Monday, June 29, 2009

ಆಟದ ಮೂಲಕ ಪಾಠ ಹೇಳುವ ಅರವಿಂದ್ ಗುಪ್ತಾ

ಆಟದ ಮೂಲಕ ಪಾಠ ಹೇಳುವ ಅರವಿಂದ್ ಗುಪ್ತಾ

ಆಟದ ಮೂಲಕ ಪಾಠ ಹೇಳಿದರೆ, ಮಕ್ಕಳಿಗೆ ಕಲಿಕೆ ಶಿಕ್ಷೆಯಾಗದು ತಾನೇ? ಮಕ್ಕಳು ಸ್ವತ: ಸಣ್ಣ ಸಣ್ಣ ಪ್ರಯೋಗಗಳ ಮೂಲಕ ಕಲಿಯುವಂತಿದ್ದರೆ,ಕಲಿಕೆಯ ಮಜಾವೇ ಬೇರೆ.ಆದರೆ ಈ ಪ್ರಯೋಗಗಳಿಗೆ ದುಬಾರಿ ಪರಿಕರಗಳು ಬೇಕಾದರೆ, ಹೀಗೆ ಕಲಿಯುವುದು ಕನಸಿನ ಮಾತಾದೀತು.ಆದರೆ http://www.arvindguptatoys.com ಅಂತರ್ಜಾಲ ತಾಣವನ್ನು ನೋಡಿದರೆ, ಕಲಿಕೆಗೆ ನೆರವಾಗುವ ಆಟಿಕೆಗಳನ್ನು ತಯಾರಿಸುವುದು ಎಷ್ಟು ಸುಲಭ ಎನ್ನುವುದು ಸ್ಪಷ್ಟವಾದೀತು.
ವಿದ್ಯುತ್,ಮೋಟಾರು-ಜನರೇಟರುಗಳು,ಖಗೋಳ ಶಾಸ್ತ್ರ,ಜೀವಶಾಸ್ತ್ರ,ಗಣಿತ,ಗಾಳಿ ಮತ್ತು ನೀರು,ತಿರುಗುವ ಆಟಿಕೆಗಳು,ಹಾರುವ ಆಟಿಕೆಗಳು,ಕಸದಿಂದ ಆಟಿಕೆಗಳು ಹೀಗೆ ಹಲವಾರು ಗುಂಪಿಗೆ ಸೇರಿದ ಆಟಿಕೆಗಳನ್ನು ಅದು ಹೇಗೆ ಸುಲಭವಾಗಿ ಮತ್ತು ಅಗ್ಗವಾಗಿ ತಯಾರಿಸಬಹುದು ಎನ್ನುವ ವಿವರಗಳನ್ನಿಲ್ಲಿ ಚಿತ್ರ ಸಹಿತವಾಗಿ ನೀಡಲಾಗಿದೆ.ವಿವರಣೆಯೂ ಇದೆ. ಮಕ್ಕಳಿಗೆ ಶಾಲೆಯಲ್ಲಿ ನೀಡುವ ಪ್ರಾಜೆಕ್ಟ್ ಕೆಲಸಗಳನ್ನು ಮಾಡಿಸಲು ಸುಲಭವಾಗಿಸುವ ತಂತ್ರಗಳು ಇಲ್ಲಿವೆ.ಹಿರಿ-ಕಿರಿಯರಿಗೆ ಆಸಕ್ತಿ ಹುಟ್ಟಿಸುವ ಪ್ರಯೋಗಗಳನ್ನು ಮಾಡುವ ಸುಲಭ ವಿಧಾನ ಅರವಿಂದ ಗುಪ್ತರ ತಾಣದಲ್ಲಿ ಲಭ್ಯ.
ಐಐಟಿ ಖರಗ್‌ಪುರದಲ್ಲಿ ಇಂಜಿನಿಯರಿಂಗ್ ಡಿಗ್ರಿ ಮುಗಿಸಿದ ಅರವಿಂದ್‌ಗುಪ್ತಾರು ಪುಣೆಯ ಟೆಲ್ಕೋ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದರು.ಜಯಂತ್ ನಾರ್ಳೀಕರ್ ಅವರ ಪ್ರೋತ್ಸಾಹದೊಂದಿಗೆ ಮಕ್ಕಳಿಗೆ ಕಡಿಮೆ ಖರ್ಚಿನಲ್ಲಿ ಆಟಿಕೆ ತಯಾರಿಸುವುದು ಹೇಗೆನ್ನುವುದರತ್ತ ಚಿಂತಿಸಲು ತೊಡಗಿದ ಅರವಿಂದ್,ಈಗ ಅಂತಹ ನೂರಾರು ಆಟಿಕೆಗಳನ್ನು ಮಾಡುವುದು ಹೇಗೆನ್ನುವುದನ್ನು ಕಂದುಕೊಂಡಿದ್ದಾರೆ.ಹಲವಾರು ಪುಸ್ತಕಗಳನ್ನೂ ಬರೆದಿರುವ ಗುಪ್ತ,ತಮ್ಮ ತಾಣದಲ್ಲಿ ನೂರಾರು ಪುಸ್ತಕಗಳ ಕೊಂಡಿಗಳನ್ನೂ ಹಂಚಿಕೊಂಡಿದ್ದಾರೆ.ಅಗ್ಗದ ಮನೆ ನಿರ್ಮಾಣ ಮಾಡುವ ವಿಧಾನಗಳ ಬಗ್ಗೆ ಲಾರೀ ಬೇಕರ್ ಅವರು ಬರೆದಿರುವ ಪುಸ್ತಕಗಳೂ ಇಲ್ಲಿವೆ.ಇಂಗ್ಲಿಷ್ ಮಾತ್ರವಲ್ಲದೆ,ಮರಾಠಿ ಮತ್ತು ಹಿಂದಿ ಭಾಷೆಯ ಪುಸ್ತಕಗಳ ಕೊಂಡಿಗಳೂ ಇಲ್ಲಿವೆ. ಪುಸ್ತಕಗಳು ಡೌನ್‌ಲೋಡಿಗೂ ಲಭ್ಯ.ಬೇಕೆಂದರೆ ಮನಿ ಆರ್ಡರ್ ಕಳಿಸಿ,ಪುಸ್ತಕಗಳನ್ನು ತರಿಸಿಕೊಳ್ಳಬಹುದು.ಪುಣೆಯಲ್ಲಿ ಆಟಿಕೆ ತಯಾರಿಕಾ ಘಟಕವನ್ನೂ ಗುಪ್ತಾ ಅವರು ನಡೆಸಿಕೊಂಡು ಬರುತ್ತಿದ್ದಾರೆ.
ಈ ತಾಣದಲ್ಲಿ ಹಲವಾರು ವೀಡಿಯೋಗಳ ಕೊಂಡಿಗಳೂ ಇರುವುದು ಇನ್ನೊಂದು ವಿಶೇಷ.ಆಟಿಕೆಗಳನ್ನು ತಯಾರಿಸುವ ವಿಧಾನವನ್ನು ತೋರಿಸುವ ವಿಡಿಯೋ ಕ್ಲಿಪ್ಪಿಂಗ್‌ಗಳಿಲ್ಲಿ ಧಾರಾಳ ಇವೆ. ಜತೆಗೆ ಪರಿಸರ ಮತ್ತು ವಿಜ್ಞಾನದ ಬಗ್ಗೆ ಪ್ರಸಿದ್ಧ ವ್ಯಕ್ತಿಗಳ ಅನಿಸಿಕೆ,ಸಾಕ್ಷ್ಯಚಿತ್ರಗಳೂ ಇಲ್ಲಿವೆ.
-------------------------------------
ಅನಾವರಣಗೊಂಡಿರುವ ಸ್ಪೆಸಿಫೈ
ಅಂತರ್ಜಾಲವನ್ನು ಬಳಸಿಕೊಳ್ಳುವುದನ್ನು ಸುಲಭವಾಗಿಸುವ ಶೋಧ ಸೇವೆಯಲ್ಲಿ ಬಿಂಗ್ ಹೊಸ ಮಜಲನ್ನು ತೆರೆದು,ಗೂಗಲ್‍ಗೆ ಸ್ಪರ್ಧೆ ನೀಡುತ್ತಿದೆ. ಈಗ ಸ್ಪೆಸಿಫೈ ಎನ್ನುವ ತಾಣದ ಸರದಿ. ಹುಡುಕು ಪದಕ್ಕೆ ಅನ್ವಯಿಸುವ ತಾಣಗಳ ದೃಶ್ಯ ಮುನ್ನೋಟವನ್ನು ನೀಡುವುದು ಈ ಶೋಧ ಸೇವೆಯ ಹೊಸತನ. ವಿವಿಧ ತಾಣಗಳ ಪಕ್ಷಿನೋಟ ನೀಡಿ, ಪ್ರತಿ ನೋಟವನ್ನೂ ಕ್ಲಿಕ್ಕಿಸಿದರೆ ಬೇರೆ ಬೇರೆ ತಾಣಗಳಿಗೆ ಸಾಗುವ ಅನುಕೂಲತೆ ಇಲ್ಲಿದೆ.
-----------------------------------------------
ಮನರಂಜನೆಯ ಜತೆ ಮಾರ್ಕೆಟಿಂಗ್
ಸೆಕೆಂಡ್‌ಲೈಫ್,ಸಿಮ್ಸಿಟಿ ಮೊದಲಾದ ಅಂತರ್ಜಾಲ ತಾಣಗಳು ಮಿಥ್ಯಾಪ್ರಪಂಚದ ಅನುಭವ ನೀಡುವ ಮೂಲಕ ವಿಶಿಷ್ಟವಾಗಿವೆ.ಈ ತಾಣಗಳು ಮನರಂಜನೆಗೆಂದೇ ಬಳಸಲ್ಪಡುವುದು ಹೆಚ್ಚು.ಈ ಮೂಲಕವೇ ಜನಪ್ರಿಯವಾಗಿರುವ ಕಾರಣ, ಈ ತಾಣಗಳು ದೊಡ್ದ ದೊಡ್ಡ ಕಂಪೆನಿಗಳನ್ನೂ ಆಕರ್ಷಿಸುತ್ತವೆ. ಮೂರು ಆಯಾಮದಲ್ಲೂ ಅಂತರ್ಜಾಲ ತಾಣವನ್ನು ರಚಿಸಲು ತಂತ್ರಾಂಶ ತಜ್ಞರ ಅವಶ್ಯಕತೆ ಇದೆ. ಹಾಗಾಗಿ ಸೆಕೆಂಡ್‌ಲೈಫ್ ಅಂತಹ ತಾಣಗಳಿಗೆ ಸೂಕ್ತವಾದ ಅಂತರ್ಜಾಲ ತಾಣಗಳನ್ನು ಅಭಿವೃದ್ಧಿ ಪಡಿಸುವ ಸೇವೆ ನೀಡುವ ಕಂಪೆನಿಗಳೂ ಹುಟ್ಟಿಕೊಂಡಿವೆ. ಸೆಕೆಂಡ್‌ಲೈಫ್ ತಾಣದ ಮೂಲಕ ಸಮಾವೇಶ,ಕಾನ್ಫರೆನ್ಸ್,ತರಗತಿಗಳನ್ನು ನಡೆಸುವುದು ಸಾಧ್ಯ.ಐಬಿಎಂ,ವಿಪ್ರೋ,ಇಂಟೆಲ್ ಅಂತಹ ಕಂಪೆನಿಗಳು ಮಾತ್ರವಲ್ಲದೆ ಪಾರ್ಚೂನ್ ಪಟ್ಟಿಯಲ್ಲಿ ಸೇರಿರುವ ಒಂದು ಸಾವಿರ ಪ್ರತಿಷ್ಠಿತ ಕಂಪೆನಿಗಳೂ ಇಲ್ಲಿ ಕಾಣಿಸಿಕೊಂಡಿವೆ.ಅರ್ಕುಟ್,ಫೇಸ್‌ಬುಕ್‌ಗಳಂತೆ ಸೆಕೆಂಡ್‌ಲೈಫಿನಲ್ಲೂ ಜನ ಸಮುದಾಯಗಳು ಇವೆ.
----------------------------------
ಸತ್ತ ಸುದ್ದಿ ನೀಡಿ ಜನಪ್ರಿಯವಾದ ಟಿಎಂಜೆಡ್
ಪಾಪ್ ಸಂಗೀತದ ಮೇರು ವ್ಯಕ್ತಿಯಾದ ಮೈಕೆಲ್ ಜಾಕ್ಸನ್ ಅವರ ನಿಧನದ ಸುದ್ದಿ ನೀಡಿ ಸುದ್ದಿ ಮಾಡಿದ ಟಿಎಮ್‌ಜೆಡ್ www.TMZ.com ಅಂತರ್ಜಾಲ ತಾಣ ಬಹುಪ್ರಚಾರ ಪಡೆದುಕೊಂಡಿತು.ಟೈಮ್-ವಾರ್ನರ್ ಗುಂಪಿನ ಈ ತಾಣವೇ ಮೈಕೆಲ್ ಜಾನ್ಸನ್ ಅವರು ಆಸ್ಪತ್ರೆ ಸೇರಿದ ಮತ್ತು ಬಳಿಕ ನಿಧನರಾದ ಸುದ್ದಿಯನ್ನು ಮೊದಲಿಗೆ ನೀಡಿತು. ಉಳಿದ ತಾಣಗಳು ಮತ್ತು ಮಾಧ್ಯಮಗಳು ಟಿಎಂಜೆಡ್ ನೀಡಿದ ಸುದ್ದಿಯ ಆಧಾರದಲ್ಲೇ ತಮ್ಮ ಸುದ್ದಿಯನ್ನು ಬಿತ್ತರಿಸಿದುವು.ಅದೇ ರೀತಿ ಮೈಕೆಲ್ ಜಾಕ್ಸನ್ ಸುದ್ದಿಯ ಚರ್ಚೆ ಮಾಡಲು ಜನರು ಬಳಸಿಕೊಂಡ ಮಾಧ್ಯಮಗಳಾದ ಟ್ವಿಟರ್ ಮತ್ತು ಫೇಸ್‌ಬುಕ್‌ಗಳೂ ಮಿಲಿಯಗಟ್ಟಲೆ ಜನರನ್ನು ಆಕರ್ಷಿಸಿದುವು. ಯಾಹೂ ತಾಣವು ಹದಿನಾರು ದಶಲಕ್ಷಕ್ಕೂ ಹೆಚ್ಚು ಸಂದರ್ಶಕರನ್ನು ಪಡೆದು ದಾಖಲೆ ನಿರ್ಮಿಸಿತು.ಯುಟ್ಯೂಬ್ ತಾಣವು ಮೈಕೆಲ್ ಜಾಕ್ಸನ್ ಅವರ ಹಾಡಿನ ವಿಡಿಯೋ ಕ್ಲಿಪ್ಪಿಂಗ್‍ಗಳನ್ನು ವೀಕ್ಷಿಸಲು ಬಯಸುವ ಜನರಿಂದಲೆ ಅತ್ಯಂತ ಹೆಚ್ಚು ಹಿಟ್‌ಗಳನ್ನು ಪಡೆಯಿತು.ಗೂಗಲ್ ಶೋಧ ಸೇವೆಯೂ ಮೈಕೆಲ್ ಜಾಕ್ಸನ್ ಬಗ್ಗೆ ಹೆಚ್ಚಿನ ವಿಷಯವನ್ನು ಅರಿಯಲು ಬಯಸುವವರ ಅಂತರ್ಜಾಲಿಗರಿಂದ ತುಂಬಿತು.
-----------------------------------------------
ಒಂದೇ ದೂರವಾಣಿ ಸಂಖ್ಯೆ ನೀಡುವ ಗೂಗಲ್ವಾಯಿಸ್
ನಿಮ್ಮ ಲ್ಯಾಂಡ್‌ಲೈನ್,ಸೆಲ್‌ಫೋನ್,ಎಸೆಮ್ಮೆಸ್ ಹೀಗೆ ಎಲ್ಲಾ ದೂರವಾಣಿ ಯಂತ್ರಗಳ ಸೇವೆಯನ್ನು 415-555-1212 ಅಂತಹ ಒಂದೇ ಸಂಖ್ಯೆಯ ಮೂಲಕ ಪಡೆಯಬೇಕೇ? ಗೂಗಲ್ ವಾಯಿಸ್ ಇಂತಹ ವಿನೂತನ ಸೇವೆ ನೀಡುತ್ತಿದೆ. ನಿಮಗೆ ಕರೆಗಳನ್ನು ಬೇಕಾದಲ್ಲಿ ಪಡೆಯುವ,ಮುದ್ರಿಸಿಕೊಳ್ಳುವ,ಅವುಗಳ ಬಗ್ಗೆ ಎಸೆಮ್ಮೆಸ್ ಮೂಲಕ ಸೂಚನೆ ಪಡೆಯುವ,ಲಭ್ಯವಿಲ್ಲದಾಗ ಕರೆ ಮಾಡಿದವರಿಗೆ ಈ ಬಗ್ಗೆ ತಿಳಿಸುವ ಹಲವರು ವೈವಿಧ್ಯಮಯ ಸೇವೆಯನ್ನು ಗೂಗಲ್ ವಾಯಿಸ್ ಮೂಲಕ ಪಡೆಯಬಹುದು. ಸದ್ಯ ಆಹ್ವಾನಿತರಿಗೆ ಮಾತ್ರಾ ಸೇವೆ ಲಭ್ಯವಿದ್ದು,ಸೇವೆಗೆ ಶುಲ್ಕವಿಲ್ಲ. http://www.google.com/googlevoice/about.htmlನಲ್ಲಿ ಇಚ್ಛಿಸಿದವರು ನೋಂದಾಯಿಸಿಕೊಂಡರೆ, ಸೇವೆಯ ಬಗ್ಗೆ ಆಹ್ವಾನ ದೊರೆಯುತ್ತದೆ.


ಉದಯವಾಣಿ


*ಅಶೋಕ್‌ಕುಮಾರ್ ಎ

Monday, June 22, 2009

ಗಾಳಿಯಲ್ಲಿ ಕೈಯಾಡಿಸಿ ಬರವಣಿಗೆ

ಶಿಕ್ಷಕರಿಗೊಂದು ತಾಣ
ವಿಪ್ರೋದ ಅಜೀಂ ಪ್ರೇಂಜಿ ಅವರಿಗೆ ಖಾಸಗಿ ವಿಶ್ವವಿದ್ಯಾಲಯ ಸ್ಥಾಪಿಸಲು ಅನುಮತಿ ಸಿಕ್ಕಿರುವುದು ನಿಮಗೆ ಗೊತ್ತಿದೆ. ಪ್ರೇಂಜಿಯವರು, ಶಿಕ್ಷಕರಿಗೆ ತರಬೇತಿ ನೀಡುವ ಮೂಲಕ,ಉದ್ಯಮಕ್ಕೆ ಸೂಕ್ತ ತರಬೇತಿ ಹೊಂದಿದ ವಿದ್ಯಾರ್ಥಿಗಳನ್ನು ತಯಾರು ಮಾಡಲು ಮಿಷನ್10X ಎನ್ನುವ ಯೋಜನೆಯೊಂದನ್ನು ಇದೀಗಲೇ ಹೊಂದಿದ್ದಾರೆ.ಆ ಯೋಜನೆಯ ಭಾಗವಾಗಿರುವ ತಾಣ http://www.mission10x.com ಶಿಕ್ಷಕರಿಗೆ ಸಹಾಯ ನೀಡುವ ಹಲವಾರು ಮಾಹಿತಿಗಳನ್ನು ಹೊಂದಿದೆ. ಶಿಕ್ಷಕರ ಜ್ಞಾನವಿಕಾಸ,ಪರಸ್ಪರ ಸಂವಹನಕ್ಕೆ ತಾಣವು ಅವಕಾಶ ನೀಡುತ್ತದೆ.ಹೊಸತನದಿಂದ ಕೂಡಿದ ಕಲಿಸುವ ಮಾರ್ಗಗಳನ್ನು ಅನುಸರಿಸಿ,ವಿದ್ಯಾರ್ಥಿಗಳ ಮನಸ್ಸಿಗೆ ನಾಟುವಂತಹ ಪಾಠ ಮಾಡುವುದನ್ನು ಅಭ್ಯಾಸ ಮಾಡಿಸಲು ಶಿಕ್ಷಕರನ್ನು ತಯಾರು ಮಾಡುವುದು ಯೋಜನೆಯ ಉದ್ದೇಶ. ಇದರಲ್ಲಿ ತರಬೇತಿ ಹೊಂದಿದ ಶಿಕ್ಷಕರು,ಅದು ಹೇಗೆ ತಮ್ಮ ಕಾರ್ಯಶೈಲಿಯನ್ನು ಬದಲಾಯಿಸಿಕೊಂಡಿದ್ದಾರೆ ಎನ್ನುವ ವಿವರಗಳೂ ಇಲ್ಲಿವೆ. ವಿವಿಧ ವಿಷಯಗಳ ಬಗೆಗೆ ತರಬೇತಿ ಹೊಂದಿದ ಶಿಕ್ಷಕರು ಸಿದ್ಧಪಡಿಸಿದ ಪಠ್ಯವಸ್ತುಗಳೂ ತಾಣದಲ್ಲಿ ಲಭ್ಯವಿವೆ. ಇಂಜಿನಿಯರಿಂಗ್ ಶಿಕ್ಷಣದ ಬಗೆಗೆ ಇಲ್ಲಿ ಹೆಚ್ಚು ಒತ್ತು ನೀಡಲಾಗಿದೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲವಷ್ಟೇ.
------------------------------------------
ಅಕ್ಷರಾನುಸಾರ ಸುದ್ದಿ ನೀಡುವ ತಾಣ
http://www.havenworks.com/ ಎನ್ನುವುದು ವಿಶಿಷ್ಟಶೈಲಿಯ ಅಂತರ್ಜಾಲ ತಾಣ.A-Zಅಕ್ಷರಾನುಸಾರ ಸುದ್ದಿಯೊದಗಿಸುವ ಈ ತಾಣ,ಮೈಲುದ್ದವಿದ್ದಂತೆ ಭಾಸವಾದರೆ ಅಚ್ಚರಿಯಿಲ್ಲ.ವಿಶ್ವದ ಸುದ್ದಿಯೆಲ್ಲವೂ ಇಲ್ಲಿದೆ.ಇದರ ವಿನ್ಯಾಸವೂ ತುಸು ಭಿನ್ನವೇ.ಮೊದಲ ನೋಟಕ್ಕಿದು ಮಾಹಿತಿಯ ರಾಶಿಯಂತೆ ಕಾಣಿಸುತ್ತದೆ.ಆದರೆ ಗಮನಿಸಿದಂತೆಲ್ಲಾ,ಇದು ಸುಲಭಗ್ರಹ್ಯವಾಗುತ್ತದೆ.ಸುದ್ದಿಗಳನ್ನು ತಾರೀಕಿನ ಅನುಸಾರವಾಗಿಯೂ ವೀಕ್ಷಿಸುವ ಅನುಕೂಲತೆ ಇಲ್ಲಿದೆ.
---------------------------------------------------

"ಅಂತರ್ಜಾಲ ಸೆನ್ಸಾರ್":ಚೀನಾ ಯತ್ನ
ಚೀನಾದಲ್ಲಿ ಸರಕಾರವು ಅಂತರ್ಜಾಲದ ಬಗ್ಗೆ ಬಹಳ ಎಚ್ಚರಿಕೆ ತೆಗೆದುಕೊಳ್ಳುತ್ತದೆ. ಅಲ್ಲಿನ ಜನರು ಬ್ಲಾಗು ಬರೆದು,ದೇಶದ "ರಹಸ್ಯ"ಗಳನ್ನು ಬಯಲು ಮಾಡುವುದು ಅದಕ್ಕೆ ಬೇಕಾಗಿಲ್ಲ. ಹಾಗೆಯೇ ಜನರನ್ನು ಪ್ರಚೋದಿಸುವ ಸೆಕ್ಸ್,ಹಿಂಸೆಯ ಮಾಹಿತಿಗಳನ್ನು ಹೊಂದಿರುವ ಅಂತರ್ಜಾಲ ತಾಣಗಳನ್ನು ಜನರು ನೋಡುವುದು ಅದಕ್ಕೆ ಇಷ್ಟವಿಲ್ಲ.ಹಾಗಾಗಿ ಹೊಸ ಕಂಪ್ಯೂಟರ್ ಕೊಂಡಾಗ,ಅದರ ಜತೆ ಒಂದು ತಂತ್ರಾಂಶವನ್ನು ಸರಕಾರವೇ ನೀಡುತ್ತದೆ.ಗ್ರೀನ್ ಡ್ಯಾಮ್ ಯುತ್ ಎಸ್ಕರ್ಟ್ ಸಾಫ್ಟ್‌ವೇರ್ ಎನ್ನುವ ಈ ತಂತ್ರಾಂಶವು ಕೆಲವು ಅಂತರ್ಜಾಲ ತಾಣಗಳನ್ನು ಪ್ರತಿಬಂಧಿಸಿ,ಜನರು ಅವನ್ನು ತಮ್ಮ ಕಂಪ್ಯೂಟರಿನಲ್ಲಿ ವೀಕ್ಷಿಸುವುದನ್ನು ತಡೆಯುತ್ತದೆ. ಸರಕಾರದ ಈ ಕ್ರಮ ವಿಶ್ವದ ಎಲ್ಲೆಡೆಯಿಂದ ಟೀಕೆಗೊಳಗಾಗಿದೆ. ಈ ತಂತ್ರಾಂಶದ ಬಳಕೆ ಜನರಿಗೆ ಬಿಟ್ಟ ವಿಷಯ-ಅದನ್ನು ಬಳಸುವುದು ಕಡ್ಡಾಯವಲ್ಲ ಎನ್ನುವುದು ಸರಕಾರದ ವಿವರಣೆ.
ಆದರೆ ಸಮಸ್ಯೆಯೆಂದರೆ, ಈ ತಂತ್ರಾಂಶ ಹಲವು ಉತ್ತಮ ಅಂತರ್ಜಾಲ ತಾಣಗಳನ್ನೂ ತಡೆಯುತ್ತದೆ. ಆರೋಗ್ಯ ಸಮಸ್ಯೆಗೆ ಪರಿಹಾರ ನೀಡುವಂತಹ ಸೇವೆ ನೀಡುವ ತಾಣಗಳೂ ಇದರ ಕತ್ತರಿಗೆ ತುತ್ತಾಗುತ್ತವೆ.
-------------------------------------------------------------
ಸಮಸ್ಯೆ ಬಗೆಹರಿಸುವುದು ಹೇಗೆ?

ನಿಮ್ಮ ಸಮಸ್ಯೆಗಳಿಗೆ ನೀವೇ ಪರಿಹಾರ ಕಂಡುಕೊಳ್ಳುವುದು ಸಾಧ್ಯವಾದರೆ ಎಷ್ಟು ಚೆನ್ನ.ಕೆಲವೊಮ್ಮೆ ಇದು ಸಾಧ್ಯವಾಗದೆ, ನೀವು ಇತರರ ಸಹಾಯವನ್ನೂ ಪಡೆಯಬೇಕಾದೀತು.ಒಂದು ಸಮಸ್ಯೆಯನ್ನು ನಿವಾರಿಸಲು ಹಲವು ಕ್ರಮಗಳ ಅಗತ್ಯ ಬರಬಹುದು.ಈ ಪರಿಹಾರಕ್ರಮಗಳು ಇನ್ನು ಹೊಸ ಸಮಸ್ಯೆಗಳನ್ನು ಹುಟ್ಟಿಹಾಕಬಹುದು.ಅಂತೂ ಇಂತೂ ಪರಿಹಾರಕ್ರಮ ಗೊತ್ತಾದಾಗ,ಅದನ್ನು ಭವಿಷ್ಯದಲ್ಲಿ ಅಗತ್ಯ ಬಿದ್ದಾಗ ಉಲ್ಲೇಖಿಸಲು ಉಳಿಸಲೂ ಬೇಕು.ಇದಕ್ಕೆಲ್ಲಾ ಅವಕಾಶ ನೀಡುವ ಪ್ರತಿ ಸಮಸ್ಯೆಗೆ ಹೊಸ ಅಂತರ್ಜಾಲ ವಿಳಾಸ ಯು ಆರ್ ಎಲ್ ಸೃಷ್ಟಿಯಾಗುತ್ತದೆ. ಹಾಗಾಗಿ,ಯು ಆರ್ ಎಲ್ ಗೊತ್ತಿದ್ದರೆ.ಮಾತ್ರಾ ಪುಟ ಇತರರಿಗೆ ಲಭ್ಯವಾಗುತ್ತದೆ.ನಿಮ್ಮ ಗೆಳೆಯರು ನಿಮ್ಮ ಸಮಸ್ಯೆಗೆ ಪರಿಹಾರ ಸೂಚಿಸಬಯಸುವಿರಾದರೆ,ಅವರಿಗೆ ಸಮಸ್ಯೆಯ ಪುಟದ ವಿಳಾಸವನ್ನು ಕಳುಹಿಸಿಕೊಡಬೇಕು. ಇದನ್ನು ಟ್ವಿಟರ್,ಮಿಂಚಂಚೆ ಹೀಗೆ ಯಾವ ರೀತಿಯಿಂದಲೂ ಕಳುಹಿಸಬಹುದು.http://a.freshbrain.com/solvr/ನಲ್ಲಿ ಆ ತಾಣವು ಲಭ್ಯವಿದೆ.
--------------------------------------
ಗಾಳಿಯಲ್ಲಿ ಕೈಯಾಡಿಸಿ ಬರವಣಿಗೆ
ವಾಕಿಂಗ್ ಹೋಗುವಾಗ ನಿಮಗೆ ಹಲವು ವಿಚಾರಗಳು ಹೊಳೆಯುತ್ತವೆ. ಆದರೆ ನಡಿಗೆ ಮುಗಿಸಿ ವಾಪಸ್ ಬಂದಾಗ,ಅವುಗಳೇನೆಂದು ಕೂಡಾ ನೆನಪಿಗೆ ಬಾರದು. ಇಂತಹ ಸಮಸ್ಯೆ ಡ್ಯೂಕ್ ವಿವಿಯ ಶಿಕ್ಷಕ ರ‍ಾಯ್ ಚೌಧುರಿಯವರಿಗೂ ಎದುರಾಗುತ್ತಿತ್ತು.ಅದಕ್ಕೆ ಪರಿಹಾರವಾಗಿ,ಗಾಳಿಯಲ್ಲಿ ಬರೆದದ್ದನ್ನೂ ಉಳಿಸಿಕೊಳ್ಳುವ ಪೆನ್ ತಯಾರಿಸಿದರೆ ಹೇಗೆ ಎನ್ನುವುದರ ಬಗ್ಗೆ ಅವರು ತಲೆಕೆಡಿಸಿಕೊಂಡಿದ್ದದ್ದುಂಟು.ಆದರೆ ಅಂತಹ ಪೆನ್‌ನಲ್ಲಿ ಎಕ್ಸೆಲೋಮೀಟರ್ ಎನ್ನುವ ಸಂವೇದಕ ಇರಬೇಕಾಗುತ್ತದೆ. ಆ ಸಂವೇದಕ, ಗಾಳಿಯಲ್ಲಿ ಆಡಿಸಿದಾಗ ಉಂಟಾಗುವ ತಿಕ್ಕಾಟವನ್ನು ಪತ್ತೆ ಮಾಡಲು ಶಕ್ತವಾಗುತ್ತದೆ.ಆದರೆ ಅಂತಹ ವಿಶೇಷ ಪೆನ್ ತಯಾರಿಕೆ ದುಬಾರಿ ಆದೀತು ಎಂದು,ಅದರ ಬಗ್ಗೆ ಮುಂದುವರಿಯದಿರಲು ಚೌಧುರಿ ಸಾಹೇಬರು ನಿರ್ಧರಿಸಿದರು.ಈಗ ಎಕ್ಸೆಲೋಮೀಟರ್ ಇರುವ ಸೆಲ್‌ಫೋನ್‌ಗಳು ಬಂದಿವೆ. ಹಾಗಾಗಿ ಅವರು ಹೊಸದಾಗಿ ಗಾಳಿಯಲ್ಲಿ ಬರವಣಿಗೆ ಪ್ರಯೋಗಕ್ಕಿಳಿದರು. ಸೆಲ್‌ಪೋನಿನಲ್ಲಿ ಹೊಸ ತಂತ್ರಾಶವನ್ನು ಸೇರಿಸುವುದಷ್ಟೇ ಅವರು ಮಾಡಬೇಕಿತ್ತು. ತಮ್ಮ ವಿದ್ಯಾರ್ಥಿಗಳ ಸಹಾಯದಿಂದ ಅಂತಹ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲು ಅವರಿಗೆ ಸಾಧ್ಯವಾಯಿತು.ಸೆಲ್‌ಫೋನನ್ನು ಗಾಳಿಯಲ್ಲಿ ಆಡಿಸಿ,ಅಕ್ಷರವನ್ನು ರೂಪಿಸಿದಾಗ, ತಂತ್ರಾಂಶವು ಅಕ್ಷರಗಳನ್ನು ಗುರುತಿಸಿ,ಅವನ್ನು ತನ್ನ ಸ್ಮರಣಕೋಶದಲ್ಲಿ ಉಳಿಸಿಕೊಳ್ಳುತ್ತದೆ.ನಂತರ ಅದನ್ನು ಮಿಂಚಂಚೆ ಮಾಡಿ,ನಿಗದಿತ ವಿಳಾಸಕ್ಕೆ ಕಳುಹಿಸಿ ಸಂಗ್ರಹಿಸುವ ಅನುಕೂಲತೆಯೂ ಇಲ್ಲಿದೆ.
udayavani
*ಅಶೋಕ್‌ಕುಮಾರ್ ಎ

Monday, June 15, 2009

ಸವಾಲಿಗೆ ಜವಾಬ್!

ಸವಾಲಿಗೆ ಜವಾಬ್!
vark.com ನಿಮ್ಮ ಪ್ರಶ್ನೆಗಳಿಗೆ ಕ್ಷಣದಲ್ಲಿ ಉತ್ತರ ದೊರಕಿಸಿಕೊಡಲು ಅಂತರ್ಜಾಲದಲ್ಲಿ ಆರಂಭವಾಗಿರುವ ಹೊಸ ತಾಣ. ತಾಣದಲ್ಲಿ ನೋಂದಾಯಿಸಿಕೊಂಡರೆ, ಈ ಸೇವೆ ನಿಮಗೆ ಲಭ್ಯ.ನೋಂದಾಯಿಸಿಕೊಳ್ಳುವಾಗ ನೀವು ಪರಿಣತಿ ಹೊಂದಿರುವ ಮೂರು ವಿಷಯಗಳನ್ನು ಸೂಚಿಸಬೇಕು. ಇನ್ಯಾರಾದರೂ ಈ ವಿಷಯಗಳಲ್ಲಿ ಪ್ರಶ್ನೆಗಳನ್ನು ಕೇಳಿದರೆ, ಅವನ್ನು ನಿಮಗೆ ರವಾನಿಸಿ,ಉತ್ತರ ಪಡೆಯಲು ಅಂತರ್ಜಾಲ ತಾಣ ಪ್ರಯತ್ನಿಸುತ್ತದೆ. ಗೂಗಲ್,ಯಾಹೂ ಹೀಗೆ ಯಾವುದಾದರೂ ದಿಡೀರ್ ಸಂದೇಶ ರವಾನಿಸುವ ಸೇವೆಯ ಮೂಲಕ ನಿಮಗೆ ಉತ್ತರವನ್ನು ಅಥವ ಇತರರ ಪ್ರಶ್ನೆಗಳನ್ನು ರವಾನಿಸಲಾಗುತ್ತದೆ. ನೀವು ಪ್ರಶ್ನೆ ಕೇಳಿ ನಂತರ ಆನ್‍ಲೈನ್ ಇಲ್ಲದಿದ್ದರೆ, ಆಗ ನಿಮಗೆ ಉತ್ತರವನ್ನು ಮಿಂಚಂಚೆ ಮೂಲಕ ರವಾನಿಸಲಾಗುತ್ತದೆ.""ಉದಯವಾಣಿ" ಏನು? ಇದು ಯಾವುದರ ಹೆಸರು?"ಎಂಬ ಪ್ರಶ್ನೆಗೆ ವರ್ಕ್ ತಾಣವು ತನ್ನ ಬಳಕೆದಾರರ ಮೂಲಕ ಪತ್ರಿಕೆಯ ಇ-ಪೇಪರ್ ಕೊಂಡಿ ರವಾನಿಸಿತು! "ಉಡುಪಿ-ಮಂಗಳೂರು ನಡುವಣ ದೂರ ಎಷ್ಟು?"ಎಂಬ ಇನ್ನೊಂದು ಪ್ರಶ್ನೆಗೆ ಅರುವತ್ತು ಕಿಲೋಮೀಟರ್-ಈ ದೂರವನ್ನು ರೈಲಿನ ಮೂಲಕವೂ ಕ್ರಮಿಸಬಹುದು ಎಂಬ ಸರಿಯಾದ ಉತ್ತರ ಬಂತು!ಪ್ರಶ್ನೆ ಕೇಳಿದಾಗ,ನಿಮ್ಮ ಸ್ನೇಹಿತರ ಬಳಗದ ಮೂಲಕ ಇಲ್ಲವೇ ಆನ್‍ಲೈನಿನಲ್ಲಿರುವ ಬಳಕೆದಾರರ ಪೈಕಿ, ಆ ವಿಷಯ ಪರಿಣತರಿಂದ ಉತ್ತರ ಪಡೆಯುವ ಕಾರಣ,ನಿಮಿಷ ಮಾತ್ರದಲ್ಲಿ ಉತ್ತರಗಳು ಲಭ್ಯವಾಗುವ ಸಂಭವವೇ ಹೆಚ್ಚು.

-----------------------------------------------------------------------------------
ಪತ್ರಿಕೆಯ ಇ-ಪ್ರತಿಗಳು
"ಉದಯವಾಣಿ"ಯ ಇ-ಪತ್ರಿಕೆಯೀಗ ಲಭ್ಯವಿರುವುದು ನಿಮಗೆ ಗೊತ್ತೇ ಇದೆ. www.udayavani.com/epaperನಲ್ಲಿದು ಲಭ್ಯವಿದೆ.ಹಾಗೆಯೇ www.pressdisplay.comನಲ್ಲಿ ವಿಶ್ವದ ನೂರಾರು ಪತ್ರಿಕೆಗಳ ಇ-ಪತ್ರಿಕೆ ಲಭ್ಯವಿದೆ.ಇಲ್ಲಿ ನೋಂದಾಯಿಸಿಕೊಂಡರೆ, ಸೀಮಿತ ಅವಧಿಗೆ ಉಚಿತ ಪ್ರಯೋಗಾರ್ಥ ಸೇವೆ ಲಭ್ಯವಿದೆ. ನಂತರ ಹಣ ಪಾವತಿಸಿ ಚಂದಾದಾರರಾಗಬಹುದು.ಸದ್ಯ ಕನ್ನಡಪತ್ರಿಕೆಗಳ ಪೈಕಿ "ಉದಯವಾಣಿ" ಮಾತ್ರಾ ಲಭ್ಯವಿದೆ.ವಿದೇಶಗಳ ಪತ್ರಿಕೆಗಳೂ ಇಲ್ಲಿ ಲಭ್ಯವಿದೆ.ದೇಶಾವಾರು ರೀತ್ಯ ಪತ್ರಿಕೆಗಳನ್ನು ವಿಭಾಗಿಸಿಟ್ಟಿರುವುದರಿಂದ ಪತ್ರಿಕೆಗಳನ್ನು ಹುಡುಕುವುದು ಸುಲಭ.
------------------------------------------------------------------
ಹೊಸ ವಿಂಡೋಸ್ 7 ಕಂಪ್ಯೂಟರ್ ಮಾರಾಟ ಕುದುರಿಸೀತೇ?
ಮೈಕ್ರೋಸಾಫ್ಟಿನ ಹೊಸ ಕಂಪ್ಯೂಟರ್ ಕಾರ್ಯನಿರ್ವಹಣಾ ತಂತ್ರಾಂಶ ಅಕ್ಟೋಬರ್ ವೇಳೆ ಮಾರಾಟಕ್ಕೆ ಲಭ್ಯವಾಗಲಿದೆ. ಇದರ ಪ್ರಾಯೋಗಿಕ ಆವೃತ್ತಿ ಸದ್ಯ ಲಭ್ಯವಿದ್ದು,ಉಚಿತ ಬಳಕೆ ಮಾಡಬಹುದು. ಈ ತಂತ್ರಾಂಶದ ಬಗ್ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು, ಹೊಸ ಆವೃತ್ತಿಯು ಲಭ್ಯವಾದಾಗ,ಅದನ್ನು ಕೊಳ್ಳಬಯಸುವವರು,ಅದರ ಜತೆ ಯಂತ್ರಾಂಶವನ್ನೂ ಬದಲಿಸುವುದು ಸಂಭವನೀಯ.ಹೀಗಾಗಿ ಅಕ್ಟೋಬರ್ ನಂತರವಾದರೂ ಕಂಪ್ಯೂಟರ್ ಮಾರಾಟವು ಚೇತರಿಸಿಕೊಳ್ಳಬಹುದೋ ಎಂಬ ನಿರೀಕ್ಷೆ ಉದ್ಯಮವಲಯದಲ್ಲಿದೆ.ಆದರೆ, ಅಂತರ್ಜಾಲದಲ್ಲೆ ಸಕಲ ಸೇವೆಗಳೂ ಲಭ್ಯವಾಗಿ, ಸರಳ ಕಂಪ್ಯೂಟರ್ ಬಳಸಿ, ಅತ್ಯುತ್ತಮ ಸೇವೆ ಪಡೆಯುವ ಕ್ಲೌಡ್ ಕಂಪ್ಯೂಟಿಂಗ್ ಈಗ ಜನಪ್ರಿಯವಾಗುತ್ತಿರುವುದರಿಂದ, ಈ ನಿರೀಕ್ಷೆ ಹುಸಿಯಾದರೂ ಅಚ್ಚರಿಯಿಲ್ಲ.
--------------------------------------------------------------
ಅಂತರ್ಜಾಲದ ಮೂಲಕ ನಿಸರ್ಗ ವೀಕ್ಷಣಾಲಯ
ನಿಸರ್ಗದಲ್ಲಿ ಆಗುತ್ತಿರುವ ಪ್ರತಿಯೊಂದು ಸಣ್ಣ ಬದಲಾವಣೆಯನ್ನು ದಾಖಲಿಸಲು ಅಂತರ್ಜಾಲದ ಶಕ್ತಿಯನ್ನು ಬಳಸುವತ್ತ ವಿಜ್ಞಾನಿಗಳು ಮುನ್ನಡೆದಿದ್ದಾರೆ.ಜನರು ತಾವು ಗಮನಿಸಿದ ಸಣ್ಣ ವಿಷಯವನ್ನು ದಾಖಲಿಸಲು ಅನುವು ಮಾಡುವ ತಾಣವೊಂದನ್ನು ಒದಗಿಸಿಕೊಡುವುದು ಪರಿಸರ ವಿಜ್ಞಾನಿಗಳ ಯೋಜನೆ.ಇಲ್ಲಿ ದಾಖಲಾದ ಮಾಹಿತಿಗಳು ಸಸ್ಯ,ಪ್ರಾಣಿ ಅಥವ ಪಕ್ಷಿ ಸಂಕುಲದ ಜೀವನದ ಬಗ್ಗೆ ಹೊಸ ಬೆಳಕು ಚೆಲ್ಲಿ,ಆನ್‍ಲೈನ್ ನಿಸರ್ಗವೀಕ್ಷಾಣಾಲಯವಾಗಿ ಬಿಡುವ ಸಾಧ್ಯತೆ ಉಜ್ವಲವಾಗಿದೆ. ನಿ೯ಸರ್ಗದ ಬಗ್ಗೆ ಚಿತ್ರ,ವಿಡಿಯೋ ಮತ್ತು ಬರಹಗಳನ್ನು ಸೇರಿಸುವ ಮೂಲಕ ಇದು ಅತ್ಯುತ್ತಮ ಮಾಹಿತಿಯನ್ನು ಒಳಗೊಳ್ಳಲಿದೆ. ಅಲ್ಲದೆ ಅಂತರ್ಜಾಲ ಮೂಲಕ ಅಗಣಿತ ಜನರೂ ಇದಕ್ಕೆ ತಮ್ಮ ಕಿಂಚಿತ್ ಮಾಹಿತಿಯನ್ನು ಸೇರಿಸಲು ಅವಕಾಶ ಇರುವುದು, ಅಗಾಧ ಮಾಹಿತಿಯನ್ನು ಕಲೆ ಹಾಕಲಿದು ಸಮರ್ಥವಾಗುವುದರಲ್ಲಿ ಸಂಶಯವಿಲ್ಲ.
----------------------------------------------------
ಆತ್ಮಹತ್ಯಾದಳಕ್ಕೆ ರೊಬೋ ಹಾವು!
ಇಸ್ರೇಲ್ ಮಿಲಿಟರಿಯು ರೋಬೋ-ಹಾವೊಂದನ್ನು ತಯಾರಿಸಿದೆ. ನೈಜ ಹಾವಿನ ರಚನೆಯನ್ನು ಅನುಕರಿಸಿ ಇದನ್ನು ತಯಾರಿಸಲಾಗಿದೆ. ಒಂದು ಕ್ಯಾಮರಾ ಮತ್ತು ಮೈಕನ್ನು ಇದರ ತಲೆಯಲ್ಲಿ ಅಳವಡಿಸಿರುವುದರಿಂದ ಈ ರೋಬೋ-ಹಾವು ಬಂಡೆ ಅಥವ ಕಟ್ಟಡದ ಸಂದುಗಳಲ್ಲೂ ಓಡಾಡಿ, ಮಾಹಿತಿಯನ್ನು ಸಂಗ್ರಹಿಸಬಲ್ಲುದು.ಇದಕ್ಕೆ ಬಾಂಬು ಅಳವಡಿಸಿ,ಬೇಕಾದಲ್ಲಿಗಿದು ತಲುಪಿದಾಗ ಬಾಂಬು ಸ್ಫೋಟವಾಗುವಂತೆ ಮಾಡಿದರೆ,ಇದು ಆತ್ಮಹತ್ಯಾ ಬಾಂಬರ್ ಕೂಡಾ ಆಗಬಲ್ಲುದು.ಭಯೋತ್ಪಾದಕರ ತಾಣಗಳಿಗಿವನ್ನು ನುಗ್ಗಿಸಿ,ನಿರ್ಮೂಲ ಮಾಡಲಿವನ್ನು ಬಳಸುವ ದಿನಗಳಿನ್ನು ದೂರವಿಲ್ಲ.
---------------------------------------------------
ಬಾಹ್ಯಾಕಾಶ ಕೇಂದ್ರದಲ್ಲಿ ಹದಿಮೂರು ಜನ
ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರವೂ ಕೆಲದಿನಗಳ ಮಟ್ಟಿಗೆ ಭೂಮಿಯಂತೆ ಜನಸಂದಣಿಯನ್ನು ಕಾಣಲಿದೆ. ಎಂಡೇವರ್ ಸ್ಪೇಸ್ ಶಟಲಿನ ಯಾತ್ರಿಗಳು ಬಾಹ್ಯಾಕಾಶ ಕೇಂದ್ರದಲ್ಲಿ ಉಳಕೊಳ್ಳುವುದರಿಂದ ಈ ಜನಸಂದಣಿ ಏರ್ಪಡಲಿದೆ. ಹದಿಮೂರು ಜನರು ಇಲ್ಲಿ ತಂಗಬೇಕಾಗಿದೆ.ಭೂಮಿಯಿಂದ ಇನ್ನೂರಿಪ್ಪತ್ತೈದು ಕಿಲೋಮೀಟರ್ ದೂರದಲ್ಲಿರುವ ಈ ಕೇಂದ್ರವನ್ನು ಎರಡು ವರ್ಷಗಳ ಹಿಂದೆ ವಿಸ್ತರಿಸಲಾಗಿದೆ.ಈಗ ಅಲ್ಲಿ ಹೊಸದಾಗಿ ನಾಲ್ಕು ವಿಭಾಗಗಳಿವೆ.ಸದ್ಯ ಅಲ್ಲಿರುವ ಜಾಗ ಇಪ್ಪತ್ತಾರು ಸಾವಿರ ಘನ ಅಡಿಗಳಷ್ಟು.ಅಂದರೆ ನಾಲ್ಕು ಬೆಡ್‌ರೂಮ್ ಮನೆಯ ಸ್ಥಳಾವಕಾಶ ಇಲ್ಲಿದೆ.ಇಲ್ಲಿನ ವಾಸಿಗಳು ಅತ್ಯಂತ ಸೀಮಿತ ನೀರು-ಆಹಾರವನ್ನು ಪಡೆಯಲಷ್ಟೇ ಸಾಧ್ಯ. ಮೂತ್ರವನ್ನು ಶುದ್ಧೀಕರಿಸಿ, ಕುಡಿಯುವ ನೀರು ಪಡೆಯುವ ವ್ಯವಸ್ಥೆಯನ್ನಲ್ಲಿ ಅವಲಂಬಿಸಬೇಕಿದೆ.
*ಅಶೋಕ್‌ಕುಮಾರ್ ಎ

Monday, June 08, 2009

ಹೌ ವಾಸ್ ಸ್ಕೂಲ್ ಟುಡೇ?

ಹೌ ವಾಸ್ ಸ್ಕೂಲ್ ಟುಡೇ?
"ಹೌ ವಾಸ್ ಸ್ಕೂಲ್ ಟುಡೇ" ಎನ್ನುವುದು ಒಂದು ತಂತ್ರಾಂಶದ ಹೆಸರು. ಸೆರಿಬ್ರಲ್ ಪಾಲ್ಸಿಯಂತಹ ತೊಂದರೆಯಿದ್ದು ಸಂಭಾಷಿಸಲು ಕಷ್ಟ ಪಡುವ ಮಕ್ಕಳನ್ನು ತರಬೇತಿಗೊಳಿಸಲು ಬಳಸಬಹುದಾದ ತಂತ್ರಾಂಶವಿದು.ಅಬರ್ದೀನ್ , ಡುನ್ದೀ ಮತ್ತು ಕೆಪೆಬಿಲಿಟ್ಯ್ ಸ್ಕಾಟ್ಲಂಡ್ ವಿಶ್ವವಿದ್ಯಾಲಯದ ಸಂಶೋಧಕರು ಅಭಿವೃದ್ಧಿ ಪಡಿಸಿದ ತಂತ್ರಾಂಶವು ವಿದ್ಯಾರ್ಥಿ ತನ್ನ ಶಾಲೆಯಲ್ಲಿ ಸಮಯ ಕಳೆದ ಬಗೆಯನ್ನು ತಿಳಿದುಕೊಳ್ಳುತ್ತದೆ. ರೆಕಾರ್ಡಿಂಗ್ ವ್ಯವಸ್ಥೆ, ಸಂವೇದಕಗಳು ಮತ್ತು ಸ್ವೈಪ್ ಕಾರ್ಡ್ ಮೂಲಕ ಈ ಬಗ್ಗೆ ಅದು ಮಾಹಿತಿ ಸಂಗ್ರಹಿಸುತ್ತದೆ. ನಂತರ ಕೃತಕ ಧ್ವನಿಜನಕ ವ್ಯವಸ್ಥೆಯ ಮೂಲಕ ತಂತ್ರಾಂಶವು ಕತೆಯನ್ನು "ಹೇಳುವ" ಸಾಮರ್ಥ್ಯ ಪಡೆದಿದೆ. ಸಮಸ್ಯೆಯಿರುವ ಮಗು, ಈ ತಂತ್ರಾಂಶ ಅಳವಡಿಸಿರುವ ಕಂಪ್ಯೂಟರ್ ಬಳಸಿ, ಕತೆಗೆ ಕಿವಿಗೊಟ್ಟು ಕೇಳಿ, ಮಾತನ್ನಾಡಲು ತರಬೇತಿ ಪಡೆಯಬಹುದು. ತಂತ್ರಾಂಶವು ಸಂವಹನಕ್ಕೆ ಅವಕಾಶ ನೀಡುವುದರಿಂದ ಮಗುವೂ ಸಂಭಾಷಿಸಲು,ಪ್ರಶ್ನಿಸಲು ಅವಕಾಶ ಸಿಗುತ್ತದೆ. ಮಾತನಾಡಲು ಸಮಸ್ಯೆಯಿರುವ ಮಗುವೂ ಕಂಪ್ಯೂಟರಿನ ಈ ಆಟದ ಮೂಲಕ ಸಂಭಾಷಿಸಲು ತೊಡಗಬಹುದು.ಪ್ರಾಯೋಗಿಕವಾಗಿ ಶಾಲೆಗಳಲ್ಲಿ ಈ ತಂತ್ರಾಂಶ ಬಳಸಿದಾಗ ತೃಪ್ತಿಕರ ಫಲಿತಾಂಶ ಸಿಕ್ಕಿದೆಯಂತೆ.
--------------------------------------
ವಾತಾವರಣವನ್ನು ಬಿಸಿ ಮಾಡುವ ಬಿಸಿಯುಸಿರು!
ದನಗಳು ಪರಿಸರಕ್ಕೆ ಮಾರಕವೇ? ಜಾನುವಾರುಗಳಿಗಾಗಿ ಆಗುತ್ತಿರುವ ಕಾಡಿನ ನಾಶವನ್ನು ಪರಿಗಣಿಸುವುದರ ಜತೆಗೆ ಅವುಗಳು ಹೊರಸೂಸುವ ಮಿಥೇನ್ ಅನಿಲದ ಪ್ರಮಾಣವನ್ನು ತೆಗೆದುಕೊಂಡರೆ, ಜಾನುವಾರುಗಳು ನಾವು ಅಂದುಕೊಂಡದ್ದಕ್ಕಿಂತ ಹೆಚ್ಚು ಪರಿಸರ ಹಾನಿ ಉಂಟು ಮಾಡುತ್ತಿವೆ.ಮಿಥೇನ್ ಅನಿಲವು ಇಂಗಾಲಾಮ್ಲಕ್ಕಿಂತ ಇಪ್ಪತ್ತು ಪಟ್ಟು ಹೆಚ್ಚು ಶಾಖವನ್ನು ಹಿಡಿದಿಡುವ ಗುಣ ಹೊಂದಿರುವ ಕಾರಣ, ಮಿಥೇನ್ ಜಾಗತಿಕ ವಾತಾವರಣದ ಶಾಖವನ್ನು ಏರಿಸುವ ಅನಿಲಗಳಲ್ಲಿ ಅತ್ಯಂತ ಅಪಾಯಕಾರಿ ಆಗಿದೆ.ಜಾನುವಾರುಗಳ ಆಹಾರವಾಗಿ ಸೋಯಾ,ಮೆಕ್ಕೆಜೋಳಗಳನ್ನು ಬಳಸಿದಾಗಲಂತೂ,ಜಾನುವಾರುಗಳ ಹೊಟ್ಟೆಯಲ್ಲಿ ಜರಗುವ ಜೀರ್ಣಕ್ರಿಯೆಯಲ್ಲಿ ಉತ್ಪತ್ತಿಯಾಗುವ ಮಿಥೇನ್ ಪ್ರಮಾಣ ಬಹಳ ಹೆಚ್ಚಾಗುತ್ತದೆ. ಹೀಗಾಗಿ ಜಾನುವಾರುಗಳು ಹೆಚ್ಚು ಮಿಥೇನ್ ಹೊರಬಿಟ್ಟು ಪರಿಸರಕ್ಕೆ ಅಪಾಯ ತರಲಿವೆ. ವಾಹನಗಳು ಮತ್ತು ಕೈಗಾರಿಕೆಗಳಿಗಿಂತ ಜಾಗತಿಕ ಬಿಸಿಯನ್ನು ಹೆಚ್ಚುವಲ್ಲಿ ಜಾನುವಾರುಗಳು ಹೆಚ್ಚು ಅಪಾಯಕಾರಿಯಾಗುತ್ತಿರುವುದು ವಿಪರ್ಯಾಸ. ಇದಕ್ಕೆ ಪರಿಹಾರ ಮಾರ್ಗವೆಂದರೆ ಜಾನುವಾರುಗಳ ಆಹಾರದಲ್ಲಿ ಬದಲಾವಣೆ ತರುವುದು. ಸೋಯಾ ಮತ್ತು ಮೆಕ್ಕೆಜೋಳದ ಬದಲು ಜೀರ್ಣವಾಗುವ ಪ್ರಕ್ರಿಯೆಯಲ್ಲಿ ಕಡಿಮೆ ಮಿಥೇನ್ ಉತ್ಪಾದನೆಗೆ ಕಾರಣವಾಗುವ ಹುಲ್ಲಿನ ತಳಿಯನ್ನು ಅವುಗಳ ಆಹಾರದಲ್ಲಿ ಬಳಸುವುದು.ಇನ್ನೊಂದು ಕ್ರಮವೆಂದರೆ ಜಾನುವಾರುಗಳ ತಳಿಗಳಲ್ಲಿ ಬದಲಾವಣೆ ತರಲು ಪ್ರಯತ್ನಿಸುವುದು.ವಿದೇಶಗಳಲ್ಲಿ ದನಗಳ ಹಾಲು ಉತ್ಪತ್ತಿ ಪ್ರಮಾಣ ಹೆಚ್ಚು. ಹೀಗಾಗಿ, ಪ್ರತಿ ಲೀಟರ್ ಹಾಲು ಉತ್ಪಾದನೆಗಾಗಿ ದನಗಳು ಉತ್ಪತ್ತಿ ಮಾಡುವ ಮಿಥೇನ್ ಪ್ರಮಾಣ ಕಡಿಮೆ. ಆದರೆ ಭಾರತದಂತಹ ದೇಶಗಳಲ್ಲಿ,ಜಾನುವಾರುಗಳ ಸಂಖ್ಯೆ ಬಹಳ ಹೆಚ್ಚು. ಹಾಗಾಗಿ ಬಿಡುಗಡೆಯಾಗುವ ಮಿಥೇನ್ ಪ್ರಮಾಣವೂ ಅಗಾಧ.ಪ್ರತಿ ಜಾನುವಾರು ಕೂಡಾ ವಾರ್ಷಿಕವಾಗಿ ನಾಲ್ಕುನೂರರಿಂದ ಎಂಟು ನೂರು ಕೆಜಿ ಮಿಥೇನ್ ಬಿಡುಗಡೆ ಮಾಡುತ್ತವೆ.ಜಾನುವಾರುಗಳ ಮೇವು ಬದಲಿಸಿದರೆ, ಅವುಗಳಿಂದ ಬರುವ ಹಾಲು ಕಡಿಮೆಯಾಗುವ ಅಪಾಯವೂ ಇದೆಯಾದ್ದರಿಂದ, ಡೈರಿ ಉದ್ಯಮದಲ್ಲಿ ತೊಡಗಿರುವವರು, ಮೇವು ಬದಲಿಸಲು ಬಯಸರು. ಒಮಿಗಾ ಕೊಬ್ಬನ್ನು ಹೊಂದಿದ ಹುಲ್ಲಿನ ಆಹಾರ ನೀಡಿದಾಗ ಹಾಲಿನ ಉತ್ಪಾದನೆಯಲ್ಲಿ ಏರುಪೇರಾಗದು.ಕೊಲೆರೆಡೋ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಸಂಶೋಧನೆಗಳು ಜಾನುವಾರುಗಳು ಹುಟ್ಟಿನಿಂದಲೇ ಕಡಿಮೆ ತೇಗುವಂತೆ ಅಭಿವೃದ್ಧಿ ಪಡಿಸಿದ ತಳಿಗಳದ್ದಾಗಲಿವೆ. ಮುಂದಿನ ದಶಕವೊಂದರಲ್ಲಿ ಜಾನುವಾರುಗಳ ಮೂಲಕ ಉತ್ಪಾದನೆಯಾಗುವ ಮಿಥೇನ್ ಪ್ರಮಾಣ ಸದ್ಯದ ಶೇಕಡಾ ಇಪ್ಪತ್ತೈದು ಭಾಗ ಇಳಿಸ ಬೇಕೆಂಬುದು ವಿಜ್ಞಾನಿಗಳ ಗುರಿ. ಇಲ್ಲವಾದರೆ, ಹೆಚ್ಚಿನ ಹಾಲಿನ ಉತ್ಪಾದನೆಗೆ ಬೇಕಾಗಿ, ಜಾಸ್ತಿ ಜಾನುವಾರುಗಳನ್ನು ಸಾಕುವಾಗ, ಅವು ಹೊರಸೂಸುವ ಮಿಥೇನ್ ಪ್ರಮಾಣ ಎಷ್ಟಿರಬಹುದೆಂದರೆ,ಅವು ದೊಡ್ದ ದೊಡ್ದ ಉದ್ದಿಮೆಗಳಿಗಿಂತ ಹೆಚ್ಚು ಅಪಾಯಕಾರಿಯಾಗಿ, ಭೂಮಿಯ ಮೇಲಿನ ಶಾಖ ಏರಲು ಕಾರಣವಾದಾವು.
----------------------------------------------------
ಎ ಟಿ ಎಂ ಯಂತ್ರದ ಮೂಲಕವೂ ಅಕ್ರಮ
ವಿದೇಶಗಳ ಕೆಲವು ಎ ಟಿ ಎಂ ಯಂತ್ರಗಳಲ್ಲಿ ಕೆಡುಕುಂಟು ಮಾಡುವ ತಂತ್ರಾಂಶವನ್ನು ಅಕ್ರಮವಾಗಿ ಅನುಸ್ಥಾಪಿಸಿರುವುದೀಗ ಬೆಳಕಿಗೆ ಬಂದಿದೆ. ಈ ಯಂತ್ರಗಳಲ್ಲಿ ಬಳಕೆದಾರ ತನ್ನ ಕಾರ್ಡ್ ಬಳಸಿದಾಗ, ಕಾರ್ಡಿನಲ್ಲಿರುವ ಮಾಹಿತಿಯನ್ನು ತಂತ್ರಾಂಶ ಉಳಿಸಿಕೊಳ್ಳುತ್ತದೆ.ಅಷ್ಟೇ ಅಲ್ಲ, ಗ್ರಾಹಕ ವ್ಯವಹಾರ ಮಾಡಲು ಪಿನ್ ಸಂಖ್ಯೆಯನ್ನು ಒತ್ತಿದಾಗ, ಅದನ್ನೂ ಉಳಿಸಿಕೊಳ್ಳುತ್ತದೆ.ಮಾಸ್ಟರ್ ಕಾರ್ಡ್ ಎನ್ನುವ ವಿಶೇಷ ಕಾರ್ಡ್ ತುರುಕಿದಾಗ, ತಂತ್ರಾಂಶವು ಉಳಿಸಿಕೊಂಡ ಮಾಹಿತಿಯನ್ನು ರಶೀದಿ ಕಾಗದ ಸುರುಳಿಯ ಮೇಲೆ ಮುದ್ರಿಸಿಕೊಳ್ಳಬಹುದು. ಬೇಕೆಂದರೆ, ಅಕ್ರಮ ಕಾರ್ಡ್ ತಯಾರಿಸಿಕೊಳ್ಳಲೂ ವಂಚಕ ಮಹಾಶಯನಿಗೆ ಸಾಧ್ಯವಂತೆ! ಈ ಕೆಡುಕು ತಂತ್ರಾಂಶವನ್ನು ಹೊರಗಿನಿಂದ ಯಂತ್ರದಲ್ಲಿ ಅನುಸ್ಥಾಪಿಸಲು ಬರುವುದಿಲ್ಲವೆಂಬುದು ಸಮಾಧಾನದ ವಿಷಯ. ಎ ಟಿ ಎಂನ ಯಾರಾದರೂ ನೌಕರರ ಜತೆ ಸೇರಿ ಮಸಲತ್ತು ಮಾಡುವ ವಂಚಕರು ಇದನ್ನು ಯಂತ್ರದಲ್ಲಿ ಸ್ಥಾಪಿಸಲು ಸಮರ್ಥರಾದಾರು.ಈ ಯಂತ್ರಗಳೇನಾದರೂ ಜಾಲದಲ್ಲಿದ್ದರೆ, ಆಗ ಈ ತಂತ್ರಾಂಶ ಇತರ ಯಂತ್ರಗಳಲ್ಲೂ ಅನುಸ್ಥಾಪಿಸಿ, ಸಮಸ್ಯೆ ತೀವ್ರತರವಾಗಬಹುದು.
--------------------------------------------------------------
ತರಕಾರಿ ಬೆಳೆಯಲು ನಗರಗಳಲ್ಲಿ ಹಸಿರು ಮನೆ
ನಗರಗಳಿಗೆ ಹಳ್ಳಿಗಳಲ್ಲಿ ಬೆಳೆದ ತರಕಾರಿಯನ್ನು ಸಾಗಾಟ ಮಾಡಿದಾಗ,ಸಾಗಾಟದ ಖರ್ಚು ಮತ್ತು ಅದನ್ನು ಕೆಡದಂತೆ ಶೈತ್ಯಾಗಾರದಲ್ಲಿಡುವುದಕ್ಕೇ ಹೆಚ್ಚು ಖರ್ಚು ಬರುತ್ತದೆ.ಬದಲು ನಗರಗಳಲ್ಲೇ ಗಗನಚುಂಬಿ ಹಸಿರುಮನೆಗಳನ್ನು ಸ್ಥಾಪಿಸಿ,ಅಲ್ಲಿ ಸಾವಯವ ವಿಧಾನದಲ್ಲಿ ತರಕಾರಿ,ಹಣ್ಣು ಬೆಳೆದರೆ,ನಗರವಾಸಿಗಳಿಗೆ ತಾಜಾ ಹಣ್ಣು-ತರಕಾರಿ ಸಿಗಲಿದೆ. ಖರ್ಚೂ ಹೆಚ್ಚೇನೂ ಆಗದು ಎನ್ನುವುದು ಸ್ವೀಡಿಶ್ ಕಂಪೆನಿ ಪ್ಲಾಂಟಾಗನ್ ಕಂಪೆನಿಯ ಲೆಕ್ಕಾಚಾರ. ಹಸಿರುಮನೆಯಲ್ಲಿ ಗಾಳಿ,ಬೆಳಕು ಮತ್ತು ನೀರನ್ನು ನಿಯಂತ್ರಿತ ಪ್ರಮಾಣದಲ್ಲಿ ನೀಡಿ, ಸಸ್ಯಗಳನ್ನು ಬೆಳೆಯುವ ವ್ಯವಸ್ಥೆಯಿರುತ್ತದೆ. ಹತ್ತು ಸಾವಿರ ಚದರ ಮೀಟರ್ ಸ್ಥಳಾವಕಾಶದಲ್ಲಿ ಲಕ್ಷ ಚದರ ಮೀಟರ್ ಸ್ಥಳದಲ್ಲಿ ಬೆಳೆಯುವಷ್ಟೇ ಸಸ್ಯಗಳನ್ನು ಬೆಳೆಯಲು ಅವಕಾಶವಿದೆ ಯಾಕೆಂದರೆ ಇವುಗಳ ಎತ್ತರ ಬಹಳ ಹೆಚ್ಚು. ಪ್ರತಿ ಹಸಿರು ಮನೆಗೂ ಮೂವತ್ತು ಮಿಲಿಯನ್ ಡಾಲರ್ ಖರ್ಚು ಬರಬಹುದು.
--------------------------------------------------------------------------
ಹೊಸ ಐಫೋನ್?
ಪ್ರತಿವರ್ಷದಂತೆ ನಡೆಯಲಿರುವ ವರ್ಲ್ಡ್‌ವೈಡ್ ಡೆವಲಪರ್ಸ್ ಸಮಾವೇಶವು ಜುಲೈಯಲ್ಲಿ ನಡೆಯಲಿದೆ. ಇದರಲ್ಲಿ ಹೊಸ ಐಫೋನ್ ಬಿಡುಗಡೆಯಾಗಬಹುದು ಎಂಬ ನಿರೀಕ್ಷೆಯಿದೆ.ಹೊಸ ಐಫೋನ್ ನಾಲ್ಕು ಜಿಬಿ ಸ್ಮರಣ ಸಾಮರ್ಥ್ಯದ್ದಾಗಿರಬಹುದು ಎನ್ನುವುದು ನಿರೀಕ್ಷೆ.ಹೊಸ ಸಂಸ್ಕಾರಕ, ಹೆಚ್ಚಿನ ಸ್ಮರಣ ಸಾಮರ್ಥ್ಯ,ಅಟೋ ಫೋಕಸ್ ಸಾಮರ್ಥ್ಯವಿರುವ ವಿಡಿಯೋ ರೆಕಾರ್ಡಿಂಗ್ ಮಾಡಬಲ್ಲ ಕ್ಯಾಮರಾ ಹೊಸ ಐಫೋನಿನಲ್ಲಿರಬಹುದೆನ್ನಲಾಗಿದೆ.ಜತೆಗೆ ಐಫೋನಿನ ಕಾರ್ಯನಿರ್ವಹಣಾ ತಂತ್ರಾಂಶದ ಹೊಸ ಆವೃತ್ತಿ ಐಫೋನ್3.0 ಲಭ್ಯವಾಗಬಹುದು. ಇದರಲ್ಲಿ ವಿಡಿಯೋ ಅಥವಾ ಧ್ವನಿಗ್ರಹಣವಾದೊಡನೆ ಇತರರಿಗೆ ಕಳುಹಿಸಲು ಅನುವು ಮಾಡುವ ಸೌಲಭ್ಯ ಸಿಗಬಹುದು ಎಂಬ ಗುಸುಗುಸು ಇದೆ.
------------------------------------
udayavani
*ಅಶೋಕ್‌ಕುಮಾರ್ ಎ

Monday, June 01, 2009

ಆಭರಣಗಳು ಬಾಡಿಗೆಗೆ!


ಗ್ರಾಹಕರಿಗೇ ಗುತ್ತಿಗೆ!

ಹೊರಗುತ್ತಿಗೆ ವಿಧಾನದಲ್ಲಿ ಕಂಪೆನಿಯು ತನ್ನ ಕೆಲಸವನ್ನು, ಆ ಕೆಲಸದಲ್ಲಿ ಹೊರಗಿನ ಇನ್ಯಾವುದಾದರೂ ಪರಿಣತ ಕಂಪೆನಿಗೆ ನೀಡಿ ತನ್ಮೂಲಕ ಮಿತವ್ಯಯ ಸಾಧಿಸುತ್ತದೆ. ಈಗಿನ ಹೊಸ ನಮೂನೆ ಎಂದರೆ ಗ್ರಾಹಕರಿಗೇ ಗುತ್ತಿಗೆ ನೀಡುವುದು. ಉತ್ಪನ್ನದ ವಿನ್ಯಾಸವನ್ನು ಗ್ರಾಹಕರಿಂದಲೇ ಆಹ್ವಾನಿಸಿ, ವಿನ್ಯಾಸಕ್ಕೆ ಕಡಿಮೆ ದರದಲ್ಲಿ ಅಥವ ಉಚಿತವಾಗಿ ಅದನ್ನು ಬಳಸುವುದು ಕಂಪೆನಿಗಳ ತಂತ್ರ. ತ್ರೆಡ್‌ಲೆಸ್ ಎನ್ನುವ ಟಿ-ಶರ್ಟ್ ತಯಾರಿಸುವ ಕಂಪೆನಿಯು ತನ್ನ ಗ್ರಾಹಕರಿಂದ ಟಿ-ಶರ್ಟಿನ ವಿನ್ಯಾಸವನ್ನು ಆಹ್ವಾನಿಸುತ್ತದೆ.ವಿನ್ಯಾಸಗಳನ್ನು ಅಂತರ್ಜಾಲ ತಾಣದಲ್ಲಿ ಹಾಕಿ,ಗ್ರಾಹಕರಿಂದ ಅವುಗಳಿಗೆ ರೇಟಿಂಗ್ ನೀಡಿಸಿ, ಹೆಚ್ಚು ಜನರು ಇಷ್ಟಪಟ್ಟ ವಿನ್ಯಾಸಗಳನ್ನು ಮಾರಾಟಕ್ಕೆ ಬಿಡುಗಡೆ ಮಾಡುತ್ತದೆ. ವಿನ್ಯಾಸಕಾರನ ಹೆಸರನ್ನೂ ಟಿ-ಶರ್ಟಿನ ಲೇಬಲ್‌ನಲ್ಲಿ ನೀಡಲಾಗುತ್ತದೆ.ಕಂಪೆನಿಯು ವಿನ್ಯಾಸಕಾರನಿಗೆ ಪ್ರತೀ ವಾರ ನೀಡುವ ಬಹುಮಾನದ ಮೊತ್ತ ಎರಡು ಸಾವಿರ ಡಾಲರುಗಳು. ಮ್ಯುಜಿ.ನೆಟ್ ಎನ್ನುವ ಜಪಾನಿ ಕಂಪೆನಿಯು ಪೀಠೋಪಕರಣಗಳ ವಿನ್ಯಾಸವನ್ನು ಗ್ರಾಹಕರಿಂದ ಸ್ವೀಕರಿಸುತ್ತದೆ. ಹೊಸ ವಿನ್ಯಾಸದ ಪೀಠೋಪಕರಣಗಳನ್ನು ಅಂತರ್ಜಾಲ ತಾಣದಲ್ಲಿ ಪ್ರದರ್ಶಿಸಿ,ಗ್ರಾಹಕರು ಬೇಡಿಕೆ ಸಲ್ಲಿಸಲು ಅವಕಾಶ ನೀಡುತ್ತದೆ. ಕನಿಷ್ಠ ಪಕ್ಷ ಮುನ್ನೂರು ಜನರಿಂದ ಬೇಡಿಕೆ ಪಡೆದ ಪೀಠೋಪಕರಣಗಳನ್ನು ತಯಾರಿಸಿ,ಮಾರಾಟಕ್ಕೆ ಒದಗಿಸುವುದು ಕಂಪೆನಿಯು ಅನುಸರಿಸುವ ಕ್ರಮ.ಮಲಗುವಾಗ ಮಂಚದ ತಲೆಯ ಸಮೀಪ ಅಳವಡಿಸಬಹುದಾದ ಅನುಕೂಲಕರ ದೀಪ ಮತ್ತು ಹಲವು ರೀತಿಯಲ್ಲಿ ಇರಿಸಬಹುದಾದ ಬೀನ್ ಬ್ಯಾಗ್ ಕುರ್ಚಿಗಳು ಈ ರೀತಿ ಗ್ರಾಹಕರಿಂದ ವಿನ್ಯಾಸಗೊಳಿಸಲ್ಪಟ್ಟು ಮಾರಾಟದಲ್ಲಿ ದಾಖಲೆ ಮಾಡಿವೆ.
----------------------------------------------------------------------
ಆಭರಣಗಳು ಬಾಡಿಗೆಗೆ!
ಮನೆ,ವಾಹನ ಇತ್ಯಾದಿಗಳು ಬಾಡಿಗೆಗೆ ಸಿಗುತ್ತಿರುವಾಗ, ಆಭರಣಗಳೂ ಬಾಡಿಗೆಗೆ ಸಿಕ್ಕಬಾರದೇ?ಈಗ ಅದೂ ಸಾಧ್ಯವಾಗಲಿದೆ.ಆರ್ಥಿಕ ಹಿನ್ನಡೆಯ ಈ ದಿನಗಳಲ್ಲಿ ಜನರ ಕೈಯಲ್ಲಿ ಓಡಾಡುವ ಹಣದ ಪ್ರಮಾಣ ಕಡಿಮೆಯಾಗಿದೆ. ಬಂಗಾರದ ಬೆಲೆಯೂ ಗಗನಕ್ಕೇರಿದೆ. ವರ್ಷದಲ್ಲಿ ನಾಲ್ಕೈದು ಬಾರಿ ಧರಿಸುವ ಆಭರಣಗಳಿಗೆ ಲಕ್ಷಗಟ್ಟಲೆ ಸುರಿಯುವ ಬದಲು ಅದು ಬಾಡಿಗೆಗೆ ದೊರೆತರೆ ಚೆನ್ನಲ್ಲವೇ?ಇಂಡಿಯಾ ಕ್ಯಾಪಿಟಲ್ ಕಂಪೆನಿಯಿದೀಗ ಬಂಗಾರದ ಆಭರಣಗಳನ್ನು ಬಾಡಿಗೆಗೆ ಒದಗಿಸಲು ಯೋಜಿಸಿದೆ. ಬಾಡಿಗೆಯು ಮೂರು ದಿನಗಳಿಗೆಯು ಆಭರಣದ ಬೆಲೆಯ ಶೇಕಡಾ ಮೂರರಿಂದ ಹತ್ತುಆಗಿರುತ್ತದೆ. ವಿದೇಶಗಳಿಗೆ ಆಭರಣಗಳನ್ನು ಕೊಂಡೊಯ್ಯುವವರು ಅಧಿಕ ಬಾಡಿಗೆ ಕೊಡಬೇಕಾಗುತ್ತದೆ. ಅಂತರ್ಜಾಲ ತಾಣದ ಮೂಲಕ ಬಾಡಿಗೆಗೆ ದೊರೆಯುವ ವಿವಿಧ ಮಾದರಿಗಳನ್ನು ಪ್ರದರ್ಶಿಸಿ,ಆಸಕ್ತರಿಂದ ಬೇಡಿಕೆ ಬಂದಾಗ ಬಾಡಿಗೆ ನೀಡಲಾಗುವುದು. ಬಾಡಿಗೆಗೆ ಆಭರಣವನ್ನು ನೀಡುವ ಮೊದಲು,ಅದನ್ನು ಗ್ರಾಹಕನ ಮುಂದೆಯೇ ಲೇಸರ್ ತಂತ್ರಜ್ಞಾನದ ಸಹಾಯದಿಂದ ಪರೀಕ್ಷಿಸಿ,ಆಭರಣದಲ್ಲಿರುವ ವಿವಿಧ ಲೋಹಗಳ ಪ್ರಮಾಣವನ್ನು ತಿಳಿಸಲಾಗುವುದು.ಆಭರಣವನ್ನು ಪಡೆದ ಬಗ್ಗೆ ಗ್ರಾಹಕ ಸಹಿ ಹಾಕಿದ ಪತ್ರವನ್ನು ಕಂಪೆನಿಗೆ ನೀಡುವುದಲ್ಲದೆ,ಖಾತರಿ ಮೊತ್ತವನ್ನೂ ನೀಡಬೇಕು.ಅಗತ್ಯವಿದ್ದರೆ ಖಾತರಿ ನೀಡುವವರ ಸಹಿಯನ್ನೂ ಪಡೆಯಲಾಗುತ್ತದೆ.ಆಭರಣ ವಾಪಸ್ಸು ಪಡೆಯುವಾಗ ಪರೀಕ್ಷಿಸಿಯೇ ಪಡೆಯಲಾಗುತ್ತದೆ.
------------------------------------------------
ಟ್ವಿಟರ್ ಮೇಲೆ ಟಿವಿ ಧಾರಾವಾಹಿ!
ಮೈಕ್ರೋಬ್ಲಾಗಿಂಗ್‌ಗೆ ಅವಕಾಶ ನೀಡುವ ಟ್ವಿಟರ್ ಅಂತರ್ಜಾಲ ತಾಣವು ರ‍ೆವಿಲ್ಲ್ ಪ್ರೊಡಕ್ಷನ್ಸ್ ಮತ್ತು ಬ್ರಿಲ್ಲ್‌ಸ್ಟೀನ್ ಎಂಟರ್ಟೈನ್‌ಮೆಂಟ್ ಕಂಪೆನಿಗಳ ಜತೆ ಒಪ್ಪಂದ ಮಾಡಿಕೊಂಡಿದೆ. ಇದರ ಪ್ರಕಾರ ಈ ಟಿವಿ ಕಂಪೆನಿಗಳು ಟ್ವಿಟರ್ ಸುತ್ತ ಹೆಣೆದ ಕತೆಯ ಧಾರಾವಾಹಿಯನ್ನು ಪ್ರಸಾರ ಮಾಡಲಿವೆ. ಜನರ ನಡುವಣ ಸಂಪರ್ಕಕ್ಕೆ ಹೊಸ ಹಾದಿ ಕಲ್ಪಿಸಿರುವ ಟ್ವಿಟರ್ ಈ ಒಡಂಬಡಿಕೆಯಿಂದ ಸಾಧಿಸಲಿರುವುದು ಏನು ಎನ್ನುವುದಿನ್ನೂ ಅಸ್ಪಷ್ಟ.

-------------------------------------
ಕನ್ನಡ ಅಂತರ್ಜಾಲ ತಾಣಗಳು
ಕನ್ನಡ ಬ್ಲಾಗ್ಸ್ http://kannadablogs.ning.com/ ಕನ್ನಡದ ಹೊಸ ಅಂತರ್ಜಾಲ ತಾಣ. ಬ್ಲಾಗಿಗರನ್ನು ಒಂದುಗೂಡಿಸುವುದು ಮತ್ತು ಪುಸ್ತಕ ಬಿಡುಗಡೆ, ಚರ್ಚೆಗಳಂತಹ ಚಟುವಟಿಕೆಗಳನ್ನು ಅವರ ಗಮನಕ್ಕೆ ತರುವ ಕಾರ್ಯದಲ್ಲಿ ಕನ್ನಡಬ್ಲಾಗ್ಸ್ ತಾಣ ಅಪೂರ್ವ ಯಶಸ್ಸು ಕಂಡಿದೆ. ಮೂರು ತಿಂಗಳೊಳಗೆ ಸಾವಿರದಿನ್ನೂರು ಸದಸ್ಯರನ್ನು ನೋಂದಾಯಿಸಿ,ಇನ್ನೂ ಹೆಚ್ಚು ಜನರನ್ನು ಆಕರ್ಷಿಸುತ್ತಿರುವ ತಾಣವಿದು.ಮೇ ಫ್ಲವರ್ ಮೀಡಿಯಾ ಹೌಸ್ ಈ ತಾಣವನ್ನು ನಿರ್ವಹಿಸುತ್ತಿದೆ. "ಕೆಂಡಸಂಪಿಗೆ" http://www.kendasampige.com/ ತಾಣದಲ್ಲಿ ಲಭ್ಯವಿದೆ. ಅನಂತಮೂರ್ತಿ,ಮೊಗಳ್ಳಿ,ವೈದೇಹಿ,ಫಕೀರ್,ಉಮಾರಾವ್,ಕೇಶವ ಕುಲಕರ್ಣಿ,ಅನಿವಾಸಿ ಮುಂತಾದವರು ನಿಯಮಿತವಾಗಿ ಬರೆಯುವ ಈ ತಾಣ ದೈನಿಕ ಕಾದಂಬರಿಯನ್ನೂ ಪ್ರಕಟಿಸುತ್ತಿದೆ.ಅನಿವಾಸಿ ಭಾರತೀಯರನ್ನು ಬಹುವಾಗಿ ಆಕರ್ಷಿಸುವಲ್ಲಿ ಸಫಲವಾಗಿರುವ ದಟ್ಸ್‌ಕನ್ನಡ.ಕಾಮ್ thatskannada.com ಕನ್ನಡದ ಜನಪ್ರಿಯ ತಾಣ. ಸುದ್ದಿಯನ್ನೂ ಪ್ರಕಟಿಸುವ ಈ ತಾಣ, ಎಲ್ಲಾ ತರದ ಮಸಾಲೆಯನ್ನೂ ಹೊಂದಿರುವುದೇ ಇದರ ಜನಪ್ರಿಯತೆಯ ಗುಟ್ಟು. ಬರಹಗಾರರಿಗೆ ತಮ್ಮ ಬರಹವನ್ನು ಯಾವುದೇ ಸಂಪಾದಕರ ಕತ್ತರಿಗೊಳಗಾಗದೆ ದಿಡೀರ‍್ ಆಗಿ ಪ್ರಕಟಿಸಿ, ಓದುಗರಿಂದ ಮತ್ತು ಸದಸ್ಯರಿಂದ ಪ್ರತಿಕ್ರಿಯೆ ಪಡೆಯಲು ಅನುವು ಮಾಡುವ ಸಂಪದ.ನೆಟ್(sampada.net ) ನಂಬರ್ 2 ಸ್ಥಾನದಲ್ಲಿರುವ ಕನ್ನಡ ತಾಣ.ಜಾಹೀರಾತಿನ ಕಾಟವಿಲ್ಲದೆ,ಅತ್ಯುತ್ತಮ ಬಳಕೆದಾರ ಸ್ನೇಹಿ ಪುಟ ವಿನ್ಯಾಸ ಹೊಂದಿದ ಸಂಪದಕ್ಕೆ ಹರಿಪ್ರಸಾದ್ ನಾಡಿಗ್ ಸಾರಥ್ಯವಿದೆ. ಸದಸ್ಯರ ಸಂಖ್ಯೆ ಆರೂವರೆ ಸಾವಿರಕ್ಕೂ ಹೆಚ್ಚು.ನೀರ ನಿಶ್ಚಿಂತೆ ಸಾಧಿಸುವ ಗುರಿ ಹೊತ್ತ ಕನ್ನಡ ವಾಟರ್ ಪೋರ್ಟಲ್, ಆರೋಗ್ಯ ಸಂಪದ, ಕೃಷಿ ಸಂಪದಗಳೂ ಸಂಪದದ ಛತ್ರದಡಿ ಬರುತ್ತವೆ.
-------------------------------------------
ಮೈಕ್ರೋಸಾಫ್ಟ್ ಬಿಂಗ್
ಮೈಕ್ರೋಸಾಫ್ಟಿನ ಹೊಸ ಶೋಧ ಸೇವೆ ಜೂನ್ ಮೂರರಿಂದ ಅನಾವರಣಗೊಳ್ಳಲಿದೆ. ಇದು ಜನರಿಗೆ ವಿವಿಧ ವಿಷಯಗಳ ಬಗ್ಗೆ ನಿರ್ಧಾರ ಕೈಗೊಳ್ಳಲು ಸಹಾಯ ಮಾಡುವ ಫಲಿತಾಂಶಗಳನ್ನು ಒದಗಿಸಿ,ಇತರ ಶೋಧ ಸೇವೆಗಳಿಗೆ ಭಿನ್ನವಾಗಿ ಕಂಡು ಬರಲಿದೆ.ಬೇಕಾದ ವಸ್ತುವನ್ನು ಆಯ್ದುಕೊಳ್ಳಲು, ಪ್ರವಾಸ ಕೈಗೊಳ್ಳಲು, ಆರೋಗ್ಯ ಪರಿಸ್ಥಿತಿಯ ಬಗ್ಗೆ ಅಧ್ಯಯನ ಮಾಡಲು ಮತ್ತು ಅಗತ್ಯವಾದ ಸ್ಥಳೀಯ ಉದ್ದಿಮೆಯನ್ನು ಹುಡುಕಲು ಬಿಂಗ್ ಸಹಾಯ ಮಾಡಲಿದೆಯಂತೆ. ಗೂಗಲ್ ಶೋಧ ಸೇವೆಗೆ ಸ್ಪರ್ಧೆ ನೀಡುವ ಮೈಕ್ರೋಸಾಫ್ಟಿನ ಗುರಿಯು ಬಿಂಗ್ ಶೋಧ ಸೇವೆಯಿಂದಲಾದರೂ ಈಡೇರುವುದೋ ಕಾದು ನೋಡಬೇಕು.
----------------------------------------------------
ಜತೆಗೊಯ ಬಹುದಾದ ಓಎಸ್
ಸಿಡಿಯಲ್ಲೂ ಪೆನ್ ಡ್ರೈವಿನಲ್ಲೂ ನಮಗೆ ಬೇಕಾದ ಕಂಪ್ಯೂಟರ್ ಕಾರ್ಯನಿರ್ವಹಣಾ ತಂತ್ರಾಂಶವನ್ನು ಒಯ್ಯಬಹುದಾದರೆ ಬಹಳ ಅನುಕೂಲತೆಯಿದೆ. ಈ ಸಿಡಿ ಅಥವ ಪೆನ್ ಡ್ರೈವ್ ಬೂಟೇಬಲ್ ಆಗಿದ್ದರೆ, ಯಾವುದೇ ಕಂಪ್ಯೂಟರಿಗೆ ಇವನ್ನು ಹಾಕಿ, ಅವುಗಳ ಮೂಲಕವೇ ಯಂತ್ರವನ್ನು ಚಾಲೂ ಮಾಡಿದರೆ, ಅಲ್ಲೂ ಸಿಡಿ ಅಥವ ಪೆನ್ ಡ್ರೈವಿನಲ್ಲಿರುವ ಓ ಎಸ್ ಮತ್ತು ಡೆಸ್ಕ್‌ಟಾಪ್ ಪಡೆಯಬಹುದು. ನಮಗೆ ಬೇಕಾದ ತಂತ್ರಾಂಶಗಳೂ ಅದರಲ್ಲಿ ಅನುಸ್ಥಾಪಿಸಿಯೇ ಇರುವುದರಿಂದ ಸದ್ಯ ನಾವು ಕೆಲಸ ಮಾಡುತ್ತಿರುವ ಯಂತ್ರದಲ್ಲಿ ಅವಿಲ್ಲದೆ ಪರದಾಡುವ ಅಗತ್ಯ ಇಲ್ಲ. ಡ್ಯಮ್ ಸ್ಮಾಲ್ ಲಿನಕ್ಸ್ ಎನ್ನುವ ಓ ಎಸ್ ಐವತ್ತು ಎಂಬಿ ಗಾತ್ರದ್ದು.ಪೆನ್ ಡ್ರೈವಿನಲ್ಲಿ ಇದು ಆರಾಮವಾಗಿ ಹಿಡಿಯುತ್ತದೆ ಮತ್ತು ಅಗತ್ಯವಾದ ಪದಸಂಸ್ಕಾರ,ಬ್ರೌಸರ್ ಇತ್ಯಾದಿಗಳೂ ಇದರಲ್ಲಿವೆ.
ಕ್ರಂಚ್‌ಬ್ಯಾಗ್ ಲಿನಕ್ಸ್ ಕೂಡಾ ಲಿನಕ್ಸ್ ಓ ಎಸ್.ಉಬುಂಟು ಲಿನಕ್ಸ್ ಬಹು ಜನಪ್ರಿಯ ಲಿನಕ್ಸ್.ಇನ್ನೂರೈವತ್ತಾರು ಎಂಬಿ ಸ್ಮರಣಸಾಮರ್ಥ್ಯ ಕಂಪ್ಯೂಟರಿನಲ್ಲಿದ್ದರೆ, ಉಬುಂಟು ಲಿನಕ್ಸ್‌ನ ಬೂಟೇಬಲ್ ಸಿಡಿ ಬಳಸಿ,ಯಾವ ಕಂಪ್ಯೂಟರಿನಲ್ಲಿಯೂ ಉಬುಂಟುವನ್ನು ಪಡೆಯಬಹುದು.ಸ್ಲಾಕ್ಸ್ ಮತ್ತು ಪಪ್ಪಿ ಲಿನಕ್ಸ್ ಕೂಡಾ ಬೂಟೇಬಲ್ ಸಿಡಿ ಅಥವ ಪೆನ್ ಡ್ರೈವಿನಲ್ಲಿ ಹಿಡಿಸುವ ಓ ಎಸ್.ಇವೆರದೂ ಇನ್ನೂರೈವತ್ತಾರು ಎಂಬಿ ರಾಮ್ ಇದ್ದರೆ ಆರಾಮವಾಗಿ ಕೆಲಸ ಮಾಡುತ್ತವೆ. ಅಗತ್ಯ ತಂತ್ರಾಂಶಗಳೆಲ್ಲಾ ಇವುಗಳಲ್ಲಿವೆ.

ಉದಯವಾಣಿ

*ಅಶೋಕ್‌ಕುಮಾರ್ ಎ
 
googledc7e93ba1a7703ae.html