Wednesday, December 30, 2009

2009: ಸ್ಮಾರ್ಟ್‌ಪೋನ್ ಹಿಡಿದು ಅಂತರ್ಜಾಲಾಟ,ಓದಾಟ,ಒದ್ದಾಟ

2009: ಸ್ಮಾರ್ಟ್‌ಪೋನ್ ಹಿಡಿದು ಅಂತರ್ಜಾಲಾಟ,ಓದಾಟ,ಒದ್ದಾಟ
ಕೈಯಲ್ಲಿ ಮೊಬೈಲ್ ಸಾಧನ ಹಿಡಿದು,ಅದರಿಂದಲೇ ಬ್ಯಾಂಕ್ ವ್ಯವಹಾರಗಳನ್ನು ಮಾಡುತ್ತಾ,ಟಿವಿ ವೀಕ್ಷಣೆಯನ್ನೂ ಮಾಡುತ್ತಾ,ಟ್ವಿಟರ್-ಫೇಸ್‌ಬುಕ್‌ಗಳಿಗೆ ಸಂದೇಶ ಕಳುಹಿಸುತ್ತಾ,ಜ್ಞಾನಾರ್ಜನೆಯನ್ನೂ ಮಾಡುವ ಪ್ರವೃತ್ತಿ ಹೆಚ್ಚಿದ ವರ್ಷವಾಗಿಯೇ ಈ ವರ್ಷ ನಮ್ಮ ನೆನಪಿನಲ್ಲುಳಿಯುತ್ತದೆ.ಸ್ಪರ್ಶಸಂವೇದಿ ಮೊಬೈಲ್ ಸಾಧನಗಳ ಕಾರಣ,ತೆರೆಯ ಮೇಲೆಯೇ ಕೈಯಾಡಿಸಿ,ಮಾಯಕದಂತೆ ಸಾಧನವನ್ನು ನಿಯಂತ್ರಿಸುತ್ತಾ,ತೆರೆಯ ಮೇಲೆ ಮೂಡುವ ಕೀಲಿ ಮಣೆಯ ಚಿತ್ರದ ಮೂಲಕವೇ ಟೈಪಿಸುತ್ತಾ ಅಂಗೈಯಲ್ಲೇ ಜಗತ್ತನ್ನು ಕಾಣುವ ಜನರನ್ನು ಎಲ್ಲೆಲ್ಲೂ ಕಾಣಬಹುದು.
ವರ್ಷಾರಂಭದಲ್ಲೇ ಆಗಬೇಕಿದ್ದ ಮೂರು-ಜಿ ಮೊಬೈಲ್ ಸೇವೆಯ ಸ್ಪೆಕ್ಟ್ರಮ್ ಹರಾಜು ಪ್ರಕ್ರಿಯೆ,ಕೊನೆಯವರೆಗೂ ನಡೆಯದೆ,ಮೂರು-ಜಿ ಸೇವೆಯು ಜನತೆಗೆ ತಲುಪುವುದಕ್ಕೆ ತಡೆಯಾಯಿತು.ಬಿಎಸ್‌ಎನ್‌ಎಲ್ ತನ್ನ ಮೂರು-ಜಿ ಸೇವೆಯನ್ನು ಆರಂಭಿಸಿದೆ.
ಟಾಟಾ ಇಂಡಿಕಾಮ್ ದೂರಸಂಪರ್ಕ ಕಂಪೆನಿಯು ಜಪಾನ್ ಕಂಪೆನಿ ಡೊಕೊಮೊ ಜತೆ ಸಹಭಾಗಿತ್ವದೊಂದಿಗೆ ಟಾಟಾ ಡೊಕೊಮೋ ದೂರಸಂಪರ್ಕ ಸೇವೆ ಆರಂಭಿಸಿ,ಪ್ರತಿ ಸೆಕೆಂಡಿನ ಬಳಕೆಗೆ ಒಂದು ಪೈಸೆ ದರದಲ್ಲಿ ಕರೆ ಮಾಡುವ ಅವಕಾಶ ನೀಡಿ,ಜನರ ಮನಗೆದ್ದಿತು.ವರ್ಷಾಂತ್ಯಕ್ಕೆ ಎಂ ಟಿ ಎಸ್,ಯುನಿನಾರ್ ಅಂತಹ ಕಂಪೆನಿಗಳು ಕರೆಯ ದರವನ್ನು ಸೆಕೆಂಡಿಗೆ ಅರ್ಧ ಪೈಸೆಯಷ್ಟಕ್ಕೆ ಇಳಿಸಿ,ಸ್ಪರ್ಧೆಯನ್ನು ಮತ್ತಷ್ಟು ಹೆಚ್ಚಿಸಿದುವು.
ಇನ್ನು ಟಿವಿ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಲು ಡಿಟಿಎಚ್ ಸೇವೆಯನ್ನು ನೀಡುವ ಕಂಪೆನಿಗಳ ಸಂಖ್ಯೆಯಲ್ಲಿ ಬಹಳ ಹೆಚ್ಚಿವೆ.ವಿಡಿಯೋಕಾನ್ ಕಂಪೆನಿಯ ಡಿ2ಎಚ್,ರಿಲಾಯನ್ಸ್ ಕಂಪೆನಿಯ ಬಿಗ್ ಟಿವಿ ಮುಂತಾದುವು,ಟಿವಿ ಚಾನೆಲ್ ಜತೆ ಬಯಸಿದ ಚಿತ್ರ ಪ್ರದರ್ಶನ,ಕಾರ್ಯಕ್ರಮಗಳ ಪ್ರಸಾರ,ಕಂಪ್ಯೂಟರ್ ಆಟ ಇತ್ಯಾದಿ ಸೇವೆಗಳನ್ನು ಒದಗಿಸಿ,ಕೇಬಲ್ ಟಿವಿಗೆ ಸ್ಪರ್ಧೆ ನೀಡಿವೆ.
ಭಾರತೀಯಮೂಲದ ವೆಂಕಿಗೆ ನೋಬೆಲ್ ಪ್ರಶಸ್ತಿಯನ್ನು ರಸಾಯನಶಾಸ್ತ್ರದಲ್ಲಿ ನೀಡಲಾಗಿದೆ.ಐವತ್ತೇಳು ವರ್ಷದ ವೆಂಕಟ್ರಾಮನ್ ರಾಮಕೃಷ್ಣನ್,ತಮಿಳ್ನಾಡಿನ ಚಿದಂಬರಮ್‌ನವರು.ಬರೋಡಾದ ಎಂಎಸ್ ವಿಶ್ವವಿದ್ಯಾಲಯದ ಪದವೀಧರರು.ಅಮೆರಿಕಾದಲ್ಲಿ ಪಿ ಎಚ್ ಡಿ ಮಾಡಿದ್ದರು.ಎಕ್ಸ್‌ರೇ ಕ್ರಿಸ್ಟಾಲಗ್ರಫಿಯ ಮೂಲಕ,ಆರ್ ಎನ್ ಎಯ ಸಾವಿರಾರು ಅಣುಗಳನ್ನು ಕಂಡು ಹಿಡಿದ ಸಂಶೋಧನೆಗೆ ಅವರಿಗೆ ರಸಾಯನಶಾಸ್ತ್ರದ ನೋಬೆಲ್ ಪ್ರಶಸ್ತಿ ನೀಡಲಾಗಿದೆ.
----------------------------------------------------------
ಅಂತರ್ಜಾಲ ಲಗ್ಗೆಗೆ ನೆಟ್‌ಬುಕ್‌ಗಳು
ಅಂತರ್ಜಾಲಕ್ಕೆ ಸದಾ ಸಂಪರ್ಕದಲ್ಲಿರುತ್ತಾ,ಎಲ್ಲ ತೆರನ ಸೇವೆ ಮತ್ತು ತಂತ್ರಾಂಶಗಳನ್ನೂ ಅಂತರ್ಜಾಲದಲ್ಲಿ ಪಡೆದು,ಕಡತಗಳನ್ನೇನಾದರೂ ಉಳಿಸಬೇಕಾದರೆ,ಅದಕ್ಕೂ ಅಂತರ್ಜಾಲದಲ್ಲಿ ಲಭ್ಯವಿರುವ ಸೇವೆಯನ್ನು ಪಡೆಯುವುದು ಈಗಿನ ವೈಖರಿ.ಅಂತರ್ಜಾಲ ಆಧರಿತ ಈ ರೀತಿಯ ಕಂಪ್ಯೂಟರ್ ಬಳಕೆಗೆ ಸಾಮಾನ್ಯ ಡೆಸ್ಕ್‌ಟಾಪ್ ಕಂಪ್ಯೂಟರುಗಳು ಅಗತ್ಯವಿಲ್ಲ.ಇನ್ನು ಲ್ಯಾಪ್‌ಟಾಪ್ ಮತ್ತು ನೋಟ್‌ಬುಕ್‌ಗಳೂ ದುಬಾರಿ ಮತ್ತು ಅತ್ತಿಂದಿತ್ತ ಒಯ್ಯಲು ಸಾಕಷ್ಟು ಅನುಕೂಲಕರವಿಲ್ಲ.ಅತ್ಯಂತ ಹಗುರ,ವಿದ್ಯುಚ್ಛಕ್ತಿಯ ಅತಿ ಕಡಿಮೆ ಬಳಕೆ ಮತ್ತು ಮಿತ ಬೆಲೆಯಲ್ಲಿ ಲಭ್ಯವಿರುವ ಸಾಧನವೇ ನೆಟ್‌ಬುಕ್.ಹಲವು ತಯಾರಕರು ಇಂತಹ ನೆಟ್‍ಬುಕ್‌ಗಳನ್ನು ಒದಗಿಸಲು ಶುರು ಮಾಡಿದ್ದು ಈ ವರ್ಷದ ವಿಶೇಷ,ಇಂತಹ ಸಾಧನಗಳು ಸರಳ ಕಾರ್ಯನಿರ್ವಹಣಾ ತಂತ್ರಾಂಶವನ್ನಷ್ಟೇ ಬಯಸುತ್ತವೆ.ಇನ್ನು ಸಂಸ್ಕಾರಕ,ಸ್ಮರಣಕೋಶ,ಹಾರ್ಡ್‌ಡಿಸ್ಕ್ ಸಾಮರ್ಥ್ಯ ಇವೆಲ್ಲಾ ಸೀಮಿತ ಸಾಮರ್ಥ್ಯದ್ದವಾಗಿರುತ್ತವೆ.ಆದರೆ ಸಾಮಾನ್ಯರಿಗೆ ಅಂತರ್ಜಾಲ ಜಾಲಾಡಲು ಇವೆಲ್ಲವೂ ಸಾಕಷ್ಟಾಯಿತು.ಇಂತಹ ಸಾಧನಗಳು ಕಡಿಮೆ ಬೆಲೆಯವಾದ ಕಾರಣ,ಇವುಗಳಿಂದ ಮಾರಾಟಗಾರರಿಗೆ ಸಿಗುವ ಲಾಭಾಂಶ ಬಹಳ ಕಡಿಮೆ.
------------------------------------------------
ತ್ರೀಡಿ ಚಲನಚಿತ್ರಗಳು
ಡಿಜಿಟಲ್ ತಂತ್ರಜ್ಞಾನದಲ್ಲಿ ತಯಾರಾದ ಮೂರು ಆಯಾಮದ ಚಿತ್ರಗಳನ್ನು ಮಾಡುವ ತಂತ್ರಜ್ಞಾನ ಸಿದ್ಧಿಸಿದ್ದರೂ,ಅದನ್ನು ಪ್ರದರ್ಶಿಸಲು ಚಲನಚಿತ್ರ ಮಂದಿರಗಳ ಕೊರತೆ ಇತ್ತು.ಅಂತಹ ಚಿತ್ರಗಳನ್ನು ಪ್ರದರ್ಶಿಸಲು ವಿಶೇಷ ಪರದೆ ಹೊಂದಿದ ಚಿತ್ರಮಂದಿರಗಳನ್ನು ಮಾಡಲು ಯಾರೂ ಮುಂದೆ ಬರುತ್ತಿರಲಿಲ್ಲ.ಈಗ ಜಗತ್ತಿನಾದ್ಯಂತ ಸುಮಾರು ಒಂದು ಸಾವಿರ ಚಿತ್ರಮಂದಿರಗಳು ಅಂತಹ ಪರದೆಯನ್ನು ಹೊಂದಿದ್ದಾವೆ.ವರ್ಷಾಂತ್ಯಕ್ಕೆ ಬಿಡುಗಡೆಯಾದ "ಅವತಾರ್" ನಂತರವೀಗ ಸರಾಗವಾಗಿ ಚಿತ್ರಗಳು ಬಿಡುಗಡೆಗೆ ಕಾದಿವೆ.ಅಪ್ ಅಂಡ್ ಕೊರಾಲೈನ್,ಮೈ ಬ್ಲಡಿ ವ್ಯಾಲಂಟೈನ್,ಮಾನ್ಸ್ಟರ್ ವರ್ಸಸ್ ಅಲೀನ್ಸ್ ಮುಂತಾದ ತ್ರೀಡಿ ಚಿತ್ರಗಳು ಸಾಲುಗಟ್ಟಿ ನಿಂತಿವೆ.
-----------------------------------------------------
ಮೊಬೈಲ್ ಮೂಲಕ ಪಥದರ್ಶನ
ಮೊಬೈಲ್ ಸಾಧನಗಳಲ್ಲಿ ನಕಾಶೆ ತೋರಿಸುವ ಪರಿಪಾಠವು ಐಫೋನಿನಲ್ಲಿ ಈ ವರ್ಷ ಆರಂಭವಾಯಿತು.ನೂರು ಡಾಲರು ಬೆಲೆಯ ತಂತ್ರಾಂಶವನ್ನು ಐಫೋನಿನಲ್ಲಿ ಹಾಕಿಕೊಳ್ಳಬೇಕಿತ್ತು.ಆದರೆ ನಂತರ ಗೂಗಲ್ ತನ್ನ ಮೊಬೈಲ್ ಕಾರ್ಯನಿರ್ವಹಣಾ ತಂತ್ರಾಂಶ ಆಂಡ್ರ‍ಾಯಿಡ್‌ನಲ್ಲಿ ನಕಾಶೆ ತೋರಿಸುವ ತಂತ್ರಾಂಶವನ್ನು ಉಚಿತವಾಗಿ ಅಳವಡಿಸಿ,ಜಿಪಿಎಸ್ ಸಾಧನಗಳ ಕಂಪೆನಿಗಳಿಗೆ ಸಿಂಹಸ್ವಪ್ನವಾಯಿತು.ಅಂತರ್ಜಾಲ ಮೂಲಕ ಗೂಗಲ್ ನಕಾಶೆ ಲಭ್ಯವಿದ್ದು,ಅದನ್ನು ಮೊಬೈಲ್ ಸಾಧನದಲ್ಲಿ ಬಳಸಿಕೊಂಡು,ಆಂಡ್ರಾಯಿಡ್ ಅಂತಹ ನಿರ್ವಹಣಾ ತಂತ್ರಾಂಶ ಬಳಸಿ,ನಕಾಶೆಯ ಮೂಲಕ ದಾರಿ ಕಂಡುಕೊಳ್ಳುವುದು ಈಗ ಸಾಧ್ಯವಾಗಿದೆ.

ಹ್ಯಾಂಡ್‌ಸೆಟ್‍ಗಳನ್ನು ತಂತಿಗಳ ಜಂಜಾಟವಿಲ್ಲದೆ ಚಾರ್ಜ್ ಮಾಡುವ ಇಂಡಕ್ಟಿವ್ ಪವರ್ ತಂತ್ರಜ್ಞಾನ ಈ ವರ್ಷ ಲಭ್ಯವಾಗಿದೆ.ಪಾಮ್‌ಪ್ರಿ ಮತ್ತು ಪವರ್‌ಮೇಟ್ ಸಾಧನಗಳನ್ನು ಈಗ ಅಂತಹ ಸೌಲಭ್ಯ ನೀಡುತ್ತಿವೆ.ದಿನಗಳಲ್ಲಿ ಹ್ಯಾಂಡ್‌ಸೆಟ್ ತಯಾರಕರು ಹ್ಯಾಂಡ್‌ಸೆಟ್‌ಗಳನ್ನು ಚಾರ್ಜ್ ಮಾಡುವ ತಂಗುದಾಣಗಳನ್ನು ಮಾರುಕಟ್ಟೆಗೆ ಬಿಡುವುದು ಖಚಿತ.
--------------------------------------------------------
ವಿನ್ ಆಗುವತ್ತ ವಿಂಡೋಸ್ 7
ಮೈಕ್ರೋಸಾಫ್ಟ್ ಕಂಪೆನಿಯು ಮೂರು ವರ್ಷಗಳ ನಂತರ ಬಿಡುಗಡೆ ಮಾಡಿದ 7 ಕಂಪ್ಯೂಟರ್ ಕಾರ್ಯನಿರ್ವಹಣಾತಂತ್ರಾಂಶ ಆರಂಭಿಕ ಯಶಸ್ಸು ಕಂಡಿದೆ.ಮೈಕ್ರೋಸಾಫ್ಟ್ ಕಂಪೆನಿಗೆ ಇತ್ತೀಚಿನ ವರ್ಷಗಳಲ್ಲಿ ಸಿಕ್ಕಿರುವ ಅಪರೂಪದ ಯಶಸ್ಸು ಇದು.ಕಡಿಮೆ ಯಂತ್ರಾಂಶವನ್ನು ಬಯಸುವ ಈ ತಂತ್ರಾಂಶ,ಕಂಪ್ಯೂಟರನ್ನು ಬೇಗನೇ ಚಾಲೂ ಮಾಡುತ್ತದೆ.ಅಲ್ಲದೆ ಕಂಪ್ಯೂಟರನ್ನು ಬಳಸುವುದನ್ನೂ ಬಹಳ ಸುಲಭವಾಗಿಸುತ್ತದೆ.ಲೆಪರ್ಡ್ ಎನ್ನುವ ಮ್ಯಾಕ್ ಕಂಪ್ಯೂಟರಿನ ಕಾರ್ಯನಿರ್ವಹಣಾ ತಂತ್ರಾಂಶದ ಹೊಸ ಆವೃತ್ತಿಯನ್ನು ಆಪಲ್ ಕಂಪೆನಿಯು ಬಿಡುಗಡೆ ಮಾಡಿತು.ಇಲ್ಲೂ ಕಂಪ್ಯೂಟರನ್ನು ಚುರುಕಾಗಿ ಚಾಲೂ ಮಾಡುವ,ಕಡಿಮೆ ಯಂತ್ರಾಂಶ ಬಯಸುವ ಪ್ರವೃತ್ತಿ ಎದ್ದು ಕಾಣುತ್ತದೆ.

ಈ ಸಲ ಮೈಕ್ರೋಸಾಫ್ಟ್ ಕಂಪೆನಿಯು ಯಂತ್ರಾಂಶ ತಯಾರಕರ ಜತೆ ಕೆಲಸ ಮಾಡಿ,ಅವರ ಯಂತ್ರಾಂಶವು ಹೊಸ ವ್ಯವಸ್ಥೆಯಲ್ಲಿ ಸರಾಗವಾಗಿ ಕೆಲಸ ಮಾಡುವಂತೆ,ವಿನ್ಯಾಸಗೊಳಿಸಲು ಶ್ರಮ ತೆಗೆದುಕೊಂಡಿದೆ.ಹಳೆಯ ಆವೃತ್ತಿಗಳಲ್ಲಿ ಕೆಲಸ ಮಾಡುತ್ತಿದ್ದ ಯಂತ್ರಾಂಶಗಳು ಇದರಲ್ಲಿ ಕೆಲಸ ಮಾಡುವಂತೆ ಮಾಡುವ ಆಯ್ಕೆಯನ್ನು ನೀಡಲಾಗಿದೆ.ಅಲ್ಲದೆ ವಿಂಡೋಸ್ 7ನ ಯಂತ್ರಾಂಶ ಅಗತ್ಯ ಮಾಡಲು ಪ್ರಯತ್ನಿಸಲಾಗಿದೆ.ಸಂಸ್ಕಾರಕ 1ಗಿಗಾಹರ್ಟ್ಸ್,ಕನಿಷ್ಠ512ಎಂಬಿ ರಾಮ್(ಒಂದು ಜಿಬಿ ಉತ್ತಮ),16ಜಿಬಿ ಹಾರ‍್ಡ್‌ಡಿಸ್ಕ್ ಅವಕಾಶ ಮತ್ತು ಡೈರೆಕ್ಟ್9 ಗ್ರಾಫಿಕ್ಸ್ ಬೇಕು.ಹೊಸ ಕಾರ್ಯನಿರ್ವಹಣಾ ತಂತ್ರಾಂಶದ ಬೆಲೆ ಸುಮಾರು ಆರು ಸಾವಿರ.ಮೂವತ್ತೆರಡು ಬಿಟ್ ಮತ್ತು ಅರುವತ್ತನಾಲ್ಕು ಬಿಟ್ ಕಂಪ್ಯೂಟರುಗಳಿಗೆ ವಿನ್7 ಸಿಗುತ್ತದೆ.
ಉಳ್ಳವರು ದುಡ್ಡು ತೆತ್ತು ವಿಂಡೋಸ್7 ಖರೀದಿಸ ಬಹುದು,ನಾವೇನು ಮಾಡುವುದು-ಬಡವರಯ್ಯಾ ಎನ್ನುವವರು ಯೋಚಿಸಿಬೇಕಾಗಿಲ್ಲ. ವಿನ್ 7ಗೆ ಎಲ್ಲಾ ವಿಧದಲ್ಲೂ ಸ್ಪರ್ಧೆ ನೀಡಬಲ್ಲ ಲಿನಕ್ಸ್ ಕಾರ್ಯನಿರ್ವಹಣಾ ತಂತ್ರಾಂಶ ಉಬುಂಟು9.10 ಹೊಸ ಆವೃತ್ತಿ ರಾಜ್ಯೋತ್ಸವದ ವೇಳೆ ಬಳಕೆಗೆ ಲಭ್ಯವಾಯಿತು.ಇದನ್ನು ಉಚಿತವಾಗಿ ಬಳಸಬಹುದು.ಕನ್ನಡದ ಬಳಕೆಯನ್ನೂ ಸರಾಗವಾಗಿಸುವ ಉಬುಂಟು,ಬಳಕೆದಾರಸ್ನೇಹೀ ಗುಣ ಹೊಂದಿದೆ.ಅಂತರ್ಜಾಲ,ವಿಡಿಯೋ,ಆಡಿಯೋ,ಪದಸಂಸ್ಕರಣೆ ಇವೆಲ್ಲವನ್ನೂ ಸುಗಮವಾಗಿಸುವ ಉಬುಂಟುವನ್ನು ಕಂಪ್ಯೂಟರಿನಲ್ಲಿ ಸ್ಥಾಪಿಸಿಕೊಂಡರೆ ವಿಂಡೋಸ್ ಹಂಗೇ ಬೇಡ.
ನೆಟ್‌ಬುಕ್ ಅಂತಹ ಅಂತರ್ಜಾಲ ಜಾಲಾಡುವ ಸಾಧನಗಳಿಗಾಗಿಯೇ ಹೊಸ ಕಾರ್ಯನಿರ್ವಹಣಾ ತಂತ್ರಾಂಶ(operating system ಗೂಗಲ್ ಕ್ರೋಂ ಓ ಎಸ್ ಅನ್ನು ತಾನು ಅಭಿವೃದ್ಧಿ ಪಡಿಸಲಿರುವುದಾಗಿ ಗೂಗಲ್ ಕಂಪೆನಿ ಹೇಳಿಕೊಂಡಿತ್ತು.ವರ್ಷಾಂತ್ಯದ ವೇಳೆಗೆ,ಈ ಹೊಸ ಓಎಸ್‌ನ ಆರಂಭಿಕ ಕ್ರಮವಿಧಿಯನ್ನು ಬಿಡುಗಡೆ ಮಾಡಿ,ಹೊಸ ಸಂಚಲನೆ ಮೂಡಿಸಿದ್ದು ಅನಿರೀಕ್ಷಿತ ಬೆಳವಣಿಗೆಯಾಗಿತ್ತು.

---------------------------------------------------------

ಆಂಡ್ರಾಯಿಡ್ ಈಗ ಜನಪ್ರಿಯ
ಗೂಗಲ್ ಮೊಬೈಲ್ ಸಾಧನಗಳಿಗೆ ಒದಗಿಸಿರುವ ಕಾರ್ಯನಿರ್ವಹಣಾ ತಂತ್ರಾಂಶ ಆಂಡ್ರಾಯಿಡ್ ಈಗ ಬಹು ಜನಪ್ರಿಯ.ಈಗದನ್ನು ಅಳವಡಿಸಿ,ಮೊಬೈಲ್ ಸಾಧನಗಳನ್ನು ಮಾರುಕಟ್ಟೆಗೆ ಒದಗಿಸಲು ಎಲ್ಜಿ,ಸ್ಯಾಮ್‌ಸಂಗ್,ಮೊಟೊರೊಲಾದಂತಹ ಹಲವು ಹ್ಯಾಂಡ್‌ಸೆಟ್ ತಯಾರಕರು ಮುಂದೆ ಬಂದಿರುವುದು ಈ ವರ್ಷದ ಮುಖ್ಯ ಬೆಳವಣಿಗೆ.ಇ-ರೀಡರ್ ನುಕ್ ಕೂಡಾ ಆಂಡ್ರಾಯಿಡನ್ನು ಬಳಸಿದ್ದು ಇನ್ನೊಂದು ವಿಶೇಷ.
ಐಫೋನ್ ಸೇರಿದಂತೆ ವಿವಿಧ ಸ್ಮಾರ್ಟ್‌ಪೋನ್ ಸಾಧನಗಳಲ್ಲಿ ಬಳಸಬಹುದಾದ ವಿವಿಧ ತಂತ್ರಾಂಶಗಳನ್ನು ಮಾರುವ ಐಸ್ಟೋರ್‌ಗಳು ಈಗ ಅಂತರ್ಜಾಲದಲ್ಲಿ ಬಹು ಜನಪ್ರಿಯವಾಗಿವೆ.ಸ್ಮಾರ್ಟ್‌ಪೋನಿನಲ್ಲಿ ವಿವಿಧ ಸೌಕರ್ಯಗಳನ್ನು ನೀಡಲು ಹೊಸ ಹೊಸ ತಂತ್ರಾಂಶಗಳನ್ನು ಅಭಿವೃದ್ಧಿ ಪಡಿಸುವುದು ಈಗ ಹಲವರ ಹವ್ಯಾಸ.ಅಂತ ತಂತ್ರಾಂಶಗಳನ್ನು ಕೆಲವರು ಉಚಿತವಾಗಿ ಒದಗಿಸಿದರೆ,ಇನ್ನು ಕೆಲವರು ಹಣ ಪಡೆದು ನೀಡುತ್ತಾರೆ.ಕೆಲವೇ ಸೆಂಟುಗಳಿಂದ ಹಿಡಿದು ಹಲವು ಡಾಲರುಗಳವರೆಗೆ ಬೆಲೆ ಬಾಳುತ್ತವೆ.ಈ ವರ್ಷದ ಹೊಸ ಬೆಳವಣಿಗೆ ಇದು ಎನ್ನಲಡ್ಡಿಯಿಲ್ಲ.
-----------------------------------------------------
ಗೂಗಲ್ ಕ್ರೋಮ್ ಬ್ರೌಸರ್
ತನ್ನದೇ ಆದ ಬ್ರೌಸರ್ ತಂತ್ರಾಂಶವನ್ನು ಒದಗಿಸಿ,ಇಂಟರ್ನೆಟ್ ಎಕ್ಸ್‌ಪ್ಲೋರರ್ ಬ್ರೌಸರ್ ತಂತ್ರಾಂಶಕ್ಕೆ ಪೈಪೋಟಿ ಒಡ್ಡಿದ್ದು ವರ್ಷದ ಅತಿ ಮುಖ್ಯ ಬೆಳವಣಿಗೆಗಳಲ್ಲೊಂದು ಎನ್ನಲಡ್ಡಿಯಿಲ್ಲ,ಗೂಗಲ್ ಕ್ರೋಮ್ ಹೇಳಿಕೊಳ್ಳುವಷ್ಟು ಜನಪ್ರಿಯವಾಗದಿದ್ದರೂ,ಮುಖ್ಯ ಬ್ರೌಸರ್ ತಂತ್ರಾಂಶಗಳ ಪೈಕಿ ಅದಕ್ಕೂ ಸ್ಥಾನ ಲಭಿಸಿದೆ.ಫೈರ್‌ಪಾಕ್ಸ್ ಈಗ ಅತ್ಯುತ್ತಮ ಬ್ರೌಸರ್ ಎಂದು ತನ್ನ ಗುರುತನ್ನು ಮೂಡಿಸಿದ್ದು,ಅತ್ಯಂತ ಹೆಚ್ಚು ಮಂದಿ ಬಳಸುವ ಬ್ರೌಸರ್ ಇದಾಗಿದೆ.
------------------------------------
ಟ್ವಿಟರ್,ಫೇಸ್‌ಬುಕ್ ಜನಪ್ರಿಯತೆಯ ತುತ್ತತುದಿಗೆ
ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್,ಅರ್ಕುಟ್,ಟ್ವಿಟರ್ ಇವು ವರ್ಷಪೂರ್ತಿ ಸುದ್ದಿಯಲ್ಲಿದ್ದುವು.ಹಲವು ವರ್ಷಗಳಿಂದ ಇವು ಅಂತರ್ಜಾಲದಲ್ಲಿ ಲಭ್ಯವಿದ್ದರೂ,ಈ ವರ್ಷ ಜನರು ಅವುಗಳ ಪ್ರಯೋಜನ ಪಡೆಯುವಲ್ಲಿ ಉತ್ಸಾಹ ತೋರಿಸಿದರು.ಅದರಲ್ಲೂ ಟ್ವಿಟರ್ ಖಾತೆಯ ಮೂಲಕ ಸುದ್ದಿಗಳು,ವಿಚಾರಗಳು,ಚಿಂತನೆಗಳು ಅತ್ಯಂತ ತ್ವರಿತವಾಗಿ,ಘಟನೆಗಳು ನಡೆದಂತೆಲ್ಲಾ ಚರ್ಚಿಸಲ್ಪಟ್ಟವು.ಮೊಬೈಲ್ ಮೂಲಕವೂ ಟ್ವಿಟ,ಫೇಸ್‌ಬುಕ್ ಸೇವೆಯನ್ನು ಪಡೆಯಲು ಸಾಧ್ಯವಾಗುವುದು,ಅವುಗಳ ಜನಪ್ರಿಯತೆಗೆ ಕಾರಣವಾಯಿತು.
-------------------------------------------------
ಗೂಗಲ್ ಸುದ್ದಿಯಲ್ಲಿ
ವರ್ಷದುದ್ದಕ್ಕೂ ಸುದ್ದಿಯಲ್ಲಿದ್ದ ಗೂಗಲ್ ತನ್ನ ಕ್ರೋಮ್ ಬ್ರೌಸರ್,ಕ್ರೋಮ್ ಓಎಸ್‌ನ ಕ್ರಮವಿಧಿ ಒದಗಿಸಿದ್ದು ಮುಖ್ಯ ಘಟನೆಗಳು.ಜತೆಗೆ ಭಾರತೀಯ ಭಾಷೆಗಳಲ್ಲಿ ಟೈಪಿಂಗ್ ಸೌಲಭ್ಯ ಒದಗಿಸಲು ಐಎಂಇ ತಂತ್ರಾಂಶ,ಭಾರತೀಯ ಭಾಷೆಗಳಲ್ಲಿ ಆನ್‌ಲೈನ್ ನಿಘಂಟು ಒದಗಿಸಿದುದು,ಅನುವಾದ ಸೇವೆ,ಗೂಗಲ್ ನಕಾಶೆಗಳನ್ನು ಇನ್ನಷ್ಟು ಬಳಕೆಗೆ ಸುಲಭವಾಗಿಸಿ,ಹೊಸ ಸೌಕರ್ಯಗಳನ್ನು ಒದಗಿಸಿದ್ದು ವರ್ಷದ ಹೈಲೈಟ್.ಗೂಗಲ್ ವೇವ್ ಎನ್ನುವ ಹೊಸ ಸೇವೆಯನ್ನೂ ಈ ವರ್ಷ ಗೂಗಲ್ ಒದಗಿಸಿತು.ಇದು ಜನರ ನದುವೆ ಸಹಭಾಗಿತ್ವ ಏರ್ಪಡಲು ಮತ್ತು ವಿಚಾರಗಳು ಮತ್ತು ವಿವಿಧ ನಮೂನೆಯ ಕಡತಗಳ ವಿನಿಮಯ ಸುಲಭವಾಗಿಸಲು ಒದಗಿಸಿದ ಹೊಸ ಸೇವೆಯಾದರೂ,ಜನರಿನ್ನೂ ಅವನ್ನು ಸಮರ್ಥವಾಗಿ ಬಳಸಲು ವಿಫಲರಾದರು.ಗೂಗಲ್ ವಾಯಿಸ್ ಸೇವೆ ಅಮೆರಿಕಾದಂತಗ ದೇಶಗಳಲ್ಲಿ ಆರ‍ಂಭವಾಗಿ,ಧ್ವನಿ ಕರೆಗಳನ್ನು ಕಂಪ್ಯೂಟರ್ ಮೂಲಕ ಮಾಡಲು,ತಮ್ಮೆಲ್ಲಾ ದೂರಸಂಪರ್ಕ ಸಾಧನಗಳು ಮತ್ತು ಸೇವೆಗಳನ್ನೂ ಒಂದೇ ಸಂಖ್ಯೆಯ ಮೂಲಕ ಪಡೆಯುವ ವಿನೂತನ ಸೇವೆಯಿದಾಗಿತ್ತು.ದೂರಸಂಪರ್ಕ ಸೇವೆಯಲ್ಲಿ ತೊಡಗಿರುವ ಕಂಪೆನಿಗಳಿಗೆ ಗೂಗಲ್‌ನ ಉಚಿತ ಸೇವೆ ಚಳಿ ಹಿಡಿಸಿತು.
---------------------------------------------------------------------------

ದಶಮಾನೋತ್ಸವ ಸಂಭ್ರಮದಲ್ಲಿ ಬ್ಲಾಗರ್
ಬ್ಲಾಗಿಂಗ್‌ಗೆ ಹೊಸ ಭಾಷ್ಯ ಬರೆದ ಬ್ಲಾಗರ್ ಸೇವೆ ಈ ವರ್ಷ ತನ್ನ ದಶಮಾನೋತ್ಸವ ಮಾಡಿತು.ನ್ಯೂಯಾರ್ಕಿನ ವರ್ಲ್ಡ್ ಟ್ರೇಡ್ ಸೆಂಟರಿನ ದಾಳಿಯ ಸಂದರ್ಭದಲ್ಲಿ ಜನರ ಭಾವನೆಗಳಿಗೆ ಅಭಿವ್ಯಕ್ತಿಯಾಗಿ ಬ್ಲಾಗಿಂಗ್ ಜನಜೀವನದ ಭಾಗವಾಗಿ ಹೋಯಿತು.ಸದ್ಯ ಮೂವತ್ತು ಕೋಟಿ ಕ್ರಿಯಾಶೀಲ ಬ್ಲಾಗಿಗರನ್ನು ಹೊಂದಿರುವ ಬ್ಲಾಗರ್,ಗೂಗಲ್ ಬಗಲಿಗೇರಿದೆ.ಪ್ರತಿ ನಿಮಿಷಕ್ಕೆ ಮೂರು ಲಕ್ಷ ಪದಗಳಷ್ಟು ಬ್ಲಾಗ್ ಬರವಣಿಗೆ ಬ್ಲಾಗರ್ ಸೇವೆಯ ಮೂಲಕ ಆಗುತ್ತದೆ.ವರ್ಡ್‌ಪ್ರೆಸ್,ಲೈವ್‌ಜರ್ನಲ್ ಮುಂತಾದ ಬ್ಲಾಗಿಂಗ್ ಸೇವೆಗಳನ್ನು ಹಿಮ್ಮೆಟ್ಟಿಸಿ,ಬ್ಲಾಗರ್ ನಂಬರ್ ಒಂದು ಸ್ಥಾನದಲ್ಲಿರಲು ಗೂಗಲ್ ಹೆಸರು ನೆರವಾಗಿದೆ.ನೂರನಲುವತ್ತು ಪದಗಳಿಗೆ ಸೀಮಿತವಾದ ಮೈಕ್ರೋಬ್ಲಾಗಿಂಗ್ ಸೇವೆ ಟ್ವಿಟರ್,ನಂಬಲಾಗದ ಬೆಳವಣಿಗೆ ಕಂಡಿರುವ ಈ ದಿನಗಳಲ್ಲೂ ಬ್ಲಾಗರ್ ಜನಪ್ರಿಯತೆ ಇಳಿಮುಖವಾಗಿಲ್ಲ. ಕ್ರಿಕೆಟಿನ 20-20ಗೆ ಟ್ವಿಟರ್ ಸಮವಾದರೆ,ಬ್ಲಾಗರನ್ನು ಟೆಸ್ಟ್ ಕ್ರಿಕೆಟಿಗೆ ಹೋಲಿಸಬಹುದೇನೋ!
-------------------------------------------------------Bold--------------
ಚಂದ್ರಮಾಮನಿಗೆ ಗುದ್ದು
ಚಂದ್ರಮಾಮನಿಗೆ ನಾಸಾದ ರಾಕೆಟ್ ಅಪ್ಪಳಿಸಿ ನಡೆಸಿದ ಪರೀಕ್ಷೆಗಳ ಫಲಿತಾಂಶವಿನ್ನೂ ಬರಬೇಕಾಗಿದೆ.ಭಾರತದ ಚಂದ್ರಯಾನ ನಿರೀಕ್ಷೆಗಿಂತ ಮೊದಲೇ ಕೊನೆಗೊಂಡರೂ,ಅದು ಸೆರೆ ಹಿಡಿದ ಚಿತ್ರಗಳ ಮೂಲಕ,ಚಂದ್ರನಲ್ಲಿ ನೀರು ಇರಬಹುದು ಎನ್ನುವ ಸುಳಿವು ಸಿಕ್ಕಿದ್ದು ವರ್ಷದಲ್ಲಿ ಎದ್ದು ಕಾಣಿಸಿದ ಸುದ್ದಿಯಾಗಿತ್ತು.
----------------------------------------------
ಆನ್‌ಲೈನಿನಲ್ಲಿ CAT ಪರೀಕ್ಷೆಯೇ ಫೇಲು
ಕಂಪ್ಯೂಟರಿನಲ್ಲಿ ಕ್ಯಾಟ್ ಪರೀಕ್ಷೆ ಬರೆದು,ಪ್ರತಿಷ್ಠಿತ ಐಐಎಂಗಳಿಗೆ ಪ್ರವೇಶ ಗಿಟ್ಟಿಸಿಕೊಳ್ಳುವ ಪ್ರಯೋಗ ಈ ವರ್ಷ ನಡೆದರೂ,ಅದಕ್ಕೆ ಹಲವು ತೊಡಕುಗಳು ಎದುರಾದುವುದು.ವೈರಸ್ ಕಾಟದಿಂದ ಹೀಗಾಯಿತು ಎನ್ನುವ ವಿವರಣೆ ಯಾರಿಗೂ ಸಮಾಧಾನ ತರಲಿಲ್ಲ.ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದ ಈ ಆನ್‌ಲೈನ್ ಪರೀಕ್ಷೆ ರದ್ದಾಗಿ,ಅವರುಗಳು ಹೊಸದಾಗಿ ಪರೀಕ್ಷೆ ಬರೆಯಬೇಕಾದ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
------------------------------------------------------------


ಕನ್ನಡ ವಿಶ್ವಕೋಶ "ಕಣಜ"
ಕರ್ನಾಟಕ ಸರಕಾರ ಆರಂಭಿಸಿರುವ ಕನ್ನಡ ಜ್ಞಾನಕೋಶಕ್ಕೆ "ಕಣಜ" ಎಂದು ಹೆಸರಿಡಲಾಗಿದೆ.ಈ ಜ್ಞಾನಕೋಶದ ಅಂತರ್ಜಾಲ ತಾಣವನ್ನು ಈಗ ಲೋಕಾರ್ಪಣೆ ಮಾಡಲಾಗಿದ್ದು http://kanaja.in/ ವಿಳಾಸದಲ್ಲಿ ಲಭ್ಯವಿದೆ."ಕರ್ನಾಟಕ ಜ್ಞಾನ ಆಯೋಗದ ಪ್ರಯತ್ನದ ಈ ಯೋಜನೆಗೆ ಕರ್ನಾಟಕ ಸರ್ಕಾವು ಎರಡು ಕೋಟಿ ಅನುದಾನವನ್ನು ನೀಡಿದೆ.
-----------------------------------------------
ಗೂಗಲ್ ಅರ್ಥ್ ಹೋಲುವ ಇಸ್ರೋದ ಭುವನ್
ಈಗ ಇಸ್ರೋವೂ ಗೂಗಲ್ ಅರ್ಥ್ ಅಂತಹ ಅಂತಹ ಸೇವೆಯನ್ನು ನೀಡಲು ಆರಂಭಿಸಿದೆ. ಅದಕ್ಕಾಗಿ ಅದು ಭುವನ್ ಎನ್ನುವ ಬಹು ಉಪಗ್ರಹ ವ್ಯವಸ್ಥೆಯನ್ನು ಸ್ಥಾಪಿಸಿತು. ಅದರ ಮೂಲಕ ಹೆಚ್ಚಿನ ಸ್ಪಷ್ಟತೆಯಿರುವ ಭೂಮಿಯ ಚಿತ್ರಗಳನ್ನು ಸೆರೆ ಹಿಡಿದು,ಅದರ ಮೂಲಕ ಗೂಗಲ್ ಅರ್ಥ್‌ಗೆ ಹೋಲುವ ಸೇವೆಯನ್ನು ನೀಡುವುದು ಇಸ್ರೋದ ಕನಸು ಈ ವರ್ಷ ನನಸಾದರೂ,ಗೂಗಲನ್ನು ಮೀರಿಸಲು ಅದಿನ್ನೂ ಸಮಯ ತೆಗೆದುಕೊಂಡೀತು.
---------------------------------
ಕನ್ನಡ ಅಂತರ್ಜಾಲ ತಾಣಗಳು
ಕನ್ನಡ ಬ್ಲಾಗ್ಸ್ http://kannadablogs.ning.com/ ಕನ್ನಡದ ಹೊಸ ಅಂತರ್ಜಾಲ ತಾಣವಾಗಿ ಮೂಡಿಬಂತು.ಕನ್ನಡ ಬ್ಲಾಗಿಗರನ್ನು ಒಂದುಗೂಡಿಸುವುದು ಮತ್ತು ಪುಸ್ತಕ ಬಿಡುಗಡೆ, ಚರ್ಚೆಗಳಂತಹ ಚಟುವಟಿಕೆಗಳನ್ನು ಅವರ ಗಮನಕ್ಕೆ ತರುವ ಕಾರ್ಯದಲ್ಲಿ ಕನ್ನಡಬ್ಲಾಗ್ಸ್ ತಾಣ ಅಪೂರ್ವ ಯಶಸ್ಸು ಕಂಡಿದೆ. ವರ್ಷಾಂತ್ಯಕ್ಕೆ ಎರಡೂಕಾಲು ಸಾವಿರ ಸದಸ್ಯರನ್ನು ನೋಂದಾಯಿಸಿ,ಇನ್ನೂ ಹೆಚ್ಚು ಜನರನ್ನು ಆಕರ್ಷಿಸುತ್ತಿರುವ ತಾಣವಿದು.ಮೇ ಫ್ಲವರ್ ಮೀಡಿಯಾ ಹೌಸ್ ಈ ತಾಣವನ್ನು ನಿರ್ವಹಿಸುತ್ತಿದೆ. "ಕೆಂಡಸಂಪಿಗೆ" ಹಿನ್ನೆಲೆಗೆ ಸರಿದುದು ಅನಿರೀಕ್ಷಿತ ಬೆಳವಣಿಗೆ.ಅನಿವಾಸಿ ಭಾರತೀಯರನ್ನು ಬಹುವಾಗಿ ಆಕರ್ಷಿಸುವಲ್ಲಿ ಸಫಲವಾಗಿರುವ ದಟ್ಸ್‌ಕನ್ನಡ.ಕಾಮ್ thatskannada.com ಕನ್ನಡದ ಜನಪ್ರಿಯ ತಾಣ. ಸುದ್ದಿಯನ್ನೂ ಪ್ರಕಟಿಸುವ ಈ ತಾಣ, ಎಲ್ಲಾ ತರದ ಮಸಾಲೆಯನ್ನೂ ಹೊಂದಿರುವುದೇ ಇದರ ಜನಪ್ರಿಯತೆಯ ಗುಟ್ಟು. ಬರಹಗಾರರಿಗೆ ತಮ್ಮ ಬರಹವನ್ನು ಯಾವುದೇ ಸಂಪಾದಕರ ಕತ್ತರಿಗೊಳಗಾಗದೆ ದಿಡೀರ‍್ ಆಗಿ ಪ್ರಕಟಿಸಿ, ಓದುಗರಿಂದ ಮತ್ತು ಸದಸ್ಯರಿಂದ ಪ್ರತಿಕ್ರಿಯೆ ಪಡೆಯಲು ಅನುವು ಮಾಡುವ ಸಂಪದ.ನೆಟ್(sampada.net ) ನಂಬರ್ 2 ಸ್ಥಾನದಲ್ಲಿರುವ ಕನ್ನಡ ತಾಣ.ಜಾಹೀರಾತಿನ ಕಾಟವಿಲ್ಲದೆ,ಅತ್ಯುತ್ತಮ ಬಳಕೆದಾರ ಸ್ನೇಹಿ ಪುಟ ವಿನ್ಯಾಸ ಹೊಂದಿದ ಸಂಪದಕ್ಕೆ ಹರಿಪ್ರಸಾದ್ ನಾಡಿಗ್ ಸಾರಥ್ಯವಿದೆ. ಸದಸ್ಯರ ಸಂಖ್ಯೆ ಆರೂವರೆ ಸಾವಿರಕ್ಕೂ ಹೆಚ್ಚು.ನೀರ ನಿಶ್ಚಿಂತೆ ಸಾಧಿಸುವ ಗುರಿ ಹೊತ್ತ ಕನ್ನಡ ವಾಟರ್ ಪೋರ್ಟಲ್, ಆರೋಗ್ಯ ಸಂಪದ, ಕೃಷಿ ಸಂಪದಗಳೂ ಸಂಪದದ ಛತ್ರದಡಿ ಬರುತ್ತವೆ.ಈ ವರ್ಷ ಈ ತಾಣವೂ ನಿರ್ವಹಣೆಗಾಗಿ ಎರಡು ತಿಂಗಳ ಕಾಲ ನಿಲುಗಡೆಯಾಯಿತು.ಸಂಪನ್ಮೂಲಗಳಿಗಾಗಿ ಕನ್ನಡಿಗರತ್ತ ನೋಡುತ್ತಿರುವ ಸಂಪದವನ್ನು ಕನ್ನಡಿಗರು ಪ್ರೋತ್ಸಾಹಿಸಲು ಮನ ಮಾಡಬೇಕಿದೆ.ಕನ್ನಡದಲ್ಲೂ ಟ್ವಿಟರನ್ನು ಹೋಲುವ ಇಂಚರ ಎನ್ನುವ ತಾಣ ಆರಂಭವಾಯಿತು.ವಸಂತ್ ಕಜೆ ಎನ್ನುವ ತಂತ್ರಜ್ಞ ಇದನ್ನು ನಿರ್ವಹಿಸುತ್ತಿದ್ದಾರೆ.ನೀರಿನ ಬಗ್ಗೆ ಮಾಹಿತಿಯನ್ನೊಳಗೊಂಡ http://kannada.indiawaterportal.org/ ಕೂಡಾ ಸಾಕಷ್ಟು ಜನಪ್ರಿಯವಾಯಿತು.
----------------------------------------
ಕೃಷಿ ಪತ್ರಿಕೆಗಳು ಅಂತರ್ಜಾಲದಲ್ಲಿ
ಕೃಷಿಸಂಪದ ಇ-ಪತ್ರಿಕೆಯ ಮೊದಲ ಆವೃತ್ತಿಯನ್ನು ಸೆಪ್ಟೆಂಬರ್ 21ರಂದು ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಬಿಡುಗಡೆಯಾಗಲಿದೆ.ಹಿರಿಯ ಪತ್ರಕರ್ತ ನಾಗೇಶ್ ಹೆಗಡೆಯವರು ಇ-ಪತ್ರಿಕೆಯನ್ನು ಬಿಡುಗಡೆ ಮಾಡಲಿದ್ದಾರೆ.ಅಡ್ಡೂರು ಕೃಷ್ಣರಾವ್ ಅವರು ಕೃಷಿರಂಗದ ಪಲ್ಲಟಗಳು ಎಂಬ ವಿಷಯದ ಬಗ್ಗೆ ಮಾತನಾಡಲಿದ್ದಾರೆ."ಕೃಷಿ,ಮಾಹಿತಿ ತಂತ್ರಜ್ಞಾನ ಮತ್ತು ನಾವು" ಎಂಬ ಬಗ್ಗೆ ಸಂವಾದವೂ ನಡೆಯಲಿದೆ.ಈಗಾಗಲೇ ಮೂರು ಸಂಚಿಕೆಗಳ ಬಿಡುಗಡೆಯಾಗಿವೆ.

ಅಡಿಕೆ ಪತ್ರಿಕೆಯೂ ರಾಜ್ಯೋತ್ಸವದ ದಿನದಿಂದ ಅಂತರ್ಜಾಲ ತಾಣದಲ್ಲಿ www.adikepatrike.com ಎಂಬ ವಿಳಾಸದಲ್ಲಿ ಲಭ್ಯವಿದೆ.ಪತ್ರಿಕೆಯ ಹಳೆ ಸಂಚಿಕೆಗಳ ಪಿಡಿಎಫ್ ಪ್ರತಿಗಳು ಡೌನ್‌ಲೋಡಿಗೆ ಲಭ್ಯವಿರುವುದು ತಾಣದ ವಿಶೇಷತೆ.ಮುಂದೆ ಪತ್ರಿಕೆಗೆ ಆನ್‌ಲೈನ್ ಚಂದಾದಾರರಾಗುವ ಅವಕಾಶವೂ ಸಿಗಲಿದೆ.ಕೃಷಿಕರ ಅನುಭವವನ್ನು ಪರಸ್ಪರ ಹಂಚಿಕೊಳ್ಳಲು ಅನುಕೂಲ ಕಲ್ಪಿಸಿದ್ದ ಅಡಿಕೆ ಪತ್ರಿಕೆ ಮುದ್ರಿತ ಪತ್ರಿಕೆಯ ವ್ಯಾಪ್ತಿಯಿಂದ ಹೊರಬಂದು ತನ್ನ ಕ್ಷೇತ್ರವನ್ನು ವಿಸ್ತಾರಗೊಳಿಸಿಕೊಂಡಿರುವುದು,ಉತ್ತಮ ಬೆಳವಣಿಗೆ.
---------------------------------------------------------
ಮೈಕ್ರೋಸಾಫ್ಟ್ ಬಿಂಗ್
ಮೈಕ್ರೋಸಾಫ್ಟಿನ ಹೊಸ ಶೋಧ ಸೇವೆ ಜೂನ್‌ನಲ್ಲಿ ಅನಾವರಣಗೊಂಡಿತು. ಟ್ವಿಟರ್ ಮಾಹಿತಿಯನ್ನು ಸೇರಿಸಿಕೊಂಡು ಶೋಧ ಫಲಿತಾಂಶವನ್ನು ಬಹು ತಾಜಾ ಆಗಿಸುವತ್ತ ಬಿಂಗ್ ಹೆಜ್ಜೆಯಿಕ್ಕಿದೆ.ಅದರ ಜತೆ ಯಾಹೂ ಜತೆ ಒಪ್ಪಂದ ಮಾಡಿಕೊಂಡು ಆದಾಯವನ್ನು ಹೆಚ್ಚಿಸಿಕೊಳ್ಳುವತ್ತಲೂ ದೃಷ್ಟಿ ಹಾಯಿಸಿತು.
-----------------------------------------------------------
ಹೊಸ ಸ್ಪರ್ಶಸಂವೇದಿ ಮೌಸ್
ಆಪಲ್ ಕಂಪೆನಿಯು ಗುಂಡಿಗಳಿಲ್ಲದ ಹೊಸ ಸ್ಪರ್ಶಸಂವೇದಿ ಮೌಸನ್ನು ಹೊರ ತಂದಿದೆ. ಈ ಮೌಸ್ ಐಫೋನ್ ಸಾಧನದ ಸ್ಪರ್ಶ ಸಂವೇದಿ ತೆರೆಯ ಸೌಲಭ್ಯಗಳನ್ನು ಕಂಪ್ಯೂಟರಿನಲ್ಲಿ ಪಡೆಯಲು ನೆರವಾಗುತ್ತದೆ. ಸ್ಪರ್ಶಿಸಿದ ಬಗೆಯಿಂದಲೇ ನೋಡುತ್ತಿರುವ ಪುಟದ ಮೇಲ್ಭಾಗ ಅಥವ ಕೆಳಭಾಗದತ್ತ ಸಾಗುವ ಸೌಕರ್ಯ ಇಲ್ಲಿ ಸಿಗುತ್ತದೆ. ಕ್ಲಿಕ್ಕಿಸಿದರೆ,ಬಲ-ಎಡ ಗುಂಡಿಗಳ ಕ್ಲಿಕ್ಕಿಸುವಿಕೆ ಇವೆಲ್ಲವನ್ನೂ ಅದು ಸ್ಪರ್ಶಿಸಿದ ರೀತಿಯಿಂದಲೇ ತಿಳಿದುಕೊಳ್ಳುತ್ತದೆ. ಕ್ಯಾಪಾಸಿಟಿವ್ ಸಂವೇದಕಗಳಿಂದ ಇದನ್ನು ತಯಾರಿಸಲಾಗಿದೆ.ಬ್ಲೂಟೂತ್ ಮೂಲಕ ಇದನ್ನು ಕಂಪ್ಯೂಟರಿಗೆ ನಿಸ್ತಂತು ಮಾಧ್ಯಮದ ಮೂಲಕ ಸಂಪರ್ಕಿಸಲಾಗುತ್ತದೆ. ಆದ್ದರಿಂದ ಕೇಬಲ್ ಮುಕ್ತವಾಗಿರುತ್ತದೆ.ಇದು ಕೆಲಸ ಮಾಡಲು ಆಪಲ್ ಕಂಪ್ಯೂಟರ್ ಮತ್ತು ಲೆಪರ್ಡ್ ಕಂಪ್ಯೂಟರ್ ಕಾರ್ಯನಿರ್ವಹಣಾ ತಂತ್ರಾಂಶ ಬೇಕು. ಹೊಸ ಕಂಪ್ಯೂಟರ್ ಮತ್ತು ಮ್ಯಾಕ್‌ಬುಕ್ ನೋಟ್‌ಬುಕ್‌ಗಳ ಜತೆ ಈ ಮೌಸ್ ಬಳಕೆಗೆ ಸಿಗಲಿದೆ.ಬೆಲೆ ಸುಮಾರು ಎಪ್ಪತ್ತು ಡಾಲರುಗಳು.
-----------------------------------------------------
ನುಕ್ ಇ-ಬುಕ್ ರೀಡರ್
ನುಕ್ ಎನ್ನುವುದು ಹೊಸ ಇ-ಬುಕ್ ರೀಡರ್ ಸಾಧನ ಈ ವರ್ಷ ಬಿಡುಗಡೆಯಾಯಿತು.ಕಿಂಡ್ಲ್ ಎನ್ನುವ ಸಾಧನದಂತೆಯೇ ಇದು ಪುಸ್ತಕವನ್ನು ಕೈಯಲ್ಲಿ ಹಿಡಿದು ಓದಿದ ಅನುಭವ ನೀಡುವ ಸಾಧನ.ಬ್ಯಾಟರಿಯಿಂದ ಕೆಲಸ ಮಾಡುವ ಕಾರಣ ಇದನ್ನು ಬೇಕೆಂದಲ್ಲಿಗೆ ಒಯ್ಯಬಹುದು.ಬಾರ್ನೆಸ್ ಅಂಡ್ ನೋಬ್ಲ್ ಕಂಪೆನಿಯು ಈ ಸಾಧನವನ್ನು ಮಾರುಕಟ್ಟೆಗೆ ಒದಗಿಸಿದೆ.ಕಂಪೆನಿಯು ಪುಸ್ತಕ ಉದ್ದಿಮೆಯಲ್ಲಿ ತೊಡಗಿಸಿಕೊಂಡಿದ್ದು,ತಾನೇ ಸ್ವತ: ಇ-ಪುಸ್ತಕಗಳನ್ನು ಒದಗಿಸುತ್ತದೆ. ನುಕ್‌ಗೆ ಪುಸ್ತಕಗಳನ್ನು ಅಂಗಡಿಯ ನಿಸ್ತಂತು ಸಂಪರ್ಕದ ಮೂಲಕ ಇಳಿಸಿಕೊಳ್ಳಬಹುದು. ಇಳಿಸಿಕೊಂಡ ಪುಸ್ತಕಗಳನ್ನು ಹದಿನಾಲ್ಕು ದಿನಗಳ ಮಟ್ಟಿಗೆ ಇತರರಿಗೆ ಎರವಲು ನೀಡಬಹುದು. ಒಂದು ಪುಸ್ತಕವನ್ನು ಒಂದು ಸಲ ಮಾತ್ರಾ ಎರವಲು ನೀಡಬಹುದು.ಬೆಲೆ ಸುಮಾರು ಇನ್ನೂರೆಪ್ಪತ್ತೈದು ಡಾಲರು. ಕಿಂಡಲ್ ಸಾಧನವೂ ಇದೇ ಬೆಲೆಯಲ್ಲಿ ಲಭ್ಯ.
----------------------------------------
ಹಿಂದಿಯಲ್ಲೂ ಅಂತರ್ಜಾಲ ತಾಣದ ಹೆಸರು ಸಾಧ್ಯ
ಇಂಗ್ಲೀಷ್(ಲ್ಯಾಟಿನ್) ಅಕ್ಷರಗಳ ಹೊರತಾದ ಇತರ ಭಾಷೆಗಳಲ್ಲೂ ಅಂತರ್ಜಾಲ ತಾಣದ ವಿಳಾಸವನ್ನು ನೀಡಲು ಸಾಧ್ಯವಾಗಬೇಕೆಂಬುದು ಹಳೆಯ ಕನಸು.ಅಂತರ್ಜಾಲದ ನೂರಹದಿನಾರು ಕೋಟಿ ಬಳಕೆದಾರರು ಇಂಗ್ಲೀಷಿನಂತಹ ಲ್ಯಾಟಿನ್ ಲಿಪಿಯೇತರ ಬಳಸುವ ಭಾಷೆಗಳ ಬಳಕೆ ಮಾಡುತ್ತಿದ್ದರೂ, ಆ ಭಾಷೆಗಳಿಗೆ ಅಂತರ್ಜಾಲದ ವಿಳಾಸದಲ್ಲಿ ಪ್ರಾತಿನಿಧ್ಯ ಸಿಗದಿರುವುದು ನ್ಯಾಯವಲ್ಲ ಎನ್ನುವ ಭಾವನೆಗೆ ಈಗ ಬೆಲೆ ಸಿಕ್ಕಿದೆ.ಇದೀಗ ಹಿಂದಿ,ಚೀನೀ,ಅರೇಬಿಕ್ ಅಂತಹ ಭಾಷೆಗಳನ್ನು ಹಲವು ನಿಯಮಗೊಳಿಗೆ ಒಳಪಟ್ಟು,ಯು ಆರ್ ಎಲ್ ಎಂದು ಕರೆಯಲ್ಪಡುವ ಅಂತರ್ಜಾಲದ ವಿಳಾಸದಲ್ಲಿ ಬಳಸಲು ಅನುಮತಿಸಲಾಗಿದೆ.ICANN ಎನ್ನುವ ಅಂತರ್ಜಾಲದ ಹೆಸರು ಮತ್ತು ಸಂಖ್ಯೆಗಳ ನಿಗಮವು ಈ ನಿರ್ಣಯ ಕೈಗೊಂಡಿದೆ. ಪ್ರತಿ ಭಾಷೆಗೂ ಅದರದ್ದೇ ಆದ ಅಂತ್ಯ ಪದವನ್ನು ಬಳಸಬೇಕು ಎನ್ನುವ ನಿಯಮವನ್ನು ವಿಧಿಸಲಾಗಿದೆ.ಕಾಂ, ನೆಟ್ ಮುಂತಾದ ಪದಗಳನ್ನು ಹೆಸರಿನ ಅಂತ್ಯದಲ್ಲಿ ಬಳಸಲು ಅನುಮತಿ ಇಲ್ಲ. ಈ ಬಳಕೆ ಮುಂದಿನ ವರ್ಷ ಸಾಧ್ಯವಾಗಬಹುದು.ನಿಧಾನವಾಗಿ ಎಲ್ಲ ಭಾಷೆಗಳಲ್ಲಿಯೂ ಅಂತರ್ಜಾಲ ವಿಳಾಸಕ್ಕೆ ಅನುಮತಿ ಸಿಗಬಹುದು.ಹೊಸ ಭಾಷೆಗಳ ಸೇರ್ಪಡೆ ಸಾಧ್ಯವಾಗಲು ಅಂತರ್ಜಾಲದ ಯುಆರೆಲ್‌ಗೆ ಸಮನಾದ ಸಂಖ್ಯಾವಿಳಾಸ ಒದಗಿಸುವ ಡಿಎನ್‌ಎಸ್ ಎನ್ನುವ ಸರ್ವರ್ ಕಾರ್ಯವಿಧಾನದಲ್ಲಿ ಬದಲಾವಣೆ ಮಾಡಬೇಕಾಗುತ್ತದೆ.
udayavani
*ಅಶೋಕ್‌ಕುಮಾರ್ ಎ

Monday, December 28, 2009

ಬ್ಲಾಗನ್ನು ಮುದ್ರಿಸಿ

ಬ್ಲಾಗನ್ನು ಮುದ್ರಿಸಿ


ಈಗ ಬ್ಲಾಗನ್ನು ಮುದ್ರಿಸುವ ಸೇವೆಯೂ ಲಭ್ಯವಿದೆ.http://blog2print.sharedbook.com ಅಂತರ್ಜಾಲ ವಿಳಾಸದಲ್ಲಿ ಈ ಸೇವೆಯು ಲಭ್ಯವಿದೆ.ಬ್ಲಾಗನ್ನು ಟೈಪ್‌ಪ್ಯಾಡ್,ವರ್ಡ್‌ಪ್ರೆಸ್ ಅಥವಾ ಬ್ಲಾಗರ್ ಸೇವೆಯ ಮೂಲಕ ಬರೆಯುವವರು ಈ ಸೇವೆಯನ್ನು ಪಡೆಯಬಹುದು.ನಿಮ್ಮ ಬ್ಲಾಗಿನ ವಿಳಾಸವನ್ನು ನೀಡಿ,ಮುಖಪುಟ ಮತ್ತು ಹಿಂಬದಿ ರಕ್ಷಾಪುಟವನ್ನು ಅಪ್ಲೋಡ್ ಮಾಡುವ ಮೂಲಕ ಕೆಲವೇ ನಿಮಿಷದಲ್ಲಿ ಬ್ಲಾಗ್ ಪುಸ್ತಕವನ್ನು ರಚಿಸಬಹುದು.ರಕ್ಷಾಪುಟವನ್ನು ನೀವು ನೀಡದಿದ್ದರೆ,ತಾನಾಗಿ ಅದನ್ನು ವಿನ್ಯಾಸ ಮಾಡಲೂ ಸೇವೆ ಶಕ್ತವಿದೆ.ಯಾವ ತಾರೀಕುಗಳ ನಡುವಣ ಬ್ಲಾಗ್ ಪುಸ್ತಕ ಬೇಕು ಎನ್ನುವುದನ್ನು ನಮೂದಿಸಲೂ ಸಾಧ್ಯವಿದೆ.ಸಂಪೂರ್ಣ ಬ್ಲಾಗನ್ನು ಒಂದೇ ಪುಸ್ತಕ ಮಾಡಬೇಕೆಂದೇನೂ ಇಲ್ಲ.ಪುಸ್ತಕದ ಮುನ್ನೋಟವನ್ನು ಪಡೆಯಲೂ ಬಹುದು.ಬ್ಲಾಗ್ ಪುಸ್ತಕವನ್ನು ಮುದ್ರಿಸಿ,ನಿಮಗೆ ಕೊರಿಯರ್ ಮೂಲಕ ಕಳುಹಿಸುವ ಸೇವೆಗೆ ಹದಿನೈದು ಡಾಲರಿನಿಂದ ಆರಂಭಿಸಿ,ಪುಟಗಳ ಸಂಖ್ಯೆಯ ಮೇಲೆ ದರ ವಿಧಿಸಲಾಗುತ್ತದೆ.ಪುಸ್ತಕದ ಇ-ಪ್ರತಿಗಾದರೆ ಬೆಲೆ ಕಡಿಮೆ.
--------------------------------------------------------------------------------
ಸನ್ನೆಯ ಮೂಲಕ ಟಿವಿ ನಿಯಂತ್ರಣ
ಟಿವಿಯ ಮುಂದೆ ಸನ್ನೆ ಮಾಡಿ,ಅದನ್ನು ನಿಯಂತ್ರಿಸಲಾಗುತ್ತದೆಯೇ? ಸಾಫ್ಟ್‌ಕೈನೆಟಿಕ್ ಎನ್ನುವ ತಂತ್ರಾಂಶ ಕಂಪೆನಿಯು ಟೆಕ್ಸಸ್ ಇನ್‌ಸ್ಟ್ರುಮೆಂಟ್ಸ್ ಕಂಪೆನಿಯ ಜತೆ ಸೇರಿ ಈ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿದೆ.ಸನ್ನೆಯನ್ನು ಗ್ರಹಿಸಲು ಟಿವಿಯ ಮೇಲೆ ಮೂರು ಆಯಾಮದಲ್ಲಿ ಚಿತ್ರವನ್ನು ಗ್ರಹಿಸುವ ಕ್ಯಾಮರಾದ ಅಗತ್ಯವಿದೆ.ಕ್ಯಾಮರಾದ ಮುಂಭಾಗದಲ್ಲಿ ನಿಂತು ಸನ್ನೆ ಮಾಡಿದಾಗ,ಅದನ್ನು ಗ್ರಹಿಸಿ,ತಂತ್ರಾಂಶದ ಸಹಾಯದಿಂದ ಸನ್ನೆಯನ್ನು ವಿಶ್ಲೇಷಿಸಿ,ಅದಕ್ಕನುಗುಣವಾಗಿ ಟಿವಿಯು ಪ್ರತಿಕ್ರಿಯೆ ನೀಡುವಂತೆ ಮಾಡಲಾಗಿದೆ. ಈ ತಂತ್ರಜ್ಞಾನವನ್ನು ಕಂಪ್ಯೂಟರಿನಲ್ಲೂ ಬಳಸಲಡ್ಡಿಯಿಲ್ಲ.ಸಾಫ್ಟ್‌ಕೈನೆಟಿಕ್ ಕಂಪೆನಿಯು,ಮೂರು ಆಯಾಮದಲ್ಲಿ ಚಿತ್ರ ಹಿಡಿಯುವ ಸಾಧನ ತಯಾರಿಕಾ ಕಂಪೆನಿಯಾದ ಅಫ್ಟ್ರಿಮಾ ಎನ್ನುವ ಬೆಲ್ಜಿಯನ್ ಕಂಪೆನಿಯೊಂದಿಗೆ ಕೂಡಾ ಒಪ್ಪಂದ ಮಾಡಿಕೊಂಡಿದೆ.ಇಂತಹ ತಂತ್ರಜ್ಞಾನದಲ್ಲಿ ಸಂವೇದಕಗಳು ಮುಖ್ಯ ಪಾತ್ರ ವಹಿಸುತ್ತವೆ.ಮುಂದಿನ ದಿನಗಳಲ್ಲಿ,ರಿಮೋಟ್ ಬದಲು, ಟಿವಿಯ ಮುಂದೆ ಕೈಕಾಲು ಅಲುಗಾಡಿಸಿ,ಚಾನೆಲ್ ಬದಲಿಸುವುದು,ಧ್ವನಿಯ ಮಟ್ಟವನ್ನು ಏರಿಳಿಸುವುದು ಮುಂತಾದವುಗಳನ್ನು ಮಾಡಬೇಕಾದೀತು.
-------------------------------------------------------------------
ಪಾರ್ಕಿಂಗ್ ಮಾಡಲು ಟ್ವಿಟರ್ ಸಹಾಯ
ಮಾಲ್ ಆಫ್ ಅಮೆರಿಕಾವು ಅಮೆರಿಕಾದ ದೊಡ್ಡ ಶಾಪಿಂಗ್ ತಾಣ.ಅಲ್ಲಿಗೆ ಹಬ್ಬದ,ಹೊಸ ವರ್ಷದಲ್ಲಿ ಬರುವ ಗ್ರಾಹಕರಿಗೆ ಸಹಾಯ ಮಾಡಲೀಗ ಟ್ವಿಟರ್ ಸಹಾಯ ಪಡೆಯಲಾಗಿದೆ.ಮಾಲ್‌ನ ವಿವಿಧ ಭಾಗಗಳಲ್ಲಿ ಇರುವ ಪಾರ್ಕಿಂಗ್ ಸ್ಥಳದ ಲಭ್ಯತೆ ಬಗ್ಗೆ ಆಗಾಗ ಟ್ವಿಟರ್ ಸಂದೇಶವನ್ನು ರವಾನಿಸುವ ಸೇವೆಯನ್ನು ಮಾಲ್ ಈಗ ಹೊಸದಾಗಿ ಆರಂಭಿಸಿದೆ.ಅದೇ ರೀತಿ ವಾಹನ ಸಂದಣಿಯನ್ನು ತಪ್ಪಿಸಿ,ಅಲ್ಲಿಗೆ ಬರುವ ಬಗ್ಗೆ ಮಾಹಿತಿಯನ್ನು ಆಗಾಗ ನೀಡಲಾಗುತ್ತದೆ.ಗ್ರಾಹಕರು ಮಾಲ್‌ನ ಟ್ವಿಟರ್ ಖಾತೆಯನ್ನು ಹಿಂಬಾಲಿಸುವ ಮೂಲಕ ತಮ್ಮ ಮೊಬೈಲ್ ಸಾಧನಗಳಲ್ಲಿ ಪಾರ್ಕಿಂಗ್ ಬಗ್ಗೆ ಮತ್ತು ವಾಹನ ಸಂದಣಿಯ ಬಗ್ಗೆ ತಾಜಾ ಮಾಹಿತಿಯನ್ನು ಪಡೆದು ಹೆಚ್ಚಿನ ಲಾಭ ಪಡೆಯುತ್ತಾರೆ.
-------------------------------------------------------------
ಗುರುತ್ವ ಬಲ ಅಳೆಯುವ ಉಪಗ್ರಹ
ಕೃತಕ ಉಪಗ್ರಹಗಳನ್ನು ವಿವಿಧ ಉದ್ದೇಶಗಳಿಂದ ಭೂಮಿಯ ಕಕ್ಷೆಗೆ ಕಳುಹಿಸುವುದು ಎಲ್ಲರಿಗೂ ಗೊತ್ತು.ಭೂಸ್ಥಿರ ಕಕ್ಷೆಯಲ್ಲಿರುವ ಉಪಗ್ರಹಗಳು ಸಂಪರ್ಕ ಉಪಗ್ರಳಾಗಿ ಬಳಕೆಯಾದರೆ,ಗೂಢಚಾರಿಕೆ ಉದ್ದೇಶಗಳಿಗಾಗಿ,ಹವಾಮಾನ ತಿಳಿದುಕೊಳ್ಳಲು,ನಕಾಶೆ ಬಿಡಿಸಲು ಬಳಕೆಯಾಗುವ ಉಪಗ್ರಹಗಳು ಕಡಿಮೆ ಎತ್ತರದ ಕಕ್ಷೆಯಲ್ಲಿರುವುದೇ ಹೆಚ್ಚು.ಈಗ ಒಂದು ಉಪಗ್ರಹವನ್ನು ಕಕ್ಷೆಯಲ್ಲಿಟ್ಟಿರುವ ಉದ್ದೇಶ ಭೂಮಿಯ ಗುರುತ್ವ ಬಲವನ್ನು ಅಂದಾಜು ಮಾಡುವುದಾಗಿದೆ.ಯುರೋಪಿನ ಗೋಸ್ ಎನ್ನುವ ಉಪಗ್ರಹವೇ ಈ ಉದ್ದೇಶದಿಂದ ಹಾರಿಸಲಾದದ್ದು.ಭೂಮಿಯ ಗುರುತ್ವ ಬಲ ಭೂಮಿಯ ಮೇಲೆ ಸಾಮಾನ್ಯವಾಗಿ ಒಂದೇ ಎಂದು ಭಾವಿಸಲಾಗುವುದಾದರೂ ಅದರಲ್ಲಿ ವ್ಯತ್ಯಾಸ ಇದ್ದೇ ಇದೆ.ಭೂಮಿಯ ಕೇಂದ್ರದಿಂದ ಜಾಗಕ್ಕಿರುವ ದೂರ,ಆ ಜಾಗದ ಕೆಳಗಿರುವ ನೆಲ ಯಾವ ಬಗೆಯದ್ದು,ಅದು ಸಾಂದ್ರವಾದದ್ದೋ ಅಲ್ಲವೋ ಎನ್ನುವುದು ಕೂಡಾ ಗುರುತ್ವ ಬಲವನ್ನು ನಿರ್ಧರಿಸುತ್ತದೆ.ಭೂಮಿಯು ಉರುಟಾಗಿರದೆ,ವಿವಿಧ ಸ್ಥಳಗಳ ಎತ್ತರ ಬೇರೆ ಬೇರೆ ಇರುತ್ತದೆ.ಆದ್ದರಿಂದ ಗುರುತ್ವ ಬಲದಲ್ಲಿ ವ್ಯತ್ಯಾಸ ಸಾಮಾನ್ಯ.ಈ ಉಪಗ್ರಹ ಚಿತ್ರವು ಭೂಮಿಯ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಗುರುತ್ವ ಬಲ ಹೆಚ್ಚಿದರೆ,ಅದನ್ನು ಕೆಂಪು ಬಣ್ಣದಿಂದ,ಕಡಿಮೆಯಾದರೆ ನೀಲಿ ಬಣ್ಣದಿಂದ ಗುರುತು ಮಾಡಿ ತೋರಿಸುತ್ತದೆ.ಈ ಉಪಗ್ರಹದಲ್ಲಿ ಗುರುತ್ವ ಬಲವನ್ನು ಅಂದಾಜು ಮಾಡುವ ಎಕ್ಸೆಲೋಮೀಟರ್ ಎನ್ನುವ ಸಂವೇದಕಗಳಿವೆ.ಇವು ದಶಲಕ್ಷದಲ್ಲಿ ಒಂದು ಭಾಗದಷ್ಟು ನಿಖರವಾಗಿ ಗುರುತ್ವಬಲವನ್ನು ಅಂದಾಜು ಮಾಡಬಲ್ಲುದು.
-------------------------------------------------------------------------------
ಆನ್‌ಲೈನ್ ಇರುವ ಅವಧಿ ಹೆಚ್ಚಿದೆ
ಅಂತರ್ಜಾಲ ಸಂಪರ್ಕದಲ್ಲಿ ಕಂಪ್ಯೂಟರ್ ಬಳಸುವುದು ಈಗ ಹೆಚ್ಚು ಸಾಮಾನ್ಯವಾಗಿ ಬಿಟ್ಟಿದೆ.ಬ್ರಾಡ್‌ಬ್ಯಾಂಡ್ ಲಭ್ಯತೆಯಿಂದಾಗಿ,ಸದಾ ಕಂಪ್ಯೂಟರನ್ನು ಅಂತರ್ಜಾಲಕ್ಕೆ ಸಂಪರ್ಕಿಸಿ ಇಡಬಹುದಾದರೂ,ಅಂತರ್ಜಾಲ ಸಂಪರ್ಕವಿದ್ದಾಗ,ಕೆಲಸದಲ್ಲಿ ಮನ ತೊಡಗುವುದಿಲ್ಲವೆಂದು ಕೆಲವರು ಅಂತರ್ಜಾಲ ಸಂಪರ್ಕ ಬಳಸದೆ ಇರಬಹುದು.ಇನ್ನು ಕೆಲವು ಕಚೇರಿಗಳಲ್ಲಿ ಅಂತರ್ಜಾಲ ಬಳಕೆ ಮೇಲೆ ನಿಯಂತ್ರಣ ವಿಧಿಸಲಾಗುತ್ತದೆ.ಫೇಸ್‌ಬುಕ್ ಅಂತಹ ತಾಣಗಳಲ್ಲಿರುವ ಆನ್‌ಲೈನ್ ಆಟಗಳಲ್ಲಿ ತೊಡಗಿ,ಕಚೇರಿ ಕೆಲಸಗಳು ಬಾಕಿಯಾಗುತ್ತವೆ ಎಂಬ ಕಾರಣಕ್ಕೆ ಈ ನಿಯಂತ್ರಣ ವಿಧಿಸಲಾಗುತ್ತಿರಬಹುದು.ಸಮೀಕ್ಷೆಯೊಂದರ ಪ್ರಕಾರ,ಅಂತರ್ಜಾಲ ಬಳಕೆದಾರರು ವಾರದಲ್ಲಿ ಸರಾಸರಿ ಹದಿಮೂರು ಗಂಟೆಗಳ ಕಾಲ ಆನ್‌ಲೈನ್ ಇರುವುದು ಕಂಡು ಬಂದಿದೆ.ಎರಡು ಸಾವಿರದ ಇಸವಿಯ ವೇಳೆ ಇದು ಏಳೆಂಟು ಗಂಟೆ ಇತ್ತು.ಮೂವತ್ತರಿಂದ ನಲುವತ್ತು ವರ್ಷ ವಯಸ್ಸಿನವರು ಸದಾಕಾಲ ಆನ್‌ಲೈನ್‌ನಲ್ಲಿ ಇದ್ದರೆ,ಹಳಬರು ಆನ್‌ಲೈನ್ ಇರುವ ಅವಧಿ ಕಡಿಮೆಯಾಗಿರುವುದು ಸಮೀಕ್ಷೆಯಿಂದ ದೃಡ ಪಟ್ಟಿದೆ.
--------------------------------------------------------------------------------
ಮೂಕವಾಗಲಿದೆ ವರ್ಲ್ಡ್‌ಸ್ಪೇಸ್
ಡಿಸೆಂಬರ್ ಮೂವತ್ತೊಂದರಂದರಿಂದ ವರ್ಲ್ಡ್‌ಸ್ಪೇಸ್ ಉಪಗ್ರಹ ರೇಡಿಯೋಸೇವೆ ತನ್ನ ಸೇವೆಯನ್ನು ಭಾರತದಲ್ಲಿ ನಿಲ್ಲಿಸಲಿದೆ.ವೈವಿಧ್ಯಮಯ ಸಂಗೀತವನ್ನು ಇಪ್ಪತ್ತನಾಲ್ಕು ಗಂಟೆಯೂ ಪ್ರಸಾರ ಮಾಡುತ್ತಿದ್ದ ವರ್ಲ್ಡ್‌ಸ್ಪೇಸ್ ರೇಡಿಯೋ ಕಂಪೆನಿಯು ದಿವಾಳಿಯಾಗಿರುವುದು ಇದಕ್ಕೆ ಕಾರಣ.ಅಮೆರಿಕಾ ಮೂಲದ ಕಂಪೆನಿಯನ್ನು ಖರೀದಿಸಲು ಇತರ ಕಂಪೆನಿಗಳು ಮುಂದೆ ಬಂದಿದ್ದರೂ, ಖರೀದಿಗೆ ಬಂದಿರುವ ಕಂಪೆನಿಗಳು ಭಾರತದ ರೇಡಿಯೋ ಪ್ರಸಾರದಲ್ಲಿಆಸಕ್ತಿ ಹೊಂದಿಲ್ಲವಾದ್ದರಿಂದ,ಭಾರತದಲ್ಲಿ ಪ್ರಸಾರ ನಿಲ್ಲಲಿದೆ.ಈ ವರ್ಷದ ನಂತರವೂ ಚಂದಾ ಅವಧಿ ಹೊಂದಿರುವ ಚಂದಾದಾರರು ಪರಿಹಾರ ಪಡೆಯಬೇಕೆಂದರೆ,ಅಮೆರಿಕಾದ ದಿವಾಳಿ ಕಾನೂನು ಪ್ರಕಾರ ವ್ಯಾಜ್ಯ ಹೂಡಬೇಕಾದೀತು.
------------------------------------------------------------------------------
ಲ್ಯಾಪ್‌ಟಾಪ್ ಮತ್ತು ವರ್ಣೀಯತೆ


ಈಗ ಲ್ಯಾಪ್‌ಟಾಪ್‌ಗಳಲ್ಲಿ ಕ್ಯಾಮರಾ ಮೂಲಕ ಬಳಕೆದಾರನ ಮುಖಪರಿಚಯ ಮಾಡಿಕೊಂಡು,ತನ್ಮೂಲಕ ಕಂಪ್ಯೂಟರ್ ಬಳಕೆಗೆ ಅವಕಾಶ ನೀಡುವ ವಿಧಾನ ಬಳಕೆಯಲ್ಲಿದೆ.ಪಾಸ್‌ವರ್ಡ್ ಬದಲಿಗೆ ಈ ವಿಧಾನ ಜನಪ್ರಿಯವಾಗುತ್ತಿದೆ.ಮುಖಪರಿಚಯಕ್ಕೆ ಕ್ಯಾಮರಾದ ಮೂಲಕ ಬಳಕೆದಾರನ ಚಿತ್ರ ಸೆರೆಹಿಡಿಯುವುದು ಅಗತ್ಯವಾಗಿದೆ.ಆದರೆ ಎಚ್‌ಪಿ ಲ್ಯಾಪ್‌ಟಾಪ್‌ನಲ್ಲಿ ಈ ಕ್ಯಾಮರಾಗಳು ಶ್ವೇತವರ್ಣೀಯರನ್ನು ಸುಲಭವಾಗಿ ಗುರುತು ಹಿಡಿದರೆ,ಇತರರನ್ನು ಗುರುತು ಹಿಡಿಯಲು ವಿಫಲವಾಗಿವೆ ಎಂದು ತೋರಿಸುವ ವಿಡಿಯೋವೊಂದು,ಯುಟ್ಯೂಬಿನಲ್ಲಿ ಒಂದು ದಶಲಕ್ಷ ಸಲ ವೀಕ್ಷಣೆ ಕಂಡು,ಕಂಪೆನಿಗೆ ಮುಜುಗರ ಉಂಟು ಮಾಡಿದೆ.ಸರಿಯಾದ ಬೆಳಕು ಇಲ್ಲದಿದ್ದರೆ ಹೀಗಾಗಬಹುದು ಎಂದು ಕಂಪೆನಿ ಸಮಜಾಯಿಷಿ ನೀಡಿದೆ.
---------------------------------------------------------------------------

*ಅಶೋಕ್‌ಕುಮಾರ್ ಎ


Sunday, December 20, 2009

ಲೋಹಿತಂತ್ರಾಂಶ:ಕನ್ನಡಕ್ಕೊಂದು ಹೊಸ ಪದಸಂಸ್ಕಾರಕ

ಲೋಹಿತಂತ್ರಾಂಶ:ಕನ್ನಡಕ್ಕೊಂದು ಹೊಸ ಪದಸಂಸ್ಕಾರಕ


"ಬರಹ" ಮತ್ತು "ನುಡಿ" ಪದಸಂಸ್ಕಾರಕಗಳು ಕನ್ನಡ ಲಿಪಿಯಲ್ಲಿ ಪದಸಂಸ್ಕಾರಕಗಳಾಗಿ ಬಳಕೆಯಲ್ಲಿರುವ ತಂತ್ರಾಂಶಗಳು.ಯುವತಂತ್ರಜ್ಞ ಲೋಹಿತ್ ಡಿ ಶಿವಮೂರ್ತಿಯವರು "ಲೋಹಿತಂತ್ರಾಂಶ" ಎನ್ನುವ ತಂತ್ರಾಂಶವನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ.ಹೊಸ ತಂತ್ರಾಂಶವು ಯುನಿಕೋಡ್ ಶಿಷ್ಟಾಚಾರದ ಪ್ರಕಾರ ಕಡತವನ್ನುಳಿಸಲು ಸಹಾಯ ಮಾಡುತ್ತದೆ.ಬರಹ ಅಥವಾ ನುಡಿಯಲ್ಲಿಯೂ ತೆರೆಯುವಂತೆಯೂ ಕಡತವನ್ನುಳಿಸಬಹುದು.ಅವುಗಳಲ್ಲಿ ರಚಿಸಿದ ಕಡತಗಳನ್ನೂ ಲೋಹಿತಂತ್ರಾಂಶ ತೆರೆಯುತ್ತದೆ.ಸದ್ಯ ವಿಂಡೋಸ್ ಕಾರ್ಯನಿರ್ವಹಣಾ ವ್ಯವಸ್ಥೆಯ ತಂತ್ರಾಂಶ ಸಿದ್ಧವಾಗಿದೆ.ಲಿನಕ್ಸಿನಲ್ಲಿಯೂ ಬಳಸಲಾಗುವಂತೆ ತಂತ್ರಾಂಶ ಸಿದ್ಧಪಡಿಸುವುದು ಅವರ ಯೋಜನೆ.ಕಡತಗಳನ್ನು ಉಳಿಸುವಾಗ,ಪಿಡಿಎಫ್ ಆಗಿಯೂ ಉಳಿಸಲು ಬರುತ್ತದೆ.ಪದವನ್ನು ಟೈಪಿಸುವಾಗ ಪದದ ಒಂದೆರಡು ಅಕ್ಷರ ಟೈಪಿಸಿದೊಡನೆ,ಅವುಗಳಿಂದ ಆರಂಭವಾಗುವ ಪದಗಳ ಪಟ್ಟಿಯನ್ನು ಪ್ರದರ್ಶಿಸುವ ಸೌಕರ್ಯ, ಈ ತಂತ್ರಾಂಶದ ಧನಾತ್ಮಕ ಅಂಶ.ಚಿತ್ರಗಳನ್ನು ಮತ್ತು ಕೋಷ್ಟಕಗಳನ್ನು ಪುಟಕ್ಕೆ ಸೇರಿಸುವ ಸೌಲಭ್ಯವಿದೆ.ಬರಹ ಮಾದರಿಯ ಲಿಪ್ಯಂತರಣ ವಿಧಾನ ಅಥವಾ ಕಗಪ ಕೀಲಿ ಮಣೆಯ ವಿನ್ಯಾಸ ಎರಡನ್ನೂ ಟೈಪಿಸುವಾಗ ಬಳಸಲು ಬರುತ್ತದೆ.ಲೋಹಿತಂತ್ರಾಂಶದಲ್ಲಿ ಪದವನ್ನು ಹುಡುಕಿ,ಅದನ್ನು ಬದಲಿಸಲೂ ಅವಕಾಶ ನೀಡಲಾಗಿದೆ.
--------------------------------------------------------------------
ಗೂಗಲ್ ದೃಶ್ಯ ಶೋಧ


ಗೂಗಲ್ ಗಾಗಲ್ ಎನ್ನುವುದು ಗೂಗಲ್‌ನ ಆಂಡ್ರಾಯ್ಡ್ ಸೆಲ್‌ಪೋನ್‌ಗಳಲ್ಲಿ ಲಭ್ಯವಿರುವ ಹೊಸ ಸೇವೆ. ಇದುವರೆಗೆ ಪದಪುಂಜಗಳ ಮೂಲಕ ಶೋಧ ನಡೆಸುವುದು ಮಾಮೂಲಿಯಾಗಿತ್ತು.ಈಗ ಚಿತ್ರಗಳ ಮೂಲಕವೂ ಅದನ್ನು ಮಾಡಬಹುದು.ಉದಾಹರಣೆಗೆ ನೀವು ಪೈಂಟಿಂಗ್ ಒಂದರ ಚಿತ್ರವನ್ನು ಮೊಬೈಲಿನಲ್ಲಿ ಸೆರೆಹಿಡಿದು,ಅದು ಯಾವ ಕಲಾವಿದನದ್ದು ಮುಂತಾದ ವಿವರಗಳನ್ನು ಗೂಗಲ್ ಶೋಧದ ಮೂಲಕ ತಿಳಿದುಕೊಳ್ಳಬಹುದು.ಜಿಪಿಎಸ್ ಸೌಲಭ್ಯ ಇರುವ ಮೊಬೈಲಿನಲ್ಲಿ,ನೀವಿರುವ ಸ್ಥಳದ ಲ್ಯಾಂಡ್‌ಮಾರ್ಕ್ ಮೇಲೆ ಮೊಬೈಲ್ ಸಾಧನದ ಕ್ಯಾಮರಾವನ್ನು ಸ್ಥಿರಗೊಳಿಸಿ,ಸ್ಥಳದ ವಿವರ ಪಡೆದುಕೊಳ್ಳಬಹುದು.ಪುಸ್ತಕದ ಮುಖಪುಟ ಸೆರೆಹಿಡಿಯುವ ಮೂಲಕ,ಪುಸ್ತಕದ ವಿವರ ಪಡೆದುಕೊಳ್ಳಬಹುದು.ವಿಸಿಟಿಂಗ್ ಕಾರ್ಡ್ ಚಿತ್ರ ಹಿಡಿದು,ಅದರಲ್ಲಿ ನಮೂದಿಸಿದ ಪೋನ್ ನಂಬರ್ ಹೆಸರನ್ನು ನಿಮ್ಮ ವಿಳಾಸಪುಸ್ತಿಕೆಗೆ ವರ್ಗಾಯಿಸಿಕೊಳ್ಳಬಹುದು!
---------------------------------------------------------------------------------
ಶಶಿತರೂರ್:ಐದುಲಕ್ಷ ಹಿಂಬಾಲಕರು




ಕೇಂದ್ರಸಚಿವ ಶಶಿತರೂರು ಟ್ವಿಟರ್ ಅಂತರ್ಜಾಲ ತಾಣದ ಖಾತೆಯನ್ನು ಹೋಂದಿದ್ದಾರೆ.ಅವರನ್ನೀಗ ಐದುಲಕ್ಷ ಜನರು ಹಿಂಬಾಲಿಸುತ್ತಿದ್ದಾರೆ.ಈ ಸಂದರ್ಭದಲ್ಲಿ ಅವರ ಟ್ವಿಟರ್ ಸಂದೇಶದಲ್ಲಿ ಅವರು ಹಿಂಬಾಲಕರಿಗೆ ಕೃತಜ್ಞತೆ ವ್ಯಕ್ತಪಡಿಸಿ,ತನ್ನ ಹಿಂಬಾಲಕರ ಸಂಖ್ಯೆ ಹತ್ತು ಸಾವಿರ ತಲುಪಿದಾಗ ಪತ್ರಿಕೆಗಳು ಅದನ್ನೆ ಸುದ್ದಿ ಮಾಡಿದ್ದನ್ನು ನೆನಪಿಸಿಕೊಂಡಿದ್ದಾರೆ.
ಟ್ವಿಟರ್ ಬಳಕೆದಾರರು ತಮ್ಮ ಸಂದೇಶಗಳಲ್ಲಿ ಬಳಸುವ ಪದಪುಂಜಗಳು ಸಾಮಾನ್ಯರಿಗೆ ಮೊದಲಿಗೆ ಗಲಿಬಿಲಿ ತರಬಹುದು.ಹಲವಾರು ಪದಗಳು ಟ್ವಿಟರ್ ಮೂಲಕ ಟಂಕಿಸಲ್ಪಟ್ಟಿವೆ.ಇವುಗಳ ಅರ್ಥ ನೋಡಿಕೊಳ್ಳಬೇಕೆಂದರೆ ಆನ್‌ಲೈನ್ ನಿಘಂಟೂ ಕೂಡಾ ಲಭ್ಯವಿದೆ.http://www.webopedia.com/quick_ref/Twitter_Dictionary_Guide.asp ಇಲ್ಲಿ ಅಂತಹ ನಿಘಂಟು ಲಭ್ಯ.ಟ್ವೀಪಲ್,ರಿಟ್ವೀಟ್,ಟ್ವೀಟ್ ಮುಂತಾದ ಪದಗಳನ್ನಿಲ್ಲಿಕಾಣಬಹುದು.ಹೊಸ ಪದಗಳನ್ನು ಸೇರಿಸುವ ಸೌಕರ್ಯವೂ ಇದೆ.
ಅಂದಹಾಗೆ ಟ್ವಿಟರ್ ಅಂತರ್ಜಾಲ ತಾಣವನ್ನು ವಶಕ್ಕೆ ತೆಗೆದುಕೊಳ್ಳಲು ಹಲವಾರು ಪ್ರಯತ್ನಗಳು ಆಗುತ್ತಿರುತ್ತವೆ.ಮೊನ್ನೆ ಶುಕ್ರವಾರ ಅಂತಹ ಪ್ರಯತ್ನವೊಂದು ಆಗಿತ್ತು.ಡಿಎನ್‌ಎಸ್ ಹ್ಯಾಕ್ ಮೂಲಕ ಈ ದಾಳಿ ಆಗಿತ್ತು ಎನ್ನುವ ಊಹೆ ಇದೆ.ಟ್ವಿಟರ್ ಸೇವೆ ಪಡೆಯಲು ಅದರ ವಿಳಾಸವನ್ನು ಟೈಪಿಸಿದರೆ,ಈ ತಾಣವು ಇರಾನಿ ಸೈಬರ್ ಸೈನ್ಯದ ವಶದಲ್ಲಿದೆ ಎಂದು ಘೋಷಿಸುವ ಪುಟ ಸಿಗುತ್ತಿತ್ತು.
----------------------------------------------------------------------------
ಯಕ್ಷಮಾತು


http://www.yakshamatu.blogspot.com/ ಎನ್ನುವುದು ಯಕ್ಷಗಾನದ ಬಗ್ಗೆ ಮೀಸಲಾಗಿಸಿದ ಕನ್ನಡ ಬ್ಲಾಗ್.ನಾ.ಕಾರಂತ ಪೆರಾಜೆಯವರ ಈ ಬ್ಲಾಗು,ಯಕ್ಷಗಾನ ಕಲಾವಿದರ ಬಗ್ಗೆ,ಯಕ್ಷಗಾನ ಕಲೆಯ ಬಗ್ಗೆ ಬರಹಗಳನ್ನು ಹೊಂದಿದೆ.ಸುಮಾರು ಐದುವರ್ಷಗಳ ಕಾಲ ನಾ ಕಾರಂತ ಪೆರಾಜೆಯವರು ಯಕ್ಷಗಾನದ ನಂಟನ್ನು ಸ್ವತ: ಹೊಂದಿದ್ದವರು.ಸದ್ಯ "ಅಡಿಕೆ ಪತ್ರಿಕೆ"ಯ ಸಹಾಯಕ ಸಂಪಾದಕ.http://hasirumatu.blogspot.com/ ಇವರ ಇನ್ನೊಂದು ಬ್ಲಾಗ್.ಇದು ಕೃಷಿ ಮತ್ತು ಪರಿಸರದ ಬಗೆಗಿನ ಬ್ಲಾಗ್ ಎನ್ನುವುದು ಹೆಸರೇ ಸೂಚಿಸುತ್ತದೆ ಅಲ್ಲವೇ?

----------------------------------------------------------
ಗೂಗಲ್ ನಕ್ಷೆಯಿಂದ "ಮಾರ್ಗದರ್ಶನ"
ಎರಡು ಸ್ಥಳಗಳ ನಡುವಣ ದಾರಿ ತಿಳಿಸುವಲ್ಲಿ,ಗೂಗಲ್ ಮ್ಯಾಪ್ ಸೇವೆಯು ಇದೀಗ ಹೆಚ್ಚು ಪ್ರಯೋಜನಕಾರಿಯಾಗಿದೆ.ಹಿಂದೆಲ್ಲಾ,ದಿಕ್ಕು ಮತ್ತು ದೂರಗಳ ಮೂಲಕ ಮಾರ್ಗದರ್ಶನ ಸಿಗುತ್ತಿತ್ತು.ಉದಾಹರಣೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಕಿಲೋಮೀಟರ್ ಸಾಗಿ,ಪೂರ್ವಕ್ಕೆ ಐದು ಕಿಎಲೋಮೀಟರ್ ಮುಂದೆ.. ಹೀಗೆ. ಈಗಾದರೋ ಗೂಗಲ್ ಮ್ಯಾಪಿನಲ್ಲಿ ಎರಡು ಸ್ಥಳಗಳ ನಡುವಣ ದಾರಿ ಕೇಳಿದಾಗ,ಜನರು ಸಾಮಾನ್ಯವಾಗಿ ಬಳಸುವ ಭೂಗುರುತುಗಳ ಮೂಲಕ ಮಾರ್ಗದರ್ಶನ ಸಿಗುತ್ತದೆ.ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರಿನತ್ತ ಎರಡು ಕಿಮೀ ಮುಂದೆ ಸಾಗಿ,ಪೆಟ್ರೋಲ್ ಬಂಕಿನ ಸಮೀಪ ಎಡಕ್ಕೆ ತಿರುವಿ.. ಹೀಗೆ ಭೂಗುರುತುಗಳ ಮೂಲಕ ಸೂಚನೆಗಳು ಸಿಗುತ್ತವೆ.
------------------------------------------------------------------
2009:ಸ್ಮಾರ್ಟ್ ಫೋನ್ ಗದ್ದಲ
ಮೊಬೈಲ್ ಫೋನ್‌ಗಳು ಜನಜೀವನದ ಅವಿಭಾಜ್ಯ ಅಂಗವಾಗಿ ಬಿಟ್ಟಿರುವುದರಿಂದ ಈ ವರ್ಷ ಅವುಗಳ ಮಾರುಕಟ್ಟೆಯಲ್ಲಿ ತುರುಸಿನ ಸ್ಪರ್ಧೆ ಇತ್ತು.ಏಸರ್ ಅಂತಹ ಕಂಪ್ಯೂಟರ್ ಯಂತ್ರಾಂಶಗಳ ಮಾರಾಟಗಾರರೂ ಸ್ಮಾರ್ಟ್‌ಫೋನ್ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದ್ದಾರೆ.ಸ್ಮಾರ್ಟ್‌ಫೋನ್‌ಗಳಲ್ಲಿ ಐಫೋನ್,ಆಂಡ್ರಾಯಿಡ್,ಸಿಂಬಿಯನ್,ಬ್ಲಾಕ್‌ಬೆರಿ,ವಿಂಡೊಸ್ ಹೀಗೆ ಹಲವು ಕಾರ್ಯಾಚರಣಾ ವ್ಯವಸ್ಥೆಗಳು ಲಭ್ಯವಿವೆ.ಗೂಗಲ್ ವ್ಯವಸ್ಥೆ ದಿನದಿಂದ ದಿನಕ್ಕೆ ಹೆಚ್ಚು ಜನಪ್ರಿಯವಾಗುತ್ತಿರುವ ಲಕ್ಷಣ ಎದ್ದು ಕಾಣುತ್ತಿದೆ.ಐಫೋನ್ ತನ್ನ ಹೊಸ ಮಾದರಿಯನ್ನು ಪರಿಚಯಿಸಿ,ತನ್ನ ಹಿಡಿತವನ್ನು ಬಿಗಿಯಾಗಿಸಿತು.ಸ್ಯಾಮ್‌ಸಂಗ್,ಎಲ್ಜಿಯಂತಹ ಸ್ಮಾರ್ಟ್ ಫೋನ್ ತಯಾರಕರೂ ಗೂಗಲ್ ವ್ಯವಸ್ಥೆಯನ್ನು ಆಧರಿಸಿದ ಮೊಬೈಲ್ ಸಾಧನಗಳನ್ನು ಬಿಡುಗಡೆ ಮಾಡಿರುವುದು ಈ ವರ್ಷದ ಎದ್ದು ಕಾಣುವ ಅಂಶ.
----------------------------------------------------------------------------
ಗೂಗಲ್:ಕನ್ನಡ ಟೈಪಿಂಗ್‍ಗೆ ಸೌಲಭ್ಯ


ಮಿಂಚಂಚೆ,ಅಂತರ್ಜಾಲ ಪುಟ,ಬ್ಲಾಗ್ ಹೀಗೆ ಬೇಕೆಂದಲ್ಲಿ ಕನ್ನಡದಲ್ಲಿ ಟೈಪಿಂಗ್ ಮಾಡಲು ಅನುವು ಮಾಡುವ ಗೂಗಲ್ ಐಎಂಇ(input method) ತಂತ್ರಾಂಶವೀಗ ಲಭ್ಯವಿದೆ.ಇದನ್ನು ಅನುಸ್ಥಾಪಿಸಿದಲ್ಲಿ ಕನ್ನಡ ಟೈಪಿಂಗ್ ಅನ್ನು ಲಿಪ್ಯಂತರಣ ವಿಧಾನದಲ್ಲಿ ಮಾಡಬಹುದು.ಇಂಗ್ಲೀಷಿನಲ್ಲಿ ಕನ್ನಡ ಬರೆದಂತೆ ಟೈಪಿಸಿದರೆ,ಅಕ್ಷರಗಳು ಮೂಡುವುದು ಲಿಪ್ಯಂತರಣ ವಿಧಾನದ ವೈಶಿಷ್ಟ್ಯ.google IME ಎಂದು ಶೋಧಿಸಿದರೆ,ಡೌನ್‌ಲೋಡ್ ಪುಟ ನಿಮ್ಮ ಮುಂದೆ ಪ್ರತ್ಯಕ್ಷವಾಗುತ್ತದೆ.
ಉದಯವಾಣಿ
*ಅಶೋಕ್‌ಕುಮಾರ್ ಎ

Monday, December 14, 2009

ಕೊನೆಯಾಸೆ ನೆರವೇರಿಸಲೂ ಅಂತರ್ಜಾಲ ತಾಣ

ಕೊನೆಯಾಸೆ ನೆರವೇರಿಸಲೂ ಅಂತರ್ಜಾಲ ತಾಣ


ಸತ್ತ ನಂತರ ವ್ಯಕ್ತಿಯ ಆಸ್ತಿಯ ವಿಲೇವಾರಿ ಮಾಡಲು ಉಯಿಲು ಬರೆದಿಡುವುದಿದೆ.ಈಗ ಡಿಜಿಟಲ್ ಉಯಿಲು ಕೂಡಾ ಸಾಧ್ಯ.http://legacylocker.com ಅಂತಹ ತಾಣಗಳು ವ್ಯಕ್ತಿಯ ಡಿಜಿಟಲ್ ಉಯಿಲನ್ನು ತಿಳಿದುಕೊಂಡು,ಆತನ ಮರಣಾನಂತರ,ಆತನ ಅಂತಿಮ ಅಭಿಲಾಷೆಯನ್ನು ನೆರವೇರಿಸಿಕೊಡಲು ಸಹಾಯ ಮಾಡುತ್ತವೆ.ಡಿಜಿಟಲ್ ಉಯಿಲು ಮುಖ್ಯವಾಗಿ,ವ್ಯಕ್ತಿಯ ಅಂತರ್ಜಾಲದ ಬದುಕಿನ ಬಗ್ಗೆ ಇರುತ್ತದೆ.ಆತನ ಮಿಂಚಂಚೆ ಖಾತೆಗಳು,ಫೇಸ್‌ಬುಕ್,ಟ್ವಿಟರ್ ಅಂತಹ ಖಾತೆಗಳು,ಆತನ ಬ್ಲಾಗುಗಳು ಇವನ್ನು ಮರಣಾನಂತರ ಹೇಗೆ ನಿರ್ವಹಿಸಬೇಕೆನ್ನುವುದು ವ್ಯಕ್ತಿಯ ಅಂತಿಮ ಆಸೆ ಎನ್ನುವುದನ್ನು ತಿಳಿದುಕೊಂಡು,ಆ ಪ್ರಕಾರ ಕ್ರಮ ತೆಗೆದುಕೊಳ್ಳಲು ಈ ಅಂತರ್ಜಾಲ ತಾಣಗಳು ಸಹಾಯ ಮಾಡುತ್ತವೆ.ಸತ್ತ ನಂತರವೂ ಖಾತೆಗಳು ಚಾಲೂ ಇರುವುದು,ಆಭಾಸಕ್ಕೆ ದಾರಿ ಮಾಡಿಕೊಡುವುದನ್ನು ತಡೆಯಲು ಈ ಕ್ರಮ ಸಹಾಯ ಮಾಡುತ್ತದೆ.ವ್ಯಕ್ತಿ ಬಯಸಿದರೆ,ಆತನ ಮಿಂಚಂಚೆ ಸಂಪರ್ಕಗಳಿಗೆ,ಆತನ ಮರಣದ ಬಗ್ಗೆ ತಿಳಿಸುವುದು,ಬ್ಲಾಗ್-ಸಾಮಾಜಿಕ ಜಾಲತಾಣಗಳ ಆತನ ಸ್ನೇಹಿತರಿಗೆ ವ್ಯಕ್ತಿಯ ಅಂತ್ಯದ ಬಗ್ಗೆ ತಿಳಿಸುವುದೇ ಮುಂತಾದ ಅಗತ್ಯ ಕ್ರಮಗಳನ್ನು ಈ ತಾಣಗಳು ತೆಗೆದುಕೊಳ್ಳುತ್ತವೆ.ಬಯಸಿದರೆ,ಖಾತೆಗಳನ್ನು ಅಮಾನತುಗೊಳಿಸಲೂ ಸಾಧ್ಯ.ಈ ಸೇವೆಯು ಉಚಿತವಾಗಿ ಲಭ್ಯವಿದೆ.ಈ ಸೇವೆಯಲ್ಲಿ ಹತ್ತು ಖಾತೆಗಳನ್ನು ಅಮಾನತು ಮಾಡುವ ಸೇವೆಯಷ್ಟೇ ಸಿಗುತ್ತದೆ.ಆದರೆ ಮುನ್ನೂರು ಡಾಲರು ತೆತ್ತರೆ,ಬಯಸಿದ ಸೇವೆಯನ್ನು ನೀಡಲಾಗುತ್ತದೆ.
------------------------------------------
ಸೌರಫಲಕ ಅಳವಡಿಸಿದ ಹಡಗು


ಹಡಗನ್ನು ನಡೆಸಲು ಪೆಟ್ರ‍ೋಲಿಯಂ ತೈಲ ಬಳಸುತ್ತಾರಷ್ಟೇ?ಈ ತೈಲ ಅತ್ಯಂತ ಅಶುದ್ಧ ರೂಪದ ತೈಲವಾದ್ದರಿಂದ,ಹಡಗುಗಳು ಚಲಿಸುವಾಗ,ಹೊರ ಹಾಕುವ ತ್ಯಾಜ್ಯಗಳಲ್ಲಿ ಗಂಧಕದ ಡಯಾಕ್ಸೈಡ್ ಅತಿ ಹೆಚ್ಚಿರುತ್ತದೆ.ಈ ಅನಿಲ ವಾತಾವರಣಕ್ಕೆ ಹಾನಿ ತರುತ್ತದೆ ಎಂಬುದನ್ನು ಬೇರೆ ಹೇಳಬೇಕಿಲ್ಲವಷ್ಟೇ? ಈ ತ್ಯಾಜ್ಯವನ್ನು ಕಡಿಮೆ ಮಾಡಲು ಹಡಗನ್ನು ನಡೆಸಲು ಸೌರಶಕ್ತಿಯನ್ನು ಬಳಸಿ ತಯಾರಿಸಿದ ವಿದ್ಯುಚ್ಛಕ್ತಿಯನ್ನು ಬಳಸುವ ತಂತ್ರಜ್ಞಾನವನ್ನು ಸೋಲಾರ್ ಸೈಲರ್ ಎನ್ನುವ ಹಾಂಕಾಂಗಿನ ಕಂಪೆನಿ ಪ್ರಯತ್ನಿಸುತ್ತಿದೆ.ಹಾಂಕಾಂಗಿನ ಬಂದರು ವಿಶ್ವದ ಅತ್ಯಂತ ಸಾರಿಗೆ ಹೊಂದಿರುವಲ್ಲಿ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿರುವ ಬಂದರಾಗಿದೆ.ಹಾಂಕಾಂಗಿನ ವಾತಾವರಣ ಕುಲಗೆಟ್ಟು ಹೋಗುವುದಕ್ಕೆ ಬಂದರಿನ ಕಾಣಿಕೆಯೂ ಸಾಕಷ್ಟಿದೆ.ಸೋಲಾರ್ ಸೈಲರ್ ಕಂಪೆನಿಯು ಹಡಗಿನಲ್ಲಿ ಸೌರಫಲಕಗಳನ್ನು ಅಳವಡಿಸಿ,ಸೌರಶಕ್ತಿಯನ್ನು ತಯಾರಿಸಿ,ಅದರ ಮೂಲಕ ಹಡಗನ್ನು ಮುನ್ನಡೆಸುವ ತಂತ್ರಜ್ಞಾನವನ್ನು ಅಳವಡಿಸಿದೆ.ಸೌರಫಲಕನ್ನು ಬೇಕಾದ ದಿಕ್ಕಿಗೆ ತಿರುಗಿಸಲು ಬರುತ್ತದೆ.ಗಾಳಿ ಮತ್ತು ಸೂರ್ಯನ ದಿಕ್ಕನ್ನು ಅವಲಂಬಿಸಿ,ಫಲಕಗಳನ್ನು ತಿರುಗಿಸಬಹುದು.ಇದೇ ರೀತಿ ಪವನಶಕ್ತಿಯನ್ನೂ ಬಳಸಿಕೊಂಡು,ಹಡಗನ್ನು ಚಲಿಸುವ ಹಾಗೆ ಮಾಡುವ ಯೋಚನೆಯೂ ಕಂಪೆನಿಗಿದೆ.
---------------------------------------
ತುಳು ಲಿಪಿಗೆ ಯುನಿಕೋಡ್ ಲಭಿಸಲಿ
ಯಾವುದೇ ಭಾಷೆಯನ್ನು ಕಂಪ್ಯೂಟರಿನಲ್ಲಿ ರಗಳೆಯಿಲ್ಲದೆ ಬಳಸಲು ಭಾಷೆಯ ಲಿಪಿಯ ಅಕ್ಷರಗಳಿಗೆ ಯುನಿಕೋಡ್ ಶಿಷ್ಟಾಚಾರ ಪ್ರಕಾರ,ಸಂಕೇತಗಳನ್ನು ನೀಡಬೇಕು.ತುಳುವಿಗೆ ಅಧಿಕೃತ ಭಾಷೆಯ ಮನ್ನಣೆ ಸಿಕ್ಕಿದರೆ ಮಾತ್ರಾ ಈ ಸಂಕೇತಗಳನ್ನು ಪಡೆಯಲು ಸಾಧ್ಯವಾಗಬಹುದಾದ್ದರಿಂದ,ತುಳುವಿಗೆ ಅಧಿಕೃತ ಭಾಷೆಯ ಅಂಗೀಕಾರ ಪಡೆದ ನಂತರವೇ ಇದು ಸಾಧ್ಯವಾದೀತು.ಅದು ವರೆವಿಗೂ,ತುಳು ಲಿಪಿಯ ಫಾಂಟುಗಳನ್ನು ಅನುಷ್ಟಾಪಿಸಿದ ನಂತರವೇ ಕಂಪ್ಯೂಟರಿನಲ್ಲಿ ತುಳು ಲಿಪಿಯನ್ನು ಮೂಡಿಸಲು ಸಾಧ್ಯ.ಸದ್ಯಕ್ಕಂತೂ ತುಳುವರು ಕನ್ನಡದ ಲಿಪಿ ಬಳಸಿಯೇ ತುಳುವನ್ನು ಬ್ಲಾಗು ಬರಹಗಳಲ್ಲಿ ಬಳಸಬಹುದಷ್ಟೆ.
-----------------------------------------------------------------------------------------
ತುಳು ಲಿಪ್ಯಂತರ ನಿಘಂಟು


ತುಳು ಶಬ್ದಗಳಿಗೆ ಇಂಗ್ಲೀಷ್ ಭಾಷೆಯಲ್ಲಿ ಅರ್ಥ ಹೇಳುವ ಲಿಪ್ಯಂತರ ಆಧಾರಿತ ನಿಘಂಟು ಅಂತರ್ಜಾಲದಲ್ಲಿದೆ.ಇದರಲ್ಲಿ ತುಳು ಶಬ್ದಗಳನ್ನು ಇಂಗ್ಲೀಷ್ ಅಕ್ಷರಗಳಲ್ಲೇ ಬರೆಯಲಾಗಿದ್ದು,http://www.websters-online-dictionary.org/translation/Tulu ಅಂತರ್ಜಾಲ ವಿಳಾಸದಲ್ಲಿ ಲಭ್ಯವಿದೆ.ಇಲ್ಲಿ ತುಳು ಶಬ್ದಗಳನ್ನು ಪಟ್ಟಿ ಮಾಡಲಾಗಿದ್ದು,ಶೋಧ ಸೇವೆಯೂ ಲಭ್ಯವಿದೆ.ದೈನಂದಿನ ವ್ಯವಹಾರದಲ್ಲಿ ಬಳಸುವ ವಾಕ್ಯಗಳನ್ನೂ ಇಲ್ಲಿ ಪಟ್ಟಿ ಮಾಡಲಾಗುವುದರಿಂದ,ಭಾಷೆಯನ್ನು ಕಲಿಯಲೂ ಸಹಾಯಕವಾಗಬಹುದು.
ಪದಗಳ ಮೂಲವನ್ನು ಹೇಳುವ ಕೋಶವೊಂದು ಅಂತರ್ಜಾಲದಲ್ಲಿ ಲಭ್ಯವಿದೆ.ಇದರಲ್ಲಿ ವಿವಿಧ ಶಬ್ದಗಳ ವ್ಯುತ್ಪತ್ತಿಯಾದ ಬಗೆಯನ್ನು ಹೇಳಲಾಗಿದೆ.ಇದರಲ್ಲಿ ತುಳು ಶಬ್ದಗಳನ್ನೂ ಉಲ್ಲೇಖಿಸಲಾಗಿದೆ.ದ್ರಾವಿಡ ಭಾಷೆಗಳ ಮೂಲವನ್ನು ಹೇಳುವ ಈ ನಿಘಂಟು http://dsal.uchicago.edu ಈ ಅಂತರ್ಜಾಲ ತಾಣದಲ್ಲಿ ಲಭ್ಯ.ಕನ್ನಡ,ತಮಿಳು,ಮಲೆಯಾಳಮ್,ಕೊಂಕಣಿ ಪದಗಳೂ ಇದರಲ್ಲಿ ಸಿಗುವುದು ವಿಶೇಷ.
----------------------------------------------------------------------------------
ತುಳು ತಂತ್ರಾಂಶ ತೌಳವ
ತೌಳವ 2.0 ಎನ್ನುವ ತುಳು ಲಿಪಿಯಲ್ಲಿ ಟೈಪ್ ಮಾಡಲು ಅನುವು ಮಾಡುವ ತಂತ್ರಾಂಶವೀಗ ಸಿದ್ಧವಾಗಿದೆ.ತುಳು ಲಿಪಿಯಲ್ಲಿ ಐವತ್ತು ಅಕ್ಷರಗಳಿದ್ದು,ಮಲಯಾಳವನ್ನು ಹೋಲುತ್ತದೆ.ಈ ಲಿಪಿಯನ್ನು ಕಂಪ್ಯೂಟರಿನಲ್ಲಿ ಅಳವಡಿಸಲು ಅಗತ್ಯವಾದ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ.ನುಡಿ ತಂತ್ರಾಂಶದ ಕೀಲಿ ಮಣೆವಿನ್ಯಾಸವನ್ನು ಬಳಸಿ ಟೈಪ್ ಮಾಡಲು ಸಾಧ್ಯ.ರಾಷ್ಟ್ರೀಯ ಕಂಪ್ಯೂಟರ್ ಸಾಕ್ಷರ ಸಮಿತಿಯು ತಂತ್ರಾಂಶದ ಅಭಿವೃದ್ಧಿ ಮಾಡುತ್ತಲಿದೆ.ಉಜಿರೆಯಲ್ಲಿ ನಡೆದ ತುಳು ವಿಶ್ವಸಮ್ಮೇಳನದಲ್ಲಿ ತಂತ್ರಾಂಶದ ಪ್ರಾಯೋಗಿಕ ಆವೃತ್ತಿಯನ್ನು ಪ್ರದರ್ಶಿಸಿದಾಗ, ತಂತ್ರಾಂಶ ಪ್ರವೀಣ ಸತ್ಯಶಂಕರ ಮತ್ತು ಹರಿಕೃಷ್ಣ ಅವರು ಹಾಜರಿದ್ದರೆ,ನಿರ್ದೇಶಕರಾದಪ್ರವೀಣರಾಜ್ ರಾವ್,ತುಳು ಭಾಷಾ ಪ್ರವೀಣರಾದ ಪಿ.ವೆಂಕಟರಾಜ ಪುಣಿಂಚಿತಾಯ,ವಿಘ್ನರಾಜ್ ಧರ್ಮಸ್ಥಳ ಮತ್ತು ಪದ್ಮನಾಭ ಕೇಕುಣ್ಣಾಯ ಮುಂತಾದವರೂ ಭಾಗವಹಿಸಿದ್ದರು.
----------------------------------------------------
ಮೊಬೈಲ್‌ನಲ್ಲಿ ಕ್ಷಣ-ಕ್ಷಣ
ಮೊಬೈಲಿನಿಂದಲೇ ಜೀವನದ ಆಗುಹೋಗುಗಳನ್ನು ದಾಖಲಿಸುವುದನ್ನು ಹವ್ಯಾಸವಾಗಿಸಿಕೊಂಡಿರುವ,ಕಂಪ್ಯೂಟರ್ ತಂತ್ರಜ್ಞ ತೇಜೇಶ್,ತಮ್ಮ ಮೊಬೈಲ್ ಸಾಧನದಿಂದ ಸೆರೆ ಹಿಡಿದಿರುವ ಚಿತ್ರಗಳನ್ನು ತಮ್ಮ ಬ್ಲಾಗ್ http://thej.inನಲ್ಲಿ ನೋಡಬಹುದು.ಇದರ ಜತೆಗೆ,ಅವರು ಮೊಬೈಲಿನಿಂದ ಕಳುಹಿಸಿದ,ಟ್ವಿಟರ್ ಸಂದೇಶಗಳು,ಅವರ ಯೋಚನಾ ಲಹರಿಯನ್ನು ಜನರಿಗೆ ತೆರೆದಿಡುತ್ತದೆ.ಪ್ರಶಾಂತ್ ಎಂ ಎಂಬ ಇನ್ನೋರ್ವ ಬ್ಲಾಗರ್ ತಮ್ಮ ಛಾಯಾಚಿತ್ರಗಳನ್ನು http://clicks.pqrshanth.comನ ವಿಳಾಸದಲ್ಲಿರುವ ಬ್ಲಾಗಿನಲ್ಲಿ ಜನರಿಗೆ ಲಭ್ಯವಾಗಿಸಿದ್ದಾರೆ.ಇಲ್ಲಿರುವ ಅವರು ಕ್ಲಿಕ್ಕಿಸಿದ ಚಿತ್ರಗಳು ವೈಶಿಷ್ಟ್ಯವನ್ನು ಮೆರೆಯುತ್ತವೆ.ಈ ಡಿಜಿಟಲ್ ಯುಗದಲ್ಲಿ ಕ್ಯಾಮರಾ ಹಿಡಿದು ಎಲ್ಲರೂ ಕ್ಲಿಕ್ಕಿಸುವುದು ಸಾಮಾನ್ಯವಾಗಿರುವಾಗ,ಅವರೆಲ್ಲರಿಗಿಂತ ವಿಭಿನ್ನವಾಗಿರುವುದು ನಿಜಕ್ಕೂ ಸವಾಲೇ ಸರಿ.ಇಲ್ಲಿನ ಚಿತ್ರಗಳು ಆ ಸವಾಲಿಗೆ ಉತ್ತರವಾಗಿವೆ ಎನ್ನಲಡ್ಡಿಯಿಲ್ಲ.ಕನ್ನಡದಲ್ಲೂ ಬ್ಲಾಗಿಸುವ ಪ್ರಭುರಾಜ ಮೂಗಿ ಅವರ ನನ್ನಾK ಬ್ಲಾಗು "ನನ್ನಾಕೆಯ ಬಗ್ಗೆ  ನನ್ನ ಕಲ್ಪನೆ,ಕತೆ,ಕೀಟಲೆಗಳು" ಎಂದು ಪ್ರಭುರಾಜ್ ಹೇಳಿಕೊಂಡಿದ್ದಾರೆ.ನನ್ನಾK ಈಗಾಗಲೇ ಸರಣಿಯಲ್ಲಿ ಐವತ್ತಕ್ಕಿಂತ ಹೆಚ್ಚು ಬರಹಗಳು ಇದೀಗಲೇ ಪ್ರಕಟವಾಗಿವೆ.ಬ್ಲಾಗಿನ ತಾಣದ ವಿಳಾಸ http://blog.telprabhu.com ಆಗಿದೆ.
udayavani
------------------------------------------------------------------------------------
*ಅಶೋಕ್‌ಕುಮಾರ್ ಎ

Monday, December 07, 2009

"ಕಣಜ"ವನ್ನು ತುಂಬಿ

"ಕಣಜ"ವನ್ನು ತುಂಬಿ


ಕರ್ನಾಟಕ ಸರಕಾರ ಆರಂಭಿಸಿರುವ ಕನ್ನಡ ಜ್ಞಾನಕೋಶಕ್ಕೆ "ಕಣಜ" ಎಂದು ಹೆಸರಿಡಲಾಗಿದೆ.ಈ ಜ್ಞಾನಕೋಶದ ಅಂತರ್ಜಾಲ ತಾಣವನ್ನು ಈಗ ಲೋಕಾರ್ಪಣೆ ಮಾಡಲಾಗಿದ್ದು http://kanaja.in/ ವಿಳಾಸದಲ್ಲಿ ಲಭ್ಯವಿದೆ."ಕರ್ನಾಟಕ ಜ್ಞಾನ ಆಯೋಗದ ಪ್ರಯತ್ನದ ಈ ಯೋಜನೆಗೆ ಕರ್ನಾಟಕ ಸರ್ಕಾವು ಎರಡು ಕೋಟಿ ಅನುದಾನವನ್ನು ನೀಡಿದೆ.ಕನ್ನಡ ವಿಕಿಪೀಡಿಯಾದ ತಾಣವನ್ನು ಹೋಲದೆ,ಈ ತಾಣ ಪ್ರತ್ಯೇಕ ವಿನ್ಯಾಸವನ್ನು ತನ್ನದಾಗಿಸಿಕೊಂಡಿದೆ.ಯುನಿಕೋಡಿನಲ್ಲಿ ಬರಹಗಳು ಲಭ್ಯವಿರುವುದು ಪ್ಲಸ್ ಪಾಯಿಂಟ್.ಅಂತರ್ಜಾಲ ಶೋಧ ಸಾಧ್ಯವಾಗಲು, ಈ ಅಂಶ ನೆರವಾಗಲಿದೆ.ಈ ಜ್ಞಾನಕೋಶವನ್ನು ಸಮೃದ್ಧಗೊಳಿಸಲು,ಕನ್ನಡಿಗರೆಲ್ಲಾ ಕೈಗೂಡಿಸಿಬೇಕಿದೆ.ತಮ್ಮ ಬರಹಗಳನ್ನು ಈ ವಿಶ್ವಕೋಶಕ್ಕೆ ಸೇರಿಸಿ,ಇದನ್ನು ಜ್ಞಾನದ ಕಣಜವಾಗಿಸುವುದು ಅವಶ್ಯಕ.ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ವಿಶ್ವಕೋಶಕ್ಕೆ ಬರಹವನ್ನು ಸೇರಿಸುವಂತಹ ಕೆಲಸಗಳನ್ನು ನೀಡಿ,ಆ ಮೂಲಕ ವಿದ್ಯಾರ್ಥಿ ಸಮುದಾಯದ ಸಹಭಾಗಿತ್ವವನ್ನು ಪಡೆಯಲು ಪ್ರಯತ್ನಿಸಬೇಕು.ಜ್ಞಾನ ಎಂಬುವುದು ಎಲ್ಲರಲ್ಲೂ ಇದೆ,ಮತ್ತು ಜ್ಞಾನ ಎಲ್ಲರಿಗಾಗಿ ಎನ್ನುವ ಧ್ಯೇಯ ವಾಕ್ಯವನ್ನು ಹೊಂದಿದ ಕಣಜ,ಸರಕಾರದ ಬೊಕ್ಕಸವನ್ನು ಮಾತ್ರಾ ಬರಿದಾಗಿಸದೆ,ಕನ್ನಡಿಗರ ಪ್ರಯೋಜನಕ್ಕೆ ಸಿಗಲಿ.
ಅತ್ತ ಜನರ ಸಹಭಾಗಿತ್ವದಿಂದ ಬೆಳೆಯುತ್ತಿರುವ ಕನ್ನಡ ವಿಕಿಪೀಡಿಯಾ ಮುಕ್ತ ವಿಶ್ವಕೋಶ,http://kn.wikipedia.org/wiki ಈಗಾಗಲೇ ಏಳೂವರೆ ಸಾವಿರ ಬರಹಗಳನ್ನು ಕಲೆ ಹಾಕಿ ದಾಪುಗಾಲು ಹಾಕುತ್ತಿದೆ.ವಿಕಿಪೀಡಿಯಾಕ್ಕೆ ಯಾರು ಬೇಕಾದರೂ ಬರಹಗಳನ್ನು ಸೇರಿಸಲು ಅವಕಾಶವಿದೆ.ಆನ್‌ಲೈನ್‌ನಲ್ಲಿ ಇರುವಾಗ ಈ ಬರಹಗಳನ್ನು ಸೇರಿಸಬಹುದು,ಇತರರ ಬರಹಗಳನ್ನು ತಿದ್ದಬಹುದು.ಸರ್ಕಾರಿ ವಿಶ್ವಕೋಶವಾದರೋ,ಜನರಲ್ಲಿ ಬರಹಗಳನ್ನು ಬರೆದು ಕಳುಹಿಸಿ ಎಂದು ವಿನಂತಿಸುತ್ತಿದೆ! ಆನ್‌ಲೈನಿನಲ್ಲಿದ್ದು ಬರಹ ಸೇರಿಸುವ ಅವಕಾಶವನ್ನು ಸದ್ಯಕ್ಕಂತೂ ಕೊಟ್ಟಿಲ್ಲ.
------------------------------------------------------------------------
ಕನ್ನಡದಲ್ಲಿ ಪಾಡ್‌ಕಾಸ್ಟು




ಬ್ರಾಡ್‌ಬ್ಯಾಂಡ್ ಸೌಲಭ್ಯ ಈಗ ದೇಶದ ಮೂಲೆ ಮೂಲೆಗೂ ಹಬ್ಬಿದ್ದು,ಧ್ವನಿ,ವಿಡಿಯೋ,ಚಿತ್ರಗಳನ್ನು ಅಂತರ್ಜಾಲ ತಾಣಗಳಲ್ಲಿ ಸಮರ್ಥವಾಗಿ ಬಳಸುವ ಪ್ರಯತ್ನಗಳು ಹೆಚ್ಚುತ್ತಿವೆ.ಅಂತರ್ಜಾಲದಲ್ಲಿ ತಮ್ಮ ಅನಿಸಿಕೆಗಳನ್ನು ಬರೆದು ತಿಳಿಸುವ ಬ್ಲಾಗ್ ಮಾಧ್ಯಮ ಬಹು ಜನಪ್ರಿಯ.ಜತೆಗೆ ಸಂಭಾಷಣೆ ಮೂಲಕ ತಮ್ಮ ಅನಿಸಿಕೆಯನ್ನು ಹಂಚಿಕೊಳ್ಳುವ ಪ್ರಯತ್ನಗಳು ಇಂಗ್ಲೀಷಿನಲ್ಲಿ ಹೆಚ್ಚೆಚ್ಚು ನಡೆದಿವೆ.ಈಗ ಕನ್ನಡದಲ್ಲೂ ಅಂತಹ ಪಾಡ್‌ಕಾಸ್ಟ್ ಲಭ್ಯವಿದೆ.ಅನಿವಾಸಿ ಕನ್ನಡಿಗ ಸುದರ್ಶನ್ ಆಸ್ಟ್ರೇಲಿಯಾದಲ್ಲಿ ವಾಸವಾಗಿರುವ ಕನ್ನಡದ ಬರಹಗಾರ ಮತ್ತು ಸಿನೆಮಾ ನಿರ್ಮಾಪಕ.ಇವರು ವಾರವಾರ ಪಾಡ್‌ಕಾಸ್ಟನ್ನು ಅಂತರ್ಜಾಲ ತಾಣ http://paaducastu.wordpress.comದ ಮೂಲಕ ಲಭ್ಯವಾಗಿಸುವ ಹುರುಪಿನಲ್ಲಿದ್ದಾರೆ.ಮೊದಲ ಸಂಚಿಕೆಯಿದೀಗಲೇ ಲಭ್ಯವಿದೆ.ಚಿತ್ರಗೀತೆಗಳಿಂದ ತೊಡಗಿ,ಆಯೋಗದ ವರದಿಗಳ ಬಗೆಗಿನ ವಿವಿಧ ಸುದ್ದಿಗಳ ಬಗ್ಗೆ ಹರಟೆ ನಸುನಗೆ ಮೂಡಿಸಲು ಯಶಸ್ವಿಯಾಗಿದೆ.ಆಕಾಶವಾಣಿಯ ಕಾರ್ಯಕ್ರಮಗಳನ್ನು ನೆನಪಿಸುವ ಈ ಧ್ವನಿಕಡತವನ್ನು ಆಲಿಸಲು ಕಂಪ್ಯೂಟರಿನಲ್ಲಿರುವ ಮೀಡಿಯಾಪ್ಲೇಯರ್ ಅಂತಹ ತಂತ್ರಾಂಶ ಬೇಕಾಗುತ್ತದೆ.ಸುದರ್ಶನ ಅವರ ಬ್ಲಾಗ್ ಬರಹಗಳ ಕೊಂಡಿ http://anivaasi.wordpress.com/ನಲ್ಲಿ ಲಭ್ಯವಿದೆ.
-----------------------------------------------------------
2009ರಲ್ಲಿ ಜನರು ಹುಡುಕಾಟ ಪ್ರವೃತ್ತಿ
ಈ ವರ್ಷ ಜನರ ಅಂತರ್ಜಾಲ ಶೋಧ ಪ್ರವೃತ್ತಿ ಈಗ ಸ್ಪಷ್ಟವಾಗಿದೆ.ಮೈಕೆಲ್ ಜಾನ್ಸನ್,ಟ್ವಿಟರ್,ಫೇಸ್‌ಬುಕ್ ಬಗ್ಗೆ ಹೆಚ್ಚಿನ ಜನರು ಗೂಗಲ್,ಯಾಹೂ,ಬಿಂಗ್ ಮುಂತಾದ ಶೋಧ ಸೇವೆಗಳನ್ನು ಬಳಸಿ ಹುಡುಕಾಡಿದ್ದಾರೆ.ಆದರೆ ಭಾರತೀಯರನ್ನು ಮಾತ್ರಾ ಪರಿಗಣಿಸಿದರೆ,ಅವರು ತಲೆ ಕೆಡಿಸಿಕೊಂಡದ್ದು ಆರ್ಥಿಕ ವಿಷಯಗಳ ಬಗ್ಗೆಯೇ ಹೆಚ್ಚು ಎನ್ನುವುದು ಕುತೂಹಲಕಾರಿ ಅಂಶ.ಬಜೆಟ್ ಬಗ್ಗೆ,ಸತ್ಯಮ್ ಶೇರು ಬೆಲೆಯ ಬಗ್ಗೆಯೇ ಹೆಚ್ಚು ಜನರು ಅಂತರ್ಜಾಲದ ಗೂಗಲ್ ಸೇವೆ ಪಡೆದು ಹುಡುಕಾಡಿದ್ದಾರೆ.
------------------------------------------------------------------------
2010ರಲ್ಲಿ ಅಂತರ್ಜಾಲ ಟ್ರೆಂಡ್ ಹೇಗಿರಬಹುದು?
ಜನರು ಮೊಬೈಲ್ ಸಾಧನಗಳ ಮೂಲಕ ಅಂತರ್ಜಾಲವನ್ನು ಜಾಲಾಡುವುದು ಹೆಚ್ಚಾಗುತ್ತಿದೆ.ಹೀಗಾಗಿ,ಘಟನೆಗಳು ನಡೆದೊಡನೆಯೇ ಅದು ಅಂತರ್ಜಾಲದಲ್ಲಿ ದಾಖಲಾಗುವ ಪ್ರ‍ವೃತ್ತಿ ಹೆಚ್ಚಿದೆ.ಟ್ವಿಟರ್,ಫೇಸ್‌ಬುಕ್‌ಗಳಲ್ಲಿ ಜನರು ತಾವು ನೋಡಿದ್ದನ್ನು ದಾಖಲಿಸಲು ಮೊಬೈಲ್ ಮೂಲಕವೇ ಸಾಧ್ಯವಾಗಿದೆ.ಹೀಗೆ ಬಿಸಿ,ಬಿಸಿ ಸುದ್ದಿಗಳು ಅಂತರ್ಜಾಲ ಮೂಲಕ ಸಿಕ್ಕುವಷ್ಟು ಬೇರೆಲ್ಲೂ ಸಿಗದು.ಹೋಟೆಲ್‌ನಲ್ಲಿ ಸಿಗುವ ತಿಂಡಿ ತೀರ್ಥಗಳ ಬಗ್ಗೆ ಜನರ ಪ್ರತಿಕ್ರಿಯೆಯಿಂದ ಹಿಡಿದು,ಚಲನಚಿತ್ರ ವಿಮರ್ಶೆ ವರೆಗೆ ಎಲ್ಲವೂ ಕ್ಷಣಮಾತ್ರದಲ್ಲಿ ಸಿಗಲು ಅಂತರ್ಜಾಲ ನೆರವಾಗಿದೆ.
ಜನರು ಸದ್ಯ ಎಲ್ಲಿದ್ದಾರೆ ಎನ್ನುವುದು ಅಂತರ್ಜಾಲದಲ್ಲಿ ಗೊತ್ತು ಮಾಡಿಕೊಳ್ಳಲು ಜಿಪಿಎಸ್ ತಂತ್ರಜ್ಞಾನ ನೆರವಾಗುವುದು ಖಂಡಿತ.ಫೋರ್‌ಸ್ಕ್ವೇರ್ ಅಂತಹ ಜಾಲತಾಣಗಳು,ಜನರು ಯಾವ ಸ್ಥಳದಲ್ಲಿದ್ದಾರೆ ಎನ್ನುವುದನ್ನು ಸತತವಾಗಿ ತಿಳಿಸುವ ಸೇವೆ ನೀಡಲು ಸನ್ನದ್ಧವಾಗಿವೆ.ವ್ಯಕ್ತಿಯ ಸ್ಥಾನವನ್ನವಲಂಬಿಸಿ,ಆತನಿಗೆ ಅಗತ್ಯವಿರಬಹುದಾದ ಮಾಹಿತಿಯನ್ನು ಪೂರೈಸುವ ಸೇವೆಗಳೂ ಗರಿಗೆದರುವ ಪ್ರವೃತ್ತಿ ಕಾಣಬರುತ್ತಿದೆ.ವ್ಯಕ್ತಿಯಿರುವ ಸ್ಥಳದ ಸಮೀಪ ಇರುವ ಹೋಟೆಲ್,ವಾಣಿಜ್ಯಸಂಕೀರ್ಣಗಳಲ್ಲಿ ದರ ಕಡಿತದ ಮಾಹಿತಿ,ಪ್ರವಾಸಸ್ಥಳಗಳ ಬಗೆಗಿನ ಮಾಹಿತಿಯನ್ನು ಮೊಬೈಲ್ ಸಾಧನದ ಮೂಲಕ ತಿಳಿಸುವುದು ಹೊಸ ಟ್ರೆಂಡ್.
ಅಂತರ್ಜಾಲದಲ್ಲಿ ಲಭ್ಯವಾಗುತ್ತಿರುವ ಮಾಹಿತಿಯ ಮಹಾಪೂರದಲ್ಲಿ ವ್ಯಕ್ತಿಗೆ ಆಸಕ್ತಿಯಿರುವ ಮಾಹಿತಿ ಏನಿರಬಹುದು ಎಂದು ನಿರ್ಧರಿಸಿ,ಆತನಿಗೆ ಬೇಕಾದ್ದನ್ನು ಒದಗಿಸಲು ಗೂಗಲ್ ಶೋಧದಂತಹ ಸೇವೆಗಳು ಪ್ರಯತ್ನಿಸುತ್ತಿವೆ.ಇದು ಬರುವ ವರ್ಷಗಳಲ್ಲಿ ಹೆಚ್ಚುವುದರಲ್ಲಿ ಸಂಶಯವಿಲ್ಲ.
ಅಂತರ್ಜಾಲದಿಂದಲೇ ಬೇಕಾದ ತಂತ್ರಾಂಶಗಳನ್ನು ಪಡೆದು ಬಳಸುವುದು,ಸ್ಮರಣಕೋಶಗಳನ್ನು ಅಂತರ್ಜಾಲದಲ್ಲೇ ಕಾಯ್ದಿಟ್ಟು,ಯಾವಾಗ ಬೇಕಾದರೂ-ಎಲ್ಲಿಂದಲಾದರೂ ತಮ್ಮ ಕಡತಗಳನ್ನು ಬಳಸಿಕೊಳ್ಳಲು ಅವಕಾಶ ನೀಡುವ ಕ್ಲೌಡ್‌ಕಂಪ್ಯೂಟಿಂಗ್ ತಂತ್ರಜ್ಞಾನಕ್ಕೆ ಗೂಗಲ್ ಕ್ರೋಮ್ ಕಂಪ್ಯೂಟರ್ ಕಾರ್ಯನಿರ್ವಹಣಾ ತಂತ್ರಾಂಶ ಹೆಚ್ಚಿನ ಒತ್ತು ನೀಡಲಿದೆ.ಮೊಬೈಲ್ ಸಾಧನಗಳ ಮೂಲಕ ಖರೀದಿಗೆ ಹಣ ಪಾವತಿ ಮಾಡುವ ಅಭ್ಯಾಸ ಜನರಲ್ಲಿ ಬೇರು ಬಿಡುವುದಕ್ಕೆ ಮುಂದಿನ ವರ್ಷ ಸಾಕ್ಷಿಯಾಗಲಿದೆ.ಅಂತರ್ಜಾಲದಲ್ಲಿ ಚಲನಚಿತ್ರ,ಟಿವಿಯ ವೀಕ್ಷಣೆ ಹೆಚ್ಚಲು ಶರವೇಗದ ಅಂತರ್ಜಾಲ ಸೇವೆಯ ಲಭ್ಯತೆ ಹೇತುವಾಗಬಹುದು.ಕೈಯಲ್ಲಿ ಹಿಡಿಯುವ ಕಿರುಸಾಧನಗಳ ಮೂಲಕ ಸೆಲ್‌ಪೋನ್ ಕರೆ ಮಾಡುವುದು,ಅಂತರ್ಜಾಲ ಜಾಲಾಟ ನಡೆಸುವುದು,ಚಿತ್ರ-ವೀಡಿಯೋಗಳನ್ನು ಸೆರೆ ಹಿಡಿಯುವುದು,ಹಾಡನ್ನಾಲಿಸುವುದು,ಟಿವಿ-ರೇಡಿಯೋ ವಿಕ್ಷಣೆ-ಆಲಿಸುವುದು ಇವೆಲ್ಲವೂ ಹೆಚ್ಚುವುದು ಖಾತರಿ.
-------------------------------------
ಬಿಂಗ್‌ನಲ್ಲಿ ನಕ್ಷೆ
ಭೌಗೋಳಿಕ ಮಾಹಿತಿಯನ್ನು ಬಿಂಗ್ ಶೋಧ ಸೇವೆಯೂ ಈಗ ನೀಡಹತ್ತಿದೆ.ವಿವಿಧ ನಗರ ಪಟ್ಟಣಗಳ ನಕ್ಷೆಗಳನ್ನು ಬಿಂಗ್ ಶೋಧ ಸೇವೆಯ ಮೂಲಕವೂ ಪಡೆಯಬಹುದು.ಅಂದ ಹಾಗೆ ಬಿಂಗ್ ಎನ್ನುವುದು ಮೈಕ್ರೋಸಾಫ್ಟ್ ಕಂಪೆನಿಯ ಶೋಧ ಸೇವೆ.ನಗರಗಳ ರಸ್ತೆಗಳ ಕ್ಲೋಸಪ್ ದೃಶ್ಯಗಳೂ ಇಲ್ಲಿ ಲಭ್ಯ.ಆದರೆ ಗೂಗಲ್ ಹೆಚ್ಚು ವಿವರ ಮತ್ತು ಸ್ಪಷ್ಟ ನಕ್ಷೆಗಳನ್ನು ನೀಡಿ ಈಗಾಗಲೇ ಜನರ ಮಾನ್ಯತೆಯನ್ನು ಗಳಿಸಿರುವುದರಿಂದ ಬಿಂಗ್ ಸೇವೆ ಜನಪ್ರಿಯವಾಗಲು ಹೆಚ್ಚಿನ ಸಮಯ ಬೇಕಾಗಬಹುದು.http://www.bing.com/maps ವಿಳಾಸದಲ್ಲಿ ನಕ್ಷೆಗಳು ಲಭ್ಯವಿವೆ.
udayavani
*ಅಶೋಕ್‌ಕುಮಾರ್ ಎ