Monday, August 29, 2011

ಭ್ರಷ್ಟಾಚಾರ ಭೂತ:ತಡೆಯುವುದೇ ಪರಿಹಾರ

ಭ್ರಷ್ಟಾಚಾರ ಭೂತ:ತಡೆಯುವುದೇ ಪರಿಹಾರ
ಭ್ರಷ್ಟಾಚಾರ ದೇಶದ ಮಹಾಸಮಸ್ಯೆಯೆನ್ನುವುದರಲ್ಲಿ ಎರಡು ಮಾತಿಲ್ಲ.ಅಣ್ಣಾ ಹಜಾರೆಯಂತವರು ತಮ್ಮ ಇಳಿವಯಸ್ಸಿನಲ್ಲಿ ಇದರ ವಿರುದ್ಧ ಸಾರಿರುವ ಯುದ್ಧಕ್ಕೆ ಎಲ್ಲೆಡೆ ಜನಬೆಂಬಲ ದೊರಕಿರುವುದು ಸಂತಸದ ವಿಷಯ.ಜನಲೋಕಪಾಲ ಅಥವಾ ಸರಕಾರದ ಲೋಕಪಾಲ ಮಸೂದೆಗಳ ಜತೆಗೆ ಇತರ ಸಲಹೆಗಳನ್ನೂ ಗಮನದಲ್ಲಿರಿಸಿ,ಶಕ್ತಿಶಾಲಿ ಶಾಸನವನ್ನು ರೂಪಿಸುವ ಸಮಯ ಬಂದಿದೆ.ಆದರೆ ಇಂತಹ ಶಾಸನಗಳು ಭ್ರಷ್ಟಾಚಾರ ನಡೆದ ಬಳಿಕ ತಪ್ಪಿತಸ್ಥರ ದಂಡನೆಯತ್ತಲೇ ಹೆಚ್ಚು ಗಮನವೀಯುತ್ತವೆ.ನಿಜವಾಗಿಯೂ ಬೇಕಾಗಿರುವುದು ಪಾರದರ್ಶಕ ವ್ಯವಸ್ಥೆಯ ಅನುಷ್ಠಾನ.ಆ ಮೂಲಕ ಭ್ರಷ್ಟಾಚಾರ ಎಸಗುವುದನ್ನೇ ನಿಲ್ಲಿಸುವುದು,ಹೆಚ್ಚು ಪರಿಣಾಮಕಾರಿಯೆನಿಸುವುದಿಲ್ಲವೇ?ರೋಗ ಬಂದ ಮೇಲೆ ಪರಿಹಾರಕ್ಕಿಂತ,ಬರದಂತೆ ತಡೆಯುವುದೊಳಿತು ಎನ್ನುವುದನ್ನು ಭ್ರಷ್ಟಾಚಾರದ ಬಗ್ಗೆಯೂ ಹೇಳಬಹುದು.ಹೀಗೆ ಮಾಡಲು ತಂತ್ರಜ್ಞಾನದ ನೆರವು ಅಗತ್ಯವಾಗಿದೆ.ಜನರು ಆನ್‌ಲೈನ್ ಮೂಲಕ ಸರಕಾರಿ ಕಚೇರಿಗಳ ಜತೆ ವ್ಯವಹರಿಸುವಂತಾದರೆ ಅವರನ್ನು ಸತಾಯಿಸುವ ಅಧಿಕಾರಿಗಳ ಪ್ರವೃತ್ತಿಗೆ ಹಿನ್ನಡೆಯಾಗದಿರದು.ಅರ್ಜಿ ಸಲ್ಲಿಸಿ,ಜತೆಗೆ ಸಲ್ಲಿಸಬೇಕಾದ ದಾಖಲೆಗಳ ವಿವರಗಳು ಅಂತರ್ಜಾಲದಲ್ಲಿ ಲಭ್ಯವಾದರೆ,ಆಗ ಜನರು ಮಧ್ಯವರ್ತಿಗಳ ಶರಣು ಹೋಗಬೇಕಿಲ್ಲ.ಅನಿಲ ಸಂಪರ್ಕ ಸಕ್ರಮಗೊಳಿಸಲು ದಾಖಲೆಗಳನ್ನು ಸ್ಕ್ಯಾನ್ ಮಾಡಿ,ಅಪ್ಲೋಡ್ ಮಾಡಿದಂತೆ ಇತರ ವ್ಯವಹಾರಗಳಲ್ಲಿಯೂ ಆನ್‌ಲೈನ್ ಅರ್ಜಿ ಸಲ್ಲಿಕೆ ಜಾರಿಗೆ ಬರಬೇಕು.ಅರ್ಜಿಗಳ ವಿಲೇವಾರಿಯನ್ನು ಅಧಿಕಾರಿಗಳು ಮಾಡಿ,ಕ್ರಮ ತೆಗೆದುಕೊಳ್ಳಲು ಸಮಯದ ಮಿತಿ ಹಾಕುವುದು ಮಾಡಿದರೆ,ಆಗ ಭ್ರಷ್ಟಾಚಾರ ಒಂದು ಮಿತಿಯಲ್ಲಿರುವಂತೆ ಮಾಡುವುದು ಸಾಧ್ಯ.ಹಾಗೆಯೇ ಗಣಿ,ಪರವಾನಗಿ,ವಿವಿಧ ಯೋಜನೆಗಳ ಜಾರಿಗೆ ಟೆಂಡರು ಪ್ರಕ್ರಿಯೆಗಳನ್ನು ಆನ್‌ಲೈನ್ ಮೂಲಕವೇ ನಡೆಸಿ,ವ್ಯವಸ್ಥೆಯನ್ನು ಪಾರದರ್ಶಕವಾಗಿಸಬಹುದು.ಸರಕಾರಿ ಕಚೇರಿಗಳಿಗೆ ಜನರು ಹೋಗದೇ ಕೆಲಸ ಮಾಡಿಸಿಕೊಳ್ಳುವಂತಾಗುವುದು,ಭ್ರಷ್ಟಾಚಾರ ತಡೆಗೆ ಅಗತ್ಯವೆನಿಸುತ್ತದೆ.
ಆಸ್ತಿ ನೋಂದಾವಣೆಯಂತಹ ಕಪ್ಪುಹಣ ಚಲಾವಣೆಗೆ ಕಾರಣವಾಗುವ ವ್ಯವಹಾರಗಳಲ್ಲಿ ಅಕ್ರಮ,ಭ್ರಷ್ಟಾಚಾರ ತಡೆಗೆ ಆಧಾರ್ ಗುರುತು ಪತ್ರದಂತಹ ಯೋಜನೆ ಬಹಳಷ್ಟು ಸಹಕಾರಿಯಾಗುವುದರಲ್ಲಿ ಅನುಮಾನವಿಲ್ಲ.ಜನರ ಬ್ಯಾಂಕ್ ಖಾತೆಗಳು,ದೊಡ್ಡ ಮೊತ್ತದ ಹಣಕಾಸು ವ್ಯವಹಾರಗಳು ಆಧಾರ್ ಮೂಲಕ,ಕಣ್ಣಿಡಲು ಸಾಧ್ಯವಾದರೆ,ತೆರಿಗೆ ತಪ್ಪಿಸುವುದು,ತಪ್ಪು ಮಾಹಿತಿ ನೀಡುವುದು ಮತ್ತು ಬೇನಾಮಿ ವ್ಯವಹಾರಗಳನ್ನು ತಡೆಯುವಂತಾದರೆ,ಭ್ರಷ್ಟತೆ ಕಡಿಮೆಯಾಗದೆ ಇರುತ್ತದೆಯೇ?ಮಾಹಿತಿ ಹಕ್ಕು,ಆಧಾರ್ ಗುರುತಿನ ಚೀಟಿ ನೀಡಿಕೆಯಂತಹ ಯೋಜನೆಗಳ ಜಾರಿಯನ್ನು ಇದೀಗಲೇ ಮಾಡಿರುವ ಸರಕಾರದ ಕ್ರಮಗಳನ್ನು ಜನರು ಬೆಂಬಲಿಸಬೇಕು.ಶಾಸನಗಳು ಲಂಚಾವತಾರದ ತಡೆಗೆ ಸಫಲವಾಗಬಹುದು ಎನ್ನುವಂತಹ ಯೋಚನೆ ಅವಾಸ್ತವ.
ಅಣ್ಣಾ ಹಜಾರೆಯವರ ಬೆಂಬಲಕ್ಕೆ ದೇಶದ ಜನರು ನಿಂತಿರುವಾಗ,ನಮ್ಮ ಶಾಸಕರು ಮತ್ತು ಸಂಸದರು ಭ್ರಷ್ಟರನ್ನು ಬೆಂಬಲಿರಿಸುವ ಪ್ರವೃತ್ತಿಯನ್ನು ಗಮನಿಸಿದಿರಾ?ಆಂಧ್ರದ ಜಗನ್‌ಮೋಹನ್ ರೆಡ್ಡಿ ಅವರ ಆಸ್ತಿ ಅಕ್ರಮವೇ ಎಂಬ ತನಿಖೆಯನ್ನು ವಿರೋಧಿಸಿ,ಆಂಧ್ರದಲ್ಲಿ ಶಾಸಕರುಗಳು ಆಳುವ ಪಕ್ಷಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದಾರೆ.ಆಂಧ್ರದ ಮತದಾರರುಗಳೂ ರೆಡ್ಡಿಯ ಬೆಂಬಲಕ್ಕೆ ನಿಂತಿರುವುದು ಉಪಚುನಾವಣೆಗಳ ಫಲಿತಾಂಶದಿಂದ ವೇದ್ಯ.ಕರ್ನಾಟಕದಲ್ಲೂಇದೇ ಸನ್ನಿವೇಶ ಇದುವರೆಗೂ ಇತ್ತು.
-------------------------------------------
ಭಾರತೀಯರಿಗೆ ಎಮೈಟಿ ಗೌರವ
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ನಾವೀನ್ಯವುಳ್ಳ ಸಂಶೋಧನೆಗಾಗಿ ನಾಲ್ವರು ಭಾರತೀಯರಿಗೆ ಅಮೆರಿಕಾದ ಮೆಸಾಚುಸೆಟ್ಸ್ ತಾಂತ್ರಿಕ ಸಂಸ್ಥೆ ಗೌರವಿಸಿದೆ.ಚೆನ್ನೈನ ಅದಿತಿ ನಾರಾಯಣ್ ಅವರಿಗೆ ಧ್ವನಿಸಂಯೋಜನೆಗೆ ಸಂಬಂಧಿಸಿದ ಸಂಶೋಧನೆಗೆ ಪ್ರಶಸ್ತಿ ನೀಡಿದೆ.ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಇವರು ಸಂಶೋಧನೆ ಕೈಗೊಂಡಿದ್ದಾರೆ.ಸದ್ಯ ಯಾಲೆ ವಿಶ್ವವಿದ್ಯಾಲಯದಲ್ಲಿರುವ ಐಶ್ವರ್ಯ ರತನ್ ಅವರಿಗೆ ಕಾಗದದ ದಾಖಲೆಗಳನ್ನು ಡಿಜಿಟಲ್ ಮಾಧ್ಯಮಕ್ಕೆ ಬದಲಿಸುವ ತಂತ್ರಜ್ಞಾನಕ್ಕಾಗಿ ಪ್ರಶಸ್ತಿ ಬಂದಿದೆ.ಭಾರತೀಯ ಮೂಲದ,ಭಾಸ್ಕರ್ ಕೃಷ್ಣಮಾಚಾರಿ ಮತ್ತು ಪ್ರಿಯಾ ಸರ್ಕಾರ್ ಪ್ರಶಸ್ತಿ ಪಡೆದ ಇನ್ನೀರ್ವರು.
----------------------------------------------
ನೋಕಿಯಾ:ಸಿಂಬಿಯನ್ ಅಣ್ಣಾ
ನೋಕಿಯಾ ಕಂಪೆನಿಯು ತನ್ನ ಹ್ಯಾಂಡ್‌ಸೆಟ್‌ನ ಆಪರೇಟಿಂಗ್ ವ್ಯವಸ್ಥೆಯನ್ನು ಸಿಂಬಿಯನ್ ಅಣ್ಣಾ ಎಂದು ಕರೆದಿದೆ.ಇದು ಅಣ್ಣಾ ಹಜಾರೆಯವರ ಹೆಸರನ್ನು ಸ್ಮಾರ್ಟ್‌ಪೋನ್ ಮಾರಾಟ ಹೆಚ್ಚಿಸಲು ನೋಕಿಯಾ ಇಟ್ಟಿರುವ ಹೆಜ್ಜೆ ಎಂದು ಮಾಧ್ಯಮಗಳ ಟೀಕೆಯನ್ನು ನೋಕಿಯಾ ಒಪ್ಪಿಲ್ಲವೆನ್ನಿ.ಅಣ್ಣಾ ಹಜಾರೆಯವರ ಚಳುವಳಿಯನ್ನು ಸಾಧನಗಳ ಜಾಹೀರಾತಿನಲ್ಲಿ ಬಳಸುವ ಪ್ರಕ್ರಿಯೆ ಆನ್‌ಲೈನ್ ಆಟದ ಜಾಹೀರಾತಿನಲ್ಲಿಯೂ ಬಳಕೆಯಾಗಿದೆ.
ಅಂದ ಹಾಗೆ ಮೊಬೈಲ್ ಫೋನು ಸಂಪರ್ಕಗಳ ಸಂಖ್ಯೆಯಲ್ಲಿ ಏರುಗತಿ ಮಂದವಾಗಿದೆ.ಜುಲೈ ತಿಂಗಳಲ್ಲಿ ಏಳೂವರೆ ದಶಲಕ್ಷ ಗ್ರಾಹಕರಷ್ಟೇ ಜಿ ಎಸ್ ಎಂ ಸೇವೆಗಳಿಗೆ ಸೇರ್ಪಡೆಯಾಗಿದ್ದಾರೆ.2007ರ ನಂತರ ಮೊದಲ ಬಾರಿಗೆ ಈ ಸಂಖ್ಯೆ ಇಷ್ಟು ಕಡಿಮೆಯಾಗಿದೆ.ಕರೆಗಳ ದರದಲ್ಲಿ ವೃದ್ಧಿ ಮತ್ತು ಕಂಪೆನಿಗಳು ಆಕರ್ಷಕ ಯೋಜನೆಗಳನ್ನು ಪ್ರಕಟಿಸದೇ ಇರುವುದು,ಇದಕ್ಕೆ ಮುಖ್ಯ ಕಾರಣವೆನ್ನುವುದು ವಿಶ್ಲೇಷಕರ ಅನಿಸಿಕೆ.ಹೆಚ್ಚು ಚಂದಾದಾರರನ್ನು ಹೊಂದುವುದಕ್ಕಿಂತ,ಇದ್ದವರಿಂದ ಹೆಚ್ಚು ಅದಾಯ ಪಡೆಯುವ ನಿಟ್ಟಿನಲ್ಲಿ ಕಂಪೆನಿಗಳು ಯೋಚಿಸತೊಡಗಿವೆ.

---------------------------------------
ಲೀನಕ್ಸ್:ಇಪ್ಪತ್ತು ತುಂಬಿತು
ಲೀನಸ್ ತೋವ್ರಾಲ್ಡ್ ಅವರ ಮುಂದಾಳತ್ವದಲ್ಲಿ ಲೀನಕ್ಸ್ ಆಪರೇಟಿಂಗ್ ವ್ಯವಸ್ಥೆಯು ಅಭಿವೃದ್ಧಿಯಾಗಿ ಈಗ ಎರಡು ದಶಕಗಳೇ ಉರುಳಿವೆ.ಮೊದಲ ದಿನಗಳಲ್ಲಿ ಇದನ್ನು ಕಂಪ್ಯೂಟರ್ ಪರಿಣತರ ಆಪರೇಟಿಂಗ್ ವ್ಯವಸ್ಥೆ ಎಂದೇ ಬ್ರಾಂಡ್ ಆಗಿಬಿಟ್ಟು,ಜನಸಾಮಾನ್ಯರ ಕಂಪ್ಯೂಟರಿನಲ್ಲಿ ಬಳಕೆಯಾಗದೇ ಉಳಿಯಿತು.ಈಗ ಲೀನಕ್ಸ್ ವಿಂಡೋಸ್ ವ್ಯವಸ್ಥೆಯಷ್ಟೇ ಬಳಕೆದಾರಸ್ನೇಹಿಯಾಗಿ ಹೊರಹೊಮ್ಮಿದರೂ,ಅದಕ್ಕಂಟಿದ ಅಪವಾದ ಇನ್ನೂ ದೂರವಾಗಿಲ್ಲ.ಆದರೆ ಸ್ಮಾರ್ಟ್‌ಫೋನುಗಳಲ್ಲಿ ಅರೆವಾಸಿ ಸಾಧನಗಳಲ್ಲಿ ಬಳಕೆಯಾಗುವ ಆಂಡ್ರಾಯಿಡ್ ವ್ಯವಸ್ಥೆಯು ಲೀನಕ್ಸ್ ಮೂಲದ್ದೇ ಆಗಿದೆ.ಹಾಗೆಯೇ ಟ್ಯಾಬ್ಲೆಟ್ ಸಾಧನಗಳಲ್ಲೂ,ಆಪಲ್ ಕಂಪೆನಿಯ ಐಓಎಸ್ ನಂತರ ಲೀನಕ್ಸ್ ಮೂಲದ ಆಂಡ್ರಾಯಿಡ್‌ನದ್ದೇ ಬಳಕೆಯಾಗುತ್ತಿದೆ.ಶೇಕಡಾ ಮೂವತ್ತು ಭಾಗ ಟ್ಯಾಬ್ಲೆಟ್ ಸಾಧನಗಳಲ್ಲಿ ಬಳಕೆಯಾಗುತ್ತಿದೆ.ಸರ್ವರ್‌ಗಳಲ್ಲಿ,ಸೂಪರ್‌ಕಂಪ್ಯೂಟರುಗಳಲ್ಲಿ,ಏಟಿಎಂ‌ಗಳಲ್ಲಿ,ಮನೆಯ ಹಲವು ಸಾಧಗಳಲ್ಲಿ ಲೀನಕ್ಸ್ ಬಳಕೆಯಾಗುವ ಕಾರಣ ಇದು ಸಾರ್ವತ್ರಿಕ ಬಳಕೆಯಾಗುತ್ತಿದ್ದರೂ,ಯಾರ ಗಮನಕ್ಕೂ ಬರದೆ ಸದ್ದಿಲ್ಲದೆ ಕಾರ್ಯಾಚರಿಸುತ್ತಿವೆ.ಲೀನಕ್ಸ್‌ನ ಹಲವು ವಿತರಣೆಗಳು ಲಭ್ಯವಿವೆ.ಉಬುಂಟು ಇವುಗಳಲ್ಲಿ ಪೈಕಿ ಬಹು ಜನಪ್ರಿಯವಾಗಿದೆ.ಫೆಡೋರಾ,ಸುಸೆ,ಮ್ಯಾಂಡ್ರಿವಾ,ಡೆಬಿಯನ್ ಮುಂತಾದ ಇತರ ಹಲವು ವಿತರಣೆಗಳು ಲಭ್ಯವಿವೆ.ಮುಕ್ತ ತಂತ್ರಾಂಶ ಮತ್ತು ಉಚಿತ ತಂತ್ರಾಂಶಗಳ ಅಲೆಯನ್ನು,ಹುಟ್ಟುಹಾಕಿದ ಲೀನಕ್ಸ್ ಚಿರಕಾಲ ಬಾಳಲಿ.
----------------------------------------
ಸ್ಟೀವ್ ಜಾಬ್:ನಿವೃತ್ತಿ

ಆಪಲ್ ಕಂಪೆನಿಯ ಮುಖ್ಯಸ್ಥ ಸ್ಟೀವ್ ಜಾಬ್ಸ್ ನಿವೃತ್ತಿಯಾಗಿದ್ದು ವಾರದ ಸುದ್ದಿಯಾಯಿತು.ಬಳಕೆದಾರ ಸ್ನೇಹಿ ಮ್ಯಾಕ್ ಕಂಪ್ಯೂಟರ್,ಐಪೋಡ್,ಐಫೋನ್,ಐಟ್ಯಾಬ್ ಹೀಗೆ ಸಾಲು ಸಾಲು ಜನ ಮೆಚ್ಚುಗೆ ಗಳಿಸಿದ ಸಾಧನಗಳ ವಿನ್ಯಾಸದಲ್ಲಿ ಆಪಲ್ ಕಂಪೆನಿಯ ಇಂಜಿನಿಯರುಗಳಿಗೆ ಮಾರ್ಗದರ್ಶನ ನೀಡಿದ ಈತ,ಕಲಿಕೆಯ ಮಟ್ಟಿಗೆ ಕಾಲೇಜು ವಿದ್ಯಾಭ್ಯಾಸವನ್ನೂ ಮುಗಿಸಲಿಲ್ಲ.ಮೊದಲ ಕೆಲಸವನ್ನೂ ಸ್ವಲ್ಪವೇ ಸಮಯದಲ್ಲಿ ಬಿಟ್ಟು,ಭಾರತದಲ್ಲಿ ಹಿಪ್ಪಿಗಳಂತೆ ತಿರುಗಿದ ಹಿನ್ನೆಲೆಯವರು.ಸುಂದರವಾಗಿ ಬರವಣಿಗೆ ಹೊಂದಿದ್ದ ಇವರು, ತಮ್ಮ ಮೊದಲ ಕಂಪ್ಯೂಟರಿನಲ್ಲಿ ಕಲಾಗಾರಿಕೆಯನ್ನು ತೋರಲು ಕಾರಣರಾದರು.ತಾವೇ ಸ್ಥಾಪಿಸಿದ ಕಂಪೆನಿಯನ್ನು ಬಿಟ್ಟು ಇನ್ನೊಂದು ಕಂಪೆನಿ ಸ್ಥಾಪಿಸಿ,ಅದನ್ನು ಆಪಲ್ ಕಂಪೆನಿಯು ಖರೀದಿಸಿದಾಗ ಮತ್ತೆ ತವರಿಗೆ ಬಂದ ಜಾಬ್ಸ್ ಈಗಿನ ಯುವಕರ ರೋಲ್ ಮಾಡೆಲ್ ಆಗಿ ಹೊರಹೊಮ್ಮಿದ್ದರೆ.ಕ್ಯಾನ್ಸರ್ ಕಾರಣ,ಅವರು ಹಿನ್ನೆಲೆಗೆ  ಸರಿಯುವುದು ಮೊದಲೇ ಗೊತ್ತಿದ್ದ ಸಂಗತಿಯಾದರೂ,ಕೊನೆಗೂ ನಿವೃತ್ತಿ ಪ್ರಕಟಿಸಿದಾಗ ಸುದ್ದಿಯಾದರು.
-------------------------------------------
ತುಷಾರ:ವಾರ್ಷಿಕ  ಚಂದಾ ಗೆಲ್ಲಿ!
ಈ ಪ್ರಶ್ನೆಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಶೋಭಾ ಮೋಹನ್,ಬೆಂಗಳೂರು.
*ಲೀನಕ್ಸ್ ಬಗ್ಗೆ ಇರುವ ಕನ್ನಡ ತಾಣವನ್ನು ಹೆಸರಿಸಿ.
(ಉತ್ತರವನ್ನು nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ:NS45 ನಮೂದಿಸಿ.)
ಕಳೆದ ವಾರದ ಬಹುಮಾನಿತ ಉತ್ತರ:
*ಗ್ಲಾಸ್‌ಡೋರ್ ತಾಣ ಕೊಡುವ ಸೇವೆಯೆಂದರೆ ಉದ್ಯೋಗದಾತರ ಬಗೆಗಿನ ವಿವರ.ಕಂಪೆನಿಗಳಲ್ಲಿ ಕೆಲಸ ಮಾಡಿದವರು ಒದಗಿಸಿದ ವಿವರಗಳನ್ನು ಇತರರೂ ಪಡೆಯಲು ಇಲ್ಲಿ ಅವಕಾಶ ಸಿಗುತ್ತದೆ.ಬಹುಮಾನ ಗೆದ್ದವರು ರಾಜೇಂದ್ರಕೃಷ್ಣ,ಬೆಳ್ತಂಗಡಿ.ಅಭಿನಂದನೆಗಳು.
Udayavani
*ಅಶೋಕ್‌ಕುಮಾರ್ ಎ

Monday, August 22, 2011

ಮಾನವ ಮಿದುಳು:ಕಂಪ್ಯೂಟರ್ ಚಿಪ್ ಅನುಕರಣೆ

ಮಾನವ ಮಿದುಳು:ಕಂಪ್ಯೂಟರ್ ಚಿಪ್ ಅನುಕರಣೆ

ಐಬಿಎಂ ಕಂಪೆನಿಯು ಮಾನವ ಮಿದುಳಿನ ರೀತಿಯಲ್ಲಿ ಕಾರ್ಯಾಚರಿಸುವ ಐಸಿ ಚಿಪ್‌ನ್ನು ಅಭಿವೃದ್ಧಿ ಪದಿಸುವ ಯತ್ನಕ್ಕೆ ಕೈಹಾಕಿದೆ.ವಿಶ್ವವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಗಳ ಸಹಭಾಗಿತ್ವದಲ್ಲಿ ಐಬಿಎಂ ಈ ಪ್ರಯತ್ನಕ್ಕೆ ಕೈಹಾಕಿದೆ.ಮಾನವ ಮಿದುಳು ಒಂದು ಅದ್ಭುತ ರಚನೆ ಎನ್ನುವುದು ಓದುಗರಿಗೆ ಗೊತ್ತಿರುವ ವಿಚಾರ.ಅತ್ಯಂತ ಕಡಿಮೆ ಶಕ್ತಿ ಬಳಸಿ ಕೆಲಸ ಮಾಡುವುದು,ಬೇಕಾದ ಭಾಗವನ್ನು ಮಾತ್ರಾ ಎಚ್ಚರವಾಗಿಟ್ಟು.ಉಳಿದ ಭಾಗಗಳನ್ನು ಬಂದ್ ಮಾಡಿಡುವುದು ಮಿದುಳಿನ ವೈಶಿಷ್ಟ್ಯ.ಐದು ಗಿಗಾಹರ್ಟ್ಸ್ ಕಂಪ್ಯೂಟರಿನಷ್ಟೇ ವೇಗವಾಗಿ ಕಾರ್ಯಾಚರಿಸುವ ಮಿದುಳು,ಪ್ಯಾರಲಲ್ ಪ್ರಾಸೆಸಿಂಗ್ ಮಾಡುವ ಪರಿಯಲ್ಲಿ ಮಾತ್ರಾ ಕಂಪ್ಯೂಟರನ್ನು ಹಿಂದಿಕ್ಕುತ್ತದೆ.ಯೋಚನೆ,ಸಂವೇದನೆ,ಸಂವಹನೆ ಮತ್ತು ಗುರುತಿಸುವಿಕೆ ಇವೆಲ್ಲಾ ಮಿದುಳಿಗೆ ಸಾಧ್ಯ,ಕಂಪ್ಯೂಟರಾದರೋ ಕ್ಯಾಲ್ಕ್ಯುಲೇಟರ್ ಪರಿ ಕೆಲಸ ಮಾಡುವಷ್ಟಕ್ಕೆ ಸೀಮಿತವಾಗಿದೆ.ಈಗ ಐಬಿಎಂ ಕಂಪೆನಿ ಮಾಡುತ್ತಿರುವುದು ಕಂಪ್ಯೂಟರಿನಲ್ಲಿ ನ್ಯಾನೋತಂತ್ರಜ್ಞಾನ,ನ್ಯೂರೋವಿಜ್ಞಾನ ಮತ್ತು ಸೂಪರ್‌ಕಂಪ್ಯೂಟರನ್ನು ಸಮ್ಮಿಳಿತಗೊಳಿಸುವ ಯತ್ನವಾಗಿದೆ.ಮಿದುಳಿನಲ್ಲಿ ನ್ಯೂರಾನ್ ಎನ್ನುವ ಕೇಂದ್ರಗಳು ಯೋಚನೆಯ ಕೇಂದ್ರಗಳಾಗಿವೆ.ಸಿನಾಪ್ಸ್ ಎನ್ನುವ ಭಾಗ ನೆನಪು ಶಕ್ತಿ ಮತ್ತು ಕಲಿಕೆಯ ಕೇಂದ್ರಗಳು.ಏಕ್ಸಾನ್ ಎನ್ನುವುದು ಮಿದುಳಿನ ಅಂಗಾಂಶಗಳನ್ನು ಬೆಸೆಯುವ ಭಾಗಗಳು.ಐಬಿಎಂನಲ್ಲೂ ಇದೇ ಆಧಾರದಲ್ಲಿ ಅಭಿವೃದ್ಧಿ ಪಡಿಸುವ ಯತ್ನಗಳಾಗುತ್ತಿವೆ.ಮಿದುಳಿನಂತೆ ಸ್ಮರಣಶಕ್ತಿಯುಳ್ಳ,ಕಲಿಯಬಲ್ಲ,ಸಂವೇದನೆಗಳನ್ನು ಹೊಂದಿದ ಕಂಪ್ಯೂಟರನ್ನು ಅಭಿವೃದ್ಧಿ ಪಡಿಸುವ ಕನಸಿನೊಂದಿಗೆ ಐಬಿಎಂ ಮುನ್ನಡೆಯಲಿದೆ.ಆದರಿದು ಬಹಳ ಸಮಯ ತೆಗೆದುಕೊಳ್ಳಲಿದೆ.ಈಗೇನಿದ್ದರೂ ಅತಿ ಚಿಕ್ಕ ಹೆಜ್ಜೆಗಳನ್ನಿಡಲಷ್ಟೇ ಸಾಧ್ಯವಾಗಿದೆ.

----------------------------------------------
ಮೊಟೊರೊಲಾ ಮೊಬಿಲಿಟಿ:ಗೂಗಲ್ ಖರೀದಿ
ಮೊಟೊರೊಲಾ ಕಂಪೆನಿಯು ಸೆಲ್‌ಫೋನನ್ನು ಮೊದಲಾಗಿ ಒದಗಿಸಿದ ಕಂಪೆನಿಯಾಗಿದೆ.ಈಗದರ ಮೊಬೈಲ್ ಹ್ಯಾಂಡ್‌ಸೆಟ್ ತಯಾರಿಕಾ ಘಟಕವನ್ನು ಗೂಗಲ್ ಕಂಪೆನಿ ಖರೀದಿಸಲಿದೆ.ಮೊಟೊರೊಲಾ ಮೊಬಿಲಿಟಿಯನ್ನು ಖರೀದಿಸಲು ಹನ್ನೆರಡೂವರೆ ಬಿಲಿಯನ್ ದಾಲರುಗಳನ್ನು ಗೂಗಲ್ ಖರ್ಚು ಮಾಡಬೇಕಾಗಬಹುದು.ಎಚ್‌ಟಿಸಿಯಂತಹ ಕಂಪೆನಿಗಳು ಆಂಡ್ರಾಯಿಡ್ ಮಾರುಕಟ್ಟೆಯಲ್ಲಿ ಮಿಂಚಲು ಗೂಗಲ್ ಜತೆಗಿನ ಭಾಗೀದಾರಿಕೆ ನೆರವಾಗಿತ್ತು.ಮೊಟೊರೊಲಾ ಮೊಬೈಲಿಟಿ ಖರೀದಿ ಸುದ್ದಿ ಅವುಗಳಿಗೆ ಕಹಿಯೆನಿಸುವುದು ಸಹಜ.ಈ ಮೂಲಕ ಗೂಗಲ್ ಸ್ವಂತವಾಗಿ ಮೊಬೈಲ್ ಹ್ಯಾಂಡ್‌ಸೆಟ್ಟುಗಳನ್ನು ಮಾರುಕಟ್ಟೆಗೆ ಬಿಡಬಹುದು.ಇದುವರೆಗೆ ಗೂಗಲ್ ಎಚ್‌ಟಿಸಿಯಂತಹ ಬಾಹ್ಯ ಕಂಪೆನಿಗಳ ಮೂಲಕ ತನ್ನ ಆಂಡ್ರಾಯಿಡ್ ಮೊಬೈಲ್ ಹ್ಯಾಂಡ್‌ಸೆಟ್‌ಗಳನ್ನು ಒದಗಿಸಬೇಕಿದ್ದ ಗೂಗಲ್ ಈಗ ಸ್ವಂತವಾಗಿಯೂ ಹೀಗೆ ಮಾಡಲು ಸಾಧ್ಯ.ಆದರೆ ಮೊಟೊರೊಲಾ ಮೊಬಿಲಿಟಿ ಗೂಗಲ್ ಒಂದಿಗೆ ಸೇರ್ಪಡೆಯಾಗದೆ,ಪ್ರತ್ಯೇಕ ಆಸ್ತಿತ್ವ ಉಳಿಸಿಕೊಳ್ಳಲಿದೆ.ಇದು ಹಕ್ಕುಸ್ವಾಮ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹುಟ್ಟುಹಾಕುತ್ತಿತ್ತು.

-----------------------------------------------
ಮಿಂಚಂಚೆ ಮೂಲಕ ನೌಕರಿಗೆ ಅರ್ಜಿ
ನೌಕರಿಗೆ ಮಿಂಚಂಚೆ ಮೂಲಕ ಅರ್ಜಿ ಗುಜರಾಯಿಸಿದಾಗ ಸ್ವವಿವರಗಳನ್ನು ಪ್ರತ್ಯೇಕ ಕಡತವಾಗಿ ಕಳುಹಿಸಬಹುದು.ಇದನ್ನು ವರ್ಡ್ ಕಡತವಾಗಿ ಕಳುಹಿಸುವುದು ಒಳ್ಳೆಯ ಅಭ್ಯಾಸವಲ್ಲ.ಯಾಕೆಂದರೆ ವರ್ಡ್ ಕಡತವನ್ನು ಕಂಪೆನಿಯವರು ತಮ್ಮಲ್ಲಿರುವ ತಂತ್ರಾಂಶವನ್ನು ಬಳಸಿ ತೆರೆದಾಗ,ಅದು ನೀವು ಬಯಸಿದ್ದಕ್ಕಿಂತ ಬೇರೆಯ ರೀತಿ ಮೂಡುವ ಅಪಾಯವಿದೆ.ಪಿಡಿಎಫ್ ಕಡತವಾಗಿ ಸ್ವವಿವರವನ್ನು ಕಳುಹಿಸುವುದು ಯಾವಾಗಲೂ ಕ್ಷೇಮಕರ ಎನ್ನುವುದು ತಜ್ಞರ ಸಲಹೆ.ನೌಕರಿಯ ಅರ್ಜಿಯನ್ನು ಈ ಸ್ವವಿವರದ ಕಡತದಲ್ಲಿ ಸೇರಿಸುವ ಬದಲು,ಆ ಪತ್ರವನ್ನು ಮಿಂಚಂಚೆಯ ಸಾಮಾನ್ಯ ಸಂದೇಶ ಬರೆಯಲು ಒದಗಿಸುವ ಸ್ಥಳಾವಕಾಶದಲ್ಲಿ ಬರೆಯಬಹುದು.ಇನ್ನು ಯಾವ ಕೆಲಸಕ್ಕೆ ಅರ್ಜಿ ಎನ್ನುವುದನ್ನು ವಿಷಯವಾಗಿ ಸೂಚಿಸುವುದು ಒಳಿತು.ಆಗ,ಅರ್ಜಿಯ ವಿಲೇವಾರಿ ಮಾಡಲು ಕಂಪೆನಿಗಳವರಿಗೆ ಸುಲಭವಾಗುತ್ತದೆ.
-------------------------------------------------
ಐಸ್‌ಮ್ಯಾಪ್
ಅಂಟಾರ್ಕಟಿಕಾ ಖಂಡದ ಮಂಜುಗಡ್ಡೆಗಳ ನಕ್ಷೆಯನ್ನು ನಾಸಾದ ಸಂಶೋಧಕರು ತಯಾರಿಸಲು ಸಫಲರಾಗಿದ್ದಾರೆ.ದೊಡ್ದ ಹಿಮಗಡ್ಡೆಗಳು ಕೇಂದ್ರದಿಂದ ಹೊರಭಾಗಕ್ಕೆ ತೇಲುತ್ತಿರುವುದು ಈ ನಕ್ಷೆಗಳಿಂದ ವ್ಯಕ್ತವಾಗಿದೆ.ಯುರೋಪ್,ಕೆನಡಾ ಮತ್ತು ಜಪಾನೀ ಉಪಗ್ರಹಗಳ ದೂರದರ್ಶಕಗಳನ್ನು ಬಳಸಿಕೊಂಡು ನಕ್ಷೆ ಸಿದ್ಧ ಪಡಿಸಲಾಗಿದೆ.ಕೆಳಗಿನ ನೆಲದಲ್ಲಿ ಜಾರುತ್ತಾ ಮಜುಗಡ್ಡೆಗಳು ಸರಿಯುತ್ತಿರುವುದರ ಬಗ್ಗೆ ಈಗಷ್ಟೇ ಗೊತ್ತಾಗಿದೆ.ಮುಂದಿನ ದಿನಗಳಲ್ಲಿ ಈ ಮಂಜುಗಡ್ಡೆಯ ಕರಗುವಿಕೆ,ಸಮುದ್ರಮಟ್ಟದಲ್ಲಿ ಏರಿಕೆ ಉಂಟು ಮಾಡಲಿರುವ ಕಾರಣ,ಈ ನಕ್ಷೆ ಹೆಚ್ಚು ಸಹಕಾರಿ ಆಗಲಿದೆ.ಅಂದಹಾಗೆ ನಕ್ಷೆ ತಯಾರಿಸಿದ್ದು ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಯಾಗಿದೆ.
---------------------------------------
ಆಂಡ್ರಾಯಿಡ್:ಟಾಪ್‌ಟೆನ್‌‍ಗೆ ಹೆಚ್ಚು ಸಮಯ
ಆಂಡ್ರಾಯಿಡ್ ಫೋನು ಬಳಸುವವರು ತಮ್ಮ ಬಳಕೆಯಲ್ಲಿ ದಿನಕ್ಕೆ ಒಂದುಗಂಟೆ ಕಾಲ,ಆಂಡ್ರಾಯಿಡ್ ಅಪ್ಲಿಕೇಶನ್(ತಂತ್ರಾಂಶ)ಗಳನ್ನು ಬಳಸುವುದು ಕಂಡುಬಂದಿದೆ.ಇದರಲ್ಲಿ ಶೇಕಡಾ ನಲುವತ್ತು ಭಾಗ ಸಮಯದಲ್ಲಿ ಟಾಪ್ ಟೆನ್ ತಂತ್ರಾಂಶಗಳ ಬಳಕೆ ಮಾಡುವುದು ಸಮೀಕ್ಷೆಯಿಂದ ವ್ಯಕ್ತವಾಗಿದೆ.ಟಾಪ್ ಐವತ್ತಕ್ಕೆ ಶೇಕಡಾ ಅರುವತ್ತೊಂದು ಭಾಗ ಸಮಯ ಬಳಕೆಯಾದರೆ,ಉಳಿದ ಲಕ್ಷಗಟ್ಟಲೆ ಅಪ್ಲಿಕೇಶನ್‌ಗಳಿಗೆ ಉಳಿದ ಮೂವತ್ತೊಂಭತ್ತು ಭಾಗ ಸಮಯ ಉಳಿಯುತ್ತದೆ!ಒಟ್ಟಿನಲ್ಲಿ ಎರಡೂವರೆ ಲಕ್ಷಕ್ಕೂ ಹೆಚ್ಚು ಆಂಡ್ರಾಯಿಡ್ ತಂತ್ರಾಂಶಗಳೀಗ ಲಭ್ಯವಿವೆ.
-----------------------------------------------------
ಓದುಗರ ಪ್ರತಿಕ್ರಿಯೆ
ಓದುಗ ಪ್ರಸನ್ನ ಶಂಕರಪುರ ಅವರು ಟ್ವಿಟರಿಗೆ ಪೋಟೋ ಸೇರಿಸುವ ಸವಲತ್ತಿನ ಬಗೆಗಿನ ತುಣುಕಿಗೆ ಪ್ರತಿಕ್ರಿಯಿಸಿ,ಈ ಸೌಲಭ್ಯ ಹಿಂದೆಯೂ ಇತ್ತು ಎಂದು ಆಕ್ಷೇಪಿಸಿದ್ದಾರೆ.ಪೋಟೋಬಕೆಟ್ ಮೂಲಕ ಈ ಸೌಕರ್ಯವನ್ನು ಟ್ವಿಟರ್ ನೀಡುತ್ತಿತ್ತು ಎನ್ನುವುದನ್ನೂ ಅವರೇ ಬರೆದಿದ್ದಾರೆ.ಈಗ ಈ ಸವಲತ್ತನ್ನು ಟ್ವಿಟರ್ ಸ್ವಂತವಾಗಿಯೇ ಒದಗಿಸುತ್ತಿದೆ.ಟ್ವಿಟರ್ ತಾಣದಲ್ಲಿ ಸಂದೇಶ ಬರೆಯುವ ಪೆಟ್ಟಿಗೆಯ ತಳಭಾಗದಲ್ಲಿ ಕ್ಯಾಮರಾ ಚಿತ್ರವನ್ನು ಕಾಣಬಹುದು.ಅದನ್ನು ಕ್ಲಿಕ್ಕಿಸಿ,ಚಿತ್ರಗಳನ್ನು ಅಪ್ಲೋಡ್ ಮಾಡಿದರೆ ಅವುಗಳ ಕೊಂಡಿಯು ನಮ್ಮ ಸಂದೇಶದೊಂದಿಗೆ ಕಾಣಿಸುತ್ತದೆ.ಈಗ ಟ್ವಿಟರಿಗೆ ಲಾಗಿನ್ ಆಗುವಾಗಲೇ ಬಳಕೆದಾರರಿಗೆ ಈ ಹೊಸ್ ಸೇವೆಯ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.
-------------------------------------------
ತುಷಾರ:ವಾರ್ಷಿಕ  ಚಂದಾ ಗೆಲ್ಲಿ!

ಈ ಪ್ರಶ್ನೆಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಶೋಭಾ ಮೋಹನ್,ಬೆಂಗಳೂರು.
*ಗಾನ.ಕಾಂ ತಾಣ ಒದಗಿಸುವ ಸೇವೆಯೇನು?
(ಉತ್ತರವನ್ನು nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ:NS45 ನಮೂದಿಸಿ.)
ಕಳೆದ ವಾರದ ಬಹುಮಾನಿತ ಉತ್ತರ:
*ಗ್ಲಾಸ್‌ಡೋರ್ ತಾಣ ಕೊಡುವ ಸೇವೆಯೆಂದರೆ ಉದ್ಯೋಗದಾತರ ಬಗೆಗಿನ ವಿವರ.ಕಂಪೆನಿಗಳಲ್ಲಿ ಕೆಲಸ ಮಾಡಿದವರು ಒದಗಿಸಿದ ವಿವರಗಳನ್ನು ಇತರರೂ ಪಡೆಯಲು ಇಲ್ಲಿ ಅವಕಾಶ ಸಿಗುತ್ತದೆ.ಬಹುಮಾನ ಗೆದ್ದವರು ರಾಜೇಂದ್ರಕೃಷ್ಣ,ಬೆಳ್ತಂಗಡಿ.ಅಭಿನಂದನೆಗಳು.

*ಅಶೋಕ್‌ಕುಮಾರ್ ಎ

Tuesday, August 16, 2011

ಸಂಶೋಧನೆ:ಮುಕ್ತ,ಮುಕ್ತ

ಸಂಶೋಧನೆ:ಮುಕ್ತ,ಮುಕ್ತಸಂಶೋಧನೆಗಳನ್ನು ಪ್ರಯೋಗಾಲಯದಲ್ಲಿ ಮಾಡುವಾಗ,ಅವುಗಳ ಬಗ್ಗೆ ಹೆಚ್ಚಿನ ಮಾಹಿತಿ ಯಾರಿಗೂ ನೀಡುವ ಪರಿಪಾಠ ಇಲ್ಲ.ಸಂಶೋಧನೆಗಳ ಫಲಿತಾಂಶಗಳನ್ನು ಸಮಾವೇಶಗಳಲ್ಲಿ ಪ್ರಬಂಧ ಮಂಡಿಸುವ ಮೂಲಕ ಅಥವಾ ಜರ್ನಲುಗಳಲ್ಲಿ ಪ್ರಬಂಧವನ್ನು ಪ್ರಕಾಶಿಸುವ ಮೂಲಕವಷ್ಟೇ ಫಲಿತಾಂಶವನ್ನು ಬಹಿರಂಗ ಪಡಿಸಿ,ಸಂಶೋಧನೆಯ ಬಗ್ಗೆ ಸಂಶೋಧಕರ ಹಕ್ಕುಸ್ವಾಮ್ಯವನ್ನು ರಕ್ಷಿಸಿಕೊಳ್ಳಲಾಗುತ್ತದೆ.ಇದರಿಂದ ಕೆಲವೊಮ್ಮೆ ಸುಳ್ಳು ಸುಳ್ಳೇ ಫಲಿತಾಂಶಗಳನ್ನು ನೀಡಿದರೂ,ಅದನ್ನು ಸಿದ್ಧಪಡಿಸಲು ಸಾಧ್ಯವಾಗದೆ ಹೋಗುವುದಿದೆ.
ಬ್ಯಾಕ್ಟೀರಿಯಾವೊಂದರ ಡಿಎನ್‌ಎಯಲ್ಲಿರುವ ರಂಜಕದ ಅಣುವನ್ನು ಆರ್ಸೆನಿಕ್ ಅಂಶದಿಂದ ಬದಲಾಯಿಸಿದರೂ,ಆ ಬ್ಯಾಕ್ಟೀರಿಯಾ ಬದುಕುತ್ತದೆ ಎಂದು ತಮ್ಮ ಸಂಶೋಧನೆಗಳು ತೋರಿಸಿವೆ ಎಂದು ಸಂಶೋಧಕ ಸೈಮನ್ ಎಂಬಾತ ಪ್ರಕಟಿಸಿದ್ದರು.ಆತ ನಾಸಾದ ಪ್ರಾಯೋಜಿತ ಸಂಶೋಧಕ.ಆರ್ಸೆನಿಕ್ ಅಂತಹ ವಿಷವನ್ನು ಹೊಂದಿದ ಡಿಎನ್‌ಎ ಬದುಕುವುದರ ಬಗ್ಗೆ ಅನುಮಾನಗಳಿದ್ದರೂ,ಸ್ವಲ್ಪಕಾಲ ಆ ಸಂಶೋಧನೆ ವಿಜ್ಞಾನ ವಲಯಗಳಲ್ಲಿ ಚರ್ಚಿತವಾಯಿತು.ಈ ಪ್ರಯೋಗದ ಫಲಿತಾಂಶವನ್ನು ಖಚಿತ ಪಡಿಸಿಕೊಳ್ಳುವ ನಿಟ್ಟಿನಲ್ಲಿ ರೆಡ್‌ಫೀಲ್ಡ್ ಎಂಬಾಕೆ ಮುಕ್ತ ಪ್ರಯೋಗ ಆರಂಭಿಸಿದರು.ಇವರ ಪ್ರಯೋಗಗಳ ಬಗ್ಗೆ,ಅವನ್ನು ನಡೆಸುವ ರೀತಿಯ ಬಗ್ಗೆ ಮತ್ತು ಫಲಿತಾಂಶಗಳ ಬಗ್ಗೆ ಅಂತರ್ಜಾಲ ಮತ್ತಾಕೆಯ ಬ್ಲಾಗಿನಲ್ಲಿ ಸಂಪೂರ್ಣ ವಿವರಗಳು ನಿಯಮಿತವಾಗಿ ಲಭ್ಯವಾಗುತ್ತಿತ್ತು.ಅಂತಿಮವಾಗಿ ಸೈಮನ್‌ನ ಸಂಶೊಧನೆಯ ಪೊಳ್ಳುತನ ಬಯಲಾಯಿತೆನ್ನಿ.ಈ ರೀತಿ  ಮುಕ್ತವಾಗಿ ಸಂಶೋಧನೆಗಳನ್ನು ಕೈಗೊಳ್ಳುವಾಗ,ಇತರ ಸಂಶೋಧಕರು ಇದರ ದುರ್ಬಳಕೆ ಮಾಡುವ ಅಪಾಯ ಇದೆ.ಧನಾತ್ಮಕವಾಗಿ ನೋಡಿದರೆ,ಸಂಶೋಧಕ ದಾರಿ ತಪ್ಪಿದಾಗ,ಆತನನ್ನು ಎಚ್ಚರಿಸುವಂತಹ ಸಹಾಯ ಸಿಗಲು ಸಾಧ್ಯವಿದೆ.ಪ್ರಯೋಗ ಫಲಿತಾಂಶವನ್ನು ಅನುಕೂಲಕ್ಕೆ ತಕ್ಕಂತೆ ಬದಲಾಯಿಸಲಾಗದು ಎನ್ನುವುದು ಇದರ ಬಹುದೊಡ್ಡ ಪ್ರಯೋಜನವಾಗಿದೆ.
-------------------------------------------
ಆಪಲ್:ವಿಶ್ವದ ನಂಬರ್ ಒನ್
ಮಾರುಕಟ್ಟೆಯಲ್ಲಿ ಶೇರಿನ ಮೌಲ್ಯದ ಆಧಾರದಲ್ಲಿ ವಿಶ್ವದ ಅತಿ ದೊಡ್ಡ ಕಂಪೆನಿಯಾಗಿ  ಆಪಲ್ ಕಂಪೆನಿಯು ಹೊರಹೊಮ್ಮಿದೆ.ಇದನ್ನು ಸ್ಥಾಪಿಸಿದ ಸ್ಟೀವ್ ಜಾಬ್ ಮತ್ತಿತ್ತರರು ಸಾಲದ ಹಣದಿಂದ ಕಂಪೆನಿ ಆರಂಭಿಸಿದ್ದರು.ಈಗದರ ಶೇರಿನ ಮಾರುಕಟ್ಟೆ ಮೌಲ್ಯ ಮುನ್ನೂರಮೂವತ್ತೇಳು ಬಿಲಿಯನ್.ಇದು ಎಕ್ಸಾನ್ ಕಂಪೆನಿಯ ಶೇರಿನ ಮೌಲ್ಯಕ್ಕಿಂತ ಹೆಚ್ಚಾಗಿತ್ತು.ಐಪಾಡ್,ಐಫೋನ್ ಮತ್ತೀಗ ಐಟ್ಯಾಬ್ ಮೂಲಕ ಜನಮನ್ನಣೆಯ ಸಾಧನಗಳನ್ನು ಮಾರುಕಟ್ಟೆಗಿಳಿಸಿ,ಕಂಪೆನಿ ಈ ಕರಾಮತ್ತು ಮಾಡಿದೆ.ಐಟ್ಯೂನ್ ಎನ್ನುವ ಆನ್‌ಲೈನ್ ತಾಣದ ಮೂಲಕ ಸಂಗೀತ ಮುದ್ರಿಕೆಗಳನ್ನು ಮಾರುವ ಆಪಲ್, ಐಫೋನ್‌ಗೆ ತಂತ್ರಾಂಶಗಳನ್ನೂ ಮಾರುಕಟ್ಟೆಗೆ ಬಿಟ್ಟು ಭರ್ಜರಿ ಲಾಭಗಿಟ್ಟಿಸುತ್ತಿದೆ.ಸುಮಾರು ಐದುಲಕ್ಶ ಐಫೋನ್ ತಂತ್ರಾಂಶಗಳೀಗ ಲಭ್ಯವಿವೆ.ಹದಿನೈದು ಬಿಲಿಯನ್ ಬಳಕೆದಾರರು ತಂತ್ರಾಂಶಗಳನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆ, ಎಂದರೆ ಈ ಮಾರುಕಟ್ಟೆಯ ವ್ಯಾಪ್ತಿಯ ಅರಿವು ಸುಲಭದಲ್ಲಿ ಆಗಬಹುದು.
---------------------------------------------
ತ್ರೀಡಿ ತೊರಿಸುವ ಲ್ಯಾಪ್‌ಟಾಪ್
ಟೊಶಿಬಾ ಕಂಪೆನಿಯು ಮೂರು ಆಯಾಮಗಳಲ್ಲಿ ಚಿತ್ರ ತೋರಿಸುವ ಲ್ಯಾಪ್‌ಟಾಪ್‌ನ್ನು ಬಿಡುಗಡೆ ಮಾಡಿದೆ.ವಿಶೇಷವೆಂದರೆ,ಇದರಲ್ಲಿ ಕನ್ನಡಕದ ಬಳಕೆ ಮಾಡದೆ,ತ್ರೀಡಿ ಚಿತ್ರ ನೋಡಲು ಬರುತ್ತದೆ.ತುಸು ವಿಭಿನ್ನ ಚಿತ್ರಗಳನ್ನು ಒಂದರ ಮೇಲೆ ಇನ್ನೊಂದು ಚಿತ್ರ ತುಸು ಸರಿದು ಕಾಣುವಂತೆ ಮೂಡಿಸುವ ಮೂಲಕ ತ್ರೀಡಿ ಕಾಣಿಸುವಂತೆ ಮಾಡಲಾಗುತ್ತದೆ.ವೆಬ್‍ಕ್ಯಾಮ್ ‍ಮೂಲಕ ವೀಕ್ಷಕರ ಸ್ಥಾನವನ್ನು ಗಮನಿಸಿ,ಚಿತ್ರದಲ್ಲಿ ಅಗತ್ಯ ಬದಲಾವಣೆಗಳಾಗುವುದರಿಂದ ತ್ರೀಡಿ ವೀಕ್ಷಣೆಯು ಸತತವಾಗಿ ಸಾಧ್ಯವಾಗುತ್ತದೆ.ಬಹಳಷ್ಟು ಜನ ಒಟ್ಟಿಗೆ ಕುಳಿತು ನೋಡುವಾಗ, ಮೂರು ಆಯಾಮದ ಚಿತ್ರ ವೀಕ್ಷಣೆ ಸಾಧ್ಯವಾಗದು.ಇಂತಹ ಲ್ಯಾಪ್‌ಟಾಪ್‌ಗಳ ಸ್ಪರ್ಧೆ ಎದುರಿಸಲೋ ಎನ್ನುವಂತೆ,ಟಿವಿ ತಯಾರಕರು ಮೂರು ಆಯಾಮಗಳ ಟಿವಿ ವೀಕ್ಷಣೆಗೆ ಬಳಸುವ ಕನ್ನಡಕಗಳನ್ನು,ಯಾವುದೇ ಟಿವಿ ಜತೆ ಬಳಸಲಾಗುವಂತೆ ಮಾಡುವ ಒಪ್ಪಂದಕ್ಕೆ ಬಂದಿದ್ದಾರೆ.ಆದರೆ ಸಮೀಕ್ಷೆಗಳ ಪ್ರಕಾರ,ತ್ರೀಡಿ ಟಿವಿ ಖರೀದಿಗೆ ಜನರು ಹೇಳುವಂತಹ ಉತ್ಸಾಹವನ್ನೇನೂ ಹೊಂದಿಲ್ಲ.
-------------------------------------------
ಆಂಡ್ರಾಯಿಡ್:ದಾಳಿಗೆ ದಾರಿ
ಆಂಡ್ರಾಯಿಡ್ ಫೋನುಗಳಿಗೆ ತಂತ್ರಾಂಶಗಳು ಹೆಚ್ಚಿನವು ಮುಕ್ತ ತಂತ್ರಾಂಶಗಳು.ಇವುಗಳನ್ನು ದಾಳಿಕೋರರು ಬಳಸಿಕೊಂಡು.ಇವುಗಳ ಮೂಲಕ ಫೋನುಗಳ ಸ್ಮರಣಕೋಶದಲ್ಲಿರುವ ಮಾಹಿತಿ ಕದಿಯುವುದು,ಅಕ್ರಮ ಕರೆಗಳನ್ನು ಮಾಡುವುದು ಮುಂತಾದ ಅಕ್ರಮಗಳಲ್ಲಿ ತೊಡಗುತ್ತಾರೆ.ಮೊದಲು ಸಾಚಾ ತಂತ್ರಾಂಶ ನೀಡಿ,ಅವನ್ನು ಕಾಲಕಾಲಕ್ಕೆ ನವೀಕರಿಸುವ ವೇಳೆ ಇಂತಹ ಕೆಟ್ಟ ಚಟುವಟಿಕೆಗಳಿಗೆ ಅನುವು ಮಾಡುವ ತಂತ್ರಾಂಶಗಳನ್ನು ಸೇರಿಸುವುದೂ ಕಂಡು ಬಂದಿದೆ.ಆಂಡ್ರಾಯಿದ್ ಫೋನುಗಳ ಜನಪ್ರಿಯತೆಯ ಕಾರಣ ದಾಳಿಕೋರರು,ಅವನ್ನು ಹೆಚ್ಚು ಹೆಚ್ಚು ಗುರಿಯಾಗಿರಿಸಿ,ಹೆಚ್ಚು ಜನರನ್ನು ವಂಚಿಸಲು ಪ್ರಯತ್ನಿಸುತ್ತಿದ್ದಾರೆ.ಇದೇ ರೀತಿ ವಿಂಡೋಸ್ ಆಪರೇಟಿಂಗ್ ವ್ಯವಸ್ಥೆಯ ಕಂಪ್ಯೂಟರುಗಳಿಗೆ ಜನಪ್ರಿಯತೆಯೇ ಕುತ್ತಾಯಿತು.
--------------------------------
ಆರ್ಥಿಕ ದುಸ್ಥಿತಿ:ಸಂಶೋಧನೆಗೆ ಕತ್ತರಿ
ಆರ್ಥಿಕ ಹಿನ್ನಡೆಯ ಕಾರಣ ಸರಕಾರಗಳು ಮತ್ತು ಕಂಪೆನಿಗಳು ತಮ್ಮ ಖರ್ಚನ್ನು ಮಿತಗೊಳಿಸಲು ಕ್ರಮ ಕೈಗೊಳ್ಳುತ್ತಿವೆ.ಸಂಶೋಧನಾ ಚಟುವಟಿಕೆಗಳಿಗೆ ಮೀಸಲಿರಿಸಿದ ಹಣದಲ್ಲಿ ಕಡಿತ ಮಾಡುವುದು ಸುಲಭ ಕ್ರಮ.ಸಂಶೋಧನೆಗಳು ದುಬಾರಿ ಮತ್ತು ಫಲಿತಾಂಶಗಳ ಬಗ್ಗೆ ಖಚಿತವಾಗಿ ಹೇಳಲು ಬರುವುದಿಲ್ಲ.ವರ್ಷಗಟ್ಟಲೆ ಕೆಲಸ ಮಾಡಿ,ಹಣ ಖರ್ಚು ಮಾಡಿ,ಕೊನೆಗೆ ನಿರೀಕ್ಷಿತ ಫಲಿತಾಂಶ ಬಾರದಿದ್ದರೆ ಹಾಕಿದ ಹಣವೆಲ್ಲಾ ನಷ್ಟ.ಹೀಗಾಗಿ ಮಿತವ್ಯಯ ಕ್ರಮವಾಗಿ ಸಂಶೋಧನೆಗಳನ್ನು ನಿಲ್ಲಿಸುವುದು ಸಾಮಾನ್ಯ.ಒಡನೆಯೇ ಸಂಶೋಧನೆಗಳು ನಿಲ್ಲದಿದ್ದರೂ,ಮುಂದಿನ ವರ್ಷಗಳಲ್ಲಿ,ಅದರಲ್ಲೂ ಎರಡುಸಾವಿರದ ಹದಿನಾಲ್ಕರ ನಂತರ ಸಂಶೋಧನಾ ಬಜೆಟ್ ನಿಜಕ್ಕೂ ಪಾತಾಳಕ್ಕೆ ಕುಸಿಯಬಹುದು ಎನ್ನುವ ಮುನ್ಸೂಚನೆ ಇದೆ.ನಾಸಾದಂತಹ ಸಂಸ್ಥೆಗಳೂ ಇದರಿಂದ ತುಂಬಾ ಹಿನ್ನಡೆ ಅನುಭವಿಸಲಿವೆ.
--------------------------------
ಟ್ವಿಟರ್:ಚಿತ್ರ ಹಾಕಲೂ ಸೌಕರ್ಯ
ಇದುವರೆಗೆ ಟ್ವಿಟರ್ ಸಂದೇಶಗಳ ಜತೆ ಚಿತ್ರ ಹಾಕಲು ಟ್ವಿಕ್‌ಪಿಕ್,ವೈಫ್ರಾಗ್ ಎಂಬ ಇತರ ತಾಣಗಳ ಸೇವೆ ಬಳಸಬೇಕಿತ್ತು.ಆದರೀಗ ಟ್ವಿಟರ್ ಸ್ವಂತವಾಗಿ ಈ ಸೇವೆ ನೀಡಲಾರಂಭಿಸಿದೆ.ಹಾಗಾಗಿ ಇತರ ತಾಣಗಳ ಸೇವೆ ಬಳಸುವುದು ಅನಗತ್ಯ.ಟ್ವಿಟರಿನ ಸಂದೇಶ ಪೆಟ್ಟಿಗೆಯ ಕೆಳಗೆ ಕ್ಯಾಮರಾ ಚಿತ್ರವನ್ನು ಕ್ಲಿಕ್ಕಿಸುವ ಮೂಲಕ, ಈ ಸೇವೆ ಪಡೆಯಬಹುದು.ಟ್ವಿಟರಿನ ಈ ವೈಖರಿ,ಚಿತ್ರ ಅಪ್ಲೋಡ್ ಮಾಡಲು ಬಳಸುವ ತಾಣಗಳ ಸೇವೆ ಪಡೆಯುವವರ ಸಂಖ್ಯೆಯ ಮೇಲೆ ಪರಿಣಾಮ ಬೀರಬಹುದು.
-----------------------------------------------
ತುಷಾರ:ವಾರ್ಷಿಕ  ಚಂದಾ ಗೆಲ್ಲಿ!
ಈ ಪ್ರಶ್ನೆಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಶೋಭಾ ಮೋಹನ್,ಬೆಂಗಳೂರು.
*ಗ್ಲಾಸ್‌ಡೋರ್ ತಾಣ ಕೊಡುವ ಸೇವೆ ಏನು?
(ಉತ್ತರವನ್ನು nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ:NS44 ನಮೂದಿಸಿ.)
ಕಳೆದ ವಾರದ ಬಹುಮಾನಿತ ಉತ್ತರ:
*ಪ್ರಯೋಗಾರ್ಥ ಬಳಕೆಯಲ್ಲಿರುವ ಹೊಸ ವೋಟಿಂಗ್ ಮೆಶೀನ್‌ಗಳಲ್ಲಿ ಆಗಿರುವ ಬದಲಾವಣೆಯೆಂದರೆ,ಮತದಾರನಿಗೆ ಅತ ಚಲಾಯಿಸಿದ ಮತ ಯಾರಿಗೆ ಹೋಗಿದೆ ಎನ್ನುವುದರ ಮುದ್ರಿತ ಚೀಟಿ ಸಿಗುತ್ತದೆ.ಬಹುಮಾನ ಗೆದ್ದವರು ಸ್ಟೀವನ್ ಸಿಕ್ವೇರಾ,ಬಂಟ್ವಾಳ.ಅಭಿನಂದನೆಗಳು.
udayavani
*ಅಶೋಕ್‌ಕುಮಾರ್ ಎ

Monday, August 08, 2011

ನೀರು:ಮಿತವ್ಯಯ ಹಿತ

ನೀರು:ಮಿತವ್ಯಯ ಹಿತಟೆಕ್ಸಾಸ್ ಪ್ರಾಂತ್ಯದಲ್ಲಿ ತೀವ್ರ ಬರ ಪರಿಸ್ಥಿತಿಯಿದೆ.ಮಳೆಯ ಅಭಾವವೇ ಇದಕ್ಕೆ ಮುಖ್ಯ ಕಾರಣ.ಅಲ್ಲಿನ ರೈತರು,ಬೆಳೆಗಳಿಗೆ ನೀರುಣಿಸಲು ನೀರಾವರಿ ವ್ಯವಸ್ಥೆಯನ್ನೇ ಅವಲಂಬಿಸಬೇಕಾಗಿ ಬಂದಿದೆ.ನೀರಾವರಿ ವ್ಯವಸ್ಥೆಯೂ ಮಿತ ಪ್ರಮಾಣದಲ್ಲಿ ಮಾತ್ರಾ ನೀರುಣಿಸಲು ಶಕ್ತವಾಗಿದೆ.ಹಾಗಾಗಿ ನೀರಿನ ಮಿತ ಬಳಕೆ ಮತ್ತು ಸಮರ್ಪಕ ನಿರ್ವಹಣೆಯತ್ತ ಅಲ್ಲಿನ ರೈತರು ಗಮನಹರಿಸಬೇಕಾಗಿ ಬಂದಿದೆ.ಅವರು ನೀರಿನ ಮಿತವ್ಯಯ ಮಾಡುವ ಮೂಲಕ,ರಾಸಾಯಿನಿಕ ಗೊಬ್ಬರಗಳು ಮತ್ತು ಕ್ರಿಮಿನಾಶಕಗಳ ಬಳಕೆಯನ್ನೂ ಮಿತಗೊಳಿಸಲು ಬರುತ್ತದೆ.ಹಾಗೆಯೇ ಪಂಪ್ ಮಾಡಲು ಅಗತ್ಯವಾದ ವಿದ್ಯುಚ್ಛಕ್ತಿಯ ಬಿಲ್ ಕೂಡಾ ಕಡಿಮೆಯಾಗುತ್ತದೆ.ಗದ್ದೆಗಳಲ್ಲಿ ನೀರಿನ ಪಸೆಯನ್ನಳೆದು,ಅಗತ್ಯವಾದರೆ ಮಾತ್ರಾ ನೀರುಣಿಸುವ ತಂತ್ರಜ್ಞಾನವನ್ನು ಸ್ಥಾಪಿಸುವ ಮೂಲಕ ಅವರು ನೀರಿನ ಮಿತ ಬಳಕೆಯತ್ತ ಹೆಜ್ಜೆಯಿಟ್ಟಿದ್ದಾರೆ.ನೆಲದಡಿಯ ಮಣ್ಣಿನಲ್ಲಿ ಪ್ರತಿ ನಾಲ್ಕಿಂಚು ಆಳದಲ್ಲಿ ಲಭ್ಯವಿರುವ ನೀರಿನ ತೇವಾಂಶವನ್ನು ಅಳೆಯುವ ಸೌರ ವಿದ್ಯುತ್ ಆಧಾರಿತ ವ್ಯವಸ್ಥೆಯನ್ನವರು ಸ್ಥಾಪಿಸಿಕೊಂಡಿದ್ದಾರೆ.ಈ ಸ್ಥಾವರಗಳಿಂದ ನೀರಿನಂಶದ ಬಗೆಗಿನ ಮಾಹಿತಿಯು,ಪ್ರತಿ ಸ್ಥಾವರದಲ್ಲಿರುವ ಸೆಲ್‌ಫೋನ್ ಮೂಲಕ ಮುಖ್ಯ ನಿಯಂತ್ರಣ ಕೇಂದ್ರವನ್ನು ತಲುಪುತ್ತದೆ.ಗದ್ದೆಯಲ್ಲಿರುವ ಬೆಳೆಯ ಅಗತ್ಯಾನುಸಾರ,ಪ್ರತಿ ರೈತನಿಗೆ ನೀರುಣಿಸಲು ಅಗತ್ಯವಾದಾಗಲೆಲ್ಲಾ ಎಸ್ಸೆಮ್ಮೆಸ್ ಸಂದೇಶ ರವಾನೆಯಾಗುತ್ತದೆ.ಹೀಗಾಗಿ,ಅನಗತ್ಯ ನೀರಾವರಿ ಆಗದು.ಬೆಳೆಗಳೂ ಒಣಗುವ ಭಯವೂ ಇಲ್ಲ.ನೀರಿನ ಮಿತವ್ಯಯವನ್ನೂ ಸಾಧಿಸಿದಂತಾಯಿತು.ಈ ವ್ಯವಸ್ಥೆಯ ನಿರ್ವಹಣೆಗೆ ತಿಂಗಳಿಗೆ ಎಕರೆಯೊಂದಕ್ಕೆ ಒಂದೂವರೆ ಡಾಲರು ಖರ್ಚು ಬರುತ್ತದಂತೆ.ಹತ್ತಿಯಂತಹ ಬೆಳೆಗಳಿಗೆ ಇದು ಹೆಚ್ಚು ಹೊಂದುತ್ತದೆ ಎಂದು ವರದಿ.
---------------------------------------------------
ಮರಳಿ ಅಂಚೆಗೆ


ಮಿಂಚಂಚೆಯೊಂದನ್ನು ಬರೆದು http://snailmailmyemail.org/ ಅಂತರ್ಜಾಲ ತಾಣಕ್ಕೆsnailmailmyemail@gmail.com ವಿಳಾಸಕ್ಕೆ  ಮಿಂಚಂಚೆ ಕಳುಹಿಸಿದರೆ ಸರಿ.ನಿಮ್ಮ ಮಿಂಚಂಚೆಯನ್ನು ಬರೆದು,ಅದನ್ನು ಸಾಮಾನ್ಯ ಅಂಚೆಯಲ್ಲಿ ಸೂಚಿಸಿದ ವಿಳಾಸಕ್ಕೆ ಕಳುಹಿಸುವ ಏರ್ಪಾಡಾಗುತ್ತದೆ.ಜುಲೈ ಹದಿನದರಿಂದ ಒಂದು ತಿಂಗಳ ಕಾಲ ಲಭ್ಯವಿರುವ ಈ ಸೇವೆಯು,ಸಾಮಾನ್ಯ ಅಂಚೆಯ ಹಿರಿಮೆಯನ್ನು ನೆನಪಿಸಲು ಹಮ್ಮಿಕೊಳ್ಳಲಾಗಿರುವ ಚಳುವಳಿಯಾಗಿದೆ.ಕೈಬರಹದ ಪತ್ರಗಳನ್ನು ಪಡೆದಾಗ ಅಗುವ ಖುಷಿಯನ್ನು ಮಿಂಚಂಚೆ ನೀಡದು.ಕೈಬರಹದ ಪತ್ರಗಳು ವ್ಯಕ್ತಿಯ ಸ್ವಂತಿಕೆಯನ್ನು ಮೆರೆದು,ಅದನ್ನು ಪಡೆದವರಲ್ಲಿ ವ್ಯಕ್ತಿಗೆ ತಮ್ಮ ಮೇಲೆ ಇರುವ ಕಾಳಜಿಯನ್ನು ವ್ಯಕ್ತಪಡಿಸುತ್ತವೆ ಎನ್ನುವುದು,ಈ ಚಳುವಳಿಯನ್ನು ಹಮ್ಮಿಕೊಂಡ ಇವಾನ್,ಲ್ಯೂಸಿ ಮುಂತಾದವರ ನಂಬಿಕೆ.ಆ ಆನ್‌ಲೈನ್ ಚಳುವಳಿಗೆ ಹೆಚ್ಚೇನೂ ಪ್ರತಿಕ್ರಿಯೆ ಬರದೆಂದುಕೊಂಡು,ತಾಣವನ್ನು ಆರಂಭಿಸಿದ ಅವರಿಗೆ ಸಾವಿರಗಟ್ಟಲೆ ಮಿಂಚಂಚೆಗಳು ಬಂದಾಗ ಖುಷಿ ಮತ್ತ್ತು ಗಾಬರಿ-ಗಾಬರಿ ಯಾಕೆಂದರೆ,ಆ ಸಂದೇಶಗಳನ್ನು ಬರೆದು ಪತ್ರ ಮುಖೇನ ಕಳುಹಿಸಲು ಬೇಕಾದ ಜನಬೆಂಬಲ ಬೇಕಲ್ಲಾ? ಅದಕ್ಕೂ ಅಂತರ್ಜಾಲವೇ ನೆರವಾಯಿತು.ಪತ್ರ ಬರೆಯುವುದು ಹವ್ಯಾಸವಾಗಿರುವ ಜನರು,ಈ ಕಾರ್ಯದಲ್ಲಿ ಕೈಗೂಡಿಸಲು ಸ್ವಯಂಸೇವಕರಾಗಿ ಮುಂದೆ ಬಂದರು.ಮೊದಲು ಮಿಂಚಂಚೆ ಕಳುಹಿಸಿ,ತಮಗಾಗಿ ಇತರರು ಪತ್ರ ಬರೆಯಲಿ ಎಂದು ಅಪೇಕ್ಷಿಸಿದವರು,ನಂತರದಲ್ಲಿ ತಾವೇ ಕೈಗೂಡಿಸಿದರು.ಆಗಸ್ಟ್ ಹದಿನೈದರ ನಂತರವೂ ಈ ತಾಣ ಮುಂದುವರಿದರೆ ಅಚ್ಚರಿಯಿಲ್ಲ.
--------------------------------------------------
ಮೊಬೈಲ್ ಬ್ಯಾಂಕಿಂಗ್:ನಾನಾ ಬಗೆ
ಮೊಬೈಲ್ ಬ್ಯಾಂಕಿಂಗ್ ಈಗಿನ ಹೊಸ ಕ್ರಮ.ಮೊಬೈಲ್ ಬ್ಯಾಂಕಿಂಗ್ ಸೇವೆ ನೀಡಲು ಬ್ಯಾಂಕ್‌ಗಳವರು ಮೂರು ಮಾದರಿಗಳನ್ನು ಬಳಸಬಹುದಾಗಿದೆ.ಸ್ಮಾರ್ಟ್‌ಫೋನುಗಳಲ್ಲಿ ಮೊಬೈಲ್ ಬ್ಯಾಂಕಿಂಗ್ ತಂತ್ರಾಂಶವನ್ನು ಅನುಸ್ಥಾಪಿಸಿಕೊಂಡು,ಬ್ಯಾಂಕಿನಲ್ಲಿ ಸ್ಮಾರ್ಟ್‌ಫೋನ್ ನಂಬರನ್ನು ನೋಂದಾಯಿಸಿಕೊಂಡು ಸೇವೆ ಪಡೆಯುವುದು ಒಂದು ಮಾದರಿ.ಇನ್ನೊಂದು ಮಾದರಿಯಲ್ಲಿ,ಬ್ಯಾಂಕ್ ತಾಣವನ್ನು ಮೊಬೈಲ್ ಬ್ರೌಸರಿನ ಮೂಲಕ ಸಂಪರ್ಕಿಸಿ,ಅಂತರ್ಜಾಲ ತಾಣದ ಮೂಲಕ ಪಡೆಯಬಹುದಾದ ಸೇವೆ.ಮೂರನೇ ರೀತಿಯಲ್ಲಿ,ಎಸ್ ಎಂ ಎಸ್ ಸಂದೇಶಗಳನ್ನು ಕಳುಹಿಸುವ ಮೂಲಕ ಸೇವೆ ಪಡೆಯಬಹುದಾಗಿದೆ.ಬೇಕಾದ ಸೇವೆಯನ್ನು ಸೂಚಿಸಲು ಸಂದೇಶದ ವಿಷಯವನ್ನು ಬದಲಿಸಬೇಕು.ಇವುಗಳ ಪೈಕಿ,ಅಂತರ್ಜಾಲ ತಾಣದ ಮೂಲಕ ಪದೆಯುವ ಬ್ರೌಸರ್ ಅಧಾರಿತ ಮಾದರಿಯೇ ಮೇಲುಗೈ ಪಡೆಯುತ್ತಿರುವುದು ವಿಶ್ವದಾದ್ಯಂತ ಕಂಡು ಬರುತ್ತಿರುವ ಪ್ರವೃತ್ತಿಯಾಗಿದೆ.ಹಾಗಾಗಿ,ಬ್ಯಾಂಕುಗಳು ಅಂತಹ ಸೇವೆಯನ್ನೇ ಅವಲಂಬಿಸುವುದು ಸೂಕ್ತವಾಗಿದೆ.ತಂತ್ರಾಂಶ ಅನುಸ್ಥಾಪನೆ,ಸ್ಮಾರ್ಟ್‌ಫೋನಿನ ಸ್ಮರಣಶಕ್ತಿಯ ಮೇಲೆ ಒತ್ತಡ ತರುವುದು ಈ ಮಾದರಿ ಕಡಿಮೆ ಜನಪ್ರಿಯವಾಗಿರುವುದಕ್ಕೆ ಕಾರಣವಾಗಿರಬಹುದು.
---------------------
ಮುಖ ನೋಡಿ ಮಣೆ!


ಫೇಸ್‌ಬುಕ್ ಅಂತಹ ಸಾಮಾಜಿಕ ಜಾಲತಾಣಗಳಲ್ಲಿ ಜನರು ತಮ್ಮ ಚಿತ್ರಗಳನ್ನು ಹಾಕಿಕೊಳ್ಳುವುದಿದೆ.ಇಂತಹ ಜಾಲತಾಣಗಳ ಜನಪ್ರಿಯತೆ ಮುಗಿಲುಮುಟ್ಟಿದೆ.ವ್ಯಕ್ತಿಯ ಚಿತ್ರವನ್ನು ಅಂತಹ ತಾಣಗಳಿಂದ ಪಡೆದು,ಅವನ ಆಸಕ್ತಿ ಇತ್ಯಾದಿಗಳನ್ನು ಅರಿತು,ಆತನು ಅಂಗಡಿ-ಮುಂಗಟ್ಟಿನ ಬಳಿ ಬಂದಾಗ,ಆತನ ಮುಖ ಪರಿಚಯವನ್ನು ತಾಣದ ಚಿತ್ರದ ಮೂಲಕ ಪಡೆದು,ಆತನ ಗಮನ ಸೆಳೆಯುವ ಜಾಹೀರಾತುಗಳನ್ನು ಭಿತ್ತರಿಸುವ ಮಟ್ಟದ ವಾಣಿಜ್ಯೀಕರಣ ಈಗ ಸಾಧ್ಯವಾಗಿದೆ.ಹೀಗೆ ಮಾಡಿದರೆ,ವ್ಯಕ್ತಿಯ ಖಾಸಗಿತನದ ಉಲ್ಲಂಘನೆಯಾಗುತ್ತದೆ ಎನ್ನುವ ಮಾಮೂಲೀ ಕೂಗೂ ಕೇಳಿ ಬರುತ್ತಿದೆ.ಹಾಗೆ ಖಾಸಗಿತನ ಬೇಕಾದವರು ತಮ್ಮ ಚಿತ್ರವನ್ನು ತಾಣಗಳಿಂದ ತೆಗೆದು ಬಿಟ್ಟರಾಯಿತು ಅಂದಿರಾ?
-------------------------
ಜಿ ಪಿ ಎಸ್:ಸೌರ ಚಟುವಟಿಕೆಯಿಂದ ಬಾಧಿತ


ಜಿಪಿಎಸ್ ಎನ್ನುವುದು ಸ್ಥಾನ ಗುರುತಿಸುವ ವ್ಯವಸ್ಥೆ.ಮೊಬೈಲ್ ಸೆಟ್ಟಿನಲ್ಲಿ ಜಿಪಿಎಸ್ ವ್ಯವಸ್ಥೆಯಿದ್ದರೆ,ವಾಹನ ಚಾಲನೆಗೆ ನಿಮಗೆ ಜಿಪಿಎಸ್ ನೆರವು ಪಡೆಯುವುದು ಸಾಧ್ಯ.ವಾಹನ ಸಾಗಬೇಕಾದ ದಾರಿಯನ್ನು ಮೊಬೈಲ್ ಮೂಲಕ ಪಡೆಯುತ್ತಿರಬಹುದು.ಆದರೆ ಸೂರ್ಯನ ಮೇಲ್ಮೈಯಲ್ಲಿ ನಡೆಯುವ ಚಟುವಟಿಕೆಗಳು ಉಂಟು ಮಾಡುವ ವಿಕಿರಣಗಳು ಈ ಜಿಪಿಎಸ್ ವ್ಯವಸ್ಥೆಯನ್ನು ಬಾಧಿಸುವುದರಿಂದ,ವಾಹನ ಚಾಲನೆಗೆ ಅದರ ಅವಲಂಬನೆ ಅಡ್ಡಿಯಾಗಬಹುದಂತೆ.ಜಿಪಿಎಸ್ ಅನ್ನು ವಿಮಾನ ಹಾರಾಟಕ್ಕೂ ಬಳಸುತ್ತಾರೆ.ಹಾಗಾಗಿ ವಿಮಾನ ಬರೇ ಜಿಪಿಎಸ್ ಅನ್ನು ವಲಂಬಿಸುವುದು ಶ್ರೇಯಸ್ಕರವಲ್ಲವೆಂದು ಸಂಶೋಧಕರು ಎಚ್ಚರಿಸಿದ್ದಾರೆ.
-------------------------------------------
ತುಷಾರ:ವಾರ್ಷಿಕ  ಚಂದಾ ಗೆಲ್ಲಿ!
ಈ ಪ್ರಶ್ನೆಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಶೋಭಾ ಮೋಹನ್,ಬೆಂಗಳೂರು.
*ಪ್ರಯೋಗಾರ್ಥ ಬಳಕೆಯಲ್ಲಿರುವ ಹೊಸ ವೋಟಿಂಗ್ ಮೆಶೀನ್‌ಗಳಲ್ಲಿ ಆಗಿರುವ ಬದಲಾವಣೆ ಏನು?
(ಉತ್ತರವನ್ನು nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ:NS43 ನಮೂದಿಸಿ.)
ಕಳೆದ ವಾರದ ಬಹುಮಾನಿತ ಉತ್ತರ:
*ಕಂಪ್ಯೂಟರ್ ಚಿತ್ರಗಳು ಅಪೇಕ್ಷಿಸುವ ಸ್ಮರಣಶಕ್ತಿ ಗಾತ್ರ ತಗ್ಗಿಸಲು, ಜೆಪೆಗ್,ಜಿಫ಼್ ತೆರನ ಚಿತ್ರಗಳು ಸೂಕ್ತ.ಬಹುಮಾನ ಗೆದ್ದವರು ಅಜಿತ್ ಬಿ ಜೆ,ಕಾಂಞಗಾಡ್,ಕೇರಳ.ಅಭಿನಂದನೆಗಳು.
*ಅಶೋಕ್‌ಕುಮಾರ್ ಎ

Udayavani

Monday, August 01, 2011

ನೀರಿನಲ್ಲಿ ನಡೆಯುವ ರೊಬೋಟ್

ನೀರಿನಲ್ಲಿ ನಡೆಯುವ ರೊಬೋಟ್
ಹನ್ನೆರಡು ಪಾದಗಳಿರುವ ರೊಬೋಟ್ ನೀರಿನಲ್ಲಿ ನಡೆಯುವಂತೆ ಮಾಡಲು ಸಂಶೋಧಕರು ಸಫಲರಾಗಿದ್ದಾರೆ.ಇದು ಜಲಚರವೊಂದರ ನಡಿಗೆಯನ್ನು ಅನುಕರಿಸುವಂತೆ ಮಾಡಿ,ನೀರಿನ ಮೇಲ್ಮೈಯಲ್ಲಿ "ನಡೆಯುವಂತೆ" ಮಾಡಿರುವ ಸಂಶೋಧಕರು ರೊಬೋಟಿನ ತೂಕವನ್ನು ನಿಯಂತ್ರಿಸಲು ಸಫಲರಾಗಿಲ್ಲ.ಈ ರೊಬೋಟ್ ಮುನ್ನೂರತೊಂಭತ್ತು ಜಲಚರ ಜೀವಿಗಳ ಒಟ್ಟು ತೂಕದಷ್ಟಿದೆ.ಜಲಚರ ಜೀವಿಯ ಕಾಲುಗಳ ರೋಮಗಳು ಗಾಳಿಯ ಕುಶನ್‌ಗಳಂತೆ ವರ್ತಿಸಿ,ನೀರಿನಲಿ ತೇಲಲು ಅನುವು ಮಾಡಿಕೊಡುತ್ತವೆ ಎಂದು ತಿಳಿದುಕೊಂಡ ಸಮ್ಶೊಧಕರು,ಅದೇ ಮಾದರಿಯನ್ನು ಅನುಕರಿಸಲು,ಹನ್ನೆರಡು ಪಾದಗಳ ರೊಬೋಟ್ ರಚಿಸಬೇಕಾಯಿತು.ರೊಬೋಟಿನ ಮೋಟಾರನ್ನು ಹೊಟ್ಟೆಯ ಭಾಗದಲ್ಲಿರಿಸಿ,ಅದು ನೀರಿನ ಸಂಪರ್ಕಕ್ಕೆ ಬರದಂತೆ ಭದ್ರಪಡಿಸಿದ್ದಾರೆ.ಕಾಲುಗಳ ಪೈಕಿ  ಎರಡು,ದೇಹವನ್ನು ಎತ್ತಿ ಹಿಡಿಯಲು ಬಳಸಿದ್ದರೆ,ಉಳಿದವು ನೀರಿನ ಮೇಲೆ ಓಡಾಡಲು ಉಪಯೋಗಕ್ಕೆ ಬರುತ್ತವೆ.
---------------------------
ಅಲಿಬಾಬಾ:ಮೊಬೈಲ್ ಆಪರೇಟಿಂಗ್ ಸಿಸ್ಟಮ್

ಚೀನಾದ ಅಲಿಬಾಬಾ ಕಂಪೆನಿಯು ಗೂಗಲ್ ಮತ್ತು ಅಪಲ್ ಕಂಪೆನಿಗಳ ಮೊಬೈಲ್ ಅಪರೇಟಿಂಗ್ ವ್ಯವಸ್ಥೆ ತಂತ್ರಾಂಶಕ್ಕೆ ಸ್ಪರ್ಧೆ ಕೊಡಲು ಹೊಸ ತಂತ್ರಾಂಶವನ್ನು ಸಿದ್ಧ ಪಡಿಸಿದೆ.ಅಲಿಬಾಬಾ ಈ ತಂತ್ರಾಂಶದಲ್ಲಿ ಮಿಂಚಂಚೆ,ಶೋಧ ಮತ್ತು ಅಂತರ್ಜಾಲ ತಾಣಗಳ ಜತೆ ಕಾರ್ಯಾಚರಣೆಗೆ ಅನುವು ಮಾಡಿಕೊಟ್ಟಿದೆ.ಹಾಗೆಂದು ಅಲಿಬಾಬಾ ಕಂಪೆನಿಯು ತನ್ನದೇ ಆದ ಮೊಬೈಲ್ ಹ್ಯಾಂಡ್‌ಸೆಟ್ ತಯಾರಿಕೆ ಇಳಿದಿಲ್ಲ,ಸದ್ಯಕ್ಕೆ ಇಳಿಯುವ ಪ್ರಸ್ತಾಪವೂ ಅದರ ಮುಂದಿಲ್ಲ.ಉಳಿದ ಹ್ಯಾಂಡ್‍ಸೆಟ್ ತಯಾರಕರು ತನ್ನ ಆಪರೇಟಿಂಗ್ ವ್ಯವಸ್ಥೆಯನ್ನು ತಮ್ಮ ಸೆಟ್‌ನಲ್ಲಿ ಬಳಸಬಹುದೆಂಬ ವಿಶ್ವಾಸ ಅದರದು.ವಿಶ್ವದಲ್ಲೇ ಅತ್ಯಧಿಕ ಹ್ಯಾಂಡ್‌ಸೆಟ್ ಮಾರುಕಟ್ಟೆಯನ್ನು ಚೀನಾ ಹೊಂದಿದೆ.ಅಲಿಬಾಬಾ ಕಂಪೆನಿಯ ಕಾರ್ಯನಿರ್ವಹಣಾ ವ್ಯವಸ್ಥೆ ತಂತ್ರಾಂಶ ಬಳಸಿದ ಮೊದಲ ಸ್ಮಾರ್ಟ್‌ಫೋನ್ ಕೆ-ಟಚ್ ಕೂಡಾ ಬಿಡುಗಡೆಯಾಗಿದೆ.ಚೀನಾದ ಕಂಪೆನಿಯಾದ ತಿಯಾನ್ಯು ಇದನ್ನು ತಯಾರಿಸಿದೆ.
---------------------------------------------------
ಹಗುರ:ಬೀಜಮಂತ್ರ

ನೋಟ್‌ಬುಕ್ ಅಂತಹ ಸಾಧನಗಳನ್ನು ಹಗುರವಾಗಿಸಲು ಕಂಪೆನಿಗಳು ಪ್ರಯತ್ನಿಸುವುದೀಗಿನ ಮಾದರಿಯಾಗಿದೆ.ಹಿಂದೆಲ್ಲಾ,ಸಾಧನಗಳಲ್ಲಿ ಸವಲತ್ತುಗಳು ಹೆಚ್ಚಿದ್ದಷ್ಟು ಒಳ್ಳೆಯದ್ದು ಎನ್ನುವ ಮನೋಭಾವ ಇತ್ತು-ಆದರೀಗ ಅದು ಬದಲಾಗಿದೆ.ಅತ್ತಿತ್ತ ಒಯ್ಯಲು ಸಾಧನ ಹಗುರವಾಗಿದ್ದಷ್ಟು ಒಳ್ಲೆಯದು ಎನ್ನುವುದು ಬಳಕೆದಾರರ ಹೊಸ ಮನೋಭಾವನೆಯಾಗಿದೆ.ಹಾಗಾಗಿ ತೆಳುವಾದ ನೋಟ್‌ಬುಕ್‌ಗಳು ಹೆಚ್ಚು ಜನಪ್ರಿಯವಾಗುತ್ತಿವೆ.ತೆಳುವಾಗಿಸಲು,ಡಿವಿಡಿ ಪ್ಲೇಯರ್ ಅಂತಹ ಭಾಗವನ್ನು ಬಿಟ್ಟು ಬಿಡುವುದೀಗ ಸಾಮಾನ್ಯ.ಹಾಗೆಯೇ ಫ್ಲಾಶ್ ಸ್ಮರಣಕೋಶಗಳ ಬಳಕೆ ಹೆಚ್ಚಿದೆ.ಹಾರ್ಡ್ ಡಿಸ್ಕ್‌ಗಳಿಗಿಂತ ಇವು ಹೆಚ್ಚು ದುಬಾರಿಯಾದರೂ,ಉತ್ತಮ ಕಾರ್ಯಕ್ಷಮತೆ,ವೇಗ ಮತ್ತು ಕಡಿಮೆ ಚಲಿಸುವ ಭಾಗಗಳನ್ನು ಹೊಂದಿದೆ.ಬೇಗನೆ ಕೆಡುವುದಿಲ್ಲ, ಎನ್ನುವುದಿವುಗಳ ಪ್ಲಸ್ ಪಾಯಿಂಟುಗಳು.ಹಗುರ ಸಾಧನಗಳನ್ನು ಪ್ಲಾಸ್ಟಿಕ್‍ನಿಂದ ಮಾಡಿದರೆ,ಹೆಚ್ಚು ಹಗುರವಾಗಿಸಬಹುದಾದರೂ,ಅವು ದೃಡವಾಗಿರವು.ಹಾಗಾಗಿ ಅಲ್ಯುಮೀನಿಯಂ ಬಳಕೆ ಹೆಚ್ಚು.ಲೋಹದ ಮೇಲ್ಮೈಯಿದ್ದರೆ,ಸಾಧನವನ್ನು ತಂಪಾಗಿಸುವುದು ಸುಲಭ.ಹಗುರ ಸಾಧನಗಳು ತೆಳುವಾಗಿ,ಅವನ್ನು ರಿಪೇರಿ ಮಾಡಲು ಹೆಚ್ಚು ಅವಕಾಶ ನೀಡವು.ಅವನ್ನು ಅಪ್‍ಗ್ರೇಡ್ ಮಾಡುವ ಅವಕಾಶವು ಕಡಿಮೆ.ಬಳಸಿ ಬಿಸಾಕುವ ಸದ್ಯದ ಜನರ ವೈಖರಿಗೆ ಈ ತೊಂದರೆಗಳು ಸಮಸ್ಯೆ ಅನಿಸುವುದಿಲ್ಲ.
-----------------------------------------------
ಗ್ಯಾಸ್ ಸಂಪರ್ಕ:ಅಂತರ್ಜಾಲ
ಅಕ್ರಮ ಎಲ್‌ಪಿಜಿ ಸಂಪರ್ಕ ಮತ್ತು ಪಡಿತರ ಚೀಟಿ ಬಗ್ಗೆ ಕರ್ನಾಟಕ ಸರಕಾರ ಕ್ರಮ ಕೈಗೊಳ್ಳಲು ಬಯಸಿದೆ.ಮೊದಲ ಹಂತದ ಪರಿಶೀಲನೆ ಬಳಿಕ ಲಕ್ಷಾಂತರ ಸಂಪರ್ಕಗಳನ್ನು ಮತ್ತು ಪಡಿತರ ಚೀಟಿಗಳನ್ನು ಅಮಾನತಿನಲ್ಲಿಡಲಾಗಿದೆ.ದಾಖಲೆಗಳು ತಾಳೆಯಾಗದಿರುವುದು.ಒದಗಿಸದಿರುವುದು ಈ ಕ್ರಮಕ್ಕೆ ಕಾರಣ.ಇಂತಹ ಪರಿಸ್ಥಿತಿಯಲ್ಲಿ ಹಲವು ನೈಜ ಬಳಕೆದಾರರಿಗೆ ಅನ್ಯಾಯವಾಗಿದೆ.ಜನರು ತಮ್ಮ ಅಹವಾಲುಗಳನ್ನು ಹೊತ್ತುಕೊಂಡು ಕಚೇರಿಗಳಿಗೆ ದೌಡಾಯಿಸುವುದು ತಪ್ಪಿಸಲು ಅಂತರ್ಜಾಲ ಹೇಗೆ ಸಹಕಾರಿ ಎನ್ನುವುದು ಜನಸಾಮಾನ್ಯರಿಗೆ ಮನವರಿಕೆಯಾಗಲು ಈ ಪ್ರಕರಣ ಒಂದು ಅವಕಾಶ ಒದಗಿಸಿದೆ.ದಾಖಲೆಗಳನ್ನು ಸ್ಕ್ಯಾನ್ ಮಾಡಿ,ಅಪ್ಲೋಡ್ ಮಾಡುವ ಅಂತರ್ಜಾಲ ಅಧಾರಿತ ವ್ಯವಸ್ಥೆಯು ,http://ahara.kar.nic.inನಲ್ಲಿ ಲಭ್ಯವಿದ್ದು,ಮನೆಯಿಂದಲೇ ದಾಖಲೆಗಳನ್ನು ಒದಗಿಸಲು ಸಾಧ್ಯ.ಅಂತರ್ಜಾಲ ಸಂಪರ್ಕ,ಬಳಕೆ ಬಗ್ಗೆ ಮಾಹಿತಿಯಿಲ್ಲದವರೂ,ಬ್ರೌಸಿಂಗ್ ಸೆಂಟರುಗಳ ಮುಖಾಂತರವೂ ದಾಖಲೆಗಳ ಸಲ್ಲಿಕೆ ಮಾಡಬಹುದು.ಇಂತಹ ವ್ಯವಸ್ಥೆ ಇಲ್ಲವಾಗಿದ್ದರೆ ಜನರ ಬವಣೆ ಇನ್ನಷ್ಟು ಹೆಚ್ಚುತ್ತಿತ್ತು-ಮಾತ್ರವಲ್ಲದೆ ಕಚೇರಿಗಳಲ್ಲಿ ಜನರು ಶೋಷಣೆಗೀಡಾಗುವುದು ಹೆಚ್ಚುತ್ತಿತ್ತು.
-----------------------------------------
ಗಿಗ್.ಯು;ಶರವೇಗದ ಜಾಲ
ಅಮೆರಿಕಾದಲ್ಲಿ ಇಪ್ಪತ್ತಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಸೇರಿ ಅತಿ ವೇಗದ ಕಂಪ್ಯೂಟರ್ ಜಾಲವನ್ನು ಅಣಿಗೊಳಿಸಲು ಯತ್ನಿಸುತ್ತಿವೆ.ಟೆಲಿಕಾಂ ಮತ್ತು ತಂತ್ರಜ್ಞಾನ ಕಂಪೆನಿಗಳ ಸಹಕಾರ ಪಡೆದು ಈ ಜಾಲವನ್ನು ಜನರಿಗೆ,ವಿದ್ಯಾರ್ಥಿಗಳಿಗೆ ಮತ್ತು ಕಂಪೆನಿಗಳಿಗೆ ನೀಡುವುದು ಈ ವಿವಿಗಳ ಬಯಕೆ.ನಗರಗಳಿಗಿಂದ ದೂರ ಇರುವ ಈ ಸಂಸ್ಥೆಗಳು ಇದರ ಮೂಲಕ ಹೆಚ್ಚು ಜನರನ್ನು ಮತ್ತು ಕಂಪೆನಿಗಳನ್ನು ತಮ್ಮ ಸುತ್ತಮುತ್ತಲಿನ ಪ್ರದೇಶಗಳಿಗೆ ವಲಸೆ ಬರುವಂತೆ ಮಾಡುವುದು ಸ್ಥಾಪನೆಯ ಹಿಂದಿನ ಮುಖ್ಯ ಉದ್ದೇಶ.ಒಂದು ಮಿನಿಟಿನಲ್ಲಿ ಚಲನಚಿತ್ರವೊಂದನ್ನು ಡೌನ್‌ಲೋಡ್ ಮಾಡುವಷ್ಟು ಈ ಜಾಲ  ವೇಗವಾಗಿರುತ್ತದೆ, ಎಂದರೆ ನೀವೇ ಯೋಚಿಸಿ.ಸದ್ಯ ಇರುವ ಜಾಲಗಳಿಗಿಂತ ನೂರಾರು ಪಟ್ಟು ವೇಗ ಈ ಜಾಲದ್ದು.ಅರಿಜೋನಾ,ಡ್ಯೂಕ್,ಮಿಚಿಗನ್,ವಾಷಿಂಗ್‌ಟನ್ ಮುಂತಾದ ಇಪ್ಪತ್ತೊಂಬತ್ತು ವಿವಿಗಳು ಯೋಜನೆಯಲ್ಲಿ ಭಾಗಿಯಾಗಿವೆ.ಯೋಜನೆಯ ಹಣಕಾಸು ನೆರವಿಗೆ ಸರಕಾರದತ್ತ ಮುಖ ಮಾಡದೆ ಖಾಸಗಿ ಮೂಲಗಳ ಸಹಕಾರವನ್ನೇ ಪಡೆದಿರುವುದು ಯೋಜನೆಯ ವೈಶಿಷ್ಟ್ಯ.ಅಂದಹಾಗೆ ಆಪಲ್ ಕಂಪೆನಿಯ ಹಣಕಾಸು ಸ್ಥಿತಿ ಅಮೆರಿಕಾ ಸರಕಾರಕ್ಕಿಂತ ಹೆಚ್ಚು ಪ್ರಬಲವಾಗಿದೆ ಎನ್ನುವುದು ತಾಜಾ ಸುದ್ದಿ.
--------------------------------------
ಸ್ಥಳ:ಮಾಹಿತಿ

ಜನರು ಇರುವ ಸ್ಥಳದ ಸುತ್ತಲಿನ ಮಾಹಿತಿ ಒದಗಿಸುವುದು ಈಗಿನ ಹೊಸ ಅಂತರ್ಜಾಲ ಸಾಮಾಜಿಕ ತಾಣಗಳ ಯಶಸ್ಸಿನ ಗುಟ್ಟಾಗಬಹುದು.ಪೋರ್‌ಸ್ಕ್ವೇರ್,ಗೊವಾಲ್ಲಾ ಇವು ಈ ಮಾದರಿಯ ಅಂತರ್ಜಾಲ ತಾಣಗಳು.ಇವುಗಳ ತಂತ್ರಾಂಶವನ್ನು ಸ್ಮಾರ್ಟ್‌ಫೋನಿನಲ್ಲಿ ಅನುಸ್ಥಾಪಿಸಿಕೊಂಡರೆ,ಸ್ನೆಹಿತರುಗಳು ಒಂದೇ ಪ್ರದೇಶಕ್ಕೆ ಬಂದಾಗ ಜತೆ ಸೇರುವುದು ಸುಲಭ.ಹಾಗೆಯೇ ಬಳಕೆದಾರರಿಗೆ ಅವರಿರುವ ಪ್ರದೇಶದಲ್ಲಿ ದೊರಕುವ ವಿವಿಧ ಸೇವೆ,ಸವಲತ್ತುಗಳ ಬಗ್ಗೆಯೆ ಹೆಚ್ಚು ಮಾಹಿತಿ ನೀಡುವುದು ಈ ತಾಣಗಳ ಹೆಗ್ಗಳಿಕೆ.ಕಲಾವಿದರು ಮತ್ತು ಅವರ ಅಭಿಮಾನಿಗಳಿಗೆ ಇಂತಹ ಸೇವೆ ಹೆಚ್ಚು ಉಪಯುಕ್ತ.
----------------------------------------
ತುಷಾರ:ವಾರ್ಷಿಕ  ಚಂದಾ ಗೆಲ್ಲಿ!
ಈ ಪ್ರಶ್ನೆಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಶೋಭಾ ಮೋಹನ್,ಬೆಂಗಳೂರು.
*ಕಂಪ್ಯೂಟರ್ ಚಿತ್ರಗಳು ಅಪೇಕ್ಷಿಸುವ ಸ್ಮರಣಶಕ್ತಿ ಗಾತ್ರ ತಗ್ಗಿಸಲು, ಯಾವ ತೆರನ ಚಿತ್ರಗಳು ಸೂಕ್ತ?
(ಉತ್ತರವನ್ನು nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ:NS42 ನಮೂದಿಸಿ.)
ಕಳೆದ ವಾರದ ಬಹುಮಾನಿತ ಉತ್ತರ:
**ಭಾರತದ ಐಟಿ ಕಂಪೆನಿಗಳ ಪೈಕಿ,ಮೂರನೆ ಸ್ಥಾನಕ್ಕೆ ಪೈಪೋಟಿ ಇರುವ ಕಂಪೆನಿಗಳು ವಿಪ್ರೋ ಮತ್ತು ಕಾಗ್ನಿಸೆಂಟ್.ಬಹುಮಾನ ಗೆದ್ದವರು ಗೀತಾ ಗೋಪಾಲ್,ಮೈಸೂರು.ಅಭಿನಂದನೆಗಳು.

Udayavani
*ಅಶೋಕ್‌ಕುಮಾರ್ ಎ