Monday, October 27, 2008

ಸಂಸ್ಕೃತ ದಿನಪತ್ರಿಕೆ "ಸುಧರ್ಮ"



ಕಳೆದ ಸುಮಾರು ನಲುವತ್ತು ವರ್ಷಗಳಿಂದ ಮೈಸೂರಿನಿಂದ ಸಂಸ್ಕೃತ ಪತ್ರಿಕೆಯೊಂದು ಪ್ರಕಟವಾಗುತ್ತಿದೆ. ಈಗದು ಅಂತರ್ಜಾಲ ಆವೃತ್ತಿಯನ್ನೂ ಹೊಂದಿ http://sudharma.epapertoday.com ತಾಣದಲ್ಲಿ ಲಭ್ಯ.ಕೆ ವಿ ಸಂಪತ್‌ಕುಮಾರ್ ಈ ಪತ್ರಿಕೆಯ ಸಂಪಾದಕರು. ವರ್ಷಕ್ಕೆ ಇನ್ನೂರೈವತ್ತು ರುಪಾಯಿ ಚಂದಾ ಹಣದಿಂದ ನಡೆಯುತ್ತಿರುವ ಪತ್ರಿಕೆ ಇದೀಗ ಅಂತರ್ಜಾಲ ಜಾಹೀರಾತುಗಳಿಂದ ಆದಾಯ ಗಳಿಸಲು ಪ್ರಯತ್ನಿಸುತ್ತಿದೆ.ಸೀಮಿತ ಪ್ರಸಾರ ಹೊಂದಿ, ಅಂಚೆಯ ಮೂಲಕ ಬಟವಾಡೆಯಾಗ ಬೇಕಿದ್ದ ಪತ್ರಿಕೆ ಈಗ ಅಂತರ್ಜಾಲ ಆವೃತ್ತಿಯ ಮೂಲಕ ಹೆಚ್ಚು ಜನರನ್ನು ಮುಟ್ಟಲು ಸಾಧ್ಯವಿದೆ.
-------------------------------------------
ಚಂದ್ರನ ಮೇಲ್ಮೈಯಲ್ಲಿ ನೀರಿದೆಯೇ?
ಚಂದ್ರನ ಮೇಲೆ ನೀರಿದೆಯೇ ಎನ್ನುವ ಪ್ರಶ್ನೆಗಿನ್ನೂ ಸಮರ್ಪಕವಾದ ಉತ್ತರ ಸಿಕ್ಕಿಲ್ಲ. ಚಂದ್ರನ ಮೇಲಿನ ತಾಪದ ಕಾರಣ ಅಲ್ಲಿ ನೀರು ಇದ್ದರೂ ತಕ್ಷಣ ಆವಿಯಾಗಿ ಹೋಗುವುದು ನಿಶ್ಚಿತ. ಆದರೆ ಚಂದ್ರನ ಧ್ರುವ ಪ್ರದೇಶಗಳಲ್ಲಿ ಯವತ್ತೂ ಬಿಸಿಲು ಬೀಳದ ಭಾಗಗಳೂ ಇವೆ. ಇಲ್ಲಿ ಬಂಡೆಯ ಕೊರಕಲುಗಳಲ್ಲಿ ನೀರು ಮಂಜುಗಡ್ಡೆಯಾಗಿ ಇದೆಯೇ ಎಂಬ ಸಂಶಯ ಅಮೆರಿಕಾದ ಬಾಹ್ಯಾಕಾಶ ವಾಹನವು ತೊಂಭತ್ತರ ದಶಕದ ಆರಂಭದಲ್ಲಿ ತೆಗೆದ ಚಿತ್ರಗಳ ಕಾರಣ ಬಂದಿದೆ. ಜಪಾನಿನ ಕಾಗುಯ ಚಂದ್ರನ ಶೋಧ ವಾಹನ ತೆಗೆದ ಚಿತ್ರಗಳು ಮಂಜುಗಡ್ಡೆಯ ಇರುವಿಕೆ ಬಗ್ಗೆ ಹೊಸ ಚರ್ಚೆ ಎಬ್ಬಿಸಿದೆ. ಈಗ ಲಭ್ಯವಿರುವ ಧ್ರುವ ಪ್ರದೇಶದ ಹೊಸ ಚಿತ್ರಗಳು, ಮೊದಲು ತೆಗೆದ ಚಿತ್ರಗಳಿಗಿಂತ ಹೆಚ್ಚಿನ ಪ್ರಕಾಶ ಲಭ್ಯವಿರುವಾಗ ತೆಗೆದ ಚಿತ್ರಗಳಾಗಿವೆ. ಜಪಾನಿ ವಿಜ್ಞಾನಿಗಳು ಚಂದ್ರನ ಧ್ರುವ ಪ್ರದೇಶದಲ್ಲಿ ಮಂಜುಗಡ್ಡೆ ಇರುವಷ್ಟು ಕಡಿಮೆ ಉಷ್ಣತೆ ಇದೆಯಾದರೂ, ಅಲ್ಲಿ ನೀರಿನ ಇರುವಿಕೆಯ ಸಾಧ್ಯತೆ ಕಡಿಮೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.ಒಂದು ವೇಳೆ ಮಂಜುಗಡ್ಡೆ ಇದ್ದರೂ,ಅದು ಚಿತ್ರದ ಸ್ಪಷ್ಟತೆಯಾದ ಹತ್ತು ಮೀಟರ್ ಪ್ರದೇಶಕ್ಕಿಂತ ಕಡಿಮೆ ಪ್ರದೇಶದಲ್ಲಿ ವ್ಯಾಪಿಸಿರಬಹುದು ಎಂದವರು ವ್ಯಾಖ್ಯಾನಿಸಿದ್ದಾರೆ.
ಈ ನಿಟ್ಟಿನಲ್ಲಿ ಚಂದ್ರಯಾನದ ಮಿನಿಸ್ಯಾರ್ ರಾಡಾರ್ ಚಂದ್ರನ ಧ್ರುವ ಪ್ರದೇಶಗಳ ಮೇಲೆ ಬಹಳ ಸಮೀಪದಿಂದ ಹೋಗುತ್ತಾ, ಅಲ್ಲಿನ ಕೊರಕಲುಗಳ ಆಳದಲ್ಲಿ ಏನಿದೆ ಎಂದು ಗಮನಿಸಲಿದೆ. ಅದರ ಆಧಾರದಲ್ಲಿ ನಮ್ಮ ವಿಜ್ಞಾನಿಗಳು ಖಚಿತವಾಗಿ ಈ ಕಗ್ಗಂಟನ್ನು ಬಿಡಿಸಲು ಸಫಲರಾಗುವುದು ನಿಶ್ಚಿತ.
--------------------------------------------------
ಜಾಣ ಮರೆವು ಸಾಧ್ಯ!
ಆಯ್ದ ಸಂಗತಿಗಳನ್ನಷ್ಟೇ ಮರೆಯುವಂತೆ ಮಾಡಬಹುದೇ ಎನ್ನುವುದಕ್ಕೆ ಒಂದು ಉತ್ತರವಂತೂ ವಿಜ್ಞಾನಿಗಳಿಗೆ ಸಿಕ್ಕಿದೆ.ಜಾರ್ಜಿಯಾದ ಮೆಡಿಕಲ್ ಕಾಲೇಜಿನ ಸಂಶೋಧಕರು ಇಲಿಗಳ ಮೇಲೆ ಪ್ರಯೋಗ ಮಾಡಿ ನೆನಪಿನ ಶಕ್ತಿಯನ್ನು ಕುಂದಿಸಲು ಕಾರಣವಾದ ಹಾರ್ಮೋನ್ ಯಾವುದೆಂದು ಪತ್ತೆ ಹಚ್ಚಲು ಸಫಲರಾಗಿದ್ದಾರೆ.ಕೈನೇಸ್ ಎನ್ನುವ ಹಾರ್ಮೋನನ್ನು ಇಲಿಯಲ್ಲಿ ಹೆಚ್ಚು ಸ್ರವಿಸುವಂತೆ ಮಾಡಿದಾಗ ಇಲಿಗಳು ತಮ್ಮ ನಡವಳಿಕೆಯಲ್ಲಿ ಬದಲಾವಣೆ ಮಾಡಿಕೊಂಡುವು. ಈ ಇಲಿಗಳು ಒಂದು ನಿಗದಿತ ಗೂಡು ಮತ್ತು ಸದ್ದನ್ನು ಆಲಿಸಿದ ಕೂಡಲೇ ಭಯದಿಂದ ನಿಂತು ಬಿಡುವಂತೆ ತರಬೇತಿ ಕೊಡಲಾಯಿತು.ಬಳಿಕ ಈ ಕಿಣ್ವವನ್ನು ಹೆಚ್ಚು ಸ್ರವಿಸುವಂತೆ ಮಾಡಿದ ಬಳಿಕ, ಇದೇ ಪರಿಸ್ಥಿಯಲ್ಲಿಯೂ ಇಲಿಗಳು ಗಾಬರಿ ಬೀಳದ್ದು ಕಂಡು ಬಂತು. ಅಂದರೆ, ಇಲಿಗಳು ತಮ್ಮ ವರ್ತನೆಯನ್ನು ಮರೆತವು ಎಂದಾಯಿತು.ಕೈನೇಸ್ ಕಿಣ್ವವು ಮನುಷ್ಯರಲ್ಲೂ ಇದೆಯಾದ್ದರಿಂದ ಮನುಷ್ಯರು ಬೇಕಾದ ಸಂಗತಿಗಳನ್ನು ಮರೆವಂತೆ ಮಾಡಬಹುದು ಎಂದು ವಿಜ್ಞಾನಿಗಳು ಭಾವಿಸಿದ್ದಾರೆ.ಬಳಿಕ ಈ ಮರೆವು ತಾತ್ಕಾಲಿಕವೋ ಎಂದು ನೋಡಲು ವಿಜ್ಞಾನಿಗಳು ಕಿಣ್ವವನ್ನು ಕಡಿಮೆ ಸ್ರವಿಸುವಂತೆ ಮಾಡಿದರೂ ಮರೆವಿನಲ್ಲಿ ಯಾವ ಬದಲಾವಣೆಯೂ ಆಗದ್ದು ಕಂಡು ಬಂತು.ಈ ಕಿಣ್ವವು ಹೆಚ್ಚಿದ್ದಾಗಲೂ ಬೆಕ್ಕಿಗೆ ಬೆದರುವ ನಡತೆಯನ್ನು ಇಲಿಗಳು ಮರೆಯದೆ ಇದ್ದ ಕಾರಣ,ಕೈನೇಸ್ ಸೀಮಿತ ಪರಿಣಾಮವನ್ನಷ್ಟೇ ಹೊಂದಿದೆ ಎನ್ನುವುದು ದೃಢ ಪಟ್ಟಿತು.
----------------------------------------------
ಗೊರಿಲ್ಲಾಕ್ಕೆ ಸಂಗಾತಿ ಬೇಕು!
ಮೈಸೂರು ಮೃಗಾಲಯದ ಗೊರಿಲ್ಲಾ ಪೋಲೋ ಭಾರತದ ಏಕೈಕ ಗೊರಿಲ್ಲಾ ವಾನರ. ಎರಡು ಸಾವಿರನೆಯ ಇಸವಿಯಲ್ಲಿ ಇದರ ಜತೆಗಾರ್ತಿ ಸುಮತಿ ನಿಧನವಾಯಿತು. ಬಳಿಕ ಈ ಗೊರಿಲ್ಲಾಗೆ ಕಂಪೆನಿಯೇ ಇಲ್ಲವಂತೆ. ಡಬ್ಲಿನ್‌ನಿಂದ ಭಾರತಕ್ಕೆ ಬಂದ ಗೊರಿಲ್ಲಾನಿಗೆ ಸಂಗಾತಿಯನ್ನು ಎಲ್ಲಾ ಮೃಗಾಲಯಗಳಲ್ಲಿ ಅರಸಲಾಗಿದೆ. ಆದರಿದು ಫಲಕೊಟ್ಟಿಲ್ಲ.ಏಕಾಂಗಿಯಾಗಿರುವುದು, ಗೊರಿಲ್ಲಕ್ಕೆ ಮಾನಸಿಕ ಸಮಸ್ಯೆಗಳನ್ನು ತರಬಹುದ್ದಾದ್ದರಿಂದ ಅದರ ಸಂಗಾತಿಯನ್ನು ಕಂಡುಕೊಳ್ಳಲು ವಿಶ್ವದ ಹೆಚ್ಚಿನ ಮೃಗಾಲಯಗಳಿಗೆ ಸಂದೇಶ ಹೋಗಿದೆಯಂತೆ.
--------------------------------------------
ಗಂಟೆಗೆ ಸಾವಿರ ಮೈಲಿ ಕ್ರಮಿಸುವ ಕಾರು ಬರಲಿದೆ!
ಒಂದು ಗಂಟೆಗೆ ಸಾವಿರ ಮೈಲಿ ವೇಗದಲ್ಲಿ ಚಲಿಸುವ ಬ್ಲಡ್‌ಹೌಂಡ್ ಸೂಪರ್ ಸೋನಿಕ್ ವೇಗದ ಕಾರು ಬರಲಿದೆ ಇನ್ನು ಮೂರು ವರ್ಷಗಳಲ್ಲಿ ಈ ದಾಖಲೆ ಸಾಧ್ಯವಾಗಬಹುದು ಎಂದು ಭಾವಿಸಲಾಗಿದೆ. ಇದರಲ್ಲಿ ರಾಕೆಟ್ ತಂತ್ರಜ್ಞಾನಕ್ಕೆ ಹೋಲುವ ತಂತ್ರಜ್ಞಾನವನ್ನು ಬಳಸಲಾಗುತ್ತಿದೆಯಂತೆ.ಇದನ್ನು ಓಡಿಸಲು ಮರಳುಗಾಡಿನಂತಹ ಸಸ್ಯಗಳಿಲ್ಲದ ತಾಣಗಳಿಗಾಗಿ ಹುಡುಕಾಟ ನಡೆದಿದೆ. ಅಲ್ಲಿ ನೀರಿನ ಪಸೆಯೂ ಇರಬಾರದು. ಹತ್ತು ಮೈಲು ಸ್ಥಳಾವಕಾಶವಾದರೂ ಇರಬೇಕು. ಅಮೆರಿಕಾದ ಎಂಟು,ಆಸ್ಟ್ರೇಲಿಯಾದ ನಾಲ್ಕು ತಾಣಗಳನ್ನು ಗುರುತಿಸಲಾಗಿದೆ.ಅಂತಿಮ ಆಯ್ಕೆಯಿನ್ನೂ ಆಗಬೇಕಿದೆ.ಇದರ ಉದ್ದ ಹನ್ನೆರಡ್ ಮೀಟರಿಗಿಂತ ಹೆಚ್ಚಿದ್ದು ತೂಕ ಆರೂವರೆ ಟನ್ ಇರಬಹುದು.ಇದನ್ನು ಚಲಾಯಿಸಲು ಆಂಡಿ ಗ್ರೀನ್ ಎಂಬ ಪೈಲಟ್ ಆಯ್ಕೆಯಾಗಿದ್ದಾನೆ.
-------------------------------------------
ಅಗ್ಗದ ಚಂದ್ರಯಾನ
ಭಾರತ ಚಂದ್ರಯಾನಕ್ಕೆ ಮುನ್ನೂರ ಎಂಭತ್ತು ಕೋಟಿ ರುಪಾಯಿಗಳಷ್ಟು ಖರ್ಚು ಮಾಡಿದ್ದಕ್ಕೆ ಆಕ್ಷೇಪ ಎತ್ತುವವರು ಇದ್ದಾರೆ. ನಮ್ಮಂತಹ ಬಡದೇಶ ಇಂತಹ ಪ್ರಯೋಗಗಳಿಗೆ ಕೋಟಿಗಟ್ಟಲೆ ಸುರಿಯಬೇಕೇ ಎನ್ನುವ ಚರ್ವಿತ ಚರ್ವಣ ವಾದ ಇದ್ದೇ ಇದೆ.ವಿಶ್ವದಲ್ಲಿ ಭಾರತ ತನ್ನ ಪ್ರತಿಷ್ಠೆ ಹೆಚ್ಚಿಸಿಕೊಳ್ಳಲು, ಕ್ಷಿಪಣಿ ತಂತ್ರಜ್ಞಾನ ಅಭಿವೃದ್ಧಿ ಪಡಿಸಿಕೊಳ್ಳುವಲ್ಲಿ, ಚಂದ್ರನ ಮೇಲೆ ವಸಾಹತು ಸ್ಥಾಪನೆಗೆ ಹಕ್ಕು ಸ್ಥಾಪಿಸಲು ಮುಂತಾದ ದೃಷ್ಟಿಗಳಿಂದ ನೋಡಿದರೆ, ಚಂದ್ರಯಾನಕ್ಕೆ ಅಷ್ಟು ಹಣ ಖರ್ಚು ಮಾಡುವುದನ್ನು ಟೀಕಿಸುವುದು ಸರಿಯಲ್ಲ. ಹಾಗೆ ನೋಡಿದರೆ ಭಾರತ ಅದಕ್ಕೆ ವ್ಯಯಿಸಿದ ಹಣ ಇತರ ದೇಶಗಳಿಗೆ ಹೋಲಿಸಿದರೆ ಬಹು ಕಡಿಮೆ. ಅಮೆರಿಕಾದಲ್ಲಾದರೆ,ಇದಕ್ಕೆ ಇದರ ಐದು ಪಟ್ಟು ಖರ್ಚು ಬರುತ್ತಿತ್ತು. ಅವರು ಆರು ಬಾರಿ ಪರೀಕ್ಷಿಸಿ,ಖಚಿತ ಪಡಿಸಿಕೊಳ್ಳುವುದನ್ನು ನಾವು ಮೂರೇ ಸಲ ಮಾಡಿ,ಖರ್ಚು ಕಡಿಮೆ ಮಾಡಿದ್ದೇವೆ.ಅದರರ್ಥ ನಾವು ರಿಸ್ಕ್ ತೆಗೆದುಕೊಳ್ಳುತ್ತಿದ್ದೇವೆ ಅಂತೇನಲ್ಲ. ಅದಲ್ಲದೆ ಹೆಚ್ಚಿನ ಭಾಗಗಳು ಈಗಾಗಲೇ ಅಭಿವೃದ್ಧಿ ಪಡಿಸಿ, ಇತರ ಉಡ್ಡಯಣಗಳಲ್ಲಿ ಬಳಕೆಯಾದ್ದದ್ದೇ ಆಗಿವೆ.ಉದಾಹರಣೆಗೆ ಪಿಎಸೆಲ್ವಿ ರಾಕೆಟ್. ಅದರ ವಿನ್ಯಾಸವನ್ನು ಹಿಂದಿನ ಉಡಯಣಗಳಲ್ಲಿ ಬಳಕೆಯಾದಂತೆ ಉಳಿಸಿಕೊಳ್ಳಲಾಗಿದೆ. ಇಸ್ರೋದ ಸದ್ಯದ ಬಜೆಟ್ ವಾರ್ಷಿಕ ಐದು ಸಾವಿರ ಕೋಟಿ ರುಪಾಯಿಗಳು. ಇತರರ ಉಪಗ್ರಹವನ್ನು ಕಕ್ಷೆಗೇರಿಸುವ ಮೂಲಕ ಮತ್ತು ರಿಮೋಟ್ ಸೆನ್ಸಿಂಗ್ ಮಾಹಿತಿಯನ್ನು ಇತರರ ದೇಶಗಳ ಜತೆ ಹಂಚಿಕೊಂಡು ಇಸ್ರೋ ಆದಾಯವನ್ನೂ ಗಳಿಸುತ್ತಿದೆ. ಈಗಿನ ಉಡಾವಣೆ ಇಸ್ರೋ ಇಮೇಜ್ ಸುಧಾರಿಸಿ, ಅದರ ಹೆಚ್ಚು ಹೊರಗುತ್ತಿಗೆ ವ್ಯವಹಾರಗಳನ್ನು ದೊರಕಿಸಿಕೊಡಲಿದೆ.ಇಸ್ರೋದ ಚಂದ್ರಯಾನದಲ್ಲಿ ಒಂದು ಸಾವಿರ ವಿಜ್ಞಾನಿಗಳು ಮೂರು ವರ್ಷ ಕಾಲ ದುಡಿದಿದ್ದಾರೆ. ಅವರುಗಳು ಗಳಿಸಿರುವ ಈ ಯಶಸ್ಸು,ಅವರ ಆತ್ಮ ವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸಲಿದೆ. ಅದರಿಂದಾಗುವ ಲಾಭವನ್ನು ಅಳೆಯುವುದು ಹೇಗೆ?

*ಅಶೋಕ್‌ಕುಮಾರ್ ಎ

Monday, October 20, 2008

"ಮಾತನಾಡುವ ಪುಸ್ತಕಗಳ" ಗ್ರಂಥಾಲಯ

ದಿಗಂಬರವಾದ,ಬುದ್ಧಿಸಂ,ಕಮ್ಯುನಿಸಂ ಇತ್ಯಾದಿ ಹದಿನಾಲ್ಕು ವಿಷಯಗಳ ಬಗ್ಗೆ ಜೀವಂತ ಪುಸ್ತಕಗಳನ್ನು ಒದಗಿಸುವ ಸೇವೆಯನ್ನು ಕ್ಯಾಲಿಫೋರ್ನಿಯಾದ ಸ್ಯಾಂಟಾ ಮೋನಿಕಾ ಸಾರ್ವಜನಿಕ ಲೈಬ್ರೇರಿಯು ಒದಗಿಸುತ್ತದೆ.ವಿಷಯತಜ್ಞರನ್ನೇ "ಮಾತನಾಡುವ ಪುಸ್ತಕಗಳು" ಎಂದು ಪರಿಗಣಿಸುವ ಈ ಗ್ರಂಥಾಲಯ, ತನ್ನ ಸದಸ್ಯರಿಗೆ ಪುಸ್ತಕಗಳನ್ನು ಎರವಲು ಕೊಡುವಂತೆ ಈ ಪುಸ್ತಕಗಳನ್ನೂ ಎರವಲು ನೀಡುತ್ತದೆ. ಅದರೆ ಇವನ್ನು ದಿನಗಟ್ಟಲೆ ಇಟ್ಟುಕೊಳ್ಳುವ ಹಾಗಿಲ್ಲ. ಈ "ಪುಸ್ತಕಗಳನ್ನು" ಓದುವುದೂ ಸಾಧ್ಯವಿಲ್ಲವಲ್ಲ! ಹಾಗಾಗಿ ಎರವಲು ಪಡೆದ "ಜೀವಂತ ಪುಸ್ತಕ"ದ ಜತೆ ಅರ್ಧ ಗಂಟೆ ಮಾತನಾಡಿ, ಸುಸ್ಥಿತಿಯಲ್ಲಿ ಅದನ್ನು ಗ್ರಂಥಾಲಯಕ್ಕೆ ಮರಳಿಸುವ ಜವಾಬ್ದಾರಿಯೊಂದಿಗೆ ಮಾತನಾಡುವ ಪುಸ್ತಕಗಳ ಎರವಲು ಪಡೆಯಬಹುದು. ಆದರೆ ಗ್ರಂಥಾಲಯದೊಳಗೆ ಮಾತುಕತೆಗೆ ಅವಕಾಶ ನೀಡಿದರೆ ಇತರರಿಗೆ ತೊಂದರೆಯಾಗುತ್ತದೆ ಎಂಬ ದೃಷ್ಟಿಯಿಂದ,ಪುಸ್ತಕಗಳನ್ನು ಹೊರಗೊಯ್ದು ಸಂಭಾಷಿಸಲು ಹೇಳಲಾಗುತ್ತದೆ.ವಿಷಯ ಪರಿಣತರೊಂದಿಗೆ ಸಂಭಾಷಿಸಿ,ಅರ್ಧ ತಾಸಿನೊಳಗೆ ಮುಗಿಸಲಾಗದವರು ಮುಂದೆ ಎರವಲು ಪಡೆಯಲು ಅವಕಾಶ ಸಿಗುತ್ತದೆ. ಮಾತನಾಡುವ ಪುಸ್ತಕದ ಬೇಡಿಕೆಯನ್ನವಲಂಬಿಸಿ, ಇದಕ್ಕೆ ಸಮಯ ನಿಗದಿ ಮಾಡಲಾಗುತ್ತದೆ.ಪುಸ್ತಕವನ್ನು ಒಯ್ಯುವಾಗ ಜಾಗ್ರತೆ ವಹಿಸುವಂತೆ, ಈ ಪುಸ್ತಕಗಳನ್ನೂ ಜಾಗ್ರತೆಯಿಂದ ಉಪಯೋಗಿಸಿ ಮರಳಿಸಲು ಸದಸ್ಯರನ್ನು ಗ್ರಂಥಾಲಯ ಕೇಳುತ್ತದೆ. ಯಾವ ಸ್ಥಿತಿಯಲ್ಲಿ ಪುಸ್ತಕವನ್ನು ಒಯ್ಯಲಾಯಿತೋ ಅದೇ ಸ್ಥಿತಿಯಲ್ಲಿ ಮರಳಿಸುವುದು ಸದಸ್ಯನ ಜವಾಬ್ದಾರಿಯಾಗಿರುತ್ತದೆ.ಪುಸ್ತಕದ ಮನೋಸ್ಥಿತಿಯನ್ನೂ ಇದ್ದ ಸ್ಥಿತಿಯಲ್ಲಿಯೇ ಉಳಿಸಿಕೊಳ್ಳುವುದೂ ಸದಸ್ಯನ ಕರ್ತವ್ಯ.ದಿಗಂಬರವಾದಿ ಬಟ್ಟೆ ಧರಿಸುತ್ತಾನೋ ಇಲ್ಲವೋ ಎಂಬಂತಹ ವಿಷಯಗಳ ಬಗ್ಗೆ ಈ ರೀತಿಯ ಸಂವಹನ ಹೆಚ್ಚು ಬೆಳಕು ಚೆಲ್ಲುತ್ತದೆ ಎನ್ನುವುದು ಸ್ಪಷ್ಟ!
----------------------------------------
ಮುಹೂರ್ತ ನೋಡಿ ಚಂದ್ರಯಾನಕ್ಕೆ ಸಜ್ಜಾಗಿರುವ ಇಸ್ರೋ!
ನಮ್ಮ ವಿಜ್ಞಾನಿಗಳು ರಾಕೆಟ್ ಉಡಾವಣೆಗೆ ಮುಹೂರ್ತ ನೋಡುತ್ತಾರೆ ಎನ್ನುವುದು ಹಳೆಯ ಆರೋಪ. ಆದರೆ ಇದು ಆರೋಪ ಅಲ್ಲ ಸತ್ಯ ವಿಷಯ ಎನ್ನುವವರೂ ಇದ್ದಾರೆ.ಇಸ್ರೋದ ವಿಜ್ಞಾನಿಗಳಲ್ಲಿ ಜ್ಯೋತಿಷ್ಯದ ಹವ್ಯಾಸವನ್ನು ಗಂಭೀರವಾಗಿ ಪರಿಗಣಿಸಿದವರೂ ಇರುವುದರಿಂದ ಅವರು ಚಂದ್ರಯಾನದ ಮುಹೂರ್ತ ಇಡಲು ಇತರ ಜ್ಯೋತಿಷ್ಯಿಗಳ ಮೊರೆ ಹೋಗ ಬೇಕಿಲ್ಲ. ಅಕ್ಟೋಬರ್ ಇಪ್ಪತ್ತೆರಡು ಶುಭಮುಹೂರ್ತವೆಂದು ಈ ಆಸ್ಥಾನ ಜ್ಯೋತಿಷಿಗಳು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಪ್ರತಿ ರಾಕೆಟ್ ಉಡ್ಡಯನದ ಸಂದರ್ಭದಲ್ಲೂ ರಾಕೆಟುಗಳ ಪ್ರತಿಕೃತಿಗಳನ್ನು ಮಾಡಿ,ಅದನ್ನು ತಿರುಪತಿಯಲ್ಲಿ ಬಾಲಾಜಿಯ ಪದತಲದಲ್ಲಿ ಅರ್ಪಿಸುವ ಕ್ರಮವನ್ನು ಇಸ್ರೋದ ಈ ವಿಜ್ಞಾನಿಗಳು ಮರೆಯುವುದಿಲ್ಲವಂತೆ. ಈ ಸಲವೂ ಉಡ್ದಯನದ ಸಿದ್ಧತೆಯ ಜತೆಗೆ ಈ ತಿರುಪತಿ ಸೇವೆಯನ್ನು ಮಾಡಲೂ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲವೆನಿಸುತ್ತದೆ.
----------------------------------------------
ಮನೆಗೆ ಪೈಪಿನಲ್ಲಿ ಅಡುಗೆ ಅನಿಲ!
ಅಪಾರ್ಟ್‌ಮೆಂಟುಗಳಲ್ಲಿ ಪ್ರತಿ ಮನೆಯವರೂ ಪ್ರತ್ಯೇಕವಾಗಿ ಅಡುಗೆ ಅನಿಲ ಸಿಲಿಂಡರುಗಳನ್ನು ಹೊಂದಿರುತ್ತಾರೆ. ಒಬ್ಬ ವ್ಯಕ್ತಿಯು ಅಜಾರೂಗಕನಾಗಿದ್ದರೆ, ಅಲ್ಲಿ ಅನಿಲದ ಜಾಡಿ ಸಿಡಿದು,ಇಡೀ ಕಟ್ಟಡವು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದ್ದೇ ಇದೆ. ಜತೆಗೆ ಅನಿಲದ ಜಾಡಿ ಯಾವಾಗೆಂದರೆ ಆಗ ಖಾಲಿಯಾಗಿ, ಮನೆಯವರು ತಾಪತ್ರಯ ಪಡುವ ಸಂದರ್ಭಗಳೂ ಇವೆ. ಈಗ ಹೊಸ ಅಪಾರ್ಟ್‌ಮೆಂಟುಗಳಲ್ಲಿ, ಅಡುಗೆ ಅನಿಲವನ್ನು ಪೈಪ್ ಮೂಲಕ ಪೂರೈಸುವ ವ್ಯವಸ್ಥೆ ಇರುತ್ತದೆ. ಮುಂಬೈ, ಗುಜರಾತ್ ಅಂತಹ ಕಡೆ, ಅಡುಗೆ ಅನಿಲವು ಕೊಳಾಯಿ ಮೂಲಕ ಲಭ್ಯವಿರುವುದರಿಂದ ಅಲ್ಲಿ ಹೀಗೆ ಪೂರೈಕೆಯಾಗುವುದರಲ್ಲಿ ಆಶ್ಚರ್ಯವಿಲ್ಲ. ಆದರೀಗ ಉಡುಪಿಯಂತಹ ಪಟ್ಟಣಗಳಲ್ಲೂ ಇಂತಹ ಸೇವೆ ಅವಶ್ಯಕವೆನಿಸುವಾಗ,ಅದನ್ನು ನೀಡುವುದು ಹೇಗೆ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ.ಅಡುಗೆ ಅನಿಲ ಪೂರೈಸುವ ಕಂಪೆನಿಗಳು ಇಂತಹ ಸೇವೆ ನೀಡಲು ನೆರವಾಗುತ್ತವೆ.ಜಾಡಿಗಳನ್ನು ಇಡಲು ಅಪಾರ್ಟ್‌ಮೆಂಟುಗಳಲ್ಲಿ ಪ್ರತ್ಯೇಕ ಸ್ಥಳ ಇರಬೇಕು.ಹಲವಾರು ಸಿಲಿಂಡರುಗಳನ್ನು ಒಂದೇ ವ್ಯವಸ್ಥೆಯಲ್ಲಿ ಅಳವಡಿಸಿ, ಪೈಪು ಸಂಪರ್ಕವನ್ನು ಪ್ರತಿಮನೆಗೂ ಕೊಡಲಾಗುತ್ತದೆ.ಪ್ರತಿ ಮನೆಯಲ್ಲಿ ಬಳಕೆಯಾಗುವ ಅನಿಲದ ಪ್ರಮಾಣವನ್ನು ಮೀಟರ್ ಬಳಸಿ,ಲೆಕ್ಕ ಹಾಕಿ,ಮಾಸಿಕ ಬಿಲ್ ನೀಡಲಾಗುತ್ತದೆ. ಜಾಡಿಗಳು ಖರ್ಚಾದಂತೆಲ್ಲಾ, ಸೂಚನೆ ಸಿಗುವುದರಿಂದ, ಅವನ್ನು ಬದಲಿಸಲು ಕ್ರಮ ಕೈಗೊಳ್ಳಬೇಕಾಗುತ್ತದೆ.ಈ ಕೆಲಸವನ್ನು ನಿರ್ವಹಿಸಲು ಅಪಾರ್ಟ್‍ಮೆಂಟಿನ ಮನೆಯವರು ಯಾರನ್ನಾದರೂ ನೇಮಿಸಬಹುದು, ಇಲ್ಲವೇ ಈ ಸೇವೆಯನ್ನು ಹೊರಗುತ್ತಿಗೆ ನೀಡಬಹುದು. ಕೇಂದ್ರೀಕೃತ ವ್ಯವಸ್ಥೆಯಾದ್ದರಿಂದ, ಇಲ್ಲಿ ಸುರಕ್ಷಾ ವ್ಯವಸ್ಥೆಗಳನ್ನು ಅಳವಡಿಸುವುದು ಹೆಚ್ಚು ಸುಲಭ ಮತ್ತು ಖರ್ಚೂ ಕಡಿಮೆ.
---------------------------------------------------------
ಭಾರತದ ಮೊದಲ ಗ್ರಾಫಿಕ್ಸ್ ಚಿಪ್
ಸಂಪೂರ್ಣವಾಗಿ ಭಾರತದಲ್ಲೇ ಅಭಿವೃದ್ಧಿಯಾದ ಗ್ರಾಫಿಕ್ಸ್ ಚಿಪ್‌ನ್ನು ಎನ್‌ವಿಡಿಯಾವು ಈಗ ಬಿಡುಗಡೆ ಮಾಡಿದ್ದು,ಇದನ್ನು ಆಪಲ್ ಕಂಪೆನಿಯ ಹೊಸ ಮ್ಯಾಕ್‌ಬುಕ್ ಲ್ಯಾಪ್‌ಟಾಪ್‌ಗಳಲ್ಲಿ ಬಳಸಲಾಗುತ್ತದೆ.ಗ್ರಾಫಿಕ್ ಚಿಪ್ ಸಾಮಾನ್ಯವಾಗಿ ಬಳಕೆಯಾಗುವ ಕಂಪ್ಯೂಟರ್ ಸಂಸ್ಕಾರಕಕ್ಕೆ ನೆರವು ನೀಡಲು ಇರುವ ಚಿಪ್ ಆಗಿದೆ. ವಿಡಿಯೋ,ಸಂಗೀತದಂತಹ ಸಂಕೇತಗಳನ್ನು ಸಂಸ್ಕರಿಸಲು ಈ ಚಿಪ್ ಬೇಕು. ಈ ಬಹುಮಾಧ್ಯಮ ಕೆಲಸಗಳಿಗೆ ಸಾಮಾನ್ಯ ಸಂಸ್ಕಾರಕವನ್ನು ಅವಲಂಬಿಸಿದರೆ, ಅದು ಇತರ ಕೆಲಸಗಳನ್ನು ನಿರ್ವಹಿಸಲು ಅಡ್ದಿಯಾಗುವುದರಿಂದ, ಈ ಕೆಲಸಗಳಿಗೇ ಪ್ರತ್ಯೇಕ ಚಿಪ್ ಬಳಕೆಯಾಗುತ್ತದೆ.ಎನ್‌ವಿಡಿಯಾದ ಎಪ್ಪತ್ತು ಜನರ ತಂಡ ಈ ವಿನ್ಯಾಸ ಕೆಲಸಕ್ಕೆ ದುಡಿದಿದೆ.ಇತರ ಗ್ರಾಫಿಕ್ಸ್ ಚಿಪ್‌ಗಳ ಐದು ಪಟ್ಟು ವೇಗದಲ್ಲಿ ಈ ಹೊಸ ಸಂಸ್ಕಾರಕ ಕೆಲಸ ಮಾಡುತ್ತದೆ. ಅದರೆ ಇದರ ಗಾತ್ರ ಸಾಮಾನ್ಯ ಚಿಪ್‌ಗಳಿಗಿಂತ ಕಮ್ಮಿ.ಇದರಲ್ಲಿ ಹದಿನಾರು ಕೋರ್‌ಗಳು ಇವೆ. ಚಿಪ್ ಬಳಸುವ ವಿದ್ಯುಚ್ಛಕ್ತಿಯೂ ಕಡಿಮೆ. ಹೀಗಾಗಿ ಲ್ಯಾಪ್‌ಟಾಪ್ ಬ್ಯಾಟರಿ ಹೆಚ್ಚು ಹೊತ್ತು ಕೆಲಸ ಮಾಡಲು ಶಕ್ತವಾಗುತ್ತದೆ.
-----------------------------------
ಟಾಟಾ ಸ್ಕೈ:ವೈಯುಕ್ತಿಕ ವಿಡಿಯೋ ರೆಕಾರ್ಡರ್ ಸೇವೆ
ಟಾಟಾ ಸ್ಕೈ ಕಂಪೆನಿಯು ಸದ್ಯ ಡಿಟಿಎಚ್ ಸೇವೆ ಒದಗಿಸುತ್ತಿರುವುದು ಎಲ್ಲರಿಗೂ ಗೊತ್ತು. ಈಗ ಈ ಸೇವೆಯಲ್ಲಿ ವಿಡಿಯೋ ರೆಕಾರ್ಡ್ ಸೇವೆಯನ್ನೂ ಪಡೆಯಬಹುದು. ಸುಮಾರು ಒಂಭತ್ತು ಸಾವಿರ ಖರ್ಚು ಮಾಡಿದರೆ, ನಿಮಗೆ ಸೆಟ್ ಟಾಪ್ ಬಾಕ್ಸ್ ನೀಡಲಾಗುತ್ತದೆ. ಈ ಸಾಧನದಲ್ಲಿ ಹಾರ್ಡ್-ಡಿಸ್ಕ್ ಇದೆ. ಹೀಗಾಗಿ ಕಾರ್ಯಕ್ರಮಗಳನ್ನು ರೆಕಾರ್ಡ್ ಮಾಡಲು ಅವಕಾಶ ಸಿಗುತ್ತದೆ. ಎರಡು ಕಾರ್ಯಕ್ರಮಗಳನ್ನು ಮುದ್ರಿಸಿಡಬಹುದು. ಹಾಗಾಗಿ ಸೀರಿಯಲ್ ತಪ್ಪಿಸಿಕೊಳ್ಳುವ ಭಯ ಬೇಕಿಲ್ಲ. ಮನೆಯಲ್ಲಿ ಯಾರಾದರೂ ವೀಕ್ಷಿಸುತ್ತಿರುವ ಕಾರ್ಯಕ್ರಮವನ್ನೂ ಬೇಕೆಂದರೆ ಮುದ್ರಿಸಿಡಬಹುದು.ವಿಡಿಯೋ ರೆಕಾರ್ಡರ್‌ನ್ನು ಹೋಲುವ ಸೇವೆಯಿದಾದ್ದರಿಂದ, ತಡೆದು ತಡೆದು ವೀಕ್ಷಿಸುವ,ಬೇಡವಾದ್ದನ್ನು ಹಾರಿಸಿ ನೋಡುವ ಸೌಲಭ್ಯ ಸಿಗುತ್ತದೆ.ಸಾಮಾನ್ಯವಾಗಿ ನಲುವತ್ತೈದು ಗಂಟೆ ಟಿವಿ ಕಾರ್ಯಕ್ರಮಗಳನ್ನು ಮುದ್ರಿಸಲು ಅಗತ್ಯವಾದ ನೂರಾರುವತ್ತು ಗಿಗಾಬೈಟು ಸ್ಮರಣಸಾಮರ್ಥ್ಯ ಇಲ್ಲಿ ಲಭ್ಯ.
*ಅಶೋಕ್‌ಕುಮಾರ್ ಎ

Monday, October 13, 2008

ಸೈಕಲ್ ರಿಕ್ಷಾಗೆ ಸೌರಶಕ್ತಿ

ಸೈಕಲ್ ರಿಕ್ಷಾಗಳು ನಮ್ಮ ದೇಶದ ರಾಜಧಾನಿಯಲ್ಲೂ ಇವೆ.ಪರಿಸರ ಮಾಲಿನ್ಯ ಉಂಟು ಮಾಡದ ಈ ರಿಕ್ಷಾಗಳು,ಅಗ್ಗದ ಸೇವೆಯನ್ನು ನೀಡಿ ಜನಪ್ರಿಯತೆ ಉಳಿಸಿಕೊಂಡಿವೆ. ಸಾಮಾನ್ಯವಾಗಿ ಇವನ್ನು ಸೈಕಲ್‌ವಾಲಾ ಸೈಕಲ್ ತುಳಿದೇ ನಡೆಸುತ್ತಾನೆ. ಆದರೆ ಏರು ರಸ್ತೆಯಲ್ಲಿ, ರಣ ಬಿಸಿಲಿನಲ್ಲಿ ಸೈಕಲ್ ತುಳಿಯುವುದು ಪ್ರಯಾಸಕರ. ಅಂತಹ ಸಂದರ್ಭದಲ್ಲಿ ಬ್ಯಾಟರಿ ಚಾಲಿತ ಮೋಟಾರನ್ನು ಚಾಲೂ ಮಾಡಿ ಸೈಕಲ್‌ವಾಲಾ ತನ್ನ ಕಷ್ಟವನ್ನು ಕಡಿಮೆ ಮಾಡಬಹುದು.ಗಂಟೆಗೆ ಹದಿನೈದು ಕಿಲೋಮೀಟರ್ ವೇಗದಲ್ಲಿ ಚಲಾಯಿಸಲು.ಒಂದು ಐವತ್ತು ಕಿಲೋಮೀಟರ್ ಓಡಿಸಲು ಬ್ಯಾಟರಿ ಅವಕಾಶ ನೀಡುತ್ತದೆ.ಬ್ಯಾಟರಿ ಚಾರ್ಜ್ ಮಾಡಲು ಸೌರಶಕ್ತಿಯನ್ನು ಬಳಸಲು ತಂತ್ರಜ್ಞಾನವನ್ನು CMERI ಸಂಶೋಧನಾ ಸಂಸ್ಥೆ ಒದಗಿಸಿದೆ. ಸದ್ಯ ಇನ್ನೂರು ಕೇಜಿ ತೂಗುವ ಸೈಕಲ್ ರಿಕ್ಷಾವನ್ನು ಹಗುರಗೊಳಿಸಿ, ಬ್ಯಾಟರಿಯಿಂದ ಅಧಿಕ ಕೆಲಸ ತೆಗೆಯುವ ತಂತ್ರಗಳ ಬಗ್ಗೆ ಸಂಶೋಧಕರು ಗಮನ ಹರಿಸಿದ್ದಾರೆ.
------------------------------------------------------
ಪ್ರಶ್ನೆಗೆ ಉತ್ತರ ಶೋಧಿಸಲು ಸೂಕ್ತ ಜಾಲತಾಣ
ಗೂಗಲ್ ಅಂತರ್ಜಾಲದ ಶೋಧ ಕಾರ್ಯಕ್ಕೆ ಇನ್ನೊಂದು ಹೆಸರಾಗಿಬಿಟ್ಟಿದೆ.ಹೆಚ್ಚು ಕಮ್ಮಿ ಶೇಕಡಾ ಎಪ್ಪತ್ತು ಬಳಕೆದಾರರು ಗೂಗಲ್ ಬಳಸಿ ಅಂತರ್ಜಾಲದ ಶೋಧ ಕೈಗೊಳ್ಳುವುದು ಕಂಡುಬಂದಿದೆ.ಹಿಂದೆ ಈ ಸೇವೆ ಒದಗಿಸಿ ಜನಪ್ರಿಯವಾಗಿದ್ದ ತಾಣ ಆಸ್ಕ್.ಕಾಮ್ ತನ್ನ ಜನಪ್ರಿಯತೆಯಲ್ಲಿ ರಸಾತಳಕ್ಕಿಳಿದಿದೆ.ಈಗದು ತನ್ನ ಮುಖಪುಟವನ್ನು ಬದಲಾಯಿಸಿಕೊಂಡು ತನ್ನ ಇಮೇಜ್ ಬದಲಿಸಿ, ಶೋಧ ಕಾರ್ಯದಲ್ಲಿ ಹೊಸ ನೆಲೆಯನ್ನು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಆರ್‍ಅಂಭಿಸಿದೆ. ಪ್ರಶ್ನೆಗಳಿಗೆ ಉತ್ತರ ಅರಸುವವರಿಗೆ ಮೊದಲಿನಿಂದಲೂ www.ask.com ಇಷ್ಟವಾಗಿತ್ತು. ಆ ಅಂಶವನ್ನು ಬಳಸಿ ಜನಪ್ರಿಯವಾಗಲು ತಾಣ ಬಯಸಿದೆ. ಪ್ರಶ್ನೆಗಳಿಗೆ ಉತ್ತರ ಬೇಕಾದರೆ, ಅಸ್ಕ್.ಕಾಂ ತಾಣವೇ ಸೂಕ್ತ ಎಂದು ಜನಮನದಲ್ಲಿ ನೆಲೆನಿಲ್ಲಲು ತಾಣವು ಉದ್ದೇಶಿಸಿದೆ.ಶೋಧ ತಂತ್ರಜ್ಞಾನವನ್ನೂ ಬಳಸಿ, ಕಡಿಮೆ ಸಮಯದಲ್ಲಿ ಶೋಧ ಫಲಿತಾಂಶ ಒದಗಿಸಲು ಅದಕ್ಕೆ ಸಾಧ್ಯವಾಗಿದೆ.
-----------------------------------------------------
ಚೀನಾ:ಬಾಹ್ಯಾಕಾಶ ನಡಿಗೆಯಿಂದ ಬಾಹ್ಯಾಕಾಶ ಪ್ರಯೋಗಾಲಯದತ್ತ
ಚೀನಾವಿ ಯಶಸ್ವಿಯಾಗಿ ತನ್ನ ಬಾಹ್ಯಾಕಾಶ ಯೋಜನೆಯಲ್ಲಿ ಭಾರೀ ಮುನ್ನಡೆ ಕಂಡಿದೆ. ಮಾನವ ಸಹಿತ ಯಾನ ಯೋಜನೆಯ ಪ್ರಕಾರ, ಬಾಹ್ಯಾಕಾಶಕ್ಕೆ ಯಾನಿಗಳನ್ನು ಕಳುಹಿಸಿದ್ದೇ ಅಲ್ಲದೆ ಅವರು ಬಾಹ್ಯಾಕಾಶದಲ್ಲಿ ನಡಿಗೆಯನ್ನೂ ಯಶಸ್ವಿಯಾಗಿ ಕೈಗೊಂಡರು.ಈ ಇಪ್ಪತ್ತು ನಿಮಿಷದ ನಡಿಗೆಯ ವೇಳೆ ಗಗನಯಾನಿ ಜಾಯ್ ಜಿಗಾಂಗ್ ಅವರು ಚೀನಾ ನಿರ್ಮಿತ ಉಡುಗೆಯನ್ನೇ ಬಳಸಿದ್ದರು. ಒಂದು ವೇಳೆ ಜಿಯಾನ್ ಅವರಿಗೆ ಸಮಸ್ಯೆಯಾದರೆ ರಕ್ಷಿಸಲು ರಶ್ಯನ್ ನಿರ್ಮಿತ ಉಡುಗೆಯನ್ನು ತೊಟ್ಟ ಸಹ ಗಗನಯಾನಿ ಸಿದ್ಧವಾಗಿದ್ದರು. ಆದರೆ ಅಂತಹ ಪ್ರಸಂಗವೇನೂ ಬರಲಿಲ್ಲ.ಇನ್ನು ಚೀನಾವು ಬಾಹ್ಯಾಕಾಶದಲ್ಲಿ ಪ್ರಯೋಗಾಲಯವನ್ನು ಸ್ಥಾಪಿಸುವತ್ತ ತನ್ನ ಗುರಿಯನ್ನಿಟ್ಟಿದೆ.ಇನ್ನೆರಡು ವರ್ಷಗಳಲ್ಲಿ ಈ ಕನಸೂ ನನಸಾಗುವ ಸೂಚನೆಯಿದೆ. ಮೊದಲೆರಡು ಮಾನವ ಯಾನಗಳು ಅಗತ್ಯ ವಸ್ತುಗಳನ್ನು ಗಗನಕ್ಕೆ ಕೊಂಡು ಹೋಗಿ,ಅಲ್ಲಿ ಜತೆಯಾಗಿ ಭೂಮಿಗೆ ಪ್ರದಕ್ಷಿಣೆ ಬರಲು ಆರಂಭಿಸುತ್ತವೆ. ಮೂರನೇಯ ಯಾನ ಮಾನವ ಸಹಿತವಾಗಿದ್ದು,ಬಾಹ್ಯಾಕಾಶ ಪ್ರಯೋಗಶಾಲೆಯಲ್ಲಿ ಉಳಿದು ಪ್ರಯೋಗ ನಡೆಸುವ ಯಾನಿಗಳನ್ನೂ ಕರೆದೊಯ್ಯುತ್ತದೆ.ಇನ್ನೊಂದೆಡೆ ಚೀನಾವು ಚಂದ್ರನ ಮೇಲೆ ತನ್ನ ನೆಲೆ ಸ್ಥಾಪಿಸುವ ಆಸಕ್ತಿಯನ್ನು ಹೊಂದಿದೆ. ಚಂದ್ರನತ್ತ ಮಾನವ ಸಹಿತ ಯಾನಕ್ಕೆ ಅದು ಸಿದ್ಧತೆ ನಡೆಸಿದೆ.ಅಮೆರಿಕಾದಿಂದ ಮೊದಲೇ ಚಂದ್ರನ ಮೇಲೆ ಮಾನವ ಸಹಿತವಾದ ನೆಲೆಯನ್ನು ಸ್ಥಾಪಿಸುವ ಮಹತ್ತ್ವಾಕಾಂಕ್ಷೆ ಚೀನಾದ್ದು.

ಇತ್ತ ಭಾರತವೂ ಚಂದ್ರಯಾನ್ ಉಡ್ಡಯನಕ್ಕೆ ಸಿದ್ಧತೆ ನಡೆಸಿದೆ. ಈ ತಿಂಗಳ ಕೊನೆಯ ವಾರದಲ್ಲಿ ಮಾನವ ರಹಿತ ಯಾನ ನಡೆಸಿ, ಚಂದ್ರನ ಮೇಲೆ ರಾಕೆಟ್ ಇಳಿಸಿ, ಪ್ರಯೋಗಗಳನ್ನು ಕೈಗೊಳ್ಳುವುದು ಇಸ್ರೋ ಗುರಿ.ಪಿಎಸೆಲ್ವಿ ಉಡಾವಣಾ ರಾಕೆಟ್‌ನಲ್ಲಿ ಹನ್ನೊಂದು ಪೇಲೋಡುಗಳನ್ನು ಒಯ್ಯಲಿದೆ. ಚಂದ್ರಯಾನದಲ್ಲಿ ರಾಕೆಟು ಚಂದ್ರನತ್ತ ಸಾಗಿ,ಚಂದ್ರನಿಂದ ನೂರು ಕಿಲೋಮೀಟರ್ ಎತ್ತರದಲ್ಲಿ ಸುತ್ತಿ,ಮಾಹಿತಿ ಸಂಗ್ರಹಿಸುವ ಕೆಲಸವನ್ನು ಇಸ್ರೋದ ವಾಹನ ಮಾಡಲಿದೆ. ಅಲ್ಲದೆ ಚಂದ್ರನ ಮೇಲ್ಮೈಯಲ್ಲಿ ಇಳಿಯಲು ಅವಶ್ಯಕವಾದ ತಂತ್ರಜ್ಞಾನ ಅಭಿವೃದ್ಧಿ ಪಡಿಸಲು ನೆರವಾಗುವ ಪ್ರಯೋಗವನ್ನೂ ಈ ಯಾನದ ಸಮಯ ಕೈಗೊಳ್ಳಲಾಗುವುದು.
------------------------------------------------
ಟ್ರಕ್ ಚಾಲನೆಯಲ್ಲಿಲ್ಲದ ವೇಳೆಯೂ ತಂಪಾಗಿಡುವ ತಂತ್ರಜ್ಞಾನ
ಟ್ರಕ್ ಕ್ಯಾಬಿನ್ ಬಿಸಿಯೇರುವಾಗ ತಂಪಾಗಿಡಲು ಏಸಿ ಚಾಲೂ ಇಡುವುದು ವಿದೇಶಗಳಲ್ಲಿ ಸಾಮಾನ್ಯ. ಟ್ರಕ್ ಓಡುತ್ತಿರುವಾಗ ಇದು ಸಮಸ್ಯೆಯಲ್ಲ. ಆದರೆ ಟ್ರಕ್ ತಂಗಿದಾಗ ಏಸಿ ಚಾಲೂ ಇಡಬೇಕಿದ್ದರೆ,ಇಂಜಿನ್ ಚಾಲೂ ಇಡಬೇಕು. ಇದು ಡಿಸೇಲ್ ಖರ್ಚು ಮತ್ತು ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತದೆ. ಇದಕ್ಕೆ ಪರಿಹಾರವೇನು?ವೆಬ್ಸ್ಟೋ ಎನ್ನುವ ಅಮೆರಿಕನ್ ಕಂಪೆನಿಯೊಂದು ಇದಕ್ಕೆ ಬ್ಲೂಕೂಲ್ ಎಂಬ ಹೊಸ ತಂತ್ರಜ್ಞಾನವನ್ನು ಸಂಶೋಧಿಸಿದೆ. ಇದರಲ್ಲಿ ರೆಫ್ರಿಜರೇಂಟ್ ಮತ್ತು ನೀರು ಹಾಗೂ ಗ್ಲೈಕಾಲ್ ಮಿಶ್ರಣವನ್ನು ಬಳಸಲಾಗುತ್ತದೆ.ಇದಕ್ಕೆ ಯಾವುದೇ ಶಕ್ತಿಯ ಬಳಕೆ ಅಗದು. ಮಾಲಿನ್ಯದ ತೊಂದರೆಯೂ ಇಲ್ಲ.ಇದು ಕೆಲಸ ಮಾಡಲು ಟ್ರಕ್‌ನ ಫ್ಯಾನ ಚಾಲೂ ಇಡಬೇಕಾಗುತ್ತದೆ. ಇದಕ್ಕೆ ಬ್ಯಾಟರಿ ಶಕ್ತಿ ಬಳಸಿದರೂ ಇಂಜಿನ್ ಚಾಲೂ ಇಡಬೇಕಿಲ್ಲ.
ಕೋಳಿ ಹಿಕ್ಕೆಯಿಂದಲೇ ನಡೆಯುವ ವಿದ್ಯುತ್ ಸ್ಥಾವರ
ಜೈವಿಕ ವಸ್ತುವನ್ನು ಬಳಸಿ ನಡೆಯುವ ವಿಶ್ವದ ಅತಿ ದೊಡ್ಡ ಬಯೋಮಾಸ್ ವಿದ್ಯುತ್ ಸ್ಥಾವರ ನೆದರ್ಲ್ಯಾಂಡಿನಲ್ಲಿ ಸ್ಥಾಪನೆಯಾಗಿದೆ. ಮೂವತ್ತಾರು ಮೆಗಾವ್ಯಾಟ್ ಸಾಮರ್ಥ್ಯದ ಈ ಸ್ಥಾವರ ತೊಂಭತ್ತು ಸಾವಿರ ಮನೆಗಳಿಗೆ ಅಗತ್ಯವಾದ ವಿದ್ಯುತ್ ಉತ್ಪಾದಿಸುತ್ತದೆ. ಅಂದರೆ ವರ್ಷಕ್ಕೆ ಇನೂರೆಪ್ಪತ್ತು ದಶಲಕ್ಷ ಯುನಿಟ್ ವಿದ್ಯುತ್ ಇಲ್ಲಿ ಉತ್ಪಾದನೆಯಾಗುತ್ತದೆ.ವರ್ಷವೊಂದಕ್ಕೆ ಈ ಸ್ಥಾವರ ಬಳಸುವ ಕೋಳಿ ಹಿಕ್ಕೆ ನಾಲ್ಕುನೂರನಲುವತ್ತು ಸಾವಿರ ಟನ್. ಆ ದೇಶದಲ್ಲಿ ಉತ್ಪಾದನೆಯಾಗುವ ಕೋಳಿ ಹಿಕ್ಕೆಯ ಮೂರನೇ ಒಂದು ಭಾಗ ಇಲ್ಲಿಯೇ ಬಳಕೆಯಾಗುತ್ತದೆ.

---------------------------------------------------
*ಅಶೋಕ್‌ಕುಮಾರ್ ಎ

Monday, October 06, 2008

ಮುದ್ರಿಸಿದ್ದು ಅಳಿಸಿಹೋಗುವ ಕಾಗದ




ಕ್ಸೆರಾಕ್ಸ್ ಕಂಪೆನಿ ಫೊಟೋಸ್ಟಾಟ್ ಯಂತ್ರಗಳನ್ನು ತಯಾರಿಸುವಲ್ಲಿ ಹೆಸರು ಮಾಡಿದೆ.ಈಗದು ಫೊಟೋಸ್ಟಾಟ್ ಯಂತ್ರದಲ್ಲಿ ಬಳಸುವ ಕಾಗದವನ್ನೂ ತಯಾರು ಮಾಡಿದೆ. ಆ ಕಾಗದದ ವಿಶೇಷತೆಯೆಂದರೆ, ಅದು ತಾತ್ಕಾಲಿಕ ಕಾಗದಪತ್ರಗಳನ್ನು ಮುದ್ರಿಸಲು ತಯಾರಿಸಲಾಗಿದೆ. ಇದರಲ್ಲಿ ಮುದ್ರಿಸಿದ್ದು ಕೆಲವು ತಾಸುಗಳ ನಂತರ ನೋಡಿದರೆ ಅಳಿಸಿ ಹೋಗಿರುತ್ತದೆ.ಇದಕ್ಕೆ ಬೇಕಾದ ಸಮಯ ಹದಿನಾರು ಗಂಟೆಯಾಗಿರಬಹುದು. ಈ ಸಮಯದ ಅವಧಿಯನ್ನು ಹೆಚ್ಚು ಕಡಿಮೆ ಮಾಡಬಹುದು! ಕಾಗದವನ್ನು ಮತ್ತೆ ಮುದ್ರಣಕ್ಕೆ ಬಳಸಲು ಅಡ್ಡಿಯಿಲ್ಲ.ಈ ಕಾಗದದ ಮರುಬಳಕೆಯಿಂದ ಪರಿಸರಕ್ಕೆ ಹಾನಿಯನ್ನು ಕಡಿಮೆ ಮಾಡಲು ಸಾಧ್ಯವಷ್ಟೇ? ಅರ್ಧಕ್ಕರ್ಧ ಕಚೇರಿ ಕಾಗದ ಪತ್ರಗಳು ಒಮ್ಮೆ ನೋಡಲು ಮಾತ್ರಾ ಬೇಕಾಗುತ್ತದೆ ಎಂದು ಸಂಶೋಧನೆಗಳು ಹೇಳುತ್ತವೆ.ಅಂದ ಹಾಗೆ ಏಟಿಎಂ ಯಂತ್ರದಿಂದ ಮುದ್ರಿಸಿ ತೆಗೆದ ಬ್ಯಾಂಕ್ ಖಾತೆ ಅಥವ ವ್ಯವಹಾರ ವಿವರಗಳು ಒಂದೆರಡು ತಿಂಗಳ ನಂತರ ಮಾಯವಾಗಿರುವುದನ್ನು ಗಮನಿಸಿದ್ದೀರ್‍ಆ?
--------------------------------------------
ಮೊಬೈಲ್ ಫೋನ್ ಬ್ಯಾಟರಿ: ಬಳಕೆಯಲ್ಲಿ ಜಿಪುಣತನ
ಮೊಬೈಲ್ ಫೋನ್‌ಗಳಲ್ಲಿ ಈಗ ಸಾಮಾನ್ಯವಾಗಿ ಲಿಥಿಯಮ್ ಅಯಾನು ಬ್ಯಾಟರಿಗಳ ಬಳಕೆಯಾಗುತ್ತವೆ. ಸದ್ಯ ಬ್ಯಾಟರಿಗಳನ್ನು ತಯಾರಿಸಲು ಪರ್ಯಾಯ ಧಾತುಗಳ್ಯಾವುವೂ ಸಿಕ್ಕಿಲ್ಲ. ಹಾಗೆಂದು ಮೊಬೈಲ್ ಫೋನ್‌ಗಳು ಸ್ಮಾರ್ಟ್ ಫೋನ್‌ಗಳಾಗುತ್ತಿವೆ. ಅವುಗಳಲ್ಲಿ ಅಂತರ್ಜಾಲ ಬಳಕೆಗೆ ಅವಕಾಶ ಸಿಕ್ಕಿದೆ. ಕ್ಯಾಮರಾ, ರೇಡಿಯೋ, ಸಂಗೀತ ನುಡಿಸುವ ಆಯ್ಕೆ ಇತ್ಯಾದಿಗಳು ಮೊಬೈಲಿನಲ್ಲಿ ಸಿಗುತ್ತಿವೆ. ಹಾಗಾದರೆ ಅದೇ ಹಳೆಯ ತಂತ್ರಜ್ಞಾನದ ಬ್ಯಾಟರಿಗಳಿಂದ ಅಧಿಕ ದಕ್ಷತೆ ನಿರೀಕ್ಷಿಸುವುದು ಹೇಗೆ? ಒಂದೇ ಪರಿಹಾರ ಎಂದರೆ ಮೊಬೈಲ್ ಫೋನಿನ ತೆರೆಯು ಬಳಸುವ ಶಕ್ತಿಯಲ್ಲಿ ಕಡಿತ ಮಾಡುವುದು. ಬಳಸದಾಗ ಮೊಬೈಲ್ ಸಾಧನದಲ್ಲಿ ಲಭ್ಯವಿರುವ ವಿವಿಧ ಸೌಲಭ್ಯಗಳನ್ನು ಚಾಲೂ ಸ್ಥಿತಿಯಲ್ಲಿರದಂತೆ ಮಾಡುವುದು.ರೇಡಿಯೊ,ಕ್ಯಾಮರಾ ,ಪ್ಲೇಯರ್ ಇವುಗಳೆಲ್ಲಾ ಬೇಕಾದಾಗ ಮಾತ್ರಾ ಚಾಲೂ ಆಗಿ,ಉಳಿದ ಹೊತ್ತಿನಲ್ಲಿ ತಮ್ಮಷ್ಟಕ್ಕೇ ಬಂದಾಗಿ ಬಿಡುವಂತೆ ಈಗಿನ ಸಾಧನಗಳಲ್ಲಿ ಅಳವಡಿಸಲಾಗಿರುತ್ತದೆ.ಮಿರಾಸೋಲ್ ಎನ್ನುವ ಹೊಸ ತಂತ್ರಜ್ಞಾನದ ತೆರೆಗಳು ಬಳಸುವ ಶಕ್ತಿ ಬಹಳ ಕಡಿಮೆ. ಅಲ್ಲದೆ ಬ್ಲೂಟೂತ್ ತಂತ್ರಜ್ಞಾನವೂ ಕಡಿಮೆ ಶಕ್ತಿ ಬಳಸಿ,ನಿಸ್ತಂತು ಸಂವಹನವನ್ನು ಮೊಬೈಲ್ ಸಾಧನಕ್ಕೆ ಒದಗಿಸುತ್ತದೆ.
-------------------------------------------------
ಗೂಗಲ್ ಗೇರ್ಸ್
ಗೂಗಲ್ ಪದಸಂಸ್ಕರಣ, ಸ್ಪ್ರೆಡ್‌ಶೀಟ್ ಮುಂತಾದ ತಂತ್ರಾಂಶಗಳನ್ನು ಅಂತರ್ಜಾಲ ಮೂಲಕ ಉಚಿತವಾಗಿಯೇ ಒದಗಿಸಿ, ಮೈಕ್ರೋಸಾಫ್ಟ್ ಕಂಪೆನಿಯ ಆಫೀಸ್ ತಂತ್ರಾಂಶಕ್ಕೆ ಸ್ಪರ್ಧೆ ನೀಡಲು ಪ್ರಯತ್ನಿಸುತ್ತಿರುವುದು ನಿಮಗೆ ಗೊತ್ತೇ ಇದೆ. ಆದರೆ ಅಂತರ್ಜಾಲ ಮೂಲಕ ತಂತ್ರಾಂಶ ಸೇವೆ ಒದಗಿಸುವಾಗಿನ ಸಮಸ್ಯೆಯೆಂದರೆ,ಅಂತರ್ಜಾಲಕ್ಕೆ ಸಂಪರ್ಕ ಇಲ್ಲದ ವೇಳೆ ಪದಸಂಸ್ಕರಣ ಇತ್ಯಾದಿ ಕೆಲಸಗಳನ್ನು ಮಾಡಲಸಾಧ್ಯ. ಇದಕ್ಕೂ ಗೂಗಲ್ ಪರಿಹಾರ ಒದಗಿಸಿದೆ. ಗೂಗಲ್ ಕ್ರೋಮ್ ಬ್ರೌಸರ್ ಗೂಗಲ್‌ನ ಹೊಸ ಬ್ರೌಸರ್ ತಂತ್ರಾಂಶ. ಇದರಲ್ಲಿ ಗೂಗಲಿನ ಅಂತರ್ಜಾಲ ಆಧಾರಿತ ತಂತ್ರಾಂಶ ಸೇವೆಯ ತಂತ್ರಾಂಶ ಲೋಡ್ ಆಗಿಯೇ ಬಂದಿರುತ್ತದೆ. ಹಾಗಾಗಿ ಅಂತರ್ಜಾಲ ಸಂಪರ್ಕ ಇಲ್ಲದಾಗಲೂ ತಂತ್ರಾಂಶ ಬ್ರೌಸರಿನಲ್ಲಿ ನಿಮ್ಮ ಉಪಯೋಗಕ್ಕೆ ಸಿಗುತ್ತದೆ. ಮಾತ್ರವಲ್ಲ ಇಂತಹ ಸೇವೆ ಒದಗಿಸುವಾಗ, ಸಾಮಾನ್ಯವಾಗಿ ಬಳಕೆದಾರ ಸೃಷ್ಟಿಸಿದ ಕಡತಗಳನ್ನು ಅಂತರ್ಜಾಲದ ಸರ್ವರ್‌ಗಳಲ್ಲಿಡುವುದು ಸಾಮಾನ್ಯ. ಗೂಗಲ್ ಇದರ ಬದಲು ಬಳಕೆದಾರನ ಕಂಪ್ಯೂಟರಿನಲ್ಲಿಯೇ ಕಡತಗಳನ್ನು ಕಾಪಿಡಲು ವ್ಯವಸ್ಥೆ ಮಾಡಿ, ಕಡತಗಳು ಬಳಕೆದರನಿಗೆ ಸದಾ ಲಭ್ಯವಾಗುವಂತೆ ಮಾಡಿವೆ.ಈ ವ್ಯವಸ್ಥೆಯನ್ನೇ ಗೂಗಲ್ ಗೇರ್ಸ್ ಎಂಬ ಹೆಸರಿನಿಂದ ಕರೆಯುತ್ತಾರೆ.
-----------------------------------------------------------
ನೋಕಿಯದಿಂದ ಐಫೋನ್‌ನಂತಹ ಫೋನ್
ನೊಕಿಯಾ ಕಂಪೆನಿಯು ನೊಕಿಯ5800 ಮೊಬೈಲ್ ಸ್ಮಾರ್ಟ್ ಪೋನನ್ನು ಬಿಡುಗಡೆ ಮಾಡಿದ್ದು. ಇದು ಐಪೋನಿಗಿಂತ ಹಲವು ರೀತಿಯಲ್ಲಿ ಹೆಚ್ಚು ಅನುಕೂಲತೆಗಳನ್ನು ಹೊಂದಿದೆ.ನೋಕಿಯ ಪೋನಿನಲ್ಲಿ ಕ್ಯಾಮರಾದ ಜತೆ ವಿಡಿಯೋ ಚಿತ್ರವನ್ನೂ ತೆಗೆಯಲು ಅವಕಾಶವಿದ್ದು,ವಿಡಿಯೋ ಕಾನ್ಫರೆನ್ಸ್ ನಡೆಸಲು ಅವಕಾಶ ನೀಡುತ್ತದೆ.ಐಫೋನಿನಲ್ಲಿದು ಸಾಧ್ಯವಿಲ್ಲ. ಬ್ಯಾಟರಿಯನ್ನು ಬದಲಿಸುವ ಸೌಕರ್ಯ ಐಫೋನಿನಲ್ಲಿಲ್ಲ, ಅದರೆ ನೋಕಿಯ ಇದಕ್ಕೆ ಅವಕಾಶ ಕಲ್ಪಿಸಿದೆ.ಇನ್ನು ಇದರಲ್ಲಿ ಕೈಬರಹದ ಮೂಲಕ ಸಂದೇಶ ಬರೆಯಬಹುದು,ಇಲ್ಲವೇ ಸ್ಟೈಲಸ್ ಕಡ್ಡಿಯಿಂದ ಟೈಪಿಸಬಹುದಾದ ಸ್ಪರ್ಶ ಸಂವೇದಿ ಕೀಲಿ ಮಣೆಯು ನೋಕಿಯದ ಹ್ಯಾಂಡ್‌ಸೆಟ್‍ನಲ್ಲಿದೆ.ಸಾಮಾನ್ಯ ತೆರನ ಕೀಲಿ ಮಣೆಯೂ ಇದರಲ್ಲಿದೆ.ಆದರೆ ಇಂತಹ ಸೌಕರ್ಯ ಐಫೋನಿನಲ್ಲಿಲ್ಲ.ಸಮೂಹಕ್ಕೆ ಸಂದೇಶವನ್ನು ರವಾನಿಸುವ ಸೌಲಭ್ಯವನ್ನು ಐಫೋನಿನಲ್ಲಿ ನೀಡಲಾಗಿಲ್ಲ, ಆದರೆ ನೋಕಿಯ ಇಂತಹ ಅವಕಾಶವನ್ನು ಗ್ರಾಹಕರಿಗೆ ಒದಗಿಸಿದೆ.ನೋಕಿಯ ಪೋನಿನಲ್ಲಿ ಖರೀದಿಸಿದ ವರ್ಷ ಹಾಡುಗಳನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳುವ ಅವಕಾಶವನ್ನು ಗ್ರಾಹಕರಿಗೆ ನೀಡಲಾಗಿದೆ.ಐಪೋನ್ ಗ್ರಾಹಕರು ಈ ಸೌಲಭ್ಯವಂಚಿತರು.ನೋಕಿಯದಲ್ಲಿ ಲಭ್ಯವಿರುವ ಸ್ಮರಣಕೋಶ ಸಾಮರ್ಥ್ಯವನ್ನು ಬಾಹ್ಯ ಸಾಧನವನ್ನು ಸೇರಿಸಿಕೊಂಡು ಹೆಚ್ಚಿಸಲು ಅವಕಾಶವಿದೆ.
--------------------------------------------------
ವಿದ್ಯುಚ್ಛಕ್ತಿ ದರ: ಒಂದೊಂದು ಹೊತ್ತು ಒಂದೊಂದು
ಗೂಗಲ್ ಕಂಪೆನಿಯು ಶಕ್ತಿಯ ಉತ್ಪಾದನೆ ಮತ್ತು ಬಳಕೆಯಲ್ಲಿ ಹೊಸ ತಂತ್ರಜ್ಞಾನಗಳನ್ನು ಬಳಸಿ ಇನ್ನು ಇಪ್ಪತ್ತು ವರ್ಷಗಳಲ್ಲಿ ಸುಮಾರು ಐದು ಟ್ರಿಲಿಯನ್ ಡಾಲರುಗಳ ಹೂಡಿಕೆಯನ್ನು ಯೋಜಿಸಿದೆ. ಗಾಳಿ,ಸೂರ್ಯ ಮತ್ತು ಭೂಮಿಯೊಳಗಿನ ಶಾಖದಿಂದ ವಿದ್ಯುತ್ ಉತ್ಪಾದಿಸಲು ಹೆಚ್ಚಿನ ಆದ್ಯತೆ ನೀಡುವುದು ಕಂಪೆನಿಯ ಗುರಿಯಾಗಲಿದೆ. ಅಲ್ಲದೆ ಬೇಡಿಕೆಯನ್ನು ಆಧಾರವಾಗಿರಿಸಿಕೊಂಡು, ವಿದ್ಯುತ್‌ನ ಬೆಲೆ ನಿಗದಿ ಮಾಡುವ ಸ್ಮಾರ್ಟ್ ಮೀಟರುಗಳನ್ನು ತಯಾರಿಸಲೂ ಗೂಗಲ್ ಬಯಸಿದೆ. ಬೆಳಗ್ಗಿನ ಹೊತ್ತು ಎಲ್ಲೆಡೆ ವಿದ್ಯುತ್ತಿಗೆ ಬೇಡಿಕೆಯಿದ್ದಾಗ ಪ್ರತಿ ಯುನಿಟಿಗೆ ಹೆಚ್ಚಿನ ದರವಿದ್ದರೆ,ಮಧ್ಯಾಹ್ನ ಬೇಡಿಕೆ ಇಳಿದರೆ, ಯುನಿಟಿನ ಬೆಲೆಯೂ ಇಳಿಯಲಿದೆ.
*ಅಶೋಕ್‌ಕುಮಾರ್ ಎ
 
googledc7e93ba1a7703ae.html