ಶುದ್ಧ ನೀರು ಕೊಡುವ ಸ್ಲಿಂಗ್‌ಶಾಟ್
ಶುದ್ಧ ಕುಡಿಯುವ ನೀರು ಜಗತ್ತಿನ ಮಹಾ ತಲೆನೋವಾಗುತ್ತಿರುವುದು ಸ್ಪಷ್ಟ. ಜಗತ್ತಿನ ಹಿಂದುಳಿದ ಮತ್ತು ಮುಂದುವರಿಯುತ್ತಿರುವ ದೇಶಗಳ ಹಳ್ಳಿಗಳಲ್ಲಂತೂ ನೀರಿಗಾಗಿನ ಪರದಾಟ ನಿರಂತರವಾಗಿರುತ್ತದೆ.ಬರದ ಪರಿಸ್ಥಿತಿಯಿಂದ ನೀರಿಗಾಗಿ ಹಾಹಾಕಾರ ಹೆಚ್ಚುತ್ತದೆ. ಈ ಪರಿಸ್ಥಿತಿ ತಪ್ಪಿಸಲು ಸಹಾಯ ಮಾಡುವ ಸ್ಲಿಂಗ್‌ಶಾಟ್ ಎನ್ನುವ ಸಾಧನವನ್ನು ಡೀನ್ ಕಾಮನ್ ಎನ್ನುವ ಸಂಶೋಧಕ ಮಾಡಿದ್ದಾರೆ. ನೀರಾವಿಯನ್ನು ಒತ್ತಡಕ್ಕೊಳಪಡಿಸಿ, ಭಟ್ಟಿ ಇಳಿಸಿ, ನೀರನ್ನು ಶುದ್ಧ ಮಾಡುವ ತಂತ್ರವನ್ನು ಇದರಲ್ಲಿ ಬಳಸಲಾಗಿದೆ.ಕೆಸರು ನೀರು,ಸಮುದ್ರದ ನೀರು ಅಥವಾ ಯಾವುದೇ ಗುಣಮಟ್ಟದ ನೀರನ್ನೂ ಶುದ್ಧ ನೀರಾಗಿ ಪರಿವರ್ತಿಸಲು ಸಾಧ್ಯ. ಸಾಧನದಲ್ಲಿ ಎರಡು ಪಾತ್ರೆಗಳಿದ್ದು,ಒಂದರಲ್ಲಿ ಅಶುದ್ಧ ನೀರಿನದ್ದಾಗಿದ್ದರೆ, ಇನ್ನೊಂದರಲ್ಲಿ ಶುದ್ಧ ನೀರು ಸಂಗ್ರಹವಾಗುತ್ತದೆ.ಈ ಸಾಧನ ಕೆಲಸ ಮಾಡಲು ವಿದ್ಯುತ್ ಬೇಕಾದರೂ, ಸಾಮಾನ್ಯ ವಿಧಾನದಿಂದ ಭಟ್ಟಿ ಇಳಿಸಿದರೆ ಬೇಕಾದ್ದಕ್ಕಿಂತ ಅತಿ ಕಡಿಮೆ ವಿದ್ಯುತ್ ಸಾಕಾಗುತ್ತದೆ.ಕೂದಲು ಒಣಗಿಸುವ ಸಾಧನ ಕೆಲಸ ಮಾಡಲು ಬೇಕಾಗುವ ವಿದ್ಯುಚ್ಛಕ್ತಿಯನ್ನಿದು ಬಳಸುತ್ತದೆ.ನೂರು ಜನರಿಗೆ ಬೇಕಾಗುವಷ್ಟು ನೀರು ಒದಗಿಸುವ ಸಾಮರ್ಥ್ಯ ಸಾಧನಕ್ಕಿದೆ.ಇದರ ಬೆಲೆ ಈಗ ಬಹಳ ಜಾಸ್ತಿಯಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಉತ್ಪಾದಿಸಿ, ಇದರ ಬೆಲೆಯನ್ನು ಎರಡುಸಾವಿರ ಡಾಲರಿಗೆ ಇಳಿಸುವುದು ಕಾಮನ್ ಅವರ ಬಯಕೆ. ಸದ್ಯದ ಪರಿಸ್ಥಿತಿ ಹೇಗಿದೆಯೆಂದರೆ, ಜಗತ್ತಿನಲ್ಲಿ ಮೂರೂವರೆ ದಶಲಕ್ಷ ಜನ ನೀರಿನಿಂದ ಬರುವ ರೋಗಗಳಿಗೆ ಬಲಿಯಾಗುತ್ತಾರೆ.
----------------------------------------------------------------------------
ಗೂಗಲ್ ಹೊಸ ಹಾದಿ
ಗೂಗಲ್ ಕಂಪೆನಿಯು ಅಂತರ್ಜಾಲ ಶೋಧ, ಕಂಪ್ಯೂಟರ್ ಜಗತ್ತಿನಿಂದ ಹೊರ ಬರಲು ಪ್ರಯತ್ನಿಸುತ್ತಿದೆ.ಸೌರಶಕ್ತಿಯನ್ನು ಬಳಸುವ ನವೀನ ತಾಂತ್ರಿಕೆತೆಯನ್ನು ಅಗ್ಗದ ದರದಲ್ಲಿ ತರುವುದೂ ಅದರ ಪ್ರಯತ್ನಗಳಲ್ಲಿ ಸೇರಿದೆ. ಸೂರ್ಯನತ್ತ ಮುಖ ಮಾಡಿದ ಕನ್ನಡಿಗಳನ್ನು ಬಳಸಿ,ವಿದ್ಯುತ್ ಉತ್ಪಾದಿಸುವ ತಂತ್ರಜ್ಞಾನವನ್ನು ಕಡಿಮೆ ಖರ್ಚಿನಲ್ಲಿ ಸ್ಥಾಪಿಸಲು ಅನುವು ಮಾಡುವ ತಾಂತ್ರಿಕತೆಯ ಅಭಿವೃದ್ಧಿಗಾಗಿ ಗೂಗಲ್ ಪ್ರಯತ್ನ ಸಾಗುತ್ತಿದೆ.ಸೌರಶಕ್ತಿ ಆಧಾರಿತ ಉಷ್ಣವಿದ್ಯುತ್ ಸ್ಥಾವರ ಸ್ಥಾಪನೆ ಗೂಗಲ್ ಗುರಿ.ಸೌರಶಕ್ತಿ ಬಳಸಿ,ಆವಿ ಉತ್ಪಾದಿಸಿ, ಟರ್ಬೈನ್ ನಡೆಸಿ ವಿದ್ಯುತ್ ಉತ್ಪಾದನೆ ಮಾಡುವುದೇ ಸೌರ ಶಕ್ತಿ ಆಧಾರಿತ ಉಷ್ಣ ವಿದ್ಯುತ್ ಸ್ಥಾವರದ ಯೋಜನೆ.ಗ್ಯಾಸ್ ಟರ್ಬೈನನ್ನು ಅನಿಲದ ಬದಲು ಸೌರಶಕ್ತಿಯಿಂದ ನಡೆಸಲೂ ಗೂಗಲ್ ತಂತ್ರಜ್ಞಾನ ಅಭಿವೃದ್ಧಿ ಪಡಿಸಲು ಪ್ರಯತ್ನಿಸುತ್ತಿದೆ.ಇನ್ನೂರೈವತು ಮೆಗಾವ್ಯಾಟ್ ವಿದ್ಯುಚ್ಛಕ್ತಿಯನ್ನು ಆರುನೂರು ದಶಲಕ್ಷದಿಂದ ಒಂದು ಬಿಲಿಯನ್ ಡಾಲರು ಹೂಡಿಕೆಯ ಮೂಲಕ ಉತ್ಪಾದಿಸುವುದು ಸಾಧ್ಯವಾಗಿಸಬೇಕೆನ್ನುವುದು ಗೂಗಲ್ ಕಂಪೆನಿಯ ಲೆಕಾಚಾರ.
---------------------------------------
ಟ್ವಿಟ್ಸ್ ಸ್ವಾಮ್ಯ ಯಾರಿಗೆ?
ಟ್ವಿಟರ್ ಮೈಕ್ರೋಬ್ಲಾಗಿಂಗ್‌ಗೆ ಅವಕಾಶ ನೀಡುವ ಅಂತರ್ಜಾಲ ತಾಣ ಎಂದು ಅರಿಯದವರು ಈಗ ವಿರಳ.ಈ ಕಿರು ಸಂದೇಶಗಳು ಬಳಕೆದಾರನು ಸದ್ಯ ಏನು ಮಾಡುತ್ತಿರುವನು ಎನ್ನುವುದನ್ನು ಸೂಚಿಸಬೇಕೆನ್ನುವುದು ಸಾಮಾನ್ಯ ನಿರೀಕ್ಷೆ. ಆದರೆ ವಕ್ರತುಂಡೋಕ್ತಿಗಳು ಟ್ವಿಟರಿನಲ್ಲಿ ಹರಿದಾಡುವುದು ಸಾಮಾನ್ಯ. ಈ ಕಿರುಬರಹಗಳ ಹಕ್ಕುಸ್ವಾಮ್ಯ ಯಾರದ್ದು-ಬರೆದವನದ್ದೇ ಅಲ್ಲ ಟ್ವಿಟರ್ ತಾಣದ್ದೇ ಎನ್ನುವ ಪ್ರಶ್ನೆ ಎದ್ದಿದೆ. ಟ್ವಿಟರ್ ತಾಣ ಇಂತಹ ಟ್ವಿಟ್ಸ್‌ಗಳು ಬರಹಗಾರನದ್ದೇ ಆದರೂ,ಅವನ್ನು ಬಳಸಲು,ಪ್ರಕಟಿಸಲು ತನಗೂ ಹಕ್ಕಿದೆ ಎಂದು ಪ್ರತಿಪಾದಿಸಿದೆ. ಪುಸ್ತಕರೂಪದಲ್ಲಿ ಪ್ರಕಟಿಸಲು ತಾಣಕ್ಕೆ ಮಾತ್ರ ಹಕ್ಕಿದೆ ಎಂದು ಅದು ಹೇಳಿಕೊಂಡಿದೆ. ಬಳಕೆದಾರರು ಇದನ್ನು ಒಪ್ಪುವರೇ ಎನ್ನುವುದು ಕುತೂಹಲದ ವಿಷಯ.
ಇದೇ ವೇಳೆಗೆ ತಾಣವು ಟ್ವಿಟ್ ಸಂದೇಶದ ಜತೆ ಜಾಹೀರಾತನ್ನು ಪ್ರಕಟಿಸಿ,ತನ್ನ ಆದಾಯ ಹೆಚ್ಚಿಸಿಕೊಳ್ಳಲು ಯೋಜಿಸಿದೆ.ಈಗ ಟ್ವಿಟರ್ ತಾಣದಲ್ಲಿ ಜಾಹೀರಾತು ಹಾವಳಿ ಇಲ್ಲ. ಇದರ ನೇರ ಪರಿಣಾಮ ಕಂಪೆನಿಯ ಆರ್ಥಿಕತೆ ಮೇಲೆ ಆಗಿದೆ.ತಿಂಗಳಿಗೆ ನಲುವತ್ತೈದು ದಶಲಕ್ಷ ಹೊಸ ಬಳಕೆದಾರರು ಬಂದರೂ,ಕಂಪೆನಿ ಲಾಭದಲ್ಲಿ ಇಲ್ಲ.ಇಂತಹ ಉಚಿತ ಸೇವೆಗೆ ಜಾಹೀರಾತು ಒಂದೇ ಪರಿಹಾರ. ಇಷ್ಟು ದೊಡ್ದ ಸಂಖ್ಯೆಯ ಬಳಕೆದಾರರು ಇದ್ದರೂ, ಅದರ ಪ್ರಯೋಜನ ಪಡೆಯಲು ಕಂಪೆನಿಗೆ ಸಾಧ್ಯವಾಗಿಲ್ಲ. ಬಳಕೆದಾರರಿಗೆ ಹೆಚ್ಚಿನ ಸೌಲಭ್ಯ ನೀಡಲು ಅದು ಮಾಡಬೇಕಿರುವ ಖರ್ಚು ಏರುತ್ತಿದೆ. ಆದರೆ ಆದಾಯ ಹೆಚ್ಚುತ್ತಿಲ್ಲ. ಇನ್ನು ಸಂದೇಶದ ಸುತ್ತಲಿನ ಖಾಲಿ ಜಾಗೆಯಲ್ಲಿ ಜಾಹೀರಾತು ಆರಂಭವಾದರೆ,ಬಳಕೆದಾರರಿಗೆ ಕಿರಿಕಿರಿ ತಪ್ಪಿದ್ದಲ್ಲ.ಬಳಕೆದಾರರು ಜಾಹೀರಾತು ಇಷ್ಟಪಡರು-ಆದರೆ ಉಚಿತ ಸೇವೆ ಬಯಸುವ ಅವರುಗಳು ಇದನ್ನು ಅನುಭವಿಸದೆ ಅನ್ಯ ಮಾರ್ಗವಿದೆಯೇ?
-------------------------------------------------------------------------
ಫೇಸ್‌ಬುಕ್:ಸರಳ ತಾಣವೂ ಲಭ್ಯ
ಇತ್ತೀಚೆಗೆ ಪೇಸ್‌ಬುಕ್ ಸುದ್ದಿಯಾಗಲು ಪ್ರಧಾನಿಯೂ ಕಾರಣರಾದರು.ಫೇಸ್‌ಬುಕ್ ತಾಣದಲ್ಲಿ ಪ್ರಧಾನಿ ಸಿಂಗ್ ಕೂಡಾ ಖಾತೆ ಹೊಂದಿರುವರೇ ಎಂಬ ಪ್ರಶ್ನೆ ಎದ್ದಿತ್ತು. ಸಿಂಗ್ ಅಂತರ್ಜಾಲದ ಬಗ್ಗೆ ಬಹಳ ಉತ್ಸಾಹ ಹೊಂದಿಲ್ಲದ್ದೇ ಇದ್ದರೂ ಅವರ ಹೆಸರಿನ ಖಾತೆಯು ಪೇಸ್‌ಬುಕ್ಕಿನಲ್ಲಿದೆ. ಅದನ್ನು ಆಗಿಂದ್ಯಾಗ್ಯೆ ನವೀಕರಿಸಲಾಗುತ್ತಿದೆ ಕೂಡಾ. ಆದರೆ ಹೀಗೆ ಮಾಡುವವರು ಯಾರೆನ್ನುವುದನ್ನು ಯಾರೂ ಖಚಿತವಾಗಿ ಹೇಳುವ ಸ್ಥಿತಿಯಲ್ಲಿಲ್ಲ.ಅವರ ಪುಟದಲ್ಲಿ ಇರುವ ಮಾಹಿತಿಗಳು ನಿಖರವಾಗಿದ್ದು,ಅವರೇ ಬಳಸುತ್ತರೇನೋ ಎನ್ನುವ ಭ್ರಮೆ ಹುಟ್ಟಿಸುವುದಂತೂ ಸತ್ಯ.
ಫೇಸ್‌ಬುಕ್‌ನ ಸರಳ ಆವೃತ್ತಿಯನ್ನೂ ಇದೀಗ ಲಭ್ಯವಾಗಿಸಲಾಗಿದೆ. ಈ ತಾಣವು ಕಡಿಮೆ ಬ್ಯಾಂಡ್‌ವಿಡ್ತ್ ಬಳಕೆದಾರ ಅನುಕೂಲಕ್ಕಾಗಿ ರಚಿತವಾದದ್ದು.ಈ ಆವೃತ್ತಿ ಸೀಮಿತ ಅವಕಾಶಗಳನ್ನು ಮಾತ್ರಾ ಒದಗಿಸುತ್ತದೆ.ಟ್ವಿಟರ್ ತಾಣವನ್ನು ಹೋಲುವಂತೆ ಇದನ್ನು ರಚಿಸಲಾಗಿದೆ.ಸಾಮಾನ್ಯವಾದ ಫೇಸ್‌ಬುಕ್ ಪುಟದಲ್ಲಿ ಹಲವು ಆಟಗಳು ಲಭ್ಯವಿದ್ದು,ಬಳಕೆದಾರಿಗೆ ಅಪರಿಮಿತ ಮನರಂಜನೆ ಪಡೆಯಲು ಅವಕಾಶವಿದೆ.
-----------------------------------------------------------------------------
ಸಂಪದ ತಾಣ ನವೀಕರಣ
ಅಂತರ್ಜಾಲ ತಾಣಗಳಿಗೆ ಹೆಚ್ಚು ಬಳಕೆದಾರರೂ ತಲೆನೋವು ತರುವುದಿದೆ. ಹೆಚ್ಚಿನ ಸಂಚಾರ ನಿಭಾಯಿಸಲು,ಅಧಿಕ ಸಾಮರ್ಥ್ಯದ ಸರ್ವರ್‌ಗಳು ಬೇಕು.ಕನ್ನಡದ ಜನಪ್ರಿಯ ತಾಣ ಸಂಪದ.ನೆಟ್‌ಗೂ ಇದೇ ಸಮಸ್ಯೆ ಕಾಡಿತು. ಇದರ ಜತೆಗೆ ತಾಣಕ್ಕೆ ಹೊಸ ರೂಪ ಕೊಡಲು ಪ್ರಯತ್ನಿಸಲಾಗುತ್ತಿದೆ.ಸಿರಿಸಂಪದ ಎಂಬ ಹೊಸ ವಿಭಾಗದ ಜತೆಗೆ,ಈಗಾಗಲೇ ಲಭ್ಯವಿರುವ ಕೃಷಿ ಸಂಪದವನ್ನು ಬಲಪಡಿಸುವ ಯತ್ನ ನಡೆದಿದೆ. ಪರಿಣಾಮ, ಸಂಪದ.ನೆಟ್ ತಾಣ ಸದ್ಯ ಲಭ್ಯವಿಲ್ಲ. ಈ ತಿಂಗಳ ಆರಂಭದಿಂದಲೂ ತಾಣವನ್ನು ನವೀಕರಿಸಿ,ಹೊಸ ಸರ್ವರಿಗೆ ಸ್ಥಳಾಂತರಿಸುವ ಪ್ರಯತ್ನ ನಡೆದಿತ್ತು.ಎಲ್ಲವೂ ಎಣಿಕೆಯಂತೆ ನಡೆದರೆ, ಈ ಬರಹ ಪ್ರಕಟವಾಗುವ ವೇಳೆ ನವೀಕೃತ ಸಂಪದ saMpada.net ತಾಣದಲ್ಲಿ ಲಭ್ಯವಿರಬೇಕು.
udayavani
*ಅಶೋಕ್‌ಕುಮಾರ್ ಎ
ಕೊರೆತ...
-
ಕಡಲ ಕೊರೆತಕೇನೋ
ಇಡಬಹುದು ಬಂಡೆಗಳನು...
ನಿನ್ನ ಮೌನದಿಂದ
ಗುಂಡಿಗೆಯಲುಂಟಾಗುವ ಕೊರೆತಕೆ
ಏನು ಮಾಡಲಿ, ಹೇಳೇ ಗೆಳತಿ???
--ಶ್ರೀ
1 hour ago



2 comments:
ನಿಮ್ಮ ಬ್ಲಾಗ್ ತೆರೆದರೆ ಮಾಹಿತಿಕೋಶವೇ ತೆರೆದಂತೆ ಭಾಸವಾಗುತ್ತದೆ. ಹಲವಾರು ಕ್ಷೇತ್ರದ ಕಿರು ಮಾಹಿತಿಗಳನ್ನು ನಮಗಾಗಿ ನೀಡುತ್ತಿರುವ ನಿಮ್ಮ ಕಾರ್ಯ ಸ್ತುತ್ಯಾರ್ಹ. ಹೀಗೇ ಮುಂದುವರೆಸಿ.
ನಿಮ್ಮ ಪ್ರೋತ್ಸಾಹದ ನುಡಿಗಳಿಗಾಗಿ ಋಣಿ.
Post a Comment