Monday, January 31, 2011

ಭಾರತದಲ್ಲೂ ಆಪಲ್ ಐಪ್ಯಾಡ್

ಭಾರತದಲ್ಲೂ ಆಪಲ್ ಐಪ್ಯಾಡ್
ಭಾರತದಲ್ಲಿ ಆಪಲ್ ಐಪ್ಯಾಡ್ ಈಗ ಲಭ್ಯವಾಗಿದೆ.ವೈ-ಫೈ ಮತ್ತು ತ್ರೀಜಿ ಸವಲತ್ತುಳ್ಳ ಐಪ್ಯಾಡುಗಳಿಗೆ ಬೆಲೆ ಇಪ್ಪತ್ತೆಂಟು ಸಾವಿರದಿಂದ ಹಿಡಿದು,ನಲುವತ್ತೈದು ಸಾವಿರದವರೆಗಿದೆ.ಕನಿಷ್ಠ ಬೆಲೆಯಲ್ಲಿ ಹದಿನಾರು ಜೀಬಿ ಸಾಮರ್ಥ್ಯ ಸಿಕ್ಕಿದರೆ,ಗರಿಷ್ಠ ಬೆಲೆಗೆ ಅರುವತ್ತನಾಲ್ಕು ಜೀಬಿ ಸಿಗಲಿದೆ.ಆರು ನಮೂನೆಯ ಐಪ್ಯಾಡುಗಳು ಲಭ್ಯ.ಸ್ಮರಣ ಸಾಮರ್ಥ್ಯ ಹದಿನಾರು ಜೀಬಿ,ಮೂವತ್ತೆರಡು ಜೀಬಿ,ಅರುವತ್ತನಾಲ್ಕು ಜೀಬಿ ಸಾಮರ್ಥ್ಯದವು;ಬರೇ ವೈ-ಫೈ ಅಥವಾ ವೈ-ಫೈ ಜತೆಗೆ ತ್ರೀಜಿ ಸಾಮರ್ಥ್ಯದಲ್ಲಿ ಸಿಗುತ್ತವೆ.ಬಿಎಸೆನ್ನೆಲ್ ಐಪ್ಯಾಡಿಗೇ ತನ್ನ ಯೋಜನೆಗಳನ್ನು ಪ್ರಕಟಿಸಿದೆ.ಅದರ ಪ್ರಕಾರ ಮಾಸಿಕ ಶುಲ್ಕ ರೂ.999 ತೆತ್ತರೆ ಅಪರಿಮಿತ ತ್ರೀಜಿ ಸಂಪರ್ಕ ಲಭ್ಯ.ರೂ.600ಕ್ಕೆ ಆರು ಜೀಬಿ ಮತ್ತು ರೂ.99ಕ್ಕೆ ಒಂದು ದಿನ ಅಪರಿಮಿತ ತ್ರೀಜಿ ಸವಿಯಬಹುದು.
ಹೆಚ್ಚು ಪ್ರಚಾರವಿಲ್ಲದೆ ಐಪ್ಯಾಡ್ ಬಿಡುಗಡೆಯಾಗಿದೆ.ಜನರ ಪ್ರತಿಕ್ರಿಯೆಯೂ ತಣ್ಣಗೇ ಇತ್ತು.ನಿಧಾನವಾಗಿ ಹೆಚ್ಚು ಉತ್ಸಾಹ ವ್ಯಕ್ತವಾಗುವ ನಿರೀಕ್ಷೆಯಿದೆ.ಬೆಲೆ ಹೆಚ್ಚಿಗೇ ಎನ್ನಬಹುದಾದ್ದರಿಂದ, ತಂತ್ರಜ್ಞರು ಮತ್ತು ವಿದ್ಯಾರ್ಥಿಗಳಷ್ಟೇ ಇದನ್ನು ಖರೀದಿಸಿಯಾರು.ಉಳಿದವರು ಕಾದು ನೋಡುವ ತಂತ್ರಕ್ಕೇ ಶರಣಾಗಿ,ಇತರ ಕಂಪೆನಿಗಳ ಟ್ಯಾಬ್ಲೆಟ್‌ಗಳ ಬಿಡುಗಡೆಗಾಗಿ ಕಾದಾರು.ಖಾಸಗಿ ಕಂಪೆನಿಗಳ ತ್ರೀಜಿ ಯೋಜನೆಗಳೂ ಲಭ್ಯವಾದಾಗ,ತ್ರೀಜಿ ಸಂಪರ್ಕವೂ ಅಗ್ಗವಾದೀತು.
-------------------------------
ಬಾಹ್ಯಾಕಾಶಕ್ಕೆ ಮೊಬೈಲ್
ಸೆಲ್‌ಪೋನನ್ನು ಬಾಹ್ಯಾಕಾಶಕ್ಕೆ ಕಳುಹಿಸಿ,ಅದನ್ನು ಬಳಸಿ ಕೃತಕ ಉಪಗ್ರಹವನ್ನು ನಿಯಂತ್ರಿಸುವ ಪ್ರಯತ್ನವನ್ನು ಮೊದಲ ಬಾರಿಗೆ ಮಾಡಲಾಗುತ್ತಿದೆ.ಯುಕೆಯ ವಿಜ್ಞಾನಿಗಳು ಈ ಪ್ರಯೋಗಕ್ಕಿಳಿದವರು.ಸರ್ರೇ ಸ್ಪೇಸ್ ಸೆಂಟರಿನ ತಂಡವು ಗೂಗಲ್ ಆಂಡ್ರಾಯಿಡ್ ವ್ಯವಸ್ಥೆ ಬಳಸಿದ ಸೆಲ್‌ಫೋನನ್ನು ಕೃತಕ ಉಪಗ್ರಹದೊಂದಿಗೆ ರಾಕೆಟಿನಲ್ಲಿ ಕಳುಹಿಸಿ,ಅದು ಬಾಹ್ಯಾಕಾಶದಲ್ಲಿ ಕೆಲಸ ಮಾಡುತ್ತದೆಯೇ ಎಂದು ಪರೀಕ್ಷಿಸಲಿದೆ.ಕೆಲಸ ಮಾಡಿದರೆ,ಸೆಲ್‌ಫೋನಿನ ಮೂಲಕ ಭೂಮಿಯ ಚಿತ್ರ ತೆಗೆದು,ಉಪಗ್ರಹ ಮೂಲಕ ಬಾಹ್ಯಾಕಾಶ ಕೇಂದ್ರದಲ್ಲಿ ಸ್ವೀಕರಿಸಿ,ಚಿತ್ರದ ವೀಕ್ಷಣೆ ನಡೆಯಲಿದೆ.ಸೆಲ್‌ಪೋನ್ ಬಾಹ್ಯಾಕಾಶದ ವೈಪರೀತ್ಯದ ಹವಾಗುಣದಲ್ಲಿ ಕೆಡದಂತೆ ಅದನ್ನು,ಸುರಕ್ಷಿತ ಆವರಣದೊಳಗೆ ಇಡಬೇಕಾಗುತ್ತದೆ.ಕ್ಯಾಮರಾಕ್ಕಾಗಿ ಅದರಲ್ಲಿ ರಂಧ್ರವನ್ನು ಮಾಡಿದ್ದಾರೆ.ಇದುವರೆಗೆ ಮೊಬೈಲ್ ಫೋನುಗಳನ್ನು ಬಲೂನುಗಳಲ್ಲಿ ಕಳುಹಿಸಿ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ.
------------------------------------
ಐಪ್ಯಾಡಿಗಾಗಿ ಪತ್ರಿಕೆ:ಮುರ್ಡೋಕ್ ಸಾಹಸ

ದ ಡೈಲಿ ಎನ್ನುವ ಪತ್ರಿಕೆಯನ್ನು ಐಪ್ಯಾಡಿಗಾಗಿಯೇ ಸಿದ್ಧಪಡಿಸಿ ಒದಗಿಸಲು ಮಾಧ್ಯಮ ತ್ರಿವಿಕ್ರಮ ಮುರ್ಡೋಕ್ ಯೋಜಿಸಿದ್ದಾರಂತೆ.ಈ ಬಗ್ಗೆ ಪ್ರಕಟಣೆ ಹೊರಬಿದ್ದಿದೆ.ನ್ಯೂಯಾರ್ಕಿನ ಐಪ್ಯಾಡ್ ಬಳಕೆದಾರರಿಗೆ ವಾರದ ಚಂದಾ ತೊಂಭತೊಂಭತ್ತು ಸೆಂಟುಗಳು.ಅಂತರ್ಜಾಲದ ಡೈಲಿ ಕಾರ್ಪ್ ಸಂಸ್ಥೆಯು ಅಂತರ್ಜಾಲದ ತನ್ನ ಮಾಹಿತಿಗಳನ್ನು ಚಂದಾಹಣದ ಆಧಾರದ ಮೇಲೆಯೇ ಒದಗಿಸಲು ಆರಂಭಿಸಿದ ಹೆಗ್ಗಳಿಕೆ ಹೊಂದಿದೆ.ಆದರೆ ಜನರಿನ್ನೂ ಹಣ ಪಾವತಿಸಿ ಸೇವೆ ಪಡೆಯಲು ಹೆಚ್ಚಿನ ಹುರುಪು ಹೊಂದಿಲ್ಲ.
-------------------------------------------
ಹನೀಕೂಂಬ್
ಆಂಡ್ರಾಯಿಡ್ ೩.೦ ಆವೃತ್ತಿಯ ತಂತ್ರಾಂಶ ಅಭಿವೃದ್ಧಿ ಕಿಟ್ ಎಸ್ಡಿಕೆಗೆ ಹನೀಕೂಂಬ್ ಎಂದು ಹೆಸರಿಸಲಾಗಿದೆ.ಇದು ಗೂಗಲ್‌ನ ಟ್ಯಾಬ್ಲೆಟ್ ಸಾಧನದ ಕಾರ್ಯನಿರ್ವಹಣಾ ತಂತ್ರಾಂಶ ವ್ಯವಸ್ಥೆಗಾಗಿಯೇ ಅಭಿವೃದ್ಧಿ ಪಡಿಸಿದ್ದು ಒಂದು ವಿಶೇಷ.ಟ್ಯಾಬ್ಲೆಟ್‌ಗಾಗಿಯೇ ಬ್ರೌಸರ್,ಮೀಡಿಯಾ ಪ್ಲೇಯರ್ ಇತ್ಯಾದಿ ಇದರಲ್ಲಿದೆ.ಜತೆಗೆ ಎಮ್ಯುಲೇಟರ್ ಇರುವುದರಿಂದ ಟ್ಯಾಬ್ಲೆಟ್ ಸಾಧನಕ್ಕೆ ರಚಿಸಿದ ಯಾವುದೇ ತಂತ್ರಾಂಶ ಹೇಗೆ ಕೆಲಸ ಮಾಡಬಹುದು ಎಂಬ ಪಕ್ಷಿನೋಟ ಸಿಗುತ್ತದೆ.
-----------------------------------
ಕ್ಷಣಹೊತ್ತು,ಆಣಿ ಮುತ್ತು ಪುಸ್ತಕ ಗೆಲ್ಲಿ!
ಈ ಪ್ರಶ್ನೆಗಳಿಗೆ ಸರಿಯುತ್ತರ ಕಳುಹಿಸಿ,ಷಡಕ್ಷರಿಯವರ "ಕ್ಷಣಹೊತ್ತು,ಆಣಿ ಮುತ್ತು" ಪುಸ್ತಕ ಗೆಲ್ಲಿ!.ಬಹುಮಾನ ಪ್ರಾಯೋಜಿಸಿದವರು ಶೋಭಾ ಮೋಹನ್,ಬೆಂಗಳೂರು.
*ತಂತ್ರಾಂಶ ಅಳವಡಿಸಿ,ಹಳೆ ಮೊಬೈಲ್ ಪೋನ್‌ಗಳನ್ನು ಸ್ಪರ್ಶಸಂವೇದಿ ತೆರೆಯವಾಗಿ ಮಾಡುವುದು ಹೇಗೆ?(ಉತ್ತರವು ಈ ಅಂಕಣದಲ್ಲಿ ಹಿಂದೆ ಚರ್ಚಿತವಾಗಿದೆ http://ashok567.blogspot.com ತಿರುವಿ ನೋಡಿ).
*ನಮ್ಮ ಮೇಲ್ಮನೆಯ ಕಾಸು-ಕುಡಿಕೆ ಬರಹಗಳು ಇರುವ ಬ್ಲಾಗ್ ಯಾವುದು?
(ಉತ್ತರಗಳನ್ನು ashok567@gmail.comಗೆ ಮಿಂಚಂಚೆ ಮಾಡಿ,ವಿಷಯ:NS16 ನಮೂದಿಸಿ.)
(ಕಳೆದ ವಾರದ ಸರಿಯುತ್ತರಗಳು:
*ನಂಬರ್ ಪೋರ್ಟೇಬಿಲಿಟಿಗೆ ಕನ್ನಡ ಪದ ನಿಶ್ಚಲಂಕೆ(ನಿಶ್ಚಲ+ಅಂಕೆ).
*ಜಿ ಎಸ್ ಎಂ. ಮತ್ತು ಸಿಡಿಎಂಎ ಮೊಬೈಲ್ ಸೇವೆ ಒದಗಿಸಲು ಲಭ್ಯವಿರುವ ವಿಭಿನ್ನ ತಂತ್ರಜ್ಞಾನಗಳು.ಮಾಹಿತಿಯನ್ನು ಬಳಕೆದಾರನಿಗೆ ಮುಟ್ಟಿಸುವ ವಿಧಾನ ಈ ತಂತ್ರಜ್ಞಾನಗಳಲ್ಲಿ ಬೇರೆ ಬೇರೆಯಾಗಿವೆ.ಬಹುಮಾನ ಗೆದ್ದವರು ಲೋಯ್ ಕ್ಯಾಸ್ಟೆಲಿನೋ,ಕಲ್ಯಾಣಪುರ,ಉಡುಪಿ.
------------------------------------------------------------
ಡಾ.ವಸಂತ್ ಕುಮಾರ್ ಪೆರ್ಲ ಬ್ಲಾಗ್

http://vasanthkumarperla.blogspot.com/ನಲ್ಲಿ ಆಕಾಶವಾಣಿಯ ಡಾ.ವಸಂತ್ ಕುಮಾರ್ ಪೆರ್ಲ ಅವರ ಬ್ಲಾಗ್ ಬರಹಗಳಿವೆ.ಮೂವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಹೊರತಂದು ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಜತೆ ಹತ್ತಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿರುವವರು.ಸದ್ಯ ಕಾರವಾರ ನಿಲಯದ ಕಾರ್ಯಕ್ರಮ ನಿರ್ವಾಹಕರು.ಮಂಗಳೂರು ನಿಲಯದ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದ ಪೆರ್ಲರವರ ಕವನ,ಬರಹಗಳು,ಸಂದರ್ಶನಗಳು ಬ್ಲಾಗಿಗೆ ವಸ್ತುಗಳಾಗಿವೆ.
-------------------------------------------------
ಕಿಂದರಿಜೋಗಿ

ಮಕ್ಕಳಿಗಾಗಿಯೇ ರಚಿಸಲಾದ ಅಂತರ್ಜಾಲ ತಾಣ http://kindarajogi.comಕಣ್ಮನ ಸೆಳೆಯುವಂತಿದೆ.http://kindarajogi.comಯಲ್ಲಿ ಓದಿ ಕಲಿ,ಮಾಡಿ ತಿಳಿ,ನೋಡಿ ಕಲಿ,ಭೂಮಿ ಮೇಲೆ ಹೀಗೆ ಹಲವು ವಿಭಾಗಗಳಿವೆ.ಪ್ರಾಯೋಗಿಕವಾಗಿ ಕಲಿಯಲು ಉತ್ತೇಜನ ನೀಡುವ ವಿಭಾಗವೇ ಮಾಡಿ ಕಲಿ.ಇತರ ವಿಭಾಗಗಳೂ ಹೀಗೆ ಅನ್ವರ್ಥಕವಾಗಿವೆ."ಹರಿಣಿ"ಯವರ ಪೋಕ್ರಿ ಮಕ್ಕಳನ್ನು ರಂಜಿಸಲು ಇಲ್ಲಿ ಪ್ರತ್ಯಕ್ಷನಾಗಿದ್ದಾನೆ.ಗಣಿತ,ವಿಜ್ಞಾನಕ್ಕೆ ಸಂಬಂಧಿಸಿದ ವಿಭಾಗವೂ ಇದೆ.ಅಂತರ್ಜಾಲ ತಾಣದಲ್ಲಿ ಬರಹಗಳನ್ನು ಪ್ರಕಟಿಸಲು info@kindarajogi.comಗೆ ಮಿಂಚಂಚೆ ಕಳುಹಿಸಿ.
--------------------------------------------------------
ಟ್ವಿಟರ್ ಚಿಲಿಪಿಲಿ
*ಹದಿನೈದು ವರ್ಷ ಹಿಂದೆ ಇಡ್ಲಿಗೆ ಐವತ್ತು ಪೈಸೆ,ಎಸ್ಟಿಡಿ ಕರೆಗೆ ಹದಿನೈದು ರೂಪಾಯಿ ಇತ್ತು..ಈಗ ಎಸ್ಟಿಡಿಗೆ ಐವತ್ತು ಪೈಸೆಯಾದರೆ,ಇಡ್ಲಿಗೆ ಹದಿನೈದು ರೂಪಾಯಿ!
*ನೀರುಳ್ಳಿ ಉತ್ತಪ್ಪ,ರಾಬಿನ್ ಉತ್ತಪ್ಪ ಭಾರೀ ದುಬಾರಿ...
*ಹೊಸ ಪ್ರಶಸ್ತಿಗಳು:ಸ್ಕೇಮ್ ರತ್ನ,ಸ್ಕೇಮ್ ವಿಭೂಷಣ,ಸ್ಕೇಮ್ ಭೂಷಣ್....
*ಕುಡಿದ ಸೆಕ್ಯುರಿಟಿವಾಲಾ ಉವಾಚ:ಸಾಬ್‌ಜಿ,ಆಜ್ ಸೆಕ್ಯುರಿಟಿ ಟೈಟ್ ಹೈ...
*ಕಂಪ್ಯೂಟರ್ ಸಾಕ್ಷರ ಹೈಸ್ಕೂಲ್ ಶಿಕ್ಷಕರಿಗೆ ಲೀನಕ್ಸ್ ತರಬೇತಿಯ ಬಗ್ಗೆ ಅಸಕ್ತಿಯಿದ್ದರೆ ashok567@gmail.comಗೆ ಮಿಂಚಿಸಿ.
*ಮೈಕ್ರೋಸಾಫ್ಟ್‌ನ ತ್ರೈಮಾಸಿಕ ಸಾಧನೆ:ವ್ಯವಹಾರ ವೃದ್ಧಿ,ಲಾಭ ಇಳಿಕೆ
Udayavani
Udayavani Epaper
*ಅಶೋಕ್‌ಕುಮಾರ್ ಎ

Monday, January 24, 2011

ಹೃಸ್ವ ವಿಳಾಸ:ವೈರಸ್‌ಗೆ ರಹದಾರಿ

ಹೃಸ್ವ ವಿಳಾಸ:ವೈರಸ್‌ಗೆ ರಹದಾರಿ
ಅಂತರ್ಜಾಲದ ಕೆಲವು ದುಷ್ಟರು ವೈರಸ್ ದಾಳಿ ನಿಯೊಜಿಸಲು ಹೊಸ ಉಪಾಯ ಕಂಡುಕೊಂಡಿದ್ದಾರೆ.ನೇರವಾಗಿ ವೆಬ್ ವಿಳಾಸಗಳನ್ನು ಕಳುಹಿಸಿದರೆ,ಅದರ ಅಂತಹವರ ಬಣ್ಣ ಸುಲಭವಾಗಿ ಬಯಲಾಗುತ್ತದೆ-ಬಳಕೆದಾರ ಎಚ್ಚರವಾಗಿದ್ದು,ಅಂತಹ ಕೊಂಡಿಗಳನ್ನು ಕ್ಲಿಕ್ಕಿಸಿದೆ ಉಳಿಯುತ್ತಾನೆಂದು,ಇಂತವರೀಗ ವಿಳಾಸಗಳನ್ನು ಕಿರಿದಾಗಿಸಿ ಕಳುಹಿಸುತ್ತಾರೆ.goo.gl,bit.ly ಇಂತಹ ಸೇವೆ ಒದಗಿಸುವ ತಾಣಗಳು.ಇಲ್ಲಿ ಅಂತರ್ಜಾಲ ವಿಳಾಸಗಳು ಬದಲಾಗಿ ಕಿರಿಯ ವಿಳಾಸ ಬರುವುದರಿಂದ ಇಂತಹ ವಿಳಾಸಗಳನ್ನು ನೋಡಿದಾಗ,ಇವುಗಳ ಬಗ್ಗೆ ಅನುಮಾನ ಬರದು.ಕ್ಲಿಕ್ಕಿಸಿದಾಗಲಷ್ತೇ ಇವುಗಳ ಬಣ್ಣ ಬಯಲಾಗುತ್ತದೆ.ಅನಪೇಕ್ಷಿತ ಅಂತರ್ಜಾಲ ತಾಣಗಳನ್ನು ಪ್ರಚಾರ ಮಾಡಲೂ ಇಂತಹ ಸೇವೆಗಳನ್ನು ಬಳಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ.ಟ್ವಿಟರಿನಲ್ಲಿ ನೂರನಲುವತ್ತು ಅಕ್ಷರಗಳ ಸಂದೇಶದ ಮಿತಿ ಇರುವ ಕಾರಣ,ಉದ್ದ ವಿಳಾಸಗಳ ಕೊಂಡಿಗಳನ್ನು ಕಿರಿದುಗೊಳಿಸುವ ಸೇವೆಯು ಹೆಚ್ಚಿನ ಬಳಕೆಯಾಗುತ್ತದೆ.ಹಾಗಾಗಿ,ಟ್ವಿಟರ್ ಸಂದೇಶಗಳ ಮೂಲಕ ವೈರಸ್,ಅನಪೇಕ್ಷಿತ ಸಂದೇಶಗಳ ವಿತರಣೆ ಹೆಚ್ಚಾಗಿ ನಡೆಯುತ್ತಲಿದೆ.ಇದನ್ನು ತಡೆಯಲು ಟ್ವಿಟರ್ ಬಳಕೆದಾರರು ಟ್ವೀಟ್‌ಡೆಸ್ಕ್ ಅಂತಹ ಟ್ವಿಟರ್ ರೀಡರುಗಳನ್ನು ಬಳಸುವುದು ಕ್ಷೇಮ.ಇದರಲ್ಲಿ ಪೂರ್ಣಕೊಂಡಿಯನ್ನು ತೋರಿಸುವ ವ್ಯವಸ್ಥೆಯಿರುವುದರಿಂದ,ಬಳಕೆದಾರರು,ಕೊಂಡಿಯ ಮೇಲೆ ಕ್ಲಿಕ್ಕಿಸುವ ಮೊದಲು ಎಚ್ಚರಿಕೆ ವಹಿಸಬಹುದು.
-------------------------------------------
ಮ್ಯಾಂಡ್ರಿವಾ ಲೀನಕ್ಸ್

ಮ್ಯಾಂಡ್ರಿವಾ ಎನ್ನುವ ಹೊಸ ಲೀನಕ್ಸ್ ವಿತರಣೆಯು ಉಬುಂಟು ಲೀನಕ್ಸಿನಂತೆ ಬಳಕೆದಾರಸ್ನೇಹಿ ಲೀನಕ್ಸ್ ಆಗಿದೆ.ಇದರ ಹೊಸ ಆವೃತ್ತಿ ಮ್ಯಾಂಡ್ರಿವಾ 2010.2 ಈಗ ಬಿಡುಗಡೆಯಾಗಿದೆ.ವರ್ಷಕ್ಕೆರಡು ಸಲ ಇದರ ಹೊಸ ಆವೃತ್ತಿಗಳನ್ನು ಬಿಡುಗಡೆಗೊಳಿಸುವ ಸಂಪ್ರದಾಯ.ಸಿಡಿ,ಡಿವಿಡಿ ಮತ್ತು ಫ್ಲಾಶ್ ಡ್ರೈವ‌ಗಳಲ್ಲೂ ಇದು ಲಭ್ಯ.ಪವರ್‌ಪ್ಯಾಕ್ ಆವೃತ್ತಿಗೆ ಹಣ ಪಾವತಿಸಬೇಕಾಗುತ್ತದೆ.ಹಾಗೆಂದು ಉಚಿತ ಆವೃತ್ತಿಯೂ ಇದೆ.ಅಂತರ್ಜಾಲ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಲು http://www.mandriva.com/en ಅಂತರ್ಜಾಲ ತಾಣಕ್ಕೆ ಭೇಟಿ ಕೊಡಬಹುದು.
-------------------------------------------------
ವಿಂಡೋಸ್7ನಲ್ಲಿ ಸಮಸ್ಯೆ

ಮೈಕ್ರೋಸಾಫ್ಟಿನ ಮೊಬೈಲ್ ಕಾರ್ಯನಿರ್ವಹಣಾ ವ್ಯವಸ್ಥೆ ವಿಂಡೋಸ್7 ಬಳಸಿದಾಗ,ಅದು ತನ್ನಿಂದತಾನೇ ಅಂತರ್ಜಾಲಕ್ಕೆ ದತ್ತಾಂಶ ಕಳುಹಿಸಿ,ಗ್ರಾಹಕರಿಗೆ ದುಬಾರಿಯಾಗಿ ಪರಿಣಮಿಸುವುದು ಕಂಡು ಬಂದಿದೆ.ಮೈಕ್ರೋಸಾಫ್ಟ್ ಕಂಪೆನಿಯೇ ಹೀಗಾಗುವುದನ್ನು ಒಪ್ಪಿಕೊಂಡು,ಇದಕ್ಕೆ ವ್ಯವಸ್ಥೆಯಲ್ಲಿ ಅನುಸ್ಥಾಪಿಸಿದ ಇತರ ತಂತ್ರಾಂಶಗಳು ಕಾರನ ಎಂದು ದೂರಿದೆ.
----------------------------------------------
ಮುಖ್ಯಸ್ಥರು ಬದಲು

ಗೂಗಲ್ ಕಂಪೆನಿಯ ಮುಖ್ಯಸ್ಥನಾಗಿ ಅದರ ಸಂಸ್ಥಾಪಕರಲ್ಲೋರ್ವರಾದ ಲ್ಯಾರೀ ಪೇಜ್ ಅವರು ಅಧಿಕಾರ ಸ್ವೀಕರಿಸಿ,ಅಚ್ಚರಿ ಮೂಡಿಸಿದ್ದಾರೆ.ಎರಿಕ್ ಸ್ಮಿತ್ ಇದುವರೆಗೆ ಮುಖ್ಯಸ್ಥರಾಗಿದ್ದರು.ಗೂಗಲ್‌ನ ಆಕರ್ಷಕ ಹಣಕಾಸು ಸ್ಥಿತಿ ಉತ್ತಮವಾಗಿದ್ದರೂ ಈ ಬದಲಾವನೆ ನಡೆದಿದೆ.ತನ್ನ ನಾಲ್ಕನೆಯ ತ್ರೈಮಾಸಿಕದಲ್ಲಿ ಎರಡೂವರೆ ಬಿಲಿಯನ್ ಡಾಲರ್ ಲಾಭ ಗಳಿಸುವಲ್ಲಿ ಯಶಸ್ವಿಯಾಗಿತ್ತು.ಇದನ್ನು ಸಾಧಿಸಲು ಗೂಗಲ್ ಸುಮಾರು ಎಂಟೂವರೆ ಬಿಲಿಯನ್ ಡಾಲರ್ ವ್ಯವಹಾರ ಮಾಡಬೇಕಾಯಿತು.ಗೂಗಲ್ ಕಂಪೆನಿಯು ಫೇಸ್‌ಬುಕ್ ಅಂತಹ ಸಾಮಾಜಿಕ ಜಾಲತಾಣಗಳಿಂದ ತೀವ್ರ ಸ್ಪರ್ಧೆ ಎದುರಿಸುತ್ತಿದ್ದು,ಮೊಬೈಲ್ ಕ್ಷೇತ್ರದಲ್ಲಿ ಆಪಲ್ ಕಂಪೆನಿಯ ಸ್ಪರ್ಧೆ ಎದುರಿಸಬೇಕಿದೆ.ಕಂಪೆನಿಯ ಉದ್ಯೋಗಿಗಳ ಸಂಖ್ಯೆಯು ಇಪ್ಪತ್ತೈದು ಸಾವಿರ ಸಮೀಪಿಸಿದೆ.ಸ್ಪರ್ಧೆ ಎದುರಿಸಲು ಹೊಸ ವರಸೆಗಳು ಬೇಕಾಗಿದ್ದು,ಲ್ಯಾರಿ ಪೇಜ್ ಇದಕ್ಕೆ ಸಮರ್ಥರೆನ್ನುವ ಭಾವನೆಯಿದೆ.
ಇತ್ತ ಭಾರತದಲ್ಲಿ ವಿಪ್ರೋ ಕಂಪೆನಿಯ ಮುಖ್ಯಸ್ಥರೂ ಬದಲಾಗಿದ್ದಾರೆ.ಈರ್ವರು ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದರೂ,ವಿಪ್ರೋ ತನ್ನ ಮೂರನೇ ತ್ರೈಮಾಸಿಕದಲ್ಲಿ ನಿರೀಕ್ಷಿತ ಯಶಸ್ಸು ಪಡೆಯದ ಕಾರಣವೋ ಏನೋ,ಅದರ ಮುಖ್ಯಸ್ಥರಾಗಿ ಟಿಕೆ ಕುರಿಯನ್ ಅವರನ್ನು ನೇಮಿಸಲಾಗಿದೆ.ಐಟಿ ಕಂಪೆನಿಗಳು ಉತ್ತಮ ಅವಕಾಶಗಿಟ್ಟಿಸಲು ಯಶಸ್ವಿಯಾಗುತ್ತಿರುವ ಇಂದಿನ ಆರ್ಥಿಕ ಪರಿಸ್ಥಿತಿಯಲ್ಲಿ,ಈ ನಾಯಕತ್ವದ ಬದಲಾವಣೆಯಿಂದ ಕಂಪೆನಿಯ ಅದೃಷ್ಟ ಖುಲಾಯಿಸುತದೋ ಕಾದು ನೋಡಬೇಕಿದೆ.
-----------------------------------------------
2011ರ ಉದಯವಾಣಿ ಡೈರಿ ಗೆಲ್ಲಿ!
ಈ ಪ್ರಶ್ನೆಗೆ ಸರಿಯುತ್ತರ ಕಳಿಸಿ ಉದಯವಾಣಿ 2011 ಡೈರಿ ಗೆಲ್ಲಿ!.ಬಹುಮಾನ ಪ್ರಾಯೋಜಿಸಿದವರು ಶ್ರೀನಿವಾಸ್ ರಾವ್,ಬ್ರಹ್ಮಗಿರಿ,ಉಡುಪಿ.
*ನಂಬರ್ ಪೋರ್ಟೇಬಿಲಿಟಿಗೆ ಕನ್ನಡ ಪದ ಟಂಕಿಸಿ.
*ಸಿಡಿಎಂಎ ಮತ್ತು ಜಿಎಸೆಂ ತಂತ್ರಜ್ಞಾನಕ್ಕಿರುವ ವ್ಯತ್ಯಾಸ ಏನು?
(ಉತ್ತರಗಳನ್ನು ashok567@gmail.comಗೆ ಮಿಂಚಂಚೆ ಮಾಡಿ,ವಿಷಯ:NS15 ನಮೂದಿಸಿ.)
(ಕಳೆದ ವಾರದ ಸರಿಯುತ್ತರಗಳು:
*ಬಿಂಗ್ ಏನ್ನುವುದು ಮೈಕ್ರೋಸಾಫ್ಟ್ ಕಂಪೆನಿಯ ಶೋಧ ಸೇವೆ.
*http://brizzly.com ಟ್ವಿಟರ್ ರೀಡರ್.ಕಳೆದವಾರ ಸರಿಯುತ್ತರ ಕಳಿಸಿ ಬಹುಮಾನ ಗೆದ್ದವರು ಉಜಿರೆಯ ಅಕ್ಷಯ ಪ್ರಭು.ಅಭಿನಂದನೆಗಳು.)
------------------------------------------------------------
ಟ್ವಿಟರ್ ಚಿಲಿಪಿಲಿ
*ನಿಯತವಾಗಿ ನಿದ್ರಿಸಿದರೆ,ಮುದಿತನ ತಪ್ಪಿಸಬಹುದು,ಅದರಲ್ಲೂ ಡ್ರೈವಿಂಗ್ ಮಾಡುವಾಗ ನಿದ್ರಿಸಿದರೆ..
*ಗಂಡಸು ಎಷ್ಟು ಚಂದವಿದ್ದರೂ ಆತ ಹ್ಯಾಂಡ್"ಸಮ್",ಹೆಂಗಸು ಸ್ವಲ್ಪವೇ ಚೆನ್ನಾಗಿದ್ದರೂ ಬ್ಯೂಟಿ"ಫುಲ್"!
*ಬಂಗಾಳಿಗಳು ವೀರ್ ಎನ್ನುವ ಶಬ್ದವನ್ನು ಬೀರ್ ಎನ್ನುತ್ತಾರೆ..ಹಾಗಾಗಿ ಬೀರ್ ಅವರ ಶೋಧ...
*ಚೈನೀಸ್ ನೀರುಳ್ಳಿ ಸಾಂಬಾರಿನ ಊಟ ಮಾಡಿದಾಗ,ನೀವು ಉಂಡದ್ದು ಚೈನೀಸ್ ಫುಡ್ಡೇ?
---------------------------------------------
ಸ್ಥಿರ ಮೊಬೈಲ್ ನಂಬರ್ ಜಾರಿ
ಮೊಬೈಲ್ ನಂಬರ್ ಬದಲಿಸದೆ,ಸೇವೆ ನೀಡುವ ಕಂಪೆನಿಯನ್ನು ಬದಲಿಸುವ ಅವಕಾಶವನ್ನು ಈಗ ದೇಶಾದ್ಯಂತ ಒದಗಿಸಲಾಗಿದೆ.ಹೆಚ್ಚಿನ ಮೊಬೈಲ್ ಕಂಪೆನಿಗಳು ಈ ಸೇವೆ ನೀಡಲಾರಂಭಿಸಿವೆ.ಸದ್ಯ ಸೇವೆ ನೀಡುತ್ತಿರುವ ಕಂಪೆನಿಯಿಂದ ಬಿಡುಗಡೆ ಹೊಂದಲು,ಎಸೆಮ್ಮೆಸ್ ಸಂದೇಶ ನೀಡಿದರೆ ಸಾಕು.ಪ್ರತ್ಯುತ್ತರವಾಗಿ,ಬರುವ ಸಂದೇಶದಲ್ಲಿ ಇರುವ ಕೋಡ್ ಅನ್ನು ಹೊಸ ಕಂಪೆನಿಯ ಅರ್ಜಿಯಲ್ಲಿ ನಮೂದಿಸಿ,ಹತ್ತೊಂಭತ್ತು ರೂಪಾಯಿ ಪಾವತಿಸಿದರೆ,ಹೊಸ ಕಂಪೆನಿಯ ಸೇವೆ ಲಭ್ಯವಾಗುತ್ತದೆ.ನಡುವೆ ತುಸು ಹೊತ್ತು ಮೊಬೈಲ್ ಸೇವೆ ಅಲಭ್ಯವಾಗಬಹುದಷ್ಟೇ.ತಮ್ಮ ಗ್ರಾಹಕರ ಸೇವೆಯಲ್ಲಿ ಉತ್ತಮ ಮಟ್ಟವನ್ನು ಕಾಪಾಡಿಕೊಳ್ಳಲು ವಿಫಲವಾದ ಕಂಪೆನಿಗಳಿಗೆ ಈ ಸವಲತ್ತು ಕಹಿಯೆನಿಸಲಿದೆ.ಹೊಸ ಕಂಪೆನಿಗಳಿಗೆ ಆಕರ್ಷಕ ಯೋಜನೆಗಳ ಮೂಲಕ ಇತರ ಕಂಪೆನಿಗಳ ಗ್ರಾಹಕರನ್ನು ತಮ್ಮತ್ತ ಸೆಳೆಯಲಿದು ಉತ್ತಮ ಅವಕಾಶ ಒದಗಿಸಲಿದೆ.ಬಿಎಸೆನ್ನೆಲ್ ಆರಂಭದಲ್ಲೇ ಹೊಸ ಗ್ರಾಹಕರಿಗೆ ಎಂಎನ್ಪಿ ಸೇವೆಗೆ ದರ ಮನ್ನಾ ಪ್ರಕಟಿಸಿದೆಯಲ್ಲದೆ,ತ್ರೀಜಿಗೂ ವರ್ಗಾವಣೆ ಮಾಡುವ ಅವಕಾಶ ಒದಗಿಸಿದೆ.ಟುಜಿ ಸೇವೆಗಳಿಗೆ ವರ್ಗಾವಣೆ ಹೊಂದುವಾಗ,ಸಿಮ್ ಬದಲಿಸಬೇಕಿಲ್ಲ.
--------------------------------
ಭಾವನಾಪ್ರಪಂಚ

ಬೆಂಗಳೂರಿನ ಭಾವನಾ ರಾವ್ ಈಗ ಜೆಕ್ ರಿಪಬ್ಲಿಕ್‌ನಲ್ಲಿ ವಾಸವಾಗಿದ್ದಾರೆ.ಅವರ ದ್ವಿಭಾಷಾ ಬ್ಲಾಗ್ ಬರವಣಿಗೆಯ ಪ್ರಯೋಗಗಳನ್ನು http://bhavana-pen.blogspot.comದಲ್ಲಿ ಕಾಣಬಹುದು.ಅವರ ತಿರುಗಾಟದ ಚಿತ್ರಗಳನ್ನು ಧಾರಾಳವಾಗಿ ಬಳಸಿಕೊಂಡ ಕಾರಣ,ಬ್ಲಾಗ್‌ನಲ್ಲಿ ಬರವಣಿಗೆಯ ಜತೆ ದೃಶ್ಯ-ಕಾವ್ಯದ ಆಹಾರವೂ ಸಿಗುತ್ತದೆ.
Udayavani Unicode
Udayavaniepaper
*ಅಶೋಕ್‌ಕುಮಾರ್ ಎ

Monday, January 17, 2011

ದಶಕ ಪೂರೈಸಿದ ವಿಕಿಪೀಡಿಯಾ

ದಶಕ ಪೂರೈಸಿದ ವಿಕಿಪೀಡಿಯಾ
ವಿಕಿಪೀಡಿಯಾಕ್ಕೀಗ ಹತ್ತು ವರ್ಷ.ಜಗತ್ತಿನ ಅತ್ಯಂತ ಜನಪ್ರಿಯ ಅಂತರ್ಜಾಲ ತಾಣಗಳಲ್ಲೊಂದಾದ ವಿಕಿಪೀಡಿಯಾ ಜನವರಿ ಹದಿನೈದು,2001ರಂದು ಆಸ್ತಿತ್ವಕ್ಕೆ ಬಂದಿತು.ವಿಕಿಪೀಡಿಯಾದ ಸ್ಥಾಪಕ ಜಿಮ್ಮಿವೇಲ್ಸ್ ಅವರು "ಹಲೋ ವರ್ಲ್ಡ್" ಎಂಬ ಪದಗಳೊಂದಿಗೆ,ವಿಕಿಪೀಡಿಯಾವನ್ನು ಆರಂಭಿಸಿದ್ದರು.ಮೊದಲ ತಿಂಗಳಲ್ಲೇ ವಿಕಿಪೀಡಿಯಾಕ್ಕೆ ಒಂದು ಸಾವಿರ ಬರಹಗಳು ಸೇರಿಸಲ್ಪಟ್ಟಿದ್ದುವು.ಈಗ ಅದರಲ್ಲಿ ಇನ್ನೂರ ಎಪ್ಪತ್ತು ಭಾಷೆಗಳ ಹದಿನೇಳು ದಶಲಕ್ಷ ಬರಹಗಳಿವೆ.ಎಂಬತ್ತು ಸಾವಿರ ಸಂಪಾದಕರುಗಳು ವಿಕಿಪೀಡಿಯಾದಲ್ಲಿ ಸೇವೆ ಸಲ್ಲಿಸುತ್ತಿದ್ದು,ಬಳಕೆದಾರ ಸಂಖ್ಯೆ ಪ್ರತಿತಿಂಗಳೂ ನಲುವತ್ತು ಕೋಟಿ ಜನ ದಾಟಿದೆ.ವಿಕಿಪೀಡಿಯಾವನ್ನು ಯಾವನೂ ತಿದ್ದುವ ಅವಕಾಶವಿದ್ದರೂ,ಇದರ ಬಳಕೆ ಮಾಡಲು ತುಸು ಪರಿಣತಿ ಅಗತ್ಯವೆನ್ನುವುದನ್ನು ಜಿಮ್ಮಿವೇಲ್ಸ್ ಅವರೇ ಒಪ್ಪಿಕೊಳ್ಳುತ್ತಾರೆ.ವಿಕಿಪೀಡಿಯಾವಿನ್ನೂ ಸರಳವಾಗಿ ಲಭ್ಯವಾದರಷ್ಟೇ ಮಹಿಳೆಯರೂ ಸೇರಿ ಶ್ರೀಸಾಮಾನ್ಯರು ಅದಕ್ಕೆ ತಮ್ಮ ಕೊಡುಗೆ ನೀಡಲು ಮುಂದೆ ಬಂದಾರು ಎನ್ನುವುದರ ಅರಿವು ವಿಕಿಪೀಡಿಯಾದ ಸಂಪಾದಕ ಮಂಡಳಿಗಿದೆ.ಇಲ್ಲವಾದರೆ ಹೆಚ್ಚು ಕಂಪ್ಯೂಟರ್ ಸಾಕ್ಷರರು ಮಾತ್ರಾ ವಿಕಿಪೀಡಿಯಾಕ್ಕೆ ಬರೆಯುವುದು ಮುಂದುವರಿದೀತು.
-----------------------------------------------
ಗೂಗಲ್ ಅನುವಾದಕ
ಇಂಗ್ಲೀಷಿನಲ್ಲಿ ಮಾತನಾಡಿದ್ದನ್ನು ಸ್ಪಾನಿಶ್ ಭಾಷೆಯಲ್ಲಿ ಹಾಗೆಯೇ ಸ್ಪಾನಿಶ್ ಭಾಷೆಯಲ್ಲಿ ಹೇಳಿದ್ದನ್ನು ಇಂಗ್ಲೀಷಿನಲ್ಲಿ ಹೇಳುವ ಅನುವಾದಕ ಸೇವೆಯೀಗ ಗೂಗಲ್ ಆಂಡ್ರಾಯಿಡ್ ಫೋನ್‌ಗಳಲ್ಲಿ ಸಿಗಲಿದೆ.ಇದುವರೆಗೆ ಗೂಗಲ್ ಅನುವಾದ ಸೇವೆಯು ಬರವಣಿಗೆಯಲ್ಲಿ ಮಾತ್ರಾ ಸಿಗುತ್ತಿತ್ತು.ಸದ್ಯ ಸರಳ ವಾಕ್ಯಗಳಲ್ಲಿ ಹೇಳಿದ್ದು ಅಥವಾ ಸಣ್ಣ ಪದಗುಚ್ಛಗಳಿಗೆ ಮಾತ್ರಾ ಸರಿಯಾದ ಅನುವಾದ ನಿರೀಕ್ಷಿಸಬಹುದು.ಮುಂದೆ ಹಲವಾರು ಭಾಷೆಗಳಲ್ಲೂ ಇಂತಹ ಅನುವಾದಕ ಸೇವೆಯು ಸಿಗಲಿದೆ.
------------------------------------
ಐಪಿವರ್ಶನ್6 ದಿನ
ಈ ವರ್ಷದ ಜೂನ್ ಹನ್ನೊಂದನ್ನು ಐಪಿವರ್ಶನ್-ಆರು ದಿನವಾಗಿ ಆಚರಿಸಲಾಗುವುದಂತೆ.ಅಂದು ಅಂತರ್ಜಾಲದಲ್ಲಿ ಈಗ ಬಳಸಲಾಗುತ್ತಿರುವ ಶಿಷ್ಟಾಚಾರವಾದ ಐಪಿವರ್ಶನ್ ನಾಲ್ಕರ ಬದಲು ಆರನ್ನು ಪರೀಕ್ಷಾರ್ಥವಾಗಿ ಒಂದು ದಿನದ ಮಟ್ಟಿಗೆ ಅನುಸರಿಸಿ,ಎಲ್ಲೆಡೆ ಹೊಸ ಶಿಷ್ಟಾಚಾರದ ಬಗ್ಗೆ ಗಮನಹರಿಯುವಂತೆ ಮಾಡಲಾಗುತ್ತದೆ.ಹಳೆ ಶಿಷ್ಟಾಚಾರ ಆನುಸರಿಸಿದರೆ,ಅಂತರ್ಜಾಲ ವಿಳಾಸಗಳನ್ನು ನೀಡಲು ಸಾಧ್ಯವಾಗದಂತಹ ಪರಿಸ್ಥಿತಿ ಏರ್ಪಡುವ ಬಗ್ಗೆ ನಿಮಗೆ ಗೊತ್ತಿರಬಹುದು.ಹೊಸ ಶಿಷ್ಟಾಚಾರವನ್ನು ಪೂರ್ತಿಯಾಗಿ ಅಂತರ್ಜಾಲದಲ್ಲಿ ಬಳಸಲು ಭಾರಿ ಸಿದ್ಧತೆ ಬೇಕು.ಹೊಸ ಜಾಲಗಳು ಹೊಸ,ಶಿಷ್ಟಾಚಾರದ ಪ್ರಕಾರವೇ ಅನುಷ್ಠಾನವಾದರೂ,ಹಳೆಯವನ್ನು ಬದಲಿಸಲು ಬದಲಾಯಿಸಬೇಕಾದ ಯಂತ್ರಾಂಶ,ತಂತ್ರಾಂಶ ಗಣನೀಯ ಮಟ್ಟದ ಪ್ರಯತ್ನ ಮತ್ತು ಮೂಲಸೌಕರ್ಯದ ಅಭಿವೃದ್ಧಿಯನ್ನು ಅಪೇಕ್ಷಿಸಲಿದೆ.ಹಾಗಾಗಿ ಎರಡೂ ಶಿಷ್ಟಾಚಾರಗಳೂ ಜತೆ ಜತೆಯಾಗಿ ಸಾಗುವಂತೆ ಏರ್ಪಾಡು ಮಾಡಬೇಕಾಗಬಹುದು.ನಿಧಾನವಾಗಿ ಬದಲಾವಣೆಗಳನ್ನು ಮಾಡಿ,ಪೂರ್ತಿಯಾಗಿ ಐಪಿವರ್ಶನ್-ಆರನ್ನು ಬಳಸಲು ಸಮಯ ಬೇಕಾಗಬಹುದು.
-------------------------------------
ದುರಂತದ ಹಾನಿ:ಹ್ಯಾಕರುಗಳ ಸಹಾಯಹಸ್ತ
ಪ್ರಾಕೃತಿಕ ದುರಂತಗಳು ಸಂಭವಿಸಿದಾಗ,ಅವುಗಳಿಂದ ಜನರಿಗೆ ಸಂಭವಿಸುವ ಹಾನಿಯನ್ನು ಕನಿಷ್ಠ ಮಟ್ಟಕ್ಕಿಳಿಸಲು ತಂತ್ರಜ್ಞಾನದ ಉಪಯೋಗ ಪಡೆಯಲಾಗುವಂತೆ ಮಾಡಲು ಹ್ಯಾಕರುಗಳ ತಮ್ಮ ಸಹಾಯಹಸ್ತವನ್ನು ಚಾಚಿದ್ದಾರೆ.ಕೆಲವು ವಾರಗಳ ಹಿಂದೆ ಈ ಅಂಕಣದಲ್ಲೂ ಹ್ಯಾಕರ್ ಶಬ್ದದ ನಿಜಾರ್ಥದ ಬಗ್ಗೆ ಚರ್ಚೆ ನಡೆದಾಗ,ಓದುಗರೊಬ್ಬರು ಹ್ಯಾಕರುಗಳು ತಮ್ಮ ಪರಿಣತಿಯನ್ನು ಸಮಸ್ಯೆಯನ್ನು ಬಗೆಹರಿಸಲು ಒದಗಿಸುವವರು ಎಂದು ವ್ಯಾಖ್ಯಾನಿಸಿದ್ದರು.ಮಾಸ್ಕೋದಲ್ಲಿ ಹ್ಯಾಕರುಗಳ ಸಮ್ಮೇಳನದಲ್ಲಿ,ಅವರುಗಳು ಮಾಡಿದ್ದೂ ಅದನ್ನೇ.ದಯಾಪರ ಹ್ಯಾಕ್‌ಗಳ ಗುಂಪು ನಾಸಾದ ಉಪಗ್ರಹ ಚಿತ್ರಗಳನ್ನು ಕಂಪ್ಯೂಟರುಗಳಲ್ಲಿ ವೀಕ್ಷಿಸಲು ಅನುಕೂಲವಾಗುವ ಹಾಗೆ ಅನುಕೂಲ ಕಲ್ಪಿಸಿ,ದುರಂತ ಸಂಭವಿಸಿದ ಪ್ರದೇಶಗಳ ಕ್ಷಣ-ಕ್ಷಣದ ಪರಿಸ್ಥಿತಿಯನ್ನು ತಿಳಿದುಕೊಂಡು ಪರಿಹಾರ ಕಾರ್ಯಗಳನ್ನು ನಡೆಸಲು ಅನುಕೂಲ ಕಲ್ಪಿಸಿದರು.ಇದರ ಜತೆಗೆ,ಅನಾಹುತಕ್ಕೀಡಾದ ಪ್ರದೇಶದಲ್ಲಿ ಸಿಲುಕಿ ಹಾಕಿಕೊಂಡವರ ಮೊಬೈಲ್ ಫೋನ್‌ಗಳ ಮೂಲಕ ಅವರಿರುವ ಸ್ಥಾನ ಪತ್ತೆಯಲ್ಲದೆ,ಅವರುಗಳು ತಾವು ಚೆನ್ನಾಗಿದ್ದೇವೆಯೇ,ಸಮಸ್ಯೆ ಎದುರಿಸುತ್ತಿದ್ದೇವೆಯೇ ಎನ್ನುವುದನ್ನು ಬಾಹ್ಯ ಜಗತ್ತಿಗೆ ಸುಲಭವಾಗಿ ತಿಳಿಯ ಪಡಿಸಲು ಮೊಬೈಲ್ ತಂತ್ರಾಂಶಗಳನ್ನೂ ಅಭಿವೃದ್ಧಿ ಪಡಿಸಿದರು.
----------------------------
ಹಲಸಿನ ಬಗೆಗೇ ಬರಹ

ಹಲಸು ಅತ್ಯುಪಯುಕ್ತ ಹಣ್ಣಾದರೂ,ಇದರ ಪೂರ್ಣ ಪ್ರಯೋಜನ ಪಡೆಯಲು ರೈತರು ಯಶಸ್ವಿಯಾಗಿಲ್ಲ.ಹಲಸಿನ ಮೌಲ್ಯವರ್ಧನೆ ಮಾಡಿ,ರೈತರು ಹೆಚ್ಚಿನ ಆದಾಯ ಪಡೆಯಲು ಲಭ್ಯವಿರುವ ವಿವಿಧ ಮಾರ್ಗಗಳನ್ನು ತೋರಿಸುವ ಬ್ಲಾಗ್ ಬರಹಗಳು http://panasamwonders.blogspot.comನಲ್ಲಿವೆ.ಇದು ಪಟ್ಟಣಂತಿಟ್ಟದ ಕೃಷಿ ವಿಜ್ಞಾನ ಕೇಂದ್ರ ನಡೆಸುತ್ತಿರುವ ಬ್ಲಾಗ್.ಸಾರ್ವಜನಿಕರೂ ತಮಗೆ ತಿಳಿದಿರುವ ಹಲಸಿನ ಮೌಲ್ಯವರ್ಧನೆಯ ದಾರಿಗಳ ಬಗ್ಗೆ ಇಲ್ಲಿ ಬರೆಯಲು ಅವಕಾಶವಿದೆ.ಹಲಸನ್ನು ಹುಲುಸಾಗಿ ಬೆಳೆದರೆ ಸಾಲದು,ಅದರ ಪ್ರಯೋಜನ ರೈತರಿಗೆ ಸಿಗಲಿ ಎಂಬ ಆಶಯ ಇಲ್ಲಿನ ಬರಹಗಳಲ್ಲಿ ಎದ್ದು ಕಾಣುವ ಅಂಶ.
---------------------------
2011ರ ಡೈರಿ ಗೆಲ್ಲಿ!

ಈ ಪ್ರಶ್ನೆಗೆ ಸರಿಯುತ್ತರ ಕಳಿಸಿ,ಎನ್ ಇ ಟಿ ನೌಕರರ ಪತ್ತಿನ ಸಂಘ ನಿ.,ನಿಟ್ಟೆರವರ 2011 ಡೈರಿ ಗೆಲ್ಲಿ!.ಬಹುಮಾನ ಪ್ರಾಯೋಜಿಸಿದವರು ಎನ್ ಇ ಟಿ ನೌಕರರ ಪತ್ತಿನ ಸಂಘ ನಿ.,ನಿಟ್ಟೆ(ರಿ ನಂ. 19327)
(ಉತ್ತರಗಳನ್ನು nittecreditsociety@yahoo.comಗೆ ಮಿಂಚಂಚೆ ಮಾಡಿ,ವಿಷಯ:NS14 ನಮೂದಿಸಿ.)
*ಬಿಂಗ್ ಏನು?
*http://brizzly.com ಏನು?
(ಕಳೆದ ವಾರದ ಸರಿಯುತ್ತರಗಳು:
*ಅಡೋಬ್ ಫೋಟೋಶಾಪ್‌ನಂತೆ ಬಳಸಬಹುದಾದ ಮುಕ್ತ ತಂತ್ರಾಂಶ ಜಿಂಪ್GIMP - “GNU image manipulation program".
*ಮೈಕ್ರೋಸಾಫ್ಟಿನ ಆಫೀಸ್ ತಂತ್ರಾಂಶದ ಬದಲು ಬಳಸಬಹುದಾದ ಮುಕ್ತ ತಂತ್ರಾಂಶ ಓಪನ್ ಆಫೀಸ್..ಕಳೆದವಾರ ಸರಿಯುತ್ತರ ಕಳಿಸಿ ಬಹುಮಾನ ಗೆದ್ದವರು ಎಸ್.ಚೇತನ್ ಕೆಮ್ಮಣ್ಣು,ಎನ್ ಐ ಟಿ ಕೆಯ ಎಂ ಟೆಕ್ ವಿದ್ಯಾರ್ಥಿ.ಅಭಿನಂದನೆಗಳು.)
------------------------------------------------------------
ಟ್ವಿಟರ್ ಚಿಲಿಪಿಲಿ
*ವಾದ ಎನ್ನುವುದು ಯಾರು ಸರಿ ಎನ್ನುವುದರ ಬಗ್ಗೆ ನಡೆದರೆ,ಚರ್ಚೆ ಯಾವುದು ಸರಿ ಎನ್ನುವುದರ ಬಗ್ಗೆ ಇರುತ್ತದೆ.
*ನೀವು ಯಾವಾಗಲೂ ಯೋಚಿಸಿದ್ದನ್ನೇ ಯೋಚಿಸಿದರೆ, ನೀವು ಮಾಡಿದ್ದನ್ನೇ ಮಾಡಿ,ನಿಮಗೆ ಇದುವರೆಗೆ ಸಿಕ್ಕಿದ ಫಲವೇ ಸಿಗುತ್ತದೆ.ಹಾಗಾಗಿ ಯೋಚನಾ ಸರಣಿಯನ್ನು ಬದಲಾಯಿಸಿ..
*ಯುವಕರು ಕೆಡುತ್ತಿದ್ದಾರೆ..ಇವತ್ತು ದೇವಾಲಯದಲ್ಲಿ ನನ್ನ ಪಕ್ಕದಲ್ಲಿ ನಿಂತಿದ್ದ ಹುಡುಗ ಆರತಿ ತಟ್ಟೆಯಿಂದ ಸಿಗರೇಟು ಉರಿಸಿಕೊಂಡಾಗ,ಅವಾಕ್ಕಾದ ನನ್ನ ಕೈಯಿಂದ ಬಿಯರ್ ಬಾಟಲು ಬೀಳದ್ದು ಪುಣ್ಯ..
-------------------------
ಬನವಾಸಿ ಬಳಗದ "ಏನ್‌ಗುರು?"

http://enguru.blogspot.com ಇದು ಹಲವರು ಸೇರಿ ಬರೆಯುತ್ತಿರುವ ಬ್ಲಾಗ್.ಬನವಾಸಿ ಬಳಗವೆಂದು ತಮ್ಮನ್ನು ಗುರುತಿಸಿಕೊಳ್ಲುವ ಇದರ ಸದಸ್ಯರು,ಕನ್ನಡಪರ ನಿಲುವನ್ನು ಬ್ಲಾಗ್ ಬರಹಗಳಲ್ಲಿ ಎತ್ತಿ ಹಿಡಿಯುತ್ತಿರುವುದು ಮೇಲ್ನೋಟಕ್ಕೇ ಸ್ಪಷ್ಟವಾಗುತ್ತದೆ.ಇದೇ ಈ ಬ್ಲಾಗ್‌ನ ಜನಪ್ರಿಯತೆಯ ಗುಟ್ಟು ಕೂಡಾ.ಇವರ ಬರಹಗಳ ಬಗ್ಗೆ ಸಮುದಾಯ ತಾಣಗಳಲ್ಲಿ ಚರ್ಚೆಯಾಗುವುದೂ ಸಾಮಾನ್ಯ.ಕರ್ನಾಟಕದಲ್ಲಿ ಕನ್ನಡಕ್ಕೆ ಪ್ರಾಧಾನ್ಯತೆ ಸಿಗಬೇಕು,ಹಿಂದಿಯನ್ನು ರಾಷ್ಟ್ರಭಾಷೆಯೆನ್ನುವುದು ತಪ್ಪು.ಹಿಂದಿ ಹೇರಿಕೆ ಬೇಡ ಎನ್ನುವುದೂ ಈ ಬ್ಲಾಗಿನಲ್ಲಿ ಆಗಾಗ ವ್ಯಕ್ತವಾಗುವ ನಿಲುವು.ವಿವಿಧ ವಿಷಯಗಳ ಬಗೆಗೆ ಪ್ರಕಟವಾದ ಬರಹಗಳ ಪರಿವಿಡಿ ಸಿಗುವ ಕಾರಣ,ಆಸಕ್ತಿಯಿರುವ ವಿಷಯಗಳ ಮೇಲಿನ ಬರಹಗಳನ್ನು ಹುಡುಕುವುದು ಸುಲಭವಾಗುತ್ತದೆ.ತಪ್ಪು ಕನ್ನಡದ ಬಳಕೆ,ಸಂಸ್ಥೆಗಳಲ್ಲಿ ಕನ್ನಡ ಬಳಸದೆ ಕನ್ನಡಿಗರಿಗೆ ತೊಂದರೆಯಾಗುವವರ ಬಗ್ಗೆ ಜನಾಭಿಪ್ರಾಯ ಮೂಡಿಸಲು ಪ್ರಯತ್ನಿಸಿ,ಸಾಕಷ್ಟು ಯಶಸ್ವಿಯಾಗಿದೆ.ಇಂತಹ ತಪ್ಪುಗಳ ವಿರುದ್ಧ ಹೋರಾಟ ನಡೆಸಲು ಕನ್ನಡಿಗರನ್ನು ಎಚ್ಚರಿಸುವ ಕೆಲಸವನ್ನೂ ಬನವಾಸಿ ಬಳಗ ಮಾಡುತ್ತಿದೆ.
Udayavani 
Udayavaniepaper
*ಅಶೋಕ್‌ಕುಮಾರ್ ಎ

Monday, January 10, 2011

ಗುಂಪುಗುಳಿಗಳಿಗೆ ಬೆಲೆ ಕಡಿತ

ಗುಂಪುಗುಳಿಗಳಿಗೆ ಬೆಲೆ ಕಡಿತ
ಗುಂಪಾಗಿ ಉತ್ಪನ್ನಗಳನ್ನು ಖರೀದಿಸಿದರೆ ಬೆಲೆಯಲ್ಲಿ ಕಡಿತ ಮಾಡುವ ಯೋಜನೆಗಳಿರುವ http://www.groupon.com/ನಂತಹ ತಾಣಗಳು ಅಂತರ್ಜಾಲದಲ್ಲಿ ಜನಪ್ರಿಯವಾಗುತ್ತಿವೆ.ಇಲ್ಲಿ ಗುಂಪಾಗಿ ಉತ್ಪನ್ನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸುವವರಿಗೆ ಶೇಕಡಾ ಐವತ್ತರಿಂದ ತೊಂಭತ್ತು ಕಡಿತ ಸಿಗುತ್ತದೆ.ಇಂತಹ ತಾಣಗಳು ನೀಡುವ ಕೊಡುಗೆಗಳ ಬಗ್ಗೆ ನೀವು ನಿಮ್ಮ ಮಿತ್ರರಿಗೆ ಮಿಂಚಂಚೆ,ಟ್ವಿಟರ್,ಫೇಸ್‍ಬುಕ್ ಅಂತಹ ಮಾಧ್ಯಮಗಳ ಮೂಲಕ ಪ್ರಚಾರ ನೀಡಿ,‍ಕಡಿತದ ಬೆಲೆಯಲ್ಲಿ ವಸ್ತುವನ್ನು ಖರೀದಿಸುವ ಅವಕಾಶ ಪಡೆಯಬಹುದು.http://livingsocial.com/ ಮತ್ತು http://www.valuup.com ತಾಣಗಳೂ ಇಂತದ್ದೇ ಯೋಜನೆಗಳನ್ನು ಹೊಂದಿರುವ ಇತರ ತಾಣಗಳು.ಕೊಡುಗೆಗಳು ವ್ಯಕ್ತಿಯಿರುವ ಊರಿನ ಆಧಾರದ ಮೇಲೆ ಆತನಿಗೆ ನೀಡುವುದು ಸಾಮಾನ್ಯ ಕ್ರಮ.ಹಾಗಾಗಿ ಬಳಕೆದಾರನು ನೋಂದಾವಣೆಯಾಗುವ ವೇಳೆ ತಾನಿರುವ ಊರಿನ ವಿವರಗಳನ್ನು,ತನ್ನ ಮಿಂಚಂಚೆಯನ್ನೂ ತಿಳಿಸಬೇಕಾಗುತ್ತದೆ.ಹೀಗೆ ಬಂದ ಕೊಡುಗೆಗಳಿಗೆ ಸಾಮಾಜಿಕ ಜಾಲತಾಣದ ಮೂಲಕವಾಗಲಿ,ಮಿಂಚಂಚೆ ಮುಖಾಂತರವಾಗಲಿ ತನ್ನ ಮಿತ್ರರಿಗೆ ತಿಳಿಸಿ,ಕೂಪನ್ ಪಡೆಯಬಹುದು.ಕೂಪನ್ ಮುದ್ರಿಸಿ,ಇಲ್ಲವೆ ಅವನ್ನು ತನ್ನ ಮೊಬೈಲಿನಲ್ಲಿ ಪಡೆದುಕೊಳ್ಳುವ ಆಯ್ಕೆ ಬಳಕೆದಾರನಿಗಿದೆ.ನಂತರ ಅಂಗಡಿಗೆ ಹೋಗಿ ಮುದ್ರಿತ ಕೂಪನ್ ನೀಡಿ ರಿಯಾಯಿತಿ ದರದಲ್ಲಿ ವಸ್ತುವನ್ನು ಖರೀದಿಸಬಹುದು.ಇಲ್ಲವೇ ಮೊಬೈಲ್ ಸಾಧನದ ಮೂಲಕ,ಇದನ್ನು ಅಂಗಡಿಯಾತನ ಮೊಬೈಲ್‌‍ಗೆ ಎಸೆಮೆಸ್ ಮಾಡಿ ರಿಯಾಯಿತಿ ಪಡೆಯಬಹುದು.ಗ್ರೂಪಾನ್ ಅಂತಹ ಕಂಪೆನಿಯ ಮೇಲೆ ಗೂಗಲ್ ಕಂಪೆನಿಯ ಕಣ್ಣು ಬಿದ್ದಿದೆ.ಆರು ಬಿಲಿಯನ್ ನೀಡಿ ಕಂಪೆನಿ ಖರೀದಿಸಲು ಗೂಗಲ್ ಅಸಕ್ತಿ ಪ್ರಕಟಿಸಿದೆ.ಗ್ರೂಪಾನ್ ಕಂಪೆನಿ ಈ ಕೊಡುಗೆಯನ್ನು ತಿರಸ್ಕರಿಸಿ, ಧೈರ್ಯ ಪ್ರಕಟಿಸಿದೆಯಂತೆ.
-----------------------------------
ಹೊಸ ಸ್ಪರ್ಶ ಸಂವೇದಿ ಟ್ಯಬ್ಲೆಟ್‌ಗಳು ಬರಲಿವೆ
ಹೊಸ ವರ್ಷದಲ್ಲಿ ಮೊಟೊರೊಲಾ,ಎಲ್ಜಿಯೂ ಸೇರಿ ಕಂಪೆನಿಗಳು ಹೊಸ ಸ್ಪಶಸಂವೇದಿ ಟ್ಯಾಬ್ಲೆಟ್‌ಗಳನ್ನು ಬಿಡುಗಡೆ ಮಾಡಲಿವೆ.ಲಾಸ್‍ವೇಗಸ್‌ನಲ್ಲಿ ನಡೆದಿರುವ ಸಿಇಎಸ್ ಎನ್ನುವ ಪ್ರದರ್ಶನದ ವೇಳೆ ಈ ಸುದ್ದಿಗಳು ಲಭ್ಯವಾಗಿವೆ.ಇಲ್ಲಿ ಕಂಪೆನಿಗಳು ತಮ್ಮ ಹೊಸ ಉತ್ಪನ್ನಗಳನ್ನು ಪ್ರದರ್ಶಿಸುವುದು ವಾಡಿಕೆ. ಹೆಚ್ಚಿನ ಕಂಪೆನಿಗಳು ಆಂಡ್ರಾಯಿಡ್ ವ್ಯವಸ್ಥೆಯ ಹೊಸ ಆವೃತ್ತಿಯನ್ನು ಬಳಸಿಕೊಳ್ಳುವ ನಿರೀಕ್ಷೆಯಿದೆ.ಈ ಆವೃತ್ತಿ ಟ್ಯಾಬ್ಲೆಟ್ ಸಾಧನಗಳಿಗೇ ಮೀಸಲಾದ ತಂತ್ರಾಂಶ ವ್ಯವಸ್ಥೆ.ಅದಿನ್ನೂ ಪೂರ್ತಿ ವಿಕಸಿತವಾಗಿಲ್ಲ ಎನ್ನುವುದು ಸತ್ಯ.ಕ್ಸೂಮ್ ಎನ್ನುವ ಸ್ಪರ್ಶಸಂವೇದಿ ಟ್ಯಾಬ್ಲೆಟ್ಗಳನ್ನು ಮೊಟೊರೊಲಾ ಘೋಷಿಸಿದೆ.ಎಲ್ಜಿಯೂ ಹೊಸ ಆಂಡ್ರಾಯಿಡ್ ಆವೃತ್ತಿಯನ್ನಾಧರಿಸಿದ ಜಿ-ಸ್ಲೇಟ್ ಎನ್ನುವ ಸಾಧನವನ್ನು ತಯಾರಿಸಲಿದೆ.ಸ್ಯಾಮ್‌ಸಂಗ್ ಕಂಪೆನಿಯು ವೈ-ಫೈಯಲ್ಲಿ ಮಾತ್ರಾ ಕೆಲಸ ಮಾಡುವ ನಿಸ್ತಂತು ಟ್ಯಾಬ್ಲೆಟನ್ನು ತನ್ನ ಗ್ಯಾಲಕ್ಸಿ ಸರಣಿಯ ಐದನೆಯ ಉತ್ಪನ್ನವಾಗಿ ಹೊರತರುವ ಯೋಚನೆಯಲ್ಲಿರುವುದೂ ಪ್ರದರ್ಶನದ ವೇಳೆ ವ್ಯಕ್ತವಾಯಿತು.ಗೂಗಲ್ ಕಂಪೆನಿಯು ತನ್ನ ಟ್ಯಾಬ್ಲೆಟ್-ಸ್ನೇಹಿ ಆಂಡ್ರಾಯಿಡ್ ಆವೃತ್ತಿಯನ್ನಿಲ್ಲಿ ಪ್ರಕಟಿಸಿದೆ.ಆಪಲ್ ಕಂಪೆನಿಯು ಇಲ್ಲಿ ಹೊಸ ಉತ್ಪನ್ನಗಳ ಪ್ರಕಟನೆಯ ಗೋಜಿಗೇ ಹೋಗಿಲ್ಲ.ಉತ್ಪನ್ನಗಳನ್ನು ಪ್ರಕಟಿಸುವ ವೇಳೆ ಪ್ರದರ್ಶಿಸಿದರೆ ಉತ್ತಮ.ಅದರೆ ಕಂಪೆನಿಗಳ ಉತ್ಪನ್ನಗಳ ಮಾದರಿಯನ್ನು ತೋರಿಸುವುದೇ ಹೆಚ್ಚು.ಈ ಸಲ ಉತ್ಪನ್ನದ ವಿಡಿಯೋ ತೋರಿಸಿ,ವಿವರಿಸಿದವರದ್ದೇ ಬಹುಮತ.
-------------------------------------
ಟೂಜಿ ಹಗರಣದಲ್ಲಿ ಸರಕಾರಕ್ಕೆ ನಷ್ಟವಾಗಿಲ್ಲವೇ?
ತ್ರೀಜಿ ಸ್ಪೆಕ್ಟ್ರಮ್ ಹರಾಜಿನಲ್ಲಿ ದೊರೆತ ಹಣದ ಪ್ರಕಾರ ಲೆಕ್ಕ ಹಾಕಿದಾಗ ಟೂಜಿ ಸ್ಪೆಕ್ಟ್ರಮ್‌ನ್ನೂ ಹರಾಜು ಹಾಕಿದ್ದರೆ ಸರಕಾರಕ್ಕೆ ಒಂದುಮುಕ್ಕಾಲು ಲಕ್ಷಕೋಟಿ ರೂಪಾಯಿಗಳು ಬರುತ್ತಿತ್ತೆಂಬ ಲೆಕ್ಕಾಚಾರ ಸರಿಯೇ?ಕಪಿಲ್ ಸಿಬಾಲ್ ಅವರ ಪ್ರಕಾರ,ಆ ಲೆಕ್ಕಾಚಾರದಲ್ಲಿ ಹಣದುಬ್ಬರ ಪ್ರಮಾಣವನ್ನು ಪರಿಗಣಿಸಿ,ನಲುವತ್ತ ಮೂರು ಸಾವಿರ ಕೋಟಿ ರೂಪಾಯಿಗಳನ್ನು ಇಳಿಸಬೇಕಾಗುತ್ತದೆ.ತ್ರೀಜಿ ಸ್ಪೆಕ್ಟ್ರಮ್ ಟೂಜಿಗಿಂತ ನಾಲ್ಕು ಪಟ್ಟು ದಕ್ಷತೆ ಇರುವ ಕಾರಣ,ಮೂವತ್ತೈದು ಸಾವಿರಕೋಟಿ; ಸ್ಪೆಕ್ಟ್ರಮ್‌ನ ಲೈಸೆನ್ಸ್ ಅವಧಿ ಕಡಿಮೆ ಇರುವ ಕಾರಣ ಮೂರು ಸಾವಿರ ಕೋಟಿ,ಆವರ್ತನ ಸಂಖ್ಯೆಯ ವ್ಯತ್ಯಾಸಕ್ಕಾಗಿ ಹದಿನೇಳು ಸಾವಿರ ಕೋಟಿ, ಹೀಗೆಲ್ಲಾ ಲೆಕ್ಕ ಹಾಕಿದರೆ ಸರಕಾರಕ್ಕೆ ನಷ್ಟವಾಗಿಲ್ಲ ಎನ್ನುವ ಹೊಸ ವಾದ ಮಂಡಿಸಿದ್ದಾರೆ.ವಕೀಲರಾಗಿರುವ ಸಿಬಾಲ್ ವಾದ ತಲೆದೂಗುವ ಹಾಗಿದ್ದರೂ ಅವರ ವಾದ ವೈಖರಿಯಲ್ಲಿ ಜಾಣಮರೆವೊಂದು ಇಣುಕಿದೆ.ಅದೆಂದರೆ 2008ರಲ್ಲಿಯೂ 2001ರ ಬೆಲೆಗಳಲ್ಲಿ ಸ್ಪೆಕ್ಟ್ರಮ್ ಮಾರುವಾಗ,ಹಣದುಬ್ಬರವನ್ನೆಕೆ ಪರಿಗಣಿಸಲಿಲ್ಲ ಎನ್ನುವುದಕ್ಕೆ ಅವರು ವಿವರಣೆ ನೀಡಿಲ್ಲ.
----------------------------------
2011 ಡೈರಿ ಗೆಲ್ಲಿ!
ಈ ಪ್ರಶ್ನೆಗೆ ಸರಿಯುತ್ತರ ಕಳಿಸಿ,ಎನ್ ಇ ಟಿ ನೌಕರರ ಪತ್ತಿನ ಸಂಘ ನಿ.,ನಿಟ್ಟೆರವರ 2011 ಡೈರಿ ಗೆಲ್ಲಿ!.ಬಹುಮಾನ ಪ್ರಾಯೋಜಿಸಿದವರು ಎನ್ ಇ ಟಿ ನೌಕರರ ಪತ್ತಿನ ಸಂಘ ನಿ.,ನಿಟ್ಟೆ(ರಿ ನಂ. 19327)
*ಅಡೋಬ್ ಫೋಟೋಶಾಪ್‌ನಂತೆ ಬಳಸಬಹುದಾದ ಮುಕ್ತ ತಂತ್ರಾಂಶ ಯಾವುದು?
*ಮೈಕ್ರೋಸಾಫ್ಟಿನ ಆಫೀಸ್ ತಂತ್ರಾಂಶದ ಬದಲು ಬಳಸಬಹುದಾದ ಮುಕ್ತ ತಂತ್ರಾಂಶ ಯಾವುದು?
(ಉತ್ತರಗಳನ್ನು nittecreditsociety@yahoo.comಗೆ ಮಿಂಚಂಚೆ ಮಾಡಿ,ವಿಷಯ:NS13 ನಮೂದಿಸಿ.)
(ಕಳೆದ ವಾರದ ಸರಿಯುತ್ತರಗಳು:
*ಟ್ಯಾಲಿ ತಂತ್ರಾಂಶದ ಹಣಕಾಸಿನ ಲೆಕ್ಕಾಚಾರಗಳನ್ನು ನಿರ್ವಹಿಸಲು ಬಳಸಬಹುದು.
*ಸಹಕಾರಿ ಸಂಘಗಳ ಲೆಕ್ಕಪತ್ರಗಳನ್ನು ನಿರ್ವಹಿಸಲು ಬಳಸುವ ಜನಪ್ರಿಯ ತಂತ್ರಾಂಶ ಕೋಬ್ಯಾಂಕ್‌ಸಾಫ್ಟ್.ಕಳೆದವಾರ ಸರಿಯುತ್ತರ ಕಳಿಸಿ ಬಹುಮಾನ ಗೆದ್ದವರು ರಜತ್,ಬಿಜಾಪುರ.ಅಭಿನಂದನೆಗಳು.)
------------------------------------------------------------
ಟ್ವಿಟರ್ ಚಿಲಿಪಿಲಿ
*2010ರಲ್ಲಿ ಕಪಿಲ್ ಸಿಬಾಲ್ ಅವರು ಘೋಷಿಸಿದ್ದ ಮೂವತ್ತೈದು ಡಾಲರು ಬೆಲೆಯ ಲ್ಯಾಪ್‌ಟಾಪ್ ಇನ್ನೂ ಆಮ್-ಆದ್ಮಿಯ ಕೈ ಸೇರಿಲ್ಲ,ಈಗವರು ಅದೇ ಬೆಲೆಯ ನೀರುಳ್ಳಿ ಘೋಷಿಸಬಹುದು!
*ಓ ದೇವರೇ, ನಾನು ವಸ್ತುಗಳ ಮೋಹಕ್ಕೊಳಗಾಗದ ಹಾಗೆ ಮಾಡು,ಇಲ್ಲವೇ ಅವನ್ನು ಖರೀದಿಸಲು ಬೇಕಾದಷ್ಟು ಹಣ ನನಗೆ ನೀಡು;ಎರಡನೆಯದ್ದೇ ಒಳಿತು...ಎಷ್ಟೋ ಉದ್ಯೋಗಾವಕಾಶಗಳ ನಿರ್ಮಾಣವಾಗುತ್ತದೆ...
*ನಿಮ್ಮ ಪ್ಲಾನ್-ಎ ಕೆಲಸ ಮಾಡದಿದ್ದರೆ ಯೋಚಿಸಬೇಡಿ,ಇನ್ನೂ (ಜೆಡ್ ವರೆಗಿನ) ಇಪ್ಪತ್ತೈದು ಅಕ್ಷರಗಳಿವೆ...
*ನನ್ನ ಹೆಲ್ತ್-ಇನ್ಶೂರೆನ್ಸ್ ಬಹಳ ಸರಳವಾಗಿದೆ-ನಾನು ಆರೋಗ್ಯವಾಗಿದ್ದಾಗ,ನನ್ನೆಲ್ಲಾ ಖರ್ಚುಗಳನ್ನದು ಭರಿಸಲಿದೆ.
-------------------------------------------------
ರಾಮಸ್ವಾಮಿಯವರ ಬೆಂಕಿಕಡ್ಡಿ
ಡಿ ಎಸ್ ರಾಮಸ್ವಾಮಿಯವರು ಚಿಂತನಶೀಲ ಬರಹಗಾರ,ಕವಿ.ಇವರು ಆಕಾಶವಾಣಿಯಲ್ಲೂ ನೂರಕ್ಕೂ ಅಧಿಕ ಚಿಂತನೆ ಕಾರ್ಯಕ್ರಮಗಳನ್ನು ನಡೆಸಿಕೊಟ್ಟವರು.ಅವರ ಚಿಂತನೆಗಳನ್ನೊಳಗೊಂಡ ಬರಹಗಳು ಇರುವ ಬ್ಲಾಗು "ಬೆಂಕಿಕಡ್ಡಿ".ಕವನ ಸಂಕಲನಗಳನ್ನೂ ಪ್ರಕಟಿಸಿರುವ,ರಾಮಸ್ವಾಮಿಯವರ ಸಂಕಲನಗಳ ಕವನಗಳೂ ಬ್ಲಾಗಿನಲ್ಲಿವೆ.ಕಾಂತಾವರ ಕನ್ನಡ ಸಂಘ,ಪತ್ರಿಕೆಗಳ ಕಥಾಸ್ಪರ್ಧೆಗಳು,ಶಿವಮೊಗ್ಗದ ಕರ್ನಾಟಕದ ಸಂಘದ ಜಿ ಎಸ್ ಶಿವರುದ್ರಪ್ಪ ಕಾವ್ಯಪ್ರಶಸ್ತಿ ಇವೆಲ್ಲವನ್ನೂ ರಾಮಸ್ವಾಮಿಯವರು ಬಗಲಿಗೇರಿಸಿಕೊಂಡವರು. ಒಟ್ಟಿನಲ್ಲಿ ಇವರ ಬೆಂಕಿಕಡ್ಡಿ ಬ್ಲಾಗ್,ಚಿಂತನಶೀಲರಿಗೆ ಒಳ್ಳೆಯ ಸಾಮಗ್ರಿ ಒದಗಿಸುವ ಬ್ಲಾಗ್ ಎನ್ನುವುದರಲ್ಲಿ ಅನುಮಾನವಿಲ್ಲ.
Udayavani
*ಅಶೋಕ್‌ಕುಮಾರ್ ಎ

Monday, January 03, 2011

ಏನಿದು GMMXIE

ಏನಿದು GMMXIE


ಜನವರಿ ಒಂದರಂದು ಗೂಗಲ್ ತಾಣವನ್ನು ನೋಡಿದಾಗ,ಅಲ್ಲಿನ ಗೂಗಲ್ ಡೂಡ್ಲ್ GMMXIE ಎಂದಿತ್ತು.ಏನಿದು MMXI ಎಂದು ತಲೆಕೆರೆದು ಕೊಂಡವರೇ ಹೆಚ್ಚು.ಗೂಗಲ್ ಡೂಡ್ಲ್,ಸಾಂದರ್ಭಿಕವಾಗಿರುವ ಕಾರಣ,ಇದು ಹೊಸ ವರ್ಷಕ್ಕೆ ಸಂಬಂಧ ಪಟ್ಟಿದ್ದು ಎನ್ನುವ ಕೋನದಿಂದ ಯೋಚಿಸಿದಾಗಲಷ್ಟೇ ಜನರಿಗೆ ಇದು ರೋಮನ್ ಅಂಕೆಯಲ್ಲಿ ಬರೆದ 2011 ಎನ್ನುವುದು ಹೊಳೆಯಿತು.ರೋಮನ್ ಅಂಕೆಯಲ್ಲಿ M ಎಂದರೆ ಸಾವಿರ,ಹಾಗಾಗಿ ಎರಡು ಸಾವಿರ ಬರೆಯಲು MM;ಹಾಗೂ ಹತ್ತು ಬರೆಯಲು X ಅಕ್ಷರವೂ ಒಂದು ಬರೆಯಲು I ಬಳಕೆಯಾಗಿದೆ.ಮೊದಲ G ಮತ್ತು ಕೊನೆಯ E ಗೂಗಲ್ ಎಂದು ಬರೆಯಲು ಬಳಕೆಯಾಗಿದೆ.ಹೀಗಾಗಿ GMMXIE.ಹೇಗಿದೆ ಹೊಸ ವರ್ಷದ ಡೂಡ್ಲ್?
------------------------------------------
2010ರ ಬೆಸ್ಟ್


ವರ್ಷದ ಬೆಸ್ಟ್ ಸ್ಮಾರ್ಟ್‌ಫೋನ್ ಉತ್ಪನ್ನವೆಂದು ಸ್ಯಾಮ್‌ಸಂಗ್ ಕಂಪೆನಿಯ ಸ್ಮಾರ್ಟ್‌ಫೋನ್ ಎಪಿಕ್ 4ಜಿ ಸ್ಥಾನಗಿಟ್ಟಿಸಿತು.ಪಿಸಿವರ್ಲ್ಡ್ ತಾಣವಿದನ್ನು ಅತ್ಯುತ್ತಮ ಉತ್ಪನ್ನವೆಂದು ಪರಿಗಣಿಸಿತು.ಇದೊಂದು ಆಂಡ್ರಾಯಿಡ್ ಫೋನ್.4ಜಿ ನೆಟ್ವರ್ಕ್ ಇರುವೆಡೆಯೂ ಕೆಲಸ ಮಾಡಬಲ್ಲುದು(ನಮ್ಮ ದೇಶದಲ್ಲಿ ಇಲ್ಲ).ಬೆಸ್ಟ್ ಡೆಸ್ಕ್‌ಟಾಪ್ ಮತ್ತು ಲ್ಯಾಪ್‌ಟಾಪ್ ಉತ್ಪನ್ನಗಳ ಸ್ಥಾನ ಎಚ್‌ಪಿಯ ಪಾಲಾಯಿತು.ಬೆಸ್ಟ್ ಇ-ರೀಡರ್ ಎಂದು ಕಿಂಡಲ್‌ನ ಇ-ರೀಡರನ್ನು ಹೆಸರಿಸಲಾಗಿದೆ.ಬೆಸ್ಟ್ ಟ್ಯಾಬ್ಲೆಟ್ ಊಹಿಸಿದಿರಲ್ಲ?ಐಪ್ಯಾಡ್.ಬೆಸ್ಟ್ ಸ್ಮರಣಕೋಶವಾಗಿ ಅತಿವೇಗದಲ್ಲಿ ದತ್ತಾಂಶ ವರ್ಗಾವಣೆಗೆ ಅನುವು ಮಾಡುವ ಕ್ರೂಸಿಯಲ್ ಎನ್ನುವ ಎಸ್‍ಎಸ್‍ಡಿಯನ್ನು ಪರಿಗಣಿಸಲಾಗಿದೆ.
------------------------------
MMXIನಲ್ಲಿ ಏನಿರಬಹುದು?
ಹೊಸ ವರ್ಷದಲ್ಲಿ ಗೂಗಲ್ ಕ್ರೋಂ ಆಧಾರಿತ ನೆಟ್‌ಬುಕ್‌ನ್ನು ವಿವಿಧ ಕಂಪೆನಿಗಳು ಬಿಡುಗಡೆ ಮಾಡಬಹುದು ಎಂಬ ಗುಸುಗುಸು ಇದೆ.ಏಸರ್ ಕಂಪೆನಿಯ ಎರಡು ತೆರೆಗಳ ನೋಟ್‌ಬುಕ್ ಬಗ್ಗೆಯೂ ವದಂತಿ ಕೇಳಿಸುತ್ತಿದೆ.ಬ್ಲೂರೇಡಿಸ್ಕ್ ಪ್ಲೇಯರ್ ಬರುವ ನಿರೀಕ್ಷೆಯಿದೆ.ಐಪೋಡ್ ಟಚ್‍ಗೆ ಹೋಲುವ ಸ್ಯಾಮ್‌ಸಂಗ್ ಕಂಪೆನಿಯ ಉತ್ಪನ್ನ ಬರುವ ಬಗ್ಗೆಯೂ ಕೇಳಿಬರುತ್ತಿದೆ.ಎಲ್ಜಿಯ ಅತಿ ತೆಳುವಾದ ಆಂಡ್ರಾಯಿಡ್ ಫೋನ್ ಲಭ್ಯವಾಗುವ ನಿರೀಕ್ಷೆಯಿದೆ.ಮೈಕ್ರೋಸಾಫ್ಟ್ ಕಂಪೆನಿಯ ವಿನ್8 ಕಾರ್ಯನಿರ್ವಹಣಾ ವ್ಯವಸ್ಥೆ ತಂತ್ರಾಂಶದ ಬಗ್ಗೆಯೂ ಮತ್ತೆ ಮಾತು ಕೇಳಿಬರತೊಡಗಿದೆ.
-----------------------------------
ಹಳೆವಿದ್ಯಾರ್ಥಿಗಳ ಮಿಲನದಲ್ಲಿ ವಿಡಿಯೋ ಕಾನ್ಫರೆನ್ಸ್ ಬಳಕೆ
ಕಾಲೇಜುಗಳು ತಮ್ಮ ಹಳೆವಿದ್ಯಾರ್ಥಿಗಳ ಜತೆ ತಮ್ಮ ನಂಟನ್ನು ಉಳಿಸಿ-ಬೆಳೆಸಿಕೊಂಡು ಹೋಗಲು ಬಯಸುತ್ತವೆ.ವಿದ್ಯಾರ್ಥಿಗಳೂ ಅಷ್ಟೆ-ಸಾಧ್ಯವಾದಷ್ಟು ಮಟ್ಟಿಗೆ,ತಮ್ಮನ್ನು ರೂಪಿಸುವಲ್ಲಿ ಸಹಾಯ ಮಾಡಿದ ಸಂಸ್ಥೆಗಳಿಗೆ ತಮ್ಮಿಂದಾದ ಮಟ್ಟಿಗೆ ಕೃತಜ್ಞತೆ ಸಲ್ಲಿಸಲು ಬಯಸುತ್ತಾರೆ.ಆದರೆ,ತಮ್ಮ ಜೀವನದ ಪಯಣದಲ್ಲಿ ಎಲ್ಲೆಲ್ಲಿಗೋ ತಲಪಿರುವ ವಿದ್ಯಾರ್ಥಿಗಳಿಗೆ ಸಂಸ್ಥೆಗಳ ಆವರಣಕ್ಕೇ ಹೋಗಿ,ರಜತ-ಸುವರ್ಣ ಮಿಲನ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದೆ ಇರಬಹುದು.ಇಂತವರಿಗೆ ಇದೀಗ ವಿಡಿಯೋ ಸಂವಾದಗಳು ಬಹಳ ನೆರವಾಗುತ್ತಿವೆ.ನಮ್ಮಲ್ಲೂ ಇಂತಹ ಪ್ರಯೋಗಗಳು ನಡೆಯುತ್ತಿವೆ.ಒಂದು ಉದಾಹರಣೆಗಾಗಿ http://nmamitalumni.in ತಾಣವನ್ನು ಗಮನಿಸಬಹುದು.
------------------------------------------
ಸ್ಮಾರ್ಟ್‌ಫೋನ್:ಬಳಸಲೂ ಸ್ಮಾರ್ಟ್
ಯುರೋಪಿನ ಹಲವು ದೇಶಗಳ ಸ್ಮಾರ್ಟ್‌ಪೋನ್‌ಗಳಲ್ಲಿ ಬಳಕೆಯಾಗುವ ವಿದ್ಯುತ್ ಶಕ್ತಿಚಾರ್ಜರ್‌ಗಳು ಒಂದೇ ರೀತಿ ಇರಬೇಕು ಎಂಬ ವಾದದನ್ವಯ,ಅಲ್ಲಿನ ಯುರೋಪಿಯನ್ ಕಮೀಷನ್ ಚಾರ್ಜರ್‌ಗಳಿಗೆ ಮಾನಕಗಳನ್ನು ಸಿದ್ಧಪಡಿಸಿದೆ.ಇದನ್ನು ಹ್ಯಾಂಡ್‌ಸೆಟ್ ತಯಾರಕರುಗಳಿಗೆ ಕಳುಹಿಸಲಾಗಿದೆ.ಸ್ಯಾಮ್‌ಸಂಗ್,ಐಫೋನ್,ನೋಕಿಯಾ,ಬ್ಲಾಕ್‌ಬೆರ್ರಿಯಂತಹ ಕಂಪೆನಿಗಳಿದಕ್ಕೀಗಾಗಲೇ ಸಮ್ಮತಿಸಿವೆ.ಹೀಗಾಗಿ ಸದ್ಯದಲ್ಲೇ ಈ ಹ್ಯಾಂಡ್‌ಸೆಟ್‌ಗಳಿಗೆ ಒಂದೇ ಚಾರ್ಜರ್ ಸರಿಹೊಂದಲಿದೆ.ಅದಲ್ಲದೆ,ಸ್ಮಾರ್ಟ್‌ಪೋನ್ ಬದಲಾಯಿಸುವಾಗ,ಹಳೆಯ ಚಾರ್ಜರ್ ಅದಕ್ಕೂ ಸರಿಹೊಂದುವ ಕಾರಣ,ಮತ್ತೆ ಹೊಸ ಚಾರ್ಜರ್  ಅಗತ್ಯವಿಲ್ಲ.
---------------------------------
2011 ಡೈರಿ ಗೆಲ್ಲಿ!
ಈ ಪ್ರಶ್ನೆಗೆ ಸರಿಯುತ್ತರ ಕಳಿಸಿ,ಎನ್ ಇ ಟಿ ನೌಕರರ ಪತ್ತಿನ ಸಂಘ ನಿ.,ನಿಟ್ಟೆರವರ 2011 ಡೈರಿ ಗೆಲ್ಲಿ!.ಬಹುಮಾನ ಪ್ರಾಯೋಜಿಸಿದವರು ಎನ್ ಇ ಟಿ ನೌಕರರ ಪತ್ತಿನ ಸಂಘ ನಿ.,ನಿಟ್ಟೆ(ರಿ ನಂ. 19327)
*ಟ್ಯಾಲಿ ತಂತ್ರಾಂಶದ ಉಪಯೋಗ ಏನು?
*ಸಹಕಾರಿ ಸಂಘಗಳ ಲೆಕ್ಕಪತ್ರಗಳನ್ನು ನಿರ್ವಹಿಸಲು ಬಳಸುವ ಜನಪ್ರಿಯ ತಂತ್ರಾಂಶ ಹೆಸರಿಸಿ.
(ಉತ್ತರಗಳನ್ನು nittecreditsociety@yahoo.comಗೆ ಮಿಂಚಂಚೆ ಮಾಡಿ,ವಿಷಯ:NS12 ನಮೂದಿಸಿ.)
(ಕಳೆದ ವಾರದ ಸರಿಯುತ್ತರಗಳು:
*ಪಾಡ್‌ಕಾಸ್ಟಿಂಗ್ ಅಂದರೆ ಧ್ವನಿರೂಪದ ಬ್ಲಾಗು.
*ಕನ್ನಡದ ಪ್ರಮುಖ ಪಾಡ್‌ಕಾಸ್ಟಿಂಗ್ ಅಂಕಣಕಾರ ಮತ್ತು  "ಉದಯವಾಣಿ" ಓದುಗ ಶ್ರೀವತ್ಸಜೋಶಿ  http://sjoshi.podbean.com

ಕಳೆದವಾರ ಸರಿಯುತ್ತರಗಳು ಬಂದಿಲ್ಲವಾದ್ದರಿಂದ ಯಾರಿಗೂ ಬಹುಮಾನ ಇಲ್ಲ.)
------------------------------------------------------------
ಟ್ವಿಟರ್ ಚಿಲಿಪಿಲಿ
*ಜನವರಿ ಏಳು ಮತ್ತು ಎಂಟರಂದು ನಿಟ್ಟೆ ಎನ್ ಎಂ ಎ ಎಂ ಐ ಟಿಯಲ್ಲಿ IC-CANA 2011 ಅಂತಾರ್ರಾಷ್ಟ್ರೀಯ ಸಮಾವೇಶ http://www.iccana.com
*ಕುಡಿತದ ಕೆಡುಕುಗಳ ಬಗ್ಗೆ ಯೋಚಿಸಿದಂತೆಲ್ಲಾ, ತಲೆಸಿಡಿದು ಹೋಗುವಂತೆ ಅನ್ನಿಸಿ,ಯೋಚಿಸುವುದನ್ನೇ ಬಿಟ್ಟು ಬಿಡುತ್ತೇನೆ..
*ಹೊಸವರ್ಷದಲ್ಲಿ 1/1/11,11/1/11,1/11/11,11/11/11 ಮುಂತಾದ ಪಂಗನಾಮಗಳು ಕಾದಿವೆ...
-------------------------------------------------
ಸಲ್ಲಾಪ:ಧಾರವಾಡದ ಪೇಡೆ
ಧಾರವಾಡ ಫೇಡೆಯ ರುಚಿ ಸವಿದವರು ಅದಕ್ಕೆ ಮನಸೋಲುತ್ತಾರೆ.ಹಾಗೆಯೇ ಅಲ್ಲಿನ ಭಾಷೆಯ ಸೊಗಡಿಗೂ ಕೂಡಾ.ಸುಧೀಂದ್ರ ಎಲ್ ದೇಶಪಾಂಡೆ "ಸುನಾತ್"ಯವರ ಬ್ಲಾಗ್ http://sallapa.blogspot.com ಓದಿದರೆ ಧಾರವಾಡದ ಪೇಡೆ ಸವಿದ ಅನುಭವವಾದೀತು.ಅವರ ಬ್ಲಾಗುಗಳಿಗೆ ರಾಶಿ-ರಾಶಿ ಪ್ರತಿಕ್ರಿಯೆಗಳು ಸಿಕ್ಕಿರುವುದೇ ಇದಕ್ಕೆ ಸಾಕ್ಷಿ.ಹಾಗೆಯೇ ಇವರ ಬ್ಲಾಗನ್ನು ಅನುಸರಿಸುವವರ ಸಂಖ್ಯೆ ಎರಡುನೂರು ಸಮೀಪಿಸುತ್ತಿದೆ.ಬೇಂದ್ರೆ,ಭೈರಪ್ಪನವರ ಸಾಹಿತ್ಯದಿಂದ ಹಿಡಿದು,ಮನಮೋಹನ-ಯೆಡ್ಡಿಯವರ ರಾಜಕಾರಣದ ಬಗೆಗಿನ ವೈವಿಧ್ಯಮಯ ವಿಚಾರಗಳೂ,ಟೀಕೆ-ಟಿಪ್ಪಣಿಗಳು ಇವರ ಬ್ಲಾಗು-ಪ್ರತಿಕ್ರಿಯೆಗಳಲ್ಲಿ ಸುಳಿಯುತ್ತವೆ.ಇತರರೊಡನೆ ಸೇರಿ ಗದುಗಿನ ಭಾರತವನ್ನು ಇನ್ನೊಂದು ಬ್ಲಾಗು "ಕರ್ಣಾಟ ಭಾರತ ಕಥಾಮಂಜರಿ"ಅಲ್ಲಿ ಪ್ರಸ್ತುತ ಪಡಿಸುತ್ತಿದ್ದಾರೆ.ಈ ಕಾರ್ಯದಲ್ಲಿ ಯಾರೂ ಭಾಗಿಯಾಗಬಹುದು ಎನ್ನುವ ಮುಕ್ತ ಆಹ್ವಾನವಿದೆ.ಬರಹಗಳನ್ನು ಬೇರೆ ಬೇರೆ ಬರಹಗಾರರು,ಬೇರೆ ಬೇರೆ ಸಮಯದಲ್ಲಿ ಬರೆಯುತ್ತಿರುವುದರಿಂದ,ಅದು ಗದುಗಿನ ಭಾರತದಲ್ಲಿರುವ ಕ್ರಮದಲ್ಲಿ ಸಿಗುವುದಿಲ್ಲ.ಆದರೆ ಶೀರ್ಷಿಕೆಗಳನ್ನು ಹತ್ತು ಪರ್ವಗಳಿಗನುಸಾರ ನೀಡಲಾಗಿದೆ.ಈ ಬ್ಲಾಗನ್ನು http://gaduginabharata.blogspot.com/
Udayavani Unicode
Udayavani
*ಅಶೋಕ್‌ಕುಮಾರ್ ಎ