Tuesday, December 30, 2008

2008ರ ತಂತ್ರಜ್ಞಾನದ ವಿನೂತನ ಆವಿಷ್ಕಾರಗಳು

*ಆಪಲ್ ಸ್ಟೋರ್‍ಸ್
ಮೊಬೈಲ್ ಸಾಧನಗಳು ಕಂಪ್ಯೂಟರುಗಳಂತೆ ಬಳಕೆಯಾಗುತ್ತಿವೆ. ಇವುಗಳಲ್ಲಿ ಬಳಸಲು ವಿವಿಧ ಸೌಲಭ್ಯವನ್ನು ನೀಡುವ ತಂತ್ರಾಂಶಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ.ಇವನ್ನು ಬಳಕೆದಾರರಿಗೆ ಮುಟ್ಟಿಸುವುದೇ ಸಮಸ್ಯೆಯಾಗುತ್ತಿತ್ತು.ಆಪಲ್ ಸ್ಟೋರ್ಸ್ ಎನ್ನುವ ಆನ್‌ಲೈನ್ ತಾಣದ ಮೂಲಕ ಈ ತಂತ್ರಾಂಶಗಳನ್ನು ವಿತರಿಸುವ ವ್ಯವಸ್ಥೆ ಜಾರಿಗೆ ಬಂದ ಬಳಿಕ, ಈ ಸಮಸ್ಯೆಗೆ ಪರಿಹಾರ ಲಭಿಸಿದೆ. ಹೊಸ ಹೊಸ ತಂತ್ರಾಂಶಗಳ ಅಭಿವೃದ್ಧಿಯಾಗಲು ಇದು ಹೊಸ ಹುರುಪು ನೀಡಿದೆ.
---------------------------------------------------
ಆಂಡ್ರಾಯ್ಡ್ ಫೋನ್‌ಗಳು
ಗೂಗಲ್ ಕಂಪೆನಿಯು ತನ್ನ ಮೊಬೈಲ್ ಪೋನನ್ನು ಟಿ-ಮೊಬೈಲಿನ ಮೂಲಕ ಬಿಡುಗಡೆ ಮಾಡಿತು. ಈ ಹ್ಯಾಂಡ್ ಸೆಟ್ ಬಣ್ಣ, ಸ್ಪರ್ಶ ಸಂವೇದಿ ಗುಣದಲ್ಲಿ ಚುರುಕುತನದ ಕೊರತೆ ಮತ್ತು ಬ್ಯಾಟರಿಯ ಕಡಿಮೆ ಬಾಳಿಕೆ ಇಂತಹ ಕೊರತೆಗಳ ಕಾರಣದಿಂದ ಐಪೋನಿನ ಮಟ್ಟದ ಗ್ರಾಹಕ ಪ್ರತಿಕ್ರಿಯೆ ಪಡೆಯಲು ವಿಫಲವಾಗಿದೆ. ಕಳೆದ ಮೂರು ತಿಂಗಳುಗಳ ಅವಧಿಯಲ್ಲಿ ಒಂದೂವರೆ ದಶಲಕ್ಷ ಹ್ಯಾಂಡ್‌ಸೆಟ್‌ಗಳು ಮಾರಾಟವಾಗಿವೆ. ಐಫೋನ್ ಆದರೂ ಇದುವರೆಗೆ ಮೂರು ದಶಲಕ್ಷ ಸೆಟ್‌ಗಳ ಮಾರಾಟವಾಗಿ ದಾಖಲೆ ನಿರ್ಮಿಸಿದೆ.ಆದರೆ ಆಂಡ್ರಾಯ್ಡ್ ಮೊಬೈಲ್ ಕಾರ್ಯನಿರ್ವಹಣಾ ವ್ಯವಸ್ಥೆ ಮಾತ್ರಾ ಬಹು ಉತ್ಸಾಹದ ಸ್ವಾಗತ ಪಡೆದಿದೆ. ಮೊಟೊರೊಲಾ,ಸೊನಿ ಎರಿಕ್ಸನ್ ಅಂತಹ ಹಲವಾರು ಮೊಬೈಲ್ ಹ್ಯಾಂಡ್‌ಸೆಟ್ ತಯಾರಕರು ತಮ್ಮ ಸೆಟ್‌ಗಳಲ್ಲಿ ಆಂಡ್ರಾಯ್ಡ್ ಬಳಸುವ ನಿರ್ಧಾರ ಮಾಡಿದ್ದಾರೆ. ಮುಕ್ತ ತಂತ್ರಾಂಶವಾಗಿರುವುದು, ತಂತ್ರಾಂಶ ಅಭಿವೃದ್ಧಿಕಾರರ ಬೆಂಬಲ ಇರುವುದು ಇದಕ್ಕೆ ಕಾರಣ.
----------------------------------------------------------
ಯು ಎಸ್ ಬಿಯೀಗ ಶರವೇಗ ಪಡೆದಿದೆ
ಯು ಎಸ್ ಬಿಯು ಕಂಪ್ಯೂಟರಿಗೆ ಸಾಧನಗಳನ್ನು ಸಂಪರ್ಕಿಸಲು ಬಳಕೆಯಾಗುವ ಪೋರ್ಟ್. ಇದರ ಸೀಮಿತ ವೇಗ ಒಂದು ಅಡ್ಡಿಯಾಗಿದ್ದರೆ, ಇದರ ಮೂಲಕ ಚಾರ್ಜ್ ಮಾಡುವಾಗ ಯು ಎಸ್ ಬಿ ಒದಗಿಸುತ್ತಿದ್ದ ಕಡಿಮೆ ವಿದ್ಯುತ್ ಪ್ರವಾಹದ ಸಾಮರ್ಥ್ಯ ಒಂದು ತೊಡಕಾಗಿತ್ತು. ಈಗ ಯು ಎಸ್ ಬಿಯ ಮೂರನೇಯ ಆವೃತಿಯು ಲಭ್ಯವಾಗಿದ್ದು, ಇದರ ಮೂಲಕ 4.8 ಗಿಗಾಬಿಟ್ ವೇಗದಲ್ಲಿ ದತ್ತಾಂಶ ವರ್ಗಾವಣೆ ಸಾಧ್ಯ.ಅದೇ ರೀತಿ, ಇದರ ಮೂಲಕ ನೂರು ಮಿಲಿ ಆಂಪಿಯರ್ ಬದಲಾಗಿ, ಒಂಭೈನೂರು ಮಿಲಿ ಆಂಪಿಯರ್ ವಿದ್ಯುತ್ ಪ್ರವಾಹವನ್ನು ಪಡೆಯಬಹುದು.ಅದರರ್ಥ ಹೆಚ್ಚಿನ ಸಂಖ್ಯೆಯ ಸಾಧನಗಳನ್ನು ಒಟ್ಟಿಗೆ ಚಾರ್ಜ್ ಮಾಡಲು ಸಾಧ್ಯವಾಗಲಿದೆ.
------------------------------------------------
ವಿಡಿಯೂ ಚಿತ್ರೀಕರಣ ನಡೆಸಲು ಎಸ್ ಎಲ್ ಆರ್ ಕ್ಯಾಮರಾವೇ ಸಾಕು!

ಅತ್ಯಂತ ಸುಧಾರಿತ ಎಸ್ ಎಲ್ ಆರ್ ಕ್ಯಾಮರಾವಾದರೂ, ಅದರ ಮೂಲಕ ವಿಡಿಯೋ ಚಿತ್ರೀಕರಣ ಸಾಧ್ಯವಾಗದು ಎನ್ನುವ ತೊಂದರೆ ಇದು ವರೆಗೆ ಕಾಡುತ್ತಿತ್ತು. ಈಗ ಕ್ಯಾನನ್ 5D ಮಾರ್ಕ್ II ಮತ್ತು ನಿಕಾನ್ ಎನ್ನುವ ಕ್ಯಾಮರಾಗಳು ಅತ್ಯುಚ್ಛ ಗುಣಮಟ್ಟದ ವಿಡಿಯೋ ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಟ್ಟಿದೆ.
-------------------------------------------
ಮೆಮ್ರಿಸ್ಟರ್
ಕೆಪಾಸಿಟರ್, ಇಂಡಕ್ಟರ್, ರೆಸಿಸ್ಟರ್ ಇವೇ ಮುಂತಾದ ಇಲೆಕ್ಟ್ರಾನಿಕ್ ಸಾಮಗ್ರಿಗಳ ಪಟ್ಟಿಗೆ ಹೊಸ ಸೇರ್ಪಡೆ ಮೆಮರಿ ಟ್ರಾನ್ಸಿಸ್ಟರ್. ಇದಕ್ಕಿರುವ ಸ್ಮರಣ ಸಾಮರ್ಥ್ಯದ ಕಾರಣ, ತನ್ನಲ್ಲಿದ್ದ ಮಾಹಿತಿಯನ್ನು ವಿದ್ಯುತ್ ಇಲ್ಲದಾಗಲೂ ಶೇಖರಿಸಿಡಬಲ್ಲ ಸಾಮರ್ಥ್ಯ ಪಡೆಯಲಿದೆ.ಇಂತಹ ಸ್ಮರಣಕೋಶ ಇದ್ದ ಕಂಪ್ಯೂಟರನ್ನು ಬೂಟ್ ಮಾಡದೆ, ನೇರವಾಗಿ ಚಾಲೂ ಮಾಡಬಹುದು.
---------------------------------------------
ಫ್ಲಾಶ್ ಸ್ಮರಣ ಕೋಶಗಳು
ಬಹಳ ಸಾಮರ್ಥ್ಯದ ಹಾರ್ಡ್ ಡಿಸ್ಕ್‌ಗಳೇನೋ ಲಭ್ಯ. ಆದರಿವು ನಿಧಾನ.ಫ್ಲಾಶ್ ಸ್ಮರಣಕೋಶಗಳು ವೇಗ ಹೊಂದಿವೆ-ಆದರಿವು ದುಬಾರಿ.ಐಫೋನಿನಲ್ಲಿ ಇಂತಹ ಸ್ಮರಣಕೋಶಗಳ ಬಳಕೆಯಾದುದೇ ತಡೆ, ಇಎಂಸಿ,ಇಂಟೆಲ್,ಹಿಟಾಚಿ,ಸನ್ ಮೈಕ್ರೋಸಿಸ್ಟಮ್ಸ್ ಹೀಗೆ ಹಲವು ಕಂಪೆನಿಗಳು ಫ್ಲಾಶ್ ಸ್ಮರಣಕೋಶಕ್ಕೆ ಬೆಂಬಲ ಸೂಚಿಸಿವೆ.ಇವುಗಳು ಬಳಸುವ ವಿದ್ಯುತ್ ಕೂಡಾ ಕಡಿಮೆಯಾಗಲಿವೆ. ಡಾಟಾ ಸೆಂಟರುಗಳಲ್ಲಿನ್ನು ಫ್ಲಾಶ್ ಸ್ಮರಣಕೋಶಗಳು ಬಳಕೆಯಾಗುವುದು ನಿಶ್ಚಿತ. ಕಂಪ್ಯೂಟರುಗಳು ಹಾಗೂ ಲ್ಯಾಪ್‌ಟಾಪ್‌ಗಳಲ್ಲಿ ಇವನ್ನು ಬಳಸಿದರೆ, ಡಿಸ್ಕ್ ಕೆಡುವ ಪ್ರಮೇಯ ಬರದು.
------------------------------------------------------
ಒಲಿಂಪಿಕ್ಸ್ ಸಾಧನೆಗೆ ಈಜುಡುಗೆ ಕಾರಣ
ಎಲ್ ಜೆಡ್ ಆರ್ ಎನ್ನುವ ಈಜುಡುಗೆಯು ನಾಸಾದ ಸಂಶೋಧನೆಯನ್ನು ಬಳಸಿ ತಯಾರಾದ ಈಜುಡುಗೆ. ಈ ನವೀನ ಸಾಧನದಿಂದ ತಯಾರಾದ ಈಜುಡುಗೆಯಾದ ಕಾರಣ ಅದು ನೀರನ್ನು ಜಾರಿ ಹೋಗುವಂತೆ ಮಾಡಿ, ಈಜುಗಾರನಿಗೆ ಪ್ರತಿರೋಧ ಕಡಿಮೆಯಾಗುವಂತೆ ಮಾಡಿ, ಆತನ ಪರಿಶ್ರಮ ಇಳಿಸುತ್ತದೆ. ಈ ಒಲಿಂಪಿಕ್ಸಿನಲ್ಲಿ ಫೆಲ್ಪ್ಸ್ ಅಂತಹ ಈಜುಗಾರ ದಾಖಲೆ ನಿರ್ಮಿಸುವುದರಲ್ಲಿ ಈಜುಡುಗೆಯ ಪಾತ್ರವೂ ಇದೆಯಂತೆ.
--------------------------------------------------------
ಖಾದ್ಯ ಚಿಪ್
ಐಸಿಯನ್ನೇ ತಿನ್ನುವುದೇ?ಅತ್ಯಂತ ಸೂಕ್ಷ್ಮ ಐಸಿಯನ್ನು ಔಷಧದೊಂದಿಗೆ ಬಾಯಿಗೆ ಹಾಕಿಕೊಂಡು ಹೊಟ್ಟೆಗಿಳಿಸಿದರೆ,ಐಸಿಯು ಹೊಟ್ಟೆಯಲ್ಲಿ ಕಾರ್ಯಾಚರಣೆ ಆರಂಭಿಸಿ,ಅಲ್ಲಿನ ಸ್ಥಿತಿಯ ಬಗ್ಗೆ ಮಾಹಿತಿ ನೀಡುತ್ತದೆ.ದೇಹದ ಶಾಖ, ಹೃದಯ ಬಡಿತದ ಗತಿ,ಒತ್ತಡ ಇವನ್ನೆಲ್ಲಾ ಅಳೆದು ಹೊರಗಿನ ಸೆಲ್‌ಫೋನಿಗೆ ತಿಳಿಸಬಲ್ಲುದು. ರೋಗಿಯ ಸ್ಥಿತಿಯ ಮೇಲೆ ಕಣ್ಣಿರಿಸಲು ವೈದ್ಯರು ಸೆಲ್‌ಫೋನನ್ನೇ ಅವಲಂಬಿಸಬಹುದು.
-------------------------------------------
ಮಡಚಲಾಗುವ ಕಂಪ್ಯೂಟರ್ ತೆರೆಗಳು


ಮಡಚಲಾಗುವ ತೆರೆಗಳನ್ನು ಅಮೆರಿಕಾದ ಸೇನೆ ಮತ್ತು ಅರಿಜೋನಾ ವಿಶ್ವವಿದ್ಯಾಲಯದ ಸಂಶೋಧಕರ ಸಹಭಾಗಿತ್ವದಿಂದ ಆವಿಷ್ಕಾರವಾಗಿದೆ.ಇಂತಹ ಮಡಚಬಲ್ಲ ಹಾಳೆಗಳನ್ನು ಪತ್ರಿಕೆ,ಪುಸ್ತಕಗಳ ಓದಿಗೆ ಬಳಸಲು ಸಾಧ್ಯ.
*ಅಶೋಕ್‌ಕುಮಾರ್ ಎ

Monday, December 22, 2008

ಅಂತರ್ಜಾಲ ಅಂತರ್ಧಾನ!

2008:ಐಟಿ,ದೂರಸಂಪರ್ಕ ಕ್ಷೇತ್ರಗಳನ್ನೂ ಬಾಧಿಸಿರುವ ಆರ್ಥಿಕ ಹಿನ್ನಡೆ
ಚೇತೋಹಾರಿ ಬೆಳವಣಿಗೆಯ ನಿರೀಕ್ಷೆಯಲ್ಲಿ 2008ಕ್ಕೆ ಕಾಲಿರಿಸಿದ್ದ, ಮಾಹಿತಿ ತಂತ್ರಜ್ಞಾನ ಮತ್ತು ದೂರಸಂಪರ್ಕ ಉದ್ಯಮಗಳು ವರ್ಷಾಂತ್ಯದಲ್ಲಿ ತತ್ತರಿಸುತ್ತಿರುವುದು ವಿಪರ್ಯಾಸ.ಆರ್ಥಿಕ ಹಿನ್ನಡೆಯು ವಿಶ್ವವನ್ನು ಬಾಧಿಸುವಾಗ, ಕಂಪೆನಿಗಳು ತಮ್ಮ ಐಟಿ ಖರ್ಚನ್ನು ಕಡಿಮೆ ಮಾಡಲು ಮುಂದಾಗುವುದು ಸ್ವಾಭಾವಿಕ. ಕೆಲಸ ಕಳೆದುಕೊಂಡ ಜನರು ತಮ್ಮ ಖರ್ಚು ಕಡಿಮೆ ಮಾಡಲು ದೂರಸಂಪರ್ಕ ಅಗತ್ಯಗಳಿಗೆ ಕಡಿವಾಣ ಹಾಕುವುದೂ ಸಂಭವನೀಯ. ಹೀಗಾಗಿ ಈ ಎರಡೂ ಕ್ಷೇತ್ರಗಳಲ್ಲಿ ತೊಡಗಿರುವ ಕಂಪೆನಿಗಳು ಸದ್ಯೋಭವಿಷ್ಯತಿನ ಬಗ್ಗೆ ಹೆಚ್ಚೇನೂ ಉತ್ಸಾಹ ತಾಳುವ ಪರಿಸ್ಥಿತಿ ಇಲ್ಲ.ಭಾರತದ ಐಟಿ ಉದ್ಯಮವಂತೂ ವಿದೇಶೀ ಕಂಪೆನಿಗಳ ಸೇವೆಯ ಅಗತ್ಯಗಳನ್ನು ಪೂರೈಸುವ ವ್ಯವಹಾರವನ್ನೇ ಅವಲಂಬಿಸುವುದರಿಂದ ಮುಂದಿನ ದಿನಗಳಲ್ಲಿ ವ್ಯವಹಾರಹಿನ್ನಡೆಯಾಗಲಿರುವುದೋ,ಅಲ್ಲ ಪರಿಸ್ಥಿತಿ ಸುಧಾರಣೆ ಆಗಲಿದೆಯೋ ಎನ್ನುವುದರ ಬಗ್ಗೆ ಖಂಡಿತವಾಗಿ ಏನನ್ನೂ ಹೇಳಲಾರದದ ಪರಿಸ್ಥಿತಿಯಲ್ಲಿವೆ. ಹೊರಗುತ್ತಿಗೆಯ ಮೇಲೆ ಅವಲಂಬಿತವಾದ ಬಿಪಿಓ ಕ್ಷೇತ್ರವಂತೂ ಮುಂದಿನ ಅಧ್ಯಕ್ಷ ಒಬಾಮಾ ನಿರ್ಧಾರಕ್ಕಾಗಿ ಕಾತರತೆಯಿಂದ ಕಾದಿವೆ.ಐಟಿ ದಿಗ್ಗಜಗಳೂ, ಹೊಸಬರ ನೇಮಕ ನಿಲ್ಲಿಸುವುದು, ದೈನಂದಿನ ಕೆಲಸದ ಅವಧಿ ಹೆಚ್ಚಿಸುವುದು,ವೇತನ ಕಡಿತ,ಮಿತವ್ಯಯ ಕ್ರಮಗಳು ಮತ್ತು ನೌಕರಿಯಲ್ಲಿ ಕಡಿತವನ್ನು ಮಾಡಲು ಆರಂಭಿಸಿವೆ.
-------------------------------------------------
ಇಂಟರ್ನೆಟ್ ಎಕ್ಸ್‌ಪ್ಲೋರರ್ 8 ಬಂದರೂ ಬ್ರೌಸರ್ ಇನ್ನೂ ಆಗಿಲ್ಲ ಸುಭದ್ರ!
ಈ ವರ್ಷ ಗೂಗಲ್‌ನ ಕ್ರೋಮ್ ಬಿಡುಗಡೆಯಾಗುವುದರ ಸುಳಿವು ಸಿಕ್ಕಿಯೋ ಏನೋ,ಮೈಕ್ರೋಸಾಫ್ಟ್ ಕಂಪೆನಿಯು ತನ್ನ ಜನಪ್ರಿಯ ಬ್ರೌಸರ್ ಇಂಟರ್ನೆಟ್ ಎಕ್ಸ್‌ಪ್ಲೋರರ್‌ನ ಎಂಟನೇ ಆವೃತ್ತಿಯನ್ನು ಬಿಡುಗಡೆ ಮಾಡಿತು. ಇದರಲ್ಲಿ ಕ್ರೋಮಿನಲ್ಲಿ ಇರುವ ಬ್ರೌಸರ್ ಅಭ್ಯಾಸದ ಗೌಪ್ಯತೆಯನ್ನು ಕಾಯ್ದುಕೊಳ್ಳುವ ಸೌಲಭ್ಯವನ್ನು ನೀಡಿತ್ತು. ಬಳಕೆದಾರನ ಕಂಪ್ಯೂಟರನ್ನು ಹ್ಯಾಕರುಗಳು ಕೈವಶ ಮಾಡಿಕೊಳ್ಳಲು ಇಂಟರ್ನೆಟ್ ಎಕ್ಸ್‌ಪ್ಲೋರರ್(ಐಇ) ಆಸ್ಪದ ನೀಡುತ್ತಿರುವುದು ಕಂಡು ಬಂದಿದೆ. ಹೀಗಾಗಲು ಬಳಕೆದಾರ ಕೆಲವೊಂದು ಅಂತರ್ಜಾಲ ತಾಣಗಳಿಗೆ ಭೇಟಿ ನೀಡುವ ತಪ್ಪೆಸಗಿದರೇ ಸಾಕು. ಆ ತಾಣಗಳಲ್ಲಿ ಹುದುಗಿರುವ ತಂತ್ರಾಂಶಗಳು ಕೆಲಸ ಆರಂಭಿಸಿ, ಬಳಕೆದಾರನ ಗುಪ್ತ ಮಾಹಿತಿಗಳನ್ನು ಕದಿಯುವ ಕೆಲಸವನ್ನು ನಿರ್ಭಿಡೆಯಿಂದ ಮಾಡುತ್ತವೆ.ಐಇನ ಹಲವಾರು ಆವೃತ್ತಿಗಳು ಈ ತೊಂದರೆಗೆ ಒಳಗಾಗುವುದನ್ನು ಮೈಕ್ರೋಸಾಫ್ಟ್ ಕಂಪೆನಿಯೇ ಒಪ್ಪಿಕೊಂಡಿತು.ನಂತರ ಅವಸರದಲ್ಲೇ ಅದಕ್ಕೆ ಪರಿಹಾರವೊದಗಿಸುವ ತಂತ್ರಾಂಶದ ಕಡತವನ್ನು ಒದಗಿಸಿದೆ.ವಿಂಡೋಸ್‌ನ ಅಪ್ಡೇಟ್ ಮಾಡಿಕೊಂಡಾಗ,ಐಇಯನ್ನು ನೇರ್ಪುಗೊಳಿಸುವ ತಂತ್ರಾಂಶವೂ ಕಂಪ್ಯೂಟರಿನಲ್ಲಿ ಅನುಸ್ಥಾಪಿತವಾಗುತ್ತದೆ.ಈ ಭದ್ರತೆ ಎಲ್ಲಾ ಆವೃತ್ತಿಗಳಿಗೆ ಇನ್ನೂ ಬಿಡುಗಡೆಯಾಗಿಲ್ಲ.
-------------------------------------------------------
3Gಐಪೋನ್ v/s ಗೂಗಲ್ ಆಂಡ್ರಾಯ್ಡ್
ಐಫೋನ್ ತನ್ನ ಮೊಬೈಲ್ ಹ್ಯಾಂಡ್‌ಸೆಟ್‌ಗಳಲ್ಲಿ ತ್ರೀಜಿ ಸೌಕರ್ಯವನ್ನು ಒದಗಿಸುತ್ತಿದೆ. ಇದರೊಂದಿಗೆ ಶರವೇಗದ ಅಂತರ್ಜಾಲ ಸೇವೆ ಮೊಬೈಲ್ ಹ್ಯಾಂಡ್‌ಸೆಟ್‌ಗಳಲ್ಲಿ ಲಭ್ಯವಾಗುತ್ತಿದೆ. ಜಿಪಿಎಸ್ ಸೌಕರ್ಯವೂ ಇರುವುದರಿಂದ ಇರುವ ಸ್ಥಾನ ಮತ್ತು ಎತ್ತ ಹೋಗಬೇಕೋ ಅಲ್ಲಿಗೆ ದಾರಿ ತೋರಿಸುವಂತಹ ಸೇವೆಗಳೂ ಐಪೋನಿನಲ್ಲಿ ಸಿಗುತ್ತಿದೆ.ಐಪಾಡ್ ಕೂಡಾ ಲಭ್ಯವಿರುವ ಈ ಹ್ಯಾಂಡ್‌ಸೆಟ್‌ಗಳು ಹಾಡಿನ ಸಂಗ್ರಹಕ್ಕೂ ಅನುವು ಮಾಡುತ್ತವೆ. ಕ್ಯಾಮರಾ ಇರುವುದರ್ ಬಗ್ಗೆ ಪ್ರತ್ಯೇಕವಾಗಿ ಪ್ರಸ್ತಾಪಿಸುವ ಅಗತ್ಯವೇ ಇಲ್ಲವೇನೋ?
ಅತ್ತ ಗೂಗಲ್ ತನ್ನದೇ ಮೊಬೈಲ್ ಕಾರ್ಯನಿರ್ವಹಣಾ ವ್ಯವಸ್ಥೆ ತಂತ್ರಾಂಶವನ್ನು ಹೊರತಂದಿದೆ. ಅದನ್ನು ಆಂಡ್ರಾಯ್ಡ್ ಎಂದು ಹೆಸರಿಸಿರುವ ಗೂಗಲ್,ತನ್ನದೇ ಆದ ಹ್ಯಾಂಡ್‌ಸೆಟ್ ತರುವ ಸಾಹಸಕ್ಕೆ ಕೈಹಾಕದೆ, ಹ್ಯಾಂಡ್‌ಸೆಟ್ ತಯಾರಕರು ತನ್ನ ಆಂಡ್ರಾಯ್ಡನ್ನು ಬಳಸುವುದಕ್ಕೆ ಪ್ರೋತ್ಸಾಹ ನೀಡುತ್ತಿದೆ. ಟಿ-ಮೊಬೈಲ್ ಹ್ಯಾಂಡ್‌ಸೆಟ್ ಇದೀಗಲೇ ಆಂಡ್ರ್‍ಆಯ್ಡ್ ಬಳಸುತ್ತಿದೆ.
-------------------------------------------
ವೈಮಾಕ್ಸ್ ನಿಸ್ತಂತು ಸೇವೆಗೆ ಕಂಕಣ ಬದ್ಧವಾಗಿರುವ ಇಂಟೆಲ್
ಅತ್ತ ತ್ರೀಜಿ ಸೇವೆಗಳಿಗೆ ಚಾಲನೆ ದೊರಕಿ, ಮೊಬೈಲ್ ಮೂಲಕ ಶರವೇಗ ಅಂತರ್ಜಾಲಕ್ಕೆ ಹಾದಿ ಸುಗಮವಾಗಿದೆ. ಇತ್ತ ನಿಸ್ತಂತು ಸೇವೆಯ ಮೂಲಕ ಅಂತರ್ಜಾಲ ಲಭ್ಯವಾಗಿಸುವ ವೈಮ್ಯಾಕ್ಸ್ ಅದ್ಯಾಕೋ ಈ ವರ್ಷದಲ್ಲಿ ಮುನ್ನಡೆ ಕಂಡಿಲ್ಲ. ಎಪ್ಪತ್ತು ಮೆಗಾಬಿಟ್ಸ್ ವೇಗದಲ್ಲಿ ಬ್ರಾಡ್ ಬ್ಯಾಂಡ್ ಸೇವೆ ಒದಗಿಸಲು ಶಕ್ತವಾಗಿರುವ ವೈಮ್ಯಾಕ್ಸ್,ಸೇವೆಗೆ ಅನುಮತಿಯನ್ನು ಭಾರತ ಸರಕಾರ ನೀಡಲು ಮುಂದಾಗಿದೆ. ಲೈಸನ್ಸ್ ಸುಲ್ಕ ನಿರ್ಣಯಕ್ಕೆ ಹರಾಜು ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಈ ನಡುವೆ ಇಂಟೆಲ್ ಕಂಪೆನಿಯು ದೂರಸಂಪರ್ಕ ಸೇವೆ ನೀಡುವ ಕಂಪೆನಿಗಳ ಜತೆ ಸಂಧಾನ ನಡೆಸಿ, ತಾನು ಈ ಸೇವೆಯನ್ನು ಜನಪ್ರಿಯವಾಗಿಸುವ ಪಣ ತೊಟ್ಟಿರುವುದನ್ನು ಸ್ಪಷ್ಟಪಡಿಸಿದೆ. ತನ್ನ ಸಂಸ್ಕಾರಕಗಳಲ್ಲಿ ಈ ಸೇವೆ ಪಡೆಯಲು ಅವಶ್ಯಕ ಬದಲಾವಣೆಗಳನ್ನು ಮಾಡಲು ಕಂಪೆನಿ ಮುಂದೆ ಬಂದಿದೆ.ಅಂತೆಯೇ ವೈಮ್ಯಾಕ್ಸ್ ಮೂಲಕ ಅಂತರ್ಜಾಲ ಸಂಪರ್ಕಕ್ಕೆ ಅವಕಾಶ ನೀಡುವ ಸಾಧನಗಳನ್ನು ತಯಾರಿಸಲೂ ಕಂಪೆನಿಯು ಮಾತುಕತೆ ನಡೆಸುತ್ತಿದೆ.ದೂರಸಂಪರ್ಕ ಕಂಪೆನಿಗಳಿಗೆ ಹಣಕಾಸಿನ ನೆರವು ನೀಡಲೂ ಇಂಟೆಲ್ ಸಿದ್ಧವಿದೆಯಂತೆ.
-----------------------------------------------
ಅಣುಬಂಧ:ಅವಕಾಶಗಳ ಪೂರ
ಭಾರತವು ಅಮೆರಿಕಾದೊಂದಿಗೆ ಅಣುಬಂಧ ಒಪ್ಪಂದಕ್ಕೆ ಸಹಿ ಮಾಡಿದ್ದು ವರ್ಷದ ಮಹತ್ತ್ವದ ಬೆಳವಣಿಗೆ. ಇದರೊಂದಿಗೆ ಭಾರತವು ಅಣುವಿದ್ಯುತ್ ಸ್ಥಾವರದ ತಂತ್ರಜ್ಞಾನ ಮತ್ತು ಅಣು ಇಂಧನವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲು ಹಾದಿ ಸುಗಮವಾಗಿದೆ. ಖಾಸಗಿ ಕಂಪೆನಿಗಳಿಗೂ ಅಣು ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲು ಹಾದಿ ಸುಗಮವಾಗುವ ನಿರೀಕ್ಷೆಯಿದ್ದು, ಟಾಟಾ ಪವರ್, ರಿಲಾಯೆನ್ಸ್ ಪವರ್ ಕಂಪೆನಿಗಳು,ಜಿ ಎಂ.ಆರ್. ಕಂಪೆನಿಗಳು ಇಂತಹ ಅಣುಸ್ಥಾವರಗಳನ್ನು ಸ್ಥಾಪಿಸಲು ಉತ್ಸಾಹ ಹೊಂದಿವೆ.ಈ ನಿಟ್ಟಿನಲ್ಲಿ ತರಬೇತಿ ಮತ್ತು ಅಣುಸ್ಥಾವರಗಳ ಸ್ಥಾಪನೆ-ನಿರ್ವಹಣೆಯ ಬಗ್ಗೆ ತರಬೇತಿ ಪಡೆಯಲು ಈ ಕಂಪೆನಿಗಳು ಹೆಜ್ಜೆಯಿಟ್ಟಿವೆ.ಮಕರಂದ್ ರಾಜಾಧ್ಯಕ್ಷ ಎಂಬ ಐಐಟಿಯ ಹಳೆವಿದ್ಯಾರ್ಥಿ,ಸ್ಥಾಪಿಸಿರುವ ಪಿ ಎಂ ಡೈಮೆನ್ಷನ್ಸ್ ಎಂಬ ಕಂಪೆನಿಯು ಇಂತಹ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡು, ಈಗಾಗಲೇ ಹಲವು ಕಂಪೆನಿಗಳಿಗೆ ತರಬೇತಿ ನೀಡಿದೆ.ಸುರಕ್ಷತೆ,ಸ್ಥಾಪನೆಯ ಕ್ರಮ,ಸ್ಥಾವರವನ್ನು ನಡೆಸುವ ರೀತಿ ಇವೆಲ್ಲವನ್ನೂ ತರಬೇತಿ ಕಾರ್ಯಕ್ರಮದಲ್ಲಿ ಅಳವಡಿಸಲಾಗಿದೆ.
------------------------------------------
ಸಮುದ್ರದಡಿಯ ಕೇಬಲ್ ಕಡಿತ: ಅಂತರ್ಜಾಲ ಅಂತರ್ಧಾನ!
ವರ್ಷದುದ್ದಕ್ಕೂ ಸಮುದ್ರದಡಿಯ ಕೇಬಲ್ ಕಡಿಯುವ ಪ್ರಸಂಗ ಆಗಾಗ ನಡೆಯಿತು. ಇದರಿಂದ ಅಂತರ್ಜಾಲ ಸೇವೆ ಬಾಧಿತವಾಗಿ ಬಿಪಿಓ ಉದ್ಯಮದ ಸೇವೆಗೆ ಚ್ಯುತಿಯಾಗುವ ಪರಿಸ್ಥಿತಿ ಬಂತು.ನಿನ್ನೆ ತಾನೇ ಯುರೋಪ್-ಏಶ್ಯಾವನ್ನು ಬೆಸೆಯುವ ಸಮುದ್ರದಡಿಯ ಕೇಬಲ್ ಮೆಡಿಟರೇನಿಯನ್ ಸಮುದ್ರದಲ್ಲಿ ಕಡಿದು, ಯುರೋಪ್ ದೇಶಗಳಿಗೆ ಸೇವೆ ಒದಗಿಸುವ ಭಾರತೀಯ ಕಂಪೆನಿಗಳ ಸೇವೆ ತುಸು ಮಟ್ಟಿಗೆ ಬಾಧಿತವಾದುವು. ಆದರೆ ಹೆಚ್ಚಿನ ಬಿಪಿಓ ಕಂಪೆನಿಗಳು ತಮಗೆ ಬೇಕಾದ್ದಕ್ಕಿಂತ ಹೆಚ್ಚು ಬ್ಯಾಂಡ್‌ವಿಡ್ತ್ ಪಡೆದು, ಇಂತಹ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ತಯಾರಾಗಿರುವುದು ವರದಾನವಾಯಿತು.ಅಂತರ್ಜಾಲ ಸೇವೆಯಲ್ಲಿ ಆಗಿರುವ ಏರುಪೇರಿನ ಹೊರತಾಗಿಯೂ ಬಿಪಿಓ ಕಂಪೆನಿಗಳು ತಮ್ಮ ಸೇವೆಯನ್ನು ಅಬಾಧಿತವಾಗಿ ನೀಡುತ್ತಿವೆ.
*ಅಶೋಕ್‌ಕುಮಾರ್ ಎ

Monday, December 15, 2008

ಮನೆಗೊಂದು ಸೂಪರ್ ಕಂಪ್ಯೂಟರ್!

ಮನೆಗೊಂದು ಸೂಪರ್ ಕಂಪ್ಯೂಟರ್!
ಸಾಮಾನ್ಯ ಕಂಪ್ಯೂಟರುಗಳ ಇನ್ನೂರೈವತ್ತು ಪಟ್ಟು ಹೆಚ್ಚು ವೇಗದಲ್ಲಿ ಕೆಲಸ ಮಾಡುವ ಪಿಸಿಗಳೀಗ ಲಭ್ಯ. ಟೆಸ್ಲಾ ಕಂಪ್ಯೂಟರ್ ಎಂಬ ಹೆಸರಿನೊಂದಿಗೆ ಈ ಕಂಪ್ಯೂಟರುಗಳು ಮಾರುಕಟ್ಟೆ ಪ್ರವೇಶಿಸಲಿವೆ.ಇವುಗಳ ಬೆಲೆ ಮಾತ್ರಾ ಸಾಮಾನ್ಯರ ಕೈಗೆಟುದಷ್ಟು ಹೆಚ್ಚು-ಎರಡು ಲಕ್ಷ ರುಪಾಯಿಗಳು.ಇವುಗಳನ್ನು ಬಳಸಿದರೆ,ವೈದ್ಯರುಗಳಿಗೆ ಸ್ಕ್ಯಾನ್ ಫಲಿತಾಂಶಗಳನ್ನು ಕೆಲವೇ ತಾಸುಗಳು ಸಾಕು. ಸಾಮಾನ್ಯ ಕಂಪ್ಯೂಟರುಗಳಾದರೆ, ಈ ಫಲಿತಾಂಶಕ್ಕೆ ದಿನವಿಡೀ ಕಾಯಬೇಕಾದೀತು.
ಟೆಸ್ಲಾ ಕಂಪ್ಯೂಟರ್ ಏಕಕಾಲದಲ್ಲಿ ಕಾರ್ಯಾಚರಿಸಬಲ್ಲ ಒಂಭೈನೂರ ಅರುವತ್ತು ಕೋರ್(ಗಣಕ ಕೇಂದ್ರ)ಗಳನ್ನು ಹೊಂದಿದೆ. ಹೀಗಾಗಿ ಗಣಕಕಾರ್ಯ ಅತಿ ವೇಗದಲ್ಲಿ ನಡೆಯುತ್ತದೆ.ಇತ್ತೀಚೆಗೆ ಇಂಟೆಲ್-ಇಂಡಿಯಾದಲ್ಲಿ ವಿನ್ಯಾಸಗೊಂಡ ಹೊಸ ಸಂಸ್ಕಾರಕವು ಆರು ಕೋರ್‌ಗಳನ್ನು ಹೊಂದಿದೆ.ಪ್ರತಿ ಸೆಕೆಂಡಿಗೆ ನಾಲ್ಕು ಟೆರಾ ಫ್ಲಾಪ್ ಗಣನೆಗಳನ್ನು ಮಾಡಬಲ್ಲುದು!
----------------------------------------------
ಬೀಟಾ ಹಣೆಪಟ್ಟಿ ಕಳಚಿಕೊಂಡ ಗೂಗಲ್ ಕ್ರೋಮ್
ತಂತ್ರಾಂಶಗಳ ಪರೀಕ್ಷಾ ಆವೃತ್ತಿಯನ್ನು ಬಿಡುಗಡೆ ಮಾಡಿ, ಬಳಕೆದಾರರ ಪ್ರತಿಕ್ರಿಯೆಯ ಅನುಸಾರ,ಅದರ ಸುಧಾರಣೆ ಮಾಡುವುದು ಕಂಪೆನಿಗಳು ಅನುಸರಿಸುವ ಮಾರ್ಗ. ತಂತ್ರಾಂಶವು ಸಾಕಷ್ಟು ಸುಧಾರಣೆಯಾದ ಬಳಿಕವಷ್ಟೇ ಅದರ ಬೀಟಾ ಹಣೆಪಟ್ಟಿಯನ್ನು ತೆಗೆಯುವುದು ಕ್ರಮ್. ಗೂಗಲ್ ತನ್ನ ಬ್ರೌಸರ್ ತಂತ್ರಾಂಶವನ್ನು ಬಿಡುಗಡೆ ಮಾಡಿ, ಈಗಿನ್ನೂ ನೂರು ದಿನಗಳು ಕಳೆದಿವೆಯಷ್ಟೆ.ಅಷ್ಟರಲ್ಲೇ ಕ್ರೋಮಿನ ಸಿದ್ಧಗೊಳಿಸಿದ ಆವೃತ್ತಿಯನ್ನು ಗೂಗಲ್ ಬಿಡುಗಡೆ ಮಾಡಿದೆ. ಈ ನಡುವೆ ಸುಮಾರು ಹದಿನೈದು ಸುಧಾರಿತ ಆವೃತ್ತಿಗಳನ್ನು ಗೂಗಲ್ ತಂದಿತ್ತು. ಗೂಗಲ್ ಮಟ್ಟಿಗೆ ಇದು ಒಂದು ಹೊಸ ವಿಕ್ರಮ-ಏಕೆಂದರೆ ಜಿಮೇಲ್ ಮಿಂಚಂಚೆ ಸೇವೆಯು ಐದು ವರ್ಷಗಳ ನಂತರವೂ,ಇನ್ನೂ ಬೀಟಾ ಆವೃತ್ತಿಯಾಗಿ ಮುಂದುವರಿದಿದೆ.

ಕ್ರೋಮ್ ಅತ್ಯಂತ ಸರಳವಾದ ವಿನ್ಯಾಸ ಹೊಂದಿ,ಇತರೆಲ್ಲಾ ಬ್ರೌಸರ್ ತಂತ್ರಾಂಶಗಳಿಗೆ ಹೋಲಿಸಿದರೆ, ಪ್ರತ್ಯೇಕವಾಗಿ ನಿಲುತ್ತದೆ.ಈಗ ಜನಪ್ರಿಯವಾಗಿರುವ ಇಂಟರ್ನೆಟ್ ಎಕ್ಸ್‌ಪ್ಲೋರರ್ ಬ್ರೌಸರ್ ಮಾರುಕಟ್ಟೆಯ ಶೇಕಡ ಎಪ್ಪತ್ತು ಮಾರುಕಟ್ಟೆ ಹಿಡಿದಿದೆಯಾದರೆ, ಕ್ರೋಮ್ ಶೇಕಡಾ ಒಂದು ಭಾಗ ಮಾರುಕಟ್ಟೆ ಹಿಡಿತವನ್ನೀಗ ಸ್ಥಾಪಿಸಲು ಸಾಧ್ಯವಾಗಿದೆ. ತಪ್ಪುಗಳನ್ನು ಸರಿ ಪಡಿಸಿರುವ ಕ್ರೋಮಿನಲ್ಲೂ ಕನ್ನಡ ಟೈಪಿಂಗ್ ಮಾಡುವಾಗ ಅಕ್ಷರಗಳು ಸರಿಯಾಗಿ ಮೂಡದಿರುವ ಸಮಸ್ಯೆ ಮುಂದುವರಿದಿರುವುದು ನಿರಾಶಾದಾಯಕ ಅಂಶ.
-------------------------------------
2008ರಲ್ಲಿ ಭಾರತೀಯರ ಹುಡುಕುವ ಪ್ರವೃತ್ತಿ
ಭಾರತೀಯರು ಅಂತರ್ಜಾಲದಲ್ಲಿ ಏನನ್ನು ಹುಡುಕುತ್ತಿದ್ದಾರೆನ್ನುವ ಮಾಹಿತಿ ಲಭ್ಯವಿದೆ. ಜನಪ್ರಿಯ ಜಾಲತಾಣ ಅರ್ಕುಟ್ ಬಗ್ಗೆ ಹುಡುಕಿದವರ ಸಂಖ್ಯೆ ಅತ್ಯಧಿಕ. ನಂತರದ ಸ್ಥಾನಗಳನ್ನು ಜಿಮೇಲ್, ಯಾಹೂ,ಗೂಗಲ್ ಮತ್ತು ಯುಟ್ಯೂಬ್ ತಾಣಗಳಿವೆ.ಯಾಹೂ ಮೈಲ್,ಭಾರತೀಯ ರೈಲ್ವೇ ತಾಣಗಳಿಗಾಗಿ ಹುಡುಕಿದವರ ಸಂಖ್ಯೆಯೂ ಹೆಚ್ಚಿದೆ.ಹಾಲಿವುಡ್ ನಕ್ಷತ್ರಗಳ ಪೈಕಿ ಕತ್ರಿನಾ ಕೈಫ್ ಬಗ್ಗೆ ಶೋಧಿಸಿದವರೇ ಜಾಸ್ತಿ. ಐಶ್ವರ್ಯ ರೈ,ಸಲ್ಮಾನ್ ಖಾನ್ ಮತ್ತು ಹೃತಿಕ್ ರೋಶನ್ ಬಗ್ಗೆಯೂ ಹುಡುಕುವವರ ಸಂಖ್ಯೆ ನಂತರದ ಸ್ಥಾನಗಳಲ್ಲಿವೆ.ತೂಕ ಇಳಿಸಿಕೊಳ್ಳುವ ಬಗೆ,ಚುಂಬನದ ರಹಸ್ಯಗಳ ಬಗ್ಗೆಯೂ ಹುಡುಕಿದವರ ಸಂಖ್ಯೆ ಧಾರಾಳವಾಗಿದೆ.ಕ್ರೀಡಾಳುಗಳ ಪೈಕಿ ಸಾನಿಯಾ ಮಿರ್ಜಾ,ಸಚಿನ್ ತೆಂಡೂಲ್ಕರ್ ಮತ್ತು ರೊನಾಲ್ಡೋ ಅವರು ಪಟ್ಟಿಯ ಮೇಲಿನ ಸ್ಥಾನಗಳಿದ್ದಾರೆ.ಮಹಾತ್ಮಾ ಗಾಂಧಿಯವರ ಬಗ್ಗೆ ಅತ್ಯಂತ ಹೆಚ್ಚು ಶೋಧಕಾರ್ಯ ನಡೆದಿದೆ.ವರ್ಷದುದ್ದಕ್ಕೂ ಸುದ್ದಿ ಮಾಡಿದ ರಾಜ್ ಥ್ಯಾಕರೆ ಬಗ್ಗೆ ಭಾರತೀಯರು ಕುತೂಹಲ ತೋರಿಸಿದ್ದು ಸಹಜ.ಪ್ರವಾಸಿ ಸ್ಥಳಗಳ ಪೈಕಿ ಗೋವಾ, ಕೇರಳ,ಕಾಶ್ಮೀರ ಮತ್ತು ದುಬಾಯಿ ಮತ್ತು ಸಿಂಗಾಪುರ ಬಗ್ಗೆ ಜನರು ಹುಡುಕುತ್ತಿದ್ದಾರೆ.ಸ್ವಾತಂತ್ರ್ಯ ದಿನದ ನಂತರ ಪ್ರೇಮಿಗಳ ದಿನದ ಬಗ್ಗೆ ಜನರು ಆಸಕ್ತಿ ತೋರಿಸಿದ್ದಾರೆ.ಗೆಳೆತನದ ದಿನ ಮತ್ತು ಶಿಕ್ಷಕರ ದಿನದ ಬಗ್ಗೆಯೂ ಹುಡುಕಾಟ ನಡೆದಿದೆ.ಸರಕಾರದ ತಾಣಗಳ ಪೈಕಿ ರೈಲ್ವೇ, ಸಿಬಿಎಸ್‌ಇ ಫಲಿತಾಂಶಗಳು ಮತ್ತು ಆದಾಯಕರ ಇಲಾಖೆಯ ತಾಣಗಳ ಬಗ್ಗೆ ಭಾರತೀಯರು ಹೆಚ್ಚು ತಿಳಿಯಲು ಬಯಸಿದ್ದಾರೆ.
-----------------------------------------
3G ಮೊಬೈಲ್ ಸೇವೆ ಆರಂಭ

ಮಹಾನಗರ್ ಟೆಲಿಫೋನ್ ನಿಗಮ್ ಲಿಮಿಟೆಡ್ ಕಂಪೆನಿಯು ಭಾರತದಲ್ಲಿ ಮೂರನೇ ತಲೆಮಾರಿನ ಸೆಲ್ ಫೋನ್ ಸೇವೆಯನ್ನು ಆರಂಭಿಸಿದ್ದು ವರ್ಷಾಂತ್ಯದ ಶುಭ ಸುದ್ದಿ. ಧ್ವನಿ ಆಧಾರಿತ ಸೇವೆಯ ಬದಲು ದತ್ತಾಂಶ ಸೇವೆಯ ಬಗ್ಗೆ ಒತ್ತು ಕೊಡುವ ಈ ಸೇವೆಯು ನೂರನಲುವತ್ತು ಕಿಲೋಬಿಟ್ ಬಿಟ್ ದರದಲ್ಲಿ ದತ್ತಾಂಶ ಇಳಿಸಿಕೊಳ್ಳಲು ಅನುಕೂಲ ಕಲ್ಪಿಸಿದೆ.ಈ ಸೇವೆಯನ್ನು ಪಡೆಯಲು ದುಬಾರಿ ಬೆಲೆ ತೆರಬೇಕಾದೀತು ಎನ್ನುವುದು ಸದ್ಯದ ಸಮಸ್ಯೆಯಾದೀತು.ಅಲ್ಲದೆ ಇದಕ್ಕಾಗಿ ಹೊಸ ಹ್ಯಾಂಡ್ ಸೆಟ್ ಬೇಕು. ಇದಕ್ಕೆ ಕಡಿಮೆಯೆಂದರೂ ಐದಾರು ಸಾವಿರದಷ್ಟು ದುಬಾರಿ ಬೆಲೆಯಿದೆ.ಚಲನಚಿತ್ರಗಳನ್ನು ಮೊಬೈಲಿಗೆ ಇಳಿಸಿಕೊಳ್ಳಲು,ಮೂಬೈಲಿನಲ್ಲಿ ಟಿವಿ ಕಾರ್ಯಕ್ರಮ ನೋಡಲು ಮೂರು ಜಿ ಸೇವೆ ಅವಕಾಶ ನೀಡಲಿದೆ.ಮೊಬೈಲ್ ಕಂಪೆನಿಗಳ ಹೆಚ್ಚಿನ ಆದಾಯವೂ ದೂರವಾಣಿ ಕರೆಗಳನ್ನೇ ಅವಲಂಬಿಸಿದೆ.ಈಗ ದತ್ತಾಂಶ ಸೇವೆಗೆ ಸಿಗಲಿರುವ ಅವಕಾಶದಿಂದ ಕಂಪೆನಿಗಳ ಆದಾಯ ಧ್ವನಿಯೇತರ ಸೇವೆಯಿಂದಲೂ ಹೆಚ್ಚುವ ಅವಕಾಶ ಇದೆ.ಇನ್ನಾರು ತಿಂಗಳುಗಳಲ್ಲಿ ಖಾಸಗಿ ಕಂಪೆನಿಗಳ ಮೂರು ಜಿ ಸೇವೆ ಲಭ್ಯವಾಗುವ ಸಾಧ್ಯತೆ ನಿಚ್ಚಳವಾಗಿದ್ದು, ಆಗ ಮೂರೂವರೆ ಸಾವಿರ ರುಪಾಯಿಗಳಷ್ಟು ಅಗ್ಗದ ದರಕ್ಕೆ ಹ್ಯಾಂಡ್‌ಸೆಟ್ ಮಾರುಕಟ್ಟೆಯಲ್ಲಿ ಲಭ್ಯವಾಗುವ ಸಾಧ್ಯತೆ ಇದೆ.ಇದೇ ವೇಳೆ ವೈಮ್ಯಾಕ್ಸ್ ಎನ್ನುವ ನಿಸ್ತಂತು ಸೇವೆಯೂ ಲಭ್ಯವಾಗುವ ಸಾಧ್ಯತೆ ನಿಚ್ಚಳವಾಗಿದೆ. ಇದು ಮೂರು ಜಿ ಸೇವೆಯ ಹತ್ತರಿಂದ ಮೂವತ್ತರಷ್ಟು ಅಧಿಕ ವೇಗದ ದತ್ತಾಂಶ ಸೇವೆಯನ್ನು ಲಭ್ಯವಾಗಿಸಲಿದ್ದು,ಮೂರು ಜಿ ಸೇವೆಗೆ ಭಾರೀ ಸ್ಪರ್ಧೆ ನೀಡುವ ನಿರೀಕ್ಷೆ ಇದೆ.ಇಂಟೆಲ್, ನೋರ್ಟೇಲ್ ಮತ್ತು ಮೊಟೊರೊಲಾ ಕಂಪೆನಿಗಳು ವೈಮ್ಯಾಕ್ಸ್ ಸೇವೆಯ ಬಗ್ಗೆ ಹೆಚ್ಚಿನ ಒಲವು ಹೊಂದಿವೆ.
------------------------------------------------
ಯಶಸ್ವಿಯಾದ ಚಂದ್ರಯಾನ
ದೇಶದ ಮಹತ್ತ್ವಾಕಾಂಕ್ಷೆಯ ಚಂದ್ರಯಾನವು ಯಶಸ್ವಿಯಾಗಿ ನಡೆಯಿತು. ನಿರೀಕ್ಷೆಯಂತೆ ಚಂದ್ರನ ಮೇಲ್ಮೈಯಲ್ಲಿ ಭಾರತದ ತ್ರಿವರ್ಣ ಧ್ವಜವನ್ನು "ನೆಟ್ಟು", ಚಂದ್ರನ ಮೇಲೆ ಭಾರತದ ಹಕ್ಕನ್ನು ಸ್ಥಾಪಿಸಲು ಇಸ್ರೋ ಸಮರ್ಥವಾಯಿತು. ನಂತರ ಚಂದ್ರನಿಂದ ಸತತವಾಗಿ ಅತ್ಯುತ್ತಮ ಗುಣಮಟ್ಟದ ಚಿತ್ರಗಳನ್ನು ಪಡೆಯುತ್ತಿರುವ ಇಸ್ರೋ,ಎಪ್ರಿಲ್‌ನಲ್ಲಿಪಿಎಸೆಲ್ವಿ10 ರಾಕೆಟ್ ಮೂಲಕ ಹತ್ತು ಉಪಗ್ರಹಗಳನ್ನು ಬಾಹ್ಯಾಕಾಶದ ನಿಗದಿತ ಕಕ್ಷೆಗೆ ಸೇರಿಸಿ ವಿಕ್ರಮ ಸ್ಥಾಪಿಸಿತು. ಇವುಗಳಲ್ಲಿ ಕಾರ್ಟೋಸ್ಯಾಟ್ ಮತ್ತುಐಎಂಎಸ್ ಉಪಗ್ರಹಗಳಲ್ಲದೆ ಎಂಟು ನ್ಯಾನೋ ಉಪಗ್ರಹಗಳಿದ್ದುವು.
*ಅಶೋಕ್‌ಕುಮಾರ್ ಎ
udayavani

Monday, December 08, 2008

ಕುರಾನ್ ಬಗ್ಗೆ ಅಂತರ್ಜಾಲ ತಾಣ


Quranet.net ಇದು ಒಂದು ಅಂತರ್ಜಾಲ ತಾಣ. ಇಸ್ರೇಲಿ ಪ್ರೊಫೆಸರ್ ಮತ್ತವರ ಶಿಷ್ಯರು ಸೇರಿ ಶುರು ಮಾಡಿದ ತಾಣವಿದು. ಜಗತ್ತಿನ ಸಮಸ್ಯೆಗಳಿಗೆ ಕುರಾನ್ ಸೂಚಿಸಿರುವ ಪರಿಹಾರಗಳನ್ನು ಜನಪ್ರಿಯಗೊಳಿಸುವುದು ತಾಣವನ್ನು ಸ್ಥಾಪಿಸಿದ ಹಿಂದಿನ ಪ್ರಮುಖ ಉದ್ದೇಶ.ಈ ತಾಣವನ್ನು ಹ್ಯಾಕರುಗಳ ದಾಳಿಯಿಂದ ರಕ್ಷಿಸುವ ಪಣವನ್ನು ಇಸ್ರೇಲಿ ಸರಕಾರವೇ ತೊಟ್ಟಿರುವುದು ಒಂದು ವಿಶೇಷ. ಕುರಾನೆಟ್ ತಾಣದ ಹೆಚ್ಚಿನ ಭಾಗ ಇಂಗ್ಲಿಷಿನಲ್ಲಿದೆ. ಹೀಬ್ರೂ ಮತ್ತು ಅರೇಬಿಕ್ ಭಾಷೆಗಳಲ್ಲೂ ಇದೆ.ಅರ್‍ಏಬಿಕ್, ಹಿಬ್ರೂ,ಸ್ಪಾನಿಷ್ ಮತ್ತು ಪರ್ಷಿಯನ್ ಭಾಷೆಗಳಲ್ಲೂ ತಾಣವನ್ನು ನೀಡುವ ಯೋಚನೆ ಪ್ರೊಫೆಸರಿಗಿದೆ. ಅದಕ್ಕಾಗಿ ಹಣವನ್ನು ಕೂಡಿಸಲವರು ಪ್ರಯತ್ನಿಸುತ್ತಿದ್ದಾರೆ.ಅನಕ್ಷರಸ್ಥರಿಗೂ ಉಪಯುಕ್ತವಾಗುವಂತೆ ಓದಿ ಹೇಳುವ ವ್ಯವಸ್ಥೆಯನ್ನು ಮಾಡುವುದು ಇನ್ನೊಂದು ಯೋಜನೆ.
ಕುರಾನಿನಲ್ಲಿ ಬರುವ ಕತೆಗಳ ಸಹಾಯದಿಂದ ವಿವಿಧ ಸಮಸ್ಯೆಗಳಿಗೆ ಪರಿಹಾರ ನೀಡುವ ತಂತ್ರ ಇಲ್ಲಿ ಬಳಕೆಯಾಗಿದೆ.ಈ ಕತೆಗಳನ್ನು ಹುಡುಕುವ ಕಾರ್ಯವನ್ನು ವಿದ್ಯಾರ್ಥಿಗಳಿಗೇ ನೀಡಲಾಗಿತ್ತು.
-------------------------------------------
ಕಣ್ಣಿನಲ್ಲಿ ಕ್ಯಾಮರಾ
ತನ್ನ ದೃಷ್ಟಿಯಿಲ್ಲದ ಕಣ್ಣಿನಲ್ಲಿ ಕ್ಯಮರಾವನ್ನಿಟ್ಟು,ಅದರ ಮೂಲಕ ತಾನು ನೋಡಿದ್ದನ್ನೆಲ್ಲಾ ಚಿತ್ರಿಸಿ, ಅದನ್ನು ನೇರ ಪ್ರಸಾರ ಮಾಡಬೇಕೆಂಬುದು ಸ್ಪೆನ್ಸ್ ಎಂಬ ಚಿತ್ರ ನಿರ್ಮಾಪಕನ ಯೋಜನೆ. ಆತನ ಒಂದು ಕಣ್ಣಿನಲ್ಲಿ ದೃಷ್ಟಿಯಿಲ್ಲ. ಈಗ ಅದರಲ್ಲಿ ನಕಲಿ ಕಣ್ಣು ಇದೆ. ಆದನ್ನು ತೆಗೆದು, ಆ ಜಾಗದಲ್ಲಿ ಮಿನಿ ವಿಡಿಯೋ ಕ್ಯಾಮರಾವನ್ನು ಅಳವಡಿಸುವುದು ಸ್ಪೆನ್ಸ್‌ನ ಯೋಜನೆ.ಹದಿಮೂರು ವರ್ಷದವನಾಗಿದ್ದಾಗ ಆತ, ತನ್ನ ಅಜ್ಜನ ಬಂದೂಕು ಹಿಡಿದು ಆಟವಾಡುತ್ತಿದ್ದಾಗ, ಅಕಸ್ಮಾತ್ ಸಿಡಿದ ಗುಂಡಿನಿಂದ ಬಂದೂಕು ಹಿಂದಕ್ಕೆ ಅಪ್ಪಳಿಸಿದಾಗ,ಕಣ್ಣಿಗೆ ಬಡಿದು, ಆತ ಕಣ್ಣು ಕಳೆದುಕೊಂಡಿದ್ದ.ಸ್ಪೆನ್ಸ್‌ನ ಕಣ್ಣಿನ ಕುಹರದಲ್ಲಿ ಕೂರುವ ಕ್ಯಾಮರವನ್ನು ಕಂಡುಕೊಳ್ಳುವುದು ಸುಲಭವಾಗಿಲ್ಲ.ಈಗಿನ ಡಿಜಿಟಲ್ ಯುಗದಲ್ಲಿ ಅಂತಹ ಸಣ್ಣ ಕುಹರದಲ್ಲಿ ಇರಿಸಬಹುದಾದ ಕ್ಯಾಮರಾ ಲಭ್ಯವಿಲ್ಲ.ಈ ಯೋಜನೆಗೆ ಸರಿ ಹೊಂದಬಲ್ಲ ಕ್ಯಾಮರಾಕ್ಕಾಗಿ,ಸ್ಪೆನ್ಸ್ ಬಹಳ ಪ್ರಯತ್ನ ಪಡುತ್ತಿದ್ದಾನೆ. ಕ್ಯಾಮರಾ ಚಿತ್ರಿಸಿದ್ದನ್ನು ಹೊರಗಡೆಯಿರುವ ಸಾಧನಕ್ಕೆ ರವಾನಿಸಿ,ಅಲ್ಲಿಂದ ಅದನ್ನು ಬೇಕಾದಂತೆ ಬಳಸುವ ಯೋಜನೆಯಿದೆ.ಕ್ಯಾಮರಾವನ್ನು ಪ್ರತಿಕ್ಷಣ ಚಾಲೂ ಇಡದೆ,ಖಾಸಗಿ ಕ್ಷಣಗಳ ಏಕಾಂತವನ್ನು ರಹಸ್ಯವಾಗಿಡಲೂ ಸ್ಪೆನ್ಸ್ ಬಯಸಿದ್ದಾನೆ. ಆದರೆ ಪ್ರತಿದಿನವೂ ಒಂದೇ ರೀತಿಯ ನಡವಳಿಕೆ ಪ್ರದರ್ಶಿಸುವ ಇರಾದೆಯೂ ಆತನಿಗಿಲ್ಲ. ಕೆಲವು ಸಲ ಅನಿರೀಕ್ಷಿತವಾಗಿ ತನ್ನ ಕಣ್ಣು ನೋಡುತ್ತಿರುವುದನ್ನು ಇತರರಿಗೂ ತಿಳಿಸುವುದು ಈತನ ಯೋಚನೆ.
-----------------------------------------------------
ಶಸ್ತ್ರಚಿಕಿತ್ಸೆಯಲ್ಲಿ ಎಸ್ ಎಂ ಎಸ್ ಮೂಲಕ ಸಹಾಯ
ವೈದ್ಯನೋರ್ವ ತನ್ನ ರೋಗಿಯ ಚಿಕಿತ್ಸೆಗೆ ತಜ್ಞ ವೈದ್ಯನ ಸಹಾಯವನ್ನು ಸೆಲ್ ಫೋನಿನ ಎಸ್ ಎಂ ಎಸ್ ಮೂಲಕ ಪಡೆದು,ಯಶಸ್ವಿ ಶಸ್ತ್ರಚಿಕಿತ್ಸೆಯನ್ನೂ ಮಾಡಿದರು. ಗ್ಯಾಂಗ್ರಿನ್ ಆಗಿದ್ದ ಮುಂಗೈಯ ಮೂಳೆಯನ್ನು ತೆಗೆದು ಹಾಕಲು ಬ್ರಿಟಿಶ್ ವೈದ್ಯ ಡೇವಿಡ್ ನಾಟ್ ಅವರು ತಮ್ಮ ಸಹೋದ್ಯೋಗಿ ಥಾಮಸ್ ಅವರ ಸಹಾಯ ಬಯಸಿ,ಕಿರು ಸಂದೇಶ ಕಳುಹಿಸಿದರು. ಥಾಮಸ್ ಒಡನೆಯೇ ಹಲವು ಕಿರು ಸಂದೇಶಗಳನ್ನು ಕಳುಹಿಸಿ,ಮಾರ್ಗದರ್ಶನ ಮಾಡಿದರು.ಶಸ್ತ್ರಚಿಕಿತ್ಸೆಯಲ್ಲಿ ಕೈಗೊಳ್ಳಬೇಕಾದ ಹತ್ತು ಮುನ್ನೆಚ್ಚರಿಕೆ ಮತ್ತು ಚಿಕಿತ್ಸಾ ಕ್ರಮಗಳ ಬಗ್ಗೆ ಥಾಮಸ್ ಸರಣಿ ಕಿರು ಸಂದೇಶಗಳನ್ನು ಕಳುಹಿಸಿದರು. ಅದನ್ನು ಅನುಸರಿಸಿ ಶಸ್ತ್ರಚಿಕಿತ್ಸೆ ನೆರವೇರಿಸಿದಾಗ, ಅದು ಯಶಸ್ವಿಯಾಯಿತು.
---------------------------------------------------------------
ನೋಕಿಯಾದ ಮೊಬೈಲ್ ಕಂಪ್ಯೂಟರ್
ನೋಕಿಯಾ ಕಂಪೆನಿಯ N97 ಮೊಬೈಲ್ ಫೋನಾದರೂ, ಮಿನಿ ಕಂಪ್ಯೂಟರ್‌ನಂತೆ ಕೆಲಸ ಮಾಡುತ್ತದೆ. ಸ್ಪರ್ಶ ಸಂವೇದಿ ತೆರೆ,qwerty ಕೀಲಿಮಣೆಯನ್ನಿದು ಹೊಂದಿದೆ. ಉತ್ತಮ ಗುಣಮಟ್ಟದ ಚಿತ್ರ ತೆಗೆಯಬಲ್ಲ ಕ್ಯಾಮರಾವೂ ಇದರಲ್ಲಿದೆ. ಜಿಪಿಎಸ್ ಸೌಲಭ್ಯ ಇರುವ ಕಾರಣ ಇದು ನಾವಿರುವ ತಾಣವನ್ನು ಗುರುತಿಸ ಬಲ್ಲುದು. ಅಂತರ್ಜಾಲದ ಸಾಮಾನ್ಯ ಪುಟಗಳನ್ನೂ ವೀಕ್ಷಿಸಲು ಅನುವು ಮಾಡುವಂತಹ ಮೂರೂವರೆ ಅಂಗುಲದ ಟಿಎಫ್‌ಟಿ ತೆರೆಯೂ ಇದರಲ್ಲಿದೆ. ಕರೆಗಳನ್ನು ಸ್ವೀಕರಿಸುವಾಗ, ತೆರೆಯ ಸ್ಪರ್ಶ ಸಂವೇದಿ ಗುಣವನ್ನು ನಿಷ್ಕ್ರಿಯಗೊಳಿಸುವ ಅನುಕೂಲತೆಯಿದೆ.ತೆರೆಯನ್ನು ವಿವಿಧ ಕೋನಗಳಿಗೆ ತಿರುಗಿಸಲು ಸುಲಭ ವ್ಯವಸ್ಥೆಯಿದರಲ್ಲಿ ಲಭ್ಯವಿದೆ. ಹೀಗಾಗಿ ಹೊರಗಡೆ ಬಿಸಿಲಿನಲ್ಲಿ ಬಳಸುವಾಗಲೂ, ಬೆಳಕಿನ ಪ್ರತಿಫಲನದಿಂದ ತೆರೆಯನ್ನು ನೋಡಲು ಆಗುವ ಕಿರಿಕಿರಿಯನ್ನು ಕಡಿಮೆ ಮಾಡಲು ಸಾಧ್ಯವಿದೆ.ಮಿಂಚಂಚೆಯನ್ನು ಬಳಸಲೂ ಇದು ಅನುಕೂಲಕರವಾಗಿದೆ.
----------------------------------------------------------------------------
ತೆರೆಮರೆಗೆ ಸರಿಯುತ್ತಿರುವ ಕಂಪ್ಯೂಟರ್ ಮೌಸ್
ಕಂಪ್ಯೂಟರಿಗೆ ಜೀವ ತುಂಬುವಲ್ಲಿ ಪ್ರಧಾನ ಪಾತ್ರ ವಹಿಸುವ ಕಂಪ್ಯೂಟರ್ ಮೌಸ್‌ಗೆ ಈಗ ನಲುವತ್ತರ ಹರೆಯ.ಲಾಜಿಟೆಕ್ ಎನ್ನುವ ಸ್ವಿಸ್ ಕಂಪೆನಿಯ ಮೌಸ್ ಬಹು ಜನಪ್ರಿಯ. ಅದೀಗಲೇ ಒಂದು ಬಿಲಿಯ ಮೌಸ್‌ಗಳನ್ನು ತಯಾರಿಸಿ ಹೊಸ ವಿಕ್ರಮ ಸಾಧಿಸಿದೆ.ಆದರೆ ವಿಪರ್ಯಾಸವೆಂದರೆ ಸ್ಪರ್ಶ ಸಂವೇದಿ ತೆರೆಗಳು ಡೆಸ್ಕ್ ಟಾಪ್ ಕಂಪ್ಯೂಟರಿನಲ್ಲಿ ಕಾಣಿಸಿಕೊಳ್ಳುವುದರೊಂದಿಗೆ,ಮೌಸ್‌ ಈಗ ತೆರೆಮರೆಗೆ ಸರಿಯುತ್ತಿದೆ. ಲ್ಯಾಪ್‌ಟಾಪ್ ಮತ್ತು ನೋಟ್‌ಬುಕ್ ಕಂಪ್ಯೂಟರುಗಳಲ್ಲಂತೂ ಅದು ಬಹಳ ಹಿಂದೆಯೇ ಸ್ಪರ್ಶಸಂವೇದಿ ಪ್ಯಾದುಗಳಿಗೆ ತನ್ನ ಸ್ಥಾನ ಬಿಟ್ಟುಕೊಟ್ಟಿದೆ.ಕಳೆದ ನಲುವತ್ತು ವರ್ಷಗಳಲ್ಲಿ ಮೌಸ್ ಬಹಳ ಬದಲಾಗಿದೆ. ಹೊಸ ಮೌಸುಗಳು ಬೆಳಕಿನ ಕಿರಣಗಲ ಸಹಾಯದಿಂದ ಕೆಲಸ ಮಾಡುತ್ತಿದ್ದರೆ,ಮೊದಲಿನ ಮೌಸ್‌ಗಳಲ್ಲಿ ಗೋಲಿಯೊಂದು ಸಾಧನದ ಜೀವಾಳವಾಗಿತ್ತು.ಡೊಗ್ಲಸ್ ಸಿ ಎಂಜೆಲ್ಬರ್ಟ್ ನೇತೃತ್ವದ ಸ್ಟಾನ್‌ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರ ತಂಡ,ಮೌಸನ್ನು ಸಂಶೋಧಿಸಿತು.
----------------------------------------------------------------------------
ಸ್ಪರ್ಶ,ಮಾತಿನ ಮೂಲಕ ಸಣ್ಣ ಸಾಧನಗಳಿಗೆ ಶಕ್ತಿ
ಕುರಾನ್ ಬಗ್ಗೆ ಅಂತರ್ಜಾಲ ತಾಣ
ಪೀಜೋ ವಿದ್ಯುತ್ ಪರಿಣಾಮದ ಮೂಲಕ ಸ್ಪರ್ಶ ಮತ್ತು ಮಾತು ಉಂಟು ಮಾಡುವ ಕಂಪನವನ್ನು ದುಡಿಸಿಕೊಂಡು ಶಕ್ತಿ ಉತ್ಪಾದಿಸಲು ಸಾಧ್ಯ. ಈ ತಂತ್ರವನ್ನು ಬಳಸಿಕೊಂಡು ಸಣ್ಣ ಸಾಧನಗಳು ಕೆಲಸ ಮಾದಲು ಅಗತ್ಯವಾದ ಶಕ್ತಿಯನ್ನು ಉತ್ಪಾದಿಸಲು ಸಾಧ್ಯ. ಹಾಗಾಗಿ ಅಂತಹ ತಂತ್ರಜ್ಞಾನ ಇರುವ ಸಾಧನಗಳು ಬ್ಯಾಟರಿಯನ್ನು ಚಾರ್ಜ್ ಮಾಡದೆ, ಕೆಲಸ ಮಾಡಲು ಶಕ್ತವಾಗುತ್ತವೆ.
*ಅಶೋಕ್‌ಕುಮಾರ್ ಎ

Monday, December 01, 2008

ನಿಟ್ಟೆ:ವಾರದ ಅಂತರದಲ್ಲಿ ಎರಡು ಅಂತಾರ್ರಾಷ್ಟ್ರೀಯ ಸಮಾವೇಶಗಳು


ನಿಟ್ಟೆ:ವಾರದ ಅಂತರದಲ್ಲಿ ಎರಡು ಅಂತಾರಾಷ್ಟ್ರೀಯ ಸಮಾವೇಶಗಳು
ಇ ಎಂ ಸಿ ಕಾರ್ಪೋರೇಷನ್ ಬಹುರಾಷ್ಟ್ರ್‍ಈಯ ಕಂಪೆನಿ.ಕಂಪ್ಯೂಟರ್ ದತ್ತಾಂಶ ಸಂಗ್ರಹ ತಂತ್ರಜ್ಞಾನ ಮತ್ತು ಪರಿಹಾರೋಪಾಯಗಳನ್ನು ಒದಗಿಸುವುದರಲ್ಲಿ ಕಂಪೆನಿಯದು ಎತ್ತಿದ ಕೈ. ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಜತೆ ಕಂಪೆನಿಯು ಶೈಕ್ಷಣಿಕ ಸಹಭಾಗಿತ್ವ ಹೊಂದಿದೆ. ನಿಟ್ಟೆಯಲ್ಲಿ ಡಿಸೆಂಬರ್ 3 ಮತ್ತು 4ರಂದು ಸ್ಟೋರೇಜ್ ತಂತ್ರಜ್ಞಾನ ಬಗ್ಗೆ ಎರಡು ದಿನಗಳ ಅಂತಾರಾಷ್ಟ್ರೀಯ ಸಮಾವೇಶ ಮತ್ತು ವಿಚಾರಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ.ಕಂಪ್ಯೂಟರ್ ಬಳಕೆದಾರರು ಹೆಚ್ಚುತ್ತಿರುವುದರಿಂದ ಮತ್ತು ನಮ್ಮ ಮಾಹಿತಿಗಳು,ಚಿತ್ರಗಳು,ವಿಡಿಯೋಗಳು,ಬ್ಲಾಗುಗಳು,ಪುಸ್ತಕಗಳು,ದಾಖಲೆಗಳು,ಕಡತಗಳು,ಹಾಡುಗಳ ಸಂಗ್ರಹ ಹೀಗೆ ಸರ್ವ ಮಾಹಿತಿಯೂ ಅಂತರ್ಜಾಲದಲ್ಲಿ ಸೇರಿಸಲ್ಪಡುತ್ತಿರುವುದರಿಂದ,ಪ್ರತಿಯೋರ್ವನೂ ತನ್ನ ಮಾಹಿತಿಯನ್ನು ಶೇಖರಿಸಲು ಸ್ಟೋರೇಜ್ ತಂತ್ರಜ್ಞಾನವನ್ನು ಅವಲಂಬಿಸುವುದು ಅನಿವಾರ್ಯ. ಅದರ ಜತೆಗೆ ಮಾಹಿತಿ ಮತ್ತು ದತ್ತಾಂಶಗಳು ನಾಶವಾಗದಂತೆ, ಅವುಗಳನ್ನು ಶೇಖರಿಸಿಡಲು ಅವುಗಳ ಬ್ಯಾಕಪ್ ಕೂಡಾ ಅಗತ್ಯವಾಗುತ್ತದೆ.ಬೇಕೆಂದಾಗ ಬೇಕಾದ ಮಾಹಿತಿಯನ್ನು ಪಡೆಯುವ ಸವಾಲೂ ಇದೆ. ಇವನ್ನು ನಿರ್ವಹಿಸಲು ಅತ್ಯಾಧುನಿಕ ತಾಂತ್ರಿಕತೆಯನ್ನು ಒದಗಿಸುವುದರಲ್ಲಿ ಸಿದ್ಧಹಸ್ತವಾದ ಇ ಎಂ ಸಿ ಕಾರ್ಪೋರೇಷನ್, ಸಮಾವೇಶದಲ್ಲಿ ತಜ್ಞರಿಂದ ಉಪನ್ಯಾಸಗಳನ್ನು ಮತ್ತು ವಿಚಾರಗೋಷ್ಠಿಗಳನ್ನು ಏರ್ಪಡಿಸಿದೆ. ಹೊಸ ತಂತ್ರಜ್ಞಾನಗಳು,ಸ್ಟೋರೇಜ್ ತಾಂತ್ರಿಕತೆಯಲ್ಲಿ ನವೀನ ಪರಿಕರಗಳು, ಅವಕಾಶಗಳ ಬಗ್ಗೆ ತಜ್ಞರು ವಿಚಾರಗೋಷ್ಠಿಗಳನ್ನು ನಡೆಸಿಕೊಡಲಿದ್ದಾರೆ.
ಕಂಪ್ಯೂಟರಿನಲ್ಲಿ ಯಂತ್ರಾಂಶಕ್ಕಿಂತ ತಂತ್ರಾಂಶವೇ ದುಬಾರಿ ಆಗಿರುವ ದಿನಗಳಿವು.ತಂತ್ರಾಂಶಕ್ಕೆ ಹಣತೆತ್ತ ನಂತರವೂ ಅದನ್ನು ತನ್ನ ಉಪಯೋಗಕ್ಕೆ ಸರಿಯಾಗುವ ರೀತಿಯಲ್ಲಿ ಬದಲಿಸಲು ಬಳಕೆದಾರನಿಗೆ ಅವಕಾಶ ಇರದು. ಕಾರಣ ತಂತ್ರಾಂಶದ ಕ್ರಮವಿಧಿಯ ಸಾಲುಗಳ ಬಗ್ಗೆ ಬಳಕೆದಾರನಿಗೆ ಮಾಹಿತಿ ಸಿಗದು.ಆದರೆ ಮುಕ್ತ ತಂತ್ರಾಂಶವನ್ನು ಬಳಸುವಾಗ, ಅದರ ಕ್ರಮವಿಧಿಯ ಸಾಲುಗಳು ಲಭ್ಯವಾಗುತ್ತದೆ. ಬೇಕೆಂದರೆ ಅದನ್ನು ಮಾರ್ಪಡಿಸಿ ಬಳಸುವ ಸ್ವಾತಂತ್ರ್ಯ ಬಳಕೆದಾರನಿಗಿದೆ. ಇಂತಹ ಮುಕ್ತ ತಂತ್ರಾಂಶಗಳ ಅಭಿವೃದ್ಧಿಯಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಲು ನಿಟ್ಟೆ ಇಂಜಿನಿಯರಿಂಗ್ ಕಾಲೇಜು ಬಹುರಾಷ್ಟ್ರೀಯ ಕಂಪೆನಿ ಹ್ಯುಲೆಟ್ ಪ್ಯಕರ್ಡ್(ಎಚ್ ಪಿ) ಕಂಪೆನಿಯ ಜತೆ ಸೇರಿ, ಮುಕ್ತ ತಂತ್ರಾಂಶ ಆಧಾರಿತ ಕಂಪ್ಯೂಟಿಂಗ್ ಬಗ್ಗೆ ಅಂತಾರಾಷ್ಟ್ರೀಯ ಸಮಾವೇಶವನ್ನು ಆಯೋಜಿಸಿದೆ.ಇದು ನಿಟ್ಟೆಯಲ್ಲಿ ಡಿಸೆಂಬರ್ ಹನ್ನೆರಡು ಮತ್ತು ಹದಿಮೂರರಂದು ನಡೆಯಲಿದೆ.ಎಚ್ ಪಿ ಕಂಪೆನಿ, ಸಿಡ್ಯಾಕ್ ಮತ್ತು ಎನ್ ಐ ಟಿ ಕೆ,ಸುರತ್ಕಲ್‌ನ ತಜ್ಞರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.ನಿಟ್ಟೆಯಂತಹ ಗ್ರಾಮೀಣ ಭಾಗದಲ್ಲಿ ಒಂದು ವಾರದ ಅಂತರದಲ್ಲಿ ಎರಡು ಅಂತಾರಾಷ್ಟ್ರೀಯ ಸಮಾವೇಶಗಳು ನಡೆಯುವುದು ಒಂದು ದಾಖಲೆಯೇ ಸರಿ.
--------------------------------------------------------------
ಲೈಬ್ರೇರಿ ಅಂತರ್ಜಾಲ ತಾಣ ವಿಫಲ
Europeana.eu ಎನ್ನುವ ಅಂತರ್ಜಾಲ ತಾಣದಲ್ಲಿ ಪುಸ್ತಕಗಳ,ನಕಾಶೆ,ಚಿತ್ರ,ವಿಡಿಯೋ ಇತ್ಯಾದಿ ಮಾಹಿತಿಗಳ ಬೃಹತ್ ಸಂಗ್ರಹ ಇದ್ದು, ಆರಂಭವಾದ ಹೊಸದರಲ್ಲೇ ಭಾರೀ ಸಂಖ್ಯೆಯಲ್ಲಿ ಬಳಕೆದಾರರನ್ನು ಆಕರ್ಷಿಸುತ್ತಿದ್ದು, ಗಂಟೆಗೆ ಹತ್ತು ದಶಲಕ್ಷಕಿಂತಲೂ ಅಧಿಕ ಜಾಲಿಗರನ್ನು ಸೆಳೆದಿತ್ತು. ಇದು ತಾಣದ ಸಾಮರ್ಥ್ಯದ ದುಪ್ಪಟ್ಟು. ಹೀಗಾಗಿ ಅಂತರ್ಜಾಲ ತಾಣವು ಕುಸಿದು ಬಿಟ್ಟಿದೆ. ಇನ್ನು ಅಗತ್ಯವಾದ ಸುಧಾರಣೆ ಮಾಡಿ, ತಾಣವು ವಿಪರೀತ ಒತ್ತಡವನ್ನು ತಡೆದುಕೊಳ್ಳುವಂತೆ ಸೂಕ್ತ ಮಾರ್ಪಾಡು ಮಾಡಿಕೊಂಡು ಮುಂದಿನ ತಿಂಗಳು ಮತ್ತೆ ತಾಣವನ್ನು ಪುನರಾರಂಭಿಸಲಾಗುತ್ತದೆ.ಯುರೋಪಿನ ಸಾವಿರಕ್ಕೂ ಹೆಚ್ಚು ಗ್ರಂಥಾಲಯಗಳು,ಮ್ಯೂಸಿಯಮ್‌ಗಳ ಸಂಗ್ರಹ ಇಲ್ಲಿ ಲಭ್ಯವಿತ್ತು.ಜರ್ಮನಿ,ಫ್ರಾನ್ಸ್, ಸ್ಪೈನ್‌ಗಳಲ್ಲಿ ತಾಣದ ಬಳಕೆದಾರರು ದೊಡ್ಡ ಸಂಖ್ಯೆಯಲ್ಲಿದ್ದಾರೆ.
-----------------------------------------------------------
ಭಯೋತ್ಪಾದನೆ ವಿರುದ್ಧ ತಂತ್ರಜ್ಞಾನ ಬಳಕೆ
ಭಯೋತ್ಪಾದಕರು ಮನಬಂದಂತೆ ದಾಳಿ ಮಾಡಿ,ನಮ್ಮ ಜನಜೀವನವನ್ನು ಅಸ್ತವ್ಯಸ್ತಗೊಳಿಸಿ,ಜನರನ್ನು ಭಯಗ್ರಸ್ತರಾಗಿ ಮಾಡುತ್ತಿರುವುದು ಪದೇ ಪದೇ ನಡೆಯುತ್ತಿದೆ. ದಿನದ ಇಪ್ಪತ್ತನಾಲ್ಕು ಗಂಟೆಯೂ, ಇಂತಹ ದಾಳಿಗಳ ಮೇಲೆ ಕಣ್ಣಿಟ್ಟು,ಮುನ್ಸೂಚನೆ ನೀಡಲು ಹೈಟೆಕ್ ತಂತ್ರಜ್ಞಾನಕ್ಕೆ ಶರಣು ಹೋಗದೆ ಅನ್ಯಮಾರ್ಗವಿಲ್ಲ.ಭಯೋತ್ಪಾದಕರು ಮುಂಬರುವ ದಿನಗಳಲ್ಲಿ ತಮ್ಮ ಶೈಲಿಯನ್ನು ಬದಲಿಸಿಕೊಳ್ಳುವುದರಲ್ಲಿ ಸಂಶಯವಿಲ್ಲ. ಹೆಚ್ಚು ಜನರನ್ನು ಬಲಿ ತೆಗೆದುಕೊಳ್ಳಲು,ಶಾಪಿಂಗ್ ಮಾಲ್‌ಗಳು, ಜನನಿಬಿಡ ಪ್ರದೇಶಗಳು,ಉತ್ಸವಾಚರಣೆಯಂತಹ ಅವಕಾಶಗಳನ್ನು ಬಳಸಿಕೊಳ್ಳುವುದರಲ್ಲಿ ಸಂಶಯವಿಲ್ಲ.
ಕೆನಡಾದ ಸಸ್ಕೆಚೇವನ್ ವಿಶ್ವವಿದ್ಯಾಲಯದ ಇಂಜಿನಿಯರಿಂಗ್ ಕಾಲೇಜಿನ ಸಂಶೋಧಕರು ಹೈಟೆಕ್ ಬಳಸಿ,ಭಯೋತ್ಪಾದನೆಯನ್ನು ಸಮರ್ಥವಾಗಿ ಮುನ್ಸೂಚನೆ ನೀಡಿ, ಎದುರಿಸುವ ವ್ಯವಸ್ಥೆ ಇ-ವಾರ್ ಯೋಜನೆಯನ್ನು ಅಭಿವೃದ್ಧಿ ಪಡಿಸಲು ಪ್ರಯತ್ನಿಸುತ್ತಿದ್ದಾರೆ. ಜನನಿಬಿಡ ಕಟ್ಟಡಗಳ ವಾತಾನುಕೂಲಿ ವ್ಯವಸ್ಥೆಗಳಲ್ಲಿ ವಿಷಯುಕ್ತ ರಾಸಾಯಿನಿಕ ಅನಿಲಗಳನ್ನು ಸೇರಿಸುವುದು,ಕುಡಿಯುವ ನೀರಿನ ಮೂಲಗಳನ್ನು ವಿಷಯುಕ್ತಗೊಳಿಸುವುದು, ಆಹಾರಕ್ಕೆ ವಿಷವೂಡುವುದು ಮುಂತಾದ ಹೊಸ ತಂತ್ರಗಳನ್ನು ಭಯೋತ್ಪಾದಕರು ಬಳಸುವುದು ಸಂಭವನೀಯ. ಇಂತಹ ದಾಳಿಗಳು ನಡೆಯದಂತೆ ತಡೆಯಲು ತಂತ್ರಜ್ಞಾನದ ಬಳಕೆ ಆಗಬೇಕಿದೆ. ಅದಲ್ಲದೆ ಒಂದು ವೇಳೆ ಇಂತಹ ದಾಳಿಗಳು ನಡೆದಾಗ,ಅದನ್ನು ತಕ್ಷಣ ಪತ್ತೆ ಹಚ್ಚಿ, ಅದರ ವಿಶ್ಲೇಷಣೆ ನಡೆಸಿ,ಪ್ರತಿಬಂಧಕ ಕ್ರಮಗಳನ್ನು ಕೈಗೊಳ್ಳಲೂ ಹೈಟೆಕ್ ತಂತ್ರಜ್ಞಾನ ಲಭ್ಯವಿರಬೇಕು.ಬಾಂಬುಗಳ ಪತ್ತೆಗೆ ಸೆನ್ಸರ್‌ಗಳ ಬಳಕೆ,ಬಸ್ಸು ನಿಲ್ದಾಣ ಮತ್ತು ರೈಲ್ವೇ ನಿಲ್ದಾಣಗಳಲ್ಲಿ ವಾರಸುದಾರರಿಲ್ಲದ ಸೂಟ್‌ಕೇಸ್,ಪಾರ್ಸೆಲುಗಳನ್ನು ಪತ್ತೆ ಮಾಡಲು ಸೆನ್ಸರುಗಳ ಬಳಕೆ ಸಾಧ್ಯವೇ ಎನ್ನುವುದನ್ನು ಸಂಶೋಧಿಸಲು ಮತ್ತು ಹೈಟೆಕ್ ವ್ಯವಸ್ಥೆಗಳನ್ನು ಅಭಿವೃದ್ಧಿ ಪಡಿಸಲು ಇ-ವಾರ್ ಯೋಜನೆ ಗಮನಕೊಡಲಿದೆ.ಈ ಕೆಲಸಕ್ಕೆ ಭಾರತದ ತಂತ್ರಜ್ಞರ ಸಹಾಯವನ್ನೂ ಪಡೆದುಕೊಳ್ಳಲು ವಿಶ್ವವಿದ್ಯಾಲಯ ಉದ್ದೇಶಿಸಿದೆ.
------------------------------------------------------
ಉಗ್ರರ ದಾಳಿ ಮತ್ತು ಅಂತರ್ಜಾಲ
ಮುಂಬೈಯಲ್ಲಿ ಉಗ್ರರದಾಳಿ ವೇಳೆ ಅಂತರ್ಜಾಲ ಮಾಧ್ಯಮವು ಕ್ರಿಯಾಶೀಲವಾಗಿದ್ದು ಕಂಡು ಬಂತು. ಭಯೋತ್ಪಾದಕ ದಾಳಿ ನಡೆದ ಕ್ಷಣದಿಂದಲೇ ಟ್ವಿಟ್ಟರ್ ಎನ್ನುವ ಜಾಲತಾಣದಲ್ಲಿ ಬಳಕೆದಾರರು, ತಮ್ಮ ಅನುಭವವನ್ನು ಕಿರು ಸಂದೇಶಗಳ ಮೂಲಕ ದಾಖಲಿಸಲಾರಂಭಿಸಿದರು. ಫ್ಲಿಕರ್ ಎನ್ನುವ ಚಿತ್ರವನ್ನು ಇತರರೊಡನೆ ಹಂಚಿಕೊಳ್ಳುವ ಅಂತರ್ಜಾಲ ತಾಣದಲ್ಲಿ ಚಿತ್ರಗಳ ಮಹಾಪೂರವೇ ಬರಲಾರಂಭಿಸಿತು. ಮೊಬೈಲ್ ಫೋನ್, ಕ್ಯಾಮರಾಗಳಲ್ಲಿ ಸೆರೆ ಹಿಡಿದ ದಾಳಿಯ ಕುರಿತಾದ ಚಿತ್ರಗಳು ಇಲ್ಲಿ ಧಾರಾಳವಾಗಿ ಕಂಡುಬಂದುವು. ಯುಟ್ಯೂಬ್ ತಾಣದಲ್ಲಿ ವಿಡಿಯೋ ಕ್ಲಿಪ್ಪಿಂಗ್‌ಗಳಿಗೆ ಬರವಿರಲಿಲ್ಲ. ಬ್ಲಾಗ್‌ಗಳಲಿಯೂ ಜನರು ತಮ್ಮ ಅನಿಸಿಕೆಗಳು,ಹತಾಶೆಗಳನ್ನು ಬರೆದುಕೊಂಡು ನಿರಾಳವಾದರು.
 
googledc7e93ba1a7703ae.html