ಟ್ವಿಟರಿನಲ್ಲಿ ಮಹಾಭಾರತ
ಪ್ರೇಮ್ ಪಣಿಕ್ಕರ್ ಅವರ "ಭೀಮಸೇನ್",ಭೀಮಸೇನನ ದೃಷ್ಟಿಕೋನದಿಂದ ಕಂಡ ಮಹಾಭಾರತದ ಒಂದು ಬ್ಲಾಗ್. ಈ ಬ್ಲಾಗನ್ನೇ ಆಧಾರವಾಗಿಟ್ಟುಕೊಂಡು,ಮೈಕ್ರೋಬ್ಲಾಗಿಂಗ್ ತಾಣವಾದ ಟ್ವಿಟರಿನಲ್ಲಿ http://twitter.com/epicretold ವಿಳಾಸದಲ್ಲಿ ಮಹಾಭಾರತದ ಕತೆ ಮೂಡಿಬರುತ್ತಿದೆ.ಹಸ್ತಿನಾಪುರಕ್ಕೆ ಪಾಂಡವರು ಮೊದಲಬಾರಿಗೆ ಬಂದಾಗ,ಗಾಂಧಾರಿಯನ್ನು ನೋಡಿದ ಭೀಮನ ಮನಸ್ಸಿನಲ್ಲಿ ಮೂಡಿದ ಭಾವನೆಗಳ ಅಭಿವ್ಯಕ್ತಿಯೊಂದಿಗೆ ಟ್ವಿಟರ್ ಕತೆ ಪ್ರಾರಂಭವಾಗುತ್ತದೆ.ಈ ಬರಹಗಳನ್ನು ನಿಯತವಾಗಿ ಪ್ರಕಟಿಸುತ್ತಿರುವುದು ಚಿಂದು ಶ್ರೀಧರನ್ ಎಂಬ ಪತ್ರಿಕೋದ್ಯಮಿ.ಸದ್ಯ ಇವರು ಇಂಗ್ಲೆಂಡಿನಲ್ಲಿ ನೆಲೆಸಿದ್ದಾರೆ.
ಅಂದಹಾಗೆ ಟ್ವಿಟರ್ ಮೈಕ್ರೋಬ್ಲಾಗಿಂಗ್ ತಾಣದ ಮೇಲೆ ಗುರುವಾರ ಸೇವೆಯನ್ನು ನಿರಾಕರಿಸುವ ದಾಳಿ ನಡೆಯಿತು. ಇದರಿಂದ ಅದರ ಸೇವೆಯು ಎರಡು ಗಂಟೆ ಕಾಲ ಬಾಧಿತವಾಯಿತು. ಜತೆಗೇ ಫೇಸ್‌ಬುಕ್‌ನಂತಹ ಸಾಮಾಜಿಕ ನೆಟ್ವರ್ಕಿಂಗ್ ತಾಣಗಳೂ ಬಾಧಿತವಾದುವು. ಈ ದಾಳಿಯನ್ನು ಆಯೋಜಿಸಿದವರು ಯಾರೆನ್ನುವುದು ಸ್ಪಷ್ಟವಾಗಿಲ್ಲ. ಪ್ರಸಿದ್ಧ ತಾಣಗಳಿಗೆ ಹುಸಿ ಬಳಕೆದಾರ ಕೇಳಿಕೆಗಳ ಪ್ರವಾಹ ಹರಿಸಿ,ನೈಜ ಬಳಕೆದಾರರಿಗೆ ಸೇವೆ ನಿರಾಕರಿಸುವ ದಾಳಿಗಳು ಅಂತರ್ಜಾಲದಲ್ಲಿ ಸಾಮಾನ್ಯವಾಗಿ ಬಿಟ್ಟಿವೆ.ಜೂನ್ ಒಂದೇ ತಿಂಗಳಲ್ಲಿ ಟ್ವಿಟರ್ ಸೇರಿದ ಹೊಸ ಬಳಕೆದಾರರ ಸಂಖ್ಯೆ ನಾಲ್ಕು ಕೋಟಿಗೂ ಹೆಚ್ಚು. ಇಷ್ಟು ಜನಪ್ರಿಯ ತಾಣವಾದ ಟ್ವಿಟರ್ ಕೈಕೊಟ್ಟಾಗ, ಅಂತರ್ಜಾಲ ಬಳಕೆದಾರರು ಕಂಗಾಲಾಗಿಬಿಟ್ಟರು. ನಂತರ ಸೇವೆ ಆರಂಭವಾದಾಗ, ಟ್ವಿಟರ್ ಇಲ್ಲದಾಗ ಏನು ಮಾಡಿದೆ ಎನ್ನುವ ಕುರಿತೇ ಬಳಕೆದಾರರು ಹೆಚ್ಚು ಸಂದೇಶ ಬರೆದರು.ಇತರ ತಾಣಗಳು ಕೈಕೊಟ್ಟಾಗ,ಅದರ ಕುರಿತು ಟ್ವಿಟರಿನಲ್ಲಿ ದೂರುವ ಜನರು, ಟ್ವಿಟರ್ ಸ್ವತ: ಕೈಕೊಟ್ಟಾಗ ಬರೆಯುವುದೆಲ್ಲಿ ಎಂದು ಅಣಕವಾಡಿದ್ದೂ ಇದೆ.
-----------------------------------------------------------------------
ಸರಕಾರಿ ಕನ್ನಡ "ವಿಕಿಪೀಡಿಯಾ"
ಕರ್ನಾಟಕ ಸರಕಾರವು ಈ ಸಲದ ಬಜೆಟಿನಲ್ಲಿ ಕನ್ನಡ ವಿಶ್ವಕೋಶವನ್ನು ಅಂತರ್ಜಾಲದಲ್ಲಿ ಪ್ರಕಟಿಸುವ ಉದ್ದೇಶದಿಂದ ಎರಡುಕೋಟಿ ರುಪಾಯಿಗಳನ್ನು ತೆಗೆದಿರಿಸುವ ನಿರ್ಧಾರ ಮಾಡಿತ್ತು.ಕನ್ನಡ ಜ್ಞಾನ ಆಯೋಗ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಐಐಐಟಿ-ಬೆಂಗಳೂರು ಅವರುಗಳು ಕನ್ನಡ ವಿಶ್ವಕೋಶವನ್ನು ಅಂತರ್ಜಾಲದಲ್ಲಿ ಲಭ್ಯವಾಗಿಸುವ ನಿಟ್ಟಿನಲ್ಲಿ ಹೆಜ್ಜೆ ಇಡಲಿದ್ದಾರೆ.ರಾಜ್ಯೋತ್ಸವದ ವೇಳೆಗೆ ಇದು ಕಾರ್ಯಾರಂಭ ಮಾಡಲಿದೆ.ಈ ತಾಣಕ್ಕೆ ಕನ್ನಡ ಜ್ಞಾನಭಂಡಾರ,ಕನ್ನಡ ಮಾಹಿತಿ ಭಂಡಾರ,ಕನ್ನಡ ಖಜಾನೆ,ಕನ್ನಡ ಸೇತುವೆ ಮುಂತಾದ ಹೆಸರುಗಳು ಪರಿಶೀಲನೆಯಲ್ಲಿವೆ.ಜನರ ಸಹಭಾಗಿತ್ವದಲ್ಲಿ ಕನ್ನಡ ವಿಶ್ವಕೋಶ ವಿಕಿಪೀಡಿಯಾವು ಈಗಾಗಲೇ http://kn.wikipedia.org/ನಲ್ಲಿ ಲಭ್ಯವಿದ್ದು ಇದರಲ್ಲಿ ಸುಮಾರು ಏಳುಸಾವಿರ ಬರಹಗಳೀಗಾಗಲೆ ಸಂಗ್ರಹವಾಗಿದೆ.ಸರಕಾರಿ ವಿಶ್ವಕೋಶ ಇದಕ್ಕಿಂತ ಹೇಗೆ ಭಿನ್ನವಾಗಿರುತ್ತದೆ,ಇರುವ ವಿಶ್ವಕೋಶವನ್ನು ಬಲಪಡಿಸುವುದನ್ನು ಬಿಟ್ಟು ಹೊಸತನ್ನು ಸರಕಾರಿ ಖರ್ಚಿನಲ್ಲಿ ಮಾಡುವ ಅಗತ್ಯ ಏನಿದೆ ಎಂಬ ವಿಚಾರಗಳ ಬಗ್ಗೆ ಅಂತರ್ಜಾಲದಲ್ಲೀಗ ಚರ್ಚೆ ನಡೆದಿದೆ.ಕನ್ನಡದ ಹೆಸರಿನಲ್ಲಿ ಸರಕಾರದ ನಿಧಿಯನ್ನು ಮುಕ್ಕಲು ವಿಶ್ವಕೋಶ ಒಂದು ನೆಪವಾಗದಿರಲಿ ಎನ್ನುವುದು ಕನ್ನಡಿಗರ ಹಾರೈಕೆ.
----------------------------------------------------------
ಅಂತರ್ಜಾಲದ ಕಡತ ಖಜಾನೆ
ಅಂತರ್ಜಾಲದಲ್ಲಿ ವಿವಿಧ ನಮೂನೆಯ ಕಡತಗಳನ್ನು ಪೇರಿಸಿಡಲು ಅವಕಾಶ ನೀಡುವ ತಾಣಗಳು ಹಲವಿವೆ.ಅವುಗಳಲ್ಲಿ ಇತ್ತೀಚೆಗೆ ಜನಪ್ರಿಯವಾಗಿರುವ ತಾಣವೆಂದರೆ www.scribd.com. ಇಲ್ಲಿ ಜನರು ತಮ್ಮ ಕಡತಗಳನ್ನು ಇತರರೊಂದಿಗೆ ಹಂಚಿಕೊಳ್ಳುವ ಅವಕಾಶವೂ ಇರುವುದರಿಂದ ವಿವಿಧ ಬಗೆಯ ಮಾಹಿತಿಗಳನ್ನು ಹೊತ್ತ ಕಡತಗಳನ್ನು ಇಲ್ಲಿಂದ ಇಳಿಸಿಕೊಳ್ಳಲೂ ಸಾಧ್ಯ.ಪುಸ್ತಕಗಳ ಇ-ಪ್ರತಿಗಳು,ವಿವಿಧ ವಿಷಯಗಳ ಬಗ್ಗೆ ಪವರ್ ಪಾಯಿಂಟ್ ಸ್ಲೈಡುಗಳು ಇಲ್ಲಿ ಸಿಗುತ್ತವೆ.ಹೆಚ್ಚು ಜನರು ಡೌನ್‌ಲೋಡ್ ಮಾಡಿಕೊಳ್ಳುತ್ತಿರುವ ಕಡತಗಳ ಪಟ್ಟಿ ಇಲ್ಲಿ ಲಭ್ಯವಿರುವುದರಿಂದ,ಉತ್ತಮ ಕಡತಗಳನ್ನು ಆಯ್ದುಕೊಳ್ಳುವುದಿಲ್ಲಿ ಸುಲಭ.ಹಣ ಪಾವತಿ ಮಾಡಿ ಉಪಯೋಗಿಸಬಹುದಾದ ಕಡತಗಳೂ ಇಲ್ಲಿವೆ.
--------------------------------------------
ಬರಲಿದೆ ವಯರ್ಲೆಸ್ ಎನ್ ನಿಸ್ತಂತು ಮಾನಕ
ಆರುನೂರು ಮೆಗಾಬಿಟ್ ವೇಗದ ನಿಸ್ತಂತು ಜಾಲವನ್ನು ನಿಜವಾಗಿಸುವ ಮಾನಕ 802.11n ಮಾನಕ ಸೆಪ್ಟೆಂಬರ್ ಅಂತ್ಯದ ವೇಳೆಗೆ ಸಿದ್ಧವಾಗಲಿದೆ. ವರ್ಷಗಳ ಕಾಲ ಅದರ ಕರಡು ಪ್ರತಿ ಲಭ್ಯವಿದ್ದು, ಯಂತ್ರಾಂಶ ತಯಾರಕರು ಅದರ ಪ್ರಕಾರ ಯಂತ್ರಾಂಶಗಳನ್ನು ತಯಾರಿಸುವಲ್ಲಿ ತೊಡಗಿದ್ದಾರೆ.ಕ್ವಾಲಕೋಮ್ ಎನ್ನುವ ಕಂಪೆನಿ ವಯರ್ಲೆಸ್ ಎನ್ ಮಾನಕದ ಪ್ರಕಾರ ಚಿಪ್ ಅನ್ನು ಸಿದ್ಧ ಪಡಿಸಿದ್ದು, ಒಂದೇ ಸಲಕ್ಕೆ ಧ್ವನಿ,ವಿಡಿಯೋ ಮತ್ತು ದತ್ತಾಂಶಗಳ ಪ್ರವಾಹವನ್ನು ಸಂಭಾಳಿಸಲು ಸಾಧ್ಯವಾಗುವಷ್ಟು ವೇಗ ನಿಸ್ತಂತು ಜಾಲಕ್ಕೆ ಲಭ್ಯವಾಗುತ್ತದೆ. ಹಲವು ಚಾನೆಲ್‌ಗಳಲ್ಲಿ ಸೇವೆ ಒದಗಿಸಲು ಅವಕಾಶ ಸಿಗುವುದು ಮಾನಕದ ವೈಶಿಷ್ಟ್ಯ.ಸದ್ಯ ಚಾಲ್ತಿಯಲ್ಲಿರುವ 802.11g ಪ್ರಕಾರ ಸುಮಾರು ಐವತ್ತು ಮೆಗಾಬಿಟ್ ವೇಗದ ನಿಸ್ತಂತು ಜಾಲ ಸೇವೆ ಮಾತ್ರಾ ಸಿಗುತ್ತದೆ. ಅದರ ಹತ್ತು ಪಟ್ಟು ವೇಗವನ್ನು ಸಾಧ್ಯವಾಗಿಸುವ ವಯರ್ಲೆಸ್ ಎನ್ ಮಾನಕ,ಅತ್ಯಂತ ಸ್ಪಷ್ಟ ವಿಡಿಯೋ ಪ್ರದರ್ಶಿಸುವ ಹೈಡೆಫಿನಿಶನ್ ಟಿವಿಯಂತಹ ಸೇವೆಯನ್ನು ಒದಗಿಸಲು ಬಳಕೆಯಾಗಬಹುದು.
---------------------------------------
ಬಿಂಗ್ v/s ಗೂಗಲ್
ಮೈಕ್ರೋಸಾಫ್ಟ್ ಕಂಪೆನಿಯ ಬಿಂಗ್ ಮತ್ತು ಗೂಗಲ್ ಕಂಪೆನಿಯ ಶೋಧ ಸೇವೆಯನ್ನು ಹೋಲಿಸಬೇಕೇ? ಇದನ್ನು ಮಾಡಲು ಬಹಳ ಸುಲಭವಾಗಿಸಲು http://bingandgoogle.com ತಾಣವನ್ನು ಬಳಸಬಹುದು. ಒಂದೇ ಪದವನ್ನು ಎರಡು ತಾಣದಲ್ಲೂ ನೀಡಿ,ಎರಡರ ಫಲಿತಾಂಶಗಳನ್ನು ಜತೆಗೆ ಪ್ರದರ್ಶಿಸುವ ಸೌಕರ್ಯವನ್ನೀ ತಾಣ ನೀಡಿದೆ."ಉಡುಪಿ" ಪದವನ್ನು ಹುಡುಕಲು ನೋಡಿ,ಗೂಗಲ್ ಮೇಲುಗೈ ನಿಚ್ಚಳವಾಗುತ್ತದೆ. ಯಾಕೆಂದು ತಟ್ ಅಂತ ಹೇಳಿ!
*ಅಶೋಕ್‌ಕುಮಾರ್ ಎ
udayavani
ಕೊರೆತ...
-
ಕಡಲ ಕೊರೆತಕೇನೋ
ಇಡಬಹುದು ಬಂಡೆಗಳನು...
ನಿನ್ನ ಮೌನದಿಂದ
ಗುಂಡಿಗೆಯಲುಂಟಾಗುವ ಕೊರೆತಕೆ
ಏನು ಮಾಡಲಿ, ಹೇಳೇ ಗೆಳತಿ???
--ಶ್ರೀ
1 hour ago




1 comments:
Install Add-Kannada button with ur blog. Then u can easily submit ur page to all top Kannada social bookmarking sites & u will get more traffic and visitors.
Install widget from www.findindia.net
Post a Comment