Monday, March 29, 2010

ಹಾರುವ ನೌಕೆ

ಹಾರುವ ನೌಕೆ

ಜಗತ್ತಿನ ಅತ್ಯಂತ ವೇಗದ ನೌಕೆ ಹೈಡ್ರೋಪ್ಟಿಯರ್.ಇದು ಗಂಟೆಗೆ ನೂರು ಕಿಲೋಮೀಟರಿನಷ್ಟು ವೇಗವಾಗಿ ನೀರಿನ ಮೇಲೆ ಸಾಗಬಲ್ಲುದು.ನಿಜವಾಗಿ ಹೇಳಬೇಕಾದರೆ,ಇದು ನೀರಿನ ಮೇಲ್ಮೈಗಿಂತ ತುಸು ಎತ್ತರದಲ್ಲಿ "ಹಾರು"ತ್ತದೆ.ಫ್ರೆಂಚ್ ನಾವಿಕ ಅಲನ್ ಥೆಬಾಲ್ಟ್ ಇದರ ತಯಾರಿಯ ಹಿಂದಿರುವ ವ್ಯಕ್ತಿ.ಮುಂದೆ ಇಡೀ ಜಗತ್ತನ್ನು ಈ ನೌಕೆಯಲ್ಲಿ ನಲುವತ್ತು ದಿನಗಳೊಳಗೆ ಸುತ್ತುವುದು ಈತನ ಕನಸು.ನೀರಿನೊಳಗೆ ಅಡಗಿರುವ ರೆಕ್ಕೆಗಳಂತಹ ರಚನೆಗಳು ನೌಕೆಯನ್ನು ಎತ್ತಿ ಹಿಡಿದು "ಹಾರಲು" ನೆರವಾಗುತ್ತದೆ.ನೌಕೆಯು ಹದಿನೆಂಟು ಮೀಟರ್ ಅಗಲ ಮತ್ತು ಇಪ್ಪತ್ತನಾಲ್ಕು ಮೀಟರ್ ಉದ್ದವಿದೆ.ನೀರಿನ ಸ್ಪರ್ಶ ಕಡಿಮೆಯಾಗುವ ಮೂಲಕ ನೀರಿನ ಸೆಳೆತ ಕಡಿಮೆಯಾಗುವುದು ಈ ನೌಕೆಯ ವೇಗಕ್ಕೆ ಕಾರಣವಾಗುತ್ತದೆ.ಕಳೆದವರ್ಷ ನೌಕೆಯನ್ನು ನಿರ್ಮಿಸಲಾಗಿತ್ತಾದರೂ ಗಂಟೆಗೆ ನೂರಹನ್ನೊಂದು ಕಿಲೋಮೀಟರ್ ಸಾಗುವ ಯತ್ನದಲ್ಲಿ ನೌಕೆ ಮುಳುಗಿತ್ತು.ನಂತರ ಪ್ರತಿಗಂಟೆಗೆ ನೂರು ಕಿಲೋಮೀಟರ್ ವೇಗದಲ್ಲಿ ಐನೂರು ಮೀಟರ್ ದೂರ ಸಾಗಿ,ಅತಿ ವೇಗದ ನೌಕೆ ಎಂದೆನಿಸಿಕೊಂಡಿತ್ತು.ಮೂವತ್ತು ಮೀಟರ್ ಉದ್ದಗಲದ ಮ್ಯಾಕ್ಸಿ ಹೈಡ್ರ‍ಾಪ್ಟಿಯರನ್ನು ನಿರ್ಮಿಸಿ,ಹತ್ತು ನಾವಿಕರ ಜತೆ ನೌಕೆಯ ವಿಶ್ವಯಾನಕ್ಕೆ ತಯಾರಾಗುವತ್ತ ಅಲೆನ್‌ನ ದೃಷ್ಟಿ ನೆಟ್ಟಿದೆ.ಮೂರುವರ್ಷಗಳಲ್ಲಿ ನೌಕೆ ಸಿದ್ಧವಾಗಬಹುದೆಂದು ಆತನ ಅಂದಾಜು.ಹಾಗೆಯೇ ಮುಂದಿನ ವರ್ಷದಲ್ಲಿ, ಶಾಂತಸಾಗರವನ್ನು ಮೂರುದಿವಸಗಳೊಳಗೆ ದಾಟುವುದೀತನ ಇನ್ನೊಂದು ಯೋಜನೆ.
---------------------------------------------------------------------
ಚೀನಾಕ್ಕೆ ಗೂಗಲ್ ಗುಡ್‌ಬೈ
ಚೀನಾದಲ್ಲಿನ್ನು ಗೂಗಲ್ ಶೋಧ ಸೇವೆ ಲಭ್ಯವಿರದು.ಚೀನಾದಲ್ಲಿ ಜಾರಿಯಲ್ಲಿರುವ ಬಿಗಿ ಸೆನ್ಸಾರ್‌ಶಿಪ್ ನೀತಿಯನ್ನು ವಿರೋಧಿಸಿ,ಗೂಗಲ್ ಚೀನಾದಿಂದ ಹೊರ ನಡೆಯುವ ತನ್ನ ನಿರ್ಧಾರವನ್ನು ಪ್ರಕಟಿಸಿದರೂ,ಅದಕ್ಕೆ ಇತರ ಕಂಪೆನಿಗಳ ಗಣನೀಯ ಬೆಂಬಲವೇನೂ ಸಿಕ್ಕಿಲ್ಲ.ಚೀನಾದ ನಾಗರಿಕರು ಶೋಧ ಸೇವೆ ಪಡೆದಾಗ ಬರುವ ಫಲಿತಾಂಶವನ್ನು ಜಾಲಾಡಿಸಿ,ಅದರಲ್ಲಿ ಚೀನಾದ ಸೆನ್ಸಾರ್‌ಶಿಪ್ ನೀತಿಗೆ ವಿರೋಧವಾದ ಅಂತರ್ಜಾಲ ತಾಣಗಳಿದ್ದರೆ,ಅವನ್ನು ಬಿಟ್ಟು ಉಳಿದವನಷ್ಟೇ ತೋರಿಸಬೇಕಿತ್ತು.ಅದನ್ನು ಗೂಗಲ್ ವಿರೋಧಿಸಿ,ಚೀನಾದಿಂದ ಹೊರನಡೆಯುವ ನಿರ್ಧಾರಕ್ಕೆ ಬಂತು.ಹಾಗೆಂದು ಚೀನೀಯರು ಗೂಗಲ್‌ಗೆ ಬೆಂಬಲವೇನೂ ವ್ಯಕ್ತಪಡಿಸುತ್ತಿಲ್ಲ.ಸರಕಾರದ ನಿಯಮಗಳನ್ನು ಪಾಲಿಸದ ಗೂಗಲ್ ಸೇವೆ ಇನ್ನು ಲಭ್ಯವಿಲ್ಲವಾದರೂ,ತಮಗೇನೂ ಬಾಧೆಯಾಗದು ಎಂದು ಅಲ್ಲಿನ ಜನರಲ್ಲಿ ಶೇಕಡಾ ತೊಂಭತ್ತು ಭಾಗ ಜನರ ಅಭಿಪ್ರಾಯವಾಗಿದೆ.ಚೀನೀಯರ ಯೋಚನಾಲಹರಿಯ ಮೇಲೆ ನಿಯಂತ್ರಣ ಸಾಧಿಸಲು ಅಲ್ಲಿನ ಸರಕಾರ ಸಫಲವಾಗಿರುವುದು ಸ್ಪಷ್ಟ.
----------------------------------------------------------------------
ಬಿಸಿಸುದ್ದಿ ಏನು?
ಟ್ವಿಟರ್ ತಾಣದಲ್ಲಿ ಜನರು ತಾಜಾ ಸುದ್ದಿಗಳನ್ನು ಚರ್ಚಿಸುವುದು ಸಾಮಾನ್ಯ.ಹಾಗಾಗಿ ಬಿಸಿಸುದ್ದಿಯನ್ನು ತಿಳಿಯಬೇಕಿದ್ದರೆ,ಟ್ವಿಟರಿನಲ್ಲಿ ಚರ್ಚಿತವಾಗುತ್ತಿರುವ ವಿಷಯಗಳ್ಯಾವುವು ಎಂದು ಅರಿಯುವುದು ಜಾಣತನ.ಬಿಂಗ್ ಎನ್ನುವ ಮೈಕ್ರೋಸಾಫ್ಟ್ ಕಂಪೆನಿಯ ಶೋಧ ಸೇವೆಯಲ್ಲಿ  ಸದ್ಯ ಟ್ವಿಟರ್‌ನಲ್ಲಿ ಚಾಲ್ತಿಯಲ್ಲಿರುವ ಪದಪುಂಜಗಳನ್ನು ಪಟ್ಟಿ ಮಾಡುವ ಸೌಲಭ್ಯವಿದೆ.ಅದನ್ನು ಪಡೆಯಲು http://www.bing.com/twitter ಪುಟಕ್ಕೆ ಹೋದರೆ ಸರಿ.ಹಾಗೆಯೇ ಜನರು ಟೈಪಿಸುವ ಪದವನ್ನು ಹೊಂದಿದ ಪುಟಗಳನ್ನಷ್ಟೇ ನೀಡುವ ಬದಲಿಗೆ,ಆತನ ಉದ್ದೇಶವನ್ನು ಊಹಿಸಿ,ಆತನಿಗೆ ನೆರವಾಗಬಲ್ಲ ಪುಟಗಳನ್ನು ಪಟ್ಟಿ ಮಾಡಿ,ಸ್ಮಾರ್ಟ್ ಶೋಧ ಫಲಿತಾಂಶ ನೀಡಲೂ ಬಿಂಗ್ ಪ್ರಯತ್ನಿಸುತ್ತಿದೆ.ಉದಾಹರಣೆಗೆ "ಗಾಸಿಪ್ ಗರ್ಲ್" ಎನ್ನುವ ಪದಪುಂಜವನ್ನು ವ್ಯಕ್ತಿ ನೀಡಿದ್ದರೆ,ಆತ ಟಿವಿ ಧಾರಾವಾಹಿ ಅಥವಾ ಚಲನಚಿತ್ರದ ಬಗ್ಗೆ ಶೋಧಿಸುತ್ತಿದ್ದಾನೆ,ಆತನಿಗೆ ಅದರ ತಾರಾಗಣ,ವಿಡಿಯೋಕ್ಲಿಪ್ ಇತ್ಯಾದಿಗಳ ಬಗ್ಗೆ ಆಸಕ್ತಿ ಇರಬಹುದು ಎಂದು ಪರಿಗಣಿಸಿ,ಶೋಧ ಫಲಿತಾಂಶವನ್ನು ಪ್ರದರ್ಶಿಸಲಾಗುತ್ತದೆ.
-----------------------------------------------------------------------------
ಕಾರಿನ ಗಾಜಿಗೆ ಪ್ರತಿಫಲಿಸುವ ಪದರ ಲೇಪನ ಬೇಕೇ?
ನಮ್ಮಲ್ಲಿ ವಾಹನದ ಗಾಜುಗಳಿಗೆ ಪ್ರತಿಫಲಿಸುವ ಲೇಪನ ನೀಡುವುದಕ್ಕೆ ಪೋಲಿಸರ ವಿರೋಧವಿದೆ.ಕಾರಣ,ವಾಹನದೊಳಗಿರುವವರು ಗೋಚರಿಸದೆ,ಭದ್ರತಾ ಸಮಸ್ಯೆಗಳಾಗಬಹುದು ಎನ್ನುವುದು.ಆದರೆ ಕ್ಯಾಲಿಫೋರ್ನಿಯಾದಲ್ಲಿ ಅಂತಹ ಪದರವನ್ನು ಲೇಪಿಸುವುದನ್ನು ಕಡ್ಡಾಯ ಮಾಡುವ ಪ್ರಸ್ತಾವ ಇದೆ.ಇಂತಹ ಪ್ರತಿಫಲಿಸುವ ಪದರ,ಸೂರ್ಯನ ಕಿರಣಗಳನ್ನು ಪ್ರತಿಫಲಿಸುವ ಕಾರಣ,ವಾಹನ ಬಿಸಿಯಾಗುವುದು ಕಡಿಮೆಯಾಗುತ್ತದೆ.ವಾತಾನುಕೂಲಿ ವ್ಯವಸ್ಥೆಯ ಮೇಲಿನ ಒತ್ತಡ ಕಡಿಮೆಯಾಗಿ,ವಾಹನ ಬಳಸುವ ಇಂಧನದ ಪ್ರಮಾಣ ಕಡಿಮೆಯಾಗುತ್ತದೆ ಎನ್ನುವುದು ಲೆಕ್ಕಾಚಾರ.ಆದರೆ ಇಂತಹ ಲೇಪನ ಸೆಲ್‌ಪೋನ್ ಸಂಕೇತಗಳ ಸ್ವೀಕಾರಕ್ಕೂ ಅಡ್ಡಿಯಾಗಬಹುದು ಎನ್ನುವ ಕಾರಣ,ಸದ್ಯಕ್ಕೆ ಲೇಪನ ಕಡ್ಡಾಯ ಮಾಡುವುದನ್ನು ಮುಂದೂಡಲಾಗಿದೆ.
-----------------------------------------------------------------------------
ಸಂಶೋಧನೆಯಿಂದ ಧನಲಾಭ
ಕಂಪೆನಿಗಳು ಮತ್ತು ಸಂಸ್ಥೆಗಳು ಸಂಶೋಧನೆಗೆ ಖರ್ಚು ಮಾಡುವ ಹಣದ ಶೇಕಡಾ ಇನ್ನೂರರಷ್ಟಕ್ಕೆ ಕರವಿನಾಯಿತಿ ನೀಡುವ ಪ್ರಸ್ತಾವ ಸರಕಾರದ ಮುಂದಿದೆ.ತಂಬಾಕು,ಮದಿರೆ ಅಂತಹ ಆಯ್ದ ಕೆಲವು ಕಂಪೆನಿಗಳನ್ನು ಹೊರತು ಪಡಿಸಿ,ಉಳಿದೆಲ್ಲಾ ಕ್ಷೇತ್ರದ ಸಂಶೋಧನೆಗಾಗಿ ಮಾಡಿದ ಖರ್ಚಿಗೆ ಈ ಕರವಿನಾಯಿತಿ ಅನ್ವಯವಾಗಲಿದೆ.ಹಿಂದೆಯೂ ಕರವಿನಾಯಿತಿ ಸೌಲಭ್ಯ ಲಭ್ಯವಿದ್ದರೂ ಅದು ಕಂಪ್ಯೂಟರ್,ಬಯೋಟೆಕ್ನಾಲಜಿ,ವೈದ್ಯಕೀಯ ಮುಂತಾದ ಆಯ್ದ ಕೆಲವು ಕ್ಷೇತ್ರಗಳಿಗೆ ಮಾತ್ರಾ ಅನ್ವಯವಾಗಿತ್ತು.ಕರವಿನಾಯಿತಿ ಸೌಲಭ್ಯ ಸಿಗಲು,ಸಂಸ್ಥೆ ಅಥವಾ  ಕಂಪೆನಿಯಲ್ಲಿ ಸಂಶೋಧನಾ ಚಟುವಟಿಕೆ ಅಗತ್ಯವಾದ ಮೂಲಸೌಕರ್ಯ ಲಭ್ಯವಿದ್ದು,ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಇಲಾಖೆಯಿಂದ ಪ್ರಮಾಣಪತ್ರ ಪಡೆಯಬೇಕು.ಭಾರತದಲ್ಲಿ ಸಂಶೋಧನಾ ಚಟುವಟಿಕೆಗಳನ್ನು ಕೈಗೊಳ್ಳಲು ಪ್ರೋತ್ಸಾಹ ನೀಡುವ ಉದ್ದೇಶದ ಈ ನಿರ್ಧಾರ ಸ್ವಾಗತಾರ್ಹವಾದರೂ,ಕರವಿನಾಯಿತಿಗಾಗಿ ಸಂಶೋಧನಾ ಚಟುವಟಿಕೆಗಳ ಹೆಸರಿನಲ್ಲಿ ಸೌಲಭ್ಯದ ದುರುಪಯೋಗುವ ಸಾಧ್ಯತೆಯೂ ಇದೆ.
----------------------------------------------------------
ಇಲೆಕ್ಟ್ರಾನಿಕ್ ಅಂಡರ್‌ಪ್ಯಾಂಟ್
ಆಸ್ಟ್ರೇಲಿಯನ್ ಕಂಪೆನಿಯೊಂದು ಜಗತ್ತಿನಲ್ಲೇ ಮೊದಲ ಇಲೆಕ್ಟ್ರಾನಿಕ್ ಅಂಡರ್‌ಪ್ಯಾಂಟ್ ಅನ್ನು ತಯಾರಿಸಿದೆ.ಮೂತ್ರ ಅಥವ ಮಲವಿಸರ್ಜನೆ ನಿಯಂತ್ರಣವಿಲ್ಲದವರಿಗೆ ನೆರವು ನೀಡಲು ಈ ಪ್ಯಾಂಟ್ ಸಹಾಯಕ.ಇದನ್ನು ಧರಿಸಿದ ವ್ಯಕ್ತಿ ಮೂತ್ರ-ಮಲ ವಿಸರ್ಜಿಸಿದರೆ,ಇಲೆಕ್ಟ್ರಾನಿಕ್ ವ್ಯವಸ್ಥೆ ಇದನ್ನು ಪತ್ತೆ ಹಚ್ಚಿ,ಎಸ್ ಎಂ ಎಸ್ ಕಳುಹಿಸುತ್ತದೆ.ಎಸ್ ಎಂ ಎಸ್ ಸಂದೇಶ,ವ್ಯಕ್ತಿಯ ಜವಾಬ್ದಾರಿ ತೆಗೆದುಕೊಂಡವರಿಗೆ ರವಾನೆಯಾಗುವಂತೆ ಮಾಡಬಹುದು.ಆಗಾಗ ಬಂದು ಪರೀಕ್ಷಿಸಬೇಕಾದ ಅಗತ್ಯವನ್ನಿದು ಇಲ್ಲವಾಗಿಸುತ್ತದೆ.ನ್ಯೂಸೌತ್‌ವೇಲ್ಸಿನ ವೃದ್ಧಾಶ್ರಮವೊಂದರಲ್ಲಿ ಇದನ್ನು ಪರೀಕ್ಷಿಸಲಾಗುತ್ತಿದೆ.
-----------------------------------------------------------------
ಟೈಮ್ಸ್ ಅಂತರ್ಜಾಲ ಜಾಲಾಟ ಉಚಿತವಲ್ಲ!
ಜೂನ್ ನಂತರ ಟೈಮ್ಸ್ ಮತ್ತು ಸಂಡೇ ಟೈಮ್ಸ್ ಪತ್ರಿಕೆಗಳು ತಮ್ಮ ಅಂತರ್ಜಾಲ ಪತ್ರಿಕೆಯ ಜಾಲಾಟಕ್ಕೆ ದಿನವಹಿ ಒಂದು ಪೌಂಡ್ ಅಥವಾ ವಾರಕ್ಕೆ  ಎರಡು ಪೌಂಡ್ ದರ ವಿಧಿಸಲು ನಿರ್ಧರಿಸಿದೆ.ರೂಪರ್ಟ್ ಮುರ್ಡೋಕ್‌ನ ಈ ಪತ್ರಿಕೆಯು ಇಂತಹ ನಿರ್ಧಾರ ಕೈಗೊಂಡ ಪತ್ರಿಕೆಗಳಲ್ಲಿ ಪ್ರಥಮವಾಗಿದೆ.ಆನ್‌ಲೈನ್ ಪತ್ರಿಕೆಯ ಜನಪ್ರಿಯತೆ ಹೆಚ್ಚಿ,ಮುದ್ರಿತ ಪತ್ರಿಕೆಯ ಪ್ರಸಾರದಲ್ಲಿ ಇಳಿಕೆ,ಜಾಹೀರಾತು ಆದಾಯದಲ್ಲಿ ಕಡಿತ ಕಾರಣಗಳಿಂದ ನಷ್ಟದಲ್ಲಿರುವ ಪತ್ರಿಕೋದ್ಯಮ ಕ್ಷೇತ್ರಕ್ಕೆ ಆರ್ಥಿಕ ಶಕ್ತಿ ನೀಡಲು ಈ ಕ್ರಮ ಅನಿವಾರ್ಯವಾಗಿತ್ತು ಎಂದು ಪತ್ರಿಕೆಯ ಮಾಲಕರಾದ ನ್ಯೂಸ್ ಇಂಟರ್ನ್ಯಾಶನಲ್ ಪ್ರಕಟಿಸಿದೆ.ಈ ವ್ಯವಹಾರ ಮಾದರಿ ಜನಪ್ರಿಯವಾದರೆ,ಉಳಿದ ಪ್ರಕಾಶನ ಸಂಸ್ಥೆಗಳೂ ಇದೇ ಹಾದಿ ತುಳಿಯಬಹುದು.
---------------------------------------------------------
ಬಿಬಿಎಂಪಿ ತಾಣ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣಾ ಪ್ರಕ್ರಿಯೆ ಜಾರಿಯಲ್ಲಿದೆ.ಈ ಹೊತ್ತಿಗೆ ಮತದಾನವೂ ಮುಗಿದಿರುತ್ತದೆ.ಚುನಾವಣೆ,ಅಭ್ಯರ್ಥಿಗಳ ವಿವರಗಳು,ವಾರ್ಡುಗಳು,ಚುನಾವಣೆಯಲ್ಲಿ ಚರ್ಚಿತವಾಗಿರುವ ವಿಷಯಗಳ ಬಗ್ಗೆ ಅಂತರ್ಜಾಲ ತಾಣ ಲಭ್ಯವಿದೆ.ಅದನ್ನು http://bbmpelections.in ವಿಳಾಸದಲ್ಲಿ ನೋಡಬಹುದಾಗಿದೆ.ಮತ ಎಣಿಕೆಗಳ ವಿವರಗಳೂ ಲಭ್ಯವಾಗುವ ನಿರೀಕ್ಷೆಯಿದೆ.


UDAYAVANI

Monday, March 22, 2010

ವಿಶಿಷ್ಟ ಗುರುತು ಯೋಜನೆ ಅನುಷ್ಠಾನದತ್ತ

ವಿಶಿಷ್ಟ ಗುರುತು ಯೋಜನೆ ಅನುಷ್ಠಾನದತ್ತ
ಭಾರತೀಯರಿಗೆಲ್ಲರನ್ನೂ ಗುರುತಿಸಲು ನೆರವಾಗುವ ಭಾರತದ ವಿಶಿಷ್ಠ ಗುರುತು ಪ್ರಾಧಿಕಾರದ ಯೋಜನೆಗೆ ಬಜೆಟ್ ಮೂಲಕ 1900 ಕೋಟಿ ರೂಪಾಯಿಗಳ ಮಂಜೂರಾದ ಕಾರಣ,ಯೋಜನೆಗೆ ಚಾಲನೆ ದೊರೆತಿದೆ.ನಂದನ್ ನೀಲೆಕಣಿ ಅವರ ನೇತೃತ್ವದ ಯುಐಡಿಎಐ Unique Identification Authority of Indiaವು ಯೋಜನೆಯ ಅನುಷ್ಠಾನಕ್ಕ್ಕೆ ಅಗತ್ಯವಾದ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲು ಉತ್ಸಾಹವಿರುವವರಿಂದ ಟೆಂಡರುಗಳನ್ನು ಆಹ್ವಾನಿಸಿದೆ.ಮಾರ್ಚ್ ಎರಡಕ್ಕೆ ಟೆಂಡರ್ ದಿನಾಂಕ ಮುಗಿದಿದ್ದು,ಹತ್ತೊಂಭತ್ತು ಅರ್ಜಿಗಳು ಬಂದಿವೆ.ವಿಪ್ರೋ,ಟಿಸಿಎಸ್,ಇನ್ಫೋಸಿಸ್,ಐಬಿಎಂ,ಎಕ್ಸೆಂಚರ್,ಮಾಸ್ಟೆಕ್,ಮೈಂಡ್‌ಟ್ರೀ,ಲಾಜಿಕಾ,ಸಿಮನ್ಸ್,ಮಹಿಂದ್ರಾ ಸತ್ಯಮ್ ಕಂಪೆನಿಗಳನ್ನು ತಂತ್ರಾಂಶ ಅಭಿವೃದ್ಧಿ ಪಡಿಸಲು ಆರಿಸಲಾಗಿದೆ.ಅವರುಗಳ ಪ್ರಸ್ತಾವಗಳನ್ನು ಪರಿಶೀಲಿಸಿ,ತಾಂತ್ರಿಕ ಮೌಲ್ಯಮಾಪನ ನಡೆದ ಬಳಿಕ ಮುಂದಿನ ತೀರ್ಮಾನ ಆಗಲಿದೆ.ಅಂದಹಾಗೆ ಅರ್ನ್ಸ್&ಯಂಗ್ ಕಂಪೆನಿಯು ಯೋಜನೆಯ ಯೋಜನೆಯ ಸಲಹಾಕಾರರಾಗಿ ನಿಯೋಜಿತರಾಗಿದ್ದಾರೆ.
-------------------------------------------------------
ಕಡಿಮೆ ಕಾಗದ ಬಳಸುವ ಕಚೇರಿಗಳತ್ತ
ಕಚೇರಿಗಳು ಕಂಪ್ಯೂಟರೀಕರಣವಾದ ಬಳಿಕವೂ ಕಾಗದರಹಿತ ಕಚೇರಿಗಳು ಎಂಬ ಕಲ್ಪನೆ ಕಲ್ಪನೆಯಾಗಿಯೇ ಉಳಿದಿದ್ದು,ನಿಜವಾಗಿಲ್ಲ.ವಾಸ್ತವ ಎಂದರೆ ಕಾಗದ ರಹಿತ ಎನ್ನುವುದಕ್ಕಿಂತ ಕಡಿಮೆ ಕಾಗದ ಬಳಸುವತ್ತ ಗುರಿಯಿಡುವುದೇ ಸರಿ ಎನ್ನುವ ನಿಜ ಈಗ ಮನದಟ್ಟಾಗಿದೆ.ತೊಂಭತ್ತರ ದಶಕದಲ್ಲಿ ಕಂಪ್ಯೂಟರುಗಳ ಬಳಕೆ ಹೆಚ್ಚಾದಂತೆ,ಕಚೇರಿಗಳಲ್ಲಿ ಕಾಗದದ ಬಳಕೆ ಇಳಿಯಬಹುದೆಂಬ ಭಾವನೆ ಬಲವಾಗಿತ್ತು.ಆದರೆ,ಜನರು ಕಾಗದದ ಬಳಕೆಗೆ ಒಗ್ಗಿ ಹೋಗಿದ್ದ ತಲೆಮಾರಿನವರಾದ ಕಾರಣವೋ ಏನೋ,ಹಾಗಾಗುವುದಕ್ಕೆ ಬದಲಾಗಿ,ಕಚೇರಿಗಳಲ್ಲಿ ಹೆಚ್ಚೆಚ್ಚು ಕಂಪ್ಯೂಟರ್ ಮುದ್ರಕಗಳು ಬಳಕೆಯಾಗ ಹತ್ತಿ,ಕಾಗದದ ಬಳಕೆ ಇಳಿಕೆ ಗಮನಾರ್ಹವಾಗಿಯೇನೂ ಇರಲಿಲ್ಲ.ಯುಎಸ್‌ನಲ್ಲಿ ಆರ್ಥಿಕ ಹಿನ್ನಡೆಯ ಮೊದಲು ವಾರ್ಷಿಕ ಒಂದು ಟ್ರಿಲಿಯನ್ ಕಾಗದಗಳು ಫ್ಯಾಕ್ಸ್,ಮುದ್ರಕಯಂತ್ರಗಳಲ್ಲಿ ಬಳಕೆಯಾದುವು ಎಂದು ಮ್ಯಸಾಚುಸೆಟ್‌ನ ಮಾರುಕಟ್ಟೆ ಸಮೀಕ್ಷಾ ಕಂಪೆನಿಯು ಅಂದಾಜು ಮಾಡಿದೆ.ಸುಮಾರು ಒಂಭೈನೂರು ಕಂಪೆನಿಗಳ ಸಮೀಕ್ಷೆ ನಡೆಸಿದಾಗ ತಿಳಿದು ಬಂದ ಅಂಶವೆಂದರೆ,ಕಂಪೆನಿಗಳು ಕಾಗದದ ಬಳಕೆಯು ಕಾನೂನಿನ ಅನ್ವಯ ಅನಿವಾರ್ಯ ಎಂದು ಪರಿಗಣಿಸಿವೆ.ಹಾಗೆಂದು ಟ್ರೆಂಡ್‌ಹಂಟರ್ ಅಂತಹ ಆನ್‌ಲೈನ್ ಪತ್ರಿಕೆಯ ಕಚೇರಿಯಲ್ಲಿ ಕಾಗದದ ಬಳಕೆಯೇ ಇಲ್ಲ.ಅದರ ಕಚೇರಿಗಳಲ್ಲಿ ಕಡತಗಳನ್ನಿಡುವ ಸೌಲಭ್ಯದ ಅಗತ್ಯವೇ ಇಲ್ಲವಾಗಿದೆ.ಮುದ್ರಕ,ಸ್ಕ್ಯಾನರುಗಳೂ,ಫ್ಯಾಕ್ಸ್ ಯಂತ್ರಗಳೂ ಅವರಿಗೆ ಬೇಡ,ಕಚೇರಿಯಲ್ಲಿ ಸ್ಥಳಾವಕಾಶದಲ್ಲಿ ಹೆಚ್ಚಳ,ಖರ್ಚು ಕಡಿಮೆ ಹೀಗೆ ಕಾಗದ ರಹಿತ ಕಚೇರಿಯ ಧನಾತ್ಮಕ ಅಂಶಗಳು ಬಹಳ.ಕಾಗದ ಅನಿವಾರ್ಯ ಎನ್ನುವುದು ನಂಬಿಕೆಯಾದರೆ,ಕಡಿಮೆ ಕಾಗದ ಬಳಸುವತ್ತಲಾದರೂ ಹೆಜ್ಜೆಯಿಡುವುದು ಒಳಿತು ಎನ್ನುವುದು ಹೆಚ್ಚಿನವರ ಅಭಿಪ್ರಾಯ.

---------------------------------------------
ವಿವೇಕ ರೈಗಳು ಬರೆಯುತ್ತಾರೆ

ಕರ್ನಾಟಕ ರಾಜ್ಯ ಮುಕ್ತ ವಿವಿ,ಹಂಪಿ ವಿವಿಗಳ ಉಪಕುಲಪತಿಗಳಾಗಿದ್ದ ಸಾಹಿತಿ ವಿವೇಕ ರೈ ಸದ್ಯ ಜರ್ಮನಿಯ ವೂಜ್‌ಬರ್ಗ್‌ನಲ್ಲಿ ಪ್ರಾಧ್ಯಾಪಕರಾಗಿದ್ದಾರೆ.ಅಲ್ಲಿಂದ ಅವರು ಕನ್ನಡಿಗರ ಸಂಪರ್ಕದಲ್ಲಿರಲು ಬಯಸಿ,ತಮ್ಮ ಬ್ಲಾಗನ್ನು ಅಂತರ್ಜಾಲದ http://bavivekrai.wordpress.com/ನ ವಿಳಾಸದಲ್ಲಿ ಬ್ಲಾಗ್ ಬರೆಯುತ್ತಾರೆ.ಜರ್ಮನಿಯ ತಮ್ಮ ಕೊಟಡಿಯಿಂದ ಹೊರಗಡೆಯ ನೋಟದ ಚಿತ್ರಗಳು,ಎಸ್ವಿ ಪರಮೇಶ್ವರ ಭಟ್ಟರ ನೆನಪಿನ ಮೆಲುಕು ಇತ್ಯಾದಿ ಬರಹಗಳು ಬ್ಲಾಗಿಗೆ ಇತ್ತೀಚೆಗೆ ಸೇರ್ಪಡೆಯಾಗಿವೆ.
-------------------------------------
ಗೂಗಲ್-ಇಂಟೆಲ್ ಟಿವಿ ಕ್ಷೇತ್ರಕ್ಕೆ ಲಗ್ಗೆ ಯತ್ನ
ಟಿವಿಯಲ್ಲಿ ಇಂಟೆಲ್ ಕಂಪೆನಿಯ ಆಟಂ ಸಂಸ್ಕಾರಕವೊಂದನ್ನು ಸೇರಿಸುವುದು,ಆ ಮೂಲಕ  ಆಂಡ್ರಾಯಿಡ್ ಕಾರ್ಯನಿರ್ವಹಣಾ ವ್ಯವಸ್ಥೆಯನ್ನು  ಟಿವಿಯಲ್ಲಿ ಅನುಸ್ಥಾಪಿಸುವುದು.  ತನ್ಮೂಲಕ ಟಿವಿಯಲ್ಲಿ ತಂತ್ರಾಂಶ ಬಳಕೆಯನ್ನು  ಸಾಧ್ಯವಾಗಿಸಿ,ವಿವಿಧ ಸೇವೆಗಳನ್ನು ಪಡೆಯಲು ಸಾಧ್ಯವಾಗಿಸುವುದು-ಜತೆಗೆ, ಅಂತರ್ಜಾಲ ಸಂಪರ್ಕವನ್ನು ಕೇಬಲ್ ಜಾಲದಲ್ಲಿ ಒದಗಿಸಿ,ಟಿವಿಯ ಮೂಲಕವೂ ಅಂತರ್ಜಾಲಾಟವನ್ನು ಸುಲಭವಾಗಿಸುವುದು. ಇದು ಗೂಗಲ್-ಇಂಟೆಲ್ ಜಂಟಿ ಕಾರ್ಯಯೋಜನೆ ಎಂಬ ಸುದ್ದಿಗಳು ಹರಡಿವೆ.ಇಂಟೆಲ್‌ನ ಸಂಸ್ಕಾರಕವಾದ ಆಟಂ ಅನ್ನು ಸೋನಿ ಟಿವಿಯಲ್ಲಿ ಅಳವಡಿಸುವ ಮೂಲಕ ಇದನ್ನು ಸಾಧಿಸಲು ಮಾತುಕತೆ ನಡೆದಿವೆ ಎಂದು ಗುಸುಗುಸು ಹಬ್ಬಿದ್ದರೂ,ಕಂಪೆನಿಗಳು ಈ ಬಗ್ಗೆ ಮುಗುಂ ಆಗಿವೆ.ಸೆಲ್‌ಫೋನ್‌ಗಾಗಿ ಗೂಗಲ್ ಅಭಿವೃದ್ಧಿ ಪಡಿಸಿರುವ ಆಂಡ್ರಾಯಿಡ್ ಕಾರ್ಯನಿರ್ವಹಣಾ ವ್ಯವಸ್ಥೆಯನ್ನು ಟಿವಿಗಾಗಿ ತುಸು ಮಾರ್ಪಡಿಸಿ,ಬಳಿಕ ಟಿವಿಯಲ್ಲೂ ವಿವಿಧ ತಂತ್ರಾಂಶಗಳನ್ನು ಅಳವಡಿಸಿ,ವಿನೂತನ ಸೇವೆಗಳನ್ನು ಲಭ್ಯವಾಗಿಸುವುದು,ಜತೆಗೆ ಟ್ವಿಟರ್,ಫೇಸ್‌ಬುಕ್,ಪಿಕಾಸ,ಯುಟ್ಯೂಬ್ ಅಂತಹ ತಾಣಗಳನ್ನು ಜನರು ಟಿವಿಯ ಮೂಲಕವೂ ಜಾಲಾಡಲು ಸಾಧ್ಯವಾಗಿಸಿ ಜಾಹೀರಾತುದಾರರು ಈ ಹೊಸ  ಪ್ರೇಕ್ಷಕರಡೆಗೆ ಗುರಿಯಿರಿಸಿ,ನೀಡುವ ಜಾಹೀರಾತುಗಳ ಲಾಭ ಪಡೆಯುವುದರತ್ತ ಕಂಪೆನಿಗಳ ಗಮನ ಕೇಂದ್ರೀಕರಿಸಿದಂತಿದೆ.
----------------------------------------
ಅಂತರ್ಜಾಲ ಮೂಲಕ ಕಾರು ವಶೀಕರಣ
ಡಲಾಸ್ ಎಂಬ ಯುಎಸ್‌ನ ನಗರದಲ್ಲಿ ಟೆಕ್ಸಸ್ ಕಾರು ಕಂಪೆನಿಯು ಸಾಲ ನೀಡಿ,ಕಾರು ಖರೀದಿಗೆ ಅನುವು ಮಾಡುತ್ತದೆ.ಖರೀದಿದಾರರು ಸಾಲ ಮರುಪಾವತಿ ಸರಿಯಾಗಿ ಮಾಡದಿದ್ದರೆ,ಅವರ ಕಾರು ಚಾಲೂ ಆಗದಂತೆ ಮಾಡುವ ಜಿಪಿಎಸ್ ತಂತ್ರಜ್ಞಾನ ಆಧಾರಿತ  ವ್ಯವಸ್ಥೆಯನ್ನು ಅವರ ಕಾರಿಗೆ ಅಳವಡಿಸುವ ಪದ್ಧತಿಯನ್ನು ಕಂಪೆನಿಯು ಬಳಸುತ್ತಿದೆ.ಜತೆಗೆ ಹಾರನ್ ಅನ್ನೂ ಕೂಡಾ ನಿಶ್ಶಕ್ತಗೊಳಿಸಲೂ ಸಾಧ್ಯ.ಇತ್ತೀಚೆಗೆ ಕಂಪೆನಿಯು ರಾಮೋಸ್ ಎನ್ನುವ ತನ್ನ ಉದ್ಯೋಗಿಯನ್ನು ಕೆಲಸದಿಂದ ಉಚ್ಚಾಟಿಸಿತ್ತು.ಈ ಉದ್ಯೋಗಿ ತನ್ನ ಮಾಜೀ ಸಹೋದ್ಯೋಗಿಯ ಪಾಸ್‌ವರ್ಡ್ ಕದ್ದು,ಅದರ ಮೂಲಕ ಕಂಪೆನಿಯ ಅಂತರ್ಜಾಲ ತಾಣ ಪ್ರವೇಶಿಸಿ,ಕಂಪೆನಿಯ ನೂರಾರು ಗ್ರಾಹಕರ ಕಾರುಗಳನ್ನು ನಿಷ್ಕ್ರಿಯಗೊಳಿಸಿಬಿಟ್ಟಿದ್ದ.ಗ್ರಾಹಕರು ತಮ್ಮ ಕಾರುಗಳು ವಿನಾ ಕಾರಣ ನಿಂತು ಬಿಟ್ಟು,ಹಾರನ್ ಕೈಕೊಡುವ ತೊಂದರೆಗೀಡಾಗಿ ಫಜೀತಿ ಪಟ್ಟು,ಕಂಪೆನಿಗೆ ದೂರಿಕೊಂಡಾಗಲಷ್ಟೇ ಕಂಪೆನಿಗೆ ವಿಷಯ ತಿಳಿಯಿತು.ರಾಮೋಸ್ ಈಗ ಕಂಬಿ ಎಣಿಸಬೇಕಾಗಿದೆ.
UDAYAVANI
ಅಶೋಕ್‌ಕುಮಾರ್ ಎ

Monday, March 15, 2010

ಐ-ಫೋನಿನಲ್ಲಿ ಸೌರಶಕ್ತಿ ಸೈ!



ಐ-ಫೋನಿನಲ್ಲಿ ಸೌರಶಕ್ತಿ ಸೈ!

ಐಫೋನ್‌ಗೆ ಸೌರಕೋಶಗಳಿರುವ ಹೊರಕವಚ ತೊಡಿಸುವ ಮೂಲಕ ಅದನ್ನು ಸೌರಶಕ್ತಿಯ ಮೂಲಕ ಚಾರ್ಜ್ ಮಾಡಲೀಗ ಸಾಧ್ಯ.ಎರಡು ಗಂಟೆ ಬಿಸಿಲಿಗಿಟ್ಟರೆ,ಒಂದು ಗಂಟೆ ಮಾತನಾಡಲು ಬೇಕಾಗುವ ಶಕ್ತಿಯನ್ನದು ಗಳಿಸಿಕೊಳ್ಳುತ್ತದೆ.ಒಂದು ಸಲ ಚಾರ್ಜ್ ಮಾಡಿದ ತ್ರೀಜಿ ಐಫೋನ್‌ನ್ನು,ಅರ್ಧ ಗಂಟೆ ಬಳಕೆ ಮಾಡಬಹುದು.ಬಿಸಿಲಿಲ್ಲದಾಗ,ಯುಎಸ್ಬಿ ಪೋರ್ಟ್ ಮೂಲಕ ಕಂಪ್ಯೂಟರಿಗೆ ಸಂಪರ್ಕಿಸಿ,ಐಫೋನನ್ನು ಚಾರ್ಜ್ ಮಾಡುವ ಅನುಕೂಲ ಇದೆ.ಸೌರಶಕ್ತಿಯನ್ನು ದುಡಿಸಿಕೊಳ್ಳುವ ಈ ಹೊರಕವಚಕ್ಕೆ ಎಂಭತ್ತು ಡಾಲರು ಕೊಡಬೇಕಾಗುತ್ತದೆ.
--------------------------------------------------
ಬಂದಿದೆ ಬರಹ 9.0
ಬರಹ ತಂತ್ರಾಂಶದ ಒಂಭತ್ತನೇ ಆವೃತ್ತಿ ಬಿಡುಗಡೆಯಾಗಿದೆ.ಇದರಲ್ಲಿ ಕನ್ನಡವೂ ಸೇರಿದಂತೆ ಭಾರತೀಯ ಭಾಷೆಗಳಲ್ಲಿನ ಕಡತವನ್ನು ಲ್ಯಾಟಿನ್ ಭಾಷೆಗೆ ಬದಲಿಸುವ ಸೌಕರ್ಯ ಲಭ್ಯವಿದೆ.ಅಸ್ಸಾಮೀ ಭಾಷೆಯನ್ನೂ ಇದರಲ್ಲಿ ಅಳವಡಿಸಲಾಗಿದೆ.ಶೇಷಾದ್ರಿ ವಾಸು ಅವರು ಅಭಿವೃದ್ಧಿ ಪಡಿಸಿರುವ ಬರಹ ತಂತ್ರಾಂಶವು ಭಾರತೀಯ ಭಾಷೆಗಳಲ್ಲಿ ಟೈಪಿಸಲು ಅನುಕೂಲ ಒದಗಿಸಿ,ಕನ್ನಡದ ಬಳಕೆಯನ್ನು ಹೆಚ್ಚಿಸುವಲ್ಲಿ ತನ್ನದೇ ಆದ ಕಾಣಿಕೆ ನೀಡಿದೆ.ಬರಹ ಯುನಿಕೋಡ್‌ನ ಮೂರನೇಯ ಆವೃತ್ತಿಯೂ ಈಗ ಲಭ್ಯವಿದ್ದು,ಇದರಲ್ಲಿ ಬರಹಪ್ಯಾಡ್ ಮತ್ತು ಬರಹ ಐಎಂಇ ತಂತ್ರಾಂಶಗಳು ಲಭ್ಯವಿದ್ದು,ಯುನಿಕೋಡ್‌ನಲ್ಲಿ ಟೈಪಿಸಲು ಸಹಕಾರಿ.ಡೌನ್‌ಲೋಡ್ ಮಾಡಲು www.baraha.com ಅಂತರ್ಜಾಲ ತಾಣಕ್ಕೆ ಭೇಟಿಕೊಡಿ.
-----------------------------------------
ಸಕ್ರಿಯ ಟ್ವಿಟರ್ ಬಳಕೆದಾರರು ಹೆಚ್ಚಿಲ್ಲ
ಐದರಲ್ಲಿ ಒಬ್ಬ ಟ್ವಿಟರ್ ಖಾತೆ ತೆರೆದವರು ಮಾತ್ರಾ ಸಕ್ರಿಯರಾಗಿರುತ್ತಾರೆ.ಹೆಚ್ಚಿನವರು ಆರಂಭಶೂರರು ಮಾತ್ರಾ-ಎನ್ನುವುದು ಬಾರಾಕುಡಾ ನೆಟ್ವರ್ಕ್ಸ್ ಎನ್ನುವ ಕಂಪೆನಿಯ ಅಧ್ಯಯನವು ದೃಡ ಪಡಿಸಿದೆ. ನವಂಬರ್ 2008ರಿಂದ ಎಪ್ರಿಲ್ 2009ರ ನಡುವೆ ಟ್ವಿಟರ್ ಖಾತೆಯನ್ನು ಹಲವು ಖ್ಯಾತನಾಮರು ತೆರೆದು,ಟ್ವಿಟರ್ ಭಾರೀ ಜನಪ್ರಿಯವಾಗಲು ಕಾರಣವಾದರು.ಈ ಅವಧಿಯನ್ನು ಟ್ವಿಟರಿನ ಸುವರ್ಣಯುಗ ಎಂದೇ ಕರೆಯಲಾಗುತ್ತಿದೆ.ಸುಮಾರು ಎರಡು ಕೋಟಿ ಖಾತೆಗಳ ಬಳಕೆಯ ಅಂಕೆ ಸಂಖ್ಯೆಯ ಆಧಾರದ ಮೇಲೆ,ಈ ಸುವರ್ಣಯುಗದಲ್ಲಿ ಅರ್ಧಕ್ಕರ್ಧ ಬಳಕೆದಾರರೂ ಖಾತೆ ತೆರೆದದ್ದು ಸ್ಪಷ್ಟವಾಗುತ್ತದೆ.ಕ್ರಿಮಿನಲ್ ಚಟುವಟಿಕೆಗಳಿಗಾಗಿ ಟ್ವಿಟರ್ ಖಾತೆಯನ್ನು ತೆರೆಯುವವರ ಸಂಖ್ಯೆಯೂ ಹೆಚ್ಚುತ್ತಿದೆ.ಇಂತಹ ಖಾತೆಗಳನ್ನು ಪತ್ತೆ ಹಚ್ಚಿ,ಅವನ್ನು ಅಶಕ್ತಗೊಳಿಸುವ ಕೆಲಸವನ್ನು ಟ್ವಿಟರ್ ಮಾಡುತ್ತದೆ.
-----------------------------------------------------------
ವಿದ್ಯಾರ್ಥಿಗಳ ಬ್ಲಾಗುಗಳು
ಬ್ಲಾಗು ಬರೆಯುವಲ್ಲಿ ಯುವಜನತೆ ಅತ್ಯುತ್ಸಾಹ ತೋರುತ್ತಿದೆ.ಕಂಪ್ಯೂಟರ್ ಬಳಸುವವರಲ್ಲಿ ಯುವಜನರ ಸಂಖ್ಯೆಯೇ ಹೆಚ್ಚಿರುವುದರಿಂದ ಇದು ನಿರೀಕ್ಷಿತವೇ ಹೌದು.ಅದರಲ್ಲೂ ವಿದ್ಯಾರ್ಥಿಗಳಂತೂ ಬ್ಲಾಗ್ ಬರವಣಿಗೆಯನ್ನು ಗಂಭೀರವಾಗಿಯೇ ಮಾಡುತ್ತಾರೆ.ಬ್ಲಾಗು ಬರೆದು,ದುಡ್ಡು ಮಾಡಲೂ ಸಾಧ್ಯ ಎನ್ನುವ ಕೆಲವು ಉದಾಹರಣೆಗಳು ಇಂತವರಿಗೆ ಹೆಚ್ಚಿನ ಉಮೇದು ನೀಡಲೂ ಬಹುದು.ರಾಕೇಶ್‌ರ "ಮನಕ್ಕಾಗಿ"http://manakkagi.blogspot.com,ನರೇಂದ್ರ ಪೈ ಅವರ http://frozenwell.wordpress.com,ಕಾರ್ತಿಕ್ ಕಸ್ತೂರಿಯವರhttp://dailyapps.net/,ಸುಶ್ರುತ್ ತೆಂಡೂಲ್ಕರ್ ಅವರ http://www.sushtend.blogspot.com,ಆದಿತ್ಯರ http://www.opensourcecollection.blogspot.com,ಕೆನೆತ್‌ರ http://aninosaintlife.wordpress.com,ಪ್ರಿಯಾಂಕಾ ಪ್ರಭು ಅವರ http://vpriyankaprabhu.blogspot.com ಬ್ಲಾಗುಗಳನ್ನು ಗಮನಿಸಬಹುದು.ಕನ್ನಡದಲ್ಲಿ ಬ್ಲಾಗ್ ಬರವಣಿಗೆ ಪ್ರಯತ್ನಿಸುವವರ ಸಂಖ್ಯೆ ಕಡಿಮೆ,ತಂತ್ರಜ್ಞಾನ ಸಂಬಂಧೀ ಬ್ಲಾಗುಗಳೇ ಅಧಿಕ ಎನ್ನುವುದನ್ನೂ ಗಮನಕ್ಕೆ ಬರದಿರದು.
-----------------------------------------------------------------------------
.XXX ತಾಣಗಳಿನ್ನೂ ದೂರ!

ವಯಸ್ಕ ಅಂತರ್ಜಾಲ ತಾಣಗಳಿಗೆ .XXXನಿಂದ ಅಂತ್ಯವಾಗುವ ಹೆಸರನ್ನು ನೀಡಬೇಕು ಎನ್ನುವ ಪ್ರಸ್ತಾವಕ್ಕೆ ಹಸಿರು ಸಂಕೇತ ನೀಡಲು ICANN ಎನ್ನುವ ಸಂಸ್ಥೆ ನಿರ್ಧಾರ ಕೈಗೊಳ್ಳುವುದನ್ನು ಮುಂದೂಡಿದ ಶುಭ ಸಮಾಚಾರ ಬಂದಿದೆ.ಇಂತಹ ನಿರ್ಧಾರ ಕೈಗೊಂಡರೆ,ದೂರಗಾಮಿ ಪರಿಣಾಮಗಳಿವೆ ಎಂದು ಎಂದು ಸಾವಿರಾರು ಜನರು ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದು ಈ ನಿರ್ಧಾರವನ್ನು ಮುಂದೂಡಲು ಕಾರಣವಾಯಿತು.
-----------------------------------------
ನೋಬೆಲ್:ದಾಖಲೆ ಸಂಖ್ಯೆಯ ನಾಮಕರಣ
2010ರ ನೋಬೆಲ್ ಶಾಂತಿ ಪ್ರಶಸ್ತಿಗೆ ಈಗಾಗಲೇ 237ರಷ್ಟು ಹೆಸರುಗಳನ್ನು ಸೂಚಿಸಲಾಗಿದೆಯಂತೆ.ಕಳೆದವರ್ಷದ ಪ್ರಶಸ್ತಿಗಾಗಿ 205ರಷ್ಟು ಜನರನ್ನು ಸೂಚಿಸಲಾಗಿತ್ತು.ಅಂದಹಾಗೆ ನೋಬೆಲ್ ಪ್ರಶಸ್ತಿಯ ಅಂತರ್ಜಾಲ ತಾಣ http://nobelprize.org/nomination ಈ ವಿಳಾಸದಲ್ಲಿದೆ.ಪ್ರಶಸ್ತಿಯ ನಿರ್ಧಾರಕ್ಕಾಗಿ ಅಕ್ಟೋಬರ್ ವರೆಗೆ ಕಾಯಬೇಕಾದೀತು.
-------------------------------------------------
ಹಾರ್ಡ್ ಡಿಸ್ಕುಗಳು ಬದಲಾಗಲಿವೆ
ಒಂದು ಟೆರಾಬೈಟ್ ಸಾಮರ್ಥ್ಯವನ್ನು ಹೊಂದಿದ ಹಾರ್ಡ್ ಡಿಸ್ಕುಗಳ ಕಾಲವಿನ್ನೇನು ಬರಲಿದೆ.ಈ ಸಾಮರ್ಥ್ಯಕ್ಕೆ ಡಿಸ್ಕುಗಳನ್ನು ಅಣಿಗೊಳಿಸಲು,ಅವುಗಳ ಪ್ರತಿ ಸೆಕ್ಟರುಗಳಲ್ಲಿ ಹಿಡಿಸುವ ದತ್ತಾಂಶ ಸಾಮರ್ಥ್ಯವನ್ನು ಅರ್ಧ ಕಿಲೋಬೈಟಿನಿಂದ ನಾಲ್ಕು ಕಿಲೋಬೈಟಿಗೆ ಏರಿಸುವ ಚಿಂತನೆ ನಡೆದಿದೆ.ಹೀಗೆ ಮಾಡಿದರೆ,ಡಿಸ್ಕಿನಲ್ಲಿರುವ ಸೆಕ್ಟರುಗಳ ಸಂಖ್ಯೆ ಇಳಿದು,ಅವುಗಳ ನಡುವೆ ಬಿಡುವ ಖಾಲಿ ಜಾಗದಿಂದ ಆಗುವ ಸ್ಥಳಾವಕಾಶದ ನಷ್ಟವನ್ನು ತಡೆಯಬಹುದು.ಆದರೆ ಈ ರೀತಿಯ ಬದಲಾವಣೆ ಮಾಡಿದರೆ,ಹಳೆಯ ಕಂಪ್ಯೂಟರ್ ಕಾರ್ಯನಿರ್ವಹಣಾ ವ್ಯವಸ್ಥೆಯನ್ನು ಹೊಂದಿದ ಕಂಪ್ಯೂಟರುಗಳಲ್ಲಿ ಹೊಸ ಡಿಸ್ಕುಗಳನ್ನು ಬಳಸುವಾಗ ಸಮಸ್ಯೆಯಾಗಬಹುದು.ಹೊಸ ಕಂಪ್ಯೂಟರ್ ಆಪರೇಟಿಂಗ್ ವ್ಯವಸ್ಥೆಗಳಾದ ವಿಂಡೋಸ್7,ಲೆಪಾರ್ಡ್,ಟೈಗರ್,ಲಿನಕ್ಸ್ ಮುಂತಾದವುಗಳು ಹೊಸ ಡಿಸ್ಕುಗಳ ನಾಲ್ಕುಕಿಲೋಬೈಟು ಸೆಕ್ಟರುಗಳನ್ನು ಗುರುತಿಸಲು ಅಣಿಗೊಂಡಿವೆ.
----------------------------------------------
ಮನೆಗೂ ಬರಲಿದೆ ಫೈಬರ್ ತಂತಿ!

ದೂರಸಂಪರ್ಕ ಜಾಲಗಳಲ್ಲಿ ಅಪ್ಟಿಕಲ್ ಫೈಬರ್ ಬಳಕೆ ಆಗಲು ತೊಡಗಿ ವರ್ಷಗಳೇ ಸಂದಿವೆ.ಆದರೆ ನಮ್ಮ ಮನೆಗಳಿಗೆ ಕೊನೆಯ ಸುತ್ತಿನ ಸಂಪರ್ಕವಿನ್ನೂ ತಾಮ್ರದ ತಂತಿಯದ್ದೇ ಆಗಿದೆ."ಕೊನೆಯ ಮೈಲು" ಅಡಚಣೆಯನ್ನೂ ನಿವಾರಿಸಿ,ಮನೆಗೆ ನೇರ ಫೈಬರ್ ಸಂಪರ್ಕದ ಉದ್ಘಾಟನೆ ಶನಿವಾರ ಜೈಪುರದಲ್ಲಿ ನಡೆಯಿತು.ಭಾರತದಲ್ಲಿ ಮೊದಲ ಬಾರಿಗೆ ಇಂತಹ ಸಂಪರ್ಕ ಸಾಧ್ಯವಾಗಿದ್ದು,ಭಾರತ್ ಸಂಚಾರ್ ನಿಗಮದವರ ಫೈಬರ್‌ಟು‌ಹೋಂ ಯೋಜನೆಯಿಂದ ದೇಶದ ಇತರೆಡೆಯೂ ಇಂತಹ ಸಂಪರ್ಕ ನಿಜವಾಗುವ ಸಮಯ ಹತ್ತಿರ ಬಂದಿದೆ.ಇಂತಹ ಸಂಪರ್ಕ ಸಿಕ್ಕಿದಾಗ,ಇಂಟರ್ನೆಟ್ ಟಿವಿ,ಹೈಡೆಫಿನಿಶನ್ ಟಿವಿ,3D ಟಿವಿಯ ಕನಸು ನನಸಾಗಲಿದೆ.ಅಂತರ್ಜಾಲದಲ್ಲಿ ಪ್ರತಿ ಸೆಕೆಂಡಿಗೆ ಒಂದು ಗಿಗಾಬಿಟ್ ವೇಗ ಸಿಗಲಿದೆ.ಬಯಸಿದ ವಿಡಿಯೋ ವೀಕ್ಷಣೆ ಸೌಲಭ್ಯವನ್ನು ಕೊಡಬಹುದು.ಧ್ವನಿ ಮತ್ತು ವಿಡಿಯೋಫೋನ್ ಸಾಧ್ಯ.

UDAYAVANI
*ಅಶೋಕ್‌ಕುಮಾರ್ ಎ

Monday, March 08, 2010

ಅಂತರ್ಜಾಲ-ಟಿವಿ ಬೆಸೆಯುವ ಯತ್ನ

ಅಂತರ್ಜಾಲ-ಟಿವಿ ಬೆಸೆಯುವ ಯತ್ನ
ಅಂತರ್ಜಾಲವನ್ನು ಟಿವಿಯ ಮೂಲಕವೂ ಲಭ್ಯವಾಗಿಸಿ,ಅಂತರ್ಜಾಲ ಬಳಕೆಯನ್ನು ಕುಟುಂಬದ ಸದಸ್ಯರೆಲ್ಲ ಜತೆ ಅನುಭವಿಸಲು ಅವಕಾಶ ನೀಡುವ ಯತ್ನಗಳು ಹೆಚ್ಚುತ್ತಿವೆ.ಸಾಮಾಜಿಕ ನೆಟ್ವರ್ಕಿಂಗ್ ಅಂತರ್ಜಾಲ ತಾಣಗಳಾದ ಫೇಸ್‌ಬುಕ್,ಅರ್ಕುಟ್,ಫ್ಲಿಕರ್ ಮುಂತಾದ ತಾಣಗಳಲ್ಲಿ ಜನರು ತಮ್ಮ ಚಿತ್ರಗಳನ್ನು ತಮ್ಮ ಮಿತ್ರರ ಜತೆ ಹಂಚಿಕೊಳ್ಳುತ್ತಾರೆ.ಟಿವಿಯ ಮೂಲಕವೂ ಜನರು ಈ ತಾಣಗಳನ್ನು ಪ್ರವೇಶಿಸಿ,ಚಿತ್ರಗಳನ್ನು ನೋಡಿ ಆನಂದಿಸಲು ಅವಕಾಶವೀಯಲು ವೆರಿಜೋನ್ ಕಂಪೆನಿಯ ಟಿವಿಯಲ್ಲಿ ಸಾಧ್ಯ.ಅದಲ್ಲದೆ ಜನರು ತಾವು ನೋಡುತ್ತಿರುವ ಟಿವಿ ಕಾರ್ಯಕ್ರಮಗಳ ಬಗ್ಗೆ ಪ್ರತಿಕ್ರಿಯೆಯನ್ನು ಈ ತಾಣಗಳಲ್ಲಿ ವ್ಯಕ್ತಪಡಿಸಿದರೆ,ಅದನ್ನು ಟಿವಿಯ ಮೂಲಕವೂ ನೋಡಬಹುದು.ಸ್ಯಾಮ್‌ಸಂಗ್ ಕಂಪೆನಿಯ ಎಲ್ ಇ ಡಿ ಹೈಡೆಫಿನಿಶನ್ ಟಿವಿಗಳಲ್ಲಿ,ಸ್ಕೈಪ್ ತಂತ್ರಾಂಶವನ್ನು ಅಳವಡಿಸಲಾಗಿದೆ.ಹಾಗಾಗಿ ಸ್ಕೈಪ್ ಬಳಕೆದಾರರು,ಟಿವಿಯ ಮೂಲಕ ಅಂತರ್ಜಾಲ ಫೋನ್ ಕರೆಗಳನ್ನು ಮಾಡಲು ಅವಕಾಶ ಸಿಗುತ್ತದೆ.ಇನ್ನೆರಡು ತಿಂಗಳಲ್ಲಿ ಇಂತಹ ಟಿವಿಗಳು ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.
----------------------------------------------
ಮಹಿಳಾ ಬ್ಲಾಗಿಗರಿಲ್ಲಿದ್ದಾರೆ!
ಮಹಿಳೆಯರು ಅಂತರ್ಜಾಲದಲ್ಲಿ ವೈವಿಧ್ಯಮಯ ವಿಷಯಗಳಲ್ಲಿ ಬ್ಲಾಗಿಸುವುದರಲ್ಲಿ ಹಿಂದೆ ಬಿದ್ದಿಲ್ಲ.ಅಡುಗೆ,ವಿಮರ್ಶೆ,ಕತೆ,ಕವನ ಹೀಗೆ ವೈವಿಧ್ಯಮಯ ವಿಷಯಗಳ ಬಗ್ಗೆ ಮಹಿಳೆಯರು ಬರೆಯುವುದನ್ನು ಕಾಣಬಹುದು.ರಶ್ಮಿಪೈ ಅವರ http://www.anuraaga.blogspot.com,ತೇಜಸ್ವಿನಿ ಹೆಗಡೆಯವರ http://manasa-hegde.blogspot.com,ದಿವ್ಯಾ ಅವರ,http://adadamaatugalu.blogspot.com,ಸುಧಾಕಿರಣರ http://bhoorame.blogspot.com,ವಿನುತಾರhttp://vinuspeaks.blogspot.com,ಸುನಂದಾರhttp://sunandaskitchen.blogspot.com,ಪ್ರತಿಭಾ ಭಟ್‌ರ http://pratibabhat.blogspot.com,http://cookpratiba.blogspot.com,ಜಯಲಕ್ಷ್ಮಿ ಪಾಟೀಲರhttp://antaraala-jayalaxmi.blogspot.com/ರ ಬ್ಲಾಗ್ ಕಡೆ ಮಹಿಳಾದಿನಾಚರಣೆಯಂದು ಕಣ್ಣು ಹಾಯಿಸಬಹುದು.
----------------------------------
ಮೈಕ್ರೋಸಾಪ್ಟ್‌ನಿಂದ ಆಂಡ್ರಾಯಿಡ್ ಫೋನ್‌ಗೆ ತಂತ್ರಾಂಶ
ಮೈಕ್ರೋಸಾಫ್ಟ್ ಕಂಪೆನಿಯು ತನ್ನ ಪ್ರತಿಸ್ಪರ್ಧಿ ಕಂಪೆನಿಗಳಿಗೆ ತಂತ್ರಾಂಶ ಅಭಿವೃದ್ಧಿ ಪಡಿಸುವ ಚಾಳಿಯನ್ನು ಮುಂದುವರಿಸಿದೆ.ಗೂಗಲ್‌ನ ಮೊಬೈಲ್ ಹ್ಯಾಂಡ್‌ಸೆಟ್‌ಗಳ ಕಾರ್ಯಾಚರಣೆ ವ್ಯವಸ್ಥೆಯಾದ ಆಂಡ್ರಾಯಿಡ್‌ಗಾಗಿ ಈ ತಂತ್ರಾಂಶವನ್ನದು ತಯಾರಿಸಿದೆ.ತಂತ್ರಾಂಶ ಬಳಸಿಕೊಂಡು,ಹ್ಯಾಂಡ್‌ಸೆಟ್‌ನ ಕ್ಯಾಮರಾದಿಂದ ತೆಗೆದ ಬಾರ್‌ಕೋಡ್ ಪಟ್ಟಿಯನ್ನು ಓದುವ ಸಾಧನವಾಗಿ ಬಳಸಬಹುದು.ಐಫೋನ್‌ಗಳಿಗೆ ಕೂಡಾ ಈ ರೀತಿಯ ತಂತ್ರಾಂಶವನ್ನದು ಈ ಮೊದಲು ಅಭಿವೃದ್ಧಿ ಪಡಿಸಿತ್ತು.
-------------------------------------
ಹಸ್ತವೇ ಕೀಲಿಮಣೆ!

ನಮ್ಮ ಹಸ್ತವನ್ನೇ ಕೀಲಿಮಣೆಯಾಗಿ ಬಳಸಿ,ಸಾಧನಗಳಾಗಿ ಬಳಸಬಹುದಾದ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲು,ಕಾರ್ನೆಜಿ ಮೆಲ್ಲಾನ್ ವಿಶ್ವವಿದ್ಯಾಲಯದ ಸಂಶೋಧಕರು ಆರಂಭಿಕ ಯಶಸ್ಸು ಕಂಡಿದ್ದಾರೆ.ಮೈಕ್ರೋಸಾಫ್ಟ್ ರಿಸರ್ಚ್ ಜತೆ ವಿವಿಯ ಸಂಶೋಧಕರು ಜಂಟಿಯಾಗಿ ಈ ಬಗ್ಗೆ ಕೆಲಸ ಮಾಡುತ್ತಿದ್ದಾರೆ.ಆಡಿಯೋಪ್ಲೇಯರ್ ಸಾಧನ ಬಳಸುವಾಗ,ಅದರ ಧ್ವನಿಯನ್ನು ಏರಿಳಿಸಲು,ನಿಲ್ಲಿಸಲು,ಪುನರಾರಂಭಿಸಲು ಹೀಗೆ ಕೆಲವು ನಿಯಂತ್ರಣಗಳು ಬೇಕು ತಾನೇ?ನಮ್ಮ ಎಡಬದಿಯ ಹಸ್ತದ ಬೇರೆ ಬೇರೆ ಭಾಗದಲ್ಲಿ ಬಲಗೈಯ ಬೆರಳಿನಿಂದ ತಟ್ಟಿದರೆ,ಅದನ್ನು ಸಾಧನ ಗ್ರಹಿಸಿ,ತಟ್ಟಿದ ಸ್ಥಾನದ ಅನುಸಾರ,ಅಗತ್ಯ ನಿಯಂತ್ರಣ ತೋರುವಂತಿದ್ದರೆ ಎಷ್ಟು ಚೆನ್ನ ಅಲ್ಲವೇ?ಬಳಕೆದಾರನ ಅಂಗೈಯಿಗೆ ಸಂವೇದಕವನ್ನು ಅಳವಡಿಸಿ,ಬೆರಳಿನಿಂದ ತಟ್ಟಿದ ಸ್ಥಾನವನ್ನು ಗ್ರಹಿಸಲು ಸಂಶೋಧಕರಿಗೆ ಸಾಧ್ಯವಾಗಿದೆ.ಅದೇ ರೀತಿ,ಕ್ಯಾಮರಾದ ಮೂಲಕ ಹಸ್ತವನ್ನು ತಟ್ಟಿದ ಸ್ಥಾನವನ್ನು ಗ್ರಹಿಸಿ,ಕಂಪ್ಯೂಟರಿಗೋ,ಮೊಬೈಲ್ ಸಾಧನಕ್ಕೋ ತಿಳಿಯ ಪಡಿಸುವತ್ತಲೂ ಅವರ ಸಂಶೋಧನೆ ಮುಂದುವರಿದಿದೆ.ನಮ್ಮ ಹಸ್ತದಲ್ಲಿ ಕೀಲಿಮಣೆಯನ್ನು ಮೂಡಿಸಿ,ತಟ್ಟುವಿಕೆಯನ್ನು ಸುಲಭವಾಗಿಸುವುದು,ಅದೇ ರೀತಿ,ಸಾಧನಕ್ಕೆ ಬಳಕೆದಾರ ಯಾವ ಕೀಲಿಯನ್ನು ಅದುಮಲು ಬಯಸಿದ್ದಾನೆ ಎಂದು ತಿಳಿಯ ಪಡಿಸುವತ್ತ ಸಂಶೋಧನೆಗಳು ಮುಂದುವರಿಯಲಿವೆ.ಅದು ಯಶಸ್ವಿಯಾದರೆ,ನಮ್ಮ ಅಂಗೈಯೇ ಕೀಲಿಮಣೆಯಾಗಬಹುದು!
--------------------------------------------------------
ಬ್ರೌಸರ್ ಅಂತ್ಯಕ್ರಿಯೆ
ಮೈಕ್ರೋಸಾಫ್ಟ್ ಕಂಪೆನಿಯ ಬ್ರೌಸರ್ ತಂತ್ರಾಂಶದ ಎಂಟನೇ ಆವೃತ್ತಿ ಈಗ ಲಭ್ಯವಿದೆ.ಆದರೆ ಅದರ ಹಳೆಯ ಆವೃತ್ತಿಯಾದ ಇಂಟರ್ನೆಟ್ ಎಕ್ಸ್‌ಪ್ಲೋರರ್6ನ್ನು ಇನ್ನೂ ಬಳಸುವವ ಕಂಪ್ಯೂಟರ್ ಬಳಕೆದಾರರಿದ್ದಾರೆ.ಇಂತವರ ಅನುಕೂಲಕ್ಕಾಗಿ ಅಂತರ್ಜಾಲ ತಾಣಗಳನ್ನು ವಿನ್ಯಾಸ ಮಾಡುವಾಗ ಹೆಚ್ಚಿನ ಜಾಗ್ರತೆ ತೆಗೆದುಕೊಳ್ಳಬೇಕಾಗುತ್ತದೆ.ಬ್ರೌಸರುಗಳ ಹೊಸ ಆವೃತ್ತಿಗಳು ಬಂದ ಹಾಗೆಲ್ಲಾ,ಹಳೆ ಆವೃತ್ತಿಗಳು ಮತ್ತು ಹೊಸ ಆವೃತಿಯ ಬ್ರೌಸರುಗಳಲೆಲ್ಲಾ ಅಂತರ್ಜಾಲ ತಾಣದ ಪುಟಗಳು ಸರಿಯಾಗಿ ಕಾಣಿಸಿಕೊಳ್ಳುವಂತೆ ತಾಣದ ವಿನ್ಯಾಸ ಮಾಡುವ ಕಿರಿಕಿರಿ ಹೆಚ್ಚುತ್ತಾ ಹೋಗುತ್ತದೆ.ಈಗ ಫೈರ್‌ಫಾಕ್ಸ್ ಬ್ರೌಸರ್ ಹೆಚ್ಚೆಚ್ಚು ಜನಪ್ರಿಯವಾಗುತ್ತಿದೆ.ಹಾಗಾಗಿ ನಿಧಾನವಾಗಿ ಇಂಟರ್ನೆಟ್ ಎಕ್ಸ್‌ಪ್ಲೋರ‍ರ್ ಬ್ರೌಸರಿನ ಮಾರುಕಟ್ಟೆಯ ಸಾರ್ವಭೌಮತ್ವ ಅಂತ್ಯವಾಗುತ್ತಿದೆ.ಅದರ ಜತೆಗೆ ಗೂಗಲ್ ಅಂತಹ ಕಂಪೆನಿಯು ತನ್ನ ತಾಣಗಳನ್ನು ಹಳೆಯ ಆರನೇ ಆವೃತ್ತಿಗೆ ಸಿದ್ಧವಾಗಿಸುವ ಪ್ರಕ್ರಿಯೆಯನ್ನು ನಿಲ್ಲಿಸಲು ನಿರ್ಧರಿಸಿದೆ.ಹಾಗಾಗಿ ಇನ್ನು ಮುಂದೆ ಗೂಗಲ್ ಸೇವೆಗಳು ಇಂಟರ್ನೆಟ್ ಎಕ್ಸ್‌ಪ್ಲೋರ‍ರ್ ಆರರ ಬಳಕೆದಾರರಿಗೆ ಅಲಭ್ಯವಾದರೆ ಆಶ್ಚರ್ಯವಿಲ್ಲ.ಅಂತಹ ಬಳಕೆದಾರರು ಹೊಸ ಆವೃತ್ತಿಗೆ ಬದಲಾಯಿಸಿಕೊಳ್ಳುವುದೇ ಸಮಸ್ಯೆಗೆ ಪರಿಹಾರ.ಇಂಟರ್ನೆಟ್ ಎಕ್ಸ್‌ಪ್ಲೋರ‍ರ್ ಬ್ರೌಸರಿಗೆ ಅಂತಿಮ ಸಂಸ್ಕಾರ ಮಾಡುವ ಅಣಕು ಕಾರ್ಯಕ್ರಮವೊಂದು ಕೊಲೆರೆಡೋದಲ್ಲಿ ವ್ಯವಸ್ಥೆಯಾಗಿತ್ತು.ಒಂದು ನೂರು ಜನ "ಅಂತಿಮಕ್ರಿಯೆ"ಯಲ್ಲಿ ಪಾಲುಗೊಂಡರು.ಆದರೆ ಅಲ್ಲಿ ನೆರೆದವರು ಸುರಿಸಿದ್ದು ಮೊಸಳೆ ಕಣ್ಣೀರು ಎಂದು ಭಾಗವಹಿಸಿದವರು ನಗೆಯಾಡಿದ್ದು ಒಂದು ವ್ಯಂಗ್ಯ.
---------------------------------------------
ಭೂಕಂಪ ತಡೆಯುವ ಕಟ್ಟಡಗಳು
ಭೂಕಂಪವಾದಾಗ ಕಟ್ಟಡಗಳು ಕುಸಿಯುವುದು ಸಾಮಾನ್ಯ ಸಮಸ್ಯೆ.ಇತ್ತೀಚಿನ ಚಿಲಿ ಮತ್ತು ಹೈಟಿಯ ಭೂಕಂಪ ವೇಳೆಯೂ ಕುಸಿದ ಕಟ್ಟಡಗಳ ಅವಶೇಷಗಳಡಿ ಬಿದ್ದು ಸತ್ತವರು ಬಹಳಷ್ಟು ಜನ.ಇದನ್ನು ತಡೆಯಲು ತಂತ್ರಜ್ಞಾನವೇನೋ ಲಭ್ಯವಿದೆ.ಭೂಕಂಪವು ಉಂಟು ಮಾಡುವ ಆಘಾತವನ್ನು ತಡೆದು ಕೊಳ್ಳಲು ಕಟ್ಟಡಗಳ ತಳಪಾಯದಲ್ಲಿ ಶಾಕ್ ಅಬ್ಸಾರ್ಬರ್ ಅಂತಹ ಪದರವನ್ನು ಒದಗಿಸಿ,ಕಟ್ಟಡವು ತುಸು ಅಲುಗಾಡಲು ಅವಕಾಶ ನೀಡುವುದು ಇದಕ್ಕೆ ಸುಲಭ ಪರಿಹಾರವಂತೆ.ಅಂದರೆ ತಳಪಾಯದಲ್ಲಿ ಸ್ಪ್ರಿಂಗುಗಳನ್ನು ಜೋಡಿಸಿದ ಪರಿಣಾಮ ಸಿಕ್ಕುವಂತಹ ರಚನೆಯಿಂದ ಭೂಕಂಪವು ಉಂಟು ಮಾಡುವ ಹಾನಿ ಬಹಳಷ್ಟು ಕಡಿಮೆಯಾಗುವುದು ಅಧ್ಯಯನದಿಂದ ಕಂಡು ಬರುತ್ತದೆ.
UDAYAVANI
*ಅಶೋಕ್‌ಕುಮಾರ್ ಎ

Monday, March 01, 2010

ಕಾಗದದ ಹಾಳೆಯೇ ಪ್ರಯೋಗಾಲಯ!

ಕಾಗದದ ಹಾಳೆಯೇ ಪ್ರಯೋಗಾಲಯ!


ಹಲವು ಪದರಗಳುಳ್ಳ ಕಾಗದದ ತುಂಡಿನ ಒಂದು ಬದಿಗೆ ರಾಸಾಯಿನಿಕಗಳನ್ನು ಲೇಪಿಸಿ,ಇನ್ನೊಂದು ಬದಿಗೆ ಒಂದು ಹನಿ ರಕ್ತ ಹಾಕಿದರೆ,ಕಾಗದದ ಪದರಗಳು ಶೋಧಕದಂತೆ ವರ್ತಿಸಿ,ಅದರಿಂದ ಹಾಯ್ದ ರಕ್ತದ ಹನಿ ರಾಸಾಯಿನಿಕಗಳ ಜತೆ ವರ್ತಿಸಿ,ಬಣ್ಣ ಬಣ್ಣದ ಚಿತ್ರವನ್ನುಂಟು ಮಾಡುತ್ತದೆ.ಈ ಚಿತ್ರಪಟ್ಟಿಯನ್ನು ಪರೀಕ್ಷಿಸಿ,ರೋಗಿಗೆ ಏಡ್ಸ್,ಕ್ಷಯ,ಜಾಂಡೀಸ್ ಇಂತಹ ಭಯಾನಕ ಕಾಯಿಲೆಗಳಿವೆಯೇ ಎನ್ನುವುದನ್ನು ಮಿತ ಖರ್ಚಿನಲ್ಲೇ ಕಂಡು ಹಿಡಿಯುವುದು ಸಾಧ್ಯವಾಗಲಿದೆ.ಹಾವರ್ಡ್ ವಿಶ್ವವಿದ್ಯಾಲಯದ ಪ್ರೊಫೆಸರ್ ವೈಟ್‌ಸೈಡ್ ಅವರ ಪ್ರಯೋಗಗಳು ಈ ನಿಟ್ಟಿನಲ್ಲಿ ಸಾಗಿದ್ದು,ಬಹುತೇಕ ಯಶಸ್ವಿಯಾಗಿವೆ.ಜನಸಾಮಾನ್ಯರ ಕೈಗೆಟಕಬಲ್ಲ ಖರ್ಚಿನಲ್ಲಿ ಹಲವಾರು ರೋಗಗಳನ್ನು ಪರೀಕ್ಷಿಸುವುದು ಸಾಧ್ಯವಾಗಲಿದೆ ಎಂದು ಸಂಶೋಧಕರು ಹೇಳಿಕೊಂಡಿದ್ದಾರೆ.ಅಂದಹಾಗೆ ವೈಟ್‌ಸೈಡ್ ರಸಾಯನ ವಿಜ್ಞಾನಿ.
-------------------------------------------------------------
ದುಬಾರಿಯಾದೀತೇ ಕಂಪ್ಯೂಟರು?
ಅಬಕಾರಿ ಕರವನ್ನು ಹೆಚ್ಚಿಸುವ ನಿರ್ಧಾರವನ್ನು ಬಜೆಟಿನಲ್ಲಿ ಪ್ರಕಟಿಸಿರುವ ಕಾರಣ ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪುಗಳ ದರಗಳು ಏರಲಿವೆ.ದರ ಏರಿಕೆ ಶೇಕಡಾ ಎರಡು ಆಗಬಹುದು ಎಂಬ ಅನಿಸಿಕೆ ಮೂಡಿದೆ.ಮೈಕ್ರೋಪ್ರಾಸೆಸರ್,ಫ್ಲಾಶ್ ಡ್ರೈವ್,ಹಾರ್ಡ್‍ಡಿಸ್ಕ್,ಸಿಡಿ/ಡಿವಿಡಿ ಇವನ್ನು ಪ್ರತ್ಯೇಕವಾಗಿ ಮಾರಾಟ ಮಾಡಿದಾಗ,ಇವುಗಳ ಮೇಲಿನ ಕರ ಶೇಕಡಾ ನಾಲ್ಕರಷ್ಟು ಹೆಚ್ಚಿದ್ದರೂ,ಕಂಪ್ಯೂಟರಿನ ಭಾಗವಾಗಿ ಬಳಸುವ ಈ ಭಾಗಗಳಿಗೆ ಬೆಲೆ ಹೆಚ್ಚದು ಎನ್ನುವ ಅಂಶ ಸಿಹಿಸುದ್ದಿ.
--------------------------
ಇಸ್ರೋದ ಭುವನ್‌ಗೆ ಹೊಳಪು

ಇಸ್ರೋವೂ ಗೂಗಲ್ ಅರ್ಥ್ ಅನ್ನು ಅನುಕರಿಸಿ,ತನ್ನ ಉಪಗ್ರಹಗಳ ಚಿತ್ರಗಳನ್ನು "ಭುವನ್" ಮೂಲಕ ಅಂತರ್ಜಾಲದಲ್ಲಿ ಲಭ್ಯವಾಗಿಸಿದ್ದು ಹಳೆಯ ಸುದ್ದಿ.ಈ ಸೇವೆಯು ನೋಂದಾಯಿತ ಬಳಕೆದಾರರಿಗಷ್ಟೇ ಲಭ್ಯವಿತ್ತು.ಅದನ್ನೀಗ ಮುಕ್ತವಾಗಿ ಬಳಸಬಹುದು.www.bhuvan.nrsc.gov.in ಅಂತರ್ಜಾಲ ವಿಳಾಸದಲ್ಲಿ ತಾಣವಿದೆ.IRS P6(Resourcesat-1) ಮೂಲಕ ಲಭ್ಯವಾದ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲು ಇಸ್ರೋ ಬಯಸಿದೆ.ಫೈರ್‌ಪಾಕ್ಸ್ ಬ್ರೌಸರ್ ಬಳಸಿಯೂ ಭುವನ್ ಚಿತ್ರಗಳನ್ನು ವೀಕ್ಷಿಸಬಹುದು.ಇಲ್ಲಿ ಸಿಗುವ ಚಿತ್ರಗಳಲ್ಲಿ 5.8ಮೀ ಸ್ಪಷ್ಟತೆಯವೂ ಸೇರಿವೆ.ವಿದೇಶೀ ನೆಲವನ್ನು 56ಮೀ ಸ್ಪಷ್ಟತೆಯಲ್ಲಿ ತೋರಿಸಲಾಗಿದೆ.ದೇಶದೊಳಗೆ,ರಾಜ್ಯ,ಜಿಲ್ಲೆ,ತಾಲೂಕು ಮತ್ತು ಹಳ್ಳಿಗಳ ಗಡಿಯನ್ನೂ ಗುರುತಿಸಲಾದ ಮೂರು ಆಯಾಮದ ಚಿತ್ರ ವೀಕ್ಷಣೆಯನ್ನು ಲಭ್ಯವಾಗಿಸಿದೆ.ಸದ್ಯವೇ ಭುವನ್ ಇನ್ನಷ್ಟು ಉತ್ತಮಗೊಳಿಸಲು ಪ್ರಯತ್ನಿಸುವುದಾಗಿ ಇಸ್ರೋ ಬಳಕೆದಾರರಿಗೆ ಬರೆದ ಮಿಂಚಂಚೆಯಲ್ಲಿ ತಿಳಿಸಿದೆ.
--------------------------------------------------
ಶೋಭಕ್ಕನ ವೆಬ್‌ಸೈಟು

www.shobhakarandlaje.com ಮೂಲಕ ಜನರ ಜತೆಗೆ ಸಂಪರ್ಕವನ್ನು ಇರಿಸಿಕೊಳ್ಳಲು ಮಾಜೀ ಸಚಿವೆ ಶೋಭಾ ಕರಂದ್ಲಾಜೆ ಬಯಸಿದ್ದಾರೆ.ವಾರವಾರವೂ ಅಂತರ್ಜಾಲದ ಮೂಲಕ ವಿವಿಧ ವಿಷಯಗಳ ಬಗ್ಗೆ ಸಂವಾದ ನಡೆಸುವ,ಬ್ಲಾಗು ಬರೆವ ಯೋಚನೆಯೂ ಅವರಿಗಿದೆ.ಅಂತರ್ಜಾಲ ತಾಣದಲ್ಲಿ ಉಪಯುಕ್ತ ಕನ್ನಡ ತಾಣಗಳ ಕೊಂಡಿಗಳನ್ನು ಒದಗಿಸಿ,ಜನರಿಗೆ ನೆರವಾಗಲು ಪ್ರಯತ್ನಿಸಲಾಗಿದೆ.ಸರಕಾರಿ ಯೋಜನೆಗಳ ವಿವರಗಳೂ ಇಲ್ಲಿವೆ.ದೇವಸ್ಥಾನಗಳ ಬಗ್ಗೆ ವಿವರಗಳು,ಸಾಧಕರ ಬಗ್ಗೆ ಬರಹಗಳನ್ನು ನೀಡಿ ತಾಣವನ್ನು ಆಕರ್ಷಕವಾಗಿಸುವ ಪ್ರಯತ್ನ ಎದ್ದು ಕಾಣುತ್ತದೆ.
-------------------------------------------------------
ಕಂಪ್ಯೂಟರನ್ನು ಐಫೋನ್ ಬಳಕೆಯಷ್ಟು ಸುಲಭವಾಗಿಸಬಾರದೇ?
ಸ್ಪರ್ಶಮೂಲಕ ಬಳಸಬಹುದಾದ ಸ್ಮಾರ್ಟ್ ಫೋನ್‌ಗಳೇನೋ ಲಭ್ಯವಿವೆ.ತೆರೆಯ ಮೇಲೆ ಬೆರಳನಾಡಿಸಿ,ಅವುಗಳನ್ನು ನಿಯಂತ್ರಿಸುವುದು ಮಕ್ಕಳಾಟದಷ್ಟು ಸುಲಭ.ಅದೇ ಕಂಪ್ಯೂಟರನ್ನು ಬಳಸಲು ಸಾಮಾನ್ಯರಿನ್ನೂ ಹೆದರುವ ಪರಿಸ್ಥಿತಿ ಇದೆ.ಇದಕ್ಕೆ ಮುಖ್ಯ ಕಾರಣ,ಕಂಪ್ಯೂಟರ್ ಕಾರ್ಯನಿರ್ವಹಣಾ ತಂತ್ರಾಂಶವನ್ನಿನ್ನೂ ಸರಳಗೊಳಿಸಲು ಹೆಚ್ಚಿನ ಕೆಲಸವಾಗದಿರುವುದು.ಐಫೋನ್ ಅಥವ ಅಂಡ್ರಾಯಿಡ್ ಫೋನ್‌ಗಳಲ್ಲಿ ಬಳಸಲಾಗುವ ಕಾರ್ಯನಿರ್ವಹಣಾ ತಂತ್ರಾಂಶವನ್ನೇ ಕಂಪ್ಯೂಟರಿಗೂ ಅಳವಡಿಸಿದರೆ ಹೇಗೆ? ಈಗ ನೆಟ್‌ಬುಕ್ ಕಂಪ್ಯೂಟರುಗಳಲ್ಲಿ ಕ್ರೋಮ್ ಓಸ್ ಅನ್ನು ಅದೇ ರೀತಿ ರೂಪಿಸಲಾಗುತ್ತಿದೆ.ನಿಧಾನವಾಗಿ ಸ್ಪರ್ಶ ಸಂವೇದಿ ತೆರೆಯ ಕಂಪ್ಯೂಟರುಗಳು ಸುಲಭ ಬೆಲೆಯಲ್ಲಿ ಲಭ್ಯವಾದ ನಂತರ ಕಂಪ್ಯೂಟರುಗಳ ಬಳಕೆಯೂ ಸರಳವಾಗುವುದು ನಿಶ್ಚಿತ.
----------------------------------------------------
ಎಐಸಿಟಿಇ ತಾಣ ಬ್ಯುಸಿ!
ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು ವೃತ್ತಿಪರ ಕಾಲೇಜುಗಳ ಮೇಲೆ ನಿಯಂತ್ರಣವಿಡುವ ಸರಕಾರದ ಅಂಗಸಂಸ್ಥೆ.ಇದೀಗ ತನ್ನ ಕೆಳಗೆ ಬರುವ ಶಿಕ್ಷಣ ಸಂಸ್ಥೆಗಳ ವಿವರಗಳನ್ನು ಆನ್‌ಲೈನ್ ಮೂಲಕವೂ ಕಲೆ ಹಾಕುತ್ತಿದೆ.ಕಾಲೇಜುಗಳು ಬೋಧಕರ ಮತ್ತು ಸಂಸ್ಥೆಗಳ ವಿವರಗಳನ್ನು ಫೆಬ್ರುವರಿ ಅಂತ್ಯದೊಳಗೆ,ನಿಗದಿತ ನಮೂನೆಯಲ್ಲಿ ಎಐಸಿಟಿಇ ತಾಣಕ್ಕೆ ಅಪ್ಲೋಡ್ ಮಾಡಬೇಕಿದೆ.ನೂರಾರು ಕಾಲೇಜುಗಳೆಲ್ಲವೂ ತಮ್ಮ ಮಾಹಿತಿಯನ್ನು ಅಪ್ಲೋಡ್ ಮಾಡಲು ಪ್ರಯತ್ನಿಸುವಾಗ,ಅದನ್ನು ಸ್ವೀಕರಿಸಲು ಸಮರ್ಥವಾದ ಸರ್ವರ್‌ಗಳು ತಾಣದಲ್ಲಿ ಬಳಕೆಯಾಗದ್ದಕ್ಕೋ ಏನೋ,ಮಾಹಿತಿಗಳು ಸ್ವೀಕೃತವಾಗುವುದೇ ಇಲ್ಲ.ಕಚೇರಿ ವೇಳೆಯ ನಂತರವಾದರೂ ತಾಣದ ಸರ್ವರ್‌ಗಳು ಮುಕ್ತವಾಗಬಹುದು ಎಂದು ಲೆಕ್ಕ ಹಾಕಿ,ನಂತರ ಮಾಹಿತಿ ಅಪ್ಲೋಡಿಗೆ ಪ್ರಯತ್ನಿಸುವವರಿಗೂ ನಿರಾಶೆಯೇ ಕಾದಿದೆ-ಹೀಗೆ ಪ್ರಯತ್ನಿಸುವವರ ಸಂಖ್ಯೆಯೂ ದೊಡ್ಡದೇ ಇದೆ!ಹಾಗಾಗಿ ಎಐಸಿಟಿಇಯ ಗಡುವನ್ನು ಪಾಲಿಸುವುದು ಹೇಗೆ ಎನ್ನುವ ತಲೆಬಿಸಿ ಶಿಕ್ಷಣಸಂಸ್ಥೆಗಳದ್ದಾಗಿವೆ.
------------------------------------------------------------------------------------------------
ತಲೆನೋವು ತಂದಿರುವ ಟ್ವಿಟರ್ ಖಾತೆಗಳ ಹ್ಯಾಕಿಂಗ್
ಟ್ವಿಟರ್‌ನಲ್ಲಿ ಬಳಕೆದಾರರು ಪರಸ್ಪರ ನೇರ ಸಂದೇಶಗಳನ್ನು ಕಳುಹಿಸಿಕೊಳ್ಳುವ ಅನುಕೂಲ ಇದೆ.ಈಗೀಗ ಕೆಲವರ ಖಾತೆಗಳಿಂದ ಅದು ಹೇಗೋ ನೈಜ ಬಳಕೆದಾರರು ಕಳುಹಿಸದ ಸಂದೇಶಗಳೂ ಇತರರನ್ನು ತಲುಪಿ,ಮುಜುಗರ ಉಂಟು ಮಾಡುತ್ತಿವೆ.ಹೀಗೆ ಬರುವ ಸಂದೇಶಗಳು ಹೆಚ್ಚಾಗಿ,"ಇದು ನೀವಲ್ಲವೇ?" ಎಂಬ ಸಂದೇಶ ಹೊತ್ತು ಬರುತ್ತವೆ.ಜತೆಗೆ ಒಂದು ಅಂತರ್ಜಾಲ ವಿಳಾಸವಿರುವ ಕೊಂಡಿಯೂ ಇರುತ್ತದೆ.ಇದನ್ನು ನೋಡಿದಾತನಿಗೆ,ಕೊಂಡಿಯನ್ನು ಕ್ಲಿಕ್ಕಿಸಿದರೆ ತಾನಿರುವ ಚಿತ್ರವೇನೋ ಇದೆ ಎಂದೆನಿಸಿ,ಆತ ಕೊಂಡಿಯನ್ನು ಕ್ಲಿಕ್ಕಿಸುತ್ತಾನೆ.ಆಗ ಟ್ವಿಟರಿನ ನಕಲಿ ಪುಟವೊಂದು ತೆರೆದು,ಬಳಕೆದಾರನ ಹೆಸರು ಮತ್ತು ಗುಪ್ತಪದವನ್ನು ಕೇಳುತ್ತದೆ.ಬಳಕೆದಾರ ತಾನು ಲಾಗಿನ್ ಆಗಬೇಕಿದೆ ಎಂದು ಭಾವಿಸಿ,ತನ್ನ ವಿವರವನ್ನು ನೀಡಿದರೆ,ಆತನ ಗುಪ್ತಪದ ಹ್ಯಾಕರ್ ಪಾಲಾಗುತ್ತದೆ.ಈ ಮಾಹಿತಿ ಬಳಸಿ,ಬಳಕೆದಾರನ ಖಾತೆಯನ್ನು ವಶಕ್ಕೆ ತೆಗೆದುಕೊಂಡು,ಅದರಿಂದ ಇನ್ನಷ್ಟು ಜನರಿಗೆ ಸಂದೇಶ ಕಳುಹಿಸಲು ಹ್ಯಾಕರ್‌ಗೆ ಸಾಧ್ಯವಾಗುತ್ತದೆ.ಇಂತಹ ಹಲವಾರು ಪ್ರಕರಣಗಳು ನಡೆದ ಬಳಿಕ ಇದೀಗ ಟ್ವಿಟರ್ ಈ ಬಗ್ಗೆ ಸಾರ್ವಜನಿಕರನ್ನು ಎಚ್ಚರಿಸಿದೆ.ಆದರೆ ಸಂದೇಶದ ಜತೆ ನೀಡಿರುವ ಕೊಂಡಿ ಸಂಕ್ಷಿಪ್ತಗೊಳಿಸಿ ನೀಡಿರುವ ಕಾರಣ ಅದು ಯಾವ ತಾಣದ ಕೊಂಡಿ ಎಂದು ಊಹಿಸಲು ಬಳಕೆದಾರರಿಗೆ ಸಾಧ್ಯವಾಗುವುದಿಲ್ಲ.ಜತೆಗೆ ಸಂದೇಶ ತಮ್ಮ ವಿಶ್ವಾಸಿ ಹಿಂಬಾಲಕರ ಖಾತೆಯಿಂದ ಬಂದಿರುವ ಕಾರಣ,ಅದನ್ನು ಸಂಶಯಿಸುವ ಕಾರಣವಿಲ್ಲದಿರುವುದು,ಸಮಸ್ಯೆ ಹೆಚ್ಚಲು ಕಾರಣವಾಗಿದೆ.
-------------------------------------------------------------------
ಮಿಲಿಟರಿಯಲ್ಲಿ ಫೇಸ್‌ಬುಕ್,ಟ್ವಿಟರ್ ಓಕೆ
ಸೈನಿಕರು ಭದ್ರತಾ ಕಾರಣಗಳಿಂದಾಗಿ ಫೇಸ್‌ಬುಕ್,ಟ್ವಿಟರ್ ಮುಂತಾದ ಅಂತರ್ಜಾಲ ತಾಣಗಳನ್ನು ಬಳಸಬಾರದೆನ್ನುವ ನಿರ್ಬಂಧವನ್ನು ಅಮೆರಿಕಾದ ರಕ್ಷಣಾ ಖಾತೆ ತೆಗೆದು ಹಾಕಿದೆ.ಇಂತಹ ತಾಣಗಳಿಂದ ಸೈನಿಕರಿಗೆ ಸಿಗುವ ಲಾಭಗಳಿಗೆ ಹೋಲಿಸಿದರೆ,ಭದ್ರತಾ ಸಮಸ್ಯೆ ದೊಡ್ಡ ವಿಷಯವಲ್ಲ ಎಂದು ಇಲಾಖೆ ಅಭಿಪ್ರಾಯಪಟ್ಟಿದೆ.ಆದರೆ ಬ್ಯಾಂಡ್‌ವಿಡ್ತ್ ಅತಿ ಬಳಕೆಯಾದರೆ,ನಿರ್ಬಂಧವನ್ನು ತಾತ್ಕಾಲಿಕವಾಗಿ ವಿಧಿಸಬಹುದು ಎಂದು ಇಲಾಖೆ ಸುತ್ತೋಲೆಯಲ್ಲಿ ಹೇಳಿದೆ.
UDAYAVANI

*ಅಶೋಕ್‌ಕುಮಾರ್ ಎ