Monday, May 30, 2011

ಬೆಂಗಳೂರಿನ ಸ್ಟ್ರೀಟ್‌ವ್ಯೂ

ಬೆಂಗಳೂರಿನ ಸ್ಟ್ರೀಟ್‌ವ್ಯೂ

ಗೂಗಲ್ ನಕಾಶೆಗಳನ್ನು ಒದಗಿಸುವ ಗೂಗಲ್ ಮ್ಯಾಪ್ ಸೇವೆಯನ್ನು ಈಗ ಎಲ್ಲರೂ ಬಳಸುತ್ತಿದ್ದಾರೆ.ಸ್ಮಾರ್ಟ್‌ಪೋನ್ ಬಳಕೆದಾರರಂತೂ,ಜಿಪಿಎಸ್ ಸೇವೆ ಬಳಸಿ,ಪ್ರಯಾಣಿಸುವಾಗ ದಾರಿ ಕಂಡುಕೊಳ್ಳಲೂ ಮ್ಯಾಪ್‌ಗಳನ್ನು ಬಳಸುತ್ತಾರೆ.ಗೂಗಲ್ ಇಪ್ಪತ್ತೇಳು ದೇಶಗಳಲ್ಲಿ ಈಗಾಗಲೇ ಸ್ಟ್ರೀಟ್‌ವ್ಯೂ ಎನ್ನುವ ಸೇವೆಯನ್ನೂ ನೀಡುತ್ತದೆ.ಇದರಲ್ಲಿ,ರಸ್ತೆಗಳ 360 ಕೋನಗಳ ದೃಶ್ಯಗಳನ್ನು ನೀಡುತ್ತದೆ.ಇದರಿಂದ ಬಳಕೆದಾರರು ತಮ್ಮ ಮನೆಯನ್ನು ಇತರರಿಗೆ ತೋರಿಸಬಹುದು.ಆಸ್ತಿ ಖರೀದಿಸುವವರು,ಅದರ ಸುತ್ತಲಿನ ಪರಿಸರವನ್ನು ಗಮನಿಸಬಹುದು.ವ್ಯಾಪಾರಸ್ಥರು ತಮ್ಮ ಅಂಗಡಿಯ ಸುತ್ತಲಿನ ಪಾರ್ಕಿಂಗ್ ವ್ಯವಸ್ಥೆಗಳನ್ನು ಗ್ರಾಹಕರಿಗೆ ತೋರಿಸಬಹುದು.ಹೀಗೆ ಹಲವು ಪ್ರಯೋಜನಗಳಿರುವ ಸ್ಟ್ರೀಟ್‌ವ್ಯೂ ಸೇವೆಯನ್ನು ಬೆಂಗಳೂರಿನ ರಸ್ತೆಗಳಿಗೂ ತರಲು ಗೂಗಲ್ ಆರಂಭಿಸಿದೆ.ಗೂಗಲ್‌ನ ವಾಹನಗಳು ರಸ್ತೆಯಲ್ಲಿ ತಿರುಗಾಡಿ,ಕ್ಯಾಮರಾ ಮೂಲಕ ದೃಶ್ಯಗಳನ್ನು ಸೆರೆ ಹಿಡಿದು,ಸೇವೆಯನ್ನು ವಿಸ್ತರಿಸಲು ಆರಂಭಿಸಿವೆ.ಜನರ ಖಾಸಗಿತನದ ಉಲ್ಲಂಘನೆಯಾಗದಂತೆ,ಜನರ ಮುಖಗಳನ್ನು ಅಸ್ಪಷ್ಟಗೊಳಿಸಲು ಮತ್ತು ವಾಹನದ ನಂಬರ್ ಪ್ಲೇಟುಗಳನ್ನೂ ಮಂಕಾಗಿಸಲು ಗೂಗಲ್ ಕ್ರಮ ಕೈಗೊಳ್ಳುತ್ತದೆ.ಸ್ಮಾರಕಗಳ ಸ್ಟ್ರೀಟ್‌ವ್ಯೂ ಕೂಡಾ ಸಿಗಲಿದ್ದು,ಅವುಗಳ ಚಿತ್ರೀಕರಣಕ್ಕೆ ಅನುಮತಿ ಪಡೆದುಕೊಳ್ಳಲಾಗುವುದು ಎಂದು ಗೂಗಲ್ ವಕ್ತಾರ ತಿಳಿಸಿದ್ದಾರೆ.ಸಾರ್ವಜನಿಕ ಪ್ರದೇಶಗಳ ಸ್ಟ್ರೀಟ್‌ವ್ಯೂ ಮಾತ್ರಾ ದೊರಕಲಿದೆ.
----------------------------------------------------
ಐಫೋನ್4 ಭಾರತದಲ್ಲಿ ಲಭ್ಯ

ಐಫೋನ್4 ಸ್ಮಾರ್ಟ್‌ಪೋನ್ ಈಗ ಭಾರತದಲ್ಲೂ ಲಭ್ಯವಾಗಲಿದೆ.ಅಮೆರಿಕಾದಲ್ಲಿ ಇದನ್ನು ಮಾರುಕಟ್ಟೆಗೆ ಬಿಟ್ಟು ಸರಿಸುಮಾರು ಒಂದು ವರ್ಷವೇ ಆಯಿತು.ಆದರೆ ತ್ರೀಜಿ ಸೇವೆ ಲಭ್ಯವಿರುವ ಈ ಸ್ಮಾರ್ಟ್‌ಫೋನನ್ನು ಮಾರುಕಟ್ಟೆಗೆ ಒದಗಿಸಲು ಆಪಲ್ ಕಂಪೆನಿ ಇಷ್ಟು ತಡ ಮಾಡಿದ್ದರಲ್ಲಿ ಕಾರಣ ಸ್ಪಷ್ಟ-ಭಾರತದಲ್ಲಿ ತ್ರೀಜಿ ಸೇವೆಗಳು ಆಗಿನ್ನೂ ಆರಂಭವಾಗಿರಲಿಲ್ಲ ಅಥವಾ ಬಹಳ ಸೀಮಿತವಾಗಿತ್ತು.ವೀಡಿಯೋ ಕರೆಗಳನ್ನು ಮಾಡಲು ಕೂಡಾ ಇದರಲ್ಲಿ ಬಳಸುವವನು ಮುಖದ ಚಿತ್ರ ಹಿಡಿಯುವ ಕ್ಯಾಮರಾ ಜತೆಗೆ ಹಿಂಬದಿ ಕ್ಯಾಮರಾವೂ ಇದೆ.ಹಿಂಬದಿ ಕ್ಯಾಮರಾವು ಐದು ಮೆಗಾಪಿಕ್ಸೆಲ್ ಸ್ಪಷ್ಟತೆಯದ್ದು.ಹದಿನಾರು ಜಿಬಿ ಸ್ಮರಣಕೋಶದ ಐಫೋನ್4ಗೆ ಮೂವತ್ತನಾಲ್ಕು ಸಾವಿರ ಮತ್ತು ಮೂವತ್ತೆರಡು ಜೀಬಿಯದ್ದಕ್ಕೆ ನಲುವತ್ತೊಂದು ಸಾವಿರ ಬೆಲೆ ನಿಗದಿ ಪಡಿಸಲಾಗಿದೆ.
--------------------------------------------
ಸ್ಮಾರ್ಟ್‌ಪೋನುಗಳಲ್ಲಿ ಗೂಗಲ್ ಮ್ಯಾಪ್
ಗೂಗಲ್ ಮ್ಯಾಪನ್ನು ಸ್ಮಾರ್ಟ್‌ಪೋನುಗಳ ಮೂಲಕ ಬಳಸುವವರ ಸಂಖ್ಯೆ ಸತತವಾಗಿ ಏರುತ್ತಿದೆ.ಜಿಪಿಎಸ್ ಸ್ಥಾನ ಪತ್ತೆ ಸೇವೆಯ ಮೂಲಕ ರಸ್ತೆಯ ಮಾರ್ಗದರ್ಶನ ನೀಡುವ ಸೇವೆಯು ಬಹು ಉಪಯುಕ್ತವಾಗುತ್ತದೆ.ಇಪ್ಪತ್ತು ಕೋಟಿ ಮೊಬೈಲ್ ಸಾಧನಗಳಲ್ಲಿ ಗೂಗಲ್ ಮ್ಯಾಪ್ ತಂತ್ರಾಂಶವನ್ನು ಅಳವಡಿಸಿಕೊಳ್ಳಲಾಗಿದೆ.ದೈನಂದಿನ ಬಳಕೆಯ ವಿವರಗಳನ್ನು ಪರಿಶೀಲಿಸಿದರೂ,ಗೂಗಲ್ ಮ್ಯಾಪ್ ಬಳಕೆ ಬಹು ಜನಪ್ರಿಯವಾಗಿದೆ.ಇನ್ನು ವಾರಾಂತ್ಯಗಳಲ್ಲಿ ಪ್ರವಾಸ ಹೋಗುವವರ ಸಂಖ್ಯೆ ಏರುವುದರಿಂದ,ಮ್ಯಾಪ್ ಬಳಕೆ ಏರುತ್ತದೆ.ಗೂಗಲ್ ಲ್ಯಾಟಿಟ್ಯೂಡ್ ಸೇವೆಯ ಬಳಕೆಯಿಂದ,ವ್ಯಕ್ತಿಗೆ ಆತನ ಸುತ್ತಮುತ್ತಲು ಲಭ್ಯವಿರುವ ವಿವಿಧ ವ್ಯವಹಾರ ಸ್ಥಳಗಳ ಮಾಹಿತಿ ದೊರೆಯುತ್ತದೆ.
---------------------------------
ಚಂದ್ರಮನಲ್ಲಿ ನೀರು
ಚಂದ್ರನ ನೆಲ ಒಣಕಲು ಅಲ್ಲ,ಅಲ್ಲಿ ನೀರಿನಂಶದಿಂದ ಒದ್ದೆಯಾದ ಪದರಗಳಿವೆ ಎನ್ನುವ ಅನಿರೀಕ್ಷಿತ ಅಂಶ ಬೆಳಕಿಗೆ ಬಂದಿದೆ.ಸಹರಾ ಮರುಭೂಮಿ ಪ್ರದೇಶಕ್ಕಿಂತ ಚಂದ್ರನ ಮೇಲ್ಮೈಯಲ್ಲಿ ಹೆಚ್ಚು ಒದ್ದೆಯಾದ ಪ್ರದೇಶಗಳಿವೆ.ಅಂತಾರ್ರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ವ್ಯೋಮಯಾನಿ ಪೌಲೋ ನೆಪೋಲಿ ತೆಗೆದ ಚಿತ್ರಗಳಿಂದ ಈ ವಿಚಾರ ಪತ್ತೆಯಾಗಿದೆ.ಕಳೆದ ಅಕ್ಟೋಬರಿನಲ್ಲಿ ಚಂದ್ರನ ಕಣಿವೆಯೊಂದರಲ್ಲಿ ಅಪಾರ ಪ್ರಮಾಣದ ನೀರು ಇರುವ ಸಾಧ್ಯತೆ ಬಗ್ಗೆ ವಿಜ್ಞಾನಿಗಳು ಹೇಳಿದ ನಂತರ,ಈ ಹೊಸ ಮಾಹಿತಿಗಳು ಚಂದ್ರನ ಬಗ್ಗೆ ನಮ್ಮ ತಿಳುವಳಿಕೆ ಅಪೂರ್ಣ ಎನ್ನುವುದನ್ನು ಬೊಟ್ಟು ಮಾಡುತ್ತದೆ.ಭೂಮಿಯು ಯಾವುದೋ ಆಕಾಶಕಾಯದ ಜತೆ ಡಿಕ್ಕಿಯಾದಾಗ,ಭೂಮಿಯ ಭಾಗ ಸಿಡಿದು,ಬೇರೆಯಾಗಿಅದರಿಂದ ಚಂದ್ರನ ಉಗಮವಾಯಿತು ಎನ್ನುವ ಸಿದ್ಧಾಂತದ ಪ್ರಕಾರ,ಸ್ಫೋಟದಿಂದ ಬಿಡುಗಡೆಯಾದ ಅಪಾರಶಕ್ತಿಯ ಕಾರಣ,ಚಂದ್ರನಲ್ಲಿದ್ದ ನೀರಿನಂಶ ಒಣಗಿ ಹೋಗಬೇಕಿತ್ತು.ಈಗ ಈ ಸಿದ್ಧಾಂತವು ಸರಿಯೇ ಎನ್ನುವ ಸಂಶಯ ಬರುವ ಹಾಗಾಗಿದೆ.
-----------------------------------------
ಅಂತರ್ಜಾಲ ಶೋಧ:ಹೊಸ ಮಾಹಿತಿ
ಅಂತರ್ಜಾಲ ಶೋಧ ನಡೆಸಿದವರ ವಿವರಗಳು ನಮಗೆ ಹೆಚ್ಚು ಉಪಯುಕ್ತವೇ?ಗೂಗಲ್ ಹೌದೆನ್ನುತ್ತದೆ.ಗೂಗಲ್ ಕೊರಿಲೇಟ್ ಎನ್ನುವ ಹೊಸ ಸೇವೆಯು,ಒಂದು ಪದಗುಚ್ಛವನ್ನು ಶೋಧಕ್ಕಾಗಿ ಬಳಸಿದವರ ಸಂಖ್ಯೆಯಲ್ಲಿ ಏರಿಳಿಕೆಯು ನೈಜ ಸಂಗತಿಗಳೊಂದಿಗೆ ತಳಕು ಹಾಕಿಕೊಂಡಿರುವುದನ್ನು ಶ್ರುತ ಪಡಿಸುತ್ತದೆ.ಉದಾಹರಣೆಗೆ "ಫ್ಲೂ" ಎನ್ನುವ ಪದವನ್ನು ಶೋಧಿಸಿದವರ ಸಂಖ್ಯೆಯು,ಆಯಾಯ ಸಮಯದಲ್ಲಿ ಫ್ಲೂ ಪೀಡಿತರಾದವರ ಸಂಖ್ಯೆಯ ಅನುಪಾತದಲ್ಲಿರುವುದನ್ನು ತೋರಿಸಿದೆ.ಇನ್ನು ರೈಬೋಸೋಮ್ ಮತ್ತು ಮೈಟೋಕಾಂಡ್ರಿಯಾದಂತಹ ಪದಗುಚ್ಛವನ್ನು ಹುಡುಕಿದವರ ಪ್ರಮಾಣ ಒಂದೇ ದರದಲ್ಲಿ ಏರಿಳಿಕೆಯಾಗಿರುವ ಅಚ್ಚರಿಯ ಅಂಶವೂ ಬೆಳಕಿಗೆ ಬಂದಿದೆ.ಇದೇಕೆ ಹೀಗೆ ಎನ್ನುವುದರ ಕಡೆಗೆ ಸಂಶೋಧನೆ ನಡೆಯಬೇಕಿದೆ.
-------------------------------------
ತುಷಾರ:ವಾರ್ಷಿಕ ಚಂದಾ ಗೆಲ್ಲಿ!
ಈ ಪ್ರಶ್ನೆಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಅಮೆರಿಕಾದ ಮೇರಿಲ್ಯಾಂಡ್‌ನಲ್ಲಿರುವ ಶಾಮಲಾ ಬನವತಿ.
(ಉತ್ತರಗಳನ್ನು nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ:NS33 ನಮೂದಿಸಿ.)
*ಭ್ರಷ್ಟಾಚಾರ ನಿಯಂತ್ರಣ ಅಥವಾ ಹೋರಾಟಕ್ಕೆ ಮೊಬೈಲ್ ಮೂಲಕ ಯಾವ ರೀತಿಯಲ್ಲಿ ಸಹಾಯ ಪಡೆಯಬಹುದು?
ಕಳೆದ ವಾರದ ಸರಿಯುತ್ತರಗಳು:
*ಬ್ಯಾಂಕ್ ವೆಬ್‌ಸೈಟಿನಲ್ಲಿ ಲಾಗಿನ್ ಪುಟದಲ್ಲಿ ಪಾಸ್‌ವರ್ಡ್ ಕದಿಯುವ ತಂತ್ರಾಂಶಗಳಿಂದ ರಕ್ಷಣೆ ಪಡೆಯಲು ಸವಲತ್ತು ಮಿಥ್ಯಾ ಕೀಲಿಮಣೆ.ಸ್ಕ್ರೀನಿನಲ್ಲಿ ಗೋಚರಿಸುವ ಈ ಕೀಲಿಮಣೆಯ ಕೀಲಿಗಳ ಮೇಲೆ ಕ್ಲಿಕ್ಕಿಸಿ,ಪಾಸ್‌ವರ್ಡ್ ನೀಡುವುದು ಸುರಕ್ಷಿತ.
*ಮೊಬೈಲ್ ಬಳಸಿ,ಬ್ಯಾಂಕ್ ತಾಣದಲ್ಲಿ ಬಳಕೆದಾರನ ಸಾಚಾತನದ ಪರೀಕ್ಷೆಗೆ ಒಂದು ಸಲ ಬಳಕೆಗೆ ಪಾಸ್‌ವರ್ಡನ್ನು ನೋಂದಾಯಿತ ಮೊಬೈಲಿಗೆ ಕಳುಹಿಸಲಾಗುತ್ತದೆ.
ಬಹುಮಾನ ಗೆದ್ದವರು ಸುಮಂತ್ ಶಾನುಭಾಗ್. ವಿ,ವಡೇರಹೋಬ್ಳಿ,ಕುಂದಾಪುರ. ಅಭಿನಂದನೆಗಳು.
----------------------------------------
ಜಿಮೇಲ್‌ಗೆ ರಂಗು
ಇನ್ನು ಕೆಲವೇ ವಾರಗಳಲ್ಲಿ ಜಿಮೇಲ್ ಮಿಂಚಂಚೆಯಲ್ಲಿ ವ್ಯಕ್ತಿಯು ತನ್ನ ಸಂಪರ್ಕಗಳ ಬಗ್ಗೆ ಹೆಚ್ಚು ವಿವರಗಳನ್ನು ಪಡೆಯಲು ಸಾಧ್ಯ.ಆಯ್ದ ಸಂಪರ್ಕದ ಜತೆ ನಡೆಸಿದ ಸಂವಾದ,ಕಳುಹಿಸಿದ ಮಿಂಚಂಚೆ,ಬಜ್ ಸೇವೆಯಲ್ಲಿ ಆತನ ಸಂದೇಶಗಳು ಇತ್ಯಾದಿ ವಿವರಗಳು ತಕ್ಷಣ ಲಭ್ಯವಾಗಲಿದೆ.
----------------------------
ಗುರ್ರ್ ಎಂದ  ಗುರುಗುಂಟಿರಾಯರು
ಕಳೆದವಾರ ವೃತ್ತಿಪರರ ನೆಟ್‌ವರ್ಕಿಂಗ್ ತಾಣ ಲಿಂಕ್‌ಡಿನ್ ಶೇರು ಬಗ್ಗೆ ನೀಡಿದ ತುಣುಕಿನಲ್ಲಿ ಶೇರು ಬೆಲೆ ರುಪಾಯಿಗಳು ಎಂದು ಪ್ರಕಟವಾಗಿತ್ತು.ಅಮೇರಿಕಾದ ಶೇರು ಮಾರುಕಟ್ಟೆಯ ಶೇರು ಬೆಲೆ ಡಾಲರುಗಳಲ್ಲವೇ ಎಂದು ಗುರುಗುಂಟಿರಾಯರು ಹರಿಹಾಯ್ದಿದ್ದಾರೆ.ಹೌದು-ಅದು ಡಾಲರುಗಳಾಗಬೇಕಿತ್ತು.ತಪ್ಪಿಗಾಗಿ ವಿಷಾದಗಳು.
*ಅಶೋಕ್‌ಕುಮಾರ್ ಎ

Monday, May 23, 2011

ಕೋಟಿ ಸಮೀಪಿಸಿದ ತ್ರೀಜಿ ಬಳಕೆದಾರರು



ಕೋಟಿ ಸಮೀಪಿಸಿದ ತ್ರೀಜಿ ಬಳಕೆದಾರರು
ತ್ರೀಜಿ ಮೊಬೈಲ್ ಸೇವೆ ಆರಂಭವಾದ ಬಳಿಕ ಆ ಸೇವೆ ಬಳಸಿ,ಬ್ರಾಡ್‌ಬ್ಯಾಂಡ್ ಸೇವೆ ಪಡೆಯುತ್ತಿರುವವರ ಸಂಖ್ಯೆ ಒಂಭತ್ತು ದಶಲಕ್ಷ ದಾಟಿದೆ.ನಾಲ್ಕು ತಿಂಗಳ ಅವಧಿಯಲ್ಲಿ ಈ ದಾಖಲೆಯ ನಿರ್ಮಾಣವಾಗಿದೆ.ದೇಶದಲ್ಲಿ ಒಟ್ಟು ಇರುವ ಕೇಬಲ್ ಆಧಾರಿತ ಬ್ರಾಡ್‌ಬ್ಯಾಂಡ್ ಸೇವೆಗೆ ಇದುವರೆಗೆ ಹನ್ನೊಂದು ದಶಲಕ್ಷ ಗ್ರಾಹಕರಷ್ಟೇ ಇದ್ದಾರೆ ಎನ್ನುವುದನ್ನು ಗಮನಿಸಿದರೆ,ತ್ರೀಜಿ ಬಳಕೆ ಅಚ್ಚರಿ ಹುಟ್ಟಿಸುವಷ್ಟಿದೆ.ಇನ್ನೊಂದು ನಾಲ್ಕು ವರ್ಷಗಳಲ್ಲಿ ಈ ಸಂಖ್ಯೆಯು ಹತ್ತು ಕೋಟಿ ಮುಟ್ಟಬೇಕೆಂಬ ಗುರಿಯನ್ನು ಮೊಬೈಲ್ ಸೇವೆದಾತೃಗಳು ಹೊಂದಿದ್ದಾರೆ.
-------------------------------------------
ಲಿಂಕಡ್ ಇನ್ ಡಬಲ್
ಮೇಲ್ಮನೆಯವರ ಕನಸಿನ ರಾಜ ಗುರುಗುಂಟಿರಾಯರ ನಿದ್ದೆ ಕದಿಯಬಹುದಾದ ಸಮಾಚಾರ ಯು ಎಸ್‌ನಿಂದ ಬಂದಿದೆ.ಅಲ್ಲಿನ ಸ್ಟಾಕ್ ವಿನಿಮಯ ಕೇಂದ್ರದಲ್ಲಿ ಸಾಮಾಜಿಕ ನೆಟ್ವರ್ಕಿಂಗ್ ತಾಣ ಲಿಂಕ್‌ಡಿನ್ ತಾಣದ ಐಪಿಓವು ಮುಗಿದು,ವಿನಿಮಯ ಕೇಂದ್ರದಲ್ಲಿ ಶೇರು ವಿಕ್ರಯ ಆರಂಭವಾದ ಮೊದಲ ದಿನವೇ ಅದರ ಬೆಲೆ ಡಬಲ್ ಆಗಿ,ಶೇರು ಗಿಟ್ಟಿಸಿಕೊಂಡವರು ಲಾಭದ ಗುಂಗಿನಲ್ಲಿ ಮೈಮರೆಯುವಂತಾಯ್ತು.ನಲುವತ್ತೈದು ಡಾಲರಿಗೆ ಶೇರುದಾರರಿಗೆ ನೀಡಲ್ಪಟ್ಟ ಶೇರು,ಈ ಬರಹ ಬರೆಯುತ್ತಿರುವಾಗ ನೂರೊಂದು ಡಾಲರಿಗೆ ಬಿಕರಿಯಾಗುತ್ತಿತ್ತು.ಫೇಸ್‌ಬುಕ್,ಅರ್ಕುಟ್ ಅಂತಹ ನೆಟ್ವರ್ಕಿಂಗ್ ಕಂಪೆನಿಗಳು ಖಾಸಗಿ ಹೂಡಿಕೆಯಿಂದ ನಡೆಯುತ್ತಿದ್ದು,ಇದೇ ಮೊದಲ ಬಾರಿಗೆ ನೆಟ್ವರ್ಕಿಂಗ್ ತಾಣವೊಂದರ ಶೇರು ಅಮೆರಿಕಾದ ಹೂಡಿಕೆದಾರರ ಕೈಗೆ ಸಿಗುತ್ತಿದೆ.ಲಿಂಕ್‌ಡಿನ್ ತಾಣವು ವೃತ್ತಿಪರರು ಕಲೆಯಲು ಅನುವು ಮಾಡುವ ತಾಣ.ಇಲ್ಲಿ ಜನರ ವೃತ್ತಿ ಸಂಬಂಧಿತ ವಿವರಗಳೇ ಹೆಚ್ಚು.ಸಹೋದ್ಯೋಗಿಗಳ ಜತೆಗಿನ ಸಾಮಾಜಿಕ ಸಂಬಂಧವೇರ್ಪಡಲು ತಾಣ ಅವಕಾಶ ಕಲ್ಪಿಸುತ್ತದೆ.ಈಗ ಇಂತಹ ತಾಣಗಳು ಹೂಡಿಕೆದಾರರಿಂದ ಹಣ ಕಲೆಹಾಕಲು ಶುರು ಮಾಡುವ ಸೂಚನೆಗಳೀಗಲೇ ಸಿಕ್ಕಿವೆ.ನೌಕರಿ ಹುಡುಕಾಟ,ಪ್ರೀಮಿಯಂ ಚಂದಾದಾರರು ಮತ್ತು ಜಾಹೀರಾತು ಹೀಗೆ ವಿವಿಧ ಮೂಲಗಳಿಂದ ಆದಾಯಗಳಿಸುತ್ತಿರುವುದು ಲಿಂಕಡ್‌ಇನ್ ತಾಣದ ವಿಶೇಷ.ವಾರಾಂತ್ಯಕ್ಕೆ ಶೇರು ಬೆಲೆ ತೊಂಭತ್ತ ಮೂರು ಡಾಲರುಗಳಲ್ಲಿ ನಿಂತಿತ್ತು.
-------------------------------------------
ಆಂಡ್ರಾಯಿಡ್ ಪೋನ್:ಭದ್ರತಾ ಕೋರೆ

ಆಂಡ್ರಾಯಿಡ್ ಫೋನುಗಳಿಂದ ಮಾಹಿತಿ ಸೋರಿಕೆಗೆ ಆಸ್ಪದ ನೀಡುವ ಭದ್ರತಾ ವೈಫಲ್ಯವನ್ನು ಬ್ರಿಟನಿನ ಸಂಶೋಧಕರು ಪತ್ತೆ ಹಚ್ಚಿದ್ದಾರೆ.ಮೊಬೈಲ್ ಜಾಲಗಳಲ್ಲಿ ನಿಸ್ತಂತು ಜಾಲದಲ್ಲಿ ಪೋನಿನಿಂದ ಹೊರಟ ಮಾಹಿತಿಯನ್ನು ಕದ್ದವರು,ಅದನ್ನು ಬಳಸಿ,ವ್ಯಕ್ತಿಯ ಗೂಗಲ್ ಕ್ಯಾಲೆಂಡರಿನಲ್ಲಿ ಶೇಖರಿಸಿದ ಮಾಹಿತಿಯನ್ನು ತಿಳಿದುಕೊಳ್ಳಲು ಸಾಧ್ಯವಾಗುವ ಭದ್ರತಾ ವೈಫಲ್ಯ ಆಂಡ್ರಾಯಿಡ್ ಫೋನುಗಳಲ್ಲಿವೆ.ಈಗ ಆಂಡ್ರಾಯಿಡ್ ಆಪರೇಟಿಂಗ್ ವ್ಯವಸ್ಥೆಗಳಲ್ಲಿ ಇದಕ್ಕೆ ಸಂಬಂಧಿಸಿದ ಪ್ಯಾಚ್ ಒಂದನ್ನು ಬಿಡುಗಡೆ ಮಾಡಬೇಕಾಗುತ್ತದೆ.ಅದನ್ನು ಪ್ರತಿಯೋರ್ವ ಆಂಡ್ರಾಯಿಡ್ ಫೋನು ಬಳಕೆದಾರ ಅನುಸ್ಥಾಪಿಸಿಕೊಳ್ಳಬೇಕಾಗುತ್ತದೆ.
---------------------------------
ಎಟಿಎಂಗಳಲ್ಲಿ ನವೀನ ಸೇವೆಗಳು
ಬ್ಯಾಂಕ್ ಎಟಿಎಂಗಳಲ್ಲಿ ನವೀನ ಮೌಲ್ಯವರ್ಧಿತ ಸೇವೆಗಳು ಆರಂಭವಾಗುತ್ತಿವೆ.ಏರ್‌ಲೈನ್ಸ್ ಬುಕಿಂಗ್,ರೈಲ್ವೇ ಟಿಕೆಟ್ ಕಾಯ್ದಿರಿಸುವಿಕೆ,ಡಿಟಿಎಚ್-ಮೊಬೈಲ್ ಪ್ರಿಪೆಯ್ಡ್ ಶುಲ್ಕ ಪಾವತಿ,ಇನ್ಶೂರೆನ್ಸ್ ಪ್ರೀಮಿಯಂ ಪಾವತಿ... ಹೀಗೆ ನಾನಾ ಸೇವೆಗಳನ್ನು ಬ್ಯಾಂಕುಗಳು ನೀಡಲಾರಂಭಿಸಿವೆ.ಗ್ರಾಹಕನನ್ನು ಬ್ಯಾಂಕ್‌ನಿಂದ ದೂರವಿಟ್ಟು ಈ ರೀತಿಯ ಸೇವೆ ಒದಗಿಸಿದರೆ,ಬ್ಯಾಂಕುಗಳಲ್ಲಿ ನೌಕರರ ಸಂಖ್ಯೆ ಕಡಿತಗೊಳಿಸಲು ಸಾಧ್ಯವಾಗುವುದರಿಂದ,ಈ ತೆರನ ಸೇವೆಗಳನ್ನು ಒದಗಿಸಲು ಬ್ಯಾಂಕುಗಳು ಉತ್ಸಾಹ ಹೊಂದಿವೆ.ಎಟಿಎಂ ನಿರ್ವಹಣಾ ಖರ್ಚನ್ನೂ ಇಂತಹ ಮೌಲ್ಯವರ್ಧಿತ ಸೇವೆಗಳಿಗೆ ಪಡೆಯುವ ಕಮಿಷನ್ ಮೂಲಕ ಹಿಂಪಡೆಯಲು ಸಾಧ್ಯ.ಆದರೆ ಎಟಿಎಂ ಪ್ರವೇಶಿಸಿದ ಗ್ರಾಹಕ,ಒಂದರ ನಂತರ ಒಂದು ಸೇವೆಯನ್ನು ಬಳಸುತ್ತಾ ಕುಳಿತರೆ,ಹೊರಗೆ ಕಾಯುವವರ ಕ್ಯೂ ಉದ್ದವಾಗಿ,ಗ್ರಾಹಕರ ಆಕ್ರೋಶ ಹೆಚ್ಚುವ ಭೀತಿಯೂ ಇಲ್ಲದಿಲ್ಲ.
----------------------------------------------------
ಇ-ಬುಕ್‍ಗಳ ಮಾರಾಟ ಭರಾಟೆ

ಕಿಂಡಲ್ ಎನ್ನುವ ಇ-ಬುಕ್ ರೀಡರ್‌ಗಳನ್ನು ಅಮೆಜಾನ್ ಅಂತರ್ಜಾಲ ತಾಣ ಮಾರುತ್ತಿದೆ.ಕಳೆದ ನಾಲ್ಕು ವರ್ಷಗಳಿಂದ ಕಿಂಡಲ್ ಇ-ಬುಕ್ ರೀಡರ್‌ಗಳನ್ನು ಮಾರುತ್ತಿರುವ ಕಂಪೆನಿ,ಕಳೆದ ವರ್ಷದಲ್ಲಿ ಈ ಸಾಧನಗಳ ಮಾರಾಟದಲ್ಲಿ ಶೇಕಡಾ145ರ ಪ್ರಗತಿ ಕಂಡಿದೆ.ಇದೇ ವೇಳೆ ಇಂತಹ ಇ-ಪುಸ್ತಕಗಳಲ್ಲಿ ಓದಬಹುದಾದ ಇ-ಬುಕ್‌ಗಳ ಮಾರಾಟ ಇದೀಗ ಹೆಚ್ಚಿದೆ.ಅಮೆಜಾನ್ ಅಂತರ್ಜಾಲ ತಾಣದ ಮೂಲಕ ಮಾರಾಟವಾಗುವ ಮುದ್ರಿತ ಪುಸ್ತಕಗಳಿಗೆ ಹೋಲಿಸಿದರೆ, ಇ-ಬುಕ್‌ಗಳ ಮಾರಾಟವೇ ಹೆಚ್ಚು.ಪ್ರತಿ ನೂರು ಮುದ್ರಿತ ಪುಸ್ತಕಗಳಿಗೆ ನೂರೈದು ಇ-ಬುಕ್‌ಗಳು ಮಾರಾಟವಾಗುತ್ತಿವೆ.ಸದ್ಯವೇ ಅಮೆಜಾನ್ ಕಂಪೆನಿಯು ಗೂಗಲ್ ಆಂಡ್ರಾಯಿಡ್ ಆಧಾರಿತ ಟ್ಯಾಬ್ಲೆಟುಗಳನ್ನು ಮಾರುಕಟ್ಟೆಗೆ ತರುವ ಉದ್ದೇಶ ಹೊಂದಿದೆ ಎನ್ನುವ ವದಂತಿಗಳಿವೆ.ಆಂಡ್ರಾಯಿಡ್ ಸಾಧನಗಳಿಗೆ ಉತ್ತಮ ಮಾರುಕಟ್ಟೆಯಿರುವ ಕಾರಣ,ಇ-ಬುಕ್ ಮಾರಾಟದಲ್ಲಿ ಇನ್ನೂ ಪ್ರಗತಿಯಾಗಬಹುದು.ಹಾಗೆಂದು ಒಟ್ಟಾರೆ ಎಲ್ಲೆಡೆ ಮಾರಾಟವಾಗುವ ಮುದ್ರಿತ ಪುಸ್ತಕಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ,ಇ-ಬುಕ್‌ಗಳ ಮಾರಾಟ ಶೇಕಡಾ ಇಪ್ಪತ್ತರಷ್ಟು ಮಾತ್ರಾ ಆಗಿದೆ.
----------------------------------------------------------------------
ಗೂಗಲ್ ಮ್ಯಾಪ್:ಜನರಿಂದ ಜನರಿಗಾಗಿ
ಗೂಗಲ್ ಮ್ಯಾಪ್‌ನ ನಕಾಶೆಯಲ್ಲಿ ವಿವಿಧ ಪ್ರದೇಶಗಳ ಹೆಸರು,ರಸ್ತೆಗಳ ವಿವರ,ಮನೆಗಳ ವಿವರಗಳನ್ನು ಒದಗಿಸಲು ಗೂಗಲ್ ಮ್ಯಾಪ್ ಪ್ರಯತ್ನಿಸುತ್ತಿದೆ.ಭಾರತದ ವಿವಿಧ ಪ್ರದೇಶಗಳ ನಕಾಶೆಯಲ್ಲಿ ಇಂತಹ ವಿವರಗಳನ್ನು ಸೇರಿಸಲು ಜನರ ಸಹಭಾಗಿತ್ವವನ್ನು ಗೂಗಲ್ ಸ್ವಾಗತಿಸುತ್ತದೆ.ಗುಜರಾತ್,ರಾಜಾಸ್ತಾನ್‌ನಂತಹ ರಾಜ್ಯಗಳ ನಕಾಶೆಗಳು ಜನರ ಸಹಭಾಗಿತ್ವದ ಮೂಲಕವೇ ಬಹಳಷ್ಟು ಸಿದ್ಧಗೊಂಡಿವೆ.ಆದರೆ ಇನ್ನುಳಿದೆಡೆ ಜನರ ಸಹಕಾರ ಹೆಚ್ಚು ವ್ಯವಸ್ಥಿತವಾಗಿ ಸಿಗುತ್ತಿಲ್ಲ.ಅವರುಗಳು ಸೇರಿಸುವ ವಿವರಗಳು ಸರಿಯಾಗಿವೆಯೇ,ಮತ್ತು ಉಪಯುಕ್ತವಾಗಿದೆಯೇ ಎನ್ನುವುದನ್ನು ಪರೀಕ್ಷಿಸಲು ಹೆಚ್ಚು ಕ್ರಿಯಾಶೀಲವಾಗಿರುವ ಜನರ ಪಡೆಯನ್ನೇ ಗೂಗಲ್ ಗುರುತಿಸಿ,ಅವರುಗಳಿಗೆ ಸಂಪಾದಕರುಗಳ ಸ್ಥಾನಮಾನವನ್ನು ನೀಡುತ್ತದೆ.ತಿರುವನಂತಪುರದಂತಹ ಪ್ರದೇಶಗಳಲ್ಲಿ ಐನೂರು ಜನರ ಪಡೆ ಇದೆ.ಮನೆಗಳ ವಿವರಗಳನ್ನು ಸೇರಿಸಲು ಗೂಗಲ್ ಜನರಿಗೆ ಅನುವು ಮಾಡಿದೆ.ಆದರೆ ಇದರಲ್ಲಿ ಮನೆ ಸಂಖ್ಯೆಯಂತಹ ವಿವರ ಸೇರಿಸಲು ಮಾತ್ರಾ ಅನುಮತಿಯಿದೆ.ಹೆಸರು ಇನ್ನಿತರ ವಿವರಗಳನ್ನಲ್ಲ.
-----------------------------------------------------------------
ತುಷಾರ:ವಾರ್ಷಿಕ ಚಂದಾ ಗೆಲ್ಲಿ!
ಈ ಪ್ರಶ್ನೆಗಳಿಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಯು. ಎಸ್.ನ ಮೇರಿಲ್ಯಾಂಡ್‌ನಲ್ಲಿರುವ ಶಾಮಲಾ.
*ಬ್ಯಾಂಕ್ ವೆಬ್‌ಸೈಟಿನಲ್ಲಿ ಲಾಗಿನ್ ಪುಟದಲ್ಲಿ ಪಾಸ್‌ವರ್ಡ್ ಕದಿಯುವ ತಂತ್ರಾಂಶಗಳಿಂದ ರಕ್ಷಣೆ ಪಡೆಯಲು ನೀಡುವ ಸವಲತ್ತು ಏನು?
*ಮೊಬೈಲ್ ಬಳಸಿ,ಬ್ಯಾಂಕ್‌ನ ಅಂತರ್ಜಾಲ ತಾಣದಲ್ಲಿ ಬಳಕೆದಾರನ ಸಾಚಾತನದ ಪರೀಕ್ಷೆ ಹೇಗೆ ಸಾಧ್ಯ?
(ಉತ್ತರಗಳನ್ನು nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ:NS32 ನಮೂದಿಸಿ.)
ಕಳೆದ ವಾರದ ಸರಿಯುತ್ತರ:
*ಕನ್ನಡ ವಿಕಿಪೀಡಿಯಾದಲ್ಲಿ 10762 ಬರಹಗಳಿವೆ. ಬಹುಮಾನ ಗೆದ್ದವರು ಸಂಧ್ಯಾ ವಿದ್ಯಾಸಾಗರ್.ಅಭಿನಂದನೆಗಳು.
*ಅಶೋಕ್‌ಕುಮಾರ್ ಎ

Monday, May 16, 2011

ಗೂಗಲ್ ಕ್ರೋಮ್‌ಬುಕ್


ಗೂಗಲ್ ಕ್ರೋಮ್‌ಬುಕ್ 
 
ಗೂಗಲ್ ತನ್ನದೇ ಆದ ಆಪರೇಟಿಂಗ್ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವ ವಿಷಯ ಹಳೆಯದು.ಈಗದು ಸಿದ್ಧವಾಗಿದೆ.ಅಷ್ಟೇ ಅಲ್ಲ,ಅದನ್ನು ಅಳವಡಿಸಿದ,ಲ್ಯಾಪ್‌ಟಾಪ್ ಸಾಧನವನ್ನೂ ಗೂಗಲ್ ಕ್ರೋಮ್‌ಬುಕ್ ಎನ್ನುವ ಹೆಸರಿನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.ಏಸರ್ ಮತ್ತು ಸ್ಯಾಮ್‌ಸಂಗ್ ಕಂಪೆನಿಗಳು ಈ ಲ್ಯಾಪ್‌ಟಾಪ್ ತಯಾರಿಸಿವೆ.ಎರಡು ನಮೂನೆಯ ಕ್ರೋಮ್‌ಬುಕ್‌ಗಳು ಲಭ್ಯ.ಕಡಿಮೆಯೆಂದರೆ ಮುನ್ನೂರೈವತ್ತು ಡಾಲರು ಬೆಲೆ.ಜೂನ್ ಮಧ್ಯಭಾಗದಿಂದ ಮಾರುಕಟ್ಟೆಯಲ್ಲೂ ಲಭ್ಯವಾಗುವ ನಿರೀಕ್ಷೆಯಿದೆ.ತ್ರೀಜಿ ಸಜ್ಜಿತ ಕ್ರೋಮ್‌ಬುಕ್ ಕೂಡಾ ಮಾರುಕಟ್ಟೇಯಲ್ಲಿ ಸಿಗುವ 
ನಿರೀಕ್ಷೆಯಿದೆ.ಕ್ರೋಮ್‌ಬುಕ್‌ನ ವಿಶೇಷತೆಯೆಂದರೆ,ಇದನ್ನು ಬಳಕೆ ಮಾಡುವುದು ಬಹು ಸುಲಭ.ಕ್ರೋಮ್‌ಬುಕ್‌ನಲ್ಲಿ ಬ್ರೌಸರ್ ಹೊರತು ಇತರ ಯಾವುದೇ ತಂತ್ರಾಂಶ ಇರದು.ಕ್ರೋಮ್‌ಬುಕ್ ಏಳೆಂಟು ಸೆಕೆಂಡುಗಳಲ್ಲಿ ಬೂಟ್ ಆಗಿ,ಅಂತರ್ಜಾಲಕ್ಕೆ ಸಂಪರ್ಕ ಹೊಂದುತ್ತದೆ.ಎಲ್ಲಾ ಕೆಲಸಗಳಿಗೆ ಅಂತರ್ಜಾಲದಲ್ಲಿ ಲಭ್ಯವಿರುವ ತಂತ್ರಾಂಶಗಳನ್ನು ಬಳಸುವುದು ಕ್ರೋಮ್‌ಬುಕ್‌ನಲ್ಲಿ ಬಳಸಲಾಗಿರುವ ಮಾದರಿ.ಕ್ಲೌಡ್‌ಕಂಪ್ಯೂಂಟಿಂಗ್ ಆಧಾರಿತ ಸಾಧನವಾಗಿರುವ ಕ್ರೋಮ್‌ಬುಕ್,ಬಳಸುವುದು ಜನಸಾಮಾನ್ಯರಿಗೂ ಸುಲಭ ಸಾಧ್ಯ.ಕಂಪ್ಯೂಟರ್ ಬಳಸುವುದು ಗೋಜಲಾಗದೆ,ಸರಳೀಕೃತವಾಗಿದೆ ಎಂದು ಗೂಗಲ್ ಭಾವನೆ.ಯು ಎಸ್ ಬಿ ಸಾಧನಗಳನ್ನು ಸಂಪರ್ಕಿಸಿದಾಗ,ಕ್ರೋಮ್‌ಬುಕ್ ಅದನ್ನು ಗುರುತಿಸುವ ಸಾಮರ್ಥ್ಯ ಹೊಂದಿದೆ.ಕಡತಗಳ ವಿಲೇವಾರಿಗೂ ಅದರಲ್ಲಿ ಸವಲತ್ತಿದೆ.ಮೈಕ್ರೋಸಾಫ್ಟ್ ಕಂಪೆನಿಗೆ ಗೂಗಲ್ ಒಡ್ಡಿರುವ ಸವಾಲಿದು.ಜನಸಾಮಾನ್ಯರು ಯಾವ ಕಡೆ ವಾಲುತ್ತಾರೆ ಎನ್ನುವುದು ಕುತೂಹಲದ ವಿಷಯ.
---------------------------------------------------
ಸ್ಕೈಪ್ ಈಗ ಮೈಕ್ರೋಸಾಫ್ಟ್ ಬಗಲಲ್ಲಿ

ಸ್ಕೈಪ್ ಎನ್ನುವ ಸೇವೆಯ ಮೂಲಕ ಕರೆಗಳನ್ನು ಮಾಡುವ ಮಿಲಿಯಗಟ್ಟಲೆ ಬಳಕೆದಾರರಿದ್ದಾರೆ.ಅಂತರ್ಜಾಲ ಮೂಲಕ ಕಂಪ್ಯೂಟರ್‌ನಿಂದ ಕಂಪ್ಯೂಟರಿಗೆ,ಮೊಬೈಲಿಗೆ ಅಥವಾ ಲ್ಯಾಂಡ್‌ಲೈನಿಗೆ ಕರೆಗಳನ್ನು ಮಾಡುವುದು ಸಾಧ್ಯ.ಮೈಕ್ರೋಸಾಫ್ಟ್ ಇನ್ನು ತನ್ನ ಔಟ್‌ಲುಕ್,ಹಾಟ್‌ಮೈಲ್,ಎಕ್ಸ್‌ಬಾಕ್ಸ್ ಮುಂತಾದವುಗಳ ಜತೆಗೂ ಸ್ಕೈಪ್ ಬಳಕೆಯನ್ನು ಸಾಧ್ಯವಾಗಿಸುವ ಬದಲಾವನೆ ತರಬಹುದು.ಸ್ಕೈಪಿನ ಮಿಲಿಯಗಟ್ತಲೆ ಬಳಕೆದಾರರನ್ನು ಅಸಮಾಧಾನಕ್ಕೀಡು ಮಾಡದೆ,ಅವರಿಗೆ ಸ್ಕೈಪನ್ನು ಹಿಂದಿನಂತೆಯೇ ಬಳಸಲು ಬಿಡುವುದರಲ್ಲಿ ಮೈಕ್ರೊಸಾಫ್ಟಿನ ಯಶಸ್ಸು ಅಡಗಿದೆ ಎಂದು ತಜ್ಞರ ಅನಿಸಿಕೆ. ಇ-ಬೇ ಎನ್ನುವ ತಾಣದ ಸ್ವತ್ತನ್ನು ಈಗ ಮೈಕ್ರೋಸಾಫ್ಟ್ ಖರೀದಿಸುವುದರಲ್ಲಿದೆ.ಬೆಲೆ ಎಂಟೂವರೆ ಬಿಲಿಯನ್ ಡಾಲರುಗಳು.ಗೂಗಲ್ ಕೂಡಾ ಒಂದೊಮ್ಮೆ ಸ್ಕೈಪನ್ನು ಖರೀದಿಸುವ ಉದ್ದೇಶ ಹೊಂದಿತ್ತು.ಕೊನೆಗೆ,ಸ್ಕೈಪಿನ ಕಡತ ವಿನಿಮಯ ಸೇವೆಯು ಅದಕ್ಕಡ್ಡಿಯಾಯಿತು.ಈ ಸೇವೆಯು ಗೂಗಲ್‌ನ ಕ್ಲೌಡ್ ಕಂಪ್ಯೂಂಟಿಂಗ್ ಮಾದರಿಗೆ ಹೊಂದಿಕೆಯಾಗುತ್ತಿರಲಿಲ್ಲ.ಮಾತ್ರವಲ್ಲ,ತನ್ನ ಲಕ್ಷಾಂತರ ಬಳಕೆದಾರರು ಸ್ಕೈಪನ್ನು ಈಗಾಗಲೇ ಬಳಸುತ್ತಿರುವಾಗ,ಅದನ್ನು ಖರೀದಿಸಿ,ತನ್ನದಾಗಿಸಿ ಸಾಧಿಸುವುದೇನನ್ನು ಎನ್ನುವುದು ಗೂಗಲ್ ಕಂಪೆನಿಯ ಮುಂದೆದ್ದ ಪ್ರಶ್ನೆಯಾಗಿತ್ತು.
--------------------------------------------
ನಡಿಗೆ:ದಾಖಲೆ ನಿರ್ಮಿಸಿದ ರೊಬೋಟ್
ಕೋರ್ನೆಲ್ ರೇಂಜರ್ ಎಂಬ ರೊಬೋಟ್ ನಲುವತ್ತೂವರೆ ಮೈಲು ದೂರವನ್ನು ಕ್ರಮಿಸಿ ದಾಖಲೆ ನಿರ್ಮಿಸಿದೆ.ಸತತ ನಡಿಗೆಯ ಮೂಲಕ ಈ ದೂರವನ್ನು ಕ್ರಮಿಸಿದ್ದು ಒಂದು ದಾಖಲೆ.ಈ ಅವಧಿಯಲ್ಲಿ ಅದನ್ನು ಯಾರು ಮುಟ್ಟಲೂ ಇಲ್ಲ.ಅದರ ಬ್ಯಾಟರಿ ರಿಚಾರ್ಜ್ ಮಾಡುವ ಅವಶ್ಯಕತೆಯೂ ಬರಲಿಲ್ಲವೆನ್ನುವುದು ಬಹುಮುಖ್ಯ ವಿಷಯವಾಗಿದೆ.ಮನುಷ್ಯನಷ್ಟೇ ಗಾತ್ರದ ಇದು,ನಡಿಗೆಯನ್ನು ನಾಲ್ಕು ಕಾಲಿನಲ್ಲಿ ಮಾಡುವಂತೆ ರಚಿಸಲಾಗಿದೆ.ಕೋರ್ನೆಲ್ ವಿಶ್ವವಿದ್ಯಾಲಯದ ಸಂಶೋಧಕರು ಅಭಿವೃದ್ಧಿ ಪಡಿಸಿದ,ರೊಬೋಟ್,ಸ್ಟೇಡಿಯಂ ಒಂದನ್ನು ಸುತ್ತಿಸಿ,ಈ ದೂರ ಕ್ರಮಿಸುವಂತೆ ಮಾಡಲಾಯಿತು.ನಡಿಗೆಯ ಅಂತ್ಯ ಆಗುವುದರಲ್ಲಿ ರೊಬೋಟ್ ನಲುವತ್ತೂವರೆ ಮೈಲು ದೂರವನ್ನೇ ಕ್ರಮಿಸಿ,ಹಿಂದಿನ ದಾಖಲೆಯನ್ನು ಅಳಿಸಿಹಾಕಿತು.ಸುಮಾರು ಮುವತ್ತೊಂದು ಗಂಟೆಯ ನಡಿಗೆಯ ನಂತರ ಈ ದೂರ ಕ್ರಮಿಸಲದಕ್ಕೆ ಸಾಧ್ಯವಾಯಿತು.ಹಿಂದೆ ಜಪಾನ್‌ನಲ್ಲಿ ರೊಬೋಟ್ ಮ್ಯಾರಥಾನ ಓಟದಲ್ಲೂ ರೊಬೋಟುಗಳು ದಾಖಲೆ ದೂರ ಕ್ರಮಿಸಿದ್ದರೂ ಅಲ್ಲಿ,ಅವುಗಳನ್ನು ಪದೇ ಪದೇ ರಿಚಾರ್ಜ್ ಮಾಡಲಾಗಿತ್ತು.ರೊಬೋಟ್ ತೂಕ ಇಪ್ಪತ್ತೆರಡು ಪೌಂಡ್,ಅದರಲ್ಲಿ ಆರು ಆನ್‍ಬೋರ್ಡ್‍ಕಂಪ್ಯೂಟರುಗಳನ್ನು ಬಳಸಲಾಗಿದೆ.ರೊಬೋಟಿನ ದಕ್ಷತೆಗೆ ಮುಖ್ಯ ಕಾರಣ ಅದರ ವಿನ್ಯಾಸ.ಅದರಲ್ಲಿ ಬಳಸಿದ ನವೀನ ಇಲೆಕ್ಟ್ರಾನಿಕ್ಸ್ ತಾಂತ್ರಿಕತೆ ಮತ್ತು ಅದರ ಕ್ರಮವಿಧಿಯೂ ಹದಿನಾರು ವ್ಯಾಟ್ ಬಳಸಿ ಓಡುವ ರೊಬೋಟಿನ ದಕ್ಷತೆಗೆ ಕಾರಣವಾಗಿದೆ.
-----------------------------------------
ಕ್ಲಾಸಿನಲ್ಲಿ ಮೌನ: ಚರ್ಚೆ
ತರಗತಿಯಲ್ಲಿ ಪದ್ಯವನ್ನು ವಿವರಿಸಿ,ವಿದ್ಯಾರ್ಥಿಗಳ ಜತೆ ಅದರ ಬಗ್ಗೆ ಚರ್ಚಿಸಲು ಟ್ವಿಟರ್ ಬಳಸಿದ ಕಾರಣ,ಮಾತಿಲ್ಲದೆ ಪದ್ಯದ ಬಗ್ಗೆ ಚರ್ಚೆ ಸಾಧ್ಯವಾಯಿತು.ಈ ನವೀನ ಪ್ರಯೋಗ ನಡೆದದ್ದು ಅಯೋವಾ ವಿವಿಯ ತರಗತಿಯಲ್ಲಿ.ವಿದ್ಯಾರ್ಥಿಗಳು ಟ್ವಿಟರ್ ಸಂದೇಶಗಳ ಮುಖಾಂತರ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡ ಕಾರಣ,ತರಗತಿಯಲ್ಲಿ ಚರ್ಚೆ ಗದ್ದಲವೆಬ್ಬಿಸಲಿಲ್ಲ.ಪ್ರತಿಯೊಬ್ಬರೂ ತಮಗನಿಸಿದ್ದನ್ನು ಹೇಳಲು,ಇತರರಿಗೆ ತಿಳಿಯ ಪಡಿಸಲು ಸಾಧ್ಯವಾಯಿತು.ಓರ್ವನೇ ಹೆಚ್ಚು ಗಮನ ಸೆಳೆಯುವ ತೊಂದರೆಯೂ ತಪ್ಪಿತು.ವಿದ್ಯಾರ್ಥಿಗಳು ಕೈಯೆತ್ತದೆ ಪ್ರಶ್ನೆಗಳನ್ನೂ ಕೇಳಲು,ಟ್ವಿಟರನ್ನೇ ಬಳಸಿದ್ದರು.ಟ್ವಿಟರಿನಂತಹ ತಾಣಗಳು ಲೈವ್ ಪಟ್ಟಾಂಗ ಅಥವಾ ವಿಚಾರ ವಿನಿಮಯಕ್ಕೆ ಅವಕಾಶ ನೀಡುವ ಕಾರಣ,ಇದನ್ನು ಇಷ್ಟ ಪಡುವ ಶಿಕ್ಷಕರು ಹೆಚ್ಚುತ್ತಿದ್ದು,ತರಗತಿಯಲ್ಲಿದನ್ನು ಬಳಸುವ ಪ್ರಯೋಗಗಳೂ ಹೆಚ್ಚುತ್ತಿವೆ.
---------------------------------
ಅಧಿಕ ಸ್ಪಷ್ಟತೆಯುಳ್ಳ ತೆರೆ

ಸ್ಯಾಮ್‌ಸಂಗ್ ಕಂಪೆನಿಯು ಈಗ ತನ್ನ ಮೊಬೈಲ್ ಸಾಧನಗಳಲ್ಲಿ ಬಳಸಲು ಸ್ಪಷ್ಟತೆಯ ತೆರೆಯನ್ನು ಅಭಿವೃದ್ಧಿ ಪಡಿಸಿದೆ.ಅದು 2560×1600 ಪಿಕ್ಸೆಲುಗಳ ತೆರೆಯು ಬಳಸುವ ವಿದ್ಯುಚ್ಛಕ್ತಿಯ ಪ್ರಮಾಣ ಬಹಳ ಕಡಿಮೆಯೆನ್ನುವುದು ಇನ್ನೊಂದು ಗಮನಾರ್ಹ ಅಂಶ.ಶೇಕಡಾ ನಲುವತ್ತರಷ್ಟು ಕಡಿಮೆ ಶಕ್ತಿ ಬಳಸುವ ಟ್ಯಾಬ್ಲೆಟ್ ಮತ್ತು ಸ್ಮಾರ್ಟ್ ಫೋನುಗಳಲ್ಲಿ ಬಳಸಬಹುದಾದ ತೆರೆಯು ಹೈಡೆಫಿನಿಶನ್‌ ಟಿವಿ ತೆರೆಯ ಕಾರ್ಯಕ್ಷಮತೆಯನ್ನು ಹೊಂದಿದೆ.ಇಂತಹ ತೆರೆಗಳಿಗೆ ಇತರ ಸ್ಮಾರ್ಟ್‌ಫೋನ್ ತಯಾರಕರೂ ಮುಗಿ ಬಿದ್ದರೆ,ಸ್ಯಾಮ್‌ಸಂಗ್ ದೊಡ್ಡ ಯಶಸ್ಸನ್ನು ಸಾಧಿಸೀತು.
---------
ತುಷಾರ:ವಾರ್ಷಿಕ ಚಂದಾ ಗೆಲ್ಲಿ!
ಈ ಪ್ರಶ್ನೆಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಮಾಳದ ಡಾ.ನಿರಂಜನ್ ಚಿಪ್ಳೂಣ್‌ಕರ್,ಉಪಪ್ರಾಂಶುಪಾಲ,ಎನ್ ಎಮ್ ಎ ಎಂ ತಾಂತ್ರಿಕ ಮಹಾವಿದ್ಯಾಲಯ,ನಿಟ್ಟೆ.
(ಉತ್ತರಗಳನ್ನು nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ:NS31 ನಮೂದಿಸಿ.)
*ಕನ್ನಡ ವಿಕಿಪೀಡಿಯಾದಲ್ಲಿ ಎಷ್ಟು ಬರಹಗಳಿವೆ? (ನೀವು ಸೇರಿಸಿದ ಬರಹ ಇದ್ದರೆ ಕೊಂಡಿ ನೀಡಿ.)
ಕಳೆದ ವಾರದ ಸರಿಯುತ್ತರ:
*ಕನ್ನಡ ನಿಘಂಟು ಲಭ್ಯವಿರುವ,ಅಂತರ್ಜಾಲ ತಾಣಗಳ ಎರಡು ಕೊಂಡಿಗಳು:http://kn.wiktionary.org,ಮತ್ತುhttp://www.baraha.com/kannada/. ಬಹುಮಾನ ಗೆದ್ದವರು ಕೆ ಎನ್ ಪರಾಂಜಪೆ,ಬೆಂಗಳೂರು. ಅಭಿನಂದನೆಗಳು.

Udayavani Unicode
Udayavani 
*ಅಶೋಕ್‌ಕುಮಾರ್ ಎ

Monday, May 09, 2011

ವೆಂಡಿಂಗ್ ಯಂತ್ರ:ಗೆಳೆಯರಿಗೆ ಪಾನಿಯ

ವೆಂಡಿಂಗ್ ಯಂತ್ರ:ಗೆಳೆಯರಿಗೆ ಪಾನಿಯ
ವೆಂಡಿಂಗ್ ಯಂತ್ರಗಳು ದಿನೇ ದಿನೇ ಜನಪ್ರಿಯವಾಗುತ್ತಿವೆ.ಇವುಗಳು ಕಡಿಮೆ ಜಾಗವನ್ನು ಬಳಸಿ,ಯಾವುದಾದರೂ ಸಾಮಗ್ರಿಯ ಮಾರಾಟಕ್ಕೆ ಆಸ್ಪದ ನೀಡುತ್ತವಲ್ಲದೆ,ಇವನ್ನು ನೋಡಿಕೊಳ್ಳಲು ಜನರೂ ಬೇಡ.ಹೀಗಾಗಿ ದುಬಾರಿ ಬಾಡಿಗೆಯಿರುವೆಡೆ,ಕಡಿಮೆ ಖರ್ಚಿನಲ್ಲಿ ವಸ್ತುಗಳ ಮಾರಾಟಕ್ಕೆ ವೆಂಡಿಂಗ್ ಯಂತ್ರಗಳು ಹೇಳಿ ಮಾಡಿಸಿದ ಹಾಗಿವೆ.ಮೊಬೈಲ್ ಮೂಲಕ ಹಣ ಪಾವತಿಯೂ ಈಗ ಸಾಧ್ಯವಾದುದ್ದರಿಂದ ನಿಧಾನವಾಗಿ,ಇವುಗಳು ನಾಣ್ಯಗಳ ಸಮಸ್ಯೆಯಿಂದಲೂ ಮುಕ್ತವಾಗಹತ್ತಿವೆ.ಈಗ ಲಭ್ಯವಾಗಿರುವ ಹೊಸ ವೆಂಡಿಂಗ್ ಯಂತ್ರಗಳು ಅಂತರ್ಜಾಲಕ್ಕೂ ಸಂಪರ್ಕ ಹೊಂದಿರುವುದರಿಂದ,ಇವುಗಳ ಮೂಲಕ ಅಂತರ್ಜಾಲದ ಸಾಮಾಜಿಕ ತಾಣಗಳ ಸ್ನೇಹಿತರಿಗೆ ವೆಂಡಿಂಗ್ ಯಂತ್ರದ ಮೂಲಕ ಮಾರಾಟವಾಗುವ ಸಾಮಗ್ರಿಯನ್ನು ಉಡುಗೊರೆಯಾಗಿ ಕಳುಹಿಸ ಬಹುದು.ನಿಮ್ಮ ಉಡುಗೊರೆಯ ಬಗ್ಗೆ ಸಂದೇಶ ಅಥವಾ ಎಸೆಮ್ಮೆಸ್ ಸಂದೇಶ ರವಾನೆಯಾಗುತ್ತದಲ್ಲದೆ,ಉಡುಗೊರೆಯನ್ನು ವಟಾಯಿಸಲು ನೀಡ ಬೇಕಾದ ಕೋಡ್ ಕೂಡಾ ರವಾನಿಸಲಾಗುತ್ತದೆ.
---------------------------------------
ಬ್ರಾಡ್‌ಬ್ಯಾಂಡ್:ಇಂಡಿಯಾ ಬ್ಯಾಡ್
ಬ್ರಾಡ್‌ಬ್ಯಾಂಡ್ ಬಳಕೆಯ ಮಟ್ಟಿಗಿರಲಿ,ಅಷ್ಟೇಕೆ ಮೊಬೈಲ್ ಸಾಧನ ಬಳಕೆಯ ಮಟ್ಟಿಗೂ ಭಾರತದ ಸ್ಥಾನ ಅಭಿವೃದ್ಧಿಶೀಲ ದೇಶಗಳ ಮಟ್ಟಿಗೆ ಕೆಳಗೇ ಇದೆ.ಇಪ್ಪತ್ತೈದು ದೇಶಗಳ ಪೈಕಿ,ಭಾರತದ ಸ್ಥಾನ ಇಪ್ಪತ್ತೊಂದನೇಯದ್ದಾಗಿದೆ.ಮಲೇಶ್ಯಾ,ಚಿಲಿ,ವಿಯೆಟ್ನಾಮ್‌ಗಳೂ ಭಾರತಕ್ಕಿಂತ ಬಹಳಷ್ಟು ಮಟ್ಟಿಗೆ ಉತ್ತಮ ಸ್ಥಾನದಲ್ಲಿವೆ.ಭಾರತದ ಸ್ಕೋರು ಒಂದಕ್ಕಿಂತ ತುಸುವೇ ಹೆಚ್ಚಿದ್ದರೆ,ಮಲೇಶ್ಯಾ ಆರು ಪಾಯಿಂಟ್ ಗಳಿಸಿದೆವೆಯೆಂದರೆ,ಭಾರತದ ಸ್ಥಾನಮಾನದ ಬಗ್ಗೆ ಹೆಚ್ಚಿನ ಕಲ್ಪನೆ ಬಂದೀತು.
---------------------------------------------
ದೂರ ಚುಂಬನ
ಅಂತರ್ಜಾಲದ ಮೂಲಕ ಒಂದೆಡೆಯಿಂದ ಇನ್ನೊಂದೆಡೆಗೆ ಚುಂಬನಾನುಭವನ್ನೂ ಕಳುಹಿಸಬಹುದು! ಇಂತಹ ಸಾಧನ ಮತ್ತು ಸಾಧನಗಳನ್ನು ಬೆಸೆಯುವ ತಂತ್ರಾಂಶವನ್ನು ಜಪಾನೀ ಸಂಶೋಧಕರು ಅಭಿವೃದ್ಧಿ ಪಡಿಸಿದ್ದಾರೆ.ಟೋಕಿಯೋದ ಕಿಜಿಮೋಟೋ ಪ್ರಯೋಗಾಲಯದ ಸಂಶೋಧಕರು ಕಿಸ್ಸಿಂಗ್ ಸಾಧನವನ್ನು ಅಭಿವೃದ್ಧಿ ಪಡಿಸಿದ್ದಾರೆ.ಇದರಲ್ಲಿ ನಳಿಕೆಯೊಂದಿದ್ದು,ಅದನ್ನು ನಾಲಗೆಯಿಂದ ಸವರಿದರೆ,ಅದು ಕಂಪ್ಯೂಟರ್ ಮೂಲಕ ಗ್ರಹಿಸಲ್ಪಟ್ಟು,ತಂತ್ರಾಂಶದ ಮೂಲಕ,ದೂರದ ಇನ್ನೊಂದು ಕಂಪ್ಯೂಟರಿಗೆ ಸಂಕೇತಗಳು ಹೋಗುತ್ತವೆ.ಅಲ್ಲಿರುವ ಕಿಸ್ಸಿಂಗ್ ಸಾಧನವು,ಕಂಪ್ಯೂಟರಿಗೆ ಸಂಪರ್ಕವಾಗಿ,ತಂತ್ರಾಂಶವೂ ಚಾಲೂ ಆಗಿದ್ದರೆ,ಅತ್ತಲಿಂದ ಬಂದ ಸಂಕೇತಗಳನ್ನು ಸ್ವೀಕರಿಸಿ,ಅಲ್ಲಿ ನಾಲಗೆಯ ಚಲನೆಯು ಉಂಟು ಮಾಡಿದ ನಳಿಕೆಯ ಚಲನೆಯು ಯಥಾವತ್ತಾಗಿ ಮೂಡುತ್ತದೆ.ಯಾರಾದರೂ ನಳಿಕೆಯನ್ನು ಬಾಯಲ್ಲಿಟ್ಟು ಕೊಂಡರೆ,ಅವರಿಗೆ ಚುಂಬನಾನುಭವ ಸಿಗಬಹುದು.ದೂರವಿದ್ದು,ವಿರಹ ವೇದನೆ ಅನುಭವಿಸುವ ಪ್ರೇಮಿಗಳಿಗೆ ಮಾತು,ನೋಟದ ಜತೆ ಈ ಹೊಸ ಸ್ಪರ್ಶಸುಖವನ್ನೂ ಅನುಭವಿಸುವ ಯೋಗವನ್ನು ಈ ಹೊಸ ತಂತ್ರ ಒದಗಿಸಲಿದೆ.
----------------------------------------------------------
ಇಂಟೆಲ್:ಹೊಸ ಚಿಪ್ ತಂತ್ರಜ್ಞಾನ
ಹೆಚ್ಚಿನ ಸ್ಮಾರ್ಟ್‌ಫೋನುಗಳಲ್ಲಿ ಬಳಕೆಯಾಗುವ ಸಂಸ್ಕಾರಕ ಆರ್ಮ್ ಪ್ರಾಸೆಸರ್ ಆಗಿದೆ.ಕಡಿಮೆ ಶಕ್ತಿ ಬಳಸುವ,ಕಿರು ಗಾತ್ರ ಇದಕ್ಕೆ ಕಾರಣ.ಕಂಪ್ಯೂಟರುಗಳ ಸಂಸ್ಕಾರಕಗಳ ಮಾರಾಟದಲ್ಲಿ ಮಾರುಕಟ್ಟೆ ನೇತಾರವಾಗಿರುವ ಇಂಟೆಲ್ ಕಂಪೆನಿ,ಸ್ಮಾರ್ಟ್ ಫೋನ್ ಮಟ್ಟಿಗೆ ಹಿಂದೆ ಬಿದ್ದಿದೆ.ಆದರೆ,ಈಗ ಮೊಬೈಲ್ ಸಾಧನಗಳು ಜನಪ್ರಿಯತೆಯ ತುತ್ತ ತುದಿಗೇರಿ,ಕಂಪ್ಯೂಟರ್ ಮಾರಾಟ ಇಳಿಕೆಯ ಹಾದಿ ಕಾಣುತ್ತಿರುವಾಗ,ಇವುಗಳಲ್ಲಿ ಬಳಕೆಯಾಗುವ ಸಂಸ್ಕಾರಕವನ್ನು ಮಾರಾಟ ಮಾಡಲು ಹಿಂದೆ ಬಿದ್ದರೆ,ಉಳಿಗಾಲವಿಲ್ಲ ಎನ್ನುವುದು ಗೋಡೆ ಬರಹದಷ್ಟು ಸ್ಪಷ್ಟ.ಇಂಟೆಲ್ ಎಚ್ಚೆತ್ತು ಕೊಂಡು,ಹೊಸ ತಂತ್ರಜ್ಞಾನದ ಮೂಲಕ,ಹೆಚ್ಚು ದಕ್ಷ,ಕಡಿಮೆ ಗಾತ್ರ ಮತ್ತು ಕಡಿಮೆ ಶಕ್ತಿ ಬಳಸಿ ಕೆಲಸ ಮಾಡಬಲ್ಲ ಚಿಪ್ ಅಭಿವೃದ್ಧಿ ಪಡಿಸುವತ್ತ ಗಮನ ನೀಡಿದೆ.ಹೊಸ ತಂತ್ರಜ್ಞಾನದಲ್ಲಿ ಮೂರು ಆಯಾಮದ ಟ್ರಾನ್ಸಿಸ್ಟರುಗಳನ್ನು ತಯಾರಿಸಲು ಸಾಧ್ಯವಾಗಿದೆ.ಒಂದು ಗುಂಡಿಸೂಜಿ ಮೊನೆಯಷ್ಟು ಜಾಗದಲ್ಲಿ,ನೂರು ದಶಲಕ್ಷ ಟ್ರಾನ್ಸಿಸ್ಟರುಗಳು ಹಿಡಿಸುತ್ತವೆ.ಐವಿ ಬ್ರಿಜ್ ಎಂದು ಇದಕ್ಕೆ ಹೆಸರಿಸಲಾಗಿದೆ.ಮುಂದಿನ ವರ್ಷದಲ್ಲಿ ಇಂತಹ ಚಿಪ್‌ಗಳ ತಯಾರಿಕೆ ಸಾಧ್ಯವಂತೆ.
------------------------------------------------------------
ಪೇಪರ್ ಫೋನ್

ಅರಿಜೋನಾ ವಿಶ್ವವಿದ್ಯಾಲಯ ಸಂಶೋಧಕರು ಹಗುರವಾದ,ಬಾಗುವ,ಮತ್ತು ಬಹಳ ದೃಡವಾದ ವಸ್ತುವನ್ನು ಬಳಸಿ ಸೆಲ್‌ಪೋನ್ ತಯಾರಿಸಿದ್ದಾರೆ.ಹಾಗಾಗಿ ಇದು ಸಾಮಾನ್ಯ ಫೋನುಗಳ ಆರನೇ ಒಂದು ಭಾಗದಷ್ಟು ತೂಗುತ್ತದೆ.ಕ್ರೆಡಿಟ್‌ಕಾರ್ಡಿನಷ್ಟು ಹಗುರ,ಆದರೆ ಅದಕ್ಕಿಂತಲೂ ಹೆಚ್ಚು ಬಾಗಿಸಲಾಗುವ ವಸ್ತುವಿನಿಂದ ಇದನ್ನು ತಯಾರಿಸಲಾಗಿದೆ.ಇದು ಪರಿಸರಕ್ಕೂ ಹೆಚ್ಚು ಪ್ರಿಯವಾಗಬಲ್ಲುವಂತಹ ವಸ್ತು.ಇದರ ಇನ್ನೊಂದು ಅನುಕೂಲವೆಂದರೆ,ಸ್ಪರ್ಶಸಂವೇದಿ ಆಗುವ ಜತೆಗೆ,ಬಾಗಿಸಿಯೂ,ಇದಕ್ಕೆ ಆದೇಶಗಳನ್ನು ನೀಡಲು ಸಾಧ್ಯ.ಒಂದು ಕಡೆ ಬಾಗಿಸಿದರೆ,ಅಪ್ಲಿಕೇಶನುಗಳನ್ನು ಚಾಲೂ ಮಾಡಬಹುದಾದರೆ,ಇನ್ನೊಂದೆಡೆ ಬಾಗಿಸಿ,ಬೇರೇನೋ ಆದೇಶ ನೀಡಲು ಸಾಧ್ಯವಾಗಲಿದೆ.ಇನ್ನೊಂದು ಹತ್ತು ವರ್ಷದಲ್ಲಾದರೂ,ಈ ತಂತ್ರಜ್ಞಾನ ವಾಣಿಜ್ಯ ತಯಾರಿಕೆಗೆ ಸಿದ್ಧವಾಗಬಹುದು ಎಂದು ನಿರೀಕ್ಷಿಸಿದರೆ,ಅದು ತಪ್ಪಲ್ಲ.
---------------------------------------------
ಐಫೋನ್ ರಿಮೋಟ್

ಟಿವಿ ರಿಮೋಟ್ ಸಾಧನವಾಗಿ,ಐಫೋನನ್ನೇ ಬಳಸಬಹುದೇ?ಸಾಧ್ಯ,ಐಫೋನ್ ಅಪ್ಲಿಕೇಶನ್‌ಗಳನ್ನು ಅನುಸ್ಥಾಪಿಸಿಕೊಳ್ಳುವುದರ ಜತೆಗೆ ಇನ್‌ಫ್ರಾರೆಡ್ ಪ್ರೇಷಕ ಸಾಧನವನ್ನು ಐಫೋನಿಗೆ ಸಿಕ್ಕಿಸಿಕೊಳ್ಳಬೇಕಾಗುತ್ತದೆ.ಈ ಪ್ರೇಷಕವನ್ನು ಪ್ರತ್ಯೇಕವಾಗಿ ಖರೀದಿಸಬೇಕು.ಸ್ಮಾರ್ಟ್‌ಫೋನನ್ನು ಸರ್ವಸಾಧನವಾಗಿಸುವ ನಿಟ್ಟಿನಲ್ಲಿ ಇದು ಮತ್ತೊಂದು ಪ್ರಯತ್ನ.ಐಫೋನ್ ಬಳಸಿ,ದೇಹದ ತಾಪಮಾನ,ಬಿಪಿ,ರಕ್ತದಲ್ಲಿ ಸಕ್ಕರೆಯ ಪ್ರಮಾಣದ ಮೇಲೆ ಗಮನವಿಡುವ ಅಪ್ಲಿಕೇಶನ್‌ಗಳಿವೆ.ಐಫೋನನ್ನು ಸಂಗೀತ ಸಾಧನವಾಗಿಸುವ,ದಿಕ್ಸೂಚಿಯಾಗಿಸುವ ತಂತ್ರಾಂಶಗಳೂ ಇವೆ.ಹೀಗೆ ಮೊಬೈಲ್ ಸಾಧನದ ಬಳಕೆಯ ವಿಸ್ತಾರ ಹೆಚ್ಚುತ್ತಾ ಹೋಗುತ್ತದೆ.ಎಲ್ಲಾ ಸಾಧನಗಳೂ ಇದರಲ್ಲೇ ಆಡಕವಾಗಿ ಬಿಡುತ್ತವೆ.
------------------------------------------------
ತುಷಾರ:ವಾರ್ಷಿಕ ಚಂದಾ ಗೆಲ್ಲಿ!
ಈ ಪ್ರಶ್ನೆಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಮಾಳದ ಡಾ.ನಿರಂಜನ್ ಚಿಪ್ಳೂಣ್‌ಕರ್,ಉಪಪ್ರಾಂಶುಪಾಲ,ಎನ್ ಎಮ್ ಎ ಎಂ ತಾಂತ್ರಿಕ ಮಹಾವಿದ್ಯಾಲಯ,ನಿಟ್ಟೆ.
(ಉತ್ತರಗಳನ್ನು nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ:NS30 ನಮೂದಿಸಿ.)
*ಕನ್ನಡ ನಿಘಂಟು ಲಭ್ಯವಿರುವ,ಅಂತರ್ಜಾಲ ತಾಣಗಳ ಎರಡು ಕೊಂಡಿಗಳನ್ನು ನೀಡಿ.
ಕಳೆದ ವಾರದ ಸರಿಯುತ್ತರ:
*ಹೊಸ ಉಬುಂಟು ಬಳಸುವುದು ಸುಲಭ,ಅದು ಮೊದಲಿಗಿಂತಲೂ ಬೇಗನೆ ಬೂಟ್ ಆಗುತ್ತದೆ.ಹೆಚ್ಚಾಗಿ ಬಳಸುವ ಅಪ್ಲಿಕೇಶನ್‌ಗಳನ್ನು ಆರಂಭಿಸಲು ಹೊಸ ಉಬುಂಟು ಅನುಕೂಲ ಒದಗಿಸಿದೆ.ಒಟ್ಟಿನಲ್ಲಿ ಯುನಿಟಿ,ಹೆಚ್ಚು ಬಳಕೆದಾರಸ್ನೇಹಿಯಾಗಿದೆ. ಬಹುಮಾನ ಗೆದ್ದವರು ವೆಂಕಟೇಶ್ ಜಿ ವೈದ್ಯ,ಮಾರ್ಪಳ್ಳಿ,ಉಡುಪಿ. ಅಭಿನಂದನೆಗಳು.
*ಅಶೋಕ್‌ಕುಮಾರ್ ಎ

Monday, May 02, 2011

ಮದುವೆ:ಅಂತರ್ಜಾಲ ಕವರೇಜ್



ಮದುವೆ:ಅಂತರ್ಜಾಲ ಕವರೇಜ್
 
ಬ್ರಿಟಿಷ್ ರಾಜಕುಟುಂಬದ ವಿವಾಹ ಸಮಾರಂಭವು ವಾರದ ಹೈಲೈಟ್ ಆಗಿತ್ತು.ಅಂತರ್ಜಾಲದ ಮೂಲಕವೂ ಮದುವೆಯ ಕ್ಷಣ-ಕ್ಷಣ ವಿವರಗಳು ಲಭ್ಯವಾಗಿದ್ದುವು.ಟ್ವಿಟರ್,ಫೇಸ್‌ಬುಕ್,ಯುಟ್ಯೂಬ್ ಮತ್ತು ಸಿ ಎನ್ ಎನ್ ಮೂಲಕ ಮದುವೆಯ ಬಗೆಗಿನ ತಾಜಾ ವರದಿಗಳು ಮತ್ತು ವಿಡಿಯೋಗಳು ಲಭ್ಯವಾದರೆ,ಮದುವೆಯ ಚಿತ್ರಗಳು ಫ್ಲಿಕರ್ ತಾಣದಲ್ಲಿ ಜನರಿಗೆ ಲಭ್ಯವಾದುವು.ಸಿ ಎನ್ ಎನ್ ಟಿವಿ ಮಾಧ್ಯಮದಲ್ಲಿ ಲೈವ್ ಕವರೇಜ್ ನೀಡಿದರೆ,ಯುಟ್ಯೂಬಿನಲ್ಲಿ ಅಂತರ್ಜಾಲ ಬಲಕೆದಾರರಿಗೆ ಮದುವೆಯ ವಿಡಿಯೋ ಕ್ಲಿಪ್ಪಿಂಗ್‌ಗಳು ನೇರ ಪ್ರಸಾರವಾದುವು.ಇದಕ್ಕಾಗಿ ಪ್ರತ್ಯೇಕ ಚಾನೆಲ್ ,http://www.youtube.com/user/TheRoyalChannel ಯುಟ್ಯೂಬಿನಲ್ಲಿ ಸೃಷ್ಟಿಯಾಯಿತು.ಮೈಕ್ರೋಬ್ಲಾಗಿಂಗ್ ತಾಣ ಟ್ವಿಟರಿನಲ್ಲಿ ವಿವಾಹಸಂಬಂಧೀ ಸುದ್ದಿ,ತುಣುಕುಗಳು @clarencehouseನಲ್ಲಿ ಕಾಣಿಸಿಕೊಂಡವು.ಇನ್ನು ಫೇಸ್‍ಬುಕ್ ಸಾಮಾಜಿಕ ಜಾಲತಾಣದಲ್ಲೂ ಪ್ರತ್ಯೇಕ ಪುಟದಲ್ಲಿ ಈ ವಿವಾಹಕ್ಕೆ ಸಂಬಂಧಿಸಿದ ಮಾಹಿತಿ,ಚಿತ್ರಗಳು ಸಿಕ್ಕಿದುವು.ಫ್ಲಿಕರ್ ತಾಣದಲ್ಲಿ ಚಿತ್ರಗಳು http://www.flickr.com/photos/britishmonarchy/ನಲ್ಲಿವೆ.
-------------------------------------------
ಅಮೇಜಾನ್‌ ಸೇವೆಗೆ ಮೋಡ
ಕ್ಲೌಡ್ ಕಂಪ್ಯೂಟಿಂಗ್ ಸೇವೆಯು ವಾರಕಾಲ ಬಾಧಿತವಾಗಿ,ಇವರ ಸೇವೆಯನ್ನವಲಂಬಿಸಿದ ಅಂತರ್ಜಾಲ ತಾಣಗಳು,ಅಂತರ್ಜಾಲದಲ್ಲಿ ವಾರಕಾಲ ಮರೆಯಾದುವು.ಅಮೇಜಾನ್ ಕಂಪೆನಿಯು ತನ್ನ ಕ್ಲೌಡ್ ಕಂಪ್ಯೂಂಟಿಂಗ್ ಸೇವೆ ಮುಖಾಂತರ ಹಲವು ತಾಣಗಳಿಗೆ ಅಗತ್ಯವಾದ ಸರ್ವರ್,ಸ್ಮರಣಶಕ್ತಿ,ನೆಟ್ವರ್ಕಿಂಗ್ ಮುಂತಾದ ಮೂಲಸೌಕರ್ಯವನ್ನು ಒದಗಿಸುತ್ತಿದೆ.ಸೇವೆಯ ಈ ಲೋಪ,ಯಾವುದೇ ಭದ್ರತಾ ಲೋಪದ ಕಾರಣ ಆಗದೆ,ಅಮೇಜಾನ್ ಕಂಪೆನಿಯು ತನ್ನ ಸೇವೆಯ ನಿರ್ವಹಣೆಯಲ್ಲಿ ಮಾಡಿದ ತಪ್ಪಿನ ಕಾರಣದಿಂದಾಗಿದೆ.ಇದಕ್ಕೆ ಕಂಪೆನಿಯು ತನ್ನ ಬಳಕೆದಾರರರಲ್ಲಿ ಕ್ಷಮೆ ಯಾಚಿಸಿ,ಎಲ್ಲರ ಸೇವಾವಧಿಯನ್ನು ಒಂದುವಾರ ಕಾಲ ವಿಸ್ತರಿಸುವ ಕೊಡುಗೆ ನೀಡಿದೆ.ಬಾಧಿತವಾದ ತಾಣಗಳಲ್ಲಿ ಫೋರ್‌ಸ್ಕ್ವೇರ್,ರೆಡ್ಡಿಟ್ ಮುಂತಾದುವುಗಳೂ ಇದ್ದುವು.
--------------------------------------------------------------
ಸ್ಪಾರ್ಕ್ ಪ್ಲಗ್:ವಿದಾಯ?

ಲೇಸರ್ ಕಿರಣಗಳ ಮೂಲಕ ಇಂಜಿನ್ ಒಳಗೆ ದಹನಕ್ರಿಯೆಯನ್ನು ಶುರು ಮಾಡುವುದು ಸಾಧ್ಯವೆಂದು ಸಿದ್ಧವಾಗಿದೆ.ಹೀಗಾಗಿ,ಸ್ಪಾರ್ಕ್ ಪ್ಲಗ್ ಮೇಲೆ ಅವಲಂಬನೆಗೆ ವಿದಾಯ ಹೇಳಲು ಭೂಮಿಕೆ ಸಿದ್ಧವಾಗಿದೆ.ಎರಡು ಅಥವಾ ಮುರು ಲೇಸರ್ ಕಿರಣಗಳನ್ನು ಕೇಂದ್ರೀಕರಿಸಿ,ಪೆಟ್ರೋಲ್-ಗಾಳಿ ಮಿಶ್ರಣ ದಹನವನ್ನು ಆರಂಭಿಸಲು ಸಾಧ್ಯವೆಂದು ಸಂಶೋಧಕರ ತಂಡವು ನಿರೂಪಿಸಿದೆ.ಸ್ಪಾರ್ಕ್ ಪ್ಲಗ್‌ಗಳು ಇಲೆಕ್ಟ್ರೋಡುಗಳ ನಡುವೆ ಉಂಟಾಗುವ ಅತ್ಯಂತ ಹೆಚ್ಚು ವಿಭವಾಂತರದ ಕಾರಣ ಮೂಡುವ ಕಿಡಿಯ ಕಾರಣ ಉಂಟಾಗುವುದರಿಂದ,ದಹನಕ್ರಿಯೆಯ ಆರಂಭ ಹೆಚ್ಚು ದಕ್ಷತೆಯಿಂದಾಗದು.ಹೀಗಾಗಿ ದಹನವು ಉಂಟು ಮಾಡುವ ಮಾಲಿನ್ಯವೂ ಹೆಚ್ಚು.ಕಿರಿದಾದ ಲೇಸರ್ ಕಿರಣಗಳು ಹೆಚ್ಚು ಶಾಖವನ್ನುಂಟು ಮಾಡಿ,ದಕ್ಷತೆ ಹೆಚ್ಚಿಸುವುದಲ್ಲದೆ,ದಹನವಾಗದೆ ಉಳಿಯುವ ಅನಿಲಗಳ ಪ್ರಮಾಣವನ್ನು ಕಡಿಮೆ ಮಾಡುತ್ತದೆ.ಇಂತಹ ವ್ಯವಸ್ಥೆಯನ್ನು ಬಳಸುವಾಗ,ಸ್ಪಾರ್ಕ್ ಪ್ಲಗ್‌ನ ಇಲೆಕ್ಟ್ರೋಡುಗಳು ಆವಿಯಾಗಿ ಸ್ಪಾರ್ಕ್ ಪ್ಲಗ್ಗನ್ನು ಆಗಾಗ ಬದಲಿಸಬೇಕಾದ ಪ್ರಮೇಯವೂ ಇರದು.
------------------------------------------
ಬಿಳಿ ಐಫೋನ್ ಮಾರಾಟಕ್ಕೆ

ಐಫೋನ್‌ನ ಬಿಳಿ ಬಣ್ಣದ ಮಾದರಿ ತನ್ನ ತಾಂತ್ರಿಕ ಸಮಸ್ಯೆಗಳನ್ನು ಸರಿ ಪಡಿಸಿಕೊಂಡು ಮಾರಾಟಕ್ಕೆ ಸಿದ್ಧವಾಗಿದೆ.ಹಿಂದಿನ ಮಾದರಿಯ ಜತೆಗೇ ಬಿಳಿ ಐಫೋನ್ ಮಾರಾಟಕ್ಕೆ ಲಭ್ಯವಾಗ ಬೇಕಿತ್ತು.ಆದರೆ ಬಿಳಿ ಐಫೋನ್‌ನಲ್ಲಿ ಕಂಡು ಬಂದ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಲು ಆಪಲ್ ಕಂಪೆನಿಯ ಇಂಜಿನಿಯರುಗಳಿಗೆ ಸಮಯ ಹಿಡಿಯಿತು.ಫೋನಿನ ಕ್ಯಾಮರಾವು ಪೋಟೋ ಹಿಡಿಯುವಾಗ,ಬಿಳಿ ಬಣ್ಣದ ಮೇಲ್ಮೈಯ ಕಾರಣ ಹೆಚ್ಚು ಬೆಳಕನ್ನು ಪ್ರತಿಫಲಿಸಿ,ಕ್ಯಾಮರಾ ಸೆನ್ಸರನ್ನು ದಾರಿ ತಪ್ಪಿಸುವ ಕಾರಣ,ಕ್ಯಾಮರಾದ ಸೆಟಿಂಗ್‌ಗಳು ತಪ್ಪಾಗುತ್ತಿತ್ತು.ಕ್ಯಾಮರಾದಲ್ಲಿ ಮೂಡುವ ಚಿತ್ರಗಳು ಅಸ್ಪಷ್ಟವಾಗುತ್ತಿದ್ದುವು.ತಡವಾದ ಕಾರಣ,ಬಿಳಿ ಐಫೋನಿಗೆ ಹೆಚ್ಚಿನ ಬೇಡಿಕೆಯೂ ಬರುವುದು ನಿಶ್ಚಿತ.ಮೊದಲೇ ಆಪಲ್ ಕಂಪೆನಿಯು ತನ್ನ ಉತ್ಪನ್ನಗಳನ್ನು ದುಬಾರಿ ಬೆಲೆಗೆ ಒದಗಿಸುತ್ತಿದೆ,ಜತೆಗೆ ಜನ ಮುಗಿ ಬಿದ್ದು ಖರೀದಿಸುತ್ತಾರೆ.ಪರಿಣಾಮವಾಗಿ ಆಪಲ್ ದಿನೆ ದಿನೇ ಹೆಚ್ಚಿನ ಲಾಭ ಗಳಿಸುತ್ತಿದೆ.ಲಾಭದ ಪ್ರಮಾಣದಲ್ಲಿ ಆಪಲ್ ಕಂಪೆನಿಯು ಮೈಕ್ರೋಸಾಫ್ಟನ್ನೂ ಹಿಂದೆ ಹಾಕಿದೆ.
------------------------
ಸ್ಯಾಮ್‌ಸಂಗ್ ಕಂಪೆನಿಯ ನೆಟ್‌ಬುಕ್:ಕ್ರೋಮ್ ಆಪರೇಟಿಂಗ್ ವ್ಯವಸ್ಥೆ
ಅಲೆಕ್ಸ್ ಎನ್ನುವ ಸ್ಯಾಮ್‌ಸಂಗ್ ನೆಟ್‌ಬುಕ್‌ನಲ್ಲಿ ಗೂಗಲ್ ಕ್ರೋಮ್ ಆಪರೇಟಿಂಗ್ ವ್ಯವಸ್ಥೆಯನ್ನು ಬಳಸುವ ಸೂಚನೆಯಿದೆ.ಗೂಗಲ್ ಆಪರೇಟಿಂಗ್ ವ್ಯವಸ್ಥೆ ಬಳಸುವ ಪ್ರಥಮ ಸಾಧನ ಇದಾಗಲಿದೆಯೆಂಬ ವದಂತಿಗಳು ಕೇಳಿಸುತ್ತಿವೆ.ಗೂಗಲ್‌ನ ಆಪರೇಟಿಂಗ್ ವ್ಯವಸ್ಥೆಯು ನೆಟ್‌ಬುಕ್‌ನಂತಹ ಅಂತರ್ಜಾಲ ಜಾಲಾಡುವ ಸಾಧನಗಳಿಗೋಸ್ಕರವೆ ವಿಶೇಷವಾಗಿ ತಯಾರಾಗುತ್ತಿರುವ ವ್ಯವಸ್ಥೆಯಾಗಿದೆ.ಇದರಲ್ಲಿ ಹೆಚ್ಚು ಅಪ್ಲಿಕೇಶನ್‌ಗಳನ್ನು ಅನುಸ್ಥಾಪಿಸದೆ,ಬ್ರೌಸರನ್ನೆ ಪ್ರಧಾನವಾಗಿ ಒದಗಿಸಲಾಗುತ್ತದೆ.ಕೌಡ್‌ಕಂಪ್ಯೂಂಟಿಂಗ್ ಮೂಲಕವೇ ತಂತ್ರಾಂಶಗಳನ್ನೂ ಪಡೆಯುವ ಯೋಜನೆಗೋಸ್ಕರ ಇಂತಹ ಸಾಧನಗಳನ್ನು ಸಿದ್ಧ ಪಡಿಸಲಾಗಿದೆ.
------------------------------------------------------------
ತುಷಾರ:ವಾರ್ಷಿಕ ಚಂದಾ ಗೆಲ್ಲಿ!
ಈ ಪ್ರಶ್ನೆಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಮಾಳದ ಡಾ.ನಿರಂಜನ್ ಚಿಪ್ಳೂಣ್‌ಕರ್,ಉಪಪ್ರಾಂಶುಪಾಲ,ಎನ್ ಎಮ್ ಎ ಎಂ ತಾಂತ್ರಿಕ ಮಹಾವಿದ್ಯಾಲಯ,ನಿಟ್ಟೆ.
(ಉತ್ತರಗಳನ್ನು nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ:NS29 ನಮೂದಿಸಿ.)
*ಹೊಸ ಉಬುಂಟು ಬಳಸಿದವರು,ಅದರ ಬಳಕೆ ಹೇಗನಿಸಿತು ಎಂದು ಸಂಕ್ಷಿಪ್ತವಾಗಿ ಬರೆಯಿರಿ.
ಕಳೆದ ವಾರದ ಸರಿಯುತ್ತರಗಳು:
*CAD ಎಂದರೆ Computer Aided Design- ಕಂಪ್ಯೂಟರ್ ಆಧಾರಿತ ವಿನ್ಯಾಸ.
*ಮೆಕಾನಿಕಲ್ ವಿಭಾಗವಲ್ಲದೆ ಕಂಪ್ಯೂಟರ್ ಚಿಪ್ ತಯಾರಿಕೆಯಲ್ಲೂ CAD ಚಿಪ್ ವಿನ್ಯಾಸ ಕಾರ್ಯಕ್ಕೆ ಬಳಕೆಯಾಗುತ್ತದೆ. ಬಹುಮಾನ ಗೆದ್ದವರು ವಿಕಾಸ್ ಹೆಗ್ಡೆ,ಬೆಂಗಳೂರು. ಅಭಿನಂದನೆಗಳು.
-------------------------------------------------------
ಓದುಗರ ಪತ್ರ
ಓದುಗ ಪ್ರದೀಪ್ ಶೆಟ್ಟಿ ರಸಪ್ರಶ್ನೆಗೆ ತಾವು ಕಳುಹಿಸಿದ ಉತ್ತರವೂ ಸರಿಯಿದ್ದರೂ,ತಮಗೇಕೆ ಬಹುಮಾನ ಕೊಟ್ಟಿಲ್ಲ ಎಂದು ವಿಚಾರಿಸಿದ್ದಾರೆ.ಪ್ರತಿವಾರ ಓರ್ವ ವಿಜೇತನಾಗುವ ಕಾರಣ,ಮೊದಲ ಸರಿಯುತ್ತರಕ್ಕೆ ಬಹುಮಾನ ನೀಡಬೇಕಾಗುತ್ತದೆ.ಹಾಗಾಗಿ ಉಳಿದವರಲ್ಲಿ ಹಲವರ ಉತ್ತರ ಸರಿಯಿದ್ದರೂ ಬಹುಮಾನ ಸಿಗದು.ಹಲವರು ಉತ್ತರ ಕಳುಹಿಸಿದರೆ,ಲಾಟರಿ ಮೂಲಕ ವಿಜೇತರನ್ನು ಆಯ್ಕೆ ಮಾಡಬೇಕೆಂಬ ಪ್ರದೀಪ್ ಶೆಟ್ಟಿಯವರ ಸಲಹೆಯಂತೆ ವಿಜೇತರನ್ನು ಆಯಲಾಗುವುದು.ಇಷ್ಟರವರೆಗೆ ವಿಜೇತರಾದವರಿಗೆ ಬಹುಮಾನಗಳನ್ನು ಕಳುಹಿಸಲಾಗಿದೆ.
*ಅಶೋಕ್‌ಕುಮಾರ್ ಎ