Tuesday, May 27, 2008

ಚುನಾವಣೆ ಸ್ಪರ್ಧಿಸಿದ ಸಾಫ್ಟ್‍ವೇರ್ ಇಂಜಿನಿಯರ್

ಅಮೆರಿಕಾದಲ್ಲಿ ತಂತ್ರಾಂಶ ಅಭಿವೃದ್ಧಿ ಕೆಲಸದಲ್ಲಿದ್ದು ಕರ್ನಾಟಕದ ವಿಧಾನಸಭೆ ಚುನಾವಣೆ ಕಣಕ್ಕಿಳಿದ ರವಿಕೃಷ್ಣ ರೆಡ್ಡಿಯವರ ಬಗ್ಗೆ ನಿಮಗೆ ಗೊತ್ತಿರಬಹುದು.ಬೆಂಗಳೂರಿನ ಜಯನಗರದಂತಹ ಸುಶಿಕ್ಷಿತ ಜನರು ಮತದಾರರಾಗುಳ್ಳ ಕ್ಷೇತ್ರದಿಂದ ಕಣಕ್ಕಿಳಿದು ಅವರು ಸಣ್ಣದಾಗಿ ಸುದ್ದಿ ಮಾಡಿದ್ದರು.ಚುನಾವಣಾ ಆಯೋಗ ನಿಗದಿ ಪಡಿಸಿದ ಹತ್ತು ಲಕ್ಷ ಬಜೆಟಿನೊಳಗೇ ಖರ್ಚು ಮಾಡಿ ಸ್ಪರ್ಧಿಸಲು ಅವರು ನಿಶ್ಚೈಸಿದ್ದರು. ಮಾತ್ರವಲ್ಲ,ಈ ಹಣವನ್ನು ಜನರ ವಂತಿಗೆಯಿಂದಲೇ ಸಂಗ್ರಹಿಸುವ ನಿರ್ಧಾರವನ್ನೂ ಅವರು ಮಾಡಿದ್ದರು.ಅವರ ನಿರ್ಧಾರವನ್ನು ಸ್ವಾಗತಿಸಿದವರನೇಕರು ಅವರಿಗೆ ಈ ಹೋರಾಟದಲ್ಲಿ ನೈತಿಕ ಬೆಂಬಲವನ್ನು ನೀಡಿದರೆ,ಇನ್ನು ಅನೇಕರು ವಂತಿಗೆ ನೀಡಿಯೂ ಬೆಂಬಲ ವ್ಯಕ್ತ ಪಡಿಸಿದರು.ಸುಮಾರು ನಾಲ್ಕು ಕಾಲು ಲಕ್ಷ ರುಪಾಯಿ ಹಣ ವಂತಿಗೆಯಾಗಿ ದೇಶ-ವಿದೇಶಗಳಿಂದ ಹರಿದು ಬಂತು.ಅದರ ವಿವರಗಳಿಗೆ http://www.ravikrishnareddy.com/donorlist.html ಕೊಂಡಿಯನ್ನು ನೋಡಿ.ಇವರ ಚುನಾವಣಾ ಖರ್ಚು ಆಯೋಗ ನಿಗದಿಪಡಿಸಿದ ಮೊತ್ತದ ಅರ್ಧದಷ್ಟು ಮಾತ್ರ.
ರವಿಕೃಷ್ಣ ರೆಡ್ಡಿಯವರು ಚುನಾವಣಾ ಅಭ್ಯರ್ಥಿಯಾಗಿ ಕಹಿ ಅನುಭವವನ್ನೇ ಉಂಡರು.ಅವರಿಗೆ ಚುನಾವಣಾ ಆಯೋಗ ನೀಡಿದ್ದ ನಗಾರಿ ಚಿನ್ಹೆಗೂ,ಮತಪೆಟ್ಟಿಗೆಯಲ್ಲಿ ಕಾಣಿಸಿಕೊಂಡ ಗುರುತಿಗೂ ವ್ಯತ್ಯಾಸವಿತ್ತು!ಅವರು ಈ ಬಗ್ಗೆ ಚುನಾವಣಾ ಆಯೋಗಕ್ಕೆ ನೀಡಿದ್ದ ದೂರಿಗೆ ಆಯೋಗ ಉತ್ತರಿಸುವ ಸೌಜನ್ಯವನ್ನೂ ತೋರಿಸಿಲ್ಲವಂತೆ! ಜಯನಗರ ಕ್ಷೇತ್ರದಲ್ಲಿ ಮರುಚುನಾವಣೆ ಬಯಸಿ ಅವರು ನ್ಯಾಯಾಲಯದ ಕಟಕಟೆ ಏರುವುದರಲ್ಲಿದ್ದಾರೆ.ಮರುಚುನಾವಣೆ ನಡೆದಾಗಲಾದರೂ,ಎಲ್ಲ ಅಭ್ಯರ್ಥಿಗಳೂ ಹತ್ತು ಲಕ್ಷಕ್ಕಿಂತ ಹೆಚ್ಚಿನ ಹಣ ಖರ್ಚು ಮಾಡದಂತೆ ಆಯೋಗವು ಮುತುವರ್ಜಿ ವಹಿಸಬೇಕು ಎನ್ನುವುದು ರೆಡ್ಡಿಯವರ ಅಭಿಲಾಷೆ.ಆಯೋಗವು ನಿಯಮಗಳನ್ನು ಬಿಗಿಗೊಳಿಸಿದ ನಾಟಕವನ್ನಷ್ಟೇ ಆಡುತ್ತಿದೆ.ಅಭ್ಯರ್ಥಿಗಳು ಕೋಟಿಗಟ್ಟಲೆ ಖರ್ಚು ಮಾಡುವುದು ಗೊತ್ತಿದ್ದೂ,ಅದರ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸಿದೆ ಎನ್ನುವುದು ಅವರ ಅಳಲು.
ಲಂಡನಿನಿಂದ ನ್ಯೂಯಾರ್ಕಿಗೆ "ದುರ್ಬೀನು"
ಲಂಡನಿನ ಥೇಮ್ಸ್ ನದಿ ದಡದಿಂದ ನ್ಯೂಯಾರ್ಕಿನ ಬ್ರೂಕ್ಲಿನ್ ಸೇತುವೆಯ ಪ್ರದೇಶವನ್ನು ವೀಕ್ಷಿಸುವ ಅವಕಾಶವನ್ನು ನೀಡುವ "ದುರ್ಬೀನು" ಈಗ ಸಿದ್ಧವಾಗಿದೆ.ಈ ದುರ್ಬೀನು ಮೂವತ್ತೇಳು ಅಡಿ ಉದ್ದವಾಗಿದ್ದು,ಹನ್ನೊಂದು ಅಡಿ ಎತ್ತರವನ್ನು ಹೊಂದಿದೆ.ಅಲೆಕ್ಸಾಂಡರ್ ಸ್ಟಾನ್‌ಹೋಪ್ ಎಂಬ ಇಂಜಿನಿಯರ್ ಕಂಡಿದ್ದ ಶತಮಾನಗಳ ಹಿಂದಿನ ಕನಸು ಈಗ ನನಸಾಗಿದೆ.ಆತ ಅಟ್ಲಾಂಟಿಕ್ ಸಮುದ್ರದ ಕೆಳಗೆ ಸುರಂಗ ಮಾರ್ಗವನ್ನು ಮಾಡಿ,ಅದರ ಇಕ್ಕೆಲಗಳಲ್ಲಿ ದೂರದರ್ಶಕ ಸಾಧನವನ್ನಿಟ್ಟು,ಲಂಡನಿನವರು ನ್ಯೂಯಾರ್ಕಿನವರನ್ನು ವೀಕ್ಷಿಸುವಂತಾಗ ಬೇಕೆಂದು ಕನಸು ಕಂಡಿದ್ದ. ಆದರೆ ಈಗದು ಕಾರ್ಯಗತವಾಗಲು ಸುರಂಗ ಅಗತ್ಯವಾಗಲಿಲ್ಲ.ಈಗ ಸಾಧ್ಯವಾಗಿರುವ ದೂರದರ್ಶಕ,ಅಂತರ್ಜಾಲ ಸಂಪರ್ಕವನ್ನು ಬಳಸಿ ಕೆಲಸ ಮಾಡುತ್ತದೆ.ಇದರಲ್ಲಿ ಅತ್ಯಂತ ಸ್ಪಷ್ಟ ಚಿತ್ರ ಮೂಡಿಸುವ ಕ್ಯಾಮರಾದ ಮೂಲಕ ದೃಶ್ಯ ಸೆರೆ ಹಿಡಿದು,ಅದನ್ನು ಅಂತರ್ಜಾಲ ಮೂಲಕ ಮತ್ತೊಂದು ಕಡೆಗೆ ರವಾನಿಸಿ,ಅಲ್ಲಿನ ದುರ್ಬೀನಿನ ತೆರೆಯಲ್ಲಿ ದೃಶ್ಯ ಮೂಡಿಸಿ,ಅಲ್ಲಿ ನೈಜ ದೃಶ್ಯ ನೋಡುವ ಅನುಭವವನ್ನು ನೋಡುಗರಿಗೆ ನೀಡಲಾಗುತ್ತದೆ.
ಸೈಂಟ್ ಜಾರ್ಜ್ ಎನ್ನುವ ಕಲಾವಿದ ಈ ದೂರದರ್ಶಕವನ್ನು ಸ್ಥಾಪಿಸಿದ.ಭೂಮಿಯನ್ನು ಕೊರೆದು ಒಂದು ಕಡೆಯಿಂದ ಭೂಮಿಯ ಇನ್ನೊಂದು ಕಡೆಗೆ ನೋಡಬೇಕು ಎನ್ನುವ ತನ್ನ ಬಾಲ್ಯದ ಕನಸನ್ನು ಆತ ನನಸಾಗಿಕೊಂಡ ಬಗೆ ಹೀಗೆ.
ಮಂಗಳನ ಅಂಗಳದಲ್ಲಿಳಿಯುವ ಅಗ್ನಿಪರೀಕ್ಷೆ
ಮಂಗಳನ ಅಧ್ಯಯನ ನಡೆಸಲು ನಾಸಾವು ಫೀನಿಕ್ಸ್ ಎಂಬ ಬಾಹ್ಯಾಕಾಶ ವಾಹನವನ್ನು ಕಳುಹಿಸಿದ್ದು,ಕಳೆದ ಆಗಸ್ಟಿನಲ್ಲಿ.ಅದು ಮಂಗಳನ ಸನಿಹ ಬಂದಿದ್ದು ಮಂಗಳನ ಅಂಗಳಕ್ಕಿಳಿಯುವ ಕ್ಷಣ ಸಮೀಪಿಸಿದೆ,ನಿರೀಕ್ಷೆಯಂತೆ ನಡೆದರೆ,ನಾಸಾ ತನ್ನ ಯೋಜನೆಯಲ್ಲಿ ಯಶಸ್ವಿಯಾಯಿತೇ ಎನ್ನುವುದು ಈ ಲೇಖನ ಓದುವಾಗ ನಿಮಗೆ ಗೊತ್ತಾಗಿರುತ್ತದೆ.ಮಂಗಳನ ವಾತಾವರಣದಿಂದ ನೆಲಕ್ಕಿಳಿಯಲು ಫೀನಿಕ್ಸ್ ಬರೇ ಏಳು ನಿಮಿಷ ತೆಗೆದುಕೊಳ್ಳಲಿದೆ.ಅದು ನೆಲಕ್ಕೆ ಅಪ್ಪಳಿಸದೆ ನಿಧಾನವಾಗಿ ಇಳಿಯಲು ಅದರ ಪ್ಯಾರಾಚ್ಯೂಟ್ ತೆರೆದುಕೊಳ್ಳಲಿದೆ.ವೇಗವನ್ನಿಳಿಸಲು ತ್ರಸ್ಟರ್ ರಾಕೆಟುಗಳನ್ನು ಉರಿಸಲಾಗುತ್ತದೆ.ವಾಹನದ ಮೂರು ಕಾಲುಗಳು ತೆರೆದುಕೊಂಡು,ಅದು ನೆಲದಲ್ಲಿ ನಿಲ್ಲಲು ನೆರವಾಗಲಿವೆ.ಗಂಟೆಗೆ ಹದಿಮೂರು ಸಾವಿರ ಮೈಲು ವೇಗದಲ್ಲಿ ಸಾಗುತ್ತಿರುವಂತೆ ಇಳಿಯಬೇಕಾದ ಕಾರಣ ಈ "ಭೂ" ಸ್ಪರ್ಶ ಹೇಳಿದಷ್ಟು ಸುಲಭವಲ್ಲ.ನಾಸಾ ಮಂಗಳನ ಅಂಗಳಕ್ಕಿಳಿಸಲು ನಡೆಸಿದ ಪ್ರಯತ್ನಗಳಲ್ಲಿ ಅರೆವಾಸಿ ಪ್ರಯತ್ನಗಳು ವಿಫಲವಾಗಿವೆ.
ಪಾಸ್‍ವರ್ಡ್ ಕಳ್ಳರಿಗೆ ಐಸಿಐಸಿಐ ಬ್ಯಾಂಕ್ ತಿರುಗೇಟು
ಬ್ಯಾಂಕಿನ ಅಂತರ್ಜಾಲ ತಾಣಗಳಿಗೆ ಗ್ರಾಹಕರ ಗುಪ್ತಪದಗಳನ್ನು ಕದಿಯುವವರ ಕಾಟ ಇದ್ದೇ ಇದೆ.ಗ್ರಾಹಕರು ಕೀಲಿಮಣೆ ಒತ್ತಿದಾಗ,ಅವರು ಯಾವ ಕೀಲಿ ಒತ್ತಿದ್ದಾರೆ ಎಂದು ದಾಖಲಿಸುವ ತಂತ್ರಾಂಶಗಳ ಮೂಲಕ ಸಂಗ್ರಹಿಸಿ,ಗುಪ್ತ ಪದವನ್ನು ಕದಿಯುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತದೆ.ಇದಕ್ಕೆ ಐಸಿಐಸಿಐ ಬ್ಯಾಂಕ್ ತನ್ನ ತಾಣದಲ್ಲಿ ಹೊಸ ಪ್ರಯೋಗ ಮಾಡಿದೆ.ಅಲ್ಲಿ ಮಿಥ್ಯಾ ಕೀಲಿ ಮಣೆಯೂ ಇದ್ದು ಗ್ರಾಹಕರು ಬಯಸಿದಲ್ಲಿ ಅದನ್ನು ಆಯ್ದುಕೊಳ್ಳುವ ಸೌಲಭ್ಯವಿದೆ.ಇದನ್ನು ಆಯ್ದರೆ,ತೆರೆಯಲ್ಲಿ ಮೂಡಿರುವ ಕೀಲಿಮಣೆಯ ಅಕ್ಷರಗಳನ್ನು ಮೌಸ್ ಮೂಲಕ ಕ್ಲಿಕ್ಕಿಸಿ,ಗುಪ್ತ ಪದವನ್ನು ಬ್ಯಾಂಕ್ ಸರ್ವರ್‌ಗೆ ಒದಗಿಸಬೇಕು.ಕೀಲಿ ಒತ್ತುವುದನ್ನು ಗ್ರಹಿಸುವ ತಂತ್ರಾಂಶಗಳು ಮೌಸ್ ಕ್ಲಿಕ್ಕಿಸುವ ಮೂಲಕ ಒದಗಿಸುವ ಮಾಹಿತಿಯನ್ನು ಗ್ರಹಿಸಲಾರವು.ಭಾರತದ ಮಟ್ಟಿಗೆ ಇದು ಹೊಸ ಪ್ರಯೋಗವೇ ಇರಬಹುದು.
*ಅಶೋಕ್‌ಕುಮಾರ್ ಎ

Monday, May 19, 2008

ವಿಂಡೋಸ್ ಪರ ಸರಕಾರಗಳ ಲಾಬಿ!

ಮೈಕ್ರೋಸಾಫ್ಟಿನ ಜನಪ್ರಿಯ ಕಂಪ್ಯೂಟರ್ ಕಾರ್ಯನಿರ್ವಹಣ ತಂತ್ರಾಂಶ ವೈರಸ್ ಬಾಧಿತವಾಗುವುದು ಜಾಸ್ತಿ.ಟೆಕಿಗಳು ಅದು ಕೊಡುವ ಕಿರಿಕಿರಿಗೆ ಬೇಸತ್ತು ಲಿನಕ್ಸ್‌ನಂತಹ ಮುಕ್ತ ತಂತ್ರಾಂಶದತ್ತ ವಾಲಿ,ವಿಂಡೋಸಿಗೆ ವಿದಾಯ ಹೇಳುತ್ತಿರುವುದು ಸಾಮಾನ್ಯ. ಜನಸಾಮಾನ್ಯರೂ ಈಗ ಲಿನಕ್ಸ್ ಕಾರನಿರ್ವಹಣಾ ವ್ಯವಸ್ಥೆಗೆ ಶರಣಾಗುತ್ತಿದ್ದಾರೆ. ಆದರೆ ಮೈಕ್ರೊಸಾಫ್ಟ್ ಕಂಪೆನಿಯು ಜೋರಾಗಿ ಲಾಬಿ ನಡೆಸಿ,ಸರಕಾರಿ ಕಚೇರಿ ಮತ್ತು ಇಲಾಖೆಗಳ ಕಂಪ್ಯೂಟರೀಕರಣದ ಕಾರ್ಯವನ್ನು ತನ್ನ ಬಗಲಿಗೆ ಹಾಕಿಕೊಂಡು,ಮಾರುಕಟ್ಟೆಯ ಮೇಲೆ ತನ್ನ ಹಿಡಿತವನ್ನು ಬಿಗಿಯಾಗಿಸಿದೆ.ನಮ್ಮ ಕರ್ನಾಟಕ ಸರಕಾರವೇ ಮೈಕ್ರೋಸಾಫ್ಟಿಗೆ ಕಂಪ್ಯೂಟರೀಕರಣದ ಕೆಲಸ ಒಪ್ಪಿಸಿದೆ.ಮುಕ್ತ ತಂತ್ರಾಂಶ ಬಳಸಿ ಗಣಕೀಕರಣ ನಡೆದರೆ,ಸರಕಾರ ತಂತ್ರಾಂಶಕ್ಕಾಗಿ ಹೆಚ್ಚು ಖರ್ಚು ಮಾಡಬೇಕಿಲ್ಲ.ಆದರೆ ಮೈಕ್ರೋಸಾಫ್ಟಿನಂತಹ ಕಂಪೆನಿಯು ಅಭಿವೃದ್ಧಿ ಪಡಿಸಿದ ತಂತ್ರಾಂಶದ ಮೇಲೆ ಅವಲಂಬಿತವಾದರೆ,ಸರಕಾರದ ಖಜಾನೆಗೆ ಹೊರೆಯಾಗುವುದರಲ್ಲಿ ಸಂಶಯವೇ ಬೇಡ.ಮಕ್ಕಳಿಗೆ ನೂರು ಡಾಲರಿಗೆ ಲ್ಯಾಪ್‌ಟಾಪ್ ಯೋಜನೆಯೂ ಈ ಮೈಕ್ರೋಸಾಫ್ಟ್ ಲಾಬಿಗೆ ಬಲಿಯಾಗಿರುವುದು ಹೊಸ ಸುದ್ದಿ.ಮೊದಲಿಗೆ ಅಗ್ಗದ ಲ್ಯಾಪ್‌ಟಾಪಿನಲ್ಲಿ ಲಿನಕ್ಸ್ ಕಾರ್ಯನಿರ್ವಹಣಾ ತಂತ್ರಾಂಶವನ್ನು ಬಳಸಲು "ಪ್ರತಿ ಮಗುವಿಗೂ ಲ್ಯಾಪ್‌ಟಾಪ್" ಯೋಜನೆಯ ನಿಖೋಲಾಸ್ ನ್ಯಗ್ರೋಪೊಂಟೆ ನಿರ್ಧರಿಸಿದ್ದರು. ಆದರೆ ಅವರ ಸರಳ ಲ್ಯಾಪ್‌ಟಾಪ್ ಖರೀದಿಸಲು ಆಶ್ವಾಸನೆ ನೀಡಿದ್ದ ಅಭಿವೃದ್ಧಿಶೀಲ ರಾಷ್ಟ್ರಗಳು ತಮ್ಮ ಮಾತಿಗೆ ತಪ್ಪಿದುವು.ಇದುವರೆಗೆ ಬರೇ ಆರು ಲಕ್ಷ ಲ್ಯಾಪ್‌ಟಾಪನ್ನು ಸರಕಾರ ಕೊಂಡಿವೆ.ಈಜಿಪ್ಟ್ ಲ್ಯಾಪ್‌ಟಾಪಿನಲ್ಲಿ ಎಕ್ಸ್‌ಪಿ ಆಪರೇಟಿಂಗ್ ವ್ಯವಸ್ಥೆಯೇ ಬೇಕೆಂ಼ದು ಪಟ್ಟು ಹಿಡಿದೆದೆ.ಕೊನೆಗೀಗ ಅವುಗಳಲ್ಲಿ ವಿಂಡೋಸ್ ಎಕ್ಸ್‌ಪಿ ಓಎಸ್ ಹಾಕಿಕೊಡಲು ನ್ಯೆಗ್ರೋಪೋಂಟೆ ಒಪ್ಪಿದ್ದಾರೆ.ಮೈಕ್ರೋಸಾಫ್ಟ್ ಕಂಪೆನಿ ಇವರ ಅಗ್ಗದ ಲ್ಯಾಪ್‌ಟಾಪಿನಲ್ಲಿ ಎಕ್ಸ್‌ಪಿ ಹಾಕಿಕೊಡಲು ವ್ಯವಸ್ಥೆ ಮಾಡಿದೆ.ಇದರಿಂದ ಲ್ಯಾಪ್‌ಟಾಪ್ ಮತ್ತೆ ಹತ್ತು ಡಾಲರು ದುಬಾರಿಯಾಗಲಿದೆ.ಒಂದು ಸಮಾಧಾನದ ವಿಷಯವೆಂದರೆ,ಲ್ಯಾಪ್‌ಟಾಪುಗಳಲ್ಲಿ ಎರಡೂ ಓಎಸ್‌ಗಳು ಲಭ್ಯವಾಗಲಿವೆ.ಬೇಕಾದ ವ್ಯವಸ್ಥೆಯನ್ನು ಆಯಲು ಅವಕಾಶ ಇದೆ.ಬೇಕೆಂದರೆ ಲಿನಕ್ಸ್ ವ್ಯವಸ್ಥೆಯ ಮೂಲಕ ಕಂಪ್ಯೂಟರ್ ಬಳಸಬಹುದು.
ನೀರು:ಪನ್ನೀರಿಗಿಂತಲೂ ದುಬಾರಿ
ಬಾಹ್ಯಾಕೇಶ ಕೇಂದ್ರಗಳಲ್ಲಿ ಗಗನಯಾತ್ರಿಗಳು ವರ್ಷಗಟ್ಟಲೆ ವಾಸಿಸುವುದು ಈಗ ಸಾಮಾನ್ಯ.ಅಂತಾರಾಷ್ಟ್ರೀಯ ಬಾಹ್ಯಾಕೇಶ ಕೇಂದ್ರದಲ್ಲಿ ವಾಸವಾಗಿರುವ ಗಗನಯಾತ್ರಿಗಳಿಗೆ ನೀರು ಪೂರೈಸುವುದೇ ವಿಜ್ಞಾನಿಗಳಿಗೆ ಸವಾಲು.ಅವರ ಕುಡಿಯುವ ನೀರಿನ ಅವಶ್ಯಕತೆಯೇ ಅಲ್ಲದೆ,ಸ್ನಾನ,ಮುಖ ತೊಳೆಯಲು,ಬಟ್ಟೆ ಒಗೆಯಲು ಹೀಗೆ ಎಲ್ಲಾ ಕೆಲಸಕ್ಕೂ ನೀರು ಒದಗಿಸ ಬೇಕಲ್ಲಾ?ಅದಕ್ಕೇಕೆ ತಲೆಬಿಸಿ-ನೀರನ್ನು ಹೋಗುವಾಗಲೇ ಒಯ್ಯಬಹುದಲ್ಲ ಎಂದಿರಾ? ಇತರ ಅವಶ್ಯಕ ವಸ್ತುಗಳನ್ನು ಕಳಿಸುವುದು ಅನಿವಾರ್ಯ.ಅದರ ಜತೆಗೆ ನೀರ್‍ಅನ್ನೂ ಕಳುಹಿಸಿದರೆ,ಬಾಹ್ಯಾಕಾಶ ಯಾನಗಳನ್ನು ಇದಕ್ಕಾಗಿಯೇ ನಡೆಸಬೇಕಾದೀತು. ಅದು ಬಹು ದುಬಾರಿಯಾಗಬಹುದು.ಹಾಗಾಗಿ ನೀರಿನ ಮರುಬಳಕೆ ಬಗ್ಗೆ ಗಮನಹರಿಸುವುದು ಅನಿವಾರ್ಯ.ಯಾನಿಗಳ ಮೈಯಿಂದ ಆವಿಯಾಗುವ ಬೆವರನ್ನೂ ಮತ್ತೆ ಸಂಗ್ರಹಿಸಿ,ಅದನ್ನು ಬಳಸುವುದು ಹಿಂದಿನಿಂದಲೂ ನಡೆದುಬಂದಿದೆ.ಈಗ ಇನೂರೈವತ್ತು ಮಿಲಿಯನ್ ಡಾಲರುಗಳ ಸಾಧನವೊಂದನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ.ಅದು ಗಗನಯಾನಿಗಳ ಮೂತ್ರವನ್ನೂ ಸ್ವಚ್ಛಗೊಳಿಸಿ ಕುಡಿಯುವ ನೀರಾಗಿ ಪರಿವರ್ತಿಸಬಲ್ಲುದು.ಶೌಚಾಲಯದ ನೀರ್‍ಅನ್ನು ಆರು ಬಾರಿ ಸಂಸ್ಕರಿಸಿ,ಕುಡಿಯಲೂ ಆಗುವಂತೆ ಶುದ್ಧೀಕರಿಸಲು ಆ ಯಂತ್ರ ಸಮರ್ಥ!ಗಗನಯಾತ್ರಿಗಳ ಅಗತ್ಯದ ಅರ್ಧಭಾಗ ಈ ಯಂತ್ರವೇ ಒದಗಿಸಲಿದೆ.
ರೆಫ್ರಿಜರೇಟರ್ ಟಿವಿ!
ಅಡುಗೆ ಮಾಡುವಾಗಲೂ ಮೆಗಾಸೀರಿಯಲ್‌ಗಳನ್ನು ನೋಡುವ ಚಪಲವೇ?ಪ್ರಿಜ್‍ನಲ್ಲೂ ಟಿವಿ ತೆರೆ ಹೊಂದಿರುವ ಟಿವಿಗಳು ಈಗ ಲಭ್ಯ.ಎಲ್ಜಿ,ಸ್ಯಾಮ್‌ಸಂಗ್ ಕಂಪೆನಿಗಳ ಇಂತಹ ಫ್ರಿಜ್‌ಗಳು ತಮ್ಮ ಬಾಗಿಲಿನಲ್ಲಿ ಟಿವಿ ತೆರೆಯನ್ನೂ ಹೊಂದಿವೆ.ದಡಕ್ಕೆಂದು ಫ್ರಿಜ್ ತೆರೆದರೂ ಇವುಗಳಿಗೆ ಹಾನಿಯಾಗದಂತೆ ಇವುಗಳ ರಚನೆಯಿದೆ.ಅಡುಗೆ ಕೋಣೆಯಲ್ಲಿ ಪ್ರತ್ಯೇಕ ಟಿವಿ ಇರಿಸಲು ಸ್ಥಳಾವಕಾಶ ಇಲ್ಲವಾದರೆ ಈ ಫ್ರಿಜ್-ಟಿವಿಗಳು ಉತ್ತಮ ಪರಿಹಾರವಾಗಬಲ್ಲುವು.ಆದರೆ ಇವು ದುಬಾರಿ.ಹದಿನೈದು ಇಂಚು ಎಳ್‍ಸಿಡಿ ತೆರೆಯನ್ನು ಹೊಂದಿರುವ ಫ್ರಿಜ್‌ಗಳು ನಾಲ್ಕು ಸಾವಿರ ಡಾಲರುಗಳ ಬೆಲೆಪಟ್ಟಿ ಹೊಂದಿವೆ.
ಅತಿ ಸಣ್ಣ ಹೆಲಿಕಾಪ್ಟರ್
ವಿಶ್ವದ ಅತಿ ಸಣ್ಣ ಹೆಲಿಕಾಪ್ಟರ್ ಜಪಾನಿ ನಿರ್ಮಿತ.ಜೆನ್ ಕಾರ್ಪೊರೇಶನ್ ಈ ಹೆಲಿಕಾಪ್ಟರ್ ನಿರ್ಮಿಸಿದೆ.ಇದರಲಿ ಓರ್ವ ವ್ಯಕ್ತಿಗೆ ಮಾತ್ರ ಸವಾರಿ ಹೋಗಲಾಗುತ್ತದೆ.ಒಂದು ಕುರ್ಚಿ,ಹ್ಯಾಂಡಲ್ ಬಾರ್,ಕಾಲಿರಿಸುವ ಸ್ಥಳ ಇದರಲ್ಲಿದೆ.ಪ್ರಯೋಗಾರ್ಥ ಪರೀಕ್ಷೆಯಲ್ಲಿ ಹೆಲಿಕಾಪ್ಟರನ್ನು ಲಿಯೋನಾರ್ಡೋ ವಿಂಚಿಯ ಹುಟ್ಟೂರಿನಲ್ಲಿ ನಡೆಸುವುದು ಹೆಲಿಕಾಪ್ಟರ್ ವಿನ್ಯಾಸಕಾರ ಜಪಾನೀಯ ಯನಗಿಸವಾನ ಯೋಚನೆ.ಓರ್ವನನ್ನು ಹೊರಬಲ್ಲ ಹೆಲಿಕಾಪ್ಟರಿನಲ್ಲಿ ನಾಲ್ಕು ಮೋಟಾರುಗಳಿವೆ.ತೂಕ ನೂರು ಕೇಜಿಗಿಂತ ಕಡಿಮೆ.ಎರಡು ರೋಟಾರುಗಳಿವೆ.ಪ್ರತಿಗಂಟೆಗೆ ಎಂಭತ್ತಕ್ಕೂ ಅಧಿಕ ವೇಗದಲ್ಲಿ ಅರ್ಧಗಂಟೆಯಷ್ಟೇ ಹಾರಲು ಇದರಲ್ಲಿ ಅವಕಾಶವಿದೆ.ಭೂಮಿಗಿಂತ ಹದಿನಾರು ಅಡಿ ಎತ್ತರದಲ್ಲಿ ಹಾರಿ ಪ್ರಯೋಗಾರ್ಥ ಪರೀಕ್ಷೆ ಪೂರೈಸಲು ತಯಾರಕ ನಿರ್ಧರಿಸಿದ್ದಾನೆ.ಇದೇ ವೇಳೆ ಗಿನ್ನೆಸ್ ದಾಖಲೆ ಸಂಸ್ಥೆ ಈ ಹೆಲಿಕಾಪ್ಟರಿಗೆ ಅತಿ ಸಣ್ಣ ಹೆಲಿಕಾಪ್ಟರ್ ಎಂದು ಮಾನ್ಯತೆ ನೀಡಲು ಒಪ್ಪಿರುವುದನ್ನು ಪ್ರಕಟಿಸಿದೆ.
*ಅಶೋಕ್‌ಕುಮಾರ್ ಎ

Monday, May 12, 2008

ಅಂತಿಮ ಸಂಸ್ಕಾರ:ಹೊಸ ವಿಧಾನ



ಮಾನವ ದೇಹದ ಅಂತಿಮ ಸಂಸ್ಕಾರಕ್ಕೆ ದಹನ ಅಥವಾ ದಫನ ವಿಧಾನಗಳನ್ನು ಬಳಸುವುದು ಗೊತ್ತೇ ಇದೆ.ಸತ್ತ ನಂತರ ನಮಗೆ ಬೇಕಾದ್ದು ಆರಡಿ-ಮೂರಡಿ ಚೌಕದ ಜಾಗ ಅನ್ನುವುದು ಇದಕ್ಕೇ ಇರಬೇಕು.ಈಗ ನಮ್ಮ ಅಂತಿಮ ಸಂಸ್ಕಾರಕ್ಕೆ ಪರಿಸರಪ್ರಿಯ ಪದ್ಧತಿ ಲಭ್ಯ.ಈ ಪದ್ಧತಿಯಲ್ಲಿ ದೇಹವನ್ನು ಉರಿಸಲು ಕಟ್ಟಿಗೆ ಅಥವಾ ವಿದ್ಯುತ್ ಯಾವುದೂ ಬೇಡ.ದೇಹವನ್ನು ಹೂಳಲು ಸ್ಥಳಾವಕಾಶವೂ ಬೇಡ.ಪ್ರೆಷರ್ ಕುಕರ್‌ನಲ್ಲಿ ಬೇಯಿಸಿದಂತೆ ದೇಹವನ್ನು ಅತಿ ಒತ್ತಡ ಮತ್ತು ಅತ್ಯಧಿಕ ಶಾಖದಲ್ಲಿ ಕಾಸ್ಟಿಕ್ ಸೋಡಾದ ಜತೆ ಬೇಯಿಸಿದರೆ ಮುಗಿಯಿತು.ಕಳೇಬರ ಹೋಗಿ ದ್ರಾವಣ ಲಭ್ಯವಾಗುತ್ತದೆ.ಅಮೋನಿಯಾ ಘಾಟಿನ,ಸಿರಪ್ ಅಂತೆ ಕಾಣಿಸುವ ದ್ರವ ರೂಪಕ್ಕೆ ಶರೀರ ಇಳಿಯುತ್ತದೆ.ಜತೆಗೆ ಅಸ್ಥಿಯ ತುಂಡುಗಳೂ ಉಳಿಯುತ್ತವೆ ಅನ್ನಿ.ಘನ ಪದಾರ್ಥಗಳನ್ನು ಸೋಸಿ ತೆಗೆದು,ದ್ರಾವಣವನ್ನು ಒಳಚರಂಡಿಗೂ ಹರಿಯ ಬಿಡಲು ಅಡ್ಡಿ ಇಲ್ಲ ಎಂದು ಈ ವಿಧಾನವನ್ನು ಅಭಿವೃದ್ಧಿ ಪಡಿಸಿರುವ ಬಯೋಸೇಫ್ ಇಂಜಿನಿಯರಿಂಗ್ ಕಂಪೆನಿಯ ವಕ್ತಾರ ಹೇಳುತ್ತಾರೆ.ಅಮೆರಿಕಾದ ಕೆಲವು ರಾಜ್ಯಗಳಲ್ಲಿ ಈ ವಿಧಾನದಿಂದ ಮೃತರ ಶರೀರಕ್ಕೆ ಅಂತಿಮ ಸಂಸ್ಕಾರ ಮಾಡುವುದಕ್ಕೆ ಅನುಮತಿಯಿದೆಯಂತೆ.ಕ್ಷಾರ ಪದಾರ್ಥ ಬಳಸುವ ಈ ವಿಧಾನಕ್ಕೆ ಅಲ್ಕಲೈನ್ ಹೈಡ್ರ್‍ಆಲಿಸಿಸ್ ಎಂದು ಹೆಸರಿಸಲಾಗಿದೆ.ಆದರೆ ಮಾನವ ಕಳೇಬರವನ್ನು ದ್ರಾವಕವಾಗಿಸಿ,ಒಳಚರಂಡಿಯ ಮೂಲಕ ನಿವಾರಿಸಿಬಿಡುವ ವಿಧಾನ ಮೃತನಿಗೆ ಅಗೌರವ ತೋರಿಸಿದಂತಾಗುತ್ತದೆ ಎಂದು ವಾದಿಸುವ ಜನರೂ ಇದ್ದಾರೆ.ಉಕ್ಕಿನ ಸಿಲಿಂಡರುಗಳಲ್ಲಿ ದೇಹವನ್ನಿರಿಸಿ,ಅಲ್ಕಲೈನ್ ಹೈಡ್ರಾಲಿಸಿಸ್ ಮಾಡುವ ವಿಧಾನ ದುಬಾರಿಯಾಗಲಿದೆ.ಯಾಕೆಂದರೆ ಇಂತಹ ಚಿತಾಗಾರಗಳು ಸ್ಥಾಪಿಸಲು ದುಬಾರಿಯಾಗುತ್ತವೆ.ಆದರೆ ಚಿತಾಗಾರದಲ್ಲಿ ಹೆಣ ಸುಡಲು ಸದ್ಯ ವಿಧಿಸುವ ದರವನ್ನಷ್ಟೇ ವಿಧಿಸಲಾಗುತ್ತದೆಯಂತೆ.ಈಗಾಗಲೇ ಮಯೋ ಕ್ಲಿನಿಕ್ ಮತ್ತು ಫ್ಲೊರಿಡಾ ವಿಶ್ವವಿದ್ಯಾಲಯಗಳಲ್ಲಿ ಈ ವಿಧಾನ ಬಳಸಿ ಅಂಗಾಂಗ ಕಳೇಬರಗಳಿಂದ ಮುಕ್ತಿ ಕಾಣಲಾಗುತ್ತಿದೆ.
ಚಂದಮಾಮನನ್ನು ಅಂತರ್ಜಾಲದಲ್ಲಿ ನೋಡಿ
ಚಂದಮಾಮ ಪತ್ರಿಕೆಯನ್ನು ಓದದೆ ಬೆಳೆದು ದೊಡ್ದವರಾದವರು ಭಾರತದಲ್ಲಿ ಹುಡುಕಿದರೂ ಸಿಗುವುದು ಕಷ್ಟ.ಅರುವತ್ತು ತುಂಬಿದ ಪತ್ರಿಕೆಯ ವಜ್ರಮಹೋತ್ಸವದಲ್ಲಿ ಅಮಿತಾಭ್ ಬಚ್ಚನ್ ಇದ್ದರು.ತಮ್ಮ ಮೊಮ್ಮಗನಿಗೂ ಚಂದಮಾಮ ಕೊಡಿಸಲಿದ್ದೇನೆಂದು ಅವರು ಈ ಸಂದರ್ಭದಲ್ಲಿ ಹೇಳಿಯೂ ಇದ್ದರು.ಅರುವತ್ತರ ಸಂಭ್ರಮದಲ್ಲಿರುವ ಪತ್ರಿಕೆಯ ಅಂತರ್ಜಾಲ ತಾಣ http://www.chandamama.com ಆದರೆ,ಅದರ ಹಳೆಯ ಸಂಚಿಕೆಗಳು http://www.chandamama.com/content/story_archive_pdf/archive.phpದಲ್ಲಿ ಲಭ್ಯ.
ಭಾರತೀಯ ವಿದ್ಯಾಲಯಗಳು ಉಪಗ್ರಹ ತಯಾರಿಸಲಿವೆ
ಇತ್ತೀಚೆಗೆ ಇಸ್ರೋ ಹತ್ತು ಉಪಗ್ರಹಗಳನ್ನು ಸುರಕ್ಷಿತವಾಗಿ ಕಕ್ಷೆಗೆ ಸೇರಿಸಿ ಹೊಸ ದಾಖಲೆ ನಿರ್ಮಿಸಿದ್ದು ಈಗ ಹಳೆಸುದ್ದಿ.ಇವುಗಳ ಪೈಕಿ ಎರಡು ಉಪಗ್ರಹಗಳು ಮಾತ್ರಾ ಇಸ್ರೋದ್ದು.ಉಳಿದ ಎಂಟು ಉಪಗ್ರಹಗಳನ್ನು ವಿದೇಶೀ ವಿಶ್ವವಿದ್ಯಾಲಯಗಳು ತಯಾರಿಸಿದ್ದುವು.ಅವುಗಳ ತೂಕ ಮೂರು ಕೆಜಿಯಿಂದ ಹದಿನಾರು ಕೆಜಿಯ ಒಳಗೇ ಇದ್ದುವು.ಕೆನಡಾ,ಜರ್ಮನಿ,ಜಪಾನ್,ನೆದರ್ಲೆಂಡ್ ಮತ್ತು ಡೆನ್ಮಾರ್ಕಿನ ವಿಶ್ವವಿದ್ಯಾಲಯಗಳಲ್ಲಿ ಅವನ್ನು ತಯಾರಿಸಲಾಗಿತ್ತು.ಘನಾಕಾರದ ಈ ಉಪಗ್ರಹಗಳನ್ನು ಕ್ಯೂಬ್‍ಸ್ಯಾಟ್ ಎನ್ನುವ ತಂತ್ರಜ್ಞಾನ ಬಳಸಿ ನಿರ್ಮಿಸಲಾಗಿದೆ.ಉಪಗ್ರಹಗಳನ್ನು ನಿರ್ಮಿಸಿದಾಗ ವಿದ್ಯಾರ್ಥಿಗಳಿಗೆ ಕ್ಲಿಷ್ಟ ವ್ಯವಸ್ಥೆಗಳನ್ನು ನಿರ್ವಹಿಸುವುದರ ಬಗ್ಗೆ ಸ್ಪಷ್ಟವಾದ ಕಲ್ಪನೆ ಬರುತ್ತದೆ.ಈಗಾಗಲೇ ಇಂತಹ ತಂತ್ರಜ್ಞಾನ ಬಳಸಿದ ನಲುವತ್ತಕ್ಕೂ ಹೆಚ್ಚು ಉಪಗ್ರಹಗಳನ್ನು ನಿರ್ಮಿಸಲಾಗಿದ್ದು,ಅವುಗಳ ಪೈಕಿ ಹತ್ತು ಹನ್ನೆರಡು ಉಪಗ್ರಹಗಳಿನ್ನೂ ಕಕ್ಷೆಯಲ್ಲಿರಬಹುದು ಎಂದು ಅಂದಾಜಿಸಲಾಗಿದೆ.ಭಾರತದ ವಿಶ್ವವಿದ್ಯಾಲಯಗಳೂ ಉಪಗ್ರಹ ನಿರ್ಮಿಸುವ ಪ್ರಯತ್ನದಲ್ಲಿವೆ.ಅಣ್ಣಾ ವಿಶ್ವವಿದ್ಯಾಲಯವು ಇಸ್ರೋ ಜತೆ ಸೇರಿ ಅಣುಸ್ಯಾಟ್ ಎನ್ನುವ ಮೂವತ್ತೈದು ಕೆಜಿ ತೂಕದ ಉಪಗ್ರಹ ನಿರ್ಮಿಸಿದೆ.ಬಾಂಬೆ ಐಐಟಿಯು ಹತ್ತು ಕೆಜಿ ತೂಕದ ಉಪಗ್ರಹ ನಿರ್ಮಿಸುತ್ತಿರುವ ಸುದ್ದಿ ಬಂದಿದೆ.ನಲುವತ್ತು ವಿದ್ಯಾರ್ಥಿಗಳು ಇಪ್ಪತ್ತು ಶಿಕ್ಷಕರ ಜತೆ ಸೇರಿ ಈ ಸಾಹಸಕ್ಕಿಳಿದಿದ್ದಾರೆ.ಐಐಟಿ ಕಾನ್‍ಪುರವು ಸಂವೇದಕಗಳನ್ನು,ಯಾಂತ್ರಿಕ ಬಿಡಿ ಭಾಗಗಳನ್ನು ಐಸಿ ತಯಾರಿಸುವ ವಿಧಾನದ ಮೂಲಕವೇ ಕಿರುಗಾತ್ರದಲ್ಲಿ ತಯಾರಿಸುವ ಮೆಮ್ಸ್ ತಂತ್ರಜ್ಞಾನದಲ್ಲಿ ತನಗಿರುವ ಪ್ರಾವಿಣ್ಯವನ್ನು ಬಳಸಿ,ಉಪಗ್ರಹ ತಯಾರಿಸುವ ಯೋಜನೆ ಹಾಕಿಕೊಂಡಿದೆ.ಸಂಸ್ಥೆಯ ಸುವರ್ಣ ಮಹೋತ್ಸವದ ಮುನ್ನ ಐಐಟಿ-ಮೆಮ್‍ಸ್ಯಾಟ್ ತಯಾರಾಗಲಿದೆ ಎನ್ನುವುದು ಈಗಿನ ಲೆಕ್ಕಾಚಾರ.
ಹಾರ್ಡ್ ಡಿಸ್ಕ್ ಸುಟ್ಟರೂ,ಮಾಹಿತಿ ಮರುಗಳಿಕೆ
ಕಂಪ್ಯೂಟರ್ ಹಾರ್ಡ್‌ಡಿಸ್ಕ್ ಕೆಟ್ಟರೆ,ಅದರಲ್ಲಿದ್ದ ಮಾಹಿತಿ ನಾಶವಾಯಿತೆಂದು ಕೊರಗುತ್ತೇವೆ.ಆದರೆ ಅಪಘಾತಕ್ಕೀಡಾಗಿ ನಾಶವಾದ ಕೊಲಂಬಿಯಾ ಬಾಹ್ಯಾಕಾಶ ಷಟಲ್‍ದಿಂದ ಉದುರಿದ ಹಾರ್ಡ್‍ಡಿಸ್ಕಿನಿಂದ ಕೂಡಾ ದತ್ತಾಂಶ ಮರುಗಳಿಸಲು ದತ್ತಾಂಶ ತಜ್ಞರಾದ ಜಾನ್ ಎಡ್ವರ್ಡ್ಸ್ ಸಫಲರಾಗಿದ್ದಾರೆ.ಅದು ಸುಟ್ಟು ಎಷ್ಟು ಕರಕಲಾಗಿತ್ತು ಎಂದರೆ,ಅದು ಹಾರ್ಡ್‍ಡಿಸ್ಕ್ ಎಂದು ಗುರುತಿಸಲೂ ಸಾಧ್ಯವಾಗುತ್ತಿರಲಿಲ್ಲವಂತೆ.ಇದರಲ್ಲಿ ಸ್ಪೇಸ್ ಷಟಲ್‍ನಲ್ಲಿ ನಡೆಸಿದ ಪ್ರಯೋಗಗಳ ಮಾಹಿತಿಯಿದೆ.ಇವುಗಳಲ್ಲಿ ಹೆಚ್ಚಿನ ಮಾಹಿತಿ ರೇಡಿಯೋ ಸಂಕೇತಗಳ ರೂಪದಲ್ಲಿ ನಾಸಾವನ್ನು ತಲುಪಿದ್ದರೂ,ಅಳಿದುಳಿದ ಮಾಹಿತಿಯನ್ನು ಈಗ ಡಿಸ್ಕಿನ ಮೂಲಕ ಕಲೆ ಹಾಕಿ ಪ್ರಕಟಿಸಲು ಎಡ್ವರ್ಡ್ಸ್ ಸಫಲರಾಗಿದ್ದಾರೆ.
ಅಂತರ್ಜಾಲದ ಮೂಲಕ ತರಗತಿ ನಡೆಸಲು ಮೂಡಲ್ ತಂತ್ರಾಂಶ
ಸ್ವಾಯತ್ತ ವಿದ್ಯಾಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ಹೊಸ ಹೊಸ ವಿಷಯಗಳಲ್ಲಿ ತರಬೇತಿ ನೀಡಲು ಮುಂದಾಗುತ್ತಿವೆ.ಅಂಚೆ ತೆರಪಿನ ಶಿಕ್ಷಣದ ಜಾಗವನ್ನು ಅಂತರ್ಜಾಲದ ಮೂಲಕ ನಡೆಸುವ ದೂರಶಿಕ್ಷಣ ಆಕ್ರಮಿಸುತ್ತಿದೆ.ಇದರಲ್ಲಿ ತಮ್ಮ ಕೋರ್ಸುಗಳನ್ನು ಒದಗಿಸಿ,ವಿದ್ಯಾರ್ಥಿಗಳನ್ನು ನೋಂದಾಯಿಸುವುದರಿಂದ ಹಿಡಿದು,ವಿಷಯ ಮಾಹಿತಿ ಒದಗಿಸಲು,ಪರೀಕ್ಷೆಗಳನ್ನು ಆನ್‍ಲೈನಿನಲ್ಲಿ ನಡೆಸಲು,ಮನೆಕೆಲಸದ ಉತ್ತರಗಳನ್ನು ವಿದ್ಯಾರ್ಥಿಯಿಂದ ಪಡೆಯಲು ಹೀಗೆ ಸರ್ವರೀತಿಯಿಂದಲೂ ನೆರವಾಗುವ ನಿರ್ವಹಣಾ ತಂತ್ರಾಂಶ ಮೂಡಲ್ ಮುಕ್ತ ತಂತ್ರಾಂಶ ಅಂತರ್ಜಾಲದಲ್ಲಿ ಲಭ್ಯವಿದೆ.www.moodle.org ತಾಣದಲ್ಲಿ ವಿವರಗಳು ಲಭ್ಯ.
*ಅಶೋಕ್‍ಕುಮಾರ್ ಎ

Monday, May 05, 2008

ಅಂತರ್ಜಾಲದ ಮೂಲಕ ಪದವಿ ಪರೀಕ್ಷೆಗಳು!

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಶೈಕ್ಷಣಿಕ ಕ್ಷೇತ್ರದಲ್ಲಿ ವಿನೂತನ ಹೆಜ್ಜೆಗಳನ್ನು ಇಟ್ಟು ಪ್ರಸಿದ್ಧವಾಗಿದೆ.ಈಗ ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನೂ ಆನ್‍ಲೈನ್‍ನಲ್ಲಿ ನಡೆಸಿ ವಿಶ್ವವಿದ್ಯಾಲಯ ಹೊಸಹಾದಿ ಹಿಡಿದಿದೆ.ಎಂ ಟೆಕ್(ಅರೆಕಾಲಿಕ) ಪರೀಕ್ಷೆಗಳನ್ನು ಈ ರೀತಿ ನಡೆಸಲಾಗುತ್ತಿವೆ. ಮಧ್ಯಾವಧಿ ಪರೀಕ್ಷೆಗಳೂ ಆನ್‍ಲೈನ್‍ನಲ್ಲಿ ನಡೆಯುತ್ತಿದೆ. ಆದರೆ ಈ ಪರೀಕ್ಷೆಗಳು ಪ್ರಬಂಧ ರೀತಿಯ ಉತ್ತರಗಳನ್ನು ಬಯಸುವ ಪ್ರಶ್ನೆಗಳನ್ನು ಹೊಂದಿರದೆ,ಬಹು ಆಯ್ಕೆ ಉತ್ತರಗಳನ್ನು ಹೊಂದಿದ ಪ್ರಶ್ನೆಗಳಾಗಿವೆ.ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳು ಅಂತರ್ಜಾಲ ಸಂಪರ್ಕ ಹೊಂದಿದ ಕಂಪ್ಯೂಟರ್ ಕೇಂದ್ರದಲ್ಲಿ ಪರೀಕ್ಷೆಗಳನ್ನು ತೆಗೆದುಕೊಳ್ಳುತ್ತಾರೆ.ಪ್ರಶ್ನೆಪತ್ರಿಕೆಗಳನ್ನು ಪಡೆಯಲು ವಿವಿಯ ಅಂತರ್ಜಾಲ ತಾಣಕ್ಕೆ ಲಾಗಿನ್ ಆಗಬೇಕಾಗುತ್ತದೆ.ಗುಪ್ತಸಂಕೇತಗಳನ್ನು ನೀಡಿದರೆ,ಪ್ರಶ್ನೆಪತ್ರಿಕೆ ಕಾಣಿಸಿಕೊಳ್ಳುತ್ತದೆ.ಪ್ರಶ್ನೆಗಳಿಗೆ ನೀಡಿದ ಉತ್ತರಗಳಲಿ ಅತ್ಯಂತ ಸೂಕ್ತವಾದದ್ದನ್ನು ಆಯ್ದು ಕ್ಲಿಕ್ಕಿಸಿದರೆ ಸರಿ.ನಿಗದಿತ ಅವಧಿಯ ನಂತರ,ಉತ್ತರಗಳನ್ನು ವಿವಿಯ ಸರ್ವರಿಗೆ ಒಪ್ಪಿಸಿದರೆ ವಿದ್ಯಾರ್ಥಿಯ ಕೆಲಸ ಮುಗಿಯಿತು.ಪರೀಕ್ಷೆಯ ಅವಧಿಯಲ್ಲಿ ಪರೀಕ್ಷಾರ್ಥಿಯ ಮೇಲೆ ಕಣ್ಣಿಡಲು ಉಪನ್ಯಾಸಕರು ಇರುತ್ತಾರೆ.ಅಂತರ್ಜಾಲದಲ್ಲಿ ಯಾವುದೇ ವಿಷಯದ ಬಗ್ಗೆ ಮಾಹಿತಿಯು ಲಭ್ಯವಾಗುತ್ತದೆ.ಅದನ್ನು ವಿದ್ಯಾರ್ಥಿಗಳು ಬಳಸದಂತೆ ಉಪನ್ಯಾಸಕರು ಕಣ್ಣಿಡಬೇಕಾಗುತ್ತದೆ.ಇತರ ಅಂತರ್ಜಾಲ ತಾಣಗಳಿಗೆ ಸಂಪರ್ಕ ಸಿಗದಂತೆ ನಿರ್ಬಂಧಿಸುವ ವ್ಯವಸ್ಥೆಯ ಉಪಯೋಗ ಪಡೆಯಬಹುದು.ಅಂತರ್ಜಾಲ ಸಂಪರ್ಕ ಕಡಿತವಾಗಿ ತೊಂದರೆಯಾಗಬಾರದೆಂದು,ಪ್ರಶ್ನೆಪತ್ರಿಕೆಗಳ ಮುದ್ರಿತ ಪ್ರತಿಯನ್ನೂ ವಿದ್ಯಾರ್ಥಿಗಳಿಗೆ ಒದಗಿಸಲಾಗುತ್ತದೆ.ಅವರು ಅಂತರ್ಜಾಲದಲ್ಲಿ ಉತ್ತರಗಳನ್ನು ಕ್ಲಿಕ್ಕಿಸುವ ಜತೆ,ಮುದ್ರಿತ ಪ್ರತಿಯಲ್ಲೂ ಉತ್ತರಗಳನ್ನು ಗುರುತು ಮಾಡುತ್ತಾರೆ.ಇದನ್ನು ಪರೀಕ್ಷೆಯ ನಂತರ ವಿವಿಗೆ ರವಾನಿಸಲಾಗುತ್ತದೆ.ಅಂತರ್ಜಾಲದ ಮೂಲಕ ಒಪ್ಪಿಸಿದ ಅಭ್ಯರ್ಥಿಯ ಉತ್ತರಗಳು ಕಾರಣಾಂತರದಿಂದ ವಿವಿಗೆ ಲಭ್ಯವಾಗದಿದ್ದರೆ,ಉತ್ತರಪತ್ರಿಕೆಯ ಉತ್ತರಗಳು ಇರುತ್ತವಲ್ಲವೇ?ತಂತ್ರಾಂಶ ಬಳಸಿ ಮೌಲ್ಯಮಾಪನ ಮಾಡುವುದು ಸುಲಭ.ನಿಜವಾಗಿಯಾದರೆ,ಅಭ್ಯರ್ಥಿ ಪಡೆದ ಅಂಕಗಳನ್ನು ಪರೀಕ್ಷೆ ನಡೆದ ತಕ್ಷಣ ಲಭ್ಯವಾಗಿಸಬಹುದು.ಆದರೆ ವಿಶ್ವವಿದ್ಯಾಲಯ ಸದ್ಯ ಹೀಗೆ ಮಾಡುತ್ತಿಲ್ಲ.ನಂತರದ ದಿನಗಳಲ್ಲಿ ಫಲಿತಾಂಶವನ್ನು ಪ್ರಕಟಿಸುತ್ತದೆ.
ಟ್ರ್‍ಆನ್ಸಿಸ್ಟರ್ ಜಾಗಕ್ಕೆ ಮೆಮ್ರಿಸ್ಟರ್?
ಎಪ್ಪತ್ತರ ದಶಕದಲ್ಲಿ ಸಂಶೋಧನೆಯಾದ ಇಲೆಕ್ಟ್ರಾನಿಕ್ಸ್ ವಸ್ತುವೊಂದು ಈಗ ಸುದ್ದಿ ಮಾಡುತ್ತಿದೆ ಎನ್ನುವುದು ಆಶ್ಚರ್ಯ ಹುಟ್ಟಿಸಬಹುದಾದರೂ ಸತ್ಯ.ಕ್ಯಾಲಿಫೊರ್ನಿಯಾ ವಿಶ್ವವಿದ್ಯಾಲಯದ ಪ್ರೊಫೆಸರ್ ಲಿಯೋನ್ ಚುವಾ ಅವರು ಇಲೆಕ್ಟ್ರೋಡುಗಳ ನಡುವೆ ಟೈಟಾನಿಯಮ್ ಆಕ್ಸೈಡೈನ ಪದರವಿದ್ದಾಗ,ಸಿಗುವ ಇಲೆಕ್ಟ್ರಾನಿಕ್ ಸಾಧನವನ್ನು ಮೆಮ್ರಿಸ್ಟರ್ ಎಂದು ಕರೆದರು.ಇದರ ವಿದ್ಯುತ್ ನಿರೋಧಕ ಶಕ್ತಿಯು,ಇದರಲ್ಲಿ ಸಂಗ್ರಹವಾಗಿದ್ದ ವಿದ್ಯುದಾವೇಶದ ಮೇಲೆ ಅವಲಂಬಿತವಾಗಿರುವುದನ್ನು ಅವರು ಕಂಡು ಕೊಂಡಿದ್ದರು.ಅಂದರೆ,ಇದಕ್ಕೆ ತನ್ನ ವಿದ್ಯುದಾವೇಶದ "ನೆನಪು" ನಂತರದಲ್ಲಿ ವಿದ್ಯುದಾವೇಶ ಇಲ್ಲದಾಗಲೂ ಇರುತ್ತದೆ! ಈ ಮೆಮ್ರಿಸ್ಟರ್‍ಗಳನ್ನು ಬಳಸಿ ಕಂಪ್ಯೂಟರಿನ ಸ್ಮರಣಕೋಶಗಳನ್ನು ತಯಾರಿಸಬಾರದೇಕೆ ಎನ್ನುವ ಕಡೆ ಈಗ ಯೋಚನೆ ಹರಿದಿದೆ.
ಇಂತಹ ಸ್ಮರಣಕೋಶಗಳನ್ನು ತಯಾರಿಸಿದರೆ,ಅವು ವಿದ್ಯುತ್ ಇಲ್ಲದ ವೇಳೆಯೂ ನೆನಪಿಟ್ಟುಕೊಳ್ಳಬಲ್ಲವು.ಸದ್ಯ ಲಭ್ಯವಿರುವ "ರಾಂ"(RAM) ಸ್ಮರಣಕೋಶಗಳು ಟ್ರಾನ್ಸಿಸ್ಟರ್‌ಗಳನ್ನು ಬಳಸಿ ತಯಾರಿಸಿದವು- ವಿದ್ಯುತ್ ಕಡಿತವಾದರೆ ಇವು ತಮ್ಮಲ್ಲಿ ಸಂಗ್ರಹವಾಗಿದ್ದ ಮಾಹಿತಿಯನ್ನು ಉಳಿಸಿಕೊಳ್ಳಲಾರವು.ಮೆಮ್ರಿಸ್ಟರುಗಳನ್ನು ಬಳಸಿದ ಮೊಬೈಲ್ ಹ್ಯಾಂಡ್‍ಸೆಟ್‌ಗಳು ಭಾರೀ ಕಡಿಮೆ ವಿದ್ಯುಚ್ಛಕ್ತಿ ಅಪೇಕ್ಷಿಸುತ್ತವೆ.ಇಂತಹ ಸ್ಮರಣಕೋಶಗಳನ್ನು ಕಂಪ್ಯೂಟರುಗಳಲ್ಲಿ ಬಳಸಿದರೆ,ಅವು ವಿದ್ಯುತ್ ನೀಡಿದೊಡನೆ,ತಮ್ಮ ಹಳೆಯ ಸ್ಥಿತಿಯಿಂದ ಚಾಲೂ ಆಗುತ್ತವೆ.ಆದರೆ ಮೆಮ್ರಿಸ್ಟರುಗಳನ್ನು ಬಳಸಿ ದೊಡ್ದ ಸ್ಮರಣಕೋಶಗಳನ್ನು ತಯಾರಿಸಲು ಸಾಧ್ಯವೇ ಎನ್ನುವುದನಿನ್ನೂ ಕಾದು ನೋಡಬೇಕಿದೆ.
ಸೆಲ್‍ಪೋನ್ ಹ್ಯಾಂಡ್‍ಸೆಟ್‌ಗಳನ್ನು ಬಳಸಿನೋಡಿ!
ಕಾರುಗಳನ್ನು ಖರೀದಿಸುವ ಮೊದಲು ಟೆಸ್ಟ್ ಡ್ರೈವ್ ಮಾಡಿನೋಡುವ ಅವಕಾಶವನ್ನು ಮಾರಾಟಗಾರರು ನೀಡುತ್ತಾರೆ ತಾನೇ?ಸೆಲ್‍ಫೋನ್ ಖರೀದಿಸುವ ಮೊದಲು ಅದರ ಬಗ್ಗೆ ಇತರರ ಅಭಿಪ್ರಾಯಗಳನ್ನು ಅಂತರ್ಜಾಲದಲ್ಲಿ ಪಡೆಯಬಹುದು.ಅವುಗಳ ಗುಣಾವಗುಣಗಳ ಪಟ್ಟಿ,ಇತರ ಸೆಟ್‍ಗಳ ಜತೆ ಹೋಲಿಕೆ ಇವೆಲ್ಲಾ ಅಂತರ್ಜಾಲದಲ್ಲಿ ಲಭ್ಯವಾಗುತ್ತದೆ.ಆದರೆ ಅವನ್ನು ಬಳಸಿ, ಎಸ್ ಎಂ ಎಸ್ ಕಳಿಸುವುದು,ಅಡ್ರೆಸ್‌ಬುಕ್ ಪರಿಶೀಲಿಸುವುದು ಸುಲಭವೇ ಎಂದು ಮುಂತಾಗಿ ಪರೀಕ್ಷಿಸುವಂತಿದ್ದರೆ?ಮನೆಯಿಂದಲೇ ನಿಮ್ಮ ಆಯ್ಕೆಯ ಹ್ಯಾಂಡ್‍ಸೆಟ್‍ನ್ನು ಪರೀಕ್ಷಿಸಿ ನೋಡಲು ಅಂತರ್ಜಾಲತಾಣವೊಂದು ಅವಕಾಶ ನೀಡುತ್ತದೆ.www.tryphone.com ಎನ್ನುವ ಈ ಅಂತರ್ಜಾಲತಾಣದಲ್ಲಿ ಹಲವು ಮಾಡೆಲ್ ಸೆಟ್‍ಗಳನ್ನು ಪರೀಕ್ಷಿಸಲು ಅನುಕೂಲ ಇದೆ.ಹ್ಯಾಂಡ್‍ಸೆಟ್ ಮೇಲೆ ಕ್ಲಿಕ್ಕಿಸಿ,ಬಳಸುವ ಅನುಕೂಲತೆ ಇಲ್ಲಿ ಲಭ್ಯ.ಬೇಕೆಂದರೆ ಅವುಗಳ ಪ್ರದರ್ಶನದ ವಿಡಿಯೋ ಕ್ಲಿಪ್ಪಿಂಗ್ ಇಲ್ಲಿದೆ. ಬಳಸಿದವರು ನೀಡಿರುವ ಅಭಿಪ್ರಾಯಗಳೂ ಸಿಗುತ್ತವೆ.ತಯಾರಕರು ಅಂತರ್ಜಾಲ ತಾಣಕ್ಕೆ ನಿಗದಿತ ದರ ಪಾವತಿಸಿ ಈ ಸೇವೆ ಪಡೆದುಕೊಳ್ಳಬಹುದು.
ಚಂದ್ರನ ಮೇಲೆ ನಿಮ್ಮ ಹೆಸರು!
ನಾಸಾದವರು ಈ ವರ್ಷದ ಮಧ್ಯಭಾಗದಲ್ಲಿ ಚಂದ್ರನ ಭೂಪರೀಕ್ಷೆ ಮಾಡುವ ಚಂದ್ರನ ಸುತ್ತ ಸುತ್ತುವ ವಾಹನವನ್ನು ಕಳುಹಿಸಲಿದ್ದಾರೆ.ಅದರಲ್ಲಿ ಚಂದ್ರನ ಮೇಲೆ ಇಡಲಿರುವ ಡಿಜಿಟಲ್ ದತ್ತಾಂಶ ಸಂಗ್ರಹದಲ್ಲಿ ಜನರ ಹೆಸರುಗಳನ್ನು ಸೇರಿಸಲು ಅನುಕೂಲ ಕಲ್ಪಿಸಲಾಗಿದೆ.ನಿಮ್ಮ ಹೆಸರನ್ನು ಸೇರಿಸಬೇಕೆಂದಿದ್ದರೆ ನೀವು http://lro.jhuapl.edu/NameToMoon/index.php ತಾಣಕ್ಕೆ ಭೇಟಿ ನೀಡಿ,ಅಲ್ಲಿ ನಿಮ್ಮ ಹೆಸರನ್ನು ಟೈಪಿಸಿ.ಈ ಬಗ್ಗೆ ಪ್ರಮಾಣಪತ್ರವನ್ನೂ ಪಡೆದುಕೊಳ್ಳಬಹುದು.
*ಅಶೋಕ್‍ಕುಮಾರ್ ಎ
 
googledc7e93ba1a7703ae.html