Monday, May 31, 2010

ಕಂಪ್ಯೂಟರ್ ವೈರಸ್ ಪೀಡಿತ ಮೊದಲ ಮಾನವ

ಕಂಪ್ಯೂಟರ್ ವೈರಸ್ ಪೀಡಿತ ಮೊದಲ ಮಾನವ
ಮನುಷ್ಯನಿಗೆ ನೆಗಡಿಯಿಂದ ಹಿಡಿದು ಏಡ್ಸ್ ವರೆಗೆ ಹಲವಾರು ಕಾಯಿಲೆಗಳು ವೈರಸ್ ಮೂಲಕವೇ ಬರುತ್ತದೆ.ಆದರೆ ಕಂಪ್ಯೂಟರ್ ವೈರಸ್ ಕೂಡಾ ಮನುಷ್ಯನನ್ನು ಕಾಡಬಹುದೇ?ಹೌದು,ಇದು ಸಾಧ್ಯ.ಮನುಷ್ಯನ ದೇಹದಲ್ಲಿ ಐಸಿ ಚಿಪ್ ಅನ್ನು ಹುದುಗಿಸಿಟ್ಟು,ಆ ಚಿಪ್ ಮೂಲಕ,ಆತನನ್ನು ಕಂಪ್ಯೂಟರುಗಳು "ಗುರುತಿಸಲು" ಮತ್ತು ಮೊಬೈಲ್ ಸಾಧನ ಚಾಲೂ ಆಗಲು ಸಾಧ್ಯವಾಗಿಸಿದ ವ್ಯಕ್ತಿಯಲ್ಲಿ,ಈ ಚಿಪ್ ಕಂಪ್ಯೂಟರ್ ವೈರಸ್ ತಂತ್ರಾಂಶದಿಂದ ಬಾಧಿತವಾಯಿತು.ಇದನ್ನೇ ಮನುಷ್ಯನನ್ನು ಕಾಡಿದ ಮೊದಲ ಕಂಪ್ಯೂಟರ್ ವೈರಸ್ ಎಂದದ್ದು.ಹಾಗೆ ಚಿಪ್ ಧರಿಸಿದ ವ್ಯಕ್ತಿ ರೀಡಿಂಗ್ ವಿಶ್ವವಿದ್ಯಾಲಯದ ಮಾರ್ಕ್ ಗೇಸನ್.ಈ ಚಿಪ್ ಮೂಲಕ ಕಂಪ್ಯೂಟರ್ ನಿಯಂತ್ರಿತ ಬಾಗಿಲುಗಳನ್ನು ದಾಟಲು ಇವರಿಗೆ ಸುಲಭ ಸಾಧ್ಯ.ಮುಂದೆಯೂ ಇಂತಹ ಚಿಪ್‌ಗಳ ಬಳಕೆ ಹೆಚ್ಚಲಿರುವುದು ಖಾತರಿ.ವೈದ್ಯಕೀಯ ಉದ್ದೇಶಗಳಿಗಾಗಿಯೂ,ಇಂತಹ ಚಿಪ್‌ಗಳ ಬಳಕೆ ನಡೆಯಬಹುದು.ಪೇಸ್‌ಮೇಕರ್,ಕಿವಿಯೊಳಗೆ ಕೃತಕ ತಮ್ಮಟೆಯಂತೆ ಕಾರ್ಯನಿರ್ವಹಿಸುವ ಕೋಕ್ಲಿಯರ್ ಮುಂತಾದ ಚಿಪ್‌ಗಳಿವಕ್ಕೆ ಉದಾಹರಣೆ.ಈ ಚಿಪ್‌ಗಳು ವೈರಸ್ ಬಾಧಿತವಾಗಿ ಸಮಸ್ಯೆ ಉಂಟು ಮಾಡಬಹುದೆಂಬ ಈ ಹೊಸ ತಿಳುವಳಿಕೆ ಹೊಸ ಆತಂಕಗಳಿಗೆ ಕಾರಣವಾಗಿದೆ.
----------------------------------------------------
ನಿಮ್ಮ ಬಗ್ಗೆಯೇ ಹುಡುಕಾಡಿ
ಸುಮ್ಮನೆ ತಮ್ಮ ಹೆಸರನ್ನು ಗೂಗಲ್‌ನಲ್ಲಿ ನೀಡಿ ಶೋಧ ಕಾರ್ಯ ಕೈಗೊಳ್ಳುವ ಅಭ್ಯಾಸ ಹಲವರಿಗಿದೆ.ತಮ್ಮ ಹೆಸರಿನ ಶೋಧ ಅಂತರ್ಜಾಲದಲ್ಲಿ ಏನು ತೋರಿಸುತ್ತದೆ ಎಂಬ ಕುತೂಹಲ ಒಂದು ಕಡೆಗಾದರೆ,ತಾವೆಷ್ಟು ಜನಪ್ರಿಯರು ಎಂದರಿಯುವ ಕೆಟ್ಟ ಕುತೂಹಲ ಇನ್ನೊಂದೆಡೆ.ನಮ್ಮ ಅಹಂ ಹೀಗೆಲ್ಲಾ ಮಾಡಿಸುತ್ತದೆ ಎನ್ನುವುದು ನಿಜವಾದರೂ,ಇದರಿಂದ ಪ್ರಯೋಜನಗಳೂ ಇವೆ.ಶೋಧವು ನಮ್ಮ ಬಗ್ಗೆ ನಾವು ಇಷ್ಟ ಪಡದ ಪುಟವನ್ನು ಅಥವ ವಿಷಯವನ್ನು ಬಹಿರಂಗ ಪಡಿಸುತ್ತಿದ್ದರೆ,ಅದನ್ನು ಸರಿಪಡಿಸಲು ಪ್ರಯತ್ನಿಸಬಹುದು.ಉದಾಹರಣೆಗೆ,ಪಿಕಾಸಾ ಚಿತ್ರಗಳನ್ನು ಅರಿವಿಗೆ ಬಾರದೆ,ಸಾರ್ವಜನಿಕಗೊಳಿಸಿಟ್ಟಿದ್ದರೆ,ನಿಮ್ಮ ಖಾಸಗಿ ಚಿತ್ರಗಳು ಅಂತರ್ಜಾಲದಲ್ಲಿ ಎಲ್ಲರಿಗೂ ಸಿಗುವಂತಿರುತ್ತದೆ.ನೀವೀಗ ಪಿಕಾಸ ಚಿತ್ರಗಳ ಸೆಟಿಂಗನ್ನು ಖಾಸಗಿ ಮಾಡಿ,ಹೀಗಾಗುವುದನ್ನು ತಪ್ಪಿಸಬಹುದು.ಸಾಮಾಜಿಕ ಜಾಲತಾಣಗಳು ನಿಮ್ಮ ಖಾಸಗಿತನಕ್ಕೆ ಧಕ್ಕೆ ತರುವಂತೆ ನಡೆದುಕೊಂಡಿದ್ದರೆ,ಅದು ಕೂಡಾ ಈ ಶೋಧದ ವೇಳೆ ನಿಮ್ಮ ಗಮನಕ್ಕೆ ಬರಬಹುದು.ಅಂತಹ ಜಾಲತಾಣಗಳಿಗೆ ಬೈ ಹೇಳಲೂ ನೀವು ನಿರ್ಧರಿಸುವುದೂ ನಿಮ್ಮ ಕೈಯಲ್ಲಿದೆ.ಕಂಪೆನಿಗಳು ತಮ್ಮ ಉದ್ಯೋಗಿಗಳು ಆನ್‌ಲೈನಿನಲ್ಲಿ ಒಂದು ನಿಗದಿತ ಇಮೇಜ್ ಕಾಪಾಡಿಕೊಳ್ಳುವುದನ್ನು ಬಯಸುತ್ತವೆ.ತಮ್ಮ ಬಗ್ಗೆಯೇ ಶೋಧ ಕಾರ್ಯ ಕೈಗೊಳ್ಳುವವರು,ಇದರ ಬಗ್ಗೆಯೂ ಖಚಿತ ಪಡಿಸಿಕೊಳ್ಳಬಹುದು.
----------------------------------------------------------------
4ಜಿ  ಆಂಡ್ರಾಯಿಡ್ ಫೋನ್ ಸೂಪರ್!

ನಾಲ್ಕನೇ ತಲೆಮಾರಿನ ಸೆಲ್‌ಪೋನ್ ಜಾಲಗಳಲ್ಲಿ ಬಳಸಬಹುದಾದ ಆಂಡ್ರಾಯಿಡ್ ಕಾರ್ಯನಿರ್ವಹಣಾ ವ್ಯವಸ್ಥೆಯನ್ನು ಬಳಸುವ ಸ್ಪ್ರಿಂಟ್ ಕಂಪೆನಿಯ ಹ್ಯಾಂಡ್‌ಸೆಟ್ ಸಿದ್ಧವಾಗಿದೆ.ಇದನ್ನು ಪರೀಕ್ಷಾರ್ಥ ಬಳಸಿದವರು,ಇದರ ಕಾರ್ಯನಿರ್ವಹಣೆ ಮೂರನೇ ತಲೆಮಾರಿನ ಜಾಲದಲ್ಲಿ ಬಳಸಿದಾಗಲೂ,ಐಫೋನ್ ಸಾಧನಕ್ಕಿಂತ ಉತ್ತಮವಾಗಿರುವುದನ್ನು ಸಿದ್ಧ ಪಡಿಸಿವೆ.ಐಫೋನ್ ಮೂಲಕ ಕರೆ ಮಾಡಲಾಗದಷ್ಟು ದುರ್ಬಲ ಸಂಕೇತ ಹೊಂದಿರುವೆಡೆ ಕೂಡಾ ಸ್ಪ್ರಿಂಟ್ ಫೋನ್ ಮೂಲಕ ದತ್ತಾಂಶಗಳನ್ನು ಇಳಿಸಿಕೊಳ್ಳಲೂ ಸಾಧ್ಯವಾಯಿತು.ಸ್ಪರ್ಶಸಂವೇದಿ ತೆರೆ,ಹಗುರ,ಬಳಸಲು ಸುಲಭವಾಗಿದೆಯೆನ್ನುವುದು ಇತರ ಹೈಲೈಟ್ಸ್.ಬ್ಯಾಟರಿ ಬಾಳಿಕೆ ತುಸು ಕಡಿಮೆ ಎನ್ನುವುದಷ್ಟೇ ಹೇಳಿಕೊಳ್ಳಬಹುದಾದ ದೂರು.
------------------------------------------------------
ಆಪಲ್ ಈಗ ಬಲು ದುಬಾರಿ!!
ಜಗತ್ತಿನ ಅತ್ಯಂತ ಬೆಲೆಬಾಳುವ ತಂತ್ರಜ್ಞಾನ ಕಂಪೆನಿ ಆಪಲ್ ಆಗಿ ಹೊರಹೊಮ್ಮಿದೆ.ಮೈಕ್ರೋಸಾಫ್ಟ್ ಕಂಪೆನಿಯನ್ನದು ಹಿಂದೆ ತಳ್ಳಿ,ಈ ಸ್ಥಾನಗಿಟ್ಟಿಸಿಕೊಂಡಿದೆ.ಆಪಲ್ ಕಂಪೆನಿಯ ಶೇರು ಮಾರುಕಟ್ಟೆಯಲ್ಲಿ ಏರಿದ ಕಾರಣ,ಅದರ ಒಟ್ಟು ಮೌಲ್ಯ ಇನ್ನೂರಿಪ್ಪತ್ತೆರಡು ಬಿಲಿಯನ್ ಡಾಲರಿಗೇರಿತು.ಅದೇ ವೇಳೆ ಮೈಕ್ರೋಸಾಫ್ಟ್ ಕಂಪೆನಿಯ ಶೇರುಗಳ ಒಟ್ಟು ಮೌಲ್ಯ,ಇನ್ನೂರಹದಿನೊಂಭತ್ತು ಬಿಲಿಯನ್ ಡಾಲರುಗಳಾಗಿತ್ತು.ಆದರೆ ಕಂಪೆನಿಯ ಆದಾಯ,ಲಾಭಗಳನ್ನು ಪರಿಗಣಿಸಿದರೆ,ಮೈಕ್ರೋಸಾಫ್ಟ್ ಆಪಲ್‍ಗಿಂತ ‍ಬಹುಮುಂದಿದೆ.ಐಫೋನ್,ಐಪಾಡ್ ಜತೆಗೀಗ ಐಪ್ಯಾಡನ್ನೂ ಮರುಕಟ್ಟೆಗಿಳಿಸಿದ್ದು,ಅದಕ್ಕೂ ಉತ್ತಮ ಪ್ರತಿಕ್ರಿಯೆ ಸಿಕ್ಕಿರುವುದು,ಕಂಪೆನಿಯ ಶೇರು ಬೆಲೆ ಮಾರುಕಟ್ತೆಯಲ್ಲಿ ಏರಲು ಕಾರಣವಾಗಿದೆ.ಮೈಕ್ರೋಸಾಫ್ಟ್ ಆದರೋ,ತನ್ನ ಹೆಚ್ಚಿನ ವ್ಯವಹಾರವನ್ನು ಆಪರೇಟಿಂಗ್ ವ್ಯವಸ್ಥೆ ಮತ್ತು ತಂತ್ರಾಂಶ ಮಾರಾಟದಿಂದ ಪಡೆಯುತ್ತಿದೆ.ಆಫೀಸ್ 2010 ಎನ್ನುವ ಹೊಸ ಆಫೀಸ್ ತಂತ್ರಾಂಶ,ವಿಂಡೋಸ್7ಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿರುವುದು ಮೈಕ್ರೋಸಾಫ್ಟ್ ಕಂಪೆನಿಗೆ ಆಶಾದಾಯಕವಾಗಿರುವ ಅಂಶಗಳು.ಅಂದಹಾಗೆ,ಈ ದೊಡ್ಡ ಐಟಿ ಕಂಪೆನಿ ಎನ್ನುವ ಪಟ್ಟ,ಶೇರು ಬೆಲೆ ಏರಿಳಿದೊಡನೆ,ಅತ್ತಿಂದಿತ್ತ ಬದಲಾಗುತ್ತಿರುತ್ತದೆ.
---------------------------------------------------
ಓದುಗರ ಆಯ್ಕೆ:ಎಲ್ಲಾ ದತ್ತಾಂಶವೂ ಚಿಟಿಕೆಯಲ್ಲಿಯೇ

ಬಿಪಿ ಪರೀಕ್ಷಿಸಿದ ನಂತರ ಅದನ್ನು ಬರೆದಿಟ್ಟರೆ,ಮುಂದಿನ ಸಲ ರಕ್ತದೊತ್ತಡದಲ್ಲಿ ಎಷ್ಟು ಬದಲಾವಣೆಯಾಗಿದೆ ಎನ್ನುವುದು ತಿಳಿಯುತ್ತದೆ.ಆದರೆ ಅದನ್ನು ಎಲ್ಲಿ ಬರೆದಿಟ್ಟಿದ್ದಿರಿ ಎನ್ನುವುದೇ ನೆನಪಾಗದು ಎನ್ನುವುದೇ ಸಮಸ್ಯೆ.ಈಗದಕ್ಕೆ ಅಂತರ್ಜಾಲದ ಸಹಾಯ ಪಡೆಯಬಹುದು.http://alltrack.inಗೆ  ಬಿಪಿ ಬಗ್ಗೆ ಕಿರು ಸಂದೇಶ ಕಳುಹಿಸಿಬಿಡಿ.ಬೇಕೆಂದಾಗ,ಅವನ್ನು ಒಟ್ಟುಗೂಡಿಸಿ,ಬಿಪಿ ಹೇಗೆ ಏರಿಳಿಯುತ್ತಿದೆ ಎನ್ನುವುದರ ನಕ್ಷೆ ಸಮೇತ ವಿಶ್ಲೇಷಣೆ ನಿಮ್ಮ ಕೈಸೇರುತ್ತದೆ.ಕೀಲಿಕೈಯನ್ನು ಸಿಕ್ಕಲ್ಲಿ ಬಿಡುವ ಅಭ್ಯಾಸ ನಿಮಗಿದ್ದರೆ,ಅದನ್ನು ಎಲ್ಲಿ ಇಟ್ಟಿರಿ ಎನ್ನುವುದನ್ನು http://alltrack.inಗೆ ಎಸೆಮ್ಮೆಸ್ ಮಾಡಿಬಿಡುವ ಅಭ್ಯಾಸ ಮಾಡಿ.ಸಂದೇಶದ ವಿಷಯ "ಕೀಲಿ" ಎಂದಿದ್ದರೆ,ಕೀಲಿ ಎಲ್ಲಿಟ್ಟೆ ಎಂದು ನೆನಪಾಗದಾಗ,ಅದರ ಬಗ್ಗೆ ಅವರಿವರಲ್ಲಿ ಕೇಳುವುದರ ಬದಲು,ನಿಮ್ಮ ಕಿರು ಸಂದೇಶಗಳನ್ನು ಹಿಂಬಾಲಿಸಿ,ಅದನ್ನು ಪತ್ತೆಹಚ್ಚಿ.ಇದೇ ತತ್ತ್ವವನ್ನು ನಿಮ್ಮ ಖರ್ಚುಗಳ ಬಗ್ಗೆಯೂ ಮಾಡಿದರೆ,ನಿಮ್ಮ ಹಣ ಎಲ್ಲಿ ಹೋಯಿತು ಎಂದು ಚಿಂತಿಸುವ ಅಗತ್ಯವಿಲ್ಲ.ಈ ಅಂತರ್ಜಾಲ ತಾಣದ ಉಪಯೋಗ ಪಡೆಯಲು ನೋಂದಾಯಿಸಿಕೊಳ್ಳಬೇಕು.ಉದಯವಾಣಿಯ ಓದುಗ ಅರವಿಂದ ವಿಕೆ, ಈ ತಾಣದ ಬಗ್ಗೆ ಗಮನ ಸೆಳೆದವರು.
------------------------------------------------------------------------------------------
ಗೂಗಲ್ ಟಾಪ್‌ಟೆನ್
ಗೂಗಲ್ ಅಂಕಿ-ಅಂಶಗಳ ಪ್ರಕಾರ,ಅತ್ಯಂತ ಹೆಚ್ಚು ಜನರು ಜಾಲಾಡಿದ ತಾಣಗಳ ಪೈಕಿ   facebook.com,yahoo.com,live.com,wikipedia.org,msn.com,microsoft.com,blogspot.com,baidu.com,qq.com,mozilla.comಗಳು ಮೊದಲ ಸ್ಥಾನದಲ್ಲಿವೆ.ಸಾಮಾಜಿಕ  ಜಾಲತಾಣಗಳು ಹೆಚ್ಚು ಜನಾಕರ್ಷಣೆಯ ಕೇಂದ್ರಬಿಂದುವಾಗುತ್ತಿರುವುದು ಈ ಪಟ್ಟಿಯನ್ನು ನೋಡಿದಾಗ ಸ್ಪಷ್ಟವಾಗುತ್ತದೆ.ಟ್ವಿಟರ್ ಪಟ್ಟಿಯಲ್ಲಿ ಹದಿನೆಂಟನೇ ಸ್ಥಾನದಲ್ಲಿದೆ.ವಿಶ್ವಕೋಶ ವಿಕಿಪೀಡಿಯಾ,ನಾಲ್ಕನೇ ಸ್ಥಾನಕ್ಕೇರಿದೆ.ಜನರು ಯಾವುದೇ ವಿಷಯವನ್ನು ಶೋಧಿಸಿದರೂ,ವಿಕಿಪೀಡಿಯಾದಲ್ಲಿ ಬೇಕಾದ ಮಾಹಿತಿ ಲಭ್ಯವಿರುವುದು ಇದಕ್ಕೆ ಕಾರಣ.
------------------------------------
ಅನುಭವ ಮಂಟಪ ಕಟ್ಟಿ
http://palachandra.blogspot.comದಲ್ಲಿ ಪಾಲಚಂದ್ರರ "ಅನುಭವ ಮಂಟಪ" ಕಟ್ಟಿ,ತಮ್ಮ ಛಾಯಾಚಿತ್ರಗ್ರಹಣದ ಅನುಭವಗಳನ್ನು ಒದುಗರ ಜತೆ ಹಂಚಿಕೊಂಡಿದ್ದಾರೆ.ಇಂಜಿನಿಯರಿಂಗ್ ಕ್ಷೇತ್ರದಲ್ಲಿ ದುಡಿಯುತ್ತಿರುವ "ಪಾಲ"ರ ಮೆಚ್ಚಿನ ಹವ್ಯಾಸಗಳಲ್ಲಿ ಚಿತ್ರಗ್ರಹಣವೂ ಒಂದು.ಚಿತ್ರಗಳ ಬಗ್ಗೆ ಕ್ಯಾಮರಾದ ತಾಂತ್ರಿಕ ವಿವರಗಳನ್ನೂ ಹಂಚಿಕೊಂಡಿರುವುದು ಹವ್ಯಾಸಿಗಳಿಗೆ ಖುಷಿ ಕೊಡಬಹುದು.ಅಲ್ಲಲ್ಲಿ ಕತೆಗಳನ್ನೂ ಬೆರೆಸಿ,ಬ್ಲಾಗನ್ನು ವೈವಿಧ್ಯಮಯವಾಗಿಸಿದ್ದಾರೆ.
---------------------------------------------------------------------------------------
Udayavani
*ಅಶೋಕ್‌ಕುಮಾರ್ ಎ

Monday, May 24, 2010

ವಕಾಲತ್ತಿಗೆ ಹೊಸ ಗತ್ತು!

ವಕಾಲತ್ತಿಗೆ ಹೊಸ ಗತ್ತು!
ಹಕ್ಕುಸ್ವಾಮ್ಯ,ಕಂಪೆನಿಗಳ ವಿಲಯನ,ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪ್‌ಗಳ ಸಾಕ್ಷ್ಯಸಂಗ್ರಹದ ಮೂಲಕ ಕಂಪ್ಯೂಟರ್ ಅಪರಾಧಗಳ ವಿಚಾರಣೆಗೆ ನೆರವು ಮುಂತಾದ ಹಲವಾರು ಕ್ಷೇತ್ರಗಳಲ್ಲಿ ವಕೀಲರ ಸೇವೆಯ ಹೊರಗುತ್ತಿಗೆಗೆ ಬಹಳ ಬೇಡಿಕೆಯಿದೆ.ಪಂಗಿಯಾ3ದಂತಹ ನ್ಯಾಯಾಂಗ ಸೇವೆಯ ಹೊರಗುತ್ತಿಗೆಯಲ್ಲಿ ತೊಡಗಿರುವ ಕಂಪೆನಿಗಳು ಸದ್ಯ ನೇಮಕಾತಿ ಪ್ರಕ್ರಿಯೆಯತ್ತ ಗಮನ ಹರಿಸುತ್ತಿವೆ.ಇದಲ್ಲದೆ,ನ್ಯಾಯಾಂಗ ಕ್ಷೇತ್ರದಲ್ಲೂ ದತ್ತಾಂಶ ನಮೂದಿಸುವ ಸೇವೆ,ಅರೆನ್ಯಾಯಾಂಗ ಸೇವೆಯಂತಹ ಕೆಳಮಟ್ಟದ ಹೊರಗುತ್ತಿಗೆಯೂ ಲಭ್ಯವಿದೆ.
ಇದೇ ವೇಳೆ ಸಂಶೋಧನೆಯ ಕ್ಷೇತ್ರದಲ್ಲೂ ಹೊರಗುತ್ತಿಗೆಯ ಅವಕಾಶ ಧಾರಾಳವಾಗಿದೆ.ಇಂಜಿನಿಯರಿಂಗ್ ಸಂಶೋಧನೆಯು ಹೆಚ್ಚು ಅವಕಾಶವನ್ನು ಸೃಷ್ಟಿಸುತ್ತಿದೆ.ಸದ್ಯ ಈ ಕ್ಷೇತ್ರವು ಎಂಟು ಬಿಲಿಯನ್ ಡಾಲರು ಗಳಿಕೆಯನ್ನು ಮಾಡುತ್ತಿದ್ದು,ಇನ್ನು ಹತ್ತು ವರ್ಷಗಳಲ್ಲಿ ಇದು ನಲುವತ್ತೈದು ಬಿಲಿಯನ್ ಡಾಲರು ಪ್ರಮಾಣಕ್ಕೆ ಏರಬಹುದು ಎಂದು ನಾಸ್ಕಾಂನ ಅಂದಾಜು.
--------------------------------------------
ಹರಾಜು ಪ್ರಕ್ರಿಯೆಗೆ ಕಂಪ್ಯೂಟರ್
ತ್ರೀಜಿ ಮೊಬೈಲ್ ಸೇವೆಗಳನ್ನೊದಗಿಸಲು,ತರಂಗಾಂತರವನ್ನು ಹರಾಜು ಹಾಕುವ ಪ್ರಕ್ರಿಯೆಗೆ ಕಂಪ್ಯೂಟರ್ ಬಳಸಿ ಆನ್‌ಲೈನ್ ಹರಾಜು ನಡೆಸುವ ಸರಕಾರದ ಪ್ರಕ್ರಿಯೆ ಪೂರ್ಣವಾಗಿದೆ.ಹರಾಜು ಪ್ರಕ್ರಿಯೆಯು ಅತ್ಯಂತ ಯಶಸ್ವಿಯಾಗಿ ಮುಗಿದು,ಸರಕಾರದ ಖಜಾನೆಗೆ ಅರುವತ್ತೇಳು ಸಾವಿರ ಕೋಟಿ ರೂಪಾಯಿಗಳ ಲಾಭವಾಗಲಿದೆ.ಸಾಮಾನ್ಯ ಹರಾಜು ಪ್ರಕ್ರಿಯೆಯಾದರೆ,ಅದರಲ್ಲಿ ಲಾಭದ ದುರಾಸೆಯಿಂದ ಅಡ್ಡಾದಿಡ್ಡಿ ಹರಾಜು ಮೊತ್ತವನ್ನು ಹೆಚ್ಚಿಸುವಂತಹ ಅಕ್ರಮಗಳು ನಡೆಯುತ್ತವೆ.ಆನ್‌ಲೈನ್ ಪ್ರಕ್ರಿಯೆಯು ಸಂಪೂರ್ಣ ಪಾರದರ್ಶಕವಾಗಿದ್ದು,ಹರಾಜು ಮೊತ್ತವನ್ನು ಕ್ರಮಕ್ರಮವಾಗಿ ಏರಿಸಲು ಅವಕಾಶವಿತ್ತು.ಹೀಗಾಗಿ ಹರಾಜು ಸತತವಾಗಿ ಮೂವತ್ತನಾಲ್ಕು ದಿನ ನಡೆದು,ನೂರಂಭೆತ್ತಮೂರು ಸುತ್ತುಗಳ ಹರಾಜು ನಡೆಯಿತು.
ಅಖಿಲ ಭಾರತ ಲೈಸೆನ್ಸನ್ನು ಯಾವ ಕಂಪೆನಿಯೂ ಪಡೆಯಲು ಮುಂದಾಗದಿದ್ದುದು ವಿಶೇಷ.ಅದರ ಬದಲು ಕೆಲವು ಲಾಭದಾಯಕವಾಗಬಲ್ಲ ವೃತ್ತಗಳ ಲೈಸೆನ್ಸ್ ಪಡೆಯಲು ಪೈಪೋಟಿ ನಡೆಸಿದವು.ಇದು ಗ್ರಾಹಕರಿಗೆ ವರದಾನವಾಗುವ ಸಂಭವವಿದೆ.ಒಂದು ವೃತ್ತದಲ್ಲಿ ತನ್ನ ಸೇವೆಯನ್ನೊದಗಿಸಲು ಕಂಪೆನಿಯು ಇತರ ಕಂಪೆನಿಗಳ ಜತೆ ಸಹಯೋಗಕ್ಕೆ ಮುಂದಾಗದೆ ಅನ್ಯ ಮಾರ್ಗವಿಲ್ಲದ ಕಾರಣ,ಪ್ರತಿ ಕಂಪೆನಿಯೂ ಇತರ ಕಂಪೆನಿಗೆ ರೋಮಿಂಗ್ ಸೇವೆಗಳ ವಿಷಯದಲ್ಲಿ ಸಹಕಾರ ನೀಡಲು ಮುಂದಾಗಬೇಕಿದೆ.ಬಹುಶ: ರೋಮಿಂಗ್ ಸೇವೆಗಳು ದುಬಾರಿಯಾಗದಿರಲು ಇದು ನೆರವಾದೀತು.ಸೆಪ್ಟೆಂಬರ್ ನಂತರ ಖಾಸಗಿ ಕಂಪೆನಿಗಳ ತ್ರೀಜಿ ಸೇವೆ ನೀಡಲು ಪರವಾನಗಿ ಇದೆಯಾದರೂ,ತಂತ್ರಜ್ಞಾನವನ್ನು ಅಳವಡಿಸಲು ಸಮಯ ತಗಲುವ ಕಾರಣ,ವರ್ಷಾಂತ್ಯದಲ್ಲಿ ತ್ರೀಜಿ ಸೇವೆ ದೊರಕಬಹುದು.ಕರ್ನಾಟಕದಲ್ಲಿ ಭಾರ್ತಿ ಏರ್‌ಟೆಲ್,ಟಾಟಾಟೆಲಿ,ಏರ್‌ಸೆಲ್ ಕಂಪೆನಿಗಳು ಪರವಾನಗಿ ಗಿಟ್ಟಿಸಿವೆ.ಇಪ್ಪತ್ತೆರಡು ವೃತ್ತಗಳನ್ನು ಏಳು ಸೇವಾಪೂರೈಕೆದಾರರು ಹಂಚಿಕೊಂಡಿದ್ದಾರೆ.ತ್ರೀಜಿ ಸೇವೆಯ ಮೂಲಕ ಸುಮಾರು ಅರುವತ್ತು ಕೋಟಿ ಗ್ರಾಹಕರ ಚಂದಾದಾರಿಕೆಯ ಲಾಭದ ಮೇಲೆ ಕಣ್ಣಿಟ್ಟಿರುವ ಕಂಪೆನಿಗಳು,ಹೆಚ್ಚು ಗ್ರಾಹಕರನ್ನು ಪಡೆಯ ಬೇಕಿದ್ದರೆ,ಅಗ್ಗದದರದಲ್ಲಿ ಸೇವೆ ಒದಗಿಸುವುದು ಅನಿವಾರ್ಯವಾಗಿದೆ.ಹಾಗೆಯೇ ಹ್ಯಾಂಡ್‌ಸೆಟ್‌ಗಳ ದರವೂ ಪ್ರಸಕ್ತ ಲಭ್ಯವಿರುವ ಐದುಸಾವಿರಕ್ಕಿಂತ ಅರ್ಧಕ್ಕರ್ಧ ಇಳಿಯದೇ ಇರದು.ಕಾದು ನೋಡುವ ತಂತ್ರ ಬಳಸುವ ಗ್ರಾಹಕರು,ಸ್ಪರ್ಧೆಯ ಗರಿಷ್ಠ ಪ್ರಯೋಜನ ಪಡೆಯುವುದರಲ್ಲಿ ಸಂಶಯವಿಲ್ಲ.
ತ್ರೀಜಿ ತರಂಗಾಂತರ ಗುಚ್ಛ ಅರುವತ್ತೇಳು ಸಾವಿರ ಕೋಟಿ ಗಳಿಸಿದ್ದರೆ,ಹಿಂದೆ 2ಜಿ ಗುಚ್ಛದಿಂದ ಸರಕಾರ ಗಳಿಸಿದ್ದು ಇದರ ಹತ್ತನೇ ಒಂದುಪಾಲು ಹಣ ಮಾತ್ರಾ ಆಗಿತ್ತು.ಇದೀಗ ವಿವಾದದ ಕೇಂದ್ರ ಬಿಂದುವಾಗಿದೆ.
------------------------------------------------------------------
ಅಂತರ್ಜಾಲದಲ್ಲಿ ಖಾಸಗಿತನ ಅಂತರ್ಧಾನ
ಫೇಸ್‌ಬುಕ್ ಅಂತಹ ತಾಣದಲ್ಲಿ ಜಾಹೀರಾತು ಕ್ಲಿಕ್ಕಿಸಿದ ಗ್ರಾಹಕನ ಬಳಕೆದಾರನ ಹೆಸರು ಜಾಹೀರಾತುದಾರ ಕಂಪೆನಿಗೆ ತಿಳಿಯುವಂತೆ,ಪೇಸ್‌ಬುಕ್ ತಾಣದಲ್ಲಿ ವ್ಯವಸ್ಥೆಯಿರುವುದು ಸಂಶೋಧನೆಯಿಂದ ವ್ಯಕ್ತವಾಗಿದೆ.ಡಿಗ್,ಮೈಸ್ಪೇಸ್ ಅಂತಹ ಸಾಮಾಜಿಕ ಜಾಲತಾಣಗಳೂ ಇಂತಹ ಪ್ರವೃತ್ತಿಯನ್ನು ಹೊಂದಿರುವುದು,ಅವುಗಳ ತಾಣಗಳ ತಂತ್ರಾಂಶ ಸಾಲನ್ನು ಪರೀಕ್ಷಿಸಿದ ಸಂಶೋಧಕರಿಗೆ ಸ್ಪಷ್ಟವಾಗಿದೆ.ಇದು ವ್ಯಕ್ತಿಯ ಖಾಸಗಿತನದ ವಿರುದ್ಧವೆಂದು ಹಲವರ ಅಭಿಪ್ರಾಯವಾಗಿದ್ದು,ತಾಣಗಳ ನೀತಿಗೆ ವಿರೋಧ ವ್ಯಕ್ತವಾಗತೊಡಗಿದೆ.ಪೇಸ್‌ಬುಕ್ ಅಂತಹ ತಾಣಗಳಿಂದ ಸದಸ್ಯತ್ವವನ್ನು ಹಿಂಪಡೆಯುವ ಅಭಿಯಾನವನ್ನು ನಡೆಸುತ್ತಿರುವ ಅಂತರ್ಜಾಲತಾಣಗಳೂ ಇವೆ.
--------------------------------------------
ಟಿವಿ-ಅಂತರ್ಜಾಲ ಬೆಸೆಯಲಿರುವ ಗೂಗಲ್

ಜಗತ್ತಿನಲ್ಲಿ ನಾಲ್ಕುನೂರು ಕೋಟಿ ಜನರು ಟಿವಿ ವೀಕ್ಷಣೆಯಲ್ಲಿ ತೊಡಗುತ್ತಾರೆ.ಅಮೆರಿಕಾದ ಜನರು ದಿನಕ್ಕೆ ನಾಲ್ಕೈದು ಗಂಟೆಗಳ ಕಾಲ ಟಿವಿ ವೀಕ್ಷಣೆಯಲ್ಲಿ ತೊಡಗಿರುವುದು ಸಾಮಾನ್ಯ.ಆದರೆ ನೂರಾರು ಚಾನೆಲ್‌ಗಳ ಕಾರ್ಯಕ್ರಮ ಪಟ್ಟಿಯನ್ನು ಜಾಲಾಡಿ,ನಮಗಿಷ್ಟವಾದ ಕಾರ್ಯಕ್ರಮದ ವೇಳೆಯನ್ನು ಪತ್ತೆ ಹಚ್ಚಿ,ಆ ವೇಳೆಗೆ ಸರಿಯಾಗಿ ಟಿವಿಯ ಮುಂದೆ ಕುಳಿತು ಟಿವಿ ವೀಕ್ಷಿಸುವುದು,ಈಗಿನ ಜನರಿಗೆ ಕಷ್ಟವೆನಿಸತೊಡಗಿದೆ.ಅಂತರ್ಜಾಲವು ಸುಲಭ ಶೋಧ ಸೌಕರ್ಯವನ್ನು ಕೊಡುವುದು,ನೇರ ಟಿವಿ ಪ್ರಸಾರವನ್ನೂ ಒದಗಿಸುತ್ತಿರುವ ಕಾರಣ,ಟಿವಿ ಕಾರ್ಯಕ್ರಮಗಳನ್ನು ಕಂಪ್ಯೂಟರಿನಲ್ಲಿ ನೋಡುವವರೂ ಹೆಚ್ಚುತ್ತಿದ್ದಾರೆ.ಇದನ್ನು ಮನಗಂಡು ಗೂಗಲ್ ಇನ್ನು "ಗೂಗಲ್ ಟಿವಿ"ಯನ್ನು ಒದಗಿಸಲು ಯೋಜಿಸಿದೆ.ಇದರ ಮೂಲಕ ಟಿವಿಯ ಮೂಲಕವೇ ಅಂತರ್ಜಾಲವನ್ನೂ ನೋಡಬಹುದು.ಗೂಗಲ್ ಕ್ರೋಮಿನ ಮೂಲಕ ಶೋಧ ನಡೆಸಿ,ಟಿವಿ ಕಾರ್ಯಕ್ರಮಗಳನ್ನು ನೋಡಬಹುದು.ಆಟಗಳನ್ನೂ ಆಡಬಹುದು.ಇಲ್ಲವೇ ಅಂತರ್ಜಾಲದಲ್ಲಿರುವ ಬಂಧು ಮಿತ್ರರ ಚಿತ್ರಗಳನ್ನೂ ಟಿವಿಯಲ್ಲಿಯೇ ನೋಡಬಹುದು.ಶೋಧ ಕಾರ್ಯವನ್ನೂ ನಡೆಸಬಹುದು.
ಸೆಟ್‌ಟಾಪ್ ಪೆಟ್ಟಿಗೆ,ಸೋನಿ ಕಂಪೆನಿ ನಿರ್ಮಿತ ಗೂಗಲ್ ಟಿವಿಗಳೂ ಲಭ್ಯವಾಗಲಿವೆ.ಜತೆಗೆ ಅಂತರ್ಜಾಲ ತಾಣಗಳು ಗೂಗಲ್ ಟಿವಿಗೆ ತಮ್ಮನ್ನು ಅಣಿಗೊಳಿಸಲು ಸಹಾಯವನ್ನೂ ಗೂಗಲ್ ಒದಗಿಸಲಿದೆ.ತಂತ್ರಾಂಶ ಅಭಿವೃದ್ಧಿ ಪಡಿಸುವವರು,ಗೂಗಲ್ ತಂತ್ರಾಂಶ ಅಭಿವೃದ್ಧಿ ಕಿಟ್‌ಗಳನ್ನು ಬಳಸಿ,ಹೊಸ ಸೇವೆಗಳಿಗೆ ಗೂಗಲ್ ಟಿವಿಯನ್ನು ಸಜ್ಜುಗೊಳಿಸಬಹುದು.ವಿವರಗಳಿಗೆ http://www.google.com/tv/ ನೋಡಬಹುದು.ಯುಟ್ಯೂಬ್ ವಿಡಿಯೋ ಕ್ಲಿಪ್ಪಿಂಗ್‌ಗಳನ್ನು ನೋಡುವುದು,ಅಂತರ್ಜಾಲದಲ್ಲಿ ಲಭ್ಯವಿರುವ ಹಳೆಯ ಟಿವಿ ಶೋಗಳನ್ನು ನೋಡುವುದಾಗಲಿ,ಹಾಡುಗಳನ್ನು ಕೇಳುವುದಾಗಲಿ ಇವನ್ನು ಟಿವಿಯ ಮೂಲಕವೇ ಮಾಡಬಹುದು.ಒಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹುಡುಕುವ ಸಮಯ ಕಡಿಮೆ ಮಾಡಿ,ಸುಲಭವಾಗಿ ಮನಸ್ಸಿಗೆ ಇಷ್ಟವಾದ ಕಾರ್ಯಕ್ರಮಗಳನ್ನು ನೋಡಲು ಗೂಗಲ್ ಟಿವಿ ಅವಕಾಶ ಕಲ್ಪಿಸಲಿದೆ.
----------------------------
ನೀವು ಶೋಧಿಸಿದ್ದೇನು ಎನ್ನುವುದನ್ನು ಗುಟ್ಟಾಗಿಡಿ
ಮಾಹಿತಿಯು ರವಾನೆಯಲ್ಲಿ ಸೋರಿಹೋಗುವ ಅಪಾಯ ಕಂಪ್ಯೂಟರ್ ಜಾಲಗಳಲ್ಲಿ ಸದಾ ಇರುತ್ತದೆ.ಅಂತಹ ಅಪಾಯವನ್ನು ಕಡಿಮೆ ಮಾಡಲು,ಮಾಹಿತಿಯನ್ನು ಗೂಢ ಲಿಪಿಯಲ್ಲಿ ಬರೆಯುವುದು ಸಾಮಾನ್ಯ.ಅದೇ ರೀತಿ,ಕಂಪ್ಯೂಟರ್ ಮೂಲಕ ಶೋಧ ನಡೆಸುವಾಗ,ನಾವು ಯಾವ ವಿಷಯದ ಬಗ್ಗೆ ಶೋಧ ನಡೆಸುತ್ತಿದ್ದೇವೆ ಎನ್ನುವುದನ್ನು ತಿಳಿಯಲು,ನಮ್ಮ ಕಂಪ್ಯೂಟರಿನಿಂದ ಗೂಗಲ್ ಶೋಧ ಸೇವೆಗೆ ಹೋಗುವ ಮಾಹಿತಿಯ ಮೇಲೆ ಕಣ್ಣಿಟ್ಟ ಖದೀಮರಿಗೆ ನಿರಾಸೆ ಮಾಡಲು ಗೂಗಲ್ ಹೊಸ ಗೂಢ ಶೋಧ ಸೇವೆ ಆರಂಭಿಸಿದೆ.ಇದನ್ನು ಕ್ರಿಯಾಶೀಲಗೊಳಿಸಲು,ಬರಿದೇ https:// ಎಂದು ಬ್ರೌಸರ್ ವಿಳಾಸದಲ್ಲಿ ಬದಲಿಸಿದರೆ ಸರಿ.ಮಾಮೂಲಾಗಿ ಇದು http:// ಎಂದಿರುತ್ತದೆ.ಇದಕ್ಕೆ ಸುಭದ್ರ ಸಂಪರ್ಕ ಬೇಕಾದುದರಿಂದ,ಅಂತಹ ಸಂಪರ್ಕ ಏರ್ಪಡಲು ತುಸು ಕಾಯಬೇಕಾಗುತ್ತದೆ.ಕಾರಣ,ಸೇವೆ ತುಸು ನಿಧಾನವಾಗುತ್ತದೆ.
ಗೂಗಲ್‌ನ ಜಿಮೇಲ್ ಮಿಂಚಂಚೆ ಸೇವೆಯೂ ಹೊಸ ಸೌಲಭ್ಯವನ್ನು ನೀಡಲಾರಂಭಿಸಿದೆ.ಚಿತ್ರವನ್ನು ಮಿಂಚಂಚೆಯಲ್ಲಿ ಸೇರಿಸಲು,ಒಂದು ಕಡತದಿಂದ ಚಿತ್ರವನ್ನು ಎಳೆದು,ಮಿಂಚಂಚೆಯ ಪುಟಕ್ಕೆ ತಂದರೆ ಸಾಕು,ಚಿತ್ರವು ಮಿಂಚಂಚೆಗೆ ಸೇರಿಬಿಡುತ್ತದೆ.ಸದ್ಯ ಕ್ರೋಮ್ ಬ್ರೌಸರ್ ಬಳಸಿದಾಗ ಮಾತ್ರಾ ಇದು ಸಾಧ್ಯವಾಗುತ್ತದೆ.
------------------------------------------------------
ಹಂಸನಾದ ಆಲಿಸಿ

ಅನಿವಾಸಿ ಭಾರತೀಯ ರಾಮ್‌ಪ್ರಸಾದ್ ಅವರು ಕ್ಯಾಲಿಫೋರ್ನಿಯಾ ನಿವಾಸಿ.ಹಂಸಾನಂದಿ ಎಂಬ ಕಾವ್ಯನಾಮದಲ್ಲಿ ಬ್ಲಾಗ್ ಬರೆಯುವ ಈ ಕನ್ನಡಿಗ ಸಂಗೀತಪ್ರೇಮಿ,ಖಗೋಳಶಾಸ್ತ್ರದ ಬಗ್ಗೆಯೂ ಆಸಕ್ತ.ನಿಯತವಾಗಿ ಸಂಸ್ಕೃತ ಸುಭಾಷಿತಗಳ ಕನ್ನಡೀಕರಣ ಮಾಡಿ,ತನ್ನ ಬ್ಲಾಗ್ "ಹಂಸನಾದ"ದಲ್ಲಿ ಬರೆಯುವುದಿವರ ಹವ್ಯಾಸ.http://hamsanada.blogspot.comನಲ್ಲಿ ಬ್ಲಾಗನ್ನು ನೋಡಿರಿ.

udayavani

*ಅಶೋಕ್‌ಕುಮಾರ್ ಎ

Monday, May 17, 2010

ಜೈಲಿನೊಳಗಿಂದ ಬಿಪಿಓ

Udayavani Bangalore
ಜೈಲಿನೊಳಗಿಂದ ಬಿಪಿಓ
ಜೈಲಿನಲ್ಲಿರುವ ಖೈದಿಗಳನ್ನು ಬಳಸಿಕೊಂಡು ಕೆಲಸ ಮಾಡುವ ಬಿಪಿಓ ಹೈದರಾಬಾದಿನ ಜೈಲಿನಲ್ಲಿ ಬರಲಿದೆ.ಕಚೇರಿ ಕೆಲಸವನ್ನು ಹೊರಗುತ್ತಿಗೆ ನೀಡಿ,ಕಚೇರಿ ನಿರ್ವಹಣಾವೆಚ್ಚವನ್ನು ತಗ್ಗಿಸುವ ವಿಧಾನ ಜನಪ್ರಿಯವಾಗಿರುವುದು ಯಾರಿಗೆ ಗೊತ್ತಿಲ್ಲ?ಖೈದಿಗಳಿಂದ ಕೆಲಸ ಮಾಡಿಸಲು ಕಂಪ್ಯೂಟರ್ ಜಾಲ ಮತ್ತು ಅಂತರ್ಜಾಲದ ಬಳಕೆ ಮಾಡುವ ವಿಶಿಷ್ಠ ಪ್ರಯೋಗ ಭಾರತದಲ್ಲಿ ಪ್ರಾಯಶ: ಮೊದಲ ಬಾರಿಗೆ ನಡೆದಿದೆ.ರೇಡಿಯಂಟ್ ಇನ್ಫೋ ಸಿಸ್ಟಮ್ಸ್ ಎನ್ನುವ ಐಟಿ ಸಂಸ್ಥೆಯ ಜತೆ ಸೇರಿ ಹೈದರಾಬಾದಿನ ಸೆಂಟ್ರಲ್ ಜೈಲು ಈ ಸಾಹಸಕ್ಕಿಳಿದಿದೆ.ಅಲ್ಲಿನ ಜೈಲಿನಲ್ಲಿ ಹೆಚ್ಚಿನ ಐಟಿ ಪರಿಣತ ಖೈದಿಗಳಿದ್ದಾರೋ ಗೊತ್ತಿಲ್ಲ. ವಿದ್ಯಾವಂತ,ಕಂಪ್ಯೂಟರ್ ಪರಿಣತರನ್ನು ಜೈಲಿನೊಳಗಿನ ಬಿಪಿಓ "ಕಚೇರಿ"ಗೆ ಕರೆತಂದು ಕೆಲಸ ಮಾಡಿಸಿ,ಕೆಲಸದ ಅವಧಿಯ ನಂತರ,ಖೈದಿಗಳನ್ನು ವಾಪಸ್ಸು ಅವರವರ ಸೆಲ್‌ಗಳಿಗೆ ಕಳಿಸಲಾಗುವುದು."ಕಚೇರಿ" ಹಗಲು ಮತ್ತು ರಾತ್ರಿ ಪಾಳೆಯಗಳಲ್ಲಿ ಮೂರು ಪಾಳೆಯಗಳಲ್ಲಿ ಕೆಲಸ ಮಾಡುತ್ತದೆ. ಕೆಲಸ ಮಾಡುತ್ತದೆ.ಪ್ರತಿ ಪಾಳೆಯದಲ್ಲಿ ಎಪ್ಪತ್ತು ಜನ ಕೆಲಸ ಮಾಡುತ್ತಾರೆ. ಇಲ್ಲಿ ಡಾಟಾ ಎಂಟ್ರಿಯಂತಹ ಕೆಲಸವೇ ಹೆಚ್ಚಾಗಿ ನಡೆವ ಕಾರಣ,ದೂರವಾಣಿ ಕರೆ ಮಾಡುವ ಅವಶ್ಯಕತೆಯಿಲ್ಲ.ಹಾಗಾಗಿ ಸೆರೆವಾಸಿಗಳು ದೂರವಾಣಿ ಕರೆ ಮಾಡುವ ಭಯವಿಲ್ಲ.ಕಂಪೆನಿಯು ಬಿಪಿಓಗೆ ಬೇಕಾದ ಮೂಲಸೌಕರ್ಯ ಮತ್ತು ಕಚೇರಿ ನಿರ್ವಹಿಸುವ ಹೊಣೆ ಹೊತ್ತರೆ,ಜೈಲು ಸ್ಥಳಾವಕಾಶ ಮತ್ತು ಜನಬಲವನ್ನು ನೀಡುತ್ತದೆ.ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದ ನೆಲೆಯಲ್ಲಿ ಬಿಪಿಓ ಕೆಲಸ ಮಾಡಲಿದೆ.ಬಿಡುಗಡೆಯಾದ ನಂತರವೂ ಕಂಪೆನಿಗಾಗಿ ದುಡಿವ ಅವಕಾಶ ಖೈದಿಗಳಿಗೆ ಸಿಗಬಹುದು ಎನ್ನುವುದು ಯೋಜನೆಯ ಮತ್ತೊಂದು ಪ್ಲಸ್‌ಪಾಯಿಂಟ್.ಹೀಗಾಗಿ,ಖೈದಿಗಳು ಬಿಡುಗಡೆಯಾದ ನಂತರ ಹೊಟ್ಟೆಹೊರೆಯಲು ಏನು ಮಾಡುವುದೆನ್ನುವ ತಲೆಬಿಸಿಯಿಂದ ಮುಕ್ತರಾಗಬಹುದು.
-------------------------------
ಗೂಗಲ್ ಸ್ಕ್ವೇರ್ ಮೂಲಕ ನಿಮಗುತ್ತರ
ಅಂತರ್ಜಾಲದಲ್ಲಿ ಶೋಧ ನಡೆಸಿ,ನೀವು ನೀಡಿದ ಪದಗುಚ್ಛವನ್ನು ಹೋಲುವ ಪದವಿರುವ ಅಂತರ್ಜಾಲ ತಾಣಗಳ ಪಟ್ಟಿಯನ್ನು ಪಡೆಯುವ ಬದಲು,ಪದಪುಂಜದ ಮೇಲೆ ಅಂತಹ ತಾಣಗಳಲ್ಲಿ ಕಂಡ ಮಾಹಿತಿಯನ್ನು ಕಲೆಹಾಕಿ,ಅದರ ಮೇಲೆ ಒಂದು ವರದಿಯನ್ನು ತಯಾರಿಸಿಕೊಡುವ ಸೇವೆಯನ್ನೊದಗಿಸುವ ತಾಣವೇ ಗೂಗಲ್ ಸ್ಕ್ವೇರ್ಡ್.ಶೋಧಕಾರ್ಯವನ್ನು ಹೊಸ ಮಜಲಿಗೆ ಒಯ್ಯುವ ಪ್ರಯತ್ನವಿದಾಗಿದ್ದು,ನಿಮಗೆ ಬೇಕಾದ ಮಾಹಿತಿಯನ್ನು ಒಂದುಗೂಡಿಸಿ ಕೊಟ್ಟು,ನಿಮ್ಮ ಪ್ರಯತ್ನವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಹೊಸ  ಸೇವೆ ಹೆಚ್ಚು ಜನಪ್ರಿಯವಾಗಬಹುದು.ಅಂತಹ ಮಾಹಿತಿಯು ಸದ್ಯ ಲಭ್ಯವಿಲ್ಲವಾದರೆ ಪದಪುಂಜದ ಬಗೆಗೆ ಹೆಚ್ಚಿನ ಮಾಹಿತಿಯನ್ನು ಕೇಳಿ,ಅಂತಹ ಮಾಹಿತಿಗಳನ್ನು ಕಲೆ ಹಾಕಲು ಗೂಗಲ್ ಸ್ಕ್ವೇರ್ಡ್ ಪ್ರಯತ್ನಿಸುತ್ತದೆ.
----------------------------------------------------------------
ಮೈಕ್ರೋಸಾಫ್ಟ್‌ನ ಹೊಸ ಪದಸಂಸ್ಕಾರಕ ಈಗ ಆನ್‌ಲೈನಿನಲ್ಲೂ ಲಭ್ಯ
ಗೂಗಲ್ ಕಂಪೆನಿಯು ಪದಸಂಸ್ಕಾರಕ,ಸ್ಪ್ರೆಡ್‌ಶೀಟ್‌ನಂತಹ ಜನಪ್ರಿಯ ತಂತ್ರಾಂಶಗಳನ್ನು ಅಂತರ್ಜಾಲದಲ್ಲಿ ಮಿಂಚಂಚೆ ಸೇವೆ ಮೂಲಕ ಲಭ್ಯವಾಗಿಸಿ,ಮೈಕ್ರೋಸಾಫ್ಟ್ ಕಂಪೆನಿಗೆ ಸ್ಪರ್ಧೆ ನೀಡಲು ಯತ್ನಿಸುತ್ತಿದೆ.ಮೈಕ್ರೋಸಾಫ್ಟ್ ಕಂಪೆನಿಯ ಆಫೀಸ್ ತಂತ್ರಾಂಶ ಮಾರುಕಟ್ಟೆ ಶೇರಿನ ಬಹುಪಾಲು ಅಂದರೆ ಶೇಕಡಾ ತೊಂಭತ್ತಕ್ಕೂ ಅಧಿಕ ಪಾಲನ್ನು ಬಗಲಿಗೇರಿಸಿಕೊಂಡಿದೆ.ಸ್ಪರ್ಧೆ ಒಡ್ಡುವ ಗುಣಮಟ್ಟದ ಪದಸಂಸ್ಕಾರಕ,ಸ್ಪ್ರೆಡ್‌ಶೀಟ್ ಮತ್ತು ಪವರ್‌ಪಾಯಿಂಟ್ ತಂತ್ರಾಂಶಗಳು ಉಚಿತವಾಗಿ ಲಭ್ಯವಿದ್ದರೂ,ಮೈಕ್ರೋಸಾಫ್ಟಿನ ಆಫೀಸು ಮೇಲುಗೈ ಉಳಿಸಿಕೊಂಡ ಹಿರಿಮೆ ಸಾಧಿಸಿದೆ.ಆಫೀಸ್ 2010 ಆವೃತ್ತಿಯನ್ನೀಗ ಬಿಡುಗಡೆ ಮಾಡುತ್ತಿರುವ ಮೈಕ್ರೋಸಾಫ್ಟ್,ಇದರ ಕೆಲ ಅಂಶಗಳನ್ನು ಅಂತರ್ಜಾಲ ಮೂಲಕ ಉಚಿತವಾಗಿ ನೀಡಿ,ಗೂಗಲ್‌ಗೆ ಸವಾಲೆಸಿದಿದೆ.ತನ್ನ ನಲುವತ್ತು ಕೋಟಿ ನೋಂದಾಯಿತ ವಿಂಡೋಸ್ ಲೈವ್   ಬಳಕೆದಾರರಿಗೆ ಈ ಸೌಕರ್ಯವನ್ನು ಮೈಕ್ರೋಸಾಫ್ಟ್ ನೀಡಲಿದೆ.ಅತ್ಯವಶ್ಯಕ ಸೇವೆಗಳು ಅಂತರ್ಜಾಲ ಮೂಲಕ ಲಭ್ಯವಿದ್ದು,ಹೆಚ್ಚಿನ ಸೌಕರ್ಯಗಳು ಬೇಕಾದರೆ,ಆಫೀಸ್ ತಂತ್ರಾಂಶವನ್ನು ಖರೀದಿಸಬೇಕಾಗುತ್ತದೆ.
-----------------------------
ಓದುಗರ ಆಯ್ಕೆ:ಸುದ್ದಿಗಾಗಿ ಬೇಟೆಯಾಡುವವರಿಗೆ  ತಾಣ
ಮೊಬೈಲಿನಲ್ಲಿ ಪ್ರಾದೇಶಿಕ ಭಾಷೆಗಳ ಪತ್ರಿಕೆಗಳನ್ನು ಮೊಬೈಲಿನಲ್ಲಿ ನೋಡುವ ಸೇವೆ ಒದಗಿಸುವ ತಾಣ http://www.newshunt.com ಆಗಿದೆ.ಒಂಭತ್ತು ವಿವಿಧ ಭಾಷೆಗಳ,ಇಪ್ಪತ್ತರಷ್ಟು ಪತ್ರಿಕೆಗಳು ಸದ್ಯಕ್ಕೆ ಲಭ್ಯವಿವೆ.ವಿಶೇಷವೆಂದರೆ ವಿವಿಧ ಕಂಪೆನಿಗಳ ಐನೂರು ವಿವಿಧ ಹ್ಯಾಂಡ್‌ಸೆಟ್‌ಗಳಲ್ಲಿ ಈ ಸೇವೆ ಲಭ್ಯವಿರುವಂತೆ ಮಾಡಲಾಗಿದೆ.ಹೆಚ್ಚಿನೆಲ್ಲಾ ಸೆಲ್‌ಫೋನ್ ಆಪರೇಟರ್‌ಗಳೂ ಕೂಡಾ ಈ ಸೇವೆ ಒದಗಿಸುತ್ತಿದ್ದಾರೆ.ಇದರ ಸೇವೆ ಪಡೆಯಲು ತಂತ್ರಾಂಶವನ್ನು ಅನುಸ್ಥಾಪಿಸಿಕೊಳ್ಳಬೇಕಾಗುತ್ತದೆ. ಎಸ್ ಎಂ ಎಸ್ ಸಂದೇಶವನ್ನು 57333ಗೆ hunt ಎಂಬ ವಿಷಯದೊಂದಿಗೆ ಕಳುಹಿಸಬೇಕು.ತಂತ್ರಾಂಶವನ್ನು ಅನುಸ್ಥಾಪಿಸಿದ ನಂತರ,ನಿಮಗೆ ಬೇಕಾದ ಪತ್ರಿಕೆಯನ್ನು ಆಯ್ದು,ಬೇಕಾದ ತೆರನ ಸುದ್ದಿಗಳನ್ನು ಆಯ್ದರೆ ಸರಿ.ನಿಮ್ಮ ಸೆಲ್‌ಪೋನ್‌ನಲ್ಲಿ ಜಿಪಿಆರೆಸ್ ಸೌಕರ್ಯವಿರಬೇಕಾಗಿರುವುದು ಮುಖ್ಯ.ಮಂಗಳೂರಿನ "ಉದಯವಾಣಿ" ಓದುಗ ಕಾರ್ತಿಕ್ ಪೈಯವರು ಈ ತಾಣದ ಸೇವೆಯ ಬಗ್ಗೆ ಮಾಹಿತಿ ನೀಡಿದ್ದಾರೆ.
-------------------------------------------------------------
ಓದುಗರ ಆಯ್ಕೆ:ಶೈಕ್ಷಣಿಕ ಚಾನೆಲ್
http://www.indiastudychannel.com/ ಎಂಬುದು ಶೈಕ್ಷಣಿಕ ಅಂತರ್ಜಾಲ ತಾಣ.ಇಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ,ಮಾದರಿ-ಪ್ರಶ್ನೆಪತ್ರಿಕೆಗಳು,ಉತ್ತರಗಳು,ಸಮಸ್ಯೆಗಳಿಗೆ ಪರಿಹಾರ,ಚರ್ಚಾಕೂಟಗಳು ಇವೆಲ್ಲವೂ ಇವೆ.ಇಲ್ಲಿ ಅಧ್ಯಯನ ಸಂಪನ್ಮೂಲವನ್ನು ಸೇರಿಸಲು ನೋಂದಾಯಿತ ಸದಸ್ಯರಿಗೆ ಅವಕಾಶವಿದ್ದು,ಅವರು ಸೇರಿಸಿರುವ ಸಂಪನ್ಮೂಲದ ಉಪಯುಕ್ತತೆಯನ್ನು ಅನುಸರಿಸಿ,ಅಂಕಗಳನ್ನು ಗಳಿಸುವ ಅವಕಾಶವೂ ಇದೆ.ಕೆಲವು ಸಂಪನ್ಮೂಲಗಳಿಗೆ ಹಣ ಪಾವತಿ ಮಾಡುವ ವ್ಯವಸ್ಥೆಯಿದ್ದು,ನಿಯತವಾಗಿ ಆದಾಯಗಳಿಸಲೂ ಪ್ರಯತ್ನಿಸಬಹುದು.ಈ ಅಂತರ್ಜಾಲ ತಾಣದ ಬಗ್ಗೆ ಪತ್ರಿಕೆಯ ಗಮನ ಸೆಳೆದವರು, ಉಡುಪಿಯ ಓದುಗ ಗೋವರ್ಧನ್ ಹೆಗ್ಡೆ.
--------------------------------------------------------
ಸೆಲ್‌ಫೋನ್ ಮಾತಿಗೆ ಮಾತ್ರವಲ್ಲ

ಬ್ಲಾಕ್‌ಬೆರಿ,ಐಫೋನ್,ಆಂಡ್ರಾಯಿಡ್ ಸ್ಮಾರ್ಟ್‌ಫೋನ್‌ಗಳ ಬಳಕೆ ಮತ್ತು ಶರವೇಗದ 3ಜಿ ಮತ್ತು 4ಜಿ ಮೊಬೈಲ್ ಜಾಲಗಳ ಲಭ್ಯತೆಯೊಂದಿಗೆ ವಿದೇಶಗಳಲ್ಲಿ,ಸೆಲ್‌ಫೋನನ್ನು ಮಾತನಾಡಲು ಬಳಸುವುದಕ್ಕಿಂತ ಮಿಂಚಂಚೆ ಓದಲು,ಕಿರುಸಂದೇಶಗಳನ್ನು ಕಳುಹಿಸಲು,ಸಾಮಾಜಿಕ ಜಾಲಗಳನ್ನು ಜಾಲಾಡಲು,ಸುದ್ದಿ ಓದಲು,ವಿಡಿಯೋ-ಹಾಡುಗಳ ಮೂಲಕ ಮನರಂಜನೆ ಪಡೆಯಲು,ಟಿವಿ ವೀಕ್ಷಣೆಗೆ ಹೀಗೆ ತರಹೇವಾರಿ ರೀತಿಯಲ್ಲಿ ಬಳಸಲು ಬಳಕೆದಾರರು ತೊಡಗಿದ್ದಾರೆ.ಭಾರತದಲ್ಲೂ 3ಜಿ ಸೇವೆಗೆ ಸ್ಪೆಕ್ಟ್ರಮ್ ಹಂಚಿಕೆ ಪ್ರಕ್ರಿಯೆ ಮುಕ್ತಾಯದ ಹಂತಕ್ಕೆ ಬಂದಿದ್ದು,ಸರಕಾರಕ್ಕೆ ಹತ್ತಿರ ಹತ್ತಿರ ಐವತ್ತು ಸಾವಿರ ಕೋಟಿ ಆದಾಯ ತರುವುದು ಖಚಿತ.ಇನ್ನು ಈ ಸ್ಪೆಕ್ಟ್ರಮ್ ಪಡೆದ ಖಾಸಗಿ ಮೊಬೈಲ್ ಸೇವಾದಾತೃಗಳು 3ಜಿ ಸೇವೆಯನ್ನು ಒದಗಿಸಿ,ಭಾರತದಲ್ಲೂ ಧ್ವನಿಕರೆಗಿಂತ ಇತರ ಮೌಲ್ಯಾಧಾರಿತ ಸೇವೆಗಳಿಗೆ ಹೆಚ್ಚಿನ ಒತ್ತನ್ನು ನೀಡಿ,ತಮ್ಮ ಹೂಡಿಕೆಯನ್ನು ನಗದಾಗಿಸಿಕೊಳ್ಳಲು ಮೇಲಾಟ ನಡೆಸಲಿದ್ದಾರೆ.ಬಳಕೆದಾರನು ಇದರ ಪ್ರಯೋಜನ ಪಡೆದು ರಾಜಮರ್ಯಾದೆ ಪಡೆಯಲಿದ್ದಾನೆ.ಅಂತಹ ದಿನಗಳಿಗಾಗಿ ಹೆಚ್ಚು ಕಾಯಬೇಕಿಲ್ಲ ಎನ್ನುವುದು ಸಂತಸದ ವಿಷಯ.


udayavanihttp://www.udayavani.com/epaper/ViewPDf.aspx?Id=40944
*ಅಶೋಕ್‌ಕುಮಾರ್ ಎ

Monday, May 10, 2010

ಶೇರು ಕುಸಿತಕ್ಕೆ ಕಂಪ್ಯೂಟರ್ ಕಾರಣವೇ?

ಶೇರು ಕುಸಿತಕ್ಕೆ ಕಂಪ್ಯೂಟರ್ ಕಾರಣವೇ?
ಕಳೆದ ಗುರುವಾರದಂದು ಅಮೆರಿಕಾದ ಶೇರು ಮಾರುಕಟ್ಟೆ ಹಠಾತ್ ಕುಸಿತ ಕಂಡು,Dow ಸೂಚ್ಯಂಕ ಒಂದು ಸಾವಿರ ಇಳಿದುಹೋಯಿತು.ಈ ಕುಸಿತಕ್ಕೆ ಕಂಪ್ಯೂಟರ್ ಮೂಲಕ ವಹಿವಾಟು ಕಾರಣವೆಂದು ಊಹಿಸಲಾಗಿದೆ.ಈಗ ಅಮೆರಿಕಾದ ಶೇರು ಮಾರುಕಟ್ಟೆಯಲ್ಲಿ ಕಂಪ್ಯೂಟರುಗಳ ನಿಯಂತ್ರಿತ ವ್ಯವಹಾರ ಶೇಕಡಾ ಎಪ್ಪತ್ತು ಸಮೀಪಿಸಿದೆ.ಮ್ಯೂಚುವಲ್ ಫಂಡ್,ಸಾಂಸ್ಥಿಕ ಹೂಡಿಕೆದಾರರು ದೊಡ್ಡ ಸಂಖ್ಯೆಯಲ್ಲಿ ಶೇರು ವ್ಯವಹಾರ ನಡೆಸುವಾಗ,ಕಂಪ್ಯೂಟರ್ ತಂತ್ರಾಂಶ ನಿಯಂತ್ರಿತ ವ್ಯವಹಾರ ನಡೆಸುವುದು ಅನಿವಾರ್ಯವಾಗುತ್ತದೆ.ಇಂತಹ ತಂತ್ರಾಂಶಗಳ ಮೂಲಕದ ವ್ಯವಹಾರದಲ್ಲಿ,ಶೇರು ಬೆಲೆಗಳು ನಿಗದಿತ ಮಿತಿಗಿಂತ ಏರಿಳಿದಾಗ,ಶೇರನ್ನು ಖರೀದಿಸಲು ಅಥವಾ ಮಾರಲು ಪೂರ್ವನಿಗದಿತವಾದ ಆರ್ಡರುಗಳು ಟ್ರಿಗರ್ ಆಗಿ ಮಾರುಕಟ್ಟೆಯಲ್ಲಿ ಅಲ್ಲೋಲ್ಲಕಲ್ಲೋಲವಾಗಿಬಿಡುವ ಸಾಧ್ಯತೆಯಿದೆ.ಕೆಲವೊಮ್ಮೆ ಕಂಪ್ಯೂಟರಿನಲ್ಲಿ ಶೇರಿನ ವ್ಯವಹಾರವನ್ನು ಮಾಡುವ ಬ್ರೋಕರ್‌ನ ಕಂಪ್ಯೂಟರ್ ಆಪರೇಟರುಗಳು ತಪ್ಪಾಗಿ ಹೆಚ್ಚು ಸೊನ್ನೆಗಳನ್ನು ಸೇರಿಸಿದ ಆರ್ಡರುಗಳನ್ನು ಕಂಪ್ಯೂಟರಿಗೆ ಉಣಿಸಿ,ಭಾರೀ ಸಂಖ್ಯೆಯ ವ್ಯವಹಾರಕ್ಕೆ ತಪ್ಪಾಗಿ ಕಾರಣವಾಗುವುದೂ ಇದೆ.ಮಿಲಿಯನ್ ಎಂದು ಟೈಪಿಸುವಲ್ಲಿ ಬಿಲಿಯನ್ ಆಗಿಬಿಟ್ಟರೆ ಆಗಬಹುದಾದ ಅನಾಹುತ ಊಹಿಸಿಕೊಳ್ಳಿ.ಅಂತಹ ಕಾರಣವೇನಾದರೂ ಗುರುವಾರದ ಸೂಚ್ಯಂಕ ಕುಸಿತದ ಹಿನ್ನೆಲೆಯಲ್ಲೂ ಇತ್ತೇ ಎನ್ನುವ ಗುಮಾನಿ ಇದೆ.ಹಾಗೆಂದು ತಂತ್ರಾಂಶವೂ ಇಂತಹ ತಪ್ಪುಗಳ ಬಗ್ಗೆ ನಿಗಾವಹಿಸಿ,ಆಪರೇಟರ್ ಗಮನಕ್ಕೆ ತರುವಂತೆ ಮಾಡಲು ಸಾಧ್ಯವಿದೆ.
--------------------------------------------------
ಸೌರಕೋಶಗಳನ್ನು ಕಾಗದದ ಮೇಲೆ ಮುದ್ರಿಸುವತ್ತ..
ಕಾಗದದ ಹಾಳೆಯ ಮೇಲೆ ಸೌರಕೋಶಗಳನ್ನು ಮುದ್ರಿಸಿ,ಅವುಗಳ ಮೂಲಕ ಸೌರಶಕ್ತಿಯನ್ನು ವಿದ್ಯುಚ್ಛಕ್ತಿಯಾಗಿ ಮಾರ್ಪಡಿಸಲು ಸಾಧ್ಯವಾದರೆ ಎಷ್ಟು ಚೆನ್ನಾಗಿತ್ತು! ಅಮೆರಿಕಾದ ಶೇ.0.3ಭಾಗವನ್ನು ಈ ಸೌರಫಲಕಗಳಿಂದ ಆವರಿಸಲು ಸಾಧ್ಯವಾದರೆ,ಅಮೆರಿಕಾವೀಗ ಬಳಸುವ ವಿದ್ಯುತ್ತಿನ ಮೂರು ಪಟ್ಟು ವಿದ್ಯುಚ್ಛಕ್ತಿಯನ್ನು ಉತ್ಪಾದಿಸಬಹುದು ಎನ್ನುವುದನ್ನು ಗಮನಿಸಿದರೆ,ಸೌರಕೋಶಗಳ ಅಪಾರ ಸಾಧ್ಯತೆಗಳ ಅರಿವು ಉಂಟಾಗಬಹುದು.ಅಮೆರಿಕಾದ ಎಂಐಟಿಯ ಸಂಶೋಧಕರು ಕೈಗೊಂಡಿರುವ ಸಂಶೋಧನೆಯು ಯಶಸ್ವಿಯಾದರೆ,ಇಂಕ್ ಜೆಟ್ ಪ್ರಿಂಟರ್‌ನ ಮೂಲಕ ಮುದ್ರಿಸುವಂತೆ,ಸೌರಕೋಶಗಳನ್ನೂ ಕಾಗದದ ಮೇಲೆ ಮುದ್ರಿಸಬಹುದಾಗಿದೆ.ಮಾತ್ರವಲ್ಲ,ಈ ಸೌರಕೋಶಗಳು ಮಾಮೂಲಿ ಸೌರಕೋಶಗಳಿಗಿಂತ ಹೆಚ್ಚು ದಕ್ಷವಾಗಿರುತ್ತವೆ.ಈ ನಿಟ್ಟಿನಲ್ಲಿ ಆರಂಭಿಕ ಯಶಸ್ಸು ಲಭಿಸಿದೆ ಎಂದು ಸಂಶೋಧಕರು ಪ್ರಕಟಿಸಿದ್ದಾರೆ.
-------------------------------------------------
ಸಚಿನ್ ಟ್ವಿಟರಿನಲ್ಲಿ

ಸಚಿನ್ ತೆಂಡೂಲ್ಕರ್ ಇದೀಗ ಟ್ವಿಟರ್ ಖಾತೆ ತೆರೆದು,ತಮ್ಮ ಅನಿಸಿಕೆಗಳನ್ನು ತಮ್ಮ ಅಭಿಮಾನಗಳ ಜತೆ ಹಂಚಿಕೊಳ್ಳುತ್ತಿದ್ದಾರೆ.ಖಾತೆ ತೆರೆದ ಕೆಲವೇ ದಿನಗಳಲ್ಲಿ ಸಚಿನ್ ಹಿಂಬಾಲಕರ ಸಂಖ್ಯೆ ಎರಡುಲಕ್ಷ ದಾಟಿದೆ.ತಮ್ಮ ಸಂಗೀತ ಪ್ರೇಮದ ಬಗ್ಗೆ,ಆಶಾ,ಲತಾರವರ ಹಾಡುಗಳನ್ನು ಆಲಿಸುವ ತಮ್ಮ ಹವ್ಯಾಸದ ಬಗ್ಗೆ ಟ್ವಿಟರ್ ಸಂದೇಶದಲ್ಲಿ ಸಚಿನ್ ಹೇಳಿಕೊಂಡಿದ್ದಾರೆ.www.twitter.com/sachin_rtನಲ್ಲಿ ಇವರ ಪುಟವನ್ನು ನೋಡಲು ಸಾಧ್ಯ.
ಇಂಡಿಯಾ ಪೋಸ್ಟ್ ಟ್ವಿಟರ್‌ನಲ್ಲಿ ಖಾತೆ ತೆರೆದ ಮೊದಲ ಸರಕಾರಿ ಸ್ವಾಮ್ಯದ ಸಂಸ್ಥೆಯಾಗಿದೆ.http://twitter.com/PostOfficeIndia ವಿಳಾಸದಲ್ಲಿ ಇದು ಲಭ್ಯ.ಹೊಸ ಅಂಚೆಚೀಟಿಗಳ ಬಗ್ಗೆ ಮಾಹಿತಿಯು ಇಲ್ಲಿ ಲಭ್ಯವಾಗಲಿರುವುದರಿಂದ ಅಂಚೆ ಚೀಟಿ ಸಂಗ್ರಾಹಕರಿಗಿದು ಉಪಯುಕ್ತತಾಣವಾಗಬಹುದು.ಅದೇ ರೀತಿ ನೋಂದಾಯಿತ ಅಂಚೆಯ ಬಟವಾಡೆ ಬಗ್ಗೆ ತಿಳಿಯಲೂ ಟ್ವಿಟರ್ ಖಾತೆ ಉಪಯೋಗಿಸುವ ಯೋಚನೆ ಸಂಸ್ಥೆಯದ್ದಾಗಿದೆ.ಎರಡು ತಿಂಗಳಲ್ಲಿ ಇಂಡಿಯಾ ಪೊಸ್ಟ್ ಹಿಂಬಾಲಕರ ಸಂಖ್ಯೆ ಎರಡು ನೂರು ದಾಟಿದೆ.
------------------------------------------------------------
ಕಳೆದವಸ್ತು ಸಿಕ್ಕಿದೆ!
ಪಿ ಐ ಇ ಸಾಫ್ಟ್‌ವೇರ್ ಕಂಪೆನಿಯು ವಿನೂತನ ಸೇವೆಯೊಂದನ್ನು ಆರಂಭಿಸಿ,ಯಾರಾದರೂ ತಮ್ಮ ಕೀಲಿಕೈ,ಮೊಬೈಲ್,ಬ್ರೀಫ್‌ಕೇಸ್ ಅಂತಹ ವಸ್ತುಗಳನ್ನು ಕಳೆದುಕೊಂಡಾಗ,ಅವನ್ನು ಹಿಂದೆ ಪಡೆಯುವ ಸಾಧ್ಯತೆಯನ್ನು ಹೆಚ್ಚಿಸಿದ್ದಾರೆ.ಕೀಲಿಕೈ,ಬ್ರೀಫ್‌ಕೇಸ್ ಇಂತವು ಸಿಕ್ಕಿದರೂ,ಅದನ್ನು ಕಳೆದುಕೊಂಡವರಿಗೆ ಮುಟ್ಟಿಸಲು,ಅದು ಯಾರದು ಎಂದು ಪತ್ತೆ ಹಚ್ಚಲು ಸಾಧ್ಯವಾಗದೆ,ಅನಿವಾರ್ಯವಾಗಿ,ಸುಮ್ಮನಿರುವ ವ್ಯಕ್ತಿಗಳಿಗೆ ನೆರವಾಗುವ ಸೇವೆ ಇನ್ನು ಮುಂದೆ ದೊರಕಲಿದೆ.ಅಂತರ್ಜಾಲ ಮತ್ತು ಮೊಬೈಲ್ ಮೂಲಕವೂ ಈ ಸೇವೆಗೆ ನೋಂದಾವಣೆ ಮಾಡಿಕೊಳ್ಳಬಹುದಾಗಿದೆ.ತೊಂಭತ್ತೊಂಭತ್ತು ರೂಪಾಯಿ ನೀಡಿ,ತಮ್ಮ ವಸ್ತುಗಳನ್ನು ಯಾರೂ ನೋಂದಾಯಿಸಿಕೊಳ್ಳಬಹುದು.ನೋಂದಾಯಿಸಿದ ವಸ್ತುವಿಗೆ ಒಂದು ವಿಶಿಷ್ಠ ಗುರುತು ಸಂಖ್ಯೆಯನ್ನು ಕಂಪೆನಿಯು ನೀಡುತ್ತದೆ.ಇದನ್ನು ವಸ್ತುವಿಗೆ ಸ್ಟಿಕರ್ ತಗುಲಿಸಿ,ಬರೆದಿಡುವುದು ಗ್ರಾಹಕನ ಜವಾಬ್ದಾರಿ.ಯಾವುದೇ ವಸ್ತು ಕಳೆದದ್ದು ಸಿಕ್ಕಿದಾಗ,ವಸ್ತುವಿನ ಗುರುತು ಸಂಖ್ಯೆ ಹೇಳಿ,ಸಿಕ್ಕಿದವರು ಕಂಪೆನಿಯ ಕಚೇರಿಯನ್ನು ಸಂಪರ್ಕಿಸಿದರೆ,ಅದನ್ನು ಸಂಬಂಧಿಸಿದವರಿಗೆ ಕೊರಿಯರ್ ಮೂಲಕ ಮುಟ್ಟಿಸುವ ಹೊಣೆಯನ್ನು ಕಂಪೆನಿ ಹೊರುತ್ತದೆ.ಇದಕ್ಕಾಗಿ ಇಂಡಿಯಾ ಪೋಸ್ಟ್ ಸೇರಿ ಕೆಲವು ಕೊರಿಯರ್ ಕಂಪೆನಿಗಳ ಜತೆ ಒಪ್ಪಂದ ಏರ್ಪಟ್ಟಿದೆ.ಕಂಪೆನಿಯು ವಸ್ತುವನ್ನು ಮರಳಿಸಿ,ಔದಾರ್ಯ ಮೆರೆದವರಿಗೆ ಬಹುಮಾನ ಬೇರೆ ನೀಡುತ್ತದೆ.ಅಂಚೆ,ದೂರವಾಣಿ ಮತ್ತು ಅಂತರ್ಜಾಲ ಮೂಲಕ ಸೇವೆ ಲಭ್ಯವಾಗಲಿದೆ.ಮೊದಲ ಹಂತದಲ್ಲಿ ವಿಶಾಖಪಟ್ಟಣದಲ್ಲಿ ಸೇವೆಯನ್ನು ಪ್ರಾಯೋಗಿಕವಾಗಿ ಆರ‍ಂಭಿಸಲಾಗಿದೆ.
-------------------------------------------------
ತಮಿಳು ಅಂತರ್ಜಾಲ ವಿಳಾಸ ಇನ್ನು ಸಾಧ್ಯ!
ಅಂತರ್ಜಾಲ ವಿಳಾಸಗಳನ್ನು ಸ್ಥಳೀಯ ಭಾಷೆಗಳಲ್ಲಿ ನೀಡುವುದು ಸಾಧ್ಯವಾಗುವ ಮೂಲಕ, ಜಗದಗಲ ಹಬ್ಬಿದ ಕಂಪ್ಯೂಟರ್ ಜಾಲವೆಂಬ ಅಂತರ್ಜಾಲದ ಹೆಗ್ಗಳಿಕೆಗೆ ಹೊಸ ಮೆರುಗು ಬಂದಿದೆ.ಮೊದಲ ಲ್ಯಾಟಿನೇತರ ಭಾಷೆಯ ಲಿಪಿಯನ್ನು ಬಳಸಿದ ಅಂತರ್ಜಾಲ ವಿಳಾಸ ಎನ್ನುವ ಹೆಗ್ಗಳಿಕೆಗೆ ಅರಬ್ಬೀ ಭಾಷೆಗೆ ಹೋಗಿದೆ.ಅರಬ್ಬೀ ಭಾಷೆಯನ್ನು ಬಲದಿಂದ ಎಡಕ್ಕೆ ಬರೆಯುವುದು ಸಂಪ್ರದಾಯ ತಾನೇ?ಅಂತರ್ಜಾಲ ವಿಳಾಸ ಬರೆವಾಗಲೂ ಅದೇ ಸಂಪ್ರದಾಯ ಪಾಲಿಸಲಾಗಿದೆ.ಸುಮಾರು ಇಪ್ಪತ್ತು ದೇಶಗಳು ತಮ್ಮ ಭಾಷೆಯಲ್ಲಿ ವೆಬ್ ವಿಳಾಸ ನೀಡುವ ಸೌಕರ್ಯಕ್ಕಾಗಿ Internet Corporation for Assigned Names and Numbers (Icann)ನ್ನು ಕೋರಿದ್ದುವು.ಇದಕ್ಕೆ ICANN ತಾತ್ವಿಕ ಒಪ್ಪಿಗೆಯನ್ನೂ ನೀಡಿತ್ತು.
ಅಂತರ್ಜಾಲ ವಿಳಾಸದ ಅಂತ್ಯಭಾಗದಲ್ಲಿ ಕಾಣಿಸಿಕೊಳ್ಳುವ .com,.in ಮುಂತಾದ ಅಂತ್ಯಪದಗಳೂ ಈಗ ಸ್ಥಳೀಯ ಭಾಷೆಯಲ್ಲಿರಬಹುದು.ಲ್ಯಾಟಿನೇತರ ಅಂತರ್ಜಾಲ ವಿಳಾಸ ಹೊಂದಿದ ಮೊದಲ ವಿಳಾಸವನ್ನು ಹೊಂದಿದ ತಾಣ ಈಜಿಪ್ಟಿನ ಸಂಪರ್ಕ ಸಚಿವಾಲಯದ್ದು.ತಮಿಳು,ಹಿಂದಿಯೂ ಸೇರಿ ಕೆಲವು ಭಾರತೀಯ ಭಾಷೆಗಳ ವಿಳಾಸವನ್ನು ನೀಡುವ ಪ್ರಸ್ತಾವಕ್ಕೆ ICANN ಅಂಗೀಕಾರ ನೀಡಿದೆ.ಚೈನೀಸ್,ರಶ್ಯನ್ ಮುಂತಾದ ಭಾಷೆಗಳ ಅಂತರ್ಜಾಲ ವಿಳಾಸ ಈಗಾಗಲೇ ಇವೆಯಾದರೂ,ಅದು ICANN ಅಂಗೀಕಾರದ ಮೂಲಕ ಅಂತಾರ್ರಾಷ್ಟ್ರೀಯ ಮಾನ್ಯತೆ ಗಳಿಸದೆ,ತಮ್ಮಷ್ಟಕ್ಕೆ ಮಾಡಿಕೊಂಡ ವ್ಯವಸ್ಥೆಗಳಾಗಿದ್ದುವು.
-----------------------------------------------------------
ಲಿಪ್ಯಂತರ ಸೇವೆ ಒದಗಿಸುವ ಮತ್ತೊಂದು ತಾಣ
ಒಂದು ಭಾಷೆಯ ಲಿಪಿಯಲ್ಲಿ ಬರೆದ ಪದಗಳನ್ನು ಇನ್ನೊಂದು ಭಾಷೆಯ ಲಿಪಿಗೆ ಪರಿವರ್ತಿಸುವ ಗೂಗಲ್ ಸೇವೆಯ ಬಗ್ಗೆ ಕಳೆದವಾರದ "ನಿಸ್ತಂತು ಸಂಸಾರ" ಅಂಕಣದಲ್ಲಿ ಪ್ರಸ್ತಾವಿಸಲಾಗಿತ್ತು.ಅದನ್ನೋದಿದ ಓದುಗ ಮಂಗಳೂರಿನ ಐಟಿ ಉದ್ಯೋಗಿ ವಾಸುದೇವ ಕಾಮತ್ ಅವರು ಇಂತಹ ಸೇವೆಯು http://www.smc.org.in/silpa/Transliterate ತಾಣದಲ್ಲಿ ಹಿಂದೆಯೇ ಲಭ್ಯವಿತ್ತು ಎಂದು ತಿಳಿಸಿದ್ದಾರೆ.SILPAದಲ್ಲಿ ಈ ಲಿಪ್ಯಂತರ ಬದಲಾವಣೆಯು ಹಲವು ಭಾರತೀಯ ಭಾಷೆಗಳಲ್ಲೂ ಲಭ್ಯವಿವೆ.
udayavani
*ಅಶೋಕ್‌ಕುಮಾರ್ ಎ

Monday, May 03, 2010

ಗಣತಿಗೆ ಗಣಕ ಏಕಿಲ್ಲ?

udayavani bangalore
ಗಣತಿಗೆ ಗಣಕ ಏಕಿಲ್ಲ?
ಹತ್ತುವರ್ಷಗಳಿಗೊಮ್ಮೆ ನಡೆಯುವ ಮಹಾಗಣತಿಗೆ ಅಧಿಕೃತ ಚಾಲನೆ ಸಿಕ್ಕಿದೆ.ಗಣತಿದಾರರು ಮನೆಗಳನ್ನು ಗುರುತಿಸಿ,ಅಲ್ಲಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹ ಮಾಡುವa ಕಾರ್ಯ ಪ್ರಗತಿಯಲ್ಲಿದೆ.ಆದರೆ ಅವರುಗಳು ಮನೆ ಮನೆಗೆ ಭೇಟಿ ನೀಡುವಾಗ ಕಾಗದ-ಪೆನ್ನು ಹಿಡಿದು ಹೋಗುತ್ತಿದ್ದಾರೆ.ಇಂದಿನ ಆಧುನಿಕ ತಂತ್ರಜ್ಞಾನಗಳು ಲಭ್ಯವಿರುವಾಗ,ಗಣತಿದಾರರು ಕೈಯಲ್ಲಿ ಹಿಡಿದ ಸಾಧನಗಳಲ್ಲಿ ಮಾಹಿತಿ ಕಲೆಹಾಕುವುದು ಸಾಧ್ಯವಿತ್ತು.ಇಂತಹ ಸಾಧನಗಳ ಬಳಕೆಯಾದರೆ,ಕಲೆ ಹಾಕಿದ ಮಾಹಿತಿಯನ್ನು ಕಂಪ್ಯೂಟರುಗಳಿಗೆ ವರ್ಗಾಯಿಸಿ,  ವಿಶ್ಲೇಷಿಸುವುದು ಸುಲಭವಾಗುತ್ತಿತ್ತು.ಕಾಗದದಲ್ಲಿ ಬರೆದುಕೊಂಡ ಮಾಹಿತಿಯನ್ನು ಮತ್ತೆ ಕಂಪ್ಯೂಟರೀಕರಣಗೊಳಿಸುವುದು,ತ್ರಾಸದಾಯಕ ಕೆಲಸ.ಕೈಯಲ್ಲಿ ಹಿಡಿಯುವ ಸಾಧನಗಳನ್ನು ಬಳಸಲು ಗಣತಿದಾರರಿಗೆ ತರಬೇತಿ ಅವಶ್ಯಕ,ಮಾಹಿತಿ ಕಲೆಹಾಕಲು ತಂತ್ರಾಂಶ ರಚನೆಯೂ ಆಗಬೇಕಿತ್ತು ಎನ್ನುವುದು,ಅಂತಹ ತಂತ್ರಜ್ಞಾನ ಬಳಕೆ ಆಗದಿರಲು ಕಾರಣವಾಗಿರಬಹುದು.ಕನಿಷ್ಟ ಪಕ್ಷ ನಗರಗಳ ನಿವಾಸಿಗಳಿಗೆ ತಮ್ಮ ವಿವರಗಳನ್ನು ಅಂತರ್ಜಾಲ ತಾಣದ ಮೂಲಕವೇ ನೀಡಲು ಅವಕಾಶ ನೀಡಿ,ಗಣತಿಕಾರ್ಯವನ್ನು ಸುಲಭವಾಗಿಸುವ ಮೊದಲ ಹೆಜ್ಜೆಯನ್ನಾದರೂ ತೆಗೆದುಕೊಳ್ಳಬಹುದಿತ್ತು.ಗಣತಿದಾರರು ಬಂದಾಗ ಮನೆಯವರೆಲ್ಲರೂ ಮನೆಯಲ್ಲಿಲ್ಲದೆ,ಗಣತಿಕಾರ್ಯ ಸರಿಯಾಗಿ ನಡೆಯದೆ ಇರುವ ಸಮಸ್ಯೆಯ ನಿವಾರಣೆಗೂ ಅಂತರ್ಜಾಲ ಮೂಲಕ ಗಣತಿ ವಿವರ ನೀಡುವ ಸೌಕರ್ಯ ಕಲ್ಪಿಸುವುದು ಪರಿಹಾರವಾಗಬಲ್ಲುದು.
------------------------------------------------------------

ಲಿಪಿ ಬದಲಾಯಿಸುವ ಗೂಗಲ್ ಸೇವೆ

ಕನ್ನಡದಲ್ಲಿ ನೀವು ಟೈಪಿಸಿದ ಪದವನ್ನು ಹಿಂದಿಗೋ ಇನ್ನಾವುದೋ ಭಾಷೆಗೆ ಬದಲಾಯಿಸುವುದೀಗ ಬಹುಸುಲಭ.ಗೂಗಲ್ ಅಂತರ್ಜಾಲ ತಾಣ ಇಂತಹ ಸೇವೆ ಒದಗಿಸುತ್ತದೆ.ನೀವು ಪದವನ್ನು ಟೈಪಿಸಿದ ಭಾಷೆಯನ್ನು ತಿಳಿಸಿದರೂ ಸರಿ,ಇಲ್ಲವಾದರೂ ಸರಿ.ಗೂಗಲ್ ತಂತಾನೇ ಭಾಷೆಯನ್ನು ಗುರುತಿಸುತ್ತದೆ.ಯಾವ ಭಾಷೆಗೆ ಬದಲಿಸಬೇಕಾಗಿದೆಯೆಂದು ತಿಳಿಸಿದರೆ,ಕ್ಷಣದಲ್ಲಿ ಲಿಪಿ ಬದಲಾವಣೆ ಆಗುತ್ತದೆ."google script converter" ಎಂದು ಗೂಗಲಿನಲ್ಲಿ ಶೋಧಿಸಿ,ಪುಟದ ಕೊಂಡಿಯನ್ನು ಕಂಡುಕೊಳ್ಳಿ.
-----------------------------------------------------------
ಪ್ರಯೋಗಾಲಯದಲ್ಲಿ ನಕ್ಷತ್ರ ಮಿನುಗಲಿದೆಯೇ?
ಅಣು ವಿದಳನದಿಂದ ಅಣುಶಕ್ತಿ ಉತ್ಪಾದಿಸಲು ಭಾರತವೂ ಸೇರಿದಂತೆ ಹಲವು ದೇಶಗಳು ಸಮರ್ಥವಾಗಿವೆ.ಆದರೆ ಅಣು ಸಂಮಿಳನದಿಂದ ಶಕ್ತಿಯ ಉತ್ಪಾದನೆ ಇನ್ನೂ ಸಾಧ್ಯವಾಗಿಲ್ಲ.ವಿಕಿರಣಶಾಲಿ ಡ್ಯುಟಿರಿಯಂ ಮತ್ತು ಟ್ರೀಟಿಯಂ ಪರಮಾಣುಗಳನ್ನು ಅಧಿಕ ಒತ್ತಡ ಮತ್ತು ಉಷ್ಣತೆಯಲ್ಲಿ ಒಂದಾಗುವಂತೆ ಮಾಡಿದರೆ,ಅಪಾರಶಕ್ತಿಯ ಬಿಡುಗಡೆಯಾಗುತ್ತದೆ.ಇಂತಹ ಅಣುಸಂಮಿಳನವೇ ನಕ್ಷತ್ರಗಳಿಂದ ಬರುವ ಬೆಳಕು ಮತ್ತು ವಿಕಿರಣಗಳ ಮೂಲವಾಗಿದೆ.ಇಂತಹ ಅಣು ಸಂಮಿಳನವನ್ನು ಪ್ರಯೋಗಾಲಯದಲ್ಲಿ ಮಾಡುವ ಕನಸು ಇನ್ನೂ ನನಸಾಗಿಲ್ಲ.ಅದಕ್ಕೆ ಅಗತ್ಯವಾದ ಅತ್ಯಧಿಕ ಶಾಖ ಮತ್ತು ಒತ್ತಡವನ್ನು ಪ್ರಯೋಗಾಲಯದಲ್ಲಿ ಉಂಟು ಮಾಡುವುದು ನಿಜಕ್ಕೂ ಸವಾಲು.ಜತೆಗೆ ಅಂತಹ ಕ್ರಿಯೆಯಿಂದ ಬಿಡುಗಡೆಯಾಗುವ ಶಕ್ತಿಯನ್ನು ನಿಯಂತ್ರಿಸದಿದ್ದರೆ,ಹಾನಿಯೂ ಕಟ್ಟಿಟ್ಟ ಬುತ್ತಿ.
ಕ್ಯಾಲಿಫೋರ್ನಿಯಾದ ಪ್ರಯೋಗಾಲಯದಲ್ಲಿ ಅತ್ಯಂತ ಸಣ್ಣ ಪ್ರಮಾಣದಲ್ಲಿ ಇಂತಹ ಬೈಜಿಕ ಸಂಮಿಳನವನ್ನು ಸಾಧಿಸಲು ವಿಜ್ಞಾನಿಗಳು ಹೊರಟಿದ್ದಾರೆ.ಆರೂವರೆ ಅಡಿ ದಪ್ಪದ ಕಾಂಕ್ರೀಟಿನ ಗುಮ್ಮಟದೊಳಗೆ ಈ ಪ್ರಯೋಗ ನಡೆಯಲಿದೆ.ಲೇಸರ್ ಕಿರಣಗಳನ್ನು ಬಳಸಿ,ಅಗತ್ಯವಾದ ಶಾಖ ಮತ್ತು ಒತ್ತಡವನ್ನು ಈ ಗುಮ್ಮಟದೊಳಗೆ ಸಾಧಿಸಬೇಕಿದೆ.ಫುಟ್‌ಬಾಲ್ ಮೈದಾನದಷ್ಟು ಅಗಲದ ಲೇಸರ್ ಕಿರಣಗಳನ್ನು ಅಣುವಿನಷ್ಟು ಗಾತ್ರಕ್ಕೆ ಕೇಂದ್ರೀಕರಿಸಿ,ಬೈಜಿಕ ಸಂಮಿಳನವನ್ನು ಸಾಧಿಸುವುದು ಕ್ಯಾಲಿಫೋರ್ನಿಯಾದ ಲಿವರ್‌ಮೋರ್ ಪ್ರಯೋಗಾಲಯದ ಸಂಶೋಧಕರ ಯೋಜನೆ.ಒಂದು ಗ್ಯಾಲನ್ ಶುದ್ಧ ನೀರಿನಿಂದ ಮುನ್ನೂರು ಗ್ಯಾಲನ್ ಪೆಟ್ರ‍ೋಲಿನಿಂದ ಪಡೆದ ಶಕ್ತಿಯನ್ನು ಪಡೆಯಲು ಅಣು ಸಂಮಿಳನದಿಂದ ಸಾಧ್ಯ.ಇನ್ನೊಂದು ವಿಧವಾಗಿ ಹೇಳುವುದಿದ್ದರೆ,ಐವತ್ತು ಕಪ್ ನೀರಿನಿಂದ,ಎರಡು ಟನ್ ಕಲ್ಲಿದ್ದಲಿನಿಂದ ಪಡೆದ ಶಕ್ತಿಗೆ ಸಮಾನವಾದ ಶಕ್ತಿಯನ್ನು ಪಡೆಯಲು ಸಾಧ್ಯವಾಗುತ್ತದೆ.
ಪ್ರಯೋಗಾಲಯದಲ್ಲಿ ಮಿನುಗಲಿರುವ ಈ ನಕ್ಷತ್ರದ ಅಳತೆ ಕೇವಲ ಐದು ಮೈಕ್ರಾನ್ ಆಗಿದ್ದು,ಅದು ಕೇವಲ ಸೆಕೆಂಡಿನ ಇನ್ನೂರು ಟ್ರಿಲಿಯನ್‌ನ ಒಂದು ಭಾಗದಷ್ಟು ಕಿರಿದು ಸಮಯ ಮಿನುಗಲಿದೆ.ಈ ಪ್ರಯೋಗದ ಸಿದ್ಧತೆಗೆ ಇದುವರೆಗೆ ಎರಡು ಬಿಲಿಯನ್ ಡಾಲರು ವೆಚ್ಚ ಮಾಡಲಾಗಿದೆ ಎಂದರೆ ನಂಬುವಿರಾ?ಇಡೀ ಪ್ರಯೋಗಾಲಯವು ಲೇಸರ್ ಕಿರಣವನ್ನು ಉತ್ಪಾದಿಸುವ ನಳಿಕೆಗಳಿಂದ ತುಂಬಿದೆ.ಲೇಸರ್ ಕಿರಣಗಳನ್ನು ನೂರತೊಂಭತ್ತೆರಡು ಪುಂಜಗಳಾಗಿಸಿ,ಅಣುಗಾತ್ರಕ್ಕೆ ಕೇಂದ್ರೀಕರಿಸಲಾಗುತ್ತದೆ.ಈ ಬಿಂದುವಿನಲ್ಲಿ ಜಲಜನಕದ ಐಸೋಟೋಪುಗಳಾದ ಡ್ಯುಟೀರಿಯಂ ಮತ್ತು ಟ್ರ‍ೀಟಿಯಮ್ ಪರಮಾಣುಗಳನ್ನು ಇರಿಸಿ,ಈ ಪರಮಾಣುಗಳು ಬಂಗಾರದ ಕ್ಯಾಪ್ಸೂಲಿನೊಳಗೆ ಸಂಮಿಳನ ಹೊಂದುವಂತೆ ಮಾಡಲಾಗುತ್ತದೆ.ಅಣುಸಂಮಿಳನವೇನಾದರೂ ನಡೆದರೆ ನೂರು ದಶಲಕ್ಷ ಡಿಗ್ರಿ ಸೆಲ್ಸಿಯಸ್ ಉಷ್ಣತೆಯೂ,ನೂರು ಬಿಲಿಯನ್ ಪಟ್ಟು ವಾತಾವರಣದ ಒತ್ತಡವೇರ್ಪಡುತ್ತದೆ!
ಈ ಪ್ರಯೋಗದ ಬಗ್ಗೆ ತಾತ್ಸಾರದ ನುಡಿಗಳೂ ಕೇಳುತ್ತಿವೆ.ಒಂದು ವೇಳೆ ಪ್ರಯೋಗ ಸಫಲವಾದರೂ,ಅದನ್ನು ಶಕ್ತಿಯ ಉತ್ಪಾದನೆಗೆ ಬಳಸಲು ಸಾಧ್ಯವಾಗುವುದು ಅಸಾಧ್ಯ.ಈ ಪ್ರಯೋಗ ಬರೇ ಸೈದ್ಧಾಂತಿಕ,ನೈಜ ಪ್ರಯೋಜನ ನೀಡುವಂತದ್ದಲ್ಲ ಎನ್ನುವ ಅಭಿಪ್ರಾಯ ಕೆಲವು ವಿಜ್ಞಾನಿಗಳದ್ದು.
------------------------------------------------------------------
ಆಪಲ್‌ಗೆ ಫ್ಲಾಶ್ ಬೇಡ,ಯಾಕೆ?

ಆಪಲ್ ಕಂಪೆನಿಯ ಐಪಾಡ್,ಐಫೋನ್ ಮತ್ತು ಹೊಸ ಸಾಧನವಾದ ಐಫ್ಯಾಡಿನಲ್ಲಿ ಫ್ಲಾಶ್ ತಂತ್ರಜ್ಞಾನವನ್ನು ಬಳಸಲು ಸಾಧ್ಯವಿಲ್ಲ.ಅಂತರ್ಜಾಲ ಜಾಲಪುಟಗಳಲ್ಲಿನ ಅನಿಮೇಶನ್ ಪರಿಣಾಮಗಳು,ಕಂಪ್ಯೂಟರ್ ಆಟಗಳಲ್ಲಿ ಫ್ಲಾಶ್ ತಂತ್ರಜ್ಞಾನದ ಬಳಕೆ ಹೆಚ್ಚಾಗಿ ನಡೆಯುತ್ತದೆ.ಇಂತಹ ಜನಪ್ರಿಯ ತಂತ್ರಜ್ಞಾನವನ್ನು ಆಪಲ್ ಉತ್ಪನ್ನಗಳಲ್ಲಿ ಬಳಸದಿರುವುದಕ್ಕೆ ಕಾರಣವಾದ ಅಂಶಗಳ ಬಗ್ಗೆ ಆಪಲ್ ಕಂಪೆನಿಯ ಮುಖ್ಯಸ್ಥ ಸ್ಟೀವ್ಸ್ ಜಾಬ್ ವಿವರಣೆ ನೀಡಿದ್ದಾರೆ.ಈ ತಂತ್ರಜ್ಞಾನ ಮುಕ್ತ ತಂತ್ರಜ್ಞಾನವಲ್ಲ,ಅದರಲ್ಲಿ ಭದ್ರತಾ ಕೊರತೆಯಿದೆ ಎನ್ನುವುದು ಸ್ಟೀವ್ ಜಾಬ್ಸ್ ನೀಡಿರುವ ಕಾರಣಗಳಲ್ಲಿ ಸೇರಿವೆ.ಈಗಿನ ಸ್ಪರ್ಶ ಸಂವೇದಿ ಸಾಧನಗಳಲ್ಲಿ,ಫ್ಲಾಶ್ ತಂತ್ರಜ್ಞಾನ ಸರಿಯಾಗಿ ಕೆಲಸ ಮಾಡುವುದಿಲ್ಲ,ಮಾತ್ರವಲ್ಲ,ಅದು ಬ್ಯಾಟರಿಯ ಶಕ್ತಿಯ ಸೋರುವಿಕೆಗೆ ಕಾರಣವಾಗುತ್ತದೆ ಎನ್ನುವುದು ಜಾಬ್ಸ್ ನೀಡಿರುವ ಮುಖ್ಯ ಸಾಬೂಬುಗಳು.ಜಾವಾಸ್ಕ್ರಿಪ್ಟ್,ಸಿಯೆಸೆಸ್ ಮತ್ತು ಎಚ್ ಟಿ ಎಂ ಎಲ್5 ನಂತಹ ಮುಕ್ತ ಬದಲಿ ತಂತ್ರಜ್ಞಾನದ ಆಯ್ಕೆಗಳು ಲಭ್ಯವಿರುವಾಗ ಫ್ಲಾಶ್ ಏಕೆ ಎನ್ನುವುದು ಜಾಬ್ಸ್ ನಿಲುವು.ಅಂದಹಾಗೆ ಫ್ಲಾಶ್ ತಂತ್ರಜ್ಞಾನವು ಅಡೋಬ್ ಕಂಪೆನಿಯದ್ದಾಗಿದೆ. ಇಲ್ಲಿಯವರೆಗೆ ಆಪಲ್ ಸಾಧನಗಳಲ್ಲಿ ಫ್ಲಾಶ್ ಬಳಕೆಗೆ ಅವಕಾಶ ನೀಡಲೋಸುಗ,ಫ್ಲಾಶ್ ತಂತ್ರಾಂಶವನ್ನು ಆಪಲ್ ಸಾಧನದಲ್ಲಿ ಬಳಕೆಗೆ ಅವಕಾಶವಿರುವ ತಂತ್ರಜ್ಞಾನದ ತಂತ್ರಾಂಶಕ್ಕೆ ಬದಲಿಸಲು ಅನುವು ನೀಡುವ ಅನುವಾದಕ ಸಾಧನಗಳನ್ನು ಒದಗಿಸಿ,ತಂತ್ರಾಂಶ ಅಭಿವೃದ್ಧಿ ಪಡಿಸುವವರಿಗೆ ನೀಡುತ್ತಿದ್ದ ಸಹಾಯಹಸ್ತವನ್ನು ನಿಲ್ಲಿಸಲು ನಿರ್ಧರಿಸಿದ ನಿರ್ಧಾರವನ್ನು ಅಡೋಬ್ ಕಂಪೆನಿ ಪ್ರಕಟಿಸಿದ ಬೆನ್ನಲ್ಲೇ ಜಾಬ್ಸ್ ಅವರ ವಿವರಣೆ ಬಂದಿದೆ.ಹಿಂದೆಲ್ಲಾ ಹಾಲು-ಜೇನು ಸಂಬಂಧ ಹೊಂದಿದ್ದ,ಅಡೋಬ್-ಆಪಲ್ ಸಂಬಂಧ ಈಗ ಸರಿ ಪಡಿಸಲು ಕಷ್ಟವಾದ ಘಟ್ಟ ಮುಟ್ಟಿರುವುದು ಸ್ಪಷ್ಟವಾಗಿದೆ.
------------------------------------------------------------------------
ಮೈಂಡ್ ಟ್ರೀ ಕಂಪೆನಿಗೆ "ಆಧಾರ"
ಭಾರತೀಯರೆಲ್ಲರಿಗೂ ವಿಶಿಷ್ಠ ಗುರುತು ನೀಡುವ ಯೋಜನೆಗೆ ಈಗ ಆಧಾರ್ ಎಂಬ ಹೊಸ ಹೆಸರನ್ನು ನೀಡಲಾಗಿದೆ.ನಂದನ್ ನೀಲೆಕಣಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಆಧಾರ್‌ಗೆ ತಂತ್ರಾಂಶ ಸಿದ್ಧ ಪಡಿಸುವ ಯೋಜನೆಗೆ ಗುತ್ತಿಗೆ ನೀಡುವ ಕಾರ್ಯ ಈಗ ಮುಗಿದಿದ್ದು,ಮೈಂಡ್ ಟ್ರೀ ಕಂಪೆನಿಗೆ ಮೂವತ್ತು ಕೋಟಿ ಕೆಲಸವನ್ನು ಗುತ್ತಿಗೆ ನೀಡಲಾಗಿದೆ.ಐಬಿಎಂ,ಅಕ್ಸೆಂಚರ್,ಟಿಸಿಎಸ್,ಇನ್ಫೋಸಿಸ್ ಮುಂತಾದ ಕಂಪೆನಿಗಳು ಗುತ್ತಿಗೆಗಾಗಿ ಸ್ಪರ್ಧೆಯಲ್ಲಿದ್ದರೂ,ಸ್ಪರ್ಧಾತ್ಮಕ ದರ ಮತ್ತು ಕಂಪೆನಿಯ ಪೂರ್ಣಕಾಲಿಕ ನೌಕರರನ್ನೇ ಅಭಿವೃದ್ಧಿ ಕಾರ್ಯಕ್ಕೆ ಬಳಸಬೇಕೆನ್ನುವ ಶರ್ತಕ್ಕೊಪ್ಪಿದ ಮೈಂಡ್ ಟ್ರೀ ಮೊದಲ ಹಂತದ ಗುತ್ತಿಗೆ ಬಗಲಿಗೆ ಹಾಕಿಕೊಳ್ಳಲು ಶಕ್ತವಾಯಿತು.

Udayavani
*ಅಶೋಕ್‌ಕುಮಾರ್ ಎ