Tuesday, January 20, 2009

"ಶಾಶ್ವತ" ಮೇಕಪ್

"ಶಾಶ್ವತ" ಮೇಕಪ್
ಮೇಕಪ್ ಎಲ್ಲಿ ಅಳಿಸಿಹೋಗುವುದೋ ಎಂದು ಬಹು ಜಾಗ್ರತೆ ಮಾಡಬೇಕಾದ ಅಗತ್ಯ ಮೇಕಪ್ ಮಾಡಿಕೊಂಡವರಿಗೆ ತಪ್ಪಿದ್ದಲ್ಲ. ಆದರೀಗ "ಶಾಶ್ವತ" ಎಂದು ಹೇಳಬಹುದಾದ ಮೇಕಪ್‌ಗಳನ್ನು ಮಾಡುವ ವಿಧಾನ ಜನಪ್ರಿಯವಾಗುತ್ತಿದೆ. ಐದು ವರ್ಷಗಳ ವರೆಗೂ ಈ ಮೇಕಪ್ ಉಳಿಯುತ್ತದಾದ್ದರಿಂದ, ಮೇಕಪ್‌ಗೆ ಬಳಸಿದ ಬಣ್ಣದ ಬಗ್ಗೆ ಜಾಗ್ರತೆ ವಹಿಸಬೇಕು. ಅದನ್ನು ಬೇಕೆಂದಾಗ ಅಳಿಸಲು ಬರುವುದಿಲ್ಲವಲ್ಲ!ಇಂತಹ ಶಾಶ್ವತ ಮೇಕಪ್‍ ಮಾಡಿಸಲು ಕೆಲವೊಮ್ಮೆ ಸ್ಥಳೀಯ ಅರಿವಳಿಕೆಯನ್ನೂ ಕೊಡಬೇಕಾಗುತ್ತದಂತೆ.ಇದನ್ನು ಮೈಮೇಲೆ ಹಚ್ಚೆ ಹಾಕುವ ವಿಧಾನಕ್ಕೆ ಹೋಲಿಸಿದರೆ ತಪ್ಪಿಲ್ಲ. ಕಣ್ಣಿನ ಸುತ್ತ ಛಾಯೆ ಕೊಡಲು,ಗಲ್ಲಕ್ಕೆ ರಕ್ತವರ್ಣ ತುಂಬಲು,ತುಟಿಯ ಆಕಾರ ಇವನ್ನೆಲ್ಲಾ ಶಾಶ್ವತ ಮೇಕಪ್ಪಿನಲ್ಲಿ ಬದಲಿಸುವುದಿದೆ. ದೇಹಕ್ಕೆ ಹಾನಿ ಮಾಡದ ನೈಸರ್ಗಿಕ ಬಣ್ಣಗಳು ಮತ್ತು "ಶಾಯಿ"ಯನ್ನುಬಳಸಲೂ ಬರುತ್ತದೆ.ಮೇಕಪ್ ಮಾಡುವಾಗ ಸೂಜಿಯ ಬಳಕೆಯೂ ಬೇಕಾಗಬಹುದು.ಹಾಗೆ ಮಾಡುವಾಗ ಹೊಸ ಸೂಜಿಯನ್ನೇ ಬಳಸುವ ಬಗ್ಗೆ ಜಾಗ್ರತೆ ಅಗತ್ಯ.ಮುಖದ ಮೇಲಿರುವ ಕಲೆಗಳನ್ನು ನಿವಾರಿಸಲೂ ಈ ವಿಧಾನ ಪ್ರಯೋಜನಕಾರಿ.
---------------------------------------------------------------
ಕರ್ನಾಟಕದಲ್ಲಿ ಸರಣಿ ನಗೆ ಸ್ಫೋಟ
"ವಾರೆಕೋರೆ" ನಗೆ ಪತ್ರಿಕೆಯ ಪ್ರಾಯೋಗಿಕ ಸಂಚಿಕೆಯನ್ನು ಕನ್ನಡ ಜನತೆ www.vaarekore.blogspot.comನ ಬ್ಲಾಗ್ ತಾಣದ ಮೂಲಕವೇ ಪಡೆದಿದ್ದರು. ಇದೀಗ "ವಾರೆಕೋರೆ"ಯ ಚೊಚ್ಚಲ ಸಂಚಿಕೆಯು ಜನವರಿ ಇಪ್ಪತ್ತಮೂರರಂದು ಬಿಡುಗಡೆಯಾಗಲು ಸೂಟ್‌ಕೇಸ್ ಒಳಗಡೆ ಬೆಚ್ಚನೆ ಕುಳಿತಿವೆ.ನಗೆಬಾಂಬುಗಳು ಜನರ ಸರಣಿ ನಗೆಸ್ಫೋಟಕ್ಕೆ ಕಾರ್‍ಅಣವಾಗಬಹುದೆಂಬ ಶಂಕೆ ವ್ಯಕ್ತವಾಗಿದೆ.ನಾಡಿನ ಖ್ಯಾತ ವ್ಯಂಗ್ಯಚಿತ್ರಕಾರ ಪ್ರಕಾಶ್ ಶೆಟ್ಟಿಯವರ ನೇತೃತ್ವದಲ್ಲಿ ಬರುತ್ತಿರುವ ನಗೆಬಾಂಬನ್ನು ತಯಾರಿಸಲು ಅವರಿಗೆ ಸೋದರ ಹರಿಣಿ,ಜೀವನ್ ಅವರಿಂದ ಹಿಡಿದು ಜೇಮ್ಸ್‌ವಾಜ್,ಕೆ ಆರ್ ಸ್ವಾಮಿ,ಶ್ರೀಧರ್,ಸತೀಶ್ ಶೃಂಗೇರಿ,ಗೋಪಾಲ್ ಹೀಗೆ ಹಲವು ನಗೋತ್ಪಾದಕರ ದಂಡೇ ಇದೆ.ಸಂಚಿಕೆಯ ಜತೆ ಉಚಿತವಾಗಿ ಸಿಗುವ "ಕಾರ್ಟೂನ್ ಮಾಸ್ತರ" ಬ್ಲಾಗಿನ ಮೂಲಕವೂ ಅಂತರ್ಜಾಲದಲ್ಲಿ ಲಭ್ಯವಾಗಲಿದೆ.
-----------------------------------------------------------------
ತಂತ್ರಜ್ಞ ರಾಜಕೀಯ ಕಣಕ್ಕೆ!
ವ್ಯಂಗ್ಯಚಿತ್ರಕಾರನಾಗಿಯೂ ಹೆಸರು ಮಾಡಿದ ಜನಾರ್ದನ ಸ್ವಾಮಿಯವರು,ಚಿಪ್ ವಿನ್ಯಾಸಕಾರನಾಗಿ ಅಮೆರಿಕಾದಲ್ಲಿ ದುಡಿಯುತ್ತಿದ್ದರು. ಸನ್ ಮೈಕ್ರೋಸಿಸ್ಟಮ್ಸ್ ಕಂಪೆನಿಯ ಮುಖ್ಯ ಇಂಜಿನಿಯರ್ ಆಗಿದ್ದು,ಇತ್ತೀಚೆಗೆ ಭಾರತಕ್ಕೆ ಮರಳಿದ್ದರು.ಜನ ಸೇವೆ ಮಾಡಬೇಕು ಎನ್ನುವ ಅಭಿಲಾಷೆಯಿಂದ ಅವರು ರಾಜಕೀಯ ಕಣಕ್ಕೆ ಧುಮುಕುವ ನಿರ್ಣಯ ಕೈಗೊಂಡಿದ್ದಾರಂತೆ.ಆರ್ಥಿಕ ದುಸ್ಥಿತಿಯಿಂದ ಕಂಗೆಟ್ಟು,ರಾಜಕಾರಣಕ್ಕೆ ಬರುತ್ತಿದ್ದರೆ ಎಂದು ವ್ಯಂಗ್ಯಚಿತ್ರಕಾರ ಯಾರಾದರೂ ಜನಾರ್ದನ ಸ್ವಾಮಿಯವರನ್ನು ಚಿತ್ರಿಸುವ ಅಪಾಯ ಇದ್ದೇ ಇದೆ! ಅವರು ರಚಿಸಿದ ವ್ಯಂಗ್ಯಚಿತ್ರಗಳು www.jswamy.comನಲ್ಲಿ ಲಭ್ಯ.

----------------------------------------------------------
ಅಮೆರಿಕನ್ನರಿಗೆ ಹಲ್ಲು,ಭಾರತೀಯರಿಗೆ ಹೊಟ್ಟೆಗೆ ಹುಲ್ಲು!
ಹೊರಗುತ್ತಿಗೆಯೀಗ ದಂತ ವೈದ್ಯಕೀಯ ರಂಗವನ್ನು ಮುಟ್ಟಿದೆ. ಅಮೆರಿಕಾದ ವೈದ್ಯರುಗಳೀಗ ತಮ್ಮ ರೋಗಿಗಳಿಗೆ ಬೇಕಾದ ಹಲ್ಲಿನ ಸೆಟ್ ಮತ್ತು ಹಲ್ಲಿನ ಮುರಿದ ಭಾಗಗಳನ್ನು ರಿಪೇರಿ ಮಾಡಲು ಬಳಸುವ ಹಲ್ಲಿನ ಮುಕುಟವನ್ನು ಭಾರತದ ದಂತ ಪ್ರಯೋಗಾಲಯಗಳಿಂದ ಆಮದು ಮಾಡಿಕೊಳ್ಳುವ ಪದ್ಧತಿ ಜನಪ್ರಿಯವಾಗುತ್ತಿದೆ.ಅಮೆರಿಕಾದ ವೈದ್ಯರು ರೋಗಿಯ ಹಲ್ಲಿನ ಅಚ್ಚನ್ನು ಅಂತರ್ಜಾಲದ ಮೂಲಕ ಭಾರತಕ್ಕೆ ರವಾನಿಸುತ್ತಾರೆ.ಅಚ್ಚಿಗೆ ಅನುಸಾರ ಮುಕುಟವನ್ನು ತಯಾರಿಸಿ,ಅಮೆರಿಕಾಕ್ಕೆ ರವಾನಿಸಲಾಗುತ್ತದೆ. ಮೊದಲೆಲ್ಲಾ ಈ ಕೋರಿಕೆಗಳು ಚೀನಾಕ್ಕೆ ಹೋಗುತ್ತಿದ್ದುದೇ ಹೆಚ್ಚು. ಅದರೀಗ ಚೀನಾ ದುಬಾರಿಯಾಗಿ ಬಿಟ್ಟಿದೆ. ರುಪಾಯಿ ಡಾಲರು ವಿರುದ್ಧ ಕುಸಿದ ನಂತರವಂತೂ,ಭಾರತದಲ್ಲಿ ಈ ಕೆಲಸ ಮಾಡಿಸಿದರೆ ಶೇಕಡಾ ಇಪ್ಪತ್ತು ಲಾಭವಾಗುತ್ತದಂತೆ.
-------------------------------------------------------------------------------

ಕಂಪ್ಯೂಟರ್ ಜಾಲವನ್ನು ಹೊಕ್ಕಿರುವ "ಹುಳು"

ವಿಶ್ವದ ಕಂಪ್ಯೂಟರ್ ಜಾಲಗಳನ್ನು ಬಾಧಿಸುತ್ತಿರುವ "ಹುಳು’ ಪ್ರೊಗ್ರಾಮ್ ಒಂದು ಹತ್ತಿರ ಹತ್ತಿರ ಒಂದು ಕೋಟಿ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ಗಳನ್ನು ಬಾಧಿಸಿದೆ. ಇದರಿಂದ ಬಾಧೆಗೊಳಗಾಗಿರುವ ಕಂಪ್ಯೂಟರುಗಳನ್ನು ಹ್ಯಾಕರುಗಳು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಭೀತಿ ಇದೆ. ಈ "ಹುಳು" ಕಂಪ್ಯೂಟರನ್ನು ಬಾಧಿಸಿ, ನಂತರ ತನ್ನ "ತವರಿ"ಗೆ ಸುದ್ದಿ ಮುಟ್ಟಿಸಲು,ಜನರು ಬಳಸುವ ಸಣ್ಣ ಪಾಸ್‌ವರ್ಡ್‌ಗಳನ್ನು ಪ್ರಯತ್ನಿಸಿ,ಕಂಪ್ಯೂಟರಿನ ಖಾತೆಗಳನ್ನು ಮುರಿಯಲು ಶಕ್ತವಾಗಿದೆ. ಎರಡು ಮೂರು ತಪ್ಪು ಪಾಸ್‌ವರ್ಡ್ ಕೊಟ್ಟಾಗ ಲಾಕ್ ಆಗುವ ವ್ಯವಸ್ಥೆಯಿದ್ದರೆ,ಖಾತೆಯನ್ನು ಬಳಸಲಾಗದಂತೆ ಲಾಕ್ ಆಗುವ ಘಟನೆಗಳು ನಡೆದಿವೆ.ಮೈಕ್ರೋಸಾಫ್ಟ್ ಬ್ರೌಸರ್ ಇಂಟರ್ನೆಟ್ ಎಕ್ಸ್‌ಪ್ಲೋರರ್ ಭದ್ರತಾ ಕೊರೆಯನ್ನು ಬಳಸಿಕೊಂಡು ಇದು ಕೆಲಸ ಮಾಡುತ್ತದೆ.MS08-067 ಎನ್ನುವ ಸಣ್ಣ ತಂತ್ರಾಂಶವನ್ನು ಕಂಪ್ಯೂಟರಲ್ಲಿ ಅಳವಡಿಸಿದರೆ, ಇದರಿಂದ ಮುಕ್ತಿ ಸಿಗುತ್ತದೆ.ಮನೆಯಲ್ಲಿ ಬಳಸುವ ಕಂಪ್ಯೂಟರುಗಳನ್ನು ಹುಳು(ವರ್ಮ್) ಬಾಧಿಸಿಲ್ಲ.ಕಂಪೆನಿಗಳಿಗೆ ಬಾಧಿಸಿದ್ದೇ ಹೆಚ್ಚು.ಫ್ಲಾಶ್ ಡ್ರೈವ್ ಮೂಲಕವೂ ಈ ಕಂಪ್ಯೂಟರ್ ವರ್ಮ್ ಹಬ್ಬುವುದು ಕಂಡು ಬಂದಿದೆ.
---------------------------------------------------------------------
ಕೆಲವು ಟೆಕ್ ದುರಭ್ಯಾಸಗಳು
ತಂತ್ರಜ್ಞಾನದ ಸದ್ಬಳಕೆಯನ್ನು ಮಾಡುವವರಿಗಿಂತ ಅದರ ದುರ್ಬಳಕೆಯನ್ನು ಮಾಡುವವರೇ ಹೆಚ್ಚು.ಕೆಲವು ತಂತ್ರಜ್ಞಾನ ಪರಿಣತರಲ್ಲಿ ಕಾಣಿಸುವ ದುರಭ್ಯಾಸಗಳನ್ನು ಪಟ್ಟಿ ಮಾಡುವುದಿದ್ದರೆ:
*ಎದುರಿಗೆ ಕುಳಿತ ವ್ಯಕ್ತಿಯ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡದೆ,ಐಫೋನಿನ ಮೇಲೆ ಕಣ್ಣಿಡುವುದು.
*ತಮಗೆ ಬಂದ ಸಂದೇಶವನ್ನು ತಮಗೆ ತಿಳಿದವರಿಗೆಲ್ಲಾ ಮುಟ್ಟಿಸುವುದು.
*ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ.
*ತಮಗೆ ಬೇಕಾದ ಮಾಹಿತಿಯನ್ನು ಗೂಗಲ್ ಅಂತಹ ಶೋಧ ಸೇವೆಯ ಮೂಲಕ ಹುಡುಕುವುದು ಬಿಟ್ಟು,ಗೆಳೆಯರ ಮೊರೆ ಹೋಗುವುದನ್ನೇ ಅಭ್ಯಾಸ ಮಾಡಿಕೊಂಡಿರುವುದು.
------------------------------------------------------------
ಆನ್‌ಲೈನಿನಲ್ಲಿ ರೈತರ ಉತ್ಪನ್ನಗಳ ಮಾರಾಟ
www.foodzie.com ಎನ್ನುವುದು ರೈತರ ಉತ್ಪನ್ನಗಳ ಮಾರಾಟಕ್ಕಾಗಿಯೇ ಹುಟ್ಟಿರುವ ಅಂತರ್ಜಾಲ ತಾಣ.ಕಳೆದ ತಿಂಗಳಷ್ಟೇ ವರ್ಜಿನಿಯಾ ಟೆಕ್‌ನ ವಿದ್ಯಾರ್ಥಿಯೊಬ್ಬ ಹುಟ್ಟುಹಾಕಿದ ತಾಣ ರೈತರಿಗೆ ಲಭ್ಯವಾಯಿತು.ರೈತರು ತಮ್ಮ ಹಾಲು-ಹೈನು ಉತ್ಪನ್ನಗಳನ್ನು, ಸಾವಯವ ಕೄಶಿಯಿಂದ ಬೆಳೆದ ಉತ್ಪನ್ನಗಳನ್ನು ಈ ತಾಣದ ಮೂಲಕ ಬಳಕೆದಾರರಿಗೆ ಮುಟ್ಟಿಸಲು ಪ್ರಯತ್ನಿಸುತ್ತಿದ್ದಾರೆ.ಈಗಾಗಲೇ ಐವತ್ತು ಬೆಳೆಗಾರರು ನೋಂದಾಯಿಸಿ ಕೊಂಡಿದ್ದಾರೆ. ಖರೀದಿದಾರರ ವಿವರ ಪಡೆದು, ವಸ್ತುವಿನ ಪಾವತಿಯನ್ನು ಕ್ರೆಡಿಟ್ ಕಾರ್ಡ್ ಮೂಲಕ ಪಡೆದು, ಅಂತಹ ವಸ್ತುಗಳನ್ನು ಕೊರಿಯರ್ ಮೂಲಕ ರವಾನೆಗೆ ವಿಳಾಸ, ವಸ್ತುವಿನ ವಿವರ ಮಾಹಿತಿಯನ್ನು ರೈತರಿಗೆ ಮೂಲಕ ಮುಟ್ಟಿಸಲು ಈ ತಾಣ ವ್ಯವಸ್ಥೆ ಮಾಡುತ್ತಿದೆ.
---------------------------------------------------------------------
ಅಂಧರಿಗೆ ದಾರಿ "ತೋರಿಸುವ" ಕ್ಯಾಮರಾ!
ಅಂಧರಿಗೆ ನಡೆಯಲು ಸಹಾಯ ಮಾಡುವ ಅಲ್ಟ್ರ್‍ಆ ಸೌಂಡ್ ಆಧಾರಿತ ಬೆತ್ತ,ಧ್ವನಿ ಮೂಲಕ ವ್ಯಕ್ತಿಗೆ ಮಾರ್ಗದರ್ಶನ ಮಾಡುವ ಜಿ ಪ್ ಎಸ್ ವ್ಯವಸ್ಥೆಯನ್ನು ಬದಿಗೆ ಸರಿಸುವ ಹೊಸ ತಂತ್ರಜ್ಞಾನವೀಗ ಬಂದಿದೆ.ಬೆರಳ ತುದಿಗೆ ಧರಿಸುವ ಕ್ಯಾಮರಾ ಲಭ್ಯವಿದೆ. ಕಂಪ್ಯೂಟರ್ ಮೂಲಕ ಈ ಕ್ಯಾಮರಾ ಸೆರೆ ಹಿಡಿದ ಚಿತ್ರಗಳನ್ನು ವಿಶ್ಲೇಷಿಸಿ,ನಡಿಗೆಗೆ ಇರುವ ಅಡ್ಡಿ-ಆತಂಕಗಳನ್ನು ಕಂಡುಕೊಂಡು ಎಚ್ಚರಿಕೆ ನೀಡುವುದು ಸಾಧ್ಯ.ಹಾಗೆಯೇ ವ್ಯಕ್ತಿಗೆ ಬೇಕಾದ ವಸ್ತುವಿನ ಬಳಿ ಆತ ಬಂದಾಗ ಆತನಿಗೆ ಸೂಚನೆ ಕೊಡಲೂ ಇದನ್ನು ಬಳಸಬಹುದು.ಈ ಬೆರಳ ತುದಿಯ ಕ್ಯಾಮರಾವು ಕಂಪಿಸುವ ಮೂಲಕ ವ್ಯಕ್ತಿಗೆ ಸೂಚನೆ ಕೊಡುವ ವ್ಯವಸ್ಥೆಯಿದೆ.
----------------------------------------------------------
udayavani

Monday, January 12, 2009

ಒಬಾಮಾ ಹಾದಿಯಲ್ಲಿ ಅಡ್ವಾಣಿ

ಅಮೆರಿಕಾದ ಅಧ್ಯಕ್ಷರಾಗಿ ಚುನಾಯಿತರಾದ ಒಬಾಮಾ ಅವರು ತಮ್ಮ ಚುನಾವಣಾ ಪ್ರಚಾರಕ್ಕೆ ಅಂತರ್ಜಾಲ ತಾಣವನ್ನು ಬಹಳ ಸಮರ್ಥವಾಗಿ ಬಳಸಿಕೊಂಡಿದ್ದರು. ತಮ್ಮ ಯೋಜನೆಗಳನ್ನು ಜನರಿಗೆ ಮುಟ್ಟಿಸಲು, ಪ್ರಚಲಿತ ಸಂಗತಿಗಳ ಬಗ್ಗೆ ತಮ ನಿಲುವನ್ನು ಸ್ಪಷ್ಟಪಡಿಸಲು.ತಮ್ಮ
ಪ್ರಚಾರದ ಕಾರ್ಯಕ್ರಮವನ್ನು ಪ್ರಕಟಿಸಲು,ಜನರ ಜತೆ ಸಂವಹನಕ್ಕೆ ಹೀಗೆ ವಿವಿಧ ರೀತಿಗಳಲ್ಲಿ ಅವರು ಅಂತರ್ಜಾಲ ತಾಣವನ್ನು ಚೆನ್ನಾಗಿ ಉಪಯೋಗಿಸಿಕೊಂಡರು. ನಮ್ಮ ನಾಯಕರೂ ಇದರಿಂದ ಪಾಠ ಕಲಿತ ಹಾಗಿದೆ. ಮುಂದಿನ ಪ್ರಧಾನಿ ಎಂದೇ ಬಿಂಬಿತವಾಗಿರುವ ಬಿಜೆಪಿ ನಾಯಕ ಎಲ್ ಕೆ ಅದ್ವಾನಿಯವರು ತಮ್ಮ ಅಂತರ್ಜಾಲ ತಾಣವನ್ನು www.lkadvani.in ಒಬಾಮಾ ತಾಣದ ರೀತಿಯೇ ರೂಪಿಸಿದಂತಿದೆ. ಟ್ರಕ್ ಮುಷ್ಕರದ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟವಾಗಿ ನೀಡುವುದು, ನೇಪಾಳದ ಅರ್ಚಕರ ವಿವಾದದ ಬಗ್ಗೆ ತಾವು ನೇಪಾಳ ಪ್ರಧಾನಿ ಜತೆ ನಡೆಸಿದ ಮಾತುಕತೆ ವಿವರಗಳನ್ನು ನೀಡುವ ಮೂಲಕ ಅದ್ವಾನಿಯವರು ಅಂತರ್ಜಾಲ ತಾಣವನ್ನು ಜನರನ್ನು ಮುಟ್ಟಲು ಅಂತರ್ಜಾಲವನ್ನು ಬಳಸಿಕೊಂಡಿದ್ದಾರೆ. ಜನರೂ ಅದ್ವಾನಿಯವರಿಗೆ ಸಲಹೆ ಸೂಚನೆಗಳನ್ನು ತಾಣದ ಮೂಲಕ ನೀಡಲು ವ್ಯವಸ್ಥೆಯಿದೆ.ಒಬಾಮಾರ ತಾಣದಷ್ಟು ಅದ್ವಾನಿಯವರ ತಾಣವು ಜನಪ್ರಿಯವಾಗುವುದು ಸಾಧ್ಯವಿಲ್ಲ್ಲವಾದರೂ, ಈ ಕ್ರಮ ಒಂದು ಸ್ವಾಗತಾರ್ಹ ಬದಲಾವಣೆ ಎನ್ನುವುದನ್ನು ಒಪ್ಪಲೇ ಬೇಕು.
------------------------------------------------------------------------------
ದುಬಾರಿ ಫೋನ್ ಮತ್ತು ಪಾಮ್ ಪ್ರಿ!
ಐಫೋನ್‌ನ ಹೊಸ ಮಾದರಿ ಐಫೋಣ್ ತ್ರೀಜಿ "ಕಿಂಗ್ ಬಟನ್" ಅತ್ಯಂತ ದುಬಾರಿ ಫೋನ್. ಇದರ ಬೆಲೆ ಹದಿನೆಂಟು ಲಕ್ಷ ಪೌಂಡ್‌ಗಳು. ಹದಿನೆಂಟು ಕ್ಯಾರಟ್ ಚಿನ್ನದಿಂದ ಪೋನನ್ನು ತಯಾರಿಸಲಾಗಿದೆ. ಇದರ ಮುಖ್ಯ ಗುಂಡಿಯಾಗಿ ಅಪೂರ್ವ ವಜ್ರವನ್ನೇ ಅಳವಡಿಸಲಾಗಿದೆ.
ಈಗ ಲಾಸ್ ವೆಗಸ್‌ನಲ್ಲಿ ನಡೆಯುತ್ತಿರುವ ಇಲೆಕ್ಟ್ರಾನಿಕ್ ವಸ್ತುಗಳ ಪ್ರದರ್ಶನವೊಂದರಲ್ಲಿ ಪಾಮ್ ಕಂಪೆನಿಯು ತನ್ನ ಹೊಸ ಸ್ಮಾರ್ಟ್ ಫೋನ್ "ಪ್ರಿ" ಯನ್ನು ಪ್ರದರ್ಶಿಸಿದೆ. ಮಾಧ್ಯಮಗಳಿದನ್ನು ಐಫೋನ್ ಪ್ರತಿಸ್ಪರ್ಢಿ ಎಂದು ಹಣೆಪಟ್ಟಿ ನೀಡಿದ್ದರೂ, ಪಾಮ್ ಕಂಪೆನಿ ಹೊಸ ಚತುರ

ಫೋನ್, ತನ್ನ ಹಳೆಯ ಸಾಧನಗಳಿಗೆ ಇದು ಸ್ಪರ್ಧಿ,ಐಫೋನಿಗಲ್ಲ ಎಂದಿದೆ. ಸ್ಪರ್ಶ ಸಂವೇದಿ ತೆರೆ, ಜಿ ಪಿ ಎಸ್, ಎಂಟು ಗಿಗಾ ಬೈಟು ಸ್ಮರಣ ಸಾಮರ್ಥ್ಯ,ನಿಸ್ತಂತು ಸಾಮರ್ಥ್ಯ, ಮಡಚಿಡಲು ಅನುವು ಮಾಡುವ ಕೀಲಿ ಮಣೆ ಇವುಗಳೆಲ್ಲಾ ಪ್ರಿಯನ್ನು ಅನನ್ಯವಾಗಿಸಿದೆ.ಐಫೋನ್ ಮಾತ್ರವಲ್ಲದೆ,ಬ್ಲ್ಯಾಕ್ ಬೆರಿಯಂತಹ ಕಂಪೆನಿಯ ಸಾಧನಗಳ ಕಾರಣ ಪಾಮ್ ಕಂಪೆನಿಗೆ ಇತ್ತೀಚಿನ ದಿನಗಳಲ್ಲಿ ಗ್ರಹಣ ಹಿಡಿದಿತ್ತು.ಪಾಮ್ ಸಾಧನಗಳು ಸ್ಪ್ರಿಂಟ್ ಎನ್ನುವ ದೂರಸಂಪರ್ಕ ಕಂಪೆನಿಯ ಜಾಲಗಳಲ್ಲಿ ಬಳಕೆಯಾಗುತ್ತದೆ. ಈಗ ಪಾಮ್ ಹೊಸ ಸಾಧನ ಜನಪ್ರಿಯವಾದರೆ, ಸ್ಪ್ರಿಂಟ್‌ಗೂ ಲಾಭವಾಗಬಹುದು.ಐಫೋನ್ ಸಾಧನವು ಏಟಿಅಂಡ್‌ಟಿ ಜಾಲಗಳಲ್ಲಿ ಕೆಲಸ ಮಾಡುತ್ತದೆ.
--------------------------------------------------------------------------
ಜೀವಜಲಕ್ಕೀಗ ಜೀವ
ನೀರಿನ ಬಗ್ಗೆ ಜನಜಾಗೃತಿಯನ್ನು ಹುಟ್ಟುಹಾಕುವಲ್ಲಿ ಖ್ಯಾತ ಅಂಕಣಕಾರ ಶ್ರೀಪಡ್ರೆಯವರು ಪ್ರಮುಖರು.ಇದುವರೆಗೂ ಅವರ ಬ್ಲಾಗು ಅಂತರ್ಜಾಲದಲ್ಲಿ ಲಭ್ಯವಿರಲಿಲ್ಲ. ಕಳೆದವಾರ ಮಂಗಳೂರಿನಲ್ಲಿ ಇಂಡಿಯ ವಾಟರ್ ಪೋರ್ಟಲ್ ಸಮುದಾಯವು ಮಂಗಳೂರಿನಲ್ಲಿ "ನೀರ ನಿಶ್ಚಿಂತೆ" ಎನ್ನುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಇದರಲ್ಲಿ ಹೊಸ ತಂತ್ರಜ್ಞಾನ ಮತ್ತು ಬ್ಲಾಗುಗಳನ್ನು ನೀರ ನಿಶ್ಚಿಂತೆಯಲ್ಲಿ ಸಮರ್ಥವಾಗಿ ಬಳಸಿಕೊಳ್ಳುವುದು ಹೇಗೆ ಎಂಬ ಬಗ್ಗೆ ವಿಚಾರ ವಿನಿಮಯ ನಡೆಯಿತು. "ಸಂಪದ"ದ ಹರಿಪ್ರಸಾದ್ ನಾಡಿಗ್,ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಮೋಟಾರ್ ಸೈಕಲ್ ಯಾತ್ರೆ ಮಾಡಿ ಜನಜಾಗೃತಿ ಉಂಟು ಮಾಡಿದ ಸಿ ಶಾರದಾ ಪ್ರಸಾದ್ ಮತ್ತು ತಂತ್ರಜ್ಞ ವಸಂತ್ ಕಜೆಯವರು ಶ್ರೀಪಡ್ರೆ ಮತ್ತು ಅಡ್ಡೂರು ಕೃಷ್ಣರಾವ್ ಜತೆಗೂಡಿ ಕಾರ್ಯಕ್ರಮ ನಡೆಸಿಕೊಟ್ಟರು. ಈ ಕಾರ್ಯಕ್ರಮದ ಫಲಶ್ರುತಿಯೊ ಎನ್ನುವಂತೆ ಶ್ರೀಪಡ್ರೆಯವರ ಬ್ಲಾಗು ಈಗ ಅಂತರ್ಜಾಲದಲ್ಲಿ ಉದಯವಾಗಿದೆ. http://jeevajala.blogspot.comದಲ್ಲಿ ಈ ಬ್ಲಾಗ್ ಲಭ್ಯ.
-------------------------------------------------------------------------
ವಿಂಡೋಸ್ 7 ಬೀಟಾ ಬಿಡುಗಡೆ
ವಿಂಡೋಸ್ ವಿಸ್ತಾ ಕಂಪ್ಯೂಟರ್ ನಿರ್ವಹಣಾ ತಂತ್ರಾಂಶವು ನಿರೀಕ್ಷಿತವಾದಷ್ಟು ಜನಪ್ರಿಯವಾಗಲಿಲ್ಲ. ಈಗ ಮೈಕ್ರೋಸಾಫ್ಟ್ ತನ್ನ ಹೊಸ ತಂತ್ರಾಂಶದ ಪ್ರಾಯೋಗಿಕ ಆವೃತ್ತಿಯನ್ನು ಜನರಿಗೆ ಲಭ್ಯವಾಗಿಸಿದೆ. ವಿಂಡೋಸ್ 7 ಚುರುಕುಗತಿಯಲ್ಲಿ ಚಾಲನೆಯಾಗಿ,ಅತ್ಯುತ್ತಮ ಬಳಕೆದಾರ ಸ್ನೇಹಿ ಗುಣಗಳನ್ನು ಹೊಂದುವಂತೆ ಅಭಿವೃದ್ಧಿ ಪಡಿಸಲಾಗಿದೆ ಎಂದು ಕಂಪೆನಿಯ ಅಂಬೋಣ.ಮನೆಯಲ್ಲಿ ಹಲವು ಕಂಪ್ಯೂಟರುಗಳನ್ನು ಹೊಂದಿದ್ದರೆ, ಅವುಗಳ ಜಾಲ ನಿರ್ಮಿಸಿ,ಪರಸ್ಪರ ವಿಡಿಯೋ,ಚಿತ್ರ ಇತ್ಯಾದಿ ಕಡತಗಳ ವಿನಿಮಯವನ್ನು ಸುಲಭವಾಗಿಸಲು ಇದರಲ್ಲಿ ವ್ಯವಸ್ಥೆಯಿದೆ. ಹಲವು ತಂತ್ರಾಂಶಗಳು ಚಾಲೂ ಇದ್ದು, ಹಲವಾರು ಬ್ರೌಸರ್ ಕಿಟಕಿಗಳು ತೆರೆದಿದ್ದಾಗಲೂ, ಅವುಗಳ ಸುಲಭ ನಿಯಂತ್ರಣಕ್ಕೆ ಹೊಸ ತಂತ್ರಾಂಶದಲ್ಲಿ ಅವಕಾಶ ಇದೆ ಎನ್ನುವುದು ಪ್ಲಸ್ ಪಾಯಿಂಟ್.ಕಂಪ್ಯೂಟರಿನಲ್ಲಿರುವ ಮಾಹಿತಿ ಸುಭದ್ರವಾಗಿರಲು ಮತ್ತು ವೈರಸ್ ಕಾಟಕ್ಕೆ ಅವಕಾಶ ನೀಡದ ರಕ್ಷಣಾ ಕ್ರಮಗಳನ್ನು ಅಳವಡಿಸಲಾಗಿದೆ ಎಂದು ಕಂಪೆನಿ ಹೇಳಿಕೊಂಡಿದ್ದರೂ, ಅದರನ್ನು ಯಾರೂ ನಂಬುವುದಿಲ್ಲ! ಹೊಸ ಆವೃತ್ತಿ ತಂತ್ರಾಂಶಕ್ಕೆ ದುಬಾರಿ ಹಣ ನೀಡುವ ಬದಲು ಉಚಿತವಾಗಿ ಲಭ್ಯವಿರುವ ಲಿನಕ್ಸ್ ತಂತ್ರಾಂಶ ಬಳಸಿದ ರುಚಿ ಹಿಡಿದವರು ಈ ಸುದ್ದಿಯನ್ನು ಗಂಭೀರವಾಗಿ ತೆಗೆದುಕೊಳ್ಳಲಾರರು.
------------------------------------------------------------------
ವಿಡಿಯೋ ಗೇಮ್ ಆಡಿ ಗಾಯ!

ವಿಡಿಯೋ ಗೇಮ್ ಆಡಿ ಮೈಕೈ ನೋವು- ಹೇಗೆ ಸಾಧ್ಯ ಎಂದಿರಾ? ಹೌದು, ಆಧುನಿಕ ವಿಡಿಯೋ ಗೇಂಗಳನ್ನು ಖುರ್ಚಿಯಲ್ಲಿ ಕುಳಿತು ಆಡುವುದಿಲ್ಲ. ಟಿವಿಯ ಮುಂದೆ ರಿಮೋಟ್ ಹಿಡಿದು ,ವ್ಯಾಯಾಮ ಮಾಡುವ ರೀತಿಯಲ್ಲಿ ವಿಡಿಯೋ ಆಟಗಳನ್ನು ಆಡುವ ನಿಂಟೆಂಡೋ ಎನ್ನುವ ಗೇಂ ಕನ್ಸೋಲುಗಳೀಗ ಬಂದಿವೆ. ಇವನ್ನು ಗಂಟೆಗಟ್ಟಲೆ ಆಡಿ,ಮೈಕೈ ನೋವು ಬಂದವರದ್ದೀಗ ಹೊಸ ಸಮಸ್ಯೆ.
-----------------------------------------------------------
ಸತ್ಯಂ ಸುಂದರಂ?
ಸತ್ಯವು ಯಾವಾಗಲೂ ಅಪ್ರಿಯ. ಸತ್ಯಂ ಕಂಪ್ಯೂಟರ್ ಬಗ್ಗೆ ಈ ಮಾತು ನಿಜವಾಗಿ ಬಿಟ್ಟಿದೆ. ಭಾರತದ ಮಾಹಿತಿ ತಂತ್ರಜ್ಞಾನ ಕಂಪೆನಿಗಳ ಪೈಕಿ ನಾಲ್ಕನೇಯ ಸ್ಥಾನದಲ್ಲಿದೆಯೆಂದು ಭಾವಿಸಲಾಗಿದ್ದ ಸತ್ಯಂ ಕಂಪ್ಯೂಟರ್ ಕಂಪೆನಿಯು ತನ್ನ ಸ್ಥಾನವನ್ನು ಸುಳ್ಳಿನ ಬಲದಿಂದಲೇ ಗಿಟ್ಟಿಸಿಕೊಂಡಿದೆಯೆನ್ನುವುದನ್ನು ಕಂಪೆನಿಯ ಮಾಜಿ ಸಿಇಓ ಅವರೇ ಒಪ್ಪಿಕೊಂಡಿದ್ದಾರೆ.ಕಂಪ್ಯೂಟರ್ ಉಂಟು ಮಾಡುವ ಭ್ರಾಮಕ ಲೋಕದಲ್ಲಿ ಇಂತಹ ವೈಚಿತ್ರ್ಯಗಳೂ ಇರುತ್ತವೆಯೆಂದು ಯಾರಾದರೂ ಊಹಿಸಿದ್ದರೇ?
*ಅಶೋಕ್‌ಕುಮಾರ್ ಎ

Monday, January 05, 2009

ವಿಕಲಚೇತನರಿಗೆ ನೆರವು ನೀಡುವ ಮುಕ್ತ ತಂತ್ರಾಂಶಗಳು ಲಭ್ಯ



ವಿಕಲಚೇತನರಿಗೆ ನೆರವು ನೀಡುವ ಮುಕ್ತ ತಂತ್ರಾಂಶಗಳು ಲಭ್ಯ
ವಿಕಲಚೇತನರಿಗೆ ಸಾಮಾನ್ಯರಂತೆ ಜೀವನ ಸಾಗಿಸಲು ಅನುವು ಮಾಡುವ ಕಂಪ್ಯೂಟರ್ ಮತ್ತು ಮೊಬೈಲ್ ಸಾಧನಗಳ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿ, ಅವನ್ನು ಮುಕ್ತವಾಗಿ ಒದಗಿಸುವ ಆಂದೋಲನಕ್ಕೆ ವಿದ್ಯಾರ್ಥಿ ಸಮುದಾಯ ಕೈಹಾಕಿದೆ.ಪ್ರಾಜೆಕ್ಟ್ ಪಾಸಿಬಿಲಿಟಿ ಎನ್ನುವ ಹೆಸರಿನೊಂದಿಗೆ ಆಸ್ತಿತ್ವಕ್ಕೆ ಬಂದಿರುವ ಈ ಆಂದೋಲನ ಈಗಾಗಲೇ ಕೆಲವು ತಂತ್ರಾಂಶಗಳನ್ನು ತನ್ನ ಅಂತರ್ಜಾಲ ತಾಣದಲ್ಲಿ ಒದಗಿಸುತ್ತಿದೆ.ದಕ್ಷಿಣ ಕ್ಯಾಲಿಫೋರ್ನಿಯಾದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಈ ಯೋಜನೆಯ ಹರಿಕಾರರು.ಈ ಯೋಜನೆಯಲ್ಲಿ ವಿಕಲಚೇತನರಿಗೆ ಅನುಕೂಲ ಕಲ್ಪಿಸುವ ತಂತ್ರಾಂಶ ಯೋಜನೆಗಳ ಅನುಷ್ಠಾನ ಕಾರ್ಯವನ್ನು ವಿದ್ಯಾರ್ಥಿಗಳ ತಂಡಗಳಿಗೆ ವಹಿಸಿಕೊಡಲಾಗುತ್ತದೆ.ವಿದ್ಯಾರ್ಥಿಗಳ ತಂಡವನ್ನು ಯೋಜನೆಯಲ್ಲಿ ಪಾಲ್ಗೊಳ್ಳಲು ನೋಂದಾಯಿಸಿದ ವಿದ್ಯಾರ್ಥಿಗಳ ಗುಂಪಿನಿಂದ ಆಯ್ದು ರಚಿಸಲಾಗುತ್ತದೆ. ಪ್ರತಿ ತಂಡಕ್ಕೂ ಓರ್ವ ನಾಯಕನಿದ್ದು, ಆತನೇ ತನ್ನ ತಂಡಕ್ಕೆ ಯಾರು ಸೂಕ್ತರೆಂದು ಆಯ್ದುಕೊಳ್ಳುತ್ತಾನೆ.ಈ ಅಭಿವೃದ್ಧಿ ಕಾರ್ಯವು ಕೇವಲ ಎರಡು ದಿನಗಳಲ್ಲಿ ನಡೆಯುತ್ತದೆ. ತಂಡಗಳ ನಡುವೆ ಸ್ಪರ್ಧಾ ಮನೋಭಾವ ಮೂಡಿಸಲು ಪತ್ರಿಕಾ ಪ್ರಚಾರ, ಗೂಗಲ್ ಅಂತಹ ಕಂಪೆನಿಗಳಿಂದ ಪ್ರಾಯೋಜನೆ,ಉತ್ತಮ ಪ್ರಾಜೆಕ್ಟುಗಳಿಗೆ ಬಹುಮಾನ ಯೋಜನೆ ಇಂತಹ ತಂತ್ರಗಳನ್ನು ಹೂಡಲಾಗುತ್ತದೆ.ಎರಡು ದಿನ,ಹನ್ನೆರಡು ಹೊತ್ತಿನಲ್ಲಿ ತಂತ್ರಾಂಶ ಅಭಿವೃದ್ಧಿ ಕಾರ್ಯ ನಡೆಯುತ್ತದೆ.
ಅಂಗಡಿಗಳಲ್ಲಿ ದೃಷ್ಟಿಯ ತೊಂದರೆಯಿರುವವರಿಗೆ ವಸ್ತುಗಳ ವಿವರಣೆ ನೀಡುವ ತಂತ್ರಾಂಶ ಬಾರ್‌ಕೋಡ್ ರೀಡರ್ ಬಹುಮಾನ ಗಳಿಸಿದ ತಂತ್ರಾಂಶಗಳಲ್ಲೊಂದು.ವಿಕಲಚೇತನರು ತಮ್ಮ ಹಾವಭಾವದ ಮೂಲಕವೇ ಕಂಪ್ಯೂಟರ್ ಮೌಸನ್ನು ತಮ್ಮ ಯೋಚನೆಯ ಮೂಲಕ ಚಲಾಯಿಸುವ ತಂತ್ರಾಂಶ ಎರಡನೆಯ ಬಹುಮಾನ ಗಳಿಸಿತು.http://projectpossibility.org/ನಲ್ಲಿ ವಿವರಗಳು ಲಭ್ಯವಿವೆ.ವರ್ಷವೂ ಇಂತಹ ಸ್ಪರ್ಧೆಗಳನ್ನು ನಡೆಸುವ ಮೂಲಕ ಕ್ಷಿಪ್ರವಾಗಿ ತಂತ್ರಾಂಶಗಳನ್ನು ಅಭಿವೃದ್ಧಿ ಪಡಿಸಿ,ಅವನ್ನು ಮುಕ್ತವಾಗಿ ಒದಗಿಸಿ, ವಿಕಲಚೇತನರಿಗೆ ಸಹಾಯ ಮಾಡುವ ಯೋಚನೆ ವಿದ್ಯಾರ್ಥಿಗಳದ್ದು.ಎರಡೆ ದಿವಸಗಳಲ್ಲಿ ನಡೆಯುವ ಈ ಸ್ಪರ್ಧೆಗೆ ,ಕಡಿಮೆ ಅವಧಿಯಲ್ಲಿ ತಂತ್ರಾಂಶ ಅಭಿವೃದ್ಧಿಗೆ ಅನುವು ಮಾಡಲು,ಪ್ರತಿಯೊಂದನ್ನೂ ಬುಡದಿಂದ ಆರಂಭಿಸದೆ, ಸದ್ಯ ಮುಕ್ತವಾಗಿ ಲಭ್ಯವಿರುವ ತಂತ್ರಾಂಶಗಳನ್ನು ಬಳಸಿಕೊಂಡು ಮುಂದುವರಿಯುವ ಅವಕಾಶ ನೀಡಲಾಗಿದೆ.
---------------------------------
ಐಫೋನನ್ನು "ತೆರೆಯುವ" ತಂತ್ರಾಂಶ
ಐಫೋನನ್ನು ನಿಗದಿತ ನಿಸ್ತಂತು ಸೇವಾದಾತೃಗಳ ಜಾಲದ ಮೂಲಕ ಮಾತ್ರಾ ಬಳಸಲು ಸಾಧ್ಯವಾಗುತ್ತದೆ. ಅಮೆರಿಕಾದಲ್ಲಾದರೆ, ಏಟಿಅಂಡ್‌ಟಿ,ಪ್ರಾನ್ಸ್‌ನಲ್ಲಾದರೆ ಒರೇಂಜ್ ಎನ್ನುವ ಜಾಲದಲ್ಲಿ ಐಫೋನ್ ಬಳಸಬಹುದು.ಭಾರತದಲ್ಲಿ ಏರ್‍ಟೆಲ್ ಈ ಒಡಂಬಡಿಕೆ ಮಾಡಿಕೊಂಡಿದೆ.ಆದರೀಗ ಕೆಲವು ಸ್ವತಂತ್ರ ತಂತ್ರಾಂಶ ಅಭಿವೃದ್ಧಿ ಪಡಿಸುವವರು ಯೆಲ್ಲೋಸ್‌ಆನ್ ಎನ್ನುವ ತಂತ್ರಾಂಶ ರಚಿಸಿ,ಆ ಮೂಲಕ ಐಫೋನ್ ಬಳಕೆಯನ್ನು ಇನ್ನಿತರ ಜಾಲಗಳ ಮೂಲಕವೂ ಸಾಧ್ಯವಾಗುವಂತೆ ಮಾಡಿದ್ದಾರೆ.ಐಫೋನಿನ ತ್ರೀಜಿ ಫೋನ್‌ನಲ್ಲಿ ಈ ತಂತ್ರಾಂಶ ಯಶಸ್ವಿಯಾಗಿ ಬಳಕೆಯಾಗುತ್ತಿದೆ.
--------------------------------------------------------------
ನಿಧಿ ಸಂಗ್ರಹ ಗುರಿ ತಲುಪಿದ ವಿಕಿಪೀಡಿಯಾ
ಮುಕ್ತ ವಿಶ್ವಕೋಶ ವಿಕಿಪೀಡಿಯಾ ತನ್ನ ವರ್ಷದ ನಿರ್ವಹಣಾ ಖರ್ಚನ್ನು ಸರಿದೂಗಿಸಲು ಆರು ಮಿಲಿಯನ್ ಡಾಲರು ಸಂಗ್ರಹಿಸುವ ಗುರಿಯನ್ನು ಹೊಂದಿತ್ತು. ಅದೀಗ ಯಶಸ್ವಿಯಾಗಿ ತನ್ನ ಗುರಿಯನ್ನು ತಲುಪಿದೆ. ಒಂದೂಕಾಲು ಲಕ್ಷ ಜನರ ವಂತಿಗೆಯ ಮೂಲಕ ಈ ನಿಧಿಯನ್ನು ಸಂಗ್ರಹಿಸಲಾಗಿದೆಯಂತೆ.ವಿಕಿಯ ಸ್ಥಾಪಕ ಜಿಮ್ಮಿ ವೇಲ್ಸ್ ಅವರು ಕಳೆದ ಜುಲೈನಲ್ಲಿ ವಂತಿಗೆ ನೀಡುವಂತೆ ಜನರಲ್ಲಿ ವಿನಂತಿಸಿಕೊಂಡಿದ್ದರು.
----------------------------------------------------------------
ಅಗ್ಗದ ಐಫೋನ್?
ಅಮೆರಿಕಾದಲ್ಲಿ ಆರ್ಥಿಕ ಕುಸಿತದ ಕಾರಣ ಎಲ್ಲಾ ವಸ್ತುಗಳು ಮಾರಾಟ ಕುಸಿತ ಕಾಣುತ್ತಿವೆ. ಇದಕ್ಕೆ ಐಫೋನ್ ಕೂಡಾ ಹೊರತಲ್ಲ.ಈ ತ್ರೈಮಾಸಿಕದಲ್ಲಿ ಐಫೋನ್ ಮಾರಾಟ ನಿರೀಕ್ಷೆಗಿಂತ ಕಡಿಮೆಯಾಗಿದೆ.ನೂರತೊಂಭತ್ತೊಂಭತ್ತು ಡಾಲರು ಮತ್ತು ಇನ್ನೂರ್‍ಅ ತೊಂಭತ್ತೊಂಭತ್ತು ಡಾಲರು ಹೀಗೆ ಎರಡು ತೆರನ ಐಫೋನ್ ಲಭ್ಯವಿದ್ದು, ಮೊದಲನೆಯದ್ದು ಎಂಟು ಜೀಬಿ ಸಾಮರ್ಥ್ಯದ್ದಾದರೆ, ಎರಡನೆಯದು ಹದಿನಾರು ಜೀಬಿಯದ್ದು.ಅಗ್ಗದ ಐಫೋನ್ ಬಿಡುಗಡೆ ಮಾಡುವ ಮೂಲಕ ಮಾರಾಟದಲ್ಲಿ ಕುಸಿತವನ್ನು ಎದುರಿಸಲು ಆಪಲ್ ಕಂಪೆನಿಯು ಯೋಜನೆ ಹಾಕಿಕೊಂಡಿದೆ.ಭಾರತದಂತಹ ದೇಶದಲ್ಲಿ ಐಫೋನ್ ಮಾರಾಟ ಹೆಚ್ಚಿಸಲೂ ಈ ಹೆಜ್ಜೆ ಸಹಾಯಕವಾಗಲಿದೆ.
-------------------------------------------------------------------
2009ರಲ್ಲಿ ಬರಲಿರುವ ಹೊಸ ಸಾಧನಗಳು
ಎಂಟಿಂಚು ಗಾತ್ರದ ತೆರೆಯಿರುವ ನೋಟ್‌ಬುಕ್ ಕಂಪ್ಯೂಟರನ್ನು ಸೋನಿ ಕಂಪೆನಿಯು ಈ ವರ್ಷ ಬಿಡುಗಡೆ ಮಾಡುವ ನಿರೀಕ್ಷೆಯಿದೆ.ಅತ್ಯಂತ ನೈಜ ಚಿತ್ರವನ್ನು ಪ್ರದರ್ಶಿಸುವ ಸಾವಯವ ಬೆಳಕು ಬೀರುವ ಡಯೋಡ್ ತೆರೆ ಇರುವ ಟಿವಿಯೂ ಈ ವರ್ಷ ಲಭ್ಯವಾಗಬಹುದು.ಇದರ ಸ್ಪಷ್ಟತೆ 100000:1 ಇರುತ್ತದೆ.ಈ ತೆರನ ಸ್ಪಷ್ಟತೆ ಸದ್ಯ ಯಾವುದೇ ಟಿವಿಯಲ್ಲಿಯೂ ಇಲ್ಲ.ಮ್ಯಾಕ್‍ಟ್ಯಾಬ್ಲೆಟ್ ಎನ್ನುವ ಕಿರುಗಾತ್ರದ ಮೊಬೈಲ್ ಸಾಧನವೂ ಇದರಲ್ಲಿ ಎರಡು ಬೆರಳುಗಳ ಮೂಲಕ ಬಳಸಬಹುದಾದ ಸ್ಪರ್ಶ ಸಂವೇದಿ ತೆರೆಯ ಬದಲಿಗೆ, ಬಹು ಬೆರಳುಗಳ ಸ್ಪರ್ಶಕ್ಕೆ ಸ್ಪಂದಿಸುವ ತಂತ್ರಜ್ಞಾನ ಲಭ್ಯವಾಗಬಹುದು.ಬ್ಲೂರೇಡಿಸ್ಕ್ ಎನ್ನುವ ಹೊಸ ನಮೂನೆಯ ಡಿವಿಡಿ ಹೊಸ ವರ್ಷದಲ್ಲಿ ಸಿಗಬಹುದು. ಈ ಡಿವಿಡಿಯಲ್ಲಿ ಎರಡು ಪದರಗಳಿದ್ದು, ಒಂದು ಪದರದಲ್ಲಿ ಸಾಮಾನ್ಯ ಡಿವಿಡಿಗೆ ಸರಿ ಹೊಂದುವ ಮಾಹಿತಿಯಿದ್ದರೆ, ಇನ್ನೊಂದು ಪದರದಲ್ಲಿ ಬ್ಲೂರೇಡಿಸ್ಕ್ ಡಿವಿಡಿಗೆ ಸರಿ ಹೊಂದುವ ಮಾಹಿತಿಯಿರುತ್ತದೆ. ಹೀಗಾಗಿ ಒಂದೇ ಡಿಸ್ಕಿನ ಮೂಲಕ ಎರಡೂ ನಮೂನೆಯ ಮಾಹಿತಿಯನ್ನು ಶೇಖರಿಸಲು ಸಾಧ್ಯ. ಹಳೆಯ ತಂತ್ರಜ್ಞಾನದ ಡಿವಿಡಿ ಪ್ಲೇಯರ್ ಕೂಡಾ ಬ್ಲೂರೇಡಿಸ್ಕ್ ಮೂಲಕ ಮಾಹಿತಿ ಪಡೆಯಲು ತೊಂದರೆಯಿಲ್ಲ.
----------------------------------------------------------------
*ಅಶೋಕ್‌ಕುಮಾರ್ ಎ
 
googledc7e93ba1a7703ae.html