Thursday, January 25, 2007

ಬಸ್‍ನಲ್ಲಿ ಮೀಟಿಂಗ್ ನಡೆಸಿ!

ಯಾವುದಾದರೂ ಸ್ಥಳ ಪರಿಶೀಲನೆ ನಡೆಸಿ,ನಂತರ ಸಭೆಗಳನ್ನು ನಡೆಸಲಿದೆಯೇ? ಸಭೆ ನಡೆಸಲು ಅನುವು ಮಾಡುವ ವ್ಯವಸ್ಥೆಯನ್ನು ಹೊಂದಿರುವ ಬಸ್‌ಗಳನ್ನು ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹೊಂದಿದೆ. ಇದರಲ್ಲಿ ಸಭೆ ನಡೆಸಲು ಅನುವು ಮಾಡುವ ಮೇಜು,ಸದಸ್ಯರಿಗೆ ಸುಖಾಸೀನಗಳು,ಸಭೆ ನಡೆಸಲು ಮುಖ್ಯಸ್ಥನಿಗೆ ಪ್ರತ್ಯೇಕ ಆಸನ, ಮೇಜವಾನಿಗೆ ಬೇಕಾಗುವ ಪೇಯಗಳನ್ನಿಡಲು ಫ್ರಿಜ್,ಸಭೆಯು ಚರ್ಚಿಸಲಿರುವ ಅಂಶಗಳನ್ನು ಪ್ರದರ್ಶಿಸಲು ಎಲ್‌ಸಿಡಿ ಪ್ರೊಜೆಕ್ಟರ್‍, ಟಿವಿ, ದೃಶ್ಯ-ಶ್ರಾವ್ಯ ವ್ಯವಸ್ಥೆ,ವಿದ್ಯುಜ್ಜನಕ ಇವೆಲ್ಲಾ ಸೌಲಭ್ಯಗಳನ್ನೂ ಹೊಂದಿದೆ. ಇದಕ್ಕೂ ಮೀರುವ ವ್ಯವಸ್ಥೆ ಇರುವ ವೊಲ್ವೋ ಬಸ್ ಕೂಡಾ ಲಭ್ಯವಂತೆ.

ಕ್ರಿಮಿನಲ್‌ಗಳಿಗೆ ದುಸ್ವಪ್ನವಾಗಲಿರುವ ಸೆಲ್‌ಫೋನ್

ಸದ್ಯ ಕ್ರಿಮಿನಲ್ ಚಟುವಟಿಕೆಗಳನ್ನು ನಡೆಸುವವರಿಗೆ ಸೆಲ್‌ಫೋನ್ ವರದಾನವಾಗಿರುವುದು ತಿಳಿದ ವಿಷಯ.ಇಂದಿನ ಫೋನ್‌ಗಳು ಕ್ಯಾಮರಾ,ವಿಡಿಯೋ ವ್ಯವಸ್ಥೆಯನ್ನೂ ಹೊಂದಿ ಸರ್ವಸಜ್ಜಿತವಾಗಿರುತ್ತವೆ. ಸದ್ದಾಂಗೆ ಗಲ್ಲು ಶಿಕ್ಷೆ ಜಾರಿಯಾದ ಬಗೆ ಪ್ರಪಂಚದ ಗಮನಕ್ಕೆ ಬಂದುದು ಸೆಲ್‌ಫೋನ್ ಮೂಲಕ.ಈಗ ಅದನ್ನು ಕ್ರಿಮಿನಲ್‌ಗಳನ್ನು ಮಟ್ಟ ಹಾಕಲೂ ಬಳಸುವ ಯೋಚನೆ ನ್ಯೂಯಾರ್ಕ್ ನಗರದ ಮೇಯರ್‌ಗೆ ಬಂದಿದೆಯಂತೆ.ಕ್ರಿಮಿನಲ್‌ ಚಟುವಟಿಕೆಗಳು ನಡೆದಾಗ, ಅಲ್ಲಿದ್ದವರು ತಮ್ಮ ಸೆಲ್‌ಫೋನ್‌ ಕ್ಯಾಮರಾದಲ್ಲಿ ಅದನ್ನು ಸೆರೆ ಹಿಡಿದು, ಕೂಡಲೇ ವಿಶೇಷ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಅದನ್ನು ಕಳುಹಿಸಿದರೆ, ಪೊಲೀಸರಿಗೆ ದೂರು ತಲುಪುವುದೇ ಅಲ್ಲದೆ, ನಡೆದದ್ದೇನು ಎನ್ನುವುದೂ ಗೊತ್ತಾಗುತ್ತದೆ. ನಮ್ಮಲ್ಲಿ ರೌಡಿಗಳು ಎಲ್ಲರ ಮುಂದೆ ಹಾಡುಹಗಲೇ ಕೊಲೆಪಾತಕಗಳನ್ನು ನಡೆಸಿ,ಸಾಕ್ಷಿ ಹೇಳುವವರಿಲ್ಲದೆ ತಪ್ಪಿಸಿಕೊಳ್ಳುತ್ತಾರೆ. ಸೆಲ್‌ಫೋನ್ ಮೂಲಕ ಸೆರೆಹಿಡಿದ ವಿಡಿಯೋ,ಚಿತ್ರ ಸಾಕ್ಷಿಯಾಗಿ ಸ್ವೀಕರಿಸಲು ನಮ್ಮ ನ್ಯಾಯಾಲಯಗಳು ಮನ ಮಾಡಿಯಾವೇ?

ಜಿರಳೆ,ಅಳಿಲು ಸ್ವರೂಪಿ ರೊಬೊಟ್‌ಗಳು
ರಾಜ ಪರೀಕ್ಷಿತ ಸರ್ಪದಿಂದ ತನಗೆ ಮೃತ್ಯು ಬರದಂತೆ ಭಾರೀ ಬಂದೋಬಸ್ತು ಮಾಡಿಕೊಂಢಿದ್ದರೂ, ಸರ್ಪರಾಜ ತಕ್ಷಕ ಹುಳುವಿನ ರೂಪಧಾರಣೆ ಮಾಡಿ, ಹಣ್ಣೊಳಗೆ ಅವಿತು,ಪರೀಕ್ಷಿತನ ಬಳಿ ಸೇರಿ, ಕಚ್ಚಲು ಸಫಲವಾದ ಕತೆ ನಿಮಗೆ ಗೊತ್ತೇ ಇದೆ.ಈಗ ಇಂತ ಸೂಕ್ಷ್ಮ ರೂಪೀ ರೊಬೊಟ್‌ಗಳ ತಯಾರಿ ನಡೆದಿದೆ.ಇಸ್ರೇಲ್ ಅಂತೂ ಭಯೋತ್ಪಾದಕರ ಮೇಲೆ ದಾಳಿ ಮಾಡಲು ಕಣಜಹುಳುವಿನ ಗಾತ್ರದ ರೊಬೋಟ್‌ಗಳ ತಯಾರಿಗಿಳಿದಿದೆ.ಬ್ರಿಟನ್‌ ಬಳಿ ಆರಿಂಚು ಉದ್ದ ಹಕ್ಕಿಯಂತಹ ವಿಮಾನಗಳಿವೆ. ಅಫ್ಘಾನಿಸ್ತಾನದಲ್ಲಿ ಇವುಗಳನ್ನು ಬಳಸಿ ಕಿರುಸ್ಫೋಟಗಳನ್ನು ನಡೆಸಲಾಗುತ್ತಿದೆ.ಕಟ್ಟಡವೊಂದರ ವಿದ್ಯುತ್‌ ವ್ಯವಸ್ಥೆಯನ್ನು ಹಾಳುಗೆಡಹಲು, ಟ್ರಕ್‌ನ್ನು ಚಲಿಸಲಾಗದಂತೆ ಮಾಡಲು,ಅದರ ಚಕ್ರಕ್ಕೆ ರಂಧ್ರ ಕೊರಯುವ ಸೀಮಿತ ಉದ್ದೇಶಗಳಿಗೆ ಇವನ್ನು ಬಳಸುವುದು ಸಂಶೋಧಕರ ಆಲೋಚನೆ.
ಆದರೆ ಇವು ಭಯೋತ್ಪಾದಕರ ಕೈ ಸೇರಿದರೆ ಅನಾಹುತವಾಗದೇ ಎನ್ನುವ ಪ್ರಶ್ನೆಯೂ ಇದೆ. ಅವರು ಯಾವುದೋ ವ್ಯಕ್ತಿಯನ್ನು ಮುಗಿಸಲು, ಸಣ್ಣ ಆಸ್ಫೋಟ ಉಂಟು ಮಾಡಬಲ್ಲ ಮದ್ದನ್ನು ಹೊಂದಿದ ಜಿರಲೆಯಂತಹ ರೊಬೋಟ್ ವ್ಯಕ್ತಿಯ ಬಳಿಸಾರಿ,ಅವನ ಹೃದಯದಂತಹ ಜೀವನಾಡಿ ಅಂಗದ ಬಳಿ ಸ್ಫೋಟವುಂಟು ಮಾಡಿದರೆ, ಅತಿ ಸುರಕ್ಷಿತ ಭದ್ರತಾ ವ್ಯವಸ್ಥೆಯೂ ವಿಫಲವಾದೀತು.

ವಿಕಿಪೀಡಿಯಾ ತಿದ್ದಲು ಅನೈತಿಕ ಮಾರ್ಗ ಹಿಡಿದ ಮೈಕ್ರೋಸಾಫ್ಟ್
ವಿಕಿಪಿಡಿಯಾ ಎನ್ನುವುದು ಜನರ ಸಹಭಾಗಿತ್ವದಲ್ಲಿ ರಚನೆಯಾಗುತ್ತಿರುವ ವಿಶ್ವಕೋಶ. ಇದಕ್ಕೆ ಯಾರು ಬೇಕಾದರೂ ಲೇಖನ ಸೇರಿಸಬಹುದು.ಸಂಪಾದಕ ಮಂಡಳಿಯು ಬರಹಗಳನ್ನು ಪರಿಶೀಲಿಸಿ,ವಿಶ್ವಕೋಶದ ಅಧಿಕೃತ ಪ್ರತಿಗೆ ಸೂಕ್ತ ಅಂಶಗಳನ್ನು ಸೇರಿಸಿಕೊಳ್ಳುತ್ತಾರೆ. ಈ ವಿಶ್ವಕೋಶ ಸದಾ ನವೀಕೃತಗೊಳ್ಳುತ್ತಿರುವುದರಿಂದ ಯಾವತ್ತೂ ಸರಿಯಾದ ಮಾಹಿತಿಯನ್ನೊಳಗೊಂಡಿರುತ್ತದೆ.ಇದಕ್ಕೆ ಸ್ಥಾಪಿತ ಹಿತಾಸಕ್ತಿಗಳು ಸುಳ್ಳು ಮಾಹಿತಿ ಸೇರಿಸುವುದನ್ನು ತಡೆಯಲು ಸಂಪಾದಕರು ಹದ್ದುಗಣ್ಣು ಹೊಂದಿರುತ್ತಾರೆ.ಮುಕ್ತ ದಾಖಲನಾ ಮಾನಕದ ಮತ್ತು ಮೈಕ್ರೋಸಾಫ್ಟ್‌ನ ದಾಖಲನಾ ಶೈಲಿಯ ಬಗೆಗೆ ಇದರಲ್ಲಿ ಪ್ರಕಟವಾದ ಲೇಖನವೊಂದು ತಪ್ಪು ಮಾಹಿತಿಗಳನ್ನು ಹೊಂದಿದೆ ಎಂದು, ಮೈಕ್ರೋಸಾಫ್ಟ್ ಕಂಪೆನಿಯು ಬ್ಲಾಗ್‌ ಬರಹಗಾರನೋರ್ವನಿಗೆ ಇದನ್ನು ತಿದ್ದಲು ಹಣ ನೀಡಲು ಮುಂದೆ ಬಂದಿದೆ ಎಂದೀಗ ಕೇಳಿ ಬರುತ್ತಿದೆ. ಕಂಪೆನಿಯೂ ತಾನು ಹೀಗೆ ಮಾಡಿರುವುದು ಹೌದೆಂದು ಒಪ್ಪಿಕೊಂಡಿದೆ.ಈ ರೀತಿ ಮಾಡಿದ್ದು ನ್ಯಾಯ ಸಮ್ಮತವೇ ಎಂಬ ಚರ್ಚೆ ಇದೀಗ ಆರಂಭವಾಗಿದೆ.

ಕಿರು ಸಂದೇಶಗಳು ಸೇರಿ ಕಿರು ಕಾದಂಬರಿ
ಫಿನ್‌ಲ್ಯಾಂಡಿನಲ್ಲಿ ವಿಶಿಷ್ಟ ಎನ್ನಬಹುದಾದ ಕಿರುಕಾದಂಬರಿ ಪ್ರಕಟವಾಗಿದೆ. ಸುಮಾರು ಮುನ್ನೂರು ಪುಟಗಳ ಈ ಫಿನ್ನಿಶ್ ಕಿರು ಕಾದಂಬರಿಯಲ್ಲಿ ಐಟಿ ಕಂಪೆನಿಯ ಉದ್ಯೋಗಿಯೋರ್ವ ಕೆಲಸ ತ್ಯಜಿಸಿದ ಬಳಿಕ ಯುರೋಪ್ ಹಾಗೂ ಭಾರತ ಪ್ರವಾಸ ಹೊರಡುವ ಕತೆಯಿದೆ. ಈ ಪ್ರವಾಸದ ವೇಳೆ ಆತ ತನ್ನ ಮಿತ್ರರಿಗೆ ಕಳುಹಿಸಿದ ಎಸ್‌ಎಂಎಸ್‌ ಸಂದೇಶಗಳೇ ಕಾದಂಬರಿಯಾಗಿದೆ.ಸಾವಿರದಷ್ಟು ಕಿರುಸಂದೇಶಗಳು ಇದರಲ್ಲಿ ಅಡಕವಾಗಿವೆ. ಸಾಮಾನ್ಯವಾಗಿ ಕಿರುಸಂದೇಶಗಳಲ್ಲಿ ಕಾಣಿಸುವ ಹೃಸ್ವ ರೂಪದ ಪದಗುಚ್ಛಗಳು, ವ್ಯಾಕರ್ಣ-ಗೋಕರ್ಣವಾಗಿರುವುದು ಇದರಲ್ಲೂ ಎದ್ದು ಕಾಣಿಸುತ್ತದೆ.
*ಅಶೋಕ್‌ಕುಮಾರ್‍ ಎ

Saturday, January 20, 2007

ಬ್ಲಾಗ್‌ ಮೂಲಕ ಆದಾಯ

ಬ್ಲಾಗ್ ಬರೆದು ಅಂತರ್ಜಾಲದಲ್ಲಿ ಹಾಕುವುದು ಈಗ ಹಲವರ ಹವ್ಯಾಸ. ಆದರೆ ಅವನ್ನು ಜನಪ್ರಿಯಗೊಳಿಸುವುದು ಸುಲಭದ ಮಾತಲ್ಲ. ತಿಂಗಳಿಗೆ ದಶಲಕ್ಷ ಓದುಗರನ್ನು ಆಕರ್ಷಿಸುವ ಭಾರತೀಯ ಬ್ಲಾಗ್‌ಗಳೂ ಇವೆ. ಅಮಿತ್ ಅಗರ್‌ವಾಲ್ ಎಂಬವರ ತಂತ್ರಜ್ಞಾನದ ಬಗೆಗಿನ ಬ್ಲಾಗ್ "ಡಿಜಿಟಲ್ ಇನ್ಸ್ಪಿರೇಶನ್" ಇವುಗಳ ಪೈಕಿ ಒಂದು."ಗಾರ್ಡಿಯನ್","ವಾಲ್‌ಸ್ಟ್ರೀಟ್ ಜರ್ನಲ್' ಅಂತಹ ಪತ್ರಿಕೆಯ ಅಂಕಣಕಾರ ಅಮಿತ್ ವರ್ಮಾ ಅವರ "ಇಂಡಿಯಾ ಅನ್‌ಕಟ್" ಕೂಡಾ ಎರಡು ಲಕ್ಷ ಓದುಗರನ್ನು ಆಕರ್ಷಿಸುತ್ತದಂತೆ. ಹೀಗಾಗಿ ಇವರ ಬ್ಲಾಗ್‌ಗಳು ಜಾಹೀರಾತುದಾರರನ್ನೂ ಆಕರ್ಷಿಸಿ,ಇವರು ಕೈತುಂಬಾ ಹಣ ಸಂಪಾದಿಸಲು ಸಾಧ್ಯವಾಗಿದೆ.ಗೂಗಲ್ ಕಂಪೆನಿಯ ಆಡ್‌ಸೆನ್ಸ್ ಎಂಬ ಸೇವೆಗೆ ನೋಂದಾಯಿಸಿಕೊಂಡರೆ,ಬ್ಲಾಗ್‌ನ ವಿಷಯಕ್ಕೆ ಸಂಬಂಧಿಸಿದ ಜಾಹೀರಾತುಗಳು ಬ್ಲಾಗ್‌ ತಾಣದಲ್ಲಿ ಸೇರ್ಪಡೆಯಾಗಿ ಅವರ ತಾಣಕ್ಕೆ ಭೇಟಿ ನೀಡಿ,ಜಾಹೀರಾತು ಕ್ಲಿಕ್ಕಿಸಿದ ಅಂತರ್ಜಾಲಿಗರ ಸಂಖ್ಯೆಯ ಆಧಾರದಲ್ಲಿ ಅವರಿಗೆ ಹಣ ಪಾವತಿಸುವ ವ್ಯವಸ್ಥೆಯಿದೆ.ಎಂಐಎಚ್ ಎಂಬ ಕಂಪೆನಿ ಅತ್ಯುತ್ತಮ ಬ್ಲಾಗ್ ಗುರುತಿಸಲು ಮುಂದಿನ ತಿಂಗಳಿನಿಂದ ಸ್ಪರ್ಧೆ ನಡೆಸಲು ಯೋಜಿಸಿದೆ. ವಿವರಗಳಿಗೆ ಹttp://blogs.ibibo.com/GIBH/index.aspx ನೋಡಿ.ಅದೇ ರೀತಿ ಭಾರತೀಯ ಭಾಷೆಯ ಬ್ಲಾಗ್‌ಗಳಿಗೆ ಸಂಬಂಧಿಸಿದ ಸ್ಪರ್ಧೆಯನ್ನು ಕಳೆದ ವರ್ಷ ನಡೆಸಲಾಗಿತ್ತು.

ಧೀರ್ಘಾಯುಷ್ಯದ ಗುಟ್ಟು
ದೀರ್ಘಾಯುಷ್ಯಕ್ಕೆ ನಮ್ಮ ಅನುವಂಶಿಕತೆ ಒಂದು ಪ್ರಧಾಣ ಕಾರಣವೆನ್ನುವುದರಲ್ಲಿ ಸಂಶಯವೇ ಇಲ್ಲ. ಅದಲ್ಲದೆ ಇನ್ನಿತರ ಪೂರಕ ಅಂಶಗಳು ಇವೆ ಎನ್ನುವುದನ್ನು ವಿಜ್ಞಾನಿಗಳು ಗಮನಿಸಿದ್ದಾರೆ. ಪರ್ವತ ಪ್ರದೇಶಗಳಲ್ಲಿ ವಾಸ ಮಾಡುವವರು ಸಾಮಾನ್ಯವಾಗಿ ದೀರ್ಘಾಯುಷ್ಯಿಗಳಾಗಿರುವುದು ಕಂಡು ಬಂದಿದೆ. ಮಿತಾಹಾರ ಸೇವಿಸಿ, ದೇಹವು ಸ್ಥೂಲಕಾಯವಾಗುವುದನ್ನು ತಪ್ಪಿಸಿದರೆ ಆಯುಷ್ಯ ವೃದ್ಧಿ ನಿಶ್ಚಿತ.ಅದೇ ರೀತಿ ದೇಹಶ್ರಮ, ಒಣಹಣ್ಣುಗಳ ಅಧಿಕ ಸೇವನೆ, ಕರಿದ ತನಿಸುಗಳನ್ನು ದೂರವಿಡುವುದು ಹೆಚ್ಚು ಕಾಲ ಬಾಳಲು ಬಯಸುವವರು ಅನುಸರಿಸಬೇಕಾದ ವೃತ. ಬಿಸಿಲಿಗೆ ಮೈಯೊಡ್ಡಿ ಡಿ ವಿಟಮಿನ್ ಪಡೆಯುವುದು,ಗಾಳಿ ಸೇವನೆ ಕೂಡಾ ಅಗತ್ಯ. ಅಲ್ಪ ಪ್ರಮಾಣದ ವೈನ್ ಸೇವಿಸುವುದು ದೀರ್ಘಾಯುಷ್ಯಕ್ಕೆ ಪೂರಕ ಎನ್ನುವುದು ತುಸು ವಿವಾದಕ್ಕೀಡಾದ ಅಂಶ.ನಿಮ್ಮ ಜೀವನಕ್ರಮವನ್ನು ನೋಡಿ ನೀವು ಎಷ್ಟು ಆಯುಷ್ಯ ಹೊಂದಿದ್ದೀರಿ,ಅದನ್ನು ಹೆಚ್ಚಿಸಿಕೊಳ್ಳಲು ನೀವು ಮಾಡಬೇಕಿರುವ ಬದಲಾವಣೆಗಳ ಬಗ್ಗೆ ತಿಳಿಸುವ ಅಂತರ್ಜಾಲ ತಾಣದ ಕೊಂಡಿ ಇಲ್ಲಿ ಲಭ್ಯ:http://www.bluezones.com/vitality_compass

ವಾಣಿಜ್ಯ ವಿಮಾನದಲ್ಲಿ ಕ್ಷಿಪಣಿ ನಿರೋಧಕ ವ್ಯವಸ್ಥೆ
ಭಯೋತ್ಪಾದಕರು ತಮ್ಮ ದಾಳಿಗಳಿಗೆ ಕ್ಷಿಪಣಿಗಳನ್ನೂ ಬಳಸಿಕೊಳ್ಳುತ್ತಿರುವುದು ಸಾಮಾನ್ಯವಾಗಿಬಿಟ್ಟಿದೆ. ಭುಜದ ಮೇಲಿಟ್ಟು ಉಡಾಯಿಸುವ ಮೊಬೈಲ್ ಕ್ಷಿಪಣಿಗಳನ್ನು ಇಂತಹ ದಾಳಿಗಳಿಗೆ ಬಳಸುವುದು ಕಂಡು ಬಂದಿದೆ. ನಾಲ್ಕು ವರ್ಷಗಳ ಹಿಂದೆಯೇ ಇಸ್ರೇಲೀ ವಾಣಿಜ್ಯ ವಿಮಾನವೊಂದು ಭಯೋತ್ಪಾದಕರ ಕ್ಷಿಪಣಿ ದಾಳಿಯಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡಿತ್ತು.ಕ್ಷಿಪಣಿ ನಿರೋಧಕ ವ್ಯವಸ್ಥೆಗಳು ಮಿಲಿಟರಿ ಬಳಕೆಗೆ ಲಭ್ಯವಿದ್ದರೂ,ಇವನ್ನು ನಾಗರಿಕ ವಿಮಾನಗಳಿಗೆ ಬಳಸಲು ಸೂಕ್ತವೇ ಎನ್ನುವುದು ಇನ್ನೂ ಸಿದ್ಧವಾಗಿಲ್ಲ. ಈಗ ಅಮೆರಿಕನ್ ವಾಣಿಜ್ಯ ಹಾರಾಟದ ವಿಮಾನವೊಂದಕ್ಕೆ ಗಾರ್ಡಿಯನ್ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಅಳವಡಿಸಿ,ಪ್ರಯೋಗಾತ್ಮಕ ಹಾರಾಟಗಳನ್ನು ನಡೆಸಲಾಗುತ್ತಿದೆ.ವಿಮಾನದ ತಳದಲ್ಲಿ ಅಳವಡಿಸಲಾಗುವ ಕ್ಷಿಪಣಿ ನಿರೋಧಕ ವ್ಯವಸ್ಥೆ, ವಿಮಾನ ಗಗನಗಾಮಿಯಾಗುವಾಗ ಹಾಗೂ ಭೂಸ್ಪರ್ಶ ಮಾಡುವ ವೇಳೆ ಸನ್ನದ್ಧ ಸ್ಥಿತಿಯಲ್ಲಿರುತ್ತದೆ.ಕ್ಷಿಪಣಿ ಉಡಾವಣೆಯಾದರೆ, ನಿರೋಧಕ ವ್ಯವಸ್ಥೆಯ ಲೇಸರ್‍ ಕಿರಣಗಳು ಕ್ಷಿಪಣಿಯ ಮಾರ್ಗದರ್ಶಕ ವ್ಯವಸ್ಥೆಯ ಹಾದಿ ತಪ್ಪಿಸಿ,ಅದು ವಿಮಾನಕ್ಕೆ ಬಂದೆರಗುವುದನ್ನು ತಪ್ಪಿಸುತ್ತದೆ.ಆದರೆ ವ್ಯವಸ್ಥೆಯನ್ನು ಅಳವಡಿಸಿದ ವಿಮಾನಗಳು ಸಾಮಾನ್ಯ ಹಾರಾಟ ನಡೆಸುವಾಗ ತೊಂದರೆ ಎದುರಿಸುತ್ತವೋ,ಅದು ವಿಮಾನದ ಇಂಧನ ದಕ್ಷತೆಯನ್ನು ತಗ್ಗಿಸಿ, ವಿಮಾನ ಹಾರಾಟವನ್ನು ಲಾಭದಾಯಕವಲ್ಲದಂತಾಗಿಸುತ್ತವೋ ಎನ್ನುವುದನ್ನು ಇನ್ನಷ್ಟೇ ತಿಳಿಯಬೇಕಿದೆ.ಪರೀಕ್ಷೆಗಳು ಧನಾತ್ಮಕ ಫಲಿತಾಂಶ ನೀಡದರೆ, ಸಾವಿರಕ್ಕೂ ಅಧಿಕ ವಿಮಾನಗಳಿಗೆ ಇವನ್ನು ಅಳವಡಿಸುವ ಯೋಜನೆಯಿದೆ.

ಸೆಲ್‌ಫೋನಿನೊಂದಿಗೆ ಮಾತಾಡುವ ಕೈಗಡಿಯಾರ

ಈ ವಾಚ್ ಧರಿಸಿದರೆ, ಸೆಲ್‌ಫೋನ್ ಕರೆ ಬಂದಾಗ, ಕರೆ ಯಾರದು ಎಂದು ತಿಳಿಯಲು, ಸೆಲ್‌ಫೋನನ್ನು ಹೊರತೆಗೆಯುವುದು ಬೇಡ. ವಾಚ್‌ನಲ್ಲೇ ಅದು ಯಾರ ಕರೆ ಎಂದು ಮೂಡುತ್ತದೆ. ವಾಚ್‌ನ ಗುಂಡಿಯೊಂದನ್ನು ಒಂದು ಬಾರಿ ಅದುಮಿದರೆ, ಫೋನ್ ಮೌವಾಗುತ್ತದೆ. ಅದನ್ನೇ ಎರಡು ಬಾರಿ ಅದಮಿದರೆ, ಧ್ವನಿ ಸಂದೇಶ ತೆಗೆದುಕೊಳ್ಳುವ ವ್ಯವಸ್ಥೆ ಚಾಲೂ ಆಗಿ, ಕರೆ ಮಾಡಿದವರು ನೀಡಿದ ಸಂದೇಶವನ್ನು ಸೆಲ್‌ಫೋನ್ ಸ್ವೀಕರಿಸುತ್ತದೆ.ಇದೆಲ್ಲಾ ಸಾಧ್ಯವಾಗಲು ಎರಡರ ನಡುವೆ ಸಂಪರ್ಕ ಏರ್ಪಡುವುದು ಹೇಗೆಂದಿರಾ? ಬ್ಲೂಟೂತ್ ತಂತ್ರಜ್ಞಾನ ಎಂಬ ನಿಸ್ತಂತು ಸಂಪರ್ಕ ಏರ್ಪಡುತ್ತದೆ. ಫೋನ್ ಜತೆಗೆ ಸಂಗೀತ ನುಡಿಸುವ ಸೌಲಭ್ಯವೂ ಇದ್ದರೆ ಇದನ್ನು ಚಾಲೂ ಮಾಡಲು ಅಥವಾ ನಿಲ್ಲಿಸಲು ಪ್ರತ್ಯೇಕ ಗುಂಡಿಯಿದೆ.ವಾಚ್ ಹಾಗೂ ಫೋನ್ ಮೂವತ್ತಡಿಯೊಳಗಿನ ಅಂತರ ಹೊಂದಿದ್ದರೆ ಮಾತ್ರಾ ಈ ನಿಸ್ತಂತು ಸಂಪರ್ಕ ಕಾರ್ಯ ನಿರ್ವಹಿಸುತ್ತದೆ. ಈ ದೂರ ಸಂಪರ್ಕ ಸಾಧ್ಯವಾಗದ ಮಟ್ಟ ತಲುಪಿದಾಗ ವಾಚ್ ಅದುರಿ ಧರಿಸಿದವನ ಗಮನ ಈ ಕಡೆ ಸೆಳೆಯುತ್ತದೆ. ಕರೆ ಬಂದಾಗ ಕೂಡಾ ಧರಿಸಿದವನ ಗಮನ ಸೆಳೆಯಲು ವಾಚ್ ಅದುರುತ್ತದೆ. ವಾಚನ್ನು ಸೋನಿ ಎರಿಕ್‌ಸನ್ ಕಂಪೆನಿ ತಯಾರಿಸಿರುವ ಕಾರಣ ಬ್ಲೂಟೂತ್ ಸೌಲಭ್ಯ ಹೊಂದಿದ ಆ ಕಂಪೆನಿಯ ಫೋನ್ ಒಂದಿಗೆ ಕೆಲಸ ಮಾಡುತ್ತದೆ.ವಾಚನ್ನು ಎರಡು ಮೂರು ವಾರಗಳಿಗೊಮ್ಮೆ ಚಾರ್ಜ್ ಮಾಡುವ ತೊಂದರೆಯಿದೆ. ಇದು ತುಸು ಭಾರವಾಗಿರುವುದರ ಜತೆಗೆ ನಾಲ್ಕು ನೂರು ಡಾಲರು ಮುಖ ಬೆಲೆ ಹೊಂದಿರುವ ಕಾರಣ ಕಿಸೆಗೂ ಭಾರವಾಗಿದೆ!
*ಅಶೋಕ್‌ಕುಮಾರ್‍ ಎ

Saturday, January 13, 2007

ಬರೇ ಫೋನಲ್ಲವಿದು,ಐಫೋನ್



ಐಪಾಡ್ ಎಂಬ ಸಂಗೀತ ಮುದ್ರಿಕೆಗಳನ್ನು ಸಂಗ್ರಹಿಸಿಟ್ಟುಕೊಂಡು ಬೇಕೆಂದಾಗ ನುಡಿಸುವ ಸೌಲಭ್ಯ ನೀಡುವ ಸಾಧನವನ್ನು ಕಂಪ್ಯೂಟರ್‍ ಕಂಪೆನಿ ಹೊರತಂದು ಹಿಟ್ ಆದುದು ಈಗ ಹಳೆ ಸುದ್ದಿ.ಸದ್ಯ ಐಪಾಡ್ ಕಿಸೆಯಲ್ಲಿರಿಸಿ ಅತ್ತಿತ್ತ ಒಯ್ಯಬಲ್ಲ ಸಂಗೀತ ಸಾಧನಗಳ ಮಾರುಕಟ್ಟೆಯ ಶೇಕಡಾ ಎಪ್ಪತ್ತೈದು ಭಾಗವನ್ನು ಪಡೆದಿದೆ.ಆಪಲ್ ಕಂಪೆನಿ ಈ ಸೌಲಭ್ಯವಿರುವ ಫೋನನ್ನೂ ಮಾರುಕಟ್ಟೆಗೆ ತರಬಹುದೆಂದು ಗುಸುಗುಸು ಹಬ್ಬಿತ್ತು. ಅದೀಗ ನಿಜವಾಗಿದೆ. ಈ ವಾರ ಕಂಪೆನಿಯ ಮುಖ್ಯಸ್ಥ ಸ್ಟೀವ್ ಜಾಬ್ ಅಂತರ್ಜಾಲ ಲಭ್ಯವಿರುವ,ಸಂಗೀತ ಮುದ್ರಿಕೆಗಳನ್ನು ಆಲಿಸಬಹುದಾದ, ದೂರವಾಣಿ ಕರೆ ಮಾಡಬಹುದಾದ ಮಾತ್ರವಲ್ಲದೆ ವಿಡಿಯೋವನ್ನು ಕಿರು ಸ್ಪರ್ಶಸಂವೇದಿ ತೆರೆಯಲ್ಲಿ ನೋಡುವ ಸೌಲಭ್ಯ ನೀಡುವ ಐಫೋನನ್ನು ಮಾರುಕಟ್ಟೆಗೆ ಪರಿಚಯಿಸಿದರು.ಇಷ್ಟು ಸಾಲದಿದ್ದರೆ ಕ್ಯಾಮರಾವೂ ಇದೆ.ಬೆಲೆ ಐನೂರು ಡಾಲರು. ನಾಲ್ಕು ಮತ್ತು ಎಂಟು ಗಿಗಾಬೈಟು ಸಂಗ್ರಹ ಸಾಮರ್ಥ್ಯದ ಎರಡು ಆಯ್ಕೆಯಿದೆ. ಬೆಲೆ ಕ್ರಮವಾಗಿ ಐನೂರು ಮತ್ತು ಏಳುನೂರು ಡಾಲರುಗಳು.ಆದರೆ ಫೋನ್ ಸೌಲಭ್ಯ ಏಟಿ&ಟಿ ಕಂಪೆನಿಯ ಸಿಂಗ್ಯುಲ್ಯಾರ್‍ ಸೆಲ್‌ಫೋನ್ ಜಾಲದಲ್ಲಿ ಮಾತ್ರ ಇದು ಕೆಲಸ ಮಾಡುತ್ತದೆ.
ಆಪಲ್ ಕಂಪೆನಿ ಇದರ ಜತೆಗೆ ಟಿವಿ ಸೆಟ್ ಟಾಪ್ ಪೆಟ್ಟಿಗೆಯನ್ನೂ ಬಿಡುಗಡೆ ಮಾಡಿದೆ. ಇದು ಕಂಪ್ಯೂಟರಿನ ಡಿಜಿಟಲ್ ಸಂಕೇತಗಳನ್ನು ಟಿವಿಗೆ ಬೇಕಾಗುವ ಸಾದೃಶ ಸಂಕೇತವಾಗಿ ಬದಲಾಯಿಸಿ ಕೊಡಬಲ್ಲುದು. ಹೀಗಾಗಿ ಸಿಡಿ,ಡಿವಿಡಿಯನ್ನು ಕಂಪ್ಯೂಟರಿನಲ್ಲಿ ಹಾಕಿ,ಟಿವಿಯಲ್ಲಿ ವೀಕ್ಷಣೆ ಸಾಧ್ಯ.ಅಂತರ್ಜಾಲದಿಂದ ಇಳಿಸಿಕೊಂಡ ಚಲನಚಿತ್ರಗಳನ್ನು ಟಿವಿಯಲ್ಲಿ ನೋಡಲು ಈ ಮೂಲಕ ಸುಲಭ ಸಾಧ್ಯ. ಈ ಸಾಧನಗಳನ್ನು ಹೊರತರುವುದರೊಂದಿಗೆ ಮ್ಯಾಕ್ ಶ್ರೇಣಿಯ ಕಂಪ್ಯೂಟರ್‍ ಮತ್ತು ತಂತ್ರಾಂಶ ಅಭಿವೃದ್ಧಿ ಪಡಿಸುತ್ತಿದ್ದ ಆಪಲ್ ಕಂಪ್ಯೂಟರ್‍ಸ್ ಕಂಪೆನಿ, ಇಲೆಕ್ಟ್ರಾನಿಕ್ಸ್ ಸಾಧನಗಳನ್ನೂ ತಯಾರಿಸುವ ಕಂಪೆನಿಯಾಗಿ ಬಿಟ್ಟಿದೆ. ಹಾಗಾಗಿ ತನ್ನ ಹೆಸರನ್ನೂ ಆಪಲ್ ಇಂಕ್ ಎಂದು ಬದಲಿಸಿಕೊಂಡಿದೆ.
ಸಿಂಗ್ಯುಲ್ಯಾರ್‍ ಜಾಲದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯವಿರುವುದು ಒಂದು ತೊಂದರೆಯೇ. ಜತೆಗೆ ಶರವೇಗದ ಅಂತರ್ಜಾಲ ಸೇವೆ ಒದಗಿಸುವ ತಂತ್ರಜ್ಞಾನ 3Gಗೆ ಅವಕಾಶವಿಲ್ಲದಿರುವುದು ಐಫೋನಿನ ಮುಖ್ಯ ಕೊರತೆ. ಐಫೋನ್ ಹೆಸರಿನ ಬಳಕೆಯ ಬಗೆಗೂ ವಿವಾದ ಎದ್ದಿದೆ. ಸಿಸ್ಕೋ ಕಂಪೆನಿಯ ಅಂತರ್ಜಾಲ ದೂರವಾಣಿಗೂ ಅದೇ ಹೆಸರು ಮೊದಲಿನಿಂದಲೂ ಬಳಕೆಯಾಗುತ್ತಿದೆ.

ಬಾಹ್ಯಾಕಾಶ ಕೇಂದ್ರದ ಸಮಸ್ಯೆ ಪರಿಹಾರಕ್ಕೆ ಗಗನಯಾತ್ರಿಗಳಿಂದ ವ್ಯಾಯಾಮ?

ಕಳೆದ ಬಾರಿ ಜಿಎಸ್‌ಎಲ್‌ವಿ ಉಡ್ಡಯನದ ಕಹಿ ಅನುಭವದ ನಂತರ ಇಸ್ರೋದ ಈ ಸಲದ ಪಿಎಸ್‌ಎಲ್‌ವಿ ಉಡ್ಡಯನ ಯಶಸ್ವಯಾಗುವ ಲಕ್ಷಣವಿದೆ. ಕಾರ್ಟೊಸಾಟ್ ಎಂಬ ಭಾರತೀಯ ಉಪಗ್ರಹದ ಜತೆಗೆ ಇಂಡೋನೇಶ್ಯಾ ಮತ್ತು ಅರ್ಜೆಂಟಿನಾದ ಉಪಗ್ರಹಗಳನ್ನೂ, ಪುನರ್ಬಳಕೆ ಮಾಡಬಲ್ಲ ಬಾಹ್ಯಾಕಾಶ ಕೋಶವನ್ನೂ ಕಕ್ಷೆಗೆ ಮುಟ್ಟಿಸಿದೆ. ಇನ್ನು ಪುನರ್ಬಳಕೆ ಮಾಡಲಾಗುವ ಕೋಶ ಭೂಮಿಗೆ ಯಶಸ್ವಿಯಾಗಿ ಮರಳಬಲ್ಲುದೇ ಎನ್ನುವುದನ್ನು ಕಾದು ನೋಡಬೇಕಿದೆ.ಚಂದ್ರಾಯಣ ಯೋಜನೆಗೆ ಇದರ ಯಶಸ್ಸು ಮುಖ್ಯ.
ಇದೇ ವೇಳೆ ಭಾರತೀಯ ಮೂಲದ ಸುನೀತಾರವರು ನೆಲೆಸಿರುವ ಅಂತಾರ್‍ರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಹಳೆಯ ಸೌರ ಫಲಕಗಳನ್ನು ಮುಚ್ಚಬೇಕಿದೆ. ಆದರೆ ಫಲಕಗಳು ಅರ್ಧ ಮುಚ್ಚಿ ತೊಂದರೆ ಕೊಡುತ್ತಿವೆ. ಈ ಸಮಸ್ಯೆ ಪರಿಹರಿಸುವುದು ಹೇಗೆಂದು ವಿಜ್ಞಾನಗಳು ತಲೆಕೆಡಿಸಿಕೊಳ್ಳುತ್ತಿದ್ದಾರಂತೆ. ಮರಳಿ ಯತ್ನವ ಮಾಡು ಎನ್ನುವುದು ಒಂದು ಪರಿಹಾರವಾದರೂ, ಬೇರೆ ಮಾರ್ಗಗಳ ಬಗೆಗೂ ಅವರ ಆಲೋಚನೆ ಸಾಗಿದೆ. ಕಳೆದ ಬಾರಿ ಬಾಹ್ಯಾಕಾಶ ಕೇಂದ್ರದಲ್ಲಿ ಯಾತ್ರಿಯೋರ್ವ ವ್ಯಾಯಾಮ ಮಾಡಿದ ವೇಳೆ, ಬಾಹ್ಯಾಕಾಶ ಕೇಂದ್ರ ಕಂಪಿಸಿ, ಸೌರ ಫಲಕಗಳು ದಿಢೀರನೆ ಕುಸಿದದ್ದು ಯಾರಿಗೋ ನೆನಪು ಬಂತು. ಅದನ್ನೇ ಮತ್ತೆ ಮಾಡಿನೋಡಬಾರದೇಕೇ ಎಂದು ಅವರಿಗನಿಸಿದೆ.

ಅಂಟಾರ್ಕಟಿಕಾದಲ್ಲೂ ಶರವೇಗದ ಅಂತರ್ಜಾಲ
ಅಂಟಾರ್ಕಟಿಕಾದಲ್ಲಿ ಬೀಡುಬಿಟ್ಟಿರುವ ವಿಜ್ಞಾನಗಳೂ ದಿನವೊಂದಕ್ಕೆ ಹದಿನೈದು ಗಿಗಾಬೈಟುಗಳಷ್ಟು ಮಾಹಿತಿಯನ್ನು ತಮ್ಮ ಮುಖ್ಯ ಕೇಂದ್ರಗಳ ಜತೆ ವಿನಿಮಯ ಮಾಡಿಕೊಳ್ಳಲು ಶಕ್ತರು ಎನ್ನುವುದು ನಂಬಲು ಕಷ್ಟ. ಇರಿಡಿಯಂ ಉಪಗ್ರಹ ಜಾಲದ ಉಪಗ್ರಹಗಳು ಈ ಸೇವೆ ಒದಗಿಸಲು ಸಹಾಯ ಮಾಡುತ್ತವೆ.ಎಂಭತ್ತರ ದಶಕದಲ್ಲೇ ಇಲ್ಲಿನ ಕೇಂದ್ರಕ್ಕೆ ಉಪಗ್ರಹ ಸಂಪರ್ಕ ಇದ್ದರೂ ಅದರ ಸಾಮರ್ಥ್ಯ ಅತ್ಯಲ್ಪವಾಗಿತ್ತು.ಮುಂದಿನ ಕೆಲವರ್ಷಗಳಲ್ಲಿ ಅಂಟಾರ್ಕಟಿಕಾದಲ್ಲಿ ರೇಡಿಯೋ ದೂರದರ್ಶಕವನ್ನು ಸ್ಥಾಪಿಸಿದ ಬಳಿಕ ದಿನವೊಂದಕ್ಕೆ ಟೆರಾಬೈಟಗಳಷ್ಟು ಮಾಹಿತಿಯನ್ನು ಮುಖ್ಯಕೇಂದ್ರಕ್ಕೆ ಕಳುಹಿಸಬೇಕಾದೀತು. ಸಮೀಪದ ಕೇಬಲ್ ಸಂಪರ್ಕ ಮೂರು ಸಾವಿರ ಕಿಲೋಮೀಟರ್‍ ದೂರದಲ್ಲಿರುವುದು ಶರವೇಗದ ಸಂಪರ್ಕವನ್ನು ಉತ್ತಮ ಪಡಿಸಲು ಇರುವ ಅಡ್ಡಿಯಾಗಿದೆ.ಈಗಲೂ ದಿನದ ಹನ್ನೊಂದು ಗಂಟೆ ಮಾತ್ರಾ ಸಂಪರ್ಕದ ಗುಣಮಟ್ಟ ಉತ್ತಮವಿದ್ದು ಉಳಿದ ವೇಳೆ ವೇಗ ಆಮೆಗತಿಗಿಳಿಯುತ್ತದೆ.

ಮನೆಯಲ್ಲೂ ಕಂಪ್ಯೂಟರ್‍ ಜಾಲ:ಬಿಲ್ ಗೇಟ್ಸ್ ಅಭಿಪ್ರಾಯ

ಮನೆಗಳಲ್ಲೂ ಹಲವು ಕಂಪ್ಯೂಟರುಗಳನ್ನು ಬಳಸುವುದೀಗ ವಿದೇಶಗಳಲ್ಲಿ ಸಾಮಾನ್ಯ. ಮನೆಮಂದಿಯೆಲ್ಲಾ ತಮ್ಮ ಮಾಹಿತಿ,ಕಡತಗಳನ್ನು ಒಂದೆಡೆ ದಾಸ್ತಾನಿಟ್ಟು ಬೇಕಾದಾಗ ಬಳಸಲಾಗುವಂತೆ ಸೇವಾದಾತೃ ಕಂಪ್ಯೂಟರನ್ನು(ಸರ್ವರ್‍) ಬಳಸಲಾರಂಭಿಸುವುದು ಸೂಕ್ತವೆಂದು ಮೈಕ್ರೋಸಾಫ್ಟ್ ಸ್ಥಾಪಕ ಬಿಲ್‌ ಗೇಟ್ಸ್ ಅಭಿಪ್ರಾಯ.ಮೈಕ್ರೋಸಾಪ್ಟ್‌ನ ಹೊಸ ನಿರ್ವಹಣಾ ತಂತ್ರಾಂಶ ವಿಸ್ಟಾದಲ್ಲಿ ಅಂತರ್ಜಾಲ ಟಿವಿ ವೀಕ್ಷಣೆಗೆ ಅನುಕೂಲ ಇದೆ.ಸ್ಪರ್ಶ ಸಂವೇದಿ ಕಂಪ್ಯೂಟರ್‍ ತೆರೆ ಇನ್ನು ಅವಶ್ಯ ಎಂದು ಗೇಟ್ಸ್ ಲಾಸ್‌ವೇಗಸ್‌ನ ಬಳಕೆದಾರರ ಇಲೆಕ್ಟ್ರಾನಿಕ್ಸ್ ಜಾತ್ರೆಯ ಸಂದರ್ಭದ ತಮ್ಮ ಮುಖ್ಯ ಭಾಷಣದಲ್ಲಿ ಹೇಳಿದ್ದಾರೆ.
*ಅಶೋಕ್‌ಕುಮಾರ್‍ ಎ

Sunday, January 07, 2007

ಕುಡುಕ ಚಾಲಕನೊಲ್ಲದ ಟೊಯೋಟಾ ಕಾರು


ಕುಡುಕ ಚಾಲಕನೊಲ್ಲದ ಟೊಯೋಟಾ ಕಾರು
ಕುಡಿದು ಬಂದು ಕಾರು ಚಲಾಯಿಸಲು ಯತ್ನಿಸಿದರೆ ಚಾಲೂ ಆಗಲು ನಿರಾಕರಿಸುವ ಕಾರು ಬಂದರೆ ಕುಡಿದು ಚಲಾಯಿಸಿ ವಾಹನ ಅಪಘಾತವಾಗುವುದನ್ನು ಸುಲಭವಾಗಿ ನಿಯಂತ್ರಿಸಬಹುದು ತಾನೇ? ಕಾರು ತಯಾರಿಕೆಯಲ್ಲಿ ಜಗತ್ತಿನಲ್ಲಿ ದ್ವಿತೀಯ ಸ್ಥಾನದಲ್ಲಿರುವ ಟೊಯೊಟಾ ಕಂಪೆನಿಯು ಇಂತಹ ಕಾರು ತಯಾರಿಸಿದೆ. ಈ ಕಾರಿನ ಸ್ಟಿಯರಿಂಗ್ ವೀಲಿನಲ್ಲಿ ಬೆವರಿನಲ್ಲಿ ಬೆರೆತಿರುವ ಮದ್ಯದ ವಾಸನೆ ಪತ್ತೆ ಹಚ್ಚುವ ಸಂವೇದಕಗಳಿವೆ. ಕುಡಿದ ಚಾಲಕ ಕಾರು ಚಲಾಯಿಸಿದರೆ, ಕಾರಿನ ಸಂವೇದಕಗಳು ಕಾರಿನ ಇಂಜಿನನ್ನು ಸ್ಥಗಿತಗೊಳಿಸಲು ಸೂಚನೆ ನೀಡುವ ಕಾರಣ, ಕಾರು ಚಾಲೂ ಆಗುವುದೇ ಇಲ್ಲ.

ಅಷ್ಟು ಮಾತ್ರವಲ್ಲದೆ ಕುಡಿಯದೆ ಎರ್‍ರಾಬಿರ್‍ರಿ ಕಾರು ಚಲಾಯಿಸಿದರೂ ಕಾರಿನ ಇಂಜಿನ್ ಸ್ಥಗಿತವಾಗುವ ವ್ಯವಸ್ಥೆ ಇದರಲ್ಲಿದೆ. ಅಡ್ಡಾದಿಡ್ಡಿ ಕಾರು ಚಲಾಯಿಸಲಾರಂಭಿಸಿದರೆ, ಕಾರು ಮುಂದೆ ಹೋಗಲು ನಿರಾಕರಿಸುತ್ತದೆ. ಕಣ್ಣಿನ ಪಾಪೆಗಳನ್ನು ಕ್ಯಾಮೆರಾದ ಮೂಲಕ ಗಮನಿಸಿ, ಚಾಲಕ ಕಾರುಗಳನ್ನು ರಸ್ತೆ ಮೇಲೆ ನೆಡಲು ವಿಫಲನಾದರೂ ಕಾರು ಸ್ಥಗಿತವಾಗುವ ಆಧುನಿಕ ವ್ಯವಸ್ಥೆ ಈ ಕಾರಿನಲ್ಲಿರುವುದರಿಂದ ಟೊಯೊಟಾದ ಈ ಕಾರು ಅಪಘಾತಕ್ಕೊಳಗಾಗುವುದು ಬಹು ಕಠಿನ.

ಪ್ಲಾಸ್ಟಿಕ್‌ನಿಂದ ಇಲೆಕ್ಟ್ರಾನಿಕ್ಸ್ ಸಾಧನಗಳು?
ಪ್ಲಾಸ್ಟಿಕ್ ಕಸ ನಮ್ಮನ್ನು ಕಂಗೆಡಿಸುತ್ತಿರುವಂತೆ ಬಂದಿರುವ ಇನ್ನೊಂದು ಸುದ್ದಿಯಂತೆ ಪ್ಲಾಸ್ಟಿಕ್ ಲಾಜಿಕ್ ಎನ್ನುವ ಕಂಪೆನಿ
ಪ್ಲಾಸ್ಟಿಕ್‌ನಿಂದ ಇಲೆಕ್ಟ್ರಾನಿಕ್ ಚಿಪ್‌ಗಳನ್ನೂ ತಯಾರಿಸಲಿದೆ. ಈ ಪ್ಲಾಸ್ಟಿಕ್‌ಗಳು ವಿದ್ಯುತ್‌ನ್ನು ಪ್ರವಾಹಿಸಲು ಬಿಡುವ ಪಾಲಿಮರ್‌ಗಳಿಂದ ತಯಾರಿಸಿದವು. ಸದ್ಯ ಚಿಪ್‌ಗಳನ್ನು ಅರೆವಾಹಕ ವಸ್ತುಗಳಿಂದ ತಯಾರಿಸುತ್ತಾರೆ.ವಿದ್ಯುತ್ ವಾಹಕ ಸಾವಯವ ಪಾಲಿಮರ್‌ಗಳಿಂದ ಚಿಪ್‌ಗಳನ್ನು ತಯಾರಿಸುವಾಗ ಸಾಮಾನ್ಯ ಪ್ಲಾಸ್ಟಿಕ್‌ ಹಾಳೆಗಳ ಮೇಲೆ ವಿದ್ಯುತ್ ಮಂಡಲಗಳನ್ನು ಮುದ್ರಿಸುವ ಅನುಕೂಲ ದೊರೆಯುತ್ತದೆ. ಮೊದಲಾಗಿ ಇ-ಕಾಗದದಂತಹ ತಂತ್ರಜ್ಞಾನಕ್ಕೆ ಅಗತ್ಯವಾದ ಚಿಪ್‌ಗಳನ್ನು ತಯಾರಿಸುವುದರತ್ತ ಪ್ಲಾಸ್ಟಿಕ್ ಲಾಜಿಕ್ ಗಮನಹರಿಸಲಿದೆ.ಕಂಪೆನಿಯ ತಯಾರಿಕ ಘಟಕ ಮುಂದಿನ ವರ್ಷ ಸಿದ್ಧವಾಗಲಿದೆ.

ಎಲ್ಲ ಕಂಪ್ಯೂಟರ್‌ಗಳಂತಲ್ಲ ಈ "ನೂರು ಡಾಲರ್‍"ನ ಲ್ಯಾಪ್‌ಟಾಪ್.

ಮಕ್ಕಳು ಶಾಲೆಯಲ್ಲಿ ಬಳಸಲು ಅನುಕೂಲವಾಗುವಂತೆ ಮಿತ ವೆಚ್ಚದಲ್ಲಿ ವಿನ್ಯಾಸಗೊಳಿಸಲಾದ ನೂರು ಡಾಲರ್‌ ಬೆಲೆಯ ಲ್ಯಾಪ್‌ಟಾಪ್ ಥೈಲ್ಯಾಂಡ್,ಲಿಬಿಯಾದಂತಹ ದೇಶಗಳಲ್ಲಿ ಬಳಕೆಗೆ ಸಿದ್ಧವಾಗಿದೆ. ಇದರಲ್ಲಿ ಹಾರ್ಡ್‌ಡಿಸ್ಕ್ ಇಲ್ಲ ಬದಲಿಗೆ ಐನೂರು ಮೆಗಾಬೈಟ್‌ ಸಾಮರ್ಥ್ಯದ ಫ್ಲಾಶ್ ಡ್ರೈವ್ ಇದೆ. ಬ್ಯಾಟರಿಯನ್ನು ಚಾರ್ಜ್ ಮಾಡಲು ಕೈಯಿಂದ ತಿರುಗಿಸುವ ಹ್ಯಾಂಡಲ್ ಇದೆ. ಇದು ನಿಸ್ತಂತು ವ್ಯವಸ್ಥೆ ಹೊಂದಿರುವುದರಿಂದ ಇತರ ಲ್ಯಾಪ್‌ಟಾಪ್ ಬಳಕೆದಾರರ ಜತೆ ಸಂವಹನ ಸಾಧ್ಯ.ಕಚೇರಿಯಲ್ಲಿ ಕಂಪ್ಯೂಟರ್‍ ಬಳಸುವಾಗ ಕಚೇರಿಯ ವ್ಯವಹಾರಗಳನ್ನು ದಾಖಲಿಸಲು ಕಂಪ್ಯೂಟರ್‍ ಬಳಕೆಯಾಗುತ್ತದೆ. ಆದರೆ ಮಕ್ಕಳಿಗೆ ಸಂವಹನ, ಸೃಜನಶೀಲ ಚಟುವಟಿಕೆ, ಇತರರ ಜತೆ ಕಲಿಕೆ ಮತ್ತು ಮಾಹಿತಿ ವಿನಿಮಯಕ್ಕೆ ಈ ಲ್ಯಾಪ್‌ಟಾಪ್ ಬಳಕೆಯಾಗುವಂತೆ ರೂಪಿಸಲಾಗಿದೆ. ವಿಂಡೋಸ್,ಲಿನಕ್ಸ್‌ನಂತಹ ಸಾಮಾನ್ಯ ಕಾರ್ಯನಿರ್ವಹಣಾ ತಂತ್ರಾಂಶಗಳನ್ನು ಬಳಸಲು ಸಾಕಾಗುವಷ್ಟು ಸಾಮರ್ಥ್ಯದ ಯಂತ್ರಾಂಶ ಇದರಲ್ಲಿ ಲಭ್ಯವಿಲ್ಲ. ಹಾಗಾಗಿ ಲಿನಕ್ಸ್ ವ್ಯವಸ್ಥೆಯನ್ನು ಸರಳೀಕರಿಸಿ, ಹೊಸದೇ ಆದ ಬಳಕೆದಾರ ಸಂಪರ್ಕಸಾಧನವನ್ನು ಬಳಸಲಾಗಿದೆ.ಕಡತಗಳನ್ನು ಹುಡುಕುವ ತಾಪತ್ರಯ ನಿವಾರಿಸಲು, ಬಳಕೆದಾರ ಅದುವರೆಗೆ ಮಾಡಿದ ಚಟುವಟಿಕೆಗಳ ಪಟ್ಟಿಯಿಟ್ಟು, ಅದರಿಂದ ಬೇಕಾದ್ದನ್ನು ಆಯ್ದುಕೊಳ್ಳುವ ಸೌಲಭ್ಯ ಕಲ್ಪಿಸಲಾಗಿದೆ.ಎಂಐಟಿಯ ಮೀಡಿಯಾ ಲ್ಯಾಬ್‌ನ ವಿನ್ಯಾಸಗೊಳಿಸಿದ ಲ್ಯಾಪ್‌ಟಾಪ್‌ನ್ನು ಕ್ವಾಂಟಾ ಕಂಪ್ಯೂಟರ್‍ ಕಂಪೆನಿ ತಯಾರಿಸಿ ವಿದ್ಯಾರ್ಥಿಗಳಿಗೆ ಒದಗಿಸುತ್ತಿದೆ. ಭಾರತ ಸರಕಾರವೂ ಆರಂಭದಲ್ಲಿ ಇದನ್ನು ಕೊಳ್ಳುಲು ಉತ್ಸುಕವಾಗಿದ್ದರೂ ನಂತರ ಯೋಜನೆಯಿಂದ ಹಿಂದೆ ಸರಿಯಿತು



ಮೂಕರಿಗೆ ಮಾತು ಕೊಡುವ ಸಾಧನ
ಮಾತು ಬರದವರು ಸಾರ್ವಜನಿಕ ಸ್ಥಳದಲ್ಲಿರುವಾಗ ಇರಿಸುಮುರಿಸು ಅನುಭವಿಸುವುದು ಸಾಮಾನ್ಯ.ಇದನ್ನು ತಪ್ಪಿಸಲು ಪಿಡಿಎ ಎನ್ನುವ ಡಿಜಿಟಲ್ ಸಾಧನವನ್ನು ಬಳಸಲು ಅನುವು ಮಾಡಿಕೊಡುವ ತಂತ್ರ ಸಿಂಗಾಪುರದಲ್ಲಿ ಬಳಕೆಯಾಗುತ್ತಿದೆ.ಸೆಲ್‌ಫೋನ್‌ನ್ನು ಹೋಲುವ ಈ ಸಾಧನ, ಸಾಮಾನ್ಯವಾಗಿ ಹಸ್ತದಲ್ಲಿ ಹಿಡಿಸುವ ಕಂಪ್ಯೂಟರಿನಂತೆ ಬಳಕೆಯಾಗುತ್ತದೆ. ಇದರಲ್ಲಿ ಕೆಲವು ಸಾಮಾನ್ಯವಾಗಿ ಬಳಕೆಯಾಗುವ ಪದಗಳನ್ನು ಮುದ್ರಿಸಿ ಇಡಲಾಗಿದೆ. ಚಿತ್ರಗಳ ಗುಂಪಿನಿಂದ ಒಂದೊಂದು ಚಿತ್ರ ಆಯ್ದರೆ ಒಂದೊಂದು ಪದದ ಉಚ್ಚಾರ ಹೊರಡಿಸುವಂತೆ ಮಾಡಲಾಗಿದೆ. ಇದನ್ನು ಬಳಸಲು ವ್ಯಕ್ತಿ ಸಂದರ್ಭಕ್ಕೆ ಉಚಿತವಾದ ಚಿತ್ರವನ್ನು ಆಯಬೇಕು. ನಿಗದಿತ ಪದವನ್ನು ಸಾಧನ ಹೊರಡಿಸುವುದರಿಂದ ಇದು ವ್ಯಕ್ತಿಯ ಸಹಾಯಕನಂತೆ ಕಾರ್ಯ ನಿರ್ವಹಿಸುತ್ತದೆ. ದಿನನಿತ್ಯದ ವ್ಯವಹಾರಗಳಿಗೆ ಅಗತ್ಯ ಪದಗಳ ಸಂಗ್ರಹ ಹೊಂದಿದರೆ, ವ್ಯಕ್ತಿಯ ತೊಂದರೆ ಕಿರಿ ಕಿರಿ ಹುಟ್ಟಿಸದಂತೆ ಮಾಡಬಹುದು.ಈಗಾಗಲೇ ಮುನ್ನೂರು ಸಿಂಗಾಪುರಿಯನ್ನರು ಇದನ್ನು ಪ್ರಾಯೋಗಿಕವಾಗಿ ಬಳಸುತ್ತಿದ್ದಾರೆ.

ಹಗ್ಗದ ಗಂಟು ಬರವಣಿಗೆ?
ಒಂದೊಮ್ಮೆ ದಕ್ಷಿಣ ಅಮೆರಿಕಾದಲ್ಲಿ ಹೆಸರು ಮಾಡಿದ್ದ ಇಂಕಾ ನಾಗರೀಕತೆ ಇಕ್ವೆಡಾರ್‌ದಿಂದ ಚಿಲಿಯ ವರೆಗಿನ ಪ್ರದೇಶವನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿತ್ತು.ಗುಡ್ಡ ಬೆಟ್ಟಗಳ ನಡುವೆ ಉತ್ತಮ ರಸ್ತೆ ನಿರ್ಮಿಸಿದ ಖ್ಯಾತಿ ಇಂಕಾ ನಾಗರೀಕತೆಗೆ ಇದೆ. ಆದರೂ ಆ ಕಾಲದಲ್ಲಿ ಬರವಣಿಗೆ ಚಾಲ್ತಿಯಲ್ಲಿದ್ದುದಕ್ಕೆ ಯಾವುದೇ ದಾಖಲೆಗಳಾಗಲಿ, ಶಿಲಾಶಾಸನಗಳಾಗಲೀ ಇಲ್ಲ. ಆದರೆ ವಿಚಿತ್ರ ಗಂಟುಗಳುಳ್ಳ ಖೀಪೂ ಎಂಬ ಹಗ್ಗದ ಕುಣಿಕೆಗಳು ಕಂಡುಬಂದಿವೆ. ಈ ಗಂಟುಗಳು ಯಾವುದೋ ಸಂದೇಶ ಹೊಂದಿದೆ ಎಂದು ವಾದಿಸುವವರು ಇದ್ದರು ಈಗ ಸಂಶೋಧಕರೋರ್ವರು ಇದರ ಹಿಂದಿನ ರಹಸ್ಯ ಬಿಡಿಸುವ ಪ್ರಯತ್ನ ಮಾಡಿ ಸಂಶೋಧನಾ ಪ್ರಬಂಧವನ್ನು ಮಂಡಿಸಿದ್ದಾರೆ.
*ಅಶೋಕ್‌ಕುಮಾರ್‍ ಎ

Tuesday, January 02, 2007

ಕಂಪ್ಯೂಟರ್‍ ಬಳಸಿ ಸಹಭೋಜನ!

ಕಂಪ್ಯೂಟರ್‍ ಬಳಸಿ ಸಹಭೋಜನ!
ಕುಟುಂಬಿಕರ ಜತೆ ಸಹಭೋಜನ ಮಾಡುವುದು ವೃದ್ಧರ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಎನ್ನುವುದು ನಿಮಗೆ ತಿಳಿದಿರಬಹುದು.ಆದರೆ ಈಗಿನ ಕಾಲಘಟ್ಟದಲ್ಲಿ ಹೆತ್ತವರು ಮತ್ತು ಮಕ್ಕಳು ಬೇರೆ ಬೇರೆ ಕಡೆ ವಾಸವಾಗಿರಬೇಕಾದ ಪರಿಸ್ಥಿತಿಯಿರುವುದು ಸಾಮಾನ್ಯ. ಹೀಗಿದ್ದರೂ ಅವರುಗಳು ಸಹಭೋಜನದ ಅನುಭವ ಪಡೆಯಬಹುದು.ಅಕ್ಸೆಂಚುವರ್‍ ಎಂಬ ಕಂಪೆನಿ ಜನರಿಗೆ ಸಹಭೋಜನ ಅನುಭವ ಪಡೆಯುವ ಕಂಪ್ಯೂಟರ್‍ ಆಧಾರಿತ ವ್ಯವಸ್ಥೆಯನ್ನು ಸಿದ್ಧಗೊಳಿಸಿದೆ. ಟಿವಿ,ಕಂಪ್ಯೂಟರ್‍,ಬ್ರಾಡ್‌ಬ್ರಾಂಡ್ ಸಂಪರ್ಕ ಮತ್ತು ವೆಬ್‌ಕ್ಯಾಮರಾದಂತಹ ಸಾಧನ ಇದಕ್ಕೆ ಬೇಕು.ವೃದ್ಧರು ಅಡುಗೆ ಮಾಡಿ, ಊಟಕ್ಕೆ ಸಿದ್ಧತೆ ನಡೆಸುತ್ತಿರುವಂತೆ, ಊಟದ ಕೋಣೆಯಲ್ಲಿಟ್ಟಿರುವ ಕ್ಯಾಮರಾದಿಂದ ಇದನ್ನರಿಯುವ ಕಂಪ್ಯೂಟರ್‍ ತಂತ್ರಾಂಶವೊಂದು ಅಂತರ್ಜಾಲ ಮೂಲಕ, ವೃದ್ಧನ ಕುಟುಂಬಿಕರಿಗೆ ಸೂಚನೆ ನೀಡುತ್ತದೆ.ಟಿವಿ ಅಥವಾ ಕಂಪ್ಯೂಟರ್‍ ಮೂಲಕ ಇದನ್ನರಿಯುವ ಕೌಟುಂಬಿಕರು,ತಮ್ಮ ಟಿವಿ ಚಾನೆಲ್ ಒಂದರಲ್ಲಿ ತಮ್ಮ ಹೆತ್ತವರು ಊಟಕ್ಕೆ ಅಣಿಯಾಗುತ್ತಿರುವುದನ್ನು ಟಿವಿ ಪರದೆಯಲ್ಲಿ ವೀಕ್ಷಿಸುತ್ತಾ, ತಾವೂ ಊಟಕ್ಕೆ ತೊಡಗಬೇಕು. ಅವರ ಚಿತ್ರಗಳು ಹಿರಿಯರ ಟಿವಿ ತೆರೆಯಲ್ಲಿ ಮೂಡತೊಡಗುತ್ತದೆ. ಪರಸ್ಪರರ ಮಾತುಗಳೂ ಕೇಳಿಸುವ ಧ್ವನಿ ವ್ಯವಸ್ಥೆಯೂ ಇದೆ.ಮಾತನಾಡುತ್ತಾ ಊಟ ಮಾಡಬಹುದು. ಏಕಾಂಗಿಯಾಗಿ ಊಟ ಮಾಡುವುದಕ್ಕಿಂತ ಹೆಚ್ಚು ಊಟವನ್ನು ಹಿರಿಯರು ಮಾಡುವುದು ಬಹುತೇಕ ನಿಶ್ಚಿತ!
ಕಂಪ್ಯೂಟರ್‍ ಬಳಸಲು ಅಂಜುವವರಿಗೂ ಅನುಕೂಲಕರವಾದ ರೀತಿ ಈ ವ್ಯವಸ್ಥೆ ಇರುವುದು ಕಂಪ್ಯೂಟರ್‍ ಸಾಕ್ಷರರಲ್ಲದವರಿಗೂ ಅನುಕೂಲ ಒದಗಿಸಲಿದೆ. ಪ್ರತಿ ಮನೆಗೂ ಈ ವ್ಯವಸ್ಥೆ ಅಳವಡಿಸಲು ಒಂದು ಸಾವಿರ ಡಾಲರ್‍ ವರೆಗೆ ಖರ್ಚು ಬರಬಹುದು ಎಂಬ ಅಂದಾಜಿದೆ.

ಹೈಟೆಕ್ ಬಳಸಿ ಮೋಸದಾಟ!
ಆಟವನ್ನು ಕ್ರೀಡಾ ಭಾವನೆಯಿಂದ ಆಡುವುದು ಬಿಟ್ಟು ಮೋಸದಾಟ ಆಡಿ ಆಟದ ಹೆಸರಿಗೆ ಮಸಿ ಬಳಿಯುವವರ ಬಗ್ಗೆ ಸಾಕಷ್ಟು ಕೇಳಿದ್ದೇವೆ. ಚದುರಂಗ ಪಟುವೋರ್ವ ಬ್ಲೂಟೂತ್ ಎಂಬ ನಿಸ್ತಂತು ತಂತ್ರಜ್ಞಾನ ಬಳಸಿ, ನಡೆಯ ಬಗ್ಗೆ ಇತರರ ಸಹಾಯ ಪಡೆದು ಹತ್ತು ವರ್ಷಾವಧಿಗೆ ಆಟದಿಂದ ಹೊರಬಿದ್ದಿದ್ದಾನೆ.ಉಮಾಕಾಂತ ಶರ್ಮಾ ಎಂಬ ಹೆಸರಿನ ಆಟಗಾರ ಕಳೆದ ಒಂದೂವರೆ ವರ್ಷದಿಂದ ಕ್ಷಿಪ್ರ ನಡೆಯ ಚೆಸ್‌ ಪಂದ್ಯಾಟದಲ್ಲಿ ಅದ್ಭುತ ಪ್ರದರ್ಶನ ನೀಡಿ, ರಾಷ್ಟ್ರೀಯ ಪಂದ್ಯಾಟಕ್ಕೂ ಅರ್ಹತೆ ಗಳಿಸಿದ್ದ. ಆತನ ದಿಢೀರ್‍ ಸಾಧನೆ ಹಲವರಿಗೆ ಅಚ್ಚರಿ ತಂದಿತ್ತು. ಟೋಪಿ ಧರಿಸಿ ಚದುರಂಗ ಆಡುವುದು ಆತನ ವೈಖರಿ. ಇತ್ತೀಚೆಗೆ ಕೂಟವೊಂದರಲ್ಲಿ ಆತನ ಹಾವಭಾವಗಳಿಂದ ಅನುಮಾನ ಬಂದು ತನಿಖೆ ನಡೆಸಿದಾಗ, ಆತನ ಟೋಪಿಯೊಳಗೆ ನಿಸ್ತಂತು ಸಾಧನ ಪತ್ತೆಯಾಯಿತು. ಅದರ ಮೂಲಕ ಆತ ತನ್ನ ಸ್ನೇಹಿತರಿಗೆ ಸಂದೇಶ ರವಾನಿಸುತ್ತಿದ್ದ. ಅವರು ಕಂಪ್ಯೂಟರ್‍ ಚೆಸ್ ಆಟದ ಸಹಾಯ ಪಡೆದು, ಅತನಿಗೆ ನಡೆಗಳ ಬಗ್ಗೆ ಸಲಹೆ ರವಾನಿಸುತ್ತಿದ್ದರು ಎನ್ನುವ ಅಂಶ ಬೆಳಕಿಗೆ ಬಂತು.

ತರಗತಿಯಿಲ್ಲದೆ ಪದವಿ ಕೋರ್ಸು
ಹೊಸ ಮೀಸಲಾತಿ ನೀತಿಯಿಂದಾಗಿ ಕಾಲೇಜುಗಳಲ್ಲಿ ಅಧಿಕ ಪ್ರವೇಶಾವಕಾಶ ಒದಗಿಸುವುದು ವಿಶ್ವವಿದ್ಯಾಲಯ ದತ್ತಿ ಆಯೋಗ(ಯುಜಿಸಿ)ಕ್ಕೆ ಅನಿವಾರ್ಯವಾಗಿ ಬಿಟ್ಟಿದೆ. ಮೂಲಸೌಕರ್ಯಗಳಿಲ್ಲದೆ ದಿಢೀರ್‍ ಅಧಿಕ ಪ್ರವೇಶಾವಕಾಶ ಒದಗಿಸಲಸಾಧ್ಯ ಎನ್ನುವುದು ಪ್ರಾಯೋಗಿಕ ಸಮಸ್ಯೆ. ಹಾಗಾಗಿ ಯುಜಿಸಿ ತನ್ನ ಶೈಕ್ಷಣಿಕ ಚಾನೆಲ್ ಎಜುಸಾಟನ್ನು ಬಳಸುವ ಯೋಚನೆಯಲ್ಲಿದೆ. ಎಜುಸಾಟ್ ಎನ್ನುವುದು ಉಪಗ್ರಹ ಆಧಾರಿತ ಶೈಕ್ಷಣಿಕ ಟಿವಿ ಕಾರ್ಯಕ್ರಮಗಳನ್ನು ಕಾಲೇಜಿನಲ್ಲಿನ ಟಿವಿಯಲ್ಲಿ ಪ್ರಸಾರ ಮಾಡುವ ವ್ಯವಸ್ಥೆ.ಇದರ ಮೂಲಕ ತಜ್ಞರು ನೀಡುವ ಪಾಠವನ್ನು ಟಿವಿ ಮುಂದೆ ಆಸೀನರಾಗಿರುವ ವಿದ್ಯಾರ್ಥಿಗಳಿಗೆ ತಲುಪಿಸಲು ಸಾಧ್ಯ. ಇಂತಹ ಮಿಥ್ಯಾ ತರಗತಿಗಳ ಮೂಲಕ ವಿದ್ಯಾರ್ಥಿಗಳಿಗೆ ಕಲಿಸಿ, ಅವರಿಗೆ ಶಿಕ್ಷಣ ನೀಡುವುದು ಯುಜಿಸಿಯ ಯೋಜನೆ. ಪರೀಕ್ಷೆಗಳನ್ನೂ ಕಂಪ್ಯೂಟರ್‍ ಮೂಲಕ ಆನ್‌ಲೈನ್‌ನಲ್ಲಿ ನಡೆಸಿದರೆ ಹೇಗೆ ಎನ್ನುವುದು ಇನ್ನೊಂದು ಚಿಂತನೆ. ಈಶಾನ್ಯ ರಾಜ್ಯಗಳ ಎಪ್ಪತ್ತು ಕಾಲೇಜುಗಳು ಎಜುಸಾಟ್ ಸೌಲಭ್ಯ ಹೊಂದಿವೆ. ಯುಜಿಸಿಯು ಒಂದೂವರೆ ಸಾವಿರ ಕೋರ್ಸುಗಳಿಗೆ ಈ ರೀತಿಯ ತರಬೇತಿ ನೀಡಲು ಸಂಪನ್ಮೂಲ ಹೊಂದಿದೆ.

ಕದ್ದರೆ ಕಿರುಚುವ ಫೋನ್!
ಸೆಲ್‌ಫೋನ್‌ನ್ನು ಯಾರಾದರೂ ಕದ್ದರೆ ನಿಮ್ಮ ಪರಿಸ್ಥಿತಿಯನ್ನು ಊಹಿಸಿಕೊಳ್ಳಿ. ಫೋನ್‌ನ ದುಬಾರಿ ಬೆಲೆ ನಿಮ್ಮನ್ನು ಕಂಗೆಡಿಸದಿರಬಹುದು. ಆದರೆ ಅದರಲ್ಲಿರುವ ದೂರವಾಣಿ ಸಂಖ್ಯೆಗಳು,ಕಾರ್ಯಕ್ರಮಗಳು,ಕ್ರೆಡಿಟ್‌ಕಾರ್ಡ್‌ನಂತಹ ವಿವರಗಳು ನಿಮ್ಮ ಕೈಬಿಟ್ಟು ಹೋಗುವುದು ನಿಮ್ಮ ಎದೆಬಡಿತ ಏರಿಸಲು ಸಾಕು.ಕಳೆದುಹೋದ ಸೆಲ್‌ಫೋನ್ ಪತ್ತೆ ಹಚ್ಚಲು ಅಥವಾ ಅದನ್ನು ನಿಷ್ಕ್ರಿಯಗೊಳಿಸುವಲ್ಲಿ ನೆರವಾಗುವ ವಿಧಾನಗಳ ಬಗ್ಗೆ ಸಂಶೋಧನೆ ನಡೆಯುತ್ತಿದೆ.
ಹೊಸ ವಿಧಾನದಲ್ಲಿ ಸೆಲ್‌ಫೋನ್ ಕಳವಾದ ಕೂಡಲೇ ನೀವು ಮೊದಲೇ ನೋಂದಾಯಿಸಿದ ಸಂಖ್ಯೆಗೆ ದೂರವಾಣಿ ಕರೆ ಮಾಡಬೇಕು. ತಕ್ಷಣ ಕಳವಾದ ಮೊಬೈಲ್ ಹ್ಯಾಂಡ್‌ಸೆಟ್‌ಗೆ ಸೂಚನೆ ಹೋಗಿ,ಅದು ಕಿರುಚುವ ಸದ್ದನ್ನು ಹೊರಹೊಮ್ಮಿಸುತ್ತದೆ.ಜತೆಗೆ ಹ್ಯಾಂಡ್‌ಸೆಟ್ ನಿಷ್ಕ್ರಿಯವಾಗಿಬಿಡುತ್ತದೆ.
ಫಿನ್ಲೆಂಡಿನಲ್ಲಿ ವಿಜ್ಞಾನಿಗಳು ಸಂವೇದಕವೊಂದನ್ನು ತಯಾರಿಸಲು ಪ್ರಯತ್ನಿಸುತ್ತಿದ್ದಾರೆ. ಅದು ಧ್ವನಿಯನ್ನು ಗುರುತಿಸಬಲ್ಲುದು ಮತ್ತು ನಡಿಗೆಯ ಶೈಲಿಯನ್ನೂ ಗುರುತಿಸಬಲ್ಲುದು. ಸೆಲ್‌ಫೋನಿಗೆ ಇದನ್ನು ಅಳವಡಿಸಿ, ಬಳಸುವವನ ನಡಿಗೆ ಮತ್ತು ಧ್ವನಿಯನ್ನು ಸೆಟ್ ಗುರುತಿಸುವಂತೆ ಮಾಡುವುದು ಸಂಶೋಧಕರ ಆಲೋಚನೆ. ಬೇರೆ ಯಾರಾದರೂ ಉಪಯೋಗಿಸಲು ಪ್ರಯತ್ನಿಸಿದರೆ, ಅದು ಪಾಸ್‌ವರ್ಡ್ ಕೇಳುತ್ತದೆ.
ಕೆನಡಾದ ಸಂಶೋಧಕರು ಸೆಟ್ ಮತ್ತದನ್ನಿರಿಸುವ ಚೀಲದ ಮಧ್ಯೆ ನಿಸ್ತಂತು ಸಂಪರ್ಕ ಏರ್ಪಡಿಸಿ, ಅವುಗಳು ಬೇರ್ಪಟ್ಟಾಗ ಹ್ಯಾಂಡ್‌ಸೆಟ್ ಪಾಸ್‌ವರ್ಡ್ ವಿನಃ ಕೆಲಸ ಮಾಡದಂತೆ ಮಾಡುವ ಪ್ರಯತ್ನದಲ್ಲಿದ್ದಾರೆ.
ಜಪಾನಿಯರು ಜಿಪಿಎಸ್ ಅಳವಡಿಸಿದ ಸೆಟ್‌ನ್ನು ಬಳಸಿ, ಅದಿರುವ ಸ್ಥಳ ಪತ್ತೆ ಹಚ್ಚಲು ಸಾಧ್ಯವಾಗುವಂತೆ ಮಾಡುತ್ತಿದ್ದಾರೆ.
*ಅಶೋಕ್‌ಕುಮಾರ್‍ ಎ
 
googledc7e93ba1a7703ae.html