Monday, June 30, 2008

ಅನಕೃ ಆಡಿಯೋ ಬುಕ್ ಬಿಡುಗಡೆಯಾಗಲಿದೆ!



ಕನ್ನಡದ ಬಗ್ಗೆ ಆಸಕ್ತಿಯಿದ್ದು,ಕನ್ನಡದ ಓದಲು ಒದ್ದಾಡಬೇಕಾಗುತ್ತದೆಯೇ?ಅಂತವರಿಗೆಂದು ಖ್ಯಾತ ಸಾಹಿತಿ ಅನಕೃ ಅವರ ಕಾದಂಬರಿ ಸಂಧ್ಯಾರಾಗ ಆಡಿಯೋಬುಕ್ ರೂಪದಲ್ಲಿ ಲಭ್ಯವಾಗಲಿದೆ.ಸಂಭಾಷಣೆಗಳ ರೂಪದಲ್ಲಿ "ಸಂಧ್ಯಾರಾಗ" ಕಾದಂಬರಿಯನ್ನು ಪ್ರಸ್ತುತ ಪಡಿಸುವ ಹೊಸ ಶೈಲಿಯನ್ನಿದರಲ್ಲಿ ಅಳವಡಿಸಲಾಗಿದೆ.ಕಲಾವಿದ ರಾಜಾರಾಮ್ ಮತ್ತು ಕೇಶವರಾವ್ ಅವರ ನಿರ್ದೇಶನದಲ್ಲಿ ಅಪರ್ಣಾ ಅವರು ಆಡಿಯೋಬುಕ್ ಅನ್ನು ನಿರೂಪಿಸಿದ್ದಾರೆ.ಅನಕೃ ಕುಟುಂಬದವರೂ ಧ್ವನಿ ನೀಡಿದ್ದಾರೆ. ಎಂಪಿತ್ರೀ ರೂಪದಲ್ಲಿರುವ ಟ್ರ್ಯಾಕ್‍ಗಳನ್ನು ಕೇಳಲು ಮೂರು ಗಂಟೆ ಸಮಯಾವಕಾಶ ಬೇಕು. ಆಡಿಯೋ ಬುಕ್ ಬೆಲೆ ನೂರೈವತ್ತು ರೂಪಾಯಿಗಳು.ಜುಲಾಯಿ ಕೊನೆಗೆ ಆಡಿಯೋ ಬುಕ್ ಬಿಡುಗಡೆಯನ್ನು ನಿರೀಕ್ಷಿಸಬಹುದು.
ವಿಂಡೋಸ್ ಎಕ್ಸ್‌ಪಿ:ಮೈಕ್ರೋಸಾಫ್ಟ್ ಬಿಟ್ಟರೂ ಜನ ಬಿಡರು
ಮೈಕ್ರೋಸಾಫ್ಟ್ ಕಂಪೆನಿ ಕಂಪ್ಯೂಟರ್ ಕಾರ್ಯನಿರ್ವಹಣಾ ವ್ಯವಸ್ಥೆ ತಂತ್ರಾಂಶ ವಿಸ್ತಾವನ್ನು ತಂದು ವರ್ಷವೇ ಉರುಳಿತು.ಹದಿನಾಲ್ಕು ಕೋಟಿ ಪ್ರತಿ ತಂತ್ರಾಂಶವನ್ನದು ಮಾರಿಯೂ ಆಗಿದೆ.ಹೊಸ ತಂತ್ರಾಂಶ ಲಭ್ಯವಿರುವಾಗ,ಹಳೆಯದನ್ನು ಮುಂದುವರಿಸಲು ಕಂಪೆನಿಗೆ ಯಾವ ಕಾರಣವೂ ಇಲ್ಲ.ಇನ್ನು ಜೂನ್ ಮೂವತ್ತರ ನಂತರ ವಿಂಡೋಶ್ ಎಕ್ಸ್‌ಪಿಯನ್ನು ಕಂಪ್ಯೂಟರಲ್ಲಿ ಅಳವಡಿಸುವುದನ್ನು ನಿಲ್ಲಿಸುವುದಾಗಿ ಕಂಪೆನಿ ಪ್ರಕಟಿಸಿಯೂ ಬಿಟ್ಟಿದೆ.ಇನ್ನೇನಿದ್ದರೂ ವಿಸ್ತಾ ಬಳಸಿ ಎಂದು ಅದರ ಸಲಹೆ. ಆದರೆ ಜನರಿಗೆ ಎಕ್ಸ್‌ಪಿಯೇ ಅಚ್ಚುಮೆಚ್ಚು.ವಿಸ್ತಾ ಮೂರು ಆಯಾಮದ ಅನುಭವ ನೀಡಿದರೂ,ಅದು ಬಯಸುವ ಕಂಪ್ಯೂಟರ್ ಯಂತ್ರಾಂಶ ಬಹಳ ದುಬಾರಿ.ಹಳೆ ಕಂಪ್ಯೂಟರುಗಳಲ್ಲಿ ಅದನ್ನು ಅಳವಡಿಸಲಾಗದು,ಒಂದು ವೇಳೆ ಅಳವಡಿಸಿದರೂ,ಅದು ಆಮೆಗತಿಯಲ್ಲಿ ಕೆಲಸ ಮಾಡುತ್ತದೆ.ಹಾಗಾಗಿ ಹಳೆಯ ಎಕ್ಸ್‌ಪಿಯೇ ಹಳೆ ಪಿಸಿಗಳಲ್ಲಿ ಮುಂದುವರಿದಿದೆ.ಆದರೆ ಮೈಕ್ರೋಸಾಫ್ಟ್‌ಗೆ ಹೊಸ ತಂತ್ರಾಂಶವನ್ನು ಮಾರುವ ತವಕ.ಕೊನೆಗೂ ಎಕ್ಸ್‌ಪಿಯನ್ನು ಹೊಸ ಕಂಪ್ಯೂಟರುಗಳಲ್ಲಿ ಇನ್ನು ಅಳವಡಿಸುವಡಿಸದಿರಲು ಮೈಕ್ರೋಸಾಫ್ಟ್ ಕಂಪೆನಿ ನಿರ್ಧರಿಸಿದೆ.ಆದರೆ ಅನಧಿಕೃತವಾಗಿ ಎಕ್ಸ್‌ಪಿಯು ಮುಂದುವರಿಯುವುದು ಬಹುತೇಕ ನಿಶ್ಚಿತ.ಮುಂದಿನ ಹೊಸ ಆವೃತಿ ವಿಂಡೋಸ್ 7 ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದು ಮುಂದಿನ ವರ್ಷವಷ್ಟೆ.ಹಾಗಾಗಿ ವಿಸ್ತಾ ಒಲ್ಲದವರು ಮೈಕ್ರೋಸಾಪ್ಟಿನ ಹೊಸ ತಂತ್ರಾಂಶಕ್ಕಾಗಿ ಕಾಯುವುದು ಅನಿವಾರ್ಯ.ಉಬುಂಟು,ಮ್ಯಾಂಡ್ರಿವಾ ಅಂತಹ ಲಿನಕ್ಸ್ ವಿತರಣೆಗಳು ಮುಕ್ತವಾಗಿ ಲಭ್ಯವಿದ್ದು,ವಿಂಡೋಸಿನಷ್ಟೇ ಸರಳವಾಗಿವೆ.ವಿಂಡೋಸ್ ವ್ಯವಸ್ಥೆಯಲ್ಲಿರುವ ವೈರಸ್ ಕಾಟವೂ ಲಿನಕ್ಸ್‌ನಲ್ಲಿಲ್ಲ.ಹೀಗಾಗಿ ಕಂಪ್ಯೂಟರನ್ನು ಬಳಸಲು ಲಿನಕ್ಸ್ ಕಾರ್ಯನಿರ್ವಹಣಾ ವ್ಯವಸ್ಥೆ ತಂತ್ರಾಂಶಕ್ಕೆ ಬದಲಾಯಿಸಿಕೊಳ್ಳಲಿದು ಸಕಾಲ.ಹೊಸ ಅನುಭವ ನೀಡುವ ಎಂಬರ್ಥದಲ್ಲಿ ಎಕ್ಸ್‌ಪಿ(eXPerience) ಈಗ ಅವಸಾನದ ಅಂಚಿನಲ್ಲಿದ್ದು eXPiry ಆಗಲಿದೆ!
ಸ್ಮಾರ್ಟ್ ರೊಬೋಟ್
ಬಾಂಬು ಪತ್ತೆ ಮತ್ತು ವಿಲೇವಾರಿ ಮಾಡಲು ಜನರನ್ನು ಬಳಸುವುದು ಅಪಾಯಕಾರಿ. ರೊಬೋಟ್‌ಗಳನ್ನು ಇದಕ್ಕೆ ಬಳಸ ಬೇಕಿದ್ದರೆ ಅವುಗಳನ್ನು ಸೂಕ್ತ ರೀತಿಯಲ್ಲಿ ವಿನ್ಯಾಸಗೊಳಿಸಬೇಕು.ಈ ರೊಬೋಟ್‌ಗಳನ್ನು ನಿಸ್ತಂತು ಮಾಧ್ಯಮದ ಮೂಲಕ ನಿಯಂತ್ರಿಸುವಂತಿರಬೇಕು.ರೊಬೋಟ್ ಸುತ್ತ ಇರುವ ವಸ್ತುಗಳನ್ನು ರೊಬೋಟ್ ಚಲಾಯಿಸುವ ವ್ಯಕ್ತಿ ನೋಡಲು ಕ್ಯಾಮರಾ ಅಳವಡಿಸಿರಬೇಕು. ಕಂಪ್ಯೂಟರ್ ಮೂಲಕ ರೊಬೋಟ್ ಅನ್ನು ನಿಯಂತ್ರಿಸುವ ಹಾಗಿರಬೇಕು.ರೊಬೋಟ್ ವಸ್ತುಗಳನ್ನು ಸರಿಸಲು ಶಕ್ತವಿರಬೇಕು.ಅದು ತನ್ನ ಸುತ್ತವಿರುವ ಅಡೆ ತಡೆಗಳನ್ನು ನಿವಾರಿಸಿಕೊಂಡು ಮುಂದುವರಿಯಲು,ದಿಕ್ಕು ಬದಲಿಸಿ ಚಲಿಸುವಂತಿರಬೇಕು.ಈ ರೀತಿ ವಿನ್ಯಾಸಗೊಳಿಸಲು ವಿದ್ಯಾರ್ಥಿಗಳಾದ ಸಂದೇಶ್ ಜೆ ಕೆ ಮತ್ತು ಷಣ್ಮುಖ ಕೆ ಅವರಿಗೆ ಸಾಧ್ಯವಾಗಿದೆ.ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ವಿಭಾಗದ ಈ ವಿದ್ಯಾರ್ಥಿಗಳು ತಮ್ಮ ಅಂತಿಮ ವರ್ಷದ ಪ್ರಾಜೆಕ್ಟ್ "ಸ್ಮಾರ್ಟ್ ರೊಬೋಟ್"ಗೆ ಹತ್ತು ಸಾವಿರ ರೂಪಾಯಿಗೂ ಅಧಿಕ ವ್ಯಯಿಸಿದ್ದಾರೆ.ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್ತು ಇದಕ್ಕೆ ಸಹಾಯಧನ ನೀಡಿದೆ.ಕಾಲೇಜಿನ ಪ್ರಾಜೆಕ್ಟ್ ಪ್ರದರ್ಶನದಲ್ಲೂ "ಸ್ಮಾರ್ಟ್ ರೊಬೋಟ್" ಅತ್ಯುತ್ತಮ ಪ್ರಾಜೆಕ್ಟ್ ಎಂದು ಆಯ್ಕೆಯಾಗಿದೆ.ಕಾಲೇಜಿನ ಸಹಪ್ರಾಧ್ಯಾಪಕ ಗೋವರ್ಧನ್ ಹೆಗ್ಡೆಯವರು ಮಾರ್ಗದರ್ಶನ ನೀಡಿದ್ದಾರೆ.
ಸಂಪಾದಕರಿಗೆ ಪತ್ರ ಪ್ರಕಟಿಸುವುದೀಗ ಸುಲಭ
ವಿಶ್ವದ ಯಾವುದೇ ಜನಪ್ರಿಯ ಪತ್ರಿಕೆಗೆ ನಿಮ್ಮ ಅನಿಸಿಕೆ ಬಗ್ಗೆ ಬರೆಯಬೇಕಿದೆಯೇ?ಪತ್ರಿಕೆಯ ಮಿಂಚಂಚೆ ವಿಳಾಸವನ್ನು ತಿಳಿದುಕೊಳ್ಳಲು ನಿಮಗೆ ಸಾಧ್ಯವಾಗಿಲ್ಲವಾದರೆ ಚಿಂತಿಲ್ಲ.http://www.publishaletter.com/ ಅಂತರ್ಜಾಲ ತಾಣದಲ್ಲಿ ಜಗತ್ತಿನ ಯಾವುದೇ ದಿನಪತ್ರಿಕೆ ಮತ್ತು ಆಯ್ದ ನಿಯತಕಾಲಿಕಗಳ ಸಂಪಾದಕರಿಗೆ ನಿಮ್ಮ ಅನಿಸಿಕೆ ಮುಟ್ಟಿಸುವ ವ್ಯವಸ್ಥೆಯಿದೆ.ಅಂತರ್ಜಾಲ ತಾಣದಲ್ಲಿನ ಅವಕಾಶದಲ್ಲಿ ನಿಮ್ಮ ಅನಿಸಿಕೆಯನ್ನು ಟೈಪಿಸಿ,ನೀವು ಪತ್ರ ಕಳುಹಿಸಬೇಕಾದ ಪತ್ರಿಕೆ ಪ್ರಕಟವಾಗುವ ದೇಶವನ್ನು ಆಯ್ಕೆ ಮಾಡಿ,ಪತ್ರಿಕೆಯ ಹೆಸರನ್ನೂ ಆಯ್ದುಕೊಡಿ. "ಸೆಂಡ್" ಗುಂಡಿಯನ್ನು ಕ್ಲಿಕ್ಕಿಸಿ. ಪತ್ರ ರವಾನೆ ಆಗುತ್ತದೆ. ನಿಮ್ಮ ಪತ್ರ ಪತ್ರಿಕೆಯಲ್ಲಿ ಪ್ರಕಟವಾಗಲಿಲ್ಲವೇ?ಚಿಂತಿಲ್ಲ- ಈ ತಾಣವೇ ನಿಮ್ಮ ಪತ್ರವನ್ನು ಜನರಿಗೆ ತಲುಪಿಸುತ್ತದೆ.ನಿಮ್ಮ ಪತ್ರವನ್ನು ತಕ್ಷಣ ಈ ತಾಣದಲ್ಲಿ ಪ್ರಕಟಿಸಬಹುದು-ಇಲ್ಲವೇ ವಾರ ಬಿಟ್ಟು ಪ್ರಕಟಿವಾಗುವಂತೆ ಮಾಡಬಹುದು.ಆಯ್ಕೆ ನಿಮ್ಮದು.ಹಾಗೆಯೇ ಇತರರ ಅನಿಸಿಕೆಗಳನ್ನು ನೀವು ಓದಬಹುದು.ಅವುಗಳಿಗೆ ಪ್ರತಿಕ್ರಿಯಿಸಬಹುದು.
ಬಿಲ್ ಗೇಟ್ಸ್ ನಿವೃತ್ತಿ

ಮೈಕ್ರೋಸಾಫ್ಟ್ ಕಂಪೆನಿಯ ಸಹಸಂಸ್ಥಾಪಕ ಬಿಲ್ ಗೇಟ್ಸ್ ಹಾವರ್ಡ್ ಕಾಲೇಜಿನ ವಿದ್ಯಾಭ್ಯಾಸಕ್ಕೆ ಬೈ ಹೇಳಿ,ಕಂಪೆನಿಯನ್ನು ಸ್ಥಾಪಿಸಿದ್ದು ಮೂವತ್ತಮೂರು ವರ್ಷ ಹಿಂದೆ.ಈ ಅವಧಿಯಲ್ಲಿ ಕಂಪೆನಿಯನ್ನು ಅಗ್ರಗಣ್ಯ ಕಂಪ್ಯೂಟರ್ ಕಂಪೆನಿಯಾಗಿ ರೂಪಿಸಲು ಬಿಲ್ ಗೇಟ್ಸ್‌ಗೆ ಸಾಧ್ಯವಾಯಿತು.ಜತೆಗೆ ವೈಯುಕ್ತಿಕವಾಗಿ ಐವತ್ತು ಬಿಲಿಯನ್ ಡಾಲರು ಸಂಪತ್ತನ್ನು ಗಳಿಸಿ,ವಿಶ್ವದ ಧನಿಕರಲ್ಲಿ ಓರ್ವನೆಂದು ಪರಿಗಣಿಸಪಟ್ಟ ಬಿಲ್ ಗೇಟ್ಸ್‌ಗೆ ಈಗ ಐವತ್ತೆರಡು ವರ್ಷ.ಮುಂದಿನ ತಿಂಗಳಿಂದ ಬಿಲ್ ಗೇಟ್ಸ್ ಮೈಕ್ರೋಸಾಫ್ಟ್‌ ಜತೆ ಸಂಬಂಧ ಅಧ್ಯಕ್ಷ ಸ್ಥಾನಕ್ಕೆ ಮಾತ್ರ ಸೀಮಿತ.ಇದುವರೆಗೆ ಕಂಪೆನಿಯ ಮುಖ್ಯ ತಂತ್ರಾಂಶ ಕರ್ತೃವೂ ಬಿಲ್ ಗೇಟ್ಸ್ ಆಗಿದ್ದರು.ವಾರಕ್ಕೊಮ್ಮೆ ಅವರು ತಮ್ಮ ಹಳೆಯ ಕಚೇರಿಗೆ ಭೇಟಿ ನೀಡಬಹುದು.ಆದರೆ ಅವರು ಹೆಚ್ಚಾಗಿ ತಮ್ಮ ಗೇಟ್ಸ್ ಫೌಂಡೇಶನ್ ಕಚೇರಿಯಲ್ಲಿ,ವಿಶ್ವದಲ್ಲಿ ಮಲೇರಿಯಾ-ಏಡ್ಸ್ ಪೀಡೆ ನಿವಾರಿಸುವುದು ಹೇಗೆ ಎಂದು ತಲೆ ಕೆಡಿಸಿಕೊಳ್ಳಲಿದ್ದಾರೆ.ಬಯೋಕೆಮಿಸ್ಟ್ರಿಯ ಬಗ್ಗೆಯೂ ಅವರು ಗಮನಹರಿಸಲಿದ್ದಾರೆ.ಆದರೆ ಕಂಪ್ಯೂಟರ್ ತಂತ್ರಾಂಶದ ಬಗ್ಗೆ ತಲೆ ಕೆಡಿಸಿಕೊಳ್ಳುವ ಬದಲು,ಬಡತನ ನಿರ್ಮೂಲನೆ ಮಾಡುವ ತಂತ್ರಗಳ ಬಗ್ಗೆ ಆದ್ಯತೆ ನೀಡಲು ಬಿಲ್ ಗೇಟ್ಸ್ ನಿರ್ಧರಿಸಿದ್ದಾರೆ.
*ಅಶೋಕ್‌ಕುಮಾರ್ ಎ

Monday, June 23, 2008

ಹಾಜರಿ ತೆಗೆದುಕೊಳ್ಳಲು ಸಾಧನ

ಈಗ ಶಾಲಾ ಕಾಲೇಜುಗಳ ಕಚೇರಿಗಳಲ್ಲಿ ಕಂಪ್ಯೂಟರ್ ಬಳಕೆ ಹೆಚ್ಚಾಗಿದೆ.ವಿದ್ಯಾರ್ಥಿಗಳ ವಿವರಗಳು,ಅವರ ಹಾಜರಾತಿ ಮತ್ತು ಪರೀಕ್ಷೆಯಲ್ಲಿ ಅವರ ಸಾಧನೆಯ ವಿವರಗಳು ಕಂಪ್ಯೂಟರುಗಳಲ್ಲಿ ಲಭ್ಯವಿರುವುದು ಸಹಜ. ಆದರೆ ಈ ವಿವರಗಳನ್ನು ಕಂಪ್ಯೂಟರುಗಳಲ್ಲಿ ಶೇಖರಿಸಲು ಅಧ್ಯಾಪಕರು ಸುಮಾರು ಹೊತ್ತು ವ್ಯಯ ಮಾಡಬೇಕಾಗುತ್ತದೆ.ಹಾಜರಾತಿ ವಿವರವು ಕಂಪ್ಯೂಟರಿಗೆ ನೇರವಾಗಿ ಸೇರಿಸಲು ಸ್ವಯಂಚಾಲಿ ವ್ಯವಸ್ಥೆ ಇದ್ದರೆ ಮಾತ್ರ ಕಂಪ್ಯೂಟರ್ ವ್ಯವಸ್ಥೆ ನಿಜಕ್ಕೂ ಅರ್ಥ ಪಡೆಯುತ್ತದೆ.
ಕಾಲೇಜಿನಲ್ಲಿ ಕಂಪ್ಯೂಟರ್ ಜಾಲ ಇದ್ದರೆ ಅಥವ ನಿಸ್ತಂತು ವ್ಯವಸ್ಥೆಯಿದ್ದರೆ,ಶಿಕ್ಷಕರ ಕೆಲಸ ಹಗುರವಾಗುತ್ತದೆ.ತರಗತಿಗೆ ಲ್ಯಾಪ್‌ಟಾಪ್ ಹಿಡಿದುಕೊಂಡು ಹೋದರೆ,ಕಾಲೇಜಿನ ಹಾಜರಾತಿ ತಂತ್ರಾಂಶವನ್ನು ತೆರೆದು,ವಿದ್ಯಾರ್ಥಿಗಳ ಹೆಸರು ಹಿಡಿದು ಕರೆದು,ಅವರು ಹಾಜರಿದ್ದರೆ,ಅದನ್ನು ದಾಖಲಿಸುವುದರ ಮುಖಾಂತರ ಕಂಪ್ಯೂಟರಿನಲ್ಲಿ ಹಾಜರಾತಿ ವಿವರಗಳನ್ನು ಶೇಖರಿಸಬಹುದು.ಆದರೆ ತರಗತಿಯಲ್ಲಿ ಹಾಜರಿದ್ದವರ ವಿವರಗಳನ್ನು ದಾಖಲಿಸುವ ಬದಲಿಗೆ,ಹಾಜರಿಲ್ಲದವರ ಬಗೆಗಿನ ವಿವರಗಳನ್ನು ದಾಖಲಿಸುವುದು ಸಾಮಾನ್ಯವಾಗಿ ಕಡಿಮೆ ತ್ರಾಸದಾಯಕ.ಆದರೆ ಇಂತಹ ವ್ಯವಸ್ಥೆಗೆ ಶಿಕ್ಷಕರು ಲ್ಯಾಪ್‌ಟಾಪ್ ತರಗತಿಗೆ ಒಯ್ಯುವುದು ಅನಿವಾರ್ಯ. ಜತೆಗೆ ಕಂಪ್ಯೂಟರ್ ಜಾಲ ಕೆಟ್ಟಿದ್ದರೆ,ನಿಸ್ತಂತು ವ್ಯವಸ್ಥೆ ಕೈಕೊಟ್ಟರೆ,ಹಾಜರು ದಾಖಲಿಸುವ ಕೆಲಸ ಸಾಧ್ಯವಾಗದು.
ಹೆಚ್ಚಿನೆಡೆ ಈ ತರ ಮಾಡುವುದರ ಬದಲಿಗೆ,ಹಾಜರು ಪುಸ್ತಕ ಹಿಡಿದು ತರಗತಿಗೆ ಹೋಗಿ,ಪುಸ್ತಕದಲ್ಲಿ ಮಾಮೂಲಿನಂತೆ ವಿವರಗಳನು ದಾಖಲಿಸಿ,ನಂತರ ಕಂಪ್ಯೂಟರಿನ ಮುಂದೆ ಕುಳಿತು ವಾರಕ್ಕೊಮ್ಮೆಯೋ ಅಥವ ನಿಗದಿತ ದಿನಗಳಿಗೊಮ್ಮೆ ಹಾಜರಿಯ ವಿವರಗಳನು ಕಂಪ್ಯೂಟರಿಗೆ ಉಣಿಸುವ ವಿಧಾನ ಅನುಸರಿಸುವುದು ಸಾಮಾನ್ಯವಾಗಿದೆ.ಹೀಗೆ ಮಾಡಿದರೆ,ಎರಡೆರಡು ಕೆಲಸ ಅನಿವಾರ್ಯ.ಜತೆಗೆ ಕಂಪ್ಯೂಟರಿನಲ್ಲಿ ದಾಖಲಿಸುವ ಕೆಲಸ ಬಾಕಿಯಾಗುವ ಸಂದರ್ಭಗಳು ಅಪರೂಪವೇನಲ್ಲ.ಅಲ್ಲದೆ ಇಂತಹ ವಿಧಾನದಲ್ಲಿ ದಕ್ಷತೆಯೂ ಕಡಿಮೆ.
ಇದಕ್ಕೇನು ಪರಿಹಾರ?ಹಾಜರಾತಿ ದಾಖಲಿಸಲು ಸಾಧನವೊಂದನ್ನು ಅಭಿವೃದ್ಧಿ ಪಡಿಸುವುದು ಒಂದು ಪರಿಹಾರ.ಈ ಸಾಧನ ಅಂಗೈ ಅಗಲದ ಸಾಧನವಾಗಿದ್ದರೆ ಒಳಿತು.ಹೆಸರು ಹಿಡಿದು ಕರೆಯುವಂತಹ ಸಮಯ ವ್ಯಯ ಮಾಡುವ ಪ್ರಕ್ರಿಯೆ ಇಲ್ಲದಿದ್ದರೆ ಒಳಿತು.ಸಾಧನ ದುಬಾರಿಯೂ ಆಗಬಾರದು.ಮೊಬೈಲ್ ಹ್ಯಾಂಡ್‌ಸೆಟ್ ಅಂತಹ ಸಾಧನವಾದರೆ ಒಳಿತು,ಜತೆಗೆ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಬಳಸುವಷ್ಟು ಅಗ್ಗದಲ್ಲಿ ಸಿಕ್ಕಬೇಕು.ಹೀಗೆ ಯೋಚಿಸಿದ ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ಸಹ ಪ್ರಾಧ್ಯಾಪಕ ಸ್ಟಿಫಾನ್ ವಡಕ್ಕನ್ ಯೋಜನೆಯೊಂದನ್ನು ಸಿದ್ಧ ಪಡಿಸಿದ್ದಾರೆ.ಈ ಯೋಜಿತ ಸಾಧನ ಬೆರಳಚ್ಚು ದಾಖಲಿಸುವ ಸೌಲಭ್ಯ ಹೊಂದಿರುತ್ತದೆ.ವಿದ್ಯಾರ್ಥಿಯ ನೋಂದಣಿ ಸಂಖ್ಯೆ ಮತ್ತು ಆತನ ಬೆರಳಚ್ಚನ್ನು ಈ ಸಾಧನದಲ್ಲಿ ಶೇಖರಿಸಿಡಬೇಕು.ಅದಕ್ಕೆ ಅಗತ್ಯವಾದ ಸ್ಮರಣಕೋಶ ಮತ್ತು ಬೆರಳಚ್ಚನ್ನು ತಾಳೆ ಹಾಕಿ,ವಿದ್ಯಾರ್ಥಿಯು ಹಾಜರಿದ್ದಾನೆಯೇ ಇಲ್ಲವೇ ಎನ್ನುವುದನ್ನು ದಾಖಲಿಸಿಕೊಳ್ಳಲು ಅಗತ್ಯ ತಂತ್ರಾಂಶವನ್ನು ಸಾಧನ ಹೊಂದಿರಬೇಕು,ಜತೆಗೆ ಈ ತಂತ್ರಾಂಶವನ್ನು ಸಂಸ್ಕರಿಸಲು ಅಗತ್ಯವಾದಷ್ಟು ಶಕ್ತಿ ಇರುವ ಸಂಸ್ಕಾರಕ ಇದರಲ್ಲಿರಬೇಕು.ಕೆಲವು ದಿನಗಳ ಹಾಜರಾತಿ ವಿವರ ಶೇಖರಿಸಲು ಇದರಲ್ಲಿ ಅನುಕೂಲ ಕಲ್ಪಿಸುವುದು ಒಳಿತು.
ತರಗತಿಗೆ ಹೋದ ಬಳಿಕ ಶಿಕ್ಷಕ ಅನುಕೂಲಕರ ಸಮಯದಲ್ಲಿ ಸಾಧನವನ್ನು ವಿದ್ಯಾರ್ಥಿಗಳ ಕೈಗಿತ್ತರೆ ಸಾಕು.ಅವರು ತಮ್ಮ ಬೆರಳನ್ನು ಬೆರಳಚ್ಚು ಸೆರೆ ಹಿಡಿವ ರೀಡರ್‌ನ ಮೇಲೆ ಇಟ್ಟರಾಯಿತು.ವಿದ್ಯಾರ್ಥಿಯ ಬೆರಳಚ್ಚು,ವಿದ್ಯಾರ್ಥಿಗಳ ಬೆರಳಚ್ಚಿನ ದತ್ತಾಂಶದ ಯಾವುದಾದರೂ ಬೆರಳಚ್ಚಿಗೆ ಸರಿಹೊಂದಿದರೆ,ಆತನ ನೋಂದಣಿ ಸಂಖ್ಯೆ ಸಾಧನದ ತೆರೆಯಲ್ಲಿ ಮೂಡುತ್ತದೆ.ಜತೆಗೆ ಧನ್ಯವಾದಗಳು ಎಂಬ ಉಲಿತವನ್ನೂ ಕೇಳಿಸಬಹುದು.ಇಲ್ಲವಾದರೆ ಪುನ: ಬೆರಳನ್ನು ಸರಿಯಾಗಿ ಹಿಡಿಯಲು ನಿರ್ದೇಶನ ಬರುತ್ತದೆ. ಹೀಗೆ ಎಲ್ಲ ವಿದ್ಯಾರ್ಥಿಗಳೂ ಬೆರಳು ತೋರಿಸಿದಾಗ ಹಾಜರಾತಿ ತೆಗೆದುಕೊಳ್ಳುವ ಕೆಲಸ ಕೆಲ ನಿಮಿಷಗಳಲ್ಲೇ ಮುಗಿಯುತ್ತದೆ.ನಕಲಿ ಹಾಜರಾತಿ ನೀಡುವುದು ಅಸಾಧ್ಯ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲವಲ್ಲ?ತರಗತಿಯ ನಂತರ ಸಾಧನವನ್ನು ಕಂಪ್ಯೂಟರಿಗೆ ಸಂಪರ್ಕಿಸಿ,ಅದರಲಿರುವ ಹಾಜರಾತಿ ವಿವರಗಳನ್ನು ಕಂಪ್ಯೂಟರಿಗೆ ವರ್ಗಾಯಿಸಬಹುದು.ಅಧಿಕ ಸಂಖ್ಯೆಯಲ್ಲಿ ಸಾಧನವನ್ನು ತಯಾರಿಸಿದರೆ,ಅದನ್ನು ಕಡಿಮೆ ಬೆಲೆಯಲ್ಲಿ ಒದಗಿಸಲು ಕಷ್ಟವಾಗದು.ಎಲ್ಲ ಶಾಲಾ-ಕಾಲೇಜುಗಳಲ್ಲಿ ಬಳಕೆಯಾಗುವ ಸಂಭವ ಇರುವುದರಿಂದ ಇಂತಹ ಸಾಧನ ಕ್ಕೆ ಹೆಚ್ಚಿನ ಬೇಡಿಕೆ ಬರುವುದು ಖಂಡಿತ.ಆದರೆ,ಆರಂಭಿಕ ಬಂಡವಾಳ ತೊಡಗಿಸಿ,ಸಾಧನವನ್ನು ಮಾರುಕಟ್ಟೆಯಲ್ಲಿ ಮಾರುವ ವ್ಯವಸ್ಥೆ ಮಾಡುವ ಎದೆಗಾರಿಕೆ ಇರುವ ಕಂಪೆನಿ ಅಥವ ಸಂಸ್ಥೆಗಾಗಿ ವಡಕ್ಕನ್ ಹುಡುಕಾಟ ನಡೆಸಿದ್ದಾರೆ.
ಪುಸ್ತಕಗಳ ಇ-ಪ್ರತಿಯನ್ನು ಲಭ್ಯವಾಗಿಸುವುದು ಲಾಭ ತರುತ್ತದೆಯೇ?
ಪುಸ್ತಕಗಳ ಪಿಡಿಎಫ್ ಪ್ರತಿಯನ್ನು ಅಂತರ್ಜಾಲದಲ್ಲಿ ಲಭ್ಯವಾಗಿಸಬೇಕೇ ಎನ್ನುವ ಚರ್ಚೆ ಬಹುಕಾಲದಿಂದ ನಡೆದಿದೆ.ಹಾಗೆಂದು ಜ್ಞಾನವನ್ನು ಹಂಚಿಕೊಳ್ಳುವುದೇ ತಮ್ಮ ಉದ್ದೇಶವಾಗಿಟ್ಟುಕೊಂಡವರು ತಮ್ಮ ಪುಸ್ತಕವನ್ನು ಉಚಿತವಾಗಿ ಅಂತರ್ಜಾಲದ ಮೂಲಕ ಒದಗಿಸಲು ಹಿಂದೆ ಮುಂದೆ ನೋಡರು.ಉದಾಹರಣೆಗೆ http://www.nitte.ac.in/downloads/Conv-LTI.pdf ಕೊಂಡಿ ನೋಡಿ. ಪ್ರತಿಗಳನ್ನು ಉಚಿತವಾಗಿ ಲಭ್ಯವಾಗಿಸುವ ಬದಲಿಗೆ,ಮುದ್ರಿತ ಪ್ರತಿಗಿಂತ ಕಡಿಮೆ ದರದಲ್ಲಿ ಲಭ್ಯವಾಗಿಸುವ ಆಯ್ಕೆ ಪ್ರಕಾಶಕರಿಗಿದೆ. ಆದರೆ ಒಮ್ಮೆ ಹಣ ತೆತ್ತು ಪಿಡಿಎಫ್ ಪ್ರತಿ ಖರೀದಿಸಿದವರು,ತಮ್ಮ ಪ್ರತಿಯನ್ನು ತಮ್ಮ ಗೆಳೆಯರ ಜತೆ ಹಂಚಿಕೊಂಡರೆ,ಸಮಸ್ಯೆ ತಲೆದೋರುತ್ತದೆ.ಇ-ಪ್ರತಿಯನ್ನು ನಕಲು ಮಾಡಲು ಯಾವ ಖರ್ಚೂ ಬರದು. ಹೀಗೆ ಇ-ಪ್ರತಿ ಲಭ್ಯವಿದ್ದರೆ,ಮುದ್ರಿತ ಪ್ರತಿಯನ್ನು ಕೊಳ್ಳುವವರು ಯಾರು ಎನ್ನುವುದು ಪ್ರಕಾಶಕರ ಪ್ರಶ್ನೆ.ಹಾಗೇನಿಲ್ಲ-ಕಂಪ್ಯೂಟರಿನಲ್ಲಿ "ಪುಸ್ತಕ"ದ ಓದು ಕಷ್ಟಕರ.ಎಲ್ಲಿಗೂ ಒಯ್ಯಬಹುದಾದ ಮುದ್ರಿತ ಪ್ರತಿಗೆ ಬೇಡಿಕೆ ಇದ್ದೇ ಇದೆ.ಇ-ಪ್ರತಿಯ ಮೂಲಕ ಪುಸ್ತಕವನ್ನು ಮೆಚ್ಚಿಕೊಂಡವರು ಮುದ್ರಿತ ಪ್ರತಿ ಖರೀದಿಸದೆ ಬಿಡರು ಎಂದು ವಾದಿಸುವ ಪುಸ್ತಕ ಪ್ರೇಮಿಗಳೂ ಇದ್ದಾರೆ.ಆದರೆ,ಪಿಡಿಎಫ್ ಪ್ರತಿ ಲಭ್ಯವಾಗಿಸಿ,ತಮ್ಮ ಪುಸ್ತಕದ ಮುದ್ರಿತ ಪ್ರತಿಯನ್ನು ಮಾರಲಾಗದೆ ಕೈಸುಟ್ಟುಕೊಂಡವರ ಸಂಖ್ಯೆ ಧಾರಾಳವಾಗಿದೆ.ಇ-ಪ್ರತಿಯನ್ನು ಮುಕ್ತವಾಗಿ ಒದಗಿಸದೆ,ಬೆಲೆ ನಿಗದಿ ಪಡಿಸಿದರೂ,ಅದನ್ನು ಅಧಿಕೃತ ಮೂಲದಿಂದ ಪಡೆಯದೆ,ನಕಲಿ ಪ್ರತಿಯನ್ನು ಇಳಿಸಿಕೊಳ್ಳುವವರೇ ಅಧಿಕ.
ಇದಕ್ಕೇನು ಪರಿಹಾರ?ಡೇವಿಡ್ ಪೋಗ್ ಅನ್ನುವ ಲೇಖಕ ಮಹಾಶಯ ತನ್ನ ಮುಂದಿನ ಪುಸ್ತಕ”Windows Vista: The Missing Manual” ಮುದ್ರಿತ ಪ್ರತಿಯ ಜತೆಗೇ,ಅದರ ಇ-ಪ್ರತಿಯನು ತುಸು ಕಡಿಮೆ ಬೆಲೆಗೆ ಮಾರಲು ನಿರ್ಧರಿಸಿದ್ದಾರೆ.ಇ-ಪ್ರತಿಯ ವಿನಿಮಯ ನಡೆದು ತಮ್ಮ ಇ-ಪ್ರತಿಗೆ ಬೇಡಿಕೆ ಕುಸಿಯದಂತೆ ಮಾಡಲು ಅವರು ಮಾಡಿರುವ ಉಪಾಯವೇನು ಗೊತ್ತೇ?ಇ-ಪ್ರತಿಯನ್ನು ಖರೀದಿಸಿದಾಗ ಲಭ್ಯವಾಗುವ ಪಿಡಿಎಫ್ ಅಥವಾ ಇತರ ರೀತಿಯ ಕಡತವನ್ನು ತೆರೆದಾಗ ಪುಟದ ಕೆಳಗೆ ಖರೀದಿಸಿದವರ ಮಿಂಚಂಚೆ ವಿಳಾಸ ಕಾಣಿಸಿಕೊಳ್ಳುವ ವ್ಯವಸ್ಥೆಯನ್ನವರು ಮಾಡಲಿದ್ದಾರೆ.ಇದರಿಂದ ಇ-ಪ್ರತಿಯನ್ನು ಖರೀದಿಸಿದವರು ಇತರರಿಗೆ ಒದಗಿಸಿದಾಗ,ತಮ್ಮ ಮಿಂಚಂಚೆ ವಿಳಾಸದ ಜತೆಗೇ ನೀಡುವ ಅನಿವಾರ್ಯತೆ ಉಂಟಾಗುವುದರಿಂದ ಅವರು ಕಾಪಿ ರೈಟ್ ಕಾಯಿದೆ ಉಲ್ಲಂಘಿಸಿದವರ ಜಾಡು ಸಿಗುತ್ತದೆ.ಇದರಿಂದ ಪುಸ್ತಕದ ಅನಧಿಕೃತ ಹಬ್ಬುವಿಕೆಗೆ ಕಡಿವಾಣ ಬೀಳಲಿದೆ ಎನ್ನುವುದು ಡೇವಿಡ್ ಅವರ ಎಣಿಕೆ.ನಿಜಕ್ಕೂ ಹಾಗಾಗಲಿದೆಯೇ ಎನ್ನುವುದು ಜುಲೈ ವೇಳೆಗೆ ತಿಳಿದೀತು-ಯಾಕೆಂದರೆ,ಆ ವೇಳೆಗೆ ಅವರ ಪುಸ್ತಕ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.
ಫೈರ್‌ಫಾಕ್ಸ್ ೩ ಗಿನೆಸ್ ದಾಖಲೆ?
ಅಂತರ್ಜಾಲವನ್ನು ಜಾಲಾಡಲು ಕಂಪ್ಯೂಟರಿನಲ್ಲಿ ಬಳಕೆಯಾಗುವ ತಂತ್ರಾಂಶವನ್ನು ಬ್ರೌಸರ್ ಎನ್ನುತ್ತಾರೆನ್ನುವುದು ಎಲ್ಲರಿಗೂ ಗೊತ್ತು.ವಿಂಡೋಸ್ ತಂತ್ರಾಂಶ ಬಳಸುವವರ ಪೈಕಿ ಇಂಟರ್ನೆಟ್ ಎಕ್ಸ್‌ಪ್ಲೋರರ್ ಬ್ರೌಸರ್ ತಂತ್ರಾಂಶ ಬಲು ಜನಪ್ರಿಯ.ಈ ಜನಪ್ರಿಯತೆಯ ಕಾರಣ,ಹೆಚ್ಚಿನ ಜಾಲತಾಣಗಳೂ ಈ ಬ್ರೌಸರಿನಲ್ಲಿ ಸರಿಯಾಗಿ ಕಾಣಿಸಿಕೊಳ್ಳುವಂತೆ ವಿನ್ಯಾಸವಾಗಿರುವುದೂ ಇದೆ. ಇದಕ್ಕೆ ಸ್ಪರ್ಧೆ ನೀಡುತ್ತಿರುವ ಇನ್ನೊಂದು ಬ್ರೌಸರ್ ಎಂದರೆ,ಮೊಜಿಲ್ಲಾ ಫೈರ್‌ಫಾಕ್ಸ್.ಇದು ಬಹಳ ವೇಗವಾಗಿ ಕಾರ್ಯನಿರ್ವಹಿಸಿ,ಕಂಪ್ಯೂಟರಿನ ಮೇಲೆ ಕಡಿಮೆ ಒತ್ತಡವನ್ನು ಬೀರುವಂತೆ ರಚಿತವಾಗಿದೆ.ಇದನ್ನು ಮುಕ್ತವಾಗಿ ಇಳಿಸಿಕೊಂಡು,ಅನುಸ್ಥಾಪಿಸಿ ಬಳಸಬಹುದು. ಇದೀಗ ತಂತ್ರಾಂಶದ ಮೂರನೇಯ ಸುಧಾರಿತ ಆವೃತ್ತಿ ಬಿಡುಗಡೆಯಾಗಿದೆ. ಈ ಆವೃತ್ತಿಯು ಮೊದಲನೇ ದಿನವೇ ಎಂಟು ದಶಲಕ್ಷ ಬಾರಿ ಡೌನ್‌ಲೋಡ್ ಮಾಡಲ್ಪಟ್ಟು ಇತಿಹಾಸ ನಿರ್ಮಿಸಿದೆ.ಒಂದೇ ದಿನದಲ್ಲಿ ಇಷ್ಟು ಬಾರಿ ಡೌನ್‌ಲೋಡ್ ಆದ ಮೊದಲ ತಂತ್ರಾಂಶ ಇದಾಗಿರಬಹುದು ಎನ್ನುವ ಅನುಮಾನ ಇದೆ. ಗಿನೆಸ್ ದಾಖಲೆಯಲ್ಲಿ ಇದನ್ನು ದಾಖಲಿಸ ಬೇಕೆಂಬ ಮನವಿ ಈಗಾಗಲೇ ಗಿನೆಸ್ ದಾಖಲೆಗಳ ಕಚೇರಿ ತಲುಪಿದೆ.
*ಅಶೋಕ್‌ಕುಮಾರ್ ಎ

Tuesday, June 17, 2008

ಮೊಬೈಲೇ ಕ್ರೆಡಿಟ್‌ಕಾರ್ಡ್!!

ಮೊಬೈಲ್ ಸೇವೆ ಒದಗಿಸುವ ಜಾಲದವರ ಮೂಲಕ ಬ್ಯಾಂಕ್ ಸೇವೆಗೆ ಅನುಮತಿಸುವುದರೊಂದಿಗೆ ರಿಸರ್ವ್ ಬ್ಯಾಂಕ್ ಮೊಬೈಲ್ ಬ್ಯಾಂಕಿಗೆ ರಂಗವನ್ನು ಅಣಿಗೊಳಿಸಿದೆ.ಬ್ಯಾಂಕ್ ಖಾತೆಯಿಂದ ಹಣವನ್ನು ಮೊಬೈಲ್ ಸೇವೆ ಒದಗಿಸುವ ಸೇವಾದಾತೃಗಳ ಮೂಲಕ ಚಂದಾದಾರರ ಖಾತೆಯಲ್ಲಿ ಟಾಲ್ಕ್ ಟೈಮ್ ಅಂತೆ ಜಮಾ ಮಾಡುವುದು,ಜಮಾ ಮಾಡಿದ ಹಣದಿಂದ ಇತರರ ಖಾತೆಗೆ ವರ್ಗಾಯಿಸುವುದು ಮಾಡಲು ರಿಸರ್ವ್ ಬ್ಯಾಂಕ್ ಅನುಮತಿಸಿದೆ.ಹೀಗಾಗಿ ಅಂಗಡಿಯಿಂದ ಸಾಮಾನು ಖರೀದಿಸಿ,ಪಾವತಿಸಲು ಮೊಬೈಲನ್ನೇ ಬಳಸಬಹುದು. ಪಿನ್ ಸಂಖ್ಯೆ ಬಳಸಿ,ಈ ಪಾವತಿಯನ್ನು ನೈಜ ಗ್ರಾಹಕ ಮಾತ್ರ ಬಳಸುವಂತೆ ಖಾತರಿ ಮಾಡಬಹುದು.ಪಿನ್ ಸಂಖ್ಯೆ ರವಾನಿಸಿದಾಗ,ಮೊಬೈಲ್ ಸಂಕೇತಗಳು ಇತರರಿಂದ ಟ್ಯಾಪ್ ಆಗಿ,ಸಂಖ್ಯೆ ಬಯಲಾಗದಂತೆ ಗೂಢ ಲಿಪಿಯನ್ನು ಬಳಸಲಾಗುತ್ತದೆ.
ಮೊಬೈಲ್ ಅನ್ನು ಕ್ರೆಡಿಟ್ ಕಾರ್ಡ್ ರೀತಿ ಬಳಸಲೂ ಬಹುದು.ಮೊಬೈಲ್ ಬಳಸಿ ವ್ಯವಹಾರ ಮಾಡುವಾಗ,ಮೊಬೈಲ್ ಕಳೆದು ಹೋದರೆ,ಅದರ ದುರುಪಯೋಗ ಆಗಬಹುದು ಎನ್ನುವ ಭಯ ಇದ್ದೇ ಇದೆ.ಪಿನ್ ಸಂಖ್ಯೆಯನ್ನು ಇತರರೂ ತಿಳಿದುಕೊಂಡರೆ,ಮೊಬೈಲ್ ನಮ್ಮ ಕೈಯಲ್ಲಿಲ್ಲದ ಹೊತ್ತು ಇತರರಿಂದ ದುರುಪಯೋಗ ಆಗಬಹುದು.ನಿಟ್ಟೆಯ ಎನ್ ಎಂ ಎ ಎಂ ತಾಂತ್ರಿಕ ವಿದ್ಯಾಲಯದ ಮಹಾವಿದ್ಯಾರ್ಥಿಗಳಾದ ವಿಭಾ ಮತ್ತು ವಿಶ್ವೇಶ ಪ್ರಭು ಅವರ ಅಂತಿಮ ವರ್ಷದ ಪ್ರೊಜೆಕ್ಟ್ ಈ ನಿಟ್ಟಿನಲ್ಲಿ ಪರಿಹಾರ ನೀಡುವ ತಂತ್ರಜ್ಞಾನ ಹೊಂದಿದೆ.ಸದ್ಯ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅನ್ನು ಪಡೆದವರು ಅದನ್ನು ಅಂಗಡಿಯಲ್ಲಿ ಕ್ರೆಡಿಟ್ ಕಾರ್ಡ್ ಯಂತ್ರದಲ್ಲಿ ಸ್ವೈಪ್ ಮಾಡುವ ಮೂಲಕ ಹಣವನ್ನು ಪಾವತಿಸುವ ವ್ಯವಸ್ಥೆಯಿದೆ.ಅಂಗಡಿಯವರು ಕ್ರೆಡಿಟ್ ಕಾರ್ಡ್ ಸ್ಲಿಪ್‍ನಲ್ಲಿ ಸಹಿ ಪಡೆದುಕೊಂಡು,ತಾಳೆ ನೋಡಿ ಖಚಿತ ಪಡಿಸಿಕೊಳ್ಳಬಹುದು. ಹಾಗೆ ಮಾಡುವವರ ಸಂಖ್ಯೆ ಕಡಿಮೆ. ಹಲವು ಕ್ರೆಡಿಟ್ ಕಾರ್ಡ್‍ಗಳನ್ನು ಹೊಂದಿದ್ದರೆ,ಅವನ್ನು ಜೋಪಾನವಾಗಿರಿಸಿಕೊಳ್ಳುವ ಸಮಸ್ಯೆಯೂ ಇದೆ. ಇದನ್ನು ಮೊಬೈಲ್ ಕ್ರೆಡಿಟ್ ಕಾರ್ಡ್ ಮೂಲಕ ಹೋಗಲಾಡಿಸಬಹುದು.ಬ್ಯಾಂಕುಗಳವರು ಕ್ರೆಡಿಟ್ ಕಾರ್ಡನ್ನು ಕಾರ್ಡ್ ರೂಪದಲ್ಲಿ ನೀಡದೆ,ಮೊಬೈಲಿನ ಸಿಮ್‍ನಲ್ಲಿ ತಂತ್ರಾಂಶದಂತೆ ಅನುಸ್ಥಾಪಿಸಬೇಕು.ಬ್ಯಾಂಕು ಗ್ರಾಹಕನ ಬೆರಳ ಗುರುತನ್ನೂ ತೆಗೆದು ತನ್ನ ಕಂಪ್ಯೂಟರಿನಲ್ಲಿ ದಾಖಲಿಸಿಕೊಳ್ಳುತ್ತದೆ.ಅಂಗಡಿಯಲ್ಲಿ ಹಣ ಪಾವತಿಸಲು ಈ ಮೊಬೈಲ್ ಕ್ರೆಡಿಟ್ ಕಾರ್ಡ್ ಬಳಸಲು, ಗ್ರಾಹಕ ತನ್ನ ಹ್ಯಾಂಡ್‌ಸೆಟ್‍ನ ಬ್ಲೂಟೂತ್ ವ್ಯವಸ್ಥೆಯ ಮೂಲಕ ಅಂಗಡಿಯ ಕ್ರೆಡಿಟ್‌ಕಾರ್ಡ್ ಯಂತ್ರದ ಸಂಪರ್ಕ ಸ್ಥಾಪಿಸಿ,ಪಾವತಿಯ ವಿವರಗಳನ್ನು ನೀಡಬೇಕಾಗುತ್ತದೆ.ಯಂತ್ರವು ಬ್ಯಾಂಕಿನ ಸರ್ವರ್ ಜತೆ ಸಂಪರ್ಕ ಸಾಧಿಸಿ,ಕ್ರೆಡಿಟ್‍ಕಾರ್ಡ್ ಸಂಖ್ಯೆ ಮತ್ತು ಪಾವತಿಸಬೇಕಾದ ಮೊತ್ತ ಖಾತೆಯಲ್ಲಿ ಇರುವ ಬಗ್ಗೆ ದೃಡೀಕರಿಸಿಕೊಳ್ಳುತ್ತದೆ.ನಂತರದ ಮುಖ್ಯ ಹೆಜ್ಜೆಯೆಂದರೆ,ಗ್ರಾಹಕ ನೈಜ ಗ್ರಾಹಕನೇ ಅನ್ನುವುದನ್ನು ದೃಢೀಕರಿಸಿಕೊಳ್ಳುವ ಹೆಜ್ಜೆ. ಈಗ ಗ್ರಾಹಕ ತನ್ನ ಬೆರಳ ಗುರುತನ್ನು ಕ್ರೆಡಿಟ್‍ಕಾರ್ಡ್ ಯಂತ್ರಕ್ಕೆ ಸಂಪರ್ಕಿಸಿದ,ಬೆರಳಚ್ಚು ಸೆರೆ ಹಿಡಿವ ಸಾಧನಕ್ಕೆ ತನ್ನ ಬೆರಳಚ್ಚನ್ನು ನೀಡಿದರೆ,ಅದು ಬ್ಯಾಂಕಿಗೆ ರವಾನೆಯಾಗಿ,ಅಲ್ಲಿರುವ ನೈಜ ಗ್ರಾಹಕನ ಬೆರಳಚ್ಚಿಗೆ ಹೋಲಿಸಿ ನೋಡಿ,ಅದು ಸರಿಯಾಗಿ ಹೊಂದಿಕೆಯಾದರೆ ಮಾತ್ರಾ ಹಣ ಪಾವತಿಯಾಗುತ್ತದೆ.ಈ ವ್ಯವಸ್ಥೆಯನ್ನು ಮೊಬೈಲ್ ಸೆಟ್ ಬಳಸಿ,ಪರೀಕ್ಷಿಸಲು ಸಾಧ್ಯವಾಗಿದೆ. ಹಣಕಾಸಿನ ವ್ಯವಹಾರಗಳಲ್ಲಿ ಭದ್ರತೆ ಖಚಿತ ಪಡಿಸಿಕೊಳ್ಳಲು ಈ ವ್ಯವಸ್ಥೆ ತುಂಬಾ ಸಹಾಯಕವಾಗಲಿದೆ.ಮೊಬೈಲ್ ಕ್ರೆಡಿಟ್ ವ್ಯವಸ್ಥೆಯ ಹಕ್ಕುಸ್ವಾಮ್ಯಕ್ಕಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳು ತೊಡಗಿದ್ದಾರೆ.ಕಾಲೇಜಿನ ಕಂಪ್ಯೂಟರ್ ವಿಭಾಗದ ಸಹಪ್ರಾಧ್ಯಾಪಕ ಸ್ಟಿಫಾನ್ ವಡಕ್ಕನ್ ಪ್ರಾಜೆಕ್ಟಿಗೆ ಮಾರ್ಗದರ್ಶನ ಮಾಡಿದ್ದಾರೆ.
ಮಣಗಾತ್ರದ ಬಟ್ಟೆ ತೊಳೆಯಲು ಬೇಕಿಲ್ಲ ಬಕೆಟ್‍ಗಟ್ಟಲೆ ನೀರು!ಬಟ್ಟೆ ಒಗೆಯುವ ಯಂತ್ರ ಪ್ರತಿ ಕೇಜಿ ಬಟ್ಟೆ ಒಗೆಯಲು ಮೂವತ್ತೈದು ಲೀಟರ್ ನೀರು ಬಳಸುವುದು ಸಾಮಾನ್ಯ. ಆದರೆ ಲೀಡ್ಸ್ ವಿಶ್ವವಿದ್ಯಾಲಯ ಸಂಶೋಧಿಸಿದ ತಂತ್ರಜ್ಞಾನ ಬಳಸಿದರೆ ಅದರ ಶೇಕಡಾ ಎರಡು ಭಾಗ ನೀರು ಮತ್ತು ಶಕ್ತಿ ಬಳಸಿ,ಬಟ್ಟೆ ಒಗೆಯಬಹುದು.ಈ ತಂತ್ರಜ್ಞಾನವನ್ನು ಬಳಸಿ ಕ್ಸೆರೋಸ್ ಎನ್ನುವ ಕಂಪೆನಿ ವಾಣಿಜ್ಯ ಉತ್ಪಾದನೆ ಆರಂಭಿಸಲಿದೆ.ಇಲ್ಲಿ ಬಟ್ಟೆಗಳ ಕಲೆ ತೆಗೆಯಲು ಮತ್ತು ಮಲಿನತೆ ನಿವಾರಿಸಲು ಪ್ಲಾಸ್ಟಿಕ್ ಚಿಪ್‍ಗಳ ಬಳಕೆಯಾಗಲಿದೆ.ಹೀಗಾಗಿ ಬಟ್ಟೆ ಒಣದಾಗಿಯೇ ಇರುವಂತೆ ಸ್ವಚ್ಛವಾಗುತ್ತದೆ.ತೊಳೆಯುವ ನೀರನ್ನು ಬಿಸಿ ಮಾಡಲು ಮತ್ತು ಬಟ್ಟೆ ಒಣಗಿಸಲು ಖರ್ಚು ಬರುವುದಿಲ್ಲ.ಇಂಗ್ಲೆಂಡಿನಲ್ಲಿ ಯಂತ್ರಗಳು ಮಾರಾಟಕ್ಕೆ ಲಭ್ಯವಾಗಲಿವೆ. ಅಲ್ಲಿ ಪ್ರತಿ ಮನೆಯಲ್ಲಿ ಬಳಕೆಯಾಗುವ ಆರನೇ ಒಂದಂಶ ನೀರು ಬಟ್ಟೆ ಒಗೆಯಲೇ ಖರ್ಚಾಗುತ್ತಿದೆ.ಹಾಗೆಯೇ ಯಂತ್ರಗಳ ಬಳಕೆಯೂ ಹೆಚ್ಚುತ್ತಿದೆ.
ಹಿಂದಿ ಚಲನಚಿತ್ರದ ನಿರ್ಮಾಣಕ್ಕೆ ಸನ್ ಮೈಕ್ರೋಸಿಸ್ಟಮ್ಸ್ ತಂತ್ರಜ್ಞಾನ ಬಳಕೆ
ಚಲನಚಿತ್ರಗಳ ನಿರ್ಮಾಣದಲ್ಲಿ ವಿಶೇಷ ಪರಿಣಾಮಗಳನ್ನು ಮೂಡಿಸಲು ಮತ್ತು ಅನಿಮೇಶನ್ ಮೂಡಿಸಲು ಕಂಪ್ಯೂಟರ್ ಬಳಕೆ ಇತ್ತೀಚೆಗೆ ಧಾರಾಳವಾಗಿ ಆಗುತ್ತಿದೆ.ಪ್ರಥಮ ಬಾರಿಗೆ ಹಿಂದಿ ಚಿತ್ರದಲ್ಲಿ ಇಂತಹ ಕೆಲಸಕ್ಕೆ ಕಂಪೆನಿಯೊಂದು ತನ್ನ ಸಂಪೂರ್ಣ ತಂತ್ರಾಂಶ ಸಹಾಯ ಒದಗಿಸಲಿದೆ.ಹ್ಯಾರಿ ಬವೇಜಾ ನಿರ್ಮಿಸಲಿರುವ ಚಿತ್ರ "ಲವ್ ಸ್ಟೋರಿ 2050",ಜುಲೈ ಐದಕ್ಕೆ ತೆರೆ ಕಾಣಲಿದೆ.ಹರ್ಮನ್ ಬವೇಜಾ ಮತ್ತು ಪ್ರಿಯಾಂಕಾ ಚೋಪ್ರಾ ನಾಯಕ-ನಾಯಕಿ.ವೈಜ್ಞಾನಿಕ ಕತೆ ಹೊಂದಿರುವ ಚಿತ್ರವಾದ್ದರಿಂದ ವಿಶೇಷ ಪರಿಣಾಮಗಳನ್ನು ಪ್ರಭಾವೀ ರೀತಿಯಿಂದ ತೆಗೆಯುವುದು ಮುಖ್ಯ.ಸನ್ ಮೈಕ್ರೋಸಿಸ್ಟಮ್ಸ್ ಕಂಪೆನಿಗೆ ಇಂತಹ ತಂತ್ರಜ್ಞಾನವನ್ನು ಹಾಲಿವುಡ್ ಸಿನೇಮಾಗಳಿಗೆ ನೀಡಿದ ಅನುಭವವಿರುವುದೆ.
ಹಸ್ತದಲ್ಲೇ ಹಿಡಿಸುವ ಪ್ರೊಜೆಕ್ಟರ್
ಮೊಬೈಲ್ ಫೋನಿನಲ್ಲೇ ಪ್ರೊಜೆಕ್ಟರ್,ಅಥವಾ ಅಂತದ್ದೇ ಕಿರುಗಾತ್ರದ ಸಾಧನದ ಮೂಲಕ ವಿಡಿಯೋ ತುಣುಕುಗಳನ್ನು ಅಥವಾ ಪವರ್‌ಪಾಯಿಂಟ್ ಸ್ಲೈಡುಗಳನ್ನು ಪ್ರದರ್ಶಿಸುವಂತಿದ್ದರೆ ಎಷ್ಟು ಚೆನ್ನ ಎನ್ನುವುದು,ಕಂಪೆನಿಯ ಮಾರಾಟ ವಿಭಾಗದಲ್ಲಿರುವ ನೌಕರರ ಕನಸಾಗಿರಬಹುದು.ಅದು ನನಸಾಗಲಿನ್ನು ಹೆಚ್ಚು ಸಮಯ ಬೇಡ.ಟೆಕ್ಸಸ್ ಇನ್‌ಸ್ಟ್ರುಮೆಂಟ್ಸ್ ಕಂಪೆನಿಯು ಅಭಿವೃದ್ಧಿ ಪಡಿಸಿದ ಡಿಜಿಟಲ್ ಬೆಳಕು ಸಂಸ್ಕಾರಕ ಚಿಪ್ ಮತ್ತು ವಿಡಿಯೋ ಸಂಸ್ಕಾರಕ ತಂತ್ರಾಂಶ ಬಳಸಿ ಇಂತಹ ಸಾಧನ ಪ್ರಾಯೋಗಿಕವಾಗಿ ಸಿದ್ಧವಾಗಿದೆ.ಪೀಕೋ ಪ್ರಾಜೆಕ್ಟರ್ ಇದ್ದರೆ,ಪ್ರವಾಸದ ವೇಳೆ ಚಿತ್ರ ವೀಕ್ಷಣೆಯನ್ನೂ ಕೋಣೆಯೊಳಗೇ ಮಾಡಬಹುದು.ತಂಬ್ ಡ್ರೈವಿನಲ್ಲಿ ಚಿತ್ರದ ಡಿಜಿಟಲ್ ಪ್ರತಿಯನ್ನು ಕೊಂಡೊಯ್ದರಾಯಿತು!ಮಾರುಕಟ್ಟೆಗೆ ಬರುವ ವರ್ಷವಷ್ಟೇ ಈ ಸಾಧನ ಬಿಡುಗಡೆಯಾಗಲಿದೆ.
*ಅಶೋಕ್‌ಕುಮಾರ್ ಎ

Monday, June 09, 2008

ಅಂಟಾರ್ಕಟಿಕಾ ಖಂಡದ ಮೇಲೆ ಕಣ್ಣಿಡಲು ಸ್ನೋಮೋಟ್‌ಗಳು



ಅಂಟಾರ್ಕ್ಟಿಕಾ ಭೂಖಂಡದ ಅಧ್ಯಯನಕ್ಕೆ ವಿಜ್ಞಾನಿಗಳ ತಂಡಗಳು ಅಲ್ಲಿ ಬೀಡು ಬಿಟ್ಟಿರುವುದು ಸಾಮಾನ್ಯ.ಭಾರತದ ವಿಜ್ಞಾನಿಗಳೂ ಅಲ್ಲಿಗೆ ಅದ್ಯಯನಕ್ಕೆ ಹೋಗುವುದಿದೆ.ಪರಿಸರದಲ್ಲಿ ಆಗುತ್ತಿರುವ ತೀವ್ರ್‍ಅಗತಿಯ ಬದಲಾವಣೆಗಳಿಂದ,ಹವಾಮಾನದಲ್ಲಿ ಏರುಪೇರು ಉಂಟಾಗಿ,ಅಂಟಾರ್ಕಟಿಕಾದ ಹಿಮ ಕರಗುವಿಕೆ,ಹವಾಮಾನದಲ್ಲಿ ಎರುಪೇರು ಆಗುತ್ತಿದೆ.ಇದನ್ನು ಗಮನಿಸಿ,ತಮ್ಮ ದೇಶಗಳಿಗೆ ತಿಳಿಸಲು ವಿಜ್ಞಾನಿಗಳನ್ನು ಅಲ್ಲಿಡುವುದು ದುಬಾರಿಯಾಗುತ್ತದೆ. ವಿಜ್ಞಾನಿಗಳೂ ಅಲ್ಲಿನ ಶೀತಮಯ ವಾತಾವರಣದಲ್ಲಿ ವಾಸಿಸಲು ಕಷ್ಟ ಪಡಬೇಕಾಗುತ್ತದೆ.ಇದನ್ನು ತಪ್ಪಿಸಲು,ಕಿರು ಗಾತ್ರದ ರೊಬೋಟ್‍ಗಳನ್ನು ಅಲ್ಲಿಟ್ಟರೆ ಹೇಗೆ ಎಂದು ಯೋಚಿಸಲಾಗುತ್ತಿದೆ.ಈ ರೊಬೋಟ್‌ಗಳು ಹಿಮತುಂಬಿದ ಆ ಖಂಡದಲ್ಲೂ ಕಾರ್ಯ ನಿರ್ವಹಿಸಲು ಸಶಕ್ತವಾಗಿರಬೇಕು.ಅಲ್ಲಿಂದ ಮಾಹಿತಿಯನ್ನು ಸತತವಾಗಿ ತಮ್ಮ ಕೇಂದ್ರಸ್ಥಳಗಳಿಗೆ ರವಾನಿಸುವ ಸಾಮರ್ಥ್ಯವನ್ನೂ ಹೊಂದಿರಬೇಕು.ಇಂತಹ ರೊಬೋಟ್‌ಗಳಿಗೆ ಸ್ನೋಮೋಟ್ ಎಂದು ಹೆಸರು.ಸ್ನೋಮೋಟ್‌ಗಳು ಹತ್ತು ಸಾವಿರ ಡಾಲರುಗಳಷ್ಟು ದುಬಾರಿಯಾಗಬಹುದಂತೆ.ಇವುಗಳು ಎರಡು ಅಡಿ ಎತ್ತರ ಹೊಂದಿವೆ. ಇವುಗಳ ಕಾಲುಗಳು ಅಂಟಾರ್ಕಟಿಕಾದ ಹಿಮ ತುಂಬಿದ ಪ್ರದೇಶದಲ್ಲೂ ಹೂತು ಹೋಗದಂತ ವಿನ್ಯಾಸ ಹೊಂದಿವೆ.ಇವು ಗುಂಪಿನಲ್ಲಿ ಚಲಿಸುವಾಗ ಪರಸ್ಪರ ಸಂವಹನದ ಮೂಲಕ,ದುರ್ಗಮ ಪ್ರದೇಶದಲ್ಲಿ ಮಾರ್ಗ ಕಂಡುಕೊಂಡು ಮುನ್ನಡೆಯುವ ಸಾಮರ್ಥ್ಯ ಹೊಂದಿವೆ. ಜಾರ್ಜಿಯಾ ಟೆಕ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಇವುಗಳನ್ನು ವಿನ್ಯಾಸಗೊಳಿಸಿದ್ದಾರೆ. ಅಂತಹ ನಲುವತ್ತರಿಂದ ಐವತ್ತು ರೊಬೋಟ್‌ಗಳು ಅಂಟಾರ್ಕ್ಟಿಕಾದಲ್ಲಿ ಸುತ್ತಾಡುವ ದಿನಗಳು ದೂರವಿಲ್ಲ.ಅನ್ಯಗ್ರಹಗಳ ಅನ್ವೇಷಣೆಗೆ ರೊಬೋಟ್‌ಗಳ ಬಳಕೆ ಈಗಾಗಲೇ ಆಗಿದ್ದರೂ,ನಮ್ಮ ಭೂಖಂಡದ ಒಂದು ಭಾಗವಾದ ಅಂಟಾರ್ಕಟಿಕಾದ ಅನ್ವೇಷಣಾ ಕಾರ್ಯ ಕೈಗೊಳ್ಳಲು ರೊಬೋಟ್ ಬಳಕೆ ಇನ್ನೂ ಆಗದಿರುವುದು ಸೋಜಿಗವೇ ಸರಿ.
ನಗರಗಳು ನರಕಗಳಾಗದಿರಲು ಏನು ಮಾಡಬೇಕು?>

ಜಗತ್ತಿನ ಜನಸಂಖ್ಯೆಯ ಅರೆವಾಸಿ ಜನ ಈಗಾಗಲೇ ನಗರಗಳಲ್ಲಿ ಬದುಕುತ್ತಿದ್ದಾರೆ.ಮುಂದಿನ ದಶಕದ ವೇಳೆಗೆ ಈ ಪ್ರಮಾಣ ಮುಕ್ಕಾಲು ಪಾಲು ಆಗಲೂ ಬಹುದು.ಹೀಗೆ ಒಂದೇ ಸವನೆ ಜನಪ್ರವಾಹ ನಗರಗಳ ಕಡೆ ಹರಿದು ಬಂದರೆ,ಅಲ್ಲಿನ ರಸ್ತೆಗಳು,ಮೂಲಸೌಕರ್ಯಗಳ ಮೇಲೆ ಅತೀವ ಒತ್ತಡ ಬರುವುದು ಸಹಜ.ಅಷ್ಟು ಜನರ ಸಾರಿಗೆ ಸೌಕರ್ಯಕ್ಕಾಗಿ ಪೆಟ್ರೋಲ್‌ಚಾಲಿತ ವಾಹನಗಳ ಬಳಕೆಯಾದರೆ,ಅದರಿಂದ ಉಂಟಾಗುವ ಮಾಲಿನ್ಯದಿಂದ ಜನರ ಬದುಕು ಅಸಹನೀಯವಾದೀತು.ಇದನ್ನು ತಪ್ಪಿಸುವುದು ಹೇಗೆ ಎಂಬ ಕಡೆ ಸಂಶೋಧಕರು ಗಮನ ಹರಿಸಿದ್ದಾರೆ.ನಗರಗಳ ಮಧ್ಯೆಯೇ ಆಹಾರ ಬೆಳೆ ಬೆಳೆಯಲು ಹಸಿರು ಮನೆಗಳನ್ನು ಕಟ್ಟಡಗಳಲ್ಲೇ ಸ್ಥಾಪಿಸುವುದು ಅಗತ್ಯ.ಇವುಗಳು ಜನರಿರುವ ಪ್ರದೇಶಗಳೇ ಆಹಾರ ಬೆಳೆದು ಸಾಗಾಣಿಕಾ ಸಮಸ್ಯೆಗೂ ಪರಿಹಾರವಾಗಬಲ್ಲುವು.ನಗರಗಳು ಸ್ವಾವಲಂಬಿಗಳಾಗಲೂ ಇವು ಸಹಾಯಕ.ಸಾರಿಗೆ ವ್ಯವಸ್ಥೆ ಒದಗಿಸಲು ಬಳಕೆಯಾಗುವ ವಾಹನಗಳಿಂದ ಉಂಟಾಗುವ ಪರಿಸರ ಹಾನಿ ತಡೆಯಲು,ಹೈಡ್ರೋಜನ್ ಅಂತಹ ಇಂಧನ ಮೂಲಗಳ ಬಳಕೆಯನ್ನು ದೊಡ್ದ ಮಟ್ಟಿಗೆ ಮಾಡಬೇಕಾದೀತು.ನಗರಗಳನ್ನು ಇಂಧನ ದಕ್ಷವಾಗಿಸಲು ಸಾಮೂಹಿಕ ಸಾರಿಗೆ ವ್ಯವಸ್ಥೆಗಳನ್ನು ಹೆಚ್ಚು ಸುಧಾರಿಸಬೇಕು.ಉದ್ಯೋಗ ಮತ್ತು ವಾಸಸ್ಥಳ ಒಟ್ಟಿಗೆ ಇರುವಂತಾದರೆ ಜನರ ಓಡಾಟ ಮತ್ತಷ್ಟು ಕಡಿಮೆಯಾಗಲಿದೆ.ಗಗನ ಚುಂಬಿ ಕಟ್ಟಡಗಳು ಹಸಿರನ್ನು ಹೊತ್ತು,ಶುದ್ಧ ಗಾಳಿ ಪೂರೈಸುವ ವ್ಯವಸ್ಥೆಯೂ ಬೇಕಾದೀತು.ಇವುಗಳ ಟೆರೇಸಿನಲ್ಲೇ ಸಸ್ಯ ಸಂಪತ್ತನ್ನು ಬೆಳೆಸಿ ನಗರವನ್ನು ಹಸಿರಾಗಿಸುವ ಪ್ರಮೇಯ ಬರಬಹುದು.

ನಾಗರಿಕತೆಯಿಂದ ದೂರವಿರುವ ಬುಡಕಟ್ಟು ಜನಾಂಗಗಳ ಪತ್ತೆನಗರಗಳು ನರಕಗಳಾಗದಿರಲು ಏನು ಮಾಡಬೇಕು?

ಜನ ಸಂಪರ್ಕವೇ ಆಗದ,ನಾಗರಿಕತೆಯಿಂದ ದೂರವುಳಿದಿರುವ ಬುಡಕಟ್ಟುಜನಾಂಗಗಳು ಇನ್ನೂ ಈ ಭೂಮಿಯ ಮೇಲೆ ಇದ್ದಾರೆ ಎಂದರೆ ನಂಬುತ್ತೀರಾ?ದಕ್ಷಿಣ ಅಮೆರಿಕಾದ ಬ್ರೆಜಿಲ್‍ನ ಅಮೆಜಾನ್ ಇಂಡಿಯನ್ ಜನಾಂಗಗಳು ದಟ್ಟಡವಿಯ ಮಧ್ಯೆ ಬದುಕುತ್ತಾ,ತಮ್ಮಷ್ಟಕ್ಕೆ ತಾವೇ ಬದುಕುತ್ತಿದ್ದಾರಂತೆ. ಆ ಬುಡಕಟ್ಟು ಜನರು ಸಮೀಪಿಸಿದ ವಿಮಾನದತ್ತ ತಮ್ಮ ಬಿಲ್ಲುಗಳನ್ನು ಬಳಸಿ,ಬಾಣ ಎಸೆಯುವ ಚಿತ್ರಗಳನ್ನು ಬ್ರೆಜಿಲ್ ಸರಕಾರ ಬಿಡುಗಡೆ ಮಾಡಿದೆ.ಮಾನವಶಾಸ್ತ್ರಜ್ಞರಿಗೇ ಈ ಜನಾಂಗಗಳ ಬಗ್ಗೆ ಕಳೆದೆರಡು ದಶಕಗಳಿಂದಲೇ ಗೊತ್ತಿದ್ದರೂ,ಅದನ್ನೀಗ ತಾನೇ ಬಹಿರಂಗಗೊಳಿಸಲಾಗಿದೆ.ಇಂತಹ ಜನಾಂಗಗಳು ಅರಣ್ಯದ ಕಬಳಿಕೆಯಂತಹ ಕಾರಣಗಳಿಂದ ಅಪಾಯಕ್ಕೀಡಾಗಿರುವ ಈ ಸಂದರ್ಭದಲ್ಲಿ ಈ ವಿಷಯವನ್ನು ಬಹಿರಂಗಗೊಳಿಸಲಾಗಿದೆ.ಇವರನ್ನು ಇತರರು ಸಂಪರ್ಕಿಸಿದರೂ, ಈ ಜನರಿಗೆ ಅಪಾಯ ತಪ್ಪಿದ್ದಲ್ಲ. ನಾಗರೀಕತೆಯ ಸೋಂಕಿಲ್ಲದ ಈ ಜನರಿಗೆ,ನಮ್ಮ ನಾಡಿನ ರೋಗಗಳಿಗೆ ಪ್ರತಿಬಂಧಕ ಶಕ್ತಿಯೂ ಇರುವುದಿಲ್ಲ.ಹೀಗಾಗಿ ನಾಗರಿಕ ಜನರ ಜತೆ ಸಂಪರ್ಕವಾದ ಸ್ವಲ್ಪವೇ ಸಮಯದಲ್ಲಿ ಈ ಜನರು,ರ್‍ಓಗಗಳಿಗೆ ತುತ್ತಾಗಿ ಸಾಯುವುದೂ ಇದೆ.ಅಮೆಜಾನ್ ಇಂಡಿಯನ್ ಜನಾಂಗದವರು ಬಹುತೇಕ ಬತ್ತಲೆಯಾಗಿ,ಮೈಯಿಡೀ ಕೆಂಬಣ್ಣ ಬಳಿದುಕೊಂಡಿರುವುದನ್ನು ಲಭ್ಯವಾಗಿರುವ ಚಿತ್ರಗಳು ತೋರಿಸುತ್ತವೆ.ಬ್ರೆಜಿಲ್ ಒಂದರಲ್ಲೇ ಇಂತಹ ಅರುವತ್ತಕ್ಕೂ ಅಧಿಕ ಗುಂಪುಗಳಿವೆಯಂತೆ.ಇವರು ಹುಲ್ಲಿನ ಚಾವಣಿಯಿರುವ ಮನೆಗಳಲ್ಲಿ ವಾಸಿಸುವುದೂ ಕಾಣುತ್ತದೆ.ಕಳೆದ ಇಪ್ಪತ್ತು ವರ್ಷಗಳಲ್ಲಿ ಗುಡಿಸಲುಗಳ ಸಂಖ್ಯೆ ದ್ವಿಗುಣವಾಗಿದೆ.ಇವರು ಬೇರೆಯೇ ಗುಂಪಾಗಿ ಬದುಕಿ,ಇತರರೊಂದಿಗೆ ಸೇರದಿರಲು ಅವರ ಸ್ವನಿರ್ಧಾರವೇ ಕಾರಣವಂತೆ.ಸಂಪರ್ಕಕ್ಕೆ ಯತ್ನಿಸಿದ ಜನರ ಮೇಲೆ ಈ ಬುಡಕಟ್ತು ಜನಾಂಗಗಳು ದಾಳಿ ನಡೆಸಿದ್ದಿದೆ.ಭೂಮಿಯ ಬೇರೆ ಬೇರೆ ಕಡೆ ಇಂತಹ ಒಂದು ನೂರು ಗುಂಪುಗಳು ಇವೆಯೆಂದು ಅಂದಾಜು ಮಾಡಲಾಗಿದೆ.ಆದರೂ ನಿಜವಾಗಿಯೂ ಹೊರ ಜಗತ್ತಿನ ಸಂಪರ್ಕವೇ ಇಲ್ಲದ ಜನಾಂಗಗಳು ವಾಸಿಸುತ್ತಿರುವುದು ಸೆಂಟಿನೆಲೇಸ್ ದ್ವೀಪಗಳಲ್ಲಂತೆ.
ಯುಎಸ್‌ಬಿ ಡ್ರೈವ್‍ಗಳಲ್ಲಿ ಅರಳಿದ ಕಲೆ


ಯುಎಸ್‌ಬಿ ಡ್ರೈವ್‌ಗಳನ್ನೂ ಯಾವೆಲ್ಲಾ ವಿವಿಧ ನಮೂನೆಗಳಲ್ಲಿ ವಿನ್ಯಾಸಗೊಳಿಸಿ,ನೀಡಬಹುದು ಎಂದರೆ ತಕ್ಷಣ ನಮ್ಮ ಮನಸ್ಸಿಗೆ ಯಾವ ಐಡಿಯಾವು ಬಾರದಿರಬಹುದು.ಆದರೆ ಚೀನಿ ಜನರು ಇವನ್ನೂ ಸ್ಯಾಂಡ್‌ವಿಚ್‌ನಂತೆ,ಬಿಯರ್ ಬಾಟಲುಗಳಂತೆ ವಿನ್ಯಾಸಗೊಳಿಸಿದ ಪರಿಯನ್ನು ನೋಡಿದಾಗ ಅಚ್ಚರಿಯಾಗದಿರದು.


*ಅಶೋಕ್‌ಕುಮಾರ್ ಎ

Monday, June 02, 2008

ಚುನಾವಣೆಯ ಕಣದಲ್ಲೂ ಅಂತರ್ಜಾಲದ ಮಾಯಾಜಾಲ



ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಅಂತರ್ಜಾಲದ ಪ್ರಭಾವ ಇತ್ತೇ? ರವಿಕೃಷ್ಣ ರೆಡ್ಡಿಯವರು ತಮ್ಮ ಚುನಾವಣಾ ನಿಧಿಗಾಗಿ ಈ ಮಾಧ್ಯಮವನ್ನೇ ಅವಲಂಬಿಸಿ ಕಣಕ್ಕಿಳಿದು ವಿಫಲ ಪ್ರಯತ್ನ ನಡೆಸಿದ್ದು ನಿಮಗೆ ಗೊತ್ತೇ ಇದೆ.ಪಕ್ಷಗಳು ತಮ್ಮ ಅಂತರ್ಜಾಲ ತಾಣದಲ್ಲಿ ಪ್ರಣಾಳಿಕೆಗಳನ್ನು ಲಭ್ಯವಾಗಿಸಿ,ತಮ್ಮ ಧ್ಯೇಯೋದ್ದೇಶಗಳ ವಿವರ ನೀಡಲಷ್ಟೇ ಅಂತರ್ಜಾಲ ತಾಣವನ್ನು ಬಳಸಿದುವು.ಅರ್ಕುಟ್ ಸಾಮಾಜಿಕ ಜಾಲತಾಣದಲ್ಲಿ ಉಡುಪಿಯ ಬಿಜೆಪಿ ಅಭ್ಯರ್ಥಿ ರಘುಪತಿ ಭಟ್ ಪುಟ ಕಾಣಿಸಿಕೊಂಡು ಅಂತರ್ಜಾಲ ಮೂಲಕ ಜನರಿಗೆ ಸಮೀಪವಾಗುವ ಪ್ರಯತ್ನ ನಡೆಸಿದರು.
ಅತ್ತ ಅಮೆರಿಕಾದಲ್ಲಿ ಬರಾಕ್ ಒಬಾಮಾ ಅವರು ಡೆಮೋಕ್ರಾಟ್ ಪಕ್ಷದ ವತಿಯಿಂದ ಅಧ್ಯಕ್ಷೀಯ ಪದಕ್ಕಾಗಿ ನಡೆಯುವ ಚುನಾವಣಾ ಅಭ್ಯರ್ಥಿಯಾಗಲು ಹಿಲರಿ ಕ್ಲಿಂಟನ್ ವಿರುದ್ಧ ಸೆಣಸಾಡುತ್ತಿದ್ದಾರೆ.ಕ್ಲಿಂಟನ್‌ಗೆ ಹೋಲಿಸಿದರೆ ದುರ್ಬಲರೆಂದೇ ಪರಿಗಣಿತರಾಗಿದ್ದ ಒಬಾಮಾ,ಕ್ಲಿಂಟನ್‌ಗೆ ಅತಿ ನಿಕಟ ಸ್ಪರ್ಧೆ ನೀಡಲು ಅಂತರ್ಜಾಲದ ಪರಿಣಾಮಕಾರಿ ಬಳಕೆಯೇ ಕಾರಣವೆಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ.ತಮ್ಮ ಚುನಾವಣಾ ನಿಧಿಯನ್ನು ಸಂಗ್ರಹಿಸಲೂ ಅಂತರ್ಜಾಲ ತಾಣವನ್ನು ಬಳಸಿ,ಯಶಸ್ವಿಯಾಗಿದ್ದಾರೆ. ಅವರು ಈ ಮೂಲಕ ಏನಿಲ್ಲವೆಂದರೂ ಒಂದು ಬಿಲಿಯನ್ ಡಾಲರು ಸಂಗ್ರಹಿಸಬಹುದೆಂದು ಅಂದಾಜು.ತಮ್ಮ ವಿಚಾರಗಳನ್ನು ಜನರಿಗೆ ಮುಟ್ಟಿಸಲೂ ಒಬಾಮಾ ಅಂತರ್ಜಾಲವನ್ನು ಬಳಸಿದರು.
ಒಬಾಮಾ ಚುನಾವಣಾ ಕಣಕ್ಕಿಳಿಯುವ ಮೊದಲೇ ತಮ್ಮ ಅಂತರ್ಜಾಲ ತಾಣವನ್ನು ಪೂರ್ತಿಯಾಗಿ ಅಭಿವೃದ್ಧಿ ಪಡಿಸಿದ್ದರು.ಅವರದನ್ನು ತಮ್ಮ ಪ್ರಚಾರವನ್ನು ಸಂಘಟಿಸಲು ಮತ್ತು ತಮ್ಮ ಬೆಂಬಲಿಗರನ್ನು ತಲುಪಲು ಬಳಸಿಕೊಂಡರು.ತಮ್ಮ ವಿಚಾರಗಳನ್ನು ಬಹಿರಂಗಗೊಳಿಸಲೂ ಅದನ್ನವರು ಬಳಸುತ್ತಿದ್ದಾರೆ.ಫೇಸ್‍ಬುಕ್ ಅಂತಹ ಸಾಮಾಜಿಕ ಜಾಲತಾಣಗಳಲ್ಲೂ ತಮ್ಮ ಪುಟ ತೆರೆದು,ಅಲ್ಲಿನ ಸಕ್ರಿಯ ಸದಸ್ಯರಾಗಿರುವ ಯುವಜನರನ್ನು ತಲುಪಿದರು.ಯುಟ್ಯೂಬಿನಲ್ಲೂ ಅವರ ಜಾಹೀರಾತು ಕಾಣಿಸಿಕೊಂಡು ಜನಪ್ರಿಯವಾದರು.ಜನರನ್ನು ಮತಗಟ್ಟೆಗೆ ಆಕರ್ಷಿಸಿ ಮತದಾನ ಮಾಡುವಂತೆಯೂ ಪ್ರೇರೇಪಿಸಲು ತಾಣವನ್ನವರು ಬಳಸಿಕೊಂಡರು.ಎರಡು ದಶಲಕ್ಷ ಸದಸ್ಯರನ್ನು ನೋದಾಯಿಸಿಕೊಳ್ಳುವಲ್ಲಿ ಅವರು ಸಫಲರಾಗಿದ್ದಾರೆ ಎಂದರೆ ಅಂತರ್ಜಾಲದ ಮಾಯಕದ ಅರಿವಾಗದೆ ಇರದು.ಹಿಂದಿನ ಅದ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಜಾನ್ ಕೆರ್ರಿಯವರೂ ಅಂತರ್ಜಾಲವನ್ನು ಬಳಸಿಕೊಂಡರೂ,ಅವರಿಗಿಂತ ಹನ್ನೆರಡು ಪಟ್ಟು ಅಧಿಕ ನಿಧಿಯನ್ನು ಒಟ್ಟು ಮಾಡಲೂ ಒಬಾಮಾಗೆ ಸಾಧ್ಯವಾಯಿತು.ಕೊನೆಯ ಹಂತದಲ್ಲಿ ಏನಾದರೂ,ದುರ್ಬಲನೆಂದೇ ಭಾವಿಸಲಾಗಿದ್ದ ಬರಾಕ್ ಒಬಾಮಾ ಕ್ಲಿಂಟನ್‌ಗೆ ಸಮಬಲದ ಸ್ಪರ್ಧೆ ನೀಡಲು ಅಂತರ್ಜಾಲ ನೆರವಾದುದು ಸುಳ್ಳಲ್ಲ.
ಐಐಟಿ ಪ್ರವೇಶದಲ್ಲಿ ಸಿಂಹಪಾಲು ಯಾರಿಗೆ?
ದೇಶದ ಪ್ರತಿಷ್ಟೆಯ ತಾಂತ್ರಿಕ ಕಾಲೇಜುಗಳೆಂದರೆ ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ)ಗಳು.ಇವುಗಳ ಪ್ರವೇಶ ಪಡೆವ ಪ್ರತಿಭಾನ್ವಿತ ವಿದ್ಯಾರ್ಥಿಗಳಲ್ಲಿ ಯಾವ ರಾಜ್ಯದ ವಿದ್ಯಾರ್ಥಿಗಳು ಹೆಚ್ಚು?ತಮಿಳ್ನಾಡು ಇರಬೇಕು ಎಂದು ನೀವು ಆಲೋಚಿಸಿದರೆ ಉತ್ತರ ತಪ್ಪು.ಐಐಟಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ರಾಜ್ಯದಲ್ಲಿ ಐಐಟಿಯೇ ಇಲ್ಲ.ಆಂಧ್ರದ ವಿದ್ಯಾರ್ಥಿಗಳು ಪ್ರವೇಶದ ಸಿಂಹಪಾಲು ಪಡೆಯುತ್ತಿದ್ದಾರೆ.ಇರುವ ಆರು ಸಾವಿರ ಸೀಟುಗಳಲ್ಲಿ ಮೂರನೇ ಒಂದು ಪಾಲು ಸೀಟುಗಳನ್ನು ಆಂಧ್ರದ ವಿದ್ಯಾರ್ಥಿಗಳು ಬಗಲಿಗೆ ಹಾಕಿಕೊಳ್ಳುತ್ತಿದ್ದಾರೆ.ಅದರಲ್ಲೂ ಕೆಲವು ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳೇ ಪ್ರವೇಶ ಪಡೆಯುತ್ತಿದ್ದಾರೆ.
ಈ ವರ್ಷ ಪ್ರವೇಶ ಪಡೆದಯಲಿರುವ ವಿದ್ಯಾರ್ಥಿಗಳಲ್ಲಿ ನಾರಾಯಣ ಶಿಕ್ಷಣ ಸಂಸ್ಥೆಯಿಂದ ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳೂ,ಶ್ರೀ ಚೈತನ್ಯ ಸಂಸ್ಥೆಗಳಿಂದ ಏಳುನೂರಕ್ಕೂ ಹೆಚ್ಚು ವಿದ್ಯಾರ್ಥಿಗಳೂ,ರಾಮಯ್ಯ ಸಂಸ್ಥೆಯಿಂದ ನೂರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಐಐಟಿ ಸೇರಲಿದ್ದಾರೆ.ಈ ಸಂಸ್ಥೆಗಳು ಅತ್ಯಂತ ಮೇಧಾವಿಗಳಿಗೆ ಪ್ರವೇಶ ಸೀಮಿತಗೊಳಿಸಿ,ಐಐಟಿ ಪರೀಕ್ಷೆ ಎದುರಿಸುವ ನಿಟ್ಟಿನಲ್ಲಿ ಕೇಂದ್ರೀಕೃತ ತರಬೇತಿ ನೀಡುವ ಮೂಲಕ ಈ ರೀತಿಯ ಸಾಧನೆ ತೋರುತ್ತಿವೆ.ತಮಗೆ ಬೇಕಾದ ಐಐಟಿಯಲ್ಲಿ ಪ್ರವೇಶ ಪಡೆಯಲು ವಿಫಲರಾಗುವ ಕೆಲವು ವಿದ್ಯಾರ್ಥಿಗಳು ಮುಂದಿನ ವರ್ಷ ಮರು ಪರೀಕ್ಷೆ ತೆಗೆದುಕೊಂಡು,ತಮ್ಮ ಪ್ರವೇಶಾವಕಾಶ ಉತ್ತಮ ಪಡಿಸಿಕೊಳ್ಳಲು ಪ್ರಯತ್ನಿಸುವುದಿದೆ.
ಮೈಕ್ರೋಸಾಫ್ಟಿನ:ವಿಸ್ತಾ ನಂತರ ವಿಂಡೋಸ್ 7
ವಿಂಡೋಸ್ ಎಕ್ಸ್‌ಪಿ ನಂತರ ವಿಸ್ತಾ ಕಂಪ್ಯೂಟರ್ ಕಾರ್ಯನಿರ್ವಹಣಾ ವ್ಯವಸ್ಥೆ ತಂತ್ರಾಂಶವನ್ನು ತಂದ ಮೈಕ್ರೋಸಾಫ್ಟ್ ಕಂಪೆನಿ,ತನ್ನ ಮುಂದಿನ ಆವೃತ್ತಿಯನ್ನು ಮೂರು ವರ್ಷಗಳ ನಂತರ ಹೊರತರುವ ಯೋಜನೆ ಹಾಕಿಕೊಂಡಿದೆ.ವಿಂಡೋಸ್ 7 ಎಂದೀ ಆವೃತ್ತಿಗೆ ಹೆಸರಿಡಲು ಯೋಜಿಸಲಾಗಿದೆ.ಈ ಕಂಪ್ಯೂಟರ್ ಕಾರ್ಯನಿರ್ವಹಣಾ ತಂತ್ರಾಂಶದಲ್ಲಿ ಮೌಸ್ ಬಳಸದೆ ಕಂಪ್ಯೂಟರ್ ಬಳಸಲು ಆಸ್ಪದ ನೀಡಲು, ಸ್ಪರ್ಷ ಸಂವೇದಿ ಕಂಪ್ಯೂಟರ್ ಪರದೆಯನ್ನು ಬಳಸುವ ಯೋಜನೆ ಕಂಪೆನಿಗಿದೆ.ಇದರೊಂದಿಗೆ ಕಂಪ್ಯೂಟರ್ ಬಳಕೆಯಲ್ಲಿ ಹೊಸ ಮಜಲಿಗೆ ಕಾಲಿಡಲು ಬಯಸಿದೆ.ಜನರು ಸಹಜವಾದ ರೀತಿಯಲ್ಲಿ ಕಂಪ್ಯೂಟರ್ ಬಳಸಲು ಆಸ್ಪದ ನೀಡುವ ತಂತ್ರಜ್ಞಾನಗಳ ಪೈಕಿ,ಸ್ಪರ್ಶದ ಮೂಲಕ ಕಂಪ್ಯೂಟರ್ ಬಳಸುವ ತಂತ್ರಜ್ಞಾನವನ್ನು ಸದ್ಯಕ್ಕೆ ದುಡಿಸಿ ಕೊಳ್ಳುವುದು ಅನಿವಾರ್ಯ.
ಯುಟ್ಯೂಬ್ ಭಾರತದಲ್ಲಿ
ಯುಟ್ಯೂಬ್‌ನ ಭಾರತೀಯ ಅವತಾರ ಈಗ ಲಭ್ಯ.ಜನರಿಗೆ ತಮ್ಮ ವಿಡಿಯೋ ತುಣುಕುಗಳನ್ನು ಇತರರೊಡನೆ ಹಂಚಿಕೊಳ್ಳಲು ಅವಕಾಶ ನೀಡಲು ಉದಯಿಸಿದ ಯುಟ್ಯೂಬ್ ತಾಣ ಸದ್ಯ ಗೂಗಲ್ ಹಿಡಿತದಲ್ಲಿದೆ. ಇಲ್ಲಿ ಸಿನಿಮಾ ತುಣುಕುಗಳಿಂದ ಹಿಡಿದು,ದೇಶಗಳ ಜನಜೀವನಕ್ಕೆ ಕನ್ನಡಿ ಹಿಡಿಯುವ ವಿಡಿಯೋ ತುಣುಕುಗಳ ಅಗಣಿತ ಕಣಜವಿದು.ಈಗ ಭಾರತೀಯರಿಗೇ ಮೀಸಲಾದ ಯುಟ್ಯೂಬಿನ ದೇಶೀ ಆವತಾರ www.youtube.co.in ಲಭ್ಯವಾಗಿದೆ.ಇಲ್ಲಿ ಭಾರತದ ಸಂಸ್ಕೃತಿಯ ದರ್ಶನ ನೀಡುವ ವಿಡಿಯೋ ತುಣುಕುಗಳಿಗೇ ಪ್ರಾಶಸ್ತ್ಯ ಸಿಗಲಿದೆ.
*ಅಶೋಕ್‌ಕುಮಾರ್ ಎ
 
googledc7e93ba1a7703ae.html