ಗೂಗಲ್ ಅರ್ಥ್ ಭೂಮಿಯ ಕೃತಕ ಉಪಗ್ರಹಗಳನ್ನು ಬಳಸಿ ರಚಿಸಿದ ಭೂಮಿಯ ನಕ್ಷೆಗಳನ್ನು ಒದಗಿಸಿ,ಜನಪ್ರಿಯವಾಗಿದೆ. ಈಗ ಇಸ್ರೋವೂ ಅಂತಹ ಸೇವೆಯನ್ನು ನೀಡಲು ಬಯಸಿದೆ. ಅದಕ್ಕಾಗಿ ಅದು ಭುವನ್ ಎನ್ನುವ ಬಹು ಉಪಗ್ರಹ ವ್ಯವಸ್ಥೆಯನ್ನು ಸ್ಥಾಪಿಸಿದೆ. ಅದರ ಮೂಲಕ ಹೆಚ್ಚಿನ ಸ್ಪಷ್ಟತೆಯಿರುವ ಭೂಮಿಯ ಚಿತ್ರಗಳನ್ನು ಸೆರೆ ಹಿಡಿದು,ಅದರ ಮೂಲಕ ಗೂಗಲ್ ಅರ್ಥ್‌ಗೆ ಹೋಲುವ ಸೇವೆಯನ್ನು ನೀಡುವುದು ಇಸ್ರೋದ ಕನಸು.ಸದ್ಯ ಲಭ್ಯವಿರುವ ಗೂಗಲ್ ಅರ್ಥ್ ನಕ್ಷೆಗಳು ನಾಲ್ಕು ವರ್ಷ ಹಳೆಯವು. ಸದಾ ಬದಲಾಗುತ್ತಿರುವ ಭಾರತದ ನಗರಗಳ ಬಗೆಗೆ ಅದರಲ್ಲಿ ಲಭ್ಯವಾಗುತ್ತಿರುವ ನಕ್ಷೆಗಳನ್ನು ಬಳಸುವುದು ತಪ್ಪು ಚಿತ್ರಣ ಮೂಡಿಸಬಹುದು. ಅ ದೃಷ್ಟಿಯಿಂದ ಭುವನ್ ಅಂತಹ ವ್ಯವಸ್ಥೆ ಅತ್ಯಂತ ಅವಶ್ಯಕವಾಗಿದೆ.ಗುಗಲ್ ಅರ್ಥ್ ಗೂಗಲಿನ ಜಾಹೀರಾತು ಆದಾಯಕ್ಕೆ ಉತ್ತಮ ಬುನಾದಿ ಹಾಕಿಕೊಟ್ಟಿದೆ.ಇಸ್ರೋದ ನಕ್ಷಾವ್ಯವಸ್ಥೆ ಜನಪ್ರಿಯವಾದರೆ,ಅದೂ ಈ ಜಾಹೀರಾತು ಆದಾಯ ತನ್ನದಾಗಿಸಿಕೊಳ್ಳಲು ಸಾಧ್ಯವಿದೆ. ಅದ್ದರಿಂದ ಇಸ್ರೋವು ತನ್ನ ಉಪಗ್ರಹ ಉಡಾವಣಾ ಸಾಮರ್ಥ್ಯವನ್ನು ನಗದೀಕರಿಸಿಕೊಳ್ಳಲು ಸಾಧ್ಯವಾದರೆ ಅಚ್ಚರಿಯಿಲ್ಲ.ಇದನ್ನು ಬಳಸಲು ತಂತ್ರಾಂಶವನ್ನು ಇಳಿಸಿಕೊಂಡು ಕಂಪ್ಯೂಟರಿನಲ್ಲಿ ಅನುಸ್ಥಾಪಿಸಿಕೊಳ್ಳಬೇಕು.ಅದರ ತಾಣದ ವಿಳಾಸ:http://www.bhuvan.nrsc.gov.in/.ನಿಮ್ಮ ಕಂಪ್ಯೂಟರಿನಲ್ಲಿ ಎರಡು ಜಿಬಿ ಹಾರ್ಡ್‌ಡಿಸ್ಕ್ ಸ್ಥಳ,512 ಎಂಬಿ ರಾಂ ಸ್ಮರಣ ಸಾಮರ್ಥ್ಯ ಅವಕಾಶ ಬೇಕಾಗುತ್ತದೆ.
---------------------------------ಗೂಗಲಿನ ಶೋಧ ತಂತ್ರಜ್ಞಾನವೀಗ ಬದಲಾಗಿದೆ
ಗೂಗಲ್ ಶೋಧವೀಗ ಬದಲಾಗಿದೆ. ಹಾಗೆಂದರೆ,ಅದು ಸಾಮಾನ್ಯರಿಗೆ ದೃಗ್ಗೋಚರವಾಗುವಂತಹ ವ್ಯತ್ಯಾಸವೇನೂ ಕಾಣಿಸದು. ಗೂಗಲ್ ಪುಟ ಮೊದಲಿನ ಹಾಗೇ ಇದೆ.ಆದರೆ ಶೋಧ ಮಾಡುವ ತಂತ್ರಜ್ಞಾನ ಹೊಸ ತಂತ್ರವನ್ನು ಬಳಸುತ್ತದೆ.ಮೈಕ್ರೋಸಾಫ್ಟಿನ ಬಿಂಗ್ ಶೋಧ,ಸ್ಪೆಸಿಫೈ,ವೂಲ್ಫ್ರಮ್ ಆಲ್ಫಾ ಹೀಗೆ ಹಲವು ಶೋಧ ವ್ಯವಸ್ಥೆಗಳ ಬಿಡುಗಡೆಯಾದ ನಂತರ ಗೂಗಲಿನ ಮಾರುಕಟ್ಟೆ ಪಾಲು ತುಸು ಇಳಿದಿರುವುದು ಹೌದು.ಗೂಗಲ್ ಸುದ್ದಿಯಿಲ್ಲದೆ ಕೆಲವು ತಿಂಗಳ ಹಿಂದಿನಿಂದಲೇ,ಶೋಧಕ್ಕಾಗಿ ಹೊಸ ತಂತ್ರಜ್ಞಾನ ಅಳವಡಿಸಲು ತೆರೆಯ ಮರೆಯಲ್ಲೇ ತನ್ನ ಸಂಶೋಧಕರನ್ನು ತೊಡಗಿಸಿತ್ತು. ಈಗ ತಕ್ಕ ಮಟ್ಟಿಗೆ ತಯಾರಾದ ಶೋಧ ವ್ಯವಸ್ಥೆಯನ್ನು ಬಳಸಲು ಗೂಗಲ್ ಆರಂಭಿಸಿದೆ. ಸದಾ ಬದಲಾಗುತ್ತಿರುವ ಪುಟಗಳ ಮಾಹಿತಿಯನ್ನೂ ಶೋಧದಲ್ಲಿ ಒಳಪಡಿಸಿ, ಶೋಧ ಫಲಿತಾಂಶವನ್ನು ತಾಜಾ ಆಗಿಸಲು ಪ್ರಯತ್ನಿಸಿರುವುದು ಗೂಗಲ್ ತಂದಿರುವ ಪ್ರಧಾನ ಬದಲಾವಣೆ. ಶೋಧ ಫಲಿತಾಂಶದ ಬಗೆಗೆ ಬಳಕೆದಾರರ ಪ್ರತಿಕ್ರಿಯೆಯನ್ನು ಆಧಾರಿಸಿ, ಶೋಧ ತಂತ್ರಜ್ಞಾನವನ್ನು ಇನ್ನೂ ಉತ್ತಮ ಪಡಿಸಲು ಪ್ರಯತ್ನಿಸುವುದು ಗೂಗಲ್ ಯೋಚನೆ.ಅಂದ ಹಾಗೆ ಈ ಶೋಧ ಇಂಜಿನ್ ಹೆಸರು ಕೆಫೀನ್ ಎಂದಾಗಿದೆ.
---------------------------------------------------------
ಭಾರತದಲ್ಲಿ ನೀರಿಗೆ ಬರ
ಉತ್ತರ ಭಾರತದ ರಾಜಾಸ್ತಾನ,ಹರ್ಯಾನಾ,ಪಂಜಾಬ ಮತ್ತು ದೆಹಲಿಯಲ್ಲಿ ಅಂತರ್ಜಲ ಮಟ್ಟ ಗಾಬರಿಗೊಳಿಸುವ ಪ್ರಮಾಣದಲ್ಲಿ ಇಳಿಯುತ್ತಿದೆ ಎನ್ನುವ ಸಂಗತಿಗೆ ನಾಸಾದ ವಿಜ್ಞಾನಿಗಳ ಅಧ್ಯಯನದ ನಂತರ ಮತ್ತಷ್ಟು ಪುರಾವೆ ಸಿಕ್ಕಿದೆ. ಪ್ರತಿ ವರ್ಷ ಅಂತರ್ಜಲ ಮಟ್ಟ ಕಡಿಮೆಯೆಂದರೂ ಒಂದು ಅಡಿ ಕೆಳಕ್ಕಿಳಿಯುತ್ತಿದೆಯಂತೆ.ಕಳೆದ ಒಂದು ವರ್ಷದಲ್ಲಿ ಭಾರತದ ಅಂತರ್ಜಲ ನೂರ ಒಂಭತ್ತು ಘನ ಕಿಲೋಮೀಟರ್‌ನಷ್ಟು ಕಡಿಮೆಯಾಗಿರುವುದು ಬೆಳಕಿಗೆ ಬಂದಿದೆ.ಕೃಷಿ ಮತ್ತು ಕೈಗಾರಿಕೆಗಳಿಗಾಗಿ,ಅಂತರ್ಜಲದಿಂದ ಬಳಕೆಯಾಗಿ ಖಾಲಿಯಾದ ನೀರನ್ನು ಮರುಪೂರಣ ಮಾಡದ ಕಾರಣ, ಈ ಇಳಿಕೆ ಆಗಿದೆ.ಉತ್ತರ ಭಾರತದ ನಾಲ್ಕು ರಾಜ್ಯಗಳ ಈ ನೀರಿನ ಮಟ್ಟ ಕುಸಿತ ಅಲ್ಲಿನ ಹನ್ನೆರಡು ಕೋಟಿ ಜನರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಸಂಶೋಧಕರಾದ ಮ್ಯಾಥ್ಯೂ ರೊಡೆಲ್ ಎಚ್ಚರಿಸಿದ್ದಾರೆ.ಅವರು ಪ್ರಸಿದ್ಧ ಬಾಹ್ಯಾಕಾಶ ಸಂಸ್ಥೆ ನಾಸಾದ ಜಲವಿಜ್ಞಾನಿ.ಭೂಮಿಯ ಗುರುತ್ವ ಶಕ್ತಿಯನ್ನಾಧರಿಸಿ, ಅಂತರ್ಜಲ ಮಟ್ಟವನ್ನು ಅಂದಾಜು ಮಾಡುವ ತಂತ್ರವನ್ನು ಬಳಸಿ, ಈ ಸಂಶೋಧನೆಯನ್ನು ಮಾಡಲಾಗಿದೆ.
---------------------------------
ಕಚೇರಿ ಸಮಯದಲ್ಲಿ ವಿಡಿಯೋ ಆಟ!
ಕಂಪೆನಿಯ ನೌಕರರರು ಮತ್ತು ಅಧಿಕಾರಿಗಳ ನಡುವಣ ಸಂಬಂಧವನ್ನು ಉತ್ತಮ ಪಡಿಸಿ,ಅದನ್ನು ವೃದ್ಧಿಸಲು ಕಂಪ್ಯೂಟರ್ ವಿಡಿಯೋ ಆಟಗಳು ಸಹಾಯಕವಾಗುತ್ತಿವೆ. ಕೆಲವು ಕಚೇರಿಗಳಲ್ಲಿ ಶುಕ್ರವಾರ ಕೊನೆಯ ಎರಡು ಗಂಟೆ,ಕಚೇರಿಯವರೆಲ್ಲಾ ಜತೆಯಾಗಿ ವಿಡಿಯೋ ಆಟಗಳನ್ನು ಆಡುವುದಿದೆ. ಈ ಆಟದಲ್ಲಿ ಉತ್ತಮ ಆಟ ಆಡ ಬಲ್ಲವನೇ ಬಾಸ್.ಕಂಪೆನಿಯ ಬಾಸ್ ನೌಕರರ ಜತೆ ಆಡಬೇಕಾಗುತ್ತದೆ. ವಿಡಿಯೋ ಆಟದಲ್ಲಿ ಬಾಸ್‌ನತ್ತ ನೌಕರ "ಗುಂಡು" ಎಸೆಯಲು ಸಾಧ್ಯ!ಆದರಿದು ಕಂಪ್ಯೂಟರಿನ ಹುಸಿ ಗುಂಡು ಎನ್ನುವುದನ್ನು ಮರೆಯದಿರಿ.ಈ ರೀತಿ ಜತೆಯಾಗಿ ಆಡಿ ಮಜಾ ಉಡಾಯಿಸಿದರೆ, ತಂಡ ಸ್ಪೂರ್ತಿ ಹೆಚ್ಚುತ್ತದೆ ಎಂದು ಅದನ್ನು ಆಡುವವರ ಅನುಭವ. ಆಟ ಆಡಲೇ ಬೇಕೆಂಬ ಒತ್ತಾಯ ಇಲ್ಲ. ಬೇಡದವರು ಬೇಗನೇ ಮನೆಗೆ ತೆರಳಲೂ ಅನುಮತಿ ನೀಡಲಾಗುತ್ತದೆ. ಆದರೆ, ಆಟ ಆಡುವವರೇ ಹೆಚ್ಚು.
----------------------------
ತೊಶಿಬಾದ 64ಜಿಬಿ ಎಸ್‌ಡಿ ಕಾರ್ಡ್
ತೊಶಿಬಾದ 64ಜಿಬಿ ಎಸ್‌ಡಿ ಕಾರ್ಡ್
ಅತ್ಯಧಿಕ ಸಾಮರ್ಥ್ಯದ ಎಸ್‌ಡಿ ಕಾರ್ಡ್‌ನ್ನು ತೊಶಿಬಾ ಕಂಪೆನಿ ಅಭಿವೃದ್ಧಿ ಪಡಿಸಿದ್ದು ಮುಂದಿನ ವರ್ಷಾರಂಭದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಅರುವತ್ತನಾಲ್ಕು ಜಿಬಿ ಸಾಮರ್ಥ್ಯದ ಈ ಕಾರ್ಡ್‌ನ್ನು ಕ್ಯಾಮರಾಗಳು ಮತ್ತು ವಿಡಿಯೋಕ್ಯಾಂಗಳಲ್ಲಿ ಬಳಸಬಹುದು.ಆದರೆ ಅವುಗಳನ್ನು ಸದ್ಯ ಇರುವ ಸಾಧನಗಳ ಜತೆ ಬಳಕೆ ಮಾಡಲಸಾಧ್ಯ.
*ಅಶೋಕ್‌ಕುಮಾರ್ ಎ




0 comments:
Post a Comment