Monday, July 06, 2009

ಸುಲಭದಲ್ಲಿ ಚಿತ್ರಿಸಿ

ಸುಲಭದಲ್ಲಿ ಚಿತ್ರಿಸಿ



ನಿಮಗೆ ಲೇಖನವೊಂದಕ್ಕೆ ವಿವರಣಾತ್ಮಕ ಚಿತ್ರಗಳು ಬೇಕೇ?ಇವನ್ನು ರಚಿಸಲು ಹೆಚ್ಚು ಪರಿಶ್ರಮ ಪಡಬೇಕಿಲ್ಲ. ಡಯಾ(http://dia-installer.de/index_en.html ಎನ್ನುವ ಸುಲಭದಲ್ಲಿ ಚಿತ್ರ ರಚಿಸುವ ತಂತ್ರಾಂಶವು ಲಭ್ಯವಿದೆ. ಇದೊಂದು ಮುಕ್ತ ತಂತ್ರಾಂಶವಾಗಿದ್ದು,ವಿಂಡೋಸ್ ಆವೃತ್ತಿಯೂ ಲಭ್ಯ.ಲಿನಕ್ಸ್ ಕಾರ್ಯನಿರ್ವಹಣಾ ತಂತ್ರಾಂಶದಲ್ಲೂ ಇದು ಲಭ್ಯವಿದೆ. ಕಂಪ್ಯೂಟರ್ ಜಾಲ ಇತ್ಯಾದಿಗಳ ಚಿತ್ರ ರಚಿಸುವುದಂತೂ ಚಿಟಿಕೆ ಹೊಡೆದಷ್ಟೇ ಸುಲಭವಾಗಿಸುವ ತಂತ್ರಾಂಶ ಎಲ್ಲರ ಕಂಪ್ಯೂಟರಿನಲ್ಲೂ ಸ್ಥಾನ ಪಡೆದರೆ ಅಚ್ಚರಿಯಿಲ್ಲ.
---------------------------------------------------
ಮುದ್ರಿಸ ಬಹುದಾದ ಬ್ಯಾಟರಿ
ಬ್ಯಾಟರಿಯನ್ನು ಮುದ್ರಿಸುವುದೇ?ಹೌದು,ಒಂದೂವರೆ ವೋಲ್ಟಿನ ಒಂದು ಮಿಲಿಮೀಟರ್ ದಪ್ಪದ ಬ್ಯಾಟರಿಗಳನ್ನು,ರೇಷ್ಮೆ ಬಟ್ಟೆಯಲ್ಲಿ ಮುದ್ರಿಸುವ ತಂತ್ರಜ್ಞಾನಕ್ಕೆ ಸಮಾನವಾದ ರೀತಿಯಲ್ಲಿ ತಯಾರಿಸಬಹುದು. ಇದು ಜರ್ಮನಿಯ ಫ಼್ರಾನ‌ಹೋಪರ್ ಸಂಶೋಧನಾಲಯದ ವಿಜ್ಞಾನಿಗಳ ಸಂಶೋಧನೆಯ ಫಲ. ಸಣ್ಣ ಗಾತ್ರದ ಈ ಬ್ಯಾಟರಿಗಳ ಬಾಳಿಕೆ ಕಡಿಮೆ. ಇವನ್ನು ಕಾರ್ಡುಗಳಲ್ಲಿ ಬಳಸಲುದ್ದೇಶಿಸಲಾಗಿದೆ.ಬಳಸಿ ಎಸೆಯುವ ವಸ್ತುಗಳಲ್ಲಿ ಇವನ್ನು ಬಳಸುವುದು ಅನುಕೂಲಕರ.ಪಾದರಸದಂತಹ ವಿಷಕಾರಿ ಲೋಹಗಳನ್ನು ಬಳಸಬೇಕಿಲ್ಲದಿರುವುದು, ಈ ಬ್ಯಾಟರಿಗಳ ಇನ್ನೊಂದು ಧನಾತ್ಮಕ ಅಂಶ.ತಯಾರಿಸಲು ಅಗ್ಗ ಮತ್ತು ಇವನ್ನು ದೊಡ್ಡ ಸಂಖ್ಯೆಯಲ್ಲಿ ತಯಾರಿಸುವುದು ಸಾಧ್ಯ.
-----------------------------------------------
ನಿರ್ಧಾರ ಕೈಗೊಳ್ಳಲು ಸಹಾಯಹಸ್ತ

ಕಂಪ್ಯೂಟರ್ ಖರೀದಿಸಲು ಬಯಸುತ್ತೀರಾ? ಲ್ಯಾಪ್‌ಟಾಪ್ ಅಥವ ಡೆಸ್ಕ್‌ಟಾಪ್-ಇವುಗಳ ಪೈಕಿ ಯಾವುದು ಹಿತ ಎಂದು ನಿರ್ಧರಿಸಲು ಕಷ್ಟವಾಗುತ್ತಿದೆಯೇ? ಇಂತಹ ನಿರ್ಣಯಗಳನ್ನು ಕೈಗೊಳ್ಳಲು ಸಹಾಯ ಮಾಡುವ ಅಂತರ್ಜಾಲ ತಾಣವೇ www.hunch.com. ನಿಮ್ಮ ಬಜೆಟ್,ಯಾವ ಕೆಲಸಗಳಿಗೆ ನೀವು ಕಂಪ್ಯೂಟರ್ ಬಳಸುತ್ತೀರಿ? ನಿಮ್ಮ ಉದ್ಯೋಗ ಯಾವ ತೆರನದ್ದು ಮೊದಲಾದ ಪ್ರಶ್ನೆಗಳನ್ನು ಕೇಳಿ,ನಿಮಗೆ ಸುಕ್ತ ಸಲಹೆ ನೀಡುವ ಸೇವೆ ಈ ತಾಣದಲ್ಲಿ ಲಭ್ಯ.ನೀವು ಉತ್ತರಿಸಲು ಬಯಸದ ಪ್ರಶ್ನೆಗಳನ್ನು ಬಿಡಲು ಸಾಧ್ಯವಿದೆ.ಹತ್ತು ಪ್ರಶ್ನೆಗಳನ್ನು ಕೇಳಿ ನಿಮಗೆ ಸಲಹೆ ನೀಡಲು ತಾಣವು ಸಮರ್ಥವಾಗಿದೆ.
----------------------------------------------------------
ದೂರುಗಂಟೆ ಬಾರಿಸಲು ಟ್ವಿಟರ್ ಬಳಕೆ
ಗ್ರಾಹಕರು ತಮ್ಮ ದೂರುಗಳಿಗೆ ಪರಿಹಾರ ಕಂಡುಕೊಳ್ಳಲು ಗ್ರಾಹಕ ಸೇವಾ ಕೇಂದ್ರಗಳಿಗೆ ದೂರವಾಣಿ ಕರೆ ಮಾಡುವುದಿದೆ. ಆದರೆ ಹಲವೊಮ್ಮೆ ಈ ಮಾರ್ಗ ನಿರೀಕ್ಷಿತ ಪರಿಣಾಮ ಬೀರದಿರಬಹುದು. ಈಗೀಗ ಗ್ರಾಹಕರು ಟ್ವಿಟರ್ ಅಂತರ್ಜಾಲ ಸೇವೆ (www.twitter.com) ಬಳಸಿ ತಮ್ಮ ದೂರುಗಳನ್ನು ಬಗೆಹರಿಸಿಕೊಳ್ಳಲು ಯಶಸ್ವಿಯಾಗುತ್ತಿದ್ದಾರೆ.ಜನ ಸಾಮಾನ್ಯರ ಹಾಗೆ ಪತ್ರಿಕೆಗಳು,ಸಂಸ್ಥೆಗಳೂ ಟ್ವಿಟರ್ ಖಾತೆ ಹೊಂದಿರುತ್ತಾರೆ. ಇತ್ತೀಚೆಗೆ ವಿಮಾನ ಪ್ರಯಾಣಿಕರೊಬ್ಬರು ತನಗೆ ಹಾಗೂ ತಮ್ಮ ಕುಟುಂಬದವರಿಗೆ ಜತೆಯಾಗಿ ಸೀಟು ಕಾಯ್ದಿರಿಸದ್ದು ನೋಡಿ,ಕರೆ ಮಾಡಿದಾಗ ಅವರ ದೂರಿಗೆ ಪ್ರತಿಕ್ರಿಯೆ ಬರಲಿಲ್ಲ.ಆದರವರು ಈ ವಿಷಯವನ್ನು ಟ್ವಿಟರ್ ಮೂಲಕ ವಿಮಾನ ಕಂಪೆನಿಗೆ ತಿಳಿಸಿದ ಕೆಲವೇ ನಿಮಿಷಗಳಲ್ಲಿ ಅವರ ದೂರಿನ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬ ಪ್ರತಿಕ್ರಿಯೆ ಬಂತು. ನಂತರ ಸ್ವಲ್ಪವೇ ಹೊತ್ತಿನಲ್ಲಿ ಅವರಿಗೆ ಬೇಕಾದ ರೀತಿಯೇ ಸೀಟೂ ನಿಗದಿಯಾಯಿತು. ಇಂತಹ ಅನುಭವಗಳು ಸಾಕಷ್ಟು ಜನರಿಗೆ ಆದ ಬಗ್ಗೆ ವರದಿಗಳಿವೆ. ಕಂಪೆನಿಯ ಟ್ವಿಟರ್ ಖಾತೆಯನ್ನು ಲಕ್ಷಾಂತರ ಜನರು ಅನುಸರಿಸುತ್ತಿರುತ್ತಾರೆ. ಹಾಗಾಗಿ ಒಬ್ಬರು ಬರೆದ ದೂರು ಇತರರಿಗೂ ಗೊತ್ತಾಗುತ್ತದೆ. ಇದು ಕಂಪೆನಿಯ ಇಮೇಜನ್ನು ಕೆಡಿಸುವ ಅಪಾಯ ಇರುವ ಕಾರಣ ಕಂಪೆನಿಗಳು ಸುಮ್ಮನಿರುವುದಿಲ್ಲ. ಅವರು ಪ್ರತಿಕ್ರಿಯೆ ನೀಡಿದರೆ,ಅವರು ಚುರುಕಾಗಿದ್ದಾರೆ ಎಂಬಂಶವೂ ಇತರರಿಗೆ ತಿಳಿದು,ಗ್ರಾಹಕರು ಕಂಪೆನಿಯ ಬಗ್ಗೆ ಉತ್ತಮ ಅಭಿಪ್ರಾಯ ಹೊಂದುತ್ತಾರೆ. ಹೀಗಾಗಿ ಟ್ವಿಟರ್ ಸಂದೇಶಗಳನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳಲಾಗುತ್ತಿದೆ.
-------------------------------------------------
ಅಮೆರಿಕಾ ಚಂದ್ರಯಾನ ಸುಳ್ಳೇ?
ಅಮೆರಿಕನ್ನರು ಚಂದ್ರನ ಮೇಲೆ ಕಾಲಿರಿಸಿದ್ದು ಕಟ್ಟು ಕತೆ ಎಂದು ನಂಬುವವರು ಬಹಳಷ್ಟಿದ್ದಾರೆ.ಇದನ್ನು ಪುಷ್ಟೀಕರಿಸಲು ಕೆಲವು ವಾದಗಳನ್ನು ಮುಂದಿಡಲಾಗುತ್ತಿತ್ತು.ಈ ಸವಾಲುಗಳಿಗೆ ಸಮಾಧಾನ ಹೇಳುವ ಪ್ರಯತ್ನ ಇತ್ತೀಚೆಗೆ ನಡೆದಿದೆ. ಚಂದ್ರನ ಮೇಲೆ ಅಮೆರಿಕನ್ನರು ನೆಟ್ಟ ಧ್ವಜ ಅಲುಗಾಡಿದ್ದು ಹೇಗೆ ಎಂಬ ಸವಾಲಿಗೆ ,ಅದು ಅಲುಗಾಡಿದಾಗ ಯಾವನಾದರೂ ಗಗನಯಾತ್ರಿ ಧ್ವಜವನ್ನು ಹಿಡಿದಿದ್ದರು ಎಂಬ ಸಮಾಧಾನ ನೀಡಲಾಗಿದೆ.ಚಿತ್ರಗಳಲ್ಲಿ ವಿವಿಧ ವಸ್ತುಗಳ ನೆರಳುಗಳು ಬೇರೆ ಬೇರೆ ಕೋನಗಳಲ್ಲಿ ಇವೆ,ಇದು ಸ್ಟುಡಿಯೋ ಚಿತ್ರೀಕರಣದಂತೆ ಹಲವು ಬೆಳಕಿನ ಮೂಲಗಳ ಉಪಯೋಗ ಮಾಡಿದ್ದರ ಫಲ ಎನ್ನುವ ವಾದ ಮುಂದಿಡಲಾಗುತ್ತಿತ್ತು. ಹಾಗೇನಾದರೂ ಆದರೆ ಒಂದು ವಸ್ತು ಒಂದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ನೆರಳು ಬೀರಬೇಕಿತ್ತು.ಚಂದ್ರನ ಮೇಲ್ಮೈಯಲ್ಲಿ ಸೂರ್ಯ ಪ್ರಕಾಶ ಮತ್ತು ನೆಲದ ಏರು ತಗ್ಗುಗಳು ಇಂತಹ ನೆರಳು ಉಂಟಾಗಲು ಕಾರಣವಿರಬಹುದು ಎಂಬ ತರ್ಕ ಮುಂದಿಡಲಾಗುತ್ತಿದೆ. ಗಗನಯಾತ್ರಿಗಳೆಲ್ಲರೂ ಚಿತ್ರದಲ್ಲಿದ್ದಾಗ ಚಿತ್ರೀಕರಿಸಿದವರು ಯಾರು ಎಂಬ ಪ್ರಶ್ನೆಗೆ ಅದು ಬಾಹ್ಯಾಕಾಶ ವಾಹನದ ಕ್ಯಾಮರ ತೆಗೆದ ಚಿತ್ರ ಎಂಬ ಸಮರ್ಥನೆ ನೀಡಲಾಗಿದೆ.ಹಬಲ್ ದೂರದರ್ಶಕದ ಮೂಲಕ ಚಂದ್ರನ ಮೇಲ್ಮೈಯಲ್ಲಿ ಬಿಡಲಾಗಿರುವುದೆನ್ನಲಾದ ಬಾಹ್ಯಾಕಾಶ ವಾಹನದ ಚಿತ್ರವನ್ನು ತೆಗೆದು ತೋರಿಸಲು ನಾಸಾ ಪ್ರಯತ್ನಿಸಿಲ್ಲವೇಕೆ ಎಂಬ ಪ್ರಶ್ನೆಗೆ ದೂರದರ್ಶಕವು ಹತ್ತು ಮೀಟರಿಗಿಂತ ಕಡಿಮೆ ಅಳತೆಯ ವಸ್ತುಗಳನ್ನು ಚಿತ್ರೀಕರಿಸಲು ಸಮರ್ಥವಾಗಿಲ್ಲ ಎಂಬ ವಾದ ಮುಂದೊಡ್ದಲಾಗಿದೆ.ಚಂದ್ರನ ಮೇಲ್ಮೈಯಲ್ಲಿ ಗಗನಯಾತ್ರಿಗಳ ಹೆಜ್ಜೆ ಗುರುತುಗಳು ಮೂಡಲು ಅಲ್ಲಿ ನೀರ ಪಸೆ ಇತ್ತೇ ಎಂಬ ಪ್ರಶ್ನೆಗೆ ಚಂದ್ರನ ಮೇಲ್ಮೈಯಲ್ಲಿರುವ ಉಸುಕಿಗೂ ಭೂಮಿಯಲ್ಲಿರುವ ಉಸುಕಿಗೂ ವ್ಯತ್ಯಾಸವಿದೆ. ಅಲ್ಲಿ ಹೆಜ್ಜೆ ಗುರುತುಗಳು ಮೂಡಲು ನೀರ ಪಸೆ ಅಗತ್ಯವಿಲ್ಲ ಎಂಬ ತರ್ಕಿಸಲಾಗಿದೆ.ಇನ್ನು ಚಿತ್ರಗಳಲ್ಲಿ ಹಿನ್ನೆಲೆಯ ಆಗಸದಲ್ಲಿ ನಕ್ಷತ್ರಗಳು ಮೂಡದಿರುವುದಕ್ಕೆ ಅತಿ ವೇಗದ ಶಟರ್ ಸ್ಪೀಡ್ ಬಳಸಿ ಚಿತ್ರೀಕರಿಸಿದುದರಿಂದ ಹೀಗಾದೀತು ಎಂಬ ಅಭಿಪ್ರಾಯ ವ್ಯಕ್ತ ಪಡಿಸಲಾಗಿದೆ.ಚಂದ್ರನಿಂದ ಹಿಂದಿರುಗುವ ರಾಕೆಟಿನಲ್ಲಿ ಜ್ವಾಲೆ ಇಲ್ಲದ್ದಕ್ಕೆ ಕಾರಣ,ರಾಕೆಟ್ಟಿನಲ್ಲಿ ಬಳಸಿದ ನೈಟ್ರೋಜನ್ ಟೆಟ್ರಾಕ್ಸೈಡ್ ಮತ್ತು ಎರೋಜೈನ್‌ನ ಜ್ವಾಲೆಗಳು ಪಾರದರ್ಶಕವಾಗಿದ್ದು,ಚಿತ್ರದಲ್ಲಿ ಮೂಡಿಲ್ಲವೆನ್ನಲಾಗಿದೆ.
*ಅಶೋಕ್‍ಕುಮಾರ್ ಎ

ಉದಯವಾಣಿ

1 comments:

ಟಿ ಜಿ ಶ್ರೀನಿಧಿ said...

ಚಂದ್ರನ ಮೇಲೆ ಇಳಿದಿದ್ದಕ್ಕೆ ಪ್ರೂಫು ಅಂತ ಒಂದಷ್ಟು ಚಿತ್ರಗಳು ನಿನ್ನೆ-ಮೊನ್ನೆ ರಿಲೀಸಾಗಿವೆ. ಅದ್ಯಾವುದೋ ಸ್ಪೇಸ್ ಕ್ರಾಫ್ಟು ತೆಗೆದಿದ್ದಂತೆ. ಆರೋ ಮಾರ್ಕ್ ಹಾಕಿ ಒಂದಷ್ಟು ಜಾಗ/ವಿಷಯಗಳನ್ನು ಗುರುತಿಸಿದ್ದಾರೆ. ನನಗಂತೂ ಆ ಚಿತ್ರಗಳಲ್ಲಿ ಏನಿದೆ ಅಂತ ಅರ್ಥ ಆಗಲಿಲ್ಲ :-)

 
googledc7e93ba1a7703ae.html