Monday, September 24, 2007

ನಿಮ್ಮ ಮನೆ ನೀವೇ ವಿನ್ಯಾಸ ಮಾಡಿ!

ಮನೆ ವಿನ್ಯಾಸ ಮಾಡುವುದು ನಮಗೇ ಸಾಧ್ಯವಿದ್ದರೆ,ಇಂಜಿನಿಯರ್ ಬಳಿಗೆ ಮನೆಯ ಪ್ಲಾನ್ ಹಿಡಿದುಕೊಂಡೇ ಹೊಗುತ್ತಿದ್ದೆವಲ್ಲವೇ? ಈಗದು ಸುಲಭ ಸಾಧ್ಯ.ಫ್ಲೋರ್‌ಪ್ಲಾನರ್.ಕಾಂ(floorplanner.com) ಎನ್ನುವ ಅಂತರ್ಜಾಲ ತಾಣದಲ್ಲಿ ಮನೆಯ ವಿನ್ಯಾಸ ಮಾಡುವ ತಂತ್ರಾಂಶ ಲಭ್ಯವಿದೆ. ಇದನ್ನು ಬಳಸಲು ಕಂಪ್ಯೂಟರಿನ ಬ್ರೌಸರ್ ಮಾತ್ರಾ ಸಾಕು.ಮನೆಯ ವಿನ್ಯಾಸ ಮಾಡುವುದು ಮಕ್ಕಳಾಟದಷ್ಟು ಸುಲಭ. ಇದರಲ್ಲಿ ವಿವಿಧ ಬಗೆಯ ಗೋಡೆಗಳು,ನೆಲ ಹಾಸು,ಕಿಟಕಿಗಳು,ಬಾಗಿಲುಗಳು ಲಭ್ಯವಿವೆ. ಇವನ್ನು ಎಳೆದು ಬೇಕಾದಲ್ಲಿ ಇಟ್ಟರೆ ಮುಗಿಯಿತು. ಬಣ್ಣಗಳ ಬದಲಾವಣೆ,ನೆಲಹಾಸಿನ ವಿನ್ಯಾಸ,ಬಣ್ಣ ಬದಲಾವಣೆ ಇವೆಲ್ಲಾ ಮಾಡಿ ನೋಡಬಹುದು.ಖುಷಿಯಾಗದಿದ್ದರೆ,ಅವೆಲ್ಲವನ್ನೂ ಬದಲಿಸಬಹುದು. ಸದ್ಯ ಎರಡು ಆಯಾಮದ ಚಿತ್ರಗಳನ್ನು ಮಾತ್ರಾ ರಚಿಸಬಹುದು. ಆದರೆ ಮುಂದೆ ಮೂರು ಆಯಾಮದ ಮನೆ ವಿನ್ಯಾಸವನ್ನು ರಚಿಸಿ,ಅದರ ಚಂದವನ್ನು ಸವಿಯುವ ಅವಕಾಶ ಸಿಗಲಿದೆ.ಐದು ವಿನ್ಯಾಸ ಉಚಿತವಾಗಿ ಮಾಡಲು ಸಾಧ್ಯ. ಅದರೆ ಹೆಚ್ಚಿನ ವಿನ್ಯಾಸ ಮಾಡಲು ಶುಲ್ಕ ಪಾವತಿಸಬೇಕು.ಈ ಅಂತರ್ಜಾಲ ತಾಣಕ್ಕೆ ಸುಮಾರು ಒಂದು ಲಕ್ಷ ನೋಂದಾಯಿತ ಸದಸ್ಯರಿದ್ದಾರೆ.
MyDesignIn ಮತ್ತು Plan3D ಅಂತರ್ಜಾಲ ತಾಣಗಳೂ ಇದೇ ರೀತಿಯ ಸೌಲಭ್ಯ ಒದಗಿಸುತ್ತವೆ.ಈ ಪೈಕಿ ಎರಡನೆಯದು ಮೂರು ಆಯಾಮದ ಮನೆಯ ವಿನ್ಯಾಸಗಳನ್ನು ರಚಿಸಲು ಅನುವು ಮಾಡುತ್ತವೆ.
ಮನಸ್ಸನ್ನೋದುವ ತಂತ್ರಾಂಶ
ಮಾಸ್ಕೋದ ಸೈಕೋಟೆಕ್ನೋಲಾಜಿ ಸಂಸ್ಥೆಯಲ್ಲಿ ಜನರ ಮನಸ್ಸನ್ನೋದುವ ಸಾಧನವಿದೆ.ಗುಹೆಯಂತಹ ಕೋಣೆಯಲ್ಲಿ ಕಂಪ್ಯೂಟರ್ ಇರಿಸಿದ ಮೇಜಿದೆ.ದಂತವೈದ್ಯರ ಬಳಿಯಿರುವ ಕುರ್ಚಿಯಂತಹ ಕುರ್ಚಿಯನ್ನು ಇದರ ಮುಂದೆ ಇರಿಸಲಾಗಿದೆ.ಯಾರ ಮನಸ್ಸನ್ನು ಅರಿಯ ಬೇಕಿದೆಯೋ,ಅವರನ್ನು ಕುರ್ಚಿಯಲ್ಲಿ ಕೂಡಿಸಲಾಗುತ್ತದೆ.ಕೋಣೆಯಲ್ಲಿ ಏಕಾಂತವಿರುತ್ತದೆ.ಕುರ್ಚಿಯಲ್ಲಿ ಕುಳಿತವನ ಮುಂದಿನ ಕಂಪ್ಯೂಟರ್ ಪರದೆಯ ಮೇಲೆ ಅಮೆರಿಕಾದ ವರ್ಲ್ಡ್ ಟ್ರೇಡ್ ಸೆಂಟರ್, ಒಸಾಮಾ ಬಿನ್ ಲಾಡೆನ್ ಮುಂತಾದ ಚಿತ್ರಗಳು ಮೂಡುತ್ತವೆ.ಚಿತ್ರಗಳಿಗೆ ವ್ಯಕ್ತಿಯ ಪ್ರತಿಕ್ರಿಯೆಯನ್ನು ಗುಂಡಿಯೊಂದನ್ನು ಅದುಮುವ ಮೂಲಕ ವ್ಯಕ್ತ ಪಡಿಸುತ್ತಾನೆ. ಇಷ್ಟೇ ಸಾಕಾಗುತ್ತದೆ. ವ್ಯಕ್ತಿಯು ಭಯೋತ್ಪಾದಕ ಹಿನ್ನೆಲೆಯವನೇ ಎಂಬುದು ಕಂಪ್ಯೂಟರಿಗೆ ಗೊತ್ತಾಗಿ ಬಿಡುತ್ತದೆ.ಕಂಪ್ಯೂಟರಿನಲ್ಲಿ ಅನುಸ್ಥಾಪಿತವಾದ ವಿಶೇಷ ತಂತ್ರಾಂಶವೊಂದು ವ್ಯಕ್ತಿಯ ಭಾವನೆಗಳನ್ನು ಗ್ರಹಿಸಿಬಿಡುತ್ತದೆ. ಈ ತಂತ್ರಾಂಶವನ್ನು ಇಗೋರ್ ಸ್ಮಿರನೋವ್ ಎನ್ನುವ ರಶ್ಯನ್ ವಿಜ್ಞಾನಿಯ ಸಂಶೋಧನೆಯನ್ನು ಅಳವಡಿಸಿಕೊಂಡಿದೆ.ಮನಶ್ಶಾಸ್ತ್ರದ ಬಗ್ಗೆ ಆತನ ಸಂಶೋಧನೆಯಿಂದ ಹೊರ ಹೊಮ್ಮಿದ ವಿಷಯಗಳು ವಿವಾದಗ್ರಸ್ತವಂತೆ. ಆದರೆ ಈ ತಂತ್ರಾಂಶ ಅಪರಾಧಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ಸು ಪಡೆದಿದೆ ಎಂದು,ಸಂಸ್ಥೆಯನ್ನು ನಡೆಸುತ್ತಿರುವ ರುಸಲ್ಕಿನಾ ಹೇಳುತ್ತಾರೆ. ಈಕೆ ವಿಜ್ಞಾನಿ ಇಗೋರ್ ಸ್ಮಿರನೋವ್‍ನ ಪತ್ನಿ. ತಂತ್ರಾಂಶವನ್ನು ಮೈಂಡ್‍ರೀಡರ್ ಎಂದು ಹೆಸರಿಸಲಾಗಿದೆ.ಅಮೆರಿಕಾದ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ತಪಾಸಣೆಗೆ ಈ ವಿಧಾನವನ್ನು ಬಳಸಲು ಭದ್ರತಾ ಇಲಾಖೆ ನಿರ್ಧರಿಸಿದೆ.

ಉಲ್ಕೆಯಿಂದ ಕಾಯಿಲೆ?
ಪೆರುವಿನಲ್ಲಿ ಉಲ್ಕೆಯೊಂದು ಬಿತ್ತು. ಇದು ಬಿದ್ದ ರಭಸಕ್ಕೆ ದೊಡ್ದ ಕೊರಕಲು ನಿರ್ಮಾಣವಾಗಿದೆ. ಅದರ ಶಾಖಕ್ಕೆ ನೀರು ಕಾಯ್ದು ಅನಿಲ ಹೊರಹೊಮ್ಮಿತು.ಈ ಅನಿಲವನ್ನು ಉಸಿರಾಡಿದ್ದಕೋ ಏನೋ ಸುಮಾರು ಇನ್ನೂರು ಜನ ತಲೆನೋವು,ವಾಂತಿ ಮತ್ತು ಉಸಿರಾಟದ ತೊಂದರೆಗಳನ್ನು ಅನುಭವಿಸಿದರಂತೆ.ವಿಜ್ಞಾನಿಗಳು ಉಲ್ಕಾಪಾತವಾದದ್ದು ಹೌದು ಎನ್ನುತ್ತಾರಾದರೂ,ಕಾಯಿಲೆಗೂ ಇದಕ್ಕೂ ಥಳಕು ಹಾಕಲು ಒಪ್ಪುತ್ತಿಲ್ಲ. ಅದರೂ ಉಲ್ಕೆಯಿಂದ ಹೊರಟ ವಿಷಾನಿಲದಿಂದ ಈ ತೊಂದರೆಗಳು ಉಂಟಾಗಿರುವುದು ಸಾಧ್ಯ ಎಂದು ಹೇಳುತ್ತಾರೆ.
ಅಂಧರಿಗೂ "ಕಾಣಿಸುವ" ಮಿಥ್ಯಾ ಜಗತ್ತು
ಅಂತರ್ಜಾಲದಲ್ಲಿ ಪ್ರತ್ಯೇಕ ಮಿಥ್ಯಾ ಜಗತ್ತು ಲಭ್ಯವಿದೆ.ಇದರಲ್ಲಿ ಅಲೆದಾಡುವುದು,ಪರಸ್ಪರ ಕಲೆಯುವುದು ಈಗಿನ ಯುವಕರ ಹವ್ಯಾಸ.ಇಂತಹ ಮಿಥ್ಯಾ ಜಗತ್ತಿನಲ್ಲಿ ಅಲೆದಾಡಲು ನಮ್ಮ ಮುಂದೆ ಆ ಜಗತ್ತಿನ ದೃಶ್ಯಗಳು ಕಾಣಿಸಿಕೊಳ್ಳಬೇಕು ತಾನೇ? ಆದರೆ ಅಂಧರಿಗೆ ಇಂತಹ ಅನುಭವ ಸಿಗದು.ಐ.ಬಿ.ಎಂ. ಕಂಪೆನಿಯ ಸಂಶೋಧಕರು ಅಂಧರೂ "ಕಾಣುವ" ವಿಶೇಷ ಪರಿಣಾಮಗಳನ್ನು ಸಂಗೀತ ಮತ್ತು ಶಬ್ದದ ಮುಖೇನ ತರಿಸುವ ಪ್ರಯತ್ನವನ್ನು ಸಂಶೋಧಕರು ಮಾಡಿದ್ದಾರೆ.ಮಿಥ್ಯಾ ಜಗತ್ತಿನ ಮರಗಿಡಗಳ ಎಲೆಗಳು ಗಾಳಿಗೆ ತೊನೆಯುವಾಗ ಉಂಟಾಗುವ ಶಬ್ದ,ನೀರಿನ ಜುಳುಜುಳು ನಿನಾದ, ಹೀಗೆ ವಿವಿಧ ಪರಿಣಾಮಗಳನ್ನು ಸಮರ್ಥವಾಗಿ ಮೂಡಿಸಿ,ಕಣ್ಣಿಲ್ಲದವರಿಗೂ ಮಿಥ್ಯಾ ಜಗತ್ತಿನ ಅನುಭವ ಆಗುವಂತೆ ಮಾಡಲು ಪ್ರಯತ್ನಿಸಿದ್ದಾರೆ.ಈ ತಂತ್ರಾಂಶವನ್ನು ಅಭಿವೃದ್ಧಿಸಿ ಪಡಿಸಲು ಹಲವಾರು ಅಂಧರ ಸಹಾಯ ಪಡೆಯಲಾಗಿರುವುದು ವಿಶೇಷ.
ಸುನೀತಾ ವಿಲಿಯಮ್ಸ್ ಭಾರತದಲ್ಲಿ
ಬಾಹ್ಯಾಕಾಶಯಾನಿ,ಭಾರತೀಯ ಮೂಲದ ಸುನೀತಾ ವಿಲಿಯಮ್ಸ್ ಭಾರತಕ್ಕೆ ಒಂದು ವಾರದ ಭೇಟಿ ನೀಡುತ್ತಿದ್ದಾರೆ.ಗುಜರಾತಿಗೆ ಆಗಮಿಸಿ,ಗಾಂಧಿಯವರ ಆಶ್ರಮಕ್ಕೆ ಭೇಟಿ ನೀಡಿದ ಅವರು ತಮ್ಮ ಪ್ರವಾಸದ ಹೆಚ್ಚಿನ ಅವಧಿಯನ್ನು ಗುಜರಾತಿನಲ್ಲೆ ಕಳೆಯಲಿದ್ದಾರಂತೆ.ಬಾಹ್ಯಾಕಾಶದಲ್ಲಿ ಅತಿ ದೀರ್ಘ ಕಾಲ ವಾಸಿಸಿದ ದಾಖಲೆ ಆಕೆಯ ಹೆಸರಿನಲ್ಲೇ ಇದೆ.
*ಅಶೋಕ್‍ಕುಮಾರ್ ಎ.

Monday, September 17, 2007

ವಿಶ್ವದ ಮಹಾಮಲಿನ ಸ್ಥಳಗಳಲ್ಲಿ ಭಾರತಕ್ಕೆ ಸ್ಥಾನ!



ಕೈಗಾರಿಕೆಗಳು ಪರಿಸರ ಮಾಲಿನ್ಯಕ್ಕೆ ಕಾರಣವಾಗುವುದು ನಮ್ಮ ಅನುಭವಕ್ಕೆ ಬರುತ್ತಿರುತ್ತದೆ.ವಿಶ್ವದ ಅತಿಮಲಿನ ಸ್ಥಳಗಳ ಪಟ್ಟಿ ಪ್ರಕಟವಾಗಿದೆ.ದುರಂತವೆಂದರೆ,ಈ ಪಟ್ಟಿಯಲ್ಲಿ ಭಾರತದ ಎರಡು ಸ್ಥಳಗಳು ಸ್ಥಾನ ಪಡೆದಿವೆ.ಸುಕಿಂದ ಕ್ರೊಮಿಯಮ್ ಗಣಿಗಾರಿಕೆಯಿಂದ ನೀರು ಮಲಿನವಾಗಿದೆಯಂತೆ.ಇಲ್ಲಿನ ಕೆಲಸಗಾರರು ಅದೇ ನೀರನ್ನು ಕುಡಿಯಲು,ದೈನಂದಿನ ಕೆಲಸಗಳಿಗೆ ಬಳಸುವುದರಿಂದ ವಿವಿಧ ರೋಗಗಳಿಗೆ ತುತ್ತಾಗುತ್ತಾರೆ.ಜತೆಗೆ ಬಂಜೆತನ,ವಿಕಲಾಂಗ ಮಕ್ಕಳ ಜನನ ಸಾಮಾನ್ಯ.ಪ್ರಸಿದ್ಧ ಟಾಟಾ ಸ್ಟೀಲ್ ಕಂಪೆನಿ ಈ ಗಣಿಯನ್ನು ನಡೆಸುತ್ತಿದೆ.ಜಂಶದ್‍ಪುರದ ಬಳಿ ಈ ಗಣಿಗಳಿವೆ.ಗುಜರಾತಿನ ವಪಿ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಇನ್ನೊಂದು ಪಟ್ಟಣ.ಇದಕ್ಕೆ ಕಾರಣವಾಗಿರುವುದು ನೀರಿನ ಮಾಲಿನ್ಯವೇ ಆಗಿದೆ.ಈ ನಗರದಲ್ಲಿರುವ ಅಪಾರ ಸಂಖ್ಯೆಯ ಕೈಗಾರಿಕೆಗಳು ರಾಸಾಯಿನಿಕ,ಕ್ರಿಮಿನಾಶಕಗಳು,ಬಣ್ಣಗಳ ತಯಾರಿಯಲ್ಲಿ ತೊಡಗಿದ್ದು,ಇಲ್ಲಿನ ನೀರಿನ ಮೂಲಗಳು ಮಲಿನವಾಗಲು ಕಾರಣವಾಗಿವೆ.ಇಲ್ಲಿ ಲಭ್ಯ ನೀರಿನಲ್ಲಿ ಪಾದರಸದ ಮಟ್ಟ ಸಾಮಾನ್ಯ ಮಟ್ಟಕ್ಕಿಂತ ತೊಂಭತ್ತಾರು ಪಟ್ಟು ಹೆಚ್ಚು!
ಈ ಪಟ್ಟಿಯಲ್ಲಿ ರಷ್ಯಾದ ನಾಲ್ಕು ಸ್ಥಳಗಳು ಇವೆ.ಬ್ಲಾಕ್‍ಸ್ಮಿತ್ ಇನ್ಸ್‍ಸ್ಟಿಟ್ಯೂಟ್ ಎನ್ನುವ ಸ್ವತಂತ್ರ ಪರಿಸರ ಸಂಸ್ಥೆಯು ನಡೆಸಿದ ಸಮೀಕ್ಷೆಯಿಂದ ಈ ಪಟ್ಟಿಯನ್ನು ತಯಾರಿಸಲಾಗಿದೆ.ಕಲ್ಲಿದ್ದಲು ಗಣಿಗಳ ಕಾರಣ ಮಲಿನವಾಗಿರುವ ಎರಡು ಚೀನಾದ ಪಟ್ಟಣಗಳೂ ಪಟ್ಟಿಯಲ್ಲಿ ಸೇರಿವೆ.
ಗುಂಡು ನಿರೋಧಕ ಶಾಲಾ ಚೀಲ
ಭಾರತದಲ್ಲಿ ಶಾಲಾ ಮಕ್ಕಳು ಶಿಕ್ಷಕರ ದೌರ್ಜನ್ಯಕ್ಕೆ ತುತ್ತಾಗುವುದು ಹೆಚ್ಚಾಗುತ್ತಿದೆ.ಅಮೆರಿಕದಲ್ಲಿ ಹಾಗಿಲ್ಲ.ಬದಲಾಗಿ ಅಲ್ಲಿ ಶಾಲೆಗಳಲ್ಲಿ ಹಿಂಸಾ ಪ್ರಕರಣಗಳು ನಡೆಯುತ್ತವೆ.ಮಕ್ಕಳು ಬೇಕಾಬಿಟ್ಟಿ ಗುಂಡೆಸೆಯುವುದು,ಇರಿಯುವಂತಹ ಘಟನೆಗಳು ನಡೆಯುವುದಿದೆ.ಕೊಲಂಬಿಯಾದಲ್ಲಿ 1999ದಲ್ಲಿ ನಡೆದ ಗುಂಡೆಸೆತ ಪ್ರಕರಣದಿಂದ ಚಿಂತಿತರಾದ ಈರ್ವರು ಹೆತ್ತವರು ಮಕ್ಕಳನ್ನು ಇಂತಹ ಘಟನೆಗಳಿಂದ ರಕ್ಷಿಸಲು ಉಪಯುಕ್ತವಾದ ಗುಂಡು ನಿರೋಧಕ ಚೀಲವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ.ಈ ಬ್ಯಾಗನ್ನು ಶರೀರದ ಅಡ್ಡ ಹಿಡಿದು ಗುಂಡೆಸೆತದಿಂದ ಬಚಾವಾಗಬಹುದಂತೆ.ಹಾಗೆಯೇ ಇದನ್ನು ಬೆನ್ನಿಗೆ ನೇತು ಹಾಕಿಕೊಂಡರೆ,ಹಿಂದಿನಿಂದ ಬಂದು ಇರಿಯುವ ಪ್ರಕರಣ ನಡೆದರೆ ರಕ್ಷಣೆ ಸಿಗುತ್ತದೆ.ಚೀಲವನ್ನು ಶಾಲೆಯಲ್ಲೂ ತೆಗೆದಿರಿಸುವುದರಿಂದ ಗುಂಡು ನಿರೋಧಕ ಚೀಲಗಳಿಂದ ಪ್ರಯೋಜನ ಸಿಗದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.ಈ ಚೀಲ ನೂರೆಪ್ಪತ್ತೈದು ಡಾಲರಿಗೆ ಮಾರಾಟವಾಗುತ್ತಿದೆ.ಮಕ್ಕಳು ಬಂದೂಕ,ಚೂರಿಯನ್ನು ಶಾಲೆಗೆ ತರುವುದನ್ನು ತಡೆಯಲು ಪಾರದರ್ಶಕ ಶಾಲಾ ಚೀಲಗಳನ್ನು ಕಡ್ಡಾಯಗೊಳಿಸಿದ ಶಾಲೆಗಳೂ ಅಲ್ಲಿವೆ!
ಸೆಲ್‍ಪೋನ್ ಸ್ಥಳೀಯ ಕರೆಗಳನ್ನು ಉಚಿತವಾಗಿಸುವ ತಾಂತ್ರಿಕತೆ
ನೆಟ್‍ವರ್ಕ್ ಲಭ್ಯವಿಲ್ಲದ ಕಡೆ ಸಮೀಪದಲ್ಲೇ ಇರುವ ಇನ್ನೊಂದು ಮೊಬೈಲಿಗೆ ಕರೆ ಮಾಡಬೇಕೇ? ಇಂತಹ ಒಂದು ಪೋನಿನಿಂದ ಇನ್ನೊಂದಕ್ಕೆ ನೇರ ಕರೆ ಮಾಡುವ ಸಮಾನಸ್ಕಂಧರ ನಡುವಣ ಕರೆ ಮಾಡುವ ತಾಂತ್ರಿಕತೆಯನ್ನು ಟೆರಾನೆಟ್ ಎನ್ನುವ ಸ್ವೀಡಿಶ್ ಕಂಪೆನಿ ಅಭಿವೃದ್ಧಿ ಪಡಿಸಿದೆ.ಈ ತಾಂತ್ರಿಕತೆಯು ಕಂಪ್ಯೂಟರ್ ಜಾಲಗಳಲ್ಲಿ ವಿಡಿಯೊ,ಸಂಗೀತ ಮತ್ತಿತರ ಕಡತಗಳ ವಿತರಣೆಗೆ ಬಳಕೆಯಾಗುತ್ತಿದೆ.ಸೆಲ್‍ಪೋನಿನಿಂದ ಈ ತೆರನ ಕರೆ ಮಾಡಿದಾಗ,ಅದು ತನ್ನ ಸುತ್ತ ಬೇಕಾದ ನಂಬರಿನ ಮೊಬೈಲ್‍ನ ಸಂಕೇತ ಬರುತ್ತಿದೆಯೇ ಎಂದು ಪರೀಕ್ಷಿಸುತ್ತದೆ.ಬರುತ್ತಿದ್ದರೆ,ಆ ಪೋನಿಗೆ ಸಂಕೇತ ರವಾನಿಸಿ,ಕರೆಯೇರ್ಪಡುತ್ತದೆ.ಒಂದು ವೇಳೆ ಆ ನಂಬರಿನ ಫೋನ್ ಇಲ್ಲವಾದರೆ,ಲಭ್ಯವಿರುವ ಇತರ ಪೋನುಗಳ ಮೂಲಕ ಸಂಕೇತಗಳನ್ನು ದೂರಕ್ಕೆ ರವಾನಿಸಿ,ಕರೆಯೇರ್ಪಡಿಸುವ ಪ್ರಯತ್ನ ನಡೆಯುತ್ತದೆ.ಪ್ರತಿ ಮೊಬೈಲ್ ಕೂಡಾ ತನ್ನ ಸುತ್ತಲಿನ ಒಂದು ಕಿಲೋಮೀಟರ್ ತ್ರಿಜ್ಯದ ಪ್ರದೇಶಕ್ಕೆ ಸಂಕೇತಗಳನ್ನು ರವಾನಿಸಬಲ್ಲುದು.ಇತರ ಮೊಬೈಲುಗಳ ಸಹಾಯ ಪಡೆದು,ಜಾಲವೇರ್ಪಡಿಸಿಕೊಂದು ಕರೆಗಳನ್ನು ದೂರದಲ್ಲಿರುವ ಮೊಬೈಲುಗಳಿಗೆ ಮಾಡುವ ಪ್ರಯತ್ನ ಇಲ್ಲಿ ನಡೆಯುತ್ತದೆ.ಕಂಪೆನಿಯ ನೆಟ್‍ವರ್ಕ್‍ನ ಸಹಾಯ ಪಡೆಯದೆ ಈ ಕರೆ ಮಾಡಲಾಗುವ ಕಾರಣ,ಕರೆಗೆ ಶುಲ್ಕವಿರದು.ಹಳ್ಳಿಗಾಡಿನ ಪ್ರದೇಶಗಳಲ್ಲಿ ಈ ತಾಂತ್ರಿಕತೆ ಹೆಚ್ಚು ಉಪಯುಕ್ತವಾಗಲಿದೆ. ಮೊಬೈಲ್ ವ್ಯಾಪ್ತಿಯಿಲ್ಲದೆ,ಜನರಲ್ಲಿ ಮೊಬೈಲ್ ಸಾಧನ ಇದ್ದಾಗಲಷ್ಟೇ ತಂತ್ರಜ್ಞಾನ ಪ್ರಯೋಜನಕಾರಿ.ಕರೆಗಳ ಒತ್ತಡ ಹೆಚ್ಚಿದ್ದರೆ ವ್ಯವಸ್ಥೆ ವಿಫಲವಾಗಬಹುದು.ಆದರೆ ಹಳ್ಳಿಗಾಡಿನ ಸ್ಥಳಗಳಲ್ಲಿ ಅಧಿಕ ಕರೆಗಳ ಒತ್ತಡ ಏರ್ಪಡುವ ಸಾಧ್ಯತೆ ಕಡಿಮೆ ತಾನೇ?ಇಂತಹ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳಲು ಸೆಲ್‍ಕಂಪೆನಿಗಳಿಗೆ ಉತ್ಸಾಹ ಇಲ್ಲ.ಆದಾಯಕ್ಕೆ ಕೊರೆಯೊಡ್ಡುವ ತಾಂತ್ರಿಕತೆಯನ್ನು ಅವೇಕೆ ಬಯಸುತ್ತವೆ?
ಖಾಸಗಿ ಚಂದ್ರಾಯಾನದ ಸ್ಪರ್ಧೆ
ಗೂಗಲ್ ಮತ್ತು ಎಕ್ಸ್-ಸ್ಪೇಸ್ ಫೌಂಡೇಶನ್ ಎಂಬ ಸಂಸ್ಥೆಗಳು ಜಂಟಿಯಾಗಿ ಖಾಸಗಿ ಚಂದ್ರಾಯಾನ ಕೈಗೊಳ್ಳಲು ಪ್ರೋತ್ಸಾಹಿಸಲೋಸುಗ ಸ್ಪರ್ಧೆ ಏರ್ಪಡಿಸಿವೆ.2012ರ ವರೆಗೆ ತೆರೆದಿರುವ ಸ್ಪರ್ಧೆಯ ಪ್ರಥಮ ಬಹುಮಾನ ಇಪ್ಪತ್ತು ದಶಲಕ್ಷ ಡಾಲರುಗಳು.ಐದು ದಶಲಕ್ಷ ಡಾಲರಿನ ದ್ವಿತೀಯ ಬಹುಮಾನವೂ ಇದೆ.ಬಹುಮಾನ ಪಡೆಯಲು ಚಂದ್ರನಲ್ಲಿಗೆ ಬಾಹ್ಯಾಕಾಶ ವಾಹನವನ್ನು ಉಡ್ಡಯಿಸಿ,ಅಲ್ಲಿ ಯಶಸ್ವಿಯಾಗಿ ಇಳಿಯಬೇಕು.ಚಂದ್ರನ ನೆಲದ ಮೇಲೆ ಐನೂರು ಅಥವ ಹೆಚ್ಚು ದೂರ ಸಾಗಿ,ನಿಗದಿತ ದತ್ತಾಂಶ,ವಿಡಿಯೋ ಚಿತ್ರೀಕರಣ ಮತ್ತು ಪರೀಕ್ಷಾ ಕಾರ್ಯಗಳನ್ನು ಕೈಗೊಳ್ಳಬೇಕು.ದ್ವಿತೀಯ ಬಹುಮಾನ ಗೆಲ್ಲಲು ಬಾಹ್ಯಾಕಾಶ ವಾಹನ ಚಂದ್ರನಲ್ಲಿಳಿದು,ಕೆಲವು ಚಿತ್ರಗಳನ್ನು ತೆಗೆಯಬೇಕು.ವಾಹನದಲ್ಲಿ ಅತ್ಯುತ್ತಮ ಗುಣಮಟ್ಟದ ವಿಡಿಯೋ ಕ್ಯಾಮರಾವನ್ನು ಅಳವಡಿಸಿರಬೇಕೆಂಬ ನಿಯಮವೂ ಇದೆ.ಒಂದು ವೇಳೆ 2012ರ ವರೆಗೂ ಬಹುಮಾನ ವಿಜೇತರು ಹೊರಹೊಮ್ಮದಿದ್ದರೆ,ಮತ್ತೆರಡು ವರ್ಷ ಕಾಲ ಸ್ಪರ್ಧೆಯ ಅವಧಿಯನ್ನು ವಿಸ್ತರಿಸಲಾಗುತ್ತದೆ.
*ಅಶೋಕ್‍ಕುಮಾರ್ ಎ

ಪಾಪ್‍ಕಾರ್ನ್ ತಿಂದು ರೋಗ?

ಕೊಲೆರಾಡೋದ ವ್ಯಕ್ತಿಯೋರ್ವನಿಗೆ ಪಾಪ್‍ಕಾರ್ನ್ ತಿನ್ನುವ ಹುಚ್ಚು.ಸಾಮಾನ್ಯ ಪಾಪ್‍ಕಾರ್ನ್ ಅಲ್ಲ.ಮೈಕ್ರೋವೇವ್‍ನಲ್ಲಿ ತಯಾರಿಸಿದ-ಕೃತಕ ಬೆಣ್ಣೆ ಹಾಕಿದ ಪಾಪ್‍ಕಾರ್ನ್.ವಾರಕ್ಕೆರಡು ಬಾರಿಯಾದರೂ ಪಾಪ್‍ಕಾರ್ನ್ ತಿನ್ನುವ ಕ್ರಮವನ್ನು ಕಳೆದ ಹತ್ತು ವರ್ಷಗಳಿಂದ ಬೆಳೆಸಿಕೊಂಡಿದ್ದಾನೆ.ಈಗಾತನ ಶ್ವಾಸಕೋಶಗಳು ಹಾನಿಗೊಳಗಾಗಿವೆ.ವೈದ್ಯರು ಆತನನ್ನು ಪರೀಕ್ಷಿಸಿ,ಪಾಪ್‍ಕಾರ್ನ್ ತಿನ್ನುವ ಚಟವೇ ಆತನಿಗೆ ಮುಳುವಾಗಿರಬಹುದು ಎಂದು ಸಂದೇಹಿಸಿದ್ದಾರೆ.ಆತನ ಶ್ವಾಸಕೋಶವನ್ನು ಪರೀಕ್ಷೆಗೊಳಪಡಿಸಿದಾಗ,ಅದರಲ್ಲಿ ಡೈಅಸಿಟೈಲ್ ಅನ್ನುವ ರಾಸಾಯಿನಿಕದ ಅಂಶ ಅಧಿಕವಾಗಿರುವುದು ಕಂಡು ಬಂತು.ಡೈಅಸಿಟೈಲ್ ಅನ್ನುವುದು ಕೃತಕ ಬೆಣ್ಣೆಯಲ್ಲಿ ಉಪಯೋಗಿಸುವ ರಾಸಾಯಿನಿಕ.ಮೈಕೋವೇವ್‍ನಲ್ಲಿ ತಯಾರಿಸುವ ಪಾಪ್‍ಕಾರ್ನ್‌ನ್ನು ಸುವಾಸಿತವಾಗಿಸಲು ಇದನ್ನು ಬಳಸುತ್ತಾರಂತೆ.ಮೈಕ್ರೋವೇವ್ ಪಾಪ್‍ಕಾರ್ನ್ ತಯಾರಿಕಾ ಘಟಕಗಳ ಕೆಲಸಗಾರರು ಡೈಅಸಿಟೈಲ್ ರಾಸಾಯಿನಿಕದ ಆವಿಯನ್ನು ಉಸಿರಾಡುವುದರಿಂದ,ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗಕ್ಕೆ ತುತ್ತಾಗುವುದು ಹಿಂದಿನಿಂದಲೂ ತಿಳಿದಿತ್ತು.ಆದರೆ ಬಳಕೆದಾರರಲ್ಲಿ ಅಂತಹ ರೋಗ ಕಂಡು ಬರುವುದು ಇದೇ ಮೊದಲು.ತಿನ್ನುವ ಮೊದಲು ಪ್ಯಾಕೆಟ್ ಒಡೆದು,ಅದರ ಪರಿಮಳ ಆಘ್ರಾಣಿಸುವ ಅಭ್ಯಾಸ ಆ ವ್ಯಕ್ತಿಗೆ ಮುಳುವಾಯಿತಿರಬೇಕೆಂದು ವೈದ್ಯರ ಸಂದೇಹ.ಪಾಪ್‍ಕಾರ್ನ್ ತಯಾರಿಸುವ ಕಂಪೆನಿ ಡೈಅಸಿಟೈಲ್ ಅಪಾಯಕಾರಿ ಎಂದು ಒಪ್ಪುತ್ತಿಲ್ಲವಾದರೂ ಸದ್ಯ ಅದರ ಬಳಕೆ ನಿಲ್ಲಿಸಲು ತೀರ್ಮಾನಿಸಿದೆಯಂತೆ.
ಸ್ಪರ್ಧೆಯಲ್ಲಿ ಗೆಲ್ಲಿ,ಬಾಹ್ಯಾಕಾಶಯಾನಿಯಾಗಿ!
ದಕ್ಷಿಣ ಕೊರಿಯಾದ ವ್ಯಕ್ತಿ ರಶ್ಯಾದ ಸೊಯೂಜ್ ಬಾಹ್ಯಾಕಾಶ ವಾಹನದಲ್ಲಿ ಯಾತ್ರೆ ಕೈಗೊಳ್ಳುವ ಕಾರ್ಯಕ್ರಮವಿದೆ.ಇದಕ್ಕೆ ಯಾರಾಗಬಹುದು ಎನ್ನುವುದನ್ನು ನಿರ್ಧರಿಸಲು ಸ್ಪರ್ಧೆಯೊಂದು ನಡೆದಿತ್ತು.ಮೂವತ್ತಾರು ಸಾವಿರ ಉಮೇದುವಾರರೂ ಇದ್ದರು.ಕೊನೆಗೂ ಕೋ ಸಾನ್ ಅನ್ನುವಾತ ಯಿ-ಸೋ-ಯಾನ್ ಎನ್ನುವ ಮಹಿಳೆಯನ್ನು ಹಿಂದಿಕ್ಕಿ ವಿಜಯಿಯಾಗಿದ್ದಾನೆ.ಬಹುಮಾನವಾಗಿ ಆತ ಮುಂದಿನ ಎಪ್ರಿಲ್ ವೇಳೆ ಬಾಹ್ಯಾಕಾಶಕ್ಕೆ ಹೋಗಲಿದ್ದಾನೆ.ಮೂರು ವರ್ಷಗಳ ಹಿಂದೆ ಬಾಕ್ಸಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಗೆದ್ದಿದ್ದ ಸಾಧನೆಯನ್ನು ಆತ ಮಾಡಿದ್ದಿದೆ.ಸಂಶೋಧಕನಾದ ಈತ ಮೂವತ್ತರ ಹರೆಯದವ.ಸದ್ಯ ತರಬೇತಿ ರಶ್ಯಾದಲ್ಲಿ ನಡೆಯುತ್ತಿದೆ.ಮುಂದಿನ ವರ್ಷ ರಾಕೆಟ್ ಉಡಾಯಿಸುವ ಯೋಜನೆಯನ್ನು ಕೊರಿಯಾ ಹೊಂದಿದೆ.ಸಣ್ಣ ಉಪಗ್ರಹವನ್ನು ಕಕ್ಷೆಯಲ್ಲಿರಿಸಲು ಅದು ಪ್ರಯತ್ನಿಸಲಿದೆ.
ಐಪಾಡ್ ಈಗ ಅಗ್ಗ
ಎಂಟು ಗಿಗಾಬೈಟ್ ಸಾಮರ್ಥ್ಯದ ಐಪಾಡ್ ಬೆಲೆ ಈಗ ಆರುನೂರು ಡಾಲರಿನಿಂದ ನಾಲ್ಕುನೂರು ಡಾಲರಿಗೆ ಇಳಿದಿದೆ.ನಾಲ್ಕು ಗಿಗಾಬೈಟು ಸಾಮರ್ಥ್ಯದ ಐಪಾಡ್‍ಗಳ ಉತ್ಪಾದನೆ ನಿಲ್ಲಿಸಲೂ ಆಪಲ್ ಕಂಪೆನಿ ತೀರ್ಮಾನಿಸಿದೆಯಂತೆ. ಮೂರು ತಿಂಗಳ ಹಿಂದೆ ಐಪಾಡ್ ಮಾರುಕಟ್ಟೆಯಲ್ಲಿ ಲಭ್ಯವಾಗಿತ್ತು.ಐಪಾಡ್,ಮೊಬೈಲಿನಲ್ಲಿ ಹಾಡನ್ನು ಆಲಿಸುವ ಸೌಲಭ್ಯ ನೀಡುವ ಸಾಧನ ಎನ್ನುವುದು ನಿಮಗೆ ಗೊತ್ತೇ ಇದೆ.ಆಪಲ್ ಕಂಪೆನಿ ತನ್ನ ಸಾಧನಗಳ ಬೆಲೆ ಇಳಿಕೆ ಮಾಡುವ ಪರಿಪಾಟ ಹೊಂದಿಲ್ಲ. ಹೊಸ ಆವೃತ್ತಿಗಳಲ್ಲಿ ಹೆಚ್ಚು ಹೆಚ್ಚು ಸೌಲಭ್ಯ ಒದಗಿಸಿ,ಬೆಲೆ ಕಾಯ್ದುಕೊಳ್ಳುವುದು ಕಂಪೆನಿ ಹಿಂದಿನಿಂದ ಪಾಲಿಸಿಕೊಂಡು ಬಂದ ಕ್ರಮ. ಈಗ ಏಕಾಏಕಿ ಬೆಲೆ ಇಳಿಕೆ ಜನರಿಗೆ ಆಶ್ಚರ್ಯ ತಂದಿದೆ.ಇತ್ತೀಚೆಗೆ ಐಪಾಡ್ ಖರೀದಿಸಿದವರಿಗೆ ನಿರಾಸೆಯಾಗದಂತೆ,ಕಳೆದ ಪಾಕ್ಷಿಕದಲಿ ಖರೀದಿಸಿದ ಗ್ರಾಹಕರಿಗೆ ಇನ್ನೂರು ಡಾಲರು ವಾಪಸ್ಸು ಮಾಡಲು ಆಪಲ್ ನಿರ್ಧರಿಸಿದೆ.
ಹೊಸ ಮಾಡೆಲುಗಳಲ್ಲಿ ಸ್ಪರ್ಶಸಂವೇದಿ ತೆರೆಯಿದೆ.ನಿಸ್ತಂತು ಮೂಲಕ ಸಮೀಪದ ಐಟ್ಯೂನ್ ಅಂಗಡಿಗಳಿಂದ ಸಂಗೀತವನ್ನು ಐಪಾಡಿಗೆ ಇಳಿಸಿಕೊಳ್ಳಲು ಸಾಧ್ಯ.ನ್ಯಾನೋ ಎನ್ನುವ ಜನಪ್ರಿಯ ಮಾದರಿಯಲ್ಲಿ ವಿಡಿಯೋ ವೀಕ್ಷಿಸುವ ಸೌಲಭ್ಯವೂ ಇದೆ.ಐಪಾಡ್ ಕ್ಲಾಸಿಕ್‍ನಲ್ಲಿ ನೂರರುವತ್ತು ಗಿಗಾಬೈಟ್ ಸಾಮರ್ಥ್ಯವಿದೆ.
ಕಾರಿನಲ್ಲಿ ವಿದ್ಯುತ್ ಮೋಟಾರ್ ಬಳಕೆ: ಅಧಿಕ ಮೈಲೇಜ್
ಕಾರಿನ ಇಂಜಿನ್‍ನಿಂದ ಪವರ್ ಸ್ಟಿಯರಿಂಗ್,ಏಸಿ ವ್ಯವಸ್ಥೆ,ಬ್ರೇಕ್ ವ್ಯವಸ್ಥೆ ಇತ್ಯಾದಿಗಳಿಗೆ ಚಾಲನಶಕ್ತಿಯನ್ನು ಬೆಲ್ಟ್ ಬಳಸಿ ಒದಗಿಸುವುದು ಸಾಮಾನ್ಯ ಕ್ರಮ. ಆದರೆ ಬೆಲ್ಟ್ ಬಳಕೆಯಿಂದ ಇಂಜಿನ್ ದಕ್ಷತೆ ತಗ್ಗುತ್ತದೆ. ಮೈಲೇಜ್ ಕಡಿಮೆಯಾಗುತ್ತದೆ.ಏರುತ್ತಿರುವ ಇಂಧನದ ಬೆಲೆಗಳು ಮತ್ತು ಸರಕಾರಿ ನಿಯಮಗಳನ್ನು ಪಾಲಿಸಲು ಕಾರ್ ತಯಾರಿಕಾ ಕಂಪೆನಿಗಳಾದ ಟೊಯೊಟಾ,ಫೋರ್ಡ್ ಕಂಪೆನಿಗಳು ವಿದ್ಯುತ್ ಮೋಟಾರು ಬಳಕೆ ಆರಂಭಿಸಿವೆ.ವಾಹನದ ಚಲನೆಗೆ ಇಂಜಿನ್ ಬಳಕೆಯಾಗುತ್ತದಾದರೂ,ಇತರ ವ್ಯವಸ್ಥೆಗಳಾದ ಏಸಿ,ಪವರ್ ಸ್ಟಿಯರಿಂಗ್,ಬ್ರೇಕಿಂಗ್ ಮುಂತಾದ ವ್ಯವಸ್ಥೆಗಳಿಗೆ ಚಾಲನಶಕ್ತಿ ಒದಗಿಸಲು ಪ್ರತ್ಯೇಕ ವಿದ್ಯುತ್ ಮೋಟಾರು ಬಳಸಲಾಗುತ್ತಿದೆ.ಇದರಿಂದ ಕಾರಿನ ದಕ್ಷತೆ ಶೇಕಡಾ ಎಂಟರಷ್ಟು ಏರಿಕೆಯಾಗುತ್ತದೆಯಂತೆ.ದಕ್ಷತೆ ಜತೆಗೆ ವಾಹನದ ರಿಪೇರಿ ಸಾಧ್ಯತೆ ಇಳಿಯುವುದು ಇನ್ನೊಂದು ಲಾಭ.ಬೆಲ್ಟ್ ಕಡಿಯುವುದು ಇಂತಹ ಸಮಸ್ಯೆ ಇಲ್ಲದಿರುವುದು ಇದಕ್ಕೆ ಕಾರಣ.ಅಲ್ಲದೆ ವಿದ್ಯುತ್ ಮೋಟಾರಿಗೆ ಸಂವೇದಕಗಳನ್ನು ಅಳವಡಿಸಿ,ಕಾರಿನಲ್ಲಿ ಹೆಚ್ಚು ಸೌಲಭ್ಯಗಳನ್ನು ಕೊಡಬಹುದು.ಕಾರು ವೇಗದಲ್ಲಿ ಸಾಗುವಾಗ ಒಂದು ಲೇನಿನಿಂದ ಇನ್ನೊಂದಕ್ಕೆ ಸಾಗದಂತೆ ತಡೆಯುವ ಸ್ವಯಂಚಾಲೀ ವ್ಯವಸ್ಥೆಗಳನ್ನು ವಿದ್ಯುತ್ ಮೋಟಾರು ಅಳವಡಿಸಿದ ಕಾರುಗಳಲ್ಲಿ ಒದಗಿಸಬಹುದು.
ಗೂಗಲ್‍ಗೆ ಸ್ಪರ್ಧೆ ನೀಡಲು ಜಪಾನ್ ಕಂಪೆನಿಗಳ ತೀರ್ಮಾನ
ಅಂತರ್ಜಾಲ ಶೋಧಿಸುವ ಸೇವೆ ಒದಗಿಸುವುದರಲ್ಲಿ ಮನೆ ಮಾತಾಗಿರುವ ಗೂಗಲಿಗೆ ಸ್ಪರ್ಧೆ ನೀಡುವ ಶೋಧಕವನ್ನು ತಯಾರಿಸಲು ಜಪಾನಿನ ಟೆಕ್ ಕಂಪೆನಿಗಳು ಮುಂದಾಗಿವೆ.ಈ ಕೆಲಸಕ್ಕೆ ನೂರ ಮೂವತ್ತು ಮಿಲಿಯನ್ ದಶಲಕ್ಷ ಡಾಲರು ಬಜೆಟ್ ಒದಗಿಸಲಾಗಿದೆ.ಹಿಟಾಚಿ,ಸೋನಿ,ಟೊಯೋಟಾ,ಎನ್ ಇ ಸಿ ಮುಂತಾದ ಕಂಪೆನಿಗಳ ಐಟಿ ವಿಭಾಗಗಳು ಈ ಕೆಲಸದಲ್ಲಿ ಕೈಜೋಡಿಸಿವೆ.
*ಅಶೋಕ್‍ಕುಮಾರ್ ಎ

ಅಂಚೆ ವಾಹನಗಳಿಗೂ ಜಿಪಿಎಸ್

ಅಂಚೆ ಇಲಾಖೆಯ ಅಂಚೆ ವಾಹನಗಳ ಓಡಾಟವನ್ನು ಗಮನಿಸಲು ಸ್ಥಾನ ಪತ್ತೆ ಮಾಡುವ ಜಿಪಿಎಸ್ ವ್ಯವಸ್ಥೆಯನ್ನು ಬಳಸಲಾಗುತ್ತಿದೆ.ಚೆನ್ನೈನ ಅಂಚೆ ಸಾಗಿಸುವ ಐದು ವಾಹನಗಳಿಗೆ ಪ್ರಾಯೋಗಿಕವಾಗಿ ಜಿಪಿಎಸ್ ವ್ಯವಸ್ಥೆಯ ಸಾಧನ ಅಳವಡಿಸಲಾಗಿದೆ.ಹೀಗಾಗಿ ಆ ವಾಹನಗಳು ಎಲ್ಲಿ ಸಾಗುತ್ತಿವೆ ಎನ್ನುವುದನ್ನು ಕಚೇರಿಯಿಂದ ಗಮನಿಸುವುದು ಸಾಧ್ಯವಾಗುತ್ತದೆ.ಇದೇ ರೀತಿ ಸಾರಿಗೆ ವಾಹನಗಳಿಗೆ ಜಿಪಿಎಸ್ ಅಳವಡಿಸುವ ಆಲೋಚನೆ ಕರಾವಳಿಯ ಖಾಸಗಿ ಬಸ್ ಮಾಲಕರು ಮಾಡಿದ್ದಾರೆ.ಸಾರಿಗೆ ಕಚೇರಿಯ ಅಧಿಕಾರಿಗಳಿಗೆ ಬಸ್‍ಗಳ ಓಡಾಟದ ಮೇಲೆ ಕಣ್ಣಿಡಲು ಸಾಧ್ಯವಾಗಿಸುವುದು ಈ ಯೋಜನೆಯ ಉದ್ದೇಶ. ಆದರೆ ಅದಿನ್ನೂ ಜಾರಿಗೆ ಬಂದಾಂತಿಲ್ಲ.
ಹೊಸ ತಲೆಮಾರಿನ ಶಾರ್ಟ್‍ಹ್ಯಾಂಡ್
ಬಾಸ್ ಹೇಳಿದ್ದನ್ನು ಬರೆದುಕೊಳ್ಳಲು ಶಾರ್ಟ್‍ಹ್ಯಾಂಡ್ ವಿಧಾನ ಬಳಸುತ್ತಿದ್ದ ಪಿ.ಎ.ಗಳು ಈಗ ಕಾಣಸಿಗದಿರಬಹುದು.ಆದರೆ ಮೊಬೈಲಿನಲ್ಲಿ ಕಿರುಸಂದೇಶ ಸೇವೆ ಬಳಸುವ ಯುವಜನತೆ ತಮ್ಮದೇ ಆದ ಹೊಸ ಶಾರ್ಟ್‍ಹ್ಯಾಂಡ್ ಅಭಿವೃದ್ಧಿ ಪಡಿಸುತ್ತಿದ್ದಾರೆ.ಅಂತರ್ಜಾಲ ಚ್ಯಾಟಿಂಗ್‍ಗಳಲ್ಲೂ ಈ ತೆರನ ಪದಗುಚ್ಛಗಳ ಪ್ರಯೋಗ ಕಂಡುಬಂದಾಗ ಹೊಸಬರಿಗೆ ಗಲಿಬಿಲಿ ಆಗುವುದು ಸರ್ವೇಸಾಮಾನ್ಯ.GI ಅಂದರೆ Google It,B2W aMdare Back To Work,U2D ಅಂದರೆ Up To Date,LOL ಅಂದರೆ Lots Of Luck!
ಅಂತರ್ಜಾಲದಲ್ಲಿ ಚಂದ್ರಯಾತ್ರೆಯ ಚಿತ್ರಗಳು
1969ರ ಅಪೊಲೋ ಬಾಹ್ಯಾಕಾಶ ವಾಹನದ ಮೂಲಕ ಚಂದ್ರಯಾತ್ರೆಯ ಚಿತ್ರಗಳೀಗ ಅಂತರ್ಜಾಲದ ಮೂಲಕ ಲಭ್ಯವಿವೆ.ಇದು ವರೆಗೆ ನಾಸಾದ ಅಂತರ್ಜಾಲ ತಾಣದಲ್ಲಿ ಚಿತ್ರಗಳು ಸಿಗುತ್ತಿದ್ದವಾದರೂ,ಅವುಗಳ ಸ್ಪಷ್ಟವಾದ ಚಿತ್ರಗಳಾಗಿರಲಿಲ್ಲ.ಈಗ ಒಂದೆಡೆ ಇವನ್ನು ಲಭ್ಯವಾಗಿಸಲಾಗಿದ್ದು,ಚಿತ್ರಗಳು ಅತ್ಯುತ್ತಮ ಸ್ಕ್ಯಾನರ್ ಮೂಲಕ ಸ್ಕ್ಯಾನ್ ಮಾಡಿದ ಕಾರಣ ಅತ್ಯಂತ ಸ್ಪಷ್ಟವಾಗಿವೆ.ಆದ ಕಾರಣ ಕೆಲವು ಚಿತ್ರಗಳೂ ಗಿಗಾಬೈಟುಗಳಷ್ಟು ದೊಡ್ಡದಿವೆ.http://apollo.sese.asu.edu/ ಈ ವಿಳಾಸದಲ್ಲಿ ಚಿತ್ರಗಳು ಲಭ್ಯವಿವೆ.ಈ ಚಂದ್ರಯಾತ್ರೆಯೇ ನಡೆದಿಲ್ಲ,ಚಿತ್ರಗಳೆಲ್ಲಾ ಪೊಳ್ಳು ಎನ್ನುವ ಆರೋಪಗಳೂ ಇವೆ.
ಬ್ಲಾಗ್ ಮೂಲಕ ವೈರಸ್ ದಾಳಿ
ಅಂತರ್ಜಾಲದ ವೈರಸ್ ದಾಳಿಗಳ ಬಗ್ಗೆ ನೀವು ಕೇಳಿದ್ದೀರಿ.ಇ-ಮೇಲ್ ಮೂಲಕ ಬರುವ ಸಂದೇಶಗಳು ಇಂತಹ ವೈರಸ್ ಹೊತ್ತು ಬಂದು,ಅದರ ಜತೆ ಬಂದ ಕಡತವನ್ನು ತೆರೆದಾಗ,ಕಂಪ್ಯೂಟರ್ ದಾಳಿಗೆ ತುತ್ತಾಗುವುದು ಸಾಮಾನ್ಯ.ಈ ವಿಧಾನ ಈಗ ಹೆಚ್ಚಿನವರಿಗೂ ಗೊತ್ತು.ಆದುದರಿಂದ ಮಿಂಚಂಚೆಯಲಿ ಬಂದ ಕಡತಗಳನ್ನು ಸ್ಕ್ಯಾನ್ ಮಾಡಿ,ವೈರಸ್ ಮುಕ್ತವೇ ಎಂದು ನೋಡಿ,ಮತ್ತೆಯೇ ತೆರೆಯುವಂತಹ ಮುನ್ನೆಚ್ಚರಿಕೆಯನ್ನು ಬಳಕೆದಾರರು ಕೈಗೊಳ್ಳುತ್ತಾರೆ.ಹಾಗಾಗಿ ಅಂತರ್ಜಾಲದ ಕಿಡಿಗೇಡಿಗಳು ಹೊಸ ವಿಧಾನಗಳನ್ನು ಕಂಡುಹಿಡಿಯುವುದು ಅನಿವಾರ್ಯವಾಗಿದೆ.ಈಗ ಜನಪ್ರಿಯವಾಗಿರುವ ಬ್ಲಾಗ್‍ಗಳನ್ನು ತಮ್ಮ ದಾಳಿಗೆ ಬಳಸಿಕೊಳ್ಳುವ ಚತುರತೆಯನ್ನು ಈಗವರು ಬಳಸುತ್ತಿದ್ದಾರಂತೆ.ಕುತೂಹಲಕಾರಿಯಾಗಿ ಇರುವ ಬ್ಲಾಗ್ ಬರಹಗಳ ನಡುವೆ,ಹೆಚ್ಚಿನ ವಿವರ,ಚಿತ್ರ ಅಥವ ವಿಡಿಯೋ ಕೊಂಡಿಗಳನ್ನು ನೀಡುವುದುಂಟು.ಆದರೆ ಇಂತಹ ಕೊಂಡಿಗಳಲ್ಲಿ ವೈರಸ್ ತಾಣಗಳ ಕೊಂಡಿಗಳನ್ನು ನೀಡುವುದು ದಾಳಿಕೋರರ ವಿಧಾನ.ಈ ಕೊಂಡಿಗಳ ಮೇಲೆ ಕ್ಲಿಕ್ಕಿಸಿದಾಗ ಕಂಪ್ಯೂಟರಿನ ಮೇಲೆ ವೈರಸ್ ದಾಳಿಯಾಗುತ್ತದೆ.ನೈಜ ಬ್ಲಾಗುಗಳಲ್ಲಿ ಇಂತಹ ಕೊಂಡಿಗಳನ್ನು ಹುದುಗಿಸಿ,ಬ್ಲಾಗ್ ಓದುಗರಿಗೆ ಅನುಮಾನವೇ ಬರದ ಹಾಗೆ ಮಾಡಲು ದಾಳಿಕೋರರಿಗೆ ಸಾಧ್ಯವಾಗಿರುವುದು ಹೇಗೆ ಎನ್ನುವುದು ಸ್ಪಷ್ಟವಾಗಿಲ್ಲ.ದಾಳಿಕೋರರೇ ಬ್ಲಾಗ್ ಬರೆದು ಪ್ರಕಟಿಸಿರುವುದೂ ಉಂಟು.
ಧೂಳಿನ ಕಣದ ಗಾತ್ರದ ಚಿಪ್‍ಗಳು!
ಐ.ಬಿ.ಎಮ್.ಕಂಪೆನಿಯು ಪ್ರಕಟಿಸಿರುವ ಸಂಶೋಧನಾ ಪ್ರಬಂಧದ ಪ್ರಕಾರ ಧೂಳಿನ ಕಣದ ಗಾತ್ರದ ಕಂಪ್ಯೂಟರ್ ಚಿಪ್‍ಗಳು ಹಲವು ಗಿಗಾಬೈಟುಗಳಷ್ಟು ಸ್ಮರಣ ಸಾಮರ್ಥ್ಯವನ್ನು ಹೊಂದಿರಬಲ್ಲುವುದು.ಈ ತಂತ್ರಜ್ಞಾನದ ಪ್ರಕಾರ ಪರಮಾಣುಗಳು ಬಿಟ್‍ಗಳನ್ನು ಹಿಡಿದಿಡಬಲ್ಲುವು.ಪರಮಾಣುಗಳು ಮುಖ ಮಾಡಿರುವ ದಿಕ್ಕಿನ ಆಧಾರದಲ್ಲಿ ಅದು ಸೊನ್ನೆ ಅಥವ ಒಂದು ಈ ಮಾಹಿತಿಯನ್ನು ಹಿಡಿದಿಡುವಂತೆ ಮಾಡುವುದು ಹೊಸ ವಿಧಾನ.ಇದನ್ನು ಸಾಕ್ಷಾತ್‍ಕರಿಸಿ,ಈ ತಂತ್ರಜ್ಞಾನ ಆಧರಿಸಿದ ಚಿಪ್‍ಗಳ ತಯಾರಿಕೆಗೆ ಇನ್ನೂ ಕಾಲ ಹಿಡಿಯಬಹುದು.ಸದ್ಯದ ಚಿಪ್ ತಯಾರಿಕಾ ತಂತ್ರಜ್ಞಾನದ ಮೂಲಕ ಅಂತದ್ದನ್ನು ನಿಜವಾಗಿಸುವುದು ಅಸಾಧ್ಯ. ಅಂತಹ ಚಿಪ್ ಬಂದಾಗ ಕಂಪ್ಯೂಟರುಗಳು ಈಗಿನದ್ದಕ್ಕಿಂತ ಸಾವಿರ ಪಟ್ಟು ಅಧಿಕ ಸ್ಮರಣ ಸಾಮರ್ಥ್ಯ ಹೊಂದಿರುವುದು ಖಂಡಿತ.
ಸುಳ್ಳಿನ ಚಿತ್ರ
ಅಪರಾಧಿಗಳು ಹೇಳುತ್ತಿರುವುದು ನಿಜವೇ ಎಂದು ಪರೀಕ್ಷಿಸಲು ಪಾಲಿಗ್ರಾಫ್ ಪರೀಕ್ಷೆ,ಸುಳ್ಳು ಪತ್ತೆ ಹಚ್ಚುವ ಯಂತ್ರದ ಪರೀಕ್ಷೆ ನಡೆಯುವುದು ಪತ್ರಿಕೆಗಳಲ್ಲಿ ವರದಿಯಾಗುತ್ತದೆ. ಈ ಪರೀಕ್ಷೆಗಳ ಫಲಿತಾಂಶಕ್ಕೆ ನ್ಯಾಯಾಲಯದ ಮಾನ್ಯತೆ ಸಿಕ್ಕಿರುವುದು ಕಡಿಮೆ.ಆದರೂ ಇಂತಹ ಪರೀಕ್ಷೆಗಳನ್ನು ಪ್ರಾಯೋಗಿಕವಾಗಿ ನಡೆಸಲಾಗುತ್ತಿದೆ.ಈಗ ಸ್ಯಾನ್ ಡಿಯಾಗೋದ ಕಂಪೆನಿಯೊಂದು ಮಿದುಳಿನ ಎಂ ಆರ್ ಐ ಪರೀಕ್ಷೆ ಮೂಲಕ,ಸುಳ್ಳು ಹೇಳುವುದನ್ನು ಪತ್ತೆ ಹಚ್ಚಲು ತನಗೆ ಸಾಧ್ಯವೆಂದು ಹೇಳಿಕೊಂಡಿದೆ.ಫಂಕ್ಷನಲ್ ಎಂ ಆರ್ ಐ ಎನ್ನುವ ಮಿದುಳಿನ ಒಳಭಾಗದ ಚಿತ್ರ ಹಿಡಿಯುವ ತಂತ್ರಜ್ಞಾನದಲ್ಲಿ ಸುಳ್ಳು ಹೇಳಿಕೆ ನೀಡುವಾಗ,ಮಿದುಳಿನ ಒಳಪದರದಲ್ಲಿ ರಕ್ತ ಪರಿಚಲನೆ ಕಂಡುಬರುವುದನ್ನು ಚಿತ್ರ ಗ್ರಹಿಸುತ್ತದೆಯಂತೆ.ಪ್ರಯೋಗಾಲಯದ ಪರೀಕ್ಷೆಗಳು ಬಹುತೇಕ ಯಶಸ್ವಿಯಾಗಿವೆ ಎಂದು ಕಂಪೆನಿ ಹೇಳಿಕೊಂಡಿದೆ.
*ಅಶೋಕ್‍ಕುಮಾರ್ ಎ

ಮಕ್ಕಳಿಗೆ ಅಂತರ್ಜಾಲ ವಿಳಾಸ ಕಾದಿಡುವ ಹೆತ್ತವರು!

ಮಕ್ಕಳು ಹುಟ್ಟಿದ ಕೂಡಲೇ ಶಾಲೆಗೆ ಅರ್ಜಿ ಹಾಕಿ ಸೀಟು ಕಾದಿಡುವ ಅಪ್ಪ-ಅಮ್ಮಂದಿರು ನಮ್ಮಲ್ಲಿ ಇದ್ದಾರೆ. ಆದರೆ ವಿದೇಶಗಳಲ್ಲಿ ಈಗ ಅದರ ಜತೆಗೆ ಮಕ್ಕಳ ಹೆಸರಿನ ಅಂತರ್ಜಾಲ ಪುಟದ ವಿಳಾಸವನ್ನು ಕಾದಿಡುವ ಚಾಳಿ ಜೋರ್‍ಆಗಿದೆ. ತಡವಾದರೆ,ಈ ವಿಳಾಸಗಳನ್ನು ಇತರರು ಪಡೆದು,ತಮ್ಮ ಮಕ್ಕಳಿಗೆ ಬೇಕಾದ ಹೆಸರು ಸಿಗದು ಎಂದು ಅವರಿಗೆ ಅಂಜಿಕೆ.ಅದು ನಿಜವೂ ಕೂಡಾ.ಹಲವು ಪ್ರಸಿದ್ಧ ಕಂಪೆನಿಗಳು ಅಂತರ್ಜಾಲ ಪುಟ ಆರಂಭಿಸಲು ಬಯಸಿದಾಗ,ತಾವು ಬಯಸಿದ ವಿಳಾಸವನ್ನು ಇತರರು ಖರೀದಿಸಿರುವುದು ಗೊತ್ತಾಗಿ,ದುಬಾರಿ ಹಣ ನೀಡಿ ತಮ್ಮ ವಿಳಾಸದ ಹಕ್ಕನ್ನು ಪಡೆದಿವೆ.ವೆಬ್ ವಿಳಾಸ ಮಾರುವ ಹಕ್ಕನ್ನು ಪಡೆದಕಂಪೆನಿಗಳಲಿ ಯಾರಿಗಾದರೂ ಬೇಕಾದ ವಿಳಾಸ ಇದ್ದರೆ,ನಿಗದಿತ ದರ ತೆತ್ತು ಅದರ ಹಕ್ಕನ್ನು ಪಡೆಯಬೇಕು.ನಂತರ ವರ್ಷವೂ ನವೀಕರಣ ಶುಲ್ಕ ಪಾವತಿಸಬೇಕು.ಹೆತ್ತವರು ಅಂತರ್ಜಾಲ ವಿಳಾಸ ಪಡೆದ ಬಳಿಕ,ಸಣ್ಣಮಟ್ಟದ ಪುಟವನ್ನು ರೂಪಿಸುವುದಿದೆ.ಮಕ್ಕಳ ಚಿತ್ರಗಳನ್ನು,ವೀಡಿಯೋಗಳನ್ನು ಅಲ್ಲಿ ಒದಗಿಸುವುದು ರೂಡಿ.
ಹತ್ತು ನಿಮಿಷದಲ್ಲಿ ಕ್ಯಾನ್ಸರ್ ಪತ್ತೆ
ಬಾಯಿಯ ಕ್ಯಾನ್ಸರನ್ನು ಹತ್ತು ನಿಮಿಷದಲ್ಲಿ ಪತ್ತೆ ಮಾಡುವ ಯಂತ್ರ ಇದೀಗ ಲಭ್ಯ.ಟೆಕ್ಸಸ್ ವಿಶ್ವವಿದ್ಯಾಲಯದ ಮೆಕ್‍ಡೆವಿಟ್ ಎನ್ನುವ ಪ್ರೊಫೆಸರ್ ಇದರ ಸಂಶೋಧಕ.ಸಾಮಾನ್ಯವಾಗಿ ಬಾಯಿ ಕ್ಯಾನ್ಸರ್ ಇದ್ದವರಿಗೆ ಹಲ್ಲು ಅಥವ ವಸಡಿನ ತೊಂದರೆಯಾಗಿ ಕಾಣಿಸಿಕೊಳ್ಳುತ್ತದೆ.ದಂತವೈದ್ಯರ ಬಳಿ ಚಿಕಿತ್ಸೆಗೆ ತೆರಳಿದಾಗ,ಅವರ ಬಾಯಿಯಿಂದ ಜೊಲ್ಲು ಮತ್ತು ಕೆರೆದ ಪದರವನ್ನು ಸಂಗ್ರಹಿಸಲು ಈ ಕ್ಯಾನ್ಸರ್ ಪರೀಕ್ಷಾ ಸಾಧನದಲ್ಲಿ ಅಕ್ರಿಲಿಕ್‍ನ ಸಣ್ಣ ಪಾತ್ರೆಯಿದೆ.ಬಾಯಿಯಿಂದ ಸಂಗ್ರಹಿಸಿದ ಜೊಲ್ಲು ಮತ್ತು ಪದರಗಳು ಸೋಸಿದಂತಾಗಿ,ರಾಸಾಯಿನಿಕದ ಜತೆ ವರ್ತಿಸುತ್ತದೆ.ಕ್ಯಾನ್ಸರ್‌ಕಾರಕ ಅಣುಗಳಿಗೆ ರಾಸಾಯಿನಿಕವು ಕ್ಯಾನ್ಸರ್ ಅಂಟಿಕೊಳ್ಳುತ್ತವೆ.ಫ್ಲೊರೆಸೆಂಟ್ ಸೂಕ್ಷ್ಮದರ್ಶಕದಲ್ಲಿ ಇದನ್ನು ವೀಕ್ಷಿಸಿದರೆ,ಕ್ಯಾನ್ಸರ್ ಕೋಶಗಳು ಹಸಿರು ಪ್ರಕಾಶದಿಂದ ಬೆಳಗುತ್ತವೆ.
ಕ್ಯಾನ್ಸರನ್ನು ಮೊದಲೇ ಪತ್ತೆ ಹಚ್ಚಿದರೆ,ಅದಕ್ಕೆ ಚಿಕಿತ್ಸೆ ನೀಡುವುದು ಸುಲಭ.ತಡವಾದೆಂತೆಲ್ಲಾ ಅದು ಮಾರಣಾಂತಿಕವಾಗುವುದೇ ಹೆಚ್ಚು.ಈ ಪರೀಕ್ಷೆ ತುಂಬಾ ಅಗ್ಗದ್ದೂ ಆಗಿದೆಯಂತೆ.ಸದ್ಯ ಇರುವ ಕ್ಯಾನ್ಸರ್ ಪರೀಕ್ಷೆಗೆಳಿಗೆ ಹೋಲಿಸಿದರೆ,ಈಪರೀಕ್ಷೆ ಹತ್ತು ಪಟ್ಟು ವೇಗದಲ್ಲೂ ನಡೆದು ಬಿಡುತ್ತದೆ.
ಭೂತಕ್ಕೂ ಭೂತದ ಕಾಟ!
ಮೋನ್‍ಸ್ಟರ್ ಎನ್ನುವ ಅಂತರ್ಜಾಲ ತಾಣ ಕೆಲಸ ಹುಡುಕುವವರ ಪೈಕಿ ಬಹು ಜನಪ್ರಿಯ.ಇಲ್ಲಿ ಲಕ್ಷಾಂತರ ಉದ್ಯೋಗಾಂಕ್ಷಿಗಳು ತಮ್ಮ ಹೆಸರು ನೋಂದಾಯಿಸಿ,ಕೆಲಸದ ಹುಡುಕಾಟ ನಡೆಸುತ್ತಾರೆ.ಉದ್ಯೋಗದಾತರೂ ಈ ಸೈಟನ್ನು ಉತ್ತಮ ಆಯ್ಕೆಗೋಸ್ಕರ ಅವಲಂಬಿಸುವುದರಿಂದ,ಅವರಿಗೂ ಉತ್ತಮ ಅಭ್ಯರ್ಥಿಗಳು ಸಿಗುತ್ತಾರೆ.ಇತ್ತೀಚೆಗೆ ಈ ತಾಣಕ್ಕೂ ಅಂತರ್ಜಾಲದ ಪುಂಡರ ಹಾವಳಿ ಎದುರಾಯಿತು.ಪ್ರಸಿದ್ಧ ಉದ್ಯೋಗದಾತರ ಲಾಗಿನ್ ಐಡಿ,ಗುಪ್ತಸಂಕೇತಗಳನ್ನು ಕದಿದು,ಉದ್ಯೋಗಾಕಾಂಕ್ಷಿಗಳ ವಿವರಗಳನ್ನು ಕದ್ದು,ತಮಗೆ ಬೇಕಾದ ಸೈಟಿನಲಿ ಉಳಿಸುವಂತಹ ವೈರಸ್ ಮೋನ್‍ಸ್ಟರ್ ತಾಣವನ್ನು ಬಾಧಿಸಿತು.ಈ ಕಾಟ ಇಷ್ಟಕ್ಕೆ ನಿಂತಿತೇ?ಇಲ್ಲ,ನಂತರ ಈ ಕದ್ದ ಮಾಹಿತಿಯಲಿದ್ದ ಉದ್ಯೊಗಾಕಾಂಕ್ಷಿಗಳ ವಿವರ ಪಡೆದು,ಅವರು ಬಯಸಿದ್ದ ಕಂಪೆನಿಯ ಹೆಸರಿನಲ್ಲಿ ಅವರಿಗೆ ಮನೆಯಿಂದಲೇ ಕೆಲಸ ಮಾಡುವ ಉದ್ಯೋಗ ನೇಮಕಾತಿಯ ಮಿಂಚಂಚೆ ಹೋಗಲಾರಂಭಿಸಿತು.ಅಭ್ಯರ್ಥಿ ಬ್ಯಾಂಕ್ ವಿವರ ನೀಡಬೇಕು ಎನ್ನುವ ನಿರ್ದೇಶನ ಅದರಲ್ಲಿತ್ತು.ಬ್ಯಾಂಕ್ ವಿವರ ನೀಡಿದವರ ಖಾತೆ ಬರಿದಾಗುತ್ತಿತ್ತು ಎನ್ನುವುದನ್ನು ಊಹಿಸುವುದು ಸುಲಭ.
ಕಾರಿನ ಚಕ್ರ ಬದಲಿಸುವುದು ಹೇಗೆಂದು ತೋರುವ ವಿಡಿಯೋ ಕ್ಲಿಪ್ ಬೇಕೇ?
ಕಾರಿನ ಚಕ್ರ ಬದಲಿಸುವುದು ಹೇಗೆ ಎಂಬುದರಿಂದ ಹಿಡಿದು ಬೇರೆ ಬೇರೆ ಕೆಲಸಗಳನ್ನು ಮಾಡುವುದು ಹೇಗೆ ಎನ್ನುವುದನ್ನು ಚಿತ್ರೀಕರಿಸಿ ತೋರಿಸುವ ಅಂತರ್ಜಾಲ ತಾಣವಿದ್ದರೆ ಎಷ್ಟು ಉಪಯುಕ್ತ ಅಲ್ಲವೇ?ವಿಡಿಯೋಜಗ್ ಎನ್ನುವುದು ಅಂತಹ ತಾಣಗಳಲ್ಲೊಂದು.ಸುಮಾರು ಹದಿನೇಳು ಸಾವಿರ ಇಂತಹ ವಿಡಿಯೋ ಕ್ಲಿಪ್ಪಿಂಗ್‍ಗಳನ್ನು ಈಗಾಗಲೇ ತಯಾರುಮಾಡಿ ಬಳಕೆಗೆ ಲಭ್ಯವಾಗಿಸಲಾಗಿದೆ.ಹೆಚ್ಚಿನ ವಿಡಿಯೋ ತುಣುಕುಗಳನ್ನು ವೃತ್ತಿಪರರೇ ತಯಾರಿಸಿದ್ದಾರೆ ಎನ್ನುವುದು ವಿಡಿಯೋಜಗ್‍ನ ಹೆಗ್ಗಳಿಕೆ.ಬಳಕೆದಾರರೇ ಒದಗಿಸಿದ ವಿಡಿಯೋ ಕಳಪೆ ಗುಣಮಟ್ಟದ್ದಾಗಿರುವುದು,ವಿಷಯಕ್ಕೆ ಸಂಬಂಧಿಸದೆ ಇರುವುದು ಮುಂತಾದ ಸಮಸ್ಯೆಗಳಿರುತ್ತವೆ.
ಸ್ಥಿರದೂರವಾಣಿ ಅಸ್ಥಿರ
ಮೊಬೈಲ್ ಬಂದ ನಂತರ ಸ್ಥಿರ ದೂರವಾಣಿ ಜನರಿಂದ ದೂರವಾಗುತ್ತಿದೇ ತಾನೇ?ಇಂಗ್ಲೆಂಡಿನಿಂದ ಬಂದ ಸುದ್ದಿಯಂತೆ ಅಲ್ಲಿನ ಬಳಕೆದಾರರು ದೂರವಾಣಿ ಬಳಕೆಯ ಮೂರನೇ ಒಂದು ಭಾಗವನ್ನು ಮೊಬೈಲ್ ಬಳಕೆಯಲ್ಲೇ ಕಳೆಯುತ್ತಾರೆ.ಒಟ್ಟು ಕರೆಗಳು ಇನ್ನೂರಮೂವತ್ತನಾಕು ಬಿಲಿಯನ್ ನಿಮಿಷಗಳಾದರೆ,ಮೊಬೈಲ್ ಬಳಕೆ ಸಮಯ ಎಂಭತ್ತನಾಲ್ಕು ಬಿಲಿಯನ್ ನಿಮಿಷಗಳಂತೆ.ಶೇಕಡಾ ಒಂಭತ್ತು ಬಳಕೆದಾರರ ಬಳಿ ಮೊಬೈಲ್ ಮಾತ್ರಾ ಇದ್ದರೆ,ಸ್ಥಿರ ದೂರವಾಣಿ ಮಾತ್ರಾ ಇರುವವರ ಭಾಗ ಶೇಕಡಾ ಏಳು.ದೂರಸಂಪರ್ಕಕ್ಕಾಗಿ ಅಲ್ಲಿನ ಬಳಕೆದಾರರು ಮಾಡುವ ವೆಚ್ಚವು ಎಪ್ಪತ್ತಾರು ಪೌಂಡ್‍ಗಳಿಂದ,ಅರುವತ್ತೊಂಭತ್ತು ಪೌಂಡುಗಳಿಗಿಳಿದಿದೆ.
*ಅಶೋಕ್‍ಕುಮಾರ್ ಎ
 
googledc7e93ba1a7703ae.html