ಆಗಾಗ ವಿದ್ಯುತ್ ಕಡಿತದಿಂದ ಎಲ್ಲರಿಗಿಂತ ಹೆಚ್ಚು ತ್ರಾಸ ಪಡುವವರು ಭಾರತದ ರೈತರೇ ಎನ್ನುವುದರಲ್ಲಿ ಅನುಮಾನವಿಲ್ಲ.ದೂರದಲ್ಲಿರುವ ಹೊಲ,ತೋಟದ ಪಂಪು ಶೆಡ್‌ಗೆ ಧಾವಿಸಿ,ಪಂಪನ್ನು ಚಾಲೂ ಮಾಡಿ ಮನೆಗೆ ಬರುವಷ್ಟರಲ್ಲಿ ವಿದ್ಯುತ್ ಕಡಿತವಾದರೆ, ಮತ್ತೆ ವಿದ್ಯುತ್ ಪೂರೈಕೆ ಆರಂಭವಾದಾಗ ಶೆಡ್‌ಗೆ ಧಾವಿಸುವ ಪ್ರಮೇಯ.ಹಗಲು-ರಾತ್ರಿ ಈ ಓಡಾಟದಲ್ಲೇ ರೈತ ಅರೆಜೀವವಾದರೆ ಅಚ್ಚರಿಯಿಲ್ಲ. ದೂರದಿಂದಲೇ ಪಂಪ್ ಚಾಲೂ-ಬಂದ್ ಮಾಡಲು ತಂತ್ರಜ್ಞಾನ ಬಳಸಬಾರದೇಕೆ ಎನ್ನುವುದರ ಬಗ್ಗೆ ಬಹಳಷ್ಟು ಸಂಶೋಧನೆಗಳು ನಡೆದಿವೆ.ಈಗ ಸೆಲ್‌ಪೋನ್ ಬಳಸಿ ಅದನ್ನು ಸಾಧ್ಯವಾಗಿಸಿ,ರೈತನಿಗೆ ಒದಗಿಸಲು ಟಾಟಾ ಇಂಡಿಕಾಮ್ ದೂರಸಂಪರ್ಕ ಕಂಪೆನಿ ಆರಂಭಿಸಿದೆ. ನ್ಯಾನೋ ಗಣೇಶ ಈ ಸಾಧನದ ಹೆಸರು.ಇದರಲ್ಲಿ ಸೆಲ್‌ಫೋನ್ ಮತ್ತು ಮಾಡೆಮ್ ಜತೆಯಾಗಿ ಬರುತ್ತದೆ. ಮಾಡೆಂ ಅನ್ನು ಪಂಪಿನ ಸ್ಟಾರ್ಟರಿಗೆ ಅಳವಡಿಸಲಾಗುತ್ತದೆ. ಎರಡುಸಾವಿರದ ಏಳುನೂರು ರುಪಾಯಿ ತೆತ್ತು ರೈತ ಈ ಹ್ಯಾಂಡ್‌ಸೆಟ್ ಮತ್ತು ಮಾಡೆಂ ಖರೀದಿಸಿದಾಗ, ಆತನಿಗೆ ಒಂದು ನಿಗದಿತ ಸಂಖ್ಯೆಯನ್ನೂ ಕೊಡಲಾಗುತ್ತದೆ. ಹ್ಯಾಂಡ್‌ಸೆಟ್‌ನಿಂದ ಆ ಸಂಖ್ಯೆಗೆ ಕರೆ ಮಾಡಿದಾಗ ಪಂಪ್ ಚಾಲೂ-ಬಂದ್ ಮಾಡಬಹುದು.ಜತೆಗೆ ಪಂಪ್ ಯಾವ ಸ್ಥಿತಿಯಲ್ಲಿದೆ ಎಂದೂ ಪರಿಶೀಲಿಸಬಹುದು.ಪಂಪ್ ಚಾಲೂ-ಬಂದ್ ಮಾಡಲು ಮಾಡುವ ಕರೆಗೆ ಶುಲ್ಕವಿಲ್ಲ. ಇತರ ಮೊಬೈಲ್ ಕರೆಗಳಿಗೆ ಸಾಮಾನ್ಯ ಶುಲ್ಕ ವಿಧಿಸಲಾಗುತ್ತದೆ. ಈ ಸೇವೆಯನ್ನು ಜೀವಮಾನಪರ್ಯಂತ ಪಡೆಯ ಬಹುದು.
------------------------------------------------------
ಅಮೆರಿಕಾದ ವಿರುದ್ಧ ಸೈಬರ್ ಯುದ್ಧ?
ಕಳೆದವಾರ ಅಮೆರಿಕಾದ ಹಲವು ಅಂತರ್ಜಾಲ ತಾಣಗಳ ಸೇವೆ ಲಭ್ಯವಿರಲಿಲ್ಲ. ಅಂತರ್ಜಾಲದ ಸುಮಾರು ಹತ್ತು ಸಾವಿರ ಕಂಪ್ಯೂಟರುಗಳನ್ನು ತಮ್ಮ ವಶ ಮಾಡಿಕೊಂಡ ಯಾರೋ ಅವುಗಳ ಮೂಲಕ ಈ ತಾಣಗಳು ಕೆಲಸ ಮಾಡುವುದನ್ನು ನಿಲ್ಲಿಸಿದ್ದರು. ಸ್ವೇತಭವನ ಮತ್ತು ಪೆಂಟಗನ್‌ದ ತಾಣವೂ ಸೇರಿದಂತೆ ಸರಕಾರದ ಹಲವು ತಾಣಗಳಲ್ಲಿ ಸಮಸ್ಯೆಯಿತ್ತು.ಇದಕ್ಕೆ ಇನ್ನೂ ಪತ್ತೆಯಾಗದ ಸೈಬರ್ ದಾಳಿ ಕಾರಣ. ಈ "ದಾಳಿ" ನಡೆಸಲು ಬಳಸಲಾದ ಹತ್ತು ಸಾವಿರ ಕಂಪ್ಯೂಟರುಗಳ ಪೈಕಿ ಹೆಚ್ಚಿನವು ದಕ್ಷಿಣ ಕೊರಿಯಾದಲ್ಲಿದ್ದವಾದರೆ, ಉಳಿದುವು ಜಪಾನ್,ಚೀನಾ,ಅಮೆರಿಕಾಗಳಲ್ಲಿದ್ದುವು.ಇಂತಹ ಅಪರೋಕ್ಷ ದಾಳಿಗಳ ಮೂಲ ಯಾವುದು ಎಂದು ಪತ್ತೆ ಮಾಡುವುದು ಅಷ್ಟು ಸುಲಭವಲ್ಲ. ದಾಳಿಯನ್ನು ಉತ್ತರ ಕೊರಿಯಾ ಮಾಡಿರಬಹುದು ಎಂಬ ಸಂಶಯ ಇದ್ದೇ ಇದೆ. ಆದರೆ ಅದಕ್ಕೆ ಪುರಾವೆ ಸಿಕ್ಕುವುದು ಕಠಿನ. ಪುರಾವೆ ಸಿಕ್ಕಿದರೂ,ಅಮೆರಿಕಾ ಏನು ತಾನೇ ಮಾಡಬಹುದು? ರಾಯಭಾರಿಯನ್ನು ಹಿಂದೆ ಕರೆಸಿಕೊಳ್ಳುವಂತಹ ಕ್ರಮಗಳು ಅಸಾಧ್ಯ,ಯಾಕೆಂದರೆ ಉತ್ತರ ಕೊರಿಯಾದಲ್ಲಿ ಅಮೆರಿಕಾದ ರಾಯಭಾರ ಕಚೇರಿಯೇ ಇಲ್ಲ.ವ್ಯಾಪಾರ ನಿಷೇಧ ಮಾಡುವುದು ಇನ್ನುಳಿದ ಮಾರ್ಗ. ವಿಶ್ವಸಂಸ್ಥೆಯ ಬಳಿ ದೂರು ನೀಡಿದರೂ ಅಷ್ಟೆ ಬಿಟ್ಟರೂ ಅಷ್ಟೆ!
-------------------------------------------------------------------------------
ಗೂಗಲ್ ಕ್ರೋಮ್ ಓಎಸ್

ಗೂಗಲ್ ಮೈಕ್ರೋಸಾಫ್ಟ್ ಕಂಪೆನಿಗೆ ಸಿಂಹಸ್ವಪ್ನವಾಗುವ ಲಕ್ಷಣಗಳೀಗ ಸ್ಪಷ್ಟವಾಗಿದೆ.2010ರ ಜೂನ್ ವೇಳೆಗೆ ಗೂಗಲ್ ಕ್ರೋಮ್ ಎಂಬ ಅತ್ಯಂತ ಸರಳ ಮತ್ತು ಕಂಪ್ಯೂಟರಿನ ಹೆಚ್ಚು ಯಂತ್ರಾಂಶವನ್ನು ಬೇಡದ ಕಾರ್ಯನಿರ್ವಹಣಾ ತಂತ್ರಾಂಶ ಬಿಡುಗಡೆಯಾಗಲಿದೆ.ಗೂಗಲ್ ಕ್ರೋಮ್ ಬ್ರೌಸರ್ ಬಿಡುಗಡೆಯಾದ ಒಂಭತ್ತು ತಿಂಗಳ ನಂತರ ಗೂಗಲ್ ಕಂಪೆನಿಯ ಈ ಘೋಷಣೆ ಹೊರಬಿದ್ದಿದೆ.ಆರ್ಮ್ ಮತ್ತು x86 ಸಂಸ್ಕಾರಕಗಳನ್ನು ಹೊಂದಿದ,ಅಂತರ್ಜಾಲ ಜಾಲಾಟಕ್ಕಾಗಿಯೇ ವಿನ್ಯಾಸಗೊಳಿಸಿದ ನೆಟ್‌ಬುಕ್‌ಗಳಿಗೆ ಗೂಗಲ್ ಕ್ರೋಮ್ ಅನ್ನು ವಿನ್ಯಾಸಗೊಳಿಸಲು ಕಂಪೆನಿ ಬಯಸಿದೆ. ನೆಟ್‌ಬುಕ್‌ಗಳಲ್ಲಿ ಹೆಚ್ಚು ತಂತ್ರಾಂಶಗಳನ್ನು ಅಳವಡಿಸಿರುವುದಿಲ್ಲ. ಅವನ್ನು ಅಂತರ್ಜಾಲಕ್ಕೆ ಸಂಪರ್ಕಿಸುವ ಮೂಲಕ, ಅಗತ್ಯವಾದ ತಂತ್ರಾಂಶಗಳನ್ನು ಅಂತರ್ಜಾಲದಿಂದಲೇ ಬಳಸುವ ಉದ್ದೇಶದಿಂದ ತಯಾರಿಸಲಾಗುತ್ತದೆ.
ನೆಟ್‌ಬುಕ್‌ನಲ್ಲಿ ಬಳಸುವ ಓಎಸ್ ಬೇಗನೇ ಚಾಲೂ ಆಗಿ,ನೇರವಾಗಿ ಅಂತರ್ಜಾಲದ ಮಿಂಚಂಚೆಯಂತಹ ಸೇವೆಗಳನ್ನು ಬಳಸಲು ಸಿದ್ಧವಾಗುವಂತೆ ಹೊಸ ಓಎಸ್ ಅನ್ನು ವಿನ್ಯಾಸಗೊಳಿಸಿ,ಅಭಿವೃದ್ಧಿ ಪಡಿಸುವುದು ಗೂಗಲ್ ಯೋಜನೆ.ಅಂತೆಯೇ,ಅತ್ಯಂತ ಸರಳ,ಬಳಕೆದಾರ ಸ್ನೇಹಿ ಲಕ್ಷಣಗಳನ್ನು ಹೊಂದಿರಬೇಕು ಎನ್ನುವುದು ಅಭಿವೃದ್ಧಿಕಾರರ ಕನಸು. ಕಂಪ್ಯೂಟರ್ ಶರವೇಗದಲ್ಲಿ ಕೆಲಸ ಮಾಡಬೇಕು,ಬಳಸುವುದು ತಲೆನೋವು ತರಬಾರದು ಎಂದು ಅವರ ಲೆಕ್ಕಾಚಾರ.ಲಿನಕ್ಸ್ ತಿರುಳಿನ ಮೇಲೆ ಹೊಸ ಓಎಸ್ ಅಭಿವೃದ್ಧಿ ಪಡಿಸುವುದರತ್ತ ಗೂಗಲ್ ಇಂಜಿನಿಯರುಗಳ ಚಿತ್ತ.
ಹೊಸ ನೆಟ್‍ಬುಕ್ ಸಾಧನಗಳನ್ನು ಬಿಡುಗಡೆಗೊಳಿಸಲು ಯಂತ್ರಾಂಶ ತಯಾರಕರನ್ನು ಪ್ರಚೋದಿಸಲು ಗೂಗಲ್ ಬಯಸಿದೆ. ಅವುಗಳಲ್ಲಿ ತನ್ನ ಓಎಸ್ ಅಳವಡಿಸಿ ಮಾರುಕಟ್ಟೆಗೆ ಬಿಡುವುದು ಕಂಪೆನಿಯ ಯೋಚನೆ. ಆದರೆ ಡೆಸ್ಕ್‌ಟಾಪ್ ಕಂಪ್ಯೂಟರುಗಳಿಗಾಗಿ ಗೂಗಲ್ ಓಎಸ್ ತರಲು ಕಂಪೆನಿಗೆ ಮತ್ತಷ್ಟು ಸಮಯ ಹೀಡಿಯಲಿದೆ.ಆದ್ದರಿಂದ ಮೈಕ್ರೋಸಾಫ್ಟ್ ತುಸು ಸಮಾಧಾನ ಹೊಂದಬಹುದು.
ಜನರಿಗೆ ಇಷ್ಟವಾಗಬಲ್ಲ,ಬಳಸಲು ಹಿತವಾಗುವ ಓಎಸ್ ತಂದು ಮೈಕ್ರೋಸಾಫ್ಟಿನ ಏಕಾಧಿಪತ್ಯವನ್ನು ಮುರಿಯಲು ಗೂಗಲ್‌ಗೆ ಸಾಧ್ಯವಾಗಬಹುದೇ ಎನ್ನುವುದು ಕೌತುಕದ ವಿಷಯ.
----------------------------------------------
ನೂರು ಜನ ಅನುಸರಿಸುವ ಕನ್ನಡ ಬ್ಲಾಗ್

ಕನ್ನಡ ಬ್ಲಾಗುಗಳ ಪೈಕಿ ಅತಿ ಜನಪ್ರಿಯ ಬ್ಲಾಗು ಯಾವುದು? ಪ್ರಾಯಶ: ಪ್ರಕಾಶ್ ಹೆಗ್ಡೆಯವರ http://ittigecement.blogspot.com/ ಇರಬಹುದು. ವೃತ್ತಿಯಿಂದ ಕಟ್ಟಡ ನಿರ್ಮಾಣ,ವಿನ್ಯಾಸಕಾರ ಪ್ರಕಾಶ್ ಹೆಗ್ಡೆಯವರ ಪ್ರವೃತ್ತಿ ಬರವಣಿಗೆ,ಛಾಯಾಚಿತ್ರೀಕರಣ. ಬ್ಲಾಗ್ ಬರವಣಿಗೆ ಇಷ್ಟವಾದರೆ,ಅದನ್ನು ನಿಯತವಾಗಿ ಅನುಸರಿಸುವ ಅವಕಾಶ ಓದುಗನಿಗಿದೆ. ಕನ್ನಡದ ಬ್ಲಾಗಗಳ ಪೈಕಿ ಇಟ್ಟಿಗೆ ಸಿಮೆಂಟ್ ಬ್ಲಾಗ್ ಇದೀಗ ನೂರಕ್ಕೂ ಹೆಚ್ಚು ಅಭಿಮಾನಿಗಳನ್ನು ಹೊಂದಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ವೃತ್ತಿಗೆ ಸಂಬಂಧಿಸಿದ ರಂಜನೀಯ ಘಟನೆಗಳು,ತಮ್ಮ ಅನುಭವಕ್ಕೆ ಬಂದ ರಂಜನೀಯ ಘಟನೆಗಳನ್ನು ಸರಳ ಸುಂದರ ರೀತಿಯಲ್ಲಿ ಪ್ರಸ್ತುತ ಪಡಿಸಿರುವುದು ಈ ಜನಪ್ರಿಯತೆಗೆ ಕಾರಣ.ಧಾರವಾಡದ ಸುನಾಥರ "ಸಲ್ಲಾಪ್" ಬ್ಲಾಗ್ ಗಂಭೀರ ವಿಷಯಗಳನ್ನು ಒಳಗೊಂಡೂ,ನಲುವತ್ತಾರು ಜನರು ಹಿಂಬಾಲಕರನ್ನು ಹೊಂದಿರುವ ಹೆಗ್ಗಳಿಕೆಯನ್ನು ಹೊಂದಿದೆ.ಶರೀಫರ,ಬೇಂದ್ರೆಯವರ ಕವನಗಳ ವಿಶ್ಲೇಷಣೆಗಳು ಇಲ್ಲಿವೆ(http://sallaap.blogspot.com).
--------------------------
udayavani
*ಅಶೋಕ್‌ಕುಮಾರ್ ಎ

