Monday, February 23, 2009

ನೀವೂ ಪುಸ್ತಕಗಳನ್ನು ಡಿಜಿಟೈಸ್ ಮಾಡುತ್ತಿದ್ದೀರಿ!



ನೀವು ಅಂತರ್ಜಾಲವನ್ನು ಬಳಸುತ್ತಿದ್ದರೆ, ಪುಸ್ತಕವನ್ನು ಡಿಜಿಟೈಸ್ ಮಾಡುವ ಯೋಜನೆಯಲ್ಲಿ ನಿಮಗರಿವಿಲ್ಲದೆಯೇ ಭಾಗವಹಿಸುತ್ತಿರುವ ಸಾಧ್ಯತೆ ಉಜ್ವಲವಾಗಿದೆ. ಅಂತರ್ಜಾಲದ ವಿವಿಧ ತಾಣಗಳ ಸೇವೆಯನ್ನು ಪಡೆಯಲು ಬಳಕೆದಾರ ನೋಂದಾಯಿಸಿಕೊಳ್ಳ ಬೇಕಾಗುತ್ತದೆ ತಾನೇ? ಹೀಗೆ ನೋಂದಾಯಿಸಿಕೊಳ್ಳುವಾಗ, ನಮ್ಮ ಖಾತೆಗೆ ಹೆಸರು ಮತ್ತು ಗುಪ್ತಸಂಕೇತಗಳನ್ನು ಆಯ್ದು ಕೊಳ್ಳಬೇಕಾಗುತ್ತದೆ.ಕಂಪ್ಯೂಟರ್ ಪ್ರೊಗ್ರಾಮುಗಳೂ ಈ ರೀತಿ ಖಾತೆಗಳನ್ನು ನೋಂದಾಯಿಸಿ ಕೊಳ್ಳಬಹುದು. ಆದರೆ ಇಂತಹ ಸ್ವಯಂಚಾಲಿ ವ್ಯವಸ್ಥೆಗಳ ಮೂಲಕ ಆಗುವ ನೋಂದಾವಣೆಗಳು ತಮ್ಮ ಸೇವೆಯ ಮೇಲೆ ಒತ್ತಡ ಉಂಟು ಮಾಡುವುದಲ್ಲದೆ,ನೈಜ ಬಳಕೆಗಾಗಿ ತೆರೆದ ಖಾತೆಗಳಲ್ಲ ಎನ್ನುವುದು ಸೇವೆಗಳನ್ನು ಒದಗಿಸುವವರಿಗೆ ಗೊತ್ತು. ಅದಕ್ಕಾಗಿ ನೈಜ ಬಳಕೆದಾರನೇ ಖಾತೆ ತೆರೆಯುತ್ತಿದ್ದಾನೆ ಎನ್ನುವುದನ್ನು ಖಚಿತ ಪಡಿಸುವ ನಿಟ್ಟಿನಲ್ಲಿ, ಖಾತೆ ತೆರೆಯುವವರಿಗೆ ಪರೀಕ್ಷೆಯನ್ನೊಡ್ಡುವುದು ಸೇವಾದಾತೃಗಳ ವೈಖರಿ.ಇದಕ್ಕಾಗಿ ಅವರು ಸುಲಭದ ಹಾದಿ ಹಿಡಿಯುತ್ತಾರೆ. ಅಡ್ಡಾದಿಡ್ಡಿ ಬರೆದ ಒಂದು ಪದವನ್ನು ತೆರೆಯ ಮೇಲೆ ಪ್ರದರ್ಶಿಸಿ,ಅದನ್ನು ಟೈಪಿಸುವಂತೆ ಬಳಕೆದಾರನಿಗೆ ಸವಾಲೊಡ್ಡುವುದೇ ಆ ವೈಖರಿ.ನೈಜ ಬಳಕೆದಾರನಿಗೆ ಅದು ಚಿಟಿಕೆ ಹೊಡೆದಷ್ಟೇ ಸುಲಭ. ಆದರೆ ಕಂಪ್ಯೂಟರ್ ಆಧಾರಿತ ವ್ಯವಸ್ಥೆಯಾದರೆ, ಈ ಸವಾಲು ಬಿಡಿಸಲದಕ್ಕೆ ಸಾಧ್ಯವಾಗದು.
ಕ್ಯಾಪ್ಚ(captcha) ಎನ್ನುವ ಈ ವಿಧಾನವನ್ನು ಒಳ್ಳೆಯ ಗುರಿ ಸಾಧನೆಗೆ ಬಳಸಬಾರದೇಕೆ ಎನ್ನುವ ಯೋಚನೆ ಗ್ವಾಟೆಮಾಲದ ವೋನಾನ್ ಎಂಬಾತನಿಗೆ ಬಂತು.ಗೂಗಲ್‌ನ ಪುಸ್ತಕಗಳನ್ನು ಡಿಜಿಟೈಸ್ ಮಾಡುವಂತಹ ಯೋಜನೆಗಳಿಗೆ ಇದನ್ನು ಉಪಯೋಗಿಸುವುದೇ ಈ ಯೋಚನೆ.ಡಿಜಿಟೈಸ್ ಮಾಡಿದ ಪುಸ್ತಕಗಳ ಸ್ಕ್ಯಾನ್ ಮಾಡಿದ ಪುಟಗಳನ್ನು ಅಪ್ಟಿಕಲ್ ಕ್ಯಾರೆಕ್ಟರ್ ರೆಕೊಗ್ನಿಶನ್ ತಂತ್ರಾಂಶ ಬಳಸಿ,ಡಿಜಿಟೈಸ್ ಮಾಡಲು ಯತ್ನಿಸಲಾಗುತ್ತದೆ.ಆದರೆ ಶೇಕಡಾ ಇಪ್ಪತ್ತು ಪದಗಳನ್ನು ಗುರುತಿಸಲು ಕಂಪ್ಯೂಟರಿಗೆ ಸಾಧ್ಯವಾಗದು.ಪುಟಗಳ ಬಣ್ಣಗೆಟ್ಟಿರುವುದು,ಶಾಯಿ ಕಲೆಗಳು ಇಂತಹ ಕಾರಣಗಳಿಂದ ಹೀಗಾಗಬಹುದು. ಅಂತಹ ಗುರುತಿಸಲಾಗದ ಪದಗಳನ್ನು ಖಾತೆ ತೆರೆಯುವವರಿಗೆ ಒದಗಿಸಿ, ಅವರಿಂದ ಈ ಪದಗಳನ್ನು ಟೈಪಿಸುವ ಪ್ರಯತ್ನ ನಡೆಯುತ್ತದೆ.ಒಂದಕ್ಕಿಂತ ಹೆಚ್ಚು ಜನರಿಗೆ ಇಂತಹ ಪದವನ್ನು ಒದಗಿಸಿ,ಅವರು ಅದನ್ನು ಒಂದೇ ರೀತಿ ಟೈಪಿಸಿದರೆ,ಅದನ್ನು ಸರಿಯಾಗಿದೆ ಎಂದು ತಿಳಿಯಲಾಗುತ್ತದೆ. ಈ ರೀತಿ ದಿನವೊಂದಕ್ಕೆ ಒಂದು ಕೋಟಿ ಪದಗಳನ್ನು ತಮಗರಿವಿಲ್ಲದೆಯೇ ಜನರು ಅಂತರ್ಜಾಲದಲ್ಲಿ ಟೈಪಿಸಿ, ಪುಸ್ತಕವನ್ನು ಡಿಜಿಟೈಸ್ ಮಾಡುವ ಒಳ್ಳೆಯ ಯೋಜನೆಯಲ್ಲಿ ಪಾಲ್ಗೊಂಡು ಬಿಡುತ್ತಾರೆ!
ಸ್ಯಾನ್‌ಪ್ರಾನಿಸ್ಕೋದ ಓಪನ್ ಕಂಟೆಂಟ್ ಅಲಾಯನ್ಸ್ ಎನ್ನುವ ಲಾಭರಹಿತ ಸಂಸ್ಥೆಯೊಂದು ಜಗತ್ತಿನ ಸುಮಾರು ನೂರೈವತ್ತು ಗ್ರಂಥಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳು ಈ ಯೋಜನೆಯ ಲಾಭವನ್ನು ಪಡೆಯುತ್ತಿವೆ.ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ 1851ರ ನಂತರದ ಸಂಚಿಕೆಗಳನ್ನು ಡಿಜಿಟೈಸ್ ಮಾಡುವ ಕಾರ್ಯವೂ ಇಂತಹ ರಿಕ್ಯಾಪ್ಚ ಯೋಜನೆಯ ಮೂಲಕ ಗಣಕೀಕರಣಗೊಳ್ಳುತ್ತಿದೆ.ಇದೀಗಲೇ ಅರ್ಧಾಂಶದಷ್ಟು ಕೆಲಸ ಮುಗಿದಿದೆ.ಇದೀಗಲೇ ಸುಮಾರು ನಲುವತ್ತು ಕೋಟಿ ಜನರು ಇದರಲ್ಲಿ ಕೈಗೂಡಿಸಿದ್ದಾರೆ.ಜನಬಲವನ್ನು ಗುರಿ ಸಾಧಿಸಲು ಬಳಸುವ ಹನಿಗೂಡಿದರೆ ಹಳ್ಳ ಎನ್ನುವಂತಹ ಇಂತಹ ಯೋಜನೆಗಳು ಹೆಚ್ಚೆಚ್ಚು ನಡೆಯಬೇಕು ಅಲ್ಲವೇ?
---------------------------------------------------------------
ಭಯೋತ್ಪಾದನೆ ಕಡಿವಾಣಕ್ಕೆ ಹೊಸ ಶಾಸನ
ಅಂತರ್ಜಾಲದ ಮೂಲಕವೂ ಭಯೋತ್ಪಾದನಾ ಚಟುವಟಿಕೆಗಳು ನಡೆಯುತ್ತಿರುವುದು ದಿನದಿಂದ ದಿನಕ್ಕೆ ಸ್ಪಷ್ಟವಾಗುತ್ತಿದೆ. ಸರ್ವವ್ಯಾಪಿಯಾಗಿರುವ ಅಂತರ್ಜಾಲದ ಮೂಲಕ ನಡೆದ ಘಟನೆಗಳ ತನಿಖೆ ನಡೆಸುವುದು ತುಂಬಾ ತೊಡಕಿನ ಸವಾಲು. ಅಂತರ್ಜಾಲವನ್ನು ಬಳಸಿಕೊಂಡವರ ದಾಖಲೆಯನ್ನು ಉಳಿಸಿಕೊಳ್ಳದಿರುವುದು ಬಹುಪ್ರಮುಖ ತೊಡಕು.ಹೀಗಾಗಿ ಅಂತರ್ಜಾಲ ಸೇವೆಯನ್ನು ಒದಗಿಸಿದವರು,ಅದನ್ನು ಪಡೆದ ಬಳಕೆದಾರ ಯಾರು ಎನ್ನುವ ವಿವರಗಳನ್ನು ಎರಡು ವರ್ಷಗಳವರೆಗಾದರೂ ಉಳಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲು ಅಮೆರಿಕಾದ ಸಂಸತ್ತಿನಲ್ಲಿ ಶಾಸನ ರೂಪಿಸಲಾಗುತ್ತಿದೆ.ಇದರ ಪ್ರಕಾರ ಅಂತರ್ಜಾಲ ಸೇವಾದಾತೃಗಳು ಮಾತ್ರವಲ್ಲದೆ,ನಿಸ್ತಂತು ಜಾಲವನ್ನು ಒದಗಿಸುವ ಹೋಟೆಲ್,ಪೆಟ್ರೋಲ್ ಬಂಕುಗಳು,ವಿಶ್ವವಿದ್ಯಾಲಯಗಳು,ಸೈಬರ್ ಕೆಫೆಗಳು ಅಷ್ಟೇ ಏಕೆ ಮನೆಗಳಲ್ಲೂ ಅಂತರ್ಜಾಲ ಸೇವೆಯನ್ನು ಬಳಸಿದವರ ವಿವರಗಳನ್ನು ದಾಖಲಿಸಿ,ಉಳಿಸಿಕೊಳ್ಳುವುದು ಕಡ್ಡಾಯವಾಗಲಿದೆ.
---------------------------------------------------------------
ಮೊಬೈಲ್ ಮೂಲಕ ಬ್ಯಾಂಕಿಂಗ್ ಸೇವೆ
ಮೊಬೈಲ್ ಮೂಲಕ ಬ್ಯಾಂಕಿಂಗ್ ಸೇವೆಗಳನ್ನು ಪೂರೈಸಿ,ಜಗತ್ತಿನ ಬಡಜನರ ಆರ್ಥಿಕ ಏಳಿಗೆಯನ್ನು ಸಾಧಿಸಲು ಬಿಲ್ ಗೇಟ್ಸ್ ಅವರ ದತ್ತಿ ಸಂಸ್ಥೆ ಉತ್ಸಾಹ ಹೊಂದಿದೆ. ಸುಮಾರು ನೂರು ಕೋಟಿ ಜನ ಬ್ಯಾಂಕ್ ಖಾತೆಯನ್ನು ಹೊಂದಿಲ್ಲ.ಇದರಿಂದ ಅವರ ಚಟುವಟಿಕೆಗಳು ಬಾಧಿತವಾಗುತ್ತವೆ. ಒಂದು ವೇಳೆ ಅವರಿಗೆ ಬ್ಯಾಂಕ್ ಸೇವೆಗಳು ದೊರಕಿದರೆ,ಅವರ ಏಳಿಗೆ ಸುಲಭದಲ್ಲಿ ಆಗುತ್ತದೆ ಎನ್ನುವುದು ದತ್ತಿ ಸಂಸ್ಥೆಯ ಲೆಕ್ಕಾಚಾರ.ಕೆನ್ಯಾದ ಎಂ-ಪೆಸಾ ಎನ್ನುವ ಯೋಜನೆಯನ್ನು ಮಾದರಿಯಾಗಿಟ್ಟು ಕೊಳ್ಳುವುದು ಸಂಸ್ಥೆಯ ಯೋಚನೆ. ಕೆನ್ಯಾದ ಯೋಜನೆಯಲ್ಲಿ ಏಜಂಟರುಗಳು ಜನರಿಂದ ನಗದು ಸ್ವೀಕರಿಸಿ,ಅದನ್ನು ಅವರ ಮೊಬೈಲ್ ಫೋನಿನ ಖಾತೆಗೆ ಸಂದಾಯ ಮಾಡುವ ಸೇವೆ ನೀಡುತ್ತಾರೆ.ವ್ಯವಹಾರಕ್ಕೆ ಹಣ ಸಂದಾಯ ಮಾಡುವಾಗ ಜನರು ತಮ್ಮ ಮೊಬೈಲ್ ಖಾತೆಯಲ್ಲಿ ಜಮೆಯಾಗಿರುವ ಹಣವನ್ನು ಬಳಸಿಕೊಂಡು ಮೊಬೈಲ್ ಮೂಲಕವೇ ಪಾವತಿಸಬಹುದು. ಹಣವನ್ನು ನಗದಾಗಿ ಪಡೆಯಲು ಏಜೆಂಟ್ ಬಳಿ ಹೋಗಿ,ತನ್ನ ಮೊಬೈಲ್ ಖಾತೆಯಲ್ಲಿ ಸಂದಾಯವಾಗಿರುವ ಹಣವನ್ನು ನಗದಾಗಿ ಪಡೆಯಬಹುದು.
----------------------------------------------------
ರೈಲ್ವೇ ಬೋಗಿಯಲ್ಲೂ ಸಭಾಂಗಣ!
ಚಲಿಸುವ ರೈಲಿನಲ್ಲೇ ಪ್ರಯಾಣಿಕರಿಗೆ ವಿಡಿಯೋ ಪ್ರದರ್ಶನದ ಮೂಲಕ ಸಾಧಕರ ಅನುಭವಗಳನ್ನು ಹಂಚಿ ಕೊಳ್ಳುವ ಸೌಲಭ್ಯ ಒದಗಿಸುವ ವಿನೂತನ ಯತ್ನ ನಡೆದಿದೆ.ಟಾಟಾ ಸಂಸ್ಥೆಯು ಈ ಯೋಜನೆಯ ರೂವಾರಿ. ಭಾರತದ ವಿವಿಧ ಭಾಗಗಳಿಂದ ಆಯ್ದ ಎಳೆಯ ಪ್ರತಿಭಾವಂತರಿಗೆ ಅವರಿಗೆ ಸಾಧಕರ ಸಾಧನೆಗಳ ಬಗ್ಗೆ ಪರಿಚಯಿಸುವ ಕಾರ್ಯಕ್ರಮವನ್ನು ಡಿಸೆಂಬರಿನಲ್ಲಿ ಹಮ್ಮಿಕೊಳ್ಳಲಾಯಿತು.ಇದರಲ್ಲಿ ಶ್ರೀಪಡ್ರೆಯವರೂ ಪಾಲ್ಗೊಂಡು ನೀರಿನ ಬಗ್ಗೆ ಅರಿವನ್ನುಂಟು ಮಾಡಲು ಪ್ರಯತ್ನಿಸಿದ್ದರು.ಇದನ್ನವರು ತಮ್ಮ ಬ್ಲಾಗ್‍ನಲ್ಲಿ (http://jeevajala.blogspot.comನಲ್ಲಿ ದಾಖಲಿಸಿದ್ದಾರೆ.
ಉದಯವಾಣಿ
*ಅಶೋಕ್‌ಕುಮಾರ್ ಎ

Monday, February 16, 2009

ನೀರ ನಿಶ್ಚಿಂತೆಗೆ ಟ್ವಿಟರ್‌ಗಳ ಸಮ್ಮೇಳನ

ಟ್ವಿಟರ್ ಎನ್ನುವುದು ಮೈಕ್ರೋಬ್ಲಾಗಿಂಗ್ ಸೇವೆ. ಬ್ಲಾಗ್ ಬರವಣಿಗೆಯನ್ನು ನೂರ ನಲುವತ್ತು ಅಕ್ಷರಗಳಲ್ಲಿ ಸೀಮಿತಗೊಳಿಸಿ,ಅದನ್ನು ಟೆಲಿಗ್ರಾಫಿಕ್ಸ್ ಭಾಷೆಯಲ್ಲಿ ಬರೆಯಲು ಉತ್ತೇಜಿಸುವುದೇ ಟ್ವಿಟರ್ ವೈಷಿಷ್ಟ್ಯ. ಪುಟಗಟ್ಟಲೆ ಬರೆಯಲು ಪುರುಸೊತ್ತು ಇಲ್ಲದವರಿಗೆ ಮತ್ತು ಹಾಗೆ ಬರೆದುದ್ದನ್ನು ಓದುವ ಉತ್ಸಾಹ ಇಲ್ಲದವರನ್ನು ಒಟ್ಟಿಗೆ ತರುವುದು ಟ್ವಿಟರ್ ಪ್ರಯತ್ನಿಸುತ್ತದೆ.ನೀವೇನೀಗ ಮಾಡುತ್ತಿದ್ದೀರಿ ಎನ್ನುವುದನ್ನು ಇತರರ ಜತೆ ಹಂಚಿಕೊಳ್ಳಿ ಎನ್ನುವುದು ಈ ಸೇವೆಯ ಧ್ಯೇಯ ವಾಕ್ಯ.ಕಾರ್ಯಕ್ರಮದ ವರದಿಯನ್ನು ಅದು ನಡೆದಿರುವ ಹಾಗೆಯೇ ವರದಿ ಮಾಡಲು ಟ್ವಿಟರ್ ಸೇವೆಯನ್ನು ಬಳಸುವ ಉತ್ಸಾಹಿಗಳು ಇದೀಗ ಎಲ್ಲೆಡೆ ಕಾಣಸಿಗುತ್ತಾರೆ.ಟ್ವಿಟರ್ ಸೇವೆಯನ್ನು ಪಡೆಯಲು ಕಂಪ್ಯೂಟರ್ ಮೂಲಕ ಅಂತರ್ಜಾಲ ಪ್ರವೇಶ ಬೇಕಿಲ್ಲ-ಮೊಬೈಲ್ ಅಂತಹ ಸಾಧನದ ಮೂಲಕವೂ ಟ್ವಿಟರ್‌ಗೆ ಬ್ಲಾಗಿಸಬಹುದು. ಹಾಗೆಯೇ ಮೊಬೈಲ್ ಮೂಲಕವೇ ಇತರರು ಬರೆದುದ್ದನ್ನು ಕಿರು ಸಂದೇಶಗಳಾಗಿ ಪಡೆಯಬಹುದು.ಟ್ವಿಟರ್‌ನಲ್ಲಿ ಗೆಳೆಯರು ಎನ್ನುವ ಪರಿಕಲ್ಪನೆಯ ಬದಲಿಗೆ "ಹಿಂಬಾಲಕ"ರನ್ನು ಸೃಷ್ಟಿಸಲಾಗಿದೆ.ನೀವು ಇತರರನ್ನು ಹಿಂಬಾಲಿಸಿ,ಅವರೇನು ಬರೆಯುತ್ತಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಬಹುದು.ಹಾಗೆಯೇ ನಿಮ್ಮನ್ನೂ ಇತರರು ಹಿಂಬಾಲಿಸಲು ಬಿಟ್ಟು,ನೀವು ಬರೆದುದನ್ನು ಇತರರು ತಿಳಿದುಕೊಳ್ಳಲು ಅನುವು ಮಾಡಿಕೊಡಬಹುದು. ಪ್ರೇಮಿಗಳ ದಿನದಂತಹ ದಿನಗಳಲ್ಲಿ,ಟ್ವಿಟರ್ ಸೇವೆ ಬಳಸುವವರ ಸಂಖ್ಯೆ ಮಿತಿ ಮೀರಿ, ಅದರ ಸರ್ವರ್ ಕುಸಿಯುವ ಅಪಾಯಕ್ಕೂ ಒಳಗಾಗುವುದಿದೆ ಎಂದರೆ ಅದರ ಸೇವೆ ಅದೆಷ್ಟು ಜನಪ್ರಿಯವಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ.ಮುಂಬೈಯಲ್ಲಿ ಉಗ್ರರ ದಾಳಿಯಂತಹ ಘಟನೆ ವೇಳೆ ಟ್ವಿಟರ್ ಮೂಲಕ ತಮ್ಮ ಅನುಭವವನ್ನು ಹಂಚಿಕೊಂಡವರು ಅನೇಕರಿದ್ದರು.
ಮೊನ್ನೆ ಗುರುವಾರ ಮುಂಬೈಯಲ್ಲಿ ಹನ್ನೆರಡು ಟ್ವಿಟರ್ ಸದಸ್ಯರು ಕಲೆತರು.ಇವರ ಸಭೆಗೆ ಆನ್‌ಲೈನ್ ಹಾಜರಿ ಸಹಸ್ರ ಸಂಖ್ಯೆಯಲ್ಲಿತ್ತು.ಇವರ ಸಮ್ಮೇಳನದ ಆಗುಹೋಗುಗಳು ಟ್ವಿಟರ್ ಸೇವೆಯ ಮೂಲಕವೇ ಜಗತ್ತಿನ ಮೂಲೆ ಮೂಲೆಗೆ ನೀರಿನ ನಿಶ್ಚಿಂತೆ ಮೂಡಿಸುವುದು ಹೇಗೆ ಎಂಬ ಮಾಹಿತಿಯನ್ನು ಹಬ್ಬಿಸಿತು.ಸಭೆ ಆಯೋಜಿಸಿದ ಮೊನಿಕ್ ಮತ್ತು ಮೋಹ್ನೀಶ್ ಹದಿಹರೆಯದ ಮೈಕ್ರೋಬ್ಲಾಗಿಗರು.ವಾಟರ್ ಎನ್ನುವ ಲಾಭರಹಿತ ಸಂಸ್ಥೆಗೆ ನಿಧಿ ಕೂಡಿಸುವ ಉದ್ದೇಶದಿಂದ ಸಮ್ಮೇಳನ ನಡೆಸುವ ಇರಾದೆಗೆ ಯಾರ ಬೆಂಬಲವೂ ಸಿಗದೆ, ಟ್ವಿಟರ್ ಮೂಲಕ ಸಮ್ಮೇಳನ ನಡೆಸುವ ಸಾಹಸಕ್ಕೆ ಕೈಹಾಕಿದರು.ಯಶಸ್ವಿಯೂ ಆದರು. ಲಕ್ನೋ,ಚೆನ್ನೈ,ಬೆಂಗಳೂರು,ಕೊಲ್ಕತ್ತ ಹೀಗೆ ವಿವಿಧ ಭಾರತೀಯ ನಗರಗಳಲ್ಲಿ ಕಲೆತಿದ್ದ ಇತರ ಉತ್ಸಾಹಿ ಸದಸ್ಯರುಗಳ ಮೂಲಕ ಇವರುಗಳು ಒಟ್ಟು ಮಾಡಿದ ನಿಧಿ ಇಪ್ಪತ್ತೈದು ಸಾವಿರ ದಾಟಿತು!
------------------------------------------------------------------
ಕಾರಿನ ಬಣ್ಣ ಬದಲಿಸಲು ಪೈಂಟ್ ಬೇಕಾಗಿಲ್ಲ!
ಕಾರಿನ ಬಣ್ಣ ಬದಲಿಸಲು ಬಣ್ಣವನ್ನು ಚಿಮುಕಿಸಲು ಜರ್ಮನಿಯಲ್ಲಾದರೆ ಒಂದು ಲಕ್ಷ ರೂಪಾಯಿಯಷ್ಟು ಖರ್ಚು ಬರುತ್ತದೆ.ಅದರ ಅರ್ಧ ಖರ್ಚು ಮಾಡಿ, ಎರಡೇ ದಿವಸಗಳಲ್ಲಿ ಕಾರನ್ನು ಹೊಸತರಂತೆ ಕಾಣಿಸುವ ವಿಧಾನವೊಂದಿದೆ.ಅದುವೇ ಬಣ್ಣದ ಪಿವಿಸಿ ಹಾಳೆಯನ್ನು ಕಾರಿನ ಮೇಲ್ಮೈಗೆ ಅಂಟಿಸುವುದು. ಇದಕ್ಕೆ ಉತ್ತಮ ಗುಣಮಟ್ಟದ ಅಂಟನ್ನು ಬಳಸುವುದರಿಂದ, ಹಾಳೆಯು ಭದ್ರವಾಗಿ ಅಂಟಿ,ಪೈಂಟಿನ ಪದರದಂತೇ ಕಾಣಿಸುತ್ತದೆ. ಈ ಹಾಳೆಯನ್ನು ಹಚ್ಚುವುದು ಹೇಳಿದಷ್ಟು ಸುಲಭವಲ್ಲ.ಅನುಭವವಿಲ್ಲದವರು ಹಚ್ಚಿದರೆ,ಹಾಳೆ ಮತ್ತು ಕಾರಿನ ಮೇಲ್ಮೈಯ ಮೇಲೆ ಗಾಳಿಯ ಗುಳ್ಳೆಗಳು ಉಳಿದುಕೊಂಡುಬಿಡಬಹುದು.ಪರಿಣತರಿಗೂ ಕಾರಿಗಿಡೀ ಹಾಳೆಯನ್ನು ಅಂಟಿಸಲು ಇಬ್ಬರಿಗೆ ಎರಡು ದಿನಗಳು ಬೇಕಾಗುತ್ತದೆ.ಜರ್ಮನಿಯಲ್ಲಿ ಹಳೆಯ ಕಾರುಗಳ ಮುಖಬೆಲೆ ಹೆಚ್ಚಿಸಲು ಈ ರೀತಿ ಮಾಡುವ ಕ್ರಮ ಜನಪ್ರಿಯವಾಗುತ್ತಿದೆ.ಒಮ್ಮೆ ಹಚ್ಚಿದರೆ, ಏಳೆಂಟು ವರ್ಷಗಳ ಬಾಳಿಕೆಯನ್ನು ನಿರೀಕ್ಷಿಸಬಹುದು. ಕಾರನ್ನು ತೊಳೆಯಲು ತೊಂದರೆಯಿಲ್ಲ.ಆದರೆ ಕಾರಿಗೆ ಬಿಸಿ ಮೇಣವನ್ನು ಹಚ್ಚಿ ಹೊಳಪು ನೀಡಲು ಪ್ರಯತ್ನಿಸಬಾರದು.ಕಾರನ್ನು ಲೀಸಿಗೆ ನೀಡಿ,ಅದು ಮರಳಿ ಬರುವಾಗ ಕಾರಿನ ತುಂಬಾ ಗೀರುಗಳು,ಸಣ್ಣ ಅಪಘಾತಗಳು ಉಂಟು ಮಾಡಿದ ಕೊರಕಲುಗಳು ಇದ್ದರೆ,ಅವನ್ನು ಅಡಗಿಸಲು ಪಿವಿಸಿ ಹಾಳೆಯನ್ನು ಹಚ್ಚುವುದು ಉತ್ತಮ ಉಪಾಯವಾಗುತ್ತದೆ.ಕೆಲವು ಕಾರು ತಯಾರಕರು ಪಾರದರ್ಶಕ ಹಾಳೆಯನ್ನು ಹೊಸ ಕಾರುಗಳ ಕೆಲವು ಆಯ್ದ ಜಾಗಗಳಿಗೆ ಹಚ್ಚಿ,ಅದನ್ನು ರಕ್ಷಣಾ ಪದರದಂತೆ ಬಳಸುವುದೂ ಇದೆ.
-------------------------------------------------------------------------------------
ಮೂರು ಸಾವಿರ ವರ್ಷದ ಹಳೆಯ ಮಮ್ಮಿಗಳ ದರ್ಶನ
ಈಜಿಪ್ಟಿನ ಮಮ್ಮಿಗಳ ಬಗ್ಗೆ ಕೇಳಿದ್ದೀರಲ್ಲಾ?ಈ ಮಮ್ಮಿಗಳ ಒಳಗೆ ಹೆಣಗಳಿವೆ ಎನ್ನುವುದು ಗೊತ್ತಿರುವ ವಿಷಯ.ಇವುಗಳು ಯಾವ ಸ್ಥಿತಿಯಲ್ಲಿವೆ, ಹೆಣ ಮಹಿಳೆಯದ್ದೋ ಅಥವ ಪುರುಷನದ್ದೋ ಎನ್ನುವ ಬಗ್ಗೆ ತಲೆ ಕೆಡಿಸಿಕೊಳ್ಳುವ ಸಂಶೋಧಕರ ಆಸಕ್ತಿಯನ್ನು ತಣಿಸಲು,ಚಿಕಾಗೋದ ವಿಶ್ವವಿದ್ಯಾಲಯದ ಸಂಶೋಧಕರು ಅತ್ಯುತ್ತಮ ಗುಣಮಟ್ಟದ ಸಿ.ಟಿ. ಸ್ಕ್ಯಾನರ್ ಅನ್ನು ಅಭಿವೃದ್ಧಿ ಪಡಿಸಿದ್ದಾರೆ.ಸ್ಕ್ಯಾನಿನ ಮೂಲಕ ಮಮ್ಮಿಯೊಳಗೆ ಇರುವ ಹೆಣ ಹೆಣ್ಣುಮಗಳದ್ದು.ಆಕೆಯ ಪ್ರಾಯ ಮೂವತ್ತು ವರ್ಷ ಇರಬಹುದು ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.ಸ್ಕ್ಯಾನಿಂಗಿನ ಮೂಲಕ ಹೆಣದ ಮುಖ ಎಷ್ಟು ಸ್ಪಷ್ಟವಾಗಿದೆಯೆಂದರೆ,ಈಗೇನಾದರೂ ಆಕೆ ತನ್ನೆದುರು ಬಂದರೆ,ಆಕೆಯನ್ನು ತಾನು ಗುರುತಿಸಬಲ್ಲೆ ಎಂದು ಸಂಶೋಧಕರು ಧೈರ್ಯವಾಗಿ ಹೇಳುತ್ತಾರೆ.
--------------------------------------------------------------------------------
ಉಪಗ್ರಹ ಡಿಕ್ಕಿ:ತರಲಿದೆಯೇ ಆಕಾಶಕಾಯಗಳಿಗೆ ಅಪಾಯ?
ಬಾಹ್ಯಾಕಾಶದಲ್ಲಿ ಇರಿಡಿಯಮ್ ಜಾಲದ ಒಂದು ಉಪಗ್ರಹ ಮತ್ತು ರಶ್ಯದ ಕೃತಕ ಉಪ್ಗ್ರಹಗಳು ಪರಸ್ಪರ ಡಿಕ್ಕಿಯಾಗಿವೆ. ಈ ಡಿಕ್ಕಿಯಿಂದ ಉಪಗ್ರಹಗಳು ಸಿಡಿದು ಹೋಗಿ ಸಾವಿರಾರು ತುಣುಕುಗಳು ಹಾರಿಹೋಗಿ,ಚದರಿಕೊಂಡಿವೆ.ಈ ತುಣುಕುಗಳು ಎರಡರಿಂದು ಐದು ಇಂಚು ಅಳತೆಯವು.ಈ ಸಣ್ಣ ತುಣುಕುಗಳು ಅತಿವೇಗದಲ್ಲಿ ಭೂಮಿಯನ್ನು ಪ್ರದಕ್ಷಿಣೆ ಬರುತ್ತಿರುವುದರಿಂದ,ಇವು ಇತರ ಉಪಗ್ರಹಗಳಿಗೆ ಡಿಕ್ಕಿ ಹೊಡೆಯುವ ಅಪಾಯವಿದೆ. ವಿಜ್ಞಾನಿಗಳು ಬಾಹ್ಯಾಕಾಶ ಕೇಂದ್ರದ ಬಗ್ಗೆ ಹೆಚ್ಚು ಕಳವಳ ಹೊಂದಿದ್ದಾರೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಸದ್ಯ ಯಾವ ಅಪಾಯ ಸಂಭವಿಸದು, ಯಾಕೆಂದರೆ,ಅದು ಸಾಕಷ್ಟು ಕೆಳಗಿನ ಕಕ್ಷೆಯಲ್ಲಿ ಭೂಮಿಗೆ ಪ್ರದಕ್ಷಿಣೆ ಬರುತ್ತಿದೆ.ಉಪಗ್ರಹ ತುಣುಕುಗಳು ಮುಂದಿನ ಹತ್ತು ವರ್ಷಗಳವರೆಗೂ ಅಪಾಯ ತರಬಲ್ಲವು ಎಂದು ವಿಜ್ಞಾನಿಗಳ ಅಂಬೋಣ.ಹತ್ತು ಸಾವಿರ ತುಣುಕುಗಳ ಜಾಡನ್ನು ಅಮೆರಿಕಾದ ನಾಸಾವು ಅನುಸರಿಸಿ,ಅವುಗಳಿಂದ ಉಂಟಾಗಬಹುದಾದ ಅಪಾಯಗಳನ್ನು ನಿವಾರಿಸಲು ಸಹಾಯ ಮಾಡಲಿದೆ.
------------------------------------------------------------------------------

ಡಿಜಿಟಲ್ ಮಾಹಿತಿಯನ್ನುಳಿಸುವ ಯೋಜನೆ
ಡಿಜಿಟಲ್ ಮಾಹಿತಿಯು ಅಳಿಯದು ಎನ್ನುವ ವಿಶ್ವಾಸ ನಿಮಗಿದ್ದರೆ ಯೋಚಿಸುವುದೊಳಿತು.ಎಪ್ಪತ್ತು,ಎಂಭತ್ತು ಮತ್ತು ತೊಂಭತ್ತರ ದಶಕಗಳ ಕಂಪ್ಯೂಟರ್ ಮಾಹಿತಿಯನ್ನು ಈಗ ಓದಲು ಪ್ರಯತ್ನಿಸಿದರೆ ವಿಫಲವಾಗುವ ಸಾಧ್ಯತೆಯೇ ಹೆಚ್ಚು. ಕಂಪ್ಯೂಟರುಗಳಲ್ಲಿ ನೀವು ಉಳಿಸಿದ ಕಡತಗಳು ವಿವಿಧ ಮಾದರಿಗಳಲ್ಲಿ ಉಳಿಸಲ್ಪಟ್ಟಿರುತ್ತವೆ. ಅವುಗಳೀಗ ಚಲಾವಣೆಯಲ್ಲಿಲ್ಲದ ಮಾದರಿಗಳಾಗಿರಬಹುದು. ವರ್ಡ್ ಅಂತಹ ಪದಸಂಸ್ಕರಣ ತಂತ್ರಾಂಶವೂ ಒಂದು ಆವೃತ್ತಿಯಿಂದ ಇನ್ನೊಂದಕ್ಕೆ ಬದಲಾಗುತ್ತಿರುತ್ತದೆ. ಹಳೆಯ ಶೈಲಿಯ ಕಡತಗಳನ್ನು ಕೈಬಿಟ್ಟಿದ್ದರೆ,ಅಂತಹ ಶೈಲಿಯಲ್ಲಿ ಉಳಿಸಿದ ಕಡತಗಳನ್ನು ಹೊಸ ತಂತ್ರಾಂಶ ತೆರೆಯಲು ವಿಫಲವಾಗುತ್ತದೆ.ಯುರೋಪಿನಲ್ಲಿ ಕೀಪ್ ಎನ್ನುವ ಒಂದು ಯೋಜನೆ ಹಳೆಯ ಕಂಪ್ಯೂಟರ್ ಕಡತಗಳನ್ನು ತೆರೆಯಬಲ್ಲ ತಂತ್ರಾಂಶವನ್ನು ಅಭಿವೃದ್ಧಿ ಪಡಿಸುವ ಯೋಜನೆಯಾಗಿದೆ. ನಾಲ್ಕು ದಶಲಕ್ಷ ಯುರೋ ಖರ್ಚಿನ ಈ ಯೋಜನೆ ಸಫಲವಾದರೆ, ಹಳೆಯ ಕಡತಗಳನ್ನು ತೆರೆದು ಓದಲು ಸಹಾಯ ಸಿಗಲಿದೆ.
*ಅಶೋಕ್‌ಕುಮಾರ್ ಎ

Monday, February 09, 2009

ಅಂತರ್ಜಾಲ ಮೂಲಕವೂ ಡಬ್ಬಾವಾಲರ ಸೇವೆ

ಅಂತರ್ಜಾಲ ಮೂಲಕವೂ ಡಬ್ಬಾವಾಲರ ಸೇವೆ
ಮುಂಬೈ ಡಬ್ಬಾವಾಲರ ಸೇವೆಯಿಂದ ಪ್ರೇರಿತವಾಗಿರುವ "ಡಬ್ಬಾ" ಸೇವೆಯನ್ನು ಈಗ ಅಮೆರಿಕಾದಲ್ಲೂ ಆರಂಭಿಸಲಾಗಿದೆ.ಟಿಫಿನ್ ಮೀಲ್ಸ್ ಎಂದು ಹೆಸರಿಡಲಾದ ಈ ಸೇವೆಯನ್ನು ಬೋಸ್ಟನ್ ಸುತ್ತಲಿನ ಹೋಟೆಲ್‍ಗಳು ಜತೆಯಾಗಿ ಒದಗಿಸುತ್ತಿವೆ.ಶುಚಿ-ರುಚಿಯಾಗಿ ಸಿದ್ಧಪಡಿಸಿದ ಆಹಾರವನ್ನು ಡಬ್ಬಗಲಲ್ಲಿ ತುಂಬಿ ಬೇಡಿಕೆ ಸಲ್ಲಿಸಿದ ಗ್ರಾಹಕರ ಕಚೇರಿ-ಅಂಗಡಿಯ ಬಾಗಿಲಿಗೆ ತಲುಪಿಸುವ ಸೇವೆಯನ್ನಿಲ್ಲಿ ಒದಗಿಸಲಾಗುತ್ತಿದೆ.ಈ ಸೇವೆಯನ್ನು ಪಡೆಯಲು ಗ್ರಾಹಕರು ಅಂತರ್ಜಾಲ ಮೂಲಕವೂ ಬೇಡಿಕೆ ಸಲ್ಲಿಸಬಹುದು. ಡಬ್ಬಗಳು ಲೋಹದ್ದಲ್ಲವಾದ ಕಾರಣ ಇವನ್ನು ವಾಪಸ್ಸು ಮಾಡುವ ಅವಶ್ಯಕತೆಯಿಲ್ಲ ಎನ್ನುವುದನ್ನು ಗಮನಿಸಿ.ಸೂಪ್,ನಾನ್,ಪಲ್ಯ,ದಾಲ್,ಅನ್ನ,ಚಟ್ನಿ ಈ ವೈವಿಧ್ಯಮಯ ಅಡುಗೆ ಡಬ್ಬದಲ್ಲಿ ಲಭ್ಯ.ಸಮೋಸ,ಪಕೋಡ,ಐಸ್‌ಕ್ರೀಮ್ ಬೇಕಿದ್ದರೆ,ಪ್ರತ್ಯೇಕ ಬೆಲೆ ತೆತ್ತು ಪಡೆಯಬಹುದು.
----------------------------------------------------------
ಅಂತರ್ಜಾಲ ಜಾಲಾಡಲು ಕಿರು ಸಾಧನ
ಒಂದೂವರೆ ಸಾವಿರ ರುಪಾಯಿಗೆ ಅಂತರ್ಜಾಲ ಜಾಲಾಡಲು ಅವಕಾಶ ನೀಡುವ ಸಾಧನವನ್ನು ಮಾನವ ಸಂಪನ್ಮೂಲ ಖಾತೆಯು ಬಿಡುಗಡೆ ಮಾಡಿದೆ.ಕೈಯಲ್ಲಿ ಹಿಡಿದು ಬಳಸಬಹುದಾದ ಈ ಸಾಧನ ಹತ್ತಿಂಚು ಉದ್ದ,ಐದಿಂಚು ಅಗಲವಾಗಿದೆ.ಜನಸಾಮಾನ್ಯರು ಅಂತರ್ಜಾಲ ಸೇವೆಯನ್ನು ಪಡೆಯಲು ಅವಕಾಶ ನೀಡುವುದು ಈ ಸಾಧನವನ್ನು ಹೊರತರುವುದರ ಹಿಂದಿನ ಉದ್ದೇಶವಾಗಿದೆ. ಡಿಜಿಟಲ್ ಡಿವೈಡನ್ನು ಹೋಗಲಾಡಿಸಿ,ಸಾಮಾನ್ಯ ಜನರೂ ಅಂತರ್ಜಾಲದ ಪ್ರಯೋಜನಗಳನ್ನು ತಮ್ಮದಾಗಿಸಲು ಇಂತಹ ಸಾಧನಗಳು ಅವಶ್ಯಕ.
------------------------------------------------------------
ಐಫೋನಿನಲ್ಲಿ ಪುಸ್ತಕ ಶೋಧ ಸಾಧ್ಯ
ಇ-ಪುಸ್ತಕಗಳನ್ನು ಹುಡುಕಾಡಲು ಮೊಬೈಲ್ ಹ್ಯಾಂಡ್‍ಸೆಟ್ಟಿನಲ್ಲಿ ಸಾಧ್ಯವಾಗಿಸುವ ಸೇವೆಯನ್ನು ಗೂಗಲ್ ಆರಂಭಿಸಿದೆ.ಐಫೋನ್,ಗೂಗಲ್ ಆಂಡ್ರಾಯ್ಡ್ ತಂತ್ರಾಂಶ ಬಳಸುವ ಜಿ1 ಎನ್ನುವ ಹ್ಯಾಂಡ್‌ಸೆಟ್ಟುಗಳಲ್ಲಿ ಸದ್ಯ ಈ ಅನುಕೂಲತೆ ಲಭಿಸಲಿದೆ.ಹಕ್ಕುಸ್ವಾಮ್ಯ ಇಲ್ಲದ ಎರಡು ದಶಲಕ್ಷ ಪುಸ್ತಕಗಳು ಈ ಸೇವೆಯ ಮೂಲಕ ಲಭ್ಯವಾಗಲಿವೆ.ಅತ್ತ ಅಮೆಜಾನ್ ಎನ್ನುವ ಅಂತರ್ಜಾಲ ಪುಸ್ತಕದಂಗಡಿಯೂ ಇ-ಪುಸ್ತಕಗಳನ್ನು ಓದಲು ಇ-ಬುಕ್ ರೀಡರ್ ಸಾಧನವನ್ನು ಬಿಡುಗಡೆ ಮಾಡಲಿದೆ.ಕಿಂಡಲ್ ಎಂಬ ಹೆಸರಿನ್ ಇ-ಬುಕ್ ಸಾಧನದ ಹೊಸ ಆವೃತ್ತಿ ಬಿಡುಗಡೆಯ ಕ್ಷಣ ಹತ್ತಿರವಾಗುತ್ತಿದೆ.ಮೊಬೈಲ್ ಸಾಧನಗಳಲ್ಲೂ ಕಿಂಡಲ್ ಅನ್ನು ಅಳವಡಿಸುವ ನಿರ್ಧಾರವನ್ನು ಅಮೆಜಾನ್ ತೆಗೆದುಕೊಂಡಿದೆ. ಅಮೆಜಾನ್ ಕಂಪೆನಿಯು ತನ್ನ ಇ-ಬುಕ್ ಸಾಧನದಲ್ಲಿ ಓದಲು ಎರಡೂವರೆ ಲಕ್ಷ ಇ-ಬುಕ್‌ಗಳನ್ನು ಉಚಿತವಾಗಿ ಒದಗಿಸುತ್ತಿದೆ. ಇವುಗಳ ಪೈಕಿ ನೂರು ಪುಸ್ತಕಗಳು ಜನಪ್ರಿಯ ಪುಸ್ತಕಗಳಾಗಿವೆ.
----------------------------------------------------------------------
ನೀವೆಲ್ಲಿದೀರಿ ಎನ್ನುವುದನ್ನು ಇತರರಿಗೂ ತಿಳಿಸಿ!
ಮೊಬೈಲ್ ಸಾಧನದಲ್ಲಿ ಜಿಪಿಎಸ್ ಸೌಕರ್ಯ ಇದ್ದರೆ, ನೀವಿರುವ ಸ್ಥಾನ ಯಾವುದು ಎನ್ನುವುದು ಗೊತ್ತಾಗುತ್ತದೆ. ಈ ಮಾಹಿತಿಯನ್ನು ಅಂತರ್ಜಾಲದಲ್ಲೂ ಪ್ರಕಟ ಪಡಿಸಿ, ಸದ್ಯ ನೀವೆಲ್ಲಿದ್ದೀರಿ ಎನ್ನುವುದನ್ನು ಇತರರಿಗೆ ತಿಳಿಸಲು ಸಾಧ್ಯವಾಗುವ ವಿನೂತನ ಸೇವೆಯನ್ನು ಗೂಗಲ್ ಕಂಪೆನಿಯು ಲ್ಯಾಟಿಟ್ಯೂಡ್ ಎನ್ನುವ ಹೆಸರಿನಲ್ಲಿ ಆರಂಭಿಸಿದೆ.ಗೂಗಲ್ ಮ್ಯಾಪಿನ ಮೇಲೆ, ವ್ಯಕ್ತಿಯಿರುವ ಸ್ಥಾನ ಗೊತ್ತಾಗುತ್ತದೆ. ನಿಮ್ಮ ಜಿಮೇಲ್ ವಿಳಾಸ ಪುಸ್ತಕದಲ್ಲಿ ಇರುವ ಇತರ ವ್ಯಕ್ತಿಗಳ ಜತೆ ಈ ಮಾಹಿತಿಯನ್ನು ಹಂಚಿಕೊಳ್ಳಬಹುದು. ನಿಮ್ಮ ಮೊಬೈಲ್ ಮೂಲಕ ಗೂಗಲ್ ಈ ಮಾಹಿತಿಯನ್ನು ಪಡೆದು,ಸ್ಥಾನವನ್ನು ಗೂಗಲ್ ನಕ್ಷೆಯಲ್ಲಿ ಪ್ರದರ್ಶಿಸುವಂತೆ ಮಾಡಲು ಸಾಧ್ಯ. ಒಂದು ಈ ಮಾಹಿತಿಯನ್ನು ಇತರರ ಜತೆ ಹಂಚಿಕೊಳ್ಳಲು ನಿಮಗೆ ಇಷ್ಟವಾಗದಿದ್ದ ಪಕ್ಷ, ಈ ಸೇವೆಯನ್ನು ನಿಷ್ಕ್ರಿಯವಾಗಿಸುವುದೂ ಸುಲಭ.ಹಾಗೆಯೇ ನಿಮ್ಮ ಸ್ಥಾನವನ್ನು ನೀವೇ ನಿಗದಿಪಡಿಸಿ,ಅದನ್ನೇ ಇತರರ ಜತೆ ಹಂಚಿಕೊಳ್ಳಲು ಬಯಸಿದಲ್ಲಿ ಅದೂ ಕೂಡಾ ಸಾಧ್ಯವಾಗುತ್ತದೆ.ನೀವು ನಿಮ್ಮ ಸ್ಥಾನವನ್ನು ಇತರರ ಜತೆ ಹಂಚಿಕೊಂಡಂತೆ, ನಿಮ್ಮ ಗೆಳೆಯರೂ ಹಂಚಿಕೊಂಡರೆ,ಅವರಿರುವ ಸ್ಥಾನವು ನಿಮಗೆ ಗೊತ್ತಾಗುತ್ತದೆ.
ಇಂತಹ ಸೇವೆ ನಿಮಗೆ ಹೇಗೆ ಅನುಕೂಲ ಎನುವುದು ಗೊತ್ತಾಯಿತೇ?ನಿಮ್ಮ ಗೆಳೆಯನ ಜತೆ ನಿಮ್ಮ ಭೇಟಿ ನಿಗದಿಯಾಗಿದ್ದರೆ, ಆತ ಈಗೆಲ್ಲಿದ್ದಾನೆ,ಆತ ಪ್ರಯಾಣಿಸುತ್ತಿದ್ದರೆ,ಯಾವ ಸ್ಥಳ ಮುಟ್ಟಿದ್ದಾನೆ ಎನ್ನುವುದು ನಿಮಗೆ ಗೊತ್ತಾಗುತ್ತದೆ.ಅವರು ಎಲ್ಲಾದರೂ ವಾಹನ ಸಂದಣಿಯಲ್ಲಿ ಸಿಲುಕಿ ಹಾಕಿಕೊಂಡಿದ್ದಾರೋ ಎನ್ನುವುದನ್ನು ಗಮನಿಸಿ,ಅವರ ಆಗಮನ ಎಷ್ಟು ತಡವಾಗಬಹುದು ಎನ್ನುವುದನ್ನು ಗೊತ್ತು ಮಾಡಿಕೊಳ್ಳಬಹುದು.
--------------------------------------------------------------------
ಎಸ್ ಎಂ ಎಸ್ ಮೂಲಕ ಗ್ಯಾಸ್ ಸಿಲಿಂಡರ್
ಇಂಡೇನ್ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೇಕೆಂಬ ಬೇಡಿಕೆಯನ್ನು ಗ್ಯಾಸ್ ಸರಬರಾಜು ಮಾಡುವ ಅಂಗಡಿಯವನಿಗೆ ತಲುಪಿಸಬೇಕೇ? ಇದುವರೆಗೆ ದೂರವಾಣಿ ಕರೆ ಮಾಡುವ ಮೂಲಕ ಬೇಡಿಕೆ ಸಲ್ಲಿಸಬೇಕಿತ್ತು.ಆದರೆ ಕೆಲವೊಮ್ಮೆ ಹಲವಾರು ಸಲ ಕರೆ ಮಾಡಿದರೂ,ದೂರವಾಣಿ ಸಂಪರ್ಕ ಸಿಗದಿರುತ್ತದೆ.ಮಧುರೆಯಲ್ಲಿ ಇಂಡಿಯನ್ ಆಯಿಲ್ ಕಂಪೆನಿಯು ತನ್ನ ಇಂಡೇನ್ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್‌ಗಾಗಿ ಮೊಬೈಲ್ ಫೋನ್ ಮೂಲಕ ಕಿರು ಸಂದೇಶ ಕಳುಹಿಸುವ ಮೂಲಕ ಬೇಡಿಕೆ ಸಲ್ಲಿಸಲು ಅವಕಾಶ ನೀಡಲಾರಂಭಿಸಿದೆ.ಈ ಸೇವೆ ನೀಡಲು ಅಂಗಡಿಯವರು ಪ್ರತ್ಯೇಕ ಮೊಬೈಲ್ ಸೆಟ್ಟನ್ನು ಹೊಂದಿರುತ್ತಾರೆ.ಇದರ ದೂರವಾಣಿ ಸಂಖ್ಯೆಯ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಲಾಗುತ್ತದೆ. ಯಾವುದೇ ಹೊತ್ತಿನಲ್ಲೂ ಎಸ್ ಎಂ ಎಸ್ ಕಳುಹಿಸಿ,ಗ್ಯಾಸ್ ಬುಕ್ ಮಾಡುವ ಅನುಕೂಲತೆ ಈ ಸೇವೆಯ ವಿಶೇಷ. ಮಧ್ಯರಾತ್ರಿಯಲ್ಲಿ ಗ್ಯಾಸ್ ಬುಕ್ ಮಾಡಲು ದೂರವಾಣಿ ಕರೆ ಮಾಡಿ ಸಿಲಿಂಡರ್‌ಗಾಗಿ ಬೇಡಿಕೆ ಸಲ್ಲಿಸಲು ಸಾಧ್ಯವಿರಲಿಲ್ಲವಾದರೂ, ಎಸ್ ಎಂ ಎಸ್ ಸೇವೆಯಲ್ಲಿ ಆ ತೊಂದರೆಯಿಲ್ಲ!
---------------------------------------------------------------------
ಅಂತರ್ಜಾಲ ಬಸ್ಸು
ಅಂತರ್ಜಾಲ ಜಾಲಾಡುವ ಸೌಲಭ್ಯ ಇರುವ ಗೂಗಲ್ ಅಂತರ್ಜಾಲ ಬಸ್ ತಮಿಳ್ನಾಡಿನಲ್ಲಿ ಆರಂಭವಾಗಿದೆ.ಇದು ರಾಜ್ಯದ ಬೇರೆ ಬೇರೆ ನಗರ ಪಟ್ಟಣಗಳಿಗೆ ಸಾಗುತ್ತಾ,ಅಂತರ್ಜಾಲದ ಬಗ್ಗೆ ಜನರಿಗೆ ತಿಳುವಳಿಕೆ ಮೂಡಿಸುವ,ಕೆಲಸ ಮಾಡಲಿದೆ.ಅಂತರ್ಜಾಲದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಿ,ಅದನ್ನು ಸಮರ್ಥವಾಗಿ ಬಳಸಿಕೊಳ್ಳುವುದು ಹೇಗೆ ಎನ್ನುವುದನ್ನು ಅವರಿಗೆ ತಿಳಿಸಲು ಈ ಬಸ್ಸಿನಲ್ಲಿ ವ್ಯವಸ್ಥೆಯಿದೆ.ಹಾಗೆಯೇ ಅಂತರ್ಜಾಲ ಜಾಲಾಡಲೂ ಇದರಲ್ಲಿ ವ್ಯವಸ್ಥೆಯಿದೆ.
---------------------------------------------------------------
ನಕ್ಷೆಯಲ್ಲಿ ಮಾಹಿತಿ ಸೇರಿಸಲು ನೆರವಾಗಿ
http://www.openstreetmap.org/ ಎನ್ನುವ ಸೇವೆಯಲ್ಲಿ ಯಾರು ಬೇಕಾದರೂ ನಕ್ಷೆಯಲ್ಲಿ ರಸ್ತೆಯ ಹೆಸರು,ಜಾಗಗಳ ಬಗ್ಗೆ ತಮಗೆ ಗೊತ್ತಿರುವ ಮಾಹಿತಿಯನ್ನು ಸೇರಿಸಲು ಸಾಧ್ಯವಿದೆ.ವಿಕಿಪೀಡಿಯದಂತೆ ಜನರಿಂದಲೇ ರಚಿತವಾದ ನಕ್ಷೆಯ ವಿವರಗಳನ್ನು ಕಲೆಹಾಕುವ ವಿನೂತನ ಪ್ರಯೋಗ ಇದಾಗಿದೆ. ಈ ಸೆವೆಯ ಮೂಲಕ ಗಾಜಾ ಪ್ರದೇಶದಂತಹ,ಸರಿಯಾದ ವಿವರಗಳು ಸಿಗದಿರುವ ಪ್ರದೇಶಗಳ ನಕ್ಷೆಗಳನ್ನೂ ಹೊಸತಾಗಿ ರಚಿಸಲು ಸಾಧ್ಯವಾಗಿದೆ.

udayavani
*ಅಶೋಕ್‌ಕುಮಾರ್ ಎ

Monday, February 02, 2009

ಆರೋಗ್ಯ ಪರೀಕ್ಷೆಗೆ ಮಣಿಪಾಲ ಆಸ್ಪತ್ರೆಯ ತಾಣದಲ್ಲಿ ಸೌಕರ್ಯ

ಆರೋಗ್ಯ ಪರೀಕ್ಷೆಗೆ ಮಣಿಪಾಲ ಆಸ್ಪತ್ರೆಯ ತಾಣದಲ್ಲಿ ಸೌಕರ್ಯ
ಮಣಿಪಾಲ ಆಸ್ಪತ್ರೆಯ ಅಂತರ್ಜಾಲ ತಾಣದಲ್ಲಿ ಕಾಯಿಲೆಯ ಲಕ್ಷಣಗಳ ಆಧಾರದ ಮೇಲೆ ಕಾಯಿಲೆಯೇನಿರಬಹುದು ಎಂದು ತಿಳಿಸುವ ವ್ಯವಸ್ಥೆಯಿದೆ.ಅಂತರ್ಜಾಲ ತಾಣಕ್ಕೆ http://www.manipalhealth.comನಲ್ಲಿ symptom checker ಎನ್ನುವ ಕೊಂಡಿಯನ್ನು ಕ್ಲಿಕ್ಕಿಸಿದರೆ ಸರಿ.ಈಗ ತೆರೆದುಕೊಳ್ಳುವ ಪುಟದ ಲಿಪಿ ಪೆಟ್ಟಿಗೆಯಲ್ಲಿ ಕಾಯಿಲೆಯ ಲಕ್ಷಣಗಳನ್ನು ಒಂದೊಂದಾಗಿ ಟೈಪಿಸಬೇಕು. ಮೂರು ಕೀಲಿಗಳನ್ನು ಒತ್ತಿದೊಡನೆ ಈ ನೀವು ಟೈಪಿಸುತ್ತಿರುವ ಪದ ಏನಿರಬಹುದೆಂದು ಊಹಿಸಿ, ಸಂಭವನೀಯ ಪದಗಳ ಪಟ್ಟಿಗಳನ್ನು ಪ್ರದರ್ಶಿಸುವ ಮೂಲಕ ಬಳಕೆದಾರನಿಗೆ ಸಹಾಯ ಮಾಡುವ ಸೌಲಭ್ಯ ಇಲ್ಲಿದೆ.ಎಲ್ಲ ಲಕ್ಷಣಗಳನ್ನು ಪಟ್ಟಿ ಮಾಡಿದ ನಂತರ ಕುರುಹುಗಳನ್ನು ಪರೀಕ್ಷಿಸು ಎನ್ನುವ ಗುಂಡಿಯನ್ನು ಒತ್ತಿದರೆ,ಸಂಭವನೀಯ ಕಾಯಿಲೆಗಳ ಪಟ್ಟಿಯನ್ನು ಪ್ರದರ್ಶಿಸುವ ವ್ಯವಸ್ಥೆ ಇಲ್ಲಿದೆ.ಆಸ್ಪತ್ರೆಯಲ್ಲಿ ಲಭ್ಯವಿರುವ ಚಿಕಿತ್ಸೆಯನ್ನು ತಿಳಿಸುವ ಅಥವ ಹೆಚ್ಚಿನ ವಿವರಗಳನ್ನು ಮಿಂಚಂಚೆಯನ್ನು ನೀಡುವ ಮೂಲಕ ತಿಳಿದುಕೊಳ್ಳಬಹುದು.
http://healthcaremagic.com/ ಎನ್ನುವ ಅಂತರ್ಜಾಲ ತಾಣದಲ್ಲಿ ನಿಮ್ಮ ಆರೋಗ್ಯ ಸಮಸ್ಯೆಗಳ ಬಗ್ಗೆ ವೈದ್ಯರ ಜತೆ ಚರ್ಚಿಸುವ ಸೌಲಭ್ಯವೂ ಇದೆ. ನಿಮ್ಮ ತೊಂದರೆಗಳಿಗೆ ಇರುವ ಪರಿಹಾರೋಪಾಯಗಳನ್ನೂ ಚರ್ಚಿಸುವ ಸೌಕರ್ಯ ಇಲ್ಲಿದೆ.ಪ್ರಾಯೋಗಿಕ ಸೇವೆ ಉಚಿತವಾಗಿಯೇ ಲಭ್ಯವಿದೆಯಾದರೂ, ಮರು ಬಳಕೆಗೆ ಶುಲ್ಕ ನೀಡಬೇಕಾಗುತ್ತದೆ.
----------------------------------------------------------------------
ನಿಟ್ಟೆಯಲ್ಲಿ ಮೂರನೇಯ ಗ್ನೂ/ಲಿನಕ್ಸ್ ಹಬ್ಬ
ಸಂಪದ ಬಳಗದ ತಂತ್ರಜ್ಞರು ಆಯೋಜಿಸಿರುವ ಮೂರನೆಯ ಲಿನಕ್ಸ್ ಹಬ್ಬವು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆಯಲಿದೆ.ಫೆಬ್ರವರಿ ಏಳನೇ ತಾರೀಕು ಶನಿವಾರ ನಿಟ್ಟೆಯಲ್ಲಿ ನಡೆಯಲಿರುವ ಹಬ್ಬಕ್ಕೆ ಪ್ರವೇಶ ಮುಕ್ತ.ಮುಕ್ತ ತಂತ್ರಾಂಶ ಮತ್ತು ಸ್ವತಂತ್ರ ತಂತ್ರಾಂಶಗಳನ್ನು ಬಳಸಿಕೊಂಡು,ತಂತ್ರಾಂಶ ಚೌರ್ಯಕ್ಕೆ ವಿದಾಯ ಹೇಳಲು ಜನರಿಗೆ ಮತ್ತು ವಿದ್ಯಾರ್ಥಿ ಸಮುದಾಯಕ್ಕೆ ನೆರವಾಗುವುದು ಕಾರ್ಯಕ್ರಮದ ಮುಖ್ಯ ಉದ್ದೇಶ.ಸ್ಥಳದಲ್ಲೇ ಲಿನಕ್ಸ್ ಕಂಪ್ಯೂಟರ್ ಕಾರ್ಯನಿರ್ವಹಣಾ ವ್ಯವಸ್ಥೆಯನ್ನು ಅನುಸ್ಥಾಪಿಸಲು ಸಹಾಯ ನೀಡಲಾಗುತ್ತದೆ.ದೈನಂದಿನ ಕಂಪ್ಯೂಟರ್ ಬಳಕೆಗೆ ಬೇಕಾಗುವ ತಂತ್ರಾಂಶಗಳ ಬಗ್ಗೆ ಮಾಹಿತಿ ಮತ್ತು ಅವುಗಳ ಬಳಕೆಯ ಬಗ್ಗೆ ಪ್ರದರ್ಶನವೂ ಇರುತ್ತದೆ.ಕಾರ್ಯಕ್ರಮದಲ್ಲಿ ಭಾಗವಹಿಸಲು http://habba.in ತಾಣದಲ್ಲಿ ನೋಂದಾಯಿಸಿಕೊಳ್ಳಬಹುದು.
---------------------------------------------------------------------------
ಬಡತನ ರೇಖೆ ಕೆಳಗಿರುವ ಜನರಿಗೆ ಉಚಿತ ಸೆಲ್‌ಫೋನ್?
ಹ್ಯಾಂಡ್‌ಸೆಟ್ ತಯಾರಕರು ಬಡತನ ರೇಖೆಯ ಕೆಳಗಿರುವ ಜನರಿಗೆ ಉಚಿತ ಹ್ಯಾಂಡ್‌ಸೆಟ್ ನೀಡಲು ಐದು ಸಾವಿರ ಕೋಟಿ ಸಬ್ಸಿಡಿಗಾಗಿ ಯು ಎಸ್ ಓ ನಿಧಿಗಾಗಿ ಆಗ್ರಹಿಸಿದ್ದಾರೆ.ಐವತ್ತು ದಶಲಕ್ಷ ಜನರಿಗೆ ಉಚಿತ ಸೆಲ್‌ಫೋನ್ ಮತ್ತು ತಿಂಗಳಿಗೆ ನೂರು ಉಚಿತ ಕರೆಗಳನ್ನು ನೀಡುವ ಮೂಲಕ ಅವರು ಪ್ರಯಾಣಕ್ಕೆ ವ್ಯಯಿಸುವ ಹಣವನ್ನು ಕಡಿತ ಮಾಡುವುದು ಮತ್ತು ಅವರಿಗೆ ಅವಶ್ಯಕ ಮಾಹಿತಿಗಳನ್ನು ಒದಗಿಸುವುದು ಯೋಜನೆಯಲ್ಲಿ ಸೇರಿದೆ.ಹ್ಯಾಂಡ್‌ಸೆಟ್‍ಗಳಲ್ಲಿ ರೇಡಿಯೋವನ್ನೂ ಲಭ್ಯವಾಗಿಸಿ, ಜನರು ಮಾಹಿತಿಯನ್ನು ಪಡೆಯಲು ನೆರವಾಗುವ ಉದ್ದೇಶವೂ ಇದೆ.ಸೋನಿ ಎರಿಕ್ಸನ್, ನೋಕಿಯ ಸೇರಿದಂತೆ ಹಲವು ಹ್ಯಾಂಡ್‌ಸೆಟ್ ತಯಾರಕರು ಈ ಬೇಡಿಕೆ ಮಂಡಿಸಿದ ಇಂಡಿಯನ್ ಸೆಲ್ಯುಲರ್ ಅಸೋಸಿಯೇಶನ್‌ನಲ್ಲಿ ಸೇರಿದ್ದಾರೆ.
-------------------------------------------------------------------------
ಅಂತರ್ಜಾಲವಿರದಾಗಲೂ ಜಿಮೇಲ್
ಅಂತರ್ಜಾಲ ಆಧಾರಿತ ಮಿಂಚಂಚೆ ಸೇವೆಯ ಸಮಸ್ಯೆಯೆಂದರೆ,ಅಂತರ್ಜಾಲ ಸಂಪರ್ಕವಿಲ್ಲದಾಗ, ನಿಮ್ಮ ಮಿಂಚಂಚೆಗಳನ್ನು ಓದಲಾಗಲಿ ಅಥವ ಹೊಸ ಸಂದೇಶಗಳನ್ನು ಓದಲಾಗಲಿ ಆಗುವುದಿಲ್ಲ.ಔಟ್‌ಲುಕ್ ಅಂತಹ ತಂತ್ರಾಂಶ ಬಳಸುವುದು ಇದಕ್ಕೆ ಒಂದು ಪರಿಹಾರ. ಇಂತಹ ತಂತ್ರಾಂಶ ಇದ್ದರೆ,ಹೊಸ ಸಂದೇಶವನ್ನು ರಚಿಸಲು ಅಂತರ್ಜಾಲ ಸಂಪರ್ಕ ಬೇಕಿಲ್ಲ. ಕಂಪ್ಯೂಟರಿಗೇ ಬಂದ ಸಂದೇಶಗಳನ್ನು ಇಳಿಸಿಕೊಳ್ಳುವ ಈ ತಂತ್ರಾಂಶ,ಹಳೆಯ ಸಂದೇಶಗಳನ್ನು ಕಂಪ್ಯೂಟರಿನಲ್ಲಿಯೇ ಉಳಿಸಿಕೊಳ್ಳುತ್ತದೆ.ಈಗ ಜಿಮೇಲ್ ಬಳಕೆದಾರರಿಗೆ ಅಂತರ್ಜಾಲವಿಲ್ಲದಾಗ ಹಳೆಯ ಮಿಂಚಂಚೆ ಓದುವ, ಹೊಸ ಸಂದೇಶ ರಚಿಸುವ ಸೌಲಭ್ಯವನ್ನು ಗೂಗಲ್ ನೀಡಲಿದೆ.ಈ ಸೌಕರ್ಯ ಪಡೆಯಲು ಜಿಮೇಲ್‌ನ ಗೂಗಲ್ ಲ್ಯಾಬ್ ಕೊಂಡಿಯ ಮೇಲೆ ಕ್ಲಿಕ್ಕಿಸಿ. ಗೂಗಲ್ ಗೇರ್ ಅನುಸ್ಥಾಪಿಸಿಕೊಳ್ಳಿ. ನಂತರ ಮಿಂಚಂಚೆಯನ್ನು ಅಂತರ್ಜಾಲ ಸಂಪರ್ಕವಿಲ್ಲದಾಗಲೂ ಓದಲು,ರಚಿಸಲು ಸಾಧ್ಯ.
-----------------------------------------------------------
ನೀರಿನ ಮಟ್ಟಿಗೆ ದಿವಾಳಿಯಾಗಲಿರುವ ಭೂಮಿ
ಜಗತ್ತಿನ ಇಂಧನ ಮೂಲಗಳು ಬತ್ತುವ ಮೊದಲೇ ನೀರಿನ ಮೂಲಗಳು ಬತ್ತಿದರೆ ಅಚ್ಚರಿಯಿಲ್ಲ ಎಂದು ಜಾಗತಿಕ ಆರ್ಥಿಕ ವೇದಿಕೆಯ ವರದಿ ಎಚ್ಚರಿಸಿದೆ.ಇನ್ನು ಇಪ್ಪತ್ತು ವರ್ಷಗಳಲ್ಲಿ ನೀರಿನ ಕೊರತೆಯಿಂದ, ಬಹುಪಾಲು ಧಾನ್ಯ ಬೆಳೆ ವಿಫಲವಾಗಬಹುದು ಎಂದು ತಜ್ಞರ ಅಭಿಮತ.ನೀರಿನ ಪೂರೈಕೆ ವಿಧಿಸಲಾಗಿರುವ ಅಗ್ಗದ ದರ,ಮತ್ತು ಏರುತ್ತಿರುವ ಬಳಕೆ ನೀರಿನ ಕ್ಷಾಮಕ್ಕೆ ಕಾರಣವಾಗಲಿದೆ.ಹಿಮಾಲಯದ ಹಿಮರಾಶಿ ಮತ್ತು ಹೆಚ್ಚಿನ ನದಿಮೂಲಗಳು 2100ರ ವೇಳೆ ಬತ್ತಿ ಹೋಗಲಿವೆ.ನೀರಿನ ಮಿತ ಬಳಕೆ,ನೀರಿನ ಬಗ್ಗೆ ಜಾಗೃತಿ,ನೀರಿನ ಮರುಪೂರಣದಂತಹ ಕ್ರಮಗಳು ಮಾತ್ರ ಇಂತಹ ನೀರಿನ ಕ್ಷಾಮಕ್ಕೆ ತುತ್ತಾಗುವುದನ್ನು ತಪ್ಪಿಸಬಲ್ಲುವು.
--------------------------------------------------------------------------------
ಇಸ್ರೋ ನಿರ್ಮಿಸಿದ ಉಪಗ್ರಹ ವಿಫಲ
ಇಸ್ರೋವು ಯುಟೆಲ್ಸಾಟ್‌ಗಾಗಿ ನಿರ್ಮಿಸಿದ W2M ಉಪಗ್ರಹದಲ್ಲಿ ಅನಿರೀಕ್ಷಿತ ತೊಂದರೆಗಳು ಕಾಣಿಸಿಕೊಂಡಿದೆ.ಹದಿನೈದು ವರ್ಷ ಬಾಳಬೇಕಿದ್ದ ಉಪಗ್ರಹ ಒಂದು ತಿಂಗಳಲ್ಲೇ ವಿದ್ಯುತ್ ವೈಫಲ್ಯಕ್ಕೆ ತುತ್ತಾಗಿ,ಕೈಕೊಟ್ಟಿದೆ.ಈಗ ಯುಟೆಲ್ಸಾಟ್ ತನ್ನ ಸಂಪರ್ಕ ಅಗತ್ಯಗಳಿಗಾಗಿ ತನ್ನ ಹಳೆಯ ಉಪಗ್ರಹ W2ವನ್ನು ಅವಲಂಬಿಸಬೇಕಿದೆ.ಮುಂದಿನ ಉಪಗ್ರಹವನ್ನದು 2010ರ ವೇಳೆಗಷ್ಟೇ ಬಾಹ್ಯಾಕಾಶಕ್ಕೆ ಕಳುಹಿಸಲಿದೆ.ಈ ಉಪಗ್ರಹ ನಿರ್ಮಿಸಿ ಆರಂಭಿಕ ನಿಯಂತ್ರಣ ಸೇವೆ ನೀಡಿದ್ದಕ್ಕಾಗಿ ಇಸ್ರೋ ನೂರಾರುವತ್ತೈದು ಕೋಟಿ ರೂಪಾಯಿ ಪಡೆದಿತ್ತು.ಉಪಗ್ರಹ ನಿರ್ಮಿಸಿ ಕೊಡುವ ಗುತ್ತಿಗೆ ಪಡೆಯುವುದರ ಮೇಲೆ ಕಣ್ಣಿರಿಸಿದ್ದ ಇಸ್ರೋಗೆ ಇದು ಹಿನ್ನಡೆಯಾಗಿ ಕಾಡಲಿದೆ.
-----------------------------------------------------------------------
ಅಶೋಕ್‌ಕುಮಾರ್ ಎ
 
googledc7e93ba1a7703ae.html