Monday, September 28, 2009

ಕಂಪ್ಯೂಟರಿನಲ್ಲಿ ಜೀವನದ ಪ್ರತಿಕ್ಷಣ ದಾಖಲು


ಕಂಪ್ಯೂಟರಿನಲ್ಲಿ ಜೀವನದ ಪ್ರತಿಕ್ಷಣ ದಾಖಲು

ಗಾರ್ಡನ್ ಬೆಲ್ ಎನ್ನುವ ಅಸಾಮಿ ತನ್ನ ಜೀವನದ ಪ್ರತಿಕ್ಷಣವನ್ನೂ ಕಂಪ್ಯೂಟರಿನಲ್ಲಿ ದಾಖಲಿಸಿಕೊಳ್ಳುವ ಯತ್ನ ಮಾಡುತ್ತಿದ್ದಾರೆ.ಮೈಕ್ರೋಸಾಫ್ಟಿನ ಈ ಸಂಶೋಧಕ ತಾನು ಭೇಟಿಯಾಗುವ ಜನರ,ಜತೆ ಆಡುವ ಪ್ರತಿ ಮಾತನ್ನೂ ದಾಖಲಿಸಿಕೊಳ್ಳುತ್ತಾರೆ.ಅವರ ಚಿತ್ರಗಳು ಮತ್ತು ವೀಡಿಯೋ ಕೂಡಾ ಕಂಪ್ಯೂಟರ್ ಸ್ಮರಣಕೇಂದ್ರದಲ್ಲಿ ಉಳಿಸಿಕೊಳ್ಳುತ್ತಾರೆ.ಹೀಗೆ ಕಳೆದ ಹತ್ತು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವುದರಿಂದ ಅವರ ಜೀವನವು ಕಂಪ್ಯೂಟರಿನಲ್ಲಿ ಉಳಿದುಕೊಂಡಿದೆ.ಈ ದಾಖಲೆಯಲ್ಲಿ ಬೇಕಾದ ಅಂಶಕ್ಕಾಗಿ ಹುಡುಕಬಹುದು.ಅವರು ತೆತ್ತಿರುವ ಬಿಲ್‌ಗಳ ಚಿತ್ರಗಳು,ವೈದ್ಯಕೀಯ ದಾಖಲೆಗಳು ಮತ್ತು ಪತ್ರಗಳು ಹೀಗೆ ಎಲ್ಲವೂ ಕಂಪ್ಯೂಟರಿನಲ್ಲಿ ಇಟ್ಟುಕೊಂಡಿದ್ದಾರೆ.ವಸ್ತುಶ: ಅವರು ಏನನ್ನೂ ನೆನಪಿನಲ್ಲಿ ಇಟ್ಟುಕೊಳ್ಳಬೇಕಿಲ್ಲ.ಕಂಪ್ಯೂಟರ್ ಸಹಾಯ ಪಡೆದು ಬೇಕಾದ್ದನ್ನು "ನೆನಪಿಸಿ"ಕೊಳ್ಳುವ ಸೌಕರ್ಯ ಅವರಿಗಿದೆ.ಅವರ ಈ ಕಳೆದ ಹತ್ತು ವರ್ಷದ ಜೀವನ ಸುಮಾರು ಮುನ್ನೂರೈವತ್ತು ಗಿಗಾಬಿಟ್‌ಗಳಷ್ಟಾಗಿದೆ.2020ರ ವೇಳೆಗೆ ಪ್ರತಿಯೋರ್ವ ವ್ಯಕ್ತಿಯ ಜೀವನವೂ ಕಂಪ್ಯೂಟರಿನಲ್ಲಿ ದಾಖಲಿಸಲ್ಪಡಬಹುದು ಎಂದು ಗಾರ್ಡನೆ ಬೆಲ್ ಭಾವಿಸುತ್ತಾರೆ.
------------------------------------------------------------------------------------------------
ಹೊಂಡ ಯುನಿಸೈಕಲ್

ಹೊಂಡ ಕಂಪೆನಿಯ ಯುನಿಸೈಕಲ್ ಎನ್ನುವುದು ಎಡ-ಬಲ,ಹಿಂದೆ-ಮುಂದೆ ಮತ್ತು ಕೋನದಲ್ಲಿ ಚಲಿಸಬಲ್ಲ ವಾಹನವಾಗಿದೆ.ಎದುರು ನಡೆದು ಸಾಗುತ್ತಿರುವವರ ಕಣ್ಣಿನ ಮಟ್ಟದಲ್ಲಿ ಸವಾರಿ ಮಾಡುತ್ತಿರುವವನ ತಲೆ ಬರುವಂತೆ ತುಸು
ಎತ್ತರದ ಸೀಟನ್ನು ಇದರಲ್ಲಿ ಒದಗಿಸಲಾಗಿದೆ.ಇದರಲ್ಲಿ ಸವಾರಿ ಮಾಡುವಾಗ,ಸಮತೋಲನ ಉಳಿಸಿಕೊಳ್ಳಲು ವಿಶಿಷ್ಟ ವ್ಯವಸ್ಥೆ ವಾಹನದಲ್ಲೇ ಲಭ್ಯವಿದೆ.ಸವಾರಿ ಮಾಡುತ್ತಿರುವವನು ಹೆಚ್ಚು ಪ್ರಯತ್ನ ಪಡದೇ ಸಮತೋಲನ ಸಾಧಿಸಬಹುದು ಎನ್ನುವುದು ಪ್ಲಸ್‌ಪಾಯಿಂಟ್.
*ಅಶೋಕ್‌ಕುಮಾರ್ ಎ

Monday, September 21, 2009

ಮೂರ್ಖರ ಪೆಟ್ಟಿಗೆಯ ಮುಂದೆ ಹೊಸ ಅವತಾರ!

ಮೂರ್ಖರ ಪೆಟ್ಟಿಗೆಯ ಮುಂದೆ ಹೊಸ ಅವತಾರ!
ಟಿವಿಯ ಮುಂದೆ ಗರಬಡಿದವರಂತೆ ಕುಳಿತುಕೊಳ್ಳುವುದು ನಮ್ಮ ದಿನಚರಿಯ ಭಾಗವಾಗಿಬಿಟ್ಟಿದೆ.ಜತೆಗೆ ವಿಶೇಷ ಕನ್ನಡಕ ಧರಿಸುವುದೂ ಅನಿವಾರ್ಯವಾಗುವ ದಿನಗಳು ದೂರವಿಲ್ಲ.ಮೂರು ಆಯಾಮದ ಚಿತ್ರ ಪ್ರದರ್ಶಿಸುವ ಟಿವಿಗಳು ಮುಂದಿನ ವರ್ಷವೇ ಮಾರಾಟಕ್ಕೆ ಲಭ್ಯವಾಗುವ ಸುದ್ದಿ ಬಂದಿದೆ.ಇವನ್ನು ನೋಡುವಾಗ ಚಿತ್ರಗಳು ಮೂರು ಆಯಾಮದ ಅನುಭವ ಸಿಗಲು ಕನ್ನಡಕ ಧರಿಸಬೇಕು-ಕುಟ್ಟಿಚಾತನ್ ಸಿನೆಮಾವನ್ನು ವೀಕ್ಷಿಸಿದಾಗ ಧರಿಸಿದ್ದೆವಲ್ಲಾ ಹಾಗೆಯೇ!ಪ್ಯಾನಸೋನಿಕ್ ಮತ್ತು ಸೋನಿ ಕಂಪೆನಿಗಳು ಅಂತಹ ಟಿವಿ ತಯಾರಿಕೆಗೆ ಮುಂದಾಗಿವೆ.ನಮ್ಮೆರಡು ಕಣ್ಣುಗಳಿಗೆ ಪ್ರತ್ಯೇಕ ಚಿತ್ರಗಳನ್ನು ತೋರಿಸಿ,ನಮ್ಮ ಮಿದುಳು ಆ ಚಿತ್ರಗಳನ್ನು ಆಳದ ಮೂರನೇ ಆಯಾಮದ ಭ್ರಮೆಗೀಡಾಗುವಂತೆ ಮಾಡುವುದು ಮೂರು ಆಯಾಮದ ಟಿವಿಯ ಗುಟ್ಟು.ಆದರೆ ಇದಕ್ಕೆ ಬಹಳ ಹೆಚ್ಚು ಬ್ಯಾಂಡ್‌ವಿಡ್ತ್ ಅವಶ್ಯಕತೆಯಿದೆ.ಟಿವಿಯ ಪ್ರಸಾರ ತಂತ್ರಜ್ಞಾನದಲ್ಲೂ ಬದಲಾವಣೆ ಅಗತ್ಯ.ಮುಂದಿನ ವರ್ಷ ಪ್ರಾಯೋಗಿಕವಾಗಿ ಪ್ರಸಾರ ಆರ್ಂಭವಾದರೂ ಆಗಬಹುದು.ಟಿವಿ ಸೆಟ್‌ಗಳೂ ಬಹುದುಬಾರಿ ಆಗುವುದು ಗ್ಯಾರಂಟಿ.
-------------------------------------------------------
ಒಬ್ಬರ ಮಿಂಚಂಚೆ ಇನ್ನೊಬ್ಬರಿಗೆ!
ಗೂಗಲ್‌ನ ಸೇವೆಗಳು ನಿತ್ಯವಿನೂತನ ರೂಪ ಪಡೆಯುತ್ತಿರುತ್ತವೆ. ಅವರ ಸಂಶೋಧನೆಗಳು ನಿರಂತರವಾಗಿ ನಡೆಯುತ್ತಿರುವುದೇ ಇದರ ಹಿಂದಿನ ಗುಟ್ಟು. ಆದರೆ ಈ ಪ್ರಯೋಗಗಳು ಕೆಲವೊಮ್ಮೆ ಬಳಕೆದಾರರಿಗೆ ಸಂಧಿಗ್ಧ ಸೃಷ್ಟಿಸುವುದಿದೆ. ಈ ಸಲ ಒಂದು ಕಾಲೇಜಿನ ವಿದ್ಯಾರ್ಥಿಗಳಿಗೆ ಅದರ ಅನುಭವವಾಯಿತು.ಕಂಪ್ಯೂಟರ್ ಜಾಲದ ವಿದ್ಯಾರ್ಥಿಗಳು ಒಬ್ಬರು ಮತ್ತೊಬ್ಬರ ಮಿಂಚಂಚೆ ನೋಡಲು ಸಾಧ್ಯವಾಯಿತು.ಕೆಲವರಿಗೆ ತಮ್ಮ ಮಿಂಚಂಚೆ ಖಾತೆಯ ಜತೆಗೆ ಇತರರ ಮಿಂಚಂಚೆ ಖಾತೆಗಳ ಇನ್‌ಬಾಕ್ಸ್‌ನ ದರ್ಶನವಾಯಿತು.ತಕ್ಷಣ ಇದನ್ನು ಗೂಗಲಿಗೆ ತಿಳಿಸಲಾಯಿತು.ಸಮಸ್ಯೆಯನ್ನು ಸರಿಪಡಿಸಲು ಮೂರು ದಿನಗಳು ಅಗತ್ಯವಾಯಿತು.ಕಂಪ್ಯೂಟರ್ ಜಾಲದ ಇನ್ನೂರು ವಿದ್ಯಾರ್ಥಿಗಳ ಪೈಕಿ ಇಪ್ಪತ್ತು ವಿದ್ಯಾರ್ಥಿಗಳಿಗೆ ಸಮಸ್ಯೆ ಕಾಡಿತು.ಸಮಸ್ಯೆ ಕಾಡಿದ ಖಾತೆಗಳನ್ನು ಅಮಾನತುಗೊಳಿಸಿದ ಕಾರಣ,ಮಿಂಚಂಚೆಗಳ ಖಾಸಗಿತನವನ್ನು ಕಾಪಾಡಲಾಯಿತು. ಆ ಬಳಕೆದಾರರಿಗೆ ಸೇವೆ ಮಾತ್ರಾ ಮೂರು ದಿನಗಳ ಕಾಲ ಲಭ್ಯವಿರಲಿಲ್ಲ.
---------------------------------------------------------------
ಬಾಹ್ಯಾಕಾಶದಲ್ಲಿ ಹೊಳೆದದ್ದೇನು?
ಉತ್ತರ ಅಮೆರಿಕಾದ ಗಗನದಲ್ಲಿ ತುಸು ಹೊತ್ತು ಹೊಳಪಿನಿಂದ ಕೂಡಿದ ದೃಶ್ಯಾವಳಿಯು ಕೆಲವರಿಗೆ ಗೋಚರಿಸಿತು.ಅದು ಮತ್ತೇನೂ ಅಲ್ಲ,ಡಿಸ್ಕವರಿ ಬಾಹ್ಯಾಕಾಶ ವಾಹನದಿಂದ ಬಿಡುಗಡೆಯಾದ ಬಾಹ್ಯಾಕಾಶಯಾನಿಗಳ ತ್ಯಾಜ್ಯ ಎಂದು ನಾಸಾ ಸ್ಪಷ್ಟಪಡಿಸಿದೆ.ಡಿಸ್ಕವರಿಯಿಂದ ಈ ರೀತಿ ತ್ಯಾಜ್ಯವನ್ನು ಗಗನದಲ್ಲಿ ವಿಸರ್ಜಿಸುವುದು ಇದೇ ಮೊದಲೇನು ಅಲ್ಲ. ಈ ಸಲ ಹಲವು ದಿನಗಳ ತ್ಯಾಜ್ಯವನ್ನು ಒಂದೇ ಸಾರಿಗೆ ವಿಸರ್ಜಿಸಿದ್ದು ಈ ರೀತಿ ಗೋಚರಿಸಲು ಕಾರಣವಾಯಿತು ಎಂದು ನಾಸಾ ಹೇಳಿದೆ.ಈ ಸಲದ ಯಾನದಲ್ಲಿ ಏಳು ಟನ್ ಆಹಾರ ಮತ್ತಿತ್ತರ ಅಗತ್ಯ ಸಾಮಾನುಗಳನ್ನು ಡಿಸ್ಕವರಿ ಬಾಹ್ಯಾಕಾಶ ಕೇಂದ್ರಕ್ಕೆ ಒಯ್ಯಿತು.ಏಳು ಜನರಿದ್ದ ವಾಹನ, ನಿಗದಿತ ದಿನಗಳಿಗಿಂತ ಒಂದು ದಿನ ತಡವಾಗಿ ಮರಳಿ ಬಂತು.ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಡಿಸ್ಕವರಿ ಸಂಪರ್ಕದ ಕೊಂಡಿಯಾಗಿಬಿಟ್ಟಿದೆ.
------------------------------------------------------------
ಐಬಿಎಂನಿಂದ ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನ
ಯು ಎಸ್‌ನ ಡ್ಯುಬುಕ್ ನಗರದಲ್ಲಿ ಸಾರಿಗೆ,ವಿದ್ಯುತ್ ಮತ್ತು ನೀರು ಪೂರೈಕೆ ಇತ್ಯಾದಿಗಳನ್ನು ಕಂಪ್ಯೂಟರ್ ಕೇಂದ್ರಿತ ವ್ಯವಸ್ಥೆಗಳ ಮೂಲಕ ನಿಯಂತ್ರಿಸಿ,ಇವುಗಳಲ್ಲಿ ದಕ್ಷತೆ ಹೆಚ್ಚಿಸಿ,ನಷ್ಟ ತಪ್ಪಿಸುವುದು ಮತ್ತು ಪರಿಸರಸ್ನೇಹೀಯಾಗಿಸಲು ಐಬಿಎಂ ಕಂಪೆನಿ ಬಯಸಿದೆ.ಇದರ ಅಂಗವಾಗಿ ಆಯ್ದ ಸ್ಥಳಗಳಲ್ಲಿ ಈಗಿರುವ ಮೀಟರ್‌ಗಳನ್ನು ಡಿಜಿಟಲ್ ಮೀಟರ್‌ಗಳಿಂದ ಬದಲಿಸಲಾಗುತ್ತದೆ. ಡಿಜಿಟಲ್ ನೀರು ಮೀಟರುಗಳು ನೀರು ಪೋಲಾಗುವುದನ್ನು ಕಂಡು ಹಿಡಿದು ಸೂಚನೆ ನೀಡಬಲ್ಲುವು.ಡ್ಯುಬುಕ್ ನಗರದ ಜನಸಂಖ್ಯೆ ಎಂಭತ್ತು ಸಾವಿರ.ಇಲ್ಲಿ ಐಬಿಎಂ ಕಂಪೆನಿಯ ಘಟಕವೊಂದು ಕೆಲಸ ಮಾಡುತ್ತಿದೆ.ಜತೆಗೆ ಇಲ್ಲಿನ ಆಡಳಿತ ಇ-ಆಡಳಿತದ ಬಗ್ಗೆ ಉತ್ಸಾಹ ಹೊಂದಿರುವುದು,ಇಲ್ಲಿ ಸ್ಮಾರ್ಟ್ ಸಿಟಿ ಅನುಷ್ಠಾನಕ್ಕೆ ತೊಡಗಲು ಮುಖ್ಯ ಕಾರಣ.
----------------------------------------------------------------------
ಮಳೆನೀರು ಇಂಗಿಸಿ
ಮಳೆನೀರನ್ನು ಇಂಗಿಸುವುದು ಹೇಗೆ?ಚಾವಣಿಯಲ್ಲಿ ಸಂಗ್ರಹವಾದ ನೀರನ್ನು ನೇರವಾಗಿ ಬಳಸಬಹುದೇ?ನಗರಗಳಿಗೆ ಸೂಕ್ತವಾದ ಮಳೆಕೊಯ್ಲು ವಿಧಾನ ಯಾವುದು?ಇಂತಹ ಪ್ರಶ್ನೆಗಳಿಗೆ ಉತ್ತರ ಬೇಕಾಗಿದ್ದರೆ,ಅವನ್ನು ನಿಮ್ಮ ಕಂಪ್ಯೂಟರ್ ಕೀಲಿಮಣೆ ಮತ್ತು ಮೌಸ್ ಕ್ಲಿಕ್‌ಗಳ ಮೂಲಕ ಪಡೆಯಲು ಅನುಕೂಲ ಕಲ್ಪಿಸುವ ಅಂತರ್ಜಾಲ ತಾಣ www.rainwaterclub.org ಆಗಿದೆ.ಇಲ್ಲಿ ಕಿರು ವಿಡಿಯೋ ಚಿತ್ರಗಳು,ಬರಹಗಳು ಇತ್ಯಾದಿ ಸಂಪನ್ಮೂಲಗಳು ಲಭ್ಯವಿವೆ.ಮಳೆನೀರನ್ನು ಸಮರ್ಥವಾಗಿ ಬಳಸಿಕೊಂಡ ಯಶಸ್ಸಿನ ಉದಾಹರಣೆಗಳನ್ನು ಇಲ್ಲಿ ಕೊಡಲಾಗಿದೆ.ಶಾಲೆಗಳಲ್ಲಿ,ಅಪಾರ್ಟ್‌ಮೆಂಟ್‌ಗಳಲ್ಲಿ,ಮನೆಗಳಲ್ಲಿ ಮಳೆ ನೀರನ್ನು ಬಳಸಿಕೊಳ್ಳಬಹುದಾದ ವಿವಿಧ ಮಾದರಿಗಳನ್ನು ಪ್ರತ್ಯಕ್ಷವಾಗಿ ಇಲ್ಲಿ ತೋರಿಸಲು ವಿಡಿಯೋ ಕೊಂಡಿಗಳನ್ನು ನೀಡಿದ್ದಾರೆ.
--------------------------------------------------------------------
ಕೃಷಿ ಸಂಪದ ಇ-ಪತ್ರಿಕೆ ಬಿಡುಗಡೆ


ಕೃಷಿಸಂಪದ ಇ-ಪತ್ರಿಕೆಯ ಮೊದಲ ಆವೃತ್ತಿಯನ್ನು ಸೆಪ್ಟೆಂಬರ್ 21ರಂದು ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಬಿಡುಗಡೆಯಾಗಲಿದೆ.ಹಿರಿಯ ಪತ್ರಕರ್ತ ನಾಗೇಶ್ ಹೆಗಡೆಯವರು ಇ-ಪತ್ರಿಕೆಯನ್ನು ಬಿಡುಗಡೆ ಮಾಡಲಿದ್ದಾರೆ.ಅಡ್ಡೂರು ಕೃಷ್ಣರಾವ್ ಅವರು ಕೃಷಿರಂಗದ ಪಲ್ಲಟಗಳು ಎಂಬ ವಿಷಯದ ಬಗ್ಗೆ ಮಾತನಾಡಲಿದ್ದಾರೆ."ಕೃಷಿ,ಮಾಹಿತಿ ತಂತ್ರಜ್ಞಾನ ಮತ್ತು ನಾವು" ಎಂಬ ಬಗ್ಗೆ ಸಂವಾದವೂ ನಡೆಯಲಿದೆ.
---------------------------------------------------------------------
ಮಾತಾಡಲಾಗದವರಿಗೆ ಧ್ವನಿಯಾಗುವ ಐ-ಪೋನ್
ಡೌನ್‌ಸಿಂಡ್ರೋಮ್,ಬಾಯಿ ಮತ್ತು ಗಂಟಲಿನ ಕ್ಷೀಣತೆ ಉಂಟು ಮಾಡುವ ಕಾಯಿಲೆಗಳಿಂದ ಬಳಲುವವರಿಗೆ ತಮ್ಮ ಮನಸ್ಸಿನಲ್ಲಿದ್ದುದ್ದನ್ನು ಹೇಳಲು ಕಷ್ಟವಾಗುತ್ತದೆ.ಅವರು ಟೈಪಿಸಿದ್ದನ್ನು ಹೇಳುವ ಸಾಧನಗಳು ಸಿಗುತ್ತವೆ.ಆದರಿವು ದುಬಾರಿಯಾಗಿವೆ.ಐದರಿಂದ ಹತ್ತು ಸಾವಿರ ಡಾಲರುಗಳ ಬೆಲೆಯ ಇವುಗಳನ್ನು ಖರೀದಿಸುವುದು ಸಾಮಾನ್ಯರಿಗೆ ಸಾಧ್ಯವಾಗದು.ಈಗ ಐ_ಫೋನ್ ಮತ್ತು ನೆಟ್‌ಬುಕ್‌ಗಳಲ್ಲಿ ಸೂಕ್ತ ಲಿಪಿಯಿಂದ ಧ್ವನಿ ಹೊರಡಿಸುವ ತಂತ್ರಾಂಶಗಳನ್ನು ಅನುಸ್ಥಾಪಿಸಿ,ಇದೇ ಕಾರ್ಯಕ್ಕೆ ಬಳಸಿಕೊಳ್ಳುವುದು ಅಗ್ಗವಾಗುತ್ತದೆ.ಐನೂರು ಡಾಲರಿಗೆ ದೊರಕುವ ಐಫೋನ್ ಅಥವಾ ನೆಟ್‌ಬುಕ್ ಸಾಕಷ್ಟು ಸಮರ್ಥವಾಗಿ ಧ್ವನಿ ಮೂಡಿಸಲು ಬಳಕೆ ಮಾಡಬಹುದು.ಇವುಗಳು ಮಕ್ಕಳಿಗೆ ಮಾತ್ರ ಅಷ್ಟೊಂದು ಹೊಂದಾಣಿಕೆ ಆಗವು.ಮಕ್ಕಳು ಸಾಧನಗಳನ್ನು ಸರಿಯಾಗಿ ಹಿಡಿದುಕೊಳ್ಳದೆ,ಅವನ್ನು ಬೀಳಿಸಬಹುದು. ವಿಶೇಷ ಸಾಧನಗಳು ಪದೇ ಪದೇ ಬಿದ್ದರೂ ಹಾನಿಯಾಗದ ಹಾಗೆ ರಚಿತವಾಗಿರುತ್ತವೆ.ಆದರೆ ಐಪೋನ್ ಅಥವಾ ನೆಟ್‌ಬುಕ್ ಬಳಸುವಾಗ ಬಹಳ ಜಾಗರೂಕತೆ ಅಗತ್ಯ.
-----------------------------------------------------------------------udayavani
*ಅಶೋಕ್‌ಕುಮಾರ್ ಎ

Monday, September 14, 2009

ಶುದ್ಧ ನೀರು ಕೊಡುವ ಸ್ಲಿಂಗ್‌ಶಾಟ್

ಶುದ್ಧ ನೀರು ಕೊಡುವ ಸ್ಲಿಂಗ್‌ಶಾಟ್

ಶುದ್ಧ ಕುಡಿಯುವ ನೀರು ಜಗತ್ತಿನ ಮಹಾ ತಲೆನೋವಾಗುತ್ತಿರುವುದು ಸ್ಪಷ್ಟ. ಜಗತ್ತಿನ ಹಿಂದುಳಿದ ಮತ್ತು ಮುಂದುವರಿಯುತ್ತಿರುವ ದೇಶಗಳ ಹಳ್ಳಿಗಳಲ್ಲಂತೂ ನೀರಿಗಾಗಿನ ಪರದಾಟ ನಿರಂತರವಾಗಿರುತ್ತದೆ.ಬರದ ಪರಿಸ್ಥಿತಿಯಿಂದ ನೀರಿಗಾಗಿ ಹಾಹಾಕಾರ ಹೆಚ್ಚುತ್ತದೆ. ಈ ಪರಿಸ್ಥಿತಿ ತಪ್ಪಿಸಲು ಸಹಾಯ ಮಾಡುವ ಸ್ಲಿಂಗ್‌ಶಾಟ್ ಎನ್ನುವ ಸಾಧನವನ್ನು ಡೀನ್ ಕಾಮನ್ ಎನ್ನುವ ಸಂಶೋಧಕ ಮಾಡಿದ್ದಾರೆ. ನೀರಾವಿಯನ್ನು ಒತ್ತಡಕ್ಕೊಳಪಡಿಸಿ, ಭಟ್ಟಿ ಇಳಿಸಿ, ನೀರನ್ನು ಶುದ್ಧ ಮಾಡುವ ತಂತ್ರವನ್ನು ಇದರಲ್ಲಿ ಬಳಸಲಾಗಿದೆ.ಕೆಸರು ನೀರು,ಸಮುದ್ರದ ನೀರು ಅಥವಾ ಯಾವುದೇ ಗುಣಮಟ್ಟದ ನೀರನ್ನೂ ಶುದ್ಧ ನೀರಾಗಿ ಪರಿವರ್ತಿಸಲು ಸಾಧ್ಯ. ಸಾಧನದಲ್ಲಿ ಎರಡು ಪಾತ್ರೆಗಳಿದ್ದು,ಒಂದರಲ್ಲಿ ಅಶುದ್ಧ ನೀರಿನದ್ದಾಗಿದ್ದರೆ, ಇನ್ನೊಂದರಲ್ಲಿ ಶುದ್ಧ ನೀರು ಸಂಗ್ರಹವಾಗುತ್ತದೆ.ಈ ಸಾಧನ ಕೆಲಸ ಮಾಡಲು ವಿದ್ಯುತ್ ಬೇಕಾದರೂ, ಸಾಮಾನ್ಯ ವಿಧಾನದಿಂದ ಭಟ್ಟಿ ಇಳಿಸಿದರೆ ಬೇಕಾದ್ದಕ್ಕಿಂತ ಅತಿ ಕಡಿಮೆ ವಿದ್ಯುತ್ ಸಾಕಾಗುತ್ತದೆ.ಕೂದಲು ಒಣಗಿಸುವ ಸಾಧನ ಕೆಲಸ ಮಾಡಲು ಬೇಕಾಗುವ ವಿದ್ಯುಚ್ಛಕ್ತಿಯನ್ನಿದು ಬಳಸುತ್ತದೆ.ನೂರು ಜನರಿಗೆ ಬೇಕಾಗುವಷ್ಟು ನೀರು ಒದಗಿಸುವ ಸಾಮರ್ಥ್ಯ ಸಾಧನಕ್ಕಿದೆ.ಇದರ ಬೆಲೆ ಈಗ ಬಹಳ ಜಾಸ್ತಿಯಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಉತ್ಪಾದಿಸಿ, ಇದರ ಬೆಲೆಯನ್ನು ಎರಡುಸಾವಿರ ಡಾಲರಿಗೆ ಇಳಿಸುವುದು ಕಾಮನ್ ಅವರ ಬಯಕೆ. ಸದ್ಯದ ಪರಿಸ್ಥಿತಿ ಹೇಗಿದೆಯೆಂದರೆ, ಜಗತ್ತಿನಲ್ಲಿ ಮೂರೂವರೆ ದಶಲಕ್ಷ ಜನ ನೀರಿನಿಂದ ಬರುವ ರೋಗಗಳಿಗೆ ಬಲಿಯಾಗುತ್ತಾರೆ.
----------------------------------------------------------------------------
ಗೂಗಲ್ ಹೊಸ ಹಾದಿ

ಗೂಗಲ್ ಕಂಪೆನಿಯು ಅಂತರ್ಜಾಲ ಶೋಧ, ಕಂಪ್ಯೂಟರ್ ಜಗತ್ತಿನಿಂದ ಹೊರ ಬರಲು ಪ್ರಯತ್ನಿಸುತ್ತಿದೆ.ಸೌರಶಕ್ತಿಯನ್ನು ಬಳಸುವ ನವೀನ ತಾಂತ್ರಿಕೆತೆಯನ್ನು ಅಗ್ಗದ ದರದಲ್ಲಿ ತರುವುದೂ ಅದರ ಪ್ರಯತ್ನಗಳಲ್ಲಿ ಸೇರಿದೆ. ಸೂರ್ಯನತ್ತ ಮುಖ ಮಾಡಿದ ಕನ್ನಡಿಗಳನ್ನು ಬಳಸಿ,ವಿದ್ಯುತ್ ಉತ್ಪಾದಿಸುವ ತಂತ್ರಜ್ಞಾನವನ್ನು ಕಡಿಮೆ ಖರ್ಚಿನಲ್ಲಿ ಸ್ಥಾಪಿಸಲು ಅನುವು ಮಾಡುವ ತಾಂತ್ರಿಕತೆಯ ಅಭಿವೃದ್ಧಿಗಾಗಿ ಗೂಗಲ್ ಪ್ರಯತ್ನ ಸಾಗುತ್ತಿದೆ.ಸೌರಶಕ್ತಿ ಆಧಾರಿತ ಉಷ್ಣವಿದ್ಯುತ್ ಸ್ಥಾವರ ಸ್ಥಾಪನೆ ಗೂಗಲ್ ಗುರಿ.ಸೌರಶಕ್ತಿ ಬಳಸಿ,ಆವಿ ಉತ್ಪಾದಿಸಿ, ಟರ್ಬೈನ್ ನಡೆಸಿ ವಿದ್ಯುತ್ ಉತ್ಪಾದನೆ ಮಾಡುವುದೇ ಸೌರ ಶಕ್ತಿ ಆಧಾರಿತ ಉಷ್ಣ ವಿದ್ಯುತ್ ಸ್ಥಾವರದ ಯೋಜನೆ.ಗ್ಯಾಸ್ ಟರ್ಬೈನನ್ನು ಅನಿಲದ ಬದಲು ಸೌರಶಕ್ತಿಯಿಂದ ನಡೆಸಲೂ ಗೂಗಲ್ ತಂತ್ರಜ್ಞಾನ ಅಭಿವೃದ್ಧಿ ಪಡಿಸಲು ಪ್ರಯತ್ನಿಸುತ್ತಿದೆ.ಇನ್ನೂರೈವತು ಮೆಗಾವ್ಯಾಟ್ ವಿದ್ಯುಚ್ಛಕ್ತಿಯನ್ನು ಆರುನೂರು ದಶಲಕ್ಷದಿಂದ ಒಂದು ಬಿಲಿಯನ್ ಡಾಲರು ಹೂಡಿಕೆಯ ಮೂಲಕ ಉತ್ಪಾದಿಸುವುದು ಸಾಧ್ಯವಾಗಿಸಬೇಕೆನ್ನುವುದು ಗೂಗಲ್ ಕಂಪೆನಿಯ ಲೆಕಾಚಾರ.
---------------------------------------
ಟ್ವಿಟ್ಸ್ ಸ್ವಾಮ್ಯ ಯಾರಿಗೆ?
ಟ್ವಿಟರ್ ಮೈಕ್ರೋಬ್ಲಾಗಿಂಗ್‌ಗೆ ಅವಕಾಶ ನೀಡುವ ಅಂತರ್ಜಾಲ ತಾಣ ಎಂದು ಅರಿಯದವರು ಈಗ ವಿರಳ.ಈ ಕಿರು ಸಂದೇಶಗಳು ಬಳಕೆದಾರನು ಸದ್ಯ ಏನು ಮಾಡುತ್ತಿರುವನು ಎನ್ನುವುದನ್ನು ಸೂಚಿಸಬೇಕೆನ್ನುವುದು ಸಾಮಾನ್ಯ ನಿರೀಕ್ಷೆ. ಆದರೆ ವಕ್ರತುಂಡೋಕ್ತಿಗಳು ಟ್ವಿಟರಿನಲ್ಲಿ ಹರಿದಾಡುವುದು ಸಾಮಾನ್ಯ. ಈ ಕಿರುಬರಹಗಳ ಹಕ್ಕುಸ್ವಾಮ್ಯ ಯಾರದ್ದು-ಬರೆದವನದ್ದೇ ಅಲ್ಲ ಟ್ವಿಟರ್ ತಾಣದ್ದೇ ಎನ್ನುವ ಪ್ರಶ್ನೆ ಎದ್ದಿದೆ. ಟ್ವಿಟರ್ ತಾಣ ಇಂತಹ ಟ್ವಿಟ್ಸ್‌ಗಳು ಬರಹಗಾರನದ್ದೇ ಆದರೂ,ಅವನ್ನು ಬಳಸಲು,ಪ್ರಕಟಿಸಲು ತನಗೂ ಹಕ್ಕಿದೆ ಎಂದು ಪ್ರತಿಪಾದಿಸಿದೆ. ಪುಸ್ತಕರೂಪದಲ್ಲಿ ಪ್ರಕಟಿಸಲು ತಾಣಕ್ಕೆ ಮಾತ್ರ ಹಕ್ಕಿದೆ ಎಂದು ಅದು ಹೇಳಿಕೊಂಡಿದೆ. ಬಳಕೆದಾರರು ಇದನ್ನು ಒಪ್ಪುವರೇ ಎನ್ನುವುದು ಕುತೂಹಲದ ವಿಷಯ.
ಇದೇ ವೇಳೆಗೆ ತಾಣವು ಟ್ವಿಟ್ ಸಂದೇಶದ ಜತೆ ಜಾಹೀರಾತನ್ನು ಪ್ರಕಟಿಸಿ,ತನ್ನ ಆದಾಯ ಹೆಚ್ಚಿಸಿಕೊಳ್ಳಲು ಯೋಜಿಸಿದೆ.ಈಗ ಟ್ವಿಟರ್ ತಾಣದಲ್ಲಿ ಜಾಹೀರಾತು ಹಾವಳಿ ಇಲ್ಲ. ಇದರ ನೇರ ಪರಿಣಾಮ ಕಂಪೆನಿಯ ಆರ್ಥಿಕತೆ ಮೇಲೆ ಆಗಿದೆ.ತಿಂಗಳಿಗೆ ನಲುವತ್ತೈದು ದಶಲಕ್ಷ ಹೊಸ ಬಳಕೆದಾರರು ಬಂದರೂ,ಕಂಪೆನಿ ಲಾಭದಲ್ಲಿ ಇಲ್ಲ.ಇಂತಹ ಉಚಿತ ಸೇವೆಗೆ ಜಾಹೀರಾತು ಒಂದೇ ಪರಿಹಾರ. ಇಷ್ಟು ದೊಡ್ದ ಸಂಖ್ಯೆಯ ಬಳಕೆದಾರರು ಇದ್ದರೂ, ಅದರ ಪ್ರಯೋಜನ ಪಡೆಯಲು ಕಂಪೆನಿಗೆ ಸಾಧ್ಯವಾಗಿಲ್ಲ. ಬಳಕೆದಾರರಿಗೆ ಹೆಚ್ಚಿನ ಸೌಲಭ್ಯ ನೀಡಲು ಅದು ಮಾಡಬೇಕಿರುವ ಖರ್ಚು ಏರುತ್ತಿದೆ. ಆದರೆ ಆದಾಯ ಹೆಚ್ಚುತ್ತಿಲ್ಲ. ಇನ್ನು ಸಂದೇಶದ ಸುತ್ತಲಿನ ಖಾಲಿ ಜಾಗೆಯಲ್ಲಿ ಜಾಹೀರಾತು ಆರಂಭವಾದರೆ,ಬಳಕೆದಾರರಿಗೆ ಕಿರಿಕಿರಿ ತಪ್ಪಿದ್ದಲ್ಲ.ಬಳಕೆದಾರರು ಜಾಹೀರಾತು ಇಷ್ಟಪಡರು-ಆದರೆ ಉಚಿತ ಸೇವೆ ಬಯಸುವ ಅವರುಗಳು ಇದನ್ನು ಅನುಭವಿಸದೆ ಅನ್ಯ ಮಾರ್ಗವಿದೆಯೇ?
-------------------------------------------------------------------------
ಫೇಸ್‌ಬುಕ್:ಸರಳ ತಾಣವೂ ಲಭ್ಯ

ಇತ್ತೀಚೆಗೆ ಪೇಸ್‌ಬುಕ್ ಸುದ್ದಿಯಾಗಲು ಪ್ರಧಾನಿಯೂ ಕಾರಣರಾದರು.ಫೇಸ್‌ಬುಕ್ ತಾಣದಲ್ಲಿ ಪ್ರಧಾನಿ ಸಿಂಗ್ ಕೂಡಾ ಖಾತೆ ಹೊಂದಿರುವರೇ ಎಂಬ ಪ್ರಶ್ನೆ ಎದ್ದಿತ್ತು. ಸಿಂಗ್ ಅಂತರ್ಜಾಲದ ಬಗ್ಗೆ ಬಹಳ ಉತ್ಸಾಹ ಹೊಂದಿಲ್ಲದ್ದೇ ಇದ್ದರೂ ಅವರ ಹೆಸರಿನ ಖಾತೆಯು ಪೇಸ್‌ಬುಕ್ಕಿನಲ್ಲಿದೆ. ಅದನ್ನು ಆಗಿಂದ್ಯಾಗ್ಯೆ ನವೀಕರಿಸಲಾಗುತ್ತಿದೆ ಕೂಡಾ. ಆದರೆ ಹೀಗೆ ಮಾಡುವವರು ಯಾರೆನ್ನುವುದನ್ನು ಯಾರೂ ಖಚಿತವಾಗಿ ಹೇಳುವ ಸ್ಥಿತಿಯಲ್ಲಿಲ್ಲ.ಅವರ ಪುಟದಲ್ಲಿ ಇರುವ ಮಾಹಿತಿಗಳು ನಿಖರವಾಗಿದ್ದು,ಅವರೇ ಬಳಸುತ್ತರೇನೋ ಎನ್ನುವ ಭ್ರಮೆ ಹುಟ್ಟಿಸುವುದಂತೂ ಸತ್ಯ.
ಫೇಸ್‌ಬುಕ್‌ನ ಸರಳ ಆವೃತ್ತಿಯನ್ನೂ ಇದೀಗ ಲಭ್ಯವಾಗಿಸಲಾಗಿದೆ. ಈ ತಾಣವು ಕಡಿಮೆ ಬ್ಯಾಂಡ್‌ವಿಡ್ತ್ ಬಳಕೆದಾರ ಅನುಕೂಲಕ್ಕಾಗಿ ರಚಿತವಾದದ್ದು.ಈ ಆವೃತ್ತಿ ಸೀಮಿತ ಅವಕಾಶಗಳನ್ನು ಮಾತ್ರಾ ಒದಗಿಸುತ್ತದೆ.ಟ್ವಿಟರ್ ತಾಣವನ್ನು ಹೋಲುವಂತೆ ಇದನ್ನು ರಚಿಸಲಾಗಿದೆ.ಸಾಮಾನ್ಯವಾದ ಫೇಸ್‌ಬುಕ್ ಪುಟದಲ್ಲಿ ಹಲವು ಆಟಗಳು ಲಭ್ಯವಿದ್ದು,ಬಳಕೆದಾರಿಗೆ ಅಪರಿಮಿತ ಮನರಂಜನೆ ಪಡೆಯಲು ಅವಕಾಶವಿದೆ.
-----------------------------------------------------------------------------
ಸಂಪದ ತಾಣ ನವೀಕರಣ
ಅಂತರ್ಜಾಲ ತಾಣಗಳಿಗೆ ಹೆಚ್ಚು ಬಳಕೆದಾರರೂ ತಲೆನೋವು ತರುವುದಿದೆ. ಹೆಚ್ಚಿನ ಸಂಚಾರ ನಿಭಾಯಿಸಲು,ಅಧಿಕ ಸಾಮರ್ಥ್ಯದ ಸರ್ವರ್‌ಗಳು ಬೇಕು.ಕನ್ನಡದ ಜನಪ್ರಿಯ ತಾಣ ಸಂಪದ.ನೆಟ್‌ಗೂ ಇದೇ ಸಮಸ್ಯೆ ಕಾಡಿತು. ಇದರ ಜತೆಗೆ ತಾಣಕ್ಕೆ ಹೊಸ ರೂಪ ಕೊಡಲು ಪ್ರಯತ್ನಿಸಲಾಗುತ್ತಿದೆ.ಸಿರಿಸಂಪದ ಎಂಬ ಹೊಸ ವಿಭಾಗದ ಜತೆಗೆ,ಈಗಾಗಲೇ ಲಭ್ಯವಿರುವ ಕೃಷಿ ಸಂಪದವನ್ನು ಬಲಪಡಿಸುವ ಯತ್ನ ನಡೆದಿದೆ. ಪರಿಣಾಮ, ಸಂಪದ.ನೆಟ್ ತಾಣ ಸದ್ಯ ಲಭ್ಯವಿಲ್ಲ. ಈ ತಿಂಗಳ ಆರಂಭದಿಂದಲೂ ತಾಣವನ್ನು ನವೀಕರಿಸಿ,ಹೊಸ ಸರ್ವರಿಗೆ ಸ್ಥಳಾಂತರಿಸುವ ಪ್ರಯತ್ನ ನಡೆದಿತ್ತು.ಎಲ್ಲವೂ ಎಣಿಕೆಯಂತೆ ನಡೆದರೆ, ಈ ಬರಹ ಪ್ರಕಟವಾಗುವ ವೇಳೆ ನವೀಕೃತ ಸಂಪದ saMpada.net ತಾಣದಲ್ಲಿ ಲಭ್ಯವಿರಬೇಕು.
udayavani
 
*ಅಶೋಕ್‌ಕುಮಾರ್ ಎ

Monday, September 07, 2009

ಅಂತರ್ಜಾಲಕ್ಕೆ ನಲುವತ್ತು: ಈಗದು ಕೆಲವರಿಗೆ ವ್ಯಸನ

ಅಂತರ್ಜಾಲಕ್ಕೆ ನಲುವತ್ತು: ಈಗದು ಕೆಲವರಿಗೆ ವ್ಯಸನ
1969ರ ಸೆಪ್ಟೆಂಬರ್ ಎರಡರಂದು ಎರಡು ಕಂಪ್ಯೂಟರುಗಳ ನಡುವೆ ಸಂಪರ್ಕ ಸಾಧಿಸುವ ಮೂಲಕ ಮೊದಲ ಕಂಪ್ಯೂಟರ್ ಜಾಲ ಏರ್ಪಟ್ಟಿತು. ಆ ಘಟನೆಯೇ ಅಂತರ್ಜಾಲವೆಂಬ ಮಹಾಜಾಲದ ನಿರ್ಮಾಣಕ್ಕೆ ಹೇತುವಾಯಿತು ಎನ್ನುವುದನ್ನು ನಂಬುವುದು ಕಷ್ಟ.ಆರಂಭದಲ್ಲಿ ಅಂತರ್ಜಾಲ ಲಿಪಿಮಯವಾಗಿತ್ತು.ಬರುಬರುತ್ತಾ ಅದು ಚಿತ್ರಮಯವಾಗುತ್ತಿದೆ. ಮುಂದಿನ ದಿನಗಳಲ್ಲಿ ಅಂತರ್ಜಾಲದಲ್ಲಿ ಮೂರು ಆಯಾಮಗಳ ಅನುಭವ ಸಿಗಬೇಕು ಎನ್ನುವುದು ಸಂಶೋಧಕರ ಹಂಬಲ.ಅಲ್ಲದೆ ಜಗತ್ತಿನ ಪ್ರತಿ ಸಾಧನವನ್ನೂ ಬೇಕೆಂದಲ್ಲಿ ಅಂತರ್ಜಾಲಕ್ಕೆ ಸಂಪರ್ಕ ಕಲ್ಪಿಸಿ,ಅವುಗಳನ್ನು ನಿಯಂತ್ರಿಸಲು ಸಾಧ್ಯವಾಗಬೇಕೆನ್ನುವುದು ಅವರ ಆಸೆ.ಅದು ಸಾಧ್ಯವಾಗಲು ಅಂತರ್ಜಾಲವನ್ನು ಸದ್ಯದ ಐಪಿ4ರಿಂದ ಐಪಿ6 ಶಿಷ್ಟಾಚಾರಕ್ಕೇರಿಸುವ ಅಗತ್ಯ ಇದೆ.
ಅಂತರ್ಜಾಲಕ್ಕೆ ನಲುವತ್ತು ವರ್ಷವಾಗಿರುವ ಈ ಸಂದರ್ಭದಲ್ಲಿ ಅದು ಜನರಿಗೆ ಒಳಿತು ಹಾಗೂ ಕೆಡುಕು ಎರಡನ್ನೂ ಧಾರಾಳವಾಗಿ ನೀಡಿದೆ.ಇಡೀ ದಿನ ಅಂತರ್ಜಾಲದಲ್ಲೇ ಮುಳುಗಿ,ಮಿಥ್ಯಾಪ್ರಪಂಚದ ಭ್ರಮೆಯಲ್ಲೇ ತೇಲುವ ಅದೆಷ್ಟೋ ಜನರಿಗೆ ಅಂತರ್ಜಾಲವೇ ವ್ಯಸನವಾಗಿರುವುದು ಸುಳ್ಳಲ್ಲ.ಇಂತಹ ವ್ಯಸನಕ್ಕೆ ಪರಿಹಾರವನ್ನೂ ಅಂತರ್ಜಾಲದಲ್ಲೇ ಲಭ್ಯವಾಗಿಸಲಾಗುತ್ತಿರುವುದು ವಿಚಿತ್ರವಾದರೂ ನಿಜ.ಅಂತರ್ಜಾಲ ವ್ಯಸನದಿಂದ ಹೊರಬರಲು ಮಾರ್ಗದರ್ಶನವೂ ಅಂತರ್ಜಾಲದಲ್ಲೇ ಲಭ್ಯವಿದೆ! ಏಪಲ್ ಕಂಪ್ಯೂಟರುಗಳಲ್ಲಿ, ಅಂತರ್ಜಾಲ ಸಂಪರ್ಕವನ್ನು ಕಡಿದು, ವ್ಯಸನಿಗಳನ್ನು ಎಚ್ಚರಿಸುವ ಫ್ರೀಡಮ್ ಎನ್ನುವ ತಂತ್ರಾಂಶವನ್ನು ಅನುಸ್ಥಾಪಿಸಬಹುದು.ಮಿಂಚಂಚೆ ಕಳುಹಿಸುವುದು,ಮಾರುತ್ತರ ಬಂದಿದೆಯೇ ಎಂದು ಪದೇ ಪದೇ ಪರಿಶೀಲಿಸುವುದು ಇವನ್ನು ತಪ್ಪಿಸಲು ಸಂದೇಶಗಳನ್ನು ಕಳುಹಿಸದೆ ತಡೆ ಹಿಡಿಯುವ ಸೌಕರ್ಯ ಜಿಮೇಲ್ ಮಿಂಚಂಚೆ ಸೇವೆ ಒದಗಿಸುತ್ತದೆ.
---------------------------------------------------------------
ಬಿಂಗ್ ಮತ್ತು ಪಿಂಗ್
ಬಿಂಗ್ ಎನ್ನುವುದು ಮೈಕ್ರೋಸಾಫ್ಟ್ ಕಂಪೆನಿಯ ಹೊಸ ಶೋಧ ಸೇವೆ. ಯಾವುದೇ ಪದವನ್ನು ನೀಡಿ ಶೋಧ ನಡೆಸಿದಾಗ ಸಿಗುವ ಫಲಿತಾಂಶವನ್ನು ಟ್ವಿಟರ್ ಅಥವಾ ಫೇಸ್‌ಬುಕ್ ಅಂತಹ ತಮ್ಮ ಖಾತೆಗಳಲ್ಲಿ ನೀಡಿ,ತಮ್ಮ ಗೆಳೆಯರಿಗೆ ತಮ್ಮ ಶೋಧದ ಫಲಿತಾಂಶವನ್ನು ಸುಲಭವಾಗಿ ಒದಗಿಸುವುದಲ್ಲದೆ,ತಮ್ಮ ಇಷ್ಟಾನಿಷ್ಟಗಳ ಬಗೆಗೆ ಅವರಿಗೆ ತಿಳಿಸುವುದನ್ನು ಸಾಧ್ಯವಾಗಿಸುವುದು "ಬಿಂಗ್ ಮತ್ತು ಪಿಂಗ್" ಸೇವೆಯ ವೈಖರಿ. ಈಗಿನ್ನೂ ಪರೀಕ್ಷಾರ್ಥ ಹಂತದಲ್ಲಿರುವ ಸೇವೆಯು ತಡವಿಲ್ಲದೆ ಜನರಿಗೆ ಸಿಗಲಿದೆ ಎಂದು ಕಂಪೆನಿಯ ಮೂಲಗಳು ಪ್ರಕಟಿಸಿವೆ.
-------------------------------------------------------------
ಮೊಬೈಲ್ ಮೂಲಕವೇ ಅಟೋ ಹೀಡಿಯಿರಿ!
ಅಟೋಗಳಿಗೆ ಕೈಯಡ್ಡ ಹಿಡಿದು, ತಮಗೆ ಹೋಗ ಬೇಕಾಗಿರುವೆಡೆ ಬರಲಾತ ನಿರಾಕರಿಸುವ ಅನುಭವ ನಗರಗಳಲ್ಲಿ ಎಲ್ಲರಿಗೂ ಆಗಿಯೇ ಇರುತ್ತದೆ. ಇದನ್ನು ತಡೆಯಲು ಸಾಧ್ಯವಾಗುವ ತಂತ್ರಜ್ಞಾನ ಜರ್ಮನಿಯಲ್ಲಿ ಪ್ರಯೋಗವಾಗುತ್ತಿದೆ. ಅಲ್ಲಿ ಅದು ಟ್ಯಾಕ್ಸಿಗಳಲ್ಲಿ ಪ್ರಯೋಗವಾಗುತ್ತಿದೆ.ಖಾಲಿ ಟ್ಯಾಕ್ಸಿ ಚಲಾಯಿಸುತ್ತಿರುವ ಚಾಲಕ,ತಾನು ಹೋಗುತ್ತಿರುವ ಸ್ಥಳವನ್ನು ಕಂಪ್ಯೂಟರ್ ಕೇಂದ್ರಕ್ಕೆ ಎಸೆಮ್ಮೆಸ್ ಮಾಡಿ ತಿಳಿಸುತ್ತಾನೆ. ಗ್ರಾಹಕರೂ ತಾವು ಹೋಗಬೇಕಿರುವ ಸ್ಥಳವನ್ನು ಇಲ್ಲಿ ದಾಖಲಿಸುತ್ತಾರೆ.ಇದಕ್ಕೆ ಮೊಬೈಲ್ ಬಳಕೆಯಾಗುತ್ತದೆ ಎಂದು ಬೇರೆ ಹೇಳಬೇಕಿಲ್ಲವಷ್ಟೇ. ಅಂತಹ ಗ್ರಾಹಕರ ಮೊಬೈಲ್ ಕರೆಯ ಮೂಲಕ ಅವರ ಸ್ಥಾನ ತಿಳಿದು,ಅಂತಹ ಸ್ಥಳಕ್ಕೆ ಸಮೀಪವಿರುವ ಟ್ಯಾಕ್ಸಿ ಚಾಲಕನಿಗೆ ಸಂದೇಶ ರವಾನೆಯಾಗುತ್ತದೆ. ಚಾಲಕ ಬಯಸಿದಲ್ಲಿ ಗ್ರಾಹಕನನ್ನು ಹತ್ತಿಸಿಕೊಳ್ಳಬಹುದು. ಬೇಡದಿದ್ದರೆ,ನಿಲ್ಲಿಸುವ ಅಗತ್ಯವೇ ಇಲ್ಲ.ಈ ಸೇವೆಗೆ ಓಪನ್ ರೈಡ್ ಎಂದು ಹೆಸರಿಸಲಾಗಿದೆ.
---------------------------------------------------
ಪ್ರಜಾವಾಣಿ ಅಂತರ್ಜಾಲ ತಾಣ ಈಗ ಯುನಿಕೋಡಿನಲ್ಲಿ
ಇದುವರೆಗೆ ತನ್ನದೇ ಆದ ಪ್ರತ್ಯೇಕ ಅಕ್ಷರ ವಿನ್ಯಾಸ ಹೊಂದಿ ಅಂತರ್ಜಾಲ ತಾಣದಲ್ಲಿ ಲಭ್ಯವಿದ್ದ "ಪ್ರಜಾವಾಣಿ" ಪತ್ರಿಕೆಯಿದೀಗ ತನ್ನ ತಾಣವನ್ನು ಯುನಿಕೋಡಿನಲ್ಲಿ ನೀಡಲಾರಂಭಿಸಿದೆ. ಇದರಿಂದ ಯುನಿಕೋಡ್ ಬೆಂಬಲವಿರುವ ಆಧುನಿಕ ಕಾರ್ಯಾಚರಣೆ ವ್ಯವಸ್ಥೆಗಳಿದ್ದಲ್ಲಿ ತಾಣವು ಸಮಸ್ಯೆಯಿಲ್ಲದೆ ಸ್ಪಷ್ಟವಾಗಿ ಕನ್ನಡ ಅಕ್ಷರಗಳು ಗೋಚರಿಸುತ್ತವೆ. "ಉದಯವಾಣಿ"ಯ ಸಹಿತ ಹೆಚ್ಚಿನ ಪತ್ರಿಕೆಗಳು ತಮ್ಮ ಇ-ಪೇಪರನ್ನು ಒದಗಿಸಿ, ಈ ಫಾಂಟ್ ಸಮಸ್ಯೆಗೆ ಪರಿಹಾರ ಒದಗಿಸಲು ಪ್ರಯತ್ನಿಸುತ್ತಿವೆ. ಆದರೆ ಹಾಗೆ ಮಾಡಿದರೆ,ಪತ್ರಿಕೆಯ ಬರಹಗಳನ್ನು ಶೋಧಿಸಲು ಸಾಧ್ಯವಾಗದು. ಆದರೆ ಯುನಿಕೋಡಿನಲ್ಲಿ ಲಭ್ಯವಿರುವ ಬರಹ,ಸುದ್ದಿಗಳನ್ನು ಗೂಗಲ್ ಅಂತಹ ಸೇವೆಗಳನ್ನು ಬಳಸಿ ಶೋಧಿಸುವುದು ಸಾಧ್ಯವೆನ್ನುವುದು ಧನಾತ್ಮಕ ಅಂಶ. ಪ್ರಜಾವಾಣಿಯ ಪುಟ ನೋಡಲು www.prajaavaani.net ವಿಳಾಸ ಬಳಸಿ.
---------------------------------------------------------
ಇ-ರೀಡರಿನಲ್ಲಿ ಪತ್ರಿಕೆಗಳು
ಹಾರ್ಸ್ಟ್ ಎನ್ನುವುದು ಪತ್ರಿಕೆಗಳ ಸಮೂಹ ಸಂಸ್ಥೆ.ಈ ಸಂಸ್ಥೆಯು ಹದಿನಾರು ದೈನಿಕಗಳನ್ನು ಮತ್ತು ನಲುವತ್ತೊಂಭತ್ತು ವಾರಪತ್ರಿಕೆಗಳನ್ನು ನಡೆಸುತ್ತಿದೆ. ಈಗ ಅದು ತನ್ನ ಪತ್ರಿಕೆಗಳನ್ನು ಓದಲು ಇ-ರೀಡರನ್ನು ಹೊರತರಲು ಯೋಚಿಸಿದೆ. ಇ-ರೀಡರ್ ಪತ್ರಿಕೆಗಳನ್ನು ಓದುವ ಸಾಧನ. ಈ ಸಾಧನವು ಪತ್ರಿಕೆಯ ಆಕಾರವನ್ನು ಹೋಲುತ್ತದೆ. ಮಡಚಲು ಸಾಧ್ಯವಾಗುವಂತೆ ಅದನ್ನು ಪ್ಲಾಸ್ಟಿಕ್ ತರದ ಉತ್ಪನ್ನದಿಂದ ತಯಾರಿಸಲಾಗಿದೆ.ಸದ್ಯ ಕಪ್ಪು-ಬಿಳುಪಿನಲ್ಲಿ ಲಭ್ಯವಿದ್ದರೂ ಮುಂದೆ ವರ್ಣದಲ್ಲೂ ಲಭ್ಯವಾಗಲಿದೆ.ಅಂತರ್ಜಾಲದಿಂದ ಪತ್ರಿಕೆಗಳನ್ನು ಇದಕ್ಕೆ ಡೌನ್‌ಲೋಡ್ ಮಾಡಿಕೊಂಡು ಓದಬಹುದು.ಮುದ್ರಿತ ಪ್ರತಿಗಳನ್ನು ಮೂಲೆಗುಂಪಾಗಿಸುವ ಇ-ರೀಡರ್‌ಗಳ ಬಳಕೆ ಪತ್ರಿಕೆಗಳ ಹೊಸ ತಂತ್ರವಾಗುವ ಲಕ್ಷಣಗಳಿವೆ.
--------------------------------------------------
udayavani

*ಅಶೋಕ್‌ಕುಮಾರ್ ಎ
 
googledc7e93ba1a7703ae.html