Monday, June 27, 2011

ಚಿತ್ರ ತಿದ್ದಲಾಗುವ ಕ್ಯಾಮರಾ

ಚಿತ್ರ ತಿದ್ದಲಾಗುವ ಕ್ಯಾಮರಾ
ಚಿತ್ರ ತೆಗೆಯುವಾಗ,ನಮಗೆ ಬೇಕಾದ ವಸ್ತುವಿನ ಮೇಲೆ ಕ್ಯಾಮರಾ ಲೆನ್ಸನ್ನು ಕೇಂದ್ರೀಕರಿಸುವುದು ಸಮಯ ತೆಗೆದುಕೊಳ್ಳುವ ಕಾರ್ಯ.ಅದೂ ಅಭ್ಯಾಸ ಇಲ್ಲದವರಿಗೆ ಆ ಕೆಲಸ ತಲೆನೋವೇ.ಎಷ್ಟೋ ಸಲ ವಸ್ತುವಿನ ಮೇಲೆ ಕೇಂದ್ರೀಕರಿಸುವ ವೇಳೆ ದೃಶ್ಯವೇ ಬದಲಾಗಿರುತ್ತದೆ.ಈಗ ಬಂದಿರುವ ಹೊಸ ಕ್ಯಾಮರಾದಲ್ಲಿ ವಸ್ತುವು ಚೌಕಟ್ಟಿನೊಳಗಿದೆ ಎಂದು ನೋಡಿಕೊಂಡರಾಯಿತು.ಕೇಂದ್ರೀಕರಿಸುವ ಕೆಲಸವನ್ನು ಆಮೇಲೆಯೂ ಮಾಡಲು ಬರುತ್ತದೆ.ಸ್ಟಾನ್‌ಫರ್ಡ್ ವಿಶ್ವವಿದ್ಯಾಲಯದ ಪಿ ಎಚ್ ಡಿ ಪದವೀಧರ ರೆನ್ ತನ್ನ ಪ್ರಬಂಧದಲ್ಲಿ ಮಂಡಿಸಿದ ತರ್ಕವನ್ನು ಈ ಕ್ಯಾಮರಾದಲ್ಲಿ ಅಳವಡಿಸಿ,ಕ್ಯಾಮರಾದಲ್ಲಿ ಈ ಸೌಕರ್ಯವನ್ನು ನೀಡಿದ್ದಾರೆ.ಲೈಟ್ರೋ ಎನ್ನುವ ಹೆಸರಿನ ಕಂಪೆನಿಯು ಕ್ಯಾಮರಾ ತಯಾರಿಸಿದೆ.ಕ್ಯಾಮರಾಗಳಲ್ಲಿ ಹಲವು ಹೊಸ ಸೌಕರ್ಯಗಳಿದ್ದರೂ,ಈ ನಮೂನೆಯ ಸವಲತ್ತು ಇರುವ ಏಕೈಕ ಕ್ಯಾಮರಾ ಇದೆನ್ನುವುದು ನಿಸ್ಸಂಶಯ.ಎಲ್ಲಾ ಕೋನಗಳಿಂದ ಬರುವ ಬೆಳಕಿನ ಮೂಲಗಳನ್ನು ಚಿತ್ರದಲ್ಲಿ ಉಳಿಸಿಕೊಂಡು ಚಿತ್ರ ಮೂಡುವ ಕಾರಣ, ಈ ರೀತಿ ಮಾಡಲು ಸಾಧ್ಯವಾಗುತ್ತದೆ.
------------------------------
ಸ್ನೇಪ್‌ಡೀಲ್:ಊರಿನ ಹೆಸರು
 
snapdeal.com ಎನ್ನುವುದು ಅಂತರ್ಜಾಲತಾಣವೆನ್ನುವುದು ಸ್ಪಷ್ಟ.ನಿಮ್ಮ ನಿಮ್ಮ ಊರಿನ ಅಂಗಡಿಗಳಲ್ಲಿ ಸಿಗುವ ಕಡಿತದ ಮಾರಾಟದ ಬಗ್ಗೆ ಮಾಹಿತಿ ನೀಡುವ ಸೇವೆ ಒದಗಿಸುವ ತಾಣವಿದು.ಕುಣಾಲ್ ಬೇಹ್ಲ್ ಎನ್ನುವ ತರುಣ,ತನ್ನ ಪದವಿಯನ್ನು ಅಮೆರಿಕಾದಲ್ಲಿ ಪಡೆದು ಭಾರತಕ್ಕೆ ಹಿಂದಿರುಗಿದ ನಂತರ ಈ ತಾಣವನ್ನು ಆರಂಭಿಸಿ,ವ್ಯವಹಾರಕ್ಕಿಳಿದಿದ್ದಾರೆ.ದೆಹಲಿಯ ಸಮೀಪದ ಕುಗ್ರಾಮವೊಂದಾದ ಶಿವನಗರ ಈತನ ಊರು.ತನ್ನ ಊರಿನ ಜನರಿಗೆ ಸಹಾಯ ಮಾಡುವ ದೃಷ್ಟಿಯಿಂದ ಅವರು ಸುಮಾರು ಹದಿನೈದು ಬೋರ್‌ವೆಲ್‌ಗಳಿಗೆ ಕೈಪಂಪ್‌ಗಳನ್ನು ಅಳವಡಿಸಿಕೊಟ್ಟಿದ್ದರು.ಊರಿನ ಜನರಿಗೆ ತಮಗೆ ಅನುಕೂಲ ಕಲ್ಪಿಸಿದ ಬೇಹ್ಲ್ ಮಹಾಶಯನಿಗೆ ಕೃತಜ್ಞತೆ ಸಲ್ಲಿಸಬೇಕೆನಿಸಿತು.ಹಾಗಾಗಿ ಅವರು ತಮ್ಮ ಊರಿಗೆ ಶಿವನಗರ ಎಂಬುದರ ಬದಲಿಗೆ, ಹೊಸಹೆಸರು ಸ್ನಾಪ್‌ಡೀಲ್‌ಡಾಟ್‌ಕಾಂ ನಗರ ಎಂದೇ ಹೆಸರಿಡುವ ನಿರ್ಧಾರಕ್ಕೆ ಬಂದರು.ಅಂತರ್ಜಾಲತಾಣದ ಹೆಸರು ಹೊತ್ತಿರುವ ಹಳ್ಳಿ ಬಹುಶ: ಇದೊಂದೇ ಆಗಿರಬಹುದು,ಅಲ್ಲವೇ?
-----------------------------------
ಮೋಸದ ತಂತ್ರಾಂಶ
ಕಂಪ್ಯೂಟರಿಗೆ ಭದ್ರತೆ ಒದಗಿಸುವ ತಂತ್ರಾಂಶ ತಮ್ಮದೆಂದು ಸುಳ್ಳು ಸುಳ್ಳೇ ಭರವಸೆ ಕೊಟ್ಟು,ನೂರನಲುವತ್ತೊಂಭತ್ತು ಡಾಲರು ವಸೂಲಿ ಮಾಡಿ,ತಂತ್ರಾಂಶವನ್ನು ಮಾರುವ ಮೋಸದ ದಂಧೆ ಈಗ ಬಯಲಾಗಿದೆ.ಅಮೇರಿಕಾದ ಎಫ್ ಬಿ ಐ, ಅಪರಾಧಿಗಳ ಹಿಂದೆ ಬಿದ್ದಿದೆ.ಸುಮಾರು ಒಂದು ದಶಲಕ್ಷ ಜನರನ್ನು ಈ ರೀತಿ ಮೂರ್ಖರಾಗಿಸಲು,ಈ ಮೋಸಗಾರರಿಗೆ ಸಾಧ್ಯವಾಗಿದೆ.ಇಂತಹುದ್ದೆ ಇನ್ನೊಂದು ಮೋಸಗಾರರ ಜಾಲ,ಕಂಪ್ಯೂಟರ್ ರಿಪೇರಿ ಮಾಡುವವರಂತೆ ಜನರ ಕಂಪ್ಯೂಟರ್‌ ಬಳಸಲು ಅವಕಾಶ ಪಡೆದು,ಆ ವೇಳೆ ಯಾವುದೋ ತಂತ್ರಾಂಶ ಅಳವಡಿಸುತ್ತಿತ್ತು.ನಂತರ ಬಳಕೆದಾರರು ಕಂಪ್ಯೂಟರ್ ಬಳಸುವಾಗಲೆಲ್ಲಾ ಅವರಿಗೆ ಹಣ ಪಾವತಿಗೆ ಒತ್ತಾಯ ಮಾಡುವ ಪಾಪ್-ಅಪ್ ಜಾಹೀರಾತು ಮೂಡುತ್ತಿತ್ತು.ಒಂದು ವೇಳೆ ಅವರು ಹಣಪಾವತಿಸದಿದ್ದರೆ,ಅವರ ಕಂಪ್ಯೂಟರಿಗೆ ವೈರಸ್ ದಾಳಿ ಆಗಿರುವಂತೆ ಭ್ರಮೆ ಮೂಡಿಸಲು ಮೋಸಗಾರರಿಗೆ ಸಾಧ್ಯವಾಗುತ್ತಿತ್ತು!
------------------------------------
ಕುರಾನ್ ಓದುವ ಪೆನ್
 
ರಂಜಾನ್ ಸಮಯದಲ್ಲಿ ಕುರಾನ್ ಪಠಣ ಮಾಡಲು ಸಹಾಯ ಮಾಡುವ ಪೆನ್ ಒಂದು ಲಭ್ಯವಿದೆ.ಅರೇಬಿಯಾ ಭಾಷೆಯ ಕುರಾನ್ ಪುಸ್ತಕದಲ್ಲಿ ಪೆನ್‌ನ್ನು ಚಲಿಸಿದಂತೆ,ಅಲ್ಲಿರುವ ವಾಕ್ಯವನ್ನು ಪೆನ್ ಉಚ್ಚರಿಸುತ್ತದೆ.ಹೆಸರಾಂತ ಕುರಾನ್ ಪಠಣಕಾರರ ಧ್ವನಿಯಲ್ಲಿ ಪಠಣ ಕೇಳಬಹುದು.ಯಾವ ಪಠಣಕಾರನ ಧ್ವನಿ ಬೇಕೋ ಅದನ್ನೂ ಆಯ್ಕೆ ಮಾಡಿಕೊಳ್ಳಬಹುದು.ಇಂಗ್ಲೀಷ್,ಜರ್ಮನ್,ಉರ್ದು,ಫ್ರೆಂಚ್,ಪರ್ಶಿಯನ್ ಭಾಷೆಯಲ್ಲಿಯೂ ಕೇಳುವ ಆಯ್ಕೆ ಸಿಗುತ್ತದೆ.ನಾಲ್ಕು ಸಾವಿರ ಬೆಲೆಯ ಈ ಪೆನ್,ಅದಕ್ಕಾಗಿಯೇ ವಿಶೇಷ ಶಾಯಿಯಲ್ಲಿ ಮುದ್ರಿಸಿದ ಪುಸ್ತಕದ ಜತೆ ಮಾತ್ರಾ ಕೆಲಸ ಮಾಡುತ್ತದೆ.ಅಂದ ಹಾಗೆ ಈ ಪೆನ್ ಚೈನಾದ ಉತ್ಪನ್ನವಾಗಿದೆ.ಹಿಮಾಲಯ ಪುಸ್ತಕದಂಗಡಿಗಳಲ್ಲಿದು ಬಿಸಿದೋಸೆ ತೆರನೆ ಮಾರಾಟವಾಗುತ್ತಿದೆಯಂತೆ.
---------------------------------
ಅಂತರ್ಜಾಲತಾಣ ಹೆಸರು:ವೈವಿಧ್ಯ ಸಾಧ್ಯ
ಅಂತರ್ಜಾಲತಾಣಗಳಿಗೆ ಡಾಟ್‌ಕಾಂ,ಡಾಟ್‌ನೆಟ್ ಎಂಬಂತಹ ನಿಗದಿತ ಶಬ್ದಗಳಿಗೇ ಸೀಮಿತಗೊಳಿಸುವ ಅಗತ್ಯ ಇನ್ನು ಹೆಚ್ಚು ಸಮಯವಿರದು.ನಿಮಗೆ ಬೇಕಾದ ಶಬ್ದದಿಂದ ತಾಣದ ಹೆಸರನ್ನು ಕೊನೆಗೊಳಿಸುವ ಅವಕಾಶ ನೀಡಲು,ತಾಣಗಳ ಹೆಸರಿನ ಪರವಾನಿಗೆ ನೀಡುವ ಸಂಸ್ಥೆ ನಿರ್ಧರಿಸಿದೆ.ಈ ಅವಕಾಶ ಪಡೆಯಲು ಎರಡುಲಕ್ಷ ಡಾಲರು ಖರ್ಚು ಬರುತ್ತದೆ.ಮಾತ್ರವಲ್ಲದೆ,ಅವಕಾಶ ಪಡೆಯಲು ಬಹುಪುಟದ ದಾಖಲೆಯನ್ನು ತುಂಬಿಸುವ ಅಗತ್ಯವೂ ಇದೆ.ಈ ಅವಕಾಶ ಪಡೆದವರು ಕಂಪೆನಿ ಹೆಸರು,ಬ್ರಾಂಡ್ ಹೆಸರಿನಿಂದ ಅಂತ್ಯವಾಗುವ ಅಂತರ್ಜಾಲತಾಣಗಳನ್ನು ಆರಂಭಿಸಬಹುದು.ಡಾಟ್‌ಐಪ್ಯಾಡ್,ಡಾಟ್‌ಆಪಲ್ ಮುಂತಾದ ತಾಣಗಳು ಆರಂಭವಾಗುವುದು ಖಂಡಿತ.ಹಾಗೆಯೇ ಹಲವರು ಸೇರಿ ಡಾಟ್‌ಸ್ಪೋರ್ಟ್ಸ್ ಎಂಬ ಹೆಸರಿನಿಂದ ಅಂತ್ಯವಾಗುವ ತಾಣಗಳನ್ನು ಕ್ರೀಡೆಗೆ ಸಂಬಂಧಿಸಿ  ಆರಂಭಿಸಬಹುದು.
-----------------------------------------------------------------
ಗೂಗಲ್ ಅನುವಾದಕ:ಕನ್ನಡದಲ್ಲೂ
ಇತರ ಭಾಷೆಗಳಲ್ಲಿರುವ ವಾಕ್ಯಗಳನ್ನುಕನ್ನಡಕ್ಕೆ ಅನುವಾದಿಸುವ ಸೇವೆಯನ್ನು ಗೂಗಲ್ ನೀಡಲಾರಂಬಿಸಿದೆ. ಕನ್ನಡವೂ ಸೇರಿ,ಕೆಲವು ಭಾರತೀಯ ಭಾಷೆಗಳಲ್ಲಿ ಸೇವೆಯೀಗ ಲಭ್ಯ.ಗೂಗಲ್ ಅನುವಾದಕ ಈಗಾಗಲೇ ಜನಪ್ರಿಯವಾಗಿದೆ.ಈ ಸೇವೆಯಲ್ಲಿ ಒಳಗೊಂದಿರುವ ಭಾಷೆಗಳ ಸಂಖ್ಯೆಯನ್ನು ಹೆಚ್ಚಿಸುತ್ತಾ ಬಂದಿರುವುದು ಗೂಗಲ್ ಹೆಗ್ಗಳಿಕೆ.ವಾಕ್ಯವನ್ನು ಅಂತರ್ಜಾಲತಾಣದಿಂದ ನಕಲು ಮಾಡಿ ನೀಡಬಹುದು,ಇಲ್ಲವೇ ಟೈಪಿಸಬಹುದು.ವಾಕ್ಯವನ್ನು ಓದುವ ರೀತಿಯ ಸಹಾಯವೂ ಸಿಗುವುದು ಈ ಸೇವೆಯ ವೈಶಿಷ್ಟ್ಯ.ಇಂಗ್ಲೀಷಿನಂತಹ ಭಾಷೆಗಳಲ್ಲಿ ಇರುವ ವಾಕ್ಯವನ್ನು ಓದಿ ಕೇಳಿಸುವ ಸವಲತ್ತೂ ಇಲ್ಲಿದೆ.
----------------------------------
ತುಷಾರ:ವಾರ್ಷಿಕ  ಚಂದಾ ಗೆಲ್ಲಿ!
ಈ ಪ್ರಶ್ನೆಗಳಿಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ನಿವೃತ್ತ ಬ್ಯಾಂಕ್ ಅಧಿಕಾರಿ ಎ ಎಸ್ ಕಲ್ಲೂರಾಯ,ಅಂಬಲಪಾಡಿ.
*FOSS ಎಂದರೇನು?
*ಉದಯವಾಣಿ ಇ-ಪತ್ರಿಕೆ ತಾಣವು ಬಳಕೆದಾರ ಸ್ನೇಹಿಯಾಗುವತ್ತ ತೆಗೆದುಕೊಂಡಿರುವ ಹೆಜ್ಜೆಯೇನು?
(ಉತ್ತರವನ್ನು nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ:NS37 ನಮೂದಿಸಿ.)
ಕಳೆದ ವಾರದ ಬಹುಮಾನಿತ ಉತ್ತರ:
*ಬಿಟ್‌ಟೊರೆಂಟ್ ಅಂದರೆ ಅಂತರ್ಜಾಲದಲ್ಲಿ ಶೀಘ್ರವಾಗಿ ಕಡತ ವಿನಿಮಯ ಮಾಡಿಕೊಳ್ಳುವ ವ್ಯವಸ್ಥೆ.
*ಇತ್ತೀಚೆಗೆ ಇದರ ಬಗ್ಗೆ ಬಂದ ಸುದ್ದಿಯೇಂದರೆ,ಈ ಸೇವೆಯ ಮೂಲಕ ಕಾಪಿರೈಟ್ ಉಲ್ಲಂಘಿಸಿ ಕಡತಗಳ ವಿನಿಮಯ ಮಾಡಿಕೊಂಡ ಐವತ್ತು ಸಾವಿರಕ್ಕೂ ಹೆಚ್ಚು ಜನರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಯಿತು.ಸರಿಯುತ್ತರ ಕಳುಹಿಸಿ,ಬಹುಮಾನ ಪಡೆದವರು ಗಣೇಶ್ ಕಾಮತ್,ಪಡುಬೆಳ್ಳೆ,ಕುಂಜಾರುಗಿರಿ.ಅಭಿನಂದನೆಗಳು.

Udayavani
*ಅಶೋಕ್‌ಕುಮಾರ್ ಎ

Monday, June 20, 2011

ದೀರ್ಘ ಗ್ರಹಣ:ಆನ್‌ಲೈನ್ ಕವರೇಜ್

ದೀರ್ಘ ಗ್ರಹಣ:ಆನ್‌ಲೈನ್ ಕವರೇಜ್

ಈ ಸಲದ ಗೂಗಲ್ ಡೂಡಲ್‌ನಲ್ಲಿ ಸ್ಪೆಷಲ್ ಏನು ಗೊತ್ತೇ?ದೀರ್ಘ ಗ್ರಹಣದ ಡೂಡಲ್ ಈ ಸಲದ ಗೂಗಲ್ ಶೋಧ ಪುಟದಲ್ಲಿ ಪ್ರತ್ಯಕ್ಷವಾಯಿತು.ಮಾತ್ರವಲ್ಲ,ಗ್ರಹಣದ ದೃಶ್ಯಾವಳಿಗಳ ಲೈವ್ ಕವರೇಜನ್ನೂ ಒದಗಿಸಲಾಯಿತು.ಹಲವರು ಗ್ರಹಣವನ್ನು ಕುಳಿತಲ್ಲೇ ಕಂಪೂಟರ್‌ನಲ್ಲಿ ವೀಕ್ಷಿಸಿದರು.ಉತ್ತರ ಅಮೆರಿಕದಲ್ಲಾಗ ಹಗಲಾದ್ದರಿಂದ ಗ್ರಹಣ ಲಭ್ಯವಿರಲಿಲ್ಲ.ದಕ್ಷಿಣ ಆಫ್ರಿಕಾ,ದುಬೈ ಮತ್ತು ಕ್ಯಾನರಿ ದ್ವೀಪಗಳಿನ ಗ್ರಹಣಗಳ ನೇರ ದೃಶ್ಯಾವಳಿಗಳು ಅಂತರ್ಜಾಲಿಗರಿಗೆ ಲಭ್ಯವಾಯಿತು.ಎರಡು ನಿಮಿಷಗಳಿಗೊಮ್ಮೆ ಗ್ರಹಣ ದೃಶ್ಯ ಬದಲಾಗುತ್ತಿತ್ತು.ಮೋಡ ಮುಸುಕಿ,ಚಂದ್ರದರ್ಶನವಾಗದ ಭಾರತವಾಸಿಗಳಿಗೂ ಗ್ರಹಣ ದೃಶ್ಯವನ್ನಿಲ್ಲಿ ನೋಡಿ ತೃಪ್ತಿ ಪಡಬೇಕಾದ ಪ್ರಮೇಯವೂ ಬಂತೆನ್ನಿ.
------------------------
ಗುಟ್ಟು ರಟ್ಟಾಗಿಸಿ!
ವಿಕಿಲೀಕ್ಸ್ ತಾಣದ ಮೂಲಕ ಹಲವು ದೇಶಗಳ ಗುಟ್ಟುಗಳು ಬಹಿರಂಗವಾಗಿ,ಗುಲ್ಲಾದ್ದು ಈಗ ಹಳೆಯ ಸುದ್ದಿ.ಕಚೇರಿ,ಆಡಳಿತಗಳ ಭ್ರಷ್ಟಾಚಾರಗಳ ಬಗ್ಗೆ ಮಾಹಿತಿ ಇರುವವರು ಅದನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲು ಈಗ ಅನೇಕ ತಾಣಗಳು ಲಭ್ಯವಾಗಿವೆ.ಕೆಲವು ತಾಣಗಳಂತೂ ಮಾಹಿತಿ ಹಂಚಿಕೊಳ್ಳುವವರ ಬಗೆಗಿನ ವಿವರಗಳೂ ಗೌಪ್ಯವಾಗಿರುವಂತೆ ಎಚ್ಚರಿಕೆ ತೆಗೆದುಕೊಳ್ಳುತ್ತವೆ.ಬಾಲ್ಕನ್‌ಲೇಕ್ಸ್,ಇಂಡೋಲೀಕ್ಸ್ ಅಂತಹ ತಾಣಗಳು ನಿಗದಿತ ಪ್ರದೇಶಗಳ ಗುಟ್ಟುಗಳನ್ನು ಬಹಿರಂಗವಾಗಿಸಲು ಲಭ್ಯವಾಗಿರುವ ತಾಣಗಳಾಗಿವೆ.ವಾಲ್‌ಸ್ಟ್ರೀಟ್ ಜರ್ನಲ್ ಪತ್ರಿಕೆಯೂ ಗುಟ್ಟು-ರಟ್ಟಾಗಿಸಲು ಸೇಫ್‌ಹೌಸ್ ಅನ್ನುವ ತಾಣವನ್ನು ಒದಗಿಸಿದೆ.ಗೌಪ್ಯತೆಯನ್ನು ಕಾಯ್ದುಕೊಳ್ಳುವ ಮಟ್ಟಿಗೆ ಪತ್ರಿಕೆ ಸೀಮಿತ ಆಶ್ವಾಸನೆಯನ್ನಷ್ಟೇ ನೀಡುತ್ತಿದೆ.ಕೋರ್ಟು ಖಟ್ಲೆಯ ಸಂದರ್ಭದಲ್ಲಿ ಮಾಹಿತಿದಾರನ ಮೂಲವನ್ನು ಬಹಿರಂಗ ಪಡಿಸುವ ಅನಿವಾರ್ಯತೆಯನ್ನು ತಾಣದಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ.ಓಪನ್‌ಲೀಕ್ಸ್ ತಾಣ ಆ ಮಟ್ಟಿಗೆ ಹೆಚ್ಚು ನಂಬಿಕೆಗೆ ಅರ್ಹವಾಗುವ ಸೂಚನೆಯಿದೆ.ಇದಿನ್ನೂ ಸಂಪೂರ್ಣ ಸಿದ್ಧವಾಗಿಲ್ಲ.ಮಾಹಿತಿದಾರನ ತಾಣ ಯಾವುದೆನ್ನುವುದನ್ನು ಗುಪ್ತವಾಗಿಸಲು ತಂತ್ರಾಂಶಗಳೂ ಇವೆ.ಟೋರ್ ಎನ್ನುವ ತಂತ್ರಾಂಶ,ಅಂತರ್ಜಾಲದಲ್ಲಿ ಹರಡಿರುವ ಸ್ವಯಂಸೇವಕರ ಗಣಕಗಳ ಸಹಾಯ ಪಡೆದು,ಮೂಲವನ್ನು ಮರೆಮಾಚುವ ತಂತ್ರವನ್ನು ಬಳಸುತ್ತದೆ.
------------------------------------------
ಜನಪ್ರಿಯ ಗುಪ್ತ ಸಂಖ್ಯೆಗಳು
ಪೋನನ್ನು ಲಾಕ್ ಮಾಡಲು ಬಳಸುವ ಗುಪ್ತ ಸಂಖ್ಯೆಗಳ ಪೈಕಿ,ಅತ್ಯಧಿಕ ಜನರು ಬಳಸುವ ಸಮ್ಖ್ಯೆಗಳು ಯಾವುವು? 1234, 0000, 2580 (ಪೋನ್ ಕೀಪ್ಯಾಡಿನ ಮಧ್ಯದ ಸಾಲಿನ ಕಿಲಿಯಲ್ಲಿರುವ ಅಂಕಿಗಳು), 1111 ಮತ್ತು 5555. ಇನ್ನೊಂದು ಜನಪ್ರಿಯ ಸಂಖ್ಯೆಯೆಂದರೆ 5683,ಇದು ಲವ್ ಎನ್ನುವ ಪದವನ್ನುಟೈಪಿಸಲು ಬೇಕಾದ ಕೀಲಿಯಲ್ಲಿರುವ ಅಂಕಿಗಳು.ಉಳಿದ ಸಂಖ್ಯೆಗಳು 0852 , 2222, 1212 ಮತ್ತು 1998.ಆಪಲ್ ಐಫೋನ್‌ನ್ನು ಲಾಕ್ ಮಾಡಲು ಬಳಕೆಯಾಗುವ ಸಂಖ್ಯೆಗಳನ್ನು ಡೇನಿಯಲ್ ಅನಾಟಲಿ ಎನ್ನುವ ತಂತ್ರಜ್ಞ ತನ್ನ ಭದ್ರತಾ ತಂತ್ರಾಂಶದ ಮೂಲಕ ಕಂಡುಕೊಂಡಾಗ, ಈ ವಿಷಯ ತಿಳಿಯಿತು.ನಾಲ್ಕಂಕಿ ಬಳಸಿ 0000-9999ರ ವರೆಗಿನ ಹತ್ತು ಸಾವಿರ ವಿವಿಧ ಸಂಖ್ಯೆಗಳನ್ನು ಬಳಸುವ ಆಯ್ಕೆಯಿದ್ದರೂ,ಜನರು ಸಾಮಾನ್ಯವಾಗಿ ಮೊದಲು ಹೇಳಿದ ಹತ್ತು ಸಂಖ್ಯೆಗಳನ್ನೇ ಬಳಸಿ,ತಮ್ಮ ಸಾಧನದ ಭದ್ರತೆಗೆ ಕುಂದು ತಂದುಕೊಳ್ಳುತ್ತಾರೆ.ಓದುಗರು ಇಂತಹ ಸಂಖ್ಯೆಗಳನ್ನು ಬಳಸದೆ ಇರುವುದು ಕ್ಷೇಮ.
----------------------------------------------
ಅಗ್ಗದ ಸಾಧನ ಯಾವ ತಾಣದಲ್ಲಿ ಲಭ್ಯ?
http://www.shopobot.com/ ಒಂದು ಹೊಸ ರೀತಿಯ ತಾಣ.ಈ ತಾಣ ಅಮೇಜಾನ್,ವಾಲ್‌ಮಾರ್ಟ್,ನ್ಯೂಎಗ್ ಮುಂತಾದ ಪ್ರಸಿದ್ಧ ತಾಣಗಳಲ್ಲಿ ವಿವಿಧ ಸಾಧನಗಳ ದರಗಳೆಷ್ಟಿವೆ ಎನ್ನುವುದನ್ನು ಪರಿಶೀಲಿಸುತ್ತಿರುತ್ತದೆ.ಇದು ಸ್ವಯಂಚಾಲಿತ ವ್ಯವಸ್ಥೆಯಾಗಿದೆ.ಸಾಧನಗಳನ್ನು ವಿವಿಧ ಹೊತ್ತಿನಲ್ಲಿ ವಿವಿಧ ತಾಣಗಳು ಬೇರೆ ಬೇರೆ ಬೆಲೆಯಲ್ಲಿ ಮಾರುತ್ತಿರುತ್ತವೆ.ಶಾಪೋಬೋಟ್ ತಾಣಕ್ಕೆ ಭೇಟಿ ನೀಡಿದವರಿಗೆ ಅಗ್ಗದಲ್ಲಿ ಸಾಧನ ಮಾರಾಟವಾಡುತ್ತಿರುವ ಸ್ಟೋರ್ ಯಾವುದು ಮತ್ತು ಎಷ್ಟು ಹೊತ್ತಿಗೆ ಬೆಲೆ ಕಡಿಮೆ ಎನ್ನುವುದು ತಿಳಿಯುತ್ತದೆ.ಇದರ ಲಾಭವನ್ನು ಗ್ರಾಹಕರು ಪಡೆಯಬಹುದು.
-----------------------------------------
ಕೂಲಿ:ಬ್ರಾಡ್‌ಬ್ಯಾಂಡ್‌ ಕೆಲಸಕ್ಕಿಲ್ಲ
ಮಹಾತ್ಮಾ ಗಾಂಧಿ ರಾಷೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು ಜನರಿಗೆ ಕೆಲಸದ ಖಾತರಿ ನೀಡುವ ಯೋಜನೆಯಾಗಿದೆ.ರಸ್ತೆ ದುರಸ್ತಿಯಂತಹ ಕೆಲಸಗಳನ್ನು ಇದರ ಮೂಲಕ ಮಾಡಿಸಲು ಅನುಮತಿಯಿದೆ.ಪ್ರತಿ ಹಳ್ಳಿಗೂ ಬ್ರಾಡ್‌ಬ್ಯಾಂಡ್ ಸಂಪರ್ಕ ಒದಗಿಸುವ ಯೋಜನೆಗೆ,ಕೇಬಲ್ ಜಾಲ ನಿರ್ಮಾಣವಾಗ ಬೇಕಷ್ಟೇ?ಈ ಯೋಜನೆಯನುಸಾರ ಇದನ್ನು ಮಾಡಿಸಲು,ಅನುಮತಿ ಕೊಡಬೇಕೆಂದು ದೂರಸಂಪರ್ಕ ಇಲಾಖೆಯು ಗ್ರಾಮೀಣಾಭಿವೃದ್ಧಿ ಇಲಾಖೆಗೆ ಮನವಿ ಸಲ್ಲಿಸಿತ್ತು.ಎರಡು ಲಕ್ಷ ಕಿಲೋಮೀಟರ್ ಕೇಬಲ್ ಅಳವಡಿಸಲು ದೇಶದ ಉದ್ದಗಲಕ್ಕೂ ತೋಡು ನಿರ್ಮಿಸಿ,ಕೇಬಲ್‌ಗಳನ್ನು ಅಳವಡಿಸಲು ಬೇಕಾದ ಮಾನವ ಯತ್ನಕ್ಕೆ ಈ ಯೋಜನೆಯಡಿ ಕೆಲಸದವರು ಲಭ್ಯರಾಗಿದ್ದರೆ,ಕೆಲಸ ಚುರುಕಾಗಿ ನಡೆಯಲು ಸಾಧ್ಯವಿತ್ತು.ಕೇಬಲ್ ಜಾಲಕ್ಕೆ ಬೇಕಾದ ಹೂಡಿಕೆಯೂ ಕಡಿಮೆಯಾಗುತ್ತಿತ್ತು.ಆದರೆ ವಿಶ್ವಬ್ಯಾಂಕ್‌ನ ಉದ್ಯೋಗ ಖಾತರಿ ಯೋಜನೆಯಲ್ಲಿ ಇಂತಹ ಕೆಲಸ ಒಳಗೊಳ್ಳದೆ ತೊಡಕಾಗಿದೆ.ಸ್ಯಾಮ್ ಪಿಟ್ರೊಡಾ ಅವರೂ ಕೂಡಾ ಈ ಕೋರಿಕೆಯನ್ನು ಬೆಂಬಲಿಸಿದ್ದರು.
--------------------------------------------
ಐಬಿಎಂ:ನೂರು
ಐಬಿಎಂ ಕಂಪೆನಿ ಈಗ ನೂರು ವರ್ಷ ಪೂರೈಸಿದೆ.ಬಿಗ್‌ಬ್ಲೂ ಎಂಬ ಅಡ್ಡಹೆಸರು ಕಂಪೆನಿಗಂಟಿದ್ದರೂ,ಈ ಹೆಸರಿಗೇನು ಕಾರಣವೆನ್ನುವುದು ಸ್ಪಷ್ಟವಿಲ್ಲ.ಐಬಿಎಂ ಕಂಪೆನಿಯ ಹೆಸರನ್ನು ಬರೆಯಲು ಬಳಸುವ ನೀಲಿ ಬಣ್ಣದಿಂದ ಹೆಸರು ಬಂದಿರಬಹುದು ಎನ್ನುವುದು ಒಂದು ಊಹೆ.ಮೊದಲ ಪಿಸಿ,ಏಟಿಎಂ ಸಾಧನಗಳು ಐಬಿಎಂನ ಕೊಡುಗೆ.ಈಗ ತಂತ್ರಾಂಶ,ಯಂತ್ರಾಂಶ ಮತ್ತು ವಿವಿಧ ಸೇವೆಗಳ ಪೂರೈಕೆಯ ಮೂಲಕ ಕಂಪೆನಿ ಚಲಾವಣೆಯಲ್ಲಿದೆ.1911ನ ಜೂನ್ ಹದಿನಾರರಂದು ಕಂಪೆನಿಯ ಸ್ಥಾಪನೆಯಾಯಿತು.ತಂತ್ರಜ್ಞಾನ ಕಂಪೆನಿಗಳ ದಿಗ್ಗಜರಲ್ಲಿ ಐಬಿಎಂ ಕಂಪೆನಿಯೂ ಒಂದಾಗಿದೆ.
------------------------------
ತುಷಾರ:ವಾರ್ಷಿಕ  ಚಂದಾ ಗೆಲ್ಲಿ!
ಈ ಪ್ರಶ್ನೆಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಅಮೆರಿಕಾದ ಮೇರಿಲ್ಯಾಂಡ್‌ನಲ್ಲಿರುವ ಶಾಮಲಾ ಬನವತಿ.
*ಬಿಟ್‌ಟೊರೆಂಟ್ ಅಂದರೇನು?
*ಇತ್ತೀಚೆಗೆ ಇದರ ಬಗ್ಗೆ ಬಂದ ಸುದ್ದಿಯೇನು?
(ಉತ್ತರವನ್ನು nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ:NS36 ನಮೂದಿಸಿ.)
ಕಳೆದ ವಾರದ ಬಹುಮಾನಿತ ಉತ್ತರ:
*ಜೈವಿಕ ಚಹರೆ ಮೂಲಕ ಯಾವುದೇ ವ್ಯವಸ್ಥೆಗೆ  ಲಾಗಿನ್ ಆಗಲು ಬಳಸುವ ವಿವಿಧ ಚಹರೆಗಳು ಬೆರಳಚ್ಚು,ಮುಖಮುದ್ರೆ ಮತ್ತು ಕಣ್ಣಿನ ಐರಿಸ್.
*ಇವುಗಳ ಬಳಕೆಯಲ್ಲಿ ಸಮಸ್ಯೆಗಳಿವೆ-ಬೆರಳಚ್ಚು ಸ್ಪಷ್ಟವಿಲ್ಲದಿರುವುದು,ಮುಖದಲ್ಲಿ ಬದಲಾವಣೆ-ಕ್ಯಾಮರದ ಮುಂದಿರುವ ಮುಖದ ಕೋನ.ಸರಿಯುತ್ತರ ಕಳುಹಿಸಿ,ಬಹುಮಾನ ಪಡೆದವರು ಪ್ರತೀಕಾ,ಕಾವು,ಪುತ್ತೂರು.ಅಭಿನಂದನೆಗಳು.
Udayavani
UDAYAVANI UNICODE
*ಅಶೋಕ್‌ಕುಮಾರ್ ಎ

Monday, June 13, 2011

"ಕಣಜ" ತುಂಬಿ

"ಕಣಜ" ತುಂಬಿ

ಕನ್ನಡದ ಜಾಲತಾಣ,www.kanaja.in ನೋಡಿದ್ದೀರಿ ತಾನೇ?ಇದನ್ನು ಕನ್ನಡದ ವಿಶ್ವಕೋಶವಾಗಿಸುವ ಪ್ರಯತ್ನದಲ್ಲಿ "ಕಣಜ"ದಲ್ಲಿ ವಿವಿಧ ವಿಷಯಗಳ ಬಗ್ಗೆ ಬರಹಗಳನ್ನು ಸೇರಿಸಲು ಮುಕ್ತ ಸ್ವಾಗತವಿದೆ.ಇದನ್ನು ಮಾಡಲು ತಾಣಕ್ಕೆ ಭೇಟಿ ನೀಡಿ,ನೋಂದಾಯಿಸಿಕೊಳ್ಳಿ.ನಂತರ ಬರಹಗಳನ್ನು ಸೇರಿಸಲು,ಈಗಾಗಲೇ ಇರುವ ಬರಹಗಳಿಗೆ ತಿದ್ದುಪಡಿ ಸೂಚಿಸಲು ಸಾಧ್ಯ.ಗುಣಮಟ್ಟದ ಬರಹ ಬರೆಯುವವರು,ತಮ್ಮ ಕೆಲಸದ ಬಗ್ಗೆ ನೈಜ ಕಾಳಜಿ ಹೊಂದಿದ್ದವರಿಗೆ ಸಂಪಾದಕ ಮಂಡಳಿಗೂ ಸೇರುವ ಅವಕಾಶ ಸಿಗಬಹುದು.ಬ್ಲಾಗು ಹೊಂದಿರುವವರು,ತಮ್ಮ ಬ್ಲಾಗಿನಲ್ಲಿ ಕಣಜದ ಬಗ್ಗೆ ಬ್ಯಾನರುಗಳನ್ನೂ ಹಾಕಿಕೊಳ್ಳಬಹುದು.ಈ ಮೂಲಕ "ಕಣಜ"ಕ್ಕೆ ಹೆಚ್ಚಿನ ಪ್ರಚಾರ ಸಿಗಬಹುದು.ಸದ್ಯ ಇದರಲ್ಲಿ ಎರಡು ಸಾವಿರದಿನ್ನೂರು ಬರಹಗಳಿವೆ.ಕನ್ನಡ ವಿಕಿಪೀಡಿಯಾಕ್ಕೆ ಹೋಲಿಸಿದರೆ ಇಲ್ಲಿರುವ ಬರಹಗಳ ಸಂಖ್ಯೆ ಕಡಿಮೆಯೇ.
-----------------------------------------
ಸಾಧನ:ಗಣನೆಗೆ ಬರುವ ಗುಣಗಳು
ಯಾವುದೇ ಸಾಧನವನ್ನು ಆಯ್ದುಕೊಳ್ಳುವಾಗ,ಅದರ ಯಾವ ಸವಲತ್ತು ಮತ್ತು ಗುಣಗಳು ಮುಖ್ಯವಾಗುತ್ತವೆ ಎಂಬುದರ ಅರಿವು ಬಳಕೆದಾರನಿಗಿದ್ದರೆ ಚೆನ್ನ.ಇಲ್ಲವಾದರೆ ಜಾಹೀರಾತಿನಲ್ಲಿರುವ ಹಲವಾರು ಅನಗತ್ಯ ವಿವರಗಳು ನಮ್ಮ ಆಯ್ಕೆಯನ್ನು ಕ್ಲಿಷ್ಟವಾಗಿಸುತ್ತವೆ.ಕಾರು ಕೊಳ್ಳುವಾಗ ಕಾರಿನ ಮೈಲೇಜ್,ವಾತಾನುಕೂಲಿ ವ್ಯವಸ್ಥೆ,ಜಾಗ ವೈಶಾಲ್ಯ ಮಾತ್ರಾ ಮುಖ್ಯವಾಗಿರಬಹುದು.ಅದೇ ರೀತಿ ಟ್ಯಾಬ್ಲೆಟ್ ಸಾಧನ ಕೊಳ್ಳುವಾಗ ಯಾವ ಗುಣಗಳನ್ನು ಮುಖ್ಯವಾಗಿ ಗಮನಿಸಬಹುದು?ಸಾಧನದ ಬೆಲೆ,ಅದರ ಸ್ಕ್ರೀನ್‌ನ ಸ್ಪಷ್ಟತೆ,ಸ್ಪರ್ಶ ಸಂವೇದಿ ಇದೆಯೇ,ಸಂಸ್ಕಾರಕದ ವೇಗ ಮತ್ತು ಸ್ಮರಣಶಕ್ತಿ ಸಾಮರ್ಥ್ಯ ಇವುಗಳ ಕಡೆ ಹೆಚ್ಚಿನ ಗಮನ ಅಗತ್ಯ.ಇತರ ಗುಣಗಳು ಅವರವರ ಭಾವಕ್ಕೆ,ಭಕುತಿಗೆ ಸಂಬಂಧ ಪಟ್ಟುದು!ಸಂಸ್ಕಾರಕ ಕಡಿಮೆ ಗಿಗಾಹರ್ಟ್ಸ್‌ನದ್ದಾದರೆ,ಎರಡು ಕೋರ್‌ನ ಸಂಸ್ಕಾರಕವಾದರೆ ಒಳಿತು.ಯಾವ ಪೋರ್ಟುಗಳಿವೆ ಎನ್ನುವುದು ಮುಖ್ಯವಾಗುವುದು ಅವನ್ನು ಇತರ ಸಾಧನಗಳಿಗೆ ಸಂಪರ್ಕಿಸುವ ಉದ್ದೇಶವಿದ್ದರೆ ಮಾತ್ರಾ.
ಇನ್ನು ಲ್ಯಾಪ್‌ಟಾಪ್‌ನ ಮಟ್ಟಿಗೆ ಹೇಳುವುದಾದರೆ,ಅದರ ಭಾರ,ಬ್ಯಾಟರಿ ಅವಧಿಯ ಬಗ್ಗೆ ಹೆಚ್ಚಿನ ಒತ್ತು ಕೊಡಬೇಕು.ರಾಮ್ ಸ್ಮರಣಶಕ್ತಿ ಸಾಮರ್ಥ್ಯ,ಹಾರ್ಡ್‌ಡಿಸ್ಕ್ ಸಾಮರ್ಥ್ಯ,ಸಂಸ್ಕಾರಕದ ಗಿಗಾಹರ್ಟ್ಸ್-ಎಷ್ಟು ಕೋರ್ ಸಂಸ್ಕಾರಕ ಎನ್ನುವುದನ್ನೂ ಗಮನಿಸಿ-ಆದರೆ ಕ್ವಾಡ್‌ಕೋರ್ ಸಂಸ್ಕಾರಕಗಳು ಸಾಮಾನ್ಯ ಉಪಯೋಗಕ್ಕೆ ಅಗತ್ಯವಿಲ್ಲ.ಕಂಪ್ಯೂಟರ್ ಆಟಗಳನ್ನಾಡಲು ಬಯಸುವವರು ಗ್ರಾಫಿಕ್ಸ್ ರಾಂ ಮತ್ತು ಗ್ರಾಫಿಕ್ಸ್ ಕಾರ್ಡ್ ಬಗ್ಗೆ ಹೆಚ್ಚಿನ ಗಮನ ನೀಡಿದರೆ ಸಾಕು.ಇವು ಪ್ರಸಿದ್ಧ ಪಿಸಿವರ್ಲ್ಡ್ ಮ್ಯಾಗಜೀನ್‌ನ ಅನಿಸಿಕೆಗಳು.
ಪ್ರಿಂಟರುಗಳ ಮಟ್ಟಿಗೆ ಹೇಳುವುದಾದರೆ,ಮುದ್ರಣದ ಸ್ಪಷ್ಟತೆ,ಒಂದು ಕಾರ್ಟ್ರಿಜಿನಲ್ಲಿ ಮುದ್ರಿಸಬಹುದಾದ ಪ್ರತಿಗಳ ಸಂಖ್ಯೆ,ಕಾಗದದ ಎರಡೂ ಮಗ್ಗುಲುಗಳಲ್ಲಿ ಮುದ್ರಿಸಬಹುದೇ ಮತ್ತು ಮುದ್ರಣದ ವೇಗ ಇವುಗಳನ್ನು ಗಮನಿಸಿ.
ಸೆಲ್‌ಫೋನುಗಳ ತೆರೆಯ ಅಳತೆ,ಸ್ಪಷ್ಟತೆ,ಸ್ಪರ್ಶಸಂವೇದಿಯೇ ಅಲ್ಲವೇ ಮತ್ತು ಬ್ಯಾಟರಿ ಬಳಕೆಯ ಅವಧಿ ಇವು ಮುಖ್ಯವಾಗಿ ಗಮನಿಸ ಬೇಕಾದ ಅಂಶಗಳು.
--------------------------------------
ಪಿಯಾನೋ:ಗೂಗಲ್ ಡೂಡಲ್

ಗೂಗಲ್ ತನ್ನ ಶೋಧ ಪುಟದಲ್ಲಿ ಚಿತ್ರವನ್ನು ನೀಡುವ ಪದ್ಧತಿ ಹೊಂದಿರುವುದು ನಿಮಗೆ ಗೊತ್ತೇ ಇರುತ್ತದೆ.ಸಾಂದರ್ಭಿಕವಾಗಿ ಇದನ್ನು ರೂಪಿಸಿ,ಜನರ ಕುತೂಹಲ ಸೆಳೆಯಲು ಗೂಗಲ್ ಸಫಲವಾಗಿದೆ.ಕಳೆದ ಗುರುವಾರ ಪಿಯಾನೋವನ್ನು ದೂಡಲ್ ಆಗಿ ನೀಡಿತ್ತು. ಪಾಲ್ ಎನ್ನುವ ಕಲಾವಿದನ ಸ್ಮರಣೆಯಲ್ಲಿದನ್ನು ನೀಡಲಾಗಿತ್ತು.ಮತ್ತೂ ಒಂದು ವಿಶೇಷವೆಂದರೆ,ಅದನ್ನು ನುಡಿಸಲು ಸಾಧ್ಯವಾಗುವಂತೆ ಮಾಡಲಾಗಿತ್ತು.ಜನರು ತಾವು ನುಡಿಸಿದಾಗ ಬಂದ ಸಂಗೀತವನ್ನು ರೆಕಾರ್ಡ್ ಮಾಡುವ ಸವಲತ್ತೂ,ಕೆಲವು ದೇಶಗಳಲ್ಲಿ ಲಭ್ಯವಾಗಿತ್ತು.ಪಿಯಾನೋ ಬುಡದಲ್ಲಿರುವ ಕೀಲಿಮಣೆಯಲ್ಲಿ ಟೈಪಿಸಿದ ಪದಗಳಿಗನುಸಾರವಾಗಿ ಪಿಯಾನೋ ಸಂಗೀತ ಆಲಿಸಲೂ ಸಾಧ್ಯವಾಗಿತ್ತು.ಜನರ ಒತ್ತಾಯದ ಮೇರೆಗೆ ಇದನ್ನು ಮತ್ತೊಂದು ದಿನವೂ ಬದಲಿಸದೆ,ಉಳಿಸಲು ಗೂಗಲ್ ನಿರ್ಧರಿಸಿತು.ಶೋಧ ಪುಟಕ್ಕೆ ಜನರು ಅಂತರ್ಜಾಲವನ್ನು ಶೋಧಿಸಲು ಬರುವುದಷ್ಟೇ ಇಲ್ಲದೆ,ಡೂಡಲಿಗೋಸ್ಕರವೂ ಬರುವ ಮೂಲಕ ಜನಾಕರ್ಷಣೆಯಲ್ಲಿ ಇತರ ಶೋಧ ಪುಟಗಳನ್ನು ಸತತವಾಗಿ ಹಿಂದಿಕ್ಕಲು ಗೂಗಲ್ ಸಫಲವಾಗಿದೆ.ಮೈಕ್ರೋಸಾಫ್ಟಿನ ಬಿಂಗ್,ಯಾಹೂ ಶೋಧ ಅವಲಂಬಿಸುವ ಜನರ ಸಂಖ್ಯೆ ಬಹಳ ಕಡಿಮೆ.
-------------------------
ಸಿಟಿಗ್ರೂಪ್:ಕ್ರೆಡಿಟ್‌ಕಾರ್ಡ್ ಮಾಹಿತಿ ನಷ್ಟ
ಅಮೆರಿಕಾದ ಸಿಟಿಗ್ರೂಪ್ ಕಂಪೆನಿಯಲ್ಲಿದ್ದ ಎರಡು ಲಕ್ಷ ಕ್ರೆಡಿಟ್‌ಕಾರ್ಡುಗಳ ಖಾತೆ ಮತ್ತು ಮಿಂಚಂಚೆ ವಿಳಾಸ ಸೋರಿ ಹೋಗಿದೆ. ದಾಳಿಕೋರರು ಕಂಪೆನಿಯ ಅಂತರ್ಜಾಲ ತಾಣಕ್ಕೆ ಲಗ್ಗೆ ಹಾಕಿ,ಮಾಹಿತಿ ಕದಿಯಲು ಸಫಲರಾಗಿದ್ದಾರೆ.ಇನ್ನು ಗ್ರಾಹಕರಿಗೆ ಹೊಸ ಕಾರ್ಡು ಕೊಡುವ ವ್ಯವಸ್ಥೆ ಮಾಡಬೇಕಿದೆ.ಪಾಸ್‌ವರ್ಡ್,ಜನ್ಮದಿನಾಂಕಗಳಂತಹ ಮಾಹಿತಿ ದಾಳಿಕೋರರಿಗೆ ಸಿಕ್ಕಿಲ್ಲವೆನ್ನುವುದು ಸಮಾಧಾನದ ವಿಷಯ.ಇತ್ತೀಚೆಗೆ ಇಂತಹ ದಾಳಿಗಳು ಸಾಮಾನ್ಯವಾಗುತ್ತಿವೆ.ದೊಡ್ಡ ದೊಡ್ಡ ಕಂಪೆನಿಗಳೂ ದಾಳಿಕೋರರ ಹಾವಳಿಗೀಡಾಗುತ್ತಿರುವುದು ಕಳವಳದ ವಿಷಯ.ಕ್ಲೌಡ್‌ಕಂಪ್ಯೂಟಿಂಗ್‌ನಂತಹ ಸೇವೆಗಳು ಜನಪ್ರಿಯವಾಗುತ್ತಿರುವ ವೇಳೆ ಇಂತಹ ದಾಳಿಗಳು,ಈ ವ್ಯವಸ್ಥೆಗಳನ್ನು ಬಳಸುವುದು ಸುರಕ್ಷಿತವೇ ಎನ್ನುವ ಪ್ರಶ್ನೆಯನ್ನೂ ಹುಟ್ಟಿಹಾಕುತ್ತಿವೆ.
----------------------------------------------------------
ಎಚ್ ಪಿ ಟಚ್ ಟ್ಯಾಬ್ಲ್ಲೆಟ್
ಎಚ್ ಪಿ ಕಂಪೆನಿಯ ಸ್ಪರ್ಶಸಂವೇದಿ ಟ್ಯಾಬ್ಲೆಟ್ ಸಾಧನವು ಜುಲೈಯಲ್ಲಿ ಲಭ್ಯವಾಗಲಿದೆ.ವೈಫೈ,ಬ್ಲೂಟೂತ್,ಹದಿನಾರು ಮತ್ತು ಮೂವತ್ತೆರಡು ಜೀಬಿ-ಹೀಗೆ ಎರಡು ಸ್ಮರಣಸಾಮರ್ಥ್ಯದಲ್ಲಿ ಸಿಗುತ್ತದೆ.ಬೆಲೆ ಅಮೆರಿಕಾದಲ್ಲಿ ಐನೂರು ಡಾಲರುಗಳು ಮತ್ತು ಆರುನೂರು ಡಾಲರುಗಳು.ಎರಡು ಕೋರ್ ಸಂಸ್ಕಾರಕ ಇದರಲ್ಲಿದೆ.ಗೈರೋ,ಕಂಪಾಸ್,ಎಕ್ಸೆಲೋಮೀಟರುಗಳು ಇದರಲ್ಲಿರುವ ಅನ್ಯ ಯಂತ್ರಾಂಶಗಳಿವೆ.ಇದರ ಗಾತ್ರ ಐಪ್ಯಾಡ್ ಅಷ್ಟೇ ಇದೆ.ವೆಬ್-ಓಎಸ್ ಎನ್ನುವ ಆಪರೇಟಿಂಗ್ ವ್ಯವಸ್ಥೆ ಇದರಲ್ಲಿ ಬಳಕೆಯಾಗಿದೆ-ಗೂಗಲ್‌ನ ಆಂಡ್ರಾಯಿಡ್ ಅಲ್ಲವೆನ್ನುವುದು ಗಮನಿಸ ಬೇಕಾದ ವಿಷಯ.ಮೊಟೊರೊಲಾ,ರಿಮ್ ಕಂಪೆನಿಗಳ ಟ್ಯಾಬ್ಲೆಟ್‌ಗಳಿಗೆ ಐಪ್ಯಾಡ್‌ಗೆ ದೊರಕಿದ ಸ್ವಾಗತ ಲಭ್ಯವಾಗದೆ,ಸಪ್ಪೆ ಪ್ರತಿಕ್ರಿಯೆ ಸಿಕ್ಕಿದ ಹಿನ್ನೆಲೆಯಲ್ಲಿ ಎಚ್ ಪಿಯ ಟ್ಯಾಬ್ಲೆಟಿಗೆ ಎಂತಹ ಸ್ವಾಗತ ಸಿಗಲಿದೆ ಎನ್ನುವುದು ತಿಳಿಯಲು ಕಾದು ನೋಡಬೇಕು.
---------------------------------------
ತುಷಾರ:ವಾರ್ಷಿಕ  ಚಂದಾ ಗೆಲ್ಲಿ!
ಈ ಪ್ರಶ್ನೆಗಳಿಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಅಮೆರಿಕಾದ ಮೇರಿಲ್ಯಾಂಡ್‌ನಲ್ಲಿರುವ ಶಾಮಲಾ ಬನವತಿ.
*ಜೈವಿಕ ಚಹರೆ ಮೂಲಕ ಯಾವುದೇ ವ್ಯವಸ್ಥೆಗೆ  ಲಾಗಿನ್ ಆಗಲು ಬಳಸುವ ವಿವಿಧ ಚಹರೆಗಳು ಯಾವುವು?
*ಇವುಗಳ ಬಳಕೆಯಲ್ಲಿ ಸಮಸ್ಯೆಗಳಿವೆಯೇ?
(ಉತ್ತರವನ್ನು nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ:NS35 ನಮೂದಿಸಿ.)
ಕಳೆದ ವಾರದ ಬಹುಮಾನಿತ ಉತ್ತರ:
*ಕನ್ನಡದ ಮಕ್ಕಳ ಅಂತರ್ಜಾಲತಾಣದ ಬಗ್ಗೆ ಬರೆದು,http://www.kannadalibrary.com/ ಮತ್ತು http://www.chandamama.com ತಾಣಗಳ ವಿಳಾಸ ನೀಡಿ,ಬಹುಮಾನ ಗೆದ್ದವರು ಪ್ರೀತಮ್,ದೇಲಂಪಾಡಿ.ಅಭಿನಂದನೆಗಳು.ಹಾಗೆಯೇ http://kindarajogi.comನ್ನೂ ನೋಡಿ.
Udayavani
*ಅಶೋಕ್‌ಕುಮಾರ್ ಎ

Monday, June 06, 2011

ಐಕ್ಲೌಡ್:ಆರಂಭದಲ್ಲಿ ಉಚಿತ

ಐಕ್ಲೌಡ್:ಆರಂಭದಲ್ಲಿ ಉಚಿತ
ಆಪಲ್ ಕೂಡಾ ಕ್ಲೌಡ್ ಕಂಪ್ಯೂಟಿಂಗ್ ವ್ಯವಹಾರಕ್ಕಿಳಿಯಲಿದೆ.ಐಕ್ಲೌಡ್ ಎನ್ನುವ ಹೆಸರಿನಲ್ಲಿ ಸೇವೆ ಲಭ್ಯವಾಗಲಿದೆ.ಮೊದಲಿಗಿದು ಉಚಿತವಾಗಿ ಲಭ್ಯವಾದರೂ,ಜನಪ್ರಿಯವಾದ ನಂತರ ಪಾವತಿ ಸೇವೆಯಾಗಲಿದೆ.ಐಫೋನ್ ಬಳಕೆದಾರರು ತಮ್ಮ ಸಂಗೀತ ಕಡತಗಳನ್ನು ಆನ್‌ಲೈನ್ ಬಳಕೆಗೆ ಐಕ್ಲೌಡ್ ಸ್ಮರಣಕೋಶದಲ್ಲಿ ಸಂಗ್ರಹಿಸಿಡಬಹುದು.ಹೀಗೆ ಮಾಡಿದರೆ,ಸ್ಮಾರ್ಟ್‌ಫೋನಿನ ಸ್ಮರಣಸಾಮರ್ಥ್ಯದ ಬಳಕೆ ಕಡಿಮೆಯಾಗುತ್ತದೆ.ಜತೆಗೇ ಆಪಲ್ ಸೋನಿ ಮ್ಯುಸಿಕ್ ಕಂಪೆನಿ,ವಾರ್ನರ್ ಗ್ರೂಪ್,ಇ ಎಂ ಐ ಮ್ಯೂಸಿಕ್ ಗ್ರೂಪ್ ಮತ್ತು ಯುನಿವರ್ಸಲ್ ಮ್ಯೂಸಿಕ್ ಗ್ರೂಪ್‌ಗಳ ಜತೆ ಒಪ್ಪಂದಕ್ಕೆ ಬಂದು,ಅವುಗಳ ಸಂಗೀತ ಆಲ್ಬಮುಗಳನ್ನು ಬಳಕೆದಾರರಿಗೆ ಒದಗಿಸಿದಾಗ ಸಂಗೀತ ಆಲ್ಬಮುಗಳ ಬಳಕೆಗೆ ವಿಧಿಸಿದ ಚಂದಾಹಣದಲ್ಲಿ ಯಾರ ಪಾಲು ಎಷ್ಟೆಷ್ಟು ಎಂಬ ತೀರ್ಮಾನ ತೆಗೆದುಕೊಂಡಿದೆ.ಅಲ್ಲದೆ ಮುಂದೆ ವಾರ್ಷಿಕ ಇಪ್ಪತ್ತೈದು ಡಾಲರುಗಳ ಕ್ಲೌಡ್ ಸೇವೆ ದರವನ್ನೂ ವಿಧಿಸುವ ಮುನ್ಸೂಚನೆಯನ್ನು ನೀಡಿದೆ.ನಿಧಾನವಾಗಿ ವಿಡಿಯೋ,ಧಾರಾವಾಹಿ,ಚಲನಚಿತ್ರಗಳನ್ನೂ ಆನ್ಲೈನಿನಲ್ಲಿ ಬಳಕೆಗೆ ಒದಗಿಸುವ ವ್ಯವಹಾರ ಮಾದರಿಯನ್ನು ತನ್ನದಾಗಿಸಿಕೊಳ್ಳುವುದು ಆಪಲ್ ಯೋಜನೆ.ಇದೇ ವೇಳೆ ಐಬಿಎಮ್ ಕಂಪೆನಿಯೂ ಕ್ಲೌಡ್ ಸೇವೆಗಳನ್ನು ಕೊಡಲಾರಂಭಿಸಿದೆ.ಸ್ಮಾರ್ಟ್‌ಕ್ಲೌಡ್ ಎಂಬ ಹೆಸರಿನ ಕ್ಲೌಡ್‌ಸೇವೆಗಳಲ್ಲಿ,ಬಳಕೆಗನುಸಾರವಾಗಿ ದರವನ್ನು ನೀಡಬೇಕಾಗುತ್ತದೆ.ಮೂಲಸೌಕರ್ಯಗಳು ಸೇವೆಯ ಆಧಾರದಲ್ಲಿ ಸ್ಮಾರ್ಟ್‌ಕ್ಲೌಡಿನಲ್ಲಿ ಸಿಗಲಿದೆ.
--------------------------------------------
ನೋಕಿಯಾ:ಜೋಡಿ ಸಿಮ್ ಹ್ಯಾಂಡ್‌ಸೆಟ್‌ಗಳು
ಕಳೆದವರ್ಷ ಮಾರಾಟವಾದ ಹ್ಯಾಂಡ್‌ಸೆಟ್‌ಗಳಲ್ಲಿ ಮೂರನೇ ಒಂದು ಭಾಗ ಜೋಡಿ ಸಿಮ್ ಬಳಕೆಗೆ ಅನುವಾಗುವ ಹ್ಯಾಂಡ್‌ಸೆಟ್‌ಗಳಾಗಿದ್ದುವು.ಎಸ್ಸೆಮ್ಮೆಸ್,ಧ್ವನಿ ಕರೆಗಳಿಗಾಗಿ ಒಂದು ಸಿಮ್,ದತ್ತಾಂಶ ಸೇವೆಗಳಿಗೆ ಇನ್ನೊಂದು ಸಿಮ್-ಹೀಗೆ ಜನರು ಬೇರೆ ಸಿಮ್‌ಗಳನ್ನು ಅವಲಂಬಿಸುವ ಈ ದಿನಗಳಲ್ಲಿ ಇಂತಹ ಜೋಡಿ ಸಿಮ್‌ಗಳಿಗೆ ಹೆಚ್ಚಿನ ಬೇಡಿಕೆ ಇರುವುದನ್ನು ಮನಗಂಡು ಹ್ಯಾಂಡ್‌ಸೆಟ್ ತಯಾರಕರು ಇಂತಹ ಸೆಟ್‌ಗಳ ತಯಾರಿಕೆಗೆ ಗಮನ ಕೊಡಲಾರಂಭಿಸಿದ್ದಾರೆ.ಇಗ ನೋಕಿಯಾ ಕೂಡಾ ಇಂತಹ ಸೆಟ್‌ಗಳನ್ನು ಭಾರತದಲ್ಲೂ  ಮಾರಲಾರಂಭಿಸಿದೆ.ಎರಡು ಸಾವಿರ ಮತ್ತು ಮೂರು ಸಾವಿರ ಬೆಲೆಯ ಸೆಟ್‌ಗಳನ್ನು ಮಾರಾಟಕ್ಕೆ ಒದಗಿಸಲಾಗುತ್ತಿದೆ.ಅತ್ತ ಟಾಟಾ ಡೊಕೊಮೋ,ಮೂರು ವಿಧದ ಜಾಲಗಳಲ್ಲಿ ಅಂತರ್ಜಾಲ ಸೇವೆಗಳನ್ನು ಬಳಸಲು ಸಾಧ್ಯವಾಗಿಸುವ ಸಾಧನವನ್ನು ಒದಗಿಸುತ್ತಿದೆ.ಆರು ಸಾವಿರ ರೂಪಾಯಿ ಬೆಲೆಯ ಈ ಸಾಧನವನ್ನು ಟಾಟಾ ಡೊಕೊಮೋದ ತ್ರೀಜಿ ಜಾಲಗಳಲ್ಲಿ,ಅದಿಲ್ಲವಾದೆಡೆ ಸಿಡಿಎಂಎ ಅಥವಾ ವೈಫೈ ಜಾಲಗಳಿಂದ ಅಂತರ್ಜಾಲ ಸೇವೆಗಳನ್ನು ಪದೆಯಲು ಅನುಕೂಲಕರವಾಗಿದೆ.ತ್ರೀಜಿ ಜಾಲದಲ್ಲಿ ಏಳು ಎಂಬಿಪಿಎಸ್ ವೇಗದ ದತ್ತಾಂಶ ಬಳಕೆಯೂ ಸಾಧ್ಯ.ತ್ರೀಜಿ ಇಲ್ಲವಾದರೆ ದತ್ತಾಂಶ ಬಳಕೆಯ ವೇಗ ತಗ್ಗುತ್ತದೆ.ತಿಂಗಳಿಗೆ ಏಳುನೂರೈವತ್ತು ರೂಪಾಯಿಗೆ ಎರಡು ಜೀಬಿ,ಸಾವಿರ ರೂಪಾಯಿಗೆ ಐದು ಜೀಬಿ ಬಳಕೆ ಮಾಡಬಹುದು.
----------------------------------------------
ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಫೋನು ಬೇಕೇ?

ಹ್ಯಾಂಡ್‌ಸೆಟ್ ಅಗ್ಗದಲ್ಲಿ ಬೇಕಾದರೆ,ಮೊಬೈಲ್ ಸೇವೆಗೆ ಕಂಪೆನಿಯೊಂದರ ಜತೆ ಒಪ್ಪಂದ ಮಾಡಿಕೊಂಡರಾಯಿತು.ಹೀಗೆ ಮಾಡಿದರೆ,ಹ್ಯಾಂಡ್‌ಸೆಟ್‌ಗೆ ಬೇಕಾಗಿ,ಕಂಪೆನಿಯ ಮೊಬೈಲ್ ಸೇವೆಗೆ ನಿಗದಿತ ಅವಧಿಯವರೆಗೆ ಮುಂದುವರಿಸಬೇಕಾಗುತ್ತದೆ.ಮೊಬೈಲ್ ಸಂಖ್ಯೆ ವರ್ಗಾವಣೆಯ ಮೂಲಕ ಸೇವಾದಾತೃವನ್ನು ಬದಲಿಸುವಂತಿಲ್ಲ.ಅಮೆರಿಕಾದ ಟಿ-ಮೊಬೈಲ್ ಇದೀಗ ಎಂಭತ್ತು ಡಾಲರುಗಳಷ್ಟು ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಪೋನನ್ನು ಒದಗಿಸಿ,ಚಂದಾದಾರರನ್ನು ಆಕರ್ಷಿಸಲು ಯತ್ನಿಸುತ್ತಿದೆ.ಸ್ಯಾಮ್‌ಸಂಗ್ ಕಂಪೆನಿಯ ಎಕ್ಸಿಬಿಟ್ ಎಂಬ ಸ್ಮಾರ್ಟ್‌ಪೋನುಗಳು ಟಿ-ಮೊಬೈಲ್ ಮೊಬೈಲ್ ಸೇವೆಯೊಂದಿಗೆ ಬಳಕೆದಾರರಿಗೆ ಸಿಗಲಿದೆ.ಎರಡು ವರ್ಷದ ಮೊಬೈಲ್ ಸೇವೆ ಕಂಪೆನಿಯಿಂದಲೇ ಪಡೆಯಬೇಕು.ಸ್ಮಾರ್ಟ್‌ಪೋನಿಗೆ ಮೊಬೈಲ್ ಸೇವಾದಾತೃ ಸಬ್ಸಿಡಿ ನೀಡುತ್ತದೆ,ಹಾಗಾಗಿ ಹ್ಯಾಂಡ್‌ಸೆಟ್ ತಯಾರಿಸಿದ ಕಂಪೆನಿಗೆ ನಷ್ಟವಾಗದು.ಜತೆಗೆ ಮಾರಾಟಕ್ಕೆ ಹೆಚ್ಚು ತಲೆಬಿಸಿಯೂ ಮಾಡಿಕೊಳ್ಳಬೇಕಿಲ್ಲ.
-----------------------------------------------
ವಿಂಡೋಸ್8
ಮೈಕ್ರೋಸಾಫ್ಟ್ ತನ್ನ ಹೊಸ ಕಂಪ್ಯೂಟರ್ ಆಪರೇಟಿಂಗ್ ವ್ಯವಸ್ಥೆ ಹೇಗಿದೆ ಎನ್ನುವುದರ ಗುಟ್ಟು ಬಿಟ್ಟುಕೊಟ್ಟಿದೆ.http://www.youtube.com/watch?v=p92QfWOw88I ವಿಳಾಸದ ಯುಟ್ಯೂಬ್ ತುಣುಕನ್ನು ನೋಡಿದರೆ ಇದರ ಮುನ್ನೋಟ ನಿಮಗೂ ಸಿಗುತ್ತದೆ.ಮುಂದಿನ ಆಪರೇಟಿಂಗ್ ವ್ಯವಸ್ಥೆಯು ಸ್ಪರ್ಶ ಸಂವೇದಿ ಕಂಪ್ಯೂಟರ್ ತೆರೆಗಳಿಗೆ ಸೂಕ್ತವಾದದ್ದು.ಈಗಿರುವ ಕಂಪ್ಯೂಟರ್ ಬಳಕೆಯ ಇಂಟರ್‌ಪೇಸ್ ಸಂಪೂರ್ಣ ಹೊಸತನದಿಂದ ಕೂಡಿದೆ.ಈಗದು ಸ್ಮಾರ್ಟ್‌ಫೋನ್ ಅಥವಾ ಸೂಪರ್‌ಪೋನ್‌ನ ನೋಟವನ್ನು ಕೊಡುತ್ತದೆ.ಸ್ಪರ್ಶದ ಮೂಲಕ ಬೇಕಾದ ಐಕಾನ್ ಸ್ಪರ್ಶಿಸಿ,ಬಳಕೆಗೆ ಅನುವು ನೀಡಲಾಗಿದೆ.ಸೂಪರ್‌ಫೋನ್,ಟ್ಯಾಬ್ಲೆಟ್,ಲ್ಯಾಪ್‌ಟಾಪ್ ಹೀಗೆ ಎಲ್ಲದಕ್ಕೂ ಸರಿಹೊಂದುವ ರೀತಿಯಲ್ಲಿ ವಿಂಡೋಸ್ ಎಂಟನ್ನು ರೂಪಿಸಿರುವುದು ಸ್ಪಷ್ಟ.
-----------------------
ಶೋಧ ಮತ್ತು ತಪ್ಪು ಸ್ಪೆಲಿಂಗ್:
ಅಂತರ್ಜಾಲದಲ್ಲಿ ಯಾವುದಾದರೂ ಪದಗುಚ್ಛದ ಮೇಲೆ ಶೋಧ ನಡೆಸುವಾಗ,ತಪ್ಪು ಸ್ಪೆಲಿಂಗ್ ಟೈಪಿಸುವುದನ್ನು ನಾವೆಲ್ಲಾ ಮಾಡುತ್ತೇವೆ.ಮೊದಲಾದರೆ,ಅಂತಹ ಪದವಿಲ್ಲ ಎಂಬ ಫಲಿತಾಂಶ ಮಾತ್ರಾ ಬರುತ್ತಿತ್ತು.ಈಗ ಹೆಚ್ಚಿನ ಶೋಧ ತಾಣಗಳು,ತಾವು ಹುಡುಕುತ್ತಿರುವ ಪದ ಇದುವೇ ಎಂದು ಸೂಚಿಸುವ ಸೇವೆ ಒದಗಿಸುತ್ತಿವೆ.ಜನಪ್ರಿಯ ಶೋಧ ಪದಗಳ ಪಟ್ಟಿಯನ್ನು ಉಳಿಸುವ ಮೂಲಕವೂ ಇಂತಹ ಸಹಾಯ ನೀಡಲು ಸಾಧ್ಯವಾಗುತ್ತದೆ.ಜತೆಗೆ ಆರ್ಟಿಫೀಶಿಯಲ್ ಇಂಟಲಿಜನ್ಸ್ ಹೊಂದಿರುವ ತಂತ್ರಾಂಶದ ಮೂಲಕವೂ ಸಹಾಯ ಒದಗಿಸಬಹುದು.ಯಾಹೂ ತನ್ನ ತಾಣದಲ್ಲಿ ಹೆಚ್ಚು ಜನರು ಸ್ಪೆಲಿಂಗ್ ತಪ್ಪು ಮಾಡುವ ಪದಗಳನ್ನು ಪ್ರಕಟಿಸಿದೆ!
---------------------------------------
ತುಷಾರ:ವಾರ್ಷಿಕ  ಚಂದಾ ಗೆಲ್ಲಿ!
ಈ ಪ್ರಶ್ನೆಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಅಮೆರಿಕಾದ ಮೇರಿಲ್ಯಾಂಡ್‌ನಲ್ಲಿರುವ ಶಾಮಲಾ ಬನವತಿ.
(ಉತ್ತರವನ್ನು nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ:NS34 ನಮೂದಿಸಿ.)
*ಕನ್ನಡದ ಮಕ್ಕಳ ಅಂತರ್ಜಾಲತಾಣದ ಬಗ್ಗೆ ಬರೆದು,ತಾಣದ ವಿಳಾಸ ನೀಡಿ.
ಕಳೆದ ವಾರದ ಬಹುಮಾನಿತ ಉತ್ತರ:
*ಭ್ರಷ್ಟಾಚಾರ ನಿಯಂತ್ರಣ ಅಥವಾ ಹೋರಾಟಕ್ಕೆ ಮೊಬೈಲ್ ಸಹಾಯ ಪಡೆಯಲು ಅದರಲ್ಲಿ ಒಂದು ತಂತ್ರಾಂಶ ಅನುಸ್ಥಾಪಿಸಬಹುದು.ನಿಗದಿತ ಕೀಲಿ ಒತ್ತಿದರೆ,ತಂತ್ರಾಂಶ ಚಾಲೂ ಆಗಿ ನಿಗದಿತ ದೂರವಾಣಿ ಸಂಖ್ಯೆಗೆ ಕರೆಹೋಗುತ್ತದೆ.ಅಲ್ಲಿ ಕರೆಯನ್ನು ದಾಖಲಿಸುವ ವ್ಯವಸ್ಥೆ ಏರ್ಪಡಿಸಬೇಕು.ಲಂಚಕ್ಕೆ ಬೇಡಿಕೆಯಿಡುವ ಅಧಿಕಾರಿಯಲ್ಲಿ ಮಾತನಾಡುವಾಗ,ಕೀಲಿ ಒತ್ತಿದರೆ,ಮಾತುಗಳು ದಾಖಲಿತವಾಗುತ್ತಿರುತ್ತದೆ.ತಂತ್ರಾಂಶ ಸ್ವಯಂಚಿತ್ರಗಳನ್ನು ಸೆರೆಹಿಡಿಯುವಂತೆಯೂ ತಂತ್ರಾಂಶವನ್ನು ರೂಪಿಸಬಹುದು.
ಬಹುಮಾನ ಗೆದ್ದವರು ಅಂಕಿತ್,ಬೆಂಗಳೂರು.ಅಭಿನಂದನೆಗಳು.
--------------------------------------------
ಬ್ಲಾಗೋಕ್ತಿಗಳು
*ಬೆಲೆ ಇಳಿಸಲು UPAಯ :ಎಲ್ಲರ UPAವಾಸ   (http://www.anveshi.net)
*ಹುಡುಗ ಹುಡುಗಿಯ ಮುದ್ದು ಮುಖಕ್ಕೆ ಸೋತು,ಆಕೆ ತನಗೆ ಬೇಕೆನ್ನುವುದನ್ನು ಫೇಸ್‌ಬುಕಿಂಗ್ ಎನ್ನಬಹುದೇ?(http://ganakindi.blogspot.com)


Udayavani
*ಅಶೋಕ್‌ಕುಮಾರ್ ಎ