ಮಕ್ಕಳಿಗೆ ಗೂಗಲ್ ಸ್ಪರ್ಧೆ
ಭಾರತದಲ್ಲಿ ಮಕ್ಕಳ ದಿನಾಚರಣೆ ನವಂಬರ್ ಹದಿನಾಲ್ಕರಂದು ಅಚರಿಸಲಾಗುತ್ತದೆ.ಅಂದು ಗೂಗಲ್ ತಾಣದ ಗೂಗಲ್ ಲೋಗೋ ಯಾವ ಭಾರತೀಯ ಮಗು ರಚಿಸಿದ್ದಾಗ ಬೇಕು ಎಂದು ನಿರ್ಧರಿಸಲು ಗೂಗಲ್ ಸ್ಪರ್ಧೆಯೊಂದನ್ನು ಏರ್ಪಡಿಸಿದೆ.www.google.co.in/doodle4google ಈ ಅಂತರ್ಜಾಲ ಕೊಂಡಿಯಲ್ಲಿ ಸ್ಪರ್ಧೆಯ ವಿವರಗಳಿವೆ. ಒಂದನೆಯ ತರಗತಿಯಿಂದ ಹತ್ತನೆಯ ತರಗತಿಯ ವರೆಗಿನ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು."ನನ್ನ ಭಾರತ" ಎನ್ನುವ ವಿಷಯದ ಮೇಲೆ ಗೂಗಲ್ ಲೋಗೋವನ್ನು ಮಾರ್ಪಡಿಸಿ ರಚಿಸುವುದೇ ಸ್ಪರ್ಧೆಯ ನಿಬಂಧನೆ.ನವಂಬರ್ ಹದಿನಾಲ್ಕರಂದು ಗೂಗಲ್ ತಾಣದಲ್ಲಿ ಕಾಣಿಸಿಕೊಳ್ಳುವ ರಚನೆಗೆ ಲ್ಯಾಪ್‌ಟಾಪ್ ಬಹುಮಾನವಾಗಿ ಲಭ್ಯವಾಗಲಿದೆ. ಆ ಲೋಗೋ ರಚಿಸಿದ ಮಗುವಿನ ಶಾಲೆಗೂ ಬಹುಮಾನ ಇದೆ. ಅದಕ್ಕಿಂತೆಲ್ಲಾ ಹೆಚ್ಚಿನ ಗೌರವವೆಂದರೆ,ಅಂದು ಮಿಲಿಯಗಟ್ಟಲೆ ಜನ ಗೂಗಲ್ ತಾಣದಲ್ಲಿ ಆ ಚಿತ್ರವನ್ನು ವೀಕ್ಷಿಸಲಿದ್ದಾರೆ.ಇಲ್ಲಿ ಸಾಮಾನ್ಯವಾಗಿ ಬಳಸಲ್ಪಡುವ ಚಿತ್ರಗಳನ್ನು ರಚಿಸುವಾತ ಡೆನಿಸ್ ಹ್ವಾಂಗ್ ಎನ್ನುವ ಮೂವತ್ತೊಂದು ವಯಸ್ಸಿನ ವಿಜ್ಞಾನಿ ಮತ್ತು ಕಲಾವಿದ.
------------------------------------------
ಸೌರಶಕ್ತಿ ಆಧಾರಿತ ಸೆಲ್‌ಪೋನ್
ಸಾಮ್‌ಸಂಗ್ ಕಂಪೆನಿಯು ಸೌರಶಕ್ತಿಚಾಲಿತ ಸೆಲ್‌ಪೋನ್ ಹ್ಯಾಂಡಸೆಟ್ಟನ್ನು ಮಾರಾಟ ಮಾಡುತ್ತಿದೆ.ಕೆನ್ಯಾದಲ್ಲಿ ಸಫಾರಿಕೋಮ್ ಕಂಪೆನಿಯು ದೊಡ್ಡ ಸೆಲ್ ಕಂಪೆನಿಯಾಗಿದ್ದು,ಅಲ್ಲಿ ಸೌರಶಕ್ತಿಚಾಲಿತ ಸೆಟ್‌ಗಳನ್ನು ಮಾರಾಟಕ್ಕೆ ಒದಗಿಸಿದೆ.ವಿದ್ಯುತ್ ಇಲ್ಲದೆಡೆಯೂ ಬಳಸಲಾಗುವ ಸೆಟ್‌ಗಳು ಹಳ್ಳಿಗಳಲ್ಲೂ ಜನಪ್ರಿಯವಾಗುವುದು ಖಚಿತ.ಕೆನ್ಯಾದಲ್ಲಿ ವಿದ್ಯುತ್ ಪೂರೈಕೆ ಇಲ್ಲದಿರುವ ಪ್ರದೇಶಗಳೇ ಹೆಚ್ಚು. ಸದ್ಯ ಅಲ್ಲಿನ ಜನರು ಸೈಕಲ್ ಚಾಲಿತ ಜನರೇಟರ್‌ನಂತಹವನ್ನು ಬಳಸಿ,ಮೊಬೈಲ್ ಸೆಟ್ ಚಾರ್ಜ್ ಮಾಡಿಕೊಳ್ಳುವುದಿದೆ. ಸೌರಶಕ್ತಿಚಾಲಿತ ಹ್ಯಾಂಡ್‌ಸೆಟ್ ಬೆಳಕಿನಲ್ಲೇ ಚಾರ್ಜ್ ಆಗುವುದರಿಂದ ಮಳೆ ಅಥವ ಮೋಡ ಇದ್ದರೂ ಪರವಾಗಿಲ್ಲ. ಭಾರತದಲ್ಲೂ ವಿದ್ಯುತ್ ಪೂರೈಕೆ ಅತ್ಯಂತ ಅನಿಶ್ಚಿತವಾಗಿರುವ ಕಾರಣ ಸೌರಶಕ್ತಿಚಾಲಿತ ಸೆಟ್‍ಗಳು ಜನಪ್ರಿಯವಾಗುವುದು ಖಂಡಿತ.
ಸಾಮ್ಸಂಗ್ ಸೆಟ್‌ನ ಹೆಸರು ಬ್ಲೂ ಅರ್ಥ್.ಇನ್ನೊಂದು ವಿಶೇಷತೆ ಅಂದರೆ, ಈ ಸೆಟ್‌ನ್ನು ನೀರಿನ ಬಾಟಲುಗಳ ಪ್ಲಾಸ್ಟಿಕನ್ನು ಮರುಬಳಕೆ ಮಾಡಿ ತಯಾರಿಸಿದ ಪ್ಲಾಸ್ಟಿಕ್ಕಿನಿಂದ ತಯಾರಿಸಲಾಗಿದೆ.ಇದರ ಹಿಂಭಾಗ ಸೌರವಿದ್ಯುತ್‌ಕೋಶಗಳನ್ನು ಹೊಂದಿದೆ.
---------------------------------------
ಇಂಗ್ಲೀಷ್ ಪದಗಳಿಗೆ ಕನ್ನಡದ್ದೇ ಪದಗಳು
ಅಂತರ್ಜಾಲದಲ್ಲಿ ವೆಂಕಟಸುಬ್ಬಯ್ಯನವರ ಪ್ರಿಸಮ್ ನಿಘಂಟು ಹಿಂದಿನಿಂದಲೇ ಲಭ್ಯವಿದೆ. ಈಗದಕ್ಕೆ ಹೊಸದಾಗಿ ಪ್ರೊ.ಡಿ ಎನ್ ಶಂಕರಭಟ್ಟರ ಇಂಗ್ಲೀಷ್ ಪದಗಳಿಗೆ ಕನ್ನಡದ್ದೇ ಪದಗಳು ನಿಘಂಟನ್ನು ಹೊಸದಾಗಿ ಅಳವಡಿಸಲಾಗಿದೆ. ಶಂಕರಭಟ್ಟರು ಕನ್ನಡದಲ್ಲಿ ಬೆರಕೆಯಾದ ಸಂಸ್ಕೃತ ಪದಗಳ ಬಗ್ಗೆ ಒಲವಿಲ್ಲದವರು. ಅಚ್ಚಕನ್ನಡ ಪದಗಳಿರುವಾಗ ಈ ರೀತಿ ಎರವಲು ಯಾಕೆ ಎನ್ನುವುದು ಅವರ ವಾದ.ಪದಗಳನ್ನು ಹೊಸದಾಗಿ ಸೇರ್ಪಡೆ ಮಾಡಲೂ ಅವಕಾಶ ಕಲ್ಪಿಸಲಾಗಿದೆ. ಕೊಂಡಿಯಲ್ಲಿ ನಿಘಂಟು ಲಭ್ಯವಿದೆ.
----------------------------------
ಕೊಂಕಣಿ,ತುಳುವಿನಲ್ಲೂ ವಿಕಿಪೀಡಿಯಾ?
ವಿಕಿಪೀಡಿಯಾ ಎನ್ನುವುದು ಜನರ ಸಹಭಾಗಿತ್ವದಿಂದ ಬೆಳೆಯುತ್ತಿರುವ ವಿಶ್ವಕೋಶ.ಅಂತರ್ಜಾಲದ ತಾಣ www.wikipedia.orgನಲ್ಲಿದು ಲಭ್ಯ.ಈಗಾಗಲೇ ನೂರಕ್ಕೂ ಹೆಚ್ಚು ಭಾಷೆಗಳಲ್ಲಿ ವಿಶ್ವಕೋಶ ಲಭ್ಯವಿದೆ.ಈ ಭಾಷೆಗಳಲ್ಲಿ ಕನ್ನಡ,ತಮಿಳು,ತೆಲುಗು,ಮಲೆಯಾಳಮ್ ಇವೂ ಸೇರಿವೆ. ಇನ್ನು ತುಳು ಮತ್ತು ಕೊಂಕಣಿ ಭಾಷೆಗಳಲ್ಲೂ ವಿಶ್ವಕೋಶದ ಆವೃತ್ತಿ ತರುವ ಯೋಜನೆ ವಿಕಿಪೀಡಿಯಾದ ಉಸ್ತುವಾರಿ ನೋಡಿಕೊಳ್ಳುವ ವಿಕಿ ಅಕಾಡೆಮಿಯೆಂಬ ಲಾಭರಹಿತ ಸಂಸ್ಥೆಯದಾಗಿದೆ.ಜನಸಾಮಾನ್ಯರು ಈ ವಿಶ್ವಕೋಶ ರಚನೆಯಲ್ಲಿ ಭಾಗಿಯಾಗುವುದಕ್ಕೆ ಅನುವು ಮಾಡುವ ಉದ್ದೇಶದಿಂದ ವಿಕಿಪೀಡಿಯಾಕ್ಕೆ ಬರಹಗಳನ್ನು ಸೇರಿಸುವುದು,ತಿದ್ದುಪಡಿಗಳನ್ನು ಮಾಡುವ ಬಗೆಯನ್ನು ತಿಳಿಸಿಕೊಡಲು ಮಂಗಳೂರಿನಲ್ಲಿ ಶನಿವಾರ ಕಾರ್ಯಕ್ರಮ ಆಯೋಜಿತವಾಗಿತ್ತು.ವಿಕಿಪೀಡಿಯಾದ ಇಂಗ್ಲಿಷ್ ಆವೃತ್ತಿಯ ಸ್ವಯಂಸೇವಕ ಸಂಪಾದಕರಾದ ಪ್ರಶಾಂತ್ ಮತ್ತು ಕನ್ನಡದ ಆವೃತ್ತಿಯ ಸ್ವಯಂಸೇವಕ ಸಂಪಾದಕರಾದ "ಸಂಪದ"ದ ಹರಿಪ್ರಸಾದ್ ನಾಡಿಗ್ ಕಾರ್ಯಕ್ರಮದಲ್ಲಿ ಭಾಗವಹಿಸಿ,ತರಬೇತಿ ನೀಡಿದರು.ಸೈಂಟ್ ಅಲೋಶಿಯಸ್ ಕಾಲೇಜಿನ ಸಮೂಹ ಸಂಪರ್ಕ ವಿಭಾಗ ಮತ್ತು ಬೆಂಗಳೂರಿನ ಇಂಟರ್ನೆಟ್ ಮತ್ತು ಸಮಾಜ ಅವರು ಜತೆಯಾಗಿ ಕಾರ್ಯಕ್ರಮವನ್ನು ಏರ್ಪಡಿಸಿದ್ದರು.ಅಂದಹಾಗೆ ವಿಶ್ವಕೋಶದಲ್ಲಿ ಈ ವರೆಗೆ ಹದಿಮೂರು ದಶಲಕ್ಷ ಬರಹಗಳ ಸೇರ್ಪಡೆಯಾಗಿವೆ!
----------------------------------------
ವೈಮಾಕ್ಸ್ 3Gಗಿಂತ ಉತ್ತಮ
ಭಾರತದಲ್ಲಿ 2014ರ ಹೊತ್ತಿಗೆ ನೂರು ದಶಲಕ್ಷ ಬ್ರಾಡ್‌ಬ್ಯಾಂಡ್ ಸಂಪರ್ಕದ ಗುರಿ ಸಾಧನೆಯಾಗ ಬೇಕಿದ್ದರೆ,ವೈಮ್ಯಾಕ್ಸ್ ಜಾಲಕ್ಕೆ ಶರಣಾಗದೆ ಅನ್ಯಮಾರ್ಗವಿಲ್ಲವೆನ್ನುವುದು ವೈಮ್ಯಾಕ್ಸ್ ಕಂಪೆನಿಗಳ ವೇದಿಕೆಯ ಅಭಿಪ್ರಾಯ. 3Gಗೆ ಹೋಲಿಸಿದರೆ ವೈಮ್ಯಾಕ್ಸ್ ಹತ್ತು ಪಟ್ಟು ವೇಗದ ಅಂತರ್ಜಾಲ ಒದಗಿಸಬಲುದು.ವೈಮ್ಯಾಕ್ಸ್ ಜಾಲದ ಮೂಲಕ ಸೆಕೆಂಡಿಗೆ ಆರು ಮೆಗಾಬಿಟ್ ಸಾಮರ್ಥ್ಯದ ಜಾಲದ ಸೌಕರ್ಯ ಸಿಗುತ್ತದೆ.ಮಾಸಿಕ ಐನೂರು ರುಪಾಯಿ ದರದಲ್ಲಿ ಸೌಕರ್ಯ ಒದಗಿಸಲು ಸಾಧ್ಯ.ಅದುವೇ ಮೂರು-ಜಿ ಸೇವೆಗೆ ಅದರ ಐದು ಪಟ್ಟು ದರ ವಿಧಿಸಬೇಕಾದೀತು.ಅಂತರ್ಜಾಲ ಸೇವೆಗೆ ವೈಮ್ಯಾಕ್ಸ್ ಹೇಳಿ ಮಾಡಿಸಿದ ಹಾಗಿದ್ದರೆ, ದೂರವಾಣಿ ಕರೆಗಳಿಗಾದರೆ ಮೂರು-ಜಿ ಜಾಲವೆ ಅನುಕೂಲ. ಸರಕಾರ ವೈಮ್ಯಾಕ್ಸ್ ಜಾಲಗಳಿಗೆ ಸ್ಪೆಕ್ಟ್ರಮ್ ವಿತರಿಸದೆ ಇರುವುದೇ ಸೇವೆ ಒದಗಿಸಲು ಅಡ್ಡಿಯಾಗಿದೆ. ಈ ಅಡ್ಡಿಯು ಬೇಗನೇ ನಿವಾರಣೆಯಾಗಲಿ ಎಂದು ವೇದಿಕೆ ಆಗ್ರಹಿಸಿದೆ.
udayavani
*ಅಶೋಕ್‌ಕುಮಾರ್ ಎ
ಕೊರೆತ...
-
ಕಡಲ ಕೊರೆತಕೇನೋ
ಇಡಬಹುದು ಬಂಡೆಗಳನು...
ನಿನ್ನ ಮೌನದಿಂದ
ಗುಂಡಿಗೆಯಲುಂಟಾಗುವ ಕೊರೆತಕೆ
ಏನು ಮಾಡಲಿ, ಹೇಳೇ ಗೆಳತಿ???
--ಶ್ರೀ
1 hour ago



0 comments:
Post a Comment