ಅಂತರ್ಜಾಲ ತಾಣದ ಸ್ಕ್ರೀನ್‍ಶಾಟ್ ಬೇಕೇ?
ಬರಹದ ಜತೆ ಪ್ರಕಟಿಸಲು ಅಂತರ್ಜಾಲ ತಾಣವೊಂದರ ಸ್ಕ್ರೀನ್‌ಶಾಟ್ ಬೇಕೇ? ಅದನ್ನು ತೆಗೆಯುವ ಒಂದು ಕ್ರಮವೆಂದರೆ, ಆ ಪುಟವನ್ನು ನಿಮ್ಮ ಕಂಪ್ಯೂಟರಿನಲ್ಲಿ ತೆರೆದು,ಅದು ಕಂಪ್ಯೂಟರ್ ತೆರೆಯಲ್ಲಿ ಕಾಣುತ್ತಿರುವಾಗ, ಪ್ರಿಂಟ್‌ಸ್ಕ್ರೀನ್ ಕೀಲಿಯನ್ನು ಒತ್ತಿ. ಇನ್ನು ಯಾವುದಾದರೂ ಪೈಂಟ್ ಅಂತಹ ಗ್ರಾಫಿಕ್ಸ್ ತಂತ್ರಾಂಶ ತೆರೆದು, ಎಡಿಟ್ ಮೆನ್ಯುವಿನಿಂದ ಪೇಸ್ಟ್ ಆಯುವುದು.ಗ್ರಾಫಿಕ್ಸ್ ತಂತ್ರಾಂಶದ ಪುಟದಲ್ಲಿ ನೀವು ಸೆರೆ ಹಿಡಿದ ಕಂಪ್ಯೂಟರ್ ತೆರೆಯ ನೋಟ ಚಿತ್ರವಾಗಿ ಮೂಡುತ್ತದೆ.ಆದರೆ ಈ ವಿಧಾನದಿಂದ ಇಡೀ ಅಂತರ್ಜಾಲ ಪುಟದ ಸ್ಕ್ರೀನ್‌ಶಾಟ್ ಲಭ್ಯವಾಗದು. ಕಂಪ್ಯೂಟರಿನಲ್ಲಿ ಎಷ್ಟು ಕಾಣಿಸಿತೋ,ಅಷ್ಟು ಮಾತ್ರಾ ತಂತ್ರಾಂಶದಲ್ಲೂ ಉಳಿಸಬಹುದು.ಆದರೆ ಅಂತರ್ಜಾಲ ತಾಣವೊಂದರ ಸೇವೆ ಪಡೆದರೆ,ಇಡೀ ಪುಟದ ಸ್ಕ್ರೀನ್‌ಶಾಟ್ ಹಿಡಿಯಬಹುದು.www.aviary.com ತಾಣವೇ ಅಂತಹ ಸೇವೆ ನೀಡುವ ತಾಣ.ಉದಾಹರಣೆಗೆ ನೀವು ಉದಯವಾಣಿ ತಾಣದ ಸ್ಕ್ರೀನ್‌ಶಾಟ್ ಹಿಡಿಯಬಯಸುವಿರಾದರೆ http://aviary.com/http://www.udayavani.com ಎಂದು ಬ್ರೌಸರಿನ ವಿಳಾಸ ಪೆಟ್ಟಿಗೆಯಲ್ಲಿ ಟೈಪಿಸಿ. ಇದರಲ್ಲಿ ಮೊದಲನೆಯ ಭಾಗಆ ತಾಣದ ವಿಳಾಸವಾದರೆ,ಎರಡನೆಯ ಭಾಗ ಉದಯವಾಣಿಯ ಅಂತರ್ಜಾಲ ತಾಣದ ವಿಳಾಸ ಎನ್ನುವುದು ಸ್ಪಷ್ಟ ತಾನೇ? ಮೊದಲು aviary ಪುಟವೇ ಕಾಣಿಸಿಕೊಂಡು,ಉದಯವಾಣಿ ಪುಟದ ಸೆರೆ ಹಿಡಿಯುತ್ತಿರುವುದಾಗಿ ಪ್ರದರ್ಶಿಸುತ್ತದೆ.ಕೆಲ ನಿಮಿಷಗಳಲ್ಲಿ,ನಿಮಗೆ ಉದಯವಾಣಿ ಪುಟದ ಸ್ಕ್ರೀನ್‌ಶಾಟಿನ ಚಿತ್ರ ಕಾಣಿಸುತ್ತದೆ. ಈ ಚಿತ್ರವನ್ನು ನಿಮಗೆ ಬೇಕಾದಂತೆ ಸಂಕಲಿಸುವ ಅನುಕೂಲತೆಯೂ ಸಿಗುತ್ತದೆ. ಆಮೇಲೆ ಚಿತ್ರವನ್ನು ಬೇಕಾದೆಡೆ ಉಳಿಸಿ.
----------------------------------------------------
ಎಸೆಮೆಸ್ ಸಂದೇಶ,ಮಿಂಚಂಚೆ ಮೂಲಕ ನಿಮ್ಮ ಕಂಪ್ಯೂಟರನ್ನು ಬಂದ್ ಮಾಡಿ!
ಕಚೇರಿಯಿಂದ ಯಾವುದೋ ಕಾರಣಕ್ಕೆ ಹೊರಬಂದು ಮಳೆಗೆ ಸಿಕ್ಕಿ ಹಾಕಿಕೊಂಡು ಮತ್ತೆ ಕಚೇರಿಗೆ ಹೋಗಲಾಗುತ್ತಿಲ್ಲವೇ?ಕಚೇರಿಯ ಕಂಪ್ಯೂಟರನ್ನು ಬಂದು ಮಾಡಿಲ್ಲವೇ? ಕಚೇರಿಗೆ ಕರೆ ಮಾಡಿದರೆ,ನಿಮ್ಮ ಅಕ್ಕಪಕ್ಕ ಕುಳಿತುಕೊಳ್ಳುವವರೂ ಕಚೇರಿ ಬಿಟ್ಟಿದ್ದಾರೆಯೇ? ನಿಮ್ಮ ಕಂಪ್ಯೂಟರನ್ನು ಎಸೆಮ್ಮೆಸ್ ಅಥವ ಮಿಂಚಂಚೆ ಕಳುಹಿಸಿ ಬಂದು ಮಾಡಲಾಗುತ್ತಿದ್ದರೆ ಎಷ್ಟು ಚೆನ್ನಾಗಿತ್ತು! ಇದು ಸಾಧ್ಯ. ಅದರೆ ಅದಕ್ಕೆ tweetmyPC ಅನ್ನು ನಿಮ್ಮ ಕಂಪ್ಯೂಟರಿನಲ್ಲಿ ಅನುಸ್ಥಾಪಿಸಿಕೊಂಡಿರಬೇಕಾಗುತ್ತದೆ.http://tweetmypc.codeplex.com/ ತಾಣದಲ್ಲದು ಲಭ್ಯವಿದೆ.ನೀವು ಜಿಮೇಲ್ ಮಿಂಚಂಚೆ ಮತ್ತು ಟ್ವಿಟರ್ ಖಾತೆಯನ್ನೂ ಹೊಂದಿರಬೇಕಾಗುತ್ತದೆ.ಟ್ವೀಟ್‌ಮೈಪಿಸಿ ತಂತ್ರಾಂಶವನ್ನು ಅನುಸ್ಥಾಪಿಸಿದ ಬಳಿಕ, ನಿಮ್ಮ ಟ್ವಿಟರ್ ಮತ್ತು ಜಿಮೇಲ್ ಖಾತೆಗಳ ವಿವರಗಳನ್ನೂ ಕೇಳುತ್ತದೆ.ನಿಮಗೆ ಕಂಪ್ಯೂಟರನ್ನು ಬಂದು ಮಾಡಬೇಕಿದ್ದರೆ twitter@posterous.com ವಿಳಾಸಕ್ಕೆ ಮಿಂಚಂಚೆ ಕಳುಹಿಸಿ. ನಿಮ್ಮ ಟ್ವಿಟರ್ ಖಾತೆಯ ಮೂಲಕ ಸಂದೇಶ ಕಂಪ್ಯೂಟರನ್ನು ತಲುಪಿ,ಕಂಪ್ಯೂಟರನ್ನು ಬಂದು ಮಾಡುತ್ತದೆ. ನಿಮ್ಮ ಟ್ವಿಟರ್ ಖಾತೆಗೆ ಶಟ್‌ಡೌನ್,ಲಾಗಾಫ್,ಲಾಕ್ ಮುಂತಾದ ಸಂದೇಶ ಕಳುಹಿಸಿದರೂ, ಕಂಪ್ಯೂಟರಿನಲ್ಲಿ ಅನುಸ್ಥಾಪಿಸಿದ ತಂತ್ರಾಂಶ,ಟ್ವಿಟರ್ ಸಂದೇಶದ ಮೇಲೆ ಅನವರತ ಕಣ್ಣಿರಿಸುವ ಮೂಲಕ ಸಂದೇಶ ಬಂದೊಡನೆ ಅದರನುಸಾರ ನೀವು ನೀಡಿದ ಸಂದೇಶದಂತೆ ಕೆಲಸ ಮಾಡುತ್ತದೆ.ಎಸೆಮೆಸ್ ಮೂಲಕವೂ ಟ್ವಿಟರ್ ಸಂದೇಶ ಕಳುಹಿಸುವ ಅನುಕೂಲ ಇರುವ ಕಾರಣ ಎಸೆಮೆಸ್ ಮೂಲಕವೂ ಕಂಪ್ಯೂಟರನ್ನು ನಿಯಂತ್ರಿಸಬಹುದು.ಅಂದ ಹಾಗೆ ಕಂಪ್ಯೂಟರಿನ ಸ್ಥಿತಿಯ ಬಗ್ಗೆ ನಿಮಗೆ ಮಿಚಂಚೆಯನ್ನೂ ಟ್ವೀಟ್‌ಮೈಪಿಸಿ ತಂತ್ರಾಂಶ ಕಳುಹಿಸುತ್ತದೆ.
----------------------------------------
ಯಾಹೂ -ಮೈಕ್ರೋಸಾಫ್ಟ್ ಮೈತ್ರಿ
ಮೈಕ್ರೋಸಾಫ್ಟ್ ಕಂಪೆನಿಯು ಯಾಹೂ ಕಂಪೆನಿಯನ್ನು ತನ್ನ ಬಗಲಿಗೆ ಹಾಕಿಕೊಳ್ಳಲು ಹಿಂದೆ ಅನೇಕ ಸಲ ಪ್ರಯತ್ನಿಸಿ,ವಿಫಲವಾಗಿತ್ತು. ಈಗ ಅವೆರಡೂ ಕಂಪೆನಿಗಳು ಸಹಯೋಗದ ಒಡಂಬಡಿಕೆ ಬಂದಿವೆ. ಅದರ ಪ್ರಕಾರ ಮುಂದಿನ ಹತ್ತು ವರ್ಷಗಳ ಕಾಲ, ಯಾಹೂ ಕಂಪೆನಿಯು ತನ್ನ ತಾಣದಲ್ಲಿ ಒದಗಿಸುವ ಶೋಧ ಸೇವೆಗೆ ಮೈಕ್ರೋಸಾಫ್ಟಿನ ಬಿಂಗ್ ಶೋಧ ಇಂಜಿನ್‌ವನ್ನು ಬಳಸುತ್ತದೆ.ಇನ್ನು ಮುಂದೆ ಯಾಹೂ ಮಿಚಂಚೆ ಸೇವೆಯಂತಹ ಸೇವೆ ಒದಗಿಸುವ ಸುದ್ದಿ ಮಾಧ್ಯಮ ತಾಣವಾಗುತ್ತದೆ. ಬಳಕೆದಾರರಿಗೆ ಶೋಧ ಸೇವೆ ಲಭ್ಯವಾದರೂ,ಅದರಲ್ಲಿ ಬಳಕೆಯಾಗುವ ತಂತ್ರಜ್ಞಾನ ಮೈಕ್ರೋಸಾಫ್ಟಿನದ್ದೇ ಆದ ಕಾರಣ,ಶೋಧದ ಫಲಿತಾಂಶದ ಮೇಲೆ ಯಾಹೂ ಕಂಪೆನಿಗೆ ಯಾವ ನಿಯಂತ್ರಣವೂ ಇರದು. ಆದರೆ ಯಾಹೂ ಪುಟದಲ್ಲಿನ ಜಾಹೀರಾತುಗಳ ಆದಾಯದಲ್ಲಿ ಶೇಕಡಾ ಹನ್ನೆರಡು ಆದಾಯ ಮೈಕ್ರೋಸಾಫ್ಟ್‌ಗೆ ಹೋಗುತ್ತದೆ. ಮೈಕ್ರೋಸಾಫ್ಟ್ ಕಂಪೆನಿಗೆ ಒಂದೇ ಏಟಿಗೆ ಯಾಹೂವಿನ ಬಳಕೆದಾರರು ತನ್ನವರೇ ಆಗಿ ಬಿಡುವುದಲ್ಲದೆ,ಕುಳಿತಲ್ಲಿಗೇ ಶೇಕಡಾ ಹನ್ನೆರಡು ಆದಾಯ ಲಾಭವಾಗುತ್ತದೆ.ಮೈಕ್ರೋಸಾಫ್ಟ್ ಕಂಪೆನಿಯು ಶೋಧ ಸೇವೆ ನೀಡುವ ಕಂಪೆನಿಗಳ ಪೈಕಿ ಗೂಗಲ್ ನಂತರದ ಸ್ಥಾನಕ್ಕೆ ಏರುತ್ತದೆ.ಇಷ್ಟು ಮಾತ್ರವಲ್ಲ,ಮೈಕ್ರೋಸಾಫ್ಟ್ ಕಂಪೆನಿಯು ಯಾಹೂವನ್ನು ಖರೀದಿಸಲು ಹಣ ಖರ್ಚು ಮಾಡುವುದೂ ಉಳಿಯುತ್ತದೆ. ವಿಲಯನವಾಗಿದ್ದಲ್ಲಿ ಗೂಗಲ್‌ಗೆ ಒಂದು ದೊಡ್ಡ ಕಂಪೆನಿಯ ಪೈಪೋಟಿ ಎದುರಾಗುತ್ತಿತ್ತು. ಸದ್ಯಕ್ಕಂತೂ ಗೂಗಲ್‌ಗೆ ಆ ಭಯ ತಪ್ಪಿತು.
----------------------------------------------------------------
ಯುಟ್ಯೂಬಿನ ಶೈಕ್ಷಣಿಕ ಚಾನೆಲ್
ಯುಟ್ಯೂಬ್ ವಿಡಿಯೋ ತುಣುಕುಗಳನ್ನು ಒದಗಿಸಿ,ಅಂತರ್ಜಾಲ ಬಳಕೆದಾರರ ಮನಗೆದ್ದ ಗೂಗಲ್ ತಾಣ. ಈಗದು ಶೈಕ್ಷಣಿಕ ವಿಷಯಗಳಿಗೆ ಸಂಬಂಧಿಸಿದ ಪ್ರತ್ಯೇಕ ಚಾನೆಲನ್ನು ಆರಂಭಿಸಿದೆ.ಇದರಲ್ಲಿ ವಿಖ್ಯಾತ ವಿಶ್ವವಿದ್ಯಾಲಯಗಳ ಪ್ರೊಫೆಸರುಗಳ ಉಪನ್ಯಾಸಗಳ ವಿಡಿಯೋ ತುಣುಕುಗಳು ಲಭ್ಯವಿವೆ. ಇವನ್ನು www.youtube.com/eduನಲ್ಲಿ ಪಡೆಯಬಹುದು.ಎಂಐಟಿ,ಸ್ಟಾನ್‌ಫರ್ಡ್,ಕೊಲಂಬಿಯಾ,ಕಾರ್ನೆಲ್,ಡ್ಯೂಕ್,ಹಾವರ್ಡ್,ಯಾಲೆ,ಕ್ಯಾಲಿಫೊರ್ನಿಯಾದ ಪ್ರಾಧ್ಯಾಪಕರುಗಳ ಉಪನ್ಯಾಸಗಳು ವಿವಿಧ ವಿಷಯಗಳ ಮೇಲೆ ಲಭ್ಯವಿವೆ.ದಂತವೈದ್ಯಕೀಯದ ಬಗ್ಗೆ ಮಿಚಿಗನ್ ವಿವಿಯ 426 ವಿಡಿಯೋಗಳಿವೆ.ಅಮೆರಿಕಾದ ವಿದ್ಯಾರ್ಥಿಗಳು ತಮ್ಮ ಕೋರ್ಸಿನ ಕೆಲವು ವಿಷಯಗಳನ್ನು ಸಂಪೂರ್ಣ ಆನ್‌ಲೈನ್ ಮೂಲಕವೇ ಪಡೆಯುವುದು ಮಾಮೂಲಿಯಾಗಿ ಬಿಟ್ಟಿದೆ. ಶೈಕ್ಷಣಿಕ ವೆಚ್ಚ ತಗ್ಗಿಸಲು ಈ ರೀತಿ ಕಲಿಯುವುದು ಸಹಾಯಕವಾಗುತ್ತದೆ.ಇಲ್ಲವಾದರೆ ತರಗತಿಗೆ ಹಾಜರಾಗಲು ದೂರದಿಂದ ಪ್ರಯಾಣಿಸಿ,ಸಮಯ-ಪ್ರಯತ್ನ ಮತ್ತು ಹಣ ಇವನ್ನು ವ್ಯಯಿಸಬೇಕಾಗುತ್ತದಲ್ಲ ಎನ್ನುವುದು ಅವರ ಲೆಕ್ಕಾಚಾರ.
udayavani
*ಅಶೋಕ್‌ಕುಮಾರ್ ಎ
0 comments:
Post a Comment