Monday, September 07, 2009

ಅಂತರ್ಜಾಲಕ್ಕೆ ನಲುವತ್ತು: ಈಗದು ಕೆಲವರಿಗೆ ವ್ಯಸನ

ಅಂತರ್ಜಾಲಕ್ಕೆ ನಲುವತ್ತು: ಈಗದು ಕೆಲವರಿಗೆ ವ್ಯಸನ
1969ರ ಸೆಪ್ಟೆಂಬರ್ ಎರಡರಂದು ಎರಡು ಕಂಪ್ಯೂಟರುಗಳ ನಡುವೆ ಸಂಪರ್ಕ ಸಾಧಿಸುವ ಮೂಲಕ ಮೊದಲ ಕಂಪ್ಯೂಟರ್ ಜಾಲ ಏರ್ಪಟ್ಟಿತು. ಆ ಘಟನೆಯೇ ಅಂತರ್ಜಾಲವೆಂಬ ಮಹಾಜಾಲದ ನಿರ್ಮಾಣಕ್ಕೆ ಹೇತುವಾಯಿತು ಎನ್ನುವುದನ್ನು ನಂಬುವುದು ಕಷ್ಟ.ಆರಂಭದಲ್ಲಿ ಅಂತರ್ಜಾಲ ಲಿಪಿಮಯವಾಗಿತ್ತು.ಬರುಬರುತ್ತಾ ಅದು ಚಿತ್ರಮಯವಾಗುತ್ತಿದೆ. ಮುಂದಿನ ದಿನಗಳಲ್ಲಿ ಅಂತರ್ಜಾಲದಲ್ಲಿ ಮೂರು ಆಯಾಮಗಳ ಅನುಭವ ಸಿಗಬೇಕು ಎನ್ನುವುದು ಸಂಶೋಧಕರ ಹಂಬಲ.ಅಲ್ಲದೆ ಜಗತ್ತಿನ ಪ್ರತಿ ಸಾಧನವನ್ನೂ ಬೇಕೆಂದಲ್ಲಿ ಅಂತರ್ಜಾಲಕ್ಕೆ ಸಂಪರ್ಕ ಕಲ್ಪಿಸಿ,ಅವುಗಳನ್ನು ನಿಯಂತ್ರಿಸಲು ಸಾಧ್ಯವಾಗಬೇಕೆನ್ನುವುದು ಅವರ ಆಸೆ.ಅದು ಸಾಧ್ಯವಾಗಲು ಅಂತರ್ಜಾಲವನ್ನು ಸದ್ಯದ ಐಪಿ4ರಿಂದ ಐಪಿ6 ಶಿಷ್ಟಾಚಾರಕ್ಕೇರಿಸುವ ಅಗತ್ಯ ಇದೆ.
ಅಂತರ್ಜಾಲಕ್ಕೆ ನಲುವತ್ತು ವರ್ಷವಾಗಿರುವ ಈ ಸಂದರ್ಭದಲ್ಲಿ ಅದು ಜನರಿಗೆ ಒಳಿತು ಹಾಗೂ ಕೆಡುಕು ಎರಡನ್ನೂ ಧಾರಾಳವಾಗಿ ನೀಡಿದೆ.ಇಡೀ ದಿನ ಅಂತರ್ಜಾಲದಲ್ಲೇ ಮುಳುಗಿ,ಮಿಥ್ಯಾಪ್ರಪಂಚದ ಭ್ರಮೆಯಲ್ಲೇ ತೇಲುವ ಅದೆಷ್ಟೋ ಜನರಿಗೆ ಅಂತರ್ಜಾಲವೇ ವ್ಯಸನವಾಗಿರುವುದು ಸುಳ್ಳಲ್ಲ.ಇಂತಹ ವ್ಯಸನಕ್ಕೆ ಪರಿಹಾರವನ್ನೂ ಅಂತರ್ಜಾಲದಲ್ಲೇ ಲಭ್ಯವಾಗಿಸಲಾಗುತ್ತಿರುವುದು ವಿಚಿತ್ರವಾದರೂ ನಿಜ.ಅಂತರ್ಜಾಲ ವ್ಯಸನದಿಂದ ಹೊರಬರಲು ಮಾರ್ಗದರ್ಶನವೂ ಅಂತರ್ಜಾಲದಲ್ಲೇ ಲಭ್ಯವಿದೆ! ಏಪಲ್ ಕಂಪ್ಯೂಟರುಗಳಲ್ಲಿ, ಅಂತರ್ಜಾಲ ಸಂಪರ್ಕವನ್ನು ಕಡಿದು, ವ್ಯಸನಿಗಳನ್ನು ಎಚ್ಚರಿಸುವ ಫ್ರೀಡಮ್ ಎನ್ನುವ ತಂತ್ರಾಂಶವನ್ನು ಅನುಸ್ಥಾಪಿಸಬಹುದು.ಮಿಂಚಂಚೆ ಕಳುಹಿಸುವುದು,ಮಾರುತ್ತರ ಬಂದಿದೆಯೇ ಎಂದು ಪದೇ ಪದೇ ಪರಿಶೀಲಿಸುವುದು ಇವನ್ನು ತಪ್ಪಿಸಲು ಸಂದೇಶಗಳನ್ನು ಕಳುಹಿಸದೆ ತಡೆ ಹಿಡಿಯುವ ಸೌಕರ್ಯ ಜಿಮೇಲ್ ಮಿಂಚಂಚೆ ಸೇವೆ ಒದಗಿಸುತ್ತದೆ.
---------------------------------------------------------------
ಬಿಂಗ್ ಮತ್ತು ಪಿಂಗ್
ಬಿಂಗ್ ಎನ್ನುವುದು ಮೈಕ್ರೋಸಾಫ್ಟ್ ಕಂಪೆನಿಯ ಹೊಸ ಶೋಧ ಸೇವೆ. ಯಾವುದೇ ಪದವನ್ನು ನೀಡಿ ಶೋಧ ನಡೆಸಿದಾಗ ಸಿಗುವ ಫಲಿತಾಂಶವನ್ನು ಟ್ವಿಟರ್ ಅಥವಾ ಫೇಸ್‌ಬುಕ್ ಅಂತಹ ತಮ್ಮ ಖಾತೆಗಳಲ್ಲಿ ನೀಡಿ,ತಮ್ಮ ಗೆಳೆಯರಿಗೆ ತಮ್ಮ ಶೋಧದ ಫಲಿತಾಂಶವನ್ನು ಸುಲಭವಾಗಿ ಒದಗಿಸುವುದಲ್ಲದೆ,ತಮ್ಮ ಇಷ್ಟಾನಿಷ್ಟಗಳ ಬಗೆಗೆ ಅವರಿಗೆ ತಿಳಿಸುವುದನ್ನು ಸಾಧ್ಯವಾಗಿಸುವುದು "ಬಿಂಗ್ ಮತ್ತು ಪಿಂಗ್" ಸೇವೆಯ ವೈಖರಿ. ಈಗಿನ್ನೂ ಪರೀಕ್ಷಾರ್ಥ ಹಂತದಲ್ಲಿರುವ ಸೇವೆಯು ತಡವಿಲ್ಲದೆ ಜನರಿಗೆ ಸಿಗಲಿದೆ ಎಂದು ಕಂಪೆನಿಯ ಮೂಲಗಳು ಪ್ರಕಟಿಸಿವೆ.
-------------------------------------------------------------
ಮೊಬೈಲ್ ಮೂಲಕವೇ ಅಟೋ ಹೀಡಿಯಿರಿ!
ಅಟೋಗಳಿಗೆ ಕೈಯಡ್ಡ ಹಿಡಿದು, ತಮಗೆ ಹೋಗ ಬೇಕಾಗಿರುವೆಡೆ ಬರಲಾತ ನಿರಾಕರಿಸುವ ಅನುಭವ ನಗರಗಳಲ್ಲಿ ಎಲ್ಲರಿಗೂ ಆಗಿಯೇ ಇರುತ್ತದೆ. ಇದನ್ನು ತಡೆಯಲು ಸಾಧ್ಯವಾಗುವ ತಂತ್ರಜ್ಞಾನ ಜರ್ಮನಿಯಲ್ಲಿ ಪ್ರಯೋಗವಾಗುತ್ತಿದೆ. ಅಲ್ಲಿ ಅದು ಟ್ಯಾಕ್ಸಿಗಳಲ್ಲಿ ಪ್ರಯೋಗವಾಗುತ್ತಿದೆ.ಖಾಲಿ ಟ್ಯಾಕ್ಸಿ ಚಲಾಯಿಸುತ್ತಿರುವ ಚಾಲಕ,ತಾನು ಹೋಗುತ್ತಿರುವ ಸ್ಥಳವನ್ನು ಕಂಪ್ಯೂಟರ್ ಕೇಂದ್ರಕ್ಕೆ ಎಸೆಮ್ಮೆಸ್ ಮಾಡಿ ತಿಳಿಸುತ್ತಾನೆ. ಗ್ರಾಹಕರೂ ತಾವು ಹೋಗಬೇಕಿರುವ ಸ್ಥಳವನ್ನು ಇಲ್ಲಿ ದಾಖಲಿಸುತ್ತಾರೆ.ಇದಕ್ಕೆ ಮೊಬೈಲ್ ಬಳಕೆಯಾಗುತ್ತದೆ ಎಂದು ಬೇರೆ ಹೇಳಬೇಕಿಲ್ಲವಷ್ಟೇ. ಅಂತಹ ಗ್ರಾಹಕರ ಮೊಬೈಲ್ ಕರೆಯ ಮೂಲಕ ಅವರ ಸ್ಥಾನ ತಿಳಿದು,ಅಂತಹ ಸ್ಥಳಕ್ಕೆ ಸಮೀಪವಿರುವ ಟ್ಯಾಕ್ಸಿ ಚಾಲಕನಿಗೆ ಸಂದೇಶ ರವಾನೆಯಾಗುತ್ತದೆ. ಚಾಲಕ ಬಯಸಿದಲ್ಲಿ ಗ್ರಾಹಕನನ್ನು ಹತ್ತಿಸಿಕೊಳ್ಳಬಹುದು. ಬೇಡದಿದ್ದರೆ,ನಿಲ್ಲಿಸುವ ಅಗತ್ಯವೇ ಇಲ್ಲ.ಈ ಸೇವೆಗೆ ಓಪನ್ ರೈಡ್ ಎಂದು ಹೆಸರಿಸಲಾಗಿದೆ.
---------------------------------------------------
ಪ್ರಜಾವಾಣಿ ಅಂತರ್ಜಾಲ ತಾಣ ಈಗ ಯುನಿಕೋಡಿನಲ್ಲಿ
ಇದುವರೆಗೆ ತನ್ನದೇ ಆದ ಪ್ರತ್ಯೇಕ ಅಕ್ಷರ ವಿನ್ಯಾಸ ಹೊಂದಿ ಅಂತರ್ಜಾಲ ತಾಣದಲ್ಲಿ ಲಭ್ಯವಿದ್ದ "ಪ್ರಜಾವಾಣಿ" ಪತ್ರಿಕೆಯಿದೀಗ ತನ್ನ ತಾಣವನ್ನು ಯುನಿಕೋಡಿನಲ್ಲಿ ನೀಡಲಾರಂಭಿಸಿದೆ. ಇದರಿಂದ ಯುನಿಕೋಡ್ ಬೆಂಬಲವಿರುವ ಆಧುನಿಕ ಕಾರ್ಯಾಚರಣೆ ವ್ಯವಸ್ಥೆಗಳಿದ್ದಲ್ಲಿ ತಾಣವು ಸಮಸ್ಯೆಯಿಲ್ಲದೆ ಸ್ಪಷ್ಟವಾಗಿ ಕನ್ನಡ ಅಕ್ಷರಗಳು ಗೋಚರಿಸುತ್ತವೆ. "ಉದಯವಾಣಿ"ಯ ಸಹಿತ ಹೆಚ್ಚಿನ ಪತ್ರಿಕೆಗಳು ತಮ್ಮ ಇ-ಪೇಪರನ್ನು ಒದಗಿಸಿ, ಈ ಫಾಂಟ್ ಸಮಸ್ಯೆಗೆ ಪರಿಹಾರ ಒದಗಿಸಲು ಪ್ರಯತ್ನಿಸುತ್ತಿವೆ. ಆದರೆ ಹಾಗೆ ಮಾಡಿದರೆ,ಪತ್ರಿಕೆಯ ಬರಹಗಳನ್ನು ಶೋಧಿಸಲು ಸಾಧ್ಯವಾಗದು. ಆದರೆ ಯುನಿಕೋಡಿನಲ್ಲಿ ಲಭ್ಯವಿರುವ ಬರಹ,ಸುದ್ದಿಗಳನ್ನು ಗೂಗಲ್ ಅಂತಹ ಸೇವೆಗಳನ್ನು ಬಳಸಿ ಶೋಧಿಸುವುದು ಸಾಧ್ಯವೆನ್ನುವುದು ಧನಾತ್ಮಕ ಅಂಶ. ಪ್ರಜಾವಾಣಿಯ ಪುಟ ನೋಡಲು www.prajaavaani.net ವಿಳಾಸ ಬಳಸಿ.
---------------------------------------------------------
ಇ-ರೀಡರಿನಲ್ಲಿ ಪತ್ರಿಕೆಗಳು
ಹಾರ್ಸ್ಟ್ ಎನ್ನುವುದು ಪತ್ರಿಕೆಗಳ ಸಮೂಹ ಸಂಸ್ಥೆ.ಈ ಸಂಸ್ಥೆಯು ಹದಿನಾರು ದೈನಿಕಗಳನ್ನು ಮತ್ತು ನಲುವತ್ತೊಂಭತ್ತು ವಾರಪತ್ರಿಕೆಗಳನ್ನು ನಡೆಸುತ್ತಿದೆ. ಈಗ ಅದು ತನ್ನ ಪತ್ರಿಕೆಗಳನ್ನು ಓದಲು ಇ-ರೀಡರನ್ನು ಹೊರತರಲು ಯೋಚಿಸಿದೆ. ಇ-ರೀಡರ್ ಪತ್ರಿಕೆಗಳನ್ನು ಓದುವ ಸಾಧನ. ಈ ಸಾಧನವು ಪತ್ರಿಕೆಯ ಆಕಾರವನ್ನು ಹೋಲುತ್ತದೆ. ಮಡಚಲು ಸಾಧ್ಯವಾಗುವಂತೆ ಅದನ್ನು ಪ್ಲಾಸ್ಟಿಕ್ ತರದ ಉತ್ಪನ್ನದಿಂದ ತಯಾರಿಸಲಾಗಿದೆ.ಸದ್ಯ ಕಪ್ಪು-ಬಿಳುಪಿನಲ್ಲಿ ಲಭ್ಯವಿದ್ದರೂ ಮುಂದೆ ವರ್ಣದಲ್ಲೂ ಲಭ್ಯವಾಗಲಿದೆ.ಅಂತರ್ಜಾಲದಿಂದ ಪತ್ರಿಕೆಗಳನ್ನು ಇದಕ್ಕೆ ಡೌನ್‌ಲೋಡ್ ಮಾಡಿಕೊಂಡು ಓದಬಹುದು.ಮುದ್ರಿತ ಪ್ರತಿಗಳನ್ನು ಮೂಲೆಗುಂಪಾಗಿಸುವ ಇ-ರೀಡರ್‌ಗಳ ಬಳಕೆ ಪತ್ರಿಕೆಗಳ ಹೊಸ ತಂತ್ರವಾಗುವ ಲಕ್ಷಣಗಳಿವೆ.
--------------------------------------------------
udayavani

*ಅಶೋಕ್‌ಕುಮಾರ್ ಎ

1 comments:

ebethaala said...

hi
gothrough this blogspot:
http://www.bethaala.blogspot.com/
And drop your comment
Snd add in your links' list

regards
ebethaala@gmail.com

 
googledc7e93ba1a7703ae.html