Monday, June 28, 2010

ಸ್ವಾಯತ್ತ ತಾಂತ್ರಿಕ ಕಾಲೇಜುಗಳು:ವಿದ್ಯಾರ್ಥಿಗಳಿಗೆ ಸೂಕ್ತವೇ?

ಸ್ವಾಯತ್ತ ತಾಂತ್ರಿಕ ಕಾಲೇಜುಗಳು:ವಿದ್ಯಾರ್ಥಿಗಳಿಗೆ ಸೂಕ್ತವೇ?
ಕರ್ನಾಟಕದಲ್ಲಿ ತಾಂತ್ರಿಕ ಕಾಲೇಜುಗಳು ವಿಶ್ವೇಶ್ವರಯ್ಯ ತಾಂತ್ರಿಕ ವಿವಿ(ವಿಟಿಯು)ಯಡಿ ಕೆಲಸ ಮಾಡುತ್ತಿದ್ದುವು.ಈಗ ಕೆಲ ಕಾಲೇಜುಗಳು ಸ್ವಾಯತ್ತ ಕಾಲೇಜುಗಳಾಗಿ ಕೆಲಸ ಮಾಡುತ್ತಾ,ಪಠ್ಯಕ್ರಮ,ಪರೀಕ್ಷೆಗಳನ್ನು ತಾವೇ ಮಾಡುವ ಸ್ವಾತಂತ್ರ್ಯ ಹೊಂದಿವೆ.ಸ್ವಾಯತ್ತ ಕಾಲೇಜುಗಳ ವಿದ್ಯಾರ್ಥಿಗಳು ವಿಟಿಯು ಪದವಿಯನ್ನೇ ಪಡೆಯುತ್ತಾರೆ.ಇಂತಹ ಸ್ವಾಯತ್ತೆ ಹೇಗೆ ಪ್ರಯೋಜನಕಾರಿ?ಪಠ್ಯಕ್ರಮವನ್ನು ಸ್ವಾಯತ್ತ ಕಾಲೇಜುಗಳು ತಮ್ಮ ಅಗತ್ಯಾನುಸಾರ ರಚಿಸಲು ಸ್ವತಂತ್ರವಾಗಿವೆ.ಪಠ್ಯಕ್ರಮವನ್ನು ಪಠ್ಯಕ್ರಮ ಸಮಿತಿಯು ಅಂಗೀಕರಿಸಬೇಕು.ಪಠ್ಯಕ್ರಮವನ್ನು ಪರಿಷ್ಕರಿಸುವುದು ಸುಲಭವಾದ್ದರಿಂದ ಅಗತ್ಯ ಕಂಡಾಗಲೆಲ್ಲಾ ಅದರಲ್ಲಿ ಬದಲಾವಣೆಗಳನ್ನು ತರುವುದು ಸಾಧ್ಯ.ನೂರಕ್ಕೂ ಅಧಿಕ ಕಾಲೇಜುಗಳು ಇರುವ ವಿವಿಯ ಪಠ್ಯಕ್ರಮವನ್ನು ಬದಲಿಸುವ ಮುನ್ನ ಕರಡು ಪಠ್ಯಕ್ರಮವನ್ನು ಕಾಲೇಜುಗಳಿಗೆ ಕಳಿಸಿ,ಅವರ ಅಭಿಪ್ರಾಯಗಳನ್ನೂ ಪಡೆಯುವುದು ಅಗತ್ಯವಾಗುವುದರಿಂದ,ಪ್ರಕ್ರಿಯೆ ನಿಧಾನವಾಗುತ್ತದೆ.
    ಈ ಕಾಲೇಜುಗಳಲ್ಲಿ,ಪರೀಕ್ಷೆಗಳು ನಡೆದು,ಎರಡು ವಾರಗಳೊಳಗೆ ಫಲಿತಾಂಶ ನೀಡಲು ಸಾಧ್ಯವಾಗುವುದು,ವಿದ್ಯಾರ್ಥಿಗಳ ದೃಷ್ಟಿಯಿಂದ ಅತ್ಯಂತ ಸ್ವಾಗತಾರ್ಹ ಕ್ರಮವಾಗುತ್ತದೆ.ಯೆರ್ರಾಬಿರ್ರಿ ಮೌಲ್ಯಮಾಪನ ನಡೆಯುವ ಭಯವಿಲ್ಲ.ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದರೆ,ಅದೂ ಅತ್ಯಂತ ಶೀಘ್ರವಾಗಿ ನಡೆಯುತ್ತದೆ.ಪರೀಕ್ಷೆಯಲ್ಲಿ ನಪಾಸಾದವರಿಗೆ,ಮುಂದಿನ ಸೆಮಿಸ್ಟರ್ ವರೆಗೆ ಕಾಯದೆ,ತಕ್ಷಣ ಪರೀಕ್ಷೆ ಬರೆಯುವ ಸೌಕರ್ಯವೂ ಸಿಗುತ್ತದೆ.ಸೆಮಿಸ್ಟರ್ ಪರೀಕ್ಷೆಗಳಿಗೆ ಮಾತ್ರಾ ಅತ್ಯಂತ ಮಹತ್ತ್ವ ನೀಡದೆ,ಆಗಾಗ ನಡೆಯುವ ಕಿರುಪರೀಕ್ಷೆಗಳಿಗೂ ಪ್ರಾಧಾನ್ಯ ಕಲ್ಪಿಸುವ ಮೂಲಕ ಪರೀಕ್ಷೆಗಳು ಲಾಟರಿಯಾಗುವುದು ತಪ್ಪುತ್ತದೆ.ಪ್ರಯೋಗಾಲಯಗಳಲ್ಲೂ ಇದೇ ರೀತಿ ಪ್ರತಿ ತರಗತಿಯಲ್ಲೂ ಮೌಲ್ಯಾಂಕನ ನಡೆಸುವ ಮೂಲಕ,ಸೆಮಿಸ್ಟರ್ ಉದ್ದಕ್ಕೂ ವಿದ್ಯಾರ್ಥಿಯ ನಿರ್ವಹಣೆಗೆ ಬೆಲೆ ಸಿಗುತ್ತದೆ.ಪರೀಕ್ಷೆಗಳಲ್ಲಿ ಹೆಚ್ಚು ವಿದ್ಯಾರ್ಥಿಗಳು ನಪಾಸಾಗುವುದು,ಕಡಿಮೆ ಅಂಕ ಗಳಿಸುವುದು ವಿವಿಯ ಗುಣಮಟ್ಟದ ಮಾನದಂಡಗಳು ಎಂಬ ತಪ್ಪು ಅಭಿಪ್ರಾಯ ಹೊಂದಿದವರು,ಸ್ವಾಯತ್ತ ಕಾಲೇಜುಗಳಲ್ಲಿ ವಿದ್ಯಾರ್ಥಿಗಳನ್ನು ಸುಮ್ಮನೆ ಪಾಸು ಮಾಡುತ್ತಾರೆ ಎಂದು ಮಿಥ್ಯಾರೋಪ ಹೊರಿಸುವುದಿದೆ.ಉತ್ತಮ ವಿದ್ಯಾಸಂಸ್ಥೆಗಳು ಮಾತ್ರಾ ಸ್ವಾಯತ್ತೆ ಗಳಿಸಿವೆಯಾದ್ದರಿಂದ ಅಂತಹ ಅಕ್ರಮಗಳು ನಡೆಯುವುದಿಲ್ಲ.ಮಾತ್ರವಲ್ಲ,ವಿಟಿಯು ಸ್ವಾಯತ್ತ ಕಾಲೇಜುಗಳ ಚಟುವಟಿಕೆಗಳ ಮೇಲೆ ನಿಯಂತ್ರಣ ಹೊಂದಿದೆ.
-----------------------------------------------------
ಸ್ವಾಗತಾರ್ಹ "ಸ್ವಾಗತ್"

State Wide Attention on Grievances with Application of Technology (SWAGAT-ಸ್ವಾಗತ್)ಎನ್ನುವುದು ಜನರ ದೂರುಗಂಟೆಯನ್ನು ಆಲಿಸಲು ಗುಜರಾತ್‌ನ ರಾಜ್ಯ ಸರಕಾರ ಮಾಡಿಕೊಂಡಿರುವ ಆನ್‌ಲೈನ್ ವ್ಯವಸ್ಥೆ.ಜನರು ತಮ್ಮ ದೂರು ದುಮ್ಮಾನಗಳನ್ನು ಆನ್‌ಲೈನ್‌ನಲ್ಲಿ ದಾಖಲಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.ದೂರು ದಾಖಲಾದೊಡನೆ,ಅದು ಅಧಿಕಾರಿಗಳ ಪ್ರತಿಕ್ರಿಯೆಗೆ ಲಭ್ಯವಿರುತ್ತದೆ.ಅಧಿಕಾರಿಗಳು ಪ್ರತಿ ದೂರಿಗೂ ತಮ್ಮ ಪ್ರತಿಕ್ರಿಯೆಯನ್ನು ದಾಖಲಿಸಬೇಕು.ಪ್ರತಿ ತಿಂಗಳೂ ನಡೆಯುವ ಸಭೆಯಲ್ಲಿ ಅವುಗಳನ್ನು ಚರ್ಚಿಸಿ,ಬಗೆಹರಿಸಲಾಗುತ್ತದೆ.ಮುಖ್ಯಮಂತ್ರಿಯೇ ಸಭೆಯಲ್ಲಿ ಖುದ್ದು ಹಾಜರಿರುವುದರಿಂದ,ಸಭೆಗೆ ಹೆಚ್ಚಿನ ಗಾಂಭಿರ್ಯ ಬರುತ್ತದೆ.ವಿಶ್ವಸಂಸ್ಥೆಯ ಸಾರ್ವಜನಿಕ ಸೇವೆಗಾಗಿ ಪ್ರಶಸ್ತಿಯನ್ನು ಈ ಯೋಜನೆ ಗೆಲ್ಲಲು ಸಾಧ್ಯವಾಗಿರುವುದು ಸ್ವಾಗತ್ ಯೋಜನೆಯ ಸಫಲತೆಗೆ ಸಾಕ್ಷಿ.http://swagat.guj.nic.inನಲ್ಲಿ ಈ ಯೋಜನೆಯ ಅಂತರ್ಜಾಲ ತಾಣವಿದೆ.ಯೋಜನೆಯ ಅನುಷ್ಠಾನಕ್ಕಾಗಿ ರಾಜ್ಯದ 26 ಸಚಿವಾಲಯಗಳ, 26 ಜಿಲ್ಲಾಕಚೇರಿಗಳು ಮತ್ತು 239 ಉಪಜಿಲ್ಲಾಕಚೇರಿಗಳಲ್ಲಿ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆಯನ್ನು ಅಳವಡಿಸಿ,ಮುಖ್ಯಮಂತ್ರಿಯ ಜತೆ ಎಲ್ಲಾ ಕೇಂದ್ರಗಳು ಭಾಗವಹಿಸಲು ಅನುಕೂಲತೆ ಕಲ್ಪಿಸಲಾಗಿದೆ.ಇಪ್ಪತ್ತಮೂರು ಸಾವಿರಕ್ಕೂ ಅಧಿಕ ಅಧಿಕಾರಿಗಳು ಸ್ವಾಗತ್ ವ್ಯವಸ್ಥೆಯಲ್ಲಿ ಭಾಗವಹಿಸುತ್ತಾರೆ.ಬಹಳ ಕಾಲದಿಂದ ವಿಲೇವಾರಿ ಆಗದ ಪ್ರಕರಣಗಳಿಗೆ ಆದ್ಯತೆಯಿರುವಂತೆ,ಮೊದಲ ಬಾರಿಗೆ ದೂರು ಸಲ್ಲಿಸುವವರೂ ದೂರು ದಾಖಲಿಸಬಹುದು.ಯೋಜನೆಯಲ್ಲಿ ಸುಮಾರು ಒಂದು ಲಕ್ಷ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ.
--------------------------------------------------------------------
ಆಸು-ಮನ
ಆತ್ರಾಡಿ ಸುರೇಶ್ ಹೆಗ್ಡೆಯವರು http://athradi.wordpress.com/ ಬ್ಲಾಗು ಬರಹಗಳ ಮೂಲಕ ಅಂತರ್ಜಾಲ ಬಳಸುವ ಕನ್ನಡಿಗರನ್ನು ರಂಜಿಸುತ್ತಿರುವ ಕವಿ,ಬರಹಗಾರ.ಹಾಸ್ಯ ಪ್ರಧಾನ ಕವನಗಳು ಇವರ ವಿಶಿಷ್ಟತೆ.ಸಿರಿ ಸಂಪದ ತಾಣದಲ್ಲೂ ಓತಪ್ರೋತವಾಗಿ ಇವರ ಬರಹಗಳು ಬೆಳಕು ಕಾಣುತ್ತಿರುತ್ತವೆ.ಸಂಪದ ಸಮುದಾಯದಲ್ಲಿ ಲವಲವಿಕೆ ಮೂಡಿಸುವುದರಲ್ಲಿ ಇವರ ಕಾಣಿಕೆಯೂ ಇದೆ.ವಾಯುಸೇನೆಯ ನಿವೃತ್ತ ಅಧಿಕಾರಿ.ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
-------------------------------------------------------------------------------------------

2013:ಸೂರ್ಯನಿಂದ ಭೂಮಿಗೆ ವಿಪತ್ತು?

2012ದಲ್ಲಿ ಪ್ರಳಯ ಸಂಭವಿಸುವುದು ನಿಶ್ಚಿತ ಎಂದು ಭಾವಿಸುವವರು 2013ರ ಬಗ್ಗೆ ಚಿಂತಿಸುವ ಅಗತ್ಯವಿಲ್ಲ.ಆದರೆ, ನೀವದನ್ನು ನಂಬುವುದಿಲ್ಲವಾದರೆ,2013ರಲ್ಲಿ ಸೂರ್ಯನ ಮೇಲಿನ ಚಟುವಟಿಕೆಗಳು ಭೂಮಿಯ ಮೇಲೆ ದುಷ್ಪರಿಣಾಮ ಬೀರಬಹುದು ಎನ್ನುವ ಅನಿಸಿಕೆ ಇದೆ.ಒಂದು ಗಂಟೆಯಿಂದ ಹತ್ತು ಗಂಟೆಗಳ ಕಾಲ ಸೂರ್ಯನಿಂದ ಭೂಮಿಯತ್ತ ವಿಕಿರಣಗಳು ಬರುವ ಸಾಧ್ಯತೆಯನ್ನು ಪೂರ್ತಿ ಅಲ್ಲಗಳೆಯಲಾಗದು ಎಂದು ಸಂಶೋಧಕರ ಅಭಿಪ್ರಾಯವಾಗಿದೆ.ಇದರಿಂದ ಸಂಪರ್ಕ ಉಪಗ್ರಹಗಳು,ಇಲೆಕ್ಟ್ರಾನಿಕ್ ಸಾಧನಗಳು,ಕಂಪ್ಯೂಟರುಗಳು ಸರಿಯಾಗಿ ಕೆಲಸ ಮಾಡದಿರಬಹುದು.ಹನ್ನೊಂದು ವರ್ಷಗಳಿಗೊಮ್ಮೆ ಸೂರ್ಯನ ಮೇಲೆ ಚಟುವಟಿಕೆಗಳು ಗರಿಷ್ಠ ಮಟ್ಟಕ್ಕೇರುವುದು ಮಾಮೂಲಿ.ಆದರೆ,ಅದರ ಪ್ರಮಾಣವನ್ನು ಈಗಲೇ ಲೆಕ್ಕ ಹಾಕುವುದು ಕಷ್ಟಸಾಧ್ಯ.ಮುನ್ನೆಚ್ಚರಿಕೆ ತೆಗೆದುಕೊಂಡು,ಜಾಗ್ರತೆ ವಹಿಸಿದರೆ,ಈ ಅವಧಿಯನ್ನು ಹೆಚ್ಚಿನ ಹಾನಿಯಾಗದಂತೆ ಕಳೆಯಲು ಸಾಧ್ಯ ಎಂದು ತಜ್ಞರು ಧೈರ್ಯ ಹೇಳುತ್ತಾರೆ.ನ್ಯಾಷನಲ್ ಅಕಾಡೆಮಿ ಆಫ್ ಸಯನ್ಸ್ ಸ್ಟಡಿ ಈ ಸಾಧ್ಯತೆ ಬಗ್ಗೆ ಮುನ್ಸೂಚನೆ ನೀಡಿದ ಸಂಸ್ಥೆಗಳಲ್ಲೊಂದಾಗಿದೆ.
--------------------------------------------------------
ಐಫೋನ್4ದಲ್ಲಿ ಏಂಟೆನಾ ಸಮಸ್ಯೆ

ಐಫೋನ್4 ಸಾಧನವನ್ನು ಏಪಲ್ ಬಿಡುಗಡೆ ಮಾಡಿದೆ.ಸಾಧನವು ವಿಡಿಯೋ ಚಾಟಿಂಗ್ ಸವಲತ್ತನ್ನು ಒದಗಿಸುತ್ತವೆ.ಹೈ ಡೇಫಿನಿಷನ್ ಟೀವಿ ವೀಕ್ಷಣೆ ಇದರಲ್ಲಿ ಸಾಧ್ಯ.ಇದರ ಮಾರಾಟ ಆರಂಭವಾದ ಕೂಡಲೇ ಜನ ಅಂಗಡಿಗಳಿಗೆ ಮುಗಿಬಿದ್ದು ಖರೀದಿಸಿದರು.ಮೊದಲ ಬಳಕೆದಾರರು,ಐಫೋನ್4ನಲ್ಲಿ ಸಂಕೇತಗಳು ದುರ್ಬಲವಾಗಿ ಸ್ವೀಕರಿಸಲ್ಪಡುವುದನ್ನು ವರದಿ ಮಾಡಿದ್ದಾರೆ.ಸ್ಟೀಲ್ ಕವಚಕ್ಕೆ ಎಡಬದಿಯಲ್ಲಿ ಏಂಟೆನಾ ಅಳವಡಿಸಲಾಗಿದ್ದು,ಇದನ್ನು ಕೈಯಲ್ಲಿ ಸ್ಪರ್ಶಿಸಿದರೆ,ಸಂಕೇತ ಸ್ವೀಕಾರ ದುರ್ಬಲಗೊಳ್ಳುತ್ತದೆ.ಕೈಯಲ್ಲಿ ಸ್ಪರ್ಶಿಸದಿದ್ದರೆ,ಸಮಸ್ಯೆಯಿಲ್ಲ ಎಂದು ಜನರು ದೂರಿದ್ದಾರೆ.ಕಂಪೆನಿಯೂ ಹೀಗಾಗುವುದು ಹೌದು ಎಂದು ಪರೀಕ್ಷೆಯ ನಂತರ ಒಪ್ಪಿಕೊಂಡಿದೆ.ಐಫೋನಿನ ಕೆಳಗೆ-ಎಡಬದಿಯಲ್ಲಿರುವ ಏಂಟೆನಾಕ್ಕೆ ದೇಹದ ಭಾಗಗಳು ನೇರ ಸಂಪರ್ಕಕ್ಕೆ ಬರದಂತೆ ಜಾಗ್ರತೆ ವಹಿಸಬೇಕಾಗುತ್ತದೆ ಎಂದು ಆಪಲ್ ವಕ್ತಾರ ಸ್ಪಷ್ಟಪಡಿಸಿದ್ದಾರೆ.ಸಾಧನವನ್ನು ಸ್ಪರ್ಶಿಸದಿದ್ದರೆ ಸಮಸ್ಯೆಯಿಲ್ಲ,ಇನ್ನೊಂದು ರೀತಿ ಹೇಳುವುದಿದ್ದರೆ,ಐಫೋನ್ ಬಳಸದಿದ್ದರೆ ಸಮಸ್ಯೆಯಿರದು ಎಂದು ಕುಹಕಿಗಳು  ಉದ್ಘರಿಸಿದ್ದಾರೆ.ಸಾಧನದ ಕ್ಯಾಮರಾ ಐದು ಮೆಗಾಪಿಕ್ಸೆಲ್‌ನಾಗಿದ್ದು,ಗುಣಮಟ್ಟದ ಚಿತ್ರ ಮತ್ತು ವಿಡಿಯೋಗಳನ್ನು ಸೆರೆ ಹಿಡಿಯಬಲ್ಲುದು.ವಿಡಿಯೊ ಸಂಕಲನವೂ ಸಾಧ್ಯವಿರುವುದು ಪ್ಲಸ್‌ಪಾಯಿಂಟ್.ಅಮೆರಿಕಾದಲ್ಲಿ ಹದಿನಾರು ಜಿಬಿ ಸಾಮರ್ಥ್ಯದ ಸಾಧನದ ಬೆಲೆ ನೂರತೊಂಭತ್ತೊಂಭತ್ತು ಡಾಲರುಗಳಾದರೆ,ಮೂವತ್ತೆರಡು ಜಿಬಿ ಸಾಮರ್ಥ್ಯದ್ದಕ್ಕೆ ಇನ್ನೂರತೊಂಭತ್ತೊಂಭತ್ತು ಡಾಲರು ಬೆಲೆಯಿದೆ.
---------------------------------------------------------
ಸೆಲ್‌ಫೋನ್ ಬಳಸಿ ಕಣ್ಣುಪರೀಕ್ಷೆ
ಸೆಲ್‌ಫೋನ್ ಬಳಸಿಕೊಂಡು ಅತ್ಯಂತ ಕಡಿಮೆ ಖರ್ಚಿನಲ್ಲಿ ಕಣ್ಣಿನ ವಕ್ರೀಭವನ ಸಂಬಂಧಿ ತೊಂದರೆಗಳನ್ನು ಪತ್ತೆ ಹಚ್ಚುವ ವಿಧಾನ "ನೇತ್ರ"ವನ್ನು ಮಸಾಚ್ಯುಸೆಟ್ಸಿನ ತಾಂತ್ರಿಕ ಮಹಾವಿದ್ಯಾಲಯದ ಸಂಶೋಧಕರು ಸಂಶೋಧಿಸಿದ್ದಾರೆ.ಭಾರತೀಯ ಮೂಲದ ರಮೇಶ್ ರಾಸ್ಕರ್ ತಮ್ಮ ಸಹಚರರೊಂದಿಗೆ ಕಣ್ಣು ಪರೀಕ್ಷೆ ಮಾಡುವ ವಿಧಾನವನ್ನು ಅಭಿವೃದ್ಧಿ ಪಡಿಸಿದ್ದಾರೆ.ಇದನ್ನು ಮೊಬೈಲ್ ಫೋನಿನಲ್ಲಿ ಅಳವಡಿಸಿ,ಒಂದು ಪ್ಲಾಸ್ಟಿಕ್ ಲೆನ್ಸ್ ಬಳಸಿ,ಕಣ್ಣಿನ ಪರೀಕ್ಷೆಯನ್ನು ಮಾಡಬಹುದು.ಲೆನ್ಸ್ ಬೆಲೆ ಒಂದು ಡಾಲರಿನಷ್ಟಾಗಬಹುದು.ಲೆನ್ಸನ್ನು ಮೊಬೈಲ್ ತೆರೆಯ ಮುಂದೆ ಅಳವಡಿಸಿ,ಅದರ ಮೂಲಕ ನೋಡುತ್ತಾ ಕಣ್ಣಿನ ಪರೀಕ್ಷೆ ಮಾಡಬೇಕು.ಮೊಬೈಲಿನಲ್ಲಿ ಒಂದು ಗೆರೆಯನ್ನು ಮೂಡಿಸಿ,ಅದನ್ನು ಲೆನ್ಸಿನ ಗೆರೆಯ ಅಕ್ಷದಲ್ಲಿ ಬರುವಂತೆ ಮಾಡಲು,ಮೊಬೈಲ್ ಸಾಧನದ ಬಾಣದ ಗುರುತಿನ ಕೀಲಿಗಳನ್ನು ಎಷ್ಟು ಚಲಿಸಬೇಕು ಎನ್ನುವ ಆಧಾರದಲ್ಲಿ,ಕಣ್ಣಿನ ತೊಂದರೆಯನ್ನು ಅಂದಾಜು ಮಾಡುವುದು "ನೇತ್ರ" ಪರೀಕ್ಷೆಯ ವಿಧಾನವಾಗಿದೆ.
Udayavani Bangalore
ಉದಯವಾಣಿ  Udayavani
*ಅಶೋಕ್‌ಕುಮಾರ್ ಎ

Monday, June 21, 2010

ಬ್ರಾಹ್ಮೀಮುಹೂರ್ತದಲ್ಲೇ ಹಾಸಿಗೆ ಬಿಟ್ಟೇಳುವ ಯುವಜನತೆ!

ಬ್ರಾಹ್ಮೀಮುಹೂರ್ತದಲ್ಲೇ ಹಾಸಿಗೆ ಬಿಟ್ಟೇಳುವ ಯುವಜನತೆ!
ಟ್ವಿಟರ್ ಸಂದೇಶಗಳನ್ನು ಗಮನಿಸಿದವರಿಗೆ,ಒಂದು ವಿಷಯ ಅಚ್ಚರಿ ಹುಟ್ಟಿಸಿರಬಹುದು-ಈಗ ಮುಂಜಾನೆ ಬೇಗನೆ ಏಳುವ ಅಂತರ್ಜಾಲ ಬಳಕೆದಾರ ಯುವಜನರ ಸಂಖ್ಯೆ ಹೆಚ್ಚುತ್ತಿದೆ.ಮುಂಜಾನೆಯ ಪ್ರಶಾಂತ ಸಮಯದಲ್ಲಿ ಓದುವುದು ಅವರ ಉದ್ದೇಶವಾಗಿರಬಹುದು ಎನ್ನಲು ಹೆಚ್ಚು ಆಲೋಚಿಸಬೇಕಿಲ್ಲ.ಸದ್ಯ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪರೀಕ್ಷೆಗಳು ಮುಗಿದು,ರಜೆ ಸಿಕ್ಕಿದವರೂ,ಬೇಗನೆ ಏಳುವುದು ಮುಂದುವರಿದಿದೆ.ಇದಕ್ಕೆ ಕಾರಣವೇನು? ಉತ್ತರವನ್ನು ಟ್ವಿಟರ್ ಸಂದೇಶಗಳೇ ಕೊಡುತ್ತವೆ.ಚಲನಚಿತ್ರವೊಂದನ್ನು ಡೌನ್‌ಲೋಡ್ ಮಾಡುತ್ತಿರುವೆ,ಎಂದು ಒಂದು ಸಂದೇಶ ಬಿತ್ತರಿಸಿದರೆ,ಇನ್ನೊಬ್ಬನ ಸಂದೇಶ,ತನಗೆ ತಂತ್ರಾಂಶವೊಂದನ್ನು ಡೌನ್‌ಲೋಡ್ ಮಾಡಬೇಕಿತ್ತು,ತನ್ನ ತಿಂಗಳ ಬ್ಯಾಂಡ್‍ವಿಡ್ತ್ ಕೋಟಾ ಮುಗಿದಿದೆ ಎನ್ನುತ್ತದೆ.ಹಾಗಾಗಿ,ಬಿಎಸೆನೆಲ್‌ನ ಉಚಿತ ಡೌನ್‌ಲೋಡ್ ಸೌಲಭ್ಯವಿರುವ ಮುಂಜಾವಿನ 2-8 ಸಮಯದ ಸದುಪಯೋಗ ಪಡೆಯಲು ಇವರುಗಳು ಬೇಗನೆ ಏಳುತ್ತಾರೆ!ಎದ್ದ ಮೇಲೆ ಅಂತರ್ಜಾಲ ಜಾಲಾಟದ ಜತೆಗೆ ಓದಿನಂತಹ ಇತರ ಚಟುವಟಿಕೆಗಳಲ್ಲಿ ತೊಡಗದೆ ಇರಲಾರರು ಬಿಡಿ.
ಕಾಲೇಜುಗಳಿಗೆ ಹೋಗುವ ಹುಡುಗ ಹುಡುಗಿಯರು,ಮನೆಯಲ್ಲಿ ಹೆತ್ತವರೊಡನೆ ಹೆಚ್ಚು ಮಾತನಾಡದೆ,ಹಾಂ-ಹೂಂಗಳಲ್ಲೇ ಮಾತನ್ನು ಮುಗಿಸುವುದಿದೆ.ಅವರ ಚಟುವಟಿಕೆಗಳೇನು,ಅವರ ಗೆಳೆಯರು ಯಾರು,ಅವರಿಗೆ ಸಂತಸ ಅಥವ ಬೇಜಾರು ಹುಟ್ಟಿಸುವ ಸಂಗತಿಗಳೇನು ಇವೇ ಮುಂತಾದ ವಿಷಯಗಳನ್ನು ಅರಿಯಲು ಬಯಸುವ ಹಿರಿಯರು,ಫೇಸ್‌ಬುಕ್ ಅಥವ ಟ್ವಿಟರ್ ಅಂತಹ ಯುವಜನರ ಮೆಚ್ಚಿನ ಅಂತರ್ಜಾಲ ತಾಣಗಳಲ್ಲಿ ಅವರುಗಳನ್ನು ಗುಟ್ಟಾಗಿ ಹಿಂಬಾಲಿಸಿದರೆ,ಎಲ್ಲ ವಿಷಯಗಳು ಸ್ಪಷ್ಟವಾಗಿ ತಿಳಿದು ಬಂದೀತು.ಮನೆಯವರಲ್ಲಿ ಹಂಚಿಕೊಳ್ಳದ ವಿಷಯಗಳು, ಈ ತಾಣಗಳಲ್ಲಿ ಸರಾಗವಾಗಿ ಹೊರಬರುತ್ತವೆ.ಸ್ನೇಹಿತರಲ್ಲಿ ಹಂಚಿಕೊಳ್ಳುವಂತೆ ತಮ್ಮ ಅಂತರ್ಜಾಲ ಹಿಂಬಾಲಕರ ಜತೆ ಯುವಜನತೆ ಹೆಚ್ಚು ಹೆಚ್ಚು ಮುಕ್ತವಾಗಿ ಸಲ್ಲಾಪ ನಡೆಸುತ್ತಾರೆ!
--------------------------------------------------------------
ಟ್ವಿಟರ್ ಕುಟುಂಬ!

ಟ್ವಿಟರಿನಲ್ಲಿ ಕಾಣುವ ಅಪ್ಪ-ಮಗ-ಮಗಳ ಅಪರೂಪದ ಜೋಡಿಯೆಂದರೆ ಐಟಿ ಪರಿಣತ,ತಂತ್ರಜ್ಞಾನ ಬರಹಗಾರರಾದ ಡಾ.ಯು.ಬಿ.ಪವನಜರ ಕುಟುಂಬವೆನ್ನ ಬೇಕು.ಅವರ ಮಗ ನಿನಾದ ಮತ್ತು ಮಗಳು ಸುರಭಿಯೂ ಟ್ವಿಟರಿನಲ್ಲಿ ಸಕ್ರಿಯ ಖಾತೆಗಳನ್ನು ಹೊಂದಿದ್ದಾರೆ.http://twitter.com/pavanaja,http://twitter.com/ninaada ಹಾಗೂ http://twitter.com/surabhi18ಗಳಲ್ಲಿ ಇವರ ಖಾತೆಗಳನ್ನು ನೋಡಬಹುದು.ಮಗ ತನ್ನ ಸ್ಕೂಟರು ಕೆಡುತ್ತಿದೆ ಎಂದು ಅಪ್ಪನ ಗಮನ ಸೆಳೆಯಲು ಟ್ವಿಟರ್ ಬಳಸಿದರೆ,ಮಗಳು ತನ್ನ ಮೊಬೈಲ್ ಹಳೆಯದಾಯಿತು ಎಂದು ಟ್ವಿಟರ್ ಸಂದೇಶ ಮೂಲಕವೇ ಜಾಹೀರು ಪಡಿಸುವುದಿದೆ.ಪರೀಕ್ಷೆ ಬಂತು,ಟ್ವಿಟರ್ ಬಳಕೆ ಕಮ್ಮಿ ಮಾಡಿ ಎಂದು ಅಪ್ಪ ಮಗನಿಗೆ ಕಿವಿಮಾತು ಹೇಳುವುದೂ ಟ್ವಿಟರ್ ಮೂಲಕವೇ! ಅಂದಹಾಗೆ ಸುರಭಿಯವರ ಕನ್ನಡ ಬರಹಗಳ ಬ್ಲಾಗ್ http://surabhi18.blogspot.com/ನಲ್ಲಿವೆ.
------------------------------------------------
ದಿನಾಲೂ ಇಡ್ಲಿ-ಸಾಂಬಾರ್ ಯಾಕೆ ಎನ್ನುವ ವಿಪ್ರೋ

ಐಟಿ ದಿಗ್ಗಜ ವಿಪ್ರೋ ಟೆಕ್ನಾಲಜಿಯ ಮಿಶನ್10ಎಕ್ಸ್ ಎನ್ನುವ ಕಾರ್ಯಕ್ರಮವು ದೇಶದ ತಾಂತ್ರಿಕ ಕಾಲೇಜುಗಳ ಶಿಕ್ಷಕರಿಗೆ ತರಗತಿಗಳಲ್ಲಿ ಹೊಸತನ ತುಂಬುವುದು ಹೇಗೆಂದು ತರಬೇತಿ ನೀಡುವ ಕಾರ್ಯಕ್ರಮ.ಮೂರು ವರ್ಷದ ಹಿಂದೆ ಶಿಕ್ಷಕರ ದಿನ ಸೆಪ್ಟೆಂಬರ್ ಐದರಂದು ಆರಂಭವಾದ ಕಾರ್ಯಕ್ರಮ,ಶಿಕ್ಷಕರು ಬರೇ ಮಾತಿನ ಮೂಲಕ ತರಗತಿಗಳಲ್ಲಿ ಏಕತಾನತೆ ಹುಟ್ಟಿಸದೆ,ನಾವೀನ್ಯತೆ ತರಲು ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಎಂದು ತಿಳುವಳಿಕೆ ಮೂಡಿಸುವ ಕಾರ್ಯಕ್ರಮವಾಗಿದೆ.ಈಗಾಗಲೇ ಸುಮಾರು ಒಂಭತ್ತು ಸಾವಿರ ಶಿಕ್ಷಕರ ತರಬೇತಿಯನ್ನು ಮುಗಿಸಿರುವ ಕಂಪೆನಿಯು,ಬರುವ ಶಿಕ್ಷಕರ ದಿನದೊಳಗೆ ಹತ್ತು ಸಾವಿರ ಜನರಿಗೆ  ತರಬೇತಿ ನೀಡಿ ತಯಾರು ಮಾಡುವ ಪಣ ತೊಟ್ಟಿದೆ.ಅತ್ಯುತ್ತಮ ಇಡ್ಲಿ-ಸಾಂಬಾರ್ ಅನ್ನು ಯಾರಿಗಾದರೂ ದಿನಕ್ಕೆ ಮೂರು ಬಾರಿ ಬಡಿಸಿದರೆ,ಅದು ಕೆಲವೇ ದಿನದಲ್ಲಿ ಬೋರು ಹುಟ್ಟಿಸುವಂತೆ,ಬೋಧನೆಯಲ್ಲಿ ಏಕತಾನತೆ ಇದ್ದರೆ,ಅದು ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸದಿರಬಹುದು ಎಂಬಂತಹ ಉಪಮಾನಗಳ ಮೂಲಕ,ತರಗತಿಗಳಲ್ಲಿ ವಿದ್ಯಾರ್ಥಿಗಳನ್ನು ಕೇಂದ್ರವಾಗಿಸಿ,ಕಲಿಸುವ ಪ್ರಯತ್ನ ನಡೆಸಲು ಶಿಕ್ಷಕರನ್ನು ಪ್ರಚೋದಿಸುತ್ತಿದೆ.ವಿವಿಧ ವಿಷಯಗಳ ಬಗ್ಗೆ ಪ್ರಯೋಗಗಳನ್ನು ನಡೆಸಲು,ಪ್ರಾಜೆಕ್ಟ್‌ಗಳನ್ನು ಅಭಿವೃದ್ಧಿ ಪಡಿಸಲು ಅವಕಾಶ ನೀಡುವ ಶೈಕ್ಷಣಿಕ ಕಲಿಕಾ ಕಿಟ್ ಒಂದರ ಮಾದರಿಯನ್ನೂ ಮಿಷನ್10ಎಕ್ಸ್ ಅಡಿ ಸಿದ್ಧ ಪಡಿಸಲಾಗಿದೆ.ಯೋಜನೆಯ ವಿವರಗಳಿಗೆ http://www.mission10x.com ನೋಡಿ.
----------------------------------------
ಕಾನೂನು,ನೀರು ಹಾಗೂ ಭೂಮಿ
http://sundararao.blogspot.com/ ಹೆಸರೇ ಹೇಳುವಂತೆ ಸುಂದರರಾಯರ ಬ್ಲಾಗ್. ರವೀಂದ್ರನಾಥ ಶ್ಯಾನುಭೋಗರ ಗ್ರಾಹಕ ಚಳುವಳಿಯಿಂದ ಪ್ರಭಾವಿತರಾದ ರಾಯರು,ವಿಶೇಷ ಆರ್ಥಿಕ ವಲಯದ ಕಂಪೆನಿಗಳು ಮಾಹಿತಿ ಹಕ್ಕಿನ ಹೊರಗಿವೆ ಎಂಬಂತಹ ವಿಚಾರಗಳನ್ನೊಪ್ಪದಿರಲು ಕಾರಣಗಳನ್ನಿಲ್ಲಿ ಚರ್ಚಿಸಿದ್ದಾರೆ.
-------------------------------------------------------------------
ಬಯೋಮಿಮಿಕ್ರಿ:ಪ್ರಕೃತಿಯ ಪ್ರತಿಕೃತಿ
ಹೊಸ ಉತ್ಪನ್ನಗಳನ್ನು ತಯಾರಿಸುವಾಗ,ಪ್ರಕೃತಿಯಲ್ಲಿ ಕಂಡು ಬರುವ ಸಸ್ಯ,ಮರ ಅಥವಾ ಜೀವಿಗಳಿಂದ ಪ್ರಭಾವಿತವಾದ ವಿನ್ಯಾಸವನ್ನು ಬಳಸಲು ಯತ್ನಿಸುವುದು ಹೆಚ್ಚೆಚ್ಚು ಜನಪ್ರಿಯವಾಗುತ್ತಿದೆ.ವಲ್ಕ್ರೋ ಎನ್ನುವ ಅಂಟು ಪಟ್ಟಿಯ ತಯಾರಕ,ಸಸ್ಯದ ಬೀಜದ ಮೇಲೆ ಕಂಡು ಬಂದ ಕುಣಿಕೆಗಳಂತಹ ರಚನೆಗಳಿಂದ ಪ್ರಭಾವಿತನಾಗಿದ್ದ.ಹೂಗಳ ರಫ್ತುದಾರ ಪೀಟರ್ ಹಾಫ್,ಸಸ್ಯಗಳ ಭಾಷ್ಪೀಕರಣದಿಂದ ಪ್ರಭಾವಿತನಾಗಿ,ಗ್ರೋಒಯಸಿಸ್ ಎನ್ನುವ ಪ್ಲಾಸ್ಟಿಕ್ ಪೆಟ್ಟಿಗೆ ತಯಾರಿಸಿದ.ಈ ಪೆಟ್ಟಿಗೆ ಗಾಳಿಯಿಂದ ನೀರಾವಿಯನ್ನು ಸಂಗ್ರಹಿಸಿ,ಗಿಡಗಳಿಗೆ ಹನಿ ನೀರಾವರಿ ಮಾಡಬಲ್ಲುದು.ಕಮಲದ ಎಲೆಯಿಂದ ಪ್ರಭಾವಿತನಾದ ಇನ್ನೊಬ್ಬ ಸಂಶೋಧಕ,ನೀರು ಹಾಗು ಧೂಳು ಪ್ರತಿರೋಧಕ ಪೈಂಟ್ ತಯಾರಿಸಿದ.ಸದಾ ಸೂರ್ಯನ ಕಡೆ ಮುಖ ಮಾಡಿ ಇರುವ ಸೌರಫಲಕಗಳ ತಯಾರಿಗೆ ಎಂಐಟಿಯ ಸಂಶೋಧಕರಿಗೆ ಸ್ಫೂರ್ತಿ ನೀಡಿದ್ದು,ಸೂರ್ಯಕಾಂತಿ ಹೂವಿನ ಸೂರ್ಯನ ಕಡೆ ಮುಖ ಮಾಡಿರುವ ಪ್ರವೃತ್ತಿ.ಇಂತಹ ಪ್ರಕೃತಿಯ ಪ್ರತಿಕೃತಿ ವಸ್ತುಗಳ ರಚನೆಯನ್ನು ಬಯೋಮಿಮಿಕ್ರಿ ಎಂದೇ ಕರೆಯಲಾಗುತ್ತಿದೆ.ಇಂತಹ ವಿನ್ಯಾಸಗಳ ಬಗ್ಗೆ ಹೆಚ್ಚು ತಿಳಿಯ ಬಯಸಿದರೆ (www.AskNature.org) ಅಂತರ್ಜಾಲ ತಾಣ ಸೂಕ್ತ ಆಯ್ಕೆ.
---------------------------------------------------
ಮೊಬೈಲ್ ಅಂತರ್ಜಾಲ ನಿಯಂತ್ರಣ ಬಲು ಕಠಿನ

ಚೀನಾದಲ್ಲಿ ಅಂತರ್ಜಾಲವನ್ನು ಸರಕಾರವು ಬಿಗಿ ನಿಯಂತ್ರಣಕ್ಕೊಳ ಪಡಿಸಿದೆ.ಆದರೆ ಸ್ಮಾರ್ಟ್‌ಫೋನ್‌ಗಳ ಮೂಲಕ ಮೊಬೈಲ್ ಮೂಲಕ ಅಂತರ್ಜಾಲವನ್ನು ಜಾಲಾಡುವವರನ್ನು ನಿಯಂತ್ರಿಸುವುದು,ಸರಕಾರಿ ಟೆಲಿಕಾಮ್ ಕಂಪೆನಿಗಳಿಗೂ ಕಷ್ಟವಾಗುತ್ತಿದೆ.ಅಲ್ಲಿನ ದೂರಸಂಪರ್ಕ ಸೇವೆಗಳು ಚೈನಾ ಟೆಲಿಕಾಂ,ಚೈನಾ ಮೊಬೈಲ್ ಮತ್ತು ಚೈನಾ ಯುನಿಕಾಮ್ ಕಂಪೆನಿಗಳ ಮೂಲಕವೇ ಒದಗಿಸಲಾಗುತ್ತಿದೆ.ಅವು ಸರಕಾರಿ ಕೃಪಾಪೋಷಿತ ಕಂಪೆನಿಗಳು.ಸೆನ್ಸಾರಿನ ಬಿಗಿ ನಿಯಮಗಳನ್ನು ಮೊಬೈಲ್ ಬಳಕೆದಾರರ ಮೇಲೆ ಹೇರಲು ಅವು ಹಿಂದೆ ಮುಂದೆ ನೋಡುವುದಿಲ್ಲ.ಆದರೆ ಇಪ್ಪತ್ತೈದು ಕೋಟಿಯಷ್ಟಿರುವ ಬಳಕೆದಾರರು,ಕಳುಹಿಸುವ ಎಸೆಮೆಸ್ ಸಂದೇಶಗಳಲ್ಲೋ,ವಿಡಿಯೋ ಅಥವಾ ಚಿತ್ರಗಳಲ್ಲೋ ಆಕ್ಷೇಪಾರ್ಹ ಸಂಗತಿಗಳಿಲ್ಲ ಎನ್ನುವುದನ್ನು ಖಚಿತ ಪಡಿಸಿಕೊಳ್ಳಲು ಬೇಕಾದ ತಾಂತ್ರಿಕ ಪರಿಣತಿ ಕಂಪೆನಿಗಳಿಗಿನ್ನೂ ಸಿದ್ಧಿಸಿಲ್ಲ.ಹೀಗಾಗಿ ಸಾಮಾನ್ಯ ಅಂತರ್ಜಾಲದಲ್ಲಿ ಲಭ್ಯವಾಗದ ವಿಷಯಗಳು ಮೊಬೈಲ್ ಅಂತರ್ಜಾಲದಲ್ಲಿ ಸರಾಗವಾಗಿ ಹರಿದಾಡುತ್ತವೆ.ಅಂದ ಹಾಗೆ ಚೀನಾದಲ್ಲಿ ಅಂತರ್ಜಾಲ ಬಳಸುವವರು ಮೂವತ್ತೈದು ಕೋಟಿ ಜನರಾದರೆ,ಇನ್ನೂ ಅದರಿಂದ ದೂರ ಉಳಿದವರು ಎಪ್ಪತ್ತು ಕೋಟಿ ಜನರು.ಅಂತರ್ಜಾಲದಲ್ಲಿ ಜನತೆಯೇ ಒದಗಿಸಿದ ವಿಷಯಗಳು ಹೆಚ್ಚು ಬೆಳಕಿಗೆ ಬರುತ್ತಿರುವಾಗ,ಅಂತಹ ಸಾಮಗ್ರಿಗಳ ಮೇಲೆ ಕಣ್ಣಿಡುವುದು ಸುಲಭವಲ್ಲ.Tudou.com.  ಅಂತಹ ತಾಣಗಳಿಗೆ ಜನರು ತಾವು ತೆಗೆದ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ.ಅವುಗಳನ್ನು ನಿಯಂತ್ರಿಸುವುದು ಹೇಗೆ?ಇನ್ನು ಬ್ಲಾಗುಗಳು,ಚಿತ್ರಗಳೂ ಕೂಡಾ ಅಂತರ್ಜಾಲಕ್ಕೆ ಕ್ಷಣ-ಕ್ಷಣದಲ್ಲೂ ಸೇರ್ಪಡೆಯಾಗುತ್ತಿರುತ್ತವೆ.ಅವುಗಳನ್ನು ಸೆನ್ಸಾರ್ ಮಾಡುವುದು ಯಾರು? ಆದರೂ ಚೀನೀ ಸರಕಾರ ತನಗೆ ಸಾಧ್ಯವಾದಷ್ಟು ಬಿಗಿ ನೀತಿ ಅನುಸರಿಸುತ್ತಿದೆ.ಟಿಯಾನಮೆನನ್ ವೃತ್ತದ ನರಮೇಧದ ವಾರ್ಷಿಕೋತ್ಸವದಂದು ಶೋಕಾಚರಣೆಯಲ್ಲಿ ಪಾಲ್ಗೊಳ್ಳುವವರ ಸಂಖ್ಯೆಯು, ಹೊರ ಜಗತ್ತಿನ ಅರಿವಿಗೆ ಬರದಿರಬೇಕೆಂದು,ಸರಕಾರ ಜನರ ಸ್ಥಾನ ಪತ್ತೆಗೆ ಅವಕಾಶ ನೀಡುವ ಫೋರ್‌ಸ್ಕ್ವೇರ್ ಅಂತಹ ಸಾಮಾಜಿಕ ಜಾಲತಾಣವನ್ನು ನಿಷೇಧಿಸಿದಿತ್ತು.
-----------------------------------------------------------------
ರೊಬೋಟುಗಳಿಂದ ನಡೆಯುವ ಆಸ್ಪತ್ರೆಯತ್ತ
ಸ್ಕಾಟ್ಲೆಂಡಿನ ಫೋರ್ತ್ ವ್ಯಾಲಿ ರಾಯಲ್ ಆಸ್ಪತ್ರೆಯಲ್ಲಿ,ಊಟದ ಪೂರೈಕೆ,ಶಸ್ತ್ರಚಿಕಿತ್ಸೆಯ ಕೋಣೆಯ ನೆಲ ಒರೆಸಲು,ರೋಗಿಗಳು ಬಳಸಿದ ಬಟ್ಟೆಗಳನ್ನು ಒಗೆಯಲು,ಫಾರ್ಮಸಿಯಲ್ಲಿ ಔಷಧಿ ಮಾರಾಟ ಎಲ್ಲದಕ್ಕೂ ರೊಬೋಟುಗಳನ್ನು ಬಳಸಲು ತಯಾರಿ ನಡೆದಿದೆ.ಅವುಗಳ ನಿಯಂತ್ರಣಕ್ಕೆ ರೊಬೋಟುಗಳೊಳಗೆ ಮಿನಿ ಕಂಪ್ಯೂಟರುಗಳಿರುತ್ತವೆ.ಆಸ್ಪತ್ರೆಯ ಬಾಗಿಲುಗಳು ಸಂವೇದಕಗಳ ಮೂಲಕ ಸಂಕೇತಗಳನ್ನು ಪಡೆದು,ತೆರೆಯುತ್ತವೆ-ಮುಚ್ಚಿಕೊಳ್ಳುತ್ತವೆ.ರೊಬೋಟುಗಳು ಜನರ ಚಲನವಲನದಿಂದ ಪ್ರಭಾವಿತವಾಗದಿರುವಂತೆ ಅವುಗಳಿಗೆ ಪ್ರತ್ಯೇಕ ಕಾರಿಡಾರ್ ನಿರ್ಮಿಸಲಾಗಿದೆ.ಅವುಗಳು ಪ್ರತ್ಯೇಕ ಲಿಫ್ಟ್ ಮೂಲಕ ಒಂದು ಅಂತಸ್ತಿನಿಂದ ಇನ್ನೊಂದಕ್ಕೆ ಚಲಿಸುತ್ತವೆ.ಮಲಿನ ಪದಾರ್ಥಗಳನ್ನು ವಿಲೇವಾರಿ ಮಾಡುವ ರೊಬೋಟುಗಳು ಶುದ್ಧ ವಸ್ತುಗಳನ್ನು ಸ್ಪರ್ಶಿಸದಂತೆ ಪ್ರತ್ಯೇಕತೆ ಉಳಿಸಿಕೊಳ್ಳುವುದರಿಂದ,ಸೋಂಕು ಹಬ್ಬದಂತೆ ಮಾಡುವುದು ಸುಲಭ.ಜನರೇ ಈ ಕೆಲಸ ಮಾಡಿದಾಗ ಹೀಗೆ ಮಾಡುವುದು ಕಠಿನ.
ಉದಯವಾಣಿ  ಬೆಂಗಳೂರು
Udayavani ಉದಯವಾಣಿ ------------------------------------------------------------

*ಅಶೋಕ್‌ಕುಮಾರ್ ಎ

Monday, June 14, 2010

ಮಕ್ಕಳಿಗೆ ಸೆಲ್‌ಪೋನ್ ಕೊಡಿಸಬೇಕೇ?

ಮಕ್ಕಳಿಗೆ ಸೆಲ್‌ಪೋನ್ ಕೊಡಿಸಬೇಕೇ?
ಈಗೀಗ ಮಕ್ಕಳು ದೂರದ ಶಾಲೆಗಳಿಗೆ ಹೋಗುವುದು,ಹಾಗಾಗಿ ಶಾಲಾ ವಾಹನದ ಉಪಯೋಗ ಮಾಡುವುದು ಹೆಚ್ಚುತ್ತಿದೆ.ಇದರಿಂದ ಹೆತ್ತವರು,ಮಕ್ಕಳ ಜತೆ ಸಂಪರ್ಕದಲ್ಲಿರಲು ಬಯಸಿ,ಅದನ್ನು ಸಾಧ್ಯವಾಗಿಸುವ ಮೊಬೈಲನ್ನು ಮಕ್ಕಳಿಗೆ ಕೊಡಿಸಲು ಬಯಸುತ್ತಾರೆ.ತಜ್ಞರ ಪ್ರಕಾರ ಹನ್ನೆರಡು ಮೀರಿದವರಿಗಷ್ಟೇ ಮೊಬೈಲ್ ಬಳಕೆಗೆ ಕೊಡುವುದು ಉತ್ತಮ.ಹಾಗೆಂದು ಅದನ್ನು ಹದವರಿತು ಬಳಸುವ ಪ್ರಬುದ್ಧತೆಯಿಲ್ಲದವರಿಗೆ ಸೆಲ್‌ಫೋನ್ ಕೊಡಿಸುವುದು ಒಳಿತಲ್ಲ.ತರಗತಿ ನಡೆಯುವಾಗ ಮೊಬೈಲ್ ಬಳಸುವುದು,ಅದನ್ನು ದುರುಪಯೋಗ ಮಾಡಿ ಪರೀಕ್ಷಾ ಅಕ್ರಮಗೈಯಲು ಬಳಸುವುದು,ಹಾಡು ಕೇಳುತ್ತಾ ಅಥವ ಸಂದೇಶಗಳನ್ನು ಕಳುಹಿಸುತ್ತಾ ಕೂರುವುದು ಸಾಮಾನ್ಯವಾಗಿ ವಿದ್ಯಾರ್ಥಿಗಳಲ್ಲಿ ಕಂಡು ಬರುವ ದುರ್ಬಳಕೆಯ ವಿಧಾನಗಳು.ಇನ್ನು ಕ್ಯಾಮರಾ,ವಿಡಿಯೋ ಅಥವ ಅಂತರ್ಜಾಲ ಸಂಪರ್ಕದ ಅವಕಾಶ ಇರುವ ಇರುವ ಸೆಟ್‌ಗಳನ್ನು ಮಕ್ಕಳಿಗೆ ಕೊಡಿಸುವುದು ತರವಲ್ಲ.ಅಂತರ್ಜಾಲ ಇದ್ದರೆ,ಅದು ಅನಿರ್ಬಂಧಿತ ಅಂತರ್ಜಾಲ ಜಾಲಾಟಕ್ಕೆ ಮುಕ್ತ ರಹದಾರಿಯಾಗಿಬಿಡುತ್ತದೆ.ಸಿಕ್ಕಸಿಕ್ಕವರ ಚಿತ್ರ-ವಿಡಿಯೋ ತೆಗೆದು ಅದನ್ನು ಎಂಎಂಎಸ್ ಮಾಡಿ,ಇತರರನ್ನು ಕಾಡುವ ಮಕ್ಕಳೂ ಇದ್ದಾರೆ.ಸೆಲ್‌ಫೋನ್ ಕೊಡಿಸುವುದಕ್ಕೆ ಮಕ್ಕಳ ಜತೆ ಸಂಪರ್ಕಕ್ಕೆ ಅವಕಾಶ ಕೊಡುತ್ತದೆ ಎಂಬ ಕಾರಣ ಕೊಡುವ ಹೆತ್ತವರು,ಮಕ್ಕಳಿಗೆ ಅತ್ಯಂತ ಸಾಮಾನ್ಯ ಸಾಧನ ಕೊಡಿಸುವುದೇ ಶ್ರೇಯಸ್ಕರ.ಮಕ್ಕಳಿಗೆ ಎಲ್ಲಾ ಸೌಲಭ್ಯವಿರುವ,ಸ್ಮಾರ್ಟ್‌ಫೋನ್ ಕೊಡಿಸುವುದು ಸ್ಮಾರ್ಟ್ ತೀರ್ಮಾನವಂತೂ ಅಲ್ಲ!
-----------------------------
ಸೌರ ಹಾಯಿಪಟ ಅರಳಿಸಿದ ಜಪಾನಿಯರು
ಬಾಹ್ಯಾಕಾಶದಲ್ಲಿ ರಾಸಾಯಿನಿಕ ಪ್ರಕ್ರಿಯೆಗಳಿಲ್ಲದೆ,ಶಕ್ತಿಯ ಉತ್ಪಾದನೆಗೆ ಅವಕಾಶ ನೀಡುವ ಸೌರ ಹಾಯಿಪಟವನ್ನು ಅರಳಿಸಲು ಜಪಾನೀ ಬಾಹ್ಯಾಕಾಶ ವಿಜ್ಞಾನಿಗಳು ಶಕ್ತರಾಗಿದ್ದಾರೆ.ಅತ್ಯಂತ ಸೂಕ್ಷ್ಮ ಹಾಳೆಯಿಂದ ಮಾಡಿದ ಹಾಯಿಪಟವನ್ನು ಅರಳಿಸಿದಾಗ,ಅವುಗಳ ಮೇಲೆ ಬೀಳುವ ಫೋಟಾನ್‌ಗಳು ಹಾಯಿಪಟದ ಮೇಲೆ ಒತ್ತಡವನ್ನುಂಟು ಮಾಡುತ್ತವೆ.ಇದರಿಂದ ಹಾಯಿಪಟ ಚಲಿಸಲಾರಂಭಿಸುತ್ತದೆ.ಹಾಯಿಪಟದ ವಿಸ್ತಾರ ಹೆಚ್ಚಿಸಿ,ಚಲನೆಯ ಗತಿಯನ್ನು ಹೆಚ್ಚಿಸಲು ಸಾಧ್ಯ.ಬಾಹ್ಯಾಕಾಶ ವಾಹನಗಳು ಚಲಿಸುವಂತೆ ಮಾಡಲು ಸೌರಶಕ್ತಿಯನ್ನು ದುಡಿಸಿಕೊಳ್ಳುವ ಹೊಸ ಮಾರ್ಗವನ್ನಿದು ತೆರೆದಿದೆ.ಮುಂದಿನ ಗ್ರಹ ಅಥವಾ ನಕ್ಷತ್ರಗಳ ಅಧ್ಯಯನಕ್ಕೆ ರವಾನಿಸಲಾಗುವ ವಾಹನಗಳಲ್ಲಿ ಇಂತಹ ತಂತ್ರಜ್ಞಾನ ಬಳಸಿ,ಗ್ರಹಗಳ ನಡುವೆ ಅಥವ ನಕ್ಷತ್ರಗಳ ನಡುವೆ ಚಲಿಸುವಂತೆ ಮಾಡುವ ಯೋಜನೆ ವಿಜ್ಞಾನಿಗಳ ಮುಂದಿದೆ.
--------------------------------------------------------
ಯಾವ ಆಸ್ಪತ್ರೆ ಅಗ್ಗ?


ಆರೋಗ್ಯ ವಿಮೆ ಹೊಂದಿರುವ ಅಮೆರಿಕನ್ನರು ಆಸ್ಪತ್ರೆ ಶುಲ್ಕದ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಕಡಿಮೆ.ಆದರೀಗ ನಿಧಾನವಾಗಿ ಆ ಪರಿಪಾಠ ಬದಲಾಗುತ್ತಿದೆ.ಉದ್ಯೋಗದಾತರು ತಮ್ಮ ನೌಕರರ ಆರೋಗ್ಯ ವಿಮಾ ಸೌಲಭ್ಯವನ್ನು ಹಿಂದೆಗೆದು ಕೊಳ್ಳುತ್ತಿರುವುದರೊಂದಿಗೆ,ನೌಕರರು ಸ್ವತ: ವಿಮೆ ಮಾಡಿಸ ಬೇಕಿದೆ.ಆದುದರಿಂದ ಹಣ ನೀಡದೇ,ಆಸ್ಪತ್ರೆವಾಸ ಅನುಭವಿಸುವ ದಿನಗಳು ಇನ್ನು ಮುಂದೆಯೂ ಸಿಗದಿರಬಹುದು.ಕಿಸೆಯಿಂದ ತೆತ್ತು ಚಿಕಿತ್ಸೆ ಪಡೆಯುವಾಗ,ಕಡಿಮೆ ದರದಲ್ಲಿ ಚಿಕಿತ್ಸೆ ಲಭ್ಯವಿರುವ ಆಸ್ಪತ್ರೆ ಅಥವಾ ವೈದ್ಯರ ಹುಡುಕಾಟ ಅಗತ್ಯವಿದೆ.http://www.castlighthealth.com/ ಅಂತಹ ಅಂತರ್ಜಾಲ ತಾಣಗಳು ಆರೋಗ್ಯ ಸೇವೆಯಲ್ಲಿ ಪಾರದರ್ಶಕತೆಯನ್ನು ತರಲು ಶ್ರಮಿಸುತ್ತಿವೆ. ಶಸ್ತ್ರಕ್ರಿಯೆಗೆ ವಿವಿಧ ಆಸ್ಪತ್ರೆಗಳಲ್ಲಿ ವಿಧಿಸಲಾಗುವ ದರವನ್ನು ಹೋಲಿಸಿ,ರೋಗಿಗೆ ಅನುಕೂಲ ಕಲ್ಪಿಸುವುದು ಇವರ ಕಾರ್ಯತಂತ್ರ.ವಿಮಾ ಕಂಪೆನಿಗಳು ಆಸ್ಪತ್ರೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ವಿವಿಧ ಚಿಕಿತ್ಸೆಗಳಿಗೆ ತಮ್ಮದೇ ದರ ನಿಗದಿ ಪಡಿಸುವ ಪದ್ಧತಿ ಸದ್ಯ ಚಾಲ್ತಿಯಲ್ಲಿದೆ.ಹಾಗಾಗಿ ಚಿಕಿತ್ಸೆಯ ನಿಜವಾದ ದರ ಎಷ್ಟು ಎನ್ನುವುದು ಗುಪ್ತವಾಗಿರುವುದು ಸದ್ಯದ ರೂಢಿ.ನೌಕರರಿಗೆ ಚಿಕಿತ್ಸೆ ಬೇಕಾದಾಗ, ದರ ಪಟ್ಟಿ ಆಧರಿಸಿದ ಪರಿಹಾರವನ್ನು ಉದ್ಯೋಗದಾತರು ನೀಡುತ್ತಾರೆ.ದುಬಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಯಸುವವರು ಹೆಚ್ಚಿನ ಹಣವನ್ನು ಸ್ವಂತವಾಗಿ ಭರಿಸುವುದು ಅನಿವಾರ್ಯ.
--------------------------------------------
ಖರ್ಚು ಕಡಿಮೆ ಮಾಡಲು ಪುಕ್ಕಟೆ ಸಲಹೆ
BillShrink.com, BankRate.com, GasBuddy.com ತಾಣಗಳು ಖರ್ಚುಳಿಸುವ ಹಾದಿಯನ್ನು ಗ್ರಾಹಕನಿಗೆ ತಿಳಿಸಲು ಪಣತೊಟ್ಟ ಅಂತರ್ಜಾಲ ತಾಣಗಳಾಗಿವೆ.ಮನರಂಜನೆ,ಸೆಲ್‌ಪೋನ್,ಅಗತ್ಯಸೇವೆಗಳಿಗೆ ಅತ್ಯಂತ ಕಡಿಮೆ ಖರ್ಚಿನಲ್ಲಿ ವ್ಯವಸ್ಥೆ ಮಾಡಲು ಯಾವ ಸೇವಾದಾತೃವಿನ ಸೇವೆಯನ್ನು ಅವಲಂಬಿಸುವುದು ಒಳ್ಳೆಯದು ಎಂದು ತಿಳಿಸುವುದೇ ಇವರ ಸೇವಾವೈಖರಿ.ವಿವಿಧ ಸೇವೆಗಳನ್ನು ಒದಗಿಸುವವರನ್ನು ನೋಂದಾಯಿಸಿ,ಅವರ ಸೇವಾದರಗಳನ್ನು ಪಟ್ಟಿ ಮಾಡಿಕೊಂಡು,ಸೇವೆಗಳನ್ನು ಬಯಸುವವರಿಗೆ ಯಾರ ಸೇವೆ ಅವಲಂಬಿಸಿದರೆ ಎಷ್ಟು ಖರ್ಚು ಬರುತ್ತದೆ ಎನ್ನುವುದನ್ನು ಹೋಲಿಸಿ ನೋಡಲು ಇಲ್ಲಿ ಅವಕಾಶವಿದೆ.ಬ್ಯಾಂಕ್ ದರಗಳು ಯಾವ ಬ್ಯಾಂಕಿನಲ್ಲಿ ಎಷ್ಟೆಷ್ಟು,ಸಾಲ ಪಡೆಯುವುದಾದರೆ ಯಾವ ಬ್ಯಾಂಕು ಉಚಿತ,ಠೇವಣಿ ಎಲ್ಲಿಟ್ಟರೆ ಹೆಚ್ಚು ಆದಾಯ ಬರುತ್ತದೆ,ಚಿನ್ನವನ್ನೋ ಅಥವಾ ಮನೆಯನ್ನೋ ಅಡವಿಡುವುದಾದರೆ ಯಾವ ಬ್ಯಾಂಕು ಉತ್ತಮ ಎನ್ನುವುದು ಬ್ಯಾಂಕ್‌ರೇಟ್.ಕಾಂ ತಾಣ ತಿಳಿಸುತ್ತದೆ.ಇನ್ನು GasBuddy.com ಅನಿಲದರಗಳ ತುಲನೆ ಮಾಡಿ,ಯಾರ ಅನಿಲ ಸಂಪರ್ಕ ಪಡೆದರೆ ಕಡಿಮೆ ಖರ್ಚಿನಲ್ಲಿ ಉತ್ತಮ ಸೇವೆ ಸಿಗುತ್ತದೆ ಎಂದ್ ಮಾಹಿತಿ ನೀಡಲು ಸಮರ್ಥವಾಗಿದೆ.
------------------------------------
ಫುಟ್‌ಬಾಲ್ ಜ್ವರ ಪೀಡಿತ ಭಾರತೀಯರು!
ಗೂಗಲ್ ಶೋಧ ಸೇವೆಯ ಮಾಹಿತಿಯ ಪ್ರಕಾರ ಅಂತರ್ಜಾಲದಲ್ಲಿ ಫುಟ್‌ಬಾಲ್ ವಿಶ್ವಕಪ್ ಬಗ್ಗೆ ಶೋಧಿಸಿದವರ ಪೈಕಿ ಭಾರತದವರೇ ಮೊದಲಿನ ಸ್ಥಾನ ಪಡೆದಿದ್ದಾರೆ.ಎಪ್ರಿಲ್ ತಿಂಗಳಲ್ಲಿ ವಿಶ್ವಕಪ್ ಟಿಕೆಟ್ ಸಂಬಂಧಿ ಮಾಹಿತಿಗೆ ಶೋಧಿಸುತ್ತಿದ್ದ ಜನರೀಗ,ವಿಶ್ವಕಪ್‌ನಲ್ಲಿ ಭಾಗವಹಿಸಲಾಗದ ಹೀರೋಗಳ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದಾರೆ. ತಮ್ಮ ತಮ್ಮ ಮೆಚ್ಚಿನ ತಂಡಗಳ ಬಗೆಗಿನ ಮಾಹಿತಿಯ ಬಗ್ಗೆಯೂ ಜನ ಹೆಚ್ಚು ತಿಳಿದುಕೊಳ್ಳಲು ಬಯಸುತ್ತಿರುವುದು ವ್ಯಕ್ತವಾಗಿದೆ.
--------------------------------------------------------------------
ಓದುಗರ ಆಯ್ಕೆ: ಮೋಬ್‌ಸ್ಪೋಟ್.ಇನ್

ಸ್ಥಾನದ ಅರಿವಿರುವ ಸಾಮಾಜಿಕ ಜಾಲತಾಣಗಳು ಜನಪ್ರಿಯವಾಗುವ ಸೂಚನೆಗಳಿವೆ.ಈಗಿನ ಮೊಬೈಲ್ ಸಾಧನದಲ್ಲಿ ಜಿಪಿಎಸ್ ವ್ಯವಸ್ಥೆ ಲಭ್ಯವಿರುವುದು ಇದಕ್ಕೆ ಹೇಳಿ ಮಾಡಿಸಿದಂತಿದೆ.ಬಳಕೆದಾರ ನೋಂದಾಯಿಸಿದಾಗ,ತನ್ನ ಮೊಬೈಲ್ ಸಂಖ್ಯೆಯನ್ನು ನೀಡುವ ಕಾರಣ,ಅಂತರ್ಜಾಲ ತಾಣವು ನೋಂದಾಯಿತ ಬಳಕೆದಾರನ ಸ್ಥಾನದ ಮಾಹಿತಿಯನ್ನು,ಪಡೆಯುತ್ತಿರುತ್ತದೆ.ಬಳಕೆದಾರನ ಸ್ನೇಹಿತರೂ,ತಮ್ಮ ಸ್ಥಾನದ ಮಾಹಿತಿಯನ್ನು ತಾಣಕ್ಕೆ ನೀಡುವ ಕಾರಣ,ವ್ಯಕ್ತಿಯಿರುವ ಸ್ಥಳದ ಸಮೀಪವಿರುವ ಆತನ ಸ್ನೇಹಿತರ ವಿವರಗಳನ್ನೂ ತಾಣವು ತೋರಿಸಲು ಸಾಧ್ಯವಾಗುತ್ತದೆ.ಅವರ ಬಳಿ ಹೋಗಲು ಬಯಸಿದಲ್ಲಿ,ಆತನು ಹಿಡಿಯಬೇಕಾದ ದಾರಿಯನ್ನೂ,ಗೂಗಲ್ ನಕ್ಷೆಯ ಮೂಲಕ ತೋರಿಸುವುದು ಈ ಅಂತರ್ಜಾಲ ತಾಣದ ಸೇವೆಗಳಲ್ಲಿ ಒಂದು ವಿಧ.ಮಕ್ಕಳು ಶಾಲೆಯ ಆವರಣ ಬಿಟ್ಟೊಡನೆ,ಅವರ ಹೆತ್ತವರನ್ನು ಎಚ್ಚರಿಸುವಂತಹ ಸೇವೆಯೂ ಇಲ್ಲಿ ಲಭ್ಯ.ಇನ್ನು ಜಾಹೀರಾತುದಾರರು,ವ್ಯಕ್ತಿಯ ಸ್ಥಳದಲ್ಲಿ ಲಭ್ಯವಿರುವ ಉಪಾಹಾರ ಮಂದಿರ,ಕಡಿತದ ಮಾರಾಟ ಮುಂತಾದ ವಿವರಗಳನ್ನೂ ಆತನಿಗೆ ರವಾನಿಸಲು ಸಾಧ್ಯ.ಈ ಅಂತರ್ಜಾಲ ತಾಣವನ್ನು ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಕಾರ್ತಿಕ್ ಕಸ್ತೂರಿ,ಪ್ರಭವ್,ಕೃತಿಕಾ ಮತ್ತು ನವೀದ್ ಹಸನ್ ರೂಪಿಸಿದ್ದಾರೆ.
-------------------------------------------------------------------
ಗೂಗಲ್ ಶೋಧವೀಗ ಮತ್ತಷ್ಟು ಚುರುಕು
ಪ್ರತಿ ಕ್ಷಣದಲ್ಲೂ ಅಂತರ್ಜಾಲಕ್ಕೆ ಹೊಸ ಪುಟಗಳು ಸೇರ್ಪಡೆಯಾಗುತ್ತಿರುತ್ತವೆ.ಗೂಗಲ್ ಶೋಧವು ತಾನು ಕಂಡುಕೊಂಡ ಹೊಸ ತಾಣದ ವಿವರವನ್ನು ಎರಡುವಾರಕ್ಕೊಮ್ಮೆ ಪರಿಷ್ಕರಿಸುತ್ತಿತ್ತು.ಹೀಗೆ ಮಾಡಿದರೆ,ಶೋಧದ ಫಲಿತಾಂಶವು ಹೊಸ ಬದಲಾವಣೆಗಳ ಬಗ್ಗೆ ಮಾಹಿತಿ ನೀಡದೆ,ಬಳಕೆದಾರನ ಅಸಮಾಧಾನಕ್ಕೆ ಕಾರಣವಾಗುವುದು ಸಹಜ ತಾನೇ? ಅದಕ್ಕೀಗ ಗೂಗಲ್,ತನ್ನ ಶೋಧದ ಇಂಜಿನ್ ಅನ್ನು ಬದಲಾಯಿಸಿ, ಕೆಫೀನ್ ಎಂಬ ಹೊಸ ಹೆಸರಿನಿಂದ ಕರೆಯಲಾಗುತ್ತಿದೆ.ಕೆಫೀನ್ ಕ್ಷಣ-ಕ್ಷಣ ಸೇರ್ಪಡೆಯಾದ ಮಾಹಿತಿಗಳನ್ನೂ ಒಳಗೊಳ್ಳುವಂತೆ ಮಾರ್ಪಾಡಾದ ಗೂಗಲ್ ಸರ್ಚ್ ಇಂಜಿನ್.ಆಡಿಯೋ,ವೀಡಿಯೋ,ಚಿತ್ರ,ಲಿಪಿ ಹೀಗೆ ವಿವಿಧ ತೆರನ ಮಾಹಿತಿಗಳನ್ನೂ ಇದು ಒಳಗೊಂಡು ವೈವಿಧ್ಯಮಯ ಫಲಿತಾಂಶವನ್ನೂ ಬಳಕೆದಾರನಿಗೆ ನೀಡಲು ಸಮರ್ಥವಾಗಿದೆ.
----------------------------------------------------------
ಬೊಕ್ಕಸ ತುಂಬಿದ ಬ್ರಾಡ್‌ಬ್ಯಾಂಡ್ ತರಂಗಾಂತರ ಗುಚ್ಛ
ಸರಕಾರವು ತ್ರೀಜಿ ತರಂಗಾಂತರ ಗುಚ್ಛವನ್ನು ಎಪ್ಪತ್ತು ಸಾವಿರ ಕೋಟಿ ರೂಪಾಯಿಗೆ ಹರಾಜು ಹಾಕಿದ ಬೆನ್ನಲ್ಲೇ,ಬ್ರಾಡ್‌ಬ್ಯಾಂಡ್ ಗುಚ್ಛವನ್ನು ಹರಾಜು ಹಾಕುವ ಪ್ರಕ್ರಿಯೆಗೆ ಮುಂದಾಯಿತು.ಅದೀಗ ಮೂವತ್ತೆಂಟು ಸಾವಿರ ಕೋಟಿ ರೂಪಾಯಿಗೆ ಹರಾಜಾಗಿ ಸರಕಾರದ ಬೊಕ್ಕಸವನ್ನು ತುಂಬಿದೆ.ದೇಶದ ಇಪ್ಪತ್ತೆರಡು ವೃತ್ತಗಳಲ್ಲೂ ಸೇವೆ ನೀಡಲು ತರಂಗಾಂತರ ಗೆದ್ದಿರುವ ಇನ್ಫೋಟೆಲ್ ಕಂಪೆನಿಯನ್ನು ಮುಕೇಶ್ ಅಂಬಾನಿಯವರು ಖರೀದಿಸಿದ್ದಾರೆ.ಇನ್ಫೋಟೆಲ್ ಸುಮಾರು ಹದಿಮೂರು ಸಾವಿರ ಕೋಟಿ ನೀಡಿ,ಪರವಾನಗಿಯನ್ನು ಬಗಲಿಗೇರಿಸಿದೆ.ಕರ್ನಾಟಕದಲ್ಲಿ ಸೇವೆ ನೀಡುವ ಅವಕಾಶವನ್ನು ಭಾರ್ತಿ ಏರ್‌ಟೆಲ್ ಕೂಡಾ ಪಡೆದಿದೆ.ರಿಲಾಯನ್ಸ್ ಕಮ್ಯುನಿಕೇಶನ್ ಮತ್ತು ವೊಡಾಫೋನ್ ಕಂಪೆನಿಗಳು ಹರಾಜಿನಿಂದ ಹಿಂದೆ ಸರಿದುವು.
Udayavani
-----------------------------------------------------------
udayavani bangalore 
*ಅಶೋಕ್‌ಕುಮಾರ್ ಎ

Monday, June 07, 2010

ಮನವ ಸಂತೈಸುವ ಸ್ಮಾರ್ಟ್ ಉಡುಗೆಗಳು

ಇಲೆಕ್ಟ್ರಾನಿಕ್ ಸಂವೇದಕಗಳನ್ನು ಹೊತ್ತ ಉಡುಗೆ ತೊಡುಗೆಗಳ ವಿವಿಧ ಮಾದರಿಗಳ ಪ್ರಯೋಗಾರ್ಥ ಪರೀಕ್ಷೆಗಳು ನಡೆಯುತ್ತಿವೆ.ಹೃದಯದ ಮಿಡಿತ,ದೇಹದ ಉಷ್ಣತೆ,ಚರ್ಮದ ಬೆವರುವಿಕೆ ಹೀಗೆ ವಿವಿಧ ಅಂಶಗಳನ್ನು ಗ್ರಹಿಸಲು ಸಂವೇದಕಗಳನ್ನು ಹೊತ್ತ,ಉಡುಪುಗಳನ್ನು ತಯಾರಿಸಲಾಗಿದೆ.ಇವು ಸತತವಾಗಿ ನಿಸ್ತಂತು ಸಂಪರ್ಕದ ಮೂಲಕ ಧರಿಸಿದವನ ದೇಹ ಸ್ಥಿತಿಯನ್ನು ಅಂತರ್ಜಾಲದ ತಾಣಕ್ಕೆ ರವಾನಿಸುತ್ತವೆ.ಆ ತಾಣದಲ್ಲಿ ವ್ಯಕ್ತಿಯ ಸಾಮಾನ್ಯ ಸ್ಥಿತಿಯಲ್ಲಿ ಈ ಅಂಶಗಳ ಬಗ್ಗೆ ಮಾಹಿತಿಯಿದ್ದರೆ,ಈಗಿನ ಸ್ಥಿತಿಯಲ್ಲಿ ಆತನ ಮಾನಸಿಕ ಸ್ಥಿತಿ ಹೇಗಿರಬಹುದು ಎನ್ನುವುದನ್ನು ಕಂಡುಕೊಳ್ಳಬಹುದು.ಅಂತರ್ಜಾಲ ತಾಣದಿಂದ ವ್ಯಕ್ತಿಯ ಭಾವನಾತ್ಮಕ ಸ್ಥಿತಿಗನುಗುಣವಾಗಿ,ಹಾಡುಗಳನ್ನು ಕೇಳಿಸುವ ಸೂಚನೆ ಹೋದರೆ,ಅದನ್ನು ನುಡಿಸಲು ಸ್ಪೀಕರುಗಳು ಉಡುಪಿನಲ್ಲಿ ಹುದುಗಿಸಿಟ್ಟ ಕಾರಣ ಸಾಧ್ಯವಾಗುತ್ತದೆ.ಉಡುಪಿನಲ್ಲಿ ಸರಳ ಚಿತ್ರಗಳು ಮತ್ತು ಸಂದೇಶಗಳನ್ನು ಪ್ರದರ್ಶಿಸಬಲ್ಲ ಎಲ್ ಇ ಡಿ ತೆರೆಯೂ ಇದೆ.
---------------------------------------------------
ನೌಕರಿ ಹುಡುಕಲು ನವೀನ ಸಹಾಯ
ನೌಕರಿ ಹುಡುಕುವವ ಫೇಸ್‌ಬುಕ್ ಬಳಕೆದಾರರಿಗೆ, ಹೊಸ ನಮೂನೆಯ ಸಹಾಯ ಸಿಗುತ್ತಲಿದೆ.ಸಾಮಾನ್ಯವಾಗಿ,ನಿಮ್ಮ ಆಯ್ಕೆಯ ಕಂಪೆನಿ,ಸ್ಥಳ ಮತ್ತು ಸಂಬಳ ಇಂತಹ ಆಯ್ಕೆಯ ಮೇಲೆ ಲಭ್ಯವಿರುವ ನೌಕರಿಗಳನ್ನು ಪಟ್ಟಿ ಮಾಡುವ ಸವಲತ್ತು ಹಲವು ಅಂತರ್ಜಾಲ ತಾಣಗಳಲ್ಲಿ ಲಭ್ಯವಿವೆ.ಫೇಸ್‌ಬುಕ್ ಬಳಕೆದಾರರಿಗೆ ಸಿಂಪ್ಲಿಹೈರಡ್ ತಾಣವು ನವೀನ ಸೌಲಭ್ಯವನ್ನು ನೀಡುತ್ತಿದೆ.ಅದರ ಪ್ರಕಾರ,ವ್ಯಕ್ತಿಯ ಗೆಳೆಯರು ಕೆಲಸ ಮಾಡುವ ಕಂಪೆನಿಗಳಲ್ಲಿ ಲಭ್ಯವಿರುವ ನೌಕರಿಗಳ ವಿವರಗಳನ್ನು ನೀಡಲಾಗುತ್ತಿದೆ.ನಿಮ್ಮಿಷ್ಟದ ಜಾಗದಲ್ಲಿ,ನಿಮಗರ್ಹವಾದ ಕೆಲಸಗಳು,ಬೇಕಾದ ಕಂಪೆನಿಯಲ್ಲಿ ಲಭ್ಯವಿದ್ದರೆ,ಅಲ್ಲಿ ಕೆಲಸ ಮಾಡುವ ನಿಮ್ಮ ಸ್ನೇಹಿತರ ವಿವರಗಳನ್ನೂ ಪೇಸ್‌ಬುಕ್‌ನ ಸೇವೆಯಲ್ಲಿ ಪಡೆಯಬಹುದು.ಒಂದು ವೇಳೆ ಕೆಲಸಕ್ಕೆ ಅರ್ಜಿ ಹಾಕಲು ತೀರ್ಮಾನಿಸಿದರೆ,ವ್ಯಕ್ತಿ ತನ್ನ ಗೆಳೆಯರಿಗೆ ಖಾಸಗಿ ಸಂದೇಶ ಕಳುಹಿಸಿ, ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಹುದು.ಕಂಪೆನಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲೂ ಈ ಸವಲತ್ತನ್ನು ಪಡೆಯಬಹುದು.ಗೆಳೆಯರ ಶಿಫಾರಸನ್ನು ಪಡೆಯಲೂ ಸಿಂಪ್ಲಿಹೈರಡ್ ಸೇವೆ ಸಹಕಾರಿ.ಅಂದ ಹಾಗೆ ಆ ಅಂತರ್ಜಾಲ ತಾಣವು SimplyHired.com ವಿಳಾಸದಲ್ಲಿದೆ.
-----------------------------------------------------
ಆನ್‌ಲೈನಿನಲ್ಲಿ ದಿನಬಳಕೆ ವಸ್ತು ಖರೀದಿ ಮಾಡಿ




ದಿನಬಳಕೆಯ ಸಾಬೂನಿನಂತಹ ಖರೀದಿಯನ್ನು ಅಂತರ್ಜಾಲದ ಇ-ವ್ಯವಹಾರದ ಮೂಲಕ ಮಾಡುವವರು ಹೆಚ್ಚಿಲ್ಲ.ಆದರೆ ಜನರಲ್ಲಿ ಅಂತಹ ಪ್ರವೃತ್ತಿಯನ್ನು ಹುಟ್ಟುಹಾಕಲು ಬಯಸಿರುವ ತಾಣ www.soap.com ಈಗ ಆರಂಭವಾಗಿದೆ.ಸಾಬೂನಿನಂತಹ ವಸ್ತುಗಳು ವಿಶೇಷ ಮುತುವರ್ಜಿ ವಹಿಸಿ ಖರೀದಿಸ ಬೇಕಾದ ವಸ್ತುವಲ್ಲ.ಟೂತ್‌ಪೇಸ್ಟ್,ಬ್ರಶ್,ಶಾಂಪೂ,ಡಿಟರ್ಜಂಟ್ ಮುಂತಾದ ಹಲವು ಸಾಮಗ್ರಿಗಳನ್ನು ನಾವು ನಿಗದಿತ ಬ್ರಾಂಡ್ ಹೆಸರಿನ ಮೂಲಕ ಖರೀದಿಸುವುದೇ ಹೆಚ್ಚು.ಹಾಗಾಗಿ ಇವುಗಳನ್ನು ಆನ್‌ಲೈನಿನಲ್ಲಿ ಖರೀದಿಸಿ,ಕೊರಿಯರ್ ಮೂಲಕ ತಕ್ಷಣ ಪಡೆಯಲು ಅವಕಾಶ ನೀಡುವ ಸೇವೆಯನ್ನು ಅಂತರ್ಜಾಲ ತಾಣವು ಒದಗಿಸುತ್ತದೆ.http://www.diapers.com/ ಅಂತರ್ಜಾಲ ತಾಣದ ಯಶಸ್ಸಿನಿಂದ ಉತ್ತೇಜಿತರಾದವರು ಸೋಪ್.ಕಾಂ ತಾಣವನ್ನು ಆರಂಬಿಸಿದ್ದಾರೆ.ಡಯಾಪರ್.ಕಾಂ ತಾಣವು ಮಕ್ಕಳಿಗೆ ಅಗತ್ಯವಾದ ವಸ್ತುಗಳನ್ನು ಖರೀದಿಸಲು ಅವಕಾಶ ನೀಡುವ ತಾಣ.
------------------------------------------------------------
ಬಿಗಿ ಸೆನ್ಸಾರ್:ಚೀನಾ ತ್ಯಜಿಸುತ್ತಿರುವ ಎಳೆಯರು
ಅನಿರ್ಬಂಧಿತ ಅಂತರ್ಜಾಲ ಜಾಲಾಟಕ್ಕೆ ಚೀನಾದಲ್ಲಿ ಅವಕಾಶವಿಲ್ಲ.ಗೂಗಲ್ ತನ್ನ ನಿಯಮಗಳಡಿ,ಶೋಧದ ಫಲಿತಾಂಶಗಳನ್ನು ನೀಡಲು ನಿರಾಕರಿಸಿದ ಬಳಿಕ,ಗೂಗಲ್ ಸೇವೆಯು ಚೀನಾದಲ್ಲೀಗ ಲಭ್ಯವಿಲ್ಲ.ಇಂತಹ ನಿರ್ಬಂಧಗಳು ಅಲ್ಲಿನ ಯುವಜನರಿಗೆ ಇಷ್ಟವಾಗುತ್ತಿಲ್ಲ.ಸದ್ಯ ಸ್ವತಂತ್ರ ಆಡಳಿತವನ್ನು ಹೊಂದಿರುವ ಹಾಂಕಾಂಗ್,ಚೀನಾಕ್ಕೆ ವ್ಯತಿರಿಕ್ತವಾಗಿ,ಮಾಹಿತಿಯ ಮೇಲೆ ಯಾವುದೇ ನಿರ್ಬಂಧ ಹೇರುತ್ತಿಲ್ಲ.ಉನ್ನತ ಶಿಕ್ಷಣ ಪಡೆಯಲು ಚೀನಾದ ಯುವಜನತೆ,ಹಾಂಕಾಂಗಿನ ವಿಶ್ವವಿದ್ಯಾಲಯಗಳ ಪ್ರವೇಶಕ್ಕೆ ಮುಗಿಬೀಳುತ್ತಿದೆ.ಹಾಂಕಾಂಗಿನ ವಿವಿಯ ಮುನ್ನೂರು ಸೀಟಿಗೆ ಹನ್ನೆರಡು ಸಾವಿರ ಅರ್ಜಿಗಳು ಬರುತ್ತಿವೆ ಎಂದರೆ,ಬೇಡಿಕೆಯ ಪ್ರಮಾಣ ಅರ್ಥವಾದೀತು. ಒಮ್ಮೆ ಅಲ್ಲಿ ವಿದ್ಯಾಭ್ಯಾಸ ಮುಗಿಸಿದವರು,ಮರಳಿ ದೇಶಕ್ಕೆ ಬರುವ ಪ್ರವೃತ್ತಿಯೂ ಇಲ್ಲ.ಹಾಗಾಗಿ ಪ್ರತಿಭಾ ಪಲಾಯನದ ಸಮಸ್ಯೆ ಚೀನಾವನ್ನು ಕಾಡಹತ್ತಿದೆ.ಚೀನಾದ ಸರಕಾರ ಅಂತವರನ್ನು ಮರಳಿ ಬರುವಂತೆ ಮಾಡಲು,ಅವರಿಗೆ ವಿಶೇಷ ಸವಲತ್ತುಗಳ ಆಕರ್ಷಣೆ ಒಡ್ಡುವ ಯತ್ನದಲ್ಲಿದೆ.
---------------------------------------
ಮುಕ್ತ ತಂತ್ರಾಂಶ ಅಭಿವೃದ್ಧಿ ಮಾಡುವವರಿಗೆ ಕಾದಿರುವ ಸ್ಕಾಲರ್‌ಶಿಪ್‌ಗಳು
ಮುಕ್ತ ಮತ್ತು ಉಚಿತ ತಂತ್ರಾಂಶದಲ್ಲಿ ತೊಡಗಿರುವ ವಿದ್ಯಾರ್ಥಿ ಸಮುದಾಯವನ್ನು ಪ್ರೋತ್ಸಾಹಿಸಲು ಶಿಷ್ಯವೇತನಗಳನ್ನು ನೀಡುವ ಕ್ರಮ ಜಾರಿಗೆ ಬರುತ್ತಿವೆ.ರೆಡ್‌ಹ್ಯಾಟ್ ಕಂಪೆನಿಯು ಫೆಡೋರಾ ಸ್ಕಾಲರ್‌ಶಿಪ್‌ಗಳನ್ನು ಹೈಸ್ಕೂಲ್ ಮಟ್ಟದ ವಿದ್ಯಾರ್ಥಿಗಳಿಗೂ ನೀಡಲು ಮುಂದೆ ಬಂದಿದೆ.ಕಲಿಕೆಗೆ ಸಹಾಯಧನ ಮತ್ತು ಉಚಿತ ಪ್ರವಾಸ ಯೋಜನೆಯಂತವು ಈ ಯೋಜನೆಯಲ್ಲಿ ಸೇರಿವೆ.
-----------------------------------------------------------------------
ಸೈಕಲ್ ಸವಾರಿ ಮಾಡಿ,ಮೊಬೈಲ್ ಚಾರ್ಜ್ ಮಾಡಿ!
ಸೈಕಲಿನ ಡೈನಮೋದ ಮೂಲಕ ಮೊಬೈಲ್ ಚಾರ್ಜ್ ಮಾಡಲು ಸಾಧ್ಯ.ನೋಕಿಯಾವು ಇಂತಹ ಕಿಟ್‌ಗಳನ್ನು ಒದಗಿಸಲಾರಂಭಿಸಿದೆ.ಮೊಬೈಲನ್ನು ಹಿಡಿದುಕೊಳ್ಳಲು, ಈ ಕಿಟ್‌ನಲ್ಲಿ ವ್ಯವಸ್ಥೆಯಿದೆ.ಮೊಬೈಲ್ ಹ್ಯಾಂಡ್‌ಸೆಟ್ ರಿಚಾರ್ಜ್ ಮಾಡಲು ಕನಿಷ್ಠ ಪ್ರತಿ ಗಂಟೆಗೆ ಹತ್ತು ಕಿಲೋಮೀಟರ್ ವೇಗದಲ್ಲಿ ಸೈಕಲ್ ಸವಾರಿ ಮಾಡುವುದಗತ್ಯವಂತೆ.ಹತ್ತು ನಿಮಿಷ ಸೈಕಲ್ ಸವಾರಿ ಮಾಡಿದರೆ,ರಿಚಾರ್ಜ್ ಆಗಿಬಿಡುತ್ತದೆ.ಬೆಲೆ ಆರುನೂರು ರೂಪಾಯಿಗಳು.ವಿದ್ಯುತ್ ಪೂರೈಕೆ ಸರಿಯಾಗಿಲ್ಲದೆಡೆ ಬಳಸಲಿವು ಸೂಕ್ತ.
-------------------------------------------------------------
ಓದುಗರ ಆಯ್ಕೆ:ಕಲಿಕಾ ಸಂಪನ್ಮೂಲಗಳ ಪುನರ್ಬಳಕೆ
ಪಠ್ಯಪುಸ್ತಕಗಳಲ್ಲಿ ಮಾಹಿತಿಯು ಕ್ರಮಾನುಗತವಾಗಿ ಇರುತ್ತದೆ.ನಾವು ಹೊಸ ವಿಷಯಗಳನ್ನು ಕಲಿಯುವಾಗ ನಮಗೆ ಈಗಾಗಲೇ ತಿಳಿದಿರುವ ವಿಷಯಕ್ಕೆ ಸಂಬಂಧ ಕಲ್ಪಿಸುವ ಮೂಲಕ ಹೊಸ ವಿಷಯವನ್ನು ಅರ್ಥ ಮಾಡಿಕೊಳ್ಳುವ ಪ್ರವೃತ್ತಿಯನ್ನು ತೋರುತ್ತೇವೆ.ಅಂತರ್ಜಾಲದಲ್ಲಿ ಹೊಸ ಮಾಹಿತಿಗಳನ್ನು ಇದೇ ರೀತಿ ಪ್ರಸ್ತುತ ಪಡಿಸಲು ಅವಕಾಶ ನೀಡುವ ತಾಣವು http://cnx.org ವಿಳಾಸದಲ್ಲಿ ಲಭ್ಯವಿದೆ.ಇತರರ ಜತೆ ಸೇರಿಕೊಂಡು ಕಲಿಕಾ ಸಂಪನ್ಮೂಲಗಳನ್ನು ಅಭಿವೃದ್ಧಿ ಪಡಿಸಲು ಇಲ್ಲಿ ಅನುಕೂಲ ಕಲ್ಪಿಸಲಾಗಿದೆ.ಮಾಹಿತಿಯನ್ನು ಮೂಲದಿಂದ ಅಭಿವೃದ್ಧಿ ಪಡಿಸುವ ಬದಲು,ಲಭ್ಯ ಮಾಹಿತಿಯನ್ನು ಮತ್ತೆ ಬಳಸಿಕೊಂಡು,ತುಸು ಹೊಸ ಮಾಹಿತಿಯನ್ನದಕ್ಕೆ ಸೇರಿಸಲು ಸಾಧ್ಯ.ಸಹಭಾಗಿತ್ವದಲ್ಲಿ ಕಲಿಕಾ ಸಂಪನ್ಮೂಲಗಳನ್ನು ಅಭಿವೃದ್ಧಿ ಪಡಿಸಲು ಇಲ್ಲಿ ಸಾಧ್ಯವಾಗುತ್ತದೆ.ಕಾರ್ಕಳದ ರಾಕೇಶ್ ಈ ತಾಣದ ಬಗ್ಗೆ ನಮ್ಮ ಗಮನ ಸೆಳೆದವರು.
-----------------------------------------------------------
ಕೇಕು ಮಹಾಶಯರ ನೀಲುಗಳು

ವೃತ್ತಿಯಲ್ಲಿ ರೇಡಿಯಾಲಜಿಸ್ಟ್‌ರಾದ ಡಾ.ಕೇಶವ ಕುಲಕರ್ಣಿಯವರಿಗೆ ,ಬರವಣಿಗೆ ಹವ್ಯಾಸ.ಯುಕೆಯಲ್ಲಿ ವೃತ್ತಿಯಲ್ಲಿ ತೊಡಗಿದ್ದರೂ ತೊದಲಮಾತು ಮೂಲಕ ಕನ್ನಡಿಗರ ಜತೆ ಸಂಪರ್ಕದಲ್ಲಿರುವ ಕೇಕು ಮಹಾಶಯರು "ನೀಲು" ಹನಿಗವನಗಳನ್ನು ಬರೆಯುತ್ತಾರೆ."ಕೆಂಡಸಂಪಿಗೆ"ಗೂ ಬರೆಯುವ, ಇವರ ವೃತ್ತಿ ಸಂಬಂಧಿ ಬ್ಲಾಗ್ http://radiologyimages.blogspot.comನಲ್ಲಿದೆ. ತೊದಲಮಾತು ನೋಡಲು ನೋಡಲು http://kannada-nudi.blogspot.com ಮತ್ತು ಇಂಗ್ಲಿಷ್ ಬರವಣಿಗೆಗಳಿಗೆ http://keshavkulkarni.blogspot.com/ ತಾಣಗಳಿಗೆ ಭೇಟಿ ಕೊಡಿ.
----------------------------------------------------------------------
ಮಾಹಿತಿ ತಂತ್ರಜ್ಞಾನದಲ್ಲಿ ನೂರಹದಿನೇಳನೇ ಸ್ಥಾನದಲ್ಲಿ ಭಾರತ
ಭಾರತವು ಮಾಹಿತಿ ತಂತ್ರಜ್ಞಾನದ ಬಳಕೆಯಲ್ಲಿ ವಿಶ್ವದ ನೂರ ಅರುವತ್ತು ದೇಶಗಳ ಪೈಕಿ ನೂರ ಹದಿನೇಳನೆಯ ಸ್ಥಾನದಲ್ಲಿದೆ.ಅಂತರ್ಜಾಲ ಬಳಕೆ,ಮೊಬೈಲ್ ಬಳಕೆಯು ದಿನೇ ದಿನೇ ಹೆಚ್ಚುತ್ತಿದೆ.ವಿಶ್ವದ ಶೇಕಡಾ ಇಪ್ಪತ್ತೈದು ಜನರೀಗ ಅಂತರ್ಜಾಲ ಬಳಸುವುದು,ಈ ಬಗ್ಗೆ ನಡೆಸಿದ ಅಧ್ಯಯನಗಳಿಂದ ವ್ಯಕ್ತವಾಗಿದೆ.ಹಾಗೆಯೇ ಮೊಬೈಲ್ ಸಂಪರ್ಕಗಳ ಸಂಖ್ಯೆಯು ನಾಲ್ಕೂವರೆ ಬಿಲಿಯನ್‌ಗಳಿಗಿಂತಲೂ ಹೆಚ್ಚು.ಸ್ವೀಡನ್,ಕೊರಿಯಾ,ನೆದರ್ಲ್ಯಾಂಡ್ ಅಂತಹ ದೇಶಗಳು ಪಟ್ಟಿಯಲ್ಲಿ ಅಗ್ರಗಣ್ಯಸ್ಥಾನ ಗಳಿಸಿವೆ.
*ಅಶೋಕ್‌ಕುಮಾರ್ ಎ
Udayavani