Monday, August 30, 2010

ಪಠ್ಯಪುಸ್ತಕಗಳು ಬಾಡಿಗೆಗೆ!

ಪಠ್ಯಪುಸ್ತಕಗಳು ಬಾಡಿಗೆಗೆ!
 
ವಿದ್ಯಾರ್ಥಿಗಳು ಪಠ್ಯಪುಸ್ತಕಗಳನ್ನು ಖರೀದಿಸದಿದ್ದರೆ ಅವರ ಕಲಿಕೆ ಕುಂಠಿತವಾಗುವುದು ಖಂಡಿತ.ಬೇಕೆಂದಾಗ ಪುಸ್ತಕ ಲಭ್ಯವಿಲ್ಲವಾದರೆ,ಅವರ ಓದಿಗೆ ತೊಂದರೆಯಾಗುತ್ತದೆ.ಪುಸ್ತಕ ಖರೀದಿಸೋಣವೆಂದರೆ,ಅದರಿಂದ ಹೆತ್ತವರಿಗೆ ಹೊರೆಯಾಗುತ್ತದಲ್ಲ ಎನ್ನುವ ಹಪಾಹಪಿ.ಹೆತ್ತವರೂ,ಬೇರೆ ಖರ್ಚುಗಳನ್ನು ಅನಿವಾರ್ಯವಾಗಿ ಭರಿಸಲು ಮುಂದಾದರೂ,ಪುಸ್ತಕಗಳ ವಿಚಾರಕ್ಕೆ ಬಂದಾಗ,ಗ್ರಂಥಾಲಯದಿಂದ ಪುಸ್ತಕ ಎರವಲು ಪಡೆಯಬಹುದಲ್ಲ ಎಂದೇ ಸಲಹೆ ನೀಡುವುದಿದೆ.http://www.chegg.com ಅಂತರ್ಜಾಲತಾಣದಲ್ಲಿ ಪುಸ್ತಕಗಳು ಬಾಡಿಗೆಗೆ ಸಿಗುತ್ತವೆ.ಸೆಮಿಸ್ಟರ್ ಆರಂಭದಲ್ಲಿ,ಪುಸ್ತಕಗಳಿಗೆ ಬೇಡಿಕೆ ಸಲ್ಲಿಸಿ,ಸೆಮಿಸ್ಟರ್ ಪೂರ್ತಿ ಪುಸ್ತಕಗಳನ್ನು ಬಾಡಿಗೆಗೆ ಇಟ್ಟುಕೊಂಡು,ನಂತರ ಅದನ್ನು ವಾಪಸ್ಸು ಮಾಡಬಹುದು.ಕೊರಿಯರ್ ಸೇವೆಯ ಮೂಲಕ,ಪುಸ್ತಕವನ್ನು ಕಳುಹಿಸುವ ವ್ಯವಸ್ಥೆಯನ್ನು ಅಂತರ್ಜಾಲ ತಾಣವು ಮಾಡುತ್ತದೆ.ಸದ್ಯಕ್ಕೆ ನಮ್ಮಲ್ಲಿ ಇದರ ಸೇವೆಯನ್ನು ಅವಲಂಬಿಸುವಂತಿಲ್ಲವಾದರೂ,ಇಂತಹ ಸೇವೆಯನ್ನು ನೀಡುವ ಅಂತರ್ಜಾಲ ತಾಣಗಳು ಬೇಕು ಅನಿಸುವುದಿಲ್ಲವೇ?
-----------------------------------------
ನಿಮ್ಮದೇ ಅಂತರ್ಜಾಲ ಪತ್ರಿಕೆ ಹೊರಡಿಸಿ 

ಟ್ವಿಟರ್ ಅಥವಾ ಫೇಸ್‌ಬುಕ್ ಅಂತರ್ಜಾಲ ತಾಣದಲ್ಲಿ ದಿನನಿತ್ಯ ನೀವು ಓದಿದ ಅಂತರ್ಜಾಲ ತಾಣಗಳ ಕೊಂಡಿಗಳನ್ನು ಹಾಕುವ ಅಭ್ಯಾಸ ಹೊಂದಿದ್ದೀರಾ?ಆ ಕೊಂಡಿಗಳನ್ನು ಪತ್ರಿಕೆಯ ಸುದ್ದಿಯಾಗಿ,ಪತ್ರಿಕೆಯ ರೂಪಕ್ಕಿಳಿಸುವ ಸೇವೆಯು ಈಗ ಲಭ್ಯ.ಈ ಸೇವೆಯನ್ನು ಪಡೆಯಲು,ಅಂತರ್ಜಾಲ ತಾಣ http://paper.li ಅನ್ನು ನೋಡಿ.ಟ್ವಿಟರ್ ಖಾತೆ ಅಥವಾ ಫೇಸ್‌ಬುಕ್ ಖಾತೆಯನ್ನು ಲಾಗಿನ್ ಆಗಲು ಈ ಅಂತರ್ಜಾಲ ಸೇವೆಗೆ ನೀವು ಅನುಮತಿಸಬೇಕಾಗುತ್ತದೆ.ಕೊಂಡಿಗಳನ್ನು ಓರಣವಾಗಿ,ಪತ್ರಿಕೆಯ ರೂಪಕ್ಕಿಳಿಸಿ,ನಿಮ್ಮ ಪತ್ರಿಕೆಯಾಗಿಸುವ ಅದ್ಭುತ ನಡೆಯುತ್ತದೆ.ಇದನ್ನೂ ಟ್ವಿಟರ್ ಅಥವಾ ಪೇಸ್‌ಬುಕ್ ಮೂಲಕ ಹಂಚಿಕೊಂಡು ಸಂತಸ ಪಡಬಹುದು.ನಿಮ್ಮ ಆಸಕ್ತಿಯ ಸುದ್ದಿಗಳನ್ನು,ಬರಹಗಳನ್ನು ನಿಮ್ಮ ಗೆಳೆಯರ ಗಮನಕ್ಕೆ ತರುವ ವಿಧಾನಗಳಲ್ಲಿ ಇದೂ ಒಂದು.ಅಂದಹಾಗೆ ನಿಮ್ಮನ್ನು ಹಿಂಬಾಲಿಸುವವರು ಹಾಕಿರುವ ಕೊಂಡಿಗಳೂ ಇದರಲ್ಲಿ ಕಾಣಿಸಿಕೊಳ್ಳುತ್ತವೆ! ಇಂತಹ ಒಂದು ಪತ್ರಿಕೆಯ ಇಣುಕುನೋಟಕ್ಕಾಗಿ http://paper.li/ashok567 ನೋಡಿ.
---------------------------------------------
ಹೊಸ ಅಂತರ್ಜಾಲ ಶಿಷ್ಟಾಚಾರ ಪಾಲನೆಗೆ ತಯಾರಿ
ಸದ್ಯ ನಾವು ಐಪಿ4 ಎನ್ನುವ ಶಿಷ್ಟಾಚಾರದ ಮೂಲಕ ಅಂತರ್ಜಾಲ ಸೇವೆಯನ್ನು ಪಡೆಯುತ್ತಿದ್ದೇವೆ.ಆದರೆ ಹೆಚ್ಚುತ್ತಿರುವ ಬಳಕೆದಾರರು ಮತ್ತು ಹೊಸ ಹೊಸ ಸೇವೆಗಳನ್ನು ನೀಡಲು ಅಗತ್ಯವಾದ ಹೆಚ್ಚಿನ ಅಂತರ್ಜಾಲತಾಣಗಳಿಗೆ ಮತ್ತು ಶರವೇಗದ ಸಂಪರ್ಕ,ಮೇಲ್ಮಟ್ಟದ ಭದ್ರತಾ ಸವಲತ್ತುಗಳಿಗೆ ಐಪಿ4 ಸಾಲದು.ಹಾಗಾಗಿ,ಐಪಿ4 ಬದಲಿಗೆ ಐಪಿ6 ಎಂಬ ಶಿಷ್ಟಾಚಾರವನ್ನು ಬಳಕೆಗೆ ತರುವ ಅಗತ್ಯವಿದೆ.ಸರಕಾರವು ನಮ್ಮಲ್ಲೂ ಇದಕ್ಕೆ ತಯಾರಿ ನಡೆಸಲು ಸೂಚನೆ ನೀಡಿದೆ.ಜುಲೈ ತಿಂಗಳಲ್ಲಿ ಈ ಬಗ್ಗೆ ಪ್ರಕಟನೆ ನೀಡಲಾಗಿದ್ದು,ಅಂತರ್ಜಾಲ ಸೇವಾದಾತೃಗಳು ತಮ್ಮ ಕಂಪ್ಯೂಟರ್ ಜಾಲಗಳನ್ನು ಮುಂದಿನ ವರ್ಷ ಡಿಸೆಂಬರ್ ವೇಳೆಗೆ ಹೊಸ ಶಿಷ್ಟಾಚಾರಕ್ಕೆ ಸನ್ನದ್ಧಗೊಳಿಸುವಂತೆ ಸೂಚನೆ ನೀಡಲಾಗಿದೆ.2012ರ ವೇಳೆಗೆ ಸಂಪೂರ್ಣ ಸೇವೆಯನ್ನು ಹೊಸ ಶಿಷ್ಟಾಚಾರದ ಪ್ರಕಾರ ನೀಡಲು ಮಾರ್ಗಸೂಚಿ ಪ್ರಕಟಿಸಲಾಗಿದೆ.ಐಪಿ4ರಲ್ಲಿ ಮೂವತ್ತೆರಡು ಬಿಟ್‌ಗಳ ಅಂತರ್ಜಾಲ ಐಪಿ ವಿಳಾಸಗಳನ್ನು ಬಳಸಿದರೆ,ಐಪಿ6ರಲ್ಲಿ 128 ಬಿಟ್‌ಗಳ ವಿಳಾಸಗಳನ್ನು ಬಳಸಬಹುದು.ಇದರಿಂದ ವಿಳಾಸಗಳ ಲಭ್ಯತೆ ಭಾರೀ ಸಂಖ್ಯೆಯಲ್ಲಿ ಏರುತ್ತದೆ.ಈಗ ಮುಕ್ತವಾಗಿ ಲಭ್ಯವಿರುವ ವಿಳಾಸಗಳು ಮುಗಿಯುತ್ತಾ ಬಂದಿದೆ.
------------------------------------------
ಅತ್ಯುತ್ತಮ ತಾಣಗಳ ಪಟ್ಟಿ
ಟೈಮ್ಸ್ ಪತ್ರಿಕೆಯು ಈ ವರ್ಷದ ಅತ್ಯುತ್ತಮ ಅಂತರ್ಜಾಲ ತಾಣಗಳ ಪಟ್ಟಿಯನ್ನು ಪ್ರಕಟಿಸಿದ್ದು,ಸಾಮಾಜಿಕ ಜಾಲತಾಣಗಳ ಪೈಕಿ,ಗೊವಲ್ಲಾ ಎನ್ನುವ ಹೊಸ ಬಗೆಯ ಜಾಲತಾಣಕ್ಕೆ ಮೊದಲ ಸ್ಥಾನ ಸಂದಿದೆ.ಇದು ನವೀನವಾದ,ವ್ಯಕ್ತಿಯಿರುವ ತಾಣವನ್ನು ಆತನ ಗೆಳೆಯರಿಗೆ ತಿಳಿಸಿ,ಅವರುಗಳು ಭೇಟಿಯಾಗುವುದನ್ನು ಸುಲಭವಾಗಿಸುವ ಸೇವೆ ನೀಡುತ್ತದೆ.ಮೊಬೈಲ್ ಹ್ಯಾಂಡ್‌ಸೆಟ್ಟಿನಲ್ಲಿ ಜಿಪಿಆರೆಸ್ ಸವಲತ್ತು ಇದ್ದು,ವ್ಯಕ್ತಿಯು ಬಯಸಿದರೆ,ಆತ ಹೋದ ಸ್ಥಾನಗಳ ನಕಾಶೆಯನ್ನು ಇತರರಿಗೆ ಒದಗಿಸುತ್ತಾ ನೆರವಾಗುವುದು ತಾಣದ ವೈಶಿಷ್ಟ್ಯ.ಫೋರ್‌ಸ್ಕ್ವೇರ್ ಎನ್ನುವುದು ಇಂತಹುದೇ ಸೇವೆ ನೀಡುವ ತಾಣವಾದರೂ,ಈ ತಾಣದ ನಾವೀನ್ಯತೆಯಿಂದ ಇದು ಮೊದಲ ಸ್ಥಾನ ಗಿಟ್ಟಿಸಿದೆ.ಫೋರ್‌ಸ್ಕ್ವೇರ್ ಹೆಚ್ಚು ಸುದ್ದಿಯಲ್ಲಿದೆ.ಗೊವಲ್ಲಾ ವಿಳಾಸ www.gowalla.com ಆಗಿದೆ.
--------------------------------------------
ಮೊಬೈಲ್ ಮೂಲಕ ಶೇರು ವ್ಯವಹಾರ:ಸೆಬಿ ಅನುಮತಿ
ಸೆಬಿಯು ಮೊಬೈಲ್ ಸಾಧನ ಬಳಸಿ, ನಿಸ್ತಂತು ಸೇವೆಯ ಮೂಲಕ,ಶೇರು ವ್ಯವಹಾರ ಮಾಡುವುದಕ್ಕೆ ಅನುಮತಿಸಿದೆ.ಮೊಬೈಲ್ ಅಥವಾ ಲ್ಯಾಪ್‌ಟಾಪ್ ಮೂಲಕ,ನಿಸ್ತಂತು ಜಾಲ ಬಳಸಿ ಶೇರು ವ್ಯವಹಾರವನ್ನು ಸಂಚಾರದ ವೇಳೆಯೂ ಮಾಡಲು ಅಗತ್ಯವಾದ ಮೂಲಸೌಕರ್ಯವನ್ನು ಕೋಟಕ್,ಬಿಎನ್ಪಿ,ಐಸಿಸಿಐಡೈರೆಕ್ಟ್,ಜಿಯೋಜಿತ್,ಏಂಜೆಲ್ ಟ್ರೇಡಿಂಗ್,ಮೋತಿಲಾಲ್ ಓಸ್ವಾಲ್ ಮುಂತಾದ ಬ್ರೋಕಿಂಗ್ ಕಂಪೆನಿಗಳು ಹೊಂದಿವೆ.ಈಗವುಗಳ ಸೇವೆಯನ್ನು ಬಳಸಿಕೊಳ್ಳಲು ಶೇರುದಾರರಿಗೆ ಸಾಧ್ಯ.
-------------------------------------------
ಜಿಮೇಲ್‌ನಿಂದ ಧ್ವನಿ ಕರೆ ಸೇವೆ

ಇನ್ನು ಮುಂದೆ ಕಂಪ್ಯೂಟರ್ ಮೂಲಕ ಧ್ವನಿ ಕರೆಗಳನ್ನು ಮಾಡುವವರ ಸಂಖ್ಯೆ ಹೆಚ್ಚಾಗುವುದು ಖಂಡಿತ.ಜಿಮೇಲ್ ತನ್ನ ಬಳಕೆದಾರರಿಗೆ ಈ ಸೇವೆಯನ್ನು ಉಚಿತವಾಗಿ ನೀಡಲು ಆರಂಭಿಸಿದ ಮೊದಲ ದಿನವೇ ಒಂದು ದಶಲಕ್ಷ ಜನರು ಧ್ವನಿ ಕರೆಗಳನ್ನು ಮಾಡಿದ್ದಾರೆ.ಕಂಪ್ಯೂಟರಿನಿಂದ ಮೊಬೈಲ್ ಮತ್ತು ಲ್ಯಾಂಡ್‌ಲೈನುಗಳಿಗೂ ಕರೆ ಮಾಡಲು ಅವಕಾಶವಿದ್ದರೂ,ಅವುಗಳಿಗೆ ಶುಲ್ಕ ಪಾವತಿಸಬೇಕಾಗುತ್ತದೆ.ಕಂಪ್ಯೂಟರ್ ಮೂಲಕ ಇತರ ಕಂಪ್ಯೂಟರ್ ಬಳಕೆದಾರರಿಗೆ ಕರೆ ಮಾಡಲು ಈರ್ವರೂ ಜಿಮೇಲ್ ಸೇವೆ ಬಳಸುತ್ತಿರಬೇಕು.ಕಂಪ್ಯೂಟರ್ ಅಥವ ಸಾಧನದಲ್ಲಿ ಮೈಕ್ ಮತ್ತು ಸ್ಪೀಕರ್ ಬೇಕು ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲವಷ್ಟೇ?ಕೆನಡಾ,ಯುಎಸ್‌ಗಳಲ್ಲಿ ಸೇವೆ ಈಗಾಗಲೇ ಲಭ್ಯವಿದ್ದು,ದೇಶದೊಳಗೆ ಕರೆಗಳು ಉಚಿತವಾಗಿ ಲಭ್ಯವಾಗಿವೆ.ಹೊರದೇಶಗಳಿಗೆ ಕರೆ ಮಾಡಲು ಪ್ರತಿ ನಿಮಿಷಕ್ಕೆ ಆರೇಳು ಸೆಂಟು ದರ ನೀಡಬೇಕಾಗುತ್ತದೆ.ಚ್ಯಾಟ್ ಸೇವೆಯಲ್ಲಿ "ಕಾಲ್‌ಪೋನ್" ಸೇವೆ ಸಶಕ್ತವಾಗಿದ್ದರೆ ಕರೆಗಳನ್ನು ಏರ್ಪಡಿಸಲು ಬರುತ್ತದೆ.ಸ್ಕೈಪ್ ಎನ್ನುವ ತಾಣವು ಇದುವರೆಗೆ ಇಂತಹ ಅಂತರ್ಜಾಲ ಮೂಲಕ ಧ್ವನಿ ಮತ್ತು ವೀಡಿಯೋ ಕರೆಗಳಿಗೆ ಅವಕಾಶ ನೀಡಿ,ಜನಪ್ರಿಯವಾಗಿತ್ತು.ಅದನ್ನು ಈಗಾಗಲೇ ಆರು ಕೋಟಿಯಷ್ಟು ಬಳಕೆದಾರರು ಬಳಸುತ್ತಿದ್ದಾರೆ.
-----------------------------------------------
ಟ್ವಿಟರ್ ಚಿಲಿಪಿಲಿ
*ಮಳೆಯು ಜನರನ್ನು ಒಂದುಗೂಡಿಸುತ್ತದೆ...ಒಂದೇ ಕೊಡೆಯಲ್ಲಿ ನಾಲ್ಕು ಜನರು ಸಾಗುತ್ತಿರುವುದೇ ಸಾಕ್ಷಿ..
*ಇವು ನಾನು ಪಾಲಿಸುವ ನಿಯಮಗಳು.ನಿಮಗಿಷ್ಟವಾಗಲಿಲ್ಲವೇ?ಸರಿ ಬಿಡಿ,ನಾನು ಪಾಲಿಸುವ ಇನ್ನೂ ಕೆಲವು ನಿಯಮಗಳಿವೆ...
*ಯಾರಾದರೂ ಶ್ರೀಮಂತ,ತನ್ನ ಶ್ರೀಮಂತಿಕೆಗೆ ಕಠಿನ ದುಡಿಮೆಯೇ ಕಾರಣ ಎಂದಾಗ,"ಯಾರ ಕಠಿನ ದುಡಿಮೆ" ಎಂದು ಕೇಳಿ ಬಿಡಿ.
*ಕನ್ನಡ ವಿಕಿಪೀಡಿಯಾದಲ್ಲಿನ ಬರಹಗಳ ಸಂಖ್ಯೆ ಒಂಭತ್ತು ಸಾವಿರದ ಗಡಿ ದಾಟಿದೆ.
*"ಸಂಪದ" ಸಮುದಾಯ ತಾಣವನ್ನು ನಿರ್ವಹಿಸಲು ಮಾಧ್ಯಮದ ಬಗ್ಗೆ ಆಸಕ್ತಿ ಹೊಂದಿದ ನಿರ್ವಾಹಕರು ಬೇಕಾಗಿದ್ದಾರೆ.ಆಸಕ್ತರು ಹರಿಪ್ರಸಾದ್ ನಾಡಿಗ್ ಅವರನ್ನು hpnadig@sampada.netನಲ್ಲಿ ಸಂಪರ್ಕಿಸಿ.
*ಅಶೋಕ್‌ಕುಮಾರ್ ಎ

Monday, August 23, 2010

ಸೌರಶಕ್ತಿ ಕಿಟ್ ಈಗ ಸರಳ

ಸೌರಶಕ್ತಿ ಕಿಟ್ ಈಗ ಸರಳ
 
ಸೌರಶಕ್ತಿಯನ್ನು ವಿದ್ಯುಚ್ಛಕ್ತಿಯಾಗಿಸಿ,ಅದನ್ನು ಮನೆಯ ವಿದ್ಯುತ್ ಪ್ಲಗ್ ಮೂಲಕ,ಮೆಸ್ಕಾಂ ವಿದ್ಯುತ್‌ಗೆ ಸೇರಿಸುವ ಹಾಗಿದ್ದರೆ ಎಷ್ಟು ಚೆನ್ನ! ಮೆಸ್ಕಾಂನಿಂದ ನಾವು ಪಡೆವ ವಿದ್ಯುಚ್ಛಕ್ತಿಯ ಪ್ರಮಾಣ ಕಡಿಮೆಯಾಗುತ್ತದೆ-ವಿದ್ಯುತ್ ಬಿಲ್ ತಗ್ಗುತ್ತದೆ.ಇಂತಹ ಸರಳ ಕಿಟ್ ಒಂದನ್ನು ಕ್ಲೇರಿಯಾನ್ ಅಮೆರಿಕಾದ ಪವರ್ ಕಂಪೆನಿಯು ತಯಾರಿಸಿದೆ.ಸೌರಫಲಕಗಳು,ವಿದ್ಯುತ್ತನ್ನು ಹೊರಗಿನ ಪವರ್ ಕಂಪೆನಿಯಿಂದ ಪಡೆದ ವಿದ್ಯುತ್ತಿನ ರೂಪಕ್ಕೆ ಪರಿವರ್ತಿಸಲು ವಿದ್ಯುತ್ ಮಂಡಲ ಇರುವ ಒಂದು ಪೆಟ್ಟಿಗೆಯ ಜತೆ ಈ ಸಾಧನ ಬರುತ್ತದೆ.ಪವರ್ ಕಟ್ ಆದರೆ,ಸೌರಕಿಟ್ ಕೆಲಸ ನಿಲ್ಲಿಸುತ್ತದೆ.ಅಂತೆಯೇ ಓವರ್‌ಲೋಡ್ ಆದರೂ ಸಾಧನ ವಿದ್ಯುತ್ ಉತ್ಪಾದಿಸದು.ಇದನ್ನು ಆರುನೂರು ಡಾಲರಿನಷ್ಟು ಬೆಲೆಗೆ ಬಳಕೆದಾರರಿಗೆ ಒದಗಿಸಲು ಕಂಪೆನಿ ನಿರ್ಧರಿಸಿದೆ.ಅಲ್ಲಿನ ರಾಜ್ಯಗಳಲ್ಲಿ ಲಭ್ಯವಿರುವ ಸಬ್ಸಿಡಿಯಂತಹ ಸವಲತ್ತುಗಳ ಲಾಭ ಪಡೆದರೆ,ಈ ಕಿಟ್‌ಗಳ ಖರ್ಚು ಮೂರು-ನಾಲ್ಕು ವರ್ಷಗಳಲ್ಲಿ ಗ್ರಾಹಕನಿಗೆ ವಾಪಸ್ಸು ಬರುತ್ತದೆ.ಒಂದು ಮನೆಯಲ್ಲಿ ಎರಡು ಮೂರು ಕಿಟ್‌ಗಳಿಗೆ ಬೇಡಿಕೆ ಬರಬಹುದು ಎಂದು ಕಂಪೆನಿಯ ಅಂದಾಜು.ಮನೆಯ ವಯರಿಂಗ್ ಬದಲಿಸದೆ,ಸೌರಶಕ್ತಿಯನ್ನು ಗ್ರಿಡ್ ಶಕ್ತಿಯ ಜತೆಜತೆಯೇ ಬಳಸುವ ಸೌಲಭ್ಯ ಜನರಿಗೆ ಆಕರ್ಷಕವಾಗಿ ಕಾಣಬಹುದು ಎಂಬುದು ಕಂಪೆನಿಯ ಎಣಿಕೆ.ಮುಂದೆ ಗಾಳಿಯಿಂದ ವಿದ್ಯುತ್ ತಯಾರಿಕೆಗೂ ಇಂತಹುದೇ ಕಿಟ್‌ಗಳನ್ನು ತಯಾರಿಸಿ,ಒದಗಿಸುವ ಯೋಚನೆಯೂ ಕ್ಲೇರಿಯಾನ್‌ದ್ದು.
--------------------------------------------------------
ಮೈಸೂರು ಅರಮನೆಯ ಯಥಾದರ್ಶನ
http://www.mysorepalace.tv/360_Eng/index.html ಅಂತರ್ಜಾಲ ವಿಳಾಸಕ್ಕೆ ಭೇಟಿ ಕೊಟ್ಟರೆ,ನಿಮಗೆ ಮೈಸೂರು ಅರಮನೆಯ ದರ್ಶನವಾಗುತ್ತದೆ.ಅರಮನೆಯ ಒಳಗೆ ನಿಂತು ನೋಡಿದ ಅನುಭವ ಕೊಡುವ ಈ ಮಿಥ್ಯಾದರ್ಶನ,ವೀಕ್ಷಕ ವಿವರಣೆಯನ್ನೂ ಒಳಗೊಂಡಿದೆ.ಅರಮನೆಯ 21 ವಿವಿಧ ಭಾಗಗಳ ಯಥಾದರ್ಶನ ನಿಮಗಾಗುತ್ತದೆ.ಚಾವಣಿಯ ಕಡೆಯ ನೋಟ,ಅರಮನೆಯ ಒಳಗಡೆ ನಿಂತು ನೋಡಿದ ಅನುಭವಗಳೂ ನಿಮಗೆ ಲಭ್ಯ.
-----------------------------
ಬಾಹ್ಯಾಕಾಶ ಯಾನ ನಿಯಂತ್ರಣ
ಬಾಹ್ಯಾಕಾಶಕ್ಕೆ ಜನರನ್ನು ಪ್ರವಾಸ ಕರೆದೊಯ್ಯುವ ಸೇವೆ ಒದಗಿಸುವ ವರ್ಜಿನ್ ಗ್ಯಾಲಾಕ್ಟಿಕ್ ಅಂತಹ ಕಂಪೆನಿಗಳ ಸೇವೆ ಲಭ್ಯವಾಗಲಿಕ್ಕೆ ಇನ್ನು ಹೆಚ್ಚು ತಡವಾಗದು.ನಾಸಾದ ಸ್ಪೇಸ್ ಶಟಲ್ ಕೂಡಾ ಈಗ ಹಳೆಯದಾಗಿದ್ದು,ಅದನ್ನು ಬಳಕೆ ಹೆಚ್ಚು ಸಮಯ ನಡೆಯದು.ನಂತರ,ಅಂತಾರ್ರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಜನರನ್ನು ಕರೆದೊಯ್ಯಲು,ಖಾಸಗಿ ಸೇವೆಯನ್ನೇ ಅವಲಂಬಿಸಬೇಕಾದೀತು.ಇವೆಲ್ಲದರಿಂದ ಬಾಹ್ಯಾಕಾಶ ವಾಹನಗಳ ಹೋಗುವಿಕೆ ಮತ್ತು ಬರುವಿಕೆ ಹೆಚ್ಚಾದಂತೆಲ್ಲಾ,ಬಾಹ್ಯಾಕಾಶದಲ್ಲೂ ಸಂಚಾರ ನಿಯಂತ್ರಣ ಬೇಕಾಗುತ್ತದೆ.ಈ ಬಗ್ಗೆ ನಿಯಮಗಳನ್ನು ಮಾಡಲು ಅಮೆರಿಕಾದ ಫೆಡರೇಶನ್ ಆಫ್ ಏವಿಯೇಶನ್ ಎರೊನಾಟಿಕ್ಸ್(FAA)ವು ಸ್ಟಾನ್‌ಫರ್ಡ್ ವಿವಿಯ ತಜ್ಞರನ್ನು ಕೇಳಿದೆ.ವಿಮಾನಗಳ ನಿಯಂತ್ರಣದ ರೀತಿಯೇ ಇಂತಹ ಬಾಹ್ಯಾಕಾಶಯಾನಗಳನ್ನು ನಿಯಂತ್ರಿಸುವ ಬಗ್ಗೆ ತಜ್ಞರು ಸಲಹೆಗಳನ್ನು ನೀಡಿ,ನಿಯಮಗಳನ್ನು ರೂಪಿಸಬೇಕಿದೆ.ಈ ಯಾನಗಳು ಸುರಕ್ಷಿತವಾಗುವಂತೆ ಮಾಡುವ ಜವಾಬ್ದಾರಿಯ ಜತೆ,ಬಾಹ್ಯಾಕಾಶ ವಾಹನಗಳು,ವಿಮಾನಗಳಿಗೆ ಡಿಕ್ಕಿಯಾಗದಂತೆ ಮಾಡುವುದು,ಸವಾಲೇ ಸರಿ.
--------------------------------------------------------------------------
ಇಂಟೆಲ್‌ನಿಂದ ಮೆಕಾಫಿ ಕಂಪೆನಿ ಖರೀದಿ
ಇಂಟೆಲ್ ಚಿಪ್ ತಯಾರಿಕೆಗೆ ಹೆಸರುವಾಸಿಯಾದ ಕಂಪೆನಿ.ಮೆಕಾಫಿ ಎನ್ನುವ ಆಂಟಿ-ವೈರಸ್‌ದಂತಹ ಕಂಪ್ಯೂಟರ್ ಭದ್ರತಾ ತಂತ್ರಜ್ಞಾನ ಒದಗಿಸುವ ಕಂಪೆನಿ.ಇಂಟೆಲ್ ಕಂಪೆನಿಯು ಮೆಕಾಫಿಯನ್ನು ಕೊಳ್ಳಲು ನಿರ್ಧರಿಸಿದೆ.ಇದಕ್ಕೆ ಇಂಟೆಲ್,ಮೆಕಾಫಿ ಕಂಪೆನಿಯ ಶೇರು ಖರೀದಿ,ನೇರ ಹಣ ಪಾವತಿ ಇತ್ಯಾದಿಗಳಿಗೆ ಸುಮಾರು ಏಳು ಮುಕ್ಕಾಲು ಬಿಲಿಯನ್ ಡಾಲರು ಖರ್ಚು ಮಾಡಬೇಕಾಗುತ್ತದೆ.ಇಂಟೆಲ್ ಇನ್ನು ಮುಂದೆ ತನ್ನ ಸಂಸ್ಕಾರಕದಲ್ಲೇ ಭದ್ರತಾ ಸವಲತ್ತುಗಳನ್ನು ಅಳವಡಿಸುವ ಯೋಚನೆಯಿಂದ ಈ ಖರೀದಿ ಮಾಡಿದೆ ಎನ್ನುವುದು ಸ್ಪಷ್ಟ.ಯಂತ್ರಾಂಶದಲ್ಲೇ ಭದ್ರತಾ ತಂತ್ರಜ್ಞಾನ ಅಳವಡಿಸಿದರೆ,ಅದು ಹೆಚ್ಚು ಚುರುಕಾಗಿ ಕೆಲಸ ಮಾಡುತ್ತದೆ.ಅಲ್ಲದೆ,ಕಂಪ್ಯೂಟರಿಗೆ ಆಪರೇಟಿಂಗ್ ತಂತ್ರಾಂಶ ವ್ಯವಸ್ಥೆ ಲೋಡ್ ಆಗುವ ಮೊದಲೇ,ಬಳಕೆದಾರನ ಬಗ್ಗೆ ಖಚಿತ ಪಡಿಸಿಕೊಳ್ಳುವಂತಹ ಸೌಲಭ್ಯಗಳನ್ನು ಅಳವಡಿಸಲು ಇಂಟೆಲ್ ಇನ್ನು ಮುಂದಾಗಬಹುದು.ಕ್ಲೌಡ್ ಕಂಪ್ಯೂಟಿಂಗ್ ಎನ್ನುವ ತಂತ್ರದ ಮೂಲಕ,ಬೇಕಾದ ಸ್ಮರಣಕೋಶಗಳು,ತಂತ್ರಾಂಶಗಳನ್ನು ಅಂತರ್ಜಾಲ ಮೂಲಕವೇ ಪಡೆಯುವ ವಿಧಾನ ಜನಪ್ರಿಯವಾಗುತ್ತಿರುವ ಈ ದಿನಗಳಲ್ಲಿ,ಬಳಕೆದಾರನಿಗೆ ಮೋಸವಾಗುವುದನ್ನು ತಡೆಯಲು,ಹೊಸ ವಿಧಾನಗಳನ್ನು ಅಳವಡಿಸಲೂ ಇಂಟೆಲಿಗೆ ಈ ಖರೀದಿ ಹೆಚ್ಚು ನೆರವಾಗಬಹುದು.ಸೆಲ್‌ಪೋನ್‌ನಂತಹ ಮೊಬೈಲ್ ಸಾಧನಗಳ ತಯಾರಿಕೆಯತ್ತವೂ ಇಂಟೆಲ್ ಗಮನಹರಿಸಿದೆ.
---------------------------------------------------------------------------
ಸೂರ್ಯ ಪ್ರದಕ್ಷಿಣೆ ಮುಗಿಸಿದ ನೆಪ್ಚೂನ್
ನೆಪ್ಚೂನ್ ಗ್ರಹವನ್ನು ಮೊದಲ ಬಾರಿಗೆ ನೋಡಿದ ಬಗ್ಗೆ ಅಧಿಕೃತವಾಗಿ ದಾಖಲಿಸಿದ್ದು,1846ರಲ್ಲಿ.ಆಮೇಲೆ ನೆಪ್ಚೂನ್ ಸೂರ್ಯನ ಸುತ್ತ ಒಂದು ಸುತ್ತು ಪ್ರದಕ್ಷಿಣೆಯನ್ನಿನ್ನೂ ಪೂರೈಸಿಲ್ಲ.ಆಗಸ್ಟ್ ಇಪ್ಪತ್ತರಂದು, ಸೂರ್ಯ ಮತ್ತು ನೆಪ್ಚೂನ್ ನಡುವೆ ಭೂಮಿ ಸರಳರೇಖೆಯಲ್ಲಿ ಬಂದಿದೆ.ಇದರಿಂದ ಆ ದಿನ ಭೂಮಿ ಮತ್ತು ನೆಪ್ಚೂನ್ ಗ್ರಹಗಳು ಅತ್ಯಂತ ಸನಿಹಕ್ಕೆ ಬಂದಂತಾಯಿತು.ಬರುವ ವರ್ಷ ನೆಪ್ಚೂನ್ ಗ್ರಹದ ಸ್ಥಾನ,ಅದನ್ನು ಗುರುತಿಸಿದ ವರ್ಷ ಇದ್ದ ಸ್ಥಾನವನ್ನೇ ತಲುಪಿ,ಒಂದು ಪ್ರದಕ್ಷಿಣೆ ಮುಗಿಸಿದಂತಾಗುತ್ತದೆ.
-------------------------------------
ಸ್ಥಳೀಯ ಭಾಷೆ:"ಪದ" ಸಂಸ್ಕಾರಕ
ಲೋಹಿತ್ ಡಿ ಶಿವಮೂರ್ತಿ ಎಂಬ ಕನ್ನಡಿಗ ತಂತ್ರಜ್ಞರ ಲೋಹಿತ್ ತಂತ್ರಾಂಶದ ಬಗ್ಗೆ ಈ ಅಂಕಣದಲ್ಲಿ ಓದಿದ್ದಿರಿ.ಇದೀಗ ಈ ಪದಸಂಸ್ಕಾರಕ ಮತ್ತಷ್ಟು ಅಭಿವೃದ್ಧಿಯಾಗಿದೆ.ಅದರ ವಿಂಡೋಸ್ ಆವೃತ್ತಿ ಮಾತ್ರವಲ್ಲದೆ ಲೀನಕ್ಸ್ ಆವೃತಿಯೂ ಲಭ್ಯವಿರುವುದು ವಿಶೇಷ.ಲೀನಕ್ಸ್‌ನಲ್ಲಿ ಬರಹದ ತರಹ ಕನ್ನಡದ ಪದಸಂಸ್ಕಾರಕ ಲಭ್ಯವಿರಲಿಲ್ಲ,(ಕನ್ನಡ ಟೈಪಿಸಲು ಸ್ಕಿಮ್,ಐಬಸ್ ಅಂತಹ ಸಾಧನಗಳು ಮೊದಲಿನಿಂದಲೂ ಇವೆ)."ಪದ"ದಲ್ಲಿ ಕನ್ನಡ ಮಾತ್ರವಲ್ಲದೆ,ಹಿಂದಿ,ಮಲಯಾಳಂ ಮುಂತಾದ ಹತ್ತು ಭಾಷೆಗಳಲ್ಲಿ ಟೈಪಿಂಗ್ ಸಾಧ್ಯ,ಇದರಲ್ಲಿ ಟ್ಯಾಬ್ ತೆರೆದು ಹೊಸ ಕಡತ ಮೂಡಿಸಬಹುದು.rank ಎನ್ನುವ ಪದವನ್ನು ಸರಿಯಾಗಿ ಮೂಡಿಸುವುದು ಹೆಚ್ಚಿನ ತಂತ್ರಾಂಶಗಳಲ್ಲಿ ಸಾಧ್ಯವಾಗುತ್ತಿಲ್ಲ."ಪದ"ದಲ್ಲಿ ಇದು ಸರಿಯಾಗಿ ಮೂಡುವುದು ವಿಶೇಷ.ಕಡತವನ್ನು ಪಿಡಿಎಫ್ ರೂಪದಲ್ಲಿ ಉಳಿಸುವ ಸೌಕರ್ಯವೂ ಬಳಕೆದಾರರಿಗಿದೆ.ಮೊದಲ ಅಕ್ಷರ ಟೈಪಿಸಿದ ಕೂಡಲೇ ಪದಸಹಾಯ ಸಿಗುತ್ತದೆ.http://lodyaashi.com ಅಂತರ್ಜಾಲ ತಾಣದಿಂದ ಇದನ್ನು ಇಳಿಸಿಕೊಳ್ಳಬಹುದು.
--------------------------------------------------------
ಟ್ವಿಟರ್ ಚಿಲಿಪಿಲಿ
*ಕಳೆದ ಎರಡು ತಿಂಗಳಿಂದ ದಿನಾಲೂ ಹತ್ತು ಗಂಟೆ ಕೆಲಸ ಮಾಡುತ್ತಿದ್ದೆ.ಇಂದು ಕಂಪೆನಿಯಿಂದ ನಾನು ಕೆಲಸದ ನಿಯಮ ಉಲ್ಲಂಘಿಸುತ್ತಿರುವ ಬಗ್ಗೆ ನೋಟೀಸ್ ಬಂದಿದೆ.ದಿನಕ್ಕೆ ಗರಿಷ್ಠ ಒಂಭತ್ತು ಗಂಟೆ ಕೆಲಸ ಮಾಡಬಹುದಷ್ಟೆ.:ಟಿಸಿಎಸ್ ಉದ್ಯೋಗಿ.
*ಕ್ಷೌರಿಕನ ಸಮಸ್ಯೆ:ಹಳ್ಳಿಯ ಕೌರಿಕನೋರ್ವನು ತನ್ನ ಸೇವೆ,ಸ್ವತ: ಬೋಳಿಸಿಕೊಳ್ಳದವರಿಗಷ್ಟೇ ಎಂದು ಶಪಥ ಮಾಡಿದರೆ,ಆತನ ಕ್ಷೌರ ಮಾಡುವವರು ಯಾರು?
*ಬ್ಯಾಂಕಿಂದ ನನಗೆ ಸಾಲ ವಸೂಲಾತಿಯ ಬಗ್ಗೆ "ಅಂತಿಮ" ನೋಟೀಸು ಬಂದಿದೆ.ಹಾಗಾದರೆ,ಇನ್ನು ನನಗೆ ಅವರ ಕಾಟ ಇರಲಾರದಷ್ಟೇ?
*ಪಾಕಿಸ್ತಾನ್:"ನೆರೆ"ರಾಷ್ಟ್ರ
*the quick brown fox jumps over the lazy dog ವಾಕ್ಯದ ವಿಶೇಷತೆ ಏನು? ಇದರಲ್ಲಿ ಇಂಗ್ಲೀಷಿನ ಎಲ್ಲಾ ಅಕ್ಷರಗಳೂ ಇವೆ.
Udayavani Bangalore
Udayavani
Udayavani Unicode
-------------------------------------------------------------
*ಅಶೋಕ್‌ಕುಮಾರ್ ಎ

Monday, August 16, 2010

ಏಕಕಾಲದಲ್ಲಿ ಎರಡು ಜಿಮೇಲ್ ಖಾತೆಗಳಿಗೆ ಲಾಗಿನ್ ಆಗಬಹುದೇ?



ಏಕಕಾಲದಲ್ಲಿ ಎರಡು ಜಿಮೇಲ್ ಖಾತೆಗಳಿಗೆ ಲಾಗಿನ್ ಆಗಬಹುದೇ?
ಒಂದೇ ಬ್ರೌಸರ್ ತೆರೆದು,ಒಂದು ಮಿಂಚಂಚೆ ಖಾತೆಗೆ ಲಾಗಿನ್ ಆದೊಡನೆ,ಇನ್ನೊಂದು ಖಾತೆಯಿಂದ ಲಾಗೌಟ್ ಆಗುವುದು ಸಾಮಾನ್ಯ.ಹಲವು ಬಳಕೆದಾರರು ಒಂದಕ್ಕಿಂತ ಹೆಚ್ಚು ಜಿಮೇಲ್ ಖಾತೆಯನ್ನು ಹೋಂದಿರುವುದು ಈಗ ಸಾಮಾನ್ಯವಾಗಿರುವುದರಿಂದ ಈ ಸೌಲಭ್ಯವನ್ನು ಗೂಗಲ್ ನೀಡಲಾರಂಭಿಸಿದೆ.ಮಿಂಚಂಚೆಯ ಜತೆಗೆ ಇತರ ಗೂಗಲ್ ಸೇವೆಗಳಿಗೂ ಪ್ರವೇಶ ಪಡೆಯುವುದು,ಸಹ ಸಾಧ್ಯವಾದರೂ, ಸದ್ಯಕ್ಕೆ, ಈ ರೀತಿಯ ಏಕಕಾಲದ ಪ್ರವೇಶ ಸಾಧ್ಯವಾಗದೆ ಹೋಗಬಹುದು ಎಂದು ಗೂಗಲ್ ಕಿವಿಮಾತು ಹೇಳಿದೆ.ಈ ಸವಲತ್ತು ಸಿಗಲು,ಮೊದಲಾಗಿ ಗೂಗಲ್‌ನ ಖಾತೆಯ ಸಿದ್ಧತೆಗಳಲ್ಲಿ "ಬಹುಖಾತೆಗಳನ್ನು ಸಾಧ್ಯವಾಗಿಸಬೇಕು.ಇದಕ್ಕೆ google.com/accounts ವಿಳಾಸ ನೋಡಿ.
---------------------------------------------------
ಟ್ವಿಟರ್ ಚಿಲಿಪಿಲಿ
*ನಾನೂ ನಿನಗೊಂದು ಬಾರಿಸಿದರೆ,ಗೂಗಲ್ ಶೋಧ ಕೂಡಾ ನಿನ್ನನ್ನು ಹುಡುಕಿಕೊಡಲು ವಿಫಲವಾಗುತ್ತೆ:ರಜನಿಕಾಂತ್ ಸಂಭಾಷಣಾ ವೈಖರಿಯ ಬಗೆಗಿನ ಜೋಕ್.
*ಟಿವಿ ನನಗೆ ಕಲಿಕೆಗೆ ಬಹಳ ಸಹಾಯ ಮಾಡುತ್ತ.ದೆಯಾರಾದರೂ ಟಿವಿ ಆನ್ ಮಾಡಿದ್ರೆ,ನಾನು ಮತ್ತೊಂದು ಕೋಣೆಗೆ ಹೋಗಿ ಪುಸ್ತಕ ಹಿಡಿದು ಕೂರೋಣ ಅನಿಸುವುದರಿಂದ!
*ಹೆಚ್ಚು ಅಕ್ರಮ ಮಾಡಿದವರಿಗೆ ಕೊಡಬಹುದಾದ ಪ್ರಶಸ್ತಿ ಯಾವುದು?ವಿಕ್ರಮಾದಿತ್ಯ..ಅಲ್ಲಲ್ಲ...ಅಕ್ರಮಾದಿತ್ಯ!
* "ವಿದ್ಯುತ್ ಕೈಕೊಡಲಿ" ಎಂದು ಮೊದಲಬಾರಿಗೆ ಹಾರೈಸುತ್ತಿರುವೆ.. ("ವಿದ್ಯುತ್ ಕೈಕೊಟ್ಟರೆ ನೇಣು ಹಾಕಿಕೊಳ್ಳುತ್ತೇನೆ" ಎಂದು ಓರ್ವನ ಟ್ವಿಟರ್ ಸಂದೇಶಕ್ಕೆ ಬಂದ ಮಾರುತ್ತರ)
-----------------------------------------------
ಅಬ್ದುಲ್‌ರ ಹಳೆ ಸೇತುವೆ

http://halesetuve.wordpress.com ಇದು ಭದ್ರಾವತಿ ಮೂಲದ ಅಬ್ದುಲ್ ಅವರ ಬ್ಲಾಗಿನ ಅಂತರ್ಜಾಲ ವಿಳಾಸ.ಸದ್ಯ ಗಲ್ಫಿನಲ್ಲಿ ಉದ್ಯೋಗದಲ್ಲಿರುವ ಅಬ್ದುಲ್ ಲತೀಫ್ ಸಯ್ಯದ್,ಅವರು ಒಂದೂವರೆ ದಶಕಗಳಿಂದ ಅರೇಬಿಯಾವಾಸಿ.ಸಾಹಿತ್ಯಪ್ರೇಮಿಯಾದ ಅಬ್ದುಲ್ ವಿವಿಧ ಪ್ರಾಕಾರಗಳಲ್ಲಿ ಕೈಯಾಡಿಸಿದ್ದಾರೆ.ಬರಹಗಳ ಜತೆ ಚಿತ್ರಗಳು,ನುಡಿಮುತ್ತುಗಳೂ ಬ್ಲಾಗಿನಲ್ಲಿವೆ.ಪಶ್ಚಿಮದ ಕ್ರೌರ್ಯ,ಭಯೋತ್ಪಾದನೆಯ ಬಗ್ಗೆಯೂ ಬರಹಗಳಿವೆ.ಸಂಪದ ತಾಣದಲ್ಲೂ ಇವರ ಬರಹಗಳು,ಪ್ರತಿಕ್ರಿಯೆಗಳು ಧಾರಾಳವಾಗಿವೆ.
--------------------------------------------
ರೂಬಿಕ್‌ಕ್ಯೂಬ್ ಪರಿಹಾರ:ಇಪ್ಪತ್ತೇ ಹೆಜ್ಜೆ

ಯಾವುದೇ ಸ್ಥಿತಿಯಲ್ಲಿರುವ ರೂಬಿಕ್ ಕ್ಯೂಬ್ ಸಮಸ್ಯೆಗೆ ಗರಿಷ್ಠ ಇಪ್ಪತ್ತು ಹೆಜ್ಜೆಗಳೊಳಗೆ ಪರಿಹಾರ ಸಾಧ್ಯವೆಂದು ನಿರೂಪಿಸಲಾಗಿದೆ.ಇದಕ್ಕೆ ಕಂಪ್ಯೂಟರ್ ಸಹಾಯ ಪಡೆಯಬೇಕಾಯಿತು ಎಂದು ಬೇರೆ ಹೇಳಬೇಕಿಲ್ಲವಷ್ಟೇ?ರೂಬಿಕ್ ಕ್ಯೂಬ್ 1974ರಲ್ಲಿ ಹಂಗೇರಿಯ ಎಮೋ ರೂಬಿಕ್ ಎಂಬಾತ ಅನ್ವೇಷಿಸಿದ.ಸಾವಿರ ದಶಲಕ್ಷ ವಿವಿಧ ಸ್ಥಿತಿಗಳಲ್ಲಿ ರೂಬಿಕ್ ಕ್ಯೂಬ್ ಇರುವ ಸಾಧ್ಯತೆಯಿದ್ದರೂ,ಅದನ್ನು ಗರಿಷ್ಠ ಇಪ್ಪತ್ತು ಬಾರಿ ತಿರುಗಿಸಿ,ರೂಬಿಕ್ ಕ್ಯೂಬ್ ಪ್ರತಿ ಮುಖದಲ್ಲೂ ಪ್ರತ್ಯೇಕ ಬಣ್ಣ ಹೊಂದುವಂತೆ ಏರ್ಪಡಿಸಲು ಸಾಧ್ಯವೆಂದು,ಗೂಗಲ್ ಕಂಪೆನಿಯ ಕಂಪ್ಯೂಟರುಗಳ ಸಮೂಹವನ್ನು ಬಳಸಿ ಸಿದ್ಧ ಪಡಿಸಿದವರು ಕೆಂಟ್ ವಿಶ್ವವಿದ್ಯಾಲಯದ ಗಣಿತಜ್ಞ ಪ್ರೊಫೆಸರ್ ಮೊರ್ಲಿ ದ್ರಾವಿಡ್ಸನ್.ಇದುವರೆಗೆ ನಲ್ವತ್ತು ಕೋಟಿ ರೂಬಿಕ್ ಕ್ಯೂಬ್‌ಗಳು ಮಾರಾಟವಾಗಿವೆ ಎಂದು ಅಂದಾಜು.ಏಳು ಸೆಕೆಂಡುಗಳಿಗಿಂತ ತುಸು ಹೆಚ್ಚು ಸಮಯದಲ್ಲಿ ಸವಾಲನ್ನು ಬಿಡಿಸಿ,ದಾಖಲೆ ಮಾಡಿದವರಿದ್ದಾರೆ.
---------------------------------------------------------
ಪ್ರಾರ್ಥನೆ ಸಮಯ ತಿಳಿಸುವ ಮೊಬೈಲ್
ಐಫೋನ್‌ನಂತಹ ಮೊಬೈಲ್ ಫೋನ್‌ಗಳಲ್ಲಿ ವಿವಿಧ ತಂತ್ರಾಂಶಗಳನ್ನು ಸ್ಥಾಪಿಸಿ,ಅದರಿಂದ ಲಾಭ ಪಡೆಯಬಹುದು.ಅವುಗಳಲ್ಲಿ ಸದ್ಯ ಸುದ್ದಿಯಲ್ಲಿರುವುದು,ಮುಸ್ಲಿಮ್ ಧರ್ಮಾನುಯಾಯಿಗಳಿಗೆ ಪ್ರಾರ್ಥನೆಯ ಸಮಯದಲ್ಲಿ ಸೂಚನೆ ನೀಡುವ ತಂತ್ರಾಂಶ.ದೈನಂದಿನ ಪ್ರಾರ್ಥನೆಯ ಹೊತ್ತಾದೊಡನೆ ಅಲಾರಂ ಮೊಳಗಿಸುವಂತೆ ಏರ್ಪಡಿಸಲು ಇದು ಅನುವು ಮಾಡುತ್ತದೆ.ಮೆಕ್ಕಾ ಕಡೆಗೆ ಮುಖ ಮಾಡಿ,ಪ್ರಾರ್ಥನೆ ಮಾಡಲು ನೆರವಾಗುವ ಐಫೋನ್ ತಂತ್ರಾಂಶವೂ ಇದೆ.ಇದು ವ್ಯಕ್ತಿ ತಿರುಗಿದಂತೆಲ್ಲಾ ದಿಕ್ಕು ತೋರಿಸುವ ಕಂಪಾಸನ್ನು ತೆರೆಯ ಮೇಲೆ ಮೂಡಿಸುತ್ತದೆ.ಕಂಪಾಸಿನ ಮಿಥ್ಯಾ ಪಾಯಿಂಟರ್ ಸರಿಯಾದ ದಿಕ್ಕನ್ನು ಹಸುರು ಬಣ್ಣಕ್ಕೆ ಬದಲಾಗುವ ಮೂಲಕ ಸೂಚಿಸುತ್ತದೆ.ತಪ್ಪು ದಿಕ್ಕಿಗೆ ಹಿಡಿದಾಗ,ಸೂಚಕ ಕೆಂಪು ಬಣ್ಣ ಇರುತ್ತದೆ.ಇನ್ನೊಂದು ಮೊಬೈಲ್ ತಂತ್ರಾಂಶ ಸಮೀಪದ ಮಸೀದಿಯನ್ನು ನಕಾಶೆಯಲ್ಲಿ ಗುರುತಿಸಿ,ವ್ಯಕ್ತಿ ಇರುವೆಡೆಯಿಂದ ಅತ್ತ ಸಾಗಲು ದಾರಿ ತೋರಿಸುತ್ತದೆ.ಇದು ಗೂಗಲ್ ಮ್ಯಾಪಿನ ಸಹಾಯ ಪಡೆಯುವ ತಂತ್ರಾಂಶ.ಈ ತಂತ್ರಾಂಶಗಳನ್ನು ಇಳಿಸಿಕೊಳ್ಳಲು ಸಣ್ಣ ಮೊತ್ತವನ್ನು ಪಾವತಿಸಬೇಕಾಗುತ್ತದೆ.ಐಫೋನ್‌ನ ತಂತ್ರಾಂಶಗಳನ್ನು ಆನ್‌ಲೈನಿನಲ್ಲಿ ಐಸ್ಟೋರುಗಳಿಂದ ಇಳಿಸಿಕೊಳ್ಳಬಹುದು.
--------------------------------------------
ನೋಕಿಯಾ:ಟಾಪ್
ಮೊಬೈಲ್ ಸಾಧನಗಳ ಮಾರಾಟದಲ್ಲಿ ನೋಕಿಯಾ ಜಗತ್ತಿನಲ್ಲೇ ಪ್ರಥಮ ಸ್ಥಾನದಲ್ಲಿದೆ.ಮಾರುಕಟ್ಟೆಯ ಸುಮಾರು ಮೂವತ್ತೈದು ಶೇಕಡಾ ಪಾಲನ್ನು ಹೊಂದುವ ಮೂಲಕ,ನೋಕಿಯಾ ತನ್ನ ಜನಪ್ರಿಯತೆಯನ್ನು ಈ ವರ್ಷವೂ ಉಳಿಸಿಕೊಂಡಿದೆ.ಉಳಿದಂತೆ ಸ್ಯಾಮ್‌ಸಂಗ್,ಎಲ್ಜಿ,ಬ್ಲಾಕ್‌ಬೆರಿ ತಯಾರಕ ರಿಮ್,ಸೋನಿ ಎರಿಕ್ಸನ್,ಮೊಟೊರೊಲಾ,ಆಪಲ್ ಕಂಪೆನಿಗಳು ನಂತರದ ಸ್ಥಾನ ಪಡಿದಿವೆ.ಇನ್ನು ಮೊಬೈಲ್ ಫೋನುಗಳಲ್ಲಿ ಬಳಸಲಾಗುವ ಕಾರ್ಯನಿರ್ವಹಣಾ ತಂತ್ರಾಂಶಗಳ ಪೈಕಿ,ಸಿಂಬಿಯನ್ ಶೇಕಡಾ ನಲುವತ್ತೊಂದು ಪಾಲು ಪಡೆದಿದೆ.ಶೇಕಡಾ ಹದಿನೇಳು ಪೋನುಗಳಲ್ಲಿ ಆಂಡ್ರಾಯಿಡ್ ಬಳಸಲಾಗುತ್ತದೆ.ವಿಂಡೋಸ್ ವ್ಯವಸ್ಥೆಯನ್ನು ಶೇಕಡಾ ಐದರಲ್ಲಿ,ಲಿನಕ್ಸನ್ನು ಶೇಕಡಾ ಎರಡೂವರೆ ಪೋನುಗಳಲ್ಲಿ ಬಳಸಲಾಗುತ್ತಿದೆ.ಅಂದಹಾಗೆ ಮಾರಾಟವಾಗುವ ಪೋನುಗಳಲ್ಲಿ ಅರೆವಾಸಿ ಪೋನುಗಳು ಸ್ಮಾರ್ಟ್‌ಪೋನುಗಳು.
-----------------------------------------------------------------
ಬ್ಲ್ಯಾಕ್‌ಬೆರಿ ವಿವಾದ:ಮಾಸಾಂತ್ಯ ಗಡುವು
ಬ್ಲ್ಯಾಕ್‌ಬೆರಿ ಮೊಬೈಲ್ ಹ್ಯಾಂಡ್‍ಸೆಟ್ ಏರ್‌ಟೆಲ್ ಮತ್ತು ವೊಡಾಫೋನ್ ಜಾಲಗಳಲ್ಲಿ ಹೆಚ್ಚು ಬಳಕೆಯಾಗುವ ಸಾಧನವಾಗಿದೆ.ಬ್ಲ್ಯಾಕ್‌ಬೆರಿ ಕಂಪೆನಿಯು ಕೆನಡಾದ ರಿಮ್ ಎನ್ನುವ ಕಂಪೆನಿಯದ್ದು.ಈ ಸಾಧನವನ್ನು ಎಸೆಮ್ಮೆಸ್ ಕಳುಹಿಸಲು,ಧ್ವನಿ ಕರೆಗಳನ್ನು ,ಅಂತರ್ಜಾಲ ಜಾಲಾಡಲು ಬಳಸಬಹುದು.ಜತೆಗೆ ಮಿಂಚಂಚೆ ಕಳುಹಿಸಲು ಮತ್ತು ದಿಡೀರ್ ಸಂದೇಶ ರವಾನೆಗೂ ಇದು ಅವಕಾಶ ನೀಡುತ್ತದೆ.ಮಿಂಚಂಚೆ ಮತ್ತು ದಿಡೀರ್ ಸಂದೇಶ ರವಾನೆಯಾಗುವಾಗ,ಮಾಹಿತಿ ಕದಿಯುವವರಿಗೆ ಅರ್ಥವಾಗದಂತೆ ಗೂಢಲಿಪಿಯಲ್ಲಿ ಸಂದೇಶಗಳನ್ನು ರವಾನಿಸುವ ವ್ಯವಸ್ಥೆ ಬ್ಲ್ಯಾಕ್‌ಬೆರಿಯಲ್ಲಿದೆ.ಈ ಸೇವೆಯೇ ಬ್ಲ್ಯಾಕ್‌ಬೆರಿ ವಿವಾದದ ಹೇತು.ಈ ಗೂಢಲಿಪಿಗೆ ಬಳಸುವ ಕ್ರಮವಿಧಿಯನ್ನು ತನಗೆ ನೀಡಬೇಕು ಎನ್ನುವುದು ಭಾರತ ಸರಕಾರದ ನಿಲುವು.ಅದನ್ನು ಅಂತಾರ್ರಾಷ್ಟ್ರೀಯವಾಗಿ ಬಳಸುವುದರಿಂದ ಮತ್ತು ಗೂಢಲಿಪೀಕರಣಕ್ಕೆ ಬಳಸುವ ಕೀಲಿಯನ್ನು ಬಳಕೆದಾರರೇ ನಿರ್ಧರಿಸುವುದರಿಂದ,ಸರಕಾರದ ಬೇಡಿಕೆಯನ್ನು ಈಡೇರಿಸಲಾಗದು ಎನ್ನುವುದು ಕಂಪೆನಿಯ ನಿಲುವು.ಬ್ಲ್ಯಾಕ್‌ಬೆರಿಯು ತನ್ನ ಸರ್ವರ್‌ಗಳನ್ನು ಭಾರತದಲ್ಲೇ ಸ್ಥಾಪಿಸಿ,ಇಲ್ಲಿನ ಬಳಕೆದಾರರಿಗೆ ಸೇವೆ ನೀಡಿದರೂ ನಡೆದೀತು ಎನ್ನುವ ರಿಯಾಯಿತಿಯನ್ನೂ ಸರಕಾರ ನೀಡಿದೆ.ತಿಂಗಳ ಅಂತ್ಯಕ್ಕೆ ತನ್ನ ಅಪೇಕ್ಷೆಯನ್ನು ಈಡೇರಿಸಬೇಕು,ಇಲ್ಲವಾದರೆ ಮಿಂಚಂಚೆ ಮತ್ತು ಮೆಸೆಂಜರ್ ಸೇವೆಯನ್ನು ತಡೆಯ ಬೇಕಾದೀತು ಎಂದು ಸರಕಾರದ ಸದ್ಯದ ಪಟ್ಟು.ಉಳಿದ ಎಸೆಮ್ಮೆಸ್,ಧ್ವನಿಕರೆಗಳು,ಅಂತರ್ಜಾಲ ಸೇವೆಗಳನ್ನು ನೀಡುವ ಬಗ್ಗೆ ಸರಕಾರದ ಅಡ್ಡಿಯಿಲ್ಲದಿರುವುದರಿಂದ ದಶಲಕ್ಷ ಸಂಖ್ಯೆಯಲ್ಲಿರುವ ಈ ಸಾಧನದ ಬಳಕೆದಾರರಿಗೆ ಸೆಟ್ಟನ್ನು ಅಟ್ಟಕ್ಕೆಸೆಯುವ ಭಯವಿಲ್ಲ.ಅಂದಹಾಗೆ ಈ ಸೆಟ್‌ಗಳನ್ನು ಮಾರಾಟಮಾಡಿ ಕೈತೊಳೆದುಕೊಳ್ಳಲು ಮಾರಾಟಗಾರರು ವಿಶೇಷ ಕಡಿತದ ಮಾರಾಟಕ್ಕೆ ಶರಣು ಹೋಗಿದ್ದಾರೆ.ಉಳಿದ ಸೆಟ್‌ಗಳ ತಯಾರಕರು ಸಂದೇಶದ ಗೌಪ್ಯತೆಯನ್ನು ಕಾಪಾಡುವ ಸೇವೆಗಳನ್ನು ಸೇವಾಜಾಲಗಳಿಗೇ ಬಿಟ್ಟಿರುವ ಕಾರಣ ಸಮಸ್ಯೆಯಿಂದ ಮುಕ್ತರಾಗಿದ್ದಾರೆ.
Udayavani bangalore
*ಅಶೋಕ್‌ಕುಮಾರ್ ಎ

Monday, August 09, 2010

ಪರಿಸರಪ್ರಿಯ ಕಾಂಕ್ರೀಟು

ಪರಿಸರಪ್ರಿಯ ಕಾಂಕ್ರೀಟು
ಮಾಮೂಲಿ ಕಾಂಕ್ರೀಟು ಪರಿಸರಸ್ನೇಹಿಯಂತೂ ಅಲ್ಲ.ಆದರೀಗ ಹೊಸ ನಮೂನೆಯ ಕಾಂಕ್ರೀಟು ತಯಾರಿಸಲು ಸಂಶೋಧಕರಿಗೆ ಸಾಧ್ಯವಾಗಿದೆ.ನೆದರ್ಲ್ಯಾಂಡಿನ ಐಂಡ್‌ಹೋವನ್ ತಾಂತ್ರಿಕ ವಿವಿಯ ಸಂಶೋಧಕರು ಕಾಂಕ್ರೀಟಿಗೆ ಹೊಸ ವಸ್ತುವೊಂದನ್ನು ಸೇರಿಸಿ,ಅದು ವಾತಾವರಣದಲ್ಲಿರುವ ನೈಟ್ರಸ್ ಆಕ್ಸೈಡುಗಳನ್ನು ಹೀರಿಕೊಂಡು,ಅದನ್ನು ನೈಟ್ರೇಟುಗಳಾಗಿ ಪರಿವರ್ತಿಸುತ್ತವೆ.ಈ ಕಾಂಕ್ರೀಟನ್ನು ರಸ್ತೆ ಮಾಡಲೂ ಬಳಸಬಹುದು.ಡಾಮರಿನ ಜತೆ ಮಿಶ್ರ ಮಾಡಿ,ರಸ್ತೆಗಳನ್ನು ಮಾಡಲು ಸಾಧ್ಯವಾಗುವುದರ ಜತೆಗೆ,ಇವನ್ನು ಗೋಡೆಗಳನ್ನು ಕಟ್ಟಲೂ ಬಳಸಬಹುದು.ಕಾಂಕ್ರೀಟನ್ನು ಪರಿಸರಸ್ನೇಹಿಯಾಗಿಸುವ ರಾಸಾಯಿನಿಕ ಯಾವುದು ಎಂದು ನಿಮಗೆ ಕುತೂಹಲವೇ? ಟೈಟಾನಿಯಮ್ ಆಕ್ಸೈಡ್ ಎನ್ನುವ ಕ್ರಿಯಾವರ್ಧಕ ರಾಸಾಯಿನಿಕವೇ,ಸೂರ್ಯನ ಬೆಳಕಿನಲ್ಲಿ,ನೈಟ್ರೋಜನ್ ಆಕ್ಸೈಡುಗಳನ್ನು ನೈಟ್ರೇಟುಗಳಾಗಿ ಪರಿವರ್ತಿಸುತ್ತವೆ.ಟೈಟಾನಿಯಮ್ ಆಕ್ಸೈಡು ಪೈಂಟ್ ತಯಾರಿಕೆಯಲ್ಲೂ ಬಳಕೆಯಾಗುವುದಿದೆ.ಹೆಂಜೆಲೋ ಎನ್ನುವ ನೆದರ್ಲ್ಯಾಂಡಿನ ನಗರದ ರಸ್ತೆಯಲ್ಲಿ ಈ ಹೊಸ ಕಾಂಕ್ರೀಟಿನ ರಸ್ತೆ ನಿರ್ಮಿಸಿ,ಅದರಿಂದ ಒಂದೂವರೆ ಮೀಟರ್ ಎತ್ತರದಲ್ಲಿ ಗಾಳಿಯ ಪರಿಶುದ್ಧತೆ ಅಳೆಯಲಾಯಿತು.ಇದೇ ರೀತಿ ಮಾಮೂಲಿ ಕಾಂಕ್ರೀಟು ಹಾಕಿದ ರಸ್ತೆಯಲ್ಲೂ ಮಾಡಿದಾಗ,ಪರಿಸರಸ್ನೇಹಿ ಕಾಂಕ್ರೀಟು ಪ್ರಯೋಜನಕಾರಿ ಎನ್ನುವುದು ಸಿದ್ಧವಾಯಿತು.ಹೊಸ ಕಾಂಕ್ರೀಟು ದುಬಾರಿಯಾಗುತ್ತದೆ ಎನ್ನುವುದನ್ನು ನೀವಿದೀಗಲೇ ಊಹಿಸಿದ್ದರೆ,ಅದು ಖಂಡಿತಾ ಸರಿ.ನಗರಗಳಲ್ಲಿ,ವಾಹನಗಳ ಓಡಾಟದಿಂದ ವಾತಾವರಣದಲ್ಲಿ ನೈಟ್ರೋಜನ್ ಆಕ್ಸೈಡುಗಳ ಮಟ್ಟ ಏರಿ,ಅದರಿಂದ ಆಮ್ಲಮಳೆ ಉಂಟಾಗುವಂತಹ ಸಮಸ್ಯೆಗಳಿಗೆ ಇದು ತಕ್ಕ ಮಟ್ಟಿನ ಪರಿಹಾರ ಒದಗಿಸುವಂತಾಗಬೇಕಾದರೆ,ನಮ್ಮ ಕಾಂಕ್ರೀಟು ಕಾಡುಗಳು ಹೊಸ ಕಾಂಕ್ರೀಟಿನಿಂದ ನಿರ್ಮಿತವಾಗಿರಬೇಕಾಗುತ್ತದೆ.
------------------------------
ಟ್ವಿಟರ್ ಚಿಲಿಪಿಲಿ
*ಬಿಲ್ ಗೇಟ್ಸ್‌ರ ಮೈಕ್ರೋಸಾಫ್ಟ್ ಕಂಪೆನಿಯು ಸದಾ ಭಾರೀ ಲಾಭದಲ್ಲಿರೋದು ಹೇಗೆ? ಕಂಪೆನಿ ವಿಂಡೋಸ್ ಪೂರೈಸಿ,ಗೇಟ್ಸ್‌ಗಳಿಗೆ ಬಿಲ್ಲು ಮಾಡ್ತದೆ ನೋಡಿ,ಅದಕ್ಕೆ...

----------------------------------------------
ಗೂಗಲ್ ವೇವ್:ಅಲೆಯಾಗದ ಕಲರವ
ಗೂಗಲ್ ವೇವ್ ಎನ್ನುವ ಅಂತರ್ಜಾಲ ಸೇವೆ ಸದ್ದಿಲ್ಲದೆ ಮರೆಯಾಗಲಿದೆ.ಇದರ ಅಭಿವೃದ್ಧಿ ಕಾರ್ಯಕ್ಕೆ ವಿದಾಯ ಹೇಳಲು ಗೂಗಲ್ ನಿರ್ಧರಿಸಿದೆಯಂತೆ.ಇದರ ಪ್ರಯೋಗಾರ್ಥ ಪರೀಕ್ಷೆಯ ವೇಳೆ ಇದನ್ನು ಆಯ್ದ ಕೆಲವರಿಗಷ್ಟೇ ಒದಗಿಸಲಾಗಿತ್ತು.ಅದನ್ನು ಬಳಸಲು ಅವರುಗಳು ಕೆಲವರನ್ನು ಆಹ್ವಾನಿಸುವ ಸೌಲಭ್ಯವೂ ಇತ್ತು.ಹೀಗಾಗಿ, ವೇವ್ ಆಹ್ವಾನ ಪಡೆಯಲು ಬಹಳ ಮೇಲಾಟ ನಡೆಯಿತು.ಜನರು ವೇವ್ ಮುಂದಿನ ಭಾರೀ ಹಿಟ್ ಸೇವೆಯಾಗಲಿದೆ-ಇದು ಬಹು ಜನಪ್ರಿಯವಾಗಲಿದೆ ಎಂದು ಭಾವಿಸಿದರು.ಆದರಿದನ್ನು ಬಳಸುವುದು ತುಸು ತ್ರಾಸದಾಯಕವೇ ಆಗಿತ್ತು.ಆರಂಭದ ಉತ್ಸಾಹ ದಿನೇ ದಿನೇ ಇಳಿಯಹತ್ತಿತು.ವೇವ್ ಚೆನ್ನಾಗಿದೆ,ಆದರಿದು ತುಸು ಬೇಗನೆ ಲಭ್ಯವಾಯಿತು.ಅದಕ್ಕೆ ಕಾಲವಿನ್ನೂ ಪಕ್ವವಾಗಿಲ್ಲ ಎಂದವರೂ ಇದ್ದರು.ಕೊನೆಗೆ ಕೊನೆಗೆ ವೇವ್‌ನ ಆಹ್ವಾನ ಪಡೆಯುವ ಉತ್ಸಾಹಿಗಳೇ ಇರಲಿಲ್ಲ.ಇದು ಒಂದು ತಮಾಷೆಯ ವಿಷಯವೇ ಆಯಿತು.ಗೂಗಲ್ ವೇವ್‌ನ ವಿಶೇಷತೆಯೆಂದರೆ, ಜನರು ಯಾವುದೇ ವಿಷಯದಲ್ಲಿ ಸಹಭಾಗಿಗಳಾಗಿ ವಿಚಾರ ವಿನಿಮಯ ನಡೆಸುವಂತಹ ಅನುಕೂಲ.
------------------------------------------------------
ಜೆಡ್-ಐ ಎನ್ನುವ ವಿನೂತನ ಕಾರ್ಯಕ್ರಮ
ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸುಮ್ಮನೆ ವಿಷಯಗಳನ್ನು ಕಲಿತರೆ ಪ್ರಯೋಜನವಿಲ್ಲ.ಅದನ್ನು ಬಳಸಿಕೊಂಡು,ಜನರ ಸಮಸ್ಯೆಗಳಿಗೆ ಪರಿಹಾರ ದೊರಕಿಸಿ ಕೊಡಬೇಕಿದೆ.ಸಾಧನಗಳನ್ನು ವಿನ್ಯಾಸ ಮಾಡುವುದು,ಅವನ್ನು ರಚಿಸುವುದು ಅಥವಾ ತಯಾರಿಸುವುದು,ತೊಂದರೆಗಳನ್ನು ಹೋಗಲಾಡಿಸುವುದು,ಅಗತ್ಯವೆನಿಸಿದರೆ ಬದಲಾವಣೆಗಳನ್ನು ಮಾಡುವುದು,ಅವುಗಳ ಹರವನ್ನು ವಿಸ್ತರಿಸುವುದು ಅಗತ್ಯವಾಗಿದೆ.ಜೆಡ್-ಐ ಎನ್ನುವ ಅಪ್ರೆಂಟಿಸ್ ಕಾರ್ಯಕ್ರಮವು ಇಂತಹದ್ದನ್ನು ಮಾಡಲು ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಕಾರ್ಯಕ್ರಮ.ಲಿಂಬರ್‌ಲಿಂಕ್ ಸಂಸ್ಥೆಯ ಸ್ವಾಮಿ ಮನೋಹರ್ ಇದರ ಉಸ್ತುವಾರಿ ವಹಿಸಿದ್ದಾರೆ.ಇವರು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸಯನ್ಸ್‌ನ ನಿವೃತ್ತ ಪ್ರೊಫೆಸರ್,ಕಿರು ಗಣಕ ಸಿಂಪ್ಯೂಟರ್‌ನ ವಿನ್ಯಾಸಕಾರರಲ್ಲಿ ಒಬ್ಬರು.ವಿವರಗಳಿಗೆ http://www.jed-i.in ನೋಡಬಹುದು.
----------------------------------------------------
ರೈಲು ಟಿಕೆಟ್:ಸುಧಾರಿತ ತಾಣ

ರೈಲು ಟಿಕೆಟ್ ಕಾದಿರಿಸಲು ರೈಲ್ವೇ ಕ್ಯಾಟರಿಂಗ್ ಸೇವೆ ನೀಡುವ ಐಆರ್‌ಸಿಟಿಸಿ ಅಂತರ್ಜಾಲತಾಣವನ್ನು ಬಳಸಬಹುದು.ಈ ತಾಣದ ಬೀಟಾ ಆವೃತ್ತಿಯೀಗ ಲಭ್ಯ.ಇಲ್ಲಿ ಅಜಾಕ್ಸ್ ಎನ್ನುವ ತಂತ್ರಜ್ಞಾನ ಬಳಸುವ ಮೂಲಕ,ಬಳಕೆದಾರರಿಗೆ ಉತ್ತಮ ಪ್ರತಿಸ್ಪಂದನ ಸಿಗುತ್ತದೆ.ಮೌಸ್ ಆಡಿಸುವಾಗಲೇ ವಿವಿಧ ವಿಷಯಗಳು ಸಿಗುವಂತೆ,ಕ್ಲಿಕ್ಕಿಸಿ ಬಹಳ ಹೊತ್ತಿನ ನಂತರ ಪ್ರತಿಕ್ರಿಯೆ ಬರುವಂತಹದರ ಬದಲು ತಕ್ಷಣ ಬೇಕಾದ ವಿವರ ಕಾಣಿಸುವಂತೆ ತಾಣವನ್ನು ರೂಪಿಸಲಾಗಿದೆ.ಮೊದಲಿಗೆ ಈ ತಾಣ ಭಾರೀ ನಿಧಾನದ ಪ್ರತಿಕ್ರಿಯೆ ನೀಡುತ್ತಿತ್ತು.ಈಗ ಹಿಂದಿನದಕ್ಕಿಂತ ಹತ್ತು ಪಟ್ಟು ಶೀಘ್ರ ಪ್ರತಿಸ್ಪಂದನ ಬರುತ್ತದೆ ಎಂದು ಕೆಲವು ಬಳಕೆದಾರರು ಅಭಿಪ್ರಾಯ ಪಡುವಷ್ಟು,ತಾಣ ಸುಧಾರಿಸಿದೆ.
----------------------------------------------------------
ಉಪಗ್ರಹ ಮಾಹಿತಿ ಬಳಸಿ ಸುನಾಮಿ ಮುನ್ಸೂಚನೆ

ಸಮುದ್ರದಲ್ಲಿ ಭೂಕಂಪ ಸಂಭವಿಸಿದ ನಂತರ,ಸುನಾಮಿ ಅಪ್ಪಳಿಸಿ ಸಮುದ್ರ ತಟಕ್ಕೆ ಅಪ್ಪಳಿಸುವ ಸಮಸ್ಯೆ ಬಗ್ಗೆ ಎಲ್ಲರಿಗೂ ಗೊತ್ತು.ಇದರ ಮುನ್ಸೂಚನೆ ನೀಡಲು,ಸಮುದ್ರ ಅಲೆಗಳ ಶಕ್ತಿ ಅಳೆಯುವುದು,ಸಾಗರ ತಟದಲ್ಲಿನ ಒತ್ತಡವನ್ನು ಅಳೆಯುವುದು ಮುಂತಾದ ವಿಧಾನಗಳನ್ನು ಅನುಸರಿಸುವುದಿದೆ.ಆದರೆ ಇದರ ಮೂಲಕ ಸುನಾಮಿ ಮುನ್ಸೂಚನೆ ಅಷ್ಟೇನೂ ನಿಖರವಲ್ಲ. ಈಗ ಉಪಗ್ರಹ ಆಧಾರಿತ ಸುನಾಮಿ ಮುನ್ಸೂಚನೆ ನೀಡುವ ಬಗ್ಗೆ ಸಂಶೋಧನೆ ನಡೆದಿದೆ.ಇದರಲ್ಲಿ ಈಗಾಗಲೇ ಲಭ್ಯವಿರುವ ಜಿಪಿಆರೆಸ್ ಉಪಗ್ರಹಗಳ ಮೂಲಕ, ಭೂಮಿಯ ವಾತಾವರಣದ ಅಯಾನೋಸ್ಪಿಯರ್ ಎನ್ನುವ ಪದರದಲ್ಲಿ ಆಗುವ ಬದಲಾವಣೆಗಳನ್ನು ಅಳೆದು ಸುನಾಮಿ ಮುನ್ಸೂಚನೆ ನೀಡಲಾಗುತ್ತದೆ.ಇದು ಹೆಚ್ಚು ಶೀಘ್ರ ಮತ್ತು ನಿಖರವಾಗಿರುವುದಂತೆ.ಫ್ರಾನ್ಸಿನ ಇನ್‌ಸ್ಟಿಟ್ಯೂಟ್ ಆಫ್ ಜಿಯೋಫಿಸಿಕ್ಸ್‍ನ ಸಂಶೋಧಕರು ಈ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ.ಹಿಂದಿನ ಸುನಾಮಿ ವೇಳೆಯಲ್ಲಿ ಜಿಪಿಆರೆಸ್ ಉಪಗ್ರಹಗಳು ದಾಖಲಿಸಿರುವ ಮಾಹಿತಿಗಳು ಸುನಾಮಿ ಸೂಚನೆಯಲ್ಲಿ,ಈ ವಿಧಾನ ಯಶಸ್ವಿಯಾಗಬಹುದು ಎನ್ನುವುದನ್ನು ಪುಷ್ಟೀಕರಿಸುತ್ತವಂತೆ.
udayavani----------------------------------------------------udayavani bangalore
*ಅಶೋಕ್‌ಕುಮಾರ್ ಎ
udayavani

Monday, August 02, 2010

ರಾಕೆಟ್ ವಿಜ್ಞಾನ:ಕಸದಿಂದ ರಸ



ರಾಕೆಟ್ ವಿಜ್ಞಾನ:ಕಸದಿಂದ ರಸ
ನೈಟ್ರಸ್ ಆಕ್ಸೈಡ್ ಗೊತ್ತಲ್ಲಾ? ನಗೆಯುಕ್ಕಿಸುವ ಈ ಅನಿಲವು ರಾಕೆಟಿಗೆ ನೂಕು ಶಕ್ತಿಯನ್ನು ಉತ್ಪಾದಿಸಲು ಬಳಕೆಯಾಗುತ್ತದೆ.ಸ್ಟಾನ್‌ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರಾದ ಬ್ರಯಾನ್ ಕಾಂಟ್‌ವೆಲ್ ಅವರು ರಾಕೆಟ್‌ಗಳನ್ನು ಬಾಹ್ಯಾಕಾಶಕ್ಕೆ ದೂಡಲು ಬೇಕಾದ ಶಕ್ತಿಯ ಉತ್ಪಾದನೆಗೆ ನೈಟ್ರಸ್ ಆಕ್ಸೈಡ್ ಅನ್ನು ಬಳಸುವ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿದ್ದರು.ಈಗ ಇದೇ ವಿಧಾನ ಬಳಸಿ,ಕಸದಿಂದ ವಿದ್ಯುಚ್ಛಕ್ತಿ ಉತ್ಪಾದನೆ ಮಾಡುವ ಬಗೆಯನ್ನು ಸಂಶೋಧಿಸಿದ್ದಾರೆ.ತ್ಯಾಜ್ಯವನ್ನು ಸಾಮಾನ್ಯವಾಗಿ ಹೆಚ್ಚು ಆಮ್ಲಜನಕವಿರುವ ವಾತಾವರಣದಲ್ಲಿ ಬಿಟ್ಟು,ನೈಟ್ರಸ್ ಆಕ್ಸೈಡ್ ಉತ್ಪಾದನೆ ಸೀಮಿತಗೊಳಿಸಿ,ಹೆಚ್ಚು ಸಾರಜನಕ(ನೈಟ್ರೋಜನ್) ಉತ್ಪಾದನೆಯಾಗುವಂತೆ ಮಾಡಲಾಗುತ್ತದೆ.ಹೆಚ್ಚಿನ ಆಮ್ಲಜನಕವಿರುವ ವಾತಾವರಣದಲ್ಲಿ,ಆಮ್ಲಜನಕ ಬಯಸುವ ಬ್ಯಾಕ್ಟೀರಿಯಾ ಹೆಚ್ಚು ಬೆಳೆದು,ಅದು ಸಾವಯವ ವಸ್ತುಗಳನ್ನು ತಿಂದು ಮುಗಿಸುತ್ತವೆ.ಈಗ ಸ್ಟಾನ್‌ಫರ್ಡ್ ಸಂಶೋಧಕರು ಆಮ್ಲಜನಕ ವಾತಾವರಣದಲ್ಲಿ ಕಸವನ್ನು ಬಿಟ್ಟು, ಹೆಚ್ಚು ನೈಟ್ರಸ್ ಆಕ್ಸೈಡ್ ಮತ್ತು ಮಿಥೇನ್ ಉತ್ಪಾದನೆಯಾಗುವಂತೆ ಮಾಡುತ್ತಾರೆ. ಆಮ್ಲಜನಕ ಬಯಸುವ ಬ್ಯಾಕ್ಟೀರಿಯಾಗಳು ಇಲ್ಲದ ಕಾರಣ,ಸಾವಯವ ಪದಾರ್ಥಗಳು ಕೊಳೆತು,ಮಿಥೇನ್ ಹೆಚ್ಚು ಬಿಡುಗಡೆಯಾಗುತ್ತದೆ.ಬಳಿಕ ವಿದ್ಯುತ್ ಘಟಕದಲ್ಲಿ ನೈಟ್ರಸ್ ಆಕ್ಸೈಡ್ ಬಳಸಿ ನೂಕುಶಕ್ತಿ ಉಂಟು ಮಾಡಿ,ಜತೆಗೇ ಬಿಡುಗಡೆಯಾಗುವ ಆಮ್ಲಜನಕದಿಂದ,ಮಿಥೇನ್ ದಹಿಸಲು ಅನುಕೂಲ ಕಲ್ಪಿಸಿಕೊಡುತ್ತಾರೆ.ದಹನದಿಂದ ದೊರಕಿದ ಉಷ್ಣಶಕ್ತಿಯಿಂದ ಆವಿ ಉತ್ಪಾದಿಸಿ,ಅದನ್ನು ಟರ್ಬೈನ್‌ ತಿರುಗಿಸಿ, ಜನರೇಟರ್ ಮೂಲಕ ವಿದ್ಯುತ್ ಉತ್ಪಾದಿಸಲು ಸಾಧ್ಯವಾಗುತ್ತದೆ.ಈ ವಿಧಾನದಲ್ಲಿ ಕಸವನ್ನು ಗಾಳಿಗೊಡ್ಡುವ ಅಗತ್ಯವಿಲ್ಲ.ಗಾಳಿ ಹೆಚ್ಚು ಪೂರೈಸುವುದು ಬಹಳ ಶಕ್ತಿ ಬಳಸುವ,ದುಬಾರಿ ಪ್ರಕ್ರಿಯೆ.ಸುಧಾರಿತ ವಿಧಾನದಲ್ಲಿ ಕಡಿಮೆ ಖರ್ಚು-ಕಡಿಮೆ ಶಕ್ತಿ ಬಳಸಿ,ಕಸದಿಂದ ರಸ ಉತ್ಪಾದಿಸಬಹುದು.ನೈಟ್ರಸ್ ಆಕ್ಸೈಡ್ ಮತ್ತು ಮಿಥೇನ್ ಅನಿಲಗಳು ಹಸಿರು ಮನೆ ಅನಿಲಗಳು.ಇವನ್ನು ವಾತಾವರಣಕ್ಕೆ ಸೇರಲು ಬಿಡುವುದು ಅಪಾಯಕರ.ಹೀಗಾಗಿ ಕಸ ವಿಲೇವಾರಿ ಮಾಡುವಾಗ,ಈ ಅನಿಲಗಳು ಉತ್ಪಾದನೆಯಾಗದಂತೆ,ಮಾಡುವ ಎಚ್ಚರಿಕೆ ಬೇಕು.ಆದರೆ ರಾಕೆಟ್ ವಿಜ್ಞಾನ ಬಳಸಿದ ಕಸದಿಂದ ವಿದ್ಯುತ್ಪಾದಿಸುವ ಹೊಸ ವಿಧಾನದಲ್ಲಿ,ನೈಟ್ರಸ್ ಆಕ್ಸೈಡಿನಿಂದ ಸಾರಜನಕ ಮತ್ತು ಆಮ್ಲಜನಕ ಪಡೆದು,ಬಳಿಕ ಮಿಥೇನ್ ದಹಿಸಿ,ಶಕ್ತಿ,ಉತ್ಪಾದಿಸುವುದರಿಂದ ಹಸಿರು ಮನೆ ಅನಿಲಗಳು ವಾತಾವರಣ ಸೇರುವ ಭಯವೂ ಇಲ್ಲ.
------------------------------------
ಯುನಿಕೋಡಿನಲ್ಲಿ "ಉದಯವಾಣಿ"

ಪತ್ರಿಕೆಗಳ ಇ-ಪೇಪರ್ ಅಂತರ್ಜಾಲದಲ್ಲಿ ಲಭ್ಯವಾಗುವುದು ಓದುಗರಿಗೆ,ಪತ್ರಿಕೆ ಮುದ್ರಣದಲ್ಲಿ ಕಾಣಿಸುವ ಪುಟಗಳ ದರ್ಶನವನ್ನು ಇದ್ದದ್ದನ್ನು ಇದ್ದಂತೆ ಮಾಡಿಸುತ್ತದೆ.ಆದರೆ ಪತ್ರಿಕೆಯ ಬರಹವನ್ನೋ,ಸುದ್ದಿಯನ್ನೋ ಶೋಧಿಸುವಾಗ, ಇ-ಪತ್ರಿಕೆಯು ಶೋಧಪುಟದಲ್ಲಿ ಕಾಣಿಸಿಕೊಳ್ಳದು.ಪತ್ರಿಕೆಯು ತನ್ನದೇ ಅಕ್ಷರಶೈಲಿ ಬಳಸಿ,ತನ್ನ ಅಂತರ್ಜಾಲ ಪುಟ ಪ್ರಕಟಿಸಿದರೂ ಅದು ಶೋಧದಲ್ಲಿ ಕಾಣಿಸಿಕೊಳ್ಳದು.ಯುನಿಕೋಡ್ ವಿಧಾನದಲ್ಲಿ ಪತ್ರಿಕೆಯನ್ನು ಪ್ರಕಟಿಸಿದರಷ್ಟೇ ಭಾರತೀಯ ಭಾಷೆಗಳು ಅಂತರ್ಜಾಲದ ಶೋಧ ಫಲಿತಾಂಶದಲ್ಲಿ ಕಾಣಿಸಿಕೊಳ್ಳುತ್ತವೆ."ಉದಯವಾಣಿ"ಯ ಅಂತರ್ಜಾಲತಾಣ ಇದೀಗ ಹೊಸ ರೂಪ ಪಡೆಯುತ್ತಿದ್ದು,ಯುನಿಕೋಡಿನಲ್ಲಿ ಪ್ರಕಟವಾಗ ಹತ್ತಿದೆ. ಈಗಾಗಲೇ ಇ-ಪೇಪರ್ ರೂಪದಲ್ಲಿ ತಾಣ ಪ್ರಕಟವಾಗುತ್ತಿದ್ದಾದರೂ,ಯುನಿಕೋಡಿನ ಶಿಷ್ಟತೆಯನ್ನು ಬಳಸತೊಡಗಿರುವುದು ಇದೀಗಲಷ್ಟೇ.www.udayavani.com ಅಂತರ್ಜಾಲ ತಾಣ ನೋಡಿ.ಇ-ಪೇಪರ್ ನೋಡಲು,ಈ ತಾಣದಲ್ಲಿ ಕೊಂಡಿ ಸಿಗುತ್ತದೆ.ಕನ್ನಡದ ಪತ್ರಿಕೆಗಳೆಲ್ಲವೂ ಯುನಿಕೋಡಿನಲ್ಲಿ ಲಭ್ಯವಾದರೆ ಚೆನ್ನ.
------------------------------------------------------------
ಹಳ್ಳಿಮನೆ ಹುಡುಗ
ತಮ್ಮ ಹೆಸರಿನ ಅಂತರ್ಜಾಲತಾಣದಲ್ಲೇ ತಮ್ಮ ಬ್ಲಾಗ್ ಬರೆಯುವ ಅರವಿಂದ ವಿ ಕೆ ತಂತ್ರಾಂಶ ಪ್ರವೀಣ.ಕನ್ನಡ ಬರಹಗಳ ಜತೆಯೇ,ತಮ್ಮ ಮೆಚ್ಚಿನ ತಂತ್ರಾಂಶ ಅಭಿವೃದ್ಧಿಯ ಅನುಭವಗಳನ್ನೂ ಹಂಚಿಕೊಂಡಿದ್ದಾರೆ.ಛಾಯಾಚಿತ್ರಗ್ರಹಣ ಇವರ ಇನ್ನೊಂದು ಹವ್ಯಾಸ.ಇವರು ಇತರರಂತೆ ಜನರ ಚಿತ್ರ ಕ್ಲಿಕ್ಕಿಸದೆ,ಪ್ರಕೃತಿಯ ಸೂಕ್ಷ್ಮ ವಿಷಯಗಳ ಕಡೆಗೆ ನೋಟ ಹರಿಸಿರುವುದೇ ಹೆಚ್ಚು.ಚಿತ್ರಗಳಿಗಾಗಿ http://picasaweb.google.com/hallimanearavind  ನೋಡಿ.ಕುಂಗ್‌ಫು-ಪ್ರವಾಸಗಳಿವರ ಇತರ ಹವ್ಯಾಸಗಳು.ಲಿಂಬರ್‌ಲಿಂಕ್‌ನ ಉದ್ಯೋಗಿಯಾದ ಇವರು ಮುಕ್ತತಂತ್ರಾಂಶ,ಉಚಿತ ತಂತ್ರಾಂಶಗಳ ಪ್ರತಿಪಾದಕರು.ಲಿನಕ್ಸ್ ಉತ್ಸಾಹಿ.ಇವರ ತಾಣದ ಕಡೆ ಗಮನ ಹರಿಸಲು http://aravindavk.in ತೆರೆಯಿರಿ.
----------------------------------------------
ಟ್ವಿಟರ್ ಚಿಲಿಪಿಲಿ
*ಪುಸ್ತಕ ಬಿಸಿದೋಸೆಯಂತೆ ಖರ್ಚಾಗಲು ಏನು ಮಾಡಬೇಕು?ಪುಸ್ತಕದ ಹೊದಿಕೆ ಮೇಲೆ ಹುಡುಗಿ ಚಿತ್ರ ಹಾಕಿ,ಹುಡುಗಿ ಮೇಲೆ ಹೊದಿಕೆ ಹಾಕದಿರಲಿ.
*ಇಸ್ತ್ರಿ ಪೆಟ್ಟಿಗೆ ಸ್ತ್ರೀಲಿಂಗವೇ,ಪುಲ್ಲಿಂಗವೇ? ಸ್ತ್ರೀಲಿಂಗ ಅನುಮಾನ ಬೇಡ,ಇ-"ಸ್ತ್ರೀ" ಪೆಟ್ಟಿಗೆ

-------------------------------------------------
ಕಿಂಡಲ್ ಇ-ಬುಕ್ ರೀಡರ್ ಅಗ್ಗ
ಐಪ್ಯಾಡ್ ಸಾಧನದ ಸ್ಪರ್ಧೆ ಎದುರಿಸಲು ಅಮೇಜಾನ್ ಕಂಪೆನಿಯು ತನ್ನ ಅಂತಹುದೇ ಸಾಧನ ಕಿಂಡಲ್‌ನ ಬೆಲೆ ಇಳಿಸಿದೆ.ಕಿಂಡಲ್ ಬರೇ ನೂರನಲುವತ್ತು ಡಾಲರಿಗೆ ದೊರೆಯುತ್ತದೆ.ಮಾತ್ರವಲ್ಲ,ಇದರಲ್ಲಿಯೂ ವೈ-ಫೈ ಸಂಪರ್ಕ ಲಭ್ಯವಿರುವ ಕಾರಣ,ಅಂತರ್ಜಾಲಕ್ಕೆ ಸಾಧನವನ್ನು ನಿಸ್ತಂತು ಮಾಧ್ಯಮದ ಮೂಲಕ ಸಂಪರ್ಕಿಸಿ,ಇ-ಪುಸ್ತಕಗಳನ್ನು ಇಳಿಸಿಕೊಳ್ಳಬಹುದು.ಅಮೇಜಾನ್ ಪುಸ್ತಕಗಳನ್ನು ಮಾರುವುದರಲ್ಲಿ ಅಗ್ರಗಣ್ಯ ತಾಣ.ಇಲ್ಲಿ ಆರು ಲಕ್ಷಕ್ಕೂ ಹೆಚ್ಚು ಇ-ಪುಸ್ತಕಗಳು ಲಭ್ಯ.ಶೇಕಡಾ ತೊಂಭತ್ತು ಪುಸ್ತಕಗಳ ಬೆಲೆ ಹತ್ತು ಡಾಲರುಗಳಿಗೂ ಕಡಿಮೆ.ಇಲ್ಲಿಂದ ಇಳಿಸಿಕೊಂಡ ಪುಸ್ತಕಗಳನ್ನು ಕಿಂಡಲ್ ಸಾಧನದ ಮೂಲಕ ಮಾತ್ರಾ ಓದಲು ಸಾಧ್ಯ.ಸೂರ್ಯನ ಬೆಳಕಿನಲ್ಲೂ ಓದಲು ಸಾಧ್ಯ,ಬ್ಯಾಟರಿಯು ದೀರ್ಘಕಾಲ ಬಾಳಿಕೆ ಬರುತ್ತದೆ ಎನ್ನುವುದು ಕಿಂಡಲಿನ ಪ್ಲಸ್ ಪಾಯಿಂಟ್.ಕಪ್ಪು-ಬಿಳುಪು ತೆರೆಯನ್ನು ವರ್ಣವಾಗಿಸಲು ಅಮೇಜಾನ್ ಕಂಪೆನಿ ಯೋಚಿಸಿದೆ.ಸದ್ಯ ಮೂರು ದಶಲಕ್ಷ ಕಿಂಡಲ್‌ಗಳು ಮಾರಾಟವಾಗಿವೆ.ಅಂದಹಾಗೆ ಐಪ್ಯಾಡ್ ಕಿಂಡಲಿನ ಏಳುಪಟ್ಟು ದುಬಾರಿಯಾದರೂ ಕೆಲವೇ ತಿಂಗಳುಗಳೊಳಗೆ ಅಷ್ಟೇ ಸಂಖ್ಯೆಯ ಐಪ್ಯಾಡ್‌ಗಳು ಮಾರಾಟವಾಗಿವೆ.
-----------------------------------------------------------
ಬಿಸಿಯಾಗುವ ಐಪ್ಯಾಡ್ ಬಗ್ಗೆ ಮಂಡೆಬಿಸಿ
ಮೂರು ಜನ ಐಪ್ಯಾಡ್ ಬಳಕೆದಾರರು ಸೂರ್ಯನ ಬೆಳಕಿನಲ್ಲಿ ಐಪ್ಯಾಡ್ ಬಳಸಿದರೆ,ಅವು ಬಿಸಿಯಾಗಿ,ತಂತಾನೇ ಬಂದ್ ಆಗುತ್ತವೆ ಎಂದು ತಗಾದೆ ಹೂಡಿದ್ದಾರೆ.ಐಪ್ಯಾಡ್‌ನ ಜಾಹೀರಾತಿನಲ್ಲಿ ಐಪ್ಯಾಡ್ ಬಳಸಿ,ಪುಸ್ತಕ ಓದಿದಂತೆ ಇ-ಪುಸ್ತಕವನ್ನು ಓದಬಹುದು ಎನ್ನುವ ರೀತಿ ಬಿಂಬಿಸಲಾಗಿದೆ.ಆದರೆ ಐಪ್ಯಾಡನ್ನು ಬಿಸಿಲಿನಲ್ಲಿ ಓದಿದರೆ,ಅದು ಬಿಸಿಯೇರಿ,ತನ್ನಷ್ಟಕ್ಕೆ ಬಂದ್ ಆಗುತ್ತದೆ-ಹೀಗಾಗಿ,ಜಾಹೀರಾತು ಜನರನ್ನು ತಪ್ಪು ದಾರಿಗೆಳೆಯುತ್ತದೆ ಎನ್ನುವುದು ಅಮೆರಿಕಾದ ಕೆಲ ಬಳಕೆದಾರರ ಆರೋಪ.ಅವರ ಸಂಖ್ಯೆ ಕೈಬೆರಳೆಣಿಕೆಯಲ್ಲಿದೆ ಎನ್ನುವುದು ಐಪ್ಯಾಡ್ ತಯಾರಿಕಾ ಆಪಲ್ ಕಂಪೆನಿಗೆ ಸಮಾಧಾನ ತಾರದೆ ಇರದು.
----------------------------------------------------------
ಪ್ರವಾಸೀ ತಾಣದಲ್ಲಿದ್ದ ಅವಧಿ ಎಷ್ಟು?
ಪ್ರವಾಸಿಗಳು ಒಂದು ಪ್ರವಾಸೀ ತಾಣದಲ್ಲಿ ಎಷ್ಟು ಸಮಯ ಕಳೆಯುತ್ತಾನೆ ಎನ್ನುವುದು,ವ್ಯವಹಾರಸ್ಥರಿಗೆ ಉಪಯುಕ್ತ ಮಾಹಿತಿಯಾದೀತು.ಇದನ್ನು ಕಲೆ ಹಾಕುವ ಸುಲಭ ವಿಧಾನ ಯಾವುದು?ಪ್ರವಾಸಿಗಳು ತೆಗೆದ ಮೊದಲ ಹಾಗೂ ಕೊನೆಯ ಚಿತ್ರಗಳ ಸಮಯ ಇದರ ಬಗ್ಗೆ ಸುಳಿವು ಕೊಡುತ್ತದೆಯಷ್ಟೇ? ಪ್ರವಾಸಿಗಳು ತಾವು ತೆಗೆದ ಚಿತ್ರಗಳನ್ನು ಫ್ಲಿಕರ್ ಅಂತಹ ಅಂತರ್ಜಾಲ ತಾಣಗಳಲ್ಲಿ ಹಾಕುವುದು ಮಾಮೂಲಾಗಿ ಬಿಟ್ಟಿದೆ.ಈ ಚಿತ್ರಗಳ ವಿಶ್ಲೇಷಣೆ ಮಾಡುವುದರ ಮೂಲಕ ಪ್ರವಾಸಿ ಬೇರೆ ಬೇರೆ ತಾಣಗಳಲ್ಲಿ ಕಳೆದ ಸಮಯದ ಅವಧಿಯನ್ನು ಲೆಕ್ಕ ಹಾಕುವ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲಾಗಿದೆ.ಬೆಂಗಳೂರಿನಲ್ಲಿ ನಡೆದ ಮೂರನೇ ಮುಕ್ತ  ಹ್ಯಾಕ್ ಸ್ಪರ್ಧೆಗಳಲ್ಲಿ ಅಭಿವೃದ್ಧಿಯಾದ ತಂತ್ರಾಂಶಗಳಲ್ಲಿ ಇದೂ ಒಂದು.ಚಿರ್ಪ್‌ಶೈರ್ ಎನ್ನುವ ಇನ್ನೊಂದು ಹ್ಯಾಕ್ ಮೂಲಕ ತಾಣವೊಂದನ್ನು ಆರಂಭಿಸಲಾಗಿದೆ.ಅತಿ ಹೆಚ್ಚು ಟ್ವಿಟರ್ ಸಂದೇಶ ಹಾಕಿದವರು,ಮುಂಜಾನೆ ಅತಿ ಹೆಚ್ಚು ಸುದ್ದಿಯ ಕೊಂಡಿಗಳನ್ನು ಟ್ವಿಟರ್ ಸಂದೇಶಗಳಾಗಿ ಹಾಕಿದವರು,ಉತ್ಪನ್ನದ ಬ್ರಾಂಡ್‌ನೇಮ್ ಬಳಸಿದ ಸಂದೇಶಗಳಿಗೆ ಬಹುಮಾನಕ್ಕೆ ಆಯ್ಕೆ ಮಾಡುವ ತಂತ್ರಾಂಶವನ್ನು,ಈ ತಾಣದಲ್ಲಿ ಬಳಸಲಾಗಿದೆ.ಅಂದ ಹಾಗೆ ಲಭ್ಯವಾಗಿರುವ ತಂತ್ರಾಂಶಗಳನ್ನೇ ತುಸು ಬದಲಿಸಿ ಅಥವಾ ಅಭಿವೃದ್ದಿ ಪಡಿಸಿ,ಕಡಿಮೆ ಸಮಯದಲ್ಲಿ ತಂತ್ರಾಂಶ ರಚಿಸುವುದನ್ನು "ಹ್ಯಾಕ್" ಮಾಡುವುದು ಎನ್ನಲಾಗುತ್ತದೆ.
-----------------------------------------------------------------
udayavani
*ಅಶೋಕ್‌ಕುಮಾರ್ ಎ