Monday, July 20, 2009

ಸೈಕ್ಲಿಂಗ್ ಬಗ್ಗೆ ಬ್ಲಾಗ್

ಗ್ರಂಥಾಲಯಕ್ಕೆ ಜನರನ್ನು ಆಕರ್ಷಿಸಲು ಅಂತರ್ಜಾಲ ಸೇವೆ ಒದಗಿಸಿ!
ಅಲಾಸ್ಕಾದ ಹೂನಾ ಸಾವಿರ ಜನರು ವಾಸಿಸುವ ಪಟ್ಟಣ. ದ್ವೀಪದ ಭಾಗವಾದ ಈ ಪಟ್ಟಣದಲ್ಲಿ ಅಲೆಮಾರಿ ಜನಾಂಗದ ಜನರೇ ವಾಸವಾಗಿದ್ದಾರೆ. ಹೊರ ಜಗತ್ತಿನ ಜತೆ ಸಂಪರ್ಕಕ್ಕೆ ಅಂತರ್ಜಾಲವೇ ಪ್ರಮುಖ ಸಾಧನ. ಅಂತರ್ಜಾಲ ಸಂಪರ್ಕ ಲಭ್ಯವಿರುವುದು ಇಲ್ಲಿನ ಗ್ರಂಥಾಲಯದಲ್ಲಿ.ಆದ್ದರಿಂದಲೇ ಗ್ರಂಥಾಲಯಕ್ಕೆ ಜನರು ಬರುತ್ತಾರೆ.ಒಂದೋ ಅಲ್ಲಿನ ಡೆಸ್ಕ್‌ಟಾಪ್ ಕಂಪ್ಯೂಟರುಗಳ ಮೂಲಕ ಇಲ್ಲವೇ ತಮ್ಮ ಲ್ಯಾಪ್‌ಟಾಪುಗಳ ಮುಖಾಂತರ ಅಂತರ್ಜಾಲ ಜಾಲಾಡುತ್ತಿರುವುದು ಇಲ್ಲಿ ಕಂಡು ಬರುವ ಸಾಮಾನ್ಯ ದೃಶ್ಯ.ಅರ್ಧಕ್ಕರ್ಧ ಜನ ಅಂತರ್ಜಾಲಕ್ಕೋಸ್ಕರವೇ ಗ್ರಂಥಾಲಯಕ್ಕೆ ಬರುತ್ತಾರೆ.ಗ್ರಂಥಾಲಯಕ್ಕೆ ಧನಸಹಾಯ ಲಭ್ಯವಾಗ ಬೇಕಾದರೆ,ಜನರು ಅಲ್ಲಿಗೆ ಬರುತ್ತಿರುವುದು ಅಗತ್ಯ. ಹೀಗಾಗಿ ಜನರು ಅಂತರ್ಜಾಲ ಸೇವೆ ಪಡೆಯಲು ಇಲ್ಲಿಗೆ ಬರುತ್ತಿರುವುದರಿಂದ ಗ್ರಂಥಾಲಯವೂ ಮುಂದುವರಿದುಕೊಂಡು ಹೋಗುತ್ತಿದೆ.ಗ್ರಂಥಾಲಯಕ್ಕೆ ಜನರು ಬರದೆ,ಸೊರಗುತ್ತಿರುವ ಇಂದಿನ ದಿನಗಳಲ್ಲಿ,ಅಂತರ್ಜಾಲ ಸೇವೆಯ ಕಾರಣ ಗ್ರಂಥಾಲಯ ಜನರನ್ನು ಆಕರ್ಷಿಸುತ್ತಿರುವುದು ನಮ್ಮ ಸರಕಾರದ ಕಣ್ಣನ್ನೂ ತೆರೆಸಲಿ!
-------------------------------------------------------------
ಸೈಕ್ಲಿಂಗ್ ಬಗ್ಗೆ ಬ್ಲಾಗ್

ಬೆಂಗಳೂರಿನಲ್ಲೀಗ ಸೈಕಲ್‌ಗೆ ಶರಣಾಗಿ,ಮೋಟಾರು ವಾಹನಗಳನ್ನು ಹಿಂದಿಕ್ಕಲು ಸಾಧ್ಯವಂತೆ.ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ನೀರಿನ ಬಗ್ಗೆ ಅಧ್ಯಯನ ಮಾಡುತ್ತಾ ಬೈಕಿನಲ್ಲಿ ಸಾಗಿ ಸುದ್ದಿ ಮಾಡಿದ್ದ ಸಿ.ಶಾರದಾ ಪ್ರಸಾದ್(ಸಿಎಸ್ಪಿ),"ತರಂಗ" ಪತ್ರಿಕೆಯ ಮುಖಪುಟದಲ್ಲೂ ಮಿಂಚಿದ್ದರು.ಈಗವರು ಸೈಕಲ್ ಯಾತ್ರೆಯ ಬಗ್ಗೆ ತಯಾರಿ ನಡೆಸುತ್ತಿದ್ದಾರೆ. ಡಿಸೆಂಬರಿನಲ್ಲಿ ನೀಲಗಿರಿಯತ್ತ ಸಾಗುವುದವರ ಯೋಜನೆ.ಈ ವರ್ಷದಲ್ಲಿ ಏಳು ಸಾವಿರ ಕಿಲೋಮೀಟರ್ ದೂರ ಸೈಕಲ್‌ನಲ್ಲಿ ಸಾಗುವದವರ ಯೋಜನೆ-ಹಾಗಾಗಿ ದಿನಾಲೂ ಕಚೇರಿಗೂ ಸೈಕಲಿನಲ್ಲೇ ಸಾಗುತ್ತಾರೆ. ಈಗಾಗಲೇ ಆರು ಸಾವಿರ ರುಪಾಯಿಯ ಪೆಟ್ರ‍ೋಲ್ ಉಳಿಸಿ, 190ಕೆಜಿ ಅಂಗಾರಾಮ್ಲ ಬಿಡುಗಡೆಯಾಗುವುದನ್ನು ತಡೆದಿದ್ದಾರಂತೆ.ಅವರ ಸೈಕ್ಲಿಂಗ್ ಅನುಭವ-ಯೋಜನೆಗಳನ್ನು ನೋಡಲು http://sharadaprasad.name/ ನೋಡಿ.
------------------------------------------
ಟ್ವಿಟರ್ ಮೂಲಕ ಕಾದಂಬರಿ
ತನ್ನ "ದ ಫ್ರೆಂಚ್ ರೆವಲ್ಯೂಶನ್"ಕಾದಂಬರಿಯನ್ನು ಪ್ರಕಟಿಸಲು ಪ್ರಕಾಶಕರು ಯಾರೂ ಮುಂದೆ ಬರದಿದ್ದಾಗ ಅಮೆರಿಕಾದ ಬರಹಗಾರ ಮ್ಯಾಟ್ ಸ್ಟಿವರ್ಟ್ ಅದನ್ನು ಟ್ವಿಟರ್ ಮೂಲಕ ಪ್ರಕಟಿಸಲು ನಿರ್ಧರಿಸಿದ್ದಾರೆ. ಒಂದು ಟ್ವಿಟರ್ ಸಂದೇಶದಲ್ಲಿ ನೂರನಲುವತ್ತು ಅಕ್ಷರಗಳನ್ನಷ್ಟೇ ಅವಕಾಶ ಇರುವುದು ನಿಮಗೆ ಗೊತ್ತೇ ಇದೆ. ಹಾಗಾಗಿ ಇಡೀ ಕಾದಂಬರಿಯನ್ನು ಪ್ರಕಟಿಸಲು ಮೂರುಸಾವಿರದ ಏಳುನೂರು ಟ್ವಿಟರ್ ಸಂದೇಶ ಪ್ರಕಟಿಸಬೇಕಾಗುತ್ತದೆ. ತನ್ನ ಕಾದಂಬರಿಯನ್ನು ಓದಲೋಸುಗ, ತನ್ನೆಲ್ಲಾ ಸಂದೇಶಗಳ ಬೆನ್ನು ಹಿಡಿದು ಓದಲು ಹೆಚ್ಚು ಜನರಿಗೆ ಸಾಧ್ಯವಾಗದು ಎಂದರಿವಿದ್ದರೂ,ದಾಖಲೆಗೋಸ್ಕರವೇ ಟ್ವಿಟರ್ ಮೂಲಕ ಕಾದಂಬರಿ ಪ್ರಕಟಿಸಲು ಸ್ಟಿವರ್ಟ್ ಬಯಸಿದ್ದಾರೆ.
--------------------------------------
ಟಿವಿ ರಿಮೋಟ್ ಮೂಲಕ ಫೋನ್ ಕರೆ
ಟಿವಿಯನ್ನು ಕುಳಿತಲ್ಲಿಂದಲೇ ನಿಯಂತ್ರಿಸಲು ಬಳಸುವ ರಿಮೋಟ್ ಸಾಧನದ ಮೂಲಕ ದೂರವಾಣಿ ಕರೆ ಮಾಡುವುದೇ? ಹೌದು, ಅಂತರ್ಜಾಲ ಆಧಾರಿತ ಟಿವಿ(ಐಪಿಟಿವಿ) ನಿಜವಾದರೆ ಇಂತಹ ಸೇವೆ ಒದಗಿಸುವುದು ಮೈವೇ ಎನ್ನುವ ಕಂಪೆನಿಯ ಯೋಜನೆ. ಆದರೆ ಇದು ಸಾಧ್ಯವಾಗಲು ಫೈಬರ್ ಜಾಲಗಳು ಮನೆ ಮನೆಗೂ ಹಬ್ಬ ಬೇಕು. ಟಿವಿಯ ಸೆಟ್ ಟಾಪ್ ಬಾಕ್ಸ್ ಮೂಲಕ ಟಿವಿ ಪ್ರಸಾರ ಜತೆಗೆ ಇತರ ಮೌಲ್ಯಾಧಾರಿತ ಸೇವೆಗಳೂ ಲಭ್ಯವಾಗುತ್ತವೆ. ರಿಮೋಟ್ ಸಾಧನದಲ್ಲಿ ಬ್ಲೂಟೂತ್ ನಿಸ್ತಂತು ಸೇವೆ ಒದಗಿಸಿ,ಮೈಕ್ ಮತ್ತು ಹೆಡ್‌ಫೋನ್ ಇದರಲ್ಲಿ ಅಳವಡಿಸಿ, ಅಂತರ್ಜಾಲದ ಮೂಲಕ ದೂರವಾಣಿ ಕರೆಗಳಿಗೆ ಅವಕಾಶ ನೀಡುವುದು ಯೋಜನೆ. ಜತೆಗೆ ಎರಡರಿಂದ ಮೂರು ಸಾವಿರ ದರ ವಿಧಿಸಿ, ಇನ್ನೂರು ಗಂಟೆಯ ಟಿವಿ ಕಾರ್ಯಕ್ರಮಗಳನ್ನು ಒದಗಿಸಲೂ ಅದು ತಯಾರಿ ನಡೆಸಿದೆ.
--------------------------------------------------
ಇದು ನೆಟ್ ಬುಕ್‌ಗಳ ಕಾಲ
ಆರ್ಥಿಕ ಹಿನ್ನಡೆಯಿಂದ ಡೆಸ್ಕ್‌ಟಾಪ್ ಹಾಗೂ ಲ್ಯಾಪ್‌ಟಾಪ್ ಕಂಪ್ಯೂಟರುಗಳ ಮಾರಾಟಕ್ಕೆ ಹಿನ್ನಡೆಯಾಗಿದೆ.ಇತ್ತೀಚೆಗಿನ ವರ್ಷಗಳಲ್ಲಿ ಹೀಗಾಗುತ್ತಿರುವುದು ಇದೇ ಮೊದಲಬಾರಿ.ಕಳೆದ ವರ್ಷ ಭಾರತದಲ್ಲಿ ಮಾರಾಟವಾದ ಡೆಸ್ಕ್‌ಟಾಪ್ ಮತ್ತು ಲ್ಯಾಪ್‌ಟಾಪ್‌ಗಳ ಸಂಖ್ಯೆ ಹತ್ತಿರ ಹತ್ತಿರ ಏಳು ದಶಲಕ್ಷ.ಅದರ ಹಿಂದಿನ ವರ್ಷ ಸುಮಾರು ಏಳೂವರೆ ದಶಲಕ್ಷ ಕಂಪ್ಯೂಟರುಗಳು ಖರ್ಚಾಗಿದ್ದುವು.ಹಾಗೆ ನೋಡಿದರೆ ಲ್ಯಾಪ್‌ಟಾಪ್ ಮತ್ತು ನೋಟ್‌ಬುಕ್‌ಗಳು ಹದಿನೇಳು ಶೇಕಡಾ ಹಿನ್ನಡೆ ಅನುಭವಿಸಿದರೆ,ಡೆಸ್ಕ್‌ಟಾಪ್ ಕಂಪ್ಯೂಟರುಗಳು ಶೇಕಡಾ ನಾಲ್ಕು ಕುಸಿತ ಅನುಭವಿಸಿದುವು.ಈಗ ಜನರು ನೆಟ್‌ಬುಕ್ ಕಂಪ್ಯೂಟರುಗಳತ್ತ ವಾಲಿದ್ದಾರೆ. ಈ ಮಿತವ್ಯಯಿ ಕಂಪ್ಯೂಟರುಗಳು ಇಪ್ಪತ್ತು ಸಾವಿರದ ಬೆಲೆಯಲ್ಲಿ ಲಭ್ಯವಿರುವುದು ಮಾತ್ರವಲ್ಲದೆ,ಅತ್ತಿತ್ತ ಒಯ್ಯಲು ಅನುಕೂಲವಾದ ಸಣ್ಣಗಾತ್ರದವು.ನಿಸ್ತಂತು ಜಾಲಕ್ಕೆ ಸಂಪರ್ಕಿಸುವ ವ್ಯವಸ್ಥೆ ಇದ್ದು,ಅಂತರ್ಜಾಲ ಜಾಲಾಡುವ ಸೌಕರ್ಯ ನೆಟ್‌ಬುಕ್‌ಗಳು ಒದಗಿಸುತ್ತವೆ.ಕಳೆದವರ್ಷ ಎಪ್ಪತ್ತೈದು ಸಾವಿರ ನೆಟ್‌ಬುಕ್‌ಗಳಿಗೆ ಬೇಡಿಕೆ ಬಂದಿತ್ತು.ಇನ್ನು ಮುಂದಿನ ವರ್ಷ ಗೂಗಲ್ ಕ್ರೋಮ್ ಆಪರೇಟಿಂಗ್ ವ್ಯವಸ್ಥೆ ಬಿಡುಗಡೆಯಾದರೆ,ಅದನ್ನು ಹೊತ್ತು ತರುವ ಹೊಸ ನೆಟ್‌ಬುಕ್‌ಗಳು ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿ,ನೆಟ್‌ಬುಕ್‌ಗಳು ಇನ್ನಷ್ಟು ಜನಪ್ರಿಯವಾಗುವುದರಲ್ಲಿ ಅನುಮಾನವಿಲ್ಲ.
ಮೊದಮೊದಲು ಈ ನೆಟ್‌ಬುಕ್‌ಗಳಲ್ಲಿ ಲಿನಕ್ಸ್ ವ್ಯವಸ್ಥೆ ಇದ್ದರೆ,ಈಗೀಗ ಜನರು ವಿಂಡೋಸ್ ವ್ಯವಸ್ಥೆಯನ್ನೇ ಇಷ್ಟಪಡುವುದು ಕಂಡು ಬಂದಿದೆ. ಇದಕ್ಕೆ ಕಾರಣ ವಿಂಡೋಸ್ ವ್ಯವಸ್ಥೆ ಲಿನಕ್ಸ್‌ಗಿಂತ ಬಳಸಲು ಹೆಚ್ಚು ಸುಲಭ ಎನ್ನುವುದಲ್ಲ-ಹಾಗೆಂಬ ಭಾವನೆ ಬೇರೂರಿರುವುದಷ್ಟೇ ಆಗಿದೆ.
-----------------------------------------
ವಿದ್ಯುತ್ ಸಂಪರ್ಕದ ಮೂಲಕವೂ ಕಂಪ್ಯೂಟರ್ ಮಾಹಿತಿ ಕದಿಯಬಹುದು
ಬ್ಯಾಂಕ್ ಮತ್ತಿತರ ಖಾತೆಗಳನ್ನು ಆನ್‌ಲೈನಿನಲ್ಲಿ ಸಂಪರ್ಕಿಸಿದಾಗ,ಪಾಸ್‌ವರ್ಡ್ ಕೇಳುವ ಮೂಲಕ,ಭದ್ರತೆ ನೀಡುವುದು ಸಾಮಾನ್ಯ. ಆದರೆ ಬಳಕೆದಾರ ಯಾವ ಕೀಲಿಗಳನ್ನು ಕುಟ್ಟಿದ್ದ ಎಂಬುದನ್ನು ದಾಖಲಿಸುವ ತಂತ್ರಾಂಶಗಳನ್ನು ಕಂಪ್ಯೂಟರಿನಲ್ಲೆ ಹಾಕಿಡುವ ಮೂಲಕ,ಅಂತಹ ಮಾಹಿತಿಯನ್ನು ಕದಿಯುವವರಿದ್ದಾರೆ. ಮಾಹಿತಿ ಕದಿಯಲು ಕಂಪ್ಯೂಟರ್‌ನ ವಿದ್ಯುತ್ ಸಂಪರ್ಕವನ್ನು ಬಳಸಬಹುದೇ ಎಂಬುದನ್ನು ಸಂಶೋಧಕರು ಪ್ರಯತ್ನಿಸಿ,ಯಶ ಕಂಡಿದ್ದಾರೆ.ಕಂಪ್ಯೂಟರಿನ ಕೀಲಿ ಮಣೆಯನ್ನು ಕಂಪ್ಯೂಟರಿಗೆ ಸಂಪರ್ಕಿಸಲು PS/2 ಕೇಬಲ್ ಬಳಸುವುದಿದೆ.ಇದರಲ್ಲಿ ಆರು ತಂತಿಗಳು ಇರುತ್ತವೆ. ಈ ತಂತಿಗಳಿಗೆ ಹೆಚ್ಚು ಸುರಕ್ಷಾ ಕವಚವೂ ಇಲ್ಲ. ಹೀಗಾಗಿ ಒಂದು ತಂತಿಯಲ್ಲಿ ಹರಿಯುವ ವಿದ್ಯುತ್ ಏರುಪೇರಾದರೆ, ಉಳಿದವಲ್ಲೂ ಅದು ಪರಿಣಾಮ ಬೀರುತ್ತದೆ. ಇದರಲ್ಲಿರುವ ಒಂದು ತಂತಿ ಭೂಮಿಗೆ ಸಂಪರ್ಕಿಸುವ ಅರ್ಥ್ ತಂತಿ. ಹೀಗಾಗಿ ಕಂಪ್ಯೂಟರಿನ ವಿದ್ಯುತ್ ಸಾಕೆಟಿನ ತಂತಿಗೆ ಸಂಪರ್ಕ ಹೊಂದುತ್ತದೆ.ಕೀಲಿ ಮಣೆಯನ್ನು ಕುಟ್ಟಿದಾಗ ಉಂಟಾಗುವ ವಿದ್ಯುತ್ ಪ್ರವಾಹದಲ್ಲಿನ ವ್ಯತ್ಯಾಸ, ಅರ್ಥ್ ತಂತಿಯಲ್ಲೂ ಪರಿಣಾಮ ಬೀರುತ್ತದೆ.ಇದನ್ನು ಓಸಿಲೋಸ್ಕೋಪ್ ಸಾಧನದ ಸಹಾಯದಿಂದ ಪರಿಶೀಲಿಸಿ,ಯಾವ ಕೀಲಿಯನ್ನು ಒತ್ತಲಾಯಿತು ಎಂದು ಊಹಿಸಲು ಸಂಶೋಧಕರಿಗೆ ಸಾಧ್ಯವಾಯಿತು. ಇದನ್ನು ಕಂಪ್ಯೂಟರಿನಿಂದ ಹತ್ತು-ಹದಿನೈದು ಮೀಟರ್ ದೂರದಿಂದಲೂ ಮಾಡಬಹುದು. ಖದೀಮರು ಮನಸ್ಸು ಮಾಡಿದರೆ,ಮಾಹಿತಿ ಕದಿಯಲು ಹಲವು ದಾರಿಗಳಿವೆ ಎನ್ನುವುದನ್ನು ಬಳಕೆದಾರರು ಗಮನದಲ್ಲಿಡಬೇಕು.

*ಅಶೋಕ್‌ಕುಮಾರ್ ಎ

udayavani

0 comments:

 
googledc7e93ba1a7703ae.html