Monday, March 28, 2011

ಲೈಟ್ ರೇಡಿಯೋ:ಮೊಬೈಲ್ ಸೇವೆಯಲ್ಲಿ ಕ್ರಾಂತಿ?

ಲೈಟ್ ರೇಡಿಯೋ:ಮೊಬೈಲ್ ಸೇವೆಯಲ್ಲಿ ಕ್ರಾಂತಿ?
 
ಅಲಾಕ್ಟೆಲ್ ಲ್ಯೂಸೆಂಟ್ ಕಂಪೆನಿಯು ಲೈಟ್ ರೇಡಿಯೋ ಎನ್ನುವ ರೂಬಿಕ್ ಕ್ಯೂಬಿನಷ್ಟು ದೊಡ್ಡ ಸಾಧನವನ್ನು ಸಿದ್ದ ಪಡಿಸಿದ್ದು,ಅದು ಮೊಬೈಲ್ ಟವರಿನ ಕೆಲಸವನ್ನು ಸಂಪೂರ್ಣವಾಗಿ ಮಾಡಬಲ್ಲುದು ಎಂದು ಕಂಪೆನಿಯ ಹೇಳಿಕೆ.ಮೊಬೈಲ್ ಸೇವೆಯ ಸಂಕೇತಗಳನ್ನು ಎಲ್ಲೆಡೆ ಲಭ್ಯವಾಗಿಸಲು,ಎತ್ತರದ ಗೋಪುರಗಳನ್ನು ನಿರ್ಮಿಸಿ,ಅವನ್ನು ನಿರ್ವಹಿಸುವುದು ಅನಿವಾರ್ಯ.ಇದು ಪ್ರತಿಯೊಂದು ಮೊಬೈಲ್ ಕಂಪೆನಿಗೆ ಖರ್ಚಿನ ಬಾಬತ್ತು.ಇವೆಲ್ಲವನ್ನು ಮಾಡಿದ ನಂತರವೂ,ಚಂದಾದಾರರ ಸಂಖ್ಯೆ ಏರಿದಂತೆ ಸೇವೆಯ ಗುಣಮಟ್ಟ ಉಳಿಸಿಕೊಳ್ಳುವುದು ಕಂಪೆನಿಗಳಿಗೆ ಸವಾಲೇ ಸರಿ.ಈಗ ಸುಲಭವಾಗಿ ಸ್ಥಾಪಿಸಲು ಅನುವು ಮಾಡುವ ಮಿನಿ ಗೋಪುರ ಲೈಟ್ ರೇಡಿಯೋವನ್ನು ಲ್ಯೂಸೆಂಟ್ ಕಂಪೆನಿ ಅಭಿವೃದ್ಧಿ ಪಡಿಸಿದೆ.ಇವನ್ನು ಬಸ್‌ಸ್ಟ್ಯಾಂಡ್ ಮೇಲೆ,ಕಟ್ಟಡಗಳೊಳಗೆ ಎಲ್ಲೆಂದರಲ್ಲಿ ಸ್ಥಾಪಿಸುವುದು ಸುಲಭ.ಜತೆಗೆ ಅವುಗಳ ಮಿನಿ ಆಂಟೆನಾಗಳ ದಿಕ್ಕನ್ನು ಬೇಕಾದಂತೆ ಬದಲಿಸಬಹುದು.ಹೀಗೆ ಮಾಡುವ ಮೂಲಕ ಸಂಕೇತಗಳು ಬೇಕಾದಲ್ಲಿ ಲಭ್ಯವಾಗಿಸುವುದು ಸುಲಭವಾಗುತ್ತದೆ.ಗೋಪುರಗಳ ಜತೆ ಇವನ್ನು ಬಳಸಿ,ಉತ್ತಮ ಸೇವೆ ನೀಡಲು ಸಾಧ್ಯವಾಗಲಿದೆ.
---------------------------------
ಗೂಗಲ್ ಮ್ಯಾಗಜೀನ್
 
ಗೂಗಲ್ ಸದ್ದಿಲ್ಲದೆ ಮಾಧ್ಯಮ ಜಗತ್ತಿಗೆ ಕಾಲಿರಿಸಿದೆ.ಆನ್‌ಲೈನ್ ಮ್ಯಾಗಜೀನ್ ಥಿಂಕ್ ಕ್ವಾರ್ಟರ್ಲೀಯನ್ನದು ಪ್ರಕಟಿಸಲಾರಂಭಿಸಿದೆ.http://thinkquarterly.co.uk ಐಪಿ ವಿಳಾಸದಲ್ಲಿದು ಲಭ್ಯವಿದೆ.ದತ್ತಾಂಶ ಮತ್ತದು ಹೇಗೆ ಮುಖ್ಯ ಎನ್ನುವುದನ್ನು ಪತ್ರಿಕೆಯಲ್ಲಿ ಚರ್ಚಿಸಲಾಗಿದೆ.ಸದ್ಯಕ್ಕಂತೂ ಪತ್ರಿಕೆಯು ಉಚಿತವಾಗಿ ಲಭ್ಯ.ಗೂಗಲ್ ತನ್ನ ಬಳಗದವರಿಗಾಗಿ ಇದನ್ನು ಪ್ರಕಟಿಸಿರುವುದಾಗಿ ಹೇಳಿಕೊಂಡಿದೆ.ಸಂದರ್ಶನ,ಲೇಖನಗಳು,ಚಿತ್ರಗಳು ಮ್ಯಾಗಜೀನ್ ಮುಖ್ಯ ತಿರುಳು.ಗೂಗಲ್ ಇದನ್ನು ಪತ್ರಿಕೆ ಎಂದು ಕರೆಯದೆ "ಪುಸ್ತಕ" ಎಂದು ಕರೆದುಕೊಂಡಿರುವುದು ವಿಶೇಷ.ಲಂಡನ್‌ನಿಂದ ಪ್ರಕಾಶಿತ ಥಿಂಕ್ ಕ್ವಾರ್ಟರ್ಲಿಯನ್ನು,ಚರ್ಚ್ ಆಫ್ ಲಂಡನ್ ಎನ್ನುವ ಏಜನ್ಸಿ ಸಿದ್ಧ ಪಡಿಸಿದೆ.ಅರುವತ್ತೆಂಟು ಪುಟಗಳ ಮೊದಲ ಸಂಚಿಕೆ ಓದುಗರ ಗಮನ ಸೆಳೆಯುವುದು ಖಚಿತ.
----------------------------
ಸ್ಮಾರ್ಟ್ ಫೋನಲ್ಲೂ ತ್ರೀಡಿ
 
ತ್ರೀಜಿ ಸೇವೆಗಳನ್ನೊಳಗೊಂಡ ಸ್ಮಾರ್ಟ್‌ಫೋನುಗಳ ನಂತರವಿದೀಗ ತ್ರೀಡಿ ಚಿತ್ರ ವೀಕ್ಷಣೆಗೆ ಅವಕಾಶ ನೀಡುವ ಸ್ಮಾರ್ಟ್‌ಫೋನುಗಳ ಸರದಿ.ಎಚ್‌ಟಿಸಿ,ಎಲ್‌ಜಿ ಮುಂತಾದ ಸ್ಮಾರ್ಟ್‌ಫೋನ್ ತಯಾರಕರು ಇಂತಹ ಫೋನುಗಳ ತಯಾರಿಕೆಗೆ ಸಿದ್ಧತೆ ನಡೆಸಿದ್ದಾರೆ.ಇದರ ವೀಕ್ಷಣೆಗೆ ಕನ್ನಡಕ ಧರಿಸುವ ಅಗತ್ಯವಿಲ್ಲ ಎನ್ನುವುದು ಮತ್ತೊಂದು ವಿಶೇಷ.ತ್ರೀಡಿ ಚಿತ್ರಗ್ರಹಣ ನಡೆಸಲು ಎರಡು ಕ್ಯಾಮರಾಗಳನ್ನು ನೀಡಲೂ ಈ ಕಂಪೆನಿಗಳು ಯೋಚಿಸಿವೆ.ಹಾಲಿವುಡ್ ನಿರ್ಮಾಪಕರ ಚಿತ್ರಗಳನ್ನು ನಂಬಿ ಸ್ಮಾರ್ಟ್‌ಪೋನ್ ಮಾರುಕಟ್ಟೆಯಲ್ಲಿ ಸ್ಪರ್ಧೆಗಿಳಿಯುವ ಬದಲು,ಕ್ಯಾಮರಾ ನೀಡಿ,ಜನರೇ ತ್ರೀಡಿ ಸರಕನ್ನು ಸಿದ್ಧ ಪಡಿಸುವಂತೆ ಅವರನ್ನು ಪ್ರೋತ್ಸಾಹಿಸುವುದು ಉತ್ತಮ ಎಂಬುದು ಕಂಪೆನಿಗಳ ಲೆಕ್ಕಾಚಾರ.ತ್ರೀಡಿ ಫೋನುಗಳು ಬಂದರಷ್ಟೇ ಸಾಲದು,ಅದರಲ್ಲಿ ವೀಕ್ಷಿಸಲು ಬೇಕಾದ ಸರಕೂ ಜನರಿಗೆ ಸಿಗಬೇಕು.ಜತೆಗೆ ಸ್ಮಾರ್ಟ್‌ಫೋನುಗಳಿಗಾಗಿ ತ್ರೀಡಿ ಆಟಗಳನ್ನು ಸಿದ್ಧ ಪಡಿಸುವತ್ತ ಕಂಪೆನಿಗಳ ಚಿತ್ತವೀಗ ಹರಿದಿದೆ.
-------------------------------
ಬಯಸದ ಸಂದೇಶ ರವಾನೆ ಜಾಲ ಬಲೆಗೆ
 
ದಿನಾಲೂ ಮೂವತ್ತು ದಶಲಕ್ಷದಷ್ಟು ಬಯಸದ ಸಂದೇಶಗಳನ್ನು ಕಳುಹಿಸಿ,ಬಳಕೆದಾರರಿಗೆ ಕಿರಿಕಿರಿ ಮಾಡುತ್ತಿದ್ದ ಕಂಪ್ಯೂಟರ್ ಜಾಲವನ್ನು ಬೇಧಿಸಲಾಗಿದೆ,ರಸ್ಟೋಕ್ ಎಂಬ ಹೆಸರಿನ ಜಾಲವು,ಅಂತರ್ಜಾಲದ ಮಿಲಿಯಗಟ್ಟಲೆ ಕಂಪ್ಯೂಟರುಗಳನ್ನು ವಶೀಕರಿಸಿಕೊಂಡು ಅವುಗಳ ಮೂಲಕ ಮಿಂಚಂಚೆಯಲ್ಲಿ ಸಂದೇಶ ರವಾನೆ ಮಾಡುತ್ತಿತ್ತು.ಫಯರ್ ಐ,ಮೈಕ್ರೋಸಾಫ್ಟ್,ಪೈಜರ್ ಮುಂತಾದ ಕಂಪೆನಿಗಳ ಮುತುವರ್ಜಿಯ ಕಾರಣ ರಸ್ಟೋಕ್ ಜಾಲ ಬಹಿರಂಗವಾಯಿತು.ಇದನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಅಮೆರಿಕಾದ ಏಳು ನಗರಗಳ ಡೇಟಾಸೆಂಟರುಗಳ,ನೂರರಷ್ಟು ಸರ್ವರುಗಳನ್ನು ವಶಕ್ಕೆ ತೆಗೆದುಕೊಳ್ಳಬೇಕಾಯಿತು.ಈ ಜಾಲದ ಹಿಂದಿನ ವ್ಯಕ್ತಿಗಳನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ.ಆದರೆ ರಸ್ಟೋಕನ್ನು ಕೈಬೆರಳೆಣಿಕೆಯ ವ್ಯಕ್ತಿಗಳ ಗುಂಪು ನಡೆಸುತ್ತಿತ್ತು ಎನ್ನುವುದು ತಜ್ಞರ ಅಭಿಮತ.ಈ ಬಯಸದ ಸಂದೇಶ ರವಾನೆ ಜಾಲವನ್ನು,ಸ್ವಯಂಚಾಲಿತವಾಗಿಸಿದ ಕಂಪ್ಯೂಟರ್ ತಂತ್ರಾಂಶವನ್ನು ಪರಿಶೀಲಿಸಿದಾಗ ಈ ವಿಷಯವು ಸ್ಪಷ್ಟವಾಗುತ್ತದೆ.ವ್ಯಕ್ತಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.ಅದು ಸಫಲವಾಗುತ್ತದೋ,ಕಾದು ನೋಡಬೇಕು.
--------------------------------
ಐಪಿ ವಿಳಾಸಗಳಿಗೆ ಏಳೂವರೆ ದಶಲಕ್ಷ ಡಾಲರು
ನೋರ್ಟೆಲ್ ಕಂಪೆನಿಯ ವಶದಲ್ಲಿರುವ ಅಂತರ್ಜಾಲ ವಿಳಾಸಗಳಿಗೆ ಮೈಕ್ರೋಸಾಫ್ಟ್ ಕಂಪೆನಿಯು ಏಳೂವರೆ ದಶಲಕ್ಷ ಡಾಲರು ಮೊತ್ತವನ್ನು ಪಾವತಿಸಲು ಮುಂದೆ ಬಂದಿದೆ.ಈ ವಿಳಾಸಗಳು ಐಪಿವರ್ಶನ್-ನಾಲ್ಕರ ಪ್ರಕಾರ ಇವೆ.ಐಪಿವರ್ಶನ್-ನಾಲ್ಕರಲ್ಲಿ ಮೂವತ್ತೆರಡು ಅಂಕಿಗಳನ್ನು ಬಳಸಲಾಗುತ್ತಿದೆ.ಈಗ ಅಂತರ್ಜಾಲ ತಾಣಗಳಿಗೆ ಬೇಡಿಕೆ ಏರುಗತಿಯಲ್ಲಿದ್ದು,ಬಹುತೇಕ ವಿಳಾಸಗಳು ಖಾಲಿಯಾಗಿ ಬಿಟ್ಟಿದೆ.ಇನ್ನು ಐಪಿವರ್ಶನ್-ಆರು ಪ್ರೊಟೋಕಾಲನ್ನು ಅಂತರ್ಜಾಲದಲ್ಲಿ ಬಳಕೆಗೆ ತಂದರಷ್ಟೆ ಹೆಚ್ಚಿನ ವಿಳಾಸಗಳಿಗೆ ಬೇಡಿಕೆಯನ್ನು ಈಡೇರಿಸಬಹುದು.ಪರಿಸ್ಥಿತಿ ಹೀಗಿರುವಾಗ,ಬಳಕೆಯಲ್ಲಿಲ್ಲದ ಐಪಿ ವಿಳಾಸಗಳ ಮಾರಾಟಕ್ಕೆ ನೊರ್ಟೆಲ್ ಕಂಪೆನಿಯು ಮುಂದಾದಾಗ ಬೇಡಿಕೆ ಬಂದದ್ದು ಸಹಜ.ಆದರೂ ಏಳೂವರೆ ದಶಲಕ್ಷ ಡಾಲರುಗಳಿಗೆ ಅವನ್ನು ಕೊಂಡಾರು ಎಂದು ಯಾರೂ ಭಾವಿಸಿರಲಿಲ್ಲ.ಈ ಮೊತ್ತಕ್ಕೆ ಮೈಕ್ರೊಸಾಫ್ಟ್ ಸುಮಾರು ನಾಲ್ಕುನೂರ ಎಪ್ಪತ್ತು ಸಾವಿರ ವಿಳಾಸಗಳನ್ನು ಗಳಿಸಲಿದೆ.ಈ ವಿಳಾಸಗಳನ್ನು ಮಾರುವ ಉದ್ದೇಶ ಕಂಪೆನಿಗಿರಲೂ ಸಾಕು.
--------------------------------------------
ತುಷಾರ:ವಾರ್ಷಿಕ  ಚಂದಾ ಗೆಲ್ಲಿ!
ಈ ಪ್ರಶ್ನೆಗಳಿಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಉಡುಪಿ ಬ್ರಹ್ಮಗಿರಿಯ ಡಾ.ಶ್ರೀನಿವಾಸ್ ರಾವ್,ಪ್ರೊಫೆಸರ್,ನಿಟ್ಟೆ.
*ಕಂಪ್ಯೂಟರಿನ ಹಾರ್ಡ್ ಡಿಸ್ಕ್ ಕೈಕೊಟ್ಟಾಗ,ಕಂಪ್ಯೂಟರ್ ಬಳಸುವುದು ಹೇಗೆ?(ಸುಳಿವು ಈ ಅಂಕಣ ಬರಹದ ಹಳೆಯ ಭಾಗಗಳಲ್ಲಿ ಲಭ್ಯ.http://ashok567.blogspot.com ನೋಡಿ).
*ಮತ ಯಾಚನೆಗೆ ಲ್ಯಾಪ್‌ಟಾಪ್ ಆಮಿಷ ಒಡ್ಡುತ್ತಿರುವ ರಾಜಕೀಯ ಪಕ್ಷಗಳನ್ನು ಹೆಸರಿಸಿ.
(ಉತ್ತರಗಳನ್ನು nistantusansaara@gmail.comಗೆ ಮಿಂಚಂಚೆ ಮಾಡಿ,ವಿಷಯ:NS24 ನಮೂದಿಸಿ.)
ಕಳೆದ ವಾರದ ಸರಿಯುತ್ತರಗಳು:
*ಆಂಡ್ರಾಯಿಡ್ ಫೋನ್‌ಗಳಲ್ಲಿ ಕನ್ನಡ ಅಂತರ್ಜಾಲ ತಾಣಗಳನ್ನು ಜಾಲಾಡಲು ಬಳಸಬಹುದಾದ ಬ್ರೌಸರ್ ಒಪೆರಾ ಮಿನಿ.
*ನೋವೆಲ್ ಕಂಪೆನಿಯ ಲೀನಕ್ಸ್ ವಿತರಣೆ ಸೂಸೆ(ಸಿ) ಲೀನಕ್ಸ್. ಬಹುಮಾನ ಗೆದ್ದವರು ಪ್ರಕಾಶ್ ಭಂಡಾರಿ,ಪಾವೂರು,ಮಂಜೇಶ್ವರ. ಅಭಿನಂದನೆಗಳು.
-----------------------------------------------------
ಟ್ವಿಟರ್ ಚಿಲಿಪಿಲಿ
*ಭೂದಿವಸದಂದು ಲೈಟ್ ಸ್ವಿಚ್ ಬೇಕಾದರೆ ಆರಿಸುವೆ,ಫ್ಯಾನ್ ಚಾಲೂ ಇಡುವುದು ಮಾತ್ರ ಖಾತರಿ.
*ಟೊಮೆಟೋ ಹಣ್ಣು ಎಂಬುದು ಅರಿವು,ಅದನ್ನು ಫ್ರುಟ್ ಸಲಾಡ್ ಹಾಕಬಾರದು ಎಂಬುದು ವಿವೇಕ.
*ಒಬ್ಬನಿಗೆ ಭಯೋತ್ಪಾದಕನಾದವ,ಇನ್ನೋರ್ವನಿಗೆ ಸ್ವಾತಂತ್ಯ ಸಂಗ್ರಾಮಿ..
*ಸೋತ್ ಆಫ್ರಿಕಾ..!

*ಅಶೋಕ್‌ಕುಮಾರ್ ಎ

Monday, March 21, 2011

ಭೂಕಂಪ:ವಂತಿಗೆಗೆ ತಾಣಗಳು

ಭೂಕಂಪ:ವಂತಿಗೆಗೆ ತಾಣಗಳು
ಜಪಾನ್ ಭೂಕಂಪ ಮತ್ತು ಸುನಾಮಿ ಅನಾಹುತಗಳನ್ನೂ ತಮ್ಮ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಳ್ಳುವ ಅಂತರ್ಜಾಲ ತಾಣಗಳಿವೆ. ಜನರು ಜಪಾನಿಗೆ ಸಂಬಂಧಿಸಿದ ವಿಡಿಯೋ ತುಣುಕುಗಳಿಗಾಗಿ ಹುಡುಕಿದಾಗ,ಸಿಗುವ ವಿಡಿಯೋ ಕೊಂಡಿಗಳೆಲ್ಲಾ,ನೈಜವಾದುದ್ದಲ್ಲ.ಕೆಲವರು ತಂತ್ರಾಂಶಗಳ ಕೊಂಡಿಯನ್ನೂ ನೀಡಿ,ಇಂತಹ ಶೋಧದ ಫಲಿತಾಂಶದಲ್ಲಿ ತಮ್ಮ ಕೊಂಡಿಗಳನ್ನೂ ತೋರಿಸಲು ಯಶಸ್ವಿಯಾಗುವುದಿದೆ.ಈ ತಂತ್ರಾಂಶಗಳು,ಜನರ ಕಂಪ್ಯೂಟರುಗಳಿಂದ ಮಾಹಿತಿ ಕದಿಯುವ ಉದ್ದೇಶದಿಂದ ರಚಿಸಿದ್ದಗಿರುವುದೂ ಇದೆ.ಇವನ್ನು ಕ್ಲಿಕ್ಕಿಸಿ,ಇವನ್ನು ತಮ್ಮ ಕಂಪ್ಯೂಟರುಗಳಲ್ಲಿ ಅನುಸ್ಥಾಪಿಸಿದರೆ,ಅಪಾಯಕ್ಕೆ ಆಹ್ವಾನ ನೀಡಿದಂತೆಯೇ ಸರಿ.ಇನ್ನು ಜಪಾನ್ ಜನರಿಗೆ ಸಹಾಯ ಮಾಡಲು ನೆರವಾಗಲು ವಂತಿಗೆ ಕೇಳುವ ಉದ್ದೇಶದಿಂದಲೇ ಆರಂಭವಾಗಿರುವ ಅಂತರ್ಜಾಲ ತಾಣಗಳಿರುವುದರಿಂದ,ಆನ್‌ಲೈನ್ ಮೂಲಕ ವಂತಿಗೆ ನೀಡುವಾಗ,ಈಗಾಗಲೇ ಪ್ರಚಲಿತದಲ್ಲಿರುವ ತಾಣಗಳನ್ನು ಆಯ್ದು ವಂತಿಗೆ ನೀಡುವುದು ಸುರಕ್ಷಿತವೆಂದು,ಅಂತರ್ಜಾಲದ ಚಟುವಟಿಕೆಗಳ ಮೇಲೆ ಕಣ್ಣಿಟ್ಟ ತಜ್ಞರು ಎಚ್ಚರಿಕೆ ನೀಡಿದ್ದಾರೆ.ವೈರಸ್ ಹಬ್ಬಿಸುವ ತಾಣಗಳ ಕೊಂಡಿಯನ್ನು, ಜಪಾನೀ ಸುನಾಮಿ ದುರಂತ ವಿಡಿಯೋ ಎಂದು ಬರುವ ಮಿಂಚಂಚೆಗಳ ಬಗ್ಗೆಯೂ ಬಳಕೆದಾರರು ಎಚ್ಚರಿಕೆ ವಹಿಸಬೇಕಿದೆ.
---------------------------------------
ಸುನಾಮಿ,ಭೂಕಂಪ:ಕೇಬಲ್ ಕಟ್

ಅಣು ವಿಕಿರಣ,ವಿದ್ಯುತ್ ಪೂರೈಕೆಯಿಲ್ಲ್ಲದೆ ಜನರು ಪಡುತ್ತಿರುವ ಪಾಡು ಎಲ್ಲರಿಗೂ ತಿಳಿದಿದೆ.ಇದರ ನಡುವೆಯೇ ಭೂಕಂಪ ಮತ್ತು ನಂತರದ ಸುನಾಮಿಗಳು ಸಮುದ್ರ ತಳದಲ್ಲಿ ದೇಶ ದೇಶಗಳ ನಡುವಣ ಅಂತರ್ಜಾಲ ಸಂಪರ್ಕ ಕೇಬಲುಗಳಿಗೆ ಬಹಳ ಹಾನಿ ಮಾಡಿದೆ.ಭೂಕಂಪದ ನಂತರ ಹಲವೆಡೆ,ಅಂತರ್ಜಾಲ ಬಾಧಿತವಾಗಿದೆ.ಸಮುದ್ರ ತಳದ ಕೇಬಲುಗಳು,ಸಾಮಾನ್ಯ ಸ್ಥಿತಿಯಲ್ಲೂ ಹಾನಿಗೀಡಾಗಿ ತುಂಡಾಗುವುದಿದೆ.ಇನ್ನು ಇಂತಹ ಅನಾಹುತದ ನಂತರ ಕೇಳಬೇಕೇ?ಈಗ ಜಪಾನ್ ಸರಕಾರ ಇವನ್ನು ದುರಸ್ತಿ ಮಾಡುವತ್ತಲೂ ಗಮನಹರಿಸ ಬೇಕಿದೆ.ಕೇಬಲ್‌ಗಳ ಕಡಿತದಿಂದ ಜಪಾನಿನ ಟೆಲೆಕಾಂಕಂಪೆನಿಗಳ ಸೇವೆಯಲ್ಲಿ ವ್ಯಾಪಕ ವ್ಯತ್ಯಯ ಕಂಡು ಬಂದಿದೆ.ಕೇಬಲುಗಳನ್ನು ದುರಸ್ಥಿ ಪಡಿಸಲು ರೊಬೋಟುಗಳನ್ನೂ ಬಳಸಬೇಕಾಗುತ್ತದೆ.ಎರಡೂವರೆ ಕಿಲೋಮೀಟರ್ ಆಳಕ್ಕಿಳಿದು,ನೀರಲ್ಲಿ ಕೇಬಲುಗಳನ್ನು ಹುಡುಕಿ,ಜೋಡಿಸುವುದರಲ್ಲಿ ಯಾಂತ್ರಿಕ ಸಹಾಯ ಇಲ್ಲವಾದರೆ ನಡೆದೀತು ಹೇಗೆ?
-------------------------------------------
ಇಲೆಕ್ಟ್ರಾನಿಕ್ ಭಾಗಗಳು ಅಲಭ್ಯ
ಜಪಾನಿನ ಭೂಕಂಪದಿಂದ,ಅಲ್ಲಿನ ಕಂಪೆನಿಗಳು ಕಾರ್ಯಸ್ಥಗಿತಗೊಳಿಸ ಬೇಕಾಗಿ ಬಂದಿವೆ.ಇದರಿಂದ ವಿಶ್ವದ ಹಲವು ಕಂಪೆನಿಗಳು ಬಾಧಿತವಾಗಲಿವೆ.ಆಪಲ್ ಕಂಪೆನಿಯೂ ಅವುಗಳಲ್ಲೊಂದು.ಆಪಲ್ ಕಂಪೆನಿಯ ಐಪ್ಯಾಡ್ ಮತ್ತು ಐಫೋನಿನಲ್ಲಿ ಕಂಪಾಸ್ ಅಂತಹ ಯಂತ್ರಾಂಶ ಭಾಗವನ್ನು ಜಪಾನೀ ಕಂಪೆನಿಗಳು ಪೂರೈಸುತ್ತಿವೆ.ಅವುಗಳ ಪೂರೈಕೆ ಬಾಧಿತವಾದರೆ,ಐಫೋನ್ ತಯಾರಿಯೂ ನಿಲ್ಲ ಬೇಕಾದೀತು.ಈ ಜಾಗತಿಕ ಮಾರುಕಟ್ಟೆಯಲ್ಲಿ ವಿಶ್ವದ ಒಂದು ಮೂಲೆಯ ವಿದ್ಯಮಾನ,ಮತ್ತೊಂದು ಮೂಲೆಯ ಕಂಪೆನಿಯ ಮೇಲೂ ಆಗಬಹುದೆನ್ನುವುದಕ್ಕೆ ಇದಕ್ಕಿಂತ ದೊಡ್ಡ ನಿದರ್ಶನ ಬೇಕೇ?ಇದನ್ನು ತಡೆಯಲು ಹಲವು ಕಂಪೆನಿಗಳ ಭಾಗಗಳನ್ನು ಬಳಸುವ ಕಂಪೆನಿಗಳು,ಇಂತಹ ಸಮಸ್ಯೆಯನ್ನು ಹೆಚ್ಚಿನ ತಾಪತ್ರಯವಿಲ್ಲದೇ ಕಳೆಯಬಲ್ಲುವು.ಹಿಟಾಚಿ,ಟೊಷಿಬಾ ಕಂಪೆನಿಗಳೂ ಸದ್ಯಕ್ಕೆ ಕಾರ್ಯ ಸ್ಥಗಿತಗೊಳಿಸಿದ ಕಂಪೆನಿಗಳಲ್ಲಿ ಸೇರಿವೆ.ಇದರಿಂದ ಎಲ್‌ಸಿಡಿ ತೆರೆ,ಕಂಪ್ಯೂಟರ್ ಬಿಡಿಭಾಗಗಳ ಅಭಾವ ಸಂಭವನೀಯ.ನಿಸಾನ್,ಜನರಲ್ ಮೋಟರ್ಸ್ ಮತ್ತು ರಿನಾಲ್ಟ್ ಮುಂತಾದ ಅಟೊಮೊಬೈಲ್ ಕಂಪೆನಿಗಳೂ ಒಂದಿಲ್ಲ ಒಂದು ರೀತಿಯಿಂದ ಬಾಧಿತವಾಗುವ ಸಾಧ್ಯತೆಯಿದೆ.
----------------------------------
ಬ್ರೌಸರುಗಳ ನಡುವೆ ಮೇಲಾಟ
ಮೊಜಿಲ್ಲಾ ಫೈರ್‌ಫಾಕ್ಸ್,ಕ್ರೋಮ್,ಇಂಟರ್ನೆಟ್ ಎಕ್ಸ್‌ಪ್ಲೋರರ್,ಸಫಾರಿ ಬ್ರೌಸರುಗಳು ಕಂಪ್ಯೂಟರಿನ ಅತಿ ಮುಖ್ಯ ತಂತ್ರಾಂಶವಾಗಿ ಬಿಟ್ಟಿವೆ.ಈ ಸಾಫ್ಟ್‌ವೇರುಗಳು ಆಮೂಲಾಗ್ರವಾಗಿ ಬದಲಾಗಿರುವುದು,ಕಂಪ್ಯೂಟರ್ ಬಳಕೆದಾರರ ಗಮನಕ್ಕೆ ಬಾರದೇ ಹೋಗದು.ಇಡೀ ತೆರೆಯನ್ನು ಸಂಪೂರ್ಣವಾಗಿ ಬಳಕೆ ಮಾಡುವತ್ತ ಹೆಚ್ಚಿನ ಬ್ರೌಸರುಗಳು ಗಮನಹರಿಸಿವೆ.ವ್ಯಕ್ತಿಯ ಕಂಪ್ಯೂಟರ್ ಬಳಕೆಯ ಬಗ್ಗೆ ಮಾಹಿತಿ ಒಟ್ಟು ಮಾಡುವ ಜಾಹೀರಾತುದಾರ ಕಂಪೆನಿಗಳನ್ನು ನಿಯಂತ್ರಿಸುವ ಸವಲತ್ತನ್ನು ಬ್ರೌಸರುಗಳೆಲ್ಲಾ ನೀಡಲಾರಂಭಿಸಿರುವುದು ವಿಶೇಷ.ನನ್ನನ್ನು ಹಿಂಬಾಲಿಸದಿರಿ ಎಂದು ಬಳಕೆದಾರನು ಜಾಹೀರಾತುದಾರ ಕಂಪೆನಿಗಳನ್ನು ತಡೆಯಲು ಬರುವ ವ್ಯವಸ್ಥೆಯನ್ನು ಬ್ರೌಸರುಗಳು ನೀಡಿವೆ.ಮೊಬೈಲ್ ಮೂಲಕವೂ ಜನರು ಅಂತರ್ಜಾಲ ಜಾಲಾಡುವುದು,ಸಾಮಾನ್ಯವಾಗಿರುವ ಈ ದಿನಗಳಲ್ಲಿ ಕ್ರೋಂ ಬ್ರೌಸರ್,ಯಾವುದೇ ತಂತ್ರಾಂಶವನ್ನು ಅನುಸ್ಥಾಪಿಸುವಾಗ,ಅದರ ಆಂಡ್ರಾಯಿಡ್ ಆವೃತ್ತಿಯನ್ನು ಮೊಬೈಲಿಗಾಗಿ ಅನುಸ್ಥಾಪಿಸಿ,ಅದರ ಕೊಂಡಿಯನ್ನು ಮೊಬೈಲಿಗೆ ಕಳುಹಿಸಿ,ಡೆಸ್ಕ್‌ಟಾಪಿನಲ್ಲಿ ಕಂಡದ್ದೆಲ್ಲವನ್ನೂ ಮೊಬೈಲಿನಲ್ಲೂ ಕಾಣುವಂತೆ ನಿಗದಿಪಡಿಸಬಹುದು.ಫೈರ್‌ಫಾಕ್ಸ್ ಬಳಕೆದಾರರು ತಮ್ಮ ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪಿನಲ್ಲಿಕಂಡದ್ದನ್ನು ಮೊಬೈಲಿನಲ್ಲೂ ಕಾಣಿಸುವಂತೆ ಮಾಡುವ ಆಡಾನ್ ತಂತ್ರಾಂಶ ಬಳಸಬಹುದು.
-------------------------

ತುಷಾರ:ವಾರ್ಷಿಕ  ಚಂದಾ ಗೆಲ್ಲಿ!
ಈ ಪ್ರಶ್ನೆಗಳಿಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಉಡುಪಿ ಬ್ರಹ್ಮಗಿರಿಯ ಡಾ.ಶ್ರೀನಿವಾಸ್ ರಾವ್,ಪ್ರೊಫೆಸರ್,ನಿಟ್ಟೆ.
*ಆಂಡ್ರಾಯಿಡ್ ಫೋನ್‌ಗಳಲ್ಲಿ ಕನ್ನಡ ಅಂತರ್ಜಾಲ ತಾಣಗಳನ್ನು ಜಾಲಾಡಲು ಬಳಸಬಹುದಾದ ಬ್ರೌಸರ್ ಯಾವುದು?
*ನೋವೆಲ್ ಕಂಪೆನಿಯ ಲೀನಕ್ಸ್ ವಿತರಣೆ ಯಾವುದು?
(ಉತ್ತರಗಳನ್ನು nistantusansaara@gmail.comಗೆ ಮಿಂಚಂಚೆ ಮಾಡಿ,ವಿಷಯ:NS23 ನಮೂದಿಸಿ.)
ಕಳೆದ ವಾರದ ಸರಿಯುತ್ತರಗಳು:
*ಕಂಪ್ಯೂಟರ್ ಕೀಬೋರ್ಡ್,ಮೌಸ್ ತಪ್ಪು ಬಳಕೆಯಿಂದ ಬರುವ ಆರೋಗ್ಯ  ಸಮಸ್ಯೆ RSI ಅಥವಾ ಕಾರ್ಪಲ್ ಟನಲ್ ಸಿಂಡ್ರೊಂ.
*ಭಾರತೀಯ ಭಾಷೆಗಳನ್ನು ಬಳಸಲು ಲೀನಕ್ಸ್ ಆಪರೇಟಿಂಗ್ ವ್ಯವಸ್ಥೆಯಲ್ಲಿ ಬಳಸಬಹುದಾದ ವ್ಯವಸ್ಥೆ ಸ್ಕಿಮ್ ಅಥವಾ ಐಬಸ್. ಬಹುಮಾನ ಗೆದ್ದವರು ಶ್ರೀಕಾಂತ್ ಮಿಶ್ರಿಕೋಟಿ,ಮುಂಬೈ. ಅಭಿನಂದನೆಗಳು.
-----------------------------------------
ಮಿಶ್ರಿಕೋಟಿಯವರ ಸಾಹಿತ್ಯ ಕೃಷಿ
 (photo:hpn)
ಸಂಪದ ತಾಣದ ಬ್ಲಾಗ್ http://sampada.net/blog/shreekant_mishrikoti_0 ಶ್ರೀಕಾಂತರ ಮಿಶ್ರಿಕೋಟಿಯವರದ್ದು.ತಾನು ಓದಿದ ವಿಷಯಗಳು,ಪುಸ್ತಕಗಳು ಮತ್ತು ಇತರರ ಬ್ಲಾಗುಗಳನ್ನು ಸಂಪದ ಸಮುದಾಯದವರಿಗೂ ಪರಿಚಯಿಸುವ ಕೆಲಸವನ್ನವರು ಆಸ್ಥೆಯಿಂದ ಮಾಡುತ್ತಿದ್ದಾರೆ,ಬ್ಯಾಂಕ್ ಉದ್ಯೋಗಿಯಾಗಿ,ಕಂಪ್ಯೂಟರೀಕರಣದಲ್ಲಿ ತೊಡಗಿಸಿಕೊಂಡಿರುವ ಶ್ರೀಕಾಂತ್ ಮುಂಬೈವಾಸಿ.ಪುರಂದರದಾಸರ ಕೀರ್ತನೆಗಳನ್ನು http://haridasa.sampada.netಗೆ ಸೇರಿಸುವುದರಲ್ಲಿ ಗಂಭೀರವಾಗಿ ತೊಡಗಿ ಕೊಂಡವರಲ್ಲೋರ್ವರು.
-----------------------------------------------------
ಟ್ವಿಟರ್ ಚಿಲಿಪಿಲಿ
*ಭಾರತದ ಭ್ರಷ್ಟಾಚಾರದ ವಿಶ್ವರೂಪ ತಿಳಿದುಕೊಳ್ಳಲು http://www.truthaboutindiacorruption.org/ ನೋಡಿ.
*ಹೋಲಿ ಆಡುವ ಪೋಲಿಗಳ ಬಗ್ಗೆ ಗಮನವಿರಲಿ.
*ಭೂಕಂಪ,ಚಂಡಮಾರುತ,ನೆರೆ ಇತ್ಯಾದಿಗಳೇ,ಇನ್ನೂ 2012 ಬಂದಿಲ್ಲ,ನಿಮ್ಮ ಕ್ಯಾಲೆಂಡರ್ ನೋಡಿಕೊಳ್ಳಿ...
*ಚಿತ್ರ ನೋಡಲು ಚಿತ್ರಮಂದಿರಕ್ಕೆ ಹೋದವ,ಅಲ್ಲಿದ್ದ ಚಿತ್ರದ "ಹೌಸ್‌ಫುಲ್" ಪೋಸ್ಟರ್ ನೋಡಿ ವಾಪಸ್ಸು ಬಂದ!
Udayavani
*ಅಶೋಕ್‌ಕುಮಾರ್ ಎ

Monday, March 14, 2011

ಸೂಪರ್ ಮೂನ್:ಜಪಾನ್ ಭೂಕಂಪಕ್ಕೆ ಸಂಬಂಧವಿಲ್ಲ

ಸೂಪರ್ ಮೂನ್:ಜಪಾನ್ ಭೂಕಂಪಕ್ಕೆ ಸಂಬಂಧವಿಲ್ಲ
ಭೂಮಿ ಹಾಗು ಚಂದ್ರಪಥಗಳು ಮಾರ್ಚ್ ಹತ್ತೊಂಭತ್ತರಂದು ಅತ್ಯಂತ ನಿಕಟವಾಗಿ ಬಂದು,ಭೂಮಿ ಹಾಗು ಚಂದ್ರನ ಕಾಂತೀಯ ಬಲಗಳ ಘರ್ಷಣೆಯಿಂದ ಭೂಮಿಯಲ್ಲಿ ವಿಪತ್ತು ಸಂಭವಿಸಬಹುದು ಎನ್ನುವ ಗುಮಾನಿ ಜನರಲ್ಲಿ ಮೂಡಿದೆ.ಆದರೆ ಜಪಾನಿನಲ್ಲಿ ಭೂಕಂಪ,ಸುನಾಮಿಗಳು ಹತ್ತೊಂಭತ್ತನೇ ತಾರೀಕಿನ ಮುಂಚೆಯೇ ಆಗಿದೆ-ಮಾತ್ರವಲ್ಲದೆ,ಭೂಮಿಯ ಮೇಲೆ ಚಂದ್ರನ ಪ್ರಭಾವ ಅತಿ ಕಡಿಮೆ ಇದ್ದ ಸಮಯದಲ್ಲೇ,ಈ ಭೂಕಂಪ ಸಂಭವಿಸಿದೆ ಎಂದು ವಿಜ್ಞಾನಿಗಳು ಖಚಿತ ಪಡಿಸಿದ್ದಾರೆ.
--------------------------------------
ಫೇಸ್‌ಬುಕ್ಕಿನಲ್ಲಿ ಚಲನಚಿತ್ರ
ವಾರ್ನರ್ ಬ್ರದರ್ಸ್ ಸಂಸ್ಥೆ ಹಾಲಿವುಡ್ ಚಿತ್ರ ನಿರ್ಮಾಣ ಸಂಸ್ಥೆಗಳಲ್ಲೊಂದು.ತನ್ನ ಆಯ್ದ ಚಲನಚಿತ್ರಗಳನ್ನು ಫೇಸ್‌ಬುಕ್‌ನ ಬಳಕೆದಾರರಿಗೆ ಒದಗಿಸಲದು ತೀರ್ಮಾನಿಸಿದೆ.ಮೂರು ಡಾಲರು ತೆತ್ತರೆ,ಮೂರು ದಿನಗಳೊಳಗೆ,ಚಿತ್ರ ವೀಕ್ಷಣೆಯನ್ನು ಆನ್‌ಲೈನಿನಲ್ಲಿ ಮಾಡಲು ಬಳಕೆದಾರನಿಗೆ ಸಾಧ್ಯವಾಗಲಿದೆ.ಮೊದಲಾಗಿ ಬ್ಯಾಟ್‌ಮನ್ ಸರಣಿಯ ಡಾರ್ಕ್ ನೈಟ್ ಚಿತವು ವೀಕ್ಷಣೆಗೆ ಲಭ್ಯವಾಗಲಿದೆ.ಸಂಗೀತ ಕಂಪೆನಿಗಳು ಕಾಪಿ ರೈಟ್ ಕಾಯಿದೆಯ ಉಲ್ಲಂಘನೆಯ ಕಾರಣ ಅಂತರ್ಜಾಲದ ಪೈರಸಿ ಸಮಸ್ಯೆಗೆ ತುತ್ತಾದುದು ಈಗ ಹಳೆಯ ಕತೆ.ವಾರ್ನಸ್ ಬ್ರದರ್ಸ್ ಕಂಪೆನಿಗೆ ಈ ಕಹಿ ಘಟನೆಗಳ ಅರಿವಿದ್ದರೂ,ಮಾರುಕಟ್ಟೆ ವಿಸ್ತರಣೆಗೆ,ಡಿಜಿಟಲ್ ಹಂಚಿಕೆಯ ಹಾದಿ ಹಿಡಿಯುವ ತನ್ನ ನಿರ್ಧಾರದ ಭಾಗವಾಗಿ,ಈ ಹೊಸ ಜಾಡನ್ನು ಹಿಡಿಯಲದು ತೀರ್ಮಾನಿಸಿದೆ.
-----------------------
ಜಪಾನ್:ಭೂಕಂಪದಿಂದ ಕನಿಷ್ಠ ಹಾನಿ
ತೀವ್ರ ಭೂಕಂಪಾನಂತರವೂ ಜಪಾನಿನ ಬಹುತೇಕ ಕಟ್ಟಡಗಳು ಮತ್ತು ಸೇತುವೆಗಳು ಕುಸಿದಿಲ್ಲ.ಭೂಕಂಪ ನಿರೋಧ ತಂತ್ರಜ್ಞಾನದಿಂದ ನಿರ್ಮಿಸಿದ ಕಟ್ಟಡಗಳು ಆಳವಾದ ತಳಪಾಯ ಮತ್ತು ಆಘಾತವನ್ನು ತಾಳಿಕೊಳ್ಳುವಂತಹ ರಚನೆಗಳನ್ನು ಬಳಸಿ ನಿರ್ಮಿಸಿದ ಕಾರಣ ಇದು ಸಾಧ್ಯವಾಗಿದೆ.ತೊಂಭತ್ತರ ದಶಕದ ಮಧ್ಯ ಭಾಗದಲ್ಲಿ ಸಂಭವಿಸಿದ ಭೂಕಂಪದಿಂದ,ಜಪಾನಿನಲ್ಲಿ ಸುಮಾರು ಆರೂವರೆ ಸಾವಿರ ಜನ ಪ್ರಾಣ ಕಳೆದುಕೊಂಡ ನಂತರ,ಜಪಾನಿನಲ್ಲಿ ಕಟ್ಟಡ ರಚನೆಯಲ್ಲಿ ಹೊಸ ತಂತ್ರಜ್ಞಾನಗಳ ಬಳಕೆಗೆ ಒತ್ತು ನೀಡಿದ ಕಾರಣ,ಇದು ಸಾಧ್ಯವಾಗಿದೆ.ಸುನಾಮಿ ಬಗ್ಗೆ ಮುನ್ಸೂಚನೆ ನೀಡುವ ಅತ್ಯಾಧುನಿಕ ವ್ಯವಸ್ಥೆಯನ್ನೂ ಜಪಾನ್ ಸ್ಥಾಪಿಸಿದೆ.ಜಪಾನಿನ ನೌಕಾ ಪಡೆ ವ್ಯವಸ್ಥಿತವಾಗಿ,ಸುನಾಮಿ ಅಥವಾ ತುರ್ತು ಸ್ಥಿತಿಯಲ್ಲಿ ಸನ್ನದ್ಧವಾಗಿರಲು ತಾಲೀಮುಗಳನ್ನು ಮಾಡಿ,ಸರ್ವಸನ್ನದ್ಧವಾಗಿದೆ.ಹೀಗಾಗಿ,ಸುನಾಮಿಯಿಂದಲೂ ಹೆಚ್ಚಿನ ಹಾನಿಯಾಗುವುದು ತಪ್ಪಿರಬಹುದು ಎಂದು ಆರಂಭಿಕ ವರದಿಗಳು ಖಚಿತ ಪಡಿಸಿವೆ.
----------------------------------
ತುಷಾರ:ವಾರ್ಷಿಕ ಚಂದಾ ಗೆಲ್ಲಿ!
ಈ ಪ್ರಶ್ನೆಗಳಿಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಉಡುಪಿ ಬ್ರಹ್ಮಗಿರಿಯ ಡಾ.ಶ್ರೀನಿವಾಸ್ ರಾವ್,ಪ್ರೊಫೆಸರ್,ನಿಟ್ಟೆ.
*ಕಂಪ್ಯೂಟರ್ ಕೀಬೋರ್ಡ್,ಮೌಸ್ ತಪ್ಪು ಬಳಕೆಯಿಂದ ಬರುವ ಆರೋಗ್ಯ ಸಮಸ್ಯೆ ಏನು?
*ಭಾರತೀಯ ಭಾಷೆಗಳನ್ನು ಬಳಸಲು ಲೀನಕ್ಸ್ ಆಪರೇಟಿಂಗ್ ವ್ಯವಸ್ಥೆಯಲ್ಲಿ ಬಳಸಬಹುದಾದ ವ್ಯವಸ್ಥೆ ಯಾವುದು?
(ಉತ್ತರಗಳನ್ನು nistantusansaara@gmail.comಗೆ ಮಿಂಚಂಚೆ ಮಾಡಿ,ವಿಷಯ:NS22 ನಮೂದಿಸಿ.)
ಕಳೆದ ವಾರದ ಸರಿಯುತ್ತರಗಳು:
*ಲೀನಕ್ಸ್ ಮೂಲದ ಸ್ಮಾರ್ಟ್ ಫೋನ್ ಆಪರೇಟಿಂಗ್ ವ್ಯವಸ್ಥೆ ಆಂಡ್ರಾಯಿಡ್.
*ನಮ್ಮಲ್ಲಿ ಬಳಕೆಯಾಗುವ ಮತದಾನ ಯಂತ್ರದ ಅತ್ಯುತ್ತಮ ಗುಣಗಳಲ್ಲಿ ಪ್ರಮುಖವಾದದ್ದೆಂದರೆ ಬ್ಯಾಟರಿ ಚಾಲಿತ.ಬಹುಮಾನ ಗೆದ್ದವರು ಯಶಸ್ವಿನಿ,ಬೆಂಗಳೂರು.ಅಭಿನಂದನೆಗಳು.
-------------------------------------------------
ಓದಲು ಪ್ರೇರೇಪಿಸುವ ತಾಣ
http://www.goodreads.com ಅಂತರ್ಜಾಲ ತಾಣವು ಉತ್ತಮ ಪುಸ್ತಕಗಳನ್ನು ಓದಲು ಜನರನ್ನು ಪ್ರೇರೇಪಿಸುವ ಉದ್ದೇಶವನ್ನು ಹೊಂದಿದ ಅಂತರ್ಜಾಲ ತಾಣವಾಗಿದೆ.ಇಲ್ಲಿ ಜನರು ತಾವು ಓದಿದ ಪುಸ್ತಕಗಳ ಜಾಡು ಹಿಡಿದಿಡಲು ಅನುಕೂಲಕರವಾಗಿದೆ.ಹಾಗೆಯೇ,ತಮ್ಮ ಮಿತ್ರರಿಂದ ಪುಸ್ತಕ ಓದಿಗೆ ಸಲಹೆ ಪಡೆಯಲು,ತಾವು ಸ್ವತ: ಓದಿದ ಪುಸ್ತಕಗಳನ್ನು ಇತರರಿಗೆ ಶಿಫಾರಸು ಮಾಡಲೂ ಕೂಡಾ ಅಂತರ್ಜಾಲ ತಾಣ ಅನುಕೂಲ ಕಲ್ಪಿಸುತ್ತದೆ.ತಾಣವು Discovereads.com ಎಂಬ ಇನ್ನೊಂದು ತಾಣವನ್ನು ತನ್ನದಾಗಿಸಿಕೊಂಡಿದೆ.Discovereads.com ಜನರೋದುವ ಪುಸ್ತಕಗಳು,ಅವರು ಇತರತಿಗೆ ಮಾಡಿದ ಶಿಫಾರಸ್ಸು ಇವುಗಳ ಮೇಲೆ ಕಣ್ಣಿರಿಸಿ,ಅವುಗಳ ಮುಖಾಂತರ ಉತ್ತಮ ಪುಸ್ತಕಗಳನ್ನು ಶಿಫಾರಸು ಮಾಡುತ್ತದೆ.
-----------------------------------------
ಕಾರು ನಿಯಂತ್ರಣಕ್ಕೆ ಐಪ್ಯಾಡ್
ಐಪ್ಯಾಡ್ ಮೂಲಕ ಕಾರು ಚಲಾವಣೆಗೆ ನೆರವು,ಉಪಗ್ರಹ ಆಧಾರಿತ ಪಥದರ್ಶನ,ಕಾರಿನೊಳಗೆ ಮನರಂಜನೆಗೆ ಐಪ್ಯಾಡ್ ಬಳಕೆ ಇವು ಮುಂದಿನ ಪೀಳಿಗೆಯ ವಾಹನಗಳಲ್ಲಿ ಸಾಮಾನ್ಯವಾಗುವ ಸೂಚನೆಗಳು,ಜಿನೇವಾದಲ್ಲಿ ನಡೆದ ಅಟೊಮೋಬೈಲ್ ಪ್ರದರ್ಶನದ ವೇಳೆಸಿಕ್ಕಿವೆ.ಇಂತಹ ಸಾಧನಗಳ ಬಳಕೆ ಇದೀಗಲೇ ವಿಪರೀತವಾಗಿ,ಅವುಗಳ ಕಾರಣ,ಚಾಲಕರ ಗಮನ ರಸ್ತೆಯಿಂದ ಬೇರೆಡೆ ಹೆಚ್ಚಾಗಿ ಹರಿದು,ಅಪಘಾತಗಳು ಹೆಚ್ಚಾಗಿವೆ ಎಂಬ ದೂರುಗಳು ಈಗಾಗಲೇ ಇವೆ.ಆದರೆ ಗ್ರಾಹಕರು ಹೆಚ್ಚು ಆಧುನಿಕ ಕಾರುಗಳನ್ನು ಅಪೇಕ್ಷಿಸುವ ಕಾರಣ,ಐಪ್ಯಾಡ್ ಅಂತಹ ಜನಪ್ರಿಯ ಸಾಧನಗಳನ್ನು,ವಾಹನಗಳಲ್ಲಿ ಸೇರಿಸದೇ ಇರಲು ಜನಪ್ರಿಯ ಕಾರು ತಯಾರಕರು ಸಿದ್ಧರಿಲ್ಲ.ರಸ್ತೆ ಬಳಕೆದಾರರನ್ನು ದೇವರೇ ಕಾಪಾಡಬೇಕು ಅಂದಿರಾ?
-----------------------------------------
ವೈ-ಫೈ:ಕೇಬಲ್‌ಗೆ ಹೋಲಿಸಿದರೆ ನಿಧಾನ
ನಿಸ್ತಂತು ಸಂಪರ್ಕದ ಮೂಲಕ ಅಂತರ್ಜಾಲ ಸಂಪರ್ಕ ಅನುಕೂಲಕರ-ಆದರೆ ಕೇಬಲ್ ಮೂಲಕ ಪಡೆವ ಸಂಪರ್ಕಕ್ಕೆ ಹೋಲಿಸಿದರೆ,ಅದು ಶೇಕಡಾ ಮೂವತ್ತರಷ್ಟು ನಿಧಾನವಾಗುತ್ತವೆ.ಆದರೆ ಹೆಚ್ಚಿನ ಬಳಕೆದಾರರು,ಮಿಂಚಂಚೆ ಮತ್ತು ಅಂತರ್ಜಾಲ ತಾಣಗಳನ್ನು ಜಾಲಾಡಲು ಅಂತರ್ಜಾಲ ಬಲಸುವುದರಿಂದ,ಇದನ್ನು ಗಮನಿಸಲಾರರು.ಕಡತಗಳನ್ನು ಇಳಿಸಿಕೊಳ್ಳುವಾಗಲಷ್ಟೇ, ಅಂತರ್ಜಾಲ ನಿಧಾನವಾಗುವುದು ಗಮನಕ್ಕೆ ಬಂದೀತು.
-------------------------------------
ಟ್ವಿಟರ್ ಚಿಲಿಪಿಲಿ
*ನರಕವಾಸಿ ಗಂಡಸು ತನ್ನ ಪತ್ನಿಗೆ ಮೊಬೈಲ್ ಕರೆ ಮಾಡಿದ ನಂತರ ಕಾಲ್‌ಸೆಂಟರಿನಲ್ಲಿ ಕರೆಗೆ ದರವೆಷ್ಟು ಎಂದು ವಿಚಾರಿಸಿದಾಗ"ನರಕದಿಂದ ನರಕಕ್ಕೆ ಕರೆ ಉಚಿತ"ಎಂದುತ್ತರ ಬಂತು!
*ನಮ್ಮನ್ನು ಅಪೇಕ್ಷಿಸುವವರನ್ನು ನಾವು ಉಪೇಕ್ಷಿಸುತ್ತೆವೆ-ನಮ್ಮನ್ನು ಉಪೇಕ್ಷಿಸುವವರನ್ನು ಅಪೇಕ್ಷಿಸುವುದೇ ಜೀವನದ ವೈಚಿತ್ರ್ಯ!
*ಯುಪಿಎ ಚಿತ್ರ:7 ಸ್ಕ್ಯಾಮ್ ಮಾಫ್!

udayavani
*ಅಶೋಕ್‌ಕುಮಾರ್ ಎ

Monday, March 07, 2011

ಹೊಸ ಐಪ್ಯಾಡ್:ಹೆಚ್ಚು ಆಕರ್ಷಕ

ಹೊಸ ಐಪ್ಯಾಡ್:ಹೆಚ್ಚು ಆಕರ್ಷಕ
ಟ್ಯಾಬ್ಲೆಟ್ ಸಾಧನಗಳ ಮಾರುಕಟ್ಟೆಯಲ್ಲಿ ಇನ್ನೇನು ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ,ಮೊಟೊರೊಲಾದ ಕ್ಸೂಮ್,ಬ್ಲ್ಯಾಕ್‌ಬೆರಿ ಕಂಪೆನಿಯ ಪ್ಲೇಬುಕ್ ಮುಂತಾದ ವಿವಿಧ ಉತ್ಪನ್ನಗಳ ಆಯ್ಕೆ ಲಭ್ಯವಾಗಿ ಸ್ಪರ್ಧೆ ಕಾವೇರಿದೆ.ಆಪಲ್ ಕಂಪೆನಿಯು ಈ ಸ್ಪರ್ಧೆಯನ್ನು ಎದುರಿಸಲು ಎರಡನೇ ಆವೃತ್ತಿಯ ಐಪ್ಯಾಡ್‌ಗಳ ಸುಧಾರಿತ ಉತ್ಪನ್ನಗಳನ್ನು ಹೊರತರುವುದರಲ್ಲಿದೆ.ಮಾರ್ಚ್ ಅಂತ್ಯದ ವೇಳೆ ಅಮೆರಿಕಾ,ಯುರೋಪುಗಳಲ್ಲಿವು ಲಭ್ಯವಾಗುವ ನಿರೀಕ್ಷೆಯಿದೆ.ಹಳೆ ಬೆಲೆಗೆ ಹೆಚ್ಚು ಹಗುರ,ತೆಳು ಮತ್ತು ಹೆಚ್ಚು ಸಂಸ್ಕರಣ ಸಾಮರ್ಥ್ಯವಿರುವ ಐಪ್ಯಾಡ್2 ಎಂಬ ಹೆಸರಲ್ಲಿ ಬಿಡುಗಡೆಯಾಗಲಿದೆ.ಡ್ಯುಲ್ ಕೋರ್ ಸಂಸ್ಕಾರಕವು ಎರಡು ಪಟ್ಟು ಹೆಚ್ಚು ವೇಗದ್ದಾಗಿದ್ದು,ಹಳೆಯ ಐಪ್ಯಾಡುಗಳಿಗಿಂತ ಮೂವತ್ತಮೂರು ಶೇಕಡಾ ತೆಳುವಾಗಿ,ಹದಿನೈದು ಶೇಕಡಾ ಹಗುರದ್ದಾಗಿರುತ್ತದೆ.ಗ್ರಾಫಿಕ್ಸ್ ಸಾಮರ್ಥ್ಯವು ಹಳೆಯವುಗಳ ಹದಿನೈದು ಪಟ್ಟು ಉತ್ತಮವಾಗಿರುತ್ತದೆ.ಮುಂಭಾಗ ಮತ್ತು ಹಿಂಭಾಗದಲ್ಲಿ-ಹೀಗೆ ಎರಡು ಕ್ಯಾಮರಾಗಳಿವೆ.ಎದುರಿನದ್ದು ವಿಡಿಯೋ ಚ್ಯಾಟಿಂಗ್‌ಗೆ ಅನುಕೂಲಕರವಾದರೆ,ಹಿಂದಿನದ್ದು ವಿಡಿಯೋ ಮತ್ತು ಚಿತ್ರಗ್ರಹಣಕ್ಕೆ ಅನುಕೂಲಕರವಾಗಿದೆ.ಐಪ್ಯಾಡಿನ ಮುಚ್ಚಿಕೆಯು ಅದನ್ನು ತೆರೆದಿಟ್ಟಾಗ,ನೇರ ನಿಲ್ಲಿಸಲು ಆಧಾರವಾಗಿಯೂ ಕೆಲಸ ಮಾಡುತ್ತದೆ.ಎಚ್ ಡಿ ಎಂ ಐ ಪೋರ್ಟ್ ಬಳಸಿಕೊಂಡು ಎಚ್ ಡಿ ಟಿ ವಿ ತೆರೆಯಲ್ಲಿ ಐಪ್ಯಾಡ್‌ನ ತೆರೆಯಲ್ಲಿ ಕಾಣುತ್ತಿರುವುದರ ದರ್ಶನಕ್ಕೆ ಅನುಕೂಲ ಕಲ್ಪಿಸುತ್ತದೆ.ತೆರೆಯು ಹತ್ತಿಂಚಿಗಿಂತ ತುಸುವಷ್ಟೇ ಕಡಿಮೆ.ತೂಕ ಆರುನೂರು ಗ್ರಾಮಿನಷ್ಟು.ಹದಿನಾರು ಜೀಬಿ ಸಾಮರ್ಥ್ಯದ್ದಕ್ಕೆ ಐನೂರು ಡಾಲರು ಬೆಲೆ.ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ ಐಪ್ಯಾಡ್ ಖರೀದಿ ಆಯ್ಕೆ ಗ್ರಾಹಕನಿಗೆ ಸಿಗಲಿದೆ.ಇದರಲ್ಲಿ ಲಭ್ಯವಿರುವ ರಾಮ್ ಸ್ಮರಣ ಸಾಮರ್ಥ್ಯದಲ್ಲಿ ವೃದ್ಧಿಯಾಗಿಲ್ಲ.ತೆರೆಯ ಸ್ಪಷ್ಟತೆಯಲ್ಲೂ ಹೆಚ್ಚಳವಾಗಿಲ್ಲ.ಆದರೂ ಜನರು ಹೊಸ ಐಪ್ಯಾಡ್ ಬಗ್ಗೆ ಹುಚ್ಚು ಕಟ್ಟಿದ್ದಾರೆ ಎಂದು ಅಮೆರಿಕಾ,ಯುರೋಪುಗಳ ವರದಿಗಳು ತಿಳಿಸುತ್ತವೆ.ಐಪ್ಯಾಡ್2 ಬಗ್ಗೆ ಮಾಹಿತಿ ನೀಡಲು ಜಡ್ಡು ಹಿಡಿದು ಮಲಗಿದ್ದರೆನ್ನಲಾದ ಸ್ಟೀವ್ ಜಾಬ್ಸ್ ಹಾಜರಾಗಿ ಅಚ್ಚರಿ ಮೂಡಿಸಿದರು.
----------------------------------------------
ಪಿಸಿ ಮಾರಾಟ:ಇಳಿಕೆ
ಐಪ್ಯಾಡ್ ಸಾಧನಗಳ ಬಗ್ಗೆ ಗರಿಗೆದರಿರುವ ಉತ್ಸಾಹದಿಂದಾಗಿ ಕಂಪ್ಯೂಟರ್ ಪಿಸಿಗಳ ಮಾರಾಟ ಇಳಿಕೆ ಕಂಡು ಬಂದಿದೆ.ಕಿರಿದು ಗಾತ್ರ,ಸಾಮರ್ಥ್ಯದಲ್ಲಿ ಹಿರಿದು ಎಂಬ ಅಗ್ಗಳಿಕೆಯ ಐಪ್ಯಾಡ್‌ಗಳ ಇದುವರೆಗೆ ಹದಿನೈದು ದಶಲಕ್ಷ ಐಪ್ಯಾಡುಗಳು ಮಾರಾಟವಾಗಿವೆ. ಈ ವರ್ಷ ಐವತ್ತು ದಶಲಕ್ಷ ಐಪ್ಯಾಡುಗಳು ಮಾರಾಟವಾಗುವ ನಿರೀಕ್ಷೆಯಿದೆ.ಇದು ಖಂಡಿತವಾಗಿಯೂ ಪಿಸಿ ಮಾರಾಟದಲ್ಲಿ ಇಳಿಕೆಗೆ ಕಾರಣವಾಗಲಿದೆಯೆನ್ನುವುದು ಕಂಪ್ಯೂಟರ್ ಕ್ಷೇತ್ರದ ಗಾರ್ಟನರ್ ಸಂಸ್ಥೆಯ ಎಣಿಕೆ.ಬ್ಯಾಟರಿ ಬ್ಯಾಕಪ್ ಲಭ್ಯತೆಯ ಕಾರಣ ಎಲ್ಲೆಂದರಲ್ಲಿಗೆ ಎತ್ತಿ ಒಯ್ದು ಬಳಸಲಾಗುವ ಅನುಕೂಲತೆ ಮತ್ತು ಅಂತರ್ಜಾಲ ಮೂಲಕ ಹೆಚ್ಚಿನ ಕೆಲಸಗಳನ್ನು ಮಾಡಿಕೊಳ್ಳಲು ಸಾಧ್ಯವಾಗಿರುವ ಸದ್ಯದ ಕ್ಲೌಡ್ ಕಂಪ್ಯೂಟಿಂಗಿನ ಜನಪ್ರಿಯತೆ,ಇದಕ್ಕೆ ಕಾರಣವಾಗ ಬಲ್ಲ ಅಂಶಗಳೆಂದು ಗಾರ್ಟನರ್ ಗುರುತಿಸಿದೆ.
-------------------------------------------
ಸೌರಶಕ್ತಿಚಾಲಿತ ಕಂಪ್ಯೂಟರ್ ಕೀಲಿಮಣೆ
ಲಾಜಿಟೆಕ್ ಕಂಪೆನಿಯು ಬೆಳಕಿನಿಂದ ಚಾರ್ಜ್ ಆಗಬಲ್ಲ, ಬ್ಯಾಟರಿಯಿಂದ ಚಾಲಿತ ನಿಸ್ತಂತು ಕೀಲಿಮಣೆಯನ್ನು ಅಭಿವೃದ್ಧಿಪಡಿಸಿದೆ.ಇದನ್ನು ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪಿಗೆ ನಿಸ್ತಂತು ಮೂಲಕ ಸಂಪರ್ಕಿಸಿ ಬಳಸಬಹುದು.ಕೀಲಿಮಣೆಯ ವಿನ್ಯಾಸವು ಕೈಬೆರಳುಗಳಿಗೆ ಆರಾಮದಾಯಕ ಅನುಭವ ನೀಡುವಂತಿದೆ.ಬಲ್ಬಿನ ಬೆಳಕಿನಲ್ಲಿ ಟೈಪಿಸಿದರೂ ಬ್ಯಾಟರಿ ರಿಚಾರ್ಜ್ ಆಗಲು ಸಮರ್ಥವಾಗಿದೆ.ಆಗೊಮ್ಮೆ ಈಗೊಮ್ಮೆ ಹೆಚ್ಚಿನ ಬೆಳಕಿಗೊಡ್ಡಿದರೂ ಸಾಕಾಗುತ್ತದಂತೆ.ವಾರಗಟ್ಟಲೆ ಬಳಸದೆ ಮೂಲೆಯಲ್ಲಿಟ್ಟಾಗಲೂ ಬ್ಯಾಟರಿ ಬರಿದಾಗದೆನ್ನುವುದು ಕೀಲಿಮಣೆಯ ಹೆಗ್ಗಳಿಕೆ.
-----------------------------------------
ಕೊರಿಯಾ:ಸೈಬರ್ ವಾರ್
ದಕ್ಷಿಣ ಕೊರಿಯಾದ ಕೆಲವಾರು ಬ್ಯಾಂಕಿಂಗ್,ಸರಕಾರಿ,ಮಿಲಿಟರಿ ಅಂತರ್ಜಾಲ ತಾಣಗಳು ದಾಳಿಗೀಡಾಗಿವೆ.ಇದರಿಂದ ತಾಣಗಳ ಸೇವೆಯು ಬಾಧಿತವಾಯಿತು ಎಂದು ವರದಿಯಾಗಿದೆ.ದೇಶದ ಶೇರು ಮಾರುಕಟ್ಟೆಯ ವ್ಯವಹಾರವೂ ತುಸು ಹೊತ್ತು ನಿಂತಿತ್ತು.ಕಳೆದ ವರ್ಷದಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆದ ದಾಳಿಗಳಂತೆ ಇವೂ,ಕಡತ ವರ್ಗಾವಣೆಗೆ ಅನುಕೂಲ ಕಲ್ಪಿಸುವ ತಾಣಗಳ ಮೂಲಕ ನಡೆದ ದಾಳಿಗಳಾಗಿದ್ದುವು.ಕಡತ ಇಳಿಸಿಕೊಂಡವರ ಕಂಪ್ಯೂಟರುಗಳನ್ನು ವಶೀಕರಿಸಿಕೊಂಡು,ಅವುಗಳ ಮೂಲಕ ನಡೆದ ದಾಳಿಗಳಿವು.ಈ ದಾಳಿಗಳ ಮೂಲಗಳ್ಯಾವುವು ಎನ್ನುವುದಿನ್ನೂ ಪತ್ತೆ ಹಚ್ಚಬೇಕಿದೆ.
---------------------------------------------
ತುಷಾರ:ವಾರ್ಷಿಕ ಚಂದಾ ಗೆಲ್ಲಿ!
ಈ ಪ್ರಶ್ನೆಗಳಿಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಉಡುಪಿ ಬ್ರಹ್ಮಗಿರಿಯ ಡಾ.ಶ್ರೀನಿವಾಸ್ ರಾವ್,ಪ್ರೊಫೆಸರ್,ನಿಟ್ಟೆ.
*ಲೀನಕ್ಸ್ ಮೂಲದ ಸ್ಮಾರ್ಟ್ ಫೋನ್ ಆಪರೇಟಿಂಗ್ ವ್ಯವಸ್ಥೆ ಯಾವುದು?
*ನಮ್ಮಲ್ಲಿ ಬಳಕೆಯಾಗುವ ಮತದಾನ ಯಂತ್ರದ ಅತ್ಯುತ್ತಮ ಗುಣ ಏನು?
(ಉತ್ತರಗಳನ್ನು nistantusansaara@gmail.comಗೆ ಮಿಂಚಂಚೆ ಮಾಡಿ,ವಿಷಯ:NS21 ನಮೂದಿಸಿ.)
ಕಳೆದ ವಾರದ ಸರಿಯುತ್ತರಗಳು:
*ಕೇರಳದಲ್ಲಿ ಶಿಕ್ಷಣಕ್ಕೆ ಲೀನಕ್ಸ್ ಆಪರೇಟಿಂಗ್ ವ್ಯವಸ್ಥೆ ಬಳಸುವ ಯೋಜನೆ ಐಟಿ@ಸ್ಕೂಲ್.
*ಮೈಂಡ್‌ಮ್ಯಾಪಿಂಗಿಗೆ ಬಳಸಬಹುದಾದ ಜನಪ್ರಿಯ ತಂತ್ರಾಂಶ ಫ್ರೀಮೈಂಡ್.ಬಹುಮಾನ ಗೆದ್ದವರು ಅಶೋಕ್ ಶೆಟ್ಟಿಗಾರ್,ಅಲೆವೂರು,ಉಡುಪಿ.ಅಭಿನಂದನೆಗಳು.
-------------------------------------------------
ಟ್ವಿಟರ್ ಚಿಲಿಪಿಲಿ
*ರಸ್ತೆಯ ಎರಡೂ ಪಕ್ಕಗಳ ಮರ ಕಡಿಯುವ ಬದಲಿಗೆ,ಅಗಲೀಕರಣವನ್ನು ಒಂದೇ ಬದಿಗೆ ಸೀಮಿತಗೊಳಿಸಬಹುದಲ್ಲಾ?
*ತಪ್ಪು ಮಾಡಬಹುದೆಂಬ ಭಯವನ್ನು ಸದಾ ಹೊಂದುರುವುದೇ ದೊಡ್ಡ ತಪ್ಪು..
*ಅಧಿಕಾರ ಬಿಡಲೊಲ್ಲದ ರಾಜಕಾರಣಿ ಬಗ್ಗೆ ಕುಹಕ: ನೀವು ಫೆವಿಕಾಲ್ ಜಾಹೀರಾತಿಗೆ ಮಾಡೆಲ್ ಆಗಲು ಸೂಕ್ತರು......
UDAYAVANI
*ಅಶೋಕ್‌ಕುಮಾರ್ ಎ