Monday, November 29, 2010

ಇಂಡೋನೇಶ್ಯಾ ಮತ್ತು ಅಂತರ್ಜಾಲ

ಇಂಡೋನೇಶ್ಯಾ ಮತ್ತು ಅಂತರ್ಜಾಲ
 
ಇಂಡೋನೇಶ್ಯಾವು ಅಂತಜಾಲ ಬಳಕೆಯಲ್ಲಿ ಮುಂದಿರುವ ದೇಶವಾಗುತ್ತಿದೆ.ಅದರಲ್ಲೂ ಸಾಮಾಜಿಕ ಜಾಲತಾಣಗಳನ್ನು ಇಲ್ಲಿನ ಜನರಷ್ಟು ಮೆಚ್ಚುವವರು ಬೇರೆಲ್ಲೂ ಇದ್ದಹಾಗಿಲ್ಲ.ಫೇಸ್‌ಬುಕ್ ಮತ್ತು ಟ್ವಿಟರ್ ಬಳಕೆಯಲ್ಲಿ ಇಂಡೋನೇಶ್ಯಾದವರದ್ದು,ಉಳಿದ ರಾಷ್ಟ್ರಗಳಿಗೆ ಹೋಲಿಸಿದರೆ ಮೇಲುಗೈಯಾಗಿದೆ.ಜಗತ್ತಿನಲ್ಲೇ ಫೇಸ್‌ಬುಕ್ ಬಳಕೆದಾರರ ಸಂಖ್ಯೆಯಲ್ಲಿ ಇಂಡೋನೇಶ್ಯಾ ನಾಲ್ಕನೇ ಸ್ಥಾನದಲ್ಲಿದೆ.ಹೆಚ್ಚಿನವರು ಮೊಬೈಲ್ ಸಾಧನಗಳ ಮೂಲಕವೆ ಅಂತರ್ಜಾಲ,ಅದರಲ್ಲೂ ಈ ತಾಣಗಳ ಬಳಕೆ ಮಾಡುತ್ತಿದ್ದಾರೆ.ಭಾರತದ ಭೇಟಿಯ ನಂತರ ಒಬಾಮಾ ದಂಪತಿಗಳು ಇಂಡೋನೇಶ್ಯಾ ಪ್ರವಾಸಕ್ಕೆ ಹೋದದ್ದು ನೆನಪಿದೆಯೇ?ಒಬಾಮ ಪತ್ನಿಯ ಕೈಕುಲುಕಿ ಸ್ವಾಗತಿಸಿದ ಇಲ್ಲಿನ ಸಚಿವರೋರ್ವರ ಕ್ರಮವು,ಸಂಪ್ರದಾಯಕ್ಕೆ ವಿರುದ್ಧವಾಗಿತ್ತು,ಜನರು ಅದರ ಬಗ್ಗೆ ಟ್ವಿಟರಿನಲ್ಲಿ ಚರ್ಚಿಸಿದ ಪರಿ ಹೇಗಿತ್ತೆಂದರೆ,ಅದು ಅಂದಿನ ಬಿಸಿ-ಬಿಸಿ ಸುದ್ದಿಯಾಯಿತು.ಇದರಲ್ಲಿ ತಂತ್ರಜ್ಞಾನ ವಿಷಯಗಳ ಚರ್ಚೆಯೂ ಗರಿಗೆದರುವುದು ವಿಶೇಷ.ಬರೇ ಒಣಚರ್ಚೆಗಲ್ಲದೆ,ಅಭಿವೃದ್ಧಿಗೂ ಈ ತಾಣಗಳ ಬಳಕೆಯಾಗುತ್ತಿವೆ.ರಾಜಧಾನಿ ಜಕಾರ್ತಾದ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲೂ ಸಾಮಾಜಿಕ ಜಾಲತಾಣಗಳ ಬಳಕೆ ನಡೆದಿವೆ.
---------------------------------
ಇದೀಗ ಏಸರ್ ಟ್ಯಾಬ್ಲೆಟ್ ಸರದಿ

ಏಸರ್ ಕಂಪೆನಿಯೂ ಟ್ಯಾಬ್ಲೆಟ್ ಸಾಧನಗಳನ್ನು ಮಾರುಕಟ್ಟೆಗೆ ಬಿಡುವುದರಲ್ಲಿದೆ.ಏಪಲ್ ಕಂಪೆನಿಯ ಐಪ್ಯಾಡ್,ಸ್ಯಾಮ್ಸಂಗ್‌ನ ಗ್ಯಾಲಕ್ಸಿ ನಂತರ ಇದೀಗ ಏಸರ್ ಪ್ಯಾಡ್‌ಗಳ ಸರದಿ.ಹತ್ತು ಮತ್ತು ಏಳು ಇಂಚು,ಹೀಗೆ ಎರಡು ರೀತಿಯ ಸಾಧನಗಳನ್ನು ಏಸರ್ ಪರಿಚಯಿಸಿದೆ.ಸ್ಪರ್ಶ ಸಂವೇದಿ ತೆರೆ ಈ ಸಾಧನಗಳ ಹೈಲೈಟ್.ಎರಡು ಕ್ಯಾಮರ,ವೈಫೈ ಮತ್ತು ತ್ರೀಜಿ ಸಂಪರ್ಕ ಇದೆ.ವಿಂಡೋಸ್,ಆಂಡ್ರಾಯಿಡ್-ಹೀಗೆ ಎರಡು ರೀತಿಯ ಸಾಧನಗಳ ಜತೆ ಏಸರ್ ಮಾರುಕಟ್ಟೆಗೆ ಲಗ್ಗೆಯಿಡಲಿದೆ.ಏಸರ್ ನೆಟ್‌ಬುಕ್‌ಗಳ ಮಾರಾಟದಲ್ಲಿ ಉತ್ತಮ ಸಾಧನೆ ಮಾಡಿದ ಬಳಿಕ,ಈ ಮಾರುಕಟ್ಟೆ ಪ್ರವೇಶಿಸಲಿದೆ.ಮುಂದಿನ ವರ್ಷದ ಮೊದಲಾರ್ಧದಲ್ಲಿ ಏಸರ್ ಟ್ಯಾಬ್ಲೆಟ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ.ಬೆಲೆಯ ವಿಷಯದಲ್ಲಿ ಕಂಪೆನಿಯು ಬಾಯಿಬಿಟ್ಟಿಲ್ಲ.ಎಚ್ ಪಿ,ಬ್ಲ್ಯಾಕ್‌ಬೆರಿ ಮುಂತಾದ ಕಂಪೆನಿಗಳೂ ಪ್ಯಾಡ್ ತಯಾರಿಸುವ ಯೋಚನೆಯಲ್ಲಿವೆ.ಏಪಲ್ ಕಂಪೆನಿಯು ಎಂಭತ್ತೇ ದಿನಗಳಲ್ಲಿ ಎರಡು ದಶಲಕ್ಷ ಐಪ್ಯಾಡ್‌ಗಳನ್ನು ಮಾರಿ,ಇತರ ಕಂಪೆನಿಗಳ ಚಿತ್ತವನ್ನು ಪ್ಯಾಡುಗಳತ್ತ ಹೋಗುವಂತೆ ಮಾಡಿದೆ.ಇದರ ಜತೆಯಲ್ಲಿಯೇ ಎರಡು ತೆರೆಗಳ ಲ್ಯಾಪ್‌ಟಾಪ್ ಐಕಾನಿಕಾವನ್ನೂ ಏಸರ್ ಮಾರುಕಟ್ಟೆಗೆ ಪರಿಚಯಿಸಿದೆ.
-------------------------------
ಉದಯವಾಣಿ ಡೈರಿ ಬಹುಮಾನ ಗೆಲ್ಲಿ!
ಈ ಪ್ರಶ್ನೆಗಳಿಗೆ ಸರಿಯುತ್ತರ ಕಳಿಸಿ,ಉದಯವಾಣಿ ಡೈರಿ ಬಹುಮಾನ ಗೆಲ್ಲಿ.ಬಹುಮಾನ ಪ್ರಾಯೋಜಿಸಿದವರು ಶ್ರುತಿಗ್ರಾಫಿಕ್ಸ್,ಉಡುಪಿ.
*ರೂಬಿ ಆನ್ ರೈಲ್ ಅಂದರೇನು?
*ಎಕ್ಸ್ಟ್ರೀಮ್ ಪ್ರೊಗ್ರಾಮಿಂಗ್ ಪದವನ್ನು ಕನ್ನಡಕ್ಕಿಳಿಸಿ.
(ಉತ್ತರಗಳನ್ನು ಬಹುಮಾನ ಪ್ರಾಯೋಜಿಸಿದ ಶ್ರುತಿಗ್ರಾಫಿಕ್ಸ್‌ಗೆ ಮಿಂಚಂಚೆ ಮಾಡಿ,ವಿಷಯ:NS7 ನಮೂದಿಸಿ adooranilk@gmail.com).
(
ಕಳೆದ ವಾರದ ಸರಿಯುತ್ತರಗಳು:
*ಅಂತರ್ಜಾಲದ ಮೂಲಕ ಬಳಕೆದಾರನಿಗೆ ಅಗತ್ಯವಾದ ಯಂತ್ರಾಂಶ,ತಂತ್ರಾಂಶ ಮತ್ತು ಸೌಕರ್ಯಗಳನ್ನು ಒದಗಿಸುವ ವಿಧಾನವೇ ಕ್ಲೌಡ್ ಕಂಪ್ಯೂಟಿಂಗ್.
*ಸ್ಮರಣ ಸಾಮರ್ಥ್ಯವನ್ನು,ತಂತ್ರಾಂಶಗಳನ್ನು ಮತ್ತು ಯಂತ್ರಾಂಶಗಳನ್ನು ಇದರ ಮೂಲಕ ನೀಡಬಹುದು.ಗೂಗಲ್,ಅಮೇಜಾನ್,ಸೇಲ್ಸ್‌ಪೋರ್ಸ್ ಮುಂತಾದ ಕಂಪೆನಿಗಳು ಕ್ಲೌಡ್‌ಕಂಪ್ಯೂಟಿಂಗನ್ನು ಬಳಸುತ್ತಿವೆ.ಬಹುಮಾನ ಗೆದ್ದ ಶಿವಾನಂದ ಪೈ,ಎಂ ಐ ಟಿ,ಮಣಿಪಾಲ ಅವರಿಗೆ ಅಭಿನಂದನೆಗಳು.)
---------------------------------------------------
ಟ್ವಿಟರ್ ಚಿಲಿಪಿಲಿ
*ಲಾ ಮತ್ತು ಆರ್ಡರ್ ಎನ್ನುವುದು ಇನ್-ಲಾ ಮತ್ತು ಫಾಡರ್(ಮೇವು)ಗಳಿಗಿಂತ ಹೆಚ್ಚು ಮುಖ್ಯವೆಂದು ಬಿಹಾರದ ಚುನಾವಣಾ ಫಲಿತಾಂಶ ರುಜುವಾತು ಪಡಿಸಿದೆ.
*ಪೋನ್ ಬನೆಗಾ ಕರೋಡ್‌ಪತಿ!
*ಬಿಹಾರದಲ್ಲಿ ಬರೇ 4ಸ್ಥಾನ ಗಳಿಸಿರುವ ರಾಷ್ಟೀಯ ಪಕ್ಷ,ಅಂತಿಮ ಯಾತ್ರೆಗೂ ನಾಲ್ಕು ಜನ ಬೇಕು ಎನ್ನುವುದನ್ನು ನೆನಪಿಡಬೇಕು.
*ಕಾಂಗ್ರೆಸ್ಸಿಗರು ಟ್ವಿಟರಿನಲ್ಲಿದ್ದರೆ ಸಂದೇಶ ಬರೆಯರು,ಸೋನಿಯಾ-ರಾಹುಲ್ ಬರೆದದ್ದನ್ನು ಮತ್ತೆ ಕಳುಹಿಸಿಯಾರಷ್ಟೇ..
*ಯೆಡಿಯೂರಪ್ಪನವರಿಗೆ "ಬಹುಮಠ"ವಿದೆ...
-------------------------------------------------
ಹಳೆಯ ಕಂಪ್ಯೂಟರಿಗೆ ಎರಡುಲಕ್ಷ ಡಾಲರು
ಏಪಲ್-1 ಎನ್ನುವ 1976ರ ಮಾದರಿ,ಕಂಪ್ಯೂಟರ್ ಲಂಡನ್‌ನ ಹರಾಜು ಮಾರುಕಟ್ಟೆಯಲ್ಲಿ ಎರಡು ಲಕ್ಷ ಡಾಲರುಗಳಿಗು ಹೆಚ್ಚು ಬೆಲೆಯಲ್ಲಿ ಮಾರಾಟವಾಗಿದೆ.ಬರೇ ಇನ್ನೂರು ಕಂಪ್ಯೂಟರುಗಳನ್ನು ತಯಾರಿಸಲಾಗಿತ್ತು.ಇದರಲ್ಲಿ ಕಂಪೆನಿಯ ಹಳೆಯ ಲೋಗೋ ಆದ ನ್ಯೂಟನ್ ತಲೆಗೆ ಏಪಲ್ ಬೀಳುವ ಲೋಗೋ ಲಗತ್ತಿಸಲಾಗಿದೆ.ಆಗಿನ ಮಾರಾಟ ಬೆಲೆ ಆರುನೂರು ಡಾಲರುಗಳಾಗಿತ್ತು.
------------------------------------------------------
ಕಾಪಿರೈಟ್ ಉಲ್ಲಂಘನೆ ಬಗ್ಗೆ ಕ್ರಮ
ಹಕ್ಕುಸ್ವಾಮ್ಯಕ್ಕೆ ಕ್ಯಾರೇ ಅನ್ನದೆ,ಕಡತಗಳನ್ನು ಅದರಲ್ಲೂ ಸಂಗೀತ ಮತ್ತು ವಿಡಿಯೋ ಕಡತಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲು ಅನುಕೂಲ ಕಲ್ಪಿಸುವ ಅಂತರ್ಜಾಲ ತಾಣಗಳಿವೆ.ಟೊರೆಂಟ್ ಸೇವೆ ಎನ್ನುವ ಸೇವೆಯ ಮುಖಾಂತರವೂ ಇಂತಹ ವಿನಿಮಯ ನಡೆಯುವುದಿದೆ.ಇಂತಹ ನೂರಾರು ತಾಣಗಳನ್ನು ವಶಪಡಿಸಿಕೊಂಡು,ಅವುಗಳಲ್ಲಿ ಹಕ್ಕುಸ್ವಾಮ್ಯದ ಉಲ್ಲಂಘನೆಗಿರುವ ದಂಡದ ಬಗ್ಗೆ ನೋಟಿಸು ಪ್ರಕಟಿಸುವ ಕ್ರಮವನ್ನೀಗ ಅಮೆರಿಕಾದ ಸರಕಾರ ಕೈಗೊಂಡಿದೆ.ಈ ತಾಣಗಳ ಸೇವೆಯೀಗ ಸ್ಥಗಿತಗೊಂಡಿವೆಯಲ್ಲದೆ,ಎಚ್ಚರಿಕೆಯ ನೋಟೀಸು ತಾಣಗಳಲ್ಲಿ ಕಾಣಿಸಿಕೊಳ್ಳುತ್ತಿದೆ.
------------------------------------
ಸ್ಥಿರ ಮೊಬೈಲ್ ಸಂಖ್ಯೆ:ಜನವರಿಯಿಂದ ಎಲ್ಲೆಡೆ ಲಭ್ಯ
ಸದ್ಯ ಹರ್ಯಾಣಾದಲ್ಲಿ ಸ್ಥಿರ ಮೊಬೈಲ್ ಸಂಖ್ಯೆ ಸಾಧ್ಯವಾಗಿದೆ.ಸದ್ಯ ಇರುವ ಮೊಬೈಲ್ ಸಂಖ್ಯೆಯನ್ನೇ ಹೊಸ ಸೆಲ್ ಆಪರೇಟರ್ ಸೇವೆಗೂ ಉಳಿಸಿಕೊಳ್ಳುವುದು ಇದರಿಂದ ಸಾಧ್ಯವಾಗುತ್ತದೆ.ಆದರೆ ಭಾರತದಾದ್ಯಂತ ಈ ಸವಲತ್ತು ಜನವರಿ ಅಂತ್ಯಕ್ಕೆ ಸಿಗಲಿದೆ ಎಂದು ಈಗಿನ ಅಂದಾಜು.ಮೊಬೈಲ್ ಸೇವೆಗಳ ನಡುವೆ ಪೈಪೋಟಿ ಹೆಚ್ಚಲು ಈ ಸೇವೆ ಕಾರಣವಾಗಬಹುದು. ಆದರೂ ಕಾಲು ಭಾಗದಷ್ಟು ಬಳಕೆದಾರರು ತಮ್ಮ ಸೇವೆಯನ್ನು ಬದಲಿಸಿಕೊಳ್ಳುವ ಆಲೋಚನೆಯಲ್ಲೇ ಇಲ್ಲ ಎನ್ನುವಷ್ಟು ಮಟ್ಟಿಗೆ,ಸದ್ಯದ ಸೇವೆಯಿಂದ ತೃಪ್ತರು.
-------------------------------------
ವೊಟ್ರಾಶಿ ಇಮೇಜಿಂಗ್
ಫೇಸ್‌ಬುಕ್‌ನಲ್ಲಿ http://www.facebook.com/votrasi ಕೊಂಡಿಯಲ್ಲಿ ಮಂಗಳೂರಿನಲ್ಲಿ ಡಿಸೆಂಬರ್ ಹನ್ನೆರಡರಂದು ನಡೆಯಲಿರುವ ಫೊಟೋಗ್ರಫಿ ಪ್ರದರ್ಶನದ ಬಗ್ಗೆ ಮಾಹಿತಿಯಿದೆ,ಈ ಪ್ರದರ್ಶನದಲ್ಲಿ ಆಯ್ಕೆಯಾದ ಛಾಯಚಿತ್ರಗಳ ಪ್ರದರ್ಶನ ಜರಗಲಿದೆ.ಆಸಕ್ತರು votrasi@gmail.com ಸಂಪರ್ಕಿಸಿ.
---------------------------------------
ಚುಕ್ಕಿಗೊಂದು ಎಲ್ಲೆ ಎಲ್ಲಿದೆ?

ವಿಜಯಶ್ರೀಯವರ ಬರಹ,ಚಿತ್ರ ಮತ್ತಿತರ ರಚನೆಗಳನ್ನು ಕಾಣಬಹುದಾದ ಬ್ಲಾಗ್ http://chukkichittaara.blogspot.com.ಪ್ರತಿ ಬರಹಕ್ಕೂ ಉತ್ತಮ ಪ್ರತಿಕ್ರಿಯೆಯಿರುವುದು,ಈ ಬ್ಲಾಗಿನ ವಿಶೇಷ.ಕೆಲವು ಪೆನ್ಸಿಲ್ ರಚನೆಗಳೂ ಇಲ್ಲಿವೆ.ಅವರ ಕ್ಯಾಮರಾದ ಕಣ್ಣಿಗೆ ಬಿದ್ದ ದೃಶ್ಯಗಳನ್ನೂ ಓದುಗರ ಜತೆ ಹಂಚಿಕೊಳ್ಳಲು ಚುಕ್ಕಿಚಿತ್ತಾರ ವೇದಿಕೆಯಾಗಿದೆ.
Udayavani
Udayavani Unicode
----------------------------------

Monday, November 22, 2010

ಗೂಗಲ್‌ನ ಫ್ಯಾಶನ್ ತಾಣ

ಫೇಸ್‌ಬುಕ್ ಸಂದೇಶ ಸೇವೆ
ಮಿಂಚಂಚೆಯ ಹೊಸ ಅವತಾರವೆಂದು ಬಣ್ಣಿಸಲಾಗುತ್ತಿರುವ ಸಂದೇಶ ಸೇವೆಯನ್ನು ಫೇಸ್‌ಬುಕ್ ಆರಂಭಿಸಿದೆ.ಇದರಲ್ಲಿ ದಿಡೀರ್ ಸಂದೇಶ ರವಾನೆಗೇ ಒತ್ತು ನೀಡಲಾಗಿದೆ.ಬಳಕೆದಾರ ಆನ್‌ಲೈನ್ ಇದ್ದಾಗ,ಆತನ ಜಾಲದಲ್ಲಿರುವವರು,ನೇರವಾಗಿ ಆತನಿಗೆ ಸಂದೇಶ ರವಾನಿಸಬಹುದು.ಆತನ ಮಿಂಚಂಚೆ ವಿಳಾಸ ಹುಡುಕಿ,ಸಂದೇಶ ರವಾನಿಸುವ ಅಗತ್ಯ ಇರದು.ಕಳುಹಿಸುವ ಪ್ರತಿ ತುಣುಕು ಸಂದೇಶವಾಗಲಿ,ಅದಕ್ಕೆ ಬರುವ ಉತ್ತರವಾಗಲಿ,ಬಳಕೆದಾರನ ಇನ್‌ಬಾಕ್ಸಿನಲ್ಲಿ ಉಳಿದು ಬಿಡುತ್ತದೆ.ಇನ್ನು ಕೆಲವು ವರ್ಷಗಳು ಕಳೆದಾಗ,ತಾನು ನಡೆಸಿದ ಪ್ರತಿ ತುಣುಕು ಪಟ್ಟಾಂಗದ ಸಂದೇಶವೂ ಆತನಿಗೆ ಲಭ್ಯವಾಗುವ ಸನ್ನಿವೇಶವನ್ನು ಊಹಿಸಿಕೊಳ್ಳಿ.ಫೇಸ್‌ಬುಕ್ ತಾಣದಲ್ಲಿರುವಾಗ,ನಮಗೆ ಇತರರಿಂದ ಬಂದ ಸಂದೇಶಗಳಿಗೆ ಪ್ರತ್ಯೇಕ ಪಾಪಪ್ ಕಿಟಕಿಗಳು ಆರಂಭವಾಗಿ,ಯಾರಿಂದ ಸಂದೇಶಗಳು ಬರುತ್ತಿವೆ ಎನ್ನುವುದನ್ನು ಅರಿಯುವುದನ್ನು ಕಠಿನವಾಗುತ್ತದೆ ಎನ್ನುವುದು,ಈ ತೆರನ ಸೇವೆಯಲ್ಲಿ ಸಮಸ್ಯೆ ಸೃಷ್ಟಿಸಬಲ್ಲುದು.ಆದರೆ,ದಿಡೀರ್ ಸೇವೆ ಗೂಗಲ್ ಮಿಂಚಂಚೆಗೆ ನಿಧಾನವಾಗಿ ಅಂತ್ಯ ಕಾಣಿಸುವುದು ಖಚಿತ ಎಂದು ಬಣ್ಣಿಸುವವರೂ ಇದ್ದಾರೆ.
------------------
ಗೂಗಲ್‌ನ ಫ್ಯಾಶನ್ ತಾಣ

ಗೂಗಲ್ ಬೋಟಿಕ್.ಕಾಮ್ ಎನ್ನುವ ಅಂತರ್ಜಾಲ ಫ್ಯಾಶನ್ ತಾಣವನ್ನು ಆರಂಭಿಸಿದೆ.ಜನರು ಕೊಳ್ಳುವ ಉಡುಪುಗಳನ್ನು ಅರಿತುಕೊಂಡು,ಮುಂದೆ ಅವರ ಖರೀದಿಗೆ ಸಲಹೆ ನೀಡುವ ಸೇವೆಯನ್ನು ಗೂಗಲ್ ನೀಡುವ ಯೋಚನೆಯಲ್ಲಿ,ಬಾಟಿಕ್ ತಾಣ ಆರ್ಂಭವಾಗಿದೆ.ಮಹಿಳಾ ಉಡುಪುಗಳಿಗೆ ಸದ್ಯ ಬಾಟಿಕ್ ತಾಣವು ಸೀಮಿತವಾಗಿದೆ.ತಾಣದಲ್ಲಿ ಫ್ಯಾಶನ್‌ಗೆ ಸಂಬಂಧಿಸಿದ ಮಾಹಿತಿಗಳಿವೆ.ಜನಪ್ರಿಯ ತಾರೆಯರಿಗೆ ಸಂಬಂಧಿಸಿದ ಮಾಹಿತಿಗಳಿವೆ.ತಾರೆಯರು ಶಿಫಾರಸು ಮಾಡುವ ಉಡುಪುಗಳನ್ನು ಒಂದರ ನಂತರ ನೋಡುತ್ತಾ,ಅದು ನಿಮಗೆ ಇಷ್ಟವಾಯಿತೇ ಎಂದು ಗುರುತು ಮಾಡುವ ಸವಲತ್ತು ಅಂತರ್ಜಾಲ ತಾಣದಲ್ಲಿದೆ.ಇದನ್ನಾಧರಿಸಿ,ಮುಂದಿನ ಸಲ ನೀವು ಉಡುಪು ಖರೀದಿಸುವಾಗ,ಗೂಗಲ್ ತನ್ನ ಕ್ರಮವಿಧಿಯ ಮೂಲಕ,ನಿಮಗಿಷ್ಟವಾಗ ಬಹುದಾದ ಫ್ಯಾಶನ್ ಉಡುಪನ್ನು ಶಿಫಾರಸ್ಸು ಮಾಡುತ್ತದೆ,ಉಡುಪುಗಳ ಬಣ್ಣ,ಅವುಗಳಲ್ಲಿನ ವಿನ್ಯಾಸದತ್ತಲೂ ಕ್ರಮವಿಧಿ ಗಮನವೀಯುವ ಸಾಮರ್ಥ್ಯ ಹೊಂದಿದೆ.ಹೀಗಾಗಿ,ಯಾವ ವಿನ್ಯಾಸ,ಯಾವ ಬಣ್ಣದೊಂದಿಗೆ ಹೆಚ್ಚು ಹೊಂದುತ್ತದೆ ಎಂದು ವಿಶ್ಲೇಷಿಸಿ,ಅದರಂತೆ ಶಿಫಾರಸು ಮಾಡುವ "ಕಂಪ್ಯೂಟರ್ ದೃಷ್ಟಿ" ಅದಕ್ಕೆ ಸಿದ್ಧಿಸಿದೆ.
------------------------------
ಸೂಪರ್ ಪವರ್ ಜತೆ ಸೂಪರ್ ಕಂಪ್ಯೂಟರ್

ಜಗತ್ತಿನ ಶಕ್ತಿಮಾನ್ ರಾಷ್ಟ್ರವಾಗಲು ಮುನ್ನುಗುತ್ತಿರುವ ಚೀನಾ,ಸೂಪರ್ ಪವರ್ ಎಂದು ಕರೆಸಿಕೊಳ್ಳುವಷ್ಟರಲ್ಲಿ ತೃಪ್ತವಾಗಿಲ್ಲ.ಬದಲಾಗಿ,ಅದು ಸೂಪರ್ ಕಂಪ್ಯೂಟರನ್ನೂ ಅಭಿವೃದ್ಧಿ ಪಡಿಸಿದೆ.ಟಿಯಾನೆ-1ಎ ಎನ್ನುವ ಸೂಪರ್ ಕಂಪ್ಯೂಟರ್,ಈಗ ಜಗತ್ತಿನ ಅತ್ಯಂತ ಶಕ್ತಿಶಾಲಿ ಸೂಪರ್ ಕಂಪ್ಯೂಟರ್.ಜತೆಗೆ ಜಗತ್ತಿನಲ್ಲಿ ಮೂರನೇ ಸ್ಥಾನದಲ್ಲಿರುವ ಸೂಪರ್ ಕಂಪ್ಯೂಟರ್ ಕೂಡಾ ಚೀನಾದ ಬಳಿಯಿದೆ.ಇಂತಹ ಕಂಪ್ಯೂಟರುಗಳು ದೇಶದ ಸಾರಿಗೆ ವ್ಯವಸ್ಥೆ ಮೇಲೆ ಗಮನವೀಯಲು,ಜನರ ಅಂತರ್ಜಾಲ ಬಳಕೆ ಬಗ್ಗೆ ಗಮನವೀಯಲು,ಹವಾಮಾನ ಮುನ್ನೋಟ ನೀಡಲು ಹೀಗೆ ಅತಿವೇಗದ ಮತ್ತು ಅತ್ಯಂತ ಹೆಚ್ಚು ಮಾಹಿತಿಯನ್ನು ವಿಶ್ಲೇಷಿಸುವಲ್ಲಿ ಬೇಕಾಗುತ್ತದೆ.ಸದ್ಯ ಚೀನಾದ ಬಳಿ ನಲ್ವತ್ತಕ್ಕೂ ಹೆಚ್ಚು ಸೂಪರ್ ಕಂಪ್ಯೂಟರುಗಳಿವೆ.ಚೀನಾವು ಅಭಿವೃದ್ಧಿ ಪಡಿಸಿರುವ ಸೂಪರ್ ಕಂಪ್ಯೂಟರುಗಳು ಅಮೆರಿಕಾದ ಕಂಪೆನಿಗಳಾದ ಇಂಟೆಲ್.ಎನ್ವಿಡಿಯಾ ಮುಂತಾದ ಕಂಪೆನಿಗಳ ಚಿಪ್‌ಗಳನ್ನು ಬಳಸಿವೆ.ಅಮೆರಿಕಾದ ವಿಶ್ವವಿದ್ಯಾಲಯಗಳೀಗ ತಮ್ಮ ಅಗತ್ಯಗಳಿಗೆ ಸೂಪರ್ ಕಂಪ್ಯೂಟರುಗಳನ್ನೂ ಬಾಡಿಗೆಗೆ ಪಡೆದು,ಅಂತರ್ಜಾಲದ ಮೂಲಕವೇ ಸಂಪರ್ಕಿಸುವ ಕ್ಲೌಡ್ ಕಂಪ್ಯೂಂಟಿಂಗ್ ತಂತ್ರ ಬಳಸಲಾರಂಭಿಸಿವೆ.ಜಪಾನ್ ಕೂಡಾ ಸೂಪರ್ ಕಂಪ್ಯೂಟರುಗಳ ಬಗ್ಗೆ ಉತ್ಸಾಹ ಹೊಂದಿರುವ ರಾಷ್ಟ್ರವಾಗಿದೆ.
---------------------------------
ಉದಯವಾಣಿ ಡೈರಿ ಬಹುಮಾನ ಗೆಲ್ಲಿ!
ಈ ಪ್ರಶ್ನೆಗಳಿಗೆ ಸರಿಯುತ್ತರ ಕಳಿಸಿ,ಉದಯವಾಣಿ ಡೈರಿ ಬಹುಮಾನ ಗೆಲ್ಲಿ.ಬಹುಮಾನ ಪ್ರಾಯೋಜಿಸಿದವರು ಶ್ರುತಿಗ್ರಾಫಿಕ್ಸ್,ಉಡುಪಿ.
*ಕ್ಲೌಡ್ ಕಂಪ್ಯೂಟಿಂಗ್ ಅಂದರೇನು?
*ಈ ತೆರನ ಸೇವೆಯಲ್ಲಿ ಲಭ್ಯವಿರುವ ವಿವಿಧ ತೆರನ ಸೇವೆಗಳ್ಯಾವುವು?
(ಉತ್ತರಗಳನ್ನು ಬಹುಮಾನ ಪ್ರಾಯೋಜಿಸಿದ ಶ್ರುತಿಗ್ರಾಫಿಕ್ಸ್‌ಗೆ ಮಿಂಚಂಚೆ ಮಾಡಿ,ವಿಷಯ:NS6 ನಮೂದಿಸಿ adooranilk@gmail.com).
(
ಕಳೆದ ವಾರದ ಸರಿಯುತ್ತರಗಳು:
*ಲೀನಸ್ ತೋರ್ವಾಲ್ಡ್
*ನೆಟ್‌ಬುಕ್ ಅಂತರ್ಜಾಲಕ್ಕೆ ಸಂಪರ್ಕಿಸಲು ಉದ್ದೇಶದಿಂದ ತಯಾರಿಸಿದ ಸಾಧನವಾದರೆ,ಲ್ಯಾಪ್‌ಟಾಪ್ ಹೆಚ್ಚಿನ ಸಾಮರ್ಥ್ಯದ ಕಂಪ್ಯೂಟರ್ ಸಾಧನವಾಗಿದೆ.
ಬಹುಮಾನ ಗೆದ್ದ ಜೈದೀಪ್ ರಾವ್,ಉಡುಪಿ ಅವರಿಗೆ ಅಭಿನಂದನೆಗಳು.)
---------------------------------------------------
ಟ್ವಿಟರ್ ಚಿಲಿಪಿಲಿ
*ಹಿಂದೆಲ್ಲಾ ಹುಡುಗಿಯರು ತಮ್ಮ ತಾಯಂದಿರಂತೆ ಅಡುಗೆ ಮಾಡುತ್ತಿದ್ದರೆ,ಈಗಿನ ಹುಡುಗಿಯರಲ್ಲಿ ತಮ್ಮ ತಂದೆಯಂತೆ ಕುಡಿಯುವವರೂ ಇದ್ದಾರೆ...
*ಹಗರಣಗಳು ಇಷ್ಟು ಮಟ್ಟಿಗೆ ಸುದ್ದಿ ಮಾಡಿದ ನಂತರ ಭಾರತವು ಜಿ-೨೦ಗುಂಪಿನಿಂದ ಜಿ-೪೨೦ ಗುಂಪಿಗೆ ಜಾರಬಹುದು.
*ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು...
*ಕರ್ನಾಟಕದ ಮಟ್ಟಿಗೆ ಜಾಗತೀಕರಣ ಅಂದರೆ ಜಾಗ ಅತಿಕ್ರಮಣ ಅನಿಸ್ತಿದೆ...
-------------------------------------------------
ಚಿಲಿಪಿಲಿಗುಟ್ಟಿದವರಿಗೆ ಸ್ಕಾಲರ್‌‍ಶಿಪ್
ಟ್ವಿಟರಿನಲ್ಲಿ ಕಿರು ಸಂದೇಶ ಬರೆದು ಸ್ಕಾಲರ್‌ಶಿಪ್ ಗೆಲ್ಲುವ ಅವಕಾಶವನ್ನು ಹೋಟೆಲ್ ಸರಪಣಿ ಉದ್ಯಮದಲ್ಲಿರುವ ಕೆ ಎಫ್ ಸಿ ವಿದ್ಯಾರ್ಥಿಗಳಿಗೆ ನೀಡಿದೆ.ತಮಗೇತಕ್ಕೆ ವಿದ್ಯಾರ್ಥಿ ವೇತನ ನೀಡಬೇಕು ಎಂದು ಈ ಸಂದೇಶ ಸುಂದರವಾಗಿ ಹೇಳಬೇಕಾಗುತ್ತದೆ.ಗೆದ್ದವರಿಗೆ ವರ್ಷಕ್ಕೆ ಐದುಸಾವಿರದಂತೆ ನಾಲ್ಕು ವರ್ಷ ವಿದ್ಯಾರ್ಥಿವೇತನ ದೊರಕುತ್ತದೆ.ಸದ್ಯ ಇದು ಯುಎಸ್ ವಿದ್ಯಾರ್ಥಿಗಳಿಗೆ ತೆರೆದಿದೆ.ಸಂದೇಶಗಳಲ್ಲಿ #KFCScholar ಎಂದು ನಮೂದಿಸುವ ಮೂಲಕ ಈ ಸಂದೇಶಗಳನ್ನು ಗುರುತಿಸಲು ಬರುತ್ತದೆ.
---------------------------------------------
ಎಕ್ಸೆಂ ಎನ್ನುವ ಹೊಸ ಅಸ್ತ್ರ
ವಿರೋಧಿ ಸೈನಿಕರು ಗೋಡೆ ಅಥವಾ ಇನ್ಯಾವುದೇ ತಡೆಯ ಹಿಂದೆ ಅಡಗಿದ್ದು,ಅವರ ಮೇಲೆ ನಿಖರವಾಗಿ ಅಕ್ರಮಣ ಮಾಡಬೇಕಿದೆಯೇ?ಅಂತಹ ಅಸ್ತ್ರವೆ ಎಕ್ಸೆಂ-25. ಅದನ್ನು ಎತ್ತ ಮತ್ತು ಎಷ್ಟು ದೂರ ಸಾಗಿ ಸಿಡಿಯಬೇಕು ಎಂದು ಪ್ರೊಗ್ರಾಂ ಮಾಡಲು ಬರುತ್ತದೆ.ಇದಕ್ಕೆ ಹೆಚ್ಚು ಸಮಯವೂ ಬೇಕಾಗದು-ಐದು ಸೆಕೆಂಡು ಸಾಕು.ಸಾಗಿ ಗುರಿಯನ್ನು ಬೇಧಿಸಲು ಇನ್ನೆರಡು ಸೆಕೆಂಡು ಬೇಕಾಗಬಹುದು.ಆದರೆ,ಸ್ಫೋಟಿಸಿದರೆ ವಿರೋಧಿಗಳ ನಾಶ ಖಚಿತ.ಇಂತಹ ಎಕ್ಸೆಂ ಅನ್ನು ಅಮೆರಿಕಾ ಅಪ್ಘಾನ್‌ನಲ್ಲಿ ಬಳಸಲಾರಂಭಿಸಿದೆ.ಸಾಮಾನ್ಯವಾಗಿ ಇಂತಹ ಕೆಲಸಕ್ಕೆ ಬಹುಶಕ್ತಿಶಾಲಿ ಸ್ಫೋಟಕಗಳನ್ನು ಬಳಸಬೇಕಾಗುತ್ತದೆ.ಆದರಿಲ್ಲಿ,ಕ್ಷಿಪಣಿಯಂತಹ ತಂತ್ರಜ್ಞಾನ ಬಳಸುವುದರಿಂದ ಹೆಚ್ಚಿನ ನಿಖರತೆ,ಗುರಿಯತ್ತ ಆಕ್ರಮಣ ಸಾಧ್ಯವಾಗುತ್ತದೆ.
Udayavani Unicode
Udayavani
*ಅಶೋಕ್‌ಕುಮಾರ್ ಎ

Monday, November 15, 2010

ಗ್ಯಾಲಕ್ಸಿ ಮತ್ತು ಐಪ್ಯಾಡ್ ಸ್ಪರ್ಧೆಯಲ್ಲಿ

ಗ್ಯಾಲಕ್ಸಿ ಮತ್ತು ಐಪ್ಯಾಡ್ ಸ್ಪರ್ಧೆಯಲ್ಲಿ
 
ಏಪಲ್‌ನ ಹೊಸ ಸಾಧನ ಐಪ್ಯಾಡ್‌‍ಗೆ ಸ್ಪರ್ಧೆ ನೀಡಲು ಸ್ಯಾಮ್‌ಸಂಗ್ ಗ್ಯಾಲಕ್ಸಿಯನ್ನು ಬಿಡುಗಡೆಗೊಳಿಸಿದೆ.ಸ್ಯಾಮ್‍ಸಂಗ್ ಕಂಪೆನಿಯು ಗ್ಯಾಲಕ್ಸಿ ಎನ್ನುವ ಆಂಡ್ರಾಯಿಡ್ ಸೆಲ್‌ಫೋನನ್ನೂ ತಯಾರಿಸುತ್ತಿದ್ದು;ಗ್ಯಾಲಕ್ಸಿ ಪ್ಯಾಡ್, ಐಪ್ಯಾಡ್‌ಗೆ ಹೋಲಿಸಿದರೆ ತುಸು ಕಿರಿದು,ಗ್ಯಾಲಕ್ಸಿ ಫೋನಿಗೆ ಹೋಲಿಸಿದರೆ ತುಸು ದೊಡ್ಡದು.ನಿಸ್ತಂತು ಜಾಲಕ್ಕೆ ಸಂಪರ್ಕದೊಂದಿಗೆ ಬರುವ ಅಮೆರಿಕನ್ ಮಾರುಕಟ್ಟೆಯಲ್ಲಿ ಬೆಲೆ ನಾಲ್ಕುನೂರು ಡಾಲರುಗಳು.ಐಪ್ಯಾಡ್ ನಿಗದಿತ ನಿಸ್ತಂತು ಜಾಲಗಳವರ ಸೇವೆ ತೆಗೆದುಕೊಳ್ಳಬೇಕಾದ ಹಂಗಿಲ್ಲದೆ ಸಿಗುತ್ತದೆ.ಆದ್ದರಿಂದ ದುಬಾರಿ.ಸಾಮಾನ್ಯ ಐಪ್ಯಾಡ್ ಆದರೆ ಬೆಲೆಯಲ್ಲಿ ವ್ಯತ್ಯಾಸ ನೂರು ಡಾಲರು,ಮೂರು-ಜಿ ಸೇವೆ ಬೇಕಿದ್ದರೆ ಇನ್ನೂರು ಡಾಲರು ಅಧಿಕ ಬೆಲೆ ತೆರಬೇಕು.ಗ್ಯಾಲಕ್ಸಿಯಲ್ಲಿ ತೆರೆ ಏಳು ಇಂಚಿನದ್ದಾದರೆ,ಐಪ್ಯಾಡಿನಲ್ಲಿ ಹತ್ತು ಇಂಚಿನ ತೆರೆಯಿದೆ.ಓದಲು,ಆಟಗಳನ್ನು ಆಡಲು ಮತ್ತು ಚಲನಚಿತ್ರ ವೀಕ್ಷಣೆಗಿಂತ ಸೆಲ್‌ಪೋನ್‌ಗಳಿಗಿಂತ ಪ್ಯಾಡುಗಳೇ ಸೂಕ್ತ-ಕಾರಣ ದೊಡ್ದದಾದ ತೆರೆ.ಐಪ್ಯಾಡ್ ತೂಕ ಜಾಸ್ತಿ.ಇ-ಪುಸ್ತಕ ಓದುವಾಗ ಗ್ಯಾಲಕ್ಸಿಯ ಬ್ಯಾಟರಿ ಐಪ್ಯಾಡಿಗಿಂತ ಬೇಗ ಮುಗಿಯುತ್ತದೆ.ಗ್ಯಾಲಕ್ಸಿಯಲ್ಲಿ ಎರಡು ಕ್ಯಾಮರಾಗಳಿದ್ದು,ವಿಡಿಯೋ ಕಾನ್ಫರೆನ್ಸ್‌ಗೆ ಅನುಕೂಲತೆಯಿದೆ.
-----------------------
ಡಿಸ್ಕವರಿ:ತೂತು
ಡಿಸ್ಕವರಿ ಸ್ಪೇಸ್ ಶಟಲ್‌ದ ಜಲಜನಕ ಇಂಧನ ಕೋಶದಲ್ಲಿ ತೂತು ಪತ್ತೆಯಾಗಿರುವುದರಿಂದ ಅದರ ಯಾನವನ್ನು ನಾಸಾ ಕನಿಷ್ಠ ಈ ತಿಂಗಳ ಕೊನೆಯ ವರೆಗೆ ಮುಂದೂಡಿದೆ.ಡಿಸ್ಕವರಿಯ ಯಾನ ಕಳೆದ ವಾರದಲ್ಲಿ ನಿಗದಿಯಾಗಿತ್ತು.ಇಪ್ಪತ್ತು ಇಂಚು ಉದ್ದದ ಸೀಳನ್ನು ಇಂಧನ ಕೋಶದಲ್ಲಿ ಕೆಲಸಗಾರರು ಪತ್ತೆ ಮಾಡಿದರು.ಉಡಾವಣಾ ವೇದಿಕೆಯಲ್ಲಿರುವ ಡಿಸ್ಕವರಿಯನ್ನು ರಿಪೇರಿ ಮಾಡುವುದು ಹೇಗೆಂದು ನಾಸಾ ಇಂಜಿನಿಯರುಗಳು ತಲೆಕೆಡಿಸಿಕೊಳ್ಳುತ್ತಿದ್ದಾರೆ.
---------------------------------------------
ಗೂಗಲ್ ಟಿವಿಗೆ ವಿರೋಧ
ಗೂಗಲ್ ಟಿವಿ ಮತ್ತು ಅಂತರ್ಜಾಲ ಬೆಸೆಯಲು ಮಾಡಿರುವ ಗೂಗಲ್ ಟಿವಿ ಪ್ರಯತ್ನದ ಬಗ್ಗೆ ನಿಮಗೆ ಗೊತ್ತಿರಬಹುದು.ಟಿವಿಯಲ್ಲೇ ಅಂತರ್ಜಾಲ ಮೂಲಕ ಚಾನೆಲ್‌ಗಳ ಕಾರ್ಯಕ್ರಮಗಳನ್ನು ವೀಕ್ಷಿಸಲು ಸಾಧ್ಯವಾಗಿಸುವುದು ಗೂಗಲ್‌ನ ಉಪಾಯ. ಇದಕ್ಕೆ ಅಗತ್ಯವಾದ ಸೆಟ್ ಟಾಪ್ ಪೆಟ್ಟಿಗೆಗಳನ್ನು ಲಾಜಿಟೆಕ್ ಕಂಪೆನಿಯು ಒದಗಿಸುತ್ತಿದೆ.ಆದರೆ ಈ ಪ್ರಯತ್ನಕ್ಕೆ ಟಿವಿ ಚಾನೆಲುಗಳವರು ತಣ್ಣೀರು ಎರಚಿದ್ದಾರೆ. ಅವರುಗಳಿಗೆ ಅಂತರ್ಜಾಲ ಮೂಲಕ ಟಿವಿ ತೋರಿಸುವುದರಲ್ಲಿ ಉತ್ಸಾಹವಿಲ್ಲ. ಇದಕ್ಕೆ ಪ್ರಮುಖ ಕಾರಣ,ಅಂತರ್ಜಾಲ ಜಾಹೀರಾತಿಗಿಂತ ಟಿವಿ ಜಾಹೀರಾತುಗಳೇ ಹೆಚ್ಚು ಲಾಭದಾಯಕ.ಹೀಗೆ ಮಾಡುತ್ತಿರುವ ಚಾನೆಲುಗಳ ಪೈಕಿ,ಅಮೆರಿಕಾದ ಎನ್‌ಬಿಸಿ,ಸಿಬಿಸಿ,ಏಬಿಸಿ ನಂತರ ಇದೀಗ ಫಾಕ್ಸ್ ಟಿವಿಯ ಸರದಿ.ಅವುಗಳು ತಮ್ಮ ಟಿವಿ ಶೋಗಳನ್ನು ಪೂರ್ತಿಯಾಗಿ ಗೂಗಲ್ ಟಿವಿಯಲ್ಲಿ ತೋರಿಸಲು ಒಲ್ಲೆಯೆಂದಿವೆ.ಗೂಗಲ್ ಈ ನಕಾರದಿಂದ ಪೇಚಿಗೀಡಾಗಿದ್ದರೂ,ಇದರಿಂದ ತನ್ನ ಯೋಜನೆಗೆ ಬಾಧಕವಿಲ್ಲ ಎಂದು ಹೇಳಿಕೊಂಡಿದೆ.
------------------------------------
ವೆಬ್‍ಸೈಟ್‌‍ಗೆ ಉಚಿತ ವೆಬ್‌ಹೋಸ್ಟಿಂಗ್ ಬಹುಮಾನ ಗೆಲ್ಲಿ!
ಈ ಪ್ರಶ್ನೆಗಳಿಗೆ ಸರಿಯುತ್ತರ ಕಳಿಸಿ,ನಿಮ್ಮ ಅಂತರ್ಜಾಲ ತಾಣಕ್ಕೆ ಒಂದು ವರ್ಷದ ಉಚಿತ ಆಶ್ರಯ ಗಿಟ್ಟಿಸಿಕೊಳ್ಳಿ.ಬಹುಮಾನ ಪ್ರಾಯೋಜಿಸಿದವರು ಲಿನಕ್ಸಾಯಣ.ನೆಟ್
*ಲೀನಕ್ಸ್‌ನ "ಜನಕ" ಯಾರು?
*ನೆಟ್ ಬುಕ್ ಮತ್ತು ಲ್ಯಾಪ್‌ಟಾಪ್‌ಗೆ ವ್ಯತ್ಯಾಸ ಇದೆಯೇ?ಇದ್ದರೆ ಅದೇನು?
(ಉತ್ತರಗಳನ್ನು ಬಹುಮಾನ ಪ್ರಾಯೋಜಿಸಿದ Linuxaayana.netಗೆ ಮಿಂಚಂಚೆ ಮಾಡಿ,ವಿಷಯ:NS5 ನಮೂದಿಸಿ contest@linuxaayana.net).
(
ಕಳೆದ ವಾರದ ಸರಿಯುತ್ತರಗಳು:
*32,128
*32 ಸ್ಥಾನಗಳನ್ನು ಬಳಸಿಕೊಂಡು ಸಿಗಬಹುದಾದ ಐಪಿ ವಿಳಾಸಗಳು ಅತ್ಯಧಿಕ ಬೇಡಿಕೆಯ ಕಾರಣ ಮುಗಿಯುತ್ತಿವೆ.ಪ್ರತಿ ಸಾಧನವನ್ನೂ ಅಂತರ್ಜಾಲಕ್ಕೆ ಸಂಪರ್ಕಿಸುವ ತವಕವೂ ಇದಕ್ಕೆ ಕಾರಣವಾಗುತ್ತಿದೆ.
ಬಹುಮಾನ ಗೆದ್ದ ಚೇತನ್ ಭಟ್,ಮಂಗಳೂರು ಅವರಿಗೆ ಅಭಿನಂದನೆಗಳು.)
---------------------------------------------------
ಟ್ವಿಟರ್ ಚಿಲಿಪಿಲಿ
*ಭಾರತದ ಜಿಡಿಪಿ ಶೇ.9% ವೃದ್ಧಿಯಾಗಿರಬಹುದು,ಆದರೆ ಭ್ರಷ್ಟಾಚಾರ ಶೇ.90000 ವೃದ್ಧಿಯಾಗಿದೆ.
*ಸಂಮೋಹಿನಿಗಾರನ ಇಷ್ಟದ ರಾಗ ಯಾವುದು?ರಾಗ ಸಂಮೋಹಿನಿ!
*ನರ್ಸ್:ಒಂದು ನಿಮಿಷ ನಿಮ್ಮ ಕೈಯನ್ನು ಹಿಡಿದು, ನಾಡಿಬಡಿತ ಸರಿಯಾಗಿರ ಬೇಕೆಂದು ನಿರೀಕ್ಷಿಸುವ ಬೆಡಗಿ :)
-------------------------------------------------
ಓದುಗರ ಪ್ರತಿಕ್ರಿಯೆಗಳು
*ಮೊಬೈಲಿನಲ್ಲಿ ಗೂಗಲ್ ಶೋಧ ತುಂಬಾ ಉಪಯುಕ್ತವಾಗಬಹುದು,ಪೂರ್ತಿ ಟೈಪು ಮಾಡುವ ಮೊದಲೇ ಬಂದ ಫಲಿತಾಂಶಗಳು,ನಿಮ್ಮ ನಿರೀಕ್ಷೆಗನುಗುಣವಾಗಿಲ್ಲವಾದರೆ,ಅವನ್ನು ಕಡೆಗಣಿಸಬೇಕಾದೀತು:ಪ್ರಸನ್ನ ಶಂಕರಪುರ
*ಕಸರತ್ತಿನ ಮೂಲಕ ಕಂಪ್ಯೂಟರ್ ನಿಯಂತ್ರಣ ಕುತೂಹಲಕಾರಿ,ಮುಂದೆ ಕಂಪ್ಯೂಟರುಗಳು ಏನೆಲ್ಲಾ ಮಾಡಬಹುದು ಎಂದು ಭಯವಾಗುತ್ತದೆ: ಮಹೇಶ್ ಭಟ್
----------------------------------------------
ಐದು ವರ್ಷ ಮುಗಿಸಿದ ಸಂಪದ
ಸಂಪದ.ನೆಟ್ ಸಮುದಾಯ ತಾಣವು ಆರಂಭವಾಗಿ ಐದು ವರ್ಷಗಳು ಕಳೆದುವು.ಕನ್ನಡದ ಪ್ರಮುಖ ಅಂತರ್ಜಾಲ ತಾಣವಾಗಿ ಮೂಡಿರುವ ಸಂಪದ,ಜಾಹೀರಾತಿನ ಹಂಗಿಗೆ ಬೀಳದೆ,ಜನ ಸಾಮಾನ್ಯರಿಗೆ ಕನ್ನಡದಲ್ಲಿ ಚರ್ಚಿಸಲು,ವಿಚಾರ ವಿನಿಮಯ ಮಾಡಿಕೊಳ್ಳಲು ಮುಕ್ತ ವೇದಿಕೆಯಾಗಿದೆ.ಸಂಪೂರ್ಣ ಕನ್ನಡ ಬಳಕೆ,ಅತ್ಯುತ್ತಮ ಬಳಕೆದಾರ ಸ್ನೇಹಿ ಪುಟ ವಿನ್ಯಾಸ,ನೋಂದಾಯಿತ ಸದಸ್ಯರಿಗೆ ಯಾವುದೇ ನಿರ್ಬಂಧವಿಲ್ಲದೆ ಬರಹಗಳನ್ನು ಪ್ರಕಟಿಸುವ ಅವಕಾಶವನ್ನು ಸಂಪದ ನೀಡಿದೆ.ಸಮುದಾಯ ತಾಣವಾದರೂ ಇದರ ಅರ್ಥಿಕ ನಿರ್ವಹಣೆ ಬಹುತೇಕ ಏಕವ್ಯಕ್ತಿ ಪ್ರದರ್ಶನ ಆಗಿರುವುದು ವಿಪರ್ಯಾಸವೆ ಸರಿ. ತಂತ್ರಾಂಶ ಅಭಿವೃದ್ಧಿಕಾರ, ಕನ್ನಡಿಗ ಹರಿಪ್ರಸಾದ್ ನಾಡಿಗ್ ಸಂಪದ ತಾಣವನ್ನು ನಡೆಸಿಕೊಂಡು ಬರುತ್ತಿದ್ದಾರೆ.ಈ ಪ್ರಯತ್ನಕ್ಕೆ ನೀವು ಕೈಜೋಡಿಸಲು ಬಯಸುವಿರಾದರೆ mail@sampada.netಗೆ ಮಿಂಚಂಚೆ ಮಾಡಿ.
---------------------------------------------
360 ಕೋನಗಳಿಂದ ವೀಕ್ಷಣೆ
http://www.p4panorama.com ಅಂತರ್ಜಾಲ ತಾಣದಿಂದ ಹಲವು ಪ್ರೇಕ್ಷಣೀಯ ಸ್ಥಳಗಳ ಮೂರು ಆಯಾಮದ ವೀಕ್ಷಣೆ ಸಾಧ್ಯವಿದೆ. ಕಂಪ್ಯೂಟರ್ ಪರದೆಯ ಮೇಲೆ ನಿಮ್ಮ ಮುಂದೆ ತಾಣದ ಮುನ್ನೂರರುವತ್ತು ಡಿಗ್ರಿ ಕೋನಗಳಿಂದಲೂ ವೀಕ್ಷಣೆ ಸಾಧ್ಯ.ಗೋಲ್ಕೊಂಡಾ ಕೋಟೆ,ಬೆಹರಿನ್‌ನನ ಮರ ಮತ್ತು ಆಭರಣ ಅಂಗಡಿ,ದುಬೈನ ಗ್ಲೋಬಲ್ ವಿಲೇಜ್ ಮುಂತಾದ ದೃಶ್ಯಗಳ ಮೂರು ಆಯಾಮದ ವೀಕ್ಷಣೆಗೆ ಇಲ್ಲಿ ಅವಕಾಶವಿದೆ.
----------------------------
ಲ್ಯಾಪ್‌ಟಾಪ್ ಮಾರಾಟ ಭಾರೀ ವೃದ್ಧಿ
ದೇಶದಲ್ಲಿ ಪಿಸಿಗಳ ಮಾರಾಟ ಭರಾಟೆಯಿಂದ ನಡೆದಿದೆ.ಕಳೆದ ವರ್ಷಕ್ಕೆ ಹೊಲಿಸಿದರೆ,ಈ ವೃದ್ಧಿ ಶೇಕಡಾ ಇಪ್ಪತ್ತೇಳು.ಲ್ಯಾಪಟ್ಯಾಪ್‌ಗಳು-ನೋಟ್‌ಬುಕ್‌ಗಳ ಮಾರಾಟ ಡೆಸ್ಕ್‌ಟಾಪ್ ಪಿಸಿಗಳ ಮೂರು ಪಟ್ಟಿನಷ್ಟು ಹೆಚ್ಚಿದೆ.ಆರ್ಥಿಕ ಚಟುವಟಿಕೆಯಲ್ಲಿ ವೃದ್ಧಿ ಕಂಪ್ಯೂಟರುಗಳಿಗೆ ಬೇಡಿಕೆ ಹೆಚ್ಚಿಸಿರುವುದು ಸ್ಪಷ್ಟ.ಡೆಲ್ ಕಂಪೆನಿ ಮಾರಾಟದಲ್ಲಿ ಮುಂದಿದೆ.ಎಚ್‌ಪಿ,ಏಸರ್ ಕಂಪೆನಿಗಳು ನಂತರದ ಸ್ಥಾನ ಪದೆದಿವೆ.

Udayavani Unicode
Udayavani
*ಅಶೋಕ್‌ಕುಮಾರ್ ಎ

Monday, November 08, 2010

ಕಸರತ್ತಿನ ಮೂಲಕ ಕಂಪ್ಯೂಟರ್ ಆಟ ಆಡಿ!

ಕಸರತ್ತಿನ ಮೂಲಕ ಕಂಪ್ಯೂಟರ್ ಆಟ ಆಡಿ!
 
ಕಂಪ್ಯೂಟರನ್ನು ಆಟವಾಡಲು ಬಳಸುವ ಜನರೂ ಇದ್ದಾರೆ,ಅವರು ಎಕ್ಸ್‌ಬಾಕ್ಸ್ ಎನ್ನುವ ವ್ಯವಸ್ಥೆಯನ್ನು ಬಳಸಿ,ಕಂಪ್ಯೂಟರಿನ ಜತೆ ವ್ಯವಹರಿಸುವುದಿದೆ.ಮೌಸ್,ಕೀಲಿ ಮಣೆಯಂತೆ ಕಂಪ್ಯೂಟರಿನ ಜತೆ ವ್ಯವಹರಿಸಲು ಎಕ್ಸ್‌ಬಾಕ್ಸ್ ಅನುವು ಮಾಡುತ್ತದೆ.ಎಕ್ಸ್‌ಬಾಕ್ಸಿನ ಅನುಕೂಲ ಎಂದರೆ,ಅದು ಕಂಪ್ಯೂಟರ್ ಆಟಗಳಿಗೆ ಹೇಳಿ ಮಾಡಿಸಿದ ಹಾಗಿದೆ.ಈಗ ಮೈಕ್ರೋಸಾಫ್ಟ್ ಕೈನೆಟಿಕ್ ಎನ್ನುವ ಇನ್ನೊಂದು ತೆರನ ವ್ಯವಸ್ಥೆಯನ್ನು ರೂಪಿಸಿದೆ.ಇದರಲ್ಲಿ ಕಂಪ್ಯೂಟರಿನ ಮುಂದೆ ಆಂಗಿಕ ಭಾವ ಪ್ರದರ್ಶಿಸಿದರೂ,ಅದಕ್ಕೆ ಕಂಪ್ಯೂಟರ್ ಪ್ರತಿಕ್ರಿಯಿಸುವಂತೆ ಯೋಜಿಸಲಾಗಿದೆ.ಕಂಪ್ಯೂಟರ್ ಆಟಗಳನ್ನಾಡುವಾಗ,ಜನರು ಕಂಪ್ಯೂಟರ್ ಮುಂದೆ ಕುಳಿತು ಕೂಚು ಭಟ್ಟರಾಗುವುದು ತಪ್ಪಿಸುವುದು,ಹೊಸ ವ್ಯವಸ್ಥೆಯ ವಿಶೇಷ.ಕಂಪ್ಯೂಟರಿನ ಮುಂದೆ ಕೈಯಾಡಿಸಿದರೆ,ಅದಕ್ಕೆ ಕಂಪ್ಯೂಟರ್ ಪ್ರತಿಕ್ರಿಯಿಸುತ್ತದೆ.ವಿಡಿಯೋ ಕ್ಯಾಮರಾ,ಮೈಕ್ ಇಂತಹ ಸೆನ್ಸರುಗಳು ಇರುವ ವ್ಯವಸ್ಥೆಯ ಮೂಲಕ,ಇದು ಸಾಧ್ಯವಾಗುತ್ತದೆ.ಕಂಪ್ಯೂಟರ್‌ನಲ್ಲಿ ಕಾರ್ ರೇಸ್ ನಡೆಸಲು,ಕೈಯನ್ನು ಎಡ ಬಲಕ್ಕೆ ಬೀಸುತ್ತಾ,ತೆರೆಯಲ್ಲಿ ಕಾಣುವ ಕಾರನ್ನು ನಿಯಂತ್ರಿಸಬೇಕು.ಕಾರಿಗೆ ಬ್ರೇಕ್,ಎಕ್ಸಲೇಟರನ್ನು ಕಂಪ್ಯೂಟರೇ ನಿರ್ಧರಿಸುತ್ತದೆ.ವಿಡಿಯೋ ಗೇಮ್ಸ್‌ಗಳಿಗಾಗಿರುವ ಕೈನೆಟಿಕ್ ಬೆಲೆ ನಾಲ್ಕುನೂರು ಡಾಲರುಗಳು.ಈ ಬೆಲೆಗೆ ಇನ್ನೂರೈವತ್ತು ಜಿಬಿ ಸ್ಮರಣಶಕ್ತಿ ಸಿಗುತ್ತದೆ.ಮುನ್ನೂರು ಮತ್ತು ನೂರೈವತ್ತು ಡಾಲರುಗಳ ಬೆಲೆಗೂ ಕೈನೆಟಿಕ್ ಮತ್ತು ಎಕ್ಸ್‌ಬಾಕ್ಸ್ ಜತೆಯಾಗಿ ಸಿಗುತ್ತದೆ.
------------------------------------------
ಮೊಬೈಲುಗಳಲ್ಲೀಗ ಗೂಗಲ್ ದಿಡೀರ್ ಶೋಧ
ಅಂತರ್ಜಾಲದಲ್ಲಿ ಗೂಗಲ್ ದಿಡೀರ್ ಶೋಧ ಸೇವೆ ಒದಗಿಸಿದ ಬಗ್ಗೆ ನೀವು ಅರಿತಿದ್ದೀರಿ.ಇದೀಗ ಈ ಸೇವೆ ಮೊಬೈಲ್ ಸಾಧನಗಳಲ್ಲೂ ಸಿಗುತ್ತಿದೆ.ಐಫೋನ್ ಮತ್ತು ಅಂಡ್ರಾಯಿಡ್ ಕಾರ್ಯಾಚರಣೆ ವ್ಯವಸ್ಥೆ ಹೊಂದಿರುವ ಫೋನುಗಳಲ್ಲಿದು ಲಭ್ಯ.ಮೊದಲಾಗಿ ಮೊಬೈಲ್ ಬ್ರೌಸರಿನಲ್ಲಿ ಗೂಗಲ್ ತಾಣಕ್ಕೆ ಹೋಗಿ,ದಿಡೀರ್ ಶೋಧವನ್ನು ಚಾಲೂ ಮಾಡಿಟ್ಟರೆ,ಮುಂದೆ ಈ ಸೇವೆ ಲಭ್ಯವಾಗುತ್ತದೆ.ಈ ಸೇವೆಯ ಲಭ್ಯತೆ ಮೊಬೈಲ್ ಸಾಧನಗಳಲ್ಲಿ ಹೆಚ್ಚು ಪ್ರಸ್ತುತವೂ ಹೌದು.ಕೆಲವೇ ಶಬ್ದಗಳನ್ನು ಟೈಪಿಸಿದೊಡನೆ, ಬಳಕೆದಾರರ ಯಾವುದರ ಬಗ್ಗೆ ಶೋಧ ನಡೆಸುತ್ತಿರ ಬಹುದು ಎಂದು ಊಹಿಸಿ,ವಿವಿಧ ಫಲಿತಾಂಶಗಳನ್ನು ಪ್ರದರ್ಶಿಸುವುದರ ಮೂಲಕ,ಟೈಪಿಂಗ್ ಮಾಡುವ ಅವಶ್ಯಕತೆಯನ್ನು ಕಡಿಮೆಯಾಗಿಸುವುದು ದಿಡೀರ್ ಶೋಧ ಸೇವೆಯ ಹೆಗ್ಗಳಿಕೆಯಾಗಿದೆ.ಇತರ ಬಳಕೆದಾರರ ಶೋಧಕಾರ್ಯದಿಂದ ಗೂಗಲ್ ಈ "ಜ್ಞಾನ" ಗಳಿಸುತ್ತದೆ.
------------------------------------------------
ಬರ್ಮಾದ ಮೇಲೆ ಸೈಬರ್ ದಾಳಿ!
ಬರ್ಮಾದ ಅಂತರ್ಜಾಲ ತಾಣಗಳನ್ನು ಯಾರೂ ಸಂಪರ್ಕಿಸಲಾಗದಂತೆ ಸೈಬರ್ ದಾಳಿಗಳನ್ನು ಆಯೋಜಿಸಲಾಗಿದೆ.ಈ ದಾಳಿಗಳನ್ನು ಹಲವು ತಾಣಗಳ ಮೂಲಕ ಮಾಡಲಾಗುತ್ತಿದ್ದು,ದಾಳಿಯ ಉದ್ದೇಶ ಅಥವ ಮೂಲ ಯಾವುದು ಎನ್ನುವುದು ಸ್ಪಷ್ಟವಾಗಿಲ್ಲ.ಅಕ್ಟೋಬರ್ ಕೊನೆಯ ವಾರದಲ್ಲಿ ಆರಂಭವಾದ ದಾಳಿಗಳು ಇನ್ನೂ ಮುಂದುವರಿಯುತ್ತಿವೆ.ಬರ್ಮಾದಲ್ಲಿ ನಡೆಯಲಿರುವ ಚುನಾವಣೆಗಳ ಸಮಯದಲ್ಲಿ ದೇಶದಲ್ಲಿ ಏನು ನಡೆಯುತ್ತಿದೆ ಎನ್ನುವುದು ಹೊರ ಪ್ರಪಂಚಕ್ಕೆ ತಿಳಿಯದಂತೆ ಮಾಡುವುದು ಈ ದಾಳಿಯ ಉದ್ದೇಶವಾಗಿರಬಹುದು ಎನ್ನುವ ಗುಮಾನಿಯಿದೆ.ಹಾಗಿದ್ದರೆ,ದಾಳಿಯು ಅಲ್ಲಿನ ಮಿಲಿಟರಿ ಆಡಳಿತದ ಕುಮ್ಮಕ್ಕಿನಿಂದ ನಡೆಯುತ್ತಿರಬಹುದು.ಅಂತರ್ಜಾಲ ಸರ್ವರುಗಳಿಗೆ ಸುಮ್ಮನೆ ಬೇಡಿಕೆ ಸಲ್ಲಿಸಿ,ಅವನ್ನು ಬ್ಯುಸಿಯಾಗಿಸುವುದು,ಈ ದಾಳಿಗಳ ವೈಖರಿ.ನೈಜ ಬಳಕೆದಾರರ ಸಂಪರ್ಕ ಬೇಡಿಕೆಯನ್ನು ಸರ್ವರುಗಳು ಸ್ವೀಕರಿಸದಂತೆ ತಡೆಯುವುದೇ ಈ ನಮೂನೆಯ ದಾಳಿಗಳ ಉದ್ದೇಶವಾಗಿದೆ.
---------------------------------
ಬಿ ಎಸ್ ಎನ್ ಎಲ್‌ನ ಕೇಬಲ್ ಮೂಲಕ ಖಾಸಗಿ ಬ್ರಾಡ್‌ಬ್ಯಾಂಡ್!
ಬ್ರಾಡ್‌ಬ್ಯಾಂಡ್ ಸೇವೆಯನ್ನು ಇನ್ನಷ್ಟು ಜನರಿಗೆ ತಲುಪಿಸಲು,ಬಿ ಎಸ್ ಎನ್ ಎಲ್ ತನ್ನ ಕೇಬಲ್ ಜಾಲವನ್ನು ಇತರರ ಖಾಸಗಿ ಟೆಲಿಕಾಂ ಸೇವೆ ನೀಡುವವರೊಂದಿಗೂ ಹಂಚಿಕೊಂಡು ಮೂಲ ಸೌಕರ್ಯ ಬಳಸಿದವರಿಂದ ಶುಲ್ಕ ಪಡೆಯುವಂತಾಗಬೆಕೆಂದು ಟೆಲಿಕಾಂ ಇಲಾಖೆ ನೇಮಿಸಿದ ಸಮಿತಿಯೊಂದು ಶಿಫಾರಸು ಮಾಡಿದೆ.ಫೈಬರ್ ಜಾಲಗಳನ್ನು ದೇಶದ ತುಂಬೆಲ್ಲಾ ಹಬ್ಬಿವೆ.ಖಾಸಗಿ ಟೆಲಿಕಾಂ ಕಂಪೆನಿಗಳೂ ಇಂತಹ ಜಾಲವನ್ನು ಹಬ್ಬಿಸಿವೆ.ಆದರೆ ಚಂದಾದಾರನ ಮನೆ ತಲುಪಲು ಮನೆ ಮನೆಗೂ ಕೇಬಲ್ ಹಾಕುವುದು ದುಬಾರಿ ಕೆಲಸ,ಜತೆಗೆ ಅತ್ಯಂತ ಪ್ರಯಾಸದ್ದೂ ಹೌದು.ಆದರೆ ಬಿ ಎಸ್ ಎನ್ ಎಲ್ ಈಗಾಗಲೇ ದೇಶಾದ್ಯಂತ ಮೂರು ಕೋಟಿ ಮನೆಗಳ ಸಮೀಪದವರೆಗೂ ಹೋಗಿರುವ ತಾಮ್ರದ ಕೇಬಲ್ ಜಾಲವನ್ನು ಹೊಂದಿದೆ.ಬಿ ಎಸ್ ಎನ್ ಎಲ್‌ನ ಸ್ಥಿರ ದೂರವಾಣಿ ಸೇವೆ ಬರುವುದು ಇಂತಹ ಜಾಲದ ಮೂಲಕವೇ. ಇಂತಹ ಕೊನೆಯ ಮೈಲು ಸಂಪರ್ಕದ ಇನ್ನಷ್ಟು ಸದುಪಯೋಗಬಾಗಬೇಕು.ಖಾಸಗಿ ರಂಗದ ಟೆಲಿಕಾಂ ಸೇವೆ ಒದಗಿಸುವ ಕಂಪೆನಿಗಳಿಗೂ ಇದರ ಬಳಕೆಯ ಅವಕಾಶ ನೀಡುವುದರ ಮೂಲಕ ಇದನ್ನು ಸಾಧಿಸಬಹುದು ಎನ್ನುವುದು ಟೆಲಿಕಾಂ ಇಲಾಖೆಯ ಲೆಕ್ಕಾಚಾರ.ಬಿ ಎಸ್ ಎನ್ ಎಲ್‌ಗೆ ಇದರ ಬಳಕೆಯ ಮೊದಲ ಹಕ್ಕು ಇದೆ.ಆದರೆ ಉಳಿದಂತೆ ಇತರ ಸೇವೆ ನೀಡುವ ಕಂಪೆನಿಗಳಿಗೂ,ಈ ಜಾಲದ ಬಳಕೆಗೆ ಅವಕಾಶ ನೀಡಿ ತನ್ನ ಸೇವೆಗೆ ಶುಲ್ಕ ಪಡೆಯಬೇಕು ಎನ್ನುವುದು ಪ್ರಸ್ತಾಪ.ಏರ್‌ಟೆಲ್ ಅಂತಹ ಕಂಪೆನಿಗಳು ಹಳ್ಳಿಗಳಲ್ಲಿ ತನ್ನ ಸೇವೆ ನೀಡಲು ಈ ಪ್ರಸ್ತಾವ ಸಹಕಾರಿಯಾಗಲಿದೆ.
-----------------------------------------
ಶೇರು ಮಾರುಕಟ್ಟೆ:ವ್ಯವಹಾರ ನಿಲುಗಡೆ
ನವಂಬರ್ ಒಂದರ ಸೋಮವಾರ ಬಾಂಬೇ ಸ್ಟಾಕ್ ಎಕ್ಸ್‌ಚೇಂಜ್(ಬಿ ಎಸ್ ಇ) ಮಾರುಕಟ್ಟೆಯಲ್ಲಿ ತಾಂತ್ರಿಕ ವೈಫ್ಹಲ್ಯದಿಂದ ಮಧ್ಯಾಹ್ನ ಹನ್ನೆರಡರಿಂದ ಎರಡೂವರೆಯ ವರೆಗೆ ವ್ಯವಹಾರ ಸಾಧ್ಯವಾಗಲಿಲ್ಲ.ಇನ್ನೊಂದು ಮಾರುಕಟ್ಟೆ ಎನ್ ಎಸ್ ಇಯ ವ್ಯವಹಾರ ಅಬಾಧಿತವಾಗಿತ್ತು.ಹಾಗಾಗಿ,ಎರಡು ಮಾರುಕಟ್ಟೆಯಲ್ಲಿ ವ್ಯವಹಾರ ಮಾಡಬಲ್ಲವರಿಗೆ ಹೆಚ್ಚು ಸಮಸ್ಯೆ ಬಾಧಿಸಲಿಲ್ಲ.ಆದರೆ ಬಿ ಎಸ್ ಇಯಲ್ಲಿ ಮಾತ್ರಾ ವ್ಯವಹಾರಗೈಯ್ಯುವ ಬ್ರೋಕರುಗಳು ವ್ಯವಹಾರ ನಿಲ್ಲಿಸಿ,ಕೈಚೆಲ್ಲಿ ತಮ್ಮ ಗಿರಾಕಿಗಳಿಗೆ ಗಾಬರಿ ಹುಟ್ಟಿಸಿದರು.ಇಂತಹ ತಾಂತ್ರಿಕ ತೊಂದರೆಗಳು ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿದವರಿಗೆ ದುಸ್ವಪ್ನವಾಗಿ ಕಾಡುತ್ತವೆ.ದಿಡೀರ್ ಮಾರುಕಟ್ಟೆ ಕುಸಿತ,ಏರಿಕೆಗಳಿಗೆ ಇಂತಹ ನಿಲುಗಡೆಗಳು ಕಾರಣವಾಗುವುದಿದೆ.
--------------------------------
ಡಾ.ಪ್ರಸನ್ನ ಕುಮಾರ್ ಕೆ ಅವರ "ಹೋಮಿಯೋಪತಿ" ಪುಸ್ತಕ ಗೆಲ್ಲಿ!
*ಐ ಪಿ ವಿಳಾಸವನ್ನು ದ್ವಿಮಾನ ಪದ್ಧತಿಯಲ್ಲಿ ಬರೆದಾಗ ಎಷ್ಟು ಸ್ಥಾನಗಳು ಬೇಕು?ಮುಂದಿನ ಐಪಿ6ನಲ್ಲಿ ಎಷ್ಟು ಸ್ಥಾನಗಳಿವೆ?
*ಐಪಿ ವಿಳಾಸಗಳು ಮುಗಿಯುತ್ತಾ ಬಂದಿವೆ-ಕಾರಣವೇನು?
(ಉತ್ತರಗಳನ್ನು ಬಹುಮಾನ ಪ್ರಾಯೋಜಿಸಿದ ಡಾ.ಪ್ರಸನ್ನ ಕುಮಾರ್‌ರವರಿಗೆ ಮಿಂಚಂಚೆ ಮಾಡಿ,ವಿಷಯ:NS4 ನಮೂದಿಸಿ drprasa@gmail.com).
(
ಕಳೆದ ವಾರದ ಸರಿಯುತ್ತರಗಳು:*
*ಶಿವರಾಮ ಕಾರಂತ,ಸಪ್ಟಂಬರ್ 8
*ತಾಣಕ್ಕೆ ಎಷ್ಟು "ಹಿಟ್ಸ್" ಬಂದವೆನ್ನುವುದು ಮಾನದಂಡ
ಎಂಟು ಜನ ಸರಿಯುತ್ತರ ಕಳಿಸಿದ್ದು,ಬಹುಮಾನ ಗೆದ್ದ ರಾಧಾಕೃಷ್ಣ ಅವರಿಗೆ ಅಭಿನಂದನೆಗಳು.)
---------------------------------------------------
ಟ್ವಿಟರ್ ಚಿಲಿಪಿಲಿ
*ಎಲ್ಲಾ ಗ್ರಹಗಳೂ ಅಪ್ರದಕ್ಷಿಣಾಕಾರವಾಗಿ ಸೂರ್ಯನ ಸುತ್ತ ಸುತ್ತುತ್ತವಾದರೆ,ಶುಕ್ರಗ್ರಹ ಮಾತ್ರಾ ಸೂರ್ಯನಿಗೆ ಪ್ರದಕ್ಷಿಣೆ ಬರುತ್ತದೆ..
*ಜೈ-ಮಿನಿ-ಭಾರತ ಎನ್ನುವುದು ಮಿನಿಭಾರತದ ಬಗ್ಗೆ ಬರೆದ ಪುರಾಣ :)
*ಪಟಾಕಿಗಳು,ನಾಯಿಸ್‌ಗಳು,ಸ್ವೀಟುಗಳು,ತಿಂಡಿಗಳು,ಎಸ್ಸೆಮ್ಮೆಸ್ಸುಗಳು,ಗ್ರೀಟಿಂಗ್ಸುಗಳು...ಈ ಹಬ್ಬ ಇಷ್ಟೇನೇ..
-------------------------------------------------
ನಿಮ್ಮೊಡನೆ ವಿ ಆರ್ ಭಟ್ರು!

ತಂತ್ರಜ್ಞ,ಸಲಹೆಗಾರ ಮತ್ತು ತರಬೇತುದಾರರಾದ ವಿ ಆರ್ ಭಟ್ ಅವರು ತಮ್ಮ ಬರವಣಿಗೆಯನ್ನು ಅಂತರ್ಜಾಲದಲ್ಲಿ ಹಂಚಿಕೊಳ್ಳಲು http://nimmodanevrbhat.blogspot.com ಬ್ಲಾಗನ್ನು ಬಳಸಿಕೊಂಡಿದ್ದಾರೆ.ಈ ತಾಣಕ್ಕೆ ಬಂದವರಿಗೆ ವಿಡಂಬನೆ,ವಿಚಾರ,ಆಧ್ಯಾತ್ಮ,ಕವನಗಳು,ಚಿಂತನೆ ಹೀಗೆ ವೈವಿಧ್ಯಮಯ ಸಾಮಗ್ರಿಗಳು ಲಭ್ಯವಾಗುವಂತೆ ಭಟ್ಟರು ನೋಡಿಕೊಂಡಿದ್ದಾರೆ.
ಕಾವ್ಯ-ಸಾಹಿತ್ಯವೆಂಬ ಕಜ್ಜಾಯ ನೆಚ್ಚಿಕೊಂಡು ಹಂಚಿಕೊಳ್ಳಲು ನಿಮ್ಮೊಡನೆ ಹಂಚಿಕೊಳ್ಳಲು ಬ್ಲಾಗು ಅವಕಾಶ ನೀಡುತ್ತದೆ.
*ಅಶೋಕ್‌ಕುಮಾರ್ ಎ

Monday, November 01, 2010

ಟಚ್ ಸ್ಕ್ರೀನ್ ಸವಲತ್ತು:ತಂತ್ರಾಂಶದ ಮೂಲಕ

ಟಚ್ ಸ್ಕ್ರೀನ್ ಸವಲತ್ತು:ತಂತ್ರಾಂಶದ ಮೂಲಕ

  ಹಳೆಯ ಮೊಬೈಲ್ ಫೋನ್‌ಗಳಲ್ಲಿ ಸ್ಪರ್ಶಸಂವೇದಿ ತೆರೆಗಳಿಲ್ಲವಷ್ಟೇ?ಆದರೆ ಈಗಿನ ಹೊಸ ಸ್ಮಾರ್ಟ್‌ಫೋನ್‌ಗಳಲ್ಲಿ ಸ್ಪರ್ಶಸಂವೇದಿ ತೆರೆಗಳದ್ದೇ ಕಾರುಬಾರು.ಈ ಸವಲತ್ತಿಗಾಗಿ,ಹಳೆಯ ಫೋನ್‌ಗಳಿಗೆ ವಿದಾಯ ಹೇಳಬೇಕೇ?ಅವನ್ನು ಸ್ಪರ್ಶ ಸಂವೇದಿಗಳಾಗಿಸಲು ಬಾರದೇ?ಕೇಂಬ್ರಿಜ್ ವಿವಿಯ ಸಂಶೋಧಕರು ಹೀಗೆ ಪರಿವರ್ತಿಸಲು ತಂತ್ರಾಂಶದ ದಾರಿ ಕಂಡುಕೊಂಡಿದ್ದಾರೆ.ತೆರೆಯ ಮೇಲೆ ಸ್ಪರ್ಶಸಂವೇದಿ ತೆರೆಯ ಮೇಲೆ ಮಾಡಿದಂತೆ ಮುಟ್ಟಿ,ತಟ್ಟಿದಾಗ, ಉಂಟಾಗುವ ಶಬ್ದದ ಆಧಾರದ ಮೇಲೆ ನೀವು ಎಲ್ಲಿ ಮುಟ್ಟಿದ್ದೀರಿ,ಏನು ಸೇವೆ ಬಯಸುವಿರಿ ಎಂದು ಅಂದಾಜಿಸಿ,ಅದನ್ನು ಮಾಡುವ ತಂತ್ರಾಂಶ ಅಭಿವೃದ್ಧಿ ಪಡಿಸುವ ಮೂಲಕ,ಸಾದಾ ಫೋನನ್ನು "ಸ್ಪರ್ಶಸಂವೇದಿಯಾಗಿಸುವ" ವಿನೂತನ ಪ್ರಯೋಗ ಯಶಸ್ವಿಯಾಗಿದೆ.ಈ ತಂತ್ರಜ್ಞಾನದ ಮೂಲಕ ಕಡಿಮೆ ಖರ್ಚಿನ "ಟಚ್‌ಸ್ಕ್ರೀನ್" ಫೋನ್ ಹ್ಯಾಂಡ್‌ಸೆಟ್‌ಗಳು ಲಭ್ಯವಾಗುವ ಭರವಸೆಯೂ ಮೂಡಿದೆ.ಮೈಕ್ ಮೂಲಕ ಶಬ್ದವನ್ನು ಗ್ರಹಿಸುವ ತಂತ್ರಾಂಶ,ಅದರ ಪ್ರಮಾಣ,ಸ್ಥಾನ ಎರಡನ್ನೂ ಅಂದಾಜು ಮಾಡುವ ಈ ನವೀನ ತಂತ್ರದಿಂದ ಕಸವಾಗಬೇಕಿದ್ದ ಫೋನ್‌ಗಳ ಆಯುಷ್ಯ ವರ್ಧಿಸಲಿವೆ!
--------------------------
ಎವರೆಸ್ಟ್ ಪರ್ವತ ಪ್ರದೇಶದಲ್ಲೂ ತ್ರೀಜಿ!
3ಜಿ ಸೆಲ್‌ಫೋನ್ ಸೇವೆಯು ಎವರೆಸ್ಟ್ ಶಿಖರ ಪ್ರದೇಶದಲ್ಲೂ ಸಿಗಲಾರಂಭಿಸಿದೆ.ಅದೂ ಎಂತ ವೇಗ ಅಂತೀರಾ? 3.6ಎಂಬಿ ವೇಗದಲ್ಲಿ ಹೆಚ್ಚಾಗಿ ಸೇವೆ ಸಿಕ್ಕಿದರೆ,ಆಗೀಗ ಅದರ ದುಪಟ್ಟು ವೇಗದ ಸಂಪರ್ಕವೂ ಸಿಗಬಹುದು.ನೇಪಾಲ ಎನ್ಸೆಲ್ ಕಂಪೆನಿಯು ಹದಿನೇಳು ಅಡಿ ಎತ್ತರದಲ್ಲಿ ಸೆಲ್‌ಫೋನ್ ಮೊಬೈಲ್ ಗೋಪುರಗಳನ್ನು ಹಾಕಿ ಸೇವೆಯನ್ನು ನೀಡಲಾರಂಭಿಸಿದೆ.ಒಂಭತ್ತು ಗೋಪುರಗಳನ್ನು ಸ್ಥಾಪಿಸಿರುವ ಕಂಪೆನಿಯು,ಮೂವತ್ತು ಸಾವಿರ ಶಿಖರಾರೋಹಿ ಪ್ರವಾಸಿಗಳನ್ನು ಗುರಿಯಾಗಿಸಿದೆ.ಒಂದು ಸಲ ಐವತ್ತು ಜನರು ಸೇವೆ ಬಳಸಲು ಸಾಧ್ಯವಾಗುತ್ತದಂತೆ.ನಾಲ್ಕು ಗೋಪುರಗಳಲ್ಲಿ ಸೌರವಿದ್ಯುತ್ ಮೂಲಕ ಸೇವೆ ನೀಡಲಾಗುತ್ತಿದೆ.ಮೂರು ದಿನಗಳಿಗೆ ಸಾಕಾಗುವಷ್ಟು ಬ್ಯಾಕಪ್ ನೀಡುವ ಬ್ಯಾಟರಿಗಳಿವೆ.ಎವರೆಸ್ಟ್ ಪರ್ವತದ ತುತ್ತ ತುದಿ ತಲುಪುವವರು ಬಹಳ ಕಮ್ಮಿಯಾದ್ದರಿಂದ,ಅಲ್ಲಿನ ಸೇವೆಯ ಲಭ್ಯತೆಯ ಬಗ್ಗೆ ಕಂಪೆನಿ ತಲೆಕೆಡಿಸಿಕೊಂಡಿಲ್ಲ.
------------------------------------------
ಉತ್ಪ್ರೇಕ್ಷಿತ ಮೊಬೈಲ್ ಬಳಕೆದಾರರ ಸಂಖ್ಯೆ
ದೇಶದ ಸೆಲ್‌ಫೋನ್ ಬಳಕೆದಾರರ ಸಂಖ್ಯೆಯು ಅತಿರಂಜಿತವಾಗಿ ಹೇಳಲ್ಪಡುತ್ತಿರುವುದು ಟ್ರಾಯ್‌ಗೂ ಸ್ಪಷ್ಟವಾಗಿದೆ.ತಮ್ಮಿಂದ ಮಾರಾಟವಾದ ಸಿಮ್‌ಗಳ ಸಂಖ್ಯೆಯನ್ನೇ ತಮ್ಮ ಬಳಕೆದಾರರ ಸಂಖ್ಯೆಯಾಗಿ ನೀಡುವ ಅಭ್ಯಾಸವನ್ನು ಸೆಲ್‌ಕಂಪೆನಿಗಳು ಹೊಂದಿವೆ.ಆದರೆ ಓರ್ವನೇ ಹಲವು ಸಿಮ್ ಹೊಂದಿರುವ ಈ ದಿನಗಳಲ್ಲಿ,ಇದು ಅತಿರಂಜಿತವಾದ ಸಂಖ್ಯೆಯನ್ನು ನೀಡುತ್ತದೆ,ವಿನ: ನಿಜವಾದ ಬಳಕೆದಾರರ ಸಂಖ್ಯೆಯಲ್ಲ ಎನ್ನುವುದು ಸ್ಪಷ್ಟ.ಆದ್ದರಿಂದ ನಿಜವಾಗಿಯೂ ಸಕ್ರಿಯವಾಗಿರುವ ಬಳಕೆದಾರರ ಸಂಖ್ಯೆಯ ಆಧಾರದಲ್ಲಿ ಚಂದಾದಾರರ ಸಂಖ್ಯೆಯನ್ನು ಅಂದಾಜಿಸಬೇಕೆಂದು ಟೆಲಿಕಾಂ ನಿಯಂತ್ರಕ ಪ್ರಾಧಿಕಾರ ನಿಗದಿಪಡಿಸುವ ಸೂಚನೆಗಳಿವೆ.
--------------------------------
ಸೂಪರ್ ಕಂಪ್ಯೂಟರಿನಲ್ಲೂ ಲೀನಕ್ಸ್
ಚೀನಾವು ಜಗತ್ತಿನ ಅತ್ಯಂತ ವೇಗದ ಸೂಪರ್ ಕಂಪ್ಯೂಟರನ್ನು ಅಭಿವೃದ್ಧಿ ಪಡಿಸಿದೆ,ಟಿಯಾನಿ ಎನ್ನುವ ಹೆಸರು ಹೊತ್ತ ಸೂಪರ್ ಕಂಪ್ಯೂಟರ್ ಸದ್ಯದ ಕ್ರೇಎಕ್ಸ್‌ಟಿ5ಜಾಗ್ವಾರ್ ಎನ್ನುವ ಯಂತ್ರಕ್ಕೆ ಹೋಲಿಸಿದರೆ ಹತ್ತಿರ ಹತ್ತಿರ ಒಂದೂವರೆಪಟ್ಟು ವೇಗದ ಗಣಕಕಾರ್ಯದಲ್ಲಿ ಮಾಡುತ್ತದೆ ಮಾಡುತ್ತದೆ ಎಂಬುದು ಅಂದಾಜು.ಆದರಿಲ್ಲಿ ಗಮನಿಸ ಬೇಕಾದ ಸಂಗತಿ ಎಂದರೆ,ಯಂತ್ರಾಂಶದ ವಾಸ್ತುವಿನಲ್ಲಿ ಹೊಸತನ ಬಳಸಿದ್ದರೂ,ತಂತ್ರಾಂಶಕ್ಕೆ ಬಂದಾಗ,ಸೂಪರ್ ಕಂಪ್ಯೂಟರಿನಲ್ಲಿ ಬಳಸಿದ ಕಾರ್ಯನಿರ್ವಹಣಾ ವ್ಯವಸ್ಥೆ ತಂತ್ರಾಂಶ ಲೀನಕ್ಸ್ ಆಗಿದೆ ಎನ್ನುವುದು.ಇಲ್ಲಿ ಮಾತ್ರಾ ಅಲ್ಲ,ಲಂಡನ್‌ನ ಶೇರು ವಿನಿಮಯ ಕೇಂದ್ರದಲ್ಲಿ ಬಳಕೆಯಾಗುವ ಕಂಪ್ಯೂಟರಿನಲ್ಲೂ ಲೀನಕ್ಸ್ ಬಳಕೆಯಾಗುತ್ತಿದೆ.ಅಲ್ಲಿ ವಿಂಡೋಸ್ ವ್ಯವಸ್ಥೆಗೆ ವಿದಾಯ ಹೇಳಿ ಲೀನಕ್ಸ್ ಬಳಸ ತೊಡಗಿದ್ದು ಈಗ ಹಳೆ ಸುದ್ದಿಯಾಗಿದೆ.ಗಣಕಯಂತ್ರ ವೇಗವಾಗಿ ಕಾರ್ಯಾಚರಿಸಲು,ಕೈಕೊಡದೆ ಕೆಲಸ ಮಾಡಲು,ವೈರಸ್ ಅಂತಹ ಭದ್ರತೆಗೆ ಅಪಾಯ ತರುವ ಕಾಟಗಳಿಂದ ಮುಕ್ತವಾಗಲು ಲೀನಕ್ಸ್ ವ್ಯವಸ್ಥೆಯೇ ಸೂಕ್ತವೆನ್ನುವುದು ಸ್ಪಷ್ಟವಾಗುವ ಅಂಶವಾಗಿದೆ.
------------------------------------
ನಡೆಯದಿನ್ನು ವಾಕ್‌ಮನ್
ಜಪಾನ್‌ನ ಸೋನಿ ಕಂಪೆನಿಯು ಕ್ಯಾಸೆಟ್ ಬಳಸುವ ವಾಕ್ಮನ್ ಟೇಪ್‌ಗಳನ್ನು 1979ರಿಂದ ತಯಾರಿಸುತ್ತಿದೆ.ಇನ್ನವುಗಳಿಗೆ ವಿದಾಯ ಹೇಳಲದು ನಿರ್ಧರಿಸಿದೆಯಂತೆ.ಸುಮಾರು ಇಪ್ಪತ್ತೆರಡು ಕೋಟಿ ವಾಕ್‌ಮನ್‌ಗಳನ್ನು ಮಾರಿದ ನಂತರ ಅವುಗಳ ಮಾರಾಟದ ಪ್ರಮಾಣದಲ್ಲಾಗಿರುವ ಕುಸಿತದಿಂದ ಇನ್ನು ಅವುಗಳ ತಯಾರಿ ನಿಲ್ಲಿಸಲು,ಸೋನಿ ಕಂಪೆನಿಯು ಮನ ಮಾಡಿದೆ.ಆದರೆ ಚೀನಾದಲ್ಲಿ ಅದರ ತಯಾರಿ,ಮಾರಾಟ ಇನ್ನಷ್ಟು ಕಾಲ ನಡೆಯಬಹುದು.
-------------------------------
ಯಾಹೂ ಮಿಂಚಂಚೆ ಮಿಂಚಲಿದೆ
ಯಾಹೂವನ್ನು ಕಳೆದ ಐದು ವರ್ಷಗಳಲ್ಲಿ ಮೊದಲ ಬಾರಿಗೆ ಹೊಸತಾಗಿ ಮಿಂಚಲಿದೆ.ಯಾಹೂವಿನಲಿದ್ದುಕೊಂಡು ಟ್ವಿಟರ್,ಫೇಸ್‌ಬುಕ್‌ಗಳಿಗೆ ಸಂದೇಶಗಳನ್ನು ಕಳುಹಿಸಬಹುದು.ಇದು ಗೂಗಲಿಗಿಂತ ವೇಗವಾಗಿ ಕಾರ್ಯನಿರ್ವಹಿಸಲಿದೆ.ಇತ್ತೀಚೆಗೆ ಜಿಮೇಲ್‌ನಲ್ಲಿ ಬಳಕೆದಾರರಿಗೆ ಮುಖ್ಯ ಮಿಂಚಂಚೆಗಳು ಪ್ರತ್ಯೇಕವಾಗಿ ತೋರಿಸುವ ವ್ಯವಸ್ಥೆ ಆರಂಭವಾಗಿತ್ತು.ಈಗ ಅಂತಹ ಅನುಕೂಲತೆ ಯಾಹೂವಿನಲ್ಲೂ ಸಿಗಲಿದೆ.ಈ ಬದಲಾವಣೆಗಳ ಲಾಭ ಯಾಹೂವಿನ ಇಪ್ಪತ್ತೆಂಟು ಕೋಟಿ ಬಳಕೆದಾರರಿಗೆ ಮುಟ್ಟಲಿದೆ.ಫ್ಲಿಕರ್,ಪಿಕಾಸ,ಯುಟ್ಯೂಬ್ ಮುಂತಾದ ಚಿತ್ರ-ವಿಡಿಯೊ ಸೇವೆಗಳನ್ನು ಯಾಹೂವಿನ ಇನ್‌ಬಾಕ್ಸಿನಲ್ಲಿದ್ದುಕೊಂಡೇ ವೀಕ್ಷಿಸುವುದು ಸಾಧ್ಯವಾಗಿಸಲಾಗುತ್ತದೆ.ಮಿಂಚಂಚೆಗಳ ರಾಶಿಯಿಂದ, ಬೇಕಾದ ಮಿಂಚಂಚೆಯನ್ನು ಹುಡುಕಿ ನೋಡುವ ಸೇವೆಯ ಗುಣಮಟ್ಟವೂ ಹೆಚ್ಚಲಿದೆ.
--------------------------------------------------
"ಹೆಸರೇ ಬೇಡ" ಪುಸ್ತಕ ಗೆಲ್ಲಿ!
*ಈ ತಾಣ ಯಾವ ಸಾಹಿತಿಯದ್ದು? http://www.shivaramkarantha.in ಅವರು ನಟಿಸಿದ್ದ ಚಿತ್ರ ಯಾವುದು?
*ಅಂತರ್ಜಾಲತಾಣದ ಜನಪ್ರಿಯತೆ ಅಳೆಯುವ ಮಾನದಂಡ ಯಾವುದು?
(ಉತ್ತರಗಳನ್ನು ಬಹುಮಾನ ಪ್ರಾಯೋಜಿಸಿದ ಪ್ರಕಾಶ್ ಹೆಗ್ಡೆಯವರಿಗೆ ಮಿಂಚಂಚೆ ಮಾಡಿ,ವಿಷಯ:NS3 ನಮೂದಿಸಿ kash531@gmail.com).
(
ಕಳೆದ ವಾರದ ಸರಿಯುತ್ತರಗಳು:*ಶೇಷಾದ್ರಿ ವಾಸು,1998
*www.udayavani.com,ಯುನಿಕೋಡ್‌ನಲ್ಲಿದೆ.
ಬಹುಮಾನ ಗೆದ್ದ ಮನೋಜ್‌ಕೃಷ್ಣ ಕೆ ಎಸ್ ಮತ್ತು ವಿಕಾಸ್ ಹೆಗ್ಡೆ,ಭದ್ರಾವತಿ ಅವರಿಗೆ ಅಭಿನಂದನೆಗಳು.)
---------------------------------------------------
ಟ್ವಿಟರ್ ಚಿಲಿಪಿಲಿ
*ಹುಡುಗಿಯ ಏಜ್,ಪುರುಷರ ವೇಜ್,ವಿದ್ಯಾರ್ಥಿಯ ಪರ್ಸಂಟೇಜ್ ಕೇಳಬೇಡ!
*ಹಿಂದುಳಿದ ಜಾತಿಯ ತೋಳಗಳ ಮೆಚ್ಚಿನ ರಾಗ ಯಾವುದು? ಹಿಂದೋಳ!!
-------------------------------------------------
ಮಲ್ಲಿಕಾರ್ಜುನರ ಕ್ಯಾಮರಾ ಕಣ್ಣಲ್ಲಿ
ಮಲ್ಲಿ(ಕ್ಯಾಮರಾ) ಕಣ್ಣಲ್ಲಿ ಎನ್ನುವುದು ಮಲ್ಲಿಕಾರ್ಜುನ ಡಿ.ಜಿ. ಅವರ ಬ್ಲಾಗ್ ಬರಹಗಳ ಗುಚ್ಛ.ಇದರಲ್ಲಿ ಅವರ ಚಿತ್ರ-ಬರಹಗಳ ಸಂಗ್ರಹಗಳಿವೆ.ವೈವಿಧ್ಯಮಯ ಬರಹಗಳ ಸಂಗ್ರಹ ಇಲ್ಲಿವೆ.ಬೇರೆ ಬೇರೆ ಕೋನಗಳಿಂದ ಚಿತ್ರಗಳನ್ನು ತೆಗೆಯುವಂತೆ,ತಮ್ಮ ಸುತ್ತಲಿನ ಬದುಕಿನತ್ತಲೂ ಬೇರೆ ಬೇರೆ ಕೋನಗಳಿಂದ ನೋಡಿದ ಅನುಭವ ಇಲ್ಲಿನ ಬರಹಗಳಿಂದಲೂ ಸಿಗುತ್ತವೆ.http://dgmalliphotos.blogspot.comನತ್ತ ಪ್ರಯಾಣಬೆಳೆಸಿ,ಬ್ಲಾಗ್‌ಬರಹಗಳತ್ತ ಕಣ್ಣಾಡಿಸಿ.

udayavani Unicode
-----------------------------
Udayavani
*ಅಶೋಕ್‌ಕುಮಾರ್ ಎ