Monday, October 26, 2009

ಭಾಷೆ ಕಲಿಯಿರಿ,ಕಲಿಸಿರಿ!!

ಭಾಷೆ ಕಲಿಯಿರಿ,ಕಲಿಸಿರಿ!!


ಭಾಷೆ ಕಲಿಕೆಗೆ ಅಂತರ್ಜಾಲದ ಸಮುದಾಯದ ನೆರವು ಸಿಗುತ್ತದೆ.ಯಾವುದೇ ಭಾಷೆಯನ್ನು ಕಲಿಯಲು ಅದರ ಅಪರಿಮಿತ ಬಳಕೆಯೇ ಸುಲಭದ ಹಾದಿ ಎನ್ನುವುದನ್ನು ಒಪ್ಪುತ್ತೀರಾ? ಎಷ್ಟೋ ವೇಳೆ ನಮಗೆ ಭಾಷೆ ಕಲಿಯಲು ಕಲಿಸುವವರಿಲ್ಲದಿರುವುದೂ ಕಾರಣವಾಗಿರುತ್ತದೆ. ಮಾತಾನಾಡುವಾಗ,ಬರೆಯುವಾಗ ತಪ್ಪುಗಳು ಆಗುತ್ತವೆ ಎನ್ನುವ ಹಿಂಜರಿಕೆಯಿಂದಲೂ ನಮಗೆ ಕಲಿಕೆಯಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. www.livemocha.com ಅಂತಹ ತಾಣಗಳು ಉಚಿತವಾಗಿ ಭಾಷೆ ಕಲಿಕೆಗೆ ನೆರವಾಗುತ್ತವೆ.ಕನ್ನಡವೂ ಸೇರಿದಂತೆ ಮೂವತ್ತಕ್ಕೂ ಹೆಚ್ಚು ಭಾಷೆಗಳ ಕಲಿಕೆಗೆ ಇಲ್ಲಿ ನೆರವು ಸಿಗುತ್ತದೆ. ನಿಮಗೆ ಯಾವ ಭಾಷೆ ಕಲಿಯಬೇಕು ಮತ್ತು ಯಾವ ಭಾಷೆಯನ್ನು ಬಲ್ಲಿರಿ ಎಂದು ನೋಂದಾಯಿಸಿಕೊಳ್ಳುವ ವೇಳೆ ತಿಳಿಸಿದರೆ, ನಿಮಗೆ ಬಲ್ಲ ಭಾಷೆಯಲ್ಲಿ ಕಲಿಯಬೇಕಾದ ಭಾಷೆಯಲ್ಲಿ ತಿಳಿಸಬಲ್ಲ ಜನರ ಸಮುದಾಯಕ್ಕೆ ನಿಮ್ಮನ್ನು ಸಂಪಕಿಸಲಾಗುತ್ತದೆ. ನಿಮ್ಮ ಉಚ್ಛಾರವನ್ನು ಈ ಸಮುದಾಯದ ಆನ್‌ಲೈನ್ ಇರುವ ಸದಸ್ಯರು ಆಲಿಸಿ, ಸಲಹೆ ನೀಡುವರು. ನಿಮ್ಮ ಬರವಣಿಗೆಯೂ ಹೀಗೆ ಪ್ರತಿಕ್ರಿಯೆಗಿಟ್ಟಿಸಿಕೊಂಡು,ನಿಮ್ಮ ತಪ್ಪು-ಒಪ್ಪುಗಳು ನಿಮಗೆ ತಿಳಿಯುತ್ತವೆ. ಅದೇ ವೇಳೆ ನೀವೂ ನಿಮಗೆ ತಿಳಿದಿರುವ ಭಾಷೆಯಲ್ಲಿ ಇತರರಿಗೆ ನೆರವಾಗುತ್ತೀರಿ.
-----------------------------------------------------------------
ವಿಂಡೋಸ್7 ಇಲ್ಲವೇ,ಉಬುಂಟು ಇದಯಲ್ಲಾ..?
ವಿಂಡೋಸ್ 7 ಕಳೆದ ಶುಕ್ರವಾರ ಬಿಡುಗಡೆಯಾಯಿತು.ಇದಕ್ಕೆ ಮೊದಲು ವಿಂಡೋಸ್ ವಿಸ್ತಾ ಕಂಪ್ಯೂಟರ್ ಕಾರ್ಯನಿರ್ವಹಣಾ ತಂತ್ರಾಂಶವನ್ನು ಬಿಡುಗಡೆ ಮಾಡಿ,ನಿರೀಕ್ಷಿಸಿದ ಯಶಸ್ಸು ಗಳಿಸಲು ವಿಫಲವಾದ ಮೈಕ್ರೋಸಾಫ್ಟ್ ಕಂಪೆನಿ,ತನ್ನ ಗ್ರಾಹಕರ ವಿಶ್ವಾಸವನ್ನು ಉಳಿಸಿಕೊಳ್ಳಲು, ವಿಂಡೋಸ್ 7 ಯಶಸ್ಸು ಗಳಿಸುವುದು ಅಗತ್ಯವಾಗಿದೆ. ಈ ಸಲ ಮೈಕ್ರೋಸಾಫ್ಟ್ ಕಂಪೆನಿಯು ಯಂತ್ರಾಂಶ ತಯಾರಕರ ಜತೆ ಕೆಲಸ ಮಾಡಿ,ಅವರ ಯಂತ್ರಾಂಶವು ಹೊಸ ವ್ಯವಸ್ಥೆಯಲ್ಲಿ ಸರಾಗವಾಗಿ ಕೆಲಸ ಮಾಡುವಂತೆ,ವಿನ್ಯಾಸಗೊಳಿಸಲು ಶ್ರಮ ತೆಗೆದುಕೊಂಡಿದೆ.ಹಳೆಯ ಆವೃತ್ತಿಗಳಲ್ಲಿ ಕೆಲಸ ಮಾಡುತ್ತಿದ್ದ ಯಂತ್ರಾಂಶಗಳು ಇದರಲ್ಲಿ ಕೆಲಸ ಮಾಡುವಂತೆ ಮಾಡುವ ಆಯ್ಕೆಯನ್ನು ನೀಡಲಾಗಿದೆ.ಅಲ್ಲದೆ ವಿಂಡೋಸ್ 7ನ ಯಂತ್ರಾಂಶ ಅಗತ್ಯ ಮಾಡಲು ಪ್ರಯತ್ನಿಸಲಾಗಿದೆ.ಸಂಸ್ಕಾರಕ 1ಗಿಗಾಹರ್ಟ್ಸ್,ಕನಿಷ್ಠ512ಎಂಬಿ ರಾಮ್(ಒಂದು ಜಿಬಿ ಉತ್ತಮ),16ಜಿಬಿ ಹಾರ‍್ಡ್‌ಡಿಸ್ಕ್ ಅವಕಾಶ ಮತ್ತು ಡೈರೆಕ್ಟ್9 ಗ್ರಾಫಿಕ್ಸ್ ಬೇಕು.ಹೊಸ ಕಾರ್ಯನಿರ್ವಹಣಾ ತಂತ್ರಾಂಶದ ಬೆಲೆ ಸುಮಾರು ಆರು ಸಾವಿರ.ಮೂವತ್ತೆರಡು ಬಿಟ್ ಮತ್ತು ಅರುವತ್ತನಾಲ್ಕು ಬಿಟ್ ಕಂಪ್ಯೂಟರುಗಳಿಗೆ ವಿನ್7 ಸಿಗುತ್ತದೆ.
ಉಳ್ಳವರು ದುಡ್ಡು ತೆತ್ತು ವಿಂಡೋಸ್7 ಖರೀದಿಸ ಬಹುದು,ನಾವೇನು ಮಾಡುವುದು-ಬಡವರಯ್ಯಾ ಎನ್ನುವವರು ಯೋಚಿಸಿಬೇಕಾಗಿಲ್ಲ. ವಿನ್ 7ಗೆ ಎಲ್ಲಾ ವಿಧದಲ್ಲೂ ಸ್ಪರ್ಧೆ ನೀಡಬಲ್ಲ ಲಿನಕ್ಸ್ ಕಾರ್ಯನಿರ್ವಹಣಾ ತಂತ್ರಾಂಶ ಉಬುಂಟು9.10 ಹೊಸ ಆವೃತ್ತಿ ರಾಜ್ಯೋತ್ಸವದ ವೇಳೆ ನಿಮ್ಮ ಬಳಕೆಗೆ ಲಭ್ಯವಿದೆ.ಇದನ್ನು ಉಚಿತವಾಗಿ ಬಳಸಬಹುದು.ಕನ್ನಡದ ಬಳಕೆಯನ್ನೂ ಸರಾಗವಾಗಿಸುವ ಉಬುಂಟು,ಬಳಕೆದಾರಸ್ನೇಹೀ ಗುಣ  ಹೊಂದಿದೆ.ಅಂತರ್ಜಾಲ,ವಿಡಿಯೋ,ಆಡಿಯೋ,ಪದಸಂಸ್ಕರಣೆ ಇವೆಲ್ಲವನ್ನೂ ಸುಗಮವಾಗಿಸುವ ಉಬುಂಟುವನ್ನು ಕಂಪ್ಯೂಟರಿನಲ್ಲಿ ಸ್ಥಾಪಿಸಿಕೊಂಡರೆ ವಿಂಡೋಸ್ ಹಂಗೇ ಬೇಡ.
-----------------------------------------------------------------------
ಲಿನಕ್ಸಾಯಣ


ಲಿನಕ್ಸ್ ಕಂಪ್ಯೂಟರ್ ಕಾರ್ಯನಿರ್ವಹಣ ತಂತ್ರಾಂಶವು ಮುಕ್ತ ಮತ್ತು ಉಚಿತವಾಗಿ ಸಿಗುತ್ತದೆ.ಉಬುಂಟು,ಫೆಡೋರಾ,ಸೂಸಿ,ಮ್ಯಾಂಡ್ರಿವಾ,ಮಿಂಟ್ ಹೀಗೆ ಹಲವು ಲಿನಕ್ಸ್ ತಂತ್ರಾಂಶದ ಹಲವು ಪ್ರಭೇದಗಳು ಲಭ್ಯವಿವೆ.ಆದರೆ ಇವನ್ನು ಬಳಸಲು ಕಂಪ್ಯೂಟರ್‌ಗೆ ಹೊಸಬರಾದವರಿಗೆ ತುಸು ಹಿಂಜರಿಕೆ ಇರುವುದು ಸ್ವಾಭಾವಿಕ.ಅಂತವರಿಗೆ ಸಹಾಯ ಮಾಡಲು,ಅವರ ಅನುಮಾನಗಳನ್ನು ನೀಗಿಸಲು ಇರುವ ತಾಣವೇ ಲಿನಕ್ಸಾಯಣ.ನೆಟ್(http://linuxaayana.net
ಇಲ್ಲಿ ಲಿನಕ್ಸಿನಲ್ಲಿ ಕನ್ನಡ ಬಳಕೆ ಹೇಗೆ,ಅಂತರ್ಜಾಲ ಜಾಲಾಟ,ನಿಸ್ತಂತು ಜಾಲದ ಬಳಕೆಗೆ ಕಂಪ್ಯೂಟರನ್ನು ಸಿದ್ಧಗೊಳಿಸುವುದು ಹೇಗೆ ಮುಂತಾದ ವಿಷಯಗಳ ಬಗೆಗೆ ಬರಹಗಳಿವೆ.ಬರಹಗಳನ್ನು ಸೇರಿಸಲು ಮತ್ತು ತಿದ್ದಲೂ ಅವಕಾಶವಿದೆ.ಓಂಶಿವಪ್ರಕಾಶ್ ಬರೆದಿರುವ ಲಿನಕ್ಸಾಯಣ ಸರಣಿ ಬರಹಗಳು ಇಲ್ಲಿ ಲಭ್ಯವಿರುತ್ತವೆ.ಟ್ವಿಟರಿನಲ್ಲಿಯೂ ಲಿನಕ್ಸಾಯಣದ ಬಗೆಗೆ ಸಂದೇಶಗಳು ಬೇಕಿದ್ದರೆ,twitter.com/linuxaayana ಪುಟವನ್ನು ನೋಡಿ.
------------------------------------------------------------------------
ಕ್ರೈಮ್ ಮ್ಯಾಪ್ ನೀಡುವ ವೆಬ್‌ಸೈಟ್
ಇಂಗ್ಲೆಂಡ್ ಮತ್ತು ವೇಲ್ಸಿನಲ್ಲಿ ಅಪರಾಧ ಪ್ರಕರಣಗಳ ಬಗೆಗೆ ಮಾಹಿತಿ ಒದಗಿಸಲು ಅಂತರ್ಜಾಲ ತಾಣವೊಂದನ್ನು ಸಿದ್ಧಗೊಳಿಸಲಾಗಿದೆ.ತಾಣದಲ್ಲಿ ಕಳ್ಳತನ,ದರೋಡೇ,ಹಿಂಸೆ,ವಾಹನಗಳನ್ನೊಳಗೊಂಡ ಪ್ರಕರಣಗಳು ಮತ್ತು ಸಮಾಜ ಬಾಹಿರ ಚಟುವಟಿಕೆಗಳ ಬಗೆಗೆ ಮಾಹಿತಿಯಿದೆ. ವರ್ತಮಾನದಲ್ಲಿ ನಡೆದ ಪ್ರಕರಣಗಳು,ಹಳೆಯ ಪ್ರಕರಣಗಳ ಬಗೆಯೂ ಅಲ್ಲಿ ನಕಾಶೆ ಮೂಡುತ್ತದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ, ಈಗ ಒಂದು ಪ್ರದೇಶದಲ್ಲಿ ಪ್ರಕರಣಗಳ ಸಂಖ್ಯೆ ಇಳಿದಿವೆಯೋ ಅಲ್ಲ ಹೆಚ್ಚಿವೆಯೋ ಎಂಬುದನ್ನು ಹೋಲಿಸಿನೋಡಲೂ ಸಾಧ್ಯವಾಗುತ್ತದೆ.ಈ ತಾಣ ಎಷ್ಟು ಜನಪ್ರಿಯವಾಗಿದೆ ಎಂದರೆ,ತಾಣವನ್ನು ವೀಕ್ಷಿಸಲು ಬಯಸುವವರ ಸಂಖ್ಯೆ ಸರ್ವರಿನ ಸಾಮರ್ಥ್ಯವನ್ನು ಮೀರ‍ಿ ಇರುವುದು ಸಾಮಾನ್ಯವಾಗಿ ಬಿಟ್ಟಿದೆ.ಇಂಗ್ಲೆಂಡಿನ 43 ಪೊಲೀಸ್ ಬಲಗಳು ಈ ರೀತಿಯ ತಾಣವನ್ನು ನಡೆಸುತ್ತಿವೆ.
---------------------------------------------------------------------------
ಹೊಸ ಸ್ಪರ್ಶಸಂವೇದಿ ಮೌಸ್


ಆಪಲ್ ಕಂಪೆನಿಯು ಗುಂಡಿಗಳಿಲ್ಲದ ಹೊಸ ಸ್ಪರ್ಶಸಂವೇದಿ ಮೌಸನ್ನು ಹೊರ ತಂದಿದೆ. ಈ ಮೌಸ್ ಐಫೋನ್ ಸಾಧನದ ಸ್ಪರ್ಶ ಸಂವೇದಿ ತೆರೆಯ ಸೌಲಭ್ಯಗಳನ್ನು ಕಂಪ್ಯೂಟರಿನಲ್ಲಿ ಪಡೆಯಲು ನೆರವಾಗುತ್ತದೆ. ಸ್ಪರ್ಶಿಸಿದ ಬಗೆಯಿಂದಲೇ ನೋಡುತ್ತಿರುವ ಪುಟದ ಮೇಲ್ಭಾಗ ಅಥವ ಕೆಳಭಾಗದತ್ತ ಸಾಗುವ ಸೌಕರ್ಯ ಇಲ್ಲಿ ಸಿಗುತ್ತದೆ. ಕ್ಲಿಕ್ಕಿಸಿದರೆ,ಬಲ-ಎಡ ಗುಂಡಿಗಳ ಕ್ಲಿಕ್ಕಿಸುವಿಕೆ ಇವೆಲ್ಲವನ್ನೂ ಅದು ಸ್ಪರ್ಶಿಸಿದ ರೀತಿಯಿಂದಲೇ ತಿಳಿದುಕೊಳ್ಳುತ್ತದೆ. ಕ್ಯಾಪಾಸಿಟಿವ್ ಸಂವೇದಕಗಳಿಂದ ಇದನ್ನು ತಯಾರಿಸಲಾಗಿದೆ.ಬ್ಲೂಟೂತ್ ಮೂಲಕ ಇದನ್ನು ಕಂಪ್ಯೂಟರಿಗೆ ನಿಸ್ತಂತು ಮಾಧ್ಯಮದ ಮೂಲಕ ಸಂಪರ್ಕಿಸಲಾಗುತ್ತದೆ. ಆದ್ದರಿಂದ ಕೇಬಲ್ ಮುಕ್ತವಾಗಿರುತ್ತದೆ.ಇದು ಕೆಲಸ ಮಾಡಲು ಆಪಲ್ ಕಂಪ್ಯೂಟರ್ ಮತ್ತು ಲೆಪರ್ಡ್ ಕಂಪ್ಯೂಟರ್ ಕಾರ್ಯನಿರ್ವಹಣಾ ತಂತ್ರಾಂಶ ಬೇಕು. ಹೊಸ ಕಂಪ್ಯೂಟರ್ ಮತ್ತು ಮ್ಯಾಕ್‌ಬುಕ್ ನೋಟ್‌ಬುಕ್‌ಗಳ ಜತೆ ಈ ಮೌಸ್ ಬಳಕೆಗೆ ಸಿಗಲಿದೆ.ಬೆಲೆ ಸುಮಾರು ಎಪ್ಪತ್ತು ಡಾಲರುಗಳು.
-----------------------------------------------------
ನುಕ್ ಎನ್ನುವ ಇ-ಬುಕ್ ರೀಡರ್
ನುಕ್ ಎನ್ನುವುದು ಹೊಸ ಇ-ಬುಕ್ ರೀಡರ್ ಸಾಧನ.ಕಿಂಡ್ಲ್ ಎನ್ನುವ ಸಾಧನದಂತೆಯೇ ಇದು ಪುಸ್ತಕವನ್ನು ಕೈಯಲ್ಲಿ ಹಿಡಿದು ಓದಿದ ಅನುಭವ ನೀಡುವ ಸಾಧನ.ಬ್ಯಾಟರಿಯಿಂದ ಕೆಲಸ ಮಾಡುವ ಕಾರಣ ಇದನ್ನು ಬೇಕೆಂದಲ್ಲಿಗೆ ಒಯ್ಯಬಹುದು.ಬಾರ್ನೆಸ್ ಅಂಡ್ ನೋಬ್ಲ್ ಕಂಪೆನಿಯು ಈ ಸಾಧನವನ್ನು ಮಾರುಕಟ್ಟೆಗೆ ಒದಗಿಸಿದೆ.ಕಂಪೆನಿಯು ಪುಸ್ತಕ ಉದ್ದಿಮೆಯಲ್ಲಿ ತೊಡಗಿಸಿಕೊಂಡಿದ್ದು,ತಾನೇ ಸ್ವತ: ಇ-ಪುಸ್ತಕಗಳನ್ನು ಒದಗಿಸುತ್ತದೆ. ನುಕ್‌ಗೆ ಪುಸ್ತಕಗಳನ್ನು ಅಂಗಡಿಯ ನಿಸ್ತಂತು ಸಂಪರ್ಕದ ಮೂಲಕ ಇಳಿಸಿಕೊಳ್ಳಬಹುದು. ಇಳಿಸಿಕೊಂಡ ಪುಸ್ತಕಗಳನ್ನು ಹದಿನಾಲ್ಕು ದಿನಗಳ ಮಟ್ಟಿಗೆ ಇತರರಿಗೆ ಎರವಲು ನೀಡಬಹುದು. ಒಂದು ಪುಸ್ತಕವನ್ನು ಒಂದು ಸಲ ಮಾತ್ರಾ ಎರವಲು ನೀಡಬಹುದು.ಬೆಲೆ ಸುಮಾರು ಇನ್ನೂರೆಪ್ಪತ್ತೈದು ಡಾಲರು. ಕಿಂಡಲ್ ಸಾಧನವೂ ಇದೇ ಬೆಲೆಯಲ್ಲಿ ಲಭ್ಯ.
---------------------------------------------------------------------
*ಅಶೋಕ್‌ಕುಮಾರ್ ಎ
udayavani

Monday, October 19, 2009

ಪ್ರತ್ಯಕ್ಷ ವರದಿ ನೀಡಲು ಕವರಿಟ್‌ಲೈವ್!!

ಪ್ರತ್ಯಕ್ಷ ವರದಿ ನೀಡಲು ಕವರಿಟ್‌ಲೈವ್!!


ಜನಸಾಮಾನ್ಯರನ್ನು ಬಳಸಿಕೊಂಡು ಯಾವುದೇ ಘಟನೆ ಅಥವಾ ಸಮಾರಂಭದ ಬಗ್ಗೆ ವರದಿ ಮಾಡುವುದು ಇನ್ನು ಸಾಮಾನ್ಯವಾಗಿ ಬಿಡಬಹುದು ಎನ್ನುವುದು ಅಂದಾಜು.ಇದಕ್ಕೆ ಆಸ್ಪದ ನೀಡುವ ಕವರಿಟ್‌ಲೈವ್ ಎನ್ನುವ ಬ್ಲಾಗ್ ಸಾಧನ ಲಭ್ಯವಿದೆ.ಕವರಿಟ್‌ಲೈವ್ ತಾಣದಲ್ಲಿ ನೋಂದಾಯಿಸಿಕೊಂಡು ಯಾರೂ ಈ ಸೇವೆಯನ್ನು ಪಡೆಯಬಹುದು.ಘಟನೆ ಅಥವಾ ಸಮಾರಂಭದ ಬಗ್ಗೆ ಪ್ರತ್ಯಕ್ಷದರ್ಶಿಗಳು ನೀಡಿದ ವಿವರಣೆಯನ್ನು ಅಂತರ್ಜಾಲ ತಾಣ ಅಥವ ಬ್ಲಾಗ್ ಪುಟದಲ್ಲಿ ಬರುವಂತೆ ಮಾಡುವುದು ಬಹಳ ಸುಲಭ.ಟ್ವಿಟರ್,ಫೇಸ್‌ಬುಕ್ ಖಾತೆ ಹೊಂದಿದವರು, ಬರೆದ ಸಂದೇಶಗಳೂ ಇಲ್ಲಿ ಬಿತ್ತರಗೊಳ್ಳುವಂತೆ ಮಾಡಲು ಬರುತ್ತದೆ.ಟ್ವಿಟರ್,ಫೇಸ್‌ಬುಕ್ ಸೇವೆಗಳನ್ನೀಗ ಸೆಲ್‌ಫೋನ್ ಮೂಲಕವೂ ಪಡೆಯಬಹುದಾದ್ದರಿಂದ,ಕೈಯಲ್ಲಿ ಹಿಡಿದ ಸಾಧನವನ್ನೂ ವರದಿಗಾರಿಕೆಗೆ ಬಳಸಬಹುದು.ಅಂತರ್ಜಾಲ ತಾಣಕ್ಕೆ ಭೇಟಿ ನೀಡುವ ಜನರಿಗೆ ಈ ನೇರ ವರದಿಗಾರಿಕೆ ತಲುಪುತ್ತದೆ.ಅವರುಗಳ ಪ್ರತಿಕ್ರಿಯೆ ಪಡೆಯಲು,ಪ್ರಶ್ನೆಗಳನ್ನು ಕೇಳಿ,ಅವರ ಅಭಿಪ್ರಾಯ ಕೇಳಲು ಅನುಕೂಲವೂ ತಾಣದಲ್ಲಿ ಲಭ್ಯವಿದೆ.ಈ ಅಭಿಪ್ರಾಯ ಸಂಗ್ರಹ ಕ್ಷಣಮಾತ್ರದಲ್ಲಿ ನಡೆಸಬಹುದು.
-------------------------------------------------------------------------------
ಎಲ್ಲೆಲ್ಲೂ ಸಂಗೀತವೇ..ಎಲ್ಲರೂ ಸಂಗೀತಜ್ಞರೇ!!
ಐಫೋನ್ ನಿಮ್ಮಲ್ಲಿದ್ದರೆ,ನೀವು ಸಂಗೀತ ಜ್ಞಾನವಿಲ್ಲದೇ ಆಲ್ಬಮ್‌ಗಳನ್ನು ಹೊರತರಬಹುದು.ZOOZbeat ಎನ್ನುವ ತಂತ್ರಾಂಶವನ್ನು ಐಫೋನಿನಲ್ಲಿ ಅನುಸ್ಥಾಪಿಸಿಕೊಂಡರೆ,ಫೋನ್ ಬೇರೆ ಬೇರೆ ಸಂಗೀತ ಸಾಧನಗಳಂತೆ ಕೆಲಸ ಮಾಡುತ್ತದೆ.ಐಫೋನನ್ನು ಅಲುಗಾಡಿಸಿದರೆ,ಅದು ಸಂಗೀತ ನುಡಿಸುತ್ತದೆ. ಹಾಗಾಗಿ ಅದನ್ನು ಬಳಸಿ,ಸಂಗೀತ ಸೃಷ್ಟಿಸುವುದು ಬಹಳ ಸುಲಭ.ಈಗ ಐಫೋನ್ ಬಳಸಿ ಹೊರತಂದಿರುವ ಆಲ್ಬಮುಗಳು ಹೊಸ ಹುಚ್ಚನ್ನೇ ಸೃಷ್ಟಿಸಿವೆ.ಆಪ್ಲ್‌ನ ಐಸ್ಟೋರಿನಲ್ಲಿ ಇಂತಹ ಜನಪ್ರಿಯ ಹಾಡುಗಳು ಡೌನ್‌ಲೋಡಿಗೆ ಲಭ್ಯವಿವೆ.
---------------------------------------------------------------------------------------

ವೈದ್ಯ ಸಲಹೆಗೆ ಆನ್‌ಲೈನ್ ಸಹಾಯ


ಹೋಮಿಯೋಪತಿ ಪದ್ಧತಿಯಲ್ಲಿ ವೈದ್ಯ ಸಲಹೆಗೆ ಬಹಳ ಸಮಯ ಹಿಡಿಸುತ್ತದೆ.ರೋಗಿಯ ವ್ಯಕ್ತಿತ್ವವನ್ನು ಅರಿತು,ಆತನಿಗೆ ಸರಿಹೊಂದುವ ಚಿಕಿತ್ಸೆಯನ್ನು ನೀಡಬೇಕಾಗುವುದರಿಂದ,ಮೊದಲ ಭೇಟಿಯಲ್ಲಿ ವೈದ್ಯರು ಬಹಳಷ್ಟು ಪ್ರಶ್ನೆಗಳನ್ನು ರೋಗಿಗೆ ಕೇಳುತ್ತಾರೆ.ಆದರೆ ವೈದ್ಯ ಭೇಟಿಗೆ ಹಲವರು ಕಾದಿರುವಾಗ,ವಿಸ್ತೃತ ಮಾತುಕತೆ ನಡೆಸಲೂ ಕಷ್ಟವಾಗುತ್ತದೆ.ಇದನ್ನು ತಪ್ಪಿಸಲು ಆನ್‌ಲೈನ್ ಸಹಾಯ ಪಡೆಯುವುದು ಈಗಿನ ಶೈಲಿ.ವೈದ್ಯರು ತಮ್ಮ ಅಂತರ್ಜಾಲತಾಣದಲ್ಲಿ ವೈದ್ಯ ಸಲಹೆ ಪುಟವನ್ನು ಒದಗಿಸಿ,ರೋಗಿಯು ತನ್ನ ವಿವರವನ್ನು ಲಿಖಿತವಾಗಿ ನೀಡಲು ಅನುಕೂಲ ಕಲ್ಪಿಸುವುದಿದೆ.ವೈದ್ಯರ ಭೇಟಿಗೆ ವೇಳೆ ಗೊತ್ತು ಪಡಿಸಿ ಭೇಟಿ ನೀಡಿದಾಗ,ರೋಗಿಯ ಲಿಖಿತ ವಿವರಗಳನ್ನು ನೋಡಿ,ಸಲಹೆ ನೀಡಲು ವೈದ್ಯರಿಗೆ ಸಾಧ್ಯವಾಗುತ್ತದೆ.ಮಂಗಳೂರಿನ ಹೋಮಿಯೋಪಥಿ ವೈದ್ಯ ಡಾ.ಪ್ರಸನ್ನಕುಮಾರ್  http://doctorprasanna.com/ಅವರ ಅಂತರ್ಜಾಲತಾಣದಲ್ಲೂ ಇದಕ್ಕೆ ಅವಕಾಶ ಕಲ್ಪಿಸಿದ್ದಾರೆ.ಇಲ್ಲಿ ವ್ಯಕ್ತಿಯ ನಿದ್ದೆ,ಹಸಿವು,ಶೌಚ ಅಭ್ಯಾಸ,ಬೆವರುವಿಕೆ ಇಂತವುಗಳ ಬಗ್ಗೆ ತಿಳಿದುಕೊಳ್ಳಲು ವಿವರವಾದ ಪ್ರಶ್ನೆಗಳನ್ನು ನೀಡಲಾಗಿದೆ.ಆನ್‌ಲೈನಿನಲ್ಲಿ ಉತ್ತರಿಸುವಾಗ,ವ್ಯಕ್ತಿಯು ತನ್ನ ಅರಿವಿಗೆ ಬಾರದ ವಿಷಯಗಳನ್ನು ಗಮನಿಸಿಕೊಂಡು ಉತ್ತರಿಸಲು ಸಾಧ್ಯವಾಗುತ್ತದೆ.ಅದೇ ರೀತಿ  ವೈದ್ಯರಿಗೂ,ಅದನ್ನು ಸರಿಯಾಗಿ ತಿಳಿದು,ನಿರ್ಧಾರಕ್ಕೆ ಬರಲು ಸಮಯ ಸಿಗುತ್ತದೆ.ವಿವಿಧ ವಿಷಯಗಳ ಬಗ್ಗೆ ತಮ್ಮ ಬರಹಗಳನ್ನು ಒದಗಿಸಿ,ಜನರಲ್ಲಿ ಅರಿವು ಮೂಡಿಸಲೂ ಸಾಧ್ಯವಾಗುತ್ತದೆ.
------------------------------------------------------------------------------------------------------
ಬ್ರೌಸರ್ ಪುಟವನ್ನು ಹಿಗ್ಗಿಸಿ-ಕುಗ್ಗಿಸಿ
ಅಂತರ್ಜಾಲ ಪುಟಗಳನ್ನು ಜಾಲಾಡಲು ಫೈರ್‌ಫಾಕ್ಸ್ ಬ್ರೌಸರನ್ನು ಬಳಸುತ್ತೀರಾ? ಪುಟದಲ್ಲಿನ ಅಕ್ಷರಗಳು ಕಿರಿದಾಗಿದ್ದು ಓದಲು ತ್ರಾಸವಾಗುತ್ತದಾದರೆ,ಪುಟವನ್ನು ಹಿಗ್ಗಿಸಲು ಕಷ್ಟವಿಲ್ಲ.ಕಂಟ್ರೋಲ್ ಕೀಲಿ ಒತ್ತಿ ಹಿಡಿದು,+ ಕೀಲಿಯನ್ನು ಒತ್ತುತ್ತಿದ್ದರೆ,ಪುಟ ಹಿಗ್ಗುತ್ತಾ ಹೋಗುತ್ತದೆ.ಅದುವೇ ಪುಟವನ್ನು ಮಾಮೂಲು ಗಾತ್ರಕ್ಕಿಳಿಸಲು,ಕಂಟ್ರ‍ೋಲ್ ಮತ್ತು - ಕೀಲಿಯನ್ನು ಒತ್ತಿದರೆ ಸರಿ!
-------------------------------------------------------------------
ಗೂಗಲ್ ಕ್ರೋಂ ಓಎಸ್ ಸೋರಿದಾಗ
ಇತ್ತೀಚೆಗೆ ಅಂತರ್ಜಾಲದಲ್ಲಿ ಸ್ಫೋಟಕ ಸುದ್ದಿ:ಗೂಗಲ್‌ನ ಕ್ರೋಂ ಕಾರ್ಯನಿರ್ವಹಣಾ ತಂತ್ರಾಂಶ ಸೋರಿಕೆಯಾಗಿದೆ ಎನ್ನುವ ಗರಂಗರಂ ಸುದ್ದಿ.ವಿಂಡೋಸ್7 ಬಿಡುಗಡೆಯಾಗುವ ಸಂದರ್ಭದಲ್ಲಿ ಸ್ಪರ್ಧೆ ಒಡ್ಡಲು ಗೂಗಲ್ ಉದ್ದೇಶಪೂರ್ವಕವಾಗಿಯೇ ಈ ಸೋರಿಕೆ ಮಾಡಿದೆ ಎಂಬ ಚರ್ಚೆಯೂ ಅಂತರ್ಜಾಲದಲ್ಲಿ ನಡೆಯಿತು.ನಿಜವಾಗಿ ನಡೆದ್ದದ್ದಿಷ್ಟು.ಟೆಕ್‌ಕ್ರಂಚ್ ಎಂಬ ತಾಣದಲ್ಲಿ ಓದುಗನೊಬ್ಬ ತನಗೆ ಗೂಗಲ್ ತಾಣದಲ್ಲಿ ಗೂಗಲ್‌ಕ್ರೋಮ್‌ಓಎಸ್ ಎನ್ನುವ ತಂತ್ರಾಂಶ ಸಿಕ್ಕಿದೆ.ಇದನ್ನು ತಾನು ಇಳಿಸಿಕೊಂಡು ರೇಪಿಡ್‌ಶೇರ್ ಎಂಬ ತಾಣದಲ್ಲಿಟ್ಟಿದ್ದೇನೆ. ಈ ತಂತ್ರಾಂಶ ಗೂಗಲ್ ಕ್ರೋಮಿನ ಕಾರ್ಯನಿರ್ವಹಣ ತಂತ್ರಾಂಶವಿರಬೇಕು ಎಂದು ತರ್ಕಿಸಿದ್ದೇ ಕಾರಣ.ಈ ತಂತ್ರಾಂಶವನ್ನು ಜನರು ಇಳಿಸಿಕೊಂಡು ತಮ್ಮ ಕಂಪ್ಯೂಟರಿನಲ್ಲಿ ಅನುಸ್ಥಾಪಿಸಲು ಯತ್ನಿಸಿದಾಗ,ಆ ಕಡತವನ್ನು ವಿಂಡೋಸ್ ಓಎಸ್ ಉಳ್ಳ ಕಂಪ್ಯೂಟರಿನಲ್ಲಿ ತೆರೆಯಲು ಅಸಾಧ್ಯವಾದ ರೂಪದಲ್ಲಿತ್ತು.ಲಿನಕ್ಸ್ ಇದ್ದವರು ಅದರಲ್ಲಿ ಕಡತವನ್ನು ತೆರೆದು ಅನುಸ್ಥಾಪಿಸಿ ನೋಡಿದಾಗ,ತಂತ್ರಾಂಶ ಕಂಪ್ಯೂಟರ್ ಕಾರ್ಯನಿರ್ವಹಣಾ ತಂತ್ರಾಂಶವಾಗಿರದೆ,ಗೂಗಲ್ ಕ್ರ‍ೋಂ ಬ್ರೌಸರಿನ ತಂತ್ರಾಂಶವಾಗಿದ್ದು ಕಂಡು ಬಂತು.ಅಂತೂ ಜನರು ಗೂಗಲ್ ತಂತ್ರಾಂಶದಿಂದ ಬೇಸ್ತು ಬಿದ್ದು ಪೆಚ್ಚಾದ್ದೂ ಆಯಿತು.
------------------------------------------------------------------------
ಆನ್‌ಲೈನ್ ಬ್ಯಾಂಕಿಂಗ್:ದರ ವೈಚಿತ್ರ್ಯ
ನಿಮ್ಮ ಬ್ಯಾಂಕ್ ಖಾತೆಯಿಂದ ಆನ್‌ಲೈನ್‌ನಲ್ಲಿ ಹಣವನ್ನು ಇನ್ನೊಂದು ಖಾತೆಗೆ ವರ್ಗಾಯಿಸಲು National Electronic Funds Transfer(NEFT) ಮತ್ತು Real Time Gross Settlement(RTGS)  ಎನ್ನುವ ಎರಡು ವ್ಯವಸ್ಥೆಗಳು ಲಭ್ಯವಿವೆ.ಇದರಲ್ಲಿ ಎರಡನೆಯದ್ದು ತಕ್ಷಣ ಹಣವರ್ಗಾವಣೆ ಮಾಡುವ ವ್ಯವಸ್ಥೆ.ಕ್ಕೆ ಹೋಲಿಸಿದರೆ ಎನ್‌ಇ‌ಎಫ್‌ಟಿ ನಿಧಾನ ಸೇವೆ. ಆದರೂ ಒಂದು ದಿನದಲ್ಲಿ ಹಣ ವರ್ಗಾವಣೆ ಸಾಧ್ಯ. ಎನ್‌ಇ‌ಎಫ್‌ಟಿ ಮೂಲಕ ಹಣ ವರ್ಗಾವಣೆಗೆ ಕನಿಷ್ಠ ಆರು ರುಪಾಯಿ ಸೇವಾದರವಾದರೆ,ಆರ್‌ಟಿಜಿ‍ಎಸ್ ರೀತಿಯ ವರ್ಗಾವಣೆಗೆ ಕನಿಷ್ಠ ದರ ಇಪ್ಪತ್ತೈದು ರುಪಾಯಿ.ಬ್ಯಾಂಕುಗಳವರು ಒಂದು ಬ್ಯಾಂಕ್‌ನ ಖಾತೆಯಿಂದ ಇನ್ನೊಂದು ಬ್ಯಾಂಕಿನ ಖಾತೆಗೆ ಹಣ ವರ್ಗಾವಣೆ ಮಾಡಲು ಎನ್‌ಇ‌ಎಫ್‌ಟಿಯನ್ನು,ತಮ್ಮದೇ ಬ್ಯಾಂಕಿನ ಇನ್ನೊಂದು ಶಾಖೆಗೆ ಹಣ ವರ್ಗಾಯಿಸಲು ಆರ್‌ಟಿ‌ಜಿ‌ಎಸ್‌ನ್ನು ಶಿಫಾರಸು ಮಾಡುವ ಕಾರಣ, ಎರಡನೆಯ ರೀತಿಯ ವರ್ಗಾವಣೆ ದುಬಾರಿ ಆಗಿ ಪರಿಣಮಿಸುತ್ತದೆ. ಒಂದೇ ಬ್ಯಾಂಕಿನ ಬೇರೆ ಬೇರೆ ಸ್ಥಳದಲ್ಲಿರುವ ಬ್ಯಾಂಕುಗಳಿಗೆ ಹಣ ವರ್ಗಾವಣೆ ಮಾಡುವುದಕ್ಕಿಂತ ಬೇರೆ ಬ್ಯಾಂಕಿನ ಖಾತೆಗೆ ಹಣ ವರ್ಗಾಯಿಸುವುದೇ ಹೆಚ್ಚು ಉಳಿತಾಯಕ್ಕೆ ಕಾರಣವಾಗುತ್ತದೆ.
udayavani

Monday, October 12, 2009

(ವಿ)ಚಿತ್ರ ಹುಡುಕಾಟ

ಪರಿಸರ ಕಾಳಜಿ ಇರಲಿ
ತಂತ್ರಜ್ಞಾನ,ವಿಜ್ಞಾನ ಪ್ರಿಯರು ಕಂಪ್ಯೂಟರ್,ವಿವಿಧ ಇಲೆಕ್ಟ್ರಾನಿಕ್ ಸಾಧನಗಳನ್ನು ಬಳಸುವುದನ್ನು ಅತಿಯಾದ ಉತ್ಸಾಹದಿಂದ ಮಾಡುತ್ತಾರೆ. ಆದರೆ ಈ ಇ-ಕಸಗಳು ಪ್ರಕೃತಿಯ ಮೇಲೆ ಇನ್ನಷ್ಟು ಒತ್ತಡ ಉಂಟು ಮಾಡುತ್ತವೆ ಎನ್ನುವುದನ್ನು ನೆನಪಿನಲ್ಲಿಡೋಣ. ಇವನ್ನು ಬಳಸಲು ಬೇಕಾಗುವ ವಿದ್ಯುಚ್ಛಕ್ತಿಯನ್ನು ಉತ್ಪಾದಿಸಲು ಪ್ರಕೃತಿಯ ನಾಶ ನಡೆಯುತ್ತದೆ.ಹಾಗೆಯೇ ಸತು,ಸೀಸವನ್ನು ಹೊಂದಿರುವ ಇಲೆಕ್ಟ್ರಾನಿಕ್ ಕಸವನ್ನು ವಿಲೇವಾರಿ ಮಾಡುವ ಸಮಸ್ಯೆ,ಬ್ಯಾಟರಿಯನ್ನು ವಿಲೇವಾರಿ ಮಾಡುವ ಸಮಸ್ಯೆಯನ್ನು ಕುರಿತು ಯೋಚಿಸಿದಾಗ,ಇವುಗಳ ಮಿತ ಬಳಕೆ,ಇವುಗಳನ್ನು ದೀರ್ಘಕಾಲ ಬಳಕೆ ಮಾಡುವ ಅಗತ್ಯ ಮನವರಿಕೆಯಾದೀತು.
ನಮ್ಮ ಪರಿಸರ ಪ್ರೇಮ ಮಾತಿನಲ್ಲಿ ಉಳಿಯದೆ,ನಡೆಯಲ್ಲಿಯೂ ವ್ಯಕ್ತವಾಗಬೇಕು.

------------------------------------------------------------------------------------

(ವಿ)ಚಿತ್ರ ಹುಡುಕಾಟ


ಟಿನ್‌ಐ ಎಂಬುದು ಅಂತರ್ಜಾಲ ಶೋಧ ಸೇವೆ.ಇದರ ವಿಶೇಷತೆ ಏನು ಗೊತ್ತೇ? ಸಾಮಾನ್ಯ ಶೋಧದಂತಲ್ಲದೆ,ಇದರಲ್ಲಿ ನೀವು ಚಿತ್ರಗಳನ್ನು ಹುಡುಕಬಹುದು.ಹುಡುಕಬೇಕಾದ ಚಿತ್ರವನ್ನು ಅಪ್ಲೋಡ್ ಮಾಡಿದರೆ,ಅಂತರ್ಜಾಲದಿಂದ ಆ ಚಿತ್ರವನ್ನು ಹೋಲುವ ಚಿತ್ರಗಳನ್ನು ಹುಡುಕಿ ಕೊಡುವ ಸೇವೆಯನ್ನು ಟಿನ್‌ಐ ಮೂಲಕ ಪಡೆಯಬಹುದು.ಚಿತ್ರವು ಅಂತರ್ಜಾಲ ವಿಳಾಸವನ್ನು ಹೊಂದಿದ್ದರೆ,ಅಂತರ್ಜಾಲ ವಿಳಾಸವನ್ನು ನೀಡಿಯೂ ಶೋಧ ಕಾರ್ಯ ಕೈಗೊಳ್ಳಬಹುದು.ಇಂತಹ ಶೋಧ ಸೇವೆಯನ್ನು ಗೂಗಲ್ ಕೂಡಾ ನೀಡುತ್ತಿಲ್ಲ. ಗೂಗಲ್ ತಾಣದಲ್ಲಿ ಚಿತ್ರವನ್ನು ಹುಡುಕುವುದು ಸಾಧ್ಯವಾದರೂ,ಅದು ಚಿತ್ರದ ಹೆಸರಿನ ಆಧಾರದಿಂದ ಹುಡುಕಲಾಗುತ್ತದೆ.ಚಿತ್ರದ ಬಗೆಗಿನ ವಿವರಣೆಯ ಪದಗುಚ್ಛಗಳ ಆಧಾರದಲ್ಲಿಯೂ ಹುಡುಕುವುದು ಸಾಧ್ಯ.ಆದರೆ ಈ ಪದಗಳು ಜನರು ನೀಡಿರುವ ಕಾರಣ, ಕೆಲವೊಮ್ಮೆ ನಿಮ್ಮ ಶೋಧಕ್ಕೆ ಸಂಬಂಧ ಪದದ ಚಿತ್ರಗಳೂ, ಶೋಧ ಫಲಿತಾಂಶದಲ್ಲಿ ಕಾಣಿಸಿಕೊಳ್ಳಬಹುದು.
---------------------------------------------------------------------------------
ಉಚಿತ ಅಂತರ್ಜಾಲಕ್ಕೆ ವಿರೋಧ:ಮುರ್ಡೋಕ್ ಪಣ


ಅಂತರ್ಜಾಲದಲ್ಲಿ ಪತ್ರಿಕೆಗಳನ್ನು ಉಚಿತವಾಗಿ ಒದಗಿಸುವುದನ್ನು ನಿಲ್ಲಿಸಿ,ಆನ್‌ಲೈನಿನಲ್ಲಿ ಪತ್ರಿಕೆ ಓದಬೇಕಾದರೆ ಶುಲ್ಕ ಪಾವತಿಸುವಂತಾಗಬೇಕು ಎಂದು ಹಲವು ಮಾಧ್ಯಮಗಳ ಏಕಸ್ವಾಮ್ಯ ಹಿಡಿದಿರುವ ಮುರ್ಡೋಕ್ ವಾದ.ಮುದ್ರಣ ಮಾಧ್ಯಮದಲ್ಲಿ ಪತ್ರಿಕೆಗಳನ್ನು ತನ್ನ ಬಗಲಿಗೆ ಹಾಕಿಕೊಳ್ಳುತ್ತಿರುವ ಮುರ್ಡೋಕ್, ಎದುರಾಳಿ ಪತ್ರಿಕೆಗಳಿಗೆ ಸ್ಪರ್ಧೆ ನೀಡಲು,ಬೆಲೆಯಿಳಿಕೆ ಸಮರ ತಂತ್ರವನ್ನೇ ನಂಬಿದ್ದರು. ಈಗ ಅಂತರ್ಜಾಲದಲ್ಲಿ ಪತ್ರಿಕೆ ಬೇಕಾದರೆ ಹಣ ತೆರಬೇಕು ಎಂದು ಹೇಳುವ ಮುರ್ಡೋಕ್‌ಗೆ ಅಂತರ್ಜಾಲ ಮಾಧ್ಯಮದ ಒಲವು ಕಡಿಮೆಯೇ.ಮೈಸ್ಪೇಸ್,ಐಗೈಡ್,ಪೇಜ್‌ಸಿಕ್ಸ್ ಮುಂತಾದ ಅಂತರ್ಜಾಲ ತಾಣಗಳನ್ನು ಶುರು ಮಾಡಿದರೂ,ಮುರ್ಡೋಕ್‌ಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಗಲಿಲ್ಲ.ತನ್ನ ಸಂಡೇ ಟೈಮ್ಸ್ ಅಂತಹ ಪತ್ರಿಕೆಗಳನ್ನು ಜನ ಓದದೆ ಇರಲು ಸಾಧ್ಯವೇ ಇಲ್ಲ. ಹಣ ತೆತ್ತಾದರೂ ಓದುತ್ತಾರೆ ಎಂದಾತ ಬಲವಾಗಿ ನಂಬುತ್ತಾರೆ.ಆದರೆ ಹಲವು ಮಾಧ್ಯಮ ಪರಿಣತರು ಈ ಮಾತಿಗೆ ಬೆಂಬಲ ನೀಡುವುದಿಲ್ಲ.ಸಾದಾ ಸುದ್ದಿಗಳನ್ನು ಓದಲು ಜನ ಹಣ ಬಿಚ್ಚುವುದು ಸಂಶಯ,ಇನ್ನು ವಿಶೇಷ ಮಾಹಿತಿಗಳಿಗೆ ಜನ ಬೆಲೆ ತೆತ್ತಾರು ಎನ್ನುವುದು ಅವರ ಅಭಿಪ್ರಾಯ.ಹಿಂದೆಯೂ ಯಾವುದೇ ಸೇವೆಗೆ ಹಣ ವಿಧಿಸಿದೊಡನೆ,ಅಂತಹ ಸೇವೆಯ ಬಳಕೆದಾರರ ಸಂಖ್ಯೆ ದಿಡೀರನೆ ಇಳಿಯುವುದು ಕಂಡು ಬಂದಿದೆ.ಅಂತರ್ಜಾಲದಲ್ಲಿ ಲಭ್ಯವಾದ ಪತ್ರಿಕೆಗಳು,ಓದುಗರ ಸಂಖ್ಯೆಯನ್ನು ಹಲವು ಪಟ್ಟು ಹೆಚ್ಚಿಗೆ ಪಡೆದಿರುವುದು ಮಾತ್ರಾ ಸತ್ಯ.ನ್ಯೂಯಾರ್ಕ್ ಟೈಮ್ಸ್ ಅಂತಹ ಪತ್ರಿಕೆಯು ಹತ್ತು ಲಕ್ಷವಿದ್ದ ತನ್ನ ಓದುಗರ ಸಂಖ್ಯೆಯನ್ನು ಒಂದು ಕೋಟಿಗೆ ಏರಿಸಿಕೊಂಡದ್ದು ಅಂತರ್ಜಾಲದ ಪವಾಡದಿಂದಲೇ.ಇಂತಹ ಪ್ರಸಾರ ಸಂಖ್ಯೆಯ ಹೆಚ್ಚಳದಿಂದ ಪತ್ರಿಕೆಯ ಜಾಹೀರಾತು ಆದಾಯವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗಬೇಕಿತ್ತು.ಅದು ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ.ಅಂತರ್ಜಾಲದ ಎಲ್ಲಾ ಪತ್ರಿಕೆಗಳು ತಮ್ಮ ಪತ್ರಿಕೆಗಳನ್ನು ಉಚಿತವಾಗಿ ನೀಡುವುದನ್ನು ನಿಲ್ಲಿಸಿದರೆ,ಆಗ ಜನರು ಹಣ ತೆತ್ತು ಓದಲು ಬಂದೇ ಬರಬೇಕಾಗುತ್ತದೆ ಎಂದು ಮುರ್ಡೋಕ್ ವಾದ.ಆದರೆ ಈ ರೀತಿಯ ಒಗ್ಗಟ್ಟು ಪತ್ರಿಕೆಯ ಮಾಲೀಕರಲ್ಲಿ ಮೂಡುತ್ತದೆಯೇ ಎನ್ನುವುದೇ ಪ್ರಶ್ನೆ.
--------------------------------------------------------------------------------------------------------
ಆನ್‌ಲೈನಿನಲ್ಲಿ CAT ಪರೀಕ್ಷೆ
ಈ ವರ್ಷದಿಂದ ತೊಡಗಿ,CAT ಪರೀಕ್ಷೆಯನ್ನು ಕಂಪ್ಯೂಟರಿನಲ್ಲಿ ತೆಗೆದುಕೊಳ್ಳಬೇಕು.ಈ ವರ್ಷದ ಮಟ್ಟಿಗೆ ನಿಗದಿತ ದಿನಾಂಕಗಳ ಹತ್ತು ದಿನಗಳ ಅವಧಿಯಲ್ಲಿ ಯಾವ ದಿನವಾದ್ರೂ ಪರೀಕ್ಷೆ ತೆಗೆದುಕೊಳ್ಳಲು ಅವಕಾಶವಿದೆ.ಮುಂದೆ ಇಚ್ಛಿಸಿದಾಗ ಪರೀಕ್ಷೆ ತೆಗೆದುಕೊಳ್ಳಲು ಅವಕಾಶ ಸಿಗಬಹುದು.ವರ್ಷದುದ್ದಕ್ಕೂ ಪರೀಕ್ಷೆ ತೆಗೆದುಕೊಳ್ಳಲು ವಿದ್ಯಾರ್ಥಿಗೆ ಸಾಧ್ಯವಾಗುವ ನಿರೀಕ್ಷೆಯಿದೆ.ಆದರೆ ಕಂಪ್ಯೂಟರಿನಲ್ಲಿ ಪರೀಕ್ಷೆ ತೆಗೆದುಕೊಂಡರೆ,ಪ್ರಶ್ನೆಗಳು ಅನುಕ್ರಮವಾಗಿ ಮೂಡುತ್ತವೆ.ಬೇಕಾದ ಭಾಗದ ಪ್ರಶ್ನೆಗಳನ್ನು ಪ್ರಯತ್ನಿಸುವ ಸ್ವಾತಂತ್ರ್ಯ ಪರೀಕ್ಷಾರ್ಥಿಗೆ ಸಿಗದು.ಹಾಗೆಯೇ ಮುದ್ರಿತ ಪ್ರಶ್ನೆಪತ್ರಿಕೆಯಲ್ಲಿ ಓದಿದಷ್ಟು ವೇಗದಲ್ಲಿ ಕಂಪ್ಯೂಟರಿನಲ್ಲೆ ಓದಲು ಸಾಧ್ಯವಾಗದು.ವಿದ್ಯಾರ್ಥಿಯ ಗ್ರಹಣಶಕ್ತಿಯನ್ನು ಪರೀಕ್ಷಿಸಲು ನೀಡಿರುವ ವಿವರಣೆಯನ್ನು ಓದುವಾಗ,ಪ್ರಶ್ನೆಪತ್ರಿಕೆಯಲ್ಲಾದರೆ ಮುಖ್ಯಾಂಶಗಳನ್ನು ಗುರುತಿಸಲು,ಪದಗಳಡಿ ಗೆರೆಯೆಳೆಯಬಹುದು. ಆದರೆ ಕಂಪ್ಯೂಟರ್ ತೆರೆಯಲ್ಲಿ ಓದುವಾಗ ಅದು ಸಾಧ್ಯವಿಲ್ಲವಲ್ಲ.ಪದಗಳನ್ನು ಬರೆದುಕೊಳ್ಳಬೇಕು.ಇದಕ್ಕೆ ತುಸು ಹೆಚ್ಚು ಸಮಯ ವ್ಯಯವಾಗುತ್ತದೆ.
ಈ ತೊಂದರೆಗಳ ನಡುವೆಯೇ,ಪ್ರಶ್ನೆಪತ್ರಿಕೆ ಸೋರಿಕೆಯಂತಹ ಸಮಸ್ಯೆ ಉದ್ಭವಿಸದು ಎನ್ನುವಂತಹ ಅನುಕೂಲತೆಗಳೂ ಆನ್‌ಲೈನ್ ಪರೀಕ್ಷೆಯಲ್ಲಿದೆ.ಪ್ರಶ್ನೆಗಳನ್ನು ಕಂಪ್ಯೂಟರೇ ಆಯ್ದು ರಚಿಸುತ್ತದೆ.OCR ಹಾಳೆಯಲ್ಲಿ ಉತ್ತರಗಳನ್ನು ತುಂಬಿದಾಗ,ತಪ್ಪಾಗುವಂತಹ ಸಮಸ್ಯೆಯೂ ಇರದು.
-----------------------------------------------------------------------------------------------
ದಶಮಾನೋತ್ಸವ ಸಂಭ್ರಮದಲ್ಲಿ ಬ್ಲಾಗರ್
ಬ್ಲಾಗಿಂಗ್‌ಗೆ ಹೊಸ ಭಾಷ್ಯ ಬರೆದ ಬ್ಲಾಗರ್ ಸೇವೆ ಈಗ ಹತ್ತು ವರ್ಷ ಹಳೆಯದು.ನ್ಯೂಯಾರ್ಕಿನ ವರ್ಲ್ಡ್ ಟ್ರೇಡ್ ಸೆಂಟರಿನ ದಾಳಿಯ ಸಂದರ್ಭದಲ್ಲಿ ಜನರ ಭಾವನೆಗಳಿಗೆ ಅಭಿವ್ಯಕ್ತಿಯಾಗಿ ಬ್ಲಾಗಿಂಗ್ ಜನಜೀವನದ ಭಾಗವಾಗಿ ಹೋಯಿತು.ಸದ್ಯ ಮೂವತ್ತು ಕೋಟಿ ಕ್ರಿಯಾಶೀಲ ಬ್ಲಾಗಿಗರನ್ನು ಹೊಂದಿರುವ ಬ್ಲಾಗರ್,ಗೂಗಲ್ ಬಗಲಿಗೇರಿದೆ.ಪ್ರತಿ ನಿಮಿಷಕ್ಕೆ ಮೂರು ಲಕ್ಷ ಪದಗಳಷ್ಟು ಬ್ಲಾಗ್ ಬರವಣಿಗೆ ಬ್ಲಾಗರ್ ಸೇವೆಯ ಮೂಲಕ ಆಗುತ್ತದೆ.ವರ್ಡ್‌ಪ್ರೆಸ್,ಲೈವ್‌ಜರ್ನಲ್ ಮುಂತಾದ ಬ್ಲಾಗಿಂಗ್ ಸೇವೆಗಳನ್ನು ಹಿಮ್ಮೆಟ್ಟಿಸಿ,ಬ್ಲಾಗರ್ ನಂಬರ್ ಒಂದು ಸ್ಥಾನದಲ್ಲಿರಲು ಗೂಗಲ್ ಹೆಸರು ನೆರವಾಗಿದೆ.ನೂರನಲುವತ್ತು ಪದಗಳಿಗೆ ಸೀಮಿತವಾದ ಮೈಕ್ರೋಬ್ಲಾಗಿಂಗ್ ಸೇವೆ ಟ್ವಿಟರ್,ನಂಬಲಾಗದ ಬೆಳವಣಿಗೆ ಕಂಡಿರುವ ಈ ದಿನಗಳಲ್ಲೂ ಬ್ಲಾಗರ್ ಜನಪ್ರಿಯತೆ ಇಳಿಮುಖವಾಗಿಲ್ಲ. ಕ್ರಿಕೆಟಿನ 20-20ಗೆ ಟ್ವಿಟರ್ ಸಮವಾದರೆ,ಬ್ಲಾಗರನ್ನು ಟೆಸ್ಟ್ ಕ್ರಿಕೆಟಿಗೆ ಹೋಲಿಸಬಹುದೇನೋ!
----------------------------------------------------------------------
ಚಂದ್ರಮಾಮನಿಗೆ ಗುದ್ದು
ಚಂದ್ರಮಾಮನಿಗೆ ನಾಸಾದ ರಾಕೆಟ್ ಅಪ್ಪಳಿಸಿ ನಡೆಸಿದ ಪರೀಕ್ಷೆಗಳ ಫಲಿತಾಂಶವಿನ್ನೂ ಬರಬೇಕಾಗಿದೆ.ಆದರೆ ಈ ಘಟನೆಯನ್ನು ಟಿವಿಯಲ್ಲಿ ವೀಕ್ಷಿಸಿದ ಲಕ್ಷಾಂತರ ಜನ ವೀಕ್ಷಕರಿಗೆ ಇದು ನಿರಾಸೆ ಮೂಡಿದೆ. ಇಂತಹ ನಿರಾಶೆ ಮೂಡಿಸುವ ಘಟನೆಯನ್ನು ವೀಕ್ಷಿಸಲು, ಮುಂಜಾನೆ ನಾಲ್ಕಕ್ಕೇ ಎದ್ದಿರಲು ಸೂಚಿಸುವ ಮುನ್ನ ನಾಸಾ ಯೋಚಿಸಬೇಕಿತ್ತು ಎಂದು ಪ್ರತಿಕ್ರಿಯಿಸದವರೇ ಹೆಚ್ಚು. ಟಿವಿಯ ತೆರೆಯಲ್ಲಿ ಏನೂ ಕಾಣಲೇ ಇಲ್ಲ ಎನ್ನುವುದು ಇನ್ನು ಕೆಲವರ ಪ್ರತಿಕ್ರಿಯೆ.ಆಗಸದತ್ತ ನೋಡಿ,ಚಂದ್ರನ ಆಕಾರ ಬದಲಾಗಿದೆಯೇ ಎಂದು ಅಚ್ಚರಿ ಪಡುವವರೂ ಇದ್ದಾರೆ!
--------------------------------------------------------------------------
ಬರಲಿದೆ ವಿಂಡೋಸ್ 8
ವಿಂಡೋಸ್ 7 ಕಂಪ್ಯೂಟರ್ ಕಾರ್ಯನಿರ್ವಹಣಾ ತಂತ್ರಾಂಶ ಈಗಾಗಲೇ ಲಭ್ಯವಿದ್ದು,ಜನರ ಮನಗೆಲ್ಲುತ್ತಿದೆ.ವಿಂಡೋಸ್‌ನ ಮುಂದಿನ ಆವೃತ್ತಿಗಳಾಗಿ ವಿಂಡೋಸ್ 8 ಮತ್ತು ವಿಂಡೋಸ್ 9ನ್ನು ತರಲು ಮೈಕ್ರೋಸಾಫ್ಟ್ ಸಿದ್ಧತೆ ಆರಂಭಿಸಿದೆ.128 ಬಿಟ್ ಕಂಪ್ಯೂಟರ್‌ಗಳಿಗೆ ಸೂಕ್ತವಾದ ಕಾರ್ಯನಿರ್ವಹಣಾ ವ್ಯವಸ್ಥೆ ತಂತ್ರಾಂಶವನ್ನು ಇವುಗಳಲ್ಲಿ ಒದಗಿಸಲು ಯೋಜಿಸಲಾಗುತ್ತಿದೆ.ಅದರ ಅಂಗವಾಗಿ ಅಂತಹ ಯಂತ್ರಾಂಶಗಳನ್ನು ಪೂರೈಸಲು ಸಂಸ್ಕಾರಕಗಳ ವಿನ್ಯಾಸ ಮಾಡಲು ಇಂಟೆಲ್,ಏಎಂಡಿ ಕಂಪೆನಿಗಳ ಜತೆಗಲ್ಲದೆ,ಯಂತ್ರಾಂಶ ತಯಾರಕರಾದ ಎಚ್‌ಪಿ,ಐಬಿಎಂ ಕಂಪೆನಿಗಳ ಜತೆಗೂ ಮಾತುಕತೆ ನಡೆದಿದೆ.

*ಅಶೋಕ್‌ಕುಮಾರ್ ಎ
udayavani

Monday, October 05, 2009

ಹೊಸ ಅಲೆ ಎಬ್ಬಿಸಿರುವ ಗೂಗಲ್ ವೇವ್

ಹೊಸ ಅಲೆ ಎಬ್ಬಿಸಿರುವ ಗೂಗಲ್ ವೇವ್
ಈ ವಾರ ಗೂಗಲ್ ವೇವ್ ಅನ್ನು ಬಳಕೆದಾರರಿಗೆ ಒದಗಿಸುವ ಮೂಲಕ ಗೂಗಲ್ ಗುಲ್ಲು ಎಬ್ಬಿಸಿದೆ.ಸದ್ಯಕ್ಕಿದು ಆಯ್ದ ಬಳಕೆದಾರರಿಗೆ ಮಾತ್ರಾ ಲಭ್ಯವಿದ್ದು,ಆಹ್ವಾನ ಮೂಲಕ ಮಾತ್ರ ಇದನ್ನು ಪಡೆಯಬಹುದು.ಜಿಮೇಲ್ ಆರಂಭವಾದಾಗ ಮಿಂಚಂಚೆ ಸೇವೆಯೂ ಹೀಗೆ ಆಹ್ವಾನದ ಮೂಲಕ ಮಾತ್ರಾ ಲಭ್ಯವಿತ್ತು.ಸಣ್ಣದರಲ್ಲಿ ಹೇಳಬೇಕೆಂದರೆ ಗೂಗಲ್ ವೇವ್,ಗೂಗಲ್ ಒದಗಿಸುತ್ತಿರುವ ಮಿಂಚಂಚೆ,ದಿಡೀರ್ ಸಂದೇಶ,ಬ್ಲಾಗಿಂಗ್,ನಕಾಶೆ,ವಿಡಿಯೊ,ಚಿತ್ರ ಇವೆಲ್ಲವುಗಳನ್ನು ಒಟ್ಟಿಗೆ, ಒಂದೇ ಕಡೆ ಒದಗಿಸುವ ಪ್ರಯತ್ನವಾಗಿದೆ.ಗೂಗಲ್ ಫೇಸ್‌ಬುಕ್ ಅಂತಹ ಸಾಮಾಜಿಕ ಸಮುದಾಯ ತಾಣಗಳಗೆ ಸ್ಪರ್ಧೆ ನೀಡಲು ಪ್ರಯತ್ನಿಸುತ್ತಿದೆ ಅಂದರೂ ತಪ್ಪಿಲ್ಲ.ಈ ಸೇವೆ ಬಳಸಿದಾಗ ಅಂತರ್ಜಾಲದ ಮೂಲಕ ವೈವಿಧ್ಯಮಯ ಸೇವೆಗಳು ಲಭ್ಯವಾಗುತ್ತವೆ.ಅಲ್ಲದೆ ಯೋಜನೆಯಲ್ಲಿ ಹಲವರು ಜತೆಗೂಡಿ ಕೆಲಸ ಮಾಡಲು ಅವಕಾಶ ಸಿಗುತ್ತದೆ.ಬೇರೆ ಬೇರೆ ಕಡೆ ಇರುವವರು ಒಟ್ಟಿಗೆ ಕುಳಿತಿರುವವರಂತೆ ಕೆಲಸ ಮಾಡುವ ಸೌಕರ್ಯವನ್ನಿದು ನೀಡುತ್ತದೆ.
------------------------------------------------------------------------------------------------------------------------

ಗಾಂಧಿ ಜಯಂತಿಗೆ ಗೂಗಲ್‍ನಲ್ಲೂ ಗಾಂಧಿ
ಗೂಗಲ್ ಶೋಧ ಪುಟದಲ್ಲಿ ದಿನದ ವಿಶೇಷವನ್ನು ತೋರ್ಪಡಿಸಲು ಗೂಗಲ್ ಯತ್ನಿಸುವುದು ಸಾಮಾನ್ಯವಾಗಿ ಬಿಟ್ಟಿದೆ.ಗಾಂಧಿ ಜಯಂತಿಯಂದು ಈ ಸಲ ಗಾಂಧಿಯವರ ಮುಖಾರವಿಂದವನ್ನು ಗೂಗಲಿನಲ್ಲಿ  ಕಾಣಿಸಿ ಮಹಾತ್ಮನಿಗೆ ಗೌರವ ಸಲ್ಲಿಸಿತು.ಈ ಹಿಂದೆ ರವೀಂದ್ರನಾಥ ಟಾಗೋರ್ ಕೂಡಾ ಗೂಗಲಿನ ಲೊಗೋದಲ್ಲಿ ಕಾಣಿಸಿಕೊಂಡಿದ್ದಿತ್ತು.ಇದನ್ನು ರಚಿಸುವ ಕಲಾವಿದರ ತಂಡವನ್ನೇ ಗೂಗಲ್ ಹೊಂದಿದೆ. ಅದೇ ರೀತಿ ಮಕ್ಕಳ ದಿನದ ಅಂಗವಾಗಿ ಮಕ್ಕಳಿಗೂ, ಗೂಗಲಿನ ಲೊಗೋವನ್ನು ವಿಶೇಷವಾಗಿ ಚಿತ್ರಿಸುವ ಸ್ಪರ್ಧೆ ಏರ್ಪಡಿಸಿದ್ದ ಬಗ್ಗೆ ಈ ಅಂಕಣದಲ್ಲಿ ಈ ಹಿಂದೆ ಓದಿದ ನೆನಪು ಬಂತೇ?
--------------------------------------------------------------------------------------------------------
ಅಮರರಾಗಲು ನ್ಯಾನೋಟೆಕ್ನಾಲಜಿಯ ಕೊಡುಗೆ


ನ್ಯಾನೋ ತಂತ್ರಜ್ಞಾನದ ಬಳಕೆಯಿಂದ ರೋಗಗಳನ್ನು ಗುಣಪಡಿಸುವುದು ಮತ್ತು ದೇಹ ಮುದಿತನಕ್ಕೀಡಾಗುವುದನ್ನು ತಡೆಯಬಹುದು ಎಂದು ಲಂಡನ್ ವಿಶ್ವವಿದ್ಯಾಲಯದ ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.ಆದರೆ ಇದನ್ನು ಸಾಧಿಸಲು ಇನ್ನೂ ಮೂವತ್ತು ವರ್ಷಗಳಾದರೂ ಬೇಕಾದೀತು.ಕ್ಯಾನ್ಸರ್ ಗಡ್ಡೆಗಳನ್ನು ಗುಣಪಡಿಸಲು ನ್ಯಾನೊ ತಂತ್ರಜ್ಞಾನವನ್ನೀಗಲೇ ಇಲಿಗಳಲ್ಲಿ ಯಶಸ್ವಿಯಾಗಿ ಬಳಸಲಾಗಿದೆ.ಮುಂದೆ ಈ ತಂತ್ರಜ್ಞಾನವನ್ನೇ ಬಳಸಿ,ಮಾನವನ ಕ್ಯಾನ್ಸರ್ ಗಡ್ಡೆಗಳನ್ನು ಕರಗಿಸಲು ಸಾಧ್ಯವಾಗಬಹುದು.ದೇಹದ ರಕ್ತದಲ್ಲಿ ಈಜಾಡುವ ನ್ಯಾನೋ ರೊಬೋಗಳನ್ನು ಅಭಿವೃದ್ಧಿಪಡಿಸಿದರೆ,ಗಾಯಗಳನ್ನು ಗುಣಪಡಿಸುವುದು ತುಂಬಾ ಸುಲಭ ಮತ್ತು ಸರಳವಾದೀತು.ದೇಹ ಮುದಿಯಾಗುವುದನ್ನು ತಡೆಯಲೂ ತಂತ್ರಜ್ಞಾನ ನೆರವಾಗುವ ನಿರೀಕ್ಷೆಯಿದೆ.ಆದರೂ ಅಪಘಾತವೋ ಮಿಂಚೋ ಮನುಷ್ಯನನ್ನು ಸಾಯಿಸಬಾರದೆಂದಿಲ್ಲ. ರೋಗಕ್ಕೆ ತುತ್ತಾಗಿ ಜನ ಸಾಯುವುದು ಇಲ್ಲವಾದೀತು!
--------------------------------------------------------------------------------------------------------------
ಐಐಟಿ ಸ್ಪರ್ಧೆಯಲ್ಲಿ ನಿಟ್ಟೆ ವಿದ್ಯಾರ್ಥಿಗಳ ಸಾಧನೆ
ಚೆನ್ನೈಯ ಐಐಟಿಯಲ್ಲಿ ಸಿಮ್ಯುಚಾಂಪ್ ಎನ್ನುವ ಸ್ಪರ್ಧೆಯಲ್ಲಿ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಕಾರ್ತಿಕ್ ಕಸ್ತೂರಿ,ಕೆನ್ನೆತ್ ಮತ್ತು ಐಐಟಿಯ ರೈಸನ್ ದ್ವಿತೀಯ ಬಹುಮಾನ ಗಳಿಸಿ,ಐಐಟಿಯೇತರ ವಿದ್ಯಾಸಂಸ್ಥೆಗಳ ಪೈಕಿ ಮೊದಲನೆಯ ಸ್ಥಾನ ಗಳಿಸಿದ ಸಾಧನೆ ಮಾಡಿದ್ದಾರೆ.ಐಐಟಿ ಚೆನ್ನೈನ ವಿದ್ಯಾರ್ಥಿಗಳು ಮೊದಲ ಬಹುಮಾನ ಗೆದ್ದಿದ್ದಾರೆ.ಕಂಪ್ಯೂಟರ್ ತಂತ್ರಾಂಶದ ಮೂಲಕ ಅಣಕ ಪರಿಸ್ಥಿತಿಯನ್ನು ಸೃಷ್ಟಿ ಮಾಡುವ ಸ್ಪರ್ಧೆಯಲ್ಲಿ ನಿಟ್ಟೆಯ ವಿದ್ಯಾರ್ಥಿಗಳು ಬೆಂಕಿ ಅಪಘಾತದಲ್ಲಿ ಸಿಲುಕಿದವರನ್ನು ರಕ್ಷಿಸುವ ಅಣಕವಾಟದ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿದ್ದರು.ಅಪಾಯಕ್ಕೀಡಾದ ಎಂಭತ್ತಏಳು ಜನರ ಪೈಕಿ ಮೂವತ್ತೇಳು ಜನರನ್ನು ರಕ್ಷಿಸಲು ಸಾಧ್ಯವಾದ ಪ್ರದರ್ಶನವನ್ನು ಅಣಕವಾಟದಲ್ಲಿ ನೀಡಲು ಸಾಧ್ಯವಾಯಿತು.
-----------------------------------------------------------------------------------------------------------

ಹೊಸ ವಿದ್ಯಾರ್ಥಿಗಳನ್ನಾಕರ್ಷಿಸಲು ಹಳೆವಿದ್ಯಾರ್ಥಿ ಬ್ಲಾಗುಗಳು
ತಮ್ಮ ಕಾಲೇಜಿಗೆ ಪ್ರವೇಶ ಗಳಿಸಲು ಬಯಸುವ ವಿದ್ಯಾರ್ಥಿಗಳು ಅಧಿಕೃತ ಮಾಹಿತಿಗಳನ್ನು ಮಾತ್ರಾ ಅವಲಂಬಿಸದೆ,ಹಳೆ ವಿದ್ಯಾರ್ಥಿಗಳ ಅನಿಸಿಕೆಗೇ ಹೆಚ್ಚಿನ ಮಹತ್ತ್ವ ಕೊಡುವುದನ್ನು ಕಾಲೇಜುಗಳ ಆಡಳಿತ ಮಂಡಳಿಗಳು ಗಮನಿಸಿವೆ. ಹೀಗಾಗಿ,ವಿದ್ಯಾರ್ಥಿಗಳು ಕಾಲೇಜಿನ ತಮ್ಮ ಅನುಭವದ ಬಗ್ಗೆ ಬರೆವ ಬ್ಲಾಗ್ ಬರವಣಿಗೆಗಳನ್ನು ತಮ್ಮ ಅಂತರ್ಜಾಲ ತಾಣಗಳಲ್ಲಿ ಪ್ರಕಟಿಸಲು ತೊಡಗಿದ್ದಾರೆ. ಈ ಬ್ಲಾಗ್‍ಗಳಿಗೆ ಯಾವುದೇ ಕತ್ತರಿ ಪ್ರಯೋಗ ಮಾಡದೆ ಇದ್ದಕ್ಕಿದ್ದ ಹಾಗೆ ಪ್ರಕಟಿಸಲಾಗುತ್ತದೆ.ಪ್ರವೇಶ ಬಯಸುವವರು ಎಷ್ಟೋ ಸಲ ಬ್ಲಾಗು ಬರೆದವರ ಜತೆ ಚರ್ಚಿಸಿ, ತೀರ್ಮಾನ ಕೈಗೊಳ್ಳುವುದೂ ಇದೆ.ಬರಹಗಳು ನೀರಸವಾಗಿರುವುದನ್ನು ತಪ್ಪಿಸಲು,ಬರವಣಿಗೆ ಬಗ್ಗೆ ಸ್ಪರ್ಧೆ ಏರ್ಪಡಿಸಿ,ವಿಜೇತರ ಬ್ಲಾಗ್ ಬರಹಗಳನ್ನು ಬಳಸುವುದು ಹೆಚ್ಚಿನ ಕಾಲೇಜುಗಳಲ್ಲಿ ಸಾಮಾನ್ಯ. ಅಮೆರಿಕಾದ ಎಂ ಐ ಟಿಯಂತಹ ಪ್ರತಿಷ್ಠಿತ ಸಂಸ್ಥೆಗಳೂ ಈ ತಂತ್ರ ಬಳಸುವುದೀಗ ಮಾಮೂಲಿ.
----------------------------------------------------------------------------------------------------------------
ಮುದುಡಿದ ಕೆಂಡಸಂಪಿಗೆ
ಕೆಂಡಸಂಪಿಗೆಯೆನ್ನುವುದು ಕನ್ನಡದ ಅಂತರ್ಜಾಲ ತಾಣ.ಅಬ್ದುಲ್ ರಶೀದ್ ಅವರ ನೇತೃತ್ವದಲ್ಲಿ ಹೊರಬರುತ್ತಿದ್ದ ಈ ತಾಣ,ಅನಂತಮೂರ್ತಿ,ವೈದೇಹಿಯಂತವರ ಬರವಣಿಗೆಗಳನ್ನು ಒಳಗೊಂಡು ಜನಪ್ರಿಯವಾಗಿತ್ತು.ಅತಿಥಿ ಸಂಪಾದಕರ ಮೂಲಕ ಕಾರ್ಯಾಚರಿಸುವ ಪ್ರಯೋಗವನ್ನೂ ತಾಣ ಇತ್ತೀಚೆಗೆ ಮಾಡುತ್ತಿತ್ತು.ಸಾಕಷ್ಟು ಜನಪ್ರಿಯವಾಗಿ,ಹೊಸ ಭರವಸೆಯನ್ನು ಹುಟ್ಟು ಹಾಕಿದ್ದ ತಾಣ ಇದೀಗ ಪ್ರಕಟಣೆಯನ್ನು ನಿಲ್ಲಿಸಿದೆ.ಅತ್ತ ಇನ್ನೊಂದು ಕನ್ನಡ ಸಮುದಾಯ ತಾಣ "ಸಂಪದ"ವೂ ಸರ್ವರ್ ಸಮಸ್ಯೆಯಿಂದ ಸದ್ಯ ಅಂತರ್ಜಾಲದಲ್ಲಿ ಸಿಗುತ್ತಿಲ್ಲ.ಅದರ ತಂತ್ರಾಂಶವನ್ನು ಬದಲಿಸಲಾಗುತ್ತಿದ್ದು,ಅದು ಮಾಮೂಲಿನಂತೆ ಲಭ್ಯವಾಗಲು ಇನ್ನೂ ಸಮಯ ಹಿಡಿದೀತು.ಸಂಪದ ಬಳಗವು ಪ್ರಕಟಿಸಿದ ಕೃಷಿ ಸಂಪದ ಇ-ಪತ್ರಿಕೆ www.krushi.sampada.net ತಾಣದಲ್ಲಿ ಡೌನ್‌ಲೋಡಿಗೆ ಲಭ್ಯವಿದ್ದು,ಈಗಾಗಲೇ ಐದೂವರೆ ಸಾವಿರ ಬಾರಿ ಇಳಿಸಿಕೊಂಡ ಹೆಗ್ಗಳಿಕೆಗೆ ಪಾತ್ರವಾಗಿದೆ.
--------------------------------------------------------------------------------------------------------------------
ಐಬಿಎಂನಿಂದ ಗೂಗಲ್‌ಗೆ ಸ್ಪರ್ಧೆ
ಐಬಿಎಂ ಕಂಪೆನಿಯು ಉದ್ಯಮಗಳಿಗೆ ಮಿಂಚಂಚೆ ಸೇವೆಯನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ನೀಡಲು ಮುಂದೆ ಬಂದಿದೆ.ಪ್ರತಿ ಉದ್ಯೋಗಿಗೆ ಮಿಂಚಂಚೆ ಸೇವೆ ಒದಗಿಸಲು ಗೂಗಲ್ ಐವತ್ತು ಡಾಲರು ಬೆಲೆ ವಿಧಿಸಿದರೆ,ಐಬಿಎಂ ಅದನ್ನು ಮೂವತ್ತಾರು ಡಾಲರು ಬೆಲೆಯಲ್ಲಿ ನೀಡಲು ಮುಂದೆ ಬಂದಿದೆ. ನಿಜಕ್ಕಾದರೆ,ಗೂಗಲ್ ಒಬ್ಬನಿಗೆ ಇಪ್ಪತ್ತೈದು ಗಿಗಾಬೈಟ್ ಸ್ಮರಣಶಕ್ತಿ ಸಾಮರ್ಥ್ಯ ನೀಡುತ್ತದೆ- ಆದರೆ ಐಬಿಎಂ ನೀಡುವುದು ಬರೇ ಒಂದು ಗಿಗಾಬೈಟು ಸ್ಮರಣಕೋಶ ಮಾತ್ರ.ಗೂಗಲ್ ಮಿಂಚಂಚೆಯಲ್ಲಿ ಪದಸಂಸ್ಕಾರಕದಂತಹ ಅಗತ್ಯ ತಂತ್ರಾಂಶಗಳೂ ಲಭ್ಯವಾಗುತ್ತವೆ. ಐಬಿಎಂ ಇದಕ್ಕೆ ತಂತ್ರಾಂಶಗಳನ್ನು ಪ್ರತ್ಯೇಕವಾಗಿ ನೀಡುತ್ತದೆ.ಈ ತಂತ್ರಾಂಶಗಳು ಲೋಟಸ್ ನೋಟ್ಸ್ ಎಂದು ಲಭ್ಯವಾಗುತ್ತವೆ. ಆದರೂ ಮೇಲ್ನೋಟಕ್ಕೆ ಐಬಿಎಂ ಸೇವೆ ಅಗ್ಗವಾಗಿದ್ದು,ಆರ್ಥಿಕ ಹಿನ್ನಡೆಯ ಈ ದಿನಗಳಲ್ಲಿ ಆಕರ್ಷಕವಾಗಿ ಕಂಡ ಬಂದರೆ ಅಚ್ಚರಿಯಿಲ್ಲ.
------------------------------------------------------------------------------------------------------------------
ಬರಲಿದೆ ನೋ-ಒಪ್ ಅನ್ನುವ ಹೊಸ ಕಂಪ್ಯೂಟರ್ ಭಾಷೆ
ನೋ-ಓಪ್ ಎನ್ನುವುದು ಈಗ ಅಭಿವೃದ್ಧಿಯಾಗುತ್ತಿರುವ ಹೊಸ ಕಂಪ್ಯೂಟರ್ ಭಾಷೆ.ಈಗಿರುವ ಭಾಷೆಗಳು ಸಾಲವೇ? ಇನ್ನೂ ಹೊಸ ಭಾಷೆಗಳು ಯಾಕೇ ಎನ್ನುವುದು ನಿಮ್ಮ ಪ್ರಶ್ನೆಯೇ? ಜಾವಾದಂತಹ ಜನಪ್ರಿಯ ಭಾಷೆಗಳು ಇದ್ದರೂ ಬಳಸುವಾಗ ಒಮ್ಮೊಮ್ಮೆ ಅಡ್ಡಿ ಆತಂಕಗಳು ಬರುವುದಿದೆ. ಭಾಷೆಯಲ್ಲಿ ಹೊಸ ಸೌಕರ್ಯ ಇದ್ದಿದ್ದರೆ ತಂತ್ರಾಂಶ ಅಭಿವೃದ್ಧಿ ಕೆಲಸ ಇನ್ನೂ ಸುಲಭವಾದೀತು ಎಂದು ಇಂಜಿನಿಯರುಗಳಿಗೆ ಕಾಣುವುದಿದೆ. ತಂತ್ರಾಂಶವನ್ನು ಸುಲಭವಾಗಿ ಪರೀಕ್ಷಿಸಲು ಅನುಕೂಲತೆ ಕಲ್ಪಿಸುವಂತಹ ಸೌಕರ್ಯಗಳನ್ನು ಒದಗಿಸುವ ದೃಷ್ಟಿಯಿಂದ ಈ ನೋ-ಒಪ್ ಭಾಷೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ.ಗೂಗಲ್ ಮತ್ತು ಇನ್ನೂ ಹಲವು ಕಂಪೆನಿಗಳು ಕೈಗೂಡಿಸಿದ ಯೋಜನೆ ಇದಾಗಿದೆ.
ಉದಯವಾಣಿ 
*ಅಶೋಕ್‌ಕುಮಾರ್ ಎ
 
googledc7e93ba1a7703ae.html