Monday, August 31, 2009

ಮಕ್ಕಳಿಗೆ ಗೂಗಲ್ ಸ್ಪರ್ಧೆ

ಮಕ್ಕಳಿಗೆ ಗೂಗಲ್ ಸ್ಪರ್ಧೆ

ಭಾರತದಲ್ಲಿ ಮಕ್ಕಳ ದಿನಾಚರಣೆ ನವಂಬರ್ ಹದಿನಾಲ್ಕರಂದು ಅಚರಿಸಲಾಗುತ್ತದೆ.ಅಂದು ಗೂಗಲ್ ತಾಣದ ಗೂಗಲ್ ಲೋಗೋ ಯಾವ ಭಾರತೀಯ ಮಗು ರಚಿಸಿದ್ದಾಗ ಬೇಕು ಎಂದು ನಿರ್ಧರಿಸಲು ಗೂಗಲ್ ಸ್ಪರ್ಧೆಯೊಂದನ್ನು ಏರ್ಪಡಿಸಿದೆ.www.google.co.in/doodle4google  ಈ ಅಂತರ್ಜಾಲ ಕೊಂಡಿಯಲ್ಲಿ ಸ್ಪರ್ಧೆಯ ವಿವರಗಳಿವೆ. ಒಂದನೆಯ ತರಗತಿಯಿಂದ ಹತ್ತನೆಯ ತರಗತಿಯ ವರೆಗಿನ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು."ನನ್ನ ಭಾರತ" ಎನ್ನುವ ವಿಷಯದ ಮೇಲೆ ಗೂಗಲ್ ಲೋಗೋವನ್ನು ಮಾರ್ಪಡಿಸಿ ರಚಿಸುವುದೇ ಸ್ಪರ್ಧೆಯ ನಿಬಂಧನೆ.ನವಂಬರ್ ಹದಿನಾಲ್ಕರಂದು ಗೂಗಲ್ ತಾಣದಲ್ಲಿ ಕಾಣಿಸಿಕೊಳ್ಳುವ ರಚನೆಗೆ ಲ್ಯಾಪ್‌ಟಾಪ್ ಬಹುಮಾನವಾಗಿ ಲಭ್ಯವಾಗಲಿದೆ. ಆ ಲೋಗೋ ರಚಿಸಿದ ಮಗುವಿನ ಶಾಲೆಗೂ ಬಹುಮಾನ ಇದೆ. ಅದಕ್ಕಿಂತೆಲ್ಲಾ ಹೆಚ್ಚಿನ ಗೌರವವೆಂದರೆ,ಅಂದು ಮಿಲಿಯಗಟ್ಟಲೆ ಜನ ಗೂಗಲ್ ತಾಣದಲ್ಲಿ ಆ ಚಿತ್ರವನ್ನು ವೀಕ್ಷಿಸಲಿದ್ದಾರೆ.ಇಲ್ಲಿ ಸಾಮಾನ್ಯವಾಗಿ ಬಳಸಲ್ಪಡುವ ಚಿತ್ರಗಳನ್ನು ರಚಿಸುವಾತ ಡೆನಿಸ್ ಹ್ವಾಂಗ್ ಎನ್ನುವ ಮೂವತ್ತೊಂದು ವಯಸ್ಸಿನ ವಿಜ್ಞಾನಿ ಮತ್ತು ಕಲಾವಿದ.
------------------------------------------
ಸೌರಶಕ್ತಿ ಆಧಾರಿತ ಸೆಲ್‌ಪೋನ್
ಸಾಮ್‌ಸಂಗ್ ಕಂಪೆನಿಯು ಸೌರಶಕ್ತಿಚಾಲಿತ ಸೆಲ್‌ಪೋನ್ ಹ್ಯಾಂಡಸೆಟ್ಟನ್ನು ಮಾರಾಟ ಮಾಡುತ್ತಿದೆ.ಕೆನ್ಯಾದಲ್ಲಿ ಸಫಾರಿಕೋಮ್ ಕಂಪೆನಿಯು ದೊಡ್ಡ ಸೆಲ್ ಕಂಪೆನಿಯಾಗಿದ್ದು,ಅಲ್ಲಿ ಸೌರಶಕ್ತಿಚಾಲಿತ ಸೆಟ್‌ಗಳನ್ನು ಮಾರಾಟಕ್ಕೆ ಒದಗಿಸಿದೆ.ವಿದ್ಯುತ್ ಇಲ್ಲದೆಡೆಯೂ ಬಳಸಲಾಗುವ ಸೆಟ್‌ಗಳು ಹಳ್ಳಿಗಳಲ್ಲೂ ಜನಪ್ರಿಯವಾಗುವುದು ಖಚಿತ.ಕೆನ್ಯಾದಲ್ಲಿ ವಿದ್ಯುತ್ ಪೂರೈಕೆ ಇಲ್ಲದಿರುವ ಪ್ರದೇಶಗಳೇ ಹೆಚ್ಚು. ಸದ್ಯ ಅಲ್ಲಿನ ಜನರು ಸೈಕಲ್ ಚಾಲಿತ ಜನರೇಟರ್‌ನಂತಹವನ್ನು ಬಳಸಿ,ಮೊಬೈಲ್ ಸೆಟ್ ಚಾರ್ಜ್ ಮಾಡಿಕೊಳ್ಳುವುದಿದೆ. ಸೌರಶಕ್ತಿಚಾಲಿತ ಹ್ಯಾಂಡ್‌ಸೆಟ್ ಬೆಳಕಿನಲ್ಲೇ ಚಾರ್ಜ್ ಆಗುವುದರಿಂದ ಮಳೆ ಅಥವ ಮೋಡ ಇದ್ದರೂ ಪರವಾಗಿಲ್ಲ. ಭಾರತದಲ್ಲೂ ವಿದ್ಯುತ್ ಪೂರೈಕೆ ಅತ್ಯಂತ ಅನಿಶ್ಚಿತವಾಗಿರುವ ಕಾರಣ ಸೌರಶಕ್ತಿಚಾಲಿತ ಸೆಟ್‍ಗಳು ಜನಪ್ರಿಯವಾಗುವುದು ಖಂಡಿತ.
ಸಾಮ್ಸಂಗ್ ಸೆಟ್‌ನ ಹೆಸರು ಬ್ಲೂ ಅರ್ಥ್.ಇನ್ನೊಂದು ವಿಶೇಷತೆ ಅಂದರೆ, ಈ ಸೆಟ್‌ನ್ನು ನೀರಿನ ಬಾಟಲುಗಳ ಪ್ಲಾಸ್ಟಿಕನ್ನು ಮರುಬಳಕೆ ಮಾಡಿ ತಯಾರಿಸಿದ ಪ್ಲಾಸ್ಟಿಕ್ಕಿನಿಂದ ತಯಾರಿಸಲಾಗಿದೆ.ಇದರ ಹಿಂಭಾಗ ಸೌರವಿದ್ಯುತ್‌ಕೋಶಗಳನ್ನು ಹೊಂದಿದೆ.
---------------------------------------
ಇಂಗ್ಲೀಷ್ ಪದಗಳಿಗೆ ಕನ್ನಡದ್ದೇ ಪದಗಳು
ಅಂತರ್ಜಾಲದಲ್ಲಿ ವೆಂಕಟಸುಬ್ಬಯ್ಯನವರ ಪ್ರಿಸಮ್ ನಿಘಂಟು ಹಿಂದಿನಿಂದಲೇ ಲಭ್ಯವಿದೆ. ಈಗದಕ್ಕೆ ಹೊಸದಾಗಿ ಪ್ರೊ.ಡಿ ಎನ್ ಶಂಕರಭಟ್ಟರ ಇಂಗ್ಲೀಷ್ ಪದಗಳಿಗೆ ಕನ್ನಡದ್ದೇ ಪದಗಳು ನಿಘಂಟನ್ನು ಹೊಸದಾಗಿ ಅಳವಡಿಸಲಾಗಿದೆ. ಶಂಕರಭಟ್ಟರು ಕನ್ನಡದಲ್ಲಿ ಬೆರಕೆಯಾದ ಸಂಸ್ಕೃತ ಪದಗಳ ಬಗ್ಗೆ ಒಲವಿಲ್ಲದವರು. ಅಚ್ಚಕನ್ನಡ ಪದಗಳಿರುವಾಗ ಈ ರೀತಿ ಎರವಲು ಯಾಕೆ ಎನ್ನುವುದು ಅವರ ವಾದ.ಪದಗಳನ್ನು ಹೊಸದಾಗಿ ಸೇರ್ಪಡೆ ಮಾಡಲೂ ಅವಕಾಶ ಕಲ್ಪಿಸಲಾಗಿದೆ. ಕೊಂಡಿಯಲ್ಲಿ ನಿಘಂಟು ಲಭ್ಯವಿದೆ.
----------------------------------
ಕೊಂಕಣಿ,ತುಳುವಿನಲ್ಲೂ ವಿಕಿಪೀಡಿಯಾ?
ವಿಕಿಪೀಡಿಯಾ ಎನ್ನುವುದು ಜನರ ಸಹಭಾಗಿತ್ವದಿಂದ ಬೆಳೆಯುತ್ತಿರುವ ವಿಶ್ವಕೋಶ.ಅಂತರ್ಜಾಲದ ತಾಣ www.wikipedia.orgನಲ್ಲಿದು ಲಭ್ಯ.ಈಗಾಗಲೇ ನೂರಕ್ಕೂ ಹೆಚ್ಚು ಭಾಷೆಗಳಲ್ಲಿ ವಿಶ್ವಕೋಶ ಲಭ್ಯವಿದೆ.ಈ ಭಾಷೆಗಳಲ್ಲಿ ಕನ್ನಡ,ತಮಿಳು,ತೆಲುಗು,ಮಲೆಯಾಳಮ್ ಇವೂ ಸೇರಿವೆ. ಇನ್ನು ತುಳು ಮತ್ತು ಕೊಂಕಣಿ ಭಾಷೆಗಳಲ್ಲೂ ವಿಶ್ವಕೋಶದ ಆವೃತ್ತಿ ತರುವ ಯೋಜನೆ ವಿಕಿಪೀಡಿಯಾದ ಉಸ್ತುವಾರಿ ನೋಡಿಕೊಳ್ಳುವ ವಿಕಿ ಅಕಾಡೆಮಿಯೆಂಬ ಲಾಭರಹಿತ ಸಂಸ್ಥೆಯದಾಗಿದೆ.ಜನಸಾಮಾನ್ಯರು ಈ ವಿಶ್ವಕೋಶ ರಚನೆಯಲ್ಲಿ ಭಾಗಿಯಾಗುವುದಕ್ಕೆ ಅನುವು ಮಾಡುವ ಉದ್ದೇಶದಿಂದ ವಿಕಿಪೀಡಿಯಾಕ್ಕೆ ಬರಹಗಳನ್ನು ಸೇರಿಸುವುದು,ತಿದ್ದುಪಡಿಗಳನ್ನು ಮಾಡುವ ಬಗೆಯನ್ನು ತಿಳಿಸಿಕೊಡಲು ಮಂಗಳೂರಿನಲ್ಲಿ ಶನಿವಾರ ಕಾರ್ಯಕ್ರಮ ಆಯೋಜಿತವಾಗಿತ್ತು.ವಿಕಿಪೀಡಿಯಾದ ಇಂಗ್ಲಿಷ್ ಆವೃತ್ತಿಯ ಸ್ವಯಂಸೇವಕ ಸಂಪಾದಕರಾದ ಪ್ರಶಾಂತ್ ಮತ್ತು ಕನ್ನಡದ ಆವೃತ್ತಿಯ ಸ್ವಯಂಸೇವಕ ಸಂಪಾದಕರಾದ "ಸಂಪದ"ದ ಹರಿಪ್ರಸಾದ್ ನಾಡಿಗ್ ಕಾರ್ಯಕ್ರಮದಲ್ಲಿ ಭಾಗವಹಿಸಿ,ತರಬೇತಿ ನೀಡಿದರು.ಸೈಂಟ್ ಅಲೋಶಿಯಸ್ ಕಾಲೇಜಿನ ಸಮೂಹ ಸಂಪರ್ಕ ವಿಭಾಗ ಮತ್ತು ಬೆಂಗಳೂರಿನ ಇಂಟರ್ನೆಟ್ ಮತ್ತು ಸಮಾಜ ಅವರು ಜತೆಯಾಗಿ ಕಾರ್ಯಕ್ರಮವನ್ನು ಏರ್ಪಡಿಸಿದ್ದರು.ಅಂದಹಾಗೆ ವಿಶ್ವಕೋಶದಲ್ಲಿ ಈ ವರೆಗೆ ಹದಿಮೂರು ದಶಲಕ್ಷ ಬರಹಗಳ ಸೇರ್ಪಡೆಯಾಗಿವೆ!
----------------------------------------
ವೈಮಾಕ್ಸ್ 3Gಗಿಂತ ಉತ್ತಮ
ಭಾರತದಲ್ಲಿ 2014ರ ಹೊತ್ತಿಗೆ ನೂರು ದಶಲಕ್ಷ ಬ್ರಾಡ್‌ಬ್ಯಾಂಡ್ ಸಂಪರ್ಕದ ಗುರಿ ಸಾಧನೆಯಾಗ ಬೇಕಿದ್ದರೆ,ವೈಮ್ಯಾಕ್ಸ್‌ ಜಾಲಕ್ಕೆ ಶರಣಾಗದೆ ಅನ್ಯಮಾರ್ಗವಿಲ್ಲವೆನ್ನುವುದು ವೈಮ್ಯಾಕ್ಸ್ ಕಂಪೆನಿಗಳ ವೇದಿಕೆಯ ಅಭಿಪ್ರಾಯ. 3Gಗೆ ಹೋಲಿಸಿದರೆ ವೈಮ್ಯಾಕ್ಸ್ ಹತ್ತು ಪಟ್ಟು ವೇಗದ ಅಂತರ್ಜಾಲ ಒದಗಿಸಬಲುದು.ವೈಮ್ಯಾಕ್ಸ್ ಜಾಲದ ಮೂಲಕ ಸೆಕೆಂಡಿಗೆ ಆರು ಮೆಗಾಬಿಟ್ ಸಾಮರ್ಥ್ಯದ ಜಾಲದ ಸೌಕರ್ಯ ಸಿಗುತ್ತದೆ.ಮಾಸಿಕ ಐನೂರು ರುಪಾಯಿ ದರದಲ್ಲಿ ಸೌಕರ್ಯ ಒದಗಿಸಲು ಸಾಧ್ಯ.ಅದುವೇ ಮೂರು-ಜಿ ಸೇವೆಗೆ ಅದರ ಐದು ಪಟ್ಟು ದರ ವಿಧಿಸಬೇಕಾದೀತು.ಅಂತರ್ಜಾಲ ಸೇವೆಗೆ ವೈಮ್ಯಾಕ್ಸ್ ಹೇಳಿ ಮಾಡಿಸಿದ ಹಾಗಿದ್ದರೆ, ದೂರವಾಣಿ ಕರೆಗಳಿಗಾದರೆ ಮೂರು-ಜಿ ಜಾಲವೆ ಅನುಕೂಲ. ಸರಕಾರ ವೈಮ್ಯಾಕ್ಸ್ ಜಾಲಗಳಿಗೆ ಸ್ಪೆಕ್ಟ್ರಮ್ ವಿತರಿಸದೆ ಇರುವುದೇ ಸೇವೆ ಒದಗಿಸಲು ಅಡ್ಡಿಯಾಗಿದೆ. ಈ ಅಡ್ಡಿಯು ಬೇಗನೇ ನಿವಾರಣೆಯಾಗಲಿ ಎಂದು ವೇದಿಕೆ ಆಗ್ರಹಿಸಿದೆ.
udayavani
*ಅಶೋಕ್‌ಕುಮಾರ್ ಎ

Monday, August 17, 2009

ಗೂಗಲ್ ಅರ್ಥ್ ಹೋಲುವ ಇಸ್ರೋದ ಭುವನ್

ಗೂಗಲ್ ಅರ್ಥ್ ಹೋಲುವ ಇಸ್ರೋದ ಭುವನ್

ಗೂಗಲ್ ಅರ್ಥ್ ಭೂಮಿಯ ಕೃತಕ ಉಪಗ್ರಹಗಳನ್ನು ಬಳಸಿ ರಚಿಸಿದ ಭೂಮಿಯ ನಕ್ಷೆಗಳನ್ನು ಒದಗಿಸಿ,ಜನಪ್ರಿಯವಾಗಿದೆ. ಈಗ ಇಸ್ರೋವೂ ಅಂತಹ ಸೇವೆಯನ್ನು ನೀಡಲು ಬಯಸಿದೆ. ಅದಕ್ಕಾಗಿ ಅದು ಭುವನ್ ಎನ್ನುವ ಬಹು ಉಪಗ್ರಹ ವ್ಯವಸ್ಥೆಯನ್ನು ಸ್ಥಾಪಿಸಿದೆ. ಅದರ ಮೂಲಕ ಹೆಚ್ಚಿನ ಸ್ಪಷ್ಟತೆಯಿರುವ ಭೂಮಿಯ ಚಿತ್ರಗಳನ್ನು ಸೆರೆ ಹಿಡಿದು,ಅದರ ಮೂಲಕ ಗೂಗಲ್ ಅರ್ಥ್‌ಗೆ ಹೋಲುವ ಸೇವೆಯನ್ನು ನೀಡುವುದು ಇಸ್ರೋದ ಕನಸು.ಸದ್ಯ ಲಭ್ಯವಿರುವ ಗೂಗಲ್ ಅರ್ಥ್ ನಕ್ಷೆಗಳು ನಾಲ್ಕು ವರ್ಷ ಹಳೆಯವು. ಸದಾ ಬದಲಾಗುತ್ತಿರುವ ಭಾರತದ ನಗರಗಳ ಬಗೆಗೆ ಅದರಲ್ಲಿ ಲಭ್ಯವಾಗುತ್ತಿರುವ ನಕ್ಷೆಗಳನ್ನು ಬಳಸುವುದು ತಪ್ಪು ಚಿತ್ರಣ ಮೂಡಿಸಬಹುದು. ಅ ದೃಷ್ಟಿಯಿಂದ ಭುವನ್ ಅಂತಹ ವ್ಯವಸ್ಥೆ ಅತ್ಯಂತ ಅವಶ್ಯಕವಾಗಿದೆ.ಗುಗಲ್ ಅರ್ಥ್ ಗೂಗಲಿನ ಜಾಹೀರಾತು ಆದಾಯಕ್ಕೆ ಉತ್ತಮ ಬುನಾದಿ ಹಾಕಿಕೊಟ್ಟಿದೆ.ಇಸ್ರೋದ ನಕ್ಷಾವ್ಯವಸ್ಥೆ ಜನಪ್ರಿಯವಾದರೆ,ಅದೂ ಈ ಜಾಹೀರಾತು ಆದಾಯ ತನ್ನದಾಗಿಸಿಕೊಳ್ಳಲು ಸಾಧ್ಯವಿದೆ. ಅದ್ದರಿಂದ ಇಸ್ರೋವು ತನ್ನ ಉಪಗ್ರಹ ಉಡಾವಣಾ ಸಾಮರ್ಥ್ಯವನ್ನು ನಗದೀಕರಿಸಿಕೊಳ್ಳಲು ಸಾಧ್ಯವಾದರೆ ಅಚ್ಚರಿಯಿಲ್ಲ.ಇದನ್ನು ಬಳಸಲು ತಂತ್ರಾಂಶವನ್ನು ಇಳಿಸಿಕೊಂಡು ಕಂಪ್ಯೂಟರಿನಲ್ಲಿ ಅನುಸ್ಥಾಪಿಸಿಕೊಳ್ಳಬೇಕು.ಅದರ ತಾಣದ ವಿಳಾಸ:http://www.bhuvan.nrsc.gov.in/.ನಿಮ್ಮ ಕಂಪ್ಯೂಟರಿನಲ್ಲಿ ಎರಡು ಜಿಬಿ ಹಾರ್ಡ್‌ಡಿಸ್ಕ್ ಸ್ಥಳ,512  ಎಂಬಿ ರಾಂ ಸ್ಮರಣ ಸಾಮರ್ಥ್ಯ ಅವಕಾಶ ಬೇಕಾಗುತ್ತದೆ.
---------------------------------
ಗೂಗಲಿನ ಶೋಧ ತಂತ್ರಜ್ಞಾನವೀಗ ಬದಲಾಗಿದೆ
ಗೂಗಲ್ ಶೋಧವೀಗ ಬದಲಾಗಿದೆ. ಹಾಗೆಂದರೆ,ಅದು ಸಾಮಾನ್ಯರಿಗೆ ದೃಗ್ಗೋಚರವಾಗುವಂತಹ ವ್ಯತ್ಯಾಸವೇನೂ ಕಾಣಿಸದು. ಗೂಗಲ್ ಪುಟ ಮೊದಲಿನ ಹಾಗೇ ಇದೆ.ಆದರೆ ಶೋಧ ಮಾಡುವ ತಂತ್ರಜ್ಞಾನ ಹೊಸ ತಂತ್ರವನ್ನು ಬಳಸುತ್ತದೆ.ಮೈಕ್ರೋಸಾಫ್ಟಿನ  ಬಿಂಗ್ ಶೋಧ,ಸ್ಪೆಸಿಫೈ,ವೂಲ್ಫ್ರಮ್ ಆಲ್ಫಾ ಹೀಗೆ ಹಲವು ಶೋಧ ವ್ಯವಸ್ಥೆಗಳ ಬಿಡುಗಡೆಯಾದ ನಂತರ ಗೂಗಲಿನ ಮಾರುಕಟ್ಟೆ ಪಾಲು ತುಸು ಇಳಿದಿರುವುದು ಹೌದು.ಗೂಗಲ್ ಸುದ್ದಿಯಿಲ್ಲದೆ ಕೆಲವು ತಿಂಗಳ ಹಿಂದಿನಿಂದಲೇ,ಶೋಧಕ್ಕಾಗಿ ಹೊಸ ತಂತ್ರಜ್ಞಾನ ಅಳವಡಿಸಲು ತೆರೆಯ ಮರೆಯಲ್ಲೇ ತನ್ನ ಸಂಶೋಧಕರನ್ನು ತೊಡಗಿಸಿತ್ತು. ಈಗ ತಕ್ಕ ಮಟ್ಟಿಗೆ ತಯಾರಾದ ಶೋಧ ವ್ಯವಸ್ಥೆಯನ್ನು ಬಳಸಲು ಗೂಗಲ್ ಆರಂಭಿಸಿದೆ. ಸದಾ ಬದಲಾಗುತ್ತಿರುವ ಪುಟಗಳ ಮಾಹಿತಿಯನ್ನೂ ಶೋಧದಲ್ಲಿ ಒಳಪಡಿಸಿ, ಶೋಧ ಫಲಿತಾಂಶವನ್ನು ತಾಜಾ ಆಗಿಸಲು ಪ್ರಯತ್ನಿಸಿರುವುದು ಗೂಗಲ್ ತಂದಿರುವ ಪ್ರಧಾನ ಬದಲಾವಣೆ. ಶೋಧ ಫಲಿತಾಂಶದ ಬಗೆಗೆ ಬಳಕೆದಾರರ ಪ್ರತಿಕ್ರಿಯೆಯನ್ನು ಆಧಾರಿಸಿ, ಶೋಧ ತಂತ್ರಜ್ಞಾನವನ್ನು ಇನ್ನೂ ಉತ್ತಮ ಪಡಿಸಲು ಪ್ರಯತ್ನಿಸುವುದು ಗೂಗಲ್ ಯೋಚನೆ.ಅಂದ ಹಾಗೆ ಈ ಶೋಧ ಇಂಜಿನ್ ಹೆಸರು ಕೆಫೀನ್ ಎಂದಾಗಿದೆ.
---------------------------------------------------------
ಭಾರತದಲ್ಲಿ ನೀರಿಗೆ ಬರ
ಉತ್ತರ ಭಾರತದ ರಾಜಾಸ್ತಾನ,ಹರ್ಯಾನಾ,ಪಂಜಾಬ ಮತ್ತು ದೆಹಲಿಯಲ್ಲಿ ಅಂತರ್ಜಲ ಮಟ್ಟ ಗಾಬರಿಗೊಳಿಸುವ ಪ್ರಮಾಣದಲ್ಲಿ ಇಳಿಯುತ್ತಿದೆ ಎನ್ನುವ ಸಂಗತಿಗೆ ನಾಸಾದ ವಿಜ್ಞಾನಿಗಳ ಅಧ್ಯಯನದ ನಂತರ ಮತ್ತಷ್ಟು ಪುರಾವೆ ಸಿಕ್ಕಿದೆ. ಪ್ರತಿ ವರ್ಷ ಅಂತರ್ಜಲ ಮಟ್ಟ ಕಡಿಮೆಯೆಂದರೂ ಒಂದು ಅಡಿ ಕೆಳಕ್ಕಿಳಿಯುತ್ತಿದೆಯಂತೆ.ಕಳೆದ ಒಂದು ವರ್ಷದಲ್ಲಿ ಭಾರತದ ಅಂತರ್ಜಲ ನೂರ ಒಂಭತ್ತು ಘನ ಕಿಲೋಮೀಟರ್‌ನಷ್ಟು ಕಡಿಮೆಯಾಗಿರುವುದು ಬೆಳಕಿಗೆ ಬಂದಿದೆ.ಕೃಷಿ ಮತ್ತು ಕೈಗಾರಿಕೆಗಳಿಗಾಗಿ,ಅಂತರ್ಜಲದಿಂದ ಬಳಕೆಯಾಗಿ ಖಾಲಿಯಾದ ನೀರನ್ನು ಮರುಪೂರಣ ಮಾಡದ ಕಾರಣ, ಈ ಇಳಿಕೆ ಆಗಿದೆ.ಉತ್ತರ ಭಾರತದ ನಾಲ್ಕು ರಾಜ್ಯಗಳ ಈ ನೀರಿನ ಮಟ್ಟ ಕುಸಿತ ಅಲ್ಲಿನ ಹನ್ನೆರಡು ಕೋಟಿ ಜನರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಸಂಶೋಧಕರಾದ ಮ್ಯಾಥ್ಯೂ ರೊಡೆಲ್ ಎಚ್ಚರಿಸಿದ್ದಾರೆ.ಅವರು ಪ್ರಸಿದ್ಧ ಬಾಹ್ಯಾಕಾಶ ಸಂಸ್ಥೆ ನಾಸಾದ ಜಲವಿಜ್ಞಾನಿ.ಭೂಮಿಯ ಗುರುತ್ವ ಶಕ್ತಿಯನ್ನಾಧರಿಸಿ, ಅಂತರ್ಜಲ ಮಟ್ಟವನ್ನು ಅಂದಾಜು ಮಾಡುವ ತಂತ್ರವನ್ನು ಬಳಸಿ, ಈ ಸಂಶೋಧನೆಯನ್ನು ಮಾಡಲಾಗಿದೆ.
---------------------------------
ಕಚೇರಿ ಸಮಯದಲ್ಲಿ ವಿಡಿಯೋ ಆಟ!
ಕಂಪೆನಿಯ ನೌಕರರರು ಮತ್ತು ಅಧಿಕಾರಿಗಳ ನಡುವಣ ಸಂಬಂಧವನ್ನು ಉತ್ತಮ ಪಡಿಸಿ,ಅದನ್ನು ವೃದ್ಧಿಸಲು ಕಂಪ್ಯೂಟರ್ ವಿಡಿಯೋ ಆಟಗಳು ಸಹಾಯಕವಾಗುತ್ತಿವೆ. ಕೆಲವು ಕಚೇರಿಗಳಲ್ಲಿ ಶುಕ್ರವಾರ ಕೊನೆಯ ಎರಡು ಗಂಟೆ,ಕಚೇರಿಯವರೆಲ್ಲಾ ಜತೆಯಾಗಿ ವಿಡಿಯೋ ಆಟಗಳನ್ನು ಆಡುವುದಿದೆ. ಈ ಆಟದಲ್ಲಿ ಉತ್ತಮ ಆಟ ಆಡ ಬಲ್ಲವನೇ ಬಾಸ್.ಕಂಪೆನಿಯ ಬಾಸ್ ನೌಕರರ ಜತೆ ಆಡಬೇಕಾಗುತ್ತದೆ. ವಿಡಿಯೋ ಆಟದಲ್ಲಿ ಬಾಸ್‌ನತ್ತ ನೌಕರ "ಗುಂಡು" ಎಸೆಯಲು ಸಾಧ್ಯ!ಆದರಿದು ಕಂಪ್ಯೂಟರಿನ ಹುಸಿ ಗುಂಡು ಎನ್ನುವುದನ್ನು ಮರೆಯದಿರಿ.ಈ ರೀತಿ ಜತೆಯಾಗಿ ಆಡಿ ಮಜಾ ಉಡಾಯಿಸಿದರೆ, ತಂಡ ಸ್ಪೂರ್ತಿ ಹೆಚ್ಚುತ್ತದೆ ಎಂದು ಅದನ್ನು ಆಡುವವರ ಅನುಭವ. ಆಟ ಆಡಲೇ ಬೇಕೆಂಬ ಒತ್ತಾಯ ಇಲ್ಲ. ಬೇಡದವರು ಬೇಗನೇ ಮನೆಗೆ ತೆರಳಲೂ ಅನುಮತಿ ನೀಡಲಾಗುತ್ತದೆ. ಆದರೆ, ಆಟ ಆಡುವವರೇ ಹೆಚ್ಚು.
----------------------------
ತೊಶಿಬಾದ 64ಜಿಬಿ ಎಸ್‌ಡಿ ಕಾರ್ಡ್
ಅತ್ಯಧಿಕ ಸಾಮರ್ಥ್ಯದ ಎಸ್‌ಡಿ ಕಾರ್ಡ್‌ನ್ನು ತೊಶಿಬಾ ಕಂಪೆನಿ ಅಭಿವೃದ್ಧಿ ಪಡಿಸಿದ್ದು ಮುಂದಿನ ವರ್ಷಾರಂಭದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಅರುವತ್ತನಾಲ್ಕು ಜಿಬಿ ಸಾಮರ್ಥ್ಯದ ಈ ಕಾರ್ಡ್‌ನ್ನು ಕ್ಯಾಮರಾಗಳು ಮತ್ತು ವಿಡಿಯೋಕ್ಯಾಂ‌ಗಳಲ್ಲಿ ಬಳಸಬಹುದು.ಆದರೆ ಅವುಗಳನ್ನು ಸದ್ಯ ಇರುವ ಸಾಧನಗಳ ಜತೆ ಬಳಕೆ ಮಾಡಲಸಾಧ್ಯ.

*ಅಶೋಕ್‌ಕುಮಾರ್ ಎ

Monday, August 10, 2009

ಟ್ವಿಟರಿನಲ್ಲಿ ಮಹಾಭಾರತ

ಟ್ವಿಟರಿನಲ್ಲಿ ಮಹಾಭಾರತ

ಪ್ರೇಮ್ ಪಣಿಕ್ಕರ್ ಅವರ "ಭೀಮಸೇನ್",ಭೀಮಸೇನನ ದೃಷ್ಟಿಕೋನದಿಂದ ಕಂಡ ಮಹಾಭಾರತದ ಒಂದು ಬ್ಲಾಗ್. ಈ ಬ್ಲಾಗನ್ನೇ ಆಧಾರವಾಗಿಟ್ಟುಕೊಂಡು,ಮೈಕ್ರೋಬ್ಲಾಗಿಂಗ್ ತಾಣವಾದ ಟ್ವಿಟರಿನಲ್ಲಿ http://twitter.com/epicretold ವಿಳಾಸದಲ್ಲಿ ಮಹಾಭಾರತದ ಕತೆ ಮೂಡಿಬರುತ್ತಿದೆ.ಹಸ್ತಿನಾಪುರಕ್ಕೆ ಪಾಂಡವರು ಮೊದಲಬಾರಿಗೆ ಬಂದಾಗ,ಗಾಂಧಾರಿಯನ್ನು ನೋಡಿದ ಭೀಮನ ಮನಸ್ಸಿನಲ್ಲಿ ಮೂಡಿದ ಭಾವನೆಗಳ ಅಭಿವ್ಯಕ್ತಿಯೊಂದಿಗೆ ಟ್ವಿಟರ್ ಕತೆ ಪ್ರಾರಂಭವಾಗುತ್ತದೆ.ಈ ಬರಹಗಳನ್ನು ನಿಯತವಾಗಿ ಪ್ರಕಟಿಸುತ್ತಿರುವುದು ಚಿಂದು ಶ್ರೀಧರನ್ ಎಂಬ ಪತ್ರಿಕೋದ್ಯಮಿ.ಸದ್ಯ ಇವರು ಇಂಗ್ಲೆಂಡಿನಲ್ಲಿ ನೆಲೆಸಿದ್ದಾರೆ.
ಅಂದಹಾಗೆ ಟ್ವಿಟರ್ ಮೈಕ್ರೋಬ್ಲಾಗಿಂಗ್ ತಾಣದ ಮೇಲೆ ಗುರುವಾರ ಸೇವೆಯನ್ನು ನಿರಾಕರಿಸುವ ದಾಳಿ ನಡೆಯಿತು. ಇದರಿಂದ ಅದರ ಸೇವೆಯು ಎರಡು ಗಂಟೆ ಕಾಲ ಬಾಧಿತವಾಯಿತು. ಜತೆಗೇ ಫೇಸ್‌ಬುಕ್‌ನಂತಹ ಸಾಮಾಜಿಕ ನೆಟ್ವರ್ಕಿಂಗ್ ತಾಣಗಳೂ ಬಾಧಿತವಾದುವು. ಈ ದಾಳಿಯನ್ನು ಆಯೋಜಿಸಿದವರು ಯಾರೆನ್ನುವುದು ಸ್ಪಷ್ಟವಾಗಿಲ್ಲ. ಪ್ರಸಿದ್ಧ ತಾಣಗಳಿಗೆ ಹುಸಿ ಬಳಕೆದಾರ ಕೇಳಿಕೆಗಳ ಪ್ರವಾಹ ಹರಿಸಿ,ನೈಜ ಬಳಕೆದಾರರಿಗೆ ಸೇವೆ ನಿರಾಕರಿಸುವ ದಾಳಿಗಳು ಅಂತರ್ಜಾಲದಲ್ಲಿ ಸಾಮಾನ್ಯವಾಗಿ ಬಿಟ್ಟಿವೆ.ಜೂನ್ ಒಂದೇ ತಿಂಗಳಲ್ಲಿ ಟ್ವಿಟರ್ ಸೇರಿದ ಹೊಸ ಬಳಕೆದಾರರ ಸಂಖ್ಯೆ ನಾಲ್ಕು ಕೋಟಿಗೂ ಹೆಚ್ಚು. ಇಷ್ಟು ಜನಪ್ರಿಯ ತಾಣವಾದ ಟ್ವಿಟರ್ ಕೈಕೊಟ್ಟಾಗ, ಅಂತರ್ಜಾಲ ಬಳಕೆದಾರರು ಕಂಗಾಲಾಗಿಬಿಟ್ಟರು. ನಂತರ ಸೇವೆ ಆರಂಭವಾದಾಗ, ಟ್ವಿಟರ್ ಇಲ್ಲದಾಗ ಏನು ಮಾಡಿದೆ ಎನ್ನುವ ಕುರಿತೇ ಬಳಕೆದಾರರು ಹೆಚ್ಚು ಸಂದೇಶ ಬರೆದರು.ಇತರ ತಾಣಗಳು ಕೈಕೊಟ್ಟಾಗ,ಅದರ ಕುರಿತು ಟ್ವಿಟರಿನಲ್ಲಿ ದೂರುವ ಜನರು, ಟ್ವಿಟರ್ ಸ್ವತ: ಕೈಕೊಟ್ಟಾಗ ಬರೆಯುವುದೆಲ್ಲಿ ಎಂದು ಅಣಕವಾಡಿದ್ದೂ ಇದೆ.
-----------------------------------------------------------------------
ಸರಕಾರಿ ಕನ್ನಡ "ವಿಕಿಪೀಡಿಯಾ"

ಕರ್ನಾಟಕ ಸರಕಾರವು ಈ ಸಲದ ಬಜೆಟಿನಲ್ಲಿ ಕನ್ನಡ ವಿಶ್ವಕೋಶವನ್ನು ಅಂತರ್ಜಾಲದಲ್ಲಿ ಪ್ರಕಟಿಸುವ ಉದ್ದೇಶದಿಂದ ಎರಡುಕೋಟಿ ರುಪಾಯಿಗಳನ್ನು ತೆಗೆದಿರಿಸುವ ನಿರ್ಧಾರ ಮಾಡಿತ್ತು.ಕನ್ನಡ ಜ್ಞಾನ ಆಯೋಗ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಐಐಐಟಿ-ಬೆಂಗಳೂರು ಅವರುಗಳು ಕನ್ನಡ ವಿಶ್ವಕೋಶವನ್ನು ಅಂತರ್ಜಾಲದಲ್ಲಿ ಲಭ್ಯವಾಗಿಸುವ ನಿಟ್ಟಿನಲ್ಲಿ ಹೆಜ್ಜೆ ಇಡಲಿದ್ದಾರೆ.ರಾಜ್ಯೋತ್ಸವದ ವೇಳೆಗೆ ಇದು ಕಾರ್ಯಾರಂಭ ಮಾಡಲಿದೆ.ಈ ತಾಣಕ್ಕೆ ಕನ್ನಡ ಜ್ಞಾನಭಂಡಾರ,ಕನ್ನಡ ಮಾಹಿತಿ ಭಂಡಾರ,ಕನ್ನಡ ಖಜಾನೆ,ಕನ್ನಡ ಸೇತುವೆ ಮುಂತಾದ ಹೆಸರುಗಳು ಪರಿಶೀಲನೆಯಲ್ಲಿವೆ.ಜನರ ಸಹಭಾಗಿತ್ವದಲ್ಲಿ ಕನ್ನಡ ವಿಶ್ವಕೋಶ ವಿಕಿಪೀಡಿಯಾವು ಈಗಾಗಲೇ http://kn.wikipedia.org/ನಲ್ಲಿ ಲಭ್ಯವಿದ್ದು ಇದರಲ್ಲಿ ಸುಮಾರು ಏಳುಸಾವಿರ ಬರಹಗಳೀಗಾಗಲೆ ಸಂಗ್ರಹವಾಗಿದೆ.ಸರಕಾರಿ ವಿಶ್ವಕೋಶ ಇದಕ್ಕಿಂತ ಹೇಗೆ ಭಿನ್ನವಾಗಿರುತ್ತದೆ,ಇರುವ ವಿಶ್ವಕೋಶವನ್ನು ಬಲಪಡಿಸುವುದನ್ನು ಬಿಟ್ಟು ಹೊಸತನ್ನು ಸರಕಾರಿ ಖರ್ಚಿನಲ್ಲಿ ಮಾಡುವ ಅಗತ್ಯ ಏನಿದೆ ಎಂಬ ವಿಚಾರಗಳ ಬಗ್ಗೆ ಅಂತರ್ಜಾಲದಲ್ಲೀಗ ಚರ್ಚೆ ನಡೆದಿದೆ.ಕನ್ನಡದ ಹೆಸರಿನಲ್ಲಿ ಸರಕಾರದ ನಿಧಿಯನ್ನು ಮುಕ್ಕಲು ವಿಶ್ವಕೋಶ ಒಂದು ನೆಪವಾಗದಿರಲಿ ಎನ್ನುವುದು ಕನ್ನಡಿಗರ ಹಾರೈಕೆ.
----------------------------------------------------------
ಅಂತರ್ಜಾಲದ ಕಡತ ಖಜಾನೆ
ಅಂತರ್ಜಾಲದಲ್ಲಿ ವಿವಿಧ ನಮೂನೆಯ ಕಡತಗಳನ್ನು ಪೇರಿಸಿಡಲು ಅವಕಾಶ ನೀಡುವ ತಾಣಗಳು ಹಲವಿವೆ.ಅವುಗಳಲ್ಲಿ ಇತ್ತೀಚೆಗೆ ಜನಪ್ರಿಯವಾಗಿರುವ ತಾಣವೆಂದರೆ www.scribd.com. ಇಲ್ಲಿ ಜನರು ತಮ್ಮ ಕಡತಗಳನ್ನು ಇತರರೊಂದಿಗೆ ಹಂಚಿಕೊಳ್ಳುವ ಅವಕಾಶವೂ ಇರುವುದರಿಂದ ವಿವಿಧ ಬಗೆಯ ಮಾಹಿತಿಗಳನ್ನು ಹೊತ್ತ ಕಡತಗಳನ್ನು ಇಲ್ಲಿಂದ ಇಳಿಸಿಕೊಳ್ಳಲೂ ಸಾಧ್ಯ.ಪುಸ್ತಕಗಳ ಇ-ಪ್ರತಿಗಳು,ವಿವಿಧ ವಿಷಯಗಳ ಬಗ್ಗೆ ಪವರ್ ಪಾಯಿಂಟ್ ಸ್ಲೈಡುಗಳು ಇಲ್ಲಿ ಸಿಗುತ್ತವೆ.ಹೆಚ್ಚು ಜನರು ಡೌನ್‌ಲೋಡ್ ಮಾಡಿಕೊಳ್ಳುತ್ತಿರುವ ಕಡತಗಳ ಪಟ್ಟಿ ಇಲ್ಲಿ ಲಭ್ಯವಿರುವುದರಿಂದ,ಉತ್ತಮ ಕಡತಗಳನ್ನು ಆಯ್ದುಕೊಳ್ಳುವುದಿಲ್ಲಿ ಸುಲಭ.ಹಣ ಪಾವತಿ ಮಾಡಿ ಉಪಯೋಗಿಸಬಹುದಾದ ಕಡತಗಳೂ ಇಲ್ಲಿವೆ.
--------------------------------------------
ಬರಲಿದೆ ವಯರ್ಲೆಸ್ ಎನ್ ನಿಸ್ತಂತು ಮಾನಕ
ಆರುನೂರು ಮೆಗಾಬಿಟ್ ವೇಗದ ನಿಸ್ತಂತು ಜಾಲವನ್ನು ನಿಜವಾಗಿಸುವ ಮಾನಕ 802.11n ಮಾನಕ ಸೆಪ್ಟೆಂಬರ್ ಅಂತ್ಯದ ವೇಳೆಗೆ ಸಿದ್ಧವಾಗಲಿದೆ. ವರ್ಷಗಳ ಕಾಲ ಅದರ ಕರಡು ಪ್ರತಿ ಲಭ್ಯವಿದ್ದು, ಯಂತ್ರಾಂಶ ತಯಾರಕರು ಅದರ ಪ್ರಕಾರ ಯಂತ್ರಾಂಶಗಳನ್ನು ತಯಾರಿಸುವಲ್ಲಿ ತೊಡಗಿದ್ದಾರೆ.ಕ್ವಾಲಕೋಮ್ ಎನ್ನುವ ಕಂಪೆನಿ ವಯರ್ಲೆಸ್ ಎನ್ ಮಾನಕದ ಪ್ರಕಾರ ಚಿಪ್ ಅನ್ನು ಸಿದ್ಧ ಪಡಿಸಿದ್ದು, ಒಂದೇ ಸಲಕ್ಕೆ ಧ್ವನಿ,ವಿಡಿಯೋ ಮತ್ತು ದತ್ತಾಂಶಗಳ ಪ್ರವಾಹವನ್ನು ಸಂಭಾಳಿಸಲು ಸಾಧ್ಯವಾಗುವಷ್ಟು ವೇಗ ನಿಸ್ತಂತು ಜಾಲಕ್ಕೆ ಲಭ್ಯವಾಗುತ್ತದೆ. ಹಲವು ಚಾನೆಲ್‌ಗಳಲ್ಲಿ ಸೇವೆ ಒದಗಿಸಲು ಅವಕಾಶ ಸಿಗುವುದು ಮಾನಕದ ವೈಶಿಷ್ಟ್ಯ.ಸದ್ಯ ಚಾಲ್ತಿಯಲ್ಲಿರುವ 802.11g ಪ್ರಕಾರ ಸುಮಾರು ಐವತ್ತು ಮೆಗಾಬಿಟ್ ವೇಗದ ನಿಸ್ತಂತು ಜಾಲ ಸೇವೆ ಮಾತ್ರಾ ಸಿಗುತ್ತದೆ. ಅದರ ಹತ್ತು ಪಟ್ಟು ವೇಗವನ್ನು ಸಾಧ್ಯವಾಗಿಸುವ ವಯರ್ಲೆಸ್ ಎನ್ ಮಾನಕ,ಅತ್ಯಂತ ಸ್ಪಷ್ಟ ವಿಡಿಯೋ ಪ್ರದರ್ಶಿಸುವ ಹೈಡೆಫಿನಿಶನ್ ಟಿವಿಯಂತಹ ಸೇವೆಯನ್ನು ಒದಗಿಸಲು ಬಳಕೆಯಾಗಬಹುದು.
---------------------------------------
ಬಿಂಗ್ v/s ಗೂಗಲ್
ಮೈಕ್ರೋಸಾಫ್ಟ್ ಕಂಪೆನಿಯ ಬಿಂಗ್ ಮತ್ತು ಗೂಗಲ್ ಕಂಪೆನಿಯ ಶೋಧ ಸೇವೆಯನ್ನು ಹೋಲಿಸಬೇಕೇ? ಇದನ್ನು ಮಾಡಲು ಬಹಳ ಸುಲಭವಾಗಿಸಲು http://bingandgoogle.com ತಾಣವನ್ನು ಬಳಸಬಹುದು. ಒಂದೇ ಪದವನ್ನು ಎರಡು ತಾಣದಲ್ಲೂ ನೀಡಿ,ಎರಡರ ಫಲಿತಾಂಶಗಳನ್ನು ಜತೆಗೆ ಪ್ರದರ್ಶಿಸುವ ಸೌಕರ್ಯವನ್ನೀ ತಾಣ ನೀಡಿದೆ."ಉಡುಪಿ" ಪದವನ್ನು ಹುಡುಕಲು ನೋಡಿ,ಗೂಗಲ್ ಮೇಲುಗೈ ನಿಚ್ಚಳವಾಗುತ್ತದೆ. ಯಾಕೆಂದು ತಟ್ ಅಂತ ಹೇಳಿ!
*ಅಶೋಕ್‌ಕುಮಾರ್ ಎ
udayavani

Monday, August 03, 2009

ಯುಟ್ಯೂಬಿನ ಶೈಕ್ಷಣಿಕ ಚಾನೆಲ್


ಅಂತರ್ಜಾಲ ತಾಣದ ಸ್ಕ್ರೀನ್‍ಶಾಟ್ ಬೇಕೇ?

ಬರಹದ ಜತೆ ಪ್ರಕಟಿಸಲು ಅಂತರ್ಜಾಲ ತಾಣವೊಂದರ ಸ್ಕ್ರೀನ್‌ಶಾಟ್ ಬೇಕೇ? ಅದನ್ನು ತೆಗೆಯುವ ಒಂದು ಕ್ರಮವೆಂದರೆ, ಆ ಪುಟವನ್ನು ನಿಮ್ಮ ಕಂಪ್ಯೂಟರಿನಲ್ಲಿ ತೆರೆದು,ಅದು ಕಂಪ್ಯೂಟರ್ ತೆರೆಯಲ್ಲಿ ಕಾಣುತ್ತಿರುವಾಗ, ಪ್ರಿಂಟ್‌ಸ್ಕ್ರೀನ್ ಕೀಲಿಯನ್ನು ಒತ್ತಿ. ಇನ್ನು ಯಾವುದಾದರೂ ಪೈಂಟ್ ಅಂತಹ ಗ್ರಾಫಿಕ್ಸ್ ತಂತ್ರಾಂಶ ತೆರೆದು, ಎಡಿಟ್ ಮೆನ್ಯುವಿನಿಂದ ಪೇಸ್ಟ್ ಆಯುವುದು.ಗ್ರಾಫಿಕ್ಸ್ ತಂತ್ರಾಂಶದ ಪುಟದಲ್ಲಿ ನೀವು ಸೆರೆ ಹಿಡಿದ ಕಂಪ್ಯೂಟರ್ ತೆರೆಯ ನೋಟ ಚಿತ್ರವಾಗಿ ಮೂಡುತ್ತದೆ.ಆದರೆ ಈ ವಿಧಾನದಿಂದ ಇಡೀ ಅಂತರ್ಜಾಲ ಪುಟದ ಸ್ಕ್ರೀನ್‌ಶಾಟ್ ಲಭ್ಯವಾಗದು. ಕಂಪ್ಯೂಟರಿನಲ್ಲಿ ಎಷ್ಟು ಕಾಣಿಸಿತೋ,ಅಷ್ಟು ಮಾತ್ರಾ ತಂತ್ರಾಂಶದಲ್ಲೂ ಉಳಿಸಬಹುದು.ಆದರೆ ಅಂತರ್ಜಾಲ ತಾಣವೊಂದರ ಸೇವೆ ಪಡೆದರೆ,ಇಡೀ ಪುಟದ ಸ್ಕ್ರೀನ್‌ಶಾಟ್ ಹಿಡಿಯಬಹುದು.www.aviary.com ತಾಣವೇ ಅಂತಹ ಸೇವೆ ನೀಡುವ ತಾಣ.ಉದಾಹರಣೆಗೆ ನೀವು ಉದಯವಾಣಿ ತಾಣದ ಸ್ಕ್ರೀನ್‌ಶಾಟ್ ಹಿಡಿಯಬಯಸುವಿರಾದರೆ http://aviary.com/http://www.udayavani.com ಎಂದು ಬ್ರೌಸರಿನ ವಿಳಾಸ ಪೆಟ್ಟಿಗೆಯಲ್ಲಿ ಟೈಪಿಸಿ. ಇದರಲ್ಲಿ ಮೊದಲನೆಯ ಭಾಗಆ ತಾಣದ ವಿಳಾಸವಾದರೆ,ಎರಡನೆಯ ಭಾಗ ಉದಯವಾಣಿಯ ಅಂತರ್ಜಾಲ ತಾಣದ ವಿಳಾಸ ಎನ್ನುವುದು ಸ್ಪಷ್ಟ ತಾನೇ? ಮೊದಲು aviary ಪುಟವೇ ಕಾಣಿಸಿಕೊಂಡು,ಉದಯವಾಣಿ ಪುಟದ ಸೆರೆ ಹಿಡಿಯುತ್ತಿರುವುದಾಗಿ ಪ್ರದರ್ಶಿಸುತ್ತದೆ.ಕೆಲ ನಿಮಿಷಗಳಲ್ಲಿ,ನಿಮಗೆ ಉದಯವಾಣಿ ಪುಟದ ಸ್ಕ್ರೀನ್‌ಶಾಟಿನ ಚಿತ್ರ ಕಾಣಿಸುತ್ತದೆ. ಈ ಚಿತ್ರವನ್ನು ನಿಮಗೆ ಬೇಕಾದಂತೆ ಸಂಕಲಿಸುವ ಅನುಕೂಲತೆಯೂ ಸಿಗುತ್ತದೆ. ಆಮೇಲೆ ಚಿತ್ರವನ್ನು ಬೇಕಾದೆಡೆ ಉಳಿಸಿ.
----------------------------------------------------
ಎಸೆಮೆಸ್ ಸಂದೇಶ,ಮಿಂಚಂಚೆ ಮೂಲಕ ನಿಮ್ಮ ಕಂಪ್ಯೂಟರನ್ನು ಬಂದ್ ಮಾಡಿ!
ಕಚೇರಿಯಿಂದ ಯಾವುದೋ ಕಾರಣಕ್ಕೆ ಹೊರಬಂದು ಮಳೆಗೆ ಸಿಕ್ಕಿ ಹಾಕಿಕೊಂಡು ಮತ್ತೆ ಕಚೇರಿಗೆ ಹೋಗಲಾಗುತ್ತಿಲ್ಲವೇ?ಕಚೇರಿಯ ಕಂಪ್ಯೂಟರನ್ನು ಬಂದು ಮಾಡಿಲ್ಲವೇ? ಕಚೇರಿಗೆ ಕರೆ ಮಾಡಿದರೆ,ನಿಮ್ಮ ಅಕ್ಕಪಕ್ಕ ಕುಳಿತುಕೊಳ್ಳುವವರೂ ಕಚೇರಿ ಬಿಟ್ಟಿದ್ದಾರೆಯೇ? ನಿಮ್ಮ ಕಂಪ್ಯೂಟರನ್ನು ಎಸೆಮ್ಮೆಸ್ ಅಥವ ಮಿಂಚಂಚೆ ಕಳುಹಿಸಿ ಬಂದು ಮಾಡಲಾಗುತ್ತಿದ್ದರೆ ಎಷ್ಟು ಚೆನ್ನಾಗಿತ್ತು! ಇದು ಸಾಧ್ಯ. ಅದರೆ ಅದಕ್ಕೆ tweetmyPC ಅನ್ನು ನಿಮ್ಮ ಕಂಪ್ಯೂಟರಿನಲ್ಲಿ ಅನುಸ್ಥಾಪಿಸಿಕೊಂಡಿರಬೇಕಾಗುತ್ತದೆ.http://tweetmypc.codeplex.com/ ತಾಣದಲ್ಲದು ಲಭ್ಯವಿದೆ.ನೀವು ಜಿಮೇಲ್ ಮಿಂಚಂಚೆ ಮತ್ತು ಟ್ವಿಟರ್ ಖಾತೆಯನ್ನೂ ಹೊಂದಿರಬೇಕಾಗುತ್ತದೆ.ಟ್ವೀಟ್‌ಮೈಪಿಸಿ ತಂತ್ರಾಂಶವನ್ನು ಅನುಸ್ಥಾಪಿಸಿದ ಬಳಿಕ, ನಿಮ್ಮ ಟ್ವಿಟರ್ ಮತ್ತು ಜಿಮೇಲ್ ಖಾತೆಗಳ ವಿವರಗಳನ್ನೂ ಕೇಳುತ್ತದೆ.ನಿಮಗೆ ಕಂಪ್ಯೂಟರನ್ನು ಬಂದು ಮಾಡಬೇಕಿದ್ದರೆ twitter@posterous.com ವಿಳಾಸಕ್ಕೆ ಮಿಂಚಂಚೆ ಕಳುಹಿಸಿ. ನಿಮ್ಮ ಟ್ವಿಟರ್ ಖಾತೆಯ ಮೂಲಕ ಸಂದೇಶ ಕಂಪ್ಯೂಟರನ್ನು ತಲುಪಿ,ಕಂಪ್ಯೂಟರನ್ನು ಬಂದು ಮಾಡುತ್ತದೆ. ನಿಮ್ಮ ಟ್ವಿಟರ್ ಖಾತೆಗೆ ಶಟ್‌ಡೌನ್,ಲಾಗಾಫ್,ಲಾಕ್ ಮುಂತಾದ ಸಂದೇಶ ಕಳುಹಿಸಿದರೂ, ಕಂಪ್ಯೂಟರಿನಲ್ಲಿ ಅನುಸ್ಥಾಪಿಸಿದ ತಂತ್ರಾಂಶ,ಟ್ವಿಟರ್ ಸಂದೇಶದ ಮೇಲೆ ಅನವರತ ಕಣ್ಣಿರಿಸುವ ಮೂಲಕ ಸಂದೇಶ ಬಂದೊಡನೆ ಅದರನುಸಾರ ನೀವು ನೀಡಿದ ಸಂದೇಶದಂತೆ ಕೆಲಸ ಮಾಡುತ್ತದೆ.ಎಸೆಮೆಸ್ ಮೂಲಕವೂ ಟ್ವಿಟರ್ ಸಂದೇಶ ಕಳುಹಿಸುವ ಅನುಕೂಲ ಇರುವ ಕಾರಣ ಎಸೆಮೆಸ್ ಮೂಲಕವೂ ಕಂಪ್ಯೂಟರನ್ನು ನಿಯಂತ್ರಿಸಬಹುದು.ಅಂದ ಹಾಗೆ ಕಂಪ್ಯೂಟರಿನ ಸ್ಥಿತಿಯ ಬಗ್ಗೆ ನಿಮಗೆ ಮಿಚಂಚೆಯನ್ನೂ ಟ್ವೀಟ್‌ಮೈಪಿಸಿ ತಂತ್ರಾಂಶ ಕಳುಹಿಸುತ್ತದೆ.
----------------------------------------
ಯಾಹೂ -ಮೈಕ್ರೋಸಾಫ್ಟ್ ಮೈತ್ರಿ
ಮೈಕ್ರೋಸಾಫ್ಟ್ ಕಂಪೆನಿಯು ಯಾಹೂ ಕಂಪೆನಿಯನ್ನು ತನ್ನ ಬಗಲಿಗೆ ಹಾಕಿಕೊಳ್ಳಲು ಹಿಂದೆ ಅನೇಕ ಸಲ ಪ್ರಯತ್ನಿಸಿ,ವಿಫಲವಾಗಿತ್ತು. ಈಗ ಅವೆರಡೂ ಕಂಪೆನಿಗಳು ಸಹಯೋಗದ ಒಡಂಬಡಿಕೆ ಬಂದಿವೆ. ಅದರ ಪ್ರಕಾರ ಮುಂದಿನ ಹತ್ತು ವರ್ಷಗಳ ಕಾಲ, ಯಾಹೂ ಕಂಪೆನಿಯು ತನ್ನ ತಾಣದಲ್ಲಿ ಒದಗಿಸುವ ಶೋಧ ಸೇವೆಗೆ ಮೈಕ್ರೋಸಾಫ್ಟಿನ ಬಿಂಗ್ ಶೋಧ ಇಂಜಿನ್‌ವನ್ನು ಬಳಸುತ್ತದೆ.ಇನ್ನು ಮುಂದೆ ಯಾಹೂ ಮಿಚಂಚೆ ಸೇವೆಯಂತಹ ಸೇವೆ ಒದಗಿಸುವ ಸುದ್ದಿ ಮಾಧ್ಯಮ ತಾಣವಾಗುತ್ತದೆ. ಬಳಕೆದಾರರಿಗೆ ಶೋಧ ಸೇವೆ ಲಭ್ಯವಾದರೂ,ಅದರಲ್ಲಿ ಬಳಕೆಯಾಗುವ ತಂತ್ರಜ್ಞಾನ ಮೈಕ್ರೋಸಾಫ್ಟಿನದ್ದೇ ಆದ ಕಾರಣ,ಶೋಧದ ಫಲಿತಾಂಶದ ಮೇಲೆ ಯಾಹೂ ಕಂಪೆನಿಗೆ ಯಾವ ನಿಯಂತ್ರಣವೂ ಇರದು. ಆದರೆ ಯಾಹೂ ಪುಟದಲ್ಲಿನ ಜಾಹೀರಾತುಗಳ ಆದಾಯದಲ್ಲಿ ಶೇಕಡಾ ಹನ್ನೆರಡು ಆದಾಯ ಮೈಕ್ರೋಸಾಫ್ಟ್‌ಗೆ ಹೋಗುತ್ತದೆ. ಮೈಕ್ರೋಸಾಫ್ಟ್ ಕಂಪೆನಿಗೆ ಒಂದೇ ಏಟಿಗೆ ಯಾಹೂವಿನ ಬಳಕೆದಾರರು ತನ್ನವರೇ ಆಗಿ ಬಿಡುವುದಲ್ಲದೆ,ಕುಳಿತಲ್ಲಿಗೇ ಶೇಕಡಾ ಹನ್ನೆರಡು ಆದಾಯ ಲಾಭವಾಗುತ್ತದೆ.ಮೈಕ್ರೋಸಾಫ್ಟ್ ಕಂಪೆನಿಯು ಶೋಧ ಸೇವೆ ನೀಡುವ ಕಂಪೆನಿಗಳ ಪೈಕಿ ಗೂಗಲ್ ನಂತರದ ಸ್ಥಾನಕ್ಕೆ ಏರುತ್ತದೆ.ಇಷ್ಟು ಮಾತ್ರವಲ್ಲ,ಮೈಕ್ರೋಸಾಫ್ಟ್ ಕಂಪೆನಿಯು ಯಾಹೂವನ್ನು ಖರೀದಿಸಲು ಹಣ ಖರ್ಚು ಮಾಡುವುದೂ ಉಳಿಯುತ್ತದೆ. ವಿಲಯನವಾಗಿದ್ದಲ್ಲಿ ಗೂಗಲ್‌ಗೆ ಒಂದು ದೊಡ್ಡ ಕಂಪೆನಿಯ ಪೈಪೋಟಿ ಎದುರಾಗುತ್ತಿತ್ತು. ಸದ್ಯಕ್ಕಂತೂ ಗೂಗಲ್‌ಗೆ ಆ ಭಯ ತಪ್ಪಿತು.
----------------------------------------------------------------
ಯುಟ್ಯೂಬಿನ ಶೈಕ್ಷಣಿಕ ಚಾನೆಲ್
ಯುಟ್ಯೂಬ್ ವಿಡಿಯೋ ತುಣುಕುಗಳನ್ನು ಒದಗಿಸಿ,ಅಂತರ್ಜಾಲ ಬಳಕೆದಾರರ ಮನಗೆದ್ದ ಗೂಗಲ್ ತಾಣ. ಈಗದು ಶೈಕ್ಷಣಿಕ ವಿಷಯಗಳಿಗೆ ಸಂಬಂಧಿಸಿದ ಪ್ರತ್ಯೇಕ ಚಾನೆಲನ್ನು ಆರಂಭಿಸಿದೆ.ಇದರಲ್ಲಿ ವಿಖ್ಯಾತ ವಿಶ್ವವಿದ್ಯಾಲಯಗಳ ಪ್ರೊಫೆಸರುಗಳ ಉಪನ್ಯಾಸಗಳ ವಿಡಿಯೋ ತುಣುಕುಗಳು ಲಭ್ಯವಿವೆ. ಇವನ್ನು www.youtube.com/eduನಲ್ಲಿ ಪಡೆಯಬಹುದು.ಎಂಐಟಿ,ಸ್ಟಾನ್‌ಫರ್ಡ್,ಕೊಲಂಬಿಯಾ,ಕಾರ್ನೆಲ್,ಡ್ಯೂಕ್,ಹಾವರ್ಡ್,ಯಾಲೆ,ಕ್ಯಾಲಿಫೊರ್ನಿಯಾದ ಪ್ರಾಧ್ಯಾಪಕರುಗಳ ಉಪನ್ಯಾಸಗಳು ವಿವಿಧ ವಿಷಯಗಳ ಮೇಲೆ ಲಭ್ಯವಿವೆ.ದಂತವೈದ್ಯಕೀಯದ ಬಗ್ಗೆ ಮಿಚಿಗನ್ ವಿವಿಯ 426 ವಿಡಿಯೋಗಳಿವೆ.ಅಮೆರಿಕಾದ ವಿದ್ಯಾರ್ಥಿಗಳು ತಮ್ಮ ಕೋರ್ಸಿನ ಕೆಲವು ವಿಷಯಗಳನ್ನು ಸಂಪೂರ್ಣ ಆನ್‌ಲೈನ್ ಮೂಲಕವೇ ಪಡೆಯುವುದು ಮಾಮೂಲಿಯಾಗಿ ಬಿಟ್ಟಿದೆ. ಶೈಕ್ಷಣಿಕ ವೆಚ್ಚ ತಗ್ಗಿಸಲು ಈ ರೀತಿ ಕಲಿಯುವುದು ಸಹಾಯಕವಾಗುತ್ತದೆ.ಇಲ್ಲವಾದರೆ ತರಗತಿಗೆ ಹಾಜರಾಗಲು ದೂರದಿಂದ ಪ್ರಯಾಣಿಸಿ,ಸಮಯ-ಪ್ರಯತ್ನ ಮತ್ತು ಹಣ ಇವನ್ನು ವ್ಯಯಿಸಬೇಕಾಗುತ್ತದಲ್ಲ ಎನ್ನುವುದು ಅವರ ಲೆಕ್ಕಾಚಾರ.


udayavani

*ಅಶೋಕ್‌ಕುಮಾರ್ ಎ
 
googledc7e93ba1a7703ae.html