Saturday, April 21, 2007

ಹೆಣ ಕೊಯ್ಯದೆ ಕಲಿಯುವ ವೈದ್ಯ ವಿದ್ಯಾರ್ಥಿಗಳು


ವೈದ್ಯ ವಿದ್ಯಾರ್ಥಿಗಳು ಹೆಣ ಕೊಯ್ಯುವುದು ಕಲಿಕೆಯ ಮುಖ್ಯ ಭಾಗವೆನ್ನುವುದು ಎಲ್ಲರಿಗೂ ತಿಳಿದ ವಿಷಯ.ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಬೇಕಾದ ಹೆಣವನ್ನು ಪಡೆಯಲು ಕಾಲೇಜುಗಳು ಹರಸಾಹಸ ಮಾಡಬೇಕಾಗುತ್ತದೆ. ನಿರ್ಗತಿಕರ, ದಿಕ್ಕಿಲ್ಲದವರ ಹೆಣಗಳಿಗಾಗಿ ಕಾಯಬೇಕಾಗುತ್ತದೆ. ತಮ್ಮ ಶರೀರವನ್ನು ಇಂತಹ ಕಲಿಕೆಗೆ ದಾನ ಮಾಡುವ ಪ್ರವೃತ್ತಿ ಈಗೀಗ ಕಾಣಬರುತ್ತಿದ್ದರೂ ಅದಿನ್ನೂ ಬೆಳೆಯಬೇಕಾಗಿದೆ.ಹೆಣಗಳೂ ಸಿಕ್ಕರೂ, ಅದಷ್ಟೇ ಕಲಿಕೆಗೆ ಸಾಕಾಗದು. ಉದಾಹರಣೆಗೆ ತುರ್ತು ಸಂದರ್ಭಗಳನ್ನು ಎದುರಿಸುವುದು ಹೇಗೆ ಎಂಬುದರ ತರಬೇತಿಗೆ ಹೆಣಗಳಷ್ಟೇ ಸಾಕಾಗವು. ಹಾಗೆಂದು ತುರ್ತು ಸ್ಥಿತಿಯಲ್ಲಿರುವ ರೋಗಿಗಳನ್ನು ವಿದ್ಯಾರ್ಥಿಗಳ ಅಭ್ಯಾಸಕ್ಕೆ ಕೊಡುವ ಹಾಗೂ ಇಲ್ಲವಲ್ಲ.ಇದೇ ಮಾತು ಪಶು ವೈದ್ಯಕೀಯ ವಿದ್ಯಾರ್ಥಿಗಳಿಗೆ ಅನ್ವಯಿಸುತ್ತದೆ.
ರೆಸ್ಕ್ಯೂ ಕ್ರಿಟರ್ಸ್ ಬ್ರಾಂಡಿನ ಪ್ರಾಣಿಗಳ ಪ್ರತಿಕೃತಿಗಳು ಇದೀಗ ಅಮೆರಿಕಾದ ಹಲವು ಪಶುವೈದ್ಯಕೀಯ ಕಾಲೇಜುಗಳಲ್ಲಿ ವಿದ್ಯಾಥಿಗಳ ತರಬೇತಿಗೆ ಬಳಕೆಯಾಗುತ್ತಿವೆ. ಕುದುರೆ,ನಾಯಿ,ಬೆಕ್ಕು ಹೀಗೆ ತರಹೇವಾರಿ ಪ್ರಾಣಿಗಳ ಪ್ರತಿಕೃತಿಗಳು ಇವರಲ್ಲಿ ಲಭ್ಯ. ಪ್ರಾಣಿಗಳ ಪ್ರತಿಕೃತಿಗಳನ್ನು ಪ್ಲಾಸ್ಟಿಕ್‍ವಸ್ತುವಿನಿಂದ ತಯಾರಿಸಲಾಗಿದ್ದು,ಇವುಗಳ ದೇಹಕ್ಕೆ ಕೃತಕ ರೋಮದ ಹೊದಿಕೆ ನೈಜ ಪ್ರಾಣಿಯ ಭ್ರಮೆ ಹುಟ್ಟಿಸುತ್ತವೆ. ಶ್ವಾಸನಾಳಗಳ ವ್ಯವಸ್ಥೆಯಿರುವ ಪ್ರತಿಕೃತಿಗಳೂ ಲಭ್ಯ.ಇಂತವುಗಳಲ್ಲಿ ಯಂತ್ರಗಳನ್ನು ಅಳವಡಿಸಿ, ಕೃತಕ ಶ್ವಾಸೋಚ್ಛಾರದ ವ್ಯವಸ್ಥೆಯನ್ನೂ ಕಲ್ಪಿಸಿ,ವಿದ್ಯಾರ್ಥಿಗಳಿಗೆ ನೈಜ ಅನುಭವ ನೀಡಬಹುದು. ಇನ್ನು ಕೆಲವು ಪ್ರತಿಕೃತಿಗಳಲ್ಲಿ ಅಣಕು ರಕ್ತ ಪರಿಚಲನೆಯ ವ್ಯವಸ್ಥೆಯೂ ಇದೆ.ಹೆಣ ಸಿಗಿಯುವ ತರಬೇತಿ ಮಾತ್ರಾ ಕೊಡುವುದರ ಬದಲು,ಚಿಕಿತ್ಸೆಗೆ ಅವುಗಳನ್ನು ಹೇಗೆ ಮಲಗಿಸಬೇಕು ಎಂಬುದನ್ನೂ ತಿಳಿದುಕೊಂಡು,ಅದೇ ರೀತಿ ದೇಹವನ್ನು ಇರಿಸಲೂ ತರಬೇತಿ ನೀಡಬಹುದು. ಪ್ರಾಣಿಗಳ ದೇಹದ ಭಾರದದಷ್ತೇ ಈ ಪ್ರತಿಕೃತಿಗಳ ದೇಹಭಾರವೂ ಇರುವಂತೆ ಇವನ್ನು ನಿರ್ಮಿಸುವ ಮೂಲಕ ಇದು ಸಾಧ್ಯವಾಗಿದೆ.ಜರ್ನಲ್ ಆಫ್ ಅಮೆರಿಕನ್ ವೆಟರಿನರಿ ಮೆಡಿಕಲ್ ಅಸೋಸಿಯೇಷನ್ ತನ್ನ ಅಧ್ಯಯನದ ಮೂಲಕ, ಪ್ರಾಣಿಗಳು ಬದಲು ಪ್ರತಿಕೃತಿಗಳ ಬಳಕೆ ವಿದ್ಯಾರ್ಥಿಗಳಿಗೆ ಯಾವ ಅಡ್ಡಿಯನ್ನೂ ಮಾಡಿಲ್ಲ.ಅವರ ಕಲಿಕೆಯ ಮಟ್ಟ ಬಾಧಿತವಾಗಿಲ್ಲ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದೆ.
http://froggy.lbl.gov.virtual/ ಅಂತರ್ಜಾಲ ತಾಣದಲ್ಲಿ ಕಪ್ಪೆಯನ್ನು ಕೊಯ್ಯುವುದನ್ನು ಅಭ್ಯಸಿಸಲು ಮಿಥ್ಯಾ ಕಪ್ಪೆಯನ್ನು ಲಭ್ಯವಾಗಿಸಲಾಗಿದೆ. ರಕ್ತದ ಹನಿಯೂ ಬರದೆ,ಕಪ್ಪೆಯನ್ನು ಬೇಕಷ್ಟು ಸಲ ಸಿಗಿಯಬಹುದು.ಪ್ರಾಣಿ ದಯಾ ಸಂಘಗಳಿಗೆ ಖುಷಿ ಕೊಡದೆ ಇರದು ಅಲ್ಲವೇ?

ಡೈನೋಸಾರ್‌ಗಿಂತ ಹಳೆಯ ಮರ ಹೇಗಿತ್ತು?
ಭೂಮಿಯ ಮೇಲೆ ಇದುವರೆಗೆ ಪತ್ತೆಯಾದ ಅತ್ಯಂತ ಹಳೆಯ ಮರ ಮೂವತ್ತು ಅಡಿ ಎತ್ತರವಾಗಿತ್ತು,ಜರಿ ಗಿಡದ ಜಾತಿಯದ್ದು.ಪ್ರವಾಹದ ವೇಳೆ ನ್ಯೂಯಾರ್ಕಿನ ಸಮೀಪದ ಗಿಲ್ಬೋವಾದಲ್ಲಿ ಇದು ಪತ್ತೆಯಾಯಿತು. ಉತ್ಖತನದ ಬಳಿಕ ಮರದ ಶಿರೋಭಾಗ ಮತ್ತು ಕಾಂಡದ ಪಳೆಯುಳಿಕೆಗಳು ಪತ್ತೆಯಾಗಿ,ಇಡಿ ಮರ ಹೇಗಿತ್ತು,ಅದು ಯಾವ ಜಾತಿಯದ್ದು ಎನ್ನುವುದರ ಪೂರ್ಣ ಚಿತ್ರಣ ಸಂಶೋಧಕರಿಗೆ ಲಭಿಸಿತು.ಸುಮಾರು ನಾಲ್ಕುನೂರು ದಶಲಕ್ಷ ವರ್ಷ ಹಳೆಯ ಮರವಿದೆಂದು ನಂಬಲಾಗಿದೆ.ಈ ಮರ ಹೂ ಬಿಡುವ ಜಾತಿಯಲ್ಲದಲ್ಲವಂತೆ.

ಕೊಲೆಯಾದ ಪ್ರೊಫೆಸರ್ ಸಂಶೋಧಿಸಿದ್ದ ನಡಿಗೆಗೆ ಸಹಾಯಕ ಸಾಧನ
ವರ್ಜೀನಿಯ ಟೆಕ್ ವಿಶ್ವವಿದ್ಯಾಲಯದಲ್ಲಿ ಕೊರಿಯಾದ ವಿಕ್ಷಿಪ್ತ ವಿದ್ಯಾರ್ಥಿಯ ಗುಂಡೇಟಿಗೆ ಬಲಿಯಾದ ವ್ಯಕ್ತಿಗಳಲ್ಲಿ ಕೆವಿನ್ ಗ್ರೆನಾಟಾ ಕೂಡಾ ಇದ್ದರು.ಸಂಶೋಧನಾ ಪ್ರವೃತ್ತಿಯ ಈತ ಇತ್ತೀಚೆಗೆ ಸ್ನಾಯುಸಂಬಂಧಿ ರೋಗದಿಂದ ಪೀಡಿತರಾಗಿ ನಡೆಯಲು ಸಾಧ್ಯವಾಗದ ರೋಗಿಗಳಿಗೆ ನಡೆಯಲು ಅನುವು ಮಾಡುವ ಸಾಧನವನ್ನು ತಯಾರಿಸಿದ್ದರು.

ಅಂತರ್ಜಾಲಪುಟದ ಜನಪ್ರಿಯತೆ ಅಳೆಯುವುದು ಹೇಗೆ?
ಅಂತರ್ಜಾಲ ಪುಟಗಳು ಜನಪ್ರಿಯವಾದರೆ,ಅವುಗಲ್ಲಿ ಕಾಣಿಸಿಕೊಳ್ಳುವ ಜಾಹೀರಾತುಗಳು ಹೆಚ್ಚು ಜನರನ್ನು ತಲುಪುತ್ತವೆ. ಸಹಜವಾಗಿ ಜಾಹೀರಾತುದಾರರು ಹೆಚ್ಚು ಹಣ ತೆರಬೇಕಾಗುತ್ತದೆ. ಆದರೆ ಅಂತರ್ಜಾಲಪುಟದ ಜನಪ್ರಿಯತೆಯನ್ನು ಅಳೆಯುವ ಮಾನದಂಡ ಯಾವುದು? ಸಾಮಾನ್ಯವಾಗಿ ಎಷ್ಟು ಜನರು ಅಂತರ್ಜಾಲ ಪುಟ ವೀಕ್ಷಣೆ ಮಾಡುತ್ತಾರೆ ಎನ್ನುವುದು ಒಂದು ಮಾನದಂಡ.ಜಾಲಿಗ ಅಂತರ್ಜಾಲ ಪುಟವನ್ನು ಮೊದಲ ಬಾರಿ ವೀಕ್ಷಿಸಿದಾಗ, ಆತನನ್ನು ಮುಂದಿನ ಬಾರಿಯೂ ಗುರುತಿಸಲು ಅನುಕೂಲವಾಗುವಂತೆ ಕಂಪ್ಯೂಟರಿನಲ್ಲಿ ಕುಕಿ ಎಂಬ ಮಾಹಿತಿ ಕಡತವನ್ನು ಅಂತರ್ಜಾಲ ತಾಣಗಳ ಸರ್ವರ್ ಕಂಪ್ಯೂಟರುಗಳು ಇಡುವುದಿದೆ. ಕುಕಿಯೊಂದನ್ನು ಬಳಕೆದಾರನ ಕಂಪ್ಯೂಟರಿನಲ್ಲಿ ಬರೆಯಲಾಯಿತೆಂದರೆ,ಅದು ಹೊಸ ಬಳಕೆದಾರ ಸಿಕ್ಕಿದ ಸೂಚನೆ ಎಂದು ತಿಳಿಯಬಹುದು. ಆದರೆ ಇದರಲ್ಲಿ ಸಮಸ್ಯೆಯೂ ಇದೆ. ಕುಕಿಯನ್ನು ಕಂಪ್ಯೂಟರಿನಿಂದ ತೆಗೆದು ಹಾಕುವುದು ಸಾಧ್ಯ. ಆಗ ಮತ್ತೆ ಕುಕಿಯನ್ನು ಸ್ಥಾಪಿಸುವ ಪ್ರಮೇಯ ಬರುತ್ತದೆ.ಈತ ಹೊಸ ಬಳಕೆದಾರ ಎಂದು ಲೆಕ್ಕ ಹಾಕಿದರೆ ಅದು ತಪ್ಪು. ಇಂತಹ ಉತ್ಪ್ರೇಕ್ಷಿತ ಲೆಕ್ಕದ ಫಲವಾಗಿ ಹೆಚ್ಚಿನ ತಾಣಗಳು ನೀಡುವ ಲೆಕ್ಕ ನೈಜವಾದುದಾಗಿರದೆ, ಅತ್ಯಂತ ಉತ್ಪ್ರೇಕ್ಷಿತವಾಗಿರುವುದು ಕಂಡು ಬಂದಿದೆ. ಇದರ ಬದಲಾಗಿ ತಾಣದಲ್ಲಿ ಬಳಕೆದಾರನು ವ್ಯಯಿಸಿದ ಸಮಯದ ಮಾನಕವು ಹೆಚ್ಚು ಸೂಕ್ತವೆಂಬ ಅಭಿಪ್ರಾಯವೂ ಇದೆ.ಆದರೆ ಈ ಬಗೆಗೆ ಸಹಮತವಿನ್ನೂ ಮೂಡಿ ಬಂದಿಲ್ಲ. ಮೊದಲ ರೀತಿಯ ಲೆಕ್ಕದಲ್ಲಾದರೆ ಗೂಗಲ್ ಮೊದಲ ಸ್ಥಾನದಲ್ಲಿದ್ದರೆ, ಎರಡನೆಯ ರೀತಿಯ ಲೆಕ್ಕದಲ್ಲಿ ಇ-ಬೇ ಎನ್ನುವ ಹರಾಜು ತಾಣ ನಂಬರ್ ಒಂದು ಸ್ಥಾನ ಪಡೆದಿದೆ.

ವಿಕಿಪೀಡಿಯಾ ಈಗ ಸಿ.ಡಿ.ಯಲ್ಲಿ
ವಿಕಿಪೀಡಿಯಾ ಎನ್ನುವುದು ಅಂತರ್ಜಾಲದಲ್ಲಿ ಲಭ್ಯವಿರುವ ಜನರ ಸಹಯೋಗದಿಂದ ರಚಿತವಾದ ವಿಶ್ವಕೋಶವೆನ್ನುವುದು ಅಂತರ್ಜಾಲ ಜಾಲಿಗರಿಗೆಲ್ಲಾ ಗೊತ್ತಿರುವ ವಿಷಯ. ಈಗ ವಿಕಿಪೀಡಿಯಾದ ಆಯ್ದ ಅತ್ಯುತ್ತಮ ಲೇಖನಗಳ ಸಿಡಿ ಮಾರುಕಟ್ಟೆಗೆ ಬರಲಿದೆ.ಪಾಲಿಶ್ ಭಾಷೆಯ ಆಯ್ದ ಎರಡೂಕಾಲು ಲಕ್ಷಕ್ಕೂ ಹೆಚ್ಚು ಲೇಖನಗಳ ಡಿವಿಡಿಯೂ ಸದ್ಯದಲ್ಲೇ ಲಭ್ಯವಾಗಲಿದೆ. ಇದುವರೆಗೆ ಆನ್‍ಲೈನ್‍ನಲ್ಲಿ ಮಾತ್ರಾ ವಿಶ್ವಕೋಶವನ್ನು ಓದುವ ಸೌಲಭ್ಯವು ಲಭ್ಯವಿತ್ತು.
*ಅಶೋಕ್‌ಕುಮಾರ್ ಎ

Sunday, April 15, 2007

ವಿಡಿಯೋ ಆಟ ಆಡುವ ಮಾರುತಿ!



ಅಟ್ಲಾಂಟಾದ ಮೃಗಾಲಯದಲ್ಲಿ ಸುಮಾತ್ರಾದ ವಾನರಗಳಿಗೆ ವಿಡಿಯೋ ಗೇಂ ಆಡುವ ಸೌಭಾಗ್ಯ ಪ್ರಾಪ್ತವಾದರೆ,ಮೃಗಾಲಯಕ್ಕೆ ಬರುವ ಪ್ರವಾಸಿಗಳಿಗೆ ವಾನರನ ಮಂಗನಾಟದ ದರ್ಶನಭಾಗ್ಯ ಲಭಿಸುತ್ತದೆ! ಸುಮಾತ್ರಾದ ವಾನರ ಜಾತಿ ಒರಂಗುಟಾನ್‌ನ ಕೌಶಲ,ಕಲಿಕೆ ಮತ್ತಿತರ ವಿಷಯಗಳ ಬಗೆಗೆ ಅಭ್ಯಾಸ ಮಾಡುವ ಸಂಶೋಧಕರು ಮಾಡಿರುವ ವ್ಯವಸ್ಥೆಯಿದು.ವಾನರಗಳು ವಾಸವಾಗಿರುವ ಮರದ ಮೇಲೆಯೇ ವಿಡಿಯೋ ತೆರೆಯಿಟ್ಟಿದ್ದಾರೆ. ಇದು ಸ್ಪರ್ಶ ಸಂವೇದಿ ತೆರೆಯಾದ್ದರಿಂದ, ವಾನರಗಳ ಸ್ಪರ್ಶಕ್ಕೆ ದೃಶ್ಯಗಳಲ್ಲಿ ಬದಲಾವಣೆಯಾಗಬಹುದು. ಚಿತ್ರಗಳನ್ನು ತೋರಿಸಿ, ವಾನರವು ಒಂದೇ ರೀತಿ ಇರುವ ಎರಡು ಚಿತ್ರಗಳನ್ನು ಗುರುತಿಸಲು ಸಫಲವಾಗುತ್ತದೋ ಎಂಬುದನ್ನು ಪರೀಕ್ಷಿಸುವಂತಹ ಆಟಗಳನ್ನು ಅದರಿಂದ ಆಡಿಸಿ, ವಾನರಗಳು ತಮ್ಮ ಅನುಭವದಿಂದ ಕಲಿಯುತ್ತವೋ ಎಂಬುವುದನ್ನು ಅಭ್ಯಸಿಸುವುದು ಸಂಶೋಧಕರ ಪ್ರಯತ್ನ. ಜತೆಗೆ ವಾನರಗಳ ಕ್ಲೋಸ್ ಅಪ್ ಚಿತ್ರಗಳು ಪ್ರವಾಸಿಗಳ ಮನತಣಿಸುವಂತೆ ಇಲ್ಲಿ ಕ್ಯಾಮರಾ ಮೂಲಕ ಅವುಗಳ ಚಟುವಟಿಕೆಗಳನ್ನು ಸೆರೆ ಹಿಡಿದು, ತೋರಿಸುವ ವ್ಯವಸ್ಥೆಯೂ ಇಲ್ಲಿದೆ.

ಸೂಡಾನ್‌ನ ನರಮೇಧ ಬಹಿರಂಗ ಪಡಿಸಿದ ಗೂಗಲ್ ಅರ್ಥ್


ಗೂಗಲ್ ಅರ್ಥ್ ತಂತ್ರಾಂಶವು ಇಪ್ಪತ್ತು ಕೋಟಿ ಕಂಪ್ಯೂಟರುಗಳಲ್ಲಿ ಅನುಸ್ಥಾಪಿತವಾಗಿದೆ. ಗೂಗಲ್‌ನ ಈ ಜನಪ್ರಿಯ ಸೇವೆಯ ಮೂಲಕ ಉಪಗ್ರಹಗಳ ಮೂಲಕ ತೆಗೆದ ಮೂರು ಆಯಾಮದ ಭೂಮಿಯ ಚಿತ್ರಗಳನ್ನು ಬಳಸಿಕೊಂಡು ಸೂಡಾನಿನಲ್ಲಿ ಕಳೆದ ನಾಲ್ಕು ವರ್ಷಗಳಿಂದೀಚೆಗೆ ನಡೆಯುತ್ತಿರುವ ನರಮೇಧ ಮತ್ತು ಆಸ್ತಿ-ಪಾಸ್ತಿಗಳಿಗೆ ಹಾನಿಯನ್ನು ಗೂಗಲ್ ಬಯಲು ಪಡಿಸಿ, ಜನಮತವನ್ನು ರೂಪಿಸಿದೆ. ಸುಮಾರು ಎರಡು ಲಕ್ಷ ಜನರ ಮಾರಣ ನಡೆದಿರುವ ಸೂಡಾನ್‌ನ ಸಹಸ್ರಾರು ಹಳ್ಳಿಗಳು ನಾಶವಾದದ್ದನ್ನು ಗೂಗಲ್ ಅರ್ಥ್‌ನ ಮ್ಯಾಪ್‌ಗಳು ತೋರಿಸುತ್ತವೆ. ಲಕ್ಷಕ್ಕೂ ಅಧಿಕ ಮನೆಗಳು ನೆಲಸಮವಾಗಿವೆ. ಮಿಲಿಯಗಟ್ಟಲೆ ಜನರು ಗುಳೇ ಹೋಗಿದ್ದಾರೆ. ಸೈನ್ಯ ಮತ್ತು ಸರಕಾರದ ವಿರೋಧಿಗಳ ನಡುವಿನ ಸಂಘರ್ಷ ತಾರಕಕ್ಕೇರಿದೆ.ಸೂಡಾನಿನ ಈ ಪ್ರದೇಶವನ್ನು ಡಾರ್ಫರ್‍ ಪ್ರದೇಶ ಎಂದು ಗೂಗಲ್ ಗುರುತಿಸಿದೆ. ಈ ಕೆಲಸದಲ್ಲಿ ಗೂಗಲ್‌ಗೆ ಸಹಯೋಗ ನೀಡಿರುವ ಅಮೆರಿಕಾದ ಹೋಲೋಕಾಸ್ಟ್ ಮೆಮೋರಿಯಲ್ ಮ್ಯೂಸಿಯಂ.

ಪುಟವನ್ನು ಬ್ರೈಲ್ ಲಿಪಿಗೆ ಪರಿವರ್ತಿಸಿ ಕೊಡುವ ಸೇವೆ
ರೊಬೋಬ್ರೈಲ್ ಎನ್ನುವ ಡ್ಯಾನಿಶ್ ಕಂಪೆನಿಯು ಅಂಧರಿಗೆ ವಿನೂತನ ಸೇವೆ ನೀಡುತ್ತಿದೆ. ಯಾವುದೇ ಪದಸಂಸ್ಕಾರಕ ತಂತ್ರಾಂಶದ ಕಡತವನ್ನು ಅಥವ ಅಂತರ್ಜಾಲ ಪುಟವನ್ನು ಕಂಪೆನಿಯ ಇ-ಮೇಲ್ ವಿಳಾಸಕ್ಕೆ ಕಳುಹಿಸಿದರೆ, ಅದರ ಎಂಪಿತ್ರೀ ಕಡತ ಅಥವ ಇಲೆಕ್ಟ್ರಾನಿಕ್ ಬ್ರೈಲ್ ಲಿಪಿಯ ಕಡತವಾಗಿ ಬದಲಾಯಿಸಿ ಮರಳಿಸುವ ಸೇವೆಯನ್ನು ಕಂಪೆನಿಯು ಉಚಿತವಾಗಿ ನೀಡುತ್ತದೆ. ಎಂಪಿತ್ರಿ ಕಡತವನ್ನು ನುಡಿಸಿ,ಆಲಿಸಬಹುದು. ಬ್ರೈಲ್ ಲಿಪಿ ಕಡತವನ್ನು ಬಳಸಲು ಸಾಧನವೊಂದರ ಅವಶ್ಯಕತೆಯಿದೆ.ಸಾಧನವು ಹಲವು ಪಿನ್‌ಗಳನ್ನ ಹೊಂದಿದ್ದು, ಬ್ರೈಲ್ ಲಿಪಿಯಲ್ಲಿ ಅಕ್ಷರವನ್ನು ಮೂಡಿಸಿ, ಸ್ಪರ್ಶದ ಮೂಲಕ, ಅಕ್ಷರವನ್ನು ಅರಿಯಲು ಅವಕಾಶವಾಗುತ್ತದೆ.ಮುಂದೆ ಪಿಡಿಎಫ್ ಕಡತಗಳಿಗೂ ಈ ಸೇವೆ ಒದಗಿಸಲು ಕಂಪೆನಿ ತಯಾರಿ ನಡೆಸುತ್ತಿದೆಯಂತೆ.

ಶೌಚಾಲಯದ ಮೂಲಕ ಅಂತರ್ಜಾಲ?
ಗೂಗಲ್ ಕಳೆದ ಮಾಸಾಂತ್ಯದ ದಿನ ಪತ್ರಿಕಾ ಗೋಷ್ಠಿ ನಡೆಸಿತು. ಗೂಗಲ್ ಕಂಪೆನಿಯ ಪತ್ರಿಕಾ ಗೋಷ್ಠಿ ಎಂದರೆ,ಏನಾದರೂ ಹೊಸ ಸೇವೆ ಆರಂಭಿಸುವ ಬಗೆಗೆ ಮಾಹಿತಿ ಎನ್ನುವುದು ಖಾತರಿ.ಅಂದೂ ಕೂಡಾ ಹಾಗೇ ಆಯಿತು. ಶೌಚಾಲಯದ ಪೈಪು ವ್ಯವಸ್ಥೆಯ ಮೂಲಕ ಅಂತರ್ಜಾಲ ಒದಗಿಸುವ ಸೇವೆ ಆರಂಭಿಸಲಿರುವುದಾಗಿ ಕಂಪೆನಿಯ ಹಿರಿಯ ಅಧಿಕಾರಿ ವಿವರಣೆ ನೀಡಿದರು. ಅದರ ಜತೆ, ಈ ಸೇವೆ ಪಡೆಯಲು ಯಾವ ಅಂತರ್ಜಾಲ ತಾಣವನ್ನು ಬಳಸಬೇಕು, ಅನುಸರಿಸಬೇಕಾದ ಕ್ರಮ ಯಾವುದು ಎನ್ನುವುದರ ಬಗೆಗೆ ವಿವರಣೆಯೂ ಇತ್ತು. ನಂತರವಷ್ಟೇ ಇದು ಎಪ್ರಿಲ್‌ಫೂಲ್ ಹುಸಿಸುದ್ದಿ ಎನ್ನುವುದು ಪತ್ರಕರ್ತರಿಗೆ ತಿಳಿಯಿತು.

ಗೂಗಲ್‌ನಿಂದ ಪಾವತಿಸೇವೆ
ಇಂಗ್ಲೆಂಡಿನ ಬಳಕೆದಾರರಿಗೆ ಇದುವರೆಗೆ ಲಭ್ಯವಾಗಿಲ್ಲದೆ ಸೇವೆಯನ್ನು ಗೂಗಲ್ ಈಗ ನೀಡಲಾರಂಭಿಸಿದೆ. ಗೂಗಲ್ ಚೆಕೌಟ್ ಎಂಬ ಈ ವ್ಯವಸ್ಥೆ ಇ-ವಾಣಿಜ್ಯದ ಮೂಲಕ ವಸ್ತುಗಳನ್ನು ಆನ್‌ಲೈನ್‌ನಲ್ಲಿ ಖರೀದಿಸುವವರಿಗೆ ಉಪಯುಕ್ತ.ಖರಿದಿಸಿದ ಮೇಲೆ ಹಣ ಪಾವತಿಸಲು ಬಳಕೆದಾರರು ಕ್ರೆಡಿಟ್ ಕಾರ್ಡ್ ಬಳಸುತ್ತಾರೆ ತಾನೇ? ಈ ಪಾವತಿ ವ್ಯವಸ್ಥೆಯಲ್ಲಿ ಬಳಕೆದಾರರು ಮತ್ತು ಸರಕು ಮಾರಿದ ಕಂಪೆನಿಗಳ ಬ್ಯಾಂಕುಗಳ ನಡುವೆ ಗೂಗಲ್ ಮಧ್ಯವರ್ತಿಯಾಗಿ ಕೆಲಸ ಮಾಡುತ್ತದೆ. ಈಗಾಗಲೇ ಇಂತಹ ಸೇವೆ ನೀಡುವ ಪೇಪಾಲ್(ಇಬೇ ಕಂಪೆನಿಯ ಸೇವೆ)ಗೆ ಹೋಲಿಸಿದರೆ, ಗೂಗಲ್ ತನ್ನ ಜಾಹೀರಾತುದಾರರಿಗೆ ಕಡಿಮೆ ಶುಲ್ಕ ವಿಧಿಸಲಿದೆ.ಇದುವರೆಗೆ ಗೂಗಲ್ ಪಾವತಿ ಸೇವೆ ಅಮೆರಿಕಾದ ಬಳಕೆದಾರರಿಗೆ ಮಾತ್ರಾ ಲಭ್ಯವಿದೆ.ಪಾವತಿ ವ್ಯವಸ್ಥೆಯಲ್ಲಿ ನಡೆಯುವ ಅಕ್ರಮಗಳ ಮೂಲಕ ಬಳಕೆದಾರರಿಗೆ ಸಂಭವಿಸುವ ನಷ್ಟವನ್ನು ಇಳಿಸುವ ಖಾತರಿಯನ್ನು ಗೂಗಲ್ ನೀಡುತ್ತಿದೆ.
*ಅಶೋಕ್‌ಕುಮಾರ್‍ ಎ

Sunday, April 08, 2007

ಪರಿಸರದ ಬಗೆಗಿನ ಪತ್ರಿಕಾ ಸಂಚಿಕೆ ಮುದ್ರಿಸದೆ ಪರಿಸರ ರಕ್ಷಣೆ!

ಅಮೆರಿಕಾದ ವಾರಪತ್ರಿಕೆ ವೀಕ್‌ಮ್ಯಾಗಜೀನ್ ಎಪ್ರಿಲ್ ತಿಂಗಳ ಮೂರನೇ ವಾರದ ಸಂಚಿಕೆಯನ್ನು ಪರಿಸರದ ಬಗೆಗೆ ಪ್ರಕಟಿಸಲಿದೆ. ಈ ವಿಶೇಷ ಸಂಚಿಕೆಯನ್ನು ಮುದ್ರಿಸದೆ, ಇದನ್ನು ಅಂತರ್ಜಾಲ ತಾಣ http://theweekmagazine.com/ದಲ್ಲಿ ಲಭ್ಯವಾಗಿಸಿ,ಪತ್ರಿಕೆಯನ್ನು ಮುದ್ರಿಸಲು ಬಳಕೆಯಾಗುವ ಕಾಗದ ಉಳಿಸಿ,ಅದರ ಮೂಲಕ ಪರಿಸರ ರಕ್ಷಣೆಗೆ ತನ್ನ ಅಳಿಲುಸೇವೆ ನೀಡಲು ಪತ್ರಿಕೆ ನಿರ್ಧರಿಸಿದೆ. ಈ ಸಂಚಿಕೆ ಅಂತರ್ಜಾಲದಲ್ಲಿ ಒಂದೇ ವಾರ ಲಭ್ಯವಿರುತ್ತದೆ. ಸಂಚಿಕೆಯ ಪೂರ್ತಿ ವೆಚ್ಚವನ್ನು ಭರಿಸಲು ಕಂಪೆನಿಯೊಂದು ಮುಂದೆ ಬಂದಿರುವುದು ಇನ್ನೊಂದು ವಿಶೇಷ. ಪತ್ರಿಕೆಯ ಪ್ರತಿ ವಾರದ ಸಂಚಿಕೆಯೂ ಅಂತರ್ಜಾಲ ತಾಣದಲ್ಲಿ ಲಭ್ಯವಿದ್ದರೂ, ಅದು ಸಂಚಿಕೆಯ ಆಯ್ದ ಭಾಗಗಳನ್ನಷ್ಟೇ ಓದುಗರಿಗೆ ನೀಡುತ್ತದೆ. ಪ್ರತೀ ತಿಂಗಳೂ ಸರಾಸರಿ ಒಂದೂವರೆ ಲಕ್ಷ ಹೊಸ ಆನ್‌ಲೈನ್ ಓದುಗರು ಲಭ್ಯವಾಗುತ್ತಾರೆ. ಪತ್ರಿಕೆಯ ಪ್ರಸಾರ ವಾರಕ್ಕೆ ನಾಲ್ಕು ಲಕ್ಷ.
ಚಿಕಾಗೋ ಸನ್‌ ಟೈಮ್ಸ್, ಟೊರೊಂಟೋ ಸ್ಟಾರ್‍ ಅಂತಹ ಮುಂಜಾವಿನ ಪತ್ರಿಕೆಗಳು, ಮಧ್ಯಾಹ್ನದ ಆವೃತ್ತಿಯನ್ನು ಹೊಸದಾಗಿ ಹೊರಡಿಸಲು ಆರಂಭಿಸಿದರೂ,ಅವನ್ನು ಅಂತರ್ಜಾಲದಲ್ಲಿ ಮಾತ್ರಾ ಒದಗಿಸುವ ಪ್ರಯೋಗ ನಡೆಸುತ್ತಿವೆ. ಈ ಮೂಲಕ ಅಂತರ್ಜಾಲದಲ್ಲಿ ಹೆಚ್ಚಿನ ಜಾಹೀರಾತು ಗಳಿಸುವುದು ಅವುಗಳ ಉದ್ದೇಶ. ಇನ್ನು ಕೆಲವು ನಿಯತಕಾಲಿಕಗಳು ತಮ್ಮ ಮುದ್ರಣ ನಿಲ್ಲಿಸಿ, ಅಂತರ್ಜಾಲ ತಾಣದ ಮೂಲಕ ಮಾತ್ರಾ ಓದುಗರನ್ನು ತಲುಪುತ್ತವೆ. ಇಂತಹ ಪತ್ರಿಕೆಗಳಲ್ಲಿ ಪ್ರಖ್ಯಾತ ಟೈಮ್ಸ್‌ ವಾರ್ನರ್‍ ಗುಂಪಿನ ಪತ್ರಿಕೆಯೂ ಇದೆ.

ಬೆರಳಚ್ಚು ತೆಗೆದುಕೊಂಡು ಸಂಬಳ ವಿತರಿಸುವ ಏಟಿಎಂ ಯಂತ್ರಗಳು
ಬಿಹಾರದಲ್ಲಿ ರಾಷ್ಟ್ರೀಯ ಹಳ್ಳಿಗಾಡಿನ ಉದ್ಯೋಗ ಖಾತರಿ ಯೋಜನೆ ಜಾರಿಯಲ್ಲಿದೆ. ಆದರೆ ಯೋಜನೆಯ ಫಲಾನುಭವಿಗಳಿಗೆ ವೇತನ ನೀಡುವಾಗ ಸಹಿ ಪಡೆಯುವ ಮೊತ್ತವೇ ಒಂದು,ವಿತರಣೆಯಾಗುವ ಮೊತ್ತವೇ ಬೇರೆ. ಇಂತಹ ಅಕ್ರಮವನ್ನು ತಪ್ಪಿಸಲು, ರಾಜ್ಯ ಸರಕಾರ ಬೆರಳಚ್ಚು ಗುರುತಿನ ಮೂಲಕ ಫಲಾನುಭವಿಗಳಿಗೆ ಏಟಿಎಂ ಯಂತ್ರದ ಮೂಲಕ ವೇತನ ವಿತರಿಸುವ ಹೊಸ ವ್ಯವಸ್ಥೆ ಜಾರಿಗೆ ತಂದಿದೆ. ಕೂಲಿಗಳನ್ನು ನೇಮಿಸುವಾಗಲೇ ಅವರ ಬೆರಳಚ್ಚು ತೆಗೆದುಕೊಂಡು ಕಂಪ್ಯೂಟರಿನಲ್ಲಿ ದಾಖಲಿಸಲಾಗುತ್ತದೆ. ತಿಂಗಳಾಂತ್ಯದಲ್ಲಿ ಕೂಲಿಕಾರರು ಏಟಿಎಂ ಯಂತ್ರದಲ್ಲಿ ತಮ್ಮ ಏಟಿಎಂ ಕಾರ್ಡ್‌ನ್ನು ಯಂತ್ರದೊಳಗೆ ತುರುಕಿ,ಅದು ನೀಡುವ ಧ್ವನ್ಯಾದೇಶಗಳ ಅನುಸಾರ,ಬೆರಳನ್ನು ಸ್ಕ್ಯಾನರ್‌ನ ಮೇಲಿರಿಸಿ, ಗರಿಗರಿ ನೋಟುಗಳ ಮೂಲಕ ತನ್ನ ವೇತನ ಪಡೆಯುತ್ತಾರೆ. ಅಕ್ರಮಗಳನ್ನು ತಡೆಗಟ್ಟುವುದೇ ಅಲ್ಲದೆ, ವೇತನ ಪಡೆಯಲು ದೂರದೂರಿಗೆ ಸಾಗಿ,ತನ್ನ ಒಂದು ದಿನವನ್ನು ವ್ಯರ್ಥಗೊಳಿಸುವ ತೊಂದರೆಯನ್ನೂ ಯಂತ್ರ ಇಲ್ಲವಾಗಿಸಿದೆ.

ಮಿಥ್ಯಾ ಚಿಕಿತ್ಸೆ ನೀಡುವ ಚೀನೀ ವೈದ್ಯ!
ಉತ್ತರ ಅಮೆರಿಕಾದಂತಹ ತಂತ್ರಜ್ಞಾನದಲ್ಲಿ ಅತ್ಯಂತ ಮುಂದುವರಿದ ದೇಶಗಳಲ್ಲೇ ತನ್ನ ಮಿಥ್ಯಾ ಚಿಕಿತ್ಸೆಯ ಮೂಲಕ ಜನರನ್ನು ಬೆರಗುಗಳಿಸುತ್ತಿರುವ ಚೀನೀ ಮೂಲದ ವೈದ್ಯ ಸುದ್ದಿ ಮಾಡುತ್ತಿದ್ದಾರೆ.ಮೂಲತಃ ಆಕ್ಯುಪಂಕ್ಚರ್‍ ಸೂಜಿ ಚಿಕಿತ್ಸೆ ನೀಡುತ್ತಿದ್ದ ಡಾ.ಶಹಾ, ಅಮೆರಿಕಾಕ್ಕೆ ಬಂದು ದಶಕಗಳೇ ಕಳೆದಿವೆ. ವಿಶ್ವಸಂಸ್ಥೆಯಿಂದ ಮಾನ್ಯತೆಯನ್ನೂ ಪಡೆದ ವೈದ್ಯನೀತ. ಆದರೀಗ ಶಹಾ ಚಿಕಿತ್ಸೆ ನೀಡುವುದು ದೈವ ಸಹಾಯದಿಂದ ಎಂದು ಹೇಳಿಕೊಳ್ಳುತ್ತಿದ್ದಾನೆ. ಹೈಟೆಕ್ ಪದಗಳನ್ನು ಬಳಸಿಕೊಂಡು ತನ್ನ ಚಿಕಿತ್ಸೆಯನ್ನು ದೈವ ತಂತ್ರಾಂಶ ಆಧಾರಿತ ಎಂದಾತ ಹೇಳುತ್ತಾನೆ.ದೇವರು ತನಗೆ ವಿವಿಧ ಚೈತನ್ಯ ತಂತ್ರಾಂಶಗಳನ್ನು ನೀಡುತ್ತಾನೆ. ಅದನ್ನು ತಾನು ಡೌನ್‌ಲೋಡ್ ಮಾಡಿ ದೇಹವೆಂಬ ಕಂಪ್ಯೂಟರಿನಲ್ಲಿ ಅಳವಡಿಸುತ್ತೇನೆ. ನವೀನ ಆವೃತ್ತಿಯ ತಂತ್ರಾಂಶ ಹೊಸ ಸೌಕರ್ಯಗಳನ್ನು ಬಳಕೆದಾರರಿಗೆ ನೀಡುವಂತೆ, ಹೊಸ ಚೈತನ್ಯ ತಂತ್ರಾಂಶಗಳು ದೇಹಕ್ಕೆ ಹೊಸ ಚೈತನ್ಯ ನೀಡುತ್ತವೆ ಎಂದು ಶಹಾ ವಿವರಿಸಿದರೆ,ಜನ ಬೆರಗಾಗಿ ನೋಡುತ್ತಾರೆ. ಈತ ಸಾರ್ವಜನಿಕರ ಎದುರು ಕ್ಯಾನ್ಸರ್‍ ಪೀಡಿತ, ಬೆನ್ನೆಲುಬು ಸಮಸ್ಯೆಯುಳ್ಳ ರೋಗಿಗಳಿಗೆ ಹೊಸ ತಂತ್ರಾಂಶ ಅನುಸ್ಥಾಪಿಸುವ ಮೂಲಕ ಪರಿಹಾರ ಒದಗಿಸಿದ ಪ್ರದರ್ಶನ ಅಂತರ್ಜಾಲದಲ್ಲಿ ವಿತರಣೆಯಾಗುತ್ತಿದೆ.ಈ ಹೊಸ ವೈದ್ಯ ಪದ್ಧತಿ ಬಗ್ಗೆ ತಜ್ಞ ವೈದ್ಯರು ಅತಿ ಎಚ್ಚರಿಕೆಯ ಪ್ರತಿಕ್ರಿಯೆ ಮಾತ್ರಾ ನೀಡುತ್ತಾರೆ. ನಂಬಿಕೆಗೆ ರೋಗಗಳನ್ನು ಗುಣ ಪಡಿಸುವ ಶಕ್ತಿ ಇದೆ. ಅದರಂತೆ ಪ್ರಾರ್ಥನೆಯೂ ರೋಗ ಚಿಕಿತ್ಸೆಯಲ್ಲಿ ಧನಾತ್ಮಕ ಪರಿಣಾಮ ನೀಡುವುದು ಸಿದ್ಧವಾಗಿದೆ. ಆ ಮಟ್ಟಿಗೆ ಶಹಾನ ಚಿಕಿತ್ಸೆ ಫಲಕಾರಿಯಾದರೆ ಆಶ್ಚರ್ಯವೇನಿಲ್ಲ ಎನ್ನುವುದು ಹೆಚ್ಚಿನವರ ನಿಲುವು.
ಶಹಾ ಆಕ್ಯುಪಂಕ್ಚರ್‍ ಚಕಿತ್ಸೆಗೆ ಸೂಜಿಯನ್ನೂ ಡೌನ್‌ಲೋಡ್ ಮಾಡಿಕೊಂಡು, ಸಾಮೂಹಿಕವಾಗಿ ಸಹಸ್ರಾರು ಜನರಿಗೆ ಸೂಜಿ ಚಿಕಿತ್ಸೆ ನೀಡುವ ವಿನೂತನ ಪ್ರಯೋಗವನ್ನೂ ನಡೆಸಿದ್ದಾನೆ. ಕಂಪ್ಯೂಟರ್‍ ದ್ವಿಮಾನ ಸಂಖ್ಯಾ ಪದ್ಧತಿಯಲ್ಲಿ ಕಾರ್ಯಾಚರಿಸುತ್ತದೆ ನೋಡಿ. ರೋಗಿಗಳಿಗೆ ಅವರ ಖಾಯಿಲೆಯ ಆಧಾರದಲ್ಲಿ, ಸಂಖ್ಯೆಯನ್ನು ನೀಡಿ,ಸಂಖ್ಯೆಯಾಧರಿಸಿದ ಚೀನೀ ಶಬ್ದ(ಮಂತ್ರ) ಉಚ್ಛರಿಸಿ, ರೋಗ ಮುಕ್ತಿ ಕಾಣುವ ಇನ್ನೊಂದು ಚಿಕಿತ್ಸೆಯನ್ನೂ ನೀಡುತ್ತಾನೆ.ಈತನ ಸೃಜನಶೀಲತೆಗೆ ಭೇಷ್ ಎನ್ನಲೇ ಬೇಕು.ನೀವೇನಂತೀರಿ?
*ಅಶೋಕ್‌ಕುಮಾರ್‍ ಎ

Sunday, April 01, 2007

ಹಳ್ಳಿಗಳಿಗೆ ಅಂತರ್ಜಾಲ ತರುವ ಬಸ್‌ಗಳು




ದೂರದ ಹಳ್ಳಿಗಳಿಗೆ ಅಂತರ್ಜಾಲ ಸಂಪರ್ಕವನ್ನು ಕೇಬಲ್ ಲೈನುಗಳ ಮೂಲಕ ನೀಡುವುದು ತುಂಬಾ ದುಬಾರಿಯಾಗುವುದಿದೆ. ಇನ್ನು ನಿಸ್ತಂತು ಜಾಲದ ಮೂಲಕ ಅಂತರ್ಜಾಲ ನೀಡುವುದು ಸಾಧ್ಯವಾದರೂ ಸೀಮಿತ ಬಳಕೆಗಾಗಿ, ಈ ವ್ಯವಸ್ಥೆಯನ್ನು ಸ್ಥಾಪಿಸಲು ಸರಕಾರ ಅಥವಾ ಖಾಸಗಿಯವರು ಮನ ಮಾಡದಿರಬಹುದು.ಆಫ್ರಿಕಾ,ಭಾರತವೂ ಸೇರಿದಂತೆ ಕೆಲವು ದೇಶಗಳಲ್ಲಿ ಪ್ರಯೋಗಾರ್ಥ ನಡೆಸಲಾಗುತ್ತಿರುವ ಯೋಜನೆಯ ಪ್ರಕಾರ,ಹಳ್ಳಿಗಳಿಗೆ ಬಸ್ ಮೂಲಕ ಅಂತರ್ಜಾಲದ ಮಾಹಿತಿಯನ್ನು ಮುಟ್ಟಿಸುವ ಪ್ರಯತ್ನ ನಡೆದಿದೆ. ಬಸ್ ದಿನಾ ನಗರಕ್ಕೆ ಹೋಗಿ ಬರುತ್ತದೆ. ಬರುವಾಗ ಅದು ನಗರಗಳ ಅಂತರ್ಜಾಲ ಸಂಪರ್ಕದ ಮೂಲಕ ಜನಪ್ರಿಯ ಪುಟಗಳನ್ನು ಅದರಲ್ಲಿರುವ ಕಂಪ್ಯೂಟರಿಗೆ ಡೌನ್‌ಲೋಡ್ ಮಾಡಿಕೊಂಡು ಬರುತ್ತದೆ.ಹಳ್ಳಿಯಲ್ಲಿ ನಿಸ್ತಂತು ಮೂಲಕ ಸಮೀಪದ ಕಂಪ್ಯೂಟರುಗಳಿಗೆ ಬಸ್‌ನ ಕಂಪ್ಯೂಟರಿನ ಮಾಹಿತಿ ಮುಟ್ಟುತ್ತದೆ.ವಸ್ತುಗಳ ಖರೀದಿಗೆ ಅಂತರ್ಜಾಲ ಬಳಸುವವರ, ಖರೀದಿ ಆರ್ಡರುಗಳು ನಗರಕ್ಕೆ ಬಸ್ಸು ಹೋದಾಗ, ಅಂತರ್ಜಾಲ ತಾಣಕ್ಕೆ ಮುಟ್ಟಿಸಿ, ಬಸ್ಸಿನ ಮೂಲಕವೇ ವಸ್ತು ಹಳ್ಳಿ ಸೇರುತ್ತದೆ.ಲಭ್ಯವಿಲ್ಲದ ಪುಟ ಬಯಸಿದವರಿಗೆ ಮುಂದಿನ ಟ್ರಿಪ್‌ನಲ್ಲಿ ಪುಟ ಬರುತ್ತದೆ.ಈ ಕೆಲಸಕ್ಕೆ ಬೈಕ್‌ಗಳ ಬಳಕೆಯಾಗುವುದೂ ಇದೆ.

ಸುನೀತಾ ವಿಲಿಯಮ್ಸ್‌ಗೆ ಇನ್ನಷ್ಟು ದೀರ್ಘ ಗಗನವಾಸ
ಭಾರತೀಯ ಮೂಲದ ಸುನೀತಾ ವಿಲಿಯಮ್ಸ್‌ ಅಟ್ಲಾಂಟಿಸ್ ಸ್ಪೇಸ್‌ ಶಟಲ್ ಮೂಲಕ ಬಾಹ್ಯಾಕಾಶ ಕೇಂದ್ರದಲ್ಲಿ ವಾಸಿಸಲು ತೊಡಗಿ ಈಗಾಗಲೇ ಮೂರು ತಿಂಗಳು ಕಳೆಯಿತು. ಡಿಸೆಂಬರ್‍-ಜುಲೈ ಅವಧಿಗೆ ಗಗನವಾಸಕ್ಕೆಂದು ಹೋದ ಸುನೀತಾ ವಿಲಿಯಮ್ಸ್‌ಗೆ,ಗಗನವಾಸ ದಾಖಲೆ ಅವಧಿಗೆ ಮಾಡಬೇಕಾಗಿ ಬಂದರೂ ಅಚ್ಚರಿಯಲ್ಲವಂತೆ. ಅಟ್ಲಾಂಟಿಸ್ ಇಂಧನ ಕೋಶ ಹಿಮಪಾತಕ್ಕೆ ಸಿಲುಕಿ ಹಾನಿಗೀಡಾಗಿರುವುದೇ ಇದಕ್ಕೆ ಕಾರಣ.ಆಕೆಯ ಆರೋಗ್ಯ ಹಾಗೂ ಮಾನಸಿಕ ಸ್ಥಿತಿಯ ಬಗ್ಗೆ ಸದಾ ಕಣ್ಣಿರಿಸಲಾಗಿದ್ದು ಸದ್ಯ ಯಾವ ಸಮಸ್ಯೆಯೂ ಇಲ್ಲವಂತೆ. ಆಕೆಯ ಈಗಿನ ಬಾಹ್ಯಾಕಾಶ ಕೇಂದ್ರದ ಜತೆಗಾರ ಮೈಕೆಲ್ ಮುಂದಿನ ಏಪ್ರಿಲ್ ಮೂರನೇ ವಾರ ಭೂಮಿಗೆ ಹಿಂದಿರುಗುವಾಗ ಇನ್ನೂರ ಹದಿನಾಲ್ಕು ದಿನಗಳ ಕಾಲ ಬಾಹ್ಯಾಕಾಶ ಕೇಂದ್ರದಲ್ಲಿ ವಾಸ ಮಾಡಿದ ದಾಖಲೆಯಾಗುತ್ತದೆ.ಸುನೀತಾ ಈ ದಾಖಲೆಯನ್ನು ಮುರಿಯವುದು ಅನಿವಾರ್ಯವಾಗಬಹುದು. ಯಾಕೆಂದರೆ,ಸ್ಪೇಸ್ ಶಟಲ್ ನಿಗದಿತ ಸಮಯಕ್ಕಿಂತ ತಡವಾಗಿ ಗಗನಗಾಮಿಯಾಗಬೇಕಾದೀತು. ಸುನೀತಾಳ ಗಗನವಾಸವನ್ನು ಸಾಧ್ಯವಾದಷ್ಟು ಆರಾಮವಾಗಿಸಲು,ಕೆಲವು ಸಾಮಗ್ರಿಗಳ ಪಾರ್ಸೆಲ್ ಇನ್ನೇನು ಆಕೆಗೆ ರವಾನೆಯಾಗಲಿದೆ ಎಂದು ನಾಸಾ ವರದಿ.

ವಿಂಡೋಸ್ ಬದಲಿಗೆ ಲಿನಕ್ಸ್ ಕಾರ್ಯನಿರ್ವಹಣಾ ತಂತ್ರಾಂಶ ಒದಗಿಸಲಿರುವ ಡೆಲ್
ವಿಶ್ವದಲ್ಲಿಯೇ ಅತಿ ಹೆಚ್ಚು ಕಂಪ್ಯೂಟರುಗಳನ್ನು ಮಾರುವ ಡೆಲ್ ಕಂಪೆನಿ ತನ್ನ ಕಂಪ್ಯೂಟರುಗಳಲ್ಲಿ ಮುಕ್ತ ಕಾರ್ಯನಿರ್ವಹಣಾ ವ್ಯವಸ್ಥೆ ತಂತ್ರಾಂಶ ಲೀನಕ್ಸ್ ಒದಗಿಸಲು ನಿರ್ಧರಿಸಿದೆ.ಒಂದು ಲಕ್ಷ ಜನರ ಜತೆ ನಡೆಸಲಾದ ಸಮೀಕ್ಷೆಯ ನಂತರ ಈ ನಿರ್ಧಾರವನ್ನು ಕಂಪೆನಿಯು ತೆಗೆದು ಕೊಂಡಿತು. ಸಮೀಕ್ಷೆಯ ಪ್ರಕಾರ ಹೆಚ್ಚಿನ ಜನರು ಲೀನಕ್ಸ್‌ ಇರುವ ಕಂಪ್ಯೂಟರ್‍ ಖರೀದಿಸುವ ಉದ್ದೇಶವನ್ನು ಹೊಂದಿದ್ದರು.ಮಾರಾಟವಾಗುವ ಪ್ರತಿ ನೂರು ಕಂಪ್ಯೂಟರುಗಳಲ್ಲಿ ತೊಂಭತ್ತು ಕಂಪ್ಯೂಟರುಗಳಲ್ಲಿ ವಿಂಡೋಸ್ ವ್ಯವಸ್ಥೆಯಿರುತ್ತದೆ. ಹಣ ಕೊಟ್ಟು ಖರೀದಿಸಬೇಕಾದ ವಿಂಡೋಸ್‌ಗೆ ಹೋಲಿಸಿದರೆ, ಲೀನಕ್ಸ್‌ ಉಚಿತವಾಗಿ ಲಭ್ಯವಿದೆ. ಕೆಲವು ಕಂಪೆನಿಗಳು ಇದರ ಜತೆ ತಮ್ಮದೇ ಇತರ ತಂತ್ರಾಂಶಗಳ ಗುಚ್ಛವನ್ನು ನಾಮಮಾತ್ರ ಬೆಲೆಗೆ ಮಾರುವುದೂ ಇದೆ. ಆದರೂ ಲೀನಕ್ಸ್‌ ಇನ್ನೂ ಆರು ಶೇಕಡಾ ಕಂಪ್ಯೂಟರುಗಳಲ್ಲೂ ಬಳಕೆಯಾಗುತ್ತಿಲ್ಲ.

ಸಂಕ್ಷಿಪ್ತವಾಗಿ ಬ್ಲಾಗಿಸಿ!
ಕಿರಿದರಲ್ಲಿ ಹಿರಿದರ್ಥವನ್ನು ಹೇಳಲು ಜನರನ್ನು ಪ್ರಚೋದಿಸುವ ಹೊಸ ಅಂತರ್ಜಾಲ ಜಾಲ ತಾಣ ಟ್ವಿಟ್ಟರ್‍(www.twitter.com) ಈಗೆರಡು ತಿಂಗಳಿನಿಂದ ಸುದ್ದಿ ಮಾಡುತ್ತಿದೆ.ಮೊಬೈಲ್‌ನಿಂದ ನಿಮ್ಮ ಸ್ನೇಹಿತರಿಗೆ ಕಳುಹಿಸುವ ಕಿರು ಸಂದೇಶಗಳು, ಈ ಅಂತರ್ಜಾಲ ತಾಣದಲ್ಲಿ ಕಾಣಿಸಿಕೊಳ್ಳುತ್ತದೆ. ಅಂತರ್ಜಾಲದ ಮೂಲಕವೂ ಸಂದೇಶ ಕಳುಹಿಸಬಹುದು. "ನೀವು ಈ ಸಮಯದಲ್ಲಿ ಏನು ಮಾಡುತ್ತಿರುವಿರಿ?" ಎನ್ನುವುದನ್ನು ನೀವು ಬರೆಯಬೇಕಾಗುತ್ತದೆ. ಸಂದೇಶಗಳು ಈ ವಿಷಯಕ್ಕೆ ಸಂಬಂಧಿಸಿಯೇ ಇರಬೇಕೆನ್ನುವ ನಿಯಮವಿದೆ.ಕಳೆದ ಒಂದು ತಿಂಗಳಿನಲ್ಲೇ ಟ್ವಿಟ್ಟರ್‌ಗೆ ಮೊದಲಿನ ಇಮ್ಮಡಿ ಸದಸ್ಯರು ನೋಂದಾಯಿಸಿಕೊಂಡಿದ್ದಾರೆ.ಪ್ರತಿ ಹತ್ತು ನಿಮಿಷಕ್ಕೆ ನೀವೀಗ ಮಾಡುತ್ತಿರುವುದೇನು ಎನ್ನುವುದರ ಬಗ್ಗೆ ತಿಳಿಸಿ ಎಂಬ ಕೋರಿಕೆ ಇಲ್ಲಿ ಕಂಡು ಬರುತ್ತದೆ.ಮೊಬೈಲ್ ಸೇವೆ ಉತ್ತರ ಅಮೆರಿಕಾದಲ್ಲಿ ಮಾತ್ರಾ ಸದ್ಯ ಲಭ್ಯ.

ಮಿತಿರಹಿತ ಸ್ಥಳಾವಕಾಶ ಒದಿಸಲಿರುವ ಯಾಹೂ ಮೈಲ್ ಯಾಹೂವಿನ ಇ-ಮೇಲ್ ಬಳಕೆದಾರರು ಮೇ ತಿಂಗಳಿನಿಂದ ಮಿತಿರಹಿತ ಸಂಗ್ರಹಣಾ ಸ್ಥಳಾವಕಾಶ ಪಡೆಯಲಿದ್ದಾರೆ. ಸದ್ಯ ಬಳಕೆದಾರರು ಬರೇ ಒಂದು ಗಿಗಾಬೈಟ್ ಸ್ಥಳಾವಕಾಶ ಪಡೆಯುತ್ತಲಿದ್ದಾರೆ. ಇದರಿಂದ ಇ-ಮೇಲ್‌ಗಳನ್ನು ಓದಿದ ಬಳಿಕ,ಅಳಿಸಿ ಹಾಕಬೇಕಾದ ಪ್ರಮೇಯವಿಲ್ಲದಾಗುತ್ತದೆ. ಸೇವೆಯು ಉಚಿತವಾಗಿಯೇ ಸಿಗಲಿರುವುದು ಮತ್ತೊಂದು ಗಮನಾರ್ಹ ಅಂಶ. ಗೂಗಲ್‌ನ ಜಿ-ಮೇಲ್ ಬಳಕೆದಾರರು ಸದ್ಯ ಎರಡೂವರೆ ಗಿಗಾಬೈಟ್ ಸ್ಥಳಾವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಗೂಗಲ್ ಕೂಡಾ ಯಾಹೂವನ್ನು ಅನುಸರಿಸುತ್ತದೆಯೋ ಕಾದು ನೋಡಬೇಕು.
*ಅಶೋಕ್‌ಕುಮಾರ್‍ ಎ
 
googledc7e93ba1a7703ae.html