------------------------------------------------------------
ಸ್ಪೆಸಿಪೈ:ದೃಶ್ಯ ಶೋಧ

ದತ್ತಾಂಶ ಉಳಿಸಿಕೊಳ್ಳಲು ಅಮೆಜಾನ್ ನೆರವು
ಯಾವುದೇ ಶಬ್ದದ ಮೇಲೆ ಶೋಧ ನಡೆಸಿದಾಗ ಗೂಗಲ್ ಅದಕ್ಕೆ ಸಂಬಂಧಿಸಿದ ಮಾಹಿತಿಯಿರುವ ಅಂತರ್ಜಾಲ ಪುಟಗಳನ್ನು, ಇತರ ಕಡತಗಳ ಕೊಂಡಿಗಳನ್ನು ತೋರಿಸುತ್ತದೆ. ವೋಲ್ಫ್ರಾಮ್ ಆಲ್ಫಾ ಎನ್ನುವ ಹೊಸ ಶೋಧ ಸೇವೆಯಾದರೋ ಅದರ ಬಗ್ಗೆ ವರದಿಯನ್ನು ತಯಾರಿಸಿಕೊಟ್ಟು, ಶೋಧದಲ್ಲಿ ಹೊಸ ಮಜಲನ್ನು ತೆರೆದಿದೆ.ಇದೀಗ ದೃಶ್ಯ ಶೋಧದ ಸರದಿ-http://beta.spezify.comನಲ್ಲಿ ಶೋಧ ನಡೆಸಿದಾಗ,ಫಲಿತಾಂಶವು ಹಲವು ಚಿತ್ರಗಳ ಕೊಲಾಜಿನ ರೂಪದಲ್ಲಿ ಕಾಣಿಸಿಕೊಳ್ಳುವುತ್ತದೆ. ಈ ಕೊಲಾಜಿನಲ್ಲಿರುವ ಪ್ರತಿ ಚಿತ್ರದ ಮೇಲೆ ಕ್ಲಿಕ್ಕಿಸಿದರೂ ಪ್ರತ್ಯೇಕ ಪುಟಗಳು ತೆರೆದುಕೊಳ್ಳುತ್ತದೆ. ಪ್ರತಿಚಿತ್ರವೂ ಸಂಬಂಧಿಸಿದ ಪುಟದ ಮುನ್ನೋಟವನ್ನು ನೀಡುತ್ತದೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲವಷ್ಟೇ?
-----------------------------------------------------
ಕುಮೋ ಎಂಬ ಮೈಕ್ರೋಸಾಫ್ಟ್ ಶೋಧ ಸೇವೆ
ಅತ್ತ ಮೈಕ್ರೋಸಾಫ್ಟ್ ಕಂಪೆನಿಯೂ ತನ್ನ ಶೋಧ ಸೇವೆಯಲ್ಲಿ ನಾವೀನ್ಯ ತರಲು ಹೆಜ್ಜೆ ಹಾಕಿದೆ. ಕುಮೋ ಎಂಬ ಹೆಸರಿನ ಶೋಧ ತಂತ್ರವನ್ನು ಅಳವಡಿಸಿದ ಶೋಧ ಸೇವೆ ಇನ್ನೇನು ಜನಸೇವೆಗೆ ಲಭ್ಯವಾಗಲಿದೆ. ಇದರಲ್ಲಿ ಫಲಿತಾಂಶಗಳನ್ನು ಹಲವು ಗುಂಪುಗಳಾಗಿ ನೀಡುವ ಸೌಲಭ್ಯವಿದೆ.ಉದಾಹರಣೆಗೆ ಆಡಿ ಕಾರಿನ ಬಗ್ಗೆ ಹುಡುಕಾಡಿದಾಗ, ಕಾರಿನ ಬೆಲೆ-ಸೌಕರ್ಯಗಳ ಬಗ್ಗೆ ,ಸಾಮಾನ್ಯ ಶೋಧ ಫಲಿತಾಂಶಗಳು, ಆ ಕಾರಿನ ವಿವಿಧ ಬಿಡಿಭಾಗಗಳ ಲಭ್ಯತೆ ಹೀಗೆ ಶೋಧ ಫಲಿತಾಂಶದಲ್ಲಿ ಹಲವು ಗುಂಪುಗಳು ಸಿಗುತ್ತವೆ.ಶೋಧ ಮಾರುಕಟ್ಟೆಯಲ್ಲಿ ಗೂಗಲ್ ಮತ್ತು ಯಾಹೂ ಕಂಪೆನಿಗಳಿಂದ ಸ್ಪರ್ಧೆ ಎದುರಿಸುತ್ತಿರುವ ಮೈಕ್ರೋಸಾಪ್ಟ್ ಸದ್ಯ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಹೊಸ ಕುಮೋದ ನಂತರವೂ ಅದರ ಸ್ಥಾನ ಸುಧಾರಿಸುವುದು ಸಂಶಯ-ಯಾಕೆಂದರೆ ಗೂಗಲ್ ಮತ್ತು ಯಾಹೂ ಈಗಾಗಲೇ ತಮ್ಮ ಸುಧಾರಿತ ಆವೃತ್ತಿಯನ್ನು ಜನರಿಗೆ ಲಭ್ಯವಾಗಿಸಿವೆ.
-------------------------------------------------
ಶತಮಾನದ ಅಂತ್ಯದ ವೇಳೆಗೆ ಭೂಮಿಯ ತಾಪ ಒಂಭತ್ತು ಡಿಗ್ರಿ ಹೆಚ್ಚಳ?
ಹಳೆಯ ಅಧ್ಯಯನಗಳು, ಈ ಶತಮಾನದ ಅಂತ್ಯದ ವೇಳೆಗೆ ಭೂಮಿಯ ತಾಪಮಾನ ನಾಲ್ಕು ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಬಹುದು ಎಂದು ಅಂದಾಜಿಸಿದ್ದುವು. ಆದರೀಗ ವಿಖ್ಯಾತ ವಿಶ್ವವಿದ್ಯಾಲಯವಾದ ಮಸಾಚ್ಯುಸೆಟ್ಸ್ ವಿವಿಯಲ್ಲಿ ಹೊಸ ಕಂಪ್ಯೂಟರ್ ತಂತ್ರಾಂಶಗಳ ನೆರವಿನಿಂದ ನಡೆಸಲಾದ ಅಧ್ಯಯನದ ಪ್ರಕಾರ ಭೂಮಿಯ ಮೇಲ್ಮೈಯ ತಾಪಮಾನದಲ್ಲಿ ಸರಾಸರಿ ಒಂಭತ್ತು ಡಿಗ್ರಿ ಸೆಲ್ಸಿಯಸ್ ಏರಿಕೆ ಆಗಬಹುದು ಎಂದು ಅಂದಾಜಿಸಲಾಗಿದೆ. ಈ ಕಂಪ್ಯೂಟರ್ ತಂತ್ರಾಂಶದಲ್ಲಿ ಸುಮಾರು ನಾಲ್ಕುನೂರು ಅಪ್ಲಿಕೇಶನ್‌ಗಳು ಒಳಗೊಂಡಿದ್ದು,ಮಾನವನ ಚಟುವಟಿಕೆಗಳ ಪರಿಣಾಮ ಉಂಟಾಗುವ ತಾಪಮಾನ ಏರಿಕೆಯನ್ನೂ ಅಂದಾಜಿಸಲಿ ದು ಸಮರ್ಥವೆಂದು ಸಂಶೋಧಕರ ಅಂಬೋಣ.
-----------------------------------------------------------
ಚಿತ್ರ ಬ್ಲಾಗ್‌ಗಳು
ಚಿತ್ರಗಳನ್ನೇ ಪ್ರಧಾನವಾಗಿ ಅಳವಡಿಸಲಾದ ಕನ್ನಡಿಗರ ಬ್ಲಾಗುಗಳು ಅಂತರ್ಜಾಲದಲ್ಲಿ ಸಾಕಷ್ಟಿವೆ.ಉದಯವಾಣಿ ಓದುಗರಿಗೆ ಚಿರಪರಿಚಿತರಾದ ಆಸ್ಟ್ರೋ ಮೋಹನ್ ಅವರ ಚಿತ್ರಬ್ಲಾಗು http://www.astromohan.blogspot.comವಿಳಾಸದಲ್ಲಿ ಲಭ್ಯವಿದೆ.ಕಾಸರಗೋಡಿನ ವೃತ್ತಿಪರ ಛಾಯಾಗ್ರಾಹಕ ಹರೀಶ್ ಹಳೆಮನೆ ಅವರ ಬ್ಲಾಗ್ ವಿಳಾಸ http://www.drishyaphotos.blogspot.comವಾದರೆ ತಂತ್ರಜ್ಞ ಪಾಲಚಂದ್ರರ ಬ್ಲಾಗ್ http://palachandra.blogspot.com/ ನಲ್ಲಿದೆ. ಪಾಲಚಂದ್ರರ ಅನುಭವ ಮಂಟಪದಲ್ಲಿ ಛಾಯಾಚಿತ್ರಗಳನ್ನು ತೆಗೆಯುವುದು ಹೇಗೆ ಎಂಬ ತಂತ್ರಗಳನ್ನು ಚರ್ಚಿಸಿ,ಸೋದಾಹರಣ ಸಲಹೆ ಸೂಚನೆಗಳನ್ನು ಕೊಟ್ಟಿದ್ದಾರೆ.
-------------------------
ಸ್ಪರ್ಶ ಸಂವೇದಿ ತೆರೆ ಇರುವ ಕಂಪ್ಯೂಟರುಗಳ ಸಮಸ್ಯೆ
ಇತ್ತೀಚೆಗೆ ಕಂಪ್ಯೂಟರುಗಳು ಸ್ಪರ್ಶ ಸಂವೇದಿ ತೆರೆಯನ್ನು ಹೊಂದಿರುವುದು ಸಾಮಾನ್ಯ. ಕೆಲವೊಮ್ಮೆ ಇವುಗಳಲ್ಲಿ ಕೀಲಿ ಮಣೆ ಮತ್ತು ಮೌಸ್ ಸೌಲಭ್ಯವೂ ಇರವು. ಈ ಕಂಪ್ಯೂಟರನ್ನು ಬಳಸುವಾಗ, ಬೆರಳನ್ನು ಬಳಸಿ ಪುಟ ಬದಲಾಯಿಸಬಹುದು. ಅದೇ ರೀತಿ ಚಿವುಟಿದಂತೆ ಮಾಡುವ ಮೂಲಕ ಪುಟವನ್ನು ಹಿಗ್ಗಿಸಿ-ಕುಗ್ಗಿಸಲೂ ಸಾಧ್ಯ.ಆದರೆ ಇಂತಹ ಕಂಪ್ಯೂಟರುಗಳಲ್ಲಿರುವ ಸಮಸ್ಯೆಯೇನು ಗೊತ್ತೇ? ತೆರೆಯ ಮೇಲೆ ಬೆರಳೋಡಿಸಿದಾಗ, ತೆರೆಯಲ್ಲಿ ಎಣ್ಣೆಯ ಕಲೆಗಳು ಮೂಡಬಹುದು.ಆದ್ದರಿಂದ ಪದೇ-ಪದೇ ತೆರೆಯನ್ನು ಸ್ವಚ್ಛಮಾಡುವುದು ಅನಿವಾರ್ಯವಾಗುತ್ತದೆ.
*ಅಶೋಕ್‌ಕುಮಾರ್ ಎ
udayavani






