Monday, April 27, 2009

ವಿದ್ಯಾರ್ಥಿ ಸಮುದಾಯಕ್ಕೆ ಗೂಗಲ್ ಕೊಡುಗೆ

ವಿದ್ಯಾರ್ಥಿ ಸಮುದಾಯಕ್ಕೆ ಗೂಗಲ್ ಕೊಡುಗೆ
ಗೂಗಲ್ ವಿದ್ಯಾರ್ಥಿ ಸಮುದಾಯವನ್ನು ಗುರಿಯಾಗಿಸಿಕೊಂಡು ಹಲವು ಸೇವೆಗಳನ್ನು ನೀಡುತ್ತಿದೆ. ತನ್ನ ನವೀನ ಸೇವೆಗಳು ವಿದ್ಯಾರ್ಥಿ ಸಮುದಾಯವನ್ನು ತಲುಪಬೇಕೆಂದು ಕಂಪೆನಿಯ ಬಯಕೆ. ಅದಕ್ಕೀಗ ಟ್ವಿಟರ್ ಸೇವೆಯ ಪ್ರಯೋಜನವನ್ನು ಪಡೆಯಲದು ಆರಂಭಿಸಿದೆ.http://twitter.com/googlestudents ಇದು ವಿದ್ಯಾರ್ಥಿ ಸಮುದಾಯವನ್ನು ನೇರವಾಗಿ ತಲುಪಲು ಗೂಗಲ್ ಆರಂಭಿಸಿರುವ ಟ್ವಿಟರ್ ಖಾತೆ. ಈ ಖಾತೆಯನ್ನು ಹಿಂಬಾಲಿಸುವವರಿಗೆ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಬಿಸಿಬಿಸಿ ಸುದ್ದಿಗಳು ತಲುಪುತ್ತವೆ.
ಈಗಾಗಲೇ ಹಲವು ಪ್ರತ್ಯೇಕ ಚಾನೆಲ್‌ಗಳು ವಿದ್ಯಾರ್ಥಿಗಳಿಗಾಗಿಯೇ ಲಭ್ಯವಿವೆ. ತಂತ್ರಾಂಶ ಅಭಿವೃದ್ಧಿಯಲ್ಲಿ ತೊಡಗಿರುವವರಿಗಾಗಿ, ತಂತ್ರಾಂಶದ ಪಾಠಗಳು, ತಂತ್ರಾಂಶದ ಸಾಲುಗಳು ಇಲ್ಲಿ ಲಭ್ಯ.code.google.com ಇದಕ್ಕೇ ಮೀಸಲಾಗಿದೆ.ಸಂಶೋಧನಾ ಬರಹಗಳು ಬೇಕಾದರೆ scholar.google.com ಮೂಲಕ ಶೋಧ ನಡೆಸುವುದೇ ಒಳಿತು. ಪ್ರಖ್ಯಾತ ಸಂಶೋಧನಾ ಬರಹಗಳಿಂದ ನಿಮ್ಮ ವಿಷಯಕ್ಕೆ ಸಂಬಂಧಿಸಿದ ಪ್ರಬಂಧಗಳು ಪಟ್ಟಿ ಮಾಡಿ ನೀಡುವ ಸೇವೆಯನ್ನು ಗೂಗಲ್ ನೀಡುತ್ತದೆ.http://www.googleforstudents.blogspot.com/ ಮೂಲಕ ಗೂಗಲ್ ವಿದ್ಯಾರ್ಥಿ ಸಮುದಾಯಕ್ಕೆ ಸಂಬಂಧಿಸಿದ ವಿಷಯಗಳನ್ನು ಒದಗಿಸುತ್ತದೆ.ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸ್ಪರ್ಧೆಗಳು, ಸವಾಲುಗಳ ಬಗ್ಗೆಯೂ ಒಂದು ಪ್ರತ್ಯೇಕ ಪುಟವಿದೆ.ಇನ್ನು ವಿದ್ಯಾರ್ಥಿ ವೇತನಗಳು, ಉದ್ಯೋಗಕ್ಕೆ ಸಂಬಂಧಿಸಿದ ಪ್ರತ್ಯೇಕ ಪುಟವನ್ನೂ ಗೂಗಲ್ ವಿದ್ಯಾರ್ಥಿಗಳಿಗಾಗಿ ಒದಗಿಸುತ್ತಿದೆ.
-----------------------------------------------------------------
ಬಾಡಿಗೆಗೆ ತಂದ ಡಿವಿಡಿಯಿಂದ ಸಿನೆಮಾ ನಕಲಿ ಮಾಡಿ!
ರಿಯಲ್ ನೆಟ್ವರ್ಕ್ಸ್ ಕಂಪೆನಿಯ ರಿಯಲ್‌ಡಿವಿಡಿ ತಂತ್ರಾಂಶ ಬಹು ಅಗ್ಗ. ಇದರ ಬೆಲೆ ಮೂವತ್ತು ಡಾಲರು ಮಾತ್ರ. ಆದರಿದು ಹಾಲಿವುಡ್‌ನ್ನು ನಡುಗಿಸಿದೆ. ಈ ತಂತ್ರಾಂಶದ ಮೂಲಕ ಡಿವಿಡಿಯಲ್ಲಿರುವ ಚಲನಚಿತ್ರವನ್ನು ಕಂಪ್ಯೂಟರಿಗೆ ನಕಲಿ ಮಾಡಿಕೊಳ್ಳಬಹುದು. ಮುಂದೆ ಚಿತ್ರ ವೀಕ್ಷಿಸಲು ಡಿವಿಡಿಯ ಬದಲು ನಕಲು ಪ್ರತಿಯನ್ನೇ ಬಳಸಬಹುದು. ಒಬ್ಬರಿಗೊಬ್ಬರು ಇದನ್ನು ವಿನಿಮಯ ಮಾಡಿಕೊಳ್ಳಲೂ ಸಾಧ್ಯ.ನಕಲು ತಡೆ ತಂತ್ರ ಬಳಸಿದ ಡಿವಿಡಿಯನ್ನೂ ತಂತ್ರಾಂಶ ಕಾಪಿ ಮಾಡಿಕೊಳ್ಳಬಲ್ಲುದು! ಇಂತಹ ಅನರ್ಥಕಾರಿ ತಂತ್ರಾಂಶ ಕಷ್ಟದಲ್ಲಿರುವ ಸಿನೆಮಾ ಉದ್ಯಮಕ್ಕೆ ಇನ್ನೊಂದು ಪೆಟ್ಟು ನೀಡುವುದು ಖಾತರಿ. ಹಾಗಾಗಿ ಈ ತಂತ್ರಾಂಶದ ಪ್ರಸರಣ ತಡೆಯುವಂತೆ ಉದ್ಯಮ ರಿಯಲ್ ನೆಟ್ವರ್ಕ್ಸ್ ಕಂಪೆನಿಗೆ ದುಂಬಾಲು ಬಿದ್ದಿದೆ. ಸದ್ಯಕ್ಕಂತೂ ಕಂಪೆನಿ ಈ ಮನವಿಗೆ ಸ್ಪಂದಿಸಿಲ್ಲ.
ಕಂಪೆನಿಯು ತಂತ್ರಾಂಶವನ್ನು ಫ್ಯಾಸೆಟ್ ಎಂಬ ಹೆಸರಿನಿಂದಲೂ ಕರೆಯುತ್ತಿದೆ. ಸೋನಿ, ಸ್ಯಾಮ್‍ಸಂಗ್,ಟೊಶಿಬಾ ಅಂತಹ ಕಂಪೆನಿಗಳು ಡಿವಿಡಿ ಪ್ಲೇಯರ್ ತಯಾರಿಕೆಯಲ್ಲಿ ಮುಂದಿವೆ. ಈ ಕಂಪೆನಿಗಳು ತಂತ್ರಾಂಶವನ್ನು ಬಳಸಿಕೊಂಡು, ಡಿವಿಡಿ ಪ್ಲೇಯರಿನಲ್ಲಿ ಹಾಕಿದ ಡಿವಿಡಿಯ ನಕಲಿ ಮಾಡಿಟ್ಟುಕೊಳ್ಳುವ ತಂತ್ರ ರೂಪಿಸಲು ಅನುವು ಮಾಡುತ್ತದೆ. ರಿಯಲ್ ನೆಟ್ವರ್ಕ್ ಕಂಪೆನಿಯೂ ಪ್ರಾಯೋಗಿಕವಾಗಿ ಎಪ್ಪತ್ತು ಚಿತ್ರಗಳನ್ನು ನಕಲಿ ಮಾಡಿಟ್ಟು ಕೊಳ್ಳುವ ಸಾಮರ್ಥ್ಯವಿರುವ ಸಾಧನವನ್ನು ತಯಾರಿಸಿದೆ.ಇಂತಹ ತಂತ್ರಾಂಶ ಚಿತ್ರ,ಹಾಡುಗಳನ್ನು ಡೌನ್‌ಲೋಡ್ ಮಾಡುವ ಸೇವೆ ನೀಡುವ ಹುಲು.ಕಾಮ್, ಐಟ್ಯೂನ್ಸ್ ಅಂತಹ ಸೇವೆಗಳ ಮೇಲೂ ಅಡ್ಡ ಪರಿಣಾಮ ಬೀರಬಲ್ಲುದು.
ಈಗ ತಂತ್ರಾಂಶದ ವಿರುದ್ಧ ಹಾಲಿವುಡ್ ಕೋರ್ಟು ಕಟಕಟೆ ಹತ್ತಿದೆ. ಹಕ್ಕುಸ್ವಾಮ್ಯ ಕಾಯಿದೆಯನ್ನು ತಂತ್ರಾಂಶ ಉಲ್ಲಂಘಿಸುತ್ತದೆ ಎಂದು ಹಾಲಿವುಡ್ ವಾದಿಸಿದೆ. ಹಿಂದೆ ಸಂಗೀತ ಕಂಪೆನಿಗಳಿಗೆ ತಲೆನೋವು ತಂದಿದ್ದ ಕಡತ ವಿನಿಮಯ ತಂತ್ರಾಂಶ ನ್ಯಾಪ‌ಸ್ಟರ್ ಎಂಬ ತಂತ್ರಾಂಶದ ವಿರುದ್ಧ ತೀರ್ಪು ನೀಡಿದ್ದ ನ್ಯಾಯಾಧೀಶರ ಮುಂದೆ ಪ್ರಕರಣ ವಿಚಾರಣೆಗೆ ಬರಲಿದೆ.
---------------------------------------------------------------------
ಯಾಹೂ ಜಿಯೋಸಿಟೀಸ್ ಸೇವೆಗೆ ಮಂಗಳ

ಯಾಹೂ ಕಂಪೆನಿಯು ಜನರ ಅಂತರ್ಜಾಲ ತಾಣಗಳನ್ನು ರೂಪಿಸಿ,ಅವನ್ನು ಕಾಯ್ದುಕೊಳ್ಳಲು ಯಾಹೂ ಜಿಯೋಸಿಟೀಸ್ ಎಂಬ ಸೇವೆಯನ್ನು ನೀಡುತ್ತಿದೆ. ಒಂಭತ್ತು ವರ್ಷಗಳ ಹಿಂದೆ ಈ ಕಂಪೆನಿಯನ್ನು ಯಾಹೂ ಸುಮಾರು ಮೂರೂವರೆ ಬಿಲಿಯನ್ ಡಾಲರು ತೆತ್ತುಖರೀದಿಸಿತ್ತು. ಉಚಿತವಾಗಿ ಅಂತರ್ಜಾಲ ಪುಟಗಳನ್ನು ರಚಿಸಿ,ಅವನ್ನು ಕಾಯ್ದುಕೊಂಡು ಬರುವ ಸೇವೆಯನ್ನು ನೀಡಿ ಯಾಹೂ ಬಹು ಜನಪ್ರಿಯವಾಯಿತಾದರೂ, ಈ ಸೇವೆಯ ಮೂಲಕ ಆದಾಯವನ್ನು ನಿರೀಕ್ಷಿಸಿದ ಕಂಪೆನಿಯ ಲೆಕ್ಕಾಚಾರ ಹುಸಿಯಾಯಿತು.ಪರಿಣಾಮ, ಜಿಯೋಸಿಟೀಸನ್ನು ಮುಂದುವರಿಸಿಕೊಂಡು ಬರುವುದು ಯಾಹೂ ಕಂಪೆನಿಗೆ ಬಿಳಿ ಆನೆಯನ್ನು ಸಾಕುವಷ್ಟೇ ಕಠಿನವಾಗಿದೆ. ಈಗ ಯಾಹೂ, ಈ ಸೇವೆಯನ್ನು ನಿಲ್ಲಿಸಲು ನಿರ್ಧರಿಸಿದೆ. ಇನ್ನು ಮುಂದೆ ಹೊಸ ಚಂದಾದಾರರನ್ನು ಸೇರಿಸಿಕೊಳ್ಳದಿರಲು ಕಂಪೆನಿ ತೀರ್ಮಾನಿಸಿದೆ.ಆದರೆ ಈಗಿರುವ ಚಂದಾದಾರರಿಗೆ ಸ್ವಲ್ಪ ಸಮಯದ ಮಟ್ಟಿಗೆ ಸೇವೆಯನ್ನು ಮುಂದುವರಿಸಿ,ನಂತರ ಅವರನ್ನು ತನ್ನ ಪಾವತಿ ಸೇವೆಗೆ ನೋಂದಾಯಿಸಿಕೊಳ್ಳುವ ಹಂಚಿಕೆ ಕಂಪೆನಿಯದ್ದು. ಇತ್ತೀಚೆಗೆ ಯಾಹೂ ತನ್ನ "ಬ್ರೀಫ್‌ಕೇಸ್" ಎನ್ನುವ ಸೇವೆಯನ್ನೂ ನಿಲ್ಲಿಸಿತ್ತು. ಈ ಸೇವೆಯ ಮೂಲಕ ಅಂತರ್ಜಾಲದಲ್ಲಿ ಕಡತಗಳನ್ನು ಉಳಿಸಲು ಸ್ಮರಣಸಾಮರ್ಥ್ಯವನ್ನು ಒದಗಿಸುವ ಸೇವೆ ಲಭ್ಯವಾಗುತ್ತಿತ್ತು.
------------------------------------------------------------------------
ಅಪರೂಪಕ್ಕೆ ಮೈಕ್ರೋಸಾಫ್ಟ್ ಲಾಭಾಂಶದಲ್ಲಿ ಇಳಿಕೆ
ಮೈಕ್ರೋಸಾಫ್ಟ್ ಕಂಪೆನಿಯನ್ನೂ ಆರ್ಥಿಕ ಹಿಂಜರಿತ ಕಾಡದೆ ಬಿಟ್ಟಿಲ್ಲ. ಇಪ್ಪತ್ತಮೂರು ವರ್ಷಗಳಲ್ಲೇ ಮೊದಲ ಬಾರಿಗೆ ಕಂಪೆನಿಯ ಲಾಭಾಂಶದಲ್ಲಿ ಶೇಕಡಾ ಮೂವತ್ತೆರಡು ಇಳಿಕೆಯಾಗಿದೆ. ಪ್ರಸಕ್ತ ವರ್ಷದ ನಾಲ್ಕನೇ ಪಾದದಲ್ಲಿ ಕಂಪೆನಿಯ ನಿವ್ವಳ ಲಾಭ ಹತ್ತಿರ ಹತ್ತಿರ ಮೂರು ಬಿಲಿಯನ್ ಡಾಲರು. ಕಳೆದ ವರ್ಷವಿದು ನಾಲ್ಕೂವರೆ ಬಿಲಿಯನ್ ಡಾಲರು ಸಮೀಪವಿತ್ತು. ಕಂಪೆನಿಯ ಆದಾಯದಲ್ಲೂ ಇಳಿಕೆಯಾಗಿದೆ. ಆರ್ಥಿಕ ಹಿನ್ನಡೆಯ ಕಾರಣ ಕಂಪೆನಿಗಳು ಮತ್ತು ಜನರು ತಮ್ಮ ಐಟಿ ಖರ್ಚನ್ನು ಕಡಿತ ಮಾಡಿದುದರ ನೇರ ಪರಿಣಾಮವಿದು ಎನ್ನಲಾಗಿದೆ. ಭಾರತದಲ್ಲೂ ಇನ್ಫೋಸಿಸ್, ಟಿಸಿಎಸ್ ಸೇರಿದಂತೆ ಐಟಿ ಕಂಪೆನಿಗಳು ಹಿನ್ನಡೆ ಕಂಡಿರುವ ಸುದ್ದಿ ಈಗ ಹಳತಾಗಿದೆ.
-------------------------------------------------------------------
ಭೂಮಿಯ ಹವಾಮಾನವನ್ನು ನಾವು ನಿಯಂತ್ರಿಸಬಹುದೇ?
ಭೂಮಿಯ ತಾಪಮಾನದಲ್ಲಿ ಆಗುತ್ತಿರುವ ಏರಿಕೆಗೆ ಮಾನವನ ಚಟುವಟಿಕೆಗಳು ಕಾರಣ ಎನ್ನುವುದಾದರೆ,ಭೂಮಿಯ ಹವಾಮಾನವನ್ನು ನಾವು ನಿಯಂತ್ರಿಸಬಹುದು ಎನ್ನಬಹುದಲ್ಲವೇ? ನಮ್ಮ ಕೈಗಾರಿಕೆಗಳು,ವಾಹನಗಳು ಉಗುಳುವ ಅನಿಲಗಳು ಭೂಮಿಯ ವಾತಾವರಣವನ್ನು ಪ್ರವೇಶಿಸಿದ ಸೂರ್ಯರಶ್ಮಿಯನ್ನು ಪ್ರತಿಫಲಿಸಿ, ಪರಿಣಾಮವಾಗಿ ಭೂಮಿಯ ಶಾಖ ಏರುತ್ತದೆ ಎನ್ನಲಾಗಿದೆ. ಹಾಗಾದರೆ, ಗಂಧಕದ ಹೊಗೆಯಂತದ್ದನ್ನು ಹಬ್ಬಿಸಿ, ವಾತಾವರಣವನ್ನು ಮಬ್ಬುಗೊಳಿಸಿ ಸೂರ್ಯರಶ್ಮಿಯನ್ನು ತಡೆಯುವ ವಿಧಾನವನ್ನು ಬಳಸಿ, ಭೂಮಿಯನ್ನು ತಂಪು ಮಾಡುವಂತಹ ತಂತ್ರ ಬಳಸಬಾರದೇಕೆ ಎಂದು ಯೋಚಿಸುವ ವಿಜ್ಞಾನಿಗಳಿದ್ದಾರೆ.ಹಾಗೆಯೇ ಚಂಡಮಾರುತವನ್ನುಂಟು ಮಾಡುವ ವಾಯುಭಾರ ಒತ್ತಡದ ವ್ಯತ್ಯಾಸವನ್ನು ಮೈಕ್ರೋವೇವ್ ಶಕ್ತಿ ಬಳಸಿ, ಬದಲಾಯಿಸಿ, ಚಂಡಮಾರುತದ ಪರಿಣಾಮ ಕಡಿಮೆ ಮಾಡುವ ತಂತ್ರದ ಬಳಕೆ ಬಗ್ಗೆಯೂ ಯೋಚನೆ ಸಾಗಿದೆ.
udayavani
*ಅಶೋಕ್‌ಕುಮಾರ್ ಎ

Wednesday, April 22, 2009

ದಶಲಕ್ಷ ಹಿಂಬಾಲಕರತ್ತ ಸಿಎನೆನ್

ದಶಲಕ್ಷ ಹಿಂಬಾಲಕರತ್ತ ಸಿಎನೆನ್
ಸಿ ಎನ್ ಎನ್ ಸುದ್ದಿ ಚಾನೆಲ್ ಟ್ವಿಟರ್ ಖಾತೆ ಹೊಂದಿದೆ. ಇದರ ಬಿಸಿಬಿಸಿ ಸುದ್ದಿ ಟ್ವಿಟರ್ ಖಾತೆಯು ಈಗ ದಶಲಕ್ಷ ಚಂದಾದಾರರನ್ನು ಹೊಂದುವತ್ತ ದಾಪುಗಾಲಿಟ್ಟಿದೆ.ಬುಧವಾರದ ವೇಳೆಗೆ ಒಂಭತ್ತು ದಶಲಕ್ಷ ಚಂದಾದಾರರನ್ನು ಹೊಂದಿದ್ದ ಶುಕ್ರವಾರದ ವೇಳೆಗೆ ದಶಲಕ್ಷದ ಸಂಖ್ಯೆ ತಲುಪುವ ಆಶಾಭಾವನೆ ಇತ್ತು.ದಶಲಕ್ಷ ಸಂಖ್ಯೆ ಹಿಂಬಾಲಕರನ್ನು ಹೊಂದಿರುವ ಖಾತೆಗಳು ಬ್ರಿಟ್ನಿ ಸ್ಪಿಯರ್ ಮತ್ತು ಆಸ್ಟನ್ ಕುಚರ್ ಅವರ ಹೆಸರುಗಳಲ್ಲಿದೆ. ಅವರುಗಳು ಅತ್ಯಧಿಕ ಟ್ವಿಟರ್ ಖಾತೆ ಹೊಂದಿದವರ ಪಟ್ಟಿಯಲ್ಲಿ ಸಿಎನೆನ್ ನಂತರದ ಸ್ಥಾನಗಳಲ್ಲಿದ್ದಾರೆ.ಆಸ್ಟನ್ ಅಂತೂ ಸಿಎನೆನಿಗಿಂತ ತನ್ನ ಖಾತೆಗೆ ಮೊದಲು ದಶಲಕ್ಷ ಹಿಂಬಾಲಕರು ಬಂದರೆ ತಾನು ಹತ್ತು ಸಾವಿರ ಸೊಳ್ಳೆ ಪರದೆಗಳನ್ನು ದಾನ ಮಾಡಿ ಮಲೇರಿಯಾ ನಿರ್ಮೂಲನೆ ಚಳುವಲಿಗೆ ಸಹಾಯ ಮಾಡಲಿದ್ದೇನೆ ಎಂದು ಪ್ರಕಟಿಸಿದ್ದಾರೆ. ಹಾಗಾಗದೆ ಸಿಎನೆನ್ ಮೊದಲು ಗುರಿ ಅಲುಪಿದರೆ ಅವರು ನೀಡುವ ಸೊಳ್ಳೆ ಪರದೆಗಳ ಸಂಖ್ಯೆ ಬರೇ ಒಂದು ಸಾವಿರ. ತಾನು ಮೊದಲು ಸಾಧನೆ ಮಾಡಿದರೆ ತಾನೂ ಸೊಳ್ಳೆ ಪರದೆಗಳನ್ನು ದಾನ ನೀಡಲು ಸಿಎನೆನ್ ಮುಂದೆ ಬಂದಿದೆ.
-------------------------------------------------
ಅಂಟಾರ್ಕ್ಟಿಕಾದ ಹತ್ತು ಸಾವಿರ ಆಯುಸ್ಸಿನ ಮಂಜುಗಡ್ಡೆ ಕರಗಿತು
ಜಾಗತಿಕ ಬಿಸಿಯೇರಿಕೆಯ ಪರಿಣಾಮವೋ ಎನೋ ಎನ್ನುವಂತೆ ಅಂಟಾರ್ಕಟಿಕಾದ ಹತ್ತು ಸಾವಿರ ವರ್ಷಗಳ ಕಾಲ ಕರಗದೆ ಇದ್ದ ಮಂಜುಗಡ್ಡೆ ಸೇತುವೆಯು ಮುರಿದ ವಿಷಯವು ಉಪಗ್ರಹ ಚಿತ್ರಗಳು ದೃಢ ಪಡಿಸಿವೆ.ತಕ್ಷಣವೇ ಅಮೆರಿಕಾವು ಜಗತ್ತಿನ ಹವಾಮಾನದಲ್ಲಿ ಆಗುತ್ತಿರುವ ಏರುಪೇರಿನ ಬಗ್ಗೆ ತಾನು ಕ್ರಮ ಕೈಗೊಳ್ಳಲು ಬದ್ಧ ಎನ್ನುವುದನ್ನು ದೃಡಪಡಿಸಿತು.ಕಳೆದ ವರ್ಷದಲ್ಲೇ ಮಂಜುಗಡ್ಡೆಯು ಶೇಕಡಾ ಹದಿನೈದು ಭಾಗ ಕರಗಿದೆ.ಉತ್ತರಧ್ರುವದ ಆರ್ಕ್‌ಟಿಕ್ ಪ್ರದೇಶದ ಮಂಜುಗಡ್ಡೆಯೂ ಕರಗುವುದರಲ್ಲಿ ಹಿಂದೆ ಬಿದ್ದಿಲ್ಲ ಎನ್ನುವುದು ಚಿಂತೆಯ ವಿಷಯವಾಗಿದೆ.
-----------------------------------------------
ಬಾಹ್ಯಾಕಾಶದಲ್ಲಿ ವಿದ್ಯುತ್ ಸ್ಥಾವರ!
ಇನ್ನೂರು ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಸ್ಥಾವರವೊಂದನ್ನು ಬಾಹ್ಯಾಕಾಶದಲ್ಲಿ ಸ್ಥಾಪಿಸಲು ಸೊಲಾರೆನ್ ಕಂಪೆನಿಯು ಯೋಜಿಸಿದೆ. ಕ್ಯಾಲಿಫೋರ್ನಿಯಾಕ್ಕೆ ವಿದ್ಯುಚ್ಛಕ್ತಿ ಒದಗಿಸಲು ಸ್ಥಾವರ ಬಳಕೆಯಾಗಲಿದೆ.ಉಪಗ್ರಹಗಳ ಸೌರ ಫಲಕಗಳ ಮೂಲಕ ಸೌರಶಕ್ತಿಯನ್ನು ವಿದ್ಯುತ್ ಅಯಸ್ಕಾಂತೀಯ ಕಿರಣಗಳಾಗಿ ಮಾರ್ಪಡಿಸಿ,ಅದನ್ನು ಕೆಳಗಿನ ಕಕ್ಷೆಯಲ್ಲಿರುವ ವಿದ್ಯುತ್ ಸ್ವೀಕಾರ ಕೇಂದ್ರಕ್ಕೆ ಕಳುಹಿಸಿ, ಅಲ್ಲಿಂದ ಅದನ್ನು ವಿದ್ಯುತ್ ಆಗಿ ಮಾರ್ಪಡಿಸುವ ಯೋಜನೆಯನ್ನು ಸೊಲಾರೆನ್ ಮಾಡಿ,ಅನುಮತಿಗೆ ಕಾಯುತ್ತಿದೆ.ವಿದ್ಯುತ್ ಅಯಸ್ಕಾಂತೀಯ ಕಿರಣಗಳ ಮೂಲಕ ಶಕ್ತಿಯನ್ನು ಕಳುಹಿಸುವ ಪ್ರಾಯೋಗಿಕ ಯೋಜನೆ ಈಗಾಗಲೇ ಸಣ್ಣ ಮಟ್ಟದಲ್ಲಿ ನಡೆದಿದೆ. ಹವಾಯಿ ದ್ವೀಪಗಳ ಸಮೂಹದ ಎರಡು ದ್ವೀಪಗಳ ನಡುವೆ ತೊಂಭತ್ತು ಕಿಲೋಮೀಟರ್ ದೂರಕ್ಕೆ ಈ ರೀತಿ ಶಕ್ತಿಯ ಕಳುಹಿಸುವ ಪರೀಕ್ಷೆ ಯಶಸ್ವಿಯಾಗಿದೆ.
----------------------------------------------
ಕನ್ನಡದ ವಿಜ್ಞಾನ-ತಂತ್ರಜ್ಞಾನ ಬ್ಲಾಗ್‌ಗಳು
ಕನ್ನಡದಲ್ಲಿ ಬ್ಲಾಗ್ ಬರವಣಿಗೆ ಸಮೃದ್ಧವಾಗಿ ಬೆಳೆದಿದೆ. ಆದರೆ ವಿಜ್ಞಾನ ತಂತ್ರಜ್ಞಾನ ವಿಷಯದ ಬಗೆಗಿರುವ ಬ್ಲಾಗುಗಳ ಸಂಖ್ಯೆ ಬಹು ಕಡಿಮೆ.ಇ-ಜ್ಞಾನ ಬ್ಲಾಗ್‌ನ ಶ್ರೀನಿಧಿಯವರು ತಮ್ಮ ಬ್ಲಾಗ್ ಬರಹದಲ್ಲಿ "ಉದಯವಾಣಿ"ಯ ವಿಜ್ಞಾನ ಬರಹಗಳ ಬ್ಲಾಗ್ "ಅಶೋಕ್‌ವರ್ಲ್ಡ್"(ashok567.blogspot.com),ಪವನಜರ ವಿಶ್ವಕನ್ನಡ, ಕೊಳ್ಳೆಗಾಲ ಶರ್ಮರ "ಇಂದಿನ ವಿಜ್ಞಾನ",ಕನ್ನಡಪ್ರಭ ಲೇಖನಗಳು,ನೆಟ್‌ನೋಟ,ತತ್ತ್ವಜ್ಞಾನಿ,ಕುತೂಹಲಿ,ಖಗೋಳ,ರಾಧಾಕೃಷ್ಣ ಉವಾಚ,ವಿಸ್ಮಯ + ಮುಂತಾದ ಕೆಲ ಬ್ಲಾಗುಗಳನ್ನು http://e-jnana.blogspot.comನಲ್ಲಿ ಪಟ್ಟಿ ಮಾಡಿದ್ದಾರೆ. ಈ ಬ್ಲಾಗುಗಳ ಕೊಂಡಿಗಳನ್ನು ಇ-ಜ್ಞಾನ ಬ್ಲಾಗಿನ ಮೂಲಕ ಪಡೆಯಬಹುದು.
*ಅಶೋಕ್‌ಕುಮಾರ್ ಎ

Monday, April 13, 2009

ಕಾರ್ಡ್‌ಬೋರ್ಡ್ ಪೆಟ್ಟಿಗೆ ಬಳಸಿ ಸೌರ ಒಲೆ


ಕಾರ್ಡ್‌ಬೋರ್ಡ್ ಪೆಟ್ಟಿಗೆ ಬಳಸಿ ಸೌರ ಒಲೆ
ಅಗ್ಗದ ಸೌರ ಒಲೆಯನ್ನು ತಯಾರಿಸಲು ಬೇಕಾದುದು ಎರಡು ಕಾರ್ಡ್‌ಬೋರ್ಡ್ ಪೆಟ್ಟಿಗೆಗಳು ಮಾತ್ರ.ಒಂದು ಪೆಟ್ಟಿಗೆ ಸಣ್ಣದು, ಇನ್ನೊಂದು ತುಸು ದೊಡ್ಡದು. ಸಣ್ಣ ಪೆಟ್ಟಿಗೆಯನ್ನು ದೊಡ್ಡದರೊಳಗೆ ಇರಿಸಬೇಕು. ದೊಡ್ಡದರ ಒಳಮೈಗೆ ಕಪ್ಪು ಬಣ್ಣವನ್ನೂ, ಸಣ್ಣದರ ಹೊರಮೈಗೆ ಅಲ್ಯುಮೀನಿಯಂ ಹಾಳೆಯನ್ನು ಅಂಟಿಸಿದರೆ ಚೆನ್ನ. ಇದನ್ನು ಗಾಜು ಮುಚ್ಚಿ ಬಿಸಿಲಿನಲ್ಲಿ ಇರಿಸಬೇಕು-ಪಾತ್ರೆಯನ್ನು ಸಣ್ಣ ಪೆಟ್ಟಿಗೆಯ ಒಳಗೆ ಇರಿಸಲು ಮರೆಯದಿರಿ. ಸೂರ್ಯನ ಕಿರಣಗಳು ಪೆಟ್ಟಿಗೆ ಪ್ರವೇಶಿಸಿ,ಅಲ್ಯುಮೀನಿಯಂ ಹಾಳೆಯ ಮೂಲಕ ಒಳಗೇ ಪ್ರತಿಫಲಿತವಾಗುತ್ತದೆ.ಕಪ್ಪುಬಣ್ಣ ಈ ರಶ್ಮಿಯ ಶಾಖವನ್ನು ಹೀರಿಕೊಂಡು,ಪಾತ್ರೆಗೆ ಬಿಟ್ಟುಕೊಡುವುದರ ಮೂಲಕ ಪಾತ್ರೆ ಕಾಯುತ್ತದೆ.ನೀರನ್ನು ಕುದಿಸಲೂ ಈ ವ್ಯವಸ್ಥೆ ಸಮರ್ಥ. ದುಡ್ಡುಕೊಟ್ಟು ತೆಗೆದುಕೊಂಡರೂ, ಈ ಸೌರ ಒಲೆಯ ಬೆಲೆ ಇನ್ನೂರೈವತ್ತು ರುಪಾಯಿ ದಾಟದು.ಜಾನ್ ಬೋಮರ್ ಎನ್ನುವಾತ ಈ ವಿನ್ಯಾಸ ಪ್ರದರ್ಶಿಸಿ ಸ್ಪರ್ಧೆಯೊಂದರಲ್ಲಿ ಬಹುಮಾನಗಿಟ್ಟಿಸಿಕೊಂಡಿದ್ದಾನೆ.
-------------------------------------
ಜೈವಿಕ ಇಥೆನಾಲ್ ಬಳಕೆ,ನೀರಿಗೆ ಅಭಾವ?
ಒಂದು ಗ್ಯಾಲನ್ ಜೈವಿಕ ಇಥೆನಾಲ್ ತಯಾರಿಸಲು ಎರಡು ಸಾವಿರದ ನೂರು ಗ್ಯಾಲನ್ ನೀರು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಮೆಕ್ಕೆಜೋಳದಿಂದ ಜೈವಿಕ ಇಥೆನಾಲ್ ತಯಾರಿಸುವಾಗ ಅದರ ಬೆಳೆಯಿಂದ ತೊಡಗಿ, ಇಂಧನ ತಯಾರಿಯ ವಿವಿಧ ಹಂತಗಳಲ್ಲಿ ನೀರು ಬೇಕೇ ಬೇಕು. ಇದನ್ನೆಲ್ಲ ಲೆಕ್ಕ ಹಾಕಿದರೆ, ಕೆಲವು ನೀರಾವರಿ ಹೊಲಗಳಲ್ಲಿ ಮೆಕ್ಕೆಜೋಳ ಬೆಳೆ ತೆಗೆಯಲು ಬಹಳ ನೀರು ಬೇಕಾಗುತ್ತದೆ. ಒಣ ನೀರಾವರಿಯ ಪ್ರದೇಶಗಳಲ್ಲಿ ಇನೂರು ಗ್ಯಾಲನ್ ನೀರಿನಲ್ಲೇ ಇಂಧನ ತಯಾರಾಗಬಹುದು. ಆದರೂ ಜೈವಿಕ ಇಥೆನಾಲ್ ಪರಿಸರ ಪ್ರಿಯ ಎನ್ನುವ ಬಿರುದು ಈ ಇಂಧನಕ್ಕೆ ಸೂಕ್ತವೇ ಎನ್ನುವುದು ವಿಚಾರಕ್ಕೆ ಸೂಕ್ತವಾದ ವಿಷಯ. ನೀರಿನ ಅಭಾವದ ಈ ದಿನಗಳಲ್ಲಿ,ಇಷ್ಟು ನೀರು ಬೇಡುವ ಬೆಳೆಯನ್ನು ಬಳಸಿ ಇಂಧನ ಪಡೆಯುವುದು ಎಷ್ಟು ಸಮಂಜಸ? ಜತೆಗೆ ರಾಸಾಯಿನಿಕ ಗೊಬ್ಬರಗಳನ್ನು ಬೆಳೆಗೆ ಬಳಸಬೆಕಾಗುತ್ತದೆ-ಜತೆಗೆ ಕೀಟನಾಶಕಗಳನ್ನೂ ಬಳಸುವುದು ಅನಿವಾರ್ಯ!
-------------------------------------
ಅಂತರ್ಜಾಲದ ಮೂಲಕ ವೈನ್ ರುಚಿ ಬಗ್ಗೆ ಟೀಕೆ
ಚಹಾ,ವೈನ್ ಇಂತಹ ಪಾನೀಯಗಳನ್ನು ವರ್ಗೀಕರಿಸಲು,ಅವುಗಳ ಸ್ವಾದವನ್ನು ಪರೀಕ್ಷಿಸಲು ಕಂಪೆನಿಗಳು ವೃತ್ತಿಪರರನ್ನು ನೇಮಿಸಿಕೊಳ್ಳುತ್ತವೆ. ಇವರು ಕಂಪೆನಿಯ ಪಾನೀಯಗಳು ತಯಾರಾದೊಡನೆ ಅವುಗಳ ರುಚಿ ನೋಡಿ,ಅವುಗಳನ್ನು ವರ್ಗೀಕರಿಸಲು ನೆರವಾಗುತ್ತಾರೆ. ಈಗಿನ ಆರ್ಥಿಕ ಹಿನ್ನಡೆಯ ದಿನಗಳಲ್ಲಿ ಅಂತಹ ನೌಕರರನ್ನಿಟ್ಟು ಕೊಳ್ಳುವುದು ಕಂಪೆನಿಗಳಿಗೆ ಕಷ್ಟವಾಗುತ್ತಿದೆ.ಅದರಲ್ಲೂ ಭಾರೀ ಹಿನ್ನಡೆ ಅನುಭವಿಸುತ್ತಿರುವ ವೈನ್ ಕಂಪೆನಿಗಳು ಗತ್ಯಂತರವಿಲ್ಲದೆ. ತಂತ್ರಜ್ಞಾನದ ಸವಲತ್ತುಗಳನ್ನು ಬಳಸಿ, ಅಂತಹ ನೌಕರರ ಸೇವೆಯನ್ನು ನಿಲ್ಲಿಸಲು ತೊಡಗಿವೆ.ಅಂತರ್ಜಾಲದ ಮೂಲಕ ವೈನ್ ರುಚಿ ನೋಡುವವರ ಟೀಕೆಗಳನ್ನು ಅರಿಯುವ ವ್ಯವಸ್ಥೆಯನ್ನವು ಮಾಡಿಕೊಂಡಿವೆ.
ಈ ವ್ಯವಸ್ಥೆಯಲ್ಲಿ ವೈನ್ ಬಾಟಲಿಗಳನ್ನು ಆಯ್ದ ವ್ಯಕ್ತಿಗಳಿಗೆ ಕಳುಹಿಸಲಾಗುತ್ತದೆ.ವೆಬ್‌ಕ್ಯಾಮ್ ಮೂಲಕ ಅಂತರ್ಜಾಲದಲ್ಲಿ ವಿಡಿಯೋ ಕಾನ್ಫರೆನ್ಸ್ ಏರ್ಪಡಿಸಿ, ಕಂಪೆನಿಯು ಅವರ ಅನಿಸಿಕೆಗಳನ್ನು ಅರಿಯುತ್ತದೆ. ಕ್ಯಾಲಿಫೊರ್ನಿಯಾದ ವೈನ್ ಕಂಪೆನಿಯೊಂದು ಇಂತಹ ಅಗ್ಗದ ವ್ಯವಸ್ಥೆಯೊಂದನ್ನು ರೂಪಿಸಿಕೊಂಡು ಪ್ರಯೋಗ ನಡೆಸಿದೆ. ವೈನ್ ಬಾಟಲಿ ನೀಡಿ, ಪರಿಣತರ ಸೇವೆ ಪಡೆಯುವ ಈ ವಿಧಾನ ಅಗ್ಗವಲ್ಲದೆ ಮತ್ತೇನು?
-----------------------------------------------------------------
ಮೊಬೈಲಿನಲ್ಲಿ ವೀಸಾ ಕ್ರೆಡಿಟ್ ಕಾರ್ಡ್
ಮಲೇಶ್ಯಾದ ಬಳಕೆದಾರರಿಗೆ ವೀಸಾ ಕಂಪೆನಿ ಹೊಸ ಸೇವೆ ಆರಂಭಿಸಿದೆ.ಇದರಲ್ಲಿ, ಮೊಬೈಲ್ ಹ್ಯಾಂಡ್‌ಸೆಟ್ ಕ್ರೆಡಿಟ್ ಕಾರ್ಡಿನಂತೆ ಕೆಲಸ ಮಾಡುತ್ತದೆ.ನೋಕಿಯಾ 6212 ಹ್ಯಾಂಡ್‌ಸೆಟ್ ಹೊಂದಿದ್ದರೆ ಈ ಸೇವೆ ಲಭ್ಯ. ಈ ಮೊಬೈಲ್ ಸೆಟ್ಟಿನಲ್ಲಿ ಒಂದು ವಿಶೇಷ ಚಿಪ್ ಅನ್ನು ಅಳವಡಿಸಲಾಗಿದೆ. ಇದರಲ್ಲಿ ವೀಸಾದ ಕ್ರೆಡಿಟ್‌ಕಾರ್ಡ್‌ನ ಮಾಹಿತಿಯನ್ನು ದಾಸ್ತಾನು ಮಾಡಲಾಗುತ್ತದೆ. ಅಂಗಡಿಯಲ್ಲಿ ಹಣ ಪಾವತಿಸಲು, ಸಾಧನವೊಂದರ ಬಳಿಗೆ ಈ ಸೆಟ್ ಅನ್ನು ಒಯ್ಯಬೇಕು. ಸೆಟ್‍ನ ಚಿಪ್, ನಿಸ್ತಂತು ಸಂದೇಶ ರವಾನಿಸಿ, ಸಾಧನಕ್ಕೆ ತನ್ನ ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ತಿಳಿಸುತ್ತದೆ. ಎಷ್ಟು ಹಣ ಪಾವತಿಯಾಗಬೇಕೆಂದು ಗ್ರಾಹಕ ಬಯಸುತ್ತನೋ ಅಷ್ಟು ಹಣ ಆತನ ಖಾತೆಯಿಂದ ವಸೂಲಾಗುತ್ತದೆ. ಈ ಬಗ್ಗೆ ವಿವರಗಳು ಮೊಬೈಲಿಗೆ ಮಾಮೂಲಿ ಕಿರುಸಂದೇಶಗಳ ಮೂಲಕವೇ ಬರುತ್ತದೆ.
ಮೊಬೈಲ್ ಸೆಟ್ ಕದ್ದು ಹೋದರೆ,ಕ್ರೆಡಿಟ್ ಕಾರ್ಡ್ ದುರುಪಯೋಗವಾಗುವ ಭೀತಿಯಿದೆಯಲ್ಲಾ ಎಂದಿರಾ? ಇದಕ್ಕೂ ಪರಿಹಾರ ರೂಪಿಸಲಾಗಿದೆ. ಬೇಕೆಂದರೆ, ಗುಪ್ತಪದದ ಮೂಲಕ ಚಿಪ್ ಅನ್ನು ಸುಭದ್ರಗೊಳಿಸಬಹುದು. ಗುಪ್ತಪದ ನೀಡಿದರೆ ಮಾತ್ರ ಮುಂದುವರಿಯುವಂತೆ ಮಾಡುವ ವ್ಯವಸ್ಥೆಯೂ ಇದೆ.
-----------------------------------------------------------
ಮೊಬೈಲ್ ಸೆಟ್‌ಗೆ ಅಗ್ನಿ ಪರೀಕ್ಷೆ
ಮೊಬೈಲ್ ಸೆಟ್‌ಗಳು ಜನರ ಜೀವನದಲ್ಲಿ ಹಾಸುಹೊಕ್ಕಾಗಿವೆ. ಗರೀಬರಿಂದ ಅಮೀರರವರೆಗೆ ಎಲ್ಲರೂ ಮೊಬೈಲ್ ಬಳಸುತ್ತಾರೆ. ಹಾಗಾಗಿ ಅದು ವಿವಿಧ ಪರಿಸ್ಥಿತಿಗಳಲ್ಲಿ ಬಳಸಲ್ಪಡುತ್ತದೆ. ಜನರ ದುರ್ಬಳಕೆಯನ್ನು ಸೆಟ್ ತಡೆದುಕೊಳ್ಳುತ್ತದೋ ಎನ್ನುವುದನ್ನು ಪರೀಕ್ಷಿಸಲು ವಿವಿಧ ನಮೂನೆಯ ಪರೀಕ್ಷೆಗಳಿಗೆ ಅವನ್ನು ಒಡ್ಡಲಾಗುತ್ತದೆ. ಈಗ ನೋಕಿಯಾದಂತಹ ಕಂಪೆನಿಗಳು ತಮ್ಮ ಪ್ರಯೋಗಾಲಯದಲ್ಲಿ ನಡೆಸುವ ಪರೀಕ್ಷೆಗಳನ್ನು ತೋರಿಸಲು ಮುಂದಾಗಿರುವುದರಿಂದ ಆ ಬಗ್ಗೆ ವಿವರಗಳು ಲಭ್ಯವಿವೆ.
ಮೊಬೈಲ್ ಸೆಟ್‌ಗಳನ್ನು ಕಾಂಕ್ರೀಟಿನ ಮೇಲ್ಮೈ ಮೇಲೆ ಒಂದೂವರೆ ಮೀಟರುಗಳ ಎತ್ತರದಿಂದ ಹಾಕಿ ಪರೀಕ್ಷಿಸುವುದು, ಫ್ರೀಜರ್-ಒವನ್ ಇವುಗಳಲ್ಲಿಟ್ಟು, ವಿವಿಧ ತಾಪಮಾನಗಳಲ್ಲಿ ಅವುಗಳು ಕೆಡುತ್ತವೆಯೋ ಎಂದು ನೋಡುವಂತಹ ಮಾಮೂಲಿ ಪರೀಕ್ಷೆಗಳಿಗವನ್ನು ಒಡ್ದಲಾಗುತ್ತದೆ. ಜತೆಗೆ ಸೆಟ್‌ಗಳನ್ನು ಪ್ಯಾಂಟ್ ಕಿಸೆಯಿಂದ ತೆಗೆಯುವಾಗ ಅವುಗಳಿಗೆ ಹಾನಿ ಆಗುತ್ತದೆಯೋ ಎಂದು ನೋಡಲು ಸಾವಿರಾರು ಬಾರಿ ಅವನ್ನು ತೆಗೆದು ನೋಡಲು ಜನರನ್ನು ನೇಮಿಸಿಕೊಳ್ಳಲಾಗುತ್ತದೆ. ಅದೇ ರೀತಿ ಚಾರ್ಜರ್‌ಗಳಿಗೆ ಅವನ್ನು ಸಿಕ್ಕಿಸುವಾಗ ಅವುಗಳಿಗೆ ಹಾನಿಯಾಗುತ್ತದೆಯೋ ಎಂಬ ಪರೀಕ್ಷೆಯೂ ಇದೆ. ಇದನ್ನೆಲ್ಲಾ ಯಂತ್ರಗಳಿಂದ ಮಾಡದೆ,ಇದಕ್ಕಾಗಿ ನೇಮಿಸಿಕೊಂಡ ಜನರಿಂದಲೇ ಮಾಡಿಸಲಾಗುತ್ತದೆ.ಜನರು ಪ್ರತಿ ಸಲ ವಿಭಿನ್ನವಾಗಿ ಹ್ಯಾಂಡ್‌ಸೆಟ್‌ಗಲನ್ನು ಬಳಸುವಂತೆ ಯಂತ್ರಗಳು ಮಾಡಲಾರವು ಎನ್ನುವುದಿದಕ್ಕೆ ಕಾರಣ.ನೀರಿನಲ್ಲಿ ಅದ್ದುವುದು, ಬೀಳುವ ನೀರ ಹನಿಗಳಿಗೆ ಅವನ್ನು ಅದ್ದುವ ಪರೀಕ್ಷೆಗಳಿಗೂ ಅವನ್ನು ಒಡ್ಡಲಾಗುತ್ತದೆ.
------------------------------------------------
ಅಶೋಕ್‌ಕುಮಾರ್ ಎ

Monday, April 06, 2009

ಬರಹ8.0

ಬರಹ8.0
ಶೇಷಾದ್ರಿ ವಾಸು ಅವರು ಅಭಿವೃದ್ಧಿ ಪಡಿಸಿದ ಬರಹ ತಂತ್ರಾಂಶವು ಕನ್ನಡಿಗರೆಲ್ಲಾ ಪರಿಚಿತ.ಕಂಪ್ಯೂಟರ್ ಬಳಸುವವರಿಗೆ ಕನ್ನಡದಲ್ಲಿ ಟೈಪಿಸುವಾಗಲೆಲ್ಲಾ ಬರಹ ತಂತ್ರಾಂಶವೇ ಮೊದಲಿಗೆ ನೆನಪಿಗೆ ಬರುವುದು. ಈಗ ಈ ತಂತ್ರಾಂಶದ ಎಂಟನೇ ಆವೃತ್ತಿ ಬಿಡುಗಡೆಯಾಯಿತು. ಇದರಲ್ಲಿ ಬರಹಪ್ಯಾಡ್ ಎನ್ನುವ ತಂತ್ರಾಂಸವೂ ಇದ್ದು, ಯುನಿಕೋಡಿನಲ್ಲಿ ಟೈಪಿಸಲು ಉಪಯುಕ್ತ.ಬರಹ ಡೈರೆಕ್ಟ್ ತಂತ್ರಾಂಶವನ್ನು ಚಾಲೂ ಇಟ್ಟರೆ, ಮೈಕ್ರೋಸಾಫ್ಟ್ ಆಫೀಸು ತಂತ್ರಾಂಶದಲ್ಲೂ ಕನ್ನಡ ಲಿಪಿಯಲ್ಲಿ ಟೈಪಿಸಬಹುದು. ಹೊಸ ಆವೃತ್ತಿಯಲ್ಲಿ ಹಳೆಯದರಲ್ಲಿದ್ದ ತೊಡುಕುಗಳನ್ನು ಸರಿಪಡಿಸಲಾಗಿದೆ.ಬರಹದ ಫಾಂಟುಗಳು ಈಗ ಮುಕ್ತವಾಗಿ ಲಭ್ಯ ಎನ್ನುವುದು ಇನ್ನೊಂದು ವಿಶೇಷ.
--------------------------------------------------
ಗೂಗಲ್ ಮಿಂಚಂಚೆಗೀಗ ಐದು ವರ್ಷ:ಕನ್ನಡ ಸೌಲಭ್ಯ
ಐದು ವರ್ಷದ ಸಂಭ್ರಮಾಚರಣೆಗೋ ಎನ್ನುವಂತೆ ಜಿಮೇಲ್ ಮಿಂಚಂಚೆ ಸೇವೆಯಲ್ಲಿ ಭಾರತೀಯ ಭಾಷೆಗಳಲ್ಲಿ ಟೈಪಿಂಗ್ ಮಾಡಲು ಅನುವು ಮಾಡಿಕೊಡಲಾಗಿದೆ. ಕನ್ನಡ,ಹಿಂದಿಯೂ ಈ ಭಾಷೆಗಳಲ್ಲಿ ಸೇರಿವೆ.ಹೊಸ ಮಿಂಚಂಚೆ ರಚಿಸಲು ಹೊಸ ಪುಟ ತೆರೆದಾಗ ಭಾರತೀಯ ಭಾಷೆಯ ಅಕ್ಷರ ಕಾಣಿಸುತ್ತದೆ. ಅದರ ಪಕ್ಕ ಕ್ಲಿಕಿಸಿದರೆ, ಭಾಷೆಗಳ ಪಟ್ಟಿಯು ಕಾಣಿಸಿಕೊಳ್ಳುತ್ತದೆ. ಬೇಕಾದ ಭಾಷೆಯನ್ನು ಆಯ್ದುಕೊಂಡು ಟೈಪಿಸದರಾಯಿತು.ಮೊದಲಿಗೆ ಇಂಗ್ಲೀಷಿನಲ್ಲೇ ಅಕ್ಷರಗಳು ಮೂಡುತ್ತವೆ. ಸ್ಪೇಸ್ ಬಾರ್ ಕೀಲಿಯನ್ನು ಅದುಮಿದಾಗ, ಟೈಪಿಸಿದ ಪದಕ್ಕೆ ಅನುಗುಣವಾದ ಕನ್ನಡ ಪದ ಮೂಡುತ್ತದೆ. ಕನ್ನಡವನ್ನು ಇಂಗ್ಲಿಷಿನಲ್ಲಿ ಬರೆದಾಗ ಟೈಪಿಸುವಂತೆ ಟೈಪಿಸಿದರಾಯಿತು. ಮೊದಲಿಗೆ ಬಂದ ಪದ ನೀವೆಣಿಸಿದ್ದಲ್ಲವಾದರೆ, ಪದದ ಮೇಲೆ ಕ್ಲಿಕ್ಕಿಸಿದರೆ,ಇನ್ನಿತರ ಆಯ್ಕೆಗಳು ಪ್ರತ್ಯಕ್ಷವಾಗುತ್ತವೆ.ಅವುಗಳಲ್ಲಿಯೂ ನಿಮ್ಮ ಪದ ಇಲ್ಲವಾದರೆ, ತಿದ್ದುವ ಆಯ್ಕೆಯ ಮೇಲೆ ಕ್ಲಿಕ್ಕಿಸಿ,ಕಾಗುಣಿತ ಆಯ್ಕೆಗಳಿಂದ ನಿಮಗೆ ಬೇಕಾದ ಪದವನ್ನು ಮೂಡಿಸಿ.
ಜಿಮೇಲ್ ಆರಂಭವಾದ ದಿನಗಳಲ್ಲಿ ಅಂತರ್ಜಾಲ ಮಿಂಚಂಚೆ ಸೇವೆಗಳಲ್ಲಿ ಬಹು ಕಡಿಮೆ ಸ್ಥಳಾವಕಾಶ ಇತ್ತು.ಪ್ರತಿದಿನ ಮಿಂಚಂಚೆ ನೋಡದಿದ್ದರೆ,ಕೆಲವೇ ದಿನಗಳಲ್ಲಿ ಮಿಂಚಂಚೆಯ ಇನ್‌ಬಾಕ್ಸ್ ತುಂಬಿ ಬಿಡುತ್ತಿತ್ತು.ಈಗ ಮಿಂಚಂಚೆಯಲ್ಲಿ ಸೇರಿಸಬಹುದಾದ ಕಡತಗಳ ಗಾತ್ರವೇ ಇಪ್ಪತ್ತು ಎಂಬಿಯಷ್ಟು!
---------------------------------------------------------
ಟ್ವಿಟರ್ ಮಾರಾಟ?
ಟ್ವಿಟರನ್ನು ಗೂಗಲ್ ಕಂಪೆನಿ ಖರೀದಿಸಲಿದೆ ಎನ್ನುವ ಸುದ್ದಿ ಈಗ ಚಲಾವಣೆಯಲ್ಲಿದೆ.ಐನೂರು ಮಿಲಿಯನ್ ಡಾಲರ್‌ಗಿಂತ ಕಡಿಮೆ ಬೆಲೆಯಲ್ಲಿ ಟ್ವಿಟರ್ ಖರೀದಿಸುವ ಪ್ರಸ್ತಾವವನ್ನು ಗೂಗಲ್ ಮಾಡಿದೆ ಎನ್ನುವ ವದಂತಿಯಿದೆ.ಬಿಸಿ ಬಿಸಿ ಸುದ್ದಿಯು ಮೈಕ್ರೋ ಬ್ಲಾಗರ್ ತಾಣ ಟ್ವಿಟರ್ ಮೂಲಕ ಪ್ರಚಾರವಾಗುತ್ತಿರುತ್ತದೆ. ಆದ್ದರಿಂದ ಅಂತರ್ಜಾಲ ಶೋಧ ಕಾರ್ಯದಲ್ಲಿ ಟ್ವಿಟರ್ ಹೆಚ್ಚು ಪ್ರಸ್ತುತ. ಶೋಧ ಸೇವೆಯಲ್ಲಿ ಅಗ್ರಗಣ್ಯ ಕಂಪೆನಿಯಾಗಿರುವ ಗೂಗಲ್, ಟ್ವಿಟರ್ ಮೇಲೆ ಕಣ್ಣು ಹಾಕಿರುವುದರ ಹಿನ್ನೆಲೆಯಿದು ಎನ್ನುವುದು ಸ್ಪಷ್ಟ.ಟ್ವಿಟರ್ ಕಂಪೆನಿಯ ಇನ್ನೊಂದು ಅಂಗವಾಗಿದ್ದ ಬ್ಲಾಗಿಂಗ್ ಸೇವೆ ಬ್ಲಾಗರ್ ಕೂಡಾ ಗೂಗಲ್ ಖರೀದಿಸಿ ಈಗಾಗಲೇ ಹಲವು ವರ್ಷಗಳುರುಳಿವೆ. ಅರ್ಧಕೋಟಿ ಬಳಕೆದಾರರನ್ನು ಹೊಂದಿರುವ ಟ್ವಿಟರ್,ಜನರನ್ನು ಸೂಜಿಗಲ್ಲಿನಂತೆ ಆಕರ್ಷಿಸಿದರೂ ಕೂಡ,ತಾಣದಲ್ಲಿ ಜಾಹೀರಾತುಗಳುಗಳಿಲ್ಲದೆ ಆದಾಯ ಮೂಲ ಹೆಚ್ಚುತ್ತಿಲ್ಲವೆನ್ನುವುದು,ಕಂಪೆನಿಯ ಒಡೆತನ ಹೊಂದಿದವರಿಗೆ ತಲೆನೋವು ತಂದಿದೆ.
--------------------------------------------------------------------
"ಪತ್ರ ಬರೆದು ಶೋಧ ಸೇವೆ ಕೇಳಿ"
ಗೂಗಲ್ ಎಪ್ರಿಲ್ ತಿಂಗಳಿನಿಂದ ಹೊಸ ಸೇವೆ ಆರಂಭಿಸಿದೆ. ನಿಮಗೆ ಯಾವುದೇ ಪದವನ್ನು ಆಧರಿಸಿ,ಅಂತರ್ಜಾಲ ಪುಟಗಳ ಶೋಧ ಕಾರ್ಯ ಕೈಗೊಳ್ಳಬೇಕಾದರೆ,ನೀವು ಕಂಪ್ಯೂಟರ್ ಬಳಸಬೇಕಿಲ್ಲ.ಗೂಗಲ್ ಕಂಪೆನಿಗೆ ಅಂಚೆಕಾರ್ಡ್ ಬರೆದು ಕೇಳಿದರೂ,ಶೋಧ ಫಲಿತಾಂಶವನ್ನು ತಲುಪಿಸಲಾಗುತ್ತದೆ.
ಹೀಗೆ ಅಂತರ್ಜಾಲ ತಾಣಗಳಲ್ಲಿ ಪ್ರಕಟವಾದಾಗ ಅದನ್ನು ನಂಬದಿರಲು ಕಾರಣವಿಲ್ಲವಷ್ಟೇ. ಯಾಕೆಂದರೆ ಗೂಗಲ್ ಕಂಪೆನಿಯು ದಿನವೂ ಹೊಸ ಹೊಸ ಸುದ್ದಿಗಳನ್ನು ನೀಡುತ್ತಿದೆ.ಆದರಿದು ಎಪ್ರಿಲ್ ಪೂಲ್ ಸುದ್ದಿ.
-------------------------------------
ಮಂಗಳ ಗ್ರಹ ಯಾತ್ರೆಗೆ ರಿಹರ್ಸಲ್!
ಮಾಸ್ಕೋದ ಬಾಹ್ಯಾಕಾಶ ಕೇಂದ್ರದಲ್ಲಿ ನಾಲ್ವರು ಮಂಗಳ ಗ್ರಹ ಯಾತ್ರೆಯ ಸವಾಲುಗಳನ್ನು ಅರಿಯಲು ನೂರೈದು ದಿನಗಳ ಪರೀಕ್ಷೆ ಕೊಟಡಿ ಪ್ರವೇಶಿಸಿದರು. ಭೂಮಿಯಿಂದ ಮಂಗಳ ಗ್ರಹದ ಅನ್ವೇಷಣೆಗೆ ಮಾನವ ಸಹಿತ ಯಾತ್ರೆ ನಿಜವಾಗಲೂ ಇನ್ನೂ ಇಪ್ಪತ್ತು ವರ್ಷಗಳಾದರೂ ಬೇಕಾದೀತು. ಈಗಿನ ತಂತ್ರಜ್ಞಾನ ಅನುವು ಮಾಡುವ ವೇಗದಲ್ಲಿ ಪ್ರವಾಸ ಕೈಗೊಂಡರೆ ಯಾತ್ರೆ ಪೂರ್ಣವಾಗಲು ಒಂದು ಸಾವಿರ ದಿನಗಳಾದರೂ ಬೇಕು. ಅದಕ್ಕೆ ಬರುವ ಖರ್ಚು ಊಹಾನಾತೀತ.ಮಂಗಳ ಗ್ರಹದತ್ತ ಯಾತ್ರೆ ಕೈಗೊಳ್ಳುವವರಿಗೆ ವಿಕಿರಣದ ಕಾಟ, ಏಕಾಂತದ ಹಿಂಸೆ ಅನುಭವಿಸಬೇಕಾದೀತು.ಅಂತಹ ಪ್ರವಾಸಕ್ಕೆ ಮನುಷ್ಯ ದೇಹ ಹೇಗೆ ಹೊಂದಿಕೊಳ್ಳುತ್ತದೆ ಎನ್ನುವುದನ್ನು ಅಭ್ಯಸಿಸಲು ಮಾಸ್ಕೋದಲ್ಲಿ ಈಗ ನೂರೈದು ದಿನಗಳ ತರಬೇತಿ ನಡೆಯುತ್ತಿದೆ.ಈ ವರ್ಷದ ಕೊನೆಯೊಳಗೆ ಐನೂರು ದಿನಗಳ ಇನ್ನೊಂದು ಶಿಬಿರವನ್ನು ನಡೆಸುವ ಉದ್ದೇಶವೂ ಬಾಹ್ಯಾಕಾಶ ವಿಜ್ಞಾನಿಗಳಿಗೆ ಇದೆ.ಓರ್ವ ಜರ್ಮನ್,ಇನ್ನೋರ್ವ ಪ್ರೆಂಚ್ ಮತ್ತೀರ್ವರು ರಶ್ಯನ್‌ರು ಈ ತರಬೇತಿ ಪಡೆಯುತ್ತಿದ್ದಾರೆ.ತರಬೇತಿಯ ಅವಧಿಯಲ್ಲಿ ತುರ್ತು ಪರಿಸ್ಥಿತಿಗಳನ್ನು ಏರ್ಪಡಿಸಿ,ಅದನ್ನು ಶಿಬಿರಾರ್ಥಿಗಳು ಎದುರಿಸಲು ಸಮರ್ಥರಾಗುತ್ತಾರೋ ಎನ್ನುವುದನ್ನು ಪರೀಕ್ಷಿಸಲಾಗುವುದು.
-----------------------------------------------
ಅಮಿತಾಬ್ ಬ್ಲಾಗಿಗೆ ಒಂದು ವರ್ಷ
ತನ್ನ ಅಭಿಮಾನಿಗಳ ಜತೆ ನೇರ ಸಂವಹನ ಸಾಧ್ಯವಾಗಿಸಲು ಅಮಿತಾಭ್ ಬಚ್ಚನ್ ಬ್ಲಾಗ್ ಬರೆಯಲು ಆರಂಭಿಸಿ ಈಗ ಒಂದು ವರ್ಷ ಆಗಿದೆ.ಆದರೆ ಪತ್ರಿಕಾ ಅಂಕಣ ಬರೆಯುವ ಯಾವ ಯೋಚನೆಯೂ ಅವರಿಗಿಲ್ಲ. ತನ್ನ ಬರವಣಿಗೆ ಉನ್ನತ ಮಟ್ಟದ್ದಲ್ಲ-ಅದೇನಿದ್ದರೂ ಬ್ಲಾಗ್ ಬರವಣಿಗೆಗೆ ಸಾಕು-ಪತ್ರಿಕಾ ಬರವಣಿಗೆಗಲ್ಲ ಎನ್ನುವುದು ಅವರ ವಿವರಣೆ.http://bigb.bigadda.com/ವಿಳಾಸದಲ್ಲಿ ಈ ಬ್ಲಾಗ್ ಲಭ್ಯ.
udayavani

*ಅಶೋಕ್‌ಕುಮಾರ್ ಎ
 
googledc7e93ba1a7703ae.html