Monday, December 27, 2010

ಸಸ್ಯದಂತಹ ಸೌರಶಕ್ತಿ ಘಟಕ

ಸಸ್ಯದಂತಹ ಸೌರಶಕ್ತಿ ಘಟಕ
 
ಸಸ್ಯವು ಇಂಗಾಲದ ಡಯಾಕ್ಸೈಡ್ ಮತ್ತು ನೀರನ್ನು ಬಳಸಿಕೊಂಡು ಶಕ್ತಿಯನ್ನು ಉತ್ಪಾದಿಸಿಕೊಳ್ಳುತ್ತದೆ.ಇದೇ ಆಧಾರದಲ್ಲಿ ತಯಾರಿಸಿದ ಘಟಕವೊಂದು, ನೀರು ಮತ್ತು ಅಂಗಾರಾಮ್ಲವನ್ನು ಜಲಜನಕ ಅಥವಾ ಇಂಗಾಲದ ಮಾನಾಕ್ಸೈಡ್ ಮಿಶ್ರಣವನ್ನು ಉತ್ಪಾದಿಸುತ್ತದೆ.ಜಲಜನಕವನ್ನು ಇಂಧನಕೋಶದಲ್ಲಿ ವಿದ್ಯುತ್ ಉತ್ಪಾದನೆಗೆ ಬಳಸಿಕೊಳ್ಳಬಹುದು.
ಇಂತಹ ಘಟಕದಲ್ಲಿ ಕ್ವಾರ್ಟ್ಸ್ ಕಿಟಕಿಯ ಮೂಲಕ ಬಿಸಿಲನ್ನು ಕೇಂದ್ರೀಕರಿಸಿ,ಇಂಗಾಲಾಮ್ಲ ಮತ್ತು ನೀರಿನ ಮಿಶ್ರಣವನ್ನು ಯಂತ್ರದೊಳಗೆ ಪಂಪ್ ಮಾಡಲಾಗುತ್ತದೆ.ಕ್ವಾರ್ಟ್ಸ್ ಕಿಟಕಿಯಿಂದ ಬರುವ ಬರುವ ಬಿಸಿಲು,ಸೀರಿಯಮ್ ಆಕ್ಸೈಡ್ ಪದರ(ಸೀರಿಯಾ) ಇರುವ ಕೊಟಡಿಯನ್ನು ಪ್ರವೇಶಿಸುತ್ತದೆ.ಇಲ್ಲಿ ಪ್ರವೇಶಿಸುವ ನೀರು ಮತ್ತು ಇಂಗಾಲಾಮ್ಲದ ಮಿಶ್ರಣ ತಣ್ಣಗಾಗುವ ಕಾರಣ,ಸೀರಿಯಾ ಪದರವು ತಂಪಾಗಿ,ಆಮ್ಲಜನಕವನ್ನು ಹೀರಿಕೊಳ್ಳುತ್ತದೆ.ಇದರಿಂದ ಇಂಗಾಲಾಮ್ಲ ಮತ್ತು ನೀರು ಜಲಜನಕ ಮತ್ತು ಇಂಗಾಲದ ಮಾನಾಕ್ಸೈಡ್ ಆಗಿ ಬದಲಾಗುತ್ತದೆ.ಈ ಘಟಕದ ದಕ್ಷತೆಯು ಸುಮಾರು ಹತ್ತೊಂಭತ್ತು ಪ್ರತಿಶತ ಇರುತ್ತದೆ ಎಂದು ಅಂದಾಜಿಸಲಾಗಿದೆ.ಇದನ್ನು ಅಭಿವೃದ್ಧಿ ಪಡಿಸಿ,ಮಿಥೇನ್ ಉತ್ಪಾದಿಸಲೂ ಬಳಸಬಹುದು ಎನ್ನುವುದು ಈ ವಿಧಾನವನ್ನು ಅಭಿವೃದ್ಧಿ ಪಡಿಸಿದ ಅಮೆರಿಕಾ ಮತ್ತು ಸ್ವಿಸ್ ಸಂಶೋಧಕರ ಲೆಕ್ಕಾಚಾರ.
-----------------------------------------
ಹೊಸ "ಬರಹ"
ಜನಪ್ರಿಯ "ಬರಹ" ತಂತ್ರಾಂಶದ ಹೊಸ ಆವೃತ್ತಿ 10.3 ಈಗ ಸಿದ್ಧವಾಗಿದೆ. ಈಗ ಬರಹವನ್ನು ಇಳಿಸಿಕೊಳ್ಳಲು,ನೋಂದಾಯಿಸಿಕೊಳ್ಳಬೇಕಾಗುತ್ತದೆ.ಹೆಸರು,ಊರು,ಮಿಂಚಂಚೆ,ಭಾಷೆ ಇವುಗಳ ಬಗೆಗಿನ ಮಾಹಿತಿಯನ್ನು ನೀಡಿ ನೋಂದಾಯಿಸಬೇಕು.ಬರಹ ತಂತ್ರಾಂಶದಲ್ಲಿ ಬರಹ ಎಡಿಟರ್,ಬರಹಪ್ಯಾಡ್ ಎಡಿಟರ್ ಎಂಬ ಭಾರತೀಯ ಭಾಷೆಗಳಲ್ಲಿ ಟೈಪಿಸಲು ಸಹಾಯ ಮಾಡುವ ತಂತ್ರಾಂಶ ಹಾಗೂ ಬರಹ ಐ ಎಂ ಇ ಎನ್ನುವ ಯಾವುದೇ ಅಂತರ್ಜಾಲ ಪುಟ ಅಥವಾ ತಂತ್ರಾಂಶದಲ್ಲಿ ಯುನಿಕೋಡಿನಲ್ಲಿ ಭಾರತೀಯ ಭಾಷೆಗಳನ್ನು ಟೈಪಿಸಲು ಅನುವು ಮಾಡುವ ತಂತ್ರಾಂಶಗಳು ಅಡಕವಾಗಿವೆ.ಪದಗಳನ್ನು ಕಾಗುಣಿತ ಪ್ರಕಾರ ವಿಂಗಡಿಸುವ,ಭಾಷಾಂತರಿಸುವ,ಆನ್-ಲೈನ್ ನಿಘಂಟು ಬಳಸಿಕೊಂಡು,ಪದಗಳ ಅಕ್ಷರವನ್ನು ಪರಿಶೀಲಿಸುವ ಸವಲತ್ತುಗಳೀಗ ಹಣ ತೆತ್ತವರಿಗೆ ಮಾತ್ರಾ ಸಮಯದ ಮಿತಿಯಲ್ಲದೆ ಸಿಗುತ್ತವೆ.ಇವುಗಳಿಗೆ ಹನ್ನೊಂದು ಡಾಲರು ತೆರಬೇಕಾಗುತ್ತದೆ.ಬರಹ ಎಸ್ಡಿಕೆ ಎನ್ನುವ ಭಾಷಾ ತಂತ್ರಾಂಶ ಅಭಿವೃದ್ಧಿ ಸಾಧನವೂ ಲಭ್ಯವಿದೆ.ಶೇಷಾದ್ರಿ ವಾಸು ಅವರು ತಮ್ಮ ಜನಪ್ರಿಯ ಪದಸಂಸ್ಕಾರಕವನ್ನು ನಿರಂತರವಾಗಿ ಉತ್ತಮ ಪಡಿಸುತ್ತಿರುವುದು ನಿಜಕ್ಕೂ ಅಭಿನಂದನಾರ್ಹವಾಗಿದೆ.
--------------------------------------
ಬಾಹ್ಯಾಕಾಶದಲ್ಲಿ ಆಂಡ್ರಾಯಿಡ್ ಫೋನ್
ಗೂಗಲ್ ತನ್ನ ನಕ್ಸಸ್ ಸ್ಮಾರ್ಟ್ ಫೋನ್‌ಗಳನ್ನು ಬಾಹ್ಯಾಕಾಶದಲ್ಲಿ ಪರೀಕ್ಷಿಸಿದೆ.ಆಗಸದಲ್ಲಿ ಬುಗ್ಗೆಗಳಿಗೆ ಇವನ್ನು ಸಿಕ್ಕಿಸಿ,ತೇಲಿ ಬಿಟ್ಟು ಪರೀಕ್ಷಿಸಲಾಗಿದೆ.ಇಪ್ಪತ್ತು ಸಾವಿರ ಅಡಿ ಎತ್ತರದಲ್ಲಿ ಸ್ಮಾರ್ಟ್‌ಪೋನ್‌ಗಳು ತೊಂದರೆ ಕೊಡದೆ ಕೆಲಸ ಮಾಡುತ್ತವೆ.ಅರುವತ್ತು ಸಾವಿರ ಅಡಿ ತಲುಪಿದ ಬುಗ್ಗೆಗಳಿಗೆ ಕಟ್ಟಿದ ಫೋನ್‌ಗಳು ಕೆಲಸ ಮಾಡದಿದ್ದದ್ದು ಕಂಡು ಬಂತು.ಮತ್ತೆ ಬುಗ್ಗೆಗಳು ಕೆಳಗಿಳಿದಾಗ ಕೆಲಸ ಮಾಡಲು ಶುರು ಮಾಡಿದುವಂತೆ.ಅರುವತ್ತು ಸಾವಿರ ಅಡಿ ಎಂದರೆ,ವಿಮಾನಗಳೂ ಅಷ್ಟೆತ್ತರ ಹಾರವು.ಸ್ಮಾರ್ಟ್ ಫೋನ್‌ಗಳು ಕೆಲಸ ಮಾಡುತ್ತವೋ ಎಂದು ನೋಡುವುದರ ಜತೆಗೆ,ಇವನ್ನು ಸಣ್ಣ ಉಪಗ್ರಹಳಂತೆ ಬಳಸುವುದನ್ನು ಪರೀಕ್ಷಿಸುವುದು ಗೂಗಲ್‌ನ ಉದ್ದೇಶವಾಗಿರಬಹುದು ಎನ್ನುವುದು ಗುಮಾನಿ.
---------------------------------
"ಕಂಪ್ಯೂಟರ್ ಬಗ್ಗೆ ಏನೂ ತಿಳಿಯದವರಿಗಾಗಿ" ಗೆಲ್ಲಿ!
ಈ ಪ್ರಶ್ನೆಗೆ ಸರಿಯುತ್ತರ ಕಳಿಸಿ,"ಕಂಪ್ಯೂಟರ್ ಬಗ್ಗೆ ಏನೂ ತಿಳಿಯದವರಿಗಾಗಿ" ಪುಸ್ತಕ ಗೆಲ್ಲಿ.ಬಹುಮಾನ ಪ್ರಾಯೋಜಿಸಿದವರು ಪುಸ್ತಕದ ಲೇಖಕ ಭವಾನಿಶಂಕರ್.ಪುಸ್ತಕದ ಬಗೆಗಿನ ವಿವರಗಳಿಗೆ http://smckannada.blogspot.com
*ಪಾಡ್‌ಕಾಸ್ಟಿಂಗ್ ಅಂದರೇನು?
*ಕನ್ನಡದ ಪ್ರಮುಖ ಪಾಡ್‌ಕಾಸ್ಟಿಂಗ್ ಯಾವುದು?
(ಉತ್ತರಗಳನ್ನು ashok567@gmail.comಗೆ ಮಿಂಚಂಚೆ ಮಾಡಿ,ವಿಷಯ:NS11 ನಮೂದಿಸಿ ).
(ಕಳೆದ ವಾರದ ಸರಿಯುತ್ತರಗಳು:
*ವರ್ಷ 2010 ಅತ್ಯಂತ ಪ್ರಮುಖ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಾದ ಬೆಳವಣಿಗೆ ಎಂದರೆ ಐಪ್ಯಾಡ್ ಅಂತಹ ಸಾಧನಗಳ ಬಿಡುಗಡೆ ಎಂದು ಸೂಚಿಸಿ ಬಹುಮಾನ ಗೆದ್ದವರು ಅಂಕಿತ್,ಬೆಂಗಳೂರು.ಅಭಿನಂದನೆಗಳು.)
------------------------------------------------------------
ಟ್ವಿಟರ್ ಚಿಲಿಪಿಲಿ
*ರಾಬಿನ್ ಉತ್ತಪ್ಪ ತಮ್ಮ ಹೆಸರನ್ನು ಆನಿಯನ್ ಉತ್ತಪ್ಪ ಎಂದು ಬದಲಾಯಿಸಿ,ಐಪಿಎಲ್‌ನ ಅತಿ ದುಬಾರಿ ಆಟಗಾರ ಎನಿಸಿಕೊಂಡರು.
*ವ್ಯಕ್ತಿಯ ಬಗ್ಗೆ ಹೆಚ್ಚು ಕುತೂಹಲ ಬೇಡ..ಆತನ ಚಿಂತನೆಗಳ ಕಡೆ ಹೆಚ್ಚು ಕುತೂಹಲವಿರಲಿ..
*ವೊಡ್ಕಾದ ಪ್ಲಸ್ ಪಾಯಿಂಟ್ ಎಂದರೆ ಅದು ನೋಡಲು ನೀರಿನ ಹಾಗಿದೆ..ಮತ್ತು ನೀರಿನ ಬಾಟಲ್ ತರಗತಿಗೂ ಒಯ್ಯಬಹುದು...
*ನೀವಿಲ್ಲಿ ಎಷ್ಟು ಸಮಯದಿಂದ ಕೆಲಸ ಮಾಡುತ್ತಿದ್ದೀರಿ? ಕೆಲಸ ಮಾಡದಿದ್ದರೆ ಕಿತ್ತೆಸೆಯುತ್ತೇವೆ ಎಂದು ಬೆದರಿಸಿದ ಬಳಿಕ..!
*ಕ್ಯಾಲರಿ ಎನ್ನುವುದು ನಮ್ಮ ವಾರ್ಡ್ರೋಬ್‌ಗೆ ರಾತ್ರಿಯ ಕಾಲ ನುಗ್ಗಿ,ನಮ್ಮ ಅಂಗಿಯನ್ನು ಬಿಗಿಯುವಂತೆ ಹೊಲಿಯುವ ಜೀವಿ..
-------------------------------------------------
ಉದಯ ಇಟಗಿಯವರ "ಬಿಸಿಲಹನಿ"

ಉದಯ್ ಇಟಗಿಯವರು ಇಂಗ್ಲೀಷ್ ಪ್ರಾಧ್ಯಾಪಕರು.ಮೂಲತ: ಮುಧೋಳದವರಾದ ಇವರೀಗ ಲಿಬಿಯಾ ದೇಶದ ಸಭಾ ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಕಲಿಸುತ್ತಿದ್ದಾರೆ.ಕನ್ನಡದ ಇವರ ಬ್ಲಾಗ್ ಬರಹಗಳ ತಾಣ http://bisilahani.blogspot.comದಲ್ಲಿ ತಾನೇಕೆ ಕನ್ನಡದಲ್ಲಿ ಬರೆಯುತ್ತೇನೆ ಎಂಬ ಬಗ್ಗೆಯೂ ಚರ್ಚಿಸಿದ್ದಾರೆ.ಸದ್ಯ ಬೇರೆ ಭಾಷೆಗಳ ಕವನಗಳನ್ನು ಕನ್ನಡಕ್ಕೆ ಅನುವಾದಿಸುವ ಕೆಲಸಕ್ಕೂ ಕೈಹಾಕಿದ್ದಾರೆ.ಕನ್ನಡದ ಅಂತರ್ಜಾಲ ತಾಣಗಳಲ್ಲಿ ಬರೆಯುವುದಿವರ ಮೆಚ್ಚಿನ ಹವ್ಯಾಸ.ಕೆಂಡಸಂಪಿಗೆ,ಸಂಪದ ತಾಣಗಳಲ್ಲಿ ಇವರು ಸಕ್ರಿಯ.
------------------------------------------
ಓದುಗರ ಅನಿಸಿಕೆ:ಹ್ಯಾಕರ್ ಎಂದರೇನು?
ಹ್ಯಾಕರ್ ಶಬ್ದವನ್ನು ನುಸುಳುಗಾರ ಎಂದು ಕನ್ನಡೀಕರಿಸಿ ನೀಡಿರುವ ವಿವರಣೆಯ ಬಗ್ಗೆ ಕಾರ್ಕಳದ ತಂತ್ರಜ್ಞ ವಾಸುದೇವ ಕಾಮತ್ ತಕರಾರು ತೆಗೆದಿದ್ದಾರೆ.ಹ್ಯಾಕರ್ ಶಬ್ದವನ್ನು ಜಾಲವನ್ನು ಬೇಧಿಸುವಾತ ಎಂಬರ್ಥದಲ್ಲಿ ಬಳಸುವುದು ಸರಿಯಲ್ಲ-ತಾನು ಹ್ಯಾಕರ್ ಎಂದು ಅಭಿಮಾನದಿಂದ ಹೇಳಿಕೊಳ್ಳುತ್ತಿರುವವ.ಹ್ಯಾಕರ್ ಎಂದರೆ,ತನ್ನ ಜಾಣ್ಮೆಯನ್ನು ಬಳಸಿ ಯಾವುದೇ ಸಮಸ್ಯೆಯನ್ನು ಬಗೆಹರಿಸುವವ ಎನ್ನುವ ಅರ್ಥಕೊಡುತ್ತದೆ.ಉದಾಹರಣೆಗೆ ವೈ-ಫೈ ಕಾರ್ಡ್ ಕಂಪ್ಯೂಟರಿನಲ್ಲಿ ಕೆಲಸ ಮಾಡದಿದ್ದರೆ,ಕಂಪ್ಯೂಟರ್ ಕಾರ್ಯನಿರ್ವಹಣಾ ವ್ಯವಸ್ಥೆ ತಂತ್ರಾಂಶವನ್ನು ಮಾರ್ಪಡಿಸಿ,ಕಾರ್ಡ್ ಸರಿಯಾಗಿ ಕೆಲಸ ಮಾಡುವಂತೆ ಮಾಡುವಂತಹ ಕೆಲಸಕ್ಕೆ ಹ್ಯಾಕ್ ಎನ್ನುವರು.ಇದನ್ನು ಸಾಧಿಸುವಾತ ಹ್ಯಾಕರ್ ಎನಿಸುವನು ಎನ್ನುವುದವರ ವಿವರಣೆ.ನುಸುಳುಗಾರ ಎನ್ನುವುದು ಕಂಪ್ಯೂಟರ್ ಅಥವ ಜಾಲವನ್ನು ಬೇಧಿಸುವ crackerಗೆ ತತ್ಸಮಾನ ಪದ-ಹ್ಯಾಕರ್‌ಗೆ ಅಲ್ಲ ಎನ್ನುವ ಅನಿಸಿಕೆ ವ್ಯಕ್ತಪಡಿಸಿದ್ದಾರೆ.ಇಂಗ್ಲೀಷ್ ಶಬ್ದಗಳಿಗೆ ಮೂಲದಲ್ಲಿ ಇದ್ದ ಅರ್ಥಗಳು ಕಾಲಾಂತರದಲ್ಲಿ ಬದಲಾಗುತ್ತವೆ.ಸಾಮಾನ್ಯ ಜನರು,ಮಾಧ್ಯಮಗಳಲ್ಲಿ ಅದು ಯಾವ ಅರ್ಥದಲ್ಲಿ ಬಳಸಲ್ಪಡುತ್ತದೆ ಎನ್ನುವುದನ್ನು ಗಣನೆಗೆ ತೆಗೆದುಕೊಂಡರೆ,ಈಗ ಹ್ಯಾಕರ್ ಶಬ್ದವನ್ನು ವ್ಯಾಪಕವಾದ ಅರ್ಥದಲ್ಲಿ ಬಳಸಲಾಗುತಿದೆ.ಅದನ್ನು ವಾಸುದೇವ್ ಹೇಳುತ್ತಿರುವಂತೆ ಸೀಮಿತವಾಗಿ ಬಳಸಲಾಗುತ್ತಿಲ್ಲವೆನಿಸುತ್ತದೆ.

Udayavani Unicode
Udayavani
*ಅಶೋಕ್‌ಕುಮಾರ್ ಎ

Monday, December 20, 2010

ಅಂಗರಚನೆ ಅಭ್ಯಾಸಕ್ಕೆ ಗೂಗಲ್ ಬಾಡಿ ಬ್ರೌಸರ್

ಅಂಗರಚನೆ ಅಭ್ಯಾಸಕ್ಕೆ ಗೂಗಲ್ ಬಾಡಿ ಬ್ರೌಸರ್
 
ಆಗಸದಿಂದ ನೋಡಿದರೆ ನಮ್ಮ ಭೌಗೋಳಿಕ ಪರಿಸರ ಹೇಗಿರುತ್ತದೆ ಎನ್ನುವುದನ್ನು ಅರಿಯಲು ಗೂಗಲ್ ಮ್ಯಾಪ್ ಬಳಸಿದರೆ ಸಾಕು.ಈಗ ಅದೇ ರೀತಿಯ ಸೌಕರ್ಯ ದೇಹ ರಚನೆಯನ್ನು ಕಲಿಯಲೂ ಸಿಗಲಿದೆ.ಗೂಗಲ್ ಕೃಪೆಯಿಂದ ಲಭ್ಯವಾಗುವ ಬಾಡಿ ಬ್ರೌಸರ್ ಎನ್ನುವ ತಂತ್ರಾಂಶವನ್ನು ಬಳಸಲು ಗೂಗಲ್ ಕ್ರೋಮ್ ಬ್ರೌಸರನ್ನು ಹೊಂದಿರಬೇಕು.http://bodybrowser.googlelabs.com/ ವಿಳಾಸಕ್ಕೆ ಸಂಪರ್ಕಿಸಿ ನೋಡಿ.ಈಗ ನಿಮ್ಮ ಮುಂದಿನ ಕಂಪ್ಯೂಟರ್ ತೆರೆಯಲ್ಲಿ ಮಾನವ ದೇಹದ ಯಾವುದೇ ಕೋನದ ವೀಕ್ಷಣೆಯ ಅವಕಾಶ ನಿಮಗೆ ಸಿಗುತ್ತದೆ.ದೇಹದೊಳಗಿನ ಮೂಳೆಗಳು,ಭಾಗಗಳು ಇವೆಲ್ಲವುಗಳ ವೀಕ್ಷಣೆ ಸಾಧ್ಯವಾಗುತ್ತದೆ.ವೈದ್ಯಕೀಯ ವಿದ್ಯಾರ್ಥಿಗಳಿಗೆ ದೇಹವನ್ನು ನೈಜವಾಗಿ ನೋಡುವ ಅವಕಾಶ ಸಿಗಬಹುದು.ಆದರೆ ಕಲಾವಿದರಿಗೋ,ಸುಮ್ಮನೆ ನಮ್ಮ ದೇಹದ ರಚನೆಯನ್ನು ಅರಿಯುವುದಿನ್ನು ಕಂಪ್ಯೂಟರ್ ಮುಂದಿನ ಆಟವಾಗಲಿದೆ.
--------------------------------
ಟೈಮ್ ಪತ್ರಿಕೆಯ ವರ್ಷದ ವ್ಯಕ್ತಿ:ಮಾರ್ಕ್ ಜುಕ್ಕರ್‌ಬರ್ಗ್
ಟೈಮ್ ಪತ್ರಿಕೆಯು 2010 ವರ್ಷದ ವ್ಯಕ್ತಿಯಾಗಿ ಮಾರ್ಕ್ ಜುಕ್ಕರ್‌ಬರ್ಗ್ ಎನ್ನುವಾತನನ್ನು ಆಯ್ಕೆ ಮಾಡಿದೆ.ವ್ಯಕ್ತಿಯಾಗಿ ಈತನ ಪರಿಚಯ ನಮಗಿಲ್ಲದೆ ಇರಬಹುದು.ಆದರೆ,ಆತನ ಅಂತರ್ಜಾಲ ತಾಣ ಫೇಸ್‌ಬುಕ್ ಬಗ್ಗೆ ನಮಗೆಲ್ಲಾ ಗೊತ್ತಿದೆ.ಫೇಸ್‌ಬುಕ್‌ನ ಸಿ ಇ ಓ ಈತನೇ.ಏಳು ವರ್ಷಗಳ ಹಿಂದೆ ವಿದ್ಯಾರ್ಥಿಯಾಗಿದ್ದಾಗ,ಜುಕ್ಕರ್‌ಬರ್ಗ್ ಆರಂಭಿಸಿದ ಫೇಸ್‌ಬುಕ್ ಈಗ ಎಪ್ಪತ್ತೈದು ದಶಲಕ್ಷ ಜನರ ಸದಸ್ಯತ್ವ ಹೊಂದಿದೆ.ಜಗತ್ತಿನ ರಾಷ್ಟ್ರಗಳ ಲೆಕ್ಕಕ್ಕೆ ಇದನ್ನೂ ಸೇರಿಸಿದರೆ,ಚೀನಾ ಮತ್ತು ಭಾರತದ ನಂತರ ಅತಿ ದೊಡ್ಡ ರಾಷ್ಟ್ರ ಇದೇ ಆಗಿಬಿಟ್ಟಿದೆ.ಜಗತ್ತಿನ ಜನರು ತಮ್ಮ ದೇಶ,ಧರ್ಮ,ಭಾಷೆಯನ್ನು ಮರೆತು ಇಲ್ಲಿ ಒಂದಾಗಿದ್ದಾರೆ.ಎಪ್ಪತ್ತೈದು ಭಾಷೆಗಳು ಇಲ್ಲಿ ಬಳಸಲ್ಪಡುತ್ತಿವೆ.ಇಂತಹ ಅದ್ಭುತ ವ್ಯವಸ್ಥೆಯ ಕಲ್ಪನೆಯ ಹಿಂದಿರುವ ಮಾರ್ಕ್ ಜುಕ್ಕರ್‌ಬರ್ಗ್ ವರ್ಷದ ವ್ಯಕ್ತಿಯಾದದ್ದು ಸಹಜವೇ ಆಗಿದೆ,ಅಲ್ಲವೇ? ಅಂದ ಹಾಗೆ ವಿಕಿಲೀಕ್ಸ್‌ನ ಅಸಾಂಗೆ,ಅಪ್ಘಾನ್ ಅಧ್ಯಕ್ಷ ಹಮೀಜ್ ಕರ್ಜಾಯಿ,ಚಿಲಿಯ ಗಣಿಯಲ್ಲಿ ಸಿಲುಕಿದರೂ ಧೈರ್ಯವಾಗಿ ಪರಿಸ್ಥಿತಿಯನ್ನೆದುರಿಸಿದ ಕೆಲಸಗಾರರನ್ನು ಕೂಡಾ ವರ್ಷದ ವ್ಯಕ್ತಿಗಳಾಗಿ ಪರಿಗಣಿಸಲಾಗಿತ್ತು.
--------------------------------
ಫ್ಲುಕಾರ್ಡ್ ಎಂಬ ಅದ್ಭುತ

ಹೆನ್ ಟ್ಯಾನ್ ಎನ್ನುವಾತನ ಹೆಸರನ್ನು ಕೇಳಿರುವಿರಾ?ಥಂಬ್ ಡ್ರೈವ್‌ಗಳೆಂಬ ಯು ಎಸ್ ಬಿ ಸ್ಮರಣ ಸಾಧನಗಳನ್ನು ಮೊದಲ ಬಾರಿಗೆ ತಯಾರಿಸಿದ ಖ್ಯಾತಿ ಈತನದ್ದು.ಆತನು ತನ್ನ ಕಂಪೆನಿಯ ಮೂಲಕ ಆ ಸಾಧನವನ್ನು ಜಗತ್ತಿನ ಮೂವತ್ತು ದೇಶಗಳಲ್ಲಿ ಮಾರಾಟ ಮಾಡುತ್ತಿದ್ದನಲ್ಲದೆ,ಥಂಬ್ ಡ್ರೈವ್ ಎಂಬ ಹೆಸರಿನ ಮೇಲೆ ಹಕ್ಕುಸ್ವಾಮ್ಯವನ್ನೂ ತನ್ನದಾಗಿಸಿಕೊಂಡಿದ್ದ,ಆದರೆ ಇತರ ದೊಡ್ಡ ಕಂಪೆನಿಗಳೂ,ಪೈರಸಿ ದಂಧೆಯವರೂ ಅದೇ ಬಗೆಯ ಸಾಧನಗಳನ್ನು ಮಾರುಕಟ್ಟೆಯಲ್ಲಿ ಒದಗಿಸಿ,ನ್ಯಾಯವಾಗಿ ಟ್ಯಾನ್‌ಗೆ ಸಲ್ಲಬೇಕಿದ್ದ ಲಾಭಕ್ಕೆ ಅಡ್ಡಗಾಲು ಹಾಕಿದರು.ಈಗ ಟ್ಯಾನ್ ಫ್ಲುಕಾರ್ಡ್ ಎಂಬ ಅಂಚೆಚೀಟಿಯ ಗಾತ್ರದ ಸ್ಮರಣಕೋಶವನ್ನು ತಯಾರಿಸಿದ್ದಾನೆ.ಇದರ ಹೆಗ್ಗಳಿಕೆ ಎಂದರೆ,ಇದು ಸ್ಮರಣಕೋಶ ಮಾತ್ರಾ ಆಗಿರದೆ,ನಿಸ್ತಂತು ಸಂಪರ್ಕವನ್ನೂ ಏರ್ಪಡಿಸಬಲ್ಲುದು.ಹೀಗಾಗಿ,ಇದನ್ನು ಬಳಸಿದಾಗ,ಕಡತಗಳನ್ನು ಅಂತರ್ಜಾಲಕ್ಕೆ ಅಪ್ಲೋಡ್ ಮಾಡುವುದು ಸುಲಭ.ಕ್ಯಾಮರಾದಂತಹ ಸಾಧನದಲ್ಲಿ ಫ್ಲುಕಾರ್ಡ್ ಇದ್ದರೆ ತೆಗೆದ ಚಿತ್ರವನ್ನು ಲಭ್ಯ ನಿಸ್ತಂತು ಜಾಲದ ಮೂಲಕ ಅಂತರ್ಜಾಲ ತಾಣಗಳಿಗೋ,ಬ್ಲಾಗಿಗೋ ಹಾಕುವುದು ಚಿಟಿಕೆ ಹೊಡೆದಷ್ಟು ಸುಲಭ ಮತ್ತು ವೇಗವಾಗಿ ಮಾಡಬಹುದು.ಯಾವುದೇ ಇಲೆಕ್ಟ್ರಾನಿಕ್ ಸಾಧನದಲ್ಲಿ ಬಳಸಬಹುದಾದ ಕಾರಣ,ಫ್ಲುಕಾರ್ಡ್ ಬಹು ಜನಪ್ರಿಯವಾಗುವುದರಲ್ಲಿ ಸಂಶಯವಿಲ್ಲ.ಮಾರ್ಕೆಟಿಂಗ್ ಸುಲಭವಾಗಲೋಸುಗ,ಟ್ಯಾನ್ ಟೊಶಿಬಾ ಕಂಪೆನಿಯ ಜತೆ ಸೇರಿದ್ದಾನೆ.ಎಸ್ಡಿ ಸ್ಲೋಟ್ ಇರುವ ಸಾಧನದಲ್ಲಿ ಇದನ್ನು ಅಳವಡಿಸಲು ಬರುತ್ತದೆ.
-----------------------------------
ತ್ರೀಜಿ:ವಿಡಿಯೋ ಕರೆ ನಿಲ್ಲಿಸಲು ಸೂಚನೆ
ಬಿಎಸೆಸೆನ್ನೆಲ್ ಮತ್ತು ಎಂಟಿಎನ್ನೆಲ್‌ಗಳು ತ್ರೀಜಿ ಸೇವೆಯ ಮೂಲಕ ವಿಡಿಯೋ ಕರೆಗಳನ್ನು ಒದಗಿಸುತ್ತಿವೆ.ಈಗ ಖಾಸಗಿ ರಂಗದವರ ತ್ರೀಜಿ ಸೇವೆಯೂ ಲಭ್ಯವಾಗುತ್ತಿದ್ದು,ಏರ್‌ಟೆಲ್,ಡೊಕೋಮೋ ಮತ್ತು ರಿಲಾಯನ್ಸ್ ಕಂಪೆನಿಗಳೂ ತ್ರೀಜಿ ಸೇವೆ ಒದಗಿಸುತ್ತಿವೆ.ಆದರೆ ವಿಡಿಯೋ ಕರೆಗಳನ್ನು ನೇರವಾಗಿ,ಪರಿಶೀಲಿಸುವ ತಂತ್ರಜ್ಞಾನ ಸದ್ಯ ಲಭ್ಯವಿಲ್ಲ.ಹಾಗಾಗಿ,ಖಾಸಗಿ ತ್ರೀಜಿ ಸೇವಾದಾತೃಗಳು ವಿಡಿಯೋ ಕರೆಗಳನ್ನು ಒದಗಿಸುವುದನ್ನು ಭದ್ರತಾ ಕಾರಣಗಳಿಗಾಗಿ,ತಡೆ ಹಿಡಿಯಬೇಕು ಎಂದು ಕೇಂದ್ರ ಸರಕಾರ ಸೂಚನೆ ನೀಡಿದೆ.ಇದಕ್ಕೆ ಕಂಪೆನಿಗಳು ಆಕ್ಷೇಪ ಸಲ್ಲಿಸಿ,ಟ್ರಾಯ್ ಅನ್ನು ಈ ಬಗ್ಗೆ ಹಸ್ತಕ್ಷೇಪ ಮಾಡುವಂತೆ ಮನವಿ ಮಾಡಿವೆ.ಸಾರ್ವಜನಿಕ ರಂಗದ ಬಿಎಸೆನ್ನೆಲ್ ಮತ್ತು ಎಂಟಿಎನ್ನೆಲ್ ಕಂಪೆನಿಗಳ ವಿಡಿಯೋ ಕರೆಗಳನ್ನೂ ನೇರವಾಗಿ ಪರಿಶೀಲಿಸಲು ಸಾಧ್ಯವಿಲ್ಲ.ಆದರೂ ಅವುಗಳ ಸೇವೆಯ ಮೇಲೆ ಇಲ್ಲದ ನಿಷೇಧ,ಖಾಸಗಿರಂಗದ ಕಂಪೆನಿಗಳ ವಿಡಿಯೋ ಕರೆಗಳ ಮೇಲೆ ಮಾತ್ರಾ ಏಕೆ ಎಂಬುದು ಅವುಗಳ ವಾದ.ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಏನು ಮಾಡಲಿದೆ ಎನ್ನುವುದು ಕುತೂಹಲದ ವಿಷಯವಾಗಿದೆ,
--------------------------------------
ಉದಯವಾಣಿ ಡೈರಿ ಗೆಲ್ಲಿ!
ಈ ಪ್ರಶ್ನೆಗೆ ಸರಿಯುತ್ತರ ಕಳಿಸಿ,ಉದಯವಾಣಿ ಡೈರಿ ಗೆಲ್ಲಿ.ಬಹುಮಾನ ಪ್ರಾಯೋಜಿಸಿದವರು ವಿಟಿಯು ವಿಜಿಎಸ್‌ಟಿ ಪ್ರಾಯೋಜಿತ ಶಿಕ್ಷಕ ವಿಕಸನ ಕಾರ್ಯಕ್ರಮ ಆಯೋಜಿಸಿರುವ ಎನ್ ಎಂ ಎ ಎಂ ಐ ಟಿ,ನಿಟ್ಟೆಯ ಕಂಪ್ಯೂಟರ್ ವಿಜ್ಞಾನ ಮತ್ತು ಇನ್ಫೊರ್ಮೇಶನ್ ಸಯನ್ಸ್ ಇಂಜಿನಿಯರಿಂಗ್ ವಿಭಾಗಗಳು.ವಿ ಎಲ್ ಎಸ್ ಐ ವಿಷಯದಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಕಾರ್ಯಕ್ರಮವನ್ನು ಬರುವ ಜನವರಿ ಹತ್ತರಿಂದ ಹನ್ನೆರಡರವರೆಗೆ ಆಯೋಜಿಸಲಾಗಿದೆ.
*ವರ್ಷ 2010 ಅತ್ಯಂತ ಪ್ರಮುಖ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಾದ ಬೆಳವಣಿಗೆ ಯಾವುದು?ಯಾಕೆ?
(ಉತ್ತರಗಳನ್ನು ashok567@gmail.comಗೆ ಮಿಂಚಂಚೆ ಮಾಡಿ,ವಿಷಯ:NS10 ನಮೂದಿಸಿ ).
(ಕಳೆದ ವಾರದ ಸರಿಯುತ್ತರಗಳು:
*ಮಿರರ್ ಸೈಟ್ ಎಂದರೆ ಅಂತರ್ಜಾಲ ತಾಣದ ಮೇಲಿನ ಅಧಿಕ ಒತ್ತಡವನ್ನು ನಿವಾರಿಸಲು ಬಳಸಲಾಗುವ ತದ್ರೂಪಿ,ಅಣಕು,ದರ್ಪಣ,ಕನ್ನಡಿ ತಾಣ.
*ಹ್ಯಾಕರ್ ಎಂದರೆ ಸ್ವಂತ ಲಾಭಕ್ಕಾಗಿ,ದುರುದ್ದೇಶದಿಂದ ಅಥವ ಛಲದಿಂದ ಇತರ ತಾಣಗಳನ್ನು ಬೇಧಿಸಲು ಯತ್ನಿಸುವ ಕಂಪ್ಯೂಟರ್ ನಿಷ್ಣಾತ.ಕನ್ನಡ ಪದ ನುಸುಳುಗಾರ ಸೂಚಿಸಿ ಬಹುಮಾನ ಗೆದ್ದವರು ಯಶಸ್ವಿನಿ.ಅಭಿನಂದನೆಗಳು.)
------------------------------------------------------------
ಟ್ವಿಟರ್ ಚಿಲಿಪಿಲಿ
*ಕಟುಕ ಬಲ್ಲ ತಾಳ ಯಾವುದು?ಖಂಡಚೋಪು.
*ವಿಕಿಲೀಕ್ಸ್ ನಮ್ಮ ಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನೂ ಲೀಕ್ ಮಾಡಿದ್ದರೆ ಚೆನ್ನಾಗಿರೋದು...
*ಕಾಯಿಲೆ ಬಿದ್ದ(ಇಲ್) ಹದ್ದು(ಈಗಲ್)-ಇಲ್ಲೀಗಲ್!
*ಧೂಮಪಾನಿಗಳು ಸಿಗರೇಟು ಬಿಟ್ಟ ಹಾಗೆ ಬಂಗಾರಪ್ಪನವರೂ ನಾಲ್ಕನೇ ಬಾರಿ ಕಾಂಗ್ರೆಸ್ ಬಿಟ್ಟರು :)
-------------------------------
ಅಂತರ್ಜಾಲ ಮೂಲಕ ಟಿವಿ ನೇರ ಪ್ರಸಾರ ಏಕಿಲ್ಲ?
ಅಂತರ್ಜಾಲದ ಮೂಲಕ ಟಿವಿ ಕಾರ್ಯಕ್ರಮಗಳ ಪ್ರಸಾರ ದಿನೇ ದಿನೇ ಹೆಚ್ಚುತ್ತಿದೆ.ತ್ರೀಜಿ ಜಾಲದ ಮೂಲಕ ಇವನ್ನು ಮೊಬೈಲಿನಲ್ಲಿಯೂ ನೋಡುವ ಚಾಳಿ ಹಬ್ಬುತ್ತಿದೆ.ಆದರಿನ್ನೂ ಟಿವಿ ಕಾರ್ಯಕ್ರಮಗಳ ನೇರಪ್ರಸಾರ ಅಂತರ್ಜಾಲ ಮೂಲಕ ಆಗುತ್ತಿಲ್ಲವೆಂದೇ ಹೇಳಬೇಕು.ಬ್ಯಾಂಡ್‌ವಿಡ್ತ್ ಒಂದು ಸಮಸ್ಯೆಯಾದರೆ,ಮುಖ್ಯ ಕಾರಣ ಹಣಕಾಸಿನ ವಿಚಾರದ್ದೇ ಆಗಿದೆ.ಅಂತರ್ಜಾಲ ಮೂಲಕ ಉಚಿತವಾಗಿ ಚಾನೆಲ್ ಕಾರ್ಯಕ್ರಮಗಳು ಲಭ್ಯವಾದರೆ,ಕೇಬಲ್ ತಿವಿ,ಡಿಟಿಎಚ್ ಸೇವೆಗಳ ಚಂದಾದಾರರ ಸಂಖ್ಯೆ ಎಲ್ಲಿ ಕುಸಿಯುವುದೋ ಎನ್ನುವ ಭೀತಿ ಸೇವೆ ಒದಗಿಸುತ್ತಿರುವ ಕಂಪೆನಿಗಳಲ್ಲಿ ಮಡುಗಟ್ಟಿ ನಿಂತಿದೆ.
-------------------------------------
ವಿಜ್ಞಾನ ಕಲಿಕೆಗೆ ಅಂತರ್ಜಾಲ ತಾಣಗಳು
ವಿಜ್ಞಾನ ಕಲಿಯುವುದನ್ನು ಸುಲಭವಾಗಿಸುವ ಸಂಪನ್ಮೂಲಗಳನ್ನು ಹೊಂದಿರುವ ಅಂತರ್ಜಾಲತಾಣಗಳ ಕಡೆಗೆ ಕಣ್ಣು ಹಾಯಿಸಿದಾಗ,ನೂರಾರು ತಾಣಗಳಿವೆ.ಅವುಗಳ ಪೈಕಿ,ವೈವಿಧ್ಯಮಯ ವಿಷಯಗಳ ಮಾಹಿತಿ ನೀಡುತ್ತಿರುವ,ಉಪಯುಕ್ತ ಸಂಪನ್ಮೂಲಗಳನ್ನು ಹೊಂದಿರುವ,ವಿಜ್ಞಾನ ಕಲಿಕೆಯನ್ನು ಗಮ್ಮತ್ತಾಗಿಸುವ ಹತ್ತು ತಾಣಗಳನ್ನು ಪಟ್ಟಿ ಮಾಡಲಾಗಿದೆ.ವಿವರಗಳಿಗೆ http://mashable.com/2010/12/16/science-teacher-resources/ನೋಡಿ.
---------------------------------
ಚುಟುಕು-ಚೂರು
*ಎಲ್ಜಿ ಕಂಪೆನಿಯು ಒಪ್ಟಿಮಸ್ ಎಂಬ ಜಗತ್ತಿನ ಮೊದಲ ಜೋಡಿ ಸಂಸ್ಕಾರಕಗಳುಳ್ಲ ಫೋನ್ ಒದಗಿಸಿದೆ.ಇದರಿಂದ ಫೋನ್ ಹೆಚ್ಚು ಗಣಕ ಸಾಮರ್ಥ್ಯ ಹೊಂದಲಿದೆ.
*ಒರಾಕಲ್ ಕಂಪೆನಿಯ ಕ್ಲೌಡ್ ಸೇವೆ-ಪದಸಂಸ್ಕಾರಕ,ಸ್ಪ್ರೆಡ್‌ಶೀಟ್,ಪ್ರೆಸೆಂಟೇಶನ್ ತಂತ್ರಾಂಶಗಳು ಆನ್‌ಲೈನಿನಲ್ಲಿ ಲಭ್ಯವಾಗಲಿವೆ.ಗೂಗಲ್ ಮತ್ತು ಮೈಕ್ರೋಸಾಫ್ಟ್ ಕಂಪೆನಿಗಳ ಕ್ಲೌಡ್ ಸೇವೆಗೆ ಇದು ಸ್ಪರ್ಧೆ ಒಡ್ಡಲಿದೆ.
*ನ್ಯೂಯಾರ್ಕಿನಲ್ಲಿ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜು ಇಲ್ಲ.ಹೀಗಾಗಿ ಇಲ್ಲಿ ಟೆಕ್ ಕಂಪೆನಿಗಳು ಕಚೇರಿ ಆರಂಭಿಸುತ್ತಿಲ್ಲ.

Udayavani Unicode
Udayavani
*ಅಶೋಕ್‌ಕುಮಾರ್ ಎ

Monday, December 13, 2010

ಬಾಹ್ಯಾಕಾಶಯಾನಕ್ಕೆ ಖಾಸಗಿ ರಂಗ

ಬಾಹ್ಯಾಕಾಶಯಾನಕ್ಕೆ ಖಾಸಗಿ ರಂಗ
ಇದುವರೆಗೆ ಬಾಹ್ಯಾಕಾಶಯಾನದಲ್ಲಿ ಸರಕಾರಿ ಸಂಸ್ಥೆಗಳು ಮಾತ್ರಾ ಭಾಗವಹಿಸಿವೆ.ಅದೂ ಕೂಡಾ ಅಮೆರಿಕಾ,ರಶ್ಯಾ,ಜಪಾನ್,ಚೀನಾ,ಭಾರತದ ಸರಕಾರಿ ಸಂಸ್ಥೆಗಳಿಗೇ ಸೀಮಿತ.ಇದೇ ಮೊದಲ ಬಾರಿಗೆ ಬಾಹ್ಯಾಕಾಶಕ್ಕೆ ವಾಹನವೊಂದನ್ನು ಕಳುಹಿಸಿ,ಅದನ್ನು ಭೂಮಿಯ ಸುತ್ತು ಪ್ರದಕ್ಷಿಣೆ ಬರಿಸಿ,ಬಳಿಕ ಶಾಂತಸಾಗರದಲ್ಲಿ ನಿಗದಿತ ಸ್ಥಾನದಲ್ಲಿ ಇಳಿಸಲು ಖಾಸಗಿ ಕಂಪೆನಿಯಾದ ಸ್ಪೇಸೆಕ್ಸ್ ಸಫಲವಾಗಿದೆ.ಆ ಹೊತ್ತು,ಕಂಪೆನಿಯ ಸಿ ಇ ಓ ಮಸ್ಕ್ ಆನಂದದಿಂದ ಮಾತು ಹೊರಡದಂಥಹ ಸ್ತಿತಿಯಲ್ಲಿದ್ದುದು ಸಹಜವೇ ಆಗಿತ್ತು.ಸ್ಪೇಸ್ ಎಕ್ಸ್‌ಪ್ಲೋರೇಶನ್ ಟೆಕ್ನಾಲಜೀಸ್ ಇಂಕ್ ಎನ್ನುವುದು ಕಂಪೆನಿಯನ್ನು ಸಂಕ್ಷಿಪ್ತವಾಗಿ ಸ್ಪೇಸೆಕ್ಸ್ ಎನ್ನುತ್ತಾರೆ.ಕಂಪೆನಿ ಕಳುಹಿಸಿದ ಕ್ಯಾಪ್ಸೂಲ್ ಭೂಮಿಗೆ ಎರಡು ಬಾರಿ ಸುತ್ತಿ,ಶಾಂತ ಸಾಗರದ ತನ್ನ ಗುರಿಯಿಂದ ಕೆಲವೇ ದೂರ ಅಂತರದಲ್ಲಿ ರೈಳಿಯಿತು.ಗಗನಯಾತ್ರಿಗಳಿದ್ದರೆ,ಅವರನ್ನು ಬಾಹ್ಯಾಕಾಶದ ಅಂತಾರ್ರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಇಳಿಸಲು ಯಾವ ಸಮಸ್ಯೆಯೂ ಆಗುತ್ತಿರಲಿಲ್ಲ.ಇನ್ನು ಮುಂದೆ ಸ್ಪೇಸ್ ಶಟಲ್ ಅಂತಹ ದುಬಾರಿ ಪ್ರಯೋಗಗಳನ್ನು ಮುಂದುವರಿಸದಿರಲು ನಾಸಾ ಕೈಗೊಂಡ ನಿರ್ಧಾರದ ನಂತರ ಇಂತಹ ಕ್ಯಾಪ್ಸೂಲುಗಳನ್ನು ಬಳಸಿ,ಅಂತಾರ್ರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಗಗನಯಾತ್ರಿಗಳನ್ನು ಮತ್ತು ಸಾಮಗ್ರಿಗಳನ್ನು ಕಳುಹಿಸುವುದು ಅನಿವಾರ್ಯವಾಗಿದೆ.ಇದು ಸ್ಪೇಸ್ ಶಟಲ್‌ಗೆ ಹೋಲಿಸಿದರೆ ಕಡಿಮೆ ಖರ್ಚಿನ ದಾರಿಯಾಗಿದೆ.ಇದರಲ್ಲಿ ಬಾಹ್ಯಾಕಾಶಯಾನಿಗಳನ್ನು ಕೊಂಡೊಯ್ಯಬಹುದು.ಕ್ಯಾಪ್ಸೂಲಿನಲ್ಲಿ ಜೀವರಕ್ಷಕ ಸವಲತ್ತುಗಳನ್ನು ಕಲ್ಪಿಸಬೇಕಾಗುತ್ತದೆ.ಹೆಲಿಪ್ಯಾಡಿನಷ್ಟು ವಿಶಾಲ ಪ್ರದೇಶಗಳಲ್ಲಿ ನಿಖರವಾಗಿ ಇಳಿಸುವ ವ್ಯವಸ್ಥೆ ಹೊಂದಿರಬೇಕಾಗುತ್ತದೆ.ಸ್ಪೇಸೆಕ್ಸ್ ಬರೇ ಸಾವಿರದಿನ್ನೂರು ಜನರ ಬೆಂಬಲದೊಂದಿಗೆ ಕಾರ್ಯಾಚರಿಸುತ್ತದೆ.ಅಂತಾರ್ರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಅಮೆರಿಕಾದ ಗಗನಯಾತ್ರಿಗಳನ್ನು ಕಳುಹಿಸಲು,ನಾಸಾವೀಗ ರಶ್ಯಾದ ಸಹಾಯ ಪಡೆದುಕೊಳ್ಳಬೇಕಿದೆ.ಇದು ಬಹು ದುಬಾರಿ ವೆಚ್ಚದಲ್ಲಿ ಲಭ್ಯವಿದೆ.ಓರ್ವನನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಇಪ್ಪತ್ತಾರು ದಶಲಕ್ಷ ಡಾಲರು ಖರ್ಚು ಬರುತ್ತದೆ.ಮುಂದಿನ ವರ್ಷ ವೆಚ್ಚ ಎರಡು ಪಟ್ಟಾಗಲಿದೆ.ಖಾಸಗಿ ಕಂಪೆನಿಗಳು ಈ ಸೇವೆ ಒದಗಿಸುವಂತಾದರೆ,ಬೇರೆ ಬೇರೆ ಕಂಪೆನಿಗಳಿಗೆ ಬೇರೆ ಬೇರೆ ಹೊಣೆ ಹೊರಿಸುವುದು ನಾಸಾದ ಯೋಚನೆ.ತನ್ನ ಪ್ರಯೋಗಗಳನ್ನು ಮಂಗಳ ಗ್ರಹ,ಕ್ಷುದ್ರಗ್ರಹಗಳ ಅಧ್ಯಯನದತ್ತ ಹೆಚ್ಚಿಸುವುದು ನಾಸಾದ ಚಿಂತನೆಯಾಗಿದೆ.
-------------------------------------
ಗೂಗಲ್:ಕ್ರೋಮ್ ಓಎಸ್,ನೋಟ್‌ಬುಕ್

ಗೂಗಲ್ ತನ್ನ ಕ್ಲೌಡ್ ಕಂಪ್ಯೂಟಿಂಗ್‌ಗೆ ಹೊಂದಿಕೊಳ್ಳುವ ಕ್ರೋಮ್ ಕಾರ್ಯನಿರ್ವಹಣಾ ವ್ಯವಸ್ಥೆಯನ್ನು ಹೊರತಂದಿದೆ.ಕ್ಲೌಡ್ ಕಂಪ್ಯೂಟಿಂಗಿನಲ್ಲಿ ಅಂತರ್ಜಾಲದಲ್ಲಿನ ಸವಲತ್ತುಗಳನ್ನು ಬಳಸಿಕೊಳ್ಳುವ ಪ್ರಯತ್ನ ನಡೆಯುತ್ತದೆ.ಬ್ರೌಸರ್ ಅವಲಂಬಿತ ಕಂಪ್ಯೂಟರ್ ಬಳಕೆಯೇ ಗುರಿಯಾದ ಕಾರಣ,ಕ್ರೋಮ್ ಓಎಸ್‌ನಲ್ಲಿ ಎದ್ದು ಕಾಣುವುದು ಬ್ರೌಸರ್ ಮಾತ್ರಾ.ಹಾಡು ಕೇಳುವ ತಂತ್ರಾಂಶವನ್ನು ತೆರೆದರೂ,ಅದು ಬ್ರೌಸರ್ ಟ್ಯಾಬ್ ಆಗಿ ತೆರೆದುಕೊಳ್ಳುತ್ತದೆ!ಇನ್ನು ಪದಸಂಸ್ಕಾರಕ ಕಡತಗಳನ್ನು ತೆರೆಯಲು ಗೂಗಲ್ ಡಾಕ್ಸ್ ಸಹಾಯ ಬೇಕು-ಅಂದರೆ ನೀವು ಅಂತರ್ಜಾಲಕ್ಕೆ ಸಂಪರ್ಕ ಹೊಂದಿರಬೇಕು.ಸ್ಮರಣಕೋಶಗಳಿಗೆ ಅಥವಾ ತಂತ್ರಾಂಶಗಳಿಗಿರಲಿ ಅಂತರ್ಜಾಲವನ್ನೇ ಅವಲಂಬಿಸುವುದೇ ಈ ಹೊಸ ಪರಿಯ ಕಂಪ್ಯೂಟಿಂಗಿನ ಧ್ಯೇಯವಾದ ಕಾರಣ,ಗೂಗಲ್ ಒಎಸ್‌ನಿಂದ ಹೆಚ್ಚಿನ ನಿರೀಕ್ಷೆಯೂ ಇಲ್ಲ.ಇನ್ನು ಗೂಗಲ್ ಬಿಡುಗಡೆ ಮಾಡಿದ ಯಂತ್ರಾಂಶ Cr 48 ಎಂಬ ಹೆಸರಿನಿಂದ ಪರೀಕ್ಷಾರ್ಥ ಬಳಕೆಗೆ ಸಿದ್ಧವಾಗಿಸಲಾಗಿರುವ ನೋಟ್‌ಬುಕ್.ಆಯ್ದ ತಂತ್ರಜ್ಞರಿಗೆ ಇದನ್ನು ಗೂಗಲ್ ಒದಗಿಸುತ್ತಿದೆ.ಇದು ಬಹಳ ಸರಳ ನೋಟ್‌ಬುಕ್.ಕೀಲಿ ಮಣೆ,ಮೌಸ್ ಕೂಡಾ ಇದ್ದು,ಯುಎಸ್‌ಬಿ,ಮೆಮರಿ ಕಾರ್ಡ್ ನಂತಹ ಪೋರ್ಟ್‌ಗಳನ್ನೂ ಹೊಂದಿದೆ.ಕ್ಯಾಪ್ಸ್‌ಲಾಕ್ ಕೀಲಿಯು ಇದರಲ್ಲಿಲ್ಲದಿರುವುದು ಗಮನಿಸಬೇಕಾದ ಅಂಶವಾಗಿದೆ.ಇದೀಗ ಶೋಧ ಸೇವೆ ಒದಗಿಸುವ ಕೀಲಿಯಾಗಿ ಬಿಟ್ಟಿದೆ.ಇದನ್ನೊತ್ತಿದರೆ,ಬ್ರೌಸರಿನ ಶೋಧ ಪುಟ ತೆರೆದುಕೊಳ್ಳುತ್ತದೆ.ಫಂಕ್ಷನ್ ಕೀಲಿಗಳ ಬದಲಿಗೆ ಬ್ರೌಸರ್ ನಿಯಂತ್ರಣ ಕೀಲಿಗಳಿವೆ.ಮೌಸ್‌ನ ಕಾರ್ಯನಿರ್ವಹಣೆ ಇನ್ನೂ ಸಮರ್ಪಕವಾಗಿಲ್ಲ,ಅಂತರ್ಜಾಲದ ಹಲವು ಬಹುಮಾಧ್ಯಮ ವಿಷಯ ಇರುವ ಅಂತರ್ಜಾಲ ತಾಣಗಳೂ ತೆರೆದು ಕೊಳ್ಳುವಾಗ,ತುಸು ನಿಧಾನವಾಗುವುದು ಮುಂತಾದ, ಸಣ್ಣಪುಟ್ಟ ತೊಂದರೆಗಳು ಎದ್ದು ಕಾಣಿಸುತ್ತವೆ ಎಂದು ಪರೀಕ್ಷಕರ ವರದಿಗಳು ಹೇಳುತ್ತವೆ.
ಕ್ರೋಮ್ ಓಎಸ್‌ನಲ್ಲಿ ಕಂಪ್ಯೂಟರಿನಲ್ಲಿ ಬಳಕೆಯ ಸಮಗ್ರ ನೋಟ ನೀಡುವ ಸವಲತ್ತು ಇದೆ.ಒಂದು ಕೆಲಸ ಮಾಡುತ್ತಿರುವಾಗ ಇನ್ನೊಂದು ಕೆಲಸ ಮಾಡಲು ಅನುವಾಗಿಸಲಾಗಿದೆ.ಉದಾಹರಣೆಗೆ ಅಂತರ್ಜಾಲ ಪುಟವನ್ನು ನೋಡುತ್ತಿರುವಾಗಲೇ ಇತರರೊಡನೆ ಚಾಟಿಂಗ್ ನಡೆಸಲು,ಅಥವಾ ಹಾಡಿನ ಧ್ವನಿ ಏರಿಳಿಸಲು ಸಾಧ್ಯವಾಗುತ್ತದೆ.ಮುಂದಿನ ಅವತರಣಿಕೆಗಳಲ್ಲಿ,ಗೂಗಲ್ ಕ್ರೋಮ್ ಓಎಸ್ ಮತ್ತು ಯಂತ್ರಾಂಶ ಎರಡೂ ಕೂಡಾ ಸುಧಾರಿಸುವುದು ನಿಶ್ಚಿತ.
----------------------------------------------
ವರ್ಷದ ಶೋಧ
ವರ್ಷದ ಕೊನೆ ಮುಟ್ಟುತ್ತಿರುವಂತೆಯೇ ಈ ವಶ ಜನರು ಯಾವುದರ ಬಗ್ಗೆ ಹೆಚ್ಚು ಗೂಗಲ್ ಶೋಧ ಸೇವೆಯಲ್ಲಿ ಹುಡುಕಾಡಿದರು ಎನ್ನುವುದನ್ನು ಗೂಗಲ್ ಹೇಳಿಕೊಳ್ಳುತ್ತಿದೆ.ಐಪ್ಯಾಡ್,ಚ್ಯಾಟ್‌ರೌಲೆಟ್ ಎನ್ನುವ ವಿಡಿಯೋ ಚ್ಯಾಟ್ ತಾಣಗಳ ಬಗ್ಗೆ ಜನ ಹೆಚ್ಚು ಶೋಧಿಸುತ್ತಿದ್ದಾರೆ.ಕಳೆದ ವರ್ಷದ ಸ್ವೈನ್ ಫ್ಲೂ,ಜಾಕ್ಸನ್ ಮುಂತಾದ ಶೋಧಗಳು ಈಗ ಹಿಂದೆ ಸರಿದಿವೆ.
-----------------------------------
ಉದಯವಾಣಿ ಡೈರಿ ಗೆಲ್ಲಿ!
ಈ ಪ್ರಶ್ನೆಗಳಿಗೆ ಸರಿಯುತ್ತರ ಕಳಿಸಿ,ಉದಯವಾಣಿ ಡೈರಿ ಗೆಲ್ಲಿ.ಬಹುಮಾನ ಪ್ರಾಯೋಜಿಸಿದವರು ಅಂಬಲ್ಪಾಡಿಯ ನಿವೃತ್ತ ಬ್ಯಾಂಕರ್ ಎ ಎಸ್ ಕಲ್ಲೂರಾಯ.
*ಮಿರರ್ ಸೈಟ್ ಎಂದರೇನು?ಇದಕ್ಕೆ ಕನ್ನಡ ಪದ ಸೂಚಿಸಿ.
*ಹ್ಯಾಕರ್ ಎಂದರೆ ಯಾರು? ಪದಕ್ಕೆ ಕನ್ನಡ ಪದ ಸೂಚಿಸಿ.
(ಉತ್ತರಗಳನ್ನು ashok567@gmail.comಗೆ ಮಿಂಚಂಚೆ ಮಾಡಿ,ವಿಷಯ:NS9 ನಮೂದಿಸಿ ).
(ಕಳೆದ ವಾರದ ಸರಿಯುತ್ತರಗಳು:
*ಸಿಲ್ವರ್ ಲೈಟ್ ಅಂದರೆ ಮೈಕ್ರೊಸಾಫ್ಟ್ ಕಂಪೆನಿಯ ಸುಲಭವಾಗಿ ಅಭಿವೃದ್ಧಿ ಪಡಿಸಲಾಗುವ,ಸಂವನಶೀಲ ಅಂತರ್ಜಾಲ,ಮೊಬೈಲ್ ಮತ್ತು ಡೆಸ್ಕ್‌ಟಾಪ್ ಅಪ್ಲಿಕೇಶನ್ ರಚಿಸಲು ಅನುವು ಮಾಡುವ ಚೌಕಟ್ಟು.
*ಈ ಅಂಕಣದ ಬರಹಗಳಿರುವ ಬ್ಲಾಗ್ http://ashok567.blogspot.com,ಬಹುಮಾನ ಗೆದ್ದ ಶ್ರೀಶೈಲ ಭಟ್ಟರವರಿಗೆ ಅಭಿನಂದನೆಗಳು.)
------------------------------------------------------------
ವಿಕಿ ಲೀಕ್ಸ್:ಅಪಾಯಕಾರಿ?

ಅಮೆರಿಕಾದ ಇರಾಕ್,ಅಪ್ಘಾನ ರಹಸ್ಯಗಳನ್ನು ಬಯಲು ಮಾಡಿ,ಹಲವಾರು ರಹಸ್ಯ ಕೇಬಲ್ ಸಂದೇಶಗಳನ್ನು ಬಯಲು ಮಾಡಿ ಸುದ್ದಿಗೆ ಬಂದ ವಿಕಿ ಲೀಕ್ಸ್‌ಯ ಮುಖ್ಯಸ್ಥನ ಹೆಸರಿಗೆ ಮಸಿ ಬಳಿಯಲು,ಆತನನ್ನು ಲೈಂಗಿಕ ಪ್ರಕರಣದಲ್ಲಿ ಸಿಕ್ಕಿಸಲಾಯಿತೇ?ಈ ಸಂಶಯ ಹಲವರನ್ನು ಬಾಧಿಸುತ್ತಿದೆ.ವಿಕಿಲೀಕ್ಸ್‌ನ ಮುಖ್ಯಸ್ಥ ಅಸಾಂಗೆ ಆಸ್ಟೇಲಿಯನ್ ಮೂಲದವರು.ಆತನು ತನ್ನ ಇಪ್ಪತ್ತನೇ ವಯಸ್ಸಿನಲ್ಲಿಯೇ ಕೆನಡಾದ ಟೆಲಿಕಾಂ ಕಂಪೆನಿಯ ಅಂತರ್ಜಾಲ ತಾಣವನ್ನು ಬೇಧಿಸಿ,ಕ್ರಿಮಿನಲ್ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡಾತ.ಕಂಪ್ಯೂಟರ್ ಮಟ್ಟಿಗೆ ಹ್ಯಾಕರ್ ಎನ್ನುವ ಹೆಗ್ಗಳಿಕೆ ಈತನದ್ದು.ವಿಕಿಲೀಕ್ಸ್‌ನ ಮೂಲ ಯಾವುದು ಎನ್ನುವುದು ಸ್ಪಷ್ಟವಿಲ್ಲ.ಆದರೆ ವಿಕಿಲೀಕ್ಸ್‌ಗೆ ಸಾವಿರದೈನೂರು ಪ್ರತಿಕೃತಿ ಅಂತರ್ಜಾಲ ತಾಣಗಳಿವೆ.ಅದರ ಬಳಕೆದಾರರಿಗೆ ಈ ಸಾವಿರದೈನೂರು ಸೈಟುಗಳಲ್ಲಿ ಯಾವುದಾದರೂ ಮೂಲದಿಂದ ತಾಣದ ಮಾಹಿತಿ ಲಭ್ಯವಾಗುತ್ತದೆ.ಅಲ್ಲದೆ ಹಲವಾರು ಸರ್ವರ್‌ಗಳು ಇರುವ ಕಾರಣ,ಇದರ ಕಾರ್ಯಾಚರಣೆಯನ್ನು ಸುಲಭವಾಗಿ ನಿಲ್ಲಿಸುವುದು ಕಷ್ಟ.ಸೈಬರ್ ಸಮರದ ಮೂಲಕ ವಿಕಿಲೀಕ್ಸ್‌ನ್ನು ಮಣಿಸುವುದು ಸುಲಭವಲ್ಲ.ಅದು ಮಾಹಿತಿಯನ್ನು ಗೂಢಲಿಪಿಯಲ್ಲಿ ಕಾಪಾಡಿಕೊಳ್ಳಲು ಸಮರ್ಥವಾಗಿದೆ.ಅಸಾಂಗೆಗೆ ಹ್ಯಾಕರುಗಳ ಬೆಂಬಲ ಸಿಗುತ್ತಿದೆ.ಆದರೆ ಆತನ ಜತೆ ಕೆಲಸ ಮಾಡಿದ್ದವರು,ಆತನ ಹಿಟ್ಲರ್‌ನಂತಹ ಸರ್ವಾಧಿಕಾರಿ ಪ್ರವೃತ್ತಿಯ ಬಗ್ಗೆ ದೂರಿಕೊಂಡದ್ದೂ ಇದೆ.ವಿಕಿಲೀಕ್ಸ್ ತಾಣದ ಭವಿಷ್ಯ ಏನು ಎಂಬುದು ಮಸುಕಾಗಿದೆ.ಆರೋಪದ ವಿಚಾರಣೆ ಎದುರು ನೋಡುತ್ತಿರುವ ಅಸಾಂಗೆಗೆ ಈಗ ಕಂಪ್ಯೂಟರ್ ಕೂಡಾ ಲಭ್ಯವಿಲ್ಲ.ತನ್ನಲ್ಲಿ ಬ್ಯಾಂಕ್ ಆಫ್ ಅಮೆರಿಕಾ ಬಗ್ಗೆ ಒಂದು ಹಾರ್ಡ್‌ಡಿಸ್ಕ್ ತುಂಬಾ ಮಾಹಿತಿಯಿದ್ದು,ಅದು ಬಹಳಷ್ಟು ಸ್ಫೋಟಕ ಮಾಹಿತಿಯನ್ನು ಹೊಂದಿದೆ ಎಂದು ಅಸಾಂಗೆ ಹೇಳಿಕೊಂಡಿದ್ದಾರೆ.
-------------------------------
udayavani unicode
*ಅಶೋಕ್‌ಕುಮಾರ್ ಎ

Monday, December 06, 2010

ನಿಘಂಟು ರೊಬೋಟ್

ನಿಘಂಟು ರೊಬೋಟ್
ನಿಮಗೆ ಇಂಗ್ಲೀಷ್ ಪದದ ಕನ್ನಡ ಸಮಾನಾರ್ಥಕ ಪದ ಬೇಕಿದೆಯೇ? ಅಥವಾ ಕನ್ನಡ ಪದದ ಸಮಾನಾರ್ಥಕ ಇಂಗ್ಲೀಷ್ ಪದ ಬೇಕಿದೆಯೇ? ಇದನ್ನು ಒದಗಿಸುವ ಜಾಬರ್ ನಿಘಂಟು ರೊಬೋಟ್ ಅಂತರ್ಜಾಲದಲ್ಲಿ ಲಭ್ಯವಿದೆ.ಈ ಸೇವೆಯನ್ನು ಪಡೆಯಲು ನೀವು ಗೂಗಲ್ ಅಥವಾ ಜಾಬರ್ ದಿಡೀರ್ ಸಂದೇಶ ಸೇವೆಯಲ್ಲಿ ಖಾತೆ ತೆರೆದುkn.dict.bot@jabber.org ನ್ನು ನಿಮ್ಮ ಮಿತ್ರನ ಪಟ್ಟಿಗೆ ಸೇರಿಸಬೇಕು.ಈ ವಿಳಾಸ ಆನ್‌ಲೈನ್ ಆಗಿದ್ದರೆ ಕನ್ನಡ ನಿಘಂಟು ಸೇವೆಯ ಬೋಟ್ ಆನ್‌ಲೈನ್ ಇದೆ ಎಂದರ್ಥ.ಇದಕ್ಕೆ ನಿಮಗೆ ಅರ್ಥ ಬೇಕಾದ ಪದವನ್ನು ಕಳುಹಿಸಿದರೆ,ಮರು ಸಂದೇಶದಲ್ಲಿ ಪದದ ಅರ್ಥ ಬರುತ್ತದೆ.ಪದದ ಅರ್ಥ ಲಭ್ಯವಿಲ್ಲವಾದರೆ,ಅದನ್ನು ನೀವು ಸೇರಿಸುವ ಆಯ್ಕೆ ಒದಗಿಸುತ್ತದೆ.ನಿಮ್ಮ ಅರ್ಥವನ್ನು ನಿಘಂಟಿಗೆ ಸೇರಿಸುವುದೋ ಬೇಡವೋ ಎನ್ನುವುದನ್ನು ನಿರ್ವಾಹಕರು ಆಗಿಂದಾಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ.ಈ ಸೇವೆಯು ಕನ್ನಡ ವಿಕ್ಷನರಿ ಸೇವೆಯನ್ನು ಬಳಸುತ್ತದೆ.ಈ ಹೊಸ ಸೇವೆಗಳನ್ನು ಲಭ್ಯವಾಗಿಸಿದವರು ಕಾರ್ಕಳದ ತಂತ್ರಜ್ಞ ವಾಸುದೇವ ಕಾಮತ್.
-----------------------------------------------
ತಲೆಯಲ್ಲಿ ಕ್ಯಾಮರಾ
ನ್ಯೂಯಾರ್ಕಿನ ಪ್ರೊಫೆಸರ್ ಒಬ್ಬರು ,ತಲೆಯ ಹಿಂಭಾಗ ಕ್ಯಾಮರಾವನ್ನು ಸಣ್ಣ ಶಸ್ತ್ರಚಿಕಿತ್ಸೆಯ ಮೂಲಕ ಅಳವಡಿಸಿಕೊಂಡಿದ್ದಾರೆ.ಇದರ ಮೂಲಕ ತೆಗೆದ ಚಿತ್ರಗಳನ್ನವರು ಅಂತರ್ಜಾಲ ತಾಣ ,www.3rdi.meನಲ್ಲಿ ಪ್ರದರ್ಶಿಸುವ ವ್ಯವಸ್ಥೆ ಮಾಡಿಕೊಂಡಿದ್ದಾರೆ.ಕ್ಯಾಮರಾ ತೆಗೆದ ಚಿತ್ರಗಳನ್ನು,ಅವರ ಬಗಲಲ್ಲಿರುವ ಕಂಪ್ಯೂಟರ್ ಮೂಲಕ ಅಂತರ್ಜಾಲದ ತಾಣಕ್ಕೆ ತಲುಪಿಸಲಾಗುತ್ತಿದೆ.ಜತೆಗೇ,ಚಿತ್ರಗಳನ್ನು ನವ್ಯಚಿತ್ರಗಳ ಅರಬ್ ಮ್ಯೂಸಿಯಂನಲ್ಲೂ ಪ್ರದರ್ಶಿಸಲಾಗುತ್ತಿದೆ.
------------------------------------------
ಗೂಗಲ್ ಕ್ರೋಮ್:ಹೊಸ ನೆಟ್‌ಬುಕ್?
ಗೂಗಲ್ ತನ್ನ ಕ್ರೋಮ್ ಕಂಪ್ಯೂಟರ್ ಕಾರ್ಯನಿರ್ವಹಣಾ ವ್ಯವಸ್ಥೆ ತಂತ್ರಾಂಶವನ್ನು ಡಿಸೆಂಬರ್ ಏಳರಂದು ಬಿಡುಗಡೆ ಮಾಡುವುದು ಬಹುತೇಕ ಖಚಿತವೆನಿಸಿದೆ.ಅಂದು ಕ್ರೋಂ‌ಗೆ ಸಂಬಂಧಿಸಿದ ಹಾಗೆ ಬಹುಮುಖ್ಯ ಬೆಳವಣಿಗೆಯನ್ನು ನಿರೀಕ್ಷಿಸಲು ಕಾದಿರುವಂತೆ ಪತ್ರಕರ್ತರಿಗೆ ಗೂಗಲ್ ಆಹ್ವಾನ ಈಗಾಗಲೇ ಪತ್ರಿಕಾಲಯಗಳನ್ನು ತಲುಪಿದೆ.ಆದರೆ ಈ ಪತ್ರಿಕಾಗೋಷ್ಠಿಯಲ್ಲಿ "ಮತ್ತಿನ್ನೇನೋ" ಪ್ರಕಟಣೆಯನ್ನು ನಿರೀಕ್ಷಿಸುವವರೂ ಇದ್ದಾರೆ.ಅಂತವರು ಅಂದು ಗೂಗಲ್ ನೆಟ್‌ಬುಕ್ ಅಂತಹ ಯಂತ್ರಾಂಶವನ್ನೂ ಗೂಗಲ್ ಬಿಡುಗಡೆ ಮಾಡಬಹುದು ಎಂದು ನಿರೀಕ್ಷಿಸಿದ್ದಾರೆ.
--------------------------------------------------
ಒರಾಕಲ್‍ನಿಂದ ಸೂಪರ್ ಕಂಪ್ಯೂಟರ್
ಸನ್ ಸ್ಪಾರ್ಕ್ ಯಂತ್ರಾಂಶ ಬಳಸಿ ಒರಾಕಲ್ ಕಂಪೆನಿಯು ಸೂಪರ್ ಕಂಪ್ಯೂಟರ್ ಅನ್ನು ಅಭಿವೃದ್ಧಿ ಪಡಿಸಿದೆ.ಹಲವು ಸರ್ವರ್‌ಗಳನ್ನು ಬಳಸಿ,ಅವುಗಳನ್ನು ಏಕಕಾಲದಲ್ಲಿ ಬಳಸುವ ಮೂಲಕ ಸೂಪರ್ ಕಂಪ್ಯೂಟರನ್ನು ಅಭಿವೃದ್ಧಿ ಪಡಿಸಿರುವುದು ಒರಾಕಲ್ ವೈಶಿಷ್ಟ್ಯವಾಗಿದೆ.ಈ ರೀತಿ ಲಭ್ಯ ಸರ್ವರ್‌ಗಳನ್ನು ಕಲೆ ಹಾಕಿ,ಸರ್ವರ್‌ಗಳ ಗುಂಪಿನಿಂದ ಶಕ್ತಿಶಾಲಿ ಗಣಕವನ್ನು ಅಭಿವೃದ್ಧಿ ಪಡಿಸುವ ಪ್ರಕ್ರಿಯೆಗೆ ಕ್ಲಸ್ಟರ್ ಕಂಪ್ಯೂಟಿಂಗ್ ಎನ್ನುವುದಿದೆ.ಇಲ್ಲಿ ಸನ್ ಮೈಕ್ರೋಸಿಸ್ಟಮ್‌ನ ಸ್ಪಾರ್ಕ್ ಸರ್ವರ್ ಯಂತ್ರಾಂಶಗಳ ಬಳಕೆ ಆಗಿದೆ.ಒರಾಕಲ್ ಕಂಪೆನಿಯು ಕ್ಲಸ್ಟರ್ ಕಂಪ್ಯೂಟಿಂಗ್ ಸಾಧಿಸುವ ತಂತ್ರಾಂಶವನ್ನು ಮಾತ್ರವಲ್ಲದೆ,ಕಂಪ್ಯೂಟರುಗಳನ್ನು ಬೆಸೆಯಲು ಅಗತ್ಯವಾದ ಸ್ವಿಚಿಂಗ್ ಫ್ಯಾಬ್ರಿಕ್ ಅನ್ನೂ ಬಳಸಿಕೊಂಡಿದೆ.
-----------------------------------------------------
ಅನಪೇಕ್ಷಿತ ಮಿಂಚಂಚೆಯ ದೊರೆ

ನಿಮ್ಮ ಮಿಂಚಂಚೆಗೆ ಬರುವ ಬಹುತೇಕ ಅನಪೇಕ್ಷಿತ ಸಂದೇಶದ ಮೂಲ ರಶ್ಯನ್ ವ್ಯಕ್ತಿಯೋರ್ವ ಅಭಿವೃದ್ಧಿ ಪಡಿಸಿದ ಬೋಟ್ ತಂತ್ರಾಂಶ ಅಂದರೆ ನಂಬುವಿರಾ?ಜಗತ್ತಿನ ಮೂರನೇ ಒಂದು ಅಂಶ ಅನಪೇಕ್ಷಿತ ಮಿಂಚಂಚೆಯನ್ನು ಕಳುಹಿಸುವ ಸ್ವಯಂಕಾರ್ಯನಿರ್ವಹಿಸುವ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಿದಾತ,ರಶ್ಯದ ವಿಸ್ಕೋನ್ಸಿನ್ ಎನ್ನುವ ವ್ಯಕ್ತಿ ಎಂದು ಅಮೆರಿಕಾದ ಗೂಢಚರ್ಯ ವಿಭಾಗ ಆರೋಪಿಸಿದೆ.ಈತನ ವಿಚಾರಣೆ ಇದೀಗ ಅಮೆರಿಕಾದ ನ್ಯಾಯಾಲಯದಲ್ಲಿ ನಡೆದಿದೆ.
----------------------------------------------------
ಷಡಕ್ಷರಿಯವರ ಪುಸ್ತಕ "ಕ್ಷಣಹೊತ್ತು ಆಣಿಮುತ್ತು" ಗೆಲ್ಲಿ!
ಈ ಪ್ರಶ್ನೆಗಳಿಗೆ ಸರಿಯುತ್ತರ ಕಳಿಸಿ,ಷಡಕ್ಷರಿಯವರ ಪುಸ್ತಕ "ಕ್ಷಣಹೊತ್ತು ಆಣಿಮುತ್ತು" ಗೆಲ್ಲಿ.ಬಹುಮಾನ ಪ್ರಾಯೋಜಿಸಿದವರು ಪ್ರೊಫೆಸರ್ ಬಂಟಕಲ್ಲು ರಾಧಾಕೃಷ್ಣ ಶರ್ಮಾ,ಜಸ್ಟೀಸ್ ಕೆ ಎಸ್ ಹೆಗ್ಡೆ ಸ್ಮಾರಕ ಮ್ಯಾನೇಜ್ಮೆಂಟ್ ಇನ್ಸ್‌ಸ್ಟಿಟ್ಯೂಟ್,ನಿಟ್ಟೆ.
*ಸಿಲ್ವರ್ ಲೈಟ್ ಅಂದರೇನು?
*ಈ ಅಂಕಣದ ಬರಹಗಳಿರುವ ಬ್ಲಾಗ್ ಯಾವುದು?
(ಉತ್ತರಗಳನ್ನು ashok567@gmail.comಗೆ ಮಿಂಚಂಚೆ ಮಾಡಿ,ವಿಷಯ:NS8 ನಮೂದಿಸಿ ).
(
ಕಳೆದ ವಾರದ ಸರಿಯುತ್ತರಗಳು:
*ರೂಬಿ ಆನ್ ರೈಲ್ ಎನ್ನುವುದು ಸುಲಭದಲ್ಲಿ ತಂತ್ರಾಂಶ ರಚಿಸಲು ಅನುವು ಮಾಡುವ ಚೌಕಟ್ಟು.ಇದರಲ್ಲಿ ರೂಬಿ ಕಂಪ್ಯೂಟರ್ ಭಾಷೆಯ ಬಳಕೆ ಆಗುತ್ತದೆ.
*ಎಕ್ಸ್ಟ್ರೀಮ್ ಪ್ರೊಗ್ರಾಮಿಂಗ್ ಪದವನ್ನು ಕನ್ನಡದಲ್ಲಿ ತೀವ್ರಗತಿಯ ಕ್ರಮವಿಧಿ ಎಂದವರು,ಬಹುಮಾನ ಗೆದ್ದ ಕೃಷ್ಣಕಿಶೋರ,ಇಂಜಿನಿಯರಿಂಗ್ ವಿದ್ಯಾರ್ಥಿ,ಪುತ್ತೂರು ಅವರಿಗೆ ಅಭಿನಂದನೆಗಳು.)
---------------------------------------------------
ಏನಿದು ವಿಕಿಲೀಕ್ಸ್?

ವಿಕಿಲೀಕ್ಸ್ ಎನ್ನುವುದು ಲಾಭರಹಿತ ಸರಕಾರೇತರ ಸಂಸ್ಥೆ.ಇದು ಹಲವಾರು ಗುಪ್ತ ಸಂದೇಶಗಳನ್ನು ಬಯಲು ಮಾಡಿ ಸುದ್ದಿಯಲ್ಲಿರುವ ಜತೆಗೇ,ಹಲವು ಬಾರಿ ದಾಳಿಗೊಳಗಾಗಿ,ತನ್ನ ಅಂತರ್ಜಾಲ ತಾಣ ಬದಲಿಸಿದೆ.ಸದ್ಯ ಇದರ ತಾಣwww.wikileaks.ch.ದಾಳಿಗೊಳಗಾಗುವ ಮೊದಲು ವಿಕಿಲೀಕ್ಸ್ ತಾಣವು www.wikileaks.org ವಿಳಾಸದಲ್ಲಿತ್ತು.ಜುಲಿಯಾನ್ ಅಸಾಂಗೆ ಎನ್ನುವಾತ ಇದರ ಸ್ಥಾಪಕ.ತುರ್ತಾಗಿ ಹೊಸ ವಿಳಾಸಕ್ಕೆ ಬದಲಾಗ ಬೇಕಾದರೆ ಇರಲಿ ಎಂದು www.wikileaks.li ಎನ್ನುವ ವಿಳಾಸವನ್ನೂ ಕಾಯ್ದಿರಿಸಲು ಕ್ರಮ ಕೈಗೊಂಡು ಎಚ್ಚರಿಕೆ ವಹಿಸಲಾಗಿದೆ.ಈ ತಾಣವನ್ನು ಅಮೆಜಾನ್ ಕಂಪೆನಿಯು ನಿರ್ವಹಿಸುತ್ತಿತ್ತಾದರೂ,ವಿಕಿಲೀಕ್ಸ್ ಅಮೆರಿಕಾದ ಸರಕಾರದ ಗುಪ್ತ ಕೇಬಲ್ ಸಂದೇಶಗಳನ್ನು ಬಯಲು ಮಾಡಿ ಸುದ್ದಿ ಮಾಡಿದ ನಂತರ ಅಮೆಜಾನ್ ಕಂಪೆನಿಯು ಈ ತಾಣಕ್ಕೆ ಜಾಗ ಕೊಡುವುದನ್ನು ನಿಲ್ಲಿಸಿತು.ತಾಣವು ಬಯಲು ಮಾಡಿದ ಮಾಹಿತಿಯು,ಅದಕ್ಕೆ ಸೇರಿದ್ದಲ್ಲವಾದ ಕಾರಣ,ಅದು ನಿಯಮದ ಉಲ್ಲಂಘನೆಗೈದಿದೆ ಎಂದು ಅಮೆಜಾನ್ ವಿಕಿಲೀಕ್ಸನ್ನು ಆಕ್ಷೇಪಿಸಿದೆ.ಯಾರಾದರೂ ರಹಸ್ಯ ಬಯಲು ಮಾಡಲು ಬಯಸಿ,ನೀಡಿದ ಮಾಹಿತಿಗಳನ್ನು ಬಯಲು ಮಾಡಲು ವಿಕಿಲೀಕ್ಸ್ ತನ್ನ ತಾಣದಲ್ಲಿ ಅವಕಾಶ ನೀಡುತ್ತದೆ.ಇರಾಕ್ ಯುದ್ಧ,ಅಪ್ಘಾನ್ ಯುದ್ಧ,ಇರಾಕಿನ ಕೊಲೆಗಳು ಮತ್ತು ಅಮೆರಿಕಾದ ರಾಯಭಾರಿ ಕಚೇರಿಯ ಕೇಬಲ್ ಸಂದೇಶಗಳು ಇವೇ ಮುಂತಾದ ರಹಸ್ಯಗಳನ್ನು ಬಯಲು ಮಾಡಿ.ವಿಕಿಲೀಕ್ಸ್ ಸತತವಾಗಿ ಸುದ್ದಿಯಲ್ಲಿದೆ.
---------------------------------
ಟ್ವಿಟರ್ ಚಿಲಿಪಿಲಿ
*ರೌರವ ನರಕದಲ್ಲಿ ಉಪ್ಪಿಟ್ಟೇ ದಿನಕ್ಕೆ ಐದು ಬಾರಿ ತಿನ್ನಲು ಸಿಗುತ್ತದೆ.
*ಜಾಗಿಂಗ್ ಮಾಡಿದರೆ ದೇಹ ತೂಕ ಕಡಿಮೆಯಾಗುತ್ತದೆಯಾದರೆ,ರಿವರ್ಸ್ ಜಾಗಿಂಗ್ ಮಾಡಿದರೆ ದೇಹ ತೂಕ ಹೆಚ್ಚುತ್ತದೆಯೇ?
-------------------------------------------------
ನೆಟ್‌ಬುಕ್‌ ಯಾಕೆ ಹಿತ?
ನೆಟ್‌ಬುಕ್‌ಗಳ ಗಾತ್ರ ಲ್ಯಾಪ್‌ಟಾಪ್‌ಗಳಿಗೆ ಹೋಲಿಸಿದರೆ ಕಡಿಮೆ,ಸ್ಮಾರ್ಟ್‌ಪೋನ್‌ಗಳಿಗೆ ಹೋಲಿಸಿದರೆ ಹೆಚ್ಚು.ಹೆಚ್ಚು ಸಮಯ ಸಾಧನ ಬಳಸಲು ಈ ಗಾತ್ರ ಹೇಳಿ ಮಾಡಿಸಿದಂತಿದೆ.ಕಂಪ್ಯೂಟರುಗಳಿಗಾಗಿ ರೂಪಿತವಾದ ತಂತ್ರಾಂಶಗಳನ್ನು ಇದರಲ್ಲಿ ಬಳಸಬಹುದು.ಪ್ರಯಾಣದ ವೇಳೆ ಒಯ್ಯಲು ನೆಟ್‌ಬುಕ್‌ನ ಗಾತ್ರ ಹೇಳಿ ಮಾಡಿಸಿದಂತಿದೆ.ಇದರಲ್ಲಿ ಲಭ್ಯವಿರುವ ಹಾರ್ಡ್‌ಡಿಸ್ಕ್ ಸಾಕಷ್ಟು ಸ್ಮರಣಶಕ್ತಿ ಸಾಮರ್ಥ್ಯವನ್ನು ಒದಗಿಸುತ್ತದೆ.ಪತ್ರಿಕೆಗಳ ಪಠಣ,ವಿಡಿಯೋ ನೋಡಲೂ ನೆಟ್‌ಬುಕ್‌ಗಳು ಸ್ಮಾರ್ಟ್‌ಪೋನ್‌ಗಳಿಗಿಂತ ಅನುಕೂಲವಾಗಿವೆ.
*ಅಶೋಕ್‌ಕುಮಾರ್ ಎ