Monday, September 26, 2011

ಸಾಧನಗಳ ಅಯ್ಕೆ ನೌಕರರಿಗೆ


ಸಾಧನಗಳ ಅಯ್ಕೆ ನೌಕರರಿಗೆ
ಕಚೇರಿಗಳಲ್ಲಿ ಡೆಸ್ಕ್‌ಟಾಪ್,ಲ್ಯಾಪ್‌ಟಾಪ್ ಅಂತಹ ಸಾಧನಗಳನ್ನು ನೌಕರರಿಗೆ ಒದಗಿಸುವುದರ ಬಗ್ಗೆ  ಕಂಪೆನಿಗಳು ತಮ್ಮಷ್ಟಕ್ಕೆ ನಿರ್ಧರಿಸುವುದೇ ಹೆಚ್ಚು.ಯಾವ ತರದ,ಯಾವ ಸಾಮರ್ಥ್ಯದ,ಕಂಪೆನಿಯ ಸಾಧನವೆನ್ನುವುದರಲ್ಲಿ ನೌಕರನ ಖುಷಿಯನ್ನು ಕೇಳುವ ಕಚೇರಿಗಳು ಹೆಚ್ಚಿರಲಿಲ್ಲ.ಅದೇನಿದ್ದರೂ ಆಡಳಿತ ವರ್ಗದ ತೀರ್ಮಾನವಾಗುತ್ತಿತ್ತು.ಈಗ ಬದಲಾದ ಪರಿಸ್ಥಿತಿಗಳಲ್ಲಿ,ಹಲವು ಸಾಧನಗಳ ಲಭ್ಯತೆಯಿದೆ.ಟ್ಯಾಬ್ಲೆಟ್,ಸ್ಮಾರ್ಟ್‌ಪೋನುಗಳ ಬಳಕೆ ಇಷ್ಟಪಡುವವರು ಕೆಲವರಾದರೆ,ಲ್ಯಾಪ್‌ಟಾಪ್ ಇಷ್ಟಪಡುವವರೂ ಇದ್ದಾರೆ.ಡೆಸ್ಕ್‌ಟಾಪಿಗೇ ಕಟ್ಟ್ಟುಬೀಳುವವರು ಕಡಿಮೆಯಾದರೂ ಇಲ್ಲವೇ ಇಲ್ಲವೆಂದೇನೂ ಹೇಳಲಾಗದು.ಕಂಪೆನಿಗಳು ಸಾಧನಗಳ ಅಯ್ಕೆಯನ್ನು ನೌಕರರಿಗೇ ಬಿಟ್ಟು,ಅದಕ್ಕೆ ಹಣಕಾಸು ಒದಗಿಸಲು ಮುಂದೆ ಬರುವುದು ಸದ್ಯದ ವೈಖರಿ.ನೌಕರರ ಅಯ್ಕೆಯ ಪ್ರಕಾರ ಸಾಧನಗಳನ್ನು ಒದಗಿಸಿ,ಅವರಿಂದ ಹೆಚ್ಚಿನ ದಕ್ಷತೆಯ ಕೆಲಸವನ್ನವು ನಿರೀಕ್ಷಿಸುತ್ತವೆ.ಕೆಲಸಕ್ಕೆ ಒತ್ತು-ಯಾವ ಸಾಧನ ಎನ್ನುವುದು ನಗಣ್ಯ ಎನ್ನುವುದು ಕಂಪೆನಿಗಳ ನಿರ್ಣಯ.ಇದು ನೌಕರರಿಗೂ ಇಷ್ಟವಾಗುವ ವೈಖರಿ.ಮನೆಯಲ್ಲೂ ಬಳಸಲು ಅನುಕೂಲವಾಗುವ ಸಾಧನವನ್ನು ಖರೀದಿಸಿದದರೆ ಹೆಚ್ಚು ಅನುಕೂಲ-ಸ್ವಾಮಿಕಾರ್ಯ,ಸ್ವಕಾರ್ಯ ಎರಡೂ ನಡೆಯುತ್ತದಲ್ಲ ಎನ್ನುವುದು ಅವರ ಲೆಕ್ಕಾಚಾರ.
----------------------------------------
ಫ್ರಾನ್ಸಿನಲ್ಲಿ 4ಜಿ ಹರಾಜು
ಫ್ರಾನ್ಸಿನಲ್ಲಿ 4ಜಿ ತರಂಗಾಂತರವನ್ನು ಹರಾಜು ಹಾಕುವ ಪ್ರಕ್ರಿಯೆ ಜಾರಿಯಲ್ಲಿದೆ.ಅದು ನಿರೀಕ್ಷಿತ ಆದಾಯಗಳಿಕೆಯನ್ನು ತರುವುದೂ ಬಹುತೇಕ ನಿಶ್ಚಿತವೆಂದು ಕಾಣುತ್ತಿದೆಯಂತೆ.ಹರಾಜಿನಿಂದ ಸರಕಾರ ಮೂರೂವರೆ ಬಿಲಿಯನ್ ಡಾಲರು ಆದಾಯ ನಿರೀಕ್ಷಿಸಿರುವ ಫ್ರಾನ್ಸ್ ಸರಕಾರ,ಆ ಮೊತ್ತ ಗಳಿಸುವುದು ಬಹುತೇಕ ಖಚಿತವಾಗಿದೆ.ಈಗ ಎರಡು ಸುತ್ತುಗಳ ಹರಾಜು ಪ್ರಕ್ರಿಯೆ ನಂತರ ಮುಕ್ಕಾಲು ಪಾಲು ಆದಾಯ ಬಂದಾಗಿದೆ.
----------------------------------
ಗೂಗಲ್ ವಾಲೆಟ್:ಮೊಬೈಲ್ ಮೂಲಕ ಪಾವತಿ
ಗೂಗಲ್ ನಕ್ಸಸ್ ಪೋನುಗಳನ್ನು ಬಳಸುವವರಿಗೆ ವ್ಯಾಲೆಟ್ ಎನ್ನುವ ಹೊಸ ಸೇವೆಯನ್ನು ಗೂಗಲ್ ನೀಡಲಾರಂಭಿಸಿದೆ.ಕ್ರೆಡಿಟ್ ಕಾರ್ಡನ್ನು ಮೊಬೈಲ್ ತಂತ್ರಾಂಶಕ್ಕೆ ತುಂಬಿ,ಅದರ ಮೂಲಕ ಹಣ ಪಾವತಿಸುವ ವ್ಯವಸ್ಥೆ ಇದಾಗಿದೆ.ರೀಡರ್ ಇರುವೆಡೆ,ಹ್ಯಾಂಡ್‌ಸೆಟ್ಟನ್ನು ರೀಡರಿಗೆ ಸ್ಪರ್ಶಿಸುವ ಮೂಲಕವೇ ಹಣ ಪಾವತಿಸುವ ಅನುಕೂಲತೆಯಿದೆ.ಸಮೀಪಜಾಲಗಳ ಏರ್ಪಡುವಿಕೆಯ ಮೂಲಕ ಕೆಲಸ ಮಾಡುವ ಈ ವ್ಯವಸ್ಥೆಯು ಜನರಿಗೆ ಅರ್ಥವಾಗಲು ತುಸು ಸಮಯ ಹಿಡಿಸಬಹುದು.ಜತೆಗೆ ಸಾಧನ ನಕ್ಸಸ್ ಬೇಕೆನ್ನುವುದು ಇದರ ಬಳಕೆಗೆ ಇನ್ನೊಂದು ಅಡ್ದಿಯಾಗಲಿದೆ.ಎಲ್ಲಾ ಮೊಬೈಲ್ ಜಾಲಗಳಲ್ಲಿ ಈ ಸೇವೆ ಲಭ್ಯವಿಲ್ಲವೆನ್ನುವುದು ಇನ್ನೊಂದು ಸಮಸ್ಯೆ.
-----------------------------------
ಗ್ರಹಗಳ ಪತ್ತೆ:ಜನರ ಸಹಭಾಗಿತ್ವ
ಜನರು ತಮಗೆ ತಿಳಿದ ವಿಷಯಗಳನ್ನು ಇತರರ ಜತೆ ಹಂಚಿಕೊಳ್ಳುವ ಮೂಲಕ,ಇತರರೂ ಅದರ ಲಾಭ ಪಡೆಯಲು ಅನುವಾಗುವ ಪ್ರಕ್ರಿಯೆ ಅಂತರ್ಜಾಲದ ಮೂಲಕ ನಡೆಯುತ್ತಲಿದೆ.ಹೋಟೆಲುಗಳು,ಅಂಗಡಿಗಳು,ಪುಸ್ತಕಗಳು ಹೀಗೆ ಹಲವಾರು ಮಾಹಿತಿಗಳ ಬಗ್ಗೆ ಜನರು ತಮಗೆ ತಿಳಿದದ್ದನ್ನು ಅಂತರ್ಜಾಲದಲ್ಲಿ ಇತರರೊಂದಿಗೆ ಹಂಚಿಕೊಂಡು,ಅವರೂ ಅವುಗಳ ಪ್ರಯೋಜನ ಪಡೆಯಲು ಸಹಕಾರ ನೀಡುವುದಿದೆ.ಇದನ್ನು ಗ್ರಹಗಳ ಅನ್ವೇಷನೆಗೂ ಬಳಸುವ ಯೋಜನೆ ಈಗ ಚಾಲ್ತಿಯಲ್ಲಿದೆ.ನಾಸಾದ ಕೆಪ್ಲರ್ ಯೋಜನೆಯನುಸಾರ ಪ್ರತಿ ಮೂವತ್ತು ಸೆಕೆಂಡಿಗೆ ಎರಡು ಲಕ್ಷ ನಕ್ಷತ್ರಗಳ ಬಗ್ಗೆ ಮಾಹಿತಿ ಸಂಗ್ರಹವಾಗುತ್ತದೆ.ಈ ಮಾಹಿತಿಯನ್ನು ಕಂಪ್ಯೂಟರುಗಳು ಜಾಲಾಡಿ,ಹೊಸ ಗ್ರಹಗಳನ್ನು ಅನ್ವೇಷಿಸುತ್ತವೆ.ಜನರೂ ಅಂತಹ ಜಾಲಾಟದಲ್ಲಿ ಕೈಗೂಡಿಸಿದರೆ,ಅವರೂ ಗ್ರಹಗಳ ಅನ್ವೇಷಣೆ ಮಾಡಬಹುದು.ಕಂಪ್ಯೂಟರ್ ಮೂಲಕ ನಡೆವ ಅನ್ವೇಷಣೆಗಿಂತ ಜನರು ನಡೆಸುವ ಅನ್ವೇಷಣೆ ಹೆಚ್ಚು ಯಶಸ್ವಿಯಾಗಬಹುದು.ಆದರೆ ಮಾಹಿತಿಯ ಅಗಾಧತೆಯ ಕಾರಣ ಈ ಕೆಲಸಕ್ಕೆ ಸಾವಿರಾರು ಜನರ ಸಹಭಾಗೀತ್ವ ಬೇಕಾಗುತ್ತದೆ.ಹಾಗಾಗಿ ಅಂತರ್ಜಾಲದ ಮೂಲಕ ನಡೆಯುವ ಅನ್ವೇಷಣೆಗೆ ಹೆಚ್ಚು ಅರ್ಥ ಬರುತ್ತದೆ.ಮೂರು ಲಕ್ಷ ಜನರು ಇಂತಹ ಯೋಜನೆಯೊಂದರಲ್ಲಿ ಕೆಪ್ಲರ್ ಮಾಹಿತಿಯನ್ನು ಪರಿಶೀಲಿಸಿ,ಎರಡು ಗ್ರಹಗಳ ಅನ್ವೇಷಣೆಗೆ ಸಹಾಯಹಸ್ತ ನೀಡಿದ್ದಾರೆ.ಗ್ರಹಾನ್ವೇಷಿಗಳ ಈ ಹೊಸ ಬಳಗ ತಮ್ಮ ಮೂರುಲಕ್ಷ ಮಿದುಳಿನ ಶಕ್ತಿಯನ್ನು ಜತೆಯಾಗಿಸಿ,ಆಪೂರ್ವ ವಿನ್ಯಾಸ ಅನ್ವೇಷಿಗಳಾಗಿ ಮೂಡಿಬಂದಿದ್ದಾರೆ.
-------------------------------------------
ಉಪಗ್ರಹ ಬಿತ್ತೇ?
ಬಸ್ಸಿನ ಗಾತ್ರದ ನಾಸಾ ಉಪಗ್ರಹ ಈಗಾಗಲೇ ಭೂಮಿಯ ವಾತಾವರಣಕ್ಕೆ ಬಿದ್ದಿರುತ್ತದೆ.ಇದುವರೆಗೆ ಸಾವಿರಾರು ಉಪಗ್ರಹಗಳು ಹೀಗೆ ಭೂಮಿಗೆ ವಾಪಸಾದರೂ,ಯಾವತ್ತೂ ಯಾರಿಗೂ ಬಡಿದು ಹಾನಿ ಮಾಡಿದ ಉದಾಹರಣೆಗಳಿಲ್ಲ.ಇದು ದೊಡ್ದ ಉಪಗ್ರಹವಾದರೂ,ಬೀಳುವ ಮುನ್ನ ಸಾವಿರಾರು ಹೋಳಾಗಿ ಬೀಳುವುದು ಖಂಡಿತ.ಹಾಗಾಗಿ ಅದು ಹಾನಿ ಮಾಡದು ಎನ್ನುವ ನಿರೀಕ್ಷೆ ಹೇಗೂ ಇತ್ತು.ಆಪ್ರಿಕಾ,ಕೆನಡಾಗಳಲ್ಲಿ ಬೀಳಬಹುದು  ಎನ್ನುವುದು ಲೆಕ್ಕಾಚಾರ.ಆದರೆ ಅದು ಬೀಳುವ ಸಮಯದ ಬಗ್ಗೆ ಲೆಕ್ಕಾಚಾರ  ಸರಿಯಾಗೇನೂ ಹಾಕಲಾಗಲಿಲ್ಲ.ಇದನ್ನು ಬರೆಯುವ ವೇಳೆಗೇ ಉಪಗ್ರಹ ಭೂಮಿಗೆ ಬಿದ್ದಾಗಿರಬಹುದು ಎಂದು ನಾಸಾ ವರದಿಗಳು ತಿಳಿಸಿದ್ದರೂ,ಅದು ಎಲ್ಲಿ ಬಿದ್ದಿತ್ತು ಎನ್ನುವುದನ್ನೂ ಹೇಳಲು ಅಸಮರ್ಥವಾಗಿತ್ತು.ಆರುವರೆ ಟನ್ ಭಾರದ ಉಪಗ್ರಹವನ್ನು ಒಂಭೈನೂರತೊಂಭತ್ತೊಂದರಲ್ಲಿ ಕಕ್ಷೆಗೆ ಸೇರಿಸಲಾಗಿತ್ತು.ಆರು ವರ್ಷ ಹಿಂದೆಯೇ ಇದರ ಬಳಕೆಯನ್ನು ನಿಲ್ಲಿಸಲಾಗಿತ್ತು.
---------------------------------------
ಟಿವಿ ಇಲ್ಲದ ಠೀವಿ
ಮುಂದಿನ ದಿನಗಳಲ್ಲಿ ಟಿವಿ ಕಾರ್ಯಕ್ರಮ ವೀಕ್ಷಣೆಗೆ ಟಿವಿ ಬಳಸುವುದು ಕಡಿಮೆಯಾದೀತು.ಹಿಗೆಂದರೆ ಅಚ್ಚರಿ ಪಡಲೇನೂ ಇಲ್ಲ.ಈಗ ಟಿವಿ ಕಾರ್ಯಕ್ರಮಗಳು ಮೊಬೈಲಿನಲ್ಲಿ,ಕಂಪ್ಯೂಟರ್ ಮೂಲಕ ನೋಡಲು ಸಾಧ್ಯ.ಹಾಗಾಗಿ ಟಿವಿಯ ಮೂಲಕವೆ ಟಿವಿ ಕಾರ್ಯಕ್ರಮಗಳನ್ನು ವೀಕ್ಷಿಸುವವರು ಒಂದು ವರ್ಗದವರು ಮಾತ್ರಾ.ಸಂಚಾರದಲ್ಲಿರುವವರು ಸ್ಮಾರ್ಟ್‌ಪೋನುಗಳಲ್ಲಿ ಟಿವಿ ವಾರ್ತೆ,ಕಾರ್ಯಕ್ರಮಗಳನ್ನು ನೋಡಲು ಬಯಸುವುದು ಸಹಜ.ತ್ರೀಜಿ ಅಂತಹ ತಂತ್ರಜ್ಞಾನವು ಶರವೇಗದಲ್ಲಿ ಸಂಕೇತಗಳನ್ನು ಸ್ವೀಕರಿಸಬಲ್ಲದಾದ ಕಾರಣ,ವಿಡಿಯೋವನ್ನೂ ಬೇಗನೇ ಡೌನ್‌ಲೋಡ್ ಮಾಡಬಲ್ಲುದು.ಆಮೆಗತಿಯ ಹಿಂದಿನ ಜಾಲಗಳಲ್ಲಿ ವೀಡಿಯೋ ವೀಕ್ಷಣೆ ಕಷ್ಟಕರವಾಗಿತ್ತು.ಲೈವ್ ಕಾರ್ಯಕ್ರಮಗಳನ್ನೂ ಕೂಡಾ ಸ್ಮಾರ್ಟ್‌ಪೋನುಗಳಲ್ಲಿ ನೋಡುವುದು ಶರವೇಗದ ಜಾಲಗಳಲ್ಲಿ ಸಮಸ್ಯೆಯಲ್ಲ.
-------------------------------------
ತುಷಾರ:ವಾರ್ಷಿಕ  ಚಂದಾ ಗೆಲ್ಲಿ!
ಈ ಪ್ರಶ್ನೆಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಶೋಭಾ ಮೋಹನ್,ಬೆಂಗಳೂರು.
*ಮುಂದಿನ ಮಿನಿಡೆಬಿಯನ್ ಕಾನ್ಫರೆನ್ಸ್ ನಡೆಯುವ ಸ್ಥಳ ಯಾವುದು?ಯಾವಾಗ?
(ಉತ್ತರವನ್ನು nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ:NS49 ನಮೂದಿಸಿ.)
ಕಳೆದ ವಾರದ ಬಹುಮಾನಿತ ಉತ್ತರ:
**ಮಣಿಪಾಲ್ ಮಾರ್ಟ್ ಮಣಿಪಾಲದ ಸುತ್ತಮುತ್ತ ವ್ಯವಹಾರ ಬಗ್ಗೆ ಬಹುವಿಧದ ಮಾಹಿತಿ ನೀಡುವ ತಾಣವಾಗಿದೆ.ಬಹುಮಾನ ವಿಜೇತರು ನಿರ್ಮಲಾ ನಾಯಕ್,ಗಂಗೊಳ್ಳಿ.ಅಭಿನಂದನೆಗಳು.

ಉದಯವಾಣಿ 

*ಅಶೋಕ್‌ಕುಮಾರ್ ಎ

Monday, September 19, 2011

ಇಂಟೆಲ್:ದಕ್ಷ ಸಂಸ್ಕಾರಕ ರೆಡಿ

ಇಂಟೆಲ್:ದಕ್ಷ ಸಂಸ್ಕಾರಕ ರೆಡಿ

ಇಂಟೆಲ್ ಕಂಪೆನಿಯು ಕಂಪ್ಯೂಟರ್ ಸಂಸ್ಕಾರಕಗಳನ್ನು ತಯಾರಿಸುವಲ್ಲಿ ಅಗ್ರಗಣ್ಯ ಕಂಪೆನಿ.ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್ ಸಾಧನಗಳ ಸಂಸ್ಕಾರಕಗಳ ಮಟ್ಟಿಗೆ ಮಾತ್ರಾ ಇಂಟೆಲ್ ತುಸು ಹಿಂದೆ ಬಿದ್ದಿದೆ.ಅರ್ಮ್ ಸಂಸ್ಕಾರಕವು ಈ ಸಾಧನಗಳ ಮಟ್ಟಿಗೆ ಇಂಟೆಲ್ ಅನ್ನು ಹಿಂದಿಕ್ಕಿದೆ.ಸದ್ಯ ಆಟಂ ಮತ್ತು ಓಕ್ ಟೈಲ್ ಎನ್ನುವ ಸಂಸ್ಕಾರಕಗಳು ಇಂಟೆಲ್ ಮಟ್ಟಿಗೆ ಮಿತ ಶಕ್ತಿ ಬಳಸುವ ಸಂಸ್ಕಾರಕಗಳು.ಈಗ ಅತ್ಯಧಿಕ ಕ್ಷಮತೆಯುಳ್ಳ ಸಂಸ್ಕಾರಕವನ್ನು ತಯಾರಿಸಿದೆ.ಹೊಸ ಬಳಸುವ ಶಕ್ತಿ ಎಷ್ಟು ಕಡಿಮೆ ಅಂದರೆ,ಅದು ಸೌರಕೋಶದಿಂದ ಉತ್ಪಾದನೆಯಾದ ಶಕ್ತಿಯನ್ನು ಬಳಸಿ ಕೆಲಸ ಮಾಡಬಲ್ಲುದು.ಒಂದು ಸಣ್ಣ ಪೋಸ್ಟೇಜ್ ಸ್ಟ್ಯಾಂಪ್ ಗಾತ್ರದ ಸೌರಕೋಶದಿಂದ ತಯಾರಾದ ಶಕ್ತಿ ಸಂಸ್ಕಾರಕಕ್ಕೆ ಸಾಕಾಗುತ್ತದೆ.ಅಂದ ಹಾಗೆ ಕುತೂಹಲದ ವಿಷಯವೆಂದರೆ,ಲೀನಕ್ಸ್ ಆಪರೇಟಿಂಗ್ ವ್ಯವಸ್ಥೆ ಇದರಲ್ಲಿ ಬಳಕೆಯಾಗಿದೆ.ಟ್ರಾನ್ಸಿಸ್ಟರುಗಳು ಕೆಲಸ ಮಾಡಲು ಬಳಸುವ ವೊಲ್ಟೇಜ್‌ನ ಅತಿ ಸಮೀಪದ ವೋಲ್ಟೆಜ್ ಬಳಸುವ ಮೂಲಕ ಸಂಸ್ಕಾರಕದ ಶಕ್ತಿಯ ಅಗತ್ಯವನ್ನು ತಗ್ಗಿಸಲು ಇಂಟೆಲ್ ಸಮರ್ಥವಾಯಿತು.ಈ ಸಂಸ್ಕಾರಕದ ದಕ್ಷತೆಯ ಕಾರಣ,ಇದು ಮೊಬೈಲ್ ಸಾಧನಗಳಿಗೆ ಹೇಳಿ ಮಾಡಿಸಿದ ಸಂಸ್ಕಾರಕವಾಗಲಿದೆ.ಬಳಸುವಾಗ,ವಿದ್ಯುತ್ ಸಂಪರ್ಕ ಇಲ್ಲದ ಸಾಧನಗಳಲ್ಲಿ ದಕ್ಷ ಸಂಸ್ಕಾರಕವನ್ನು ಬಳಸುವುದು ಬ್ಯಾಟರಿಯ ದೀರ್ಘ ಬಳಕೆಗೆ ಅನುಕೂಲ ಕಲ್ಪಿಸುತ್ತವೆ.ಹೊಸ ಸಂಸ್ಕಾರಕಕ್ಕೆ ಕ್ಲಾರಮೊಂಟ್ ಎಂದು ಹೆಸರಿಸಲಾಗಿದೆ.ಇವನ್ನು ಬಟಾಟೆ ಅಥವಾ ಲಿಂಬೆರಸದಲ್ಲಿ ಲಭ್ಯವಿರುವ ಶಕ್ತಿಯಿಂದಲೇ ಕೆಲಸ ಮಾಡುವಂತೆ ಮಾಡಲು ಸಾಧ್ಯವೆಂದು ಕಂಪೆನಿಯ ವಕ್ತಾರ ಹೇಳಿಕೊಂಡರು.ಇಂತಹ ಸಂಸ್ಕಾರಕವು ಕೆಲಸವಿಲ್ಲದಾಗಲೂ ಸ್ಥಗಿತಗೊಳ್ಳದೆ ಸದಾ ಚಾಲೂ ಆಗಿಟ್ಟರೂ ತೊಂದರೆಯಾಗದು.ಇದರ ಶಕ್ತಿಯ ಅಗತ್ಯ ಹತ್ತು ಮಿಲ್ಲಿವ್ಯಾಟ್‌ಗಿಂತ ಕಡಿಮೆಯಾದ ಕಾರಣ,ಇದರಲ್ಲಿ ಶಾಖ ಬಿಡುಗಡೆಯಾಗದು.ಶಾಖವನ್ನು ಹೊರಗಿನ ವಾತಾವರಣಕ್ಕೆ ಹೊರದೂಡಲು ಅಗತ್ಯವಾದ ಹೀಟ್ ಸಿಂಕ್ ಇದರಲ್ಲಿಲ್ಲ.ದಿನಪೂರ್ತಿ ನಡೆಯಬಹುದಾದ ಲ್ಯಾಪ್‌ಟಾಪ್,ಅಂತರ್ಜಾಲದಿಂದ ಮಾಹಿತಿಯನ್ನು ಆಗಾಗ ಇಳಿಸಿಕೊಳ್ಳುವ ಕೆಲಸ ಮಾತ್ರಾ ಮಾಡುತ್ತಿದ್ದರೆ,ಹತ್ತು ದಿನ ಕೆಲಸ ಮಾಡುವಷ್ಟು ಕಡಿಮೆ ಬ್ಯಾಟರಿಯನ್ನು ಬಳಸುತ್ತದೆ.

------------------------------------------------
ಆರ್ ಟಿ ಐ :ಮೊಬೈಲ್ ಮೂಲಕ ಅರ್ಜಿ
ಮಾಹಿತಿಯ ಹಕ್ಕು ಕಾನೂನು ಮೂಲಕ ಅಗತ್ಯ ಮಾಹಿತಿಗೆ ಅರ್ಜಿ ಸಲ್ಲಿಕೆಯನ್ನು ಮೊಬೈಲ್ ಮೂಲಕ ಸಾಧ್ಯವಾಗಿಸುವತ್ತ ಕರ್ನಾಟಕ ಸರಕಾರ ಹೆಜ್ಜೆಯಿಕ್ಕಿದೆ.ಖಾಸಗಿ ಸೇವಾದಾತೃಗಳ ಮೂಲಕ ಈ ಸೇವೆ ಜನರಿಗೆ ಲಭ್ಯವಾಗಲಿದೆ.ಮಾಹಿತಿಹಕ್ಕಿನ ಪ್ರಕಾರ ಸಲ್ಲಿಸಿದ ಅರ್ಜಿಗೆ ಅನ್ವಯಿಸುವ ಶುಲ್ಕವನ್ನು ಮೊಬೈಲ್ ಕರೆಯ ಮೇಲೆ ವಿಧಿಸುವ ಶುಲ್ಕದ ಮೂಲಕ ವಸೂಲಿ ಮಾಡಲಾಗುತ್ತದೆ.ಗ್ರಾಹಕ ಸರಕಾರಿ ಕಚೇರಿಗೆ ಹೋಗದೆ,ಈ ಸೇವೆಯ ಮೂಲಕ ಮಾಹಿತಿ ಪಡೆಯಲು ಸಾಧ್ಯವಾಗುತ್ತದೆ.ಟಿಸಿಎಸ್ ಕಂಪೆನಿಯ ಸೋದರಿ ಸಂಸ್ಥೆಯಾದ ಸಿಎಂಸಿಯು ಇದನ್ನು ಅಭಿವೃದ್ಧಿ ಪಡಿಸಲು ಸರಕಾರದಿಂದ ಹಸಿರು ಸಂಕೇತ ಪಡೆದಿದೆ.ಬಿಹಾರದಲ್ಲಿ ಇಂತಹ ಸೇವೆಯು ಲಭ್ಯವಾಗಿ ಇದೀಗಲೇ ನಾಲ್ಕು ವರ್ಷಗಳು ಕಳೆದಿವೆ.ಕಂಪೆನಿಯು ನಿರ್ವಹಿಸುವ ಕಾಲ್ ಸೆಂಟರಿನ ಮೂಲಕ ಜನರು ಮಾಹಿತಿಗಾಗಿ ಸಲ್ಲಿಸುವ ಬೇಡಿಕೆಯನ್ನು ದಾಖಲಿಸಿಕೊಂಡು ಸಂಬಂಧಿತ ಇಲಾಖೆಗೆ ಅರ್ಜಿಯನ್ನು ಸಲ್ಲಿಸುವ ಕೆಲಸವನ್ನು ಕಂಪೆನಿಯು ಮಾಡಲಿದೆ.ಅರ್ಜಿಯ ವಿಲೇವಾರಿ ಬಗ್ಗೆಯೂ ಮಾಹಿತಿಯನ್ನು ಕಾಲ್ ಸೆಂಟರಿನ ಮೂಲಕ ಪಡೆಯಲು ಸಾಧ್ಯ.ಹದಿನೈದು ಜನರನ್ನು ಕಾಲ್ ಸೆಂಟರಿನ ನಿರ್ವಹಣೆಗೆ ಸದ್ಯ ಬಳಸಲು ಕಂಪೆನಿಯು ತೀರ್ಮಾನಿಸಿದೆ.ಜನರು ಅಂತರ್ಜಾಲ ತಾಣದ ಮೂಲಕವೂ ಅರ್ಜಿ ಸಲ್ಲಿಸಬಹುದು.ಇದರಲ್ಲಿ ಶುಲ್ಕವನ್ನು ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸುವ ಆಯ್ಕೆಯೂ ಇದೆಯಂತೆ.
------------------------------
ವಿಂಡೋಸ್ ಎಂಟು:ಮೊಬೈಲ್ ನಂಟು
ವಿಂಡೋಸ್ ಎಂಟು ಆಪರೇಟಿಂಗ್ ವ್ಯವಸ್ಥೆಯ ಮೂಲಕ ಮೈಕ್ರೋಸಾಫ್ಟ್ ಕಂಪೆನಿಯು ತನ್ನ ಹೊಸ ಆಪರೇಟಿಂಗ್  ತಂತ್ರಾಂಶವನ್ನು ಬರುವ ವರ್ಷ ತಯಾರು ಮಾಡಿ,ಜನರಿಗೆ ಒದಗಿಸಲು ಸಿದ್ಧತೆ ನಡೆಸಿದೆ.ಮಾಮೂಲಿ ಡೆಸ್ಕ್‌ಟಾಪ್ ಕಂಪ್ಯೂಟರುಗಳು,ಲ್ಯಾಪ್‌ಟಾಪ್ ಮತ್ತು ನೋಟ್‌ಬುಕ್‌ಗಳಲ್ಲಿ ಮಾತ್ರವಲ್ಲದೆ ಟ್ಯಾಬ್ಲೆಟ್ ಸಾಧನಗಳಲ್ಲೂ ಇದನ್ನು ಬಳಸಲು ಸಾಧ್ಯವಾಗಲಿದೆ.ಹಾಗಾಗಿ ಟ್ಯಾಬ್ಲೆಟ್‌ಗಳಿಗೆ ವಿಂಡೋಸ್ ವ್ಯವಸ್ಥೆಯಲ್ಲಿ ಬಳಸಬಹುದಾದ ತಂತ್ರಾಂಶಗಳ ತಯಾರಿ ಇದೀಗಲೇ ನಡೆಯಬಹುದು ಎನ್ನುವ ನಿರೀಕ್ಷೆಯಿದೆ.ಆಂಡ್ರಾಯಿಡ್,ಐಫೋನ್ ಅಂತೆ ವಿಂಡೋಸ್ ಇಂತಹ ಸಾಧನಗಳಲ್ಲಿ ಬಳಕೆಯಾಗುವ ಪ್ರಮಾಣ ಇಲ್ಲವೇ ಇಲ್ಲ ಎನ್ನುವಷ್ಟು ವಿರಳ.ಅಲ್ಲದೆ ವಿಂಡೋಸ್ ಎಂಟು ಬಿಡುಗಡೆಯಾಗಲು ಇನ್ನೂ ಸಮಯ ಹಿಡಿಸಬಹುದು ಎನ್ನುವುದು,ನಿಶ್ಚಿತ ಬಳಕೆದಾರರ ಭರವಸೆ ಇಲ್ಲದಿರುವುದು,ಅಭಿವೃದ್ಧಿಕಾರರನ್ನು ಸೆಳೆಯಲು ಪ್ರಮುಖ ಅಡ್ಡಿಗಳಾಗಿವೆ.
-------------------------------------
ತುಷಾರ:ವಾರ್ಷಿಕ  ಚಂದಾ ಗೆಲ್ಲಿ!
ಈ ಪ್ರಶ್ನೆಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಶೋಭಾ ಮೋಹನ್,ಬೆಂಗಳೂರು.
*ಮಣಿಪಾಲ್ ಮಾರ್ಟ್ ಏನು?
(ಉತ್ತರವನ್ನು nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ:NS48 ನಮೂದಿಸಿ.)
ಕಳೆದ ವಾರದ ಬಹುಮಾನಿತ ಉತ್ತರ:
*ಕನ್ನಡ ಟೈಪಿಸಲು ಕಂಪ್ಯೂಟರಿನಲ್ಲಿ ಬರಹ,ನುಡಿ,ಪದ ಮುಂತಾದ ತಂತ್ರಾಂಶ ವ್ಯವಸ್ಥೆಗಳಿವೆ.ಬಹುಮಾನ ವಿಜೇತರು ಅವಿನಾಶ್ ವಿ,ಕಿನ್ನಿಕಂಬಳ.ಅಭಿನಂದನೆಗಳು.
Udayavani Unicode 
Udayavani
*ಅಶೋಕ್‌ಕುಮಾರ್ ಎ

Monday, September 12, 2011

ಪರಿಸರಪ್ರಿಯ ಕೌಡ್ ಸೇವೆ

ಪರಿಸರಪ್ರಿಯ ಕೌಡ್ ಸೇವೆಅಂತರ್ಜಾಲ ಆಧಾರಿತ ಸೇವೆಗಳನ್ನು ಬಳಸುವ ಮೂಲಕ ಸೌಕರ್ಯಗಳ ದಕ್ಷ ಬಳಕೆ ಸಾಧ್ಯ.ಹೀಗಾಗಿ ಅನಗತ್ಯ ಪೋಲು ತಪ್ಪಿಸಬಹುದು.ಸ್ಮರಣಶಕ್ತಿಯನ್ನು ಡಾಟಾ ಸೆಂಟರುಗಳ ಮೂಲಕ ಲಭ್ಯವಾಗಿಸುವ ಸೇವೆ,ಸರ್ವರ್ ಬಳಕೆ,ತಂತ್ರಾಂಶ ಸೇವೆ ಹೀಗೆ ವೈವಿಧ್ಯಮಯ ಸೇವೆಗಳನ್ನು ಒದಗಿಸುವ ಅಂತರ್ಜಾಲ ಅಧಾರಿತ ಕ್ಲೌಡ್ ಸೇವೆಗಳ ಮೂಲಕ ಬಳಕೆದಾರರು ಇಂತಹ ಮೂಲಸೌಕರ್ಯಗಳನ್ನು ತಾವೇ ನಿರ್ವಹಿಸುವ ತೊಂದರೆ ತಪ್ಪುತ್ತದೆ.ಹೊರಗುತ್ತಿಗೆಯಾಗಿ ಹಲವರಿಗೆ ಸೇವೆ ಒದಗಿಸುವ ಅಂತರ್ಜಾಲ ತಾಣಗಳು,ಉತ್ತಮ ಪರಿಣತ ಸೇವೆ,ಸಮಗ್ರ ನಿರ್ವಹಣೆ ಮತ್ತು ದಕ್ಷ ಸೇವೆ ನೀಡಲು ಸಾಧ್ಯವಾಗುತ್ತದೆ.ಮಾತ್ರವಲ್ಲ ಸೇವೆಗಳು ಬಳಕೆದಾರರಿಗೆ ಸ್ಪರ್ಧಾತ್ಮಕ ದರಗಳಲ್ಲೂ ಲಭ್ಯವಾಗುತ್ತವೆ.ವಿದ್ಯುಚ್ಛಕ್ತಿಯ ಮಿತಬಳಕೆಯು ಆಗುವುದರಿಂದ ಇದು ಪರಿಸರಪ್ರಿಅವು ಹೌದು. 
ಕ್ಲೌಡ್ ಸೇವೆಗಳ ಮೂಲಕ ವಿನೂತನ ಸೇವೆಗಳನ್ನು ಒದಗಿಸುವಲ್ಲಿ ಭಾರತೀಯ ಕಂಪೆನಿಗಳು ಆಸಕ್ತಿ ತೋರುತ್ತಿವೆ.ಅಪ್ನಾಟೆಕ್ನಾಲಜಿ ಎನ್ನುವ ಕಂಪೆನಿಯು,ರೈಲ್ವೇ ಹಳಿಗಳ ಸಮೀಪ ಸಂವೇದಕಗಳನ್ನು ಸ್ಥಾಪಿಸಿ,ಅದರ ಮೂಲಕ ರೈಲ್ವೇ ಹಳಿಗಳ ಸುರಕ್ಷತೆಗೆ ಅಪಾಯವಿದ್ದಾಗ,ಎಚ್ಚರಿಕೆ ನೀಡುವ ವ್ಯವಸ್ಥೆಯನ್ನು ಜಾರಿಗೆ ತಂದಿದೆ.ಅದು ತನ್ನ ಸೇವೆಯನ್ನು ಅಂತರ್ಜಾಲದ ಸರ್ವರುಗಳ ಮುಖಾಂತರ ನೀಡುವುದರಿಂದ,ಇದೂ ಒಂದು ಕ್ಲೌಡ್ ಸೇವೆಯಾಗಿ ಪರಿಗಣಿಸಲ್ಪಡುತ್ತದೆ.ಇದೇ ರೀತಿ ಹೋಟೆಲ್ ನಿರ್ವಹಣೆ,ಮೊಬೈಲ್ ಸೇವೆಗಳು,ಐಟಿ,ಬ್ಯಾಂಕಿಂಗ್ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಕ್ಲೌಡ್ ಆಧಾರಿತ ಸೇವೆಗಳು ಲಭ್ಯವಾಗುತ್ತಿವೆ.ಸದ್ಯ ಭಾರತದಲ್ಲಿ ಸಾವಿರದ ಅರುನೂರು ಕೋಟಿ ರೂಪಯಿಗಳ ವ್ಯವಹಾರ ಈ ರೀತಿಯಲ್ಲಿ ನಡೆಯುತ್ತಿದ್ದು,ಇನ್ನೈದು ವರ್ಷಗಳಲ್ಲಿ ಇದು ಹತ್ತು ಪಟ್ಟು ಏರಬಹುದು ಎಂದು ಅಂದಾಜು.
ಇದೇ ವೇಳೆ ಕಂಪ್ಯೂಟರುಗಳಿಗೆ ಬೇಡಿಕೆ, ಈ ವರ್ಷ ಸುಮಾರು ಮೂವತ್ತೈದು ಶೇಕಡಾ ಏರಬಹುದು ಎಂದು ಅಂದಾಜಿಸಲಾಗಿದೆ.ಡೆಸ್ಕ್‌ಟಾಪ್‌ಗಳಿಗೆ ಬೇಡಿಕೆ ಆರು ದಶಲಕ್ಷಗಳಿಗೆ ಅಂದರೆ ಸುಮಾರು ಶೇಕಡಾ  ಹದಿನಾರರಷ್ಟು ಏರಬಹುದು ಎಂದು ಅಂದಾಜು.ನೆಟ್‌ಬುಕ್ ಮತ್ತು ನೋಟ್‌ಬುಕ್‌ಗಳಿಗೆ ಬೇಡಿಕೆ ಮೂರು ದಶಲಕ್ಷ ಸಂಖ್ಯೆಯಲ್ಲಿ ಬರಬಹುದು ಎಮ್ದು ಅಂದಾಜು.ಸರ್ವರ್ ಕಂಪ್ಯೂಟರುಗಳಿಗೆ ಮಾತ್ರಾ ಬೇಡಿಕೆ ಇಳಿದಿದ್ದು,ಇದು ಕ್ಲೌಡ್ ಸೇವೆಗಳ ಬಳಕೆಯ ಕಾರಣ ಆಗಿರಲೂ ಬಹುದು.ಪ್ರತಿಯೊಂದು ಸಣ್ಣ ಅಥವಾ ಮಧ್ಯಮ ಕಂಪೆನಿಗಳೀಗ ಇಂತಹ ಕಂಪ್ಯೂಟರುಗಳನ್ನು ಹೊಂದುವ ಅಗತ್ಯ ಇಲ್ಲದ್ದರಿಂದ,ಬೇಡಿಕೆ ಇಳಿಮುಖವಾಗಿರಬಹುದು.
----------------------------
ಫಿಲಿಪ್ಸ್ ಕಂಪೆನಿಯ ಮೊಬೈಲ್ ಫೋನ್
ಖ್ಯಾತ ಫಿಲಿಪ್ಸ್ ಕಂಪೆನಿಯೂ ಮೊಬೈಲ್ ಹ್ಯಾಂಡ್‍ಸೆಟ್‌‍ಗಳನ್ನು ಮಾರಾಟ ಮಾಡಲು ಆರಂಭಿಸಿದೆ.ಸಾವಿರದೇಳ್ನೂರು ರೂಪಾಯಿಗಳಿಂದ ತೊಡಗಿ,ಎಂಟು ಸಾವಿರದ ವರೆಗಿನ ಬೆಲೆಯ ಸೆಟ್‌ಗಳನ್ನದು ಮಾರಾಟ ಮಾಡುತ್ತಿದೆ.ಚೈನೀಸ್ ಕಂಪೆನಿಯೊಂದು,ಹಾಂಕಾಂಗ್ ಕಂಪೆನಿಯ ಜತೆ ಸೇರಿ,ಫಿಲಿಪ್ಸ್ ಬ್ರಾಂಡ್‌ನ ಮೊಬೈಲ್ ಸೆಟ್ಟುಗಳ ನಿರ್ವಹಣೆ ಮಾಡುತ್ತಿದೆ. ,ಬಳಸದಿರುವ ಸಮಯದಲ್ಲಿ ಅತಿ ಕನಿಷ್ಠ ಶಕ್ತಿ ಬಳಸುವ ಈ ಹ್ಯಾಂಡ್‌ಸೆಟ್ಟುಗಳಲ್ಲಿ,ಬ್ಯಾಟರಿಯನ್ನು ಹೆಚ್ಚು ಹೊತ್ತು ಬಾಳಿಕೆ ಬರುತ್ತದೆ.
----------------------------------------------------
ಝಗತ್ ಗೂಗಲ್ ಬಗಲಿಗೆ
ಗೂಗಲ್ ಹಲವು ಕಂಪೆನಿಗಳನ್ನು ಖರೀದಿಸಲು ಒಲವು ತೋರಿಸುತ್ತಿದೆ.ಈ ವರ್ಷವೇ ಇದುವರೆಗೆ ಗೂಗಲ್ ಇಪ್ಪತ್ತು ಕಂಪೆನಿಗಳನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ.ಹೋಟೆಲ್‌ಗಳ ಬಗ್ಗೆ ವಿವರ ನೀಡುವ ಝಗತ್ ಎನ್ನುವ  ಕಂಪೆನಿಯು, ಅದರ ಈ ವಾರದ ಖರೀದಿ.ವಿವಿಧೆಡೆ ಲಭ್ಯವಿರುವ ಹೋಟೆಲುಗಳು,ಅಲ್ಲಿ ದೊರೆಯುವ ಊಟೋಪಚಾರಗಳ ವ್ಯವಸ್ಥೆ ಬಗ್ಗೆ ಈ ಅಂತರ್ಜಾಲ ತಾಣದಲ್ಲಿ ವಿವರಗಳು ಸಿಗುತ್ತವೆ.ಸೇವೆ ಸ್ವೀಕರಿಸಿದವರು ಒದಗಿಸಿದ ಪ್ರತಿಕ್ರಿಯೆಗಳೂ ಇಲ್ಲಿ ಸಿಗುತ್ತವೆ.ಇಪ್ಪತ್ತು ವರ್ಷಕ್ಕೂ ಹೆಚ್ಚು ಕಾಲದಿಂದ ಆಸ್ತಿತ್ವದಲ್ಲಿರುವ ಝಗತ್ ತಾಣವು ಕಲೆ ಹಾಕಿರುವ ಮಾಹಿತಿಯನ್ನು ಗೂಗಲ್ ನಕ್ಷೆ,ಶೋಧ ಸೇವೆಗಳ ಜತೆ ಸಮ್ಮಿಳನಗೊಳಿಸಿ,ಜನರಿಗೆ ವಿನೂತನ ಅನುಭವ ನೀಡಲು ಗೂಗಲಿಗೆ ಸಾಧ್ಯವಾಗಲಿದೆ.ಇಂತಹ ಮಾಹಿತಿ ನೀಡುವ ಇತರ ತಾಣಗಳಿಗೆ ಗೂಗಲ್-ಝಗತ್ ಜುಗಲ್‌ಬಂದಿ ಸಿಹಿ ಸುದ್ದಿಯಂತೂ ಅಲ್ಲ.
-------------------------------------------
ಪತ್ರಿಕೆಗಳು ಮತ್ತು ಅಂತರ್ಜಾಲ


ಭಾರತದಲ್ಲಿ ಪತ್ರಿಕೆಗಳು ಸದ್ಯ ತಮ್ಮ ಮುದ್ರಿತ ಪ್ರತಿಯ ಮಾರಾಟದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಸಫಲವಾಗಿವೆ.ಭಾಷಾಪತ್ರಿಕೆಗಳ ಪ್ರಸಾರ ಏರುಗತಿಯಲ್ಲಿದೆ.ಆದರೆ ವಿಶ್ವದ ಉಳಿದೆಡೆ ಮುದ್ರಿತ ಪತ್ರಿಕೆಗಳ ಪ್ರಸಾರ ಇಳಿಯುತ್ತಿವೆ.ಅಲ್ಲಿ ಪತ್ರಿಕೆಗಳು ತಮ್ಮ ಅಂತರ್ಜಾಲ ಆವೃತ್ತಿಗಳ ಮೂಲಕ ತಮ್ಮ ಓದುಗರನ್ನು ಹೆಚ್ಚಿಸಲು ಪ್ರಯತ್ನಿಸ ಬೇಕಿದೆ.ಡಿಜಿಟಲ್ ಮಾಧ್ಯಮದ ಮೂಲಕವೇ ತಮ್ಮತನ ಉಳಿಸಿಕೊಳ್ಳಲು ಹೋರಾಟ ಅನಿವಾರ್ಯ ಎನ್ನುವುದು ಅಲ್ಲಿನ ಪತ್ರಿಕೋದ್ಯಮಿಗಳ ಅನಿಸಿಕೆಯಾಗಿದೆ.ಅಂತರ್ಜಾಲ ಆವೃತ್ತಿಗಳಲ್ಲಿ ಮುದ್ರಿತ ಪ್ರತಿಯನ್ನು ನೀಡಿದರೆ ಸಾಕಾಗದು ಎನ್ನುವುದು ಅಲ್ಲಿ ವ್ಯಕ್ತವಾಗುತ್ತಿರುವ ಅಂಶವಾಗಿದೆ.ಆನ್‌ಲೈನ್ ಆವೃತ್ತಿಯಲ್ಲಿ ತಾಜಾ ಸುದ್ದಿ,ವಿಶ್ಲೇಷಣೆ,ಓದುಗರ ಅನಿಸಿಕೆಗಳನ್ನು ವ್ಯಕ್ತಪಡಿಸಿ, ಭಾಗವಹಿಸಲು ಅನುಕೂಲತೆ ಅಗತ್ಯವಾಗಿದೆ.ಓದುಗರು ಸುದ್ದಿಯನ್ನು ಹಂಚಿಕೊಳ್ಳಲು,ತಮ್ಮ ಚಿತ್ರಗಳನ್ನು ಅಪ್ಲೋಡ್ ಮಾಡಲು ಪತ್ರಿಕೆಗಳು ಅವಕಾಶ ನೀಡಿ,ಓದುಗರನ್ನು ಆಕರ್ಷಿಸುತ್ತಿವೆ.ಓದುಗರು ಭಾಗವಹಿಸಲು ಅನುಕೂಲ ನೀಡುವುದರಿಂದ,ಅವರು ಅಂತರ್ಜಾಲ ತಾಣದಲ್ಲಿ ಕಳೆಯುವ ಸಮಯವೂ ಹೆಚ್ಚುವುದು ಒಂದು ಅನುಕೂಲವಾಗಿದೆ. ಜನಪ್ರಿಯ ಸಾಮಾಜಿಕ ಜಾಲತಾಣಗಳಾದ ಫೇಸ್‍ಬುಕ್ ಮತ್ತು ಟ್ವಿಟರ್ ಅಂತಹ ತಾಣಗಳಲ್ಲೂ ಪತ್ರಿಕೆಯ ಪುಟಗಳನ್ನು ರೂಪಿಸುವುದು,ಸದ್ಯ ಮಾಮೂಲಿಯಾಗಿದೆ.ಜಕಾರ್ತಾ ಗ್ಲೋಬ್ ಅಂತಹ ಪತ್ರಿಕೆಯು ಫೇಸ್‌ಬುಕ್ ಪುಟದ ಮೂಲಕ ಲಕ್ಷಗಟ್ಟಲೆ ಪತ್ರಿಕೆಯ ಅಭಿಮಾನಿ ಒದುಗರನ್ನು ಆಕರ್ಷಿಸಲು ಸಫಲವಾಗಿವೆ.ಪತ್ರಿಕೆಯ ಸುದ್ದಿಗಳನ್ನು ಟ್ವಿಟರ್ ಖಾತೆಯ ಮೂಲಕ ನೀಡಿ,ಟ್ವಿಟರ್ ಬಳಗದ ಸದಸ್ಯರನ್ನೂ ಆಕರ್ಷಿಸುವುದೂ ಪತ್ರಿಕೆಗೆ ಸಾಧ್ಯವಾಗಿದೆ.
ಮುದ್ರಿತ ಪ್ರತಿಯಲ್ಲಿ ಮೂರು ಆಯಾಮಗಳ ಚಿತ್ರಗಳನ್ನು ಪ್ರಕಟಿಸುವ ತಾಂತ್ರಿಕತೆ‍, ಪತ್ರಿಕೆಗಳಿಗೆ ಈಗ ಲಭ್ಯವಾಗಿರುವ ಹೊಸ ತಂತ್ರಜ್ಞಾನ.ಇದರ ಮೂಲಕ ಮುದ್ರಿಸಿದ ಪತ್ರಿಕೆಯ ಜತೆಗೆ ಅಗ್ಗದ ಕನ್ನಡಕವನ್ನೂ ಪತ್ರಿಕೆಗಳು ನೀಡಬೇಕಾಗುತ್ತದೆ.ವಿಶೇಷ ಕ್ಯಾಮರಾ ಬಳಸಿ,ಚಿತ್ರೀಕರಿಸಿದ ಚಿತ್ರಗಳನ್ನು,ವಿಶೇಷ ರೀತಿಯಲ್ಲಿ ಮುದ್ರಿಸಿ, ಮೂರು ಆಯಾಮಗಳಲ್ಲಿ ಕಾಣುವಂತೆ ಮಾಡಬಹುದು.ಜರ್ಮನ್,ಥಾಯ್ಲೆಂಡ್,ಬ್ರೆಜಿಲ್‌ನಲ್ಲಿ ಇಂತಹ ಪ್ರಯೋಗಗಳೀಗಾಗಲೆ ನಡೆದಿವೆ.
ಭಾಷಾಪತ್ರಿಕೆಗಳು ಯುನಿಕೋಡ್ ಮೂಲಕ ತಮ್ಮ ಪತ್ರಿಕೆಗಳ ಆವೃತ್ತಿಯನ್ನು ನೀಡಿದಾಗ ಪತ್ರಿಕೆಯು ತನ್ನದೇ ಆದ ಫಾಂಟ್ ಹೊಂದುವ ಅಗತ್ಯವಿಲ್ಲದಾಗುತ್ತದೆ.ಯುನಿಕೋಡ್ ಈಗ ಎಲ್ಲಾ ಆಪರೇಟಿಂಗ್ ವ್ಯವಸ್ಥೆಗಳ ಭಾಗವಾಗಿ ಬಿಟ್ಟಿರುವುದರಿಂದ,ಭಾಷಾ ಪತ್ರಿಕೆಗಳು ಅಂತರ್ಜಾಲದಲ್ಲಿ ಓದುಗರಿಗೆ ಸುಲಭವಾಗಿ ಲಭ್ಯವಾಗುತ್ತವೆ,ಅಲ್ಲದೆ ಭಾಷಾಪತ್ರಿಕೆಗಳ ವರದಿ,ಬರಹಗಳ ಶೋಧನೆಯೂ ಸಾಧ್ಯವಾಗುತ್ತದೆ.ಸ್ಮಾರ್ಟ್ ಫೋನು ಆಪರೇಟಿಂಗ್ ವ್ಯವಸ್ಥೆಗಳ ಮಟ್ಟಿಗೆ ಈ ವ್ಯವಸ್ಥೆಯಿನ್ನೂ ಸರಿಯಾಗಿ ಕಾರ್ಯಗತವಾಗಬೇಕಿದೆಯಷ್ಟೆ.ಅಂದಹಾಗೆ ಆಂಧ್ರದ ಕಂಪೆನಿಯೊಂದಾದ ಸಿಲಿಕಾನ್ ಆಂಧ್ರ, ಯುನಿಕೋಡ್ ಒಕ್ಕೂಟದ ಸದಸ್ಯನಾಗಿದೆ.ಅದು  ಮೂರುದಿನಗಳ ವಿಶ್ವ ತೆಲುಗು ಸಮಾವೇಶ ನಡೆಸುತ್ತಿದ್ದು,ಕ್ಯಾಲಿಫೋರ್ನಿಯಾದಲ್ಲಿ ಕಾರ್ಯಕ್ರಮ ಆಯೋಜಿಸಿದೆ.ಯುನಿಕೋಡ್ ವ್ಯವಸ್ಥೆಗೆ ಹಲವು ಫಾಂಟ್‌ಗಳನ್ನು ಬಿಡುಗಡೆಗೊಳಿಸಿ,ತೆಲುಗು ಬಳಕೆಯನ್ನು ಮತ್ತಷ್ಟು ಜನಪ್ರಿಯಗೊಳಿಸಲದು ಪ್ರಯತ್ನಿಸುತ್ತಿದೆ.
-------------------------------------------
ತುಷಾರ:ವಾರ್ಷಿಕ  ಚಂದಾ ಗೆಲ್ಲಿ!
ಈ ಪ್ರಶ್ನೆಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಶೋಭಾ ಮೋಹನ್,ಬೆಂಗಳೂರು.
*ಕನ್ನಡ ಟೈಪಿಸಲು ಕಂಪ್ಯೂಟರಿನಲ್ಲಿ ಯಾವ ವ್ಯವಸ್ಥೆಗಳಿವೆ?
(ಉತ್ತರವನ್ನು nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ:NS47 ನಮೂದಿಸಿ.)
ಕಳೆದ ವಾರದ ಬಹುಮಾನಿತ ಉತ್ತರ:
*ಬ್ರಾಡ್‌ಬ್ಯಾಂಡ್ ಅನಿಸಿಕೊಳ್ಳಲು ದತ್ತಾಂಶ ವೇಗ ಪ್ರತಿಸೆಕೆಂಡಿಗೆ ಕನಿಷ್ಠವೆಂದರೂ ಇನ್ನೂರೈವತ್ತಾರು ಕಿಲೋಬಿಟ್ಸ್ ಇರಬೇಕು.ಬಹುಮಾನ ಗೆದ್ದವರು ವಿಷ್ಣುಮೂರ್ತಿ,ಮಂಗಳೂರು.ಅಭಿನಂದನೆಗಳು.
Udayavani
*ಅಶೋಕ್‌ಕುಮಾರ್ ಎ

Udayavani Unicode

Monday, September 05, 2011

ಆಧಾರ್:ಆಧಾರ ರಹಿತ ಆರೋಪ?


ಆಧಾರ್:ಆಧಾರ ರಹಿತ ಆರೋಪ?
ಆಧಾರ್ ಯೋಜನೆಯೀಗ ವೇಗ ಪಡೆದು ಕೊಂಡಿದೆ.ರಾಜ್ಯದ ಮೂಲೆ ಮೂಲೆಯ ಸ್ಥಳಗಳಲ್ಲಿ ಆಧಾರ್ ಗುರುತುಚೀಟಿ ನೀಡಿಕೆ ನಡೆಸಲಾಗುತ್ತಿದೆ.ಜತೆಗೆ ಆಯ್ದ ಅಂಚೆ ಕಚೇರಿಗಳಲ್ಲಿಯೂ ಆಧಾರ್ ಚೀಟಿ ನೀಡಿಕೆಯನ್ನು ಆರಂಭಿಸಲಾಗಿದೆ.ಬೆಂಗಳೂರಿನಲ್ಲಿ,ಜನರು ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಅನುಕೂಲವಾಗುವಂತೆ ರಾತ್ರಿ ವೇಳೆಯೂ ಚೀಟಿ ನೀಡಿಕೆ ನಡೆದಿದೆ.ಇದರ ನಡುವೆಯೇ,ಯೋಜನೆಯ ಬಗ್ಗೆ ಅಪಸ್ವರಗಳೂ ಕೇಳಿ ಬರುತ್ತಿವೆ.ಯೋಜನೆ ಬಹು ದುಬಾರಿ ಯೋಜನೆ.ಇದರಲ್ಲಿ ಜನರ ಬಗೆಗಿನ ಬಗ್ಗೆ ಸಂಗ್ರಹಿಸುವ ಮಾಹಿತಿಯ ದುರುಪಯೋಗ ಆಗಬಹುದು.ಅಮೇರಿಕಾದ ಸಂಸ್ಥೆಗಳು,ಯೋಜನೆಯ ಅನುಷ್ಠಾನದಲ್ಲಿ ಕೈಜೋಡಿಸಿರುವ ಕಾರಣ,ನಮ್ಮ ಜನರ ಬ್ಯಾಂಕ್ ಖಾತೆಗಳಂತಹ ಮಾಹಿತಿಯು ಅಮೆರಿಕಾ ಸರಕಾರಕ್ಕೆ ಸಿಗಬಹುದು.ನೂರ ಇಪ್ಪತ್ತು ಕೋಟಿ ಜನರ ಖಾಸಗಿ ಮಾಹಿತಿ,ಆಧಾರ್ ಯೋಜನೆಯ ಅಡಿ ಸಂಗ್ರಹವಾದಾಗ,ಅದು ದಾಳೀಕೋರರ ದಾಳಿಯಲ್ಲಿ ಸೋರಿಹೋಗುವ ಸಾಧ್ಯ ಇದೆ ಎಂದು ಮುಂತಾಗಿ ಟೀಕೆಗಳು ಬರುತ್ತಿವೆ.
ಭಾರತದ ನೂರ ಇಪ್ಪತ್ತು ಕೋಟಿ ಜನರು ಸರಕಾರದ ಜತೆ ವ್ಯವಹರಿಸುವುದು ಸುಲಭವಾಗಬೇಕು,ಪ್ರತಿ ವ್ಯಕ್ತಿಗೂ ತಾನು ಭಾರತೀಯ ಎಂದು ನಿರೂಪಿಸಲು ಸಾಧ್ಯವಾಗಬೇಕು ಎನ್ನುವುದು ಆಧಾರ್ ಯೋಜನೆಯ ಹಿಂದಿನ ಮುಖ್ಯ ಉದ್ದೇಶವಾಗಿದೆ.ಜನರ ಬೆರಳಚ್ಚು ಮತ್ತು ಐರಿಸ್ ಇವುಗಳ ಮುದ್ರೆಯನ್ನು ಸೆರೆ ಹಿಡಿದು ಪ್ರತಿಯೊಬ್ಬನಿಗೂ ಪ್ರತ್ಯೇಕ ಸಂಖ್ಯೆಯನ್ನು ನೀಡುವ ಕಾರಣ ಈ ಯೋಜನೆ,ವಿಶ್ವದ ಅತಿ ದೊಡ್ಡ ಜೈವಿಕ ಗುರುತಿನ ಭಂಡಾರ ಇದಾಗಲಿದೆ.ಇದರಲ್ಲಿ ಸುಮಾರು ಇನ್ನೂರ ನಲುವತ್ತು ಕೋಟಿ ಐರಿಸ್ ಗುರುತು ಮತ್ತು ಒಂದು ಸಾವಿರದಿನ್ನೂರು ಕೋಟಿ ಕೈಬೆರಳಚ್ಚು ಸಂಗ್ರಹವಾಗಲಿದ್ದು,ಇಂತಹ ಮಾಹಿತಿಯ ಭಂಡಾರದ ನಿರ್ವಹಣೆ ನಿಜಕ್ಕೂ ತಾಂತ್ರಿಕ ಸವಾಲು.ಮಾಹಿತಿಯ ಭಂಡಾರದ ಭದ್ರತೆ-ಬೇಕಾದಾಗ ಇದರ ಬಳಕೆ ಮಾಡುವುದು ಬಹಳ ಕಠಿನ ಕೆಲಸ.ಇದಕ್ಕೆ ಅತಿ ಸಮೀಪ ಬರುವ ಮಾಹಿತಿ ಭಂಡಾರದಲ್ಲಿ ಬರೇ ದಶಲಕ್ಷ ಜನರ ಮಾಹಿತಿಯಿದೆ ಎಂದರೆ ಯೋಜನೆಯ ಹರವು ಅರಿವಾದೀತು.
ಆಧಾರ್ ಯೋಜನೆಗೆ ಬಡಜನ ಹೆಚ್ಚು ಸ್ಪಂದಿಸುತ್ತಿದ್ದಾರೆ.ಅಲೆಮಾರಿ ಜೀವನ ನಡೆಸ ಬೇಕಾದ ಅನಿವಾರ್ಯತೆಯುಳ್ಳ ಇವರುಗಳನೇಕರಿಗೆ ಬ್ಯಾಂಕ್ ಖಾತೆ ತೆರೆಯುವುದು ಸಮಸ್ಯೆಯಾಗುತ್ತದೆ.ಬ್ಯಾಂಕ್ ಖಾತೆಯಿಲ್ಲದೆ ಸಾಲಸೌಲಭ್ಯ ಪಡೆಯಲು ಸಾಧ್ಯವಾಗದೆ ದುಬಾರಿ ಬಡ್ಡಿದರದ ಸಾಲಗಳಿಗೆ ಶರಣು ಹೋಗಬೇಕಾಗುತ್ತದೆ.ಅಂತವರಿಗೆ ಆಧಾರ್ ಬ್ಯಾಂಕ್ ಖಾತೆ ತೆರೆಯುವಿಕೆ,ಪಡಿತರ ಪಡೆಯಲು,ಮತದಾನ ಮಾಡಲು ನೆರವಾಗುತ್ತದೆ ಎನ್ನುವ ವಿಚಾರವೇ ಆಪ್ಯಾಯಮಾನವೆನಿಸುತ್ತದೆ.ಸಬ್ಸಿಡಿ ನೀಡಿಕೆಯಂತಹ ಪ್ರಕ್ರಿಯೆಗೂ ಆಧಾರ್ ಗುರುತನ್ನು ಬಳಸುವ ಕ್ರಿಯಾಯೋಜನೆಯನ್ನು ನಂದನ್ ನೀಲಕೇಣಿ ಸಿದ್ಧ ಪಡಿಸಿದ್ದಾರೆ.ವ್ಯಕ್ತಿಗೆ ತನ್ನ ಗುರುತನ್ನು ಸಿದ್ಧಪಡಿಸಲು ಆಧಾರ್ ತುಂಬಾ ಸುಲಭವಾಗಿಸುವ,ಈ ಯೋಜನೆಯು ಕಾರ್ಯಗತವಾಗತವಾಗಲು ಎಲ್ಲರೂ ಬೆಂಬಲ ನೀಡುವುದು ಮುಖ್ಯ.ಪ್ರತಿ ವ್ಯಕ್ತಿಗೆ ಇದರ ಸರಾಸರಿ ಖರ್ಚಾದ ನೂರೈವತ್ತು ರೂಪಾಯಿ ವೆಚ್ಚವನ್ನು ಸರಕಾರ ಭರಿಸಬೇಕಾಗುತ್ತದೆ.ವಾರ್ಷಿಕ ನಿರ್ವಹಣಾ ವೆಚ್ಚ ಇನ್ನೂರು ಕೋಟಿ ವೆಚ್ಚ ಬೇರೆ ಬರುತ್ತದೆ.ಐದು ವರ್ಷಗಳಿಗೊಮ್ಮೆ ಗುರುತುಗಳನ್ನು ನವೀಕರಿಸಲು ವೆಚ್ಚ ಬೇರೆ ಬರುತ್ತದೆ.
--------------------------------------------------------------------
ಮೊಬೈಲ್ ಮೂಲಕ ಅಂತರ್ಜಾಲ;ಹೆಚ್ಚಳ
ಭಾರತದಲ್ಲಿ ಶೇಕಡಾ ನಾಲ್ಕರಷ್ಟು ಜನರು ಅಂತರ್ಜಾಲ ಬಳಸುತ್ತಾರೆ.ಅವರ ಪೈಕಿ ಶೇಕಡಾ ಮೂರು ಜನ ಪಿಸಿಯ ಮೂಲಕ ಅಂತರ್ಜಾಲ ಬಳಸುತ್ತಾರೆ.ಇನ್ನುಳಿದವರು ಮೊಬೈಲ್ ಮೂಲಕ ಅಂತರ್ಜಾಲ ಪಡೆಯುತ್ತಿದ್ದಾರೆ.ಎಂಭೈತ್ತದು ಕೋಟಿ ಜನರಲ್ಲಿ ಮೊಬೈಲ್ ಇರುವ ಕಾರಣ ಮತ್ತು ತ್ರೀಜಿ ಜಾಲ ಹೆಚ್ಚಳದ ಕಾರಣ ಇಂತವರ ಸಂಖ್ಯೆಯಲ್ಲಿ ಏರಿಕೆಯಾಗುವುದು ನಿಶ್ಚಿತ.ಬಿ ಎಸ್ ಎನ್ ಎಲ್ ಈ ವಾರ ಐಐಟಿಯ ಜತೆ ಸೇರೀ ರಚಿಸಿದ ಮೊಬೈಲ್ ಮಂಡಿ ತಂತ್ರಾಂಶಗಳ ಲಾಭ ಪಡೆಯಲು ಸ್ಮಾರ್ಟ್ ಫೋನು ಇದ್ದವರಿಗೆ ಸುಲಭ.ಅಗ್ಗದ ಸ್ಮಾರ್ಟ್ ಫೋನುಗಳೂ ಈ ವಾರ ಬಿಡುಗಡೆಯಾಗಿವೆ.ಎಂಟಿಎಸ್ ಕಂಪೆನಿಯ ಆಂಡ್ರಾಯಿಡ್ ಫೋನುಗಳ ಬೆಲೆ ಐದು ಸಾವಿರದ ಆಸುಪಾಸಿನಲ್ಲಿವೆ.
----------------------------------------------------------------------
ಬದಲಾಗದೇ ಉಳಿದ ಸಾಧನ
ಹ್ಯೂಲೆಟ್ ಪ್ಯಾಕರ್ಡ್ ಕಂಪೆನಿಯ ಕ್ಯಾಲ್ಕ್ಯುಲೇಟರಿನ ಒಂದು ಮಾದರಿ 12c. ಇದು ಮೂರೂ ದಶಕಗಳಿಗೂ ಹೆಚ್ಚು ಕಾಲ ಬಳಕೆಯಲ್ಲಿದ್ದು,ಮೊದಲಿನ ಮತ್ತು ಹೊಸ ಮಾದರಿಗಳಲ್ಲಿನ ವ್ಯತ್ಯಾಸ ಅತಿ ಕನಿಷ್ಠವಾಗಿ ಉಳಿದು ವಿಕ್ರಮ ಸಾಧಿಸಿದೆ.ಕಂಪ್ಯೂಟರ್ ಕ್ಷೇತ್ರದಲ್ಲಿ ಪ್ರತಿ ವರ್ಷವೂ ಹೊಸ ಮಾದರಿ ಬಿಡುಗಡೆಯಾಗುವುದು,ಸಾಮಾನ್ಯವಾಗಿರುವಾಗ,ಈ ನಮೂನೆಯ ವಿಕ್ರಮ ಬಹು ಅಪೂರ್ವ.ಕೆಲವು ಪರೀಕ್ಷೆಗಳಲ್ಲಿ ಈ ಮಾದರಿ ಕ್ಯಾಲ್ಕ್ಯುಲೇಟರ್ ಮಾತ್ರಾ,ಒಯ್ಯಲು ಅನುಮತಿಯಿರುವುದು,ಮತ್ತು ಇದರ ಅನುಕೂಲತೆ,ಸರಳತೆಗಳು ಮತ್ತು ಸಾಮಾನ್ಯ ಬಳಕೆಗೆ ಇದು ಸಾಕಷ್ಟು ಎನಿಸುವಂತಿರುವುದು,ಇದು ಬದಲಾಗದೇ ಉಳಿಯಲು ಪ್ರಮುಖ ಕಾರಣವಂತೆ.
-----------------------------------------------------------------------------------------
ಸಾಮಾಜಿಕ ಜಾಲತಾಣ:ಚಳುವಳಿಗಳಿಗಳಿಗೆ ನೆರವಾಗುವವೇ?
ಈಜಿಪ್ಟ್,ಲಿಬಿಯಾದಂತಹ ದೇಶಗಳಲ್ಲಿ ಇತ್ತೀಚೆಗೆ ನಡೆದ ಚಳುವಳಿಗಳಲ್ಲಿ ಫೇಸ್ ಬುಕ್,ಟ್ವಿಟರ್‍ ಆಂತಹ ಸಾಮಾಜಿಕ ಜಾಲತಾಣಗಳು ಜನರನ್ನು ಒಗ್ಗೂಡಿಸಲು ನೆರವಾಗಿವೆ ಎನ್ನುವ ಅಂಶ ಎದ್ದು ಕಾಣುತ್ತದೆ.ಅಣ್ಣಾಹಜಾರೆಯವರ ಭ್ರಷ್ಟಾಚಾರ ವಿರುದ್ಧದ ಚಳುವಳಿಯಲ್ಲಂತೂ,ಈ ತಾಣಗಳ ಕೊಡುಗೆಯನ್ನು ತಮ್ಮ ಸಂದರ್ಶನವೊಂದರಲ್ಲಿ ಅರವಿಂದ ಕೇಜ್ರಿವಾಲ್ ಅವರು ಮುಕ್ತ ಕಂಠದಿಂದ ಪ್ರಶಂಸಿಸಿದ್ದಾರೆ.ಅವರ ಸಹವರ್ತಿಯೋರ್ವ ಮೊದಲಿಗೆ,ಚಳುವಳಿಯ ಬಗ್ಗೆ ಫೇಸ್ ಬುಕ್ ಪುಟವನ್ನು ರಚಿಸುತ್ತೇನೆಂದು ಮುಂದೆ ಬಂದಾಗ,ಕೇಜ್ರಿವಾಲ್ ಅವರು ಈ ಬಗ್ಗೆ ಉತ್ಸಾಹವನ್ನು ತೋರಿಸಲಿಲ್ಲವಂತೆ.ಇವೇನಿದ್ದರೂ,ನಗರಕೇಂದ್ರಿತ-ಯುವಕರಿಗೆ ಸೀಮಿತ ಎನ್ನುವುದು ಅವರ ಅಭಿಪ್ರಾಯವಾಗಿತ್ತು.ಆದರೆ ಸಾವಿರಗಟ್ಟಲೆ ಜನರ ಗಮನ ಸೆಳೆಯಲು ಈ ಪುಟ ನೆರವಾದಾಗ,ಚಳುವಳಿಯ ಕಾವು ಹಬ್ಬಲು ಮತ್ತು ಸಮಾಂತರ ಸಭೆಗಳನ್ನು ಆನ್ ಲೈನಿನಲ್ಲಿ ನಡೆಸಲು ಇದು ನೆರವಾಯಿತು ಎನ್ನುವುದನ್ನು ಕೇಜ್ರಿವಾಲ್ ಅವರು ವಿವರಿಸಿದ್ದಾರೆ.ಅಲ್ಲದೆ ನಿಗದಿತ ಸಂಖ್ಯೆಯ ಸೆಲ್ ಸಂಖ್ಯೆಗೆ ಮಿಸ್ಸ್ಡ್ ಕಾಲ್ ನೀಡಿ ಬೆಂಬಲ ವ್ಯಕ್ತ ಪಡಿಸುವ ಹೊಸ ನಮೂನೆಯ ಖರ್ಚಿಲ್ಲದ ಯೋಜನೆಗೂ ಅಣ್ಣಾ ಚಳುವಳಿ ಹೇತುವಾಯಿತು.
------------------------------------------------
ತುಷಾರ ವಾರ್ಷಿಕ ಚಂದಾ ಗೆಲ್ಲಿ
ಈ ಪ್ರಶ್ನೆಗೆ ಸರಿಯುತ್ತರ ಕಳುಹಿಸಿ ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ. ಬಹುಮಾನ ಪ್ರಾಯೋಜಿಸಿದವರು ಶೋಭಾ ಮೋಹನ್,ಬೆಂಗಳೂರು.
*ಬ್ರಾಂಡ್ಬ್ಯಾಂಡ್ ಎನಿಸಿಕೊಳ್ಳಲು ದತ್ತಾಂಶ ವರ್ಗಾವಣೆ ವೇಗ ಕನಿಷ್ಠ ಎಂದರೆ ಎಷ್ಟಿರಬೇಕು?
ಉತ್ತರವನ್ನು nistantusansaara@gmail.comಗೆ ಮಿಂಚಂಚೆ ಮಾಡಿ,ವಿಷಯ ns46 ನಮೂದಿಸಿ.
ಕಳೆದ ವಾರದ ಬಹುಮಾನಿತ ಉತ್ತರ:
ಲೀನಕ್ಸ್ ಬಗ್ಗೆ ಇರುವ ಕನ್ನಡ ತಾಣವನ್ನು ಹೆಸರಿಸಿ-ಲೀನಕ್ಸಾಯಣ(http://linuxaayana.net).ಬಹುಮಾನ ಗೆದ್ದವರು ಶ್ರೀನಿವಾಸ ಬಂಗೋಡಿ,ಬೆಂಗಳೂರು.ಅಭಿನಂದನೆಗಳು.

Udayavani
ಅಶೋಕ್ ಕುಮಾರ್ ಎ.