
ಯುರೋಪಿನ ಸಣ್ಣ ದೇಶವಾದ ಇಸ್ಟೋನಿಯಾದ ಬಹುಪಾಲು ಅರಣ್ಯ ಪ್ರದೇಶದಿಂದ ಆವರಿಸಿದೆ. ಆದರೆ ನಗರ ಪ್ರದೇಶದ ಕಸವನ್ನು ಈ ಕಾಡುಗಳಲ್ಲೇ ರಾಶಿ ಹಾಕುತ್ತಾ ಬಂದ ಕಾರಣ, ಇಡೀ ಪರಿಸರ ಗಬ್ಬೆದ್ದು ಹೋಗಿತ್ತು.ಇಡೀ ದೇಶವನ್ನು ಸ್ವಚ್ಛಗೊಳಿಸಲು ಸಾಮಾನ್ಯ ಪರಿಸ್ಥಿತಿಯಲ್ಲಿ ಸರಕಾರಕ್ಕೆ ಇಪ್ಪತ್ತೆರಡು ದಶಲಕ್ಷ ಯುರೋ ಖರ್ಚು ಬರುತ್ತಿತ್ತು. ಕಳೆದ ವರ್ಷದ ಒಂದು ಶುಭದಿನ ಇಡೀ ಇಸ್ಟೋನಿಯಾವನ್ನು ಸ್ವಯಂಸೇವಕರು ಸ್ವಚ್ಛಗೊಳಿಸಲು ಸಫಲರಾದರು. ಇದನ್ನು ಅನುಷ್ಠಾನಕ್ಕೆ ತರಲು ಐವತ್ತು ಸಾವಿರ ಜನ ಒಂದು ದಿನ ಶ್ರಮದಾನ ಮಾಡಿದರು. ಇದರ ಹಿಂದೆ ತಿಂಗಳುಗಳ ಯೋಜನೆಯಿತ್ತು. ಇಸ್ಟೋನಿಯಾದ ಸಾಧಕರು ಒಗ್ಗೂಡಿ ಕೆಲಸ ಮಾಡಿದರು.ಗೂಗಲ್ ಮ್ಯಾಪ್ ಜತೆ ತಂತ್ರಾಂಶಗಳನ್ನು ಬಳಸಿ, ಇಡೀ ದೇಶದಲ್ಲಿ ಹಬ್ಬಿರುವ ಕಸದ ರಾಶಿಗಳ ನಕ್ಷೆ ತಯಾರಿಸಲಾಯಿತು.ಸೆಲ್‌ಪೋನ್ ಕ್ಯಾಮರಾ ಬಳಸಿ,ಕಸದ ರಾಶಿಗಳ ಚಿತ್ರೀಕರಣ ನಡೆಸಿ,ಅವುಗಳ ಸ್ಥಾನವನ್ನು ಗೂಗಲ್ ಮ್ಯಾಪಿನಲ್ಲಿ ಗುರುತಿಸಲಾಯಿತು.ಇಸ್ಟೋನಿಯಾದಲ್ಲಿ ಅದುವರೆಗೆ ನಡೆದ ಅತಿದೊಡ್ಡ ಪ್ರಚಾರ ಅಭಿಯಾನ ನಡೆಸಲಾಯಿತು. ಅಲ್ಲಿನ ಪ್ರಸಿದ್ಧ ಜನರೆಲಾ, ಈ ಪ್ರಚಾರ ಕಾರ್ಯಕ್ಕೆ ತಮ್ಮ ಅಳಿಲ ಸೇವೆ ನೀಡಿದರು. ಪ್ರಚಾರಕ್ಕೆ ಸಾಧ್ಯವಿದ್ದ ಎಲ್ಲಾ ಮಾಧ್ಯಮಗಳನ್ನೂ ಬಳಸಲಾಯಿತು. ಸ್ವಯಂಸೇವಕರ ನೋಂದಾವಣೆಯನ್ನು ಅಂತರ್ಜಾಲ ಬಳಸಿ ಕೈಗೊಳ್ಳಲಾಯಿತು.ಕೊನೆಗೂ ಮೇ 3,2008ರಂದು ಐವತ್ತು ಸಾವಿರ ಜನರು ಐದೇ ಗಂಟೆಯಲ್ಲಿ ಸ್ವಚ್ಛತಾ ಕಾರ್ಯವನ್ನು ಪೂರ್ಣಗೊಳಿಸಿದರು. ಇದಕ್ಕೆ ತಗಲಿದ ವೆಚ್ಚ ಬರೇ ಅರ್ಧ ದಶಲಕ್ಷ ಯುರೋಗಳು!ಇದರ ವಿಡಿಯೋ ಕ್ಲಿಪ್ಪಿಂಗ್http://www.youtube.com/watch?v=A5GryIDl0qY&feature=player_embeddedನಲ್ಲಿ ಲಭ್ಯವಿದೆ.
ಈ ವರ್ಷ ಆಗಸ್ಟ್ ಹದಿನೈದು ಶನಿವಾರ.ಅಂದು ಏಳುನೂರೈವತ್ತು ಚದರ ಕಿಲೋಮೀಟರ್ ಹಬ್ಬಿರುವ ಬೆಂಗಳೂರು ನಗರವನ್ನು ಜನರೇ ಸೇರಿ ಸ್ವಚ್ಛಗೊಳಿಸುವುದು ಸರಕಾರೇತರ ಸಂಸ್ಥೆ ಅನಾನಿಮಸ್ ಇಂಡಿಯಾದ ಯೋಜನೆ.ಈ ಸ್ವಚ್ಛತಾ ಅಭಿಯಾನಕ್ಕೆ ನಮಗೆ ಇಸ್ಟೋನಿಯಾ ದೇಶದ ಮಾದರಿ ಹೇಗೂ ಇದೆ.ಜನರ ತನು-ಮನ-ಧನದ ಸಹಾಯ ಬೇಕಾಗಿದೆ. ಈಗಾಗಲೇ ಈ ಅಭಿಯಾನದ ಮುಖ್ಯ ತಂಡ ತನ್ನ ಕೆಲಸ ಆರಂಭಿಸಿದೆ. ಈ ದೊಡ್ಡ ಯೋಜನೆಯ ಅನುಷ್ಥಾನಕ್ಕಾಗಿ ಬೆಂಗಳೂರನ್ನು ಹದಿನೈದು ವಲಯಗಲಾಗಿ ವಿಭಾಗಿಸಲಾಗಿದೆ. ಪ್ರತಿ ವಲಯಕ್ಕೂ ಓರ್ವ ನಾಯಕನಿದ್ದು,ಈತ ತನ್ನ ವಲಯದ ಜನರ ಸಹಕಾರದೊಂದಿಗೆ ವಲಯದ ಸ್ವಚ್ಛತಾ ಕಾರ್ಯವನ್ನು ಅನುಷ್ಠಾನಕ್ಕೆ ತರಬೇಕಿದೆ.ಇದರಲ್ಲಿ ಭಾಗವಹಿಸಲು ನೋಂದಾಯಿಸಿಕೊಳ್ಳಲು http://www.cbengaluru.com/ ಅಂತರ್ಜಾಲ ತಾಣಕ್ಕೆ ಭೇಟಿಕೊಡಿ.
----------------------------------------------------------
ದೃಷ್ಟಿ ತೊಂದರೆಯಿದ್ದರೂ ಚಲಾಯಿಸಬಹುದಾದ ಕಾರು
ವರ್ಜಿನಿಯಾ ಟೆಕ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕಣ್ಣಿನ ದೃಷ್ಟಿಯ ಸಮಸ್ಯೆಯಿದ್ದವ್ರೂ ಚಲಾಯಿಸಬಹುದಾದ ಕಾರನ್ನು ತಯಾರಿಸಿದ್ದಾರೆ. ಇದರಲ್ಲಿ ಲೇಸರ್ ಕಿರಣ ಮತ್ತು ಕ್ಯಾಮರಾ ಬಳಸಲಾಗಿದೆ. ಡ್ರೈವರನ ಮುಂದಿರುವ ತೆರೆಯಲ್ಲಿ ಎದುರಿನ ರಸ್ತೆಯ ದೃಶ್ಯ ಬರುತ್ತಿರುತ್ತದೆ. ಲೇಸರ್ ಕಿರಣಗಳು ಸುತ್ತಲಿನ ಅಡೆತಡೆಯನ್ನು ಗ್ರಹಿಸಲು ನೆರವಾಗುತ್ತವೆ. ಕಂಪ್ಯೂಟರ್ ತೆರೆಯ ದೃಶ್ಯವನ್ನು ಗ್ರಹಿಸಿ,ಚಾಲಕನಿಗೆ ಧ್ವನಿಯ ಮೂಲಕ ಸೂಚನೆಗಳನ್ನು ನೀಡುತ್ತದೆ. "ಎರಡು ಕ್ಲಿಕ್ ಶಬ್ದ ಬರುವಷ್ಟು ಸ್ಟಿಯರಿಂಗ್ ಚಕ್ರ ತಿರುಗಿಸು",ಎಂಬಂತಹ ಸೂಚನೆಗಳು ಸಿಗುತ್ತವೆ. ಕಾರನ್ನು ನಿಲ್ಲಿಸುವಾಗ ಬ್ರೇಕನ್ನು ಎಷ್ಟು ಒತ್ತಬೇಕು ಎನ್ನುವುದರ ಸೂಚನೆಯು ಚಾಲಕನ ವಿವಿಧ ದೇಹ ಭಾಗಗಳಿಗೆ ಸಿಗುವ ಕಂಪನದಿಂದ ಗೊತ್ತುಪಡಿಸಲು ಕಂಪ್ಯೂಟರ್ ತಂತ್ರಾಂಶ ನೆರವಾಗುತ್ತದೆ. ಬೆನ್ನಿಗೆ ಅಳವಡಿಸಿದ ಸ್ಪರ್ಶಕ ಅದುರಿದರೆ,ಅದರರ್ಥ ಒಡನೆಯೇ ಬ್ರೇಕ್ ಹಾಕು ಎಂದು. ಅದೇ ರೀತಿ ಭುಜದ ಬಳಿ ಕಂಪನವೆದ್ದರೆ,ನಿಧಾನವಾಗಿ ಬ್ರೇಕೊತ್ತು ಎಂಬ ಸೂಚನೆ ಕೊಟ್ಟಂತೆ.ರಸ್ತೆಯಲ್ಲಿ ವಾಹನ ಸಂದಣಿಯಿರುವ ಸಂದರ್ಭದಲ್ಲಿ ಈ ಕಾರನ್ನು ಚಲಾಯಿಸಿಕೊಂಡು ಹೋಗಲು ಸಮಸ್ಯೆಯಿದ್ದವರಿಗೆ ಸಾಧ್ಯವಾಗಲು ಇನ್ನೂ ಹೆಚ್ಚಿನ ಸುಧಾರಣೆ ಅಗತ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ.ಅದೇ ರೀತಿ,ಸಮಸ್ಯೆಯುಳ್ಳವರು ಕಾರು ಚಲಾಯಿಸಲು ಸದ್ಯದ ಶಾಸನಗಳು ಅನುಮತಿಯನ್ನು ನೀಡುವುದಿಲ್ಲ. ಆದರೂ ಇದು ಒಂದು ಸ್ತ್ಯುತ್ಯರ್ಹ ಪ್ರಯತ್ನ ಎನ್ನುವುದರಲ್ಲಿ ಅನುಮಾನವಿಲ್ಲ. ಐದು ವರ್ಷಗಳ ಹಿಂದೆ ಅಂಧರ ಪ್ರತಿಷ್ಠಾನವೊಂದು ಘೋಷಿಸಿದ, ಕಾರು ತಯಾರಿಸಿ ಸ್ಪರ್ಧೆಗೆ ವರ್ಜಿನಿಯಾ ಟೆಕ್ ವಿಶ್ವವಿದ್ಯಾಲಯ ಮಾತ್ರಾ ಸ್ಪಂದಿಸಿ,ಕೆಲಸ ಆರಂಭಿಸಿತ್ತು. ಅದರಫಲಶ್ರುತಿಯೇ ಈ ವಾಹನ.
--------------------------------------------
ಕಂಪ್ಯೂಟರ್ ಚಾಲೂ ಆಗಲು ಕಾಯಬೇಕಿಲ್ಲ!
ಕೋಣೆಯ ವಿದ್ಯುದ್ದೀಪದ ಸ್ವಿಚ್ ಹಾಕೊದೊಡನೆ ಬೆಳಗುತ್ತದೆ. ಟಿವಿಯ ರಿಮೋಟ್ ಅದುಮಿದ ಕೆಲ ಕ್ಷಣಗಳಲ್ಲೇ, ಟಿವಿ ಶುರು.ಆದರೆ ಕಂಪ್ಯೂಟರ್ ಮಾತ್ರಾ ಆಮೆಗತಿಯಲ್ಲೇ ಚಾಲೂ ಆಗುತ್ತದೆ. ಹೊಸದರಲ್ಲದು ಸ್ವಲ್ಪ ಚುರುಕಾಗಿದ್ದರೂ,ನೀವು ಹೆಚ್ಚು ಹೆಚ್ಚು ತಂತ್ರಾಂಶಗಳನ್ನು ಕಂಪ್ಯೂಟರಿನಲ್ಲಿ ಅನುಸ್ಥಾಪಿಸಿದರೆ,ಅದು ನಿಧಾನವಾಗುತ್ತಾ ಹೋಗುತ್ತದೆ.ಇದಕ್ಕೆ ಪರಿಹಾರವೇನು?ಸ್ಪ್ಲಾಶ್-ಟಾಪ್ ಎಂಬ ಕಂಪೆನಿಯು ಕಂಪ್ಯೂಟರನ್ನು ದಿಡೀರ್ ಆಗಿ ಚಾಲೂ ಆಗಿಸುವ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದೆ.ಕಂಪ್ಯೂಟರ್ ತಯಾರಕ ಕಂಪೆನಿಗಳಾದ ಏಸರ್,ಲೆನೊವೋ,ಎಚ್‌ಪಿ,ಎಲ್‌ಜಿಇವರುಗಳ ಜತೆ ಸಹಭಾಗಿತ್ವದಲ್ಲಿ ಅವರುಗಳ ನೆಟ್‌ಬುಕ್ ಮತ್ತು ನೋಟ್‌ಬುಕ್ ಕಂಪ್ಯೂಟರುಗಳಲ್ಲಿ ಈ ತಂತ್ರಜ್ಞಾನವನ್ನು ನೀಡಲಾಗುತ್ತಿದೆ.ಸದ್ಯ ದಶಲಕ್ಷ ಕಂಪ್ಯೂಟಿಂಗ್ ಸಾಧನಗಳಲ್ಲಿ ಬಳಕೆದಾರರು ಸ್ಪ್ಲಾಶ್‌ಟಾಪನ್ನು ಬಳಸಿ,ಲಾಭ ಪಡೆಯುತ್ತಿದ್ದಾರೆ.ಏಸರ್ ಮತ್ತು A.S.U.S. ಡೆಸ್ಕ್‌ಟಾಪ್‌ಗಳಲ್ಲೂ ತಕ್ಷಣ ಚಾಲೂ ಸೌಲಭ್ಯ ಸಿಗುತ್ತದೆ.
ಸ್ಪ್ಲಾಶ್‌ಟಾಪ್ ಒಂದು ಕಂಪ್ಯೂಟರ್ ಕಾರ್ಯನಿರ್ವಹಣಾ ತಂತ್ರಾಂಶದಂತೆಯೇ ರೂಪಿಸಲಾದ ತಂತ್ರಾಂಶ.ಈ ತಂತ್ರಾಂಶವನ್ನು ಕಂಪ್ಯೂಟರಿನಲ್ಲಿ ಅನುಸ್ಥಾಪಿಸಿಯೇ ಕೊಟ್ಟಿದ್ದರೆ ಅದನ್ನು ಬಳಸಲು ಬರುತ್ತದೆ.ನಿಗದಿತ ಬಟನ್ ಒತ್ತಿದೊಡನೆ,ಬಯೋಸಿನಿಂದ ಈ ತಂತ್ರಾಂಶ ಲೋಡ್ ಆಗಿ,ತೆರೆಯನ್ನು ತೋರಿಸುತ್ತದೆ.ಸ್ಪ್ಲಾಶ್‌ಟಾಪ್ ಬ್ರೌಸರ್ ತಂತ್ರಾಂಶವು ಒಡನೆಯೇ ಲಭ್ಯವಾಗುವುದರಿಂದ ಅಂತರ್ಜಾಲ ಸಂಪರ್ಕ ತಕ್ಷಣ ಲಭ್ಯವಾಗುತ್ತದೆ.ಹಾಗಿಲ್ಲದೆ ವಿಂಡೋಸ್,ಲಿನಕ್ಸ್ ವ್ಯವಸ್ಥೆ ಬೇಕಿದ್ದರೆ, ಮೊದಲ ಸ್ಕ್ರೀನಿನಲ್ಲಿಯೇ ಅವುಗಳನ್ನು ಆಯ್ದುಕೊಳ್ಳುವ ಆಯ್ಕೆ ಲಭ್ಯವಾಗುತ್ತದೆ.ನಾವು ಅನುಸ್ಥಾಪಿಸುವ ತಂತ್ರಾಂಶಗಳು ವಿಂಡೋಸ್,ಲಿನಕ್ಸ್ ವ್ಯವಸ್ಥೆಯಲ್ಲಿ ಸಿಗುವುದರಿಂದ,ಸ್ಪ್ಲಾಶ್‌ಟಾಪ್ ನಿಧಾನವಾಗುತ್ತಾ ಹೋಗುವುದಿಲ್ಲ.ಇನ್ನು ಮುಂದೆ,ಮೊದಲ ಪುಟದಲ್ಲೇ ಶೋಧಪುಟವನ್ನು ಪ್ರದರ್ಶಿಸಿ,ಬಳಕೆದಾರರು ಜಾಲಾಡಲು ಅನುಕೂಲ ಕಲ್ಪಿಸಲು ಕಂಪೆನಿ ಯೋಜಿಸುತ್ತಿದೆ. ಇದಕಾಗಿ ಯಾಹೂವಿನಂತಹ ಶೋಧ ಸೇವೆಗಳ ಜತೆ ಒಪ್ಪಂದ ಮಾಡಿಕೊಂಡು,ಗ್ರಾಹಕರಿಗೆ ಅನುಕೂಲ ಕಲ್ಪಿಸಲು ಕಂಪೆನಿ ನಿರ್ಧರಿಸಿದೆ. ಈಗೀಗ ಬಳಕೆದಾರರು ಶೋಧ ಪುಟದಲ್ಲಿ ತಮಗೆ ಬೇಕಾದ ಶಬ್ದವನ್ನು ಟೈಪಿಸಿ,ಅಲ್ಲಿ ಬರುವ ಕೊಂಡಿಗಳನ್ನು ಕ್ಲಿಕ್ಕಿಸಿ,ಮುಂದುವರಿಯುವ ಹವ್ಯಾಸವನ್ನು ಹೊಂದಿರುವುದರಿಂದ ಈ ಅನುಕೂಲ ಕಲ್ಪಿಸಲು ಕಂಪೆನಿ ಚಿಂತಿಸಬೇಕಾಗಿದೆ.
udayavani
**ಅಶೋಕ್‌ಕುಮಾರ್ ಎ






