Tuesday, August 21, 2007

ಕಾಗದದ ಬ್ಯಾಟರಿ

ಕಿರುಗಾತ್ರದ ಸಾಧನಗಳಿಗೆ ಕಿರುಗಾತ್ರದ, ಆದರೆ ಭೀಮಬಲದ ಬ್ಯಾಟರಿ ತಯಾರಿಸುವ ಪ್ರಯತ್ನಗಳು ವಿಶ್ವದಾದ್ಯಂತ ನಡೆದಿದೆ.ನ್ಯೂಯಾರ್ಕಿನ ರೆನ್ಸೆಲರ್ ಪಾಲಿಟೆಕ್ನಿಕ್‍ನ ಸಂಶೋಧಕರು ಸುರುಳಿ ಸುತ್ತಬಲ್ಲ,ಮಡಚಬಲ್ಲ ಬ್ಯಾಟರಿಯನ್ನು ಸಂಶೋಧಿಸಿದ್ದಾರೆ.ಅದನ್ನವರು ಸೆಲ್ಯುಲೋಸ್ ಅಂಶದಿಂದ ತಯಾರಿಸಿದ್ದಾರೆ.ಸೆಲ್ಯುಲೋಸ್ ಕಾಗದದಲ್ಲೂ ಇದೆ. ಹಾಗಾಗಿ ಬ್ಯಾಟರಿಯನ್ನೂ ಕಾಗದದಿಂದ ತಯಾರಾದದ್ದು ಎಂದರೆ ತಪ್ಪಿಲ್ಲ.ಇದು ಮುನ್ನೂರು ಡಿಗ್ರಿ ಫ್ಯಾರನ್‍ಹೀಟ್ ಉಷ್ಣತೆಯಿಂದ ಹಿಡಿದು ಸೊನ್ನೆಗಿಂತಲೂ ನೂರು ಫ್ಯಾರನ್‍ಹೀಟ್ ಕೆಳಗಿನ ಉಷ್ಣತೆಯ ವರೆಗೂ ಕಾರ್ಯನಿರ್ವಹಿಸಬಲ್ಲುದು.ಕಾಗದದಲ್ಲಿ ಬ್ಯಾಟರಿಯನ್ನು ಮುದ್ರಿಸಬಹುದು.ಹಾಗಾಗಿ ತಯಾರಿಕೆಯೂ ಸುಲಭ.ವಿದ್ಯುದ್ರಾವಕವಾಗಿ ಅಯೋನಿಕ್ ಉಪ್ಪನ್ನು ಬಳಸಲಾಗಿದೆ.ನ್ಯಾನೋಟ್ಯೂಬುಗಳು ಇದರ ಧ್ರುವಗಳಾಗಿ ಕೆಲಸ ಮಾಡುತ್ತವೆ. ಇದು ಪರಿಸರ ಸ್ನೇಹಿ ಬ್ಯಾಟರಿ ಎನ್ನುವುದಕ್ಕೆ ಇದು ಕಾಗದದಿಂದ ತಯಾರಿಸಿದ್ದು ಎನ್ನುವ ಸಮರ್ಥನೆ ಸಂಶೋಧಕರದ್ದು.ವಿಷವಸ್ತುಗಳನ್ನು ಇದರ ತಯಾರಿಕೆಗೆ ಬಳಸಿಲ್ಲ.ಈ ಸಂಶೋಧನೆಯಲ್ಲಿ ಪುಲಿಕ್ಕೆಲ್ ಅಜಯನ್,ಓಂಕಾರಮ್ ನಲಮಾಸು,ಅಶವಾನಿ ಕುಮಾರ್,ಶರವಣಬಾಬು ಮುರುಗೇಶನ್ ಮುಂತಾದ ಭಾರತೀಯ ಹೆಸರಿನ ವ್ಯಕ್ತಿಗಳಿರುವುದು ವಿಶೇಷ.
ಮೇಷ್ಟ್ರು ಬಾಹ್ಯಾಕಾಶಕ್ಕೆ
ಸ್ಪೇಸ್ ಶಟಲ್ ಎಂಡೇವರ್‌ನ ಮುಂದಿನ ಉಡ್ಡಯಣದ ಓರ್ವ ಬಾಹ್ಯಾಕಾಶಯಾನಿ ವೃತ್ತಿಯಿಂದ ಶಿಕ್ಷಕನಾಗಿದ್ದಾತ.ಹಲವಾರು ಶಿಕ್ಷಕರ ನಡುವೆ ನಡೆದ ಸ್ಪರ್ಧೆಯಲ್ಲಿ ಜಯಶಾಲಿಯಾಗಿ ಬರ್ಬರಾ ಮೋರ್ಗನ್ ಎನ್ನುವಾತ ಎಂಡೇವರ್‌ನಲ್ಲಿ ಯಾತ್ರೆ ಮಾಡಲಿದ್ದಾರೆ.ಚಾಲೆಂಜರ್ ಸ್ಪೇಸ್ ಶಟಲ್ ಅಪಫಾತಕ್ಕೀಡಾದಾಗ ಅದರಲ್ಲಿದ್ದ ಕ್ರಿಸ್ಟಾ ಮೆಕುಲ್ಲಿಫೆ ಬಾಹ್ಯಾಕಾಶಯಾನ ಮಾಡಿದ ಮೊದಲ ಶಿಕ್ಷಕನೆಂದು ನಿಮಗೆ ಗೊತ್ತಿರಬಹುದು.ನೂರಿಪ್ಪತ್ತು ಸ್ಪರ್ಧಿಗಳ ಪೈಕಿ ಬರ್ಬರಾ ಆಯ್ಕೆಯಾಗಿದ್ದಾರೆ.ಇವರ ಉಡ್ಡಯನವನ್ನು ವೀಕ್ಷಿಸಲು ಸೋತ ಹಲವಾರು ಶಿಕ್ಷಕರು ಬಯಸಿದ್ದಾರೆ.ತಮ್ಮವನೋರ್ವ ಬಾಹ್ಯಾಕಾಶಯಾತ್ರೆ ಮಾಡುವ ಅದೃಷ್ಟ ಪಡೆದಿರುವುದು ಅವರಿಗೆ ಖುಷಿ ತಂದಿದೆ.ಸ್ಪರ್ಧಿಗಳ ಪೈಕಿ ಕೇವಲ ಹತ್ತು ಜನ ಮಾತ್ರಾ ವಿಜ್ಞಾನ ಶಿಕ್ಷಕರೇ ಅಂತೆ.ಈ ಯಾನ ಶಿಕ್ಷಕರ ದಿನಾಚರಣೆಯ ಸಮೀಪವೇ ನಡೆಯಲಿರುವುದು ಕಾಕತಾಳೀಯ!
ಚಿಪ್ ತಣಿಸಲು ಗಾಳಿಯಂತ್ರ
ವಿದ್ಯುತ್ ಮಂಡಲಗಳನ್ನು ಕಿರುಗಾತ್ರದಲ್ಲಿ ಸಾಕ್ಷಾತ್ಕರಿಸುವ ಇಂಟೆಗ್ರೇಟೆಡ್ ಸರ್ಕ್ಯೂಟ್(ಐ.ಸಿ.) ತಂತ್ರಜ್ಞಾನ ಅದ್ಭುತ ಪ್ರಗತಿ ಸಾಧಿಸುತ್ತಿದೆ.ಮೂರ್ ಎನ್ನುವ ವಿಜ್ಞಾನಿ ಊಹಿಸಿದಂತೆ,ಕಡಿಮೆ ಜಾಗದಲ್ಲಿ ದೊಡ್ಡ ವಿದ್ಯುತ್ ಮಂಡಲಗಳನ್ನು ರೂಪಿಸಲು ಸಾಧ್ಯವಾಗುತ್ತಿದೆ. ಆದರೆ ಐ.ಸಿ.ಗಳ ಗಾತ್ರ ಕುಗ್ಗಿದಂತೆ,ಅವುಗಳ ತಾಪ ಏರುತ್ತದೆ.ಐ.ಸಿ.ಗಳನ್ನು ತಂಪಾಗಿರಿಸುವುದೇ ಒಂದು ಸವಾಲು.ಸಾಮಾನ್ಯ ಫ್ಯಾನ್‍ಗಳನ್ನು ಇದಕ್ಕೆ ಬಳಸಿದರೆ,ಐ.ಸಿಗಳ ಮೂಲಕ ಗಾಳಿಯ ಅಣುಗಳು ಚಲಿಸುವಾಗ,ಅವುಗಳು ಸಿಕ್ಕಿ ಹಾಕಿಕೊಂಡು,ಗಾಳಿಯ ಪ್ರವಾಹಕ್ಕೆ ತಡೆ ಉಂಟಾಗುವುದು ಒಂದು ದೊಡ್ಡ ಸಮಸ್ಯೆ.ಈಗ ಪುರ್ಡ್ಯೂ ವಿಶ್ವವಿದ್ಯಾಲಯದವರು ಕಂಡು ಹಿಡಿದಿರುವ ಹೊಸ ವಿಧಾನದ ಪ್ರಕಾರ,ಐ.ಸಿ.ಗಳ ಅಡ್ಡಲಾಗಿ ವಿದ್ಯುತ್ ವಿಭವಾಂತರ ಉಂಟುಮಾಡಿ,ವಿದ್ಯುದಾವೇಶ ಉಳ್ಳ ಅಯಾನುಗಳ ಪ್ರವಾಹ ಉಂಟಾಗುವಂತೆ ಮಾಡಿ,ಆ ಮೂಲಕ,ಐ.ಸಿ.ಗಳ ತಾಪವನ್ನು ಇಳಿಸುವ ಗಾಳಿಯಂತ್ರ ವಿಧಾನವನ್ನು ಪ್ರಕಟಿಸಿದ್ದಾರೆ.ಸಾಮಾನ್ಯ ವಿಧಾನಕ್ಕಿಂತ ಶೇಕಡಾ ಇನ್ನೂರೈವತ್ತು ಪಟ್ಟು ಪ್ರಭಾವಶಾಲಿಯಾಗಿರುವುದು ಹೊಸ ವಿಧಾನದ ಅನುಕೂಲವಾಗಿದೆ.ತಮ್ಮ ಸಂಶೋಧನೆಯನ್ನು ಪರೀಕ್ಷಿಸಲು ಈಗಾಗಲೇ ಮಾದರಿಯೊಂದನ್ನು ಸಿದ್ಧ ಪಡಿಸಲು ಸಂಶೋಧಕರಾದ ಸುರೇಶ್ ಗರಿಮೆಲ್ಲಾ ಅವರಿಗೆ ಸಾಧ್ಯವಾಗಿದೆ.ಇದರ ಗಾತ್ರವನ್ನು ನೂರು ಪಟ್ಟು ಇಳಿಸುವ ಸವಾಲು ಅವರ ಮುಂದಿದೆ.
ದೇವರ ಸಂಖ್ಯೆಯೆಷ್ಟು?ಇದೇನು ದೇವರ ಸಂಖ್ಯೆ ಎಂದು ಆಶ್ಚರ್ಯವಾಯಿತೇ?ಹಳೆಕಾಲದ ಆಟಿಕೆ "ರೂಬಿಕ್ ಕ್ಯೂಬ್" ಗೊತ್ತು ತಾನೇ?ರೂಬಿಕ್ ಕ್ಯೂಬಿನ ಮುಖದಲ್ಲಿ ಒಂದೇ ಬಣ್ಣ ಬರುವಂತೆ ಮಾಡುವುದು ಕಠಿನ ಸವಾಲೇ ಸರಿ.ಅಭ್ಯಾಸ ಬಲದಿಂದ ಹಲವರು ರೂಬಿಕ್ ಕ್ಯೂಬ್ ಸಮಸ್ಯೆಯನ್ನು ಶರವೇಗದಲ್ಲಿ ಪರಿಹರಿಸಬಲ್ಲರು.ಯಾವುದೇ ಸ್ಥಿತಿಯಲ್ಲಿರುವ ರೂಬಿಕ್ ಕ್ಯೂಬನ್ನು ಒಂದೇ ಬಣ್ಣದ ಮುಖ ಹೊಂದಿರುವಂತೆ ಮಾಡಲು ಎಷ್ಟು ಹೆಜ್ಜೆಗಳು ಬೇಕು ಎನ್ನುವುದನ್ನು ವಿಜ್ಞಾನಿಗಳ ತಲೆ ತಿನುತ್ತಿರುವ ಪ್ರಶ್ನೆ.ರೂಬಿಕ್ ಕ್ಯೂಬ್ ಸಮಸ್ಯೆಯನ್ನು ಪರಿಹರಿಸಲು ತಗಲುವ ಅತ್ಯಂತ ಕಡಿಮೆ ಸಂಖ್ಯೆಯ ಹೆಜ್ಜೆಗಳನ್ನು ದೇವರ ಸಂಖ್ಯೆ ಎನುತ್ತಾರೆ.ಬಾಸ್ಟನ್‍ನ ನಾರ್ತೀಸ್ಟರ್ನ್ ವಿಶ್ವವಿದ್ಯಾಲಯದ ಡೇನಿಯಲ್ ಎನ್ನುವ ವಿದ್ಯಾರ್ಥಿ ಸೂಪರ್ ಕಂಪ್ಯೂಟರ್ ಬಳಸಿ,ರೂಬಿಕ್ ಯೂಬ್ ಸಮಸ್ಯೆ ಬಗೆಹರಿಸಲು ಸಫಲನಾಗಿದ್ದಾನೆ.ಅವನ ಹೆಗ್ಗಳಿಕೆಯೆಂದರೆ,ಹೆಚ್ಚೆಂದರೆ ಇಪತ್ತಾರು ಹೆಜ್ಜೆಗಳಲ್ಲಿ ಸಮಸ್ಯೆ ಬಗೆಹರಿಸುವಂತೆ ತಂತ್ರಾಂಶ ರೂಪಿಸಿದ್ದಾನೆ.ಸೈದ್ಧಾಂತಿಕವಾಗಿ ಇಪ್ಪತ್ತು ಅಥವಾ ಕಡಿಮೆ ಹೆಜ್ಜೆಗಳಲ್ಲಿ ಈ ಸಮಸ್ಯೆ ಬಗೆಹರಿಸಲು ಸಾಧ್ಯವಾಗಬೇಕಿದೆ.
ಭಾರತ:ಹನ್ನೆರಡು ತುಂಬಿದ ಆಂತರ್ಜಾಲ
ಭಾರತದಲ್ಲಿ ಅಂತರ್ಜಾಲ ಲಭ್ಯವಾಗಲು ಶುರುವಾಗಿ ಹನ್ನೆರಡು ವರ್ಷಗಳು ಸಂದುವು. ಈ ಹನ್ನೆರಡು ವರ್ಷಗಳಲ್ಲಿ ಅಂತರ್ಜಾಲ ಸಂಪರ್ಕ ಹೊಂದಿದವರ ಸಂಖ್ಯೆ ಐದು ದಶಲಕ್ಷವನ್ನು ಮುಟ್ಟಿದೆ.ಮೊದಲು ಟೆಲಿಫೋನ್ ಸಂಪರ್ಕದ ಮೂಲಕ ಲಭ್ಯವಾಗಿದ್ದ ಅಂತರ್ಜಾಲ ಆಮೆಗತಿಯದ್ದಾದರೆ,ಈಗ ಬ್ರಾಡ್‌ಬ್ಯಾಂಡ್ ಸೇವೆಯ ಮೂಲಕ ಶರವೇಗದಲ್ಲೂ ಲಭ್ಯ.ಇನೂರೈವತ್ತು ಮಾಸಿಕ ದರದಲ್ಲೂ ಲಭ್ಯವಾಗುತ್ತಿರುವ ಅಂತರ್ಜಾಲ ಸೇವೆ ಈಗ ಜನರಿಗೆ ಅತ್ಯಗತ್ಯ ಸೇವೆ ಅನಿಸುತ್ತಿದೆ.
*ಅಶೋಕ್‍ಕುಮಾರ್ ಎ

Tuesday, August 14, 2007

ಇನ್‍ಸ್ಟೆಂಟ್ ಪುಸ್ತಕ ಮುದ್ರಿಸುವ ಯಂತ್ರ

ಕಾಫಿ,ಟೀ ತಯಾರಿಸುವ ಯಂತ್ರವನ್ನು ಜನಸಂದಣಿಯಿರುವೆಡೆ ಸ್ಥಾಪಿಸಿರುವುದನ್ನು ನೋಡಿದ್ದೀರ್‍ಇ ತಾನೇ? ಇದೀಗ ಪುಸ್ತಕ ಮುದ್ರಿಸಿ ಕೊಡುವ ಯಂತ್ರಗಳೂ ಬಂದಿವೆ.ಮುದ್ರಿಸ ಬೇಕಾದ ಪುಸ್ತಕದ ಪಿಡಿಎಫ್ ಕಂಪ್ಯೂಟರ್ ಕಡತ ಇದ್ದರೆ,ಅದನ್ನು ಯಂತ್ರವೊಂದು ಗರಿ ಗರಿಯಾಗಿ ಮುದ್ರಿಸಿ,ಬೈಂಡ್ ಮಾಡಿ ಕೊಡುತ್ತದೆ.ಈ ಯಂತ್ರ ಫೊಟೋ ಕಾಪಿ ಮಾಡುವ ಯಂತ್ರದಂತೆ ಕಾಣಿಸುತ್ತದೆ. ಗಾತ್ರ ಎರಡು ಫ್ರೀಜರ್ ಯಂತ್ರದ ಗಾತ್ರ ಇದೆಯಂತೆ.ಪುಸ್ತಕ ಭಾರೀ ದುಬಾರಿಯಾದೀತು ಎಂದು ಮೂಗು ಮುರಿಯಬೇಡಿ-ಮುನ್ನೂರು ಪುಟದ ಪುಸ್ತಕಕ್ಕೆ ನೂರೈವತ್ತು ರುಪಾಯಿ ಖರ್ಚು ಬರುತ್ತದೆ.ಮಾರಾಟ ಬೆಲೆ ಜಾಸ್ತಿ ಇದ್ದೀತು ಬಿಡಿ.
ಇಂತಹ ಪುಸ್ತಕ ಮುದ್ರಿಸುವ ಯಂತ್ರದ ಉದ್ದೇಶ ಹೊಸ ಪುಸ್ತಕಗಳನ್ನು ಮುದ್ರಿಸುವುದಲ್ಲ. ಹಳೆಯ,ಮುದ್ರಿತ ಪ್ರತಿ ಲಭ್ಯವಿಲ್ಲದ ಪುಸ್ತಕಗಳನ್ನು ಮುದ್ರಿಸುವುದಕ್ಕೆ ಇದರ ಬಳಕೆ ಸೂಕ್ತ.ಕೃತಿಯ ಹಕ್ಕುಸ್ವಾಮ್ಯವಾಗದಂತಿದ್ದರೆ ಮಾತ್ರ ಈ ಯಂತ್ರದಲ್ಲಿ ಪುಸ್ತಕ ಮುದ್ರಿಸಿ ಕೊಡಲಾಗುತ್ತದೆ.ಹತ್ತು ಲಕ್ಷ ಬೆಲೆಯ ಯಂತ್ರವಿದು.ಸದ್ಯ ಈ ಯಂತ್ರದ ಮೂರು ಕಡೆ ಇದೆಯಂತೆ.ವಾಷಿಂಗ್ಟನ್‍ನ ವಿಶ್ವಬ್ಯಾಂಕಿನ ಪುಸ್ತಕ ಮಳಿಗೆಯಲ್ಲಿ,ನ್ಯೂಯರ್ಕ್‍ನ ಸಾರ್ವಜನಿಕ ಗ್ರಂಥಾಲಯದಲ್ಲಿ ಮತ್ತು ಈಜಿಪ್ಟಿನ ಅಲೆಕ್ಸಾಂಡ್ರಿಯಾದಲ್ಲಿ ಯಂತ್ರಗಳಿವೆಯಂತೆ.ಮುಂದಿನ ದಿನಗಳಲ್ಲಿ ಇಂತಹ ಯಂತ್ರವನ್ನು ಪ್ರಸಿದ್ಧ ಗ್ರಂಥಾಲಯಗಳಲ್ಲಿ ಕಾಣುವ ಅದೃಷ್ಟ ನಮ್ಮದಾಗಬಹುದು.
ಸೌರಶಕ್ತಿ ಬಳಸಿಕೊಳ್ಳುವ ಮನೆ ನಿರ್ಮಿಸಲು ವಿದ್ಯಾರ್ಥಿಗಳಿಗೆ ಸ್ಪರ್ಧೆ
ಸೌರಶಕ್ತಿಯನ್ನು ಸಮರ್ಥವಾಗಿ ಬಳಸಿಕೊಳ್ಳುವ ಎಂಟುನೂರು ಚದರ ಅಡಿ ಮನೆ ನಿರ್ಮಿಸುವ ಸ್ಪರ್ಧೆಯನ್ನು ನ್ಯೂಯಾರ್ಕಿನಲ್ಲಿ ನಡೆಸಲಾಗುತ್ತಿದೆ.ನ್ಯೂಯಾರ್ಕ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ನಡೆಸಲಾಗುತ್ತಿರುವ ಈ ಸ್ಪರ್ಧೆಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ.ವಿದ್ಯಾರ್ಥಿಗಳು ಸ್ವತಹ ಮನೆಯನ್ನು ನಿರ್ಮಿಸುತ್ತಿದ್ದಾರೆ.ಅಮೆರಿಕಾದಲ್ಲಿ ಮನೆಗಳನ್ನು ಮರದಿಂದ ನಿರ್ಮಿಸುವುದೇ ಹೆಚ್ಚು ತಾನೇ? ನಮ್ಮಂತೆ ಇಟ್ಟಿಗೆ,ಕಾಂಕ್ರೀಟು ಬಳಕೆ ಅಲ್ಲಿ ಕಡಿಮೆ.
ಸೌರಶಕ್ತಿಯನ್ನು ಬಳಸಿಕೊಳ್ಳಲು ಮನೆಗಳಲ್ಲಿ ಸೌರಫಲಕವನ್ನು ಅಳವಡಿಸಿರಬಹುದು ಎಂದು ನೀವು ಆಲೋಚಿಸಿದ್ದರೆ,ಅದು ಸರಿ. ಇಲ್ಲಿ ಕಂಡುಬರುವ ನಿರ್ಮಾಣವಾಗುತ್ತಿರುವ ಮನೆಗಳಲ್ಲಿ ಸೌರಫಲಕಗಳಿವೆ.ಅದರಲ್ಲಿ ತಯಾರಾದ ವಿದ್ಯುತ್ತನ್ನು ಹಿಡಿದಿಡಲು ಬ್ಯಾಟರಿಯನ್ನು ಬಳಸುತ್ತಿದ್ದಾರೆ.ಅಲ್ಲಿನ ವಿದ್ಯುತ್ ಮಂಡಳಿಗಳು ತಯಾರಾದ ವಿದ್ಯುತ್ತನ್ನು ಖರೀದಿಸಲು ಆಸಕ್ತಿ ತೋರುವುದರಿಂದ,ಬೇಕೆಂದರೆ ಅದನ್ನು ನೇರ ಗ್ರಿಡ್‍ಗೆ ಸೇರಿಸಿ,ಮನೆಗೆ ಅವಶ್ಯಕವಾದ ಸಮಯದಲ್ಲಿ ವಿದ್ಯುತ್ತನ್ನು ಮಂಡಳಿಯ ಗ್ರಿಡ್‍ನಿಂದ ಪಡೆದುಕೊಳ್ಳಬಹುದು. ಹೀಗಾಗಿ ಬ್ಯಾಟರಿಯ ಖರ್ಚನ್ನು ಉಳಿತಾಯ ಮಾಡುವುದು ಸಾಧ್ಯ.ಅಲ್ಲಿ ತಯಾರಾದ ವಿದ್ಯುತ್ತಿನಲ್ಲೇ ಸುಧಾರಿಸಲೋಸಗ ಮನೆಯ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡುವತ್ತ ವಿದ್ಯಾರ್ಥಿಗಳು ಹೆಚ್ಚಿನ ಗಮನ ಕೊಟ್ಟಿದ್ದಾರೆ. ಅದಕ್ಕಾಗಿ ವಿಶಾಲ ಕಿಟಿಕಿ,ಬಾಗಿಲುಗಳನ್ನು ಒದಗಿಸಿ,ಬೇಕಿದ್ದರೆ-ಮನೆಯನ್ನು ಹೊರಗಿನ ಗಾಳಿಗೆ ತೆರೆದುಕೊಂಡು,ಏಸಿಯ ವಿದ್ಯುತ್ ಬೇಡಿಕೆ ಮಿತಗೊಳಿಸುವತ್ತ ಹೆಚ್ಚಿನವರು ಗಮನ ನೀಡಿದ್ದಾರೆ.
ಮನೆಯ ಸಂಪೂರ್ಣ ನಿಯಂತ್ರಣವನ್ನು ಕಂಪ್ಯೂಟರೀಕರಣಗೊಳಿಸಲು ಹೆಚ್ಚಿನವರು ಒತ್ತು ನೀಡಿದ್ದಾರೆ.ಹಾಗಾಗಿ ಕಚೇರಿಯಿಂದಲೇ ಮನೆಯ ವಿದ್ಯುದ್ದೀಪಗಳು ಉರಿಯುತ್ತಿವೆಯೇ,ಏಸಿ ಚಾಲೂ ಇದೆಯೇ ಎಂದು ಪರೀಕ್ಷಿಸಿ,ಅದನ್ನು ನಿಯಂತ್ರಿಸಲು ಬರುತ್ತದೆ.ಮನೆಗೆ ಬರುವ ಮೊದಲು ಏಸಿ ಚಾಲೂ ಮಾಡಿ,ಮನೆ ಮುಟ್ಟುವಷ್ಟರಲ್ಲಿ ಮನೆ ತಂಪಾಗಿರುವಂತೆ ಮಾಡಲು ಬರುತ್ತದೆ.
ಸೇತುವೆ ಮೇಲೆ ಕಣ್ಣಿಡಲು ಸೆನ್ಸರುಗಳು
ಮಿನ್ನಿಯಪೊಲೀಸ್‍ನಲ್ಲಿ ಇತ್ತೀಚೆಗೆ ಸೇತುವೆಯೊಂದು ಕುಸಿದು ಅನಾಹುತವಾಯಿತಲ್ಲ.ಅಂತಹ ಸೇತುವೆ ಕುಸಿತವನ್ನು ತಡೆಯಲು ಸಂವೇದಕಗಳನ್ನು ಬಳಸಬಹುದೇ ಎಂದು ಸಂಶೋಧಕರು ಯೋಚಿಸುತ್ತಿದ್ದಾರೆ.ಕ್ರೆಡಿಟ್ ಕಾರ್ಡ್‍ನ ಗಾತ್ರದ ವಿದ್ಯುನ್ಮಾನ ಮಂಡಲಗಳುಳ್ಳ ಸಾಧನ,ಸೇತುವೆಯ ಕಬ್ಬಿಣದ ರಾಡುಗಳು ಹೊರ ಸೂಸುವ ವಿಕಿರಣಗಳನ್ನು ಗ್ರಹಿಸಬಲ್ಲವು.ಇವುಗಳಿಗೆ ಶಕ್ತಿಯನ್ನು ಮೈಕ್ರೊವೇವ್ ಕಿರಣಗಳ ಮೂಲಕ ಅಥವ ಬೆಳಕಿನ ಮೂಲಕ ನೀಡಬಹುದು. ಒಂದು ಸೇತುವೆಗೆ ಹಲವು ಸೆನ್ಸರುಗಳನ್ನು ಅಳವಡಿಸಬೇಕಾಗುತ್ತದೆ.ಹೆಲಿಕಾಪ್ಟರ್ ಒಂದು ಸೇತುವೆಯ ಮೇಲೆ ಹಾರಿ,ಮೈಕ್ರೋವೇವ್ ಕಿರಣಗಳನ್ನು ಹೊರಸೂಸಿ,ಸೆನ್ಸರುಗಳ ಸಂಕೇತವನ್ನು ಗ್ರಹಿಸುತ್ತದೆ. ಈ ಮಾಹಿತಿಯ ವಿಶ್ಲೇಷಣೆಯನ್ನು ಕಂಪ್ಯೂಟರುಗಳು ಮಾಡಿ,ಸೇತುವೆ ಬಲವಾಗಿದೆಯೇ ಅಥವಾ ದುರ್ಬಲಗೊಂಡಿದೆಯೇ ಎಂದು ತಿಳಿಸಬಲ್ಲುವು.ದುರ್ಬಲ ಸೇತುವೆಯಾದರೆ,ಸಾರಿಗೆಯನ್ನು ನಿಯಂತ್ರಿಸಿ ಅಥವಾ ನಿಷೇಧಿಸಿ,ಅಗತ್ಯ ಕ್ರಮ ಕೈಗೊಳ್ಳಬಹುದು.
ನಿಸ್ಸಾನ್ ಕಂಪೆನಿಯಿಂದಲೂ ಕುಡುಕನೊಲ್ಲದ ಕಾರು
ಜಪಾನೀ ಕಾರು ತಯಾರಕ ಕಂಪೆನಿ ನಿಸ್ಸಾನ್ ಕೂಡಾ ತನ್ನ ಕಾರಿನಲಿ ಕುಡಿದ ಚಾಲಕ ಚಲಾಯಿಸದಂತೆ ಸ್ವಯಂ ಪ್ರತಿಬಂಧಿಸುವ ವ್ಯವಸ್ಥೆಯನ್ನು ಅಳವಡಿಸುವತ್ತ ಹೆಜ್ಜೆಯಿಟ್ಟಿದೆ.ಚಾಲಕನ ಉಸಿರನ್ನು ಪರೀಕ್ಷಿಸಿ,ಆತ ಲೆಕ್ಕಕ್ಕಿಂತ ಹೆಚ್ಚು ಕುಡಿದಿದ್ದರೆ,ಕಾರು ಚಾಲೂ ಆಗಲು ನಿರಾಕರಿಸುತ್ತದೆ.ಎಷ್ಟು ಕುಡಿತ ಓಕೆ ಎನ್ನುವುದನು ಕಂಪೆನಿಯಿನ್ನೂ ತೀರ್ಮಾನಿಸಿಲ್ಲವಂತೆ.ಹಾಗೆಯೇ ಕಾರನ್ನು ಮಾರುಕಟ್ಟೆಗೆ ಯಾವಾಗ ಬಿಡುಗಡೆ ಮಾಡಬೇಕು ಎನ್ನುವ ವೇಳಾಪಟ್ಟಿಯನ್ನು ಕಂಪೆನಿಯು ಹೊಂದಿಲ್ಲ.
*ಅಶೋಕ್‍ಕುಮಾರ್ ಎ

ಕಾರು ಕಳವಾದರೆ ಎಸ್ ಎಂ ಎಸ್ ಕಳುಹಿಸಿ,ಕಾರನ್ನು ಲಾಕ್ ಮಾಡಿ!

ಮುಂಬೈಯ ಮೈಕ್ರೋಟೆಕ್ನೋಲಾಜೀಸ್ ಕಂಪೆನಿ ಮನೆ ಮತ್ತು ವಾಹನಗಳ ಭದ್ರತಾ ವ್ಯವಸ್ಥೆಯನ್ನು ಒದಗಿಸುತ್ತಿದೆ. ಈಗ ಅದು ಹೊರ ತಂದಿರುವ ಸಾಧನವು ಕಾರು ಕಳವಾದರೆ ಪತ್ತೆ ಮಾಡಬಲ್ಲುದು. ಸಂವೇದಕಗಳ ಮೂಲಕ ಕಾರನ್ನು ಯಾರಾದರೂ ಅಕ್ರಮವಾಗಿ ಚಲಾಯಿಸಿಕೊಂಡು ಹೋಗುತ್ತಿದ್ದರೆಯೋ ಎಂದು ಸಾಧನವು ಗ್ರಹಿಸುತ್ತದೆ.ಕೂಡಲೇ ವಾಹನದ ಮಾಲೀಕನ ಸೆಲ್‍ಪೋನಿಗೆ ಸಂದೇಶ ಹೋಗುತ್ತದೆ. ಆತ ಕಾರಿನ ಇಂಜಿನ್ ಬಂದು ಮಾಡಲು ಬಯಸಿದಲ್ಲಿ ಹಾಗೆ ಮಾಡುವುದು ಸುಲಭ. ನಿಗದಿತ ಸಂದೇಶವನ್ನು ನಿಶ್ಚಿತ ನಂಬರಿಗೆ ಕಳುಹಿಸಿದರೆ ಸಾಕು. ಕಾರಿನ ಇಂಜಿನ್ ಬಂದಾಗುತ್ತದೆ. ಈಗಾಗಲೇ ಎರಡು ಸಾವಿರ ಕಾರುಗಳಲ್ಲಿ ಇಂತಹ ವ್ಯವಸ್ಥೆಯನ್ನು ಅಳವಡಿಸಲಾಗಿದೆ.ಬೇಕೆಂದರೆ ಸೈರನ್ ಮೊಳಗಿಸಲೂ ಸಾಧ್ಯ.
ಕಳೆದು ಹೋದ ಮೊಬೈಲ್ ಪೋನನ್ನು ’ಪತ್ತೆ’ ಹಚ್ಚುವಂತಹ ತಂತ್ರಜ್ಞಾನವನ್ನು ಕಂಪೆನಿ ಅಭಿವೃದ್ಧಿ ಪಡಿಸಿದೆ.ಮೊಬೈಲ್ ಕದ್ದವರು ಸಿಮ್ ಬದಲಾಯಿಸಿ, ಹೊಸ ಸಿಮ್ ಬಳಸಿದರೂ, ಪೋನಿನಲ್ಲಿ ಹೊಸದಾಗಿ ಬಳಕೆಯಾಗುತ್ತಿರುವ ನಂಬರನ್ನು ತಿಳಿಸುವ ತಂತ್ರಜ್ಞಾನವನ್ನು ಮೈಕ್ರೋಟೆಕ್ ಕಂಪೆನಿ ಕಂಡುಹಿಡಿದಿದೆ.
ಗಗನದಲ್ಲೂ ಕುಡುಕ ಚಾಲಕರು
ಬಸ್ ಕಾರುಗಳನ್ನು ಕುಡುಕರು ಚಲಾಯಿಸುವ ಸಮಸ್ಯೆ ಹೊಸದಲ್ಲ. ಅದರೆ ಬಾಹ್ಯಾಕಾಶ ವಾಹನವನ್ನೂ ಕುಡುಕ ಚಾಲಕರು ಚಲಾಯಿಸಿದರೆ? ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಇಂತಹ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದೆ.ಪತ್ರಿಕೆಯ ಸಂದರ್ಶನವೊಂದರಲ್ಲಿ ಕೆಲವು ಬಾಹ್ಯಾಕಾಶಯಾನಿಗಳು ಸ್ಪೇಸ್ ಶಟಲ್ ಉಡಾವಣೆಯಾಗಬೇಕಿದ್ದ ವೇಳೆ ಓರ್ವ ಬಾಹ್ಯಾಕಾಶಯಾನಿ ಕುಡಿದ ಸ್ಥಿತಿಯಲ್ಲಿದ್ದನೆಂದು ಒಪ್ಪಿಕೊಂಡರು.ರಶ್ಯಾದ ಬಾಹ್ಯಾಕಾಶ ಕೇಂದ್ರಕ್ಕೆ ಹೋಗಲಿದ್ದ ಬಾಹ್ಯಾಕಾಶ ಯಾನಿಯೂ ಕುಡಿದ ಸ್ಥಿತಿಯಲ್ಲಿದ್ದನಂತೆ! ಈಗ ನಾಸಾ ಈ ವರದಿಗಳ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಸಲಿದೆ. ಬಾಹ್ಯಾಕಾಶ ಯಾನಿಗಳು ತಮ್ಮ ಪ್ರವಾಸಕ್ಕೆ ಹನ್ನೆರಡು ಗಂಟೆ ಮುನ್ನ ಕುಡಿಯಬಾರದು ಎನ್ನುವ ನಿಯಮ ಜಾರಿಗೆ ತರುವ ಜತೆಗೆ, ಬಾಹ್ಯಾಕಾಶಯಾನಿಗಳ ಆರೋಗ್ಯ ಕಾಪಾಡಲು ನಿಯಮಗಳನ್ನು ರೂಪಿಸಲು ನಾಸಾ ಉದ್ದೇಶಿಸಿದೆ. ಕುಡಿಯದೆ ಬಾಹ್ಯಾಕಾಶ ವಾಹನವನ್ನು ಚಲಾಯಿಸಲು ಧೈರ್ಯ ಬರುವುದಿಲ್ಲ ಎಂದು ಚಾಲಕರು ನೇರವಾಗಿ ಹೇಳದಿದ್ದರೆ ಸಾಕು!
ವೇಗದಲ್ಲಿ ಬೆಳೆಯುವ ಮರದ ತಳಿಗಳು
ದಕ್ಷಿಣ ಕ್ಯಾರೊಲಿನಾದ ಬಯೋಟೆಕ್ ಕಂಪೆನಿ ಸೂಪರ್ ತಳಿಗಳನ್ನು ಬೆಳೆದಿದೆ. ನೀಲಗಿರಿ,ಪೈನ್ ಜಾತಿಯ ವೃಕ್ಷಗಳು ತೀವ್ರ್‍ಅ ಬೇಳವಣಿಗೆ ತೋರುವಂತೆ ಮಾಡಲು ಕಂಪೆನಿ ಶಕ್ತವಾಗಿದೆ.ನೀಲಗಿರಿಯ ಮರಗಳ ತೊಗಟೆಯಲ್ಲಿ ಕಂಡುಬರುವ ರಾಸಾಯಿನಿಕದ ಅಂಶವನ್ನು ಕಡಿಮೆ ಮಾಡಲೂ ಅದು ಶಕ್ತವಾಗಿದೆ. ನೀಲಗಿರಿಯನ್ನು ಕಾಗದ ತಯಾರಿಸಲು ಬಳಸಿದಾಗ,ಅದರಲ್ಲಿನ ರಾಸಾಯಿನಿಕವನ್ನು ತೆಗೆಯಲು ಶ್ರಮ ಪಡಬೇಕಾಗುತ್ತದೆ. ಈಗ ಈ ರಾಸಾಯಿನಿಕ ಅಂಶವೇ ಇರುವುದಿಲ್ಲವಾದ್ದರಿಂದ, ಆ ಕೆಲಸ ಉಳಿಯುತ್ತದೆ.
ನೀಲಗಿರಿ ಮರವನ್ನು ಜೈವಿಕ ಇಂಧನ ಇಥೆನಾಲ್ ತಯಾರಿಸಲೂ ಬಳಸಬಹುದು.ಬೇಗನೆ ಬೆಳೆವ ನೀಲಗಿರಿ ಮರಗಳಿದ್ದರೆ,ಅರಣ್ಯನಾಶ ಕಡಿಮೆಯಾಗುತ್ತದಾದ ಕಾರಣ ಪರಿಸರ ಉಳಿಸಲು ಹೊಸ ತಳಿ ಸಹಕಾರಿ ಎನ್ನುವುದು ಸ್ಪಷ್ಟ. ಉತ್ತಮ ತಳಿಯ ಆಯ್ಕೆ ಮತ್ತು ತದ್ರೂಪಿ ಸಸ್ಯಗಳ ಅಭಿವೃದ್ಧಿ ಮೂಲಕ ಈ ಬೇಗನೇ ಬೆಳೆವ ತಳಿಗಳನ್ನು ಅಭಿವೃದ್ಧಿ ಪಡಿಸಲಾಗಿದೆಯೇ ವಿನ: ಜೆನೆಟಿಕ್ ವಿಧಾನದಿಂದ ಅಲ್ಲ ಎಂದು ಕಂಪೆನಿ ಅಬೋರ್‍ಜೆನ್ ಹೇಳಿಕೊಂಡಿದೆ.
ಭೂಕಂಪದ 3ಡಿ ಸಿನೇಮಾ
ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಭೂಕಂಪ ಪದೇ ಪದೇ ಸಂಭವಿಸುತ್ತಿರುತ್ತದೆ. ಭೂಮಿಯು ಎಷ್ಟು ಕಂಪಿಸಿತು,ಅದರ ಕೇಂದ್ರ ಎಲ್ಲಿತ್ತು,ಅದು ಎಷ್ಟು ಆಳದಲ್ಲಿ ಸಂಭವಿಸಿತು ಮುಂತಾದ ವಿವರಗಳನ್ನು ಭೂಮಿಗೆ ಅಳವಡಿಸಿದ ಸಂವೇದಕಗಳು ದಾಖಲಿಸುತ್ತಿರುತ್ತವೆ. ಮುಂದೆ ಈ ಪ್ರದೇಶದಲ್ಲಿ ಭೂಕಂಪ ಮಾಪಕ ರಿಕ್ಟರ್ ಸ್ಕೇಲಿನಲ್ಲಿ ಮೂರುವರೆಗಿಂತ ಹೆಚ್ಚು ಪ್ರಮಾಣದ ಭೂಕಂಪ ಸಂಭವಿಸಿದ ಅರ್ಧ ಗಂಟೆಯ ಬಳಿಕ ಟಿವಿಯಂತಹ ಮಾಧ್ಯಮಗಳಲ್ಲಿ,ಭೂಕಂಪದಿಂದ ಭೂಮಿ ಅದುರಿದ ಬಗೆಯನ್ನು ಮೂರು ಆಯಾಮಗಳಲ್ಲಿ ತೋರಿಸುತ್ತಾರಂತೆ. ಭೂಕಂಪದ ಬಗೆಗಿನ ವಿವರಗಳು ಸೂಪರ್ ಕಂಪ್ಯೂಟರಿಗೆ ತಲುಪಿ,ಅದರಲ್ಲಿರುವ ತಂತ್ರಾಂಶವು ಭೂಕಂಪದ ಪರಿಣಾಮವನ್ನು ಅನಿಮೇಶನ್ ಚಲನಚಿತ್ರವಾಗಿ ವೀಕ್ಷಕರ ಕಣ್ಣ ಮುಂದಿಡುತ್ತದೆ.ಇದಕ್ಕೆ ಮೂವತ್ತು ನಿಮಿಷಗಳಷ್ಟೇ ಸಾಕು.ಹಿಂದೆ ಈ ಪ್ರದೇಶದಲ್ಲಿ ನಡೆದ ಭೂಕಂಪ ಉಂಟು ಮಾಡಿದ ಪರಿಣಾಮಗಳ ಮಾಹಿತಿಯನ್ನೂ ಕಂಪ್ಯೂಟರ್ ಬಳಸಿಕೊಂಡು ಈ ವಿಶ್ಲೇಷಣೆ ನಡೆಸುತ್ತದೆ."ಆನ್ ಡಿಮಾಂಡ್’ ಹೆಸರಿನ ಸೂಪರ್ ಕಂಪ್ಯೂಟರ್ ಇನ್ನೂರೈವತ್ತರು ಸಂಸ್ಕಾರಕಗಳನ್ನು ಹೊಂದಿದೆ. ಲಿನಕ್ಸ್ ಕಾರ್ಯನಿರ್ವಹಣ ವ್ಯವಸ್ಥೆ ತಂತ್ರಾಂಶ ಇದರಲ್ಲಿದೆ.
ಭಾರತದಲ್ಲೇ ತಯಾರಾಗಲಿರುವ ಡೆಲ್ ಕಂಪ್ಯೂಟರುಗಳು
ಇನು ಮುಂದೆ ಡೆಲ್ ಕಂಪೆನಿ ಭಾರತದಲ್ಲೇ ಕಂಪ್ಯೂಟರುಗಳನ್ನು ತಯಾರಿಸಲಿದೆ. ಶ್ರೀಪೆರಂಬದೂರಿನಲ್ಲಿ ಕಂಪೆನಿಯ ಘಟಕ ಈಗ ಕಾರ್ಯಾರಂಭ ಮಾಡಿದೆ.ಇದು ವರೆಗೆ ಡೆಲ್ ಕಂಪೆನಿ ವಿದೇಶದಿಂದ ಕಂಪ್ಯೂಟರ್ ಆಮದು ಮಾಡಿಕೊಂಡು ಇಲ್ಲಿ ಮಾರುತ್ತಿತ್ತು. ಹಾಗಾಗಿ ಕಂಪ್ಯೂಟರ್ ಬೆಲೆ ದುಬಾರಿಯಾಗುತ್ತಿತ್ತು. ಬಳಕೆದಾರರಿಗೆ ಬೇಕಾದ ಸಾಮರ್ಥ್ಯದ ಕಂಪ್ಯೂಟರ್ ಪೂರೈಸುವುದು ಡೆಲ್ ವೈಶಿಷ್ಟ್ಯ.ಕಂಪೆನಿಯ ಲ್ಯಾಪ್‌ಟಾಪ್‍ಗಳು ಗುಲಾಬಿ,ಹಳದಿ ಬಣ್ಣದಲ್ಲೂ ಲಭ್ಯವಾಗಲಿವೆ.
*ಅಶೋಕ್‍ಕುಮಾರ್ ಎ
 
googledc7e93ba1a7703ae.html