Monday, September 27, 2010

ಸ್ಟಕ್ಸ್‌ನೆಟ್:ವಿದ್ಯುತ್ ಸ್ಥಾವರ ಕೆಲಸ ಕೆಡಿಸುವ ಕಂಪ್ಯೂಟರ್ ವರ್ಮ್

ಸ್ಟಕ್ಸ್‌ನೆಟ್:ವಿದ್ಯುತ್ ಸ್ಥಾವರ ಕೆಲಸ ಕೆಡಿಸುವ ಕಂಪ್ಯೂಟರ್ ವರ್ಮ್
ಸ್ಟಕ್ಸ್‌ನೆಟ್ ಎನ್ನುವ ಕಂಪ್ಯೂಟರ್ ವರ್ಮ್ ಈಗ ಹಬ್ಬುತ್ತಿದೆ.ಕಂಪ್ಯೂಟರ್ ಜಾಲಗಳಲ್ಲಿರುವ ವಿದ್ಯುತ್ ಸ್ಥಾವರ,ಕಂಪ್ಯೂಟರ್ ನಿಯಂತ್ರಿತ ಸ್ಥಾವರಗಳ ಕೆಲಸವನ್ನು ಕೆಡಿಸುವ ಕೆಲಸವನ್ನದು ಮಾಡಬಲ್ಲುದು.ಇದರ ಮೂಲ ಯಾವುದು ಎನ್ನುವುದು ಇನ್ನೂ ಪತ್ತೆಯಾಗದಿದ್ದರೂ,ಇಂತಹ ಗಂಭೀರ ಅನಾಹುತಗಳಿಗೆ ಕಾರಣವಾಗಬಲ್ಲ ಕಂಪ್ಯೂಟರ್ ವರ್ಮ್,ವ್ಯಕ್ತಿ ಮೂಲವಾಗಿರದೆ,ಯಾವುದಾದರೂ ದೇಶ ಅಥವ ಸಂಸ್ಥೆ ಇದರ ಹಿಂದಿರಬಹುದು ಎನ್ನುವ ಗುಮಾನಿ ತಜ್ಞರದ್ದು.ಸ್ಥಾವರಗಳ ನಿಯಂತ್ರಣವನ್ನು ವರ್ಮ್ ತನ್ನ ಕೈಗೆ ತೆಗೆದುಕೊಂಡಿದ್ದು,ಕಂಪ್ಯೂಟರ್ ಜಾಲಗಳ ನಿರ್ವಾಹಕರುಗಳ ಗಮನಕ್ಕೆ ಬರದಂತೆ ಮಾಡುವುದು ಈ ವರ್ಮಿನ ವಿಶೇಷ.
-----------------------------------------
ಫೇಸ್‌ಬುಕ್ ಸ್ಥಗಿತ
ಕಳೆದ ಬುಧವಾರ ಮತ್ತು ಗುರುವಾರಗಳಂದು ಎರಡು ದಿನ,ಯುವಜನರ ಮೆಚ್ಚಿನ ತಾಣ ಫೇಸ್‌ಬುಕ್ ತೊಂದರೆಗೀಡಾಯಿತು.ಬಳಕೆದಾರರು ತಾಣವನ್ನು ಬಳಸಲು ಸಾಧ್ಯವಾಗದೆ ಹೋಯಿತು.ಗುರುವಾರ ಎರಡೂವರೆ ಗಂಟೆಗಳ ಕಾಲ ತಾಣ ಸಮಸ್ಯೆಯಿಂದ ಬಾಧಿತವಾಗಿ,ಅದರ ಏಳು ದಶಲಕ್ಷದಷ್ಟು ಜನ ಬಳಕೆದಾರರು ತೊಂದರೆ ಅನುಭವಿಸಿದರು.ಕಳೆದ ನಾಲ್ಕು ವರ್ಷಗಳಲ್ಲೇ ಇಷ್ಟು ಹೆಚ್ಚು ಹೊತ್ತು ತಾಣ ತೊಂದರೆಗೀಡಾದ್ದದ್ದು ಇದೇ ಮೊದಲು.ದತ್ತಾಂಶ ನಿರ್ವಹಣೆಯಲ್ಲಿ ಬಳಸಲ್ಪಡುವ ತಂತ್ರಾಂಶದಲ್ಲಿನ ಸಮಸ್ಯೆಯೇ ಇದಕ್ಕೆ ಕಾರಣವಿರಬಹುದು ಎಂದು ತರ್ಕಿಸಲಾಗಿದೆ.ಸಣ್ಣ ಸಮಸ್ಯೆಯನ್ನು ಸರಿಪಡಿಸುವ ಯತ್ನದಲ್ಲಿ ದತ್ತಾಂಶ ನಿರ್ವಹಣಾ ತಂತ್ರಾಂಶದ ಮೇಲೆ ಅತೀವ ಒತ್ತಡ ಬಿದ್ದು,ತಾಣವನ್ನು ಸ್ಥಗಿತಗೊಳಿಸಬೇಕಾಯಿತು.ನಂತರ ತೊಂದರೆಯನ್ನು ಪತ್ತೆ ಹಚ್ಚಿ ಸರಿ ಪಡಿಸಿದ ನಂತರವಷ್ಟೇ,ಬಳಕೆದಾರರು ತಾಣಕ್ಕೆ ಬರಲು ಅನುಮತಿಸಬೇಕಾಯಿತು ಎಂದು ಪೇಸ್‌ಬುಕ್ ವಿವರಿಸಿ,ಬಳಕೆದಾರರಿಗಾದ ತೊಂದರೆಗೆ ವಿಷಾದ ಸೂಚಿಸಿತು.
---------------------------------------------
ಚಾಮರಾಜ ಸವಡಿ

ಚಾಮರಾಜ ಸವಡಿಯವರು ಮಾಧ್ಯಮಗಳ ಪರಿಣತ.ಕೊಪ್ಪಳ ಜಿಲ್ಲೆಯ ಅಳವಂಡಿಯವರು.ಸದ್ಯ ಸ್ವ-ಉದ್ಯೋಗ ಮಾಡುತ್ತಿದ್ದಾರೆ.ಪತ್ರಕರ್ತರಾಗಿ ದುಡಿದ ಅನುಭವವೂ ಸಾಕಷ್ಟಿದೆ.ಟಿವಿ ನ್ಯೂಸ್ ಚಾನೆಲ್‌ಗಳಲ್ಲಿಯೂ ಕೆಲಸ ಮಾಡಿರುವ ಚಾಮರಾಜ ಸವಡಿಯವರ ಬರವಣಿಗೆಯಲ್ಲಿ ಆರೋಗ್ಯ,ಮಾನವಿಕ ಸಂಬಂಧಗಳು,ಸಹಜ ಕೃಷಿ,ಅಭಿವೃದ್ಧಿ,ವ್ಯಕ್ತಿತ್ವ ವಿಕಸನ ಮುಂತಾದ ವಿಚಾರಗಳನ್ನು ಕಾಣಬಹುದು.http://matumanikya.blogspot.com ಮತ್ತು http://chamarajsavadi.blogspot.com/ ಇವರ ಬ್ಲಾಗುಗಳು.
-------------------------------------------------
ಟ್ವಿಟರ್ ಸಂದೇಶದ ಮೂಲಕ ಹಣಪಾವತಿ?

ಟ್ವಿಟರ್ ಸಂದೇಶ ಕಳುಹಿಸಿ,ಅದರ ಮೂಲಕ ಸಂದೇಶ ಕಳುಹಿಸಿದಾತನ ಖಾತೆಯಿಂದ,ಸಂದೇಶದಲ್ಲಿ ಹೆಸರು ಸೂಚಿಸಿದ ಬಳಕೆದಾರನ ಪೇಪಾಲ್ ಖಾತೆಗೆ ಹಣಸಂದಾಯ ಮಾಡುವ ನೀಡುವ ಸೋಶಿಯಲ್ ಪೇ ಎನ್ನುವ ಸೇವೆಯನ್ನು ಮಣಿಪಾಲದ ತರುಣ ಇಂಜಿನಿಯರ್ ಕಾರ್ತಿಕ್ ಕಸ್ತೂರಿ ರೂಪಿಸಿದ್ದಾರೆ.ಸೋಶಿಯಲ್‌ಪೇ ಸೇವೆಗೆ ನೋಂದಾಯಿಸಿಕೊಂಡು,ಪೇಪಾಲ್‌ನ ಖಾತೆಯಿಂದ ಪಾವತಿಸಬಹುದಾದ ಗರಿಷ್ಥ ಹಣಪಾವತಿಯ ಮಿತಿ,ಪಾವತಿಯ ಮೇಲಿನ ಸಂಖ್ಯೆಯ ಮಿತಿಯನ್ನು ನಿಗದಿ ಪಡಿಸಿ,ಭದ್ರತೆಯನ್ನೂ ಒದಗಿಸಬಹುದು.ಟ್ವಿಟರ್ ಮತ್ತು ಪೇಪಾಲ್ ತಾಣಗಳು ಒದಗಿಸುವ ತಂತ್ರಾಂಶ ಅಭಿವೃದ್ಧಿ ಪಡಿಸಲು ಒದಗಿಸುವ ಅನುಕೂಲತೆಗಳನ್ನು ಬಳಸಿಕೊಂಡು ಈ ಸೇವೆಯನ್ನು ಅಭಿವೃದ್ಧಿ ಪಡಿಸಲಾಗಿದೆ.ಪೇಪಾಲ್‌ಎಕ್ಸ್ ಡೆವಲಪರ್ಸ್ ಚಾಲೆಂಜ್ ಸ್ಪರ್ಧೆಗೇ ಈ ಸೇವೆಯ ಪ್ರಸ್ತಾವವನ್ನು ಸಲ್ಲಿಸಲಾಗಿದೆ.ಟ್ವಿಟರ್ ಸಂದೇಶದ ಮೂಲಕ ಹಣಪಾವತಿ ಸಾಧ್ಯವಾದರೆ,ಅದೊಂದು ಹೊಸ ಶಕೆಯ ಆರಂಭಿಸಲಿದೆ ಎಂದರೆ ತಪ್ಪಿಲ್ಲ.ಟ್ವಿಟರಿಗೆ ಮೊಬೈಲ್ ಮೂಲಕವೂ ಸಂದೇಶಗಳನ್ನು ರವಾನಿಸಬಹುದಾದ್ದರಿಂದ,ಹಣ ಪಾವತಿಯನ್ನೂ ಮೊಬೈಲ್ ಮೂಲಕವೂ ಮಾಡಬಹುದು.ಫೇಸ್‌ಬುಕ್ ಮೂಲಕವೂ ಇದೇ ರೀತಿ ಪಾವತಿ ಸಂದೇಶಗಳನ್ನು ಮಾಡಬಹುದು.ಹಣ ಪಾವತಿ ಸೌಲಭ್ಯದ ದುರುಪಯೋಗವಾಗದಂತೆ ಇದನ್ನು ನಿರ್ವಹಿಸಲು ಸಾಧ್ಯವಾದರೆ,ಪೇಪಾಲ್ ಈ ಸೇವೆಗೆ ಮಾನ್ಯತೆ ನೀಡುವ ಸಂಭವವಿದೆ.ಹಾಗಾಗುತ್ತದೆಯೇ ಎನ್ನುವುದನ್ನು ಕಾದುನೋಡಬೇಕಷ್ಟೇ.
-------------------------------------------------
ಟ್ವಿಟರ್ ಚಿಲಿಪಿಲಿ
*mouseನ ಬಹುವಚನ mice ಆದರೆ spouseನ ಬಹುವಚನ spice ಅಲ್ಲವೇ?
*ಹುಡುಗರು ಗುಲಾಬಿಯಂತೆ,ಚುಚ್ಚುವ ಮುಳ್ಳಿನ ಬಗ್ಗೆ ಎಚ್ಚರಿಕೆಯಿಂದಿರಬೇಕು.
*ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಕೆಲದೇಶಗಳು ಬಹಿಷ್ಕರಿಸಿದರೆನಂತೆ?,ಭಾರತಕ್ಕೆ ಪದಕಗಳ ಸಂಖ್ಯೆ ಹೆಚ್ಚಾಗುತ್ತದೆ.
----------------------------------------------------
ಓದುಗರ ಪ್ರತಿಕ್ರಿಯೆಗಳು

ಓದುಗ ಶ್ರೀನಿವಾಸ ಬಂಗೋಡಿಯವರು ಇಂಟರ್ನೆಟ್ ಎಕ್ಸ್‌ಪ್ಲೋರರ್ ಬ್ರೌಸರ್ ಬಗೆಗಿನ ಬರಹಕ್ಕೆ ಪ್ರತಿಕ್ರಿಯಿಸಿ,ಬ್ರೌಸರಿನ ಹೊಸ ಆವೃತ್ತಿ ಇನ್ನೂ ಬೀಟಾ ಹಂತದಲ್ಲಿದೆ.ಅದು ವಿಂಡೋಸ್7 ಮತ್ತು ವಿಂಡೋಸ್ ವಿಸ್ತಾಗಳಿಗೆ ಮಾತ್ರಾ ಲಭ್ಯವಿದೆ ಎಂದು ತಿಳಿಸಿದ್ದಾರೆ.ಗೂಗಲ್ ದಿಡೀರ್ ಶೋಧ ಸೇವೆ ಈಗ ಭಾರತದಲ್ಲೂ ಲಭ್ಯವಿರುವ ಬಗ್ಗೆ ವಾಸುದೇವ ಕಾಮತ್ ಮತ್ತು ಪ್ರಸನ್ನ ಶಂಕರಪುರ ಅವರುಗಳು ಓದುಗರ ಗಮನ ಸೆಳೆದಿದ್ದಾರೆ.ಗೋವರ್ಧನ್ ಹೆಗ್ಡೆಯವರು ವಿಡಿಯೋಗಿರ್ಮಿಟ್.ಕಾಮ್ videogirmit.com ತಾಣದಲ್ಲಿ ಕನ್ನಡದ ಟಿವಿ ಸೀರಿಯಲುಗಳ ಹಳೆಯ ಕಂತುಗಳನ್ನು ನೋಡಬಹುದು ಎನ್ನುವ ಮಾಹಿತಿ ನೀಡಿದ್ದಾರೆ.
------------------------------------------------------------
ಮರಣ ಸಂದೇಶ
ವಾಹನ ಚಲಾಯಿಸುವಾಗ ಮೊಬೈಲ್ ಕಿರು ಸಂದೇಶಗಳನ್ನು ರವಾನಿಸಿ ಅಪಘಾತಗಳು ಸಂಭವಿಸುವುದಿದೆ.ಇಂತಹ ಅಪಘಾತಗಳಿಂದ ಹದಿನಾರು ಸಾವಿರಕ್ಕೂ ಅಧಿಕ ಜನರು ಪ್ರಾಣತೆತ್ತಿದ್ದಾರೆ ಎಂದು ಉತ್ತರ ಟೆಕ್ಸಾಸ್‌ನ ಸಂಶೋಧಕರು ಅಂದಾಜು ಮಾಡಿದ್ದಾರೆ.2002-2007ರ ನಡುವಣ ಅಪಘಾತಗಳ ವಿಶ್ಲೇಷಣೆಯಿಂದ ಇದು ಶ್ರುತ ಪಟ್ಟಿದೆ.ಕಿರು ಸಂದೇಶಗಳ ಕಾರಣದಿಂದ ಈ ಐದು ವರ್ಷಗಳಲ್ಲಿ ಸರಾಸರಿ 4600 ಜನರು ಸತ್ತ್ತಿದ್ದಾದ್ದಾರೆ.ಒಂದು ವೇಳೆ ಕಿರುಸಂದೇಶಗಳ ಹಾವಳಿ ಇಲ್ಲವಾದರೆ,ಇದರ ಅರೆವಾಸಿ ಜನರು ಸಾಯುತ್ತಿದ್ದರು ಎಂದು ಅವರ ಲೆಕ್ಕಾಚಾರ.ಅಮೆರಿಕಾದಲ್ಲಿ ಶೇಕಡಾ ತೊಂಭತ್ತೊಂದು ಜನರು ಮೊಬೈಲ್ ಫೋನ್ ಬಳಸುತ್ತಿದ್ದಾರೆ.ದಶಕದ ಹಿಂದೆ ಇದು ಶೇಕಡಾ ಮೂವತ್ತು ಇತ್ತು.ವಾಹನ ಚಲಾಯಿಸುವಾಗ ಗಮನ ಬೇರೆಡೆ ಹೋಗಿ ಅಪಘಾತ ಸಂಭವಿಸುವ ಪ್ರಮಾಣ ಶೇಕಡಾ ಹನ್ನೊಂದರಿಂದ ಹದಿನಾರಕ್ಕೆ ಏರಿದೆ.ಇದರಲ್ಲಿ ಮೊಬೈಲ್ ಫೋನ್‍ಗಳ ಪಾತ್ರವೇ ಹಿರಿದು.
Udayavani Unicode
Udayavani
*ಅಶೋಕ್‌ಕುಮಾರ್ ಎ

Monday, September 20, 2010

ಉಡುಗೆಯನ್ನು ಸ್ಪ್ರೇ ಮಾಡಿ

ಉಡುಗೆಯನ್ನು ಸ್ಪ್ರೇ ಮಾಡಿ
 
ದೇಹದ ಮೇಲೆ ಸಿಂಪಡಣೆ ಮೂಲಕ ಮೂಡಿಸಬಹುದಾದ ತೊಡುಗೆಯಿದೀಗ ಬಂದಿದೆ.ಲಂಡನ್‌ನ ಇಂಪೀರಿಯಲ್ ಕಾಲೇಜ್ ಮತ್ತು ಫೇಬ್ರಿಕನ್ ಎನ್ನುವ ಕಂಪೆನಿಯು ಸೇರಿ ತಯಾರಿಸಿರುವ ದ್ರವವನ್ನು ಸಿಂಪಡಿಸಿ,ಬಿಗಿ ಉಡುಗೆಗಳನ್ನು ಸಿಂಪರಣೆ ಮೂಲಕ ದೇಹಕ್ಕೆ ಅಳವಡಿಸುವುದು ಸಾಧ್ಯ.ಈ ದ್ರವದಲ್ಲಿ ಎಳೆಯ ನಾರುಗಳನ್ನು ಪಾಲಿಮರ್‌ನೊಂದಿಗೆ ಮಿಶ್ರ ಮಾಡಿ ಇಡಲಾಗುತ್ತದೆ.ಹೀಗಾಗಿ,ಸಿಂಪಡಿಸಿದಾಗ,ಪಾಲಿಮರ್ ಒಣಗಿ,ದೇಹಕ್ಕೆ ನಾರಿನ ಪದರದ ತೊಡುಗೆಯನ್ನು ಒದಗಿಸುತ್ತದೆ.ಈ ಬಿಗಿ ಉಡುಗೆಯನ್ನು ಜಾಗರೂಕತೆಯಿಂದ ತೆಗೆದು ಮಡಿಸಿಡಲೂ ಸಾಧ್ಯವೆನ್ನುವುದು ಮತ್ತೊಂದು ವಿಶೇಷ.ಇದನ್ನು ವಿವಿಧ ಬಣ್ಣಗಳ ನಾರಿನಿಂದ ತಯಾರಿಸಬಹುದು.ಹಾಗೆಯೇ ನಾರೂ ಕೂಡಾ ಬೇರೆ ಬೇರೆ ಮೂಲದ್ದಿರಬಹುದು.ಕೃತಕ ಅಥವಾ ಹತ್ತಿಯ ನಾರನ್ನೂ ಬಳಸಲು ಸಾಧ್ಯ.ಸ್ಪ್ರೇಗನ್ ಅಥವಾ ಎರೋಸೋಲ್ ಬಳಸಿ ಸಿಂಪಡಣೆ ಮಾಡಬಹುದು.ಗಾಯಗಳಿದ್ದ ದೇಹಕ್ಕೆ ಬ್ಯಾಂಡೇಜು ಬಿಗಿಯಲೂ ಈ ತಂತ್ರವನ್ನು ಬಳಸಬಹುದು.ಹಾಗಾಗಿ ಇದಕ್ಕೆ ವೈದ್ಯಕೀಯ ಕ್ಷೇತ್ರದಲ್ಲೂ ಉಪಯೋಗವಿದೆ.
-------------------------------------------------
ಇಂಟರ್ನೆಟ್ ಎಕ್ಸ್‌ಪ್ಲೋರರ್ ಹೊಸ ಆವೃತ್ತಿ

ಮೈಕ್ರೋಸಾಫ್ಟ್ ಕಂಪೆನಿಯ ಬ್ರೌಸರ್ ಇಂಟರ್ನೆಟ್ ಎಕ್ಸ್‌ಪ್ಲೋರರ್ ‌ನ ಹೊಸ ಆವೃತ್ತಿ ಒಂಭತ್ತನೆಯದು.ಇದು ಈಗ ಬಳಕೆದಾರರಿಗೆ ಲಭ್ಯವಾಗಿದೆ.ಎಚ್ ಟಿ ಎಂ ಎಲ್5ನ್ನು ಬಳಸಲು ಅನುವು ಕೊಡುವಂತೆ ರಚಿಸಿರುವ ಕಾರಣ,ವಿಡಿಯೋ ಇರುವ ಪುಟಗಳಲ್ಲಿ ಬ್ರೌಸರ್ ಅತ್ಯಂತ ವೇಗವಾಗಿ ಕೆಲಸ ಮಾಡುತ್ತದೆ ಎಂದು ತಜ್ಞರ ಅಭಿಪ್ರಾಯ.ಬ್ರೌಸರುಗಳು ಇತ್ತೀಚೆಗೆ ಮೊದಲಿನಂತೆ ಹೆಚ್ಚು ಗುಂಡಿಗಳು,ಮೆನ್ಯುಗಳನ್ನು ಹೊಂದಿರುವುದಿಲ್ಲ.ಗೂಗಲ್ ಕ್ರೋಮ್ ಬ್ರೌಸರ್ ಮಾದರಿಯಲ್ಲೇ ಇಂಟರ್ನೆಟ್ ಎಕ್ಸ್ಲ್‌ಪ್ಲೋರರ್ ಕೂಡಾ ಅತ್ಯಂತ ಕನಿಷ್ಠ ವಿನ್ಯಾಸ ಹೊಂದಿದೆ.ಹೆಚ್ಚಿನ ಸವಲತ್ತು ಬೇಕಾದರೆ ಪ್ಲಗಿನ್‌ಗಳನ್ನು ಅಳವಡಿಸಿಕೊಳ್ಳುವ ನೂತನ ವಿಧಾನಕ್ಕೆ ಮೈಕ್ರೋಸಾಫ್ಟ್ ಕೂಡಾ ಒಗ್ಗಿಕೊಂಡಿರುವುದು ಸ್ಪಷ್ಟ.ಇಂಟರ್ನೆಟ್ ಎಕ್ಸ್‌ಪ್ಲೋರರಿನಲ್ಲಿ ಭದ್ರತಾ ಕೊರೆಯದ್ದೇ ಸಮಸ್ಯೆ.ಅದರ ಬಗ್ಗೆ ಮುಂದಿನ ದಿನಗಳಲ್ಲಷ್ಟೇ ಗೊತ್ತಾದೀತು.
--------------------------------------------------------
ಟ್ವಿಟರ್ ಪುಟ ಬೆಟರ್!

ಟ್ವಿಟರ್ ಬಳಕೆದಾರರು ಸಾಮಾನ್ಯವಾಗಿ ಟ್ವಿಟರ್ ಪುಟಕ್ಕೇ ಹೋಗುವುದಿಲ್ಲ.ಟ್ವಿಟರನ್ನು ಸಿಸ್ಮಿಕ್,ಬ್ರಿಜ್ಲೀ,ಟ್ವೀಟ್‌ಡೆಕ್ ಹೀಗೆ ಇತರ ತಂತ್ರಾಂಶಗಳ ಮೂಲಕವೂ-ವೆಬ್‌ಪುಟಗಳ ಮೂಲಕವೋ ತೆರೆಯುವುದೇ ಹೆಚ್ಚು.ಬಳಕೆದಾರರು ನೇರವಾಗಿ twitter.com ವಿಳಾಸಕ್ಕೇ ಬರುವಂತೆ ಮಾಡಬಲ್ಲ ಚಂದವಾದ ಟ್ವಿಟರ್ ಪುಟವನ್ನು ಟ್ವಿಟರ್ ವಿನ್ಯಾಸಗೊಳಿಸಿದೆ.ಸದ್ಯದ ಕೋಟಿಗಟ್ಟಲೆ ಬಳಕೆದಾರರಿಗೆ ಹಳೆಯ ವಿನ್ಯಾಸದ ಪುಟವೇ ಈಗಲೂ ಲಭ್ಯವಾದರೂ,ಹೊಸತಾಗಿ ನೋಂದಾಯಿಸಿಕೊಂಡವರಿಗೆ ಎರಡು ಭಾಗವಾಗಿ ಕಾಣಿಸಿಕೊಳ್ಳುವ ಹೊಸ ಪುಟದ ಟ್ವಿಟರ್ ಸೌಕರ್ಯ ಸಿಗುತ್ತದೆ.ಸಂದೇಶಗಳನ್ನು ವರ್ಗೀಕರಿಸಿ,ಟ್ಯಾಬ್‌ಗಳಲ್ಲಿ ತೋರಿಸುವುದು,ಬಳಕೆದಾರ ಕಳುಹಿಸಿದ ಸಂದೇಶಗಳನ್ನು ಬಲಗಡೆಯಲ್ಲಿ ಪ್ರತ್ಯೇಕವಾಗಿಸಿ ಪ್ರದರ್ಶಿಸುವುದು,ಉಚ್ಛಮಟ್ಟದ ಶೋಧ ಫಲಿತಾಂಶ ಇದು ಹೊಸ ಟ್ವಿಟರಿನ ಮುಖ್ಯ ಬದಲಾವಣೆಗಳು.ಜನರು ಟ್ವಿಟರ್ ತಾಣಕ್ಕೆ ಬರುವಂತೆ ಮಾಡಿ,ಪುಟಗಳಲ್ಲಿ ಜಾಹೀರಾತು ನೀಡುವಂತೆ ಜಾಹೀರಾತುದಾರರನ್ನು ಆಕರ್ಷಿಸುವತ್ತ ಟ್ವಿಟರ್ ಮುನ್ನಡೆದಿದೆ ಎಂದರೆ ತಪ್ಪಾಗಲಾರದು.ಕೋಟಿಗಟ್ಟಲೆ ಬಳಕೆದಾರರನ್ನು ಹೊಂದಿಯೂ,ಜಾಹೀರಾತು ಬಲ ಇಲ್ಲದೆ,ನಷ್ಟದಲ್ಲಿರುವ ಸ್ಥಿತಿಯಿಂದ ಟ್ವಿಟರ್ ಕಂಪೆನಿ ಹೊರಬರಲೇ ಬೇಕಿದೆ.
-------------------------------------------------
ಅಪರಿಮಿತ ಬ್ರಾಡ್‌ಬ್ಯಾಂಡ್:ಬಿಎಸೆನೆಲ್ ಯೋಜನೆಗಳು
ಬ್ರಾಡ್‌ಬ್ಯಾಂಡ್ ಸೇವೆಯನ್ನು ಜನರಿಗೆ ನೀಡುವಲ್ಲಿ ಹೆಚ್ಚಿನ ಮುತುವರ್ಜಿ ವಹಿಸುತ್ತಿರುವ ಬಿಎಸೆನೆಲ್ ಇದೀಗ ಮತ್ತಷ್ಟು ಹೊಸ ಯೋಜನೆಗಳನ್ನು ಪ್ರಕಟಿಸಿದೆ."ಅಪರಿಮಿತ ಬ್ರಾಡ್‌ಬ್ಯಾಂಡ್" ಯೋಜನೆಗಳಾದ ಇವುಗಳಲ್ಲಿ ಬಳಕೆದಾರ ಬಳಸಬಹುದಾದ ಬ್ಯಾಂಡ್‌ವಿಡ್ತ್ ಮೇಲಿನ ಪರಿಮಿತಿ ಇರದು.ಕನಿಷ್ಠವೆಂದರೆ ಮಾಸಿಕ ದರ 499ರದ್ದು.ಇದು 256ಕೆಬಿಪಿಎಸ್ ವೇಗದಲ್ಲಿ ಅಂತರ್ಜಾಲ ಸಂಪರ್ಕವನ್ನು ಗ್ರಾಹಕನಿಗೆ ತರುತ್ತದೆ.ಮಾಸಿಕ 100 ಕರೆಗಳೊಂದಿಗೆ 256ಕೆಬಿಪಿಎಸ್ ವೇಗದ ಅಂತರ್ಜಾಲ ಬೇಕಿದ್ದರೆ ಮಾಸಿಕ ಶುಲ್ಕ 625 ಆಗುತ್ತದೆ.750 ಶುಲ್ಕ ನೀಡಿದರೆ,512ಕೆಬಿಪಿಎಸ್ ವೇಗದ ಅಂತರ್ಜಾಲ ಅಪರಿಮಿತ ಬಳಕೆಗೆ ಲಭ್ಯ.ಮಾಸಿಕ ಶುಲ್ಕ 900ಕ್ಕೆ 2ಎಂಬಿಪಿಎಸ್ ವೇಗದವರೆಗಿನ ಅಂತರ್ಜಾಲ ನಾಲ್ಕುನೂರು ಉಚಿತ ಧ್ವನಿಕರೆಗಳೊಂದಿಗೆ ಲಭ್ಯವಾಗಲಿದೆ.ಅದೇ ರೀತಿ 1000,1350,1400,1700ರೂಪಾಯಿಗಳ ಯೋಜನೆಗಳೂ ಹೆಚ್ಚಿನ ವೇಗ ಮತ್ತು ಉಚಿತ ಕರೆಗಳೊಂದಿಗೆ ಲಭ್ಯವಿವೆ.ಇವೆಲ್ಲವೂ ಗೃಹಬಳಕೆಗೆ ಇರುವ ಬ್ರಾಡ್‌ಬ್ಯಾಂಡ್ ಯೋಜನೆಗಳು.
--------------------------------------------
ನವಂಬರ್:ಹಳೆ ಮೊಬೈಲ್ ಸಂಖ್ಯೆಯೊಂದಿಗೆ ಸೇವೆ ವಲಸೆ ಸಾಧ್ಯ
ಮೊಬೈಲ್ ಸೇವಾದಾತೃವನ್ನು ಬದಲಿಸಿದಾಗಲೂ ಹಳೆಯ ಸಂಖ್ಯೆ ಉಳಿಸಿಕೊಳ್ಳುವ ಸೌಲಭ್ಯವು ನವಂಬರ್ ಒಂದರ ನಂತರ ಸಿಗುವುದು ಈಗ ಖಚಿತವೆನಿಸಿದೆ.ವಿವಿಧ ಮೊಬೈಲ್ ಕಂಪೆನಿಗಳು ಇದಕ್ಕೆ ಬೇಕಾದ ಪೂರ್ವ ಸಿದ್ಧತೆಯನ್ನು ಮಾಡಿಕೊಂಡು ನಂಬರ್ ಪೋರ್ಟೇಬಿಲಿಟಿ ಸೇವೆಯನ್ನು ನೀಡಲು ತಯಾರಾಗಿವೆ.ಎಲ್ಲವೂ ಎಣಿಸಿದಂತೆಯೇ ನಡೆದಿದ್ದರೆ,ಇದೀಗಲೇ ಇಂತಹ ಸೇವೆ ಲಭ್ಯವಾಗಬೇಕಿತ್ತು.ಆದರೆ ಕಂಪೆನಿಗಳ ಮೀನಮೇಷದಿಂದ ಬಹಳ ತಡವಾಗಿ,ಇಂತಹ ಸವಲತ್ತು ಜನರಿಗೆ ಸಿಗುತ್ತಿದೆ.ಸೇವೆ ಬದಲಿಸಿದರೆ,ಹೊಸ ನಂಬರ್‌ಗೆ ಬದಲಾಯಿಸಬೇಕಾಗುತ್ತದೆ,ಎನ್ನುವ ಕಾರಣಕ್ಕೆ ಹಳೆಯ ಕಂಪೆನಿಗೇ ಕಟ್ಟು ಬೀಳಬೇಕಾದ ಪ್ರಮೇಯದಿಂದ ಬಳಕೆದಾರನಿಗೆ ಬಿಡುಗಡೆ ಸಿಗುವುದು ನಿಜಕ್ಕೂ ಸ್ವಾಗತಾರ್ಹ.
----------------------------------------------------
ಇ-ಡೈರಿ ಬರೆಯಿರಿ
ಡಿಜಿಟಲ್ ಪೆನ್ ಬಳಸಿ ಕಾಗದದಲ್ಲಿ ಬರೆದದ್ದನ್ನು ಕಂಪ್ಯೂಟರ್‌ನಲ್ಲಿ ಉಳಿಸುವ ಇ-ಡೈರಿ ಈಗ ಭಾರತದಲ್ಲೂ ಲಭ್ಯವಾಗಿದೆ.ಹೈಟೆಕ್ ಸೊಲ್ಯುಶನ್ ಎಂಬ ಕಂಪೆನಿಯ ಇ-ಡೈರಿಯ ಡಿಜಿಟಲ್ ಪೆನ್ ಫ್ಲಾಶ್ ಸ್ಮರಣಕೋಶ ಹೊಂದಿರುವುದರಿಂದ,ಬರೆದದ್ದನ್ನು ಉಳಿಸಿ,ನಂತರ ಕಂಪ್ಯೂಟರಿಗೆ ವರ್ಗಾಯಿಸುವ ಅನುಕೂಲವನ್ನೂ ಒದಗಿಸುತ್ತದೆ.ಒಂದುಸಲಕ್ಕೆ ನೂರು ಪುಟಗಳನ್ನು ಉಳಿಸಿಕೊಳ್ಳುವ ಸ್ಮರಣಸಾಮರ್ಥ್ಯ ಡಿಜಿಟಲ್ ಪೆನ್‌ಗಿದೆ.ಹತ್ತುಸಾವಿರ ರೂಪಾಯಿ ಬೆಲೆಯ ಇ-ಡೈರಿ,ಕಲಾವಿದರಿಗೆ ಚಿತ್ರವನ್ನು ಕಂಪ್ಯೂಟರಿನಲ್ಲಿ ಮೂಡಿಸಲು ಬಹು ಸಹಕಾರಿಯಾಗಬಹುದು.ಚಿತ್ರವನ್ನು ಮಾರ್ಪಡಿಸಲು,ಅಡೋಬ್,ಕೊರೆಲ್‌ಡ್ರಾದಂತಹ ತಂತ್ರಾಂಶಗಳಲ್ಲಿ ತೆರೆಯಲು ಇದನ್ನು ಬಳಸಬಹುದು.
----------------------------------------------
ಎಸೆಮೆಸತ್ಯ
ಎಸೆಮೆಸ್ ಸಂದೇಶಗಳನ್ನೇ ಸಂಗ್ರಹಿಸಿ ತಮ್ಮ ಬ್ಲಾಗ್ ಪುಟದಲ್ಲಿ ನೀಡಿರುವ ಬ್ಲಾಗು http://smsathya.blogspot.com/ನಲ್ಲಿದೆ.ಶಿವಮೊಗ್ಗದ ಸತ್ಯಚರಣ ಈ ಬ್ಲಾಗಿನ ಬರಹಗಾರರು.ವೃತ್ತಿ ಇಂಜಿನಿಯರ್-ತಂತ್ರಾಂಶ ಪ್ರವೀಣ.ಸಿಫಿ ಕಂಪೆನಿಯ ಉದ್ಯೋಗಿ.ತರಬೇತಿ ನೀಡುವ ಕೆಲಸವನ್ನೂ ಇವರು ಮಾಡುವುದಿದೆ.ಧಾರ್ಮಿಕ ಪ್ರವೃತ್ತಿಯ ವ್ಯಕ್ತಿಯಾದ ಇವರು ಸಾಯಿಬಾಬಾ ಭಕ್ತ.ಕಿರುಸಂದೇಶಗಳು ನೀಡುವ ಕಚಗುಳಿ ಹಿತವಾಗುವವರಿಗೆ ಕಣ್ಣಾಡಿಸಲು ಈ ಬ್ಲಾಗು ಸೂಕ್ತ ಸ್ಥಳ.
----------------------------------------------------------
ಟ್ವಿಟರ್ ಚಿಲಿಪಿಲಿ
*ಇಂಜಿನಿಯರ್ ದಿನದ ತಪ್ಪೊಪ್ಪಿಗೆ:ಅಂದು ನಾನು ಇಂಜಿನಿಯರ್ ಆಗಿದ್ದೆ,ಇಂದು ಉದ್ಯೋಗಿಯಾಗಿದ್ದೇನೆ..
*ಸುಖವಾಗಿರಲು ನನಗೆ ಬೇಕಾದ್ದು ಸ್ವಲ್ಪ ಪ್ರೀತಿ,ಸ್ವಲ್ಪ ಗೌರವ ಮತ್ತು ತುಂಬಾ ತುಂಬಾ ಹಣ...
*ಹೃದಯ ಕಲಕಿದ ಮಗುವಿನ ಮುಗ್ಧ ಮಾತು:ಎದುರು ಮನೆಯಲ್ಲಿ ಹಲವಾರು ಕಿಟಕಿಗಳಿವೆ,ಹಾಗೆಯೇ ನನ್ನ ಅಂಗಿಯಲ್ಲೂ..
---------UDAYAVANI---------------------------------Udayavani Bangalore---------
Udayavani Unicode
*ಅಶೋಕ್‌ಕುಮಾರ್ ಎ

Monday, September 13, 2010

ದಿಢೀರ್ ಶೋಧ:ಗೂಗಲ್ ಸ್ಪೆಶಲ್

ದಿಢೀರ್ ಶೋಧ:ಗೂಗಲ್ ಸ್ಪೆಶಲ್
 
ಟೈಪಿಸಿದಂತೆಲ್ಲಾ ಶೋಧ ಫಲಿತಾಂಶವನ್ನು ತೋರಿಸುವ ವಿನೂತನ ಸೇವೆಯು ಗೂಗಲ್ ನೀಡಲಾರಂಭಿಸಿದೆ.ಟೈಪಿಸಿದಾಗ ಪದಗುಚ್ಛಗಳನ್ನು ಸೂಚಿಸುವ ಸೇವೆಯಿದೀಗಲೇ ಇತ್ತು.ಈಗ ಶೋಧ ಪೆಟ್ಟಿಗೆಯ ಕೆಳಗೆ ನಿಮ್ಮ ಪದಗುಚ್ಛದ ಆಧಾರದ ಮೇಲೆ ಶೋಧ ಫಲಿತಾಂಶವನ್ನು ಊಹಿಸಿ,ಪ್ರದರ್ಶಿಸುವ ಹೊಸ ಬಗೆ ಸೇವೆ ಆರಂಭವಾಗಿದೆ.ನಾವು ಟೈಪಿಸಲು ಹೆಚ್ಚು ಹೊತ್ತು ತೆಗೆದುಕೊಳ್ಳುತ್ತೇವೆ,ಆದರೆ ಫಲಿತಾಂಶ ಒದಗಿಸಲು, ಟೈಪಿಸಲು ತೆಗೆದುಕೊಳ್ಳುವ ಸಮಯದ ಹತ್ತನೇ ಒಂದು ಸಮಯ ಸಾಕು ಎನ್ನುವುದೇ ಈ ವಿನೂತನ ವಿಧಾನದ ಹಿಂದಿನ ಗುಟ್ಟು.ಸದ್ಯ ಸೇವೆಯು ಯುಎಸ್,ಯುಕೆ,ರಶ್ಯಾ,ಜರ್ಮನಿ,ಪ್ರಾನ್ಸ್,ಇಟೆಲಿ ಮುಂತಾದೆಡೆ ಮಾತ್ರಾ ಲಭ್ಯವಿದೆ.ನಮ್ಮಲ್ಲಿ ಟೈಪಿಸಿದ ಹಾಗೆ ಪದಗಳನ್ನು ಸೂಚಿಸುವ ಸಹಾಯವಷ್ಟೇ ಸಿಗುತ್ತದೆ.ಪ್ರತಿ ಶೋಧ ನಡೆಸಿದಾಗಲೂ ದಿಡೀರ್ ಫಲಿತಾಂಶದಿಂದ ಎರಡರಿಂದ ಐದು ಸೆಕೆಂಡು ಉಳಿಯುತ್ತದೆ ಎಂದು ಅಂದಾಜು.ಪ್ರತಿ ಸೆಕೆಂಡಿನ ಶೋಧ ನಡೆದಾಗ ಅಂತರ್ಜಾಲದಲ್ಲಿ ಹನ್ನೊಂದು ಗಂಟೆಗಳಷ್ಟು ಮಾನವ ಗಂಟೆಗಳು ಉಳಿಯುತ್ತವೆ ಎಂದು ಗೂಗಲ್ ಅಂದಾಜು.ಟೈಪಿಸುವುದನ್ನು ಪೂರ್ಣಗೊಳಿಸುವ ಮೊದಲೇ ಫಲಿತಾಂಶ ಬರಲಾರಂಭಿಸಿದರೆ,ನಮ್ಮ ಲಕ್ಷ್ಯ ಅತ್ತ ಹರಿದು,ನಮ್ಮ ಶೋಧದ ಬಗ್ಗೆ ವಿಮುಖರಾಗುವ ಸಂಭಾವ್ಯತೆಯನ್ನು ಅಲ್ಲಗಳೆಯುವಂತಿಲ್ಲವೆಂದು ಕೆಲವರ ಗುಮಾನಿ.
--------------------------------------------
ನಿತ್ಯಪಂಚಾಂಗ

ನಿತ್ಯವೂ ನಿಮ್ಮ ಮೊಬೈಲಿಗೆ ನಿತ್ಯಪಂಚಾಂಗ ಕಿರುಸಂದೇಶವಾಗಿ ಬರಬೇಕೇ?ಇಂತಹ ಸೇವೆಯು ಆನ್‌ಲೈನಿನಲ್ಲಿ ಲಭ್ಯ.http://labs.google.co.in/smschannels/subscribe/DailyPanchangaತಾಣಕ್ಕೆ ಹೋಗಿ,ಈ ಸೇವೆಗೆ ನೋಂದಾಯಿಸಬಹುದು.ನಿತ್ಯವೂ ಮೊಬೈಲಿಗೆ ಕಿರು ಸಂದೇಶದಲ್ಲಿ ಪಂಚಾಂಗ ವಿವರಗಳು ಬಂದು ಬಿಡುತ್ತವೆ.ಬೇಡವಾದರೆ ಈ ಸೇವೆಯನ್ನು ನಿಲ್ಲಿಸಲೂ ಬರುತ್ತದೆ.ಅಂದಹಾಗೆ ಇದು ಉಚಿತ ಸೇವೆ.
-----------------------------------
ಟ್ವಿಟರ್ ಚಿಲಿಪಿಲಿ
*ಸೇಲ್ಸ್‌ಗರ್ಲ್‌ಗೆ ಕನ್ನಡದಲ್ಲಿ ಏನೆನ್ನುತ್ತಾರೆ?ಮಾರಮ್ಮ!
*ಪುಸ್ತಕದಂಗಡಿಯಲ್ಲಿ "ಸ್ವಸಹಾಯ"ದ ಬಗೆಗಿನ ಪುಸ್ತಕಗಳನ್ನು ಯಾವೆಡೆ ಇಟ್ಟಿದ್ದೀರಾ--ತೋರಿಸುತ್ತೀರಾ ಎಂಬ ಕೋರಿಕೆಗೆ,ಹಾಗೆ ಮಾಡೋದು "ಸ್ವಸಹಾಯ"ತತ್ತ್ವಕ್ಕೆ ವಿರೋಧ ಎಂಬ ಮುಗುಂ ಉತ್ತರ ಬಂತು!
*ಹೃದಯವಿರುವುದು ಒಂದೇ,ಅದನ್ನು ಮುರಿಯದಿರಿ,ಬೇಕಿದ್ದರೆ ಹಲ್ಲು ಮುರಿಯಿರಿ,ಅವಾದರೆ ಮೂವತ್ತೆರಡಿವೆ!
*ಸ್ವತಂತ್ರ ತಂತ್ರಾಂಶಗಳನ್ನೇ ಬಳಸಿ-ರಿಚಾರ್ಡ್ ಸ್ಟಾಲ್‌ಮನ್
-----------------------------------
ಅರಿವಿನ ಮರೆವು

ಅರಿವಿನ ಮರೆವು ಇದು ಹುಬ್ಬಳ್ಳಿಯ ಪತ್ರಿಕೋದ್ಯಮ ಕಾಲೇಜು ಐಬಿಎಂಆರ್‌ನ ಸಹಾಯಕ ಪ್ರಾಧ್ಯಾಪಕ ಹರ್ಷವರ್ಧನ ವಿ ಶೀಲವಂತ್ ಅವರ ಬ್ಲಾಗ್‌ನ ಶೀರ್ಷಿಕೆ.arivinamarevu.blogspot.comನಲ್ಲಿ ಅವರ ಬ್ಲಾಗು ಬರಹಗಳಿದ್ದರೂ,ಅವರು ಪ್ರಸ್ತುತ ಸಕ್ರಿಯರಾಗಿರುವುದು ಸಂಪದ ಸಮುದಾಯ ತಾಣದಲ್ಲಾಗಿದೆ.ಗಣೇಶನ ಹಬ್ಬದ ಸಂದರ್ಭದ ಬರಹದಲ್ಲಿ,ಜನರ ನಂಬಿಕೆಗಳು ಪರಿಸರಕ್ಕೆ ಹೇಗೆ ಹಾನಿ ತರುತ್ತವೆ ಎಂಬುದಕ್ಕೆ ಉದಾಹರಣೆಯಾಗಿ,ಗಣೇಶನಿಗೆ ಗೀಜಗನ ಗೂಡಿನ ಅಲಂಕಾರದ ಬಗ್ಗೆ ಬರೆದು ಗಮನ ಸೆಳೆದಿದ್ದಾರೆ.ಇಂತಹ ಸರಣಿ ಬರವಣಿಗೆಗಳು sampada.netನಲ್ಲಿವೆ.http://kannada.indiawaterportal.org/ನಲ್ಲೂ ಇವರು ಖಾಯಂ ಆಗಿ ಬರೆಯುತ್ತಿದ್ದಾರೆ.ಬಣ್ಣರಹಿತ ಪರಿಸರಪ್ರಿಯ ಗಣೇಶನ ಮೂರ್ತಿಗಳ ಬಗ್ಗೆ ಇತ್ತೀಚೆಗೆ ಬರೆದಿದ್ದಾರೆ.ಈ ತಾಣದಲ್ಲಿ ನೀರಿನ ಬಗ್ಗೆ ಓತಪ್ರೋತವಾಗಿ ಬರೆಯುವ ಹರ್ಷವರ್ಧನರು,ಆಕಾಶವಾಣಿಯಲ್ಲಿ ಪ್ರದೇಶ ಸಮಾಚಾರವನ್ನೂ ಓದುತ್ತಾರೆ.ಆಕಾಶವಾಣಿಯ ಶ್ರೇಣೀಕೃತ ಕಲಾವಿದರೂ ಹೌದು.
--------------------------------------------------------
ಗೂಗಲ್ ಡೂಡ್ಲ್‌ನಲ್ಲಿ ಚುಕ್ಕಿ ಏಕೆ?

ಗೂಗಲ್ ಪುಟದಲ್ಲಿ ಗೂಗಲ್ ಡೂಡ್ಲ್ ಎಂಬ ಚಿತ್ರಗಳನ್ನು ಪ್ರದರ್ಶಿಸುವ ಕ್ರಮವಿದೆ.ಅದು ದಿನ ವಿಶೇಷದ ಮೇಲೆ ಬದಲಾಗುತ್ತಿರುತ್ತದೆ.ಇತ್ತೀಚೆಗೆ ಗೂಗಲ್ ಎಂಬುದನ್ನು ಚುಕ್ಕಿಯಲ್ಲೇ ಬರೆಯಲಾಗಿತ್ತು.ಅದರ ಹಿಂದಿನ ಮಹತ್ತ್ವವೇನು ಎನ್ನುವುದು ಯಾರಿಗೂ ಗೊತ್ತಾಗಲಿಲ್ಲ.ಕೊನೆಗೂ ಈ ಚುಕ್ಕಿಚಿತ್ರದ ಗುಟ್ಟನ್ನು ಗೂಗಲ್ ಬಿಟ್ಟುಕೊಡಲೂ ಇಲ್ಲ,ಜನರು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದನ್ನು ಬಿಡಲೂ ಇಲ್ಲ.
-------------------------------------------------------
ಓದುಗರ ಅನಿಸಿಕೆಗಳು
ಟ್ವಿಟರ್ ಚಿಲಿಪಿಲಿಗಳನ್ನು ಹೆಚ್ಚಿಸಲು ಪ್ರಸನ್ನ ಶಂಕರಪುರ ಅವರು ಸಲಹೆ ನೀಡಿದರೆ,ನಿಸ್ತಂತು ಸಂಸಾರದಲ್ಲಿ ನೀಡಿದ ಮಾಹಿತಿಗಳು ಉಪಯುಕ್ತ ಎಂದು "ದೀವಿಗೆ" ಬ್ಲಾಗಿನ ಮನ"ಮುಕ್ತಾ" ಶ್ಲಾಘಿಸಿದ್ದಾರೆ.ಏಕಕಾಲದಲ್ಲಿ ಎರಡು ಜಿಮೇಲ್ ಖಾತೆಗಳಿಗೆ ಲಾಗಿನ್ ಆಗುವ ಬಗೆಯನ್ನು ಬರೆದದ್ದು ವಿ ಆರ್ ಭಟ್ ಅವರಿಗೆ ಖುಷಿ ಕೊಟ್ಟಿದೆ.ಶ್ರೀರಾಮ್ ಕೂಡಾ ಈ ಬರಹದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.ಪರಿಸರಪ್ರಿಯ ಕಾಂಕ್ರೀಟಿನ ಬಗೆಗಿನ ಬರಹ ಸಿವಿಲ್ ಇಂಜಿನಿಯರ್ ಆಗಿರುವ ಪ್ರಕಾಶ್ ಭಟ್‌ರಿಗೆ ಹಿಡಿಸಿದೆ.ಬರಹಗಳು ಮಾಹಿತಿಪೂರ್ಣ ಎಂಬುದು ಓದುಗರ ಸಾಮಾನ್ಯ ಅಭಿಪ್ರಾಯವಾಗಿದೆ.
-----------------------------------------------------------
ಆಲೋಚನೆಯನ್ನು ಗ್ರಹಿಸಬಲ್ಲ ಕಂಪ್ಯೂಟರ್
ಮನಸ್ಸಿನಲ್ಲಿ ಏನನ್ನಾದರೂ ಯೋಚಿಸಿದಾಗ,ಅದು ಉಂಟು ಮಾಡುವ ಸಂಕೇತಗಳನ್ನು ತಿಳಿದುಕೊಂಡು,ವ್ಯಕ್ತಿಯ ಯೋಚನೆಯನ್ನು ಅರಿಯಲು ಸಂಶೋಧಕರಿಗೆ ಸಾಧ್ಯವಾಗಿದೆ.ಊಟಾ ವಿವಿಯ ಬಯೋ ಇಂಜಿನಿಯರ್ ಪ್ರೊಫೆಸರ್ ಬ್ರೇಡ್ಲೀ ಗ್ರೆಗರ್ ಅವರು ಲಕ್ವಾಪೀಡಿತ ವ್ಯಕ್ತಿಯ ಮಿದುಳಿನ ಮಾತಿನ ಕೇಂದ್ರಕ್ಕೆ ಹದಿನಾರು ವಿದ್ಯುಧ್ರುವಗಳನ್ನು ಅಳವಡಿಸಿದರು.ವ್ಯಕ್ತಿಯಿಂದ ಕೆಲವು ಶಬ್ದಗಳನ್ನು ಓದಿಸಿದಾಗ,ಆತನ ಮಿದುಳಿನಿಂದ ಹೊರಡುವ ಸಂಕೇತಗಳನ್ನು ಕಂಪ್ಯೂಟರಿಗೆ ಉಣಿಸಲಾಯಿತು.ನಂತರ ವ್ಯಕ್ತಿ ಕಂಪ್ಯೂಟರಿನಲ್ಲೆ ಅದೇ ಶಬ್ದಗಳನ್ನು ಟೈಪಿಸಿದಾಗ,ವಿದ್ಯುಧ್ರುವಗಳಿಂದ ಹೊರಡುವ ಸಂಕೇತಗಳನ್ನು ಮೊದಲಿಗೆ ಸಂಗ್ರಹಿಸಿದ ಸಂಕೇತಗಳೊಂದಿಗೆ ಸರಿಯಾಗಿ ಹೊಂದಿಸಲು ಕಂಪ್ಯೂಟರ್ ಸಮರ್ಥವಾಯಿತು.ಯಶಸ್ಸಿನ ಪ್ರಮಾಣವೂ ಎಪ್ಪತ್ತೈದು ಪ್ರತಿಶತಕ್ಕಿಂತ ಹೆಚ್ಚೇ ಇತ್ತು.ಮನಸ್ಸನ್ನು "ಓದುವ" ಸಾಮರ್ಥ್ಯದಲ್ಲಿ ಇದೊಂದು ಕಿರು ಹೆಜ್ಜೆಯಾದರೂ,ಈ ಯಶಸ್ಸು ಬ್ರೇಡ್ಲೀಯವರ ತಂಡಕ್ಕೆ ಹುರುಪು ತಂದಿದೆ.ಮಾತಾನಾಡಲಾಗದ ಸ್ಥಿತಿಯಲ್ಲಿರುವ ರೋಗಿಗಳ ಮನಸ್ಸಿನ ಯೋಚನೆಗಳನ್ನು ತಿಳಿಯಲು ಸಾಧ್ಯವಾದರೆ ಅದೊಂದು ಸಾಧನೆಯೇ ತಾನೇ?
ಉದಯವಾಣಿ ಬೆಂಗಳೂರು
udayavani
*ಅಶೋಕ್‌ಕುಮಾರ್ ಎ

Monday, September 06, 2010

ಜಿಮೇಲ್:ಪ್ರತ್ಯೇಕವಾಗಿ ಪ್ರತ್ಯಕ್ಷವಾಗುವ ಮುಖ್ಯ ಮಿಂಚಂಚೆಗಳು

ಜಿಮೇಲ್:ಪ್ರತ್ಯೇಕವಾಗಿ ಪ್ರತ್ಯಕ್ಷವಾಗುವ ಮುಖ್ಯ ಮಿಂಚಂಚೆಗಳು
ಜಿಮೇಲ್ ತನ್ನ ಮಿಂಚಂಚೆ ಸೇವೆಗೆ ಹೊಸ ಹೊಸ ಸೇವೆಗಳನ್ನು ಸೇರಿಸುತ್ತಾ ಬಂದಿದೆ.ಈ ವಾರದ ವಿಶೇಷವೆಂದರೆ,ಮಿಂಚಂಚೆಯಲ್ಲಿ ಮುಖ್ಯ ಮಿಂಚಂಚೆಗಳನ್ನು ಪ್ರತ್ಯೇಕಿಸಿ ತೋರಿಸುವ ಸೌಲಭ್ಯವಾಗಿದೆ.ಬಳಕೆದಾರನು ಸಾಮಾನ್ಯವಾಗಿ ಮೊದಲು ಗಮನಹರಿಸುವ ಮಿಂಚಂಚೆಗಳು ಯಾರಿಂದ ಬಂದದ್ದು ಎಂಬ ಆಧಾರದಲ್ಲಿ,ಜಿಮೇಲ್ ಈ ಪ್ರಮುಖ ಮಿಂಚಂಚೆಗಳನ್ನು ನಿರ್ಧರಿಸುತ್ತದೆ.ಉಳಿದ ಎಲ್ಲಾ ಮಿಂಚಂಚೆಗಳು ಸಾಮಾನ್ಯ ಇನ್‌ಬಾಕ್ಸ್ ಮಿಂಚಂಚೆ ಪೆಟ್ಟಿಗೆಯಲ್ಲಿ ಇರುತ್ತವೆ.ಇನ್ನು ಬಳಕೆದಾರ,ತಾನು ಗಮನಹರಿಸಬೇಕಾದ ಕೆಲ ಮಿಂಚಂಚೆಗಳಿಗೆ ನಕ್ಷತ್ರ ಗುರುತನ್ನು ಹಾಕಿದ್ದರೆ,ಅವು ನಕ್ಷತ್ರ ಮಿಂಚಂಚೆ ಪೆಟ್ಟಿಗೆಯಲ್ಲಿ ಪ್ರತ್ಯೇಕವಾಗಿರುತ್ತವೆ.ಮಿಂಚಂಚೆಗಳ ಈ ವರ್ಗೀಕರಣದಿಂದ,ಅವಸರದಲ್ಲಿದ್ದಾಗ,ಮೊದಲು ತುರ್ತು ಗಮನ ಹರಿಸಬೇಕಾದ ಮಿಂಚಂಚೆಗಳು ಯಾವುವೆಂದು ಗೊತ್ತಾಗುವ ಅನುಕೂಲ ಸಿಗುತ್ತದೆ.
---------------------------------------------
ಐಐಟಿಯ ಪಾಠಗಳು ಯುಟ್ಯೂಬ್‌ನಲ್ಲಿ

ಐಐಟಿ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸಯನ್ಸ್ ಸಂಸ್ಥೆಗಳು ತಮ್ಮ ಪ್ರೊಫೆಸರುಗಳ ಉಪನ್ಯಾಸಗಳ ಮಾಲಿಕೆ ಸಿದ್ಧಪಡಿಸಿ,ಯುಟ್ಯೂಬಿನ youtube.com/iit ವಿಳಾಸ ಮೂಲಕ ಜನರಿಗೆ ಒದಗಿಸುತ್ತಿವೆ.ಯಾರೂ ಬೇಕಾದರೂ ಆನ್‌ಲೈನಿನಲ್ಲಿ ಇವನ್ನು ನೋಡಬಹುದು.ದೇಶದ ಅತ್ಯುತ್ತಮ ಶಿಕ್ಷಕರ ಉಪನ್ಯಾಸಗಳು,ಕಂಪ್ಯೂಟರ್ ತೆರೆಯ ಮೇಲೆ ಮೂಡಿಬರುವ ಅನುಕೂಲ ಅಂತರ್ಜಾಲವಲ್ಲದಿದ್ದರೆ ಸಿಗುತ್ತಿತ್ತೇ?ಇಂತಹ ವಿಡಿಯೋಗಳ ಸಂಖ್ಯೆ ಐದು ಸಾವಿರವನ್ನು ಸಮೀಪಿಸಿದೆ.ಸದ್ಯಕ್ಕೆ ಇವನ್ನು ಡೌನ್‌ಲೋಡ್ ಮಾಡಿಕೊಳ್ಳಲು ಆಗದು.ಆದರೆ ಮುಂಬರುವ ದಿನಗಳಲ್ಲಿ ಅದಕ್ಕೂ ಅನುವು ಸಿಗಬಹುದು.ಈ ವಿಡಿಯೋ ಪಾಠಗಳು ಇಂಜಿನಿಯರಿಂಗ್ ಮತ್ತು ವಿಜ್ಞಾನ ವಿದ್ಯಾರ್ಥಿಗಳಿಗೆ ಹೇಳಿ ಮಾಡಿಸಿದಂತಿವೆ.ಕಾಲೇಜಿನಲ್ಲಿ ಪಾಠಗಳು ಚೆನ್ನಾಗಿ ನಡೆಯದಿದ್ದರೇನಾಯಿತು-ಅಂತರ್ಜಾಲ ಸಂಪರ್ಕ ಇದ್ದರೂ ಸಾಕು ಎನ್ನುವ ಕಾಲ ಬಂತು ನೋಡಿ.
-------------------------------------------
ಟ್ವಿಟರ್ ಚಿಲಿಪಿಲಿ
*ನೂರು ಬೆಕ್ಕುಗಳ ಸಮೂಹಕ್ಕೆ ಏನು ಹೆಸರು?ಸೌ-ಮಿಯಾಂವ್(ಸೌಮ್ಯ)
*ಹೆಂಡತಿಗೆ ಹೆರಿಗೆಯಾದ ಕೂಡಲೇ ಗಂಡ ಓಡುವ ನಗರ ಯಾವುದು?bagh-dad
*ಮನುಷ್ಯರಿಗಾದರೆ ಶಟಪ್,ಕಂಪ್ಯೂಟರಿಗೆ ಶಟ್‌ಡೌನ್..ಇದ್ಯಾಕೆ ಹೀಗೆ!
*ದೇವರು ಸ್ವರ್ಗ,ನರಕಗಳನ್ನು ಸೃಷ್ಟಿಸಿದ,ಉಳಿದದ್ದೆಲ್ಲಾ ಮೇಡ್ ಇನ್ ಚೈನಾ.. :)
-------------------------------------
ಐಪ್ಯಾಡ್ ಹೋಲುವ ಗೇಲಾಕ್ಸಿ
ಸ್ಯಾಮ್‌ಸಂಗ್ ಕಂಪೆನಿಯು ಆಪಲ್ ಕಂಪೆನಿಯ ಐಪ್ಯಾಡ್ ಸಾಧನವನ್ನು ಹೋಲುವ ಸಾಧನವನ್ನು ತಯಾರಿಸಿದೆ.ಇ-ಪುಸ್ತಕ,ಚಲನಚಿತ್ರ ವೀಕ್ಷಣೆ,ಅಂತರ್ಜಾಲ ಜಾಲಾಟ,ದೂರವಾಣಿ ಕರೆ ಮಾಡಲು,ಜಿಪಿಎಸ್ ಸೇವೆ ಬಳಸಿ,ಬೇಕಾದ ಸ್ಥಳ ತಲುಪಲು ನಕಾಶೆ ವೀಕ್ಷಿಸಲು ಹೀಗೆ ಇದನ್ನು ಹಲವು ರೀತಿಯಲ್ಲಿ ಬಳಸಬಹುದು.ನಿಸ್ತಂತು ಜಾಲಗಳು ಇದ್ದಲ್ಲಿ ಇಂತಹ ಸವಲತ್ತುಗಳನ್ನು ಪಡೆಯುವುದು ಸಾಧ್ಯವಾಗುತ್ತದೆ.ಏಳಿಂಚಿನ ತೆರೆ ಇದರಲ್ಲಿದೆ.ಸ್ಪರ್ಶ ಸಂವೇದಿ ತೆರೆ,ಹದಿನಾರು ಜಿಬಿ ಸ್ಮರಣಸಾಮರ್ಥ್ಯ ಇದರಲ್ಲಿದೆ.ಚಿತ್ರಗಳನ್ನು ಸ್ಪಷ್ಟವಾಗಿ ತೋರಿಸಲು ಅಧಿಕ ಸ್ಪಷ್ಟತೆಯ ತೆರೆಯೂ ಗ್ಯಾಲಕ್ಸಿಯಲ್ಲಿದೆ.ಎದುರು ಬದಿಯಲ್ಲಿ 1.3ಮೆಗಾಪಿಕ್ಸೆಲ್ ಕ್ಯಾಮರಾ ಇದ್ದು,ಇದು ವಿಡಿಯೋ ಕರೆಗಳನ್ನು ಮಾಡಲು ಸೂಕ್ತವಾಗಿದೆ.ಹಿಂಬದಿಯ ಕ್ಯಾಮರಾ ಅಧಿಕ ಸ್ಪಷ್ಟತೆಯುಳ್ಳ,ಮೂರು ಮೆಗಾಪಿಕ್ಸೆಲ್ ಸಾಮರ್ಥ್ಯದ್ದು-ಇದರಲ್ಲಿ ಎಲ್ ಇ ಡಿ ಲ್ಯಾಂಪ್ ಕೂಡಾ ಇದೆ.ಮುನ್ನೂರ ಎಂಭತ್ತು ಗ್ರಾಮ್ ತೂಕದ ಗ್ಯಾಲಕ್ಸಿಯ ದಪ್ಪ ಒಂದು ಸೆಂಟಿಮೀಟರಿನಿಂದ ತುಸು ಹೆಚ್ಚು.ಹತ್ತೊಂಭತ್ತು ಸೆಂಟಿಮೀಟರ್ ಉದ್ದ,ಹನ್ನೆರಡು ಸೆಂಟಿಮೀಟರ್ ಅಗಲದ ಸಾಧನವಿದು.ಟೈಪಿಸಲು ಮಿಥ್ಯಾ ಕೀಲಿಮಣೆಯನ್ನು ಬಳಸಬೇಕು.
-----------------------------
ಆಪಲ್:ಪಿಂಗ್,ಐಪೋಡ್,ಟಿವಿ
ಆಪಲ್ ಕಂಪೆನಿಯು ಮೂರೇ ತಿಂಗಳುಗಳಲ್ಲಿ ಮೂರು ದಶಲಕ್ಷ ಐಪ್ಯಾಡ್ ಸಾಧನಗಳನ್ನು ಮಾರಾಟ ಮಾಡಿ ವಿಕ್ರಮ ಸ್ಥಾಪಿಸಿದ ಆತ್ಮವಿಶ್ವಾಸದಲ್ಲಿದೆ.ಅದು ಸಂಗೀತಪ್ರಿಯರ ಸಾಮಾಜಿಕ ಜಾಲತಾಣ ಪಿಂಗ್ ಅನ್ನು ಆರಂಭಿಸಿದೆ.ಈ ತಾಣದಲ್ಲಿ ಜನರು ಮಾರಾಟದಲ್ಲಿ ಮುಂದಿರುವ ಸಂಗೀತ ಮುದ್ರಿಕೆಗಳು ಯಾವುವು ಎನ್ನುವುದರ ಜತೆಗೆ,ತಮ್ಮ ಮಿತ್ರರು ಏನು ಆಲಿಸುತ್ತಿದ್ದಾರೆ ಎನ್ನುವುದನ್ನು ಅರಿಯುವ ಅವಕಾಶ ನೀಡಿದೆ.ಮೊದಲದಿನವೇ ಪಿಂಗ್ ಅಂತರ್ಜಾಲತಾಣಕ್ಕೆ ದಶಲಕ್ಷ ಜನರು ಚಂದಾದಾರರಾಗಿದ್ದಾರೆ.ಆಪಲ್‌ನ ಐಟ್ಯೂನ್ ಎನ್ನುವ ಆನ್‌ಲೈನ್ ಪ್ಲೇಯರ್ ಸೇವೆಯ ಜತೆಜತೆಗೆ ಪಿಂಗ್ ತಾಣವನ್ನು ಒದಗಿಸಲಾಗಿದೆ.ಪಿಂಗ್‌ನ ವಿಳಾಸ http://www.apple.com/itunes/ping ಎಂದಾಗಿದೆ.
ಆಪಲ್ ಟಿವಿ ಎನ್ನುವ ಸೆಟ್‌ಟಾಪ್ ಬಾಕ್ಸ್ ನಿಸ್ತಂತು ಜಾಲದಿಂದ ಟಿವಿ ಕಾರ್ಯಕ್ರಮಗಳನ್ನು ಕಿರಿದಾದ ತೆರೆಯಲ್ಲಿ ನೋಡಲು ಸಾಧ್ಯವಾಗಿಸುವ ಚಿಕಣಿ ಸಾಧನ.ಟಿವಿ ಕಾರ್ಯಕ್ರಮಗಳಿಗೆ ಒಂದು ಡಾಲರು ಮತ್ತು ಚಲನಚಿತ್ರಗಳಿಗೆ ಐದು ಡಾಲರು ದರ ತೆರಬೇಕು.ಆಪಲ್ ಟಿವಿಯ ಬೆಲೆ ತೊಂಭತ್ತೊಂಭತ್ತು ಡಾಲರುಗಳು.ನಮ್ಮಲ್ಲಿ ಈ ಸಾಧನ ಸದ್ಯಕ್ಕಂತೂ ಉಪಯೋಗವಾಗದು.
ಐಪೋಡ್ ಎನ್ನುವ ತನ್ನ ಮತ್ತೊಂದು ಜನಪ್ರಿಯ ಸಾಧನದ ಹೊಸ ಮಾಡೆಲ್‌ಗಳನ್ನು ಆಪಲ್ ಮಾರುಕಟ್ಟೆಗೆ ತರಲಿದೆ.ಐಪೋಡ್ ಟಚ್-4ಜಿ ಮೂರುವರೆ ಇಂಚಿನ ರೆಟಿನಾ ತೆರೆಯನ್ನು ಹೊಂದಲಿದೆ.ಐಫೋನಿನ ಚಿಪ್‌ಗಳ ಬಳಕೆಯು ಇದರಲ್ಲೂ ಆಗಲಿದೆ.ಹಿಂದೆ,ಮುಂದೆ ಹೀಗೆ ಎರಡು ಕ್ಯಾಮರಾಗಳಿವೆ.ಮುಂದಿನ ಕ್ಯಾಮರಾ ವಿಡಿಯೋ ಕರೆ ಮಾಡಲೋಸುಗ ಅಳವಡಿಸಲಾಗಿದೆ.ಮುನ್ನೂರು ಡಾಲರು ಬೆಲೆಯ ಐಪೋಡ್ ಮೂವತ್ತೆರಡು ಜಿಬಿಯದ್ದದಾದರೆ, ನಾಲ್ಕುನೂರು ಡಾಲರಿಗೆ ಅರುವತ್ತನಾಲ್ಕು ಜಿಬಿಯದ್ದು ಸಿಗುತ್ತದೆ.
ಐಪೋಡ್ ನ್ಯಾನೋ ಎನ್ನುವ ಸ್ಪರ್ಶ ಸಂವೇದಿ ತೆರೆಯ ನೂರೈವತ್ತು ಡಾಲರು ಬೆಲೆಯ ಸಂಗೀತ ಆಲಿಸುವ ಸಾಧನವನ್ನು ಇಪ್ಪತ್ತನಾಲ್ಕು ಗಂಟೆ ಚಾರ್ಜ್ ಮಾಡದೆ ಬಳಸಲು ಸಾಧ್ಯ.ಎಂಟು ಜಿಬಿ ಸಾಮರ್ಥ್ಯದ್ದಕ್ಕೆ ಬೆಲೆ ನೂರೈವತ್ತು ಡಾಲರುಗಳಾದರೆ,ಹದಿನಾರು ಜಿಬಿಯದ್ದಕ್ಕೆ ನೂರಎಂಭತ್ತು ಡಾಲರು ತೆರಬೇಕಾಗುತ್ತದೆ.
ಐಪಾಡ್ ಶಫಲ್ ಎನ್ನುವ ಸಂಗೀತ ಸಾಧನ ಹದಿನೈದು ಗಂಟೆಯ ಬ್ಯಾಟರಿಯೊಂದಿಗೆ ಬರಲಿದ್ದು,ಬೆಲೆ ಕೇವಲ ಐವತ್ತು ಡಾಲರುಗಳು.ಇದರಲ್ಲಿರುವ ಕ್ಲಿಕ್-ಚಕ್ರ ಬಳಸಿ ಹಾಡು ಬದಲಿಸಲು ಸುಲಭವಾಗಿ ಸಾಧ್ಯವಾಗಲಿದೆ.
---------------------------------------------
ಪ್ರಸನ್ನರ "ಅಂತಃಸ್ಫುರಣ"

ಪ್ರಸನ್ನ ಶಂಕರಪುರ ಅವರ ಅಂತಃಸ್ಫುರಣ ಎನ್ನುವ ಕನ್ನಡ ಬ್ಲಾಗ್ http://prasannakannada.blogspot.comನ ಅಂತರ್ಜಾಲ ವಿಳಾಸದಲ್ಲಿದೆ.ಕನ್ನಡ,ದೇವರು-ಆಧ್ಯಾತ್ಮ,ಹಾಸ್ಯ,ಕತೆ-ಕವನ,ಅಡುಗೆ ಹೀಗೆ ಹಲವು ವೈವಿಧ್ಯಮಯ ಬರಹಗಳು ಈ ಬ್ಲಾಗಿನಲ್ಲಿವೆ.ತಂತ್ರಜ್ಞಾನಕ್ಕೆ ಸಂಬಂಧಿಸಿದ ಬರಹಗಳು ಇಲ್ಲಿನ ಹೈಲೈಟ್.ಟೆಕ್-ಕನ್ನಡ ಎನ್ನುವ ಇವರ ಇನ್ನೊಂದು ಬ್ಲಾಗಿನ ಮೂಲಕ ವಿವಿಧ ಲೇಖಕರ ತಂತ್ರಜ್ಞಾನ ಸಂಬಂಧಿ ಬರಹಗಳನ್ನು ಒದಗಿಸುವ ಪ್ರಯತ್ನ ಮಾಡುತ್ತಿದ್ದಾರೆ.ಲಿನಕ್ಸ್ ಮತ್ತು ಮುಕ್ತತಂತ್ರಾಂಶದ ಬೆಂಬಲಿಗ ಪ್ರಸನ್ನರ ಊರು ಕಮ್ಮರಡಿ.
----------------------------------------
ಚೌತಿ ಸ್ಪೆಷಲ್:ಬ್ರಾಡ್‌ಬ್ಯಾಂಡ್ ದರ ಇಳಿಕೆ
ನಾಲ್ಕುನೂರತೊಂಭತ್ತೊಂಭತ್ತು ರೂಪಾಯಿ ಮಾಸಿಕ ಬ್ರಾಡ್‌ಬ್ಯಾಂಡ್ ಶುಲ್ಕ ತೆತ್ತರೆ ಅಪರಿಮಿತ ಡೌನ್‌ಲೊಡ್ ಅವಕಾಶ ನೀಡುವ ಬ್ರಾಡ್‌ಬ್ಯಾಂಡ್ ಯೋಜನೆಗೆ ಪರಿವರ್ತನೆಗೆ ಕರ್ನಾಟಕದ ಗ್ರಾಹಕರಿಗೆ ಅವಕಾಶ ನೀಡಲು ಬಿಎಸೆನೆಲ್ ಮುಂದೆ ಬಂದಿದೆ.ಧ್ವನಿಕರೆ ಮತ್ತು ಮಾಸಿಕ ಲ್ಯಾಂಡ್‌ಲೈನ್ ಬಾಡಿಗೆಗಳು ಸದ್ಯ ಇರುವಷ್ಟೇ ಮುಂದುವರಿಯಲಿದ್ದು,ಬ್ರಾಡ್‌ಬ್ಯಾಂಡ್ ವೇಗ ಇನ್ನೂರೈವತ್ತಾರು ಕೆಬಿಪಿಎಸ್‌ನಷ್ಟಿರುತ್ತದೆ.ಮೊದಲಾಗಿ ಪಾವತಿಸಿದರೆ,ವಾರ್ಷಿಕ ಶುಲ್ಕವಾಗಿ ಹತ್ತು ತಿಂಗಳ ದರವನ್ನೇ ಪಾವತಿಸಿದರೆ ಸಾಕು ಎನ್ನುವ ರಿಯಾಯಿತಿಯೂ ಇದೆ.
----------------------------------udayavani-bangalore

udayavani
*ಅಶೋಕ್‌ಕುಮಾರ್ ಎ