Monday, November 30, 2009

ಧಾನ್ಯ ಸಂಗ್ರಹಣೆ ಮೇಲೆ ಕಣ್ಣಿಡಲು ಕಂಪ್ಯೂಟರ್ ಮುಂದೆ ಧ್ಯಾನ!



ಧಾನ್ಯ ಸಂಗ್ರಹಣೆ ಮೇಲೆ ಕಣ್ಣಿಡಲು ಕಂಪ್ಯೂಟರ್ ಮುಂದೆ ಧ್ಯಾನ!
ಚೆನ್ನೈಯ ಸಮೀಪದ ಎಳವೂರು ಎಂಬ ಪಟ್ಟಣದಲ್ಲಿ ಭಾರತೀಯ ಆಹಾರ ನಿಗಮದ ಧಾನ್ಯ ಸಂಗ್ರಹಣೆ ಮಾಡುವ ಉಗ್ರಾಣಗಳಿವೆ.ಅದಾನಿ ಗುಂಪು ಈ ಉಗ್ರಾಣದ ನಿರ್ವಹಣೆ ಮಾಡುತ್ತಿದ್ದು,ಉಗ್ರಾಣವು ಪೂರ್ತಿಯಾಗಿ ಕಂಪ್ಯೂಟರ್ ನಿಯಂತ್ರಣದಲ್ಲಿ ನಡೆಯುತ್ತದೆ.ಚೀಲಗಳನ್ನು ಇಳಿಸುವ,ಉಗ್ರಾಣದಲ್ಲಿ ಕಾಪಿಡುವ ಮತ್ತು ಉಗ್ರಾಣದಿಂದ ಹೊರಗೆ ಕಳುಹಿಸುವ ಚೀಲಗಳನ್ನು ವಾಹನಗಳಿಗೆ ತುಂಬಿಸುವ ಮುಂತಾದ ಕೆಲಸಗಳು ಕಂಪ್ಯೂಟರ್ ಮೂಲಕ ನಿಯಂತ್ರಿಸಲ್ಪಡುತ್ತದೆ.ಸಂಪೂರ್ಣ ವ್ಯವಸ್ಥೆ ಸ್ವಯಂಚಾಲಿ ವ್ಯವಸ್ಥೆಯ ಮೂಲಕ ನಡೆಸಲ್ಪಡುತ್ತದೆ.ಹೀಗಾಗಿ,ಇಲ್ಲಿ ಉದ್ಯೋಗಿಗಳ ಸಂಖ್ಯೆ ಬಹಳ ಕಡಿಮೆ.ಇದ್ದ ಕೆಲವರೂ,ಕಂಪ್ಯೂಟರ್ ಮುಂದೆ ಕುಳಿತು,ತೆರೆಯನ್ನು ದಿಟ್ಟಿಸಿರುತ್ತಾರೆ.ಆಹಾರ ಧಾನ್ಯಗಳ ಚೀಲಗಳ ಪರೀಕ್ಷೆ,ಗುಣಮಟ್ಟದ ಮೇಲೆ ಕಣ್ಣಿಡುವ ಕೆಲಸವೂ ದೂರನಿಯಂತ್ರಣದಿಂದಲೇ ನಡೆಯುತ್ತದೆ.ಧಾನ್ಯಗಳ ಹಾಳಾಗುವ ಪ್ರಮಾಣ,ಕೇವಲ ಶೇಕಡಾ ಒಂದು.ಸಾಮಾನ್ಯವಾಗಿ ಇದರ ಪ್ರಮಾಣ ಶೇಕಡಾ ಇಪ್ಪತ್ತರಷ್ಟಾಗಿರುತ್ತದೆ.ಉಗ್ರಾಣದ ಸಾಮರ್ಥ್ಯ ಇಪ್ಪತ್ತೈದು ಸಾವಿರ ಟನ್.
-----------------------------------------------
ಅತ್ಯುತ್ತಮ ಪ್ರಾಂಶುಪಾಲ ಪ್ರಶಸ್ತಿ ನಿಟ್ಟೆ ಸಂಸ್ಥೆಗೆ
ಇಂಜಿನಿಯರಿಂಗ್ ಕಾಲೇಜುಗಳ ಪ್ರಾಂಶುಪಾಲರಲ್ಲಿ ಅತ್ಯುತ್ತಮ ಪ್ರಾಂಶುಪಾಲರಿಗೆ ಭಾರತೀಯ ವಿದ್ಯಾಭವನ,ಮುಂಬೈಯು ಸ್ಥಾಪಿಸಿರುವ ಪ್ರಶಸ್ತಿಯು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಸ್. ವೈ.ಕುಲಕರ್ಣಿ ಅವರ ಪಾಲಾಗಿದೆ.ಭಾರತೀಯ ತಾಂತ್ರಿಕ ತಾಂತ್ರಿಕ ವಿದ್ಯಾಭ್ಯಾಸದ ಸಂಘ ಐಎಸ್‌ಟಿಇ ಅವರು ವಾರ್ಷಿಕವಾಗಿ ಈ ನೀಡುವ ಈ ಪ್ರಶಸ್ತಿಯನ್ನು ಮುಂದಿನ ತಿಂಗಳು ಸುರತ್ಕಲ್ಲಿನ ಎನೈಟಿಕೆ ಸಂಸ್ಥೆಯಲ್ಲಿ ನಡೆಯಲಿರುವ ಸಮಾವೇಶದ ವೇಳೆ ಪ್ರದಾನ ಮಾಡಲಾಗುವುದು.
------------------------------------------------------------------------------------------
ಇಂಚರದ ಮೂಲಕ ಕನ್ನಡದಲ್ಲಿ ಚಿಲಿಪಿಲಿಗುಡಿ




ಕನ್ನಡದ ಟ್ವಿಟರ್ ತಾಣವಾಗಿ,ಇಂಚರ inchara.net ಅಂತರ್ಜಾಲದಲ್ಲಿ ಲಭ್ಯವಾಗಿದೆ.ಈ ತಾಣವನ್ನು ಕಂಪ್ಯೂಟರ್ ಇಂಜಿನಿಯರ್ ವಸಂತ್ ಕಜೆ ಅವರು ಆರಂಭಿಸಿದ್ದಾರೆ.ಈ ತಾಣದಲ್ಲಿ ಕನ್ನಡಿಗರು ನೂರನಲುವತ್ತು ಅಕ್ಷರಗಳ ಮಿತಿಯಲ್ಲಿ ಸಂದೇಶಗಳನ್ನು ಪ್ರಕಟಿಸಿ,ಚಿಲಿಪಿಲಿಗುಟ್ಟಬಹುದು.ಜನಪ್ರಿಯ ತಾಣ ಟ್ವಿಟರಿನ ತಾಣ,ಈ ತಾಣಕ್ಕೆ ಪ್ರೇರಣೆ.ಸಂದೇಶದ ಜತೆಗೆ ಸೂಕ್ತ ಐಕಾನ್(ಕಿರುಚಿತ್ರ) ಸೇರಿಸಲು ಅವಕಾಶ ಇರುವುದು,ಇಲ್ಲಿನ ವಿಶೇಷ.ಸಂದೇಶ ಟೈಪಿಸುವಾಗ.ಅಕ್ಷರಗಳು ಕನ್ನಡದಲ್ಲೇ ಮೂಡುವಂತೆ ರೂಪಿಸಿರುವುದು,ಸಂದೇಶವನ್ನು ಕನ್ನಡದಲ್ಲಿ ರಚಿಸುವುದನ್ನು ಸುಲಭವಾಗಿಸಿದೆ.ನಿಮ್ಮ ಜತೆ ಸಂಪರ್ಕವಿರುವ ಮಂದಿಯ ಪಟ್ಟಿಯ ಜತೆಗೆ,ನಿಮ್ಮ ಹಿಂಬಾಲಕರ ಪಟ್ಟಿಯನ್ನು ತಾಣ ಪ್ರತ್ಯೇಕವಾಗಿ ನೆನಪಿನಲ್ಲಿಟ್ಟುಕೊಳ್ಳುತ್ತದೆ.ಎಸೆಮ್ಮೆಸ್ ಮೂಲಕವೂ ಸಂದೇಶಗಳನ್ನು ಸೇರಿಸುವ ಸೌಲಭ್ಯವಿದೆ.ಜುಕಿಎಂಜಿನ್ ಎಂಬ ಮುಕ್ತ ತಂತ್ರಾಂಶವನ್ನು ಬಳಸಿ,ಈ ಸೇವೆಯನ್ನು ನೀಡಲಾಗುತ್ತಿದೆ.
----------------------------------------------------------------------------
ಗೂಗಲ್ ಗಂಟಿನಲ್ಲಿ ಕನ್ನಡದ ನಿಘಂಟು
ಗೂಗಲ್ ಕೈಯಾಡಿಸದ ಕ್ಷೇತ್ರವೇ ಇಲ್ಲವೇನೋ.ಮಿಂಚಂಚೆಯಿಂದ ಹಿಡಿದು,ಗೂಗಲ್ ವೇವ್ ತನಕ ಗೂಗಲ್ ಜನಸಮುದಾಯಕ್ಕೆ ಒದಗಿಸುವ ಸೇವೆಗಳ ಪಟ್ಟಿ ಹನುಮಂತನ ಬಾಲವಾಗುತ್ತಿದೆ.ಈ ಪಟ್ಟಿಗೆ ಒಂದು ಸೇರ್ಪಡೆಯೆಂದರೆ ನಿಘಂಟು ಸೇವೆ.ಗೂಗಲ್ ನಿಘಂಟು ಹಲವು ಭಾಷೆಗಳಲ್ಲಿ ಲಭ್ಯವಿದ್ದು,ಅದರಲ್ಲಿ ಕನ್ನಡವೂ ಒಂದು.ಬಳಸಲು ಸುಲಭವಾದ ಈ ನಿಘಂಟು,ಇಂಗ್ಲೀಷ್-ಕನ್ನಡ ಹಾಗೂ ಕನ್ನಡ-ಇಂಗ್ಲೀಷ್ ಹೀಗೆ ಎರಡೂ ವಿಧದಲ್ಲಿ ಬಳಕೆಗೆ ಅವಕಾಶ ನೀಡುತ್ತದೆ.ಇಂಗ್ಲೀಷ್ ಪದದ ಉಚ್ಛಾರವೂ ಸಿಗುವುದು ತಾಣದ ಹೆಚ್ಚುಗಾರಿಕೆ.ಮೂವತ್ತು ಭಾಷೆಗಳಲ್ಲಿ ನಿಘಂಟು ಸೇವೆ ಲಭ್ಯವಿದೆ.
-----------------------------------------------------------------------------------------------------
ಮಾರಾಟದ ರೀತಿ ಬದಲಾಗಿದೆ
ಕ್ರಿಸ್ಮಸ್ ಸಮೀಪ ಬರುತ್ತಿದೆ.ಆರ್ಥಿಕ ಹಿನ್ನಡೆಯಿಂದ ಕಂಗೆಟ್ಟಿರುವ ಅಮೆರಿಕಾದ ವ್ಯಾಪಾರಿಗಳು ತಮ್ಮ ವ್ಯಾಪಾರ ವ್ಯವಹಾರ,ಈ ಹಬ್ಬದ ಕಾರಣದಿಂದಲಾದರೂ ತುಸು ಸಾಮಾನ್ಯವಾದೀತು ಎನ್ನುವ ಆಶೆ ಹೊತ್ತಿದ್ದಾರೆ.ಅದನ್ನು ಖಚಿತ ಪಡಿಸಿಕೊಳ್ಳಲು ಅವರಿಗೆ ಅಂತರ್ಜಾಲದ ಟ್ವಿಟರ್ ಸಾಕಷ್ಟು ಪ್ರಯೋಜನಕಾರಿಯಾಗಿದೆ.ಟ್ವಿಟರಿನ ತಮ್ಮ ಖಾತೆಯ ಮೂಲಕ,ಕಡಿತದ ಮಾರಾಟ,ಹೊಸ ಸರಕುಗಳ ಬಗ್ಗೆ ಜನರಿಗೆ ತಿಳಿಸಲು ವ್ಯಾಪಾರ ಮಳಿಗೆಗಳು ಪ್ರಯತ್ನಿಸುತ್ತಿವೆ.ಜನರೂ ಮಳಿಗೆಗಳ ಖಾತೆಗಳನ್ನು ಹಿಂಬಾಲಿಸುವ ಮೂಲಕ ವಿವರಗಳನ್ನು ಪಡೆಯಲು ಸಮರ್ಥರಾಗಿದ್ದಾರೆ.ಅವರು ಕೂಡಾ ತಮ್ಮ ಅನಿಸಿಕೆಗಳನ್ನು,ಸಲಹೆಗಳನ್ನು,ಪ್ರಶ್ನೆಗಳನ್ನು ಕಳುಹಿಸಿ,ಅವುಗಳಿಗೆ ಮಳಿಗೆಗಳಿಂದ ಸೂಕ್ತ ಉತ್ತರ ಅಥವಾ ಪರಿಹಾರವನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ.
ಮಿಂಚಂಚೆ ಅಥವಾ ದೂರವಾಣಿ ಕರೆಯಾದರೆ,ಮಿಂಚಂಚೆ ಬರೆದವನಿಗೆ ಅಥವಾ ಕರೆ ಮಾಡಿದವನಿಗೆ ಮಾತ್ರಾ ಈ ಬಗ್ಗೆ ಗೊತ್ತಾದರೆ,ಟ್ವಿಟರಿನಲ್ಲಿ ಎಲ್ಲರೂ ಈ ಬಗ್ಗೆ ತಿಳಿದುಕೊಳ್ಳಬಹುದು ಎನ್ನುವುದು ಟ್ವಿಟರಿನ ಹೆಚ್ಚುಗಾರಿಕೆ.ಈ ಸಂದೇಶಗಳ ಮೇಲೆ ಗಮನವಿಡಲೇ ಕೆಲವು ಉದ್ಯೋಗಿಗಳನ್ನು ಮಳಿಗೆಗಳವರು ಬಳಸಬೇಕಾಗಿ ಬಂದಿದೆ.
---------------------------------------------------------------------------------
ಮಿಂಚಿನ ಸಂಚಿನ ಮೇಲೆ ಕಣ್ಣಿಡಲು ಜಾಲ!
ಜಗತ್ತಿನಲ್ಲಿ ಪ್ರತಿ ಸೆಕೆಂಡಿಗೆ ಅರುವತ್ತಮೂರು ಮಿಂಚುಗಳು ಮೂಡಿ ಮರೆಯಾಗುತ್ತವೆ.ಈ ಮಿಂಚುಗಳು ಎಲ್ಲಿ ಹೊಡೆದುವು ಎಂದು ಗಮನಿಸಿ,ಬಿರುಗಾಳಿ,ಮಳೆ ಇತ್ಯಾದಿಗಳ ತೀವ್ರತೆಯನ್ನು ಅರಿಯುವುದು ಸುಲಭವಂತೆ.ಜಗತ್ತಿನಲ್ಲಿ ಬೇರೆ ಬೇರೆ ಕಡೆ ಮಿಂಚುಗಳನ್ನು ಪತ್ತೆ ಹಚ್ಚಲು ಸಂವೇದಕಗಳನ್ನು ಸ್ಥಾಪಿಸಿ,ಆ ಜಾಲದ ಮೂಲಕ ಹವಾಮಾನ ಮುನ್ಸೂಚನೆಯನ್ನು ಹೆಚ್ಚು ನಿಖರವಾಗಿಸಲು ಸಂಶೋಧಕರು ಗಮನವಿತ್ತಿದ್ದಾರೆ.ಪ್ರತಿ ಮೂರುಸಾವಿರ ಕಿಲೋಮೀಟರಿಗೆ ಸಂವೇದಕವನ್ನು ಸ್ಥಾಪಿಸುವುದು ಅಗತ್ಯವೆಂದು ಕಂಡುಬಂದಿದೆ.ವಿಮಾನಗಳ ಹಾರಾಟ ಸುರಕ್ಷಿತವೇ ಅಲ್ಲವೇ ಎನ್ನುವುದನ್ನು ತಿಳಿಯಲು ಮಿಂಚಿನ ಸ್ಥಾನದ ಬಗೆಗಿನ ಅರಿವು ಸಹಾಯ ಮಾಡುತ್ತದೆ.ಮಿಂಚು ಹೊಡೆದಾಗ,ವಾತಾವರಣದ ಗಾಳಿಯಲ್ಲಿ ನೈಟ್ರಸ್ ಆಕ್ಸೈಡ್ ಹೆಚ್ಚುವುದರಿಂದ,ಗಾಳಿಯ ಗುಣಮಟ್ಟವನ್ನು ತಿಳಿಯಲೂ ಮಿಂಚಿನ ಸ್ಥಾನ ತಿಳಿಯುವುದು ಅಪರೋಕ್ಷವಾಗಿ ಸಹಾಯ ಮಾಡುತ್ತದೆ.ಜಗತಿನಲ್ಲಿ   ಒಟ್ಟು ಅರುವತ್ತು ಕೇಂದ್ರಗಳು ಕೆಲಸ ಮಾಡಲಿವೆ.ಮುಂದಿನ ವರ್ಷದಲ್ಲಿ ಈ ಕೇಂದ್ರಗಳು ಕೆಲಸ ಮಾಡಲು ಶುರು ಮಾಡಬಹುದು.
----------------------------------------------------------------------------------------------
ಪಾಚಿಯಿಂದ ಬ್ಯಾಟರಿಗಳು
ಕ್ಲಾಡೋಫೋರಾ ಎನ್ನುವ ಪಾಚಿಗಳು ನೀರಿಗೆ ದುರ್ವಾಸನೆ ಉಂಟು ಮಾಡುವ ಪಾಚಿಗಳು.ಇವುಗಳ ಮೇಲ್ಮೈ ವಿಸ್ತೀರ್ಣ ಬಹಳ ಹೆಚ್ಚು.ಇವುಗಳನ್ನು ಮುಂದಿನ ತಲೆಮಾರಿನ ಬ್ಯಾಟರಿಯಲ್ಲಿ ಬಳಸಬಹುದು ಎನ್ನುವುದು ಸ್ವೀಡನ್ ವಿವಿಯ ಸಂಶೋಧಕರ ಅಧ್ಯಯನ ತಿಳಿಸಿದೆ.ಇವುಗಳನ್ನು ಬಳಸಿ ಬ್ಯಾಟರಿ ತಯಾರಿಸಿದಾಗ,ಅವುಗಳು ಪರಿಸರಪ್ರಿಯ ಬ್ಯಾಟರಿಗಳಾಗಲಿವೆ.ಬ್ಯಾಟರಿಗಳು ಹಗುರ,ವಿಷಮುಕ್ತ ಮತ್ತು ಮಡಚಬಲ್ಲ ಶಕ್ತಿಯ ಮೂಲಗಳಾಗಲಿವೆ.ಈ ಬ್ಯಾಟರಿಗಳು ವಿದ್ಯುಚ್ಛಕ್ತಿಯನ್ನು ಹೆಚ್ಚು ಕಾಲ ಹಿಡಿದಿಡಲು ಸಫಲವಾಗುವ ನಿರೀಕ್ಷೆಯಿದೆ.
------------------------------------------------------------------
ಪರೀಕ್ಷೆಯೇ ಫೇಲು
ಮೊದಲಬಾರಿಗೆ ಕಂಪ್ಯೂಟರ್ ಮೂಲಕ ನಡೆಯುತ್ತಿರುವ ಕ್ಯಾಟ್ ಪ್ರವೇಶ ಪರೀಕ್ಷೆಗಳಿಗೆ ಮೊದಲ ದಿನವಾದ ಶನಿವಾರವೇ ವಿಘ್ನ ಬಂತು.ಸರ್ವರ್‌ಗಳು ಕೈಕೊಟ್ಟದ್ದೇ ಈ ವೈಫಲ್ಯಕ್ಕೆ ಕಾರಣವೆಂದೂ,ವೈರಸ್ ಕಾರಣವೆಂದೂ ವಿಶ್ಲೇಷಣೆಗಳು ಬಂದಿವೆ.ಈ ವರ್ಷದ ಪರೀಕ್ಶೆಗಳನ್ನು ಕಂಪ್ಯೂಟರ್ ಮುಂದೆಯೇ ಕುಳಿತು ಬರೆಯಬೇಕಾದ ಅಗತ್ಯವಿದೆ.ಹತ್ತು ದಿನಗಳು ಸತತವಾಗಿ ನಡೆವ ಪರೀಕ್ಷೆಗಳನ್ನು ವಿದ್ಯಾರ್ಥಿಗಳು ಯಾವಾಗ ತೆಗೆದುಕೊಳ್ಳಲು ಬಯಸುವುದಾಗಿ ಮೊದಲೇ ನಿಗದಿಯಾಗಿದೆ.ಮೊದಲ ದಿನ ಪರೀಕ್ಷೆ ತೆಗೆದುಕೊಳ್ಳಬೇಕಾದವರು ಈಗ ಮತ್ತೆ ಪರೀಕ್ಷೆ ಬರೆಯಬೇಕಾಗುತ್ತದೆ.
*ಅಶೋಕ್‌ಕುಮಾರ್ ಎ
ಉದಯವಾಣಿ
---------------------------------------------

Monday, November 23, 2009

ನಿಫ್ಟಿ ಟ್ವಿಟರಿನಲ್ಲಿ

ನಿಫ್ಟಿ ಟ್ವಿಟರಿನಲ್ಲಿ


ಎಲ್ಲಾ ತರದ ಸೇವೆಗಳು ಕೂಡಾ ಟ್ವಿಟರಿನಲ್ಲಿ ತಮ್ಮ ಖಾತೆ ತೆರೆದು,ಜನರ ಜತೆ ಸಂಪರ್ಕ ಪಡೆಯಲು ಪ್ರಯತ್ನಿಸುತ್ತಿವೆ.ಈಗ ಶೇರು ಮಾರುಕಟ್ಟೆಯ ಸರದಿ.ಭಾರತದ ಪ್ರಮುಖ ಶೇರು ಮಾರುಕಟ್ಟೆಯಾದ ಎನ್.ಎಸ್.ಇ.ಯು ತನ್ನ ಶೇರು ಸಂವೇದನಾ ಸೂಚ್ಯಂಕವಾದ,ನಿಫ್ಟಿಯ ಏರಿಳಿತವನ್ನು ಟ್ವಿಟರ್ ಮೈಕ್ರೋಬ್ಲಾಗಿಂಗ್ ತಾಣದ ಮೂಲಕ ನೀಡುತ್ತಿದೆ.ಅದನ್ನು ಹಿಂಬಾಲಿಸಲು http://twitter.com/NSE_NIFTY ಈ ಖಾತೆಗೆ ಹೋಗಬೇಕಾಗುತ್ತದೆ.ಒಂದೇವಾರದಲ್ಲಿ ಹತ್ತಿರ ಸಾವಿರ ಜನ ಈ ಟ್ವಿಟರ್ ಖಾತೆಯನ್ನು ಹಿಂಬಾಲಿಸುತ್ತಿದ್ದಾರೆ.ಪ್ರತಿ ಹತ್ತು ನಿಮಿಷಕ್ಕೊಮ್ಮೆ ನಿಫ್ಟಿಯ ಮಟ್ಟವನ್ನು ತಿಳಿಸುವ ವ್ಯವಸ್ಥೆಯಿದೆ.ಟ್ವಿಟರ್ ಖಾತೆಯನ್ನು ಮೊಬೈಲ್ ಸೇವೆಯ ಮೂಲಕ ಪಡೆಯುವವರಿಗೆ,ವಿವರಗಳು ಮೊಬೈಲಿನಲ್ಲಿಯೇ ಸಿಗುತ್ತದೆ.ಜಗತ್ತಿನ ಪ್ರಮುಖ ಶೇರು ಮಾರುಕಟ್ಟೆಯ ವಿವರಗಳು ಇದೀಗಾಗಲೇ ಟ್ವಿಟರಿನ ಮೂಲಕ ಲಭ್ಯವಿತ್ತು.ಈಗ ಎನ್.ಎಸ್.ಇ.ಯೂ ಅದನ್ನು ನೀಡುವುದರ ಮೂಲಕ,ಭಾರತದ ಮಟ್ಟಿಗೆ ನಾವೀನ್ಯತೆ ನೀಡುವುದರಲ್ಲಿ ತಾನು ಮುಂದೆ ಎಂದು ತೋರಿಸಿಕೊಟ್ಟಂತಾಗಿದೆ.
ಅಂದಹಾಗೆ ಇದುವರೆಗೆ,ಟ್ವಿಟರಿನಲ್ಲಿ ಈಗ ನೀವೇನು ಮಾಡುತ್ತಿದ್ದೀರಿ ಎಂದು ತಿಳಿಸಲು ಆಹ್ವಾನವಿದ್ದರೆ,ಈಗದು ಈಗೇನಾಗುತ್ತಿದೆ ಎಂದು ತಿಳಿಸುವಂತೆ ಬದಲಾಗಿದೆ.ಮೊದಲಿಗೆ ಇದ್ದದ್ದಕ್ಕಿಂತ ಈಗಿನ ಪ್ರಶ್ನೆ ಹೆಚ್ಚು ವಿಸ್ತಾರದ ನೆಲೆಗಟ್ಟನ್ನು ಮೈಕ್ರೋಬ್ಲಾಗಿಗರಿಗೆ ನೀಡುತ್ತಿದೆ.
------------------------------------------------------------------
ಗೂಗಲ್ ಕ್ರೋಮ್:ತಂತ್ರಾಂಶ ಸಾಲುಗಳೀಗ ಬಹಿರಂಗ
ಗೂಗಲ್ ಕ್ರ‍ೋಮ್ ಕಂಪ್ಯೂಟರ್ ಆಪರೇಟಿಂಗ್ ವ್ಯವಸ್ಥೆ ತಂತ್ರಾಂಶದ ಸಾಲುಗಳೀಗ ಬಹಿರಂಗ.ಇನ್ನೂ ಅಭಿವೃದ್ಧಿಗೊಳ್ಳುತ್ತಿರುವ ಈ ತಂತ್ರಾಂಶವನ್ನು,ಕಂಪ್ಯೂಟರಿನಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾದರೂ,ಅದು ಸಾಮಾನ್ಯರಿಗೆ ಸುಲಭವಲ್ಲ.ಮಾತ್ರವಲ್ಲ, ಈ ಗೂಗಲ್ ಕ್ರೋಮ್ ಹಾರ್ಡ್‌ಡಿಸ್ಕ್ ಇಲ್ಲದ ಕಂಪ್ಯೂಟರುಗಳಿಗೆ ಎಂದು ಸಿದ್ಧವಾಗಿದೆ.ಯಾವಾಗಲೂ ಅಂತರ್ಜಾಲದಲ್ಲೇ ಇರುವವರಿಗಷ್ಟೇ ಇದು ಉಪಯೋಗಕ್ಕೆ ಬರುತ್ತದೆ.ಆದರೆ ಅದರ ಪ್ರಯೋಜನವೆಂದರೆ,ಬರೇ ಏಳು ಸೆಕೆಂಡಿನಲ್ಲಿ ಚಾಲೂ ಆಗುತ್ತದೆ.ಅಂತರ್ಜಾಲದಲ್ಲಿ ಪದಸಂಸ್ಕರಣದಿಂದ ಹಿಡಿದು,ಸ್ಮರಣಕೋಶದವರೆಗೆ ಪ್ರತಿಯೊಂದೂ ಉಚಿತವಾಗಿ ಲಭ್ಯವಾಗುವುದರಿಂದ,ಇಂತಹ ಅಂತರ್ಜಾಲ ಜಾಲಾಡುವ ನೆಟ್‌ಬುಕ್ ಅಂತಹ ಸಾಧನಗಳಿಗೆ ಕ್ರೋಮ್ ಓ.ಎಸ್. ಹೇಳಿ ಮಾಡಿಸಿದ ಹಾಗಿದೆ.ಸಾಮಾನ್ಯ ಬಳಕೆದಾರರಿಗಾಗಿ ಮೊದಲ ಆವೃತ್ತಿ ಲಭ್ಯವಾಗಲು ಮುಂದಿನ ವರ್ಷದವರೆಗೂ ಕಾಯುವುದು ಅನಿವಾರ್ಯ.ಈಗ ಪರೀಕ್ಷಾರ್ಥ ಕ್ರೋಂ ಬಳಸುವವರು ವರ್ಚುವಲ್ ಬಾಕ್ಸ್ ಅಂತಹ ಮಿಥ್ಯಾಯಂತ್ರವನ್ನು ಸೃಷ್ಟಿಸುವ ತಂತ್ರಾಂಶವನ್ನು ಬಳಸಬೇಕು.
------------------------------------------------------------------------------------
ಯುಟ್ಯೂಬಿನ ವಿಡಿಯೋಗಳಿಗೆ ಸಬ್‌ಟೈಟ್ಲಸ್
ವಿಡಿಯೋಗಳನ್ನು ನೋಡುವಾಗ,ಅದರಲ್ಲಿ ಬರುವ ಧ್ವನಿಯನ್ನು ಆಲಿಸಲು ಅಸಮರ್ಥವಾಗಿರುವವರಿಗೆ ಸಹಾಯ ಮಾಡಲು ಯುಟ್ಯೂಬ್ ಬಯಸಿದೆ.ಅದಕ್ಕಾಗಿ ಗೂಗಲ್ ತನ್ನ ತಂತ್ರಜ್ಞಾನವನ್ನು ಬಳಸಿ,ವಿಡಿಯೋಗೆ ಅಡಿಬರಹಗಳನ್ನು ನೀಡಲು ಆರಂಭಿಸಿದೆ.ಮೊದಲಾಗಿ ಶೈಕ್ಷಣಿಕ ವಿಡಿಯೋಗಳಿಗೆ ಈ ಅಡಿಬರಹವನ್ನು ನೀಡಲು ಆದ್ಯತೆ ನೀಡುವುದು ಗೂಗಲ್ ಯೋಚನೆ.ಅಡಿ ಬರಹಗಳು ಇಂಗ್ಲೀಷಿನಲ್ಲಿರುವುದಾದರೂ,ಅದನ್ನು ಗೂಗಲ್‌ನ ಅನುವಾದ ಸೇವೆ ಬಳಸಿ,ಬೇರೆ ಭಾಷೆಗಳಿಗೆ ಬದಲಿಸುವುದೂ ಸಾಧ್ಯವಿದೆ. ಹೀಗೆ ಭಾಷೆ ಬಲ್ಲದವರಿಗೂ ವಿಡಿಯೋ ನೋಡಿ ತಿಳಿದುಕೊಳ್ಳಲು ಸಾಧ್ಯವಾಗಲಿದೆ.ಧ್ವನಿಯನ್ನು ಲಿಪಿಯಾಗಿ ಮಾರ್ಪಡಿಸುವ ತಂತ್ರಾಂಶ ಆಧಾರಿತ ವಿಧಾನವನ್ನಿದಕ್ಕೆ ಬಳಸಲಾಗಿದೆ. ಈ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಿದಾತನಿಗೆ ಕಿವುಡಿನ ಸಮಸ್ಯೆಯಿತ್ತು.ಹ್ಯಾರೆನ್ಸ್‌ಟೀನ್ ಎನ್ನುವಾತ ಇದನ್ನು ಅಭಿವೃದ್ಧಿ ಪಡಿಸಿದ್ದಾನೆ.ಯುಟ್ಯೂಬಿಗೆ ವಿಡಿಯೋಗಳನ್ನು ಸೇರಿಸುವವರು,ಅದಕ್ಕೆ ಸರಿಯಾದ ಅಡಿಬರಹಗಳನ್ನು ಲಿಪಿರೂಪದಲ್ಲಿ ಸೈಟಿಗೆ ಏರಿಸಬಹುದು.ಆ ಅಡಿಬರಹಗಳನ್ನು ಗೂಗಲ್ ಸ್ವತ: ವಿಡಿಯೋಗೆ ಸರಿಯಾದ ಸಂದರ್ಭದಲ್ಲಿ ಸೇರಿಸುವ ತಂತ್ರಜ್ಞಾನ ಬಳಸಿ ಮಾಡುತ್ತದೆ.ಸರಿಯಾದ ಕ್ಷಣದಲ್ಲಿ ಅಡಿಬರಹ ಮೂಡಿಸಲು ಗೂಗಲ್ ತಂತ್ರಜ್ಞಾನ ಸಹಕಾರಿ. ಈ ತಂತ್ರಜ್ಞಾನ ಪೂರ್ತಿ ನಿಖರವಾಗಿಲ್ಲ.ಸ್ಟಾನ್‌ಫರ್ಡ್,ಯಾಲೇ,ಎಂಐಟಿಯಂತಹ ವಿಶ್ವವಿದ್ಯಾಲಯಗಳ ವಿಡಿಯೋಗಳು ಮೊದಲಾಗಿ ಅಡಿಬರಹ ಪಡೆಯಲಿದ್ದಾವೆ.
-----------------------------------------------------------------------------------------
ಮುಂದಿನ ಜನಪ್ರಿಯ ತಾಣ ಪೋರ‍್‌ಸ್ಕ್ವೇರ್
ಅಂತರ್ಜಾಲದಲ್ಲಿ ಟ್ವಿಟರ್ ಈ ವರ್ಷ ಮಾಡಿದಷ್ಟು ಸುದ್ದಿ ಯಾವ ತಾಣವೂ ಮಾಡಲಿಲ್ಲ.ಮುಂದಿನ ವರ್ಷ ಆ ಹೆಗ್ಗಳಿಕೆ ಪೋರ್‌ಸ್ಕ್ವೇರ್ ಎನ್ನುವ ತಾಣಕ್ಕೆ ಹೋಗಲಿದೆಯೇ?ಮಾಧ್ಯಮ ಪಂಡಿತರ ಪ್ರಕಾರ ಹೌದು. ಅಂದಹಾಗೆ ಏನಿದು ಫೋರ್‌ಸ್ಕ್ವೇರ್ ಅಂದಿರಾ? ಇದು ಜನರು ಯಾವ ಸ್ಥಳದಲ್ಲಿ ಇದ್ದಾರೆ ಎಂದು ಅವರ ಜಿಪಿಎಸ್ ಸೌಲಭ್ಯವಿರುವ ಮೊಬೈಲ್ ಸಾಧನದ ನೆರವಿನ ಮೂಲಕ ಪತ್ತೆ ಹಚ್ಚಿ,ಉಳಿದವರಿಗೆ ಅವರ ಸ್ಥಾನ ತಿಳಿಸುತ್ತದೆ.ಇದನ್ನು ಒಂದು ಆಟವಾಗಿಸಲೂ ತಾಣ ಪ್ರಯತ್ನಿಸುತ್ತದೆ.ಆ ಸ್ಥಳದ ಬೇರೆ ಬೇರೆ ಕಡೆಯ ನಿಶ್ಚಿತ ಸ್ಥಳಗಳಲ್ಲಿರುವವರಿಗೆ ಅವರಿರುವ ಸ್ಥಳದ ಆಧಾರದಲ್ಲಿ ಅಂಕಗಳನ್ನು ನೀಡಿ,ಅವರ ಒತ್ತು ಅಂಕಗಳನ್ನು ಲೆಕ್ಕ ಹಾಕಿ,ಅದರ ಆಧಾರದಲ್ಲಿ,ಪ್ರತಿ ಸ್ಥಾನದಲ್ಲಿರುವವರನ್ನು ಮೇಯರ್ ಎಂದು ಕರೆದು ಗೌರವ ನೀಡುವಂತಹ ಆಟವನ್ನು ಬಳಸುವುದು ಅಂತರ್ಜಾಲ ತಾಣದ ಯೋಜನೆ.ಆದರೆ ತಾಣ ಯಶಸ್ವಿಯಾಗಲು ಅದಕ್ಕೆ ಸಾಕಷ್ಟು ಬಳಕೆದಾರರು ಸಿಗಬೇಕು.ಟ್ವಿಟರ್ ಮೂರು ವರ್ಷದ ಹಿಂದೆ ಆರಂಭವಾದಾಗ,ಅದು ಯಾವ ಉತ್ಸಾಹವನ್ನೂ ಉಂಟು ಮಾಡಲಿಲ್ಲ. ಬಳಕೆದಾರರ ಸಂಖ್ಯೆ ಹೆಚ್ಚಿದಂತೆ,ಅದು ಹೆಚ್ಚಿನ ಉತ್ಸಾಹ,ಆಸಕ್ತಿಯನ್ನು ಉಂಟು ಮಾಡುತ್ತಿದೆ.ಒಂದು ವೇಳೆ ಟ್ವಿಟರ್‌ನಲ್ಲೇ ಪೋರ್‌ಸ್ಕ್ವೇರ್ ನೀಡುವ ಸೇವೆಯನ್ನು ನೀಡಲು ಆರಂಭಿಸಿದರೆ,ಆ ತಾಣ ಯಶಸ್ವಿಯಾಗುವುದು ಅಷ್ಟರಲ್ಲೇ ಇದೆ.
----------------------------------------------------------------------
ದೂರವಾಣಿ ಸಂಖ್ಯೆಯನ್ನು ಶಬ್ದವಾಗಿಸಿ

ದೂರವಾಣಿ ಸಂಖ್ಯೆಯನ್ನು ನೆನಪಿಡುವುದು ತ್ರಾಸದಾಯಕ.ಆದರೀಗ ಸೆಲ್‌ಪೋನ್ ಸಂಖ್ಯೆಗಳನ್ನು ನೆನಪಿಟ್ಟುಕೊಳ್ಳುವ ಕೆಲಸ ಮಾಡುವುದರಿಂದ,ನಮ್ಮ ಕೆಲಸ ಸಲೀಸಾಗಿದೆ.ಆದರೂ ತುರ್ತಿನ ಸಂದರ್ಭದಲ್ಲಿ ಕೆಲವು ಸಂಖ್ಯೆಗಳನ್ನಾದರೂ ನೆನಪಿನಲ್ಲಿಟ್ಟುಕೊಳ್ಳುವುದು ಕ್ಷೇಮ.ಸೆಲ್‌ಫೋನ್ ಕಳೆದುಹೋದಾಗ ಅಥವಾ ಕೈಕೊಟ್ಟಾಗ ತುರ್ತಾಗಿ ಕರೆ ಮಾಡಲು ಕೆಲವು ಸಂಖ್ಯೆಗಳಾದರೂ ನೆನಪಿನಲ್ಲಿದ್ದರೆ ಒಳ್ಳೆಯದು.ದೂರವಾಣಿ ಸಂಖ್ಯೆಗಳನ್ನು ಶಬ್ದಗಳಿಗೆ ಬದಲಿಸಿ,ನೆನಪಿನಲ್ಲಿಡುವ ಕ್ರಮವನ್ನು ಬಳಸುವುದು ಒಂದು ಪರಿಹಾರ. ಈ ರೀತಿ ನೀವು ನೀಡುವ ಸಂಖ್ಯೆಯನ್ನು ಶಬ್ದವಾಗಿ ಬದಲಿಸಿಕೊಡುವ ಕೆಲಸವನ್ನು ಮಾಡುವ ಅಂತರ್ಜಾಲ ತಾಣಗಳಿವೆ.www.dialabc.com,www.phonetic.com,www.phonespell.com ಇವೆಲ್ಲಾ ಅಂತಹ ಸೇವೆ ಒದಗಿಸುವ ತಾಣಗಳು.ಹಾಗೆಯೇ ನಿಮಗೆ ದೂರವಾಣಿ ಸಂಖ್ಯೆಯನ್ನು ಆರಿಸಿಕೊಳ್ಳುವಾಗ,ನಿಮ್ಮ ಹೆಸರಿನ ಅಥವಾ ಇನ್ಯಾವುದೇ ಶಬ್ದಕ್ಕೆ ನಿಕಟವಾದ ಸಂಖ್ಯೆಯನ್ನು ಕಂಡುಹಿಡಿಯಲು ಈ ಸೇವೆಗಳನ್ನು ಬಳಸಬಹುದು.ಈ ವಿಧಾನ ಬಳಸಿದಾಗ,ಉದಯವಾಣಿಯ ಸಂಪಾದಕೀಯ ವಿಭಾಗದ ದೂರವಾಣಿ ಸಂಖ್ಯೆಯಾದ 2570841 belroti,akroti ಇತ್ಯಾದಿಯಾಗಿ ಬದಲಾಗಿ ಬಿಡುತ್ತದೆ!
ಉದಯವಾಣಿ
*ಅಶೋಕ್‌ಕುಮಾರ್ ಎ

Monday, November 16, 2009

ಗೂಗಲ್ ಡೂಡಲ್ ಬಹುಮಾನ ಪುರುಪ್ರತಾಪನಿಗೆ

ಗೂಗಲ್ ಡೂಡಲ್ ಬಹುಮಾನ ಪುರುಪ್ರತಾಪನಿಗೆ


ಮಕ್ಕಳ ದಿನದಂದು ಗೂಗಲ್ ಅಂತರ್ಜಾಲ ತಾಣದಲ್ಲಿ ಕಾಣಿಸಿಕೊಳ್ಳುವ ಲೋಗೋವನ್ನು ನಿರ್ಧರಿಸಲು ಗೂಗಲ್ ಭಾರತದ ಮಕ್ಕಳಿಗಾಗಿ ಸ್ಪರ್ಧೆ ನಡೆಸಿತ್ತು.ನವಂಬರ್ ಹದಿನಾಲ್ಕರಂದು ಗೂಗಲ್ ತಾಣದಲ್ಲಿ ಪ್ರದರ್ಶಿತವಾದ ಚಿತ್ರ ಗುರ್ಗಾಂವಿನ ಪುರು ಪ್ರತಾಪ್ ಸಿಂಗ್ ಎಂಬ ಬಾಲಕನದ್ದು. ಈ ಚಿತ್ರದಲ್ಲಿ ಭಾರತದ ಸೊಗಸನ್ನು ಚಿತ್ರಿಸಲಾಗಿದೆ.ಜಿ ಅಕ್ಷರವನ್ನು ನವಿಲಾಗಿಸಿ,ಒ ಅಕ್ಷರವನ್ನು ಒಮ್ಮೆ ಜ್ಞಾನದ ಪ್ರತೀಕವಾಗಿಸಿ,ಇನ್ನೊಂದು ’ಒ’ವನ್ನು ವೈಜ್ಞಾನಿಕ ಪ್ರಗತಿಯ ಪ್ರತೀಕವನ್ನಾಗಿಸಿ,’ಜಿ’ಯನ್ನು ಕಾಶ್ಮೀರ ಭಾರತದ ಹೆಮ್ಮೆ ಎನ್ನುವುದನ್ನು ತೋರಿಸಲು,ಎಲ್ ಅಕ್ಷರವನ್ನು ದೇಶಕ್ಕೆ ಪ್ರಾಣವನ್ನು ಮುಡಿಪಾಗಿರುವ ಸೈನಿಕರ ಸೈನಿಕರ ಬಗ್ಗೆ ಗೌರವ ತೋರಿಸಲು ಮತ್ತು ಕೊನೆಯ ಇ ಅಕ್ಷರವನ್ನು ಗಾಂಧೀಜಿಯವರ ಮೌಲ್ಯಗಳ ಬಗ್ಗೆ ಗೌರವ ವ್ಯಕ್ತ ಪಡಿಸಲು ಬಳಸಿದ್ದಾಗಿ ಪುರು ಪ್ರತಾಪ್ ಸಿಂಗ್ ಹೇಳಿದ್ದಾರೆ.ಈ ಸ್ಪರ್ಧೆಗೆ ನಾಲ್ಕು ಸಾವಿರ ಮಕ್ಕಳು ತಮ್ಮ ರಚನೆಗಳನ್ನು ಕಳಿಸಿದ್ದರು.
ಇಂಗ್ಲೀಷ್-ಕನ್ನಡ ನಿಘಂಟು
ಡಿಕ್ಟ್‌ಡಿ ಎನ್ನುವುದು ಒಂದು ಅಂತರ್ಜಾಲ ಶಿಷ್ಟಾಚಾರ.ಅದನ್ನು ಬಳಸಿ,ಅಂತರ್ಜಾಲದಲ್ಲಿ ನಿಘಂಟು ಸೇವೆ ಪಡೆಯಬಹುದು.ಅಂತರ್ಜಾಲದಲ್ಲಿರುವ ಸಣ್ಣ ಸಣ್ಣ ನಿಘಂಟುಗಳನ್ನೆಲ್ಲಾ ಒಗ್ಗೂಡಿಸಿ,ಅದರ ಬಳಕೆ ಮಾಡಲು ಜನರಿಗೆ ಸಾಧ್ಯವಾಗಿಸುವುದು ಈ ಶಿಷ್ಟಾಚಾರದ ಹೆಗ್ಗಳಿಕೆ.ಇಂತಹ ಆನ್‌ಲೈನ್ ನಿಘಂಟುಗಳು ಇತರ ಭಾರತೀಯ ಭಾಷೆಗಳಲ್ಲಿದ್ದರೂ ಕನ್ನಡದಲ್ಲಿಲ್ಲ.ಕಾರ್ಕಳದ ವಾಸುದೇವ್ ಕಾಮತ್,ಕನ್ನಡ-ಇಂಗ್ಲೀಷ್ ಹಾಗೂ ಇಂಗ್ಲೀಷ್-ಕನ್ನಡ ನಿಘಂಟುವನ್ನು ಈ ರೀತಿ ರಚಿಸಲು ಸಿದ್ಧತೆ ನಡೆಸಿದ್ದಾರೆ.ನಿಘಂಟುವಿಗೆ ಶಬ್ದಗಳನ್ನು ಸೇರಿಸಲು ಕನ್ನಡಿಗರು ಕೈಜೋಡಿಸಬೇಕಾಗಿದೆ.ಉತ್ಸಾಹಿಗಳು ಅವರ ಬ್ಲಾಗ್ http://vasudevkamath.techfiz.com ನೋಡಬಹುದು.

ಬ್ಲಾಗಿನಿಂದ ಪುಸ್ತಕಕ್ಕೆ


http://www.ittigecement.blogspot.com ಎನ್ನುವ ಬ್ಲಾಗ್ ಮೂಲಕ ಬರವಣಿಗೆ ಆರಂಭಿಸಿ,ತಮ್ಮ ಬರವಣಿಗೆ ದಾಟಿಯಿಂದ ಬ್ಲಾಗ್‌ಲೋಕದಲ್ಲಿ ಮಿಂಚುತ್ತಿರುವ ಪ್ರಕಾಶ್ ಹೆಗ್ಡೆ ತಮ್ಮ ಬ್ಲಾಗ್ ಬರವಣಿಗೆಯನ್ನು ಪುಸ್ತಕವಾಗಿ ಹೊರತರುತ್ತಿದ್ದಾರೆ."ಹೆಸರೇ ಬೇಡ" ಎನ್ನುವ ಶೀರ್ಷಿಕೆ ಹೊತ್ತ ಪುಸ್ತಕದಲ್ಲಿ ತಮ್ಮ ವೃತ್ತಿಯಾದ ಕಟ್ಟಡ ನಿರ್ಮಾಣ ಗುತ್ತಿಗೆಯಲ್ಲಿ ಆಗಿರುವ ಅನುಭವಗಳು,ಜೀವನದ ರಸಪ್ರಸಂಗಗಳನ್ನು ಸ್ವಾರಸ್ಯಕರವಾಗಿ ಬರೆದಿದ್ದಾರೆ.ಬೆಂಗಳೂರಿನಲ್ಲಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ದಿವಾಕರ್ ಹೆಗಡೆಯವರ "ಉದ್ಧಾರ ಮತ್ತು ಸಂತೆ",ಪತ್ರಿಕಾ ವಿತರಕ ಮತ್ತು ಛಾಯಾಗ್ರಾಹಕ ಶಿವೂ ಅವರ"ವೆಂಡರ್ ಕಣ್ಣು"
ಕೂಡಾ ಬಿಡುಗಡೆಯಾಗಿವೆ.ಪತ್ರಿಕೆ ಹಂಚುವ ವಿತರಕರ,ಹುಡುಗರ ಅನುಭವ,ಕಷ್ಟ-ಸುಖಗಳ ಬಗ್ಗೆ ಹೊಸ ನೋಟ ಇಲ್ಲಿದೆ.
-------------------------------------------------------------------------------------------------------
ಕೆಪಿ ರಾವ್:ಕಂಪ್ಯೂಟರಿಗೆ ಕನ್ನಡ ಕಂಪು
ಕೆ ಪಿ ರಾವ್ ಎಂಬ ಹೆಸರು ಕಂಪ್ಯೂಟರಿನ ಕನ್ನಡ ಕೀಲಿ ಮಣೆ ಬಗ್ಗೆ ಬಂದಾಗಲೆಲ್ಲಾ ಕೇಳಿ ಬರುವ ಹೆಸರು.ಮೊದಲಾಗಿ ಕಂಪ್ಯೂಟರಿಗಾಗಿ  ಕನ್ನಡ ಅಕ್ಷರ ವಿನ್ಯಾಸಗಳನ್ನು ರೂಪಿಸಿದವರವರು. ತುಳು ತೆಲುಗು ಅಕ್ಷರ ವಿನ್ಯಾಸಗಳನ್ನು ಕಂಪ್ಯೂಟರಿಗಾಗಿ ಮಾಡಿದ ಸಾಧನೆ ಇವರದು. ಐವತ್ತು ವರ್ಷಗಳಿಂದ ಕಂಪ್ಯೂಟರುಗಳ ಜತೆ ಎಡತಾಕಿದ ಅನುಭವ ಇವರಿಗಿದೆ.ಕನ್ನಡಕ್ಕೆ ತರ್ಕಬದ್ಧ ಕೀಲಿ ಮಣೆ ವಿನ್ಯಾಸ ರೂಪಿಸಿದ ಇವರ ಸಾಧನೆ ಸರಕಾರವೂ ಗುರುತಿಸಿದೆ.ಡಾಟ್‌ಮ್ಯಾಟ್ರಿಕ್ಸ್ ಮುದ್ರಕಗಳಲ್ಲಿ ಕನ್ನಡ ಲಿಪಿ ಮೂಡಿಬರುವಂತೆ ಮಾಡುವುದರಲ್ಲಿಯೂ ಕೆ ಪಿ ರಾವ್ ಕೆಲಸ ಮಾಡಿದ್ದಾರೆ.ಟಾಟಾ ಪ್ರೆಸ್‌ನಲ್ಲಿ ಕೆಲಸ ಮಾಡಿದ್ದ ಕೆಪಿ ರಾವ್ ಈಗ ಮಣಿಪಾಲದ ಎಂ ಐ ಟಿಯ ಪ್ರಿಂಟಿಂಗ್ ಟೆಕ್ನಾಲಜಿ ವಿಭಾಗದ ಮುಖ್ಯಸ್ಥರು.ಇತ್ತೀಚೆಗೆ ನಡೆದ ಆಳ್ವಾಸ್ ನುಡಿಸಿರಿಯಲ್ಲಿ ಸನ್ಮಾನದ ಗೌರವ ದೊರಕಿದ ಬೆನ್ನಲ್ಲೇ ನಿಟ್ಟೆಯ ವಿದ್ಯಾರ್ಥಿವೃಂದವೂ ಇವರಿಗೆ ಗೌರವ ಸಲ್ಲಿಸಿತು.ಮಾನವ ಮತ್ತು ಕಂಪ್ಯೂಟರ್ ನಡುವಣ ಸಂವಹನ ಈಗ ಅವರ ಸಂಶೋಧನಾ ಕ್ಷೇತ್ರ.
-------------------------------------------------------------------
ಕ್ರೋಮ್ ಓಎಸ್ ಬಿಡುಗಡೆಯಾಗಿಯೇ ಬಿಟ್ಟಿತೇ?
ಗೂಗಲ್ ಕಂಪೆನಿಯ ಕ್ರೋಮ್ ಓಎಸ್ ಕಂಪ್ಯೂಟರ್ ಕಾರ್ಯನಿರ್ವಹಣಾ ತಂತ್ರಾಂಶಗಳ ಕ್ಷೇತ್ರದಲ್ಲಿ ಬಿರುಗಾಳಿ ಎಬ್ಬಿಸುವುದು ಖಚಿತ.ಇದರ ಮೊದಲ ಆವೃತ್ತಿ ಮುಂದಿನವಾರ ಬಿಡುಗಡೆಯಾಗಲಿದೆ ಎಂಬುದು ಕಂಪ್ಯೂಟರ್ ಜಗತ್ತಿನಲ್ಲಿ ಹಬ್ಬಿರುವ ವದಂತಿ; ಈಗಾಗಲೇ ಹಲವು ಸಲ ಕ್ರೋಮ್ ಓಎಸ್ "ಬಿಡುಗಡೆ" ಆಗಿದೆ. ಈ ವಾರಾಂತ್ಯದಲ್ಲಿ ಒಂದು ಐನೂರು ಮೆಗಾಬಿಟ್ ಗಾತ್ರದ ಕಡತವು ಡೌನ್‌ಲೋಡಿಗೆ ಲಭ್ಯವಿದ್ದು,ಅದನ್ನು ಅನುಸ್ಥಾಪಿಸಿ,ಕಂಪ್ಯೂಟರಿನಲ್ಲಿ ಬಳಸಲೂ ಸಾಧ್ಯವಾಗಿತ್ತು.ಆದರಿದು ನಕಲಿ ತಂತ್ರಾಂಶವೆನ್ನುವುದು ಬಹುತೇಕ ನಿಶ್ಚಿತ.ಕಂಪ್ಯೂಟರಿನ ಅತಿ ಕಡಿಮೆ ಸಂಪನ್ಮೂಲಗಳನ್ನು ಬಳಸಿ,ಅತ್ಯಂತ ಚುರುಕಾಗಿ ಚಾಲೂ ಆಗಿ,ಒಡನೆಯೇ ಕಂಪ್ಯೂಟರನ್ನು ಅಂತರ್ಜಾಲ ಜಾಲಾಟಕ್ಕೆ ಅಣಿಗೊಳಿಸುವುದು ಕ್ರೋಮ್ ಓಎಸ್‌ನ ಗುರಿ.
------------------------------------------------------------------------------
ಶೋಧ ಪಟುಗಳ ಮದುವೆ!
ಬಿಂಗ್ ಮತ್ತು ವೋಲ್ಫ್ರಾಮ್ ಆಲ್ಫಾ ಶೋಧ ಸೇವೆಗಳು ತಮ್ಮ ಸೇವೆಯನ್ನು ಜಂಟಿಯಾಗಿ ನೀಡಲು ನಿರ್ಧರಿಸಿವೆ.ವೋಲ್ಫ್ರಾಮ್ ಆಲ್ಫಾ ಶೋಧ ಸೇವೆಯು ಶೋಧ ನಡೆಸಿದಾಗ,ಕೊಂಡಿಗಳನ್ನು ನೀಡದೆ,ಅವುಗಳಿಗೆ ಉತ್ತರ ತಯಾರಿಸಿ,ಕಡತ ತಯಾರಿಸಿ ಒದಗಿಸುತ್ತದೆ.ಬಿಂಗ್ ಆದರೋ ಈಗ ನಿಧಾನವಾಗಿಯಾದರೂ ಜನರಿಗೆ ಪ್ರಿಯವಾಗಿ ಸುಮಾರು ಹತ್ತು ಶೇಕಡಾ ಮಾರುಕಟ್ಟೆ ಪಾಲನ್ನು ಪಡೆದುಕೊಂದಿದೆ. ಗೂಗಲ್‌ನ ಎಪ್ಪತ್ತು ಶೇಕಡಾ ಪಾಲಿಗೆ ಹೋಲಿಸಿದರೆ,ಇದು ಜುಜುಬಿ ಅನಿಸುತ್ತದಾದರೂ,ಮೈಕ್ರೋಸಾಫ್ಟ್ ಕಂಪೆನಿಯು ಈಗ ತಾನೇ ಶೋಧ ಸೇವೆಯ ಮೂಲಕ ಸುದ್ದಿ ಮಾಡುತ್ತಲಿದೆ.
------------------------------------------------------------------------------------
ಗೂಗಲ್ ಪೋನ್ ಕಂಪೆನಿಯಾದೀತೇ?
ಗೂಗಲ್ ಗಿಜ್ಮೋ5 ಎನ್ನುವ ಫೋನ್ ಕಂಪೆನಿಯನ್ನು ತನ್ನದಾಗಿಸಿಕೊಂಡಿದೆ.ಇದರೊಂದಿಗೆ ಗೂಗಲ್ ತನ್ನ ಗೂಗಲ್ ವಾಯಿಸ್ ಸೇವೆಯನ್ನು ಇನ್ನಷ್ಟು ಚುರುಕಾಗಿಸಲಿದೆ. ಅಮೆರಿಕಾದಲ್ಲಿ ಅಂತರ್ಜಾಲ ಕರೆಗಳ ಮೂಲಕ ಜಂಗಮ,ಸಂಚಾರಿ ದೂರವಾಣಿ ಅಥವಾ ಕಂಪ್ಯೂಟರಿಗೆ ಕರೆ ಮಾಡುವುದನ್ನು ಬಹುತೇಕ ಉಚಿತವಾಗಿಸಿರುವ ಗೂಗಲ್,ಅಂತಾರ್ರಾಷ್ಟ್ರೀಯ ಕರೆಗಳನ್ನೂ ಮಾಡಲು ಸಾಧ್ಯವಾಗಿಸಿದೆ.ಜತೆಗೇ ಉಚಿತ ಎಸೆಮ್ಮೆಸ್ ಸೇವೆ,ಉಚಿತ ಗುಂಪು ಕರೆ,ಮುದ್ರಿತ ಸಂಭಾಷಣೆ ಮೂಲಕ ಸಂದೇಶ ಕೇಳಿಸುವ ಸೌಲಭ್ಯ ಇವೆಲ್ಲವನ್ನೂ ಗ್ರಾಹಕರಿಗೆ ಒದಗಿಸುವುದು ಗೂಗಲ್ ಗುರಿ.ಗೂಗಲ್ ವಾಯಿಸ್ ಸೇವೆ ಇದೀಗ ಅಮೆರಿಕಾದಲ್ಲಿ ಮಾತ್ರಾ ಲಭ್ಯವಿರುವ ಸೇವೆ. ಅಲ್ಲಿ ಐದು ಲಕ್ಷ ಚಂದಾದಾರರು ಗೂಗಲ್ ವಾಯಿಸನ್ನು ಬಳಸಲು ಆಹ್ವಾನ ಪಡೆದಿದ್ದಾರೆ.ದಶಲಕ್ಷ ಜನರು ಕರೆಗಳ ಲಾಭ ಪಡೆದು ಕೊಳ್ಳುತ್ತಿದ್ದಾರೆ.ಇತರ ದೂರಸಂಪರ್ಕ ಕಂಪೆನಿಗಳು,ತನ್ನ ಸೇವೆಗೆ ವಿರೋಧ ಮಾಡದಂತೆ ಗೂಗಲ್ ಎಚ್ಚರ ವಹಿಸಿದೆ.ತನ್ನ ಸೇವೆಯು ದೂರವಾಣಿ ಇಲ್ಲದಂತೆ ಮಾಡದೆ,ದೂರವಾಣಿ ಇದ್ದವರಿಗೆ ನೀಡುವ ಸೇವೆ ಎಂದು ಅದು ಹೇಳಿಕೊಳ್ಳುತ್ತಿದೆ.
ಉದಯವಾಣಿ
*ಅಶೋಕ್‌ಕುಮಾರ್ ಎ

Monday, November 09, 2009

ಅಂತರ್ಜಾಲಕ್ಕೆ ಅಡಿಯಿರಿಸಿದ "ಅಡಿಕೆ ಪತ್ರಿಕೆ"

ಅಂತರ್ಜಾಲಕ್ಕೆ ಅಡಿಯಿರಿಸಿದ "ಅಡಿಕೆ ಪತ್ರಿಕೆ"



ಅಡಿಕೆ ಪತ್ರಿಕೆಯೂ ರಾಜ್ಯೋತ್ಸವದ ದಿನದಿಂದ ಅಂತರ್ಜಾಲ ತಾಣದಲ್ಲಿ  www.adikepatrike.com  ಎಂಬ ವಿಳಾಸದಲ್ಲಿ ಲಭ್ಯವಿದೆ.ಪತ್ರಿಕೆಯ ಹಳೆ ಸಂಚಿಕೆಗಳ ಪಿಡಿಎಫ್ ಪ್ರತಿಗಳು ಡೌನ್‌ಲೋಡಿಗೆ ಲಭ್ಯವಿರುವುದು ತಾಣದ ವಿಶೇಷತೆ.ಮುಂದೆ ಪತ್ರಿಕೆಗೆ ಆನ್‌ಲೈನ್ ಚಂದಾದಾರರಾಗುವ ಅವಕಾಶವೂ ಸಿಗಲಿದೆ.ಕೃಷಿಕರ ಅನುಭವವನ್ನು ಪರಸ್ಪರ ಹಂಚಿಕೊಳ್ಳಲು ಅನುಕೂಲ ಕಲ್ಪಿಸಿದ್ದ ಅಡಿಕೆ ಪತ್ರಿಕೆ ಮುದ್ರಿತ ಪತ್ರಿಕೆಯ ವ್ಯಾಪ್ತಿಯಿಂದ ಹೊರಬಂದು ತನ್ನ ಕ್ಷೇತ್ರವನ್ನು ವಿಸ್ತಾರಗೊಳಿಸಿಕೊಂಡಿರುವುದು,ಉತ್ತಮ ಬೆಳವಣಿಗೆ.
ಕೃಷಿಸಂಪದವೆಂಬ ಇನ್ನೊಂದು ಇ-ಪತ್ರಿಕೆಯೂ ಪ್ರಕಾಶನ ಆರ‍ಂಭಿಸಿದ್ದು,ಇದೀಗ ಎರಡನೇ ಸಂಚಿಕೆಯೂ ಬಿಡುಗಡೆಯಾಗಿದೆ.http://krushi.sampada.net ವಿಳಾಸದಲ್ಲಿ ಇದು ಲಭ್ಯವಿದೆ.ಅಡ್ಡೂರು ಕೃಷ್ಣರಾವ್ ಅವರ ಸಂಪಾದಕತ್ವದ ಹೊಸ ಇ-ಪತ್ರಿಕೆಯ ಮೊದಲ ಸಂಚಿಕೆ ಹನ್ನೆರಡುಸಾವಿರಕ್ಕೂ ಹೆಚ್ಚು ಸಲ ಅಂತರ್ಜಾಲದಿಂದ ಡೌನ್‌ಲೋಡ್ ಆಗಿದೆ.ಕೃಷಿ ಪತ್ರಿಕೆಗಳಿಗೆ ಆನ್‌ಲೈನ್ ಓದುಗರು ಇರುವುದು ಅಚ್ಚರಿ ಹುಟ್ಟಿಸುವ ಸಂಗತಿ.
-------------------------------------------------------------------------------------------------
ಶೈಕ್ಷಣಿಕ ಸಂಸ್ಥೆಗಳು-ಕಂಪೆನಿಗಳ ನಡುವೆ ಹೆಚ್ಚುತ್ತಿರುವ ಬಾಂಧವ್ಯ
ಭಾರತದಲ್ಲಿ ಶೈಕ್ಷಣಿಕ ಸಂಸ್ಥೆಗಳು ಮತ್ತು ಕಂಪೆನಿಗಳ ನಡುವೆ ಹೆಚ್ಚಿನ ಸಂವಹನ ಇಲ್ಲ.ಅವುಗಳು ಪ್ರತ್ಯೇಕವಾಗಿ ಕೆಲಸ ಮಾಡಿರುವುದರಿಂದ ನಮ್ಮ ಪದವೀಧರ ವಿದ್ಯಾರ್ಥಿಗಳು ಪಡೆದ ತರಬೇತಿ, ಕೆಲಸದಲ್ಲಿ ಉಪಯೋಗವಾಗದಿರುವುದೂ ಇದೆ. ನಿಧಾನವಾಗಿಯಾದರೂ ಸಂಸ್ಥೆಗಳ ನಡುವೆ ಸಂಪರ್ಕ ಹೆಚ್ಚುತ್ತಿದ್ದು,ವಿದ್ಯಾರ್ಥಿಗಳಿಗಾಗಿ ಕಂಪೆನಿಗಳು ನಡೆಸುತ್ತಿರುವ ಸ್ಪರ್ಧೆಗಳ ಸಂಖ್ಯೆ ಹೆಚ್ಚುತ್ತಿರುವುದು ಕಂದುಬಂದಿದೆ.ಇನ್ಫೋಸಿಸ್ ಕಂಪೆನಿಯು "ಕ್ಯಾಂಪಸ್ ಕನೆಕ್ಟ್" ಎಂಬ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳನ್ನು ಐಟಿ ಕಂಪೆನಿಗಳಲ್ಲಿ ಕೆಲಸ ಮಾಡಲು ತಯಾರುಗೊಳಿಸಲು ಪ್ರಯತ್ನಿಸುತ್ತಿದೆ.ಇನ್ಫೋಸಿಸ್, ಇದೀಗ ತಾನೇ ಏಸ್ಪಿರೇಶನ್-2020 ಎಂಬ ಪ್ರೊಗ್ರಾಮಿಂಗ್ ಸ್ಪರ್ಧೆಯನ್ನು ಹಮ್ಮಿಕೊಂಡಿದೆ.ಐಬಿಎಂ ಕಂಪೆನಿಯು ವಿದ್ಯಾರ್ಥಿಗಳಿಗಾಗಿ ಪ್ರಾಜೆಕ್ಟ್ ಅಭಿವೃದ್ಧಿ ನಡೆಸುವ ಸ್ಪರ್ಧೆಯನ್ನು ಆಯೋಜಿಸಿದ್ದು,ತಂತ್ರಾಂಶ ಅಭಿವೃದ್ಧಿಗೆ ಸಹಾಯ,ಸಾಧನಗಳನ್ನು ಒದಗಿಸುತ್ತಿದ್ದು,ಸ್ಪರ್ಧೆಯನ್ನು "ದ ಗ್ರೇಟ್ ಮೈಂಡ್ ಚ್ಯಾಲೆಂಜ್" ಎಂಬ ಹೆಸರಿನಿಂದ ಕರೆದಿದೆ.ಅತ್ತ ಇಂಟೆಲ್ ಎಂಬೆಡೆಡ್ ವ್ಯವಸ್ಥೆಗಳ ಮೇಲಿನ "ಎಂಬೆಡ್ಡೆಡ್ ಚ್ಯಾಲೆಂಜ್" ಎಂಬ ಸ್ಪರ್ಧೆಯನ್ನು ನಡೆಸುತ್ತಿದ್ದು,ವಿದ್ಯಾರ್ಥಿಗಳು ಈ ವ್ಯವಸ್ಥೆಯಲ್ಲಿ ಅಳವಡಿಸಬಹುದಾದ ವಿನೂತನ ಸವಾಲುಗಳನ್ನು ಒಡ್ಡಲು ಆಹ್ವಾನಿಸಿದೆ.ಮೈಕ್ರೋಸಾಫ್ಟ್ ಕಂಪೆನಿಯು ಇಮ್ಯಾಜಿನ್ ಕಪ್-2010 ಎಂಬ ಸ್ಪರ್ಧೆಯ ಮೂಲಕ ವಿದ್ಯಾರ್ಥಿಗಳಿಂದ ಹೊಸ ಆಲೋಚನೆಗಳನ್ನು ಸ್ವಾಗತಿಸಿದೆ.ಹ್ಯುಲೆಟ್-ಪ್ಯಕರ್ಡ್ ಕಂಪೆನಿಯಾದರೋ "ಟಚ್ ದ್ ಫ್ಯೂಚರ್" ಸ್ಪರ್ಧೆಯ ಮೂಲಕ,ತಾನೊಡ್ಡುವ ಸವಾಲುಗಳಿಗೆ ವಿದ್ಯಾರ್ಥಿಗಳು ತಮ್ಮ ಪರಿಹಾರವನ್ನು ವಿಡಿಯೋ ಮೂಲಕ ಕಳಿಸಲು ಆಹ್ವಾನ ನೀಡಿದೆ.
ಟಿಸಿಎಸ್,ಇಎಂಸಿ,ಮೈಕ್ರೋಸಾಪ್ಟ್,ಆಲ್ಟೇರಾ,ಐಬಿಎಂ,ಕ್ಸೈಲಿಂಕ್ಸ್ ಇವುಗಳೆಲ್ಲಾ, ಶೈಕ್ಷಣಿಕ ಸಂಸ್ಥೆಗಳ ಜತೆ ಹೊಂದಾಣಿಕೆಗಳನ್ನು ಮಾಡಿಕೊಂಡು,ತಮ್ಮ ತಂತ್ರಾಂಶಗಳನ್ನು ವಿದ್ಯಾಸಂಸ್ಥೆಗಳಿಗೆ ಇಳಿಸಿದ ದರಗಳಲ್ಲಿ ಅಥವಾ ಉಚಿತವಾಗಿ ನೀಡಿ,ವಿದ್ಯಾರ್ಥಿಗಳಿಗೆ ಸರ್ಟಿಫಿಕೇಶನ್ ಪರೀಕ್ಷೆಗಳನ್ನು ನಡೆಸುವಂತಹ ಚಟುವಟಿಕೆಗಳಿಗೆ ಮುಂದಾಗಿವೆ.ವಿಪ್ರೋ ಕಂಪೆನಿಯು ಇವೆಲ್ಲವುಗಳಿಗಿಂತ ಭಿನ್ನವಾದ,ಶಿಕ್ಷಕ ತರಬೇತಿ ಕಡೆ ಗಮನ ಕೊಟ್ಟಿದ್ದು,ವಿದ್ಯಾರ್ಥಿಗಳಿಗೆ ಚಟುವಟಿಕೆಗಳ ಮೂಲಕ ಕಲಿಕೆಯ ವಾತಾವರಣ ಸೃಷ್ಟಿಸುವ ಮಿಶನ್10ಎಕ್ಸ್ ಕಾರ್ಯಕ್ರಮದ ಮೂಲಕ ಹೊಸ ಹಾದಿ ಹಿಡಿದಿದೆ.ಆದರೆ ಪ್ರಯೋಗಾಲಯಗಳನ್ನೇ ಕಂಪೆನಿಗಳು ಪ್ರಾಯೋಜಿಸುವಂತಹ ದೊಡ್ಡ ಮಟ್ಟದ ಸಹಕಾರಕ್ಕಿನ್ನೂ ಕಂಪೆನಿಗಳು ಮನಮಾಡಿಲ್ಲ.
------------------------------------------------------------------------------------------------------------
ಆಗಸಕ್ಕೆ ಏಣಿ ಏರಿಸುವ ಸ್ಪರ್ಧೆ!
ಆಕಾಶದಿಂದ ನೇತಾಡುತ್ತಿರುವ ಹಗ್ಗವನ್ನು ಅತಿವೇಗದಲ್ಲಿ ಏರುವ ಸಾಧನವನ್ನು ಅನ್ವೇಷಿಸುವ ಸವಾಲೊಡ್ಡಿ,ನಾಸಾ ಸ್ಪರ್ಧೆಯನ್ನು ಆಯೋಜಿಸಿದೆ.ಇದರಲ್ಲಿ ಗೆದ್ದವರಿಗೆ ಬಹುಮಾನ ಎರಡು ದಶಲಕ್ಷ ಡಾಲರುಗಳು.ನ್ಯೂಯಾರ್ಕಿನ ಲೇಸರ್‌ಮೋಟಿವ್ ಕಂಪೆನಿಯ ಸಾಧನವು ಪ್ರತಿಸೆಕೆಂಡಿಗೆ ಹದಿಮೂರು ಕಿಲೋಮೀಟರ್ ವೇಗದಲ್ಲಿ,ಹೆಲಿಕಾಪ್ಟರ್‌ನಿಂದ ನೇತಾಡುತ್ತಿರುವ ಹಗ್ಗವೊಂದನ್ನು ಏರುವ ಮೂಲಕ ಇದುವರೆಗಿನ ಅತಿವೇಗದ ಸಾಧನವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಬಾಹ್ಯಾಕಾಶಕ್ಕೆ ರಾಕೆಟ್ ಮೂಲಕವಲ್ಲದೆ ಇನ್ಯಾವುದಾದರೂ ಸಾಧನದ ಮೂಲಕ ಲಗ್ಗೆ ಹಾಕುವ ಕತೆಗಳಿಂದ ಸ್ಫೂರ್ತಿ ಪಡೆದು,ಈ ಸ್ಪರ್ಧೆಯು ನಡೆದಿದೆ. ಬಾಹ್ಯಾಕಾಶದ ಭೂಸ್ಥಿರ ಕಕ್ಷೆಯಲ್ಲಿ ತಿರುಗುತ್ತಿರುವ ಉಪಗ್ರಹದಿಂದ ಇಳಿಬಿಟ್ಟಿರುವ ದೃಡವಾದ ಹಗ್ಗದಿಂದ ಸಾಧನವನ್ನು ಉಪಯೋಗಿಸಿ,ಮೇಲೇರುವುದು ಮುಂದೆ ನಿಜವಾಗುವುದು ಎಂಬುದು ನಾಸಾ ಕನಸು.
-------------------------------------------------------------------
ಮಗುವಿನ ಅಳು ಯಾತಕ್ಕೆ?

ಮಗು ಅಳುತ್ತಿರುವುದು ಹಸಿವೆಯಿಂದಲೇ,ನೋವಿನಿಂದಲೇ,ಉದಾಸೀನವಾಗಿಯೇ,ಬೇಸತ್ತೇ ಎಂದು ವಿಶ್ಲೇಷಿಸಿ,ಕಂಡುಕೊಳ್ಳುವ ಐಫೋನ್ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲಾಗಿದೆ.ಬಾರ್ಸಿಲೋನಾದ ಬಿಲೂಪ್ ಟೆಕ್ನಾಲಜಿಯು ಅಭಿವೃದ್ಧಿಸಿಪಡಿಸಿದ ಈ ವಿಶ್ಲೇಷಣಾ ತಂತ್ರ,ಬಹುತೇಕ ಸಂದರ್ಭಗಳಲ್ಲಿ ಸರಿಯಾಗಿರುತ್ತದೆ ಎಂದು ಕಂಪೆನಿಯು ಹೇಳಿಕೊಂಡಿದೆ. ಮಗುವಿನ ಅಳುವಿನ ಗುಟ್ಟನ್ನು ಪತ್ತೆ ಹಚ್ಚಲು. ಕೇವಲ ಹತ್ತೇ ಸೆಕೆಂಡುಗಳ ಕಾಲಾವಧಿಯು ಸಾಕಾಗುತ್ತದೆ.ವಿಶ್ಲೇಷಣೆ ನಡೆಸಿದೊಡನೆ,ಹೆತ್ತವರಿಗೆ ಐಫೋನ್‌ನಲ್ಲಿ ಸಲಹೆಯು ಪ್ರದರ್ಶಿತವಾಗುತ್ತದೆ.ಈ ತಂತ್ರಾಂಶಕ್ಕೆ ಸದ್ಯ ಹತ್ತು ಡಾಲರು ಬೆಲೆಯಿದ್ದು,ಕೆಲದಿನಗಳ ನಂತರ ಬೆಲೆ ಮೂರು ಪಟ್ಟು ಹೆಚ್ಚಾಗಲಿದೆ.ಐಫೋನಿನ ತಂತ್ರಾಂಶಗಳು ಐಸ್ಟೋರ್ಸ್ ಎನ್ನುವ ಆನ್‌ಲೈನ್ ಅಂಗಡಿಗಳಲ್ಲಿ ಲಭ್ಯವಿವೆ.
-------------------------------------------------------------------------------------------------
ಗುಟ್ಟು ರಟ್ಟು ಮಾಡದ ಅನುವಾದಕ
ಕನ್ನಡಕದಂತೆ  ಧರಿಸಬಲ್ಲ ಅನುವಾದಕವನ್ನು ಎನ್.ಇ.ಸಿ. ಕಂಪೆನಿಯು ತಯಾರಿಸಿದೆ.ಇದರಲ್ಲಿ ಸಂಭಾಷಣೆಯಲ್ಲಿ ತೊಡಗಿರುವವರ ಧ್ವನಿಯನ್ನು ಸೆರೆ ಹಿಡಿದು,ಅದನ್ನು ಲಿಪ್ಯಂತರ ಮಾಡಿ,ಮತ್ತೆ ಧ್ವನಿಯನ್ನು ಹೊರಡಿಸುವ ತಂತ್ರಾಂಶ ಬಳಸಿ,ಅನುವಾದ ಮಾಡಿಸಿ ಅದನ್ನು ಕಿವಿಯ ಬಳಿ ಇಟ್ಟ ಇಯರ್‌ಫೋನಿನಲ್ಲಿ ಧ್ವನಿ ಹೊರಡಿಸಲಾಗುತ್ತದೆ.ಕಣ್ಣಿನ ಬಳಿಯಿಟ್ಟ ತೆರೆಯ ಮೂಲಕ,ಬರಹವನ್ನು ಕಣ್ಣಿನ ರೆಟಿನಾದ ಮೇಲೆ ಮೂಡಿಸುವ ಸೌಕರ್ಯವೂ ಇದೆ.ಮಾರಾಟ ಪ್ರತಿನಿಧಿಗಳು,ಗ್ರಾಹಕರ ಜತೆ ಮಾತನಾಡುವಾಗ,ಸಹಾಯ ಮಾಡುವುದು ಈ ವ್ಯವಸ್ಥೆಯ ಉದ್ದೇಶ.ಗುಟ್ಟು ಕಾಪಾಡಬೇಕಾದ ಸಂದರ್ಭಗಳಲ್ಲೂ ಇಂತಹ ಅನುವಾದಕ ಬಳಸುವುದೇ ಒಳಿತು.ಗ್ರಾಹಕನ ಖರೀದಿಯ ಅಭ್ಯಾಸಗಳ ಬಗ್ಗೆ ಮಾಹಿತಿಯಿದ್ದರೆ,ಅದನ್ನು ಕಣ್ಣಿನ ಬಳಿ ಪ್ರದರ್ಶಿಸಿ,ಮಾರಾಟ ಪ್ರತಿನಿಧಿಗೆ ಸಹಾಯ ಮಾಡುವ ಇರಾದೆಯೂ ಇದೆ.
-----------------------------------------------------------------------------------
ಗೂಗಲ್ ಡ್ಯಾಶ್‌ಬೋರ್ಡ್
ಗೂಗಲ್ ತನ್ನ ಬಳಕೆದಾರನ ಬಗ್ಗೆ ಸಂಗ್ರಹಿಸಿರುವ ಸಕಲ ಮಾಹಿತಿಯನ್ನೂ,ಒಂದೇ ಕಡೆ ಒದಗಿಸುವ ವ್ಯವಸ್ಥೆಯೇ ಗೂಗಲ್ ಡ್ಯಾಶ್‌ಬೋರ್ಡ್.ಮಿಂಚಂಚೆ ಖಾತೆ ವಿಳಾಸ,ಗೂಗಲ್ ಮೂಲಕ ತೆರೆದಿರುವ ಕಡತಗಳ ವಿವರಗಳು,ಬ್ಲಾಗ್ ವಿವರಗಳು,ಕಾರ್ಯಕ್ರಮ ವಿವರಗಳಿರುವ ವ್ಯಕ್ತಿಯ ಕ್ಯಾಲೆಂಡರ್ ಹೀಗೆ ಗೂಗಲ್ ವ್ಯಕ್ತಿಯ ಬಗ್ಗೆ ಇಟ್ಟಿರುವ ಸಕಲ ಮಾಹಿತಿಯನ್ನೂ ಒಂದೇ ಕಡೆ ಒದಗಿಸುವ ವಿನೂತನ ಸೇವೆಯ ಹೆಸರೇ ಗೂಗಲ್ ಡ್ಯಾಶ‌ಬೋರ್ಡ್.

udayavani
*ಅಶೋಕ್‌ಕುಮಾರ್ ಎ

Monday, November 02, 2009

ಹಿಂದಿಯಲ್ಲೂ ಅಂತರ್ಜಾಲ ತಾಣದ ಹೆಸರು ಸಾಧ್ಯ

ಹಿಂದಿಯಲ್ಲೂ ಅಂತರ್ಜಾಲ ತಾಣದ ಹೆಸರು ಸಾಧ್ಯ
ಇಂಗ್ಲೀಷ್(ಲ್ಯಾಟಿನ್) ಅಕ್ಷರಗಳ ಹೊರತಾದ ಇತರ ಭಾಷೆಗಳಲ್ಲೂ ಅಂತರ್ಜಾಲ ತಾಣದ ವಿಳಾಸವನ್ನು ನೀಡಲು ಸಾಧ್ಯವಾಗಬೇಕೆಂಬುದು ಹಳೆಯ ಕನಸು.ಕಂಪ್ಯೂಟರಿನಲ್ಲಿ ಯುನಿಕೋಡ್ ಮೂಲಕ ಎಲ್ಲಾ ಭಾಷೆಗಳ ಬಳಕೆ ಸಾಧ್ಯವಾಗಿರುವಾಗ,ಅಂತರ್ಜಾಲ ತಾಣದ ವಿಳಾಸ A-Z,0-9 ಇವುಗಳಿಗೆ ಯಾಕೆ ಸೀಮಿತವಾಗಿರಬೇಕು ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಲೇ ಇದೆ. ಅಂತರ್ಜಾಲದ ನೂರಹದಿನಾರು ಕೋಟಿ ಬಳಕೆದಾರರು ಇಂಗ್ಲೀಷಿನಂತಹ ಲ್ಯಾಟಿನ್ ಲಿಪಿಯೇತರ ಬಳಸುವ ಭಾಷೆಗಳ ಬಳಕೆ ಮಾಡುತ್ತಿದ್ದರೂ, ಆ ಭಾಷೆಗಳಿಗೆ ಅಂತರ್ಜಾಲದ ವಿಳಾಸದಲ್ಲಿ ಪ್ರಾತಿನಿಧ್ಯ ಸಿಗದಿರುವುದು ನ್ಯಾಯವಲ್ಲ.ಇದೀಗ ಹಿಂದಿ,ಚೀನೀ,ಅರೇಬಿಕ್ ಅಂತಹ ಭಾಷೆಗಳನ್ನು ಹಲವು ನಿಯಮಗೊಳಿಗೆ ಒಳಪಟ್ಟು,ಯು ಆರ್ ಎಲ್ ಎಂದು ಕರೆಯಲ್ಪಡುವ ಅಂತರ್ಜಾಲದ ವಿಳಾಸದಲ್ಲಿ ಬಳಸಲು ಅನುಮತಿಸಲಾಗಿದೆ.ICANN ಎನ್ನುವ ಅಂತರ್ಜಾಲದ ಹೆಸರು ಮತ್ತು ಸಂಖ್ಯೆಗಳ ನಿಗಮವು ಈ ನಿರ್ಣಯ ಕೈಗೊಂಡಿದೆ. ಪ್ರತಿ ಭಾಷೆಗೂ ಅದರದ್ದೇ ಆದ ಅಂತ್ಯ ಪದವನ್ನು ಬಳಸಬೇಕು ಎನ್ನುವ ನಿಯಮವನ್ನು ವಿಧಿಸಲಾಗಿದೆ.ಕಾಂ, ನೆಟ್ ಮುಂತಾದ ಪದಗಳನ್ನು ಹೆಸರಿನ ಅಂತ್ಯದಲ್ಲಿ ಬಳಸಲು ಅನುಮತಿ ಇಲ್ಲ. ಈ ಬಳಕೆ ಮುಂದಿನ ವರ್ಷ ಸಾಧ್ಯವಾಗಬಹುದು.ನಿಧಾನವಾಗಿ ಎಲ್ಲ ಭಾಷೆಗಳಲ್ಲಿಯೂ ಅಂತರ್ಜಾಲ ವಿಳಾಸಕ್ಕೆ ಅನುಮತಿ ಸಿಗಬಹುದು.ಹೊಸ ಭಾಷೆಗಳ ಸೇರ್ಪಡೆ ಸಾಧ್ಯವಾಗಲು  ಅಂತರ್ಜಾಲದ ಯುಆರೆಲ್‌ಗೆ ಸಮನಾದ ಸಂಖ್ಯಾವಿಳಾಸ ಒದಗಿಸುವ ಡಿಎನ್‌ಎಸ್ ಎನ್ನುವ ಸರ್ವರ್ ಕಾರ್ಯವಿಧಾನದಲ್ಲಿ ಬದಲಾವಣೆ ಮಾಡಬೇಕಾಗುತ್ತದೆ.
-------------------------------------
ಜಾಲಾಟ ಕಂಪ್ಯೂಟರ್‌ಗೆ ಅಪಾಯ ತಂದೀತು!
ಫೇಸ್‌ಬುಕ್,ಟ್ವಿಟರ್ ಅಂತಹ ಅಂತರ್ಜಾಲ ತಾಣಗಳು ಯುವಜನತೆಯ ಮೆಚ್ಚಿನ ತಾಣಗಳಾಗಿ ಬಿಟ್ಟಿವೆ.ಜನರು ಕಲೆತು,ತಮ್ಮ ಅನಿಸಿಕೆಯನ್ನು ಮುಕ್ತವಾಗಿ ಹೇಳಿಕೊಳ್ಳುವ,ಕಡತಗಳನ್ನು ಹಂಚಿಕೊಳ್ಳುವ ತಾಣವಾಗಿ ಬಿಟ್ಟಿದೆ.ಆದರೆ ಇಲ್ಲಿ ಲಭ್ಯವಾಗುವ ಅಂತರ್ಜಾಲ ತಾಣದ ಕೊಂಡಿಗಳನ್ನು ಸಿಕ್ಕಂತೆ ಕ್ಲಿಕ್ಕಿಸುವುದು ಅಪಾಯ ತಂದೀತು.ಹಿಂದೆಲ್ಲಾ,ಮಿಂಚಂಚೆಯ ಮೂಲಕ ಬರುತ್ತಿದ್ದ ಕಡತಗಳು ಅಪಾಯಕಾರಿ ವೈರಸ್‌ಗಳನ್ನು ಕಂಪ್ಯೂಟರಿಗೆ ಬಿತ್ತಿ,ಹಾನಿ ಮಾಡುತ್ತಿದ್ದ ಪ್ರಕರಣಗಳು ನಡೆದರೆ,ಈಗ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್,ಟ್ವಿಟರ್ ತಾಣಗಳು ಅಂತಹ ಕಡತಗಳನ್ನು ಹಬ್ಬಿಸುವ ಮೂಲಗಳಾಗಿ ಬಿಟ್ಟಿವೆ.ಗುರುತು ಪರಿಚಯವಿಲ್ಲದವರು ಅಲ್ಲಿ ಹಾಕಿರುವ ಕಡತಗಳನ್ನು ಕ್ಲಿಕ್ಕಿಸಿದರೆ,ವೈರಸ್‌ನಂತಹ ಕಂಪ್ಯೂಟರ್ ತಂತ್ರಾಂಶಗಳು ಚಾಲೂ ಆಗಿ,ಕಂಪ್ಯೂಟರನ್ನು ವಶಕ್ಕೆ ತೆಗೆದುಕೊಂಡು ಅದರ ಮೂಲಕ,ಇತರ ಕಂಪ್ಯೂಟರುಗಳನ್ನು ದಾಳಿ ಮಾಡುವ ಮೂಲಗಳಾಗುವುದಿದೆ.ಹಾಗಾಗಿ ಅಂತರ್ಜರ್ಜಾಲದಲ್ಲಿ ಟ್ವಿಟರ್ ಮತ್ತು ಫೇಸ್‌ಬುಕ್‌ಗಳಂತಹ ತಾಣಗಳಲ್ಲಿ ಸಿಕ್ಕ ಕಡತಗಳನ್ನು ತೆರೆಯದಿರುವುದು ಉತ್ತಮ. ಬಲ್ಲವರು,ನಂಬಿಕಸ್ತ ಮೂಲಗಳಿಂದ ಬಂದ ಕೊಂಡಿಗಳನ್ನು ಮಾತ್ರಾ ತೆರೆಯುವುದು ಕ್ಷೇಮ.
-------------------------------------------------------------------------------
ನಿಟ್ಟೆಗೆ ಸಂಶೋಧನಾ ನಿಧಿ
ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಾಜ್ಞಾನ ಇಲಾಖೆಯು ವಿದ್ಯಾಸಂಸ್ಥೆಗಳಲ್ಲಿ ಸಂಶೋಧನೆಗೆ ಒತ್ತು ನೀಡುವ ದೃಷ್ಟಿಯಿಂದ ಅನುದಾನ ನೀಡುತ್ತದೆ. ನಿಟ್ಟೆಯ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ವಿದ್ಯಾಲಯದ ಕಂಪ್ಯೂಟರ್ ವಿಭಾಗಕ್ಕೆ ಹದಿನಾರು ಲಕ್ಷ ರೂಪಾಯಿಗಳ ಅನುದಾನ ನೀಡಲಾಗಿದ್ದು,ಬಹುಸಂಸ್ಕಾರಕ ಹೊಂದಿದ ಕಂಪ್ಯೂಟರುಗಳ ಕಾರ್ಯದಕ್ಷತೆ ಹೆಚ್ಚಿಸುವ ತಂತ್ರಾಂಶ ಅಭಿವೃದ್ಧಿ ಮಾದರಿಗಳನ್ನು ಸಂಶೋಧಿಸಲು, ಈ ನಿಧಿಯನ್ನು ಬಳಸಬೇಕಾಗುತ್ತದೆ. ಕಂಪ್ಯೂಟರ್ ವಿಭಾಗದ ಮುಖ್ಯಸ್ಥ,ಕಾಲೇಜಿನ ಉಪಪ್ರಾಂಶುಪಾಲರಾದ ಡಾ,ನಿರಂಜನ್ ಚಿಪ್ಳೂಣ್‌ಕರ್ ಮತ್ತು ನೀಲಿಮಾ ಅವರು ಈ ಸಂಶೋಧನಾ ಕಾರ್ಯಾವನ್ನು ನಿರ್ವಹಿಸಲಿದ್ದಾರೆ.
----------------------------------------------------------------
ಲ್ಯಾಪ್‌ಟಾಪ್,ಕಾಗದ ಎರಡರಲ್ಲೂ ಬರೆಯಿರಿ!


ಹ್ಯಾನ್‌ಟೆಕ್ ಎನ್ನುವ ಕಂಪೆನಿಯು ಲ್ಯಾಪ್‌ಟಾಪ್ ಮತ್ತು ಕಾಗದ ಇವೆರಡರ ಮೇಲೆಯೂ ಬರೆವ ಟ್ಯಾಬ್ಲೋ ಎನ್ನುವ ಸಾಧನವನ್ನು ತಯಾರಿಸಿದೆ.ಇದನ್ನುಪಯೋಗಿಸಿ,ಸಾಮಾನ್ಯ ನೆಟ್‌ಬುಕ್‌ಗಳಲ್ಲೂ ಈ ಸೌಕರ್ಯ ಸಿಗುವಂತೆ ಮಾಡಬಹುದು.ಯುಎಸ್‌ಬಿ ಸಾಧನವನ್ನು ಕಂಪ್ಯೂಟರಿಗೆ ಸಿಕ್ಕಿಸಿ,ಇದರ ಬೆಳಕು ಬೀರುವ ವೆಬ್‌ಕ್ಯಾಮ್ ಅಂತಹ ಭಾಗವನ್ನು ತೆರೆಯ ಮೇಲ್ಬದಿ ಸಿಕ್ಕಿಸಿದರೆ ಸರಿ.ತೆರೆಯ ಮೇಲೆ ಟ್ಯಾಬ್ಲೋ ಬಳಸಿದಾಗ,ಇನ್‌ಫ್ರಾರೆಡ್ ಕಿರಣಗಳ ಸಹಾಯದಿಂದ ಟ್ಯಾಬ್ಲೋ ಸ್ಥಾನ ನಿರ್ಧರಿಸಿ,ಅದಕ್ಕನುಸಾರವಾಗಿ,ತೆರೆಯ ಮೇಲೆ ಬರೆದ್ದದ್ದು ಏನು ಎಂದು ಅಂದಾಜಿಸಲು, ಸಾಧನದ ತಂತ್ರಾಂಶಕ್ಕೆ ಸಾಧ್ಯವಾಗುತ್ತದೆ.ಚಿತ್ರಗಳನ್ನು ರಚಿಸಲು,ಕಡತಗಳ ಮೇಲೆ ಸಹಿ ಹಾಕಲು ಇದು ಉಪಯುಕ್ತ.
--------------------------------------------------------------
ಟ್ವಿಟರಿನಲ್ಲಿ "ಗುಂಪುಗುಳಿತನ"!
ಜನಮೆಚ್ಚುಗೆ ಗಳಿಸಿದ ಟ್ವಿಟ್ಟರ್ ಮೈಕ್ರೋಬ್ಲಾಗಿಂಗ್ ಸೇವೆಯು ದಿನದಿಂದ ದಿನಕ್ಕೆ ಹೊಸತನ ಮೈಗೂಡಿಸಿಕೊಳ್ಳುತ್ತಿದೆ.ಇದರಲ್ಲಿ ಜನರು ಬರೆದ ಕಿರುಸಂದೇಶಗಳಿಗೆ ಪ್ರತಿಕ್ರಿಯಿಸುವ ಸೌಲಭ್ಯ ಮೊದಲಿಗೆ ಇತ್ತು.ನಂತರದ ದಿನಗಳಲ್ಲಿ,ಮೆಚ್ಚಿಕೆಯಾದ ಸಂದೇಶಗಳನ್ನು ಮರು’ಪ್ರಸಾರ’ ಮಾಡುವ ಸೌಕರ್ಯವನ್ನು ನೀಡಲಾಯಿತು.ಚಿತ್ರಗಳನ್ನು,ಆಡಿಯೋ,ವಿಡಿಯೋಗಳನ್ನು ಸಂದೇಶದ ಜತೆ ಕೊಂಡಿಯಾಗಿ ನೀಡಲೂ ಸಾಧ್ಯವಾಯಿತು.
ಟ್ವಿಟರ್‌ನಲ್ಲಿ ಪ್ರತಿಯೊರ್ವನೂ ಇತರರನ್ನು ಹಿಂಬಾಲಿಸಲು ಸಾಧ್ಯವಿದೆ.ಕೇಂದ್ರ ಸಚಿವ ಶಶಿತರೂರು ಅವರಿಗೆ ಸದ್ಯ ನಾಲ್ಕು ಲಕ್ಷದಷ್ಟು ಹಿಂಬಾಲಕರಿದ್ದಾರೆ.ಅವರು ಸ್ವತ: ಹಿಂಬಾಲಿಸುವುದು ಕೇವಲ ಹದಿನಾಲ್ಕು ಜನವನ್ನಷ್ಟೇ.ಈ ವಾರ ಟ್ವಿಟರ್ ತನ್ನ ಬಳಕೆದಾರರಿಗೆ ವಿನೂತನ ಸೌಲಭ್ಯ ಒದಗಿಸಿದೆ.ಇದರ ಪ್ರಕಾರ,ಪ್ರತಿ ಬಳಕೆದಾರನೂ ತನ್ನ ಬಳಗದ ಜನರನ್ನು ಗುಂಪುಗಳಾಗಿ ವಿಂಗಡಿಸಬಹುದು.ತಮ್ಮ ಸಹೋದ್ಯೋಗಿಗಳು,ಸ್ನೇಹಿತರು,ಅಂತರ್ಜಾಲದ ಗೆಳೆಯರು ಹೀಗೆ ಹಲವು ಬಳಗಗಳನ್ನು ರಚಿಸಿಕೊಳ್ಳಬಹುದು.ಹೀಗೆ ಬಳಗಗಳನ್ನು ರಚಿಸಿಕೊಂಡರೆ,ಆ ಬಳಗದಿಂದ ಬಂದ ಸಂದೇಶಗಳನ್ನು ಒಟ್ಟಿಗೆ ವೀಕ್ಷಿಸಬಹುದು.
-------------------------------------------------------------------
ಮತ್ತೆ ಚಿಗುರಿದ ಸಂಪದ


ಕನ್ನಡಿಗರಿಗೆ ರಾಜ್ಯೋತ್ಸವದ ಕೊಡುಗೆಯಾಗಿ ಅಂತರ್ಜಾಲದ ಕನ್ನಡ ಸಮುದಾಯ ತಾಣ ಸಂಪದ ಮತ್ತೆ ಕಾರ್ಯಾರಂಭ ಮಾಡಿದೆ.ಹೆಚ್ಚಿದ ಬಳಕೆದಾರರ ಸಂಖ್ಯೆಗೆ ಸರಿಗಟ್ಟುವ ಸರ್ವರ್ ಅಳವಡಿಸಿ,ತಾಣವನ್ನು ಉತ್ತಮ ಪಡಿಸುವ ಕೆಲಸ ನಡೆದಿತ್ತು.ಎರಡು ತಿಂಗಳ ನಂತರ ರಾಜ್ಯೋತ್ಸವದ ಈ ದಿನ ತಾಣ ಮತ್ತೆ ತೆರೆದುಕೊಂಡು,ಕನ್ನಡಿಗರನ್ನು ಎದುರು ನೋಡುತ್ತಿದೆ.ಜಾಹೀರಾತು ಇಲ್ಲದೆ,ಯಾವ ಆದಾಯವಿಲ್ಲದೆ ತಾಣವನ್ನು ಮುನ್ನಡೆಸಲು ಕನ್ನಡಿಗರ ತನು-ಮನ-ಧನಗಳ ಸಹಕಾರ ಸಂಪದಕ್ಕೆ ಸಿಗಬೇಕಾಗಿದೆ.
udayavani

*ಅಶೋಕ್‌ಕುಮಾರ್ ಎ