Monday, March 30, 2009

ಕನ್ನಡಬ್ಲಾಗ್ಸ್ ಎಂಬ ಕನ್ನಡ ಬ್ಲಾಗಿಗರ ಸಮುದಾಯ

ಕನ್ನಡಬ್ಲಾಗ್ಸ್ ಎಂಬ ಕನ್ನಡ ಬ್ಲಾಗಿಗರ ಸಮುದಾಯ
ಕನ್ನಡದ ಹವ್ಯಾಸಿ ಮತ್ತು ಬರಹಗಾರರು ಅಂತರ್ಜಾಲದಲ್ಲಿ ಬ್ಲಾಗ್‌ಗಳನ್ನು ಬರೆಯುವುದರಲ್ಲಿ ಹಿಂದೆ ಬಿದ್ದಿಲ್ಲ. ಆದರೆ ಆ ಬಗ್ಗೆ ನಿಖರ ಮಾಹಿತಿಗಳು ಸಿಗವು. ಸಂಪದ.ನೆಟ್. ಕೆಂಡಸಂಪಿಗೆ.ಕಾಂ,ವಿಶ್ವಕನ್ನಡ.ಕಾಂ,ವೆಬ್‌ದುನಿಯ,ದಟ್ಸ್‌ಕನ್ನಡ,ಯಾಹೂಕನ್ನಡ ಹೀಗೆ ಕೆಲವು ತಾಣಗಳಲ್ಲಿ ಚದುರಿ ಹೋಗಿರುವ ಬರಹಗಾರರನ್ನು ಒಂದೆಡೆ ಸೇರಿಸಿ,ಬ್ಲಾಗಿಗರ ಸಮುದಾಯವಾಗಿಸುವ ಪ್ರಯತ್ನ ಈಗ ನಡೆದಿದೆ. ಮೇಫ್ಲವರ್ ಮೀಡಿಯಾ ಹೌಸ್ ಅವರ ಕನ್ನಡಬ್ಲಾಗರ್ಸ್ ತಾಣ http://kannadablogs.ning.com/ ಉತ್ತಮ ಪ್ರತಿಕ್ರಿಯೆ ಪಡೆದಿದ್ದು ಐನೂರಕ್ಕೂ ಮಿಕ್ಕಿ ಸದಸ್ಯರನ್ನು ನೋಂದಾಯಿಸಲು ಸಫಲವಾಗಿದೆ.ರಾಜ್ಯದ ವಿವಿಧೆಡೆ ನಡೆಯುವ ಕಾರ್ಯಕ್ರಮಗಳ ವಿವರಗಳು ಕೂಡಾ ಇಲ್ಲಿ ಲಭ್ಯ.

---------------------------------------------------------
ಬಿ ಎಸ್ ಎನ್ ಎಲ್‌ನ ನೆಟ್‌ಪಿಸಿ
ಕಂಪ್ಯೂಟರ್ ಇಲ್ಲದೆಯೇ ಬ್ರಾಡ್‌ಬ್ಯಾಂಡ್ ಬಳಸಲು ಅನುವು ಮಾಡುವ ವ್ಯವಸ್ಥೆಯ ಬಗ್ಗೆ ಭಾರತ್ ಸಂಚಾರ್ ನಿಗಮ ಗಮನ ಹರಿಸಿದೆ.ನೊವಾಟಿಯಮ್ ಸೊಲ್ಯೂಶನ್ಸ್ ಎನ್ನುವ ಕಂಪೆನಿ ಸುಮಾರು ಒದಗಿಸುವ ಮೋಡೆಮ್,ಕೀಲಿ ಮಣೆ,ಮೌಸ್ ಮತ್ತು ಇಂಟೆಲ್‌ನ ಆಟಮ್ ಎನ್ನುವ ಸಂಸ್ಕಾರಕ ಹೊಂದಿರುವ ಕಿಟ್‌ಗೆ ಮೂರು ಸಾವಿರ ತೆರಬೇಕಾಗುತ್ತದೆ. ಟಿವಿಯಿದ್ದರೆ,ಅದನ್ನೇ ತೆರೆಯಾಗಿ ಬಳಸಬಹುದು. ಟಿವಿ ಇಲ್ಲವಾದರೆ ಕಂಪ್ಯೂಟರ್ ಮಾನಿಟರ್ ಬೇಕು. ಈ ವ್ಯವಸ್ಥೆಯ ಮೂಲಕ ಅಂತರ್ಜಾಲ ಜಾಲಾಡಬಹುದು.ಅಂತರ್ಜಾಲದಲ್ಲಿ ಲಭ್ಯವಿರುವ ಗೂಗಲ್ ಡಾಕ್ಯುಮೆಂಟ್ ಅಂತಹ ಸೇವೆಯ ಮೂಲಕ ಪದಸಂಸ್ಕರಣ ಇತ್ಯಾದಿ ಕೆಲಸಗಳನ್ನೂ ಮಾಡಬಹುದು.ಸದ್ಯ ಈ ಸೇವೆ ಮಧುರೆಯಲ್ಲಿ ಜಾರಿಗೆ ಬಂದಿದೆ.ಮಾಸಿಕ ಚಂದಾದಾರ ಇನ್ನೂರೆಪ್ಪತ್ತೈದು ರುಪಾಯಿಗಳ ಬ್ರಾಡ್‌ಬ್ಯಾಂಡ್ ಶುಲ್ಕವನ್ನೂ ಪಾವತಿಸಬೇಕಾಗುತ್ತದೆ.
-----------------------------------------------------------------------------
ಬರಲಿದೆ ಮಿದುಳಿನ ಡಿಎನ್‍ಎ ನಕ್ಷೆ!
ಮಾನವ ಮಿದುಳನ್ನು ಎಡಭಾಗ,ಬಲಭಾಗ ಹೀಗೆ ವಿವಿಧ ಭಾಗಗಳಾಗಿ ಅಭ್ಯಾಸ ಮಾಡುವುದು ಸಾಮಾನ್ಯ. ಮಿದುಳಿನ ಪ್ರತಿ ಜೀವಕೋಶದಲ್ಲಿರುವ ಡಿಎನ್‌ಎ ಯಾವ ಬಗೆಯದು ಎನ್ನುವ ನಕ್ಷೆ ತಯಾರಿಸುವ ದೊಡ್ದ ಯೋಜನೆಯು ಅಮೆರಿಕಾದ ಸೀಟಲ್‌ನ ಅಲೆನ್ ಇನ್‌ಸ್ಟಿಟ್ಯೂಟ್ ಆಫ್ ಬ್ರೈನ್ ಸಯನ್ಸ್‌ನಲ್ಲಿ ಪ್ರಗತಿಯಲ್ಲಿದೆ. ಇದಕ್ಕಾಗಿ ರೊಬೋಟ್ ವ್ಯವಸ್ಥೆಯನ್ನೊಳಗೊಂಡ ದೊಡ್ಡ ವ್ಯವಸ್ಥೆಯನ್ನಿಲ್ಲಿ ಅಳವಡಿಸಲಾಗಿದೆ. ಮನುಷ್ಯ ದೇಹದಿಂದ ತೆಗೆದ ಮಿದುಳನ್ನು ಅಭ್ಯಸಿಸಲು,ಅದನ್ನು ಚಿಕ್ಕ ಚಿಕ್ಕ ಚೂರುಗಳಾಗಿಸಿ,ಹೋಳುಗಳನ್ನು ರೊಬೋಟ್ ಮೂಲಕ ಮೈಕ್ರಾನ್ ಗಾತ್ರದ ಚಿಪ್ಸ್‌ಗಳಾಗಿಸಬೇಕು.ನಂತರ ಅವುಗಳನ್ನು ಸೂಕ್ಷ್ಮದರ್ಶಕದಡಿಯಲ್ಲಿ ನೋಡಲು ಅನುವಾಗುವಂತೆ ಗಾಜಿನ ತುಂಡುಗಳ ನಡುವೆ ಇಡಬೇಕಾಗುತ್ತದೆ.ರಾಸಾಯಿನಿಕಗಳನ್ನು ಹಾಕಿ,ಚಿತ್ರ ಹಿಡಿದು, ಇವುಗಳಲ್ಲಿರುವ ಡಿಎನ್‌ಎ ಯಾವುದು ಎನ್ನುವುದನ್ನು ಪತ್ತೆ ಹಚ್ಚಬೇಕಾಗುತ್ತದೆ.ಹೀಗೆ ಪ್ರತಿ ಕೋಶದಲ್ಲಿರುವ ಡಿ ಎನ್ ಎ ಯಾವುದೆಂದು ತಿಳಿದರೆ, ಯಾವ ಡಿಎನ್‌ಎ ಯಾವ ಕೆಲಸ ಮಾಡುತ್ತದೆ ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬಹುದು.ಆದರೆ ಒಬ್ಬನ ಮಿದುಳು ಇನ್ನೊಬ್ಬನ ಮಿದುಳಿಗೆ ಹೋಲದಿರಬಹುದು. ಹಾಗಾಗಿ ಒಂದು ಮಿದುಳಿನ ಡಿಎನ್‌ಎ ನಕ್ಷೆಯಿಂದ ಅಂತಿಮ ತೀರ್ಪು ನೀಡಲಸಾಧ್ಯ ಎನ್ನುವ ಅರಿವು ಸಂಶೋಧಕರಿಗಿದೆ. ಅತ್ಯಾಧುನಿಕ ವ್ಯವಸ್ಥೆಗಳಿದ್ದರೂ, ಈ ಸಂಶೋಧನೆಯ ಫಲಿತಾಂಶಕ್ಕಾಗಿ ಇನ್ನೂ ಮೂರು ವರ್ಷ ಕಾಯಬೇಕಾದೀತು.
-------------------------------------------------------------------------
ಭಗವದ್ಗೀತೆ ವ್ಯಾಖ್ಯಾನ ಉಚಿತ ಡೌನ್‌ಲೋಡ್‌ಗೆ ಲಭ್ಯ
ಮಹಾತ್ಮಾಗಾಂಧಿಯವರು ವ್ಯಾಖ್ಯಾನಿಸಿದ ಭಗವದ್ಗೀತೆಯ ಆಡಿಯೋ ಮುದ್ರಿಕೆಯು ಮಾರ್ಚ್ ಮೂವತ್ತೊಂದರವರೆಗೆ ಉಚಿತವಾಗಿ ಲಭ್ಯವಿದೆ. ಅಂತರ್ಜಾಲದ learnoutloud.com ತಾಣದಿಂದ ಇದರ ಕಡತ ಇಳಿಸಿಕೊಳ್ಳಬಹುದು.ಪ್ರವಚನ ಇಂಗ್ಲಿಷ್ ಭಾಷೆಯದ್ದು. ಮೂರುಗಂಟೆಗೂ ಹೆಚ್ಚು ಹೊತ್ತಿನ ಮುದ್ರಿಕೆ ಇಲ್ಲಿದೆ.
-------------------------------------------------------
"ಯಕ್ಷಪ್ರಶ್ನೆ"ಯಲ್ಲಿ ರಸಪ್ರಶ್ನೆ
ದೂರದರ್ಶನದ ಚಂದನ ಚಾನೆಲ್ ಪ್ರಸಾರ ಮಾಡುವ ರಸಪ್ರಶ್ನೆ ಕಾರ್ಯಕ್ರಮ ಜನಪ್ರಿಯ ಕಾರ್ಯಕ್ರಮಗಳಲ್ಲೊಂದು. ಅದೀಗ ಒಂದುಸಾವಿರದಿನ್ನೂರು ಕಂತುಗಳನ್ನು ಮುಗಿಸಿ ಮುನ್ನಡೆಯುತ್ತಿದೆ. ಕಾರ್ಯಕ್ರಮ ನಿರ್ವಹಿಸುವ ಡಾ.ನಾ.ಸೋಮೇಶ್ವರ ಅವರಿಗೆ ಕಾರ್ಯಕ್ರಮವನ್ನು ನೇರವಾಗಿ ನೋಡದವರಿಗೂ ಮತ್ತು ಆಸಕ್ತರಿಗೂ ಇದರ ಪ್ರಶ್ನೆಗಳನ್ನು ಮುಟ್ಟಿಸಬೇಕೆನ್ನುವ ಬಯಕೆ. ಕಾರ್ಯಕ್ರಮದಲ್ಲಿ ಭಾಗವಹಿಸುವವರು ಕೇವಲ ಮೂರು ಜನರಾದರೆ,ಇತರರೂ ಭಾಗವಹಿಸಲು ಅವಕಾಶ ಸಿಗಬೇಕೆಂಬ ಹಂಬಲವೂ ಇತ್ತು.ಅದಕ್ಕಾಗಿ ಅವರು ಅಂತರ್ಜಾಲ ತಾಣ ಯಕ್ಷಪ್ರಶ್ನೆಯನ್ನು http://chiyabgs.typepad.com/yakshaprashne/ ಆರಂಭಿಸಿದ್ದಾರೆ. ಇದರ ಮೂಲಕ ನೋಂದಾಯಿಸಿಕೊಂಡರೆ ರಸಪ್ರಶ್ನೆಗಳು ರವಾನೆಯಾಗುತ್ತವೆ. ಸಂಪೂರ್ಣ ಸರಿಯುತ್ತರ ನೀಡಿದರೆ ಪ್ರಮಾಣಪತ್ರವೂ ಸಿಗಲಿದೆಯಂತೆ.ಧರ್ಮರಾಯನಿಗೆ ಯಮಧರ್ಮ ಪ್ರಶ್ನೆಗಳನ್ನು ಕೇಳಿದುದೇ ರಸಪ್ರಶ್ನೆಗಳ ಉಗಮವೆಂಬ ಅನಿಸಿಕೆಯೇ ಯಕ್ಷಪ್ರಶ್ನೆ ಎಂಬ ಹೆಸರಿನ ಆಯ್ಕೆಗೆ ಕಾರಣ.
--------------------------------------------------------------------
Udayavani
*ಅಶೋಕ್‌ಕುಮಾರ್ ಎ

Monday, March 23, 2009

ಇರಾನ್ ಜತೆ ಮೈತ್ರಿಗೆ ಯುಟ್ಯೂಬ್ ಬಳಸುತ್ತಿರುವ ಒಬಾಮಾ!

ಇರಾನ್ ಜತೆ ಮೈತ್ರಿಗೆ ಯುಟ್ಯೂಬ್ ಬಳಸುತ್ತಿರುವ ಒಬಾಮಾ!
ಅಮೆರಿಕನ್ ಅಧ್ಯಕ್ಷ ಅಂತರ್ಜಾಲವನ್ನು ಸಮರ್ಥವಾಗಿ ಬಳಸುವಲ್ಲಿ ಹೆಸರು ಮಾಡಿದ್ದಾರೆ. ಈಗ ತಮ್ಮ ಇರಾನ್-ಅಮೆರಿಕನ್ ಸಂಬಂಧ ಸುಧಾರಣೆಯ ಮಹತ್ವಾಕಾಂಕ್ಷೆಯ ಯೋಜನೆಗೂ ಯುಟ್ಯೂಬ್ ವಿಡಿಯೋ ಸೇವೆಯನ್ನು ಬಳಸುತ್ತಿದ್ದಾರೆ. ಇರಾನ್ ಜತೆ ಅಮೆರಿಕ ಮೈತ್ರಿ ಬಯಸುತ್ತಿದೆ ಎನ್ನುವುದನ್ನು ಮನಗಾಣಿಸಲು,ಒಬಾಮ ಇರಾನ್ ಜನತೆಗೆ ಮೈತ್ರಿ ಸಂದೇಶವನ್ನು ವಿಡಿಯೋ ರೆಕಾರ್ಡ್ ಮಾಡಿ ಯುಟ್ಯೂಬ್ ತಾಣದಲ್ಲಿ ಹಾಕಿದ್ದಾರೆ.ಜನಪ್ರಿಯ ತಾಣವಾಗಿರುವ ಯುಟ್ಯೂಬಿನಲ್ಲಿ ಮೊದಲ ಕೆಲವೇ ಗಂಟೆಗಳಲ್ಲಿ ಈ ವಿಡಿಯೋ ತುಣುಕನ್ನು ಹದಿನೈದು ಸಾವಿರ ಸಲ ವೀಕ್ಷಿಸಲಾಗಿದೆ. ಟಿವಿಯಲ್ಲಿಯೂ ಇಂತಹ ತುಣುಕನ್ನು ಪ್ರದರ್ಶಿಸ ಬಹುದಾದರೂ, ಪ್ರಸಾರದ ಸಮಯ ಮಿತಿಯಿಂದಾಗಿ ಚಾನೆಲ್‌ಗಳು ಕತ್ತರಿ ಪ್ರಯೋಗ ಮಾಡಿ ಪ್ರದರ್ಶಿಸಿ,ಸಂದೇಶ ಕುಲಗೆಡುವ ಅಪಾಯ ಇದೆ. ಯುಟ್ಯೂಬಿನಲ್ಲಿ ಅಂತಹ ಅಪಾಯ ಇಲ್ಲ ಎನ್ನುವುದು ಬಹಳ ಅನುಕೂಲ.
---------------------------------------------------
ವಿದ್ಯಾರ್ಥಿ ನಿರ್ಮಿತ ಅಣುಸ್ಯಾಟ್ ಉಪಗ್ರಹ ಗಗನಕ್ಕೆ
ಏಪಿಜೆ ಅಬ್ದುಲ್ ಕಲಾಂ ಅವರು ಕಲಿತ ಕಾಲೇಜಿನ ವಿದ್ಯಾರ್ಥಿಗಳು ನಿರ್ಮಿಸಿದ ಮೈಕ್ರೋಉಪಗ್ರಹ ಎಪ್ರಿಲ್ ಮೊದಲ ವಾರ ಉಡಾವಣೆಯಾಗುವ ನಿರೀಕ್ಷೆಯಿದೆ. ಇಸ್ರೋ ಜತೆ ಕೈಗೂಡಿಸಿ,ಕೆಲಸ ಮಾಡಿ,ಮದ್ರಾಸ್ ತಾಂತ್ರಿಕ ಮಹಾವಿದ್ಯಾಲಯದ ಮೂವತ್ತೇಳು ಏರೋಸ್ಪೇಸ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು ತಮ್ಮ ಹತ್ತು ಶಿಕ್ಷಕರುಗಳ ಜತೆಗೂಡಿ ನಿರ್ಮಿಸಿದ ಉಪಗ್ರಹ ಇದಾಗಿದೆ.ಆರುನೂರರಿಂದ ಎಂಟುನೂರು ಕಿಲೋಮೀಟರ್ ಎತ್ತರದ ಕಕ್ಷೆಯಲ್ಲಿ ಭೂಮಿಯನ್ನು ಈ ಮೈಕ್ರೋಉಪಗ್ರಹ ಸುತ್ತಲಿದೆ.ಭಾರತದ ಬಾಹ್ಯಾಕಾಶ ಯೋಜನೆಗಳಿಗೆ ಅಗತ್ಯವಾದ ಪ್ರತಿಭೆಯನ್ನು ಹುಟ್ಟು ಹಾಕುವುದು ಈ ಉಪಗ್ರಹ ನಿರ್ಮಾಣ ಯೋಜನೆಯ ಗುರಿ.
-----------------------------------------------------------
ಮಂತ್ರ ಪಠಿಸುವ ವೆಬ್‌ಸೈಟ್!
ನಿಮ್ಮ ಪ್ರಾರ್ಥನೆಯನ್ನು ಪಠಿಸುವ ಸೇವೆ ನೀಡುವ Informationageprayer.com ತಾಣದಲ್ಲಿ ಸಿಗುತ್ತದೆ.ಇದಕ್ಕೆ ನಿಗದಿತ ದರ ತೆರಬೇಕಾಗುತ್ತದೆ.ವಿವಿಧ ಧಾರ್ಮಿಕ ಸಂಪ್ರದಾಯಗಳ ಪ್ರಕಾರ ಪ್ರಾರ್ಥನೆ ಸಲ್ಲಿಸುವ ಸೇವೆಯ ಆಯ್ಕೆ ಇಲ್ಲಿದೆ.ಸದ್ಯ ನಿಗದಿತ ನಮೂನೆಯ ಪ್ರಾರ್ಥನೆಯನ್ನು ಮಾತ್ರ ಸಲ್ಲಿಸಲು ಅವಕಾಶ ಇದೆಯಾದರೂ,ಮುಂದೆ ನೀವು ಕೇಳಿದ ನಮೂನೆಯ ಪ್ರಾರ್ಥನೆಯನ್ನು ಸಲ್ಲಿಸುವ ಆಯ್ಕೆ ಲಭ್ಯವಾಗಲಿದೆಯಂತೆ.ಪ್ರಾರ್ಥನೆ ಸಲ್ಲಿಸಿದವರ ಹೆಸರಿನ ಜತೆ ಪ್ರಾರ್ಥನೆ ಸಲ್ಲಿಸುವುದು ಇಲ್ಲಿನ ವೈಶಿಷ್ಟ್ಯ.
-------------------------------------------------------------------------
ಜಿಮೇಲಿನಲ್ಲಿ ಮಿಂಚಂಚೆ ರದ್ದು ಮಾಡುವ ಸೌಲಭ್ಯ
ಮಿಂಚಂಚೆ ಕಳುಹಿಸಿದೊಡನೆ,ಅದರಲ್ಲಿ ಏನೋ ತಪ್ಪಾಗಿದೆ,ಮಿಂಚಂಚೆ ಕಳುಹಿಸ ಬಾರದಿತ್ತು ಅನಿಸುವುದಿದೆ.ಹಾಗನಿಸಿದಾಗ,ಕಳುಹಿಸಿದ ಮಿಂಚಂಚೆಯನ್ನು ರದ್ದು ಪಡಿಸುವ ಸೌಲಭ್ಯ ಈಗ ಲಭ್ಯವಿದೆ.ಈ ಹೊಸ ಪ್ರಯೋಗಾತ್ಮಕ ಸೌಲಭ್ಯ ಬೇಕಿದ್ದರೆ,ಗೂಗಲ್ ಲ್ಯಾಬಿನ ಸೌಕರ್ಯಗಳ ಪೈಕಿ, ಈ ಸೌಕರ್ಯವನ್ನು ಆಯ್ದು ಕೊಳ್ಳಬೇಕು.ಮಿಂಚಂಚೆ ಕಳುಹಿಸಿದೊಡನೆ,ಮಿಂಚಂಚೆ ರದ್ದು ಮಾಡು ಎನ್ನುವ ಆಯ್ಕೆಯೂ ಕಾಣಿಸಿಕೊಳ್ಳುತ್ತದೆ. ಒಡನೆಯೇ ಅದನ್ನು ಅದುಮಿದರೆ,ಮಿಂಚಂಚೆ ರದ್ದಾದರೂ ಆಗಬಹುದು. ಅದುಮುವುದು ತುಸು ತಡವಾದರೂ,ಅದು ಬಟವಾಡೆಯಾದೀತು.ನಂತರ ಮಿಂಚಂಚೆ ರದ್ದು ಮಾಡಲು ಅಸಾಧ್ಯ. ನಿಧಾನ ಗತಿಯ ಜಾಲವಿದ್ದರೆ,ಇದರ ಪ್ರಯೋಜನ ಸಿಗುವ ಸಾಧ್ಯತೆ ಹೆಚ್ಚು.
--------------------------------------------
ಜನಪ್ರಿಯ ಪಾಸ್‌ವರ್ಡ್ ಯಾವುದು?
ಈಗ ಅಂತರ್ಜಾಲದ ಖಾತೆಗಳ ಬಳಕೆ ಹೆಚ್ಚುತ್ತಿದೆ. ಪ್ರತಿ ಖಾತೆಯನ್ನು ನೋಂದಾಯಿಸುವಾಗ,ಗುಪ್ತಪದವನ್ನು ನೀಡಿ, ಖಾತೆಯ ಬಳಕೆಯನ್ನು ಸುಭದ್ರಗೊಳಿಸುವ ಪ್ರಯತ್ನ ನಡೆಯುತ್ತದೆ. ಆದರೆ ಬಳಕೆದಾರರಿಗೆ ಈ ಗುಪ್ತಪದಗಳನ್ನು ನೆನಪಿಡುವುದೇ ತಲೆನೋವಿನ ಕೆಲಸ.ಅದಕ್ಕಾಗಿ ಹೆಚ್ಚಿನ ಬಳಕೆದಾರರು ಸುಲಭವಾಗಿ ನೆನಪಿಡುವ ಗುಪ್ತಪದಗಳನ್ನು ನೀಡುವುದೇ ಹೆಚ್ಚು.whatismypass.com ನಡೆಸಿದ ಸಮೀಕ್ಷೆಯ ಪ್ರಕಾರ,123456 ಅತ್ಯಂತ ಹೆಚ್ಚು ಬಳಕೆಯಾಗುವ ಗುಪ್ತಪದ.ನಂತರದ ಸ್ಥಾನದಲ್ಲಿ ಪಾಸ್‌ವರ್ಡ್ ಎನ್ನುವ ಪದವೇ ಬಳಕೆಯಾಗುತ್ತದಂತೆ. ಜನರು ತಮ್ಮ ಹೆಸರನ್ನೇ ಗುಪ್ತಪದವಾಗಿ ಬಳಸುವ ಚಾಳಿಯೂ ಇದೆಯೆನ್ನುವುದು ಸಮೀಕ್ಷೆಯಿಂದ ವ್ಯಕ್ತವಾಗಿದೆ.
--------------------------------------------
ಟ್ವಿಟರ್‌ನಲ್ಲಿ ಬಿಜೆಪಿ,ಕೃಷ್ಣ
ಟ್ವಿಟರಿನಲ್ಲಿ ಖಾತೆ ಹೊಂದಿ, ತಮ್ಮ ಚುನಾವಣಾ ಪ್ರಚಾರದಲ್ಲಿ ಲಾಭ ಪಡೆಯುವುದು ಸುಲಭವೆಂದು ಅಮೆರಿಕನ್ ಅಧ್ಯಕ್ಷೀಯ ಚುನಾವಣೆ ವೇಳೆ ಗೊತ್ತಾಯಿತು.ಬರಾಕ್ ಒಬಾಮಾ ಅವರಿಗೆ ಲಕ್ಷಗಟ್ಟಲೆ ಅಭಿಮಾನಿ ಹಿಂಬಾಲಕರಿದ್ದರು.ಇದರಿಂದ ಅವರು ನೀಡುವ ಟ್ವಿಟ್‌ಗಳು ಕ್ಷಣಮಾತ್ರದಲ್ಲಿ ಹಿಂಬಾಲಕರಿಗೆ ತಲುಪುತ್ತಿದ್ದುವು.ಮೊಬೈಲ್ ಸಾಧನದ ಮೂಲಕವೂ ಟ್ವಿಟರ್ ಸಂದೇಶಗಳನ್ನು ಸಾಧ್ಯವೆನ್ನುವುದು,ಇದರ ಜನಪ್ರಿಯತೆಗೆ ಮತ್ತೊಂದು ಕಾರಣ.ಭಾರತದ ಸಂಸತ್ತಿನ ಮಹಾಚುನಾವಣೆಯಲ್ಲೂ ಈ ಪ್ರಯೋಗ ಮರುಕಳಿಸುವ ಲಕ್ಷಣ ಕಾಣುತ್ತಿದೆ.ಬಿಜೆಪಿ ಪಕ್ಷದ(http://twitter.com/bjp_) ಟ್ವಿಟರ್ ಖಾತೆಯೀಗ ಟ್ವಿಟರಿನಲ್ಲಿ ತೆರೆದಿದೆ.ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ(http://twitter.com/SMKrishnaCong) ಅವರ ಹೆಸರು ಹೊತ್ತ ಟ್ವಿಟರ್ ಖಾತೆಯೂ ಚಲಾವಣೆಯಲ್ಲಿದೆ.ಅಂದ ಹಾಗೆ ಟ್ವಿಟರ್ ಈಗ ಮೂರು ವರ್ಷ ಕಳೆದು ನಾಲ್ಕನೇ ವರ್ಷಕ್ಕೆ ಕಾಲಿರಿಸಿದೆ.
udayavani
-------------------------------------------------------
*ಅಶೋಕ್‌ಕುಮಾರ್ ಎ

Monday, March 16, 2009

ಅಂತರ್ಜಾಲ ಅಥವಾ ಅಂತರಜಾಲ?


ಅಂತರ್ಜಾಲ ಅಥವಾ ಅಂತರಜಾಲ?
internet ಎನ್ನುವ ಪದಕ್ಕೆ ನಾವು ಕನ್ನಡದಲ್ಲಿ ಅಂತರ್ಜಾಲ ಎಂದು ಪ್ರಯೋಗಿಸುವುದು ಸರಿಯೇ? ಈ ಪ್ರಶ್ನೆ ಎತ್ತಿದವರು ತಂತ್ರಾಂಶ ಪ್ರವೀಣ ಟಿ ಜಿ ಶ್ರ್‍ಈನಿಧಿ.intercity, inter caste ಇಲ್ಲೆಲ್ಲಾ, inter ಎನ್ನುವುದಕ್ಕೆ ಅಂತರ ಎನ್ನುವ ಪದ ಬಳಕೆಯಾಗಿ ಅಂತರ ಕಾಲೇಜು, ಅಂತರಜಾತಿ ಪದಗಳ ಬಳಕೆಯಾಗುತ್ತಿದೆ. internet ಎನ್ನುವುದು ಕಂಪ್ಯೂಟರ್ ಜಾಲಗಳ ನಡುವಣ ಜಾಲ. ಹಾಗಾಗಿ ಇದು ಅಂತರಜಾಲ-ಅಂತರ್ಜಾಲ ಅಲ್ಲ ಎನ್ನುವುದು ಅವರ ವಾದ. ಇನೋರ್ವ ತಂತ್ರಜ್ಞ ಡಾ.ಪವನಜ ಇವರ ವಾದಕ್ಕೆ ಧ್ವನಿಗೂಡಿಸಿ, ಅಂತರಜಾಲ ಸರಿಯಾದ ಬಳಕೆ,ವೆಬ್‌ಸೈಟಿಗೆ ಅಂತರಜಾಲ ತಾಣ ಅಥವ ಸಂಕ್ಷಿಪ್ತವಾಗಿ ಜಾಲತಾಣ ಎಂದು ಪ್ರತಿಕ್ರಿಯಿಸಿದ್ದಾರೆ.ಅಂತರ್ಜಾಲ ಪದ ವ್ಯಾಪಕವಾಗಿ ಬಳಕೆಯಾಗುತ್ತಿರುವಾಗ, ಈಗ ಪದದಲ್ಲಿ ಬದಲಾವಣೆ ಮಾಡುವುದು ಉಚಿತವೇ ನೀವೇನು ಹೇಳುತ್ತೀರಿ?http://e-jnana.blogspot.com ಶ್ರೀನಿಧಿಯವರ ಬ್ಲಾಗು- ಈಗ ಅದು ಮೂರನೇಯ ವರ್ಷ ದಾಟಿದೆ.
-------------------------------------------------------------
ಮುಕ್ತ ತಂತ್ರಾಂಶಕ್ಕೆ ಬೆಂಬಲಿಸಲಿರುವ ಬಿಜೆಪಿ
ಬಿಜೆಪಿಯು ಮಾಹಿತಿ ತಂತ್ರಜ್ಞಾನದ ಬಗೆಗಿನ ತನ್ನ ದೃಷ್ಟಿಕೋನವನ್ನು ಸ್ಪಷ್ಟಪಡಿಸಲು ನಲುವತ್ತು ಪುಟಗಳ ಪುಸ್ತಿಕೆಯನ್ನು ಪ್ರಕಟಿಸಿದೆ.ಪಕ್ಷವು ತಾನು ಮುಕ್ತ ತಂತ್ರಾಂಶದ ಪರವಾಗಿರುವುದರ ಸೂಚನೆ ನೀಡಿದೆ.ಕಂಪೆನಿಗಳು ಅಭಿವೃದ್ಧಿ ಪಡಿಸಿದ ತಂತ್ರಾಂಶಗಳನ್ನು ಬಳಸುವುದು ಹೆಚ್ಚಿನ ವೆಚ್ಚ ಮತ್ತು ಕಂಪೆನಿಗಳ ಮೇಲೆ ಅಧಿಕ ಅವಲಂಬನೆಯನ್ನು ಉಂಟು ಮಾಡುತ್ತದಾದ್ದರಿಂದ ಇದು ಸ್ವಾಗತಾರ್ಹ ನಿಲುವೇ ಆಗಿದೆ. ಕರ್ನಾಟಕ ಸರಕಾರವು ಸರಕಾರದ ಗಣಕೀಕರಣ ಕಾರ್ಯದಲ್ಲಿ ಮೈಕ್ರೋಸಾಫ್ಟ್ ಕಂಪೆನಿಯ ಜತೆ ಒಪ್ಪಂದ ಮಾಡಿ ಟೀಕೆಗೊಳಗಾಗಿತ್ತು.ಚುನಾವಣೆಯಲ್ಲಿ ಹೊಸ ಮಾಧ್ಯಮವನ್ನು ಸಮರ್ಥವಾಗಿ ಬಲಸ್ಲು ಅನುವು ಮಾಡುವಂತೆ,ಬಿಜೆಪಿಯ ಅಂತರ್ಜಾಲ ಜಾಲತಾಣವನ್ನೂ ನವೀಕರಿಸಲಾಗಿದೆ.
----------------------------------------------------------------
ಗೂಗಲ್ ನೋಟಿಸ್ ಬೋರ್ಡ್
ಗೂಗಲ್ ತನ್ನ ಹೊಸ ಸೇವೆಯಲ್ಲಿ "ಸೂಚನಾ ಫಲಕ"ವನ್ನು ಆರಂಭಿಸಿದೆ.ಇದನ್ನು ಬಳಸಲು ತಂತ್ರಾಂಶವನ್ನು ಇಳಿಸಿಕೊಂಡು ಫೈರ್‌ಪಾಕ್ಸ್ ಬ್ರೌಸರಿನಲ್ಲಿ ಅಳವಡಿಸಿಕೊಳ್ಳಬೇಕಾಗುತ್ತದೆ. ಅಂತರ್ಜಾಲದ ಸಮುದಾಯಗಳಿಗೆ ಈ ಸೂಚನಾ ಫಲಕಗಳು ಹೆಚ್ಚು ಪ್ರಯೋಜನಕಾರಿ ಆಗಬಲ್ಲುವು.ಇದರಲ್ಲಿ ಸದಸ್ಯರು ನೋಟಿಸ್ ಬೋರ್ಡಿನಲ್ಲಿ ಸಂದೇಶಗಳನ್ನು ಪ್ರಕಟಿಸಲು ಬರುತ್ತದೆ. ಲಿಪಿ,ಧ್ವನಿ,ಚಿತ್ರ ಇವನ್ನು ಬಳಸಿ ಸಂದೇಶ ಪ್ರಕಟಿಸಬಹುದು.ಅಂತರ್ಜಾಲ ಸಂಪರ್ಕವು ಸತತವಾಗಿ ಲಭ್ಯವಿರದಿದ್ದರೂ ಸೂಚನಾಫಲಕವನ್ನು ಬಳಸಲಾಗುವಂತೆ ಇದು ಕೆಲಸ ಮಾಡುತ್ತದೆ.ಸಂಪರ್ಕ ಇದ್ದಾಗ ಇಳಿಸಿಕೊಂಡ ಸಂದೇಶಗಳು ಸೂಚನಾ ಫಲಕದಲ್ಲಿ ಉಳಿದು,ಸಂಪರ್ಕ ಮತ್ತೆ ಬಂದಾಗ ಉಳಿದ ಭಾಗಗಳನ್ನು ಇಳಿಸಿಕೊಳ್ಳುವ ಹಾಗೆ ತಂತ್ರಾಂಶ ಅಭಿವೃದ್ಧಿ ಪಡಿಸಲಾಗಿದೆ.ಮಾರಾಟ ಖರೀದಿ ಸೂಚನೆಗಳಿಗೂ ಇದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು.
-------------------------------------------------------------
ನಿಮ್ಮ ಆಸಕ್ತಿ ನೋಡಿ ಜಾಹೀರಾತು!
ಅಂತರ್ಜಾಲ ಪುಟಗಳಲ್ಲಿ ಬರುವ ಜಾಹೀರಾತು,ನಿಮ್ಮ ಆಸಕ್ತಿಯನ್ನು ಕೆರಳಿಸುವಂತಿರದಿದ್ದರೆ,ನೀವದನ್ನು ಕ್ಲಿಕ್ಕಿಸುವ ಗೋಜಿಗೇ ಹೋಗುವುದಿಲ್ಲ. ಇದರಿಂದ ಜಾಹೀರಾತುದಾರರಿಗೆ ತಾವು ಮಾಡಿದ ಖರ್ಚಿಗೆ ಪ್ರತಿಫಲ ಸಿಗದು.ಇದನ್ನು ತಪ್ಪಿಸಲು ಗೂಗಲ್ ಹೊಸ ನಮೂನೆ ಜಾಹೀರಾತು ಪ್ರಕಟಿಸಲು ಯೋಜಿಸಿದೆ.ಇದರ ಪ್ರಕಾರ ಬಳಕೆದಾರನು ಯಾವ ನಮೂನೆಯ ಅಂತರ್ಜಾಲ ತಾಣಗಳಿಗೆ ಭೇಟಿ ನೀಡುತ್ತಾನೆ ಎನ್ನುವುದನ್ನು ನೋಡಿಕೊಂಡು,ಆತನ ಅಸಕ್ತಿಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜಾಹೀರಾತು ಪ್ರಕಟಿಸಿ, ಜಾಹೀರಾತು ಆತನ ಗಮನ ಸೆಳೆಯುವಂತೆ ಮಾಡುವುದು ಗೂಗಲ್ ಉಪಾಯ.ಈ ನಮೂನೆ ಬಳಕೆದಾರನ ಆಸಕ್ತಿಯ ಮೇಲೆ ಗೂಢಚರ್ಯೆ ಮಾಡುವುದು ಆತನ ಖಾಸಗೀತನದ ವಿರುದ್ಧ ಎನಿಸಲೂ ಬಹುದು. ಅದಕ್ಕಾಗಿ ಗೂಗಲ್, ಬಳಕೆದಾರ ಬಯಸಿದರೆ ಮಾತ್ರ ಈ ನಮೂನೆ ಜಾಹೀರಾತು ಲಭ್ಯವಾಗಿಸುತ್ತದೆ. ಬಳಕೆದಾರ ಬೇಕಾದರೆ, ಈ ಸೇವೆ ಪಡೆದು ಬೇಡವಾದಾಗ ಬಂದ್ ಮಾಡಲೂ ಬಹುದು.
-----------------------------------------------------------
ಡಬ್ಲ್ಯೂಡಬ್ಲ್ಯೂಡಬ್ಲ್ಯೂಗೀಗ ಇಪ್ಪತ್ತು ವರ್ಷ
ಜಗದಗಲ ಹಬ್ಬಿದ ಕಂಪ್ಯೂಟರ್ ಜಾಲವೀಗ ಎರಡು ದಶಕಗಳಷ್ಟು ಹಳೆಯದು. ಯುರೋಪಿನ ಕೆಲವು ಕಣ ಭೌತಶಾಸ್ತ್ರ ಪ್ರಯೋಗಾಲಯಗಳನ್ನು ಬೆಸೆಯಲು, ಆ ಮೂಲಕ ವಿಜ್ಞಾನಿಗಳ ನಡುವೆ ಸಂಪರ್ಕ ಏರ್ಪಡಿಸಲೋಸುಗ ಜಾಲವನ್ನು ರಚಿಸಲಾಯಿತು. ಟಿಮ್ ಬರ್ನಸ್ ಲೀ ಮತ್ತವರ ಸಹೋದ್ಯೋಗಿ ರಾಬರ್ಟ್ ಅವರು ತಮ್ಮ ಯೋಜನೆಯನ್ನು ನನಸಾಗಿಸಲು ಎಚ್ ಟಿ ಎಂ ಎಲ್ ಭಾಷೆಯನ್ನು ಅಭಿವೃದ್ಧಿ ಪಡಿಸಿದರು.ಮೊದಲ ಬ್ರೌಸರ್ ತಂತ್ರಾಂಶವೂ ತೊಂಬತ್ತರ ದಶಕದಲ್ಲಿ ಬಂತು. ಟಿಮ್ ಬಾರ್ನಸ್ ಲೀ ಪ್ರಕಾರ ಇನ್ನು ಮುಂದೆ ಅಂತರ್ಜಾಲವನ್ನು ಜನರು ಮೊಬೈಲ್ ಸಾಧನದ ಮೂಲಕವೆ ಹೆಚ್ಚಾಗಿ ಜಾಲಾಡುವುದು ಖಂಡಿತ.ಜನರ ಆಸಕ್ತಿಯ ಮೇಲೆ ಕಣ್ಣಿಟ್ಟು,ಅದರಿಂದ ಲಾಭ ಪಡೆಯುವ ಪ್ರವೃತ್ತಿಯ ಬಗ್ಗೆ ಜನರು ಎಚ್ಚರಿಕೆಯಿಂದಿರುವ ಅಗತ್ಯದ ಬಗ್ಗೆ ಬರ್ನಸ್ ಲೀ ಜನರ ಗಮನ ಸೆಳೆದಿದ್ದಾರೆ.
*ಅಶೋಕ್‌ಕುಮಾರ್ ಎ

Monday, March 09, 2009

ಕೇರಳದ ಸಂಸ್ಕೃತ ಶಾಲೆಯ ಕನ್ನಡ ಇ-ಪತ್ರಿಕೆ!

ನೈತಿಕ ಹ್ಯಾಕರುಗಳ ಸ್ಪರ್ಧೆಗೆ ನಿಟ್ಟೆಯಲ್ಲಿ ತರಬೇತಿ

ವಿಎಂವೇರ್ ಮತ್ತು ಕಂಪ್ಯೂಟರ್ ಸೊಸೈಟಿ ಆಫ್ ಇಂಡಿಯಾದವರ ಆಶ್ರಯದಲ್ಲಿ ರಾಜ್ಯಮಟ್ಟದ ನೈತಿಕ ಹ್ಯಾಕರುಗಳ ಸ್ಪರ್ಧೆ ನಡೆಯಲಿದ್ದು,ಅದಕ್ಕೆ ತರಬೇತಿಯು ನಿಟ್ಟೆಯ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಏರ್ಪಡಿಸಲಾಗಿದೆ. ಮಾರ್ಚ್ ಒಂಭತ್ತರ ಸೋಮವಾರ ಒಂದು ದಿನದ ತರಬೇತಿ ನಡೆಯಲಿದ್ದು, ಕಂಪ್ಯೂಟರ್ ವರ್ಚುವಲೈಸೇಷನ್ ಬಗ್ಗೆಯೂ ತರಬೇತಿ ನೀಡಲಾಗುತ್ತದೆ.ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಹ್ಯಾಕಿಂಗ್ ಬಗ್ಗೆ ಲಭ್ಯ ತಂತ್ರಾಂಶ ಮತ್ತು ತಂತ್ರಗಳ ಬಗ್ಗೆ ಅರಿವು ಮೂಡಿಸುವುದೇ ಕಾರ್ಯಕ್ರಮದ ಉದ್ದೇಶ. ಹ್ಯಾಕಿಂಗನ್ನು ನೈತಿಕ ಕಾರ್ಯಗಳಿಗೆ ಬಳಸಿಕೊಂಡಾಗ,ಅದು ಭಯೋತ್ಪಾದನಾ ಚಟುವಟಿಕೆ ನಿಯಂತ್ರಣ ಮತ್ತು ಪತ್ತೆ ಕಾರ್ಯದಲ್ಲೂ ಉಪಯೋಗಕ್ಕೆ ಬರುತ್ತದೆ.ಅಂತಿಮ ಸ್ಪರ್ಧೆಯು ಮಾರ್ಚ್ ಹದಿನೈದರಂದು ನಡೆಯಲಿದ್ದು,ಬೆಂಗಳೂರಿನ ಆಚಾರ್ಯ ತಾಂತ್ರಿಕ ಕಾಲೇಜಿನಲ್ಲಿ ನಡೆಸಲಾಗುವುದು.ಪ್ರತಿ ತಂಡವೂ ಒದಗಿಸಲಾದ ತಂತ್ರಾಂಶಗಳನ್ನು ಬಳಸಿಕೊಂಡು,ಕಂಪ್ಯೂಟರ್ ವ್ಯವಸ್ಥೆಯಲ್ಲಿನ ಐದು ಭದ್ರತಾ ಕೋರೆಗಳನ್ನು ಪತ್ತೆ ಮಾಡಬೇಕಾಗುತ್ತದೆ.ಈ ತರಬೇತಿಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ತಾಂತ್ರಿಕ ವಿದ್ಯಾಲಯಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
------------------------------------------------------------
ಕೇರಳದ ಸಂಸ್ಕೃತ ಶಾಲೆಯ ಕನ್ನಡ ಇ-ಪತ್ರಿಕೆ!
ರಾಷ್ಟ್ರಕವಿ ಪ್ರಶಸ್ತಿ ಪುರಸ್ಕೃತ ಕಯ್ಯಾರ ಕಿಞ್ಞಣ್ಣ ರೈ,ಯಕ್ಷಗಾನ ಭೀಷ್ಮ ಶೇಣಿ ಗೋಪಾಲಕೃಷ್ಣ,ಕವಿ ವೆಂಕಟರಾಜ ಪುಣಿಂಚಿತ್ತಾಯ ಮುಂತಾದವರು ಕಲಿತ ನೀರ್ಚಾಲಿನ ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯು ಇದೀಗ ಇ-ಪತ್ರಿಕೆ ಆರಂಭಿಸಿದೆ."ಮಹಾಜನ" ಇ-ಪತ್ರಿಕೆಯಲ್ಲಿ ಶಾಲಾಮಕ್ಕಳ ಬರಹ,ಚಿತ್ರಗಳನ್ನು ಪ್ರಕಟಿಸಲಾಗುತ್ತಿದೆ.ಶಾಲೆಯ ಅಧ್ಯಾಪಕ ರವಿಶಂಕರ್ ದೊಡ್ಡಮಾಣಿ ಅವರ ನೇತೃತ್ವ ಇ-ಪತ್ರಿಕೆಗಿದೆ.ಬ್ಲಾಗನ್ನು ಇ-ಪತ್ರಿಕೆಯಾಗಿಸಿದ ನವೀನ ಪ್ರಯೋಗ ಕೇರಳದ ಪತ್ರಿಕೆ,ಟಿವಿಗಳಿಂದ ಪ್ರಶಂಸೆ ಬಾಚಿಕೊಳ್ಳುತ್ತಿದೆ.
-----------------------------------------------------------------------
ಭುವಿಯ ಹುಡುಕಾಟಕ್ಕೆ ಕೆಪ್ಲರ್ ಬಾಹ್ಯಾಕಾಶ ಸಾಧನ
ನಾಸಾವಿದೀಗ ಒಂದು ಲಕ್ಷ ನಕ್ಷತ್ರಗಳ ಕಡೆ ತನ್ನ ದೂರದರ್ಶಕ ಕೆಪ್ಲರ್ ಮೂಲಕ ವರ್ಷಗಟ್ಟಲೆ ಕಾಲ ಕಣ್ಣಿರಿಸಲು ಬಯಸಿದೆ.ಭೂಮಿಯಂತಹ ಗ್ರಹ ಯಾವುದಾದರೂ ಇದೆಯೇ ಎನುವುದನ್ನು ಪತ್ತೆ ಮಾಡುವುದೇ ಉದ್ದೇಶ.ಫ್ಲೊರಿಡಾದ ಕೇಪ್ ಕೆನವರಲ್ ಬಾಹ್ಯಾಕಾಶ ಕೇಂದ್ರದಿಂದ ಡೆಲ್ಟಾ ರಾಕೆಟ್ ಮೂಲಕ ಇದರ ಉಡ್ಡಯನವಾಗಿದೆ.ನಕ್ಷತ್ರದ ಬೆಳಕಿನಲ್ಲಾಗುವ ಇಳಿತವನ್ನು ದಾಖಲಿಸಿಕೊಳ್ಳುವ ಮೂಲಕ ಅದರ ಮುಂದೆ ಗ್ರಹವು ಹಾದುಹೋಗುವುದನ್ನು ತಿಳಿದುಕೊಳ್ಳುವ ತಂತ್ರವನ್ನು ಇಲ್ಲಿ ಬಳಸಲಾಗುತ್ತದೆ.ಗ್ರಹ ಪತ್ತೆಯಾದ ಬಳಿಕ ಅದರ ದೂರ,ಗಾತ್ರ ಮತ್ತು ಪಥ ಇತ್ಯಾದಿಗಳನ್ನು ಅಂದಾಜು ಮಾಡಲಾಗುತ್ತದೆ.
--------------------------------------------------------------------------
ಹೆಸರಿನಲ್ಲೇನಿದೆ?
ಹೆಸರಿಗೆ ಐದು ದಶಲಕ್ಷ ಡಾಲರುಗಳು ಎಂದರೆ ನಂಬುತ್ತೀರಾ?ಅಂತರ್ಜಾಲ ತಾಣಗಳಿಗೆ ಅತ್ಯಂತ ಬಳಕೆಯಲ್ಲಿರುವ ಶಬ್ದಗಳ ಹೆಸರನ್ನು ಬಳಸಿ,ಸುಲಭವಾಗಿ ಜನಪ್ರಿಯವಾಗ ಬಹುದು.ಹೀಗಾಗಿ toys,wine,business ಮುಂತಾದ ಪದಗಳನ್ನು ಪಡೆಯಲು ಮೇಲಾಟ ನಡೆಯುತ್ತದೆ.ಇಂತಹ ಪದಗಳನ್ನು ನೊಂದಾಯಿಸಿದವರಿಂದ ಹೆಸರು ಖರೀದಿಸಲು ಉದ್ಯಮದ ಮಂದಿ ಮುಗಿಬೀಳುತ್ತಾರೆ.ಆಟಿಕೆಯನ್ನು ಮಾರುವ ಅಂತರ್ಜಾಲ ತಾಣವೊಂದು toys ಹೆಸರಿಗೆ ಐದು ದಶಲಕ್ಷ ಡಾಲರು ದುಡ್ಡು ಖರ್ಚು ಮಾಡಬೇಕಾಯಿತು!
----------------------------------------------------------------------------
ವಿಂಡೋಸ್7ರಲ್ಲೇನು ಹೊಸತು?
ಇಂಟರ್ನೆಟ್ ಎಕ್ಸ್‌ಪ್ಲೋರರ್ ವಿಂಡೋಸ್ ಕಾರ್ಯನಿರ್ವಹಣಾ ತಂತ್ರಾಂಶದ ಜತೆಗೆ ಬರುವ ಬ್ರೌಸರ್ ತಂತ್ರಾಂಶ.ಆದರೆ ಅಂತರ್ಜಾಲ ಜಾಲಾಟಕ್ಕೆ ಇದನ್ನು ಬಳಸಿದರೆ,ಭದ್ರತೆಗೆ ಚ್ಯುತಿ ಬರುತ್ತದೆ ಎನ್ನುವುದನ್ನು ಕಂಪೆನಿಯೇ ಒಪ್ಪಿರುವ ಹಿನ್ನೆಲೆಯಲ್ಲಿ ವಿಂಡೋಸ್ ಓಎಸ್ ಬಳಸುವವರೂ ಮೊಜಿಲ್ಲಾ ಬಳಗದ ಮುಕ್ತ ತಂತ್ರಾಂಶಗಳನ್ನೇ ಬ್ರೌಸರ್ ಆಗಿ ಬಳಸುತ್ತಾರೆ.ಇದಕ್ಕೆ ಮೈಕ್ರೋಸಾಫ್ಟ್ ಕೂಡಾ ಹಸಿರು ಸಂಕೇತ ತೋರಿದೆ. ಹೊಸ ಓಎಸ್ ತಂತ್ರಾಂಶದಲ್ಲಿ ಅನುಸ್ಥಾಪನೆಯ ವೇಳೆಯೇ ಇಂಟರ್ನೆಟ್ ಎಕ್ಸ್‌ಪ್ಲೋರರನ್ನು ನಿಷ್ಕ್ರಿಯಗೊಳಿಸಿ,ಅದರ ಸುಳಿವೇ ಇಲ್ಲದ ಹಾಗೆ ಮಾಡಲು ಬರುತ್ತದೆ. ಇದೇ ರೀತಿ ವಿಂಡೋಸ್ ಮೀಡಿಯಾ ಪ್ಲೇಯರ್ ತಂತ್ರಾಂಶವನ್ನೂ "ಆಫ್" ಮಾಡಲು ಬರುತ್ತದೆ.
---------------------------------------------------------------------------
ಬರಲಿದೆ ತ್ರೀಜಿ ಕಾರ್ ರೇಡಿಯೋ!
ಜರ್ಮನಿಯ ಹ್ಯಾನೋವರ್‌ನಲ್ಲಿ ವಾರ್ಷಿಕವಾಗಿ ನಡೆಯುವ ತಂತ್ರಜ್ಞಾನ ಪ್ರದರ್ಶನ ಸದ್ಯ ಪ್ರಗತಿಯಲ್ಲಿದೆ.ಇದರಲ್ಲಿ ಯಂತ್ರಾಂಶ ಮತ್ತು ತಂತ್ರಾಂಶಗಳಲ್ಲಿ ಆಗಲಿರುವ ಬೆಳವಣಿಗೆಗಳ ಬಗ್ಗೆ ಮುನ್ಸೂಚನೆ ಸಿಗುತ್ತದೆ.ತ್ರೀಜಿ ಮೊಬೈಲ್ ಮೂಲಕ ಅಂತರ್ಜಾಲ ಸಂಪರ್ಕ ಪಡೆದು,ಅಂತರ್ಜಾಲದಲ್ಲಿ ಲಭ್ಯವಿರುವ ಮೂವತ್ತೈದು ಸಾವಿರ ರೇಡಿಯೋ ಕೇಂದ್ರಗಳನ್ನು ಯಾವುದೇ ಎಗ್ಗಿಲ್ಲದೆ ಪಡೆಯುವ ಸೌಕರ್ಯ ಪಡೆಯುವ ತಾಂತ್ರಿಕತೆಯನ್ನಲ್ಲಿ ಪ್ರದರ್ಶಿಸಲಾಗಿದೆ.ಕೈಯಲ್ಲಿ ಹಿಡಿದ ಲೇಸರ್ ಸ್ಕ್ಯಾನರ್ ಮೂಲಕ ವಸ್ತುಗಳ ತ್ರೀಡಿ ಚಿತ್ರಗಳನ್ನು ಪಡೆದು,ಕಂಪ್ಯೂಟರ್ ಗೇಂಸ್‌ಗಳಲ್ಲಿ ಹೆಚ್ಚಿನ ಮನರಂಜನೆ ಪಡೆಯುವ ಸಾಧ್ಯತೆಯನ್ನೂ ಪ್ರದರ್ಶಿಸಲಾಗಿದೆ.ರಾಜಕಾರಣಿಗಳ ಪಟಾಲಂ ಸಾಗುವಾಗ ಒಂದು ಕಾರನ್ನು ನೂರಾರು ಕಾರುಗಳು ಹಿಂಬಾಲಿಸುವುದನ್ನು ನೋಡಿದ್ದೀರಲ್ಲಾ? ಎದುರಿನ ವಾಹನವೊಂದರಲ್ಲೇ ಚಾಲಕನನ್ನು ಬಳಸಿಕೊಂಡು,ಉಳಿದವು ಅದನ್ನು ಹಿಂಬಾಲಿಸುವಂತೆ ಮಾಡಿದರೆ? ಅದನ್ನು ಸಾಧ್ಯ ಮಾಡುವ ತಂತ್ರಜ್ಞಾನವನ್ನೂ ಸಿಬಿಟ್ ಪ್ರದರ್ಶನದಲ್ಲಿ ಪ್ರದರ್ಶಿಸಲಾಗಿದೆ.
udayavani
*ಅಶೋಕ್‌ಕುಮಾರ್ ಎ

Monday, March 02, 2009

ಏಳುನೂರು ಪುರಂದರ ದಾಸರ ಕೀರ್ತನೆಗಳೀಗ ಅಂತರ್ಜಾಲದಲ್ಲಿ ಲಭ್ಯ!


ಏಳುನೂರು ಪುರಂದರ ದಾಸರ ಕೀರ್ತನೆಗಳೀಗ ಅಂತರ್ಜಾಲದಲ್ಲಿ ಲಭ್ಯ!

ದಾಸ ಕೀರ್ತನೆಗಳು ಮತ್ತು ಉಗಾಭೋಗಗಳನ್ನು ಅಂತರ್ಜಾಲದಲ್ಲಿ ಒದಗಿಸಿ,ಜನಪ್ರಿಯವಾದ ಅಂತರ್ಜಾಲ ತಾಣವೇ http://haridasa.in.ಸದ್ಯ ಸುಮಾರು ಏಳುನೂರು ಪುರಂದರ ದಾಸರ ಕೀರ್ತನೆಗಳು ಇಲ್ಲಿ ಲಭ್ಯ.ಸಂಪದ ಅಂತರ್ಜಾಲ ಸಮುದಾಯದ ಈ ತಾಣದ ಸಾರಥ್ಯ ರಾಮ್‌ಪ್ರಸಾದ್ ಎನ್ನುವ ಹೊರನಾಡ ಕನ್ನಡಿಗ.ಅಲ್ಟೆರಾ ಕಂಪೆನಿಯ ಉದ್ಯೋಗಿ.ಶ್ರೀಕಾಂತ್ ಮಿಶ್ರಿಕೋಟಿಯೆನ್ನುವ ಉತ್ಸಾಹಿ ಇನ್ನೂ ನಾಲ್ಕುನೂರು ಹಾಡುಗಳನ್ನು ಸೇರಿಸುವ ಸನ್ನಾಹದಲ್ಲಿದ್ದಾರೆ.ಈ ಪ್ರಯತ್ನಗಳಿಗೆ ನೀವೂ ಕೈಗೂಡಿಸಬಹುದು!
------------------------------------------------------
ಟ್ವಿಟರಿನಲ್ಲಿ ಗೂಗಲ್
ಕೊನೆಗೂ ಟ್ವಿಟರ್ ಅಂತರ್ಜಾಲ ತಾಣದಲ್ಲಿ ಅಧಿಕೃತ ಗೂಗಲ್ ಖಾತೆಯ ಸೃಷ್ಟಿಯಾಗಿದೆ.ಖಾತೆ ಆರಂಭವಾದ ಕೆಲವೇ ಗಂಟೆಗಳೊಳಗೆ ಸಾವಿರಾರು ಜನರು ಗೂಗಲ್ ಖಾತೆಯನ್ನು ಹಿಂಬಾಲಿಸಲಾರಂಭಿಸಿದರು.ಕಂಪೆನಿಗಳೂ ಕೂಡಾ ಟ್ವಿಟರ್ ಖಾತೆಯನ್ನು ಹೊಂದಿ,ಅದರ ಮೂಲಕ ತಮ್ಮ ಉದ್ಯೋಗಿಗಳು,ಬಳಕೆದಾರರು ಮತ್ತಿತರಿಗೆ ತಮ್ಮ ಕಂಪೆನಿಯ ಬಗ್ಗೆ ಮಾಹಿತಿ ನೀಡುವ ವಿಧಾನ ಈಗ ಚಾಲ್ತಿಗೆ ಬಂದಿದೆ. ಗೂಗಲ್ ವಿನೂತನ ಸೇವೆಗಳನ್ನು ನೀಡುವುದರಲ್ಲಿ ಮುಂದು. ಇಂತಹ ಹೊಸ ಸೇವೆಗಳನ್ನು ಪ್ರಚುರ ಪಡಿಸಲು ಗೂಗಲ್ ಬ್ಲಾಗನ್ನು ಅವಲಂಬಿಸಿದೆ. ಆದರೆ ಬ್ಲಾಗ್ ಬರೆದಿರುವ ಬಗ್ಗೆ ಜನರಿಗೆ ತಿಳಿಸಲು ಟ್ವಿಟರಿನಂತಹ ಸೇವೆ ಸಹಾಯ ಮಾಡಲಿದೆ.ಈಗ ಸುಮಾರು ಮೂವತ್ತಮೂರು ಸಾವಿರ ಹಿಂಬಾಲಕರನ್ನು ಹೊಂದಿರುವ ಗೂಗಲ್ ಖಾತೆಯು ಟ್ವಿಟರ್ ಬಗ್ಗೆ ಇನ್ನಷ್ಟು ಜನರ ಗಮನ ಸೆಳೆದಿದೆ. ಗೂಗಲ್ ಖಾತೆಯು ಅರುವತ್ತೇಳು ವ್ಯಕ್ತಿ ಅಥವಾ ಸೇವೆಗಳನ್ನು ಹಿಂಬಾಲಿಸುತ್ತಿದೆ. ತಂತ್ರಜ್ಞಾನ ಸುದ್ದಿ ಮಾಧ್ಯಮಗಳ ಟ್ವಿಟರ್ ಖಾತೆಗಳನ್ನು ಮತ್ತು ಗೂಗಲ್‌ನದ್ದೇ ಆದ ಯುಟ್ಯೂಬ್ ಮುಂತಾದ ಸೇವೆಗಳು ಅದರಲ್ಲಿ ಸೇರಿವೆ.ಅಂದ ಹಾಗೆ ಗೂಗಲ್ ಖಾತೆಯ ಮೊದಲ ಸಂದೇಶ ಏನೆಂಬ ಕುತೂಹಲ ನಿಮಗಿದೆಯೇ? “I’m feeling lucky\n” ಎನ್ನುವುದೇ ಆ ಸಂದೇಶವಾಗಿದೆ.
-------------------------------------------------------
ಆನ್‌ಲೈನಿನಲ್ಲಿ ಓಸಿಆರ್
ಓಸಿಆರ್ ಎಂದರೇನು ಎನ್ನುವುದು ನಿಮಗೆ ನೆನಪಿದೆ ತಾನೇ? ಅಪ್ಟಿಕಲ್ ಕ್ಯಾರೆಕ್ಟರ್ ರೆಕೋಗ್ನಿಷನ್ ಎಂದರೆ ಚಿತ್ರ ಅಥವ ಪಿಡಿಎಫ್ ರೂಪದಲ್ಲಿರುವ ಪುಟದ ಅಕ್ಷರಗಳನ್ನು ಗ್ರಹಿಸಿ, ಪದಸಂಸ್ಕಾರಕ ಕಡತವಾಗಿ ಅದನ್ನು ಬದಲಾಯಿಸಿ,ಪುಟದಲ್ಲಿರುವ ಮಾಹಿತಿಯನ್ನು ಬಳಸಿಕೊಳ್ಳಲು ಅಥವ ಬದಲಾಯಿಸಲು ಅನುವು ಮಾಡುವ ಸೌಕರ್ಯ ಸಿಗುತ್ತದೆ. ಸಾಮಾನ್ಯವಾಗಿ ಓಸಿಆರ್ ತಂತ್ರಾಂಶಗಳು ಸ್ಕ್ಯಾನರ್ ಯಂತ್ರಾಂಶದ ಜತೆ ಸಿಗುತ್ತವೆ. ಒಂದು ವೇಳೆ ನಿಮ್ಮ ಕಂಪ್ಯೂಟರಿನಲ್ಲಿ ಓಸಿಆರ್ ತಂತ್ರಾಂಶ ಇಲ್ಲವೆನ್ನಿ.ಹಾಗಾದರೆ ಅದನ್ನು ಅಂತರ್ಜಾಲ ಮೂಲಕ ಪಡೆಯಬಹುದೇ? ಇದು ಸಾಧ್ಯ. https://www.ocrterminal.com/ ಅಂತಹ ಸೇವೆಯ ಪ್ರಾಯೋಗಿಕ ಸೇವೆ ನೀಡುತ್ತಿದೆ.ನೋಂದಾಯಿಸಿ ಕೊಂಡವರಿಗೆ ದಿನವೊಂದಕ್ಕೆ ಮೂವತ್ತು ಪುಟಗಳನ್ನು ಪಿಡಿಎಫ್‌ನಿಂದ doc ಕಡತಗಳಾಗಿ ಬದಲಾಯಿಸಿಕೊಳ್ಳಲು ಅವಕಾಶವಿದೆ. ಇದೀಗ ಈ ಸೇವೆ ಅದೆಷ್ಟು ಜನಪ್ರಿಯವಾಗಿದೆಯೆಂದರೆ ಕೆಲವೊಮ್ಮೆ ಈ ಅಂತರ್ಜಾಲ ತಾಣ ಬಳಕೆದಾರರ ಒತ್ತಡದಿಂದ ಕುಸಿಯುವ ಭೀತಿ ಎದುರಿಸುತ್ತಿದೆ!
---------------------------------------------------------
ಗೂಗಲ್ ಕೈಕೊಟ್ಟಿತು!
ಜಿಮೇಲ್ ಗೂಗಲ್ ಮಿಂಚಂಚೆ ಈ ವಾರಾರಂಭದಲ್ಲಿ ಬಳಕೆದಾರರಿಗೆ ಲಭ್ಯವಿರಲಿಲ್ಲ. ಕೆಲವು ಗಂಟೆಗಳು ಅದರ ಸೇವೆ ಜನರಿಗೆ ಸಿಗದೆ,ಜನರು ಕಂಗಾಲಾದರು.ಈಗೀಗ ಅಂತರ್ಜಾಲ ಮಿಂಚಂಚೆ ಸೇವೆಯಲ್ಲಿ ಅಪರಿಮಿತ ಸ್ಮರಣಸಾಮರ್ಥ್ಯ ಲಭ್ಯವಾಗುವುದರಿಂದ,ಮಿಂಚಂಚೆಯನ್ನು ತಮ್ಮ ಕಂಪ್ಯೂಟರಿಗೆ ಇಳಿಸಿಕೊಳ್ಳುವ ಪ್ರವೃತ್ತಿ ಕಡಿಮೆಯಾಗಿದೆ.ಸದಾ ಅಂತರ್ಜಾಲಕ್ಕೆ ಸಂಪರ್ಕದಲ್ಲಿರುವ ಜನರು ಬೇಕೆಂದಾಗ ಗೂಗಲ್ ಖಾತೆಗೆ ಹೋಗಿ ತಮಗೆ ಬೇಕಾದ ಹಳೆಯ ಸಂದೇಶವನ್ನು ಶೋಧಿಸಿ, ಅದನ್ನು ನೋಡುವ ಸೌಲಭ್ಯವಿದೆ.ಆದರೆ ಗೂಗಲ್ ಸೇವೆಯು ಅಕಸ್ಮಾತ್ತಾಗಿ ನಿಂತು ಜನರನ್ನು ಕಂಗೆಡಿಸಿತು.ಹೀಗಾಗಲು ಕಾರಣವೆಂಬುದು ಸ್ಪಷ್ಟವಿಲ್ಲವಾದರೂ,ಹ್ಯಾಕರುಗಳ ದಾಳಿ ಇದಕ್ಕೆ ಕಾರಣವಿರಬಹುದು ಎನ್ನುವ ಗುಮಾನಿ ಇದೆ.ಅಂತರ್ಜಾಲದ ಸಾವಿರಾರು ಕಂಪ್ಯೂಟರುಗಳನ್ನು ಮೋಸದಿಂದ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು,ಅವುಗಳ ಮೂಲಕ ಗೂಗಲ್ ಸರ್ವರಿಗೆ ಸತತ ಸೇವೆಯ ಕೋರಿಕೆಗಳನ್ನು ಕಳುಹಿಸುವ ಮೂಲಕ ನೈಜ ಬಳಕೆದಾರರಿಗೆ ಸೇವೆಯನ್ನು ನಿರಾಕರಿಸುವ ಸಂಚು ನಡೆದಿತ್ತು ಎನ್ನುವುದು ಪರಿಣತರ ಗುಮಾನಿ.ಈ ನಡುವೆ ಯಾಹೂ ಕಂಪೆನಿಯು ತನ್ನ ಸೇವೆಯೊಂದನ್ನು ನಿಲ್ಲಿಸುವ ನಿರ್ಧಾರ ಪ್ರಕಟಿಸಿ,ಜನರಿಗೆ ಆಶ್ಚರ್ಯ ಉಂಟು ಮಾಡಿದೆ. ಯಾಹೂ ಬ್ರೀಫ್‌ಕೇಸ್ ಎನ್ನುವ ಆನ್‌ಲೈನ್ ಅಂತರ್ಜಾಲ ಕಡತ ದಾಸ್ತಾನು ಮಾಡುವ ಸೇವೆ ಈ ತಿಂಗಳ ಅಂತ್ಯದಿಂದ ನಿಲ್ಲಲಿದೆ. ಈ ಆರ್ಥಿಕ ಹಿನ್ನಡೆಯ ದಿನಗಳಲ್ಲಿ, ಅಂತರ್ಜಾಲದ ಉಚಿತ ಸೇವೆಗಳು ಅನಿರ್ದಿಷ್ಟಾವಧಿ ಕಾಲಮುಂದುವರಿಯುವುದು ಸಾಧ್ಯವೇ ಎನ್ನುವ ಅನುಮಾನ ಜನರಲ್ಲಿ ಉಂಟಾಗಿದೆ.
-----------------------------------------------------
ಮಹಾಚುನಾವಣೆ ಮತ್ತು ಅಂತರ್ಜಾಲ
ಆರ್ಥಿಕ ಹಿನ್ನಡೆಯಿಂದ ಉದ್ಯೋಗ ನಷ್ಟದ ಭೀತಿ ಎಲ್ಲೆಡೆ ಹಬ್ಬಿರುವ ಬೆನ್ನಿಗೇ ಭಾರತದ ಸಂಸತ್‌ನ ಚುನಾವಣೆಗಳ ಘೋಷಣೆಗೆ ಕ್ಷಣಗಣನೆ ಆರಂಭವಾಗಿದೆ.ಸುಮಾರು ಹದಿನೈದರಿಂದ ಹದಿನಾರು ಸಾವಿರ ಕೋಟಿ ಹಣವನ್ನು ಚುನಾವಣೆ ನಡೆಸಲು ಕೇಂದ್ರ ಸರಕಾರವೊಂದೇ ಖರ್ಚು ಮಾಡಲಿದೆ. ಚುನಾವಣೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳ ಖರ್ಚು,ಪಕ್ಷಗಳು ಸುರಿಯಲಿರುವ ಹಣ ಇವೆಲ್ಲವೂ ಹೊಸ ಉದ್ಯೋಗ,ಅವಕಾಶಗಳ ಸೃಷ್ಟಿಗೆ ಕಾರಣವಾಗಿ ಆರ್ಥಿಕ ಪುನಶ್ಚೇತನ ಮಾಡಬಹುದು ಎಂಬ ಆಶೆಗೆ ಕಾರಣವಾಗಿದೆ.ಅಂತರ್ಜಾಲದಲ್ಲಿ ಮತದಾರರ ಪಟ್ಟಿಯ ಲಭ್ಯತೆಯಿಂದ ಹಿಡಿದು, ಪಕ್ಷಗಳ ಮತ್ತು ಅಭ್ಯರ್ಥಿಗಳ ಅಂತರ್ಜಾಲ ತಾಣಗಳು ಈ ಸಲದ ಚುನಾವಣೆಯಲ್ಲಿ ಪ್ರಮುಖವಾಗಿ ಸುದ್ದಿ ಮಾಡುವ ನಿರೀಕ್ಷೆಯಿದೆ. ಬ್ಲಾಗ್ ಬರವಣಿಗೆಯನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುವ ವೈಖರಿಗೆ ಬಿಜೆಪಿ ಮುಖಂಡ ಎಲ್ ಕೆ ಅಡ್ವಾಣಿಯವರು ಚಾಲನೆ ನೀಡಿದ್ದಾರೆ.ಅಂತರ್ಜಾಲ ಮೂಲಕ ಸಾಮೂಹಿಕ ಎಸ್ ಎಂ ಎಸ್ ಸಂದೇಶಗಳನ್ನು ಕಳುಹಿಸಲು ಸಾಧ್ಯವಿರುವುದರಿಂದ,ಮೊಬೈಲ್ ಹ್ಯಾಂಡ್‌ಸೆಟ್ ಮೂಲಕ ಜನರನ್ನು ತಲುಪುವ ಪ್ರಯತ್ನ ನಡೆಯುವುದು ನಿಶ್ಚಿತ. ಟ್ವಿಟರ್ ಸೇವೆಯಲ್ಲಿ ಅಭ್ಯರ್ಥಿಗಳ ಖಾತೆ,ಅರ್ಕುಟ್ ಅಂತಹ ನೆಟ್ವರ್ಕಿಂಗ್ ತಾಣಗಳಲ್ಲಿ ಅಭ್ಯರ್ಥಿಗಳ ಬೆಂಬಲಿಗರ ಸಮುದಾಯ ಏರ್ಪಡುವುದು ಈ ಸಲದ ಹೊಸ ನಡೆಯಾಗಲಿದೆ.
------------------------------------------------------------
ಜಪಾನಿನಲ್ಲಿ ಈಗ ಐಫೋನ್ ಉಚಿತ
ಮೊಬೈಲ್ ಸಂಪರ್ಕದೊಂದಿಗೆ ಹ್ಯಾಂಡ್‌ಸೆಟ್ ಅನ್ನು ಉಚಿತವಾಗಿ ಒದಗಿಸುವ ಪರಿ ಆರಂಭವಾಗಿದೆ. ಜಪಾನಿನಲ್ಲಿ ಐಫೋನ್ ಮೂಲಕ ಸೇವೆ ಒದಗಿಸುವ ಸಾಫ್ಟ್‌ಬ್ಯಾಂಕ್ ಮೊಬೈಲ್ ಕಂಪೆನಿ ಎರಡು ವರ್ಷದ ತ್ರೀಜಿ ಸೇವೆ ಅಪೇಕ್ಷಿಸುವ ಮೊಬೈಲ್ ಬಳಕೆದಾರರಿಗೆ ಉಚಿತ ಐಫೋನ್ ಹ್ಯಾಂಡ್‌ಸೆಟ್ ನೀದಲು ಮುಂದೆ ಬಂದಿದೆ. ಈ ಹ್ಯಾಂಡ್‌ಸೆಟ್ ಎಂಟು ಜೀಬಿ ಸಾಮರ್ಥ್ಯದ್ದು.ಹದಿನಾರು ಜೀಬಿ ಸಾಮರ್ಥ್ಯದ ಸೆಟ್ ಬೇಕಿದ್ದರೆ,ನೂರ ಹದಿನೆಂಟು ಡಾಲರು ತೆತ್ತರಾಯಿತು.(ನಿಜ ಬೆಲೆ ಮುನ್ನೂರೈವತ್ತು ಡಾಲರು).ಜಪಾನಿನಲ್ಲಿ ಐಪೋನ್‌ಗಳಷ್ಟೇನೂ ಮಾರಾಟವಾಗುತ್ತಿಲ್ಲ.ಅದಕ್ಕಾಗಿಯೇ ಈ ವೇಷ.ಹೆಬ್ಬೆರಳೊಂದರಿಂದಲೇ ಕಿರುಸಂದೇಶ ರಚಿಸಿ ಕಳುಹಿಸಲು ಸಾಧ್ಯವಿಲ್ಲದಿರುವುದು,ಕ್ಯಾಮರಾದ ಗುಣಮಟ್ಟ ಸಾಮಾನ್ಯವಾಗಿರುವುದು, ಉದ್ದ ಉಗುರಿನ ಮಹಿಳೆಯರಿಗೆ ಬಳಸಲು ಅನುಕೂಲ ಇಲ್ಲದಿರುವುದು ಐಫೋನ್ ಜನಪ್ರಿಯತೆಗೆ ಅಡ್ದಿಯಾಗಿದೆ ಎಂಬ ಗುಮಾನಿಯಿದೆ. ಅದೇ ವೇಳೆ ಅತ್ತ ಇಂಗ್ಲೆಂಡಿನಲ್ಲಿ ನೆಟ್‌ಬುಕ್ ಎನ್ನುವ ಲ್ಯಾಪ್‌ಟಾಪ್ ಸಾಧನವನ್ನು ನಿಸ್ತಂತು ಬಳಕೆದಾರರಿಗೆ ಉಚಿತವಾಗಿ ಒದಗಿಸಿ,ಸೇವೆಯನ್ನು ಜನಪ್ರಿಯವಾಗಿಸುವ ಪ್ರಯತ್ನ ಸಾಗಿದೆ. ಡೆಲ್ ಕಂಪೆನಿಯ ನೆಟ್‌ಬುಕ್ ಅಂತರ್ಜಾಲ ಜಾಲಾಟಕ್ಕೆ ಅನುಕೂಲ ಒದಗಿಸುತ್ತದೆ. ಅದರ ಬೆಲೆ ಮುನ್ನೂರು ಡಾಲರುಗಳು.
udayavani

*ಅಶೋಕ್‌ಕುಮಾರ್ ಎ
 
googledc7e93ba1a7703ae.html