Monday, April 25, 2011

ಆನ್‌ಲೈನ್ ಆವೃತ್ತಿಗೆ ಲಕ್ಷ ಚಂದಾದಾರರು

ಆನ್‌ಲೈನ್ ಆವೃತ್ತಿಗೆ ಲಕ್ಷ ಚಂದಾದಾರರು
 
ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಆನ್‍ಲೈನ್ ಆವೃತ್ತಿ ಈಗ ಉಚಿತವಲ್ಲ.ಮಾಸಿಕ ಶುಲ್ಕ ಹದಿನೈದರಿಂದ ಮೂವತ್ತೈದು ಡಾಲರುಗಳ ವಿವಿಧ ಪ್ಯಾಕೆಜುಗಳಲ್ಲಿ ಲಭ್ಯ.ಯಾವ ಸಾಧನದ ಮೂಲಕ ಪತ್ರಿಕೆ ಓದುತ್ತಾರೋ ಅನ್ನುವುದರ ಮೆಲೆ,ಈ ಶುಲ್ಕ ನಿಗದಿಯಾಗುತ್ತದೆ.ಐಫೋನ್ ಮೂಲಕ ಪತ್ರಿಕೆ ಓದುವವರ ಸಂಖ್ಯೆ ದೊಡ್ದದು.ಜೂನ್ ತಿಂಗಳ ನಂತರ ಆಪಲ್ ಜತೆ ಚಂದಾದಾರಿಕೆಯ ಶುಲ್ಕವನ್ನು ಹಂಚಿಕೊಳ್ಳುವ ಒಪ್ಪಂದ ಏರ್ಪಟ್ಟಿದೆ.ಸುದ್ದಿಯನ್ನು ಹಣತೆತ್ತು ಒದುವವರ ಸಂಖ್ಯೆ ದೊಡ್ದದಿಲ್ಲ ಎನ್ನುವ ಕೂಗಿನ ನಡುವೆಯೇ,ಒಂದೇ ತಿಂಗಳಲ್ಲಿ ಲಕ್ಷ ಚಂದಾದಾರರನ್ನು ಬಗಲಿಗೆ ಹಾಕಿಕೊಂಡು ನ್ಯೂಯಾರ್ಕ್ ಟೈಮ್ಸ್,ಹೊಸ ಪೀಳಿಗೆ ಹಣದ ಮುಖವನ್ನೇ ನೋಡದೆ ಗುಣಮಟ್ಟಕ್ಕೂ ಬೆಲೆ ಕೊಡುತ್ತದೆ ಎನ್ನುವ ಆಶಾವಾದವನ್ನು ಚಿಗುರಿಸಿದೆ.ಆದರೆ ಚಂದಾದಾರರ ಸಂಖ್ಯೆ ಇನ್ನಷ್ಟು ಏರಬೇಕು.ಅದು ನಿಜಕ್ಕೂ ಸವಾಲೇ ಸರಿ.
----------------------------------------
ಗೂಗಲ್ ಮ್ಯಾಪ್:ಜನರ ಸಹಭಾಗಿತ್ವ
ಗೂಗಲ್ ಮ್ಯಾಪಿನ ರಸ್ತೆಗಳ ನಕ್ಷೆಯನ್ನು ಮಾರ್ಪಡಿಸಲು ಜನರಿಗೇ ಅವಕಾಶ ಸಿಗುತ್ತಿದೆ.ಹಲವೆಡೆ ಇದರ ಮೂಲಕ ಜನರಿಗೆ ಮ್ಯಾಪ್ ಬಳಕೆ ಹೆಚ್ಚು ಅರ್ಥಪೂರ್ಣವಾಗುತ್ತದೆ.ಏಕಪಥ ರಸ್ತೆಗಳು,ಬೈಕ್‌ಗಾಗಿ ಮೀಸಲಿರಿಸಿದ ರಸ್ತೆಗಳು,ಮುಖ್ಯ ರಸ್ತೆ ಗುರುತುಗಳು ಇವುಗಳು ಸ್ಥಳೀಯರಿಗೆ ಅಥವಾ ರಸ್ತೆ ಬಳಕೆದಾರರಿಗೇ ಚೆನ್ನಾಗಿ ಗೊತ್ತಿರುತ್ತದೆ.ಅದನ್ನು ನಕ್ಷೆಯಲ್ಲಿ ಪಡಿಮೂಡಿಸಿದರೆ,ಅದು ಬಳಕೆದಾರರಿಗೆ ಹೆಚ್ಚು ಅನುಕೂಲ ಒದಗಿಸುತ್ತದೆ.ಈ ದೃಷ್ಟಿಯಿಂದ ಮ್ಯಾಪುಗಳಲ್ಲಿ ಮಾಹಿತಿಗಳನ್ನು ಸೇರಿಸಲು ನೋಂದಾಯಿತ ಬಳಕೆದಾರರಿಗೆ ಅವಕಾಶ ಸಿಗುತ್ತದೆ.ಆದರೆ,ಮಾಡಿದ ಬದಲಾವಣೆಗಳನ್ನು ಉಳಿಸುವ ಅಥವಾ ತಿರಸ್ಕರಿಸಲು ನಿರ್ವಾಹಕರು ಇರುತ್ತಾರೆ.ಈಗ ಅಮೆರಿಕಾದ ಪೂರ್ತಿ ನಕ್ಷೆಯೂ ಇದೇ ರೀತಿ,ಜನರಿಗೆ ಮುಕ್ತವಾಗಿ ತೆರೆದಿದೆ.
------------------------------------------
ಸ್ಯಾಮ್‌ಸಂಗ್ ಮತ್ತು ಅಪಲ್:ವಿವಾದ

ಕಂಪೆನಿಗಳು ತಮ್ಮ ಉತ್ಪನ್ನವನ್ನು ಬೇರೆ ಕಂಪೆನಿಗಳು ನಕಲಿ ಮಾಡುವ ಬಗ್ಗೆ ಆರೋಪ ಮಾಡುವುದು ಹೊಸತೇನಲ್ಲ.ಆಪಲ್ ಮತ್ತು ಸ್ಯಾಮ್‍೬ಸಂಗ್ ಕಂಪೆನಿಗಳೂ ಪರಸ್ಪರ ದೂಷಿಸಿಕೊಂಡು,ಕೋರ್ಟಿನ ಮೆಟ್ಟಿಲೂ ಏರಿವೆ.ಆಪಲ್ ಟ್ಯಾಬ್ಲೆಟ್ ಸಾಧನವನ್ನು ಸ್ಯಾಮ್‍ಸಂಗ್ ಕಂಪೆನಿಯ ಗ್ಯಾಲಕ್ಸಿ ಹೋಲುತ್ತದೆ ಎನ್ನುವುದು ಆಪಲ್‌ ಕಂಪೆನಿಯ ಅರೋಪ.ಹಲವು ಪೇಟೆಂಟುಗಳಿರುವ ವಿನ್ಯಾಸಗಳನ್ನು ತನ್ನ ಪ್ರತಿಸ್ಪರ್ಧಿ ನಕಲಿ ಮಾಡಿದೆ ಎಂದು ಅಮೆರಿಕಾದಲ್ಲಿ ಆಪಲ್ ವ್ಯಾಜ್ಯ ಹೂಡಿದೆ.ಸ್ಯಾಮ್‍ಸಂಗ್ ಕಂಪೆನಿಯೂ ಸುಮ್ಮನೆ ಕುಳಿತಿಲ್ಲ.ಸಂಪರ್ಕ ಮತ್ತು ಮೊಬೈಲ್ ಫೋನುಗಳನ್ನು ಪಿಸಿಗಳಿಗೆ ಸಂಪರ್ಕಿಸುವ ವಿಧಾನಗಳನ್ನು ಆಪಲ್ ನಕಲಿ ಮಾಡಿ,ತನ್ನ ಹಕ್ಕುಸ್ವಾಮ್ಯವನ್ನು ಮುರಿದಿದೆ ಎಂದು ಸ್ಯಾಮ್‌ಸಂಗ್ ಆರೋಪಿಸಿದೆ.ಈ ವ್ಯಾಜ್ಯವನ್ನದು ಕೊರಿಯಾದ ನ್ಯಾಯಾಲಯದಲ್ಲಿ ಹೂಡಿದೆ.ಆಪಲ್ ಕಂಪೆನಿಯು ಸ್ಯಾಮ್‍ಸಂಗ್ ಕಂಪೆನಿಯ ಮೇಲೆ ಒತ್ತಡ ಹೇರಲು ಈ ಮಾರ್ಗ ಹಿಡಿದಿದೆ ಎಂದು ಗುಮಾನಿ.ಆಪಲ್ ತನ್ನ ಸಾಧನಗಳಲ್ಲಿ ಸ್ಯಾಮ್‌ಸಂಗ್ ಕಂಪೆನಿಯು ಪೂರೈಸಿದ ಬಿಡಿಭಾಗಗಳನ್ನು ಬಳಸುತ್ತಿದೆ.ಸ್ಯಾಮ್‌ಸಂಗ್ ಕಂಪೆನಿಯು,ತನ್ನ ಗ್ರಾಹಕನನ್ನು ಕಳೆದುಕೊಳ್ಳುವ ಅಪಾಯ ಇದ್ದರೂ,ಆರೋಪವನ್ನು ಧೈರ್ಯವಾಗಿ ಎದುರಿಸದೆ ಸುಮ್ಮನಿದ್ದರೆ,ತನ್ನ ಉತ್ಪನ್ನಗಳ ಸಾಚಾತನದ ಬಗ್ಗೆ ಖಾತರಿ ಹೊಂದಿಲ್ಲ ಎನ್ನುವ ಆರೋಪವನ್ನೂ ಎದುರಿಸಬೇಕಿತ್ತು.
------------------------------------------------------------------------------------------
ಬ್ಯಾಂಕ್:ಆನ್‌ಲೈನ್ ಬಳಕೆ ಹೆಚ್ಚಳ
ಭಾರತದ ಏಳು ಕೋಟಿ ಅಂತರ್ಜಾಲ ಬಳಕೆದಾರರ ಪೈಕಿ ಕಾಲು ಭಾಗದಷ್ಟು ಅಂದರೆ ಸುಮಾರು 1.85 ಕೋಟಿ ಬಳಕೆದಾರರು ಬ್ಯಾಂಕು ಸೇವೆಗಳನ್ನು ಆನ್‌ಲೈನ್‌ನಲ್ಲಿ ಪಡೆಯುತ್ತಿದ್ದಾರೆ.ಸ್ಟೇಟ್‌ಬ್ಯಾಂಕ್,ಐಸಿಐಸಿಐ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕುಗಳಿಗೆ ಹೆಚ್ಚು ಆನ್‌ಲೈನ್ ಗ್ರಾಹಕರಿದ್ದಾರೆ.ಮಾರ್ಚಿನಲ್ಲಿ ಈ ಸಂಖ್ಯೆ ಕ್ರಮವಾಗಿ 46.5,59.5ಮತ್ತು 57.1ಲಕ್ಷಗಳು.ಇನ್ನೊಂದು ಕುತೂಹಲದ ವಿಷಯವೆಂದರೆ ಕೊನೆಗೂ ಭಾರತದ ಮಹಾನಗರಗಳಲ್ಲಿ ವಾಸಿಸದ ಗ್ರಾಹಕರೂ ಅಂತರ್ಜಾಲ ಬ್ಯಾಂಕಿಂಗ್ ಸೇವೆಗಳ ಬಳಕೆಯಲ್ಲಿ ಹಿಂದೆ ಬಿದ್ದಿಲ್ಲ.ಈಗ ಮಹಾನಗರವಾಸಿಗಳು ಮತ್ತು ಉಳಿದೆಡೆಯ ಗ್ರಾಹಕರ ಸಂಖ್ಯೆ ಬಹುತೇಕ ಸಮ ಸಮವಾಗಿದೆ.ಉದಾಹರಣೆಗೆ ಐಸಿಐಸಿಐ ಬ್ಯಾಂಕಿನ ಬಳಕೆದಾರರಲ್ಲಿ ಅರ್ಧಾಂಶ ಜನ ದೆಹಲಿ,ಚೆನ್ನೈ,ಮುಂಬೈ,ಕೊಲ್ಕಟಾ ಮತ್ತು ಬೆಂಗಳೂರಿನವರಾದರೆ ಉಳಿದವರು ಇತರ ನಗರ ಪಟ್ಟಣಗಳವರು.ಬ್ಯಾಂಕು ಸೇವೆಯನ್ನು ಇನ್ನಷ್ಟು ಜನಪ್ರಿಯವಾಗಿಸಲು,ಬ್ಯಾಂಕುಗಳು ಮೊಬೈಲ್ ಬ್ಯಾಂಕಿಂಗಿಗೆ ಪ್ರಾಧಾನ್ಯ ನೀಡಲಾರಂಭಿಸಿವೆ.ತಂತ್ರಾಂಶವನ್ನಿಳಿಸಿಕೊಂಡು,ಅದನ್ನು ಹ್ಯಾಂಡ್‌ಸೆಟ್ಟಿನಲ್ಲಿ ಸ್ಥಾಪಿಸಿ,ಅದರ ಮೂಲಕ ಬ್ಯಾಂಕಿನಲ್ಲಿ ಮೊಬೈಲ್ ಬ್ಯಾಂಕಿಂಗ್ ಸೇವೆಗೆ ನೋಂದಾಯಿಸಿ ಎಂಎಮೈಡಿ ನಂಬರ್ ಪಡೆದರೆ, ಅಂತರಬ್ಯಾಂಕ್ ನಡುವೆ ಹಣ ವರ್ಗಾವಣೆಯ ಸೇವೆ ಪಡೆಯುವುದು ಸಾಧ್ಯ.
--------------------------------
ಆಂಡ್ರಾಯಿಡ್ ಫೋನಿನಲ್ಲಿ ಕನ್ನಡ
ಆಂಡ್ರಾಯಿಡ್ ಫೋನಿನಲ್ಲಿ ಕನ್ನಡ ಅಂತರ್ಜಾಲ ಪುಟಗಳನ್ನು ಓದುವ ಸಮಸ್ಯೆಗೆ ಸುಲಭ ಪರಿಹಾರವನ್ನು ಅಂಕಣದ ಓದುಗ ,ತಂತ್ರಜ್ಞ ಓಂಶಿವಪ್ರಕಾಶ್ ಅವರು ತಮ್ಮ ಬ್ಲಾಗಿನಲ್ಲಿ http://platonic.techfiz.infoನಲ್ಲಿ ಸೂಚಿಸಿದ್ದಾರೆ.ಒಪೆರಾ ಮಿನಿ ಬ್ರೌಸರ್ ಅನ್ನು ಆಂಡ್ರಾಯಿಡ್ ಮಾರುಕಟ್ಟೆಯಿಂದ ಇಳಿಸಿ ಸ್ಥಾಪಿಸಿಕೊಂಡು,ಬ್ರೌಸರಿನ ವಿಳಾಸ ಪಟ್ಟಿಯಲ್ಲಿ about:config ಎಂದು ಟೈಪಿಸಿ,ಬರುವ ಆಯ್ಕೆಗಳಲ್ಲಿ,ಸಂಕೀರ್ಣ ಸ್ಕ್ರಿಪ್ಟ್‌ಗಳಿಗೆ ಬಿಟ್‌ಮ್ಯಾಪ್ ಫಾಂಟ್ ಬಳಸಲೇ ಎನ್ನುವುದಕ್ಕೆ ಹೌದು ಎಂಬ ಆಯ್ಕೆಯನ್ನು ಬದಲಾಯಿಸುವುದೇ ಈ ಪರಿಹಾರ.
------------------------------------------------------------
ತುಷಾರ:ವಾರ್ಷಿಕ ಚಂದಾ ಗೆಲ್ಲಿ!
ಈ ಪ್ರಶ್ನೆಗಳಿಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಮಾಳದ ಡಾ.ನಿರಂಜನ್ ಚಿಪ್ಳೂಣ್‌ಕರ್,ಉಪಪ್ರಾಂಶುಪಾಲ,ಎನ್ ಎಮ್ ಎ ಎಂ ಮಹಾವಿದ್ಯಾಲಯ,ನಿಟ್ಟೆ.
(ಉತ್ತರಗಳನ್ನು nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ:NS28 ನಮೂದಿಸಿ.)
*CAD ಎಂದರೇನು?
*ಮೆಕಾನಿಕಲ್ ವಿಭಾಗವಲ್ಲದೆ ಕಂಪ್ಯೂಟರ್ ಚಿಪ್ ತಯಾರಿಕೆಯಲ್ಲೂ CAD ಯಾಕೆ ಬಳಕೆಯಾಗುತ್ತದೆ?
ಕಳೆದ ವಾರದ ಸರಿಯುತ್ತರಗಳು:
*ಭಾರತದ ಅತಿ ದೊಡ್ಡ ಐಟಿ ಕಂಪೆನಿ ಟಿಸಿಎಸ್.
*ಲೀನಕ್ಸ್‌ನಲ್ಲಿ ಲಭ್ಯವಿರುವ ಎರಡು ಡೆಸ್ಕ್‌ಟಾಪ್ ಆಯ್ಕೆಗಳು:ಜಿನೋಮ್ ಮತ್ತು ಕೆಡಿಇ. ಬಹುಮಾನ ಗೆದ್ದವರು ಜಾಯ್‌ಸನ್ ಸಲ್ದಾನಾ,ಪಕ್ಷಿಕೆರೆ. ಅಭಿನಂದನೆಗಳು.
----------------
ಚಿದಂಬರ ಕಾಕತ್ಕರ್ ಅವರ ಪಾಡ್‌ಕಾಸ್ಟು
ಪಾಡ್‌ಕಾಸ್ಟ್ ಮೂಲಕ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವವರ ಸಂಖ್ಯೆ ಕನ್ನಡದಲ್ಲಿ ಹೆಚ್ಚಿಲ್ಲ. ಹಾಗೆ ಮಾಡುತ್ತಿರುವವರಲ್ಲಿ ಚಿದಂಬರ್ ಕಾಕತ್ಕರ್ ಅವರು ಒಬ್ಬರು.ಕಂಪ್ಯೂಟರ್ ತಂತ್ರಾಂಶ,ಕೊಳಲು ವಾದನ,ತಂತ್ರಜ್ಞಾನದಲ್ಲಿ ಪ್ರಯೋಗಶೀಲರಾದ ಚಿದಂಬರ್ ಕಾಕತ್ಕರ್ ಅವರು,ಹಳೆಯ ಚಲನಚಿತ್ರಗೀತೆಗಳ ಸಂಗ್ರಾಹಕರಾಗಿಯೂ ಪ್ರಸಿದ್ಧರು.ಹಾಡುಗಳ ಸಾಹಿತ್ಯವೂ ಅವರ ಸಂಗ್ರಹದಲ್ಲಿ ಸಿಗುತ್ತದೆ.ತಮ್ಮ ಪಾಡ್‌ಕಾಸ್ಟಿನಲ್ಲೂ,ಕೊಳಲುವಾದನ,ಹಳೆಯ ಚಿತ್ರಗೀತೆಗಳು ಇವೆಲ್ಲವನ್ನೂ ಹಚಿಕೊಂಡಿದ್ದಾರೆ.ಆಕಾಶವಾಣಿಯು ಪ್ರಸಾರ ಮಾಡಿದ ಅವರ ಸಂದರ್ಶನದ ಧ್ವನಿಮುದ್ರಣವನ್ನೂ ಇಲ್ಲಿ ಕೇಳಿಸಿದ್ದಾರೆ.http://cbkmr.podbean.comನಲ್ಲಿದು ಲಭ್ಯ.
*ಅಶೋಕ್‌ಕುಮಾರ್ ಎ

Monday, April 18, 2011

ಅಗ್ಗದಲ್ಲಿ ತರಬೇತುದಾರ ಬೇಕೇ?


ಅಗ್ಗದಲ್ಲಿ ನಿಮಗೆ ತರಬೇತುದಾರ ಬೇಕೇ?
 
ವ್ಯಾಯಾಮ ಮಾಡಿಸಲು,ತರಬೇತುದಾರರನ್ನು ಬಳಸುವುದು ದುಬಾರಿಯಾಗುತ್ತಿದೆಯೇ?ನಿಮ್ಮ ವ್ಯಾಯಾಮ ಹೇಗಿರಬೇಕು ಎಂದು ಸಲಹೆ ಪಡೆಯುವುದು ಅನಿವಾರ್ಯವಾಗಿದ್ದರೂ,ಅದನ್ನು ಅಗ್ಗದಲ್ಲಿ ಸಾಧಿಸಬೇಕೆಂದಿದ್ದರೆ,ಆನ್‌ಲೈನ್ ತರಬೇತಿ ನೀಡುವ http://www.fitorbit.comನ ಸೇವೆಯನ್ನು ಬಳಸಬಹುದು.ಈ ಅಂತರ್ಜಾಲ ತಾಣದಲ್ಲಿ,ಮೊದಲಾಗಿ ವ್ಯಾಯಾಮವನ್ನು ಮಾಡುವ ಮುಖ್ಯ ಉದ್ದೇಶವೇನು,ವ್ಯಕ್ತಿಯ ಆರೋಗ್ಯ ಹೇಗಿದೆ,ಆತನಿಗೆ ಇರುವ ಸಮಸ್ಯೆಗಳೇನು ಎನ್ನುವುದನ್ನೆಲ್ಲಾ ಮೊದಲಾಗಿ ನೋಂದಾವಣೆಯ ವೇಳೆಯೇ ತಿಳಿಯಪಡಿಸಬೇಕಾಗುತ್ತದೆ.ಇದರ ಮೇಲೆ,ವ್ಯಕ್ತಿಗೆ ತರಬೇತುದಾರನನ್ನು ನೀಡಲಾಗುತ್ತದೆ.ಮೊದಲಾಗಿ ಮೂವರನ್ನು ಸೂಚಿಸಿ,ನಿಮಗಿಷ್ಟವಾದ ತರಬೇತುದಾರರನ್ನು ಆಯ್ದುಕೊಳ್ಳುವುದು ಸಾಧ್ಯ.ತರಬೇತುದಾರನು ನಿಮ್ಮ ದೇಹ,ಅಗತ್ಯಗಳಿಗೆ ಸೂಕ್ತವಾದ ವ್ಯಾಯಾಮವನ್ನು ಸೂಚಿಸಿ,ಅದನ್ನು ಮಾಡುವ ಕ್ರಮದ ವಿಡಿಯೋಗಳನ್ನು ಆನ‌ಲೈನಿನಲ್ಲಿ ನೀಡುತ್ತಾನೆ.ಇವನ್ನು ಕಂಪ್ಯೂಟರ್ ಅಥವಾ ಸ್ಮಾರ್ಟ್‌ಫೋನ್‌ಗಳಲ್ಲಿಯೂ ನೋಡಿ ಅನುಸರಿಸುವುದು ಸುಲಭ.ಆಹಾರದ ಬಗ್ಗೆಯೂ ಸಲಹೆಗಳು ಸಿಗುತ್ತವೆ.ಪಾಕವಿಧಾನವನ್ನೂ ತೋರಿಸುವ ವಿಡಿಯೋ ನೀಡಲಾಗುತ್ತದೆ.ಇವೆಲ್ಲವುಗಳೂ ವಾರಕ್ಕೆ ಹತ್ತು ಡಾಲರು ಬೆಲೆಗೆ ಲಭ್ಯವಾಗುತ್ತದೆ.ನಮ್ಮಲ್ಲಿ ಇಂತಹ ಆನ್‌ಲೈನ್ ತರಬೇತಿಯ ಅಗತ್ಯ ಇನ್ನೂ ಇಲ್ಲ ಎನ್ನುವುದು ಸ್ಪಷ್ಟ-ಬಾಬಾ ರಾಮ್‌ದೇವ್‌ರಂತವರೇ ನಮ್ಮೂರಿಗೆ ಬಂದು ಪ್ರಾಣಾಯಾಮದ ಬಗ್ಗೆ ತರಬೇತಿ ನೀಡುತ್ತಿರುವಾಗ,ಅದನ್ನು ಅನುಸರಿಸುವುದೇ ಶ್ರೇಯಸ್ಕರ ಅಂತೀರಾ?
------------------------------------------------
ಇಂಟೆಲ್:ಟ್ಯಾಬ್ಲೆಟ್ ಸಾಧನಗಳಿಗೆ ಸಂಸ್ಕಾರಕ
ಈಗ ಕಂಪ್ಯೂಟರ್,ಲ್ಯಾಪ್‌ಟಾಪ್‌ಗಳ ಮಾರ‍ಾಟವು ತುಸು ತಗ್ಗಿ,ಅದರ ಬದಲಿಗೆ ಟ್ಯಾಬ್ಲೆಟ್ ಸಾಧನಗಳಿಗೆ ಬೇಡಿಕೆ ಹೆಚ್ಚುತ್ತಿದೆ.ಇಂಟೆಲ್ ಕಿರು ಸಾಧನಗಳಿಗೆಂದೇ ಆಟಂ ಎನ್ನುವ ಸಂಸ್ಕಾರಕವನ್ನು ತಯಾರಿಸುತ್ತಿದೆ.ಆದರೆ ಆಪಲ್ ಮತ್ತು ಆರ್ಮ್ ಪ್ರಾಸೆಸರುಗಳನ್ನು ಕೈಯಲ್ಲಿ ಹಿಡಿದು ಬಳಸುವ ಸಾಧನಗಳಲ್ಲಿ ಬಳಸಲು ಹೆಚ್ಚಿನ ತಯಾರಕರು ಉದ್ಯುಕ್ತರಾಗುತ್ತಿರುವಂತೆ,ಇಂಟೆಲ್ ಕಂಪೆನಿಯು ಎಚ್ಚೆತ್ತು ಕೊಂಡಿದೆ.ಅದು ಟ್ಯಾಬ್ಲೆಟ್ ಸಾಧನಗಳಲ್ಲಿ ಬಳಕೆಗೆ ಸೂಕ್ತವಾದ,ಕಡಿಮೆ ವಿದ್ಯುತ್ ಶಕ್ತಿ ಬಳಸುವ ಓಕ್ ಟ್ರೈಲ್ ಎಂಬ ಹೆಸರಿನ ಸಂಸ್ಕಾರಕವನ್ನು ಹೊರತಂದಿದೆ.z670 ಎನ್ನುವುದು ಇದರ ವ್ಯಾವಹಾರಿಕ ಸಂಖ್ಯೆ.ಮೈಕ್ರೋಪಾಸೆಸರುಗಳ ಮಟ್ಟಿಗೆ ಜಗತ್ತಿನ ಅತ್ಯಂತ ಜನಪ್ರಿಯ ಹೆಸರು ಇಂಟೆಲ್‌ದ್ದಾದರೂ,ಕಿರುಸಾಧನಗಳ ಮಟ್ಟಿಗೆ ಈ ಖ್ಯಾತಿ,ಕಂಪೆನಿಗಿಲ್ಲ.ಅಂತಹ ಸಾಧನಗಳು ದಿನೇ ದಿನೇ ಜನಪ್ರಿಯವಾಗುತ್ತಿರುವಾಗ,ತಕ್ಷಣ ಎಚ್ಚೆತ್ತು,ಸ್ಪರ್ಧೆಯನ್ನೆದುರಿಸಲು ಹೊಸ ಚಿಪ್‌ಗಳ ತಯಾರಿ ಮಾಡದಿದ್ದರೆ,ಆಮೇಲೆ ಪಶ್ಚಾತ್ತಾಪ ಪಡಬೇಕಾಗುತ್ತದೆ ಎನ್ನುವುದು ಇಂಟೆಲ್‌ಗೆ ಮನವರಿಕೆಯಾದದ್ದರ ಸೂಚನೆಯೇ ಹೊಸ ಸಂಸ್ಕಾರಕದ ಅಭಿವೃದ್ಧಿ.ಓಕ್ ಟ್ರೈಲ್ ಸಂಸ್ಕಾರಕವು ಆಂಡ್ರಾಯಿಡ್,ಮಿಟೂ,ವಿಂಡೋಸ್ ಹೀಗೆ ವಿವಿಧ ಆಪರೇಟಿಂಗ್ ವ್ಯವಸ್ಥೆಗಳಿಗೂ ಸೂಕ್ತವಾಗುವ ಹಾಗೆ ಮಾಡಿ,ವಿವಿಧ ಸಾಧನಗಳ ತಯಾರಕರನ್ನು ಬಗಲಲ್ಲಿ ಹಾಕಲೂ ಇಂಟೆಲ್ ಸಿದ್ಧವಾಗಿದೆ.ಚಿಪ್‌ನ್ನು ನಲ್ವತ್ತೈದು ನ್ಯಾನೋಮೀಟರ್ ತಂತ್ರಜ್ಞಾನದಿಂದ ತಯಾರಿಸಲಾಗಿದೆ.ಇಷ್ಟೆಲ್ಲಾ ಆದರೂ,ಎಲ್ಲರನ್ನೂ ಆಕರ್ಷಿಸುವ ಇಂಟೆಲ್‌ನ ಕೆಲಸ ಸಲೀಸಾಗದು ಎನ್ನುವುದು ಸತ್ಯ.
-------------------------------------------
ಕಂಪ್ಯೂಟರ್ ನಿಯಂತ್ರಣ:ಹೊಸ ಪರಿ
ಯೋಚನೆಯ ಮೂಲಕ ಕಂಪ್ಯೂಟರ್ ಜತೆ ಸಂವಹನ ಸಾಧ್ಯವಾಗಿಸಿ,ಕಂಪ್ಯೂಟರ್-ಮನುಷ್ಯನ ನಡುವಿನ ಅಂತರವನ್ನಿಳಿಸುವುದು ಸಂಶೋಧಕರ ಕನಸು.ಕ್ಯಾಲಿಫೋರ್ನಿಯಾ ವಿವಿಯ ನರವಿಜ್ಞಾನ ಸಂಶೋಧನಾಲಯದ ಸಂಶೋಧಕರ ಆಸಕ್ತಿ ಇಂತದ್ದರ ಕಡೆಗೇ ಇದೆ.ಯೋಚನೆಯ ಮೂಲಕ ಕರೆಗಳನ್ನು ಮಾಡುವುದು,ಈ ನಿಟ್ಟಿನಲ್ಲಿ ಮೊದಲ ಕೆಲಸ.ನಂಬರುಗಳ ಪಟ್ಟಿಯ ಕಡೆ ದಿಟ್ಟಿಸಿ ಇದನ್ನು ಸಾಧಿಸುವುದು ಒಂದು ಸಾಧ್ಯತೆ.ಮಿದುಳಿನಿಂದ ಹೊರಡುವ ಸಂಕೇತಗಳನ್ನು ಎಲೆಕ್ಟ್ರೋ ಎನ್ಸೆಫಲೋಗ್ರಾಂ ಸಾಧನದ ಮೂಲಕ ಗ್ರಹಿಸಿ,ಇದನ್ನು ಸಾಧಿಸುವ ಆಯ್ಕೆಯೂ ಅವರ ಮುಂದಿದೆ.ಹಾಗೆಯೇ ವೈಮಾನಿಕ ಪೈಲಟ್‌ಗಳು ಸಾಕಷ್ಟು ಚುರುಕಾಗಿದ್ದಾರೆಯೇ,ಅಲ್ಲ ದಣಿದು,ಚಾಲನೆಯ ಕಡೆ ಗಮನ ಕೊಡಲು ಅಸಮರ್ಥರಾಗಿದ್ದಾರೆಯೇ ಎನ್ನುವುದನ್ನೂ ಅರಿಯುವುದು ಅವರ ಸಂಶೋಧನೆಯ ಇನ್ನೊಂದು ಗುರಿ.ದಣಿದ ಪೈಲಟ್‌ಗಳ ಕಾರಣ ವಿಮಾನ ಅಪಘಾತ ತಡೆಯೊಡ್ಡಲು ಇಂತಹ ಸಂಶೋಧನೆ ನೆರವಾದೀತು.
-------------------------------------
ವಾಮನಾಕೃತಿಯಲ್ಲಿ ಭಾರೀ ನೆನಪು

ಇಂಟೆಲ್ ಮತ್ತು ಮೈಕ್ರಾನ್ ಕಂಪೆನಿಗಳು ಜಂಟಿಯಾಗಿ,ಐಎಂ ಎಂಬ ಹೆಸರಿನ ಫ್ಲಾಶ್ ಚಿಪ್‌ಗಳನ್ನು ತಯಾರಿಸುತ್ತಿವೆ.ಇವು ಪೊಸ್ಟೇಜ್ ಸ್ಟಾಂಪಿನ ಗಾತ್ರದವಾದರೂ,ಎಂಟು ಜೀಬಿ ಸ್ಮರಣಶಕ್ತಿಯನ್ನು ಒದಗಿಸಲು ಶಕ್ತವಾಗಿವೆ. ಮುಂದಿನ ಪ್ರಯತ್ನ ಹದಿನಾರು ಜೀಬಿ,ಮೂವತ್ತೆರಡು ಜೀಬಿ ಹೀಗೆ ಸಾಗಲಿದೆ.ನೂರ ಇಪ್ಪತ್ತೆಂಟು ಜೀಬಿ ಸಾಮರ್ಥ್ಯದ ಫ್ಲಾಶ್ ಸ್ಮರಣಕೋಶಗಳೂ ಬರುವುದು ಹೆಚ್ಚು ತಡವಾಗದು.ಇದು ಸಾಧ್ಯವಾಗಲು ಮುಖ್ಯ ಕಾರಣ,ಇಪ್ಪತ್ತು ನ್ಯಾನೋ ಮೀಟರ್ ತಂತ್ರಜ್ಞಾನದ ಬಳಕೆಯನ್ನು ಚಿಪ್ ತಯಾರಿಕೆಗೆ ಬಳಸಿದ್ದಾಗಿದೆ.ಸುಧಾರಿತ ತಂತ್ರಜ್ಞಾನವು ಕಡಿಮೆ ಗಾತ್ರದಲ್ಲಿ ಹೆಚ್ಚಿನ ವಿದ್ಯುನ್ಮಾನ ಮಂಡಲಗಳನ್ನು ಹಿಡಿಸಲು ಶಕ್ತವಾಗುತ್ತದೆ.ಈ ಫ್ಲಾಶ್ ಸ್ಮರಣಕೋಶಗಳು ದುಬಾರಿಯಾದರೂ,ಸ್ಮಾರ್ಟ್‌ಫೋನ್,ಟ್ಯಾಬ್ಲೆಟ್ ಸಾಧನಗಳ ಮಟ್ಟಿಗೆ ವರದಾನವಾಗಲಿವೆ.ಇಪ್ಪತ್ತು ನ್ಯಾನೋಮೀಟರ್ ತಂತ್ರಜ್ಞಾನವು ಇದರ ಹಿಂದಿನ ಇಪ್ಪತ್ತೈದು ನ್ಯಾನೋಮೀಟರ್ ತಂತ್ರಜ್ಞಾನಕ್ಕೆ ಹೋಲಿಸಿದರೆ,ಎರಡು ಪಟ್ಟು ಹೆಚ್ಚು ಸ್ಮರಣ ಸಾಮರ್ಥ್ಯವನ್ನು ಹಿಡಿಸಲು ಸಮರ್ಥವಾಗಿದೆ.ಅಷ್ಟು ಮಾತ್ರವಲ್ಲ,ಗಿಗಾಬೈಟಿಗೆ ಬರುವ ಖರ್ಚು ಕೂಡಾ ಇಳಿಯುತ್ತದೆ.ಸ್ಮಾರ್ಟ್‌ಪೋನುಗಳ ಗಾತ್ರ ತಗ್ಗಿಸುವಲ್ಲಿ,ಅವುಗಳನ್ನು ಅಗ್ಗವಾಗಿಸುವಲ್ಲಿ ಮತ್ತು ಅವುಗಳಲ್ಲಿ ಹೆಚ್ಚು ಅನುಕೂಲಗಳನ್ನು ಕಲ್ಪಿಸುವಲ್ಲಿ ಹೊಸ ತಂತ್ರಜ್ಞಾನವು ನೆರವಾಗಲಿದೆ.
-----------------------------------------
ಜಿಮೇಲ್ ಹೊಸತು:ನಿಮ್ಮದೇ ಥೀಮ್
ಜಿಮೇಲ್ ಬಳಕೆದಾರರು ತಮ್ಮ ಜಿಮೇಲ್ ಪುಟವನ್ನು ವಿವಿಧ ವಿನ್ಯಾಸಗಳಲ್ಲಿ ಕಾಣುವ ಅನುಕೂಲವನ್ನು ಗೂಗಲ್ ನೀಡತೊಡಗಿ ವರ್ಷಗಳೇ ಕಳೆದುವು.ಈಗ ನಿಮಗಿಷ್ಟವಾದ,ಜಿಮೇಲ್ ಪುಟದ ವಿನ್ಯಾಸವನ್ನು ಏರ್ಪಡಿಸುವುದೂ ಸಾಧ್ಯ.ನೀವು ತೆಗೆದ ಚಿತ್ರವನ್ನು ಬಳಸಿದ ವಿನ್ಯಾಸ ಮೂಡಿಸುವುದು,ಚಿಟಿಕೆ ಹೊಡೆದಷ್ಟೇ ಸುಲಭ.ಜಿಮೇಲ್ ಮಿಂಚಂಚೆಯ ಗೂಗಲ್ ಲ್ಯಾಬ್ ವಿಭಾಗದಲ್ಲಿ ತಡಕಾಡಿ,ಸೆಟ್ಟಿಂಗ್ ಬದಲಾಯಿಸಿದರೆ ಇದು ಸಾಧ್ಯ.ನಿಮ್ಮ ಚಿತ್ರವನ್ನೇ ಆರಿಸಿ,ಥೀಂ ರಚಿಸಿನೋಡಬಾರದೇಕೇ?
--------------------------------
ತುಷಾರ:ವಾರ್ಷಿಕ ಚಂದಾ ಗೆಲ್ಲಿ!
ಈ ಪ್ರಶ್ನೆಗಳಿಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಉಡುಪಿ ಬ್ರಹ್ಮಗಿರಿಯ ಡಾ.ಶ್ರೀನಿವಾಸ್ ರಾವ್,ಪ್ರೊಫೆಸರ್,ನಿಟ್ಟೆ.
*ಭಾರತದ ಅತಿ ದೊಡ್ಡ ಐಟಿ ಕಂಪೆನಿ ಯಾವುದು?
*ಲೀನಕ್ಸ್‌ನಲ್ಲಿ ಲಭ್ಯವಿರುವ ಎರಡು ಡೆಸ್ಕ್‌ಟಾಪ್ ಆಯ್ಕೆಗಳನ್ನು ಹೆಸರಿಸಿ.
(ಉತ್ತರಗಳನ್ನು nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ:NS27 ನಮೂದಿಸಿ.)
ಕಳೆದ ವಾರದ ಸರಿಯುತ್ತರಗಳು:
*ಉಬುಂಟು ಲೀನಕ್ಸ್‌ನ ಎಪ್ರಿಲ್ 2011ನ ಆವೃತ್ತಿಯ ಹೆಸರು ನ್ಯಾಟಿ ನರ್ವಾಲ್-Natty Narwhal
*ಫೊಟೋಶಾಪ್,ಜಿಂಪ್,ಇಂಕ್‌ಸ್ಕೇಪ್ ತಂತ್ರಾಂಶಗಳ ಪೈಕಿ ಲೀನಕ್ಸಿನಲ್ಲಿಲ್ಲದ ತಂತ್ರಾಂಶ ಫೊಟೋಶಾಪ್. ಬಹುಮಾನ ಗೆದ್ದವರು ರಾಕೇಶ್ ಕೆ ಕೆ,ಕುಕ್ಕುಂದೂರು,ಕಾರ್ಕಳ. ಅಭಿನಂದನೆಗಳು.
----------------
ಗೂಗಲ್,ಇನ್ಫೋಸಿಸ್:ನಿರಾಸೆ
ನಮ್ಮ ಐಟಿ ದಿಗ್ಗಜ ಕಂಪೆನಿಯ ಫಲಿತಾಂಶ ಮೇಲ್ಮನೆಯ ಗುರುಗುಂಟಿರಾಯರ ಬಳಗದವರಿಗೆ ಇಷ್ಟವಾಗಲಿಲ್ಲವಂತೆ.ಗೂಗಲ್ ಫಲಿತಾಂಶವೂ ಅಮೆರಿಕಾದ ಮಾರುಕಟ್ಟೆಯನ್ನು ನಿರಾಸೆಗೊಳಿಸಿತು.ಲಾಭದಲ್ಲಿ ಶೇಕಡಾ ಹದಿನೇಳು ಪ್ರಗತಿಯಾದರೂ ತೃಪ್ತಿಯಿಲ್ಲ.ಪ್ರತಿ ಶೇರಿಗೆ ಲಾಭ ಏಳು ಡಾಲರುಗಳು.ವಾರ್ಷಿಕ ವ್ಯವಹಾರ ಎಂಟೂವರೆ ಬಿಲಿಯನ್‌ಗೂ ಹೆಚ್ಚು.ಆಂಡ್ರಾಯಿಡ್ ಅಪ್ಲಿಕೇಶನ್‌ಗಳನ್ನು ಮೂರು ಬಿಲಿಯನ್ ಬಾರಿ ಇಳಿಸಿಕೊಳ್ಳಲಾಗಿದೆ.ದಿನಾಲೂ ಗೂಗಲ್ ಕ್ರೋಮನ್ನು ಹನ್ನೆರಡು ದಶಲಕ್ಷ ಜನರು ಬಳಸುತ್ತಿದ್ದಾರೆ.ಯುಟ್ಯೂಬ್ ಜಾಹೀರಾತು ಆದಾಯ ಬಹಳ ಹೆಚ್ಚಿದ್ದು,ಗೂಗಲ್‌ನ ಮುಖ್ಯ ಆದಾಯ ಮೂಲವಾಗಿದೆ.
Udayavani Unicode

Udayavani
*ಅಶೋಕ್‌ಕುಮಾರ್ ಎ

Monday, April 11, 2011

ಟ್ವಿಟರ್ ಮೂಲಕ ಹಣ ಗಳಿಸಿ

ಟ್ವಿಟರ್ ಮೂಲಕ ಹಣ ಗಳಿಸಿ
 
ಗುರುಗುಂಟಿರಾಯರಿಗೆ ಖುಷಿ ಕೊಡಬಹುದಾದ ಸಮಾಚಾರ ಇಲ್ಲಿದೆ.ಟ್ವಿಟರ್ ಅಂತರ್ಜಾಲ ತಾಣದಲ್ಲಿ ಪ್ರಕಟವಾಗುವ,ಶೇರುಗಳ ಬಗೆಗಿನ ಜನರ ಒಲವು-ತಾತ್ಸಾರಗಳು ನಿಜವಾಗುತ್ತಿದೆ.ಶೇರುಗಳ ಬಗೆಗಿನ ಟ್ವೀಟ್ಸ್‌ಗಳನ್ನು ಕಲೆ ಹಾಕಿ,ಕಂಪೆನಿಯ ಶೇರೊಂದರ ಬಗ್ಗೆ ಜನಾಭಿಪ್ರಾಯ ಹೇಗಿದೆ?ಆ ಕಂಪೆನಿಯ ಶೇರಿನ ಬಗ್ಗೆ ಜನರ ಒಲವು ಹೆಚ್ಚಿದೆಯೇ ಅಲ್ಲ ತಗ್ಗಿದೆಯೇ ಎನ್ನುವುದನ್ನು ತಿಳಿಸುವ ಸೇವೆಗಳಿವೆ. ಇದು ಕಂಪೆನಿಯ ಶೇರುಗಳ ಮಾರುಕಟ್ಟೆ ದರಕ್ಕೂ ತಳಕು ಹಾಕಿಕೊಡಿರುವುದು ಅಧ್ಯಯನದಿಂದ ವ್ಯಕ್ತವಾಗಿದೆ.ಉದಾಹರಣೆಗೆ http://tweettrader.net ಅಂತಹ ಅಂತರ್ಜಾಲ ತಾಣವು,ಪ್ರತಿ ಕಂಪೆನಿ ಶೇರಿನ ಬಗ್ಗೆ ಜನಾಭಿಪ್ರಾಯ ಏರಿದೆಯೇ ಅಥವಾ ತಗ್ಗಿದೆಯೇ-ಎಷ್ಟು ಪ್ರಮಾಣದಲ್ಲಿ ಎಂದು ತಿಳಿಸುವ ಸೇವೆಯನ್ನು ನೀಡುತ್ತಿದ್ದು,ಇದರ ಪ್ರಕಾರ ವ್ಯವಹಾರ ಮಾಡಿದರೆ,ಅಚ್ಚುಕಟ್ಟಾಗಿ ಹಣ ಮಾಡಲು ಮೋಸ ಇಲ್ಲವಂತೆ. ಈ ತಾಣವನ್ನು ಅಧ್ಯಯನ ವರದಿಯ ಆಧಾರದಲ್ಲಿ ಅಭಿವೃದ್ಧಿ ಪಡಿಸಲಾಯಿತು.ಮ್ಯುನಿಚ್ ಪಟ್ಟಣದ ವಿಶ್ವವಿದ್ಯಾಲಯದ ವಿದ್ಯಾರ್ಥಿ,ಎರಡೂವರೆ ದಶಲಕ್ಷ ಟ್ವೀಟ್ಸ್‌ಗಳ ಅಧ್ಯಯನದ ಆಧಾರದಲ್ಲಿ ಸಂಶೋಧನೆ ಕೈಗೊಂಡು ಪ್ರಬಂಧ ಮಂಡಿಸಿದ್ದನಂತೆ.

ಜನಾಭಿಪ್ರಾಯ ತಿಳಿಯಲು ಟ್ವಿಟರ್ ಸಹಾಯಕ ಎನ್ನುವುದಕ್ಕೆ ಜರ್ಮನಿಯ ಇನ್ನೊಂದು ಸಂಶೋಧನಾ ವರದಿಯೂ ಪೂರಕವಾಗಿದೆ.ಚುನಾವಣೆಯಲ್ಲಿ ಜನರ ಒಲವು ಯಾವ ಪಕ್ಷದ ಕಡೆಗಿದೆ ಎನ್ನುವುದನ್ನು ತಿಳಿಯಲು ಸಮೀಕ್ಷೆಗಳನ್ನು ಕೈಗೊಳ್ಳುವುದಕ್ಕೆ ಬದಲಾಗಿ,ಟ್ವೀಟ್ಸ್‌ಗಳಲ್ಲಿ ವ್ಯಕ್ತವಾಗುವ ಜನರ ಅಭಿಪ್ರಾಯಗಳ ಆಧಾರದಲ್ಲಿ ಮತದಾನದ ಪಕ್ಷವಾರು ಮತಪ್ರಮಾಣವನ್ನು ಊಹಿಸಿದರೆ,ಅದು ನೈಜ ಪರಿಣಾಮದ ಬಹು ಸಮೀಪದಲ್ಲಿರುವುದು ಜರ್ಮನಿಯ ಸಮೀಕ್ಷೆಯಿಂದ ವ್ಯಕ್ತವಾಗಿದೆ.
------------------------------------------------
ಸಮುದ್ರದಲ್ಲಿ ವಿದ್ಯುತ್ ಸ್ಥಾವರ

ಗಾಳಿಯಿಂದ ವಿದ್ಯುಚ್ಛಕ್ತಿ ಉತ್ಪಾದನೆಯು ಪರಿಸರಪ್ರಿಯ ವಿದ್ಯುತ್ಪಾದನೆಯಾಗಿದೆ.ಇಂತಹ ಮಾರುತ ಶಕ್ತಿ ಆಧಾರಿತ ಸ್ಥಾವರಗಳನ್ನು ಸ್ಥಾಪಿಸಲು,ಏಕಪ್ರಕಾರವಾಗಿ ಬೀಸುವ ಗಾಳಿಯ ಅನುಕೂಲ ಬೇಕು.ವರ್ಷದುದ್ದಕ್ಕೂ ಗಾಳಿ ಬೀಸುತ್ತಿರುವ ಪ್ರದೇಶಗಳನ್ನು ಆಯ್ದು ಕೊಂಡು,ಸ್ಥಾವರ ಸ್ಥಾಪಿಸುವುದು ಮುಖ್ಯ.ಇದಕ್ಕೆ ವಿಶಾಲ ಪ್ರದೇಶಗಳನ್ನು ಆರಿಸಿಕೊಳ್ಳಬೇಕು.ಸಮುದ್ರ ಮಧ್ಯೆ ಸತತವಾಗಿ ಗಾಳಿ ಬೀಸುವ ಅನುಕೂಲ ಇರುವ ಪ್ರದೇಶಗಳನ್ನು ಪತ್ತೆ ಮಾಡುವುದು ಸುಲಭ.ಆದರೆ ಇಂತೆಡೆ,ಗಾಳಿ ಮಿಲ್ಲುಗಳನ್ನು ಸ್ಥಾಪಿಸುವುದು ಕಠಿನ.ಒಂದು ವೇಳೆ ಸ್ಥಾಪಿಸಿದರೂ,ಅಲ್ಲಿಂದ ವಿದ್ಯುತ್ತನ್ನು ನಗರಗಳಿಗೆ ತರಲು ಸಮುದ್ರ ತಳದಲ್ಲಿ ಕೇಬಲ್ ಹಾಕಬೇಕು ಇದು ಖರ್ಚಿನ ಬಾಬತ್ತು ಗೂಗಲ್ ಕಂಪೆನಿಯು ಇಂತಹ ಸಮುದ್ರ ನಡುವಣ ಗಾಳಿ ವಿದ್ಯುತ್ ಸ್ಥಾವರದಿಂದ ವಿದ್ಯುತ್ ತರಲು ಸಮುದ್ರ ತಳದಲ್ಲಿ ಕೇಬಲ್ ಹಾಕಲು ಮುಂದೆ ಬಂದಿದೆ.ದಕ್ಷಿಣ ವರ್ಜೀನಿಯಾದಿಂದ ಆರಂಭಿಸಿ,ನ್ಯೂಜೆರ್ಸಿ ವರೆಗಿನ ಕೇಬಲ್ ಹಾಕಲು ಕಂಪೆನಿ ಮುಂದೆ ಬಂದಿದೆ.ಒಟ್ಟು ಇಪ್ಪತ್ತು ಕಿಲೋಮೀಟರುಗಳಷ್ಟು ಕೇಬಲ್ ಹಾಕಬೇಕಾದೀತು.ಈ ಮೂಲಕ ಆರುಸಾವಿರ ಮೆಗಾವ್ಯಾಟ್ ವಿದ್ಯುಚ್ಛಕ್ತಿಯನ್ನು ಉತ್ಪಾದಿಸಿ,ವಿತರಿಸ ಬಹುದು.ಎರಡು ದಶಲಕ್ಷ ಮನೆಗಳಿಗೆ ಈ ವಿದ್ಯುತ್ ಸಾಕಾಗಬಹುದು.
--------------------------------------
ತುಷಾರ:ವಾರ್ಷಿಕ ಚಂದಾ ಗೆಲ್ಲಿ!
ಈ ಪ್ರಶ್ನೆಗಳಿಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಉಡುಪಿ ಬ್ರಹ್ಮಗಿರಿಯ ಡಾ.ಶ್ರೀನಿವಾಸ್ ರಾವ್,ಪ್ರೊಫೆಸರ್,ನಿಟ್ಟೆ.
*ಉಬುಂಟು ಲೀನಕ್ಸ್‌ನ ಎಪ್ರಿಲ್ 2011ನ ಆವೃತ್ತಿಯ ಹೆಸರೇನು?
*ಫೊಟೋಶಾಪ್,ಜಿಂಪ್,ಇಂಕ್‌ಸ್ಕೇಪ್ ತಂತ್ರಾಂಶಗಳ ಪೈಕಿ ಲೀನಕ್ಸಿನಲ್ಲಿಲ್ಲದ ತಂತ್ರಾಂಶ ಯಾವುದು?
(ಉತ್ತರಗಳನ್ನು nistantusansaara@gmail.comಗೆ ಮಿಂಚಂಚೆ ಮಾಡಿ ಅಥವಾ 725927022ಗೆ ಎಸ್ಸೆಮ್ಮೆಸ್ ಮಾಡಿ.ವಿಷಯ:NS26 ನಮೂದಿಸಿ.)
ಕಳೆದ ವಾರದ ಸರಿಯುತ್ತರಗಳು:
*ಡೆಬಿಯನ್ ಲೀನಕ್ಸ್ ವಿತರಣೆಯ ಮುಖ್ಯ ಹೆಗ್ಗಳಿಕೆ-ಇದು ಬಹು ಸ್ಥಿರವಾದ ಕಾರ್ಯಕ್ಷಮತೆಯುಳ್ಳ, ವಿತರಣೆ.
*ಐ ಆರ್ ಸಿ ತಂತ್ರಜ್ಞರು ಪಟ್ಟಾಂಗಕ್ಕೆ ಬಳಸುವ ಮಾಧ್ಯಮ.ಯಾಕೆ ಜನಪ್ರಿಯವೆಂದರೆ ವೃತ್ತಿಪರರೇ ಹೆಚ್ಚು ಬಳಾಸುವುದರಿಂದ ಸಮಸ್ಯೆಗಳಿಗೆ ಪರಿಹಾರ ಸಿಗುವ ಸಾಧ್ಯತೆ ಹೆಚ್ಚು . ಬಹುಮಾನ ಗೆದ್ದವರು ಚೇತನ್ ಭಟ್. ಅಭಿನಂದನೆಗಳು.
-----------------------------------------------------
ಯುಟ್ಯೂಬಿನಲ್ಲಿ ಹೊಸ ಚಾನೆಲುಗಳು
ಗೂಗಲ್ ಯುಟ್ಯೂಬನ್ನು ಸಮಗ್ರವಾಗಿ ಬದಲಿಸುವಂತೆ ಕಾಣಿಸುತ್ತಿದೆ.ಮೊದಲಾಗಿ ಯುಟ್ಯೂಬಿನಲ್ಲಿ ಹೊಸ ಚಾನೆಲುಗಳನ್ನು ಆರಂಭಿಸಿ,ಅದರಲ್ಲಿ ತಾನೇ ನಿರ್ಮಾಣ ಮಾಡಿದ ವಿಡಿಯೋಗಳನ್ನು ನೇರ ಪ್ರಸಾರಕ್ಕೆ ಒದಗಿಸುವ ಯೋಚನೆ ಗೂಗಲ್ ಕಂಪೆನಿಗಿದೆ.ಅದಕ್ಕಾಗಿ ನೂರು ದಶಲಕ್ಷ ಡಾಲರು ಬಜೆಟ್ ಮೀಸಲರಿಸಲದು ನಿರ್ಧರಿಸಿದೆ.ಹಾಲಿವುಡ್ ನಿರ್ಮಾಪಕರ ಸಲಹೆ ಸೂಚನೆಗಳನ್ನು ಪಡೆದು,ಗೂಗಲ್ ಮುಂದಡಿಯಿಡುತ್ತಿದೆ.ಯುಟ್ಯೂಬಿನಲ್ಲಿ ಜನರು ಹಾಕುವ ಅಗಣಿತ ವಿಡಿಯೋಗಳಲ್ಲೂ ಹಲವು ಚಾನೆಲುಗಳು ಲಭ್ಯವಿವೆ.ಅಂತರ್ಜಾಲವನ್ನು ಸೆಟ್‌ಟಾಪ್ ಮೂಲಕ ಟಿವಿಯಲ್ಲಿ ವೀಕ್ಷಿಸುವ ಅಭ್ಯಾಸ ಬೆಳೆಯುವ ಈ ಹೊತ್ತಿನಲ್ಲಿ,ಇಂತಹ ಬಹುಸಂಖ್ಯೆಯ ಚಾನೆಲುಗಳು ನೀಡುವ ಭರಪೂರ ಆಯ್ಕೆ,ಡಿ ಟಿ ಎಚ್,ಕೇಬಲ್ ಟಿವಿ ಚಾನೆಲುಗಳಿಗೆ ಹೋಲಿಸಿದರೆ,ಇದು ಜನರ ಒಲವು ಗಳಿಸುವುದರಲ್ಲಿ ಅನುಮಾನವಿಲ್ಲ.ಡಿಟಿಎಚ್,ಕೇಬಲ್ ಟಿವಿಗಳು ನೂರೋ,ಇನ್ನೋರೂ ಚಾನೆಲ್ ನೀಡಿದರೆ,ಇಲ್ಲಿನ ಆಯ್ಕೆ ಅವುಗಳ ಹಲವು ಪಟ್ಟು ಹೆಚ್ಚು.
---------------------------------------
ಬ್ರೌಸರುಗಳ ಪೈಕಿ ಕ್ರೋಮ್ ಟಾಪರ್
ಇಂಟರ್ನೆಟ್ ಎಕ್ಸ್‌ಪ್ಲೋರರ್,ಫೈರ್‌ಫಾಕ್ಸ್ ಮತ್ತು ಗೂಗಲ್‌ನ ಕ್ರೋಮ್ ಬ್ರೌಸರ್ ತಂತ್ರಾಂಶಗಳ ಸ್ಪರ್ಧೆಯಲ್ಲಿ ಒಂದಕ್ಕೊಂದು ಪೈಪೋಟಿ ಒಡ್ಡುತ್ತಿವೆ.ಇಂಟರ್ನೆಟ್ ಎಕ್ಸ್‌ಪ್ಲೋರರ್‌ನ ಒಂಭತ್ತನೇ ಆವೃತ್ತಿ,ಹಳೆಯ ಆವೃತ್ತಿಗಳಿಗಿಂತ ಉತ್ತಮ ಪ್ರತಿಕ್ರಿಯೆ ಪಡೆಯಲು ಸಫಲವಾಗಿದೆ.ಮೋಜಿಲ್ಲಾ ಫೈರ್‌ಫಾಕ್ಸ್ ಬ್ರೌಸರ್ ಕೂಡಾ,ಈಗ ಬಹು ಜನಪ್ರಿಯ ಬ್ರೌಸರುಗಳಲ್ಲೊಂದು.ಆಡಾನ್ ತಂತ್ರಾಂಶಗಳ ಮೂಲಕ ಅದು ವಿವಿಧ ಸವಲತ್ತುಗಳನ್ನು ಬಳಕೆದಾರರಿಗೆ ನೀಡಿ,ಹೆಚ್ಚಿನ ಜನ ಮನ್ನಣೆ ಪಡೆದಿದೆ.ಗೂಗಲ್ ಸರಳ ಬ್ರೌಸರ್ ಆಗಿ ಹೊಸ ವಿನ್ಯಾಸವನ್ನು ನೀಡಿ,ಅಂತರ್ಜಾಲ ಜಾಲಾಟಕ್ಕೆ ಹೇಳಿ ಮಾಡಿಸಿದ,ವಿನ್ಯಾಸ ಹೊಂದಿದ ಮೊದಲ್ ಬ್ರೌಸರ್ ಆಗಿದೆ.ವೇಗವಾಗಿ ಅಂತರ್ಜಾಲ ಪುಟಗಳನ್ನು ತೋರಿಸುವಲ್ಲೂ ಕ್ರೋಮ್ ಮೇಲುಗೈ ಪಡೆದಿದೆ.ಬ್ರೌಸರ್‌ಗಳ ಮೇಲೆ ನಡೆಸಿದ ಪರೀಕ್ಷೆಗಳಲ್ಲೂ ಗೂಗಲ್ ಕ್ರೋಮ್ ಉಳಿದ ಬ್ರೌಸರುಗಳಿಗಿಂತ ಅತಿ ಹೆಚ್ಚು ಅಂಕ ಪಡೆದು ಮೇಲುಗೈ ಪಡೆದಿದೆ.
Udayavani
*ಅಶೋಕ್‌ಕುಮಾರ್ ಎ

Monday, April 04, 2011

ಐಪ್ಯಾಡ್‌ಗೆ ಚೀನೀ ಉತ್ತರ:ಲೀಪ್ಯಾಡ್

ಐಪ್ಯಾಡ್‌ಗೆ ಚೀನೀ ಉತ್ತರ:ಲೀಪ್ಯಾಡ್
ಆಪಲ್ ಕಂಪೆನಿಯ ಐಪ್ಯಾಡ್ ಒಂದು ವರ್ಷದಲ್ಲಿ ಒಂದೂವರೆ ಕೋಟಿಯಷ್ಟು ಮಾರಾಟವಾಗಿ ದಾಖಲೆ ನಿರ್ಮಿಸಿದೆ.ಲೆನೊವೋ ಕಂಪೆನಿಯು ಚೀನಾದಲ್ಲಿ ಇಂತಹ ಸಾಧನದ ಮಾರುಕಟ್ಟೆಯಲ್ಲಿ ಪಾಲು ಪಡೆಯಲು ಯೋಜಿಸಿ,ಲೀಪ್ಯಾಡ್ ಸಾಧನವನ್ನು ಬಿಡುಗಡೆ ಮಾಡುವುದರಲ್ಲಿದೆ.ಇದು ಐಪ್ಯಾಡಿಗೆ ಹೋಲಿಸಿದರೆ,ಮುನ್ನೂರು ಡಾಲರು ಅಗ್ಗ-ಐನೂರ ಮೂವತ್ತಮೂರು ಡಾಲರು ಬೆಲೆಯಲ್ಲಿ ಸಿಗಲಿದೆ.ವೈ-ಫೈ ಮತ್ತು ತ್ರೀಜಿ ಹೀಗೆ ಎರಡು ವಿಧದ ಆವೃತ್ತಿಗಳೂ ಲಭ್ಯವಾಗಲಿವೆ.ಸದ್ಯಕ್ಕೆ ಚೀನೀ ಮಾರುಕಟ್ಟೆಯ ಮೇಲೇ ಗಮನ ಹರಿಸುವುದು ಕಂಪೆನಿಯ ಲೆಕ್ಕಾಚಾರ-ನಂತರ ಇತರೆಡೆಯೂ ಸಾಧನ ಲಭ್ಯವಾಗಬಹುದು.ಲೀಪ್ಯಾಡಿನಲ್ಲಿ ಆಂಡ್ರಾಯಿಡ್ ವ್ಯವಸ್ಥೆ ಬಳಕೆಯಾಗಲಿದೆ.ಚೀನಾದಲ್ಲಿ ಒಂದು ದಶಲಕ್ಷ ಐಪ್ಯಾಡುಗಳ ಮಾರಾಟವಾಗಿರಬಹುದು ಎನ್ನುವ ಅಂದಾಜಿದೆ.ಈಗ ಬಳಕೆದಾರರಿಗೆ ಅಗ್ಗದ ಸಾಧನ ದೊರಕಿ,ಆವರಿಗೆ ಹೆಚ್ಚಿನ ಆಯ್ಕೆ ದೊರಕಲಿದೆ.
------------------------------------
ಆಂಡ್ರಾಯಿಡ್:ಟಾಪ್

ಕಂಪ್ಯೂಟರುಗಳ ಮಟ್ಟಿಗೆ ವಿಂಡೋಸ್ ಆಪರೇಟಿಂಗ್ ವ್ಯವಸ್ಥೆ ಅತಿ ಜನಪ್ರಿಯವಾದಂತೆ,ಮೊಬೈಲ್ ಸಾಧನಗಳ ಮಟ್ಟಿಗೆ ಆಂಡ್ರಾಯಿಡ್ ತಂತ್ರಾಂಶವು ನಿರ್ವಹಣಾ ವ್ಯವಸ್ಥೆ ತಂತ್ರಾಂಶವಾಗಿ ಬಳಕೆಯಾಗುವ ಲಕ್ಷಣವಿದೆ.ಹೆಚ್ಚಿನೆಲ್ಲಾ ಹ್ಯಾಂಡ್‌ಸೆಟ್ ತಯಾರಕರುಗಳು ಮತ್ತು ಮೊಬೈಲ್ ಸೇವೆ ಒದಗಿಸುವ ಕಂಪೆನಿಗಳು ಆಂಡ್ರಾಯಿಡ್ ಪರವಾಗಿವೆ.ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳ ಅಭಿವೃದ್ಧಿಯೂ ತ್ವರಿತಗತಿಯಲ್ಲಿ ನಡೆಯುತ್ತಿರುವುದು ಆಂಡ್ರಾಯಿಡ್ ವ್ಯವಸ್ಥೆಗೇ ಆಗಿದೆ.ಹೀಗಾಗಿ,ಗ್ರಾಹಕರೂ ಆಂಡ್ರಾಯಿಡ್ ವ್ಯವಸ್ಥೆಯನ್ನೇ ಬಯಸುತ್ತಿದ್ದಾರೆ.ಮೊಬೈಲ್ ಹ್ಯಾಂಡ್‌ಸೆಟ್‌ಗಳು ಅಲ್ಲದೆ ಸ್ಮಾರ್ಟ್‌ಪೋನ್ ಮತ್ತು ಟ್ಯಾಬ್ಲೆಟ್ ಸಾಧನಗಳ ಮಟ್ಟಿಗೂ ಇದೇ ಮಾತು ಅನ್ವಯವಾಗುತ್ತದೆ. ಆಂಡ್ರಾಯಿಡ್ ವ್ಯವಸ್ಥೆಯು ಟ್ಯಾಬ್ಲೆಟ್ ಸಾಧನಗಳ ಆವೃತಿಯನ್ನೂ ಹೊಂದಿರುವುದು ಇನ್ನೊಂದು ವಿಶೇಷ.ಗೂಗಲ್ ಸ್ವತ: ತನ್ನದೇ ಸ್ಮಾರ್ಟ್ ಫೋನ್ ಹೊರ ತಂದು,ಅದನ್ನು ಜಗತ್ತಿನಲ್ಲೆಡೆ ಒದಗಿಸುವ ಯೋಜನೆ ಹೊಂದಿದೆ ಎನ್ನುವ ವದಂತಿಯೂ ಇದೆ.ಹೀಗಾಗಿ,ಯಾವ ರೀತಿ ವಿಂಡೋಸ್ ಆಪರೇಟಿಂಗ್ ವ್ಯವಸ್ಥೆ ಕಂಪ್ಯೂಟರ್ ಮಾರುಕಟ್ಟೆಯ ಪಾರುಪತ್ಯ ಹೊಂದಿತ್ತೋ,ಅದೇ ಮಟ್ಟಿನ ಪಾರುಪತ್ಯ ಆಂಡ್ರಾಯಿಡ್ ವ್ಯವಸ್ಥೆಯೂ ಮಾಡುವತ್ತ ಮುನ್ನಡೆದಿದೆ.ಈ ಮಧ್ಯೆ ನೋಕಿಯಾ ಮಾತ್ರಾ ವಿಂಡೋಸ್ ಹಿಂದೆ ಬಿದ್ದು ಅಚ್ಚರಿ ಮೂಡಿಸಿದ್ದನ್ನು ಈ ಅಂಕಣದಲ್ಲಿಯೂ, ತಾವು ಓದಿದ್ದೀರಿ.
----------------------------------------
ಅಮೆಜಾನ್ ಕಂಪೆನಿಯ ಕ್ಲೌಡ್ ಸೇವೆ
ಅಮೆಜಾನ್ ಕಂಪೆನಿಯೂ ತನ್ನ ಇ-ವ್ಯವಹಾರದಿಂದ ಹೊಸ ಹಾದಿಯತ್ತ ಹೊರಳಿಕೊಳ್ಳುವುದರಲ್ಲಿದೆ.ಈಗ ಅದು ತನ್ನ ಗ್ರಾಹಕರಿಗೆ ಅಂತರ್ಜಾಲದಲ್ಲಿ ಐದು ಗಿಗಾಬೈಟುಗಳಷ್ಟು ಉಚಿತ ಆನ್‌ಲೈನ್ ಸ್ಮರಣ ಸಾಮರ್ಥ್ಯದ ಅವಕಾಶವನ್ನು ಒದಗಿಸಲಿದೆ.ಇಲ್ಲಿ ಯಾವುದೇ ಕಡತವನ್ನು ಕಾಪಿಡಬಹುದು.ಸಂಗೀತ,ಚಲನಚಿತ್ರಗಳ ಕಾಪಿರೈಟುಳ್ಳ ಕಡತಗಳನ್ನಿಡಲೂ ಅವಕಾಶವಿದೆ.ಇದರಿಂದ ಹಾಲಿವುಡ್ ಚಿತ್ರ ನಿರ್ಮಾಪಕರು ಮತ್ತು ಸಂಗೀತ ಉದ್ಯಮಕ್ಕೆ ತಲೆಬಿಸಿಯಾಗಬೇಕಿತ್ತು.ಆದರೆ,ಅಂತಹದ್ದೇನೂ ಆಗಿಲ್ಲ.ಯಾಕೆಂದರೆ,ಐದು ಗಿಗಾಬೈಟ್‌ನಷ್ಟು ಅವಕಾಶದಲ್ಲಿ ಹೆಚ್ಚು ಕಡತಗಳು ಹಿಡಿಯವು ಎನ್ನುವ ಲೆಕ್ಕಾಚಾರ ಒಂದಾದರೆ,ಕಡತಗಳನ್ನು ಇತರ ಜತೆ ಹಂಚಿಕೊಳ್ಳಲು,ಖಾತೆಯ ಗುಪ್ತಪದವನ್ನು ಇತರರ ಜತೆ ಹಂಚಿಕೊಳ್ಳಬೇಕಾಗುತ್ತದೆ ಎನ್ನುವ ವಾಸ್ತವದ ಅರಿವು.ಈ ಅಗತ್ಯದ ಕಾರಣ ಯಾರೂ ಕಡತಗಳನ್ನು ಹಂಚಿಕೊಳ್ಳುವ ಸಾಹಸಕ್ಕೆ ಕೈಹಾಕರು-ಹಾಗಾಗಿ ಕಾಪಿರೈಟ್ ಕಾಯಿದೆಯ ಉಲ್ಲಂಘನೆಗೆ ಅಮೆಜಾನ್ ಕ್ಲೌಡ್ ಸೇವೆ ಹೆಚ್ಚು ಬಳಕೆಯಾಗದು ಎನ್ನುವ ಸಮಾಧಾನ ಹಾಲಿವುಡ್ ನಿರ್ಮಾಪಕರದ್ದು.
----------------------------------
"ಸ್ಪರ್ಶ" ಮೂಲಕ ಕಾಪಿ ಮಾಡಿ!

ಒಂದು ಸಾಧನದಿಂದ ಕಡತಗಳನ್ನು ಇನ್ನೊಂದು ಸಾಧನಕ್ಕೆ ನಕಲು ಮಾಡುವುದು ತ್ರಾಸದಾಯಕವೇ ಸರಿ.ಬ್ಲೂಟೂತ್,ನಿಸ್ತಂತು ಸಂಪರ್ಕಗಳ ಮೂಲಕ ಈ ಕ್ರಿಯೆ ಸಾಕಷ್ಟು ಸರಳವಾಗಿದೆ.ಜತೆಗೆ ಆಂಡ್ರಾಯಿಡ್ ಅಪ್ಲಿಕೇಶನ್‌ಗಳನ್ನು ಡೆಸ್ಕ್‌ಟಾಪ್ ಕಂಪ್ಯೂಟರಿನಲ್ಲಿ ಇಳಿಸಿಕೊಂಡು,ತನ್ನ ಮೊಬೈಲ್ ಸಾಧನದಲ್ಲಿ ಅನುಸ್ಥಾಪಿಸಲು ಅನುವು ಮಾಡುವಂತಹ ಅನುಕೂಲತೆಗಳೂ ಈಗ ಲಭ್ಯ.ಸ್ಪರ್ಶ ಸಂವೇದಿ ತೆರೆಯುಳ್ಳ ಸಾಧನಗಳಲ್ಲಿ ಬಳಸಲು ತಂತ್ರಾಂಶವನ್ನು ಎಂಐಟಿಯ ಖ್ಯಾತ ಸಂಶೋಧಕ ಪ್ರಣವ್ ಮಿಸ್ತ್ರಿ ಸಿದ್ಧ ಪಡಿಸಿದ್ದಾರೆ."ಸ್ಪರ್ಶ" ಎಂದೇ ತಂತ್ರಾಂಶದ ಹೆಸರು.ಇದನ್ನು ಎರಡೂ ಸಾಧನದಲ್ಲಿ ಅಳವಡಿಸಿಕೊಳ್ಳಬೇಕು.ಎರಡೂ ಸಾಧನದಲ್ಲಿ ಒಂದೇ ಫೋಲ್ಡರ್ ಬಳಸುತ್ತಿರಬೇಕು.ಆಗ ಒಂದು ಸಾಧನದ ತೆರೆಯನ್ನು ಸ್ಪರ್ಶಿಸುವ ಮೂಲಕ,ಕಡತವನ್ನು ಕಾಪಿ ಮಾಡಿಕೊಂಡು,ಅದನ್ನು ನಮ್ಮ ದೇಹದಲ್ಲಿ ಧರಿಸಿದೆವೆಯೋ ಎನ್ನುವಂತ ಪರಿಣಾಮ ಉಂಟು ಮಾಡಬೇಕು.ನಂತರ ಇನ್ನೊಂದು ಸಾಧನದ ತೆರೆಯನ್ನು ಮುಟ್ಟಿದರೆ ಸರಿ,ಕಡತ ಅಲ್ಲಿಗೆ ವರ್ಗಾವಣೆಯಾಗಲಾರಂಭಿಸುತ್ತದೆ.ಮನುಷ್ಯ-ಕಂಪ್ಯೂಟರ್ ನಡುವಣ ಸಂವಹನವನ್ನು ಸಲೀಸುಗೊಳಿಸಲು ಪ್ರಣವ್ ಮಿಸ್ತ್ರಿ ಇಂತಹ ಅನೇಕ ಯೋಜನೆಗಳನ್ನು ಟೆಡೆಕ್ಸ್ ಎನ್ನುವ ಸಮಾವೇಶದಲ್ಲಿ ಸೋದಾಹರಣವಾಗಿ ತೋರಿಸಿ,ಯುವಜನರ ಕಣ್ಮಣಿಯಾಗಿರುವುದು ನಿಮಗೆ ತಿಳಿದೇ ಇದೆ.ಈ ತಂತ್ರಾಂಶವನ್ನು ಆಪರೇಟಿಂಗ್ ವ್ಯವಸ್ಥೆಯ ತಂತ್ರಾಂಶದ ಭಾಗವಾಗಿಸಿ,ನಕಲು ಮಾಡುವುದನ್ನು ಸುಲಭವಾಗಿಸಬಹುದು ಎಂಬುದು ಮುಂದಿನ ಯೋಜನೆ.
--------------------------------------------
ಜಿಮೇಲ್ ಮೋಶನ್:ಬೇಸ್ತು
ಜನರನ್ನು ಬೇಸ್ತು ಬೀಳಿಸುವ ಎಪ್ರಿಲ್ ಫೂಲ್ ಜೋಕುಗಳಲ್ಲಿ ಗೂಗಲ್‌ನ ಪ್ರಯೋಗ ಪರಿಣಾಮಕಾರಿಯಾಗಿತ್ತು.ಜಿಮೇಲ್ ಲಾಗಿನ್ ಪುಟದಲ್ಲಿ ಜಿಮೇಲ್ ಮೋಶನ್ ಎಂಬ ಹೊಸ ಅಪ್ಲಿಕೇಶನ್ ವಿವರ ಎಲ್ಲರ ಗಮನ ಸೆಳೆಯುವಂತಿತ್ತು.ಕ್ಲಿಕ್ಕಿಸಿದರೆ,ತೆರೆಯುವ ಹೊಸ ಪುಟದಲ್ಲಿ,ಹೊಸ ಅಪ್ಲಿಕೇಶನ್ ಡೌನ್‌ಲೋಡ್ ಬಟನ್,ಅಪ್ಲಿಕೇಶನ್ ಬಗ್ಗೆ ವಿವರಣೆ ನೀಡುವ ವಿಡಿಯೋ ಕೊಂಡಿ ಎಲ್ಲವೂ ಇತ್ತು.ಜಿಮೇಲ್ ಮೋಶನ್ ಅಪ್ಲಿಕೇಶನ್ ಅನುಸ್ಥಾಪಿಸಿದರೆ,ಕಂಪ್ಯೂಟರ್ ಮುಂದೆ ನಟಿಸುವ ಮೂಲಕ,ಮಿಂಚಂಚೆ ಓದುವುದರಿಂದ ಹಿಡಿದು,ರಚಿಸಲು ಸಾಧ್ಯ ಎಂಬ ವಿವರಣೆ ವಿಡಿಯೋದಲ್ಲಿ ಬಹಳ ಮನ ಮುಟ್ಟುವಂತೆ ವಿವರಿಸಲಾಗಿತ್ತು.ಆದರೆ,ಡೌನ್‌ಲೋಡ್ ಬಟನ್ ಕ್ಲಿಕ್ಕಿಸಿದಿರೋ,ಇದೊಂದು ಎಪ್ರಿಲ್ ಫೂಲ್ ತಂತ್ರ,ಸದ್ಯಕ್ಕಂತೂ ಇಂತಹ ಸವಲತ್ತು ಲಭ್ಯವಿಲ್ಲ ಎನ್ನುವ ಗುಟ್ಟು ಬಹಿರಂಗವಾಗುತ್ತಿತ್ತು.
--------------------------------------------------
ತುಷಾರ:ವಾರ್ಷಿಕ ಚಂದಾ ಗೆಲ್ಲಿ!
ಈ ಪ್ರಶ್ನೆಗಳಿಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಉಡುಪಿ ಬ್ರಹ್ಮಗಿರಿಯ ಡಾ.ಶ್ರೀನಿವಾಸ್ ರಾವ್,ಪ್ರೊಫೆಸರ್,ನಿಟ್ಟೆ.
*ಡೆಬಿಯನ್ ಲೀನಕ್ಸ್ ವಿತರಣೆಯ ಮುಖ್ಯ ಹೆಗ್ಗಳಿಕೆ ಏನು?
*ಐ ಆರ್ ಸಿ ಏನು?ಯಾಕೆ ಜನಪ್ರಿಯ?
(ಉತ್ತರಗಳನ್ನು nistantusansaara@gmail.comಗೆ ಮಿಂಚಂಚೆ ಮಾಡಿ ಅಥವಾ 725927022ಗೆ ಎಸ್ಸೆಮ್ಮೆಸ್ ಮಾಡಿ.ವಿಷಯ:NS25 ನಮೂದಿಸಿ.)
ಕಳೆದ ವಾರದ ಸರಿಯುತ್ತರಗಳು:
*ಕಂಪ್ಯೂಟರಿನ ಹಾರ್ಡ್ ಡಿಸ್ಕ್ ಕೈಕೊಟ್ಟಾಗ,ಕಂಪ್ಯೂಟರ್ ಬಳಸಲು ಲೀನಕ್ಸ್ ಲೈವ್ ಸಿಡಿ ಬಳಸಿ.
*ಮತ ಯಾಚನೆಗೆ ಲ್ಯಾಪ್‌ಟಾಪ್ ಆಮಿಷ ಒಡ್ಡುತ್ತಿರುವ ರಾಜಕೀಯ ಪಕ್ಷಗಳು ಡಿಎಂಕೆ ಮತ್ತು ಎಐಡಿಎಂಕೆ. ಬಹುಮಾನ ಗೆದ್ದವರು ಸ್ವಾತಿ ಎನ್,ಜಾಲ್ಸೂರು. ಅಭಿನಂದನೆಗಳು.
-----------------------------------------------------
ಟ್ವಿಟರ್ ಚಿಲಿಪಿಲಿ
*ರಾಜಹಂಸ ಬಸ್ ಸರಿಯಿರಲಿಲ್ಲ-ಹಾಗಾಗಿ ಅದು ರಾಜಹಿಂಸೆಯಾಯ್ತು..
*ವಿಕಿ ಲೀಕ್ಸ್‌ನ ಇಂಡಿಯಾ ಕೇಬಲುಗಳಿಲ್ಲಿವೆ:http://www.interestingreads.org/?p=691
Udayavani
*ಅಶೋಕ್‌ಕುಮಾರ್ ಎ