Monday, October 25, 2010

ಗೂಗಲ್ ಮೂಲಕ ಬಾಲಿವುಡ್ ಸಂಗೀತ

ಗೂಗಲ್ ಮೂಲಕ ಬಾಲಿವುಡ್ ಸಂಗೀತ
 
ಹಿಂದಿ ಚಿತ್ರಗೀತೆಗಳ ಸಂಗ್ರಹದ ಶೋಧ ಸೇವೆಯನ್ನು ಗೂಗಲ್ ಈಗ ಒದಗಿಸಲಾರಂಭಿಸಿದೆ.ಕಲಾವಿದ,ಚಿತ್ರ ಅಥವಾ ಹಾಡಿನ ಸಾಲಿನ ಮೂಲಕ ಹುಡುಕಬಹುದು.ಹುಡುಕಿದ ನಂತರ ಹಾಡನ್ನು ಕೇಳಿಸಿಕೊಳ್ಳುವುದೂ ಸುಲಭ-ಹಾಡಿನ ಕೊಂಡಿಯನ್ನು ಕ್ಲಿಕ್ಕಿಸಿದರೆ,ಹಾಡು ಡೌನ್‌ಲೋಡ್ ಆಗಿ ತಕ್ಷಣ ಪ್ಲೇ ಆಗುತ್ತದೆ.ಸದ್ಯ ಹಿಂದಿ ಹಾಡುಗಳು ಲಭ್ಯವಾಗಿವೆ.ಉಳಿದ ಭಾರತೀಯ ಭಾಷೆಗಳಿಗೂ ಸೇವೆ ವಿಸ್ತರಿಸುವ ನಿರೀಕ್ಷೆಯಿದೆ.
---------------------------------------
ಅಗ್ಗದ ಸೆಲ್‌ಪೋನ್ 

ಬಡಜನರು ಒಂದೇ ಮೊಬೈಲ್ ಸಾಧನ ಬಳಸಿಯೂ,ಪ್ರತ್ಯೇಕ ಸೆಲ್‌ಪೋನ್ ನಂಬರ್ ಬಳಸಬಹುದಾದ ಕ್ಲೌಡ್‌ಫೋನ್ ಎನ್ನುವ ತಂತ್ರಜ್ಞಾನವೀಗ ಲಭ್ಯ.ಬರೇ ಇಪ್ಪತ್ತು ಸೆಂಟುಗಳನ್ನು ತೆತ್ತು ಈ ಸೌಲಭ್ಯದ ಬಳಕೆ ಲಭ್ಯವಿದೆ.ಮಿಂಚಂಚೆ ಖಾತೆಯಂತೆ ಸೆಲ್‌ಫೋನ್ ಖಾತೆಯನ್ನೂ ತೆರೆದು,ಇದಕ್ಕೆ ಮೊದಲಾಗಿ ಲಾಗಿನ್ ಆಗಬೇಕಾಗುತ್ತದೆ.ಯಾವುದೇ ಕರೆ ಬಂದಿದ್ದರೆ,ಲಾಗಿನ್ ಆದೊಡನೆ ಅದರ ಬಗ್ಗೆ ಆತನಿಗೆ ಮಾಹಿತಿ ಲಭಿಸುತ್ತದೆ.ಬಳಿಕ ಆತ ಬೇಕಾದ ಕರೆ ಮಾಡಬಹುದು.ಸಿಮ್ ಕಾರ್ಡನ್ನು ಮೊಬೈಲ್ ಸಾಧನಕ್ಕೆ ಹಾಕಿಯೂ ಒಂದೇ ಹ್ಯಾಂಡ್‌ಸೆಟ್‌ನಿಂದ ಹಲವರು ಕರೆ ಮಾಡಬಹುದು ನಿಜ,ಆದರೆ ಸಿಮ್ ಅನ್ನು ಹಾಕುವುದು,ತೆಗೆಯುವುದು ಕಿರಿ-ಕಿರಿ ತಾನೇ?ನೈಜೆಲ್ ವಾಗರ್ ಎಂಬಾತನ ಕ್ಲೌಡ್‌ಫೋನ್ ತಂತ್ರಜ್ಞಾನದ ಹರಿಕಾರ.ಆಫ್ರಿಕಾದಲ್ಲಿ ಇಂತಹ ಸೇವೆಯಿದೀಗ ಲಭ್ಯ.ಒಂದು ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಹ್ಯಾಂಡ್‌ಸೆಟ್ ಮಾರಾಟ ಕಷ್ಟಸಾಧ್ಯವಾದ್ದರಿಂದ ಇಂತಹ ಯೋಚನೆ ಮಾಡಿದ್ದಾಗಿ ನೈಜೆಲ್ ವಾಗರ್ ಹೇಳುತ್ತಾನೆ.ಈ ತಂತ್ರಜ್ಞಾನವು ಆಪ್ರಿಕಾದಲ್ಲಿ ಕೆಲವು ಸೇವಾದಾತೃಗಳಿಂದ ಅಂಗೀಕರಿಸಲ್ಪಟ್ಟು,ಬಳಕೆದಾರರಿಗೆ ಲಭ್ಯವಿದೆ.ಒಂದು ವರ್ಷದೊಳಗೆ ಈ ಕ್ಲೌಡ್‌ಫೋನಿಗೆ ಒಂದು ದಶಲಕ್ಷ ಬಳಕೆದಾರರು ಲಭ್ಯವಾಗಬಹುದು ಎಂಬ ನಿರೀಕ್ಷೆ ಇದ್ದರೂ,ಹಾಗಾಗದೆ ಕೆಲವು ಸಾವಿರ ಬಳಕೆದಾರರು ಚಂದಾದಾರರಾಗಿದ್ದಾರೆ.
-------------------------------------------------------
ಮಾಯವಾಗಲು ಸಲಹೆ!!

ನಮ್ಮ ಪ್ರತಿಪಕ್ಷ ಶಾಸಕರುಗಳು "ಆಪರೇಶನ್ ಕಮಲ"ದ ಖೆಡ್ಡಾಗೆ ಸಿಲುಕದಂತೆ ಮಾಡಲು ರೆಸಾರ್ಟುಗಳಲ್ಲೇ ಗುಂಪಾಗಿ ಬೀಡುಬಿಡಬೇಕಾಗುತ್ತದೆ.ಸಾಮಾನ್ಯರೂ ಆಗೀಗ ಪೀಡಕರಿಂದ ತಪ್ಪಿಸಿಕೊಳ್ಳಲೋ ಇನ್ಯಾವುದೋ ಕಾರಣಕ್ಕೋ "ಮಾಯ"ವಾಗ ಬೇಕಾಗುತ್ತದೆ.ಇಂತವರಿಗೆ ಸೂಕ್ತ ಮಾರ್ಗದರ್ಶನ ಮಾಡುವ ಅಂತರ್ಜಾಲ ತಾಣವೂ ಇದೆ.http://www.frankahearn.com/ಯಲ್ಲಿ ಇಂತವರಿಗೆ ಉಚಿತವಾಗಿಯೂ ಸಲಹೆ ಲಭ್ಯವಿದೆ.ಮೊಬೈಲ್ ಸಾಧನ ಬಳಸುವಾಗ ಅದರಲ್ಲಿ ಜಿಪಿಆರೆಸ್ ಸೌಲಭ್ಯ ಹೊಂದದಿರುವುದು,ಕರೆಗಳನ್ನು ಸ್ವೀಕರಿಸಿ,ಗೂಗಲ್ ವಾಯಿಸ್ ಸೇವೆಯಂತಹ ಅಂತರ್ಜಾಲ ಸೇವೆಯ ಮೂಲಕ ಪಡೆದ ಅಂತರ್ಜಾಲ ಸೇವೆಗೆ ಕರೆಗಳನ್ನು ರವಾನಿಸುವುದು,ಆತನ ಸಲಹೆಗಳಲ್ಲಿ ಸೇರಿದೆ.
------------------------------------------------
ವಿಂಡೋಸ್ ಏಳು:ಹುಟ್ಟುಹಬ್ಬ
ಮೊದಲ ವರ್ಷ ಪೂರೈಸಿದ ವಿಂಡೋಸ್7 ಇದುವರೆಗೆ ಇಪ್ಪತ್ತನಾಲ್ಕು ಕೋಟಿ ಕಂಪ್ಯೂಟರುಗಳಲ್ಲಿ ಅನುಸ್ಥಾಪನೆಯಾಗಿದೆ.ಇದರಿಂದ ಅತ್ಯಂತ ಯಶಸ್ವಿ ಕಂಪ್ಯೂಟರ್ ಕಾರ್ಯನಿರ್ವಹಣಾ ವ್ಯವಸ್ಥೆ ತಂತ್ರಾಂಶವಿದೆಂದು ಸಿದ್ಧವಾಗಿದೆ.ಮೈಕ್ರೋಸಾಫ್ಟ್ ಕಂಪೆನಿಯ ಹಿಂದಿನ ವಿಸ್ತಾ ಕಂಪ್ಯೂಟರ್ ಕಾರ್ಯನಿರ್ವಹಣಾ ವ್ಯವಸ್ಥೆ ತಂತ್ರಾಂಶದ ಬಗ್ಗೆ ಬಹಳಷ್ಟು ಬಳಕೆದಾರರು ಅಸಮಾಧಾನ ಹೊಂದಿದ್ದರೆ,ಈ ಹೊಸ ಕಾರ್ಯನಿರ್ವಹಣಾ ವ್ಯವಸ್ಥೆ ಬಗ್ಗೆ ಬಳಕೆದಾರರ ದೂರುಗಳು ಅತ್ಯಂತ ಕಡಿಮೆಯೆಂದೇ ಹೇಳಬೇಕು.ಈ ವ್ಯವಸ್ಥೆಗಾಗಿ ರೂಪಿತವಾದ ಹಲವಾರು ತಂತ್ರಾಂಶಗಳೂ ತೊಂದರೆ ಕೊಡದೆ ಕೆಲಸ ಮಾಡುತ್ತಿವೆ.
----------------------------------------------------
ಗೂಗಲ್ ಮ್ಯಾಪ್:ರಸ್ತೆ ನೋಟ ಬಯಸದ ಜರ್ಮನ್ನರು
ಗೂಗಲ್ ಮ್ಯಾಪ್ ಸೇವೆಯಲ್ಲಿ ಕೆಲವು ನಗರಗಳ ರಸ್ತೆಯ ನೋಟಗಳೂ ಲಭ್ಯ.ವಾಹನಗಳನ್ನು ಬಳಸಿ ತೆಗೆದ ಚಿತ್ರಗಳ ಸಹಾಯದಿಂದ ನೆಲಮಟ್ಟದ ನೋಟವೂ ಸಿಗುತ್ತದೆ.ಈ ಸೇವೆಯ ಕಾರಣ,ಬಳಕೆದಾರನು ರಸ್ತೆಯಲ್ಲಿ ನಡೆದು ಹೋದಾಗ ಸಿಗುವ ನೋಟವೇ ಗೂಗಲ್ ಮ್ಯಾಪಿನ ಮೂಲಕ ಸಿಗುತ್ತದೆ.ಇಂತಹ ಸೇವೆಯಿಂದ ತಮ್ಮ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ ಎಂದು ಭಾವಿಸುವ ಮನೆಗಳವರು ಬಯಸಿದರೆ,ಅವರ ಮನೆಯ ನೋಟವನ್ನು ಅಸ್ಪಷ್ಟಗೊಳಿಸಲು ಗೂಗಲ್ ಸಿದ್ಧವಿದೆ.ಜರ್ಮನಿಯ ನಗರಗಳ ಸುಮಾರು ಶೇಕಡಾ ಮೂರು ಮನೆಗಳವರು ಇಂತಹ ಸೇವೆಯಿಂದ ತಮ್ಮ ಮನೆಯನ್ನು ಹೊರಗಿಡಲು ಬಯಸಿದ್ದಾರೆ.ಈ ಸೇವೆಯ ಮೂಲಕ ವ್ಯವಹಾರಸ್ಥರಿಗೆ ಅನುಕೂಲಕಲ್ಪಿಸುವುದು ಗೂಗಲ್ ಉದ್ದೇಶವಾಗಿದೆ.ರಸ್ತೆಸಾರಿಗೆ,ದಾರಿ ಕಂಡುಕೊಳ್ಳಲು ಅನುಕೂಲತೆ ಕಲ್ಪಿಸುವುದೂ ಅದರ ಇನ್ನೊಂದು ಉದ್ದೇಶ.ಜರ್ಮನಿಯಲ್ಲಿ ಈ ಸೇವೆ ಬಯಸದ ಎರಡೂವರೆ ಲಕ್ಷ ಮನೆಗಳಿವೆ.
--------------------------------------------------
ಉದಯವಾಣಿ ದೀಪಾವಳಿ ವಿಶೇಷಾಂಕ ಗೆಲ್ಲಿ!
*ಬರಹ ಪದಸಂಸ್ಕಾರಕ ತಂತ್ರಾಂಶ ಅಭಿವೃದ್ಧಿ ಪಡಿಸಿದ ವ್ಯಕ್ತಿ ಯಾರು?ಮೊದಲ ಆವೃತ್ತಿ ಬಿಡುಗಡೆಯಾದ ವರ್ಷ ಯಾವುದು?
*ಉದಯವಾಣಿ ಅಂತರ್ಜಾಲಪುಟ ಯಾವುದು? ವಿಶೇಷತೆ ಏನು?
(ಉತ್ತರಗಳನ್ನು ಬಹುಮಾನ ಪ್ರಾಯೋಜಿಸಿದ ಅರವಿಂದ ವಿ ಕೆ;ಇವರಿಗೆ ಮಿಂಚಂಚೆ ಮಾಡಿ,ವಿಷಯ:NS2 ನಮೂದಿಸಿ hallimanearavind@gmail.com).
(ಕಳೆದವಾರದ ಪ್ರಶ್ನೆಗಳಿಗೆ ಉತ್ತರ:
ಸಿ++,ಜೇನ್ ಸ್ಟೌಸ್ಟ್ರಪ್;ಮುಕ್ತ ಕಾರ್ಯನಿರ್ವಹಣಾ ತಂತ್ರಾಂಶ,ವೈರಸ್ ಕಾಟರಹಿತ;ಅಕ್ಟೋಬರ್ ಹತ್ತು
ಬಹುಮಾನ ಗೆದ್ದ ವಿಶ್ವನಾಥ ಹೆಗ್ಡೆ,ಅಂಬಲಿಕೆ,ಶಿರಸಿ;ಅನಂತಮೂರ್ತಿ,ಕೋಟೇಶ್ವರ ಅವರಿಗೆ ಅಭಿನಂದನೆಗಳು.)
---------------------------------------------------
ಟ್ವಿಟರ್ ಚಿಲಿಪಿಲಿ
*ಒಂದಿಷ್ಟು ರಕ್ತದಾನ ಮಾಡಿದೆ-ಸೊಳ್ಳೆಗಳಿಗೆ!
*ಉಪ್ಪಿಟ್ಟಿಗೆ ಉಪ್ಮಾ, ದೋಸೆಗೆ ದೋಸಾ,ಸಾರಿಗೆ ರಸಂ,ಹುಳಿಗೆ ಸಾಂಬಾರ್,ಬಿಸಿಹುಳಿಅನ್ನಕ್ಕೆ ಬಿಸಿಬೇಳೆಬಾತ್ ಅಂತ ಯಾಕಂತೀರಿ?
-------------------------------------------------
ಕನ್ನಡದಲ್ಲಿ ಶುಭಾಶಯ
http://www.shubhashaya.com ಕನ್ನಡದ ಶುಭಾಶಯ ಪತ್ರಗಳನ್ನು ಲಭ್ಯವಾಗಿಸುವ ಅಂತರ್ಜಾಲ ತಾಣ.ವಿವಿಧ ಸಂದರ್ಭಗಳಿಗೆ ಸೂಕ್ತವಾದ ಶುಭಾಶಯ ಪತ್ರಗಳು ಇಲ್ಲಿವೆ.ಬೇಕಾದರೆ ನಿಮಗೆ ಸೂಕ್ತವಾದ ಪತ್ರವನ್ನು ವಿನ್ಯಾಸ ಮಾಡಿಕೊಡುವ ಸೇವೆಯೂ ಇಲ್ಲಿ ಲಭ್ಯ.ಆಯ್ದ ಪತ್ರವನ್ನು ಬೇಕಾದ ಮಿಂಚಂಚೆ ವಿಳಾಸಕ್ಕೆ ಕಳುಹಿಸಲು ಅಂತರ್ಜಾಲ ತಾಣವು ಅನುಕೂಲ ಕಲ್ಪಿಸಿದೆ.ಶುಭಾಶಯ ಪತ್ರಗಳ ಜತೆ ಹಿನ್ನೆಲೆ ಸಂಗೀತ,ಅನಿಮೇಶನ್ ಮುಂತಾದ ಸೌಲಭ್ಯಗಳೂ ಸಿಗುತ್ತವೆ.
---------------------------------
ಬಹುಸ್ಪರ್ಶ ಸಂವೇದಿ ಬಳಸದ ಮ್ಯಾಕ್‌ಬುಕ್
ಆಪಲ್ ಮ್ಯಾಕ್‌ಬುಕ್ ಏರ್ ನೋಟ್‌ಬುಕ್‌ನ್ನು ಬಿಡುಗಡೆ ಮಾಡಿದೆ.ಆದರೆ ಐಪ್ಯಾಡಿನಲ್ಲಿರುವ ಬಹುಸ್ಪರ್ಶ ಸಂವೇದಿ ತೆರೆ ಇದರಲ್ಲಿ ಒದಗಿಸಿಲ್ಲ.ಇದಕ್ಕೆ ಕಾರಣ ಏನಿರಬಹುದು ಎಂದರೆ,ಇಂತಹ ತೆರೆಯನ್ನು ಬಳಸಲು,ತೆರೆ ಲಂಬವಾಗಿರಬೇಕಾಗುತ್ತದೆ.ಇದು ಅತ್ಯಂತ ಪ್ರಯಾಸವನ್ನುಂಟು ಮಾಡುತ್ತದೆ.ಹಾಗಾಗಿ ಬಳಸುವವರು ಇಂತಹ ತೆರೆಯನ್ನು ಬಳಸಲು ಇಷ್ಟಪಡರು ಎನ್ನುವುದು ಕಂಪೆನಿಗೆ ಸ್ಪಷ್ಟವಾಗಿದೆ.ಐಪ್ಯಾಡ್,ಐಫೋನ್ ಆದರೆ ಕೈಯಲ್ಲಿ ಹಿಡಿದು ಬಳಸುವ ಕಾರಣ ಅಂತಹ ತೆರೆಯ ಬಳಕೆಯನ್ನು ಸಾಧ್ಯವಾಗಿಸುತ್ತದೆ.ಈ ನೋಟ್‌ಬುಕ್‌ನಲ್ಲಿ ಹಾರ್ಡ್‌ಡಿಸ್ಕ್ ಕೂಡಾ ಇಲ್ಲ.ಇದರಲ್ಲಿ ಫ್ಲಾಶ್ ಡ್ರೈವ್ ಬಳಸಲಾಗಿದೆ.ಹಾಗಾಗಿ ಬಾಳಿಕೆ ಹೆಚ್ಚು.ಇನ್ನು ರಾಮ್ ಸ್ಮರಣಶಕ್ತಿಯನ್ನು ಬದಲಿಸಲಾಗದಂತೆ ಜೋಡಿಸಿರುವ ಕಾರಣ,ಮೊದಲಿಗೆ ಖರೀದಿಸಿದಾಗ ಇರುವ ಸಾಮರ್ಥ್ಯವನ್ನು ಬದಲಿಸುವ ಅವಕಾಶ ಬಳಕೆದಾರನಿಗೆ ಇರದು.ಒಂದು ಸಾವಿರ ಡಾಲರು ಮತ್ತು ಒಂದು ಸಾವಿರದ ಆರುನೂರು ಡಾಲರು ಬೆಲೆಯಲ್ಲಿ ಇದು ಲಭ್ಯ.

udayavani Unicode
Udayavani
-------------------
*ಅಶೋಕ್‌ಕುಮಾರ್ ಎ

Monday, October 18, 2010

ಕಂಪ್ಯೂಟರುಗಳು ಬೋಟ್‌ನೆಟ್‌ಗಳ ಹಿಡಿತದಲ್ಲಿ

ಕಂಪ್ಯೂಟರುಗಳು ಬೋಟ್‌ನೆಟ್‌ಗಳ ಹಿಡಿತದಲ್ಲಿ
ಅಮೆರಿಕಾದಲ್ಲಿ ಸುಮಾರು ಇಪ್ಪತ್ತು ಲಕ್ಷ ಕಂಪ್ಯೂಟರುಗಳು ಬೋಟ್‌ನೆಟ್‌ಗಳ ಹಿಡಿತದಲ್ಲಿವೆಯೆಂದು ಮೈಕ್ರೋಸಾಫ್ಟ್ ಕಂಪೆನಿ ಅಂದಾಜು ಮಾಡಿದೆ.ಕೆಲವು ಅಂತರ್ಜಾಲತಾಣಗಳ ಪುಟಗಳನ್ನು ತೆರೆದಾಗ,ಆ ಪುಟದಲ್ಲಿರುವ ಸಣ್ಣ ತಂತ್ರಾಂಶಗಳು ನಮ್ಮ ಕಂಪ್ಯೂಟರುಗಳನ್ನು ವಶಕ್ಕೆ ತೆಗೆದುಕೊಂಡು ಹ್ಯಾಕರನ ಹಿಡಿತಕ್ಕೆ ಒಳಪಡಿಸುವುದಿದೆ.ಈ ಕಂಪ್ಯೂಟರುಗಳನ್ನು ಬಳಸಿ,ಜನಬಯಸದ ಮಿಂಚಂಚೆಗಳ ಸರಣಿಯನ್ನು ಕಳುಹಿಸುವುದು,ಮಾಹಿತಿ ಕದಿಯುವುದು ಮುಂತಾದ ಅನೀತಿಯುತ ಕೆಲಸ ಕಾರ್ಯಗಳಿಗೆ ಬಳಸಿಕೊಳ್ಳುವುದಿದೆ.ಕದ್ದ ಮಾಹಿತಿಗಳನ್ನು ಕೆಲವು ಅಂತರ್ಜಾಲತಾಣಗಳಲ್ಲಿ ಹರಾಜೂ ಹಾಕಲಾಗುತ್ತದೆ!ಮಾಹಿತಿ ಕೊಂಡವರು ಅವನ್ನು ದುರುಪಯೋಗ ಪಡಿಸಿಕೊಳ್ಳುತ್ತಾರೆ.ಅಂತರ್ಜಾಲ ತಾಣಗಳ ಸೇವೆಗಳನ್ನು ನಿರಾಕರಿಸಲು ಕೆಲವೊಮ್ಮೆ ದಾಳಿಗಳನ್ನು ಸಂಘಟಿಸಲೂ,ಬೋಟ್‌ನೆಟ್ ಹಿಡಿತದಲ್ಲಿರುವ ಕಂಪ್ಯೂಟರುಗಳನ್ನು ಬಳಸಿಕೊಳ್ಳುತ್ತಾರೆ.ಎಪ್ರಿಲ್ ಮತ್ತು ಜೂನ್ ನಡುವಿನ ಮೂರು ತಿಂಗಳುಗಳಲ್ಲಿ ಮೈಕ್ರೋಸಾಫ್ಟ್ ಸುಮಾರು ಆರೂವರೆ ಲಕ್ಷ ಸೋಂಕಿರುವ ಕಂಪ್ಯೂಟರುಗಳನ್ನು ಶುದ್ಧಗೊಳಿಸಿದೆ.ಈ ಮಾಹಿತಿಗಳು ಮೈಕ್ರೋಸಾಫ್ಟ್ ಕಂಪೆನಿಯಲ್ಲಿ ನೋಂದಾಯಿತ ಅರುವತ್ತು ಕೋಟಿ ಕಂಪ್ಯೂಟರುಗಳಿಂದ ದೊರೆತ ಮಾಹಿತಿಯ ಆಧಾರದಲ್ಲಿ ಸಿದ್ಧವಾದ ಅಂಶಗಳಾಗಿವೆ.ಬ್ರೆಜಿಲಿನಲ್ಲಿ ಐದೂವರೆ ಲಕ್ಷ ಕಂಪ್ಯೂಟರುಗಳು ಇದೇ ರೀತಿ ಬಾಧಿತವಾಗಿದ್ದುವು.ಕೊರಿಯಾದಲ್ಲಿ ಪ್ರತಿ ಸಾವಿರದಲ್ಲಿ ಹದಿನಾಲ್ಕು ಕಂಪ್ಯೂಟರುಗಳು ಬೋಟ್‌ನೆಟ್ ಬಾಧೆಗೆ ಒಳಪಟ್ಟಿದ್ದ ಅಂಶ ವ್ಯಕ್ತವಾಯಿತು.
-----------------------------------------
ಅತಿ ದೊಡ್ಡ ಮೈಕ್ರೋಸಾಫ್ಟ್ ಅಪ್ಡೇಟ್
ಮೈಕ್ರೋಸಾಫ್ಟ್ ಕಂಪೆನಿಯು ತನ್ನ ವಿವಿಧ ತಂತ್ರಾಂಶಗಳಾದ ಕಂಪ್ಯೂಟರ್ ಕಾರ್ಯನಿರ್ವಹಣಾ ತಂತ್ರಾಂಶಗಳು,ಬ್ರೌಸರ್,ಆಫೀಸ್ ಮುಂತಾದ ತಂತ್ರಾಂಶಗಳ ಕೋರತೆಗಳನ್ನು ನಿವಾರಿಸಲು ಮತ್ತು ಭದ್ರತಾಕೊರತೆಯನ್ನು ಹೋಗಲಾಡಿಸಲು ತಂತ್ರಾಂಶಗಳ ಆಧುನಿಕ ಆವೃತ್ತಿಯನ್ನು ಪ್ರಕಟಿಸುವುದಿದೆ.ಅದರಂತೆ ಈ ಸಲ ತನ್ನ ವಿವಿಧ ತಂತ್ರಾಂಶಗಳ ನಲುವತ್ತೊಂಭತ್ತು ವಿವಿಧ ಕೊರತೆಗಳನ್ನು ಸರಿಪಡಿಸುವ ತಿದ್ದುಪಡಿಗಳನ್ನು ಪ್ರಕಟಿಸಿದೆ.ಇದು ಈವರೆಗಿನ ಅತಿದೊಡ್ಡ ತಿದ್ದುಪಡಿಯಾಗಿದೆ.ಈ ತಿದ್ದುಪಡಿಗಳಿಗೆ MS10-071 ಎಂದು ಹೆಸರಿಸಲಾಗಿದ್ದು,ಅಂತರ್ಜಾಲದಲ್ಲಿದು ಉಚಿತವಾಗಿ ಲಭ್ಯವಿದೆ.ಇವುಗಳ ಪೈಕಿ ಸುಮಾರು ಹತ್ತು ತಿದ್ದುಪಡಿಗಳು ಇಂಟರ್ನೆಟ್ ಎಕ್ಸ್‌ಪ್ಲೋರರ್‌ ತಂತ್ರಾಂಶಕ್ಕೆ ಸಂಬಂಧಿಸಿದೆ.ಒಟ್ಟು ನಲುವತ್ತೊಂಭತ್ತಿ ತಿದ್ದುಪಡಿಗಳ ಪೈಕಿ,ತಿದ್ದುಪಡಿಗಳನ್ನು ಹದಿನಾರು ಗುಂಪುಗಳಾಗಿ ವಿಂಗಡಿಸಲಾಗಿದೆ.ಸಾಮಾನ್ಯವಾಗಿ ವಿಂಡೋಸ್ ಬಳಕೆದಾರರು ತಮ್ಮ ಕಂಪ್ಯೂಟರುಗಳನ್ನು ಅಂತರ್ಜಾಲಕ್ಕೆ ಸಂಪರ್ಕಿಸಿದಾಗ,ಈ ತಿದ್ದುಪಡಿಗಳನ್ನು ತನ್ನಷ್ಟಕ್ಕೆ ಇಳಿಸಿಕೊಂಡು ಅನುಸ್ಥಾಪಿಸುವಂತೆ ಏರ್ಪಡಿಸಲಾಗಿರುತ್ತದೆ.ಕೆಲವು ತಿದ್ದುಪಡಿಗಳನ್ನು ಅನುಸ್ಥಾಪಿಸುವುದು ಕಂಪ್ಯೂಟರಿನ ಭದ್ರತಾ ಕೊರತೆಗಳನ್ನು ನಿವಾರಿಸಲು ಅತ್ಯಗತ್ಯ.ವಿಂಡೋಸ್ ಮೀಡಿಯಾ ಪ್ಲೇಯರ್ ವಿಡಿಯೋ,ಆಡಿಯೋ ಕಡತಗಳನ್ನು ನುಡಿಸಲು ಉಪಯುಕ್ತವಾದ ತಂತ್ರಾಂಶವಾಗಿದ್ದು,ಇದರ ತಿದ್ದುಪಡಿಗಳೂ ಈ ಅರ್ಧಶತಕದ ತಿದ್ದುಪಡಿಗಳಲ್ಲಿ ಸೇರಿವೆ.
----------------------------------------
ಟ್ವಿಟರ್ ಚಿಲಿಪಿಲಿ
*ಚಿಲಿಯಲ್ಲಿ ಗಣಿಯಲ್ಲಿ ಸಿಲುಕಿ ಹಾಕಿದವರನ್ನು ರಕ್ಷಿಸಿದ ತೆರದಲ್ಲಿ,ಭಾರತವನ್ನು ಭ್ರಷ್ಟಾಚಾರದಿಂದ ರಕ್ಷಿಸಿ ಕಾಪಾಡಿರಿ.
*ಬೆಂಗಳೂರಿನಲ್ಲಿ ಅತ್ಯಂತ ಹೆಚ್ಚು ಬಳಕೆಯಾಗುವ ಭಾಷೆ ತಮಿಳು?ಹಿಂದಿ? ಯಾವುದೂ ಅಲ್ಲ..ಸಿ,ಸಿ++,ಜಾವಾ!
*ಉಬುಂಟು10.10 ಕಂಪ್ಯೂಟರ್ ಬರೇ ಹತ್ತು ಸೆಕೆಂಡಿನಲ್ಲಿ ಬೂಟ್ ಆಗುತ್ತದೆ
-----------------------------------------------------------------
ಸ್ಪರ್ಧಾಪರೀಕ್ಷೆಗಳಿಗೆ ಸ್ಪರ್ಧಾರ್ಥಿ

http://spardharthi.blogspot.com ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರ ಸಿದ್ಧತೆಗೆ ಸಹಾಯ ಮಾಡುವ ಮೊದಲ ಇ-ಪತ್ರಿಕೆಯಂತೆ.ರವಿ,ಪರಶುರಾಮ್,ಲಾವಣ್ಯ,ನಿಹಾರಿಕಾ,ಗೌರಿ,ಪವನ್,ಸ್ಪಂದನಾ ಇವರೆಲ್ಲಾ ಈ ಬ್ಲಾಗಿಗೆ ವಿಷಯ ಒದಗಿಸಿದ್ದಾರೆ.ಪ್ರಚಲಿತ ವಿದ್ಯಮಾನಗಳ ಒಳನೋಟವೂ ಇಲ್ಲಿ ಲಭ್ಯ..ವಿವಿಧ ಸ್ಥಾನಮಾನಗಳನ್ನು ಹೊಂದಿದವರ ವಿವರಗಳೂ ಇಲ್ಲಿವೆ.ಇಲ್ಲಿಯ ಬರಹಗಳನ್ನು ಫೇಸ್‌ಬುಕ್ ಮೂಲಕ ಪಡೆಯುವ ಸವಲತ್ತೂ ಕೂಡಾ ಇದೆ.ಸುಮಾರು ಎಂಟುನೂರು ಜನ ಫೇಸ್‌ಬುಕ್ ಮೂಲಕ ಸ್ಪರ್ಧಾರ್ಥಿಯನ್ನು ಪಡೆಯುತ್ತಾರೆ.ಈ ಬ್ಲಾಗಿಗೆ ನೂರು ಜನಕ್ಕಿಂತ ಹೆಚ್ಚು ಜನ ಹಿಂಬಾಲಕರಿದ್ದಾರೆ.
----------------------------------------------------
ಮೊಬೈಲ್ ಬಳಕೆ:ಮಿತಿ ಮೀರುತ್ತಿದೆಯೇ?
ಒಂದು ತಿಂಗಳಲ್ಲಿ ಅಮೆರಿಕಾದ ಯುವಕರು ಮೂರೂವರೆಸಾವಿರದಷ್ಟು ಕಿರು ಸಂದೇಶಗಳನ್ನು ರವಾನಿಸುತ್ತಾರೆ.ಸಂದೇಶಗಳ ಉದ್ದ ಸರಾಸರಿ ನೂರಾರುವತ್ತು ಅಕ್ಷರಗಳಿಗೆ ಸೀಮಿತವಾಗಿದೆ.ಹಾಗೆ ನೋಡಿದರೆ ಕಿರುಸಂದೇಶ ಕಳುಹಿಸುವುದೇ ಯುವಕರಿಗೆ ಹೆಚ್ಚು ಸುಲಭ,ಗಮ್ಮತ್ತು ಮತ್ತು ಹಿಡಿಸಿದೆ.ಅವರು ಮಾತಿನಲ್ಲಿ ಕಳೆಯುವ ಸಮಯ ಸುಮಾರು ಆರುನೂರು ನಿಮಿಷಗಳು.ಇದು ಕಳೆದವರ್ಷದ ಆಧಾರದಲ್ಲಿ ಕಡಿಮೆಯಾಗಿದೆ.ದತ್ತಾಂಶಗಳ ಬಳಕೆ ಬಹಳ ಹೆಚ್ಚಿದ್ದು,ಅರುವತ್ತೆರಡು ಎಂಬಿಗಳಷ್ಟು ದತ್ತಾಂಶವನ್ನು ಬಳಸುತ್ತಾರೆನ್ನುವುದು ಅಧ್ಯಯನದಿಂದ ವ್ಯಕ್ತವಾಗಿದೆ.ಮಾತಿಗಾಗಿ ಮೊಬೈಲ್ ಬಳಸುವವರ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿರುವುದು ಐವತ್ತು ವರ್ಷ ದಾಟಿದವರ ಪೈಕಿ ಮಾತ್ರಾ.ಚಿತ್ರ,ಎಮೆಮೆಸ್ ಸಂದೇಶಗಳೂ ಕಿರಿಯರ ಪೈಕಿ ಹೆಚ್ಚು ಜನಪ್ರಿಯವಾದ ಸೇವೆಗಳಾಗಿವೆ.ದತ್ತಾಂಶ ಸೇವೆ ಬಳಸುವವರು ಟಿವಿ ವೀಕ್ಷಿಸುವುದೇ ಹೆಚ್ಚು.
----------------------------------------------
ಓದುಗರ ಪ್ರತಿಕ್ರಿಯೆಗಳು
*ಟ್ವಿಟರ್ ಚಿಲಿಪಿಲಿಯಲ್ಲಿ"ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿ ಹತ್ತು ವರ್ಷ ಪೂರೈಸಿದರು..ಯೆಡ್ಡಿ?"ಎಂದಿತ್ತು..ಯೆಡ್ಡಿ ಹತ್ತು ಗಂಡಾಂತರಗಳಿಂದ ಪಾರಾಗಿದ್ದಾರೆ!:ಆಸು ಹೆಗ್ಡೆ,ಬೆಂಗಳೂರು.
*ತುಂಬಾ ಚೆನ್ನಾಗಿದೆ:ನಮನ,ಬಜಗೋಳಿ.
--------------------------------------
ಅಂತರ್ಜಾಲ ಟಿವಿ

ಐದು ಬಿಲಿಯನ್ ಟಿವಿ ಸೆಟ್‌ಗಳು ಪ್ರಪಂಚದ ಮೂಲೆಮೂಲೆಯಲ್ಲಿದ್ದು,ಮೊಬೈಲ್ ಸೆಟ್‌ಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿವೆ.ಕಂಪ್ಯೂಟರ್ ಮತ್ತು ಅಂತರ್ಜಾಲಗಳನ್ನು ಬೆಸೆದರೆ ಹಲವು ಲಾಭಗಳಿವೆ.ಮೊದಲನೆಯದಾಗಿ,ನಮಗೆ ಬೇಕಾದ ಕಾರ್ಯಕ್ರಮಗಳನ್ನು ಶೋಧಿಸುವುದು ಸುಲಭವಾಗಲಿದೆ.ಜತೆಗೆ ಟಿವಿ ವೀಕ್ಷಣೆಯಲ್ಲಿ ನಾವೀನ್ಯತೆ ತರುವ ತಂತ್ರಾಂಶಗಳ ಬಳಕೆ ಸಾಧ್ಯವಾಗಲಿದೆ.ಟಿವಿ ಸೆಟ್‌ಟಾಪ್ ಬಾಕ್ಸ್ ಮಾರಾಟ ಜನಪ್ರಿಯವಾದರೆ,ಐದು ಬಿಲಿಯನ್ ಅಷ್ಟು ಸೆಟ್‌ಗಳಿಗೆ ಅವಕಾಶ ಇದೆ ಎನ್ನುವುದು ತಯಾರಕರಿಗೆ ಖುಷಿ ಕೊಡುವ ಅಂಶ.ಕಳೆದವಾರ ಲಾಜಿಟೆಕ್ ಕಂಪೆನಿಯ ಗೂಗಲ್ ಸೆಟ್‌ಟಾಪ್ ಬಾಕ್ಸ್ ರೆವ್ಯುವನ್ನು ಮಾರುಕಟ್ಟೆಗೆ ತಂದುದನ್ನು ಓದಿದಿರಿ.ಮರುದಿನವೇ ಆಪಲ್ ಕಂಪೆನಿಯ ಸೆಟ್‌ಟಾಪ್ ಬಾಕ್ಸ್ ಕೂಡಾ ಮಾರುಕಟ್ಟೆಗೆ ಬಂದಿದೆ.ಇದರ ಮೂಲಕ ಕೆಲವು ಟಿವಿ ಸೀರಿಯಲ್ ನಿರ್ಮಾಪಕರ ಕಾರ್ಯಕ್ರಮಗಳನ್ನು ವೀಕ್ಷಿಸಲು ಮಾತ್ರಾ ಸಾಧ್ಯ.ಅಂತರ್ಜಾಲ ಮೂಲಕ ಟಿವಿಯನ್ನು ನೀಡಿ,ಅಧಿಕ ವೀಕ್ಷಕರ ಮೂಲಕ ತನ್ನ ಅಂತರ್ಜಾಲ ಜಾಹೀರಾತು ಆದಾಯವನ್ನು ಹೆಚ್ಚಿಸಿಕೊಳ್ಳುವುದು ಗೂಗಲ್ ಯೋಜನೆ.ಸ್ಯಾಮ್‌ಸಂಗ್,ಎಲ್ಜಿ ಕಂಪೆನಿಗಳೂ ಅಂತರ್ಜಾಲ ಟಿವಿಯತ್ತ ಕಣ್ಣುಹಾಕಿವೆ.ಆದರೆ ಯಾವ ಕಂಪೆನಿಗೂ ನಿರೀಕ್ಷಿತ ಜನಪ್ರಿಯತೆ ಲಭ್ಯವಾಗಿಲ್ಲ.
--------------------------------------------------------------
ರಸಪ್ರಶ್ನೆ ಉತ್ತರಿಸಿ-ಉಬುಂಟು ಡಿವಿಡಿ ಗೆಲ್ಲಿ
*ಈ ವಾರ ಇಪ್ಪತ್ತೈದು ವರ್ಷ ಪೂರೈಸಿದ ಕಂಪ್ಯೂಟರ್ ಭಾಷೆ ಯಾವುದು?ಅದನ್ನು ಅಭಿವೃದ್ಧಿ ಪಡಿಸಿದ ವ್ಯಕ್ತಿ ಯಾರು?
*ಉಬುಂಟು ಕಂಪ್ಯೂಟರ್ ನಿರ್ವಹಣಾ ವ್ಯವಸ್ಥೆಯ ಎರಡು ಮುಖ್ಯ ಲಾಭಗಳೇನು?ಹೊಸ ಆವೃತ್ತಿ ಉಬುಂಟು10.10 ಬಿಡುಗಡೆಯಾದ ದಿನಾಂಕ ಯಾವುದು?(ಉತ್ತರಗಳನ್ನು ಬಹುಮಾನ ಪ್ರಾಯೋಜಿಸಿದ ಶ್ರುತಿಗ್ರಾಫಿಕ್ಸ್,ಉಡುಪಿ;ಇವರಿಗೆ ಮಿಂಚಂಚೆ ಮಾಡಿ,ವಿಷಯ:NS1 ನಮೂದಿಸಿ adooranilk@gmail.com).

Udayavani Bangalore
Udayavani

Monday, October 11, 2010

ಸರಿಯಾಗಿ ಕುಳ್ಳಿರಿಸೋ ಕುರ್ಚಿ

ಸರಿಯಾಗಿ ಕುಳ್ಳಿರಿಸೋ ಕುರ್ಚಿ
ಕುರ್ಚಿಯಲ್ಲಿ ತಪ್ಪು ಭಂಗಿಯಲ್ಲಿ ಕೂತು ಬೆನ್ನುನೋವು ಬರಿಸಿಕೊಳ್ಳುವುದು ಆಧುನಿಕ ಕಚೇರಿಗಳಲ್ಲಿ ಸರ್ವೇಸಾಮಾನ್ಯ.ಕುರ್ಚಿಯಲ್ಲಿ ಕುಳಿತುಕೊಳ್ಳುವ ಮತ್ತು ಒರಗುವ ಭಾಗಗಳಲ್ಲಿ ಸಂವೇದಕಗಳನ್ನು ಅಳವಡಿಸಿ,ಅವುಗಳ ಮೂಲಕ ತಪ್ಪು ಭಂಗಿಯಲ್ಲಿ ಕುಳಿತ ವ್ಯಕ್ತಿಯನ್ನು ಎಚ್ಚರಿಸುವ ಕುರ್ಚಿಗಳೀಗ ಇವೆ.ಹಾಗೆಯೆ ಹೆಚ್ಚು ಕುಳಿತರೂ,ಎಚ್ಚರಿಕೆಯ ಗಂಟೆ ಮೊಳಗುತ್ತವೆ.ಜರ್ಮನಿಯ ಈಶಾನ್ಯ ಭಾಗದ ನಾರ್ತ್‌ಈಸ್ಟರ್ನ್ ಬೈಎಲೆಫೆಲ್ಡ್ ವಿಶ್ವವಿದ್ಯಾಲಯದ ಸಂಶೋಧಕರು ಇದರ ವಿನ್ಯಾಸ ಮಾಡಿದ್ದಾರೆ.ಕುರ್ಚಿಯ ಸಂವೇದಕಗಳು ಕಂಪ್ಯೂಟರ್ ತಂತ್ರಾಂಶವೊಂದಕ್ಕೆ ಬ್ಲೂಟೂತ್ ಮೂಲಕ ಮಾಹಿತಿ ರವಾನಿಸಿ,ಈ ಎಚ್ಚರಿಕೆಯ ಗಂಟೆ ಮೊಳಗುವಂತೆ ಮಾಡುತ್ತದೆ.ರಿಸ್ತೊಕೊವಿಯಾ ಎನ್ನುವ ಸಂಶೋಧಕ,ತಮ್ಮ ಸಂಶೋಧನೆಯ ಈ ಕುರ್ಚಿಗೆ ಇಂಟೆಲ್ಲಿ ಕುರ್ಚಿ ಎಂದು ಹೆಸರಿಸಿದ್ದಾರೆ.
---------------------------------------------
ಅನಿಮೇಶನ್ ಚಿತ್ರ ಲವ-ಕುಶ ತೆರೆಗೆ
ಹೈದರಾಬಾದಿನ ಆರ್‌ವಿ‌ಎಂಎಲ್ ಅನಿಮೇಶನ್ ಸ್ಟುಡಿಯೋ ಇಪ್ಪತ್ತೈದು ಕೋಟಿ ವೆಚ್ಚದಲ್ಲಿ ನಿರ್ಮಿಸಿದ "ಲವ-ಕುಶ"ಅನಿಮೇಶನ್ ಚಿತ್ರ ಭಾರತದಲ್ಲಿ ಬಿಡುಗಡೆಯಾದ ಬೆನ್ನಲ್ಲೇ,ಹಲವು ಅನಿಮೇಶನ್ ಚಿತ್ರಗಳು ಬಿಡುಗಡೆಗೆ ಕಾದಿವೆ.ವಿವಿಧ ಭಾಷೆಗಳಲ್ಲಿ ಚಿತ್ರವನ್ನು ಡಬ್ ಮಾಡಿ ಬಿಡುಗಡೆ ಮಾಡುವುದರಿಂದ ಹಿಂದಿ,ಇಂಗ್ಲೀಷ್,ತೆಲುಗು,ಮತ್ತು ತಮಿಳು ಭಾಷೆಗಳಲ್ಲೂ ಚಿತ್ರ ತೆರೆ ಕಾಣಲಿದೆ.ಡಭ್ಬಿಂಗ್ ನಿಷೇಧವಿರುವ ಕನ್ನಡ ಅವತರಣಿಕೆಯಿರದು.ಲವ-ಕುಶ ಸಿದ್ಧವಾಗಲು ಐದುವರ್ಷವೇ ಹಿಡಿಯಿತು.ಇದರ ಬೆನ್ನಲ್ಲೇ,"ರಾಮಾಯಣ-ದ ಎಪಿಕ್" ಅಕ್ಟೋಬರ್ ಮಧ್ಯಭಾಗದಲ್ಲಿ ತೆರೆಕಾಣಲಿದೆ.ಇದು ಮಾಯಾ ಡಿಜಿಟಲ್ ಮೀಡಿಯಾದಿಂದ ನಿರ್ಮಾಣಗೊಂಡ ಚಿತ್ರ.ತಮಿಳು,ತೆಲುಗು ಮತ್ತು ಹಿಂದಿಯಲ್ಲಿ ಇದು ಮೊದಲು ವೀಕ್ಷಕರ ನಾಡಿಮಿಡಿತ ಪರೀಕ್ಷಿಸಲಿದೆ.ಆಲ್ಫಾ-ಒಮಿಗಾ ಅಮೆರಿಕಾದಲ್ಲಿ ಸದ್ಯ ತೆರೆಕಂಡು,ದೀಪಾವಳಿ ಸಮಯ ನಮ್ಮಲ್ಲೂ ಚಿತ್ರಮಮಂದಿರಗಳಿಗೆ ಲಗ್ಗೆಯಿಡಲಿದೆ.ತೂನ್‌ಪುರ್ ಕಾ ಸೂಪರ್‌ಹೀರೋ ತೆರೆ ಕಾಣಲು ಸಿದ್ಧವಾಗಿರುವ ತ್ರೀಡಿ ಮಕ್ಕಳನ್ನು ಗುರಿಯಾಗಿಸಿ ತಯಾರಿಸಿದ ಅಜಯ್ ದೇವಗನ್-ಕಾಜೋಲ್ ತಾರಾಗಣದ ಚಿತ್ರ.ಈ ಚಿತ್ರಗಳು ಇಪ್ಪತ್ತು ಕೋಟಿ ರೂಪಾಯಿ ನಿರ್ಮಾಣವೆಚ್ಚ ಅಪೇಕ್ಷಿಸುವಂತಹ,ಕಂಪ್ಯೂಟರ್ ತಂತ್ರಜ್ಞಾನ ಬಳಸಿ ನಿರ್ಮಾಣವಾಗಿರುವ ಚಿತ್ರಗಳು.
---------------------------------------------
ಓದುಗರ ಪ್ರತಿಕ್ರಿಯೆಗಳು
*ವೆಬ್‌ಪಿ ಚಿತ್ರ ಉಳಿಸುವ ಶೈಲಿ ಲಿನಕ್ಸ್ ವ್ಯವಸ್ಥೆಗಳಲ್ಲಿ ಮಾತ್ರಾ ಸದ್ಯ ಲಭ್ಯ-ಶ್ರೀನಿವಾಸ ಬಂಗೋಡಿ.
*ಮಿತವ್ಯಯಿ ಇಂಕ್ಯುಬೇಟರನ್ನು ಆಗೀಗ ಚಾರ್ಜ್ ಮಾಡಲೂ ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಇಲ್ಲದ ಸಮಸ್ಯೆ ಕಾಡಬಹುದು-ಪ್ರಸನ್ನ.
*ಸ್ವತಂತ್ರ ತಂತ್ರಜ್ಞರ ಸಮಾವೇಶದ ಬಗ್ಗೆ ಬರೆದದ್ದಕ್ಕೆ ಧನ್ಯವಾದಗಳು-ಸಂಪತ್‌ಕುಮಾರ್.
----------------------------------
ಸರಳತೆಗೆ ನೋಬೆಲ್ ಪ್ರಶಸ್ತಿ
ಈ ಸಲ ಭೌತಶಾಸ್ತ್ರದಲ್ಲಿ ನೋಬೆಲ್ ಬಹುಮಾನ ಗ್ರಾಫೀನ್ ಎನ್ನುವ ವಸ್ತುವನ್ನು ಪ್ರತ್ಯೇಕಿಸಿದ ವಿಧಾನಕ್ಕೆ ಲಭಿಸಿದೆ.ಇಂದಿನ ಆಧುನಿಕ ಸಾಧನಗಳ ಈ ದಿನಗಳಲ್ಲೂ ಸಂಶೋಧಕರು ಬಳಸಿದ್ದು ಬರೇ ಗಮ್‌ಟೇಪ್! ಗಮ್‌ಟೇಪ್‌ಗೆ ಪೆನ್ಸಿಲ್ ಮೊನೆಯನ್ನು ಉಜ್ಜಿದರೆ,ಈ ವಸ್ತು ಪ್ರತ್ಯೇಕಗೊಳ್ಳುತ್ತದೆ ಎಂದವರ ಸಂಶೋಧನೆ.ಗ್ರಾಫೀನ್ ಇಂಗಾಲದ ಅತ್ಯಂತ ತೆಳು ಪದರ.ಈ ಪದರವು ಅತ್ಯಂತ ಶಕ್ತಿಶಾಲಿ-ಉಕ್ಕಿನ ಪದರಕ್ಕಿಂತಲೂ ಕೂಡಾ.ರಶ್ಯಾ ಸಂಜಾತ ವಿಜ್ಞಾನಿಗಳಾದ ಕೊನ್‌ಸ್ಟಾಂಟಿನ್ ನೊವೋಸೆಲೋವ್ ಮತ್ತು ಆಂಡ್ರೆ ಗಿಮ್ ಅವರುಗಳು ಈ ಸಲ ನೋಬೆಲ್ ಪ್ರಶಸ್ತಿಯ ಭೌತಶಾಸ್ತ್ರ ವಿಭಾಗದ ಪ್ರಶಸ್ತಿಯನ್ನು ಗೆದ್ದದ್ದು ತಮ್ಮ ಸರಳ ವಿಧಾನದಿಂದ ಎನ್ನುವುದು ಗಮನಾರ್ಹ.ಗ್ರಾಫೀನ್‌‍ನ ಅತ್ಯಂತ ತೆಳು ಹಾಳೆಯು,ಇತರ ಯಾವುದೇ ವಸ್ತುವಿನ ಅಷ್ಟೆ ತೆಳ್ಳಗಿನ ಹಾಳೆಗಿಂತ ಗಟ್ಟಿಯಾಗಿದೆ.ಗ್ರಾಫೀನ್ ಪಾರದರ್ಶಕವಾಗಿದ್ದು,ಗಟ್ಟಿತನ ಪ್ರದರ್ಶಿಸುವ ಕಾರಣ,ಅದನ್ನು ಸ್ಪರ್ಶಸಂವೇದಿ ತೆರೆ,ಅರೆವಾಹಕ ಗುಣದಿಂದಾಗಿ ಸಿಲಿಕಾನ್ ಬದಲು ಬಳಸಲಾಗಬಹುದು.ಈಗ ಗ್ರಾಫೀನ್ ಪದರವನ್ನು ಬೇರ್ಪಡಿಸಲು ಹೈಟೆಕ್ ವಿಧಾನಗಳನ್ನು ಅನ್ವೇಷಿಸಲಾಗಿದ್ದರೂ,ನೋಬೆಲ್ ಪ್ರಶಸ್ತಿ ಬಂದದ್ದು ಮಾತ್ರಾ ಮೊದಲ ಬಾರಿಗೆ ಹಾಗೆ ಮಾಡಲು ಯಶಸ್ವಿಯಾದ ಸರಳ ವಿಧಾನಕ್ಕೆ!ಅಂದಹಾಗೆ ಈ ಸಂಶೋಧಕರು ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದವರು.
----------------------------------------------
ಗೂಗಲ್ ಟಿವಿಗೆ ಲಾಜಿಟೆಕ್ ಯಂತ್ರಾಂಶ

ಲಾಜಿಟೆಕ್ ಕಂಪೆನಿಯು ಲಾಜಿಟೆಕ್ ರೆವ್ಯು ಎನ್ನುವ ಯಂತ್ರಾಂಶವನ್ನು ತಯಾರಿಸಿದೆ.ಇದನ್ನು ಬಳಸಿ,ಟಿವಿಯಲ್ಲೇ ಅಂತರ್ಜಾಲ,ಕಡತ ತೆರೆಯುವುದು,ಶೋಧಿಸುವುದು ಮತ್ತು ಟಿವಿ ಕಾರ್ಯಕ್ರಮಗಳನ್ನೂ ವೀಕ್ಷಿಸಬಹುದು.ಗೂಗಲ್‌ನ ಆಂಡ್ರಾಯಿಡ್ ತಂತ್ರಾಂಶಗಳನ್ನೂ ಬಳಸಲು ಈ ವ್ಯವಸ್ಥೆ ಅನುವು ಮಾಡುತ್ತದೆ.ರಿಮೋಟ್ ಬಳಸುವ ಮೂಲಕ ಅಥವಾ ಆಂಡ್ರಾಯಿಡ್ ವ್ಯವಸ್ಥೆಯಿರುವ ಸಾಧನದಿಂದ ಟಿವಿಯನ್ನು ನಿಯಂತ್ರಿಸಬಹುದು,ಐಫೋನನ್ನು ಬಳಸಲೂ ಸಾಧ್ಯ.ನಿಸ್ತಂತು ಕೀಲಿಮಣೆ ನಿಯಂತ್ರಣ ಸಾಧನಕಾದರೆ ಮತ್ತೆ ನೂರಮೂವತ್ತು ಡಾಲರು ತೆರಬೇಕು-ಸೆಟ್‌ಟಾಪ್ ಬಾಕ್ಸಿನ ಬೆಲೆಯು ಮುನ್ನೂರು ಡಾಲರು.
-----------------------------------------------
ಕನ್ನಡ ಸಂಗೀತ

ಜನಪ್ರಿಯ ಕನ್ನಡ ಚಿತ್ರಗೀತೆಗಳು ಮತ್ತಿತರ ಸಂಗೀತ ಕಡತಗಳನ್ನಾಲಿಸಲು ನೀವು ಬಯಸುವಿರಾದರೆ,http://kannada-music.blogspot.com ಅಂತರ್ಜಾಲತಾಣವನ್ನು ಸಂದರ್ಶಿಸಿ.ಇಂಡಿ ಬ್ಲಾಗರ್ ಎನ್ನುವ ಭಾರತೀಯ ಭಾಷೆಗಳ ಬಗೆಗೆ ಕಣ್ಣಿರಿಸುವ ತಾಣವು,ಕನ್ನಡ ಬ್ಲಾಗುಗಳ ಪೈಕಿ ಸದ್ಯ ಈ ತಾಣವನ್ನು ಮೊದಲ ಸ್ಥಾನದಲ್ಲಿರಿಸಿದೆ.ಈ ರಾಂಕಿಂಗ್ ಪ್ರತಿ ತಿಂಗಳೂ ಜನಪ್ರಿಯತೆಯ ಆಧಾರದಲ್ಲಿ ಕೊಡಲ್ಪಡುತ್ತದೆ.ಇಲ್ಲಿ ಚಿತ್ರಗಳ ಕ್ಲಿಪ್ಪಿಂಗ್‌ಗಳೂ,ಕನ್ನಡ ಟಿವಿ ಚಾನೆಲುಗಳ ಕೊಂಡಿಗಳೂ ಇದ್ದು,ಉಪಯುಕ್ತವೆನ್ನಿಸುವುದು ಖಾತರಿ.ಚಲನಚಿತ್ರಗಳ ಚಿತ್ರಗಳನ್ನೂ ಕೊಟ್ಟಿರುವುದರಿಂದ,ಬ್ಲಾಗಿನ ಪುಟಗಳಿಗೆ ರಂಗೇರಿದೆ.
----------------------
ನವಂಬರ್ 1:ಟ್ವಿಟರ್,ಫೇಸ್‌ಬುಕ್ ಬೇಡ
ಚಿಕ್ಕ ಮಕ್ಕಳು ಇತರರ ಜತೆ ವ್ಯವಹರಿಸಲಾಗದಂತೆ ಮಾಡುವ ಆಟಿಸಂ ಎನ್ನುವ,ತೊಂದರೆಯಿಂದ ಅವರಿಗಾಗುವ ಸಮಸ್ಯೆಗಳನ್ನು ಇತರರಿಗೂ ಮನವರಿಕೆ ಮಾಡುವ ಉದ್ದೇಶದಿಂದ,ನವಂಬರ್ ಒಂದರಂದು ಸಾಮಾಜಿಕ ಜಾಲತಾಣಗಳಾದ ಟ್ವಿಟರ್,ಫೇಸ್‌ಬುಕ್ ಮತ್ತು ಅರ್ಕುಟ್ ಮುಂತಾದ ತಾಣಗಳಿಂದ ದೂರವಿರಲು ಜನರಿಗೆ ವಿನಂತಿಸಲಾಗಿದೆ.ಕಮ್ಯುನಿಕೇಶನ್ ಶಟ್‌ಡೌನ್ ಎನ್ನುವ ಜಾಗತಿಕ ಉಪಕ್ರಮ ಈ ಚಳುವಳಿಯನ್ನು ಹುಟ್ಟಿಹಾಕಿದೆ.ಮೂರನೇ ವರ್ಷದ ವೇಳೆಗೆ ಮಕ್ಕಳಲ್ಲಿ ಆಟಿಸಂ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.ಮಾತಿನ ಸಮಸ್ಯೆ,ಭಾಷಾ ಸಮಸ್ಯೆಗಳೂ ಕಾಡಬಹುದು.ಈ ಸಂಪರ್ಕ ನ್ಯೂನ್ಯತೆಗಳಿಂದ ಇತರ ಮಕ್ಕಳ ಜತೆ ಬೆರೆಯುವುದೂ ಅಂತಹ ಸಮಸ್ಯೆಯಿದ್ದ ಮಕ್ಕಳಿಗೆ ಕಷ್ಟವಾಗುತ್ತದೆ.ಹಾಗೆಂದು ಮಕ್ಕಳ ಬುದ್ಧಿಶಕಿ ಸಾಮಾನ್ಯ ಅಥವಾ ದಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿರಬಹುದು.ಇದಕ್ಕೆ ಮದ್ದಿಲ್ಲವಾದರೂ,ಸರಿಯಾಗಿ ತರಬೇತಿ ನೀಡುವ ಮೂಲಕ ಮಕ್ಕಳಿಗೆ ನೆರವಾಗಬಹುದು.
----------------------------------------------------
ಟ್ವಿಟರ್ ಚಿಲಿಪಿಲಿ:
*ಪಾಕಿಸ್ತಾನ್ ಟಾಸ್ ಗೆದ್ದು,ಬೆಟ್ಟಿಂಗ್ ಮಾಡಲು ನಿರ್ಧರಿಸಿತು :)
*ಕೇರಳ,ತಮಿಳ್ನಾಡಿನ ದೇವ-ದೇವತೆಗಳು ಕರ್ನಾಟಕದ್ದಕ್ಕಿಂತ ಶಕ್ತಿಶಾಲಿ...
*ಅದು ಚರಿತ್ರೆಯಲ್ಲೇ ಅತ್ಯಂತ ದುಬಾರಿ ಚಲನಚಿತ್ರ..ನಾಯಕನ ವಯಸ್ಸು ಮುಚ್ಚಲು,ಮೇಕಪ್ಪಿಗೆ ತಗಲಿದ ಖರ್ಚೇ ಕಾರಣ!
*ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿ,ಹತ್ತು ವರ್ಷ ಪೂರೈಸಿದ್ರು..ಯೆಡ್ಡಿ?
*ರಜನೀಕಾಂತ್ ಸರ್ವಶಕ್ತ..ಆತ ಸೊನ್ನೆಯಿಂದಲೂ ಭಾಗಿಸಬಲ್ಲ..
*ರಜನೀಕಾಂತ್ ಸೀನುವಾಗಲೂ ಕಣ್ಣು ಮುಚ್ಚುದೇ ಸೀನಬಲ್ಲರು..
Udayavani Bangalore
*ಅಶೋಕ್‌ಕುಮಾರ್ ಎ

Monday, October 04, 2010

ವಾಶಿಂಗ್ ಮಶೀನ್:ನೀರಿನ ಬಳಕೆ ಎಷ್ಟು?

ವಾಶಿಂಗ್ ಮಶೀನ್:ನೀರಿನ ಬಳಕೆ ಎಷ್ಟು?
ವಾಹನ ಖರೀದಿಸುವಾಗ ಇಂಧನ ದಕ್ಷತೆ,ವಿದ್ಯುತ್ ಬಳಸುವ ಸಾಧನ ಖರೀದಿಸುವಾಗ ವಿದ್ಯುತ್ ಬಳಕೆಯ ದಕ್ಷತೆಯ ಬಗ್ಗೆ ಗಮನ ನೀಡುವುದು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ.ಆದರೆ ನೀರಿನ ಬಳಕೆಯನ್ನೂ ಮಾನದಂಡವಾಗಿ ಬಳಸುವಷ್ಟು ನೀರಿನ ಬಗ್ಗೆ ನಮ್ಮಲ್ಲಿ ಅನೇಕರಿಗೆ ಕಾಳಜಿಯಿರಲಿಕ್ಕಿಲ್ಲ.ವಾಶಿಂಗ್ ಮೆಶೀನ್ ಅಂತಹ ಸಾಧನ ಖರೀದಿಸುವಾಗ ಅದು ಬಟ್ಟೆ ಒಗೆಯಲು ಬಳಸುವ ನೀರಿನ ಪ್ರಮಾಣವೆಷ್ಟು ಎನ್ನುವುದನ್ನು ಜಾಹೀರು ಪಡಿಸುವುದನ್ನು ಕಡ್ಡಾಯವಾಗಿಸುವ ವ್ಯವಸ್ಥೆಯನ್ನು ಜಾರಿಗೆ ತರುವ ಉದ್ದೇಶವಿದೆ.ಇಂತಹ ನೀರಿನ ಬಗೆಗಿನ ವಿವರವನ್ನು ನೀಡುವುದನ್ನು ಕಡ್ಡಾಯವಾಗಿಸುವ ನೀರಿನ ದಕ್ಷತೆಯ ಕಾರ್ಯಾಲಯವನ್ನು ಸ್ಥಾಪಿಸುವ ಅಗತ್ಯದ ಬಗ್ಗೆ ನೀರಿನ ಸಂಪನ್ಮೂಲದ ಸಚಿವಾಲಯವು ಸರಕಾರದ ಮೇಲೆ ಒತ್ತಡ ಹೇರಲಿದೆ.ಕೈಗಾರಿಕೆಗಳು,ರೈತರು ಬಳಸುವ ನೀರಿನ ಮೇಲೆ ಕಣ್ಣಿಟ್ಟು,ಅದನ್ನು ನಿಯಂತ್ರಿಸಲು ಮತ್ತು ಅವರ ನೀರಿನ ದಕ್ಷತೆಯನ್ನು ಹೆಚ್ಚಿಸಲು ಒತ್ತಾಯಿಸುವುದು ಈಗಿನ ಅಗತ್ಯವಾಗಿದೆ.ಸ್ವಾತಂತ್ರ್ಯ ಬಂದ ದಶಕದಲ್ಲಿ ಭಾರತದಲ್ಲಿ ಪ್ರತಿವ್ಯಕ್ತಿಗೆ ಐದುಸಾವಿರ ಘನಮೀಟರ್ ನೀರಿನ ಲಭ್ಯತೆಯಿದ್ದರೆ,ಈಗದು ಬರೇ ಸಾವಿರದ ಮುನ್ನೂರು ಘನಮೀಟರುಗಳಿಗೆ ಕುಸಿದಿದೆ.ಹಾಗಾಗಿ,ಈಗಿನ ಸನ್ನಿವೇಶದಲ್ಲಿ ನೀರಿನ ದಕ್ಷತೆಯ ಕಡೆ ಕಣ್ಣಿಡಬೇಕಾದ್ದು ಅನಿವಾರ್ಯವಾಗಿದೆ.
-------------------------------------------
ಹೃಸ್ವ ಯುಆರೆಲ್: ಗೂಗಲ್ ಸೇವೆ
ಟ್ವಿಟರ್ ಅಂತಹ ತಾಣಗಳಲ್ಲಿ,ಸಂದೇಶಗಳ ಉದ್ದ ಸೀಮಿತವಾಗಿರಬೇಕಾಗುತ್ತದೆ.ಇಂತಹ ತಾಣಗಳಲ್ಲಿ ನೀವು ನೋಡಿದ ಅಂತರ್ಜಾಲ ಪುಟದ ಕೊಂಡಿಯನ್ನು ನೀಡಲು ಸಮಸ್ಯೆಯಾಗುವುದಿದೆ.ಉದ್ದವಾದ ವಿಳಾಸವನ್ನು ಕಿರಿದಾಗಿಸುವುದು ಅಗತ್ಯವಾಗುತ್ತದೆ.http://bit.ly/ಅಂತಹ ತಾಣಗಳು ಇಂತಹ ವಿಳಾಸ ಕಿರಿದಾಗಿಸುವ ಸೇವೆ ಒದಗಿಸಿ,ಟ್ವಿಟರ್ ಬಳಕೆದಾರರಿಗೆ ನೆರವಾಗುತ್ತವೆ.ಈಗ ಗೂಗಲ್ ಕೂಡಾ http://goo.gl/ ಎನ್ನುವ ಇಂತಹ ಸೇವೆಯನ್ನು ನೀಡಲಾರಂಭಿಸಿದೆ.ಈ ಸೇವೆ ಒದಗಿಸಿದಾಗ,ಗೂಗಲ್‌ಗೆ ಬಳಕೆದಾರನು ಯಾವ ಪುಟಗಳ ಬಗ್ಗೆ ಆಸಕ್ತಿ ಹೊಂದಿದ್ದಾನೆ ಎನ್ನುವ ಮಾಹಿತಿ ಸಿಗುತ್ತದೆ.ಇದು ಬಿಟ್.ಲೀಯಂತಹ ಜನಪ್ರಿಯ ಸೇವೆಗಳಿಗೆ ಯಾವ ರೀತಿ ಹಿನ್ನಡೆ ತರುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.ಬಳಕೆದಾರನಿಗೆ ಬೇಕಾದ ಸರ್ವ ಸೇವೆಗಳನ್ನೂ ತಾನೇ ಒದಗಿಸಿ,ಅಗಾಧ ಸಂಖ್ಯೆಯ ಜನರ ಮಾಹಿತಿ,ಬಳಕೆ,ಅವರ ದತ್ತಾಂಶಗಳ ಮೇಲೆ ನಂಬಲು ಕಷ್ಟವಾಗುವಷ್ಟು ಹಿಡಿತ ಸಾಧಿಸುವ ಗೂಗಲ್ ಯತ್ನದ ಭಾಗವಾಗಿ ಈ ಹೆಜ್ಜೆಯನ್ನು ಕಾಣುವ ತಜ್ಞರಿದ್ದಾರೆ.
----------------------------------------
ಜೆಪೆಗ್ ಬದಲು webp
ಚಿತ್ರಗಳನ್ನು ಕಂಪ್ಯೂಟರಿನಲ್ಲಿ ಸಂಗ್ರಹಿಸುವಾಗ,ಬೇರೆ ಬೇರೆ ತೆರನ ಶೇಖರಣಾ ವಿಧಾನಗಳನ್ನು ಬಳಸಬಹುದು.ಕೆಲವು ವಿಧಾನಗಳಲ್ಲಿ ಚಿತ್ರವನ್ನು ಉಳಿಸಿದಾಗ,ಚಿತ್ರವನ್ನು ಶೇಖರಿಸಲು ಅಗತ್ಯವಾದ ಸ್ಮರಣಕೋಶದ ಸಾಮರ್ಥ್ಯ ಹೆಚ್ಚು,ಇನ್ನು ಕೆಲವು ರೀತಿಗಳಲ್ಲಿ ರೂಪಿಸಿದಾಗ,ಚಿತ್ರವು ಕಡಿಮೆ ಸ್ಮರಣಕೋಶ ಸಾಮರ್ಥ್ಯವನ್ನು ಬಳಸುತ್ತದೆ.ಜೆಪೆಗ್ ಇಂತಹ ರೂಪಿಸುವ ಜನಪ್ರಿಯ ವಿಧಾನವಾಗಿದೆ.ಅಂತರ್ಜಾಲದ ಹೆಚ್ಚಿನ ಚಿತ್ರಗಳು ಈ ರೀತಿಯಲ್ಲಿ ರೂಪಿಸಲಾಗಿರುವುದೇ ಹೆಚ್ಚು.ಈ ಶೈಲಿಯು ಚಿತ್ರವನ್ನು ತುಸು ಕೆಡಿಸಿದರೂ,ಕಡಿಮೆ ಸ್ಮರಣಕೋಶ ಸಾಮರ್ಥ್ಯವನ್ನು ಬಳಸುವುದರಿಂದ ಜನಪ್ರಿಯವಾಗಿದೆ.ಈಗ ಗೂಗಲ್ ಅಭಿವೃದ್ಧಿ ಪಡಿಸಿರುವ ವೆಬ್‌ಪಿ ಎನ್ನುವ ರೂಪಣಾ ವಿಧಾನವು ಜೆಪೆಗ್‌ಗಿಂತಲೂ ಶೇಕಡಾ ನಲುವತ್ತು ಕಡಿಮೆ ಸ್ಮರಣಸಾಮರ್ಥ್ಯವನ್ನು ಬಳಸುವುದಂತೆ.ಇದು ಹೊಸ ವಿಧಾನವಾದುದರಿಂದ ಬ್ರೌಸರ್,ಕ್ಯಾಮರಾ ಅಥವಾ ಚಿತ್ರವನ್ನು ಮಾರ್ಪಡಿಸುವ ತಂತ್ರಾಂಶಗಳಲ್ಲಿ ಇನ್ನೂ ಲಭ್ಯವಾಗಿಲ್ಲವೆನ್ನುವ ಸಮಸ್ಯೆಯಿದೆ.ಆದರೆ ನಿಧಾನವಾಗಿ,ತಂತ್ರಾಂಶಗಳಲ್ಲಿ ಮತ್ತು ಬ್ರೌಸರುಗಳಲ್ಲಿ,ಅಂತಹ ಸಾಮರ್ಥ್ಯವನ್ನು ಅಳವಡಿಕೆಯಾಗುವುದು ಶತಸಿದ್ಧ.ಈಗಿನ ಅಂತರ್ಜಾಲದ ಪುಟದ ಶೇಕಡಾ ಅರುವತ್ತೈದು ಭಾಗ ಚಿತ್ರಗಳೇ ಆಗಿರುತ್ತವೆ ಎನ್ನುವ ಅಂದಾಜು ಮಾಡಲಾಗಿದೆ.ಹಾಗಾಗಿ,ವೆಬ್‌ಪಿ ವಿಧಾನವನ್ನು ಬಳಸಿದ ಪುಟಗಳು ವೇಗವಾಗಿ ಲೋಡ್ ಆಗುವ ಲಾಭ ಬಳಕೆದಾರರಿಗೆ ಸಿಗಲಿದೆ.ಗೂಗಲಿನ ಮುಕ್ತ,ಬಳಸಲು ಯಾವುದೇ ರಾಯಧನ ಕೊಡಬೇಕಿಲ್ಲದ ವಿಡಿಯೋ ರೂಪಿಸುವ ವಿಧಾನವಾದ ವೆಬ್‌ಎಂ ಎನ್ನುವ ವಿಧಾನದಿಂದ ವೆಬ್‌ಪಿಯನ್ನು ವ್ಯುತ್ಪತ್ತಿ ಮಾಡಲಾಗಿದೆ.
--------------------------------------------------
ಮಿತವ್ಯಯಿ ಇಂಕ್ಯುಬೇಟರ್
ಅವಧಿಗಿಂತ ಮೊದಲೇ ಹುಟ್ಟಿದ ಮಕ್ಕಳು,ತಮ್ಮ ದೇಹದ ಶಾಖವನ್ನು ಕಾಪಿಡಲು ವಿಫಲವಾಗುವುದಿದೆ.ಇದಕ್ಕಾಗಿ ಕಂದಮ್ಮಗಳನ್ನು ಇಂಕ್ಯುಬೇಟರ್ ಎನ್ನುವ ಕೃತಕ ಕಾವುಪೆಟ್ಟಿಗೆಯಲ್ಲಿ ಇಡಬೇಕಾಗುತ್ತದೆ.ಹಳ್ಳಿಯಲ್ಲಿ ಇಂತಹ ಕಾವುಪೆಟ್ಟಿಗೆಗಳಿಲ್ಲದೆ,ಮಕ್ಕಳು ಸಾಯುವುದು ಸಾಮಾನ್ಯವಂತೆ.ಎಂಬ್ರೇಸ್ ಎನ್ನುವ ಚೀಲದಂತೆ ತೋರುವ ಕಾವುಪೆಟ್ಟಿಗೆಗಳು ಮಿತವ್ಯಯಿಯಾಗಿದ್ದು,ಮಕ್ಕಳ ದೇಹದ ಶಾಖವನ್ನು ಕಾಪಿಟ್ಟು,ಅವುಗಳ ಜೀವವನ್ನು ಉಳಿಸಲು ನೆರವಾಗುತ್ತವೆ.ಎಂಬ್ರೇಸ್ ಎನ್ನುವ ಲಾಭರಹಿತ ಸಂಸ್ಥೆಯು ಮಕ್ಕಳನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸಲು ಬಳಸಬಹುದಾದ,ಕಾವುಪೆಟ್ಟಿಗೆಯನ್ನು ಅಭಿವೃದ್ಧಿಪಡಿಸಲು ಸಮರ್ಥವಾಗಿದೆ.ಇದಕ್ಕೆ ಆಗೊಮ್ಮೆ ಈಗೊಮ್ಮೆ ವಿದ್ಯುತ್ ಪೂರೈಕೆ ಇದ್ದರೆ ಸಾಕಾಗುತ್ತದೆ.ಇದರಲ್ಲಿ ವಿದ್ಯುತ್ ಹೀಟರ್,ಮಗುವನ್ನು ಇರಿಸುವ ಬ್ಯಾಗ್,ಹೀಟರಿನ ಬಿಸಿಯನ್ನು ಕಾಪಿಡುವ ಮೇಣದ ಪದರ ಇತ್ಯಾದಿ ಭಾಗಗಳಿವೆ.
-----------------------------------------------
ಸ್ವದೇಶೀ ತಂತ್ರಜ್ಞರ ಸಮಾವೇಶ
ಗಾಂಧೀಜಿಯವರ ರಾಮರಾಜ್ಯದ ಕನಸು ನನಸಾಗಲು,ರೈತರಿಗೆ ಸುಲಭ,ಅಗ್ಗ,ಪರಿಸರಸ್ನೇಹೀ ಮತ್ತು ಸಣ್ಣ ಯಂತ್ರಗಳನ್ನು ಸಂಶೋಧಿಸುವ ನಿಟ್ಟಿನಲ್ಲಿ ಪಣತೊಟ್ಟ ಸ್ವದೇಶೀ ತಂತ್ರಜ್ಞರ ಸಮಾವೇಶವೇ ಸ್ವತಂಸಮ್.ಇದರ ಅಂತರ್ಜಾಲ ತಾಣ http://swatamsam.in.ಸ್ವದೇಶೀ ತಂತ್ರಜ್ಞರು ಗಾಂಧೀಜಯಂತಿಯಂದು ಆನೆಗುಡ್ಡೆಯ ಕುಂಭಾಷಿಯಲ್ಲಿ ಸಮಾವೇಶ ಏರ್ಪಡಿಸಿದ್ದರು.ಅಗ್ಗದ ಗೋಬರ್ ಗ್ಯಾಸ್ ಸಂಶೋಧಕ ಮೂಡಿಗೆರೆಯ ಕೃಷ್ಣರಾಜು ಮತ್ತು ಕಡಿಮೆ ಶ್ರಮದಾಯಕ ಸೈಕಲ್ ವಿನ್ಯಾಸ ರೂಪಿಸಿದ,ಬೆಂಗಳೂರಿನ ನಟರಾಜ್ ಅವರ ಪ್ರಾತ್ಯಕ್ಷಿಕೆಗಳು ಏರ್ಪಾಡಾಗಿದ್ದುವು.ರೈತರು ಕೃಷಿಯ ಜತೆಗೆ,ಸಿದ್ಧ ಸರಕನ್ನು ತಯಾರಿಸುವತ್ತ ಗಮನ ಹರಿಸಿದರೆ,ಅವರ ಆದಾಯ ಹೆಚ್ಚುತ್ತದೆ.ಹಳ್ಳಿಗಳಲ್ಲೂ ವರ್ಷಪೂರ್ತಿ ಉದ್ಯೋಗ ದೊರಕುತ್ತದೆ.ಇದರಿಂದ ಹಳ್ಳಿಗಳ ಪ್ರಗತಿ ಸಾಧ್ಯ.ಇದಕ್ಕೆ ಅನುಕೂಲವಾಗುವ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸಲು ಪಣತೊಟ್ಟಿರುವ ಸ್ವತಂಸಂ,ಅಗ್ಗದ ಗಿರಣಿ,ಅಕ್ಕಿಮಿಲ್,ಕಸದಿಂದ ವಿದ್ಯುತ್ ಇಂತಹ ಯೋಜನೆಗಳನ್ನು ಹಾಕಿಕೊಂಡಿದೆ.ತಂತ್ರಜ್ಞರಾದ ಕುಂಭಾಷಿಯ ಸಂಪತ್‌ಕುಮಾರ್ ಮತ್ತು ದ್ಯುತಿ ಟೆಕ್ನಾಲಜಿಯ ಹರ್ಷ ಸಾಲೀಮಠ ಸಮಾವೇಶವನ್ನು ಆಯೋಜಿಸಿದ್ದರು.
--------------------------------------
ಟ್ವಿಟರ್ ಚಿಲಿಪಿಲಿ
*ಆಪಲ್ ಹಣ್ಣಿನ ಬದಲು ಮರವೇ ನ್ಯೂಟನ್ ತಲೆ ಮೇಲೆ ಬಿದ್ದಿದ್ದರೆ,ಭೌತಶಾಸ್ತ್ರ ಇಷ್ಟು ಕಠಿನವಾಗ್ತಿರಲಿಲ್ಲವೇನೋ..
*ಹೆಂಗಸರ ಹೆಸರಲ್ಲಿ ಶೇಕಡಾ ಎಂಭತ್ತರಷ್ಟು ಜನರ ಹೆಸರಿನ ಕೊನೆಯ ಅಕ್ಷರ A,ಶೇಕಡಾ ಹದಿನೈದು ಜನರದ್ದು I ಅಕ್ಷರದಿಂದ ಕೊನೆಗೊಂಡರೆ ಇನ್ನು ಮೂರು ಶೇಕಡಾ ಹೆಂಗಸರ ಹೆಸರು, L ಅಕ್ಷರದಿಂದ ಕೊನೆಯಾಗುತ್ತವೆ.
*ಕಾಮನ್‌ವೆಲ್ತ್ ಗೇಮ್ಸ್ ಭಾರತಕ್ಕೆ ಸಿಗಲು ಎಪ್ಪತ್ತೆರಡು ದೇಶಗಳಿಗೆ ಲಂಚ ನೀಡಲಾಗಿತ್ತು..
*ಕಟ್ಟಾ ಕೆಟ್ಟ.
*ತಾರೀಕಿನ ತಾರೀಫು 10-10-10
------------------------------------------
ಓದುಗರ ಪ್ರತಿಕ್ರಿಯೆಗಳು
*ಅಪಘಾತಗಳ ವಿಶ್ಲೇಷಣೆಯಿಂದ "ಶ್ರುತ" ಪಡುವುದು ಎಂಬ ಪದಪ್ರಯೋಗ ಅರ್ಥವಾಗಲಿಲ್ಲ.ಗೂಗಲ್‌ನಲ್ಲಿ ಆ ಪದವಿರುವ ಪುಟಗಳು ಸಾಕಷ್ಟು ಸಿಕ್ಕಿದುವು:ಪ್ರಸನ್ನ(ಶ್ರುತ=ಕೇಳಿದ,ಆಲಿಸಿದ,ಸ್ಪಷ್ಟವಾಗು)
*ಉತ್ತಮ ಮಾಹಿತಿಯುಳ್ಳ ಬರಹಗಳಿವೆ-ಗೋಪಿನಾಥ
---------Udayavani---------------Udayavaniepaper----------------------------------
*ಅಶೋಕ್‌ಕುಮಾರ್ ಎ