Monday, February 28, 2011

ಇಂಟೆಲ್:ಥಂಡರ್‌ಬೋಲ್ಟ್

ಇಂಟೆಲ್:ಥಂಡರ್‌ಬೋಲ್ಟ್
ಯುಎಸ್ಬಿ 3.0ರ ಎರಡುಪಟ್ಟು ವೇಗದಲ್ಲಿ ದತ್ತಾಂಶ ವರ್ಗಾವಣೆ ಮಾಡಬಲ್ಲ ತಾಮ್ರದ ಕೇಬಲ್ ಆಧಾರಿತ ಥಂಡರ್ ಬೋಲ್ಟ್ ಎನ್ನುವ ತಂತ್ರಜ್ಞಾನವನ್ನು ಇಂಟೆಲ್ ಇದೀಗ ಅಭಿವೃದ್ಧಿ ಪಡಿಸಿದೆ.ಥಂಡರ್ ಬೋಲ್ಟ್ ಬಳಸಿದರೆ ಹತ್ತು ಗಿಗಾಬಿಟ್ ವೇಗದಲ್ಲಿ ದತ್ತಾಂಶ ವರ್ಗಾವಣೆ ಸಾಧ್ಯ.ನೈಜ ವೇಗ ಇಷ್ಟಿರದು.ಥಂಡರ್‌ಬೋಲ್ಟ್ ತಂತ್ರಜ್ಞಾನವನ್ನು ಆಪಲ್ ಕಂಪೆನಿಯ ಹೊಸ ಲ್ಯಾಪ್‌ಟಾಪುಗಳಲ್ಲಿ ಅಳವಡಿಸಲಾಗಿದೆ.ಅಂದಹಾಗೆ ಆಪಲ್ ಕಂಪೆನಿಯ ಹೊಸ ಲ್ಯಾಪ್‌ಟಾಪುಗಳು ಮ್ಯಾಕ್‌ಬುಕ್ ಪ್ರೋ ಸರಣಿಯಲ್ಲಿ ಹದಿಮೂರು ಮತ್ತು ಹದಿನೇಳು ಇಂಚು ತೆರೆಯ ಎರಡು ಮಾದರಿಗಳಿವೆ.ಕ್ರಮವಾಗಿ ಸಾವಿರದಿನ್ನೂರು ಮತ್ತು ಎರಡೂವರೆ ಸಾವಿರ ಡಾಲರು ಬೆಲೆಯ ಈ ಲ್ಯಾಪ್‌ಟಾಪುಗಳು ಥಂಡರ್‌ಬೋಲ್ಟ್ ತಂತ್ರಜ್ಞಾನವನ್ನು ಮೊದಲಬಾರಿಗೆ ಬಳಸಿ ಗಮನಸೆಳೆದಿವೆ.ಹೊಸ ತಂತ್ರಜ್ಞಾನ ವ್ಯಾಪಕ ಬಳಕೆ ಕಾಣಲಿದೆಯೇ,ಅಲ್ಲ ಇವು ಆಪಲ್‌ನ ಲ್ಯಾಪ್‌ಟಾಪುಗಳಿಗಷ್ಟೇ ಸೀಮಿತವಾಗಲಿದೆಯೇ ಎನ್ನುವುದು ಕುತೂಹಲದ ವಿಷಯ.ಇದನ್ನು ಕಾದು ನೋಡಬೇಕಿದೆ.
-------------------------------
ದಕ್ಷತೆ ಹೆಚ್ಚಿಸುವ ತಂತ್ರಜ್ಞಾನ
ವಿದ್ಯುತ್ ಸಾಧನಗಳಲ್ಲಿ ಏಸಿ ವಿದ್ಯುತ್ ಡಿಸಿ ಆಗಿ ಪರಿವರ್ತಿತವಾಗುವುದು,ಮತ್ತೆ ಡಿಸಿ ಏಸಿ ವಿದ್ಯುತ್ ಆಗಬೇಕಾಗುವುದು ಇದೆ.ಹೀಗೆ ವಿದ್ಯುಚ್ಛಕ್ತಿ ಪರಿವರ್ತಿತವಾಗುವಾಗ ವಿದ್ಯುತ್ ನಷ್ಟವಾಗುವುದಿದೆ.ಇದನ್ನು ಶೇಕಡಾ ತೊಂಭತ್ತರಷ್ಟು ಕಡಿಮೆ ಮಾಡುವ ಮೂಲಕ ವಿದ್ಯುತ್ ಸಾಧನದ ದಕ್ಷತೆ ಹೆಚ್ಚಿಸುವ ತಂತ್ರಜ್ಞಾನವನ್ನು ಗೂಗಲ್ ಬೆಂಬಲಿತ ಕಂಪೆನಿಯೊಂದು ಅಭಿವೃದ್ಧಿ ಪಡಿಸಿದೆ.ಸಿಲಿಕಾನ್ ಬದಲು ಗ್ಯಾಲಿಯಂ ನೈಟ್ರೈಡ್ ಬಳಸುವ ಮೂಲಕ ಇದನ್ನು ಸಾಧಿಸಲಾಗಿದೆಯೆಂದು ಕಂಪೆನಿ ಹೇಳಿಕೊಂಡಿದೆ.ಈ ತಂತ್ರಜ್ಞಾನವನ್ನು ಎಲ್ಲೆಡೆ ಬಳಸಿದರೆ,ಅಮೆರಿಕಾದಲ್ಲೇ ಮುನ್ನೂರು ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳ ಅಗತ್ಯ ಬೀಳದು ಎಂದರೆ ವಿದ್ಯುತ್ ಉಳಿಕೆಯ ಪ್ರಮಾಣ ಮನವರಿಕೆಯಾದೀತು.
----------------------------------
ಹಿಂಬಾಲಿಸದಿರಿ ಎನ್ನನು
ಕಂಪ್ಯೂಟರ್ ಬಳಕೆದಾರನು ಭೇಟಿ ಕೊಡುವ ತಾಣಗಳನ್ನು ತಿಳಿಯುವುದರ ಜತೆ,ಆತ ಆ ತಾಣದಲ್ಲಿ ಹೇಗೆ ಸಮಯ ಕಳೆಯುತ್ತಾನೆ ಎನ್ನುವುದರ ಬಗ್ಗೆ ಮಾಹಿತಿ ಸಂಗ್ರಹಿಸುವುದರಲ್ಲಿ ಹಲವು ಕಂಪೆನಿಗಳು ಆಸಕ್ತವಾಗಿವೆ.ಈ ಮಾಹಿತಿಯನ್ನು ಬಳಕೆದಾರನ ಗಮನ ಸೆಳೆಯುವ ಜಾಹೀರಾತುಗಳನ್ನು ಪ್ರದರ್ಶಿಸಲು ಬಳಸಿ,ಲಾಭ ಪಡೆಯುವುದು ಕಂಪೆನಿಗಳ ಉದ್ದೇಶವಾಗಿದೆ.ಇಂತಹ ಮಾಹಿತಿಗಳನ್ನು ಇತರರಿಗೆ ಮಾರಿ ದುಡ್ಡು ಮಾಡುವ ಅಂತರ್ಜಾಲ ತಾಣಗಳೂ ಇವೆ.ಇಂತಹ ನಡವಳಿಕೆಯನ್ನು, ಖಾಸಗಿತನದ ಉಲ್ಲಂಘನೆ ಎಂದು ಬಗೆವ ಬಳಕೆದಾರರು ತಮ್ಮನ್ನು ಹಿಂಬಾಲಿಸುವುದನ್ನು ಇಷ್ಟ ಪಡರು.ಬ್ರೌಸರ್ ಅಭಿವೃದ್ಧಿ ಪಡಿಸುವ ಮೋಜಿಲ್ಲಾ,ಗೂಗಲ್ ಮುಂತಾದ ಕಂಪೆನಿಗಳು ಬ್ರೌಸರಿನಲ್ಲೇ ಈ ರೀತಿಯ ಸೆಟ್ಟಿಂಗ್‌ಗಳನ್ನು ನೀಡಿ,ಬಳಕೆದಾರನನ್ನು ಹಿಂಬಾಲಿಸಿ,ಮಾಹಿತಿ ಶೇಖರಿಸುವುದನ್ನು ಅಸಾಧ್ಯವಾಗಿಸಲು ಕ್ರಮ ಕೈಗೊಳ್ಳಲು ಮುಂದೆ ಬಂದಿವೆ.ಡು ನಾಟ್ ಕಾಲ್ ಮಿ ಎನ್ನುವ ಸೆಲ್‌ಪೋನ್ ಕಂಪೆನಿಗಳ ನೋಂದಾವಣೆಯಿಂದ ಪ್ರೇರಿತ ಈ ಹಿಂಬಾಲಿಸಿದಿರಿ,ಕೆಲಸ ಮಾಡುವ ರೀತಿ ಮಾತ್ರಾ ಬೇರೆಯಾಗಿದೆ.
------------------------------------
ಗೂಗಲ್ ಶೋಧ:ನಿಯಂತ್ರಣ ಸಾಧ್ಯ
ಗೂಗಲ್ ಶೋಧದ ಫಲಿತಾಂಶದಲ್ಲಿ ಯಾವುದೇ ತಾಣವನ್ನು ಸೇರಿಸದೇ ಇರಲು ಸಾಧ್ಯವಾಗುವ ಸವಲತ್ತು ಗೂಗಲ್ ಕ್ರೋಮ್ ಬ್ರೌಸರಿನಲ್ಲಿ ಸಾಧ್ಯ.ಪದೇ ಪದೇ ಕೆಲವು ತಾಣಗಳು ಶೋಧ ಫಲಿತಾಂಶದಲ್ಲಿ ಕಾಣಿಸುವುದು ಬಳಕೆದಾರನಿಗೆ ಬೇಡವಾಗಿದ್ದರೆ ಈ ಆಯ್ಕೆ ಪ್ರಯೋಜನಕಾರಿ.ಹಾಗೆಯೇ ನಿಮಗಿಷ್ಟವಲ್ಲದ ತಾಣಗಳು ಫಲಿತಾಂಶದಲ್ಲಿ ಸೇರದೇ ಇರುವಂತೆ ಮಾಡುವಲ್ಲಿದು ಉಪಯುಕ್ತವಾಗುತ್ತದೆ.ಉದಾಹರಣೆಗೆ ಹೆಚ್ಚಿನ ಶೋಧ ಫಲಿತಾಂಶದಲ್ಲಿ ವಿಕಿಪೀಡಿಯಾದ ಬರಹಗಳು ಮೊದಲಾಗಿ ಕಾಣಿಸಿಕೊಳ್ಳುತ್ತವೆ.ನಿಮಗವುಗಳಲ್ಲಿ ಆಸಕ್ತಿಯಿಲ್ಲವಾದರೆ,ಅವನ್ನು ಶೋಧ ಫಲಿತಾಂಶದಿಂದ ಹೊರಗುಳಿಸಲು ಅವಕಾಶವಿದೆ.ಶೋಧ ಫಲಿತಾಂಶದಲ್ಲಿ ತಮ್ಮ ಅಂತರ್ಜಾಲ ತಾಣವನ್ನು ಸೇರಿಸುವ ತಂತ್ರ ಬಲ್ಲ ಅಂತರ್ಜಾಲ ಪುಟಗಳ ನಿರ್ಮಾತೃಗಳಿಗೆ ಇದು ಒಳ್ಳೆಯ ಸುದ್ದಿಯಲ್ಲ.
----------------------------------
ತುಷಾರ:ವಾರ್ಷಿಕ ಚಂದಾ ಗೆಲ್ಲಿ!
ಈ ಪ್ರಶ್ನೆಗಳಿಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ!.ಬಹುಮಾನ ಪ್ರಾಯೋಜಿಸಿದವರು ಉಡುಪಿ ಬ್ರಹ್ಮಗಿರಿಯ ಡಾ.ಶ್ರೀನಿವಾಸ್ ರಾವ್,ಪ್ರೊಫೆಸರ್,ನಿಟ್ಟೆ.
(ಉತ್ತರಗಳನ್ನು nistantusansaara@gmail.comಗೆ ಮಿಂಚಂಚೆ ಮಾಡಿ,ವಿಷಯ:NS20 ನಮೂದಿಸಿ.)
*ಕೇರಳದಲ್ಲಿ ಶಿಕ್ಷಣಕ್ಕೆ ಲೀನಕ್ಸ್ ಆಪರೇಟಿಂಗ್ ವ್ಯವಸ್ಥೆ ಬಳಸುವ ಯೋಜನೆ ಯಾವುದು?
*ಮೈಂಡ್‌ಮ್ಯಾಪಿಂಗಿಗೆ ಬಳಸಬಹುದಾದ ಜನಪ್ರಿಯ ತಂತ್ರಾಂಶ ಹೆಸರಿಸಿ.
ಕಳೆದ ವಾರದ ಸರಿಯುತ್ತರಗಳು:
*ಪ್ಲಾನೆಟೇರಿಯಂ ಅನ್ನು ಕಂಪ್ಯೂಟರಿನಲ್ಲೇ ದರ್ಶನ ಮಾಡಿಸುವ ತಂತ್ರಾಂಶ ಸ್ಟೆಲ್ಲೇರಿಯಂ -ವಿವರಗಳಿಗೆ www.stellarium.org ನೋಡಿ.
*ಲಿನಕ್ಸ್ ಆಪರೇಟಿಂಗ್ ವ್ಯವಸ್ಥೆಯನ್ನು ಬಳಸಿದರೆ ಆಗುವ ಲಾಭಗಳು-ವೈರಸ್ ಕಾಟ ಕಡಿಮೆ,ಮುಕ್ತ-ಉಚಿತ.ಬಹುಮಾನ ಗೆದ್ದವರು ನವನೀಶ್,ಪೆರ್ಲ,ಕೇರಳ.ಅಭಿನಂದನೆಗಳು.
-------------------------------------------------
ನವನೀಶ್ ಕುಮಾರರ ಬ್ಲಾಗುಗಳು

ಈ ಸಲದ ಬಹುಮಾನ ವಿಜೇತ ನವನೀಶ್ ಕುಮಾರ್ ಹದಿನೈದು ವರ್ಷದ ವಿದ್ಯಾರ್ಥಿ.ಈತ ಕಂಪ್ಯೂಟರ್ ಪ್ರವೀಣನೆಂದು ಈತನ ಬ್ಲಾಗುಗಳು ಸಾರಿ ಹೇಳುತ್ತವೆ.ಪೆರ್ಲದ ಸತ್ಯನಾರಾಯಣ ಹೈಸ್ಕೂಲಿನ ಹಳೆ ವಿದ್ಯಾರ್ಥಿಯಾದ ಇವರು ಲೀನಕ್ಸ್ ಆಪರೇಟಿಂಗ್ ವ್ಯವಸ್ಥೆಯಲ್ಲಿ ಆಸಕ್ತಿ ಹೊಂದಿದ್ದಾರೆ.ಕೇರಳದಲ್ಲಿ ಐಟಿ ಶಿಕ್ಷಣದಲ್ಲಿ ಉಬುಂಟು ಆಧಾರಿತ ಆಪರೇಟಿಂಗ್ ವ್ಯವಸ್ಥೆಯನ್ನೇ ಬಳಸಿ ಮುಕ್ತ ಮತ್ತು ಉಚಿತ ತಂತ್ರಾಂಶಗಳನ್ನೇ ಬಳಸಿಕೊಳ್ಳಲಾಗಿದೆ.http://navaneeshperla.blogspot.com,http://amazescience.blogspot.com,http://navuniverse.110mb.com/chapter.html ಇವು ನವನೀಶರ ಬ್ಲಾಗುಗಳು.ಶಾಲೆಯ ಪ್ರಾಜೆಕ್ಟ್ ಅಂಗವಾಗಿ ಸಿದ್ಧ ಪಡಿಸಿದ ಬ್ಲಾಗುಗಳಲ್ಲಿ ಸೌರವ್ಯೂಹ,ವಿಜ್ಞಾನ ವಿಷಯಗಳಿಗೇ ಹೆಚ್ಚು ಒತ್ತು ನೀಡಲಾಗಿದೆ.
-----------------------------------------
ಟ್ವಿಟರ್ ಚಿಲಿಪಿಲಿ
*ಹೈಸ್ಕೂಲ್ ಶಿಕ್ಷಕರಿಗೆ ಲೀನಕ್ಸ್ ತರಬೇತಿ ಶಿಬಿರ ನಿಟ್ಟೆ ಎನ್ ಎಂ ಎ ಎಂ ಐ ಟಿಯಲ್ಲಿ ಫೆಬ್ರವರಿ26ರಂದು ಯಶಸ್ವಿಯಾಗಿ ನಡೆಯಿತು.
*ಅನಂತ್ ಪೈ ಅವರ ಕಾಮಿಕ್ಸಿನ ರಾಮು-ಶಾಮು ಅವಳಿಗಳೆಷ್ಟು ಕ್ಯೂಟ್...
*ನಾನು ನಿಮ್ಮ ಬಲಗೈ ಬಂಟ ಆಗಲಸಾಧ್ಯ..ಯಾಕೆಂದರೆ ನಾನು ಎಡಚ...
*ಅಶೋಕ್‌ಕುಮಾರ್ ಎ

Monday, February 21, 2011

ಬರುತ್ತಿದ್ದಾನೆ ಡಾ.ವಾಟ್ಸನ್!

ಬರುತ್ತಿದ್ದಾನೆ ಡಾ.ವಾಟ್ಸನ್!
 
ಐ ಬಿ ಎಮ್ ಕಂಪೆನಿ ವಾಟ್ಸನ್ ಎನ್ನುವ ಯೋಜನೆಯಡಿ ತೊಂಭತ್ತು ಸರ್ವರುಗಳು,2880ನಷ್ಟು ಸಂಸ್ಕಾರಕಗಳ ಜತೆ ಆನ್‌ಲೈನಿನಲ್ಲಿ ಸಿಗುವ ಸರ್ವರ್.ಇದು ಜನರ ಜತೆ ವ್ಯವಹರಿಸಿ,ಅವರ ವಿವಿಧ ಪ್ರಶ್ನೆಗಳಿಗೆ ಉತ್ತರಿಸಲು ಸಮರ್ಥವಾಗುವಂತೆ ಅಭಿವೃದ್ಧಿ ಪಡಿಸಲಾಗುತ್ತಿದೆ.ಇದು ಸಿದ್ಧವಾದಾಗ,ಜನರು ತಮ್ಮ ಕಾಯಿಲೆ-ಕಸಾಲೆಗಳ ವಿವರಗಳನ್ನು ವಿವರಿಸಿದರೆ,ಈ ಸರ್ವರ್ ವೈದ್ಯರಂತೆ ಅದಕ್ಕೆ ಯಾವ ರೋಗ ಕಾರಣ,ಚಿಕಿತ್ಸೆ ಏನು ಎಂದು ಸಲಹೆ ನೀಡಬಲ್ಲುದು.ಮುಂದೆ ಕಾನೂನು ಮತ್ತು ಜನ ಸಾಮಾನ್ಯರ ಇತರ ಸಮಸ್ಯೆಗಳಿಗೂ ಪರಿಹಾರ ಸೂಚಿಸಲಿದು ಸಮರ್ಥವಾಗುವಂತೆ ಮಾಡುವ ಗುರಿ ಸಂಶೋಧಕರದ್ದು.ಕೊಲಂಬಿಯಾ ಮತ್ತು ಮೇರಿಲ್ಯಾಂಡ್ ವಿಶ್ವವಿದ್ಯಾಲಯಗಳ ಸಂಶೋಧಕರ ಅಧ್ಯಯನದ ಫಲವಿದು.ಐ ಬಿ ಎಂ ಮತ್ತು ನ್ಯುಅನ್ಸ್ ಕಮ್ಯುನಿಕೇಶನ್‌ಗಳ ಜಂಟಿ ಯೋಜನೆಯಿದು.ಈ ನಡುವೆ,ಐಬಿಎಂ ವಾಟ್ಸನ್ ಅನ್ನು ಜನರ ಗ್ರಾಹಕ ಸಲಹೆಗಳನ್ನು ನೀಡಿ,ಅವರಿಗೆ ಖರೀದಿ ಸಲಹೆಗಳನ್ನೂ ನೀಡುವಂತೆ ಅಭಿವೃದ್ಧಿ ಪಡಿಸುವಂತೆ ಇಲೆಕ್ಟ್ರಾನಿಕ್ಸ್ ಕಂಪೆನಿಯೊಂದಕ್ಕೆ ಕೇಳಿದೆ ಎಂದು ಸುದ್ದಿಯಿದೆ.
--------------------------------
ಆಟ್ರಿಕ್ಸ್ 4ಜಿ ಫೋನ್
ಮೊಟೊರೊಲಾ ಆಟ್ರಿಕ್ಸ್ ಎನ್ನುವ ಮೊಬೈಲ್ ಫೋನನ್ನು ಮಾರ್ಚಿನಲ್ಲಿ ಬಿಡುಗಡೆ ಮಾಡುವ ಯೋಜನೆಯಲ್ಲಿದೆ.ಮೊದಲ್ ನೋಟಕ್ಕೆ ಇದು ಆಂಡ್ರಾಯಿಡ್ ಫೋನಿನ ಹಾಗೆ ಕಾಣುತ್ತದೆ.ಆದರಿದರಲ್ಲಿ ಕೆಲವು ವಿಶೇಷತೆಗಳಿವೆ.ಇದರಲ್ಲಿ ಬೆರಳಚ್ಚಿನ ಮೂಲಕ ಮೊಬೈಲನ್ನು ಲಾಕ್ ಮಾಡುವ ಸವಲತ್ತಿದೆ.ಮೊಟೊರೊಲಾದ ಡಾಕ್ ಜತೆಗಿದನ್ನು ಬಳಸಿದರೆ,ಲ್ಯಾಪ್‌ಟಾಪ್ ಸಾಧನವನ್ನು ಇದರ ಜತೆ ಬಳಸಬಹುದು.ಕರೆಗಳನ್ನು ಲ್ಯಾಪ್‌ಟಾಪಿನ ಮೂಲಕವೇ ಮಾಡಲು ಅವಕಾಶವಿದೆ.ಆಟ್ರಿಕ್ಸ್ ಫೋನ್ ಅತ್ಯಂತ ವೇಗದ ಬಳಕೆಗೆ ಅನುವು ಮಾಡುತ್ತದೆ.ಇದರಲ್ಲಿ ತಂತ್ರಾಂಶಗಳನ್ನು ತೆರೆಯಲು ಅತ್ಯಂತ ಕಡಿಮೆ ಸಮಯ ಸಾಕು.ಕರೆಗಳನ್ನು ಡೆಸ್ಕ್‌ಟಾಪಿನ ಮೂಲಕವೂ ಮಾಡಬಹುದು.ಇದರ ವೀಡಿಯೋ ವೀಕ್ಷಣೆ ಅತ್ಯಂತ ಸ್ಪಷ್ಟತೆಯುಳ್ಳದ್ದು.ಟಿವಿಯ ಜತೆ ಮೊಬೈಲನ್ನು ಬಳಸಲು ಹೈಡೆಫಿನಿಶನ್ ಡಾಕ್ ಲಭ್ಯವಿದೆ.ಇದರ ಮೇಲೆ ಮೊಬೈಲ್ ಇರಿಸಿದರೆ,ಟಿವಿಯಲ್ಲಿ ಮೊಬೈಲ್ ಫೋನಿನಲ್ಲಿರುವ ವೀಡಿಯೋಗಳನ್ನು ವೀಕ್ಷಿಸಬಹುದು.ಇದರ ಬೆಲೆ ಇನ್ನೂರು ಡಾಲರುಗಳು.ಡಾಕ್ ಲಂಗರು ಸಾಧನದ ಜತೆ ಇದರ ಬೆಲೆ ನಾಲ್ಕುನೂರು ಡಾಲರುಗಳು.
--------------------------
ಮೊಬೈಲ್ ಸಂಕೇತ ಶಕ್ತಿಯುತವಾಗಿದೆಯೇ?
ಒಂದು ಜಾಗದಲ್ಲಿ ಮೊಬೈಲ್ ಟವರ್ ಇದ್ದ ಮಾತ್ರಕ್ಕೆ ಸುತ್ತಮುತ್ತಲೂ ಶಕ್ತಿಯುತ ಸಂಕೇತಗಳು ಸಿಗುತ್ತವೆಂದಿಲ್ಲ.ಕೆಲವೊಮ್ಮೆ ಬೃಹತ್ ಕಟ್ಟಡಗಳೋ,ಗುಡ್ಡಗಳ ಕಾರಣ ಕೆಲವೆಡೆ ಸಂಕೇತ ಅಲಭ್ಯವಾಗಬಹುದು.ಆದರೆ ಸಾಮಾನ್ಯವಾಗಿ ಕವರೇಜ್ ಜಾಗವನ್ನು ಮೊಬೈಲ್ ಟವರುಗಳನ್ನು ಬಳಸಿಯೇ ಮಾಡುವುದು ಸಾಮಾನ್ಯ.ಈಗ ರೂಟ್‌ಮ್ಯಾಟ್ರಿಕ್ಸ್ ಎನ್ನುವ ಕಂಪೆನಿಯು,ಇದಕ್ಕೊಂದು ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿದೆ.ಇದನ್ನು ಮೊಬೈಲಿನಲ್ಲಿ ಅನುಸ್ಥಾಪಿಸಿದರೆ,ಮೊಬೈಲ್ ಇರುವ ಸ್ಥಳದ ಸಂಕೇತದ ಮಟ್ಟದ ಬಗ್ಗೆ
ರೂಟ್‌ಮ್ಯಾಟ್ರಿಕ್ಸ್ ಕಂಪೆನಿಗೆ ಮಾಹಿತಿ ಸಿಗುತ್ತಿರುತ್ತದೆ.ಹೀಗೆ ಬಳಕೆದಾರರಿಂದ ಬರುವ ಮಾಹಿತಿಗಳನ್ನು ಕಲೆ ಹಾಕಿ,ಬೇರೆ ಬೇರೆ ಸೇವೆ ನೀಡುವ ಕಂಪೆನಿಗಳ ಸಂಕೇತದ ಗುಣಮಟ್ಟ,ವಿವಿಧ ಸ್ಥಳಗಳಲ್ಲಿ ಹೇಗಿದೆ ಎಂದು ತನ್ನ ಅಂತರ್ಜಾಲ ತಾಣದಲ್ಲಿ ತೋರಿಸಲು ಸಾಧ್ಯವಾಗುತ್ತದೆ.ಇದು ಜನರ ಮೊಬೈಲ್ ಫೋನುಗಳಿಂದ ಬಂದ ಮಾಹಿತಿಯಿಂದಲೇ ಕಲೆ ಹಾಕಿದ ಮಾಹಿತಿಯಾದ್ದರಿಂದ ಅತ್ಯಂತ ನಿಖರ ಮಾಹಿತಿಯಾಗಿರುತ್ತದೆ.ಇದರಲ್ಲಿ ಯಾವುದೇ ಉತ್ಪೇಕ್ಷೆ ಇರದು.
---------------------------------
ಡಯಸ್ಪೋರಾ:ಸುಧಾರಿತ ಫೇಸ್‌ಬುಕ್
ನಿಮ್ಮ ಖಾಸಗಿತನವನ್ನು ಗೌರವಿಸುವ ಪೇಸ್‌ಬುಕ್‌ನ್ನು ಹೋಲುವ ಸಾಮಾಜಿಕ ಜಾಲತಾಣದ ಅವತಾರವೇ ಡಯಸ್ಪೋರಾ.ಇದರಲ್ಲಿ ನಿಮ್ಮ ಜತೆ ಸಂಬಂಧವಿರಿಸಿಕೊಂಡವರನ್ನು ಆಸ್ಪೆಕ್ಟ್ ಎಂದು ಕರೆಯಲಾಗುತ್ತದೆ.ಕೆಲಸದ ಸ್ಥಳ,ಕುಟುಂಬ,ಗೆಳೆಯರು ಮತ್ತು ಅಂತರ್ಜಾಲದ ಮೂಲಕ ಪರಿಚಯವಾದರು ಎಂದು ಪರಿಚಯಸ್ಥರನ್ನು ವಿಭಾಗಿಸಿರುವುದು ಡಯಸ್ಪೋರಾದ ವಿಶೇಷತೆ.ಯಾವ ಗುಂಪಿನ ಜತೆ ಏನನ್ನು ಹಂಚಿಕೊಳ್ಳಬೇಕು ಎನ್ನುವುದನ್ನು ನಿಗದಿ ಪಡಿಸಲು ಸಾಧ್ಯವಾಗುವುದು ಈ ತಾಣದ ವಿಶೇಷತೆ.ವ್ಯಕ್ತಿಯ ಖಾಸಗಿತನಕ್ಕೆ ಮರ್ಯಾದೆ ನೀಡುವುದು ಇಲ್ಲಿನ ಹೆಗ್ಗಳಿಕೆ.ಉಳಿದಂತೆ ಪೇಸ್‌ಬುಕ್‌ ತಾಣದ ಹಾಗೆ ಈ ತಾಣವನ್ನು ಬಳಸಬಹುದು.
----------------------------------
ಗೂಗಲ್ ಕ್ರೋಮಿನ ಬ್ರೌಸರ್ ಬೀಟಾ ಆವೃತ್ತಿ
ಗೂಗಲ್ ಕ್ರೋಮಿನ ಬ್ರೌಸರ್ ಬೀಟಾ ಆವೃತ್ತಿ ಇದೀಗ ಲಭ್ಯವಾಗಿದೆ.ಇದು ಹತ್ತನೇ ಆವೃತ್ತಿಯ ಪರೀಕ್ಷಾರ್ಥ ಬಿಡುಗಡೆಯಾಗಿದೆ.ಜಾವಾ ಸ್ಕ್ರಿಪ್ಟನ್ನು ಹಿಂದಿನ ಆವೃತ್ತಿಗಳಲ್ಲಿ ಸಾಧ್ಯವಾಗುವುದಕ್ಕಿಂತ ಶೇಕಡಾ ಅರುವತ್ತರಷ್ಟು ವೇಗದಲ್ಲಿ ಗೂಗಲ್ ಕ್ರೋಮ್ ನಿಭಾಯಿಸಬಲ್ಲುದು.ಗೂಗಲ್ ಅಪ್ಲಿಕೇಶನ್ ಸ್ಟೋರುಗಳಿಗೆ ಗೂಗಲ್ ಕ್ರೋಂ ಬಳಕೆದಾರರಿಗೆ ಮಾತ್ರಾ ಪ್ರವೇಶಾಧಿಕಾರ ಸಿಗುತ್ತದೆ.ವಿಂಡೋಸ್,ಲೀನಕ್ಸ್ ಮತ್ತು ಮ್ಯಾಕ್ ಆಪರೇಟಿಂಗ್ ವ್ಯವಸ್ಥೆಗಳ ಆವೃತ್ತಿಗಳೂ ಲಭ್ಯವಾಗಿವೆ.ವಿಡಿಯೋಗಳನ್ನು ತೋರಿಸುವಾಗ,ಕಡಿಮೆ ಬ್ಯಾಟರಿ ಬಳಕೆ ಮತ್ತು ದಕ್ಷ ಸಂಸ್ಕಾರಕ ಬಳಕೆ ಇವು ಗೂಗಲ್ ಕ್ರೋಮಿನ ಹೆಗ್ಗಳಿಕೆ ಎನ್ನಲಾಗಿದೆ.ಉಳಿದ ಬ್ರೌಸರುಗಳಿಗೆ ಹೋಲಿಸಿ,ಪ್ರಯೋಗಗಳಿಗೊಡ್ಡಿ ಇದನ್ನು ಪುಷ್ಟೀಕರಿಸ ಬೇಕಿದೆ.ಹೊಸ ಎಚ್ ಟಿ ಎಂ ಎಲ್ 5 ಮಾನಕಕ್ಕೆ ಕ್ರೋಂ ಹೆಚ್ಚು ಸರಿ ಹೊಂದುವ ಬ್ರೌಸರ್ ಎನ್ನುವುದು ಶ್ರುತ ಪಟ್ಟಿದೆ.
----------------------------------
ತುಷಾರ:ವಾರ್ಷಿಕ ಚಂದಾ ಗೆಲ್ಲಿ!
ಈ ಪ್ರಶ್ನೆಗಳಿಗೆ ಸರಿಯುತ್ತರ ಕಳುಹಿಸಿ,ತುಷಾರ ಪತ್ರಿಕೆಯ ವಾರ್ಷಿಕ ಚಂದಾ ಗೆಲ್ಲಿ!.ಬಹುಮಾನ ಪ್ರಾಯೋಜಿಸಿದವರು ಉಡುಪಿ ಬ್ರಹ್ಮಗಿರಿಯ ಡಾ.ಶ್ರೀನಿವಾಸ್ ರಾವ್,ಪ್ರೊಫೆಸರ್,ನಿಟ್ಟೆ.
*ಪ್ಲಾನೆಟೇರಿಯಂ ಅನ್ನು ಕಂಪ್ಯೂಟರಿನಲ್ಲೇ ದರ್ಶನ ಮಾಡಿಸುವ ತಂತ್ರಾಂಶ ಯಾವುದು?
*ಲಿನಕ್ಸ್ ಆಪರೇಟಿಂಗ್ ವ್ಯವಸ್ಥೆಯನ್ನು ಬಳಸಿದರೆ ಆಗುವ ಲಾಭಗಳೇನು?
(ಉತ್ತರಗಳನ್ನು nistantusansaara@gmail.comಗೆ ಮಿಂಚಂಚೆ ಮಾಡಿ,ವಿಷಯ:NS19 ನಮೂದಿಸಿ.)
ಕಳೆದ ವಾರದ ಸರಿಯುತ್ತರಗಳು:
*ಶಾಲಾ ಮಕ್ಕಳಿಗೆ ಹೇಳಿ ಮಾಡಿಸಿದಂತಿರುವ ಲೀನಕ್ಸ್ ವಿತರಣೆ ಸ್ಕೋಓಲ್ ಓಎಸ್(http://schoolos.org) ನೋಡಿ.
*ಶಿಕ್ಷಣಕ್ಕೆ ಸಂಬಂಧಿಸಿದ ಪದಕ್ಕೆ ತಳಕು ಹಾಕಿರುವ ಲೀನಕ್ಸ್ ವಿತರಣೆ ಎಜ್ಯುಬುಂಟು.ಬಹುಮಾನ ಗೆದ್ದವರು ಸಾತ್ವಿಕ್,ಬೆಂಗಳೂರು.ಅಭಿನಂದನೆಗಳು.
-------------------------------------------------
ಟ್ವಿಟರ್ ಚಿಲಿಪಿಲಿ
*ರಾಜಾರನ್ನು ಪೆಟ್ರೋಲಿಯಂ ಮಂತ್ರಿ ಮಾಡಿದ್ದರೆ,2001ರ ಬೆಲೆಯಲ್ಲಿ ಪೆಟ್ರೋಲ್ ಪಡೆವ ಅದೃಷ್ಟ ಸಿಗುತ್ತಿತ್ತೋ ಏನೋ.
*ಮ್ಯಜೀಷಿಯನ್ ಮತ್ತು ರಾಜಕಾರಣಿ,ಈರ್ವರೂ ಜನರ ಗಮನವನ್ನು ತಾವು ಮಾಡುತ್ತಿರುವುದರಿಂದ ಅತ್ತ ಸರಿಸಬೇಕು.
*ಮೊಬೈಲ್ ಸರ್ವವ್ಯಾಪಿ,ಸರ್ವವ್ಯಾಧಿಯೂ ಹೌದು...
*ರಾಜಾಜಿ ಬಗ್ಗೆ ಗೊತ್ತಿಲ್ಲ..ರಾಜಾ.ಜಿ ಬಗ್ಗೆ ಗೊತ್ತು..
*ಇಸ್ರೋದವರು ಚಂದ್ರನ ಮೇಲೆ ನೀರು ಮತ್ತು ಐಸ್ ಇದೆ ಅಂತ ಪತ್ತೆ ಹಚ್ಚಿದ್ದಾರೆ..ಚಿಪ್ಸು,ವಿಸ್ಕಿ ಇಲ್ಲಿಂದ ಒಯ್ದರಾಯಿತು.
*ಅಶೋಕ್‌ಕುಮಾರ್ ಎ

Monday, February 14, 2011

ಎಚ್ ಪಿಯ ಟ್ಯಾಬ್ಲೆಟ್

ಎಚ್ ಪಿಯ ಟ್ಯಾಬ್ಲೆಟ್

ಹ್ಯೂಲೆಟ್-ಪ್ಯಕರ್ಡ್(ಎಚ್‌ಪಿ) ಕಂಪೆನಿಯು ಹೊಸ ಟ್ಯಾಬ್ಲೆಟ್ ಸಾಧನಗಳನ್ನು ಮಾರುವ ತೀರ್ಮಾನಕ್ಕೆ ಬಂದಿದೆ.ಎಂಟು ಗಿಗಾಬೈಟ್ ಸ್ಮರಣ ಸಾಮರ್ಥ್ಯದ ಸಾಧನದ ತೆರೆಯೂ ಮೂರೂವರೆ ಇಂಚಿನ ಕರ್ಣ ಹೊಂದಿದೆ.ಈ ಸಾಧನಗಳಲ್ಲಿ ತನ್ನದೇ ಆದ ವೆಬ್‍ಓಎಸ್ ಎನ್ನುವ ಆಪರೇಟಿಂಗ್ ವ್ಯವಸ್ಥೆಯನ್ನು ಅಳವಡಿಸಲೂ ಎಚ್‌ಪಿ ತೀರ್ಮಾನಿಸಿದೆ.ತನ್ನ ಕಂಪ್ಯೂಟರುಗಳಲ್ಲೂ ತನ್ನದೇ ಆದ ವೆಬ್‌ಓಎಸ್ ಬಳಸುವ ಅದರ ತೀರ್ಮಾನವೂ ಹೊಸ ಹೆಜ್ಜೆ.ಟ್ಯಾಬ್ಲೆಟ್ ಸಾಧನವು ಐಪ್ಯಾಡಿಗೆ ಸ್ಪರ್ಧೆ ನೀಡುವುದು ನಿಶ್ಚಿತ.
------------------------------
ನೋಕಿಯಾ-ಮೈಕ್ರೋಸಾಫ್ಟ್:ಮೈತ್ರಿ
ನೋಕಿಯಾ ತನ್ನ ಹ್ಯಾಂಡ್‌ಸೆಟ್‌ಗಳಲ್ಲಿ ಸಿಂಬಿಯಾನ್ ಎನ್ನುವ ತನ್ನದೇ ಆಪರೇಟಿಂಗ್ ವ್ಯವಸ್ಥೆಯನ್ನು ಬಳಸುತ್ತಿತ್ತು.ಒಂದೊಮ್ಮೆ ಮಾರುಕಟ್ಟೆಯ ಅರೆಪಾಲು ನೋಕಿಯಾ ಸೆಟ್‌ಗಳೇ ಮಾರಾಟವಾಗುತ್ತಿದ್ದುವು.ಈಗ ಕಾಲ ಬದಲಾಗಿ ನೋಕಿಯಾ ಪಾಲು ಕಾಲುಭಾಗಕ್ಕಿಂತ ತುಸುವೇ ಹೆಚ್ಚಿದೆ.ಸ್ಯಾಂಸಂಗ್,ಎಚ್‌ಟಿಸಿ,ಎಲ್ಜಿ ಮುಂತಾದ ಕಂಪೆನಿಗಳು ನೋಕಿಯಾಗೆ ತೀವ್ರ ಸ್ಪರ್ಧೆ ನೀಡುತ್ತಿವೆ.ಈಗ ನೋಕಿಯಾ ತನ್ನ ಸಿಇಓವನ್ನೂ ಬದಲಿಸಿದ್ದು,ಸ್ಟೀಫನ್ ಇಲಾಪ್ ಎನ್ನುವಾತ ನೋಕಿಯಾಕ್ಕೆ ಹೊಸ ನಾಯಕನಾಗಲಿದ್ದಾರೆ.ಆತ ಮೊದಲು ಮೈಕ್ರೋಸಾಫ್ಟ್ ಕಂಪೆನಿಯಲ್ಲಿದ್ದಾತ.ಅವರು ತೆಗೆದುಕೊಂಡ ಮೊದಲ ನಿರ್ಧಾರಗಳಲ್ಲಿ,ಸಿಂಬಿಯಾನ್‌ಗೆ ಬೈ ಹೇಳಿ ಮೈಕ್ರೋಸಾಫ್ಟಿನ ವಿಂಡೋಸ್ ಫೋನ್ 7 ಆಪರೇಟಿಂಗ್ ವ್ಯವಸ್ಥೆಯನ್ನು ನೋಕಿಯಾ ಫೋನುಗಳಲ್ಲಿ ಬಳಸಲು ತೀರ್ಮಾನಿಸಿದೆ.ಇದು ನೋಕಿಯಾಗೆ ತುಂಬಾ ಅಪಾಯಕಾರಿಯಾದ ತೀರ್ಮಾನ ಎಂದು ಮೊದಲ ನೋಟಕ್ಕೆ ಕಾಣುತ್ತದೆ.ಆದರಿದು ಮೈಕ್ರೋಸಾಫ್ಟ್ ಕಂಪೆನಿಗೆ ಹೆಚ್ಚು ಲಾಭ ತರುವುದು ನಿಶ್ಚಿತ.ಅದರ ಆಪರೇಟಿಂಗ್ ವ್ಯವಸ್ಥೆ ಬರೇ ಶೇಕಡಾ ಎರಡು ಮಾರುಕಟ್ಟೆ ಮಾತ್ರಾ ಹೊಂದಿದ್ದು,ನೋಕಿಯಾದ ಕಾರಣ ಅದು ಹೆಚ್ಚಿನ ಜನಪ್ರಿಯತೆಗಿಟ್ಟಿಸಲಿದೆ.ಗೂಗಲ್‌ನ ಆಂಡ್ರಾಯಿಡ್ ಇದೀಗ ಹ್ಯಾಂಡ್‌ಸೆಟ್ ಮಾರುಕಟ್ಟೆಯಲ್ಲಿ ಅತಿ ಜನಪ್ರಿಯ ತಂತ್ರಾಂಶ.ಆದರೆ ಅದರ ಬಳಕೆಯನ್ನು ನೋಕಿಯಾದಲ್ಲಿ ಮಾಡಿದರೆ,ಅದರ ಪ್ರಯೋಜನ ಗೂಗಲಿಗಲ್ಲದೆ ನೋಕಿಯಾಗಲ್ಲ ಎನ್ನುವುದು ಇಲಾಪ್ ಲೆಕ್ಕಾಚಾರ.ಈಗ ನೋಕಿಯಾದ ಸೆಟ್‌ಗಳನ್ನು ಜಗತ್ತಿನಲ್ಲಿ ಇಪ್ಪತ್ತು ಕೋಟಿ ಜನ ಬಳಸುತ್ತಿದ್ದು,ಅವರಿಗಾಗಿ ಸಿಂಬಿಯಾನ್ ಮುಂದುವರಿಯ ಬೇಕಾದೀತು.ವಿಂಡೋಸ್ 7ರ ಸುಮಾರು ಎಂಟು ಸಾವಿರ ತಂತ್ರಾಂಶಗಳು ಲಭ್ಯವಿವೆ.ಅವನ್ನು ಬಳಸಿ,ಹೊಸ ಮೌಲ್ಯವರ್ಧಿತ ಸೇವೆಗಳನ್ನು ನೋಕಿಯಾದ ಪೋನುಗಳಲ್ಲಿ ಪಡೆಯಬಹುದು.ಮೈಕ್ರೋಸಾಫ್ಟ್ ಕಂಪೆನಿಯು ಈ ಸ್ನೇಹಕ್ಕೆ ಪ್ರತಿಯಾಗಿ,ಹ್ಯಾಂಡ್‌ಸೆಟ್‌ಗಳಲ್ಲಿ ಶೋಧ ಸೇವೆಯಿಂದ ಪಡೆದ ಜಾಹೀರಾತು ಆದಾಯ.ಮ್ಯಾಪ್ ಸೇವೆಗಳ ಆದಾಯ ಇಂತವುಗಳಲ್ಲಿ ಹೆಚ್ಚಿನ ಪಾಲು ನೀಡಲು ಒಪ್ಪಿದ್ದು ಈ ನಿರ್ಣಯಕ್ಕೆ ಕಾರಣವಾಗಿರ ಬಹುದು.ಮೈಕ್ರೋಸಾಫ್ಟಿಗೂ ತನ್ನ ಹಿಡಿತವನ್ನು ಹೆಚ್ಚಿಸಿಕೊಳ್ಳಲು ಒಳ್ಳೆಯ ಗೆಳೆಯರ ಅವಶ್ಯಕತೆಯಿತ್ತು.ನೋಕಿಯಾ ಜತೆ ಸ್ನೇಹ ಮೈಕ್ರೋಸಾಫ್ಟಿಗೆ ಅದೃಷ್ಟವೇ ಸರಿ.ಇಂಟೆಲ್ ಜತೆ ಮೀಗೋ ಸಂಸ್ಕಾರಕದ ಬಗ್ಗೆ ತಳೆದಿದ್ದ ನಿರ್ಧಾರವನ್ನು ಇಲಾಪ್ ಬದಲಿಸಿ,ತನ್ನದೇ ಆದ ಸಂಸ್ಕಾರಕವನ್ನು ತಯಾರಿಸಲು ತೀರ್ಮಾನಿಸಿದ್ದಾರೆ.
-----------------------------------
ಐಫೋನ್ ಮಿನಿ


ಐಫೋನಿನ ಅಗ್ಗದ ಮಿನಿ ಸೆಟ್‌ನ್ನೂ ಮಾರಾಟಕ್ಕೆ ಒದಗಿಸಲು ಆಪಲ್ ತಯಾರಿ ನಡೆಸಿದೆಯಂತೆ.ಇನ್ನೂರು ಡಾಲರು ಬೆಲೆಯ ಸೆಟ್ ಈಗಿನ ಐಫೋನುಗಳ ಅರ್ಧ ಗಾತ್ರದ್ದಿರುತ್ತದೆ.ಅದರಲ್ಲಿ ಸಿಮ್ ಬದಲಿಸದೆ,ಸೇವಾದಾತೃಗಳನ್ನು ಬದಲಿಸಲು ಅವಕಾಶ ಸಿಗಲಿದೆ ಎಂದು ವರದಿ.ಸ್ಮಾರ್ಟ್ ಫೋನ್ ಮಾರುಕಟ್ಟೆಯೇ ಅಲ್ಲದೆ,ಅಗ್ಗದ ಸೆಟ್‌ಗಳ ಪಾಲೂ ಪಡೆಯಲು ಆಪಲ್ ಹವಣಿಸಿ,ಈ ನಿರ್ಧಾರ ತಳೆದಿರಬಹುದು.
----------------------------------------
ಓದುಗರ ಪ್ರತಿಕ್ರಿಯೆಗಳು
*ಬೆಂಗಳೂರಿನ ಸಾಹಿತ್ಯ ಸಮ್ಮೇಳನಾಧ್ಯಕ್ಷರು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪದಗಳನ್ನು ಇಂಗ್ಲೀಷಿನಲ್ಲಿದ್ದಂತೆ ಬಳಸಿ,ಕನ್ನಡ ಶಬ್ದ ಭಂಡಾರವನ್ನು ಶ್ರೀಮಂತಗೊಳಿಸಲು ಮತ್ತು ಈಗಿರುವ ಕನ್ನಡ ಶಬ್ದಗಳು ಅಳಿಯದಂತೆ ಎಚ್ಚರಿಕೆ ವಹಿಸಲು ಕರೆ ನೀಡಿದ್ದರು.ಓದುಗರಾದ ಜಯಶ್ರೀಯವರು ಇದಕ್ಕೆ ಸಹಮತ ಸೂಚಿಸಿದ್ದಾರೆ.
*ಅಂಕಣದ ಬರಹಗಳು ವಿಷಯ ಸಮೃದ್ಧವಾಗಿ,ಸರಳ ನಿರೂಪಣೆ ಹೊಂದಿವೆ ಎಂದು ಚೆನ್ನೈಯ ಶಾಂತಿ.ಕೆ.ಎ. http://kannadablogs.ning.comನಲ್ಲಿ ಪ್ರತಿಕ್ರಿಯಿಸಿದ್ದಾರೆ.
------------------------------
ತುಷಾರ:ವಾರ್ಷಿಕ ಚಂದಾ ಗೆಲ್ಲಿ!
ಈ ಪ್ರಶ್ನೆಗಳಿಗೆ ಸರಿಯುತ್ತರ ಕಳುಹಿಸಿ,ತುಷಾರ ಪತ್ರಿಕೆಯ ವಾರ್ಷಿಕ ಚಂದಾ ಗೆಲ್ಲಿ!.ಬಹುಮಾನ ಪ್ರಾಯೋಜಿಸಿದವರು ಉಡುಪಿ ಬ್ರಹ್ಮಗಿರಿಯ ಡಾ.ಶ್ರೀನಿವಾಸ್ ರಾವ್,ಪ್ರೊಫೆಸರ್,ನಿಟ್ಟೆ.
*ಶಾಲಾ ಮಕ್ಕಳಿಗೆ ಹೇಳಿ ಮಾಡಿಸಿದಂತಿರುವ ಲೀನಕ್ಸ್ ವಿತರಣೆ ಯಾವುದು?
*ಶಿಕ್ಷಣಕ್ಕೆ ಸಂಬಂಧಿಸಿದ ಪದಕ್ಕೆ ತಳಕು ಹಾಕಿರುವ ಲೀನಕ್ಸ್ ವಿತರಣೆ ಯಾವುದು?
(ಉತ್ತರಗಳನ್ನು nistantusansaara@gmail.comಗೆ ಮಿಂಚಂಚೆ ಮಾಡಿ,ವಿಷಯ:NS18 ನಮೂದಿಸಿ.)
(ಕಳೆದ ವಾರದ ಸರಿಯುತ್ತರಗಳು:
*ಈ ವಾರ ಅಂತರ್ಜಾಲದ ಮಟ್ಟಿಗೆ ಒಂದು ಪರ್ವ(ಯುಗ) ಮುಗಿದಂತಾಗಿದೆ.ಯಾಕೆಂದರೆ ಐಪಿ ವಿಳಾಸಗಳು ಮುಗಿದಿವೆ.
*ಹೊಸ "ಯುಗ"ದಲ್ಲಿ ಅಗುವ ಬದಲಾವಣೆಯೆಂದರೆ ನೂರ ಇಪ್ಪತ್ತೆಂಟು ಸ್ಥಾನಗಳ ಐಪಿವಿಳಾಸಗಳನ್ನು ಬಳಸುವ,ಐಪಿv6 ಜಾರಿಗೆ ಬರಬೇಕಾಗುತ್ತದೆ.ಬಹುಮಾನ ಗೆದ್ದವರು ಪ್ರಜೋತ್ ಡೇಸಾ,ಉಡುಪಿ.ಅಭಿನಂದನೆಗಳು.
-------------------------------------------------
ಲಂಚ್ ಡಬ್ಬ


ಗಂಟೆಗೆ ಎರಡು ಸಾವಿರ ಚಪಾತಿ ತಯಾರಿಸಬಲ್ಲ ಯಂತ್ರದ ಸಹಾಯದಿಂದ ಚಪಾತಿ ತಯಾರಿಸಿ,ಬೇಕಾದ ಹೋಟೆಲ್,ಬಳಕೆದಾರರಿಗೆ ತಲುಪಿಸುವ ಸೇವೆಯನ್ನು ಲಂಚ್ ಡಬ್ಬಾ ಕಂಪೆನಿ ನೀಡುತ್ತಿದೆ.ಬೆಂಗಳೂರಿನ ಗ್ರಾಹಕರಿಗಷ್ಟೇ ಸದ್ಯಕ್ಕೆ ಪೂರೈಕೆ ಸೀಮಿತವಾಗಿದೆ.ಈ ಚಪಾತಿಗಳು ತಿನ್ನಲು ರೆಡಿಯಾಗಿರುತ್ತವಾದರೂ,ಬೇಕಾದರೆ ಉಗಿಯಲ್ಲಿ ಬಿಸಿ ಮಾಡಿ ತಿನ್ನಬಹುದಾಗಿದೆ.ಬೆಲೆಯೂ ಹೆಚ್ಚಿಲ್ಲ.ಎರಡು ರೂಪಾಯಿಗೂ ಕಡಿಮೆ ದರದಲ್ಲಿ ಪ್ರತಿ ಚಪಾತಿಯನ್ನು ಪೂರೈಸಲು ಲಂಚ್ ಡಬ್ಬಾಕ್ಕೆ ಸಾಧ್ಯವಾಗಿದೆ.
------------------------------
ಟ್ವಿಟರ್ ಚಿಲಿಪಿಲಿ
*ಫೆಬ್ರವರಿ ಹದಿನಾಲ್ಕರಂದು ಪೆಟ್ರೋಲ್ ಬಂಕ್ ಬಳಿ ಸುಳಿಯದೆ,ಪೆಟ್ರೋಲ್ ಮೇಲೆ ಅಧಿಕ ತೆರಿಗೆಯ ಬಗ್ಗೆ ಪ್ರತಿಭಟಿಸಿ.
*ಹಲಸಿನ ಮುನ್ನೂರು ಖಾದ್ಯಗಳನ್ನು ತಯಾರಿಸಬಲ್ಲ ಮಹಿಳೆ ಹೆಬ್ರಿಯ ಗೀತಾ ನರಸಿಂಹ ಭಟ್; (ವಿವರಗಳಿಗೆ:http://www.panasamwonders.blogspot.com/ ನೋಡಿ).
*ಸಾಹಿತ್ಯ ಸಮ್ಮೇಳನದಲ್ಲಿ ನಾನು ಒಂದು ಲಕ್ಷ ಮೌಲ್ಯದ ಪುಸ್ತಕ ನೋಡಿದೆ,ನೂರರದ್ದನ್ನು ಕೊಂಡೆ...
------------------------------
Udayavani
Udayavaniepaper
*ಅಶೋಕ್‌ಕುಮಾರ್ ಎ

Monday, February 07, 2011

ಮಡಿವಂತಿಕೆ ಬಿಡಿ:ಸಮ್ಮೇಳನಾಧ್ಯಕ್ಷ

ಮಡಿವಂತಿಕೆ ಬಿಡಿ:ಸಮ್ಮೇಳನಾಧ್ಯಕ್ಷ
ಬೆಂಗಳೂರಿನ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ವೆಂಕಟಸುಬ್ಬಯ್ಯನವರು ಶತಕದ ಸಮೀಪದಲ್ಲಿರುವ ಜ್ಞಾನವೃದ್ಧರಾದರೂ,ಭಾಷೆಯಲ್ಲಿ ಮಡಿವಂತಿಕೆ ಬೇಡ ಎನ್ನುವ ಅಭಿಪ್ರಾಯದವರು.ಕಂಪ್ಯೂಟರ್,ಮೌಸ್,ಮಾನಿಟರ್,ಸ್ಕ್ಯಾನರ್,ಆಪರೇಟಿಂಗ್ ಸಿಸ್ಟಮ್ ಮುಂತಾದ ಪದಗಳನ್ನು ಇದ್ದ ಹಾಗೆಯೇ ಕನ್ನಡವನ್ನು ಮಾತನಾಡುವಾಗ ಬಳಸಿ.ಏನೇನೋ ಅನುವಾದಿಸಿ,ಕನ್ನಡವನ್ನು ಕುಲಗೆಡಿಸಬೇಡಿ ಎಂದವರ ಸಲಹೆ.ಹೀಗೆ ಮಾಡಿದರೆ,ಕನ್ನಡಕ್ಕೂ ಇಂಗ್ಲೀಷಿಗೂ ಅಂತರ ಕಡಿಮೆಯಾಗುತ್ತದೆ.ಕನ್ನಡಕ್ಕೆ ಹೆಚ್ಚು ಪದಗಳು ಸೇರಿ ಭಾಷೆ ಶ್ರೀಮಂತವಾಗುತ್ತದೆ.ಹಾಗೆಂದು ಅಚ್ಚ ಕನ್ನಡ ಶಬ್ದಗಳನ್ನು ಬಳಸದೇ ಇರಬೇಡಿ.ಇದ್ದದ್ದನ್ನು ಉಳಿಸಿ,ಹೊಸ ಶಬ್ದಗಳನ್ನು ಸೇರಿಸಿ,ಭಾಷೆಯನ್ನು ಬೆಳೆಸಿದರೆ ವ್ಯವಹಾರ ಸುಲಭ ಎನ್ನುವುದು ಅವರ ಸ್ಪಷ್ಟ ನುಡಿ.ಏನಂತೀರಾ?
--------------------------
ಐಪಿ ವಿಳಾಸಗಳು ಬರಿದು!
ಮೂವತ್ತೆರಡು ಸ್ಥಾನಗಳ ಐಪಿ ವಿಳಾಸ ಬಳಸುವ ಐಪಿವರ್ಶನ್ ನಾಲ್ಕು ಶಿಷ್ಟಾಚಾರವು ಸುಮಾರು 4.3 ಬಿಲಿಯನ್ ಐಪಿ ವಿಳಾಸಗಳನ್ನು ಹುಟ್ಟು ಹಾಕಿತ್ತು.ಆದರೆ ಈ ವಿಳಾಸಗಳು ಈಗಾಗಲೇ ಅಂತರ್ಜಾಲ ತಾಣಗಳನ್ನು ನಡೆಸುವವರಿಗೆ ನೀಡಲಾಗಿದೆ.ಅಧಿಕೃತವಾಗಿ ವಿಳಾಸಗಳನ್ನು ವಿತರಿಸುವ ಕಾರ್ಯಾಲಯದಲ್ಲಿನ್ನು ಐಪಿ ವಿಳಾಸಗಳಿಲ್ಲ.ಕಾಳಸಂತೆಯ ದಂಧೆಯಲ್ಲಿ ವಿಳಾಸಗಳನ್ನು ಪಡೆಯಬಹುದು-ಆದರಿವು ಬಲು ದುಬಾರಿಯಾದಾವು!ನೂರಿಪ್ಪತ್ತೆಂಟು ಸ್ಥಾನಗಳ ಐಪಿ ವಿಳಾಸ ನೀಡುವ ಮುಂದಿನ ಶಿಷ್ಟಾಚಾರವನ್ನು ಬಳಸಲು ಕಂಪ್ಯೂಟರ್ ಜಾಲಗಳನ್ನು ಹೊಸ ಯಂತ್ರಾಂಶ ಮತ್ತು ತಂತ್ರಾಂಶಗಳ ಮೂಲಕ ಸಿದ್ಧಗೊಳಿಸುವ ಪ್ರಕ್ರಿಯೆಗೆ ಇನ್ನು ತೀವ್ರ ಚಾಲನೆ ಸಿಗಬೇಕಾಗಿದೆ.
----------------------------------
ಧ್ವನಿ ಮೂಲಕ ನೌಕರಿ ಬೇಟೆ!

ಮಾತಿನ ಮೂಲಕವೇ ಕೆಲಸ ಮಾಡಿಸಿಕೊಳ್ಳುವುದು ಸಹಜಕ್ರಿಯೆ.ಭಾರತದಲ್ಲಿ ಜನರ ಒಲವು ಮೊಬೈಲನ್ನು ಮಾತಿಗಾಗಿ ಬಳಸುವುದೇ ಆಗಿದೆ.ಇದನ್ನರಿತು ರಿಲಾಯೆನ್ಸ್ ಮೊಬೈಲ್ ಅವರು ಮಾತಿನ ಮೂಲಕ ಕೆಲಸ ಅರಸುವ ವಿಧಾನಕ್ಕೆ ಸಹಾಯ ಮಾಡಲು ಹೊರಟಿದೆ.ಈ ಸೇವೆಯಲ್ಲಿ ಕೆಲಸಕ್ಕೆ ಆಳನ್ನು ಹುಡುಕುವವರು,ತಮ್ಮ ಅಗತ್ಯಗಳನ್ನು,ತಮ್ಮಲ್ಲಿ ಕೆಲಸಕ್ಕೆ ಬೇಕಾದ ಕೌಶಲಗಳ ಬಗ್ಗೆ ಮಾತನಾಡಿ,ತಾವು ನೀಡಬಹುದಾದ ಸಂಬಳ,ಸವಲತ್ತು,ಕೆಲಸದ ಅವಧಿಯ ಬಗ್ಗೆ ಮಾಹಿತಿ ನೀಡಬಹುದು.ಅದೇ ರೀತಿ ನೌಕರಿ ಬೇಕಾದವರು,ತಮ್ಮ ಕೌಶಲಗಳು,ಕೆಲಸ ಬೇಕಾದ ಸ್ಥಳ,ಸಂಬಳ-ಸವಲತ್ತಿನ ಬಗ್ಗೆ ಮಾತನಾಡಬಹುದು.ಎರಡೂ ಸರಿ ಹೊಂದುವುದು ಕಂಡು ಬಂದರೆ,ಒಬ್ಬರು ಇನ್ನೊಬ್ಬರನ್ನು ಕರೆ ಮಾಡಿ ಮಾತನಾಡಬಹುದು.ಕಿರು ಸಂದೇಶವನ್ನೂ ಕಳುಹಿಸಿ ಸಂಪರ್ಕಿಸಬಹುದು.ಈ ಸೇವೆಯು ಮೌಲ್ಯವರ್ಧಿತ ಸೇವೆಯಾಗಿ ಗ್ರಾಹಕರಿಗೆ ಒದಗುವುದರಿಂದ,ಮಾಸಿಕ ದರ ಅನ್ವಯವಾಗುತ್ತದೆ.ಆದರೆ ದರ ಆಕರ್ಷಕವಾಗಿದ್ದು,ಪ್ರತಿದಿನಕ್ಕೆ ರೂಪಾಯಿ ವೆಚ್ಚದಲ್ಲಿ ಲಭ್ಯ.
-------------------------------------------------
ಕಾಮಸೂತ್ರ:ಎಚ್ಚೆರೆಚ್ಚರ
ಕಾಮಸೂತ್ರ ಎನ್ನುವ ಹೆಸರಿನೊಂದಿಗೆ ಬರುವ ಪವರ್‌ಪಾಯಿಂಟ್ ಸ್ಲೈಡುಗಳ ಬಗ್ಗೆ ಎಚ್ಚರವಿರಲಿ.ಇವು ಕ್ಲಿಕ್ಕಿಸಿದರೆ,ಬ್ರೌಸರಿನಲ್ಲಿ ತೆರೆದುಕೊಂಡು,ಕಂಪ್ಯೂಟರನ್ನು ದಾಳಿಕೋರರ ಕೈಗೊಪ್ಪಿಸುವ ತಂತ್ರಾಂಶವನ್ನು ಚಾಲು ಮಾಡುತ್ತವೆ.ಒಮ್ಮೆ ಈ ವೈರಸ್ ತಂತ್ರಾಂಶಕ್ಕೆ ಕಂಪ್ಯೂಟರ್ ಪಕ್ಕಾದರೆ,ಮುಂದೆ ಕಂಪ್ಯೂಟರು ದಾಳಿಕೋರನ ಕೈವಶವಾಗುತ್ತದೆ.ಆತನು ಬೇಕೆಂದರೆ ವಶವಾದ ಕಂಪ್ಯೂಟರಿನ ಕಡತಗಳನ್ನು ಬಳಸಿಕೊಳ್ಳಬಹುದು.ಹಾಗೆಯೇ,ಪ್ರತಿ ಕೀಲಿಯ ಬಳಕೆಯನ್ನು ಅರಿಯಬಹುದು.
-----------------------------------------
ಓದುಗರ ಪ್ರತಿಕ್ರಿಯೆಗಳು
*ನಿಶ್ಚಲಂಕೆಯನ್ನು ನಂಬರ್ ಪೋರ್ಟೇಬಿಲಿಟಿಗೆ ಸಮಾನರ್ಥಕವಾಗಿ,ಬಹುಮಾನ ನೀಡಿದ್ದಕ್ಕೆ ಓದುಗ  ಕೆ.ಐ ಭಟ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ನಿಶ್ಚಲ ಮತ್ತು ಅಂಕೆ ಕ್ರಮವಾಗಿ ಸಂಸ್ಕೃತ ಮತ್ತು ಕನ್ನಡ ಶಬ್ದಗಳು-ಅವನ್ನು ಸಂಧಿ ಮಾಡಬಾರದು.ಮಾಡಿದರೂ ಅದು ಸವರ್ಣ ದೀರ್ಘ ಸಂಧಿ ಆಗಬೇಕು-ಲೋಪ ಸಂಧಿ ಅಲ್ಲ.ಅಲ್ಲದೆ ಅಂಕೆ ದೂರವಾಣಿ ಸಂಖ್ಯೆಗೆ ಬಳಸಲಾಗದು.ಅಂಕೆ ಏಕವಚನ,ಸಂಖ್ಯೆ ಬಹುವಚನ.ಈ ಉತ್ತರದ ಆಯ್ಕೆ,ಉಳಿದ ಉತ್ತರಗಳಿಗೆ ಹೋಲಿಸಿದಾಗ; ಅದರ ನಾವೀನ್ಯತೆ ಗಮನಿಸಿ ಆಯ್ದುದೇ ವಿನ: ಪರ್ಯಾಯ ಪದವಾಗಿ ಅಲ್ಲ.
*ಕಳೆದವಾರದ ಬರಹದಲ್ಲಿ,ಆಂಡ್ರಾಯಿಡ್ ೩.೦ ಎಸ್ಡಿಕೆಯ ಹೆಸರು ಹನೀಕೂಂಬ್ ಎಂದು ಪ್ರಕಟಿಸಲಾಗಿತ್ತು.ನಿಜವಾಗಿ ಹೊಸ ಆವೃತ್ತಿಯ ಗುಪ್ತನಾಮ ಹನೀಕೂಂಬ್ ಎಂದಾಗಬೇಕಿತ್ತು.ಈ ತಪ್ಪಿನ ಬಗ್ಗೆ ಗಮನ ಸೆಳೆದ "ಉದಯವಾಣಿ" ಓದುಗ ಕಾರ್ಕಳದ ತಂತ್ರಜ್ಞ ವಾಸುದೇವ ಕಾಮತ್‌ಗೆ ಕೃತಜ್ಞತೆಗಳು.
(ಪತ್ರಗಳ ಪೂರ್ಣ ಪಾಠಗಳಿಗಾಗಿ http://ashok567.blogspot.comನ ಪ್ರತಿಕ್ರಿಯೆಗಳತ್ತ ಕಣ್ಣು ಹಾಯಿಸಿ.
---------------------------------
ಕರಾವೋಕೆ ಟ್ರ್ಯಾಕ್ ಗೆಲ್ಲಿ!
ಈ ಪ್ರಶ್ನೆಗಳಿಗೆ ಸರಿಯುತ್ತರ ಕಳುಹಿಸಿ,ಬಸಂತ್ ಕುಮಾರ್ ಕುತ್ಯಾರ್ ವಿರಚಿತ 5 ಕರಾವೋಕೆ ಸಂಗೀತ ಟ್ರ್ಯಾಕ್ ಗೆಲ್ಲಿ!.ಬಹುಮಾನ ಪ್ರಾಯೋಜಿಸಿದವರು www.bacchusongs.com
*ಈ ವಾರ ಅಂತರ್ಜಾಲದ ಮಟ್ಟಿಗೆ ಒಂದು ಪರ್ವ(ಯುಗ) ಮುಗಿದಂತಾಗಿದೆ.ಯಾಕೆ?
*ಹೊಸ "ಯುಗ"ದಲ್ಲಿ ಅಗುವ ಬದಲಾವಣೆಯೇನು?
(ಉತ್ತರಗಳನ್ನು basanthk23@gmail.comಗೆ ಮಿಂಚಂಚೆ ಮಾಡಿ,ವಿಷಯ:NS17 ನಮೂದಿಸಿ.)
(ಕಳೆದ ವಾರದ ಸರಿಯುತ್ತರಗಳು:
* ಮೊಬೈಲ್ ಫೋನಿನ ಮೈಕ್ ಗ್ರಹಿಸಿದ, ಬಳಕೆದಾರನ ಸ್ಪರ್ಶ ಉಂಟು ಮಾಡುವ ಸದ್ದಿನ ಪ್ರಮಾಣದ ಮೂಲಕ,ಆತನು ಸ್ಪರ್ಶಿಸಿದ ಜಾಗವನ್ನು ಲೆಕ್ಕ ಹಾಕುವ ಕ್ರಮವಿಧಿಯನ್ನು ತಂತ್ರಾಂಶದಲ್ಲಿ ಅಳವಡಿಸಿ,ಹಳೆ ಮೊಬೈಲ್ ಪೋನ್‌ಗಳನ್ನು ಸ್ಪರ್ಶಸಂವೇದಿ ತೆರೆಯವಾಗಿ ಮಾಡಲು ಸಾಧ್ಯವಾಗಿದೆ.
*ನಮ್ಮ ಮೇಲ್ಮನೆಯ ಕಾಸು-ಕುಡಿಕೆ ಬರಹಗಳು ಇರುವ ಬ್ಲಾಗ್  www.avadhi.wordpress.com.ಬಹುಮಾನ ಗೆದ್ದವರು ಕೇಶವ ಗಬ್ಬಲಡ್ಕ.ಅಭಿನಂದನೆಗಳು.
------------------------------------------------------------
ಮುರಳೀಧರ ಉಪಾಧ್ಯ ಹಿರಿಯಡ್ಕರ ಬ್ಲಾಗ್

ಸಾಹಿತಿ,ವಿಮರ್ಶಕ ಮುರಳೀಧರ ಉಪಾಧ್ಯರ ಬ್ಲಾಗ್ http://mupadhyahiri.blogspot.comನಲ್ಲಿ ಅಂತರ್ಜಾಲದಲ್ಲಿ ಬೆಳಕು ಕಾಣುತ್ತಿದೆ.ಅವರ ವಿಮರ್ಶಾ ಬರಹಗಳು,ಲೇಖನಗಳಿಲ್ಲಿವೆ.ಇಂಗ್ಲೀಷ್,ಕನ್ನಡ ಎರಡೂ ಭಾಷೆಗಳನ್ನು ಬಳಸಿರುವ ಬ್ಲಾಗಿನಲ್ಲಿ ಇತರ ಹೊರಗಿನ ಕೊಂಡಿಗಳನ್ನೂ ನೀಡಲಾಗಿದೆ.ಹಲವು ಪತ್ರಿಕಾ ಬರಹಗಳ ಕೊಂಡಿಗಳನ್ನೂ ನೀಡಿ,ಬ್ಲಾಗನ್ನು ಆಕರ್ಷಕವಾಗಿಸಲಾಗಿದೆ.ಈ ಬ್ಲಾಗಿಗೆ ಕೆ ಎಸ್ ಸೋಮಯಾಜಿಗಳೂ ಬರಹಗಳನ್ನು ಒದಗಿಸುತ್ತಿದ್ದಾರೆ.
-------------------------------------------------
ರೇಷನ್ ಕಾರ್ಡ್:ಆನ್‌ಲೈನ್


ಪಡಿತರ ಚೀಟಿ ವಿವರವನ್ನು ಅಂತರ್ಜಾಲ ಮೂಲಕವೇ ಸಲ್ಲಿಸಲು ಬೆಂಗಳೂರಿನ ಗ್ರಾಹಕರಿಗೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿದೆ.ಸಲ್ಲಿಸಬೇಕಾದ ಚೀಟಿ,ವಿದ್ಯುತ್ ಬಿಲ್ ಮತ್ತು ಅನಿಲ ಸಂಪರ್ಕದ ವಿವರವನ್ನು ಸ್ಕ್ಯಾನ್ ಮಾಡಿ,ಆನ್‌ಲೈನಿನಲ್ಲೇ ಸಲ್ಲಿಸಲು ಅವಕಾಶವಿದೆ.ನೌಕರಿಯಲ್ಲಿರುವವರು,ರಜೆ ಹಾಕಿ ಅಂಗಡಿಗೆ ಮುಖತ: ಭೇಟಿ ನೀಡುವುದನ್ನು ತಪ್ಪಿಸುವ ಸ್ತುತ್ಯರ್ಹ ಪ್ರಯತ್ನವಿದು.ವೆಬ್ ವಿಳಾಸ:http://web5.kar.nic.in/fcslpg/main.aspx
------------------------------
ಟ್ವಿಟರ್ ಚಿಲಿಪಿಲಿ
*ಆಶಾವಾದದದ ಪರಮಾವಧಿ:ತನ್ನ ಸೆಕ್ರೆಟರಿಯನ್ನು ಮದುವೆಯಾದರೆ,ಆಮೇಲೂ ಆಕೆ ತನ್ನ ಮಾತಿನಂತೆ ನಡೆದಾಳು ಎನ್ನುವ ಬಾಸ್‌ನ ಲೆಕ್ಕಾಚಾರ.
*ಮೈಸೂರಿನಲ್ಲಿ ಎರಡ್ಮೂರು ದಿನಗಳಿಂದ ನಳ್ಳಿನೀರು ಪೂರೈಕೆ ಸ್ಥಗಿತ ಹೊಂದುವುದಕ್ಕೂ,ಹಾಲು ಪೂರೈಕೆಯಾಗದ್ದಕ್ಕೂ ಸಂಬಂಧ ಇದೆಯೇ?ಅಲ್ಲ,ಅದು ಕಾಕತಾಳೀಯವೇ?
*ತೆರೆದ ಮನಸ್ಸುಗಳನ್ನು ರಿಪೇರಿಗಾಗಿ,ಇವತ್ತು  ಮುಚ್ಚಲಾಗಿದೆ.
*ಪೀಜಾ ಹಟ್ ಬೋರ್ಡ್:ಪೀಜಾಗಳು ಮಾತ್ರ ಹೊಗೆ(ಸ್ಮೋಕ್)ಯಾಡಬಹುದು...
UDAYAVANI

*ಅಶೋಕ್‌ಕುಮಾರ್ ಎ