Sunday, May 27, 2007

ಈ ವ್ಯಕ್ತಿಯ ಬದುಕು ತೆರೆದ ಪುಸ್ತಕ!

ಅಮೆರಿಕಾದ ಗೂಢಚಾರ ಸಂಸ್ಥೆ ಎಫ್‍ಬಿಐಯ ಗುಮಾನಿಗೊಳಗಾದ ಹಸನ್ ಇಲಾಹಿ, ತನ್ನ ಜೀವನದ ಕ್ಷಣ-ಕ್ಷಣವನ್ನು ಅಂತರ್ಜಾಲದ ಮೂಲಕ ಸಾರ್ವಜನಿಕರಿಗೆ ಬಯಲಾಗಿಸುವ ನಿರ್ಧಾರ ತೆಗೆದುಕೊಂಡ. ಇದು ಐದು ವರ್ಷದ ಹಿಂದಿನಂದಲೇ ನಡೆದು ಬಂದಿದೆ. ಬಾಂಗ್ಲಾ ಸಂಜಾತ ಹಸನ್ ಇಲಾಹಿ ವೃತ್ತಿಯಿಂದ ಕಾಲೇಜು ಪ್ರೊಫೆಸರ್. ಎರಡು ಸಾವಿರದ ಎರಡನೆಯ ಇಸವಿಯಲ್ಲಿ ಆತ ಡೆನ್ಮಾರ್ಕ್‍ನಿಂದ ಡೇಟ್ರಾಯಿಟ್‍ಗೆ ಪ್ರಯಾಣಿಸುತ್ತಿದ್ದಾಗ, ಭಯೋತ್ಪಾದಕನೆಂಬ ಸಂಶಯದಲ್ಲಿ ಆತನನ್ನು ಬಂಧಿಸಲಾಯಿತು. ತಾನು ನಿರಪರಾಧಿಯೆಂದು ಸಾಧಿಸ ಬೇಕಾದರೆ, ಅತನಿಗೆ ಕುತ್ತಿಗೆಗೆ ಬಂತು. ಆಮೇಲೆಯೂ ಆತನು ಗುಮಾನಿಯ ಮೇಲೆ ಬಂಧನಕ್ಕೀಡಾದ. ಅವನ ಅದೃಷ್ಟ, ಅಧಿಕಾರಿಗಳಿಗೆ ಅವನು ತಪ್ಪಿತಸ್ಥನಲ್ಲ ಎಂದು ಬೇಗನೇ ಮನವರಿಕೆಯಾಯಿತು. ಆಗಲೆ ಹಸನ್ ತನ್ನ ಜೀವನವನ್ನು ಬಟಾಬಯಲಾಗಿಸುವ ತೀರ್ಮಾನಕ್ಕೆ ಬಂದ. ಬದುಕಿನ ಖಾಸಗಿ ಕ್ಷಣವನ್ನು ತ್ಯಾಗ ಮಾಡುವ ಮೂಲಕ ತಾನು ಭಯೋತ್ಪಾದಕನೆಂಬ ಗುಮಾನಿಗೊಳಗಾಗುವುದನ್ನು ಆತ ತಪ್ಪಿಸಿಕೊಂಡ. ಈಗ ಆತ ಎಚ್ಚರವಾಗಿರುವಾಗ ಎಲ್ಲಿದ್ದಾನೆ ಅನ್ನುವುದನ್ನು ಜಿಪಿಎಸ್ ಸಾಧನವೊಂದು ಅಂತರ್ಜಾಲ ಪುಟ www.TrackingTransience.netದಲ್ಲಿ ಪ್ರದರ್ಶಿಸುತ್ತಿರುತ್ತದೆ. ಅತ ತನ್ನ ಮೊಬೈಲ್ ಫೋನಿನ ಮೂಲಕ ತೆಗೆದ ಚಿತ್ರಗಳನ್ನು ಅಂತರ್ಜಾಲ ತಾಣದಲ್ಲಿ ಆಗಾಗ ಹಾಕುತ್ತಾ, ತನ್ನ ಬದುಕಿನ ಪ್ರತಿ ವಿವರಗಳನ್ನೂ ಸಾರ್ವಜನಿಕಗೊಳಿಸುತ್ತನೆ. ಹಸನ್ ಇಲಾಹಿಯ ಪ್ರತಿ ಏಟಿಎಂ ಅಥವಾ ಕ್ರೆಡಿಟ್ ಕಾರ್ಡ್ ಬಳಕೆಯ ವಿವರವೂ ತಾಣದಲ್ಲಿ ಸಿಗುತ್ತದೆ. ಅತ ತನ್ನ ಹಣವನ್ನು ಖರ್ಚು ಮಾಡಿದ್ದು ಹೇಗೆ ಎನ್ನುವುದು ಆತನ ಪತ್ನಿಗೆ ಮಾತ್ರಾ ಅಲ್ಲ,ನನಗೂ ನಿಮಗೂ ಸಿಗುತ್ತದೆ.

ಅಮೆರಿಕಾದ ಬಾಡಿಗೆ ಕಾರುಗಳಲ್ಲೂ ಅಂತರ್ಜಾಲ ಲಭ್ಯ!
ಅಮೆರಿಕಾದ ಕಾರು ಬಾಡಿಗೆ ನೀಡುವ ಅವಿಸ್ ಎನ್ನುವ ಕಂಪೆನಿಯು ತನ್ನ ಕಾರುಗಳಲ್ಲಿ ಅಂತರ್ಜಾಲ ಸೇವೆ ಒದಗಿಸುವ ನಿರ್ಧಾರ ಕೈಗೊಂಡಿದೆ.ಯಾವುದಾದರೂ ನಿಸ್ತಂತು ಸಾಧನ ಇದ್ದರೆ, ಅಂತರ್ಜಾಲ ಸೇವೆ ಪಡೆಯಬಹುದು. ಇದಕ್ಕೆ ಕಾರು ಬಾಡಿಗೆಯ ಮೇಲೆ ಹನ್ನೊಂದು ಡಾಲರು ಶುಲ್ಕ ನೀಡಬೇಕಾಗುತ್ತದೆ.

ಪ್ಲಾಸ್ಟಿಕ್‍ಗೆ ನೂರರ ಸಂಭ್ರಮ

ಪರಿಸರಪ್ರಿಯರ ಕೆಂಗಣ್ಣಿಗೆ ಗುರಿಯಾಗಿರುವ ಪ್ಲಾಸ್ಟಿಕ್ ಈಗಾಗಲೇ ನೂರು ವರ್ಷ ಪೂರೈಸಿದೆ ಎನ್ನುವುದು ನಿಮಗೆ ಗೊತ್ತೇ?ಬೆಲ್ಜಿಯನ್-ಅಮೆರಿಕನ್ ವಿಜ್ಞಾನಿ ಲಿಯೋ ಬ್ಯಾಕ್‍ಲ್ಯಾಂಡ್ 1907ರಲ್ಲಿ ಬೇಕಲೈಟ್ ಎನ್ನುವ ಪ್ಲಾಸ್ಟಿಕನ್ನು ತಯಾರಿಸುವುದರೊಂದಿಗೆ ಪ್ಲಾಸ್ಟಿಕ್‍ನ ಬಳಕೆ ಮೊದಲಿಟ್ಟಿತು.ಪಿವಿಸಿ ಎನ್ನುವ ಒಂದು ಬಗೆಯ ಪ್ಲಾಸ್ಟಿಕ್ ಸಂಶೋಧನೆಯಾದ ನಂತರವಂತೂ ಪ್ಲಾಸ್ಟಿಕ್ ಜನಪ್ರಿಯತೆಯ ತುತ್ತ ತುದಿಗೇರಿತು.ಈಗ ಮಗುವಿನ ಹಾಲಿನ ಬಾಟಲಿನಿಂದ ಹಿಡಿದು,ಬಾಹ್ಯಾಕಾಶ ವಾಹನದ ವರೆಗಿನ ಸರ್ವ ಬಗೆಯ ವಸ್ತುಗಳೂ ಪ್ಲಾಸ್ಟಿಕ್‍ನಿಂದಲೇ ತಯಾರಾಗುತ್ತವೆ.ಪೆಟ್ರೋಲಿಯಮ್ ಮೂಲದ ಪ್ಲಾಸ್ಟಿಕ್, ಮಣ್ಣಿನಲ್ಲಿ ಕೊಳೆಯದೆ, ಪರಿಸರಕ್ಕೆ ಹಾನಿ ತರುತ್ತದೆ ಎನ್ನುವ ಅಂಶ ಪ್ಲಾಸ್ಟಿಕ್ ವಿರೋಧಿ ಅಲೆ ಎಬ್ಬಿಸಿದೆ. ಅದರೆ ಅದರ ಜನಪ್ರಿಯತೆಗೆ ಯಾವ ಬಗೆಯಲ್ಲೂ ಕುಂದು ಬಂದಿಲ್ಲ. ಬದಲಾಗಿ ಅದು ದಿನೇ ದಿನೇ ಹೆಚ್ಚುತ್ತಿದೆ. ಆದರೆ ಪೆಟ್ರೋಲಿಯಂ ವಸ್ತುಗಳು ಖಾಲಿಯಾದ ಬಳಿಕ ಪ್ಲಾಸ್ಟಿಕ್ ಉತ್ಪಾದಿಸುವುದು ಹೇಗೆ ಎನ್ನುವುದು ಯಕ್ಷಪ್ರಶ್ನೆ. ಲಂಡನ್‍ನ ವಿಜ್ಞಾನ ಮ್ಯೂಸಿಯಂನಲ್ಲೀಗ ಪ್ಲಾಸ್ಟಿಕ್ ಬಗ್ಗೆ ವಸ್ತು ಪ್ರದರ್ಶನ ನಡೆದಿದೆ.

ಜನಪ್ರಿಯ ಶತಶೋಧ ಯಾವುದು?
ಅಂತರ್ಜಾಲದಿಂದ ಮಾಹಿತಿ ಹುಡುಕಿ ಕೊಡುವ ಸೇವೆ ನೀಡುವ ಅಂತರ್ಜಾಲ ತಾಣ ಗೂಗಲ್ ಇದೀಗ ತನ್ನ ಸೇವೆ ಬಳಸಿ ಹೆಚ್ಚು ಜನರು ಏನನ್ನು ಶೋಧಿಸುತ್ತಿದ್ದಾರೆ ಎನ್ನುವ ಮಾಹಿತಿಯನ್ನು ಇತರರಿಗೆ ಒದಗಿಸಲಿದೆ. ಕಾಮುಕ, ವ್ಯಕ್ತಿಯ ಬಗೆಗಿನ ಶೋಧ, ಹವಾಮಾನ ಮತ್ತು ಜನಪ್ರಿಯ ಅಂತರ್ಜಾಲ ತಾಣದ ವಿಳಾಸ ಹುಡುಕಿ ಮಾಡುವ ಶೋಧಗಳನ್ನು ಇದರ ವ್ಯಾಪ್ತಿಯಿಂದ ಹೊರಗಿಡಲಾಗಿದೆ.ಈ ಮಾಹಿತಿಯನ್ನು ದಿನಕ್ಕೆ ಹಲವಾರು ಸಲ ನವೀಕರಿಸಲಾಗುತ್ತದೆ.
ಹಾಡಿನ ಸಾಲಿನ ಶೋಧ,ಮಕ್ಕಳ ಪರೀಕ್ಷೆ ತಯಾರಿಗೆ ಸಹಾಯಕ್ಕಾಗಿ ನಡೆಸುವ ಶೋಧಗಳು ಶೋಧ ಸೇವೆಯ ಮೊದಲ ಸ್ಥಾನಗಳಿಗೆ ಏರುವುದು ಸಾಮಾನ್ಯವಂತೆ.

ಭೂಗತ ಕೇಬಲ್‍ಗಳ ಪರೀಕ್ಷೆಗೆ ರೊಬೋಟ್
ವಿದೇಶಗಳಲ್ಲಿ ವಿದ್ಯುತ್ ಸರಬರಾಜಿಗೂ ಭೂಗತ ಕೇಬಲ್ ಬಳಕೆ ಹೆಚ್ಚು. ಈ ಕೇಬಲ್‍ಗಳು ಮಳೆಯ ಸಂದರ್ಭಗಳಲ್ಲಿ ನಿರೋಧಕ ವಸ್ತುವಿನ ವೈಫಲ್ಯವನ್ನು ಅನುಭವಿಸಬಹುದು. ಕೇಬಲ್‍ನ ಯಾವುದೋ ಒಂದೆಡೆ ಅತಿಯಾಗಿ ಬಿಸಿಯಾಗುವ ತೊಂದರೆಯೂ ಇರುತ್ತದೆ. ಇಂತಹ ತೊಂದರೆಗಳು ವಿದ್ಯುತ್ ಸರಬರಾಜಿನಲ್ಲಿ ಏರುಪೇರು ಉಂಟು ಮಾಡುವ ಮೊದಲೇ ಪತ್ತೆಯಾಗಬೇಕಾದರೆ, ಕೇಬಲ್ ಪರೀಕ್ಷೆ ನಡೆಸುವ ವಿಧಾನ ಬದಲಾಗಬೇಕು. ವಾಶಿಂಗ್ಟನ್ ವಿಶ್ವವಿದ್ಯಾಲಯದವರು ಇದಕ್ಕಾಗಿ ಸರೀಸೃಪದ ಲಕ್ಷಣವುಳ್ಳ ರೊಬೋಟ್ ಕಂಡುಹಿಡಿದಿದ್ದಾರೆ.ಇದು ಭೂಗತ ಕೇಬಲ್‍ನ ಪೈಪ್‍ನಲ್ಲಿ ತೆವಳಿಕೊಂಡು ಹೋಗಿ, ಇನ್‍ಫ್ರಾರೆಡ್ ಕಿರಣಗಳ ಮೂಲಕ ಶಾಖದ ಬಿಂದುಗಳನ್ನು ಕಂಡು ಹಿಡಿಯಬಲ್ಲುದು. ಕಿಡಿ ಬರುವ ಶಬ್ದವನ್ನಾಲಿಸಿ, ನಿರೋಧಕ ವಸ್ತುವಿನ ವೈಫಲ್ಯವನ್ನು ಕಂಡುಕೊಳ್ಳಬಲ್ಲುದು. ವಿಡಿಯೊ ಚಿತ್ರವನ್ನು ರವಾನಿಸಿ, ಕೇಬಲ್ ಜಾಲದ ಸ್ಥಿತಿಯನ್ನು ಹೊರಜಗತ್ತಿಗೆ ಅರುಹಬಲ್ಲುದು.ಈಗಾಗಲೇ ನಗರಗಳಲ್ಲಿ ಇದರ ಬಳಕೆ ಆರಂಭವಾಗಿದೆ.
*ಅಶೋಕ್‍ಕುಮಾರ್ ಎ

ಡಾರ್ವಿನ್ ಪತ್ರಗಳು ಅಂತರ್ಜಾಲದಲ್ಲಿ ಲಭ್ಯ



ವಿಕಾಸವಾದದ ಹರಿಕಾರ,ಮಂಗನಿಂದ ಮಾನವನ ಉಗಮವಾಯಿತೆಂದು ಪ್ರತಿಪಾದಿಸಿದ ವಿಜ್ಞಾನಿ ಡಾರ್ವಿನ್ ತಮ್ಮ ಜೀವಿತ ಕಾಲದಲ್ಲಿ ಬರೆದ ಪತ್ರಗಳ ಸಂಖ್ಯೆ ಅಪಾರ. ಸುಮಾರು ಎರಡು ಸಾವಿರ ಜನರ ಜತೆ ಪತ್ರ ವ್ಯವಹಾರ ಹೊಂದಿದ್ದ, ಡಾರ್ವಿನ್ ತಮ್ಮ ಸಂಶೋಧನೆಗೆ ಬೇಕಾದ ಮಾಹಿತಿ ಕಲೆ ಹಾಕಲು ಪತ್ರಗಳನ್ನೇ ಅವಲಂಬಿಸಿದ್ದರು.ಡಾರ್ವಿನ್ ಬರೆದ ಹದಿನಾಲ್ಕು ಸಾವಿರಕ್ಕೂ ಅಧಿಕ ಪತ್ರಗಳು ಲಭ್ಯವಿದ್ದು, ಇವನ್ನು ಈಗಾಗಲೇ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗಿದೆ. ಈಗ ಅವುಗಳ ಪೈಕಿ ಮೂರನೆ ಒಂದಂಶ ಪತ್ರಗಳ ಡಿಜಿಟಲ್ ಪ್ರತಿಗಳು ಅಂತರ್ಜಾಲ ತಾಣದ ಮೂಲಕ ಲಭ್ಯವಾಗಲಿವೆ.ಅವರ ಹಲವು ವೈಯುಕ್ತಿಕ ಪತ್ರಗಳೂ ಇಲ್ಲಿದ್ದು, ತಂಗಿಗೆ ಬರೆದ ಒಂದು ಪತ್ರದಲ್ಲಿ ಅವರು ತಾನು ಕಾಲುಗಳನ್ನು ತೊಳೆದುಕೊಳ್ಳುವುದು ಅಪರೂಪ,ತಾನು ಕೊಳಕ ಎಂಬ ಸತ್ಯವನ್ನು ಒಪ್ಪಿಕೊಂಡಿದ್ದಾರೆ!

ಕಚೇರಿಯಲ್ಲೂ ವ್ಯಾಯಾಮ!ಕಚೇರಿಯಲ್ಲಿ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವ ಕಾರಣ ತಮ್ಮ ದೇಹ ತೂಕ ಹೆಚ್ಚಿಸಿಕೊಳ್ಳುವ ನೌಕರರು, ಕಚೇರಿಯ ಸಮಯದಲೇ ವ್ಯಾಯಾಮ ಮಾಡಿ ದೇಹ ತೂಕ ಇಳಿಸಿಕೊಳ್ಳುವಂತೆ ಟ್ರೆಡ್‍ಮಿಲ್ ಯಂತ್ರವನ್ನು ಕಚೇರಿಯಲ್ಲೇ ಒದಗಿಸುವ ಕ್ರಮವನ್ನು ಇಂಗ್ಲೆಂಡಿನ ಕಂಪೆನಿಗಳು ಅನುಸರಿಸುತ್ತಿವೆ. ಆದರೆ ವ್ಯಾಯಾಮ ಸಮಯ ವ್ಯರ್ಥವಾಗಿ, ಕಚೇರಿ ಕೆಲಸ ಹಿಂದೆ ಬೀಳುವುದನ್ನು ತಡೆಯಲು ಟ್ರೆಡ್‍ಮಿಲ್‍ನಲ್ಲೂ ಕಂಪ್ಯೂಟರ್ ಅಳವಡಿಸಲಾಗಿದ್ದು, ನಡೆಯುತ್ತಾ ಅಥವ ನಿಂತಾಗಲೂ ಕೆಲಸ ಮಾಡುವ ಅನುಕೂಲತೆ ಒದಗಿಸಲಾಗಿದೆ.ದಿನಕ್ಕೆ ಎರಡು-ಮೂರು ಗಂಟೆ ಇದರಲ್ಲಿ "ನಡೆದು" ಕೆಲಸ ಮಾಡಿದರೆ,ವರ್ಷಕ್ಕೆ ಮೂವತ್ತು ಕಿಲೋ ಮೈತೂಕ ಇಳಿಸಬಹುದೆನ್ನುವ ಖಾತರಿಯನ್ನು ಇದನ್ನು ತಯಾರಿಸಿದ ಕಂಪೆನಿ ನೀಡಿದೆ.

ಚಿತ್ರೀಕರಣ ನಡೆಸದೆ ಚಲನಚಿತ್ರ!
ಚಿತ್ರೀಕರಣವೇ ನಡೆಯದೆ ಚಿತ್ರ ನಿರ್ಮಿಸುವುದು ಸಾಧ್ಯವೇ? ಆಸ್ಟ್ರೀಯಾದ ನಿರ್ದೇಶಕರೋರ್ವರು ನಿರ್ಮಿಸಿದ ರೀತಿ ಚಿತ್ರ ನಿರ್ಮಾಣ ನಡೆಸಿದರೆ ಸಾಧ್ಯ.ಮನು ಲಕ್ಷ್ ಎನ್ನುವಾಕೆ "ಫೇಸ್‍ಲೆಸ್" ಎನ್ನುವ ತನ್ನ ಚಿತ್ರವನ್ನು ಪೂರ್ತಿಯಾಗಿ ಇಂಗ್ಲೆಂಡ್‍ನ ಮೂಲೆ ಮೂಲೆಗಳಲ್ಲಿ ಸ್ಥಾಪಿಸಲಾಗಿರುವ ಕ್ಲೋಸ್ಡ್ ಸರ್ಕ್ಯೂಟ್ ಟಿವಿಯ ಚಿತ್ರಗಳನ್ನು ಬಳಸಿಕೊಂಡು ತಯಾರಿಸಿದ್ದಾರೆ. ಆಕೆ ಕ್ಲೋಸ್ಡ್ ಸರ್ಕ್ಯೂಟ್ ಟಿವಿಗಳಲ್ಲಿ ಸೆರೆಹಿಡಿಯಲ್ಪಟ್ಟ ತನ್ನ ಚಿತ್ರಗಳುಳ್ಳ ದೃಶ್ಯಗಳನ್ನು ಪಡೆದುಕೊಂಡು, ಅದರಿಂದ ಇತರರ ಮೊಗಗಳನ್ನು ಕಾಣದಂತೆ ಮಾಡಿ ವಿಶಿಷ್ಠ ಕತೆಯುಳ್ಳ ಚಿತ್ರ ನಿರ್ಮಾಣ ಮಾಡಿದ್ದಾರೆ. ವ್ಯಕ್ತಿಯೋರ್ವನಿಗೆ ಸಂಬಂಧ ಪಟ್ಟ ಕ್ಲೋಸ್ಡ್ ಸರ್ಕ್ಯೂಟ್ ಟಿವಿಯ ದೃಶ್ಯಗಳನ್ನು ಅ ವ್ಯಕ್ತಿ ಪಡೆದುಕೊಳ್ಳುವ ಹಕ್ಕನ್ನು ಹೊಂದಿದ್ದಾನೆ ಎನ್ನುವ ಕಾನೂನಿನ ನೆರವು ಪಡೆದು, ತನ್ನ ಚಿತ್ರಗಳುಳ್ಳ ದೃಶ್ಯಗಳನ್ನು ವಿವಿಧ ಮೂಲಗಳಿಂದ ಪಡೆದುಕೊಳ್ಳಲು ಸಫಲರಾದ ಆಕೆ ಕೊನೆಗೆ ಅವೆಲ್ಲವನ್ನೂ ಸೇರಿಸಿ, ಚಿತ್ರ ನಿರ್ಮಿಸಿದ್ದಾರೆ.

ಅಂತರ್ಜಾಲದ ಮಾಹಿತಿಯನ್ನು ನಂಬಬಹುದೇ?
ಅಂತರ್ಜಾಲದಲ್ಲಿ ನಮಗೆ ಅತಿಯೆನಿಸುವಷ್ಟು ಮಾಹಿತಿ ಸಿಕ್ಕಿದರೂ, ಅದರ ಸತ್ಯಾಸತ್ಯತೆ ಬಗ್ಗೆ ಯಾವ ಖಾತರಿಯೂ ಇಲ್ಲ. ವಿಶ್ವವಿದ್ಯಾಲಯವೋ, ಸರಕಾರಿ ಅಂತರ್ಜಾಲ ಜಾಲ ತಾಣದಲ್ಲಿ ಸಿಗುವ ಮಾಹಿತಿ ನಂಬುಗೆಗೆ ಅರ್ಹವಾದರೂ, ಇತರೆಡೆ ಸಿಕ್ಕುವ ಮಾಹಿತಿಯನ್ನು ನಂಬುವುದು ಬಿಡುವುದೂ ಅವರವರ ತೀರ್ಮಾನಕ್ಕೆ ಬಿಟ್ಟ ವಿಷಯ.ಇದರ ಬದಲಿಗೆ ನಂಬಿಕೆಗೆ ಅರ್ಹವಾದ ಮಾಹಿತಿಯನ್ನೇ ಒದಗಿಸುವ ಹೊಸ ಪ್ರಯತ್ನವೊಂದನ್ನು ಯುಎಸ್‍ವೆಬ್‍ ಸ್ಥಾಪಕರಾದ ಜೋ ಫರ್ಮೇಜ್ ಎನ್ನುವಾತ ತನ್ನ ಮೆನಿವನ್‍ನೆಟ್‍ವರ್ಕ್ಸ್ ಅನ್ನುವ ಕಂಪೆನಿಯ ಪ್ರಾಯೋಜನೆಯೊಂದಿಗೆ ಆರಂಭಿಸಿದ್ದಾನೆ.ಜನರು ಹೆಚ್ಚಾಗಿ ಬಯಸುವ ಮಾಹಿತಿಗಳ ಬಗ್ಗೆ ಪ್ರತಿಷ್ಠಿತ ತಾಣಗಳ ಮಾಹಿತಿಯ ಕೊಂಡಿಗಳನ್ನು ಒಂದೇ ಕಡೆ ಒದಗಿಸುವ ವ್ಯವಸ್ಥೆ ಅಲ್ಲಿರುತ್ತದೆ.ಮಾಹಿತಿಯನ್ನು ಪರಿಶೀಲಿಸಿ, ಅದರ ಬಗ್ಗೆ ಖಾತರಿ ನೀಡಲು, ಸಂಬಳ ಪಡೆಯುವ ಸಂಪಾದಕರ ಬಳಗವನ್ನೂ ತಾಣ ಹೊಂದಲಿದೆ.ಈ ತಾಣವನ್ನು ಯಾವ ಬ್ರೌಸರ್ ತಂತ್ರಾಂಶವನ್ನು ಉಪಯೋಗಿಸಿಯೂ ಜಾಲಾಡಲು ಅನುವಾಗುವಂತೆ ರಚಿಸಲಾಗುವುದು. ಬಳಕೆದಾರನು ತನ್ನ ಪ್ರಾಯ ನಮೂದಿಸಿದರೆ, ಆತನ ವಯಸ್ಸಿಗೆ ಸರಿಯದ ಮಟ್ಟದ ಮಾಹಿತಿಯನ್ನು ಒದಗಿಸುವ ರೀತಿ ತಾಣವನ್ನು ವ್ಯವಸ್ಥೆಗೊಳಿಸಲಾಗಿದೆ.http://www.earthportal.org/ ಎನ್ನುವುದು ಇಂತಹ ಒಂದು ಮೊದಲ ಪ್ರಯತ್ನ.

ನೀವು ಹೇಳಿದಂತೆ ಕೇಳುವ ರೊಬೊಟ್
ಹಾಂಕಾಂಗ್‍ನ ಕಂಪೆನಿ ವೋವೀ ರೊಬೋಟಿಕ್ಸ್ ಹೊಸ ತೆರನ ರೊಬೋಟ್‍ಗಳನ್ನು ತಯಾರಿಸಿದೆ.ಅರ್ಧ ಮೀಟರ್ ಎತ್ತರವುಳ್ಳ ಈ ರೊಬೋಟ್‍ಗಳ ಎದೆಯಲ್ಲಿ ಕಂಪ್ಯೂಟರ್ ತೆರೆಯೂ ಇದೆ. ರೊಬೊಟ್ ಕೆಲಸ ಮಾಡದಿದ್ದಾಗ ಇದನ್ನು ಮನರಂಜನೆಗಾಗಿಯೂ ಬಳಸಲು ಈ ತೆರೆ ಸಹಾಯಕ.ಜಾವಾ ಕಂಪ್ಯೂಟರ್ ಭಾಷೆಯಲ್ಲಿ ಕ್ರಮವಿಧಿ ಬರೆದು ಇದರ ಕಾರ್ಯವಿಧಾನ ಬದಲಿಸಲೂ ಸಾಧ್ಯ.ಇದರ ದೇಹದ ವಿನ್ಯಾಸ ಹೇಗಿದೆಯೆಂದರೆ, ಇದಕ್ಕೆ ಇನ್‍ಫ್ರಾರೆಡ್ ಕಿರಣಗಳ ಸಹಾಯದಿಂದ ಎದುರಿನ ವಸ್ತುಗಳನ್ನು "ಕಾಣುವ" ಸಾಮರ್ಥ್ಯವಿದೆ.ಇದು ಶಬ್ದವನ್ನಾಲಿಸಿ, ಅದರ ಮೂಲದೆಡೆ ಸಾಗಬಲ್ಲುದು.ಕೈಯಲ್ಲಿ ಹಿಡಿದದ್ದನ್ನು ಎಸೆಯಲು ಇದಕ್ಕೆ ಸಾಧ್ಯ. ಕೈಕಾಲುಗಳನ್ನು ಮಡಿಸಲು,ಭಾರ ಎತ್ತಲು ಇದು ಸಮರ್ಥ.
*ಅಶೋಕ್‍ಕುಮಾರ್ ಎ

Friday, May 18, 2007

ಜೈವಿಕ ಇಂಧನಗಳ ಬಳಕೆಯಿಂದ ಅಪಾಯ?

ಇಥೆನಾಲ್ ಬಳಸಿ ವಾಹನ ಓಡಿಸಲು ಸಾಧ್ಯ. ಅದನ್ನು ಪೆಟ್ರೋಲ್ ಜತೆ ಮಿಶ್ರ ಮಾಡಿಯೂ ಬಳಸಬಹುದು. ಏರುತ್ತಿರುವ ಕಚ್ಚಾ ತೈಲದ ಬಳಕೆ ಮತ್ತು ಅದರಿಂದ ಭೂಮಿಯ ವಾತಾವರಣಕ್ಕೆ ಅಗುತ್ತಿರುವ ಹಾನಿ, ಶಾಖದ ಏರಿಕೆ ಇವುಗಳ ಬಗ್ಗೆ ಚಿಂತಿಸಿದ ಸಂಶೋಧಕರು, ಇಥೆನಾಲ್‍ನಂತಹ ಜೈವಿಕ ಇಂಧನ ಬಳಕೆ ಒಳಿತು ಎಂಬ ಅಭಿಪ್ರಾಯಕ್ಕೆ ಬಂದಿದ್ದರು. ಅದರೆ ಈಗ ವಿಶ್ವ ಸಂಸ್ಥೆಯು ಜೈವಿಕ ಇಂಧನದ ಬಳಕೆಯೂ ಅಪಾಯಕಾರಿ ಆಗಬಲ್ಲುದು, ಇದರಿಂದ ಭೂಮಿಯ ಪರಿಸರದ ಮೇಲೆ ಆಗುತ್ತಿರುವ ಕೆಡುಕನ್ನು ನಿವಾರಿಸಲು ಅಸಾಧ್ಯವಾಗಬಹುದು ಎನ್ನುವ ಕಳವಳ ವ್ಯಕ್ತ ಪಡಿಸಿದೆ.
ಜೈವಿಕ ಇಂಧನವನ್ನು ಸಾಮಾನ್ಯವಾಗಿ ಮೆಕ್ಕೆಜೋಳ, ಬೀಟ್‍ರೂಟ್, ಪಾಮೆಣ್ಣೆಯಿಂದ ತಯಾರಿಸುವುದು ವಾಡಿಕೆ.ಈ ವರ್ಷ ತೈಲ ಬೆಲೆಯಲ್ಲಿ ಅಗಿರುವ ಹೆಚ್ಚಳದಿಂದ ಇಥೆನಾಲ್ ಉತ್ಪಾದನೆ ಹೆಚ್ಚಿದೆ. ಇದಕ್ಕಾಗಿ ಮೆಕ್ಕೆಜೋಳ, ಬೀಟ್‍ರೂಟ್ ಅದರ ಉತ್ಪಾದನೆಗೆ ಬಳಕೆಯಾಗಿ, ವಿಶ್ವ ಮಾರುಕಟ್ಟೆಯಲ್ಲಿ ಸಕ್ಕರೆ ಮತ್ತು ಮೆಕ್ಕೆಜೋಳದ ಬೆಲೆಯಲ್ಲಿ ಹೆಚ್ಚಳವಾಗಿದೆ. ಅಲ್ಲದೆ ಹೊಲಗಳನ್ನು ಜೈವಿಕ ಇಂಧನ ನೀಡುವ ಬೆಳೆಗಳನ್ನು ಬೆಳೆಯಲು ಬಳಸಿದರೆ, ಆಹಾರ ಉತ್ಪಾದನೆಗೆ ಪೆಟ್ಟು ಬೀಳಬಹುದು. ಏಕಬೆಳೆಯನ್ನು ಬೆಳೆಯುವುದರಿಂದ ಭೂಮಿ ಬರಡಾಗುವಿಕೆ, ನೀರಿನ ಬಳಕೆಯಲ್ಲಿ ಹೆಚ್ಚಳ, ಮಣ್ಣಿನ ಸವಕಳಿಯೂ ಹೆಚ್ಚುವ ಅಪಾಯವಿದೆ.ಅರಣ್ಯ ಭೂಮಿ ಒತ್ತುವರಿಯಿಂದ ಅರಣ್ಯ ನಾಶ,ಆಹಾರದ ಬೆಳೆಗಳ ಬೆಲೆಯಲ್ಲಿ ಹೆಚ್ಚಳ, ಸಣ್ಣ ಹಿಡುವಳಿಗಳು ಈ ಬೆಳೆಗಳಿಗೆ ಲಾಭದಾಯಕವಲ್ಲದ ಕಾರಣ ಸಣ್ಣ ಹಿಡುವಳಿದಾರರು ನಿರ್ಗತಿಕರಾಗುವ ಅಪಾಯವೂ ಇದೆ. ಭೂಮಿಯ ಪರಿಸರಕ್ಕೆ ಹಾನಿ ಹೆಚ್ಚಲಿದೆಯೇ ವಿನ: ಕಡಿಮೆಯಾಗದು ಎಂದು ಪರಿಸರವಾದಿಗಳು ಎಚ್ಚರಿಸಿದ್ದಾರೆ.

ಗೂಗಲ್ ಹಿಮ್ಮೆಟ್ಟಿಸಲು ಮೈಕ್ರೊಸಾಫ್ಟ್-ಯಾಹೂ ವಿಲಯನ ಯತ್ನ
ಗೂಗಲ್ ಅಗಾಧವಾಗಿ ಬೆಳೆಯುತ್ತಿದೆ. ಯುಟ್ಯೂಬ್ ಮತ್ತು ಡಬಲ್‍ಕ್ಲಿಕ್ ಕಂಪೆನಿಗಳ ಖರೀದಿಯ ಜತೆಗೆ ಗೂಗಲ್ ಮತ್ತಷ್ಟು ಬಲಾಢ್ಯವಾಗಿದೆ. ಮೈಕ್ರೋಸಾಫ್ಟ್ ಕಂಪೆನಿಯು ಗೂಗಲ್‍ನ್ನು ಹಿಮ್ಮೆಟ್ಟಿಸಲು ಇನ್ನೊಂದು ದೊಡ್ಡ ಕಂಪೆನಿಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಯೋಚನೆಯಲ್ಲಿದೆಯಂತೆ. ಮೈಕ್ರೋಸಾಫ್ಟ್‍ನ ಬಿಲ್ ಗೇಟ್ಸ್ ಮತ್ತು ಯಾಹೂವಿನ ಟೆರ್ರಿ ಸೆಮೆಲ್ ಈ ಬಗ್ಗೆ ಮಾತುಕತೆ ನಡೆಸಿದ್ದಾರೆನ್ನುವ ಗುಲ್ಲು ಈಗ ಕೇಳಿ ಬರುತ್ತಿದೆ. ಯಾಹೂವಿಗೆ ಐವತ್ತು ಬಿಲಿಯನ್ ಡಾಲರ್ ನೀಡಲು ಮೈಕ್ರೋಸಾಫ್ಟ್ ಸಿದ್ಧವಿದೆಯಂತೆ. ಈ ಎರಡೂ ದಿಗ್ಗಜಗಳು ಜತೆಯಾದರೂ ಅವುಗಳ ಮಾರುಕಟ್ಟೆ ಪಾಲು ಗೂಗಲ್‍ನಷ್ಟಾಗದು. ಆದರೂ ಎರಡರ ನಡುವಣ ಅಂತರ ಬಹಳಷ್ಟು ಕಡಿಮೆಯಾಗುವುದು ವಾಸ್ತವ.

ಜೀವವೈವಿಧ್ಯದ ವಿವರ ನೀಡುವ ವಿಶ್ವಕೋಶ
ಭೂಮಿಯ ಮೇಲೆ ಕಂಡು ಬರುತ್ತಿರುವ ಎಲ್ಲಾ ಹದಿನೆಂಟು ಲಕ್ಷ ಜಾತಿಯ ಜೀವಪ್ರಕಾರಗಳ ವಿವರಗಳು,ಚಿತ್ರಗಳನ್ನು,ವಿಡಿಯೋ,ಸಂಶೋಧನಾ ಪ್ರಬಂಧಗಳು,ನಕಾಶೆಗಳು ಇತ್ಯಾದಿಯನ್ನು ನೀಡುವ ವಿಶ್ವಕೋಶದ ಕೆಲಸ ಆರಂಭವಾಗಲಿದೆ. ಈ ವಿಶ್ವಕೋಶ ಎನ್‍ಸೈಕ್ಲೋಪೀಡಿಯಾ ಆಫ್ ಲೈಫ್ ಎಂಬ ಅಂತರ್ಜಾಲ ತಾಣದಲ್ಲಿ www.eol.org ಎನ್ನುವ ವಿಳಾಸದಲ್ಲಿ ಲಭ್ಯವಿದೆ. ಇಲ್ಲಿ ಸಿಕ್ಕುವ ವಿವರಗಳು ವಿದ್ಯಾರ್ಥಿಗಳಿಗೆ ಮತ್ತು ಸಂಶೋಧಕರಿಗೆ ಸೂಕ್ತವಾಗುವ ರೀತಿ ಎರಡು ತೆರದಲ್ಲಿ ಕಾಣಿಸಿಕೊಳ್ಳುವಂತೆ ಮಾಡುವ ಆಲೋಚನೆ ಸಂಯೋಜಕರಿಗಿದೆ.ಯೋಜನೆ ಪೂರ್ಣಗೊಳ್ಳಲು ಹತ್ತು ವರ್ಷ ಬೇಕಾದೀತು.

ಸೈಬರ್ ಕೆಫೆಯಲ್ಲೇ ಶಯನ!
ಸೈಬರ್ ಕೆಫೆಯಲ್ಲಿ ಅಂತರ್ಜಾಲ ಜಾಲಾಡಲು ಹೋಗುವ ಮಂದಿಯೇ ಅಧಿಕ. ಅದರೀಗ ಸೈಬರ್ ಕೆಫೆಯಲ್ಲಿ ರಾತ್ರಿ ಕಳೆಯಲು ಹೋಗುವ ಚಾಳಿ ಜಪಾನೀ ಯುವ ಪೀಳಿಗೆಯಲ್ಲಿ ಹೆಚ್ಚುತ್ತಿದೆ. ಅರೆಉದ್ಯೋಗಿ ಯುವಕರು ದುಬಾರಿ ನಗರವಾದ ಟೊಕಿಯೋದಲ್ಲಿ ಗಂಟೆಗೆ ಎಂಟು ಡಾಲರು ಗಳಿಸುತ್ತಾರೆ. ಮನೆ(ಕೋಣೆ) ಬಾಡಿಗೆ ಹಿಡಿಯಲು ತಿಂಗಳಿಗೆ ಸಾವಿರದಿನ್ನೂರು ಕಕ್ಕಬೇಕು. ಅದರ ಬದಲು ಒಂದು ರಾತ್ರಿ ನಿಲ್ಲಲು ಹದಿನೈದು-ಇಪ್ಪತ್ತು ಡಾಲರು ನೀಡಿ,ಸೈಬರ್ ಕೆಫೆಯಲ್ಲಿ ತಂಗಿದರೆ, ಅಂತರ್ಜಾಲ ಜಾಲಾಡಬಹುದು, ಲಘು ಪಾನೀಯ ಕುಡಿಯಬಹುದು,ಸ್ನಾನಗೃಹ,ಕಕ್ಕಸು ಲಭ್ಯ. ಒರಗು ಕುರ್ಚಿಯಲ್ಲಿ ನಿದ್ರಾದೇವಿಗೆ ಶರಣಾಗುವ ಮೊದಲು ಉಡುಗೆ ತೆಗೆದು ತೂಗು ಹಾಕಲು ಹ್ಯಾಂಗರ್ ಸೌಲಭ್ಯವೂ ಲಭ್ಯ. ಪ್ರತಿ ಸರ್ಫಿಗನಿಗೂ ಕ್ಯಾಬಿನ್ ಲಭ್ಯವಾಗುವುದರಿಂದ ಖಾಸಗಿತನಕ್ಕೂ ಅಡ್ಡಿಯಿಲ್ಲ. ನಿದ್ದೆ ಬರದಿದ್ದರೆ ಕಂಪ್ಯೂಟರ್ ಬಳಸಲೂ ಬಹುದು. ಮುಂಜಾನೆ ಜಾಗ ಖಾಲಿ ಮಾಡಿದರೆ ಸರಿ.ಬಾಡಿಗೆಯ ಹಣದ ಕಾಲು ಭಾಗ ನೀಡಿ,ಉಳಕೊಳ್ಳುವ ಸಮಸ್ಯೆ ಬಗೆಹರಿಸಿಕೊಂಡ ಹಾಗೆ ಆಗುತ್ತದೆ. ರಾತ್ರಿ ಊರು ಸೇರಲು ಟ್ರೈನ್ ತಪ್ಪಿಸಿಕೊಂಡ ಯುವತಿಯರೂ ಸೈಬರ್ ಕೆಫೆಯಲ್ಲಿ ರಾತ್ರಿ ಕಳೆಯಲು ಬರುವುದೂ ಇದೆಯಂತೆ.

ಹಸಿರಾಗುತ್ತಿದೆ ಸ್ಯಾನ್‍ಫ್ರಾನ್ಸಿಸ್ಕೋ ನಗರ!
ಸ್ಯಾನ್‍ಫ್ರಾನ್ಸಿಸ್ಕೋ ನಗರವು ಸಿಲಿಕಾನ್ ವ್ಯಾಲಿಯ ಸಮೀಪದ ನಗರ. ಅಮೆರಿಕಾದಲ್ಲಿ ಪ್ಲಾಸ್ಟಿಕ್ ಚೀಲ ನಿಷೇಧಿಸಿದ ಮೊದಲ ನಗರ ಎಂಬ ಹೆಗ್ಗಳಿಕೆ ಇದರದ್ದೇ. ಈಗಂತೂ ನಗರವನ್ನು ಪರಿಸರಪ್ರಿಯವಾಗಿಸಲು ಎಲ್ಲೆಡೆ ಒತ್ತು ನೀಡಲಾಗುತ್ತಿದೆ. ಗಗನಚುಂಬಿ ಕಟ್ಟಡವೊಂದರ ಎರಡೂವರೆ ಎಕರೆ ಚಾವಣಿಯಲ್ಲಿ ಉದ್ಯಾನ ಬೆಳೆಸಲಾಗುತ್ತಿದೆ.ಇದರಲ್ಲಿ ಹದಿನೇಳು ಲಕ್ಷ ಸಸಿಗಳು ಇಲ್ಲಿ ಬೆಳೆಯಲಿವೆ.ಹೆಚ್ಚಿನೆಲ್ಲಾ ಕಟ್ತಡಗಳಲ್ಲಿ ಸೌರ ಫಲಕಗಳನ್ನು ಸ್ಥಾಪಿಸಿ, ವಿದ್ಯುಚ್ಛಕ್ತಿ ಉತ್ಪಾದನೆಗೆ ಒತ್ತು ನೀಡಲಾಗುತ್ತಿದೆ.ನೀರಿನ ಮರುಬಳಕೆಗೆ ಪ್ರಯತ್ನ ಸಾಗಿದೆ. ಗಾಳಿಯಿಂದ ವಿದ್ಯುದುತ್ಪಾದನೆಗೆ ವಿಂಡ್‍ಮಿಲ್ ಸ್ಥಾಪನೆ ಅಲ್ಲಲ್ಲಿ ನಡೆದಿದೆ.ಚರ್ಚಿನಂತಹ ಸ್ಥಳಗಳಲ್ಲಿ ದಕ್ಷ ವಿದ್ಯುದ್ದೀಪಕಗಳ ಬಳಕೆ ನಡೆದಿದೆ. ಸೌರಶಕ್ತಿ ಮೇಲೆ ಇಲ್ಲಿನ ವಿದ್ಯುತ್ ಬೇಡಿಕೆ ಪೂರೈಸಿ,ಜನರಿಗೆ ಆದರ್ಶವಾಗುವ ಕನಸನ್ನು ಚರ್ಚಿನ ಆಡಳಿತ ಮಂಡಳಿಗಳು ಕಾಣುತ್ತಿವೆ. ಕೈಗಾರಿಕೆಗಳು ಹೊರಸೂಸುವ ತ್ಯಾಜ್ಯ ಅನಿಲಗಳ ಕಾರಣ ಸ್ಮೋಗ್ ಮತ್ತು ಮಂಜಿನ ವಾತಾವರಣದ ಸಮಸ್ಯೆ ಎದುರಿಸುತ್ತಿರುವ ಸ್ಯಾನ್‍ಫ್ರಾನ್ಸಿಸ್ಕೋ ನಗರ, ಬರೇ ಕನಸು ಕಾಣದೆ ಸಾಧ್ಯವದಷ್ಟನ್ನು ಕೃತಿಗಿಳಿಸಿ, ಇತರ ನಗರಗಳಿಗೆ ಪಾಠವಾಗಲು ಹೊರಟಿದೆ.
*ಅಶೋಕ್‍ಕುಮಾರ್ ಎ

Saturday, May 05, 2007

ದನದಿಂದ ಜನರೇಟರಿಗೆ ಸ್ಪೂರ್ತಿ



ಅಮೆರಿಕಾದ ಮಿಲಿಟರಿಗೋಸ್ಕರ ಪುರ್ಡ್ಯೂ ವಿಶ್ವವಿದ್ಯಾಲಯದ ಸಂಶೋಧಕರು ರಚಿಸಿದ, ವಿದ್ಯುಜ್ಜನಕ ಯಂತ್ರಕ್ಕೆ ದನದ ಹೊಟ್ಟೆಯೇ ಸ್ಪೂರ್ತಿ. ದನದ ಜಠರವು ಮಿಥೇನ್ ಅನಿಲವನ್ನು ಉತ್ಪಾದಿಸುತ್ತದಂತೆ. ಅದೇ ರೀತಿ ಕೆಲಸ ಮಾಡಿ ಅನಿಲ ಉತ್ಪಾದಿಸುವಂತೆ ವಿದ್ಯುಜನಕ ಯಂತ್ರವನ್ನು ರಚಿಸಬಾರದೇಕೇ ಎಂದು ಯೋಚಿಸಿದ ಸಂಶೋಧಕರು, ಯಂತ್ರದಲ್ಲಿ ಬೇಡದ ಕಸವನ್ನು ಇಂಧನವಾಗಿ ಬಳಸುತ್ತಾರೆ. ಯಂತ್ರದ ಘಟಕವೊಂದರಲ್ಲಿ ಜೈವಿಕ ವಸ್ತುಗಳ ಕೊಳೆತು ಮಿಥೇನ್ ಅನಿಲ ಉತ್ಪಾದನೆಯಾಗುತ್ತದೆ.ಈ ಕ್ರಿಯೆಯನು ಚುರುಕುಗೊಳಿಸಲು ಕಿಣ್ವಗಳ ಬಳಕೆಯಾಗುತ್ತದೆ. ಯೀಸ್ಟ್‍ಗಳು ಅನಿಲದ ಉತ್ಪಾದನೆಗೆ ನೆರವಾಗುತ್ತವೆ. ಪ್ಲಾಸ್ಟಿಕ್ ವಸ್ತುಗಳು ಇದ್ದರೆ,ಅವು ಪ್ರತ್ಯೇಕಗೊಂಡು ಇನ್ನೊಂದು ಘಟಕಕ್ಕೆ ಹೋಗಿ,ಅಲ್ಲಿ ಒತ್ತಲ್ಪಟ್ಟು ಗೋಲಿಗಳಾಗಿ ಬಿಡುತ್ತವೆ. ಈ ಗೋಲಿಗಳನ್ನು ಉರಿಸಿ, ಬಿಡುಗಡೆಯಾದ ಸಂಯುಕ್ತ ಅನಿಲವು, ಮೊದಲ ಘಟಕದ ಮಿಥೇನ್ ಅನಿಲದ ಜತೆ ಸೇರಿ, ಡಿಸೇಲ್ ಚಾಲಿತ ವಿದ್ಯುಜ್ಜನಕ ಯಂತ್ರಕ್ಕೆ ಬರುತ್ತದೆ. ಇಲ್ಲಿ ಇಂಧನದ ಶೇಕಡಾ ಹತ್ತು ಡಿಸೇಲ್ ಬಳಕೆಯಾಗುತ್ತದೆ. ವಿದ್ಯುಜ್ಜನಕ ಯಂತ್ರವು ಅರುವತ್ತು ಕಿಲೋವ್ಯಾಟಿನದ್ದು. ವ್ಯಾನ್ ಗಾತ್ರದ ಈ ಬಯೋ ವಿದ್ಯುತ್ ಸ್ಥಾವರ ಐದು ಸಾವಿರ ಕೆಜಿ ಕಸವನ್ನು ಬಳಸುತ್ತದೆ.ಆರುನೂರು ಜನರ ಕಸವನ್ನು ಬಳಸಿ,ಅವರ ವಿದ್ಯುಚ್ಚಕ್ತಿಯ ಬೇಡಿಕೆಯನ್ನಿದು ಪೂರೈಸುತ್ತದೆ.
ಯುಟ್ಯೂಬ್ ಮೂಲಕ ಸೆಲ್‌ಫೋನ್ ನಂಬರ್ ನೀಡಿದ ಭೂಪ
ಯುಟ್ಯೂಬ್ ಎನ್ನುವ ಅಂತರ್ಜಾಲ ತಾಣದ ಬಗ್ಗೆ ನಿಮಗೆ ಗೊತ್ತಿದೆ. ಇದು ಗೂಗಲ್ ಗುಂಪಿನ ವಿಡಿಯೋ ತುಣುಕುಗಳನ್ನು ವಿನಿಮಯ ಮಾಡಿಕೊಳ್ಳುವ ತಾಣ. ಪಿಟ್ಸೆರಾಲ್ಡ್ ಎನ್ನುವ ನಿರುದ್ಯೋಗಿ ಯುವಕ ತನ್ನ ವಿಡಿಯೊ ತುಣುಕಿನಲ್ಲಿ "ನಾನು ಸದ್ಯ ಬಿಡುವಾಗಿದ್ದೇನೆ. ನಿಮ್ಮೊಡನೆ ಮಾತನಾಡಲು ನಾನು ಸಿದ್ಧ,ಈ ಸಂಖ್ಯೆಗೆ ಕರೆ ಮಾಡಿ" ಎಂದು ತನ್ನ ನಂಬರನ್ನು ನೀಡಿದ್ದೇ ಸರಿ-ತೆಗೊಳ್ಳಿ ಅವನಿಗೆ ಒಂದರ ಹಿಂದೆ ಒಂದು ಐದು ಸಾವಿರ ಕರೆಗಳು ಬಂದಿವೆ. ಲೇಖನ ಬರೆಯುವವರೆಗೆ ಆತ ಬಂದ ಕರೆಗಳಿಗೆ ಸಮಾಧಾನದಿಂದ ಉತ್ತರಿಸಿದ್ದಾನೆ. ಇನ್ನೇನು ಒಳಬರುವ ಉಚಿತ ಕರೆಗಳ ಸಮಾಯಾವಧಿ ಮುಗಿದು ಹೋಗಲಿದೆಯಂತೆ. ಆಮೇಲೆ ಒಳಕರೆಗಳಿಗೂ ದುಡ್ಡು ತೆತ್ತು ಮಾತನಾಡುವ ಪರಿಸ್ಥಿತಿ, ಆ ನಿರುದ್ಯೋಗಿ ಯುವಕನದ್ದು.ಪಾಪ ಎನ್ನೋಣವೇ?
ಉಬುಂಟು ಲೀನಕ್ಸ್ ಹೆಚ್ಚು ಬಳಕೆದಾರ ಸ್ನೇಹಿ
ಲೀನಕ್ಸ್ ಕಂಪ್ಯೂಟರ್ ಕಾರ್ಯನಿರ್ವಹಣಾ ತಂತ್ರಾಂಶದ ಹಲವು ವಿತರಣೆಗಳು ಲಭ್ಯ. ಉಬುಂಟು ಎನ್ನುವುದು ಈಗ ಜನಪ್ರಿಯ. ಲೀನಕ್ಸ್ ವಿತರಣೆಗಳ ಪೈಕಿ ಉಬುಂಟು ಬಳಸಲು ಹೆಚ್ಚು ಸರಳ ಎಂಬ ಅಭಿಪ್ರಾಯವಿದೆ. ಡೆಲ್ ಕಂಪೆನಿಯೂ ತನ್ನ ಲೀನಕ್ಸ್ ವ್ಯವಸ್ಥೆ ಜತೆ ಬರುವ ಕಂಪ್ಯೂಟರುಗಳಲ್ಲಿ ಇದನ್ನೇ ನೀಡಲು ಸಿದ್ಧತೆ ನಡೆಸಿದೆ. ಇಂಟರ್ನೆಟ್ ಬಳಸಲು ಉಬುಂಟು ಅನುವು ಮಾಡಿಕೊಡುವುದು ಧನಾತ್ಮಕ ಅಂಶ. ಡೆಲ್ ಯಂತ್ರಾಂಶಗಳು ಉಬುಂಟುವಿನ ಜತೆ ಸಮಸ್ಯೆ ಸೃಷ್ಟಿಸದೆ ಕಾರ್ಯಾಚರಿಸಲು ವಿನ್ಯಾಸಗೊಳಿಸಲಾಗಿದೆಯಂತೆ.ಅಂದ ಹಾಗೆ ಉಬುಂಟು ಮುಕ್ತ ತಂತ್ರಾಂಶದ ಹಿಂದಿನ ಚಾಲಕ ಶಕ್ತಿ ಮಾರ್ಕ್ ಶಟಲ್‍ವರ್ತ್,ಸ್ಪೇಸ್ ಶಟಲಿನಲ್ಲಿ ಹಾರಿದ ಮೊದಲ "ಪ್ರವಾಸಿ" ಬಾಹ್ಯಾಕಾಶಯಾನಿ.
ಅಂತರ್ಜಾಲದಲ್ಲಿ ಸೆನ್ಸಾರ್ ಬೇಡ:ಜನಾಭಿಪ್ರಾಯಕ್ಕೆ ಮಣಿದ ಡಿಗ್
ಡಿಗ್ ಎನ್ನುವ ತಾಣದಲ್ಲಿ ಜನರು ತಮಗನಿಸಿದ್ದನ್ನು ಪ್ರಕಟಪಡಿಸಲು ಅವಕಾಶವಿದೆ. ಈ ತಾಣವನ್ನು ನಿರ್ವಹಿಸಲು ಹದಿನಾರು ಜನ ಸಾಕಾಗುವ ಹಿಂದಿನ ಗುಟ್ಟು ಇದೇ ಆಗಿದೆ. ಜನರಿಗೆ ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಪ್ರಕಟಿಸಲು ಅವಕಾಶ ಇರುವ ಕಾರಣ ಅವರ ಬರಹಗಳನ್ನು ಯಾರೂ ತಿದ್ದುವುದಿಲ್ಲ. ಅದರೆ ಈ ವಾರ ಅದಕ್ಕೆ ಚ್ಯುತಿ ಬಂತು.ಹೊಸ ಎಚ್.ಡಿ. ಡಿವಿಡಿಗಳಲ್ಲಿ ಮತ್ತು ಬ್ಲೂರೇಡಿಸ್ಕ್‌ಗಳಲ್ಲಿ ದಾಖಲಿತ ಮಾಹಿತಿ, ಖರೀದಿಸಿದವರಿಗೆ ಮಾತ್ರಾ ಸಿಗುವಂತೆ ಗುಪ್ತಪದವನ್ನು ನೀಡಬೇಕಾಗುತ್ತದೆ.ಈ ಗೌಪ್ಯತೆಯನ್ನು ಮುರಿಯಲು ಶಕ್ತರಾದ ಕೆಲ ಟೆಕಿಗಳು, ಡಿವಿಡಿ ಬಳಸಲು ನೀಡಬೇಕಾದ ಗುಪ್ತಪದವನ್ನು ಡಿಗ್ ಅಂತರ್ಜಾಲ ತಾಣದಲ್ಲಿ ಪ್ರಕಟಿಸಿದರು. ಕಾಪಿರೈಟ್ ಕಾಯಿದೆಯನ್ನು ಉಲ್ಲಂಘಿಸಲು ನೆರವಾದುದಕ್ಕೆ ಡಿಗ್ ತಾಣದ ನಿರ್ವಾಹಕರಿಗೆ ಕೋರ್ಟು ನೋಟೀಸು ಬಂತು. ತಕ್ಷಣ ಜಾಗೃತರಾದ ಡಿಗ್ ತಾಣದ ನಿರ್ವಾಹಕರು, ಗುಪ್ತಪದವನ್ನು ಬಹಿರಂಗ ಪಡಿಸಿದ ಪುಟಗಳನ್ನು ತಾಣದಿಂದ ತೆರವುಗೊಳಿಸಿದರು.ಈ ಕ್ರಮದ ಬಗ್ಗೆ ವ್ಯಾಪಕ ಪ್ರತಿಭಟನೆ ಕಂಡು ಬಂತು. ಡಿವಿಡಿ ಕಂಪೆನಿಗಳ ಲಾಬಿಗೆ ಮಣಿದುದಕ್ಕೆ ಡಿಗ್‌ಗೆ ಜನ ಛೀಮಾರಿ ಹೇಳಿದರು. ಕೊನೆಗೇ ಜನಮತಕ್ಕೇ ಗೆಲುವಾಯಿತು. "ಆದದ್ದಾಗಲಿ, ನಾವು ಯಾವ ಪುಟವನ್ನೂ ಸೆನ್ಸಾರ್ ಮಾಡುವುದಿಲ್ಲ.ನ್ಯಾಯಾಲಯ ತಾಣವನ್ನು ಮುಚ್ಚಿಸಿದರೆ, ಹಾಗೇ ಆಗಲಿ", ಎಂದು ಅಂತರ್ಜಾಲ ತಾಣದ ನಿರ್ವಾಹಕರು ಪ್ರಕಟಿಸಿ,ವಿವಾದಕ್ಕೆ ಅಂತ್ಯ ಹೇಳಿದ್ದಾರೆ.
ಗುರುಗ್ರಹದ (ವಿ)ಚಿತ್ರಗಳು
ಗುರುಗ್ರಹದ ಉಪಗ್ರಹಗಳೂ ಸೇರಿದಂತೆ, ಗ್ರಹದ ಅನೇಕ ಸಮೀಪ ದೃಶ್ಯಗಳನ್ನು ಸೆರೆ ಹಿಡಿದು ಕಳುಹಿಸಿರುವ ನಾಸಾದ ಅತ್ಯಧಿಕ ವೇಗದ ಬಾಹ್ಯಾಕಾಶ ವಾಹನ ನ್ಯೂ ಹರೈಸನ್‌ನ ಚಿತ್ರಗಳು ಅತ್ಯಮೂಲ್ಯ ಮಾಹಿತಿಯನ್ನು ವಿಜ್ಞಾನಿಗಳಿಗೆ ನೀಡಿದೆ.ವಾಹನವೀಗಾಗಲೇ ಒಂದು ವರ್ಷವನ್ನು ಪ್ಲುಟೋವಿನತ್ತದ ತನ್ನ ಪ್ರಯಾಣದಲ್ಲಿ ಕಳೆದಿದೆ. ಏಳು ಕ್ಯಾಮರಾಗಳು ಹಿಡಿದ ಅಸಂಖ್ಯ ಚಿತ್ರಗಳು ಮೂವತ್ತನಾಲ್ಕು ಗಿಗಾಬಿಟ್‌ನಷ್ಟು ದೀರ್ಘವಾಗಿವೆ.ಗುರುವಿನ ನಾಲ್ಕು ಗುಲಾಮ ಉಪಗ್ರಹಗಳ ಚಿತ್ರಗಳನ್ನೂ ವಿಜ್ಞಾನಿಗಳು ಪಡೆದಿದ್ದಾರೆ.
*ಅಶೋಕ್‌ಕುಮಾರ್ ಎ

ಪರೀಕ್ಷೆಯಲ್ಲಿ ಐಪಾಡ್ ಅಕ್ರಮ ಬಳಕೆ

ಸೆಲ್ ಪೋನ್‌ಗಳನ್ನು ವಿದ್ಯಾರ್ಥಿಗಳು ಅಕ್ರಮವಾಗಿ ಬಳಸುತ್ತಿದ್ದುದು ಗೊತ್ತಾದ ಮೇಲೆ ಅದರ ಬಳಕೆಯನ್ನು ನಿಯಂತ್ರಿಸುವ ನಿರ್ಧಾರವನ್ನು ಹಲವಾರು ಕಾಲೇಜುಗಳು ವಿಶ್ವವಿದ್ಯಾಲಯಗಳು ಮಾಡಿವೆ. ಈಗ ವಿದ್ಯಾರ್ಥಿಗಳಲ್ಲಿ ಜನಪ್ರಿಯವಾಗಿರುವ ಹಾಡುಗಳ ಧ್ವನಿಮುದ್ರಿಕೆಯನ್ನು ಸಂಗ್ರಹಿಸಿ,ಅದನ್ನು ನುಡಿಸುವ ಐಪಾಡ್ ಕೂಡಾ ದುರ್ಬಳಕೆಯಾಗುತ್ತದೆ ಎನ್ನುವುದು ಕೆಲವೆಡೆ ಬೆಳಕಿಗೆ ಬಂದಿದೆ.ಕಿರುಗಾತ್ರದ ಐಪಾಡನ್ನು ಅಡಗಿಸಿ ಇಡುವುದು ಸುಲಭ. ಕಿವಿಗೆ ಧ್ವನಿ ಆಲಿಸಲು ಇಯರ್ ಫೋನ್ ಸಿಕ್ಕಿಸಿಕೊಂಡು,ಅದರ ತಂತಿಯನ್ನು ಕಾಲರಿನೆಡೆಯಿಂದ ತೆಗೆದುಕೊಂಡರೆ,ಪಕ್ಕನೆ ಯಾರ ಗಮನಕ್ಕೂ ಬಾರದು.ಪ್ರಶ್ನೆಗಳಿಗೆ ಉತ್ತರಗಳನ್ನು ಮೊದಲೆ ಧ್ವನಿಮುದ್ರಿಸಿ ಇಟ್ಟುಕೊಂಡು,ಪರೀಕ್ಷೆಯಲ್ಲಿ ಅದನ್ನು ಆಲಿಸುತ್ತಾ ಉತ್ತರ ಬರೆಯುವ ಭೂಪರು ಅಮೆರಿಕಾದಲ್ಲಿ ಕೆಲವು ಕಾಲೇಜುಗಳಲ್ಲಿ ಹದ್ದಿನ ಕಣ್ಣಿನ ಶಿಕ್ಷಕರ ಕೈಗೆ ಸಿಕ್ಕಿ ಬಿದ್ದಿದ್ದಾರೆ.ಹಾಡಿನ ಸಾಲಿನ ಲಿಪಿ ಕಡತವನ್ನೂ ದಾಸ್ತಾನು ಮಾಡುವ ಸೌಲಭ್ಯವನ್ನು ಉತ್ತರ ಬರೆದಿಡಲು ಉಪಯೋಗಿಸಿ,ಪರೀಕ್ಷೆಯಲ್ಲಿ ಅದನ್ನು ನೋಡಿ ಉತ್ತರ ಬರೆಯುವುದು ವಿದ್ಯಾರ್ಥಿಗಳು ಬಳಸುತ್ತಿರುವ ಇನ್ನೊಂದು ತಂತ್ರ.ಹಾಗಾಗಿ ಐಪಾಡ್‌ಗೆ ನಿಷೇಧ ಭಾಗ್ಯ ಒದಗಲಿದೆ. ಉತ್ತರ ಕೆರೋಲಿನಾದ ಡ್ಯೂಕ್ ವಿಶ್ವವಿದ್ಯಾಲಯ ಮಾತ್ರ ಇದಕ್ಕೆ ವ್ಯತಿರಿಕ್ತವಾಗಿ,ಐಪಾಡ್‌ನಿಂದ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಹೆಚ್ಚಿನ ಸಹಾಯ ಆಗುತ್ತಿದೆ.ಸಂಗೀತ,ತಂತ್ರಜ್ಞಾನದ ವಿದ್ಯಾರ್ಥಿಗಳ ಕಲಿಕೆಗೆ ಇದು ಸಹಕಾರಿ ಎಂದು ಅದರ ಬಳಕೆಗೆ ಮುಕ್ತ ಅನುಮತಿ ನೀಡಿದೆ.

ಎಸ್ ಎಮ್ ಎಸ್ ಕಳುಹಿಸಿ ಇಪ್ಪತ್ತೈದು ಸಾವಿರ ಡಾಲರು ಬಹುಮಾನ ಗೆದ್ದ ಬಾಲಕಿ
supercalifragilisticexpialidocious ಎನ್ನುವ ಉದ್ದ ಸಂದೇಶವನ್ನು ಬರೇ ಹದಿನೈದು ಸೆಕೆಂಡುಗಳಲ್ಲಿ ಮೊಬೈಲ್ ಮೇಲೆ ಟೈಪಿಸಿ,ಹದಿಮೂರು ವರ್ಷದ ಪೋರಿ ಎಲ್‍ಜಿ ಕಂಪೆನಿ ನೀಡಿದ ಇಪ್ಪತ್ತೈದು ಸಾವಿರ ಡಾಲರು ಬಹುಮಾನವನ್ನು ತನ್ನದಾಗಿಸಿಕೊಂಡಿದ್ದಾಳೆ.ಇನ್ನೂರು ಜನರು ಸ್ಪರ್ಧಿಗಳ ಪೈಕಿ ಆಕೆ ಮೊದಲಿಗಳಾದಳು. ತಾನು ಟೈಪಿಸಿದ ಪದ ಏನೆಂದು ಆಕೆಗೆ ಪ್ರಾಯಶ: ಗೊತ್ತಿರಲಾರದು.
ಐರ್‌ಲ್ಯಾಂಡಿನ ವರದಿಯೊಂದು ಮಕ್ಕಳು ಕಿರು ಸಂದೇಶಗಳನ್ನು ಕಳುಹಿಸುವ ಕಾರಣ ಅವರ ಬರವಣಿಗೆ ಸಾಮರ್ಥ್ಯ ಕುಸಿಯುತ್ತಿದೆ ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದೆ.ಅಕ್ಷರ ತಪ್ಪುಗಳ ಜತೆ, ವ್ಯಾಕರಣ ತಪ್ಪುಗಳು ಜತೆಗೆ ವಿರಾಮ ಚಿಹ್ನೆಗಳ ಬಳಕೆಯೂ ಬಾಧಿತವಾಗಿದೆ ಎಂದು ವರದಿ ತಿಳಿಸಿದೆ.

ನಗರಗಳ ನಕಾಶೆ ಅಂತರ್ಜಾಲದಲ್ಲಿ ಲಭ್ಯವಾಗಿಸಿದ ಯಾಹೂ
ಸಿಇ ಇನ್ಫೋ ಸಿಸ್ಟಮ್ಸ್‌ನ ಜತೆಗೂಡಿ ಯಾಹೂ ಕಂಪೆನಿಯು ಭಾರತದ ಇಪ್ಪತ್ತಕ್ಕೂ ಅಧಿಕ ನಗರಗಳ ನಕಾಶೆಯನ್ನು ಅಂತರ್ಜಾಲದಲ್ಲಿ ಲಭ್ಯವಾಗಿಸಿದೆ. ವಾಣಿಜ್ಯೋದ್ದಮಗಳು,ಏಟಿಎಂ,ಸಿನೆಮಾ ಮಂದಿರ,ಹೋಟೆಲುಗಳ ವಿವರಗಳೂ ಲಭ್ಯವಾಗಲಿವೆ.ಹವಾಮಾನ ವರದಿಯೂ ಸಿಗುತ್ತದೆ.ರಸ್ತೆ ನಕಾಶೆ ಮತ್ತು ಉಪಗ್ರಹ ಚಿತ್ರಗಳನ್ನು ಜತೆಗೂಡಿಸಿ ನೋಡುವ ಸೌಲಭ್ಯವನ್ನೂ ಯಾಹೂ ಒದಗಿಸಲಿದೆ. http://in.maps.yahoo.com/ವಿಳಾಸದಲ್ಲಿ ಇದು ಲಭ್ಯವಾಗಿದೆ. ಈಗಿನ್ನೂ ಆರಂಭದ ಹಂತವಾಗಿರುವುದರಿಂದ ಸಮಗ್ರವಾದ ವಿವರಗಳು ಸಿಗದಿರಬಹುದು. ಆದರೆ ಮುಂದಿನ ದಿನಗಳಲ್ಲಿ ಸೇವೆ ಸುಧಾರಿಸಲಿದೆ. ಪ್ಲಿಕ್ರ್, ಡಿಲಿಷಿಯಸ್ ಮುಂತಾದ ಜನಪ್ರಿಯ ಅಂತರ್ಜಾಲ ತಾಣಗಳಲ್ಲಿರುವ ಚಿತ್ರಗಳನ್ನು ಬಳಸಿ, ಯಾಹೂ ವಿಶಿಷ್ಟ ಅನುಭವ ನೀಡಲು ಪ್ರಯತ್ನ ನಡೆಸಿದೆ.

ಇ-ರಾಷ್ಟ್ರಗಳ ಪಟ್ಟಿಯಲ್ಲಿ ಭಾರತಕ್ಕೆ ಐವತ್ತನಾಲ್ಕನೇ ಸ್ಥಾನಕ್ಕೆ ಕುಸಿತ
ಭಾರತದಲ್ಲೂ ಅಂತರ್ಜಾಲ ಬಳಕೆ ಹೆಚ್ಚುತ್ತಿದ್ದರೂ, ಇ-ಸಿದ್ಧತೆ ಪರಿಗಣಿಸಿ ನೀಡಿದ ಶ್ರೇಣಿಯಲ್ಲಿ ಕಳೆದವರ್ಷದ ಐವತ್ತಮೂರನೇ ಸ್ಥಾನದಿಂದ ಐವತ್ತನಾಲ್ಕನೇ ಸ್ಥಾನಕ್ಕೆ ಕುಸಿದಿದೆ.ಅಂತರ್ಜಾಲದ ಸುಲಭ ಲಭ್ಯತೆ, ಅದರ ಬಳಕೆಗೆ ಇರುವ ನಿಯಮಾವಳಿಗಳು ಮತ್ತು ಸರಕಾರದ ಸೇವೆಗಳನ್ನು ಪಡೆಯಲು ಅಂತರ್ಜಾಲದಲ್ಲಿ ಇರುವ ಅವಕಾಶಗಳನ್ನು ಆಧರಿಸಿ, ಈ ರ್‍ಯಾಂಕಿಂಗ್ ನೀಡಲಾಗಿದೆ.ಡೆನ್ಮಾರ್ಕ್ ಮೊದಲ ಸ್ಥಾನದಲ್ಲಿದ್ದರೆ ಅಮೆರಿಕಾ ದ್ವಿತೀಯ ಸ್ಥಾನದಲ್ಲಿದೆ.ಹಾಂಕಾಗ್ ನಾಲ್ಕನೇ, ಸಿಂಗಾಪುರ್ ಆರನೇ ಮತ್ತು ದಕ್ಷಿಣ ಕೊರಿಯ ಹದಿನಾಲ್ಕನೇ ಸ್ಥಾನದಲ್ಲಿವೆ.ಬ್ರಾಡ್‌ಬ್ಯಾಂಡ್ ಈಗ ಜನರು ಅಂತರ್ಜಾಲ ಜಾಲಾಟಕ್ಕೆ ಬಳಸುವ ಸಾಮಾನ್ಯ ಮಾಧ್ಯಮವಾಗಿ ಹೊರಹೊಮ್ಮಿದೆ.ಇಂಗ್ಲೆಂಡ್ ಐದನೇ ಸ್ಥಾನದಿಂದ ಏಳನೇ ಸ್ಥಾನಕ್ಕೆ ಕುಸಿದು ಅಚ್ಚರಿ ಮೂಡಿಸಿದೆ.

ಅಡೋಬ್‌ನ ಫ್ಲೆಕ್ಸ್ ತಂತ್ರಾಂಶ ಅಗಲಿದೆ ಮುಕ್ತ,ಮುಕ್ತ..ಮುಕ್ತ!
ಅಡೋಬ್ ಕಂಪೆನಿಯು ತನ್ನ ತಂತ್ರಾಂಶಗಳ ಮೂಲ ಕ್ರಮವಿಧಿಗಳನ್ನು ಮುಕ್ತವಾಗಿ ಒದಗಿಸುವ ತೀರ್ಮಾನ ಮಾಡಿದೆ.ಫ್ಲೆಕ್ಸ್ ಎನ್ನುವ ಅಂತರ್ಜಾಲದಲ್ಲಿ ಬಳಸಬಹುದಾದ ತಂತ್ರಾಂಶಗಳನ್ನು ಅಭಿವೃದ್ಧಿ ಪಡಿಸುವ ಸಾಧನವೀ ವರ್ಷದೊಳಗೆ ಮುಕ್ತವಾಗಲಿದೆ. ಮೈಕ್ರೋಸಾಫ್ಟ್ ಅಡೋಬ್ ಕಂಪೆನಿಯ್ ಫ್ಲಾಶ್ ತಂತ್ರಾಂಶಕ್ಕೆ ಸ್ಪರ್ಧೆಯನ್ನೊಡಲು ಸಿಲ್ವರ್ ಲೈಟ್ ಎನ್ನುವ ತಂತ್ರಾಂಶವನ್ನು ಬಿಡುಗಡೆ ಮಾಡುವ ಸಿದ್ಧತೆಯಲ್ಲಿರುವಾಗಲೇ ಈ ತೀರ್ಮಾನ ಬಂದಿದೆ. ಮುಕ್ತ ತಂತ್ರಾಂಶವಾದ ಕಾರಣ,ಅ ಅದನ್ನು ಅಭಿವೃದ್ಧಿ ಪಡಿಸಲು ಕೈ ಸೇರಿಸಲು ಟೆಕಿಗಳಿಗೆ ಅವಕಾಶ ಸಿಗುತ್ತದೆಯಾದರೂ,ಅದರ ಹೊಸ ಆವ್ರುತ್ತಿಯನ್ನು ಬಿಡುಗಡೆ ಮಾಡಲು ಅವಕಾಶವಿಲ್ಲ. ಅದೇನಿದ್ದರೂ ಕಂಪೆನಿಯೇ ಮಾಡಲಿದೆ.
*ಅಶೋಕ್‍ಕುಮಾರ್ ಎ
 
googledc7e93ba1a7703ae.html