Monday, January 25, 2010

ಯುಟ್ಯೂಬ್ ಮೂಲಕ ಐ ಪಿ ಎಲ್

ಯುಟ್ಯೂಬ್ ಮೂಲಕ ಐ ಪಿ ಎಲ್
ಇದೇ ಮೊದಲ ಬಾರಿಗೆ ಕ್ರೀಡೆಯ ಬಗ್ಗೆ ನೇರ ವಿಡಿಯೋ ಪ್ರಸಾರ ಯುಟ್ಯೂಬಿನ ಮೂಲಕ ಲಭ್ಯವಾಗಲಿದೆ.ಸಾಮಾನ್ಯವಾಗಿ ಯುಟ್ಯೂಬ್‌ನಲ್ಲಿ ಜನರು ವಿಡಿಯೋ ಕ್ಲಿಪ್ಪಿಂಗ್‌ಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶ ಇದೆ. ಐಪಿಎಲ್ ಕ್ರಿಕೆಟ್ ಪ್ರಸಾರದ ಹಕ್ಕನ್ನು ಹೊಂದಿರುವ ಗ್ಲೋಬಲ್ ಕ್ರಿಕೆಟ್ ವೆಂಚರ್ ಸಂಸ್ಥೆಯೊಂದಿಗೆ ಗೂಗಲ್ ಒಪ್ಪಂದಕ್ಕೆ ಬಂದಿರುವ ಕಾರಣ,ಐ ಪಿ ಎಲ್ 20-20  ಪಂದ್ಯಗಳ ನೇರ ಪ್ರಸಾರದ ಹಕ್ಕನ್ನು ಅಂತರ್ಜಾಲದಲ್ಲಿ ಗೂಗಲ್ ಪಡೆದಿದೆ. ಹೀಗಾಗಿ,ಐಪಿಎಲ್‌ನ ಪಂದ್ಯಗಳನ್ನು ಅಂತರ್ಜಾಲ ಮೂಲಕವೂ ವೀಕ್ಷಿಸಬಹುದು.ಇದು ಗೂಗಲಿಗೆ ಭಾರೀ ಜಾಹೀರಾತು ಆದಾಯ ತರಬಲ್ಲುದು.ಐಪಿಎಲ್ ಎನ್ನುವುದು,ಬಹುಜನಪ್ರಿಯ.ಜತೆಗೆ ಅಂತರ್ಜಾಲದಲ್ಲಿ,ವೀಕ್ಷಕರ ಆಸಕ್ತಿ ಇರುವ ವಿಷಯಗಳ ಬಗ್ಗೆ ಜಾಹೀರಾತನ್ನು ತೋರಿಸಲು ಜಾಹೀರಾತುದಾರರಿಗೆ ಸವಲತ್ತುಗಳನ್ನು ಗೂಗಲ್ ಒದಗಿಸಲಿದೆ.ಹಾಗಾಗಿ,ಹೆಚ್ಚಿನ ಜಾಹೀರಾತುದಾರರು ಐವತ್ತು ಕೋಟಿಯಷ್ಟಾಗಬಲ್ಲ ವೀಕ್ಷಕರನ್ನು ಮುಟ್ಟಲು ಅಂತರ್ಜಾಲ ಮಾಧ್ಯಮವನ್ನು ಬಳಸುವುದು ಸಂಭವನೀಯ.ಐಪಿಎಲ್‌ನಲ್ಲಿ ಒಟ್ಟು ಅರುವತ್ತು ಪಂದ್ಯಗಳಿವೆ.
ಈ ನಡುವೆ,ಯುಟ್ಯೂಬಿನ ಮೂಲಕ ಚಲನಚಿತ್ರಗಳನ್ನು ಬಾಡಿಗೆ ಆಧಾರದಲ್ಲಿ ತೋರಿಸುವ ಸೇವೆಯನ್ನು ಆರಂಭಿಸಲೂ ಗೂಗಲ್ ಆರಂಭಿಸಿದೆ.ಸುಂಡಾನ್ಸಿನ ಫಿಲ್ಮ್ ಫೆಸ್ಟಿವಲ್ ಜತೆ ಒಪ್ಪಂದ ಮಾಡಿಕೊಂಡು,ಅಲ್ಲಿ ಪ್ರದರ್ಶಿತವಾದ ಚಿತ್ರಗಳ ಪೈಕಿ ಐದನ್ನು,ಯುಟ್ಯೂಬಿನ ಮೂಲಕ ಬಾಡಿಗೆ ಆಧಾರದಲ್ಲಿ ಪ್ರಸಾರ ಮಾಡಲು ಯುಟ್ಯೂಬ್ ನಿರ್ಧರಿಸಿದೆ.ವಿಡಿಯೋ ತುಣುಕುಗಳನ್ನು ಜನರು ಪರಸ್ಪರ ಹಂಚಿಕೊಳ್ಳಲು ಆರಂಭವಾಗಿದ್ದ,ಯುಟ್ಯೂಬ್‌ಗೆ ಇದು ಬಹಳ ದೊಡ್ಡ ಹೆಜ್ಜೆಯಾಗಿದೆ.ಈ ನಿರ್ಧಾರದಿಂದ ಗೂಗಲ್‌ಗೆ ಆದಾಯ ಹೆಚ್ಚುವ ನಿರೀಕ್ಷೆಯಿದೆ.2009 ,2010ಚಿತ್ರೋತ್ಸವಗಳ ಐದು ಚಿತ್ರಗಳು ಮೊದಲಿಗೆ ಇಲ್ಲಿ ಲಭ್ಯವಾಗುತ್ತವೆ.ಇತರ ಚಿತ್ರ ನಿರ್ಮಾಣಸಂಸ್ಥೆಗಳನ್ನೂ ಇತ್ತ ಕಡೆ ಆಕರ್ಷಿಸಲು ಗೂಗಲ್ ಯತ್ನಿಸಲಿದೆ.ಬಾಡಿಗೆ ಎಷ್ಟೆಂಬುದನ್ನು ಚಿತ್ರಾನುಸಾರ ನಿರ್ಧರಿಸಲು ಅವಕಾಶ ಸಿಗಲಿದೆ.
-------------------------------------------------
ಐಸ್ಲೇಟ್ ಬಗ್ಗೆ ಇನ್ನಷ್ಟು ವಿವರಗಳು ಬಹಿರಂಗ


ಆಪಲ್ ಕಂಪೆನಿಯ ಹೊಸ ಉತ್ಪನ್ನ ಟ್ಯಾಬ್ಲೆಟ್ ಸಾಧನ ಎನ್ನುವುದು,ಆ ಸಾಧನಕ್ಕೆ ಐಸ್ಲೇಟ್ ಎಂಬ ಹೆಸರಿಡಲು ನಿರ್ಧಾರವಾಗಿದೆ ಎನ್ನುವುದು ಕಳೆದ ವರ್ಷಾಂತ್ಯದಲ್ಲೇ ಕೇಳಿ ಬಂದ ವದಂತಿ.ಈಗ ಬಹಿರಂಗ ಆಗಿರುವ ಇನ್ನಷ್ಟು ಮಾಹಿತಿಗಳ ಪ್ರಕಾರ,ಐಸ್ಲೇಟ್ ಬಿಡುಗಡೆ ಯಾವ ಕ್ಷಣದಲ್ಲೂ ಆಗಬಹುದು.ಐಸ್ಲೇಟನ್ನು ಕೌಟುಂಬಿಕ ಉಪಯೋಗಕ್ಕಾಗಿ ಇರುವ ಸಾಧನ ಎಂದು ಬ್ರಾಂಡ್ ಮಾಡುವ ಸಾಧ್ಯತೆ  ಇದೆಯಂತೆ.ಕುಟುಂಬದ ಸದಸ್ಯರೆಲ್ಲರೂ ತಮ್ಮ ಮಿಂಚಂಚೆಗಳತ್ತ ಕಣ್ಣುಹಾಯಿಸಲು,ಬಿಸಿಬಿಸಿ ಸುದ್ದಿಗಳಿಗಾಗಿ,ನ್ಯೂಯಾರ್ಕ್ ಟೈಮ್ಸ್ ಅಂತಹ ತಾಣಗಳನ್ನು ಪರಿಶೀಲಿಸಲು,ಪರಸ್ಪರ ಸಂದೇಶಗಳನ್ನು ಕೊಟ್ಟುಕೊಳ್ಳಲು,ಇದನ್ನು ಬಳಸಬೇಕೆಂದು ಆಪಲ್ ಯೋಚನೆ.ಅದು ಹಲವು ಟಿವಿ ಪ್ರಸಾರಕರ ಜತೆಯೂ ಒಪ್ಪಂದ ಮಾಡಿಕೊಂಡು ಜನಪ್ರಿಯ ಟಿವಿ ಕಾರ್ಯಕ್ರಮಗಳನ್ನು ಐಸ್ಲೇಟ್ ಮೂಲಕ ಲಭ್ಯವಾಗಿಸಲು ಪ್ರಯತ್ನಿಸುತ್ತಿದೆಯಂತೆ.ಜತೆಗೆ ಪುಸ್ತಕ ಪ್ರಕಾಶಕರ ಜತೆ ಸೇರಿಕೊಂಡು,ಪುಸ್ತಕಗಳನ್ನು ಇ-ಬುಕ್ ಆಗಿಸಿ,ಇದರ ಮೂಲಕ ಒದಗಿಸಲು ಯೋಜಿಸಿದೆಯಂತೆ.
-----------------------------------------------------------------------------
ಕೃಷ್ಣದೇವರಾಯ ಅಂತರ್ಜಾಲ ತಾಣಕ್ಕೆ


ವಿಜಯನಗರ ಸಾಮ್ರಾಜ್ಯದ ಶ್ರೀಕ್ರಷ್ಣದೇವರಾಯ ಮಹಾರಾಜ.ತುಳುವ ವಂಶದ ಈ ದೊರೆಯ ಕಾಲವನ್ನು ಸುವರ್ಣಯುಗವೆಂದು ಕರೆಯಲಾಗುತ್ತದೆ.ಈತನ ಪಟ್ಟಾಭಿಷೇಕದ ಐನೂರನೇ ವರ್ಷಾಚರಣೆ ಈಚೆಗೆ ಹಂಪಿಯಲ್ಲಿ ಅದ್ದೂರಿಯಾಗಿ ಆಚರಿಸಲ್ಪಟ್ಟಿತು.  http://krishnadevaraya.in ಅಂತರ್ಜಾಲ ತಾಣವು ಈ ಸಂದರ್ಭದಲ್ಲಿ ಆಸ್ತಿತ್ವಕ್ಕೆ ಬಂದಿದೆ.ಇಲ್ಲಿ ಮಹಾರಾಜನ ಆಡಳಿತದ,ಕಾರ್ಯಕ್ರಮಗಳ ವಿವರಗಳಿವೆ.ಅಂತರ್ಜಾಲತಾಣ  ತಾಣವಿನ್ನೂ ಸಂಪೂರ್ಣವಾದ ಹಾಗಿಲ್ಲ.ಹೆಚ್ಚಿನ ಕೊಂಡಿಗಳು ಒಂದು ವಾಕ್ಯಕ್ಕೇ ಸೀಮಿತವಾಗಿದೆ,ವಿವರಗಳನ್ನು ಹೊಂದಿಲ್ಲ!
--------------------------------------------------------------------
ಬಿಎಸೆನೆಲ್‌ನಿಂದ ಗ್ರಾಹಕರತ್ತ ಡಬಲ್ ಬಿಲ್ಲೆಸೆತ!
ಹೊಸ ವರ್ಷದ ಮೊದಲ ತಿಂಗಳೇ ಬಿಎಸೆನೆಲ್‌ನ ದ.ಕ. ದೂರಸಂಪರ್ಕ ಜಿಲ್ಲೆಯಲ್ಲಿ ಗ್ರಾಹಕರಿಗೆ ಶಾಕ್ ಅನುಭವವಾಗಿದೆ.ಹಲವು ಸ್ಥಿರ ದೂರವಾಣಿ ಗ್ರಾಹಕರಿಗೆ ಎರಡೆರಡು ಬಿಲ್‌ಗಳು ತಲುಪಿವೆ.ಒಂದು ಸರಿಯಾದ ಬಿಲ್ ಆದರೆ,ಇನ್ನೊಂದು ಹಳೆಯ ಬಿಲ್ ಅಂಚೆಯ ಮೂಲಕ ಒಂದರ ಹಿಂದೆ ಇನ್ನೊಂದರಂತೆ ಬಟವಾಡೆಯಾಗಿದೆ.ಇದು ಕಂಪ್ಯೂಟರ್ ದೋಷವೇ,ಅಲ್ಲ ಕಂಪ್ಯೂಟರಿಗೆ ವೈರಸ್ ಅಂತಹ ಕಾಟದ ಕಾರಣವೇ ಎಂದು ಗ್ರಾಹಕರು ಅಚ್ಚರಿ ಪಡುವಂತಾಗಿದೆ.ಬಿಎಸೆನೆಲ್ ಕಚೇರಿಯನ್ನು ಸಂಪರ್ಕಿಸಿದಾಗ,ಸರಿಯಾದ ಬಿಲ್ ಪಾವತಿಸಿ,ಮತ್ತೊಂದು ಬಿಲ್ಲನ್ನು ಕಡೆಗಣಿಸಿ,ಎನ್ನುವ ಸಲಹೆ ಸಿಕ್ಕಿದೆ.ನೇರವಾಗಿ ಬಿಲ್ ಪಾವತಿಸುವ ಗ್ರಾಹಕರಿಗೆ ಸಮಸ್ಯೆಯಿಲ್ಲ.ಬ್ಯಾಂಕುಗಳಲ್ಲಿ ಈಸಿಎಸ್(ECS) ಮೂಲಕ ಪಾವತಿ ವ್ಯವಸ್ಥೆ ಮಾಡಿದವರಿಗೆ,ಸಂಬಂಧಿಸಿದ ಬ್ಯಾಂಕುಗಳೂ ಎರಡೂ ಬಿಲ್ ಪಡೆದು,ಬ್ಯಾಂಕಿನ ಕಂಪ್ಯೂಟರುಗಳು ತಪ್ಪಾಗಿ ಎರಡನ್ನೂ ಪಾವತಿಸಿದರೆ ಎನ್ನುವ ಸಂಶಯಕ್ಕೀಡಾಗಿದ್ದಾರೆ.ಒಂದು ವೇಳೆ ಪಾವತಿಯಾದರೆ,ಮುಂದಿನ ಬಿಲ್‌ನಲ್ಲಿ ಸರಿಯಾಗಬಹುದು ಎಂದು ಆಶಿಸುವುದಷ್ಟೇ ಗ್ರಾಹಕರಿಗೆ ಸದ್ಯಕ್ಕೆ ಉಳಿದಿರುವ ಮಾರ್ಗ!
--------------------------------------------------------------------------------
ಟ್ವೀಟಲಾರಂಭಿಸಿರುವ ಬಿಲ್‌ಗೇಟ್ಸ್,ಶಾರುಖ್
ಅಂತರ್ಜಾಲ ಸೇವೆ ಟ್ವಿಟರ್,ನಿಧಾನವಾಗಿ ಖ್ಯಾತನಾಮರನ್ನು ತನ್ನೆಡೆಗೆ ಸೆಳೆಯುತ್ತಿದೆ.ಇದೀಗ ಬಿಲ್‌ಗೇಟ್ಸ್ ಮತ್ತು ಶಾರುಖ್ ಖಾನ್ ಸರದಿ.ಮೈಕ್ರೋಸಾಫ್ಟ್ ಕಂಪೆನಿಯಿಂದ ವಿರಮಿಸಿದ ಬಳಿಕವೂ,ಬಿಲ್‌ಗೇಟ್ಸ್ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿದ್ದಾರೆ.ಅವರೀಗ ಬಿಲ್ ಮತ್ತು ಮೆಲಿಂದಾ ಗೇಟ್ಸ್ ಫೌಂಡೇಶನ್ ಮೂಲಕ ಸಮಾಜಸೇವಾ ಕಾರ್ಯಗಳಲ್ಲಿ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ.ತನ್ನ ಚಟುವಟಿಕೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು,ಮತ್ತು ಅಭಿಮಾನಿಗಳ ಸಂಪರ್ಕ ಸಾಧಿಸಲು,ಬಿಲ್ ಗೇಟ್ಸ್ ಅವರು ಟ್ವಿಟರ್ ಖಾತೆಯನ್ನು ಬಳಸಲಾರಂಭಿಸಿದ್ದಾರೆ. www.twitter.com/billgates ಮೂಲಕ ಅವರು ತಮ್ಮ ಸಂದೇಶಗಳನ್ನು ಜಗಜ್ಜಾಹೀರು ಮಾಡುತ್ತಿದ್ದಾರೆ.ಅವರ ಖಾತೆಯನ್ನು ಟ್ವಿಟರ್ ಪ್ರಮಾಣೀಕರಿಸಿ,ಅದು ಅವರದ್ದೇ ಖಾತೆ,ನಕಲಿಯಲ್ಲ ಎಂದು ಶ್ರುತ ಪಡಿಸಿದ ಬಳಿಕ,ಅವರನ್ನು ಹಿಂಬಾಲಿಸುವವರ ಸಂಖ್ಯೆ ಒಂದೇ ಸವನೆ ಏರತೊಡಗಿದ್ದು,ಕೆಲವೇ ದಿನಗಳ ಬಳಿಕವೀಗ ಹಿಂಬಾಲಕರ ಸಂಖ್ಯೆ ಮೂರು ಲಕ್ಷವನ್ನು ದಾಟಿದೆ.ತಮ್ಮ ಮೊದಲ ಟ್ವೀಟ್ ಸಂದೇಶದಲ್ಲಿ "ಹಲ್ಲೋ ವರ್ಲ್ಡ್" ಎಂಬ ಜನಪ್ರಿಯ ಕ್ರಮವಿಧಿಯ ಸಾಲಿನ ಮೂಲಕವೇ ಆರಂಭಿಸಿದ,ಬಿಲ್ ಗೇಟ್ಸ್,ತಮ್ಮ ಭಾರತ ಭೇಟಿಯ ಸಂದರ್ಭದ ಚಿತ್ರಗಳನ್ನೂ ಇನ್ನೊಂದು ಸಂದೇಶದ ಜತೆ ನೀಡಿದ್ದಾರೆ.
ಇತ್ತ ಬಾಲಿವುಡ್ ಬಾದಶಾಹ್ ಶಾರೂಖ್ ಖಾನ್ ಕೂಡಾ ತಮ್ಮ ಮಿತ್ರ ಕರಣ್‌ಜೋಹರ್ ಅವರ ಒತ್ತಾಯಕ್ಕೆ ಮಣಿದು ಟ್ವಿಟರಿನಲ್ಲಿ ಪ್ರತ್ಯಕ್ಷರಾಗಿದ್ದಾರೆ.www.twitter.com/iamsrk ಎನ್ನುವುದು ಅವರ ಖಾತೆಯ ವಿಳಾಸ.ಅವರೂ ಬಹಳ ಬೇಗನೇ ತಮ್ಮ ಹಿಂಬಾಲಕರನ್ನು ಗಳಿಸಿಕೊಳ್ಳುತ್ತಿದ್ದಾರಾದರೂ ಆ ಸಂಖ್ಯೆ ಒಂದು ಲಕ್ಷವನ್ನಿನ್ನೂ ತಲುಪಿಲ್ಲ.
udayavani
-------------------------------------------------------------------------------------
*ಅಶೋಕ್‌ಕುಮಾರ್ ಎ

Monday, January 18, 2010

ಯಾವ ಟಿವಿ ಕಾರ್ಯಕ್ರಮ ನಿಮಗಿಷ್ಟ?

ಯಾವ ಟಿವಿ ಕಾರ್ಯಕ್ರಮ ನಿಮಗಿಷ್ಟ?


ಡಿ ಟಿ ಎಚ್ ಅಥವಾ ಕೇಬಲ್ ಟಿವಿ ಸೇವೆ ಮೂಲಕ ಟಿವಿ ಕಾರ್ಯಕ್ರಮಗಳನ್ನು ಪಡೆಯುವವರಿಗೆ,ಯಾವ ಕಾರ್ಯಕ್ರಮಗಳು ಯಾವ ಚಾನೆಲ್‌ನಲ್ಲಿ ಬರುತ್ತಿವೆ,ಯಾವುದು ತಮಗಿಷ್ಟವಾದುವು ಎಂದು ನಿರ್ಧರಿಸಲು ಸುಲಭವಾಗಿಸುವ ಅಂತರ್ಜಾಲ ಸೇವೆಯು http://whatsonindia.com ತಾಣದಲ್ಲಿ ಲಭ್ಯವಿದೆ. ಯಾವ ಡಿಟಿಎಚ್ ಸೇವೆಯ,ಯಾವ ಸೇವೆಗೆ ಚಂದಾದಾರರಾಗಿದ್ದೀರಿ,ಯಾವ ಭಾಷೆಯ ಕಾರ್ಯಕ್ರಮ ಎಂದು ನಿಗದಿ ಪಡಿಸಿ,ತಾರೀಕನ್ನು ನೀಡಿದರೆ ಸರಿ,ಕಾರ್ಯಕ್ರಮಗಳು ಚಾನೆಲ್ ಅನುಸಾರ ಪಟ್ಟಿ ಮಾಡಿ ವೇಳಾ ಪಟ್ಟಿ ನಿಮ್ಮ ಮುಂದೆ ಪ್ರತ್ಯಕ್ಷವಾಗುತ್ತದೆ.ವಿವಿಧ ಚಾನೆಲ್‌ಗಳು ಬೇರೆ ಬೇರೆ ಹೊತ್ತಿನಲ್ಲಿ ಪ್ರಸಾರ ಮಾಡುವ ಕಾರ್ಯಕ್ರಮ ವಿವರಗಳು ಲಭ್ಯವಾಗುವುದರಿಂದ,ಅವುಗಳನ್ನು ಹೋಲಿಸಿ ನೋಡಿ ನಿರ್ಧರಿಸುವುದು ಸುಲಭ.ಯಾವುದೇ ಕಾರ್ಯಕ್ರಮವನ್ನು ನೋಡಬೇಕು ಎಂದು ನಿರ್ಧರಿಸಿದರೆ,ಅದನ್ನು ನೆನಪಿಟ್ಟುಕೊಳ್ಳಬೇಕಾದ ತಾಪತ್ರಯವೂ ಇಲ್ಲ.ತಾಣದಲ್ಲಿ ನೋಂದಾಯಿಸಿಕೊಂಡು,ನಿಮ್ಮ ಮೊಬೈಲ್ ಸಂಖ್ಯೆ ನೀಡಿದರೆ,ಕಾರ್ಯಕ್ರಮದ ಮೂಂಚಿತವಾಗಿ ನಿಮಗೆ ಎಸೆಮ್ಮೆಸ್ ಕಳುಹಿಸುವ ಸೇವೆಯೂ ಇಲ್ಲಿದೆ.ಬೇಕೆಂದರೆ,ನಿಮ್ಮ ಗೆಳೆಯರ ಮೊಬೈಲ್ ನೀಡಿ,ಅವರಿಗೂ ಎಸೆಮ್ಮೆಸ್ ಕಳುಹಿಸಿ,ಅವರಿಗೂ ಕಾರ್ಯಕ್ರಮದ ಬಗ್ಗೆ ತಿಳಿಸಬಹುದು.
------------------------------------------------------------------
ಪರ್ಯಾಯ ಶೀರೂರು ಮಠ ಅಂತರ್ಜಾಲದಲ್ಲಿ



ಉಡುಪಿ ಕೃಷ್ಣ ಮಠದ ಆಡಳಿತ ಸೂತ್ರವನ್ನು ವಹಿಸಲಿರುವ ಶ್ರೀಶೀರೂರು ಮಠದ ಅಂತರ್ಜಾಲ ತಾಣವೀಗ http://udupishiroormutt.inನಲ್ಲಿ ಲಭ್ಯ.ಶ್ರೀಮಠದ ಹಿನ್ನೆಲೆ,ಯೋಜನೆಗಳು,ಬರಹಗಳು,ಗುರು ಪರಂಪರೆ ಇತ್ಯಾದಿ ವಿವರಗಳು ಇಲ್ಲಿ ಸಿಗುತ್ತವೆ.ದೇವಾಲಯ ಮತ್ತು ಮಠದ ಚಿತ್ರಸಂಗ್ರಹವೂ ಇಲ್ಲಿದೆ.
ಪರ್ಯಾಯ ಪೂರೈಸುತ್ತಿರುವ ಶ್ರೀಪುತ್ತಿಗೆ ಮಠದ ಅಂತರ್ಜಾಲ ತಾಣವು http://www.puthigeshree.orgನಲ್ಲಿ ಸಿಗುತ್ತದೆ.ಪ್ರಸಕ್ತ ಪರ್ಯಾಯದಲ್ಲಿ ಹಮ್ಮಿಕೊಂಡ ಯೋಜನೆಗಳು,ಅವುಗಳಿಗೆ ನೆರವು ನೀಡುವುದು ಹೇಗೆ ಇತ್ಯಾದಿ ವಿವರಗಳ ಸಹಿತ,ಮಠದ ಹಿನ್ನೆಲೆ,ಚಿತ್ರಗಳು,ಬರಹಗಳು ಇಲ್ಲಿವೆ.ದೇಶ ವಿದೇಶಗಳ ಭಕ್ತಾದಿಗಳಿಗೆ ಅಂತರ್ಜಾಲತಾಣಗಳು ಮಾಹಿತಿಯನ್ನು ಪಡೆದುಕೊಳ್ಳಲು ಸಹಕಾರಿಯಾಗಿವೆ.ಸಹಾಯಹಸ್ತ ನೀಡುವವರು ಆನ್‌ಲೈನ್ ಮೂಲಕ ಪಾವತಿ ಮಾಡಲು ಅವಕಾಶ ಕಲ್ಪಿಸಿದರೆ ಚೆನ್ನ.
----------------------------------------------------------------------
ಹೈಟಿ ಭೂಕಂಪ:ಅಂತರ್ಜಾಲವೇ ಸುದ್ದಿ ಮೂಲ
ಹೈಟಿಯನ್ನು ನಡುಗಿಸಿ,ಅಂದಾಜು ಒಂದು ಲಕ್ಷ ಜನರನ್ನು ಬಲಿ ತೆಗೆದುಕೊಂಡಿರುವ ಭೂಕಂಪದ ಬಗ್ಗೆ ಸ್ಪಷ್ಟ ಚಿತ್ರವನ್ನು ಪಡೆಯಲು ಅಂತರ್ಜಾಲವು ಬಹಳ ನೆರವಾಗಿದೆ.ಟ್ವಿಟರ್,ಫೇಸ್‌ಬುಕ್ ತಾಣಗಳ ಮೂಲಕ ಜನರು ತಮ್ಮ ಬಂಧು-ಬಾಂಧವರು ಭೂಕಂಪದಿಂದ ಬಾಧಿತರಾಗಿದ್ದಾರೋ ಎಂದರಿಯಲು ಪ್ರಯತ್ನಿಸುತ್ತಿದ್ದರು.ಟ್ವಿಟರ್ ತಾಣದಲ್ಲಿ ಭೂಕಂಪ ಮತ್ತು ಹೈಟಿ ವಿಷಯಗಳು ಹೆಚ್ಚು ಚರ್ಚಿತವಾಗುತ್ತಿದ್ದುವು.ಗೂಗಲ್ ಭೂಕಂಪ ಪೀಡಿತ ಪ್ರದೇಶದ ಹೊಸ ಉಪಗ್ರಹ ಚಿತ್ರವನ್ನು ತೆಗೆದು,ಭೂಕಂಪದ ತೀವ್ರತೆಯನ್ನು ಜನರಿಗೆ ಮನದಟ್ಟು ಮಾಡಿಕೊಟ್ಟಿತು.ಭೂಕಂಪ ಪೀಡಿತರ ನೆರವಿಗೆ ಧನಸಹಾಯಕ್ಕೆ ಆಪಲ್ ಕಂಪೆನಿಯು ತನ್ನ ಐಸ್ಟೋರ್ಸ್ ಮೂಲಕ ಅನುಕೂಲ ಕಲ್ಪಿಸಿದಂತೆ,ಇತರ ಕಂಪೆನಿಗಳು ಜನರು ಆನ್‌ಲೈನ್ ಪಾವತಿ ಮೂಲಕ ನೆರವಾಗಲು ಅನುಕೂಲ ಕಲ್ಪಿಸುತ್ತಿವೆ.ಬ್ಯಾಂಕುಗಳೂ ಅಂತಹ ಪಾವತಿಗೆ ಗೇಟ್‌ವೇಗಳನ್ನು ತೆರೆದು,ನೆರವಾಗಲು ಕೋರಿಕೆಗಳು ಬರುತ್ತಿವೆ.
---------------------------------------------------------
ಚೀನಾದ ಅಂತರ್ಜಾಲ ಸೆನ್ಸಾರ್ ಧಿಕ್ಕರಿಸಿದ ಗೂಗಲ್
ಚೀನಾದಲ್ಲಿ ಅಂತರ್ಜಾಲದ ಬಗ್ಗೆ ಬಿಗಿ ಸೆನ್ಸಾರ್ ನೀತಿ ಅನುಸರಿಸಲಾಗುತ್ತಿದೆ.ಗೂಗಲ್ ಮೂಲಕ ಶೋಧಿಸಿದಾಗ,ಅದು ತೋರುವ ಅಂತರ್ಜಾಲ ಪುಟಗಳು ದಲಾಯಿಲಾಮ ಬಗ್ಗೆ ಇದ್ದರೆ,ಸರಕಾರದ ವಿರುದ್ಧ ಬರಹಗಳನ್ನು ಹೊಂದಿದ್ದರೆ,ಅಶ್ಲೀಲ ಮಾಹಿತಿ-ಚಿತ್ರ-ವಿಡಿಯೋ ಹೊಂದಿದ್ದರೆ,ಅಂತಹ ವಿವರಗಳನ್ನು ತೆಗೆದು,ಉಳಿದವನಷ್ಟೇ ಚೀನೀಯರಿಗೆ ಒದಗಿಸಬಹುದಿತ್ತು.ಅಂತಹ ಬಿಗಿ ಸೆನ್ಸಾರಿಗೆ ಗೂಗಲ್ ತನ್ನನ್ನು ಒಡ್ಡಿಕೊಂಡ ಕಾರಣ ಇದುವರೆಗೆ ಯಾವ ಸಮಸ್ಯೆಯೂ ಇರಲಿಲ್ಲ.ಆದರೀಗ ಗೂಗಲ್ ಅಂತಹ ಸೆನ್ಸಾರಿಗೆ ಒಳಗಾಗಲೂ ನಿರಾಕರಿಸಿ,ಬಿರುಗಾಳಿ ಎಬ್ಬಿಸಿದೆ.ಗೂಗಲ್ ವಿರೋಧ ಮುಂದುವರಿದರೆ, ಆ ತಾಣವನ್ನೇ ಚೀನಾ ಬಹಿಷ್ಕರಿಸುವ ಸಾಧ್ಯತೆ ಇದೆ.ಹಾಗೆ ಹೇಳಬೇಕೆಂದರೆ ಚೀನಾದಲ್ಲಿ ಗೂಗಲ್ ಅಂತಹ ಜನಪ್ರಿಯ ತಾಣವಲ್ಲ.ಶೋಧದ ಮಟ್ಟಿಗೆ ಚೀನಾ ತನ್ನದೇ ಆದ,ಬೈದು ಎನ್ನುವ ತಾಣವನ್ನು ಹೊಂದಿದೆ.ಇದು ಶೋಧ ಮಾರುಕಟ್ಟೆಯ ಶೇಕಡಾ ಅರುವತ್ತು ಪಾಲನ್ನು ಹೊಂದಿದ್ದರೆ,ಗೂಗಲ್ ಶೇಕಡಾ ಮೂವತ್ತು ಪಾಲನ್ನು ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿ ಪಡಬೇಕಿದೆ.ಹಾಗಾಗಿ ಚೀನಾವು ಗೂಗಲ್ ಇಲ್ಲದಿದ್ದರೂ ಹೆಚ್ಚೇನೂ ಬಾಧಿತವಾಗದು.ಮೈಕ್ರೋಸಾಫ್ಟ್ ಕಂಪೆನಿಯು ಸದ್ಯಕ್ಕಂತೂ ಸೆನ್ಸಾರ್‌ಗೆ ಒಳಪಡಲು ಒಪ್ಪುವ ತನ್ನ ಹಿಂದಿನ ನಿರ್ಧಾರಕ್ಕೇ ಅಂಟಿಕೊಂಡಿದೆ.ಹಾಗಾಗಿ,ಗೂಗಲ್ ಚೀನಾದಿಂದ ಹೊರನಡೆಯಬೇಕಾಗಿ ಬಂದರೆ,ಅದರ ನಷ್ಟ ಗೂಗಲಿಗೇ ಹೊರತು ಚೀನಾಕ್ಕಲ್ಲ. ಈ ನಡುವೆ ಅಮೆರಿಕಾ ಅಧ್ಯಕ್ಷರು ಗೂಗಲಿನ ನಿರ್ಧಾರ ಸರಿಯೆಂದು ಬೆಂಬಲಿಸಿದ್ದಾರೆ.ಉಳಿದ ಕಂಪೆನಿಗಳೂ ಗೂಗಲಿಗೆ ಬೆಂಬಲ ಪ್ರಕಟಿಸುವ ಧೈರ್ಯ ತೋರಿದರೆ ಮಾತ್ರಾ ಚೀನಾ ತೊಂದರೆಗೆ ಸಿಕ್ಕಿಹಾಕಿಕೊಂಡೀತು.ಅಂದ ಹಾಗೆ ಗೂಗಲ್ ಚೀನಾದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಲಭ್ಯವಿದೆ.ಗೂಗಲನ್ನು ಅಲ್ಲಿ ಸುಮಾರು ಐದು ಕೋಟಿ ಜನ ಬಳಸುತ್ತಿದ್ದಾರೆ.ಚೀನಾದಿಂದ ಗೂಗಲಿಗೆ ಸಿಗುತ್ತಿರುವ ಜಾಹೀರಾತು ಆದಾಯ ಕೂಡಾ ಕಡಿಮೆಯೇ.
--------------------------------------------------------
ಗ್ರಹಣದ ಪರಿಣಾಮಗಳನ್ನು ಅಧ್ಯಯನ ಮಾಡಲು ಇಸ್ರೋ ರಾಕೆಟ್
ಸೂರ್ಯಗ್ರಹಣದ ವೇಳೆ ವಾತಾವರಣದ ವಿವಿಧ ಪದರಗಳಲ್ಲಿ ಏನು ವ್ಯತ್ಯಾಸ ಆಗುತ್ತದೆ ಎನ್ನುವುದನ್ನು ಖಚಿತವಾಗಿ ತಿಳಿದುಕೊಳ್ಳಲು ಇಸ್ರೋ ರಾಕೆಟುಗಳನ್ನು ಉಡಾಯಿಸಿತು.ಶುಕ್ರವಾರ ಗ್ರಹಣದ ವೇಳೆ ಮತ್ತು ಹಿಂದಿನ ದಿನ ವಾತಾವರಣದ ವಿವಿಧ ಪದರಗಳನ್ನು ತಲುಪಿ ಮಾಹಿತಿ ಸಂಗ್ರಹಿಸುವ ಉದ್ದೇಶದಿಂದ ರಾಕೆಟುಗಳನ್ನು ಕಳುಹಿಸಿದ,ಇಸ್ರೋ ಸಾಮಾನ್ಯ ದಿನ ಮತ್ತು ಗ್ರಹಣದ ವೇಳೆ ವಾತಾವರಣದ ಉಷ್ಣತೆ,ಅಯಾನುಗಳ ಮಟ್ಟ ಇವುಗಳ ಮೇಲೆ ಬೆಳಕಿನ ಅಲೆಗಳ ಪರಿಣಾಮವನ್ನು ಅಭ್ಯಸಿಸಿತು.ಮೂರು ರಾಕೆಟುಗಳನ್ನು ಗುರುವಾರ ಕಳುಹಿಸಿದರೆ,ಐದು ರಾಕೆಟುಗಳು ಗ್ರಹಣದ ವೇಳೆ ಗಗನಗಾಮಿಯಾದುವು.ತುಂಬಾ ರಾಕೆಟ್ ಉಡಾವಣಾ ಕೇಂದ್ರ ಮತ್ತು ಶ್ರೀಹರಿಕೋಟಾ ಕೇಂದ್ರದಿಂದ ರಾಕೆಟುಗಳ ಉಡಾವಣೆ ನಡೆಯಿತು.ರಾಕೆಟುಗಳಲ್ಲಿದ್ದ ಹಲವು ಉಪಕರಣಗಳು ರಾಕೆಟು ಉರಿದು ಬೀಳುವ ಮುನ್ನ ಮಾಹಿತಿ ಸಂಗ್ರಹಿಸಿ,ಭೂಮಿಗೆ ರವಾನಿಸುವ ಏರ್ಪಾಡಾಗಿತ್ತು.ರೋಹಿಣಿ ಹೆಸರಿನ ರಾಕೆಟುಗಳು ಅರುವತ್ತು ಕಿಲೋಮೀಟರುಗಳಿಂದ ಹಿಡಿದು,ಐನೂರೈವತ್ತು ಕಿಲೋಮೀಟರುಗಳ ಎತ್ತರಕ್ಕೆ ಉಡಾವಣೆಯಾದುವು.
------------------------------------------------------------
ಮೊಬೈಲಿನಲ್ಲಿ ಶೋಧಕ್ಕೂ ಸಹಾಯ
ಮೊಬೈಲಿನಲ್ಲಿ ಗೂಗಲ್ ಮೂಲಕ ಶೋಧಿಸಲು ಪದಗುಚ್ಛಗಳನ್ನು ನೀಡುವ ಅಗತ್ಯವನ್ನೂ ಇಲ್ಲವಾಗಿಸಿ,ಗೂಗಲ್ ಶೋಧದಲ್ಲಿ ಹೊಸ ಸೇವೆ ನೀಡಲಾರಂಭಿಸಿದೆ.ಮೊಬೈಲ್ ಬಳಕೆದಾರನ ಸ್ಥಾನವನ್ನು ಗೊತ್ತು ಮಾಡಿಕೊಂಡು,ಆ ಊರಿನಲ್ಲಿ ಸಾಮಾನ್ಯವಾಗಿ ಯಾವುದಕ್ಕಾಗಿ ಜನ ಶೋಧಿಸುತ್ತಾರೆಂಬುದರ ಮಾಹಿತಿಯು ಗೂಗಲ್ ಪುಟ ತೆರೆದ ಕೂಡಲೇ ಬರುತ್ತದೆ.ಉದಾಹರಣೆಗೆ ಮ್ಯೂಸಿಯಂ ಇರುವ ಊರಿನಲ್ಲಿ ಅದರ ಬಗ್ಗೆ ಶೋಧ ನಡೆಸುವುದು ಸಾಮಾನ್ಯವಲ್ಲವೇ? ಈ ರೀತಿ ಕೆಲವು ಆಯ್ದ ಪದಗುಚ್ಛಗಳನ್ನು ನೀಡಿ,ಅವುಗಳ ಬಗ್ಗೆಯೇ ಶೋಧ ನಡೆಸಬಯಸುತ್ತಿದ್ದರೆ,ಅವುಗಳಲ್ಲಿ ಬೇಕಾದ್ದನ್ನು ಆಯ್ದುಕೊಳ್ಳಲು,ಅಲ್ಲವಾದರೆ ಬೇಕಾದ ಪದಗುಚ್ಛವನ್ನು ಟೈಪಿಸಲು ಬಳಕೆದಾರನಿಗೆ ಅವಕಾಶ ಸಿಗುತ್ತದೆ.
--------------------------------------------
ವಿಕಿಪೀಡಿಯಾ ಹತ್ತನೇ ವರ್ಷಕ್ಕೆ
ಜನವರಿ ಹದಿನೈದು ವಿಕಿಪೀಡಿಯಾ ದಿನವಾಗಿ ಆಚರಿಸಲ್ಪಡುತ್ತದೆ.2001ರಲ್ಲಿ ಆ ದಿನ ವಿಕಿಪೀಡಿಯಾ ಉದಯವಾಯಿತು.ಇಂಗ್ಲೀಷ್ ವಿಕಿಪೀಡಿಯಾದಲ್ಲಿ ಮೂರು ದಶಲಕ್ಷ ಬರಹಗಳಿವೆ.ಕನ್ನಡದ ವಿಕಿಪೀಡಿಯಾವೂ ಇದ್ದು,ಇದರಲ್ಲೂ ಏಳುಸಾವಿರ ಬರಹಗಳು ಸೇರಿಸಲ್ಪಟಿವೆ.ಜನರ ಸಹಭಾಗಿತ್ವದಲ್ಲಿ ಬೆಳೆಯುತ್ತಿರುವ ವಿಕಿಪೀಡಿಯಾದಲ್ಲಿ ಇನ್ನಷ್ಟು ಜನರು ಬರಹಗಳನ್ನು ಸೇರಿಸಿದರೆ ಚೆನ್ನ.

udayavani
---------------------------------------------------------------------------
*ಅಶೋಕ್‌ಕುಮಾರ್ ಎ
------------------------------------------------------------

Monday, January 11, 2010

ಗೂಗಲ್‌ನ ನಕ್ಸಸ್ ಫೋನ್ ಬಿಡುಗಡೆ

ಗೂಗಲ್‌ನ ನಕ್ಸಸ್ ಫೋನ್ ಬಿಡುಗಡೆ
ವರ್ಷದ ಮೊದಲವಾರದಲ್ಲಿ ಗೂಗಲ್ ಕಂಪೆನಿಯು ನಕ್ಸಸ್ ಫೋನ್‌ನ್ನು ಬಿಡುಗಡೆ ಮಾಡಿದೆ.ಐಫೋನ್‌ಗೆ ಸ್ಪರ್ಧೆ ಒಡ್ಡಲು ಸಮರ್ಥವೆಂದು ಭಾವಿಸಲಾಗಿರುವ ನಕ್ಸಸ್ ಫೋನ್,ಸುಮಾರು ಹನ್ನೆರಡು ಸೆಂಟಿಮೀಟರ್ ಉದ್ದ,ಆರು ಸೆಂಟಿಮೀಟರ್ ಅಗಲ ಮತ್ತು 1.15ಸೆಂಟಿಮೀಟರ್ ದಪ್ಪವಿದೆ.115ಗ್ರಾಮುಗಳಷ್ಟು ತೂಕವಿರುವ ಈ ಸೆಲ್‌ಪೋನಿನಲ್ಲಿ,ಬ್ಲೂಟೂತ್,ನಿಸ್ತಂತು,ಐದು ಮೆಗಾಪಿಕ್ಸೆಲ್ ಕ್ಯಾಮರಾ,800X480ಸ್ಪಷ್ಟತೆಯ ತೆರೆ,ಹತ್ತು ಗಂಟೆ ಮಾತನಾಡುವಷ್ಟು ಬ್ಯಾಟರಿ ಶಕ್ತಿ ಇವೆಲ್ಲಾ ಇವೆ.ಗೂಗಲ್ ಆಂಡ್ರಾಯಿಡ್ ಕಾರ್ಯನಿರ್ವಹಣಾ ವ್ಯವಸ್ಥೆಯನ್ನು ಬಳಸುವ ನಕ್ಸಸ್ ಪೋನ್‌ನಲ್ಲಿ ಕೀಲಿ ಮಣೆಯು ತೆರೆಯ ಮೇಲೆಯೇ ಕಾಣಿಸುತ್ತದೆ.512ಎಂಬಿ ಸ್ಮರಣಸಾಮರ್ಥ್ಯದ ರಾಂ ಇದೆ.ನಾಲ್ಕು ಜಿಬಿ ಎಸ್ಡಿ ಕಾರ್ಡ್ ಇದೆ.ಸ್ಪರ್ಶ ಸಂವೇದಿ ತೆರೆಯಿದೆ.ಬೆಲೆ ಐನೂರು ಡಾಲರುಗಳಿಗಿಂತ ಹೆಚ್ಚು.ಅದೃಷ್ಟವಶಾತ್ ನಮ್ಮಲ್ಲಿದು ಸದ್ಯ ಲಭ್ಯವಿಲ್ಲ!ಹಾಗಾಗಿ ಇದರ ಆಮಿಷಕ್ಕೆ ಬಿದ್ದು ಕಿಸೆ ಬರಿದಾಗುವ ಅಪಾಯವಿಲ್ಲ.
ಐಫೋನಿಗೆ ಹೋಲಿಸಿದರೆ ಬೆಲೆ ಕಡಿಮೆ,ಯಾವುದೇ ಜಿಎಸೆಂ ಸೇವೆಯನ್ನು ಪಡೆಯಲು ಸಾಧ್ಯವಿದೆ ಎನ್ನುವುದು ನಕ್ಸಸ್ ಫೋನಿನ ಹೆಗ್ಗಳಿಕೆ.ಐಫೋನಿನಲ್ಲಿ ನಿಗದಿತ ಕಂಪೆನಿಯ ಸೇವೆಯನ್ನು ಮಾತ್ರಾ ಪಡೆಯಲು ಸಾಧ್ಯವಿದೆ.ನಕ್ಸಸ್‌ನ ಕ್ಯಾಮರಾವೂ ಹೆಚ್ಚು ಗುಣಮಟ್ತದ್ದು.ಟೈಪಿಂಗ್ ಮಾಡುವಾಗ,ಪದಪೂರ್ತಿ ಸೌಕರ್ಯವನ್ನು ನಕ್ಸಸಿನಲ್ಲಿ ಒದಗಿಸಲಾಗಿದೆ.ನಕ್ಸಸ್ ಫೋನಿನಲ್ಲಿ ಐಫೋನಿಗಿಂತ ಹೆಚ್ಚು ಸ್ಪಷ್ಟ ಚಿತ್ರ ಮತ್ತು ಅಕ್ಷರ ಪ್ರದರ್ಶಿಸಬಲ್ಲ ತೆರೆಯಿದೆ.ಐಫೋನಿಗೆ ಹೋಲಿಸಿದಾಗ,ನಕ್ಸಸ್ ಫೋನಿನಲ್ಲಿ ಬ್ಯಾಟರಿ ಹೆಚ್ಚು ಹೊತ್ತು ಪೋನ್ ಬಳಕೆಗೆ ಆಸ್ಪದ ನೀಡುತ್ತದೆ.
------------------------------------------------------------------------------------------------
ಗೆರೆ-ಬರೆ


ಜಗಜೀವನ್ ಶೆಟ್ಟಿಯವರು ವ್ಯಂಗ್ಯಚಿತ್ರ ಕಲಾವಿದರು,ಜತೆಗೆ "ಉದಯವಾಣಿ", "ತರಂಗ"ವೂ ಸೇರಿದಂತೆ ಹಲವು ಪತ್ರಿಕೆಗಳಿಗೆ ಚಿತ್ರರಚನೆಯನ್ನೂ ಮಾಡಿ ಹೆಸರು ಮಾಡಿದ ಕಲಾವಿದ ಕೂಡಾ.ಇವರ ಮಕ್ಕಳ ಕಲಾಶಾಲೆ "ಗೆರೆ-ಬರೆ" ಉಡುಪಿಯ ಹೊರವಲಯ ಅಂಬಾಗಿಲಿನಲ್ಲಿದೆ.ಈ ಕಲಾಶಾಲೆಯ ಬ್ಲಾಗ್ www.gerebare.blogspot.comನಲ್ಲಿ ಆರಂಭವಾಗಿದೆ.ಈ ಕಲಾಶಾಲೆಯ ಐದನೆ ವರ್ಷಾಚರಣೆಯ ಸ್ಮರಣಾರ್ಥವಾಗಿ,ಕಾರ್ಟೂನ್ ಮತ್ತು ಮಕ್ಕಳು ರಚಿಸಿದ ಪೋಸ್ಟರುಗಳ ಪ್ರದರ್ಶನ ರಾಜ್ಯೋತ್ಸವದ ಸಂದರ್ಭದಲ್ಲಿ ನಡೆಯಲಿದೆ.ವಿವರಗಳು ಬ್ಲಾಗ್‌ನಲ್ಲಿವೆ.
ವ್ಯಂಗ್ಯಚಿತ್ರಕಾರ "ಹರಿಣಿ"ಯವರ ಅಂತರ್ಜಾಲ ತಾಣ http://harinigallery.blogspot.comನಲ್ಲಿದೆ. ತರಂಗದಲ್ಲಿ "ಹರಿಣಿ"ಯೆಂಬ ಹೆಸರಿನಲ್ಲಿ ವ್ಯಂಗ್ಯಚಿತ್ರ ರಚಿಸಿ,ಪ್ರಸಿದ್ಧಿಗೆ ಬಂದ ಕಲಾವಿದ ಹರಿಶ್ಚಂದ್ರ ಶೆಟ್ಟಿಯವರು ಮಹಿಳೆಯೆಂದೇ ಜನರು ಭಾವಿಸಿದ್ದರು.ವ್ಯಂಗ್ಯಭಾವಚಿತ್ರ ರಚನೆಯಲ್ಲೂ ಅವರದು ಎತ್ತಿದ ಕೈ.ಅವರ ಇತ್ತೀಚಿನ ವ್ಯಂಗ್ಯಚಿತ್ರಗಳು,ವ್ಯಂಗ್ಯಭಾವಚಿತ್ರಗಳು ಮತ್ತು ಇ-ಪೈಂಟಿಂಗಗಳನ್ನು ಬ್ಲಾಗಿನಲ್ಲಿ ನೋಡಬಹುದು.

-------------------------------------------------------------------------------------------

ಐಟಿ ರೋಗ ಓಡಿಸಲು ಟ್ಯಾಬ್ಲೆಟ್‌ಗಳು!
ಈ ವರ್ಷದ ಬಳಕೆದಾರರ ಇಲೆಕ್ಟ್ರಾನಿಕ್ಸ್ ಪ್ರದರ್ಶನ (ಸಿಇಎಸ್)ನಲ್ಲಿ ಕಂಪೆನಿಗಳು ತಮ್ಮ ಹೊಸ ಉತ್ಪನ್ನಗಳನ್ನು ಪ್ರದರ್ಶಿಸಿದುವು.ಡೆಲ್ ಮತ್ತು ಮೈಕ್ರೋಸಾಫ್ಟ್ ಕಂಪೆನಿಗಳು ತಮ್ಮ ಟ್ಯಾಬ್ಲೆಟ್ ಸಾಧನವನ್ನು ಪ್ರದರ್ಶಿಸಿದುವು.ಈ ಸಾದನವು ಅತ್ತ ನೆಟ್‌ಬುಕ್ ಮತ್ತು ಇತ್ತ ಸ್ಮಾರ್ಟ್ ಫೋನ್ ನಡುವಣ ಸಾಧನವಾಗಿದೆ.ಇದು ಕೈಯಲ್ಲಿ ಹಿಡಿಯಲು ಸುಲಭವಾದ ಸುಮಾರು ಐದಿಂಚು ಅಳತೆಯದ್ದಾಗಿವೆ.ಮೈಕ್ರೋಸಾಫ್ಟ್ ಕಂಪೆನಿಯ ಟ್ಯಾಬ್ಲೆಟ್,ಹ್ಯುಲೆಟ್ ಪ್ಯಕಾರ್ಡ್ ಕಂಪೆನಿಯು ತಯಾರಿಸಿದ ಉತ್ಪನ್ನವಾಗಿದ್ದು,ವಿಂಡೋಸ್ 7 ಕಾರ್ಯನಿರ್ವಹಣಾ ವ್ಯವಸ್ಥೆ ತಂತ್ರಾಂಶವನ್ನು ಬಳಸಿದೆ.ಅತ್ತ ಆಪಲ್ ಕಂಪೆನಿಯೂ ಐಸ್ಲೇಟ್ ಎನ್ನುವ ಟ್ಯಾಬ್ಲೆಟ್ ಅನ್ನು ಬಿಡುಗಡೆ ಮಾಡಬಹುದೆಂಬ ನಿರೀಕ್ಷೆ ಹುಸಿಯಾಯಿತು.ಐಫೋನ್ ನಂತರ ಐಸ್ಲೇಟ್ ಹೆಚ್ಚು ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದು,ಐಫೋನ್ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಗೆದ್ದಂತೆ,ಟ್ಯಾಬ್ಲೆಟ್ ಸಾಧನದ ಮಾರುಕಟ್ಟೆಯಲ್ಲಿ ಐಸ್ಲೇಟ್ ಯಶಸ್ಸು ಗಳಿಸಬಹುದೆಂದು ತಜ್ಞರ ಅಭಿಮತ.ಹಾಗಾಗಿ ಡೆಲ್ ಮತ್ತು ಮೈಕ್ರೋಸಾಫ್ಟ್ ಕಂಪೆನಿಗಳೂ ತಮ್ಮ ಸಾಧನಗಳಿಗೂ ಸ್ಲೇಟ್ ಎಂದು ಹೆಸರಿಸಿದ್ದುವು.ಆದರೆ ಅವುಗಳು ಜನರ ಮನಸ್ಸು ಸೂರೆಯನ್ನೇನೂ ಮಾಡಲಿಲ್ಲ.ಐಸ್ಲೇಟ್ ಬಿಡುಗಡೆಗೆ ಸವಾಲೆಸೆಯಲು ಒಂದು ಉತ್ಪನ್ನವನ್ನು ಗಡಿಬಿಡಿಯಲ್ಲಿ ಪ್ರದರ್ಶಿಸಿದ್ದು ಸ್ಪಷ್ಟವಾಗಿತ್ತು.
-------------------------------------------------------------------------------------
ನಿಸ್ತಂತು ಹಾಟ್‌ಸ್ಪಾಟ್ ಸೃಷ್ಟಿಸಬಲ್ಲ ಸ್ಮಾರ್ಟ್‌ಫೋನ್ ಬಂದಿದೆ
ಪಾಮ್ ಕಂಪೆನಿಯ ಸ್ಮಾರ್ಟ್‌ಫೋನ್‌ಗಳು ಬಹಳಷ್ಟು ಜನಪ್ರಿಯ.ಸಿಇಎಸ್ ಪ್ರದರ್ಶನದಲ್ಲಿ ಇದು ತನ್ನೆರಡು ಸ್ಮಾರ್ಟ್‌ಪೋನ್‌ಗಳ ಹೊಸ ನಮೂನೆಗಳನ್ನು ಪ್ರದರ್ಶಿಸಿತು.ಪಾಮ್ ಪ್ರಿ ಮತ್ತು ಪಿಕ್ಸಿ ಎನ್ನುವ ಸ್ಮಾರ್ಟ್‌ಪೋನ್‌ಗಳೀಗ ವಿಡಿಯೋ ರೆಕಾರ್ಡಿಂಗ್ ಮತ್ತು ನಿಸ್ತಂತು ಹಾಟ್‌ಸ್ಪಾಟುಗಳನ್ನು ಸೃಷ್ಟಿಸುವ ಸಾಮರ್ಥ್ಯದೊಂದಿಗೆ ಲಭ್ಯವಾಗಿವೆ.ಈ ರೀತಿ ಹಾಟ್‌ಸ್ಪಾಟ್ ಸೃಷ್ಟಿಸಿದರೆ,ಸೆಲ್‌ಫೋನ್ ಮೂಲಕ,ನಿಸ್ತಂತು ಸೌಕರ್ಯ ಇಲ್ಲದಲ್ಲೂ ಆ ಸವಲತ್ತನ್ನು ಲಭ್ಯವಾಗಿಸಬಹುದು.ಸ್ಮಾರ್ಟ್ ಫೋನ್ ಮೂಲಕ ಇತರ ಐದು ಸಾಧನಗಳಲ್ಲಿ ಅಂತರ್ಜಾಲ ಜಾಲಾಡಬಹುದು.ಆ ಸಾಧನಗಳಲ್ಲಿ ನಿಸ್ತಂತು ಕಾರ್ಡ್‌ಗಳಿರಬೇಕು.ಈಗಿನ ಲ್ಯಾಪ್‌ಟಾಪ್,ನೆಟ್‌ಬುಕ್‌ಗಳಲ್ಲಿ ಆ ಸವಲತ್ತು ಬಂದೇ ಬರುತ್ತದೆ.ಆದರೆ ಪಾಮ್ ಸಾಧನವು ವೆರಿಜೋನ್ ಮೊಬೈಲ್ ಜಾಲದಲ್ಲಿ ಮಾತ್ರಾ ಕೆಲಸ ಮಾಡಬಲ್ಲುದು.ಆ ಸೇವೆ ಅಮೆರಿಕಾದಲ್ಲಿ ಲಭ್ಯವಿದೆ.ಸ್ಮಾರ್ಟ್‌ಪೋನ್‌ನಲ್ಲಿ ಬಳಸಲು ಸುಮಾರು ಒಂದು ಸಾವಿರ ತಂತ್ರಾಂಶಗಳು ಲಭ್ಯವಿವೆ.ಈ ತಂತ್ರಾಂಶಗಳನ್ನು ಅನುಸ್ಥಾಪಿಸಿಕೊಂಡರೆ ಹೆಚ್ಚಿನ ಸೌಕರ್ಯಗಳು ಲಭ್ಯವಾಗುತ್ತವೆ.
-----------------------------------------------------------
ಕಂಪ್ಯೂಟರ್ ಕಂಪೆನಿ ಜತೆ ಸೇರಿ ಕಾರು ತಯಾರಿ
ಫೋರ್ಡ್ ಕಾರು ಅದೆಷ್ಟು ಕಂಪ್ಯೂಟರ್ ತಂತ್ರಜ್ಞಾನವನ್ನು ಬಳಸುತ್ತದೆ ಎಂದರೆ,ಸಿಂಕ್ ಎನ್ನುವ ಫೋರ್ಡ್ ಕಾರನ್ನು ಮೈಕ್ರೋಸಾಪ್ಟ್ ಜತೆ ಸಹಭಾಗಿತ್ವದಲ್ಲಿ ತಯಾರಿಸುತ್ತದೆ. ಈ ಸಹಕಾರ ಎರಡು ವರ್ಷಗಳ ಹಳೆಯದ್ದು.ಈ ವರ್ಷದ ಇಲೆಕ್ಟ್ರಾನಿಕ್ಸ್ ವಸ್ತುಗಳ ಪ್ರದರ್ಶನದಲ್ಲಿ ಕಾರು ತಯಾರಕರೂ ಭಾಗವಹಿಸಿದ್ದರು.ಫೋರ್ಡ್ ಕಾರಿನಲ್ಲೂ,ಈಗ ಅಂತರ್ಜಾಲ ಜಾಲಾಡುವ ಸೌಕರ್ಯ ಒದಗಿಸಲಾಗಿದೆ.ಅಮೆರಿಕಾದಲ್ಲಿ ಜನರು ಮೊಬೈಲ್ ಮೂಲಕ ಅಂತರ್ಜಾಲ ಸೌಕರ್ಯ ಪಡೆಯುವುದರಿಂದ,ಅದನ್ನು ಬಳಸಿ,ಕಾರಿನ ಡ್ಯಾಶ್‌ಬೋರ್ಡನ್ನು ತೆರೆಯಂತೆ ಬಳಸಲು ಅವಕಾಶ ನೀಡಲಾಗಿದೆ.ಕಾರು ಚಲನೆಯಲ್ಲಿರುವಾಗ,ಈ ಸೌಕರ್ಯ ಸಿಗದ ಹಾಗೆ ಮಾಡಿ,ಕಾರನ್ನು ಸುರಕ್ಷಿತಗೊಳಿಸಲಾಗಿದೆ.ಆದರೂ,ಕಾರು ಚಾಲನೆಯಲ್ಲಿರುವಾಗ,ಟ್ರಾಫಿಕ್ ಬಗೆಗಿನ ಮಾಹಿತಿ,ಹವಾಮಾನ ಬಗೆಗಿನ ತಾಜ ಮಾಹಿತಿ,ಬಿಸಿಬಿಸಿ ಸುದ್ದಿಗಳು ಡ್ಯಾಶ್‌ಬೋರ್ಡಿನಲ್ಲಿ ಕಾಣಿಸಿಕೊಂಡು,ಚಾಲಕರ ಗಮನ ಬೇರೆಡೆ ಸೆಳೆಯುತ್ತವೆ ಎಂದು ದೂರುವವರಿದ್ದಾರೆ.
---------------------------------------------------------------------------------
ಡೊಕಾಮಿಕ್ಸ್
ಟಾಟಾ ಡೊಕೊಮೋ ಕಂಪೆನಿಯ ಜಿಎಸೆಂ ಸೆಲ್‌ಪೋನ್ ಸೇವೆ ಪಡೆದವರಿಗೆ,ತಮ್ಮ ಮೊಬೈಲ್ ಪೋನ್‌ಗಳಲ್ಲಿ ಕಾಮಿಕ್ಸ್ ನೋಡಬಹುದು.ಒಂದೊಂದು ಕಾಮಿಕ್ಸ್ ನೋಡಿದಾಗ,ಹದಿನೈದು ರುಪಾಯಿ ತೆರಬೇಕಾಗುತ್ತದೆ.ಸೆಲ್‌ಪೋನ್‌ನ ಮೂಲಕ ಅಂತರ್ಜಾಲ ತಾಣವೊಂದರಿಂದ ಕಾಮಿಕ್ಸಿನ ಚಿತ್ರಗಳನ್ನು ಇಳಿಸಿಕೊಳ್ಳಬೇಕಾಗುತ್ತದೆ.ವಿಶೇಷ ಪರಿಣಾಮಗಳು ಸಿಗಲು ತಂತ್ರಾಂಶವೊಂದನ್ನು ಹ್ಯಾಂಡ್‌ಸೆಟ್‌ನಲ್ಲಿ ಅನುಸ್ಥಾಪಿಸಿಕೊಳ್ಳಬೇಕಾಗುತ್ತದೆ.ಮೊದಲಾಗಿ ಜಪಾನ್‌ನ ಪ್ರಸಿದ್ಧ ಕಾಮಿಕ್ಸ್ ಸರಣಿಗಳಾದ ಮಾರ್ವೆಲ್ ಮತ್ತು ಮಂಗಾ ಕಾಮಿಕ್ಸ್‌ಗಳು ಲಭ್ಯವಿವೆ.
-------------------------------------------------------------------------------------

ಇ-ರೀಡರ್‌ಗಳು
ಅಂತರ್ಜಾಲದಿಂದ ಇಳಿಸಿಕೊಂಡ ಪತ್ರಿಕೆಗಳ ಅಥವಾ ಮ್ಯಾಗಜೀನ್‌ಗಳ ಪುಟಗಳನ್ನು ಕೈಯಲ್ಲಿ ಹಿಡಿದು ಓದಲು ಅನುಕೂಲ ಒದಗಿಸುವ ಇ-ರೀಡರುಗಳ ಹಲವು ಅವತರಣಿಕೆಗಳು ಸಿಇಎಸ್ ಪ್ರದರ್ಶನದಲ್ಲಿದ್ದುವು.ಇವೆಲ್ಲವೂ ಬಣ್ಣದ ಚಿತ್ರ ಪ್ರದರ್ಶಿಸಬಲ್ಲ ತೆರೆಗಳನ್ನು ಹೊಂದಿ,ಅತ್ಯಂತ ಸ್ಪಷ್ಟವಾಗಿ ಪುಟವನ್ನು ಪ್ರದರ್ಶಿಸುವ ಸಾಮರ್ಥ್ಯ ಹೊಂದಿವೆ.ಪ್ಲಾಸ್ಟಿಕ್ ಲಾಜಿಕ್ ಕಂಪೆನಿಯ ಕ್ಯೂ,ಸ್ಕಿಫ್ ಮತ್ತು ಎಂಟೂರೇಜ್ ಕಂಪೆನಿಯ ಎಜ್ ಇ-ರೀಡರುಗಳ ಬಗ್ಗೆ ಪ್ರಮುಖವಾದುವು.ಇವುಗಳೆಲ್ಲಾ ನಲುವತ್ತು ಸಾವಿರದಿಂದ ಐವತ್ತು ಸಾವಿರದ ಬೆಲೆಗೆ ಲಭ್ಯವಾಗುವ ಅಂದಾಜು ಇದೆ.ಪತ್ರಿಕೆ ಮತ್ತು ನಿಯತಕಾಲಿಕಗಳ ಪುಟಗಳನ್ನು ಇಳಿಸಿಕೊಂಡು,ಪತ್ರಿಕೆ ಮತ್ತು ಮ್ಯಾಗಜೀನ್‌ಗಳನ್ನು ಕೈಯಲ್ಲಿ ಹಿಡಿದು ಓದುವ ಅನುಭವ ಕೊಡುವುದಕ್ಕೆ ಇ-ರೀಡರುಗಳು ಬಳಕೆಯಾಗುತ್ತವೆ.ಪತ್ರಿಕೆಗಳನ್ನು ಮುದ್ರಿಸುವ ಅಗತ್ಯವನ್ನು ತಪ್ಪಿಸಿ,ಬೇಕಾದಲ್ಲಿಗೆ ಒಯ್ಯುವ ಸೌಕರ್ಯವನ್ನಿವು ಒದಗಿಸುತ್ತವೆ.ಕಡಿಮೆ ಬ್ಯಾಟರಿ ಶಕ್ತಿ ವ್ಯಯಿಸುವಂತೆ ಇವನ್ನು ತಯಾರಿಸಲಾಗಿದೆ.ಜತೆಗೆ ಬಿದ್ದರೂ ಒಡೆಯದ ಹಾಗೆ ಇರಲು ಪ್ಲಾಸ್ಟಿಕ್,ಸ್ಟೀಲ್ ಹಾಳೆಗಳನ್ನು ಬಳಸಿ,ಇವನ್ನು ತಯಾರಿಸಲಾಗಿದೆ.ನಿಸ್ತಂತು ಜಾಲ,ಅಥವಾ ತಂತಿಯ ಮೂಲಕ ಇವನ್ನು ಅಂತರ್ಜಾಲ ಸಂಪರ್ಕಕ್ಕೆ ತರಬಹುದು.
udayavani
*ಅಶೋಕ್‌ಕುಮಾರ್ ಎ

Monday, January 04, 2010

2010:ಕೆಲಸದಲ್ಲಿ ತಲ್ಲೀನತೆಯೇ ಕಷ್ಟವಾಗಲಿದೆಯೇ?

2010:ಕೆಲಸದಲ್ಲಿ ತಲ್ಲೀನತೆಯೇ ಕಷ್ಟವಾಗಲಿದೆಯೇ?
ಸದಾ ಅಂತರ್ಜಾಲ ಸಂಪರ್ಕದಲ್ಲಿರುವುದರ ಜತೆಗೆ,ಮಿಂಚಂಚೆ,ದಿಡೀರ್ ಸಂದೇಶಗಳು,ಫೇಸ್‌ಬುಕ್,ಟ್ವಿಟರ್,ಅರ್ಕುಟ್ ಅಂತಹ ಸೇವೆಗಳ ಜನಪ್ರಿಯವಾಗಿರುವುದು,ಇವೆಲ್ಲಾ ಮಾಹಿತಿಯನ್ನು ನಮಗೆ ಸುಲಭವಾಗಿ ಒದಗಿಸುತ್ತವೆ.ಒಟ್ಟೊಟ್ಟಿಗೆ ಓದುವುದು,ಹಾಡು ಕೇಳುವುದು,ಸಂದೇಶಗಳಿಗೆ ಪ್ರತಿಕ್ರಿಯಿಸುವುದು ಇತ್ಯಾದಿಗಳನ್ನು ಮಾಡುತ್ತಾ,ಹಲವು ಕಾಯಕಗಳನ್ನು ಒಟ್ಟೊಟ್ಟಿಗೆ ನಿಭಾಯಿಸಲು ತಾವು ನಿಪುಣರು ಎನ್ನುವ ಭ್ರಮೆಯಲ್ಲಿ ಇಂದಿನ ಯುವಜನತೆ ಇರುವುದೇನೋ ನಿಜ.ಆದರೆ ಮನಸ್ಸು ಒಂದೇ ಕೆಲಸದಲ್ಲಿ ತೊಡಗಿದ್ದಾಗ,ನಮಗೆ ಸಿಗುವ ದಕ್ಷತೆ,ಹಲವು ಕೆಲಸಗಳಲ್ಲಿ ತೊಡಗಿ,ಮನಸ್ಸನ್ನು ಒಂದು ಕೆಲಸದಿಂದ ಇನ್ನೊಂದಕ್ಕೆ ತೊಡಗಿಸುವಾಗ ಸಿಗದು ಎನ್ನುವುದು ಸಂಶೋಧನೆಗಳು ತಿಳಿಸುವ ಸತ್ಯ.ಇದು ಮೊದಲಿನಿಂದಲೂ ತಿಳಿದ ವಿಚಾರವೇ ಹೌದು.ಆದರೆ ಹೊಸ ವರ್ಷದಲ್ಲಿ ಅಂತರ್ಜಾಲವು ಇನ್ನಷ್ಟು ಜನರಿಗೆ ಲಭ್ಯವಾದಾಗ,ಜತೆಗೆ ಅಂತರ್ಜಾಲದ ವೇಗವೂ ಹೆಚ್ಚಾದಾಗ,ಕೆಲಸದಲ್ಲಿ ಮನಸ್ಸು ತೊಡಗಿಸಿಕೊಳ್ಳುವುದಕ್ಕೆ ಇನ್ನಷ್ಟು ಹೆಚ್ಚು ಸಮಸ್ಯೆಯಾಗಲಿದೆ ಎನ್ನುವುದು ತಜ್ಞರ ಅಭಿಪ್ರಾಯ.ಆದ್ದರಿಂದ ಇಂತಹ ಸೇವೆಗಳ ಬಳಕೆಯಲ್ಲಿ ವಿವೇಚನೆಯಿರಬೇಕಾದ್ದು ಮುಖ್ಯವಾಗುತ್ತದೆ.
-------------------------------------------------------------
ಜಿಎಸ್‌ಎಂ ಫೋನುಗಳ ಸಂಭಾಷಣೆ ಕದ್ದಾಲಿಸುವುದೀಗ ಸುಲಭ
ಜಿಎಸೆಂ ಸೆಲ್ ಫೋನ್‌ಗಳಲ್ಲಿ ಬಳಸಲಾಗುತ್ತಿರುವ ಗೂಢಲಿಪೀಕರಣ ವಿಧಾನವನ್ನು ತಾನು ಕಂಡುಕೊಂಡಿರುವುದಾಗಿ ಪ್ರಕಟಿಸಿರುವ ಜರ್ಮನ್ ತಂತ್ರಜ್ಞ,ನೋಲ್, ಜಿಎಸೆಂ ಪೋನ್ ಕರೆಗಳನ್ನು ಯಾರೂ ಕದ್ದಾಲಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾನೆ.ಆದರೆ,ಈ ವಿಧಾನವನ್ನು ಪ್ರಕಟಿಸುವುದು,ಕಾನೂನು ಬಾಹಿರವಾಗುತ್ತದೆ ಎಂದು ಜಿಎಸೆಂ ಸೇವೆ ಒದಗಿಸುವ ಕಂಪೆನಿಗಳ ಒಕ್ಕೂಟ ಪ್ರತಿಕ್ರಿಯಿಸಿದೆ.ವಕೀಲರ ಅಭಿಪ್ರಾಯವನ್ನು ತಾನೂ ಕೇಳಿದ್ದು,ತನ್ನ ಸಂಶೋಧನೆಯನ್ನು ಪ್ರಕಟಿಸಲು ತನಗೆ ಹಕ್ಕಿದೆ ಎಂದು ಸಂಶೋಧಕ ನೋಲ್ ವಾದ.ನಾಲ್ಕು ಬಿಲಿಯನ್ ಜಿಎಸೆಂ ಸೇವೆ ಬಳಸುವ ಮೊಬೈಲ್ ಬಳಕೆದಾರರ ಸಂಭಾಷಣೆಗಳ ಗೌಪ್ಯತೆಯೀಗ ಪ್ರಶ್ನಾರ್ಹವಾದರೂ,ಹೊಸ ತಂತ್ರಜ್ಞಾನವನ್ನು ಅಳವಡಿಸಲು ಅಗತ್ಯವಿರುವ ಹೊಸ ಯಂತ್ರಾಂಶಗಳು ಬಹಳ ಬಂಡವಾಳ ಅಪೇಕ್ಷಿಸುವುದರಿಂದ ತಂತ್ರಜ್ಞಾನದ ಬದಲಾವಣೆ ಸುಲಭವಲ್ಲ.
--------------------------------------------------------------
ಮುಂದಿನವಾರ ಗೂಗಲ್ ಫೋನ್ ಮಾರುಕಟ್ಟೆಗೆ?
ಮುಂದಿನವಾರ ಗೂಗಲ್ ತನ್ನದೇ ಹೆಸರಿನಲ್ಲಿ ಮೊಬೈಲ್ ಹ್ಯಾಂಡ್‌ಸೆಟ್ ಮಾರುಕಟ್ಟೆಯಲ್ಲಿ ಲಭ್ಯವಾಗಿಸಬಹುದು ಎಂಬ ನಿರೀಕ್ಷೆಯಿದೆ.ನಕ್ಸಸ್1 ಪೋನನ್ನು ಗೂಗಲ್ ತನ್ನ ಅಂತರ್ಜಾಲತಾಣದ ಮೂಲಕವೇ ಮಾರಲಿದೆಯಂತೆ.ಜಿಎಸೆಂ ಸೇವೆಯನ್ನು ಈ ಹ್ಯಾಂಡ್‌ಸೆಟ್‌ನಲ್ಲಿ ಪಡೆಯಬಹುದು.ಸೆಟ್‌ನ ಬೆಲೆ ಐನೂರಮೂವತ್ತು ಡಾಲರುಗಳು.ಅಮೆರಿಕಾದಲ್ಲಾದರೆ ಟಿಮೊಬೈಲ್ ಸೆಲ್‌ಪೋನ್ ಸೇವೆ ಪಡೆದರೆ,ನೂರಎಂಭತ್ತು ಡಾಲರುಗಳಿಗೆ ಹ್ಯಾಂಡ್‌ಸೆಟ್ ಸಿಕ್ಕಿದರೂ,ಮಾಸಿಕ ಕನಿಷ್ಠ ದರ ಎಂಭತ್ತು ಡಾಲರು ನೀಡಬೇಕಾಗುತ್ತದೆ.ಇದುವರೆಗೆ ಆಂಡ್ರಾಯಿಡ್ ಆಧಾರಿತ ಗೂಗಲ್ ಫೋನ್‌ಗಳು ಇತರ ಯಂತ್ರಾಂಶ ತಯಾರಕರ ಮೂಲಕ ಲಭ್ಯವಾಗುತ್ತಿದ್ದುವು.ಎಚ್‌ಟಿಸಿ,ಮೊಟೊರೊಲಾದ ಸೆಟ್‌ಗಳು ಈ ರೀತಿ ಲಭ್ಯವಿವೆ.
-----------------------------------------------------------
ಜನರನ್ನು ಸೆಳೆಯುತ್ತಿರುವ ಮೊಬೈಲ್ ಬ್ಯಾಂಕಿಂಗ್
ಕಾರ್ಡುಗಳನ್ನು ಬಳಸಿ ಬ್ಯಾಂಕ್ ಸೇವೆ ಪಡೆಯುವುದು ಸಾಧ್ಯ.ಆದರೆ ಕಾರ್ಡ್ ಅನ್ನು ಕಳೆದುಕೊಂಡರೆ,ಅದು ದುರುಪಯೋಗವಾಗುವ ಸಾಧ್ಯತೆ ಇದೆ.ಕಾರ್ಡ್ ರಹಿತವಾಗಿ ಬ್ಯಾಂಕ್ ಸೇವೆ ಒದಗಿಸುವ ಮೊಬೈಲ್ ಬ್ಯಾಂಕ್ ಸೇವೆ ಈಗ ಭಾರತದಲ್ಲೂ ಜನಪ್ರಿಯವಾಗುತ್ತಿದೆ.ಬ್ಯಾಂಕ್ ಖಾತೆಯ ವಿವರಗಳನ್ನು ಪಡೆಯುವುದರಿಂದ ಹಿಡಿದು,ಹಣವನ್ನು ಒಂದು ಖಾತೆಯಿಂದ ಇನ್ನೊಂದಕ್ಕೆ ವರ್ಗಾಯಿಸುವುದು,ಬಿಲ್‌ಗಳ ಪಾವತಿ ಮುಂತಾದುವುಗಳೀಗ ಮೊಬೈಲ್ ಬ್ಯಾಂಕಿಂಗ್ ಪರಿಧಿಯಲ್ಲೇ ಬರುತ್ತದೆ.ಮೊದಲಿಗೆ ಹಣ ವರ್ಗಾವಣೆಗೆ ಇದ್ದ ಐದು ಸಾವಿರ ರೂಪಾಯಿ ಮಿತಿಯನ್ನೀಗ ಐವತ್ತು ಸಾವಿರದಷ್ಟಕ್ಕೆ ಏರಿಸುವ ಆರ್‌ಬಿ‌ಐ(ರಿಸರ್ವ್ ಬ್ಯಾಂಕ್) ನಿರ್ಧಾರ,ಮೂವತ್ತೆರಡು ಬ್ಯಾಂಕುಗಳಿಗೆ ಮೊಬೈಲ್ ಬ್ಯಾಂಕಿಂಗ್ ಸೇವೆ ನೀಡಲು ಅನುಮತಿ ಮುಂತಾದುವುಗಳು, ಈ ಸೇವೆಯ ಜನಪ್ರಿಯತೆಗೆ ಕಾರಣವಾಗಿವೆ.ಐಸಿಐಸಿಐ ಬ್ಯಾಂಕ್ ಸದ್ಯ ಎಂಟು ದಶಲಕ್ಷ ಗ್ರಾಹಕರಿಗೆ ಈ ರೀತಿಯ ಸೇವೆಯನ್ನು ನೀಡುತ್ತಿದೆ.ಸಾರ್ವಜನಿಕ ರಂಗದ ಬ್ಯಾಂಕುಗಳೂ ಮೊಬೈಲ್ ಬ್ಯಾಂಕಿಂಗ್ ಸೇವೆಯನ್ನು ನೀಡಲಾರಂಭಿಸಿದ್ದು,ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾವು ಸದ್ಯ ಐವತ್ತೊಂದು ಸಾವಿರ ಗ್ರಾಹಕರು ಈ ತೆರನ ಸೇವೆಗೆ ನೋಂದಾಯಿಸಿಕೊಂಡಿದ್ದಾರೆ.ಕಳೆದ ವರ್ಷ ಈ ಸಂಖ್ಯೆ ಬರೇ ಆರು ಸಾವಿರವಾಗಿತ್ತು.ಮಾಲ್‌ಗಳಲ್ಲಿ ಮೊಬೈಲ್ ಮೂಲಕ ಹಣವನ್ನೂ ಪಡೆಯಲು ಅನುಮತಿ ಸಿಕ್ಕಿದರೆ,ಖಾತೆಯಲ್ಲಿರುವ ಹಣವನ್ನು ತೆಗೆಯಲು ಏಟಿಎಂ‌ಗೆ ಹೋಗುವ ಅಗತ್ಯವಿಲ್ಲದಾಗಿಸುತ್ತದೆ.ನಂತರ ಮೊಬೈಲ್ ಬ್ಯಾಂಕಿಂಗ್ ಮತ್ತಷ್ಟು ಜನಪ್ರಿಯವಾಗುವುದು ಖಂಡಿತ.
-------------------------------------------------------------------
ಯಂತ್ರಾಂಶ ಖರ್ಚು ಕಡಿಮೆ ಮಾಡುವ ಡಾಸ್
ತಂತ್ರಾಂಶವನ್ನು ಖರೀದಿಸುವ ಬದಲಿಗೆ,ಅದನ್ನು ಅಂತರ್ಜಾಲ ಮೂಲಕ ಬಳಸಿ,ಬಳಕೆಯ ಅವಧಿಯ ಆಧಾರದಲ್ಲಿ ಬಾಡಿಗೆ ತೆರುವ ಸಾಸ್(SAAS-Softawre as a service)ಮಾದರಿಯಲ್ಲೇ ಡೆಸ್ಕ್‌ಟಾಪನ್ನೂ ಬಾಡಿಗೆ ನೀಡುವ ಸೇವೆಯDAAS-Desktop as a service)ಯ ಮಾದರಿಯನ್ನು ಜೈಲಾಗ್ ಎಂಬ ಕಂಪೆನಿಯು ತನ್ನದಾಗಿಸಿಕೊಂಡಿದೆ.ಐಬಿಎಂ ಕಂಪೆನಿ ಮತ್ತು ಕ್ಯಾನೋನಿಕಲ್ ಉಬುಂಟು ಜತೆಗೆ ಜೈಲಾಗ್ ಕಂಪೆನಿಯು ಒಡಂಬಡಿಕೆ ಮಾಡಿಕೊಂಡ ಕಾರಣ,ಐಬಿಎಂ ಯಂತ್ರಾಂಶ ಮತ್ತು ಉಬುಂಟುವಿನ ಮುಕ್ತ ತಂತ್ರಾಂಶಗಳನ್ನು ಬಳಸಿಕೊಂಡು ಜೈಲಾಗ್ ಕಂಪೆನಿಯು ಬಳಕೆದಾರರಿಗೆ ಅಗತ್ಯ ಸೇವೆಗಳನ್ನು ನೀಡುತ್ತದೆ. ಈ ಸೇವೆಗೆ ಪವರ್‌ಕ್ಯೂಬ್ ಎನ್ನುವ ಹೆಸರು ನೀಡಲಾಗಿದೆ.ಸದ್ಯ ಅಮೆರಿಕಾದಲ್ಲಿ ಮಾತ್ರಾ ಈ ಸೇವೆ ಲಭ್ಯವಿದ್ದರೂ ಮುಂದಿನ ವರ್ಷಾರ್ಧದಲ್ಲಿ ಭಾರತ ಮತ್ತು ಆಫ್ರಿಕಾದಲ್ಲೂ ಈ ಸೇವೆಯನ್ನು ನೀಡುವುದು ಕಂಪೆನಿಯ ಉದ್ದೇಶವಾಗಿದೆ.ಯಂತ್ರಾಂಶವನ್ನು ಖರೀದಿಸುವ ಬದಲು ಈ ರೀತಿಯ ಸೇವೆ ಪಡೆದರೆ,ಖರ್ಚಿನಲ್ಲಿ ಶೇಕಡಾ ಅರುವತ್ತರಷ್ಟನ್ನು ಉಳಿಸಬಹುದು ಎಂದು ಅಂದಾಜಿಸಲಾಗಿದೆ.
-----------------------------------------------------------------
ಸಂಕ್ರಾತಿಯ ವೇಳೆಗೆ ಘಮಘಮಿಸಲಿರುವ ಕೆಂಡಸಂಪಿಗೆ
www.kendasampige.com ಕನ್ನಡ ಅಂತರ್ಜಾಲ ತಾಣ ಮೂರು ತಿಂಗಳಿನಿಂದು ಸ್ಥಗಿತಗೊಂಡಿತ್ತು.ಅದನ್ನು ಸಂಕ್ರಾತಿಯ ಹೊತ್ತಿಗೆ ಪುನರಾರಂಭಿಸುವ ಯೋಜನೆಯನ್ನೀಗ ಬಹಿರಂಗ ಪಡಿಸಲಾಗಿದೆ.ಲೆಮನ್ ಟ್ರೀ ಮೀಡಿಯಾದ ಈ ತಾಣ, ಹಲವು ಖ್ಯಾತನಾಮ ಸಾಹಿತಿಗಳ ಅಂಕಣಗಳನ್ನು ನೀಡಿ ಅಂತರ್ಜಾಲದಲ್ಲಿ ಬಹಳಷ್ಟು ಹೆಸರು ಮಾಡಿತ್ತು.ಅಂತರ್ಜಾಲ ತಾಣಗಳ ಸೇವೆ ಬಳಕೆದಾರರಿಗೆ ಉಚಿತವಾಗಿ ಸಿಗುತ್ತವೆ.ಜಾಹೀರಾತು ಬಲವಿಲ್ಲದೆ,ಆರ್ಥಿಕವಾಗಿ ಸಂಕಷ್ಟ ಎದುರಿಸಬೇಕಾಗಿ ಬರುವುದು ನಿರ್ವಹಣೆಗೆ ಸಮಸ್ಯೆ ಒಡ್ಡುತ್ತದೆ ಎನ್ನುವುದು ಬಹಿರಂಗ ಸತ್ಯ.
-------------------------------------------------------
ಪುಸ್ತಕ ಪ್ರೀತಿಯವರಿಗಿಲ್ಲಿದೆ ಆಹಾರ



ಪುಸ್ತಕ ಪ್ರೇಮಿಗಳು ಇಷ್ಟ ಪಡಬಹುದಾದ ಎರಡು ಬ್ಲಾಗುಗಳಿವು.ಮೊದಲನೆಯದು ಪುಸ್ತಕ ವಿಮರ್ಶೆಯ ನರೇಂದ್ರ ಪೈ ಅವರ ಬ್ಲಾಗ್.ತಾವು ಒದಿದ ಪುಸ್ತಕಗಳ ಬಗೆಗಿನ ವಿವರಣೆ ಜತೆಗೆ ವಿಮರ್ಶೆಯನ್ನು ನೀಡಿ,ಪುಸ್ತಕ ಓದಲು ಪ್ರೇರೇಪಿಸುವ ಬ್ಲಾಗ್ ವಿಳಾಸ http://narendrapai.blogspot.com/. ಮಂಗಳೂರಿನ ಅತ್ರಿ ಪುಸ್ತಕದದೊಡೆಯ ಅಶೋಕವರ್ಧನ್ ಅವರ ಆರೋಹಣ,ತಮ್ಮಿಂದ ವಿತರಣೆಯಾಗುವ ಪುಸ್ತಕಗಳ ಪಟ್ಟಿಯನ್ನು ಓದುಗರಿಗೆ ತಿಳಿಸುವ ಜತೆಗೆ,ವೈವಿಧ್ಯಮಯ ಬರಹಗಳನ್ನಿಲ್ಲಿ ಬರೆಯುತ್ತಾರೆ. ಇತ್ತೀಚೆಗೆ ದೀವಟಿಗೆಯ ಬೆಳಕಿನಲ್ಲಿ ನಡೆದ ಯಕ್ಷಗಾನ ಪ್ರದರ್ಶನದ ಬಗ್ಗೆಯೂ ವಿವರಗಳಿವೆ.ಅದರ ವಿಡಿಯೋ ರೆಕಾರ್ಡಿಂಗ್ ಮಾಡಿಕೊಳ್ಳುವಲ್ಲಿ ಎದುರಿಸಬೇಕಾದ ಸಮಸ್ಯೆಗಳ ಸ್ವಾರಸ್ಯಕರ ವಿವರಣೆ ಇಲ್ಲಿದೆ.ವಿಳಾಸ http://athree.wordpress.com

udayavani
*ಅಶೋಕ್‌ಕುಮಾರ್ ಎ



udayavani