Monday, June 25, 2007

ಅಗ್ಗ್ದ ದರಕ್ಕೆ ಸಿ ಎಫ್ ಲ್ಯಾಂಪ್

ಸಿ ಎಫ್ ಎಲ್ ಎಂದು ಜನಪ್ರಿಯವಾಗಿರುವ ಕ್ಯಾಂಪ್ಯಾಕ್ಟ್ ಫ್ಲೊರಸೆಂಟ್ ಲ್ಯಾಂಪ್‍ಗಳು ಸದ್ಯ ಎಪ್ಪತ್ತೈದರಿಂದ ನೂರು ರುಪಾಯಿಗೆ ಕಡಿಮೆಯಿಲ್ಲದ ಬೆಲೆಯಲ್ಲಿ ಬಳಕೆದಾರರಿಗೆ ಲಭ್ಯ. ಇವು ಬಹಳ ಕಡಿಮೆ ವಿದ್ಯುಚ್ಛಕ್ತಿ ಬಳಸುತ್ತವೆ. ನೂರು ವ್ಯಾಟ್‍ನ ಮಾಮೂಲಿ ಬಲ್ಬ್ ಬಳಸುವ ವಿದ್ಯುತ್‍ನ ಐದನೇ ಒಂದು ಶಕ್ತಿ ಬಳಸಿ ನೂರು ವ್ಯಾಟಿನ ಬಲ್ಬು ನೀಡುವ ಬೆಳಕು ನೀಡುತ್ತದೆ. ಅಂದರೆ, ಸಿ ಎಫ್ ಎಲ್ ಪರಿಸರ ಸ್ನೇಹಿ ಅನ್ನುವುದರಲ್ಲಿ ಸಂಶಯವಿಲ್ಲವಷ್ಟೇ?ಇನ್ನು ಮುಂದೆ ಪರಿಸರಸ್ನೇಹಿ ಉತ್ಪನ್ನಗಳನ್ನು ತಯಾರಿಸುವ ಕಂಪೆನಿಗಳಿಗೆ ಕಾರ್ಬನ್ ಕ್ರೆಡಿಟ್ ಅನ್ನು ಪಡೆಯುತ್ತವೆ. ಪರಿಸರಕ್ಕೆ ಹಾನಿ ಮಾಡುವ ಕಂಪೆನಿಗಳು ಕಾರ್ಬನ್ ಕ್ರೆಡಿಟ್ ಹೊಂದಿರುವ ಕಂಪೆನಿಗಳಿಂದ ಕಾರ್ಬನ್ ಕ್ರೆಡಿಟನ್ನು ದುಡ್ಡುಕೊಟ್ಟು ಖರೀದಿಸಬೇಕಾಗುತ್ತದೆ.
ಇದರ ಲಾಭ ಪಡೆದು ಕಡಿಮೆ ಬೆಲೆಯಲ್ಲಿ ಸಿ ಎಫ್ ಎಲ್‍ಗಳನ್ನು ಜನರಿಗೆ ಒದಗಿಸಲು ಕೇಂದ್ರ ಸರಕಾರ ಯೋಜನೆ ಹಾಕಿಕೊಂಡಿದೆ. ಇದರ ಪ್ರಕಾರ ಬಲ್ಬ್ ಕಂಪೆನಿಗಳು ಹತ್ತು-ಹದಿನೈದು ರೂಪಾಯಿಗಳಿಗೆ ಬಲ್ಬ್ ಒದಗಿಸಬೇಕಾಗುತ್ತದೆ. ಇವನ್ನು ವಿತರಿಸಲು ಪ್ರತ್ಯೇಕ ಕಂಪೆನಿಗಳಿರುತ್ತವೆ. ಈ ವಿತರಕ ಕಂಪೆನಿಗಳು ಕಾರ್ಬನ್ ಕ್ರೆಡಿಟ್ ಅಂದಾಜು ಮಾಡುವ ಕಾರ್ಯದಲ್ಲಿಯೂ ಕೆಲಸ ಮಾಡುತ್ತವೆ. ಪ್ರತಿವರ್ಷ ಬಲ್ಬ್ ಕಂಪೆನಿಗೆ ಅಂದಾಜು ಇಪ್ಪತ್ತು ರೂಪಾಯಿ ಕಾರ್ಬನ್ ಕ್ರೆಡಿಟ್ ದೊರೆಯುತ್ತದೆ. ಹೀಗೆ ಐದು ವರ್ಷವಾಧಿಯಲ್ಲಿ ಬಲ್ಬ್ ಕಂಪೆನಿಗೆ ಪೂರ್ತಿ ಹಣ ಸಂದಾಯವಾಗುತ್ತದೆ.
ಈ ಯೋಜನೆಯು ಆಂಧ್ರ ಪ್ರದೇಶ ಮತ್ತು ಹರ್ಯಾಣಾದಲ್ಲಿ ಈಗಾಗಲೇ ಜಾರಿಗೆ ಬಂದಿದೆ.ಓಸ್‍ರಾಮ್ ಕಂಪೆನಿ ಈ ಯೋಜನೆಯಲ್ಲಿ ಪಾಲ್ಗೊಂಡಿದೆ. ಫಿಲಿಫ್ಸ್ ಕಂಪೆನಿಯೂ ಉತ್ಸಾಹ ವ್ಯಕ್ತ ಪಡಿಸಿದೆ.ದೇಶದಲ್ಲಿ ಐನೂರು ದಶಲಕ್ಷ ಬಲ್ಬ್‍ಗಳು ಬಳಕೆಯಲಿದ್ದು,ಅವುಗಳ ಪೈಕಿ ನೂರು ದಶಲಕ್ಷ ಬಲ್ಬ್‍ಗಳನ್ನು ಬದಲಾಯಿಸುವ ಗುರಿಯನ್ನು ಕೇಂದ್ರ ಸರಕಾರ ಹೊಂದಿದೆ.

ವಿಡಿಯೋಗೇಮ್‍ಗೆ ನಿಷೇಧ
ಮ್ಯಾನ್‍ಹಂಟ್ 2 ಎಂಬುದು ಅಮೆರಿಕಾದಲ್ಲಿ ಅಭಿವೃದ್ಧಿ ಪಡಿಸಲಾದ ವಿಡಿಯೋಗೇಮ್. ಈಗಿನ ವಿಡಿಯೋ ಆಟಗಳು ಚಲನಚಿತ್ರಗಳಂತೆ ಕತೆಯನ್ನು ಹೊಂದಿದ್ದು, ಆಟಗಾರನ ಸೂಚನೆಗಳಿಗೆ ಪ್ರತಿಸ್ಪಂದನೆ ಸಿಗುತ್ತದೆ. ಜನರ ಅಕರ್ಷಣೆ ಗಳಿಸಲು ಭಯಾನಕ, ಬೀಭತ್ಸ ದೃಶ್ಯಗಳನ್ನು ಒಳಗೊಂಡಿರುವುದು ತೀರಾ ಸಾಮಾನ್ಯ. ಈ ವಿಡಿಯೋ ಆಟವನ್ನು ಬ್ರಿಟನ್ನಿನ ಸೆನ್ಸಾರ್ ಮಂಡಳಿ ನಿಷೇಧಿಸಿದೆ. ಇದು ಜನರ ಮನಸ್ಸು ಕೆಡಿಸುವಂತಹ ಭಯಾನಕ, ಬೀಭತ್ಸ ಕತೆ ಹೊಂದಿದೆ ಎಂದು ಸೆನ್ಸಾರ್ ಮಂಡಳಿಯ ಆಕ್ಷೇಪ.ಆದರೆ ಇದನ್ನು ಆಡುವವರಿಗೆ ಇದು ಕತೆ ನಿಜವಲ್ಲ ಎನ್ನುವುದರ ಅರಿವಿರುತ್ತದೆ. ಇದು ವಯಸ್ಕರಿಗೆ ನಿರ್ಮಿಸಿದ ಆಟ ಎಂದು ಅದನ್ನು ಅಭಿವೃದ್ಧಿ ಪಡಿಸಿದ ರಾಕ್‍ಸ್ಟಾರ್ ಹೇಳಿದೆ.ಬ್ರಿಟನ್ನಿನಲ್ಲಿ ಹೇರಿದ ನಿಷೇಧ ಅಮೆರಿಕಾದಲ್ಲೂ ಪ್ರಭಾವ ಬೀರಬಹುದು.

ಚಕ್ರದ ಗಾಳಿ ಒತ್ತಡ ಸರಿಯಾಗಿಡಲು ಸಾಧನ
ಚಕ್ರದ ಗಾಳಿಯ ಒತ್ತಡ ಸರಿಯಾಗಿದ್ದರೆ ಅದರ ಮೈಲೇಜ್ ಕೂಡಾ ಹೆಚ್ಚಿರುತ್ತದೆ.ಹಾಗಾಗಿ ಅಮೆರಿಕಾದಲ್ಲಿ ಮುಂದಿನ ವರ್ಷದಿಂದ ಎಲ್ಲಾ ವಾಹನಗಳಲ್ಲಿ ಚಕ್ರದ ಗಾಳಿ ಒತ್ತಡ ಅಳೆಯುವ ಮಾಪಕ ಹೊಂದುವುದು ಕಡ್ಡಾಯಗೊಳಿಸಲಾಗಿದೆ. ಅದರೆ ಬರಿದೇ ಗಾಳಿ ಕಡಿಮೆ ಇರುವುದು ಗೊತ್ತಾದರೆ ಏನು ಪ್ರಯೋಜನ? ಗಾಳಿ ಕಡಿಮೆಯಿದ್ದಾಗ ಟ್ಯೂಬ್‍ಗೆ ಗಾಳಿ ಪಂಪ್ ಮಾಡುವ ವ್ಯವಸ್ಥೆ ಇದ್ದರೆ? ಮ್ಯಾಕ್ಸ್ ಏರ್ ಎಂಬ ಕಂಪೆನಿ ಹೊಸ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಿದೆ. ಇದರಲ್ಲಿ ಕಂಪ್ರೆಸರ್ ಇದ್ದು, ಗಾಳಿ ಕಡಿಮೆಯಿದ್ದರೆ, ವಾತಾವರಣದ ಗಾಳಿಯನ್ನು ಒತ್ತಡಕ್ಕೊಳಪಡಿಸಿ, ಚಕ್ರಕ್ಕೆ ತುಂಬಿಸುವ ಕೊಳವೆ ವ್ಯವಸ್ಥೆ ಇದರಲ್ಲಿದೆ.ಸದಾ ಚಕ್ರದ ಗಾಳಿಯ ಒತ್ತಡ ಸರಿಯಾಗಿರುವಂತೆ ಈ ವ್ಯವಸ್ಥೆ ನೋಡಿಕೊಳ್ಳುವ ಮೂಲಕ ವಾಹನದ ಮೈಲೇಜ್ ಹೆಚ್ಚುವಂತಾಗುತ್ತದೆ.
ಹಣ್ಣು ಕೊಯ್ಯಲು ರೊಬೋಟ್
ಕ್ಯಾಲಿಫೋರ್ನಿಯಾದ ಹಣ್ಣು ಬೆಳೆಗಾರರ ಸಂಘವು ತನ್ನ ಕೃಷಿಕರು ಎದುರಿಸುವ ಕೂಲಿಕಾರ್ಮಿಕರ ಸಮಸ್ಯೆಗೆ ಪರಿಹಾರ ಒದಗಿಸಲು,ವಿಶನ್ ರೊಬೋಟಿಕ್ಸ್ ಎನ್ನುವ ಕಂಪೆನಿಯನ್ನು ಸಂಪರ್ಕಿಸಿತು. ಕಿತ್ತಳೆ, ಸೇಬು ಇಂತಹ ಹಣ್ಣುಗಳ ಮರದಿಂದ ಬೆಳೆದ ಹಣ್ಣುಗಳನ್ನು ಕೊಯ್ಯಲು ರೊಬೋಟ್ ಅಭಿವೃದ್ಧಿ ಪಡಿಸುವ ಜವಾಬ್ದಾರಿಯನ್ನು ಕಂಪೆನಿಗೆ ನೀಡಲಾಯಿತು. ಕಂಪೆನಿಯ ಪ್ರತಿನಿಧಿಗಳು ತೋಟಗಳನ್ನು ಸಂದರ್ಶಿಸಿದಾಗ, ಸಾಲು ಸಾಲು ಮರಗಳು ಇಕ್ಕೆಲಗಳಲ್ಲೂ ಬೆಳೆದಿರುವುದನ್ನು ನೋಡಿದರು. ಮರಗಳಲ್ಲಿ ಹಣ್ಣುಗಳೆಲ್ಲಿವೆ ಎಂದು ಹುಡುಕಿ, ಅದು ಬೆಳೆದಿದ್ದರೆ ಮಾತ್ರಾ ಕೊಯ್ಯುವ ಕೆಲಸವನ್ನು ರೊಬೋಟ್ ಮಾಡಬೇಕಿತ್ತು. ಪ್ರಾಯೋಗಿಕವಾಗಿ ತಯಾರಿಸಿದ ರೊಬೋಟ್ ಹಣ್ಣನ್ನು ಒಂದೊಂದೇ ಹುಡುಕಿ ಕೊಯ್ಯಲು ಬಹಳ ಸಮಯ ತೆಗೆದುಕೊಳ್ಳುತ್ತಿತ್ತು. ಇದಕ್ಕೇನು ಪರಿಹಾರ ಎಂದು ಯೋಚಿಸಿದಾಗ,ಹಣ್ಣನ್ನು ಹುಡುಕಲು ಒಂದು ರೊಬೋಟ್, ಕೊಯ್ಯಲು ಇನ್ನೊಂದು ರೊಬೋಟ್ ಹೀಗೆ ಎರಡು ಪ್ರತ್ಯೇಕ ರೊಬೋಟ್‍ಗಳನ್ನು ಬಳಸುವ ತೀರ್ಮಾನಕ್ಕೆ ಬರಲಾಯಿತು. ಈಗ ಅವಳಿ ರೊಬೋಟ್ ಇರುವ ಹಣ್ಣು ಕೊಯ್ಯುವ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಿ ಹಣ್ಣು ಬೆಳೆಗಾರರಿಗೆ ವಿಷನ್ ರೊಬೋಟ್ ಕಂಪೆನಿ ನೀಡಿದೆ.ಮುಂದಿನ ದಿನಗಳಲ್ಲಿ ಇಂತಹ ನೂರಾರು ರೊಬೋಟ್‍ಗಳು ಹಣ್ಣು ಕೊಯ್ಯುವ ಕೆಲಸವನ್ನು ಮಾಡಬಹುದು. ಈ ನಡುವೆ ಇಂತಹ ಕ್ರಮದಿಂದ ಕೆಲಸ ಕಳೆದುಕೊಳ್ಳುವ ವಲಸೆ ಕಾರ್ಮಿಕರು ಕಳವಳ ವ್ಯಕ್ತಪಡಿಸಿದ್ದಾರೆ.
*ಅಶೋಕ್‍ಕುಮಾರ್ ಎ

Sunday, June 17, 2007

ಪ್ರಕೃತಿಯೇ ಪಾಠಶಾಲೆ



ಪ್ರಕೃತಿಯಿಂದ ನಾವು ಕಲಿಯಬೇಕಾದ್ದು ಬಹಳವಿದೆ. ಈ ಜಗತ್ತಿನ ಪ್ರತಿ ಜೀವಿಯೂ ಒಂದು ಅದ್ಭುತ. ಹಾಗೆ ನೋಡಿದರೆ ನಮ್ಮ ಸುತ್ತಲಿನ ಪ್ರತಿವಸ್ತುವೂ ಒಂದು ಪ್ರ್‍ಆಕೃತಿಕ ಕಲಾಕೃತಿ.ಇದು ತಡವಾಗಿಯಾದರೂ ನಮ್ಮ ತಂತ್ರಜ್ಞರಿಗೆ ಹೊಳೆದಿದೆ. ತಾವು ವಿನ್ಯಾಸಗೊಳಿಸಬೇಕಾದ ವಸ್ತು, ಅದು ವಾಹನವಾಗಿರಲಿ, ಅದರ ಬಿಡಿ ಭಾಗವಾಗಿರಲಿ,ಅಲ್ಲ ಮತ್ಯಾವುದೋ ಸಾಧನವಿರಲಿ,ಅವುಗಳ ವಿನ್ಯಾಸವನ್ನು ಪ್ರಕೃತಿಯಿಂದ ಅಳವಡಿಸಿಕೊಳ್ಳಬಹುದು ಎನ್ನುವುದು ತಂತ್ರಜ್ಞರಿಗೆ ಮನವರಿಕೆಯಾಗಿದೆ.
ಹಲ್ಲಿಯ ಕಾಲಿನಡಿ ಇರುವ ಅತಿಸೂಕ್ಷ್ಮ ರೋಮಗಳು,ಹಲ್ಲಿಗಳು ತಾರಸಿ ಅಥವಾ ಗೋಡೆಗೆ ಬಿಗಿಯಾಗಿ ಅಂಟಿಕೊಳ್ಳಲು ಸಹಾಯ ಮಾಡುತ್ತವೆ. ಒಂದು ರೀತಿಯ ಸಸ್ಯ ಬೀಜಗಳಲ್ಲಿರುವ ಸಣ್ಣ ಕೊಂಡಿಗಳ ಕಾರಣ ಅವು ಬಟ್ಟೆಯನ್ನು ಅಂಟಲು ಸಾಧ್ಯವಾಗುತ್ತದೆ. ಇದನ್ನು ಗಮನಿಸಿದ ಸ್ವಿಸ್ ಇಂಜಿನಿಯರ್, ವೆಲ್ಕ್ರೋ ಎಂದು ಕರೆಯಲಾಗುವ ಅಂಟುವ ಪಟ್ಟಿಗಳ ಸಂಶೋಧನೆ ಮಾಡಿದ.
ತಾವರೆಯೆಲೆಯ ಮೇಲೆ ನೀರು ಸರಾಗವಾಗಿ ಜಾರಿ ಹೋಗಿ, ಇದಕ್ಕೆ ತುಸುವೂ ಅಂಟದು. ಇದನ್ನು ನಕಲು ಮಾಡಿ ಕಲೆಯಾಗದ ವಸ್ತ್ರ ತಯಾರಿಸಲಾಗಿದೆ.
ಯಾವುದೇ ವಸ್ತುವಿನ ವಿನ್ಯಾಸದಲ್ಲಿ ಹೊಸತನ ಅಳವಡಿಸುವಾಗ ಪ್ರಕೃತಿಯು ಅಂತಹ ಗುಣವನ್ನು ನೀಡಿದ ಬಗೆಯನ್ನು ತಿಳಿದುಕೊಳ್ಳುವುದು ಹೆಚ್ಚಿನ ಸಹಾಯ ಮಾಡುತ್ತದೆ.ಇಂಧನ ಬಳಕೆಯಲ್ಲಿ ಮಿತವ್ಯಯ ಸಾಧ್ಯವಾಗುವ ಕಾರಿನ ವಿನ್ಯಾಸ ಮಾಡುವಾಗ ವಿನ್ಯಾಸಕಾರರು ಮೀನುಗಳನ್ನು ಅಧ್ಯಯನ ಮಾಡಿದರು.ಡೈಮರ್‌ಕ್ರಿಸ್ಲರ್ ಕಂಪೆನಿಯ ವಿನ್ಯಾಸಕಾರರ ಗಮನ ಸೇಳೆದದ್ದು ಬಾಕ್ಸ್‍ಫಿಶ್ ಎನ್ನುವ ಮೀನಿನ ತಳಿ. ಈ ಮೀನು ಮಧ್ಯದಲ್ಲಿ ಉಬ್ಬಿದ ದೇಹ ಹೊಂದಿದೆ. ಇದು ವೇಗವಾಗಿ ಸಾಗುವ ಮೀನು ಮತ್ತು ಅತ್ಯಂತ ಕಡಿಮೆ ಪ್ರಯತ್ನದ ಮೂಲಕ ವೇಗವನ್ನು ಸಾಧಿಸುತ್ತದೆ. ಇದರ ವಿಶಿಷ್ಟ ಆದರೆ ಅಷ್ಟು ಆಕರ್ಷಕವಲ್ಲದ ದೇಹ ವಿನ್ಯಾಸವನ್ನು ತಮ್ಮ ಸಣ್ಣ ಕಾರಿನ ವಿನ್ಯಾಸದಲ್ಲೂ ಅಳವಡಿಸಲು ಕಂಪೆನಿಯ ವಿನ್ಯಾಸಕಾರರು ತೀರ್ಮಾನಿಸಿದರು. ಮೊದಲಾಗಿ ಅವರು ಮಣ್ಣಿನ ಮಾದರಿಗಳನ್ನು ಮಾಡಿ ಅವನ್ನು ಗಾಳಿಯೆದುರು ಒಡ್ಡಿ ಅದು ಗಾಳಿಯ ಪ್ರವಾಹಕ್ಕೆ ಒಡ್ಡುವ ಪ್ರತಿರೋಧವನ್ನು ಕಂಡುಕೊಂಡರು. ತಿಂಗಳುಗಟ್ಟಲೆ ಪರಿಶ್ರಮದ ಬಳಿಕ ಕಂಪ್ಯೂಟರು ಮಾದರಿಯನ್ನೂ ಅವರು ಅಭಿವೃದ್ಧಿ ಪಡಿಸಿದರು.ಮೀನಿನ ಎಲುಬುಗಳ ವಿನ್ಯಾಸ ನಕಲು ಮಾಡಿ, ಕಾರಿನ ಬಾಗಿಲಿನ ತೂಕ ಇಳಿಸಲೂ ಅವರಿಗೆ ಸಾಧ್ಯವಾಯಿತು.ಇಂತಹ ಕಾರುಗಳ ಪೈಕಿ ಈ ಕಾರು ಅತ್ಯುತ್ತಮ ಎನಿಸಿದೆ.
ಒಂದು ಬಗೆಯ ಚಿಟ್ಟೆಯನ್ನು ಅಭ್ಯಸಿಸುವಾಗ, ಮಾರ್ಕ್ ಮೈಲ್ಸ್ ಎನ್ನುವ ಸಂಶೋಧಕ ಅದರ ರೆಕ್ಕೆಗಳು ಹೊಳೆಯುವ ಬಣ್ಣದ್ದಾಗಿ ಕಂಡರು, ರೆಕ್ಕೆಗಳಲ್ಲಿ ಬಣ್ಣದ ಅಂಶ ಇಲ್ಲದ್ದನ್ನು ಗಮನಿಸಿದನಾತ. ಪರೀಕ್ಷಿಸಿದಾಗ, ರೆಕ್ಕೆಗಳ ಮೇಲ್ಮೈಯಲ್ಲಿ ಕಿರು ರಚನೆಗಳಿದ್ದು, ಇವು ಬೆಳಕಿನ ಒಂದು ತರಂಗಾಂತರದ ಅಲೆಗಳನ್ನು ಪ್ರತಿಫಲಿಸುವ ಮೂಲಕ ಬಣ್ಣವನ್ನು ಹೊಮ್ಮಿಸುತ್ತವೆ ಎನ್ನುವುದನ್ನು ಗುರುತಿಸಿದ. ಇದೇ ಮಾದರಿ ಅನುಸರಿಸಿ ಕಂಪ್ಯೂಟರ್ ಅಥವ ಸಾಧನಗಳ ತೆರೆಯನ್ನು ತಯಾರಿಸಿದರೆ. ಬಾಹ್ಯ ಬೆಳಕಿನ ಮೂಲಕವೇ ದೃಶ್ಯ ತೋರಿಸಿ, ಸಾಧನದ ಬ್ಯಾಟರಿಯನ್ನು ಉಳಿಸಲು ಸಾಧ್ಯವೆಂದು ಯೋಚಿಸಿದ.ಫಲಸ್ವರೂಪವಾಗಿ ಐಮಾಡ್ ಎನ್ನುವ ತೆರೆಯನ್ನು ತಯಾರಿಸಲಾಯಿತು. ಇದು ಎಲ್.ಸಿ.ಡಿ. ತೆರೆಗಿಂತ ಕಡಿಮೆ ವಿದ್ಯುಚ್ಚಕ್ತಿ ಬಳಸುತ್ತದೆ.
ಪ್ರಕೃತಿಯಿಂದ ಹೊಸ ವಿನ್ಯಾಸಗಳನ್ನು ಪಡೆದು ದೈನಂದಿನ ಸಾಧನಗಳಲ್ಲಿ ಅಳವಡಿಸುವ ಬಯೋಮಿಮಿಕ್ರಿ ಎನ್ನುವ ವಿಧಾನ ಜನಪ್ರಿಯವಾಗುತ್ತಿದೆ.

ಕಲಾಕೃತಿಗಳ ಮುದ್ರಣಕ್ಕೆ ಪ್ರಿಂಟರ್
ಮೊನಾಲಿಸಾ ಅಂತಹ ಕಲಾಕೃತಿಯನ್ನು ನೈಜವೆನ್ನಿಸುವ ಹಾಗೆ ಮುದ್ರಿಸಲು ಅತ್ಯುತ್ತಮ ಕಂಪ್ಯೂಟರ್ ಪ್ರಿಂಟರ್ ಬೇಕು. ಇಲ್ಲವಾದಲ್ಲಿ ಕೋಟಿಗಟ್ಟಲೆ ಬಿಂದುಗಳನ್ನು ಹೊಂದಿರುವ ಕಲಾಕೃತಿಯ ಡಿಜಿಟಲ್ ಪ್ರತಿಯಿಂದ ಚಿತ್ರವನ್ನು ಮುದ್ರಿಸಿ, ಅದು ನಿಜವಾದ ಕಲಾಕೃತಿಯೋ ಎಂದು ಭ್ರಮೆ ಹುಟ್ಟಿಸುವುದು ಹೇಗೆ ಸಾಧ್ಯ? ಕಂಪ್ಯೂಟರ್ ಪ್ರಿಂಟರ್ ತಯಾರಿಸುವುದರಲ್ಲಿ ಎತ್ತಿದ ಕೈ ಎಂದು ಗುರುತಿಸಲ್ಪಡುವ ಹ್ಯೂಲೆಟ್ ಪ್ಯಕರ್ಡ್ ಕಂಪೆನಿ ಜೆಟ್‍ಮ್ಯಾಟ್ರಿಕ್ಸ್ 10000 ಎನ್ನುವ ಹೊಸ ಮುದ್ರಕ ಇಂತಹ ಕಾರ್ಯಕ್ಕೆ ಹೇಳಿ ಮಾಡಿಸಿದಂತಿದೆ. ವಿನೈಲ್ ಎನ್ನುವ ಸಂಯುಕ್ತವನ್ನು ಬಳಸುವ ಶಾಯಿಯಿಂದ ಮುದ್ರಣ ನಡೆಯುತ್ತದೆ. ಚಿತ್ರದ ಸ್ಪಷ್ಟತೆಯೂ ಅತ್ಯುಚ್ಚ ಮಟ್ಟದ್ದು. ಚಿತ್ರವನ್ನು ಲ್ಯಾಮಿನೇಟ್ ಮಾಡಿದರೆ,ಕನಿಷ್ಠ ಮೂರು ವರ್ಷ ಕಾಲ ಚಿತ್ರ ಬಾಳಿಕೆ ಬರುವುದು ಖಾತರಿ ಎನ್ನುವುದು ಪ್ರಯೋಗಾಲಯದ ಪರೀಕ್ಷೆಗಳು ಸಿದ್ಧ ಪಡಿಸಿವೆ.ಪ್ರತಿ ಚಿತ್ರ ಮುದ್ರಿಸಲು ಇಪ್ಪತ್ತು ಸಾವಿರ ಖರ್ಚು ಬರುತ್ತದೆ.

ಬಾಹ್ಯಾಕಾಶ ಕೇಂದ್ರದಲ್ಲಿ ಕೈಕೊಟ್ಟ ಕಂಪ್ಯೂಟರ್ ರಿಪೇರಿ!
ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ಕಂಪ್ಯೂಟರ್ ಕೈಕೊಟ್ಟಿದೆ. ಆರು ಕಂಪ್ಯೂಟರುಗಳ ಜಾಲದಲ್ಲಿ ಸದ್ಯ ಎರಡು ಮಾತ್ರಾ ಕೆಲಸ ಮಾಡುತ್ತಿವೆ.ಹಿಂದೆಯೂ ಹೀಗಾಗುತ್ತಿತ್ತಂತೆ. ಆದರೆ ಕಂಪ್ಯೂಟರ್ ತೊಂದರೆ ಕೊಟ್ಟಾಗ ನಾವು ಪ್ರಯೋಗಿಸುವ ಬ್ರಹ್ಮಾಸ್ತ್ರ ಪುನರಾರಂಭಿಸುವ ಮಂತ್ರವನ್ನು ಪಠಿಸಿದಾಗ ಸರಿಯಾಗುತ್ತಿದ್ದವು. ಈ ಸಲ ಮಂತ್ರ ಕೆಲಸ ಮಾಡಿಲ್ಲ. ಪುಣ್ಯಕ್ಕೆ ಈಗ ಅಟ್ಲಾಂಟಿಸ್ ಸ್ಪೇಸ್ ಶಟಲ್ ಕೇಂದ್ರದೊಡನೆ ಥಳಕು ಹಾಕಿಕೊಂಡಿದೆ.ಏಳು ಜನ ಬಾಹ್ಯಾಕಾಶಯಾನಿಗಳು ಶಟಲಿನಲ್ಲಿ ಕೇಂದ್ರಕ್ಕೆ ಭೇಟಿ ಇತ್ತಿದ್ದಾರೆ. ಕೇಂದ್ರದಲ್ಲಿ ಮೂರು ಜನ ವಾಸವಾಗಿದ್ದಾರೆ. ಇವರೆಲ್ಲಾ ಸೇರಿ ತೊಂದರೆಯನ್ನು ಸರಿ ಪಡಿಸಲು ಕೊನೆಗೂ ಪ್ರಯತ್ನಿಸಿ ಯಶ ಸಾಧಿಸಿದ್ದಾರೆ.
ಇದರ ಜತೆಗೆ ಶಟಲ್‍ನ ಹೊರಕವಚ ಕಿತ್ತಿದ್ದು, ಅದನ್ನೂ ಸರಿ ಪಡಿಸಬೇಕಾಗಿದೆ. ಕಂಪ್ಯೂಟರ್ ಕೆಟ್ಟಿರುವುದು ಸದ್ಯಕ್ಕೆ ದೊಡ್ಡ ಸಮಸ್ಯೆಯಾಗಿರಲಿಲ್ಲ. ಆದರೆ ಉಸಿರಾಡಲು ಆಮ್ಲಜನಕ ಪೂರೈಸುವ ವ್ಯವಸ್ಥೆ ನಿಂತು ಹೋಗಿತ್ತು. ದಾಸ್ತಾನು ಮಾಡಿಟ್ಟಿರುವ ಆಮ್ಲಜನಕ ಇನ್ನೆರಡು ತಿಂಗಳಿಗೆ ಮಾತ್ರಾ ಬರುತ್ತಿತ್ತು. ಕಂಪ್ಯೂಟರುಗಳನ್ನು ಸರಿಪಡಿಸಲಾಗದಿದ್ದರೆ, ಅಲ್ಲಿನ ನಿವಾಸಿಗಳು ನಿಗದಿತ ಸಮಯದ ಮೊದಲೇ ವಾಪಸ್ಸಾಗಬೇಕಾಗುತ್ತಿತ್ತು. ಅಟ್ಲಾಂಟಿಸ್‍ನ ಯಾತ್ರೆಯನ್ನು ಒಂದೆರಡು ದಿನ ಹೆಚ್ಚಿಸಿಯಾದರೂ ರಿಪೇರಿ ಕೈಗೊಳ್ಳ ಬೇಕೆನ್ನುವ ತೀರ್ಮಾನಕ್ಕೆ ವಿಜ್ಞಾನಿಗಳು ಬಂದಿದ್ದರು.

ಹುಡುಗಿಯನ್ನು ಹುಡುಕಲು ಅಂತರ್ಜಾಲದ ಬಳಕೆ
ಪೋರ್ಚುಗಲ್‍ನಲ್ಲಿನ ಪ್ರವಾಸಿಧಾಮದಿಂದ ಕಾಣೆಯಾದ ಮಾದೆನೀಲ್ ಎನ್ನುವ ನಾಲ್ಕು ವರ್ಷದ ಬಾಲೆಯನ್ನು ಹುಡುಕಲು ಬ್ರಿಟಿಷ್ ಪೊಲೀಸರು ಸಾಧ್ಯವಾದ ಎಲ್ಲಾ ಮಾರ್ಗಗಳನ್ನು ಉಪಯೋಗಿಸುತ್ತಿದ್ದಾರೆ.ಅದರಲ್ಲಿ ಅಂತರ್ಜಾಲದ ಬಳಕೆಯೂ ಸೇರಿದೆ. ಅಂತರ್ಜಾಲದ ಸೆಕೆಂಡ್‍ಲೈಫ್ ಎನ್ನುವ ಮಿಥ್ಯಾಪ್ರಪಂಚದಲ್ಲಿ ಕೂಡಾ ಆಕೆಯ ಪೋಸ್ಟರ್ ಅನ್ನು ಪ್ರದರ್ಶಿಸಲಾಗಿದೆ.ಈ ಮಿಥ್ಯಾಪ್ರಪಂಚದಲ್ಲಿ ಜನಪ್ರಿಯವಾಗಿರುವ ತಾಣಗಳಲ್ಲಿ ಈ ಪೋಸ್ಟರ್ ಪ್ರದರ್ಶಿಸಿ ಜನರ ಗಮನ ಸೆಳೆಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.
ಹುಡುಗಿ ನಾಪತ್ತೆಯಾಗಿ ಈಗಾಗಲೇ ಆರು ವಾರ ಉರುಳಿದೆ. ಮೊರಾಕ್ಕೋದ ಅಪಹರಣಕಾರರ ಮೇಲೆ ಸಂಶಯವಿರುವುದರಿಂದ, ಹುಡುಗಿಯ ಹೆತ್ತವರು ಅಲ್ಲಿಗೆ ಭೇಟಿ ಇತ್ತು ಅಲ್ಲಿನ ಸರಕಾರದ ನೆರವು ಪಡೆಯಲು ಪ್ರಯತ್ನಿಸುತ್ತಿದಾರೆ.
*ಅಶೋಕ್‍ಕುಮಾರ್ ಎ

Sunday, June 10, 2007

ಸಮುದ್ರಕ್ಕೆ ಕಬ್ಬಿಣದ ಪುಡಿ ಸೇರಿಸಿದರೆ, ವಾತಾವರಣ ಶುದ್ಧ?

ಇದೇನು ಮ್ಯಾಜಿಕ್ ಎನು ಎಂದು ಹುಬ್ಬೇರಿಸದಿರಿ. ಹೌದು ಕಬ್ಬಿಣದ ಸೂಕ್ಷ್ಮ ಪುಡಿಯನ್ನು ಸಾಗರಕ್ಕೆ ಸೇರಿಸಿದರೆ, ಸಮುದ್ರದ ನೀರಿನಲ್ಲಿರುವ ಪಾಚಿ ಬೆಳವಣಿಗೆ ಅಧಿಕವಾಗುತ್ತದೆ. ಈ ಪಾಚಿ ಸಸ್ಯಕ್ಕೆ ಒಂದು ಸ್ವಾರಸ್ಯಕರ ಗುಣವಿದೆ. ಇದು ಸೂರ್ಯಪ್ರಕಾಶವಿದ್ದಾಗ, ಕಾರ್ಬನ್ ಡಯಾಕ್ಸೈಡ್ ಅನಿಲವನ್ನು ಹೀರಿಕೊಳ್ಳುತ್ತದೆ. ಇದರಿಂದ ವಾತಾವರಣದ ಅನಿಲ ಸಮುದ್ರದ ನೀರಿಗೆ ಹೆಚ್ಚು ಹೆಚ್ಚು ಸೇರಿಕೊಳ್ಳುತ್ತದೆ. ವಾತಾವರಣದಲ್ಲಿ ಕಾರ್ಬನ್ ಡಯಾಕ್ಸೈಡ್ ಇಳಿದರೆ ವಾತಾವರಣ ಶುದ್ಧವಾಗುತ್ತದೆ ತಾನೇ?ಈ ಪಾಚಿ ಸಸ್ಯ ಸತ್ತು ಸಾಗರ ತಳ ಸೇರಿದರೆ,ಕಾರ್ಬನ್ ಡಯಾಕ್ಸೈಡ್‌ಗೆ ಮೋಕ್ಷ ಸಿಕ್ಕಿದಂತೆಯೇ.ಶತಮಾನಗಳ ಕಾಲ ಅನಿಲ ವಾತಾವರಣ ಸೇರದು. ಅಮೆರಿಕದಲ್ಲಿ ಪ್ರತಿ ಕಂಪೆನಿ ಎಷ್ಟು ಕಾರ್ಬನ್ ಡಯಾಕ್ಸೈಡ್ ಮಾಲಿನ್ಯ ಉಂಟು ಮಾಡಬಹುದು ಎಂಬ ಮಿತಿಯಿದೆ. ಯಾವುದೇ ಕಾರಣಕ್ಕೆ ಅವು ಮಿತಿ ಉಲ್ಲಂಘಿಸಿದರೆ, ಮಿತಿಗಿಂತಲೂ ಕಡಿಮೆ ಅನಿಲ ವಿಸರ್ಜನೆಯನ್ನು ಮಾಡಿ ತಮ್ಮ ಕೋಟಾ ಉಳಿಸಿಕೊಂಡ ಕಂಪೆನಿಗಳ ಕಾರ್ಬನ್ ಸಾಲ ಖರೀದಿಸಬೇಕೆಂದು ವಿಧಿಸಲಾಗಿದೆ. ಈಗ ಕೆಲವು ಕಂಪೆನಿಗಳು ಕಬ್ಬಿಣದ ಪುಡಿ ಉದುರಿಸಿ, ಅನಿಲ ಕಡಿಮೆಗೊಳಿಸಿ, ಕಾರ್ಬನ್ ಕ್ರೆಡಿಟ್ ಸಂಪಾದಿಸುವ ಹೊಸ ವ್ಯವಹಾರಕ್ಕೆ ಇಳಿಯಲು ಹವಣಿಸಿವೆ. ಸದ್ಯ ಪ್ರತಿ ಟನ್ ಕಾರ್ಬನ್ ಡಯಾಕ್ಸೈಡ್ ಅನಿಲ ಸಾಲ ಐದು ಡಾಲರು ಬೆಲೆಗೆ ಮಾರಾಟವಾಗುತ್ತಿವೆ.ಕಳೆದ ವರ್ಷವೊಂದರಲ್ಲೇ ಮೂವತ್ತು ಬಿಲಿಯನ್ ಡಾಲರು ಮೊತ್ತದ ಕಾರ್ಬನ್ ಕ್ರೆಡಿಟ್ ಮಾರಾಟವಾಗಿದೆ. ಈ ವರ್ಷ ಇದು ಎರಡು ಪಟ್ಟು ಹೆಚ್ಚಬಹುದಂತೆ.
ಅಂದಹಾಗೆ ಒಂದೇ ಸವನೆ ಕಬ್ಬಿಣದ ಪುಡಿ ಸಮುದ್ರಕ್ಕೆ ಸೇರಿಸಿದರೆ, ನೀರಿನ ಆಮ್ಲಜನಕದ ಪ್ರಮಾಣ ತಗ್ಗುವ ಸಮಸ್ಯೆಯಿದೆ.ಸಾರಜನಕದ ಅಂಶ ಹೆಚ್ಚುವುದು, ಕಾರ್ಬೋನಿಕ್ ಆಮ್ಲದ ಪ್ರಮಾಣ ಏರುವುದು ಇನ್ನೊಂದು ಸಮಸ್ಯೆ.

ಹುಡುಕಾಟದ ಫಲಿತಾಂಶ ವಿಭಿನ್ನ ರೀತಿಯಲ್ಲಿ ಒದಗಿಸುವ ಅಂತರ್ಜಾಲ ತಾಣ
ಗೂಗಲ್ ಶೋಧ ಕಾರ್ಯ ಕೈಗೊಳ್ಳುವಲ್ಲಿ ಅಂತರ್ಜಾಲಿಗರ ಮೊದಲ ಆಯ್ಕೆ.ಯಾಹೂ ಕೂಡಾ ಜನಪ್ರಿಯ ತಾಣಗಳಲ್ಲೊಂದು. ನಾಲ್ಕನೇ ಸ್ಥಾನದಲ್ಲಿರುವ ಆಸ್ಕ್ ಎನ್ನುವ ತಾಣವೀಗ ಶೋಧದ ಫಲಿತಾಂಶಗಳನ್ನು ವಿಭಿನ್ನ ರೀತಿಯಲ್ಲಿ ನೀಡಿ ಜನರ ಮನ ಗೆಲ್ಲಲು ಬಯಸಿದೆ. ಇನ್ನು ಮುಂದೆ www.ask.com ಅಂತರ್ಜಾಲ ತಾಣದಲ್ಲಿ ಶೋಧ ಕಾರ್ಯದ ಫಲಿತಾಂಶವನ್ನು ಮೂರು ಕಂಬಸಾಲುಗಳಲ್ಲಿ ನೀಡಲಾಗುವುದು.ಮೊದಲನೇ ಸಾಲಿನಲ್ಲಿ ಮಾಮೂಲು ರೀತಿಯ ಫಲಿತಾಂಶ ಲಭ್ಯವಾಗುತ್ತದೆ. ಎರಡನೇ ಸಾಲಿನಲ್ಲಿ ಜಾಹೀರಾತುಗಳು,ಜನರಿಗೆ ಉಪಯುಕ್ತವಾದ ಮಾಹಿತಿಗಳು ಇರುತ್ತವೆ. ಮೂರನೇ ಸಾಲಿನಲ್ಲಿ ಶೋಧಕ್ಕೆ ಸಂಬಂಧಿಸಿದ ಚಿತ್ರಗಳು,ಬ್ಲಾಗ್‍ಗಳು ಮತ್ತು ಬಹುಮಾಧ್ಯಮ ಸಂಪನ್ಮೂಲಗಳು ಪ್ರದರ್ಶಿತವಾಗುತ್ತವೆ. ವಿಭಿನ್ನ ಸಂಪನ್ಮೂಲಗಳಿಗೆ ಪ್ರತ್ಯೇಕ ಶೋಧ ನಡೆಸುವ ಅವಶ್ಯಕತೆ ಇದರಿಂದ ಇಲ್ಲವಾಗುತ್ತದೆ.ನಾಲ್ಕನೇ ಸ್ಥಾನದಿಂದ ಮೇಲೇರಲು ಹೊಸ ವೇಷ ಸಹಾಯ ಮಾಡುತ್ತದೋ ಕಾದು ನೋಡಬೇಕು!

ಮೊಬೈಲ್ ಬಳಸಿ ಪಟ್ಟಾಂಗ!
ಏರ್‌ಟೆಲ್ ಮೊಬೈಲ್ ಕಂಪೆನಿಯು ತನ್ನ ಸೇವೆಯ ಪಟ್ಟಿಗೆ ದಿಢೀರ್ ಸಂದೇಶ ವರ್ಗಾವಣೆಯನ್ನೂ ಸೇರಿಸಲಿದೆ.ಕಂಪ್ಯೂಟರ್ ಬಳಸಿ ಪಟ್ಟಾಂಗ ನಡೆಸುವ ಯುವಜನರ ಹವ್ಯಾಸವನ್ನು ಮೊಬೈಲಿಗೂ ವಿಸ್ತರಿಸುವ ನಿಟ್ಟಿನಲ್ಲಿ ಈ ಸೇವೆ ಆರಂಭವಾಗಿದೆ.ಆಗಸ್ಟ್ ಮೂವತ್ತೊಂದರ ವರೆಗೆ ಸೇವೆ ಉಚಿತ.ಮುಂದೆ ಸ್ವಲ್ಪ ಸಮಯ ಆರಂಭಿಕ ಕೊಡುಗೆಯ ರಿಯಾಯಿತಿ ದರ ಅನ್ವಯವಾಗಬಹುದು.ಈ ಸೇವೆ ಪದೆಯಲು ಜಿ ಪಿ ಆರ್ ಎಸ್ ಸೌಲಭ್ಯವಿರುವ ಸೆಲ್‍ಪೋನ್ ಸಾಧನ ಬೇಕು. ಕಂಪೆನಿಯಲ್ಲಿ ನೋಂದಾಯಿಸಿಕೊಂಡ ನಂತರವಷ್ಟೇ ಸೇವೆ ಲಭ್ಯವಾಗುತ್ತದೆ.ಏರ್‌ಟೆಲ್ ಅಲ್ಲದೆ ವಿಶ್ವದ ಹದಿನೈದು ಮೊಬೈಲ್ ಕಂಪೆನಿಗಳು ಪಟ್ಟಾಂಗ ಸೇವೆ ನೀಡಲು ನಿರ್ಧರಿಸಿವೆ. ಮುಂದಿನ ದಿನಗಳಲ್ಲಿ ಕಿರುಸಂದೇಶ ಸೇವೆಯನ್ನು ಪಟ್ಟಾಂಗ ಸೇವೆ ಹಿಂದೆ ಹಾಕಲಿದೆ.

ಗೂಗಲ್ ಪುಸ್ತಕ ಯೋಜನೆಗೆ ಹತ್ತು ವಿಶ್ವವಿದ್ಯಾಲಯಗಳು ಸೇರ್ಪಡೆ
ಗೂಗಲ್ ಪುಸ್ತಕಗಳನ್ನು ಸ್ಕ್ಯಾನ್ ಮಾಡಿ ಅಂತರ್ಜಾಲಕ್ಕೆ ಸೇರಿಸುವ ಮಹಾಯೋಜನೆ ಹಾಕಿಕೊಂಡಿದೆ. ಆದರೆ ಪುಸ್ತಕಗಳ ಹಕ್ಕುಸ್ವಾಮ್ಯ ಹೊಂದಿದವರು ಇದರ ವಿರುದ್ಧ ನ್ಯಾಯಾಲಯದ ಮೆಟ್ಟಿಲು ಏರಿದ್ದಾರೆ.ಹಾವರ್ಡ್,ಕ್ಯಾಲಿಫೋರ್ನಿಯಾದಂತಹ ವಿಶ್ವವಿದ್ಯಾಲಯಗಳು ತಮ್ಮ ಪುಸ್ತಕಗಳನ್ನು ಈ ಯೋಜನೆಗೆ ಸೇರಿಸಲು ಒಪ್ಪಿಗೆ ನೀಡಿವೆ. ಈಗ ಇನ್ನೂ ಹತ್ತು ವಿಶ್ವವಿದ್ಯಾಲಯಗಳು ಈ ಪಟ್ಟಿಗೆ ಸೇರಿವೆ.ಪೆನ್, ಪುರ್ಡ್ಯೂ,ಇಂಡಿಯಾನಾ,ಇಲಿನೋಯಿಸ್,ಮಿಚಿಗನ್,ಒಹಾಯೋ,ಮಿನಿಸೋಟಾ,ಅಯೋವಾ ಇವೆಲ್ಲಾ ಈ ಯೋಜನೆಯಲ್ಲಿ ಪಾಲ್ಗೊಳ್ಳಲು ಒಪ್ಪಿಗೆ ಸೂಚಿಸಿವೆ. ಈ ವಿಶ್ವವಿದ್ಯಾಲಯಗಳ ಬಳಿಯಿರುವ ಪುಸ್ತಕಗಳನ್ನು ಸ್ಕ್ಯಾನ್ ಮಾಡಿ, ಅಂತರ್ಜಾಲದಲಿ ಸೇರಿಸುವುದು ಗೂಗಲ್ ಉದ್ದೇಶ. ಹಾಗೆ ಮಾಡುವಾಗ ಹಕ್ಕುಸ್ವಾಮ್ಯ ಇರುವ ಪುಸ್ತಕಗಳನ್ನು ಓದುಗರಿಗೆ ಲಭ್ಯವಾಗದಿರಿಸಲು ಗೂಗಲ್ ಒಪ್ಪಿದೆ.

ಬಟಾಟೆಯಿಂದ ಪ್ಲಾಸ್ಟಿಕ್
ಬೆಲೆ ಕುಸಿತದಿಂದ ನಷ್ಟ ಅನುಭವಿಸುವ ರೈತರಿಗೆ ಸಿಹಿ ಸುದ್ದಿಯಿದೆ. ಬಟಾಟೆಯನ್ನು ಬಳಸಿ, ಬಯೋಪ್ಲಾಸ್ಟಿಕ್ ಉತ್ಪಾದಿಸುವ ವಿಧಾನ ಈಗ ಯಶಸ್ವಿಯಾಗಿದೆ. ಬಯೋಪ್ಲಾಸ್ಟಿಕ್ ಪೆಟ್ರೋಲಿಯಮ್ ಉತ್ಪನ್ನವಾಗಿರದೆ, ಜೈವಿಕ ಮೂಲದ್ದಗಿರುವುದು ವಿಶೇಷ.

*ಅಶೋಕ್‍ಕುಮಾರ್ ಎ

Sunday, June 03, 2007

ರಸ್ತೆ ಹೊಂಡ ಮುಚ್ಚಲು ಇರುವೆಗಳು ಬಳಸುವ ಕ್ರಮ ನಮಗೆ ಉಪಯುಕ್ತವೇ?

ಮಧ್ಯ ಮತ್ತು ದಕ್ಷಿಣ ಅಮೆರಿಕಾದ ಇರುವೆಗಳನ್ನು ಅಧ್ಯಯನ ಮಾಡಿದ ಬ್ರಿಸ್ಟೊಲ್ ವಿಶ್ವವಿದ್ಯಾಲಯದ ಸಂಶೋಧಕರು ಅವುಗಳ ವಿಶಿಷ್ಟ ನಡವಳಿಕೆಯನ್ನು ಗಮನಿಸಿದ್ದಾರೆ. ಇರುವೆಗಳು ಗುಂಪಿನಲ್ಲಿ ಸಾಗುವಾಗ, ದಾರಿಯು ಹೊಂಡಗಳಿಂದ ಕೂಡಿದ್ದಾಗ, ಅವುಗಳ ಯಾತ್ರೆಯ ವೇಗ ಕುಸಿಯುವುದು ಸಹಜ ತಾನೇ? ಆಗ ಕೆಲಸಗಾರ ಇರುವೆಗಳು ಅಮೋಘ ಎನ್ನಬಹುದಾದ ನಡವಳಿಕೆ ಪ್ರದರ್ಶಿಸುತ್ತವೆ. ಅವುಗಳು ಈ ಹೊಂಡಗಳಿಗೆ ಇಳಿದು, ಅವನ್ನು ಮುಚ್ಚುವಂತೆ ತಮ್ಮ ಶರೀರವನ್ನು ಮುದ್ದೆ ಮಾಡಿ ಹೊಂಡವನ್ನು ಮುಚ್ಚಿ ಬಿಡುತ್ತವೆ. ಇದರಿಂದ ಅವುಗಳ ಪಟಾಲಂ ಅಡೆ ತಡೆಯಿಲ್ಲದೆ ಸಾಗಲು ಸಾಧ್ಯವಾಗುತ್ತದೆ. ಒಂದು ವೇಳೆ ಹೊಂಡ ದೊಡ್ಡದಿದ್ದರೆ? ಆಗ ಹಲವು ಕೆಲಸಗಾರ ಇರುವೆಗಳು ಸೇರಿ,ಹೊಂಡವನ್ನು ಆಕ್ರಮಿಸಲು ಪ್ರಯತ್ನಿಸುತ್ತವೆ. ಯಾತ್ರೆ ಸಾಗಿದ ಬಳಿಕ, ಈ ಇರುವೆಗಳು ಎದ್ದು ಸಾಲಿನ ಹಿಂದೆ ಸೇರುತ್ತವೆ. ಗುಂಪಿನ ಅನುಕೂಲತೆಗಾಗಿ ಎಂಥಾ ತ್ಯಾಗ!ಮನುಷ್ಯರೂ ಇಂತಹದೇ ತಂತ್ರ ಬಳಸಿ, ರಸ್ತೆ ಹೊಂಡಗಳನ್ನು ಮುಚ್ಚಲು ಕ್ರಮ ಕೈಗೊಳ್ಳಬಹುದೇ ಎಂದು ಸಂಶೋಧಕರು ತಲೆಕೆಡಿಸಿ ಕೊಳ್ಳುತ್ತಿರುವ ಪ್ರಶ್ನೆ.

ಮೈಕ್ರೊಸಾಫ್ಟ್‍ನಿಂದ ಮೇಜೆಂಬ ಕಂಪ್ಯೂಟರ್
"ಸರ್ಫೇಸ್" ಎನ್ನುವ ಹೊಸ ಉತ್ಪನ್ನವನ್ನು ಕ್ಂಪ್ಯೂಟರ್ ಪ್ರಪಂಚಕ್ಕೆ ಪರಿಚಯಿಸಲಾಗಿದೆ. ಇದನ್ನು ಮಾಡಿದ್ದು ಮತ್ತ್ಯಾರೋ ಅಲ್ಲ
ದಿಗ್ಗಜ ಕಂಪೆನಿ ಮೈಕ್ರೊಸಾಫ್ಟ್. ನೋಡಲು ಮೇಜಿನಂತೆ ಕಾಣಿಸುವ ಸಾಧನ ನಿಜಕ್ಕಾದರೆ ಕಂಪ್ಯೂಟರ್. ಇದರ ಮೇಲ್ಮೈಯೇ ಕಂಪ್ಯೂಟರ್ ತೆರೆ. ಇದರ ಮೇಲೆ ಕೈಯಾಡಿಸಿ, ಕಂಪ್ಯೂಟರ್ ಕೀಲಿ ಮಣೆ ಅಥವಾ ಮೌಸ್ ಕೈಯಾಡಿಸಿ ಮಾಡುವುದನ್ನು ಮಾಡಬಹುದು.ಇದು ಸಾಧ್ಯವಾಗಲು ಕಾರಣ ಇದರ ಮೇಲ್ಮೈ ಸ್ಪರ್ಶ ಸಂವೇದಿಯಾಗಿರುವುದು. ಹತ್ತು ಸಾವಿರ ಡಾಲರು ಬೆಲೆ ಇದಕ್ಕೆ ತೆರಬೇಕಾಗಿ ಬರಬಹುದು. ಮೊದಲಾಗಿ ಇದನ್ನು ಕಾರ್ಪೋರೇಟ್ ಗ್ರಾಹಕರಿಗೆ ಒದಗಿಸುವ ಆಲೋಚನೆ ಕಂಪೆನಿಯದು. ಹೋಟೆಲ್, ಪೋನ್ ಅಂಗಡಿಗಳಿಗೆ ಮತ್ತು ಜೂಜಾಟದ ಅಡ್ಡೆಗಳಿಗೆ ಮಾರಾಟ ಮಾಡಲಾಗುವುದಂತೆ. ಇದರ ಮೇಲೆ ಸೆಲ್‍ಪೋನ್ ಇಟ್ಟರೆ, ಅದರ ನಿಯಂತ್ರಣವೂ ಬೆರಳುಗಳನ್ನು ತೆರೆಯ ಮೇಲೆ ಚಲಿಸುವ ಮೂಲಕ ಸಾಧ್ಯ.ಬಹುಬೆರಳಿನ ಸ್ಪರ್ಶಕ್ಕೂ ಇದು ತೊಂದರೆ ಕೊಡದೆ ಸ್ಪಂದಿಸುವ ಸಾಮರ್ಥ್ಯ ಹೊಂದಿದೆ.

ಬಯಸದ ರಾಶಿ ರಾಶಿ ಇ-ಮೇಲ್ ಕಳುಹಿಸಿ ಪೊಲೀಸ್ ಬಲೆಗೆ!
ಜನರು ಸ್ವೀಕರಿಸಲು ಬಯಸದ ಇ-ಮೇಲ್‍ಗಳನ್ನು ರಾಶಿ ರಾಶಿ ಕಳುಹಿಸಿ, ಕಿರಿಕಿರಿ ಮಾಡಿದ ಆರೋಪದಲ್ಲಿ ರಾಬರ್ಟ್ ಅನ್ನುವ ವ್ಯಕ್ತಿಯನ್ನು ವಾಶಿಂಗ್ಟನ್ ಬಳಿ ಬಂಧಿಸಲಾಗಿದೆ. ಅತ ಇತರರ ಗಮನಕ್ಕೆ ಬಾರದಂತೆ, ಅವರುಗಳ ಕಂಪ್ಯೂಟರುಗಳನ್ನು ತನ್ನ ನಿಯಂತ್ರಣಕ್ಕೆ ತಂತ್ರಾಂಶದ ಮೂಲಕ ತೆಗೆದುಕೊಂಡು, ಮಿಲಿಯಗಟ್ಟಲೆ ಇ-ಮೇಲ್‍ಗಳನ್ನು ಕಳುಹಿಸಿ, ತನ್ನ ವ್ಯವಹಾರ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ.ಈ ಮೂಲಕ ಆತ ಹತ್ತಿರ ಹತ್ತಿರ ಒಂದು ಲಕ್ಷ ಪೌಂಡು ಹಣ ಗಳಿಸಿದ್ದಾನಂತೆ.ಶಿಕ್ಷೆಯಾದರೆ ಆತನ ಅಪರಾಧಕ್ಕೆ ಗರಿಷ್ಠ ಅರುವತ್ತೈದು ವರ್ಷ ಜೈಲುವಾಸ ಆಗಬಹುದಂತೆ.

ಅಂತರ್ಜಾಲ ಇಲ್ಲದಾಗಲೂ ಆನ್‍ಲೈನ್ ಅನುಕೂಲ ಪಡೆಯಿರಿ!
ಇ-ಮೇಲ್, ಕ್ಯಾಲೆಂಡರ್ ಮತ್ತು ಆನ್‍ಲೈನ್ ಪದಸಂಸ್ಕಾರಕ ತಂತ್ರಾಂಶವನ್ನು ಅಂತರ್ಜಾಲ ಸಂಪರ್ಕ ಹೊಂದಿದಾಗಲಷ್ಟೆ ಬಳಸಲು ಸಾಧ್ಯ. ಅದರೆ ಆಫ್‍ಲೈನ್(ಅಂತರ್ಜಾಲಕ್ಕೆ ಸಂಪರ್ಕ ಹೊಂದಿರದಿದ್ದರೆ) ಆ ಸೇವೆಗಳು ಅಲಭ್ಯವಷ್ಟೇ? ಗೂಗಲ್ ಕಂಪೆನಿಯು ಗೂಗಲ್ ಗೇರ್ಸ್ ಎನ್ನುವ ತನ್ನ ಹೊಸ ಸೇವೆಯ ಮೂಲಕ ಈ ಸೇವೆಯಲ್ಲಿನ ನ್ಯೂನ್ಯತೆಯನ್ನು ಇಲ್ಲವಾಗಿಸಲು ಪ್ರಯತ್ನಿಸುತ್ತಿದೆ. ಗೂಗಲ್ ಗೇರ್ಸ್ ಎನ್ನುವ ಪ್ಲಗ್-ಇನ್ ತಂತ್ರಾಂಶವನ್ನು ಬ್ರೌಸರ್ ತಂತ್ರಾಂಶದಲ್ಲಿ ಅನುಸ್ಥಾಪಿಸಿದಾಗ, ಅಂತರ್ಜಾಲದಲ್ಲಿ ಇಲ್ಲದ ವೇಳೆಯೂ ನಮ್ಮ ಕಡತಗಳನ್ನು ಪಡೆಯಲು ಸಾಧ್ಯ. ಮತ್ತೆ ಅಂತರ್ಜಾಲಕ್ಕೆ ಸಂಪರ್ಕ ಪಡೆದಾಗ, ಕಡತಗಳಿಗೆ ನಾವು ಮಾಡಿದ ಬದಲಾವಣೆಗಳು ಆನ್‍ಲೈನ್‍ನ ಬಳಕೆದಾರನ ಖಾತೆಯಲ್ಲೂ ಉಳಿದು, ಆನ್‍ಲೈನ್ ಮತ್ತು ಆಫ್‍ಲೈನ್ ನಡುವಿನ ಅಂತರವನ್ನು ಇಲ್ಲವಾಗಿಸುತ್ತದೆ.ಅಂತರ್ಜಾಲ ಪುಟ:http://gears.google.com/

ತೂಕ ಇಳಿಸಲು ಸೆಲ್‍ಪೋನ್ ಸಹಾಯ
ಜಪಾನಿನ ಯುವಕ-ಯುವತಿಯರು ದಢೂತಿಗಳಾಗುತ್ತಿದ್ದಾರಂತೆ. ಅವರ ಕೊಬ್ಬಿನಂಶ ಹೆಚ್ಚಿರುವ ಆಹಾರ ಮತ್ತು ಮಾಂಸಾಹಾರ ಸೇವನೆ ಜತೆಗೆ ಜೀವನ ಶೈಲಿ ಹೀಗಾಗಲು ಕಾರಣವೆನ್ನುವುದು ಸ್ಪಷ್ಟ.ಅಸಾಹಿ ಕಸೀ ಕೊರ್ಪೊರೇಷನ್ ಎನ್ನುವ ವೈದ್ಯಕೀಯ ಉಪಕರಣಗಳ ತಯಾರಿಕಾ ಕಂಪೆನಿ ಇದಕ್ಕೆ ತಂತ್ರಜ್ಞಾನದ ಮೂಲಕ ಪರಿಹಾರ ಕಂಡುಕೊಳ್ಳುವ ಪ್ರಯತ್ನದಲ್ಲಿದೆ. ಇದರಂತೆ ಕಂಪೆನಿಯ ಜತೆ ನೋಂದಾಯಿಸಿಕೊಂಡ ಗ್ರಾಹಕರು ತಮ್ಮ ಊಟದ ಬಟ್ಟಲಿನ ಚಿತ್ರ ಹಿಡಿದು ಕಂಪೆನಿಗೆ ಬಹುಮಾಧ್ಯಮ ಸಂದೇಶ ಸೇವೆ ಮೂಲಕ ಕಳುಹಿಸುತ್ತಾರೆ. ಕಂಪೆನಿಯ ಆಹಾರ ವಿಶ್ಲೇಷಕ ಈ ಚಿತ್ರವನ್ನು ಪರಿಶೀಲಿಸಿ,ಸೂಕ್ತ ಸಲಹೆ ನೀಡಿ, ಅವರ ಆಹಾರ ಅವರ ದೇಹಕ್ಕೆ ಅಗತ್ಯವಾದಷ್ಟೇ ಇರುವಂತೆ ನೋಡಿಕೊಳ್ಳುತ್ತಾನೆ.ಡಿಜಿಟಲ್ ಕ್ಯಾಮರದ ಚಿತ್ರಗಳು ಇದ್ದರೆ ಅವನ್ನು ಅಂತರ್ಜಾಲ ತಾಣಕ್ಕೂ ಇ-ಮೇಲ್ ಮೂಲಕ ಕಳುಹಿಸಬಹುದು.ತಿಂದ ಆಹಾರದ ವಿವರವನ್ನು ಬಾಯ್ದರೆ ನೀಡಿದರೆ ಅಥವಾ ಬರೆದು ನೀಡಿದಾಗ ರೋಗಿಗಳು ಕೆಲವು ಐಟಮ್‍ಗಳನ್ನು ಮರೆಯುವ ಅಥವಾ ಪ್ರಮಾಣದ ಬಗ್ಗೆ ಹುಸಿ ಮಾಹಿತಿ ನೀಡುವ ಸಮಸ್ಯೆ ಇಲ್ಲಿ ಇರದು ಎನ್ನುವುದು ಈ ವಿಧಾನದ ಅನುಕೂಲ.
*ಅಶೋಕ್‍ಕುಮಾರ್ ಎ
 
googledc7e93ba1a7703ae.html