Monday, April 26, 2010

ಇ-ಪುಸ್ತಕಗಳು ಮಕ್ಕಳ ಚೀಲವನ್ನು ಹಗುರಾಗಿಸಲಿದೆಯೇ?


udayavani

ಇ-ಪುಸ್ತಕಗಳು ಮಕ್ಕಳ ಚೀಲವನ್ನು ಹಗುರಾಗಿಸಲಿದೆಯೇ?
ಪಠ್ಯಪುಸ್ತಕಗಳು ಮತ್ತು ನೋಟುಪುಸ್ತಕಗಳನ್ನು ಪ್ರತಿದಿನ ಶಾಲೆಗೊಯ್ಯುವ ಮಕ್ಕಳ ಪುಸ್ತಕದ ಹೊರೆ ಕಟುಕರ ಮನಸ್ಸನ್ನೂ ಕರಗಿಸಬಲ್ಲುದು.ಆದರೆ ನಮ್ಮ ಶಿಕ್ಷಣವೇತ್ತರು ಅದಕ್ಕಿನ್ನೂ ಪರಿಹಾರ ಕಂಡುಕೊಂಡಿಲ್ಲ.ಸಮಸ್ಯೆಗೆ ಪರಿಹಾರವನ್ನು ತಂತ್ರಜ್ಞಾನ ನೀಡುವ ಸಾಧ್ಯತೆಗಳು ಉಜ್ವಲವಾಗಿವೆ.ಪಠ್ಯಪುಸ್ತಕಗಳ ಇ-ಪುಸ್ತಕವನ್ನು ಹಾಕಿಕೊಂಡು ಓದಲು ಅನುಕೂಲ ಕಲ್ಪಿಸುವ ಮಿತಬೆಲೆಯ ಇ-ಪುಸ್ತಕಗಳನ್ನು ತಯಾರಿಸಲು ಫ್ರೀಸ್ಕೇಲ್ ಸೆಮಿಕಂಡಕ್ಟರ್ ಪ್ರಯತ್ನಿಸುತ್ತಿದೆ.ಬೆಂಗಳೂರಿನ ಎನ್‌ಕೋರ್ ಮತ್ತು ಹೈದರಾಬಾದಿನ ಎಲ್ಲೋಕ ಸಹಯೋಗದಲ್ಲಿವನ್ನು ತಯಾರಿಸಿ,ಮಾರಾಟಕ್ಕೆ ಒದಗಿಸುವ ಯೋಜನೆಯಿದೆ. ಬ್ಯಾಟರಿ ಬಾಳಿಕೆ ಮತ್ತು ಕಾರ್ಯಕ್ಷಮತೆ ಹೆಚ್ಚಿಸಿ,ಮಕ್ಕಳ ಕೈಯಲ್ಲಿನ ಜಾಗರೂಕತೆಯಿಲ್ಲದ ನಿರ್ವಹಣೆಯನ್ನು ತಾಳಿಕೊಳ್ಳಬಲ್ಲ ಸಾಮರ್ಥ್ಯವನ್ನಿವು ಹೊಂದುವಂತೆ ವಿನ್ಯಾಸ ಮಾಡಲಾಗುತ್ತಿದೆ.ಬೆಲೆಯನ್ನು ಏಳೆಂಟು ಸಾವಿರದ ಸಮೀಪ ಇರಿಸುವುದು ಕಂಪೆನಿಯ ಗುರಿ.ಪಠ್ಯಪುಸ್ತಕದ ಇ-ಪುಸ್ತಕಗಳು ಸಮಸ್ಯೆಯಾಗದು.ಈಗಾಗಲೆ ಎನ್ ಸಿ ಇ ಆರ್ ಟಿ,ಸಿಬಿಎಸ್ ಇ ಪಠ್ಯಪುಸ್ತಕಗಳ ಇ-ಪ್ರತಿ ಲಭ್ಯವಿವೆಯಂತೆ.ಆದರೆ ಇಂತಹ ಪರಿಹಾರ ಮೇಲ್ಮಧ್ಯಮ ವರ್ಗದ ಮಕ್ಕಳಿಗಳಿಗೆ ಮಾತ್ರಾ ಎಟಕುವ ಹಾಗಿದೆ ಎನ್ನುವುದು ವಾಸ್ತವ.
-----------------------------------------------------------------------
ಸುಲಭವಾಗಿ ಕೋಷ್ಟಕಗಳನ್ನು ಟೈಪಿಸಿ!

 ಪದಸಂಸ್ಕಾರಕ ತಂತ್ರಾಂಶದಲ್ಲಿ ಕೋಷ್ಟಕಗಳನ್ನು ಟೈಪಿಸುವುದು ಬಹಳ ಸುಲಭ.ಕೀಲಿ ಮಣೆಯನ್ನು ಬಳಸಿ(ಮೌಸ್ ಬಳಸದೇ) ಬೇಕಾದ ಕೋಷ್ಟಕ ಟೈಪಿಸಬಹುದು. ಪುಟದ ಯಾವ ಸ್ಥಳದಲ್ಲಿ ಕೋಷ್ಟಕ ಬೇಕೋ ಅಲ್ಲಿ,ಕರ್ಸರ್ ಇರಿಸಿ, + ಚಿಹ್ನೆಯನ್ನು ಟೈಪಿಸಿ.ಎಲ್ಲಿಯವರೆಗೆ ಕೋಷ್ಟಕದ ಪಟ್ಟಿ ಬೇಕೋ ಅಲ್ಲಿಯವರೆಗೆ - ಅನ್ನು ಟೈಪಿಸಿ.ಮೊದಲ ಚೌಕದ ಅಗಲ ಸಾಕೆನಿಸಿದಾಗ,ಮತ್ತೆ + ಟೈಪಿಸಿ.ನಂತರದ ಎರಡನೆಯ,ಮೂರನೆಯ ಚೌಕಗಳಿಗೂ ಹೀಗೇ ಮಾಡಿ.ಬೇಕಾದಷ್ಟು ಕೋಣೆಗಳಾದಾಗ enter ಕೀಲಿ ಒತ್ತಿ.ಕೋಷ್ಟಕದ ಮೊದಲ ಸಾಲು ತಯಾರಾಗುತ್ತದೆ. ಮುಂದೆ ಟ್ಯಾಬ್ ಕೀಲಿಯನ್ನು ಒತ್ತುತ್ತಾ,ಇದೇ ಆಕಾರದ ಸಾಲುಗಳನ್ನು ಪುನರಾವರ್ತಿಸಬಹುದು.
+------+------+-------+
ಮೇಲೆ ತೋರಿಸಿದ ಹಾಗೆ ಟೈಪಿಸಿದರೆ,ಮೂರು ಕೋಣೆಗಳಿರುವ ಕೋಷ್ಟಕದ ತಯಾರಿಗೆ ಸಿದ್ಧತೆ ಪೂರ್ಣವಾಯಿತು.ನಂತರ enter ,ಆಮೇಲೆ enter ಮತ್ತು ಟ್ಯಾಬ್ ಕೀಲಿ ಬಳಸಿದರಾಯಿತು!
------------------------------------------------------------------------
ಸುವಾಸನೆಯ ಕಸದ ರಾಶಿ!

 ಬೀಜಿಂಗ್‌ನ ಜನಸಂಖ್ಯೆ ಹದಿನೇಳು ದಶಲಕ್ಷಕ್ಕೂ ಹೆಚ್ಚು.ಪ್ರತಿದಿನ ನಗರದಲ್ಲಿ ಹದಿನೆಂಟು ಸಾವಿರಕ್ಕೂ ಅಧಿಕ ಟನ್ ಕಸ ಎಸೆಯಬೇಕಾಗುತ್ತದೆ.ನಗರದ ಮೂರು ಕಡೆ ಕಸವನ್ನೆಸೆಯುವ ಗುಂಡಿಗಳಿವೆ.ಬೇಸಗೆಯ ಈ ದಿನಗಳಲ್ಲಿ,ಇಲ್ಲಿನ ನಿವಾಸಿಗಳು ಗಾಳಿ ಬೀಸಲೆಂದು ಕಿಟಕಿ ತೆರೆದರೆ,ನಾರುವ ಕಸದ ರಾಶಿಯ ವಾಸನೆ ಮೂಗಿಗೆ ಅಡರುತ್ತದೆ.ಕೆಲವರಿಗಿದು ಕೆಮ್ಮಿನ ಕಾಟವನ್ನೂ ಉಂಟು ಮಾಡುತ್ತದೆ.ಕಸದ ವಿಲೇವಾರಿ ಮಾಡುವ ಕಂಪೆನಿ ಗ್ವಾಂಟುನ್ ಗಾರ್ಬೇಜ್ ಲ್ಯಾಂಡ್‌ಫಿಲ್ ಘಟಕವು ಇದಕ್ಕೊಂದು ಪರಿಹಾರ ಕಂಡು ಹಿಡಿದಿದೆ.ಸಸ್ಯವೊಂದರಿಂದ ತೆಗೆದ ಸುವಾಸಿತ ಸ್ಪ್ರೇಯನ್ನು ಈ ಕಸದ ರಾಶಿಯ ಮೇಲೆ ಸಿಂಪಡಿಸಲಾಗುತ್ತದೆ.ಇದಕ್ಕೆ ಲೀಟರುಗಟ್ಟಲೆ ಸ್ಪ್ರೇ ಬೇಕಾಗುತ್ತದೇನೋ ನಿಜ.ಆದರೆ ಕಸದ ವಾಸನೆ ಅಡಗಿ,ಅದು ಸುವಾಸನೆ ಬೀರಲಾರಂಬಿಸುತ್ತದೆ.ಇದರ ಮೇಲೆ ನಾರುವ ವಾಸನೆಯನ್ನು ಹೀರುವ  ಹಾಳೆಯ ಹೊದಿಕೆಯನ್ನು ಹೊದಿಸಿ,ನಂತರ ಇನ್ನಷ್ಟು ಸುವಾಸಿತ ಸಿಂಪಡಣೆ ಮಾಡಲಾಗುತ್ತದೆ.ಇಂತಹ ಪರಿಹಾರಗಳೇನಿದ್ದರೂ ತಾತ್ಕಾಲಿಕ ಎಂದು ಮೂಗು ಮುರಿಯುವ ಪರಿಸರವಾದಿಗಳು ಬೇಕಾದಷ್ಟಿದ್ದಾರೆ.ಸುವಾಸನೆ ಬಂದರೂ,ಇವು ಪರಿಸರಕ್ಕೆ ಹಾನಿ ಮಾಡದೆ ಇರುವುದಿಲ್ಲ ಎಂದು ಅವರುಗಳ ಕಿಡಿನುಡಿ.
-------------------------------------------------------
ಮಂಕುತಿಮ್ಮನ ಕಗ್ಗ ಮತ್ತು ಪಟ್ಟಣಸುದ್ದಿ

ಬ್ಲಾಗಿನಲ್ಲಿ ಮಂಕುತಿಮ್ಮನ ಕಗ್ಗದ ತಾತ್ಪರ್ಯವನ್ನು ನಿಯತವಾಗಿ ಉಣಬಡಿಸುವ ಬ್ಲಾಗು http://todayskagga.blogspot.comನಲ್ಲಿ ಕಾಣಬಹುದು.ಮಂಕುತಿಮ್ಮನ ಬಗ್ಗೆ ಬಂದಿರುವ ಪುಸ್ತಕಗಳಿಂದ ತೆಗೆದ ಅರ್ಥವಿವರಣೆಯನ್ನು ಬ್ಲಾಗಿನಲ್ಲಿ ಬಳಸಲಾಗಿದೆ.ಅಮೆರಿಕಾದಲ್ಲಿರುವ ಅನಿವಾಸಿ ಭಾರತೀಯ ವೆಂಕಟೇಶ್ ಮೂರ್ತಿ ಈ ಬ್ಲಾಗ್ ನಿರ್ವಹಿಸುತ್ತಿದ್ದಾರೆ.
ಜಗನ್‌ಮೋಹನ ಉದ್ಯಾವರ ಅವರು ಸದಾ ತಿರುಗಾಟದಲ್ಲಿರುವವರು.ತಾವು ವಿವಿಧ ಪಟ್ಟಣಗಳಲ್ಲಿ ಕಂಡ ಸ್ವಾರಸ್ಯಕರ ಅಂಶಗಳನ್ನು ಹಂಚಿಕೊಳ್ಳಲು ಬ್ಲಾಗ್ ಮಾಧ್ಯಮದ ಉಪಯೋಗ ಪಡೆದಿದ್ದಾರೆ.http://www.pattanasuddi.blogspot.com/ಯಲ್ಲಿ ಸ್ವಾರಸ್ಯಕರ ತುಣುಕುಗಳನ್ನು ಪ್ರಸ್ತುತ ಪಡಿಸಿದ್ದಾರೆ.
----------------------------------------------------------------
ಮತ್ತೊಂದು ಇ-ಬುಕ್ ಎಚ್ ಪಿ ಸ್ಲೇಟ್

ಐಪ್ಯಾಡ್ ಅನ್ನುವ ಸಾಧನವನ್ನು ಆಪಲ್ ಮಾರುಕಟ್ಟೆಗೆ ತಂದಿರುವ ಬೆನ್ನಲ್ಲೇ,ಅಂತಹುದೇ ಸಾಧನವನ್ನು ಹ್ಯುಲೆಟ್ ಪ್ಯಕರ್ಡ್ ಕಂಪೆನಿಯೂ  ತಯಾರಿಸುತ್ತಿದೆ.ಕನೆಕ್ಟಿಕಾ ಎನ್ನುವ ತಾಣದ ವರದಿ ಪ್ರಕಾರ ಐಪ್ಯಾಡಿಗೆ ಹೋಲಿಸಿದರೆ,ಸ್ಲೇಟ್‌ನಲ್ಲಿ ಹೆಚ್ಚಿನ ಸ್ಪಷ್ಟತೆಯಿದೆ.ಫ್ಲಾಶ್ ತಂತ್ರಾಂಶವೂ ಇದರಲ್ಲಿ ಕೆಲಸ ಮಾಡುತ್ತದೆ.ಜತೆಗೆ ಇದರ ಪ್ಲಾಸ್ಟಿಕ್ ಹೊರಕವಚ ಹೆಚ್ಚು ದೃಡ ರಚನೆಯ ರಕ್ಷಣೆಯನ್ನು ಸಾಧನಕ್ಕೆ ನೀಡುತ್ತದೆ.
--------------------------------------
ಅಂತರ್ಜಾಲದಲ್ಲಿ ವಸ್ತುಪ್ರದರ್ಶನ,ಸಮಾವೇಶಗಳು


 ವಸ್ತುಪ್ರದರ್ಶನ,ಟ್ರೇಡ್ ಶೋ,ಸಮಾವೇಶಗಳನ್ನು ಏರ್ಪಡಿಸಿ ಜನರಿಗೆ ಹೊಸ ಆವಿಷ್ಕಾರಗಳ ಬಗ್ಗೆ ಮಾಹಿತಿ ನೀಡುವುದು ಹಿಂದಿನಿಂದಲೂ ನಡೆದು ಬಂದಿದೆ.ಈಗ ಇಂತವನ್ನು ಅಂತರ್ಜಾಲದಲ್ಲೂ ಮಾಡಲು ಸಾಧ್ಯ. ಸೆಕೆಂಡ್ ಲೈಫ್,ಓ ಎನ್24 ಮತ್ತು ಯುನಿಸ್ಫ಼ೇರ್ ಕಂಪೆನಿಗಳು ಜತೆಯಾಗಿ ಅಂತರ್ಜಾಲದಲ್ಲಿ ವಸ್ತುಪ್ರದರ್ಶನಗಳನ್ನು ಆಯೋಜಿಸುವುದನ್ನು ಸಾಧ್ಯವಾಗಿಸಿವೆ.ನಗರಗಳಿಗೆ ದೂರದೂರಿನಿಂದ ಬಂದು,ವಸತಿ-ಊಟಗಳಿಗೆ ಖರ್ಚು ಮಾಡುವ ಬದಲು ಕುಳಿತಲ್ಲಿಂದಲೇ ವಸ್ತುಪ್ರದರ್ಶನವನ್ನು ನೋಡಿ,ತಮಗೆ ಬೇಕಾದ ಮಾಹಿತಿ ಪಡೆಯುವ ಸೌಕರ್ಯವನ್ನು ಪಡೆಯಬಹುದು.ಆಯೋಜಕರಿಗೂ ಯಾರೆಲ್ಲಾ ತಮ್ಮ ಪ್ರದರ್ಶನದ ಬಗ್ಗೆ ಕುತೂಹಲ ವ್ಯಕ್ತಪಡಿಸಿದರು,ಪ್ರದರ್ಶನವನ್ನು ಎಷ್ಟು ಹೊತ್ತು ವೀಕ್ಷಿಸಿದರು ಎನ್ನುವುದನ್ನು ತಿಳಿದು,ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತದೆ.ಅಟೋ ವೀಕ್ ಎನ್ನುವ ಜನಪ್ರಿಯ ವಾಹನಗಳ ಬಗೆಗಿನ ಪತ್ರಿಕೆಯು  ಕಾರುಗಳ ಬಗೆಗಿನ  ಟ್ರೇಡ್ ಶೋವನ್ನು ಸದ್ಯವೇ ನಡೆಸಲಿದೆ.


*ಅಶೋಕ್‌ಕುಮಾರ್ ಎ

Monday, April 19, 2010

ಮುದ್ರಿಸಲು ಗೂಗಲ್ ಸೇವೆ

ಮುದ್ರಿಸಲು ಗೂಗಲ್ ಸೇವೆ
ನಿಮ್ಮ ಪ್ರಿಂಟರ್ ಯಾವುದೇ ಇದ್ದರೂ,ಅದನ್ನು ಅಂತರ್ಜಾಲ ಮೂಲಕವೇ ನಿಯಂತ್ರಿಸಿ,ಅದರಿಂದ ಮುದ್ರಣ ಸೇವೆಯನ್ನು ಪಡೆಯುವ ಕ್ಲೌಡ್ ಕಂಪ್ಯೂಟಿಂಗ್ ಸೇವೆ ನೀಡಲು ಗೂಗಲ್ ಮುಂದಾಗಿದೆ.ಸಾಮಾನ್ಯವಾಗಿ,ಮುದ್ರಕದ ಸೇವೆ ಪಡೆಯಲು ಕಂಪ್ಯೂಟರ್‌ನ ಕಾರ್ಯನಿರ್ವಹಣಾ ವ್ಯವಸ್ಥೆ ತಂತ್ರಾಂಶದ ಮತ್ತು ಮುದ್ರಕದ ಡ್ರೈವರ್ ತಂತ್ರಾಂಶದ ನೆರವು ಬೇಕು.ಅಂತರ್ಜಾಲದ ಮೂಲಕ ಇವುಗಳ ನೇರವಾಗಿ ಮುದ್ರಕಕ್ಕೆ ಮುದ್ರಣ ಪ್ರತಿಗಳಿಗೆ ಕೋರಿಕೆ ಸಲ್ಲಿಸುವ ಹೊಸ ತಂತ್ರವನ್ನು ಪ್ರಯೋಗಿಸಲು ಗೂಗಲ್ ಸಜ್ಜಾಗಿದೆ. ನಿಮ್ಮ ಮುದ್ರಕ ಯಾವ ಕಂಪೆನಿಯದ್ದು ಮುಂತಾದ ವಿವರಗಳನ್ನು ನೀವು ನೀಡಿದರೆ ಈ ಸವಲತ್ತ್ತು ನಿಮ್ಮದಾಗುತ್ತದೆ.ಅಂತರ್ಜಾಲ ಮೂಲಕವೇ ಕೆಲಸ ಸಾಧಿಸಿಕೊಳ್ಳುವ ಗೂಗಲ್ ಕ್ರೋಮ್ ಬ್ರೌಸರ್ ಮೂಲಕ ಈ ಸೇವೆ ಪಡೆಯಬಹುದು.
-----------------------------------------
ಐಪ್ಯಾಡ್ ಮೂಲಕ ದೇಶದ ಆಡಳಿತ

ಐಪ್ಯಾಡ್ ಮೂಲಕ ದೇಶದ ಆಡಳಿತದ ಚುಕ್ಕಾಣಿಯನ್ನು ಚಲಾಯಿಸುವ ಪ್ರಸಂಗ ಇತ್ತೀಚೆಗೆ ನಾರ್ವೆಯ ಪ್ರಧಾನಿಗೆ ಬಂತು.ಅಮೆರಿಕಾಗೆ ಭೇಟಿ ನೀಡಲು ಬಂದಿದ್ದ,ನಾರ್ವೆಯ ಪ್ರಧಾನಿಯು,ಸ್ಟೊಲ್ಟೆನ್‌ಬರ್ಗ್ ಅವರು,ಐಸ್‌ಲ್ಯಾಂಡಿನ ಜ್ವಾಲಾಮುಖಿಯ ಬೂದಿಯ ಕಾರಣ ವಿಮಾನ ಹಾರಾಟ ಸ್ಥಗಿತವಾಗಿ,ಅಮೆರಿಕಾದಿಂದ ಹಿಂದಿರುಗುವುದು,ನಿಧಾನವಾಯಿತು.ನಾರ್ವೆಯಲ್ಲಿನ ತಮ್ಮ ಕಚೇರಿಯ ತುರ್ತು ಕೆಲಸಗಳನ್ನು ನಿರ್ವಹಿಸಲು,ನಾರ್ವೆಯ ಪ್ರಧಾನಿ ತಮ್ಮ ಬಳಿಯಿದ್ದ ಹೊಸ ಐಪ್ಯಾಡನ್ನು ಬಳಸಿದರು.ನಂತರ ವಿಮಾನ ಸೇವೆ ಲಭ್ಯವಿದ್ದ ಸ್ಪೇನಿಗೆ ತೆರಳಿ,ವಾಹನದ ಮೂಲಕ ಸ್ಪೇನಿನಿಂದ ನಾರ್ವೆಯತ್ತ ಪ್ರಯಾಣ ಬೆಳೆಸಿದ ಕಾರಣ, ಈ ಐಪ್ಯಾಡ್ ಆಡಳಿತ ಹೆಚ್ಚು ಉದ್ದವಾಗುವುದು ತಪ್ಪಿತು!
--------------------------------------------------------
ಮೊಬೈಲಿನಲ್ಲಿ ಮೊಬಿಟಿವಿ
ಮೊಬಿಟಿವಿಯು ಮೊಬೈಲ್ ಮೂಲಕ ಟಿವಿ ಸೇವೆ ಆರಂಭಿಸಿದಾಗ,ಕ್ರೀಡಾ ಚಾನೆಲುಗಳ ಮೂಲಕ ಆರಂಭಿಸಿತು.ಈಗ ಮೊಬಿಟಿವಿಯು ಸುದ್ದಿ ಚಾನೆಲುಗಳ ಜತೆ ಆಯ್ದ ಮನರಂಜನಾ ಚಾನೆಲುಗಳನ್ನು ನೀಡಲಾರಂಭಿಸಿದೆ.ಮಾಸಿಕ ಹತ್ತು ಡಾಲರು ಮತ್ತು ಅರ್ಧವಾರ್ಷಿಕ ನಲುವತ್ತೈದು ಡಾಲರುಗಳಿಗೆ ಲಭ್ಯ.ಸುಮಾರು ಮೂವತ್ತು ಚಾನೆಲುಗಳು ಲಭ್ಯ.ಆದರಿದು ಸದ್ಯ ಭಾರತದ ಮೊಬೈಲ್ ಬಳಕೆದಾರರಿಗೆ ಸಿಗದು.ತ್ರೀಜಿ ಸೇವೆಗಳು ಈಗ ನಮ್ಮಲ್ಲೂ ಆರ‍ಂಭವಾಗಿರುವ ಕಾರಣ ಇಲ್ಲೂ ಮೊಬೈಲ್ ಮೂಲಕ ಟಿವಿ ನಿಜವಾಗುವ ದಿನಗಳು ದೂರವಿಲ್ಲ.
-------------------------------------------
ಟ್ವಿಟರ್:ಜಾಹೀರಾತು ಮೂಲಕ ಆದಾಯದತ್ತ
ಟ್ವಿಟರ್ ಅಂತರ್ಜಾಲ ತಾಣವು ಜಗತ್ತಿನ ಅತ್ಯಂತ ಪ್ರಮುಖ ಸಂಪರ್ಕ ಮಾಧ್ಯಮವಾಗಿ ರೂಪುಗೊಂಡಿದೆ.ಆದರೂ ಅಂತರ್ಜಾಲ ತಾಣವಿನ್ನೂ ಆದಾಯ ಗಳಿಸುತ್ತಿಲ್ಲ.ಇನ್ನು ಮುಂದೆ ಟ್ವಿಟರ್ ಸಂದೇಶಗಳನ್ನು ಶೋಧಿಸಿದಾಗ,ಪ್ರದರ್ಶಿತವಾಗುವ ಸಂದೇಶಗಳ ಜತೆ ಜಾಹೀರಾತುಗಳು ಕಾಣಿಸಿಕೊಳ್ಳಬಹುದು ಎನ್ನುವ ಸೂಚನೆಯಿದೆ.ಇವುಗಳ ಮೂಲಕ ಟ್ವಿಟರ್ ಜನಪ್ರಿಯತೆಯನ್ನು ಕ್ಯಾಶ್ ಮಾಡಿಕೊಳ್ಳುವ ಯೋಜನೆ ತಾಣದ ನಿರ್ವಾಹಕರದ್ದು.ಮೊಬೈಲ್ ಮೂಲಕ ಟ್ವಿಟರ್ ಬಳಕೆಯನ್ನು ಹೆಚ್ಚಾಗಿಸಿ,ತನ್ನ ಜನಪ್ರಿಯತೆಯನ್ನು ಕಾಯ್ದುಕೊಳ್ಳುವುದಕ್ಕೆ ಟ್ವಿಟರ್ ಯೋಜನೆ ಹಾಕಿದೆ.ಜನಸಂಖ್ಯೆಯಲ್ಲಿ ಕಂಪ್ಯೂಟರ್ ಒಂದು ಬಿಲಿಯನ್ ಜನರನ್ನು ಮುಟ್ಟಿದ್ದರೆ,ಮೊಬೈಲ್ ಬಳಕೆ ಮಾಡುವವರ ಸಂಖ್ಯೆ ಇದರ ನಾಲ್ಕು ಪಟ್ಟು ಇರುವುದೇ ಇದಕ್ಕೆ ಕಾರಣ.
-------------------------------------------------------------
ಐಫೋನ್:ಸ್ಪರ್ಶದ ಮೂಲಕ ಬಿಲ್ ಪಾವತಿ
ಪೇಪಾಲ್ ಖಾತೆಯನ್ನು ಹೊಂದಿದ್ದು,ಖಾತೆಯಲ್ಲಿ ನಗದು ಇದ್ದರೆ,ನಿಮ್ಮ ಖರೀದಿಯ ಬಿಲ್ ಪಾವತಿ ಮಾಡುವುದು ಸುಲಭ.ಐಪೋನ್ ಬಳಕೆದಾರರು,ತಮ್ಮ ಪೇಪಾಲ್ ಖಾತೆಯ ಮೂಲಕ ಬಿಲ್ ಪಾವತಿ ಮಾಡಲು ಅಂಗಡಿಯಾತನ ಐಫೋನ್‌ಗೆ ತಮ್ಮ ಐಫೋನ್ ಅನ್ನು ಸ್ಪರ್ಶಿಸಿದರೆ ಸಾಕು.ಖಾತೆಯಿಂದ ಹಣ ವರ್ಗಾವಣೆಯಾಗುತ್ತದೆ.ಇದು ನಿಜವಾಗಲು,ಐಫೋನ್ ತಂತ್ರಾಂಶವೊಂದನ್ನು ಇಳಿಸಿಕೊಂಡು ಐಫೋನಿನಲ್ಲಿ ಅನುಸ್ಥಾಪಿಸಿಕೊಳ್ಳಬೇಕು.
----------------------------------------
ಪಡ್ನೀಸ್ ನಗೆಲಹರಿ

ಶಿವರಾಮ ದತ್ತಾತ್ರೇಯ ಪಡ್ನೀಸ್ ಎಂಬ ಹಿರಿಯ ವ್ಯಂಗ್ಯಚಿತ್ರಕಾರರ ಚಿತ್ರಗಳು ಭಾಷಾ ಸೀಮೆಯನ್ನು ದಾಟಿ,ಎಲ್ಲರ ಮುಖದಲ್ಲೂ ನಗೆಯನ್ನು ಮೂಡಿಸಲು ಸಮರ್ಥವಾಗಿವೆ.ಆಯ್ದ ಕೆಲವನ್ನು ಅಂತರ್ಜಾಲದಲ್ಲಿಯೂ ನೋಡಬಹುದು.http://www.sdphadnis.com/ ಅಂತರ್ಜಾಲ ತಾಣವು ಅವರ ಚಿತ್ರಗಳ ಸಂಗ್ರಹವನ್ನು ನಿಮ್ಮ ಮುಂದೆ ತೆರೆದಿಡುತ್ತದೆ.ಅಡಿಬರಹಗಳಿಲ್ಲದೆ,ಚಿತ್ರಗಳೇ ಮಾತನಾಡುವ ಈ ವ್ಯಂಗ್ಯಚಿತ್ರಗಳು ಹಳೆಯವಾದರೂ,ಈಗಿನ ಕಾಲಕ್ಕೂ ಪ್ರಸ್ತುತವಾಗಿರುವುದು ಅಚ್ಚರಿ ಹುಟ್ಟಿಸುತ್ತವೆ.
------------------------------------------------------------------
ಗೂಗಲ್ ಶೋಧ ಸುಲಭ
ಅಂತರ್ಜಾಲದಲ್ಲಿ ಹುಡುಕಾಟ ನಡೆಸಲು ನೀವು ನೀಡುವ ಪದಗುಚ್ಛದ ಒಂದೆರಡು ಅಕ್ಷರಗಳನ್ನು ಟೈಪಿಸಿದೊಡನೆ,ಇತರರು ಹುಡುಕುತ್ತಿರುವ ಜನಪ್ರಿಯ ಶೋಧ ಪದಗುಚ್ಛಗಳನ್ನು ತೋರಿಸಿ,ನಿಮಗೆ ನೆರವಾಗುವ ಗೂಗಲ್ ಸೇವೆ ಲಭ್ಯವಿರುವುದು ನಿಮ್ಮ ಗಮನಕ್ಕೆ ಬಂದಿದೆಯಲ್ಲಾ?ಅದೇ ರೀತಿ,ನಿಮ್ಮ ಟೈಪಿಂಗಿನಲ್ಲಿ ತಪ್ಪುಗಳು ನುಸುಳಿರುವ ಸಂಶಯ ಬಂದರೆ,ತಾವು ಹುಡುಕುತ್ತಿರುವ ಪದಗುಚ್ಛ ಇದುವೇ ಎಂದು ನಿಮ್ಮ ಗಮನ ಸೆಳೆಯುವ ಗೂಗಲ್ ಸೇವೆಯೂ ಇದೆ.ಇಂತಹ ಸಹಾಯ ಹಲವಾರು ಪ್ರಾದೇಶಿಕ ಭಾಷೆಗಳಲ್ಲೂ ಇದೆ.ವ್ಯಕ್ತಿಗಳ ಬಗ್ಗೆ ಹುಡುಕಾಟ ನಡೆಸುವಾಗ,ಅವರ ಕ್ಷೇತ್ರಗಳ ಬಗ್ಗೆ ಸೂಚಿಸುವ ಬಗ್ಗೆ ಜನರ ಅಭ್ಯಾಸಕ್ಕೆ ಗೂಗಲ್ ಸ್ಪಂದಿಸುತ್ತದೆ."ಕಲಾವಿದ ಹುಸೇನ್" ಎಂಬಂತಹ ಪದಗುಚ್ಛಕ್ಕೆ ಗೂಗಲ್ ಶೋಧ ಸರಿಯಾಗಿ ಸ್ಪಂದಿಸಬಲ್ಲುದು.
--------------------------------------------
ಸಮುದ್ರತಳದ ಕೇಬಲ್ ಸಂಪರ್ಕ ಸ್ಥಗಿತ
ಅಲೆಕ್ಸಾಂಡ್ರಿಯಾ ಮತ್ತು ಮಾರ್ಶೆಲೀಸ್ ನಡುವಣ ಸಮುದ್ರತಳದ ಫೈಬರ್ ಕೇಬಲ್ ಸಂಪರ್ಕದಲ್ಲಿ ಸಮಸ್ಯೆ ಉದ್ಭವಿಸಿದ್ದು,ಭಾರತ,ಕೊಲ್ಲಿ ರಾಷ್ಟ್ರಗಳ ಅಂತರ್ಜಾಲ ಸಂಪರ್ಕದಲ್ಲಿ ಕೊರತೆ ಕಾಣಿಸುವ ಸಾಧ್ಯತೆಯ ಬಗ್ಗೆ ಬಳಕೆದಾರರಿಗೆ ಸೂಚನೆ ನೀಡಲಾಗಿದೆ.ಸುಮಾರು ಹದಿನೆಂಟು ಸಾವಿರ ಕಿಲೋಮೀಟರ್ ದೂರದ ಈ ಕೇಬಲ್ ಸಂಪರ್ಕದ ಮೂಲಕ ಏರ್‌ಟೆಲ್ ಸೇರಿದಂತೆ ಹಲವಾರು ಸೇವಾದಾತೃಗಳು ಬ್ರಾಡ್‌ಬ್ಯಾಂಡ್ ಸೇವೆ ಒದಗಿಸುತ್ತಿದ್ದಾರೆ.ಸಮಸ್ಯೆ ಸರಿಪಡಿಸುವವ ವರೆಗೆ ಸೇವಾನ್ಯೂನ್ಯತೆ ಬಾಧಿಸಬಹುದು.ಅಂದಹಾಗೆ ಈ ಕೇಬಲ್ ಸಂಪರ್ಕಕ್ಕೆ ಸೀ-ಮಿ-ವಿ-4 ಎಂಬ ಹೆಸರಿದೆ.ಈಜಿಪ್ಟ್,ಸೌದಿ ಅರೇಬಿಯಾ,ಕತಾರ್,ಭಾರತ ಮತ್ತು ಪಾಕಿಸ್ತಾನದ ಅಂತರ್ಜಾಲ ಸಂಪರ್ಕ ಸೇವೆ ಈ ಫೈಬರ್ ಸಂಪರ್ಕ ಮೂಲಕವೂ ನಿರ್ವಹಿಸಲ್ಪಡುವುದರಿಂದ ಸೇವಾನ್ಯೂನ್ಯತೆ ನಿರೀಕ್ಷಿತ.
------------------------------------------------------------
ಐಪ್ಯಾಡಿಗೆ ಇಸ್ರೇಲಿ ನಿಷೇಧ
ಐಪ್ಯಾಡ್‌ನ್ನು ಇಸ್ರೇಲ್‌ನಲ್ಲಿ ಬಳಸುವುದಕ್ಕೆ ನಿಷೇಧ ಹೇರಲಾಗಿದೆ.ಇಸ್ರೇಲ್ ಮತ್ತು ಯುರೋಪಿನ ರಾಷ್ಟ್ರಗಳಲ್ಲಿ ನಿಗದಿ ಪಡಿಸಿದ,ನಿಸ್ತಂತು ಸಾಧನಗಳ ಸಂಕೇತಕ್ಕಿಂತ ಐಪ್ಯಾಡ್ ಪ್ರಬಲ ಸಂಕೇತ ಬಳಸುವುದರಿಂದ,ಅದರ ಬಳಕೆ ಇತರ ನಿಸ್ತಂತು ಸಾಧನಗಳ ಬಳಕೆಗೆ ಸಮಸ್ಯೆಯೊಡ್ಡಬಹುದು ಎನ್ನುವ ಕಾರಣವನ್ನು ಇಸ್ರೇಲಿ ಸರಕಾರವು ನೀಡಿದೆಯಾದರೂ,ಅಲ್ಲಿನ ಜನರಿಗೆ,ಈ ಸಾಬೂಬು ಸಮಾಧಾನ ತಂದಿಲ್ಲ.ಹಾಗೆ ನೋಡಿದರೆ,ಅಮೆರಿಕಾದಲ್ಲಿ ನಿಸ್ತಂತು ಸಾಧನಗಳಿಗೆ ನಿಗದಿಪಡಿಸಿದ ಸಂಕೇತದ ಮಟ್ಟ ಅಧಿಕವೇ.ಐಫೋನ್,ಬ್ಲಾಕ್‌ಬೆರಿ ಮುಂತಾದ ಸಾಧನಗಳೂ ಇದೇ ಕಾರಣದಿಂದ ಇಸ್ರೇಲಿನಲ್ಲಿ ನಿಷೇಧಕ್ಕೀಡಾಗಬೇಕಿತ್ತು.ಹಾಗೇನೂ ಆಗಿಲ್ಲದಿರುವಾಗ,ಐಪ್ಯಾಡಿಗೆ ಮಾತ್ರಾ ನಿಷೇಧ ಯಾಕೆ ಎಂದು ಜನರ ಪ್ರಶ್ನೆ.ಅದಕ್ಕೆ ಉತ್ತರಿಸುವವರಿಲ್ಲ.ಈಗಾಗಲೇ ಸುಮಾರು ಹತ್ತು ಐಪ್ಯಾಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಉದಯವಾಣಿ 
*ಅಶೋಕ್‌ಕುಮಾರ್ ಎ

Monday, April 12, 2010

ರಕ್ತದಾನಿಗಳು ಬೇಕೇ?


ರಕ್ತದಾನಿಗಳು ಬೇಕೇ?

http://www.friendstosupport.org ಅಂತರ್ಜಾಲ ತಾಣದಲ್ಲಿ ರಕ್ತದಾನಿಗಳು ನೋಂದಾಯಿಸಿಕೊಳ್ಳುವ ವ್ಯವಸ್ಥೆಯಿದೆ.ಹೆಸರು,ವಿಳಾಸ,ಸಂಪರ್ಕಸಂಖ್ಯೆ ಇತ್ಯಾದಿ ವಿವರಗಳೊಂದಿಗೆ ನೋಂದಾಯಿಸಿಕೊಳ್ಳಬೇಕಾಗುತ್ತದೆ.ರಕ್ತದ ಗುಂಪನ್ನೂ ನೀಡಬೇಕಾಗುತ್ತದೆ.ರಕ್ತ ಬೇಕಾದವರು ತಮ್ಮ ಊರು,ರಕ್ತದ ಗುಂಪು ನೀಡಿ,ದಾನಿಗಳ ವಿವರಗಳನ್ನು ಪಡೆದುಕೊಳ್ಳಬಹುದು.ನಂತರ ದಾನಿಯನ್ನು ನೇರವಾಗಿ ಸಂಪರ್ಕಿಸಿ,ರಕ್ತದಾನದ ವ್ಯವಸ್ಥೆ ಮಾಡಿಕೊಳ್ಳಬಹುದು.ಸಂಪರ್ಕ ವಿಳಾಸಗಳು ತಪ್ಪಿದ್ದರೆ,ಅದನ್ನು ಅಂತರ್ಜಾಲ ತಾಣಕ್ಕೆ ತಿಳಿಸಿದರೆ,ಅಂತಹ ವ್ಯಕ್ತಿಗಳ ವಿವರಗಳನ್ನು ಕಿತ್ತು ಹಾಕಬಹುದು.
------------------------------
ಆಸ್ತಿ ತೆರಿಗೆ ಪಾವತಿ ವ್ಯವಸ್ಥೆ
ಬೃಹತ್ ಬೆಂಗಳೂರು ಮಹಾನಗರಪಾಲಿಕೆಯ ಆಸ್ತಿ ತೆರಿಗೆಯನ್ನು ಆನ್‌ಲೈನಿನಲ್ಲೇ ಪಾವತಿಸುವ ವ್ಯವಸ್ಥೆಯಿದೆ. http://sasbbmp.com/PalikeOnline.aspx ಅಂತರ್ಜಾಲ ತಾಣದಲ್ಲಿ ಲಭ್ಯವಿರುವ ಈ ವ್ಯವಸ್ಥೆಯಲ್ಲಿ,ಆಸ್ತಿ ತೆರಿಗೆಯನ್ನು ಡೆಬಿಟ್.ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಬಹುದು.ಹಳೆಯ ಪಾವತಿಗಳನ್ನು ಪರಿಶೀಲಿಸಲೂ ಸಾಧ್ಯ.
--------------------------------------------------------
ವರದಿಗಾರಿಕೆಗೆ ಕಂಪ್ಯೂಟರ್?
ಸುದ್ದಿಯನ್ನು ಜಾಲಾಡಿಸಿ,ವರದಿ ತಯಾರಿಸುವ ಕೆಲಸವನ್ನು ಪತ್ರಿಕೆಯ ಸಂಪಾದಕೀಯ ವಿಭಾಗದವರು ಮಾಡುತ್ತಾರಲ್ಲವೇ?ಈ ಕೆಲಸವನ್ನು ಕಂಪ್ಯೂಟರಿನಿಂದ ಮಾಡಿಸುವ ಯತ್ನವನ್ನು ಸಂಶೋಧಕರು ಮಾಡುತ್ತಿದ್ದಾರೆ.ಅಂಕಿ-ಸಂಖ್ಯೆ ಹೆಚ್ಚಾಗಿರುವ ಕ್ರೀಡಾವರದಿಗಳನ್ನು ಕಂಪ್ಯೂಟರ್ ತಂತ್ರಾಂಶದ ಮೂಲಕ ತಯಾರಿಸುವ ಮೂಲಕ ಕ್ರಮವಿಧಿಯ ರಚನೆಯೀಗಲೇ ಆಗಿದೆ.ವರದಿಗಳು ಓದುಗರಿಗೆ ಮನುಷ್ಯ ಬರೆದಂತೆ ಕಾಣಬೇಕೆನ್ನುವ ಉದ್ದೇಶವಿರಿಸಿ ರಚಿಸಲಾಗಿದೆ.ನಾರ್ತ್ ವೆಸ್ಟೆರ್ನ್ ವಿಶ್ವವಿದ್ಯಾಲಯದ ಮೆಕ್ಕೋರ್ಮಿಕ್ ಇಂಜಿನಿಯರಿಂಗ್ ಕಾಲೇಜು ಮತ್ತು ಮೆಡಿಲ್ ಪತ್ರಿಕೋದ್ಯಮ ಕಾಲೇಜುಗಳು ಜತೆಯಾಗಿ ಕ್ರಮವಿಧಿಯನ್ನು ಅಭಿವೃದ್ಧಿ ಪಡಿಸಿವೆ.ವರದಿಗಾರಿಕೆಯನ್ನು ಕಂಪ್ಯೂಟರೀಕರಣಗೊಳಿಸುವ ಈ ವಿಧಾನಗಳು ಆರಂಭಿಕ ಯಶಸ್ಸನ್ನು ಸಾಧಿಸಿವೆ.ಕಾಲೇಜು ಕ್ರೀಡಾ ಪಂದ್ಯಗಳ ವರದಿಯನ್ನು ತಯಾರಿಸಲು ಕ್ರಮವಿಧಿಯನ್ನು ಯಶಸ್ವಿಯಾಗಿ ಬಳಸಲಾಗಿದೆ.ಸ್ಥಳೀಯ ಸುದ್ದಿಗಳ ವರದಿಯನ್ನೂ ಕಂಪ್ಯೂಟರೀಕರಣಗೊಳಿಸುವತ್ತ ಸಂಶೋಧನೆ ಮುಂದುವರಿದಿದೆ.ಜನರನ್ನು ರಂಜಿಸುವ ಗಾಸಿಪ್,ಮಸಾಲಾ ವರದಿ ತಯಾರಿಗೂ ತಂತ್ರಾಂಶದ ಬಳಕೆ ಸಾಧ್ಯವಾಗಿದೆ.ಇದನ್ನು ಮಿಥ್ಯಾವಾರ್ತಾವಾಚಕರು ಪ್ರಸ್ತುತ ಪಡಿಸುವ ಶೈಲಿಯನ್ನು ಬಳಸಿ ಪ್ರಾಯೋಗಿಕವಾಗಿ ಬಳಸಿದಾಗ,ಅದರ ಫಲಿತಾಂಶ ಜನರಿಗೆ ಸಂಪೂರ್ಣವಾಗಿ ಒಪ್ಪಿತವಾಗದಿದ್ದರೂ,ಸಾಕಷ್ಟು ತೃಪ್ತಿ ತಂದಿದೆ.
ಹಾಗೆಂದು ಇಂತಹ ವ್ಯವಸ್ಥೆಗಳು ಸಂಪೂರ್ಣವಾಗಿ ಮನುಷ್ಯರ ಅಗತ್ಯವೇ ಇಲ್ಲದೆ ಕಾರ್ಯನಿರ್ವಹಿಸ ಬಲ್ಲವು ಎಂದಲ್ಲ.ಅಕ್ಷರ ಪರೀಕ್ಷಕ ಸೌಲಭ್ಯ ಪದಸಂಸ್ಕಾರಕ ತಂತ್ರಾಂಶದಲ್ಲಿ ಲಭ್ಯವಿದ್ದರೂ,ಅದನ್ನು ಬಳಸಲು ಟೈಪಿಸ್ಟ್ ಬೇಕಾಗುವಂತೆ,ಇಂತಹ ತಂತ್ರಾಂಶದ ವರದಿಯನ್ನು ತಿದ್ದಲು ಮನುಷ್ಯರು ಬೇಕೇ ಬೇಕು.
-------------------------------------------------------------------------
ಐಫೋನಿಗೆ ಹೊಸ ಕಾರ್ಯನಿರ್ವಹಣಾತಂತ್ರಾಂಶ
ಐಫೋನಿಗೆ ಹೊಸ ಕಾರ್ಯನಿರ್ವಹಣಾ ವ್ಯವಸ್ಥೆ ತಂತ್ರಾಂಶವನ್ನು ಬಿಡುಗಡೆಗೊಳಿಸಲಾಗಿದೆ.ಒಟ್ಟಿಗೆ ಹಲವು ಕಾರ್ಯಗಳನ್ನು ಮಾಡಲು ಅವಕಾಶ ನೀಡುವ ಸೌಕರ್ಯ,ಹೊಸ ತಂತ್ರಾಂಶ ವ್ಯವಸ್ಥೆಯ ಮುಖ್ಯಾಂಶ.ಹಾಡನ್ನು ಕೇಳುತ್ತಿದ್ದಂತೆ ಕರೆಗಳನ್ನು ಸ್ವೀಕರಿಸುವಂತಹ ಸೌಲಭ್ಯ ಇದರಲ್ಲಿದೆ.ಇಂತಹ ಸೌಲಭ್ಯವನ್ನು ಒದಗಿಸುವುದು ಬಹಳ ಕಠಿನಕೆಲಸವೇನಲ್ಲ.ಆದರೆ,ಹೀಗೆ ಮಾಡಿದಾಗ,ಐಫೋನ್ ತುಂಬಾ ನಿಧಾನವಾಗುವುದು ಅಥವಾ ಹೆಚ್ಚು ಬ್ಯಾಟರಿ ಬಳಸದಂತೆ ಮಾಡುವುದು ನಿಜಕ್ಕೂ ಸವಾಲೇ ಸರಿ.ಇದನ್ನು ಹೊಸ ವ್ಯವಸ್ಥೆಯಲ್ಲಿ ಸಾಧಿಸಲು ಸಾಧ್ಯವಾಗಿದೆ ಎಂದು ಆಪಲ್ ಕಂಪೆನಿ ಹೇಳಿಕೊಂಡಿದೆ.ಸ್ಪರ್ಶ ಸಂವೇದಿ ಐಫೋನ್,ಐಫೋನ್ ಮತ್ತು ಹೊಸ ಸಾಧನ ಐಪ್ಯಾಡ್,ಇವೆಲ್ಲವುಗಳಿಗೂ ಸೂಕ್ತವಾದ ಐಫೋನ್-3.0,ಹಳೆಯ ಆವೃತ್ತಿಯಲ್ಲಿದ್ದ ಹಲವು ತಂತ್ರಾಂಶಗಳ ಏಕಕಾಲದ ಬಳಕೆ ಸಾಧ್ಯವಿಲ್ಲವೆಂಬ ಕೊರತೆಯನ್ನು ನಿವಾರಿಸಿದೆ.ಸದ್ಯ ಐಫೋನ್‌ಗಳಿಗೆ ಸುಮಾರು ಒಂದುಮುಕ್ಕಾಲು ಲಕ್ಷ ಅನ್ವಯಿಕ ತಂತ್ರಾಂಶಗಳು ಲಭ್ಯವಿದ್ದು,ಐಪ್ಯಾಡಿಗೆ ಸುಮಾರು ಮೂರೂವರೆ ಸಾವಿರ ತಂತ್ರಾಂಶಗಳನ್ನು ಸಿದ್ಧಗೊಳಿಸಲಾಗಿದೆ.ಈ ತಂತ್ರಾಂಶಗಳನ್ನು ಅನುಸ್ಥಾಪಿಸಿ,ಸಾಧನಗಳಿಂದ ಹೆಚ್ಚಿನ ಸವಲತ್ತುಗಳನ್ನು ಪಡಕೊಳ್ಳುವುದು ಸಾಧ್ಯ.
-----------------------------------------------------------------------------
ಪ್ರಾಚ್ಯವಸ್ತು ಶೋಧನೆಗೂ ಉಪಗ್ರಹ ಬಳಕೆ
ಉತ್ಖತನದ ಮೂಲಕ ಪುರಾತನ ವಸ್ತುಗಳನ್ನು ಭೂಗರ್ಭದಿಂದ ಹೊರತೆಗೆಯುವ ಕಠಿನ ಕೆಲಸವನ್ನು,ಕೃತಕ ಉಪಗ್ರಹಗಳು ತುಸು ಸುಲಭವಾಗಿಸಿವೆ.ಉಪಗ್ರಹ ಚಿತ್ರಗಳನ್ನು ಬಳಸಿ,ದಕ್ಷಿಣಾ ಆಪ್ರಿಕಾದಲ್ಲಿ ಸುಮಾರು ಐನೂರು ಗುಹೆಗಳನ್ನು ಪತ್ತೆ ಹಚ್ಚಲು ಪುರಾತತ್ವ ಸಂಶೋಧಕರು ಸಫಲರಾಗಿದ್ದಾರೆ.ವಿಟ್‌ವಾಟರ್‌ಸ್ಯಾಂಡ್ ವಿಶ್ವವಿದ್ಯಾಲಯದವರು ಪಳೆಯುಳಿಕೆಗಳ ಪತ್ತೆಗೂ ಉಪಗ್ರಹ ಚಿತ್ರಗಳನ್ನು ಬಳಸಿ,ಉತ್ಖತನಕ್ರಿಯೆಯನ್ನು ಸುಲಭಗೊಳಿಸಿದ್ದಾರೆ.ಅಂದ ಹಾಗೆ ಗೂಗಲ್‌ಮ್ಯಾಪ್ ಚಿತ್ರಗಳು ಪುರಾತತ್ವ ಸಂಶೋಧಕರಿಗೆ ನೆರವಾದ ಚಿತ್ರಗಳನ್ನು ಒದಗಿಸಿದೆ.
--------------------------------------------------
ರಶ್ಯಾದ ಜಿಪಿಎಸ್ ವ್ಯವಸ್ಥೆ ಗ್ಲೋನಾಸ್ ಸಿದ್ಧ
ಅಮೆರಿಕಾದ ಸ್ಥಾನಪತ್ತೆ ವ್ಯವಸ್ಥೆ ಜಿಪಿಎಸ್‌ಗೆ ಸ್ಪರ್ಧೆ ನೀಡಬಲ್ಲ ರಶ್ಯಾದ ವ್ಯವಸ್ಥೆ ಗ್ಲೋನಾಸ್ ಈಗ ಬಹುತೇಕ ಸಿದ್ಧಗೊಂಡಿದೆ. ಕಡಿಮೆ ಎತ್ತರದಲ್ಲಿ ಭೂಮಿಯ ಸುತ್ತ ಸುತ್ತುವ ಉಪಗ್ರಹ ಆಧಾರಿತ ಈ ವ್ಯವಸ್ಥೆ,ಅಮೆರಿಕಾದ ಜಿಪಿಎಸ್ ವ್ಯವಸ್ಥೆಯ ಜತೆ ಮಿಳಿತವಾಗಿ ಸೇವೆ ನೀಡುವಂತಾಗಬೇಕೆಂದು ತಂತ್ರಜ್ಞರು ಬಯಸಿದ್ದಾರೆ.ಕೆಬಿ ನಾವಿಸ್ ಎನ್ನುವ ಕಂಪೆನಿಯು,ಹೊಸ ಚಿಪ್ ಒಂದನ್ನು ತಯಾರಿಸಿದ್ದು,ಇದನ್ನು ಬಳಸಿದ ಸಾಧನದಲ್ಲಿ ರಶ್ಯಾದ ಅಥವ ಅಮೆರಿಕಾದ ಇಲ್ಲವೇ ಇತರ ಸಮಾಂತರ ವ್ಯವಸ್ಥೆಗಳ ಉಪಗ್ರಹ ಸಂಕೇತಗಳನ್ನು ಸ್ವೀಕರಿಸಿ,ಸ್ಥಾನಪತ್ತೆ ಮಾಡಲು ಸಾಧ್ಯವಾಗಿಸಲಾಗಿದೆ.


UDAYAVANI

Monday, April 05, 2010

ವಿದ್ಯುತ್ ಸಮಸ್ಯೆ:ನೀವೂ ಪವರ್‌ಕಟ್ ಕಡಿಮೆ ಮಾಡಬಹುದು!

ವಿದ್ಯುತ್ ಸಮಸ್ಯೆ:ನೀವೂ ಪವರ್‌ಕಟ್ ಕಡಿಮೆ ಮಾಡಬಹುದು!
ಸೆಕೆಯಿಂದ ಒಣಗಿರುವ ಕರ್ನಾಟಕದಲ್ಲಿ ವಿದ್ಯುಚ್ಛಕ್ತಿಯ ಬರ ಪರಿಸ್ಥಿತಿಯನ್ನು ಅಸಹನೀಯವಾಗಿಸಿದೆ.ದಿನದಿಂದ ದಿನಕ್ಕೆ ವಿದ್ಯುತ್‌ಗೆ ಬೇಡಿಕೆ ಹೆಚ್ಚುತ್ತಿದೆ.ಎಲ್ಲಕಡೆ ವಿದ್ಯುತ್‌ಗೆ ಬೇಡಿಕೆ ಹೆಚ್ಚಿರುವಾಗ ಹೊರಗಿನ ರಾಜ್ಯಗಳಿಂದ ವಿದ್ಯುತ್ ಖರೀದಿಸಿ,ಬೇಡಿಕೆಯನ್ನು ಪೂರೈಸಲೂ ಅಸಾಧ್ಯವಾಗಿರುವ ಪರಿಸ್ಥಿತಿಯಲ್ಲಿ,ವಿದ್ಯುಚ್ಛಕ್ತಿ ಕಂಪೆನಿಯು ನಿಸ್ಸಹಾಯಕವಾಗಿದೆ.ಅವುಗಳಿಗೆ ಶಾಪ ಹಾಕುವ ಬದಲು,ಜನರು ತಮ್ಮ ಬೇಡಿಕೆಯನ್ನು ಮಿತಗೊಳಿಸಿ,ಪರಿಸ್ಥಿತಿ ಕೈಮೀರುವುದನ್ನು ತಡೆಯುವುದು ಅನಿವಾರ್ಯವಾಗಿದೆ.ಅಲಂಕಾರಿಕ ದೀಪಗಳನ್ನು ಬಳಸದಿರುವುದು,ಸಿ ಎಫ್ ಎಲ್,ಎಲ್ ಇ ಡಿ ದೀಪಗಳ ಬಳಕೆ ಮಾಡುವುದು ಅಗತ್ಯ.ಜತೆಗೆ ಮುಂಜಾನೆ ಮತ್ತು ಮುಸ್ಸಂಜೆಯ ನಂತರ ಮಿಕ್ಸಿ,ಗ್ರೈಂಡರ್,ಪಂಪ್,ಇಸ್ತ್ರಿಪೆಟ್ಟಿಗೆ,ವಿದ್ಯುತ್ ಒಲೆ,ಬಿಸಿನೀರಿನ ಗೀಸರುಗಳನ್ನು ಬಳಸದಿರುವ ಮೂಲಕ ಬೇಡಿಕೆ ಕಡಿತಗೊಳಿಸಿ.ಲಿಫ್ಟ್,ವಾತಾನುಕೂಲಿಗಳನ್ನು ಈ ಹೊತ್ತಿನಲ್ಲಿ ಚಾಲೂ ಇಡದಿರುವುದು ಅತ್ಯುತ್ತಮ.ಕಡಿಮೆ ಸಂಖ್ಯೆಯ ದೀಪಗಳ ಬಳಕೆ,ಫ್ಯಾನುಗಳ ಬಳಕೆಯನ್ನು ಮಿತಿಗೊಳಿಸಿ.ವಾಶಿಂಗ್ ಮೆಶೀನ್ ಬಳಕೆ ವಾರದಲ್ಲಿ ಕೆಲವೇ ದಿನ ಮಾಡಿ-ವಿದ್ಯುಚ್ಛಕ್ತಿಯ ಜತೆಗೆ ನೀರಿನ ಬಳಕೆಯನ್ನೂ ಮಿತಿಯಲ್ಲಿಡಬಹುದು.
-------------------------------------------------------------
ಮೈಕ್ರೋಸಾಫ್ಟ್ ಡ್ರೀಮ್‌ಸ್ಪಾರ್ಕ್ ಯಾತ್ರಾ

ಕಂಪ್ಯೂಟರ್ ಬಳಸುವವರಿಗೆ ಮೈಕ್ರೋಸಾಫ್ಟ್ ಕಂಪೆನಿಯ ಬಗ್ಗೆ ಗೊತ್ತೇ ಇರುತ್ತದೆ.ಹೊಸ ಕಂಪ್ಯೂಟರ್ ಕಾರ್ಯನಿರ್ವಹಣಾ ತಂತ್ರಾಂಶ ವಿಂಡೋಸ್ 7,ಇಂಟರ್ನೆಟ್ ಎಕ್ಸ್‌ಪ್ಲೋರರ್ ಬ್ರೌಸರ್ ತಂತ್ರಾಂಶಗಳು ಸದ್ಯಸುದ್ದಿಯಲ್ಲಿವೆ.ಈ ಕಂಪೆನಿಯು ತನ್ನ ಉತ್ಪನ್ನಗಳನ್ನು ಜನಪ್ರಿಯಗೊಳಿಸಲು.ವಿದ್ಯಾರ್ಥಿ ಸಹಭಾಗಿಗಳನ್ನು ನೇಮಿಸಿಕೊಳ್ಳುವ ವಿನೂತನ ತಂತ್ರ ಬಳಸುತ್ತಿದೆ.ವಿದ್ಯಾರ್ಥಿ ಸಹಭಾಗಿಗಳು ತಂತ್ರಜ್ಞಾನದ ಬಗ್ಗೆ ತಿಳುವಳಿಕೆ ಕೊಡುವ ನಿಟ್ಟಿನಲ್ಲಿ ಮೈಕ್ರೋಸಾಫ್ಟ್ ಡ್ರೀಮ್‌ಸ್ಪಾರ್ಕ್ ಯಾತ್ರಾ ಎನ್ನುವ ಕಾರ್ಯಕ್ರಮಗಳನ್ನು ಭಾರತದಾದ್ಯಂತ ಹಮ್ಮಿಕೊಂಡಿದ್ದು,ಎಪ್ರಿಲ್ ಐದರಂದು ಒಂದು ದಿನದ ಕಾರ್ಯಕ್ರಮವು ನಿಟ್ಟೆಯ ಎನ್ ಎಂ ಎ ಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜರಗಲಿದೆ.ರಸಪ್ರಶ್ನೆ,ಹೆಚ್ಚು ಮಂದಿ ನೋಂದಾಯಿಸುವ ಕಾಲೇಜುಗಳಿಗೆ ಪ್ರಶಸ್ತಿಯಂತಹ ಕೊಡುಗೆಗಳಿವೆ.ವಿವರಗಳಿಗೆ http://www.nittedreamsparkyatra.in/ ಅಂತರ್ಜಾಲತಾಣವನ್ನು ನೋಡಬಹುದು.
--------------------------------------------------------------------
ನೋಬೆಲ್ ಬಹುಮಾನಕ್ಕೆ "ಅಂತರ್ಜಾಲ" ಅರ್ಹವೇ?
ಜಗತ್ತಿನ ಚಿತ್ರವನ್ನೇ ಬದಲಿಸಿರುವ ಶತಮಾನದ ತಂತ್ರಜ್ಞಾನದ ಅದ್ಭುತ ಅಂತರ್ಜಾಲಕ್ಕೆ ನೋಬೆಲ್ ಬಹುಮಾನವನ್ನು ಕೊಡಬೇಕು ಎನ್ನುವ ಅಭಿಪ್ರಾಯ ಮೂಡಿಬರುತ್ತಿದೆ.ಈ ಸಲದ ನೋಬೆಲ್ ಬಹುಮಾನಕ್ಕೆ ನಾಮಕರಣಗಳು ನಡೆಯುತ್ತಿದ್ದು,ಈವರೆಗಿನ ಗರಿಷ್ಠ ನಾಮಕರಣಗಳು ಈ ವರ್ಷ ಆಗಿದೆ.ಈಗಾಗಲೆ ಸುಮಾರು ಎರಡುನೂರೈವತ್ತು ನಾಮಕರಣಗಳಾಗಿವೆ.ಅಂತರ್ಜಾಲವನ್ನು ವಾಸ್ತವವಾಗಿಸಿದ ಲ್ಯಾರೀ ರಾಬರ್ಟ್,ವಿಂಟ್ ಸರ್ಫ್ ಮತ್ತು ಟಿಂ ಬರ್ನೆಸ್ ಲೀ ಅವರುಗಳ ಹೆಸರುಗಳೂ ನಾಮಕರಣಗೊಂಡಿವೆ.ಹೈಟಿ ಭೂಕಂಪ ಪೀಡಿತರಿಗೆ ಅಂತರ್ಜಾಲ ಮೂಲಕ ಒದಗಿದ ಸಹಾಯ,ಇರಾನ್‌ನ ನಿರಂಕುಶ ಪ್ರಭುತ್ವದ ವಿರುದ್ಧ ಹೋರ‍ಾಟಕ್ಕೆ ವೇದಿಕೆ ಒದಗಿಸಿದ,ಸದ್ಯದ ಘಟನೆಗಳು ಅಂತರ್ಜಾಲದ ನಾಮಕರಣಕ್ಕೆ ಸ್ಫೂರ್ತಿಯಾಗಿದೆ.ಆದರೆ ವ್ಯಕ್ತಿಗಳಿಗೆ ನೀಡುವ ಬಹುಮಾನವನ್ನು ತಂತ್ರಜ್ಞಾನಕ್ಕೆ ನೀಡುವುದಕ್ಕೆ ವಿರೋಧವೂ ಇದೆ.ಜತೆಗೆ ಅಂತರ್ಜಾಲವು ಒಳಿತು-ಕೆಡುಕುಗಳನ್ನೆರಡನ್ನೂ ಹೊಂದಿದ್ದು,ಇದೊಂದು ತಟಸ್ಥ ಮಾಧ್ಯಮ,ಇದನ್ನು ಪ್ರಶಸ್ತಿಗೆ ಪರಿಗಣಿಸಬಾರದು ಎಂದು ವಾದಿಸುವವರೂ ಇದ್ದಾರೆ.
-----------------------------------------------------------
ಮಿಂಚಂಚೆಯನ್ನು ಕಾದಿಡಿ,ಅಳಿಸಬೇಡಿ ಎಂದ ಜಿಮೇಲ್‌ಗೆ ಈಗ ಏಳು
ಇತರ ಮಿಂಚಂಚೆ ಸೇವೆಗಳು ಒದಗಿಸುತ್ತಿದ್ದ ಸ್ಮರಣಸಾಮರ್ಥ್ಯದ ನಲುವತ್ತು ಪಟ್ಟು ಹೆಚ್ಚು ಅವಕಾಶ ನೀಡುವ ಮೂಲಕ,ಮಿಂಚಂಚೆಗಳನ್ನು ಅಳಿಸಿಹಾಕದೆ ಕಾದಿಡಿ ಎನ್ನುವ ಸಂದೇಶ ನೀಡಿದ ಜಿಮೇಲ್ ಈಗ ಆರುವರ್ಷಗಳನ್ನು ಪೂರೈಸಿದೆ.ಒಂದೇ ವಿಷಯದ ಬಗ್ಗೆ ನಡೆಸಿದ ಮಿಂಚಂಚೆ ವಿನಿಮಯವನ್ನು ಒಟ್ಟಿಗೆ "ಸಂಭಾಷಣೆ"ಯಂತೆ ಒದಗಿಸಿದ ಮೊದಲ ಸೇವಾದತೃ ಜಿಮೇಲ್ ಆಗಿತ್ತು.ಕಳೆದವಾರವಷ್ಟೇ ತನ್ನ ವಿನೂತನ ಸೇವೆಯಲ್ಲಿ ಜಿಮೇಲ್, ಮಿಂಚಂಚೆ ಖಾತೆಯು ದುರುಪಯೋಗವಾಗುತ್ತಿರುವ ಅನುಮಾನ ಬಂದೊಡನೆ,ಅದನ್ನು ಬಳಕೆದಾರನ ಗಮನಕ್ಕೆ ತರುವ ಕೆಲಸವನ್ನೂ ಮಾಡಲಿದೆ.ಬಳಕೆದಾರನು ಭಾರತದಲ್ಲಿ ವಾಸವಾಗಿರುವವನಾಗಿದ್ದು,ಖಾತೆಯು ಬೇರೆಡೆ ಬಳಕೆಯಾದರೆ,ಅದರ ಹಿಂದೆ ಹ್ಯಾಕರುಗಳ ಕೈಯಿರಬಹುದೆಂಬ ಗುಮಾನಿ ವ್ಯಕ್ತಪಡಿಸಿ,ಅವುಗಳ ವಿವರಗಳನ್ನು ನೀಡಿ ಬಳಕೆದಾರನ ಗಮನ ಸೆಳೆಯುವ ಕೆಲಸವನ್ನು ಜಿಮೇಲ್ ಮಾಡಲಿದೆ.
--------------------------------------------------------------
ಐಪ್ಯಾಡ್:ಲ್ಯಾಪ್‌ಟಾಪ್‌ಗೆ ಖೋ ಕೊಡಲಿದೆಯೇ?

ಎಪ್ರಿಲ್ ಮೂರರಂದು ಐಪ್ಯಾಡ್ ಸಾಧನವನ್ನು ಬಿಡುಗಡೆಗೊಳಿಸಿದ ಐಪ್ಯಾಡ್,ಐಪೋಡ್-ಐಪೋನ್‌ಗಳಂತೆ ಇದೂ ಜನರ ಮನಸ್ಸನ್ನು ಗೆಲ್ಲುವಲ್ಲಿ  ಸಫಲವಾಗಬಹುದು ಎಂದು ಆಶಿಸಿದ್ದಾರೆ.ಅಂತರ್ಜಾಲ,ಮಿಂಚಂಚೆ,ಇ-ಪುಸ್ತಕ,ಸಂಗೀತ,ವಿಡಿಯೋ ಮತ್ತು ಚಿತ್ರಗಳು ಇವೆಲ್ಲವುಗಳಿಗೂ ಐಪ್ಯಾಡ್ ಹೇಳಿ ಮಾಡಿಸಿದ್ದು ಎಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ತಂತ್ರಜ್ಞಾನ ವಿಮರ್ಶಕರ ಅಭಿಪ್ರಾಯವಾಗಿದೆ.ಇದು ಒಂದೇ ಸಮಯದಲ್ಲಿ ಹಲವು ಕೆಲಸಗಳನ್ನು ಮಾಡುವ ಬಹುಕಾರ್ಯಪಟುತ್ವವನ್ನು ಹೊಂದಿಲ್ಲದಿದ್ದರೂ,ಲ್ಯಾಪ್‌ಟಾಪಿಗೆ ಸ್ಪರ್ಧೆ ನೀಡಲು ಸಮರ್ಥವಾಗಿದೆ ಎಂದು ಇನ್ನಿತರರ ಅಭಿಪ್ರಾಯವಾಗಿದೆ.ವೆಬ್‌ಕ್ಯಾಮ್ ಇಲ್ಲವಾದ್ದು ಒಂದು ಪ್ರಮುಖ ಕೊರತೆಯಾದರೆ,ಫ್ಲಾಶ್ ತಂತ್ರಜ್ಞಾನಕ್ಕೆ ಬೆಂಬಲ ಲಭ್ಯವಿಲ್ಲವಾದ ಕಾರಣ,ಅವನ್ನು ಬಳಸುವ ಹಲವಾರು ಅಂತರ್ಜಾಲ ತಾಣಗಳನ್ನು ಪ್ರದರ್ಶಿಸುವಲ್ಲಿ ಐಪ್ಯಾಡ್ ಸಮಸ್ಯೆ ಎದುರಿಸುತ್ತದೆ ಎಂದು ಟೀಕಾಕಾರರ ಅನಿಸಿಕೆ.
-----------------------------------------------------------
ಶರವೇಗದ ಅಂತರ್ಜಾಲ ಒದಗಿಸುವ ದಕ್ಷಿಣಕೊರಿಯಾ
ಅಮೆರಿಕಾದಲ್ಲಿ ಲಭ್ಯವಿರುವ ಅಂತರ್ಜಾಲದ ವೇಗಕ್ಕಿಂತ ಧಿಕ ವೇಗದಲ್ಲಿ ಬ್ರಾಡ್‌ಬ್ಯಾಂಡ್ ಸೇವೆ ಒದಗಿಸುವ ರಾಷ್ಟ್ರವೆಂದರೆ,ದಕ್ಷಿಣಕೊರಿಯಾ ಆಗಿದೆ.ಅಲ್ಲಿ ಅಂತರ್ಜಾಲದ ಸಾಮಾನ್ಯವೇಗದ ಸಂಪರ್ಕ ಮಾಸಿಕ ಮೂವತ್ತು ಡಾಲರು ಬೆಲೆಗೇ ಲಭ್ಯ.ಅಮೆರಿಕಾದಲ್ಲಿ ಅದಕ್ಕೆ ನಲ್ವತ್ತೈದು ಡಾಲರು ತೆರಬೇಕು.ಸೇವೆ ಒದಗಿಸುವವರ ನಡುವಣ ಹೆಚ್ಚಿನ ಸ್ಪರ್ಧೆ ,ಸ್ವಭಾವತ: ಅಧಿಕ ವೇಗಿಗಳೂ ಆದ ಕೊರಿಯನ್ನರ ಮನೋಭಾವ,ಅಲ್ಲಿನ ರಾಜಕೀಯ ಸ್ಥಿತಿಗತಿಗಳು ಅಗ್ಗದ ಅಂತರ್ಜಾಲಕ್ಕೆ ಕಾರಣ ಎನ್ನುವ ಅಭಿಪ್ರಾಯವಿದೆ.

ಉದಯವಾಣಿ