Tuesday, July 31, 2007

ಮಂಜುಗಡ್ಡೆ ಬಳಸಿ ಕಟ್ಟಡ ತಂಪುಗೊಳಿಸುವ ವ್ಯವಸ್ಥೆ!

ಬೇಸಗೆಯಲ್ಲಿ ವಿದ್ಯುತ್ ಬಳಕೆ ಮಿತಿಮೀರಿ ಹೋಗುವುದು ಎಲ್ಲರ ಅನುಭವ.ಕಟ್ಟಡಗಳನ್ನು ತಂಪುಗೊಳಿಸುವ ವ್ಯವಸ್ಥೆಗಳು ವಿದ್ಯುತ್ ಬೇಡಿಕೆಯ ಮೇಲೆ ಹೆಚ್ಚು ಒತ್ತಡ ಹೇರುತ್ತವೆ. ಅಮೆರಿಕಾದಲ್ಲು ಪರಿಸ್ಥಿತಿ ಭಿನ್ನವಲ್ಲವಂತೆ. ಅಲ್ಲಿಯೂ ಕಚೇರಿ ಸಮಯದಲ್ಲಿ ವಿದ್ಯುತ್ ಬೇಡಿಕೆ ಮಿತಿಮೀರಿ ಹೋಗುತ್ತದೆ. ಈ ಬೇಡಿಕೆಯನ್ನು ತಗ್ಗಿಸಿದರೆ,ಪರಿಸರಸ್ನೇಹಿ ಕ್ರಮಗಳನ್ನು ಕೈಗೊಳ್ಳಲು ಹೆಚ್ಚಿನ ಪ್ರೋತ್ಸಾಹ ಇದೆ.
ಕಟ್ಟಡದ ಏ.ಸಿ.ಗಳನ್ನು ಹೊಸ ರೀತಿಯಲ್ಲಿ ಮಾರ್ಪಡಿಸಿ, ವಿದ್ಯುತ್ ಬೇಡಿಕೆಯನ್ನು ತಗ್ಗಿಸುವ ಕ್ರಮಗಳನ್ನು ಕೆಲವು ಕಂಪೆನಿಗಳು ಕೈಗೊಳ್ಳುತ್ತಿವೆಯಂತೆ. ಖ್ಯಾತ ವಿತ್ತ ಸೇವೆ ಒದಗಿಸುವ ಕಂಪೆನಿ ಮೋರ್ಗನ್ ಸ್ಟೇನ್ಲಿ ತನ್ನ ಕಚೇರಿಯಲ್ಲಿ ಮಂಜುಗಡ್ಡೆಯ ಮೂಲಕ ಕಟ್ಟಡ ತಂಪುಗೊಳಿಸುವ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ.ಏನಿದು ಹೊಸ ವ್ಯವಸ್ಥೆ ಎಂದಿರಾ? ಈ ವ್ಯವಸ್ಥೆ ಅಳವಡಿಸಲು ಸಾಕಷ್ಟು ಸ್ಥಳಾವಕಾಶ ಬೇಕು. ದೊಡ್ದ ನೀರಿನ ಟ್ಯಾಂಕುಗಳನ್ನು ಅಳವಡಿಸಿಕೊಂಡು, ಈ ನೀರನ್ನು ವಿದ್ಯುತ್ ಬಳಸಿ ಮಂಜುಗಡ್ಡೆ ಮಾಡುವ ಕೆಲಸ ರಾತ್ರಿಯ ವೇಳೆ ನಡೆಯುತ್ತದೆ. ರಾತ್ರೆ ವಿದ್ಯುತ್ ಬೇಡಿಕೆ ಕಡಿಮೆಯೆಂದು ನೆನಪಿಡಿ.ಹಗಲಿನ ವೇಳೆ, ಈ ಟ್ಯಾಂಕುಗಳಿಂದ ಕಟ್ಟಡಕ್ಕೆ ಪ್ರತ್ಯೇಕ ಕೊಳವೆಗಳ ಮೂಲಕ ತಂಪು ಗಾಳಿ,ಸಾಗಿ ಕಟ್ಟಡವನ್ನು ತಂಪು ಮಾಡುತ್ತದೆ. ಮಂಜು ಕರಗಿ, ಉಂಟಾದ ನೀರು ರಾತ್ರೆ ಮತ್ತೆ ಮಂಜುಗಡ್ಡೆಯಾಗಿ,ಮರುದಿನ ಕಟ್ಟಡ ತಂಪಾಗಿಸಲು ತಯಾರಾಗುತ್ತದೆ.
ಈ ಹೊಸ ವ್ಯವಸ್ಥೆ ವಿದ್ಯುತ್ ಬಳಸುವುದು, ರಾತ್ರೆ.ನೀರು ಮರು ಬಳಕೆಯಗುತ್ತದೆ. ಹೆಚ್ಚಿನ ಜನರೇಟರ್ ಅಗತ್ಯವನ್ನು ತಪ್ಪಿಸುವ ಮೂಲಕ ಪರಿಸರಸ್ನೇಹಿ.ಸ್ಥಾಪನೆಗೆ ಸ್ಥಳಾವಕಾಶ ಹೆಚ್ಚು ಬೇಕು. ಅಲ್ಲದೆ ಹೊಸ ಟ್ಯಾಂಕ್, ಪ್ರತ್ಯೇಕ ಕೊಳವೆ ಇತ್ಯಾದಿ ಅಳವಡಿಸಲು ಹೆಚ್ಚು ಖರ್ಚು ಬರುತ್ತದೆ ಎನ್ನುವುದು ಈ ವ್ಯವಸ್ಥೆಯ ತೊಂದರೆ.ಆದರೆ ಪರಿಸರಸ್ನೇಹಿ ಕ್ರಮಕ್ಕೆ ಪ್ರೋತ್ಸಾಹ ನೀಡುವ ಸರಕಾರದ ನಿರ್ಧಾರದಿಂದ ವಿದ್ಯುಚ್ಛಕ್ತಿ ದರದಲ್ಲಿ ಕಡಿತದಂತಹ ಪ್ರೋತ್ಸಾಹ ದೊರೆಯುವುದರಿಂದ ಕೆಲವು ವರ್ಷಗಳಲ್ಲಿ ಈ ಖರ್ಚು ವಸೂಲಾಗುತ್ತದೆ.

ಬಾಹ್ಯಾಕಾಶ ಯಾತ್ರಿಗಳಿಗೆ ಸ್ಟೈಲಿಶ್ ಉಡುಪು!
ಬಾಹ್ಯಾಕಾಶಯಾನಿಗಳು ಧರಿಸುವ ಉಡುಗೆತೊಡುಗೆಗಳನ್ನು ಗಮನಿಸಿದ್ದೀರಿ ತಾನೇ?ಕಳೆದ ನಲ್ವತ್ತು ವರ್ಷಗಳಿಂದ ಅದೇ ತಟ್ಟೀರಾಯನಂತಹ ಉಡುಗೆ ಧರಿಸುತ್ತಾ ಬಂದಿದ್ದಾರೆ.ಅದು ಭಾರೀ ಭಾರ. ಬಾಹ್ಯಾಕಾಶದಲ್ಲಿ ಯಾತ್ರಿಯ ಮೇಲೆ ಬೀಳುವ ಒತ್ತಡ ಕಡಿಮೆಯಾಗುತ್ತದೆ. ಆದರೂ ಭೂಮಿಯ ಮೇಲಿನ ಒತ್ತಡ ಅಲ್ಲೂ ಲಭ್ಯವಾಗುವಂತೆ ಒತ್ತಡದಲ್ಲಿ ತುಂಬಿಸಿದ ಗಾಳಿಯನ್ನು ಹಿಡಿದಿಡುವಂತೆ ಅದನ್ನು ರೂಪಿಸಲಾಗಿದೆ. ಜತೆಗೆ ಆ ಒತ್ತಡವನ್ನು ಉಳಿಸಿಕೊಳ್ಳುವ ಯಂತ್ರಗಳೂ ಜತೆಯಲ್ಲಿರಬೇಕು. ಈ ಉಡುಗೆ ತೊಟ್ಟು ಆಚೀಚೆ ನಡೆದಾಡುವುದು ಪ್ರಯಾಸಕರ.ಯಾತ್ರಿಯ ಹೆಚ್ಚಿನ ಶಕ್ತಿ ಈ ಉಡುಗೆಯಿಂದಲೇ ಖರ್ಚಾಗುತ್ತದೆ.
ಈಗ ಮಸಾಚ್ಯುಸೆಟ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರು ಹೊಸ ನಮೂನೆಯ ಉಡುಗೆಯನ್ನು ರೂಪಿಸಿದ್ದಾರೆ.ಇದರಲ್ಲಿ ನೈಲಾನ್ ಮತ್ತು ಸ್ಪೇಂಡೆಕ್ಸ್ ಎನ್ನುವ ವಸ್ತ್ರಗಳನ್ನು ಒಂದರ ಮೇಲೆ ಇನ್ನೊಂದನ್ನು ಸುತ್ತಿ, ಬಾಹ್ಯಾಕಾಶಯಾನಿಯು ಬಯಸುವ ಒತ್ತಡವನ್ನು ಉಂಟು ಮಾಡಲಾಗಿದೆ.ಇದು ಬಹಳ ಕಡಿಮೆ ತೂಕದ್ದು,ಯಂತ್ರಗಳನ್ನಿದರಲ್ಲಿ ಅಳವಡಿಸಬೇಕಿಲ್ಲ.ತಟ್ಟೀರಾಯನ ತರದ ಉಡುಗೆಯಲ್ಲದೆ,ಇದು ಮೈಬಿಗಿಯುವ,ನೋಡಲು ಸಹ್ಯವೆನಿಸುವ ಹಾಗಿದೆ.ಇದನ್ನು ಪ್ರತಿ ಬಾಹ್ಯಾಕಾಶಯಾನಿಗೆ ಪ್ರತ್ಯೇಕವಾಗಿ ರೂಪಿಸಬೇಕಾಗುತ್ತದೆ. ಅಂದಹಾಗೆ ಇದು ಬಾಹ್ಯಾಕಾಶಯಾನಕ್ಕೆ ಮಾತ್ರಾ ಸೂಕ್ತ-ಅನ್ಯಗ್ರಹಗಳಿಗೆ ಇದು ಸೂಕ್ತವಲ್ಲ.

ಬಾಹ್ಯಾಕಾಶಯಾನಿಗಳ ಆಹಾರ ಮಾಲ್‍ಗಳಲ್ಲಿ ಮಾರಾಟ

ಚೀನಾವು ಈಗಾಗಲೇ ಬಾಹ್ಯಾಕಾಶಕ್ಕೆ ಯಾನಿಯನ್ನು ಕಳಿಸಿದೆ.ಅವರು ಸೇವಿಸುವ ಆಹಾರವನ್ನು ಮಾರುಕಟ್ಟೆಯಲ್ಲಿ ಜನ ಸಾಮಾನ್ಯರಿಗೆ ಲಭ್ಯವಾಗಿಸುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದೆ. ಅಲ್ಲಿನ ಬಾಹ್ಯಾಕಾಶಯಾನ ಸಂಸ್ಥೆ ಶಾಂಘೈಯ ಕಂಪೆನಿಯೊಂದಿಗೆ ಆಹಾರದ ವಾಣಿಜ್ಯ ಉತ್ಪಾದನೆಗೆ ಒಪ್ಪಂದ ಮಾಡಿಕೊಂಡಿದೆ.ಈ ಆಹಾರ ಪೋಷಕಾಂಶಗಳನ್ನು ಬಹಳ ಪ್ರಮಾಣದಲ್ಲಿ ಒಳಗೊಂಡಿರಬೇಕು ತಾನೆ?ಹಂದಿಮಾಂಸ,ಬಾತುಕೋಳಿಯ ಮಾಂಸ ಹೀಗೆ ಹಲವು ಮಾಂಸಾಹಾರಗಳನ್ನು ಬಾಹ್ಯಾಕಾಶ ಯಾನಿಗಳ ಆಹಾರ ಒಳಗೊಂಡಿದೆ. ಚಾಕಲೇಟ್ ಬಾರ್,ಡೆಸರ್ಟ್‍ಗಳನ್ನು ಇದುವರೆಗೆ ಬಾಹ್ಯಾಕಾಶಯಾನಿಗಳು ಬಳಸಿಲ್ಲವಾದರೂ, ಮುಂದಿನ ಯಾತ್ರೆಯ ವೇಳೆ ಇವನ್ನು ಒಯ್ಯಲಿರುವುದರಿಂದ,ಇವನ್ನೂ ಲಭ್ಯವಾಗಿಸುವ ಸೂಚನೆಯಿದೆ.

ಸಮುದ್ರದಡಿಯ ಪ್ರಯೋಗಾಲಯಗಳು
ಈ ಆಧುನಿಕ ಯುಗದಲ್ಲೂ ಸಮುದ್ರದ ಬಗ್ಗೆ ನಮಗೆ ತಿಳಿದಿರುವುದು ಕಡಿಮೆ. ಸಮುದ್ರ ತಳದ ಕೆಲವೆಡೆ ಸೀಮಿತ ಸಂಶೋಧನೆಗಳು ನಡೆದಿವೆಯಾದರೂ, ಅದರ ಅವಧಿ ಮತ್ತು ಆ ಸಂಶೋಧನೆ ನಡೆದ ಸ್ಥಳ ವಿಸ್ತೀರ್ಣ ಸಮುದ್ರದ ಅಗಾಧತೆಗೆ ಹೋಲಿಸಿದರೆ ಕಡಿಮೆಯೆ ಎನ್ನುವುದು ತಿಳಿದವರ ಅನಿಸಿಕೆ. ಸಮುದ್ರದ ಮೂಲಕ ಹಲವು ಕೇಬಲ್ ಜಾಲಗಳು ಭೂಮಿಯ ಒಂದು ಖಂಡದಿಂದ ಇನ್ನೊಂದಕ್ಕೆ ಹಾದು ಹೋಗಿವೆ. ಇವನ್ನು ಮಾಹಿತಿಯ ಸಾಗಾಟಕ್ಕೆ ಹೆದ್ದಾರಿಗಳಂತೆ ಬಳಸಲಾಗುತ್ತಿದೆ. ಇವನ್ನು ಸಮುದ್ರ ಸಂಶೋಧನೆ ಬಗ್ಗೆಯೂ ಬಳಸಬಾರದೇಕೆ ಎನ್ನುವ ಯೋಚನೆಯೂ ಇದೆ.
ಹವಾಯಿ ದ್ವೀಪದ ಸಮೀಪ ಸಮುದ್ರ ಸಂಶೋಧನೆ ಪ್ರಯೋಗಾಲಯವನ್ನು ಸ್ಥಾಪಿಸಲಾಗಿದೆ.ಈ ಪ್ರಯೋಗಾಲಯದಲ್ಲಿ ಆಧುನಿಕ ತಂತ್ರಜ್ಞಾನ ಒದಗಿಸಿರುವ ಸೌಲಭ್ಯಗಳನ್ನು ಬಳಸಿಕೊಳ್ಳಲಾಗಿದೆ. ಸಮುದ್ರ ತಳದ ಉಷ್ಣತೆಯನ್ನು ಅಳೆಯಲು ಸಂವೇದಕಗಳನ್ನು ಬಳಸಲಾಗಿದೆ. ಅಲ್ಲಿನ ಒತ್ತಡ,ನೀರಿನ ಚಲನೆ ಇತ್ಯಾದಿ ಮಾಹಿತಿಗಳನ್ನು ವಿಜ್ಞಾನಿಗಳು ದೂರದ ಪ್ರಯೋಗಾಲಯದಲ್ಲಿ ಕುಳಿತು ತಮ್ಮ ಕಂಪ್ಯೂಟರುಗಳಲ್ಲೇ ಪಡೆಯುತ್ತಾರೆ. ಮೊದಲು ಹೇಳಿದ ಕೇಬಲ್ ಜಾಲಗಳು, ಈ ಮಾಹಿತಿಯನ್ನು ಸಾಧನಗಳಿಂದ ವಿಜ್ಞಾನಿಗಳಿಗೆ ಮುಟ್ಟಿಸುತ್ತವೆ.ಹಾಗಾಗಿ ವಿಜ್ಞಾನಿಗಳು ಸಮುದ್ರಕ್ಕೆ ಹೋಗದೆಯೇ ತಮಗೆ ಬೇಕಾದ ಮಾಹಿತಿಗಳನ್ನು ಪಡೆಯುವುದು ಸಾಧ್ಯವಾಗುತ್ತದೆ.
ಸಮುದ್ರಜೀವಿಗಳ ಬಗ್ಗೆ ಸಂಶೋಧಕರು ಹೇಗೆ ತಿಳಿದುಕೊಳ್ಳುತ್ತಾರೆ?ಈಗ ಲಭ್ಯವಿರುವ ಸ್ವಯಂಚಾಲೀ ರೊಬೋಗಳು ಆ ಕೆಲಸ ಮಾಡುತ್ತವೆ.ತಮ್ಮ ಕ್ಯಾಮರಾ ಕಣ್ಣಿನಿಂದ ನೋಡಿದ್ದನ್ನು ಅವು ಫೈಬರ್ ಜಾಲದ ಮೂಲಕ ಪ್ರಯೋಗಾಲಯದ ಕಂಪ್ಯೂಟರುಗಳಿಗೆ ಕಳುಹಿಸುತ್ತವೆ.ಸಮುದ್ರದಾಳದ ಸಂಶೋಧನೆಗೆ ಹೊಸ ಕೇಬಲ್‍ಗಳನ್ನು ಅಳವಡಿಸುವ ಕೆಲಸವೂ ಕೆಲವೆಡೆ ನಡೆಯುತ್ತಿದೆ. ಅಲಾಕ್ಟೆಲ್-ಲ್ಯೂಸೆಂಟ್ ಎನ್ನುವ ದೂರಸಂಪರ್ಕ ಕಂಪೆನಿಯಿಂತಹ ಯೋಜನೆಗಳಲ್ಲಿ ತೊಡಗಿಸಿಕೊಂಡಿದೆ.ಭೂಮಿಯ ಮುಕ್ಕಾಲು ಪಾಲು ಆವರಿಸಿರುವ ಸಮುದ್ರವನ್ನು ತಿಳಿಯಲು ಹೆಚ್ಚು ಹೆಚ್ಚು ಪ್ರಯತ್ನ ನಡೆದಂತೆ ಸಮುದ್ರವನ್ನಿಡೀ ಕೇಬಲ್‍ಗಳು ಆವರಿಸುವುದು ಸಂಭವನೀಯ.ಈ ಕೇಬಲ್‍ಗಳೇ ಹೊಸ ಬಗೆಯ ತಲೆನೋವೂ ಒಡ್ಡಬಹುದು!
*ಅಶೋಕ್‍ಕುಮಾರ್ ಎ

Tuesday, July 24, 2007

ಹಾರುವ ಅಂಬ್ಯುಲೆನ್ಸ್!



ನಗರದ ಜನಸಂದಣಿಯ ಪ್ರದೇಶದಲ್ಲಿ ಬಾಂಬು ಸ್ಫೋಟದಂತಹ ಅನಾಹುತ ಸಂಭವಿಸಿದೆ.ಕೆಲವರು ಗಾಯಗೊಂಡಿದ್ದಾರೆ. ಅವರನ್ನು ಸಾಗಿಸಲು ಸಾಮಾನ್ಯ ಅಂಬ್ಯುಲೆನ್ಸ್ ಕಳುಹಿಸುವ ಪರಿಸ್ಥಿತಿ ಇಲ್ಲ. ಹಾಗಾದರೆ ಎನು ಮಾಡಬಹುದು? ಹಾರುವ ಅಂಬ್ಯುಲೆನ್ಸ್ ಕಳುಹಿಸಿದರೆ ಹೇಗೆ? ಅದಾದರೆ ಅನಾಹುತ ಸಂಭವಿಸಿದ ಪ್ರದೇಶದಲ್ಲಿ ಆಗಸದಲ್ಲಿ ಹಾರಿ ಬಂದು ಇಳಿಯಬಹುದು.ಹೆಲಿಕಾಪ್ಟರನ್ನೇ ಕಳುಹಿಸಬಹುದು. ಹೆಲಿಕಾಪ್ಟರಿನ ತಿರುಗುವ ಬ್ಲೇಡುಗಳು ಜನವಸತಿ ಪ್ರದೇಶಗಳಲ್ಲಿ ಇಳಿಯಲು ತೊಂದರೆ ಕೊಡುವ ಪರಿಸ್ಥಿತಿ ಇದ್ದರೆ, ಅಗ ಹಾರುವ ಅಂಬ್ಯುಲೆನ್ಸ್ ಸೂಕ್ತ.
ಇಂತಹ ವಾಹನ ಸದ್ಯ ಲಭ್ಯವಿಲ್ಲ. ರಫಿ ಎನ್ನುವ ವೈಮಾನಿಕ ತಂತ್ರಜ್ಞ ಈ ಆಲೋಚನೆಯುಳ್ಳ ವ್ಯಕ್ತಿ. ಆತ ಬೋಯಿಂಗ್ ಕಂಪೆನಿಯಲ್ಲಿ ದಶಕಗಳ ಕಾಲ ದುಡಿದ ಅನುಭವ ಹೊಂದಿದ್ದಾನೆ.ಕೊಳವೆಯಲ್ಲಿ ಗಾಳಿಯ ಸಾಗಾಟ ಮಾಡಿ, ಹೆಲಿಕಾಪ್ಟರಿನಲ್ಲಿ ಉಂಟಾಗುವ ಬ್ಲೇಡುಗಳ ಚಲನೆಯನ್ನು ಪಡೆಯುವ ವಿನ್ಯಾಸವನ್ನು ಆತ ಮಾಡಿದ್ದಾನೆ. ಇದರಲ್ಲೂ ಹೆಲಿಕಾಪ್ಟರಿನ ತತ್ತ್ವ ಕೆಲಸ ಮಾಡುತ್ತದಾದರೂ, ಬ್ಲೇಡುಗಳು ಹೊರಗೆ ಕಾಣಿಸವು ಮತ್ತವುಗಳ ಗಾತ್ರವೂ ಸಣ್ಣದು. ಈ ವಾಹನವನ್ನು ಪೈಲಟ್ ರಹಿತವಾಗಿ ಮಾಡಿ, ಜಿ.ಪಿ.ಎಸ್. ಎನ್ನುವ ಸ್ಥಾನ ವ್ಯವಸ್ಥೆಯನ್ನಾಧರಿಸಿ ಸ್ವಯಂಚಾಲಿತಗೊಳಿಸುವ ಯೋಚನೆ ಆತನದು. ಹೀಗೆ ಮಾಡಿದರೆ, ಈ ಅಂಬ್ಯುಲೆನ್ಸ್ ಗ್ರೆನೇಡ್ ಎಸೆತ ಮುಂತಾದ ಆಕ್ರಮಣಕ್ಕೀಡಾದ ಸೈನಿಕರ ರಕ್ಷಣೆಗೂ ಕಳಿಸಬಹುದಲ್ಲ ಎನ್ನುವುದವನ ದೂರಾಲೋಚನೆ.
ಅಂಬ್ಯುಲೆನ್ಸ್‍ನಲ್ಲಿ ಎರಡು ಜನ ಗಾಯಾಳುಗಳನ್ನಿಡಲು ಜಾಗವಿರುವಂತೆ ವಿನ್ಯಾಸ ಮಾಡಲಾಗಿದೆ. ಅವರಿಗೆ ಸಮಾಧಾನ ಹೇಳಲು ಮುದ್ರಿತ ಧ್ವನಿ ವ್ಯವಸ್ಥೆಯನ್ನೂ ವಾಹನ ಹೊಂದಿರುತ್ತದೆ. ಗಂಟೆಗೆ ನೂರು ಮೈಲು ವೇಗ ಇದಕ್ಕಿರಬೇಕು ಹಾಗಿದೆ ಇದರ ವಿನ್ಯಾಸ.ದುರ್ಗಮ ಪ್ರದೇಶಗಳಲ್ಲೂ ಇದರ ಬಳಕೆ ಸಾಧ್ಯವಾಗುವಂತೆ ಮಾಡುವುದಿವನ ಮಹತ್ತ್ವಾಕಾಂಕ್ಷೆ.ಈಗ ಮಾದರಿಯ ರಚನೆ ಮಾಡಿ, ಇನ್ನೆರಡು ವರ್ಷಗಳಲ್ಲಿ ಮೊದಲ ವಾಹನ ಮಾರುಕಟ್ಟೆಗೆ ಬಿಡುವುದವನ ಆಲೋಚನೆ.
ಸೈಬರ್ ಜಗತ್ತಿನ ಹೊಸ ಕೆಲಸ-ಬಾಡಿಗೆ ಲೇಖಕ!
ಗಣ್ಯ ವ್ಯಕ್ತಿಗಳು ಅಂತರ್ಜಾಲದ ತಾಣಗಳನ್ನು ಮಾಡಿಕೊಂಡಿರುತ್ತಾರೆ. ಅವರಿಗೆ ದಿನಾಲೂ ನೂರಾರು ಮಿಂಚೋಲೆಗಳು (ಇ-ಮೇಲ್) ಬರುತ್ತವೆ.ಅವುಗಳಿಗೆ ವೈಯುಕ್ತಿಕವಾಗಿ ಪ್ರತಿಕ್ರಿಯಿಸಲು ಪುರುಸೊತ್ತು ಸಿಗುವುದಿಲ್ಲ. ಜತೆಗೆ ತಮ್ಮ ಅಭಿಪ್ರಾಯ,ಯೋಜನೆಗಳನ್ನು ತಮ್ಮ ಅಭಿಮಾನಿಗಳಿಗೆ ತಿಳಿಯಪಡಿಸಲು ಬ್ಲಾಗು ಬರೆಯುತ್ತಿರಬೇಕು. ಅಂತರ್ಜಾಲ ತಾಣವು ಸದಾ ತಾಜಾ ಆಗಿರಬೇಕು-ಅದು ವ್ಯಕ್ತಿಯ ಚಲನವಲನಗಳ ಸರಿಯಾದ ಚಿತ್ರ ನೀಡಬೇಕು. ಇದೆಲ್ಲವನ್ನೂ ಹೊರಗುತ್ತಿಗೆ ನೀಡುವ ಚಾಳಿಯೂ ಈಗ ಆರಂಭವಾಗಿದೆ.ಇಂತಹ ಡಿಜಿಟಲ್ ಬಯೋಗ್ರಾಫರ್‌ಗಳಿಗೆ ನಿಗದಿತ ಶುಲ್ಕ ನೀಡಿ, ಸೂಚನೆಗಳನ್ನು ನೀಡಿದರೆ ಮುಗಿಇಯಿತು. ಉಳಿದ ತಲೆನೋವನ್ನೆಲ್ಲಾ ಅವರೇ ನಿಭಾಯಿಸುತ್ತಾರೆ.ಭಾಷೆಯ ಮೇಲೆ ಪ್ರಭುತ್ವ,ಸೂಚನೆಗಳನ್ನು ಕಾರ್ಯರೂಪಕ್ಕಿಳಿಸುವ ಸಾಮರ್ಥ್ಯದ ಜತೆಗೆ, ಅಂತರ್ಜಾಲ ಪುಟಗಳನ್ನು ನಿರ್ವಹಿಸುವ ತಾಕತ್ತನ್ನೂ ಇಂತಹ ಕೆಲಸ ಮಾಡುವ ವ್ಯಕ್ತಿಗಳು ಹೊಂದಿರುವುದು ಅಗತ್ಯ.

ಕುರ್ರಿಕಿ ಎಂಬ ಅಂತರ್ಜಾಲ ಕಲಿಕಾಕೇಂದ್ರ

ಮಕ್ಕಳ ಕಲಿಕೆಗೆ ಅಗತ್ಯ ಸಂಪನ್ಮೂಲಗಳನ್ನು ಅಂತರ್ಜಾಲ ತಾಣದ ಮೂಲಕ ಒದಗಿಸುವುದು ಹೊಸ ವಿಷಯವೇನಲ್ಲ. ಎಲ್ಲರಿಗೂ ಮುಕ್ತವಾಗಿ ತಮಗೆ ತಿಳಿದುದನ್ನು ಇತರರಿಗೆ ನೀಡುವ ಅಥವಾ ತಮಗೆ ಬೇಕೆನಿಸಿದ ಮಾಹಿತಿಯನ್ನು ಮುಕ್ತವಾಗಿ ಪಡೆಯುವ ಅವಕಾಶ ಕಲ್ಪಿಸುವ ತಾಣಗಳು ಕಡಿಮೆ. ಕುರ್‍ರ್‍ಇಕಿ(curriki.org) ಇಂತಹ ಅವಕಾಶ ಒದಗಿಸುತ್ತದೆ. ಶಿಕ್ಷಕರು, ಅಥವಾ ಆಸಕ್ತರು ತಮ್ಮ ಪಠ್ಯ ಕ್ರಮಗಳನ್ನು,ಟಿಪ್ಪಣಿಗಳನ್ನು ಈ ತಾಣದಲ್ಲಿ ಇಡಬಹುದು. ಅವರು ನಿಗದಿತ ತಂತ್ರಾಂಶ ಬಳಸಿರಬೇಕು ಎಂದಿಲ್ಲ. ಇಲ್ಲಿ ಅವನ್ನು ಬದಲಾಯಿಸಿ,ಇತರ ತಂತ್ರಾಂಶ ಬಳಸುವವರ ಉಪಯೋಗಕ್ಕೂ ಸಿಗುವಂತೆ ಮಾಡಲಾಗುತ್ತದೆ. ಸದ್ಯ ಅಮೆರಿಕಾದ ಮಕ್ಕಳ ಪಠ್ಯಕ್ರಮದ ಪಾಠಗಳೇ ಇಲ್ಲಿ ಹೆಚ್ಚು ಲಭ್ಯವಿರುವುದು ನಿಜವಾದರೂ,ನಮ್ಮವರ ಪೈಕಿಯೂ ತಾಣ ಜನಪ್ರಿಯವಾಗುತ್ತಿರುವುದು, ಇಲ್ಲಿನ ಮಕ್ಕಳ ಪಠ್ಯವಿಷಯಗಳೂ ಸಿಗುವ ವಿಶ್ವಾಸ ಮೂಡಿಸಿದೆ.
ಅಂಟು ಪಟ್ಟಿ ತಯಾರಿಕೆಗೆ ಹಲ್ಲಿ ಸ್ಪೂರ್ತಿ
ಗಾಯಗಳಿಗೆ ಹಾಕಬಹುದಾದ ಬ್ಯಾಂಡೇಜಿನಿಂದ ಹಿಡಿದು, ಸೋರುವ ಟ್ಯಾಂಕ್‍ಗಳಿಗೆ ಪಟ್ಟಿ ಹಾಕುವಂತಹ ವಿವಿಧ ಉದ್ದೇಶಗಳಿಗೆ ಬಳಸಬಹುದಾದ ಅಂಟುಪಟ್ಟಿ ತಯಾರಿಕೆಗೆ ಸ್ಪೂರ್ತಿ ಹಲ್ಲಿ ಎಂದರೆ ನಂಬುವುದು ಕಷ್ಟ. ಆದರೆ "ನೇಚರ್" ಎಂಬ ಪತ್ರಿಕೆಯಲ್ಲಿ ಪ್ರಕಟವಾಗಿರುವ ಸಂಶೋಧನಾ ಲೇಖನದ ಪ್ರಕಾರ ಅದು ನಿಜ. ಹಲ್ಲಿಗಳು ಚಾವಣಿಯ ಮೇಲೆ ತಲೆ ಕೆಳಗಾಗಿ ಓಡಾಡುವುದನ್ನು ಗಮನಿಸಿದ್ದಿರಿ ತಾನೇ? ಅವುಗಳ ಬಿಗಿ ಹಿಡಿತಕ್ಕೆ ಅವುಗಳ ಪಾದದಡಿಯ ಸೂಕ್ಷ್ಮ ರೋಮಗಳು ಉಂಟು ಮಾಡುವ ನಿರ್ವಾತ ಕಾರಣವಂತೆ. ತಮ್ಮ ದೇಹ ತೂಕಕ್ಕಿಂತ ಹೆಚ್ಚಿನ ಬಲ ಬಿದ್ದರೂ ಅವುಗಳ ಬಿಗಿ ಹಿಡಿತ ಸಡಿಲವಾಗದು.ಸಮುದ್ರದ ಇನ್ನೊಂದು ಮೃದ್ವಂಗಿ ಜಾತಿಯ ಜೀವಿಯೂ ಸಂಶೋಧಕರ ಕುತೂಹಲ ಕೆರಳಿಸಿದೆ. ಇದೂ ಕೂಡಾ ತನ್ನ ಬಿಗಿ ಹಿಡಿತಕ್ಕೆ ಹೆಸರುವಾಸಿ. ಈ ಹಿಡಿತಕ್ಕೆ ಕಾರಣ ಅದರ ಪಾದದಿಂದ ಒಸರುವ ದ್ರವ.ಸಂಶೋಧಕರು ಈ ಎರಡು ಜೀವಿಗಳ ಸ್ಪೂರ್ತಿಯಿಂದ ಕೃತಕ ಅಂಟು ಪಟ್ಟಿ ತಯಾರಿಸಲು ಶಕ್ತರಾಗಿದ್ದಾರಂತೆ. ಇದಕ್ಕೆ ಜೆಕ್ಕೆಲ್ ಎಂದು ನಾಮಕರಣವನ್ನೂ ಮಾಡಿದ್ದಾರೆ.ಇಂತಹ ಪಟ್ಟಿಯನ್ನು ಇಲೆಕ್ಟ್ರ್‍ಆನಿಕ್ ಚಿಪ್ ತಯಾರಿಸುವ ಫೊಟೊಲಿಥೋಟ್ರೆಪ್ಸಿ ಎನ್ನುವ ವಿಧಾನದಿಂದ ತಯಾರಿಸಬೇಕಾಗುತ್ತದೆ.ಭಾರೀ ಸೂಕ್ಷ್ಮದ ರೋಮದಂತಹ ರಚನೆ ಈ ಪಟ್ಟಿಯಲ್ಲಿ ಮಾಡಲು ಈ ವಿಧಾನ ಅನುಕೂಲ ಮಾಡಿಕೊಡುತ್ತದೆ.
*ಅಶೋಕ್‍ಕುಮಾರ್ ಎ

Monday, July 16, 2007

ಅಣೆಕಟ್ಟು ಧ್ವಂಸ ಮಾಡಲು ಪೂರ್ವ ತಯಾರಿ

ಅಣೆಕಟ್ಟುಗಳ ಬಗ್ಗೆ ಈಗ ಅಭಿಪ್ರಾಯ ಬದಲಾಗಿದೆ.ಅಣೆಕಟ್ಟುಗಳು ಪ್ರಕೃತಿಯ ಸ್ವಾಭಾವಿಕ ಪ್ರಕ್ರಿಯೆಗಳಿಗೆ ಅಡ್ಡಿ ತರುತ್ತದೆ. ಅಣೆಕಟ್ಟು ಭಾರೀ ಪ್ರಮಾಣದಲ್ಲಿ ಹೊಯಿಗೆ ಮತ್ತು ಮಣ್ಣನ್ನು ತಡೆಯುತ್ತವೆ. ಮೀನುಗಳ ನಾಶಕ್ಕೂ ಕಾರ್‍ಅಣವಾಗುತ್ತವೆ. ಅಣೆಕಟ್ಟು ತುಂಬಿದಾಗ ಒಂದೇ ಭಾರಿಗೆ ನೀರು ಬಿಡುವ ನಿರ್ಧಾರಗಳು ತರುವ ತೊಂದರೆಗಳು ಇದ್ದೇ ಇವೆ. ಅಮೆರಿಕಾದ ವೆಂಚುರಾ ಪಟ್ಟಣದ ಬಳಿಯ ವೆಂಚುರಾ ನದಿಗೆ ನಮಗೆ ಸ್ವಾತಂತ್ರ್ಯ ಸಿಕ್ಕಿದ ವರ್ಷ ಅಣೆಕಟ್ಟು ಕಟ್ಟಲಾಯಿತು.ಇದನ್ನೀಗ ತೆಗೆದು ಬಿಡುವ ಯೋಚನೆಯಿದೆ. ಕಳೆದ ಒಂದು ದಶಕದಿಂದಲು ಅಣೆಕಟ್ಟನ್ನು ತೆಗೆಯುವ ಯೋಚನೆಯೇನೋ ಇತ್ತಾದರೂ, ಅದನ್ನು ತೆಗೆದಾಗ ಹೊರಹೋಗುವ ಅಪಾರ ನೀರು ಮತ್ತು ಕೆಸರು ನದಿ ಹರಿವಿನ ಪ್ರದೇಶಗಳಲ್ಲಿ ಮಾಡಬಹುದಾದ ಅನಾಹುತವನ್ನು ಅಂದಾಜು ಮಾಡುವುದು ಹೇಗೆ ಎನ್ನುವುದರ ಬಗ್ಗೆ ಸ್ಪಷ್ಟ ಕಲ್ಪನೆಯಿಲ್ಲದ ಕಾರಣ ಇದನ್ನು ಮುಂದೆ ಹಾಕಲಾಗುತ್ತಿತ್ತು.
ಈಗ ಆ ಬಗ್ಗೆ ಅಧ್ಯಯನ ಮಾಡಲು ಮತ್ತು ಅಣೆಕಟ್ಟು ಒಡೆದಾಗ ಆಗಬಹುದಾದ ಪರಿಣಾಮವನ್ನು ಅಧ್ಯಯನ ಮಾಡಲು ಕಂಪ್ಯೂಟರ್ ಮಾದರಿ ಲಭ್ಯವಿದೆ.ಖ್ಯಾತ ವಿಜ್ಞಾನಿ ಐನ್‍ಸ್ಟೈನ್ ಅವರ ಮಗನ ಮಾದರಿಯನ್ನು ಕಂಪ್ಯೂಟರಿಗೆ ಅಳವಡಿಸಲಾಗಿದೆ.ಇದನ್ನು ರಚಿಸಲು ಮೊದಲಾಗಿ ಅಣೆಕಟ್ಟಿನ ಸುತ್ತಲಿನ ಚಿತ್ರವನ್ನು ಲೇಸರ್ ಕಿರಣಗಳ ಸಹಾಯದಿಂದ ಪಡೆಯಲಾಯಿತು. ಈ ಚಿತ್ರಗಳ ಮೂಲಕ, ಭೂಭಾಗದ ಎತ್ತರ ನೀಡುವ ನಕ್ಷೆಯನ್ನೂ, ಭೂಭಾಗಗಳ ಸಾಮಾನ್ಯ ನಕ್ಷೆಯನ್ನೂ ರಚಿಸಲಾಯಿತು. ನಂತರ ಈ ಮಾಹಿತಿಗಳನ್ನು ಕಂಪ್ಯೂಟರಿಗೆ ಉಣಿಸಿ,ಹ್ಯಾನ್ಸ್ ಆಲ್ಬರ್ಟ್ ಐನ್‍ಸ್ಟೈನ್ ಅವರ ಮಾದರಿಯ ಪ್ರಕಾರ ತಂತ್ರಾಂಶ ರಚಿಸಿ, ಅಧ್ಯಯನ ಮಾಡಲು ಅಮೆರಿಕಾದ ಮಿಲಿಟರಿಯ ಇಂಜಿನಿಯರುಗಳು ತೊಡಗಿದ್ದಾರೆ. ಅಣೆಕಟ್ಟಿನಲ್ಲಿ ಸಂಗ್ರಹವಾಗಿರುವ ಕೆಸರು ಒಂದು ಫುಟ್‍ಬಾಲ್ ಮೈದಾನದ ಅಗಲದ ಸ್ಥಳದಲ್ಲಿ ರಾಶಿ ಹಾಕಿದರೆ,ಅದರ ಎತ್ತರ ಮೂರು ಸಾವಿರ ಅಡಿಗಳಾಗಬಹುದು, ಎಂದವರು ಅಂದಾಜು ಮಾಡಿದ್ದಾರೆ. ಅದರಿಂದ ನೀರು ಮತ್ತು ಕೆಸರು ಹೊರ ಬಿಟ್ಟಾಗ ಜನಪ್ರದೇಶಗಳಿಗೆ ನೀರು ನುಗ್ಗದಂತೆ ಎಲ್ಲೆಲ್ಲಾ ತಡೆಗೋಡೆಗಳು ಬೇಕಾಗಬಹುದು ಎಂದವರಿಗೆ ಗೊತ್ತಾಗಿದೆ.ಯಾವ ಪ್ರದೇಶಗಳ ಜನರನ್ನು ದೂರ ಸಾಗಿಸುವುದು ಸುರಕ್ಷಿತವೆನ್ನುವುದು ಅವರು ಅಂದಾಜು ಮಾಡಿದ್ದಾರೆ.ಮೊದಲಾಗಿ ವೆಂಚುರಾ ನದಿಗೆ ಕಟ್ಟಿದ ಈ ಮತಿಲಿಜಾ ಅಣೆಕಟ್ಟನ್ನು ತೆಗೆದು, ನಂತರ ಇನ್ನೂ ಕೆಲವು ಅಣೆಕಟ್ಟುಗಳನ್ನು ತೆಗೆಯುವ ಯೋಚನೆ ಇದೆಯಂತೆ.

ಅಡ್ಡ ಕುಳಿತು ಬಿಡುವ ಸೈಕಲ್
ಮಾಮೂಲು ಸೈಕಲ್ ಸವಾರಿ ಮಾಡುವ ಹಾಗೆ ಮಾಡದೆ, ರಸ್ತೆಯಲ್ಲಿ ಸಾಗುತ್ತಿರುವವರನ್ನು ನೋಡುತ್ತಾ, ಅಡ್ಡಲಾಗಿ ಕುಳಿತು ಸವಾರಿ ಮಾಡುವ ಹೊಸ ವಿನ್ಯಾಸದ ಸೈಕಲನ್ನು ಅಭಿವೃದ್ಧಿ ಪಡಿಸಲಾಗಿದೆ. ಇದನ್ನು ಮಾಡಿದಾತ ತಂತ್ರಾಂಶ ಇಂಜಿನಿಯರ್. ಹಾಗೆಂದು ಇದು ಕಂಪ್ಯೂಟರ್ ಚಾಲಿತವೆಂದು ಬಗೆಯಬೇಡಿ. ಇದರಲ್ಲಿ ಸಂಕೀರ್ಣ ಗೇರ್ ವ್ಯವಸ್ಥೆಯನ್ನು ಬಳಸಿ, ಕುಳಿತೆಡೆಯಿಂದ ಪೆಡಲ್ ಮಾಡಿದರೂ ಮುಂದೆ ಹೋಗುವಂತೆ ವಿನ್ಯಾಸಗೊಳಿಸಲಾಗಿದೆ.ಮೈಕೆಲ್ ಕಿಲ್ಲಿಯನ್ ಎಂಬ ಹೆಸರಿನ ಇಂಜಿನಿಯರ್, ತನ್ನ ಸೈಕಲ್ ಸವಾರಿ ಭಾರೀ ಮಜಾ ಕೊಡುತ್ತೆ ಎನ್ನುತ್ತಾನೆ. ಅದರೆ ಸೈಕಲ್ ಮುಂದಿನಿಂದ ಬರುವ ಇತರ ಜನ, ವಾಹನಗಳನ್ನು ಸವಾರ ನೋಡುವುದು ಹೇಗೆನ್ನುವುದು ನಿಮ್ಮ ಊಹೆಗೆ ಬಿಟ್ಟದ್ದು.

ಆಂಧ್ರ ಸದನದಲ್ಲೀಗ ನಿಸ್ತಂತು ಕಂಪ್ಯೂಟರ್ ಜಾಲ
ಆಂಧ್ರಪ್ರದೇಶ ಕಂಪ್ಯೂಟರೀಕರಣದಲ್ಲಿ ರಾಷ್ಟ್ರದಲ್ಲೇ ಮುಂದಿರುವ ರಾಜ್ಯಗಳಲ್ಲೊಂದು. ಈಗ ಅಲ್ಲಿನ ಶಾಸನ ಸಭೆಯಲ್ಲಿ ನಿಸ್ತಂತು ಕಂಪ್ಯೂಟರ್ ಜಾಲ ವ್ಯವಸ್ಥೆಯನ್ನು ಅಳವಡಿಸಲಾಗಿದೆ.ಒಂದು ಮೆಗಾಬೈಟು ಸಾಮರ್ಥ್ಯದ ಐವತ್ತು ಸಂಪರ್ಕಗಳನ್ನು ಒದಗಿಸಲು ಈ ವ್ಯವಸ್ಥೆ ಸಮರ್ಥವಾಗಿದೆ. ಅಲ್ಲಿನ ಶಾಸಕರಿಗೆ ನಿಸ್ತಂತು ಸಂಪರ್ಕ ಸಾಧಿಸಲು ಸಮರ್ಥವಾದ ಲ್ಯಾಪ್‍ಟಾಪ್ ಒದಗಿಸಲಾಗಿದೆ.ಇವರಲ್ಲಿ ಒಂದು ಮೂವತ್ತು ಶಾಸಕರಾದರೂ ಸದನ ನಡೆಯುವ ವೇಳೆ ಬಳಸಬಹುದೆಂದು ಊಹೆ. ಅಂತರ್ಜಾಲ ಸಂಪರ್ಕವೂ ಲಭ್ಯವಿರುವುದರಿಂದ, ಸದನದಲ್ಲಿ ಕಲಾಪ ನಡೆಯುವ ವೇಳೆ, ತೂಕಡಿಸುವ ಬದಲು, ಅಂತರ್ಜಾಲ ಜಾಲಾಡುವ ಕಾರ್ಯವನ್ನಾದರೂ ಅವರು ಮಾಡಬಹುದು. ನಿಜವಗಿಯೂ ಕಾಳಜಿಯಿದ್ದವರಿಗೆ, ಮಾಹಿತಿಗಳನ್ನು ಪಡೆದುಕೊಳ್ಳಲು ವ್ಯವಸ್ಥೆ ಅನುಕೂಲ ಕಲ್ಪಿಸಲಿದೆ.ಮಾಧ್ಯಮ ಪ್ರತಿನಿಧಿಗಳಿಗೂ ವ್ಯವಸ್ಥೆಯಡಿ ಅವಕಾಶ ಕಲ್ಪಿಸಲು ಚಿಂತನೆ ನಡೆದಿದೆ.

ಮೈಕ್ರೋಸಾಫ್ಟ್‍ನಿಂದ ಬೆಂಗಳೂರಲ್ಲಿ ವಿಶ್ವವಿದ್ಯಾಲಯ?
ಮೈಕ್ರೋಸಾಫ್ಟ್ ಕಂಪೆನಿ ವಿದ್ಯಾಕ್ಷೇತ್ರಕ್ಕೆ ಅಡಿಯಿರಿಸಲಿದೆಯಂತೆ. ಈ ಯೋಜನೆಗೆ ಬೆಂಗಳೂರು ಸೂಕ್ತ ಎನ್ನುವ ನಿರ್ಧಾರ ಕಂಪೆನಿಯದ್ದು. ರಾಜ್ಯ ಸರಕಾರದ ಜತೆಗೀಗಲೇ ಮಾತುಕತೆ ನಡೆದಿದ್ದರೂ, ಮಾನವ ಸಂಪನ್ಮೂಲ ಸಚಿವಾಲಯ ಮತ್ತು ಯು.ಜಿ.ಸಿಯ ಅಂಗೀಕಾರವಿನ್ನಷ್ಟೇ ದೊರಕಬೇಕಾಗಿದೆ.

ಕ್ಷೀರಪಥಗಳನ್ನು ವಿಂಗಡಿಸಲು ಸಹಾಯ ಬೇಕಿದೆ!
ನಮ್ಮ ವಿಶ್ವವನ್ನು ಅಭ್ಯಸಿಸುವ ಖಗೋಳವಿಜ್ಞಾನಿಗಳಿಗೆ ಈಗ ರೇಡಿಯೋ ದೂರದರ್ಶಕಗಳು, ಆಕಾಶನೌಕೆಗಳಿಂದ ಲಭ್ಯವಾಗುತ್ತಿರುವ ಮಾಹಿತಿ ವಿಶ್ಲೇಷಿಸಲು ಪುರುಸೊತ್ತು ಸಾಲದಷ್ಟು ಮಾಹಿತಿಯ ಭರಪೂರ. ಕಂಪ್ಯೂಟರ್ ಬಳಸಿ,ಸಾಕಷ್ಟು ಮಾಹಿತಿಗಳ ವಿಶ್ಲೇಷಣೆ ನಡೆಯುತ್ತದಾದರೂ, ಕೆಲವಕ್ಕೆ ಕಂಪ್ಯೂಟರ್ ಪ್ರಯೋಜನಕ್ಕೆ ಬಾರವು. ಆಕಾಶಗಂಗೆಗಳ ಚಿತ್ರವನ್ನು ನೋಡಿ,ಅವು ದೀರ್ಘವೃತ್ತಾಕಾರದವೇ ಅಲ್ಲ ಉರುಟಿನವೇ ಮತ್ತು ಅವು ಚಲಿಸುವ ದಿಕ್ಕು ಯಾವುವು ಎಂದು ಅಂದಾಜಿಸಲು ಉತ್ಸಾಹಿ ಸ್ವಯಂಸೇವಕರನ್ನು ಬಳಸಬೇಕಿದೆ. ಅಂತರ್ಜಾಲ ಮೂಲಕ ಚಿತ್ರಗಳನ್ನು ಪಡೆದು, ತಮ್ಮ ಅನಿಸಿಕೆಯನ್ನು ತಿಳಿಸುವವರಿಗಾಗಿ ಇಂಗ್ಲೆಂಡಿನ ಪೋರ್ಟ್‍ಮೌತ್ ವಿಶ್ವವಿದ್ಯಾಲಯದ ಖಗೋಳಶಾಸ್ತಜ್ಞರು ಹುಡುಕುತ್ತಿದ್ದಾರೆ. ಇದೀಗಲೇ ಇಪ್ಪತ್ತು ಸಾವಿರ ಜನ ಇದರಲ್ಲಿ ಪಾಲ್ಗೊಂಡಿದ್ದಾರೆ. ಸಮಸ್ಯೆಯೆಂದರೆ ಸುಮಾರು ಒಂದು ದಶಲಕ್ಷ ಚಿತ್ರಗಳಿವೆ. ಈ ಚಿತ್ರಗಳು ಮೆಕ್ಸಿಕೋದ ದೂರದರ್ಶಕದಿಂದ ತೆಗೆಯಲಾದುವು.
*ಅಶೋಕ್‍ಕುಮಾರ್ ಎ

Monday, July 09, 2007

ಸರೋವರ ಮಾಯವಾಯಿತು!



ದಕ್ಷಿಣ ಅಮೆರಿಕಾದ ಚಿಲಿಯಲ್ಲಿ ಸರೋವರದ ನೀರು ಖಾಲಿಯಾದುದನ್ನು ಜನ ಗಮನಿಸಿದರು.ಈ ಸಂಗತಿ ಗಮನಕ್ಕೆ ಬಂದುದು ಮೇ ತಿಂಗಳಲ್ಲಿ. ಇದಕ್ಕೆ ಕಾರಣವೇನು ಎಂದು ತಜ್ಞರು ತಲೆ ಕೆಡಿಸಿಕೊಳ್ಳುತ್ತಿದ್ದರು. ಕೊನೆಗೂ ಅದರ ಹಿಂದಿನ ಕಾರಣ ಪತ್ತೆಯಾಗಿದೆ. ಸರೋವರದ ನೀರು ಸರೋವರದಿಂದ ಇಳಿದು ಹೋಗದಂತೆ ತಡೆಯುತಿದ್ದ ಹಿಮಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿತಂತೆ. ಈ ಕಾರಣದಿಂದ, ಸರೋವರದ ನೀರು, ಸಮೀಪದ ಸಮುದ್ರ ಸೇರಿ, ಸರೋವರ ಖಾಲಿಯಾಯಿತು ಎನ್ನುವುದು ಈಗ ಸಿದ್ಧವಾಗಿದೆ.ಸರೋವರದ ಸಮೀಪ ಇರುವ ಹಿಮರಾಶಿ,ಸರೋವರದ ಜಲಮೂಲವಂತೆ. ಈಗ ಈ ಹಿಮರಾಶಿ ಕರಗಿ,ಸರೋವರ ಮತ್ತೆ ತುಂಬಿ ಕೊಳ್ಳುತ್ತಿದೆ. ಸರೋವರ ಹತ್ತು-ಹನ್ನೆರಡು ಎಕರೆ ವಿಸ್ತೀರ್ಣಕ್ಕೆ ಹಬ್ಬಿಕೊಂಡಿದೆ. ಭೂಮಿಯ ವಾತಾವರಣ ಬಿಸಿಯೇರುತ್ತಿರುವುದು, ಸರೋವರದ ಹಿಮಗೋಡೆ ಕರಗಲು ಕಾರಣವಾಗಿರಬಹುದು, ಎನ್ನುವುದು ತಜ್ಞರ ಗುಮಾನಿ.

ಜನ ಕಾಯುತ್ತಿರುವೆಡೆ ಬಸ್ ಟ್ರಿಪ್ ಏರ್ಪಡಿಸಲು ಮೊಬೈಲ್ ಸಾಧನ ಬಳಕೆ
ನಗರಗಳಲ್ಲಿ ಕೆಲ ಪ್ರದೇಶಗಳಲ್ಲಿ ಅಸಾಧ್ಯ ಜನಸಂದಣಿ ಏರ್ಪಟ್ಟು, ಅಲ್ಲಿ ಜನರು ಸಾರಿಗೆ ವ್ಯವಸ್ಥೆ ಸಿಗದೆ ಪೇಚಾಡುವ ಪರಿಸ್ಥಿತಿ ಬರುತ್ತದೆ. ಆಗ ಅ ಕಡೆ ಹೆಚ್ಚು ಬಸ್ ಟ್ರಿಪ್‍ಗಳನ್ನು ಏರ್ಪಡಿಸಿದರೆ, ಜನರಿಗೆ ಅನುಕೂಲ ತಾನೇ? ಇಂತಹ ಸಂಚಾರ ವ್ಯವಸ್ಥೆ ಜಾರಿಗೆ ತಂದರೆ, ಬಸ್‍ಗಳು ನಿಗದಿತ ವೇಳಾ ಪಟ್ಟಿಯ ಅನುಸಾರವೇ ಓಡಾಡಬೇಕಿಲ್ಲ. ಇಂತಹ ಸಾರಿಗೆ ನಿಯಂತ್ರಣಕ್ಕೆ ಮೊಬೈಲ್ ಫೋನ್‍ಗಳನ್ನು ಬಳಸುವುದು ಪ್ರಖ್ಯಾತ ಮಸಾಚುಸೆಟ್ ವಿಶ್ವವಿದ್ಯಾಲಯದ ಸಂಶೋಧಕರ ಗುರಿ.ಮೊಬೈಲ್ ಸೇವೆ ನೀಡುವ ಕಂಪೆನಿಗಳ ಮೂಲಕ ಮೊಬೈಲ್ ಹೊಂದಿರುವ ಜನರು ನಗರದ ಯಾವ ಪ್ರದೇಶಗಳಲ್ಲಿ ಎಷ್ಟು ಸಾಂದ್ರವಾಗಿದ್ದಾರೆ ಎಂದು ತಿಳಿಯಲು ಸಾಧ್ಯ. ಈ ಮಾಹಿತಿಯನ್ನು ವಿಶ್ಲೇಷಿಸಿದರೆ, ಎಲ್ಲಿ ಜನಸಂದಣಿ ಹೆಚ್ಚಿದೆ ಎಂದರಿಯಬಹುದು.ಈ ಮಾಹಿತಿಯನ್ನು ಬಳಸಿಕೊಂಡು ಇಂತಹ ಸೇವೆ ನೀಡಬಹುದು.
ಇಟೆಲಿಯಲ್ಲಿ ಈ ರೀತಿಯ ಪ್ರಯೋಗ ಮೊದಲಾಗಿ ನಡೆಯಬಹುದು.ಅಟಾಕ್ ಎನ್ನುವ ಇಟೆಲಿ ಕಂಪೆನಿ ಇದೀಗಲೇ ಅಂತರ್ಜಾಲ ಮೂಲಕ ಟ್ರ್‍ಆಫಿಕ್ ಜಾಮ್ ಬಗ್ಗೆ ಜನರಿಗೆ ತಿಳಿಸುತ್ತಿದೆ. ಅದರೆ ಈ ಮಾಹಿತಿ ಮುಖ್ಯ ರಸ್ತೆಗಳಿಗೆ ಮಾತ್ರಾ ಸೀಮಿತವಾಗಿದೆ. ಎಮ್ ಐ ಟಿಯ ಸಂಶೋಧನೆ ಬಳಸಿಕೊಂಡು ನಗರದ ಸಣ್ಣ ರಸ್ತೆಗಳ ಬಗ್ಗೆಯೂ ಮಾಹಿತಿ ಒದಗಿಸುವುದು ಕಂಪೆನಿಯ ಯೋಜನೆ. ಅದು ನೀಡುವ ಇನ್ನೊಂದು ಸೇವೆ ಮೊಬೈಲ್ ಮೂಲಕ ಲಭ್ಯವಿದೆ. ಈ ಸೇವೆಯೆಂದರೆ,ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಬಸ್‍ಗಳು ವ್ಯಕ್ತಿ ಕಾಯುತ್ತಿರುವೆಡೆ ಯಾವ ವೇಳೆಗೆ ಬರಲಿದೆ ಎನ್ನುವುದನ್ನು ತಿಳಿಸುವ ವ್ಯವಸ್ಥೆ. ಬಸ್‍ಗೆ ಅಳವಡಿಸಿರುವ ಅದಿರುವ ಜಾಗ ತಿಳಿಸುವ ಜಿ ಪಿ ಎಸ್ ವ್ಯವಸ್ಥೆಯನ್ನಿದು ಬಳಸುತ್ತದೆ.

ಏರುತ್ತಿರುವ ವಿದ್ಯುತ್ ಬೇಡಿಕೆಗೆ ಕಾರಣವೇನು?
ಮನೆ ಮತ್ತು ಕಚೇರಿಗಳಲ್ಲಿ ವಿದ್ಯುತ್ ಬೇಡಿಕೆ ಇತ್ತೀಚಿನ ದಿನಗಳಲ್ಲಿ ಒಂದೇ ಸವನೆ ಏರುತ್ತಿದೆ. ಇದರ ಹಿಂದೆ ಇಲೆಕ್ಟ್ರಾನಿಕ್ ಸಾಧನ ಸಲಕರಣೆಗಳ ಪಾತ್ರ ಹೆಚ್ಚಿನದು. ಈಗ ಮನೆಗಳಲ್ಲೂ ಕಂಪ್ಯೂಟರ್ ಬಳಕೆ ಸಾಮಾನ್ಯವಾಗಿ ಬಿಟ್ಟಿದೆ. ಕಚೇರಿಗಳಲ್ಲಂತೂ, ಕಂಪ್ಯೂಟರ್ ಜಾಲವೇರ್ಪಡಿಸಿ, ಹತ್ತಾರು ಕಂಪ್ಯೂಟರುಗಳನ್ನು ಜಾಲಕ್ಕೆ ಜೋಡಿಸಿರುತ್ತಾರೆ. ಕಂಪ್ಯೂಟರುಗಳನ್ನು ಬಂದು ಮಾಡಿ ಇಡುವ ಸಂಪ್ರದಾಯವೇ ಇಲ್ಲಿಲ್ಲ. ಅಗತ್ಯವಿರಲಿ ಇಲ್ಲದಿರಲಿ, ಕಂಪ್ಯೂಟರುಗಳು ಚಾಲೂ ಇರುತ್ತವೆ. ಮನೆಯ ಟಿವಿಗಳೂ ಚಪ್ಪಟೆ ತೆರೆಯವಾದರೆ, ಹಳೆಯ ಟಿವಿಗಳಿಗಿಂತ ಹೆಚ್ಚು ವಿದುಚ್ಛಕ್ತಿ ಬಳಸುತ್ತವೆ.ಇವುಗಳನ್ನು ಸ್ಟಾಂಡ್‍ಬೈ ರೀತಿಯಲ್ಲಿ ಇಟ್ಟು ಬಳಸುವುದೇ ಈಗಿನ ಪದ್ಢತಿ. ಓಂದು ಮನೆಯಲ್ಲಿ ಒಂದಕ್ಕಿಂತ ಹೆಚ್ಚಿನ ಟಿವಿಗಳ ಬಳಕೆಯೂ ಆಗುತ್ತಿವೆ. ದೊಡ್ದ ತೆರೆಯ ಟಿವಿಗಳಂತೂ ಬಕಾಸುರ ಹಸಿವಿನವು!ಇವುಗಳ ಜತೆ ಮೋಡೆಮ್,ಸೆಟ್ ಟಾಪ್ ಬಾಕ್ಸ್‍ಗಳು,ಬಟ್ಟೆ ಒಗೆಯುವ ಯಂತ್ರಗಳು, ಫ್ರಿಜ್‍ಗಳು ಇವುಗಳ ಬಳಕೆ ಹೆಚ್ಚುತ್ತಿದ್ದು, ವಿದ್ಯುತ್ ಬೇಡಿಕೆ ಎರಲು ಕಾರಣವಾಗಿವೆ.
ತಂತ್ರಜ್ಞಾನದಲ್ಲಿ ಆಗಿರುವ ಪ್ರಗತಿಯಿಂದ ಸಾಧನಗಳ ದಕ್ಷತೆ ಹೆಚ್ಚಿದ ಕಾರಣ ವಿದ್ಯುತ್ ಬಳಕೆ ಕಡಿಮೆಯಾಗಬೇಕಲ್ಲಾ ಎಂದು ನಿಮಗೆ ಸಂಶಯ ಬರಬಹುದು. ಸಾಧನಗಳ ದಕ್ಷತೆ ಹೆಚ್ಚುತ್ತಿರುವುದು ಹೌದಾದರೂ, ಅವುಗಳು ವಿಶಿಷ್ಟ ಸೌಲಭ್ಯಗಳನ್ನು ನೀಡುವ ಕಾರಣ ಅವುಗಳ ವಿದ್ಯುತ್ ಬೇಡಿಕೆ ಹೆಚ್ಚುತ್ತದೆ. ಉದಾಹರಣೆಗೆ ಟಿವಿ ತೆರೆಯನ್ನೆ ತೆಗೆದುಕೊಳ್ಳಿ. ದೊಡ್ದ ತೆರೆ, ಪ್ರಕಾಶಮಾನವಾದ ಚಿತ್ರಗಳು,ಅತ್ಯುತ್ತಮ ಮಟ್ಟದ ಧ್ವನಿ ವ್ಯವಸ್ಥೆ ಇವೆಲ್ಲಾ ಹೆಚ್ಚಿನ ಶಕ್ತಿಯ ಬಳಕೆಗೆ ಕಾರಣವಾಗುತ್ತವೆ.ಬೇರೆಲ್ಲಾ ಸಾಧನಗಳು ಹಾಗಿರಲಿ, ಹೊಸ ನಮೂನೆಯ ಡಿಜಿಟಲ್ ರೇಡಿಯೋ ಸೆಟ್‍ಗಳು ಹಳೆಯ ರೇಡಿಯೋಗಳಿಗಿಂತ ನಾಲ್ಕು ಪಟ್ಟು ವಿದ್ಯುತ್ ಬಳಸುತ್ತವೆ. ಅಗತ್ಯವಿಲ್ಲದಿರುವಾಗಲಾದರೂ ಸಾಧನಗಳಿಗೆ ವಿದ್ಯುತ್ ಸಂಪರ್ಕ ನಿಲ್ಲಿಸಿದರೇ ಎಷ್ಟೋ ಮಟ್ಟಿನ ಉಳಿತಾಯ ಸಾಧ್ಯ.

ಡಿಜಿಟಲ್ ಮಾಹಿತಿಯು ಅಮರವೇ?
ಪುಸ್ತಕವನ್ನು ಬಹಲ ಕಾಲ ರಕ್ಷಿಸುವುದು ಕಷ್ಟವೇ. ಆದರೆ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ಇರಿಸಿದರೆ ನಮಗೆ ಬೇಕಾದಾಗ ಅವನ್ನು ಪಡೆಯಬಹುದು ಎಂದು ಅಂದು ಕೊಂಡರೆ ಅದು ನಿಜವಲ್ಲ. ಕಂಪ್ಯೂಟರೀಕರಣಗೊಳಿಸಿದ ಮಾಹಿತಿಯಲ್ಲಿ ಎರಡು ವಿಧದ ಸಮಸ್ಯೆಯಿದೆ. ಮೊದಲನೆಯದು ಅದನ್ನು ಉಳಿಸಲು ಬಳಸಿದ ಮಾಧ್ಯಮದ್ದು. ಎರಡನೆಯದು ಅದನ್ನು ಕಂಪ್ಯೂಟರಿನಲ್ಲಿ ತೋರಿಸಲು ಬಳಕೆಯಾಗುವ ತಂತ್ರಾಂಶದ್ದು.
ಬ್ರಿಟಿಶ್ ಗ್ರಂಥಾಲಯದ ಬಳಿ ಒಂಭೈನೂರು ವರ್ಷ ಹಳೆಯ ಗ್ರಂಥಗಳಿವೆ. ಅವುಗಳ ಗಣಕೀಕರಣದ ನಂತರ ಸುಮಾರು ಆರು ನೂರು ಟೆರಾಬೈಟುಗಳಷ್ಟು ಮಾಹಿತಿಯೂ ಅಲ್ಲಿದೆ. ಇವನ್ನು ಉಳಿಸಲು ಮೊದಲಿಗೆ ಫ್ಲಾಪಿಯಂತಹ ಮಾಧ್ಯಮ ಬಳಕೆಯಾಗುತ್ತಿದ್ದರೆ,ಸದ್ಯ ಡಿವಿಡಿಯಂತಹ ಮಾಧ್ಯಮ ಬಳಕೆಯಾಗುತ್ತಿದೆ. ಈಗಿನ ಕಂಪ್ಯೂಟರುಗಳಲ್ಲಿ ಫ್ಲಾಪಿ ಡ್ರೈವ್‍ಗಳೇ ಇಲ್ಲ. ಇದು ಸಮಸ್ಯೆ ತಂದೊಡ್ಡುತ್ತಿದೆಯಾದರೂ, ಅದನ್ನು ಗ್ರಂಥಾಲಯವು ಸಮರ್ಥವಾಗಿಯೇ ಎದುರಿಸಿದೆ.
ತಂತ್ರಾಂಶದ ಸಮಸ್ಯೆ ಗ್ರಂಥಾಲಯಕ್ಕೆ ತಲೆನೋವಾಗಿದೆಯಂತೆ. ಮೊದಲಲ್ಲಿ ಬಳಕೆಯಾಗುತ್ತಿದ್ದ ಕಂಪ್ಯೂಟರ್ ಕಾರ್ಯನಿರ್ವಹಣಾ ತಂತ್ರಾಂಶವಾಗಲೀ,ಕಡತಗಳನ್ನು ಕಂಪ್ಯೂಟರುಗಳಲ್ಲಿ ಉಳಿಸಿದ ತಂತ್ರಾಂಶಗಳಾಗಲೀ ಈಗ ಬಳಕೆಯಲ್ಲಿಲ್ಲ. ಉದಾಹರಣೆಗೆ ವಿಂಡೋಸ್-95 ವ್ಯವಸ್ಥೆಯಲ್ಲಿ ಆಫೀಸ್-97 ತಂತ್ರಾಂಶ ಬಳಕೆಯಾಗುತ್ತಿತ್ತು.ಈಗಿನ ವಿಸ್ಟಾದಲ್ಲಿ ಆಫೀಸ್ ತಂತ್ರಾಂಶ ಕಡತಗಳನ್ನು ಉಳಿಸುವ ಬಗೆಯೇ ಬೇರೆ. ಈಗಿನ ಆಫೀಸ್ ತಂತ್ರಾಂಶ ಹಳೆಯ ಆಫೀಸ್ ಕಡತಗಳನ್ನು ತೆರೆಯಲಾರದು!
ಈಗ ಬ್ರಿಟಿಶ್ ಗ್ರಂಥಾಲಯ ಮೈಕ್ರೋಸಾಫ್ಟಿಗೆ ಶರಣು ಹೋಗಿದೆ. ಕಂಪೆನಿಯೊಂದಿಗೆ ಒಡಂಬಡಿಕೆಗೆ ಸಹಿ ಹಾಕಿ, ಹೊಸ ವ್ಯವಸ್ಥೆಯಲ್ಲಿ ಹಳೆಯ ಕಡತಗಳನ್ನು ತೆರೆಯುವ ತಂತ್ರಾಂಶವನ್ನು ಸಿದ್ಧಪಡಿಸಲು ಹೇಳಿದೆ. ಅಂತೂ ಮೈಕ್ರೋಸಾಫ್ಟ್ ಕಂಪೆನಿ ಬಯಸಿದ್ದೂ ಹಾಲು..ಸಿಕ್ಕಿದ್ದೂ ಹಾಲು!
*ಅಶೋಕ್‍ಕುಮಾರ್ ಎ

Monday, July 02, 2007

ಎ ಟಿ ಎಂ ಯಂತ್ರಕ್ಕೀಗ ನಲುವತ್ತು ವರ್ಷ



ಜಗತ್ತಿನ ಮೊದಲ ಎ ಟಿ ಎಂ ಯಂತ್ರ ಸ್ಥಾಪನೆಯಾದುದು ಲಂಡನ್ ಸಮೀಪದ ಬ್ಯಾಂಕ್ ಶಾಖೆಯಲ್ಲಿ. ಅದು ನಲುವತ್ತು ವರ್ಷ ಮೊದಲು. ಆಗ ಎ ಟಿ ಎಂ ಕಾರ್ಡುಗಳೆಂಬ ಪ್ಲಾಸ್ಟಿಕ್ ಕಾರ್ಡುಗಳಿರಲಿಲ್ಲ. ವಿಕಿರಣಶಾಲಿ ಇಂಗಾಲದ ರೂಪ ಇಂಗಾಲ-14 ಸವರಿದ ಚೆಕ್ ಹಾಳೆಯನ್ನು ಬಳಸಬೇಕಿತ್ತು.ಪಿನ್ ಸಂಖ್ಯೆಯನ್ನು ತಾಳೆ ಮಾಡಿದ ನಂತರ ಹಣ ಕೊಡುವ ವ್ಯವಸ್ಥೆ ಆಗಲೇ ಜಾರಿಗೆ ಬಂದಿತ್ತು. ಚೆಕ್ ಒಂದಕ್ಕೆ ಹತ್ತು ಪೌಂಡ್ ಯಂತ್ರ ನೀಡುತ್ತಿದ್ದ ಗರಿಷ್ಠ ಹಣವಾಗಿತ್ತು.
ಎ ಟಿ ಎಂ ಯಂತ್ರದ ಸಂಶೋಧಕ ಶೆಪರ್ಡ್ ಬ್ಯಾರನ್ ಈಗ ಎಂಭತ್ತೆರಡು ವರ್ಷದ ಅಜ್ಜ.ಆರ್ಕಿಮಿಡೀಸ್ ಸ್ನಾನ ಮಾಡುತ್ತಿದ್ದಾಗ ಆತನ ಸಮಸ್ಯೆಗೆ ಪರಿಹಾರ ಹೊಳೆದು ಯುರೇಕಾ ಎಂದು ಕೂಗುತ್ತಾ ಸ್ನಾನದ ತೊಟ್ಟಿಯಿಂದ ಹೊರ ಬಂದ ಕತೆ ನಿಮಗೆ ಗೊತ್ತಿದೆ. ಶೆಪರ್ಡ್‍ಗೆ ಕೂಡಾ ಎ ಟಿ ಎಂ ಯಂತ್ರದ ಆಲೋಚನೆ ಹೊಳೆದುದು, ಅತನು ಸ್ನಾನ ಮಾಡುತ್ತಿದ್ದಾಗಲೇ!ಆಗ ಅಲ್ಲಲ್ಲಿ ಕೆಲಸ ಮಾದುತ್ತಿದ್ದ ಚಾಕಲೇಟ್ ಮಾರಾಟ ಮಾಡುತ್ತಿದ್ದ ಯಂತ್ರವೇ ಇದಕ್ಕೆ ಸ್ಪೂರ್ತಿ.
ವಿಕಿರಣಶೀಲ ಚೆಕ್ ಬಳಕೆ ಎ ಟಿ ಎಂ ಯಂತ್ರದ ಉಪಯೋಗ ಆರೋಗ್ಯಕ್ಕೆ ಒಳಿತಲ್ಲ ಎನ್ನುವ ವದಂತಿಗೆ ಕಾರಣವಾಯಿತು.ಮೊದಲಿನ ಯಂತ್ರವನ್ನು ದರೋಡೆಕೋರರು ಸೂರೆ ಮಾಡಿದರಂತೆ. ಒಂದು ಯಂತ್ರ ತಪ್ಪಾಗಿ ಪ್ರತಿಕ್ರಿಯೆ ನೀಡಿ ತಲೆನೋವು ಉಂಟು ಮಾಡಿತ್ತು. ಪರಿಶೀಲಿಸಿದಾಗ ಆ ಯಂತ್ರ ತಪ್ಪೆಸಗಲು ಅದರ ಪಕ್ಕದಲ್ಲಿ ಸಾಗುತ್ತಿದ್ದ ಟ್ರಾಮ್ ಯಂತ್ರದ ತಂತಿಗಳು ಎನ್ನುವುದು ಗೊತ್ತಾಯಿತು. ಮೊದಲಿಗೆ ಶೆಪರ್ಡ್ ಆರು ಅಂಕಿ ಪಿನ್ ಉಪಯೋಗಿಸುವ ಆಲೋಚನೆಯಲಿದ್ದ. ನಂತರ ಹೆಂಡತಿಯ ಅಭಿಪ್ರಾಯ ಕೇಳಿದಾಗ ನಾಲ್ಕಕ್ಕಿಂತ ಹೆಚ್ಚಿನ ಅಂಕಿಗಳನ್ನು ನೆನಪಿನಲ್ಲಿಡುವುದು ತನ್ನ ಸಾಮರ್ಥ್ಯಕ್ಕೆ ಮೀರಿದ್ದು ಎನ್ನುವ ಅವಳ ನೇರ ನುಡಿ, ನಾಲ್ಕಂಕಿ ಪಿನ್ ಸಂಖ್ಯೆ ಬಳಸಲು ಕಾರಣವಾಯಿತು.ಆಶ್ಚರ್ಯವೆಂದರೆ ಈಗಲೂ ನಾಲ್ಕಂಕಿ ಪಿನ್ ಸಂಖ್ಯೆಯೇ ಉಳಿದಿದೆ.
ಎ ಟಿ ಎಮ್ ಯಂತ್ರದ ಭವಿಷ್ಯದ ಬಗ್ಗೆ ಕೇಳಿದಾಗ ಶೆಪರ್ಡ್ ಅದು ಇನ್ನು ಹೆಚ್ಚು ಕಾಲ ಉಳಿಯುವ ಭರವಸೆ ಇಲ್ಲವೆನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು. ಸೆಲ್ ಪೋನಿನ ಮೂಲಕ ಹಣ ಪಾವತಿಸುವ ವ್ಯವಸ್ಥೆ ಈಗ ಲಭ್ಯವಿರುವುದರಿಂದ ಮುಂದಿನ ದಿನಗಳಲ್ಲಿ, ಎಲ್ಲಾ ಹಣಕಾಸಿನ ವ್ಯವಹಾರದ ಪಾವತಿಯೂ ಅದರ ಮೂಲಕವೇ ಆಗಬಹುದು ಎನ್ನುವುದು ಅವರ ಅಭಿಪ್ರಾಯ. ನೋಟನ್ನು ಒಂದೆಡೆಯಿಂದ ಇನ್ನೊಂದೆಡೆ ಕೊಂಡೊಯ್ಯುವುದು
ಅಪಾಯಕಾರಿ. ಹೀಗಿರುವಾಗ ಅವನ್ನು ಯಾಕಾಗಿ ಅವಲಂಬಿಸಬೇಕು ಎನ್ನುವುದು ಯೋಚಿಸಬೇಕಾದ ಪ್ರಶ್ನೆಯೇ.
ಸುರಕ್ಷಿತ ವಿಮಾನಯಾನಕ್ಕೆ ಹೊಸ ವ್ಯವಸ್ಥೆ
ವಿಮಾನಯಾನಗಳು ಹೆಚ್ಚಿದಂತೆ,ಸಮಯ ಪರಿಪಾಲನೆ ಕಷ್ಟವಾಗುತ್ತಿದೆ ಎನ್ನುವುದು ಅಮೆರಿಕಾದಂತಹ ಅನುಭವ. ಇದಕ್ಕೆ ಮುಖ್ಯ ಕಾರಣ ವಿಮಾನಗಳ ನಿಯಂತ್ರಣಕ್ಕೆ ರಾಡಾರ್ ಸಾಧನಗಳ ಬಳಕೆ. ವಿಮಾನ ರಾಡಾರ್ ಕೇಂದ್ರದಿಂದ ಸಮೀಪವಿದ್ದರೆ, ವಿಮಾನಗಳ ಸ್ಥಾನದ ಬಗ್ಗೆ ರಾಡಾರ್‌ಗಳು ನಿಖರವಾಗಿ ಮಾಹಿತಿ ನೀಡುತ್ತವೆ. ಆದರೆ ವಿಮಾನಗಳು ರಾಡಾರ್ ಆಂಟೆನಾದಿಂದ ದೂರ ಸರಿದಂತೆ ಅವುಗಳ ಸ್ಥಾನದ ಬಗ್ಗೆ ನಿಯಂತ್ರಣ ಕಕ್ಷೆ ಅಥವಾ ಇತರ ವಿಮಾನಗಳವರಿಗೆ ಸಿಗುವ ಮಾಹಿತಿ ಅಸ್ಪಷ್ಟವಾಗಿರುತ್ತದೆ. ಹಾಗಾಗಿ ಒಂದೇ ಎತ್ತರದಲ್ಲಿ ಹಾರಾಡುತ್ತಿರುವ ವಿಮಾನಗಳು ರಾಡಾರ್ ಸಮೀಪ ಇರುವಾಗ ಪರಸ್ಪರ ಐದು ಕಿಲೋಮೀಟರ್ ಅಂತರ ಕಾಯ್ದುಕೊಂಡರೆ, ದೂರದಲ್ಲಿರುವಾಗ ಇಪ್ಪತ್ತು ಕಿಲೋಮೀಟರ್ ಅಂತರ ಹೊಂದಿರಬೇಕು. ವೇಗ ಹೆಚ್ಚಿದಂತೆ ರಾಡಾರ್‌ಗಳು ನೀಡುವ ಮಾಹಿತಿ ನಂಬಲರ್ಹವಲ್ಲ. ಹೀಗಾಗಿ ವಿಮಾನಗಳ ಹಾರಾಟ ನಿಧಾನವಾಗಿ,ಸಮಯ ಪರಿಪಾಲನೆ ಕಷ್ಟವಾಗುತ್ತದೆ.
ಹೊಸ ವ್ಯವಸ್ಥೆ ಎಡಿಎಸ್-ಬಿಯಲ್ಲಿ ಕೃತಕ ಉಪಗ್ರಹಗಳನ್ನು ಬಳಸಲಾಗುತ್ತದೆ. ಜಿ ಪಿ ಎಸ್ ಉಪಗ್ರಹ ವ್ಯವಸ್ಥೆ ಬಳಸಿ, ಪ್ರತಿ ವಿಮಾನವೂ ತನ್ನ ಸ್ಥಾನವನ್ನು ಬಹಳ ನಿಖರವಾಗಿ ಲೆಕ್ಕ ಹಾಕಿ, ಅದನ್ನು ಬಳಸಿ,ವಿಮಾನ ಹಾರುತ್ತಿರುವ ವಾಯುಮಂಡಲದ ಚಿತ್ರವನ್ನು ರಚಿಸುತ್ತದೆ.ಇದನ್ನು ದೂರಸಂಪರ್ಕ ಉಪಗ್ರಹದ ಮೂಲಕ ಇತರ ವಿಮನಗಳಿಗೂ ತಲುಪಿಸುತ್ತವೆ. ಹೀಗಾಗಿ ವಿಮಾನಗಳ ಪೈಲಟ್‌ಗಳು ತಮ್ಮ ಅಂತರವನ್ನು ಅಗತ್ಯವಿರುವಷ್ಟೇ ಕಾಯ್ದುಕೊಂಡು,ಹಾರಾಟ ನಡೆಸಲು ಸಾಧ್ಯವಾಗುತ್ತದೆ.
ಅಲಾಸ್ಕದಂತಹ ಅಧಿಕ ಅಪಘಾತ ವಲಯದಲ್ಲೂ ಹೊಸ ವ್ಯವಸ್ಥೆ ಉತ್ತಮ ಫಲಿತಾಂಶ ನೀಡಿದೆ.ಸಾಗರದಲ್ಲಿಹಾರಾಡುವ ವಿಮಾನಗಳು ರಾಡಾರ್ ಪಥದಲ್ಲಿ ಬರುವುದಿಲ್ಲವಾದರೂ ,ಎಡಿಎಸ್-ಬಿ ವ್ಯವಸ್ಥೆ ಅಲ್ಲೂ ಲಭ್ಯವಿರುತ್ತದೆ.
ಇದರ ಜತೆ ಇನ್‌ಫ್ರಾರೆಡ್ ಚಿತ್ರದ ಮೂಲಕ ರಾತ್ರಿಯ ವೇಳೆ ಮತ್ತು ಮೋಡ ಮುಸುಕಿದ ಆಗಸವಿದ್ದಾಗಲೂ,ರನ್‍ವೇಯ ನೋಟವನ್ನು ಪೈಲಟ್ ಪಡೆಯಲು ಅನುವಾಗಿಸುವ ವ್ಯವಸ್ಥೆಗಳು ಈಗ ಲಭ್ಯ.
ಅಂತರ್ಜಾಲದಲ್ಲಿ ಹೊಸ ನೀತಿ?
ಮೊದಲಿಗೆ ಸೆಲ್ ಫೋನ್ ವ್ಯವಸ್ಥೆಯಲ್ಲಿ ಕರೆ ಮಾಡುವವನೂ, ಕರೆ ಸ್ವೀಕರಿಸಿದವನೂ ಕರೆಗೆ ದರ ಪಾವತಿಸುವ ವ್ಯವಸ್ಥೆ ಇತ್ತು ತಾನೇ? ಇಂತಹದೇ ಮಾದರಿ ಅಂತರ್ಜಾಲದಲ್ಲೂ ಬರಲಿದೆಯೇ? ಸದ್ಯ ಬ್ರಾಡ್‍ಬ್ಯಾಂಡ್ ಸೇವೆಗೆ ಗ್ರಾಹಕ ಮಾತ್ರಾ ಹಣ ಪಾವತಿಸುತ್ತಾನೆ. ಈಗ ಸೇವೆ ಪೂರೈಕೆದಾರರು ಹೊಸ ಪ್ರಸ್ತಾವವನ್ನು ವೆಬ್‍ಸೈಟುಗಳ ಸಂಚಾಲಕರಲ್ಲಿ ಇಡುವ ಯೋಚನೆಯಲ್ಲಿದ್ದಾರೆ.ಅದರ ಪ್ರಕಾರ ವೆಬ್‍ಸೈಟುಗಳು ಗ್ರಾಹಕನ ಕಂಪ್ಯೂಟರಿನಲ್ಲಿ ಬೇಗ ಕಾಣಿಸಿಕೊಳ್ಳ ಬೇಕಿದ್ದರೆ,ಅವೂ ಸೇವಾ ಪೂರೈಕೆದಾರರಿಗೆ ಹಣ ಪಾವತಿಸಬೇಕು.ಹಣ ಪಾವತಿಸದ ವೆಬ್‍ಸೈಟುಗಳು ಕಡಿಮೆ ಬ್ಯಾಂಡ್‍ವಿಡ್ತ್ ಪಡೆಯುವ ಕಾರಣ ಗ್ರಾಹಕನ ಕಂಪ್ಯೂಟರಿನಲ್ಲಿ ಕಾಣಿಸಿಕೊಳ್ಳುವುದು ನಿಧಾನವಾಗುತ್ತದೆ.
ಭೂಕಂಪ ಮುನ್ಸೂಚನೆ ನೀಡುವ ಸಾಧನ
ಜಪಾನ್ ಭೂಕಂಪ ಪೀಡಿತ ದೇಶ. ಜಗತ್ತಿನ ಭೂಕಂಪಗಳ ಪೈಕಿ ಐದನೇ ಒಂದು ಭಾಗ ಭೂಕಂಪಗಳು ಸಂಭವಿಸುವುದು ಇಲ್ಲೇ. ಭೂಕಂಪ ಸಂಭವಿಸುವ ತುಸು ಮುನ್ನ ಅದರ ಬಗ್ಗೆ ಮುನ್ಸೂಚನೆ ಸಿಕ್ಕಿದರೆ, ಜೀವ ಹಾನಿಯನ್ನು ತಡೆಯುವುದು ಸಾಧ್ಯ. ಈಗ ಜಪಾನಿನ ಹವಾಮಾನ ಇಲಾಖೆ ಭೂಕಂಪ ಮುನ್ಸೂಚನೆಯನ್ನು ಕೆಲವು ಸೆಕೆಂಡು ಮುನ್ನವೇ ನೀಡುವ ತಂತ್ರಜ್ಞಾನ ಹೊಂದಿದೆ. ಇದನ್ನು ಟಿವಿ,ಸೆಲ್‍ಫೋನ್ ಮೂಲಕ ಜನರಿಗೆ ತಲುಪಿಸುವ ವ್ಯವಸ್ಥೆ ಇದೆ. ಅದರೆ ಆ ಸಮಯದಲ್ಲಿ ಟಿವಿಯನ್ನು ನೋಡದವರಿಗೆ ಎಚ್ಚರಿಕೆ ತಲುಪುವುದಿಲ್ಲ.ಈಗ ಬಂದಿರುವ ಸಾಧನ ಕಾದಂಬರಿ ಪುಸ್ತಕದ ಗಾತ್ರದ್ದು. ಇದು ಹವಾಮಾನ ಇಲಾಖೆಯ ಜಾಲಕ್ಕೆ ಸಂಪರ್ಕ ಹೊಂದಿದ್ದು, ಭೂಕಂಪ ಮುನ್ಸೂಚನೆಯನ್ನು ಪಡೆದು ಅಲಾರ್ಮ್ ನೀಡುತ್ತದೆ.ಅಲಾರ್ಮ್ ಮೊಳಗಿದ ಕೂಡಲೇ ಜನರು ವಿದ್ಯುತ್ ಸಂಪರ್ಕ ನಿಲ್ಲಿಸಲು, ಗ್ಯಾಸ್ ಬಂದ್ ಮಾಡಲು ಮತ್ತು ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆಯಲು ತೊಡಗಬೇಕು.
*ಅಶೋಕ್ ಕುಮಾರ್ ಎ
 
googledc7e93ba1a7703ae.html